M’Cheyne Bible Reading Plan
ಮನಸ್ಸೆ ಮತ್ತು ಎಫ್ರಾಯೀಮರಿಗೆ ಆಶೀರ್ವಾದಗಳು
48 ಸ್ವಲ್ಪ ಕಾಲದ ನಂತರ, ತಂದೆಯು ಬಹಳ ಅನಾರೋಗ್ಯದಿಂದಿರುವುದು ಯೋಸೇಫನಿಗೆ ತಿಳಿಯಿತು. ಆದ್ದರಿಂದ ಅವನು ತನ್ನ ಇಬ್ಬರು ಗಂಡುಮಕ್ಕಳಾದ ಮನಸ್ಸೆಯನ್ನು ಮತ್ತು ಎಫ್ರಾಯೀಮನನ್ನು ಕರೆದುಕೊಂಡು ತನ್ನ ತಂದೆಯ ಬಳಿಗೆ ಬಂದನು. 2 ಯೋಸೇಫನು ಬಂದಾಗ ಯಾರೋ ಒಬ್ಬನು ಇಸ್ರೇಲನಿಗೆ, “ನಿನ್ನ ಮಗನಾದ ಯೋಸೇಫನು ನಿನ್ನನ್ನು ನೋಡಲು ಬಂದಿದ್ದಾನೆ” ಎಂದು ಹೇಳಿದನು. ಆಗ ಅವನು ಬಹಳ ಬಲಹೀನನಾಗಿದ್ದರೂ ಕಷ್ಟಪಟ್ಟು ಹಾಸಿಗೆಯ ಮೇಲೆ ಕುಳಿತುಕೊಂಡನು.
3 ಬಳಿಕ ಇಸ್ರೇಲನು ಯೋಸೇಫನಿಗೆ, “ಸರ್ವಶಕ್ತನಾದ ದೇವರು ನನಗೆ ಕಾನಾನ್ ದೇಶದ ಲೂಜ್ ಎಂಬ ಸ್ಥಳದಲ್ಲಿ ಕಾಣಿಸಿಕೊಂಡು ನನ್ನನ್ನು ಆಶೀರ್ವದಿಸಿದನು. 4 ದೇವರು ನನಗೆ, ‘ನಾನು ನಿನಗೆ ಅನೇಕ ಮಕ್ಕಳನ್ನು ಕೊಡುತ್ತೇನೆ; ನಿನ್ನ ಸಂತತಿಯವರು ಅನೇಕ ಜನಾಂಗಗಳಾಗುವರು; ನಿನ್ನ ಸಂತತಿಯವರಿಗೆ ನಾನು ಈ ದೇಶವನ್ನು ಶಾಶ್ವತವಾಗಿ ಕೊಡುವೆನು’ ಎಂದು ಹೇಳಿದನು. 5 ಈಗ ನಿನಗೆ ಇಬ್ಬರು ಗಂಡುಮಕ್ಕಳಿದ್ದಾರೆ. ನಾನು ಈಜಿಪ್ಟಿಗೆ ಬರುವುದಕ್ಕಿಂತ ಮೊದಲೇ ಅವರು ಇಲ್ಲಿ ಹುಟ್ಟಿದರು. ನಿನ್ನ ಇಬ್ಬರು ಗಂಡುಮಕ್ಕಳಾದ ಮನಸ್ಸೆ ಮತ್ತು ಎಫ್ರಾಯೀಮ್ ನನ್ನ ಮಕ್ಕಳಂತೆಯೇ ಇದ್ದಾರೆ. ಅವರು ನನಗೆ ರೂಬೇನ್ ಮತ್ತು ಸಿಮೆಯೋನರಂತೆಯೇ ಇದ್ದಾರೆ. 6 ಆದ್ದರಿಂದ ಈ ಇಬ್ಬರು ಗಂಡುಮಕ್ಕಳು ನನಗೆ ಮಕ್ಕಳಂತೆಯೇ ಇರುತ್ತಾರೆ. ನಾನು ಹೊಂದಿರುವ ಪ್ರತಿಯೊಂದರಲ್ಲಿಯೂ ಅವರು ಪಾಲನ್ನು ಹೊಂದುವರು. ಆದರೆ ನಿನಗೆ ಬೇರೆ ಗಂಡುಮಕ್ಕಳಿದ್ದರೆ ಅವರು ಎಫ್ರಾಯೀಮ್ ಮತ್ತು ಮನಸ್ಸೆಯವರಿಗೆ ಮಕ್ಕಳಾಗಿರುತ್ತಾರೆ. ಅಂದರೆ ಎಫ್ರಾಯೀಮ್ ಮತ್ತು ಮನಸ್ಸೆ ಹೊಂದಿರುವ ಪ್ರತಿಯೊಂದರಲ್ಲಿ ಅವರು ಪಾಲನ್ನು ಹೊಂದುವರು. 7 ಪದ್ದನ್‌ಅರಾಮಿನಿಂದ ಹಿಂತಿರುಗಿ ಬರುತ್ತಿರುವಾಗ ರಾಹೇಲಳು ಸತ್ತಳು. ಇದು ನನಗೆ ತುಂಬ ದುಃಖವನ್ನು ಉಂಟುಮಾಡಿತು. ನಾವು ಕಾನಾನ್ ದೇಶದಲ್ಲಿ ಎಫ್ರಾತ್ ನಗರದ ಕಡೆಗೆ ಪ್ರಯಾಣ ಮಾಡುತ್ತಿದ್ದೆವು. ಆದ್ದರಿಂದ ನಾನು ಅವಳನ್ನು ಬೆತ್ಲೆಹೇಮೆಂಬ ಎಫ್ರಾತ್ ನಗರದ ರಸ್ತೆಯಲ್ಲಿ ಸಮಾಧಿ ಮಾಡಿದೆನು” ಎಂದು ಹೇಳಿದನು.
8 ಆಮೇಲೆ ಇಸ್ರೇಲನು ಯೋಸೇಫನ ಗಂಡುಮಕ್ಕಳನ್ನು ನೋಡಿ, “ಈ ಹುಡುಗರು ಯಾರು?” ಎಂದು ಕೇಳಿದನು.
9 ಯೋಸೇಫನು ತನ್ನ ತಂದೆಗೆ, “ಇವರು ನನ್ನ ಮಕ್ಕಳು. ದೇವರು ನನಗೆ ಕೊಟ್ಟಿರುವ ಗಂಡುಮಕ್ಕಳೇ ಇವರು” ಎಂದು ಹೇಳಿದನು.
ಇಸ್ರೇಲನು, “ಅವರನ್ನು ನನ್ನ ಬಳಿಗೆ ಕರೆದುಕೊಂಡು ಬಾ, ನಾನು ಅವರನ್ನು ಆಶೀರ್ವದಿಸುತ್ತೇನೆ” ಎಂದು ಹೇಳಿದನು.
10 ಇಸ್ರೇಲನಿಗೆ ತುಂಬ ವಯಸ್ಸಾಗಿತ್ತು. ಅವನಿಗೆ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ. ಆದ್ದರಿಂದ ಯೋಸೇಫನು ಅವರನ್ನು ತಂದೆಯ ಬಳಿಗೆ ಕರೆದುಕೊಂಡು ಬಂದನು. ಇಸ್ರೇಲನು ಆ ಹುಡುಗರನ್ನು ಅಪ್ಪಿಕೊಂಡು ಮುದ್ದಿಟ್ಟನು. 11 ಬಳಿಕ ಇಸ್ರೇಲನು ಯೋಸೇಫನಿಗೆ, “ನಾನು ಮತ್ತೆ ನಿನ್ನ ಮುಖವನ್ನು ನೋಡುತ್ತೇನೆ ಎಂದು ಯೋಚಿಸಿರಲಿಲ್ಲ. ಆದರೆ ನಾನು ನಿನ್ನನ್ನೂ ನಿನ್ನ ಮಕ್ಕಳನ್ನೂ ನೋಡುವಂತೆ ದೇವರು ಅನುಗ್ರಹಿಸಿದ್ದಾನೆ” ಎಂದು ಹೇಳಿದನು.
12 ಆಗ ಯೋಸೇಫನು ಇಸ್ರೇಲನ ತೊಡೆಯ ಮೇಲೆ ಕುಳಿತಿದ್ದ ತನ್ನ ಗಂಡುಮಕ್ಕಳನ್ನು ಎತ್ತಿಕೊಂಡನು. ಬಳಿಕ ಅವರು ಇಸ್ರೇಲನ ಮುಂದೆ ಅಡ್ಡಬಿದ್ದು ನಮಸ್ಕರಿಸಿದರು. 13 ಯೋಸೇಫನು ಎಫ್ರಾಯೀಮನನ್ನು ತನ್ನ ಬಲಭಾಗದಲ್ಲಿಯೂ ಮನಸ್ಸೆಯನ್ನು ತನ್ನ ಎಡಭಾಗದಲ್ಲಿಯೂ ಕುಳ್ಳಿರಿಸಿದನು. (ಆದ್ದರಿಂದ ಎಫ್ರಾಯೀಮನು ಇಸ್ರೇಲನ ಎಡಭಾಗದಲ್ಲಿಯೂ ಮನಸ್ಸೆಯು ಬಲಭಾಗದಲ್ಲಿಯೂ ಇದ್ದರು.) 14 ಆದರೆ ಇಸ್ರೇಲನು ತನ್ನ ಕೈಗಳನ್ನು ವಾರೆ ಮಾಡಿ ತನ್ನ ಬಲಗೈಯನ್ನು ಚಿಕ್ಕ ಮಗನಾದ ಎಫ್ರಾಯೀಮನ ತಲೆಯ ಮೇಲಿಟ್ಟು ಎಡಗೈಯನ್ನು ದೊಡ್ಡ ಮಗನಾದ ಮನಸ್ಸೆಯ ತಲೆಯ ಮೇಲಿಟ್ಟನು. ಮನಸ್ಸೆಯು ಹಿರಿಯ ಮಗನಾಗಿದ್ದರೂ ಇಸ್ರೇಲನು ಮನಸ್ಸೆಯ ತಲೆಯ ಮೇಲೆ ಎಡಗೈಯನ್ನಿಟ್ಟನು. 15 ಬಳಿಕ ಇಸ್ರೇಲನು ಯೋಸೇಫನನ್ನು ಆಶೀರ್ವದಿಸಿ ಹೀಗೆಂದನು:
“ನನ್ನ ಪೂರ್ವಿಕರಾದ ಅಬ್ರಹಾಮನೂ ಇಸಾಕನೂ ನಮ್ಮ ದೇವರನ್ನು ಆರಾಧಿಸಿದರು.
ಆ ದೇವರೇ ನನ್ನನ್ನು ನನ್ನ ಜೀವಮಾನವೆಲ್ಲಾ ನಡೆಸಿದನು.
16 ನನ್ನನ್ನು ಎಲ್ಲಾ ತೊಂದರೆಗಳಿಂದ ಕಾಪಾಡಿದ ದೂತನೇ ಆತನು.
ಈ ಹುಡುಗರನ್ನು ಆಶೀರ್ವದಿಸಬೇಕೆಂದು ನಾನು ಆತನಲ್ಲಿ ಪ್ರಾರ್ಥಿಸುವೆನು.
ಇಂದಿನಿಂದ ಈ ಮಕ್ಕಳು ನನ್ನ ಹೆಸರನ್ನೇ ಹೊಂದಿಕೊಳ್ಳುವರು.
ನನ್ನ ಪೂರ್ವಿಕರಾದ ಅಬ್ರಹಾಮ್ ಮತ್ತು ಇಸಾಕರ ಹೆಸರನ್ನು ಇವರು ಹೊಂದಿಕೊಳ್ಳುವರು.
ಇವರು ಭೂಮಿಯ ಮೇಲೆ ಬೆಳೆದು ದೊಡ್ಡ ಕುಟುಂಬಗಳಾಗುವಂತೆಯೂ
ದೊಡ್ಡ ಜನಾಂಗಗಳಾಗುವಂತೆಯೂ ನಾನು ಪ್ರಾರ್ಥಿಸುವೆನು.”
17 ಇಸ್ರೇಲನು ತನ್ನ ಬಲಗೈಯನ್ನು ಎಫ್ರಾಯೀಮನ ತಲೆಯ ಮೇಲಿಟ್ಟಿದ್ದರಿಂದ ಯೋಸೇಫನು ಅಸಮಾಧಾನದಿಂದ ನೋಡಿ ತಂದೆಯ ಕೈಯನ್ನು ಹಿಡಿದುಕೊಂಡನು; ಅಲ್ಲದೆ ತಂದೆಯ ಕೈಯನ್ನು ಎಫ್ರಾಯೀಮನ ತಲೆಯ ಮೇಲಿಂದ ತೆಗೆದುಕೊಂಡು ಮನಸ್ಸೆಯ ತಲೆಯ ಮೇಲೆ ಇಡಬೇಕೆಂದಿದ್ದನು. 18 ಯೋಸೇಫನು ತನ್ನ ತಂದೆಗೆ, “ನೀನು ನಿನ್ನ ಬಲಗೈಯನ್ನು ತಪ್ಪಾಗಿ ಎಫ್ರಾಯೀಮನ ಮೇಲೆ ಇಟ್ಟಿರುವೆ. ಮೊದಲು ಹುಟ್ಟಿದವನು ಮನಸ್ಸೆ” ಎಂದು ಹೇಳಿದನು.
19 ಅದಕ್ಕೆ ಅವನ ತಂದೆಯು, “ನನಗೆ ಗೊತ್ತು ಮಗನೇ, ನನಗೆ ಗೊತ್ತು. ಮನಸ್ಸೆ ಮೊದಲು ಹುಟ್ಟಿದವನು. ಅವನು ಮಹಾವ್ಯಕ್ತಿಯಾಗುವನು. ಅವನು ಅನೇಕ ಜನರಿಗೆ ತಂದೆಯಾಗುವನು. ಆದರೆ ತಮ್ಮನು ಅಣ್ಣನಿಗಿಂತ ಮಹಾವ್ಯಕ್ತಿಯಾಗುವನು. ಅವನ ಕುಟುಂಬವು ತುಂಬ ದೊಡ್ಡದಾಗುವುದು” ಎಂದು ಹೇಳಿದನು.
20 ಅಂದು ಇಸ್ರೇಲನು ಅವರನ್ನು ಆಶೀರ್ವದಿಸಿ,
“ಇಸ್ರೇಲರು ನಿಮ್ಮ ಹೆಸರುಗಳ ಮೂಲಕ
ಬೇರೆಯವರನ್ನು ಆಶೀರ್ವದಿಸುವರು.
‘ದೇವರು ನಿನ್ನನ್ನು ಎಫ್ರಾಯೀಮನಂತೆಯೂ
ಮನಸ್ಸೆಯಂತೆಯೂ ಮಾಡಲಿ’ ಎಂದು ಹೇಳುವರು” ಎಂದನು.
ಹೀಗೆ, ಇಸ್ರೇಲನು ಎಫ್ರಾಯೀಮನನ್ನು ಮನಸ್ಸೆಗಿಂತ ದೊಡ್ಡವನನ್ನಾಗಿ ಮಾಡಿದನು.
21 ಬಳಿಕ ಇಸ್ರೇಲನು ಯೋಸೇಫನಿಗೆ, “ನೋಡು, ನಾನು ಸಾಯುವ ಕಾಲ ಸಮೀಪಿಸಿದೆ. ಆದರೆ ದೇವರು ಇನ್ನೂ ನಿನ್ನ ಸಂಗಡವಿರುವನು. ಅವನು ನಿನ್ನನ್ನು ನಿನ್ನ ಪೂರ್ವಿಕರ ದೇಶಕ್ಕೆ ಹಿಂತಿರುಗಿಸುವನು. 22 ನಾನು ನಿನ್ನ ಸಹೋದರರಿಗೆ ಕೊಟ್ಟ ಪಾಲಿಗಿಂತ ಹೆಚ್ಚಾಗಿ ಬೇರೊಂದನ್ನು ನಿನಗೆ ಕೊಟ್ಟಿದ್ದೇನೆ. ನಾನು ಅಮೋರಿಯರಿಂದ ಗೆದ್ದುಕೊಂಡಿರುವ ಬೆಟ್ಟವನ್ನು ನಿನಗೆ ಕೊಡುವೆನು. ನಾನು ಅವರೊಂದಿಗೆ ಖಡ್ಗಗಳಿಂದಲೂ ಬಿಲ್ಲುಗಳಿಂದಲೂ ಹೋರಾಡಿ ಆ ಬೆಟ್ಟವನ್ನು ವಶಪಡಿಸಿಕೊಂಡಿದ್ದೇನೆ” ಎಂದು ಹೇಳಿದನು.
ಮರಿಯಳು ನೀಡಿದ ಸಂದರ್ಶನ
39 ಆಗ ಮರಿಯಳು ಎದ್ದು ಜುದೇಯದ ಗುಡ್ಡಪ್ರದೇಶದಲ್ಲಿರುವ ಒಂದು ಊರಿಗೆ ಬೇಗಬೇಗನೆ ಹೋದಳು. 40 ಅಲ್ಲಿ ಜಕರೀಯನ ಮನೆಯೊಳಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು. 41 ಎಲಿಜಬೇತಳು ಮರಿಯಳ ವಂದನೆಯನ್ನು ಕೇಳಿದಾಗ, ಆಕೆಯ ಗರ್ಭದಲ್ಲಿದ್ದ ಮಗು ನಲಿದಾಡಿತು. ಆಗ ಎಲಿಜಬೇತಳು ಪವಿತ್ರಾತ್ಮಭರಿತಳಾಗಿ
42 ಹರ್ಷೋದ್ಗಾರದಿಂದ ಹೀಗೆಂದಳು: “ದೇವರು ನಿನ್ನನ್ನು (ಮರಿಯ) ಬೇರೆಲ್ಲಾ ಸ್ತ್ರೀಯರಿಗಿಂತ ಹೆಚ್ಚಾಗಿ ಆಶೀರ್ವದಿಸಿದ್ದಾನೆ. ನಿನ್ನಲ್ಲಿ ಜನಿಸಲಿರುವ ಮಗುವನ್ನು ದೇವರು ಆಶೀರ್ವದಿಸಿದ್ದಾನೆ. 43 ನನ್ನ ಪ್ರಭುವಿನ ತಾಯಿಯಾದ ನೀನೇ ನನ್ನ ಬಳಿಗೆ ಬಂದದ್ದು ನನಗೆಷ್ಟೋ ಭಾಗ್ಯ! 44 ನಿನ್ನ ಧ್ವನಿಯನ್ನು ಕೇಳಿದಾಗ, ನನ್ನೊಳಗಿರುವ ಕೂಸು ಸಂತೋಷದಿಂದ ನಲಿದಾಡಿತು. 45 ಪ್ರಭುವು ನಿನಗೆ ಹೇಳಿದ್ದು ಸಂಭವಿಸೇ ತೀರುವುದೆಂದು ನೀನು ನಂಬಿ ಧನ್ಯಳಾದೆ” ಎಂದಳು.
ಮರಿಯಳು ದೇವರನ್ನು ಸ್ತುತಿಸಿದಳು
46 ಆಗ ಮರಿಯಳು,
47 “ನನ್ನ ಪ್ರಾಣವು ಪ್ರಭುವನ್ನು ಸ್ತುತಿಸುತ್ತದೆ.
ದೇವರೇ ನನ್ನ ರಕ್ಷಕನಾಗಿರುವುದರಿಂದ ನನ್ನ ಹೃದಯವು ಸಂತೋಷಗೊಂಡಿದೆ.
48 ದೇವರು ತನ್ನ ದಾಸಿಯಾದ ನನ್ನನ್ನು ಕಟಾಕ್ಷಿಸಿದ್ದಾನೆ.
ಇಂದಿನಿಂದ, ಎಲ್ಲಾ ಜನರು ನನ್ನನ್ನು ಧನ್ಯಳೆಂದು ಹೇಳುವರು.
49 ಏಕೆಂದರೆ ಸರ್ವಶಕ್ತನು (ದೇವರು) ನನಗೆ ಮಹಾಕಾರ್ಯಗಳನ್ನು ಮಾಡಿದ್ದಾನೆ.
ಆತನ ಹೆಸರು ಅತಿ ಪರಿಶುದ್ಧವಾದದ್ದು.
50 ದೇವರು ತನ್ನಲ್ಲಿ ಭಯಭಕ್ತಿಯುಳ್ಳ ಜನರಿಗೆ ಎಂದೆಂದಿಗೂ ಕರುಣೆ ತೋರುವನು.
51 ಆತನು ತನ್ನ ಭುಜಬಲವನ್ನು ತೋರಿ
ಗರ್ವಿಷ್ಠರನ್ನು ಚದರಿಸುತ್ತಾನೆ.
52 ದೇವರು ಅಧಿಪತಿಗಳನ್ನು ಅವರ ಸಿಂಹಾಸನಗಳಿಂದ ಕೆಳಗಿಳಿಸಿ
ದೀನರನ್ನು ಉನ್ನತಿಗೇರಿಸುತ್ತಾನೆ.
53 ಆತನು ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಗೊಳಿಸಿ
ಐಶ್ವರ್ಯವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಡುತ್ತಾನೆ.
54 ದೇವರು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನಕ್ಕನುಸಾರವಾಗಿ
ಅಬ್ರಹಾಮನಿಗೂ ಅವನ ಸಂತತಿಯವರಿಗೂ ಯಾವಾಗಲೂ
55 ಕರುಣೆ ತೋರಬೇಕೆಂದುಕೊಂಡು ತನ್ನ ಸೇವಕನಾದ ಇಸ್ರೇಲನನ್ನು ಕೈ ಹಿಡಿದಿದ್ದಾನೆ” ಎಂದಳು.
56 ಮರಿಯಳು ಸುಮಾರು ಮೂರು ತಿಂಗಳ ಕಾಲ ಎಲಿಜಬೇತಳೊಡನೆ ತಂಗಿದ್ದು ತನ್ನ ಮನೆಗೆ ಹಿಂತಿರುಗಿದಳು.
ಯೋಹಾನನ ಜನನ
57 ಎಲಿಜಬೇತಳಿಗೆ ಹೆರಿಗೆ ಕಾಲ ಬಂದಿತು. ಆಕೆಯಲ್ಲಿ ಒಬ್ಬ ಮಗನು ಹುಟ್ಟಿದನು. 58 ಪ್ರಭುವು ಆಕೆಗೆ ತೋರಿದ ಮಹಾಕರುಣೆಯು ಆಕೆಯ ನೆರೆಹೊರೆಯವರಿಗೆ ಮತ್ತು ಬಂಧುಗಳಿಗೆ ತಿಳಿಯಿತು. ಅವರು ಆಕೆಯ ವಿಷಯದಲ್ಲಿ ಸಂತೋಷಪಟ್ಟರು.
59 ಮಗುವಿಗೆ ಎಂಟು ದಿನವಾದಾಗ ಅವರು ಸುನ್ನತಿ ಮಾಡಿಸುವುದಕ್ಕಾಗಿ ಬಂದರು. ಅವರು ಆ ಮಗುವಿಗೆ “ಜಕರೀಯ” ಎಂಬ ಹೆಸರು ಇಡಬೇಕೆಂದಿದ್ದರು. ಏಕೆಂದರೆ ಅದು ಮಗುವಿನ ತಂದೆಯ ಹೆಸರಾಗಿತ್ತು. 60 ಆದರೆ ಮಗುವಿನ ತಾಯಿ, “ಇಲ್ಲ! ಆತನಿಗೆ ‘ಯೋಹಾನ’ ಎಂಬ ಹೆಸರಿಡಬೇಕು” ಎಂದು ಹೇಳಿದಳು.
61 ಜನರು ಎಲಿಜಬೇತಳಿಗೆ, “ನಿನ್ನ ಕುಟುಂಬದಲ್ಲಿ ಯಾರಿಗೂ ಈ ಹೆಸರು ಇಲ್ಲವಲ್ಲಾ!” ಎಂದು ಹೇಳಿದರು. 62 ಬಳಿಕ ಅವರು ಅವನ ತಂದೆಗೆ ಸನ್ನೆಮಾಡಿ, “ಆತನಿಗೆ ಯಾವ ಹೆಸರಿಡಬೇಕು?” ಎಂದು ಕೇಳಿದರು.
63 ಆಗ ಜಕರೀಯನು ಸನ್ನೆಮಾಡಿ, ಒಂದು ಹಲಗೆಯನ್ನು ತರಿಸಿಕೊಂಡು, “ಈತನ ಹೆಸರು ಯೋಹಾನ” ಎಂದು ಬರೆದನು. ಜನರೆಲ್ಲರಿಗೂ ಆಶ್ಚರ್ಯವಾಯಿತು. 64 ಆ ಕೂಡಲೇ ಜಕರೀಯನು ಮತ್ತೆ ಮಾತಾಡಬಲ್ಲವನಾಗಿ ದೇವರನ್ನು ಸ್ತುತಿಸತೊಡಗಿದನು. 65 ಇದನ್ನು ಕೇಳಿ ನೆರೆಹೊರೆಯವರಿಗೆಲ್ಲಾ ಭಯವಾಯಿತು. ಜುದೇಯದ ಗುಡ್ಡಪ್ರದೇಶದಲ್ಲೆಲ್ಲಾ ಈ ಸಂಗತಿಗಳ ಬಗ್ಗೆ ಜನರು ಮಾತನಾಡತೊಡಗಿದರು. 66 ಈ ಸಂಗತಿಗಳನ್ನು ಕೇಳಿದ ಜನರೆಲ್ಲರು ಆಶ್ಚರ್ಯಪಟ್ಟು “ಈ ಮಗು (ಯೋಹಾನ) ಬೆಳೆದು ದೊಡ್ಡವನಾದ ಮೇಲೆ ಎಂಥ ವ್ಯಕ್ತಿಯಾಗುವನೋ?” ಎಂದು ಯೋಚಿಸತೊಡಗಿದರು. ಏಕೆಂದರೆ ಪ್ರಭುವು ಈ ಮಗುವಿನ ಸಂಗಡವಿದ್ದನು.
ಜಕರೀಯನ ಪ್ರವಾದನೆ
67 ಬಳಿಕ ಯೋಹಾನನ ತಂದೆಯಾದ ಜಕರೀಯನು ಪವಿತ್ರಾತ್ಮಭರಿತನಾಗಿ ಹೀಗೆಂದು ಪ್ರವಾದಿಸಿದನು:
68 “ಇಸ್ರೇಲರ ಪ್ರಭುವಾದ ದೇವರಿಗೆ ಸ್ತೋತ್ರವಾಗಲಿ.
ಆತನು ಬಂದು ತನ್ನ ಜನರನ್ನು ಬಿಡುಗಡೆ ಮಾಡಿದ್ದಾನೆ.
69 ತನ್ನ ಸೇವಕನಾದ ದಾವೀದನ ಮನೆತನದಿಂದ
ದೇವರು ವೀರರಕ್ಷಕನನ್ನು ನಮಗೆ ಕೊಟ್ಟಿದ್ದಾನೆ.
70 ಇದನ್ನು ಆತನು ಪೂರ್ವಕಾಲದ
ತನ್ನ ಪವಿತ್ರ ಪ್ರವಾದಿಗಳ ಮೂಲಕ ತಿಳಿಸಿದ್ದಾನೆ.
71 ದೇವರು ನಮ್ಮನ್ನು ನಮ್ಮ ವೈರಿಗಳಿಂದಲೂ
ದ್ವೇಷಿಗಳ ಹಿಡಿತದಿಂದಲೂ ರಕ್ಷಿಸಿದ್ದಾನೆ.
72 ಕರುಣೆ ತೋರುವುದಾಗಿ ನಮ್ಮ ಪಿತೃಗಳಿಗೆ ನೀಡಿದ
ತನ್ನ ಪವಿತ್ರ ವಾಗ್ದಾನವನ್ನು ಆತನು ಜ್ಞಾಪಿಸಿಕೊಂಡಿದ್ದಾನೆ.
73 ನಮ್ಮ ವೈರಿಗಳ ಹಿಡಿತದಿಂದ ನಮ್ಮನ್ನು ಬಿಡಿಸುವುದಾಗಿ ದೇವರು ನಮ್ಮ ಪಿತೃವಾದ ಅಬ್ರಹಾಮನಿಗೆ ವಾಗ್ದಾನ ಮಾಡಿದ್ದಾನೆ.
74-75 ಏಕೆಂದರೆ ನಮ್ಮ ಜೀವಮಾನವೆಲ್ಲಾ ನಾವು ಆತನ ಸನ್ನಿಧಿಯಲ್ಲಿ ನೀತಿವಂತರೂ ಪರಿಶುದ್ಧರೂ ಆಗಿದ್ದು
ಭಯವಿಲ್ಲದೆ ಆತನ ಸೇವೆ ಮಾಡಬೇಕೆಂಬುದೇ ಆತನ ಉದ್ದೇಶವಾಗಿತ್ತು.
76 “ಮಗುವೇ, ನೀನು ಮಹೋನ್ನತನ ಪ್ರವಾದಿ ಎನಿಸಿಕೊಳ್ಳುವೆ.
ಪ್ರಭುವಿನ ಮುಂದೆ ಹೋಗಿ ಆತನ ಬರುವಿಕೆಗಾಗಿ ಜನರನ್ನು ಸಿದ್ಧಮಾಡುವೆ.
77 ಪಾಪಕ್ಷಮೆಯ ಮೂಲಕವಾಗಿ ರಕ್ಷಣೆಯಾಗುವುದೆಂಬ ತಿಳುವಳಿಕೆಯನ್ನು ನೀನು ಜನರಿಗೆ ಕೊಡುವೆ.
78 “ನಮ್ಮ ದೇವರ ಮಹಾಕರುಣೆಯಿಂದ
ಪರಲೋಕದಿಂದ ಹೊಸ ದಿನವೊಂದು ನಮಗಾಗಿ ಉದಯಿಸುವುದು.
79 ಅಂಧಕಾರದಲ್ಲಿ ಜೀವಿಸುತ್ತಾ ಮರಣಭಯದಲ್ಲಿರುವ ಜನರಿಗೆ ದೇವರು ಸಹಾಯ ಮಾಡುವನು.
ಆತನು ನಮ್ಮನ್ನು ಸಮಾಧಾನದ ಮಾರ್ಗದಲ್ಲಿ ನಡೆಸುವನು.”
80 ಆ ಮಗುವು (ಯೋಹಾನನು) ಬೆಳೆದು ದೊಡ್ಡವನಾಗಿ ಆತ್ಮದಲ್ಲಿ ಬಲವುಳ್ಳವನಾದನು. ಇಸ್ರೇಲರಿಗೆ ತನ್ನ ಉಪದೇಶವನ್ನು ಆರಂಭಿಸುವ ತನಕ ಯೋಹಾನನು ಅಡವಿಯಲ್ಲಿ ವಾಸವಾಗಿದ್ದನು.
14 ಯೋಬನು ಹೇಳಿದನು:
“ನಾವು ಮನುಷ್ಯರಷ್ಟೇ.
ನಮ್ಮ ಅಲ್ಪಜೀವಿತವು ಕಷ್ಟಗಳಿಂದ ತುಂಬಿಕೊಂಡಿದೆ.
2 ಮನುಷ್ಯನ ಜೀವಿತವು ಹೂವಿನಂತೆ ಬೇಗನೆ ಬೆಳೆದು ಒಣಗಿಹೋಗುವುದು.
ಮನುಷ್ಯನ ಜೀವಿತವು ನೆರಳಿನಂತೆ ಕ್ಷಣಿಕವಾದದ್ದು.
3 ದೇವರೇ, ಇಂಥವನಾದ ನನ್ನ ಮೇಲೆ ಕಣ್ಣಿಟ್ಟು
ನ್ಯಾಯಾಲಯಕ್ಕೆ ಎಳೆದುಕೊಂಡು ಹೋಗುವಿಯಾ?
4 “ಅಶುದ್ಧದಿಂದ ಶುದ್ಧವು ಉಂಟಾದೀತೇ? ಎಂದಿಗೂ ಇಲ್ಲ.
5 ಮನುಷ್ಯನ ದಿನಗಳು ಇಷ್ಟೇ ಎಂದು ನಿರ್ಣಯವಾಗಿದೆ;
ಅವನ ತಿಂಗಳುಗಳನ್ನು ನೀನು ನಿರ್ಣಯಿಸಿರುವೆ.
ಅವನ ಆಯುಷ್ಯಕ್ಕೆ ದಾಟಲಾರದ ಮೇರೆಯನ್ನು ಹಾಕಿರುವೆ.
6 ದೇವರೇ, ನಿನ್ನ ದೃಷ್ಟಿಯನ್ನು ಮನುಷ್ಯನ ಕಡೆಯಿಂದ ತಿರುಗಿಸು.
ಅವನನ್ನು ಅವನ ಪಾಡಿಗೆ ಬಿಟ್ಟುಬಿಡು.
ಅವನು ಕೂಲಿಯವನಂತಾದರೂ ಜೀವಿಸಲಿ.
7 “ಮರಕ್ಕೆ ನಿರೀಕ್ಷೆಯಿದೆ.
ಕಡಿದುಹಾಕಲ್ಪಟ್ಟರೂ ಅದು ಮತ್ತೆ ಚಿಗುರಬಹುದು;
ಹೊಸ ಕವಲುಗಳನ್ನು ಮೊಳೆಯಿಸುತ್ತಲೇ ಇರುವುದು.
8 ಅದರ ಬೇರುಗಳು ನೆಲದೊಳಗೆ ಮುದಿಯಾದರೂ
ಅದರ ಬುಡವು ನೆಲದಲ್ಲಿ ಸತ್ತುಹೋದರೂ,
9 ಅದು ನೀರಿನಿಂದ ಮತ್ತೆ ಹೊಸದಾಗಿ ಬೆಳೆಯುವುದು;
ಎಳೆ ಗಿಡದಂತೆ ಕವಲೊಡೆಯುವುದು.
10 ಮನುಷ್ಯನಾದರೋ ಸತ್ತು ಕೊನೆಗೊಳ್ಳುವನು.
ಪ್ರಾಣ ಹೋದಾಗ ಇಲ್ಲವಾಗುವನು.
11 ಸರೋವರದಿಂದ ನೀರು ಕಾಣೆಯಾಗುವವರೆಗೂ
ನದಿಯ ನೀರು ಒಣಗಿಹೋಗುವವರೆಗೂ
12 ಸತ್ತ ಮನುಷ್ಯನು ಮಲಗಿಕೊಂಡೇ ಇರುವನು.
ಅವನು ಮತ್ತೆ ಮೇಲೇಳುವುದಿಲ್ಲ.
ಆಕಾಶವು ಅಳಿದುಹೋಗುವವರೆಗೆ
ಅವನು ನಿದ್ರೆಯಿಂದ ಎಬ್ಬಿಸಲ್ಪಡುವುದಿಲ್ಲ.
13 “ನಿನ್ನ ಕೋಪವು ಇಳಿಯುವ ತನಕ ನನ್ನನ್ನು ಪಾತಾಳದಲ್ಲಿ ಬಚ್ಚಿಟ್ಟಿದ್ದು,
ನೀನು ಗೊತ್ತುಪಡಿಸಿದ ಸಮಯದಲ್ಲಿ ನನ್ನನ್ನು ಜ್ಞಾಪಿಸಿಕೊಂಡಿದ್ದರೆ
ಎಷ್ಟೋ ಒಳ್ಳೆಯದಾಗುತ್ತಿತ್ತು.
14 ಸತ್ತ ಮನುಷ್ಯನು ಮತ್ತೆ ಬದುಕುವನೇ?
ಬದುಕುವುದಾಗಿದ್ದರೆ, ನನಗೆ ಬಿಡುಗಡೆಯಾಗುವ ತನಕ ನನ್ನ ಎಲ್ಲಾ ಕಷ್ಟದ ದಿನಗಳಲ್ಲಿಯೂ ಕಾದುಕೊಂಡಿರುವೆ.
15 ದೇವರೇ, ನೀನು ನನ್ನನ್ನು ಕರೆದರೆ,
ಉತ್ತರ ಕೊಡುವೆನು.
ಆಗ ನಿನ್ನ ಸೃಷ್ಟಿಯಾದ ನನ್ನನ್ನು
ನೀನು ಇಷ್ಟಪಡುವೆ.
16 ನಾನಿಡುವ ಪ್ರತಿ ಹೆಜ್ಜೆಯನ್ನೂ ನೀನು ಗಮನಿಸುವೆ.
ಆದರೆ ನೀನು ನನ್ನ ಪಾಪಗಳನ್ನು ಜ್ಞಾಪಿಸಿಕೊಳ್ಳುವುದಿಲ್ಲ.
17 ನನ್ನ ಪಾಪಗಳನ್ನು ಚೀಲದಲ್ಲಿಟ್ಟು ಮುದ್ರಿಸಿ
ದೂರಕ್ಕೆ ಎಸೆದುಬಿಡುವೆ.
18 “ಪರ್ವತವು ಬಿದ್ದು ಕರಗಿಹೋಗುವಂತೆ
ಬಂಡೆಯು ತನ್ನ ಸ್ಥಳದಿಂದ ಚಲಿಸುವುದು.
19 ಹರಿಯುವ ನೀರು ಕಲ್ಲುಗಳನ್ನು ಸವೆಯಿಸುವಂತೆಯೂ
ನೆಲದ ಮೇಲಿನ ಧೂಳನ್ನು ಪ್ರವಾಹದ ನೀರು ಕೊಚ್ಚಿಕೊಂಡು ಹೋಗುವಂತೆಯೂ
ದೇವರೇ, ನೀನು ಮನುಷ್ಯನ ನಿರೀಕ್ಷೆಯನ್ನು ನಾಶಮಾಡುವೆ.
20 ನೀನು ಮನುಷ್ಯನನ್ನು ಶಾಶ್ವತವಾಗಿ ಸೋಲಿಸಿಬಿಡುವೆ.
ಆಗ ಮನುಷ್ಯನು ಇಲ್ಲವಾಗುವನು.
ನೀನು ಅವನ ಮುಖವನ್ನು ವಿಕಾರಗೊಳಿಸಿ
ಶಾಶ್ವತವಾಗಿ ಕಳುಹಿಸಿಬಿಡುವೆ.
21 ಅವನ ಮಕ್ಕಳಿಗೆ ಸನ್ಮಾನವಾದರೂ ಅವನಿಗೆ ತಿಳಿಯುವುದಿಲ್ಲ;
ಅವರಿಗೆ ಅವಮಾನವಾದರೂ ಅವನಿಗೆ ಅದರ ಅರಿವೇ ಇರುವುದಿಲ್ಲ.
22 ಅವನು ತನ್ನ ದೇಹದಲ್ಲಿ ನೋವನ್ನೇ ಅನುಭವಿಸುತ್ತಾ
ತನಗೋಸ್ಕರ ಗೋಳಾಡುವನು.”
ಶಿಲುಬೆಗೆರಿಸಲ್ಪಟ್ಟ ಕ್ರಿಸ್ತನ ಕುರಿತಾದ ಸಂದೇಶ
2 ಪ್ರಿಯ ಸಹೋದರ ಸಹೋದರಿಯರೇ, ನಾನು ನಿಮ್ಮ ಬಳಿಗೆ ಬಂದಿದ್ದಾಗ, ನಾನು ನಿಮಗೆ ದೇವರ ಸತ್ಯವನ್ನು ತಿಳಿಸಿದೆನು. ಆದರೆ ನಾನು ನಾಜೂಕಾದ ಪದಗಳನ್ನಾಗಲಿ ಮಹಾ ಜ್ಞಾನವನ್ನಾಗಲಿ ಉಪಯೋಗಿಸಲಿಲ್ಲ. 2 ನಾನು ನಿಮ್ಮೊಂದಿಗಿದ್ದಾಗ ಯೇಸು ಕ್ರಿಸ್ತನ ಮತ್ತು ಆತನ ಶಿಲುಬೆಯ ಮೇಲಿನ ಮರಣವನ್ನೇ ಹೊರತು ಬೇರೆಲ್ಲಾ ವಿಷಯಗಳನ್ನು ಮರೆತುಬಿಡಲು ನಿರ್ಧರಿಸಿದೆನು. 3 ನಾನು ನಿಮ್ಮ ಬಳಿಗೆ ಬಂದಿದ್ದಾಗ ಬಲಹೀನನಾಗಿದ್ದೆನು; ಭಯದಿಂದ ನಡುಗುತ್ತಿದ್ದೆನು. 4 ನನ್ನ ಉಪದೇಶವಾಗಲಿ ಮಾತುಕತೆಯಾಗಲಿ ಜನರನ್ನು ಒತ್ತಾಯಿಸುವಂಥ ಜ್ಞಾನವಾಕ್ಯಗಳನ್ನು ಒಳಗೊಂಡಿರಲಿಲ್ಲ. ಆದರೆ ಪವಿತ್ರಾತ್ಮನು ಕೊಡುವ ಶಕ್ತಿಯೇ ನನ್ನ ಉಪದೇಶಕ್ಕೆ ಆಧಾರವಾಗಿತ್ತು. 5 ನಿಮ್ಮ ನಂಬಿಕೆಯು ಮನುಷ್ಯನ ಜ್ಞಾನದ ಮೇಲೆ ಆಧಾರಗೊಂಡಿರದೆ ದೇವರ ಶಕ್ತಿಯ ಮೇಲೆ ಆಧಾರಗೊಂಡಿರಬೇಕೆಂದು ನಾನು ಹೀಗೆ ಮಾಡಿದೆನು.
ದೇವರ ಜ್ಞಾನ
6 ಪರಿಣತರಾದ ಜನರಿಗೆ ನಾವು ಜ್ಞಾನವನ್ನೇ ಉಪದೇಶಿಸುತ್ತೇವೆ. ಇದು ಇಹಲೋಕದ ಜ್ಞಾನವೂ ಅಲ್ಲ. ಅಧಿಪತಿಗಳ ಜ್ಞಾನವೂ ಅಲ್ಲ. ಈ ಲೋಕದ ಅಧಿಪತಿಗಳು ತಮ್ಮ ಅಧಿಕಾರವನ್ನು ಕಳೆದುಕೊಳ್ಳುವವರಾಗಿದ್ದಾರೆ. 7 ನಾವಾದರೋ ದೇವರ ರಹಸ್ಯವಾದ ಜ್ಞಾನವನ್ನೇ ಹೇಳುತ್ತೇವೆ. ಈ ಜ್ಞಾನವನ್ನು ಜನರಿಗೆ ಮರೆಮಾಡಲಾಗಿದೆ. ದೇವರು ನಮ್ಮ ಮಹಿಮೆಗಾಗಿ ಈ ಜ್ಞಾನವನ್ನು ಲೋಕವು ಆರಂಭವಾಗುವುದಕ್ಕಿಂತ ಮೊದಲೇ ಯೋಜಿಸಿದ್ದನು. 8 ಈ ಲೋಕದ ಯಾವ ಅಧಿಪತಿಗಳೂ ಈ ಜ್ಞಾನವನ್ನು ಅರ್ಥಮಾಡಿಕೊಳ್ಳಲಿಲ್ಲ. ಅವರು ಅರ್ಥಮಾಡಿಕೊಂಡಿದ್ದರೆ, ಮಹಿಮೆಯುಳ್ಳ ಪ್ರಭುವನ್ನು ಶಿಲುಬೆಗೇರಿಸುತ್ತಿರಲಿಲ್ಲ. 9 ಪವಿತ್ರಗ್ರಂಥದಲ್ಲಿ ಬರೆದಿರುವಂತೆಯೇ ಇದಾಯಿತು:
“ದೇವರು ತನ್ನನ್ನು ಪ್ರೀತಿಸುವ ಜನರಿಗೆ ಸಿದ್ಧಪಡಿಸಿರುವುದನ್ನು
ಯಾವ ಕಣ್ಣೂ ಕಾಣಲಿಲ್ಲ.
ಯಾವ ಕಿವಿಯೂ ಕೇಳಲಿಲ್ಲ.
ಯಾವ ವ್ಯಕ್ತಿಯೂ ಊಹಿಸಿಕೊಳ್ಳಲಿಲ್ಲ.”(A)
10 ಆದರೆ ದೇವರು ತನ್ನ ಪವಿತ್ರಾತ್ಮನ ಮೂಲಕ ನಮಗೆ ಈ ಸಂಗತಿಗಳನ್ನು ಪ್ರಕಟಿಸಿದನು.
ಪವಿತ್ರಾತ್ಮನು ಸಕಲವನ್ನೂ ದೇವರ ಅಗಾಧವಾದ ರಹಸ್ಯಗಳನ್ನೂ ತಿಳಿದಿದ್ದಾನೆ. 11 ಇದು ಹೇಗೆಂದರೆ: ಒಬ್ಬನ ಆಲೋಚನೆಗಳು ಅವನ ಆಂತರ್ಯದಲ್ಲಿರುವ ಜೀವಾತ್ಮವೊಂದಕ್ಕೆ ಹೊರತು ಬೇರೆ ಯಾರಿಗೂ ತಿಳಿದಿರುವುದಿಲ್ಲ. ಅಂತೆಯೇ, ದೇವರ ಆಲೋಚನೆಗಳು ದೇವರಾತ್ಮನ ಹೊರತು ಬೇರೆ ಯಾರಿಗೂ ತಿಳಿದಿರುವುದಿಲ್ಲ. 12 ನಾವು ಹೊಂದಿಕೊಂಡದ್ದು ದೇವರಿಂದ ಬಂದ ಪವಿತ್ರಾತ್ಮನನ್ನೇ ಹೊರತು ಪ್ರಾಪಂಚಿಕವಾದ ಆತ್ಮವನ್ನಲ್ಲ. ದೇವರು ನಮಗೆ ಉಚಿತವಾಗಿ ಕೊಟ್ಟಿರುವಂಥವುಗಳನ್ನು ತಿಳಿದುಕೊಳ್ಳುವುದಕ್ಕಾಗಿ ನಾವು ಆತನನ್ನು ಹೊಂದಿಕೊಂಡೆವು.
13 ನಾವು ಈಸಂಗತಿಗಳನ್ನು ಹೇಳುವಾಗ ಮನುಷ್ಯರ ಜ್ಞಾನದಿಂದ ಕಲಿತುಕೊಂಡಿರುವ ವಾಕ್ಯಗಳನ್ನು ಉಪಯೋಗಿಸದೆ ಆತ್ಮನಿಂದ ಕಲಿತುಕೊಂಡ ವಾಕ್ಯಗಳನ್ನೇ ಉಪಯೋಗಿಸುತ್ತೇವೆ. ಆತ್ಮಿಕ ಸಂಗತಿಗಳನ್ನು ವಿವರಿಸಲು ಆತ್ಮಿಕ ಪದಗಳನ್ನೇ ಬಳಸುತ್ತೇವೆ. 14 ಆತ್ಮಿಕನಲ್ಲದ ವ್ಯಕ್ತಿಯು ದೇವಾರಾತ್ಮನ ವಿಷಯಗಳನ್ನು ಸ್ವೀಕರಿಸಿಕೊಳ್ಳವುದಿಲ್ಲ. ಅವನು ಆ ವಿಷಯಗಳನ್ನು ಮೂರ್ಖತನವೆಂದು ಯೋಚಿಸುತ್ತಾನೆ. ಅವನು ಪವಿತ್ರಾತ್ಮನ ವಿಷಯಗಳನ್ನು ಅರ್ಥಮಾಡಿಕೊಳ್ಳಲಾರನು; ಏಕೆಂದರೆ ಆ ವಿಷಯಗಳನ್ನು ಆತ್ಮಿಕವಾಗಿ ವಿಚಾರಣೆ ಮಾಡಲು ಮಾತ್ರ ಸಾಧ್ಯ. 15 ಆದರೆ ಆತ್ಮಿಕ ಮನುಷ್ಯನು ಎಲ್ಲಾ ವಿಷಯಗಳ ಬಗ್ಗೆ ತೀರ್ಪು ಮಾಡಬಲ್ಲನು. ಅವನಿಗೆ ಬೇರೆ ಯಾರೂ ತೀರ್ಪು ನೀಡಲಾಗುವುದಿಲ್ಲ. 16 ಪವಿತ್ರ ಗ್ರಂಥವು ಹೇಳುವಂತೆ:
“ಪ್ರಭುವಿನ ಮನಸ್ಸನ್ನು ಯಾರು ಬಲ್ಲರು?
ಪ್ರಭುವಿಗೆ ಯಾರು ಉಪದೇಶ ಮಾಡಬಲ್ಲರು?”(B)
ನಾವಾದರೋ ಕ್ರಿಸ್ತನ ಮನಸ್ಸನ್ನು ಹೊಂದಿದವರಾಗಿದ್ದೇವೆ.
Kannada Holy Bible: Easy-to-Read Version. All rights reserved. © 1997 Bible League International