M’Cheyne Bible Reading Plan
ಇಸ್ರೇಲನು ಗೋಷೆನಿನಲ್ಲಿ ನೆಲೆಸಿದ್ದು
47 ಯೋಸೇಫನು ಫರೋಹನ ಬಳಿಗೆ ಹೋಗಿ, “ನನ್ನ ತಂದೆಯೂ ನನ್ನ ಸಹೋದರರೂ ಅವರೆಲ್ಲರ ಕುಟುಂಬಗಳವರೂ ಇಲ್ಲಿಗೆ ಬಂದಿದ್ದಾರೆ. ಅವರು ತಮ್ಮ ಎಲ್ಲಾ ಪಶುಗಳನ್ನೂ ಕಾನಾನಿನಲ್ಲಿ ಪಡೆದಿದ್ದ ಪ್ರತಿಯೊಂದನ್ನೂ ತೆಗೆದುಕೊಂಡು ಬಂದಿದ್ದಾರೆ. ಈಗ ಅವರು ಗೋಷೆನ್ ಪ್ರಾಂತ್ಯದಲ್ಲಿ ಇದ್ದಾರೆ” ಎಂದು ಹೇಳಿದನು. 2 ಯೋಸೇಫನು ತನ್ನ ಸಹೋದರರಲ್ಲಿ ಐದು ಮಂದಿಯನ್ನು ಆರಿಸಿಕೊಂಡು ಫರೋಹನ ಬಳಿಗೆ ಅವರನ್ನು ಕರೆದುಕೊಂಡು ಹೋದನು.
3 ಫರೋಹನು ಸಹೋದರರಿಗೆ, “ನಿಮ್ಮ ಉದ್ಯೋಗವೇನು?” ಎಂದು ಕೇಳಿದನು.
ಸಹೋದರರು ಫರೋಹನಿಗೆ, “ಸ್ವಾಮೀ, ನಾವು ಕುರುಬರು. ನಮ್ಮ ಪೂರ್ವಿಕರು ನಮಗಿಂತ ಮೊದಲೇ ಕುರುಬರಾಗಿದ್ದರು” ಎಂದು ಹೇಳಿದರು. 4 ಅವರು ಫರೋಹನಿಗೆ, “ಬರಗಾಲವು ಕಾನಾನ್ ದೇಶದಲ್ಲಿ ತುಂಬ ಘೋರವಾಗಿದೆ. ಯಾವ ಹೊಲದಲ್ಲಿಯೂ ನಮ್ಮ ಪಶುಗಳಿಗೆ ಹುಲ್ಲು ಉಳಿದಿಲ್ಲ. ಆದ್ದರಿಂದ ನಾವು ಈ ದೇಶದಲ್ಲಿ ವಾಸಿಸಲು ಬಂದಿದ್ದೇವೆ. ನಾವು ಗೋಷೆನ್ ಪ್ರಾಂತ್ಯದಲ್ಲಿ ವಾಸಿಸಲು ದಯವಿಟ್ಟು ನಮಗೆ ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇವೆ” ಎಂದು ಹೇಳಿದರು.
5 ಆಗ ಫರೋಹನು ಯೋಸೇಫನಿಗೆ, “ನಿನ್ನ ತಂದೆಯೂ ನಿನ್ನ ಸಹೋದರರೂ ನಿನ್ನ ಬಳಿಗೆ ಬಂದಿದ್ದಾರೆ. 6 ಅವರ ವಾಸಕ್ಕಾಗಿ ಈಜಿಪ್ಟಿನಲ್ಲಿ ಯಾವ ಸ್ಥಳವನ್ನಾದರೂ ಆರಿಸಿಕೊಳ್ಳಬಹುದು. ನಿನ್ನ ತಂದೆಯೂ ನಿನ್ನ ಸಹೋದರರೂ ವಾಸವಾಗಿರಲು ಉತ್ತಮವಾದ ಪ್ರದೇಶವನ್ನು ಕೊಡು. ಅವರು ಗೋಷೆನ್ ಪ್ರಾಂತ್ಯದಲ್ಲಿ ವಾಸಿಸಲಿ. ಅವರು ನಿಪುಣರಾದ ಕುರುಬರಾಗಿದ್ದರೆ, ಅವರು ನನ್ನ ದನಕರುಗಳನ್ನು ಸಹ ನೋಡಿಕೊಳ್ಳಬಹುದು” ಎಂದು ಹೇಳಿದನು.
7 ಆಗ ಯೋಸೇಫನು ತನ್ನ ತಂದೆಯನ್ನು ಫರೋಹನ ಸನ್ನಿಧಿಗೆ ಕರೆಯಿಸಿದನು. ಯಾಕೋಬನು ಫರೋಹನನ್ನು ಆಶೀರ್ವದಿಸಿದನು.
8 ಆಗ ಫರೋಹನು ಯಾಕೋಬನಿಗೆ, “ನಿನಗೆ ಎಷ್ಟು ವಯಸ್ಸಾಗಿದೆ?” ಎಂದು ಕೇಳಿದನು.
9 ಯಾಕೋಬನು ಫರೋಹನಿಗೆ, “ನಾನು ನನ್ನ ಅಲ್ಪಕಾಲದ ಜೀವನದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸಿದೆನು. ಈಗ ನನಗೆ ನೂರಮೂವತ್ತು ವರ್ಷ. ನನ್ನ ತಂದೆಯೂ ಅವನ ಪೂರ್ವಿಕರೂ ನನಗಿಂತ ಹೆಚ್ಚು ವರ್ಷ ಜೀವಿಸಿದರು” ಎಂದು ಹೇಳಿದನು.
10 ಯಾಕೋಬನು ಫರೋಹನನ್ನು ಆಶೀರ್ವದಿಸಿದ ಬಳಿಕ ಫರೋಹನ ಸನ್ನಿಧಿಯಿಂದ ಹೊರಟುಹೋದನು.
11 ಫರೋಹನು ಹೇಳಿದಂತೆಯೇ ಯೋಸೇಫನು ಮಾಡಿದನು. ಅವನು ತನ್ನ ತಂದೆಗೂ ಸಹೋದರರಿಗೂ ಈಜಿಪ್ಟಿನಲ್ಲಿ ವಾಸಿಸಲು ಉತ್ತಮವಾದ ಪ್ರದೇಶವನ್ನು ಕೊಟ್ಟನು. ಅದು ರಮ್ಸೇಸ್ ಪಟ್ಟಣದ ಸಮೀಪದಲ್ಲಿತ್ತು. 12 ಯೋಸೇಫನು ತನ್ನ ತಂದೆಗೂ ತನ್ನ ಸಹೋದರರಿಗೂ ಮತ್ತು ಅಲ್ಲಿನ ಎಲ್ಲಾ ಜನರಿಗೂ ಬೇಕಾಗಿದ್ದ ಆಹಾರವನ್ನು ಕೊಟ್ಟನು.
ಯೋಸೇಫನು ಫರೋಹನಿಗೆ ಭೂಮಿಯನ್ನು ಕೊಂಡುಕೊಂಡದ್ದು
13 ಬರಗಾಲವು ಹೆಚ್ಚು ಭೀಕರವಾಯಿತು. ದೇಶದಲ್ಲಿ ಎಲ್ಲಿಯೂ ಆಹಾರ ಇರಲಿಲ್ಲ. ಈಜಿಪ್ಟ್ ಮತ್ತು ಕಾನಾನ್ ದೇಶಗಳು ಬರಗಾಲದಿಂದ ಬಡದೇಶಗಳಾದವು. 14 ಈಜಿಪ್ಟ್ ಮತ್ತು ಕಾನಾನ್ ದೇಶಗಳ ಜನರು ಧಾನ್ಯಗಳನ್ನು ಕೊಂಡುಕೊಂಡರು. ಯೋಸೇಫನು ಹಣವನ್ನು ಉಳಿಸಿ ಫರೋಹನ ಭಂಡಾರಕ್ಕೆ ಸೇರಿಸಿದನು. 15 ಸ್ವಲ್ಪ ಸಮಯದ ನಂತರ, ಈಜಿಪ್ಟ್ ಮತ್ತು ಕಾನಾನ್ ದೇಶಗಳಲ್ಲಿದ್ದ ಜನರಲ್ಲಿ ಹಣವು ಉಳಿದಿರಲಿಲ್ಲ. ಆದ್ದರಿಂದ ಈಜಿಪ್ಟಿನ ಜನರು ಯೋಸೇಫನ ಬಳಿಗೆ ಹೋಗಿ, “ದಯವಿಟ್ಟು ನಮಗೆ ಆಹಾರವನ್ನು ಕೊಡು. ನಮ್ಮ ಹಣವೆಲ್ಲ ಮುಗಿದುಹೋಗಿದೆ. ನಾವು ಊಟ ಮಾಡದಿದ್ದರೆ ನಿನ್ನೆದುರಿನಲ್ಲೇ ಸಾಯುತ್ತೇವೆ” ಎಂದು ಹೇಳಿದರು.
16 ಅದಕ್ಕೆ ಯೋಸೇಫನು, “ನಿಮ್ಮ ದನಕರುಗಳನ್ನು ನನಗೆ ಕೊಡಿರಿ, ನಾನು ನಿಮಗೆ ಆಹಾರವನ್ನು ಕೊಡುತ್ತೇನೆ” ಎಂದು ಉತ್ತರಿಸಿದನು. 17 ಆದ್ದರಿಂದ ಜನರು ತಮ್ಮ ದನಕರುಗಳನ್ನೂ ಕುದುರೆಗಳನ್ನೂ ಇತರ ಎಲ್ಲಾ ಪಶುಗಳನ್ನೂ ಕೊಟ್ಟು ಆಹಾರವನ್ನು ಕೊಂಡುಕೊಂಡರು. ಆ ವರ್ಷ ಯೋಸೇಫನು ಅವರಿಗೆ ಆಹಾರವನ್ನು ಕೊಟ್ಟು ಅವರ ಪಶುಗಳನ್ನು ಕೊಂಡುಕೊಂಡನು.
18 ಆದರೆ ಮುಂದಿನ ವರ್ಷ, ಪಶುಗಳನ್ನು ಕೊಟ್ಟು ಆಹಾರವನ್ನು ಕೊಂಡುಕೊಳ್ಳಲು ಜನರ ಬಳಿ ಪಶುಗಳಿರಲಿಲ್ಲ. ಆದ್ದರಿಂದ ಜನರು ಯೋಸೇಫನಲ್ಲಿಗೆ ಹೋಗಿ, “ನಮ್ಮಲ್ಲಿ ಹಣ ಇಲ್ಲವೆಂಬುದು ನಿನಗೆ ಗೊತ್ತೇ ಇದೆ. ಅಲ್ಲದೆ ನಮ್ಮ ಪಶುಗಳೂ ನಿನ್ನ ಸ್ವತ್ತಾಗಿವೆ. ಆದ್ದರಿಂದ ನಮ್ಮಲ್ಲಿ ಏನೂ ಉಳಿದಿಲ್ಲ. ನೀನು ನೋಡುತ್ತಿರುವ ನಮ್ಮ ಶರೀರ ಮತ್ತು ನಮ್ಮ ಜಮೀನು ಮಾತ್ರ ಉಳಿದಿದೆ. 19 ನಿನ್ನ ಕಣ್ಣೆದುರಿನಲ್ಲಿಯೇ ನಾವು ಖಂಡಿತವಾಗಿ ಸಾಯುತ್ತೇವೆ. ಆದರೆ ನೀನು ನಮಗೆ ಆಹಾರವನ್ನು ಕೊಟ್ಟರೆ, ನಾವು ಫರೋಹನಿಗೆ ನಮ್ಮ ಭೂಮಿಯನ್ನು ಕೊಟ್ಟು ಅವನ ಗುಲಾಮರಾಗಿರುತ್ತೇವೆ. ಬಿತ್ತನೆ ಮಾಡಲು ನಮಗೆ ಬೀಜವನ್ನು ಕೊಡು. ಆಗ ನಾವು ಬದುಕುತ್ತೇವೆ, ಸಾಯುವುದಿಲ್ಲ. ಮತ್ತು ಭೂಮಿಯೂ ಬೆಳೆಗಳನ್ನು ಫಲಿಸುತ್ತದೆ” ಎಂದು ಹೇಳಿದರು.
20 ಆದ್ದರಿಂದ ಯೋಸೇಫನು ಈಜಿಪ್ಟಿನ ಎಲ್ಲಾ ಜಮೀನನ್ನು ಫರೋಹನಿಗಾಗಿ ಕೊಂಡುಕೊಂಡನು. ಹಸಿವೆಯಿಂದಾಗಿ ಈಜಿಪ್ಟಿನ ಎಲ್ಲಾ ಜನರು ಯೋಸೇಫನಿಗೆ ತಮ್ಮ ಜಮೀನುಗಳನ್ನು ಮಾರಿದರು. 21 ಈಜಿಪ್ಟಿನ ಎಲ್ಲಾ ಜನರು ಫರೋಹನ ಗುಲಾಮರಾಗಿದ್ದರು.[a] 22 ಪುರೋಹಿತರು ಹೊಂದಿದ್ದ ಭೂಮಿಯನ್ನು ಮಾತ್ರ ಯೋಸೇಫನು ಕೊಂಡುಕೊಳ್ಳಲಿಲ್ಲ. ಭೂಮಿಯನ್ನು ಮಾರುವ ಅವಶ್ಯಕತೆ ಪುರೋಹಿತರಿಗೆ ಇರಲಿಲ್ಲ. ಯಾಕೆಂದರೆ ಫರೋಹನೇ ಅವರಿಗೆ ಸಂಬಳವನ್ನು ಕೊಡುತ್ತಿದ್ದನು. ಆದ್ದರಿಂದ ಅವರು ಆ ಹಣದಿಂದ ಆಹಾರವನ್ನು ಕೊಂಡುಕೊಂಡರು.
23 ಯೋಸೇಫನು ಜನರಿಗೆ, “ಈಗ ನಾನು ನಿಮ್ಮನ್ನೂ ನಿಮ್ಮ ಜಮೀನನ್ನೂ ಫರೋಹನಿಗಾಗಿ ಕೊಂಡುಕೊಂಡಿದ್ದೇನೆ. ಆದ್ದರಿಂದ ನಾನು ನಿಮಗೆ ಬೀಜವನ್ನು ಕೊಡುತ್ತೇನೆ. ನೀವು ನಿಮ್ಮ ಜಮೀನುಗಳಲ್ಲಿ ಬಿತ್ತನೆಮಾಡಿರಿ. 24 ಸುಗ್ಗಿಕಾಲ ಬಂದಾಗ, ನಿಮ್ಮ ಬೆಳೆಗಳಲ್ಲಿ ಐದನೆ ಒಂದು ಭಾಗ ಫರೋಹನಿಗೆ ಸೇರಿದ್ದು. ಐದನೆ ನಾಲ್ಕು ಭಾಗವನ್ನು ನಿಮಗೋಸ್ಕರ ಇಟ್ಟುಕೊಳ್ಳಿರಿ. ನೀವು ಆಹಾರಕ್ಕಾಗಿ ಇಟ್ಟುಕೊಳ್ಳುವ ಬೀಜವನ್ನೇ ಮುಂದಿನ ವರ್ಷದ ಬಿತ್ತನೆಗಾಗಿ ಉಪಯೋಗಿಸಬಹುದು. ಹೀಗೆ ನೀವು ನಿಮ್ಮ ಕುಟುಂಬದವರಿಗೂ ಮಕ್ಕಳಿಗೂ ಪೋಷಣೆಮಾಡಿರಿ” ಎಂದು ಹೇಳಿದನು.
25 ಆಗ ಜನರು, “ನೀನು ನಮ್ಮ ಜೀವವನ್ನು ಉಳಿಸಿರುವೆ. ನಾವು ಸಂತೋಷದಿಂದ ಫರೋಹನ ಗುಲಾಮರಾಗುತ್ತೇವೆ” ಎಂದು ಹೇಳಿದರು.
26 ಆದ್ದರಿಂದ ಯೋಸೇಫನು ಒಂದು ಕಾನೂನನ್ನು ಮಾಡಿದನು. ಅದು ಇಂದಿಗೂ ಜಾರಿಯಲ್ಲಿದೆ. ಆ ಕಾನೂನಿನ ಪ್ರಕಾರ, ಭೂಮಿಯ ಫಸಲಿನಲ್ಲಿ ಐದನೇ ಒಂದು ಭಾಗವು ಫರೋಹನಿಗೆ ಸೇರಿದ್ದಾಗಿದೆ. ಫರೋಹನು ಎಲ್ಲಾ ಜಮೀನಿಗೂ ಒಡೆಯನಾಗಿದ್ದಾನೆ. ಪುರೋಹಿತರ ಭೂಮಿಯು ಮಾತ್ರ ಅವನಿಗೆ ಸೇರಿಲ್ಲ.
“ನನ್ನನ್ನು ಈಜಿಪ್ಟಿನಲ್ಲಿ ಸಮಾಧಿ ಮಾಡಬೇಡ”
27 ಇಸ್ರೇಲನು ಈಜಿಪ್ಟಿನಲ್ಲಿ ಇಳಿದುಕೊಂಡನು. ಅವನು ಗೋಷೆನ್ ಪ್ರಾಂತ್ಯದಲ್ಲಿ ವಾಸಿಸಿದನು. ಅವನ ಕುಟುಂಬವು ಬೆಳೆದು ತುಂಬ ದೊಡ್ಡದಾಯಿತು. ಅವರು ಈಜಿಪ್ಟಿನಲ್ಲಿ ಜಮೀನನ್ನು ಪಡೆದುಕೊಂಡರು ಮತ್ತು ಸುಖವಾಗಿದ್ದರು.
28 ಕೋಬನು ಈಜಿಪ್ಟಿನಲ್ಲಿ ಹದಿನೇಳು ವರ್ಷಗಳ ಕಾಲ ಜೀವಿಸಿದನು. ಆಗ ಯಾಕೋಬನಿಗೆ ನೂರನಲವತ್ತೇಳು ವರ್ಷವಾಗಿತ್ತು. 29 ಇಸ್ರೇಲನು ಸಾಯುವ ಕಾಲ ಸಮೀಪಿಸಿತು. ಅವನಿಗೆ ತಾನು ಸಾಯುತ್ತೇನೆಂದು ತಿಳಿದು ಬಂದಾಗ, ತನ್ನ ಮಗನಾದ ಯೋಸೇಫನನ್ನು ಕರೆಯಿಸಿ, “ನೀನು ನನ್ನನ್ನು ಪ್ರೀತಿಸುವುದಾದರೆ, ನಿನ್ನ ಕೈಯನ್ನು ನನ್ನ ತೊಡೆಯ ಕೆಳಗಿಟ್ಟು ಪ್ರಮಾಣಮಾಡು. ನಾನು ಹೇಳಿದ್ದನ್ನು ನಡೆಸುವುದಾಗಿಯೂ ನನಗೆ ನಂಬಿಗಸ್ತನಾಗಿರುವುದಾಗಿಯೂ ಪ್ರಮಾಣ ಮಾಡು. ನಾನು ಸತ್ತಾಗ, ನನ್ನನ್ನು ಈಜಿಪ್ಟಿನಲ್ಲಿ ಸಮಾಧಿ ಮಾಡಬೇಡ. 30 ನನ್ನ ಪೂರ್ವಿಕರನ್ನು ಸಮಾಧಿ ಮಾಡಿದ ಸ್ಥಳದಲ್ಲಿಯೇ ನನ್ನನ್ನು ಸಮಾಧಿ ಮಾಡು. ನನ್ನನ್ನು ಈಜಿಪ್ಟಿನಿಂದ ತೆಗೆದುಕೊಂಡು ಹೋಗಿ ನಮ್ಮ ಕುಟುಂಬದವರ ಸ್ಮಶಾನದಲ್ಲಿ ಸಮಾಧಿ ಮಾಡು” ಎಂದು ಹೇಳಿದನು.
ಯೋಸೇಫನು, “ನೀನು ಹೇಳಿದಂತೆಯೇ ಮಾಡುತ್ತೇನೆ” ಎಂದು ಪ್ರಮಾಣ ಮಾಡಿದನು.
31 ಇಸ್ರೇಲನು, “ನನಗೆ ಪ್ರಮಾಣ ಮಾಡು” ಎಂದು ಹೇಳಿದ್ದರಿಂದ ಯೋಸೇಫನು ಅವನಿಗೆ ಪ್ರಮಾಣ ಮಾಡಿದನು. ಆಮೇಲೆ ಇಸ್ರೇಲನು ಹಾಸಿಗೆಯ ಮೇಲೆ ಮತ್ತೆ ತನ್ನ ತಲೆಬಾಗಿ ದೇವರಿಗೆ ನಮಸ್ಕರಿಸಿದನು.
ಯೇಸುವಿನ ಜೀವನದ ಬಗ್ಗೆ ಲೂಕನ ಬರಹ
1 ಸನ್ಮಾನ್ಯ ಥೆಯೊಫಿಲನೇ,
ನಮ್ಮ ಮಧ್ಯದಲ್ಲಿ ಸಂಭವಿಸಿದ ಸಂಗತಿಗಳ ಚರಿತ್ರೆಯನ್ನು ತಿಳಿಸುವುದಕ್ಕೆ ಅನೇಕರು ಪ್ರಯತ್ನಿಸಿದ್ದಾರೆ. 2 ಪ್ರಾರಂಭದಿಂದಲೂ ಆ ಸಂಗತಿಗಳನ್ನು ಕಣ್ಣಾರೆ ಕಂಡು ದೇವರ ಸಂದೇಶವನ್ನು ಸಾರಿದವರಿಂದ ನಾವು ಕೇಳಿದ ಸಂಗತಿಗಳನ್ನೇ ಅವರು ಬರೆದಿದ್ದಾರೆ. 3 ಪ್ರತಿಯೊಂದು ಸಂಗತಿಯನ್ನು ಪ್ರಾರಂಭದಿಂದ ನಾನೇ ಶ್ರದ್ಧೆವಹಿಸಿ ಅಧ್ಯಯನ ಮಾಡಿರುವುದರಿಂದ ಅವೆಲ್ಲವನ್ನೂ ನಿನಗೆ ಕ್ರಮಬದ್ಧವಾಗಿ ತಿಳಿಸಲು ಪುಸ್ತಕ ರೂಪದಲ್ಲಿ ಬರೆದಿದ್ದೇನೆ. 4 ನಿನಗೆ ಉಪದೇಶಿಸಿರುವ ವಿಷಯಗಳು ಸತ್ಯವಾದವುಗಳೆಂದು ಇದರಿಂದ ನಿನಗೆ ಸ್ಪಷ್ಟವಾಗಿರುವುದು.
ಜಕರೀಯ ಮತ್ತು ಎಲಿಜಬೇತ್
5 ಹೆರೋದನು[a] ಜುದೇಯವನ್ನು ಆಳುತ್ತಿದ್ದ ಕಾಲದಲ್ಲಿ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಜಕರೀಯನು ಅಬೀಯನ ವರ್ಗಕ್ಕೆ[b] ಸೇರಿದವನು. ಜಕರೀಯನ ಹೆಂಡತಿ ಆರೋನನ ಕುಟುಂಬದವಳು. ಆಕೆಯ ಹೆಸರು ಎಲಿಜಬೇತ್. 6 ಜಕರೀಯನು ಮತ್ತು ಎಲಿಜಬೇತಳು ನಿಜವಾಗಿಯೂ ದೇವರ ದೃಷ್ಟಿಯಲ್ಲಿ ಒಳ್ಳೆಯವರಾಗಿದ್ದರು. ಪ್ರಭುವಿನ (ದೇವರ) ಆಜ್ಞೆಗಳನ್ನೆಲ್ಲಾ ಕೈಕೊಂಡು ನಡೆಯುತ್ತಿದ್ದ ಅವರು, ಅದೇರೀತಿ ಬಾಳಲು ಇತರರಿಗೂ ಉಪದೇಶಿಸುತ್ತಿದ್ದರು. ಅವರು ತಪ್ಪಿಲ್ಲದವರಾಗಿದ್ದರು. 7 ಅವರಿಗೆ ಮಕ್ಕಳಿರಲಿಲ್ಲ. ಎಲಿಜಬೇತಳು ಬಂಜೆಯಾಗಿದ್ದಳು; ಮತ್ತು ಅವರಿಬ್ಬರೂ ಬಹಳ ಮುಪ್ಪಿನವರಾಗಿದ್ದರು.
8 ಒಮ್ಮೆ ತನ್ನ ವರ್ಗದ ಸರದಿ ಬಂದಾಗ, ಜಕರೀಯನು ದೇವರ ಸನ್ನಿಧಿಯಲ್ಲಿ ಯಾಜಕಸೇವೆ ಸಲ್ಲಿಸುತ್ತಿದ್ದನು. 9 ಯಾಜಕರು ಧೂಪವನು ಅರ್ಪಿಸುವುದಕ್ಕಾಗಿ ತಮ್ಮ ಸಂಪ್ರದಾಯದ ಪ್ರಕಾರ ಚೀಟಿಹಾಕಿ ಒಬ್ಬ ಯಾಜಕನನ್ನು ಆರಿಸುತ್ತಿದ್ದರು. ಈ ಸಲ ಅದು ಜಕರೀಯನ ಪಾಲಿಗೆ ಬಂದಿತು. ಆದ್ದರಿಂದ ಜಕರೀಯನು ಧೂಪ ಅರ್ಪಿಸುವುದಕ್ಕಾಗಿ ಪ್ರಭುವಿನ ಆಲಯದೊಳಗೆ ಹೋದನು. 10 ಹೊರಗಡೆ ಬಹು ಜನರಿದ್ದರು. ಧೂಪವನ್ನರ್ಪಿಸುತ್ತಿದ್ದ ಸಮಯದಲ್ಲಿ ಅವರು ಪ್ರಾರ್ಥಿಸುತ್ತಿದ್ದರು.
11 ಆಗ, ಧೂಪಪೀಠದ ಬಲಗಡೆಯಲ್ಲಿ, ಪ್ರಭುವಿನ ದೂತನೊಬ್ಬನು ಬಂದು ಜಕರೀಯನ ಮುಂದೆ ನಿಂತನು. 12 ಅವನು ದೇವದೂತನನ್ನು ನೋಡಿ ಗಲಿಬಿಲಿಗೊಂಡು ಬಹು ಭಯಪಟ್ಟನು. 13 ಆದರೆ ದೇವದೂತನು ಅವನಿಗೆ, “ಜಕರೀಯನೇ, ಹೆದರಬೇಡ. ನಿನ್ನ ಪ್ರಾರ್ಥನೆ ದೇವರಿಗೆ ಕೇಳಿಸಿತು. ನಿನ್ನ ಹೆಂಡತಿಯಾದ ಎಲಿಜಬೇತಳು ಒಂದು ಗಂಡುಮಗುವನ್ನು ಹೆರುವಳು. ನೀನು ಅವನಿಗೆ ಯೋಹಾನ ಎಂದು ಹೆಸರಿಡಬೇಕು. 14 ಅವನ ಜನನದಿಂದ ನಿಮಗೆ ಹರ್ಷಾನಂದವಾಗುವುದು. ಬಹುಜನರು ಸಂತೋಷಪಡುವರು. 15 ಪ್ರಭುವಿನ ದೃಷ್ಟಿಯಲ್ಲಿ ಯೋಹಾನನು ಮಹಾಪುರುಷನಾಗಿರುವನು. ಅವನು ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿಯುವುದಿಲ್ಲ. ಯೋಹಾನನು ಹುಟ್ಟಿದಂದಿನಿಂದಲೇ ಪವಿತ್ರಾತ್ಮಭರಿತನಾಗಿರುವನು.[c]
16 “ಅನೇಕ ಯೆಹೂದ್ಯರು ತಮ್ಮ ದೇವರಾದ ಪ್ರಭುವಿನ ಕಡೆಗೆ ತಿರುಗಿಕೊಳ್ಳಲು ಅವನು ಸಹಾಯ ಮಾಡುವನು. 17 ಅವನು ಪ್ರಭುವಿಗೆ ಮುಂದೂತನಾಗಿ ಹೋಗುವನು. ಅವನು ಎಲೀಯನ[d] ಗುಣಶಕ್ತಿಗಳಿಂದ ಕೂಡಿದವನಾಗಿರುವನು; ತಂದೆ ಮತ್ತು ಮಕ್ಕಳ ನಡುವೆ ಸಮಾಧಾನವನ್ನು ಉಂಟುಮಾಡುವನು; ಅವಿಧೇಯರಾದ ಅನೇಕರನ್ನು ನೀತಿವಂತರ ಜ್ಞಾನದ ಕಡೆಗೆ ನಡೆಸುವನು; ಜನರನ್ನು ಪ್ರಭುವಿನ ಆಗಮನಕ್ಕೆ ಸಿದ್ಧಪಡಿಸುವನು” ಎಂದು ಹೇಳಿದನು.
18 ಜಕರೀಯನು ದೇವದೂತನಿಗೆ, “ನೀನು ಹೇಳುತ್ತಿರುವುದು ಸತ್ಯವೆಂಬುದಕ್ಕೆ ಆಧಾರವೇನು? ನಾನು ಮುದುಕನಾಗಿದ್ದೇನೆ ಮತ್ತು ನನ್ನ ಹೆಂಡತಿ ಸಹ ಮುಪ್ಪಿನವಳಾಗಿದ್ದಾಳೆ” ಎಂದು ಹೇಳಿದನು.
19 ದೇವದೂತನು, “ನನ್ನ ಹೆಸರು ಗಬ್ರಿಯೇಲ. ನಾನು ದೇವರ ಸನ್ನಿಧಿಯಲ್ಲಿ ನಿಂತುಕೊಂಡಿರುವವನು. ನಿನಗೆ ಈ ಶುಭಸಮಾಚಾರವನ್ನು ತಿಳಿಸಲು ದೇವರು ನನ್ನನ್ನು ಕಳುಹಿಸಿದ್ದಾನೆ. 20 ಈಗ ಕೇಳು! ಈ ಸಂಗತಿಗಳು ನೆರವೇರುವ ತನಕ ನೀನು ಮೂಕನಾಗಿರುವೆ. ಏಕೆಂದರೆ ನೀನು ನನ್ನ ಮಾತನ್ನು ನಂಬಲಿಲ್ಲ. ಆದರೆ ನಾನು ಹೇಳಿದ ಈ ಸಂಗತಿಗಳು ಖಂಡಿತವಾಗಿ ನೆರವೇರುತ್ತವೆ” ಎಂದು ಹೇಳಿದನು.
21 ಜನರು ಜಕರೀಯನಿಗಾಗಿ ಎದುರುನೋಡುತ್ತಾ ದೇವಾಲಯದೊಳಗೆ ಅವನು ಇಷ್ಟುಹೊತ್ತು ಇರಲು ಕಾರಣವೇನಿರಬಹುದೆಂದು ಆಶ್ಚರ್ಯಚಕಿತರಾದರು. 22 ಬಳಿಕ ಜಕರೀಯನು ಹೊರಗೆ ಬಂದಾಗ, ಅವನಿಗೆ ಅವರೊಡನೆ ಮಾತಾಡಲಾಗಲಿಲ್ಲ. ಆದ್ದರಿಂದ ಅವನಿಗೆ ದೇವಾಲಯದಲ್ಲಿ ದರ್ಶನವಾಗಿರಬೇಕೆಂದು ಅವರು ತಿಳಿದುಕೊಂಡರು. ಅಂದಿನಿಂದ ಅವನು ಮಾತಾಡಲಾಗದೆ ಕೇವಲ ಸನ್ನೆಗಳ ಮೂಲಕ ತಿಳಿಸುತ್ತಿದ್ದನು. 23 ತನ್ನ ಯಾಜಕಸೇವೆಯ ಸರದಿಯು ಮುಗಿದ ಮೇಲೆ ಜಕರೀಯನು ಮನೆಗೆ ಹಿಂತಿರುಗಿ ಹೋದನು.
24 ಆ ಬಳಿಕ, ಜಕರೀಯನ ಹೆಂಡತಿಯಾದ ಎಲಿಜಬೇತಳು ಗರ್ಭಿಣಿಯಾದಳು. ಆದ್ದರಿಂದ ಆಕೆ ಐದು ತಿಂಗಳವರೆಗೆ ತನ್ನ ಮನೆಯಿಂದ ಹೊರಗೆ ಹೋಗಲಿಲ್ಲ. 25 ಎಲಿಜಬೇತಳು, “ನೋಡಿ, ಪ್ರಭುವು ನನಗೋಸ್ಕರ ಎಂಥಾ ಕಾರ್ಯಮಾಡಿದ್ದಾನೆ! ನನ್ನ ಜನರ ನಡುವೆ ನನಗಿದ್ದ ಅವಮಾನವನ್ನು ಪ್ರಭುವು ತೊಲಗಿಸಿದ್ದಾನೆ” ಎಂದು ಹೇಳಿದಳು.
ಕನ್ಯೆ ಮರಿಯಳು
26-27 ಎಲಿಜಬೇತಳು ಆರು ತಿಂಗಳ ಗರ್ಭಿಣಿಯಾಗಿದ್ದಾಗ, ದೇವರು ತನ್ನ ದೂತನಾದ ಗಬ್ರಿಯೇಲನನ್ನು ಗಲಿಲೇಯ ಪ್ರಾಂತ್ಯದ ನಜರೇತ್ ಎಂಬ ಊರಿನಲ್ಲಿ ವಾಸಿಸುತ್ತಿದ್ದ ಒಬ್ಬ ಕನ್ಯೆಯ ಬಳಿಗೆ ಕಳುಹಿಸಿದನು. ಆಕೆಗೆ ದಾವೀದನ ಮನೆತನದ ಯೋಸೇಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯಳು. 28 ದೇವದೂತನು ಆಕೆಯ ಬಳಿಗೆ ಬಂದು, “ದೇವರಾಶೀರ್ವಾದ ಹೊಂದಿದವಳೇ, ನಿನಗೆ ಶುಭವಾಗಲಿ! ಪ್ರಭುವು ನಿನ್ನೊಡನೆ ಇದ್ದಾನೆ” ಎಂದು ಹೇಳಿದನು.
29 ದೇವದೂತನ ಮಾತನ್ನು ಕೇಳಿ ಬಹು ಗಲಿಬಿಲಿಗೊಂಡ ಮರಿಯಳು, “ಇದರ ಅರ್ಥವೇನಿರಬಹುದು?” ಎಂದು ಆಶ್ಚರ್ಯಪಟ್ಟಳು.
30 ದೇವದೂತನು ಆಕೆಗೆ, “ಮರಿಯಳೇ, ಭಯಪಡಬೇಡ. ದೇವರು ನಿನ್ನನ್ನು ಬಹಳವಾಗಿ ಆಶೀರ್ವದಿಸಿದ್ದಾನೆ. 31 ಕೇಳು! ನೀನು ಗರ್ಭಿಣಿಯಾಗಿ ಒಂದು ಗಂಡುಮಗುವನ್ನು ಹೆರುವೆ. ಆತನಿಗೆ, ‘ಯೇಸು’ ಎಂದು ಹೆಸರಿಡಬೇಕು. 32 ಆತನು ಮಹಾಪುರುಷನಾಗುವನು. ಜನರು ಆತನನ್ನು ಮಹೋನ್ನತನ (ದೇವರ) ಮಗನೆಂದು ಕರೆಯುವರು. ಪ್ರಭುವಾದ ದೇವರು ಆತನಿಗೆ ಆತನ ಪೂರ್ವಿಕನಾದ ದಾವೀದನ ಅಧಿಕಾರವನ್ನು ಕೊಡುವನು. 33 ಯೇಸುವು ಯಾಕೋಬನ ಜನರನ್ನು ಸದಾಕಾಲ ಆಳುವನು. ಆತನ ರಾಜ್ಯ ಎಂದಿಗೂ ಅಂತ್ಯವಾಗುವುದಿಲ್ಲ” ಎಂದು ಹೇಳಿದನು.
34 ಮರಿಯಳು ದೇವದೂತನಿಗೆ, “ಇದು ಹೇಗೆ ಸಂಭವಿಸುವುದು? ನಾನು ಮದುವೆಯಾಗಿಲ್ಲವಲ್ಲಾ!” ಎಂದು ಹೇಳಿದಳು.
35 ದೇವದೂತನು ಮರಿಯಳಿಗೆ, “ಪವಿತ್ರಾತ್ಮನು ನಿನ್ನ ಮೇಲೆ ಬರುವನು; ಮಹೋನ್ನತನ ಶಕ್ತಿಯು ನಿನ್ನನ್ನು ಆವರಿಸುವುದು. ಈ ಕಾರಣದಿಂದ ನಿನ್ನಲ್ಲಿ ಹುಟ್ಟುವ ಈ ಪವಿತ್ರಮಗುವು ‘ದೇವರ ಮಗ’ ಎನಿಸಿಕೊಳ್ಳುವನು. 36 ಇದಲ್ಲದೆ, ನಿನ್ನ ಬಂಧುವಾದ ಎಲಿಜಬೇತಳು ಗರ್ಭಿಣಿಯಾಗಿದ್ದಾಳೆ. ಆಕೆಯು ಬಹಳ ಮುಪ್ಪಿನವಳಾಗಿದ್ದರೂ ಆಕೆಗೊಬ್ಬ ಮಗ ಹುಟ್ಟುವನು. ಜನರಿಂದ ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿಯಾಗಿದ್ದಾಳೆ. 37 ದೇವರಿಗೆ ಯಾವುದೂ ಅಸಾಧ್ಯವಲ್ಲ,” ಎಂದು ಹೇಳಿದನು.
38 ಮರಿಯಳು, “ನಾನು ಪ್ರಭುವಿನ ದಾಸಿ. ನೀನು ಹೇಳಿದಂತೆಯೇ ನನಗಾಗಲಿ!” ಅಂದಳು. ಬಳಿಕ ದೇವದೂತನು ಹೊರಟುಹೋದನು.
13 ಯೋಬನು ಹೇಳಿದನು:
“ಇಗೋ, ಇವುಗಳನ್ನೆಲ್ಲ ನನ್ನ ಕಣ್ಣುಗಳು ಕಂಡಿವೆ;
ಕಿವಿಗಳು ಕೇಳಿ ಗ್ರಹಿಸಿಕೊಂಡಿವೆ.
2 ನಿಮಗೆ ತಿಳಿದಿರುವುದು ನನಗೂ ತಿಳಿದಿದೆ.
ನಾನು ನಿಮಗಿಂತ ಕಡಿಮೆಯಲ್ಲ.
3 ಆದರೆ ನಾನು ನಿಮ್ಮೊಂದಿಗೆ ವಾದಮಾಡದೆ
ಸರ್ವಶಕ್ತನಾದ ದೇವರೊಂದಿಗೆ ಮಾತಾಡುವೆನು;
ನನ್ನ ಕಷ್ಟಗಳ ಕುರಿತು ಆತನೊಂದಿಗೆ ವಾದಿಸುವೆನು.
4 ನೀವಾದರೋ ನಿಮ್ಮ ಆ ಜ್ಞಾನವನ್ನು ಸುಳ್ಳುಗಳಿಂದ ಮುಚ್ಚಲು ಪ್ರಯತ್ನಿಸುತ್ತಿದ್ದೀರಿ.
ನೀವೆಲ್ಲರೂ ಗುಣಪಡಿಸಲಾಗದ ವೈದ್ಯರುಗಳಂತಿದ್ದೀರಿ.
5 ನೀವು ಬಾಯಿಮುಚ್ಚಿಕೊಂಡು ಸುಮ್ಮನಿದ್ದರೆ ಎಷ್ಟೋ ಒಳ್ಳೆಯದು.
ನೀವು ಮಾಡಬಹುದಾದ ಜ್ಞಾನದ ಕಾರ್ಯ ಅದೊಂದೇ.
6 “ಈಗ ನನ್ನ ವಾದಕ್ಕೆ ಕಿವಿಗೊಡಿ.
ನಾನು ಹೇಳುವುದನ್ನು ಕೇಳಿ.
7 ನೀವು ದೇವರಿಗಾಗಿ ಸುಳ್ಳಾಡುವಿರಾ?
ಆತನಿಗಾಗಿ ಅನ್ಯಾಯದ ವಾದಗಳನ್ನು ಬಳಸುವಿರಾ?
8 ನೀವು ದೇವರಿಗೆ ಮುಖದಾಕ್ಷಿಣ್ಯವನ್ನು ತೋರಿಸುವಿರಾ?
ನ್ಯಾಯಾಲಯದಲ್ಲಿ ಆತನಿಗಾಗಿ ವಾದಿಸಲು ಹೋಗುವಿರಾ?
9 ದೇವರು ನಿಮ್ಮನ್ನು ಸೂಕ್ಷ್ಮವಾಗಿ ಪರಿಶೋಧಿಸಿದರೆ
ನೀವು ನೀತಿವಂತರಾಗಿ ಕಂಡುಬರುವಿರಾ?
ಜನರಿಗೆ ಮೋಸ ಮಾಡುವಂತೆ
ದೇವರಿಗೂ ಮೋಸ ಮಾಡಬಹುದೆಂದು ಯೋಚಿಸಿಕೊಂಡಿದ್ದೀರಾ?
10 ನೀವು ನ್ಯಾಯಾಲಯದಲ್ಲಿ ರಹಸ್ಯವಾಗಿ ಪಕ್ಷಪಾತ ಮಾಡಿದರೆ
ಆತನು ನಿಮ್ಮನ್ನು ಖಂಡಿಸೇ ಖಂಡಿಸುವನು.
11 ಆತನ ಪ್ರಕಾಶಮಾನವಾದ ಮಹಿಮೆಯು ನಿಮ್ಮನ್ನು ಹೆದರಿಸುವುದಿಲ್ಲವೇ?
ನೀವು ಆತನಿಗೆ ಭಯಪಡುವುದಿಲ್ಲವೇ?
12 ನೀವಾಡುವ ಸ್ಮರಣೀಯ ನುಡಿಗಳು ಬೂದಿಗೆ ಸಮಾನವಾಗಿವೆ.
ನಿಮ್ಮ ವಾದಗಳು ಮಣ್ಣಿನಷ್ಟೇ ಬಲಹೀನವಾಗಿವೆ.
13 “ಸುಮ್ಮನಿರಿ, ಮಾತಾಡಲು ನನಗೆ ಅವಕಾಶ ಕೊಡಿ!
ನನಗೆ ಏನಾಗಬೇಕೋ ಆಗಲಿ.
14 ನಾನು ನನ್ನನ್ನು ಅಪಾಯಕ್ಕೊಡ್ಡುವೆನು;
ನನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡಿರುವೆನು.
15 ದೇವರು ನನ್ನನ್ನು ಕೊಂದರೂ ಆತನಲ್ಲಿಯೇ ಭರವಸವಿಟ್ಟಿರುವೆನು.
ನನ್ನ ನಡತೆಯ ಕುರಿತು ಆತನ ಮುಂದೆ ವಾದಿಸುವೆನು.
16 ನಾನು ನಿರಪರಾಧಿಯೆಂದು ಆಗ ರುಜುವಾತಾಗುವುದು.
ಯಾಕೆಂದರೆ, ದೇವರನ್ನು ಮುಖಾಮುಖಿಯಾಗಿ ಸಂಧಿಸಲು ದುಷ್ಟನಿಗೆ ಸಾಧ್ಯವೇ ಇಲ್ಲ.
17 ನಾನು ಹೇಳುವುದನ್ನು ಗಮನವಿಟ್ಟು ಕೇಳಿ.
ನನ್ನ ವಿವರಣೆಯನ್ನು ನಿಮ್ಮ ಕಿವಿಗಳು ಕೇಳಲಿ.
18 ನನ್ನ ಪರವಾಗಿ ವಾದಿಸಲು ಈಗ ಸಿದ್ಧವಾಗಿದ್ದೇನೆ.
ನಾನು ನಿರಪರಾಧಿಯೆಂದು ನನಗೆ ಗೊತ್ತದೆ.
19 ನಾನು ತಪ್ಪಿತಸ್ಥನೆಂದು ಯಾವನೂ ನಿರೂಪಿಸಲಾರನು.
ನಿರೂಪಿಸಬಲ್ಲವನಿದ್ದರೆ ಬಾಯಿ ಮುಚ್ಚಿಕೊಳ್ಳುವೆನು.
20 “ದೇವರೇ, ನನಗಾಗಿ ಎರಡು ಕಾರ್ಯಗಳನ್ನು ಮಾಡಬೇಡ,
ಆಗ ನನ್ನನ್ನು ನಿನಗೆ ಮರೆಮಾಡಿಕೊಳ್ಳುವುದಿಲ್ಲ.
21 ನನ್ನ ಮೇಲೆತ್ತಿರುವ ನಿನ್ನ ಕೈಯಿಂದ ನನ್ನನ್ನು ದಂಡಿಸಬೇಡ,
ಭಯಾನಕವಾದವುಗಳಿಂದ ನನ್ನನ್ನು ಹೆದರಿಸಬೇಡ.
22 ಆಗ ನೀನು ಕರೆದರೆ, ನಾನು ಉತ್ತರಕೊಡುವೆನು.
ಇಲ್ಲವೇ ನಾನು ಕರೆಯುವೆ, ನೀನು ಉತ್ತರಕೊಡು.
23 ನಾನು ಎಷ್ಟು ಪಾಪಗಳನ್ನು ಮಾಡಿರುವೆ?
ನಾನೇನು ತಪ್ಪು ಮಾಡಿರುವೆ?
ನನ್ನ ತಪ್ಪನ್ನೂ ಪಾಪವನ್ನೂ ನನಗೆ ತೋರಿಸು.
24 ದೇವರೇ, ನೀನೇಕೆ ನನಗೆ ಮರೆಯಾಗಿರುವೆ?
ನನ್ನನ್ನೇಕೆ ನಿನ್ನ ಶತ್ರುವೆಂದು ಪರಿಗಣಿಸಿರುವೆ?
25 ಒಣಗಿದ ಎಲೆಯಂತಿರುವ ನನ್ನನ್ನು ಹೆದರಿಸುವಿಯಾ?
ಹುಲ್ಲುಕಡ್ಡಿಯಂತಿರುವ ನನ್ನ ಮೇಲೆ ಆಕ್ರಮಣ ಮಾಡುವಿಯಾ?
26 ದೇವರೇ, ನೀನು ನನಗೆ ಕಠಿಣವಾದ ದಂಡನೆಗಳನ್ನು ವಿಧಿಸಿರುವೆ.
ನನ್ನ ಯೌವನದ ಪಾಪಗಳ ದೆಸೆಯಿಂದ ನನ್ನನ್ನು ಸಂಕಟಪಡಿಸಿರುವೆ.
27 ನೀನು ನನ್ನ ಕಾಲುಗಳಿಗೆ ಕೋಳವನ್ನು ಹಾಕಿರುವೆ.
ನಾನಿಡುವ ಪ್ರತಿಯೊಂದು ಹೆಜ್ಜೆಯನ್ನು ನೀನು ಸೂಕ್ಷ್ಮವಾಗಿ ಗಮನಿಸಿ
ನನ್ನ ಹೆಜ್ಜೆಗಳಿಗೆ ಮೇರೆಗಳನ್ನು ಹಾಕಿರುವೆ.
28 ಆದ್ದರಿಂದ ನಾನು ಕೊಳೆತುಹೋದ ಪದಾರ್ಥದಂತೆಯೂ
ನುಸಿಹಿಡಿದ ಬಟ್ಟೆಯ ಚೂರಿನಂತೆಯೂ
ಕ್ಷಯಿಸಿಹೋಗುತ್ತಿದ್ದೇನೆ.”
1 ಪೌಲನು ಬರೆಯುತ್ತಿರುವ ಪತ್ರ. ಕ್ರಿಸ್ತ ಯೇಸುವಿನ ಅಪೊಸ್ತಲನಾಗುವುದಕ್ಕೆ ನಾನು ದೇವರ ಚಿತ್ತಾನುಸಾರವಾಗಿ ಕರೆಯುಲ್ಪಟ್ಟೆನು. ನಾನು ಈ ಪತ್ರವನ್ನು ಕ್ರಿಸ್ತನಲ್ಲಿ ನಮ್ಮ ಸಹೋದರನಾದ ಸೊಸ್ಥೆನನೊಂದಿಗೆ ಬರೆಯುತ್ತಿದ್ದೇನೆ.
2 ಕ್ರಿಸ್ತ ಯೇಸುವಿನಲ್ಲಿ ಪವಿತ್ರರಾಗಿ ಮಾಡಲ್ಪಟ್ಟಿರುವ ಕೊರಿಂಥದ ದೇವರ ಸಭೆಯವರಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ನೀವು ದೇವರ ಪವಿತ್ರ ಜನರಾಗುವುದಕ್ಕೆ ಕರೆಯಲ್ಪಟ್ಟಿದ್ದೀರಿ. ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಂಬಿಕೆ ಇಡುವ ಎಲ್ಲಾ ಜನರೊಂದಿಗೆ ನೀವು ಕರೆಯಲ್ಪಟ್ಟಿದ್ದೀರಿ. ಯೇಸು ಕ್ರಿಸ್ತನು ಅವರಿಗೂ ನಮಗೂ ಪ್ರಭುವಾಗಿದ್ದಾನೆ.
3 ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ದೊರೆಯಲಿ.
ಪೌಲನು ದೇವರಿಗೆ ಸಲ್ಲಿಸುವ ಕೃತಜ್ಞತಾಸ್ತುತಿ
4 ದೇವರು ಕ್ರಿಸ್ತ ಯೇಸುವಿನ ಮೂಲಕ ನಿಮಗೆ ಕೊಟ್ಟಿರುವ ಕೃಪೆಯ ನಿಮಿತ್ತವಾಗಿ ನಾನು ನಿಮಗೋಸ್ಕರ ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. 5 ಯೇಸುವಿನಲ್ಲಿ ಸಕಲ ಆಶೀರ್ವಾದಗಳನ್ನು ಹೊಂದಿರುವ ನೀವು ವಾಕ್ಚತುರರೂ ಜ್ಞಾನಸಂಪನ್ನರೂ ಆಗಿದ್ದೀರಿ. 6 ಕ್ರಿಸ್ತನ ವಿಷಯವಾದ ಸತ್ಯವು ನಿಮ್ಮಲ್ಲಿ ನಿರೂಪಿಸಲ್ಪಟ್ಟಿದೆ. 7 ಹೀಗಿರಲು, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಪುನರಾಗಮನವನ್ನು ಎದುರುನೋಡುತ್ತಿರುವ ನೀವು ದೇವರಿಂದ ಬರುವ ಪ್ರತಿಯೊಂದು ವರವನ್ನು ಹೊಂದಿದವರಾಗಿದ್ದೀರಿ. 8 ಯೇಸುವು ನಿಮ್ಮನ್ನು ಕೊನೆಯವರೆಗೂ ದೃಢಪಡಿಸಿ ಕಾಪಾಡುವನು. ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಮತ್ತೆ ಬಂದಾಗ ನೀವು ನಿರ್ದೋಷಿಗಳಾಗಿರುವಿರಿ. 9 ದೇವರು ನಂಬಿಗಸ್ತನಾಗಿದ್ದಾನೆ. ದೇವರ ಮಗನಾದ ಮತ್ತು ಪ್ರಭುವಾದ ಯೇಸು ಕ್ರಿಸ್ತನ ಜೀವದಲ್ಲಿ ಪಾಲುಹೊಂದಬೇಕೆಂದು ನಮ್ಮನ್ನು ಕರೆದಿರುವಾತನು ದೇವರೇ.
ಕೊರಿಂಥ ಸಭೆಯಲ್ಲಿ ಸಮಸ್ಯೆಗಳು
10 ಸಹೋದರ ಸಹೋದರಿಯರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಾನು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ವಾದವಿವಾದವಿಲ್ಲದೆ ಭಿನ್ನಭೇದಗಳಿಲ್ಲದೆ ಒಂದೇ ಮನಸ್ಸಿನಿಂದಲೂ ಒಂದೇ ಉದ್ದೇಶದಿಂದಲೂ ನೀವು ಐಕ್ಯಮತ್ಯದಿಂದ ಬಾಳಿರಿ.
11 ನನ್ನ ಸಹೋದರ ಸಹೋದರಿಯರೇ, ಖ್ಲೊಯೆಯ ಮನೆಯಿಂದ ಬಂದಿದ್ದ ಕೆಲವರು ನಿಮ್ಮ ಬಗ್ಗೆ ನನಗೆ ಹೇಳಿದರು. ನಿಮ್ಮ ಮಧ್ಯದಲ್ಲಿ ವಾಗ್ವಾದಗಳಿರುವುದಾಗಿ ನನಗೆ ತಿಳಿಯಿತು. 12 ಅಂದರೆ, ನಿಮ್ಮಲ್ಲಿ ಒಬ್ಬನು, “ನಾನು ಪೌಲನನ್ನು ಹಿಂಬಾಲಿಸುತ್ತೇನೆ” ಎಂದು ಹೇಳುತ್ತಾನೆ; ಮತ್ತೊಬ್ಬನು, “ನಾನು ಅಪೊಲ್ಲೋಸನನ್ನು ಹಿಂಬಾಲಿಸುತ್ತೇನೆ” ಎಂದು ಹೇಳುತ್ತಾನೆ. ಇನ್ನೊಬ್ಬನು, “ನಾನು ಕೇಫನನ್ನು (ಪೇತ್ರನನ್ನು) ಹಿಂಬಾಲಿಸುತ್ತೇನೆ” ಎಂದು ಹೇಳುತ್ತಾನೆ. ಮತ್ತೊಬ್ಬನು, “ನಾನು ಕ್ರಿಸ್ತನನ್ನು ಹಿಂಬಾಲಿಸುತ್ತೇನೆ.” ಎಂದು ಹೇಳುತ್ತಾನೆ. 13 ಕ್ರಿಸ್ತನು ವಿಭಾಗವಾಗಿದ್ದಾನೋ? ಪೌಲನು ನಿಮಗೋಸ್ಕರ ಶಿಲುಬೆಯ ಮೇಲೆ ಸತ್ತನೇ? ಇಲ್ಲ! ನೀವು ಪೌಲನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿರೋ? ಇಲ್ಲ! 14 ನಿಮ್ಮಲ್ಲಿ ಕ್ರಿಸ್ಪನು ಮತ್ತು ಗಾಯನು ಇವರ ಹೊರತು ಬೇರೆ ಯಾರಿಗೂ ನಾನು ದೀಕ್ಷಾಸ್ನಾನ ಮಾಡಿಸಿಲ್ಲವಾದ್ದರಿಂದ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. 15 ನನ್ನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿರುವುದಾಗಿ ಹೇಳಲು ನಿಮ್ಮಲ್ಲಿ ಯಾರಿಗೂ ಈಗ ಸಾಧ್ಯವಿಲ್ಲವಾದ್ದರಿಂದ ನಾನು ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. 16 (ಸ್ತೆಫನನ ಮನೆಯವರಿಗಲ್ಲದೆ ಬೇರೆ ಯಾರಿಗೂ ದೀಕ್ಷಾಸ್ನಾನ ಮಾಡಿಸಿದಂತೆ ನನಗೆ ತೋರುವುದಿಲ್ಲ.) 17 ಕ್ರಿಸ್ತನು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ, ಸುವಾರ್ತೆಯನ್ನು ತಿಳಿಸುವುದಕ್ಕಾಗಿಯಷ್ಟೆ. ಆದರೆ ವಾಕ್ಚಾತುರ್ಯದಿಂದ ಸಾರುವುದಕ್ಕಾಗಿ ಕಳುಹಿಸಲಿಲ್ಲ. ನಾನೇನಾದರೂ ಲೋಕಜ್ಞಾನದಿಂದ ಸುವಾರ್ತೆ ಸಾರಿದ್ದೇಯಾದರೆ, ಕ್ರಿಸ್ತನ ಶಿಲುಬೆಯೇ ನಿರರ್ಥಕವಾಗುವುದು.
ದೇವರ ಶಕ್ತಿ ಮತ್ತು ಕ್ರಿಸ್ತನ ಜ್ಞಾನ
18 ನಾಶನ ಮಾರ್ಗದಲ್ಲಿರುವ ಜನರಿಗೆ ಶಿಲುಬೆಯ ಉಪದೇಶವು ಮೂರ್ಖತನವಾಗಿದೆ. ಆದರೆ ರಕ್ಷಣೆಯ ಮಾರ್ಗದಲ್ಲಿರುವ ನಮಗಾದರೋ ಅದು ದೇವರ ಶಕ್ತಿಯಾಗಿದೆ. 19 ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ:
“ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು.
ಬುದ್ಧಿವಂತರ ಬುದ್ಧಿಯನ್ನು ಬೆಲೆಬಾಳದಂತೆ ಮಾಡುವೆನು.”(A)
20 ಜ್ಞಾನಿಯು ಎಲ್ಲಿದ್ದಾನೆ? ವಿದ್ಯಾವಂತನು ಎಲ್ಲಿದ್ದಾನೆ? ಈ ಕಾಲದ ತತ್ವಜ್ಞಾನಿಯು ಎಲ್ಲಿದ್ದಾನೆ? ದೇವರು ಲೋಕದ ಜ್ಞಾನವನ್ನು ಮೂರ್ಖತನವನ್ನಾಗಿ ಮಾಡಿದ್ದಾನೆ. 21 ಇದು ದೇವರ ಜ್ಞಾನದ ಸಂಕಲ್ಪವಾಗಿತ್ತು. ಲೋಕವು ತನ್ನ ಸ್ವಂತ ಜ್ಞಾನದ ಮೂಲಕವಾಗಿ ದೇವರನ್ನು ತಿಳಿದುಕೊಂಡಿರಲಿಲ್ಲ. ಆದ್ದರಿಂದ ಮೂರ್ಖತನದಂತೆ ತೋರುವ ಸಂದೇಶದ ಮೂಲಕ ನಂಬುವವರನ್ನು ರಕ್ಷಿಸುವುದು ದೇವರಿಗೆ ಒಳ್ಳೆಯದೆನಿಸಿತು.
22 ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ. ಗ್ರೀಕರಿಗೆ ಜ್ಞಾನವು ಬೇಕಾಗಿದೆ. 23 ನಾವಾದರೋ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಕುರಿತಾಗಿ ಬೋಧಿಸುತ್ತೇವೆ. ಇದು ಯೆಹೂದ್ಯರಿಗೆ ದೊಡ್ಡ ಸಮಸ್ಯೆಯಾಗಿದೆ; ಯೆಹೂದ್ಯರಲ್ಲದ ಜನರಿಗೆ ಮೂರ್ಖತನದಂತೆ ತೋರುತ್ತದೆ. 24 ದೇವರಿಂದ ಕರೆಯಲ್ಪಟ್ಟಿರುವ ಜನರು ಯೆಹೂದ್ಯರಾಗಿದ್ದರೂ ಯೆಹೂದ್ಯರಲ್ಲದವರಾಗಿದ್ದರೂ ಅವರಿಗೆ ಕ್ರಿಸ್ತನು ದೇವರ ಶಕ್ತಿಯಾಗಿದ್ದಾನೆ; ಮತ್ತು ದೇವರ ಜ್ಞಾನವಾಗಿದ್ದಾನೆ. 25 ದೇವರ ಮೂಢತನವು ಸಹ ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠವಾಗಿದೆ. ದೇವರ ಬಲಹೀನತೆಯು ಸಹ ಮನುಷ್ಯರ ಬಲಕ್ಕಿಂತಲೂ ಹೆಚ್ಚು ಶಕ್ತಿಯುತವಾಗಿದೆ.
26 ಸಹೋದರ ಸಹೋದರಿಯರೇ, ದೇವರು ನಿಮ್ಮನ್ನು ಕರೆದಾಗ ನೀವು ಹೇಗಿದ್ದಿರಿ ಎಂದು ಜ್ಞಾಪಿಸಿಕೊಳ್ಳಿರಿ. ಲೋಕದ ಎಣಿಕೆಯಲ್ಲಿ ನಿಮ್ಮಲ್ಲಿ ಅನೇಕರು ಜ್ಞಾನಿಗಳಾಗಿರಲಿಲ್ಲ; ಅಧಿಕಾರಿಗಳಾಗಿರಲಿಲ್ಲ; ಪ್ರಾಮುಖ್ಯವಾದ ಕುಟುಂಬಗಳಿಗೆ ಸೇರಿದವರಾಗಿರಲಿಲ್ಲ. 27 ಆದರೆ ದೇವರು ಈ ಲೋಕದ ಜ್ಞಾನಿಗಳನ್ನು ನಾಚಿಕೆಪಡಿಸುವುದಕ್ಕಾಗಿ ಮೂಢರನ್ನು ಆರಿಸಿಕೊಂಡಿದ್ದಾನೆ; ಬಲಿಷ್ಠರನ್ನು ನಾಚಿಕೆಪಡಿಸುವುದಕ್ಕಾಗಿ ಬಲಹೀನರನ್ನು ಆರಿಸಿಕೊಂಡಿದ್ದಾನೆ. 28 ಲೋಕವು ಯಾವುದನ್ನು ಮುಖ್ಯವಲ್ಲವೆಂದು ಯೋಚಿಸುತ್ತದೆಯೋ ಯಾವುದನ್ನು ದ್ವೇಷಿಸುತ್ತದೆಯೋ ಮತ್ತು ನಿಷ್ಪ್ರಯೋಜಕವೆಂದು ಪರಿಗಣಿಸುತ್ತದೆಯೋ ಅದನ್ನು ದೇವರು ಆರಿಸಿಕೊಂಡನು. ಲೋಕವು ಯಾವುದನ್ನು ಮುಖ್ಯವೆಂದು ಯೋಚಿಸುತ್ತದೊ ಅದನ್ನು ನಾಶಪಡಿಸಲು ದೇವರು ಹೀಗೆ ಮಾಡಿದನು. 29 ಹೀಗಿರಲು ದೇವರ ಮುಂದೆ ಹೆಮ್ಮೆಪಡಲು ಯಾರಿಗೂ ಆಸ್ಪದವಿಲ್ಲ. 30 ನಿಮ್ಮನ್ನು ಕ್ರಿಸ್ತ ಯೇಸುವಿನಲ್ಲಿ ಒಂದು ಭಾಗವನ್ನಾಗಿ ಮಾಡಿದಾತನು ದೇವರೇ. ಕ್ರಿಸ್ತನು ನಮಗಾಗಿ ದೇವರಿಂದ ಬಂದ ಜ್ಞಾನವಾಗಿದ್ದಾನೆ. ನಾವು ನೀತಿವಂತರಾಗಿರುವುದಕ್ಕೆ, ಪಾಪದಿಂದ ಬಿಡುಗಡೆಯಾಗಿರುವುದಕ್ಕೆ ಮತ್ತು ಪವಿತ್ರರಾಗಿರುವುದಕ್ಕೆ ಕ್ರಿಸ್ತನೇ ಕಾರಣನಾಗಿದ್ದಾನೆ. 31 ಆದ್ದರಿಂದ ಪವಿತ್ರ ಗ್ರಂಥವು ಹೇಳುವಂತೆ, “ಹೆಮ್ಮೆಪಡುವವನು ಪ್ರಭುವಿನಲ್ಲಿ ಮಾತ್ರ ಹೆಮ್ಮೆಪಡಬೇಕು.”
Kannada Holy Bible: Easy-to-Read Version. All rights reserved. © 1997 Bible League International