M’Cheyne Bible Reading Plan
ಮೋಶೆಯ ಮಾವನಿಂದ ಸಲಹೆ
18 ಮೋಶೆಯ ಮಾವನಾದ ಇತ್ರೋನನು ಮಿದ್ಯಾನಿನಲ್ಲಿ ಯಾಜಕನಾಗಿದ್ದನು. ಮೋಶೆಗೆ ಮತ್ತು ಇಸ್ರೇಲರಿಗೆ ದೇವರು ಅನೇಕ ರೀತಿಗಳಲ್ಲಿ ಸಹಾಯ ಮಾಡಿದ್ದರ ಬಗ್ಗೆ, ಯೆಹೋವನು ಇಸ್ರೇಲರನ್ನು ಈಜಿಪ್ಟಿನಿಂದ ಹೊರಗೆ ನಡಿಸಿದ್ದರ ಬಗ್ಗೆ ಇತ್ರೋನನು ಕೇಳಿದನು. 2 ಆದ್ದರಿಂದ ಅವನು ಮೋಶೆಯ ಹೆಂಡತಿಯಾದ ಚಿಪ್ಪೋರಳನ್ನು ಕರೆದುಕೊಂಡು ಬಂದನು. (ಚಿಪ್ಪೋರಳನ್ನು ಮೋಶೆಯು ಮನೆಗೆ ಕಳುಹಿಸಿದ್ದರಿಂದ ಆಕೆಯು ಮೋಶೆಯ ಸಂಗಡ ಇರಲಿಲ್ಲ.) 3 ಇತ್ರೋನನು ಮೋಶೆಯ ಇಬ್ಬರು ಗಂಡುಮಕ್ಕಳನ್ನೂ ಕರೆದುಕೊಂಡು ಬಂದನು. ಮೊದಲಿನ ಮಗನ ಹೆಸರು ಗೇರ್ಷೋಮ್. ಅವನು ಹುಟ್ಟಿದಾಗ ಮೋಶೆಯು, “ನಾನು ಪರದೇಶದಲ್ಲಿ ಅಪರಿಚಿತನಾಗಿದ್ದೇನೆ” ಎಂದು ಹೇಳಿ ಆ ಹೆಸರನ್ನು ಇಟ್ಟನು. 4 ಇನ್ನೊಬ್ಬ ಮಗನ ಹೆಸರು ಎಲೀಯೆಜೆರ್. ಇವನು ಹುಟ್ಟಿದಾಗ ಮೋಶೆಯು, “ನನ್ನ ತಂದೆಯ ದೇವರು ನನಗೆ ಸಹಾಯ ಮಾಡಿ ಈಜಿಪ್ಟಿನ ಅರಸನಿಂದ ರಕ್ಷಿಸಿದನು” ಎಂದು ಹೇಳಿ ಆ ಹೆಸರನ್ನು ಇಟ್ಟನು. 5 ಆದ್ದರಿಂದ ಮೋಶೆಯು ಮರುಭೂಮಿಯಲ್ಲಿ ದೇವರ ಬೆಟ್ಟವಾದ ಸೀನಾಯ್ ಬೆಟ್ಟದ ಬಳಿ ತಂಗಿದ್ದಾಗ ಇತ್ರೋನನು ಮೋಶೆಯ ಬಳಿಗೆ ಹೋದನು. ಇತ್ರೋನನ ಜೊತೆಯಲ್ಲಿ ಮೋಶೆಯ ಹೆಂಡತಿ ಮತ್ತು ಅವನ ಇಬ್ಬರು ಗಂಡುಮಕ್ಕಳು ಇದ್ದರು.
6 ಇತ್ರೋನನು ಮೋಶೆಗೆ, “ನಾನು ನಿನ್ನ ಮಾವನಾದ ಇತ್ರೋನ. ನಾನು ನಿನ್ನ ಹೆಂಡತಿಯನ್ನು ಮತ್ತು ಆಕೆಯ ಇಬ್ಬರು ಗಂಡುಮಕ್ಕಳನ್ನು ನಿನ್ನ ಬಳಿಗೆ ಕರೆದುಕೊಂಡು ಬರುತ್ತಿದ್ದೇನೆ” ಎಂಬ ಸಂದೇಶವನ್ನು ಕಳುಹಿಸಿದನು.
7 ಆದ್ದರಿಂದ ಮೋಶೆ ತನ್ನ ಮಾವನನ್ನು ಭೇಟಿಯಾಗಲು ಹೊರಗೆ ಹೋದನು. ಮೋಶೆ ಅವನ ಮುಂದೆ ತಲೆಬಾಗಿ ಅವನಿಗೆ ಮುದ್ದಿಟ್ಟನು. ಅವರಿಬ್ಬರು ಪರಸ್ಪರ ಕ್ಷೇಮ ಸಮಾಚಾರವನ್ನು ವಿಚಾರಿಸಿಕೊಂಡರು. ಬಳಿಕ ಅವರು ಹೆಚ್ಚು ಮಾತಾಡಲು ಮೋಶೆಯ ಡೇರೆಯೊಳಕ್ಕೆ ಹೋದರು. 8 ಯೆಹೋವನು ಇಸ್ರೇಲರಿಗೆ ಮಾಡಿದ ಪ್ರತಿಯೊಂದು ಸಂಗತಿಯನ್ನು ಮೋಶೆ ಇತ್ರೋನನಿಗೆ ಹೇಳಿದನು. ಯೆಹೋವನು ಫರೋಹನಿಗೆ ಮತ್ತು ಈಜಿಪ್ಟಿನವರಿಗೆ ಮಾಡಿದ ಸಂಗತಿಗಳ ಬಗ್ಗೆ ಮೋಶೆಯು ಹೇಳಿದನು. ದಾರಿಯ ಉದ್ದಕ್ಕೂ ತಮಗೆ ಬಂದೊದಗಿದ ಎಲ್ಲಾ ಸಮಸ್ಯೆಗಳ ಬಗ್ಗೆ ಮತ್ತು ತೊಂದರೆ ಬಂದೊದಗಿದ ಪ್ರತಿ ಸಾರಿಯೂ ಯೆಹೋವನು ಇಸ್ರೇಲರನ್ನು ಹೇಗೆ ರಕ್ಷಿಸಿದನೆಂಬುದನ್ನು ಮೋಶೆಯು ತನ್ನ ಮಾವನಿಗೆ ತಿಳಿಸಿದನು.
9 ಯೆಹೋವನು ಇಸ್ರೇಲರಿಗೆ ಮಾಡಿದ ಒಳ್ಳೆಯ ಸಂಗತಿಗಳಿಗಾಗಿಯೂ ಈಜಿಪ್ಟಿನವರಿಂದ ಇಸ್ರೇಲರನ್ನು ಯೆಹೋವನು ಬಿಡುಗಡೆಗೊಳಿಸಿದ್ದಕ್ಕಾಗಿಯೂ ಇತ್ರೋನನು ಬಹಳ ಸಂತೋಷಪಟ್ಟನು. 10 ಇತ್ರೋನನು,
“ಯೆಹೋವನನ್ನು ಸ್ತುತಿಸಿರಿ!
ಆತನು ನಿಮ್ಮನ್ನು ಫರೋಹನಿಂದಲೂ
ಈಜಿಪ್ಟಿನಿಂದಲೂ ರಕ್ಷಿಸಿದನು.
11 ಈಜಿಪ್ಟಿನವರು ತಾವು ಇಸ್ರೇಲರಿಗಿಂತಲೂ ಉತ್ತಮರೆಂದು ಭಾವಿಸಿಕೊಂಡಿದ್ದರು.
ಆದರೆ ಯೆಹೋವನು ಅವರನ್ನು ತಗ್ಗಿಸಿದ್ದರಿಂದ ಎಲ್ಲಾ ದೇವರುಗಳಲ್ಲಿ ಆತನೇ ದೊಡ್ಡವನೆಂದು ಈಗ ನಾನು ತಿಳಿದುಕೊಂಡೆನು”
ಎಂದು ಹೇಳಿದನು.
12 ಇತ್ರೋನನು ದೇವರಿಗೆ ಯಜ್ಞಗಳನ್ನು, ಕಾಣಿಕೆಗಳನ್ನು ಸಮರ್ಪಿಸಿದನು. ಆಗ ಆರೋನನು ಮತ್ತು ಇಸ್ರೇಲರ ಎಲ್ಲಾ ಹಿರಿಯರು ಮೋಶೆಯ ಮಾವನಾದ ಇತ್ರೋನನೊಡನೆ ದೇವರ ಸನ್ನಿಧಿಯಲ್ಲಿ ಊಟಮಾಡಲು ಬಂದರು.
13 ಮರುದಿನ ಮೋಶೆಯು ಜನರಿಗೆ ನ್ಯಾಯನಿರ್ಣಯ ಮಾಡಲು ತನ್ನ ಆಸನದ ಮೇಲೆ ಕುಳಿತುಕೊಂಡನು. ಅಲ್ಲಿ ಬಹಳ ಜನರಿದ್ದರು, ಆದ್ದರಿಂದ ಅವರು ಮುಂಜಾನೆಯಿಂದ ಸಾಯಂಕಾಲದವರೆಗೆ ಅವನ ಸುತ್ತಲೂ ನಿಂತುಕೊಂಡಿದ್ದರು.
14 ಮೋಶೆಯು ಜನರ ನ್ಯಾಯತೀರಿಸುವುದನ್ನು ಇತ್ರೋನನು ನೋಡಿ, “ನೀನು ಯಾಕೆ ಹೀಗೆ ಮಾಡುತ್ತಿರುವೆ? ನೀನೊಬ್ಬನೇ ಯಾಕೆ ನ್ಯಾಯತೀರಿಸಬೇಕು? ಜನರು ದಿನವೆಲ್ಲಾ ನಿನ್ನ ಬಳಿಗೆ ಯಾಕೆ ಬರಬೇಕು?” ಎಂದು ಕೇಳಿದನು.
15 ಆಗ ಮೋಶೆ ತನ್ನ ಮಾವನಿಗೆ, “ಜನರು ನನ್ನ ಬಳಿಗೆ ಬಂದು ದೇವರ ತೀರ್ಮಾನವನ್ನು ಕೇಳಬಯಸುತ್ತಾರೆ. 16 ಅವರೊಳಗೆ ವ್ಯಾಜ್ಯವಿದ್ದರೆ ಅವರು ನನ್ನ ಬಳಿಗೆ ಬರುತ್ತಾರೆ. ಯಾವನು ನ್ಯಾಯವಂತನೆಂದು ನಾನು ತೀರ್ಮಾನಿಸುತ್ತೇನೆ. ಈ ರೀತಿಯಾಗಿ ನಾನು ದೇವರ ಕಟ್ಟಳೆಗಳನ್ನು ಮತ್ತು ಬೋಧನೆಗಳನ್ನು ಜನರಿಗೆ ಬೋಧಿಸುತ್ತೇನೆ” ಅಂದನು.
17 ಆದರೆ ಮೋಶೆಯ ಮಾವನು ಅವನಿಗೆ, “ನೀನು ಹೀಗೆ ಮಾಡುತ್ತಿರುವುದು ಒಳ್ಳೆಯದಲ್ಲ. 18 ಈ ಕೆಲಸ ನೀನೊಬ್ಬನೇ ಮಾಡುವುದು ಬಹಳ ಪ್ರಯಾಸಕರ. ಇದು ನಿನ್ನನ್ನೂ ಆಯಾಸಗೊಳಿಸುತ್ತದೆ; ಜನರನ್ನೂ ಆಯಾಸಗೊಳಿಸುತ್ತದೆ. ನಿನ್ನೊಬ್ಬನಿಂದಲೇ ಈ ಕೆಲಸವನ್ನು ಮಾಡಲಾಗದು. 19 ಕೇಳು, ನಾನು ನಿನಗೆ ಕೆಲವು ಸಲಹೆಗಳನ್ನು ಕೊಡುವೆನು. ಯೆಹೋವನು ನಿನ್ನೊಡನೆ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನೀನು ಮಾಡಬೇಕಾದದ್ದು ಇವೇ: ಜನರ ವ್ಯಾಜ್ಯಗಳನ್ನು ನೀನು ಕೇಳುವುದನ್ನು ಮುಂದುವರಿಸಬೇಕು; ಈ ಸಂಗತಿಗಳ ಬಗ್ಗೆ ನೀನು ದೇವರೊಂದಿಗೆ ಮಾತಾಡುವುದನ್ನೂ ಮುಂದುವರಿಸಬೇಕು; 20 ನೀನು ದೇವರ ಕಟ್ಟಳೆಗಳನ್ನು ಮತ್ತು ಬೋಧನೆಗಳನ್ನು ಜನರಿಗೆ ಬೋಧಿಸಬೇಕು; ನಿಬಂಧನೆಗಳನ್ನು ಉಲ್ಲಂಘಿಸದಂತೆ ಅವರನ್ನು ಎಚ್ಚರಿಸಬೇಕು; ಜೀವಿಸಲು ಸರಿಯಾದ ಮಾರ್ಗವನ್ನು ಅವರಿಗೆ ಬೋಧಿಸಬೇಕು; ಅವರು ಮಾಡಬೇಕಾದದ್ದನ್ನು ಅವರಿಗೆ ತಿಳಿಸಬೇಕು. 21 ಆದರೆ ನೀನು ಜನರೊಳಗೆ ದೇವಭಕ್ತರೂ ಲಂಚಮುಟ್ಟದವರೂ ಆಗಿರುವವರನ್ನು ಆರಿಸಿಕೊಳ್ಳಬೇಕು. ಅವರನ್ನು ಸಾವಿರ ಜನರ ಮೇಲೆಯೂ ನೂರು ಜನರ ಮೇಲೆಯೂ ಐವತ್ತು ಜನರ ಮೇಲೆಯೂ ಹತ್ತು ಜನರ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಬೇಕು. 22 ಈ ಅಧಿಕಾರಿಗಳು ಜನರಿಗೆ ನ್ಯಾಯತೀರಿಸಲಿ. ಬಹಳ ಪ್ರಾಮುಖ್ಯವಾದ ವ್ಯಾಜ್ಯವಿದ್ದರೆ, ತೀರ್ಮಾನಕ್ಕಾಗಿ ಅವರು ನಿನ್ನ ಬಳಿಗೆ ಬರಬಹುದು. ಆದರೆ ಇತರ ವ್ಯಾಜ್ಯಗಳನ್ನು ಅವರೇ ತೀರ್ಮಾನಿಸಿಕೊಳ್ಳಬಹುದು. ಈ ರೀತಿಯಾಗಿ ಮಾಡಿದರೆ, ಅದು ನಿನಗೆ ಸುಲಭವಾಗುವುದು. ಮಾತ್ರವಲ್ಲದೆ, ಈ ಜನರು ನಿನ್ನ ಕೆಲಸವನ್ನು ತಮ್ಮೊಳಗೆ ಹಂಚಿಕೊಳ್ಳುವರು. 23 ನೀನು ಈ ಸಂಗತಿಗಳನ್ನು ಮಾಡಿದರೆ, ಯೆಹೋವನ ಚಿತ್ತವಿದ್ದರೆ, ನೀನು ನಿನ್ನ ಕೆಲಸವನ್ನು ಮಾಡುತ್ತಾ ಮುಂದುವರಿಯಲು ಶಕ್ತನಾಗುವೆ ಮತ್ತು ಅದೇ ಸಮಯದಲ್ಲಿ ಜನರೆಲ್ಲರೂ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮನೆಗೆ ಹೋಗಬಹುದು” ಎಂದು ಹೇಳಿದನು.
24 ಮೋಶೆಯು ತನ್ನ ಮಾವನಾದ ಇತ್ರೋನನು ಹೇಳಿದಂತೆ ಮಾಡಿದನು. 25 ಮೋಶೆಯು ಇಸ್ರೇಲರೊಳಗಿಂದ ನೀತಿವಂತರನ್ನು ಆರಿಸಿಕೊಂಡು ಅವರನ್ನು ಹೀಗೆ ಸಾವಿರ ಜನರ ಮೇಲೆಯೂ ನೂರು ಜನರ ಮೇಲೆಯೂ ಐವತ್ತು ಜನರ ಮೇಲೆಯೂ ಹತ್ತು ಜನರ ಮೇಲೆಯೂ ಅಧಿಕಾರಿಗಳನ್ನಾಗಿ ಮಾಡಿದನು 26 ಈ ಅಧಿಕಾರಿಗಳು ಜನರ ನ್ಯಾಯಾಧಿಪತಿಗಳಾಗಿದ್ದರು. ಜನರು ತಮ್ಮ ವ್ಯಾಜ್ಯಗಳನ್ನು ಈ ಅಧಿಕಾರಿಗಳ ಬಳಿಗೆ ಯಾವಾಗಲೂ ತರಬಹುದಾಗಿತ್ತು. ಮೋಶೆಯು ಬಹು ಪ್ರಾಮುಖ್ಯವಾದ ವ್ಯಾಜ್ಯಗಳನ್ನು ಮಾತ್ರ ತೀರ್ಮಾನಿಸುತ್ತಿದ್ದನು.
27 ಸ್ವಲ್ಪ ಸಮಯದ ನಂತರ ಮೋಶೆಯು ತನ್ನ ಮಾವನಾದ ಇತ್ರೋನನನ್ನು ಬೀಳ್ಕೊಟ್ಟನು; ಇತ್ರೋನನು ತನ್ನ ಸ್ವದೇಶಕ್ಕೆ ಹಿಂತಿರುಗಿಹೋದನು.
ನಿಜವಾದ ಕಾಣಿಕೆ
(ಮಾರ್ಕ 12:41-44)
21 ಕೆಲವು ಐಶ್ವರ್ಯವಂತರು ದೇವಾಲಯದ ಹಣದ ಪೆಟ್ಟಿಗೆಯಲ್ಲಿ ದೇವರಿಗಾಗಿ ತಮ್ಮ ಕಾಣಿಕೆಗಳನ್ನು ಹಾಕುವುದನ್ನು ಯೇಸು ಗಮನಿಸಿದನು. 2 ಅಷ್ಟರಲ್ಲಿ ಒಬ್ಬ ಬಡ ವಿಧವೆಯು ಬಂದು ಎರಡು ಚಿಕ್ಕನಾಣ್ಯಗಳನ್ನು ಪೆಟ್ಟಿಗೆಯಲ್ಲಿ[a] ಹಾಕಿದಳು. 3 ಅದನ್ನು ಕಂಡ ಯೇಸು, “ನಿಮಗೆ ಸತ್ಯವಾಗಿ ಹೇಳುತ್ತೇನೆ. ಈ ಬಡ ವಿಧವೆ ಕೇವಲ ಎರಡು ಚಿಕ್ಕ ತಾಮ್ರದ ನಾಣ್ಯಗಳನ್ನು ಕೊಟ್ಟಳು. ಆದರೆ ಆಕೆ ನಿಜವಾಗಿಯೂ, ಆ ಐಶ್ವರ್ಯವಂತರೆಲ್ಲರಿಗಿಂತ ಹೆಚ್ಚು ಕೊಟ್ಟಳು. 4 ಐಶ್ವರ್ಯವಂತರಿಗೆ ಬೇಕಾದಷ್ಟು ಇದೆ. ಅವರು ಕೇವಲ ತಮಗೆ ಅವಶ್ಯವಿಲ್ಲದ್ದನ್ನು ಕೊಟ್ಟರು. ಈ ಸ್ತ್ರೀ ಬಹಳ ಬಡವಳಾಗಿದ್ದರೂ ತನ್ನಲ್ಲಿ ಇದ್ದದ್ದೆಲ್ಲವನ್ನೂ ಕೊಟ್ಟಳು. ಈಕೆಗೆ ಆ ಹಣದ ಅವಶ್ಯವಿತ್ತು” ಎಂದು ಹೇಳಿದನು.
ದೇವಾಲಯದ ನಾಶನ
(ಮತ್ತಾಯ 24:1-14; ಮಾರ್ಕ 13:1-13)
5 ಶಿಷ್ಯರಲ್ಲಿ ಕೆಲವರು ದೇವಾಲಯದ ಕುರಿತು ಮಾತಾಡುತ್ತಾ, “ಇದು ಅಂದವಾದ ಕಲ್ಲುಗಳಿಂದಲೂ ಹರಕೆಯ ಕೊಡುಗೆಗಳಿಂದಲೂ ಎಷ್ಟೊಂದು ಸುಂದರವಾಗಿದೆ!” ಎಂದರು.
6 ಆದರೆ ಯೇಸು ಅವರಿಗೆ, “ನೀವು ಇಲ್ಲಿ ನೋಡುವಂಥದ್ದೆಲ್ಲವೂ ನಾಶವಾಗುವ ಕಾಲ ಬರುವುದು. ಈ ಕಟ್ಟಡಗಳ ಪ್ರತಿಯೊಂದು ಕಲ್ಲನ್ನು ನೆಲಕ್ಕೆ ಕೆಡವಲಾಗುವುದು. ಇಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲುವುದಿಲ್ಲ!” ಎಂದು ಹೇಳಿದನು.
7 ಶಿಷ್ಯರಲ್ಲಿ ಕೆಲವರು ಯೇಸುವಿಗೆ, “ಗುರುವೇ, ಇವುಗಳೆಲ್ಲಾ ಯಾವಾಗ ಸಂಭವಿಸುತ್ತವೆ? ಆ ಸಮಯವನ್ನು ಯಾವ ಸೂಚನೆಗಳಿಂದ ತಿಳಿದುಕೊಳ್ಳಬೇಕು?” ಎಂದು ಕೇಳಿದರು.
8 ಯೇಸು ಅವರಿಗೆ, “ಎಚ್ಚರಿಕೆಯಾಗಿರಿ! ಮೋಸ ಹೋಗಬೇಡಿರಿ. ನನ್ನ ಹೆಸರನ್ನು ಹೇಳುತ್ತಾ ಅನೇಕರು ಬರುವರು. ಅವರು, ‘ನಾನೇ ಕ್ರಿಸ್ತನು’ ಎಂದೂ, ‘ಸರಿಯಾದ ಸಮಯ ಬಂದಿದೆ’ ಎಂದೂ ಹೇಳುವರು. ಆದರೆ ಅವರನ್ನು ಹಿಂಬಾಲಿಸಬೇಡಿರಿ. 9 ಯುದ್ಧಗಳ ಬಗ್ಗೆ ಮತ್ತು ದಂಗೆಗಳ ಬಗ್ಗೆ ನೀವು ಕೇಳುವಾಗ ಹೆದರಬೇಡಿರಿ. ಇವುಗಳೆಲ್ಲಾ ಮೊದಲು ಸಂಭವಿಸಬೇಕು. ಆದರೂ ಆ ಕೂಡಲೇ ಅಂತ್ಯ ಬರುವುದಿಲ್ಲ” ಎಂದು ಹೇಳಿದನು.
10 ಬಳಿಕ ಯೇಸು ಅವರಿಗೆ, “ಜನಾಂಗಗಳು ಬೇರೆ ಜನಾಂಗಗಳಿಗೆ ವಿರುದ್ಧವಾಗಿ ಹೋರಾಡುವವು. ರಾಜ್ಯಗಳು ಬೇರೆ ರಾಜ್ಯಗಳಿಗೆ ವಿರುದ್ಧವಾಗಿ ಹೋರಾಡುವವು. 11 ಭೀಕರ ಭೂಕಂಪಗಳಾಗುವವು. ಕ್ಷಾಮಗಳೂ ಉಪದ್ರವಗಳೂ ತಲೆದೋರುವವು. ಭಯಂಕರ ಘಟನೆಗಳೂ ಆಕಾಶದಲ್ಲಿ ಅಪೂರ್ವ ಸೂಚನೆಗಳೂ ಕಾಣಿಸಿಕೊಳ್ಳುವವು.
12 “ಆದರೆ ಈ ಎಲ್ಲಾ ಸಂಗತಿಗಳು ಸಂಭವಿಸುವ ಮೊದಲು, ಜನರು ನಿಮ್ಮನ್ನು ಬಂಧಿಸುವರು ಮತ್ತು ಹಿಂಸಿಸುವರು. ಸಭಾಮಂದಿರಗಳಲ್ಲಿ ಜನರು ನಿಮಗೆ ತೀರ್ಪು ನೀಡಿ ಸೆರೆಮನೆಗೆ ಹಾಕುವರು. ರಾಜರ ಮುಂದೆ ಮತ್ತು ರಾಜ್ಯಪಾಲರ ಮುಂದೆ ನಿಮ್ಮನ್ನು ಬಲವಂತವಾಗಿ ನಿಲ್ಲಿಸುವರು. ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರು ನಿಮಗೆ ಹೀಗೆಲ್ಲಾ ಮಾಡುವರು. 13 ಆದರೆ ನನ್ನ ಕುರಿತು ಹೇಳುವುದಕ್ಕೆ ನಿಮಗೆ ಅದು ಸುಸಂದರ್ಭವಾಗಿರುವುದು. 14 ನೀವು ಏನು ಹೇಳಬೇಕೆಂದು ಚಿಂತಿಸಬೇಡಿರಿ. 15 ಏಕೆಂದರೆ ನಾನೇ ನಿಮಗೆ ಜ್ಞಾನವನ್ನು ಕೊಡುತ್ತೇನೆ. ಆದ್ದರಿಂದ ನಿಮ್ಮ ವೈರಿಗಳಲ್ಲಿ ಯಾರೂ ನಿಮ್ಮ ಮಾತಿಗೆ ಪ್ರತ್ಯುತ್ತರವನ್ನು ಕೊಡಲು ಸಾಧ್ಯವಿಲ್ಲ. 16 ನಿಮ್ಮ ತಂದೆತಾಯಿಗಳು, ಸಹೋದರರು, ಸಂಬಂಧಿಕರು ಮತ್ತು ಸ್ನೇಹಿತರು ಸಹ ನಿಮಗೆ ವಿರುದ್ಧವಾಗುವರು. ನಿಮ್ಮಲ್ಲಿ ಕೆಲವರನ್ನು ಅವರು ಕೊಲ್ಲುವರು. 17 ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರೆಲ್ಲರೂ ನಿಮ್ಮನ್ನು ದ್ವೇಷಿಸುವರು. 18 ಆದರೆ ಇವುಗಳಿಂದ ನೀವೇನೂ ನಾಶವಾಗುವುದಿಲ್ಲ. 19 ನೀವು ನಿಮ್ಮ ನಂಬಿಕೆಯಲ್ಲಿ ದೃಢವಾಗಿದ್ದರೆ ನಿಮ್ಮನ್ನು ರಕ್ಷಿಸಿಕೊಳ್ಳುವಿರಿ.
ಜೆರುಸಲೇಮಿನ ನಾಶನ
(ಮತ್ತಾಯ 24:15-21; ಮಾರ್ಕ 13:14-19)
20 “ಜೆರುಸಲೇಮಿನ ಸುತ್ತಲೂ ಸೈನ್ಯಗಳು ಮುತ್ತಿಗೆ ಹಾಕುವುದನ್ನು ನೀವು ನೋಡುವಿರಿ. ಆಗ ಜೆರುಸಲೇಮಿನ ನಾಶನದ ಕಾಲ ಬಂತೆಂದು ನೀವು ತಿಳಿದುಕೊಳ್ಳಿರಿ. 21 ಆ ಕಾಲದಲ್ಲಿ ಜುದೇಯದಲ್ಲಿರುವ ಜನರು ಬೆಟ್ಟಗಳಿಗೆ ಓಡಿಹೋಗಲಿ. ಜೆರುಸಲೇಮಿನಲ್ಲಿರುವ ಜನರು ಬೇಗನೆ ಅಲ್ಲಿಂದ ಪಲಾಯನ ಮಾಡಲಿ. ನೀವು ಪಟ್ಟಣದ ಹತ್ತಿರವಿದ್ದರೂ ಅದರೊಳಗೆ ಹೋಗದಿರಿ! 22 ದೇವರು ತನ್ನ ಜನರನ್ನು ಶಿಕ್ಷಿಸುವ ಕಾಲದ ಬಗ್ಗೆ ಪ್ರವಾದಿಗಳು ಬರೆದಿರುವ ಸಂಗತಿಗಳೆಲ್ಲಾ ಆಗ ನೆರವೇರುತ್ತದೆ. 23 ಆ ಕಾಲದಲ್ಲಿ, ಗರ್ಭಿಣಿ ಸ್ತ್ರೀಯರಿಗೂ ಚಿಕ್ಕ ಕೂಸುಗಳಿರುವವರಿಗೂ ಬಹಳ ಗೋಳಾಟ ಇರುವುದು. ಏಕೆಂದರೆ ಈ ದೇಶವು ಮಹಾವಿಪತ್ತಿಗೆ ಈಡಾಗುವುದು. ದೇವರು ಈ ಜನರ (ಯೆಹೂದ್ಯರ) ವಿಷಯದಲ್ಲಿ ಕೋಪಗೊಂಡಿರುವುದರಿಂದ 24 ಇವರಲ್ಲಿ ಕೆಲವರು ಸೈನಿಕರಿಂದ ಕೊಲ್ಲಲ್ಪಡುವರು. ಇನ್ನು ಕೆಲವರು ಬಂಧಿತರಾಗಿ ಪರದೇಶಕ್ಕೆ ಒಯ್ಯಲ್ಪಡುವರು. ಅನ್ಯದೇಶೀಯರು ತಮ್ಮ ಕಾಲ ಮುಗಿಯುವ ತನಕ ಪರಿಶುದ್ಧ ಪಟ್ಟಣವಾದ ಜೆರುಸಲೇಮಿನಲ್ಲಿ ನಡೆದಾಡುವರು.
ಭಯಪಡಬೇಡಿರಿ
(ಮತ್ತಾಯ 24:29-31; ಮಾರ್ಕ 13:24-27)
25 “ಸೂರ್ಯ, ಚಂದ್ರ ಮತ್ತು ನಕ್ಷತ್ರಗಳಲ್ಲಿ ವಿಚಿತ್ರವಾದ ಸೂಚನೆಗಳು ಕಾಣಿಸಿಕೊಳ್ಳುವವು. ಮೊರೆಯುವ ತೆರೆಗಳ ಹಾಗೂ ಭೋರ್ಗರೆಯುವ ಸಮುದ್ರದ ನಿಮಿತ್ತ ಭೂಮಿಯಲ್ಲಿ ಜನಾಂಗಗಳು ದಿಕ್ಕುತೋಚದೆ ತತ್ತರಿಸಿ ಹೋಗುವವು. 26 ಗ್ರಹಶಕ್ತಿಗಳು ಕದಲುವುದರಿಂದ ಭೂಮಿಯಲ್ಲಿ ಏನೇನು ಸಂಭವಿಸುವುದೋ ಎಂಬ ಭಯದಿಂದ ಮನುಷ್ಯರು ದಿಗ್ಭ್ರಮೆಗೊಳ್ಳುವರು. 27 ಆಗ ಮನುಷ್ಯಕುಮಾರನು ಮಹಾಶಕ್ತಿಯಿಂದಲೂ ಮಹಿಮಾ ಪ್ರಭಾವದಿಂದಲೂ ಮೇಘಾರೂಢನಾಗಿ ಬರುವುದನ್ನು ಜನರು ನೋಡುವರು. 28 ಈ ಸಂಗತಿಗಳು ಸಂಭವಿಸುವುದಕ್ಕೆ ತೊಡಗುವಾಗ ಭಯಪಡಬೇಡಿರಿ. ಮೇಲೆ ನೋಡಿ ಸಂತೋಷಪಡಿರಿ! ಚಿಂತೆಮಾಡಬೇಡಿರಿ. ಸಂತೋಷಪಡಿರಿ, ಏಕೆಂದರೆ ದೇವರು ನಿಮ್ಮನ್ನು ಬಿಡುಗಡೆಗೊಳಿಸುವ ಕಾಲ ಸಮೀಪವಾಗಿದೆ ಎಂಬುದಕ್ಕೆ ಅವು ಸೂಚನೆಯಾಗಿವೆ.”
ಯೇಸುವಿನ ಮಾತುಗಳಿಗೆ ಅಳಿವಿಲ್ಲ
(ಮತ್ತಾಯ 24:32-35; ಮಾರ್ಕ 13:28-31)
29 ಬಳಿಕ ಯೇಸು ಈ ಸಾಮ್ಯವನ್ನು ಹೇಳಿದನು: “ಎಲ್ಲಾ ಮರಗಳಲ್ಲಿ ಅಂಜೂರದ ಮರ ಒಳ್ಳೆಯ ಉದಾಹರಣೆಯಾಗಿದೆ. 30 ಅದು ಚಿಗುರುತ್ತಲೇ, ಬೇಸಿಗೆ ಹತ್ತಿರವಾಗಿದೆ ಎಂದು ನೀವು ತಿಳಿದುಕೊಳ್ಳುವಿರಿ. 31 ಅದೇರೀತಿಯಲ್ಲಿ ಈ ಎಲ್ಲಾ ಸಂಗತಿಗಳು ಸಂಭವಿಸುವುದನ್ನು ನೀವು ನೋಡುವಾಗ, ದೇವರ ರಾಜ್ಯವು ಬಹುಬೇಗನೆ ಬರುತ್ತದೆ ಎಂದು ತಿಳಿದುಕೊಳ್ಳುವಿರಿ.
32 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಈ ಕಾಲದ ಜನರು ಇನ್ನೂ ಜೀವಿಸುತ್ತಿರುವಾಗ ಈ ಸಂಗತಿಗಳೆಲ್ಲಾ ಸಂಭವಿಸುವವು! 33 ಭೂಮ್ಯಾಕಾಶಗಳು ನಾಶವಾಗುವವು; ಆದರೆ ನಾನು ಹೇಳಿದ ಮಾತುಗಳು ಎಂದಿಗೂ ನಾಶವಾಗುವುದಿಲ್ಲ!
ಎಲ್ಲಾ ಸಮಯದಲ್ಲೂ ಸಿದ್ಧರಾಗಿರಿ
34 “ಎಚ್ಚರಿಕೆ! ತಿನ್ನುವುದರಲ್ಲಿಯೂ ಕುಡಿದು ಮತ್ತರಾಗುವುದರಲ್ಲಿಯೂ ಪ್ರಾಪಂಚಿಕ ಚಿಂತೆಗಳಲ್ಲಿಯೂ ಮಗ್ನರಾಗಿರಬೇಡಿರಿ. ಇಲ್ಲವಾದರೆ, ನಿಮ್ಮ ಹೃದಯಗಳು ಭಾರವಾಗಿರುವಾಗಲೇ ಅಂತ್ಯವು ಫಕ್ಕನೆ ಬಂದೀತು. 35 ಆ ದಿವಸವು ಭೂನಿವಾಸಿಗಳೆಲ್ಲರಿಗೂ ವಿಸ್ಮಯಕರವಾಗಿರುವುದು. 36 ಆದ್ದರಿಂದ ಎಲ್ಲಾ ಸಮಯದಲ್ಲಿಯೂ ಸಿದ್ಧರಾಗಿರಿ. ನಡೆಯಲಿರುವ ಈ ಎಲ್ಲಾ ಸಂಗತಿಗಳನ್ನು ಎದುರಿಸಿ ಸುರಕ್ಷಿತವಾಗಿ ಮುಂದುವರಿಯಲು ಮತ್ತು ಮನುಷ್ಯಕುಮಾರನ ಮುಂದೆ ನಿಲ್ಲಲು ಬೇಕಾದ ಶಕ್ತಿಗಾಗಿ ಪ್ರಾರ್ಥಿಸಿರಿ.”
37 ಯೇಸು ಹಗಲೆಲ್ಲಾ ದೇವಾಲಯದಲ್ಲಿ ಜನರಿಗೆ ಉಪದೇಶಿಸುತ್ತಿದ್ದನು. ರಾತ್ರಿಯಲ್ಲಾದರೋ ಪಟ್ಟಣದ ಹೊರಗಿದ್ದ ಆಲಿವ್ ಮರಗಳ ಗುಡ್ಡದ ಮೇಲೆ ಇರುತ್ತಿದ್ದನು. 38 ಪ್ರತಿ ಮುಂಜಾನೆ, ಜನರೆಲ್ಲರೂ ಬೇಗನೆ ಎದ್ದು ದೇವಾಲಯದಲ್ಲಿ ಯೇಸುವಿನ ಉಪದೇಶವನ್ನು ಕೇಳುವುದಕ್ಕೆ ಹೋಗುತ್ತಿದ್ದರು.
36 ಎಲೀಹು ಮಾತನ್ನು ಮುಂದುವರಿಸಿ ಹೀಗೆಂದನು:
2 “ಯೋಬನೇ, ಇನ್ನು ಸ್ವಲ್ಪಹೊತ್ತು ನನ್ನೊಂದಿಗೆ ತಾಳ್ಮೆಯಿಂದಿರು.
ದೇವರ ಪರವಾಗಿ ಹೇಳಬೇಕಾಗಿರುವ ಇನ್ನೂ ಕೆಲವು ಮಾತುಗಳಿವೆ.
3 ನಾನು ಜ್ಞಾನವನ್ನು ಬಹುದೂರದಿಂದ ಪಡೆದುಕೊಂಡಿದ್ದೇನೆ.
ನನ್ನ ಸೃಷ್ಟಿಕರ್ತನಾದ ದೇವರು ನ್ಯಾಯವಂತನೆಂದು ನಿರೂಪಿಸುವೆ.
4 ಯೋಬನೇ, ನಾನು ಹೇಳುವ ಪ್ರತಿಯೊಂದು ಮಾತೂ ಸತ್ಯ.
ನಿನ್ನ ಬಳಿಯಲ್ಲಿ ಜ್ಞಾನಪೂರ್ಣನೊಬ್ಬನು ಇದ್ದಾನೆ.
5 “ದೇವರು ಮಹಾ ಶಕ್ತಿಶಾಲಿಯಾಗಿದ್ದರೂ ಜನರನ್ನು ತಿರಸ್ಕರಿಸುವುದಿಲ್ಲ.
ದೇವರು ಮಹಾ ಬಲಶಾಲಿಯೂ ಹೌದು, ಮಹಾ ಜ್ಞಾನಿಯೂ ಹೌದು!
6 ದೇವರು ದುಷ್ಟರನ್ನು ಜೀವಿಸಲು ಅವಕಾಶ ಕೊಡುವುದಿಲ್ಲ.
ಆತನು ಬಡಜನರಿಗೆ ಯಾವಾಗಲೂ ನ್ಯಾಯದೊರಕಿಸುವನು.
7 ನೀತಿವಂತರನ್ನು ದೇವರು ಪರಿಪಾಲಿಸುವನು;
ಆತನು ಒಳ್ಳೆಯವರನ್ನು ಅಧಿಪತಿಗಳನ್ನಾಗಿ ನೇಮಿಸುವನು;
ಅವರಿಗೆ ಸದಾಕಾಲ ಗೌರವ ದೊರೆಯುವಂತೆ ಮಾಡುವನು.
8 ಅವರು ಒಂದುವೇಳೆ ದಂಡನೆಗೆ ಒಳಗಾಗಿ ಸರಪಣಿಗಳಿಂದ ಬಂಧಿಸಲ್ಪಟ್ಟು
ಸಂಕಟಪಡುತ್ತಿದ್ದರೆ,
9 ಆತನು ಅವರ ದುಷ್ಕೃತ್ಯವನ್ನೂ ಪಾಪವನ್ನೂ ಗರ್ವವನ್ನೂ
ಅವರಿಗೆ ತಿಳಿಯಪಡಿಸುವನು.
10 ಇದಲ್ಲದೆ ತನ್ನ ಎಚ್ಚರಿಕೆಯ ಮಾತಿಗೆ ಕಿವಿಗೊಡುವಂತೆ ಬಲವಂತ ಮಾಡುವನು;
ಪಾಪಮಾಡಕೂಡದೆಂದು ಆಜ್ಞಾಪಿಸುವನು.
11 ಅವರು ದೇವರಿಗೆ ಕಿವಿಗೊಟ್ಟು ಆತನಿಗೆ ವಿಧೇಯರಾದರೆ, ಆತನು ಅವರನ್ನು ಅಭಿವೃದ್ಧಿಪಡಿಸುವನು;
ಆಗ ಅವರ ಜೀವನವು ಸುಖಕರವಾಗುವುದು.
12 ಆದರೆ ಅವರು ದೇವರಿಗೆ ವಿಧೇಯರಾಗದಿದ್ದರೆ ನಾಶವಾಗುವರು;
ಮೂಢರಂತೆ ಸಾಯುವರು.
13 “ದೇವರ ಬಗ್ಗೆ ಲಕ್ಷಿಸದವರು ಯಾವಾಗಲೂ ಕೋಪದಿಂದಿರುವರು.
ದೇವರು ಅವರನ್ನು ದಂಡಿಸಿದರೂ ಅವರು ದೇವರಿಗೆ ಮೊರೆಯಿಡುವುದಿಲ್ಲ.
14 ಅವರು ಯೌವನ ಪ್ರಾಯದಲ್ಲೇ
ಪುರುಷಗಾಮಿಗಳಂತೆ ಸಾಯುವರು.
15 ಆದರೆ ದೇವರು ದೀನರನ್ನು ವಿಪತ್ತುಗಳಿಂದ ಬಿಡಿಸುವನು.
ಆ ವಿಪತ್ತುಗಳಿಂದ ದೇವರು ಜನರನ್ನು ಎಚ್ಚರಗೊಳಿಸಿ ತನಗೆ ಕಿವಿಗೊಡುವಂತೆ ಮಾಡುವನು.
16 “ಯೋಬನೇ, ದೇವರು ನಿನ್ನನ್ನು ಕೇಡಿನಿಂದ ತಪ್ಪಿಸಿ
ಸುರಕ್ಷಿತವೂ ಅಭಿವೃದ್ಧಿಕರವೂ ಆಗಿರುವ ಸ್ಥಳಕ್ಕೆ ಕರೆದುಕೊಂಡು ಬಂದು
ನಿನಗೆ ಊಟವನ್ನು ಯಥೇಚ್ಛವಾಗಿ ಬಡಿಸಲು ಇಷ್ಟಪಡುತ್ತಾನೆ.
17 ಯೋಬನೇ, ಈಗಲಾದರೋ ನೀನು ದೋಷಿಯೆಂದು ನಿರ್ಣಯಿಸಲ್ಪಟ್ಟಿರುವೆ; ದುಷ್ಟನಂತೆ ದಂಡಿಸಲ್ಪಟ್ಟಿರುವೆ.
18 ಯೋಬನೇ, ಕೋಪವು ನಿನ್ನನ್ನು ಮೋಸಗೊಳಿಸದಿರಲಿ;
ಹಣವು ನಿನ್ನ ಮನಸ್ಸನ್ನು ಮಾರ್ಪಡಿಸದಿರಲಿ, ನಿನ್ನನ್ನು ನಾಶನಕ್ಕೆ ನಡೆಸದಿರಲಿ.
19 ನಿನ್ನ ಎಲ್ಲಾ ಹಣವು ಈಗ ನಿನಗೆ ಸಹಾಯ ಮಾಡಲಾರದು;
ನಿನ್ನಲ್ಲಿರುವ ಶಕ್ತಿಸಾಮರ್ಥವು ಸಹ ನಿನಗೆ ಸಹಾಯ ಮಾಡಲಾರದು.
20 ಜನಾಂಗಗಳು ಇದ್ದಕ್ಕಿದ್ದಂತೆ
ಕಾಣೆಯಾಗುವ ರಾತ್ರಿಗಾಗಿ ಬಯಸಬೇಡ.
21 ಯೋಬನೇ, ನೀನು ಬಹಳ ಸಂಕಟಪಟ್ಟಿರುವೆ.
ಆದ್ದರಿಂದ ಕೆಡುಕನ್ನು ಆರಿಸಿಕೊಳ್ಳಬೇಡ; ತಪ್ಪು ಮಾಡದಂತೆ ಎಚ್ಚರಿಕೆಯಾಗಿರು.
22 “ಇಗೋ, ದೇವರು ತನ್ನ ಶಕ್ತಿಯಿಂದ ಮಹಾಕಾರ್ಯವನ್ನು ಮಾಡುವನು!
ಆತನು ಎಲ್ಲರಿಗೂ ಅತ್ಯಂತ ದೊಡ್ಡ ಉಪದೇಶಕನಾಗಿದ್ದಾನೆ.
23 ದೇವರಿಗೆ ಕೆಲಸವನ್ನು ನೇಮಿಸಲು ಯಾರಿಗೆ ಸಾಧ್ಯ?
ಆತನಿಗೆ, ‘ನೀನು ತಪ್ಪನ್ನು ಮಾಡಿರುವೆ’ ಎಂದು ಹೇಳಲು ಯಾರಿಗೆ ಸಾಧ್ಯ?
24 ದೇವರನ್ನು ಆತನ ಕಾರ್ಯಗಳಿಗಾಗಿ ಕೊಂಡಾಡಲು ಮರೆಯಬೇಡ.
ಜನರು ಆತನನ್ನು ಕುರಿತು ಅನೇಕ ಸುತ್ತಿಗೀತೆಗಳನ್ನು ಬರೆದಿದ್ದಾರೆ.
25 ಪ್ರತಿಯೊಬ್ಬನೂ ದೇವರ ಕಾರ್ಯವನ್ನು ನೋಡಬಲ್ಲನು.
ದೂರದೇಶಗಳ ಜನರು ಸಹ ಆತನು ಕಾರ್ಯವನ್ನು ನೋಡಬಲ್ಲರು.
26 ಹೌದು, ದೇವರೇ ಮಹೋನ್ನತನು.
ಆತನ ಮಹತ್ವವನ್ನು ನಾವು ಅರ್ಥಮಾಡಿಕೊಳ್ಳಲಾರೆವು.
ಆತನು ಎಂದಿನಿಂದ ಜೀವಿಸಿರುವನೋ ನಮಗೆ ತಿಳಿಯದು.
27 “ದೇವರು ಭೂಮಿಯ ನೀರನ್ನು ಹಬೆಯ ರೂಪದಲ್ಲಿ ಮೇಲಕ್ಕೆ ಕೊಂಡೊಯ್ದು
ಅದನ್ನು ಮಂಜನ್ನಾಗಿಯೂ ಮಳೆಯನ್ನಾಗಿಯೂ ಪರಿವರ್ತಿಸುತ್ತಾನೆ.
28 ಆದ್ದರಿಂದ ಮೋಡಗಳು ನೀರನ್ನು ಸುರಿಯಮಾಡುತ್ತವೆ;
ಅನೇಕರ ಮೇಲೆ ಮಳೆಯು ಸುರಿಯುತ್ತದೆ.
29 ದೇವರು ಮೋಡಗಳನ್ನು ಹರಡುವ ಬಗೆಯನ್ನಾಗಲಿ
ಆಕಾಶದಲ್ಲಿ ಗುಡುಗು ಗರ್ಜಿಸುವ ಬಗೆಯನ್ನಾಗಲಿ ಯಾವನೂ ಅರ್ಥಮಾಡಿಕೊಳ್ಳಲಾರನು.
30 ಇಗೋ, ದೇವರು ತನ್ನ ಪ್ರಕಾಶವನ್ನು ಆಕಾಶದಲ್ಲೆಲ್ಲಾ ಹರಡಿ
ಸಮುದ್ರದ ಆಳವಾದ ಭಾಗಗಳನ್ನು ಬೆಳಕಿನಿಂದ ತುಂಬಿಸಿದ್ದಾನೆ.
31 ಜನಾಂಗಗಳನ್ನು ಹತೋಟಿಯಲ್ಲಿಡುವುದಕ್ಕಾಗಿಯೂ
ಬೇಕಾದಷ್ಟು ಆಹಾರವನ್ನು ಕೊಡುವುದಕ್ಕಾಗಿಯೂ ದೇವರು ಅವುಗಳನ್ನು ಉಪಯೋಗಿಸುವನು.
32 ದೇವರು ತನ್ನ ಕೈಗಳಲ್ಲಿ ಸಿಡಿಲನ್ನು ಹಿಡಿದುಕೊಂಡು ಅದಕ್ಕೆ ಆಜ್ಞಾಪಿಸಲು
ಅದು ಆತನ ಚಿತ್ತಕ್ಕನುಸಾರವಾಗಿ ಹೊಡೆಯುವುದು.
33 ಬಿರುಗಾಳಿಯು ಬರುತ್ತಿದೆಯೆಂದು ಗುಡುಗು ಎಚ್ಚರಿಕೆ ನೀಡುತ್ತದೆ;
ಬಿರುಗಾಳಿ ಬರುತ್ತಿರುವುದು ದನಕರುಗಳಿಗೂ ಸಹ ಗೊತ್ತಾಗುವುದು.
6 ನಾವು ದೇವರ ಜೊತೆಕೆಲಸದವರಾಗಿದ್ದೇವೆ. ಆದ್ದರಿಂದ ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ನೀವು ದೇವರಿಂದ ಹೊಂದಿಕೊಂಡ ಕೃಪೆಯು ವ್ಯರ್ಥವಾಗದಂತೆ ನೋಡಿಕೊಳ್ಳಿ. 2 ದೇವರು ಹೀಗೆನ್ನುತ್ತಾನೆ:
“ಸುಪ್ರಸನ್ನತೆಯ ಕಾಲದಲ್ಲಿ ನಾನು ನಿನಗೆ ಕಿವಿಗೊಟ್ಟೆನು,
ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯ ಮಾಡಿದೆನು.”(A)
ಇದೇ ಆ “ಸುಪ್ರಸನ್ನತೆಯ ಕಾಲ.” ಇದೇ ಆ “ರಕ್ಷಣೆಯ ದಿನ.”
3 ನಮ್ಮ ಸೇವೆಯು ನಿಂದೆಗೆ ಒಳಗಾಗಬಾರದೆಂದು ನಾವು ಯಾರಿಗೂ ತೊಂದರೆ ಮಾಡುವುದಿಲ್ಲ. 4 ಆದರೆ ಪ್ರತಿಯೊಂದು ವಿಷಯದಲ್ಲಿಯೂ ನಾವು ದೇವರ ಸೇವಕರೆಂಬುದನ್ನು ತೋರ್ಪಡಿಸುತ್ತೇವೆ. ನಾವು ಸಂಕಟಗಳಲ್ಲಿಯೂ ಕೊರತೆಗಳಲ್ಲಿಯೂ ಇಕ್ಕಟ್ಟುಗಳಲ್ಲಿಯೂ 5 ಪೆಟ್ಟುಗಳಲ್ಲಿಯೂ ಸೆರೆಮನೆಗಳಲ್ಲಿಯೂ ಕಲಹಗಳಲ್ಲಿಯೂ ಕಷ್ಟವಾದ ಕೆಲಸಗಳಲ್ಲಿಯೂ ನಿದ್ದೆಗೇಡುಗಳಲ್ಲಿಯೂ ಉಪವಾಸಗಳಲ್ಲಿಯೂ ಬಹು ತಾಳ್ಮೆಯನ್ನು ತೋರುತ್ತೇವೆ. 6 ನಾವು ದೇವರ ಸೇವಕರೆಂಬುದನ್ನು ನಮ್ಮ ತಿಳುವಳಿಕೆಯಿಂದಲೂ ತಾಳ್ಮೆಯಿಂದಲೂ ಕನಿಕರದಿಂದಲೂ ಮತ್ತು ಪರಿಶುದ್ಧ ಜೀವಿತದಿಂದಲೂ ತೋರ್ಪಡಿಸಿದ್ದೇವೆ. ನಾವು ಇದನ್ನು ಪವಿತ್ರಾತ್ಮನಿಂದಲೂ ನಿಜವಾದ ಪ್ರೀತಿಯಿಂದಲೂ 7 ಸತ್ಯವನ್ನು ಹೇಳುವುದರಿಂದಲೂ ದೇವರ ಶಕ್ತಿಯಿಂದಲೂ ತೋರ್ಪಡಿಸುತ್ತೇವೆ. ಪ್ರತಿಯೊಂದರ ವಿರೋಧವಾಗಿ ನಮ್ಮನ್ನು ಸಂರಕ್ಷಿಸಿಕೊಳ್ಳಲು ನಮ್ಮ ಒಳ್ಳೆಯ ಜೀವಿತವನ್ನೇ ಉಪಯೋಗಿಸುತ್ತೇವೆ.
8 ಕೆಲವರು ನಮ್ಮನ್ನು ಸನ್ಮಾನಿಸುತ್ತಾರೆ; ಇನ್ನು ಕೆಲವರು ನಮಗೆ ಅವಮಾನ ಮಾಡುತ್ತಾರೆ. ಕೆಲವರು ನಮ್ಮ ಬಗ್ಗೆ ಒಳ್ಳೆಯ ವಿಷಯಗಳನ್ನು ಹೇಳುತ್ತಾರೆ; ಇನ್ನು ಕೆಲವರು ನಮ್ಮ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳುತ್ತಾರೆ. ಕೆಲವರು ನಮ್ಮನ್ನು ಸುಳ್ಳುಗಾರರೆನ್ನುತ್ತಾರೆ, ಆದರೆ ನಾವು ಸತ್ಯವನ್ನೇ ಹೇಳುತ್ತೇವೆ. 9 ನಾವು ಪ್ರಸಿದ್ಧರಾಗಿದ್ದರೂ ಕೆಲವರು ನಮ್ಮನ್ನು ಅಪ್ರಸಿದ್ಧರಂತೆ ಕಾಣುತ್ತಾರೆ. ನಾವು ಸಾಯುವಂತಿದ್ದರೂ ಬದುಕಿದ್ದೇವೆ; ಶಿಕ್ಷಿಸಲ್ಪಟ್ಟರೂ ಕೊಲ್ಲಲ್ಪಡಲಿಲ್ಲ; 10 ದುಃಖಿತರಂತೆ ಕಂಡರೂ ಯಾವಾಗಲೂ ಉಲ್ಲಾಸಿಸುವವರಾಗಿದ್ದೇವೆ; ಬಡವರಂತೆ ಕಂಡರೂ ಅನೇಕರನ್ನು ನಂಬಿಕೆಯಲ್ಲಿ ಐಶ್ವರ್ಯವಂತರನ್ನಾಗಿ ಮಾಡುತ್ತಿದ್ದೇವೆ; ಏನೂ ಇಲ್ಲದವರಂತೆ ಕಂಡರೂ ವಾಸ್ತವವಾಗಿ ಎಲ್ಲವನ್ನೂ ಹೊಂದಿದವರಾಗಿದ್ದೇವೆ.
11 ಕೊರಿಂಥದಲ್ಲಿರುವ ನಿಮ್ಮೊಂದಿಗೆ ಬಿಚ್ಚುಮನಸ್ಸಿನಿಂದ ಮಾತಾಡಿದ್ದೇವೆ. ನಮ್ಮ ಹೃದಯಗಳನ್ನು ನಿಮ್ಮ ಮುಂದೆ ತೆರೆದಿಟ್ಟಿದ್ದೇವೆ. 12 ನಿಮ್ಮ ಮೇಲೆ ನಮಗಿರುವ ಪ್ರೀತಿಯು ನಿಂತು ಹೋಗಿಲ್ಲ. ಆದರೆ ನಮ್ಮ ಮೇಲೆ ನಿಮಗಿದ್ದ ಪ್ರೀತಿಯೇ ನಿಂತು ಹೋಗಿದೆ. 13 ನೀವು ನನ್ನ ಮಕ್ಕಳೆಂಬಂತೆ ನಾನು ನಿಮ್ಮೊಂದಿಗೆ ಮಾತಾಡುತ್ತಿದ್ದೇನೆ. ನಾವು ತೆರೆದಂತೆ ನೀವು ಸಹ ನಿಮ್ಮ ಹೃದಯಗಳನ್ನು ತೆರೆಯಿರಿ.
ಅವಿಶ್ವಾಸಿಗಳ ಮಧ್ಯದಲ್ಲಿ ಜೀವಿಸುವುದರ ಬಗ್ಗೆ ಎಚ್ಚರಿಕೆ
14 ಕ್ರಿಸ್ತನಂಬಿಕೆಯಿಲ್ಲದ ಜನರಿಗೂ ನಿಮಗೂ ವ್ಯತ್ಯಾಸವಿದೆ. ಆದ್ದರಿಂದ ನೀವು ಅವರೊಂದಿಗೆ ಸೇರಬೇಡಿ. ಒಳ್ಳೆಯದು ಮತ್ತು ಕೆಟ್ಟದು ಒಟ್ಟಾಗಿ ಸೇರಲು ಸಾಧ್ಯವಿಲ್ಲ. ಬೆಳಕು ಕತ್ತಲೆಯೊಡನೆ ಅನ್ಯೋನ್ಯವಾಗಿರಲು ಸಾಧ್ಯವೇ? 15 ಕ್ರಿಸ್ತನೂ ಸೈತಾನನೂ ಅನ್ಯೋನ್ಯವಾಗಿರಲು ಸಾಧ್ಯವೇ? ವಿಶ್ವಾಸಿಗಳಿಗೂ ಅವಿಶ್ವಾಸಿಗಳಿಗೂ ಪಾಲುಗಾರಿಕೆಯೇನು? 16 ದೇವರ ಆಲಯವು ವಿಗ್ರಹಗಳೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲು ಸಾಧ್ಯವೇ? ನಾವು ಜೀವಸ್ವರೂಪನಾದ ದೇವರ ಆಲಯವಾಗಿದ್ದೇವೆ. ದೇವರು ಹೇಳಿದಂತೆ:
“ನಾನು ಅವರೊಂದಿಗೆ ವಾಸಿಸುವೆನು; ಅವರೊಂದಿಗೆ ನಡೆಯುವೆನು;
ಅವರ ದೇವರಾಗಿರುವೆನು; ಅವರು ನನ್ನ ಜನರಾಗಿರುವರು.”(B)
17 “ಆದ್ದರಿಂದ ಆ ಜನರನ್ನು ಬಿಟ್ಟು ಹೊರಬನ್ನಿರಿ;
ಅವರಿಂದ ಬೇರ್ಪಡಿರಿ ಎನ್ನುತ್ತಾನೆ ಪ್ರಭುವು.
ಅಶುದ್ಧವಾದ ಯಾವುದನ್ನೂ ಮುಟ್ಟಬೇಡಿ,
ಆಗ ನಾನು ನಿಮ್ಮನ್ನು ಸ್ವೀಕರಿಸಿಕೊಳ್ಳುವೆನು.”(C)
18 “ನಾನು ನಿಮ್ಮ ತಂದೆಯಾಗಿರುವೆನು
ಮತ್ತು ನೀವು ನನ್ನ ಪುತ್ರಪುತ್ರಿಯರಾಗುವಿರಿ ಎನ್ನುತ್ತಾನೆ ಸರ್ವಶಕ್ತನಾದ ಪ್ರಭುವು.”(D)
Kannada Holy Bible: Easy-to-Read Version. All rights reserved. © 1997 Bible League International