Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 11:1-12:21

ಚೊಚ್ಚಲು ಮಕ್ಕಳ ಮರಣ

11 ಬಳಿಕ ಯೆಹೋವನು ಮೋಶೆಗೆ, “ನಾನು ಫರೋಹನಿಗೂ ಈಜಿಪ್ಟಿಗೂ ಮತ್ತೊಂದು ವಿಪತ್ತನ್ನು ಬರಮಾಡುತ್ತೇನೆ. ಆಗ ಅವನು ನಿಮ್ಮನ್ನು ಈಜಿಪ್ಟಿನಿಂದ ಕಳುಹಿಸುವನು; ನಿಮ್ಮನ್ನು ಬಲವಂತದಿಂದ ಕಳುಹಿಸಿಬಿಡುವನು. ನೀನು ಇಸ್ರೇಲರಿಗೆ ಈ ಸಂದೇಶವನ್ನು ತಿಳಿಸು: ‘ಸ್ತ್ರೀಯರೂ ಪುರುಷರೂ ತಮ್ಮ ನೆರೆಯವರಿಂದ ಬೆಳ್ಳಿಬಂಗಾರಗಳ ವಸ್ತುಗಳನ್ನು ಕೇಳಿಕೊಳ್ಳಬೇಕು.’ ಈಜಿಪ್ಟಿನವರು ನಿಮಗೆ ದಯೆತೋರುವಂತೆ ಯೆಹೋವನು ಅವರನ್ನು ಪ್ರೇರೇಪಿಸುವನು. ಈಜಿಪ್ಟಿನ ಜನರು ಮತ್ತು ಫರೋಹನ ಅಧಿಕಾರಿಗಳು ಮೋಶೆಯನ್ನು ಮಹಾಪುರುಷನೆಂದು ತಿಳಿದುಕೊಂಡಿದ್ದಾರೆ” ಎಂದು ಹೇಳಿದನು.

ಮೋಶೆಯು ಜನರಿಗೆ, “ಯೆಹೋವನು ಹೀಗೆನ್ನುತ್ತಾನೆ: ‘ಇಂದು ಮಧ್ಯರಾತ್ರಿ ನಾನು ಈಜಿಪ್ಟಿನ ಮೂಲಕ ಹಾದುಹೋಗುವೆನು. ಈಜಿಪ್ಟಿನ ಚೊಚ್ಚಲು ಮಕ್ಕಳೆಲ್ಲರೂ ಅಂದರೆ ಫರೋಹನ ಚೊಚ್ಚಲು ಮಗನಿಂದಿಡಿದು ಧಾನ್ಯವನ್ನು ಬೀಸುವ ಸೇವಕಿಯ ಚೊಚ್ಚಲು ಮಗನವರೆಗೂ ಇರುವ ಚೊಚ್ಚಲು ಮಕ್ಕಳೆಲ್ಲರೂ ಸಾಯುವರು. ಇದಲ್ಲದೆ ಚೊಚ್ಚಲು ಪಶುಗಳೂ ಸಾಯುತ್ತವೆ. ಈಜಿಪ್ಟಿನಲ್ಲೆಲ್ಲಾ ದೊಡ್ಡ ಗೋಳಾಟ ಉಂಟಾಗುವುದು, ಅಂಥ ಗೋಳಾಟ ಈವರೆಗೂ ಆಗಿಲ್ಲ; ಮುಂದೆಯೂ ಆಗುವುದಿಲ್ಲ. ಆದರೆ ಇಸ್ರೇಲರಲ್ಲಿ ಯಾರಿಗೂ ಕೇಡಾಗುವುದಿಲ್ಲ. ಒಂದು ನಾಯಿಯೂ ಅವರಿಗೆ ಬೊಗಳುವುದಿಲ್ಲ. ಇಸ್ರೇಲಿನ ಜನರಿಗಾಗಲಿ ಪಶುಗಳಿಗಾಗಲಿ ಕೇಡಾಗುವುದಿಲ್ಲ. ಇಸ್ರೇಲರಿಗೂ ಮತ್ತು ಈಜಿಪ್ಟಿನವರಿಗೂ ನಾನು ವ್ಯತ್ಯಾಸ ಮಾಡಿದ್ದೇನೆಂದು ಆಗ ನೀವು ತಿಳಿದುಕೊಳ್ಳುವಿರಿ. ಆಗ ನಿಮ್ಮ ಈ ಗುಲಾಮರೆಲ್ಲರೂ (ಈಜಿಪ್ಟಿನ ಅಧಿಕಾರಿಗಳು) ನನ್ನ ಬಳಿಗೆ ಬಂದು ನನಗೆ ಅಡ್ಡಬಿದ್ದು ನನ್ನನ್ನು ಆರಾಧಿಸುವರು.’ ಅವರು, ‘ಹೊರಟುಹೋಗಿ, ನಿಮ್ಮ ಜನರೆಲ್ಲರನ್ನು ನಿಮ್ಮೊಂದಿಗೆ ಕರೆದುಕೊಂಡು ಹೋಗಿರಿ’ ಎಂದು ಹೇಳುವರು. ಆಗ ನಾನು ಫರೋಹನ ಬಳಿಯಿಂದ ಬಿಟ್ಟುಹೋಗುವೆನು” ಅಂದನು.

ಬಳಿಕ ಯೆಹೋವನು ಮೋಶೆಗೆ, “ಫರೋಹನು ನಿನ್ನ ಮಾತಿಗೆ ಕಿವಿಗೊಡುವುದಿಲ್ಲ. ಯಾಕೆಂದರೆ ನಾನು ನನ್ನ ಮಹಾಶಕ್ತಿಯನ್ನು ಈಜಿಪ್ಟಿನಲ್ಲಿ ತೋರಿಸಬೇಕಾಗಿದೆ” ಅಂದನು. 10 ಯೆಹೋವನು ಫರೋಹನ ಹೃದಯವನ್ನು ಕಠಿಣಗೊಳಿಸಿದ್ದರಿಂದ ಫರೋಹನು ಇಸ್ರೇಲರನ್ನು ಕಳುಹಿಸಿಕೊಡಲಿಲ್ಲ; ಆದ್ದರಿಂದ ಮೋಶೆ ಆರೋನರು ಈ ಅದ್ಭುತಕಾರ್ಯಗಳನ್ನೆಲ್ಲಾ ಮಾಡಿದರು.

ಪಸ್ಕ ಹಬ್ಬ

12 ಮೋಶೆ ಆರೋನರು ಇನ್ನೂ ಈಜಿಪ್ಟಿನಲ್ಲಿದ್ದಾಗ ಯೆಹೋವನು ಅವರೊಡನೆ ಮಾತಾಡಿ, “ಈ ತಿಂಗಳು ನಿಮಗೆ ವರ್ಷದ ಮೊದಲನೆ ತಿಂಗಳಾಗಿರುವುದು. ಈ ಆಜ್ಞೆಯು ಇಡೀ ಇಸ್ರೇಲರ ಸಮೂಹಕ್ಕೆ ಅನ್ವಯಿಸುತ್ತದೆ. ಈ ತಿಂಗಳ ಹತ್ತನೆಯ ದಿನದಲ್ಲಿ ಪ್ರತಿಯೊಬ್ಬನು ತನ್ನ ಮನೆಯಲ್ಲಿರುವ ಜನರಿಗಾಗಿ ಒಂದು ಕುರಿಮರಿಯನ್ನು ಅಥವಾ ಒಂದು ಆಡುಮರಿಯನ್ನು ಕೊಯ್ಯಬೇಕು. ಅದನ್ನು ಸಂಪೂರ್ಣವಾಗಿ ತಿನ್ನಲು ಅವನ ಮನೆಯಲ್ಲಿ ಸಾಕಷ್ಟು ಜನರಿಲ್ಲದಿದ್ದರೆ ಅವನು ತನ್ನ ನೆರೆಯವರನ್ನು ಆಮಂತ್ರಿಸಿ ಅವರೊಂದಿಗೆ ಅದರ ಮಾಂಸವನ್ನು ಹಂಚಿಕೊಳ್ಳಬೇಕು. ಪ್ರತಿಯೊಬ್ಬನಿಗೂ ತಿನ್ನಲು ಸಾಕಷ್ಟು ಮಾಂಸವಿರಬೇಕು. ಅದು ಒಂದು ವರ್ಷದ ಗಂಡು ಕುರಿಯಾಗಿರಬೇಕು ಅಥವಾ ಆಡಾಗಿರಬೇಕು. ಅಲ್ಲದೆ ಕಳಂಕ ರಹಿತವಾಗಿರಬೇಕು. ಈ ತಿಂಗಳ ಹದಿನಾಲ್ಕನೆಯ ದಿನದವರೆಗೆ ನೀವು ಆ ಪಶುವನ್ನು ಸಾಕಬೇಕು. ಅಂದು ಸಂಜೆ ಇಸ್ರೇಲರೆಲ್ಲರೂ ಆ ಪಶುಗಳನ್ನು ಕೊಯ್ಯಬೇಕು. ಈ ಪಶುಗಳ ರಕ್ತವನ್ನು ತೆಗೆದಿಟ್ಟು ಜನರು ಭೋಜನಮಾಡುವ ಮನೆಗಳ ಬಾಗಿಲಿನ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗಳಿಗೂ ಆ ರಕ್ತವನ್ನು ಹಚ್ಚಬೇಕು.

“ಅಂದು ರಾತ್ರಿ ಆ ಪಶುವಿನ ಮಾಂಸವನ್ನು ಸುಟ್ಟು ಸಂಪೂರ್ಣವಾಗಿ ತಿನ್ನಬೇಕು. ಅದರೊಡನೆ ಕಹಿಯಾದ ಪಲ್ಯಗಳನ್ನೂ ಹುಳಿಯಿಲ್ಲದ ರೊಟ್ಟಿಯನ್ನೂ ತಿನ್ನಬೇಕು. ನೀವು ಆ ಪಶುವಿನ ಮಾಂಸವನ್ನು ಹಸಿಯಾಗಲಿ ನೀರಿನಲ್ಲಿ ಬೇಯಿಸಿಯಾಗಲಿ ತಿನ್ನಬಾರದು; ಅದರ ಮಾಂಸವನ್ನು ಬೆಂಕಿಯ ಮೇಲಿಟ್ಟು ಬೇಯಿಸಬೇಕು. ಅದರ ತಲೆ, ಕಾಲುಗಳನ್ನೂ ಒಳಗಿನ ಭಾಗಗಳನ್ನೂ ಬೆಂಕಿಯ ಮೇಲೆ ಬೇಯಿಸಬೇಕು. 10 ಅದರ ಮಾಂಸವನ್ನೆಲ್ಲಾ ಆ ರಾತ್ರಿಯಲ್ಲಿಯೇ ತಿನ್ನಬೇಕು. ಬೆಳಗಾಗುವವರೆಗೆ ಮಾಂಸವೇನಾದರೂ ಉಳಿದರೆ ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.

11 “ನೀವು ಭೋಜನ ಮಾಡುವಾಗ ಪ್ರಯಾಣ ಮಾಡುತ್ತಿರುವಂತೆ ಬಟ್ಟೆ ಧರಿಸಿಕೊಂಡಿರಬೇಕು; ಕೆರಗಳನ್ನು ಹಾಕಿಕೊಂಡು ನಿಮ್ಮ ಊರುಗೋಲನ್ನು ಕೈಯಲ್ಲಿ ಹಿಡಿದಿರಬೇಕು. ನೀವು ಅವಸವಸರವಾಗಿ ತಿನ್ನಬೇಕು. ಯಾಕೆಂದರೆ ಇದು ಯೆಹೋವನ ಪಸ್ಕಹಬ್ಬ.

12 “ಆ ರಾತ್ರಿ ನಾನು ಈಜಿಪ್ಟಿನ ಮೂಲಕ ಹಾದುಹೋಗಿ ಈಜಿಪ್ಟಿನ ಚೊಚ್ಚಲು ಪಶುಗಳನ್ನೂ ಚೊಚ್ಚಲು ಗಂಡುಮಕ್ಕಳನ್ನೂ ಕೊಲ್ಲುವೆನು; ಈಜಿಪ್ಟಿನ ಎಲ್ಲಾ ದೇವರುಗಳಿಗೆ ತೀರ್ಪು ಮಾಡುವೆನು. ನಾನೇ ಯೆಹೋವನೆಂದು ತೋರಿಸಿಕೊಡುವೆನು. 13 ಆದರೆ ನಿಮ್ಮ ಮನೆಗಳಿಗೆ ಹಚ್ಚಿರುವ ರಕ್ತವು ಒಂದು ವಿಶೇಷ ಸೂಚನೆಯಾಗಿದೆ. ನಾನು ಆ ರಕ್ತವನ್ನು ನೋಡಿದಾಗ ನಿಮ್ಮ ಮನೆಯನ್ನು ದಾಟಿಹೋಗುವೆನು.[a] ಈಜಿಪ್ಟಿನ ಜನರಿಗೆ ಕೇಡುಗಳಾಗುವಂತೆ ಮಾಡುವೆನು. ಆದರೆ ಆ ವ್ಯಾಧಿಗಳು ನಿಮಗೆ ಹಾನಿ ಮಾಡುವುದಿಲ್ಲ.

14 “ಆದ್ದರಿಂದ ನೀವು ಆ ರಾತ್ರಿಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವಿರಿ. ಅದು ನಿಮಗೆ ವಿಶೇಷವಾದ ಹಬ್ಬವಾಗಿರುವುದು. ನಿಮ್ಮ ಸಂತತಿಯವರು ಈ ಹಬ್ಬದಿಂದ ಯೆಹೋವನನ್ನು ಎಂದೆಂದಿಗೂ ಸನ್ಮಾನಿಸುವರು. 15 ಈ ಹಬ್ಬದಲ್ಲಿ ನೀವು ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿವಸ ತಿನ್ನುವಿರಿ. ಹಬ್ಬದ ಪ್ರಥಮ ದಿನದಲ್ಲಿ ನೀವು ನಿಮ್ಮ ಮನೆಯಿಂದ ಎಲ್ಲಾ ಹುಳಿಯನ್ನು ತೆಗೆದುಹಾಕುವಿರಿ. ಈ ಹಬ್ಬದ ಏಳು ದಿನಗಳಲ್ಲಿ ಯಾವುದೇ ಹುಳಿಯನ್ನು ತಿನ್ನಬಾರದು. ಯಾವನಾದರೂ ಹುಳಿಯನ್ನು ತಿಂದರೆ, ನೀವು ಅವನನ್ನು ಇಸ್ರೇಲಿನಿಂದ ಬಹಿಷ್ಕರಿಸಬೇಕು. 16 ಈ ಹಬ್ಬದ ಪ್ರಥಮ ಮತ್ತು ಕೊನೆಯ ದಿನಗಳಲ್ಲಿ ಪವಿತ್ರ ಸಭೆಯಾಗಿ ಕೂಡಿಬರಬೇಕು. ಈ ಹಬ್ಬದ ದಿನಗಳಲ್ಲಿ ನೀವು ಯಾವ ಕೆಲಸವನ್ನೂ ಮಾಡಬಾರದು. ಆದರೆ ನಿಮ್ಮ ಭೋಜನಕ್ಕಾಗಿ ಆಹಾರ ಸಿದ್ಧಪಡಿಸಬಹುದು. 17 ನೀವು ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಲೇಬೇಕು. ಯಾಕೆಂದರೆ ಆ ದಿನದಲ್ಲಿಯೇ ನಾನು ನಿಮ್ಮ ಎಲ್ಲಾ ಜನರ ಗುಂಪುಗಳನ್ನು ಈಜಿಪ್ಟಿನಿಂದ ಬಿಡಿಸಿ ಕರೆದುಕೊಂಡು ಹೋದೆನು. ಆದ್ದರಿಂದ ನಿಮ್ಮ ಸಂತತಿಯವರೆಲ್ಲರೂ ಆ ದಿನವನ್ನು ಜ್ಞಾಪಕಮಾಡಿಕೊಳ್ಳಬೇಕು. ಇದು ಶಾಶ್ವತವಾದ ಕಟ್ಟಳೆಯಾಗಿದೆ. 18 ಆದ್ದರಿಂದ ಪ್ರಥಮ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲ ನೀವು ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಲು ಆರಂಭಿಸಿ ಅದೇ ತಿಂಗಳ ಇಪ್ಪತ್ತೊಂದನೇ ದಿನದ ಸಾಯಂಕಾಲದವರೆಗೂ ತಿನ್ನುವಿರಿ. 19 ಏಳು ದಿನಗಳವರೆಗೆ ನಿಮ್ಮ ಮನೆಗಳಲ್ಲಿ ಯಾವ ಹುಳಿಯೂ ಇರಬಾರದು. ಯಾವ ಇಸ್ರೇಲಿಯಾದರೂ ಯಾವ ವಿದೇಶಿಯನಾದರೂ ಈ ಹಬ್ಬದಲ್ಲಿ ಹುಳಿಯನ್ನು ತಿಂದರೆ, ಅವನನ್ನು ಇಸ್ರೇಲರ ಸಮುದಾಯದಿಂದ ಬಹಿಷ್ಕರಿಸಬೇಕು. 20 ಈ ಹಬ್ಬದಲ್ಲಿ ನೀವು ಹುಳಿಯನ್ನು ತಿನ್ನಬಾರದು. ನೀವು ಎಲ್ಲೇ ವಾಸವಾಗಿದ್ದರೂ ಹುಳಿಯಿಲ್ಲದ ರೊಟ್ಟಿಯನ್ನೇ ತಿನ್ನಬೇಕು” ಎಂದು ಹೇಳಿದನು.

21 ಆದ್ದರಿಂದ ಮೋಶೆಯು ಹಿರಿಯರ ಸಭೆ ಸೇರಿಸಿ, “ನಿಮ್ಮ ಕುಟುಂಬಗಳಿಗೆ ಬೇಕಾದ ಪಶುಗಳನ್ನು ತೆಗೆದುಕೊಂಡು ಪಸ್ಕಕ್ಕಾಗಿ ಅವುಗಳನ್ನು ಕೊಯ್ಯಿರಿ.

ಲೂಕ 14

ಸಬ್ಬತ್‌ದಿನದಲ್ಲಿ ವಾಸಿಮಾಡುವುದು ಸರಿಯೋ?

14 ಒಂದು ಸಬ್ಬತ್ ದಿನದಲ್ಲಿ ಯೇಸು ಒಬ್ಬ ಪ್ರಮುಖ ಫರಿಸಾಯನ ಮನೆಗೆ ಊಟಕ್ಕೆ ಹೋದನು. ಅಲ್ಲಿದ್ದ ಜನರೆಲ್ಲರೂ ಯೇಸುವನ್ನೇ ದೃಷ್ಟಿಸಿ ನೋಡುತ್ತಿದ್ದರು. ಯೇಸುವಿನ ಎದುರಿನಲ್ಲಿಯೇ ಜಲೋದರ[a] ರೋಗವುಳ್ಳ ಒಬ್ಬನನ್ನು ಇರಿಸಿದ್ದರು. ಯೇಸು ಫರಿಸಾಯರಿಗೂ ಧರ್ಮೋಪದೇಶಕರಿಗೂ, “ಸಬ್ಬತ್‌ದಿನದಲ್ಲಿ ವಾಸಿಮಾಡುವುದು ಸರಿಯೋ? ತಪ್ಪೋ?” ಎಂದು ಕೇಳಿದನು. ಅವರು ಉತ್ತರಕೊಡಲಿಲ್ಲ. ಆಗ ಯೇಸು ಆ ಮನುಷ್ಯನ ಕೈಮುಟ್ಟಿ ವಾಸಿಮಾಡಿ ಅವನನ್ನು ಕಳುಹಿಸಿಬಿಟ್ಟನು. ಯೇಸು ಫರಿಸಾಯರಿಗೂ ಧರ್ಮೋಪದೇಶಕರಿಗೂ, “ಸಬ್ಬತ್ ದಿನದಲ್ಲಿ ನಿಮ್ಮ ಮಗನಾಗಲಿ ನಿಮ್ಮ ದುಡಿಯುವ ಪಶುವಾಗಲಿ ಬಾವಿಗೆ ಬಿದ್ದರೆ, ಆ ಕೂಡಲೇ ನೀವು ಬಾವಿಯಿಂದ ಮೇಲಕ್ಕೆ ಎತ್ತಿ ಬದುಕಿಸುತ್ತೀರಿ ಎಂಬುದು ನಿಮಗೆ ಗೊತ್ತೇ ಇದೆ” ಎಂದು ಹೇಳಿದನು. ಫರಿಸಾಯರಾಗಲಿ ಧರ್ಮೋಪದೇಶಕರಾಗಲಿ ಯೇಸುವಿನ ಈ ಮಾತಿಗೆ ಉತ್ತರ ಕೊಡಲಾಗಲಿಲ್ಲ.

ನಿನ್ನನ್ನು ಪ್ರಮುಖನನ್ನಾಗಿ ಮಾಡಿಕೊಳ್ಳಬೇಡ

ಅತಿಥಿಗಳಾಗಿ ಬಂದಿದ್ದ ಕೆಲವರು ಊಟಕ್ಕೆ ಕುಳಿತುಕೊಳ್ಳಲು ಉತ್ತಮವಾದ ಸ್ಥಳಗಳನ್ನು ಆರಿಸಿಕೊಳ್ಳುತ್ತಿರುವುದನ್ನು ಕಂಡ ಯೇಸು ಈ ಸಾಮ್ಯವನ್ನು ಹೇಳಿದನು: “ಒಬ್ಬನು ನಿನ್ನನ್ನು ಮದುವೆಗೆ ಆಮಂತ್ರಿಸಿದರೆ, ಉನ್ನತವಾದ ಆಸನದಲ್ಲಿ ಕುಳಿತುಕೊಳ್ಳಬೇಡ. ಅವನು ನಿನಗಿಂತಲೂ ಪ್ರಮುಖನಾದವನನ್ನು ಆಮಂತ್ರಿಸಿದ್ದಿರಬಹುದು. ನೀನು ಉನ್ನತವಾದ ಸ್ಥಳದಲ್ಲಿ ಕುಳಿತುಕೊಂಡಿದ್ದರೆ, ನಿನಗೆ ಆಮಂತ್ರಣ ನೀಡಿರುವವನು ಬಂದು, ‘ಈ ಸ್ಥಳವನ್ನು ಇವನಿಗೆ ಬಿಟ್ಟುಕೊಡು’ ಎಂದು ನಿನಗೆ ಹೇಳಬಹುದು. ಆಗ ನೀನು ನಾಚಿಕೆಯಿಂದ ಕೊನೆಯ ಸ್ಥಳದಲ್ಲಿ ಕುಳಿತುಕೊಳ್ಳಬೇಕಾಗುವುದು.

10 “ಆದ್ದರಿಂದ ಒಬ್ಬನು ನಿನ್ನನ್ನು ಆಮಂತ್ರಿಸುವಾಗ, ಕೊನೆಯ ಸ್ಥಳದಲ್ಲಿ ಹೋಗಿ ಕುಳಿತುಕೊ. ಆಗ ನಿನ್ನನ್ನು ಆಮಂತ್ರಿಸಿದ ವ್ಯಕ್ತಿಯು ಬಂದು, ‘ಸ್ನೇಹಿತನೇ, ಉನ್ನತವಾದ ಈ ಸ್ಥಳದಲ್ಲಿ ಕುಳಿತುಕೊ!’ ಎಂದು ನಿನಗೆ ಹೇಳುವನು. ಆಗ ನೆರೆದು ಬಂದ ಅತಿಥಿಗಳೆಲ್ಲಾ ನಿನ್ನನ್ನು ಗೌರವಿಸುವರು. 11 ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನೂ ತಗ್ಗಿಸಲ್ಪಡುವನು. ತನ್ನನ್ನು ತಗ್ಗಿಸಿಕೊಳ್ಳುವ ಪ್ರತಿಯೊಬ್ಬನೂ ಹೆಚ್ಚಿಸಲ್ಪಡುವನು.”

ನಿಮಗೆ ಪ್ರತಿಫಲ ದೊರೆಯುವುದು

12 ಬಳಿಕ ಯೇಸು ತನ್ನನ್ನು ಆಮಂತ್ರಿಸಿದ ಫರಿಸಾಯನಿಗೆ, “ನೀನು ಮಧ್ಯಾಹ್ನದ ಊಟಕ್ಕೆ ಅಥವಾ ರಾತ್ರಿಯ ಊಟಕ್ಕೆ ನಿನ್ನ ಸ್ನೇಹಿತರನ್ನು, ಸಹೋದರರನ್ನು, ಸಂಬಂಧಿಕರನ್ನು ಮತ್ತು ಶ್ರೀಮಂತರಾದ ನೆರೆಯವರನ್ನು ಆಮಂತ್ರಿಸಿದರೆ, ಅವರೂ ನಿನ್ನನ್ನು ಮತ್ತೊಮ್ಮೆ ಊಟಕ್ಕೆ ಆಮಂತ್ರಿಸುವರು. ಆಗ ಅದೇ ನಿನಗೆ ಪ್ರತಿಫಲವಾಗುವುದು. 13 ಅದರ ಬದಲು, ನೀನು ಔತಣ ಮಾಡಿಸುವಾಗ ಬಡಜನರನ್ನು, ಕುಂಟರನ್ನು ಮತ್ತು ಕುರುಡರನ್ನು ಆಮಂತ್ರಿಸು. 14 ಆಗ ನಿನಗೆ ಆಶೀರ್ವಾದ ದೊರೆಯುವುದು. ಏಕೆಂದರೆ, ಈ ಜನರು ನಿನ್ನನ್ನು ಔತಣಕ್ಕೆ ಆಮಂತ್ರಿಸಲಾರರು. ಅವರಲ್ಲಿ ಏನೂ ಇಲ್ಲ. ಆದರೆ ನೀತಿವಂತರು ಜೀವಂತವಾಗಿ ಎದ್ದುಬರುವಾಗ, ನಿನಗೆ ಪ್ರತಿಫಲ ದೊರೆಯುವುದು” ಎಂದು ಹೇಳಿದನು.

ಔತಣಕೂಟದ ಸಾಮ್ಯ

(ಮತ್ತಾಯ 22:1-10)

15 ಯೇಸುವಿನೊಡನೆ ಊಟಕ್ಕೆ ಕುಳಿತಿದ್ದವರಲ್ಲಿ ಒಬ್ಬನು ಈ ವಿಷಯಗಳನ್ನು ಕೇಳಿ ಯೇಸುವಿಗೆ, “ದೇವರ ರಾಜ್ಯದಲ್ಲಿ ಊಟಮಾಡುವವರೇ ಧನ್ಯರು!” ಎಂದನು.

16 ಯೇಸು ಅವನಿಗೆ ಹೇಳಿದ್ದೇನೆಂದರೆ: “ಒಬ್ಬನು ಒಂದು ದೊಡ್ಡ ಔತಣವನ್ನು ಮಾಡಿಸಿ ಅನೇಕ ಜನರನ್ನು ಆಮಂತ್ರಿಸಿದನು. 17 ಊಟದ ಸಮಯ ಬಂದಾಗ, ಅವನು ತನ್ನ ಸೇವಕನನ್ನು ಕಳುಹಿಸಿ, ‘ಬನ್ನಿರಿ! ಊಟ ಸಿದ್ಧವಾಗಿದೆ’ ಎಂದು ಅತಿಥಿಗಳಿಗೆ ತಿಳಿಸಿದನು. 18 ಆದರೆ ಎಲ್ಲಾ ಅತಿಥಿಗಳು ತಾವು ಬರಲಾಗುವುದಿಲ್ಲವೆಂದು ಹೇಳಿದರು. ಪ್ರತಿಯೊಬ್ಬನೂ ಒಂದೊಂದು ನೆವ ಹೇಳಿದನು. ಮೊದಲನೆಯವನು, ‘ನಾನು ಇದೀಗ ಒಂದು ಹೊಲವನ್ನು ಕ್ರಯಕ್ಕೆ ತೆಗೆದುಕೊಂಡಿದ್ದೇನೆ. ಆದ್ದರಿಂದ ನಾನು ಹೋಗಿ ಅದನ್ನು ನೋಡಬೇಕು. ದಯಮಾಡಿ ಕ್ಷಮಿಸು’ ಎಂದು ಹೇಳಿದನು. 19 ಎರಡನೆಯವನು, ‘ನಾನು ಇದೀಗ ಐದು ಜೊತೆ ಎತ್ತುಗಳನ್ನು ಕ್ರಯಕ್ಕೆ ತೆಗೆದುಕೊಂಡಿದ್ದೇನೆ. ನಾನು ಹೋಗಿ ಅವುಗಳನ್ನು ಪರೀಕ್ಷಿಸಬೇಕು. ದಯಮಾಡಿ ಕ್ಷಮಿಸು’ ಎಂದು ಹೇಳಿದನು. 20 ಮೂರನೆಯವನು, ‘ನಾನು ಇದೀಗ ಮದುವೆಯಾಗಿದ್ದೇನೆ, ನಾನು ಬರಲಾರೆ’ ಎಂದನು.

21 “ಆದ್ದರಿಂದ ಆ ಸೇವಕನು ಹಿಂತಿರುಗಿ ಹೋಗಿ ಅವರು ಹೇಳಿದ್ದನ್ನೆಲ್ಲ ತನ್ನ ಯಜಮಾನನಿಗೆ ತಿಳಿಸಿದನು. ಆಗ ಯಜಮಾನನು ಬಹಳ ಕೋಪಗೊಂಡು ಆ ಸೇವಕನಿಗೆ, ‘ಈ ಊರಿನ ಬೀದಿಗಳಿಗೂ ಸಂದಿಗಳಿಗೂ ಬೇಗನೆ ಹೋಗಿ ಬಡವರನ್ನೂ ಅಂಗವಿಕಲರನ್ನೂ ಕುರುಡರನ್ನೂ ಕುಂಟರನ್ನೂ ಇಲ್ಲಿಗೆ ಕರೆದುಕೊಂಡು ಬಾ’ ಎಂದು ಹೇಳಿದನು.

22 “ತರುವಾಯ ಆ ಸೇವಕನು ಬಂದು, ‘ಸ್ವಾಮೀ, ನೀನು ಹೇಳಿದಂತೆಯೇ ಮಾಡಿದೆನು. ಆದರೆ ನಮ್ಮಲ್ಲಿ ಇನ್ನೂ ಹೆಚ್ಚು ಜನರಿಗೆ ಸ್ಥಳವಿದೆ.’ ಎಂದು ಹೇಳಿದನು. 23 ಆಗ ಯಜಮಾನನು ಆ ಸೇವಕನಿಗೆ, ‘ಹೆದ್ದಾರಿಗಳಿಗೂ ರಸ್ತೆಗಳಿಗೂ ಹೋಗಿ, ಅಲ್ಲಿರುವ ಜನರನ್ನೆಲ್ಲಾ ಆಮಂತ್ರಿಸು. ನನ್ನ ಮನೆಯು ಜನರಿಂದ ತುಂಬಿಹೋಗಬೇಕೆಂಬುದೇ ನನ್ನ ಅಪೇಕ್ಷೆ. 24 ನಾನು ಮೊದಲನೆ ಸಲ ಆಮಂತ್ರಿಸಿದ ಆ ಜನರಲ್ಲಿ ಒಬ್ಬರಾದರೂ ನನ್ನೊಂದಿಗೆ ಊಟಮಾಡಕೂಡದು!’ ಎಂದು ಹೇಳಿದನು.”

ಯೋಜನೆಯ ಅಗತ್ಯತೆ

(ಮತ್ತಾಯ 10:37-38)

25 ಅನೇಕ ಜನರು ಯೇಸುವಿನೊಂದಿಗೆ ಗುಂಪುಗುಂಪಾಗಿ ಹೋಗುತ್ತಿದ್ದಾಗ ಆತನು ಅವರಿಗೆ ಹೀಗೆಂದನು: 26 “ನನ್ನ ಬಳಿಗೆ ಬರುವವನು ನನ್ನನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ತನ್ನ ತಂದೆತಾಯಿಗಳನ್ನು, ಹೆಂಡತಿಯನ್ನು, ಮಕ್ಕಳನ್ನು, ಸಹೋದರ ಸಹೋದರಿಯರನ್ನು ಮತ್ತು ತನ್ನನ್ನು ಪ್ರೀತಿಸುವುದಾದರೆ, ಅವನು ನನ್ನ ಶಿಷ್ಯನಾಗಿರಲು ಸಾಧ್ಯವಿಲ್ಲ. 27 ನನ್ನನ್ನು ಹಿಂಬಾಲಿಸುವವನು ತನಗೆ ಕೊಡಲ್ಪಟ್ಟಿರುವ ಶಿಲುಬೆಯನ್ನು (ಶ್ರಮೆ) ಹೊತ್ತುಕೊಂಡು ಹೋಗದಿದ್ದರೆ, ಅವನು ನನ್ನ ಶಿಷ್ಯನಾಗಿರಲು ಸಾಧ್ಯವಿಲ್ಲ.

28 “ನೀನು ಒಂದು ಕಟ್ಟಡವನ್ನು ಕಟ್ಟಬೇಕೆಂದಿದ್ದರೆ ಮೊದಲು ನೀನು ಕುಳಿತುಕೊಂಡು ಅದಕ್ಕೆ ಎಷ್ಟು ಖರ್ಚಾಗುತ್ತದೆ ಎಂಬುದನ್ನು ಆಲೋಚಿಸು. ಆ ಕಟ್ಟಡವನ್ನು ಪೂರೈಸಲು ನಿನ್ನಲ್ಲಿ ಸಾಕಷ್ಟು ಹಣವಿದೆಯೋ ಎಂದು ಲೆಕ್ಕಹಾಕಿ ನೋಡು. 29 ಇಲ್ಲವಾದರೆ, ನೀನು ಕಟ್ಟಡದ ಕೆಲಸವನ್ನು ಪ್ರಾರಂಭಿಸಿದರೂ ಅದನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಜನರು ನಿನ್ನನ್ನು ನೋಡಿ, 30 ‘ಇವನು ಈ ಕಟ್ಟಡದ ಕೆಲಸವನ್ನು ಪ್ರಾರಂಭಿಸಿದನು. ಆದರೆ ಪೂರೈಸಲು ಅವನಿಂದಾಗಲಿಲ್ಲ’ ಎಂದು ಗೇಲಿ ಮಾಡುವರು.

31 “ಒಬ್ಬ ಅರಸನು ಇನ್ನೊಬ್ಬ ಅರಸನ ವಿರುದ್ಧ ಯುದ್ಧಕ್ಕೆ ಹೋಗುವಾಗ, ಮೊದಲು ಅವನು ಕುಳಿತುಕೊಂಡು ಯೋಜನೆ ಮಾಡುವನು. ಅರಸನ ಬಳಿಯಲ್ಲಿ ಕೇವಲ ಹತ್ತುಸಾವಿರ ಮಂದಿ ಸೈನಿಕರಿದ್ದರೆ, ಇಪ್ಪತ್ತುಸಾವಿರ ಮಂದಿ ಸೈನಿಕರಿರುವ ಇನ್ನೊಬ್ಬ ಅರಸನನ್ನು ಸೋಲಿಸಲು ತನಗೆ ಸಾಧ್ಯವೇ ಎಂದು ಆಲೋಚಿಸುವನು. 32 ಅವನು ಇನ್ನೊಬ್ಬ ಅರಸನನ್ನು ಸೋಲಿಸಲಾಗದಿದ್ದರೆ, ತನ್ನ ರಾಯಭಾರಿಗಳನ್ನು ಕಳುಹಿಸಿ, ಶಾಂತಿಒಪ್ಪಂದಕ್ಕಾಗಿ ಕೇಳಿಕೊಳ್ಳುವನು.

33 “ಅದೇರೀತಿಯಲ್ಲಿ ನೀವೆಲ್ಲರೂ ಮೊದಲು ಯೋಜನೆ ಮಾಡಬೇಕು. ನೀವು ನನ್ನನ್ನು ಹಿಂಬಾಲಿಸಬೇಕೆಂದಿದ್ದರೆ ನಿಮ್ಮಲ್ಲಿರುವ ಪ್ರತಿಯೊಂದನ್ನೂ ತ್ಯಜಿಸಿಬಿಡಬೇಕು. ಇಲ್ಲವಾದರೆ, ನನ್ನ ಶಿಷ್ಯರಾಗಲು ಸಾಧ್ಯವಿಲ್ಲ!

ನಿಮ್ಮ ಪ್ರಭಾವವನ್ನು ಕಳೆದುಕೊಳ್ಳಬೇಡಿರಿ

(ಮತ್ತಾಯ 5:13; ಮಾರ್ಕ 9:50)

34 “ಉಪ್ಪು ಒಳ್ಳೆಯ ಪದಾರ್ಥ. ಆದರೆ ಉಪ್ಪು ತನ್ನ ರುಚಿ ಕಳೆದುಕೊಂಡರೆ ಅದಕ್ಕೆ ಯಾವ ಬೆಲೆಯೂ ಇಲ್ಲ. ನೀವು ಅದಕ್ಕೆ ಮತ್ತೆ ಉಪ್ಪಿನ ರುಚಿಯನ್ನು ಕೊಡಲು ಸಾಧ್ಯವಿಲ್ಲ. 35 ಅದರಿಂದ ಮಣ್ಣಿಗಾಗಲಿ ಗೊಬ್ಬರಕ್ಕಾಗಲಿ ಪ್ರಯೋಜನವಿಲ್ಲ. ಜನರು ಅದನ್ನು ಹೊರಗೆ ಬಿಸಾಡುತ್ತಾರೆ.

“ನನ್ನ ಮಾತನ್ನು ಕೇಳುವ ಜನರೇ, ಆಲಿಸಿರಿ!”

ಯೋಬನು 29

ಯೋಬನು ಮುಂದುವರಿಸಿದ ಮಾತು

29 ಯೋಬನು ಮಾತನ್ನು ಮುಂದುವರಿಸಿ ಹೀಗೆಂದನು:

“ನನ್ನ ಜೀವಿತವು ಕೆಲವು ತಿಂಗಳುಗಳ ಮುಂಚೆ ಇದ್ದಂತೆ ಈಗಲೂ ಇದ್ದಿದ್ದರೆ ಎಷ್ಟೋ ಒಳ್ಳೆಯದಿತ್ತು.
    ಆ ದಿನಗಳಲ್ಲಿ ದೇವರು ನನ್ನನ್ನು ಕಾಯುತ್ತಾ ಪರಿಪಾಲಿಸುತ್ತಿದ್ದನು.
ಆ ದಿನಗಳಲ್ಲಿ ದೇವರ ದೀಪವು ನನ್ನ ಮೇಲೆ ಪ್ರಕಾಶಿಸುತ್ತಿದ್ದ ಕಾರಣ
    ನಾನು ಕಾರ್ಗತ್ತಲೆಯಲ್ಲೂ ಸಂಚರಿಸುತ್ತಿದ್ದೆನು.
ಆ ದಿನಗಳು ನನ್ನ ಜೀವಿತದ ಸುಗ್ಗಿಕಾಲವಾಗಿದ್ದವು;
    ಆ ದಿನಗಳಲ್ಲಿ ದೇವರ ಸ್ನೇಹವು ನನ್ನೊಂದಿಗೂ ನನ್ನ ಮನೆಯವರೊಂದಿಗೂ ಇತ್ತು.
ಆ ದಿನಗಳಲ್ಲಿ ಸರ್ವಶಕ್ತನಾದ ದೇವರು ಇನ್ನೂ ನನ್ನೊಂದಿಗಿದ್ದನು;
    ನನ್ನ ಮಕ್ಕಳು ನನ್ನ ಸುತ್ತಲೂ ಇದ್ದರು.
ಆ ದಿನಗಳಲ್ಲಿ ನನ್ನ ಜೀವಿತವು ತುಂಬ ಚೆನ್ನಾಗಿತ್ತು.
    ನನ್ನ ಮಾರ್ಗಗಳು ಕೆನೆಯಿಂದ ತುಂಬಿರುವಂತೆಯೂ
    ಬಂಡೆಗಳು ನನಗಾಗಿ ಆಲೀವ್ ಎಣ್ಣೆಯ ನದಿಗಳನ್ನೇ ಹರಿಸುತ್ತಿರುವಂತೆಯೂ ನನ್ನ ಜೀವಿತವಿತ್ತು.

“ಆ ದಿನಗಳಲ್ಲಿ ನಾನು ನಗರದ ಹೆಬ್ಬಾಗಿಲಿನ ಬಳಿಗೆ ಹೋಗಿ,
    ಸಾರ್ವಜನಿಕ ಸಭಾಸ್ಥಳದಲ್ಲಿ ಪಟ್ಟಣದ ಹಿರಿಯರೊಂದಿಗೆ ಕುಳಿತುಕೊಳ್ಳುತ್ತಿದ್ದೆನು.
ಅಲ್ಲಿದ್ದ ಜನರೆಲ್ಲರೂ ನನ್ನನ್ನು ಗೌರವಿಸುತ್ತಿದ್ದರು;
    ಯೌವನಸ್ಥರು ನನ್ನನ್ನು ಕಂಡು ಹಿಂದಕ್ಕೆ ಸರಿದು ದಾರಿಮಾಡಿಕೊಡುತ್ತಿದ್ದರು;
    ವೃದ್ಧರು ಗೌರವದಿಂದ ಎದ್ದುನಿಂತುಕೊಳ್ಳುತ್ತಿದ್ದರು.
ಮಾತಾಡುತ್ತಿದ್ದ ಜನನಾಯಕರು
    ತಮ್ಮ ಬಾಯಿ ಮೇಲೆ ಕೈಯಿಟ್ಟುಕೊಂಡು ಮೌನವಾಗುತ್ತಿದ್ದರು.
10 ಪ್ರಮುಖನಾಯಕರುಗಳು ಸಹ ನಾಲಿಗೆಯು ಸಿಕ್ಕಿಕೊಂಡಂತೆ
    ತಮ್ಮ ಧ್ವನಿಯನ್ನು ಕಡಿಮೆಮಾಡುತ್ತಿದ್ದರು.
11 ನನ್ನ ಮಾತನ್ನು ಕೇಳಿದವರೆಲ್ಲರೂ ನನ್ನನ್ನು ಪ್ರಶಂಸಿಸುತ್ತಿದ್ದರು;
    ನಾನು ಮಾಡಿದ್ದನ್ನು ಕಂಡವರೆಲ್ಲರೂ ನನ್ನನ್ನು ಹೊಗಳುತ್ತಿದ್ದರು.
12 ಯಾಕೆಂದರೆ ಬೇಡಿಕೊಂಡ ಬಡವರಿಗೆ ಸಹಾಯ ಮಾಡಿದೆನು;
    ಗತಿಯಿಲ್ಲದ ಅನಾಥರನ್ನು ರಕ್ಷಿಸಿದೆನು.
13 ಜನರು ತಮ್ಮ ಸಾವಿನ ಗಳಿಗೆಯಲ್ಲೂ ನನ್ನನ್ನು ಆಶೀರ್ವದಿಸಿದರು.
    ಕಷ್ಟದಲ್ಲಿದ್ದ ವಿಧವೆಯರಿಗೆ ನನ್ನಿಂದ ಆನಂದವಾಯಿತು.
14 ನೀತಿಯೇ ನನ್ನ ಉಡುಪಾಗಿತ್ತು; ಅದೇ ನನ್ನ ನಿಲುವಂಗಿಯಾಗಿತ್ತು.
    ನ್ಯಾಯವು ನನಗೆ ನಿಲುವಂಗಿಯೂ ಪೇಟವಾಗಿಯೂ ಇತ್ತು.
15 ನಾನು ಕುರುಡನಿಗೆ ಕಣ್ಣಾಗಿಯೂ
    ಕುಂಟನಿಗೆ ಕಾಲಾಗಿಯೂ ಇದ್ದೆನು.
16 ನಾನು ಬಡವರಿಗೆ ತಂದೆಯಂತಿದ್ದೆನು.
    ತೊಂದರೆಯಲ್ಲಿದ್ದ ಅಪರಿಚಿತರ ವ್ಯಾಜ್ಯವನ್ನು ವಿಚಾರಿಸುತ್ತಿದ್ದೆನು.
17 ನಾನು ದುಷ್ಟರ ಕೋರೆಗಳನ್ನು ಮುರಿದು
    ಅವರ ಬಾಯೊಳಗಿಂದ ಬೇಟೆಗಳನ್ನು ಕಿತ್ತು ತರುತ್ತಿದ್ದೆನು.

18 “ನನ್ನ ಬಗ್ಗೆ ಆಲೋಚಿಸುತ್ತಾ, ‘ನನ್ನ ದಿನಗಳು ಮರಳಿನ ಕಣಗಳಷ್ಟು ಅಸಂಖ್ಯಾತವಾಗಿವೆ;
    ನಾನು ನನ್ನ ಸ್ವಂತ ಮನೆಯಲ್ಲಿ ಮರಣಹೊಂದುವೆನು.
19 ನನ್ನ ಬೇರುಗಳು ನೀರಿನವರೆಗೂ ವ್ಯಾಪಿಸಿಕೊಂಡಿರುತ್ತವೆ;
    ನನ್ನ ಕೊಂಬೆಗಳು ಇಬ್ಬನಿಯಿಂದ ಹಸಿಯಾಗಿರುತ್ತವೆ;
20 ಜನರು ನನ್ನನ್ನು ಹೊಗಳುತ್ತಲೇ ಇರುವರು;
    ಕೈಯಲ್ಲಿ ಹೊಸಬಿಲ್ಲು ಇರುವಂತೆ ನಾನು ಬಲಿಷ್ಠನಾಗಿದ್ದೇನೆ’ ಎಂದುಕೊಂಡೆನು.

21 “ಆ ದಿನಗಳಲ್ಲಿ ಜನರು ನನಗೆ ಕಿವಿಗೊಡುತ್ತಿದ್ದರು;
    ನನ್ನ ಆಲೋಚನೆಯನ್ನು ಕೇಳಲು ಮೌನದಿಂದ ಕಾದುಕೊಂಡಿರುತ್ತಿದ್ದರು.
22 ನನ್ನ ಮಾತುಗಳು ಪರಿಪೂರ್ಣವಾಗಿದ್ದ ಕಾರಣ ಅದಕ್ಕೆ ಬೇರೇನೂ ಸೇರಿಸಲು ಅವರಿಗೆ ಸಾಧ್ಯವಿರಲಿಲ್ಲ.
    ನನ್ನ ಮಾತುಗಳು ಅವರ ಕಿವಿಗಳಿಗೆ ಕೋಮಲವಾಗಿದ್ದವು.
23 ಮಳೆಗಾಗಿಯೋ ಎಂಬಂತೆ ಅವರು ನನ್ನ ಮಾತುಗಳಿಗಾಗಿ ಎದುರುನೋಡುತ್ತಿದ್ದರು.
    ವಸಂತ ಕಾಲದಲ್ಲಿ ಬೀಳುವ ಮಳೆಯ ನೀರನ್ನೋ ಎಂಬಂತೆ ಅವರು ನನ್ನ ಮಾತುಗಳನ್ನು ಕುಡಿಯುತ್ತಿದ್ದರು.
24 ನಾನು ಅವರನ್ನು ಕಂಡು ಮುಗುಳ್ನಗೆ ಬೀರಿದಾಗ ಅವರಿಗೆ ನಂಬುವುದಕ್ಕೇ ಆಗುತ್ತಿರಲಿಲ್ಲ.
    ನನ್ನ ಸಂತೋಷದ ಮುಖವು ಅವರನ್ನು ಪ್ರೋತ್ಸಾಹಗೊಳಿಸಿತು.
25 ನಾನು ನಾಯಕನಾಗಿದ್ದರೂ ಅವರೊಂದಿಗೇ ಇರುತ್ತಿದ್ದೆನು;
    ಪಾಳೆಯದಲ್ಲಿ ಸೈನ್ಯಗಳೊಂದಿಗಿರುವ ರಾಜನಂತೆ ನಾನು ದುಃಖಿತರನ್ನು ಆದರಿಸುತ್ತಿದ್ದೆನು.

1 ಕೊರಿಂಥದವರಿಗೆ 15

ಕ್ರಿಸ್ತನ ವಿಷಯವಾದ ಸುವಾರ್ತೆ

15 ಸಹೋದರ ಸಹೋದರಿಯರೇ, ನಾನು ನಿಮಗೆ ತಿಳಿಸಿದ ಸುವಾರ್ತೆಯನ್ನು ನೀವು ಜ್ಞಾಪಿಸಿಕೊಳ್ಳಿರಿ. ನೀವು ಅದನ್ನು ಸ್ವೀಕರಿಸಿಕೊಂಡಿರಿ ಮತ್ತು ಅದರಲ್ಲಿ ದೃಢವಾಗಿದ್ದೀರಿ. ನೀವು ಆ ಸಂದೇಶದ ಮೂಲಕ ರಕ್ಷಣೆ ಹೊಂದಿದ್ದೀರಿ. ನಾನು ನಿಮಗೆ ತಿಳಿಸಿದ ಸಂದೇಶದಲ್ಲಿ ನಿಮಗೆ ದೃಢವಾದ ನಂಬಿಕೆ ಇರಲೇಬೇಕು. ನೀವು ಹೀಗೆ ಮಾಡದಿದ್ದರೆ, ನಿಮ್ಮ ನಂಬಿಕೆಯು ನಿರರ್ಥಕವಾಗುವುದು.

ನಾನು ಸ್ವೀಕರಿಸಿಕೊಂಡ ಸಂದೇಶವನ್ನು ನಾನು ನಿಮಗೆ ತಿಳಿಸಿದೆನು. ಆ ಸಂಗತಿಗಳು ಬಹಳ ಮುಖ್ಯವಾದುವುಗಳಾಗಿವೆ. ಪವಿತ್ರ ಗ್ರಂಥವು ಹೇಳುವಂತೆ, ಕ್ರಿಸ್ತನು ನಮ್ಮ ಪಾಪಗಳಿಗೋಸ್ಕರವಾಗಿ ಸತ್ತು ಹೂಳಲ್ಪಟ್ಟು ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದುಬಂದನು. ಬಳಿಕ ಕ್ರಿಸ್ತನು ಪೇತ್ರನಿಗೆ ಕಾಣಿಸಿಕೊಂಡನು. ಅನಂತರ ಹನ್ನೆರಡು ಮಂದಿ ಅಪೊಸ್ತಲರಿಗೆ ಕಾಣಿಸಿಕೊಂಡನು. ತರುವಾಯ, ಒಂದೇ ಸಮಯದಲ್ಲಿ ಐನೂರಕ್ಕಿಂತಲೂ ಹೆಚ್ಚು ಮಂದಿ ಸಹೋದರರಿಗೆ ಕಾಣಿಸಿಕೊಂಡನು. ಈ ಸಹೋದರರಲ್ಲಿ ಬಹುಮಂದಿ ಇಂದಿನವರೆಗೂ ಬದುಕಿದ್ದಾರೆ. ಆದರೆ ಕೆಲವರು ಸತ್ತುಹೋದರು. ಬಳಿಕ ಕ್ರಿಸ್ತನು ಯಾಕೋಬನಿಗೆ ಕಾಣಿಸಿಕೊಂಡನು. ಅನಂತರ ಮತ್ತೊಮ್ಮೆ ಎಲ್ಲಾ ಅಪೊಸ್ತಲರಿಗೆ ಕಾಣಿಸಿಕೊಂಡನು. ಕಟ್ಟಕಡೆಗೆ, ಕ್ರಿಸ್ತನು, ದಿನ ತುಂಬುವ ಮೊದಲೇ ಹುಟ್ಟಿದಂತಿದ್ದ ನನಗೆ ಕಾಣಿಸಿಕೊಂಡನು.

ಉಳಿದೆಲ್ಲಾ ಅಪೊಸ್ತಲರು ನನಗಿಂತಲೂ ಶ್ರೇಷ್ಠರಾಗಿದ್ದಾರೆ. ಇದಕ್ಕೆ ಕಾರಣವೇನೆಂದರೆ, ನಾನು ದೇವರ ಸಭೆಯನ್ನು ಹಿಂಸಿಸಿದೆನು. ಆದ್ದರಿಂದ ಅಪೊಸ್ತಲನೆಂದು ಕರೆಸಿಕೊಳ್ಳುವುದಕ್ಕೂ ನಾನು ಯೋಗ್ಯನಲ್ಲ. 10 ಆದರೆ, ದೇವರ ಕೃಪೆಯಿಂದ ನಾನು ಅಪೊಸ್ತಲನಾಗಿದ್ದೇನೆ. ಆತನು ನನಗೆ ತೋರಿದ ಕೃಪೆಯು ನಿಷ್ಛಲವಾಗಲಿಲ್ಲ. ಉಳಿದೆಲ್ಲ ಅಪೊಸ್ತಲರಿಗಿಂತ ನಾನು ಹೆಚ್ಚು ಕಷ್ಟಪಟ್ಟು ಸೇವೆ ಮಾಡಿದ್ದೇನೆ. (ಆದರೆ ಸೇವೆ ಮಾಡುತ್ತಿದ್ದವನು ನಿಜವಾಗಿಯೂ ನಾನಲ್ಲ ದೇವರ ಕೃಪೆಯೇ ನನ್ನೊಂದಿಗಿತ್ತು.) 11 ಆದ್ದರಿಂದ ನಾನು ಬೋಧನೆ ಮಾಡಿದೆನೊ ಅಥವಾ ಇತರ ಅಪೊಸ್ತಲರು ಬೋಧನೆ ಮಾಡಿದರೊ ಎಂಬುದು ಮುಖ್ಯವಲ್ಲ. ನಾವೆಲ್ಲರೂ ಒಂದೇ ಸಂದೇಶವನ್ನು ಬೋಧಿಸುತ್ತೇವೆ ಮತ್ತು ನೀವು ನಂಬಿರುವುದೂ ಅದನ್ನೇ.

ನಾವು ಪುನರುತ್ಥಾನ ಹೊಂದುವೆವು

12 ಕ್ರಿಸ್ತನು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದನೆಂದು ನಾವು ಬೋಧಿಸಿದ್ದೇವೆ. ಹೀಗಿರಲಾಗಿ, ಜನರಿಗೆ ಪುನರುತ್ಥಾನವಿಲ್ಲವೆಂದು ನಿಮ್ಮಲ್ಲಿ ಕೆಲವರು ಹೇಳುತ್ತಿರುವುದೇಕೆ? 13 ಜನರಿಗೆ ಪುನರುತ್ಥಾನವಿಲ್ಲದಿದ್ದರೆ ಕ್ರಿಸ್ತನು ಸಹ ಸತ್ತವರೊಳಗಿಂದ ಎದ್ದೇಬಂದಿಲ್ಲ. 14 ಕ್ರಿಸ್ತನು ಎದ್ದೇಬಂದಿಲ್ಲವಾದರೆ ನಮ್ಮ ಬೋಧನೆಗೂ ನಿಮ್ಮ ನಂಬಿಕೆಗೂ ಯಾವ ಬೆಲೆಯೂ ಇಲ್ಲ. 15 ಅಲ್ಲದೆ, ದೇವರ ಬಗ್ಗೆ ನಾವು ಸುಳ್ಳುಸಾಕ್ಷಿ ಹೇಳಿದಂತಾಗುವುದು. ಏಕೆಂದರೆ, ದೇವರು ಕ್ರಿಸ್ತನನ್ನು ಜೀವಂತವಾಗಿ ಎಬ್ಬಿಸಿದನೆಂದು ನಾವು ದೇವರ ಬಗ್ಗೆ ಬೋಧಿಸಿದೆವು. ಜನರು ಜೀವಂತವಾಗಿ ಎದ್ದುಬರದಿದ್ದರೆ, ದೇವರು ಕ್ರಿಸ್ತನನ್ನು ಜೀವಂತವಾಗಿ ಎಬ್ಬಿಸಲೇ ಇಲ್ಲ. 16 ಸತ್ತುಹೋದ ಜನರು ಎಬ್ಬಿಸಲ್ಪಡದಿದ್ದರೆ, ಕ್ರಿಸ್ತನು ಸಹ ಎಬ್ಬಿಸಲ್ಪಡಲೇ ಇಲ್ಲ. 17 ಕ್ರಿಸ್ತನು ಜೀವಂತವಾಗಿ ಎಬ್ಬಿಸಲ್ಪಟ್ಟಿಲ್ಲದಿದ್ದರೆ, ನಿಮ್ಮ ನಂಬಿಕೆಯು ನಿಷ್ಪ್ರಯೋಜಕವಾಗಿದೆ ಮತ್ತು ನೀವು ನಿಮ್ಮ ಪಾಪಗಳಿಂದ ಇನ್ನೂ ಅಪರಾಧಿಗಳಾಗಿದ್ದೀರಿ. 18 ಇದಲ್ಲದೆ ಕ್ರಿಸ್ತನಲ್ಲಿದ್ದು ಸತ್ತುಹೋದವರು ನಾಶವಾಗಿದ್ದಾರೆ. 19 ನಮಗೆ ಕ್ರಿಸ್ತನಲ್ಲಿರುವ ನಿರೀಕ್ಷೆಯು ಈ ಲೋಕಕ್ಕೆ ಮಾತ್ರ ಸೀಮಿತವಾಗಿದ್ದರೆ, ನಾವು ಬೇರೆಲ್ಲ ಜನರಿಗಿಂತಲೂ ದುಃಖಕ್ಕೆ ಪಾತ್ರರಾಗಿದ್ದೇವೆ.

20 ಆದರೆ ಕ್ರಿಸ್ತನು ನಿಜವಾಗಿಯೂ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಿದ್ದಾನೆ. ನಿದ್ರೆಹೋದವರಲ್ಲಿ ಅಂದರೆ ಸತ್ತುಹೋದ ಎಲ್ಲಾ ವಿಶ್ವಾಸಿಗಳಲ್ಲಿ ಆತನೇ ಪ್ರಥಮ ಫಲವಾದನು. 21 ಒಬ್ಬ ಮನುಷ್ಯನು (ಆದಾಮನು) ಮಾಡಿದ ಕಾರ್ಯದಿಂದಾಗಿ ಜನರು ಮರಣ ಹೊಂದುವಂತೆಯೇ ಒಬ್ಬ ಮನುಷ್ಯನ (ಕ್ರಿಸ್ತನ) ಮೂಲಕವಾಗಿಯೇ ಜನರು ಜೀವಂತವಾಗಿ ಎದ್ದುಬರುವರು. 22 ಆದಾಮನ ಸಂಬಂಧದಿಂದ ಎಲ್ಲರೂ ಸಾಯುತ್ತಾರೆ. ಇದೇರೀತಿ ಕ್ರಿಸ್ತನ ಸಂಬಂಧದಿಂದ ನಾವೆಲ್ಲರೂ ಮತ್ತೆ ಜೀವಂತರಾಗುತ್ತೇವೆ. 23 ಆದರೆ ಪ್ರತಿಯೊಬ್ಬನು ಕ್ರಮಬದ್ಧ ರೀತಿಯಲ್ಲಿ ಜೀವಂತವಾಗಿ ಎದ್ದುಬರುವನು. ಮೊಟ್ಟಮೊದಲನೆಯದಾಗಿ ಕ್ರಿಸ್ತನೇ ಎದ್ದುಬಂದನು. ಕ್ರಿಸ್ತನು ಮತ್ತೆ ಬರುವಾಗ ಕ್ರಿಸ್ತನಿಗೆ ಸೇರಿದ ಜನರು ಜೀವಂತವಾಗಿ ಎದ್ದುಬರುವರು. 24 ಅನಂತರ ಅಂತ್ಯ ಬರುವುದು. ಕ್ರಿಸ್ತನು ಎಲ್ಲಾ ಅಧಿಪತಿಗಳನ್ನು, ಅಧಿಕಾರಗಳನ್ನು ಮತ್ತು ಶಕ್ತಿಗಳನ್ನು ನಾಶಮಾಡುವನು. ಬಳಿಕ ಕ್ರಿಸ್ತನು ತಂದೆಯಾದ ದೇವರಿಗೆ ರಾಜ್ಯವನ್ನು ಕೊಡುವನು.

25 ದೇವರು ಎಲ್ಲಾ ಶತ್ರುಗಳನ್ನು ಕ್ರಿಸ್ತನಿಗೆ ಅಧೀನಗೊಳಿಸುವ ತನಕ ಕ್ರಿಸ್ತನು ಆಳಲೇಬೇಕು. 26 ನಾಶವಾಗುವ ಕಡೆಯ ಶತ್ರುವೆಂದರೆ ಮರಣವೇ. 27 “ದೇವರು ಸಮಸ್ತವನ್ನು ಆತನಿಗೆ ಅಧೀನಗೊಳಿಸುತ್ತಾನೆ”(A) ಎಂದು ಪವಿತ್ರಗ್ರಂಥವು ಹೇಳುತ್ತದೆ. “ಸಮಸ್ತವನ್ನು” ಕ್ರಿಸ್ತನಿಗೆ ಅಧೀನಗೊಳಿಸುತ್ತಾನೆಂದು ಹೇಳುವಾಗ, ಅದು ದೇವರನ್ನು ಒಳಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಸಮಸ್ತವನ್ನು ಕ್ರಿಸ್ತನಿಗೆ ಅಧೀನಗೊಳಿಸಿದಾತನು ದೇವರೇ. 28 ಸಮಸ್ತವು ತನ್ನ ಅಧೀನಕ್ಕೆ ಬಂದ ಮೇಲೆ, ಕ್ರಿಸ್ತನು ತನ್ನನ್ನೇ ದೇವರಿಗೆ ಅಧೀನಪಡಿಸಿಕೊಳ್ಳುವನು. ಸಮಸ್ತವನ್ನು ಕ್ರಿಸ್ತನಿಗೆ ಅಧೀನಪಡಿಸಿದಾತನು ದೇವರೇ. ಹೀಗೆ ದೇವರು ಸಮಸ್ತಕ್ಕೂ ಸರ್ವಾಧಿಪತಿಯಾಗುವನು.[a]

29 ಸತ್ತವರಿಗೆ ಪುನರುತ್ಥಾನವಿಲ್ಲವಾದರೆ ಸತ್ತುಹೋದವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಂಡ ಜನರು ಏನು ಮಾಡುವರು? ಸತ್ತವರಿಗೆ ಪುನರುತ್ಥಾನವಿಲ್ಲವಾದರೆ, ಜನರು ಅವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದೇಕೆ?

30 ನಮ್ಮ ವಿಷಯವೇನು? ನಾವು ನಮ್ಮನ್ನು ಪ್ರತಿ ತಾಸಿನಲ್ಲಿಯೂ ಅಪಾಯಕ್ಕೆ ಒಡ್ಡುವುದು ಏಕೆ? 31 ನಾನು ಪ್ರತಿದಿನವೂ ಸಾಯುತ್ತೇನೆ. ಸಹೋದರರೇ ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಲ್ಲಿ ನಾನು ನಿಮ್ಮ ಬಗ್ಗೆ ಹೆಮ್ಮೆಪಡುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಅದಾಗಿದೆ. 32 ಕೇವಲ ನನ್ನ ಮಾನುಷ ಸ್ವಭಾವದಿಂದ ನಾನು ಎಫೆಸದಲ್ಲಿ ದುಷ್ಟಮೃಗಗಳೊಂದಿಗೆ ಹೋರಾಡಿದ್ದರೆ, ಅದರಿಂದ ನನಗೇನು ಪ್ರಯೋಜನ? ಸತ್ತವರಿಗೆ ಪುನರುತ್ಥಾನವಿಲ್ಲದಿದ್ದರೆ, “ತಿನ್ನೋಣ, ಕುಡಿಯೋಣ, ಏಕೆಂದರೆ ನಾವು ನಾಳೆ ಸಾಯುತ್ತೇವೆ.”

33 ಮೋಸ ಹೋಗಬೇಡಿರಿ. “ದುರ್ಜನರ ಸಹವಾಸ ಸದಾಚಾರದ ಭಂಗ.” 34 ಸ್ವಸ್ಥಚಿತ್ತರಾಗಿರಿ ಮತ್ತು ಪಾಪಮಾಡುವುದನ್ನು ನಿಲ್ಲಿಸಿರಿ. ನಿಮ್ಮಲ್ಲಿ ಕೆಲವರು ದೇವರನ್ನು ಅರಿತುಕೊಂಡಿಲ್ಲ. ನಿಮಗೆ ನಾಚಿಕೆ ಆಗಲೆಂದು ಇದನ್ನು ಹೇಳುತ್ತಿದ್ದೇನೆ.

ಯಾವ ಬಗೆಯ ದೇಹವನ್ನು ನಾವು ಹೊಂದಿಕೊಳ್ಳುವೆವು?

35 “ಸತ್ತವರು ಹೇಗೆ ಎದ್ದುಬರುವರು? ಅವರಿಗೆ ಯಾವ ಬಗೆಯ ದೇಹವಿರುತ್ತದೆ?” ಎಂದು ಕೆಲವರು ಕೇಳಬಹುದು. 36 ಅವು ಮೂಢ ಪ್ರಶ್ನೆಗಳು. ನೀವು ಬೀಜವನ್ನು ಬಿತ್ತಿದಾಗ, ಆ ಬೀಜವು ಜೀವ ಹೊಂದಿಕೊಂಡು ಬೆಳೆಯುವುದಕ್ಕಿಂತ ಮುಂಚೆ ಸಾಯಲೇಬೇಕು. 37 ನೀವು ಬೀಜವನ್ನು ಬಿತ್ತುವಾಗ, ಆ ಬೀಜವು ಕೇವಲ ಕಾಳಾಗಿರುತ್ತದೆಯೇ ಹೊರತು ಮುಂದೆ ಹುಟ್ಟಿ ಬರಲಿರುವ ಗಿಡವಾಗಿರುವುದಿಲ್ಲ. ನೀವು ಬಿತ್ತುವ ಬೀಜವು ಕೇವಲ ಕಾಳಷ್ಟೆ. ಅದು ಗೋಧಿಯಾಗಿರಬಹುದು ಅಥವಾ ಬೇರೆ ಕಾಳಾಗಿರಬಹುದು. 38 ಅದರೆ ದೇವರು ತನ್ನ ಯೋಜನೆಗನುಸಾರವಾಗಿ ಅದಕ್ಕೆ ದೇಹವನ್ನು ಕೊಡುತ್ತಾನೆ ಮತ್ತು ದೇವರು ಪ್ರತಿಯೊಂದು ಬಗೆಯ ಬೀಜಕ್ಕೆ ಅದರದೇ ಆದ ದೇಹವನ್ನು ಕೊಡುತ್ತಾನೆ. 39 ಎಲ್ಲಾ ಶರೀರಗಳು ಒಂದೇ ರೀತಿಯ ಮಾಂಸವನ್ನು ಹೊಂದಿರುವುದಿಲ್ಲ. ಜನರಿಗೆ ಒಂದು ಬಗೆಯ ಮಾಂಸವಿರುತ್ತದೆ; ಪ್ರಾಣಿಗಳಿಗೆ ಮತ್ತೊಂದು ಬಗೆಯ ಮಾಂಸವಿರುತ್ತದೆ; ಪಕ್ಷಿಗಳಿಗೆ ಇನ್ನೊಂದು ಬಗೆಯ ಮಾಂಸವಿರುತ್ತದೆ. ಮೀನುಗಳು ಬೇರೊಂದು ರೀತಿಯ ಮಾಂಸವನ್ನು ಹೊಂದಿರುತ್ತವೆ. 40 ಇದಲ್ಲದೆ ಪರಲೋಕದ ಶರೀರಗಳಿವೆ ಮತ್ತು ಭೂಲೋಕದ ಶರೀರಗಳಿವೆ. ಪರಲೋಕದ ಶರೀರಗಳಿಗೆ ಒಂದು ಬಗೆಯ ಸೌಂದರ್ಯವಿರುತ್ತದೆ. ಭೂಲೋಕದ ಶರೀರಗಳಿಗೆ ಮತ್ತೊಂದು ಬಗೆಯ ಸೌಂದರ್ಯವಿರುತ್ತದೆ. 41 ಸೂರ್ಯನಿಗೆ ಒಂದು ಬಗೆಯ ಸೌಂದರ್ಯವಿದೆ; ಚಂದ್ರನಿಗೆ ಮತ್ತೊಂದು ಬಗೆಯ ಸೌಂದರ್ಯವಿದೆ. ನಕ್ಷತ್ರಗಳಿಗೆ ಇನ್ನೊಂದು ಬಗೆಯ ಸೌಂದರ್ಯವಿದೆ. ಪ್ರತಿಯೊಂದು ನಕ್ಷತ್ರವು ತನ್ನದೇ ಆದ ಸೌಂದರ್ಯವನ್ನು ಹೊಂದಿದೆ.

42 ಸತ್ತವರಿಗಾಗುವ ಪುನರುತ್ಥಾನವು ಅದೇ ರೀತಿಯಾಗಿರುವುದು. ಬಿತ್ತಲ್ಪಟ್ಟ ದೇಹವು ಹಾಳಾಗುವುದು ಮತ್ತು ಕೊಳೆತು ಹೋಗುವುದು. ಆದರೆ ಜೀವಂತವಾಗಿ ಎದ್ದುಬರುವ ಆ ದೇಹವನ್ನು ನಾಶಮಾಡಲು ಸಾಧ್ಯವೇ ಇಲ್ಲ. 43 ದೇಹವು ಹೀನಾವಸ್ಥೆಯಲ್ಲಿ ಬಿತ್ತಲ್ಪಡುವುದು, ಆದರೆ ಮಹಿಮೆಯೊಡನೆ ಎದ್ದುಬರುವುದು. ದೇಹವು ಬಿತ್ತಲ್ಪಟ್ಟಾಗ, ಅದು ಬಲಹೀನವಾಗಿರುತ್ತದೆ. ಆದರೆ ಅದು ಎದ್ದುಬಂದಾಗ ಅದಕ್ಕೆ ಶಕ್ತಿಯಿರುತ್ತದೆ. 44 ಬಿತ್ತಲ್ಪಟ್ಟ ದೇಹವು ಭೌತಿಕವಾದದ್ದು. ಆದರೆ ಅದು ಎದ್ದುಬಂದಾಗ, ಆತ್ಮಿಕ ದೇಹವಾಗಿರುತ್ತದೆ.

ಭೌತಿಕ ದೇಹವಿದೆ. ಆದ್ದರಿಂದ ಆತ್ಮಿಕ ದೇಹವೂ ಇದೆ. 45 “ಮೊದಲನೆ ಮನುಷ್ಯನಾದ ಆದಾಮನು ಜೀವಿಸುವ ವ್ಯಕ್ತಿಯಾದನು”(B) ಎಂದು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ. ಆದರೆ ಕೊನೆಯ ಆದಾಮನು (ಕ್ರಿಸ್ತನು) ಜೀವಕೊಡುವ ಜೀವಾತ್ಮನಾದನು. 46 ಮೊದಲು ಬಂದವನು ಆತ್ಮಿಕ ಮನುಷ್ಯನಲ್ಲ, ಅವನು ಪ್ರಾಕೃತ ಮನುಷ್ಯ. ಅನಂತರ ಆತ್ಮಿಕ ಮನುಷ್ಯನು ಬಂದನು. 47 ಮೊದಲನೆಯ ಮನುಷ್ಯನು ಭೂಮಿಯ ಧೂಳಿನಿಂದ ಬಂದನು. ಆದರೆ ಎರಡನೆಯ ಮನುಷ್ಯನು (ಕ್ರಿಸ್ತನು) ಪರಲೋಕದಿಂದ ಬಂದನು. 48 ಜನರು ಭೂಮಿಗೆ ಸಂಬಂಧಪಟ್ಟವರು. ಅವರು ಭೂಮಿಯ ಮೊದಲನೆ ಮನುಷ್ಯನಂತಿದ್ದಾರೆ. ಆದರೆ ಪರಲೋಕಕ್ಕೆ ಸಂಬಂಧಪಟ್ಟವರು ಪರಲೋಕದ ಮನುಷ್ಯನಂತಿದ್ದಾರೆ. 49 ಭೂಮಿಯ ಆ ಮನುಷ್ಯನಂತೆಯೇ ನಾವು ನಿರ್ಮಾಣಗೊಂಡೆವು. ಆದ್ದರಿಂದ ಪರಲೋಕದ ಆ ಮನುಷ್ಯನಂತೆಯೇ ನಾವು ನಿರ್ಮಾಣಗೊಳ್ಳುವೆವು.

50 ಸಹೋದರ ಸಹೋದರಿಯರೇ, ನಾನು ಹೇಳುವುದೇನೆಂದರೆ, ಮಾಂಸ ಮತ್ತು ರಕ್ತ (ಭೌತಿಕ ದೇಹ) ಪರಲೋಕ ರಾಜ್ಯದಲ್ಲಿ ಪಾಲುಹೊಂದಲು ಸಾಧ್ಯವಿಲ್ಲ. ನಾಶವಾಗುವಂಥದ್ದು ಎಂದಿಗೂ ನಾಶವಾಗದ ಒಂದರಲ್ಲಿ ಪಾಲುಹೊಂದಲು ಸಾಧ್ಯವಿಲ್ಲ. 51 ಆದರೆ ಕೇಳಿರಿ, ನಾನು ನಿಮಗೆ ಈ ರಹಸ್ಯವೊಂದನ್ನು ತಿಳಿಸುತ್ತೇನೆ. ನಾವೆಲ್ಲರೂ ಸಾಯುವುದಿಲ್ಲ. ಆದರೆ ನಾವೆಲ್ಲರೂ ಮಾರ್ಪಾಟಾಗುವೆವು. 52 ಇದಕ್ಕೆ ಕೇವಲ ಒಂದು ಕ್ಷಣಕಾಲ ಸಾಕು. ರೆಪ್ಪೆಬಡಿಯುವಷ್ಟು ವೇಗವಾಗಿ ನಾವು ಮಾರ್ಪಾಟಾಗುವೆವು. ಕಡೇ ತುತ್ತೂರಿಯನ್ನು ಊದಿದಾಗ ಇದು ಸಂಭವಿಸುವುದು. ತುತ್ತೂರಿಯನ್ನು ಊದಲಾಗುವುದು; ಆಗ ಸತ್ತುಹೋಗಿದ್ದ ವಿಶ್ವಾಸಿಗಳು ಸದಾಕಾಲ ಜೀವಿಸುವುದಕ್ಕಾಗಿ ಎಬ್ಬಿಸಲ್ಪಡುವರು ಮತ್ತು ನಾವು ಮಾರ್ಪಾಟಾಗುವೆವು. 53 ಅಳಿದುಹೋಗುವ ಈ ದೇಹವು ಅಳಿದುಹೋಗದ್ದನ್ನು ಧರಿಸಿಕೊಳ್ಳುವುದು. ಮರಣಾಧೀನವಾದ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವುದು. 54 ಅಳಿದುಹೋಗುವ ಈ ದೇಹ ಅಮರತ್ವವನ್ನು ಧರಿಸಿಕೊಂಡಾಗ ಪವಿತ್ರಗ್ರಂಥದ ಈ ಮಾತುಗಳು ನೆರವೇರುತ್ತವೆ:

“ಮರಣವು ಜಯದಲ್ಲಿ ನುಂಗಿಯೇಹೋಯಿತು.”(C)

55 “ಮರಣವೇ, ನಿನ್ನ ಜಯವೆಲ್ಲಿ?
ಮರಣವೇ, ಕೇಡುಮಾಡುವ ನಿನ್ನ ಶಕ್ತಿ ಎಲ್ಲಿ?”(D)

56 ಕೇಡುಮಾಡಲು ಮರಣಕ್ಕಿರುವ ಶಕ್ತಿಯು ಪಾಪವೇ. ಪಾಪದ ಶಕ್ತಿಯು ಧರ್ಮಶಾಸ್ತ್ರವೇ. 57 ಆದರೆ ನಾವು ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇವೆ. ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ಆತನು ನಮಗೆ ಜಯವನ್ನು ಕೊಡುತ್ತಾನೆ.

58 ಆದ್ದರಿಂದ, ನನ್ನ ಪ್ರಿಯ ಸಹೋದರ ಸಹೋದರಿಯರೇ, ದೃಢವಾಗಿರಿ, ನಿಶ್ಚಲರಾಗಿರಿ. ಪ್ರಭುವಿನ ಸೇವೆಗಾಗಿ ನಿಮ್ಮನ್ನು ಯಾವಾಗಲೂ ಸಂಪೂರ್ಣವಾಗಿ ಪ್ರತಿಷ್ಠಿಸಿಕೊಳ್ಳಿರಿ. ನೀವು ಪ್ರಭುವಿಗಾಗಿ ಪಡುವ ಪ್ರಯಾಸವು ಎಂದಿಗೂ ವ್ಯರ್ಥವಾಗುವುದಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International