M’Cheyne Bible Reading Plan
ಯೆಹೂದನು ಮತ್ತು ತಾಮಾರಳು
38 ಆ ಕಾಲದಲ್ಲಿ ಯೆಹೂದನು ತನ್ನ ಸಹೋದರರನ್ನು ಬಿಟ್ಟು ಹೀರಾ ಎಂಬುವನೊಂದಿಗೆ ವಾಸಿಸಲು ಹೋದನು. ಅವನು ಅದುಲ್ಲಾಮ್ ಊರಿನವನು. 2 ಯೆಹೂದನು ಅಲ್ಲಿ ಒಬ್ಬ ಕಾನಾನ್ಯನ ಮಗಳನ್ನು ಕಂಡು ಆಕೆಯನ್ನು ಮದುವೆಮಾಡಿಕೊಂಡನು. ಆ ಹುಡುಗಿಯ ತಂದೆಯ ಹೆಸರು ಶೂಗ. 3 ಆಕೆಯು ಒಬ್ಬ ಮಗನನ್ನು ಹೆತ್ತಳು. ಅವರು ಅವನಿಗೆ ಏರ ಎಂದು ಹೆಸರಿಟ್ಟರು. 4 ಬಳಿಕ ಆಕೆ ಮತ್ತೊಬ್ಬ ಮಗನಿಗೆ ಜನನವಿತ್ತಳು. ಅವರು ಆ ಮಗನಿಗೆ ಓನಾನ ಎಂದು ಹೆಸರಿಟ್ಟರು. 5 ಆಕೆಗೆ ಮೂರನೆಯ ಮಗನು ಹುಟ್ಟಿದಾಗ ಆಕೆ ಅದಕ್ಕೆ ಶೇಲಹ ಎಂದು ಹೆಸರಿಟ್ಟಳು. ಆ ಮಗು ಹುಟ್ಟಿದಾಗ ಯೆಹೂದನು ಕಜೀಬೂರಿನಲ್ಲಿ ವಾಸಿಸುತ್ತಿದ್ದನು.
6 ಯೆಹೂದನು ತನ್ನ ಮೊದಲನೆ ಮಗನಾದ ಏರನಿಗಾಗಿ ಒಬ್ಬ ಕನ್ನಿಕೆಯನ್ನು ಆಯ್ಕೆಮಾಡಿದನು. ಆಕೆಯ ಹೆಸರು ತಾಮಾರ. 7 ಆದರೆ ಏರನು ಅನೇಕ ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ಯೆಹೋವನು ಅವನನ್ನು ಸಾಯಿಸಿದನು. 8 ಆಗ ಯೆಹೂದನು ಏರನ ತಮ್ಮನಾದ ಓನಾನನಿಗೆ, “ಹೋಗು, ಸತ್ತುಹೋದ ನಿನ್ನ ಅಣ್ಣನ ಹೆಂಡತಿಗೆ ಗಂಡನಂತಿರು. ನಿನ್ನ ಮೂಲಕ ಆಕೆಯಲ್ಲಿ ಹುಟ್ಟುವ ಮಕ್ಕಳು ನಿನ್ನ ಅಣ್ಣನಾದ ಏರನ ಮಕ್ಕಳಾಗಿರಲಿ” ಎಂದು ಹೇಳಿದನು.
9 ತಾಮಾರಳಲ್ಲಿ ತನಗೆ ಹುಟ್ಟುವ ಮಕ್ಕಳು ತನ್ನವರಾಗುವುದಿಲ್ಲವೆಂದು ಅರಿತುಕೊಂಡು ಓನಾನನು ಆಕೆಯನ್ನು ಕೂಡಿದರೂ ವೀರ್ಯವನ್ನು ನೆಲದ ಪಾಲು ಮಾಡುತ್ತಿದ್ದನು. 10 ಇದು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿದ್ದರಿಂದ ಆತನು ಓನಾನನನ್ನು ಸಹ ಸಾಯಿಸಿದನು. 11 ಆಗ ಯೆಹೂದನು ತನ್ನ ಸೊಸೆಯಾದ ತಾಮಾರಳಿಗೆ, “ನಿನ್ನ ತಂದೆಯ ಮನೆಗೆ ಹಿಂತಿರುಗಿ ಹೋಗಿ ಅಲ್ಲಿರು. ನನ್ನ ಮಗನಾದ ಶೇಲಹನು ದೊಡ್ಡವನಾಗುವ ತನಕ ಮದುವೆಯಾಗಬೇಡ” ಎಂದು ಹೇಳಿದನು. ಶೇಲಹನು ಸಹ ತನ್ನ ಅಣ್ಣಂದಿರಂತೆ ಸಾಯಬಹುದೆಂದು ಯೆಹೂದನು ಹೆದರಿಕೊಂಡಿದ್ದನು. ಆದ್ದರಿಂದ ತಾಮಾರಳು ತನ್ನ ತಂದೆಯ ಮನೆಗೆ ಹಿಂತಿರುಗಿ ಹೋದಳು.
12 ಆಮೇಲೆ ಬಹುದಿನಗಳಾದ ಮೇಲೆ ಯೆಹೂದನ ಹೆಂಡತಿಯಾಗಿದ್ದ ಶೂಗನ ಮಗಳು ತೀರಿಕೊಂಡಳು. ಯೆಹೂದನು ತನ್ನ ದುಃಖದ ಸಮಯ ತೀರಿದ ಮೇಲೆ ಅದುಲ್ಲಾಮ್ಯದವನಾದ ತನ್ನ ಸ್ನೇಹಿತ ಹೀರಾನೊಂದಿಗೆ ತನ್ನ ಕುರಿಗಳ ಉಣ್ಣೆ ಕತ್ತರಿಸುವುದಕ್ಕಾಗಿ ತಿಮ್ನಾ ಊರಿಗೆ ಹೋದನು. 13 ಮಾವನು ಉಣ್ಣೆ ಕತ್ತರಿಸುವುದಕ್ಕಾಗಿ ತಿಮ್ನಾ ಊರಿಗೆ ಹೋಗುತ್ತಿರುವುದು ತಾಮಾರಳಿಗೆ ತಿಳಿಯಿತು. 14 ತಾಮಾರಳು ಯಾವಾಗಲೂ ವಿಧವೆಯ ವಸ್ತ್ರಗಳನ್ನು ಧರಿಸಿಕೊಂಡಿರುತ್ತಿದ್ದಳು. ಆದರೆ ಈಗ ಆಕೆ ಬೇರೆ ಬಟ್ಟೆಗಳನ್ನು ಧರಿಸಿಕೊಂಡು ತನ್ನ ಮುಖವನ್ನು ಮುಸುಕಿನಿಂದ ಮುಚ್ಚಿಕೊಂಡು ತಿಮ್ನಾ ಊರಿನ ಸಮೀಪದಲ್ಲಿರುವ ಏನಯಿಮೂರಿನ ದಾರಿಯಲ್ಲಿ ಕುಳಿತುಕೊಂಡಳು. ಯೆಹೂದನ ಚಿಕ್ಕಮಗನಾದ ಶೇಲಹನು ಬೆಳೆದು ದೊಡ್ಡವನಾಗಿರುವುದು ತಾಮಾರಳಿಗೆ ತಿಳಿದಿತ್ತು. ಆದರೆ ಆಕೆಗೆ ಅವನನ್ನು ಮದುವೆ ಮಾಡಿಸಲು ಯೆಹೂದನು ಆಲೋಚಿಸಿರಲಿಲ್ಲ.
15 ಯೆಹೂದನು ಆ ದಾರಿಯಲ್ಲಿ ಪ್ರಯಾಣ ಮಾಡುತ್ತಿರಲು ಆಕೆಯನ್ನು ಕಂಡು ವೇಶ್ಯೆಯೆಂದು ಭಾವಿಸಿದನು. (ಆಕೆಯು ವೇಶ್ಯೆಯಂತೆ ಮುಸುಕು ಹಾಕಿಕೊಂಡಿದ್ದಳು.) 16 ಆದ್ದರಿಂದ ಯೆಹೂದನು ಆಕೆಯ ಬಳಿಗೆ ಹೋಗಿ, “ನಾನು ನಿನ್ನನ್ನು ಕೂಡಬಹುದೇ?” ಎಂದು ಕೇಳಿದನು. (ಆಕೆ ತನ್ನ ಸೊಸೆಯಾದ ತಾಮಾರಳೆಂದು ಯೆಹೂದನಿಗೆ ತಿಳಿದಿರಲಿಲ್ಲ.)
ಅವಳು “ನೀನು ನನಗೆ ಏನು ಕೊಡುವೆ?” ಎಂದು ಕೇಳಿದಳು.
17 ಯೆಹೂದನು, “ನನ್ನ ಮಂದೆಯಿಂದ ನಿನಗೆ ಒಂದು ಆಡುಮರಿಯನ್ನು ಕಳುಹಿಸಿಕೊಡುವೆ” ಎಂದು ಉತ್ತರಿಸಿದನು.
ಅವಳು “ಸರಿ, ನೀನು ನನಗೆ ಆಡುಮರಿಯನ್ನು ಕಳುಹಿಸಿ ಕೊಡುವ ತನಕ ನನ್ನಲ್ಲಿ ಏನಾದರೂ ಒತ್ತೆಯಿಡಬೇಕು” ಎಂದು ಹೇಳಿದಳು.
18 ಯೆಹೂದನು, “ಏನು ಒತ್ತೆಯಿಡಲಿ?” ಎಂದು ಕೇಳಿದನು.
ತಾಮಾರಳು, “ನಿನ್ನ ಪತ್ರಗಳ ಮೇಲೆ ಉಪಯೋಗಿಸುವ ನಿನ್ನ ಮುದ್ರೆಯನ್ನೂ ಅದರ ದಾರವನ್ನೂ ಮತ್ತು ನಿನ್ನ ಊರುಗೋಲನ್ನೂ ಕೊಡು” ಎಂದು ಉತ್ತರಿಸಿದಳು. ಯೆಹೂದನು ಅವುಗಳನ್ನು ಆಕೆಗೆ ಕೊಟ್ಟನು. ಯೆಹೂದನು ಆಕೆಯನ್ನು ಕೂಡಿದನು; ಅವಳು ಗರ್ಭಿಣಿಯಾದಳು. 19 ತಾಮಾರಳು ಮನೆಗೆ ಹೋಗಿ ಮುಸುಕನ್ನು ತೆಗೆದುಹಾಕಿ ಮತ್ತೆ ವಿಧವಾವಸ್ತ್ರಗಳನ್ನು ಧರಿಸಿಕೊಂಡಳು.
20 ಯೆಹೂದನು ಮಾತು ಕೊಟ್ಟಿದ್ದಂತೆಯೇ ಒಂದು ಆಡುಮರಿಯನ್ನು ತನ್ನ ಸ್ನೇಹಿತನಾದ ಹೀರಾನ ಮೂಲಕ ಏನಯಿಮಿಗೆ ಕಳುಹಿಸಿ ಆ ಮುದ್ರೆಯನ್ನೂ ಊರುಗೋಲನ್ನೂ ತೆಗೆದುಕೊಂಡು ಬರುವಂತೆ ಅವನಿಗೆ ತಿಳಿಸಿದನು. ಆದರೆ ಅವನು ಅವಳನ್ನು ಕಂಡುಹಿಡಿಯಲಾಗಲಿಲ್ಲ. 21 ಅವನು ಏನಯಿಮ್ ಊರಿನ ಕೆಲವು ಗಂಡಸರಿಗೆ, “ಇಲ್ಲಿಯ ದಾರಿಯ ಸಮೀಪದಲ್ಲಿರುತ್ತಿದ್ದ ವೇಶ್ಯೆಯು ಎಲ್ಲಿದ್ದಾಳೆ?” ಎಂದು ಕೇಳಿದನು.
ಅದಕ್ಕೆ ಅವರು, “ಇಲ್ಲಿ ಯಾವ ವೇಶ್ಯೆಯೂ ಇಲ್ಲ” ಎಂದು ಉತ್ತರಿಸಿದರು.
22 ಆದ್ದರಿಂದ ಅವನು ಯೆಹೂದನ ಬಳಿಗೆ ಹಿಂತಿರುಗಿ ಬಂದು, “ನಾನು ಆ ವೇಶ್ಯೆಯನ್ನು ಕಂಡುಹಿಡಿಯಲಾಗಲಿಲ್ಲ. ಅದಲ್ಲದೆ ಆ ಸ್ಥಳದ ಗಂಡಸರು ಅಲ್ಲಿ ಒಬ್ಬ ವೇಶ್ಯೆಯೂ ಇಲ್ಲ ಎಂದು ಹೇಳಿದರು” ಅಂದನು.
23 ಅದಕ್ಕೆ ಯೆಹೂದನು, “ಆಕೆ ಆ ವಸ್ತುಗಳನ್ನು ಇಟ್ಟುಕೊಳ್ಳಲಿ. ಜನರು ನಮ್ಮನ್ನು ಕಂಡು ನಗುವುದು ನನಗೆ ಇಷ್ಟವಿಲ್ಲ. ನಾನು ಅವಳಿಗೆ ಆಡನ್ನು ಕೊಡಲು ಪ್ರಯತ್ನಿಸಿದೆ. ಆದರೆ ಅವಳು ನಿನಗೆ ಸಿಕ್ಕಲಿಲ್ಲವಷ್ಟೇ” ಎಂದು ಹೇಳಿದನು.
ತಾಮಾರಳಿಗೆ ಗರ್ಭಧಾರಣೆ
24 ಮೂರು ತಿಂಗಳಾದ ಬಳಿಕ, ಯಾರೋ ಒಬ್ಬನು ಯೆಹೂದನಿಗೆ, “ನಿನ್ನ ಸೊಸೆಯಾದ ತಾಮಾರಳು ವ್ಯಭಿಚಾರದಿಂದ ಗರ್ಭಿಣಿಯಾಗಿದ್ದಾಳೆ” ಎಂದು ತಿಳಿಸಿದನು.
ಆಗ ಯೆಹೂದನು, “ಆಕೆಯನ್ನು ಎಳೆದುಕೊಂಡು ಹೋಗಿ ಸುಟ್ಟುಬಿಡಿ” ಎಂದು ಹೇಳಿದನು.
25 ಆ ಗಂಡಸರು ತಾಮಾರಳನ್ನು ಕೊಲ್ಲಲು ಆಕೆಯ ಬಳಿಗೆ ಹೋದರು. ಆದರೆ ಆಕೆ ತನ್ನ ಮಾವನಿಗೆ, “ನನ್ನನ್ನು ಗರ್ಭಿಣಿ ಮಾಡಿದವನು ಈ ವಸ್ತುಗಳ ಒಡೆಯ. ಈ ವಸ್ತುಗಳನ್ನು ನೋಡು! ಇವು ಯಾರವು? ಈ ಮುದ್ರೆಯೂ ದಾರವೂ ಯಾರವು? ಇದು ಯಾರ ಕೈಕೋಲು?” ಎಂಬ ಸಂದೇಶವನ್ನು ಹೇಳಿ ಕಳುಹಿಸಿದಳು.
26 ಯೆಹೂದನು ಆ ವಸ್ತುಗಳನ್ನು ಗುರುತಿಸಿ, “ಆಕೆ ಸರಿಯಾದದ್ದನ್ನೇ ಮಾಡಿದ್ದಾಳೆ. ನಾನೇ ತಪ್ಪು ಮಾಡಿದೆ. ನಾನು ಆಕೆಗೆ ಮಾತುಕೊಟ್ಟಂತೆ ನನ್ನ ಮಗನಾದ ಶೇಲಹನನ್ನು ಆಕೆಗೆ ಕೊಡಬೇಕಿತ್ತು” ಎಂದು ಹೇಳಿದನು. ಆದರೆ ಯೆಹೂದನು ಆಕೆಯೊಡನೆ ಮತ್ತೆ ಮಲಗಿಕೊಳ್ಳಲಿಲ್ಲ.
27 ತಾಮಾರಳಿಗೆ ಹೆರಿಗೆಕಾಲ ಬಂತು. ಆಕೆಗೆ ಅವಳಿಜವಳಿ ಮಕ್ಕಳಾಗುವುದನ್ನು ದಾದಿಯು ಗಮನಿಸಿದಳು. 28 ಆಕೆಗೆ ಹೆರಿಗೆಯಾಗುವಾಗ ಒಂದು ಮಗು ತನ್ನ ಕೈಚಾಚಿತು. ದಾದಿಯು ಆ ಮಗುವಿನ ಕೈಗೆ ಕೆಂಪುದಾರವನ್ನು ಕಟ್ಟಿ, “ಮೊದಲನೆಯವನು” ಅಂದಳು. 29 ಆದರೆ ಆ ಮಗು ತನ್ನ ಕೈಯನ್ನು ಹಿಂದಕ್ಕೆ ಎಳೆದುಕೊಂಡಿತು. ಆಮೇಲೆ ಮತ್ತೊಂದು ಮಗುವು ಮೊದಲು ಹುಟ್ಟಿತು. ಆದ್ದರಿಂದ ದಾದಿಯು, “ನೀನು ಮೊದಲನೆಯವನನ್ನು ಛೇದಿಸಿಕೊಂಡು ಬಂದೆ” ಅಂದಳು. ಆದ್ದರಿಂದ ಅವರು ಆ ಮಗುವಿಗೆ “ಪೆರೆಚ್” ಎಂದು ಹೆಸರಿಟ್ಟರು. 30 ಆ ಬಳಿಕ ಮತ್ತೊಂದು ಮಗುವು ಹೊರಬಂದಿತು. ಆ ಮಗುವಿನ ಕೈಯಲ್ಲಿ ಕೆಂಪುದಾರವಿತ್ತು. ಅವರು ಅವನಿಗೆ “ಜೆರಹ” ಎಂದು ಹೆಸರಿಟ್ಟರು.
ನಾಲ್ಕು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ
(ಮತ್ತಾಯ 15:32-39)
8 ಇನ್ನೊಂದು ಸಮಯದಲ್ಲಿ ಯೇಸುವಿನ ಜೊತೆಯಲ್ಲಿ ಅನೇಕ ಜನರಿದ್ದರು. ಆ ಜನರ ಬಳಿ ಊಟಕ್ಕೆ ಏನೂ ಇರಲಿಲ್ಲ. ಆದ್ದರಿಂದ ಯೇಸು ತನ್ನ ಶಿಷ್ಯರನ್ನು ಕರೆದು, 2 “ನಾನು ಈ ಜನರಿಗಾಗಿ ಕನಿಕರಪಡುತ್ತೇನೆ. ಇವರು ಮೂರು ದಿನಗಳಿಂದ ನನ್ನ ಜೊತೆಯಲ್ಲಿದ್ದಾರೆ. ಇವರ ಬಳಿ ಊಟಕ್ಕೆ ಏನೂ ಇಲ್ಲ. 3 ಇವರು ಏನನ್ನೂ ತಿನ್ನದೆ ಹಸಿವೆಯಲ್ಲಿಯೇ ಹೊರಟರೆ ದಾರಿಯಲ್ಲಿ ಬಳಲಿ ಹೋಗುವರು. ಈ ಜನರಲ್ಲಿ ಕೆಲವರು ಬಹಳ ದೂರದಿಂದ ಬಂದಿದ್ದಾರೆ” ಎಂದು ಹೇಳಿದನು.
4 ಅದಕ್ಕೆ ಶಿಷ್ಯರು, “ಇಲ್ಲಿಗೆ ಯಾವ ಊರೂ ಸಮೀಪದಲ್ಲಿಲ್ಲ. ಈ ಜನರಿಗೆಲ್ಲಾ ಸಾಕಾಗುವಷ್ಟು ರೊಟ್ಟಿಯನ್ನು ನಾವು ಎಲ್ಲಿಂದ ತರಲು ಸಾದ್ಯ?” ಎಂದು ಉತ್ತರಿಸಿದರು.
5 ಯೇಸು, “ನಿಮ್ಮ ಬಳಿ ಎಷ್ಟು ರೊಟ್ಟಿಗಳಿವೆ?” ಎಂದು ಅವರನ್ನು ಕೇಳಿದನು.
ಅದಕ್ಕೆ ಶಿಷ್ಯರು, “ನಮ್ಮ ಬಳಿ ಏಳು ರೊಟ್ಟಿಗಳಿವೆ” ಎಂದು ಉತ್ತರಿಸಿದರು.
6 ಯೇಸು ಆ ಜನರಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಹೇಳಿದನು. ನಂತರ ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು, ದೇವರಿಗೆ ಸ್ತೋತ್ರಸಲ್ಲಿಸಿ ಅವುಗಳನ್ನು ಮುರಿದು, ತನ್ನ ಶಿಷ್ಯರಿಗೆ ಕೊಟ್ಟು, ಅವುಗಳನ್ನು ಜನರಿಗೆ ಹಂಚಬೇಕೆಂದು ಹೇಳಿದನು. ಶಿಷ್ಯರು ಹಾಗೆಯೇ ಮಾಡಿದರು. 7 ಶಿಷ್ಯರ ಬಳಿ ಕೆಲವು ಸಣ್ಣ ಮೀನುಗಳೂ ಇದ್ದವು. ಯೇಸು ಆ ಮೀನುಗಳಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ ಅವುಗಳನ್ನೂ ಜನರಿಗೆ ಕೊಡಬೇಕೆಂದು ಶಿಷ್ಯರಿಗೆ ಹೇಳಿದನು.
8 ಜನರೆಲ್ಲರೂ ಊಟಮಾಡಿ ತೃಪ್ತರಾದರು. ನಂತರ ತಿನ್ನದೆ ಉಳಿದಿದ್ದ ಆಹಾರದ ಚೂರುಗಳನ್ನು ಶಿಷ್ಯರು ಶೇಖರಿಸಿದಾಗ ಏಳು ಬುಟ್ಟಿಗಳು ತುಂಬಿಹೋದವು. 9 ಅಲ್ಲಿ ಊಟ ಮಾಡಿದವರಲ್ಲಿ ಸುಮಾರು ನಾಲ್ಕು ಸಾವಿರ ಗಂಡಸರಿದ್ದರು. ಅವರು ಊಟಮಾಡಿದ ಮೇಲೆ, ಯೇಸು ಅವರನ್ನು ಕಳುಹಿಸಿಕೊಟ್ಟನು. 10 ಬಳಿಕ ಆತನು ತನ್ನ ಶಿಷ್ಯರೊಂದಿಗೆ ದೋಣಿಯನ್ನು ಹತ್ತಿ ದಲ್ಮನೂಥ ಪ್ರದೇಶಕ್ಕೆ ಹೋದನು.
ಯೇಸುವನ್ನು ಪರೀಕ್ಷಿಸಲು ಫರಿಸಾಯರ ಪ್ರಯತ್ನ
(ಮತ್ತಾಯ 16:1-4; ಲೂಕ 11:16,29)
11 ಫರಿಸಾಯರು ಯೇಸುವಿನ ಬಳಿಗೆ ಬಂದು, ಆತನನ್ನು ಪರೀಕ್ಷಿಸಲು ಪ್ರಶ್ನೆಗಳನ್ನು ಕೇಳಿದರು. ಅವರು ಯೇಸುವಿಗೆ, “ನೀನು ದೇವರಿಂದ ಬಂದವನೆಂದು ತೋರಿಸಲು ಒಂದು ಸೂಚಕಕಾರ್ಯವನ್ನು ಮಾಡು” ಎಂದರು. 12 ಆಗ ಯೇಸು ನಿಟ್ಟುಸಿರುಬಿಟ್ಟು ಅವರಿಗೆ, “ನೀವು ಸೂಚಕಕಾರ್ಯವನ್ನು ನೋಡಬಯಸುವುದೇಕೆ? ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮಗೆ ಯಾವ ಸೂಚಕಕಾರ್ಯವನ್ನೂ ತೋರಿಸಲಾಗುವುದಿಲ್ಲ” ಎಂದು ಹೇಳಿದನು. 13 ನಂತರ ಯೇಸು ಫರಿಸಾಯರ ಬಳಿಯಿಂದ ಹೊರಟು ದೋಣಿಯಲ್ಲಿ ಸರೋವರದ ಆಚೆಯ ದಡಕ್ಕೆ ಹೋದನು.
ಯೆಹೂದ್ಯ ನಾಯಕರ ಬಗ್ಗೆ ಯೇಸು ನೀಡಿದ ಎಚ್ಚರಿಕೆ
(ಮತ್ತಾಯ 16:5-12)
14 ಶಿಷ್ಯರು ದೋಣಿಯಲ್ಲಿ ಹೋಗುತ್ತಿದ್ದಾಗ ಅವರ ಬಳಿಯಲ್ಲಿ ಒಂದೇ ಒಂದು ರೊಟ್ಟಿಯಿತ್ತು. ಅವರು ಮರೆತು ಹೆಚ್ಚು ರೊಟ್ಟಿಗಳನ್ನು ತಂದಿರಲಿಲ್ಲ. 15 ಯೇಸು ಅವರಿಗೆ, “ಜಾಗರೂಕರಾಗಿರಿ! ಫರಿಸಾಯರ ಮತ್ತು ಹೆರೋದನ ಹುಳಿಹಿಟ್ಟಿನ ಬಗ್ಗೆ ಎಚ್ಚರವಹಿಸಿರಿ” ಎಂದು ಎಚ್ಚರಿಸಿದನು.
16 ಶಿಷ್ಯರು ಇದರ ಅರ್ಥವನ್ನು ಚರ್ಚಿಸಿ, “ನಮ್ಮ ಬಳಿ ರೊಟ್ಟಿ ಇಲ್ಲದೆ ಇರುವುದರಿಂದ ಆತನು ಹೀಗೆ ಹೇಳಿದನು” ಎಂದು ತಮ್ಮತಮ್ಮೊಳಗೆ ಅಂದುಕೊಂಡರು.
17 ಶಿಷ್ಯರು ಇದರ ಬಗ್ಗೆ ಮಾತಾಡುತ್ತಿರುವುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಅವರಿಗೆ, “ರೊಟ್ಟಿ ಇಲ್ಲವೆಂದು ನೀವು ಚರ್ಚಿಸುವುದೇಕೆ? ನಿಮಗಿನ್ನೂ ಕಾಣುವುದಿಲ್ಲವೇ? ನಿಮಗಿನ್ನೂ ಅರ್ಥವಾಗುವುದಿಲ್ಲವೇ? ನಿಮ್ಮ ಹೃದಯಗಳು ಇನ್ನೂ ಕಠಿಣವಾಗಿವೆಯೋ? 18 ನಿಮ್ಮ ಕಣ್ಣುಗಳು ಕುರುಡಾಗಿವೆಯೋ? ನಿಮ್ಮ ಕಿವಿಗಳು ಕಿವುಡಾಗಿವೆಯೋ? ಮೊದಲೊಮ್ಮೆ, ನಮ್ಮ ಬಳಿ ಸಾಕಷ್ಟು ರೊಟ್ಟಿಗಳಿಲ್ಲದಿದ್ದಾಗ, ನಾನು ಏನು ಮಾಡಿದೆನೆಂಬುದನ್ನು ಜ್ಞಾಪಿಸಿಕೊಳ್ಳಿ. 19 ನಾನು ಐದು ಸಾವಿರ ಜನರಿಗಾಗಿ ಐದು ರೊಟ್ಟಿಗಳನ್ನು ಮುರಿದು ನಿಮಗೆ ಕೊಟ್ಟೆ. ಅವರು ಊಟ ಮಾಡಿದ ಮೇಲೆ ತಿನ್ನಲಾರದೆ ಬಿಟ್ಟ ಚೂರುಗಳನ್ನು ಎಷ್ಟು ಬುಟ್ಟಿಗಳಲ್ಲಿ ತುಂಬಿದಿರಿ ಎಂಬುದು ನಿಮಗೆ ನೆನಪಿಲ್ಲವೇ?” ಎಂದು ಹೇಳಿದನು.
ಆ ಶಿಷ್ಯರು, “ನಾವು ಹನ್ನೆರಡು ಬುಟ್ಟಿಗಳಲ್ಲಿ ತುಂಬಿದೆವು” ಎಂದು ಉತ್ತರಿಸಿದರು.
20 “ನಾನು ನಾಲ್ಕು ಸಾವಿರ ಜನರಿಗಾಗಿ ಏಳು ರೊಟ್ಟಿಗಳನ್ನು ಮುರಿದು ಕೊಟ್ಟದ್ದನ್ನು ಜ್ಞಾಪಿಸಿಕೊಳ್ಳಿ. ಅವರು ಊಟ ಮಾಡಿದ ಮೇಲೆ ತಿನ್ನಲಾರದೆ ಬಿಟ್ಟ ಚೂರುಗಳನ್ನು ಎಷ್ಟು ಬುಟ್ಟಿಗಳಲ್ಲಿ ತುಂಬಿದಿರಿ ಎಂಬುದು ನಿಮಗೆ ನೆನಪಿಲ್ಲವೇ?” ಎಂದು ಕೇಳಿದನು.
ಅದಕ್ಕೆ ಶಿಷ್ಯರು, “ನಾವು ಏಳು ಬುಟ್ಟಿಗಳಲ್ಲಿ ತುಂಬಿದೆವು” ಎಂದು ಉತ್ತರಿಸಿದರು.
21 ಆಗ ಯೇಸು ಅವರಿಗೆ, “ನಾನು ಮಾಡಿದ ಈ ಕಾರ್ಯಗಳನ್ನು ನೀವು ಜ್ಞಾಪಕದಲ್ಲಿಟ್ಟುಕೊಂಡಿದ್ದೀರಿ, ಆದರೆ ನೀವಿನ್ನೂ ಅರ್ಥಮಾಡಿಕೊಳ್ಳುವುದಿಲ್ಲವೇ?” ಎಂದು ಕೇಳಿದನು.
ಬೆತ್ಸಾಯಿದದಲ್ಲಿ ಕುರುಡನಿಗೆ ದೃಷ್ಟಿದಾನ
22 ಯೇಸು ಮತ್ತು ಆತನ ಶಿಷ್ಯರು ಬೆತ್ಸಾಯಿದಕ್ಕೆ ಬಂದರು. ಕೆಲವು ಜನರು ಯೇಸುವಿನ ಬಳಿಗೆ ಒಬ್ಬ ಕುರುಡನನ್ನು ತಂದು ಅವನನ್ನು ಮುಟ್ಟಬೇಕೆಂದು ಯೇಸುವನ್ನು ಬೇಡಿಕೊಂಡರು. 23 ಆಗ ಯೇಸು ಆ ಕುರುಡನ ಕೈ ಹಿಡಿದುಕೊಂಡು, ಅವನನ್ನು ಊರಿನಿಂದ ಹೊರಕ್ಕೆ ಕರೆದುಕೊಂಡು ಹೋದನು. ನಂತರ ಯೇಸು ಅವನ ಕಣ್ಣುಗಳಲ್ಲಿ ಉಗುಳಿ ಅವನ ಮೇಲೆ ತನ್ನ ಕೈಗಳನ್ನಿಟ್ಟು, “ಈಗ ನಿನಗೆ ಕಾಣುತ್ತದೆಯೋ?” ಎಂದು ಕೇಳಿದನು.
24 ಆ ಕುರುಡನು ತಲೆಯೆತ್ತಿ ನೋಡಿ, “ಹೌದು, ನನಗೆ ಜನರು ಕಾಣುತ್ತಾರೆ. ಅವರು ಮರಗಳಂತೆ ಕಂಡರೂ ನಡೆದಾಡುತ್ತಿದ್ದಾರೆ” ಎಂದು ಹೇಳಿದನು.
25 ಯೇಸು ತನ್ನ ಕೈಗಳನ್ನು ಮತ್ತೆ ಕುರುಡನ ಕಣ್ಣುಗಳ ಮೇಲೆ ಇಟ್ಟನು. ಆಗ ಅವನು ತನ್ನ ಕಣ್ಣುಗಳನ್ನು ಅಗಲವಾಗಿ ತೆರೆದನು. ಅವನ ಕಣ್ಣುಗಳು ಗುಣಹೊಂದಿದ್ದವು. ಅವನಿಗೆ ಎಲ್ಲವೂ ಸ್ಪಷ್ಟವಾಗಿ ಕಾಣಿಸಿತು. 26 ಯೇಸು ಅವನಿಗೆ, “ನೀನು ನೇರವಾಗಿ ಮನೆಗೆ ಹೋಗು, ಊರೊಳಗೆ ಹೋಗಬೇಡ” ಎಂದು ಹೇಳಿ ಕಳುಹಿಸಿದನು.
ಯೇಸುವೇ ಕ್ರಿಸ್ತನೆಂದು ಪೇತ್ರನ ಪ್ರಕಟನೆ
(ಮತ್ತಾಯ 16:13-20; ಲೂಕ 9:18-21)
27 ಯೇಸು ಮತ್ತು ಆತನ ಶಿಷ್ಯರು ಫಿಲಿಪ್ಪನ ಸೆಜರೇಯ ಎಂಬ ಪಟ್ಟಣದ ಸಮೀಪದಲ್ಲಿರುವ ಊರುಗಳಿಗೆ ಹೋದರು. ಅವರು ಪ್ರಯಾಣ ಮಾಡುತ್ತಿರುವಾಗ, ಯೇಸು ತನ್ನ ಶಿಷ್ಯರನ್ನು, “ನನ್ನನ್ನು ಜನರು ಯಾರೆಂದು ಹೇಳುತ್ತಾರೆ?” ಎಂದು ಕೇಳಿದನು.
28 ಅದಕ್ಕೆ ಶಿಷ್ಯರು, “ಕೆಲವರು ನಿನ್ನನ್ನು, ‘ಸ್ನಾನಿಕ ಯೋಹಾನ’ ಎಂದು ಹೇಳುತ್ತಾರೆ. ಇನ್ನು ಕೆಲವರು ‘ಎಲೀಯ’ ಎಂದು ಹೇಳುತ್ತಾರೆ. ಇನ್ನು ಕೆಲವು ಜನರು ನಿನ್ನನ್ನು, ‘ಪ್ರವಾದಿಗಳಲ್ಲಿ ಒಬ್ಬನು’ ಎನ್ನುತ್ತಾರೆ” ಎಂದು ಉತ್ತರಿಸಿದರು.
29 ಆಗ ಯೇಸು ಅವರಿಗೆ, “ನೀವು ನನ್ನನ್ನು ಯಾರೆಂದು ಹೇಳುತ್ತೀರಿ?” ಎಂದು ಕೇಳಿದನು.
ಕೂಡಲೇ ಪೇತ್ರನು, “ನೀನು ಬರಬೇಕಾದ ಕ್ರಿಸ್ತನು” ಎಂದು ಉತ್ತರಿಸಿದನು.
30 ಯೇಸು ತನ್ನ ಶಿಷ್ಯರಿಗೆ, “ನಾನು ಯಾರೆಂಬುದನ್ನು ಯಾರಿಗೂ ಹೇಳಬೇಡಿ” ಎಂದು ಹೇಳಿದನು.
ಯೇಸು ತನ್ನ ಮರಣದ ಕುರಿತು ಮುಂತಿಳಿಸಿದ್ದು
(ಮತ್ತಾಯ 16:21-28; ಲೂಕ 9:22-27)
31 ನಂತರ ಯೇಸು ತನ್ನ ಶಿಷ್ಯರಿಗೆ ಉಪದೇಶಿಸುತ್ತಾ “ಮನುಷ್ಯಕುಮಾರನು ಅನೇಕ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಹಿರಿಯ ಯೆಹೂದ್ಯನಾಯಕರು, ಮಹಾಯಾಜಕರು ಮತ್ತು ಧರ್ಮೋಪದೇಶಕರು ಆತನನ್ನು ತಿರಸ್ಕರಿಸಿ ಕೊಲ್ಲುವರು. ಆದರೆ ಮೂರನೆಯ ದಿನದಲ್ಲಿ ಆತನು ಸತ್ತವರೊಳಗಿಂದ ಜೀವಂತವಾಗಿ ಎದ್ದುಬರುತ್ತಾನೆ” ಎಂದು ಹೇಳಿದನು. 32 ಮುಂದೆ ಸಂಭವಿಸುವದೆಲ್ಲವನ್ನು ಯೇಸು ಅವರಿಗೆ ಹೇಳಿದನು. ಆತನು ಯಾವುದನ್ನೂ ರಹಸ್ಯವಾಗಿ ಇಡಲಿಲ್ಲ.
ಪೇತ್ರನು ಯೇಸುವನ್ನು ಸ್ವಲ್ಪದೂರ ಕರೆದೊಯ್ದು, “ನೀನು ಹಾಗೆಲ್ಲಾ ಹೇಳಕೂಡದು” ಎಂದು ಪ್ರತಿಭಟಿಸಿದನು. 33 ಆದರೆ ಯೇಸು ತನ್ನ ಶಿಷ್ಯರ ಕಡೆಗೆ ನೋಡಿ, ಪೇತ್ರನಿಗೆ, “ಸೈತಾನನೇ, ನನ್ನಿಂದ ತೊಲಗಿಹೋಗು! ನಿನ್ನ ಆಲೋಚನೆ ಮನುಷ್ಯರದೇ ಹೊರತು ದೇವರದಲ್ಲ” ಎಂದು ಗದರಿಸಿದನು.
34 ನಂತರ ಯೇಸು ಜನರನ್ನು ತನ್ನ ಬಳಿಗೆ ಕರೆದನು. ಆತನ ಶಿಷ್ಯರೂ ಅಲ್ಲಿದ್ದರು. ಯೇಸು ಅವರಿಗೆ, “ಯಾವನಿಗಾದರೂ ನನ್ನನ್ನು ಅನುಸರಿಸಲು ಮನಸ್ಸಿದ್ದರೆ, ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಬೇಕು. 35 ತನ್ನ ಪ್ರಾಣವನ್ನು ಕಾಪಾಡಿಕೊಳ್ಳಲು ಇಚ್ಛಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗಾಗಿ ಹಾಗೂ ಸುವಾರ್ತೆಗಾಗಿ ತನ್ನ ಪ್ರಾಣವನ್ನು ಕೊಡುವ ಪ್ರತಿಯೊಬ್ಬನೂ ತನ್ನ ಪ್ರಾಣವನ್ನು ನಿರಂತರವಾಗಿ ಕಾಪಾಡಿಕೊಳ್ಳುತ್ತಾನೆ. 36 ಒಬ್ಬನು ಪ್ರಪಂಚವನ್ನೆಲ್ಲಾ ಸಂಪಾದಿಸಿಕೊಂಡು ತನ್ನ ಆತ್ಮವನ್ನೇ ನಷ್ಟಪಡಿಸಿಕೊಂಡರೆ ಅದರಿಂದ ಅವನಿಗೆ ಪ್ರಯೋಜನವೇನು? 37 ಒಬ್ಬನು ತನ್ನ ಆತ್ಮವನ್ನು ಕೊಂಡುಕೊಳ್ಳಲು ಸಾಧ್ಯವೇ? 38 ವ್ಯಭಿಚಾರಿಣಿಯಂತಿರುವ ಈ ಕೆಟ್ಟ ಸಂತತಿಯವರಲ್ಲಿ ಯಾವನಾದರೂ ನನಗೂ ನನ್ನ ಉಪದೇಶಕ್ಕೂ ನಾಚಿಕೊಂಡರೆ, ಮನುಷ್ಯಕುಮಾರನಾದ ನಾನು ನನ್ನ ತಂದೆಯ ಮಹಿಮೆಯೊಂದಿಗೆ ಪರಿಶುದ್ಧ ದೇವದೂತರ ಸಮೇತವಾಗಿ ಬರುವ ಸಮಯದಲ್ಲಿ ಅವನ ಬಗ್ಗೆ ನಾಚಿಕೆಪಡುವೆನು” ಎಂದು ಹೇಳಿದನು.
ಎಲೀಫಜನ ವಾದ
4 ಆಗ ತೇಮಾನ್ಯನಾದ ಎಲೀಫಜನು ಹೀಗೆ ಉತ್ತರಿಸಿದನು:
2 “ಒಬ್ಬನು ನಿನ್ನೊಂದಿಗೆ ಮಾತಾಡತೊಡಗಿದರೆ ನಿನಗೆ ಬೇಸರವಾಗುವುದೇ?
ಸುಮ್ಮನಿರಲು ನನಗಂತೂ ಸಾಧ್ಯವಿಲ್ಲ.
3 ಯೋಬನೇ, ನೀನು ಅನೇಕರಿಗೆ ಉಪದೇಶಿಸಿರುವೆ.
ನೀನು ಬಲಹೀನನ ಕೈಗಳಿಗೆ ಶಕ್ತಿಯನ್ನು ಕೊಟ್ಟಿರುವೆ;
4 ಎಡವಿಬಿದ್ದವರನ್ನು ನಿನ್ನ ಮಾತುಗಳಿಂದ ಉದ್ಧರಿಸಿರುವೆ;
ಬಲಹೀನವಾದ ಮೊಣಕಾಲುಗಳನ್ನು ಪ್ರೋತ್ಸಾಹದಿಂದ ಬಲಗೊಳಿಸಿರುವೆ.
5 ಈಗಲಾದರೋ ನಿನಗೆ ಕೇಡು ಬಂದಿದೆ;
ಆದ್ದರಿಂದ ನೀನು ನಿರಾಶನಾಗಿರುವೆ.
ಕೇಡು ನಿನಗೆ ಬಡಿದಿರುವುದರಿಂದ
ಭ್ರಮೆಗೊಂಡಿರುವೆ.
6 ನೀನು ದೇವರಲ್ಲಿ ಭಯಭಕ್ತಿಯಿಂದಿರುವುದರಿಂದ
ಆತನಲ್ಲಿ ಭರವಸವಿಡು.
ನೀನು ನೀತಿವಂತನಾಗಿರುವುದರಿಂದ
ಅದೇ ನಿನ್ನ ನಿರೀಕ್ಷೆಯಾಗಿರಲಿ.
7 ಯೋಬನೇ, ಆಲೋಚಿಸು: ಎಂದಾದರೂ ನಿರಪರಾಧಿಯು ನಾಶವಾಗಿರುವನೇ?
ಎಂದಾದರೂ ಯಥಾರ್ಥವಂತರು ನಾಶವಾಗಿರುವರೇ?
8 ನಾನು ನೋಡಿರುವಂತೆ, ಅಧರ್ಮವನ್ನು ಮತ್ತು ಕೇಡನ್ನು ಬಿತ್ತುವವರು
ಅದನ್ನೇ ಕೊಯ್ಯುವರು.
9 ದೇವರ ಉಸಿರು ಅವರನ್ನು ಕೊಲ್ಲುತ್ತದೆ;
ಆತನ ಕೋಪದ ಗಾಳಿಯು ಅವರನ್ನು ನಾಶಮಾಡುತ್ತದೆ.
10 ದುಷ್ಟರು ಸಿಂಹಗಳಂತೆ ಗರ್ಜಿಸುತ್ತಾ ಗುರುಗುಟ್ಟುವರು.
ಆದರೆ ದೇವರು ದುಷ್ಟರನ್ನು ಸುಮ್ಮನಿರಿಸಿ, ಅವರ ಹಲ್ಲುಗಳನ್ನು
ಮುರಿದುಹಾಕುವನು.
11 ದುಷ್ಟರು ಆಹಾರವಿಲ್ಲದ ಸಿಂಹಗಳಂತಿದ್ದು ಸಾಯುವರು;
ಅವರ ಮಕ್ಕಳು ಚದರಿಹೋಗಿ ಅಳಿದುಹೋಗುವರು.
12 “ಒಂದು ಸಂದೇಶವು ನನಗೆ ರಹಸ್ಯವಾಗಿ ತಿಳಿಸಲ್ಪಟ್ಟಿತು;
ನನ್ನ ಕಿವಿಗಳಿಗೆ ಅದು ಗುಸುಗುಸು ಸದ್ದಾಗಿ ಕೇಳಿಬಂತು.
13 ಮನುಷ್ಯರಿಗೆ ಗಾಢನಿದ್ರೆ ಹತ್ತುವ ಸಮಯದಲ್ಲಿ
ರಾತ್ರಿಯ ಕನಸುಗಳಿಂದ ಯೋಚನೆಯಲ್ಲಿರುವಾಗ
14 ನನಗೆ ಎಲುಬುಗಳೆಲ್ಲಾ ನಡುಗುವಷ್ಟು
ಭಯಂಕರವಾದ ಭಯ ಉಂಟಾಯಿತು.
15 ಯಾವುದೋ ಒಂದು ಉಸಿರು ನನ್ನ ಮುಖಕ್ಕೆ ಸುಳಿಯಲು
ಮೈಯೆಲ್ಲಾ ರೋಮಾಂಚನಗೊಂಡಿತು.
16 ಯಾವುದೋ ಒಂದು ಆತ್ಮ
ನನ್ನ ಕಣ್ಣೆದುರಿನಲ್ಲಿ ಬಂದು ನಿಂತುಕೊಂಡಿತು;
ಅದು ಏನೆಂಬುದು ನನಗೆ ಗೊತ್ತಾಗಲಿಲ್ಲ.
ಸೂಕ್ಷ್ಮ ಧ್ವನಿಯೊಂದು ನನಗೆ ಕೇಳಿಬಂತು.
17 ಅದೇನೆಂದರೆ: ‘ದೇವರಿಗಿಂತಲೂ ನೀತಿವಂತನಾದ ಮನುಷ್ಯನಿರುವನೇ?
ಮನುಷ್ಯನು ತನ್ನ ಸೃಷ್ಟಿಕರ್ತನಿಗಿಂತಲೂ ಶುದ್ಧನಾಗಿರುವನೇ?
18 ದೇವರು ತನ್ನ ಪರಲೋಕದ ಸೇವಕರುಗಳಲ್ಲಿಯೂ ಭರವಸವಿಡುವುದಿಲ್ಲ.
ದೇವರು ತನ್ನ ದೂತರುಗಳಲ್ಲಿಯೂ ತಪ್ಪನ್ನು ಕಂಡುಹಿಡಿಯುವನು.
19 ಹೀಗಿರಲು ದೇವರು ಮನುಷ್ಯರಲ್ಲಿ ಎಷ್ಟೋ ತಪ್ಪುಗಳನ್ನು ಕಂಡುಹಿಡಿಯುವನು;
ಮನುಷ್ಯರು ಮಣ್ಣಿನ ಮನೆಗಳಲ್ಲಿ[a] ವಾಸಿಸುತ್ತಾರೆ.
ಈ ಮಣ್ಣಿನ ಮನೆಗಳ ಅಸ್ತಿವಾರಗಳು ಧೂಳಿನಲ್ಲಿವೆ.
ಅವರು ಹುಳಕ್ಕಿಂತಲೂ ಸುಲಭವಾಗಿ ಸಾವಿಗೀಡಾಗುವರು!
20 ಸೂರ್ಯೋದಯ ಮತ್ತು ಸೂರ್ಯಾಸ್ತಮಾನಗಳ ನಡುವೆ ಅವರು ನಜ್ಜುಗುಜ್ಜಾಗುವರು.
ಅವರು ಸತ್ತು ನಿತ್ಯ ನಾಶವಾಗುವುದನ್ನು ಯಾರೂ ಗಮನಿಸುವುದಿಲ್ಲ.
21 ಅವರ ಗುಡಾರಗಳ ಹಗ್ಗಗಳು ಬಿಚ್ಚಲ್ಪಡುವವು,
ಅವರು ಜ್ಞಾನವಿಲ್ಲದವರಾಗಿ ಸತ್ತುಹೋಗುವರು.’”
ಪವಿತ್ರಾತ್ಮನಿಗೆ ಅಧೀನವಾದ ಜೀವಿತ
8 ಆದ್ದರಿಂದ ಈಗ ಕ್ರಿಸ್ತ ಯೇಸುವಿನಲ್ಲಿರುವ ಜನರಿಗೆ ಅಪರಾಧಿಗಳೆಂದು ತೀರ್ಪಾಗುವುದಿಲ್ಲ. 2 ನನಗೆ ಅಪರಾಧಿಯೆಂದು ತೀರ್ಪಾಗದಿರುವುದೇಕೆ? ಏಕೆಂದರೆ ಕ್ರಿಸ್ತ ಯೇಸುವಿನಲ್ಲಿರುವ ಜನರಿಗೆ ಜೀವವನ್ನು ತರುವ ಪವಿತ್ರಾತ್ಮನ ನಿಯಮವು ನನ್ನನ್ನು ಪಾಪ ಮತ್ತು ಮರಣಗಳನ್ನು ತರುವ ನಿಯಮದಿಂದ ಬಿಡುಗಡೆ ಮಾಡಿತು. 3 ಧರ್ಮಶಾಸ್ತ್ರವು ನಿರ್ಬಲವಾಗಿತ್ತು. ಏಕೆಂದರೆ ನಮ್ಮ ಪಾಪಾಧೀನಸ್ವಭಾವವೇ ಅದನ್ನು ಬಲಹೀನಗೊಳಿಸಿತು. ಹೀಗಿರಲಾಗಿ, ಧರ್ಮಶಾಸ್ತ್ರವು ಮಾಡಲಾಗದ್ದನ್ನು ದೇವರು ಮಾಡಿದನು. ದೇವರು ತನ್ನ ಸ್ವಂತ ಮಗನನ್ನೇ ಪಾಪಾಧೀನವಾದ ಮಾನವ ಸ್ವಭಾವದಲ್ಲಿ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಕಳುಹಿಸಿಕೊಟ್ಟನು. ಆದಕಾರಣ ದೇವರು ಪಾಪಕ್ಕೆ ಮರಣದಂಡನೆಯನ್ನು ವಿಧಿಸಲು ಮಾನವ ಸ್ವಭಾವವನ್ನೇ ಉಪಯೋಗಿಸಿಕೊಂಡನು. 4 ಈಗ ನಮ್ಮ ಸ್ವಭಾವಕ್ಕನುಸಾರವಾಗಿ ಜೀವಿಸದೆ ಪವಿತ್ರಾತ್ಮನಿಗನುಸಾರವಾಗಿ ಜೀವಿಸುತ್ತಿರುವ ನಮ್ಮಲ್ಲಿ ಧರ್ಮಶಾಸ್ತ್ರದ ನಿಯಮಗಳು ನೆರವೇರಲೆಂದು ದೇವರು ಹೀಗೆ ಮಾಡಿದನು.
5 ತಮ್ಮ ಪಾಪಸ್ವಭಾವಕ್ಕನುಸಾರವಾಗಿ ಜೀವಿಸುವ ಜನರು ತಮ್ಮ ಪಾಪಸ್ವಭಾವವು ಬಯಸುವ ಸಂಗತಿಗಳ ಬಗ್ಗೆ ಮಾತ್ರ ಆಲೋಚಿಸುತ್ತಾರೆ. ಆದರೆ ಆತ್ಮನಿಗನುಸಾರವಾಗಿ ಜೀವಿಸುವ ಜನರು ತಮ್ಮಿಂದ ಆತ್ಮನು ಅಪೇಕ್ಷಿಸುವ ಕಾರ್ಯಗಳ ಬಗ್ಗೆ ಆಲೋಚಿಸುತ್ತಾರೆ. 6 ಒಬ್ಬನ ಆಲೋಚನೆಯು ಅವನ ಪಾಪ ಸ್ವಭಾವದ ಹಿಡಿತಕ್ಕೆ ಒಳಪಟ್ಟಿದ್ದರೆ ಅವನಿಗೆ ಆತ್ಮಿಕ ಮರಣವಾಗುತ್ತದೆ. ಆದರೆ ಒಬ್ಬನ ಆಲೋಚನೆಯು ಪವಿತ್ರಾತ್ಮನ ಹತೋಟಿಗೆ ಒಳಪಟ್ಟಿದ್ದರೆ, ಅವನಲ್ಲಿ ಜೀವವೂ ಸಮಾಧಾನವೂ ಇರುತ್ತದೆ. 7 ಏಕೆಂದರೆ ಒಬ್ಬನ ಆಲೋಚನೆಯು ಅವನ ಪಾಪಾಧೀನಸ್ವಭಾವದ ಹಿಡಿತಕ್ಕೆ ಒಳಪಟ್ಟಿದ್ದರೆ, ಅವನು ದೇವರಿಗೆ ವಿರೋಧವಾಗಿದ್ದಾನೆ. ಅವನು ದೇವರ ನಿಯಮಕ್ಕೆ ವಿಧೇಯನಾಗುವುದೂ ಇಲ್ಲ್ಲ, ವಿಧೇಯನಾಗಲು ಸಾಧ್ಯವಿರುವುದೂ ಇಲ್ಲ. 8 ತಮ್ಮ ಪಾಪಸ್ವಭಾವದ ಆಡಳಿತಕ್ಕೆ ಒಳಪಟ್ಟಿರುವ ಆ ಜನರು ದೇವರನ್ನು ಮೆಚ್ಚಿಸಲು ಸಾಧ್ಯವಿಲ್ಲ.
9 ಆದರೆ ನೀವು ನಿಮ್ಮ ಪಾಪಸ್ವಭಾವದ ಆಡಳಿತಕ್ಕೆ ಒಳಗಾಗಿಲ್ಲ. ದೇವರಾತ್ಮನು ನಿಮ್ಮಲ್ಲಿ ನಿಜವಾಗಿಯೂ ವಾಸವಾಗಿದ್ದರೆ, ನೀವು ಪವಿತ್ರಾತ್ಮನ ಆಡಳಿತಕ್ಕೆ ಒಳಗಾಗಿದ್ದೀರಿ ಯಾವನಲ್ಲಾದರೂ ಕ್ರಿಸ್ತನ ಆತ್ಮನು ಇಲ್ಲದಿದ್ದರೆ, ಅವನು ಕ್ರಿಸ್ತನಿಗೆ ಸೇರಿದವನಲ್ಲ. 10 ನಿಮ್ಮ ದೇಹವು ಪಾಪದ ದೆಸೆಯಿಂದಾಗಿ ಯಾವಾಗಲೂ ಸತ್ತದ್ದಾಗಿದೆ. ಆದರೆ ಕ್ರಿಸ್ತನು ನಿಮ್ಮಲ್ಲಿದ್ದರೆ ಆತ್ಮನು ನಿಮಗೆ ಜೀವವನ್ನು ಕೊಡುತ್ತಾನೆ. ಏಕೆಂದರೆ ಕ್ರಿಸ್ತನು ನಿಮ್ಮನ್ನು ನೀತಿವಂತರನ್ನಾಗಿ ಮಾಡಿದ್ದಾನೆ. 11 ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ ದೇವರ ಆತ್ಮನು ನಿಮ್ಮಲ್ಲಿ ವಾಸವಾಗಿದ್ದರೆ, ಸತ್ತುಹೋಗುವ ನಿಮ್ಮ ದೇಹಗಳಿಗೆ ಆತನು ಜೀವವನ್ನು ಸಹ ಕೊಡುತ್ತಾನೆ. ಕ್ರಿಸ್ತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದಾತನು ದೇವರೇ. ನಿಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮನ ಮೂಲಕ ಆತನು ನಿಮ್ಮ ದೇಹಗಳಿಗೆ ಜೀವವನ್ನು ಕೊಡುತ್ತಾನೆ.
12 ಆದ್ದರಿಂದ ನನ್ನ ಸಹೋದರ ಸಹೋದರಿಯರೇ, ನಾವು ನಮ್ಮ ಪಾಪಾಧೀನಸ್ವಭಾವದ ಆಳ್ವಿಕೆಗೆ ಒಳಗಾಗಿರಬಾರದು. ನಮ್ಮ ಪಾಪಸ್ವಭಾವದ ಬಯಕೆಗನುಸಾರವಾಗಿ ನಾವು ಜೀವಿಸಕೂಡದು. 13 ನಿಮ್ಮ ಪಾಪಸ್ವಭಾವವು ಬಯಸುವ ಕೆಟ್ಟಕಾರ್ಯಗಳನ್ನು ಮಾಡುವುದಕ್ಕಾಗಿ ನೀವು ನಿಮ್ಮ ಜೀವಿತವನ್ನು ಉಪಯೋಗಿಸಿದರೆ, ನೀವು ಆತ್ಮಿಕವಾಗಿ ಸಾಯುವಿರಿ. ಆದರೆ ನೀವು ನಿಮ್ಮ ದೇಹದ ಮೂಲಕವಾಗಿ ಮಾಡುವ ಕೆಟ್ಟಕಾರ್ಯಗಳನ್ನು ಪವಿತ್ರಾತ್ಮನ ಸಹಾಯದಿಂದ ನಿಲ್ಲಿಸಿದರೆ ಹೊಸ ಜೀವಿತವನ್ನು ಹೊಂದಿಕೊಳ್ಳುವಿರಿ.
14 ಯಾರು ತಮ್ಮನ್ನು ದೇವರಾತ್ಮನ ನಡೆಸುವಿಕೆಗೆ ಒಪ್ಪಿಸಿಕೊಡುತ್ತಾರೊ ಅವರೇ ದೇವರ ಮಕ್ಕಳಾಗಿದ್ದಾರೆ. 15 ನಾವು ಹೊಂದಿಕೊಂಡಿರುವ ಆತ್ಮನು ನಮ್ಮನ್ನು ಮತ್ತೆ ಗುಲಾಮರನ್ನಾಗಿ ಮಾಡುವವನಲ್ಲ ಮತ್ತು ನಮ್ಮಲ್ಲಿ ಭಯವನ್ನು ಹುಟ್ಟಿಸುವವನಲ್ಲ. ನಾವು ಹೊಂದಿರುವ ಪವಿತ್ರಾತ್ಮನು ನಮ್ಮನ್ನು ದೇವರ ಮಕ್ಕಳನ್ನಾಗಿ ಮಾಡುತ್ತಾನೆ. ಈ ಆತ್ಮನ ಮೂಲಕವಾಗಿ ನಾವು, “ಅಪ್ಪಾ ತಂದೆಯೇ” ಎಂದು ಹೇಳುತ್ತೇವೆ. 16 ನಾವು ದೇವರ ಮಕ್ಕಳಾಗಿದ್ದೇವೆಂದು ಪವಿತ್ರಾತ್ಮನು ತಾನೇ ನಮ್ಮ ಅಂತರಾತ್ಮದೊಂದಿಗೆ ಹೇಳುತ್ತಾನೆ. 17 ನಾವು ದೇವರ ಮಕ್ಕಳಾಗಿದ್ದರೆ, ಬಾಧ್ಯರಾಗಿದ್ದೇವೆ. ಹೌದು, ದೇವರಿಗೆ ಬಾಧ್ಯರಾಗಿದ್ದೇವೆ ಮತ್ತು ಕ್ರಿಸ್ತನೊಂದಿಗೆ ಬಾಧ್ಯರಾಗಿದ್ದೇವೆ. ಹೇಗೆಂದರೆ, ಕ್ರಿಸ್ತನ ಬಾಧೆಯಲ್ಲಿ ನಾವು ಪಾಲುಗಾರರಾಗುವುದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.
ಭವಿಷ್ಯತ್ತಿನಲ್ಲಿ ನಮಗೆ ಮಹಿಮೆ ದೊರೆಯುವುದು
18 ಈಗ ನಾವು ಕಷ್ಟಸಂಕಟಗಳನ್ನು ಸಹಿಸಿಕೊಳ್ಳುತ್ತೇವೆ. ಆದರೆ ನಮಗೆ ಮುಂದೆ ಕೊಡಲ್ಪಡುವ ಮಹಿಮೆಗೆ ಈ ಕಷ್ಟಸಂಕಟಗಳನ್ನು ಹೋಲಿಸಿದರೆ ಇವು ಗಣನೆಗೆ ಬರುವುದಿಲ್ಲ. 19 ದೇವರು ತನ್ನ ಮಕ್ಕಳನ್ನು ಪ್ರತ್ಯಕ್ಷಪಡಿಸುವ ಕಾಲಕ್ಕಾಗಿ ದೇವರ ಸರ್ವಸೃಷ್ಟಿಯು ಉತ್ಸುಕತೆಯಿಂದ ಎದುರು ನೋಡುತ್ತಿದೆ. ಅದು ಸಂಭವಿಸಲೆಂದು ಇಡೀ ಜಗತ್ತೇ ಹಂಬಲಿಸುತ್ತಿದೆ. 20 ಸರ್ವಸೃಷ್ಟಿಯು ನಿರರ್ಥಕತೆಗೆ ಒಳಗಾಯಿತು. ಹೀಗಾದದ್ದು ಅದರ ಸ್ವಂತ ಇಚ್ಛೆಯಿಂದಲ್ಲ, ದೇವರ ಇಚ್ಛೆಯಿಂದಲೇ. ಆದರೂ ಅದಕ್ಕೆ ನಿರೀಕ್ಷೆಯಿತ್ತು. ಅದೇನೆಂದರೆ: 21 ಸರ್ವಸೃಷ್ಟಿಯು ನಾಶನದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಸ್ವಾತಂತ್ರವನ್ನೂ ಮಹಿಮೆಯನ್ನೂ ಹೊಂದಿಕೊಳ್ಳುತ್ತದೆ ಎಂಬುದೇ.
22 ದೇವರು ಸೃಷ್ಟಿಮಾಡಿದ ಪ್ರತಿಯೊಂದೂ, ಪ್ರಸವವೇದನೆ ಪಡುತ್ತಿರುವ ಸ್ತ್ರೀಯಂತೆ ನೋವಿನಿಂದ ನರಳುತ್ತಾ ಇಂದಿನವರೆಗೂ ಕಾಯುತ್ತಿದೆ ಎಂಬುದು ನಮಗೆ ಗೊತ್ತಿದೆ. 23 ಜಗತ್ತು ಮಾತ್ರವೇ ಅಲ್ಲ, ನಾವು ಸಹ ನಮ್ಮೊಳಗೆ ನೋವಿನಿಂದ ನರಳುತ್ತಾ ಕಾಯುತ್ತಿದ್ದೇವೆ. ದೇವರ ವಾಗ್ದಾನದ ಮೊದಲನೆ ಭಾಗವಾಗಿರುವ ಪವಿತ್ರಾತ್ಮನನ್ನು ನಾವು ಹೊಂದಿಕೊಂಡಿದ್ದೇವೆ. ನಮ್ಮನ್ನು ತನ್ನ ಸ್ವಂತ ಮಕ್ಕಳನ್ನಾಗಿ ಮಾಡಿಕೊಳ್ಳಲು ದೇವರು ಮಾಡುತ್ತಿರುವ ಕಾರ್ಯವು ಸಂಪೂರ್ಣಗೊಳ್ಳುವುದನ್ನೇ ಅಂದರೆ, ನಮ್ಮ ದೇಹಗಳಿಗಾಗುವ ಬಿಡುಗಡೆಯನ್ನೇ ನಾವು ಎದುರು ನೋಡುತ್ತಿದ್ದೇವೆ. 24 ನಾವು ರಕ್ಷಣೆ ಹೊಂದಿದ್ದೇವೆ ಮತ್ತು ನಮಗಿನ್ನೂ ಆ ನಿರೀಕ್ಷೆಯಿದೆ. ನಾವು ಯಾವುದಕ್ಕೋಸ್ಕರ ಕಾಯುತ್ತಿದ್ದೇವೊ ಅದನ್ನು ಕಾಣಬಲ್ಲವರಾಗಿದ್ದರೆ, ಅದು ನಿಜವಾದ ನಿರೀಕ್ಷೆಯಲ್ಲ. ಜನರು ತಾವು ಈಗಾಗಲೇ ಹೊಂದಿರುವ ಯಾವುದನ್ನೂ ನಿರೀಕ್ಷಿಸುವುದಿಲ್ಲ. 25 ಆದರೆ ನಾವಿನ್ನೂ ಹೊಂದಿಕೊಂಡಿಲ್ಲದೆ ಇರುವುದನ್ನು ನಿರೀಕ್ಷಿಸುತ್ತಾ ತಾಳ್ಮೆಯಿಂದ ಅದಕ್ಕಾಗಿ ಕಾಯುತ್ತಿದ್ದೇವೆ.
26 ನಾವು ಬಲಹೀನರಾಗಿರುವುದರಿಂದ ನಮ್ಮ ಬಲಹೀನತೆಯಲ್ಲಿ ಪವಿತ್ರಾತ್ಮನು ನಮಗೆ ಸಹಾಯ ಮಾಡುತ್ತಾನೆ. ನಾವು ಹೇಗೆ ಪ್ರಾರ್ಥಿಸಬೇಕು ಮತ್ತು ಯಾವುದಕ್ಕಾಗಿ ಪ್ರಾರ್ಥಿಸಬೇಕು ಎಂಬುದು ನಮಗೆ ತಿಳಿಯದು. ಆದರೆ ಪವಿತ್ರಾತ್ಮನು ತಾನೇ ನಮಗೋಸ್ಕರ ದೇವರಲ್ಲಿ ವಿವರಿಸಲಾಗದ ಅಂತರ್ಭಾವದಿಂದ ಬೇಡಿಕೊಳ್ಳುತ್ತಾನೆ. 27 ಅಂತರಂಗವನ್ನು ನೋಡಬಲ್ಲ ದೇವರಿಗೆ ಪವಿತ್ರಾತ್ಮನ ಮನಸ್ಸಿನಲ್ಲಿರುವುದೆಲ್ಲಾ ಗೊತ್ತಿದೆ, ಏಕೆಂದರೆ ದೇವರ ಚಿತ್ತಕ್ಕನುಸಾರವಾಗಿಯೇ ಪವಿತ್ರಾತ್ಮನು ದೇವಜನರಿಗೋಸ್ಕರ ದೇವರಲ್ಲಿ ವಿಜ್ಞಾಪಿಸುತ್ತಾನೆ.
28 ದೇವರು ತನ್ನನ್ನು ಪ್ರೀತಿಸುವವರ ಒಳ್ಳೆಯದಕ್ಕಾಗಿ ಪ್ರತಿಯೊಂದು ಕಾರ್ಯವನ್ನೂ ಅನುಕೂಲ ಮಾಡುತ್ತಾನೆಂದು ನಮಗೆ ಗೊತ್ತಿದೆ. ಆ ಜನರನ್ನು ದೇವರೇ ಆರಿಸಿಕೊಂಡನು, ಏಕೆಂದರೆ ಅದು ಆತನ ಯೋಜನೆಯಾಗಿತ್ತು. 29 ದೇವರು ತಾನು ಜಗತ್ತನ್ನು ಸೃಷ್ಟಿಸುವುದಕ್ಕಿಂತ ಮೊದಲೇ ಆ ಜನರನ್ನು ಬಲ್ಲವನಾಗಿದ್ದನು ಮತ್ತು ಆ ಜನರು ತನ್ನ ಮಗನ ಅನುರೂಪಿಗಳಾಗಿರಬೇಕೆಂದು ನಿರ್ಧರಿಸಿದನು. ಹೀಗಿರಲಾಗಿ, ಅನೇಕ ಸಹೋದರ ಸಹೋದರಿಯರಲ್ಲಿ ಯೇಸುವೇ ಹಿರಿಯವನಾಗಿದ್ದಾನೆ. 30 ಆ ಜನರು ತನ್ನ ಮಗನ ಅನುರೂಪಿಗಳಾಗಿರಬೇಕೆಂಬ ತನ್ನ ಯೋಜನೆಗನುಸಾರವಾಗಿ ದೇವರು ಅವರನ್ನು ಕರೆದು, ನೀತಿವಂತರನ್ನಾಗಿ ಮಾಡಿ, ಅವರಿಗೆ ತನ್ನ ಮಹಿಮೆಯನ್ನು ಕೊಟ್ಟನು.
ಕ್ರಿಸ್ತ ಯೇಸುವಿನಲ್ಲಿ ದೇವರ ಪ್ರೀತಿ
31 ಹೀಗಿರುವಲ್ಲಿ ಇದರ ಬಗ್ಗೆ ನಾವು ಏನು ಹೇಳೋಣ? ದೇವರು ನಮ್ಮೊಂದಿಗೆ ಇರುವಾಗ, ನಮ್ಮನ್ನು ಯಾರೂ ಸೋಲಿಸಲಾರರು. 32 ದೇವರು ತನ್ನ ಸ್ವಂತ ಮಗನನ್ನೇ ಉಳಿಸಿಕೊಳ್ಳದೆ ನಮ್ಮೆಲ್ಲರಿಗೊಸ್ಕರ ಕೊಟ್ಟನು. ಆದ್ದರಿಂದ ಈಗ, ದೇವರು ಯೇಸುವಿನೊಂದಿಗೆ ನಮಗೆ ಎಲ್ಲವನ್ನು ಖಂಡಿತವಾಗಿ ಕೊಡುತ್ತಾನೆ. 33 ದೇವರು ಆರಿಸಿಕೊಂಡಿರುವ ಜನರ ಮೇಲೆ ಯಾರು ದೋಷಾರೋಪಣೆ ಮಾಡಬಲ್ಲರು? ಯಾರೂ ಇಲ್ಲ! ಅವರನ್ನು ನೀತಿವಂತರನ್ನಾಗಿ ಮಾಡುವಾತನು ದೇವರೇ. 34 ದೇವಜನರು ದೋಷಿಗಳೆಂದು ಯಾರು ಹೇಳಬಲ್ಲರು? ಯಾರು ಇಲ್ಲ! ಕ್ರಿಸ್ತ ಯೇಸು ನಮಗೋಸ್ಕರ ಪ್ರಾಣಕೊಟ್ಟನು. ಅಷ್ಟೇ ಅಲ್ಲ, ಆತನು ಸತ್ತವರೊಳಗಿಂದ ಜೀವಂತನಾಗಿ ಎದ್ದುಬಂದನು. ಈಗ ಆತನು ದೇವರ ಬಲಗಡೆಯಲ್ಲಿದ್ದಾನೆ ಮತ್ತು ನಮಗೋಸ್ಕರ ದೇವರನ್ನು ಬೇಡಿಕೊಳ್ಳುತ್ತಿದ್ದಾನೆ. 35 ಕ್ರಿಸ್ತನ ಪ್ರೀತಿಯಿಂದ ಯಾವುದು ನಮ್ಮನ್ನು ಬೇರ್ಪಡಿಸಬಲ್ಲದು? ಕಷ್ಟಸಂಕಟಗಳಾಗಲಿ ಇಕ್ಕಟ್ಟುಗಳಾಗಲಿ ಹಿಂಸೆಯಾಗಲಿ ಆಹಾರವಿಲ್ಲದಿರುವುದಾಗಲಿ ಬಟ್ಟೆಯಿಲ್ಲದಿರುವುದಾಗಲಿ ಅಪಾಯವಾಗಲಿ ಮರಣವಾಗಲಿ ನಮ್ಮನ್ನು ಕ್ರಿಸ್ತನ ಪ್ರೀತಿಯಿಂದ ಬೇರ್ಪಡಿಸಬಲ್ಲವೇ? ಇಲ್ಲ! 36 ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ:
“ನಿನಗೋಸ್ಕರವಾಗಿ ನಾವು ಎಲ್ಲಾ ಸಮಯಗಳಲ್ಲಿ ಸಾವಿನ ದವಡೆಯಲ್ಲಿದ್ದೇವೆ.
ಕೊಯ್ಯಲು ಕೊಂಡೊಯ್ಯುವ ಕುರಿಗಳಿಗಿಂತ ಕಡೆಗಣಿಸಲ್ಪಟ್ಟಿದ್ದೇವೆ.”(A)
37 ಆದರೆ ನಮಗೋಸ್ಕರ ತನ್ನ ಪ್ರೀತಿಯನ್ನು ತೋರಿಸಿದ ದೇವರ ಮೂಲಕವಾಗಿ ಈ ಎಲ್ಲಾ ಸಂಗತಿಗಳಲ್ಲಿ ನಮಗೆ ಪೂರ್ಣ ಜಯವಿದೆ. 38-39 ಹೌದು, ದೇವರ ಪ್ರೀತಿಯಿಂದ ನಮ್ಮನ್ನು ಯಾವುದೂ ಬೇರ್ಪಡಿಸಲಾರದೆಂದು ನನಗೆ ನಿಶ್ಚಯವಾಗಿ ತಿಳಿದಿದೆ. ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ದುರಾತ್ಮಗಳಾಗಲಿ ಈಗಿನ ಸಂಗತಿಗಳಾಗಲಿ ಮುಂದಿನ ಸಂಗತಿಗಳಾಗಲಿ ಯಾವ ಶಕ್ತಿಗಳೇ ಆಗಲಿ ಮೇಲಿನ ಸಂಗತಿಗಳಾಗಲಿ ಕೆಳಗಿನ ಸಂಗತಿಗಳಾಗಲಿ ಅಥವಾ ಇಡೀ ಜಗತ್ತಿನಲ್ಲಿರುವ ಯಾವುದೇ ಸಂಗತಿಗಳಾಗಲಿ ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ.
Kannada Holy Bible: Easy-to-Read Version. All rights reserved. © 1997 Bible League International