M’Cheyne Bible Reading Plan
22 ಹಿಸ್ಸೋಪ್ ಗಿಡದ ಬರಲನ್ನು ತೆಗೆದುಕೊಂಡು ರಕ್ತ ತುಂಬಿರುವ ಪಾತ್ರೆಯಲ್ಲಿ ಅದ್ದಿರಿ. ರಕ್ತವನ್ನು ಬಾಗಿಲಿನ ನಿಲುವು ಕಂಬಗಳಿಗೆ ಮತ್ತು ಮೇಲಿನ ಪಟ್ಟಿಗಳಿಗೆ ಹಚ್ಚಿರಿ. ಮುಂಜಾನೆಯಾಗುವವರೆಗೆ ಯಾರೂ ತಮ್ಮ ಮನೆಯನ್ನು ಬಿಟ್ಟು ಹೊರಗೆ ಹೋಗಬಾರದು. 23 ಆ ಸಮಯದಲ್ಲಿ ಚೊಚ್ಚಲಾದವುಗಳನ್ನು ಸಂಹರಿಸಲು ಯೆಹೋವನು ಈಜಿಪ್ಟಿನ ಮೂಲಕ ಹಾದುಹೋಗುವನು. ಬಾಗಿಲಿನ ನಿಲುವು ಕಂಬಗಳಿಗೆ ಮತ್ತು ಮೇಲಿನ ಪಟ್ಟಿಗಳಿಗೆ ಹಚ್ಚಿದ ರಕ್ತವನ್ನು ಯೆಹೋವನು ನೋಡಿ ಆ ಮನೆಯನ್ನು ಸಂರಕ್ಷಿಸುವನು.[a] ಸಂಹಾರಕನು ನಿಮ್ಮ ಮನೆಯೊಳಗೆ ಬಂದು ಸಂಹರಿಸಲು ಯೆಹೋವನು ಬಿಡುವುದಿಲ್ಲ. 24 ನೀವು ಈ ಆಜ್ಞೆಯನ್ನು ಜ್ಞಾಪಕದಲ್ಲಿಡಬೇಕು. ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತವಾದ ನಿಯಮವಾಗಿದೆ. 25 ಯೆಹೋವನು ನಿಮಗೆ ಕೊಡಲಿರುವ ದೇಶಕ್ಕೆ ನೀವು ಹೋದಾಗಲೂ ಈ ಹಬ್ಬವನ್ನು ಆಚರಿಸಬೇಕು. 26 ‘ಈ ಹಬ್ಬವನ್ನು ಮಾಡುವುದೇಕೆ?’ ಎಂದು ನಿಮ್ಮ ಮಕ್ಕಳು ನಿಮ್ಮನ್ನು ಕೇಳುವಾಗ, 27 ‘ಇದು ಯೆಹೋವನನ್ನು ಸನ್ಮಾನಿಸಲು ಮಾಡುವ ಪಸ್ಕಹಬ್ಬವಾಗಿದೆ. ಯಾಕೆಂದರೆ ನಾವು ಈಜಿಪ್ಟಿನಲ್ಲಿದ್ದಾಗ ಯೆಹೋವನು ಇಸ್ರೇಲರ ಮನೆಗಳನ್ನು ಬಿಟ್ಟು ದಾಟಿಹೋದನು; ಈಜಿಪ್ಟಿನವರನ್ನು ಸಂಹರಿಸಿದನು; ಆದರೆ ಆತನು ನಮ್ಮ ಮನೆಗಳಲ್ಲಿದ್ದವರನ್ನು ರಕ್ಷಿಸಿದನು’ ಎಂದು ಹೇಳಬೇಕು.
“ಆಗ ಮೋಶೆಯ ಮಾತನ್ನು ಕೇಳುತ್ತಿದ್ದ ಇಸ್ರೇಲರು ಅಡ್ಡಬಿದ್ದು ಯೆಹೋವನನ್ನು ಆರಾಧಿಸಿದರು.” 28 ಯೆಹೋವನು ಮೋಶೆ ಮತ್ತು ಆರೋನರಿಗೆ ಆಜ್ಞಾಪಿಸಿದ್ದಂತೆಯೇ ಇಸ್ರೇಲರು ಮಾಡಿದರು.
29 ಮಧ್ಯರಾತ್ರಿಯಲ್ಲಿ ಯೆಹೋವನು ಈಜಿಪ್ಟಿನಲ್ಲಿದ್ದ ಚೊಚ್ಚಲು ಗಂಡುಮಕ್ಕಳನ್ನೆಲ್ಲಾ ಸಂಹರಿಸಿದನು. ಫರೋಹನ ಚೊಚ್ಚಲು ಮಗನಿಂದಿಡಿದು ಸೆರೆಮನೆಯಲ್ಲಿದ್ದ ಕೈದಿಯ ಚೊಚ್ಚಲು ಮಗನವರೆಗೆ ಇರುವ ಎಲ್ಲಾ ಚೊಚ್ಚಲು ಮಕ್ಕಳನ್ನು ಆತನು ಸಂಹರಿಸಿದನು. ಚೊಚ್ಚಲು ಪಶುಗಳೂ ಸಂಹರಿಸಲ್ಪಟ್ಟವು. 30 ಆ ರಾತ್ರಿಯಲ್ಲಿ ಫರೋಹನೂ ಅವನ ಅಧಿಕಾರಿಗಳೂ ಈಜಿಪ್ಟಿನ ಜನರೆಲ್ಲರೂ ಎದ್ದರು. ಈಜಿಪ್ಟಿನಲ್ಲಿ ಮಹಾ ಗೋಳಾಟ ಉಂಟಾಯಿತು. ಯಾಕೆಂದರೆ ಸಾವಿಲ್ಲದ ಮನೆಯೇ ಇರಲಿಲ್ಲ.
ಇಸ್ರೇಲರಿಗೆ ಈಜಿಪ್ಟಿನಿಂದ ಬಿಡುಗಡೆ
31 ಆದ್ದರಿಂದ ಆ ರಾತ್ರಿ, ಫರೋಹನು ಮೋಶೆ ಆರೋನರನ್ನು ಕರೆಸಿ, “ನನ್ನ ಜನರನ್ನು ಬಿಟ್ಟುಹೋಗಿ. ನೀವು ಕೇಳಿಕೊಂಡಂತೆ ನೀವು ಮತ್ತು ನಿಮ್ಮ ಜನರು ಹೊರಟುಹೋಗಿ ಯೆಹೋವನನ್ನು ಆರಾಧಿಸಿ. 32 ನೀವು ಕೇಳಿಕೊಂಡಂತೆ ನಿಮ್ಮ ಕುರಿಗಳನ್ನೂ ದನಕರುಗಳನ್ನೂ ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ! ನನ್ನನ್ನು ಆಶೀರ್ವದಿಸಿ!” ಎಂದು ಹೇಳಿದನು. 33 ಈಜಿಪ್ಟಿನ ಜನರು ಸಹ ತಮ್ಮನ್ನು ಬೇಗನೆ ಬಿಟ್ಟು ಹೋಗಬೇಕೆಂದು ಇಸ್ರೇಲರನ್ನು ಬೇಡಿಕೊಂಡು, “ನೀವು ಬಿಟ್ಟು ಹೋಗದಿದ್ದರೆ, ನಾವೆಲ್ಲಾ ಸಾಯುವೆವು” ಎಂದು ಹೇಳಿದರು.
34 ತಮ್ಮ ರೊಟ್ಟಿಗೆ ಹುಳಿಹಾಕಲು ಇಸ್ರೇಲರಿಗೆ ಸಮಯವಿರಲಿಲ್ಲ. ಅವರು ಹಿಟ್ಟಿನ ಮುದ್ದೆಯನ್ನು ಬಟ್ಟೆಯಲ್ಲಿ ಸುತ್ತಿ ಹೆಗಲಿನ ಮೇಲೆ ಹೊತ್ತುಕೊಂಡು ಹೋದರು. 35 ಅಲ್ಲದೆ ಮೋಶೆಯು ಹೇಳಿದಂತೆಯೇ ಇಸ್ರೇಲರು ತಮ್ಮ ನೆರೆಮನೆಯವರ ಬಳಿಗೆ ಹೋಗಿ ಬಟ್ಟೆಗಳನ್ನೂ ಬೆಳ್ಳಿಬಂಗಾರಗಳ ವಸ್ತುಗಳನ್ನೂ ಕೇಳಿಕೊಂಡರು. 36 ಈಜಿಪ್ಟಿನವರು ಇಸ್ರೇಲರಿಗೆ ದಯೆ ತೋರಿಸುವಂತೆ ಯೆಹೋವನು ಪ್ರೇರೇಪಿಸಿದ್ದರಿಂದ ಈಜಿಪ್ಟಿನವರು ತಮ್ಮ ಸ್ವತ್ತುಗಳನ್ನು ಇಸ್ರೇಲರಿಗೆ ಕೊಟ್ಟುಬಿಟ್ಟರು.
37 ಇಸ್ರೇಲರು ರಮ್ಸೇಸ್‌ನಿಂದ ಸುಕ್ಕೋತಿಗೆ ಪ್ರಯಾಣ ಮಾಡಿದರು. ಅವರಲ್ಲಿ ಸುಮಾರು ಆರು ಲಕ್ಷಮಂದಿ[b] ಗಂಡಸರಿದ್ದರು. (ಈ ಸಂಖ್ಯೆಯಲ್ಲಿ ಮಕ್ಕಳು ಮತ್ತು ಹೆಂಗಸರು ಸೇರಿಲ್ಲ.) 38 ಲೆಕ್ಕವಿಲ್ಲದಷ್ಟು ಕುರಿಗಳೂ ದನಕರುಗಳೂ ಇವರೊಂದಿಗಿದ್ದವು. ಇಸ್ರೇಲರಲ್ಲದ ಬೇರೆ ಜನರು ಸಹ ಇಸ್ರೇಲರೊಂದಿಗೆ ಈಜಿಪ್ಟಿನಿಂದ ಹೊರಟರು. 39 ರೊಟ್ಟಿಗೆ ಹುಳಿಹಾಕುವಷ್ಟು ಸಮಯವೂ ಜನರಿಗೆ ಇರಲಿಲ್ಲ; ಅವರು ತಮ್ಮ ಪ್ರಯಾಣಕ್ಕಾಗಿ ವಿಶೇಷ ಆಹಾರವನ್ನು ತಯಾರಿಸುವುದಕ್ಕೂ ಆಗಲಿಲ್ಲ. ಆದ್ದರಿಂದ ಅವರು ಹುಳಿಯಿಲ್ಲದ ರೊಟ್ಟಿ ಮಾಡಿ ತಮ್ಮೊಡನೆ ತೆಗೆದುಕೊಂಡು ಹೋದರು.
40 ಇಸ್ರೇಲರು ಈಜಿಪ್ಟಿನಲ್ಲಿ ನಾನೂರಮೂವತ್ತು ವರ್ಷ ವಾಸಿಸಿದರು. 41 ನಾನೂರಮೂವತ್ತು ವರ್ಷಗಳಾದ ನಂತರ, ಅದೇ ದಿನದಂದು ಯೆಹೋವನ ಸೈನ್ಯಗಳೆಲ್ಲಾ[c] ಈಜಿಪ್ಟನ್ನು[d] ಬಿಟ್ಟು ಹೊರಟವು. 42 ಆದ್ದರಿಂದ ಯೆಹೋವನು ಅವರನ್ನು ಸಂರಕ್ಷಿಸಿ ಈಜಿಪ್ಟಿನಿಂದ ಹೊರತಂದದ್ದನ್ನು ಜ್ಞಾಪಕಮಾಡುವ ಆ ರಾತ್ರಿ ಬಹು ವಿಶೇಷವಾದ ರಾತ್ರಿಯಾಗಿದೆ. ಇಸ್ರೇಲರೆಲ್ಲರೂ ಆ ರಾತ್ರಿಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವರು.
43 ಯೆಹೋವನು ಮೋಶೆ ಆರೋನರಿಗೆ, “ಪಸ್ಕಹಬ್ಬದ ನಿಯಮಗಳು ಇಂತಿವೆ: ಯಾವ ಪರದೇಶಿಯೂ ಪಸ್ಕಹಬ್ಬದ ಊಟವನ್ನು ಮಾಡಬಾರದು. 44 ಆದರೆ ಸುನ್ನತಿ ಮಾಡಿಸಿಕೊಂಡಿರುವ ಗುಲಾಮನು ಪಸ್ಕಹಬ್ಬದ ಊಟವನ್ನು ಮಾಡಬಹುದು. 45 ಆದರೆ ನಿಮ್ಮ ದೇಶದಲ್ಲಿ ಕೇವಲ ವಾಸವಾಗಿರುವವರಾಗಲಿ ಕೂಲಿಯಾಳಾಗಲಿ ಪಸ್ಕಹಬ್ಬದ ಊಟ ಮಾಡಬಾರದು.
46 “ಪಸ್ಕಹಬ್ಬದ ಊಟವನ್ನು ಮನೆಯೊಳಗೆ ತಿನ್ನಬೇಕು. ಪಸ್ಕದ ಮಾಂಸವನ್ನು ಮನೆಯಿಂದ ಹೊರಗೆ ತೆಗೆದುಕೊಂಡು ಹೋಗಕೂಡದು. ಕುರಿಮರಿಯ ಎಲುಬುಗಳಲ್ಲಿ ಯಾವುದನ್ನೂ ಮುರಿಯಬಾರದು. 47 ಇಸ್ರೇಲರ ಇಡೀ ಸಮೂಹವು ಈ ಹಬ್ಬವನ್ನು ಆಚರಿಸಬೇಕು. 48 ನಿಮ್ಮ ಮಧ್ಯದಲ್ಲಿ ವಾಸವಾಗಿರುವ ಪರದೇಶದವನು ಯೆಹೋವನ ಪಸ್ಕ ಭೋಜನದಲ್ಲಿ ಪಾಲುಗಾರನಾಗಬೇಕೆಂದು ಬಯಸಿದರೆ ಅವನು ಸುನ್ನತಿ ಮಾಡಿಸಿಕೊಳ್ಳಬೇಕು. ಆಗ ಅವನು ಇಸ್ರೇಲಿನವನಾಗುವುದರಿಂದ ಭೋಜನದಲ್ಲಿ ಪಾಲುಗಾರನಾಗಬಹುದು. ಆದರೆ ಸುನ್ನತಿಯಾಗಿಲ್ಲದವನು ಪಸ್ಕದ ಊಟ ಮಾಡಕೂಡದು. 49 ಪ್ರತಿಯೊಬ್ಬರಿಗೂ ಇದೇ ನಿಯಮ ಅನ್ವಯಿಸುತ್ತದೆ. ಸ್ವದೇಶದವನಿಗೂ ನಿಮ್ಮಲ್ಲಿ ವಾಸವಾಗಿರುವ ಪರದೇಶದವನಿಗೂ ಒಂದೇ ನಿಯಮವಿರಬೇಕು” ಅಂದನು.
50 ಯೆಹೋವನು ಮೋಶೆ ಆರೋನರಿಗೆ ಆಜ್ಞಾಪಿಸಿದಂತೆಯೇ ಇಸ್ರೇಲರೆಲ್ಲರೂ ಮಾಡಿದರು. 51 ಆದ್ದರಿಂದ ಅದೇ ದಿನದಲ್ಲಿ ಯೆಹೋವನು ಇಸ್ರೇಲರನ್ನು ಈಜಿಪ್ಟ್ ದೇಶದಿಂದ ಜನರನ್ನು ಗುಂಪುಗುಂಪುಗಳಾಗಿ ಹೊರತಂದನು.
ಸ್ವರ್ಗದಲ್ಲಿ ಆನಂದ
(ಮತ್ತಾಯ 18:12-14)
15 ಅನೇಕ ಸುಂಕವಸೂಲಿಗಾರರು ಮತ್ತು ಪಾಪಿಗಳು ಯೇಸುವಿನ ಉಪದೇಶವನ್ನು ಕೇಳಲು ಬಂದಿದ್ದರು. 2 ಆಗ ಫರಿಸಾಯರು ಮತ್ತು ಧರ್ಮೋಪದೇಶಕರು, “ನೋಡಿರಿ! ಈ ಮನುಷ್ಯನು (ಯೇಸು) ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರ ಜೊತೆಯಲ್ಲಿ ಊಟಮಾಡುತ್ತಾನೆ!” ಎಂದು ದೂರು ಹೇಳತೊಡಗಿದರು.
3 ಆಗ ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದನು: 4 “ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳಿವೆ ಎಂದು ತಿಳಿದುಕೊಳ್ಳೋಣ. ಆ ಕುರಿಗಳಲ್ಲಿ ಒಂದು ಕಳೆದುಹೋದರೆ, ಅವನು ಉಳಿದ ತೊಂಭತ್ತೊಂಭತ್ತು ಕುರಿಗಳನ್ನು ಅಲ್ಲೇ ಬಿಟ್ಟು ಕಳೆದುಹೋದ ಒಂದು ಕುರಿಗೋಸ್ಕರ ಹುಡುಕುತ್ತಾ ಹೋಗುವನು. ಆ ಕುರಿಯು ಸಿಕ್ಕುವ ತನಕ ಅವನು ಅದಕ್ಕಾಗಿ ಹುಡುಕುತ್ತಲೇ ಇರುವನು. 5 ಅವನು ಆ ಕುರಿಯನ್ನು ಕಂಡುಕೊಂಡಾಗ ಬಹು ಸಂತೋಷಪಡುವನು. ಅವನು ಆ ಕುರಿಯನ್ನು ತನ್ನ ಮನೆಗೆ ಹೊತ್ತುಕೊಂಡು ಹೋಗುವನು. 6 ಅವನು ತನ್ನ ಸ್ನೇಹಿತರ ಮತ್ತು ನೆರೆಹೊರೆಯವರ ಬಳಿಗೆ ಹೋಗಿ, ‘ನನ್ನೊಡನೆ ಸಂತೋಷಪಡಿರಿ, ಕಳೆದುಹೋದ ನನ್ನ ಕುರಿ ಸಿಕ್ಕಿತು’ ಎಂದು ಹೇಳುವನು. 7 ಅದೇ ರೀತಿಯಲ್ಲಿ, ಒಬ್ಬ ಪಾಪಿ ತನ್ನ ಹೃದಯವನ್ನು ಪರಿವರ್ತಿಸಿಕೊಂಡಾಗ ಸ್ವರ್ಗದಲ್ಲಿ ಬಹಳ ಸಂತೋಷವಾಗುತ್ತದೆ ಎಂದು ನಾನು ನಿಮಗೆ ಹೇಳುತ್ತೇನೆ. ತಮ್ಮ ಹೃದಯಗಳನ್ನು ಪರಿವರ್ತಿಸಲು ಅವಶ್ಯವಿಲ್ಲದ ತೊಂಭತ್ತೊಂಭತ್ತು ಒಳ್ಳೆಯ ಜನರಿಗಿಂತ ಆ ಒಬ್ಬ ಪಾಪಿಯ ವಿಷಯದಲ್ಲಿ ಹೆಚ್ಚು ಸಂತೋಷವಾಗುತ್ತದೆ.
8 “ಒಬ್ಬ ಸ್ತ್ರೀಯ ಬಳಿ ಹತ್ತು ಬೆಳ್ಳಿನಾಣ್ಯಗಳು ಇವೆಯೆಂದು ಭಾವಿಸಿಕೊಳ್ಳಿರಿ. ಆಕೆಯು ಅವುಗಳಲ್ಲಿ ಒಂದನ್ನು ಕಳೆದುಕೊಳ್ಳುತ್ತಾಳೆ. ಆಕೆ ದೀಪವನ್ನು ತಂದು ಮನೆಯನ್ನು ಗುಡಿಸುತ್ತಾಳೆ. ಆ ನಾಣ್ಯವು ಸಿಕ್ಕುವ ತನಕ ಆಕೆ ಎಚ್ಚರಿಕೆಯಿಂದ ಹುಡುಕುತ್ತಾಳೆ. 9 ಕಳೆದುಹೋದ ಆ ನಾಣ್ಯ ಸಿಕ್ಕಿದಾಗ ಆಕೆ ತನ್ನ ಸ್ನೇಹಿತರನ್ನೂ ನೆರೆಹೊರೆಯವರನ್ನೂ ಕರೆದು, ‘ನನ್ನೊಡನೆ ಸಂತೋಷಪಡಿರಿ ಕಳೆದುಹೋಗಿದ್ದ ನನ್ನ ನಾಣ್ಯ ಸಿಕ್ಕಿತು’ ಎಂದು ಹೇಳುವಳು. 10 ಅದೇರೀತಿ ಒಬ್ಬ ಪಾಪಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವಾಗ ದೇವದೂತರ ಮುಂದೆ ಸಂತೋಷವಾಗುವುದು.”
ಮನೆ ಬಿಟ್ಟುಹೋದ ಮಗನು
11 ಬಳಿಕ ಯೇಸು ಹೀಗೆಂದನು: “ಒಬ್ಬ ಮನುಷ್ಯನಿಗೆ ಇಬ್ಬರು ಗಂಡುಮಕ್ಕಳಿದ್ದರು. 12 ಕಿರಿಯ ಮಗನು ತಂದೆಗೆ, ‘ನಿನ್ನ ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಡು’ ಎಂದು ಕೇಳಿದನು. ಆದ್ದರಿಂದ ತಂದೆಯು ತನ್ನ ಆಸ್ತಿಯನ್ನು ಹಂಚಿಕೊಟ್ಟನು.
13 “ಆಗ ಕಿರಿಮಗನು ತನಗೆ ದೊರೆತ ಪಾಲನ್ನೆಲ್ಲಾ ಕೂಡಿಸಿಕೊಂಡು ದೂರದೇಶಕ್ಕೆ ಪ್ರಯಾಣಮಾಡಿದನು. ಅಲ್ಲಿ ಅವನು ಪಟಿಂಗನಾಗಿ ಬದುಕಿ ತನ್ನ ಹಣವನ್ನೆಲ್ಲಾ ಹಾಳುಮಾಡಿಕೊಂಡನು. 14 ಸ್ವಲ್ಪಕಾಲದ ನಂತರ, ಆ ದೇಶದಲ್ಲಿ ಕ್ಷಾಮ ಉಂಟಾಯಿತು. ಆ ದೇಶದ ಯಾವ ಭಾಗದಲ್ಲಿಯೂ ಸಾಕಷ್ಟು ಆಹಾರವಿರಲಿಲ್ಲ. ಅವನು ಬಹಳ ಹಸಿವೆಗೊಂಡಿದ್ದನು. ಅವನಿಗೆ ಹಣದ ಅಗತ್ಯತೆಯಿತ್ತು. 15 ಆದ್ದರಿಂದ ಅವನು ಆ ದೇಶದ ನಿವಾಸಿಯೊಬ್ಬನ ಬಳಿ ಕೂಲಿಕೆಲಸಕ್ಕೆ ಸೇರಿಕೊಂಡನು. ಆ ಮನುಷ್ಯನು ಹಂದಿ ಮೇಯಿಸುವುದ್ಕಕಾಗಿ ಅವನನ್ನು ಹೊಲಕ್ಕೆ ಕಳುಹಿಸಿದನು. 16 ಆಗ ಅವನು ಬಹಳ ಹಸಿವೆಗೊಂಡಿದ್ದನು. ಆದ್ದರಿಂದ ಹಂದಿಗಳು ತಿನ್ನುತ್ತಿದ್ದ ಕಾಯಿಗಳನ್ನೇ ತಿನ್ನಲು ಹಂಬಲಿಸಿದನು. ಆದರೆ ಅದನ್ನೂ ಅವನಿಗೆ ಯಾರೂ ಕೊಡಲಿಲ್ಲ.
17 “ಆಗ ಅವನಿಗೆ ತಾನು ಮಾಡಿದ ಬುದ್ಧಿಹೀನ ಕಾರ್ಯದ ಅರಿವಾಯಿತು. ಅವನು ತನ್ನೊಳಗೆ, ‘ನನ್ನ ತಂದೆಯ ಬಳಿಯಲ್ಲಿರುವ ಸೇವಕರಿಗೆ ಬೇಕಾದಷ್ಟು ಆಹಾರವಿದೆ. ನಾನಾದರೋ ಇಲ್ಲಿ ಊಟವಿಲ್ಲದೆ ಸಾಯುತ್ತಿದ್ದೇನೆ. 18 ನಾನು ಇಲ್ಲಿಂದ ನನ್ನ ತಂದೆಯ ಬಳಿಗೆ ಹೊರಟುಹೋಗುತ್ತೇನೆ. ನಾನು ನನ್ನ ತಂದೆಗೆ, ಅಪ್ಪಾ, ನಾನು ದೇವರಿಗೆ ವಿರೋಧವಾಗಿಯೂ ನಿನಗೆ ವಿರೋಧವಾಗಿಯೂ ಪಾಪ ಮಾಡಿದ್ದೇನೆ. 19 ನಿನ್ನ ಮಗನೆಂದು ಕರೆಸಿಕೊಳ್ಳುವುದಕ್ಕೆ ನಾನು ಯೋಗ್ಯನಲ್ಲ. ನೀನು ನನ್ನನ್ನು ನಿನ್ನ ಸೇವಕರಲ್ಲಿ ಒಬ್ಬನನ್ನಾಗಿ ಸೇರಿಸಿಕೊ ಎಂದು ಹೇಳುವೆನು’ ಅಂದುಕೊಂಡನು. 20 ಅಂತೆಯೇ ಅವನು ಹೊರಟು ತನ್ನ ತಂದೆಯ ಬಳಿಗೆ ಹೋದನು.
ಕಿರಿಮಗನು ಹಿಂತಿರುಗಿದನು
“ಮಗನು ಇನ್ನೂ ಬಹುದೂರದಲ್ಲಿ ಬರುತ್ತಿರುವಾಗಲೇ ತಂದೆಯು ಅವನನ್ನು ಗುರುತಿಸಿ ಕನಿಕರದಿಂದ ಅವನ ಬಳಿಗೆ ಓಡಿಬಂದು ಅವನನ್ನು ಅಪ್ಪಿಕೊಂಡು ಮುದ್ದಿಟ್ಟನು. 21 ಮಗನು ತನ್ನ ತಂದೆಗೆ, ‘ಅಪ್ಪಾ, ನಾನು ದೇವರಿಗೆ ವಿರೋಧವಾಗಿಯೂ ನಿನಗೆ ವಿರೋಧವಾಗಿಯೂ ಪಾಪಮಾಡಿದ್ದೇನೆ. ನಿನ್ನ ಮಗನೆಂದು ಕರೆಸಿಕೊಳ್ಳುವುದಕ್ಕೆ ನಾನು ಯೋಗ್ಯನಲ್ಲ’ ಎಂದು ಹೇಳಿದನು.
22 “ಆದರೆ ತಂದೆಯು ತನ್ನ ಸೇವಕರಿಗೆ, ‘ತ್ವರೆಮಾಡಿರಿ! ಉತ್ತಮವಾದ ಉಡುಪುಗಳನ್ನು ತಂದು ಇವನಿಗೆ ತೊಡಿಸಿರಿ. ಇವನ ಬೆರಳಿಗೆ ಉಂಗುರವನ್ನು ಹಾಕಿರಿ. ಪಾದಗಳಿಗೆ ಒಳ್ಳೆಯ ಪಾದರಕ್ಷೆಗಳನ್ನು ತೊಡಿಸಿರಿ. 23 ಕೊಬ್ಬಿದ ಕರುವನ್ನು ಕೊಯ್ದು ಉಲ್ಲಾಸಪಡೋಣ. 24 ನನ್ನ ಮಗನು ಸತ್ತುಹೋಗಿದ್ದನು, ಈಗಲಾದರೋ ಮತ್ತೆ ಜೀವಂತನಾಗಿ ಬಂದಿದ್ದಾನೆ! ಇವನು ತಪ್ಪಿಹೋಗಿದ್ದನು. ಈಗಲಾದರೋ ಮತ್ತೆ ಸಿಕ್ಕಿದ್ದಾನೆ!’ ಎಂದು ಹೇಳಿದನು. ಆದ್ದರಿಂದ ಅವರು ಉಲ್ಲಾಸಪಡುವುದಕ್ಕೆ ತೊಡಗಿದರು.
ಹಿರಿಮಗನು ಬಂದನು
25 “ಹಿರಿಯ ಮಗನು ಹೊಲದಲ್ಲಿದ್ದನು. ಅವನು ಮನೆಗೆ ಬರುತ್ತಿದ್ದಾಗ ವಾದ್ಯಗೋಷ್ಠಿಯ ಮತ್ತು ನೃತ್ಯದ ಶಬ್ದವನ್ನು ಕೇಳಿದನು. 26 ಆದ್ದರಿಂದ ಅವನು ತನ್ನ ಸೇವಕರಲ್ಲಿ ಒಬ್ಬನನ್ನು ಕರೆದು, ‘ಇದೇನು?’ ಎಂದು ವಿಚಾರಿಸಿದನು. 27 ಆ ಸೇವಕನು, ‘ನಿನ್ನ ತಮ್ಮ ಮರಳಿ ಬಂದಿದ್ದಾನೆ. ನಿನ್ನ ತಂದೆಯು ಕೊಬ್ಬಿದ ಕರುವನ್ನು ಕೊಯ್ಸಿದ್ದಾನೆ. ನಿನ್ನ ತಮ್ಮನು ಮನೆಗೆ ಸುರಕ್ಷಿತವಾಗಿ ಬಂದದ್ದಕ್ಕಾಗಿ ನಿನ್ನ ತಂದೆಯು ಸಂತೋಷಗೊಂಡಿದ್ದಾನೆ!’ ಎಂದು ಹೇಳಿದನು.
28 “ಆಗ ಹಿರಿಯ ಮಗನು ಕೋಪಗೊಂಡು ಔತಣಕೂಟಕ್ಕೆ ಹೋಗಲಿಲ್ಲ. ಆಗ ಅವನ ತಂದೆ ಹೊರಗೆ ಬಂದು ಅವನನ್ನು ಒಳಗೆ ಕರೆದನು. 29 ಹಿರಿಮಗನು ತಂದೆಗೆ, ‘ನಾನು ಗುಲಾಮನಂತೆ ನಿನಗೆ ಅನೇಕ ವರ್ಷಗಳವರೆಗೆ ಸೇವೆಮಾಡಿದೆನು! ನಾನು ಯಾವಾಗಲೂ ನಿನ್ನ ಅಪ್ಪಣೆಗಳಿಗೆ ವಿಧೇಯನಾದೆನು. ಆದರೆ ನೀನು ನನಗೋಸ್ಕರ ಎಂದೂ ಒಂದು ಆಡನ್ನಾಗಲಿ ಕೊಯ್ಯಲಿಲ್ಲ. ನನಗಾಗಿ ಮತ್ತು ನನ್ನ ಸ್ನೇಹಿತರಿಗಾಗಿ ನೀನೆಂದೂ ಒಂದು ಔತಣಕೂಟವನ್ನು ಏರ್ಪಡಿಸಲಿಲ್ಲ. 30 ಆದರೆ ನಿನ್ನ ಕಿರಿಯ ಮಗನು ನಿನ್ನ ಎಲ್ಲ ಹಣವನ್ನು ಸೂಳೆಯರಿಗೆ ಖರ್ಚುಮಾಡಿ ಮನೆಗೆ ಹಿಂತಿರುಗಿ ಬಂದಾಗ ನೀನು ಅವನಿಗಾಗಿ ಕೊಬ್ಬಿದ ಕರುವನ್ನು ಕೊಯ್ಸಿದ್ದಿ!’ ಅಂದನು.
31 “ಆದರೆ ತಂದೆಯು ಅವನಿಗೆ, ‘ಮಗನೇ, ನೀನು ಯಾವಾಗಲೂ ನನ್ನೊಂದಿಗೆ ಇರುತ್ತೀ. ನನಗಿರುವುದೆಲ್ಲಾ ನಿನ್ನದೇ. 32 ನಾವು ಸಂತೋಷಪಡಬೇಕು. ಉಲ್ಲಾಸಪಡಬೇಕು, ಏಕೆಂದರೆ ನಿನ್ನ ತಮ್ಮನು ಸತ್ತುಹೋಗಿದ್ದನು, ಈಗಲಾದರೋ ಮತ್ತೆ ಜೀವಂತವಾಗಿ ಬಂದಿದ್ದಾನೆ. ಅವನು ಕಳೆದುಹೋಗಿದ್ದನು, ಈಗಲಾದರೋ ಮತ್ತೆ ಸಿಕ್ಕಿದ್ದಾನೆ’ ಅಂದನು.”
30 “ಈಗಲಾದರೋ, ನನಗಿಂತ ಚಿಕ್ಕವರೂ ನನ್ನನ್ನು ಗೇಲಿ ಮಾಡುತ್ತಾರೆ.
ಅವರ ತಂದೆಗಳನ್ನು ನನ್ನ ಕುರಿಕಾಯುವ ನಾಯಿಗಳಿಗೂ ಯೋಗ್ಯರಲ್ಲವೆಂದು ತಳ್ಳಿಬಿಟ್ಟಿದ್ದೆನು.
2 ಆ ಯೌವನಸ್ಥರ ತಂದೆಗಳಿಗೆ ನನ್ನಲ್ಲಿ ಕೆಲಸ ಮಾಡುವಷ್ಟು ಬಲವಿರಲಿಲ್ಲ.
ಅವರು ಮುದುಕರಾಗಿದ್ದರು; ತ್ರಾಣವಿಲ್ಲದವರಾಗಿದ್ದರು.
3 ಆ ಮನುಷ್ಯರು ಬಡಕಲಾಗಿದ್ದರು; ತಿನ್ನಲಿಕ್ಕಿಲ್ಲದೆ ಹಸಿವೆಯಿಂದಿದ್ದರು;
ಅಡವಿಯ ಒಣಧೂಳನ್ನು ತಿನ್ನುತ್ತಿದ್ದರು.
4 ಅವರು ಮರುಭೂಮಿಯಲ್ಲಿ ಉಪ್ಪುಸಸಿಗಳನ್ನು ಕೀಳುತ್ತಿದ್ದರು;
ಕುರುಚಲು ಮರದ ಬೇರುಗಳನ್ನು ತಿನ್ನುತ್ತಿದ್ದರು.
5 ಅವರನ್ನು ಬೇರೆಯವರು ಬಲವಂತದಿಂದ ಹೊರಗಟ್ಟುತ್ತಿದ್ದರು.
ಕಳ್ಳರನ್ನೋ ಎಂಬಂತೆ ಜನರು ಅವರನ್ನು ಕಂಡು ಕೂಗಿಕೊಳ್ಳುತ್ತಿದ್ದರು.
6 ಆ ಮುದುಕರು ನದಿಯ ದಂಡೆಗಳಲ್ಲಿಯೂ ನೆಲದ ಕುಳಿಗಳಲ್ಲಿಯೂ
ಗುಹೆಗಳಲ್ಲಿಯೂ ವಾಸಿಸುತ್ತಿದ್ದರು.
7 ಅವರು ಪೊದೆಗಳಲ್ಲಿ ಕಾಡುಕತ್ತೆಗಳಂತೆ ಅರಚುತ್ತಿದ್ದರು;
ಮುಳ್ಳುಗಿಡಗಳ ಕೆಳಗೆ ಕೂಡಿಕೊಳ್ಳುತ್ತಿದ್ದರು.
8 ಅಯೋಗ್ಯರಾಗಿದ್ದ ಈ ಗುಂಪಿನವರು
ದೇಶಭ್ರಷ್ಟರಾಗಿದ್ದರು.
9 “ಈಗಲಾದರೋ ಅವರ ಗಂಡುಮಕ್ಕಳು ನನ್ನ ಮೇಲೆ ಗೇಲಿ ಹಾಡುಗಳನ್ನು ಕಟ್ಟುವರು;
ನನ್ನ ಹೆಸರು ಅವರಿಗೆ ಹಾಸ್ಯವಾಯಿತು.
10 ಆ ಯೌವನಸ್ಥರು ನನ್ನನ್ನು ಕಂಡು ಅಸಹ್ಯಪಡುತ್ತಾರೆ; ನನ್ನಿಂದ ದೂರ ನಿಲ್ಲುತ್ತಾರೆ.
ನನ್ನ ಮುಖದ ಮೇಲೆ ಉಗುಳುವುದಕ್ಕೂ ಅವರು ಹಿಂದೆಗೆಯರು!
11 ದೇವರು ನನ್ನ ಬಿಲ್ಲಿನ ತಂತಿಯನ್ನು ಕಿತ್ತು ನನ್ನನ್ನು ಬಲಹೀನಗೊಳಿಸಿದ್ದಾನೆ.
ಆ ಯೌವನಸ್ಥರು ಕಡಿವಾಣವಿಲ್ಲದವರಾಗಿ ಕೋಪದಿಂದ ನನಗೆ ವಿರೋಧವಾಗಿ ಎದ್ದಿದ್ದಾರೆ.
12 ಅವರು ನನ್ನ ಬಲಗಡೆಯಲ್ಲಿ ಎದ್ದು ನನ್ನ ಕಾಲುಗಳನ್ನು ಹಿಂದಕ್ಕೆ ನೂಕಿ
ನನ್ನನ್ನು ನಾಶಮಾಡಲು ದಿಬ್ಬಹಾಕಿದ್ದಾರೆ.
13 ನಾನು ತಪ್ಪಿಸಿಕೊಂಡು ಹೋಗುವ ದಾರಿಯನ್ನು ಆ ಯೌವನಸ್ಥರು ಕಾಯುತ್ತಿದ್ದಾರೆ.
ನನ್ನನ್ನು ನಾಶಮಾಡುವುದರಲ್ಲಿ ಅವರು ಯಶಸ್ವಿಯಾಗುವರು.
ಅವರಿಗೆ ವಿರುದ್ಧವಾಗಿ ನನಗೆ ಸಹಾಯಮಾಡಲು ಯಾರೂ ಇಲ್ಲ.
14 ಅವರು ಗೋಡೆಯನ್ನು ಒಡೆದು ನುಗ್ಗಿಬರಲು
ಕಲ್ಲುಗಳು ನನ್ನ ಮೇಲೆ ಬೀಳುವವು.
15 ನಾನು ಭಯದಿಂದ ನಡುಗುತ್ತಿರುವೆ.
ಗಾಳಿಯು ವಸ್ತುಗಳನ್ನು ಕೊಚ್ಚಿಕೊಂಡು ಹೋಗುವಂತೆ ಆ ಯೌವನಸ್ಥರು ನನ್ನ ಮಾನವನ್ನು ಅಟ್ಟಿಬಿಡುವರು.
ನನ್ನ ಸುರಕ್ಷತೆಯು ಮೋಡದಂತೆ ಕಾಣದೆಹೋಗುವುದು.
16 “ಈಗ ನನ್ನ ಜೀವಿತವು ಕೊನೆಗೊಂಡಿದೆ; ಸಾವು ಸಮೀಪವಾಗಿದೆ.
ಸಂಕಟದ ದಿನಗಳು ನನ್ನನ್ನು ಹಿಡಿದುಕೊಂಡಿವೆ.
17 ರಾತ್ರಿಯಲ್ಲಿ ನನ್ನ ಎಲುಬುಗಳೆಲ್ಲಾ ನೋಯುತ್ತವೆ.
ನನ್ನನ್ನು ಕಚ್ಚುತ್ತಿರುವ ನೋವು ನಿಲ್ಲುವುದೇ ಇಲ್ಲ.
18 ದೇವರು ನನ್ನ ಮೇಲಂಗಿಯ ಕೊರಳಪಟ್ಟಿಯನ್ನು ಹಿಡಿದು
ನನ್ನ ಬಟ್ಟೆಯನ್ನು ತಿರುವಿಬಿಟ್ಟಿದ್ದಾನೆ.
19 ದೇವರು ನನ್ನನ್ನು ಮಣ್ಣಿಗೆ ಎಸೆದುಬಿಟ್ಟಿದ್ದಾನೆ,
ನಾನು ಧೂಳಿನಂತೆಯೂ ಬೂದಿಯಂತೆಯೂ ಆಗಿದ್ದೇನೆ.
20 “ದೇವರೇ, ನಾನು ಸಹಾಯಕ್ಕಾಗಿ ನಿನಗೆ ಮೊರೆಯಿಡುವೆನು, ಆದರೆ ನೀನು ಉತ್ತರಿಸುವುದಿಲ್ಲ.
ನಾನು ಎದ್ದುನಿಂತು ಪ್ರಾರ್ಥಿಸಿದರೂ ನೀನು ನನಗೆ ಗಮನ ಕೊಡುವುದಿಲ್ಲ.
21 ದೇವರೇ, ನೀನು ನನ್ನ ಪಾಲಿಗೆ ಕ್ರೂರನಾಗಿಬಿಟ್ಟೆ.
ನಿನ್ನ ಶಕ್ತಿಯಿಂದ ನನ್ನನ್ನು ನೋಯಿಸುತ್ತಿರುವೆ.
22 ದೇವರೆ, ನನ್ನನ್ನು ಎತ್ತಿಕೊಂಡು ಹೋಗಲು ನೀನು ಬಿರುಗಾಳಿಗೆ ಅವಕಾಶಕೊಟ್ಟೆ;
ನೀನು ನನ್ನನ್ನು ಎತ್ತಿ ಬಿರುಗಾಳಿಗೆ ಎಸೆದುಬಿಟ್ಟೆ.
23 ನೀನು ನನ್ನನ್ನು ಮರಣಕ್ಕೀಡು ಮಾಡಿರುವುದು ನನಗೆ ಗೊತ್ತಿದೆ.
ಜೀವಿಸಿರುವ ಪ್ರತಿಯೊಬ್ಬನೂ ಸಾಯಲೇಬೇಕು.
24 “ಆದರೆ ಈಗಾಗಲೇ ನಾಶವಾಗಿ ಸಹಾಯಕ್ಕಾಗಿ ಕೂಗಿಕೊಳ್ಳುವವನಿಗೆ
ಯಾರೂ ಕೇಡುಮಾಡುವುದಿಲ್ಲ.
25 ದೇವರೇ, ಕಷ್ಟದಲ್ಲಿರುವವರಿಗಾಗಿ ನಾನು ಅತ್ತದ್ದು ನಿನಗೆ ಗೊತ್ತಿದೆ.
ಬಡವರಿಗೋಸ್ಕರ ನನ್ನ ಹೃದಯವು ಬಹು ದುಃಖಗೊಂಡದ್ದು ನಿನಗೆ ತಿಳಿದಿದೆ.
26 ಆದರೆ ನಾನು ಒಳ್ಳೆಯವುಗಳನ್ನು ನಿರೀಕ್ಷಿಸುತ್ತಿದ್ದಾಗ ನನಗೆ ಕೇಡುಗಳೇ ಆದವು.
ನಾನು ಬೆಳಕಿಗಾಗಿ ಎದುರುನೋಡುತ್ತಿದ್ದಾಗ ನನಗೆ ಕತ್ತಲಾಯಿತು.
27 ನನ್ನ ಅಂತರಂಗವು ಕುದಿಯುತ್ತಿದೆ; ಸಂಕಟವು ನಿಲ್ಲುತ್ತಲೇ ಇಲ್ಲ.
ಸಂಕಟವು ಈಗ ತಾನೆ ಆರಂಭಗೊಂಡಿದೆ.
28 ನಾನು ದುಃಖಿತನೂ ಕುಂದಿಹೋದವನೂ ಆಗಿರುವೆ; ನನಗೆ ಉಪಶಮನವೇ ಇಲ್ಲ.
ನಾನು ಸಭೆಯಲ್ಲಿ ನಿಂತುಕೊಂಡು ಸಹಾಯಕ್ಕಾಗಿ ಕೂಗುತ್ತಿರುವೆ.
29 ನಾನು ನರಿಗಳಂತೆಯೂ ಉಷ್ಟ್ರಪಕ್ಷಿಗಳಂತೆಯೂ
ಒಬ್ಬಂಟಿಗನಾಗಿರುವೆ.
30 ನನ್ನ ಚರ್ಮವು ಕಡುಕಪ್ಪಾಗಿದೆ.
ನನ್ನ ದೇಹವು ಜ್ವರದಿಂದ ಬಿಸಿಯಾಗಿದೆ.
31 ಶೋಕಗೀತೆಗಳನ್ನು ನುಡಿಸಲು ನನ್ನ ಹಾರ್ಪ್ ವಾದ್ಯವನ್ನು ಶೃತಿ ಮಾಡಲಾಗಿದೆ.
ನನ್ನ ಕೊಳಲು ಅಳುವವರಿಗೆ ತಕ್ಕಂತೆ ನುಡಿಯುತ್ತದೆ.
ಇತರ ವಿಶ್ವಾಸಿಗಳಿಗಾಗಿ ಹಣ ಸಂಗ್ರಹಣೆ
16 ದೇವಜನರಿಗೋಸ್ಕರ ಹಣ ಸಂಗ್ರಹಿಸುವುದರ ವಿಷಯವಾಗಿ ಈಗ ನಾನು ಬರೆಯುತ್ತೇನೆ. ನಾನು ಗಲಾತ್ಯ ಸಭೆಗಳಿಗೆ ಹೇಳಿಕೊಟ್ಟಂತೆ ನೀವೂ ಮಾಡಿರಿ. 2 ನಿಮ್ಮಲ್ಲಿ ಪ್ರತಿಯೊಬ್ಬನು ತನಗಾದ ಅಭಿವೃದ್ಧಿಗೆ ತಕ್ಕಂತೆ ನಿಮ್ಮಿಂದ ಸಾಧ್ಯವಾದಷ್ಟು ಹಣವನ್ನು ಪ್ರತಿವಾರದ ಮೊದಲನೆಯ ದಿನವೇ ಪ್ರತ್ಯೇಕಿಸಿ, ವಿಶೇಷವಾದ ಸ್ಥಳವೊಂದರಲ್ಲಿ ಇಟ್ಟಿರಬೇಕು. ಆಗ ನಾನು ನಿಮ್ಮಲ್ಲಿಗೆ ಬಂದ ನಂತರ ಹಣವನ್ನು ಸಂಗ್ರಹಿಸುವ ಅವಶ್ಯಕತೆಯಿರುವುದಿಲ್ಲ. 3 ನಾನು ಬಂದಾಗ, ನಿಮ್ಮ ಕೊಡುಗೆಯನ್ನು ಕೆಲವರ ಮೂಲಕ ಜೆರುಸಲೇಮಿಗೆ ಕಳುಹಿಸುವೆನು. ನೀವೆಲ್ಲರೂ ಯಾರನ್ನು ಇಷ್ಟಪಡುತ್ತೀರೋ ಅವರಿಗೆ ನಾನು ಪರಿಚಯದ ಪತ್ರಗಳನ್ನು ಕೊಟ್ಟು ಕಳುಹಿಸುವೆನು. 4 ಒಂದುವೇಳೆ, ನಾನು ಸಹ ಹೋಗುವುದು ಒಳ್ಳೆಯದೆನಿಸಿದರೆ, ಆ ಜನರು ನನ್ನೊಂದಿಗೆ ಬರಲಿ.
ಪೌಲನ ಯೋಜನೆಗಳು
5 ನಾನು ಮಕೆದೋನಿಯದ ಮೂಲಕ ಹೋಗಬೇಕೆಂದಿರುವೆ. ಆದ್ದರಿಂದ ಮಕೆದೋನಿಯದ ಪ್ರವಾಸವನ್ನು ಮುಗಿಸಿಕೊಂಡು ನಿಮ್ಮಲ್ಲಿಗೆ ಬರುವೆನು. 6 ನಾನು ನಿಮ್ಮೊಂದಿಗೆ ಸ್ವಲ್ಪಕಾಲ ಇಳಿದುಕೊಳ್ಳಬಹುದು. ಒಂದುವೇಳೆ ಚಳಿಗಾಲವನ್ನು ಪೂರ್ತಿಯಾಗಿ ನಿಮ್ಮಲ್ಲಿ ಕಳೆಯಬೇಕಾಗಬಹುದು. ಬಳಿಕ ನಾನು ಹೋಗಬೇಕಾದ ಸ್ಥಳಕ್ಕೆ ನೀವು ನನ್ನನ್ನು ಕಳುಹಿಸಿಕೊಡಬೇಕು. 7 ಈಗ ನಿಮ್ಮ ಬಳಿಗೆ ಬರಲು ನನಗೆ ಇಷ್ಟವಿಲ್ಲ. ಏಕೆಂದರೆ ನಾನು ಬೇರೆ ಸ್ಥಳಗಳಿಗೆ ಹೋಗಬೇಕಾಗಿರುವುದರಿಂದ ನಿಮ್ಮೊಂದಿಗೆ ಬಹಳ ಕಾಲವಿರಲು ಸಾಧ್ಯವಿಲ್ಲ. ಪ್ರಭುವು ಅವಕಾಶಕೊಡುವುದಾದರೆ, ನಾನು ನಿಮ್ಮೊಂದಿಗೆ ದೀರ್ಘಕಾಲ ತಂಗುವ ನಿರೀಕ್ಷೆಯಿಂದಿದ್ದೇನೆ. 8 ಆದರೆ ನಾನು ಪಂಚಾಶತ್ತಮ ಹಬ್ಬದವರೆಗೆ ಎಫೆಸದಲ್ಲಿ ಇರುತ್ತೇನೆ. 9 ಯಾಕೆಂದರೆ ಮಹತ್ವವಾದ ಮತ್ತು ಫಲಭರಿತವಾದ ಸೇವೆಯನ್ನು ಮಾಡಲು ಇಲ್ಲಿ ನನಗೆ ಒಳ್ಳೆಯ ಅವಕಾಶಗಳಿವೆ. ಆದರೂ ಇಲ್ಲಿ ನನಗೆ ಅನೇಕ ವಿರೋಧಿಗಳಿದ್ದಾರೆ.
10 ತಿಮೊಥೆಯನು ನಿಮ್ಮ ಬಳಿಗೆ ಬರಬಹುದು. ಅವನು ನಿಮ್ಮೊಂದಿಗಿರುವಾಗ ಅವನಿಗೆ ಚಿಂತೆಯಾಗದಂತೆ ನೋಡಿಕೊಳ್ಳಿರಿ. ನಾನು ಪ್ರಭುವಿಗೋಸ್ಕರ ಕೆಲಸ ಮಾಡುತ್ತಿರುವಂತೆ ಅವನು ಸಹ ಮಾಡುತ್ತಿದ್ದಾನೆ. 11 ಆದ್ದರಿಂದ ನಿಮ್ಮಲ್ಲಿ ಯಾರೂ ಅವನನ್ನು ತಿರಸ್ಕರಿಸಬಾರದು. ಅವನನ್ನು ನನ್ನ ಬಳಿಗೆ ಸಮಾಧಾನದಿಂದ ಕಳುಹಿಸಿಕೊಡಿರಿ. ಅವನು ಸಹೋದರರೊಂದಿಗೆ ಬರುವುದನ್ನು ನಾನು ಎದುರು ನೋಡುತ್ತಿದ್ದೇನೆ.
12 ನಮ್ಮ ಸಹೋದರನಾದ ಅಪೊಲ್ಲೋಸನ ಬಗ್ಗೆ ನಾನು ಹೇಳುವುದೇನೆಂದರೆ, ಇತರ ಸಹೋದರರೊಂದಿಗೆ ನಿಮ್ಮನ್ನು ಸಂದರ್ಶಿಸಲು ನಾನು ಅವನನ್ನು ಬಹಳವಾಗಿ ಪ್ರೋತ್ಸಾಹಿಸಿದ್ದೇನೆ. ಆದರೆ ಈಗ ಬರುವುದಕ್ಕೆ ಅವನಿಗೆ ನಿಶ್ಚಯವಾಗಿ ಇಷ್ಟವಿರಲಿಲ್ಲ. ಆದರೆ ಅವಕಾಶ ಸಿಕ್ಕಿದಾಗ ಅವನು ನಿಮ್ಮ ಬಳಿಗೆ ಬರುವನು.
ಅಂತಿಮ ಮಾತುಗಳು
13 ಜಾಗರೂಕರಾಗಿರಿ, ನಂಬಿಕೆಯಲ್ಲಿ ದೃಢವಾಗಿರಿ. ಧೈರ್ಯದಿಂದಿರಿ ಮತ್ತು ಬಲಿಷ್ಠರಾಗಿರಿ. 14 ಪ್ರತಿಯೊಂದನ್ನು ಪ್ರೀತಿಯಿಂದ ಮಾಡಿರಿ.
15 ಅಖಾಯದಲ್ಲಿ ಪ್ರಥಮ ವಿಶ್ವಾಸಿಗಳಾದ ಸ್ತೆಫನನನ್ನು ಮತ್ತು ಅವನ ಕುಟುಂಬದವರನ್ನು ನೀವು ಬಲ್ಲಿರಿ. ಅವರು ದೇವರ ಸೇವೆಗಾಗಿ ತಮ್ಮನ್ನು ಒಪ್ಪಿಸಿಕೊಂಡಿದ್ದಾರೆ. ಸಹೋದರ ಸಹೋದರಿಯರೇ, ನಾನು ನಿಮ್ಮನ್ನು ಕೇಳಿಕೊಳ್ಳುವುದೇನೆಂದರೆ, 16 ಈ ರೀತಿಯ ಮುಂದಾಳುಗಳನ್ನು ಮತ್ತು ಅವರೊಂದಿಗೆ ಕೆಲಸ ಮಾಡುವವರನ್ನು ಹಾಗೂ ಸೇವೆ ಮಾಡುವವರನ್ನು ಹಿಂಬಾಲಿಸಿರಿ.
17 ಸ್ತೆಫನನು, ಪೊರ್ತುನಾತನು ಮತ್ತು ಅಖಾಯಿಕನು ಬಂದುದರಿಂದ ನನಗೆ ಸಂತೋಷವಾಯಿತು. ನೀವು ಇಲ್ಲದ್ದರಿಂದ ನನಗುಂಟಾದ ಕೊರತೆಯನ್ನು ಅವರು ನೀಗಿಸಿದ್ದಾರೆ. 18 ಅವರು ನನ್ನ ಆತ್ಮಕ್ಕೂ ನಿಮ್ಮ ಆತ್ಮಗಳಿಗೂ ವಿಶ್ರಾಂತಿಯನ್ನು ಕೊಟ್ಟಿದ್ದಾರೆ. ಇಂಥ ಜನರ ಮೌಲ್ಯವನ್ನು ನೀವು ಗುರುತಿಸಬೇಕು.
19 ಏಷ್ಯಾದ ಸಭೆಗಳವರು ನಿಮಗೆ ವಂದನೆಗಳನ್ನು ತಿಳಿಸಿದ್ದಾರೆ. ಅಕ್ವಿಲನು ಮತ್ತು ಪ್ರಿಸ್ಕಿಲ್ಲಳು ಪ್ರಭುವಿನ ಹೆಸರಿನಲ್ಲಿ ನಿಮಗೆ ಬಹಳ ವಂದನೆಗಳನ್ನು ತಿಳಿಸಿದ್ದಾರೆ. ಅವರ ಮನೆಯಲ್ಲಿ ಸೇರಿಬರುವ ಸಭೆಯವರು ಸಹ ನಿಮಗೆ ವಂದನೆ ತಿಳಿಸಿದ್ದಾರೆ. 20 ಇಲ್ಲಿರುವ ಎಲ್ಲಾ ಸಹೋದರ ಸಹೋದರಿಯರು ನಿಮಗೆ ವಂದನೆ ತಿಳಿಸಿದ್ದಾರೆ. ನೀವು ಒಬ್ಬರನ್ನೊಬ್ಬರು ಭೇಟಿಯಾಗುವಾಗ ಪವಿತ್ರವಾದ ಮುದ್ದಿಟ್ಟು ವಂದಿಸಿರಿ.
21 ಪೌಲನಾದ ನಾನು ನನ್ನ ಕೈಯಾರೆ ಈ ವಂದನೆಗಳನ್ನು ಬರೆಯುತ್ತಿದ್ದೇನೆ.
22 ಯಾವನಾದರೂ ಪ್ರಭುವನ್ನು ಪ್ರೀತಿಸದಿದ್ದರೆ, ಅವನು ಜೀವದಿಂದ ಬೇರ್ಪಟ್ಟು ನಿತ್ಯನಾಶನ ಹೊಂದಲಿ!
ಪ್ರಭುವೇ ಬಾ!
23 ಪ್ರಭುವಾದ ಯೇಸುವಿನ ಕೃಪೆಯು ನಿಮ್ಮೊಂದಿಗಿರಲಿ.
24 ಕ್ರಿಸ್ತ ಯೇಸುವಿನಲ್ಲಿ ನಿಮ್ಮೆಲ್ಲರೊಂದಿಗೆ ನನ್ನ ಪ್ರೀತಿಯಿರಲಿ!
Kannada Holy Bible: Easy-to-Read Version. All rights reserved. © 1997 Bible League International