M’Cheyne Bible Reading Plan
ಧೂಪವೇದಿಕೆ
30 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಜಾಲೀಮರದಿಂದ ಧೂಪವೇದಿಕೆಯನ್ನು ಮಾಡಿಸು. 2 ಈ ಧೂಪವೇದಿಕೆಯು ಚೌಕವಾಗಿ ಒಂದು ಮೊಳ ಉದ್ದ, ಒಂದು ಮೊಳ ಅಗಲ, ಎರಡು ಮೊಳ ಎತ್ತರ ಇರಬೇಕು. ಅದರ ನಾಲ್ಕು ಮೂಲೆಗಳಲ್ಲೂ ಕೊಂಬುಗಳಿರಬೇಕು. ಈ ಕೊಂಬುಗಳು ಧೂಪವೇದಿಕೆಯ ಅವಿಭಾಜ್ಯ ಭಾಗವಾಗಿರಬೇಕು. 3 ಧೂಪವೇದಿಕೆಯ ಮೇಲ್ಭಾಗವನ್ನೂ ಎಲ್ಲಾ ಪಾರ್ಶ್ವಗಳನ್ನೂ ಅದರ ಕೊಂಬುಗಳನ್ನೂ ಶುದ್ಧಬಂಗಾರದ ತಗಡಿನಿಂದ ಹೊದಿಸಬೇಕು ಮತ್ತು ಸುತ್ತಲೂ ಚಿನ್ನದ ಕಟ್ಟನ್ನು ಕಟ್ಟಿಸಬೇಕು. 4 ಧೂಪವೇದಿಕೆಯ ಎದುರುಬದುರಾಗಿರುವ ಎರಡು ಗೋಡೆಗಳಲ್ಲಿ ಕಟ್ಟಿನ ಕೆಳಗೆ ಎರಡು ಚಿನ್ನದ ಬಳೆಗಳನ್ನು ಮಾಡಿಸು. ಧೂಪವೇದಿಕೆಯನ್ನು ಹೊರುವ ಕೋಲುಗಳನ್ನು ಈ ಬಳೆಗಳು ಹಿಡಿದುಕೊಂಡಿರುತ್ತವೆ. 5 ಕೋಲುಗಳನ್ನು ಜಾಲೀಮರದಿಂದ ಮಾಡಿಸು. ಚಿನ್ನದ ತಗಡಿನಿಂದ ಆ ಕೋಲುಗಳನ್ನು ಹೊದಿಸು. 6 ವಿಶೇಷ ಪರದೆಯ (ಒಡಂಬಡಿಕೆಯ ಪೆಟ್ಟಿಗೆಯನ್ನು ಆವರಿಸಿಕೊಂಡಿರುವ) ಮುಂಭಾಗದಲ್ಲಿ ಧೂಪವೇದಿಕೆಯನ್ನು ಇಡು. ಧೂಪವೇದಿಕೆಯು ಒಡಂಬಡಿಕೆ ಪೆಟ್ಟಿಗೆಯ ಕೃಪಾಸನದ ಮುಂಭಾಗದಲ್ಲಿರುವುದು. ಇದು ನಾನು ನಿನ್ನನ್ನು ಸಂಧಿಸುವ ಸ್ಥಳವಾಗಿದೆ.
7 “ಆರೋನನು ಪ್ರತಿಮುಂಜಾನೆ ಧೂಪವೇದಿಕೆಯ ಮೇಲೆ ಸುಗಂಧದ್ರವ್ಯಗಳ ಧೂಪವನ್ನು ಉರಿಸಬೇಕು. ಅವನು ದೀಪಗಳನ್ನು ಸರಿಪಡಿಸಲು ಬರುವಾಗ ಇದನ್ನು ಮಾಡುವನು. 8 ತಿರುಗಿ ಸಾಯಂಕಾಲದಲ್ಲಿ ಧೂಪವನ್ನು ಉರಿಸಬೇಕು. ಇದು ಸಾಯಂಕಾಲಗಳಲ್ಲಿ ಅವನು ದೀಪಗಳನ್ನು ಹೊತ್ತಿಸುವ ಸಮಯವಾಗಿರುತ್ತದೆ. ಹೀಗೆ ಪ್ರತಿದಿನ ಯೆಹೋವನ ಮುಂದೆ ನಿತ್ಯವಾದ ಧೂಪಸಮರ್ಪಣೆ ಇರುವುದು. 9 ಈ ಧೂಪವೇದಿಕೆಯನ್ನು ಬೇರೆ ವಿಧದ ಧೂಪಸಮರ್ಪಣೆಗಾಗಲಿ ಸರ್ವಾಂಗಹೋಮವನ್ನು ಅರ್ಪಿಸುವುದಕ್ಕಾಗಲಿ ಯಾವುದೇ ಧಾನ್ಯಸಮರ್ಪಣೆಗಾಗಲಿ ಪಾನದ್ರವ್ಯಸಮರ್ಪಣೆಗಾಗಲಿ ಉಪಯೋಗಿಸಬಾರದು.
10 “ಆರೋನನು ವರ್ಷಕ್ಕೊಮ್ಮೆ ಯೆಹೋವನಿಗೆ ವಿಶೇಷ ಯಜ್ಞವನ್ನು ಸಮರ್ಪಿಸಬೇಕು. ಜನರ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಆರೋನನು ದೋಷಪರಿಹಾರಕ ಯಜ್ಞದ ರಕ್ತವನ್ನು ಉಪಯೋಗಿಸುವನು. ಆರೋನನು ಇದನ್ನು ಈ ಯಜ್ಞವೇದಿಕೆಯ ಕೊಂಬುಗಳಲ್ಲಿ ಮಾಡುವನು. ಆ ದಿನವು ದೋಷಪರಿಹಾರಕ ದಿನವೆಂದು ಕರೆಯಲ್ಪಡುವುದು. ಯೆಹೋವನಿಗೆ ಇದು ಅತೀ ಪರಿಶುದ್ಧವಾದ ವಿಶೇಷ ದಿನವಾಗಿದೆ.”
ದೇವಾಲಯದ ತೆರಿಗೆ
11 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 12 “ಇಸ್ರೇಲರನ್ನು ಲೆಕ್ಕಿಸು. ಹೀಗಾಗಿ ಎಷ್ಟು ಮಂದಿ ಜನರಿರುತ್ತಾರೆಂದು ನೀನು ತಿಳಿದುಕೊಳ್ಳುವೆ. ಪ್ರತಿಸಾರಿ ಇದನ್ನು ಮಾಡಿದಾಗ, ಪ್ರತಿಯೊಬ್ಬನು ತನಗೋಸ್ಕರವಾಗಿ ಯೆಹೋವನಿಗೆ ತೆರಿಗೆಯನ್ನು ಕೊಡಬೇಕು. ಆಗ ಜನರಿಗೆ ಯಾವ ಕೇಡುಗಳೂ ಉಂಟಾಗುವುದಿಲ್ಲ. 13 ಲೆಕ್ಕಿಸಲ್ಪಟ್ಟ ಪ್ರತಿಯೊಬ್ಬನು ಅಧಿಕೃತ ಅಳತೆಗನುಸಾರವಾಗಿರುವ ಅರ್ಧಶೆಕೆಲ್ ಕಪ್ಪಕಾಣಿಕೆಯನ್ನು ಕೊಡಬೇಕು. ಈ ಅರ್ಧಶೆಕೆಲ್ ಯೆಹೋವನಿಗೆ ಕಾಣಿಕೆಯಾಗಿರುತ್ತದೆ. 14 ಲೆಕ್ಕಿಸಲ್ಪಟ್ಟವರಲ್ಲಿ ಇಪ್ಪತ್ತು ವರ್ಷದವರೂ ಅದಕ್ಕೆ ಮೇಲ್ಪಟ್ಟವರೂ ಈ ಕಾಣಿಕೆಯನ್ನು ಯೆಹೋವನಿಗೆ ಕೊಡಬೇಕು. 15 ಐಶ್ವರ್ಯವಂತರು ಅರ್ಧಶೆಕೆಲಿಗಿಂತ ಹೆಚ್ಚು ಕೊಡಬಾರದು; ಬಡವರು ಅರ್ಧಶೆಕೆಲಿಗಿಂತ ಕಡಿಮೆ ಕೊಡಬಾರದು. ಜನರೆಲ್ಲರೂ ಈ ಕಾಣಿಕೆಯನ್ನು ಯೆಹೋವನಿಗೆ ಅರ್ಪಿಸಬೇಕು. ಇದು ನಿಮ್ಮ ಪ್ರಾಣರಕ್ಷಣೆಯ ತೆರಿಗೆಯಾಗಿದೆ. 16 ಇಸ್ರೇಲರಿಂದ ಈ ಹಣವನ್ನು ಒಟ್ಟುಗೂಡಿಸಬೇಕು. ದೇವದರ್ಶನಗುಡಾರದ ಸೇವೆಗಾಗಿ ಹಣವನ್ನು ಉಪಯೋಗಿಸಬೇಕು. ಯೆಹೋವನು ತನ್ನ ಜನರನ್ನು ಜ್ಞಾಪಿಸಿಕೊಳ್ಳುವುದಕ್ಕಾಗಿ ಈ ಕಪ್ಪವು ಒಂದು ಮಾರ್ಗವಾಗಿದೆ. ಅವರು ತಮ್ಮ ಪ್ರಾಣರಕ್ಷಣೆಗಾಗಿ ಹಣವನ್ನು ಕೊಡುತ್ತಿರುವರು.”
ಗಂಗಾಳ
17 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 18 “ತಾಮ್ರದ ಗಂಗಾಳವನ್ನು ಮಾಡಿ ಅದನ್ನು ತಾಮ್ರದ ಪೀಠದ ಮೇಲಿಡು. ತೊಳೆದುಕೊಳ್ಳುವುದಕ್ಕೆ ನೀವು ಇದನ್ನು ಉಪಯೋಗಿಸುವಿರಿ. ಗಂಗಾಳವನ್ನು ದೇವದರ್ಶನಗುಡಾರ ಮತ್ತು ಯಜ್ಞವೇದಿಕೆಯ ನಡುವೆ ಇಡು. ಗಂಗಾಳದಲ್ಲಿ ನೀರನ್ನು ತುಂಬಿಸು. 19 ಆರೋನನು ಮತ್ತು ಅವನ ಪುತ್ರರು ಈ ಗಂಗಾಳದಲ್ಲಿರುವ ನೀರಿನಿಂದ ತಮ್ಮ ಕೈಕಾಲುಗಳನ್ನು ತೊಳೆದುಕೊಳ್ಳಬೇಕು. 20 ಪ್ರತಿಸಾರಿ ದೇವದರ್ಶನಗುಡಾರಕ್ಕೆ ಪ್ರವೇಶಿಸುವಾಗ ಅಥವಾ ಯೆಹೋವನಿಗಾಗಿ ಸರ್ವಾಂಗಹೋಮಗಳನ್ನು ಅರ್ಪಿಸಲು ಯಜ್ಞವೇದಿಕೆಯ ಹತ್ತಿರಕ್ಕೆ ಬರುವಾಗ ಅವರು ನೀರಿನಿಂದ ತೊಳೆದುಕೊಳ್ಳಬೇಕು. ಆಗ ಅವರು ಸಾಯುವುದಿಲ್ಲ. 21 ಅವರು ತಮ್ಮ ಕೈಕಾಲುಗಳನ್ನು ತೊಳೆದುಕೊಳ್ಳುವುದರಿಂದ ಅವರು ಸಾಯುವುದಿಲ್ಲ. ಆರೋನನಿಗೂ ಅವನ ಸಂತತಿಯವರಿಗೂ ಇದು ಶಾಶ್ವತವಾದ ನಿಯಮ. ತಲೆಮಾರುಗಳವರೆಗೆ ಆರೋನನ ಸಂತತಿಯವರಿಗೆಲ್ಲಾ ಇದೇ ಕಟ್ಟಳೆಯಿರುವುದು.”
ಅಭಿಷೇಕತೈಲ
22 ತರುವಾಯ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 23 “ಶ್ರೇಷ್ಠವಾದ ಸುಗಂಧದ್ರವ್ಯಗಳನ್ನು ಮಾಡಿಸು. ಹನ್ನೆರಡು ಪೌಂಡುಗಳಷ್ಟು ಅಚ್ಚ ರಕ್ತಬೋಳ, ಅದರ ಅರ್ಧದಷ್ಟು ಅಂದರೆ ಆರು ಪೌಂಡು ಸುವಾಸನೆಯುಳ್ಳ ದಾಲ್ಚಿನ್ನಿ, ಹನ್ನೆರಡು ಪೌಂಡುಗಳಷ್ಟು ಸುವಾಸನೆಯುಳ್ಳ ಬಜೆ, 24 ಮತ್ತು ಹನ್ನೆರಡು ಪೌಂಡುಗಳಷ್ಟು ಲವಂಗಚಕ್ಕೆಯನ್ನು ತೆಗೆದುಕೊಂಡು ಬಾ. ಇವುಗಳನ್ನೆಲ್ಲ ಅಧಿಕೃತ ಅಳತೆಮಾಪಕದಿಂದ ಅಳತೆಮಾಡು. ಒಂದು ಗ್ಯಾಲನ್ ಆಲಿವ್ ಎಣ್ಣೆಯನ್ನೂ ತೆಗೆದುಕೊಂಡು ಬಾ.
25 “ಸುವಾಸನೆಯುಳ್ಳ ಪವಿತ್ರ ಅಭಿಷೇಕತೈಲವನ್ನು ಮಾಡಲು ಇವುಗಳನ್ನೆಲ್ಲ ಒಟ್ಟಿಗೆ ಬೆರೆಸು. 26 ದೇವದರ್ಶನಗುಡಾರವನ್ನು ಮತ್ತು ಒಡಂಬಡಿಕೆಯ ಪೆಟ್ಟಿಗೆಯನ್ನು ಅಭಿಷೇಕಿಸಲು ಈ ತೈಲವನ್ನು ಉಪಯೋಗಿಸು. 27 ಈ ತೈಲವನ್ನು ಮೇಜಿನ ಮೇಲಿರುವ ಎಲ್ಲಾ ಉಪಕರಣಗಳ ಮೇಲೆ ಸುರಿ. ಈ ತೈಲವನ್ನು ದೀಪಸ್ತಂಭ ಮತ್ತು ಅದರ ಉಪಕರಣಗಳೆಲ್ಲದರ ಮೇಲೆ ಸುರಿ. ಆ ಯಜ್ಞವೇದಿಕೆಯ ಮೇಲಿರುವ ಅದರ ಉಪಕರಣಗಳ ಮೇಲೆಯೂ ಈ ತೈಲವನ್ನು ಸುರಿ. ತೈಲವನ್ನು ಧೂಪವೇದಿಕೆಯ ಮೇಲೆ ಸುರಿ. 28 ದೇವರಿಗೆ ಬೆಂಕಿಯ ಮೂಲಕ ಅರ್ಪಿಸುವ ಹೋಮಗಳ ಮೇಲೆಯೂ ತೈಲವನ್ನು ಸುರಿ. ಈ ತೈಲವನ್ನು ಗಂಗಾಳದ ಮೇಲೆಯೂ ಮತ್ತು ಗಂಗಾಳದ ಕೆಳಗಿರುವ ಪೀಠದ ಮೇಲೆಯೂ ಸುರಿ. 29 ಆಗ ನೀನು ಈ ಉಪಕರಣಗಳನ್ನೆಲ್ಲ ಪವಿತ್ರಗೊಳಿಸುವೆ. ಅವುಗಳು ಯೆಹೋವನಿಗೆ ಬಹು ವಿಶೇಷವಾಗಿವೆ. ಅವುಗಳಿಗೆ ಸೋಂಕಿದ್ದೆಲ್ಲವೂ ಪವಿತ್ರವಾಗುತ್ತವೆ.
30 “ಆರೋನನನ್ನು ಮತ್ತು ಅವನ ಪುತ್ರರನ್ನು ಈ ತೈಲದಿಂದ ಅಭಿಷೇಕಿಸು. ಅವರು ವಿಶೇಷವಾದ ರೀತಿಯಲ್ಲಿ ನನ್ನ ಸೇವೆಮಾಡುತ್ತಾರೆಂದು ಇದು ತೋರಿಸುವುದು. ಆಗ ಅವರು ಅಭಿಷೇಕಿಸಲ್ಪಟ್ಟ ಯಾಜಕರಾಗಿ ನನ್ನ ಸೇವೆಮಾಡಬಹುದು. 31 ಅಭಿಷೇಕತೈಲವು ಪವಿತ್ರವಾದದ್ದು. ಅದನ್ನು ಯಾವಾಗಲೂ ನನಗಾಗಿ ಮಾತ್ರವೇ ಉಪಯೋಗಿಸಬೇಕೆಂದು ಇಸ್ರೇಲರಿಗೆ ಹೇಳು. 32 ಯಾರೂ ಇದನ್ನು ಸಾಮಾನ್ಯವಾದ ಸುಗಂಧ ವಾಸನೆಯುಳ್ಳ ತೈಲವಾಗಿ ಉಪಯೋಗಿಸಬಾರದು. ಈ ವಿಶೇಷವಾದ ತೈಲವನ್ನು ಮಾಡುವ ರೀತಿಯಲ್ಲಿ ಸಾಮಾನ್ಯವಾದ ಸುಗಂಧತೈಲವನ್ನು ಮಾಡಬಾರದು. ಈ ತೈಲವು ಪವಿತ್ರವಾದದ್ದು. ಇದು ನಿಮಗೆ ಬಹಳ ವಿಶೇಷವಾದದ್ದಾಗಿರಬೇಕು. 33 ಯಾವನಾದರೂ ಸುಗಂಧತೈಲವನ್ನು ಈ ಪವಿತ್ರತೈಲದಂತೆ ಮಾಡಿ ಯಾಜಕನಲ್ಲದ ಒಬ್ಬನಿಗೆ ಅದನ್ನು ಕೊಟ್ಟರೆ, ಅವನನ್ನು ಅವನ ಕುಲದಿಂದ ಬಹಿಷ್ಕರಿಸಬೇಕು.”
ಧೂಪ
34 ಬಳಿಕ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ನೀನು ಹಾಲುಮಡ್ಡಿ, ಗುಗ್ಗುಲ, ಗಂಧದ ಚೆಕ್ಕೆ ಎಂಬ ಸುಗಂಧ ದ್ರವ್ಯಗಳನ್ನು ಸಮವಾಗಿ ತೆಗೆದುಕೊ. 35 ಸುವಾಸನೆಯುಳ್ಳ ಧೂಪವನ್ನು ಮಾಡುವುದಕ್ಕೆ ಈ ಸುಗಂಧ ದ್ರವ್ಯಗಳನ್ನು ಒಟ್ಟಾಗಿ ಬೆರೆಸು. ಸುಗಂಧದ್ರವ್ಯಕಾರನು ಮಾಡುವ ಪ್ರಕಾರವೇ ಇದನ್ನು ಮಾಡು. ಈ ಧೂಪಕ್ಕೆ ಉಪ್ಪನ್ನು ಬೆರೆಸು. ಉಪ್ಪು ಅದನ್ನು ಶುದ್ಧಗೊಳಿಸುವುದು. 36 ಸ್ವಲ್ಪ ಧೂಪವನ್ನು ಅರೆದು ಪುಡಿ ಮಾಡು. ಈ ಪುಡಿಯನ್ನು ದೇವದರ್ಶನಗುಡಾರದಲ್ಲಿರುವ ಒಡಂಬಡಿಕೆ ಪೆಟ್ಟಿಗೆಯ ಮುಂದೆ ನಾನು ನಿನಗೆ ದರ್ಶನ ಕೊಡುವ ಸ್ಥಳದಲ್ಲಿಡು. ಈ ಧೂಪದ ಪುಡಿಯನ್ನು ಅದರ ವಿಶೇಷ ಉದ್ದೇಶಕ್ಕಾಗಿ ಮಾತ್ರವೇ ಉಪಯೋಗಿಸಬೇಕು. ಅದು ಅತಿ ಪರಿಶುದ್ಧವಾದದ್ದು. 37 ನೀನು ಈ ಧೂಪವನ್ನು ಯೆಹೋವನಿಗಾಗಿ ವಿಶೇಷವಾದ ರೀತಿಯಲ್ಲಿ ಮಾತ್ರ ಉಪಯೋಗಿಸಬೇಕು. ನೀನು ಈ ಧೂಪವನ್ನು ವಿಶೇಷವಾದ ರೀತಿಯಲ್ಲಿ ತಯಾರಿಸಬೇಕು. ಈ ರೀತಿ ವಿಶೇಷವಾಗಿ ಬೇರೆ ಯಾವ ಧೂಪವನ್ನೂ ಮಾಡಬಾರದು. 38 ಸುವಾಸನೆಗೋಸ್ಕರ ಒಬ್ಬನು ತನಗಾಗಿ ಸ್ವಲ್ಪ ಧೂಪವನ್ನು ಈ ರೀತಿಯಲ್ಲಿ ಮಾಡಿದರೆ ಅವನನ್ನು ಅವನ ಕುಲದಿಂದ ಬಹಿಷ್ಕರಿಸಬೇಕು.”
ಯೇಸು ಹುಟ್ಟು ಕುರುಡನನ್ನು ಗುಣಪಡಿಸುವನು
9 ಯೇಸು ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ಹುಟ್ಟು ಕುರುಡನನ್ನು ಕಂಡನು. 2 ಯೇಸುವಿನ ಶಿಷ್ಯರು ಆತನಿಗೆ, “ಗುರುವೇ, ಈ ಮನುಷ್ಯನು ಹುಟ್ಟು ಕುರುಡನಾಗಲು ಯಾರ ಪಾಪ ಕಾರಣ? ಅವನ ಸ್ವಂತ ಪಾಪವೇ ಅಥವಾ ಅವನ ತಂದೆತಾಯಿಗಳ ಪಾಪವೇ?” ಎಂದು ಕೇಳಿದರು.
3 ಯೇಸು, “ಅವನ ಪಾಪವಾಗಲಿ ಅವನ ತಂದೆತಾಯಿಗಳ ಪಾಪವಾಗಲಿ ಇದಕ್ಕೆ ಕಾರಣವಲ್ಲ. ದೇವರ ಕಾರ್ಯವು ಅವನಲ್ಲಿ ತೋರಿಬಲೆಂದು ಹೀಗಾಗಿದ್ದಾನೆ. 4 ನನ್ನನ್ನು ಕಳುಹಿಸಿದಾತನ ಕಾರ್ಯವನ್ನು ಹಗಲಿರುವಾಗಲೇ ನಾವು ಮಾಡಬೇಕು. ರಾತ್ರಿ ಬರುತ್ತದೆ. ಆಗ ಯಾವನೂ ಕೆಲಸ ಮಾಡಲಾರನು. 5 ನಾನು ಈ ಲೋಕದಲ್ಲಿರುವಾಗ, ನಾನೇ ಈ ಲೋಕಕ್ಕೆ ಬೆಳಕಾಗಿದ್ದೇನೆ” ಎಂದು ಹೇಳಿದನು.
6 ಯೇಸು ಈ ಮಾತನ್ನು ಹೇಳಿದ ಮೇಲೆ ನೆಲದ ಮೇಲೆ ಉಗುಳಿ ಅದರಿಂದ ಕೆಸರನ್ನು ಮಾಡಿಕೊಂಡು ಆ ಮನುಷ್ಯನ ಕಣ್ಣುಗಳಿಗೆ ಹಚ್ಚಿದನು. 7 ಯೇಸು ಆ ಮನುಷ್ಯನಿಗೆ, “ಹೋಗಿ ಸಿಲೋವ ಕೊಳದಲ್ಲಿ ತೊಳೆದುಕೊ” ಎಂದು ಹೇಳಿದನು. (ಸಿಲೋವ ಅಂದರೆ “ಕಳುಹಿಸಲ್ಪಟ್ಟವನು.”) ಅಂತೆಯೇ ಅವನು ಹೋಗಿ ತೊಳೆದುಕೊಂಡನು. ಆ ಕೂಡಲೇ ಅವನಿಗೆ ದೃಷ್ಟಿಬಂದಿತು.
8 ಈ ಮನುಷ್ಯನು ಮೊದಲು ಭಿಕ್ಷೆ ಬೇಡುತ್ತಿದ್ದುದನ್ನು ನೋಡಿದ್ದ ಕೆಲವರು ಮತ್ತು ಅವನ ನೆರೆಯವರು, “ನೋಡಿ! ಯಾವಾಗಲೂ ಭಿಕ್ಷೆ ಬೇಡುತ್ತಾ ಕುಳಿತುಕೊಂಡಿದ್ದವನು ಇವನೇ ಅಲ್ಲವೇ” ಎಂದು ವಿಚಾರಿಸಿದರು.
9 ಕೆಲವು ಜನರು, “ಹೌದು ಅವನೇ” ಎಂದು ಹೇಳಿದರು. ಇನ್ನು ಕೆಲವರು, “ಇಲ್ಲ, ಇವನು ಆ ಮನುಷ್ಯನಲ್ಲ. ಇವನು ಅವನಂತಿದ್ದಾನಷ್ಟೇ” ಎಂದು ಹೇಳಿದರು.
ಅದಕ್ಕೆ ಆ ಮನುಷ್ಯನು, “ನಾನೇ ಅವನು” ಎಂದು ಹೇಳಿದನು.
10 ಜನರು, “ನೀನು ದೃಷ್ಟಿಯನ್ನು ಹೇಗೆ ಪಡೆದುಕೊಂಡೆ?” ಎಂದು ಕೇಳಿದರು.
11 ಆ ಮನುಷ್ಯನು, “ಯೇಸು ಎಂಬವನು ಸ್ವಲ್ಪ ಕೆಸರನ್ನು ಮಾಡಿ ನನ್ನ ಕಣ್ಣುಗಳಿಗೆ ಹಚ್ಚಿ, ಸಿಲೋವ ಕೊಳಕ್ಕೆ ಹೋಗಿ ತೊಳೆದುಕೊಳ್ಳಲು ಹೇಳಿದನು. ಅಂತೆಯೇ ನಾನು ತೊಳೆದುಕೊಂಡೆನು. ಈಗ ನನಗೆ ಕಣ್ಣು ಕಾಣಿಸುತ್ತಿದೆ” ಎಂದು ಉತ್ತರಕೊಟ್ಟನು.
12 ಜನರು ಆ ಮನುಷ್ಯನಿಗೆ, “ಆ ವ್ಯಕ್ತಿ ಎಲ್ಲಿದ್ದಾನೆ?” ಎಂದು ಕೇಳಿದರು.
ಆ ಮನುಷ್ಯನು, “ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟನು.
ಗುಣಹೊಂದಿದ ವ್ಯಕ್ತಿಗೆ ಫರಿಸಾಯರಿಂದ ವಿಚಾರಣೆ
13 ಬಳಿಕ ಜನರು ಆ ಮನುಷ್ಯನನ್ನು ಫರಿಸಾಯರ ಬಳಿಗೆ ಕರೆದು ತಂದರು. ಮೊದಲು ಕುರುಡನಾಗಿದ್ದವನು ಅವನೇ. 14 ಯೇಸು ಕೆಸರು ಮಾಡಿ ಅವನ ಕಣ್ಣುಗಳನ್ನು ಗುಣಪಡಿಸಿದ್ದನು. ಯೇಸು ಈ ಕಾರ್ಯವನ್ನು ಮಾಡಿದ್ದು ಸಬ್ಬತ್‌ದಿನದಲ್ಲಿ. 15 ಆದ್ದರಿಂದ ಅವರು ಆ ಮನುಷ್ಯನಿಗೆ, “ನೀನು ದೃಷ್ಟಿಯನ್ನು ಹೇಗೆ ಪಡೆದುಕೊಂಡೆ?” ಎಂದು ಕೇಳಿದರು.
ಆ ಮನುಷ್ಯನು, “ಆತನು ನನ್ನ ಕಣ್ಣುಗಳಿಗೆ ಕೆಸರನ್ನು ಹಚ್ಚಿದನು. ನಾನು ತೊಳೆದುಕೊಂಡೆನು. ಈಗ ನನಗೆ ಕಣ್ಣು ಕಾಣಿಸುತ್ತಿದೆ” ಎಂದು ಉತ್ತರಕೊಟ್ಟನು.
16 ಫರಿಸಾಯರಲ್ಲಿ ಕೆಲವರು, “ಈ ಮನುಷ್ಯನು (ಯೇಸು) ಸಬ್ಬತ್‌ದಿನದ ವಿಷಯದಲ್ಲಿ ಧರ್ಮಶಾಸ್ತ್ರಕ್ಕೆ ವಿಧೇಯನಾಗುವುದಿಲ್ಲ. ಆದ್ದರಿಂದ ಇವನು ದೇವರಿಂದ ಬಂದಿಲ್ಲ” ಎಂದು ಹೇಳಿದರು.
ಇತರರು, “ಇವನು ಪಾಪಿಯಾಗಿದ್ದರೆ ಇಂಥ ಅದ್ಭುತಕಾರ್ಯಗಳನ್ನು ಹೇಗೆ ಮಾಡಲಾದೀತು?” ಎಂದರು. ಹೀಗೆ ಯೆಹೂದ್ಯರಲ್ಲೇ ಭಿನ್ನಾಭಿಪ್ರಾಯ ಉಂಟಾಯಿತು.
17 ಯೆಹೂದ್ಯನಾಯಕರು ಗುಣಹೊಂದಿದವನಿಗೆ, “ಆ ಮನುಷ್ಯನು (ಯೇಸು) ನಿನ್ನನ್ನು ಗುಣಪಡಿಸಿದನು ಮತ್ತು ನಿನಗೆ ಕಣ್ಣು ಕಾಣಿಸುತ್ತಿದೆ. ಆದರೆ ಅವನ ಬಗ್ಗೆ ನಿನಗೇನು ಅನ್ನಿಸುತ್ತದೆ?” ಎಂದು ಕೇಳಿದರು.
ಅದಕ್ಕೆ ಅವನು, “ಆತನು ಒಬ್ಬ ಪ್ರವಾದಿ” ಎಂದು ಉತ್ತರಕೊಟ್ಟನು.
18 ಈ ಮನುಷ್ಯನು ಮೊದಲು ಕುರುಡನಾಗಿದ್ದನು. ಆದರೆ ಈಗ ಇವನಿಗೆ ಗುಣವಾಗಿದೆ ಎಂದು ಯೆಹೂದ್ಯನಾಯಕರುಗಳು ನಂಬಲಿಲ್ಲ. ಆದ್ದರಿಂದ ಅವರು ಅವನ ತಂದೆತಾಯಿಗಳನ್ನು ಕರೆಯಿಸಿದರು. 19 ಅವರು ಅವನ ತಂದೆತಾಯಿಗಳಿಗೆ, “ಇವನು ನಿಮ್ಮ ಮಗನೋ? ಇವನು ಹುಟ್ಟುಕುರುಡನೆಂದು ನೀವು ಹೇಳುತ್ತೀರಿ. ಹಾಗಾದರೆ ಇವನಿಗೆ ಈಗ ಹೇಗೆ ಕಣ್ಣು ಕಾಣಿಸುತ್ತದೆ?” ಎಂದು ಕೇಳಿದರು.
20 ತಂದೆತಾಯಿಗಳು, “ಇವನು ನಮ್ಮ ಮಗನೆಂದು ನಮಗೆ ಗೊತ್ತು. ಇವನು ಹುಟ್ಟುಕುರುಡನೆಂಬುದೂ ನಮಗೆ ಗೊತ್ತು. 21 ಆದರೆ ಈಗ ಅವನಿಗೆ ಹೇಗೆ ಕಣ್ಣು ಕಾಣಿಸುತ್ತದೆಯೋ ಯಾರು ಗುಣಪಡಿಸಿದರೋ ನಮಗೆ ತಿಳಿಯದು. ಅವನನ್ನೇ ಕೇಳಿ. ಇವನು ತನ್ನ ವಿಷಯವಾಗಿ ಹೇಳುವಷ್ಟು ಪ್ರಾಯಸ್ಥನಾಗಿದ್ದಾನೆ” ಎಂದು ಉತ್ತರಕೊಟ್ಟರು. 22 ಅವನ ತಂದೆತಾಯಿಗಳು ಯೆಹೂದ್ಯ ನಾಯಕರಿಗೆ ಹೆದರಿಕೊಂಡಿದ್ದರಿಂದ ಹಾಗೆ ಹೇಳಿದರು. ಯೇಸುವನ್ನು ಕ್ರಿಸ್ತನೆಂದು ಹೇಳುವ ಯಾರನ್ನೇ ಆಗಲಿ ಸಭಾಮಂದಿರದಿಂದ ಬಹಿಷ್ಕರಿಸುವುದಾಗಿ ಯೆಹೂದ್ಯನಾಯಕರುಗಳು ಪ್ರಕಟಿಸಿದ್ದರು. 23 ಆದಕಾರಣವೇ ಅವನ ತಂದೆತಾಯಿಗಳು, “ಅವನು ಪ್ರಾಯಸ್ಥನಾಗಿದ್ದಾನೆ. ಅವನನ್ನೇ ಕೇಳಿ” ಎಂದು ಹೇಳಿದರು.
24 ಯೆಹೂದ್ಯನಾಯಕರು ಕುರುಡನಾಗಿದ್ದ ಆ ಮನುಷ್ಯನನ್ನು ಒಳಗೆ ಕರೆದು, “ನೀನು ದೇವರನ್ನು ಮಹಿಮೆಪಡಿಸಬೇಕು. ಈ ಮನುಷ್ಯನು (ಯೇಸು) ಪಾಪಿಯೆಂದು ನಮಗೆ ಗೊತ್ತಿದೆ” ಎಂದರು.
25 ಆ ಮನುಷ್ಯನು, “ಅವನು ಪಾಪಿಯೋ ಅಲ್ಲವೋ ನನಗೆ ಗೊತ್ತಿಲ್ಲ. ಆದರೆ ನಾನು ಕುರುಡನಾಗಿದ್ದೆನು; ಈಗ ನನಗೆ ದೃಷ್ಟಿ ಬಂದಿದೆ ಎಂಬುದಂತೂ ನನಗೆ ಗೊತ್ತಿದೆ” ಎಂದು ಉತ್ತರಕೊಟ್ಟನು.
26 ಯೆಹೂದ್ಯನಾಯಕರು, “ಅವನು (ಯೇಸು) ನಿನಗೇನು ಮಾಡಿದನು? ಅವನು ನಿನ್ನ ಕಣ್ಣುಗಳನ್ನು ಹೇಗೆ ಗುಣಪಡಿಸಿದನು?” ಎಂದು ಕೇಳಿದರು.
27 ಆ ಮನುಷ್ಯನು, “ಆಗಲೇ ನಿಮಗೆ ಅದನ್ನು ತಿಳಿಸಿದ್ದೇನೆ. ಆದರೆ ನೀವು ನನಗೆ ಕಿವಿಗೊಡಲಿಲ್ಲ. ಈಗ ಅದನ್ನು ಮತ್ತೆ ಏಕೆ ಕೇಳಬೇಕೆಂದಿದ್ದೀರಿ? ನೀವು ಸಹ ಆತನ ಹಿಂಬಾಲಕರಾಗಬೇಕೆಂದಿದ್ದೀರೋ?” ಎಂದು ಉತ್ತರಕೊಟ್ಟನು.
28 ಯೆಹೂದ್ಯನಾಯಕರು ಕೋಪಗೊಂಡು ಆ ಮನುಷ್ಯನನ್ನು ಅಪಹಾಸ್ಯಮಾಡಿ, “ನೀನು ಅವನ (ಯೇಸು) ಹಿಂಬಾಲಕನಾಗಿರುವೆ. ನಾವು ಮೋಶೆಯ ಹಿಂಬಾಲಕರಾಗಿದ್ದೇವೆ. 29 ದೇವರು ಮೋಶೆಯೊಂದಿಗೆ ಮಾತಾಡಿದನೆಂಬುದನ್ನು ನಾವು ಬಲ್ಲೆವು. ಆದರೆ ಆ ಮನುಷ್ಯನು (ಯೇಸು) ಎಲ್ಲಿಂದ ಬಂದನೆಂಬುದು ಸಹ ನಮಗೆ ಗೊತ್ತಿಲ್ಲ!” ಎಂದು ಹೇಳಿದರು.
30 ಆ ಮನುಷ್ಯನು, “ಇದು ಬಹು ಆಶ್ಚರ್ಯಕರವಾದ ಸಂಗತಿ. ಯೇಸು ಎಲ್ಲಿಂದ ಬಂದನೆಂಬುದು ನಿಮಗೆ ಗೊತ್ತಿಲ್ಲ. ಆದರೆ ಆತನು ನನ್ನ ಕಣ್ಣುಗಳನ್ನು ಗುಣಪಡಿಸಿದನು. 31 ದೇವರು ಪಾಪಿಗಳಿಗೆ ಕಿವಿಗೊಡುವುದಿಲ್ಲವೆಂಬುದು ನಮ್ಮೆಲರಿಗೂ ಗೊತ್ತಿದೆ. ಆದರೆ ದೇವರು ತನ್ನನ್ನು ಆರಾಧಿಸುವವನಿಗೂ ಮತ್ತು ತನಗೆ ವಿಧೇಯನಾಗುವವನಿಗೂ ಕಿವಿಗೊಡುತ್ತಾನೆ. 32 ಹುಟ್ಟುಕುರುಡನೊಬ್ಬನನ್ನು ಯಾರಾದರೂ ಎಂದಾದರೂ ಗುಣಪಡಿಸಿರುವುದು ಇದೇ ಮೊದಲನೆ ಸಲ. 33 ಆ ಮನುಷ್ಯನು (ಯೇಸು) ದೇವರಿಂದಲೇ ಬಂದಿರಬೇಕು. ಆತನು ದೇವರಿಂದ ಬಂದಿಲ್ಲದಿದ್ದರೆ, ಇಂಥ ಕಾರ್ಯಗಳನ್ನು ಮಾಡಲಾಗುತ್ತಿರಲಿಲ್ಲ” ಎಂದು ಉತ್ತರಕೊಟ್ಟನು.
34 ಯೆಹೂದ್ಯನಾಯಕರು, “ಪಾಪದಲ್ಲೇ ಹುಟ್ಟಿ ಬೆಳೆದವನು ನೀನು! ನಮಗೇ ಉಪದೇಶಮಾಡುವಿಯಾ?” ಎಂದು ಉತ್ತರಕೊಟ್ಟರು. ಅಲ್ಲದೆ ಅವರು ಅವನನ್ನು ಬಲವಂತವಾಗಿ ಹೊರಗಟ್ಟಿದರು.
ಆತ್ಮಿಕ ಅಂಧತೆ
35 ಯೆಹೂದ್ಯನಾಯಕರು ಆ ಮನುಷ್ಯನನ್ನು ಹೊರಗಟ್ಟಿದ್ದು ಯೇಸುವಿಗೆ ತಿಳಿಯಿತು. ಯೇಸು ಆ ಮನುಷ್ಯನನ್ನು ಕಂಡು, “ನೀನು ಮನುಷ್ಯಕುಮಾರನಲ್ಲಿ ನಂಬಿಕೆಯಿಡುವಿಯಾ?” ಎಂದು ಕೇಳಿದನು.
36 ಆ ಮನುಷ್ಯನು, “ಸ್ವಾಮೀ, ಆ ಮನುಷ್ಯಕುಮಾರನು ಯಾರು? ನನಗೆ ತಿಳಿಸು. ನಾನು ಆತನಲ್ಲಿ ನಂಬಿಕೆ ಇಡುತ್ತೇನೆ” ಎಂದು ಹೇಳಿದನು.
37 ಯೇಸು, “ನೀನು ಆತನನ್ನು ಈಗಾಗಲೇ ನೋಡಿರುವೆ. ಈಗ ನಿನ್ನೊಂದಿಗೆ ಮಾತಾಡುತ್ತಿರುವಾತನೇ ಮನುಷ್ಯಕುಮಾರನು” ಎಂದು ಹೇಳಿದನು.
38 ಆ ಮನುಷ್ಯನು, “ಹೌದು ಪ್ರಭುವೇ, ನಾನು ನಂಬುತ್ತೇನೆ!” ಎಂದು ಉತ್ತರಕೊಟ್ಟನು. ಬಳಿಕ ಅವನು ಯೇಸುವಿಗೆ ಅಡ್ಡಬಿದ್ದು ಆರಾಧಿಸಿದನು.
39 ಯೇಸು, “ಈ ಲೋಕಕ್ಕೆ ತೀರ್ಪಾಗಲೆಂದು ನಾನು ಈ ಲೋಕಕ್ಕೆ ಬಂದೆನು. ಕುರುಡರು ಕಾಣುವಂತಾಗಲೆಂದೂ ಕಣ್ಣುಳ್ಳವರು ಕುರುಡರಾಗಲೆಂದೂ ನಾನು ಬಂದೆನು” ಎಂದು ಹೇಳಿದನು.
40 ಅಲ್ಲಿದ್ದ ಫರಿಸಾಯರು ಇದನ್ನು ಕೇಳಿ, “ಏನು? ನಮ್ಮನ್ನು ಸಹ ಕುರುಡರೆಂದು ಹೇಳುತ್ತಿರುವೆಯಾ?” ಎಂದು ಪ್ರಶ್ನಿಸಿದರು.
41 ಯೇಸು, “ನೀವು ನಿಜವಾಗಿಯೂ ಕುರುಡರಾಗಿದ್ದರೆ ಪಾಪವೆಂಬ ಅಪರಾಧಕ್ಕೆ ಗುರಿಯಾಗುತ್ತಿರಲಿಲ್ಲ. ಆದರೆ ನೀವು, ‘ನಮಗೆ ಕಣ್ಣು ಕಾಣುತ್ತದೆ’ ಎಂದು ಹೇಳುತ್ತೀರಿ. ಆದ್ದರಿಂದ ನೀವು ಪಾಪಿಗಳೇ ಆಗಿದ್ದೀರಿ” ಎಂದು ಹೇಳಿದನು.
ಜಾಮೀನಿನ ಅಪಾಯ
6 ನನ್ನ ಮಗನೇ, ಮತ್ತೊಬ್ಬನ ಸಾಲಕ್ಕೆ ನೀನು ಜಾಮೀನಾಗಬೇಡ. ಅವನು ಸಾಲ ತೀರಿಸಲಾಗದಿದ್ದರೆ ನಾನು ತೀರಿಸುತ್ತೇನೆ ಎಂದು ಪ್ರಮಾಣ ಮಾಡಿರುವೆಯಾ? 2 ಮಾಡಿದ್ದರೆ, ಸಿಕ್ಕಿಕೊಂಡಿರುವೆ! ನಿನ್ನ ಸ್ವಂತ ಮಾತೇ ನಿನ್ನನ್ನು ಬಲೆಗೆ ಸಿಕ್ಕಿಸಿದೆ! 3 ನೀನು ಅವನ ಅಧಿಕಾರದ ಅಧೀನದಲ್ಲಿರುವೆ. ಆದ್ದರಿಂದ ಅವನ ಬಳಿಗೆ ಹೋಗಿ ನಿನ್ನನ್ನು ಸಾಲದಿಂದ ಬಿಡುಗಡೆ ಮಾಡುವಂತೆ ಬೇಡಿಕೋ. 4 ವಿಶ್ರಮಿಸಲು ಹಾಗೂ ನಿದ್ರಿಸಲು ಕಾಯಬೇಡ. 5 ಬೇಟೆಗಾರನಿಂದ ತಪ್ಪಿಸಿಕೊಂಡು ಓಡುವ ಜಿಂಕೆಯಂತೆ ಆ ಸಾಲದ ಬಂಧನದಿಂದ ತಪ್ಪಿಸಿಕೊ. ಬಲೆಯಿಂದ ತಪ್ಪಿಸಿಕೊಂಡು ಹಾರುವ ಪಕ್ಷಿಯಂತೆ ನಿನ್ನನ್ನು ಬಿಡುಗಡೆ ಮಾಡಿಕೋ.
ಸೋಮಾರಿತನದ ಅಪಾಯ
6 ಸೋಮಾರಿಯೇ, ನೀನು ಇರುವೆಯಂತೆ ಚುರುಕಾಗಿರಬೇಕು. ಇರುವೆಯನ್ನು ನೋಡಿ ಕಲಿತುಕೋ. 7 ಇರುವೆಗೆ ರಾಜನಿಲ್ಲ, ಅಧಿಕಾರಿಯಿಲ್ಲ, ನಾಯಕನಿಲ್ಲ, 8 ಆದರೆ ಸುಗ್ಗಿಕಾಲದಲ್ಲಿ ತನಗೆ ಬೇಕಾದ ಆಹಾರವನ್ನೆಲ್ಲ ಅದು ಕೂಡಿಸಿಟ್ಟುಕೊಳ್ಳುವುದು. ಆದ್ದರಿಂದ ಚಳಿಗಾಲದಲ್ಲಿ ಅದಕ್ಕೆ ಬೇಕಾದಷ್ಟು ಆಹಾರ ಇರುವುದು.
9 ಸೋಮಾರಿಯೇ, ಇನ್ನೆಷ್ಟುಕಾಲ ಮಲಗಿಕೊಂಡಿರುವೆ? ನಿನ್ನ ವಿಶ್ರಾಂತಿಯಿಂದ ಯಾವಾಗ ಎದ್ದೇಳುವೆ? 10 ಸೋಮಾರಿಯು, “ಸ್ವಲ್ಪ ನಿದ್ರೆ, ಸ್ವಲ್ಪ ವಿಶ್ರಾಂತಿ” ಅನ್ನುವನು. 11 ಆದರೆ ಅವನು ನಿದ್ರಿಸುತ್ತಲೇ ಇರುವನು; ಬಡವನಾಗುತ್ತಲೇ ಹೋಗುವನು. ಅವನ ಸ್ಥಿತಿಯು ದರೋಡೆಕೋರರು ಬಂದು ಇದ್ದದ್ದನ್ನೆಲ್ಲಾ ದೋಚಿಕೊಂಡು ಹೋದಂತಾಗಿರುವುದು.
ದುಷ್ಟನು
12 ಕೆಡುಕನೂ ನೀಚನೂ ಆಗಿರುವವನು ಸುಳ್ಳಾಡುತ್ತಾ ಅಡ್ಡಾಡುತ್ತಾನೆ. 13 ಅವನು ಜನರನ್ನು ಮೋಸಗೊಳಿಸಲು ತನ್ನ ಕಾಲುಗಳಿಂದಲೂ ಕೈಬೆರಳುಗಳಿಂದಲೂ ಸನ್ನೆಮಾಡುತ್ತಾನೆ. 14 ಅವನು ಕೆಡುಕ. ಎಲ್ಲಾ ಸಮಯಗಳಲ್ಲಿ ಅವನು ಕೆಡುಕನ್ನೇ ಆಲೋಚಿಸುತ್ತಾನೆ; ಎಲ್ಲೆಲ್ಲೂ ತೊಂದರೆ ಮಾಡುತ್ತಾನೆ. 15 ಆದರೆ ಅವನಿಗೆ ಆಪತ್ತು ಇದ್ದಕ್ಕಿದ್ದಂತೆ ಬರುವುದು. ಅವನು ನಾಶವಾಗುವನು! ಅವನಿಗೆ ಸಹಾಯಮಾಡಲು ಯಾರೂ ಇರುವುದಿಲ್ಲ!
ಯೆಹೋವನು ದ್ವೇಷಿಸುವ ಏಳು ವಸ್ತುಗಳು
16 ಯೆಹೋವನು ಈ ಆರು ವಸ್ತುಗಳನ್ನು ದ್ವೇಷಿಸುತ್ತಾನೆ, ಇಲ್ಲ, ಏಳು ವಸ್ತುಗಳನ್ನು ದ್ವೇಷಿಸುತ್ತಾನೆ:
17 ಗರ್ವದ ಕಣ್ಣು, ಸುಳ್ಳಾಡುವ ನಾಲಿಗೆ,
ನಿರಪರಾಧಿಗಳನ್ನು ಕೊಲ್ಲುವ ಕೈ.
18 ದುರಾಲೋಚನೆ ಮಾಡುವ ಹೃದಯ,
ಕೇಡುಮಾಡಲು ಓಡುವ ಕಾಲು.
19 ಅಸತ್ಯವಾಡುವ ಸುಳ್ಳುಸಾಕ್ಷಿ
ಮತ್ತು ಸಹೋದರರಲ್ಲಿ ಜಗಳ ಬಿತ್ತುವ ವ್ಯಕ್ತಿ.
ವ್ಯಭಿಚಾರದ ಕುರಿತು ಎಚ್ಚರಿಕೆ
20 ನನ್ನ ಮಗನೇ, ನಿನ್ನ ತಂದೆಯ ಆಜ್ಞೆಗಳನ್ನು ಜ್ಞಾಪಕಮಾಡಿಕೋ. ನಿನ್ನ ತಾಯಿಯ ಉಪದೇಶಗಳನ್ನು ಮರೆಯಬೇಡ. 21 ಯಾವಾಗಲೂ ಅವರ ಮಾತುಗಳನ್ನು ಜ್ಞಾಪಕಮಾಡಿಕೊ. ಅವುಗಳನ್ನು ನಿನ್ನ ಕೊರಳಿಗೆ ಕಟ್ಟಿಕೊ; ನಿನ್ನ ಹೃದಯದ ಮೇಲೆ ಇಟ್ಟುಕೋ. 22 ನೀನು ಹೋಗುವಲ್ಲೆಲ್ಲಾ ಅವರ ಉಪದೇಶಗಳು ನಿನ್ನನ್ನು ನಡೆಸುತ್ತವೆ. ನೀನು ಮಲಗಿರುವಾಗಲೂ ಅವು ನಿನ್ನನ್ನು ಕಾಯುತ್ತವೆ. ನೀನು ಎಚ್ಚರಗೊಂಡಾಗ ಅವು ನಿನ್ನೊಡನೆ ಮಾತಾಡಿ ನಿನಗೆ ಮಾರ್ಗದರ್ಶನ ನೀಡುತ್ತವೆ.
23 ನಿನ್ನ ತಂದೆತಾಯಿಗಳ ಆಜ್ಞೆಗಳು ಮತ್ತು ಉಪದೇಶಗಳು ನಿನಗೆ ನೀತಿಮಾರ್ಗವನ್ನು ತೋರಿಸುವ ಬೆಳಕಿನಂತಿವೆ. ಅವು ನಿನ್ನನ್ನು ಸರಿಪಡಿಸಿ ಜೀವಮಾರ್ಗದಲ್ಲಿ ನಡೆಯಲು ಸಹಾಯಮಾಡುತ್ತವೆ. 24 ಅವು ನಿನ್ನನ್ನು ಕೆಟ್ಟ ಹೆಂಗಸಿನ ಬಳಿಗೆ ಹೋಗದಂತೆ ತಡೆಯುತ್ತವೆ; ಗಂಡನನ್ನು ಬಿಟ್ಟಂಥ ಹೆಂಗಸಿನ ನಯವಾದ ನುಡಿಗಳಿಂದ ತಪ್ಪಿಸಿ ಕಾಪಾಡುತ್ತವೆ. 25 ಆಕೆಯ ಸೌಂದರ್ಯವನ್ನು ಕಂಡು ಹೃದಯದಲ್ಲಿ ಆಸೆಪಡಬೇಡ. ಆಕೆಯ ಕಣ್ಣುಗಳು ನಿನ್ನನ್ನು ವಶಮಾಡಿಕೊಳ್ಳಲು ಬಿಡಬೇಡ. 26 ಸೂಳೆಯು ಒಂದು ರೊಟ್ಟಿಗೇ ಬರಬಹುದು; ಆದರೆ ಬೇರೊಬ್ಬನ ಹೆಂಡತಿಗೆ ನಿನ್ನ ಜೀವವನ್ನೇ ಕಳೆದುಕೊಳ್ಳಬೇಕಾಗುವುದು. 27 ಮಡಿಲಲ್ಲಿ ಬೆಂಕಿಯನ್ನಿಟ್ಟುಕೊಂಡರೆ ಬಟ್ಟೆ ಸುಡುವುದಿಲ್ಲವೇ? 28 ಉರಿಯುವ ಕೆಂಡದ ಮೇಲೆ ನಡೆದರೆ ಪಾದಗಳು ಸುಟ್ಟುಹೋಗುವುದಿಲ್ಲವೇ? 29 ಬೇರೊಬ್ಬನ ಹೆಂಡತಿಯೊಡನೆ ಮಲಗಿಕೊಳ್ಳುವವನಿಗೆ ಇದೇ ರೀತಿಯಾಗುವುದು. ಅವನು ದಂಡನೆ ಅನುಭವಿಸುವನು.
30-31 ಹಸಿವೆಗೊಂಡಿರುವವನು ಕದ್ದುತಿಂದರೂ ತಿನ್ನಬಹುದು. ಅವನು ಸಿಕ್ಕಿಕೊಂಡರೆ ತಾನು ಕದ್ದದ್ದಕ್ಕಿಂತ ಏಳರಷ್ಟು ಹೆಚ್ಚಾಗಿ ಕೊಡಬೇಕು. ಒಂದುವೇಳೆ ಅವನು ತನ್ನಲ್ಲಿರುವ ಪ್ರತಿಯೊಂದನ್ನೂ ಕೊಡಬೇಕಾಗಬಹುದು! ಆದರೆ ಬೇರೆಯವರು ಅವನನ್ನು ಅರ್ಥಮಾಡಿಕೊಳ್ಳುತ್ತಾರೆ; ಅವನ ಬಗ್ಗೆ ಅವರಿಗಿರುವ ಗೌರವವು ಕಳೆದು ಹೋಗುವುದಿಲ್ಲ. 32 ಆದರೆ ವ್ಯಭಿಚಾರ ಮಾಡುವವನು ಮೂರ್ಖನಾಗಿದ್ದಾನೆ. ಅದನ್ನು ಮಾಡುವವನು ತನ್ನನ್ನೇ ನಾಶಮಾಡಿಕೊಳ್ಳುತ್ತಾನೆ. 33 ಅವನಿಗೆ ಹೊಡೆತಬೀಳುವುದು; ಅವಮಾನವಾಗುವುದು. ಆ ನಾಚಿಕೆಯು ಅವನನ್ನು ಬಿಟ್ಟುಹೋಗುವುದೇ ಇಲ್ಲ. 34 ಆಕೆಯ ಗಂಡನು ಮತ್ಸರದಿಂದ ಬಹು ಕೋಪಗೊಳ್ಳುವನು; ಕರುಣೆತೋರದೆ ಅವಳ ಮೇಲೆ ಸೇಡುತೀರಿಸಿಕೊಳ್ಳುವನು. 35 ಏನೇ ಕೊಟ್ಟರೂ, ಎಷ್ಟೇ ಹಣ ಕೊಟ್ಟರೂ ಅವನ ಕೋಪವನ್ನು ತಡೆಯಲಾಗುವುದಿಲ್ಲ.
ಸ್ವತಂತ್ರರಾಗಿರಿ
5 ಈಗ ನಮಗೆ ಸ್ವತಂತ್ರವಿದೆ. ಕ್ರಿಸ್ತನು ನಮ್ಮನ್ನು ಸ್ವತಂತ್ರರನ್ನಾಗಿ ಮಾಡಿದನು. ಆದ್ದರಿಂದ ದೃಢವಾಗಿರಿ. ಮನಸ್ಸನ್ನು ಬದಲಾಯಿಸಿಕೊಂಡು ಮತ್ತೆ ಧರ್ಮಶಾಸ್ತ್ರದ ಗುಲಾಮಗಿರಿಗೆ ಹೋಗಬೇಡಿರಿ. 2 ಕೇಳಿ, ನಾನೇ ಪೌಲನು. ನೀವು ಸುನ್ನತಿ ಮಾಡಿಸಿಕೊಂಡು ಧರ್ಮಶಾಸ್ತ್ರಕ್ಕೆ ಹಿಂತಿರುಗಿಕೊಳ್ಳುವುದಾದರೆ ಕ್ರಿಸ್ತನಿಂದ ನಿಮಗೇನೂ ಪ್ರಯೋಜನವಿಲ್ಲ. 3 ಮತ್ತೆ ನಾನು ಪ್ರತಿಯೊಬ್ಬನನ್ನೂ ಎಚ್ಚರಿಸುತ್ತೇನೆ. ನೀವು ಸುನ್ನತಿ ಮಾಡಿಸಿಕೊಂಡರೆ, ಧರ್ಮಶಾಸ್ತ್ರವನ್ನೆಲ್ಲಾ ಅನುಸರಿಸಬೇಕು. 4 ನೀವು ಧರ್ಮಶಾಸ್ತ್ರದ ಮೂಲಕ ನೀತಿವಂತರಾಗಲು ಪ್ರಯತ್ನಿಸುವವರಾಗಿದ್ದರೆ, ದೇವರ ಕೃಪಾಶ್ರಯದಿಂದ ಬಿದ್ದುಹೋದ ಕಾರಣ ಕ್ರಿಸ್ತನೊಂದಿಗಿರುವ ನಿಮ್ಮ ಜೀವಿತವು ಅಂತ್ಯಗೊಳ್ಳುವುದು. 5 ಆದರೆ ನಾವು ನಂಬಿಕೆಯ ಮೂಲಕ ನೀತಿವಂತರಾಗಿದ್ದೇವೆ ಎಂಬ ನಿರೀಕ್ಷೆ ನಮಗುಂಟು. ದೇವರಾತ್ಮನ ಸಹಾಯದಿಂದ ಈ ನಿರೀಕ್ಷೆ ಸಫಲವಾಗುವುದೆಂದು ತವಕದಿಂದ ಎದುರುನೋಡುತ್ತಿದ್ದೇವೆ. 6 ಒಬ್ಬನು ಕ್ರಿಸ್ತ ಯೇಸುವಿನಲ್ಲಿರುವಾಗ ಸುನ್ನತಿ ಹೊಂದಿದ್ದಾನೋ ಇಲ್ಲವೋ ಎಂಬುದು ಮುಖ್ಯವಲ್ಲ. ಮುಖ್ಯವಾದದ್ದೇನೆಂದರೆ ಪ್ರೀತಿಯಿಂದ ಕಾರ್ಯನಡೆಸುವ ನಂಬಿಕೆ.
7 ನೀವು ಚೆನ್ನಾಗಿ ಓಡುತ್ತಾ ಇದ್ದಿರಿ. ನೀವು ಸತ್ಯಕ್ಕೆ ವಿಧೇಯರಾಗಿದ್ದಿರಿ. ಸತ್ಯಮಾರ್ಗವನ್ನು ಅನುಸರಿಸದಂತೆ ನಿಮ್ಮನ್ನು ಒತ್ತಾಯಪಡಿಸಿದವರ್ಯಾರು? 8 ಆ ಒತ್ತಾಯವು ಬಂದದ್ದು ನಿಮ್ಮನ್ನು ಆರಿಸಿಕೊಂಡಾತನಿಂದಲ್ಲ. 9 ಎಚ್ಚರಿಕೆಯಿಂದಿರಿ! “ಸ್ವಲ್ಪ ಹುಳಿಯಿಂದ ಪಾತ್ರೆಯಲ್ಲಿರುವ ನಾದಿದ ಹಿಟ್ಟೆಲ್ಲಾ ಹುಳಿಯಾಗುವುದು.” 10 ಆ ಬೇರೆ ಅಭಿಪ್ರಾಯಗಳನ್ನು ನೀವು ನಂಬುವುದಿಲ್ಲವೆಂದು ಪ್ರಭುವಿನಲ್ಲಿ ನಿಮ್ಮನ್ನು ಕುರಿತು ಭರವಸೆಯಿಂದಿದ್ದೇನೆ. ಯಾರೊ ಒಬ್ಬನು ಆ ಅಭಿಪ್ರಾಯಗಳಿಂದ ನಿಮ್ಮನ್ನು ಗಲಿಬಿಲಿಗೊಳಿಸುತ್ತಿದ್ದಾನೆ. ಅವನು ಯಾರೇ ಆಗಿದ್ದರೂ ದಂಡನೆ ಹೊಂದುವನು.
11 ನನ್ನ ಸಹೋದರ ಸಹೋದರಿಯರೇ, ಜನರು ಸುನ್ನತಿ ಮಾಡಿಸಿಕೊಳ್ಳಬೇಕೆಂದು ನಾನು ಬೋಧಿಸುವುದಿಲ್ಲ. ಸುನ್ನತಿಯ ಅಗತ್ಯತೆಯನ್ನು ಕುರಿತು ಉಪದೇಶಿಸುವವನಾಗಿದ್ದರೆ, ನಾನಿನ್ನೂ ಹಿಂಸೆಗೆ ಒಳಗಾಗಿರುವುದೇಕೆ? ಜನರು ಸುನ್ನತಿ ಮಾಡಿಸಿಕೊಳ್ಳಬೇಕೆಂದು ನಾನಿನ್ನೂ ಉಪದೇಶಿಸುವುದಾಗಿದ್ದರೆ, ಶಿಲುಬೆಯ ವಿಷಯವಾದ ನನ್ನ ಬೋಧನೆಗೆ ಅಡ್ಡಿಯಾಗುವುದೇ ಇಲ್ಲ. 12 ನಿಮ್ಮನ್ನು ಕಳವಳಪಡಿಸುತ್ತಿರುವವರು ತಮಗಾಗಿರುವ ಸುನ್ನತಿಯಲ್ಲದೆ ತಮ್ಮ ಅಂಗವನ್ನೇ ಕತ್ತರಿಸಿಕೊಂಡರೆ ಒಳ್ಳೆಯದು.
13 ನನ್ನ ಸಹೋದರ ಸಹೋದರಿಯರೇ, ನೀವು ಸ್ವತಂತ್ರರಾಗಬೇಕೆಂದು ದೇವರು ನಿಮ್ಮನ್ನು ಕರೆದಿದ್ದಾನೆ. ಆದರೆ ಪಾಪಮಯವಾದ ನಿಮ್ಮ ಸ್ವಭಾವವನ್ನು ಮೆಚ್ಚಿಸುವುದಕ್ಕಾಗಿ ನಿಮ್ಮ ಸ್ವತಂತ್ರವನ್ನು ನೆಪಮಾಡಿಕೊಳ್ಳಬೇಡಿ. ಆದರೆ ಪ್ರೀತಿಯಿಂದ ಒಬ್ಬರ ಸೇವೆಯನ್ನೊಬ್ಬರು ಮಾಡಿರಿ. 14 “ನೀವು ನಿಮ್ಮನ್ನು ಪ್ರೀತಿಸುವಂತೆ ಇತರರನ್ನು ಪ್ರೀತಿಸಿರಿ”(A) ಎಂಬ ಒಂದೇ ಒಂದು ಆಜ್ಞೆಯಲ್ಲಿ ಇಡೀ ಧರ್ಮಶಾಸ್ತ್ರವೇ ಅಡಕವಾಗಿದೆ. 15 ನೀವು ಒಬ್ಬರನ್ನೊಬ್ಬರು ಕಚ್ಚಿ ಹರಿದುಹಾಕಿ ನುಂಗುವುದಾದರೆ ಒಬ್ಬರಿಂದೊಬ್ಬರು ನಾಶವಾಗುತ್ತೀರಿ. ಆದ್ದರಿಂದ ಎಚ್ಚರಿಕೆಯಿಂದಿರಿ!
ದೇವರಾತ್ಮನು ಮತ್ತು ಮಾನವ ಸ್ವಭಾವ
16 ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ಪವಿತ್ರಾತ್ಮನನ್ನು ಅನುಸರಿಸುವವರಾಗಿರಿ. ಆಗ, ನಿಮ್ಮ ಶರೀರಭಾವವು ಬಯಸುವ ಕೆಟ್ಟ ಸಂಗತಿಗಳನ್ನು ನೀವು ಮಾಡುವುದಿಲ್ಲ. 17 ನಮ್ಮ ಶರೀರಭಾವವು ದೇವರಾತ್ಮನಿಗೆ ವಿರುದ್ಧವಾದ ಸಂಗತಿಗಳನ್ನು ಬಯಸುತ್ತದೆ. ದೇವರಾತ್ಮನು ನಮ್ಮ ಶರೀರಭಾವಕ್ಕೆ ವಿರುದ್ಧವಾದ ಸಂಗತಿಗಳನ್ನು ಬಯಸುತ್ತಾನೆ. ಆದ್ದರಿಂದ ನೀವು ನಿಜವಾಗಿಯೂ ಬಯಸುವಂಥವುಗಳನ್ನು ಮಾಡಲಾಗದಂತೆ ಅವು ಒಂದಕ್ಕೊಂದು ಹೋರಾಡುತ್ತವೆ. 18 ಆದರೆ ನೀವು ನಿಮ್ಮನ್ನು ದೇವರಾತ್ಮನ ನಡೆಸುವಿಕೆಗೆ ಒಪ್ಪಿಸಿಕೊಟ್ಟರೆ ನೀವು ಧರ್ಮಶಾಸ್ತ್ರದ ಅಧೀನದಲ್ಲಿಲ್ಲ.
19 ನಮ್ಮ ಶರೀರಭಾವವು ಮಾಡುವ ಕೆಟ್ಟ ಸಂಗತಿಗಳು ಸ್ಪಷ್ಟವಾಗಿವೆ. ಜಾರತ್ವ, ಅಶುದ್ಧತ್ವ, 20 ಸುಳ್ಳುದೇವರುಗಳ ಆರಾಧನೆ, ಮಾಟಮಂತ್ರ, ದ್ವೇಷ, ಜಗಳ, ಹೊಟ್ಟೆಕಿಚ್ಚು, ಕಡುಕೋಪ, ಸ್ವಾರ್ಥ, ಸಿಟ್ಟು, ಕಕ್ಷಭೇದ, 21 ಮತ್ಸರ, ಕುಡಿಕತನ ಮತ್ತು ಸ್ವೇಚ್ಫಾಚಾರದ ಕೂಟ, ಮೊದಲಾದವುಗಳೇ. ನಾನು ನಿಮ್ಮನ್ನು ಮೊದಲು ಎಚ್ಚರಿಸಿದಂತೆ ಈಗಲೂ ಎಚ್ಚರಿಸುತ್ತೇನೆ. ಇಂಥವುಗಳನ್ನು ಮಾಡುವ ಜನರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ. 22 ಆದರೆ ದೇವರಾತ್ಮನು ಹುಟ್ಟಿಸುವುದು ಪ್ರೀತಿ, ಆನಂದ, ಶಾಂತಿ, ತಾಳ್ಮೆ, ಕರುಣೆ, ಉಪಕಾರ, ನಂಬಿಗಸ್ತಿಕೆ, 23 ಸಾಧುತ್ವ, ಇಂದ್ರಿಯ ನಿಗ್ರಹ ಇಂಥವುಗಳೇ. ಇವುಗಳನ್ನು ತಪ್ಪೆಂದು ಯಾವ ಧರ್ಮಶಾಸ್ತ್ರವೂ ಹೇಳುವುದಿಲ್ಲ. 24 ಕ್ರಿಸ್ತ ಯೇಸುವಿನವರು ತಮ್ಮ ಶರೀರಭಾವವನ್ನು ಶಿಲುಬೆಗೇರಿಸಿದ್ದಾರೆ. ಅವರು ತಮ್ಮ ಹಳೆಯ ಸ್ವಾರ್ಥಪರವಾದ ಅಭಿಲಾಷೆಗಳನ್ನು ಮತ್ತು ತಾವು ಮಾಡಬೇಕೆಂದಿದ್ದ ಕೆಟ್ಟಕಾರ್ಯಗಳನ್ನು ಬಿಟ್ಟುಕೊಟ್ಟವರಾಗಿದ್ದಾರೆ. 25 ನಮ್ಮ ಹೊಸ ಜೀವಿತವನ್ನು ಪವಿತ್ರಾತ್ಮನಿಂದ ಪಡೆದುಕೊಂಡಿರುವುದರಿಂದ ನಾವು ಆತನನ್ನೇ ಅನುಸರಿಸಬೇಕು. 26 ನಾವು ಅಹಂಕಾರಿಗಳಾಗಬಾರದು, ಒಬ್ಬರನ್ನೊಬ್ಬರು ಕೆಣಕುವವರಾಗಬಾರದು, ಒಬ್ಬರಮೇಲೊಬ್ಬರು ಮತ್ಸರ ಉಳ್ಳವರಾಗಬಾರದು.
Kannada Holy Bible: Easy-to-Read Version. All rights reserved. © 1997 Bible League International