M’Cheyne Bible Reading Plan
13 ಬಳಿಕ ಯೆಹೋವನು ಮೋಶೆಗೆ, 2 “ಇಸ್ರೇಲರಲ್ಲಿ ಹುಟ್ಟಿದ ಚೊಚ್ಚಲು ಗಂಡುಮಕ್ಕಳೆಲ್ಲಾ ನನಗೆ ಮೀಸಲಾಗಿರಬೇಕು; ಪ್ರತಿಯೊಬ್ಬ ಚೊಚ್ಚಲು ಮಗನು ನನ್ನವನೇ. ಪ್ರತಿಯೊಂದು ಚೊಚ್ಚಲು ಪಶುವು ನನ್ನದೇ” ಎಂದು ಹೇಳಿದನು.
3 ಮೋಶೆಯು ಜನರಿಗೆ, “ನೀವು ಈಜಿಪ್ಟಿನ ಗುಲಾಮತನದಿಂದ ಬಿಡುಗಡೆಯಾದ ಈ ದಿನವನ್ನು ಜ್ಞಾಪಕಮಾಡಿಕೊಳ್ಳಿರಿ. ಆದರೆ ಈ ದಿನದಲ್ಲಿ ಯೆಹೋವನು ತನ್ನ ಮಹಾಶಕ್ತಿಯಿಂದ ನಿಮ್ಮನ್ನು ಸ್ವತಂತ್ರರನ್ನಾಗಿ ಮಾಡಿದನು. ನೀವು ಹುಳಿಯಿರುವ ರೊಟ್ಟಿಯನ್ನು ತಿನ್ನಬಾರದು. 4 ಅಬೀಬ್ ತಿಂಗಳಿನ ಈ ದಿನದಲ್ಲಿ ನೀವು ಈಜಿಪ್ಟನ್ನು ಬಿಟ್ಟು ಹೊರಟಿರಿ. 5 ಆಗ ಯೆಹೋವನು ಒಂದು ವಿಶೇಷ ವಾಗ್ದಾನವನ್ನು ನಿಮ್ಮ ಪೂರ್ವಿಕರಿಗೆ ಮಾಡಿದನು. ಕಾನಾನ್ಯರು, ಹಿತ್ತಿಯರು, ಅಮೋರಿಯರು, ಹಿವ್ವಿಯರು ಮತ್ತು ಯೆಬೂಸಿಯರು ವಾಸಿಸುವ ಸಮೃದ್ಧಿಕರವಾದ ದೇಶವನ್ನು ನಿಮಗೆ ಕೊಡುವುದಾಗಿ ಯೆಹೋವನು ವಾಗ್ದಾನ ಮಾಡಿದನು. ಆತನು ನಿಮಗೆ ಆ ದೇಶವನ್ನು ಕೊಟ್ಟಾಗ ಪ್ರತಿವರ್ಷದ ಮೊದಲನೆಯ ತಿಂಗಳ ಈ ದಿನವನ್ನು ಆರಾಧನೆಯ ವಿಶೇಷ ದಿನವನ್ನಾಗಿ ಇಟ್ಟುಕೊಳ್ಳಬೇಕು.
6 “ಏಳು ದಿನಗಳವರೆಗೆ ನೀವು ಕೇವಲ ಹುಳಿಯಿಲ್ಲದ ರೊಟ್ಟಿಯನ್ನೇ ತಿನ್ನಬೇಕು. ಏಳನೆಯ ದಿನದಲ್ಲಿ ಯೊಹೋವನ ಘನತೆಗಾಗಿ ಒಂದು ದೊಡ್ಡ ಹಬ್ಬ ಮಾಡಬೇಕು. 7 ಆದ್ದರಿಂದ ಹುಳಿಯಿರುವ ರೊಟ್ಟಿಯನ್ನು ಏಳು ದಿನಗಳವರೆಗೆ ತಿನ್ನಬಾರದು. ನಿಮ್ಮ ದೇಶದಲ್ಲಿ ಹುಳಿಯಿರುವ ರೊಟ್ಟಿ ಇರಲೇಕೂಡದು. 8 ಈ ದಿನದಲ್ಲಿ ನೀವು ನಿಮ್ಮ ಮಕ್ಕಳಿಗೆ, ‘ಯೆಹೋವನು ನಮ್ಮನ್ನು ಈಜಿಪ್ಟಿನಿಂದ ಬಿಡಿಸಿಕೊಂಡು ಬಂದದ್ದರಿಂದ ನಾವು ಈ ಹಬ್ಬವನ್ನು ಮಾಡುತ್ತಿದ್ದೇವೆ’ ಎಂದು ಹೇಳಬೇಕು.
9 “ಈ ಹಬ್ಬವು ನಿಮ್ಮ ಕೈಗಳಲ್ಲಿ ಜ್ಞಾಪಕಪಟ್ಟಿಯಂತಿದ್ದು ಯೆಹೋವನು ತನ್ನ ಮಹಾಶಕ್ತಿಯಿಂದ ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿದ್ದನ್ನು ಮತ್ತು ನಿಮಗೆ ಆತನು ನೀಡಿದ ಉಪದೇಶಗಳನ್ನು ನೆನಪಿಗೆ ತರುತ್ತದೆ. 10 ಆದ್ದರಿಂದ ಪ್ರತಿವರ್ಷ ನಿಯಮಿತವಾದ ಕಾಲದಲ್ಲಿ ನೀವು ಈ ಹಬ್ಬವನ್ನು ಆಚರಿಸಬೇಕು.
11 “ಯೆಹೋವನು ನಿಮಗೆ ಕೊಡುವುದಾಗಿ ವಾಗ್ದಾನ ಮಾಡಿದ ದೇಶಕ್ಕೆ ನಿಮ್ಮನ್ನು ನಡಿಸುವನು. ಈಗ ಅಲ್ಲಿ ಕಾನಾನ್ಯರು ವಾಸವಾಗಿದ್ದಾರೆ. ಆದರೆ ದೇವರು ಆ ದೇಶವನ್ನು ನಿಮಗೆ ಕೊಡುವುದಾಗಿ ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದನು. ದೇವರು ಆ ದೇಶವನ್ನು ನಿಮಗೆ ಕೊಟ್ಟನಂತರ 12 ನೀವು ನಿಮ್ಮ ಚೊಚ್ಚಲು ಗಂಡುಮಕ್ಕಳನ್ನು ಆತನಿಗಾಗಿ ಮೀಸಲಿಡಬೇಕು. 13 ಚೊಚ್ಚಲು ಕತ್ತೆಮರಿಯನ್ನು ನೀವು ಯೆಹೋವನಿಂದ ಬಿಡಿಸಿಕೊಳ್ಳಬೇಕೆಂದಿದ್ದರೆ ಅದಕ್ಕೆ ಬದಲಾಗಿ ಒಂದು ಕುರಿಮರಿಯನ್ನು ಕೊಡಬೇಕು. ಕತ್ತೆಮರಿಯನ್ನು ಬಿಡಿಸಿಕೊಳ್ಳಲು ಇಷ್ಟಪಡದಿದ್ದರೆ, ಅದರ ಕುತ್ತಿಗೆಯನ್ನು ಮುರಿದು ಕೊಲ್ಲಬೇಕು. ಆದರೆ ಚೊಚ್ಚಲು ಗಂಡುಮಕ್ಕಳನ್ನೆಲ್ಲಾ ಯೆಹೋವನಿಂದ ಬಿಡಿಸಿಕೊಳ್ಳಲೇಬೇಕು.
14 “ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು, ‘ನೀವು ಹೀಗೇಕೆ ಮಾಡುತ್ತೀರಿ?’ ಎಂದು ಕೇಳುವಾಗ ನೀವು, ‘ಯೆಹೋವನು ನಮ್ಮನ್ನು ಈಜಿಪ್ಟಿನಿಂದ ತನ್ನ ಮಹಾಶಕ್ತಿಯಿಂದ ರಕ್ಷಿಸಿದನು. ನಾವು ಅಲ್ಲಿ ಗುಲಾಮರಾಗಿದ್ದೆವು, ಆದರೆ ಯೆಹೋವನು ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದನು. 15 ಈಜಿಪ್ಟಿನಲ್ಲಿ ಫರೋಹನು ತನ್ನ ಹೃದಯವನ್ನು ಕಠಿಣಪಡಿಸಿಕೊಂಡು ನಮ್ಮನ್ನು ಕಳುಹಿಸಿಕೊಡಲಿಲ್ಲ. ಆಗ ಯೆಹೋವನು ಆ ದೇಶದ ಚೊಚ್ಚಲು ಗಂಡುಮಕ್ಕಳನ್ನೆಲ್ಲಾ ಸಂಹರಿಸಿದನು. (ಯೆಹೋವನು ಚೊಚ್ಚಲು ಪಶುಗಳನ್ನು ಮತ್ತು ಚೊಚ್ಚಲು ಗಂಡುಮಕ್ಕಳನ್ನು ಕೊಂದನು.) ಆದ್ದರಿಂದ ನಾವು ಚೊಚ್ಚಲಾದ ಪ್ರತಿಯೊಂದು ಗಂಡುಪಶುವನ್ನು ಯೆಹೋವನಿಗೆ ಯಜ್ಞವಾಗಿ ಅರ್ಪಿಸುತ್ತೇವೆ. ಈ ಕಾರಣದಿಂದಲೇ, ನಮ್ಮ ಪ್ರತಿಯೊಂದು ಗಂಡುಮಗುವನ್ನು ಯೆಹೋವನಿಂದ ಮತ್ತೆ ಖರೀದಿ ಮಾಡುತ್ತೇವೆ’ ಎಂದು ಹೇಳುವಿರಿ. 16 ಇದು ನಿಮ್ಮ ಕೈಗೆ ದಾರ ಕಟ್ಟಿದಂತಿರುತ್ತದೆ; ನಿಮ್ಮ ಕಣ್ಣುಗಳ ಮುಂದೆ ಒಂದು ಚಿಹ್ನೆಯಂತೆ ಇರುತ್ತದೆ.[a] ಯೆಹೋವನು ತನ್ನ ಮಹಾಶಕ್ತಿಯಿಂದ ನಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದನೆಂಬುದನ್ನು ಜ್ಞಾಪಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.”
ಈಜಿಪ್ಟಿನಿಂದ ಪ್ರಯಾಣ
17 ಇಸ್ರೇಲರು ಈಜಿಪ್ಟನ್ನು ಬಿಟ್ಟುಹೋಗುವಂತೆ ಫರೋಹನು ಅನುಮತಿ ನೀಡಿದನು. ಇಸ್ರೇಲರು ಫಿಲಿಷ್ಟಿಯರ ದೇಶದ ಮೂಲಕ ಹಾದುಹೋಗುವ ರಸ್ತೆಯಲ್ಲಿ ಹೋಗಲು ಯೆಹೋವನು ಅನುಮತಿ ನೀಡಲಿಲ್ಲ. ಸಮುದ್ರದ ಮೂಲಕ ಹಾದುಹೋಗುವ ಆ ರಸ್ತೆ ಬಹಳ ಹತ್ತಿರವಾಗಿತ್ತು. ಆದರೆ ಯೆಹೋವನು, “ಇಸ್ರೇಲರು ಆ ದಾರಿಯಲ್ಲಿ ಹೋದರೆ, ಯುದ್ಧಮಾಡಬೇಕಾಗುವುದು. ಆಗ ಅವರು ತಮ್ಮ ಮನಸ್ಸುಗಳನ್ನು ಬದಲಾಯಿಸಿ ಈಜಿಪ್ಟಿಗೆ ಹಿಂತಿರುಗಬಹುದು” ಅಂದುಕೊಂಡನು. 18 ಆದ್ದರಿಂದ ಯೆಹೋವನು ಅವರನ್ನು ಕೆಂಪು ಸಮುದ್ರದ ಅರಣ್ಯದ ಮೂಲಕ ನಡೆಸಿದನು. ಇಸ್ರೇಲರು ಈಜಿಪ್ಟನ್ನು ಬಿಟ್ಟಾಗ ಯುದ್ಧವಸ್ತ್ರಗಳನ್ನು ಧರಿಸಿಕೊಂಡಿದ್ದರು.
ಯೋಸೇಫನ ಎಲುಬುಗಳನ್ನು ತೆಗೆದುಕೊಂಡರು
19 ಮೋಶೆಯು ತನ್ನೊಡನೆ ಯೋಸೇಫನ ಎಲುಬುಗಳನ್ನು ತೆಗೆದುಕೊಂಡು ಹೋದನು. (ಯೋಸೇಫನು ಸಾಯುವ ಮೊದಲು, ತನಗಾಗಿ ಈ ಕಾರ್ಯವನ್ನು ಮಾಡುವಂತೆ ಇಸ್ರೇಲನ ಪುತ್ರರಿಂದ ಪ್ರಮಾಣ ಮಾಡಿಸಿದ್ದನು. ಯೋಸೇಫನು ಅವರಿಗೆ, “ಯೆಹೋವನು ನಿಮ್ಮನ್ನು ರಕ್ಷಿಸುವಾಗ, ಈಜಿಪ್ಟಿನಿಂದ ನನ್ನ ಎಲುಬುಗಳನ್ನು ತೆಗೆದುಕೊಂಡು ಹೋಗಲು ಮರೆಯಬೇಡಿ” ಎಂದು ಹೇಳಿದ್ದನು.)
ಯೆಹೋವನು ತನ್ನ ಜನರನ್ನು ಮುನ್ನಡೆಸಿದನು
20 ಇಸ್ರೇಲರು ಸುಕ್ಕೋತನ್ನು ಬಿಟ್ಟು ಏತಾಮಿನಲ್ಲಿ ಪಾಳೆಯ ಹಾಕಿದರು. ಏತಾಮು ಮರುಭೂಮಿಗೆ ಹತ್ತಿರವಾಗಿತ್ತು. 21 ಯೆಹೋವನು ದಾರಿಯನ್ನು ತೋರಿಸಿದನು. ಹಗಲಿನಲ್ಲಿ ಜನರನ್ನು ನಡಿಸಲು ಯೆಹೋವನು ಎತ್ತರವಾದ ಮೇಘಸ್ತಂಭವನ್ನು ಉಪಯೋಗಿಸಿದನು; ರಾತ್ರಿ ವೇಳೆಯಲ್ಲಿ ದಾರಿಯನ್ನು ತೋರಿಸಲು ಯೆಹೋವನು ಎತ್ತರವಾದ ಅಗ್ನಿಸ್ತಂಭವನ್ನು ಉಪಯೋಗಿಸಿದನು. ಈ ಬೆಂಕಿಯು ಅವರಿಗೆ ಬೆಳಕು ಕೊಟ್ಟಿದ್ದರಿಂದ ಅವರು ರಾತ್ರಿಯಲ್ಲಿ ಪ್ರಯಾಣ ಮಾಡಲು ಸಾಧ್ಯವಾಯಿತು. 22 ಹಗಲಿನಲ್ಲಿ ಎತ್ತರವಾದ ಮೇಘಸ್ತಂಭವೂ ರಾತ್ರಿವೇಳೆಯಲ್ಲಿ ಅಗ್ನಿಸ್ತಂಭವೂ ಯಾವಾಗಲೂ ಅವರ ಮುಂಭಾಗದಲ್ಲಿ ಅವರೊಂದಿಗಿದ್ದವು.
ನಿಜವಾದ ಐಶ್ವರ್ಯ
16 ಯೇಸು ತನ್ನ ಶಿಷ್ಯರಿಗೆ ಹೀಗೆಂದನು: “ಒಂದಾನೊಂದು ಕಾಲದಲ್ಲಿ ಒಬ್ಬ ಐಶ್ವರ್ಯವಂತನಿದ್ದನು. ಈ ಐಶ್ವರ್ಯವಂತನು ತನ್ನ ವ್ಯಾಪಾರವನ್ನು ನೋಡಿಕೊಳ್ಳಲು ಒಬ್ಬ ಮೇಲ್ವಿಚಾರಕನನ್ನು ನೇಮಿಸಿದನು. ಸ್ವಲ್ಪಕಾಲದ ನಂತರ, ಆ ಮೇಲ್ವಿಚಾರಕನು ತನಗೆ ಮೋಸಮಾಡುತ್ತಿದ್ದಾನೆಂಬುದು ಐಶ್ವರ್ಯವಂತನಿಗೆ ತಿಳಿಯಿತು. 2 ಆದ್ದರಿಂದ ಅವನು ಆ ಮೇಲ್ವಿಚಾರಕನನ್ನು ಕರೆದು, ‘ನಿನ್ನ ಬಗ್ಗೆ ನನಗೆ ದೂರುಗಳು ಬಂದಿವೆ. ನನ್ನ ಹಣವನ್ನು ನೀನು ಯಾವುದಕ್ಕಾಗಿ ಖರ್ಚು ಮಾಡಿರುವೆ? ನನಗೆ ವರದಿ ಒಪ್ಪಿಸು. ಇನ್ನು ಮೇಲೆ ನನ್ನ ವ್ಯಾಪಾರಕ್ಕೆ ನೀನು ಮೇಲ್ವಿಚಾರಕನಾಗಿರಲು ಸಾಧ್ಯವಿಲ್ಲ’ ಎಂದು ಹೇಳಿದನು.
3 “ಆಗ, ಆ ಮೇಲ್ವಿಚಾರಕನು ತನ್ನೊಳಗೆ, ‘ಈಗ ನಾನೇನು ಮಾಡಲಿ? ನನ್ನ ಯಜಮಾನನು ನನ್ನನ್ನು ಈ ಕೆಲಸದಿಂದ ತೆಗೆದುಬಿಡುತ್ತಾನೆ! ಗುಂಡಿಗಳನ್ನು ಅಗಿಯುವುದಕ್ಕೂ ನನಗೆ ಬಲವಿಲ್ಲ. ಭಿಕ್ಷೆ ಬೇಡುವುದಕ್ಕೂ ನನಗೆ ನಾಚಿಕೆ. 4 ಈಗ ನಾನೇನು ಮಾಡಬೇಕೆಂಬುದು ನನಗೆ ಗೊತ್ತಿದೆ! ನಾನು ಕೆಲಸವನ್ನು ಕಳೆದುಕೊಂಡ ಮೇಲೆ ಬೇರೆ ಜನರು ನನ್ನನ್ನು ತಮ್ಮ ಮನೆಗಳಿಗೆ ಸೇರಿಸಿಕೊಳ್ಳುವಂಥ ಕಾರ್ಯವೊಂದನ್ನು ನಾನು ಈಗ ಮಾಡುವೆ’ ಅಂದುಕೊಂಡನು.
5 “ಆಮೇಲೆ ಆ ಮೇಲ್ವಿಚಾರಕನು, ಯಜಮಾನನ ಸಾಲಗಾರರಲ್ಲಿ ಪ್ರತಿಯೊಬ್ಬನನ್ನು ಕರೆದನು. ಅವನು ಮೊದಲನೆಯವನಿಗೆ, ‘ನೀನು ನನ್ನ ಯಜಮಾನನಿಗೆ ಎಷ್ಟು ಸಾಲ ಕೊಡಬೇಕು?’ ಎಂದು ಕೇಳಿದನು. 6 ಅದಕ್ಕೆ ಮೊದಲನೆಯ ವ್ಯಕ್ತಿ, ‘ನಾನು ಎಂಟುಸಾವಿರ ಕಿಲೋಗ್ರಾಂ ಆಲಿವ್ ಎಣ್ಣೆ ಕೊಡಬೇಕು’ ಎಂದು ಉತ್ತರಿಸಿದನು. ಮೇಲ್ವಿಚಾರಕನು ಅವನಿಗೆ, ‘ನಿನ್ನ ಲೆಕ್ಕಪತ್ರ ಇಲ್ಲಿದೆ. ಕುಳಿತುಕೊಂಡು ಬೇಗನೆ ಅದನ್ನು ಕಡಿಮೆಮಾಡಿ ನಾಲ್ಕುಸಾವಿರ ಎಂದು ಬರೆ’ ಅಂದನು.
7 “ಬಳಿಕ ಆ ಮೇಲ್ವಿಚಾರಕನು ಎರಡನೆಯವನಿಗೆ, ‘ನೀನು ನನ್ನ ಯಜಮಾನನಿಗೆ ಎಷ್ಟು ಕೊಡಬೇಕಾಗಿದೆ’ ಎಂದು ಕೇಳಿದನು. ಎರಡನೆಯವನು, ‘ನಾನು ಅವನಿಗೆ ಅರವತ್ತುಸಾವಿರ ಕಿಲೋಗ್ರಾಂ ಗೋಧಿ ಕೊಡಬೇಕು’ ಎಂದು ಉತ್ತರಿಸಿದನು. ಆಗ ಆ ಮೇಲ್ವಿಚಾರಕನು ಅವನಿಗೆ, ‘ನಿನ್ನ ಲೆಕ್ಕಪತ್ರ ಇಲ್ಲಿದೆ. ನೀನು ಅದನ್ನು ಕಡಿಮೆ ಮಾಡು. ಐವತ್ತುಸಾವಿರ ಎಂದು ಬರೆ’ ಅಂದನು.
8 “ಬಳಿಕ ಯಜಮಾನನು ಮೋಸಗಾರನಾದ ಮೇಲ್ವಿಚಾರಕನಿಗೆ, ‘ನೀನು ಜಾಣತನ ಮಾಡಿದೆ’ ಎಂದು ಹೇಳಿದನು. ಹೌದು, ಲೌಕಿಕ ಜನರು ತಮ್ಮ ಜನರೊಡನೆ ವ್ಯಾಪಾರದಲ್ಲಿ ದೈವಿಕ ಜನರಿಗಿಂತಲೂ ಜಾಣರಾಗಿದ್ದಾರೆ.
9 “ಈ ಲೋಕದಲ್ಲಿ ನೀವು ಹೊಂದಿರುವಂಥವುಗಳಿಂದ ದೇವರಿಗೆ ಸ್ನೇಹಿತರನ್ನು ಮಾಡಿಕೊಡಿರಿ. ನೀವು ಹೀಗೆ ಮಾಡಿದರೆ, ಈ ಲೋಕದವುಗಳು ನಿಮ್ಮ ಕೈಬಿಟ್ಟು ಹೋದಾಗ ನಿಮ್ಮನ್ನು ಶಾಶ್ವತವಾದ ಮನೆಗೆ ಸ್ವೀಕರಿಸಿಕೊಳ್ಳಲಾಗುವುದು. 10 ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾಗಿರುವವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗಿರುವನು. ಸ್ವಲ್ಪವಾದದ್ದರಲ್ಲಿ ಅನ್ಯಾಯಗಾರನಾಗಿರುವವನು ಬಹಳವಾದದ್ದರಲ್ಲಿಯೂ ಅನ್ಯಾಯಗಾರನಾಗಿರುವನು. 11 ಲೌಕಿಕ ಐಶ್ವರ್ಯಗಳಲ್ಲಿ ನೀವು ನಂಬಿಗಸ್ತರಾಗಿಲ್ಲದಿದ್ದರೆ ಪರಲೋಕದ ಐಶ್ವರ್ಯಗಳಲ್ಲಿಯೂ ನೀವು ನಂಬಿಗಸ್ತರಾಗಿರುವುದಿಲ್ಲ. 12 ಮತ್ತೊಬ್ಬನ ಸ್ವತ್ತುಗಳಲ್ಲಿ ನೀವು ನಂಬಿಗಸ್ತರಾಗಿಲ್ಲದಿದ್ದರೆ ನಿಮ್ಮ ಸ್ವಂತ ಸ್ವತ್ತುಗಳನ್ನೇ ನಿಮಗೆ ಯಾರೂ ಕೊಡುವುದಿಲ್ಲ.
13 “ಯಾವ ಸೇವಕನೂ ಒಂದೇ ಸಮಯದಲ್ಲಿ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುವನು ಅಥವಾ ಒಬ್ಬನಿಗೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುವನು. ನೀವು ಒಂದೇ ಸಮಯದಲ್ಲಿ ದೇವರ ಮತ್ತು ಹಣದ ಸೇವೆಮಾಡಲಾರಿರಿ.”
ದೇವರ ಧರ್ಮಶಾಸ್ತ್ರ ಬದಲಾಗಲಾರದು
(ಮತ್ತಾಯ 11:12-13)
14 ಫರಿಸಾಯರು ಈ ಎಲ್ಲಾ ಸಂಗತಿಗಳನ್ನು ಕೇಳುತ್ತಿದ್ದರು. ಫರಿಸಾಯರೆಲ್ಲರು ಹಣದಾಸೆ ಉಳ್ಳವರಾಗಿದ್ದರಿಂದ ಅವರು ಯೇಸುವನ್ನು ಟೀಕಿಸಿದರು. 15 ಯೇಸು ಫರಿಸಾಯರಿಗೆ ಹೀಗೆಂದನು, “ನೀವು ಜನರ ಮುಂದೆ ನಿಮ್ಮನ್ನು ಒಳ್ಳೆಯವರೆಂದು ತೋರಿಸಿಕೊಳ್ಳುತ್ತೀರಿ. ಆದರೆ ನಿಜವಾಗಿಯೂ ನಿಮ್ಮ ಹೃದಯದಲ್ಲಿರುವುದು ದೇವರಿಗೆ ಗೊತ್ತು. ಜನರ ದೃಷ್ಟಿಯಲ್ಲಿ ಅಮೂಲ್ಯವಾದುವುಗಳು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿವೆ.
16 “ಜನರು ಮೋಶೆಯ ಧರ್ಮಶಾಸ್ತ್ರಕ್ಕೂ ಪ್ರವಾದಿಗಳ ಗ್ರಂಥಗಳಿಗೂ ಅನುಸಾರವಾಗಿ ಜೀವಿಸಬೇಕೆಂಬುದು ದೇವರ ಅಪೇಕ್ಷೆಯಾಗಿತ್ತು. ಸ್ನಾನಿಕನಾದ ಯೋಹಾನನು ಬಂದ ಕಾಲದಿಂದ ದೇವರ ರಾಜ್ಯದ ಸುವಾರ್ತೆಯು ತಿಳಿಸಲ್ಪಡುತ್ತಿದೆ. ಅನೇಕ ಜನರು ದೇವರ ರಾಜ್ಯದೊಳಗೆ ಹೋಗಲು ಬಹಳ ಪ್ರಯಾಸಪಡುತ್ತಿದ್ದಾರೆ. 17 ಧರ್ಮಶಾಸ್ತ್ರದಲ್ಲಿರುವ ಒಂದು ಚುಕ್ಕೆಯು ಬದಲಾಗುವುದಕ್ಕಿಂತಲೂ ಭೂಮ್ಯಾಕಾಶಗಳು ಅಳಿದುಹೋಗುವುದು ಸುಲಭ.
ವಿವಾಹವಿಚ್ಛೇದನ ಮತ್ತು ಪುನರ್ವಿವಾಹ
18 “ತನ್ನ ಪತ್ನಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಆಗುವವನು ವ್ಯಭಿಚಾರ ಮಾಡಿದವನಾಗುತ್ತಾನೆ. ವಿವಾಹವಿಚ್ಛೇದನ ಹೊಂದಿದ ಸ್ತ್ರೀಯನ್ನು ಮದುವೆ ಆಗುವವನು ಸಹ ವ್ಯಭಿಚಾರ ಮಾಡಿದವನಾಗುತ್ತಾನೆ.”
ಐಶ್ವರ್ಯವಂತನು ಮತ್ತು ಲಾಜರನು
19 ಯೇಸು ಹೀಗೆಂದನು: “ಒಬ್ಬ ಐಶ್ವರ್ಯವಂತನಿದ್ದನು. ಅವನು ಯಾವಾಗಲೂ ಉತ್ತಮವಾದ ಉಡುಪುಗಳನ್ನು ಧರಿಸುತ್ತಿದ್ದನು. ಅವನು ಬಹಳ ಐಶ್ವರ್ಯವಂತನಾಗಿದ್ದುದರಿಂದ ಪ್ರತಿದಿನವೂ ವೈಭವದೊಡನೆ ಊಟಮಾಡುತ್ತಾ ಸಂತೋಷಪಡುತ್ತಿದ್ದನು. 20 ಅಲ್ಲಿ ಲಾಜರನೆಂಬ ಒಬ್ಬ ಬಡಮನುಷ್ಯನೂ ಇದ್ದನು. ಅವನ ಮೈತುಂಬ ಹುಣ್ಣುಗಳಿದ್ದವು. ಅವನು ಐಶ್ವರ್ಯವಂತನ ಮನೆಯ ಹೊರಬಾಗಿಲ ಬಳಿ ಬಿದ್ದುಕೊಂಡಿರುತ್ತಿದ್ದನು. 21 ಐಶ್ವರ್ಯವಂತನು ಊಟ ಮಾಡಿದ ಮೇಲೆ ಹೊರಗೆಸೆದ ಎಂಜಲನ್ನು ತಿನ್ನುವುದಕ್ಕಾಗಿ ಅಲ್ಲಿ ಬಿದ್ದುಕೊಂಡಿರುತ್ತಿದ್ದನು. ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು.
22 “ಸ್ವಲ್ಪ ಸಮಯದ ನಂತರ ಲಾಜರನು ಸತ್ತನು. ದೇವದೂತರು ಲಾಜರನನ್ನು ತೆಗೆದುಕೊಂಡು ಹೋಗಿ ಅಬ್ರಹಾಮನ ಎದೆಗೆ ಒರಗಿಸಿದರು. ಒಂದು ದಿನ ಐಶ್ವರ್ಯವಂತನೂ ಸತ್ತನು. ಅವನಿಗೆ ಸಮಾಧಿ ಮಾಡಲಾಯಿತು. 23 ಆದರೆ ಅವನು ಪಾತಾಳದಲ್ಲಿ ಬಹಳ ಯಾತನೆಪಡುತ್ತಾ ಬಹಳ ದೂರದಲ್ಲಿ ಅಬ್ರಹಾಮನ ಎದೆಗೆ ಒರಗಿಕೊಂಡಿದ್ದ ಲಾಜರನನ್ನು ನೋಡಿ, 24 ‘ತಂದೆಯಾದ ಅಬ್ರಹಾಮನೇ, ನನ್ನ ಮೇಲೆ ಕರುಣೆತೋರು! ಲಾಜರನನ್ನು ನನ್ನ ಬಳಿಗೆ ಕಳುಹಿಸು. ಅವನು ತನ್ನ ಬೆರಳನ್ನು ನೀರಿನಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡಲಿ, ನಾನು ಈ ಬೆಂಕಿಯಲ್ಲಿ ಯಾತನೆಪಡುತ್ತಿದ್ದೇನೆ!’ ಎಂದು ಬೇಡಿಕೊಂಡನು.
25 “ಅದಕ್ಕೆ ಅಬ್ರಹಾಮನು, ‘ಕಂದಾ, ನಿನ್ನ ಜೀವಮಾನದ ದಿನಗಳು ನಿನಗೆ ನೆನಪಿಲ್ಲವೇ? ಅಲ್ಲಿ ನಿನಗೆ ಎಲ್ಲ ಬಗೆಯ ಸುಖವಿತ್ತು. ಆದರೆ ಲಾಜರಿನಿಗಾದರೋ ಕಷ್ಟಗಳೇ ತುಂಬಿಕೊಂಡಿದ್ದವು. ಆದ್ದರಿಂದ ಈಗ ಅವನು ಸುಖಪಡುತ್ತಿದ್ದಾನೆ, ನೀನು ಸಂಕಟಪಡುತ್ತಿರುವೆ. 26 ಮಾತ್ರವಲ್ಲದೆ ನಿನಗೂ ನಮಗೂ ಮಧ್ಯೆ ದೊಡ್ಡ ಡೊಂಗುರವಿದೆ. ಅಲ್ಲಿಗೆ ಬಂದು ನಿನಗೆ ಸಹಾಯ ಮಾಡಲು ಯಾರಿಗೂ ಸಾಧ್ಯವಿಲ್ಲ. ಅಲ್ಲದೆ ಯಾರು ಅಲ್ಲಿಂದ ಇಲ್ಲಿಗೆ ಬರಲು ಸಾಧ್ಯವಿಲ್ಲ’ ಎಂದು ಹೇಳಿದನು.
27 “ಐಶ್ವರ್ಯವಂತನು, ‘ಹಾಗಾದರೆ, ದಯಮಾಡಿ ಲಾಜರನನ್ನು ಭೂಲೋಕದಲ್ಲಿರುವ ನನ್ನ ತಂದೆಯ ಮನೆಗೆ ಕಳುಹಿಸು! 28 ನನಗೆ ಐದು ಮಂದಿ ಸಹೋದರರಿದ್ದಾರೆ. ಅವರು ಈ ಯಾತನೆಯ ಸ್ಥಳಕ್ಕೆ ಬಾರದಂತೆ ಲಾಜರನು ಅವರನ್ನು ಎಚ್ಚರಿಸಲಿ’ ಎಂದು ಹೇಳಿದನು.
29 “ಅದಕ್ಕೆ ಅಬ್ರಹಾಮನು, ‘ಮೋಶೆಯ ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರಂಥಗಳು ಅವರಲ್ಲಿ ಇವೆ. ಅವರು ಅವುಗಳನ್ನು ಓದಿ ಕಲಿತುಕೊಳ್ಳಲಿ’ ಅಂದನು.
30 “ಅದಕ್ಕೆ ಐಶ್ವರ್ಯವಂತನು, ‘ತಂದೆಯಾದ ಅಬ್ರಹಾಮನೇ, ಹಾಗೆನ್ನಬೇಡ! ಯಾರಾದರೊಬ್ಬರು ಸತ್ತವರೊಳಗಿಂದ ಎದ್ದುಹೋದರೆ, ಅವರು ತಮ್ಮ ಹೃದಯಗಳನ್ನೂ ಜೀವಿತಗಳನ್ನೂ ಮಾರ್ಪಡಿಸಿಕೊಳ್ಳುವರು’ ಎಂದು ಹೇಳಿದನು.
31 “ಅದಕ್ಕೆ ಅಬ್ರಹಾಮನು ಅವನಿಗೆ, ‘ಇಲ್ಲ! ನಿನ್ನ ಸಹೋದರರು ಮೋಶೆಯ ಮತ್ತು ಪ್ರವಾದಿಗಳ ನುಡಿಗಳನ್ನು ಕೇಳುವುದಿಲ್ಲವಾದರೆ, ಸತ್ತವರೊಳಗಿಂದ ಜೀವಿತನಾಗಿ ಎದ್ದುಬಂದವನ ಮಾತನ್ನೂ ಅವರು ಕೇಳುವುದಿಲ್ಲ’” ಎಂದು ಹೇಳಿದನು.
31 “ಯುವತಿಯನ್ನು ಕಾಮದಾಶೆಯಿಂದ ನೋಡುವುದಿಲ್ಲವೆಂದು
ನನ್ನ ಕಣ್ಣುಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆ.
2 ಸರ್ವಶಕ್ತನಾದ ದೇವರು ಜನರಿಗೆ ಏನು ಮಾಡುವನು?
ದೇವರು ತನ್ನ ಉನ್ನತವಾದ ಪರಲೋಕದಿಂದ ಜನರಿಗೆ ಹೇಗೆ ಪ್ರತಿಫಲವನ್ನು ಕೊಡುವನು?
3 ಆತನು ದುಷ್ಟರಿಗೆ ತೊಂದರೆಯನ್ನೂ ನಾಶನವನ್ನೂ
ತಪ್ಪಿತಸ್ಥರಿಗೆ ವಿಪತ್ತನ್ನೂ ಕಳುಹಿಸುವನು.
4 ನಾನು ಮಾಡುವ ಪ್ರತಿಯೊಂದು ದೇವರಿಗೆ ಗೊತ್ತು
ಮತ್ತು ನಾನಿಡುವ ಪ್ರತಿಯೊಂದು ಹೆಜ್ಜೆಯನ್ನೂ ಆತನು ಗಮನಿಸುವನು.
5 “ನಾನು ಸುಳ್ಳು ಹೇಳಲಿಲ್ಲ;
ಜನರಿಗೆ ಮೋಸಮಾಡಲು ಪ್ರಯತ್ನಿಸಲೂ ಇಲ್ಲ.
6 ದೇವರು ನ್ಯಾಯವಾದ ಅಳತೆಮಾನಗಳಿಂದ ನನ್ನನ್ನು ತೂಗಿದರೆ,
ನಾನು ನಿರಪರಾಧಿಯೆಂದು ಆತನಿಗೆ ಗೊತ್ತಾಗುವುದು.
7 ನಾನು ನೀತಿಮಾರ್ಗವನ್ನು ಬಿಟ್ಟುಹೋಗಿದ್ದರೆ,
ನನ್ನ ಕಣ್ಣುಗಳು ನನ್ನ ಹೃದಯವನ್ನು ಕೆಟ್ಟದ್ದಕ್ಕೆ ನಡೆಸಿದ್ದರೆ,
ನನ್ನ ಕೈಗಳು ಪಾಪದಿಂದ ಕೊಳಕಾಗಿದ್ದರೆ,
8 ನಾನು ಬಿತ್ತಿ ಬೆಳೆಸಿದ ಬೆಳೆಗಳನ್ನು ಬೇರೆಯವರು ತಿನ್ನಲಿ;
ನಾನು ಬೆಳೆಸಿದ ಸಸಿಗಳು ಕೀಳಲ್ಪಡಲಿ.
9 “ಒಂದುವೇಳೆ ನಾನು ಪರಸ್ತ್ರೀಯಲ್ಲಿ ಮರುಳುಗೊಂಡಿದ್ದರೆ,
ನನ್ನ ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ಮಾಡಲು ಅವನ ಮನೆಯ ಬಾಗಿಲಲ್ಲಿ ಕಾದುಕೊಂಡಿದ್ದರೆ,
10 ನನ್ನ ಹೆಂಡತಿಯು ಬೇರೊಬ್ಬನಿಗೆ ಸೇವಕಿಯಾಗಲಿ;
ಬೇರೆಯವರು ಆಕೆಯೊಂದಿಗೆ ಮಲಗಿಕೊಳ್ಳಲಿ.
11 ಯಾಕೆಂದರೆ ವ್ಯಭಿಚಾರ ಅವಮಾನಕರ.
ಆ ಪಾಪಕ್ಕೆ ದಂಡನೆಯಾಗಲೇಬೇಕು.
12 ವ್ಯಭಿಚಾರವು ಸುಟ್ಟು ನಾಶಮಾಡುವ ಬೆಂಕಿಯಂತಿದೆ.
ನಾನು ಹೊಂದಿರುವ ಪ್ರತಿಯೊಂದನ್ನು ಅದು ನಾಶಮಾಡಿಬಿಡುತ್ತಿತ್ತು.
13 “ನನ್ನ ಸೇವಕಸೇವಕಿಯರು ನನಗೆ ವಿರೋಧವಾಗಿ ದೂರನ್ನು ಹೊಂದಿದ್ದಾಗ
ನಾನು ಅವರಿಗೆ ನ್ಯಾಯವನ್ನು ದೊರಕಿಸಿಲ್ಲದಿದ್ದರೆ
14 ದೇವರು ನನ್ನನ್ನು ಮುಖಾಮುಖಿಯಾಗಿ ಸಂಧಿಸುವಾಗ ನಾನೇನು ಮಾಡಲಿ?
ನಾನು ಮಾಡಿದ್ದಕ್ಕೆ ವಿವರಣೆ ಕೊಡುವಂತೆ ದೇವರು ನನ್ನನ್ನು ಕರೆಯುವಾಗ ನಾನೇನು ಉತ್ತರ ಕೊಡಲಿ?
15 ದೇವರು ನನ್ನನ್ನು ನನ್ನ ತಾಯಿಯ ಗರ್ಭದಲ್ಲಿ ನಿರ್ಮಿಸಿದನು.
ದೇವರು ನನ್ನ ಸೇವಕಸೇವಕಿಯರನ್ನೂ ನಿರ್ಮಿಸಿದನು.
ದೇವರು ನಮ್ಮೆಲ್ಲರನ್ನು ನಮ್ಮ ತಾಯಂದಿರ ಗರ್ಭಗಳಲ್ಲಿ ರೂಪಿಸಿದನು.
16 “ಬಡಜನರಿಗೆ ಸಹಾಯಮಾಡಲು ನಾನೆಂದೂ ನಿರಾಕರಿಸಲಿಲ್ಲ;
ವಿಧವೆಯರಿಗೆ ಬೇಕಾದದ್ದನ್ನೆಲ್ಲ ನಾನು ಒದಗಿಸಿಕೊಟ್ಟೆನು.
17 ನಾನು ಸ್ವಾರ್ಥದಿಂದ ನನ್ನ ಆಹಾರವನ್ನು ಎಂದೂ ಇಟ್ಟುಕೊಳ್ಳಲಿಲ್ಲ.
ಅನಾಥರು ಹಸಿವೆಯಿಂದಿರಲು ನಾನೆಂದೂ ಅವಕಾಶ ಕೊಟ್ಟಿಲ್ಲ.
18 ನಾನು ನನ್ನ ಜೀವಮಾನವೆಲ್ಲಾ, ಅನಾಥರಿಗೆ ತಂದೆಯಂತಿದ್ದೆನು;
ವಿಧವೆಯರನ್ನು ಪರಿಪಾಲಿಸಿದೆನು.
19 ಬಟ್ಟೆಯಿಲ್ಲದೆ ಸಂಕಟಪಡುತ್ತಿರುವವರನ್ನೂ
ಮೇಲಂಗಿಯಿಲ್ಲದ ಬಡವರನ್ನೂ ನಾನು ಕಂಡಾಗಲೆಲ್ಲಾ
20 ಅವರಿಗೆ ಬಟ್ಟೆಗಳನ್ನು ಕೊಟ್ಟೆನು.
ನನ್ನ ಕುರಿಗಳ ಉಣ್ಣೆಯಿಂದ ಅವರ ಮೈಯನ್ನು ಬೆಚ್ಚಗೆ ಮಾಡಿದೆನು.
ಅವರು ನನ್ನನ್ನು ಪೂರ್ಣಹೃದಯದಿಂದ ಆಶೀರ್ವದಿಸಿದರು.
21 ನನಗೆ ನ್ಯಾಯಸ್ಥಾನದಲ್ಲಿ ಬೆಂಬಲವಿದ್ದರೂ
ಅನಾಥರನ್ನು ಕಂಡು ನಾನೆಂದೂ ಅವರ ಮೇಲೆ ಕೈ ಮಾಡಲಿಲ್ಲ.
22 ನಾನು ಹಾಗೆ ಮಾಡಿದ್ದರೆ,
ನನ್ನ ತೋಳು ಕೀಲುತಪ್ಪಿ ಭುಜದಿಂದ ಮುರಿದುಬೀಳಲಿ.
23 ನಾನು ಆ ಕೆಟ್ಟಕಾರ್ಯಗಳಲ್ಲಿ ಯಾವುದನ್ನೂ ಮಾಡಲಿಲ್ಲ.
ಯಾಕೆಂದರೆ ನಾನು ದೇವರ ಶಿಕ್ಷೆಗೆ ಹೆದರಿಕೊಂಡಿದ್ದೆ.
ಆತನ ವೈಭವದ ಎದುರಿನಲ್ಲಿ ನಿಂತುಕೊಳ್ಳಲು ನನಗಾಗಲಿಲ್ಲ.
24 “ನಾನು ನನ್ನ ಐಶ್ವರ್ಯಗಳಲ್ಲಿ ಎಂದೂ ಭರವಸವಿಡಲಿಲ್ಲ.
ನಾನು ಬಂಗಾರಕ್ಕೆ ‘ನೀನೇ ನನ್ನ ನಿರೀಕ್ಷೆ’ ಎಂದು ಹೇಳಲೇ ಇಲ್ಲ.
25 ನನ್ನ ಐಶ್ವರ್ಯದಿಂದಲೂ ನಾನು ಗರ್ವಿಷ್ಠನಾಗಲಿಲ್ಲ.
ನಾನು ಗಳಿಸಿದ ಅಪಾರ ಹಣವೂ ನನ್ನನ್ನು ಉಲ್ಲಾಸಪಡಿಸಲಿಲ್ಲ.
26 ಪ್ರಕಾಶಮಾನವಾದ ಸೂರ್ಯನನ್ನಾಗಲಿ
ಸುಂದರವಾದ ಚಂದ್ರನನ್ನಾಗಲಿ ನಾನೆಂದೂ ಪೂಜಿಸಲಿಲ್ಲ.
27 ನಾನು ಮರುಳುಗೊಂಡು
ನನ್ನ ಕೈಗೆ ಮುದ್ದಿಡುವುದರ ಮೂಲಕ ಸೂರ್ಯಚಂದ್ರರನ್ನು ಪೂಜಿಸಲಿಲ್ಲ.
28 ನಾನು ಅವುಗಳಲ್ಲಿ ಯಾವುದನ್ನೇ ಮಾಡಿದ್ದರೂ ನನಗೆ ಶಿಕ್ಷೆಯಾಗುತ್ತಿತ್ತು.
ಯಾಕೆಂದರೆ ಆಗ ನಾನು ಸರ್ವಶಕ್ತನಾದ ದೇವರಿಗೆ ಅಪನಂಬಿಗಸ್ತನಾಗುತ್ತಿದ್ದೆನು.
29 “ನನ್ನ ವೈರಿಗಳು ನಾಶವಾದಾಗ
ನಾನೆಂದೂ ಸಂತೋಷಪಡಲಿಲ್ಲ.
ನನ್ನ ವೈರಿಗಳಿಗೆ ಕೇಡಾದಾಗ
ನಾನೆಂದೂ ನಗಲಿಲ್ಲ.
30 ನನ್ನ ವೈರಿಗಳನ್ನು ಶಪಿಸಿ, ಅವರಿಗೆ ಸಾವನ್ನು ಕೋರಲು
ನಾನೆಂದೂ ನನ್ನ ಬಾಯಿಗೆ ಅವಕಾಶ ಕೊಡಲಿಲ್ಲ.
31 ನಾನು ಅಪರಿಚಿತರಿಗೆ ಯಾವಾಗಲೂ ಊಟ ಕೊಟ್ಟದ್ದು
ನನ್ನ ಮನೆಯಲ್ಲಿರುವ ಎಲ್ಲರಿಗೂ ಗೊತ್ತಿದೆ.
32 ನಾನು ಅಪರಿಚಿತರನ್ನು ನನ್ನ ಮನೆಗೆ ಯಾವಾಗಲೂ ಆಹ್ವಾನಿಸುತ್ತಿದ್ದೆನು.
ಆದ್ದರಿಂದ ರಾತ್ರಿಯಲ್ಲಿ ಅವರು ಬೀದಿಗಳಲ್ಲಿ ಮಲಗಿಕೊಳ್ಳಬೇಕಾಗಿರಲಿಲ್ಲ.
33 ಬೇರೆಯವರು ತಮ್ಮ ಪಾಪಗಳನ್ನು ಮರೆಮಾಡಲು ಪ್ರಯತ್ನಿಸಬಹುದು.
ಆದರೆ ನಾನು ನನ್ನ ಯಾವ ಪಾಪವನ್ನೂ ಮರೆಮಾಡಲಿಲ್ಲ.
34 ಜನರ ಮಾತಿಗೆ ನಾನೆಂದೂ ಭಯಗೊಂಡಿರಲಿಲ್ಲ; ಯಾವ ಕುಟುಂಬದ ಅಸಮ್ಮತಿಗೂ ನಾನೆಂದೂ ಹೆದರಿಕೊಂಡಿರಲಿಲ್ಲ; ಅಂಥ ಯಾವ ಭಯವೂ ನನ್ನನ್ನು ಮೌನಗೊಳಿಸಿ ಮನೆಯೊಳಗಿರಿಸಲಿಲ್ಲ.
ಯಾಕೆಂದರೆ ನನ್ನ ಮೇಲೆ ಜನರಿಗಿರುವ ದ್ವೇಷಕ್ಕೆ ನಾನು ಹೆದರಿಕೊಂಡಿರಲಿಲ್ಲ.
35 “ಅಯ್ಯೋ, ನನಗೆ ಕಿವಿಗೊಡುವುದಕ್ಕೆ ಯಾರಾದರೊಬ್ಬರು ಇರಬೇಕಿತ್ತು!
ನಾನು ಸತ್ಯವನ್ನೇ ಹೇಳಿದೆನೆಂಬುದಕ್ಕೆ ಇದೋ, ಇಲ್ಲಿದೆ ನನ್ನ ಸಹಿ!
ಸರ್ವಶಕ್ತನಾದ ದೇವರು ನನಗೆ ಉತ್ತರಕೊಡಲಿ.
ನನ್ನ ಮೇಲೆ ಅಪವಾದ ಹೊರಿಸುವವನು, ಆಪಾದನೆಯ ಪತ್ರವನ್ನು ಕೊಡಲಿ!
36 ಖಂಡಿತವಾಗಿಯೂ ನಾನು ಆ ಪತ್ರವನ್ನು ನನ್ನ ಹೆಗಲ ಮೇಲೆ ಇಟ್ಟುಕೊಳ್ಳುವೆನು.
ಅದನ್ನು ಕಿರೀಟವನ್ನಾಗಿ ಧರಿಸಿಕೊಳ್ಳುವೆನು.
37 ನಾನು ಮಾಡಿರುವ ಪ್ರತಿಯೊಂದನ್ನು ದೇವರಿಗೆ ವಿವರಿಸುವೆನು.
ನಾನು ಅಧಿಪತಿಯಂತೆ ತಲೆಯೆತ್ತಿಕೊಂಡು ಆತನ ಸಮೀಪಕ್ಕೆ ಬರುವೆನು.
38 “ನನ್ನ ಹೊಲವನ್ನು ಬೇರೆಯವರಿಂದ ಕಿತ್ತುಕೊಳ್ಳಲಿಲ್ಲ;
ಈ ವಿಷಯದಲ್ಲಿ ಯಾರೂ ನನ್ನ ಮೇಲೆ ಅಪವಾದ ಹೊರಿಸಲಾರರು.
39 ನಾನು ರೈತರಿಗೆ ಬೆಳೆಯಲ್ಲಿ ಪಾಲು ಕೊಟ್ಟೆನು;
ಯಾರೂ ಹಸಿವೆಯಿಂದ ಇರಲು ಬಿಡಲಿಲ್ಲ.
40 ಇವುಗಳಲ್ಲಿ ನಾನು ಯಾವುದನ್ನಾದರೂ ಮಾಡಿದ್ದರೆ,
ಗೋಧಿ ಮತ್ತು ಬಾರ್ಲಿಗಳ ಬದಲಾಗಿ ನನ್ನ ಹೊಲಗಳಲ್ಲಿ ಮುಳ್ಳುಗಳೂ ಕಳೆಗಳೂ ಬೆಳೆಯಲಿ.”
ಹೀಗೆ ಯೋಬನ ಮಾತುಗಳು ಮುಗಿದವು.
1 ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು ಬರೆಯುವ ಪತ್ರ. ನಾನು ದೇವರ ಚಿತ್ತಾನುಸಾರ ಅಪೊಸ್ತಲನಾಗಿದ್ದೇನೆ. ಕೊರಿಂಥದಲ್ಲಿರುವ ದೇವರ ಸಭೆಯವರಿಗೂ ಇಡೀ ಅಖಾಯ ಸೀಮೆಯಲ್ಲಿರುವ ದೇವಜನರೆಲ್ಲರಿಗೂ ನಾನು ಈ ಪತ್ರವನ್ನು ಕ್ರಿಸ್ತನಲ್ಲಿ ನಮ್ಮ ಸಹೋದರನಾದ ತಿಮೊಥೆಯನೊಡನೆ ಸೇರಿ ಬರೆಯುತ್ತಿದ್ದೇನೆ.
2 ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
ಪೌಲನು ದೇವರಿಗೆ ಸಲ್ಲಿಸುವ ಕೃತಜ್ಞತಾಸ್ತುತಿ
3 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ. ದೇವರು ಕನಿಕರದಿಂದ ತುಂಬಿರುವ ತಂದೆಯಾಗಿದ್ದಾನೆ. ಆತನು ಸಕಲ ವಿಧವಾಗಿ ಸಂತೈಸುವ ದೇವರಾಗಿದ್ದಾನೆ. 4 ನಮಗೆ ಸಂಕಷ್ಟವಿರುವಾಗಲೆಲ್ಲಾ ಆತನು ನಮ್ಮನ್ನು ಸಂತೈಸುತ್ತಾನೆ; ಸಂಕಷ್ಟಗಳಲ್ಲಿರುವ ಇತರ ಜನರನ್ನು ಸಂತೈಸಲು ಇದರ ಮೂಲಕ ನಾವು ಸಹ ಶಕ್ತರಾಗುತ್ತೇವೆ. ದೇವರು ನಮ್ಮನ್ನು ಸಂತೈಸುವಂತೆಯೇ ನಾವು ಸಹ ಅವರನ್ನು ಸಂತೈಸಬಲ್ಲವರಾಗುತ್ತೇವೆ. 5 ನಾವು ಕ್ರಿಸ್ತನ ಅನೇಕ ಬಾಧೆಗಳಲ್ಲಿ ಪಾಲುಗಾರರಾಗುತ್ತೇವೆ. ಅದೇ ರೀತಿಯಲ್ಲಿ, ಕ್ರಿಸ್ತನ ಮೂಲಕ ಹೇರಳವಾದ ಆದರಣೆಯು ನಮಗೆ ಬರುತ್ತದೆ. 6 ನಮಗೆ ಸಂಕಷ್ಟಗಳಿರುವುದಾದರೆ, ಆ ಸಂಕಷ್ಟಗಳು ನಿಮ್ಮ ಆದರಣೆಗಾಗಿಯೇ ಮತ್ತು ರಕ್ಷಣೆಗಾಗಿಯೇ. ನಮಗೆ ಆದರಣೆ ಇರುವುದಾದರೆ, ಅದು ನಿಮ್ಮ ಆದರಣೆಗಾಗಿಯೇ. ನಮಗಿರುವಂಥ ಬಾಧೆಗಳನ್ನು ನೀವು ತಾಳ್ಮೆಯಿಂದ ಸ್ವೀಕರಿಸಿಕೊಳ್ಳಲು ಇದು ನಿಮಗೆ ಸಹಾಯವಾಗಿದೆ. 7 ನಿಮ್ಮ ವಿಷಯದಲ್ಲಿ ನಮಗೆ ಬಲವಾದ ನಿರೀಕ್ಷೆಯಿದೆ. ನೀವು ನಮ್ಮ ಬಾಧೆಗಳಲ್ಲಿ ಪಾಲುಗಾರರಾಗಿರುವುದರಿಂದ ನಮ್ಮ ಆದರಣೆಯಲ್ಲಿಯೂ ನೀವು ಪಾಲುಗಾರರಾಗುತ್ತೀರಿ ಎಂಬುದು ನನಗೆ ತಿಳಿದಿದೆ.
8 ಸಹೋದರ ಸಹೋದರಿಯರೇ, ನಾವು ಏಷ್ಯಾ ಪ್ರಾಂತ್ಯದಲ್ಲಿ ಅನುಭವಿಸಿದ ಸಂಕಟದ ಬಗ್ಗೆ ನೀವು ತಿಳಿದುಕೊಳ್ಳಬೇಕೆಂದು ನಾವು ಅಪೇಕ್ಷಿಸುತ್ತೇವೆ. ಅಲ್ಲಿ ನಮಗೆ ಅಪಾರವಾದ ಭಾರಗಳಿದ್ದವು. ಆ ಭಾರಗಳು ನಮ್ಮ ಸ್ವಂತ ಶಕ್ತಿಗಿಂತಲೂ ಅಧಿಕವಾಗಿದ್ದವು. ಜೀವಸಹಿತ ಉಳಿಯುತ್ತೇವೆ ಎಂಬ ನಿರೀಕ್ಷೆಯನ್ನು ಸಹ ನಾವು ಬಿಟ್ಟುಕೊಟ್ಟೆವು. 9 ನಿಜವಾಗಿಯೂ ನಾವು ಸಾಯುತ್ತೇವೆಂದು ನಮ್ಮ ಹೃದಯಗಳಲ್ಲಿ ನಂಬಿಕೊಂಡೆವು. ನಾವು ನಮ್ಮಲ್ಲಿ ಭರವಸೆ ಇಡದಂತೆಯೂ ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸುವ ದೇವರಲ್ಲಿ ಭರವಸೆ ಇಡಬೇಕೆಂತಲೂ ಇದಾಯಿತು. 10 ಮರಣದ ಈ ಮಹಾ ಅಪಾಯಗಳಿಂದ ದೇವರು ನಮ್ಮನ್ನು ರಕ್ಷಿಸಿದನು. ಮತ್ತು ಇನ್ನು ಮುಂದೆಯೂ ರಕ್ಷಿಸುವನು. ನಾವು ಆತನಲ್ಲಿ ಭರವಸೆ ಇಟ್ಟಿದ್ದೇವೆ. ಆತನು ನಮ್ಮನ್ನು ಇನ್ನು ಮುಂದೆಯೂ ರಕ್ಷಿಸುವನು. 11 ಇದಲ್ಲದೆ ನೀವು ನಿಮ್ಮ ಪ್ರಾರ್ಥನೆಗಳ ಮೂಲಕ ನಮಗೆ ಸಹಾಯ ಮಾಡಬಲ್ಲಿರಿ. ಆಗ, ನಿಮ್ಮ ಪ್ರಾರ್ಥನೆಗಳ ನಿಮಿತ್ತ ದೇವರು ನಮ್ಮನ್ನು ಆಶೀರ್ವದಿಸಿರುವುದನ್ನು ಕಂಡು ಅನೇಕರು ದೇವರಿಗೆ ಕೃತಜ್ಞತಾಸ್ತುತಿ ಮಾಡುವರು.
ಪೌಲನ ಯೋಜನೆಗಳಲ್ಲಿ ಬದಲಾವಣೆ
12 ನಾವು ಈ ವಿಷಯದಲ್ಲಿ ಹೆಮ್ಮೆಪಡುತ್ತೇವೆ ಮತ್ತು ಇದು ಸತ್ಯವೆಂದು ನಾನು ಹೃದಯಪೂರ್ವಕವಾಗಿ ಹೇಳಬಲ್ಲೆನು. ಅದೇನೆಂದರೆ ಈ ಲೋಕದಲ್ಲಿ ಮಾಡಿದ ಎಲ್ಲಾ ಕಾರ್ಯಗಳನ್ನು ದೇವರಿಂದ ಕೊಡಲ್ಪಟ್ಟ ಯಥಾರ್ಥವಾದ ಮತ್ತು ಪರಿಶುದ್ಧವಾದ ಹೃದಯದಿಂದ ಮಾಡಿದೆವು. ನಾವು ನಿಮ್ಮ ಮಧ್ಯದಲ್ಲಿ ಮಾಡಿದ ಕಾರ್ಯಗಳಲ್ಲಂತೂ ಇದು ಮತ್ತಷ್ಟು ಸತ್ಯವಾಗಿದೆ. ನಾವು ಇದನ್ನು ಮಾಡಿದ್ದು ದೇವರ ಕೃಪೆಯಿಂದಲೇ ಹೊರತು ಲೋಕದ ಜ್ಞಾನದಿಂದಲ್ಲ. 13-14 ನೀವು ಓದಿ ಅರ್ಥಮಾಡಿಕೊಳ್ಳಬಲ್ಲ ಸಂಗತಿಗಳನ್ನು ಮಾತ್ರ ನಾನು ನಿಮಗೆ ಬರೆಯುತ್ತೇನೆ. ನಮ್ಮ ವಿಷಯವಾದ ಕೆಲವು ಸಂಗತಿಗಳನ್ನು ನೀವು ಈಗಾಗಲೇ ಸ್ಪಲ್ಪ ಅರ್ಥಮಾಡಿಕೊಂಡಂತೆ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೀರೆಂಬ ನಿರೀಕ್ಷೆ ನನಗಿದೆ. ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಮತ್ತೆ ಬಂದಾಗ ನಾವು ನಿಮ್ಮ ವಿಷಯದಲ್ಲಿ ಹೆಮ್ಮೆಪಡುವಂತೆ ನೀವೂ ನಮ್ಮ ವಿಷಯದಲ್ಲಿ ಹೆಮ್ಮೆಪಡಲಾಗುವಂತೆ ನೀವು ಅರ್ಥಮಾಡಿಕೊಳ್ಳುತ್ತೀರಿ ಎಂಬ ಭರವಸೆ ನನಗಿದೆ.
15 ನಾನು ಈ ಎಲ್ಲಾ ವಿಷಯಗಳಲ್ಲಿ ಬಹು ಭರವಸೆ ಉಳ್ಳವನಾಗಿದ್ದೆನು. ಆದ್ದರಿಂದ ನಿಮ್ಮನ್ನು ಮೊದಲು ಸಂದರ್ಶಿಸಲು ನಾನು ಯೋಜನೆಗಳನ್ನು ಮಾಡಿದೆನು. ಆಗ ನಿಮಗೆ ಎರಡು ಸಲ ಆಶೀರ್ವಾದವಾಗಬಹುದಿತ್ತು. 16 ನಾನು ಮಕೆದೋನಿಯಕ್ಕೆ ಹೋಗುವಾಗಲೂ ಬಳಿಕ ಅಲ್ಲಿಂದ ಹಿಂತಿರುಗಿ ಬರುವಾಗಲೂ ನಿಮ್ಮ ಬಳಿಗೆ ಬರಬೇಕೆಂದಿದ್ದೆ. ಜುದೇಯಕ್ಕೆ ಪ್ರವಾಸ ಕೈಕೊಳ್ಳಲು ನಿಮ್ಮಿಂದ ಸಹಾಯವನ್ನು ಪಡೆದುಕೊಳ್ಳಬೇಕೆಂದಿದ್ದೆ. 17 ನಾನು ಆ ಯೋಜನೆಗಳನ್ನು ಮಾಡಿದಾಗ ನಿಮ್ಮ ಬಳಿಗೆ ಬರುವ ಉದ್ದೇಶ ನಿಜವಾಗಿಯೂ ನನಗಿರಲಿಲ್ಲವೆಂದು ಯೋಚಿಸುತ್ತೀರಾ? ನಾನು ಪ್ರಾಪಂಚಿಕರಂತೆ ಯೋಜನೆಗಳನ್ನು ಮಾಡಿದೆನೋ? ಅವರಾದರೋ ಯೋಜನೆಗಳನ್ನು ಮಾಡುವಾಗ “ಹೌದು, ಹೌದು” ಎಂತಲೂ ಅದೇ ಸಮಯದಲ್ಲಿ “ಇಲ್ಲ, ಇಲ್ಲ” ಎಂತಲೂ ಹೇಳುತ್ತಾರೆ.
18 ನೀವು ದೇವರನ್ನು ನಂಬಬಲ್ಲವರಾಗಿದ್ದರೆ, ನಾವು ನಿಮಗೆ ಏಕಕಾಲದಲ್ಲಿಯೇ “ಹೌದು” ಮತ್ತು “ಇಲ್ಲ” ಎಂದು ಹೇಳಲಿಲ್ಲವೆಂದು ನೀವು ನಂಬಬಲ್ಲಿರಿ. 19 ಸೀಲನು, ತಿಮೊಥೆಯನು ಮತ್ತು ನಾನು ನಿಮಗೆ ಬೋಧಿಸಿದ ದೇವರ ಮಗನಾದ ಯೇಸುಕ್ರಿಸ್ತನು ಹೌದೆಂತಲೂ ಅಲ್ಲವೆಂತಲೂ ಎರಡು ರೀತಿಯಲ್ಲಿರಲಿಲ್ಲ. ಕ್ರಿಸ್ತನಲ್ಲಿ ಯಾವಾಗಲೂ ಇರುವಂಥದ್ದು “ಹೌದು” ಎಂಬುದೇ. 20 ದೇವರು ಮಾಡಿದ ವಾಗ್ದಾನಗಳಿಗೆಲ್ಲ “ಹೌದು” ಎಂಬ ಉತ್ತರ ಕ್ರಿಸ್ತನೇ ಆಗಿದ್ದಾನೆ. ಆದ್ದರಿಂದಲೇ ನಾವು ದೇವರ ಮಹಿಮೆಗಾಗಿ ಕ್ರಿಸ್ತನ ಮೂಲಕ “ಆಮೆನ್” ಎಂದು ಹೇಳುತ್ತೇವೆ. 21 ನಿಮ್ಮನ್ನು ಮತ್ತು ನಮ್ಮನ್ನು ಕ್ರಿಸ್ತನಲ್ಲಿ ದೃಢಗೊಳಿಸುವಾತನು ದೇವರೇ. ದೇವರು ತನ್ನ ವಿಶೇಷವಾದ ಆಶೀರ್ವಾದವನ್ನು ನಮಗೆ ಕೊಟ್ಟಿದ್ದಾನೆ. 22 ನಾವು ಆತನವರೆಂಬುದನ್ನು ತೋರಿಸುವುದಕ್ಕಾಗಿ ಆತನು ನಮ್ಮ ಮೇಲೆ ಮುದ್ರೆಯನ್ನು ಹಾಕಿದ್ದಾನೆ. ಆತನು ತನ್ನ ಪವಿತ್ರಾತ್ಮನನ್ನು ನಮ್ಮ ಹೃದಯಗಳಲ್ಲಿ ನೆಲೆಗೊಳಿಸಿದ್ದಾನೆ. ಆತನು ನಮಗೆ ಮಾಡಿದ ವಾಗ್ದಾನವನ್ನು ನೆರವೇರಿಸುತ್ತಾನೆ ಎಂಬುದಕ್ಕೆ ಪವಿತ್ರಾತ್ಮನೇ ನಮಗೆ ಆಧಾರವಾಗಿದ್ದಾನೆ.
23 ನಿಮ್ಮನ್ನು ಶಿಕ್ಷಿಸುವುದಕ್ಕಾಗಲಿ ನೋಯಿಸುವುದಕ್ಕಾಗಲಿ ನನಗೆ ಇಷ್ಟವಿರಲಿಲ್ಲ. ಆದಕಾರಣ ನಾನು ನಿಮ್ಮ ಬಳಿಗೆ ಹಿಂತಿರುಗಿ ಬರಲಿಲ್ಲ. ಇದು ಸತ್ಯ. ಇದಕ್ಕೆ ದೇವರೇ ಸಾಕ್ಷಿ. 24 ನಿಮ್ಮ ನಂಬಿಕೆಯನ್ನು ಹತೋಟಿಯಲ್ಲಿಟ್ಟುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆಂದು ನಾನು ಹೇಳುತ್ತಿಲ್ಲ. ನೀವು ನಂಬಿಕೆಯಲ್ಲಿ ದೃಢವಾಗಿದ್ದೀರಿ. ಆದರೆ ನಾವು ನಿಮ್ಮ ಸಂತೋಷಕ್ಕಾಗಿ ನಿಮ್ಮ ಜೊತೆಕೆಲಸದವರಾಗಿದ್ದೇವೆ.
Kannada Holy Bible: Easy-to-Read Version. All rights reserved. © 1997 Bible League International