M’Cheyne Bible Reading Plan
ಬೆಚಲೇಲ್ ಮತ್ತು ಒಹೊಲೀಯಾಬ
31 ತರುವಾಯ ಯೆಹೋವನು ಮೋಶೆಗೆ ಹೀಗೆಂದನು: 2 “ನಾನು ಯೆಹೂದ ಕುಲದಿಂದ ಊರಿಯ ಮಗನಾದ ಬೆಚಲೇಲನನ್ನು ಆರಿಸಿಕೊಂಡಿದ್ದೇನೆ. ಊರಿಯು ಹೂರನ ಮಗನು. 3 ನಾನು ಬೆಚಲೇಲನನ್ನು ದೇವರಾತ್ಮಭರಿತನನ್ನಾಗಿ ಮಾಡಿದ್ದೇನೆ. ನಾನು ಅವನಿಗೆ ಎಲ್ಲಾ ಬಗೆಯ ಕೆಲಸಗಳನ್ನು ಮಾಡಲು ನಿಪುಣತೆಯನ್ನೂ ಜ್ಞಾನವನ್ನೂ ಅನುಗ್ರಹಿಸಿದ್ದೇನೆ. 4 ಬೆಚಲೇಲನು ಬಹಳ ಉತ್ತಮ ಚಿತ್ರಕಾರನಾಗಿದ್ದಾನೆ. ಬೆಳ್ಳಿಬಂಗಾರಗಳ ಮತ್ತು ತಾಮ್ರದ ವಸ್ತುಗಳನ್ನು ಅವನು ಮಾಡಬಲ್ಲನು. 5 ಅವನು ರತ್ನಗಳನ್ನು ಕೆತ್ತಿ ಅಂದವಾದ ಆಭರಣಗಳನ್ನು ಮಾಡಬಲ್ಲನು ಮತ್ತು ಮರಗೆಲಸವನ್ನು ಮಾಡಬಲ್ಲನು. ಅವನು ಎಲ್ಲಾ ತರದ ಕೆಲಸಗಳನ್ನು ಮಾಡಬಲ್ಲನು. 6 ಅವನೊಂದಿಗೆ ಕೆಲಸ ಮಾಡಲು ನಾನು ಒಹೊಲೀಯಾಬನನ್ನು ಆರಿಸಿಕೊಂಡಿದ್ದೇನೆ. ಒಹೊಲೀಯಾಬನು ದಾನ್ ಕುಲದ ಅಹೀಸಾಮಾಕನ ಮಗನು. ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನು ಮಾಡುವುದಕ್ಕೆ ಬೇರೆ ಕೆಲಸಗಾರರಿಗೆಲ್ಲಾ ನಿಪುಣತೆಯನ್ನು ಅನುಗ್ರಹಿಸಿದ್ದೇನೆ:
7 ದೇವದರ್ಶನಗುಡಾರ,
ಒಡಂಬಡಿಕೆ ಪೆಟ್ಟಿಗೆ,
ಕೃಪಾಸನ, ಗುಡಾರದ ಎಲ್ಲಾ ಉಪಕರಣಗಳು,
8 ಮೇಜು ಮತ್ತು ಅದರ ಮೇಲಿನ ವಸ್ತುಗಳು,
ಬಂಗಾರದ ದೀಪಸ್ತಂಭ ಮತ್ತು ಅದರ ಉಪಕರಣಗಳು,
9 ಧೂಪವೇದಿಕೆ, ಯಜ್ಞವೇದಿಕೆ ಮತ್ತು ಅವುಗಳ ಉಪಕರಣಗಳು,
ಗಂಗಾಳ ಮತ್ತು ಅದರ ಪೀಠ.
10 ಮಹಾಯಾಜಕನಾದ ಆರೋನನ ಎಲ್ಲಾ ವಿಶೇಷ ಬಟ್ಟೆಗಳು,
ಆರೋನನ ಪುತ್ರರು ಯಾಜಕರಾಗಿ ಸೇವೆ ಮಾಡುವಾಗ ಧರಿಸಿಕೊಳ್ಳತಕ್ಕ ಎಲ್ಲಾ ಬಟ್ಟೆಗಳು.
11 ಸುವಾಸನೆಯುಳ್ಳ ಅಭಿಷೇಕತೈಲ,
ಪವಿತ್ರ ಸ್ಥಳದಲ್ಲಿ ಉಪಯೋಗಿಸುವ ಸುವಾಸನೆಯುಳ್ಳ ಧೂಪ.
ನಾನು ನಿನಗೆ ಆಜ್ಞಾಪಿಸಿದ ರೀತಿಯಲ್ಲೇ ಈ ಕೆಲಸಗಾರರು ಈ ವಸ್ತುಗಳನ್ನೆಲ್ಲಾ ಮಾಡತಕ್ಕದ್ದು.”
ಸಬ್ಬತ್
12 ತರುವಾಯ ಯೆಹೋವನು ಮೋಶೆಗೆ ಹೀಗೆಂದನು: 13 “ಇದನ್ನು ಇಸ್ರೇಲರಿಗೆ ಹೇಳು: ‘ನೀವು ನನ್ನ ವಿಶೇಷವಾದ ಸಬ್ಬತ್ ದಿನವನ್ನು ಖಂಡಿತವಾಗಿ ಆಚರಿಸಬೇಕು. ಯೆಹೋವನಾದ ನಾನು ನಿಮ್ಮನ್ನು ನನ್ನ ವಿಶೇಷ ಜನರನ್ನಾಗಿ ಮಾಡಿರುವುದಕ್ಕೆ ಇದು ಗುರುತಾಗಿದೆ.
14 “‘ಸಬ್ಬತ್ ದಿನವನ್ನು ವಿಶೇಷ ದಿನವೆಂದು ಪರಿಗಣಿಸಿ ಆಚರಿಸಿರಿ. ಆ ದಿನವನ್ನು ಬೇರೆ ದಿನದಂತೆ ಪರಿಗಣಿಸಿ ನಡೆಯುವವನಿಗೆ ಮರಣದಂಡನೆಯಾಗಬೇಕು. ಸಬ್ಬತ್ ದಿನದಲ್ಲಿ ಯಾವನಾದರೂ ಕೆಲಸಮಾಡಿದರೆ ಅವನನ್ನು ಬಹಿಷ್ಕರಿಸಬೇಕು. 15 ಕೆಲಸ ಮಾಡುವುದಕ್ಕೆ ವಾರದಲ್ಲಿ ಬೇರೆ ಆರು ದಿನಗಳಿವೆ. ಆದರೆ ಏಳನೆಯ ದಿನವು ವಿಶ್ರಾಂತಿಯ ಬಹು ವಿಶೇಷವಾದ ದಿನವಾಗಿದೆ. ಯೆಹೋವನನ್ನು ಸನ್ಮಾನಿಸಲು ಅದೊಂದು ವಿಶೇಷ ದಿನವಾಗಿದೆ. ಸಬ್ಬತ್ತಿನ ಸಮಯದಲ್ಲಿ ಕೆಲಸಮಾಡುವವನು ಕೊಲ್ಲಲ್ಪಡಬೇಕು. 16 ಇಸ್ರೇಲರು ಸಬ್ಬತ್ ದಿನವನ್ನು ಜ್ಞಾಪಿಸಿಕೊಂಡು ಅದನ್ನು ವಿಶೇಷ ದಿನವನ್ನಾಗಿ ಮಾಡಿಕೊಳ್ಳತಕ್ಕದ್ದು. ಅವರು ಇದನ್ನು ಎಂದೆಂದೂ ಮಾಡತಕ್ಕದ್ದು. ಇದು ಎಂದೆಂದಿಗೂ ಮುಂದುವರಿಯುವ ಒಡಂಬಡಿಕೆ. 17 ಸಬ್ಬತ್ ನನಗೂ ಮತ್ತು ಇಸ್ರೇಲರಿಗೂ ನಡುವೆ ಎಂದೆಂದೂ ಇರುವ ಸೂಚನೆಯಾಗಿರುವುದು.’” ಯೆಹೋವನು ಆರು ದಿನಗಳಲ್ಲಿ ಕೆಲಸಮಾಡಿ ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು. ಏಳನೆಯ ದಿನದಲ್ಲಿ ಕೆಲಸ ಮಾಡದೆ ವಿಶ್ರಮಿಸಿಕೊಂಡನು.
18 ಹೀಗೆ, ಯೆಹೋವನು ಮೋಶೆಯೊಡನೆ ಸೀನಾಯಿ ಬೆಟ್ಟದಲ್ಲಿ ಮಾತಾಡುವುದನ್ನು ಮುಗಿಸಿದನು. ಬಳಿಕ ಯೆಹೋವನು ಒಡಂಬಡಿಕೆ ಬರೆಯಲ್ಪಟ್ಟಿದ್ದ ಎರಡು ಕಲ್ಲಿನ ಹಲಿಗೆಗಳನ್ನು ಮೋಶೆಗೆ ಕೊಟ್ಟನು. ಅವು ದೇವರ ಬೆರಳಿನಿಂದ ಲಿಖಿತವಾಗಿತ್ತು.
ಕುರುಬನು ಮತ್ತು ಅವನ ಕುರಿಗಳು
10 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಒಬ್ಬನು ಕುರಿಹಟ್ಟಿಯೊಳಗೆ ಪ್ರವೇಶಿಸುವಾಗ ಬಾಗಿಲಿನ ಮೂಲಕ ಪ್ರವೇಶಿಸಬೇಕು. ಮತ್ತೆಲ್ಲಿಂದಾದರೂ ಹತ್ತಿ ಬರುವವನು ಸುಲಿಗೆಗಾರನಾಗಿದ್ದಾನೆ; ಕುರಿಗಳನ್ನು ಕದ್ದುಕೊಳ್ಳಲು ಪ್ರಯತ್ನಿಸುವವನಾಗಿದ್ದಾನೆ. 2 ಆದರೆ ಕುರುಬನು ಬಾಗಿಲ ಮೂಲಕ ಪ್ರವೇಶಿಸುತ್ತಾನೆ. 3 ಕಾವಲುಗಾರನು ಕುರುಬನಿಗೆ ಬಾಗಿಲನ್ನು ತೆರೆಯುತ್ತಾನೆ. ಕುರಿಗಳು ಅವನ ಸ್ವರಕ್ಕೆ ಕಿವಿಗೊಡುತ್ತವೆ. ಕುರುಬನು ತನ್ನ ಸ್ವಂತ ಕುರಿಗಳನ್ನು ಹೆಸರು ಹಿಡಿದು ಕರೆದು ಹೊರಗೆ ಬಿಡುತ್ತಾನೆ. 4 ಆ ಬಳಿಕ ಅವುಗಳ ಮುಂದೆ ಹೋಗುತ್ತಾ ಅವುಗಳಿಗೆ ಮಾರ್ಗದರ್ಶನ ಮಾಡುತ್ತಾನೆ. ಕುರಿಗಳು ಅವನನ್ನು ಹಿಂಬಾಲಿಸುತ್ತವೆ; ಏಕೆಂದರೆ ಅವು ಅವನ ಸ್ವರವನ್ನು ತಿಳಿದಿವೆ. 5 ಆದರೆ ಕುರಿಗಳು ತಮಗೆ ಗೊತ್ತಿಲ್ಲದ ವ್ಯಕ್ತಿಯನ್ನು ಎಂದಿಗೂ ಹಿಂಬಾಲಿಸುವುದಿಲ್ಲ. ಅವುಗಳು ಆ ವ್ಯಕ್ತಿಯ ಬಳಿಯಿಂದ ಓಡಿಹೋಗುತ್ತವೆ. ಏಕೆಂದರೆ ಅವುಗಳು ಅವನ ಸ್ವರವನ್ನು ತಿಳಿದಿಲ್ಲ” ಎಂದು ಹೇಳಿದನು.
6 ಯೇಸು ಹೇಳಿದ ಈ ಸಾಮ್ಯದ ಅರ್ಥವನ್ನು ಜನರು ಗ್ರಹಿಸಿಕೊಳ್ಳಲಿಲ್ಲ.
ಯೇಸು ಒಳ್ಳೆಯ ಕುರುಬ
7 ಆದ್ದರಿಂದ ಯೇಸು ಮತ್ತೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಾನೇ ಕುರಿಗಳಿಗೆ ಬಾಗಿಲಾಗಿದ್ದೇನೆ. 8 ನಾನು ಬರುವುದಕ್ಕಿಂತ ಮೊದಲು ಬಂದವರೆಲ್ಲರೂ ಕಳ್ಳರಾಗಿದ್ದರು ಮತ್ತು ಸುಲಿಗೆಗಾರರಾಗಿದ್ದರು. ಕುರಿಗಳು ಅವರಿಗೆ ಕಿವಿಗೊಡಲಿಲ್ಲ. 9 ನಾನೇ ಬಾಗಿಲಾಗಿದ್ದೇನೆ. ನನ್ನ ಮೂಲಕವಾಗಿ ಪ್ರವೇಶಿಸುವವರು ರಕ್ಷಣೆ ಹೊಂದುವರು. ಅವರು ಒಳಗೆ ಬರಬಲ್ಲರು. ಹೊರಗೆ ಹೋಗಬಲ್ಲರು ಮತ್ತು ಹುಲ್ಲುಗಾವಲನ್ನು ಕಂಡುಕೊಳ್ಳುವರು. 10 ಕಳ್ಳನು ಕದಿಯುವುದಕ್ಕೂ ಕೊಲ್ಲುವುದಕ್ಕೂ ನಾಶಮಾಡುವುದಕ್ಕೂ ಬರುತ್ತಾನೆ. ನಾನಾದರೋ ಸಮೃದ್ಧಿಕರವಾದ ಜೀವವನ್ನು ಕೊಡಲು ಬಂದೆನು.
11 “ನಾನೇ ಒಳ್ಳೆಯ ಕುರುಬ. ಒಳ್ಳೆಯ ಕುರುಬನು ಕುರಿಗಳಿಗಾಗಿ ತನ್ನ ಪ್ರಾಣವನ್ನು ಕೊಡುತ್ತಾನೆ. 12 ಕುರಿಗಳನ್ನು ನೋಡಿಕೊಳ್ಳುವುದಕ್ಕಾಗಿ ನೇಮಿತನಾಗಿರುವ ಕೂಲಿಯಾಳು ಕುರುಬನಿಗಿಂತ ಭಿನ್ನವಾಗಿದ್ದಾನೆ. ಕೂಲಿಯಾಳು ಕುರಿಗಳ ಒಡೆಯನಲ್ಲ. ಆದ್ದರಿಂದ ಕೂಲಿಯಾಳು ತೋಳ ಬರುವುದನ್ನು ಕಾಣುವಾಗ ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ. ಆಗ ತೋಳವು ಕುರಿಗಳ ಮೇಲೆ ಬಿದ್ದು ಅವುಗಳನ್ನು ಚದರಿಸಿಬಿಡುತ್ತದೆ. 13 ಆ ವ್ಯಕ್ತಿಯು ಓಡಿಹೋಗುತ್ತಾನೆ. ಏಕೆಂದರೆ ಅವನು ಕೇವಲ ಕೂಲಿಗಾರನಾಗಿದ್ದಾನೆ. ಅವನ ಕುರಿಗಳ ಬಗ್ಗೆ ನಿಜವಾಗಿಯೂ ಚಿಂತಿಸುವುದಿಲ್ಲ.
14-15 “ನಾನು ಕುರಿಗಳಿಗಾಗಿ (ಜನರಿಗಾಗಿ) ಚಿಂತಿಸುವ ಕುರುಬನಾಗಿದ್ದೇನೆ. ನನ್ನ ತಂದೆಯು ನನ್ನನ್ನು ತಿಳಿದಿರುವಂತೆ ನನ್ನ ಕುರಿಗಳನ್ನು ನಾನು ತಿಳಿದಿದ್ದೇನೆ. ಮತ್ತು ನಾನು ನನ್ನ ತಂದೆಯನ್ನು ತಿಳಿದಿರುವಂತೆ ನನ್ನ ಕುರಿಗಳು ನನ್ನನ್ನು ತಿಳಿದಿವೆ. ಈ ಕುರಿಗಳಿಗೋಸ್ಕರ ನನ್ನ ಜೀವವನ್ನೇ ಕೊಡುತ್ತೇನೆ. 16 ನನಗೆ ಬೇರೆ ಕುರಿಗಳು ಸಹ ಇವೆ. ಅವುಗಳು ಇಲ್ಲಿರುವ ಈ ಮಂದೆಯಲ್ಲಿಲ್ಲ. ನಾನು ಅವುಗಳನ್ನು ಸಹ ಒಳಗೆ ನಡೆಸಬೇಕು. ಅವುಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಮುಂದಿನ ಕಾಲದಲ್ಲಿ ಒಂದೇ ಮಂದೆಯಿರುವುದು ಮತ್ತು ಒಬ್ಬನೇ ಕುರುಬನಿರುವನು. 17 ತಂದೆಯು ನನ್ನನ್ನು ಪ್ರೀತಿಸುತ್ತಾನೆ. ಏಕೆಂದರೆ ನಾನು ನನ್ನ ಪ್ರಾಣವನ್ನು ಮತ್ತೆ ಪಡೆದುಕೊಳ್ಳುವುದಕ್ಕಾಗಿ ಕೊಡುತ್ತೇನೆ. 18 ನನ್ನ ಪ್ರಾಣವನ್ನು ಯಾರೂ ನನ್ನಿಂದ ಕಸಿದುಕೊಳ್ಳಲಾರರು; ನಾನೇ ಅದನ್ನು ಇಚ್ಛಾಪೂರ್ವಕವಾಗಿ ಕೊಡುತ್ತೇನೆ. ನನ್ನ ಪ್ರಾಣವನ್ನು ಕೊಡುವುದಕ್ಕೂ ಅದನ್ನು ಮತ್ತೆ ಪಡೆದುಕೊಳ್ಳುವುದಕ್ಕೂ ನನಗೆ ಹಕ್ಕಿದೆ. ಹೀಗೆ ಮಾಡಬೇಕೆಂದು ತಂದೆಯೇ ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು.
19 ಯೇಸು ಈ ಸಂಗತಿಗಳನ್ನು ಹೇಳಿದ್ದರಿಂದ ಯೆಹೂದ್ಯರಲ್ಲಿ ಮತ್ತೆ ಭೇದ ಉಂಟಾಯಿತು. 20 ಅವರಲ್ಲಿ ಅನೇಕರು, “ಅವನೊಳಗೆ ದೆವ್ವವು ಸೇರಿಕೊಂಡು ಅವನನ್ನು ಹುಚ್ಚನನ್ನಾಗಿ ಮಾಡಿದೆ. ಅವನಿಗೆ ಏಕೆ ಕಿವಿಗೊಡುತ್ತೀರಿ?” ಎಂದು ಹೇಳಿದರು.
21 ಆದರೆ ಇತರರು, “ದೆವ್ವದಿಂದ ಹುಚ್ಚು ಹಿಡಿದಿರುವ ಮನುಷ್ಯನು ಈ ರೀತಿಯ ಸಂಗತಿಗಳನ್ನು ಹೇಳುವುದಿಲ್ಲ. ಕುರುಡರ ಕಣ್ಣುಗಳನ್ನು ಗುಣಪಡಿಸಲು ದೆವ್ವಕ್ಕೆ ಸಾಧ್ಯವೇ? ಇಲ್ಲ!” ಎಂದು ಹೇಳಿದರು.
ಯೇಸುವಿನ ವಿರುದ್ಧ ಯೆಹೂದ್ಯರು
22 ಜೆರುಸಲೇಮಿನಲ್ಲಿ ಆಚರಿಸುವ ಪ್ರತಿಷ್ಠೆಯ ಹಬ್ಬವು ನಡೆಯುತ್ತಿತ್ತು. ಅದು ಚಳಿಗಾಲದಲ್ಲಿ ಆಚರಿಸುವ ಹಬ್ಬ. 23 ಯೇಸು ದೇವಾಲಯದೊಳಗೆ ಸೊಲೊಮೋನನ ಆಲಯದಲ್ಲಿದ್ದನು. 24 ಯೆಹೂದ್ಯರು ಯೇಸುವಿನ ಸುತ್ತಲೂ ನೆರೆದರು. ಅವರು ಆತನಿಗೆ, “ಇನ್ನೆಷ್ಟುಕಾಲ ನೀನು ನಿನ್ನ ಬಗ್ಗೆ ನಮ್ಮನ್ನು ಆಶ್ಚರ್ಯಗೊಳಿಸುವೆ? ನೀನು ಕ್ರಿಸ್ತನಾಗಿದ್ದರೆ, ನಮಗೆ ಸ್ಪಷ್ಟವಾಗಿ ತಿಳಿಸು” ಎಂದು ಹೇಳಿದರು.
25 ಯೇಸು, “ನಾನು ಆಗಲೇ ನಿಮಗೆ ಹೇಳಿದೆನು. ಆದರೆ ನೀವು ನಂಬಲಿಲ್ಲ. ನನ್ನ ತಂದೆಯ ಹೆಸರಿನಲ್ಲಿ ನಾನು ಅದ್ಭುತಕಾರ್ಯಗಳನ್ನು ಮಾಡುತ್ತೇನೆ. ನಾನು ಯಾರೆಂಬುದನ್ನು ಆ ಅದ್ಭುತಕಾರ್ಯಗಳು ತೋರಿಸುತ್ತವೆ. 26 ಆದರೆ ನೀವು ನಂಬುವುದಿಲ್ಲ. ಏಕೆಂದರೆ ನೀವು ನನ್ನ ಕುರಿಗಳಲ್ಲ (ಜನರಲ್ಲ). 27 ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ನಾನು ಅವುಗಳನ್ನು ಬಲ್ಲೆನು ಮತ್ತು ಅವುಗಳು ನನ್ನನ್ನು ಹಿಂಬಾಲಿಸುತ್ತವೆ. 28 ನನ್ನ ಕುರಿಗಳಿಗೆ ನಾನು ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದಿಗೂ ಸಾಯುವುದಿಲ್ಲ, ಮತ್ತು ಅವುಗಳನ್ನು ಯಾರೂ ನನ್ನಿಂದ ಕಸಿದುಕೊಳ್ಳಲಾರರು. 29 ನನ್ನ ಕುರಿಗಳನ್ನು ನನ್ನ ತಂದೆಯೇ ನನಗೆ ಕೊಟ್ಟನು. ಆತನು ಎಲ್ಲರಿಗಿಂತಲೂ ದೊಡ್ಡವನಾಗಿದ್ದಾನೆ. ನನ್ನ ಕುರಿಗಳನ್ನು ನನ್ನ ತಂದೆಯ ಕೈಯಿಂದ ಯಾರೂ ಕದ್ದುಕೊಳ್ಳಲಾರರು. 30 ತಂದೆಯು ಮತ್ತು ನಾನು ಒಂದೇ ಆಗಿದ್ದೇವೆ” ಎಂದು ಉತ್ತರಕೊಟ್ಟನು.
31 ಯೆಹೂದ್ಯರು ಯೇಸುವನ್ನು ಕೊಲ್ಲಲು ಮತ್ತೆ ಕಲ್ಲುಗಳನ್ನು ತೆಗೆದುಕೊಂಡರು. 32 ಆದರೆ ಯೇಸು ಅವರಿಗೆ, “ನಾನು ತಂದೆಯಿಂದ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡಿದ್ದೇನೆ. ನೀವು ಆ ಕಾರ್ಯಗಳನ್ನು ನೋಡಿದ್ದೀರಿ. ಆ ಒಳ್ಳೆಯ ಕಾರ್ಯಗಳಲ್ಲಿ ಯಾವುದರ ನಿಮಿತ್ತ ನೀವು ನನ್ನನ್ನು ಕೊಲ್ಲಬೇಕೆಂದಿದ್ದೀರಿ?” ಎಂದು ಹೇಳಿದನು.
33 ಯೆಹೂದ್ಯರು, “ನಾವು ನಿನ್ನನ್ನು ಕೊಲ್ಲುತ್ತಿರುವುದು ನೀನು ಮಾಡಿದ ಯಾವುದೇ ಒಳ್ಳೆಯ ಕಾರ್ಯದ ನಿಮಿತ್ತದಿಂದಲ್ಲ. ನೀನು ಮಾಡುತ್ತಿರುವ ದೇವದೂಷಣೆಗಾಗಿ. ನೀನು ಕೇವಲ ಒಬ್ಬ ಮನುಷ್ಯ. ನೀನು ನಿನ್ನನ್ನೇ ದೇವರೆಂದು ಹೇಳಿಕೊಳ್ಳುತ್ತಿರುವೆ! ಆದಕಾರಣ ಕಲ್ಲುಗಳಿಂದ ನಿನ್ನನ್ನು ಕೊಲ್ಲಬೇಕೆಂದಿದ್ದೇವೆ!” ಎಂದು ಉತ್ತರಕೊಟ್ಟರು.
34 ಅದಕ್ಕೆ ಯೇಸು, “ನಿಮ್ಮ ಧರ್ಮಶಾಸ್ತ್ರದಲ್ಲಿ, ‘ನಾನು ನಿಮ್ಮನ್ನು ದೇವರುಗಳೆಂದು ಹೇಳಿದೆನು’(A) ಎಂಬುದಾಗಿ ಬರೆದಿದೆ. 35 ದೇವರ ಸಂದೇಶವನ್ನು ಹೊಂದಿದ್ದ ಜನರನ್ನು ಈ ಪವಿತ್ರ ಗ್ರಂಥವು ದೇವರುಗಳೆಂದು ಕರೆದಿದೆ. ಪವಿತ್ರ ಗ್ರಂಥವು ಯಾವಾಗಲೂ ಸತ್ಯವಾದದ್ದು. 36 ತಂದೆಯೇ ನನ್ನನ್ನು ಪ್ರತಿಷ್ಠಿಸಿ ಈ ಲೋಕಕ್ಕೆ ಕಳುಹಿಸಿಕೊಟ್ಟಿರುವುದರಿಂದ ನಾನು ದೇವರ ಮಗನು ಎಂದು ಹೇಳಿದ್ದಕ್ಕೆ ನೀವು ನನ್ನನ್ನು ದೇವದೂಷಣೆ ಮಾಡುವವನೆಂದು ಹೇಳುವುದೇಕೆ? 37 ನನ್ನ ತಂದೆಯು ಮಾಡುವುದನ್ನು ನಾನು ಮಾಡದಿದ್ದರೆ, ನಾನು ಹೇಳುವುದನ್ನು ನಂಬಬೇಡಿ. 38 ಆದರೆ ನನ್ನ ತಂದೆಯು ಮಾಡುವ ಕಾರ್ಯಗಳನ್ನೇ ನಾನು ಮಾಡಿದರೆ, ಆ ಕಾರ್ಯಗಳಲ್ಲಿ ನೀವು ನಂಬಿಕೆ ಇಡಬೇಕು. ನೀವು ನನ್ನಲ್ಲಿ ನಂಬಿಕೆ ಇಡದಿದ್ದರೂ ನನ್ನ ಕಾರ್ಯಗಳಲ್ಲಾದರೂ ನಂಬಿಕೆ ಇಡಿರಿ. ತಂದೆಯು ನನ್ನಲ್ಲಿದ್ದಾನೆ ಮತ್ತು ನಾನು ತಂದೆಯಲ್ಲಿದ್ದೇನೆ ಎಂಬುದನ್ನು ಆಗ ನೀವು ತಿಳಿದುಕೊಳ್ಳುವಿರಿ ಮತ್ತು ಅರ್ಥಮಾಡಿಕೊಳ್ಳುವಿರಿ” ಎಂದು ಹೇಳಿದನು.
39 ಯೇಸುವನ್ನು ಬಂಧಿಸಲು ಯೆಹೂದ್ಯರು ಮತ್ತೆ ಪ್ರಯತ್ನಿಸಿದರು. ಆದರೆ ಯೇಸು ಅವರಿಂದ ತಪ್ಪಿಸಿಕೊಂಡನು.
40 ಬಳಿಕ ಯೇಸು ಜೋರ್ಡನ್ ನದಿಯ ಆಚೆಯ ದಡಕ್ಕೆ ಹೋದನು. ಯೋಹಾನನು ಮೊದಲು ದೀಕ್ಷಾಸ್ನಾನ ಕೊಡುತ್ತಿದ್ದ ಸ್ಥಳಕ್ಕೆ ಯೇಸು ಹೋಗಿ ಅಲ್ಲಿ ತಂಗಿದನು. 41 ಆಗ ಅನೇಕ ಜನರು ಆತನ ಬಳಿಗೆ ಬಂದರು. “ಯೋಹಾನನು ಎಂದೂ ಅದ್ಭುತಕಾರ್ಯವನ್ನು ಮಾಡಲಿಲ್ಲ. ಆದರೆ ಯೋಹಾನನು ಈ ಮನುಷ್ಯನ (ಯೇಸುವಿನ) ಬಗ್ಗೆ ಹೇಳಿದ ಪ್ರತಿಯೊಂದೂ ಸತ್ಯವಾದದ್ದು” ಎಂದು ಅವರು ಮಾತಾಡಿಕೊಂಡರು. 42 ಮತ್ತು ಅಲ್ಲಿ ಅನೇಕ ಜನರು ಯೇಸುವಿನಲ್ಲಿ ನಂಬಿಕೆ ಇಟ್ಟರು.
ಜ್ಞಾನವು ನಿನ್ನನ್ನು ವ್ಯಭಿಚಾರದಿಂದ ದೂರವಿಡುತ್ತದೆ
7 ನನ್ನ ಮಗನೇ, ನನ್ನ ಮಾತುಗಳನ್ನು ಜ್ಞಾಪಕಮಾಡಿಕೋ, ನನ್ನ ಆಜ್ಞೆಗಳನ್ನು ಮರೆಯಬೇಡ. 2 ನನ್ನ ಆಜ್ಞೆಗಳಿಗೆ ವಿಧೇಯನಾಗು, ಆಗ ನೀನು ಜೀವಿಸುವೆ. ನಿನ್ನ ಕಣ್ಣುಗುಡ್ಡೆಗಳೋ ಎಂಬಂತೆ ನನ್ನ ಉಪದೇಶಗಳಿಗೆ ಎಚ್ಚರಿಕೆಯಿಂದ ವಿಧೇಯನಾಗಿರು. 3 ಅವುಗಳನ್ನು ನಿನ್ನ ಬೆರಳುಗಳ ಸುತ್ತಲೂ ಕಟ್ಟಿಕೊ; ನಿನ್ನ ಹೃದಯದ ಮೇಲೆ ಬರೆದುಕೊ, 4 ಜ್ಞಾನವನ್ನು ನಿನ್ನ ಸಹೋದರಿಯಂತೆ ಪ್ರೀತಿಸು. ವಿವೇಕವನ್ನು ನಿನ್ನ ಕುಟುಂಬದಂತೆ ಪ್ರೀತಿಸು. 5 ಆಗ ಅವು ನಿನ್ನನ್ನು ಬೇರೆ ಹೆಂಗಸರಿಂದ ತಪ್ಪಿಸಿ ಕಾಪಾಡುತ್ತವೆ; ನಿನ್ನನ್ನು ಪಾಪಕ್ಕೆ ನಡೆಸುವಂಥ ಅವರ ಸವಿ ಮಾತುಗಳಿಂದ ತಪ್ಪಿಸಿ ಕಾಪಾಡುತ್ತವೆ.
6 ಒಂದು ದಿನ ನಾನು ನನ್ನ ಮನೆಯ ಕಿಟಿಕಿಯಿಂದ ನೋಡಿದಾಗ 7 ಅನೇಕ ಮೂಢ ಯೌವನಸ್ಥರನ್ನು ಕಂಡೆನು. ಅವರಲ್ಲಿ ತುಂಬಾ ಮೂಢನಾಗಿದ್ದ ಒಬ್ಬ ಯೌವನಸ್ಥನನ್ನು ಗಮನಿಸಿದೆ. 8 ಅವನು ಒಬ್ಬ ಕೆಟ್ಟ ಹೆಂಗಸಿನ ಬೀದಿಯಲ್ಲಿ ಆಕೆಯ ಮನೆಯ ಕಡೆಗೆ ಹೋಗುತ್ತಿದ್ದನು. 9 ಆಗ ಕತ್ತಲಾಗುತ್ತಿತ್ತು. ಸೂರ್ಯ ಮುಳುಗುತ್ತಿದ್ದನು; ರಾತ್ರಿ ಆರಂಭವಾಗುತ್ತಿತ್ತು. 10 ಆ ಹೆಂಗಸು ಅವನನ್ನು ಎದುರುಗೊಳ್ಳಲು ಮನೆಯ ಹೊರಗಡೆ ಬಂದಳು. ಆಕೆಯ ಉಡುಪು ವ್ಯಭಿಚಾರಿಣಿಯ ಉಡುಪಿನಂತಿತ್ತು. ಅವನೊಡನೆ ಪಾಪಮಾಡಬೇಕೆಂಬ ಆಸೆ ಆಕೆಯಲ್ಲಿತ್ತು. 11 ಅವಳು ಸುಮ್ಮನಿರದವಳೂ ಹಟಮಾರಿಯೂ ಆಗಿದ್ದಾಳೆ. ಅವಳು ಎಂದೂ ಮನೆಯಲ್ಲಿ ಇದ್ದವಳಲ್ಲ. 12 ಅವಳು ಪ್ರತಿಯೊಂದು ಮೂಲೆಯಲ್ಲೂ ಗಂಡಸರನ್ನು ಬಲೆಗೆ ಹಾಕಿಕೊಳ್ಳಲು ಕಾದುಕೊಂಡಿರುವಳು. ಅವಳು ಬೀದಿಗಳಲ್ಲಿ ನಡೆದು ಹೋದಳು. 13 ಅವಳು ಆ ಯೌವನಸ್ಥನನ್ನು ಹಿಡಿದುಕೊಂಡು ಮುದ್ದಿಟ್ಟಳು. ಅವಳು ನಾಚಿಕೆಯಿಲ್ಲದೆ ಅವನಿಗೆ, 14 “ಈ ದಿನ ನಾನು ಸಮಾಧಾನಯಜ್ಞವನ್ನು ಅರ್ಪಿಸಬೇಕಿತ್ತು. ನನ್ನ ಹರಕೆಯನ್ನು ಸಲ್ಲಿಸಿದೆನು. ಯಜ್ಞದಲ್ಲಿ ಉಳಿದ ಮಾಂಸ ನನ್ನಲ್ಲಿ ಬಹಳಷ್ಟಿದೆ. 15 ಆದ್ದರಿಂದ ನನ್ನೊಂದಿಗೆ ಬರುವಂತೆ ನಿನ್ನನ್ನು ಕರೆಯಲು ಬಂದೆ. ನಿನಗಾಗಿ ಹುಡುಕಾಡಿ ಈಗ ನಿನ್ನನ್ನು ಕಂಡುಕೊಂಡೆ. 16 ನನ್ನ ಹಾಸಿಗೆಯನ್ನು ಈಜಿಪ್ಟಿನ ಸುಂದರವಾದ ಹೊದಿಕೆಗಳಿಂದ ಹೊದಿಸಿ 17 ಪರಿಮಳದ್ರವ್ಯವನ್ನು ಚಿಮಿಕಿಸಿರುವೆ. ಆ ಪರಿಮಳದ್ರವ್ಯವನ್ನು ರಕ್ತಬೋಳ, ಅಗುರು ಮತ್ತು ಲವಂಗಚಕ್ಕೆಗಳಿಂದ ತಯಾರಿಸಿರುವೆ. 18 ಬಾ, ನಾವು ಮುಂಜಾನೆಯವರೆಗೆ ಪ್ರೇಮಿಸೋಣ; ರಾತ್ರಿಯೆಲ್ಲಾ ಸುಖಿಸೋಣ. 19 ನನ್ನ ಗಂಡನು ವ್ಯಾಪಾರಕ್ಕಾಗಿ ದೂರದೇಶಕ್ಕೆ ಹೋಗಿದ್ದಾನೆ. 20 ದೀರ್ಘಪ್ರಯಾಣಕ್ಕೆ ಬೇಕಾದಷ್ಟು ಹಣವನ್ನು ಅವನು ತನ್ನೊಡನೆ ತೆಗೆದುಕೊಂಡು ಹೋಗಿದ್ದಾನೆ; ಎರಡು ವಾರಗಳವರೆಗೆ ಅವನು ಮನೆಗೆ ಬರುವುದಿಲ್ಲ” ಎಂದು ಹೇಳಿದಳು.
21 ಅವಳು ಆ ಯೌವನಸ್ಥನನ್ನು ಪ್ರೇರೇಪಿಸಲು ಈ ಮಾತುಗಳನ್ನಾಡಿದಳು. ಆಕೆಯ ಸವಿನುಡಿಗಳು ಅವನನ್ನು ಮರುಳುಗೊಳಿಸಿತು. 22-23 ಆ ಯೌವನಸ್ಥನು ಬಲೆಗೆ ಸಿಕ್ಕಿಕೊಳ್ಳುವುದಕ್ಕಾಗಿ ಆಕೆಯನ್ನು ತಕ್ಷಣವೇ ಹಿಂಬಾಲಿಸಿದನು. ಕೊಯ್ಯಲು ಎಳೆದೊಯ್ಯುವ ಹೋರಿಯಂತೆಯೂ ಬೇಟೆಗಾರನು ಬಾಣ ಹೂಡಿ ಎದೆಗೆ ಗುರಿಮಾಡಿದಾಗ ಜಿಗಿದುಕೊಂಡು ಹೋಗುವ ಜಿಂಕೆಯಂತೆಯೂ ಬಲೆಯೊಳಗೆ ಹಾರಿ ಹೋಗುವ ಪಕ್ಷಿಯಂತೆಯೂ ಅವನಿದ್ದನು. ತಾನು ಅಪಾಯದಲ್ಲಿರುವುದು ಅವನಿಗೆ ತಿಳಿದಿರಲಿಲ್ಲ.
24 ಗಂಡುಮಕ್ಕಳೇ, ನನಗೆ ಕಿವಿಗೊಡಿರಿ. ನಾನು ಹೇಳುವ ಮಾತುಗಳಿಗೆ ಗಮನಕೊಡಿರಿ. 25 ಅಂತಹ ಹೆಂಗಸಿನ ಬಗ್ಗೆ ಯೋಚಿಸಲೂಬೇಡಿ, ಆಕೆಗಾಗಿ ಅಲೆದಾಡಲೂಬೇಡಿ. 26 ಆಕೆಯಿಂದ ಅನೇಕ ಗಂಡಸರು ಬಿದ್ದುಹೋಗಿದ್ದಾರೆ; ಅವಳು ಅನೇಕ ಗಂಡಸರನ್ನು ನಾಶಮಾಡಿದ್ದಾಳೆ. 27 ಅವಳ ಮನೆಯು ಪಾತಾಳದ ಮಾರ್ಗದಲ್ಲಿದೆ. ಅವಳ ದಾರಿ ನೇರವಾಗಿ ಮರಣಕ್ಕೆ ನಡೆಸುತ್ತದೆ.
ಒಬ್ಬರಿಗೊಬ್ಬರು ಸಹಾಯ ಮಾಡಿರಿ
6 ಸಹೋದರ ಸಹೋದರಿಯರೇ, ನಿಮ್ಮ ಸಭೆಯಲ್ಲಿ ಯಾವನಾದರೂ ತಪ್ಪು ಮಾಡಿದರೆ, ಆತ್ಮಿಕರಾದ ನೀವು ಅವನ ಬಳಿಗೆ ಹೋಗಿ ಸೌಮ್ಯತೆಯಿಂದ ಅವನನ್ನು ತಿದ್ದಿ ಸರಿಪಡಿಸಬೇಕು. ಆದರೆ ಎಚ್ಚರಿಕೆಯಿಂದಿರಿ! ನೀವು ಸಹ ಶೋಧನೆಗೊಳಗಾಗಿ ಪಾಪಕ್ಕೆ ಬೀಳುವ ಸಾಧ್ಯವಿದೆ. 2 ನಿಮ್ಮ ಭಾರವಾದ ಹೊರೆಗಳನ್ನು ಹೊರಲು ಒಬ್ಬರಿಗೊಬ್ಬರು ಸಹಾಯಮಾಡಿರಿ. ಹೀಗೆ ನೀವು ಕ್ರಿಸ್ತನ ಆಜ್ಞೆಯನ್ನು ನಿಜವಾಗಿಯೂ ಅನುಸರಿಸಿರಿ. 3 ಯಾವನಾದರೂ ತಾನು ಪ್ರಾಮುಖ್ಯನಲ್ಲದಿದ್ದರೂ ತನ್ನನ್ನು ಪ್ರಾಮುಖ್ಯನೆಂದು ಭಾವಿಸಿಕೊಂಡರೆ ಅವನು ತನ್ನನ್ನೇ ಮೋಸಪಡಿಸಿಕೊಳ್ಳುತ್ತಾನೆ. ಒಬ್ಬನು ತನ್ನನ್ನು ಮತ್ತೊಬ್ಬನೊಡನೆ ಹೋಲಿಸಿಕೊಳ್ಳಕೂಡದು. 4 ಪ್ರತಿಯೊಬ್ಬನು ತನ್ನ ನಡತೆಯನ್ನು ತಾನೇ ವಿಮರ್ಶಿಸಿಕೊಳ್ಳಲಿ. ಆಗ ತಾನೇನಾದರೂ ಹೆಚ್ಚಳಪಡುವಂತ ಕಾರ್ಯಗಳನ್ನು ಮಾಡಿದ್ದರೆ ಅವನಿಗೆ ತಿಳಿಯುವುದು. 5 ಪ್ರತಿಯೊಬ್ಬನು ತನ್ನ ಜವಾಬ್ದಾರಿಕೆಯನ್ನು ತಾನೇ ಹೊತ್ತುಕೊಳ್ಳಬೇಕು.
ಜೀವನವು ಜಮೀನಿನಲ್ಲಿ ಬಿತ್ತುವಂತಿದೆ
6 ದೇವರ ವಾಕ್ಯವನ್ನು ಕಲಿತುಕೊಳ್ಳುವವನು, (ತನಗೆ) ಕಲಿಸುವವನಿಗೆ ತನ್ನಲ್ಲಿರುವ ಎಲ್ಲಾ ಒಳ್ಳೆತನಗಳಲ್ಲಿ ಪಾಲು ಕೊಡತಕ್ಕದ್ದು.
7 ಮೋಸಹೋಗಬೇಡಿರಿ! ನೀವು ದೇವರನ್ನು ವಂಚಿಸಲು ಸಾಧ್ಯವಿಲ್ಲ. ಒಬ್ಬನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯುತ್ತಾನೆ. 8 ಒಬ್ಬನು ತನ್ನ ಶರೀರಭಾವವನ್ನು ತೃಪ್ತಿಪಡಿಸುವುದಕ್ಕಾಗಿ ಪಾಪ ಕಾರ್ಯಗಳನ್ನು ಮಾಡಿದರೆ ಆ ಶರೀರಭಾವವು ಅವನಿಗೆ ನಿತ್ಯನಾಶವನ್ನು ಬರಮಾಡುತ್ತದೆ. ಆದರೆ ಒಬ್ಬನು ಪವಿತ್ರಾತ್ಮನನ್ನು ಮೆಚ್ಚಿಸುವುದಕ್ಕಾಗಿ ಒಳ್ಳೆಯ ಕಾರ್ಯಗಳನ್ನು ಮಾಡುವುದಾಗಿದ್ದರೆ, ಅವನು ಪವಿತ್ರಾತ್ಮನಿಂದ ನಿತ್ಯಜೀವವನ್ನು ಹೊಂದಿಕೊಳ್ಳುವನು. 9 ನಾವು ಒಳ್ಳೆಯ ಕಾರ್ಯ ಮಾಡುವುದರಲ್ಲಿ ಬೇಸರಗೊಳ್ಳಬಾರದು. ತಕ್ಕ ಸಮಯದಲ್ಲಿ ನಾವು ನಿತ್ಯಜೀವವೆಂಬ ಸುಗ್ಗಿಯನ್ನು ಪಡೆಯುವೆವು. ಆದ್ದರಿಂದ ಒಳ್ಳೆಯ ಕಾರ್ಯ ಮಾಡುವುದನ್ನು ನಾವು ಬಿಟ್ಟುಬಿಡಬಾರದು. 10 ಯಾರಿಗಾದರೂ ಒಳ್ಳೆಯದನ್ನು ಮಾಡಲು ಅವಕಾಶವಿರುವಾಗ ನಾವು ಮಾಡಲೇಬೇಕು. ಅದರಲ್ಲೂ ಒಂದೇ ಕುಟುಂಬದವರಂತಿರುವ ವಿಶ್ವಾಸಿಗಳ ಬಗ್ಗೆ ನಾವು ವಿಶೇಷವಾದ ಗಮನ ಕೊಡಬೇಕು.
ಪೌಲನ ಕಡೇ ಮಾತುಗಳು
11 ಇದನ್ನು ನಾನೇ ಕೈಯಾರೆ ಬರೆಯುತ್ತಿದ್ದೇನೆ. ನಾನು ಎಷ್ಟು ದೊಡ್ಡ ಅಕ್ಷರಗಳಲ್ಲಿ ಬರೆಯುತ್ತಿದ್ದೇನೆಂಬುದನ್ನು ನೋಡಿರಿ. 12 ನೀವು ಸುನ್ನತಿ ಮಾಡಿಸಿಕೊಳ್ಳಬೇಕೆಂದು ಕೆಲವರು ನಿಮ್ಮನ್ನು ಒತ್ತಾಯಿಸುತ್ತಿದ್ದಾರೆ. ತಮ್ಮನ್ನು (ಯೆಹೂದ್ಯರು) ಸ್ವೀಕರಿಸಿಕೊಳ್ಳಲಿ ಎಂಬುದೇ ಅವರ ಉದ್ದೇಶ. ಕ್ರಿಸ್ತನ ಶಿಲುಬೆಯ ದೆಸೆಯಿಂದ ತಾವು ಹಿಂಸೆಗೆ ಒಳಗಾಗಬಹುದೆಂಬ ಭಯದಿಂದ ಅವರು ಹೀಗೆ ಮಾಡುತ್ತಾರೆ. 13 ಸುನ್ನತಿ ಮಾಡಿಸಿಕೊಂಡಿರುವ ಅವರೇ ಧರ್ಮಶಾಸ್ತ್ರಕ್ಕೆ ವಿಧೇಯರಾಗುತ್ತಿಲ್ಲ. ಆದರೆ ನಿಮಗೂ ಸುನ್ನತಿ ಮಾಡಿಸಿ ಅದರ ಬಗ್ಗೆ ಹೆಚ್ಚಳಪಡಬೇಕೆಂಬುದೇ ಅವರ ಆಸೆ.
14 ಅಂಥ ವಿಷಯಗಳ ಬಗ್ಗೆ ನಾನು ಹೆಚ್ಚಳಪಡುವುದೇ ಇಲ್ಲ. ನಾನು ಹೆಮ್ಮೆಪಡಲು ನನಗಿರುವ ಒಂದೇ ಕಾರಣವೇನೆಂದರೆ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಶಿಲುಬೆಯೊಂದೇ. ಶಿಲುಬೆಯ ಮೇಲೆ ಯೇಸುವಿಗಾದ ಮರಣದ ಮೂಲಕ ಲೋಕವು ನನ್ನ ಪಾಲಿಗೆ ಸತ್ತುಹೋಯಿತು. ನಾನು ಸಹ ಲೋಕದ ಪಾಲಿಗೆ ಸತ್ತುಹೋದೆನು. 15 ಒಬ್ಬನಿಗೆ ಸುನ್ನತಿಯಾಗಿದೆಯೋ ಸುನ್ನತಿಯಾಗಿಲ್ಲವೋ ಎಂಬುದು ಮುಖ್ಯವಲ್ಲ. ಆದರೆ ದೇವರಿಂದ ಹೊಸ ಸೃಷ್ಟಿಯಾಗಿರುವುದೇ ಮುಖ್ಯವಾದದ್ದು.[a] 16 ಈ ನಿಯಮವನ್ನು ಅನುಸರಿಸುವವರಿಗೆಲ್ಲ, ಅಂದರೆ ನಿಜ ಇಸ್ರೇಲರಾದ ದೇವ ಜನರಿಗೆಲ್ಲ ಶಾಂತಿಯೂ ಕರುಣೆಯೂ ಆಗಲಿ.
17 ಆದ್ದರಿಂದ ಇನ್ನು ಮೇಲೆ ನನಗೆ ತೊಂದರೆ ಕೊಡಬೇಡಿ. ನನ್ನ ದೇಹದ ಮೇಲೆ ಬಾಸುಂಡೆಯ ಗುರುತುಗಳಿವೆ. ನಾನು ಕ್ರಿಸ್ತನವನೆಂಬುದಕ್ಕೆ ಈ ಗುರುತುಗಳೇ ಸಾಕ್ಷಿ.
18 ನನ್ನ ಸಹೋದರ ಸಹೋದರಿಯರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲೆಂದು ಪ್ರಾರ್ಥಿಸುತ್ತೇನೆ. ಆಮೆನ್.
Kannada Holy Bible: Easy-to-Read Version. All rights reserved. © 1997 Bible League International