M’Cheyne Bible Reading Plan
ಯಾಕೋಬನು ಬೆನ್ಯಾಮೀನನನ್ನು ಈಜಿಪ್ಟಿಗೆ ಕಳುಹಿಸಲು ಒಪ್ಪಿದ್ದು
43 ಬರಗಾಲವು ದೇಶದಲ್ಲಿ ತುಂಬ ಭೀಕರವಾಗಿತ್ತು. 2 ಅವರು ಈಜಿಪ್ಟಿನಿಂದ ತಂದಿದ್ದ ದವಸಧಾನ್ಯಗಳನ್ನೆಲ್ಲ ಊಟ ಮಾಡಿದರು. ದವಸಧಾನ್ಯಗಳು ಮುಗಿದು ಹೋದಾಗ ಯಾಕೋಬನು, ತನ್ನ ಗಂಡುಮಕ್ಕಳಿಗೆ, “ಈಜಿಪ್ಟಿಗೆ ಮತ್ತೆ ಹೋಗಿ ನಮಗೆ ಊಟಕ್ಕೆ ದವಸಧಾನ್ಯಗಳನ್ನು ಕೊಂಡುಕೊಂಡು ಬನ್ನಿ” ಎಂದು ಹೇಳಿದನು.
3 ಯೆಹೂದನು ಯಾಕೋಬನಿಗೆ, “ಆ ದೇಶದ ರಾಜ್ಯಪಾಲನು ನಮಗೆ ಎಚ್ಚರಿಕೆ ಕೊಟ್ಟಿದ್ದಾನೆ. ಅವನು, ‘ನೀವು ನಿಮ್ಮ ಸಹೋದರನನ್ನು ನನ್ನ ಬಳಿಗೆ ಕರೆದುಕೊಂಡು ಬಾರದೆ ನನ್ನನ್ನು ಭೇಟಿಯಾಗಕೂಡದು’ ಎಂದು ಹೇಳಿದ್ದಾನೆ. 4 ನೀನು ನಮ್ಮೊಡನೆ ಬೆನ್ಯಾಮೀನನನ್ನು ಕಳುಹಿಸಿದರೆ, ನಾವು ಹೋಗಿ ದವಸಧಾನ್ಯಗಳನ್ನು ಕೊಂಡುಕೊಂಡು ಬರುವೆವು. 5 ಆದರೆ ಬೆನ್ಯಾಮೀನನನ್ನು ಕಳುಹಿಸದಿದ್ದರೆ, ನಾವು ಹೋಗುವುದಿಲ್ಲ; ಆ ಮನುಷ್ಯನು ನಮಗೆ ಬೆನ್ಯಾಮೀನನಿಲ್ಲದೆ ಬರಕೂಡದೆಂದು ಎಚ್ಚರಿಕೆ ಕೊಟ್ಟಿದ್ದಾನೆ” ಅಂದನು.
6 ಇಸ್ರೇಲನು, “ನಿಮಗೆ ಮತ್ತೊಬ್ಬ ಸಹೋದರನಿರುವುದಾಗಿ ನೀವು ಆ ಮನುಷ್ಯನಿಗೆ ಯಾಕೆ ಹೇಳಿದಿರಿ? ನೀವು ಅಂಥ ಕೆಟ್ಟದ್ದನ್ನು ಯಾಕೆ ಮಾಡಿದಿರಿ?” ಎಂದು ಕೇಳಿದನು.
7 ಸಹೋದರರು, “ಆ ಮನುಷ್ಯನು ನಮ್ಮ ವಿಷಯವಾಗಿಯೂ ನಮ್ಮ ಕುಟುಂಬದ ವಿಷಯವಾಗಿಯೂ ತಿಳಿದುಕೊಳ್ಳಲು ಸೂಕ್ಷ್ಮವಾಗಿ ಪ್ರಶ್ನೆಗಳನ್ನು ಕೇಳಿದನು. ಅವನು ನಮಗೆ, ‘ನಿಮ್ಮ ತಂದೆಯು ಇನ್ನೂ ಜೀವಂತವಾಗಿರುವನೇ? ನಿಮಗೆ ಮನೆಯಲ್ಲಿ ಮತ್ತೊಬ್ಬ ಸಹೋದರನಿರುವನೇ?’ ಎಂದು ಕೇಳಿದನು. ನಾವು ಅವನ ಪ್ರಶ್ನೆಗಳಿಗೆ ಮಾತ್ರ ಉತ್ತರಕೊಟ್ಟೆವು. ನಮ್ಮ ಸಹೋದರನನ್ನು ತನ್ನ ಬಳಿಗೆ ಕರೆದುಕೊಂಡು ಬರಬೇಕೆಂದು ಅವನು ಹೇಳುತ್ತಾನೆಂದು ನಮಗೆ ತಿಳಿದಿರಲಿಲ್ಲ” ಎಂದು ಹೇಳಿದರು.
8 ಆಮೇಲೆ ಯೆಹೂದನು ತನ್ನ ತಂದೆಯಾದ ಇಸ್ರೇಲನಿಗೆ, “ನನ್ನೊಂದಿಗೆ ಬೆನ್ಯಾಮೀನನನ್ನು ಕಳುಹಿಸಿಕೊಡು. ನಾನು ಅವನನ್ನು ನೋಡಿಕೊಳ್ಳುವೆನು. ನಾವು ಈಜಿಪ್ಟಿಗೆ ಹೋಗಿ ಆಹಾರವನ್ನು ತರಬೇಕು. ಇಲ್ಲವಾದರೆ ನಾವೂ ಸಾಯುವೆವು, ನಮ್ಮ ಮಕ್ಕಳೂ ಸಾಯುವರು. 9 ಅವನು ಸುರಕ್ಷಿತವಾಗಿರುವಂತೆ ನಾನು ನೋಡಿಕೊಳ್ಳುವೆನು. ನಾನು ಅವನಿಗೆ ಜವಾಬ್ದಾರನಾಗಿರುತ್ತೇನೆ. ನಾನು ಅವನನ್ನು ನಿನ್ನ ಬಳಿಗೆ ಮತ್ತೆ ಕರೆದುಕೊಂಡು ಬರದಿದ್ದರೆ, ನೀನು ಸದಾಕಾಲ ನನ್ನನ್ನು ದೂಷಿಸಬಹುದು. 10 ಮೊದಲೇ ನೀನು ನಮ್ಮನ್ನು ಕಳುಹಿಸಿಕೊಟ್ಟಿದ್ದರೆ, ಈಗಾಗಲೇ ಎರಡು ಸಲ ಆಹಾರವನ್ನು ತೆಗೆದುಕೊಂಡು ಬರಬಹುದಾಗಿತ್ತು” ಎಂದು ಹೇಳಿದನು.
11 ಅದಕ್ಕೆ ಅವರ ತಂದೆಯಾದ ಇಸ್ರೇಲನು, “ಇದು ನಿಜವಾಗಿಯೂ ಸತ್ಯವಾಗಿದ್ದರೆ, ನಿನ್ನೊಂದಿಗೆ ಬೆನ್ಯಾಮೀನನನ್ನು ಕರೆದುಕೊಂಡು ಹೋಗು. ಆದರೆ ರಾಜ್ಯಪಾಲನಿಗೆ ಶ್ರೇಷ್ಠವಾದ ಕೆಲವು ಉಡುಗೊರೆಗಳನ್ನು ತೆಗೆದುಕೊಂಡು ಹೋಗಿ. ನಮ್ಮ ನಾಡಿನಲ್ಲಿ ದೊರಕುವ ಜೇನು, ಆಕ್ರೋಡು, ಬಾದಾಮಿ, ಹಾಲುಮಡ್ಡಿ ಮತ್ತು ಗೋಲರಸ ಇವುಗಳನ್ನು ತೆಗೆದುಕೊಳ್ಳಿ. 12 ಈ ಸಲ ಎರಡರಷ್ಟು ಹಣವನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ. ಕಳೆದ ಸಲ ನೀವು ಪಾವತಿ ಮಾಡಿದ್ದರೂ ಹಿಂತಿರುಗಿಸಲಾದ ಹಣವನ್ನು ತೆಗೆದುಕೊಂಡು ಹೋಗಿ. ಒಂದುವೇಳೆ ರಾಜ್ಯಪಾಲನು ತಪ್ಪು ಮಾಡಿದ್ದಿರಬೇಕು. 13 ಬೆನ್ಯಾಮೀನನನ್ನು ಕರೆದುಕೊಂಡು ಆ ಮನುಷ್ಯನ ಬಳಿಗೆ ಹಿಂತಿರುಗಿ ಹೋಗಿರಿ. 14 ನೀವು ರಾಜ್ಯಪಾಲನ ಮುಂದೆ ನಿಂತುಕೊಂಡಾಗ ಸರ್ವಶಕ್ತನಾದ ದೇವರು ನಿಮಗೆ ಸಹಾಯ ಮಾಡುವಂತೆ ನಾನು ಪ್ರಾರ್ಥಿಸುತ್ತೇನೆ. ಬೆನ್ಯಾಮೀನನನ್ನೂ ಸಿಮೆಯೋನನನ್ನೂ ಕಳುಹಿಸಿಕೊಡುವಂತೆ ಮತ್ತು ನೀವು ಸುರಕ್ಷಿತವಾಗಿ ಮರಳಿಬರುವಂತೆ ನಾನು ಪ್ರಾರ್ಥಿಸುತ್ತೇನೆ. ಇಲ್ಲವಾದರೆ, ನನ್ನ ಮಗನನ್ನು ಕಳೆದುಕೊಂಡು ನಾನು ಮತ್ತೆ ದುಃಖಿತನಾಗುವೆ” ಎಂದು ಹೇಳಿದನು.
15 ಆದ್ದರಿಂದ ಸಹೋದರರು ರಾಜ್ಯಪಾಲನಿಗೆ ಕೊಡಲು ಉಡುಗೊರೆಗಳನ್ನು ತೆಗೆದುಕೊಂಡರು; ಮೊದಲನೆ ಸಲ ತೆಗೆದುಕೊಂಡು ಹೋಗಿದ್ದ ಹಣಕ್ಕಿಂತ ಎರಡರಷ್ಟು ಹೆಚ್ಚಾಗಿ ತೆಗೆದುಕೊಂಡರು. ಬೆನ್ಯಾಮೀನನು ಸಹೋದರರೊಂದಿಗೆ ಈಜಿಪ್ಟಿಗೆ ಹೋದನು.
ಯೋಸೇಫನು ಸಹೋದರರನ್ನು ಮನೆಗೆ ಆಹ್ವಾನಿಸಿದ್ದು
16 ಸಹೋದರರೊಂದಿಗೆ ಬೆನ್ಯಾಮೀನನು ಇರುವುದನ್ನು ಕಂಡ ಯೋಸೇಫನು ತನ್ನ ಸೇವಕನಿಗೆ, “ಈ ಜನರನ್ನು ನನ್ನ ಮನೆಯೊಳಗೆ ಕರೆದುಕೊಂಡು ಹೋಗು; ಕುರಿಯನ್ನು ಕೊಯ್ದು ಅಡಿಗೆ ಮಾಡು. ಈ ಜನರು ಈ ಹೊತ್ತು ಮಧ್ಯಾಹ್ನ ನನ್ನೊಂದಿಗೆ ಊಟಮಾಡುವರು” ಎಂದು ಹೇಳಿದನು. 17 ಅಂತೆಯೇ ಆ ಸೇವಕನು ಸಹೋದರರನ್ನು ಮನೆಯೊಳಗೆ ಕರೆದುಕೊಂಡು ಹೋದನು.
18 ಆಗ ಸಹೋದರರಿಗೆ ಭಯವಾಯಿತು. ಅವರು, “ಕಳೆದ ಸಲ ನಮ್ಮ ಚೀಲಗಳಿಗೆ ಮತ್ತೆ ಹಾಕಿದ್ದ ಹಣದ ಕಾರಣದಿಂದಾಗಿ ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ನಮ್ಮನ್ನು ತಪ್ಪಿತಸ್ಥರೆಂದು ನಿರ್ಣಯಿಸಿ ನಮ್ಮ ಕತ್ತೆಗಳನ್ನು ವಶಮಾಡಿಕೊಳ್ಳುವರು; ನಮ್ಮನ್ನೂ ಗುಲಾಮರನ್ನಾಗಿ ಮಾಡಿಕೊಳ್ಳುವರು” ಎಂದು ಮಾತಾಡಿಕೊಂಡರು.
19 ಆದ್ದರಿಂದ ಸಹೋದರರು ಯೋಸೇಫನ ಮನೆಯ ಮೇಲ್ವಿಚಾರಕನಾದ ಸೇವಕನ ಬಳಿಗೆ ಹೋಗಿ ಪ್ರವೇಶದ್ವಾರದ ಬಳಿಯಲ್ಲಿ ಅವನೊಂದಿಗೆ ಮಾತಾಡಿದರು. 20 ಅವರು, “ಸ್ವಾಮೀ, ನಾವು ಪ್ರಮಾಣಮಾಡಿ ಹೇಳುತ್ತೇವೆ. ಇದು ಸತ್ಯ. ಕಳೆದ ಸಲ ನಾವು ಆಹಾರವನ್ನು ಕೊಂಡುಕೊಳ್ಳಲು ಬಂದಿದ್ದೆವು. 21-22 ಮನೆಗೆ ಹೋಗುವಾಗ ದಾರಿಯಲ್ಲಿ ನಾವು ನಮ್ಮ ಚೀಲಗಳನ್ನು ಬಿಚ್ಚಿದಾಗ ಪ್ರತಿಯೊಂದು ಚೀಲದಲ್ಲಿಯೂ ನಾವು ಪಾವತಿಮಾಡಿದ್ದ ಹಣವನ್ನು ಕಂಡೆವು. ಆ ಹಣವು ಅಲ್ಲಿಗೆ ಹೇಗೆ ಬಂತೋ ನಮಗೆ ಗೊತ್ತಿಲ್ಲ. ಆದರೆ ಆ ಹಣವನ್ನು ನಿಮಗೆ ಕೊಡುವುದಕ್ಕಾಗಿ ನಮ್ಮೊಂದಿಗೆ ತೆಗೆದುಕೊಂಡು ಬಂದಿದ್ದೇವೆ. ಈ ಸಲ ನಾವು ಖರೀದಿ ಮಾಡಬೇಕೆಂದಿರುವ ಆಹಾರಕ್ಕೆ ಕೊಡಲು ಹೆಚ್ಚು ಹಣವನ್ನು ತಂದಿದ್ದೇವೆ” ಎಂದು ಹೇಳಿದರು.
23 ಅದಕ್ಕೆ ಸೇವಕನು, “ಭಯಪಡಬೇಡಿ, ಚಿಂತಿಸಬೇಡಿ. ನಿಮ್ಮ ದೇವರೂ ನಿಮ್ಮ ತಂದೆಯ ದೇವರೂ ಹಣವನ್ನು ಉಡುಗೊರೆಯಾಗಿ ನಿಮ್ಮ ಚೀಲಗಳಲ್ಲಿ ಇಟ್ಟಿದ್ದಿರಬೇಕು. ಕಳೆದ ಸಲ ನೀವು ದವಸಧಾನ್ಯಗಳಿಗಾಗಿ ಹಣ ಪಾವತಿ ಮಾಡಿದ್ದು ನನಗೆ ನೆನಪಿದೆ” ಎಂದು ಹೇಳಿದನು.
ಬಳಿಕ ಆ ಸೇವಕನು ಸಿಮೆಯೋನನನ್ನು ಸೆರೆಮನೆಯಿಂದ ಕರೆತಂದನು. 24 ಸೇವಕನು ಅವರನ್ನು ಯೋಸೇಫನ ಮನೆಯೊಳಗೆ ಕರೆದುಕೊಂಡು ಹೋಗಿ ಅವರಿಗೆ ನೀರನ್ನು ಕೊಟ್ಟನು. ಅವರು ತಮ್ಮ ಕಾಲುಗಳನ್ನು ತೊಳೆದುಕೊಂಡರು. ಬಳಿಕ ಅವನು ಅವರ ಕತ್ತೆಗಳಿಗೆ ಆಹಾರವನ್ನು ಹಾಕಿದನು.
25 ತಾವು ಯೋಸೇಫನೊಂದಿಗೆ ಊಟ ಮಾಡುವುದಾಗಿ ಸಹೋದರರಿಗೆ ತಿಳಿಯಿತು. ಆದ್ದರಿಂದ ಅವರು ಅವನಿಗೆ ಕೊಡಲು ತಮ್ಮ ಉಡುಗೊರೆಗಳನ್ನು ಮಧ್ಯಾಹ್ನದವರೆಗೆ ಸಿದ್ಧಪಡಿಸಿದರು.
26 ಯೋಸೇಫನು ಮನೆಗೆ ಬಂದಾಗ, ಸಹೋದರರು ತಾವು ತಂದಿದ್ದ ಉಡುಗೊರೆಗಳನ್ನು ಅವನಿಗೆ ಕೊಟ್ಟರು. ಬಳಿಕ ಅವರು ನೆಲದವರೆಗೆ ಬಾಗಿ ನಮಸ್ಕರಿಸಿದರು.
27 ಯೋಸೇಫನು ಅವರ ಯೋಗಕ್ಷೇಮವನ್ನು ವಿಚಾರಿಸಿದನು. ಯೋಸೇಫನು “ನೀವು ನನಗೆ ತಿಳಿಸಿದ ನಿಮ್ಮ ವೃದ್ಧನಾದ ತಂದೆ ಕ್ಷೇಮವಾಗಿದ್ದಾನೆಯೇ? ಇನ್ನೂ ಜೀವಂತವಾಗಿರುವನೇ?” ಎಂದು ಕೇಳಿದನು.
28 ಸಹೋದರರು, “ಸ್ವಾಮೀ, ನಮ್ಮ ತಂದೆ ಕ್ಷೇಮವಾಗಿದ್ದಾನೆ. ಅವನು ಇನ್ನೂ ಜೀವಂತವಾಗಿದ್ದಾನೆ” ಎಂದು ಹೇಳಿದನು. ಬಳಿಕ ಅವರು ಮತ್ತೆ ಯೋಸೇಫನಿಗೆ ಅಡ್ಡಬಿದ್ದರು.
29 ಬಳಿಕ ಯೋಸೇಫನು ತನ್ನ ಸಹೋದರನಾದ ಬೆನ್ಯಾಮೀನನನ್ನು ನೋಡಿದನು. (ಬೆನ್ಯಾಮೀನ ಮತ್ತು ಯೋಸೇಫ ಒಂದೇ ತಾಯಿಯ ಮಕ್ಕಳು.) ಯೋಸೇಫನು, “ನೀವು ನನಗೆ ತಿಳಿಸಿದ ನಿಮ್ಮ ಕಿರಿಯ ತಮ್ಮನು ಇವನೋ?” ಎಂದು ಕೇಳಿದನು. ಆಮೇಲೆ ಯೋಸೇಫನು ಬೆನ್ಯಾಮೀನನಿಗೆ “ಮಗನೇ, ದೇವರು ನಿನಗೆ ಒಳ್ಳೆಯದನ್ನು ಮಾಡಲಿ” ಎಂದು ಹೇಳಿದನು.
30 ಯೋಸೇಫನು ತನ್ನ ತಮ್ಮನಾದ ಬೆನ್ಯಾಮೀನನನ್ನು ಬಹಳವಾಗಿ ಪ್ರೀತಿಸುತ್ತಿದ್ದ ಕಾರಣ ಆನಂದದಿಂದ ಅವನ ಕಣ್ಣಲ್ಲಿ ನೀರು ಉಕ್ಕೇರಿ ಬಂದದ್ದರಿಂದ ಕೋಣೆಯೊಳಗೆ ಹೋಗಿ ಕಣ್ಣೀರಿಟ್ಟನು. 31 ಬಳಿಕ ಯೋಸೇಫನು ತನ್ನ ಮುಖವನ್ನು ತೊಳೆದುಕೊಂಡು ಮತ್ತು ಮನಸ್ಸನ್ನು ಬಿಗಿಹಿಡಿದುಕೊಂಡು ಬಂದು, “ಊಟ ಬಡಿಸಿರಿ” ಎಂದು ಅಪ್ಪಣೆಕೊಟ್ಟನು.
32 ಯೋಸೇಫನೊಬ್ಬನೇ ಒಂದು ಮೇಜಿನಲ್ಲಿ ಊಟ ಮಾಡಿದನು. ಅವನ ಸಹೋದರರು ಒಟ್ಟಾಗಿ ಮತ್ತೊಂದು ಮೇಜಿನಲ್ಲಿ ಊಟ ಮಾಡಿದರು. ಈಜಿಪ್ಟಿನವರು ಬೇರೊಂದು ಮೇಜಿನಲ್ಲಿ ಊಟ ಮಾಡಿದರು. ಇಬ್ರಿಯ ಜನರೊಂದಿಗೆ ಊಟ ಮಾಡುವುದು ತಪ್ಪೆಂಬುದು ಅವರ ನಂಬಿಕೆಯಾಗಿತ್ತು. 33 ಯೋಸೇಫನ ಎದುರಿನ ಸಾಲಿನಲ್ಲಿ ಕುಳಿತುಕೊಳ್ಳಲು ಯೋಸೇಫನ ಸಹೋದರರಿಗೆ ಹಿರಿಯವನಿಂದ ಮೊದಲುಗೊಂಡು ಕಿರಿಯವನವರೆಗೆ ಕ್ರಮವಾಗಿ ಸ್ಥಳವನ್ನು ಗೊತ್ತುಪಡಿಸಲಾಗಿತ್ತು. ಆದ್ದರಿಂದ ಸಹೋದರರೆಲ್ಲಾ ಅತ್ಯಾಶ್ಚರ್ಯದಿಂದ ಒಬ್ಬರನ್ನೊಬ್ಬರು ನೋಡತೊಡಗಿದರು. 34 ಸೇವಕರು ಯೋಸೇಫನ ಮೇಜಿನಿಂದ ಊಟವನ್ನು ತೆಗೆದುಕೊಂಡು ಅವರಿಗೆ ಬಡಿಸುತ್ತಿದ್ದರು. ಆದರೆ ಸೇವಕರು ಬೆನ್ಯಾಮೀನನಿಗೆ ಬೇರೆಯವರಿಗಿಂತ ಐದರಷ್ಟು ಹೆಚ್ಚಾಗಿ ಕೊಟ್ಟರು. ಸಹೋದರರು ಯಥೇಚ್ಛವಾಗಿ ಊಟ ಮಾಡಿದರು.
ದೇವಾಲಯದ ಮುಂದಿನ ವಿನಾಶ
(ಮತ್ತಾಯ 24:1-44; ಲೂಕ 21:5-33)
13 ಯೇಸು ದೇವಾಲಯದಿಂದ ಹೊರಡುತ್ತಿರಲು ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ, “ಗುರುವೇ, ನೋಡು! ಈ ದೇವಾಲಯ ಎಂಥಾ ದೊಡ್ಡ ಕಲ್ಲುಗಳಿಂದ ಮಾಡಿದ ಎಂಥಾ ಸುಂದರ ಕಟ್ಟಡಗಳನ್ನು ಹೊಂದಿದೆ” ಎಂದನು.
2 ಯೇಸು, “ನೀವು ಈ ದೊಡ್ಡ ಕಟ್ಟಡಗಳನ್ನು ನೋಡುತ್ತಿರುವಿರಾ? ಇವುಗಳನ್ನೆಲ್ಲ ನಾಶಪಡಿಸಲಾಗುವುದು. ಪ್ರತಿಯೊಂದು ಕಲ್ಲನ್ನೂ ನೆಲಕ್ಕೆ ಕೆಡವಲಾಗುವುದು. ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಉಳಿಯುವುದಿಲ್ಲ” ಎಂದನು.
3 ನಂತರ ಯೇಸು ಆಲಿವ್ ಮರಗಳ ಗುಡ್ಡದ ಮೇಲೆ, ಪೇತ್ರ, ಯಾಕೋಬ, ಯೋಹಾನ ಮತ್ತು ಅಂದ್ರೆಯರ ಸಂಗಡ ಕುಳಿತಿದ್ದನು. ಅವರೆಲ್ಲರಿಗೂ ಅಲ್ಲಿಂದ ದೇವಾಲಯ ಕಾಣುತಿತ್ತು. 4 ಆ ಶಿಷ್ಯರು ಯೇಸುವಿಗೆ, “ಈ ಸಂಗತಿಗಳೆಲ್ಲಾ ಯಾವಾಗ ಸಂಭವಿಸುತ್ತವೆ? ಅವುಗಳು ನಡೆಯುವ ಕಾಲಕ್ಕೆ ಸೂಚನೆಯೇನು?” ಎಂದು ಕೇಳಿದರು.
5 ಅದಕ್ಕೆ ಯೇಸು, “ಎಚ್ಚರಿಕೆಯಿಂದಿರಿ! ನಿಮಗೆ ಮೋಸ ಮಾಡಲು ಯಾರಿಗೂ ಆಸ್ಪದ ಕೊಡಬೇಡಿ. 6 ಅನೇಕ ಜನರು ಬಂದು, ‘ನಾನೇ ಕ್ರಿಸ್ತನು; ನಾನೇ ಕ್ರಿಸ್ತನು’ ಎನ್ನುತ್ತಾ ಅನೇಕ ಜನರನ್ನು ಮೋಸಗೊಳಿಸುತ್ತಾರೆ. 7 ಸಮೀಪದಲ್ಲಿ ನಡೆಯುತ್ತಿರುವ ಯುದ್ಧಗಳ ಶಬ್ಧವನ್ನೂ ಬಹುದೂರದಲ್ಲಿ ನಡೆಯುತ್ತಿರುವ ಯುದ್ಧಗಳ ಬಗ್ಗೆ ಸುದ್ದಿಯನ್ನೂ ನೀವು ಕೇಳುವಿರಿ. ಆದರೆ ಭಯಪಡಬೇಡಿ. ಅಂತ್ಯಕಾಲ ಬರುವುದಕ್ಕಿಂತ ಮುಂಚೆ ಈ ಸಂಗತಿಗಳು ನಡೆಯಲೇಬೇಕು. 8 ಜನಾಂಗಗಳು ಇತರ ಜನಾಂಗಗಳ ವಿರುದ್ಧ ಹೋರಾಡುತ್ತವೆ. ರಾಜ್ಯಗಳು ಇತರ ರಾಜ್ಯಗಳ ವಿರುದ್ಧ ಹೋರಾಡುತ್ತವೆ. ಜನರಿಗೆ ತಿನ್ನಲು ಏನೂ ಆಹಾರವಿಲ್ಲದಂಥ ಕಾಲ ಬರುತ್ತದೆ. ಅನೇಕ ಸ್ಥಳಗಳಲ್ಲಿ ಭೂಕಂಪಗಳಾಗುತ್ತವೆ. ಈ ಸಂಗತಿಗಳು ಪ್ರಸವವೇದನೆಯಂತಿರುತ್ತವೆ.
9 “ಎಚ್ಚರಿಕೆಯಿಂದಿರಿ! ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರು ನಿಮ್ಮನ್ನು ಬಂಧಿಸಿ, ನ್ಯಾಯವಿಚಾರಣೆಗೆ ಕೊಂಡೊಯ್ಯುವರು. ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು. ರಾಜರ ಮತ್ತು ಅಧಿಪತಿಗಳ ಮುಂದೆ ನಿಮ್ಮನ್ನು ನಿಲ್ಲಿಸಿ ನನ್ನ ವಿಷಯದಲ್ಲಿ ಸಾಕ್ಷಿಕೊಡಲು ನಿಮ್ಮನ್ನು ಬಲವಂತಪಡಿಸುವರು. 10 ಈ ಸಂಗತಿಗಳು ಸಂಭವಿಸುವುದಕ್ಕಿಂತ ಮೊದಲು ನೀವು ಜನರಿಗೆಲ್ಲ ಸುವಾರ್ತೆಯನ್ನು ತಿಳಿಸಬೇಕು. 11 ನೀವು ಬಂಧಿಸಲ್ಪಟ್ಟು ನ್ಯಾಯವಿಚಾರಣೆಗೆ ಒಳಗಾಗುವಿರಿ. ಆದರೆ ನೀವು ಏನು ಹೇಳಬೇಕೆಂಬುದರ ಬಗ್ಗೆ ಯೋಚಿಸಬೇಡಿ, ಆ ಸಮಯದಲ್ಲಿ ದೇವರು ನಿಮಗೆ ತಿಳಿಸಿಕೊಡುವುದನ್ನೇ ಹೇಳಿರಿ. ಆಗ ಮಾತಾಡುವವರು ನೀವಲ್ಲ, ಪವಿತ್ರಾತ್ಮನೇ.
12 “ಸಹೋದರರು ಸಹೋದರರನ್ನೇ, ತಂದೆಗಳು ತಮ್ಮ ಸ್ವಂತ ಮಕ್ಕಳನ್ನೇ ಮರಣಕ್ಕೆ ಗುರಿಮಾಡುವರು. ಮಕ್ಕಳು ತಮ್ಮ ಸ್ವಂತ ತಂದೆತಾಯಂದಿರ ವಿರುದ್ಧ ತಿರುಗಿಬಿದ್ದು ಅವರನ್ನು ಕೊಲ್ಲಿಸುವರು. 13 ನೀವು ನನ್ನನ್ನು ಹಿಂಬಾಲಿಸುವ ಕಾರಣ ಜನರೆಲ್ಲರೂ ನಿಮ್ಮನ್ನು ದ್ವೇಷಿಸುವರು. ಆದರೆ ಕೊನೆಯವರೆಗೆ ತಾಳುವವನು ರಕ್ಷಣೆ ಹೊಂದುವನು.
14 “ವಿನಾಶವನ್ನು ಉಂಟುಮಾಡುವ ಭಯಂಕರ ವಸ್ತುವನ್ನು ನೀವು ನೋಡುತ್ತೀರಿ. ಇದು ನಿಂತುಕೊಳ್ಳಬಾರದಂಥ ಸ್ಥಳದಲ್ಲಿ ನಿಂತಿರುವುದನ್ನು ನೀವು ನೋಡುವಿರಿ. (ಇದನ್ನು ಓದುವವನು ಇದರ ಅರ್ಥವನ್ನು ತಿಳಿದುಕೊಳ್ಳಬೇಕು) ಆ ಸಮಯದಲ್ಲಿ ಜುದೇಯದಲ್ಲಿರುವ ಜನರು ಬೆಟ್ಟಗಳಿಗೆ ಓಡಿಹೋಗಬೇಕು. 15 ಮಾಳಿಗೆಯ ಮೇಲಿರುವವನು ಕೆಳಗಿಳಿದು ಮನೆಯೊಳಗಿಂದ ಏನನ್ನೂ ತೆಗೆದುಕೊಳ್ಳದೆ ಓಡಿಹೋಗಲಿ. 16 ಹೊಲದಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳಲು ಹಿಂತಿರುಗದಿರಲಿ.
17 “ಆ ಸಮಯವು ಗರ್ಭಿಣಿ ಸ್ತ್ರೀಯರಿಗೆ ಹಾಗೂ ಎಳೆಕೂಸುಗಳನ್ನು ಹೊಂದಿರುವ ತಾಯಂದಿರಿಗೆ ಬಹಳ ಸಂಕಟಕರವಾಗಿರುತ್ತದೆ. 18 ಈ ಸಂಗತಿಗಳು ಚಳಿಗಾಲದಲ್ಲಿ ನಡೆಯದಂತೆ ಪ್ರಾರ್ಥನೆ ಮಾಡಿರಿ. 19 ಏಕೆಂದರೆ ಆ ದಿನಗಳು ಬಹಳ ಸಂಕಟದಿಂದ ತುಂಬಿರುತ್ತವೆ. ದೇವರು ಈ ಲೋಕವನ್ನು ಸೃಷ್ಟಿಮಾಡಿದಂದಿನಿಂದ ಅಂಥ ಸಂಕಟ ಇದುವರೆಗೂ ಆಗಿಲ್ಲ, ಇನ್ನು ಮುಂದೆಯೂ ಆಗುವುದಿಲ್ಲ. 20 ದೇವರು ಆ ಭಯಂಕರ ಕಾಲವನ್ನು ಕಡಿಮೆಗೊಳಿಸಲು ನಿರ್ಧರಿಸಿದ್ದಾನೆ. ಇಲ್ಲವಾಗಿದ್ದರೆ, ಯಾವ ಮನುಷ್ಯನೂ ಬದುಕಿ ಉಳಿಯಲು ಸಾಧ್ಯವಿಲ್ಲ. ಆದರೆ ದೇವರು ತಾನು ಆರಿಸಿಕೊಂಡ ವಿಶೇಷ ಜನರಿಗೆ ಸಹಾಯ ಮಾಡಲು ಆ ಸಮಯವನ್ನು ಕಡಿಮೆ ಮಾಡುವನು.
21 “ಆ ಸಮಯದಲ್ಲಿ, ಯಾರಾದರೂ ನಿಮಗೆ ‘ಕ್ರಿಸ್ತನು ಅಲ್ಲಿದ್ದಾನೆ, ನೋಡು’ ಎನ್ನಬಹುದು. ಅಥವಾ ಇನ್ನೊಬ್ಬನು, ‘ಆತನು ಇಲ್ಲಿದ್ದಾನೆ’ ಎನ್ನಬಹುದು. ಆದರೆ ಅವರನ್ನು ನಂಬಬೇಡಿ. 22 ದೇವರು ಆರಿಸಿಕೊಂಡ ಜನರನ್ನು ಮೋಸಗೊಳಿಸುವುದಕ್ಕಾಗಿ ಸುಳ್ಳುಕ್ರಿಸ್ತರು ಮತ್ತು ಸುಳ್ಳುಪ್ರವಾದಿಗಳು ಬಂದು ಮಹಾಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡುತ್ತಾರೆ. 23 ಆದ್ದರಿಂದ ಎಚ್ಚರಿಕೆಯಿಂದಿರಿ, ಇದು ನಡೆಯುವ ಮುಂಚೆ ಇದೆಲ್ಲದರ ಬಗ್ಗೆ ನಿಮ್ಮನ್ನು ಎಚ್ಚರಿಸಿದ್ದೇನೆ.
24 “ಈ ಸಂಕಟವು ತೀರಿದ ಮೇಲೆ,
‘ಸೂರ್ಯನು ಕತ್ತಲಾಗುತ್ತಾನೆ.
ಚಂದ್ರನು ಬೆಳಕನ್ನು ಕೊಡುವುದಿಲ್ಲ.
25 ನಕ್ಷತ್ರಗಳು ಆಕಾಶದಿಂದ ಬೀಳುವವು
ಮತ್ತು ಆಕಾಶದಲ್ಲಿರುವ ಶಕ್ತಿಗಳು ನಡುಗುವವು.’[a]
26 “ಆಗ ಮನುಷ್ಯಕುಮಾರನು ಅಧಿಕಾರದಿಂದಲೂ ಮಹಾಮಹಿಮೆಯೊಡನೆಯೂ ಮೇಘಗಳಲ್ಲಿ ಬರುವುದನ್ನು ಜನರು ನೋಡುತ್ತಾರೆ. 27 ಮನುಷ್ಯಕುಮಾರನು ತನ್ನ ದೂತರನ್ನು ಭೂಮಿಯ ಎಲ್ಲಾ ಕಡೆಗೆ ಕಳುಹಿಸಿ ತಾನು ಆರಿಸಿಕೊಂಡ ಜನರನ್ನು ಭೂಮಿಯ ಕಟ್ಟಕಡೆಗಳಿಂದ ಒಟ್ಟುಗೂಡಿಸುವರು.
28 “ಅಂಜೂರದ ಮರವು ನಮಗೆ ಒಂದು ಪಾಠವನ್ನು ಕಲಿಸುತ್ತದೆ. ಅಂಜೂರದ ಮರದ ಕೊಂಬೆಗಳು ಹಸಿರಾಗಿ ಮೃದುವಾದಾಗ ಮತ್ತು ಹೊಸ ಎಲೆಗಳು ಬೆಳೆಯಲು ಪ್ರಾರಂಭಿಸಿದಾಗ, ಬೇಸಿಗೆಕಾಲ ಹತ್ತಿರವಾಯಿತೆಂದು ನೀವು ತಿಳಿದುಕೊಳ್ಳುತ್ತೀರಿ. 29 ಅಂತೆಯೇ ನಾನು ನಿಮಗೆ ಹೇಳಿದ ಈ ಸಂಗತಿಗಳು ನೆರವೇರುವುದನ್ನು ನೀವು ನೋಡುವಾಗ, ಸಮಯವು ಹತ್ತಿರವಾಗಿದೆಯೆಂದೂ ಬರಲು ಸಿದ್ಧವಾಗಿದೆಯೆಂದೂ ತಿಳಿದುಕೊಳ್ಳಿರಿ. 30 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಈ ಕಾಲದ ಜನರು ಇನ್ನೂ ಬದುಕಿರುವಾಗಲೇ ಈ ಎಲ್ಲಾ ಸಂಗತಿಗಳು ನಡೆಯುತ್ತವೆ. 31 ಭೂಮ್ಯಾಕಾಶಗಳು ನಾಶವಾಗುತ್ತವೆ. ಆದರೆ ನಾನು ಹೇಳಿದ ಮಾತುಗಳು ಎಂದೆಂದಿಗೂ ನಾಶವಾಗುವುದಿಲ್ಲ.
32 “ಆ ದಿನವಾಗಲಿ ಸಮಯವಾಗಲಿ ಯಾವಾಗ ಬರುತ್ತದೆಂಬುದು ಪರಲೋಕದಲ್ಲಿರುವ ಮಗನಿಗಾಗಲಿ ದೇವದೂತರಿಗಾಗಲಿ ತಿಳಿದಿಲ್ಲ. ತಂದೆಗೆ ಮಾತ್ರ ತಿಳಿದಿದೆ. 33 ಎಚ್ಚರಿಕೆಯಿಂದಿರಿ! ಯಾವಾಗಲೂ ಸಿದ್ಧರಾಗಿರಿ! ಆ ಸಮಯ ಯಾವಾಗ ಬರುತ್ತದೆಂದು ನಿಮಗೆ ತಿಳಿದಿಲ್ಲ.
34 “ತನ್ನ ಮನೆಯನ್ನು ಬಿಟ್ಟು ಪ್ರವಾಸಕ್ಕಾಗಿ ಹೋದ ಮನುಷ್ಯನಿಗೆ ಇದು ಹೋಲಿಕೆಯಾಗಿದೆ. ಅವನು ತನ್ನ ಮನೆಯನ್ನು ನೋಡಿಕೊಳ್ಳುವುದಕ್ಕಾಗಿ ಸೇವಕರಿಗೆ ಒಪ್ಪಿಸಿಕೊಟ್ಟನು. ಅವನು ಪ್ರತಿಯೊಬ್ಬ ಸೇವಕನಿಗೂ ಒಂದೊಂದು ವಿಶೇಷ ಕೆಲಸವನ್ನು ಕೊಟ್ಟು ದ್ವಾರಪಾಲಕನಿಗೆ, ‘ನೀನು ಯಾವಾಗಲೂ ಸಿದ್ಧವಾಗಿರು’ ಎಂದು ಹೇಳಿದನು. ಅಂತೆಯೇ ನಾನೂ ನಿಮಗೆ ಹೇಳುವುದೇನೆಂದರೆ, 35 ಯಾವಾಗಲೂ ಸಿದ್ಧವಾಗಿರಿ. ಮನೆಯ ಯಜಮಾನನು ಯಾವಾಗ ಹಿಂತಿರುಗಿ ಬರುವನೋ ನಿಮಗೆ ತಿಳಿದಿಲ್ಲ. ಅವನು ಮಧ್ಯಾಹ್ನದಲ್ಲಾಗಲಿ ಮಧ್ಯರಾತ್ರಿಯಲ್ಲಾಗಲಿ ಮುಂಜಾನೆಯಲ್ಲಾಗಲಿ ಸೂರ್ಯೋದಯದಲ್ಲಾಗಲಿ ಬರಬಹುದು. 36 ಯಜಮಾನನು ಬೇಗನೆ ಹಿಂತಿರುಗಿ ಬರಬಹುದು. ನೀವು ಯಾವಾಗಲೂ ಸಿದ್ಧವಾಗಿದ್ದರೆ, ಅವನು ಬಂದಾಗ ನೀವು ನಿದ್ರಿಸುತ್ತಿರುವುದಿಲ್ಲ. 37 ನಾನು ನಿಮಗೂ ಪ್ರತಿಯೊಬ್ಬರಿಗೂ ಹೇಳುವುದೇನೆಂದರೆ, ‘ಸಿದ್ಧರಾಗಿರಿ!’”
ಯೋಬನ ವಾದ
9 ಬಳಿಕ ಯೋಬನು ಪ್ರತ್ಯುತ್ತರವಾಗಿ ಹೀಗೆಂದನು:
2 “ಹೌದು, ನೀನು ಹೇಳಿದ್ದು ಸತ್ಯವೇ ಸರಿ!
ಆದರೆ ಮನುಷ್ಯನು ದೇವರ ದೃಷ್ಟಿಯಲ್ಲಿ ನೀತಿವಂತನಾಗಿರುವುದು ಹೇಗೆ?
3 ಒಬ್ಬನು ದೇವರೊಂದಿಗೆ ವಾದಿಸಬಯಸಿದರೆ,
ದೇವರ ಸಾವಿರ ಪ್ರಶ್ನೆಗಳಲ್ಲಿ ಮನುಷ್ಯನು ಒಂದಕ್ಕೂ ಉತ್ತರ ಕೊಡಲಾರನು.
4 ದೇವರ ಜ್ಞಾನವು ಅಗಾಧವಾದದ್ದು;
ಆತನ ಶಕ್ತಿಯು ಮಹತ್ವವಾದದ್ದು; ಯಾವನೂ ದೇವರಿಗೆ ವಿರೋಧವಾಗಿ ಜಯಗಳಿಸಲಾರನು.
5 ದೇವರು ಪರ್ವತಗಳನ್ನು ಅವುಗಳಿಗೇ ತಿಳಿಯದಂತೆ ಸರಿಸಿ ಕೋಪದಿಂದ ಅವುಗಳನ್ನು ಉರುಳಿಸುವನು.
6 ಆತನು ಭೂಮಿಯನ್ನು ಅದರ ಸ್ಥಳದೊಳಗಿಂದ ಕದಲಿಸುವನು;
ಅದರ ಅಸ್ತಿವಾರಗಳನ್ನು ನಡುಗಿಸುವನು.
7 ಆತನು ಆಜ್ಞಾಪಿಸಿದರೆ, ಆತನ ಆಜ್ಞೆಯಂತೆಯೇ ಸೂರ್ಯೋದಯವಾಗದು.
ನಕ್ಷತ್ರಗಳು ಪ್ರಕಾಶಿಸದಂತೆ ಆತನು ಅವುಗಳನ್ನು ಮುಚ್ಚಿಟ್ಟು ಮುದ್ರೆ ಹಾಕಬಲ್ಲನು.
8 ಆಕಾಶಮಂಡಲವನ್ನು ಸೃಷ್ಟಿಸಿದವನು ಆತನೇ.
ಆತನು ಭೋರ್ಗರೆಯುತ್ತಿರುವ ಸಮುದ್ರದ ಮೇಲೆ ನಡೆಯಬಲ್ಲನು.
9 “ಆತನೇ ಬೇರ್, ಒರೈಯನ್ ಮತ್ತು ಪ್ಲೈಯಡ್ಸ್[a] ಎಂಬ ನಕ್ಷತ್ರಸಮೂಹಗಳನ್ನು ಸೃಷ್ಟಿಮಾಡಿದನು.
ದಕ್ಷಿಣ ಆಕಾಶದಲ್ಲಿ ನಕ್ಷತ್ರವ್ಯೂಹಗಳನ್ನು ಸೃಷ್ಟಿಸಿದವನು ಆತನೇ.
10 ಗ್ರಹಿಸಲಶಕ್ಯವಾದ ಅದ್ಭುತಕಾರ್ಯಗಳನ್ನೂ
ಅಸಂಖ್ಯಾತವಾದ ಮಹತ್ಕಾರ್ಯಗಳನ್ನೂ ಆತನು ಮಾಡುವನು.
11 ದೇವರು ನನ್ನ ಸಮೀಪದಲ್ಲಿ ಹಾದುಹೋದರೂ ನನಗೆ ಕಾಣಿಸದು;
ನನ್ನ ಮುಂದೆ ಹೋದರೂ ನನಗೆ ತಿಳಿಯದು.
12 ದೇವರೇ ತೆಗೆದುಕೊಳ್ಳುವುದಾದರೆ, ಆತನನ್ನು ತಡೆಯಬಲ್ಲವರು ಯಾರು?
‘ನೀನು ಏನು ಮಾಡುತ್ತಿರುವೆ’ ಎಂದು ಆತನನ್ನು ಕೇಳುವವರು ಯಾರು?
13 ದೇವರು ತನ್ನ ಕೋಪವನ್ನು ತಡೆಹಿಡಿದುಕೊಳ್ಳುವುದಿಲ್ಲ.
ರಹಬನ ಸಹಾಯಕರು ಸಹ ದೇವರ ಮುಂದೆ ಭಯದಿಂದ ಅಡ್ಡಬೀಳುವರು.
14 ಆದ್ದರಿಂದ ನಾನು ದೇವರೊಂದಿಗೆ ವಾದ ಮಾಡಲಾರೆ.
ಆತನಿಗೆ ಉತ್ತರ ಕೊಡುವುದಕ್ಕೂ ನಾನು ಅಶಕ್ತನಾಗಿರುವೆ.
15 ಯೋಬನಾದ ನಾನು ನಿರಪರಾಧಿಯಾಗಿದ್ದರೂ ಆತನಿಗೆ ಉತ್ತರವನ್ನು ಕೊಡಲಾರೆ.
ನನಗೆ ಕರುಣೆ ತೋರುವಂತೆ ನ್ಯಾಯಾಧಿಪತಿಯಾದ ದೇವರನ್ನು ಬೇಡಿಕೊಳ್ಳುವೆನು.
16 ನಾನು ಆತನಿಗೆ ಮೊರೆಯಿಟ್ಟಿದ್ದರೂ, ಆತನು ನನಗೆ ಉತ್ತರ ಕೊಟ್ಟಿದ್ದರೂ
ಈಗ ಆತನು ನನಗೆ ಕಿವಿಗೊಡುತ್ತಾನೆ ಎಂಬುದರಲ್ಲಿ ನನಗೆ ನಂಬಿಕೆಯಿಲ್ಲ.
17 ನನ್ನನ್ನು ಜಜ್ಜುವುದಕ್ಕಾಗಿ ದೇವರು ಬಿರುಗಾಳಿಯನ್ನು ಕಳುಹಿಸುವನು;
ನಿಷ್ಕಾರಣವಾಗಿ ನನಗೆ ಗಾಯಮಾಡುವನು.
18 ಉಸಿರೆಳೆದುಕೊಳ್ಳಲೂ ಬಿಡುವು ನೀಡದೆ
ಕಷ್ಟದ ಮೇಲೆ ಕಷ್ಟವನ್ನು ಕೊಡುವನು.
19 ಆತನನ್ನು ಸೋಲಿಸೋಣವೆಂದರೆ
ಆತನೇ ಬಲಿಷ್ಠನಾಗಿದ್ದಾನೆ;
ನ್ಯಾಯಾಲಯಕ್ಕೆ ಹೋಗೋಣವೆಂದರೆ
ಆತನನ್ನು ನ್ಯಾಯಾಲಯಕ್ಕೆ ಬರಮಾಡುವವನು ಯಾರು?
20 ನಾನು ನಿರಪರಾಧಿಯಾಗಿದ್ದರೂ ನನ್ನ ಬಾಯಿ ನನ್ನನ್ನು ಖಂಡಿಸುವುದು;
ನಾನು ನಿರ್ದೋಷಿಯಾಗಿದ್ದರೂ ನನ್ನ ಬಾಯಿ ನನ್ನನ್ನು ದೋಷಿಯೆಂದು ಹೇಳುವುದು.
21 ನಾನು ನಿರಪರಾಧಿಯಾಗಿದ್ದರೂ ನನ್ನ ಬಗ್ಗೆ ಚಿಂತಿಸುವುದಿಲ್ಲ;
ನನ್ನ ಜೀವಿತವನ್ನೇ ತುಚ್ಫೀಕರಿಸುವೆನು.
22 ‘ಜೀವಿತದಲ್ಲಿ ಎಲ್ಲರೂ ಒಂದೇ.
ಆದ್ದರಿಂದ ಆತನು ಅಪರಾಧಿಗಳನ್ನೂ ನಿರಪರಾಧಿಗಳನ್ನೂ ನಾಶಮಾಡುತ್ತಾನೆ’
ಎಂಬುದು ನನ್ನ ಆಲೋಚನೆ.
23 ಪಕ್ಕನೆ ಆಪತ್ತಿಗೊಳಗಾಗಿ ನಿರಪರಾಧಿಯು ಸತ್ತರೆ, ದೇವರು ಅವನನ್ನು ನೋಡುತ್ತಾ ನಗುವನೇ?
24 ದುಷ್ಟನು ಭೂಮಿಯನ್ನು ಆಕ್ರಮಿಸಿಕೊಂಡಾಗ, ದೇವರು ಅದನ್ನು ನ್ಯಾಯಾಧಿಪತಿಗಳಿಗೆ ಮರೆಮಾಡುವನೇ?
ಇದು ಸತ್ಯವಾಗಿದ್ದರೆ, ಇದನ್ನು ದೇವರಲ್ಲದೆ ಇನ್ಯಾರು ಮಾಡಿದರು?
25 “ನನ್ನ ದಿನಗಳು ಓಟಗಾರನಿಗಿಂತಲೂ ವೇಗವಾಗಿ ಹೋಗುತ್ತಿವೆ.
ಸುಖವಿಲ್ಲದ ನನ್ನ ದಿನಗಳು ಹಾರಿಹೋಗುತ್ತಿವೆ.
26 ಜಂಬುಗಿಡದಿಂದ ಮಾಡಿದ ದೋಣಿಗಳಂತೆಯೂ
ಹದ್ದು ತನ್ನ ಬೇಟೆಯ ಮೇಲೆ ಎರಗಲು ಹಾರಿಹೋಗುವಂತೆಯೂ
ನನ್ನ ದಿನಗಳು ವೇಗವಾಗಿ ಹೋಗುತ್ತಿವೆ.
27 “ನಾನು ದೂರು ಹೇಳುವುದಿಲ್ಲ.
ನನ್ನ ನೋವನ್ನು ಮರೆತು ನನ್ನ ಮುಖವನ್ನು ಮಾರ್ಪಡಿಸಿಕೊಂಡು ನಗುವೆನೆಂದರೆ,
28 ನನ್ನ ಎಲ್ಲಾ ಸಂಕಟಗಳಿಂದ ಇನ್ನೂ ಭಯಗೊಂಡಿರುವೆ.
ಯಾಕೆಂದರೆ ನನ್ನನ್ನು ಅಪರಾಧಿಯೆಂದು ದೇವರು ಹೇಳುತ್ತಿದ್ದಾನೆ.
29 ಅಪರಾಧಿಯೆಂದು ಈಗಾಗಲೇ ನನಗೆ ತೀರ್ಪಾಗಿದೆ.
ಹೀಗಿರಲು ನಾನೇಕೆ ವ್ಯರ್ಥ ಪ್ರಯತ್ನ ಮಾಡಲಿ?
30 ನಾನು ಹಿಮದಿಂದ ಸ್ನಾನಮಾಡಿದರೂ
ಸಾಬೂನಿನಿಂದ ಕೈತೊಳೆದುಕೊಂಡರೂ
31 ದೇವರು ನನ್ನನ್ನು ಮಣ್ಣಿನ ಗುಂಡಿಗೆ ತಳ್ಳಿ
ನನ್ನ ಬಟ್ಟೆಗಳಿಗೇ ನಾನು ಅಸಹ್ಯವಾಗುವಂತೆ ಮಾಡುವನು.
32 ದೇವರು ನನ್ನಂಥ ಮನುಷ್ಯನಲ್ಲ; ನಾನು ಆತನಿಗೆ ಉತ್ತರಿಸಲಾರೆ.
ನಾವು ನ್ಯಾಯಾಲಯದಲ್ಲಿ ಒಬ್ಬರನ್ನೊಬ್ಬರು ಸಂಧಿಸಲಾರೆವು.
33 ನಮ್ಮಿಬ್ಬರಿಗೆ ಮಧ್ಯಸ್ಥಗಾರನಿದ್ದರೆ, ನಮ್ಮಿಬ್ಬರ ಮೇಲೆ ಅಧಿಕಾರವುಳ್ಳವನಿದ್ದರೆ
ಎಷ್ಟೋ ಚೆನ್ನಾಗಿರುತ್ತಿತ್ತು. (ಆದರೆ ಅಂಥವರು ಯಾರೂ ಇಲ್ಲ.)
34 ದೇವರ ದಂಡವನ್ನು ತೆಗೆದುಹಾಕುವ ಮಧ್ಯಸ್ಥಗಾರನಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು.
ಆಗ ಆತನು ನನ್ನನ್ನು ಹೆದರಿಸುತ್ತಿರಲಿಲ್ಲ.
35 ಆಗ ನಾನು ಭಯವಿಲ್ಲದೆ ಮಾತಾಡುತ್ತಿದ್ದೆನು;
ಆದರೆ ಈಗ ನನಗೆ ಸಾಧ್ಯವೇ ಇಲ್ಲ.”
ಸರ್ಕಾರದ ಅಧಿಕಾರಿಗಳಿಗೆ ವಿಧೇಯರಾಗಿರಿ
13 ನೀವೆಲ್ಲರೂ ಸರ್ಕಾರದ ಅಧಿಕಾರಿಗಳಿಗೆ ವಿಧೇಯರಾಗಿರಬೇಕು. ಪ್ರತಿಯೊಬ್ಬ ಅಧಿಕಾರಿಗೆ ಅಧಿಕಾರವನ್ನು ಕೊಟ್ಟಿರುವವನು ದೇವರೇ. ಈಗಿರುವ ಎಲ್ಲಾ ಅಧಿಕಾರಿಗಳಿಗೆ ದೇವರೇ ಅಧಿಕಾರವನ್ನು ಕೊಟ್ಟಿದ್ದಾನೆ. 2 ಆದ್ದರಿಂದ ಸರ್ಕಾರಕ್ಕೆ ವಿರೋಧವಾಗಿರುವ ವ್ಯಕ್ತಿಯು ನಿಜವಾಗಿಯೂ ದೇವರ ಆಜ್ಞೆಗೇ ವಿರೋಧವಾಗಿದ್ದಾನೆ. ಸರ್ಕಾರಕ್ಕೆ ವಿರೋಧವಾಗಿರುವ ಜನರು ತಮ್ಮ ಮೇಲೆ ತಾವೇ ದಂಡನೆಯನ್ನು ಬರಮಾಡಿಕೊಳ್ಳುತ್ತಾರೆ. 3 ಸರಿಯಾದದ್ದನ್ನು ಮಾಡುವ ಜನರಿಗೆ ಅಧಿಕಾರಿಗಳ ಭಯವಿರುವುದಿಲ್ಲ. ಆದರೆ ಕೆಟ್ಟದ್ದನ್ನು ಮಾಡುವ ಜನರಿಗೆ ಅಧಿಕಾರಿಗಳ ಭಯವಿರುತ್ತದೆ. ನೀವು ಅಧಿಕಾರಿಗಳಿಗೆ ಭಯಪಡದವರಾಗಿರಬೇಕೆಂದು ಅಪೇಕ್ಷಿಸುತ್ತೀರೋ? ಹಾಗಾದರೆ ನೀವು ಸರಿಯಾದದ್ದನ್ನೇ ಮಾಡಿರಿ. ಆಗ ಅಧಿಕಾರಿಗಳು ನಿಮ್ಮನ್ನು ಹೊಗಳುವರು.
4 ಅಧಿಕಾರಿಯು ನಿಮ್ಮ ಒಳ್ಳೆಯದಕ್ಕಾಗಿ ನೇಮಕಗೊಂಡಿರುವ ದೇವರ ಸೇವಕನಾಗಿದ್ದಾನೆ. ಆದರೆ ನೀವು ಕೆಟ್ಟದ್ದನ್ನು ಮಾಡಿದರೆ ಭಯಪಡಲೇಬೇಕು. ನಿಮ್ಮನ್ನು ದಂಡಿಸಲು ಅವನಿಗೆ ಅಧಿಕಾರವಿದೆ. ಅವನು ಆ ಅಧಿಕಾರವನ್ನು ಉಪಯೋಗಿಸುವನು. ಅಧಿಕಾರಿಯು ಕೆಟ್ಟದ್ದನ್ನು ಮಾಡುವ ಜನರನ್ನು ದಂಡಿಸುವುದಕ್ಕಾಗಿ ನೇಮಕಗೊಂಡಿರುವ ದೇವರ ಸೇವಕನಾಗಿದ್ದಾನೆ. 5 ಆದ್ದರಿಂದ ನೀವು ಸರ್ಕಾರಕ್ಕೆ ವಿಧೇಯರಾಗಬೇಕು. ನೀವು ದಂಡನೆಗೆ ಗುರಿಯಾಗಬಹುದೆಂಬ ಕಾರಣದಿಂದ ಮಾತ್ರವಲ್ಲದೆ, ನಿಮ್ಮ ಮನಸ್ಸಾಕ್ಷಿಯ ದೆಸೆಯಿಂದಲೂ ನೀವು ಅವರಿಗೆ ವಿಧೇಯರಾಗಬೇಕು.
6 ಈ ಕಾರಣದಿಂದಲೇ ನೀವು ತೆರಿಗೆಯನ್ನು ಸಹ ಕೊಡುತ್ತೀರಿ. ಆ ಅಧಿಕಾರಿಗಳು ದೇವರಿಗೋಸ್ಕರ ಕೆಲಸ ಮಾಡುವವರಾಗಿದ್ದಾರೆ; ತಮ್ಮ ಸಮಯವನ್ನೆಲ್ಲಾ ಆಡಳಿತ ಮಾಡಲು ಉಪಯೋಗಿಸುವವರಾಗಿದ್ದಾರೆ. 7 ನೀವು ಯಾರ್ಯಾರಿಗೆ ಏನೇನು ಕೊಡಬೇಕೋ ಅದನ್ನೆಲ್ಲಾ ಅವರಿಗೆ ಕೊಡಿರಿ. ಯಾವ ತೆರಿಗೆಯನ್ನಾದರೂ ಕೊಡಬೇಕಿದ್ದರೆ ಅದನ್ನು ಕೊಟ್ಟುಬಿಡಿರಿ. ಯಾರಿಗೆ ಗೌರವ ಕೊಡಬೇಕೋ ಅವರಿಗೆ ಗೌರವ ಕೊಡಿರಿ. ಯಾರಿಗೆ ಮರ್ಯಾದೆ ತೋರಿಸಬೇಕೊ ಅವರಿಗೆ ಮರ್ಯಾದೆಯನ್ನು ತೋರಿಸಿರಿ.
ಇತರ ಜನರನ್ನು ಪ್ರೀತಿಸಬೇಕೆಂಬ ಒಂದೇ ಆಜ್ಞೆ
8 ಜನರಿಗೆ ಯಾವ ವಿಷಯದಲ್ಲಿಯೂ ಸಾಲಗಾರರಾಗಿರಬೇಡಿ. ಆದರೆ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ವಿಷಯದಲ್ಲಿ ಮಾತ್ರ ಯಾವಾಗಲೂ ಸಾಲಗಾರರಾಗಿದ್ದೀರಿ. ಇತರ ಜನರನ್ನು ಪ್ರೀತಿಸುವ ವ್ಯಕ್ತಿಯು ಇಡೀ ಧರ್ಮಶಾಸ್ತ್ರಕ್ಕೆ ವಿಧೇಯನಾಗಿದ್ದಾನೆ. 9 ಏಕೆಂದರೆ, “ವ್ಯಭಿಚಾರ ಮಾಡಕೂಡದು; ಕೊಲೆ ಮಾಡಕೂಡದು; ಕದಿಯಕೂಡದು; ಇತರರಿಗೆ ಸೇರಿದ ವಸ್ತುಗಳನ್ನು ಅಪೇಕ್ಷಿಸಕೂಡದು”(A) ಎಂದು ಧರ್ಮಶಾಸ್ತ್ರವು ಹೇಳುತ್ತದೆ. ಈ ಆಜ್ಞೆಗಳನ್ನು ಮೊದಲುಗೊಂಡು ಉಳಿದೆಲ್ಲಾ ಆಜ್ಞೆಗಳು, “ನೀನು ನಿನ್ನನ್ನು ಪ್ರೀತಿಸುವಂತೆ ಇತರ ಜನರನ್ನೂ ಪ್ರೀತಿಸು”(B) ಎಂಬ ಒಂದೇ ಆಜ್ಞೆಯಲ್ಲಿ ಅಡಕವಾಗಿದೆ. 10 ಪ್ರೀತಿಯು ಬೇರೆಯವರಿಗೆ ಕೇಡುಮಾಡುವುದಿಲ್ಲ. ಆದ್ದರಿಂದ ಪ್ರೀತಿಸುವುದಕ್ಕೂ ಎಲ್ಲಾ ಆಜ್ಞೆಗಳಿಗೆ ವಿಧೇಯರಾಗುವುದಕ್ಕೂ ವ್ಯತ್ಯಾಸವೇನೂ ಇಲ್ಲ.
11 ನಾವು ಪ್ರಾಮುಖ್ಯವಾದ ಸಮಯದಲ್ಲಿ ಜೀವಿಸುತ್ತಿರುವುದರಿಂದ ಈ ವಿಷಯಗಳನ್ನು ಹೇಳುತ್ತಿದ್ದೇನೆ ಎಂಬುದು ನಿಮಗೆ ಗೊತ್ತೇ ಇದೆ. ಹೌದು, ನೀವು ನಿದ್ರೆಯಿಂದ ಎಚ್ಚರಗೊಳ್ಳುವ ಕಾಲ ಇದಾಗಿದೆ. ನಾವು ವಿಶ್ವಾಸಿಗಳಾದ ಕಾಲಕ್ಕಿಂತ ಈಗ ನಮ್ಮ ರಕ್ಷಣೆಯು ಸಮೀಪವಾಗಿದೆ. 12 “ರಾತ್ರಿ”ಯು ಬಹುಮಟ್ಟಿಗೆ ಮುಗಿದುಹೋಗಿದೆ. “ಹಗಲು” ಬಹುಮಟ್ಟಿಗೆ ಬಂದಿದೆ. ಆದ್ದರಿಂದ ಕತ್ತಲೆಗೆ ಸೇರಿದ ಕಾರ್ಯಗಳನ್ನು ಇನ್ನು ಮೇಲೆ ಮಾಡದೆ ಬೆಳಕಿಗೆ ಸೇರಿದ ಕಾರ್ಯಗಳನ್ನು ಮಾಡಲು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು. 13 ಹಗಲಿಗೆ ಸೇರಿದ ಜನರಂತೆ ಸರಿಯಾದ ರೀತಿಯಲ್ಲಿ ಜೀವಿಸೋಣ. ಕೆಟ್ಟದಾದ ಮತ್ತು ವ್ಯರ್ಥವಾದ ಔತಣಕೂಟಗಳನ್ನು ನಾವು ಏರ್ಪಡಿಸಕೂಡದು; ಕುಡಿದು ಮತ್ತರಾಗಕೂಡದು; ನಾವು ಲೈಂಗಿಕ ಪಾಪವನ್ನಾಗಲಿ ನಮ್ಮ ದೇಹದಿಂದ ಯಾವುದೇ ಬಗೆಯ ಪಾಪವನ್ನಾಗಲಿ ಮಾಡಕೂಡದು; ವಾಗ್ವಾದಗಳನ್ನಾಗಲಿ ಜಗಳಗಳನ್ನಾಗಲಿ ಎಬ್ಬಿಸಬಾರದು; ಅಲ್ಲದೆ ಹೊಟ್ಟೆಕಿಚ್ಚುಪಡಬಾರದು. 14 ಪ್ರಭುವಾದ ಯೇಸು ಕ್ರಿಸ್ತನನ್ನೇ ಧರಿಸಿಕೊಳ್ಳಿರಿ. ನಿಮ್ಮ ಪಾಪಸ್ವಭಾವವನ್ನು ಹೇಗೆ ತೃಪ್ತಿಗೊಳಿಸಬೇಕೆಂದಾಗಲಿ ಕೆಟ್ಟಕಾರ್ಯಗಳನ್ನು ಮಾಡಬೇಕೆಂಬ ಬಯಕೆಯನ್ನು ಹೇಗೆ ಪೂರೈಸಿಕೊಳ್ಳಬೇಕೆಂದಾಗಲಿ ಆಲೋಚಿಸಬೇಡಿ.
Kannada Holy Bible: Easy-to-Read Version. All rights reserved. © 1997 Bible League International