M’Cheyne Bible Reading Plan
8 ಆಗ ಯೆಹೋವನು ಮೋಶೆಗೆ, “ಫರೋಹನ ಬಳಿಗೆ ಹೋಗಿ ಯೆಹೋವನು ಹೀಗೆನ್ನುತ್ತಾನೆ ಎಂದು ಹೇಳು: ‘ನನ್ನನ್ನು ಆರಾಧಿಸುವುದಕ್ಕೆ ನನ್ನ ಜನರು ಹೋಗಲಿ. 2 ನನ್ನ ಜನರನ್ನು ನೀನು ಹೋಗಗೊಡಿಸದಿದ್ದರೆ ನಾನು ಈಜಿಪ್ಟನ್ನು ಕಪ್ಪೆಗಳಿಂದ ತುಂಬಿಸುವೆನು. 3 ನೈಲ್ ನದಿಯು ಕಪ್ಪೆಗಳಿಂದ ತುಂಬಿ ಹೋಗುವುದು. ಕಪ್ಪೆಗಳು ನದಿಯಿಂದ ಬಂದು ನಿಮ್ಮ ಮನೆಗಳನ್ನು ಪ್ರವೇಶಿಸುವವು; ನಿಮ್ಮ ಮಲಗುವ ಕೋಣೆಯಲ್ಲಿಯೂ ನಿಮ್ಮ ಹಾಸಿಗೆಗಳಲ್ಲಿಯೂ ನಿಮ್ಮ ಅಧಿಕಾರಿಗಳ ಮನೆಗಳಲ್ಲಿಯೂ ನಿಮ್ಮ ಒಲೆಗಳಲ್ಲಿಯೂ ನೀರಿನ ಜಾಡಿಗಳಲ್ಲಿಯೂ ಹಿಟ್ಟುನಾದುವ ತಟ್ಟೆಗಳಲ್ಲಿಯೂ ಇರುವವು; 4 ನಿನ್ನ ಮೇಲೆಯೂ ನಿನ್ನ ಪ್ರಜೆಗಳ ಮೇಲೆಯೂ ನಿನ್ನ ಅಧಿಕಾರಿಗಳ ಮೇಲೆಯೂ ಇರುವವು’” ಅಂದನು.
5 ಬಳಿಕ ಯೆಹೋವನು ಮೋಶೆಗೆ, “ನೀನು ಆರೋನನಿಗೆ, ‘ನಿನ್ನ ಕೋಲನ್ನು ಹಿಡಿದುಕೊಂಡು ಹೊಳೆಗಳ, ಕಾಲುವೆಗಳ ಮತ್ತು ಕೆರೆಗಳ ಮೇಲೆ ಕೈಚಾಚು’ ಎಂದು ಹೇಳು. ಆಗ ಈಜಿಪ್ಟ್ ದೇಶದ ಮೇಲೆ ಕಪ್ಪೆಗಳು ಹೊರಬರುವವು” ಎಂದು ಹೇಳಿದನು.
6 ಅಂತೆಯೇ ಆರೋನನು ಈಜಿಪ್ಟಿನ ನೀರುಗಳ ಮೇಲೆ ತನ್ನ ಕೈಯನ್ನು ಚಾಚಿದಾಗ ಕಪ್ಪೆಗಳು ನೀರುಗಳಿಂದ ಹೊರಬಂದು ಈಜಿಪ್ಟ್ ದೇಶವನ್ನು ಆವರಿಸಿಕೊಳ್ಳತೊಡಗಿದವು.
7 ಮಾಂತ್ರಿಕರು ತಮ್ಮ ಮಂತ್ರವಿದ್ಯೆಯಿಂದ ಅದೇರೀತಿ ಮಾಡಿ ಈಜಿಪ್ಟ್ ದೇಶದ ಮೇಲೆ ಕಪ್ಪೆಗಳನ್ನು ಬರಮಾಡಿದರು.
8 ಫರೋಹನು ಮೋಶೆ ಆರೋನರನ್ನು ಕರೆಯಿಸಿ, “ನನ್ನಿಂದ ಮತ್ತು ನನ್ನ ಜನರ ಮೇಲಿಂದ ಕಪ್ಪೆಗಳನ್ನು ತೊಲಗಿಸಬೇಕೆಂದು ಯೆಹೋವನನ್ನು ಕೇಳಿಕೊಳ್ಳಿರಿ. ಯೆಹೋವನಿಗೆ ಯಜ್ಞಗಳನ್ನು ಸಮರ್ಪಿಸಲು ನಾನು ಆತನ ಜನರನ್ನು ಹೋಗಗೊಡಿಸುವೆನು” ಎಂದು ಹೇಳಿದನು.
9 ಮೋಶೆಯು ಫರೋಹನಿಗೆ, “ಕಪ್ಪೆಗಳು ಯಾವಾಗ ಬಿಟ್ಟುಹೋಗಬೇಕೆಂದು ತಿಳಿಸು. ನಾನು ನಿನಗೋಸ್ಕರ, ನಿನ್ನ ಜನರಿಗೋಸ್ಕರ ಮತ್ತು ನಿನ್ನ ಅಧಿಕಾರಿಗಳಿಗೋಸ್ಕರ ಪ್ರಾರ್ಥಿಸುವೆನು. ಆಗ ಕಪ್ಪೆಗಳು ನಿನ್ನನ್ನೂ ನಿನ್ನ ಮನೆಗಳನ್ನೂ ಬಿಟ್ಟುಹೋಗಿ ನದಿಯಲ್ಲಿ ಮಾತ್ರ ಉಳಿಯುತ್ತವೆ” ಎಂದು ಹೇಳಿದನು.
10 ಅದಕ್ಕೆ ಫರೋಹನು, “ನಾಳೆ” ಅಂದನು.
ಮೋಶೆ, “ನೀನು ಹೇಳಿದಂತೆಯೇ ಆಗುವುದು. ನಮ್ಮ ದೇವರಾದ ಯೆಹೋವನಿಗೆ ಸಮಾನನಾದ ದೇವರೇ ಇಲ್ಲವೆಂದು ನೀನು ತಿಳಿದುಕೊಳ್ಳುವೆ. 11 ಕಪ್ಪೆಗಳು ನಿನ್ನನ್ನೂ ನಿನ್ನ ಮನೆಗಳನ್ನೂ ನಿನ್ನ ಅಧಿಕಾರಿಗಳನ್ನೂ ನಿನ್ನ ಜನರನ್ನೂ ಬಿಟ್ಟುಹೋಗಿ ನದಿಯಲ್ಲಿ ಮಾತ್ರ ಉಳಿದುಕೊಳ್ಳುವವು” ಎಂದು ಹೇಳಿದನು.
12 ಮೋಶೆ ಆರೋನರು ಫರೋಹನ ಬಳಿಯಿಂದ ಹೋದರು. ಫರೋಹನ ವಿರುದ್ಧವಾಗಿ ಕಳುಹಿಸಿದ ಕಪ್ಪೆಗಳನ್ನು ತೊಲಗಿಸಬೇಕೆಂದು ಮೋಶೆಯು ಯೆಹೋವನಿಗೆ ಪ್ರಾರ್ಥಿಸಿದನು. 13 ಯೆಹೋವನು ಮೋಶೆಯ ಬೇಡಿಕೆಯನ್ನು ಅನುಗ್ರಹಿಸಿದನು. ಕಪ್ಪೆಗಳು ಮನೆಗಳಲ್ಲಿಯೂ ಅಂಗಳಗಳಲ್ಲಿಯೂ ಹೊಲಗಳಲ್ಲಿಯೂ ಸತ್ತುಹೋದವು. 14 ಅವುಗಳನ್ನು ಕೂಡಿಸಿದಾಗ ರಾಶಿರಾಶಿಗಳಾದವು. ದೇಶವು ದುರ್ವಾಸನೆಯಿಂದ ತುಂಬಿಹೋಯಿತು. 15 ಕಪ್ಪೆಗಳಿಂದ ಬಿಡುಗಡೆಯಾದದ್ದನ್ನು ಫರೋಹನು ಕಂಡು ಮತ್ತೆ ತನ್ನ ಹೃದಯವನ್ನು ಕಠಿಣಪಡಿಸಿಕೊಂಡನು. ಮೋಶೆ ಆರೋನರ ಬೇಡಿಕೆಯನ್ನು ಅವನು ಈಡೇರಿಸಲಿಲ್ಲ. ಯೆಹೋವನು ಹೇಳಿದಂತೆಯೇ ಇದಾಯಿತು.
ಹೇನುಗಳು
16 ಬಳಿಕ ಯೆಹೋವನು ಮೋಶೆಗೆ, “ನೀನು ಆರೋನನಿಗೆ, ‘ನಿನ್ನ ಕೋಲನ್ನು ಎತ್ತಿ ನೆಲದ ಧೂಳನ್ನು ಹೊಡೆ’ ಎಂದು ಹೇಳು. ಆಗ ಧೂಳು ಈಜಿಪ್ಟಿನಲ್ಲೆಲ್ಲಾ ಹೇನುಗಳಾಗುವವು” ಎಂದು ಹೇಳಿದನು.
17 ಅವರು ಹಾಗೆಯೇ ಮಾಡಿದರು. ಆರೋನನು ತನ್ನ ಕೈಯಲ್ಲಿದ್ದ ಕೋಲನ್ನು ಎತ್ತಿ ನೆಲದ ಧೂಳನ್ನು ಹೊಡೆದನು. ಆಗ ಈಜಿಪ್ಟಿನ ಪ್ರತಿಯೊಂದು ಸ್ಥಳದ ಧೂಳು ಹೇನುಗಳಾಗಿ ಪ್ರಾಣಿಗಳ ಮೇಲೂ ಜನರ ಮೇಲೂ ಏರಿಕೊಂಡವು.
18 ಮಾಂತ್ರಿಕರು ತಮ್ಮ ಮಂತ್ರವಿದ್ಯೆಯಿಂದ ಅದೇರೀತಿ ಮಾಡಲು ಪ್ರಯತ್ನಿಸಿದರೂ ಧೂಳಿನಿಂದ ಹೇನುಗಳನ್ನು ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಹೇನುಗಳು ಪ್ರಾಣಿಗಳ ಮೇಲೂ ಜನರ ಮೇಲೂ ಉಳಿದುಕೊಂಡವು. 19 ಆದ್ದರಿಂದ ಮಾಂತ್ರಿಕರು ಫರೋಹನಿಗೆ, “ಇದು ದೇವರ ಕಾರ್ಯವೇ” ಎಂದು ಹೇಳಿದರು. ಆದರೆ ಫರೋಹನು ಅವರ ಮಾತಿಗೆ ಕಿವಿಗೊಡಲಿಲ್ಲ. ಯೆಹೋವನು ಹೇಳಿದಂತೆಯೇ ಇದಾಯಿತು.
ಹುಳಗಳು
20 ಯೆಹೋವನು ಮೋಶೆಗೆ, “ಬೆಳಿಗ್ಗೆ ಎದ್ದು ಫರೋಹನ ಬಳಿಗೆ ಹೋಗು. ಫರೋಹನು ನದಿಗೆ ಹೋಗುವನು. ನೀನು ಅವನಿಗೆ, ‘ಯೆಹೋವನು ಹೀಗೆನ್ನುತ್ತಾನೆ: ನನ್ನ ಜನರು ಹೋಗಿ ನನ್ನನ್ನು ಆರಾಧಿಸಲಿ! 21 ನೀನು ನನ್ನ ಜನರನ್ನು ಹೋಗಗೊಡಿಸದಿದ್ದರೆ, ಹುಳಗಳು ನಿನ್ನ ಮೇಲೆಯೂ ನಿನ್ನ ಅಧಿಕಾರಿಗಳ ಮೇಲೆಯೂ ನಿನ್ನ ಜನರ ಮೇಲೆಯೂ ನಿಮ್ಮ ಮನೆಗಳಲ್ಲಿಯೂ ತುಂಬಿಕೊಳ್ಳುವವು; ನೆಲದ ಮೇಲೆಲ್ಲಾ ಇರುವವು. 22 ಆದರೆ ನಾನು ಈಜಿಪ್ಟಿನವರೊಡನೆ ವರ್ತಿಸುವಂತೆ ಇಸ್ರೇಲರೊಡನೆ ವರ್ತಿಸುವುದಿಲ್ಲ. ನನ್ನ ಜನರು ವಾಸಿಸುವ ಗೋಷೆನ್ ಪ್ರದೇಶದಲ್ಲಿ ಯಾವ ಹುಳವೂ ಇರುವುದಿಲ್ಲ. ನಾನೇ ಭೂಲೋಕವನ್ನು ಆಳುವ ಯೆಹೋವನೆಂದು ಆಗ ನೀನು ತಿಳಿದುಕೊಳ್ಳುವೆ. 23 ಆದ್ದರಿಂದ ನಾಳೆ ನನ್ನ ಜನಕ್ಕೂ ನಿನ್ನ ಜನಕ್ಕೂ ವ್ಯತ್ಯಾಸ ಮಾಡುವೆನು. ಅದೇ ನನ್ನ ಸಾಕ್ಷಿ’ ಎಂದು ಹೇಳಬೇಕು” ಎಂದು ಹೇಳಿದನು.
24 ಯೆಹೋವನು ತಾನು ಹೇಳಿದಂತೆಯೇ ಮಾಡಿದನು. ಲೆಕ್ಕವಿಲ್ಲದಷ್ಟು ಹುಳಗಳು ಈಜಿಪ್ಟಿಗೆ ಬಂದು ಫರೋಹನ ಮನೆಯಲ್ಲಿಯೂ ಅವನ ಅಧಿಕಾರಿಗಳ ಮನೆಗಳಲ್ಲಿಯೂ ತುಂಬಿಕೊಂಡವು. ಇಡೀ ಈಜಿಪ್ಟನ್ನೇ ಅವು ತುಂಬಿಕೊಂಡದ್ದರಿಂದ ದೇಶವು ಹಾಳಾಯಿತು. 25 ಆಗ ಫರೋಹನು ಮೋಶೆ ಆರೋನರನ್ನು ಕರೆಯಿಸಿ, “ನಿಮ್ಮ ದೇವರಿಗೆ ಈ ದೇಶದಲ್ಲಿಯೇ ಯಜ್ಞಗಳನ್ನು ಅರ್ಪಿಸಿರಿ” ಎಂದು ಹೇಳಿದನು.
26 ಅದಕ್ಕೆ ಮೋಶೆ, “ಅದು ಸರಿಯಲ್ಲ. ನಮ್ಮ ದೇವರಾದ ಯೆಹೋವನಿಗೆ ನಾವು ಅರ್ಪಿಸುವ ಯಜ್ಞಗಳು ಈಜಿಪ್ಟಿನವರಿಗೆ ನಿಷಿದ್ಧವಾಗಿವೆ. ಹೀಗಿರಲು ಅವರ ಕಣ್ಣೆದುರಿಗೇ ಅಂಥ ಯಜ್ಞಗಳನ್ನು ಅರ್ಪಿಸಿದರೆ, ಅವರು ನಮ್ಮನ್ನು ಕಲ್ಲೆಸೆದು ಕೊಲ್ಲುವುದಿಲ್ಲವೇ? 27 ನಾವು ಅರಣ್ಯದಲ್ಲಿ ಮೂರು ದಿನ ಪ್ರಯಾಣ ಮಾಡಿ ನಮ್ಮ ದೇವರಾದ ಯೆಹೋವನಿಗೆ ಯಜ್ಞಗಳನ್ನು ಸಮರ್ಪಿಸುವಂತಾಗಲಿ. ಹೀಗೆ ಮಾಡಲು ಯೆಹೋವನೇ ನಮಗೆ ಹೇಳಿದ್ದಾನೆ” ಅಂದನು.
28 ಅದಕ್ಕೆ ಫರೋಹನು, “ಅರಣ್ಯದಲ್ಲಿ ನಿಮ್ಮ ದೇವರಾದ ಯೆಹೋವನಿಗೆ ಯಜ್ಞಗಳನ್ನು ಅರ್ಪಿಸಲು ನಾನು ನಿಮಗೆ ಅಪ್ಪಣೆ ಕೊಡುವೆನು; ಆದರೆ ಬಹುದೂರ ಹೋಗಬೇಡಿ; ಈಗ ಹೋಗಿ ನನಗೋಸ್ಕರ ಪ್ರಾರ್ಥಿಸಿರಿ” ಅಂದನು.
29 ಅದಕ್ಕೆ ಮೋಶೆ, “ನಾನು ಇಲ್ಲಿಂದ ಹೋದಾಗ, ನಿನಗೂ ನಿನ್ನ ಪ್ರಜೆಗಳಿಗೂ ನಿನ್ನ ಅಧಿಕಾರಿಗಳಿಗೂ ಹುಳಗಳ ಬಾಧೆ ನಾಳೆಯಿಂದ ಇರಬಾರದೆಂಬುದಾಗಿ ಯೆಹೋವನಿಗೆ ಪ್ರಾರ್ಥಿಸುವೆನು. ಆದರೆ ಮತ್ತೆ ನೀನು ವಂಚಿಸಿ ಜನರು ಯಜ್ಞಗಳನ್ನು ಸಮರ್ಪಿಸದಂತೆ ತಡೆಯಬಾರದು” ಎಂದು ಹೇಳಿದನು.
30 ಮೋಶೆಯು ಫರೋಹನ ಬಳಿಯಿಂದ ಹೋಗಿ ಯೆಹೋವನಿಗೆ ಪ್ರಾರ್ಥಿಸಿದನು. 31 ಯೆಹೋವನು ಮೋಶೆಯ ಬೇಡಿಕೆಯನ್ನು ಅನುಗ್ರಹಿಸಿದನು. ಯೆಹೋವನು ಫರೋಹನಿಂದಲೂ ಅವನ ಅಧಿಕಾರಿಗಳಿಂದಲೂ ಅವನ ಜನರಿಂದಲೂ ಹುಳಗಳನ್ನು ತೊಲಗಿಸಿದನು. ಯಾವ ಹುಳಗಳೂ ಉಳಿಯಲಿಲ್ಲ. 32 ಆದರೆ ಫರೋಹನು ಮತ್ತೆ ತನ್ನ ಹೃದಯವನ್ನು ಕಠಿಣಪಡಿಸಿಕೊಂಡು ಜನರನ್ನು ಹೋಗಗೊಡಿಸಲಿಲ್ಲ.
ಪ್ರಾರ್ಥನೆಯ ಕುರಿತು ಯೇಸುವಿನ ಉಪದೇಶ
(ಮತ್ತಾಯ 6:9-15)
11 ಒಮ್ಮೆ ಯೇಸು ಒಂದು ಸ್ಥಳದಲ್ಲಿ ಪ್ರಾರ್ಥಿಸುತ್ತಿದ್ದನು. ಯೇಸು ಪ್ರಾರ್ಥನೆ ಮಾಡಿ ಮುಗಿಸಿದಾಗ, ಆತನ ಶಿಷ್ಯರಲ್ಲೊಬ್ಬನು, “ಪ್ರಭುವೇ, ಯೋಹಾನನು ತನ್ನ ಶಿಷ್ಯರಿಗೆ ಪ್ರಾರ್ಥಿಸುವ ವಿಧಾನವನ್ನು ಕಲಿಸಿದಂತೆ, ದಯಮಾಡಿ ನಮಗೂ ಪ್ರಾರ್ಥಿಸುವ ವಿಧಾನವನ್ನು ಹೇಳಿಕೊಡು” ಎಂದನು.
2 ಯೇಸು ಅವರಿಗೆ ಹೀಗೆಂದನು: “ನೀವು ಹೀಗೆ ಪ್ರಾರ್ಥಿಸಿರಿ:
‘ತಂದೆಯೇ, ನಿನ್ನ ನಾಮವು ಯಾವಾಗಲೂ ಪರಿಶುದ್ಧವಾಗಿರಲಿ.
ನಿನ್ನ ರಾಜ್ಯವು ಬರಲಿ.
3 ನಮ್ಮ ಅನುದಿನದ ಆಹಾರವನ್ನು ನಮಗೆ ದಯಪಾಲಿಸು.
4 ನಮಗೆ ತಪ್ಪುಮಾಡಿದವರನ್ನು ನಾವು ಕ್ಷಮಿಸುವಂತೆ
ನಮ್ಮಪಾಪಗಳನ್ನೂ ಕ್ಷಮಿಸು.
ನಮ್ಮನ್ನು ಶೋಧನೆಗೆ ಒಳಪಡಿಸಬೇಡ.’”
ಎಡಬಿಡದೆ ಪ್ರಾರ್ಥಿಸಿ
(ಮತ್ತಾಯ 7:7-11)
5-6 ಆಗ ಯೇಸು ಅವರಿಗೆ, “ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನೊಬ್ಬನ ಮನೆಗೆ ರಾತ್ರಿ ಬಹಳ ತಡವಾಗಿ ಹೋಗಿದ್ದಾನೆ ಎಂದು ಭಾವಿಸಿಕೊಳ್ಳೋಣ. ಅವನು ತನ್ನ ಸ್ನೇಹಿತನಿಗೆ, ‘ನನ್ನ ಗೆಳೆಯನೊಬ್ಬನು ನನ್ನನ್ನು ನೋಡಲು ದೂರದಿಂದ ನಮ್ಮ ಮನೆಗೆ ಬಂದಿದ್ದಾನೆ. ಆದರೆ ಅವನಿಗೆ ಊಟಕ್ಕೆ ಕೊಡಲು ನನಲ್ಲಿ ಏನೂ ಇಲ್ಲ. ದಯಮಾಡಿ ನನಗೆ ಮೂರು ರೊಟ್ಟಿಗಳನ್ನು ಕೊಡು’ ಎಂದು ಕೇಳುತ್ತಾನೆ. 7 ಮನೆಯೊಳಗಿರುವ ಸ್ನೇಹಿತನು, ‘ಹೊರಟುಹೋಗು! ನನಗೆ ತೊಂದರೆ ಕೊಡಬೇಡ! ಬಾಗಿಲು ಮುಚ್ಚಿದೆ! ನಾನು ಮತ್ತು ನನ್ನ ಮಕ್ಕಳು ಮಲಗಿದ್ದೇವೆ. ಈಗ ಎದ್ದು ನಿನಗೆ ರೊಟ್ಟಿ ಕೊಡಲಾರೆ’ ಎಂದು ಉತ್ತರಕೊಡುತ್ತಾನೆ. 8 ಕೇವಲ ಸ್ನೇಹವೊಂದೇ ಅವನನ್ನು ಏಳಿಸಿ ರೊಟ್ಟಿ ಕೊಡುವಂತೆ ಮಾಡಲಾರದೆಂದು ನಾನು ನಿಮಗೆ ಹೇಳುತ್ತೇನೆ. ಆದರೆ ಅವನು ಎಡಬಿಡದೆ ಕೇಳುತ್ತಲೇ ಇದ್ದರೆ, ಅವನು ಎದ್ದು ತನ್ನ ಸ್ನೇಹಿತನಿಗೆ ಬೇಕಾಗಿರುವ ರೊಟ್ಟಿಯನ್ನು ಖಂಡಿತವಾಗಿ ಕೊಡುವನು. 9 ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ಬೇಡಿಕೊಳ್ಳಿರಿ, ನಿಮಗೆ ದೊರೆಯುವುದು. ಹುಡುಕಿರಿ, ಆಗ ನೀವು ಕಂಡುಕೊಳ್ಳುವಿರಿ. ತಟ್ಟಿರಿ, ಆಗ ನಿಮಗೆ ಬಾಗಿಲು ತೆರೆಯುವುದು. 10 ಹೌದು, ಎಡಬಿಡದೆ ಬೇಡಿಕೊಳ್ಳುವವನಿಗೆ ದೊರೆಯುವುದು. ಎಡಬಿಡದೆ ಹುಡುಕುವವನು ಕಂಡುಕೊಳ್ಳುವನು. ಒಬ್ಬನು ಎಡಬಿಡದೆ ತಟ್ಟುತ್ತಿದ್ದರೆ, ಅವನಿಗೆ ಬಾಗಿಲು ತೆರೆಯಲ್ಪಡುವುದು. 11 ನಿಮ್ಮಲ್ಲಿ ಎಷ್ಟು ಜನರು ತಂದೆಗಳಾಗಿದ್ದೀರಿ? ನಿಮ್ಮ ಮಗನು ಮೀನನ್ನು ಕೇಳಿದರೆ, ನೀವು ಅವನಿಗೆ ಹಾವನ್ನು ಕೊಡುವಿರೋ? ಇಲ್ಲ! ನೀವು ಮೀನನ್ನೇ ಕೊಡುತ್ತೀರಿ. 12 ನಿಮ್ಮ ಮಗನು ಮೊಟ್ಟೆಯನ್ನು ಕೇಳಿದರೆ, ನೀವು ಅವನಿಗೆ ಚೇಳನ್ನು ಕೊಡುವಿರೋ? ಇಲ್ಲ! 13 ನೀವು ಇತರ ಜನರಂತೆ ಕೆಟ್ಟವರಾಗಿದ್ದೀರಿ. ಆದರೆ ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡುತ್ತೀರಿ. ಅದೇ ರೀತಿಯಲ್ಲಿ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ತನ್ನನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮನನ್ನು ಖಂಡಿತವಾಗಿ ಕೊಡುತ್ತಾನೆ” ಎಂದು ಹೇಳಿದನು.
ಯೇಸುವಿನ ಶಕ್ತಿ ದೇವರಿಂದ ಬಂದದ್ದು
(ಮತ್ತಾಯ 12:22-30; ಮಾರ್ಕ 3:20-27)
14 ಒಮ್ಮೆ ಯೇಸು ಮೂಕದೆವ್ವದಿಂದ ಪೀಡಿತನಾಗಿದ್ದ ಒಬ್ಬನನ್ನು ಬಿಡಿಸುತ್ತಿದ್ದನು. ಆ ದೆವ್ವವು ಅವನನ್ನು ಬಿಟ್ಟು ಹೊರಗೆ ಬಂದಾಗ ಅವನು ಮಾತಾಡಿದನು. ಇದನ್ನು ಕಂಡ ಜನರು ಬೆರಗಾದರು. 15 ಆದರೆ ಕೆಲವರು, “ದೆವ್ವದಿಂದ ಪೀಡಿತರಾಗಿರುವವರನ್ನು ಇವನು ಬೆಲ್ಜೆಬೂಲನ ಶಕ್ತಿಯಿಂದ ಬಿಡಿಸುತ್ತಾನೆ. ಬೆಲ್ಜೆಬೂಲನು ದೆವ್ವಗಳ ಅಧಿಪತಿ” ಎಂದು ಹೇಳಿದರು.
16 ಇತರ ಜನರು ಯೇಸುವನ್ನು ಪರೀಕ್ಷಿಸಬೇಕೆಂದು ದೇವರಿಂದ ಒಂದು ಸೂಚಕಕಾರ್ಯವನ್ನು ನಮಗೆ ತೋರಿಸು ಎಂದು ಕೇಳಿದರು. 17 ಆದರೆ ಅವರ ಆಲೋಚನೆಯನ್ನು ತಿಳಿದಿದ್ದ ಯೇಸು ಅವರಿಗೆ, “ಒಡೆದುಹೋದ ಮತ್ತು ತನಗೆ ವಿರುದ್ಧವಾಗಿ ತಾನೇ ಕಾದಾಡುವ ರಾಜ್ಯವು ನಾಶವಾಗುವುದು. ಭೇದಭಾವದಿಂದ ಕೂಡಿರುವ ಕುಟುಂಬವು ಮುರಿದು ಹೋಗುವುದು. 18 ಅಂತೆಯೇ, ಸೈತಾನನು ತನಗೆ ವಿರುದ್ಧವಾಗಿ ತಾನೇ ಕಾದಾಡಿದರೆ ಅವನ ರಾಜ್ಯವು ಮುಂದುವರಿಯಲು ಹೇಗೆ ಸಾಧ್ಯ? ನಾನು ದೆವ್ವಗಳನ್ನು ಬೆಲ್ಜೆಬೂಲನ ಶಕ್ತಿಯಿಂದ ಬಿಡಿಸುತ್ತೇನೆಂದು ನೀವು ಹೇಳುತ್ತೀರಿ. 19 ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾಗಿದ್ದರೆ, ನಿಮ್ಮ ಜನರು ದೆವ್ವಗಳನ್ನು ಯಾವ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನಿಮ್ಮ ಸ್ವಂತ ಜನರೇ ನಿಮ್ಮನು ತಪ್ಪಿತಸ್ಥರೆಂದು ಹೇಳುತ್ತಾರೆ. 20 ಆದರೆ ನಾನು ದೆವ್ವಗಳನ್ನು ದೇವರ ಬಲದಿಂದ ಹೊರಡಿಸುವುದಾದರೆ ದೇವರ ರಾಜ್ಯವು ನಿಮ್ಮ ಬಳಿಗೆ ಬಂದಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ.
21 “ಒಬ್ಬ ಬಲಿಷ್ಠನು ಅನೇಕ ಆಯುಧಗಳಿಂದ ಸುಸಜ್ಜಿತನಾಗಿ ತನ್ನ ಮನೆಯನ್ನು ಕಾಯುತ್ತಿರುವಾಗ, ಮನೆಯೊಳಗಿರುವ ವಸ್ತುಗಳು ಸುರಕ್ಷಿತವಾಗಿರುತ್ತವೆ. 22 ಆದರೆ ಅವನಿಗಿಂತಲೂ ಬಲಿಷ್ಠನಾದ ಮತ್ತೊಬ್ಬನು ಬಂದು ಅವನನ್ನು ಸೋಲಿಸಿದರೆ, ಮೊದಲನೆಯ ಬಲಿಷ್ಠನು ತನ್ನ ಮನೆಯನ್ನು ಸುರಕ್ಷಿತವಾಗಿಡುವುದಕ್ಕಾಗಿ ಅವಲಂಬಿಸಿಕೊಂಡಿದ್ದ ಆಯುಧಗಳನ್ನೆಲ್ಲಾ ಆ ಮತ್ತೊಬ್ಬ ಬಲಿಷ್ಠನು ತೆಗೆದುಕೊಂಡು ಹೋಗುವನು. ಬಳಿಕ ಆ ಮತ್ತೊಬ್ಬ ಬಲಿಷ್ಠನು ಆ ಮನುಷ್ಯನ ವಸ್ತುಗಳನ್ನು ತನಗೆ ಇಷ್ಟಬಂದ ಹಾಗೆ ಮಾಡುವನು.
23 “ನನ್ನೊಂದಿಗಿಲ್ಲದವನು ನನಗೆ ವಿರೋಧವಾಗಿದ್ದಾನೆ. ನನ್ನೊಂದಿಗೆ ಶೇಖರಿಸದವನು ಚದರಿಸುವವನಾಗಿದ್ದಾನೆ.
ಬರಿದಾದ ಹೃದಯ
(ಮತ್ತಾಯ 12:43-45)
24 “ದೆವ್ವವು ಒಬ್ಬ ವ್ಯಕ್ತಿಯಿಂದ ಹೊರಗೆ ಬಂದ ಮೇಲೆ ವಿಶ್ರಾಂತಿಗಾಗಿ ಸ್ಥಳವನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ಅಲೆದಾಡುತ್ತದೆ. ಆದರೆ ವಿಶ್ರಮಿಸಿಕೊಳ್ಳಲು ಅದಕ್ಕೆ ಸ್ಥಳ ದೊರೆಯುವುದಿಲ್ಲ. ಆದ್ದರಿಂದ ‘ನಾನು ಬಿಟ್ಟುಬಂದ ಮನೆಗೆ (ವ್ಯಕ್ತಿ) ಹಿಂತಿರುಗುವೆನು’ ಎಂದುಕೊಳ್ಳುತ್ತದೆ. 25 ಅದು ಆ ವ್ಯಕ್ತಿಯ ಬಳಿಗೆ ಹಿಂತಿರುಗಿ ಬಂದಾಗ, ಆ ಮನೆಯನ್ನು (ವ್ಯಕ್ತಿ) ಗುಡಿಸಿ ಅಲಂಕರಿಸಿರುವುದನ್ನು ಕಾಣುತ್ತದೆ. 26 ಆಗ ಹೊರಟುಹೋಗಿ ತನಗಿಂತಲೂ ಹೆಚ್ಚು ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುತ್ತದೆ. ಬಳಿಕ ಆ ದೆವ್ವಗಳೆಲ್ಲಾ ಆ ಮನುಷ್ಯನೊಳಗೆ ಹೋಗಿ ಅಲ್ಲೇ ವಾಸಿಸುತ್ತವೆ. ಆಗ ಆ ವ್ಯಕ್ತಿಯು ಮೊದಲಿಗಿಂತಲೂ ಹೆಚ್ಚಿನ ಸಂಕಟಕ್ಕೆ ಒಳಗಾಗುತ್ತಾನೆ” ಎಂದು ಹೇಳಿದನು.
ನಿಜವಾದ ಭಾಗ್ಯವಂತರು
27 ಯೇಸು ಈ ಸಂಗತಿಗಳನ್ನು ಹೇಳಿದಾಗ, ಅಲ್ಲಿ, ಜನರೊಂದಿಗಿದ್ದ ಒಬ್ಬ ಸ್ತ್ರೀ ಯೇಸುವಿಗೆ, “ನಿನ್ನನ್ನು ಹೆತ್ತು ಪೋಷಿಸಿದ ತಾಯಿ ಭಾಗ್ಯವಂತಳೇ ಸರಿ!” ಎಂದು ಹೇಳಿದಳು.
28 ಆದರೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದಕ್ಕೆ ವಿಧೇಯರಾಗುವ ಜನರೇ ಭಾಗ್ಯವಂತರು!” ಎಂದನು.
ನಮಗೆ ಸಾಕ್ಷಿ ಕೊಡು!
(ಮತ್ತಾಯ 12:38-42; ಮಾರ್ಕ 8:12)
29 ಜನರ ಗುಂಪು ದೊಡ್ಡದಾಗುತ್ತಿರಲು ಯೇಸು ಅವರಿಗೆ, “ಈ ಸಂತತಿಯು ಕೆಟ್ಟ ಸಂತತಿಯೇ ಸರಿ! ಇದು ಸೂಚಕಕಾರ್ಯವನ್ನು ನೋಡಬೇಕೆನ್ನುತ್ತದೆ. ಆದರೆ ಯೋನನ ಜೀವಿತದಲ್ಲಾದ ಸೂಚಕಕಾರ್ಯದ ಹೊರತು ಬೇರೆ ಯಾವುದೂ ಇದಕ್ಕೆ ದೊರೆಯುವುದಿಲ್ಲ. 30 ನಿನೆವೆಯಲ್ಲಿ ಜೀವಿಸುತ್ತಿದ್ದ ಜನರಿಗೆ ಯೋನನು ಒಂದು ಸೂಚನೆಯಾಗಿದ್ದನು. ಅದೇ ರೀತಿಯಲ್ಲಿ ಈ ಕಾಲದ ಜನರಿಗೆ ಮನುಷ್ಯಕುಮಾರನು ಸೂಚನೆಯಾಗಿದ್ದಾನೆ.
31 “ನ್ಯಾಯತೀರ್ಪಿನ ದಿನದಲ್ಲಿ ದಕ್ಷಿಣ ದೇಶದ ರಾಣಿಯು ಈ ಪೀಳಿಗೆಯವರೊಂದಿಗೆ ಎದ್ದುನಿಂತು ಇವರನ್ನು ಅಪರಾಧಿಗಳೆಂದು ಹೇಳುವಳು. ಏಕೆಂದರೆ ಆ ರಾಣಿಯು ಬಹುದೂರದಿಂದ ಸೊಲೊಮೋನನ ಜ್ಞಾನಬೋಧನೆಯನ್ನು ಕೇಳಲು ಬಂದಳು. ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಾನು ಸೊಲೊಮೋನನಿಗಿಂತಲೂ ಹೆಚ್ಚಿನವನಾಗಿದ್ದೇನೆ!
32 “ನ್ಯಾಯತೀರ್ಪಿನ ದಿನದಲ್ಲಿ ನಿನೆವೆ ಪಟ್ಟಣದವರು ಈ ಸಂತತಿಗೆ ಎದುರಾಗಿ ನಿಂತು ಇವರನ್ನು ಅಪರಾಧಿಗಳೆಂದು ತೋರಿಸುವರು. ಏಕೆಂದರೆ ಅವರು ಪ್ರವಾದಿಯಾದ ಯೋನನ ಬೋಧನೆಯನ್ನು ಕೇಳಿ ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡರು. ಆದರೆ ನಾನು ಪ್ರವಾದಿ ಯೋನನಿಗಿಂತಲೂ ಹೆಚ್ಚಿನವನಾಗಿದ್ದೇನೆ.
ಲೋಕಕ್ಕೆ ಬೆಳಕಾಗಿರಿ!
(ಮತ್ತಾಯ 5:15; 6:22-23)
33 “ದೀಪವನ್ನು ಹಚ್ಚಿ ಪಾತ್ರೆಯೊಳಗಾಗಲಿ ಬೇರೆ ಎಲ್ಲೇ ಆಗಲಿ ಅಡಗಿಸಿಡುವುದಿಲ್ಲ. ಒಳಗೆ ಬರುವವರಿಗೆ ಬೆಳಕು ಕಾಣಿಸಲೆಂದು ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. 34 ನಿನ್ನ ಕಣ್ಣು ದೇಹಕ್ಕೆ ಬೆಳಕಾಗಿದೆ, ನಿನ್ನ ಕಣ್ಣು ಒಳ್ಳೆಯದಾಗಿದ್ದರೆ, ನಿನ್ನ ದೇಹವೆಲ್ಲಾ ಪೂರ್ಣ ಬೆಳಕಾಗಿರುವುದು. ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ, ನಿನ್ನ ದೇಹವೆಲ್ಲಾ ಪೂರ್ಣಕತ್ತಲಾಗಿರುವುದು. 35 ಆದ್ದರಿಂದ ಎಚ್ಚರಿಕೆಯಾಗಿರು! ನಿನ್ನೊಳಗಿರುವ ಬೆಳಕು ಕತ್ತಲಾಗದಂತೆ ನೋಡಿಕೊ. 36 ನಿನ್ನ ದೇಹವೆಲ್ಲಾ ಬೆಳಕಿನಿಂದ ತುಂಬಿದ್ದು ಯಾವ ಭಾಗದಲ್ಲಿಯೂ ಕತ್ತಲಿಲ್ಲದಿದ್ದರೆ ನೀನು ಪ್ರಜ್ವಲಿಸುವ ಬೆಳಕಿನಂತಿರುವೆ” ಎಂದು ಹೇಳಿದನು.
ಯೇಸು ಫರಿಸಾಯರನ್ನು ಖಂಡಿಸಿದನು
(ಮತ್ತಾಯ 23:1-36; ಮಾರ್ಕ 12:38-40; ಲೂಕ 20:45-47)
37 ಯೇಸು ಮಾತಾಡಿ ಮುಗಿಸಿದ ಮೇಲೆ ಫರಿಸಾಯನೊಬ್ಬನು ಯೇಸುವನ್ನು ತನ್ನ ಮನೆಗೆ ಊಟಕ್ಕೆ ಬರಬೇಕೆಂದು ಕರೆದನು. ಆದ್ದರಿಂದ ಯೇಸು ಅವನ ಮನೆಯೊಳಗೆ ಹೋಗಿ ಊಟಕ್ಕೆ ಕುಳಿತುಕೊಂಡನು. 38 ಆದರೆ ಯೇಸು ತನ್ನ ಕೈಗಳನ್ನು ತೊಳೆದುಕೊಳ್ಳದೆ ಊಟಕ್ಕೆ ಕುಳಿತಿರುವುದನ್ನು ಕಂಡಾಗ ಫರಿಸಾಯನಿಗೆ ಆಶ್ಚರ್ಯವಾಯಿತು. 39 ಪ್ರಭುವು (ಯೇಸು) ಅವನಿಗೆ ಹೇಳಿದ್ದೇನೆಂದರೆ: “ಫರಿಸಾಯರಾದ ನೀವು ಪಾತ್ರೆಯ ಮತ್ತು ಬಟ್ಟಲಿನ ಹೊರಭಾಗವನ್ನು ಶುಚಿಮಾಡುತ್ತೀರಿ. ಆದರೆ ನಿಮ್ಮ ಒಳಭಾಗವು ಮೋಸದಿಂದಲೂ ಕೆಟ್ಟತನದಿಂದಲೂ ತುಂಬಿಹೋಗಿದೆ. 40 ನೀವು ಬುದ್ಧಿಹೀನರು! ಹೊರಭಾಗವನ್ನು ಮಾಡಿದಾತನೇ (ದೇವರು) ಒಳಭಾಗವನ್ನೂ ಮಾಡಿದ್ದಾನೆ. 41 ಆದ್ದರಿಂದ ಪಾತ್ರೆ ಮತ್ತು ಬಟ್ಟಲುಗಳ ಒಳಗಿರುವುದನ್ನು ಬಡವರಿಗೆ ದಾನಮಾಡಿರಿ. ಆಗ ನೀವು ಪೂರ್ಣಶುದ್ಧರಾಗುತ್ತೀರಿ.
42 “ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ದೇವರಿಗೆ ನಿಮ್ಮಲ್ಲಿರುವ ಪ್ರತಿಯೊಂದರಲ್ಲಿಯೂ ಹತ್ತನೆಯ ಒಂದು ಭಾಗವನ್ನು ಕೊಡುತ್ತೀರಿ. ನಿಮ್ಮ ತೋಟದಲ್ಲಿ ಬೆಳೆಯುವ ಮರುಗ, ಸದಾಪು ಮುಂತಾದ ಚಿಕ್ಕ ಸಸಿಗಳಲ್ಲಿಯೂ ಹತ್ತನೆಯ ಒಂದು ಭಾಗವನ್ನು ಕೊಡುತ್ತೀರಿ. ಆದರೆ ಬೇರೆಯವರಿಗೆ ನ್ಯಾಯತೋರಿಸುವುದನ್ನೂ ದೇವರನ್ನು ಪ್ರೀತಿಸುವುದನ್ನೂ ಮರೆತುಬಿಟ್ಟಿದ್ದೀರಿ. ನೀವು ಮೊದಲು ಇವುಗಳನ್ನು ಮಾಡಬೇಕು ಮತ್ತು ಉಳಿದವುಗಳನ್ನು ಕಡೆಗಣಿಸಬಾರದು.
43 “ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಸಭಾಮಂದಿರಗಳಲ್ಲಿ ಉನ್ನತಪೀಠಗಳನ್ನೂ ಮಾರುಕಟ್ಟೆಗಳಲ್ಲಿ ಜನರಿಂದ ಗೌರವವನ್ನೂ ಆಶಿಸುತ್ತೀರಿ. 44 ನೀವು ಮರೆಯಾಗಿರುವ ಸಮಾಧಿಗಳಂತಿದ್ದೀರಿ. ಜನರು ಸಮಾಧಿಗಳೆಂದು ತಿಳಿಯದೆ ಅವುಗಳ ಮೇಲೆ ನಡೆಯುತ್ತಾರೆ.”
ಧರ್ಮೋಪದೇಶಕನಿಗೆ ಯೇಸು ನೀಡಿದ ಉತ್ತರ
45 ಧರ್ಮೋಪದೇಶಕನೊಬ್ಬನು ಯೇಸುವಿಗೆ, “ಬೋಧಕನೇ, ನೀನು ಫರಿಸಾಯರ ಕುರಿತಾಗಿ ಈ ಸಂಗತಿಗಳನ್ನು ಹೇಳಿದಾಗ ನಮ್ಮನ್ನು ಸಹ ಖಂಡಿಸಿದಂತಾಯಿತು” ಎಂದು ಹೇಳಿದನು.
46 ಅದಕ್ಕೆ ಯೇಸು, “ಧರ್ಮೋಪದೇಶಕರೇ, ನಿಮ್ಮ ಗತಿಯನ್ನು ಏನು ಹೇಳಲಿ! ಜನರು ಅನುಸರಿಸಲಾಗದ ನಿಯಮಗಳನ್ನು ನೀವು ಮಾಡುತ್ತೀರಿ.[a] ಆ ನಿಯಮಗಳಿಗೆ ವಿಧೇಯರಾಗುವಂತೆ ಬೇರೆಯವರಿಗೆ ಬಲವಂತ ಮಾಡುತ್ತೀರಿ. ಆದರೆ ಆ ನಿಯಮಗಳಲ್ಲಿ ಒಂದನ್ನಾದರೂ ಪಾಲಿಸಲು ನೀವು ಪ್ರಯತ್ನಿಸುವುದಿಲ್ಲ. 47 ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಪ್ರವಾದಿಗಳಿಗೆ ಗೋರಿಗಳನ್ನು[b] ಕಟ್ಟುತ್ತೀರಿ. ಆದರೆ ಆ ಪ್ರವಾದಿಗಳನ್ನು ಕೊಂದವರು ನಿಮ್ಮ ಪಿತೃಗಳೇ! 48 ಇದರಿಂದಾಗಿ, ನಿಮ್ಮ ಪಿತೃಗಳು ಮಾಡಿದ ಕೃತ್ಯಗಳನ್ನು ನೀವು ಒಪ್ಪಿಕೊಂಡಿದ್ದೀರೆಂಬುದನ್ನು ಎಲ್ಲಾ ಜನರಿಗೆ ತೋರಿಸುತ್ತೀರಿ. ಅವರು ಪ್ರವಾದಿಗಳನ್ನು ಕೊಂದರು. ನೀವು ಆ ಪ್ರವಾದಿಗಳಿಗಾಗಿ ಗೋರಿಗಳನ್ನು ಕಟ್ಟುತ್ತೀರಿ! 49 ಆದಕಾರಣ ದೇವರ ಜ್ಞಾನವು ಹೇಳಿದ್ದೇನೆಂದರೆ, ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಅಪೊಸ್ತಲರನ್ನೂ ಕಳುಹಿಸುವೆನು. ನನ್ನ ಕೆಲವು ಪ್ರವಾದಿಗಳು ಮತ್ತು ಅಪೊಸ್ತಲರು ಕೆಡುಕರಿಂದ ಹತರಾಗುವರು. ಬೇರೆ ಕೆಲವರು ಸಂಕಟಕ್ಕೆ ಗುರಿಯಾಗುವರು.’
50 “ಆದ್ದರಿಂದ ಲೋಕಾದಿಯಿಂದ ಹತರಾದ ಎಲ್ಲಾ ಪ್ರವಾದಿಗಳ ಸಾವಿಗೆ ಈ ಕಾಲದ ಜನರಾದ ನೀವು ದಂಡನೆ ಹೊಂದುವಿರಿ. 51 ಹೇಬೆಲನನ್ನು ಕೊಂದದ್ದಕ್ಕಾಗಿಯೂ ಜಕರೀಯನನ್ನು ಕೊಂದದ್ದಕ್ಕಾಗಿಯೂ ನಿಮಗೆ ದಂಡನೆಯಾಗುವುದು. ಜಕರೀಯನನ್ನು ಯಜ್ಞವೇದಿ ಮತ್ತು ದೇವಾಲಯದ ನಡುವೆ ಕೊಲ್ಲಲಾಯಿತು. ಹೌದು, ಅವರೆಲ್ಲರ ಕೊಲೆಗಳಿಗಾಗಿ ಈಗ ಜೀವಿಸುತ್ತಿರುವ ನಿಮಗೆ ದಂಡನೆ ಆಗುವುದು.
52 “ಧರ್ಮೋಪದೇಶಕರೇ, ನಿಮ್ಮ ಗತಿಯನ್ನು ಏನು ಹೇಳಲಿ! ದೇವರ ಕುರಿತಾಗಿ ಕಲಿಯಲು ಸಾಧನವಾಗಿರುವ ಬೀಗದ ಕೈಯನ್ನು ನೀವು ಬಚ್ಚಿಟ್ಟಿದ್ದೀರಿ. ನೀವೂ ಕಲಿಯುವುದಿಲ್ಲ, ಬೇರೆಯವರಿಗೂ ಕಲಿಯಲು ಬಿಡುವುದಿಲ್ಲ” ಎಂದು ಹೇಳಿದನು.
53 ಯೇಸು ಅಲ್ಲಿಂದ ಹೊರಟಾಗ ಧರ್ಮೋಪದೇಶಕರು ಮತ್ತು ಫರಿಸಾಯರು ಆತನಿಗೆ ಮತ್ತಷ್ಟು ತೊಂದರೆ ಕೊಡಲು ಪ್ರಾರಂಭಿಸಿದರು. ಅವರು ಅನೇಕ ಸಂಗತಿಗಳ ಕುರಿತು ಪ್ರಶ್ನೆಗಳನ್ನು ಕೇಳಿ, ಆತನಿಂದ ಉತ್ತರ ಹೇಳಿಸುವುದಕ್ಕೆ ಪ್ರಯತ್ನಿಸಿದರು. 54 ಯೇಸುವನ್ನು ಮಾತಿನಲ್ಲಿ ಹಿಡಿಯಬೇಕೆಂದು ಯೋಚಿಸಿ, ಆತನು ಏನಾದರೂ ತಪ್ಪು ಹೇಳುವಂತೆ ಮಾಡಲು ಪ್ರಯತ್ನಿಸುತ್ತಿದ್ದರು.
ಯೋಬನಿಗೆ ಬಿಲ್ದದನ ಉತ್ತರ
25 ಬಳಿಕ ಶೂಹ ದೇಶದ ಬಿಲ್ದದನು ಉತ್ತರಕೊಟ್ಟನು:
2 “ದೇವರು ಸರ್ವಾಧಿಪತಿ.
ಎಲ್ಲರೂ ತನ್ನಲ್ಲಿ ಭಯಭಕ್ತಿಯುಳ್ಳವರಾಗುವಂತೆ ಆತನು ಮಾಡುತ್ತಾನೆ.
ಆತನು ತನ್ನ ಪರಲೋಕರಾಜ್ಯದಲ್ಲಿ ಸಮಾಧಾನವನ್ನು ನೆಲೆಗೊಳಿಸುವನು.
3 ಯಾವನೂ ಆತನ ಸೈನ್ಯಗಳನ್ನು ಲೆಕ್ಕಿಸಲಾರನು.
ಆತನ ಸೂರ್ಯನು ಜನರೆಲ್ಲರ ಮೇಲೆ ಉದಯಿಸುವನು.
4 ದೇವರಿಗೆ ಹೋಲಿಸಿದರೆ ಯಾವನೂ ನೀತಿವಂತನಲ್ಲ.
ಯಾವ ಮನುಷ್ಯನೂ ಪರಿಶುದ್ಧನಾಗಿರಲು ಸಾಧ್ಯವಿಲ್ಲ.
5 ದೇವರ ದೃಷ್ಟಿಯಲ್ಲಿ ಚಂದ್ರನು ಸಹ ಪ್ರಕಾಶವಾಗಿಲ್ಲ;
ನಕ್ಷತ್ರಗಳು ಸಹ ಪರಿಶುದ್ಧವಲ್ಲ.
6 ಹೀಗಿರಲು, ಮನುಷ್ಯನು ಎಷ್ಟೋ ಅಪರಿಶುದ್ಧನು!
ಅವನು ಕೇವಲ ನಿಷ್ಪ್ರಯೋಜಕವಾದ ಹುಳವಿನಂತಿದ್ದಾನೆ!”
ಬಿಲ್ದದನಿಗೆ ಯೋಬನ ಉತ್ತರ
26 ಆಗ ಯೋಬನು ಹೀಗೆ ಉತ್ತರಕೊಟ್ಟನು:
2 “ನಿನ್ನಿಂದ ಬಲಹೀನನಿಗೆ ಎಷ್ಟೋ ಸಹಾಯವಾಯಿತು!
ನೀನು ನನ್ನ ಬಲಹೀನವಾದ ತೋಳುಗಳನ್ನು ಮತ್ತೆ ಬಲಗೊಳಿಸಿದೆ!
3 ಹೌದು, ಅಜ್ಞಾನಿಗೆ ಎಷ್ಟೋ ಒಳ್ಳೆಯ ಬುದ್ಧಿವಾದ ಮಾಡಿದೆ!
ನೀನು ಎಷ್ಟು ಜ್ಞಾನಿ ಎಂಬುದನ್ನು ತೋರಿಸಿಕೊಟ್ಟಿರುವೆ.[a]
4 ಇವುಗಳನ್ನು ತಿಳಿಸಲು ನಿನಗೆ ಯಾರು ಸಹಾಯ ಮಾಡಿದವರು?
ಯಾರ ಆತ್ಮವು ನಿನ್ನನ್ನು ಪ್ರೇರೇಪಿಸಿತು?
5 “ಸತ್ತವರ ಆತ್ಮಗಳು
ಭೂಗರ್ಭದಲ್ಲಿರುವ ಜಲರಾಶಿಗಳಲ್ಲಿ ನಡುಗುತ್ತವೆ.
6 ದೇವರಿಗೆ ಪಾತಾಳವೂ ಸ್ಪಷ್ಟವಾಗಿ ಕಾಣುತ್ತದೆ;
ಮರಣವು ಆತನಿಗೆ ಮರೆಯಾಗಿಲ್ಲ.
7 ದೇವರು ಶೂನ್ಯದ ಮೇಲೆ ಉತ್ತರದಿಕ್ಕಿನ ಆಕಾಶವನ್ನು ವಿಸ್ತರಿಸಿದನು.
ಆತನು ಭೂಮಿಯನ್ನು ಯಾವ ಆಧಾರವೂ ಇಲ್ಲದೆ ತೂಗುಹಾಕಿದ್ದಾನೆ.
8 ದೇವರು ಮೋಡಗಳನ್ನು ನೀರಿನಿಂದ ತುಂಬಿಸುವನು.
ಆದರೆ ಮೋಡಗಳು ನೀರಿನ ಭಾರದಿಂದ ಒಡೆದುಹೋಗದಂತೆ ನೋಡಿಕೊಳ್ಳುವನು.
9 ದೇವರು ತನ್ನ ಮೋಡಗಳನ್ನು ಹರಡಿ
ಪೂರ್ಣಚಂದ್ರನನ್ನು ಮರೆಮಾಡುವನು.
10 ದೇವರು ಸಮುದ್ರದ ಮೇಲೆ ಬೆಳಕು ಮತ್ತು ಕತ್ತಲೆಗಳು ಸಂಧಿಸುವ ಸ್ಥಳದಲ್ಲಿ
ಕ್ಷಿತಿಜವನ್ನು ಗಡಿರೇಖೆಯನ್ನಾಗಿ ಎಳೆದಿದ್ದಾನೆ.
11 ದೇವರು ಗದರಿಸುವಾಗ
ಆಕಾಶಮಂಡಲದ ಸ್ತಂಭಗಳು ಭಯದಿಂದ ನಡುಗುತ್ತವೆ.
12 ದೇವರ ಶಕ್ತಿಯು ಸಮುದ್ರವನ್ನು ಪ್ರಶಾಂತಗೊಳಿಸುವುದು.
ದೇವರ ಶಕ್ತಿಯು ರಹಬನ[b] ಸಹಾಯಕರನ್ನು ನಾಶಮಾಡುವುದು.
13 ಆತನ ಉಸಿರು ಆಕಾಶಮಂಡಲವನ್ನು ಶುಭ್ರಗೊಳಿಸುವುದು.
ಆತನ ಜ್ಞಾನವು ಓಡಿಹೋಗಲು ಪ್ರಯತ್ನಿಸಿದ ರಹಬನನ್ನು ನಾಶಮಾಡುವುದು.
14 ದೇವರ ಶಕ್ತಿಯುತವಾದ ಕಾರ್ಯಗಳಲ್ಲಿ ಇವು ಕೇವಲ ಒಂದು ಚಿಕ್ಕ ಭಾಗವಾಗಿವೆ.
ಆತನ ವಿಷಯವಾಗಿ ಸೂಕ್ಷ್ಮ ಧ್ವನಿಯನ್ನು ಮಾತ್ರ ಕೇಳಿದ್ದೇವೆ.
ಆತನ ಶಕ್ತಿಯ ಗರ್ಜನೆಯನ್ನು ಯಾರು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲರು?”
ಪವಿತ್ರಾತ್ಮನ ವರಗಳು
12 ಸಹೋದರ ಸಹೋದರಿಯರೇ, ಆತ್ಮಿಕ ವರಗಳ ಬಗ್ಗೆ ನೀವು ಅರ್ಥಮಾಡಿಕೊಳ್ಳಬೇಕೆಂಬುದು ನನ್ನ ಅಪೇಕ್ಷೆಯಾಗಿದೆ. 2 ನೀವು ವಿಶ್ವಾಸಿಗಳಾಗುವುದಕ್ಕಿಂತ ಮುಂಚೆ ನಿಮ್ಮ ಜೀವಿತವು ಹೇಗಿತ್ತೆಂಬುದನ್ನು ಜ್ಞಾಪಿಸಿಕೊಳ್ಳಿರಿ. ನಿಮಗಿಷ್ಟ ಬಂದಂತೆ ನಿರ್ಜೀವ ವಸ್ತುಗಳಾದ ವಿಗ್ರಹಗಳನ್ನು ಆರಾಧಿಸುತ್ತಿದ್ದಿರಿ. 3 ಹೀಗಿರಲಾಗಿ, ನಾನು ನಿಮಗೆ ಹೇಳುವುದೇನೆಂದರೆ, ದೇವರಾತ್ಮನ ಸಹಾಯದಿಂದ ಮಾತಾಡುವ ಯಾವ ವ್ಯಕ್ತಿಯೇ ಆಗಲಿ, “ಯೇಸು ಶಾಪಗ್ರಸ್ತನಾಗಲಿ” ಎಂದು ಹೇಳುವುದಿಲ್ಲ. ಅಂತೆಯೇ ಪವಿತ್ರಾತ್ಮನ ಸಹಾಯವಿಲ್ಲದೆ ಯಾವ ವ್ಯಕ್ತಿಯೇ ಆಗಲಿ, “ಯೇಸುವೇ ಪ್ರಭು” ಎಂದು ಹೇಳಲಾರನು.
4 ಅನೇಕ ರೀತಿಯ ಆತ್ಮಿಕ ವರಗಳಿವೆ. ಆದರೆ ಅವುಗಳೆಲ್ಲ ಒಬ್ಬನೇ ಆತ್ಮನಿಂದ ಬಂದಂಥವುಗಳಾಗಿವೆ. 5 ಸೇವೆಮಾಡಲು ವಿವಿಧ ಮಾರ್ಗಗಳಿವೆ, ಆದರೆ ಅವುಗಳೆಲ್ಲಾ ಒಬ್ಬನೇ ಆತ್ಮನಿಂದ ಬಂದಂಥವುಗಳಾಗಿವೆ. 6 ದೇವರು ಜನರಲ್ಲಿ ಮಾಡುವ ಕಾರ್ಯಗಳಿಗೂ ವಿವಿಧ ಮಾರ್ಗಗಳಿವೆ. ಆದರೆ ಅವುಗಳೆಲ್ಲಾ ಒಬ್ಬನೇ ದೇವರಿಂದ ಬಂದಂಥವುಗಳಾಗಿವೆ.
7 ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಪವಿತ್ರಾತ್ಮನ ವರವು ಕಾಣಬಲ್ಲದು. ಇತರರಿಗೆ ಸಹಾಯ ಮಾಡಲೆಂದು ಪವಿತ್ರಾತ್ಮನು ವರವನ್ನು ಕೊಡುತ್ತಾನೆ. 8 ಆತನು ಒಬ್ಬನಿಗೆ ಜ್ಞಾನದಿಂದ ಮಾತಾಡುವ ವರವನ್ನೂ ಮತ್ತೊಬ್ಬನಿಗೆ ತಿಳುವಳಿಕೆಯಿಂದ ಮಾತಾಡುವ ವರವನ್ನೂ ಕೊಡುತ್ತಾನೆ. 9 ಒಬ್ಬನಿಗೆ ನಂಬಿಕೆಯನ್ನೂ ಮತ್ತೊಬ್ಬನಿಗೆ ಸ್ವಸ್ಥಪಡಿಸುವ ವರವನ್ನೂ ಕೊಡುತ್ತಾನೆ; 10 ಮತ್ತೊಬ್ಬನಿಗೆ ಅದ್ಭುತಕಾರ್ಯಗಳನ್ನು ಮಾಡುವ ಶಕ್ತಿಯನ್ನೂ ಇನ್ನೊಬ್ಬನಿಗೆ ಪ್ರವಾದಿಸುವ ಸಾಮರ್ಥ್ಯವನ್ನೂ ಇನ್ನೊಬ್ಬನಿಗೆ ಒಳ್ಳೆಯ ಮತ್ತು ಕೆಟ್ಟ ಆತ್ಮಗಳ ನಡುವೆ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳುವ ಸಾಮರ್ಥ್ಯವನ್ನೂ ಕೊಡುತ್ತಾನೆ; ಒಬ್ಬನಿಗೆ ಅನೇಕ ಭಾಷೆಗಳನ್ನು ಮಾತಾಡುವ ಸಾಮರ್ಥ್ಯವನ್ನೂ ಮತ್ತೊಬ್ಬನಿಗೆ ಆ ಭಾಷೆಗಳನ್ನು ಅನುವಾದಿಸುವ ಸಾಮರ್ಥ್ಯವನ್ನೂ ಕೊಡುತ್ತಾನೆ. 11 ಪವಿತ್ರಾತ್ಮನು ಒಬ್ಬನೇ. ಆತನೇ ಎಲ್ಲಾ ವರಗಳನ್ನು ತನ್ನ ಚಿತ್ತಕ್ಕನುಸಾರವಾಗಿ ಪ್ರತಿಯೊಬ್ಬನಿಗೂ ಹಂಚಿಕೊಟ್ಟು ನಡೆಸುತ್ತಾನೆ.
ಕ್ರಿಸ್ತನ ದೇಹ
12 ದೇಹವು ಒಂದೇ, ಆದರೆ ಅದು ಅನೇಕ ಅಂಗಗಳನ್ನು ಪಡೆದಿದೆ. ಹೌದು, ದೇಹದಲ್ಲಿ ಅನೇಕ ಅಂಗಗಳಿವೆ, ಆದರೆ ಆ ಎಲ್ಲಾ ಅಂಗಗಳಿಂದ ಒಂದೇ ಒಂದು ದೇಹವು ರೂಪಿತವಾಗುತ್ತದೆ. ಅಂತೆಯೇ ಕ್ರಿಸ್ತನು. 13 ನಮ್ಮಲ್ಲಿ ಕೆಲವರು ಯೆಹೂದ್ಯರಿದ್ದಾರೆ, ಕೆಲವರು ಗ್ರೀಕರಿದ್ದಾರೆ, ಕೆಲವರು ಗುಲಾಮರಿದ್ದಾರೆ, ಕೆಲವರು ಸ್ವತಂತ್ರರಿದ್ದಾರೆ, ಆದರೆ ನಾವೆಲ್ಲರೂ ಒಂದೇ ದೇಹವಾಗುವುದಕ್ಕಾಗಿ ಒಬ್ಬನೇ ಪವಿತ್ರಾತ್ಮನ ಮೂಲಕ ದೀಕ್ಷಾಸ್ನಾನ ಮಾಡಿಸಿಕೊಂಡೆವು. ನಮ್ಮೆಲ್ಲರಿಗೂ ಒಬ್ಬನೇ ಪವಿತ್ರಾತ್ಮನನ್ನು ಕೊಡಲಾಯಿತು.[a]
14 ದೇಹವು ಒಂದು ಅಂಗಕ್ಕಿಂತಲೂ ಹೆಚ್ಚು ಅಂಗಗಳನ್ನು ಪಡೆದಿದೆ. ಅದು ಅನೇಕ ಅಂಗಗಳನ್ನು ಪಡೆದಿದೆ. 15 ಪಾದವು, “ನಾನು ಕೈಯಲ್ಲ, ಆದ್ದರಿಂದ ನಾನು ದೇಹಕ್ಕೆ ಸೇರಿಲ್ಲ” ಎಂದು ಹೇಳಬಹುದು. ಆದರೆ ಹೀಗೆ ಹೇಳಿದ ಮಾತ್ರಕ್ಕೆ ಪಾದವು ದೇಹದಿಂದ ಹೊರತಾಗಲಿಲ್ಲ. 16 ಕಿವಿಯು, “ನಾನು ಕಣ್ಣಲ್ಲ, ಆದ್ದರಿಂದ ನಾನು ದೇಹಕ್ಕೆ ಸೇರಿಲ್ಲ” ಎಂದು ಹೇಳಬಹುದು. ಆದರೆ ಹೀಗೆ ಹೇಳಿದ ಮಾತ್ರಕ್ಕೆ ಕಿವಿಯು ದೇಹದಿಂದ ಹೊರತಾಗಲಿಲ್ಲ. 17 ಇಡೀ ದೇಹವೇ ಕಣ್ಣಾಗಿದ್ದರೆ, ಕೇಳಿಸಿಕೊಳ್ಳಲು ದೇಹಕ್ಕೆ ಸಾಧ್ಯವಿರುತ್ತಿರಲಿಲ್ಲ. ಇಡೀ ದೇಹವೇ ಕಿವಿಯಾಗಿದ್ದರೆ, ದೇಹವು ಯಾವುದರ ವಾಸನೆಯನ್ನೂ ತಿಳಿದುಕೊಳ್ಳಲಾಗುತ್ತಿರಲಿಲ್ಲ. 18-19 ದೇಹದ ಪ್ರತಿಯೊಂದು ಅಂಗವು ಒಂದೇ ರೀತಿಯ ಅಂಗವಾಗಿದ್ದರೆ, ಆಗ ದೇಹವೇ ಇರುತ್ತಿರಲಿಲ್ಲ. ಆದರೆ ದೇವರು ತನ್ನ ಇಚ್ಛೆಗನುಸಾರವಾಗಿ ದೇಹದಲ್ಲಿ ಅಂಗಾಂಗಗಳನ್ನು ಇಟ್ಟಿದ್ದಾನೆ. ಆತನು ಅವುಗಳಲ್ಲಿ ಪ್ರತಿಯೊಂದಕ್ಕೂ ಸ್ಥಳವನ್ನು ಗೊತ್ತುಪಡಿಸಿದ್ದಾನೆ. 20 ಆದ್ದರಿಂದ ಅಂಗಗಳು ಅನೇಕವಿದ್ದರೂ ದೇಹವು ಒಂದೇ.
21 ಕಣ್ಣು, “ನೀನು ನನಗೆ ಅವಶ್ಯವಿಲ್ಲ” ಎಂದು ಕೈಗೆ ಹೇಳಲಾರದು ಮತ್ತು ತಲೆಯು, “ನೀನು ನನಗೆ ಅವಶ್ಯವಿಲ್ಲ” ಎಂದು ಪಾದಕ್ಕೆ ಹೇಳಲಾರದು. 22 ಅಲ್ಲದೆ ದೇಹದಲ್ಲಿ ಬಲಹೀನವಾಗಿ ತೋರುವ ಅಂಗಗಳು ನಿಜವಾಗಿಯೂ ಬಹಳ ಅವಶ್ಯವಾಗಿವೆ. 23 ನಾವು ದೇಹದ ಯಾವ ಅಂಗಗಳನ್ನು ಅಲ್ಪವಾದುವುಗಳೆಂದು ಎಣಿಸುತ್ತೇವೋ ಆ ಅಂಗಗಳ ಬಗ್ಗೆ ಹೆಚ್ಚು ಎಚ್ಚರಿಕೆ ತೆಗೆದುಕೊಳ್ಳುತ್ತೇವೆ. ನಾವು ನಮ್ಮ ಯಾವ ಅಂಗಗಳನ್ನು ತೋರಿಸಬಯಸುವುದಿಲ್ಲವೋ ಆ ಅಂಗಗಳನ್ನು ವಿಶೇಷವಾದ ರೀತಿಯಲ್ಲಿ ಸಂರಕ್ಷಿಸುತ್ತೇವೆ. 24 ಬಹು ಸುಂದರವಾದ ಅಂಗಗಳಿಗೆ ಇಂಥ ವಿಶೇಷ ಸಂರಕ್ಷಣೆಯ ಅಗತ್ಯವಿರುವುದಿಲ್ಲ. ಆದರೆ ದೇವರು ಅಂಗಗಳನ್ನು ಒಟ್ಟಾಗಿ ಸೇರಿಸಿದ್ದಾನೆ ಮತ್ತು ಕೊರತೆಯಲ್ಲಿರುವ ಅಂಗಗಳಿಗೆ ಹೆಚ್ಚಿನ ಮಾನ್ಯತೆಯನ್ನು ಕೊಟ್ಟಿದ್ದಾನೆ. 25 ನಮ್ಮ ದೇಹವು ವಿಭಜನೆಯಾಗದಂತೆ ಅಂಗಗಳು ಒಂದಕ್ಕೊಂದರ ಹಿತವನ್ನು ಸರಿಸಮನಾಗಿ ಗಮನಿಸುವಂತೆ ದೇವರು ಮಾಡಿದ್ದಾನೆ. 26 ಒಂದು ಅಂಗಕ್ಕೆ ನೋವಾದರೆ, ಉಳಿದೆಲ್ಲ ಅಂಗಗಳು ಅದರೊಂದಿಗೆ ನೋವನ್ನು ಅನುಭವಿಸುತ್ತವೆ. ಒಂದು ಅಂಗಕ್ಕೆ ಸನ್ಮಾನ ದೊರೆತರೆ, ಉಳಿದೆಲ್ಲ ಅಂಗಗಳು ಅದರ ಸನ್ಮಾನದಲ್ಲಿ ಪಾಲುಗಾರರಾಗುತ್ತವೆ.
27 ನೀವೆಲ್ಲರೂ ಒಂದುಗೂಡಿ ಕ್ರಿಸ್ತನ ದೇಹವಾಗಿದ್ದೀರಿ. ನಿಮ್ಮಲ್ಲಿ ಪ್ರತಿಯೊಬ್ಬರೂ ಅದರ ಅಂಗವಾಗಿದ್ದೀರಿ. 28 ದೇವರು ಸಭೆಯಲ್ಲಿ ಅಪೊಸ್ತಲರಿಗೆ ಮೊದಲನೆಯ ಸ್ಥಾನವನ್ನೂ ಪ್ರವಾದಿಗಳಿಗೆ ಎರಡನೆಯ ಸ್ಥಾನವನ್ನೂ ಉಪದೇಶಕರಿಗೆ ಮೂರನೆಯ ಸ್ಥಾನವನ್ನೂ ಇಟ್ಟಿದ್ದಾನೆ. ಇದಲ್ಲದೆ ದೇವರು, ಅದ್ಭುತಕಾರ್ಯಗಳನ್ನು ಮಾಡುವ ಜನರಿಗೂ ಸ್ಪಸ್ಥಪಡಿಸುವ ಜನರಿಗೂ ಇತರರಿಗೆ ಸಹಾಯಮಾಡುವ ಜನರಿಗೂ ಮುನ್ನಡೆಸಬಲ್ಲ ಜನರಿಗೂ ವಿವಿಧ ಭಾಷೆಗಳನ್ನು ಮಾತಾಡಬಲ್ಲ ಜನರಿಗೂ ಸಭೆಯಲ್ಲಿ ಸ್ಥಾನವನ್ನು ಕೊಟ್ಟಿದ್ದಾನೆ. 29 ಎಲ್ಲಾ ಜನರು ಅಪೊಸ್ತಲರುಗಳಲ್ಲ. ಎಲ್ಲಾ ಜನರು ಪ್ರವಾದಿಗಳಲ್ಲ. ಎಲ್ಲಾ ಜನರು ಉಪದೇಶಕರುಗಳಲ್ಲ. ಎಲ್ಲಾ ಜನರು ಅದ್ಭುತಕಾರ್ಯಗಳನ್ನು ಮಾಡುವುದಿಲ್ಲ. 30 ಎಲ್ಲಾ ಜನರು ಗುಣಪಡಿಸುವ ವರವನ್ನು ಹೊಂದಿಲ್ಲ. ಎಲ್ಲಾ ಜನರು ವಿವಿಧ ಭಾಷೆಗಳನ್ನು ಮಾತಾಡುವುದಿಲ್ಲ. ಎಲ್ಲಾ ಜನರು ಆ ಭಾಷೆಗಳನ್ನು ಅನುವಾದಿಸುವುದಿಲ್ಲ. 31 ಆದರೆ ನೀವು ಪವಿತ್ರಾತ್ಮನ ಇನ್ನೂ ಶ್ರೇಷ್ಠವಾದ ವರಗಳನ್ನು ಯಥಾರ್ಥವಾಗಿ ಅಪೇಕ್ಷಿಸತಕ್ಕದ್ದು. ಈಗ ನಾನು ನಿಮಗೆ ಎಲ್ಲಕ್ಕಿಂತಲೂ ಉತ್ತಮವಾದ ಮಾರ್ಗವನ್ನು ತೋರಿಸುತ್ತೇನೆ.
Kannada Holy Bible: Easy-to-Read Version. All rights reserved. © 1997 Bible League International