Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 28

ಯಾಜಕರು ಧರಿಸಬೇಕಾದ ಬಟ್ಟೆಗಳು

28 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರಿಂದ ನಿನ್ನ ಬಳಿಗೆ ಬರಲು ನಿನ್ನ ಅಣ್ಣನಾದ ಆರೋನನಿಗೂ ಅವನ ಗಂಡುಮಕ್ಕಳಾದ ನಾದಾಬ, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್ ಎಂಬವರಿಗೂ ಹೇಳು. ಇವರು ಯಾಜಕರಾಗಿ ನನ್ನ ಸೇವೆ ಮಾಡುವರು.

“ನಿನ್ನ ಅಣ್ಣನಾದ ಆರೋನನಿಗೆ ವಿಶೇಷ ಬಟ್ಟೆಗಳನ್ನು ಮಾಡಿಸು. ಈ ಬಟ್ಟೆಗಳು ಅವನಿಗೆ ಘನತೆಯನ್ನೂ ಗೌರವವನ್ನೂ ನೀಡುತ್ತವೆ. ಈ ಬಟ್ಟೆಗಳನ್ನು ಮಾಡುವಂಥ ಕೆಲವು ನಿಪುಣರಿದ್ದಾರೆ. ನಾನು ಅವರಿಗೆ ವಿಶೇಷ ಜ್ಞಾನವನ್ನು ಕೊಟ್ಟಿದ್ದೇನೆ. ಆರೋನನಿಗೆ ಬೇಕಾದ ಬಟ್ಟೆಗಳನ್ನು ಮಾಡಲು ಅವರಿಗೆ ಹೇಳು. ಅವನು ವಿಶೇಷವಾದ ರೀತಿಯಲ್ಲಿ ನನ್ನ ಸೇವೆಮಾಡುತ್ತಾನೆಂದು ಈ ಬಟ್ಟೆಗಳು ತೋರಿಸುತ್ತವೆ. ಆಗ ಅವನು ಯಾಜಕನಾಗಿ ನನ್ನ ಸೇವೆ ಮಾಡಬಹುದು. ಅವರು ಮಾಡತಕ್ಕ ಬಟ್ಟೆಗಳು ಯಾವುವೆಂದರೆ: ದೈವನಿರ್ಣಯಕ ಪದಕ, ಏಫೋದು, ನೀಲಿಯ ನಿಲುವಂಗಿ, ಹೆಣೆದ ಬಿಳಿಯ ನಿಲುವಂಗಿ, ಮುಂಡಾಸು ಮತ್ತು ನಡುಕಟ್ಟು. ನಿನ್ನ ಅಣ್ಣನಾದ ಆರೋನನಿಗೂ ಅವನ ಗಂಡುಮಕ್ಕಳಿಗೂ ಈ ವಿಶೇಷ ಬಟ್ಟೆಗಳನ್ನು ಅವರು ಮಾಡಬೇಕು. ಆಗ ಆರೋನನೂ ಅವನ ಗಂಡುಮಕ್ಕಳೂ ಯಾಜಕರಾಗಿ ನನ್ನ ಸೇವೆಮಾಡಬಹುದು. ಚಿನ್ನದ ದಾರಗಳು, ನಾರುಬಟ್ಟೆ, ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಲು ಅವರಿಗೆ ಹೇಳು.

ಏಫೋದು ಮತ್ತು ನಡುಕಟ್ಟು

“ಏಫೋದನ್ನು ಚಿನ್ನದ ದಾರಗಳು, ನಾರಿನಬಟ್ಟೆ, ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಿ ಚಾಣಾಕ್ಷತೆಯಿಂದ ಹೆಣೆದು ತಯಾರಿಸಬೇಕು. ಏಫೋದಿನ ಪ್ರತಿಭುಜದಲ್ಲಿ ಭುಜದ ಪಟ್ಟಿಯಿರಬೇಕು. ಭುಜದ ಈ ಪಟ್ಟಿಗಳು ಏಫೋದಿನ ಎರಡು ಕೊನೆಗಳಿಗೆ ಕಟ್ಟಿರಬೇಕು.

“ಇವರು ಏಫೋದಿಗೆ ಸೇರಿಸಲ್ಪಟ್ಟಿರುವ ನಡುಕಟ್ಟನ್ನು ಬಹಳ ಎಚ್ಚರಿಕೆಯಿಂದ ಹೆಣೆಯಬೇಕು. ಏಫೋದನ್ನು ತಯಾರಿಸಿದಂತೆಯೇ ಈ ನಡುಕಟ್ಟನ್ನು ತಯಾರಿಸಬೇಕು. ಚಿನ್ನದ ದಾರಗಳು, ನಾರುಬಟ್ಟೆ, ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಿ ಇದನ್ನು ಮಾಡಬೇಕು.

“ಎರಡು ಗೋಮೇಧಕ ರತ್ನಗಳನ್ನು ತೆಗೆದುಕೊ. ಈ ರತ್ನಗಳ ಮೇಲೆ ಇಸ್ರೇಲನ ಹನ್ನೆರಡು ಗಂಡುಮಕ್ಕಳ ಹೆಸರನ್ನು ಬರೆಸು. 10 ಒಂದು ರತ್ನದ ಮೇಲೆ ಆರು ಹೆಸರುಗಳನ್ನೂ ಇನ್ನೊಂದು ರತ್ನದ ಮೇಲೆ ಆರು ಹೆಸರುಗಳನ್ನೂ ಬರೆಸು. ಹಿರಿಮಗನಿಂದ ಹಿಡಿದು ಕಿರಿ ಮಗನವರೆಗೆ ಕ್ರಮಾನುಸಾರವಾಗಿ ಹೆಸರುಗಳನ್ನು ಬರೆಸು. 11 ಈ ಕಲ್ಲುಗಳ ಮೇಲೆ ಇಸ್ರೇಲನ ಗಂಡುಮಕ್ಕಳ ಹೆಸರನ್ನು ಕೆತ್ತಿಸು. ಒಬ್ಬ ಕೆಲಸಗಾರನು ಮುದ್ರೆಯನ್ನು ಮಾಡುವ ರೀತಿಯಲ್ಲಿ ಇದನ್ನು ಮಾಡಿಸು. ಚಿನ್ನದ ಕುಂದಣದಲ್ಲಿ ರತ್ನಗಳನ್ನಿಡು. 12 ಬಳಿಕ ಈ ಎರಡು ರತ್ನಗಳನ್ನು ಏಫೋದಿನ ಪ್ರತಿಭುಜದ ಪಟ್ಟಿಯಲ್ಲಿಡು. ಆರೋನನು ಯೆಹೋವನ ಮುಂದೆ ನಿಲ್ಲುವಾಗ ಈ ವಿಶೇಷ ಅಂಗಿಯನ್ನು ಧರಿಸಿಕೊಂಡಿರುವನು. ಇಸ್ರೇಲನ ಗಂಡುಮಕ್ಕಳ ಹೆಸರುಗಳುಳ್ಳ ಎರಡು ರತ್ನಗಳು ಏಫೋದಿನ ಮೇಲಿರುತ್ತವೆ. ದೇವರು ಇಸ್ರೇಲರನ್ನು ಜ್ಞಾಪಿಸಿಕೊಳ್ಳುವಂತೆ ಈ ರತ್ನಗಳು ಮಾಡುವವು. 13 ಏಫೋದಿನಲ್ಲಿ ಕಲ್ಲುಗಳು ಬಿಗಿಯಾಗಿ ಹಿಡಿದುಕೊಂಡಿರಲು ಉತ್ತಮ ಚಿನ್ನವನ್ನು ಉಪಯೋಗಿಸು. 14 ಹೆಣಿಗೆ ಕೆಲಸದಿಂದ ಶುದ್ಧಬಂಗಾರದ ಎರಡು ಸರಪಣಿಗಳನ್ನು ಮಾಡಿಸಿ ಚಿನ್ನದ ಗೂಡುಗಳಿಗೆ ಬಿಗಿಯಾಗಿ ಸಿಕ್ಕಿಸಬೇಕು.

ದೈವನಿರ್ಣಯದ ಪದಕ

15 “ಮಹಾಯಾಜಕನಿಗೆ ದೈವನಿರ್ಣಯದ ಪದಕವನ್ನು ಮಾಡಿಸು. ಏಫೋದನ್ನು ಮಾಡಿಸಿದಂತೆ ನಿಪುಣರಾದ ಕೆಲಸಗಾರರಿಂದ ಇದನ್ನು ಮಾಡಿಸಬೇಕು. ಚಿನ್ನದ ದಾರಗಳು, ಉತ್ಕೃಷ್ಟವಾದ ನಾರುಬಟ್ಟೆ, ನೀಲಿ, ನೇರಳೆ ಮತ್ತು ಕೆಂಪು ದಾರಗಳನ್ನು ಉಪಯೋಗಿಸಿ ಇದನ್ನು ಮಾಡಬೇಕು. 16 ಅದು ಚೌಕವಾಗಿದ್ದು ಒಂಭತ್ತು ಇಂಚು ಉದ್ದವಾಗಿಯೂ ಒಂಭತ್ತು ಇಂಚು ಅಗಲವಾಗಿಯೂ ಇರಬೇಕು. 17 ಅದರ ಮೇಲೆ ಅಂದವಾದ ರತ್ನಗಳನ್ನು ನಾಲ್ಕು ಸಾಲುಗಳಾಗಿ ಹಾಕಿಸಬೇಕು. ರತ್ನಗಳ ಮೊದಲಿನ ಸಾಲಿನಲ್ಲಿ ಮಾಣಿಕ್ಯ, ಪುಷ್ಪರಾಗ, ಸ್ಪಟಿಕಗಳಿರಬೇಕು. 18 ಎರಡನೆಯ ಸಾಲಿನಲ್ಲಿ ಕೆಂಪರಲು, ನೀಲ, ಪಚ್ಚೆಗಳಿರಬೇಕು. 19 ಮೂರನೆಯ ಸಾಲಿನಲ್ಲಿ ಸುವರ್ಣರತ್ನ, ಗೋಮೇಧಕ ಮತ್ತು ಧೂಮ್ರಮಣಿಗಳಿರಬೇಕು. 20 ನಾಲ್ಕನೆಯ ಸಾಲಿನಲ್ಲಿ ಪೀತರತ್ನ ಮತ್ತು ಬೆರುಲ್ಲ ವಜ್ರಗಳಿರಬೇಕು. ಈ ಎಲ್ಲಾ ರತ್ನಗಳನ್ನು ಚಿನ್ನದ ಜವೆಯ ಕಲ್ಲುಗಳಲ್ಲಿ ಸೇರಿಸಬೇಕು. 21 ಇಸ್ರೇಲನ ಗಂಡುಮಕ್ಕಳಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ರತ್ನದಂತೆ ದೈವನಿರ್ಣಯ ಪದಕದಲ್ಲಿ ಹನ್ನೆರಡು ರತ್ನಗಳಿರಬೇಕು. ಪ್ರತಿಯೊಂದು ಕಲ್ಲುಗಳಲ್ಲಿ ಇಸ್ರೇಲನ ಗಂಡುಮಕ್ಕಳ ಒಬ್ಬೊಬ್ಬರ ಹೆಸರನ್ನು ಬರೆಸಬೇಕು. ಒಬ್ಬ ಕೆಲಸಗಾರನು ಮುದ್ರೆಯನ್ನು ಕೆತ್ತುವಂತೆ ಈ ಹೆಸರುಗಳನ್ನು ಪ್ರತಿ ರತ್ನದ ಮೇಲೆ ಕೆತ್ತಿಸಬೇಕು.

22 “ದೈವನಿರ್ಣಯ ಪದಕದಲ್ಲಿ ಶುದ್ಧಬಂಗಾರದ ಸರಪಣಿಗಳನ್ನು ಮಾಡಿಸು. ಈ ಸರಪಣಿಗಳು ಹುರಿಗಳಂತಿರುವ ಹಗ್ಗದಂತೆ ಇರಬೇಕು. 23 ಬಂಗಾರದ ಎರಡು ಬಳೆಗಳನ್ನು ಮಾಡಿಸಿ ಅದರ ಎರಡು ಕೊನೆಗಳಲ್ಲಿ ಸಿಕ್ಕಿಸಬೇಕು. 24 ಅದರ ಕೊನೆಯಲ್ಲಿರುವ ಎರಡು ಬಳೆಗಳ ಮೂಲಕ ಚಿನ್ನದ ಎರಡು ಸರಪಣಿಗಳನ್ನು ಸಿಕ್ಕಿಸಬೇಕು. 25 ಚಿನ್ನದ ಸರಪಣಿಗಳ ಇನ್ನೊಂದು ಕೊನೆಗಳನ್ನು ಎರಡು ಪಟ್ಟಿಗಳಿಗೆ ಬಿಗಿಯಾಗಿ ಕಟ್ಟಿಸಬೇಕು. ಇದು ಮುಂಬದಿಯಲ್ಲಿರುವ ಏಫೋದಿನ ಎರಡು ಭುಜದ ಪಟ್ಟಿಗಳಿಗೆ ಬಿಗಿಯಾಗಿ ಹಿಡಿದುಕೊಂಡಿರುವಂತೆ ಮಾಡುವುದು. 26 ಇನ್ನೂ ಎರಡು ಚಿನ್ನದ ಬಳೆಗಳನ್ನು ಮಾಡಿಸಿ, ಅವುಗಳನ್ನು ದೈವನಿರ್ಣಯದ ಪದಕದ ಬೇರೆ ಎರಡು ಕೊನೆಗಳಿಗೆ ಸಿಕ್ಕಿಸು. ಇದು ದೈವನಿರ್ಣಯದ ಪದಕದ ಒಳಗಣ ಅಂಚಿನಲ್ಲಿರುವುದು. 27 ಇನ್ನೆರಡು ಚಿನ್ನದ ಬಳೆಗಳನ್ನು ಮಾಡಿಸಿ ಅವುಗಳನ್ನು ಏಫೋದಿನ ಭುಜಪಟ್ಟಿಗಳ ಮುಂಭಾಗದ ಕೆಳಗೆ ಸಿಕ್ಕಿಸು. ಈ ಚಿನ್ನದ ಬಳೆಗಳನ್ನು ಏಫೋದಿನ ನಡುಕಟ್ಟಿನ ಮೇಲ್ಗಡೆ ಇರಿಸು. 28 ದೈವನಿರ್ಣಯದ ಪದಕದ ಬಳೆಗಳನ್ನು ಏಫೋದಿನ ಬಳೆಗಳಿಗೆ ಜೋಡಿಸಲು ನೀಲಿದಾರವನ್ನು ಉಪಯೋಗಿಸು. ಈ ರೀತಿಯಲ್ಲಿ ದೈವನಿರ್ಣಯದ ಪದಕವು ನಡುಕಟ್ಟಿಗೆ ಹತ್ತಿರವಾಗಿದ್ದು ಏಫೋದಿಗೆ ಬಿಗಿಯಾಗಿ ಅಂಟಿಕೊಂಡಿರುವುದು.

29 “ಆರೋನನು ಪವಿತ್ರಸ್ಥಳವನ್ನು ಪ್ರವೇಶಿಸುವಾಗ, ದೈವನಿರ್ಣಯದ ಪದಕವನ್ನು ಧರಿಸಿಕೊಳ್ಳಬೇಕು. ಈ ರೀತಿ ಎದೆಯ ಮೇಲೆ ಇಸ್ರೇಲನ ಗಂಡುಮಕ್ಕಳ ಹೆಸರುಗಳಿರಬೇಕು. ಅವನು ನ್ಯಾಯತೀರಿಸಲು ಧರಿಸಿಕೊಂಡಿರುವ ದೈವನಿರ್ಣಯದ ಪದಕದ ಮೇಲೆ ಈ ಹೆಸರುಗಳಿರುತ್ತವೆ. ಈ ರೀತಿಯಲ್ಲಿ ಇಸ್ರೇಲನ ಹನ್ನೆರಡು ಮಂದಿ ಗಂಡುಮಕ್ಕಳನ್ನು ಯೆಹೋವನಿಗೆ ಯಾವಾಗಲೂ ಜ್ಞಾಪಿಸಲಾಗುವುದು. 30 ದೈವನಿರ್ಣಯದ ಪದಕದೊಳಗೆ ಊರೀಮ್ ಮತ್ತು ತುಮ್ಮೀಮ್ ಎಂಬ ವಸ್ತುಗಳನ್ನು ಇಡು. ಆರೋನನು ಯೆಹೋವನ ಮುಂದೆ ಹೋಗುವಾಗ ಅವುಗಳು ಅವನ ಎದೆಯ ಮೇಲಿರುವವು. ಹೀಗೆ ಆರೋನನು ಯೆಹೋವನ ಮುಂದೆ ನಿಲ್ಲುವಾಗಲೆಲ್ಲಾ, ಜನರಿಗೆ ತೀರ್ಪು ನೀಡತಕ್ಕದ್ದನ್ನು ಯಾವಾಗಲೂ ತನ್ನ ಎದೆಯ ಮೇಲೆ ಹೊತ್ತುಕೊಂಡಿರುವನು.

ಯಾಜಕರ ಇತರ ಬಟ್ಟೆಗಳು

31 “ಏಫೋದಿನ ಒಳಗೆ ಹಾಕಿಕೊಳ್ಳಲು ಒಂದು ನಿಲುವಂಗಿಯನ್ನು ನೀಲಿಬಟ್ಟೆಯಿಂದ ಮಾಡಿಸಬೇಕು. 32 ತಲೆಯನ್ನು ತೂರಿಸುವುದಕ್ಕೆ ಮಧ್ಯದಲ್ಲಿ ಒಂದು ಸಂದು ಮಾಡಿಸು. ಈ ಸಂದಿನ ಸುತ್ತಲೂ ಹೆಣೆದ ಬಟ್ಟೆಯನ್ನು ಹೊಲಿಸು. ಈ ಬಟ್ಟೆಯು ಸಂದು ಹರಿದುಹೋಗದಂತೆ ಕಾಪಾಡುವುದು. 33 ಬಟ್ಟೆಯ ಅಂಚಿನ ಸುತ್ತಲೂ ದಾಳಿಂಬೆ ಹಣ್ಣುಗಳನ್ನು ಮಾಡಲು ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಬೇಕು. ಆ ದಾಳಿಂಬೆ ಹಣ್ಣಿನ ಚೆಂಡುಗಳನ್ನು ನಿಲುವಂಗಿಯ ಕೆಳಅಂಚಿನಲ್ಲಿ ಸುತ್ತಲೂ ನೇತಾಡುವಂತೆ ಸಿಕ್ಕಿಸಬೇಕು. ದಾಳಿಂಬೆ ಹಣ್ಣಿನ ಚೆಂಡುಗಳ ನಡುವೆ ಚಿನ್ನದ ಗೆಜ್ಜೆಗಳನ್ನು ಸಿಕ್ಕಿಸಬೇಕು. 34 ಹೀಗೆ ನಿಲುವಂಗಿಯ ಕೆಳಅಂಚಿನಲ್ಲಿ ಸುತ್ತಲೂ ಗೆಜ್ಜೆಗಳು ಮತ್ತು ದಾಳಿಂಬೆ ಹಣ್ಣುಗಳು ಇರಬೇಕು. ಪ್ರತಿ ಎರಡು ದಾಳಿಂಬೆ ಹಣ್ಣಿನ ನಡುವೆ ಗೆಜ್ಜೆ ಇರಬೇಕು. 35 ಆರೋನನು ಯಾಜಕನಾಗಿ ಸೇವೆಮಾಡುವಾಗ ಈ ನಿಲುವಂಗಿಯನ್ನು ಧರಿಸಿಕೊಂಡಿರುವನು. ಯೆಹೋವನ ಮುಂದೆ ನಿಲ್ಲುವುದಕ್ಕೆ ಆರೋನನು ಪವಿತ್ರಸ್ಥಳವನ್ನು ಪ್ರವೇಶಿಸುವಾಗ ಗೆಜ್ಜೆಗಳು ಶಬ್ದ ಮಾಡುತ್ತಿರುತ್ತವೆ. ಅವನು ಪವಿತ್ರಸ್ಥಳವನ್ನು ಬಿಡುವಾಗಲೂ ಗೆಜ್ಜೆಗಳು ಶಬ್ಧ ಮಾಡುತ್ತಿರುತ್ತವೆ. ಹೀಗಾಗಿ ಆರೋನನು ಸಾಯುವುದಿಲ್ಲ.

36 “ಶುದ್ಧಬಂಗಾರದ ಪಟ್ಟಿಯನ್ನು ಮಾಡಿಸಿ ಮುದ್ರೆಯನ್ನು ಕೆತ್ತುವ ರೀತಿಯಲ್ಲಿ “ಯೆಹೋವನಿಗೆ ಮೀಸಲು” ಎಂಬ ಮಾತುಗಳನ್ನು ಚಿನ್ನದಲ್ಲಿ ಕೆತ್ತಿಸಬೇಕು. 37 ಚಿನ್ನದ ಪಟ್ಟಿಯನ್ನು ನೀಲಿದಾರಕ್ಕೆ ಬಿಗಿಯಾಗಿ ಕಟ್ಟಿಸಬೇಕು. ನೀಲಿದಾರವನ್ನು ಮುಂಡಾಸದ ಸುತ್ತಲೂ ಅದರಲ್ಲಿ ಕೆತ್ತಿಸಬೇಕು. ಚಿನ್ನದ ಪಟ್ಟಿಯು ಮುಂಡಾಸದ ಮುಂಭಾಗದಲ್ಲಿರಬೇಕು. 38 ಆರೋನನು ಇದನ್ನು ತನ್ನ ಹಣೆಯ ಮೇಲೆ ಧರಿಸಿಕೊಳ್ಳುವನು. ಹೀಗೆ, ಇಸ್ರೇಲರು ಅರ್ಪಿಸಿದ ಕಾಣಿಕೆಗಳಲ್ಲಿ ದೋಷವೇನಾದರೂ ಇದ್ದರೆ ಅವನು ಅದನ್ನು ತನ್ನ ಮೇಲೆ ತೆಗೆದುಕೊಂಡು ತಾನೇ ಅದನ್ನು ವಹಿಸಿಕೊಳ್ಳುವನು. ಇವು ಜನರು ಯೆಹೋವನಿಗೆ ಸಮರ್ಪಿಸುವ ಕಾಣಿಕೆಗಳಾಗಿವೆ. ಜನರ ಕಾಣಿಕೆಗಳನ್ನು ಯೆಹೋವನು ಅಂಗೀಕರಿಸುವಂತೆ ಆರೋನನು ಇದನ್ನು ಯಾವಾಗಲೂ ತನ್ನ ಶಿರದಲ್ಲಿ ಧರಿಸಿಕೊಂಡಿರುವನು.

39 “ಹೆಣೆದ ಅಂಗಿಯನ್ನು ಮತ್ತು ಮುಂಡಾಸವನ್ನು ಮಾಡಲು ಉತ್ಕೃಷ್ಟವಾದ ನಾರಿನ ಬಟ್ಟೆಯನ್ನು ಉಪಯೋಗಿಸು. ನಡುಕಟ್ಟನ್ನು ಬುಟ್ಟೀದಾರಿ ಕೆಲಸದಿಂದ ಮಾಡಿಸಬೇಕು. 40 ಆರೋನನ ಗಂಡುಮಕ್ಕಳಿಗೂ ಅಂಗಿಗಳನ್ನು, ನಡುಕಟ್ಟುಗಳನ್ನು ಮತ್ತು ಮುಂಡಾಸಗಳನ್ನು ಮಾಡಿಸು. ಇವು ಅವರಿಗೆ ಘನತೆ ಮತ್ತು ಗೌರವಗಳನ್ನು ಕೊಡುತ್ತವೆ. 41 ನಿನ್ನ ಸಹೋದರನಾದ ಆರೋನನಿಗೆ ಮತ್ತು ಅವನ ಗಂಡುಮಕ್ಕಳಿಗೆ ಬಟ್ಟೆಗಳನ್ನು ತೊಡಿಸು. ಬಳಿಕ ಅವರನ್ನು ಯಾಜಕರನ್ನಾಗಿ ಮಾಡಲು ವಿಶೇಷ ತೈಲದಿಂದ ಅಭಿಷೇಕಿಸು. ಇದು ಅವರನ್ನು ಪ್ರತಿಷ್ಠಿಸುವುದು ಮತ್ತು ಪವಿತ್ರರನ್ನಾಗಿ ಮಾಡುವುದು. ಅವರು ಯಾಜಕರಾಗಿ ನನ್ನ ಸೇವೆ ಮಾಡುವರು.

42 “ಯಾಜಕರಿಗೆ ಒಳಗಿನ ಉಡುಪುಗಳನ್ನು ಮಾಡಲು ನಾರುಬಟ್ಟೆಯನ್ನು ಉಪಯೋಗಿಸು. ಈ ಒಳಗಿನ ಉಡುಪುಗಳು ಅವರನ್ನು ಸೊಂಟದಿಂದ ತೊಡೆಯವರೆಗೆ ಮುಚ್ಚುವುದು. 43 ಆರೋನನು ಮತ್ತು ಅವನ ಗಂಡುಮಕ್ಕಳು ದೇವದರ್ಶನ ಗುಡಾರದೊಳಗೆ ಪ್ರವೇಶಿಸುವಾಗಲೆಲ್ಲಾ ಈ ಉಡುಪುಗಳನ್ನು ಧರಿಸಿಕೊಳ್ಳಬೇಕು. ಪವಿತ್ರಸ್ಥಳದಲ್ಲಿ ಯಾಜಕರಾಗಿ ಸೇವೆಮಾಡಲು ಯಜ್ಞವೇದಿಕೆಯ ಬಳಿಗೆ ಬರುವಾಗ ಅವರು ಈ ಬಟ್ಟೆಗಳನ್ನು ಧರಿಸಿಕೊಂಡಿರಬೇಕು. ಅವರು ಈ ಉಡುಪುಗಳನ್ನು ಧರಿಸಿಕೊಳ್ಳದಿದ್ದರೆ, ದೋಷಿಗಳಾಗಿ ಸಾಯುವರು. ಇವುಗಳೆಲ್ಲಾ ಆರೋನನಿಗೂ ಅವನ ನಂತರ ಅವನ ಕುಟುಂಬಸ್ಥರೆಲ್ಲರಿಗೂ ಶಾಶ್ವತವಾದ ಕಟ್ಟಳೆಯಾಗಿವೆ.”

ಯೋಹಾನ 7

ಯೇಸು ಮತ್ತು ಆತನ ಸಹೋದರರು

ಇದಾದ ಮೇಲೆ, ಯೇಸು ಗಲಿಲಾಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿದನು. ಜುದೇಯದಲ್ಲಿ ಸಂಚರಿಸಲು ಯೇಸುವಿಗೆ ಇಷ್ಟವಿರಲಿಲ್ಲ. ಏಕೆಂದರೆ ಅಲ್ಲಿನ ಯೆಹೂದ್ಯರು ಆತನನ್ನು ಕೊಲ್ಲಲು ಅವಕಾಶಕ್ಕಾಗಿ ಕಾಯುತ್ತಿದ್ದರು. ಆಗ ಯೆಹೂದ್ಯರ ಪರ್ಣಕುಟೀರಗಳ ಹಬ್ಬದ ಸಮಯವಾಗಿತ್ತು. ಆದ್ದರಿಂದ ಯೇಸುವಿನ ಸಹೋದರರು ಆತನಿಗೆ, “ನೀನು ಇಲ್ಲಿಂದ ಜುದೇಯಕ್ಕೆ ಹೋಗು. ಆಗ ಅಲ್ಲಿರುವ ನಿನ್ನ ಹಿಂಬಾಲಕರು ನೀನು ಮಾಡುವ ಅದ್ಭುತಕಾರ್ಯಗಳನ್ನು ನೋಡುವರು. ತನ್ನ ಬಗ್ಗೆ ಜನರಿಗೆ ತಿಳಿಯಬೇಕೆಂದು ಅಪೇಕ್ಷಿಸುವವನು ತಾನು ಮಾಡುವ ಕಾರ್ಯಗಳನ್ನು ಮರೆಮಾಡಕೂಡದು. ನಿನ್ನನ್ನು ಈ ಲೋಕಕ್ಕೆ ತೋರಿಸಿಕೊ. ನೀನು ಮಾಡುವ ಕಾರ್ಯಗಳನ್ನು ಅವರು ನೋಡಲಿ” ಎಂದು ಹೇಳಿದರು. (ಯೇಸುವಿನ ಸಹೋದರರು ಸಹ ಆತನನ್ನು ನಂಬಲಿಲ್ಲ.)

ಯೇಸು ತನ್ನ ಸಹೋದರರಿಗೆ, “ನನಗೆ ಸರಿಯಾದ ಸಮಯವು ಇನ್ನೂ ಬಂದಿಲ್ಲ. ನಿಮಗಾದರೋ ಹೋಗಲು ಎಲ್ಲಾ ಸಮಯವೂ ಸರಿಯಾಗಿರುತ್ತದೆ. ಈ ಲೋಕವು ನಿಮ್ಮನ್ನು ದ್ವೇಷಿಸಲಾರದು. ಆದರೆ ಈ ಲೋಕವು ನನ್ನನ್ನು ದ್ವೇಷಿಸುತ್ತದೆ. ಏಕೆಂದರೆ ನಾನು ಈ ಲೋಕದ ಜನರಿಗೆ, ಅವರು ಮಾಡುತ್ತಿರುವುದು ಕೆಟ್ಟಕಾರ್ಯಗಳೆಂದು ಹೇಳುವೆನು. ಆದ್ದರಿಂದ ನೀವು ಹಬ್ಬಕ್ಕೆ ಹೋಗಿರಿ. ನಾನು ಈ ಹಬ್ಬಕ್ಕೆ ಹೋಗುವುದಿಲ್ಲ. ನನಗೆ ಸರಿಯಾದ ಸಮಯವು ಇನ್ನೂ ಬಂದಿಲ್ಲ” ಎಂದು ಹೇಳಿದನು. ಯೇಸು ಹೀಗೆ ಹೇಳಿ ಗಲಿಲಾಯದಲ್ಲೇ ಉಳಿದುಕೊಂಡನು.

10 ಆದ್ದರಿಂದ ಯೇಸುವಿನ ಸಹೋದರರು ಹಬ್ಬಕ್ಕಾಗಿ ಹೊರಟರು. ಅವರು ಹೋದನಂತರ ಆತನು ಸಹ ಗುಟ್ಟಾಗಿಹೋದನು. 11 ಹಬ್ಬದಲ್ಲಿ ಯೆಹೂದ್ಯರು, “ಆತನು ಎಲ್ಲಿದ್ದಾನೆ” ಎಂದು ಕೇಳುತ್ತಾ ಆತನಿಗಾಗಿ ಹುಡುಕುತ್ತಿದ್ದರು.

12 ಅಲ್ಲಿ ಜನರ ದೊಡ್ಡ ಗುಂಪೊಂದು ನೆರೆದಿದ್ದಿತು. ಆ ಜನರಲ್ಲಿ ಅನೇಕರು ಯೇಸುವಿನ ಬಗ್ಗೆ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಿದ್ದರು. “ಆತನು ಒಳ್ಳೆಯವನು” ಎಂದು ಕೆಲವರು ಹೇಳಿದರು. ಇತರರು, “ಇಲ್ಲ, ಆತನು ಜನರನ್ನು ಮೋಸಗೊಳಿಸುತ್ತಿದ್ದಾನೆ” ಎಂದು ಟೀಕಿಸಿದರು. 13 ಆದರೆ ಯೇಸುವಿನ ಬಗ್ಗೆ ಬಹಿರಂಗವಾಗಿ ಮಾತಾಡಲು ಆ ಜನರಲ್ಲಿ ಯಾರಿಗೂ ಸಾಕಷ್ಟು ಧೈರ್ಯವಿರಲಿಲ್ಲ. ಜನರು ಯೆಹೂದ್ಯ ನಾಯಕರುಗಳಿಗೆ ಹೆದರಿಕೊಂಡಿದ್ದರು.

ಯೆಹೂದ್ಯರ ಹಬ್ಬದಲ್ಲಿ ಯೇಸುವಿನ ಉಪದೇಶ

14 ಹಬ್ಬದಲ್ಲಿ ಸುಮಾರು ಅರ್ಧಭಾಗ ಮುಗಿದುಹೋಗಿತ್ತು. ಆಗ ಯೇಸು ದೇವಾಲಯಕ್ಕೆ ಹೋಗಿ ಉಪದೇಶಿಸಲು ಆರಂಭಿಸಿದನು. 15 ಯೆಹೂದ್ಯರಿಗೆ ಆಶ್ಚರ್ಯವಾಯಿತು. “ಈ ಮನುಷ್ಯನು ಎಂದೂ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲಿಲ್ಲ. ಇವನು ಇಷ್ಟೆಲ್ಲವನ್ನೂ ಹೇಗೆ ಕಲಿತನು?” ಎಂದು ವಿಚಾರಿಸತೊಡಗಿದರು.

16 ಯೇಸು, “ನಾನು ಉಪದೇಶಿಸುವ ಸಂಗತಿಗಳು ನನ್ನ ಸ್ವಂತವಾದವುಗಳಲ್ಲ. ನನ್ನ ಉಪದೇಶವು ನನ್ನನ್ನು ಕಳುಹಿಸಿದಾತನಿಂದ (ದೇವರು) ಬರುತ್ತದೆ. 17 ದೇವರು ಅಪೇಕ್ಷಿಸುವುದನ್ನು ಮಾಡಬಯಸುವವನಿಗೆ ನನ್ನ ಉಪದೇಶವು ದೇವರಿಂದ ಬಂದದ್ದೇ ಹೊರತು ನನ್ನ ಸ್ವಂತದ್ದಲ್ಲವೆಂದು ಗೊತ್ತಾಗುವುದು. 18 ತನ್ನ ಸ್ವಂತ ಆಲೋಚನೆಗಳನ್ನು ಉಪದೇಶಿಸುವವನು, ತನಗೇ ಘನತೆಯನ್ನು ಉಂಟುಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ತನ್ನನ್ನು ಕಳುಹಿಸಿದಾತನಿಗೆ ಘನತೆಯನ್ನು ಉಂಟುಮಾಡಲು ಪ್ರಯತ್ನಿಸುವವನು ಸತ್ಯವನ್ನೇ ಹೇಳುತ್ತಾನೆ. ಆತನಲ್ಲಿ ಯಾವ ಸುಳ್ಳೂ ಇಲ್ಲ. 19 ಮೋಶೆಯು ನಿಮಗೆ ಧರ್ಮಶಾಸ್ತ್ರವನ್ನು ಕೊಟ್ಟನು. ಹೌದಲ್ಲವೇ? ಆದರೆ ನಿಮ್ಮಲ್ಲಿ ಒಬ್ಬರೂ ಧರ್ಮಶಾಸ್ತ್ರಕ್ಕೆ ವಿಧೇಯರಾಗುತ್ತಿಲ್ಲ. ನೀವು ನನ್ನನ್ನು ಕೊಲ್ಲಲು ಏಕೆ ಪ್ರಯತ್ನಿಸುತ್ತಿದ್ದೀರಿ?” ಎಂದು ಉತ್ತರಕೊಟ್ಟನು.

20 ಜನರು, “ದೆವ್ವವು ನಿನ್ನೊಳಗೆ ಸೇರಿಕೊಂಡು ನಿನ್ನನ್ನು ಹುಚ್ಚನನ್ನಾಗಿ ಮಾಡಿದೆ! ನಾವು ನಿನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿಲ್ಲ” ಎಂದು ಉತ್ತರಕೊಟ್ಟರು.

21 ಯೇಸು ಅವರಿಗೆ, “ನಾನು ಮಾಡಿದ ಒಂದು ಅದ್ಭುತಕಾರ್ಯವನ್ನು ಕಂಡು ನೀವೆಲ್ಲರೂ ಆಶ್ಚರ್ಯಗೊಂಡಿದ್ದೀರಿ. 22 ಮೋಶೆಯು ನಿಮಗೆ ಸುನ್ನತಿಯ ಬಗ್ಗೆ ಕಟ್ಟಳೆಯನ್ನು ಕೊಟ್ಟನು. (ಆದರೆ ನಿಜವಾಗಿಯೂ ಸುನ್ನತಿ ಎಂಬ ಸಂಸ್ಕಾರವನ್ನು ನಿಮಗೆ ಕೊಟ್ಟವನು ಮೋಶೆಯಲ್ಲ. ಅವನಿಗಿಂತ ಮೊದಲೇ ಜೀವಿಸಿದ್ದ ನಮ್ಮ ಜನರಿಂದ ಈ ಸಂಸ್ಕಾರವು ಬಂದಿದೆ.) ಆದ್ದರಿಂದ ಕೆಲವೊಮ್ಮೆ ನೀವು ಸಬ್ಬತ್‌ದಿನದಲ್ಲಿ ಮಗುವಿಗೆ ಸುನ್ನತಿಮಾಡುತ್ತೀರಿ. 23 ಒಬ್ಬ ವ್ಯಕ್ತಿಯು ಮೋಶೆಯ ಕಟ್ಟಳೆಗೆ ವಿಧೇಯನಾಗುವುದಕ್ಕಾಗಿ ಸಬ್ಬತ್‌ದಿನದಂದು ಸುನ್ನತಿ ಮಾಡಬಹುದು ಎಂಬುದನ್ನು ಇದು ತೋರಿಸುತ್ತದೆ. ಹೀಗಿರುವಲ್ಲಿ, ಸಬ್ಬತ್‌ದಿನದಂದು ಒಬ್ಬನ ಇಡೀ ದೇಹವನ್ನು ಗುಣಪಡಿಸಿದ್ದಕ್ಕೋಸ್ಕರ ನೀವು ಏಕೆ ಕೋಪಗೊಂಡಿದ್ದೀರಿ? 24 ಹೊರತೋರಿಕೆಯ ಆಧಾರದ ಮೇಲೆ ತೀರ್ಪುಮಾಡದೆ ನ್ಯಾಯಾನುಸಾರವಾಗಿ ತೀರ್ಪುಮಾಡಿರಿ” ಎಂದು ಹೇಳಿದನು.

ಯೇಸುವೇ ಕ್ರಿಸ್ತನೋ?

25 ಬಳಿಕ, ಜೆರುಸಲೇಮಿನಲ್ಲಿ ವಾಸವಾಗಿದ್ದ ಕೆಲವರು, “ಅವರು ಕೊಲ್ಲಲು ಪ್ರಯತ್ನಿಸುತ್ತಿರುವುದು ಈ ವ್ಯಕ್ತಿಯನ್ನೇ 26 ಆದರೆ ಇವನು ಪ್ರತಿಯೊಬ್ಬರಿಗೂ ಕಾಣುವ ಮತ್ತು ಕೇಳುವ ಸ್ಥಳದಲ್ಲಿ ಉಪದೇಶಿಸುತ್ತಿದ್ದಾನೆ. ಅಲ್ಲದೆ ಉಪದೇಶ ಮಾಡದಂತೆ ಯಾರೂ ಅವನನ್ನು ತಡೆಯುತ್ತಿಲ್ಲ. ಒಂದುವೇಳೆ ಈತನೇ ಕ್ರಿಸ್ತನು ಎಂಬ ನಿರ್ಧಾರಕ್ಕೆ ನಾಯಕರುಗಳು ಬಂದಿರಬಹುದು. 27 ಆದರೆ ಈ ಮನುಷ್ಯನ ಮನೆಯು ಎಲ್ಲಿದೆ ಎಂಬುದು ನಮಗೆ ಗೊತ್ತಿದೆ. ಅಲ್ಲದೆ, ಕ್ರಿಸ್ತನು ಬಂದಾಗ, ಆತನು ಎಲ್ಲಿಂದ ಬಂದನೆಂದು ಯಾರಿಗೂ ತಿಳಿಯುವುದಿಲ್ಲ” ಎಂದು ಮಾತಾಡಿಕೊಂಡರು.

28 ಯೇಸುವು ದೇವಾಲಯದಲ್ಲಿ ಇನ್ನೂ ಉಪದೇಶಿಸುತ್ತಾ, “ಹೌದು, ನಿಮಗೆ ನನ್ನ ಬಗ್ಗೆ ಗೊತ್ತಿದೆ, ನಾನು ಎಲ್ಲಿಂದ ಬಂದೆನೆಂಬುದೂ ನಿಮಗೆ ತಿಳಿದಿದೆ. ಆದರೆ ನಾನು ಬಂದಿರುವುದು ನನ್ನ ಸ್ವಂತ ಅಧಿಕಾರದಿಂದಲ್ಲ. ಸತ್ಯಸ್ವರೂಪನು ನನ್ನನ್ನು ಕಳುಹಿಸಿದ್ದಾನೆ. ನಿಮಗೆ ಆತನು ಗೊತ್ತಿಲ್ಲ. 29 ಆದರೆ ನಾನು ಆತನನ್ನು ಬಲ್ಲೆನು. ನಾನು ಆತನಿಂದಲೇ ಬಂದೆನು ಮತ್ತು ಆತನೇ ನನ್ನನ್ನು ಕಳುಹಿಸಿದನು” ಎಂದು ಗಟ್ಟಿಯಾಗಿ ಕೂಗಿ ಹೇಳಿದನು.

30 ಇದನ್ನು ಕೇಳಿ ಜನರು ಆತನನ್ನು ಬಂಧಿಸಲು ಪ್ರಯತ್ನಿಸಿದರು. ಆದರೆ ಯೇಸುವಿನ ಮೇಲೆ ಕೈಹಾಕಲು ಯಾರಿಗೂ ಸಾಧ್ಯವಿರಲಿಲ್ಲ, ಏಕೆಂದರೆ ಯೇಸುವನ್ನು ಕೊಲ್ಲಲು ಇನ್ನೂ ಸರಿಯಾದ ಸಮಯ ಬಂದಿರಲಿಲ್ಲ. 31 ಆದರೆ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು. ಅವರು, “ಕ್ರಿಸ್ತನು ಬರುತ್ತಾನೆಂದು ನಾವು ಎದುರು ನೋಡುತ್ತಿದ್ದೇವೆ. ಕ್ರಿಸ್ತನು ಬಂದಾಗ, ಈ ಮನುಷ್ಯನು (ಯೇಸು) ಮಾಡಿರುವುದಕ್ಕಿಂತಲೂ ಹೆಚ್ಚು ಸೂಚಕಕಾರ್ಯಗಳನ್ನು ಮಾಡುವನೇ? ಇಲ್ಲ! ಆದ್ದರಿಂದ ಈತನೇ ಕ್ರಿಸ್ತನಿರಬೇಕು” ಎಂದರು.

ಯೇಸುವನ್ನು ಬಂಧಿಸಲು ಯೆಹೂದ್ಯರ ಪ್ರಯತ್ನ

32 ಯೇಸುವಿನ ಬಗ್ಗೆ ಜನರು ಹೇಳುತ್ತಿದ್ದ ಈ ಸಂಗತಿಗಳನ್ನು ಫರಿಸಾಯರು ಕೇಳಿದರು. ಆದ್ದರಿಂದ ಮಹಾಯಾಜಕರು ಮತ್ತು ಫರಿಸಾಯರು ಯೇಸುವನ್ನು ಬಂಧಿಸುವುದಕ್ಕಾಗಿ ದೇವಾಲಯದ ಸಿಪಾಯಿಗಳಲ್ಲಿ ಕೆಲವರನ್ನು ಕಳುಹಿಸಿದರು. 33 ಆಗ ಯೇಸು, “ಇನ್ನು ಸ್ವಲ್ಪಕಾಲ ನಾನು ನಿಮ್ಮೊಂದಿಗಿರುತ್ತೇನೆ. ಬಳಿಕ, ನನ್ನನ್ನು ಕಳುಹಿಸಿದಾತನ ಬಳಿಗೆ ನಾನು ಹಿಂತಿರುಗಿ ಹೋಗುತ್ತೇನೆ. 34 ನೀವು ನನ್ನನ್ನು ಹುಡುಕುವಿರಿ, ಆದರೆ ನೀವು ನನ್ನನ್ನು ಕಂಡುಕೊಳ್ಳುವುದಿಲ್ಲ ಮತ್ತು ನಾನಿರುವಲ್ಲಿಗೆ ನೀವು ಬರಲಾರಿರಿ” ಎಂದು ಹೇಳಿದನು.

35 ಯೆಹೂದ್ಯರು, “ಇವನನ್ನು ನಾವು ಕಂಡುಕೊಳ್ಳಲಾಗದಂತೆ ಇವನು ಎಲ್ಲಿಗೆ ಹೋಗುವನು? ನಮ್ಮವರು ವಾಸವಾಗಿರುವ ಗ್ರೀಕ್ ಜನರ ಪಟ್ಟಣಗಳಿಗೆ ಹೋಗಿ ಗ್ರೀಕರಿಗೆ ಉಪದೇಶಿಸುವನೇ? 36 ಇವನು (ಯೇಸು), ‘ನೀವು ನನ್ನನ್ನು ಹುಡುಕುವಿರಿ, ಆದರೆ ನೀವು ನನ್ನನ್ನು ಕಂಡುಕೊಳ್ಳುವುದಿಲ್ಲ’ ಎನ್ನುತ್ತಾನೆ. ಅಲ್ಲದೆ ಇವನು, ‘ನಾನು ಇರುವಲ್ಲಿಗೆ ನೀವು ಬರಲಾರಿರಿ’ ಎನ್ನುತ್ತಾನೆ. ಇದರರ್ಥವೇನು?” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.

ಪವಿತ್ರಾತ್ಮನ ಬಗ್ಗೆ ಉಪದೇಶ

37 ಹಬ್ಬದ ಕೊನೆಯ ದಿನ ಬಂದಿತು. ಅದು ಅತ್ಯಂತ ಮುಖ್ಯವಾದ ದಿನವಾಗಿತ್ತು. ಅಂದು ಯೇಸು ನಿಂತುಕೊಂಡು, “ಯಾವನಿಗಾದರೂ ಬಾಯಾರಿಕೆಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ. 38 ನನ್ನಲ್ಲಿ ನಂಬಿಕೆ ಇಡುವವನ ಹೊಟ್ಟೆಯೊಳಗಿಂದ ಜೀವಕರವಾದ ನೀರಿನ ಹೊಳೆಗಳು ಹರಿಯುತ್ತವೆ. ಪವಿತ್ರ ಗ್ರಂಥವು ತಿಳಿಸುವುದು ಇದನ್ನೇ” ಎಂದು ಗಟ್ಟಿಯಾಗಿ ಹೇಳಿದನು. 39 ಯೇಸು ತನ್ನನ್ನು ನಂಬಿದವರು ಹೊಂದಲಿರುವ ಪವಿತ್ರಾತ್ಮನನ್ನು ಕುರಿತು ಹೇಳಿದನು. ಆತನು ಇನ್ನೂ ತನ್ನ ಮಹಿಮೆಯನ್ನು ಹೊಂದಿಲ್ಲದಿದ್ದ ಕಾರಣ ಪವಿತ್ರಾತ್ಮನು ಇನ್ನೂ ಬಂದಿರಲಿಲ್ಲ.

ಯೇಸುವಿನ ಬಗ್ಗೆ ಜನರ ವಾದವಿವಾದ

40 ಈ ಸಂಗತಿಗಳನ್ನು ಕೇಳಿದ ಜನರಲ್ಲಿ ಕೆಲವರು, “ಈ ಮನುಷ್ಯನು ನಿಜವಾಗಿಯೂ ಪ್ರವಾದಿ” ಎಂದರು.

41 “ಆತನೇ ಕ್ರಿಸ್ತನು” ಎಂದು ಇನ್ನು ಕೆಲವರು ಹೇಳಿದರು.

ಮತ್ತೆ ಕೆಲವರು, “ಕ್ರಿಸ್ತನು ಗಲಿಲಾಯದಿಂದ ಬರುವುದಿಲ್ಲ. 42 ಕ್ರಿಸ್ತನು ದಾವೀದನ ಕುಟುಂಬದವನೆಂತಲೂ ದಾವೀದನು ವಾಸಿಸಿದ ಬೆತ್ಲೆಹೇಮ್ ಊರಿನಿಂದ ಆತನು ಬರುತ್ತಾನೆಂತಲೂ ಪವಿತ್ರ ಗ್ರಂಥವು ತಿಳಿಸುತ್ತದೆ” ಎಂದರು. 43 ಹೀಗೆ ಯೇಸುವಿನ ಕುರಿತು ಜನರಲ್ಲಿ ಭೇದ ಉಂಟಾಯಿತು. 44 ಕೆಲವರು ಯೇಸುವನ್ನು ಬಂಧಿಸಬೇಕೆಂದಿದ್ದರು. ಆದರೆ ಬಂಧಿಸಲು ಯಾರೂ ಪ್ರಯತ್ನಿಸಲಿಲ್ಲ.

ಯೆಹೂದ್ಯನಾಯಕರ ಅಪನಂಬಿಕೆ

45 ದೇವಾಲಯದ ಸಿಪಾಯಿಗಳು ಹಿಂತಿರುಗಿದಾಗ, ಮಹಾಯಾಜಕರು ಮತ್ತು ಫರಿಸಾಯರು ಅವರಿಗೆ, “ನೀವು ಅವನನ್ನು ಏಕೆ ಹಿಡಿದುಕೊಂಡು ಬರಲಿಲ್ಲ?” ಎಂದು ಕೇಳಿದರು.

46 ದೇವಾಲಯದ ಸಿಪಾಯಿಗಳು, “ಈತನಂತೆ ಆಶ್ಚರ್ಯಕರವಾದ ಸಂಗತಿಗಳನ್ನು ಬೇರೆ ಯಾರೂ ಹೇಳಿಲ್ಲ” ಎಂದು ಉತ್ತರಕೊಟ್ಟರು.

47 ಫರಿಸಾಯರು, “ಹಾಗಾದರೆ, ಯೇಸು ನಿಮ್ಮನ್ನು ಸಹ ಮರುಳುಗೊಳಿಸುತ್ತಿದ್ದಾನೆ! 48 ನಾಯಕರಲ್ಲಿ ಯಾರಾದರೂ ಯೇಸುವಿನಲ್ಲಿ ನಂಬಿಕೆ ಇಟ್ಟಿದ್ದಾರೋ? ಇಲ್ಲ! ಫರಿಸಾಯರಾದ ನಮ್ಮಲ್ಲಿ ಯಾರಾದರೂ ಆತನನ್ನು ನಂಬಿದ್ದಾರೋ? ಇಲ್ಲ! 49 ಆದರೆ ಹೊರಗಿನ ಜನರಿಗೆ ಧರ್ಮಶಾಸ್ತ್ರದ ಬಗ್ಗೆ ಏನೂ ಗೊತ್ತಿಲ್ಲ. ಅವರು ದೇವರ ಶಾಪಕ್ಕೆ ಒಳಗಾಗಿದ್ದಾರೆ!” ಎಂದು ಉತ್ತರಕೊಟ್ಟರು.

50 ಆದರೆ ಆ ಗುಂಪಿನಲ್ಲಿ ನಿಕೊದೇಮನು ಇದ್ದನು. ಮೊದಲೊಮ್ಮೆ ಯೇಸುವನ್ನು ನೋಡಲು ಹೋಗಿದ್ದವನು ಇವನೇ. 51 ನಿಕೊದೇಮನು, “ಒಬ್ಬ ವ್ಯಕ್ತಿಯ ಹೇಳಿಕೆಯನ್ನು ಕೇಳದೆ ತೀರ್ಪು ನೀಡಲು ನಮ್ಮ ಧರ್ಮಶಾಸ್ತ್ರವು ಸಮ್ಮತಿಸುವುದಿಲ್ಲ. ಆತನು ಮಾಡಿರುವುದನ್ನು ನಾವು ತಿಳಿದುಕೊಳ್ಳುವವರೆಗೆ ಆತನಿಗೆ ತೀರ್ಪು ಮಾಡಲಾಗದು” ಎಂದು ಹೇಳಿದನು.

52 ಯೆಹೂದ್ಯನಾಯಕರು, “ನೀನೂ ಗಲಿಲಾಯದವನೋ? ಪವಿತ್ರ ಗ್ರಂಥವನ್ನು ಅಧ್ಯಯನಮಾಡು. ಗಲಿಲಾಯದಿಂದ ಯಾವ ಪ್ರವಾದಿಯೂ ಬರುವುದಿಲ್ಲವೆಂಬುದು ಆಗ ನಿನಗೆ ತಿಳಿಯುತ್ತದೆ” ಎಂದು ಉತ್ತರಕೊಟ್ಟರು. 53 ಬಳಿಕ ಅವರೆಲ್ಲರೂ ತಮ್ಮತಮ್ಮ ಮನೆಗಳಿಗೆ ಹೊರಟುಹೋದರು.

ಜ್ಞಾನೋಕ್ತಿಗಳು 4

ಜ್ಞಾನ ವಿವೇಕಗಳ ಪ್ರಾಮುಖ್ಯತೆ

ಮಕ್ಕಳೇ, ನಿಮ್ಮ ತಂದೆಯ ಉಪದೇಶಗಳಿಗೆ ಕಿವಿಗೊಡಿ, ಗಮನವಿಟ್ಟು ಅರ್ಥಮಾಡಿಕೊಳ್ಳಿರಿ. ನನ್ನ ಉಪದೇಶಗಳು ಸದುಪದೇಶಗಳಾಗಿರುವುದರಿಂದ ಅವುಗಳನ್ನು ಎಂದಿಗೂ ಮರೆಯಬೇಡಿ.

ನಾನು ನನ್ನ ತಂದೆಗೆ ಚಿಕ್ಕ ಮಗನಾಗಿದ್ದೆ. ನನ್ನ ತಾಯಿಗೆ ನಾನೊಬ್ಬನೇ ಮಗನು. ನನ್ನ ತಂದೆ ನನಗೆ ಉಪದೇಶ ಮಾಡಿದ್ದೇನೆಂದರೆ: “ನನ್ನ ಮಾತುಗಳನ್ನು ನೆನಪುಮಾಡಿಕೊ; ನನ್ನ ಆಜ್ಞೆಗಳಿಗೆ ವಿಧೇಯನಾಗು, ಆಗ ನೀನು ಬದುಕುವೆ. ಜ್ಞಾನವನ್ನು ಮತ್ತು ವಿವೇಕವನ್ನು ಪಡೆದುಕೋ! ನನ್ನ ಮಾತುಗಳನ್ನು ಮರೆಯಬೇಡ. ಯಾವಾಗಲೂ ನನ್ನ ಉಪದೇಶಗಳನ್ನು ಅನುಸರಿಸು. ಜ್ಞಾನವನ್ನು ಬಿಟ್ಟು ಬೇರೆ ಕಡೆಗೆ ತಿರುಗಿಕೊಳ್ಳಬೇಡ. ಆಗ ಅದು ನಿನ್ನನ್ನು ಕಾಪಾಡುವುದು. ಜ್ಞಾನವನ್ನು ಪ್ರೀತಿಸು, ಆಗ ಅದು ನಿನ್ನನ್ನು ಕಾಪಾಡುವುದು.”

“ಜ್ಞಾನವನ್ನು ಪಡೆಯಲು ನೀನು ನಿರ್ಧರಿಸಿದಾಗಲೇ ಜ್ಞಾನವು ನಿನ್ನಲ್ಲಿ ಆರಂಭವಾಗುತ್ತದೆ. ಆದ್ದರಿಂದ ವಿವೇಕವನ್ನು ಪಡೆಯಲು ನಿನಗಿರುವದನ್ನೆಲ್ಲಾ ಉಪಯೋಗಿಸು. ಆಗ ನೀನು ವಿವೇಕಿಯಾಗುವೆ. ಜ್ಞಾನವನ್ನು ಪ್ರೀತಿಸು, ಆಗ ಅದು ನಿನ್ನನ್ನು ಉನ್ನತಸ್ಥಾನಕ್ಕೆ ತರುವುದು. ಜ್ಞಾನವನ್ನು ಅಪ್ಪಿಕೊ; ಆಗ ಅದು ನಿನಗೆ ಸನ್ಮಾನವನ್ನು ತರುವುದು. ಅದು ನಿನಗೆ ಅಂದವಾದ ಪುಷ್ಪಮಾಲೆಯಂತೆಯೂ ಸುಂದರವಾದ ಕಿರೀಟದಂತೆಯೂ ಇರುವುದು.”

10 ಮಗನೇ, ನನ್ನ ಮಾತನ್ನು ಕೇಳು. ನಾನು ಹೇಳಿದಂತೆ ಮಾಡು, ಆಗ ನೀನು ಬಹುಕಾಲ ಬದುಕುವೆ. 11 ನಾನು ನಿನಗೆ ಜ್ಞಾನದ ಕುರಿತು ಉಪದೇಶಿಸುತ್ತಿರುವೆನು. ನಾನು ನಿನ್ನನ್ನು ಧರ್ಮದ ಮಾರ್ಗದಲ್ಲಿ ನಡೆಸುತ್ತಿರುವೆನು. 12 ಈ ದಾರಿಯಲ್ಲೇ ಹೋಗು, ಆಗ ನಿನ್ನ ಕಾಲುಗಳು ಇಕ್ಕಟ್ಟಿಗೆ ಸಿಕ್ಕಿಕೊಳ್ಳುವುದಿಲ್ಲ. ನೀನು ಓಡಿದರೂ ಮುಗ್ಗರಿಸುವುದಿಲ್ಲ. 13 ಈ ಉಪದೇಶಗಳನ್ನು ಯಾವಾಗಲೂ ನೆನಪುಮಾಡಿಕೊ; ಮರೆತುಬಿಡಬೇಡ. ಅವು ನಿನಗೆ ಜೀವವಾಗಿವೆ!

14 ಕೆಡುಕರ ಮಾರ್ಗದಲ್ಲಿ ನಡೆಯಬೇಡ. ಅವರಂತೆ ಜೀವಿಸಬೇಡ. 15 ದುಷ್ಟತನಕ್ಕೆ ದೂರವಾಗಿರು. ಅದರ ಬಳಿಗೆ ಹೋಗಬೇಡ. ನೇರವಾಗಿ ನಡೆದು ಅದರಿಂದ ದೂರವಾಗು. 16 ಏನಾದರೂ ಕೇಡುಮಾಡದಿದ್ದರೆ ಕೆಡುಕರಿಗೆ ನಿದ್ರೆಬಾರದು. ಯಾರಿಗಾದರೂ ನೋವು ಮಾಡದೆ ಅವರು ನಿದ್ರಿಸಲಾರರು. 17 ಅವರು ಬೇರೆಯವರಿಗೆ ಕೇಡನ್ನಾಗಲಿ ನೋವನ್ನಾಗಲಿ ಮಾಡದೆ ಜೀವಿಸಲಾರರು. ಅದೇ ಅವರ ಆಹಾರ ಮತ್ತು ಪಾನೀಯ.

18 ನೀತಿವಂತರ ಜೀವಿತವು ಮಧ್ಯಾಹ್ನದವರೆಗೂ ಹೆಚ್ಚುತ್ತಾ ಬರುವ ಮುಂಜಾನೆಯ ಬೆಳಕಿನಂತಿರುವುದು. 19 ಆದರೆ ದುಷ್ಟರ ಜೀವಿತವು ರಾತ್ರಿಯ ಕತ್ತಲೆಯಂತಿದೆ. ಅವರು ಕತ್ತಲೆಯಲ್ಲಿ ತಪ್ಪಿಸಿಕೊಂಡಿದ್ದು ತಮಗೆ ಕಾಣದ ವಸ್ತುಗಳ ಮೇಲೆ ಎಡವಿ ಬೀಳುತ್ತಾರೆ.

20 ನನ್ನ ಮಗನೇ, ನನ್ನ ಮಾತುಗಳಿಗೆ ಗಮನಕೊಡು. ನನ್ನ ನುಡಿಗಳಿಗೆ ಕಿವಿಗೊಡು. 21 ನಿನ್ನ ದೃಷ್ಟಿಯು ಅವುಗಳ ಮೇಲಿರಲಿ, ಅವುಗಳನ್ನು ನಿನ್ನ ನೆನಪಿನಲ್ಲಿಟ್ಟುಕೋ. 22 ನನ್ನ ಉಪದೇಶಕ್ಕೆ ಕಿವಿಗೊಡುವವರು ಜೀವವನ್ನು ಹೊಂದಿಕೊಳ್ಳುವರು. ನನ್ನ ಮಾತುಗಳು ದೇಹಕ್ಕೆ ಒಳ್ಳೆಯ ಆರೋಗ್ಯವನ್ನು ನೀಡುತ್ತವೆ. 23 ನಿನ್ನ ಆಲೋಚನೆಗಳ ವಿಷಯದಲ್ಲಿ ಎಚ್ಚರಿಕೆಯಿಂದಿರು. ನಿನ್ನ ನಡತೆಯು ನಿನ್ನ ಆಲೋಚನೆಗಳ ಮೇಲೆ ಆಧಾರಗೊಂಡಿದೆ.

24 ಸತ್ಯವನ್ನು ಸೊಟ್ಟಗೆ ಮಾಡದಿರು; ಸುಳ್ಳನ್ನು ಹೇಳದಿರು. 25 ಒಳ್ಳೆಯದನ್ನೇ ದೃಷ್ಟಿಸು; ನಿನ್ನ ನೋಟವನ್ನು ನಿನ್ನ ಗುರಿಯ ಮೇಲೆ ಕೇಂದ್ರೀಕರಿಸು. 26 ನಿನ್ನ ಕಾರ್ಯಗಳನ್ನು ಎಚ್ಚರಿಕೆಯಿಂದ ಮಾಡು; ಆಗ ನಿನ್ನ ಜೀವನವು ದೃಢವಾಗಿರುವುದು. 27 ಒಳ್ಳೆಯ ಮಾರ್ಗವನ್ನು ಬಿಟ್ಟು ಹೋಗಬೇಡ; ಆದರೆ ಕೆಡುಕಿಗೆ ಯಾವಾಗಲೂ ದೂರವಾಗಿರು.

ಗಲಾತ್ಯದವರಿಗೆ 3

ನಂಬಿಕೆಯ ಮೂಲಕ ದೇವರಾಶೀರ್ವಾದ

ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಮರಣ ಹೊಂದಿದ್ದರ ಬಗ್ಗೆ ಗಲಾತ್ಯದಲ್ಲಿರುವ ನಿಮಗೆ ಬಹು ಸ್ಪಷ್ಟವಾಗಿ ತಿಳಿಸಲಾಯಿತು. ಆದರೆ ನೀವು ಬಹು ಬುದ್ಧಿಹೀನರಾಗಿದ್ದೀರಿ. ನಿಮ್ಮನ್ನು ಮೋಸಗೊಳಿಸಲು ಬೇರೊಬ್ಬನಿಗೆ ಅವಕಾಶ ಮಾಡಿಕೊಟ್ಟಿರಿ. ಈ ವಿಷಯವೊಂದನ್ನು ನನಗೆ ತಿಳಿಸಿರಿ: ನೀವು ಪವಿತ್ರಾತ್ಮನನ್ನು ಹೊಂದಿಕೊಂಡದ್ದು ಹೇಗೆ? ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದ ಹೊಂದಿಕೊಂಡಿರೊ? ಇಲ್ಲ! ಸುವಾರ್ತೆಯನ್ನು ಕೇಳಿ ಅದರಲ್ಲಿ ನಂಬಿಕೆಯಿಟ್ಟದ್ದರಿಂದಲೇ ಪವಿತ್ರಾತ್ಮನನ್ನು ಹೊಂದಿಕೊಂಡಿರಿ. ಕ್ರಿಸ್ತನಲ್ಲಿಯ ನಿಮ್ಮ ಜೀವಿತವನ್ನು ಪವಿತ್ರಾತ್ಮನೊಂದಿಗೆ ಆರಂಭಿಸಿದಿರಿ. ಈಗ ಅದನ್ನು ನಿಮ್ಮ ಸ್ವಂತ ಶಕ್ತಿಯೊಂದಿಗೆ ಮುಂದುವರಿಸಲು ಪ್ರಯತ್ನಿಸುತ್ತೀರೋ? ಅದು ಬುದ್ಧಿಹೀನತೆ! ಅನೇಕ ಸಂಗತಿಗಳನ್ನು ಅನುಭವದಿಂದ ತಿಳಿದುಕೊಂಡಿದ್ದೀರಿ. ಆ ಅನುಭವಗಳೆಲ್ಲಾ ವ್ಯರ್ಥಗೊಂಡವೇ? ದೇವರು ಪವಿತ್ರಾತ್ಮನನ್ನು ಕೊಡುವುದು ನೀವು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲೋ? ದೇವರು ಮಹತ್ಕಾರ್ಯಗಳನ್ನು ಮಾಡುವುದು ನೀವು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲೋ? ಇಲ್ಲ! ಸುವಾರ್ತೆಯನ್ನು ಕೇಳಿ ಅದನ್ನು ನಂಬಿಕೊಂಡದ್ದರಿಂದ ದೇವರು ನಿಮಗೆ ಪವಿತ್ರಾತ್ಮನನ್ನು ಕೊಡುತ್ತಾನೆ ಮತ್ತು ಮಹತ್ಕಾರ್ಯಗಳನ್ನು ಮಾಡುತ್ತಾನೆ.

ಪವಿತ್ರ ಗ್ರಂಥವು ಅಬ್ರಹಾಮನ ವಿಷಯವಾಗಿಯೂ ಇದನ್ನೇ ಹೇಳುತ್ತದೆ. “ಅಬ್ರಹಾಮನು ದೇವರನ್ನು ನಂಬಿದನು. ದೇವರು ಅವನ ನಂಬಿಕೆಯನ್ನು ಪರಿಗಣಿಸಿದ್ದರಿಂದ ನೀತಿವಂತನೆಂಬ ನಿರ್ಣಯ ಅವನಿಗೆ ದೊರೆಯಿತು.”(A) ಆದ್ದರಿಂದ ನಂಬಿಕೆಯನ್ನು ಹೊಂದಿರುವ ಜನರೇ ಅಬ್ರಹಾಮನ “ನಿಜಮಕ್ಕಳು” ಎಂಬುದು ನಿಮಗೆ ತಿಳಿದಿರಬೇಕು. ದೇವರು ಯೆಹೂದ್ಯರಲ್ಲದವರನ್ನು ಅವರ ನಂಬಿಕೆಯ ಮೂಲಕ ನೀತಿವಂತರನ್ನಾಗಿ ಮಾಡುತ್ತಾನೆ. “ಅಬ್ರಹಾಮನೇ, ನಿನ್ನ ಮೂಲಕ ದೇವರು ಭೂಮಿಯ ಮೇಲಿರುವ ಜನರನ್ನೆಲ್ಲ ಆಶೀರ್ವದಿಸುತ್ತಾನೆ”(B) ಎಂಬ ಸುವಾರ್ತೆಯನ್ನು ಅವನಿಗೆ ಮೊದಲೇ ತಿಳಿಸಲಾಯಿತೆಂದು ಪವಿತ್ರ ಗ್ರಂಥವು ಹೇಳುತ್ತದೆ. ಅವನು ಇದನ್ನು ನಂಬಿದ್ದರಿಂದಲೇ ಆಶೀರ್ವಾದ ಹೊಂದಿದನು. ಇದೇ ನಿಯಮ ಇಂದಿಗೂ ಅನ್ವಯಿಸುತ್ತದೆ. ಅವನು ಆಶೀರ್ವಾದ ಹೊಂದಿದಂತೆಯೇ ನಂಬಿಕೆಯಿಡುವ ಜನರೆಲ್ಲರೂ ಆಶೀರ್ವಾದ ಹೊಂದುವರು.

10 ಆದರೆ ನೀತಿವಂತರಾಗಲು ಧರ್ಮಶಾಸ್ತ್ರವನ್ನು ಅವಲಂಬಿಸಿಕೊಂಡಿರುವವರು ಶಾಪಗ್ರಸ್ತರಾಗಿದ್ದಾರೆ. ಏಕೆಂದರೆ ಪವಿತ್ರ ಗ್ರಂಥವು ಹೇಳುವಂತೆ, “ಧರ್ಮಶಾಸ್ತ್ರದಲ್ಲಿ ಬರೆದಿರುವ ನಿಯಮಗಳನ್ನೆಲ್ಲಾ ಕೈಕೊಂಡು ನಡೆಯಬೇಕು. ಅವುಗಳಿಗೆ ಎಂದಾದರೂ ಅವಿಧೇಯನಾದವನು ಶಾಪಗ್ರಸ್ತನಾಗಿದ್ದಾನೆ.”(C) 11 ಆದ್ದರಿಂದ ಧರ್ಮಶಾಸ್ತ್ರದ ಮೂಲಕ ಯಾವನೂ ನೀತಿವಂತನಾಗಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಪವಿತ್ರ ಗ್ರಂಥವು ಹೇಳುವಂತೆ, “ನಂಬಿಕೆಯ ಮೂಲಕ ನೀತಿವಂತನಾದವನು ಸದಾಕಾಲ ಜೀವಿಸುವನು.”[a]

12 ಧರ್ಮಶಾಸ್ತ್ರವು ನಂಬಿಕೆಯ ಮಾರ್ಗವನ್ನು ಬಳಸದೆ, “ಈ ವಿಧಿನಿಯಮಗಳನ್ನು ಪಾಲಿಸುವವನು ಅವುಗಳ ಮೂಲಕ ಜೀವವನ್ನು ಪಡೆದುಕೊಳ್ಳುತ್ತಾನೆ” ಎಂದು ಹೇಳುತ್ತದೆ. 13 ಧರ್ಮಶಾಸ್ತ್ರವು ನಮ್ಮ ಮೇಲೆ ಶಾಪವನ್ನು ಬರಮಾಡುತ್ತದೆ. ಆದರೆ ಕ್ರಿಸ್ತನು ಆ ಶಾಪವನ್ನು ತನ್ನ ಮೇಲೆ ತೆಗೆದುಕೊಂಡನು. ಆತನು ನಮ್ಮ ಸ್ಥಾನವನ್ನು ತಾನೇ ತೆಗೆದುಕೊಂಡನು. ಕ್ರಿಸ್ತನು ತನ್ನನ್ನೇ ಶಾಪಕ್ಕೆ ಒಳಪಡಿಸಿಕೊಂಡನು. ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ, “ಮರಕ್ಕೆ ತೂಗುಹಾಕಲ್ಪಟ್ಟ ವ್ಯಕ್ತಿಯು ಶಾಪಗ್ರಸ್ತನಾಗಿದ್ದಾನೆ.”(D) 14 ಎಲ್ಲಾ ಜನರಿಗೆ ದೇವರ ಆಶೀರ್ವಾದವು ದೊರೆಯಲೆಂದು ಕ್ರಿಸ್ತನು ಹೀಗೆ ಮಾಡಿದನು. ಈ ಆಶೀರ್ವಾದವನ್ನು ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ್ದನು. ಈ ಆಶೀರ್ವಾದವು ಯೇಸು ಕ್ರಿಸ್ತನ ಮೂಲಕ ಬರುತ್ತದೆ. ದೇವರು ವಾಗ್ದಾನ ಮಾಡಿದ ಪವಿತ್ರಾತ್ಮನನ್ನು ನಾವು ಹೊಂದಿಕೊಳ್ಳಲೆಂದು ಯೇಸು ಮರಣಹೊಂದಿದನು. ನಂಬಿಕೆಯಿಡುವುದರ ಮೂಲಕ ನಾವು ಈ ವಾಗ್ದಾನವನ್ನು ಪಡೆದುಕೊಳ್ಳುತ್ತೇವೆ.

ಧರ್ಮಶಾಸ್ತ್ರ ಮತ್ತು ವಾಗ್ದಾನ

15 ಸಹೋದರ ಸಹೋದರಿಯರೇ, ನಾನು ನಿಮಗೊಂದು ಉದಾಹರಣೆಯನ್ನು ಕೊಡುತ್ತೇನೆ. ಒಬ್ಬನು ಇನ್ನೊಬ್ಬನೊಂದಿಗೆ ಮಾಡಿಕೊಳ್ಳುವ ಒಪ್ಪಂದದ ಬಗ್ಗೆ ಯೋಚಿಸಿ. ಆ ಒಪ್ಪಂದವು ಅಧಿಕೃತವಾದಾಗ ಅದನ್ನು ರದ್ದುಮಾಡುವುದಕ್ಕಾಗಲಿ ಅಥವಾ ಅದಕ್ಕೆ ಬೇರೆ ಏನಾದರು ಸೇರಿಸುವುದಕ್ಕಾಗಲಿ ಯಾರಿಗೂ ಸಾಧ್ಯವಿಲ್ಲ. 16 ದೇವರು ಅಬ್ರಹಾಮನಿಗೂ ಅವನ ಸಂತಾನದವರಿಗೂ ವಾಗ್ದಾನಗಳನ್ನು ಮಾಡಿದನು. “ನಿನ್ನ ಸಂತತಿಗಳಿಗೆ” ಎಂದು ದೇವರು ಹೇಳಲಿಲ್ಲ. ಏಕೆಂದರೆ ಅನೇಕ ಜನರು ಎಂಬರ್ಥವನ್ನು ಅದು ಕೊಡುತ್ತದೆ. ಆದರೆ ದೇವರು ಅವನಿಗೆ, “ನಿನ್ನ ಸಂತತಿಗೆ”[b] ಎಂದು ಹೇಳಿದನು. ಅದರರ್ಥವೇನೆಂದರೆ, ಒಬ್ಬನೇ ಒಬ್ಬ ವ್ಯಕ್ತಿ. ಆತನೇ ಕ್ರಿಸ್ತನು. 17 ನಾನು ಹೇಳುತ್ತಿರುವುದೇನೆಂದರೆ, ದೇವರು ಅಬ್ರಹಾಮನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡು ಅದನ್ನು ಸ್ಥಿರಪಡಿಸಿದನು. ಆದ್ದರಿಂದ ನಾನೂರಮೂವತ್ತು ವರ್ಷಗಳಾದ ನಂತರ ಬಂದ ಧರ್ಮಶಾಸ್ತ್ರವು ಅಬ್ರಹಾಮನಿಗೆ ದೇವರು ಮಾಡಿದ ವಾಗ್ದಾನವನ್ನು ರದ್ದುಪಡಿಸುವುದೂ ಇಲ್ಲ ಬದಲಾಯಿಸುವುದೂ ಇಲ್ಲ.

18 ದೇವರು ವಾಗ್ದಾನ ಮಾಡಿದಂಥವುಗಳು ಧರ್ಮಶಾಸ್ತ್ರದ ಅನುಸರಣೆಯಿಂದ ದೊರೆಯುತ್ತವೆಯೇ? ಇಲ್ಲ! ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ನಾವು ಅವುಗಳನ್ನು ಪಡೆದುಕೊಳ್ಳಬಹುದಾಗಿದ್ದರೆ ಅವುಗಳನ್ನು ನಮಗೆ ಕೊಡುವಂಥದ್ದು ದೇವರ ವಾಗ್ದಾನವಲ್ಲ. ಆದರೆ ದೇವರು ತಾನು ಮಾಡಿದ ವಾಗ್ದಾನದ ಮೂಲಕ ತನ್ನ ಆಶೀರ್ವಾದಗಳನ್ನು ಅಬ್ರಹಾಮನಿಗೆ ಉಚಿತವಾಗಿ ಕೊಟ್ಟನು.

19 ಹಾಗಾದರೆ ಧರ್ಮಶಾಸ್ತ್ರವಿದ್ದದ್ದು ಯಾಕೆ? ಜನರ ಅಪರಾಧಗಳನ್ನು ತೋರಿಸುವುದಕ್ಕಾಗಿ ಧರ್ಮಶಾಸ್ತ್ರವನ್ನು ಕೊಡಲಾಯಿತು. ಅಬ್ರಹಾಮನ ವಿಶೇಷ ಸಂತಾನವು ಬರುವ ತನಕ ಧರ್ಮಶಾಸ್ತ್ರವಿತ್ತು. ಈ ಸಂತಾನದ (ಕ್ರಿಸ್ತನು) ಬಗ್ಗೆಯೇ ದೇವರು ವಾಗ್ದಾನ ಮಾಡಿದನು. ಧರ್ಮಶಾಸ್ತ್ರವನ್ನು ದೇವದೂತರ ಮೂಲಕ ಕೊಡಲಾಯಿತು. ಜನರಿಗೆ ಧರ್ಮಶಾಸ್ತ್ರವನ್ನು ಕೊಡುವುದಕ್ಕಾಗಿ ದೇವದೂತರು ಮೋಶೆಯನ್ನು ಮಧ್ಯವರ್ತಿಯನ್ನಾಗಿ ಉಪಯೋಗಿಸಿದರು. 20 ಒಂದೇ ಪಕ್ಷವಿದ್ದರೆ ಮಧ್ಯಸ್ತನು ಬೇಕಿಲ್ಲ. ದೇವರು ಒಬ್ಬನೇ.

ಮೋಶೆಯ ಧರ್ಮಶಾಸ್ತ್ರದ ಉದ್ದೇಶ

21 ಧರ್ಮಶಾಸ್ತ್ರವು ದೇವರ ವಾಗ್ದಾನಗಳಿಗೆ ವಿರೋಧವಾಗಿದೆ ಎಂಬುದು ಇದರರ್ಥವೇ? ಇಲ್ಲ! ಜೀವವನ್ನು ಕೊಡುವಂಥ ಧರ್ಮಶಾಸ್ತ್ರವಿದ್ದಿದ್ದರೆ ಅದನ್ನು ಅನುಸರಿಸುವುದರ ಮೂಲಕ ನೀತಿವಂತರಾಗಬಹುದಾಗಿತ್ತು. 22 ಆದರೆ ಇದು ಸತ್ಯವಲ್ಲ. ಏಕೆಂದರೆ ಸಮಸ್ತವೂ ಪಾಪಕ್ಕೆ ಒಳಗಾಗಿದೆ ಎಂದು ಪವಿತ್ರ ಗ್ರಂಥ ಪ್ರಕಟಿಸುತ್ತದೆ. ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವವರಿಗೆ ಅವರ ನಂಬಿಕೆಯ ಆಧಾರದ ಮೇಲೆ ವಾಗ್ದಾನದ ಫಲವು ದೊರೆಯಬೇಕೆಂದೇ ಪವಿತ್ರ ಗ್ರಂಥವು ಹೀಗೆ ಪ್ರಕಟಿಸಿದೆ.

23 ಈ ನಂಬಿಕೆಯು ಬರುವುದಕ್ಕಿಂತ ಮೊದಲು ನಾವು ಧರ್ಮಶಾಸ್ತ್ರಕ್ಕೆ ಸೆರೆಯಾಳುಗಳಾಗಿದ್ದೆವು. ಬರಲಿದ್ದ ನಂಬಿಕೆಯ ಮಾರ್ಗವನ್ನು ದೇವರು ನಮಗೆ ತೋರಿಸಿಕೊಡುವ ತನಕ ನಮಗೆ ಸ್ವತಂತ್ರವಿರಲಿಲ್ಲ. 24 ಆದ್ದರಿಂದ ಕ್ರಿಸ್ತನು ಬರುವ ತನಕ ಧರ್ಮಶಾಸ್ತ್ರವು ನಮಗೆ ಯಜಮಾನನಾಗಿತ್ತು. ಕ್ರಿಸ್ತನು ಬಂದ ತರುವಾಯ ನಾವು ನಂಬಿಕೆಯ ಮೂಲಕ ನೀತಿವಂತರಾಗಿರಲು ಸಾಧ್ಯವಾಯಿತು. 25 ಈಗ ನಂಬಿಕೆಯ ಮಾರ್ಗವು ಬಂದಿದೆ. ಆದ್ದರಿಂದ ಈಗ ನಾವು ಧರ್ಮಶಾಸ್ತ್ರದ ಅಧೀನದಲ್ಲಿ ಜೀವಿಸುವುದಿಲ್ಲ.

26-27 ನೀವೆಲ್ಲರೂ ಕ್ರಿಸ್ತನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದರಿಂದ ಕ್ರಿಸ್ತನನ್ನೇ ಧರಿಸಿಕೊಂಡಿರಿ. ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಡುವುದರ ಮೂಲಕ ನೀವೆಲ್ಲರೂ ದೇವರ ಮಕ್ಕಳಾಗಿದ್ದೀರೆಂಬುದನ್ನು ಇದು ತೋರಿಸುತ್ತದೆ. 28 ಈಗ ಕ್ರಿಸ್ತನಲ್ಲಿ ಯೆಹೂದ್ಯನು, ಗ್ರೀಕನು ಎಂಬ ವ್ಯತ್ಯಾಸವಿಲ್ಲ; ಸ್ವತಂತ್ರರು ಮತ್ತು ಗುಲಾಮರು ಎಂಬ ವ್ಯತ್ಯಾಸವಿಲ್ಲ; ಸ್ತ್ರೀಯರು ಮತ್ತು ಪುರುಷರು ಎಂಬ ವ್ಯತ್ಯಾಸವಿಲ್ಲ. ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿದ್ದೀರಿ. 29 ನೀವು ಕ್ರಿಸ್ತನವರಾಗಿದ್ದೀರಿ. ಆದ್ದರಿಂದ ನೀವು ಅಬ್ರಹಾಮನ ಸಂತಾನದವರು. ದೇವರು ಅವನಿಗೆ ಮಾಡಿದ ವಾಗ್ದಾನದ ಪ್ರಕಾರ ನೀವೆಲ್ಲರೂ ದೇವರ ಆಶೀರ್ವಾದಗಳನ್ನು ಪಡೆದುಕೊಳ್ಳುವಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International