M’Cheyne Bible Reading Plan
ಯಜ್ಞವೇದಿಕೆ
27 ಯೆಹೋವನು ಮೋಶೆಗೆ, “ಜಾಲೀಮರದಿಂದ ಯಜ್ಞವೇದಿಕೆಯನ್ನು ಮಾಡಿಸಬೇಕು. ಈ ಯಜ್ಞವೇದಿಕೆಯು ಚೌಕವಾಗಿರಬೇಕು. ಅದು ಐದು ಮೊಳ ಉದ್ದ, ಐದು ಮೊಳ ಅಗಲ ಮತ್ತು ಮೂರು ಮೊಳ ಎತ್ತರ ಇರಬೇಕು. 2 ಈ ಯಜ್ಞವೇದಿಕೆಯ ನಾಲ್ಕು ಮೂಲೆಗಳಿಗೆ ನಾಲ್ಕು ಕೊಂಬುಗಳನ್ನು ಮಾಡಿಸಬೇಕು. ಪ್ರತಿಯೊಂದು ಕೊಂಬೂ ಯಜ್ಞವೇದಿಕೆಗೆ ಜೋಡಿಸಲ್ಪಟ್ಟಿರಬೇಕು. ಹೀಗೆ ಅವು ಯಜ್ಞವೇದಿಕೆಯ ಅವಿಭಾಜ್ಯ ಭಾಗವಾಗಿರಬೇಕು. ಬಳಿಕ ಯಜ್ಞವೇದಿಕೆಯನ್ನು ತಾಮ್ರದ ತಗಡಿನಿಂದ ಹೊದಿಸಬೇಕು.
3 “ಯಜ್ಞವೇದಿಕೆಯ ಉಪಕರಣಗಳನ್ನೆಲ್ಲಾ ತಾಮ್ರದಿಂದ ಮಾಡಿಸಬೇಕು. ಬಟ್ಟಲುಗಳನ್ನು, ಸಲಿಕೆಗಳನ್ನು, ಬೋಗುಣಿಗಳನ್ನು, ಮುಳ್ಳುಗಳನ್ನು ಮತ್ತು ಅಗ್ಗಿಷ್ಟಿಕೆಗಳನ್ನು ಮಾಡಿಸಬೇಕು. ಇವುಗಳನ್ನು ಯಜ್ಞವೇದಿಕೆಯಿಂದ ಬೂದಿಯನ್ನು ತೆಗೆದು ಶುಚಿಗೊಳಿಸುವುದಕ್ಕೆ ಉಪಯೋಗಿಸಬೇಕು. 4 ಯಜ್ಞವೇದಿಕೆಗೆ ಹೆಣಿಗೇ ಕೆಲಸದಿಂದ ತಾಮ್ರದ ಜಾಳಿಗೆ ಮಾಡಿಸಬೇಕು. ಈ ಜಾಳಿಗೆಯ ನಾಲ್ಕುಮೂಲೆಗಳಲ್ಲಿ ನಾಲ್ಕು ತಾಮ್ರದ ಬಳೆಗಳನ್ನು ಮಾಡಿಸಬೇಕು. 5 ಆ ಜಾಳಿಗೆಯು ಯಜ್ಞವೇದಿಕೆಯ ಸುತ್ತಲಿರುವ ಕಟ್ಟೆಯ ಕೆಳಗೆ ಇದ್ದು ಯಜ್ಞವೇದಿಕೆಯ ಬುಡದಿಂದ ಅರ್ಧದಷ್ಟು ಮೇಲಕ್ಕೆ ಇರಬೇಕು.
6 “ಯಜ್ಞವೇದಿಕೆಗೆ ಕೋಲುಗಳನ್ನು ಜಾಲೀಮರದಿಂದ ಮಾಡಿಸಿ ಅವುಗಳಿಗೆ ತಾಮ್ರದ ತಗಡನ್ನು ಹೊದಿಸಬೇಕು. 7 ಯಜ್ಞವೇದಿಕೆಯ ಎರಡು ಕಡೆಗಳಲ್ಲಿರುವ ಬಳೆಗಳಲ್ಲಿ ಕೋಲುಗಳನ್ನು ಸೇರಿಸಬೇಕು. ಈ ಕೋಲುಗಳಿಂದ ಯಜ್ಞವೇದಿಕೆಯನ್ನು ಹೊತ್ತುಕೊಂಡು ಹೋಗಬೇಕು. 8 ಯಜ್ಞವೇದಿಕೆಯ ಪಾರ್ಶ್ವಗಳನ್ನು ಹಲಗೆಗಳಿಂದ ಮಾಡಿಸಬೇಕು. ನಾನು ಬೆಟ್ಟದ ಮೇಲೆ ನಿನಗೆ ತೋರಿಸಿದ ಪ್ರಕಾರವೇ ಯಜ್ಞವೇದಿಕೆಯನ್ನು ಮಾಡಿಸಬೇಕು.
ಪವಿತ್ರಗುಡಾರದ ಅಂಗಳ
9 “ಪವಿತ್ರಗುಡಾರಕ್ಕೆ ಅಂಗಳವನ್ನು ಮಾಡಿಸಬೇಕು. ದಕ್ಷಿಣ ದಿಕ್ಕಿನಲ್ಲಿ ನೂರು ಮೊಳ ಉದ್ದದ ಪರದೆಗಳ ಗೋಡೆಯಿರಬೇಕು. ಈ ಪರದೆಗಳನ್ನು ಉತ್ತಮ ನಾರುಬಟ್ಟೆಯಿಂದ ಮಾಡಿಸಬೇಕು. 10 ಇಪ್ಪತ್ತು ಕಂಬಗಳನ್ನು ಮತ್ತು ಆ ಕಂಬಗಳಿಗೆ ಇಪ್ಪತ್ತು ತಾಮ್ರದ ಗದ್ದಿಗೇಕಲ್ಲುಗಳನ್ನು ಮಾಡಿಸಬೇಕು. ಕಂಬಗಳಿಗೆ ಬೆಳ್ಳಿಯ ಕೊಂಡಿಗಳನ್ನು ಮತ್ತು ಪರದೆಯ ಕೋಲುಗಳಿಗೆ ಬೆಳ್ಳಿಯ ಕಂಬಿಗಳನ್ನು ಮಾಡಿಸಬೇಕು. 11 ಉತ್ತರ ದಿಕ್ಕಿನಲ್ಲಿ ಸಹ ನೂರು ಮೊಳ ಉದ್ದದ ಪರದೆಗಳ ಗೋಡೆಯಿರಬೇಕು. ಅದಕ್ಕೆ ಇಪ್ಪತ್ತು ಕಂಬಿಗಳು ಮತ್ತು ಇಪ್ಪತ್ತು ತಾಮ್ರದ ಗದ್ದಿಗೇಕಲ್ಲುಗಳು ಇರಬೇಕು. ಕಂಬಗಳ ಕೊಂಡಿಗಳನ್ನು ಮತ್ತು ಪರದೆಯ ಕಟ್ಟುಗಳನ್ನು ಬೆಳ್ಳಿಯಿಂದ ಮಾಡಿಸಬೇಕು.
12 “ಪಶ್ಚಿಮದಿಕ್ಕಿನಲ್ಲಿ ಅಂಗಳದ ಅಗಲಕ್ಕೆ ಐವತ್ತು ಮೊಳ ಉದ್ದದ ಪರದೆಗಳೂ ಹತ್ತು ಕಂಬಗಳೂ ಮತ್ತು ಹತ್ತು ಗದ್ದಿಗೇಕಲ್ಲುಗಳೂ ಇರಬೇಕು. 13 ಅಂಗಳದ ಪೂರ್ವದಿಕ್ಕಿನಲ್ಲಿ ಐವತ್ತು ಮೊಳ ಉದ್ದ ಇರಬೇಕು. 14 ಈ ಪೂರ್ವದಿಕ್ಕಿನಲ್ಲಿ ಅಂಗಳದ ಪ್ರವೇಶದ್ವಾರವಿರುತ್ತದೆ. ಪ್ರವೇಶದ್ವಾರದ ಒಂದು ಕಡೆಯಲ್ಲಿ ಹದಿನೈದು ಮೊಳ ಉದ್ದದ ಪರದೆಗಳು, ಮೂರು ಕಂಬಗಳು ಮತ್ತು ಮೂರು ಗದ್ದಿಗೇಕಲ್ಲುಗಳು ಇರಬೇಕು. 15 ಇನ್ನೊಂದು ಕಡೆಯಲ್ಲಿ ಹದಿನೈದು ಮೊಳ ಉದ್ದದ ಪರದೆಗಳು, ಮೂರು ಕಂಬಗಳು; ಮೂರು ಗದ್ದಿಗೇಕಲ್ಲುಗಳು ಇರಬೇಕು.
16 “ಅಂಗಳದ ದ್ವಾರವನ್ನು ಮುಚ್ಚುವುದಕ್ಕೆ ಇಪ್ಪತ್ತು ಮೊಳ ಉದ್ದದ ಪರದೆಯನ್ನು ಮಾಡಿಸಬೇಕು. ಪರದೆಯನ್ನು ಉತ್ತಮ ನಾರಿನ ಬಟ್ಟೆಯಿಂದ ಮತ್ತು ನೀಲಿ, ನೇರಳೆ ಮತ್ತು ಕೆಂಪು ದಾರಗಳಿಂದ ಮಾಡಿಸಬೇಕು. ಆ ಪರದೆಯಲ್ಲಿ ಅಲಂಕೃತವಾದ ಚಿತ್ರಗಳನ್ನು ಬುಟೇದಾರೀ ಕೆಲಸದವರಿಂದ ಮಾಡಿಸಬೇಕು. ಆ ಪರದೆಗೆ ನಾಲ್ಕು ಕಂಬಗಳು ಮತ್ತು ನಾಲ್ಕು ಗದ್ದಿಗೇಕಲ್ಲುಗಳು ಇರಬೇಕು. 17 ಅಂಗಳದ ಸುತ್ತಲಿರುವ ಕಂಬಗಳನ್ನೆಲ್ಲ ಬೆಳ್ಳಿಯ ಪರದೆ ಕೋಲುಗಳೊಡನೆ ಜೋಡಿಸಬೇಕು. ಕಂಬಗಳ ಕೊಂಡಿಗಳನ್ನು ಬೆಳ್ಳಿಯಿಂದಲೂ ಕಂಬಗಳ ಗದ್ದಿಗೇಕಲ್ಲುಗಳನ್ನು ತಾಮ್ರದಿಂದಲೂ ಮಾಡಿಸಬೇಕು. 18 ಅಂಗಳವು ನೂರು ಮೊಳ ಉದ್ದ ಮತ್ತು ಐವತ್ತು ಮೊಳ ಅಗಲ ಇರಬೇಕು. ಅಂಗಳದ ಸುತ್ತಲಿರುವ ಪರದೆಗಳ ಗೋಡೆಯು ಐದು ಮೊಳ ಎತ್ತರವಿರಬೇಕು. ಪರದೆಗಳನ್ನು ಉತ್ತಮ ನಾರುಬಟ್ಟೆಯಿಂದ ಮಾಡಿಸಬೇಕು. ಕಂಬಗಳ ಕೆಳಗಿರುವ ಗದ್ದಿಗೇಕಲ್ಲುಗಳನ್ನು ತಾಮ್ರದಿಂದ ಮಾಡಿಸಬೇಕು. 19 ಪವಿತ್ರಗುಡಾರದ ಉಪಕರಣಗಳನ್ನೂ ಗುಡಾರದ ಗೂಟಗಳನ್ನೂ ಗುಡಾರದ ಸುತ್ತಲೂ ಇರುವ ಪರದೆಯ ಗೂಟಗಳನ್ನೂ ತಾಮ್ರದಿಂದ ಮಾಡಿಸಬೇಕು.
ದೀಪದ ಎಣ್ಣೆ
20 “ಉತ್ತಮವಾದ ಆಲಿವ್‌ಎಣ್ಣೆಯನ್ನು ತರಬೇಕೆಂದು ಇಸ್ರೇಲರಿಗೆ ಆಜ್ಞಾಪಿಸು. ಪ್ರತಿ ಸಾಯಂಕಾಲ ಉರಿಸುವ ದೀಪಕ್ಕೆ ಈ ಎಣ್ಣೆಯನ್ನು ಉಪಯೋಗಿಸು. 21 ಆರೋನ ಮತ್ತು ಅವನ ಗಂಡುಮಕ್ಕಳಿಗೆ ದೀಪವನ್ನು ನೋಡಿಕೊಳ್ಳುವ ಕೆಲಸವಿರುವುದು. ಅವರು ದೇವದರ್ಶನಗುಡಾರದ ಮೊದಲಿನ ಕೋಣೆಯೊಳಗೆ ಹೋಗುವರು. ಇದು ಎರಡು ಕೋಣೆಗಳನ್ನು ಪ್ರತ್ಯೇಕಿಸುವ ಪರದೆಯ ಹಿಂದೆ ಒಪ್ಪಂದವಿರುವ ಕೋಣೆಯ ಹೊರಗೆ ಇರುತ್ತದೆ. ಈ ಸ್ಥಳದಲ್ಲಿ ದೀಪವು ಯೆಹೋವನ ಮುಂದೆ ಸಾಯಂಕಾಲದಿಂದ ಮುಂಜಾನೆಯವರೆಗೆ ಯಾವಾಗಲೂ ಉರಿಯುತ್ತಿರುವಂತೆ ಅವರು ನೋಡಿಕೊಳ್ಳುವರು. ಇಸ್ರೇಲರು ಮತ್ತು ಅವರ ಸಂತತಿಯವರು ಈ ನಿಯಮಕ್ಕೆ ಶಾಶ್ವತವಾಗಿ ವಿಧೇಯರಾಗಬೇಕು” ಎಂದು ಹೇಳಿದನು.
ಐದು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ
(ಮತ್ತಾಯ 14:13-21; ಮಾರ್ಕ 6:30-44; ಲೂಕ 9:10-17)
6 ತರುವಾಯ, ಯೇಸು ಗಲಿಲಾಯ ಸರೋವರವನ್ನು (ತಿಬೇರಿಯ ಸರೋವರ) ದಾಟಿ ಆಚೆಯ ದಡಕ್ಕೆ ಹೋದನು. 2 ಅನೇಕ ಜನರು ಯೇಸುವನ್ನು ಹಿಂಬಾಲಿಸಿದರು. ಏಕೆಂದರೆ ಯೇಸು ರೋಗಿಗಳನ್ನು ಗುಣಪಡಿಸುವುದರ ಮೂಲಕ ತನ್ನ ಅಧಿಕಾರವನ್ನು ತೋರಿಸಿದ್ದನು. ಅವರೆಲ್ಲರೂ ಅದನ್ನು ನೋಡಿದ್ದರು. 3 ಆಗ ಯೇಸು ಬೆಟ್ಟವನ್ನು ಹತ್ತಿ ತನ್ನ ಶಿಷ್ಯರ ಸಂಗಡ ಕುಳಿತುಕೊಂಡನು. 4 ಯೆಹೂದ್ಯರ ಪಸ್ಕಹಬ್ಬವೂ ಬಹು ಸಮೀಪವಾಗಿತ್ತು.
5 ಯೇಸು ಕಣ್ಣೆತ್ತಿ ನೋಡಿದಾಗ, ತನ್ನ ಬಳಿಗೆ ಬರುತ್ತಿದ್ದ ಜನಸಮೂಹವನ್ನು ಕಂಡು ಫಿಲಿಪ್ಪನಿಗೆ, “ಈ ಜನರಿಗೆಲ್ಲಾ ಸಾಕಾಗುವಷ್ಟು ರೊಟ್ಟಿಯನ್ನು ನಾವು ಎಲ್ಲಿ ಕೊಂಡುಕೊಳ್ಳೋಣ?” ಎಂದು ಕೇಳಿದನು. 6 (ಫಿಲಿಪ್ಪನನ್ನು ಪರೀಕ್ಷಿಸುವುದಕ್ಕಾಗಿ ಆತನು ಈ ಪ್ರಶ್ನೆಯನ್ನು ಕೇಳಿದನು. ತಾನು ಮಾಡಲಿದ್ದ ಕಾರ್ಯ ಯೇಸುವಿಗೆ ಮೊದಲೇ ತಿಳಿದಿತ್ತು.)
7 ಫಿಲಿಪ್ಪನು, “ಇಲ್ಲಿರುವ ಪ್ರತಿಯೊಬ್ಬರಿಗೆ ರೊಟ್ಟಿಯ ಒಂದು ತುಂಡನ್ನು ಕೊಡಬೇಕಾದರೆ, ಇನ್ನೂರು ದಿನಾರಿ ನಾಣ್ಯಗಳಾದರೂ[a] ಬೇಕು” ಎಂದು ಉತ್ತರಕೊಟ್ಟನು.
8 ಅಂದ್ರೆಯನೆಂಬ ಮತ್ತೊಬ್ಬ ಶಿಷ್ಯನು ಅಲ್ಲಿದ್ದನು. ಅಂದ್ರೆಯನು ಸೀಮೋನ್ ಪೇತ್ರನ ಸಹೋದರ. 9 ಅಂದ್ರೆಯನು, “ಇಲ್ಲಿರುವ ಒಬ್ಬ ಹುಡುಗನ ಬಳಿ ಜವೆಗೋಧಿಯ ಐದು ರೊಟ್ಟಿಗಳಿವೆ ಮತ್ತು ಎರಡು ಚಿಕ್ಕ ಮೀನುಗಳಿವೆ. ಆದರೆ ಅವು ಈ ಜನಸಮೂಹಕ್ಕೆ ಸಾಕಾಗುವುದಿಲ್ಲ” ಎಂದು ಹೇಳಿದನು.
10 ಯೇಸು, “ಜನರಿಗೆ ಕುಳಿತುಕೊಳ್ಳಲು ಹೇಳಿರಿ” ಎಂದು ತಿಳಿಸಿದನು. ಆ ಸ್ಥಳದಲ್ಲಿ ಹುಲ್ಲು ಹುಲುಸಾಗಿ ಬೆಳೆದಿತ್ತು. ಅಲ್ಲಿ ಕುಳಿತುಕೊಂಡವರಲ್ಲಿ ಸುಮಾರು ಐದುಸಾವಿರ ಮಂದಿ ಗಂಡಸರಿದ್ದರು. 11 ಬಳಿಕ ಯೇಸು ಆ ರೊಟ್ಟಿಗಳನ್ನು ತೆಗೆದುಕೊಂಡು ಅವುಗಳಿಗಾಗಿ ದೇವರಿಗೆ ಸ್ತೋತ್ರಸಲ್ಲಿಸಿ, ಕುಳಿತುಕೊಂಡಿದ್ದ ಜನರಿಗೆ ಕೊಟ್ಟನು. ಆತನು ಮೀನುಗಳನ್ನು ಕೊಡುವಾಗಲೂ ಅದೇ ರೀತಿ ಮಾಡಿದನು. ಎಲ್ಲರೂ ತಮಗೆ ಬೇಕಾದಷ್ಟು ತಿಂದರು.
12 ಅವರೆಲ್ಲರೂ ಊಟ ಮಾಡಿ ತೃಪ್ತರಾದ ಮೇಲೆ ಯೇಸು ತನ್ನ ಶಿಷ್ಯರಿಗೆ, “ಉಳಿದುಹೋದ ರೊಟ್ಟಿ ಮತ್ತು ಮೀನುಗಳ ತುಂಡುಗಳನ್ನು ಒಟ್ಟುಗೂಡಿಸಿರಿ. ಯಾವುದನ್ನೂ ಹಾಳುಮಾಡಬೇಡಿ” ಎಂದು ಹೇಳಿದನು. 13 ಆದ್ದರಿಂದ ಶಿಷ್ಯರು ಉಳಿದುಹೋಗಿದ್ದ ತುಂಡುಗಳನ್ನು ಒಟ್ಟುಗೂಡಿಸಿದರು. ಜನರು ತಿನ್ನಲು ಆರಂಭಿಸಿದಾಗ ಕೇವಲ ಐದು ಜವೆಗೋದಿಯ ರೊಟ್ಟಿಗಳಿದ್ದವು. ಆದರೆ ಶಿಷ್ಯರು ಉಳಿದುಹೋದ ಆಹಾರದ ತುಂಡುಗಳನ್ನು ಒಟ್ಟುಗೂಡಿಸಿದಾಗ ಹನ್ನೆರಡು ದೊಡ್ಡ ಬುಟ್ಟಿಗಳು ತುಂಬಿಹೋದವು.
14 ಯೇಸು ಮಾಡಿದ ಈ ಸೂಚಕಕಾರ್ಯವನ್ನು ಕಂಡ ಜನರು, “ಈ ಲೋಕಕ್ಕೆ ಬರಲಿರುವ ಪ್ರವಾದಿ ನಿಜವಾಗಿಯೂ ಈತನೇ ಇರಬೇಕು” ಎಂದು ಹೇಳತೊಡಗಿದರು.
15 ತನ್ನನ್ನು ಬಲವಂತದಿಂದ ರಾಜನನ್ನಾಗಿ ಮಾಡಲು ಜನರು ಯೋಚಿಸುತ್ತಿದ್ದಾರೆಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಅಲ್ಲಿಂದ ತಾನೊಬ್ಬನೇ ಬೆಟ್ಟಕ್ಕೆ ಮತ್ತೆ ಹೋದನು.
ನೀರಿನ ಮೇಲೆ ಕಾಲ್ನಡಿಗೆ
(ಮತ್ತಾಯ 14:22-27; ಮಾರ್ಕ 6:45-52)
16 ಆ ಸಾಯಂಕಾಲ ಯೇಸುವಿನ ಶಿಷ್ಯರು ಸರೋವರಕ್ಕೆ (ಗಲಿಲಾಯ) ಹೋದರು. 17 ಆಗಲೇ ಕತ್ತಲಾಗಿತ್ತು. ಯೇಸು ಅವರ ಬಳಿಗೆ ಇನ್ನೂ ಬಂದಿರಲಿಲ್ಲ. ಆದ್ದರಿಂದ ಶಿಷ್ಯರು ದೋಣಿಯನ್ನು ಹತ್ತಿ ಸರೋವರದ ಆಚೆಯ ಕಡೆಯಿದ್ದ ಕಪೆರ್ನೌಮಿಗೆ ಹೊರಟರು. 18 ಗಾಳಿಯು ಬಹು ರಭಸವಾಗಿ ಬೀಸುತ್ತಿತ್ತು. ಸರೋವರದ ಅಲೆಗಳು ದೊಡ್ಡದಾಗುತ್ತಿದ್ದವು. 19 ಅವರು ಹುಟ್ಟುಹಾಕುತ್ತಾ ಸುಮಾರು ಮೂರು ಅಥವಾ ನಾಲ್ಕು ಮೈಲಿಗಳವರೆಗೆ ದೋಣಿಯನ್ನು ನಡೆಸಿದ ನಂತರ ಯೇಸುವನ್ನು ಕಂಡರು. ಆತನು ನೀರಿನ ಮೇಲೆ ನಡೆಯುತ್ತಾ ದೋಣಿಯ ಸಮೀಪಕ್ಕೆ ಬರುತ್ತಿರುವುದನ್ನು ಕಂಡು ಅವರಿಗೆ ಭಯವಾಯಿತು. 20 ಯೇಸು ಅವರಿಗೆ, “ಹೆದರಬೇಡಿರಿ, ನಾನೇ” ಎಂದು ಹೇಳಿದನು. 21 ಆಗ ಅವರು ಯೇಸುವನ್ನು ದೋಣಿಯೊಳಗೆ ಬರಮಾಡಿಕೊಳ್ಳಬೇಕೆಂದಿದ್ದರು. ಅಷ್ಟರಲ್ಲೇ, ಅವರು ಹೋಗಬೇಕೆಂದಿದ್ದ ಸ್ಥಳದ ದಡಕ್ಕೆ ದೋಣಿಯು ತಲುಪಿತು.
ಯೇಸುವಿಗಾಗಿ ಹುಡುಕಾಟ
22 ಮರುದಿನವಾಯಿತು. ಕೆಲವು ಜನರು ಸರೋವರದ ಮತ್ತೊಂದು ಕಡೆಯಲ್ಲಿ ಉಳಿದುಕೊಂಡಿದ್ದರು. ಯೇಸು ತನ್ನ ಶಿಷ್ಯರೊಂದಿಗೆ ದೋಣಿಯಲ್ಲಿ ಹೋಗಲಿಲ್ಲ ಎಂಬುದು ಈ ಜನರಿಗೆ ತಿಳಿದಿತ್ತು. ಯೇಸುವಿನ ಶಿಷ್ಯರು ಮಾತ್ರ ದೋಣಿಯಲ್ಲಿ ಹೋದರೆಂಬುದೂ ಮತ್ತು ಅದೊಂದು ದೋಣಿ ಮಾತ್ರ ಅಲ್ಲಿತ್ತೆಂಬುದೂ ಅವರಿಗೆ ಗೊತ್ತಿತ್ತು. 23 ಆದರೆ ಅಷ್ಟರಲ್ಲಿಯೇ, ಕೆಲವು ದೋಣಿಗಳು ತಿಬೇರಿಯಾದಿಂದ ಬಂದವು. ಅವರು ಊಟ ಮಾಡಿದ ಸ್ಥಳಕ್ಕೆ ಸಮೀಪದ ದಡದಲ್ಲಿಯೇ ಆ ದೋಣಿಗಳು ನಿಂತುಕೊಂಡವು. ಪ್ರಭುವು ಸ್ತೋತ್ರ ಮಾಡಿದ ಮೇಲೆ ಅವರು ರೊಟ್ಟಿಯನ್ನು ಆ ಸ್ಥಳದಲ್ಲೇ ತಿಂದಿದ್ದರು. 24 ಯೇಸು ಮತ್ತು ಆತನ ಶಿಷ್ಯರು ಅಲ್ಲಿಲ್ಲದಿರುವುದನ್ನು ಜನರು ಕಂಡು ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಪೆರ್ನೌಮಿಗೆ ಹೋದರು. ಅವರು ಯೇಸುವನ್ನು ಕಂಡುಕೊಳ್ಳಬೇಕೆಂದಿದ್ದರು.
ಯೇಸುವೇ ಜೀವದ ರೊಟ್ಟಿ
25 ಜನರು ಯೇಸುವನ್ನು ಸರೋವರದ ಆಚೆಯ ದಡದಲ್ಲಿ ಕಂಡುಕೊಂಡರು. ಅವರು ಆತನಿಗೆ, “ಗುರುವೇ, ನೀನು ಇಲ್ಲಿಗೆ ಯಾವಾಗ ಬಂದೆ?” ಎಂದು ಕೇಳಿದರು.
26 ಯೇಸು, “ನೀವು ನನ್ನನ್ನು ಏಕೆ ಹುಡುಕುತ್ತಿದ್ದೀರಿ? ನನ್ನ ಅಧಿಕಾರವನ್ನು ನಿರೂಪಿಸುವ ನನ್ನ ಅದ್ಭುತಕಾರ್ಯಗಳನ್ನು ಕಂಡು ನೀವು ನನ್ನನ್ನು ಹುಡುಕುತ್ತಿದ್ದೀರೋ? ಇಲ್ಲ! ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ರೊಟ್ಟಿಯನ್ನು ತೃಪ್ತಿಯಾಗುವಷ್ಟು ತಿಂದಕಾರಣ ನನ್ನನ್ನು ಹುಡುಕುತ್ತಿದ್ದೀರಿ. 27 ಈ ಲೋಕದ ಆಹಾರವು ಕೆಟ್ಟುಹೋಗುತ್ತದೆ ಮತ್ತು ಹಾಳಾಗುತ್ತದೆ. ಆದ್ದರಿಂದ ಅಂಥ ಆಹಾರವನ್ನು ಪಡೆದುಕೊಳ್ಳಲು ದುಡಿಯಬೇಡಿರಿ. ಆದರೆ ಎಂದಿಗೂ ಕೆಟ್ಟುಹೋಗದಂಥ ಮತ್ತು ನಿಮಗೆ ನಿತ್ಯಜೀವವನ್ನು ಕೊಡುವಂಥ ಆಹಾರವನ್ನು ಪಡೆದುಕೊಳ್ಳಲು ದುಡಿಯಿರಿ. ಮನುಷ್ಯಕುಮಾರನು ಆ ಆಹಾರವನ್ನು ನಿಮಗೆ ಕೊಡುವನು. ತಂದೆಯಾದ ದೇವರು ಆತನ ಮೇಲೆ ತನ್ನ ಅಧಿಕಾರದ ಮುದ್ರೆಯನ್ನು ಒತ್ತಿದ್ದಾನೆ” ಎಂದು ಹೇಳಿದನು.
28 ಜನರು ಯೇಸುವಿಗೆ, “ನಾವು ಯಾವ ಕಾರ್ಯಗಳನ್ನು ಮಾಡಬೇಕೆಂದು ದೇವರು ಬಯಸುತ್ತಾನೆ?” ಎಂದು ಕೇಳಿದರು.
29 ಯೇಸು, “ದೇವರು ಕಳುಹಿಸಿದಾತನನ್ನು ನೀವು ನಂಬಬೇಕು. ಈ ಕಾರ್ಯವನ್ನೇ ದೇವರು ನಿಮ್ಮಿಂದ ಅಪೇಕ್ಷಿಸುತ್ತಾನೆ” ಎಂದು ಉತ್ತರಕೊಟ್ಟನು.
30 ಆದ್ದರಿಂದ ಜನರು, “ದೇವರಿಂದ ಕಳುಹಿಸಲ್ಪಟ್ಟಾತನು ನೀನೇ ಎಂಬುದನ್ನು ನಿರೂಪಿಸುವುದಕ್ಕಾಗಿ ನೀನು ಯಾವ ಸೂಚಕಕಾರ್ಯವನ್ನು ಮಾಡುವೆ? 31 ನಮ್ಮ ಪಿತೃಗಳು ತಮಗೆ ದೇವರು ಮರುಭೂಮಿಯಲ್ಲಿ ಕೊಟ್ಟ ಮನ್ನವನ್ನು (ಆಹಾರವನ್ನು) ತಿಂದರು. ‘ದೇವರು ಅವರಿಗೆ ತಿನ್ನಲು ಪರಲೋಕದಿಂದ ರೊಟ್ಟಿಯನ್ನು ಕೊಟ್ಟನು’(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಹೇಳಿದರು.
32 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮ್ಮ ಜನರಿಗೆ ಪರಲೋಕದಿಂದ ರೊಟ್ಟಿಯನ್ನು ಕೊಟ್ಟವನು ಮೋಶೆಯಲ್ಲ. ಆದರೆ ನನ್ನ ತಂದೆಯು ನಿಮಗೆ ಪರಲೋಕದಿಂದ ನಿಜವಾದ ರೊಟ್ಟಿಯನ್ನು ಕೊಡುವನು. 33 ದೇವರ ರೊಟ್ಟಿ ಯಾವುದು? ಪರಲೋಕದಿಂದ ಇಳಿದುಬಂದು ಈ ಲೋಕಕ್ಕಾಗಿ ಜೀವವನ್ನು ಕೊಡುವಾತನೇ ದೇವರು ಕೊಡುವ ರೊಟ್ಟಿ” ಎಂದು ಹೇಳಿದನು.
34 ಜನರು, “ಅಯ್ಯಾ, ಆ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡು” ಎಂದು ಕೇಳಿಕೊಂಡರು.
35 ಅದಕ್ಕೆ ಯೇಸು, “ನಾನೇ ಜೀವಕೊಡುವ ರೊಟ್ಟಿ. ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗದು. ನನ್ನಲ್ಲಿ ನಂಬಿಕೆ ಇಡುವವನಿಗೆ ಎಂದಿಗೂ ಬಾಯಾರಿಕೆಯಾಗದು. 36 ನಾನು ನಿಮಗೆ ಮೊದಲೇ ಹೇಳಿದಂತೆ, ನೀವು ನನ್ನನ್ನು ನೋಡಿದ್ದರೂ ಇನ್ನೂ ನನ್ನನ್ನು ನಂಬುತ್ತಿಲ್ಲ. 37 ತಂದೆಯು ನನ್ನ ಜನರನ್ನು ನನಗೆ ಕೊಡುತ್ತಾನೆ. ಆ ಜನರಲ್ಲಿ ಪ್ರತಿಯೊಬ್ಬರೂ ನನ್ನ ಬಳಿಗೆ ಬರುತ್ತಾರೆ. ನನ್ನಲ್ಲಿಗೆ ಬರುವ ಪ್ರತಿಯೊಬ್ಬರನ್ನೂ ನಾನು ಖಂಡಿತವಾಗಿ ಸ್ವೀಕರಿಸಿಕೊಳ್ಳುವೆನು, ಅವರನ್ನು ಎಂದಿಗೂ ತಳ್ಳಿಬಿಡುವುದಿಲ್ಲ. 38 ನಾನು ಪರಲೋಕದಿಂದ ಇಳಿದು ಬಂದದ್ದು ದೇವರ ಚಿತ್ತಕ್ಕನುಸಾರವಾಗಿ ಮಾಡುವುದಕ್ಕಾಗಿಯೇ ಹೊರತು ನನ್ನ ಚಿತ್ತಕ್ಕನುಸಾರವಾಗಿಯಲ್ಲ. 39 ದೇವರು ನನಗೆ ಕೊಟ್ಟಿರುವ ಯಾವ ವ್ಯಕ್ತಿಯನ್ನೂ ನಾನು ಕಳೆದುಕೊಳ್ಳಕೂಡದು. ಅಲ್ಲದೆ ಅಂತಿಮ ದಿನದಂದು ನಾನು ಆ ಜನರನ್ನು ಜೀವಂತವಾಗಿ ಎಬ್ಬಿಸಬೇಕು. ನನ್ನನ್ನು ಕಳುಹಿಸಿದಾತನು ಆ ಕಾರ್ಯವನ್ನೇ ನನ್ನಿಂದ ಅಪೇಕ್ಷಿಸುತ್ತಾನೆ. 40 ಮಗನನ್ನು ನೋಡಿ ಆತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬನೂ ನಿತ್ಯಜೀವವನ್ನು ಹೊಂದಿದ್ದಾನೆ. ಅಂತಿಮ ದಿನದಂದು ನಾನು ಆ ವ್ಯಕ್ತಿಯನ್ನು ಜೀವಂತವಾಗಿ ಎಬ್ಬಿಸುವೆನು. ನನ್ನ ತಂದೆಯು ಬಯಸುವುದು ಇದನ್ನೇ” ಎಂದನು.
41 ಯೆಹೂದ್ಯರು ಯೇಸುವಿನ ಬಗ್ಗೆ ಗುಣುಗುಟ್ಟಿದರು. “ಪರಲೋಕದಿಂದ ಇಳಿದುಬರುವ ರೊಟ್ಟಿಯೇ ನಾನು” ಎಂದು ಆತನು ಹೇಳಿದ್ದರಿಂದ ಅವರು ಆಕ್ಷೇಪಿಸಿದರು. 42 ಯೆಹೂದ್ಯರು, “ಇವನು ಯೇಸು. ಇವನ ತಂದೆತಾಯಿಗಳನ್ನು ನಾವು ಬಲ್ಲೆವು. ಇವನು ಕೇವಲ ಯೋಸೇಫನ ಮಗನು. ‘ನಾನು ಪರಲೋಕದಿಂದ ಇಳಿದುಬಂದೆನು’ ಎಂದು ಇವನು ಹೇಳುವುದಕ್ಕೆ ಹೇಗೆ ಸಾಧ್ಯ?” ಎಂದರು.
43 ಅದಕ್ಕೆ ಯೇಸು, “ನೀವು ಗುಣುಗುಟ್ಟುತ್ತಿರುವುದನ್ನು ನಿಲ್ಲಿಸಿರಿ. 44 ತಂದೆಯೇ ನನ್ನನ್ನು ಕಳುಹಿಸಿದನು ಮತ್ತು ತಂದೆಯೇ ನನ್ನ ಬಳಿಗೆ ಜನರನ್ನು ಕರೆತರುವನು. ಅಂತಿಮ ದಿನದಂದು ನಾನು ಆ ಜನರನ್ನು ಜೀವಂತವಾಗಿ ಎಬ್ಬಿಸುವೆನು. ತಂದೆಯು ನನ್ನ ಬಳಿಗೆ ಕರೆದುಕೊಂಡು ಬರದ ಹೊರತು ಯಾವನೂ ನನ್ನ ಬಳಿಗೆ ಬರಲಾರನು. 45 ‘ದೇವರು ಎಲ್ಲಾ ಜನರಿಗೆ ಉಪದೇಶಿಸುವನು’(B) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಜನರು ತಂದೆಗೆ ಕಿವಿಗೊಟ್ಟು ಆತನಿಂದ ಕಲಿತುಕೊಳ್ಳುವರು. ಆ ಜನರು ನನ್ನ ಬಳಿಗೆ ಬರುವರು. 46 ತಂದೆಯಿಂದ ಬಂದಿರುವಾತನು ಮಾತ್ರ ತಂದೆಯನ್ನು ನೋಡಿದವನಾಗಿದ್ದಾನೆ. ಬೇರೆ ಯಾವ ವ್ಯಕ್ತಿಯೂ ತಂದೆಯನ್ನು ಎಂದೂ ನೋಡಿಲ್ಲ.
47 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನನ್ನು ನಂಬಿರುವವನು ನಿತ್ಯಜೀವವನ್ನು ಹೊಂದಿದ್ದಾನೆ. 48 ನಾನೇ ಜೀವಕೊಡುವ ರೊಟ್ಟಿ. 49 ನಿಮ್ಮ ಪಿತೃಗಳು ತಮಗೆ ದೇವರು ಮರುಭೂಮಿಯಲ್ಲಿ ಕೊಟ್ಟ ಮನ್ನವನ್ನು ತಿಂದರು. ಆದರೆ ಎಲ್ಲಾ ಜನರಂತೆ ಅವರೂ ಸತ್ತುಹೋದರು. 50 ಪರಲೋಕದಿಂದ ಇಳಿದುಬರುವ ರೊಟ್ಟಿ ನಾನೇ. ಈ ರೊಟ್ಟಿಯನ್ನು ತಿನ್ನುವವನು ಎಂದಿಗೂ ಸಾಯುವುದಿಲ್ಲ. 51 ಪರಲೋಕದಿಂದ ಇಳಿದುಬಂದ ಜೀವವುಳ್ಳ ರೊಟ್ಟಿ ನಾನೇ. ಈ ರೊಟ್ಟಿಯನ್ನು ತಿನ್ನುವವನು ಶಾಶ್ವತವಾಗಿ ಜೀವಿಸುವನು. ಈ ರೊಟ್ಟಿಯೇ ನನ್ನ ದೇಹ. ಈ ಲೋಕದಲ್ಲಿರುವ ಜನರು ಜೀವವನ್ನು ಹೊಂದಿಕೊಳ್ಳಲೆಂದು ನಾನು ನನ್ನ ದೇಹವನ್ನೇ ಕೊಡುತ್ತೇನೆ” ಎಂದು ಉತ್ತರಕೊಟ್ಟನು.
52 ಆಗ ಯೆಹೂದ್ಯರು, “ಈ ಮನುಷ್ಯನು ತನ್ನ ದೇಹವನ್ನು ನಮಗೆ ತಿನ್ನಲು ಹೇಗೆ ಕೊಡಲಾದೀತು?” ಎಂದು ತಮ್ಮತಮ್ಮೊಳಗೆ ವಾಗ್ವಾದ ಮಾಡತೊಡಗಿದರು.
53 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಮನುಷ್ಯಕುಮಾರನ ದೇಹವನ್ನು ತಿನ್ನಲೇಬೇಕು. ಆತನ ರಕ್ತವನ್ನು ಕುಡಿಯಲೇಬೇಕು. ನೀವು ಹೀಗೆ ಮಾಡದಿದ್ದರೆ, ನಿಮ್ಮಲ್ಲಿ ನಿಜವಾದ ಜೀವ ಇರುವುದಿಲ್ಲ. 54 ನನ್ನ ದೇಹವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನಿತ್ಯಜೀವವನ್ನು ಹೊಂದಿದ್ದಾನೆ. ಅಂತಿಮ ದಿನದಂದು ನಾನು ಆ ವ್ಯಕ್ತಿಯನ್ನು ಜೀವಂತವಾಗಿ ಎಬ್ಬಿಸುವೆನು. 55 ನನ್ನ ದೇಹವು ನಿಜವಾದ ಆಹಾರವಾಗಿದೆ. ನನ್ನ ರಕ್ತವು ನಿಜವಾದ ಪಾನೀಯವಾಗಿದೆ. 56 ನನ್ನ ದೇಹವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ವಾಸಿಸುತ್ತಾನೆ. ನಾನು ಅವನಲ್ಲಿ ವಾಸಿಸುತ್ತೇನೆ.
57 “ತಂದೆಯೇ ನನ್ನನ್ನು ಕಳುಹಿಸಿದನು. ತಂದೆಯು ಜೀವಸ್ವರೂಪನಾಗಿದ್ದಾನೆ. ನಾನು ತಂದೆಯಿಂದಲೇ ಜೀವಿಸುತ್ತೇನೆ. ಆದ್ದರಿಂದ ನನ್ನನ್ನು ತಿನ್ನುವವನು ನನ್ನಿಂದಲೇ ಜೀವಿಸುವನು. 58 ನಮ್ಮ ಪಿತೃಗಳು ತಿಂದ ರೊಟ್ಟಿಯಂತಲ್ಲ ನಾನು. ಅವರು ಆ ರೊಟ್ಟಿಯನ್ನು ತಿಂದರೂ ಎಲ್ಲಾ ಜನರಂತೆ ಸತ್ತು ಹೋದರು. ನಾನು ಪರಲೋಕದಿಂದ ಇಳಿದುಬಂದ ರೊಟ್ಟಿ. ಈ ರೊಟ್ಟಿಯನ್ನು ತಿನ್ನುವವನು ಸದಾಕಾಲ ಜೀವಿಸುವನು,” ಎಂದು ಹೇಳಿದನು.
59 ಯೇಸು ಕಪೆರ್ನೌಮಿನ ಸಭಾಮಂದಿರದಲ್ಲಿ ಉಪದೇಶಿಸುತ್ತಿದ್ದಾಗ ಈ ಸಂಗತಿಗಳನ್ನೆಲ್ಲಾ ಹೇಳಿದನು.
ನಿತ್ಯಜೀವದ ನುಡಿಗಳು
60 ಇದನ್ನು ಕೇಳಿದ ಆತನ ಶಿಷ್ಯರಲ್ಲಿ ಅನೇಕರು, “ಈ ಉಪದೇಶವು ಕಠಿಣವಾಗಿದೆ. ಇದನ್ನು ಯಾರು ಗ್ರಹಿಸಿಕೊಳ್ಳಬಲ್ಲರು?” ಎಂದರು.
61 ತನ್ನ ಶಿಷ್ಯರು ಆಕ್ಷೇಪಿಸುತ್ತಿರುವುದನ್ನು ತಿಳಿದಿದ್ದ ಯೇಸು, “ಈ ಉಪದೇಶದಿಂದ ನಿಮಗೆ ಬೇಸರವಾಯಿತೇ? 62 ಹಾಗಾದರೆ ಮನುಷ್ಯಕುಮಾರನು ತಾನು ಬಿಟ್ಟುಬಂದ ಸ್ಥಳಕ್ಕೆ ಮರಳಿಹೋಗುವುದನ್ನು ನೀವು ನೋಡುವಾಗ ಬೇಸರಪಡುವಿರಾ? 63 ಒಬ್ಬನಿಗೆ ಜೀವವನ್ನು ಕೊಡುವಂಥದ್ದು ದೈಹಿಕ ಸಂಗತಿಗಳಲ್ಲ. ಜೀವವನ್ನು ಕೊಡುವಂಥದ್ದು ದೇವರಾತ್ಮ. ನಾನು ನಿಮಗೆ ಹೇಳಿದ ಸಂಗತಿಗಳು ಆತ್ಮಿಕ ಸಂಗತಿಗಳಾಗಿವೆ. ಆದ್ದರಿಂದ ಈ ಸಂಗತಿಗಳೇ ಜೀವವನ್ನು ಕೊಡುತ್ತವೆ. 64 ಆದರೆ ನಿಮ್ಮಲ್ಲಿ ಕೆಲವರು ನಂಬುವುದಿಲ್ಲ” ಎಂದು ಹೇಳಿದನು. (ತನ್ನನ್ನು ನಂಬಿಲ್ಲದವರು ಯಾರೆಂದೂ ತನಗೆ ದ್ರೋಹ ಮಾಡುವವನು ಯಾರೆಂದೂ ಯೇಸುವಿಗೆ ಮೊದಲಿಂದಲೂ ತಿಳಿದಿತ್ತು.) 65 ಇದಲ್ಲದೆ ಯೇಸು, “ತಂದೆಯ ಅನುಮತಿ ಇಲ್ಲದೆ ಯಾವನೂ ನನ್ನ ಬಳಿಗೆ ಬರಲಾರನು ಎಂದು ನಾನು ನಿಮಗೆ ಹೇಳಿದ್ದಕ್ಕೆ ಅದೇ ಕಾರಣ” ಎಂದನು.
66 ಯೇಸು ಈ ಸಂಗತಿಗಳನ್ನು ಹೇಳಿದ ಮೇಲೆ ಆತನ ಹಿಂಬಾಲಕರಲ್ಲಿ ಅನೇಕರು ಆತನನ್ನು ತೊರೆದುಬಿಟ್ಟರು. ಅವರು ಆತನನ್ನು ಹಿಂಬಾಲಿಸಲಿಲ್ಲ.
67 ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ, “ನೀವು ಸಹ ನನ್ನನ್ನು ಬಿಟ್ಟುಹೋಗಬೇಕೆಂದಿರುವಿರಾ?” ಎಂದು ಕೇಳಿದನು.
68 ಸೀಮೋನ್ ಪೇತ್ರನು ಯೇಸುವಿಗೆ, “ಪ್ರಭುವೇ, ನಾವೆಲ್ಲಿಗೆ ಹೋಗೋಣ? ನಿತ್ಯಜೀವವನ್ನು ಕೊಡುವ ಸಂಗತಿಗಳು ನಿನ್ನಲ್ಲಿವೆ. 69 ನಾವು ನಿನ್ನಲ್ಲಿ ನಂಬಿಕೆ ಇಡುತ್ತೇವೆ. ನೀನು ದೇವರಿಂದ ಬಂದ ಪರಿಶುದ್ಧನೆಂದು ನಮಗೆ ಗೊತ್ತಿದೆ” ಎಂದು ಉತ್ತರಕೊಟ್ಟನು.
70 ಬಳಿಕ ಯೇಸು, “ನಾನು ಆರಿಸಿಕೊಂಡ ಹನ್ನೆರಡು ಮಂದಿ ನೀವೇ. ಆದರೆ ನಿಮ್ಮಲ್ಲಿರುವ ಒಬ್ಬನು ಸೈತಾನನ ಮಗನಾಗಿದ್ದಾನೆ” ಎಂದು ಉತ್ತರಕೊಟ್ಟನು. 71 ಯೇಸು ಸಿಮೋನನ ಮಗನಾದ ಇಸ್ಕರಿಯೋತ ಯೂದನ ಬಗ್ಗೆ ಮಾತಾಡುತ್ತಿದ್ದನು. ಯೂದನು ಹನ್ನೆರಡು ಮಂದಿ ಅಪೊಸ್ತಲರಲ್ಲಿ ಒಬ್ಬನಾಗಿದ್ದನು. ಆದರೆ ಮುಂದೆ ಯೇಸುವಿಗೆ ದ್ರೋಹ ಮಾಡಿದ ವ್ಯಕ್ತಿ ಇವನೇ.
ಜ್ಞಾನದ ಆಶೀರ್ವಾದಗಳು
3 ನನ್ನ ಮಗನೇ, ನನ್ನ ಉಪದೇಶವನ್ನು ಮರೆಯಬೇಡ. ನನ್ನ ಆಜ್ಞೆಗಳನ್ನು ಜ್ಞಾಪಕದಲ್ಲಿಟ್ಟುಕೊ. 2 ಅವು ನಿನಗೆ ದೀರ್ಘಾಯುಷ್ಯವನ್ನು ನೀಡಿ ಸಂತೋಷ ಸಮಾಧಾನಗಳಿಂದ ಕೂಡಿದ ಜೀವಿತವನ್ನು ಕೊಡುತ್ತವೆ.
3 ಪ್ರೀತಿಯೂ ನಂಬಿಗಸ್ತಿಕೆಯೂ ನಿನ್ನನ್ನು ಬಿಟ್ಟು ಹೋಗದಿರಲಿ. ಅವುಗಳನ್ನು ನಿನ್ನ ಕೊರಳಿಗೆ ಕಟ್ಟಿಕೊ; ನಿನ್ನ ಹೃದಯದ ಮೇಲೆ ಬರೆದುಕೊ. 4 ಆಗ ನೀನು ದೇವರಿಂದಲೂ ಮನುಷ್ಯರಿಂದಲೂ ಮೆಚ್ಚಿಕೆಯನ್ನು ಮತ್ತು ಒಳ್ಳೆಯ ಹೆಸರನ್ನು ಸಂಪಾದಿಸಿಕೊಳ್ಳುವೆ.
5 ಯೆಹೋವನಲ್ಲಿ ಸಂಪೂರ್ಣವಾಗಿ ಭರವಸೆ ಇಡು. ನಿನ್ನ ಸ್ವಂತ ಜ್ಞಾನವನ್ನು ಅವಲಂಬಿಸಬೇಡ. 6 ನಿನ್ನ ಎಲ್ಲಾ ಕಾರ್ಯಗಳಲ್ಲಿ ಆತನನ್ನು ಜ್ಞಾಪಿಸಿಕೊ. ಆಗ ಆತನು ನಿನಗೆ ಸಹಾಯ ಮಾಡುವನು. 7 ನಿನ್ನನ್ನು ಜ್ಞಾನಿಯೆಂದು ಪರಿಗಣಿಸಿಕೊಳ್ಳದೆ ಯೆಹೋವನಿಗೆ ಭಯಪಟ್ಟು ಕೆಟ್ಟದ್ದರಿಂದ ದೂರವಾಗಿರು. 8 ನೀನು ಹೀಗೆ ಮಾಡುವುದಾದರೆ, ಅದು ನಿನ್ನ ದೇಹಕ್ಕೆ ಒಳ್ಳೆಯ ಆರೋಗ್ಯವನ್ನೂ ನಿನ್ನ ಎಲುಬುಗಳಿಗೆ ಹೊಸ ಶಕ್ತಿಯನ್ನೂ ಕೊಡುವುದು.
9 ನಿನಗೆ ಬರುವ ಆದಾಯದಿಂದಲೂ ಬೆಳೆಯ ಪ್ರಥಮ ಫಲದಿಂದಲೂ ಯೆಹೋವನನ್ನು ಸನ್ಮಾನಿಸು. 10 ಆಗ ನಿನ್ನ ಕಣಜಗಳು ದವಸಧಾನ್ಯಗಳಿಂದ ತುಂಬಿರುತ್ತವೆ. ನಿನ್ನ ದ್ರಾಕ್ಷಾರಸದ ತೊಟ್ಟಿಗಳು ತುಂಬಿತುಳುಕುತ್ತವೆ.
11 ನನ್ನ ಮಗನೇ, ಯೆಹೋವನು ನಿನ್ನನ್ನು ಶಿಕ್ಷಿಸುವಾಗ ಕೋಪಗೊಳ್ಳಬೇಡ. ಆತನು ಗದರಿಸುವಾಗ ಬೇಸರಪಡಬೇಡ. 12 ತಂದೆಯು ತನ್ನ ಮಗನನ್ನು ಗದರಿಸುವಂತೆಯೇ ಯೆಹೋವನು ತಾನು ಪ್ರೀತಿಸುವವರನ್ನು ಶಿಕ್ಷಿಸುತ್ತಾನೆ.
13 ಜ್ಞಾನವನ್ನು ಕಂಡುಕೊಂಡು ವಿವೇಕವನ್ನು ಸಂಪಾದಿಸಿಕೊಳ್ಳುವವನೇ ಭಾಗ್ಯವಂತನು. 14 ಜ್ಞಾನವು ಬೆಳ್ಳಿಗಿಂತಲೂ ಲಾಭದಾಯಕ. ಅದರ ಆದಾಯವು ಬಂಗಾರಕ್ಕಿಂತಲೂ ಅಧಿಕ. 15 ಜ್ಞಾನವು ರತ್ನಕ್ಕಿಂತಲೂ ಅಮೂಲ್ಯವಾದದ್ದು. ನಿನ್ನ ಇಷ್ಟ ವಸ್ತುಗಳಲ್ಲಿ ಯಾವುದೂ ಅದಕ್ಕೆ ಸಮವಿಲ್ಲ.
16 ಜ್ಞಾನವೆಂಬಾಕೆಯ ಬಲಗೈಯಿಂದ ದೀರ್ಘಾಯುಷ್ಯವೂ ಎಡಗೈಯಿಂದ ಐಶ್ವರ್ಯವೂ ಘನತೆಯೂ ಬರುವವು. 17 ಜ್ಞಾನವು ನಿನ್ನ ಜೀವನವನ್ನು ಸುಖಕರವನ್ನಾಗಿ ಮಾಡುತ್ತದೆ; ಸಮಾಧಾನವನ್ನು ಬರಮಾಡುತ್ತದೆ. 18 ಜ್ಞಾನವು ತನ್ನನ್ನು ಅವಲಂಬಿಸಿಕೊಳ್ಳುವವರಿಗೆ ಜೀವದಾಯಕ ಮರದಂತಿದೆ. ಅದನ್ನು ಹೊಂದಿರುವವರು ಧನ್ಯರಾಗಿದ್ದಾರೆ.
19 ಯೆಹೋವನು ಜ್ಞಾನದ ಮೂಲಕ ಭೂಮಿಯನ್ನು ಸೃಷ್ಟಿಸಿದನು. ಆತನು ವಿವೇಕದ ಮೂಲಕ ಆಕಾಶವನ್ನು ಸೃಷ್ಟಿಸಿದನು. 20 ಯೆಹೋವನು ತನ್ನ ತಿಳುವಳಿಕೆಯಿಂದ ಸಮುದ್ರಗಳನ್ನು ವಿಭಜಿಸಿದನು. ಮೋಡವು ಮಳೆಸುರಿಸುವುದಕ್ಕೆ ಆತನ ತಿಳುವಳಿಕೆಯೇ ಕಾರಣ.
21 ನನ್ನ ಮಗನೇ, ಜ್ಞಾನವನ್ನೂ ಬುದ್ಧಿಯನ್ನೂ ಭದ್ರವಾಗಿಟ್ಟುಕೋ. ನಿನ್ನ ದೃಷ್ಟಿಯು ಅವುಗಳ ಮೇಲೇ ಇರಲಿ. 22 ಜ್ಞಾನವಿವೇಕಗಳು ನಿನಗೆ ಜೀವವನ್ನೂ ನಿನ್ನ ಜೀವಿತಕ್ಕೆ ಸೌಂದರ್ಯವನ್ನೂ ನೀಡುತ್ತವೆ. 23 ಆಗ ನೀನು ಎಡವಿಬೀಳದೆ ಸುರಕ್ಷಿತವಾಗಿ ನಡೆಯುವೆ. 24 ಆಗ ನೀನು ನಿರ್ಭಯದಿಂದ ಮಲಗಿಕೊಂಡು ಸುಖವಾಗಿ ನಿದ್ರಿಸುವೆ. 25 ದುಷ್ಟರ ಮೇಲೆ ಇದ್ದಕ್ಕಿದ್ದಂತೆ ಬರುವ ಅಪಾಯಕ್ಕಾಗಲಿ ನಾಶನಕ್ಕಾಗಲಿ ಹೆದರಿಕೊಳ್ಳಬೇಡ. 26 ಯೆಹೋವನು ನಿನ್ನೊಂದಿಗಿದ್ದಾನೆ. ನೀನು ಬಲೆಗೆ ಸಿಕ್ಕಿಬೀಳದಂತೆ ಆತನು ನಿನ್ನನ್ನು ಕಾಪಾಡುತ್ತಾನೆ.
27 ನಿನಗೆ ಸಾಧ್ಯವಾದಾಗಲೆಲ್ಲಾ ಉಪಕಾರಮಾಡು. 28 ನಿನ್ನ ನೆರೆಯವನಿಗೆ ಕೊಡತಕ್ಕದ್ದು ನಿನ್ನಲ್ಲಿರುವಾಗ, “ನಾಳೆ ಬಾ, ಕೊಡುತ್ತೇನೆ” ಎಂದು ಹೇಳಬೇಡ.
29 ನಿನ್ನ ನೆರೆಯವನಿಗೆ ಕೇಡನ್ನು ಕಲ್ಪಿಸಬೇಡ. ನಿನ್ನ ಸುರಕ್ಷತೆಗಾಗಿಯೇ ನಿನ್ನ ನೆರೆಯವನ ಸಮೀಪದಲ್ಲಿ ವಾಸಿಸುತ್ತಿದ್ದೀಯಲ್ಲಾ!
30 ನಿನಗೆ ಕೇಡನ್ನು ಮಾಡಿಲ್ಲದಿರುವವನನ್ನು ನಿಷ್ಕಾರಣವಾಗಿ ನ್ಯಾಯಾಲಯಕ್ಕೆ ಕೊಂಡೊಯ್ಯಬೇಡ.
31 ಬಲಾತ್ಕಾರಿಯನ್ನು ಕಂಡು ಹೊಟ್ಟೆಕಿಚ್ಚುಪಡಬೇಡ; ಅವನ ನಡತೆಯನ್ನು ಅನುಸರಿಸಬೇಡ. 32 ಯೆಹೋವನಿಗೆ ವಕ್ರಬುದ್ಧಿಯುಳ್ಳವರು ಅಸಹ್ಯ. ಆದರೆ ಆತನು ಯಥಾರ್ಥರೊಂದಿಗೆ ಸ್ನೇಹದಿಂದಿರುವನು.
33 ದುಷ್ಟರ ಮನೆಯ ಮೇಲೆ ಯೆಹೋವನ ಶಾಪವಿರುವುದು; ಆದರೆ ನೀತಿವಂತರ ಮನೆಯ ಮೇಲೆ ಆತನ ಆಶೀರ್ವಾದವಿರುವುದು.
34 ಯಾರು ಗರ್ವದಿಂದ ಬೇರೆಯವರನ್ನು ಗೇಲಿಮಾಡುತ್ತಾರೋ ಅವರನ್ನು ಯೆಹೋವನೂ ಗೇಲಿಮಾಡುತ್ತಾನೆ. ದೀನರಿಗಾದರೋ ಆತನ ಕರುಣೆ ದೊರೆಯುವುದು.
35 ಜ್ಞಾನಿಗಳು ಸನ್ಮಾನ ಹೊಂದುವರು; ಮೂಢರಿಗೆ ಅವಮಾನವಾಗುವುದು.
ಇತರ ಅಪೊಸ್ತಲರು ಪೌಲನನ್ನು ಸ್ವೀಕರಿಸಿಕೊಂಡರು
2 ಹದಿನಾಲ್ಕು ವರ್ಷಗಳ ನಂತರ ಬಾರ್ನಬನ ಜೊತೆಯಲ್ಲಿ ತೀತನನ್ನು ಕರೆದುಕೊಂಡು ಮತ್ತೆ ಜೆರುಸಲೇಮಿಗೆ ಹೋದೆನು. 2 ನಾನು ಹೋಗಲೇಬೇಕೆಂದು ದೇವರು ನನಗೆ ತಿಳಿಸಿದ್ದರಿಂದ ವಿಶ್ವಾಸಿಗಳ ನಾಯಕರಾದ ಈ ಜನರ ಬಳಿಗೆ ಹೋದೆನು. ನಾವಷ್ಟೇ ಇದ್ದಾಗ, ಯೆಹೂದ್ಯರಲ್ಲದವರಿಗೆ ಸಾರುವ ಸುವಾರ್ತೆಯನ್ನು ಇವರಿಗೆ ತಿಳಿಸಿದೆನು. ನಾನು ಮೊದಲು ಮಾಡಿದ ಸೇವೆ ಮತ್ತು ಈಗ ಮಾಡುತ್ತಿರುವ ಸೇವೆ ವ್ಯರ್ಥವಾಗಬಾರದೆಂಬ ಉದ್ದೇಶದಿಂದ ಇವರಿಗೆ ಅರ್ಥವಾಗುವಂತೆ ನನ್ನ ಸೇವೆಯ ಬಗ್ಗೆ ತಿಳಿಸಿದೆನು.
3-4 ತೀತನು ನನ್ನೊಂದಿಗಿದ್ದನು. ಅವನು ಗ್ರೀಕನಾಗಿದ್ದನು. ಆದರೆ ಅವನು ಸುನ್ನತಿ ಮಾಡಿಸಿಕೊಳ್ಳಬೇಕೆಂದು ಯಾರೂ ಬಲವಂತ ಮಾಡಲಿಲ್ಲ. ಈ ಸಮಸ್ಯೆಗಳ ಬಗ್ಗೆ ನಾವು ಮಾತಾಡಲೇಬೇಕಿತ್ತು. ಏಕೆಂದರೆ ಕೆಲವು ಸುಳ್ಳು ಸಹೋದರರು ಬಂದು ನಮ್ಮ ಸಭೆಯೊಳಗೆ ಸೇರಿಕೊಂಡಿದ್ದರು. ಯೇಸು ಕ್ರಿಸ್ತನಲ್ಲಿ ನಮಗಿರುವ ಸ್ವಾತಂತ್ರ್ಯದ ಬಗ್ಗೆ ರಹಸ್ಯವಾಗಿ ತಿಳಿದುಕೊಳ್ಳಲು ಅವರು ಬಂದಿದ್ದರು. 5 ಆದರೆ ಆ ಸುಳ್ಳುಸಹೋದರರು ಬಯಸಿದ ಯಾವುದಕ್ಕೂ ನಾವು ಒಂದು ಕ್ಷಣವಾದರೂ ಒಪ್ಪಿಗೆ ಕೊಡಲಿಲ್ಲ. ಸುವಾರ್ತೆಯ ಸತ್ಯವು ನಿಮ್ಮಲ್ಲಿ ಸ್ಥಿರವಾಗಿರಬೇಕೆಂಬುದೇ ನಮ್ಮ ಅಪೇಕ್ಷೆಯಾಗಿತ್ತು.
6 ನಾನು ಬೋಧಿಸುವ ಸುವಾರ್ತೆಗೆ ಅವರೇನೂ ಸೇರಿಸಲಿಲ್ಲ. (ಅವರು ಪ್ರಮುಖರಾಗಿದ್ದರೊ ಪ್ರಮುಖರಾಗಿರಲಿಲ್ಲವೊ ಅದು ನನಗೆ ಮುಖ್ಯವಲ್ಲ. ದೇವರಿಗೆ ಎಲ್ಲಾ ಜನರು ಒಂದೇ ಆಗಿದ್ದಾರೆ.) 7 ಆದರೆ ಪೇತ್ರನಂತೆ ನನಗೂ ದೇವರು ವಿಶೇಷವಾದ ಕೆಲಸವನ್ನು ಕೊಟ್ಟಿದ್ದಾನೆಂಬುದನ್ನು ಈ ನಾಯಕರು ತಿಳಿದುಕೊಂಡರು. ಯೆಹೂದ್ಯರಿಗೆ ಸುವಾರ್ತೆಯನ್ನು ತಿಳಿಸಬೇಕೆಂಬ ಕೆಲಸವನ್ನು ದೇವರು ಪೇತ್ರನಿಗೆ ಕೊಟ್ಟನು. ಆದರೆ ಯೆಹೂದ್ಯರಲ್ಲದವರಿಗೆ ಸುವಾರ್ತೆಯನ್ನು ತಿಳಿಸಬೇಕೆಂಬ ಕೆಲಸವನ್ನು ದೇವರು ನನಗೆ ಕೊಟ್ಟನು. 8 ಯೆಹೂದ್ಯರಿಗೆ ಅಪೊಸ್ತಲನಾಗಿ ಕೆಲಸ ಮಾಡಲು ದೇವರು ಪೇತ್ರನಿಗೆ ವಹಿಸಿಕೊಟ್ಟಂತೆಯೇ ಯೆಹೂದ್ಯರಲ್ಲದವರಿಗೆ ಅಪೊಸ್ತಲನಾಗಿ ಕೆಲಸ ಮಾಡಲು ನನಗೂ ವಹಿಸಿ ಕೊಟ್ಟನು. 9 ದೇವರು ನನಗೆ ಈ ವಿಶೇಷವಾದ ವರವನ್ನು ಕೊಟ್ಟಿದ್ದಾನೆಂಬುದನ್ನು ನಾಯಕರೆನಿಸಿಕೊಂಡಿದ್ದ ಯಾಕೋಬ, ಪೇತ್ರ, ಯೋಹಾನರು ಕಂಡುಕೊಂಡರು. ಆದ್ದರಿಂದ ಅವರು ಬಾರ್ನಬನನ್ನು ಮತ್ತು ನನ್ನನ್ನು ಸ್ವೀಕರಿಸಿಕೊಂಡರು. ಅವರು ನಮಗೆ, “ಪೌಲ ಮತ್ತು ಬಾರ್ನಬರೇ, ನೀವು ಯೆಹೂದ್ಯರಲ್ಲದವರ ಬಳಿಗೆ ಹೋಗಿರಿ. ನಾವು ಯೆಹೂದ್ಯರ ಬಳಿಗೆ ಹೋಗುತ್ತೇವೆ” ಎಂದು ತಿಳಿಸಿದರು. 10 ಬಡಜನರನ್ನು ಜ್ಞಾಪಕದಲ್ಲಿಟ್ಟುಕೊಂಡು ಅವರಿಗೆ ಸಹಾಯಮಾಡಬೇಕೆಂಬ ಒಂದೇ ಒಂದು ಸಂಗತಿಯನ್ನು ಅವರು ನಮಗೆ ತಿಳಿಸಿದರು. ನಾನೂ ಈ ಕಾರ್ಯವನ್ನು ಮಾಡಬೇಕೆಂದುಕೊಂಡಿದ್ದೆನು.
ಪೇತ್ರನ ತಪ್ಪನ್ನು ಪೌಲನು ತೋರಿಸಿದನು
11 ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ, ಅವನು ತಪ್ಪಿತಸ್ಥನೆಂದು ಸ್ಪಷ್ಟವಾಗಿ ತೋರಿದ್ದರಿಂದ ನಾನು ಅವನನ್ನು ಮುಖಾಮುಖಿಯಾಗಿ ಖಂಡಿಸಿದೆನು. 12 ನಡೆದ ಸಂಗತಿ ಏನೆಂದರೆ: ಪೇತ್ರನು ಮೊದಲು ಅಂತಿಯೋಕ್ಯಕ್ಕೆ ಬಂದಾಗ ಅವನು ಯೆಹೂದ್ಯರಲ್ಲದವರೊಂದಿಗೆ ಊಟಮಾಡಿದನು ಮತ್ತು ಅನ್ಯೋನ್ಯತೆಯಿಂದಿದ್ದನು. ಆ ಬಳಿಕ ಯಾಕೋಬನಿಂದ ಕಳುಹಿಸಲ್ಪಟ್ಟಿದ್ದ ಕೆಲವು ಯೆಹೂದ್ಯರು ಬಂದರು. ಆಗ, ಪೇತ್ರನು ಯೆಹೂದ್ಯರಲ್ಲದವರೊಂದಿಗೆ ಊಟಮಾಡುವುದನ್ನು ನಿಲ್ಲಿಸಿದನು. ಪೇತ್ರನು ತನ್ನನ್ನು ಯೆಹೂದ್ಯರಲ್ಲದವರಿಂದ ಬೇರ್ಪಡಿಸಿಕೊಂಡನು. ಯೆಹೂದ್ಯರಲ್ಲದವರೆಲ್ಲರೂ ಸುನ್ನತಿ ಮಾಡಿಸಿಕೊಳ್ಳಬೇಕೆಂದು ನಂಬಿಕೊಂಡಿದ್ದ ಯೆಹೂದ್ಯರಿಗೆ ಅವನು ಹೆದರಿಕೊಂಡನು. 13 ಹೀಗೆ ಪೇತ್ರನು ಕಪಟತನದಿಂದ ವರ್ತಿಸಿದನು. ಯೆಹೂದ್ಯರಾದ ವಿಶ್ವಾಸಿಗಳು ಸಹ ಪೇತ್ರನನ್ನೇ ಅನುಸರಿಸಿ ಕಪಟತನದಿಂದ ವರ್ತಿಸಿದರು. ಇವರ ವರ್ತನೆಯಿಂದ ಬಾರ್ನಬನು ಸಹ ಪ್ರಭಾವಿತನಾದನು. 14 ಈ ಯೆಹೂದ್ಯರ ವರ್ತನೆಯನ್ನು ನಾನು ಗಮನಿಸಿದೆನು. ಅವರು ಸುವಾರ್ತೆಯ ಸತ್ಯವನ್ನು ಅನುಸರಿಸದೆ ಇರುವುದನ್ನು ಕಂಡು ಅಲ್ಲಿದ್ದ ಯೆಹೂದ್ಯರೆಲ್ಲರಿಗೂ ಕೇಳಿಸುವಂತೆ ನಾನು ಪೇತ್ರನಿಗೆ, “ನೀನು ಯೆಹೂದ್ಯನಾಗಿರುವೆ. ಆದರೆ ನೀನು ಯೆಹೂದ್ಯನಂತೆ ಜೀವಿಸುತ್ತಿಲ್ಲ. ನೀನು ಯೆಹೂದ್ಯನಲ್ಲದವನಂತೆ ಜೀವಿಸುತ್ತಿರುವೆ. ಹೀಗಿರಲು ನೀನು ಯೆಹೂದ್ಯರಲ್ಲದವರಿಗೆ ಯೆಹೂದ್ಯರಂತೆ ಜೀವಿಸಬೇಕೆಂದು ಒತ್ತಾಯಮಾಡುವುದೇಕೆ?” ಎಂದು ಕೇಳಿದೆನು.
15 ನಾವಂತೂ ಹುಟ್ಟು ಯೆಹೂದ್ಯರು. ನಾವು ಪಾಪಿಗಳೆನಿಸಿಕೊಂಡಿರುವ ಅನ್ಯಜನರಲ್ಲ. 16 ಕೇವಲ ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ಒಬ್ಬನು ನೀತಿವಂತನಾಗಲು ಸಾಧ್ಯವಿಲ್ಲವೆಂಬುದು ನಮಗೆ ಗೊತ್ತಿದೆ. ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವುದರಿಂದಲೇ ಒಬ್ಬನು ನೀತಿವಂತನಾಗಲು ಸಾಧ್ಯ. ಆದ್ದರಿಂದ ನೀತಿವಂತರಾಗಲು ನಾವು ಯೇಸು ಕ್ರಿಸ್ತನಲ್ಲಿ ನಂಬಿಕೆ ಇಟ್ಟೆವು. ಹೀಗಿರಲಾಗಿ, ನಾವು ನೀತಿವಂತರಾದದ್ದು ಕ್ರಿಸ್ತನಲ್ಲಿ ನಂಬಿಕೆಯಿಟ್ಟಿದ್ದರಿಂದಲೇ ಹೊರತು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲ್ಲ. ಇದು ಸತ್ಯ, ಏಕೆಂದರೆ ಧರ್ಮಶಾಸ್ತ್ರವನ್ನು ಅನುಸರಿಸುವುದರಿಂದ ಯಾರೂ ನೀತಿವಂತರಾಗಲು ಸಾಧ್ಯವಿಲ್ಲ.
17 ಯೆಹೂದ್ಯರಾದ ನಾವು ನೀತಿವಂತರಾಗಲು ಕ್ರಿಸ್ತನ ಬಳಿಗೆ ಬಂದೆವು. ಆದ್ದರಿಂದ ನಾವು ಸಹ ಪಾಪಿಗಳಾಗಿದ್ದೇವೆಂಬುದು ಸ್ಪಷ್ಟವಾಗಿದೆ. ಕ್ರಿಸ್ತನು ನಮ್ಮನ್ನು ಪಾಪಿಗಳನ್ನಾಗಿ ಮಾಡುತ್ತಾನೆಂಬುದು ಇದರ ಅರ್ಥವೇ? ಇಲ್ಲ. 18 ಆದರೆ ನಾನು ತೊರೆದುಬಿಟ್ಟ ಆ ಸಂಗತಿಗಳನ್ನು ಮತ್ತೆ ಬೋಧಿಸಲಾರಂಭಿಸಿದರೆ ನಿಜವಾಗಿಯೂ ತಪ್ಪು ಮಾಡಿದವನಾಗುತ್ತೇನೆ. 19 ನಾನು ಧರ್ಮಶಾಸ್ತ್ರಕ್ಕಾಗಿ ಜೀವಿಸುವುದನ್ನು ತೊರೆದುಬಿಟ್ಟೆನು. ನನ್ನನ್ನು ಧರ್ಮಶಾಸ್ತ್ರವೇ ಕೊಂದಿತು. ಈಗ ನಾನು ದೇವರಿಗಾಗಿ ಜೀವಿಸಬೇಕೆಂದು ಧರ್ಮಶಾಸ್ತ್ರದ ಪಾಲಿಗೆ ಸತ್ತುಹೋದೆನು. ನಾನು ಕ್ರಿಸ್ತನೊಂದಿಗೆ ಶಿಲುಬೆಗೇರಿಸಲ್ಪಟ್ಟೆನು. 20 ಆದ್ದರಿಂದ ಈಗ ನನ್ನೊಳಗೆ ಜೀವಿಸುತ್ತಿರುವವನು ನಿಜವಾಗಿಯೂ ನಾನಲ್ಲ, ಕ್ರಿಸ್ತನೇ ನನ್ನೊಳಗೆ ಜೀವಿಸುತ್ತಿದ್ದಾನೆ. ನಾನಿನ್ನೂ ದೇಹಾರೂಢನಾಗಿದ್ದೇನೆ. ಆದರೆ ನಾನು ಜೀವಿಸುತ್ತಿರುವುದು ದೇವರ ಮಗನ ಮೇಲೆ ನನಗಿರುವ ನಂಬಿಕೆಯಿಂದಲೇ. ನನ್ನನ್ನು ಪ್ರೀತಿಸಿದಾತನು ಯೇಸುವೇ ಮತ್ತು ನನ್ನನ್ನು ರಕ್ಷಿಸುವುದಕ್ಕಾಗಿ ಆತನು ತನ್ನನ್ನೇ ಕೊಟ್ಟುಬಿಟ್ಟನು. 21 ಇದು ದೇವರ ವರವಾಗಿದೆ ಮತ್ತು ನನಗೆ ಅತಿಮುಖ್ಯವಾದದ್ದಾಗಿದೆ. ಏಕೆಂದರೆ ಧರ್ಮಶಾಸ್ತ್ರವು ನಮ್ಮನ್ನು ನೀತಿವಂತರನ್ನಾಗಿ ಮಾಡಬಹುದಾಗಿದ್ದರೆ, ಕ್ರಿಸ್ತನು ಸಾಯುವ ಅಗತ್ಯವೇ ಇರಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International