Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 24

ದೇವರ ಮತ್ತು ಇಸ್ರೇಲರ ನಡುವೆ ಒಡಂಬಡಿಕೆ

24 ದೇವರು ಮೋಶೆಗೆ, “ನೀನು, ಆರೋನ, ನಾದಾಬ, ಅಬೀಹೂ ಮತ್ತು ಇಸ್ರೇಲರ ಎಪ್ಪತ್ತು ಮಂದಿ ಹಿರಿಯರು ಬೆಟ್ಟವನ್ನೇರಿಬಂದು ದೂರದಿಂದ ನನ್ನನ್ನು ಆರಾಧಿಸಬೇಕು. ಬಳಿಕ ನೀನು ಮಾತ್ರ ನನ್ನ ಬಳಿಗೆ ಬರಬೇಕು; ಬೇರೆಯವರು ಬರಕೂಡದು; ಆದರೆ ಉಳಿದ ಜನರು ಬೆಟ್ಟವನ್ನೂ ಏರಕೂಡದು” ಎಂದು ಹೇಳಿದನು.

ಮೋಶೆಯು ಯೆಹೋವನ ಎಲ್ಲಾ ನಿಯಮಗಳನ್ನು ಮತ್ತು ಆಜ್ಞೆಗಳನ್ನು ಜನರಿಗೆ ತಿಳಿಸಿದನು. ಆಗ ಜನರೆಲ್ಲರೂ, “ಯೆಹೋವನ ಆಜ್ಞೆಗಳಿಗೆಲ್ಲಾ ನಾವು ವಿಧೇಯರಾಗುವೆವು” ಎಂದು ಒಂದೇ ಸ್ವರದಿಂದ ಹೇಳಿದರು.

ಆದ್ದರಿಂದ ಮೋಶೆ ಯೆಹೋವನ ಆಜ್ಞೆಗಳನ್ನೆಲ್ಲಾ ಒಂದು ಸುರುಳಿಯಲ್ಲಿ ಬರೆದನು. ಮರುದಿನ ಮುಂಜಾನೆ, ಅವನು ಬೇಗನೆ ಎದ್ದು ಬೆಟ್ಟದ ಕೆಳಭಾಗದ ಹತ್ತಿರ, ಹನ್ನೆರಡು ಕುಲಗಳಿಗೆ ಒಂದೊಂದರಂತೆ ಹನ್ನೆರಡು ಕಂಬಗಳುಳ್ಳ ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. ಇಸ್ರೇಲರ ಹನ್ನೆರಡು ಕುಲಗಳಿಗೆ ಒಂದೊಂದರಂತೆ ಹನ್ನೆರಡು ಕಲ್ಲುಗಳನ್ನು ನಿಲ್ಲಿಸಿದನು. ಬಳಿಕ ಮೋಶೆಯು ಯಜ್ಞಗಳನ್ನು ಸಮರ್ಪಿಸುವುದಕ್ಕೆ ಇಸ್ರೇಲರ ಯೌವನಸ್ಥರನ್ನು ಕಳುಹಿಸಿದನು. ಅವರು ಯೆಹೋವನಿಗೆ ಎತ್ತುಗಳನ್ನು ಸರ್ವಾಂಗಹೋಮಗಳಾಗಿಯೂ ಸಮಾಧಾನಯಜ್ಞಗಳಾಗಿಯೂ ಅರ್ಪಿಸಿದರು.

ಮೋಶೆಯು ಈ ಪಶುಗಳ ರಕ್ತವನ್ನು ತೆಗೆದುಕೊಂಡು ಅದರಲ್ಲಿ ಅರ್ಧಭಾಗವನ್ನು ಬೋಗುಣಿಗಳಲ್ಲಿ ಹಾಕಿದನು; ಉಳಿದ ಅರ್ಧಭಾಗವನ್ನು ಯಜ್ಞವೇದಿಕೆಯ ಮೇಲೆ ಸುರಿದನು.

ವಿಶೇಷ ಒಡಂಬಡಿಕೆಯಿಂದ ಬರೆಯಲ್ಪಟ್ಟಿದ್ದ ಸುರುಳಿಯನ್ನು ಮೋಶೆಯು ಎಲ್ಲಾ ಜನರಿಗೆ ಕೇಳುವಂತೆ ಓದಿದನು. ಆಗ ಜನರು, “ಯೆಹೋವನ ಆಜ್ಞೆಗಳನ್ನೆಲ್ಲ ಅನುಸರಿಸಿ ಆತನಿಗೆ ವಿಧೇಯರಾಗಿರುತ್ತೇವೆ” ಅಂದರು.

ಆಗ ಮೋಶೆ ಯಜ್ಞಗಳ ರಕ್ತದಿಂದ ತುಂಬಿದ ಬೋಗುಣಿಯನ್ನು ತೆಗೆದುಕೊಂಡು ಅದರಲ್ಲಿದ್ದ ರಕ್ತವನ್ನು ಜನರ ಮೇಲೆ ಚಿಮಿಕಿಸಿ, “ಈ ಸುರುಳಿಯಲ್ಲಿರುವ ವಾಕ್ಯಗಳಿಗನುಸಾರವಾಗಿ ಯೆಹೋವನು ನಿಮ್ಮೊಡನೆ ಒಂದು ವಿಶೇಷ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆಂಬುದನ್ನು ಈ ರಕ್ತವು ಸೂಚಿಸುತ್ತದೆ” ಎಂದು ಹೇಳಿದನು.

ಬಳಿಕ ಮೋಶೆ, ಆರೋನ, ನಾದಾಬ, ಅಬೀಹೂ ಮತ್ತು ಇಸ್ರೇಲರ ಎಪ್ಪತ್ತು ಮಂದಿ ಹಿರಿಯರು ಬೆಟ್ಟವನ್ನೇರಿದರು. 10 ಈ ಜನರು ಇಸ್ರೇಲರ ಯೆಹೋವನನ್ನು ನೋಡಿದರು. ದೇವರು ಆಕಾಶಮಂಡಲದಂತೆ ಅತಿ ನಿರ್ಮಲವಾದ ಇಂದ್ರನೀಲಮಣಿಯ ನೆಲಗಟ್ಟಿನ ಮೇಲೆ ನಿಂತುಕೊಂಡಿದ್ದನು! 11 ಇಸ್ರೇಲರ ನಾಯಕರೆಲ್ಲರೂ ಯೆಹೋವನನ್ನು ನೋಡಿದರು, ಆದರೆ ದೇವರು ಅವರನ್ನು ನಾಶಮಾಡಲಿಲ್ಲ. ಅವರೆಲ್ಲರೂ ದೇವದರ್ಶನ ಮಾಡಿ ಅನ್ನಪಾನಗಳನ್ನು ತೆಗೆದುಕೊಂಡರು.

ಯೆಹೋವನ ನಿಬಂಧನೆಯನ್ನು ಪಡೆಯಲು ಮೋಶೆ ಹೋದದ್ದು

12 ಯೆಹೋವನು ಮೋಶೆಗೆ, “ನೀನು ಬೆಟ್ಟವನ್ನು ಹತ್ತಿ ಬಂದು ನನ್ನ ಬಳಿಯಲ್ಲಿರು. ನಾನು ನನ್ನ ಉಪದೇಶಗಳನ್ನು ಮತ್ತು ಕಟ್ಟಳೆಗಳನ್ನು ಎರಡು ಕಲ್ಲಿನ ಹಲಗೆಗಳ ಮೇಲೆ ಬರೆದಿದ್ದೇನೆ. ಈ ಉಪದೇಶಗಳನ್ನು ಮತ್ತು ಕಟ್ಟಳೆಗಳನ್ನು ನೀನು ಜನರಿಗೆ ಬೋಧಿಸಬೇಕು. ನಾನು ಈ ಕಲ್ಲಿನ ಹಲಗೆಗಳನ್ನು ನಿನಗೆ ಕೊಡುವೆನು” ಎಂದು ಹೇಳಿದನು.

13 ಆದ್ದರಿಂದ ಮೋಶೆಯು ತನ್ನ ಶಿಷ್ಯನಾದ ಯೆಹೋಶುವನೊಡನೆ ಎದ್ದುನಿಂತು ದೇವರ ಬೆಟ್ಟದ ಮೇಲಕ್ಕೆ ಹೋದನು. 14 ಮೋಶೆಯು ಹಿರಿಯರಿಗೆ, “ನಾವು ನಿಮ್ಮ ಬಳಿಗೆ ಹಿಂತಿರುಗಿ ಬರುವ ತನಕ ನೀವು ಇಲ್ಲಿ ಕಾದುಕೊಂಡಿರಿ. ಆರೋನನು ಮತ್ತು ಹೂರನು ನಿಮ್ಮ ಬಳಿಯಿದ್ದಾರೆ; ನಿಮ್ಮಲ್ಲಿ ಯಾರಿಗಾದರೂ ಸಮಸ್ಯೆಯಿದ್ದರೆ ಅವರ ಬಳಿಗೆ ಹೋಗಲಿ” ಎಂದು ಹೇಳಿದನು.

ಮೋಶೆಯು ದೇವರನ್ನು ಭೇಟಿಯಾದದ್ದು

15 ಬಳಿಕ ಮೋಶೆ ಬೆಟ್ಟದ ಮೇಲಕ್ಕೆ ಹೋದನು. ಮೋಡವು ಬೆಟ್ಟವನ್ನು ಕವಿದುಕೊಂಡಿತ್ತು. 16 ಸೀನಾಯಿ ಬೆಟ್ಟದ ಮೇಲೆ ಯೆಹೋವನ ಮಹಿಮೆಯು ಇಳಿದು ಬಂದಿತು. ಮೋಡವು ಆರುದಿನಗಳವರೆಗೆ ಬೆಟ್ಟವನ್ನು ಕವಿದುಕೊಂಡಿತ್ತು. ಏಳನೆಯ ದಿನದಲ್ಲಿ, ಮೋಡದೊಳಗಿಂದ ಯೆಹೋವನು ಮೋಶೆಯೊಡನೆ ಮಾತಾಡಿದನು. 17 ಇಸ್ರೇಲರಿಗೆ ಯೆಹೋವನ ಮಹಿಮೆಯು ಬೆಟ್ಟದ ತುದಿಯಲ್ಲಿ ಉರಿಯುವ ಬೆಂಕಿಯಂತೆ ಕಾಣುತ್ತಿತ್ತು.

18 ಬಳಿಕ ಮೋಶೆಯು ಮೋಡದಲ್ಲಿ ಬೆಟ್ಟದ ಮೇಲೆ ಇನ್ನೂ ಎತ್ತರಕ್ಕೆ ಹೋದನು. ಮೋಶೆಯು ಬೆಟ್ಟದಲ್ಲಿ ಹಗಲಿರುಳು ನಲವತ್ತು ದಿವಸ ಇದ್ದನು.

ಯೋಹಾನ 3

ಯೇಸು ಮತ್ತು ನಿಕೊದೇಮ

ನಿಕೊದೇಮ ಎಂಬ ಒಬ್ಬ ಮನುಷ್ಯನಿದ್ದನು. ನಿಕೊದೇಮನು ಫರಿಸಾಯರಲ್ಲಿ ಒಬ್ಬನಾಗಿದ್ದನು. ಅವನು ಒಬ್ಬ ಮುಖ್ಯ ಯೆಹೂದ್ಯ ನಾಯಕನಾಗಿದ್ದನು. ಒಂದು ರಾತ್ರಿ ನಿಕೊದೇಮನು ಯೇಸುವಿನ ಬಳಿಗೆ ಬಂದನು. ನಿಕೊದೇಮನು, “ಗುರುವೇ, ನೀನು ದೇವರಿಂದ ಕಳುಹಿಸಲ್ಪಟ್ಟ ಉಪದೇಶಕನೆಂದು ನಮಗೆ ಗೊತ್ತಿದೆ. ನೀನು ಮಾಡುವ ಈ ಸೂಚಕಕಾರ್ಯಗಳನ್ನು ದೇವರ ಸಹಾಯದಿಂದಲ್ಲದೆ ಯಾರೂ ಮಾಡಲಾರರು” ಎಂದು ಹೇಳಿದನು.

ಯೇಸು “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಒಬ್ಬನು ಹೊಸದಾಗಿ ಹುಟ್ಟಲೇಬೇಕು. ಒಬ್ಬನು ಹೊಸದಾಗಿ ಹುಟ್ಟಿಲ್ಲದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು” ಎಂದು ಉತ್ತರಿಸಿದನು.

ನಿಕೊದೇಮನು, “ಮನುಷ್ಯನು ಮುದುಕನಾದ ಮೇಲೆ ಹುಟ್ಟುವುದು ಹೇಗೆ? ಒಬ್ಬನು ತನ್ನ ತಾಯಿಯ ಗರ್ಭದೊಳಗೆ ಮತ್ತೆ ಪ್ರವೇಶಿಸಲು ಸಾಧ್ಯವೇ?” ಎಂದು ಕೇಳಿದನು.

ಅದಕ್ಕೆ ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಒಬ್ಬನು ನೀರಿನಿಂದಲೂ ಆತ್ಮನಿಂದಲೂ ಹುಟ್ಟಲೇಬೇಕು. ಇಲ್ಲವಾದರೆ ಅವನು ದೇವರ ರಾಜ್ಯವನ್ನು ಪ್ರವೇಶಿಸಲಾರನು. ದೇಹವು ಮಾನುಷ ತಂದೆತಾಯಿಗಳಿಂದ ಹುಟ್ಟಿದ್ದು. ಆದರೆ ಆತ್ಮಿಕ ಜೀವನವು ಆತ್ಮನಿಂದ ಹುಟ್ಟಿದ್ದು. ‘ನೀನು ಹೊಸದಾಗಿ ಹುಟ್ಟಲೇಬೇಕು’ ಎಂದು ನಾನು ಹೇಳಿದ್ದಕ್ಕೆ ಆಶ್ಚರ್ಯಪಡಬೇಡ. ಗಾಳಿಯು ತನಗಿಷ್ಟ ಬಂದ ಕಡೆಗೆ ಹೋಗುತ್ತದೆ. ಗಾಳಿ ಬೀಸುವ ಶಬ್ದವನ್ನು ನೀನು ಕೇಳುವೆ. ಆದರೆ ಗಾಳಿ ಎಲ್ಲಿಂದ ಬರುತ್ತದೋ ಮತ್ತು ಎಲ್ಲಿಗೆ ಹೋಗುತ್ತದೋ ನಿನಗೆ ತಿಳಿಯದು. ಆತ್ಮನಿಂದ ಹುಟ್ಟಿದ ಪ್ರತಿಯೊಬ್ಬರೂ ಅದರಂತಿದ್ದಾರೆ” ಎಂದು ಹೇಳಿದನು.

ನಿಕೊದೇಮನು, “ಇದೆಲ್ಲಾ ಹೇಗೆ ಸಾಧ್ಯ?” ಎಂದು ಕೇಳಿದನು.

10 ಯೇಸು, “ನೀನು ಇಸ್ರೇಲಿನ ಉಪದೇಶಕನಾಗಿರುವೆ. ಆದರೆ ನಿನಗೆ ಈ ಸಂಗತಿಗಳು ಇನ್ನೂ ಅರ್ಥವಾಗುವುದಿಲ್ಲವೇ? 11 ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ನಮಗೆ ಗೊತ್ತಿರುವುದರ ಬಗ್ಗೆ ನಾವು ಮಾತಾಡುತ್ತೇವೆ. ನಾವು ಕಂಡದ್ದರ ಬಗ್ಗೆ ನಾವು ಸಾಕ್ಷಿ ಕೊಡುತ್ತೇವೆ. ಆದರೆ ನಾವು ಹೇಳುವುದನ್ನು ನೀವು ಸ್ವೀಕರಿಸಿಕೊಳ್ಳುವುದಿಲ್ಲ. 12 ನಾನು ನಿಮಗೆ ಭೂಲೋಕದ ಸಂಗತಿಗಳ ಬಗ್ಗೆ ಹೇಳಿದೆ, ಆದರೆ ನೀವು ನನ್ನನ್ನು ನಂಬುವುದಿಲ್ಲ. ಆದ್ದರಿಂದ ನಾನು ಪರಲೋಕದ ಸಂಗತಿಗಳ ಬಗ್ಗೆ ನಿನಗೆ ಹೇಳಿದರೂ ನೀವು ಖಂಡಿತವಾಗಿ ನಂಬುವುದಿಲ್ಲ! 13 ಪರಲೋಕದಿಂದ ಇಳಿದುಬಂದ ಮನುಷ್ಯಕುಮಾರನೊಬ್ಬನೇ ಪರಲೋಕಕ್ಕೆ ಏರಿಹೋದ ಏಕೈಕ ವ್ಯಕ್ತಿಯಾಗಿದ್ದಾನೆ.

14 “ಮೋಶೆಯು ಮರಳುಗಾಡಿನಲ್ಲಿ ಸರ್ಪವನ್ನು ಎತ್ತರವಾದ ಕಂಬದ ಮೇಲಿಟ್ಟನು. ಅಂತೆಯೇ ಮನುಷ್ಯಕುಮಾರನನ್ನು ಸಹ ಎತ್ತರವಾದ ಕಂಬದ ಮೇಲಿಡಬೇಕು. 15 ಆತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರೂ ನಿತ್ಯಜೀವವನ್ನು ಹೊಂದಿಕೊಳ್ಳುವರು” ಎಂದು ಹೇಳಿದನು.

16 ಹೌದು, ದೇವರು ಲೋಕವನ್ನು ಎಷ್ಟೋ ಪ್ರೀತಿಸಿ ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಹೊಂದಬೇಕೆಂದು ಆತನನ್ನು ಕೊಟ್ಟನು. 17 ದೇವರು ತನ್ನ ಮಗನನ್ನು ಈ ಲೋಕಕ್ಕೆ ಕಳುಹಿಸಿದ್ದು, ಆತನ ಮೂಲಕವಾಗಿ ಈ ಲೋಕದ ಜನರನ್ನು ಅಪರಾಧಿಗಳೆಂದು ತೀರ್ಪು ಮಾಡುವುದಕ್ಕಾಗಿಯಲ್ಲ. ಈ ಲೋಕದವರು ರಕ್ಷಣೆ ಹೊಂದಿಕೊಳ್ಳಲೆಂದು ದೇವರು ಆತನನ್ನು ಕಳುಹಿಸಿಕೊಟ್ಟನು. 18 ದೇವರ ಮಗನಲ್ಲಿ ನಂಬಿಕೆ ಇಡುವವನಿಗೆ ತೀರ್ಪಾಗುವುದಿಲ್ಲ. ಆದರೆ ನಂಬದವನಿಗೆ ಆಗಲೇ ತೀರ್ಪಾಗಿದೆ. ಏಕೆಂದರೆ ಅವನು ದೇವರ ಒಬ್ಬನೇ ಮಗನಲ್ಲಿ ನಂಬಿಕೆ ಇಡಲಿಲ್ಲ. 19 ಆ ತೀರ್ಪು ಏನೆಂದರೆ: ಬೆಳಕು ಈ ಲೋಕಕ್ಕೆ ಬಂದಿದೆ, ಆದರೆ ಜನರು ಬೆಳಕನ್ನು ಅಪೇಕ್ಷಿಸದೆ ಕತ್ತಲೆಯನ್ನೇ ಬಯಸಿದರು. ಏಕೆಂದರೆ ಅವರು ದುಷ್ಕೃತ್ಯಗಳನ್ನು ಮಾಡುತ್ತಿದ್ದರು. 20 ಕೇಡನ್ನು ಮಾಡುವ ಪ್ರತಿಯೊಬ್ಬನೂ ಬೆಳಕನ್ನು ದ್ವೇಷಿಸುವನು. ಅವನು ಬೆಳಕಿಗೆ ಬರುವುದಿಲ್ಲ. ಏಕೆಂದರೆ ಅವನು ಮಾಡಿರುವ ಕೆಟ್ಟಕಾರ್ಯಗಳನ್ನೆಲ್ಲಾ ಬೆಳಕು ತೋರಿಸುತ್ತದೆ. 21 ಆದರೆ ಸತ್ಯಮಾರ್ಗವನ್ನು ಅನುಸರಿಸುವವನು ಬೆಳಕಿಗೆ ಬರುತ್ತಾನೆ. ಅವನು ಮಾಡಿರುವ ಕಾರ್ಯಗಳೆಲ್ಲಾ ದೇವರ ಮೂಲಕವಾಗಿ ಮಾಡಿದ ಕಾರ್ಯಗಳೆಂದು ಬೆಳಕು ತೋರಿಸುತ್ತದೆ.

ಯೇಸು ಮತ್ತು ಸ್ನಾನಿಕ ಯೋಹಾನ

22 ಇದಾದ ನಂತರ, ಯೇಸು ಮತ್ತು ಆತನ ಶಿಷ್ಯರು ಜುದೇಯ ಪ್ರಾಂತ್ಯಕ್ಕೆ ಹೋದರು. ಅಲ್ಲಿ ಯೇಸು ತನ್ನ ಶಿಷ್ಯರೊಡನೆ ತಂಗಿದ್ದು, ಜನರಿಗೆ ದೀಕ್ಷಾಸ್ನಾನ ಮಾಡಿಸಿದನು. 23 ಯೋಹಾನನು ಸಹ ಐನೋನ್ ಎಂಬ ಸ್ಥಳದಲ್ಲಿ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಐನೋನ್ ಎಂಬ ಊರು ಸಲೀಮ್ ಊರಿನ ಸಮೀಪದಲ್ಲಿದೆ. ಅಲ್ಲಿ ಬೇಕಾದಷ್ಟು ನೀರಿದ್ದುದರಿಂದ ಯೋಹಾನನು ಅಲ್ಲಿ ಜನರಿಗೆ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಜನರು ಅಲ್ಲಿಗೆ ಬಂದು ದೀಕ್ಷಾಸ್ನಾನ ತೆಗೆದುಕೊಳ್ಳುತ್ತಿದ್ದರು. 24 (ಆಗ ಯೋಹಾನನನ್ನು ಇನ್ನೂ ಸೆರೆಮನೆಗೆ ಹಾಕಿರಲಿಲ್ಲ.)

25 ಯೋಹಾನನ ಶಿಷ್ಯರಲ್ಲಿ ಕೆಲವರಿಗೂ ಮತ್ತೊಬ್ಬ ಯೆಹೂದ್ಯನಿಗೂ ಶುದ್ಧಾಚಾರದ ಬಗ್ಗೆ ವಾದವಾಯಿತು. 26 ಆದ್ದರಿಂದ ಶಿಷ್ಯರು ಯೋಹಾನನ ಬಳಿಗೆ ಬಂದು, “ಗುರುವೇ, ಜೋರ್ಡನ್ ನದಿಯ ಆಚೆದಡದಲ್ಲಿ ನಿನ್ನೊಂದಿಗಿದ್ದ ವ್ಯಕ್ತಿಯನ್ನು ಜ್ಞಾಪಿಸಿಕೊ. ಆತನ ಕುರಿತಾಗಿ ನೀನೇ ಸಾಕ್ಷಿ ಹೇಳಲಿಲ್ಲವೇ? ಆತನು ಜನರಿಗೆ ದೀಕ್ಷಾಸ್ನಾನ ಕೊಡುತ್ತಿದ್ದಾನೆ. ಅನೇಕ ಜನರು ಆತನ ಬಳಿಗೆ ಹೋಗುತ್ತಿದ್ದಾರೆ” ಎಂದು ಹೇಳಿದರು.

27 ಯೋಹಾನನು, “ದೇವರು ಏನು ಕೊಡುತ್ತಾನೋ ಅದನ್ನು ಮಾತ್ರ ಒಬ್ಬನು ಪಡೆದುಕೊಳ್ಳಬಲ್ಲನು. 28 ‘ನಾನು ಕ್ರಿಸ್ತನಲ್ಲ. ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದಕ್ಕಾಗಿ ಮಾತ್ರ ಕಳುಹಿಸಲ್ಪಟ್ಟಿದ್ದೇನೆ’ ಎಂದು ನಾನು ಹೇಳಿದ್ದಕ್ಕೆ ನೀವೇ ಸಾಕ್ಷಿಗಳಾಗಿದ್ದೀರಿ. 29 ಮದುಮಗಳು ಮದುಮಗನಿಗೆ ಮಾತ್ರ ಸೇರಿದವಳಾಗಿದ್ದಾಳೆ. ಮದುಮಗನಿಗೆ ಸಹಾಯಮಾಡುವ ಸ್ನೇಹಿತನು ಮದುಮಗನ ಬರುವಿಕೆಗಾಗಿ ಕಾಯುತ್ತಿರುತ್ತಾನೆ ಮತ್ತು ಆತನ ಕರೆಗಾಗಿ ಆಲಿಸುತ್ತಿರುತ್ತಾನೆ. ಮದುಮಗನ ಸ್ವರವನ್ನು ಕೇಳುವಾಗ ಈ ಸ್ನೇಹಿತನು ಬಹು ಸಂತೋಷಪಡುವನು. ಅದೇ ಸಂತೋಷ ನನಗಿದೆ. ನನ್ನ ಪೂರ್ಣಾನಂದದ ಸಮಯವು ಇದೇ ಆಗಿದೆ. 30 ಆತನು (ಯೇಸು) ವೃದ್ಧಿಯಾಗಬೇಕು ಮತ್ತು ನಾನು ಕಡಿಮೆಯಾಗಬೇಕು.

ಪರಲೋಕದಿಂದ ಬರುವ ವ್ಯಕ್ತಿ

31 “ಮೇಲಿನಿಂದ ಬರುವ ಒಬ್ಬನು (ಯೇಸು) ಬೇರೆಲ್ಲಾ ಜನರಿಗಿಂತಲೂ ದೊಡ್ಡವನಾಗಿದ್ದಾನೆ. ಈ ಲೋಕದ ವ್ಯಕ್ತಿಯು ಈ ಲೋಕಕ್ಕೆ ಸೇರಿದವನಾಗಿದ್ದಾನೆ. ಅವನು ಈ ಲೋಕದಲ್ಲಿನ ಸಂಗತಿಗಳ ಬಗ್ಗೆ ಮಾತಾಡುತ್ತಾನೆ. ಆದರೆ ಪರಲೋಕದಿಂದ ಬರುವ ಒಬ್ಬನು ಬೇರೆಲ್ಲಾ ಜನರಿಗಿಂತಲೂ ದೊಡ್ಡವನಾಗಿದ್ದಾನೆ. 32 ಆತನು ತಾನು ಕಂಡಿರುವುದರ ಬಗ್ಗೆ ಮತ್ತು ಕೇಳಿರುವುದರ ಬಗ್ಗೆ ಸಾಕ್ಷಿ ನೀಡುತ್ತಾನೆ. ಆದರೆ ಆತನ ಸಾಕ್ಷಿಯನ್ನು ಜನರು ಸ್ವೀಕರಿಸಿಕೊಳ್ಳುವುದಿಲ್ಲ. 33 ಆತನ ಸಾಕ್ಷಿಯನ್ನು ಸ್ವೀಕರಿಸಿಕೊಳ್ಳುವ ವ್ಯಕ್ತಿಯು ದೇವರೇ ಸತ್ಯವಂತನೆಂದು ನಿರೂಪಿಸುತ್ತಾನೆ. 34 ದೇವರು ಆತನನ್ನು (ಯೇಸುವನ್ನು) ಕಳುಹಿಸಿದನು. ದೇವರು ಹೇಳುವ ಸಂಗತಿಗಳನ್ನು ಆತನು ಹೇಳುತ್ತಾನೆ. ಏಕೆಂದರೆ ದೇವರು ಆತನಿಗೆ ಆತ್ಮವನ್ನು ಅಮಿತವಾಗಿ ಕೊಡುತ್ತಾನೆ. 35 ತಂದೆಯು ಮಗನನ್ನು ಪ್ರೀತಿಸುತ್ತಾನೆ. ತಂದೆಯು ಮಗನಿಗೆ ಪ್ರತಿಯೊಂದರ ಮೇಲೆಯೂ ಅಧಿಕಾರವನ್ನು ಕೊಟ್ಟಿದ್ದಾನೆ. 36 ಮಗನಲ್ಲಿ ನಂಬಿಕೆ ಇಡುವವನು ನಿತ್ಯಜೀವವನ್ನು ಹೊಂದಿದ್ದಾನೆ. ಆದರೆ ಮಗನಿಗೆ ವಿಧೇಯನಾಗದವನು ಆ ಜೀವವನ್ನು ಎಂದಿಗೂ ಹೊಂದಿಕೊಳ್ಳುವುದಿಲ್ಲ. ದೇವರ ಕೋಪವು ಅವನ ಮೇಲೆ ನೆಲೆಗೊಂಡಿರುವುದು” ಎಂದು ಉತ್ತರಕೊಟ್ಟನು.

ಯೋಬನು 42

ಯೆಹೋವನಿಗೆ ಯೋಬನ ಉತ್ತರ

42 ಆಗ ಯೋಬನು ಯೆಹೋವನಿಗೆ ಪ್ರತ್ಯುತ್ತರವಾಗಿ ಹೀಗೆಂದನು:

“ಯೆಹೋವನೇ, ನೀನು ಪ್ರತಿಯೊಂದನ್ನೂ ಮಾಡಬಲ್ಲೆ ಎಂದು ನನಗೆ ಗೊತ್ತಿದೆ.
    ನೀನು ಮಾಡಿದ ಆಲೋಚನೆಗಳನ್ನು ಯಾವುದೂ ಬದಲಿಸಲಾರದು; ಯಾವುದೂ ನಿಲ್ಲಿಸಲಾರದು.
ಯೆಹೋವನೇ, ‘ಈ ಮೂರ್ಖ ಸಂಗತಿಗಳನ್ನು ಹೇಳುತ್ತಿರುವ ಈ ಮೂಢನು ಯಾರು?’ ಎಂದು ನೀನು ಪ್ರಶ್ನಿಸಿದೆ.
    ನನಗೆ ಅರ್ಥವಾಗಿಲ್ಲದ ಸಂಗತಿಗಳ ಬಗ್ಗೆಯೂ
    ನಾನು ತಿಳಿಯಲಾಗದಷ್ಟು ಆಶ್ಚರ್ಯಕರವಾದ ಅದ್ಭುತಕಾರ್ಯಗಳ ಬಗ್ಗೆಯೂ ನಾನು ಮಾತಾಡಿದ್ದೇನೆ.

“ಯೆಹೋವನೇ, ನೀನು ನನಗೆ, ‘ಯೋಬನೇ, ಆಲಿಸು; ನಾನು ಮಾತಾಡುತ್ತೇನೆ.
    ನಾನು ನಿನಗೆ ಪ್ರಶ್ನೆಗಳನ್ನು ಕೇಳುತ್ತೇನೆ; ನೀನು ನನಗೆ ಉತ್ತರಿಸು’ ಎಂದು ಹೇಳಿದೆ.
ಯೆಹೋವನೇ, ಮೊದಲಾದರೋ ನಾನು ನಿನ್ನ ಬಗ್ಗೆ ಕೇಳಿದ್ದೆನು;
    ಈಗಲಾದರೋ ಕಣ್ಣಾರೆ ನಿನ್ನನ್ನು ಕಂಡಿದ್ದೇನೆ.
ಯೆಹೋವನೇ, ನನ್ನ ವಿಷಯದಲ್ಲಿ ನನಗೇ ನಾಚಿಕೆಯಾಗಿದೆ.
    ನನಗೆ ಎಷ್ಟೋ ದುಃಖವಾಗಿದೆ.
ನಾನು ಧೂಳಿನಲ್ಲಿಯೂ ಬೂದಿಯಲ್ಲಿಯೂ ಕುಳಿತುಕೊಳ್ಳುತ್ತೇನೆ.
    ನನ್ನ ಹೃದಯವನ್ನೂ ಜೀವಿತವನ್ನೂ ಮಾರ್ಪಡಿಸಿಕೊಳ್ಳುವುದಾಗಿ ನಾನು ನಿನಗೆ ವಾಗ್ದಾನ ಮಾಡುತ್ತೇನೆ.”

ಯೋಬನಿಗೆ ದೊರೆತ ಐಶ್ವರ್ಯ

ಯೆಹೋವನು ಯೋಬನೊಂದಿಗೆ ಮಾತಾಡಿದ ಮೇಲೆ, ಎಲೀಫಜನೊಂದಿಗೆ ಮಾತಾಡಿದನು. ಎಲೀಫಜನು ತೇಮಾನ್ ಪಟ್ಟಣದವನಾಗಿದ್ದನು. ಯೆಹೋವನು ಎಲೀಫಜನಿಗೆ, “ನಾನು ನಿನ್ನ ಮೇಲೆಯೂ ನಿನ್ನ ಇಬ್ಬರು ಸ್ನೇಹಿತರ ಮೇಲೆಯೂ ಕೋಪಗೊಂಡಿದ್ದೇನೆ. ಯಾಕೆಂದರೆ ನೀನು ನನ್ನ ಬಗ್ಗೆ ಹೇಳಿದವುಗಳು ಸತ್ಯವಲ್ಲ. ಆದರೆ ಯೋಬನು ನನ್ನ ಬಗ್ಗೆ ಹೇಳಿದವುಗಳು ಸತ್ಯವಾಗಿವೆ. ಯೋಬನು ನನ್ನ ಸೇವಕ. ಆದ್ದರಿಂದ, ಈಗ ನೀವು (ಮೂವರು) ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ತೆಗೆದುಕೊಂಡು ನನ್ನ ಸೇವಕನಾದ ಯೋಬನ ಬಳಿಗೆ ಹೋಗಿ ಅವುಗಳನ್ನು ನಿಮಗೋಸ್ಕರ ದೋಷಪರಿಹಾರಕಯಜ್ಞ ಮಾಡಿರಿ. ನನ್ನ ಸೇವಕನಾದ ಯೋಬನು ನಿಮಗೋಸ್ಕರ ಪ್ರಾರ್ಥಿಸುವನು. ಆಗ ನಾನು ಅವನ ಪ್ರಾರ್ಥನೆಗೆ ಖಂಡಿತವಾಗಿ ಉತ್ತರಿಸುವೆನು; ನಿಮ್ಮ ಮೂರ್ಖತನಕ್ಕೆ ಬರಬೇಕಾಗಿದ್ದ ದಂಡನೆಯನ್ನು ಮನ್ನಿಸುವೆನು. ನೀವು ನನ್ನ ಬಗ್ಗೆ ಹೇಳಿದವುಗಳು ಸತ್ಯವಲ್ಲ; ಆದರೆ ನನ್ನ ಸೇವಕನಾದ ಯೋಬನು ಹೇಳಿದವುಗಳು ಸತ್ಯವಾಗಿವೆ.” ಎಂದನು.

ಆಗ ತೇಮಾನ್ ಪಟ್ಟಣದ ಎಲೀಫಜನೂ ಶೂಹ ದೇಶದ ಬಿಲ್ದದನೂ ನಾಮಾಥ್ಯ ದೇಶದ ಚೋಫರನೂ ಯೆಹೋವನಿಗೆ ವಿಧೇಯರಾದರು. ಯೆಹೋವನು ಯೋಬನ ಪ್ರಾರ್ಥನೆಗೆ ಉತ್ತರವನ್ನು ನೀಡಿದನು.

10 ಯೋಬನು ತನ್ನ ಸ್ನೇಹಿತರಿಗೋಸ್ಕರ ಪ್ರಾರ್ಥಿಸಿದ ಮೇಲೆ ಯೆಹೋವನು ಯೋಬನನ್ನು ಅಭಿವೃದ್ಧಿಪಡಿಸಿದನು. ಆತನು ಯೋಬನಿಗೆ, ಮೊದಲಿಗಿಂತ ಎರಡರಷ್ಟು ಹೆಚ್ಚಿಗೆ ಆಸ್ತಿಯನ್ನು ಕೊಟ್ಟನು. 11 ಯೋಬನ ಸಹೋದರಸಹೋದರಿಯರೂ ಅವನ ಪರಿಚಯಸ್ಥರೂ ಅವನ ಮನೆಗೆ ಬಂದರು; ಅವನೊಂದಿಗೆ ಊಟ ಮಾಡಿದರು; ಯೆಹೋವನು ಅವನಿಗೆ ಬಹಳ ಕಷ್ಟವನ್ನು ಬರಮಾಡಿದ್ದರಿಂದ ಅವರು ಮರುಕದಿಂದ ಅವನನ್ನು ಸಂತೈಸಿದರು. ಪ್ರತಿಯೊಬ್ಬರು ಯೋಬನಿಗೆ ಒಂದು ಬೆಳ್ಳಿಯ ನಾಣ್ಯವನ್ನೂ ಒಂದು ಚಿನ್ನದ ಉಂಗುರವನ್ನೂ ಕೊಟ್ಟರು.

12 ಯೆಹೋವನು ಯೋಬನ ಜೀವಿತದ ಅಂತಿಮ ಸ್ಥಿತಿಯನ್ನು ಮೊದಲನೆ ಸ್ಥಿತಿಗಿಂತಲೂ ಹೆಚ್ಚಾಗಿ ಆಶೀರ್ವದಿಸಿದನು. ಯೋಬನಿಗೆ ಹದಿನಾಲ್ಕು ಸಾವಿರ ಕುರಿಗಳೂ ಆರು ಸಾವಿರ ಒಂಟೆಗಳೂ ಒಂದು ಸಾವಿರ ಜೊತೆ ಎತ್ತುಗಳೂ ಒಂದು ಸಾವಿರ ಹೆಣ್ಣು ಕತ್ತೆಗಳೂ ಇದ್ದವು. 13 ಅಲ್ಲದೆ ಯೋಬನು ಏಳು ಗಂಡುಮಕ್ಕಳನ್ನೂ ಮೂವರು ಹೆಣ್ಣುಮಕ್ಕಳನ್ನೂ ಪಡೆದನು. 14 ಯೋಬನು ಮೊದಲನೆ ಮಗಳಿಗೆ “ಯೆಮೀಮ” ಎಂತಲೂ, ಎರಡನೆಯವಳಿಗೆ “ಕೆಚೀಯ” ಎಂತಲೂ ಮೂರನೆಯವಳಿಗೆ “ಕೆರೆನ್ಹಪ್ಪೂಕ್” ಎಂತಲೂ ಹೆಸರಿಟ್ಟನು. 15 ಯೋಬನ ಹೆಣ್ಣುಮಕ್ಕಳು ಇಡೀ ದೇಶದಲ್ಲೇ ಅತ್ಯಂತ ಸೌಂದರ್ಯವುಳ್ಳ ಸ್ತ್ರೀಯರಾಗಿದ್ದರು. ಯೋಬನು ತನ್ನ ಗಂಡುಮಕ್ಕಳಿಗೆ ಆಸ್ತಿಯನ್ನು ಕೊಟ್ಟಂತೆ ತನ್ನ ಹೆಣ್ಣುಮಕ್ಕಳಿಗೂ ಕೊಟ್ಟನು.

16 ಆ ಮೇಲೆ ಯೋಬನು ನೂರನಲವತ್ತು ವರ್ಷಗಳ ಕಾಲ ಬದುಕಿದ್ದನು. ಅವನು ತನ್ನ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಮರಿಮಕ್ಕಳನ್ನೂ ಮರಿಮೊಮ್ಮಕ್ಕಳನ್ನೂ ಮರಿಮೊಮ್ಮಕ್ಕಳಿಗೆ ಹುಟ್ಟಿದ ಮಕ್ಕಳನ್ನೂ ಕಣ್ಣಾರೆಕಂಡನು. 17 ತರುವಾಯ ಯೋಬನು ಮುಪ್ಪಿನ ಮುದುಕನಾಗಿ ತೀರಿಕೊಂಡನು.

2 ಕೊರಿಂಥದವರಿಗೆ 12

ಪೌಲನ ಜೀವಿತದಲ್ಲಾದ ವಿಶೇಷ ಆಶೀರ್ವಾದ

12 ಹೊಗಳಿಕೊಳ್ಳುವುದು ಹಿತಕರವಲ್ಲ. ಆದರೂ ನನಗೆ ಅವಶ್ಯವಾಗಿದೆ. ಆದ್ದರಿಂದ ನನಗೆ ಪ್ರಭುವಿನಿಂದಾದ ದರ್ಶನಗಳ ಮತ್ತು ಪ್ರಕಟಣೆಗಳ ಬಗ್ಗೆ ಹೇಳುತ್ತೇನೆ. ಮೂರನೆಯ ಆಕಾಶಕ್ಕೆ ಒಯ್ಯಲ್ಪಟ್ಟಿದ್ದ ಒಬ್ಬ ವ್ಯಕ್ತಿಯನ್ನು ನಾನು ಬಲ್ಲೆನು. ಇದು ಸಂಭವಿಸಿ ಹದಿನಾಲ್ಕು ವರ್ಷಗಳಾದವು. ಆ ವ್ಯಕ್ತಿಯು ದೇಹಸಹಿತವಾಗಿ ಹೋಗಿದ್ದನೊ ಅಥವಾ ದೇಹರಹಿತನಾಗಿ ಹೋಗಿದ್ದನೊ ನನಗೆ ಗೊತ್ತಿಲ್ಲ. ದೇವರಿಗೆ ಗೊತ್ತು. 3-4 ಈ ವ್ಯಕ್ತಿಯು ಪರದೈಸಿಗೆ ಒಯ್ಯಲ್ಪಟ್ಟದ್ದು ನನಗೆ ಗೊತ್ತಿದೆ. ಅವನು ನುಡಿಯಲಶಕ್ಯವಾದ ಮತ್ತು ಹೇಳಕೂಡದಂಥ ಮಾತುಗಳನ್ನು ಕೇಳಿದನು. ಅಂಥವನ ಬಗ್ಗೆ ನಾನು ಹೊಗಳಿಕೊಳ್ಳುತ್ತೇನೆ. ಆದರೆ ನನ್ನ ಬಗ್ಗೆ ಹೊಗಳಿಕೊಳ್ಳದೆ, ನನ್ನ ಬಲಹೀನತೆಗಳ ಬಗ್ಗೆ ಹೊಗಳಿಕೊಳ್ಳುತ್ತೇನೆ.

ನನ್ನ ಬಗ್ಗೆ ಹೊಗಳಿಕೊಳ್ಳಬೇಕೆಂದಿದ್ದರೂ ಬುದ್ಧಿಹೀನನಾಗುವುದಿಲ್ಲ, ಏಕೆಂದರೆ ಸತ್ಯವನ್ನೇ ಹೇಳುತ್ತೇನೆ. ಆದರೆ ನನ್ನ ಬಗ್ಗೆ ಹೊಗಳಿಕೊಳ್ಳುವುದಿಲ್ಲ, ಏಕೆಂದರೆ ಜನರು ನನ್ನಲ್ಲಿ ನೋಡುವುದಕ್ಕಿಂತಲೂ ನನ್ನಿಂದ ಕೇಳುವುದಕ್ಕಿಂತಲೂ ಹೆಚ್ಚಾಗಿ ನನ್ನ ಬಗ್ಗೆ ಯೋಚಿಸುವುದು ನನಗೆ ಇಷ್ಟವಿಲ್ಲ.

ಆದರೆ ನನಗೆ ತೋರಿಸಲ್ಪಟ್ಟ ಆಶ್ಚರ್ಯಕರವಾದ ಸಂಗತಿಗಳ ಬಗ್ಗೆ ನಾನು ಬಹು ಹೆಮ್ಮೆಪಡಕೂಡದು. ಆದ್ದರಿಂದಲೇ ಬಾಧೆಯ ಸಮಸ್ಯೆಯೊಂದು ನನಗೆ ಕೊಡಲ್ಪಟ್ಟಿತು. ಸೈತಾನನಿಂದ ಬಂದ ದೂತನೇ ಈ ಸಮಸ್ಯೆ. ಬಹಳವಾಗಿ ಹೆಮ್ಮೆಪಡದಂತೆ ನನ್ನನ್ನು ಹೊಡೆಯುವುದಕ್ಕಾಗಿ ಅದನ್ನು ಕಳುಹಿಸಲಾಗಿತ್ತು. ನನ್ನಿಂದ ಅದನ್ನು ತೆಗೆದುಹಾಕಬೇಕೆಂದು ನಾನು ಮೂರು ಸಲ ಪ್ರಭುವನ್ನು ಬೇಡಿಕೊಂಡೆನು. ಆದರೆ ಪ್ರಭುವು ನನಗೆ, “ನನ್ನ ಕೃಪೆಯೇ ನಿನಗೆ ಸಾಕು, ನೀನು ಬಲಹೀನನಾಗಿರುವಾಗ ನನ್ನ ಶಕ್ತಿಯು ನಿನ್ನಲ್ಲಿ ಪರಿಪೂರ್ಣವಾಗಿರುತ್ತದೆ” ಎಂದು ಹೇಳಿದನು. 10 ಆದ್ದರಿಂದ ನನ್ನಲ್ಲಿ ಬಲಹೀನತೆಗಳಿರುವಾಗ, ಜನರು ನನ್ನ ಬಗ್ಗೆ ಕೆಟ್ಟಸಂಗತಿಗಳನ್ನು ಹೇಳುವಾಗ, ಜನರು ನನ್ನನ್ನು ಹಿಂಸಿಸುವಾಗ, ನನಗೆ ಸಮಸ್ಯೆಗಳಿರುವಾಗ ಸಂತೋಷಿಸುತ್ತೇನೆ. ಇವುಗಳೆಲ್ಲಾ ಕ್ರಿಸ್ತನಿಗೋಸ್ಕರವಾಗಿಯೆ. ಇವುಗಳ ಬಗ್ಗೆ ಸಂತೋಷಪಡುತ್ತೇನೆ, ಏಕೆಂದರೆ ಬಲಹೀನನಾಗಿರುವಾಗಲೇ ನಿಜವಾಗಿಯೂ ಶಕ್ತಿಶಾಲಿಯಾಗಿರುತ್ತೇನೆ.

ಕೊರಿಂಥದ ಕ್ರೈಸ್ತರ ಮೇಲೆ ಪೌಲನಿಗಿರುವ ಪ್ರೀತಿ

11 ನಾನು ಬದ್ಧಿಹೀನನಂತೆ ಮಾತಾಡುತ್ತಿದ್ದೇನೆ. ಅದಕ್ಕೆ ನೀವೇ ಕಾರಣರು. ನೀವೇ ನನ್ನ ಬಗ್ಗೆ ಒಳ್ಳೆಯ ಸಂಗತಿಗಳನ್ನು ಹೇಳಬೇಕು. ನನಗೆ ಯಾವ ಬೆಲೆಯೂ ಇಲ್ಲ. ನಾನು ಕೇವಲ ಅಲ್ಪನಾಗಿದ್ದೇನೆ, ಆದರೆ ಆ “ಮಹಾಅಪೊಸ್ತಲರು” ನನಗಿಂತ ಯಾವುದರಲ್ಲಿಯೂ ಮಿಗಿಲಾಗಿಲ್ಲ. 12 ನಾನು ನಿಮ್ಮೊಂದಿಗಿದ್ದಾಗ ನಾನೂ ಅಪೊಸ್ತಲನೆಂಬುದನ್ನು ನಿರೂಪಿಸುವಂಥ ಸೂಚಕಕಾರ್ಯಗಳನ್ನು, ಆಶ್ಚರ್ಯಕರವಾದ ಕಾರ್ಯಗಳನ್ನು, ಅದ್ಭುತಕಾರ್ಯಗಳನ್ನು ಮಾಡಿದೆನು. 13 ನಾನು ಈ ಕಾರ್ಯಗಳನ್ನು ಬಹು ತಾಳ್ಮೆಯಿಂದ ಮಾಡಿದೆನು. ಆದ್ದರಿಂದ ಇತರ ಸಭೆಗಳಿಗೆ ದೊರೆತವುಗಳೆಲ್ಲ ನಿಮಗೂ ದೊರೆತವು. ಒಂದೇ ಒಂದು ವ್ಯತ್ಯಾಸವೇನೆಂದರೆ, ನಾನು ನಿಮಗೆ ಭಾರವಾಗಿರಲಿಲ್ಲ. ಈ ವಿಷಯದಲ್ಲಿ ನನ್ನನ್ನು ಕ್ಷಮಿಸಿರಿ.

14 ಈಗ ನಿಮ್ಮನ್ನು ಮೂರನೆ ಸಲ ಸಂದರ್ಶಿಸಲು ಸಿದ್ಧನಾಗಿದ್ದೇನೆ, ಆದರೆ ನಾನು ನಿಮಗೆ ಭಾರವಾಗಿರುವುದಿಲ್ಲ. ನಿಮ್ಮ ಸ್ವತ್ತುಗಳಲ್ಲಿ ಯಾವುದೂ ನನಗೆ ಬೇಕಾಗಿಲ್ಲ. ನನಗೆ ಬೇಕಾಗಿರುವುದು ನೀವೇ. ಮಕ್ಕಳು ತಂದೆತಾಯಿಗಳಿಗೋಸ್ಕರ ಹಣವನ್ನು ಉಳಿಸಿ ಕೊಡಬೇಕಾಗಿಲ್ಲ. ತಂದೆತಾಯಿಗಳು ಹಣವನ್ನು ಉಳಿಸಿ ಮಕ್ಕಳಿಗೆ ಕೊಡಬೇಕು. 15 ಆದ್ದರಿಂದ ನನ್ನಲ್ಲಿರುವುದನ್ನೆಲ್ಲಾ ನಿಮಗೆ ಕೊಡಲು ಸಂತೋಷಿಸುತ್ತೇನೆ. ನನ್ನನ್ನೇ ನಿಮಗೆ ಕೊಟ್ಟುಬಿಡುತ್ತೇನೆ. ನಾನು ನಿಮ್ಮನ್ನು ಬಹಳವಾಗಿ ಪ್ರೀತಿಸಿದರೆ, ನೀವು ನನ್ನನ್ನು ಕಡಿಮೆಯಾಗಿ ಪ್ರೀತಿಸುವಿರೋ?

16 ನಾನು ನಿಮಗೆ ಭಾರವಾಗಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಸುಳ್ಳು ಹೇಳಿ ಕುತಂತ್ರದಿಂದ ನಿಮ್ಮನ್ನು ಬಲೆಗೆ ಬೀಳಿಸುವವನಾಗಿದ್ದೇನೆಂದು ನೀವು ಯೋಚಿಸಿಕೊಂಡಿದ್ದೀರಿ. 17 ನಾನು ನಿಮ್ಮ ಬಳಿಗೆ ಕಳುಹಿಸಿದ ಜನರಲ್ಲಿ ಯಾರ ಮೂಲಕವಾದರೂ ನಿಮ್ಮನ್ನು ಮೋಸಗೊಳಿಸಿದೆನೇ? ಇಲ್ಲ! ನಾನು ಮೋಸಗೊಳಿಸಲಿಲ್ಲ ಎಂಬುದು ನಿಮಗೆ ಗೊತ್ತಿದೆ. 18 ನಿಮ್ಮ ಬಳಿಗೆ ಹೋಗಬೇಕೆಂದು ತೀತನನ್ನು ಕೇಳಿಕೊಂಡೆನು. ಅಲ್ಲದೆ ನಮ್ಮ ಸಹೋದರನನ್ನು ಅವನೊಂದಿಗೆ ಕಳುಹಿಸಿದೆನು. ಅವನು ನಿಮ್ಮನ್ನು ಮೋಸಗೊಳಿಸಲಿಲ್ಲ. ಅವನು ಮೋಸ ಮಾಡಿದನೇ? ಇಲ್ಲ! ಅವನು ಮತ್ತು ನಾನು ಒಂದೇ ಆತ್ಮನಿಂದ ಪ್ರೇರಿತರಾಗಿ ಒಂದೇ ರೀತಿಯಲ್ಲಿ ನಡೆದುಕೊಂಡೆವು.

19 ಈವರೆಗೂ ನಾವು ನಿಮ್ಮೊಂದಿಗೆ ನಮ್ಮ ಬಗ್ಗೆ ಸಮರ್ಥಿಸಿಕೊಳ್ಳುತ್ತಿದ್ದೇವೆಂದು ಭಾವಿಸುತ್ತೀರೋ? ಇಲ್ಲ! ನಾವು ಕ್ರಿಸ್ತನಲ್ಲಿ ಈ ಸಂಗತಿಗಳನ್ನು ದೇವರ ಮುಂದೆ ಹೇಳುತ್ತಿದ್ದೇವೆ. ನೀವು ನಮ್ಮ ಪ್ರಿಯ ಸ್ನೇಹಿತರು. ನಾವು ಮಾಡುವ ಪ್ರತಿಯೊಂದೂ ನಿಮ್ಮನ್ನು ಮತ್ತಷ್ಟು ಬಲಿಷ್ಠರನ್ನಾಗಿ ಮಾಡುವುದಕ್ಕಾಗಿಯೇ. 20 ಕಾರಣವೇನೆಂದರೆ, ನಾನು ಬಂದಾಗ ನನ್ನ ಅಪೇಕ್ಷೆಗೆ ತಕ್ಕಂತೆ ನೀವು ಇರುವುದಿಲ್ಲವೆಂಬ ಭಯ ನನಗಿದೆ. ನಿಮ್ಮ ಸಭೆಯಲ್ಲಿ ವಾದ, ಹೊಟ್ಟೆಕಿಚ್ಚು, ಕೋಪ, ಸ್ವಾರ್ಥಪರವಾದ ಹೋರಾಟ, ಕೆಟ್ಟಮಾತು, ಸುಳ್ಳುಸುದ್ದಿ, ಗರ್ವ ಮತ್ತು ಗಲಿಬಿಲಿ ಇರಬಹುದೆಂಬ ಭಯ ನನಗಿದೆ. 21 ನಾನು ನಿಮ್ಮ ಬಳಿಗೆ ಮತ್ತೆ ಬಂದಾಗ ನನ್ನ ದೇವರು ನನ್ನನ್ನು ನಿಮ್ಮ ಮುಂದೆ ದೀನನನ್ನಾಗಿ ಮಾಡಬಹುದೆಂಬ ಭಯವಿದೆ. ನಿಮ್ಮಲ್ಲಿ ಪಾಪಕ್ಕೆ ಒಳಗಾಗಿರುವ ಅನೇಕರಿಂದ ನಾನು ದುಃಖಿತನಾಗಬಹುದು. ಏಕೆಂದರೆ, ಆ ಜನರು ತಮ್ಮ ದುಷ್ಟಜೀವಿತದ ಬಗ್ಗೆ, ತಮ್ಮ ಲೈಂಗಿಕ ಪಾಪಗಳ ಬಗ್ಗೆ ಮತ್ತು ನಾಚಿಕೆಕರವಾದ ಕಾರ್ಯಗಳ ಬಗ್ಗೆ ದುಃಖಪಟ್ಟಿಲ್ಲ ಮತ್ತು ತಮ್ಮ ಹೃದಯಗಳನ್ನು ಮಾರ್ಪಾಟು ಮಾಡಿಕೊಂಡಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International