M’Cheyne Bible Reading Plan
ಕನಸುಗಾರ ಯೋಸೇಫ
37 ಯಾಕೋಬನು ಕಾನಾನ್ ದೇಶದಲ್ಲಿ ನೆಲೆಸಿದನು. ಅವನ ತಂದೆ ಆ ದೇಶದಲ್ಲೇ ವಾಸವಾಗಿದ್ದನು. 2 ಯಾಕೋಬನ ಕುಟುಂಬದ ಚರಿತ್ರೆಯಿದು:
ಯೋಸೇಫನು ಹದಿನೇಳು ವರ್ಷದ ಯೌವನಸ್ಥನಾಗಿದ್ದನು. ಆಡುಕುರಿಗಳನ್ನು ಸಾಕುವುದು ಅವನ ಕಸುಬಾಗಿತ್ತು. ತನ್ನ ಅಣ್ಣಂದಿರೊಡನೆ ಅಂದರೆ ಬಿಲ್ಹಾ ಮತ್ತು ಜಿಲ್ಪಾ ಎಂಬ ತನ್ನ ಮಲತಾಯಿಗಳ ಮಕ್ಕಳೊಡನೆ ಯೋಸೇಫನು ಆಡುಕುರಿಗಳನ್ನು ಮೇಯಿಸುತ್ತಿದ್ದನು. ಅವರೇನಾದರೂ ಕೆಟ್ಟದ್ದನ್ನು ಮಾಡಿದರೆ ಯೋಸೇಫನು ತಂದೆಗೆ ತಿಳಿಸುತ್ತಿದ್ದನು. 3 ಇಸ್ರೇಲನು ತುಂಬ ಮುಪ್ಪಿನವನಾಗಿದ್ದಾಗ ಯೋಸೇಫನು ಹುಟ್ಟಿದ್ದರಿಂದ ಇಸ್ರೇಲನು ತನ್ನ ಬೇರೆ ಗಂಡುಮಕ್ಕಳಿಗಿಂತಲೂ ಹೆಚ್ಚಾಗಿ ಯೋಸೇಫನನ್ನು ಪ್ರೀತಿಸಿದನು. ಯಾಕೋಬನು ತನ್ನ ಮಗನಿಗೆ ಸುಂದರವಾದ ನಿಲುವಂಗಿಯನ್ನು ಮಾಡಿಸಿ ಕೊಟ್ಟಿದ್ದನು. 4 ತಮ್ಮ ತಂದೆಗೆ ಯೋಸೇಫನ ಮೇಲೆ ಹೆಚ್ಚು ಪ್ರೀತಿಯಿರುವುದನ್ನು ಗಮನಿಸಿದ ಯೋಸೇಫನ ಅಣ್ಣಂದಿರು ಯೋಸೇಫನನ್ನು ದ್ವೇಷಿಸತೊಡಗಿ ಅವನೊಡನೆ ಸ್ನೇಹಭಾವದಿಂದ ಮಾತಾಡುತ್ತಿರಲಿಲ್ಲ.
5 ಒಂದು ದಿನ ಯೋಸೇಫನು ವಿಶೇಷವಾದ ಕನಸನ್ನು ಕಂಡನು. ಯೋಸೇಫನು ಈ ಕನಸನ್ನು ತನ್ನ ಅಣ್ಣಂದಿರಿಗೆ ತಿಳಿಸಿದಾಗ ಅವರು ಅವನನ್ನು ಮತ್ತಷ್ಟು ದ್ವೇಷಿಸತೊಡಗಿದರು.
6 ಯೋಸೇಫನು ಅವರಿಗೆ, “ನನಗೆ ಒಂದು ಕನಸಾಯಿತು. 7 ನಾವೆಲ್ಲರು ಹೊಲದಲ್ಲಿ ಗೋಧಿಯ ಸಿವುಡುಗಳನ್ನು ಕಟ್ಟುತ್ತಿದ್ದೆವು. ಆಗ ನನ್ನ ಸಿವುಡು ಎದ್ದುನಿಂತಿತು; ನನ್ನ ಸಿವುಡಿನ ಸುತ್ತಲೂ ನಿಮ್ಮ ಸಿವುಡುಗಳೆಲ್ಲಾ ಎದ್ದುನಿಂತುಕೊಂಡು ನನ್ನ ಸಿವುಡಿಗೆ ಅಡ್ಡಬಿದ್ದವು” ಎಂದು ಹೇಳಿದನು.
8 ಅವನ ಅಣ್ಣಂದಿರು, “ನೀನು ರಾಜನಾಗಿ ನಮ್ಮನ್ನು ಆಳುವೆ ಎಂಬುದು ಇದರ ಅರ್ಥವೆಂದು ನಿನ್ನ ಆಲೋಚನೆಯೋ?” ಎಂದು ಪ್ರಶ್ನಿಸಿ ಆ ಕನಸಿನ ನಿಮಿತ್ತ ಅವನನ್ನು ಮತ್ತಷ್ಟು ದ್ವೇಷಿಸತೊಡಗಿದರು.
9 ಆಮೇಲೆ ಯೋಸೇಫನಿಗೆ ಮತ್ತೊಂದು ಕನಸಾಯಿತು. ಯೋಸೇಫನು ಈ ಕನಸಿನ ಬಗ್ಗೆಯೂ ತನ್ನ ಅಣ್ಣಂದಿರಿಗೆ ತಿಳಿಸಿದನು. ಯೋಸೇಫನು ಅವರಿಗೆ, “ನನಗೆ ಮತ್ತೊಂದು ಕನಸಾಯಿತು. ಸೂರ್ಯ, ಚಂದ್ರ ಮತ್ತು ಹನ್ನೊಂದು ನಕ್ಷತ್ರಗಳು ನನಗೆ ಅಡ್ಡಬೀಳುವುದನ್ನು ಕಂಡೆನು” ಎಂದು ಹೇಳಿದನು.
10 ಯೋಸೇಫನು ತನ್ನ ತಂದೆಗೂ ಸಹ ಈ ಕನಸಿನ ಬಗ್ಗೆ ತಿಳಿಸಿದನು. ಆದರೆ ಅವನ ತಂದೆ ಅವನನ್ನು ಗದರಿಸಿ, “ಇದೆಂಥಾ ಕನಸು? ನಾನೂ ನಿನ್ನ ತಾಯಿಯೂ ಮತ್ತು ನಿನ್ನ ಸಹೋದರರೂ ನಿನಗೆ ಅಡ್ಡಬೀಳುತ್ತೇವೆಂದು ನಂಬುತ್ತೀಯೋ?” ಎಂದು ಕೇಳಿದನು. 11 ಯೋಸೇಫನ ಅಣ್ಣಂದಿರಿಗೆ ಅವನ ಮೇಲೆ ಹೊಟ್ಟೆಕಿಚ್ಚು ಹೆಚ್ಚಾಯಿತು. ಆದರೆ ಯೋಸೇಫನ ತಂದೆಯು ಆ ಕನಸುಗಳ ಬಗ್ಗೆ ಆಶ್ಚರ್ಯಚಕಿತನಾಗಿ ಆಲೋಚಿಸತೊಡಗಿದನು.
12 ಒಂದು ದಿನ ಯೋಸೇಫನ ಅಣ್ಣಂದಿರು ತಮ್ಮ ತಂದೆಯ ಆಡುಕುರಿಗಳನ್ನು ಕಾಯಲು ಶೆಕೆಮಿಗೆ ಹೋದರು. 13 ಇಸ್ರೇಲನು ಯೋಸೇಫನಿಗೆ, “ಶೆಕೆಮಿಗೆ ಹೋಗು. ನಿನ್ನ ಅಣ್ಣಂದಿರು ಅಲ್ಲಿ ನನ್ನ ಆಡುಕುರಿಗಳನ್ನು ಮೇಯಿಸುತ್ತಿದ್ದಾರೆ” ಎಂದು ಹೇಳಿದನು.
ಯೋಸೇಫನು, “ಸರಿ, ಹೋಗುವೆನು” ಎಂದು ಉತ್ತರಿಸಿದನು.
14 ಇಸ್ರೇಲನು, “ನಿನ್ನ ಅಣ್ಣಂದಿರ ಮತ್ತು ಆಡುಕುರಿಗಳ ಕ್ಷೇಮವನ್ನು ವಿಚಾರಿಸಿಕೊಂಡು ಬಂದು ನನಗೆ ತಿಳಿಸು” ಎಂದು ಹೇಳಿ ಅವನನ್ನು ಹೆಬ್ರೋನಿನ ಕಣಿವೆಯಿಂದ ಶೆಕೆಮಿಗೆ ಕಳುಹಿಸಿಕೊಟ್ಟನು.
15 ಶೆಕೆಮಿನಲ್ಲಿ ದಾರಿತಪ್ಪಿ ಯೋಸೇಫನು ಹೊಲಗಳಲ್ಲಿ ಅಲೆದಾಡುತ್ತಿರಲು ಅವನನ್ನು ಕಂಡ ಒಬ್ಬನು, “ಏನು ಹುಡುಕುತ್ತಿರುವೆ?” ಎಂದು ಕೇಳಿದನು.
16 ಯೋಸೇಫನು, “ನನ್ನ ಅಣ್ಣಂದಿರನ್ನು ಹುಡುಕುತ್ತಿದ್ದೇನೆ. ಅವರು ತಮ್ಮ ಆಡುಕುರಿಗಳನ್ನು ಎಲ್ಲಿ ಮೇಯಿಸುತ್ತಿದ್ದಾರೆ?” ಎಂದು ಕೇಳಿದನು.
17 ಅದಕ್ಕೆ ಅವನು, “ಅವರು ಇಲ್ಲಿಂದ ಹೊರಟುಹೋದರು. ದೋತಾನಿಗೆ ಹೋಗೋಣ ಎಂದು ಅವರು ಮಾತಾಡಿಕೊಳ್ಳುವುದನ್ನು ನಾನು ಕೇಳಿದೆ” ಎಂದು ಹೇಳಿದನು. ಆದ್ದರಿಂದ ಯೋಸೇಫನು ಅವರನ್ನು ಹುಡುಕುತ್ತಾ ಹೋಗಿ ದೋತಾನಿನಲ್ಲಿ ಅವರನ್ನು ಕಂಡನು.
ಯೋಸೇಫನನ್ನು ಗುಲಾಮತನಕ್ಕೆ ಮಾರಿದ್ದು
18 ಯೋಸೇಫನನ್ನು ಬಹುದೂರದಿಂದಲೇ ಕಂಡ ಅವನ ಅಣ್ಣಂದಿರು ಅವನನ್ನು ಕೊಲ್ಲಲು ಒಂದು ಉಪಾಯ ಮಾಡಿದರು. 19 ಅವರು ಒಬ್ಬರಿಗೊಬ್ಬರು, “ಅಗೋ, ಅಲ್ಲಿ ಬರುತ್ತಿದ್ದಾನೆ ಕನಸುಗಾರನಾದ ಯೋಸೇಫ. 20 ಅವನನ್ನು ಕೊಲ್ಲಲು ಇದೇ ತಕ್ಕ ಸಮಯ. ಅವನನ್ನು ಕೊಂದು ನೀರಿಲ್ಲದ ಬಾವಿಯೊಳಗೆ ದಬ್ಬಿ, ಕ್ರೂರ ಪ್ರಾಣಿಯೊಂದು ಅವನನ್ನು ತಿಂದುಬಿಟ್ಟಿತೆಂದು ನಮ್ಮ ತಂದೆಗೆ ಹೇಳೋಣ. ಆಗ ಅವನ ಕನಸುಗಳೆಲ್ಲ ಹೇಗೆ ನಿಜವಾಗುತ್ತವೊ ನೋಡೋಣ” ಎಂದು ಮಾತಾಡಿಕೊಂಡರು.
21 ಆದರೆ ರೂಬೇನನು ಅವರಿಗೆ, “ಅವನನ್ನು ಕೊಲ್ಲಬೇಡಿ; 22 ಅರಣ್ಯದಲ್ಲಿರುವ ಬರಿದಾದ ಬಾವಿಗೆ ಅವನನ್ನು ನೂಕಿಬಿಡಿ; ಆದರೆ ಅವನಿಗೆ ನೋವು ಮಾಡಬೇಡಿ” ಎಂದು ಹೇಳಿದನು. ತರುವಾಯ ಯೋಸೇಫನನ್ನು ಬಾವಿಯಿಂದ ಮೇಲೆತ್ತಿ ತಂದೆಗೆ ಅವನನ್ನು ಒಪ್ಪಿಸಬೇಕೆಂಬುದೇ ರೂಬೇನನ ಅಪೇಕ್ಷೆಯಾಗಿತ್ತು. 23 ಯೋಸೇಫನು ಬಂದಾಗ ಅವನ ಅಣ್ಣಂದಿರು ಅವನನ್ನು ಹಿಡಿದು ಅವನ ನಿಲುವಂಗಿಯನ್ನು ಹರಿದುಹಾಕಿ 24 ನೀರಿಲ್ಲದ ಒಂದು ಬಾವಿಯೊಳಗೆ ತಳ್ಳಿದರು.
25 ಯೋಸೇಫನು ಬಾವಿಯೊಳಗಿದ್ದಾಗ, ಅವನ ಅಣ್ಣಂದಿರು ಊಟಕ್ಕೆ ಕುಳಿತುಕೊಂಡರು. ಅವರು ಕಣ್ಣೆತ್ತಿ ನೋಡಿದಾಗ ಗಿಲ್ಯಾದಿನಿಂದ ಈಜಿಪ್ಟಿಗೆ ಹೋಗುತ್ತಿದ್ದ ವ್ಯಾಪಾರಿಗಳನ್ನು ಕಂಡರು. ಅವರ ಒಂಟೆಗಳು ಅನೇಕ ಬಗೆಯ ಸಾಂಬಾರ ಪದಾರ್ಥಗಳನ್ನು ಮತ್ತು ಬೆಲೆಬಾಳುವ ವಸ್ತುಗಳನ್ನು ಹೊತ್ತುಕೊಂಡು ಹೋಗುತ್ತಿದ್ದವು. 26 ಆದ್ದರಿಂದ ಯೆಹೂದನು ತನ್ನ ಸಹೋದರರಿಗೆ, “ನಾವು ನಮ್ಮ ತಮ್ಮನನ್ನು ಕೊಂದು ಅವನ ಮರಣವನ್ನು ಮರೆಮಾಡಿದರೆ ನಮಗಾಗುವ ಲಾಭವೇನು? 27 ಈ ವ್ಯಾಪಾರಿಗಳಿಗೆ ನಾವು ಅವನನ್ನು ಮಾರಿದರೆ ನಮಗೆ ಹೆಚ್ಚು ಲಾಭವಾಗುವುದು; ಆಮೇಲೆ ನಮ್ಮ ತಮ್ಮನನ್ನು ಕೊಂದ ಅಪರಾಧವೂ ನಮ್ಮ ಮೇಲಿರುವುದಿಲ್ಲ” ಎಂದು ಹೇಳಿದನು. ಅದಕ್ಕೆ ಉಳಿದ ಸಹೋದರರೆಲ್ಲ ಒಪ್ಪಿಕೊಂಡರು. 28 ಮಿದ್ಯಾನಿನ ವ್ಯಾಪಾರಿಗಳು ಸಮೀಪಿಸಿದಾಗ, ಅಣ್ಣಂದಿರು ಯೋಸೇಫನನ್ನು ಬಾವಿಯೊಳಗಿಂದ ಹೊರತೆಗೆದು ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ ಮಾರಿದರು. ವ್ಯಾಪಾರಿಗಳು ಯೋಸೇಫನನ್ನು ಈಜಿಪ್ಟಿಗೆ ಕೊಂಡೊಯ್ದರು.
29 ಆ ಸಮಯದಲ್ಲಿ ರೂಬೇನನು ತನ್ನ ಸಹೋದರರೊಡನೆ ಇರಲಿಲ್ಲ. ಅವರು ಯೋಸೇಫನನ್ನು ಮಾರಿದ್ದು ಅವನಿಗೆ ಗೊತ್ತಿರಲಿಲ್ಲ. ರೂಬೇನನು ಬಾವಿಗೆ ಹಿಂತಿರುಗಿ ಬಂದಾಗ, ಯೋಸೇಫನನ್ನು ಅಲ್ಲಿ ಕಾಣದೆ ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನು. 30 ರೂಬೇನನು ತನ್ನ ಸಹೋದರರ ಬಳಿಗೆ ಹೋಗಿ, “ಹುಡುಗನು ಬಾವಿಯೊಳಗೆ ಇಲ್ಲ. ಈಗ ನಾನೇನು ಮಾಡಲಿ?” ಎಂದು ಕೇಳಿದನು. 31 ಬಳಿಕ ಅವರು ಒಂದು ಆಡನ್ನು ಕತ್ತರಿಸಿ ಆಡಿನ ರಕ್ತವನ್ನು ಯೋಸೇಫನ ಸುಂದರವಾದ ನಿಲುವಂಗಿಯ ಮೇಲೆ ಹಾಕಿದರು. 32 ಬಳಿಕ ಆ ನಿಲುವಂಗಿಯನ್ನು ತಮ್ಮ ತಂದೆಯ ಬಳಿಗೆ ತೆಗೆದುಕೊಂಡು ಹೋಗಿ, “ನಾವು ಈ ನಿಲುವಂಗಿಯನ್ನು ಕಂಡೆವು. ಇದು ಯೋಸೇಫನ ನಿಲುವಂಗಿಯೋ?” ಎಂದು ಕೇಳಿದರು.
33 ತಂದೆಯು ಆ ನಿಲುವಂಗಿಯನ್ನು ನೋಡಿ ಅದನ್ನು ಗುರುತಿಸಿ, “ಹೌದು, ಇದು ಯೋಸೇಫನದೇ. ಯಾವುದೋ ಕ್ರೂರ ಪ್ರಾಣಿಯ ಬಾಯಿಗೆ ತುತ್ತಾದನು” ಎಂದು ಹೇಳಿ 34 ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು ಗೋಣಿತಟ್ಟನ್ನು ಸುತ್ತಿಕೊಂಡು ಬಹುದಿನಗಳವರೆಗೆ ದುಃಖಪಟ್ಟನು. 35 ಯಾಕೋಬನ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಎಷ್ಟೇ ಸಂತೈಸಿದರೂ ಯಾಕೋಬನಿಗೆ ಆದರಣೆಯಾಗಲಿಲ್ಲ. ಯಾಕೋಬನು ಅವರಿಗೆ, “ನಾನು ಸಾಯುವ ತನಕ ನನ್ನ ಮಗನಿಗಾಗಿ ದುಃಖಪಡುವೆ” ಎಂದು ಹೇಳಿ ದುಃಖಿಸುತ್ತಲೇ ಇದ್ದನು.
36 ಮಿದ್ಯಾನಿನ ವ್ಯಾಪಾರಿಗಳು ಯೋಸೇಫನನ್ನು ಈಜಿಪ್ಟಿನಲ್ಲಿ ಮಾರಿದರು. ಅವರು ಅವನನ್ನು ಫರೋಹನ ಕಾವಲುಗಾರರಿಗೆ ನಾಯಕನಾಗಿದ್ದ ಪೋಟೀಫರನಿಗೆ ಮಾರಿದರು.
ದೇವರ ಧರ್ಮಶಾಸ್ತ್ರ ಮತ್ತು ಜನರ ಸ್ವನಿಯಮ
(ಮತ್ತಾಯ 15:1-20)
7 ಕೆಲವು ಫರಿಸಾಯರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಿಂದ ಬಂದರು. ಅವರು ಯೇಸುವಿನ ಸುತ್ತಲೂ ಒಟ್ಟಿಗೆ ಸೇರಿದರು. 2 ಯೇಸುವಿನ ಶಿಷ್ಯರಲ್ಲಿ ಕೆಲವರು ಕೈಗಳನ್ನು ತೊಳೆಯದೆ[a] ಅಶುದ್ಧವಾದ ಕೈಗಳಿಂದ ಊಟ ಮಾಡುತ್ತಿರುವುದನ್ನು ಫರಿಸಾಯರು ಮತ್ತು ಧರ್ಮೋಪದೇಶಕರು ನೋಡಿದರು. 3 ಫರಿಸಾಯರು ಮತ್ತು ಇತರ ಯೆಹೂದ್ಯರೆಲ್ಲರೂ ಸಂಪ್ರದಾಯದಂತೆ ಕೈಗಳನ್ನು ತೊಳೆಯದೆ ಊಟಮಾಡುತ್ತಿರಲಿಲ್ಲ. ತಮ್ಮ ಪಿತೃಗಳಿಂದ ಬಂದ ಆಚಾರಗಳನ್ನು ಅನುಸರಿಸುವುದಕ್ಕಾಗಿ ಅವರು ಹೀಗೆ ಮಾಡುತ್ತಿದ್ದರು. 4 ಅವರು ಏನನ್ನಾದರೂ ಮಾರುಕಟ್ಟೆಯಲ್ಲಿ ಕೊಂಡುಕೊಂಡರೆ, ವಿಶೇಷವಾದ ರೀತಿಯಲ್ಲಿ ಅದನ್ನು ತೊಳೆಯದೆ ತಿನ್ನುತ್ತಿರಲಿಲ್ಲ. ತಮ್ಮ ಪಿತೃಗಳಿಂದ ಬಂದ ಇತರ ಆಚಾರಗಳನ್ನು ಅಂದರೆ ಲೋಟ, ಬಟ್ಟಲು, ತಪ್ಪಲೆ ಮತ್ತು ದೋಲಿಗಳನ್ನು ತೊಳೆಯುವಾಗಲೂ ಈ ನಿಯಮಗಳನ್ನು ಅನುಸರಿಸುತ್ತಿದ್ದರು.
5 ಫರಿಸಾಯರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ನಮ್ಮ ಪಿತೃಗಳ ಸಂಪ್ರದಾಯವನ್ನು ನಿನ್ನ ಶಿಷ್ಯರು ಅನುಸರಿಸದೆ ಅಶುದ್ಧವಾದ ಕೈಗಳಿಂದ ಆಹಾರವನ್ನು ತಿನ್ನುವುದೇಕೆ?” ಎಂದು ಕೇಳಿದರು.
6 ಯೇಸು, “ನೀವೆಲ್ಲ ಕಪಟಿಗಳು. ನಿಮ್ಮ ಬಗ್ಗೆ ಯೆಶಾಯನು ಸರಿಯಾಗಿ ಹೇಳಿದ್ದಾನೆ:
‘ನನ್ನನ್ನು ಗೌರವಿಸುವುದಾಗಿ ಈ ಜನರು ಹೇಳುತ್ತಾರೆ,
ಆದರೆ ಇವರ ಹೃದಯಗಳು ನನ್ನಿಂದ ಬಹುದೂರವಾಗಿವೆ.
7 ಇವರು ನನ್ನನ್ನು ಆರಾಧಿಸುವುದು ಕೇವಲ ವ್ಯರ್ಥ.
ಏಕೆಂದರೆ ಮಾನವ ನಿಯಮಗಳನ್ನೇ ಇವರು ಬೋಧಿಸುತ್ತಾರೆ.’(A)
8 ನೀವು ದೇವರ ಆಜ್ಞೆಗಳಿಗೆ ವಿಧೇಯರಾಗದೆ ಜನರ ಸಂಪ್ರದಾಯಗಳನ್ನು ಅನುಸರಿಸುತ್ತಿರುವಿರಿ” ಎಂದು ಹೇಳಿದನು.
9 ನಂತರ ಯೇಸು ಅವರಿಗೆ, “ನೀವು ನಿಮ್ಮ ಸಂಪ್ರದಾಯಗಳನ್ನು ಅನುಸರಿಸುವುದಕ್ಕಾಗಿ ದೇವರ ಆಜ್ಞೆಗಳನ್ನು ತಿರಸ್ಕರಿಸುವುದರಲ್ಲಿ ನಿಪುಣರಾಗಿದ್ದೀರಿ! 10 ‘ನಿಮ್ಮ ತಂದೆತಾಯಿಗಳನ್ನು ಗೌರವಿಸಿರಿ’(B) ಎಂತಲೂ ‘ಯಾವ ವ್ಯಕ್ತಿಯಾದರೂ ತನ್ನ ತಂದೆತಾಯಿಗಳಿಗೆ ಕೆಟ್ಟದ್ದನ್ನು ನುಡಿದರೆ ಅವನಿಗೆ ಮರಣದಂಡನೆ ಆಗಬೇಕು’(C) ಎಂತಲೂ ಮೋಶೆಯು ಹೇಳಿದ್ದಾನೆ. 11 ಆದರೆ ನೀವು ಹೇಳುವುದೇನೆಂದರೆ, ಒಬ್ಬನು ತನ್ನ ತಂದೆತಾಯಿಗಳಿಗೆ, ‘ನಿಮ್ಮ ಸಹಾಯಕ್ಕಾಗಿ ನಾನು ಕೊಡತಕ್ಕದ್ದನ್ನೆಲ್ಲ ದೇವರಿಗೆ ಅರ್ಪಿಸಿದ್ದೇನೆ ಎಂದು ಹೇಳಬಹುದು’ ಎಂದು ಬೋಧಿಸಿ, 12 ತನ್ನ ತಂದೆತಾಯಿಗಳಿಗೆ ಸಹಾಯಮಾಡದಂತೆ ಅವನನ್ನು ತಡೆಗಟ್ಟುತ್ತೀರಿ. 13 ಹೀಗಿರಲು ದೇವರ ಆಜ್ಞೆಯನ್ನು ಅನುಸರಿಸುವುದಕ್ಕಿಂತಲೂ ನಿಮ್ಮ ಸಂಪ್ರದಾಯಗಳನ್ನು ಅನುಸರಿಸುವುದೇ ಬಹಳ ಮುಖ್ಯವೆಂದು ನೀವು ಬೋಧಿಸಿದಂತಾಯಿತು. ಇಂಥ ಅನೇಕ ಕಾರ್ಯಗಳನ್ನು ನೀವು ಮಾಡುತ್ತೀರಿ” ಎಂದು ಹೇಳಿದನು.
14 ಯೇಸು ಜನರನ್ನು ಮತ್ತೆ ತನ್ನ ಬಳಿಗೆ ಕರೆದು, “ನಾನು ಹೇಳುವುದನ್ನು ಪ್ರತಿಯೊಬ್ಬರು ಕೇಳಿರಿ ಮತ್ತು ಅರ್ಥಮಾಡಿಕೊಳ್ಳಿರಿ. 15 ಒಬ್ಬ ವ್ಯಕ್ತಿಯ ಅಂತರಂಗದೊಳಕ್ಕೆ ಹೋಗಿ ಅವನನ್ನು ಅಶುದ್ಧನನ್ನಾಗಿ ಮಾಡುವಂಥದ್ದು ಯಾವುದೂ ಇಲ್ಲ. ಒಬ್ಬ ವ್ಯಕ್ತಿಯ ಒಳಗಿಂದ ಬಂದ ಸಂಗತಿಗಳೇ ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ” ಎಂದು ಹೇಳಿದನು. 16 [b]
17 ನಂತರ ಯೇಸು ಜನರನ್ನು ಅಲ್ಲೇ ಬಿಟ್ಟು ಮನೆಯೊಳಕ್ಕೆ ಹೋದನು. ಶಿಷ್ಯರು ಈ ಕಥೆಯ ಬಗ್ಗೆ ಯೇಸುವನ್ನು ಕೇಳಿದರು. 18 ಯೇಸು, “ನಿಮಗೂ ಅರ್ಥವಾಗುವುದಿಲ್ಲವೇ? ಒಬ್ಬ ವ್ಯಕ್ತಿಯ ಒಳಗೆ ಹೋಗುವ ಯಾವ ಪದಾರ್ಥವೂ ಅವನನ್ನು ಅಶುದ್ಧನನ್ನಾಗಿ ಮಾಡುವುದಿಲ್ಲ ಎಂಬುದು ನಿಮಗೆ ತಿಳಿದೇ ಇದೆ. 19 ಆಹಾರವು ಒಬ್ಬ ಮನುಷ್ಯನ ಹೃದಯದೊಳಕ್ಕೆ ಹೋಗದೆ ಹೊಟ್ಟೆಯೊಳಕ್ಕೆ ಹೋಗುತ್ತದೆ. ಅನಂತರ ಅದು ಅಲ್ಲಿಂದ ಹೊರಬರುತ್ತದೆ” ಎಂದು ಹೇಳಿದನು. (ಹೀಗೆ ತಿನ್ನತಕ್ಕ ಯಾವ ಆಹಾರವೂ ಅಶುದ್ಧವಲ್ಲವೆಂದು ಯೇಸು ಸೂಚಿಸಿದನು.)
20 ಇದಲ್ಲದೆ ಯೇಸು ಅವರಿಗೆ, “ಒಬ್ಬ ಮನುಷ್ಯನಿಂದ ಹೊರಬರುವ ಸಂಗತಿಗಳೇ ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ. 21 ಒಬ್ಬ ವ್ಯಕ್ತಿಯ ಅಂತರಂಗದಲ್ಲಿ ಈ ಕೆಟ್ಟ ಆಲೋಚನೆಗಳೆಲ್ಲವೂ ಆರಂಭವಾಗುತ್ತವೆ: ದುರಾಲೋಚನೆ, ಲೈಂಗಿಕಪಾಪ, ಕಳ್ಳತನ, ಕೊಲೆ, 22 ವ್ಯಭಿಚಾರ, ಹಣದಾಶೆ, ಕೆಡುಕುತನ, ಭಂಡತನ, ಅಸೂಯೆ, ಚಾಡಿಕೋರತನ, ಅಹಂಕಾರ ಮತ್ತು ಬುದ್ಧಿಗೇಡಿತನ. 23 ಈ ಕೆಟ್ಟ ವಿಷಯಗಳೆಲ್ಲಾ ಮನುಷ್ಯನ ಅಂತರಂಗದಿಂದ ಬಂದು ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ” ಎಂದು ಹೇಳಿದನು.
ಯೆಹೂದ್ಯಳಲ್ಲದ ಸ್ತ್ರೀಗೆ ಯೇಸುವಿನ ಸಹಾಯ
(ಮತ್ತಾಯ 15:21-28)
24 ಯೇಸು ಆ ಸ್ಥಳವನ್ನು ಬಿಟ್ಟು ಟೈರ್ ಪಟ್ಟಣದ ಸುತ್ತಮುತ್ತಲಿನ ಪ್ರದೇಶಕ್ಕೆ ಹೋದನು. ಯೇಸು ಅಲ್ಲಿ ಒಂದು ಮನೆಯೊಳಕ್ಕೆ ಹೋದನು. ತಾನು ಅಲ್ಲಿರುವುದು ಅಲ್ಲಿಯ ಜನರಿಗೆ ತಿಳಿಯಬಾರದೆಂಬುದು ಆತನ ಅಪೇಕ್ಷೆಯಾಗಿತ್ತು. ಆದರೆ ಯೇಸುವಿಗೆ ಅಡಗಿಕೊಳ್ಳಲಿಕ್ಕಾಗಲಿಲ್ಲ. 25 ಯೇಸು ಅಲ್ಲಿರುವನೆಂಬುದು ಒಬ್ಬ ಸ್ತ್ರೀಗೆ ತಿಳಿಯಿತು. ಅವಳ ಕಿರಿಯ ಮಗಳಿಗೆ ದೆವ್ವ ಹಿಡಿದಿತ್ತು. ಆದ್ದರಿಂದ ಆ ಸ್ತ್ರೀಯು ಯೇಸುವಿನ ಬಳಿಗೆ ಬಂದು, ಆತನ ಪಾದಗಳ ಮುಂದೆ ಅಡ್ಡಬಿದ್ದು ನಮಸ್ಕರಿಸಿದಳು. 26 ಅವಳು ಸಿರಿಯ ಪ್ರದೇಶದ ಪೊಯಿನಿಕ್ಯದಲ್ಲಿ ಹುಟ್ಟಿದ್ದಳು ಮತ್ತು ಗ್ರೀಕಳಾಗಿದ್ದಳು. ಆ ಸ್ತ್ರೀಯು ತನ್ನ ಮಗಳಲ್ಲಿರುವ ದೆವ್ವವನ್ನು ಹೊರಗಟ್ಟಬೇಕೆಂದು ಯೇಸುವಿನಲ್ಲಿ ಬೇಡಿಕೊಂಡಳು.
27 ಯೇಸು ಆ ಸ್ತ್ರೀಗೆ, “ಮಕ್ಕಳಿಗೆ ಕೊಡುವ ರೊಟ್ಟಿಯನ್ನು ತೆಗೆದುಕೊಂಡು ನಾಯಿಗಳಿಗೆ ಕೊಡುವುದು ಸರಿಯಲ್ಲ. ತಮಗೆ ಬೇಕಾದುದನ್ನು ಮಕ್ಕಳು ಮೊದಲು ತಿನ್ನಲಿ” ಎಂದು ಹೇಳಿದನು.
28 ಆ ಸ್ತ್ರೀಯು, “ಅದು ನಿಜ ಪ್ರಭು. ಆದರೆ ಮಕ್ಕಳು ತಿನ್ನದೆ ಬಿಟ್ಟ ಆಹಾರದ ಚೂರುಗಳನ್ನು ಮೇಜಿನ ಕೆಳಗಿರುವ ನಾಯಿಗಳು ತಿನ್ನಬಹುದಲ್ಲವೇ?” ಎಂದು ಉತ್ತರಕೊಟ್ಟಳು.
29 ಆಗ ಯೇಸು ಆ ಸ್ತ್ರೀಗೆ, “ನೀನು ಒಳ್ಳೆಯ ಉತ್ತರ ಕೊಟ್ಟೆ. ಹೋಗು, ನಿನ್ನ ಮಗಳನ್ನು ದೆವ್ವವು ಬಿಟ್ಟುಹೋಗಿದೆ” ಎಂದು ಹೇಳಿದನು.
30 ಆ ಸ್ತ್ರೀಯು ಮನೆಗೆ ಹೋದಾಗ ತನ್ನ ಮಗಳು ಹಾಸಿಗೆಯಲ್ಲಿ ಮಲಗಿರುವುದನ್ನು ಕಂಡಳು. ದೆವ್ವವು ಅವಳನ್ನು ಬಿಟ್ಟುಹೋಗಿತ್ತು.
ಕಿವುಡನಿಗೆ ಸ್ವಸ್ಥತೆ
31 ನಂತರ ಯೇಸು ಟೈರ್ ಪಟ್ಟಣದ ಆ ಪ್ರದೇಶವನ್ನು ಬಿಟ್ಟು ಸಿದೋನ್ ಪಟ್ಟಣದ ಮಾರ್ಗವಾಗಿ ದೆಕಪೊಲಿ[c] ಪ್ರದೇಶವನ್ನು ಹಾದು ಗಲಿಲಾಯ ಸರೋವರಕ್ಕೆ ಹೋದನು. 32 ಆತನು ಅಲ್ಲಿದ್ದಾಗ, ಕೆಲವರು ಕಿವುಡನೂ ತೊದಲನೂ ಆಗಿದ್ದ ಒಬ್ಬನನ್ನು ಯೇಸುವಿನ ಬಳಿಗೆ ಕರೆದುತಂದು ಅವನ ಮೇಲೆ ಕೈಯಿಟ್ಟು ಗುಣಪಡಿಸಬೇಕೆಂದು ಬೇಡಿಕೊಂಡರು.
33 ಯೇಸು ಅವನನ್ನು ಜನರಿಂದ ಸ್ವಲ್ಪ ದೂರ ತನ್ನೊಂದಿಗೆ ಕರೆದೊಯ್ದು ತನ್ನ ಬೆರಳುಗಳನ್ನು ಅವನ ಕಿವಿಗಳಲ್ಲಿಟ್ಟು ಉಗುಳಿ, ಅವನ ನಾಲಿಗೆಯನ್ನು ಮುಟ್ಟಿದನು. 34 ಬಳಿಕ ಆಕಾಶದ ಕಡೆಗೆ ನೋಡಿ, ನಿಟ್ಟುಸಿರು ಬಿಟ್ಟು, “ಎಪ್ಫಥಾ” ಎಂದು ಹೇಳಿದನು. (ಎಪ್ಫಥಾ ಎಂದರೆ “ತೆರೆಯಲಿ”) 35 ಆಗ ಅವನ ಕಿವಿಗಳು ತೆರೆದವು. ನಾಲಿಗೆ ಸಡಿಲಗೊಂಡಿತು. ಅವನು ಸ್ಪಷ್ಟವಾಗಿ ಮಾತಾಡಿದನು.
36 ಈ ಸಂಗತಿಯನ್ನು ತಿಳಿಸಕೂಡದೆಂದು ಯೇಸು ಜನರಿಗೆ ಆಜ್ಞಾಪಿಸಿದನು. ತನ್ನ ಬಗ್ಗೆ ಇತರ ಜನರಿಗೆ ತಿಳಿಸಕೂಡದಂತೆ ಯೇಸು ಯಾವಾಗಲೂ ಆಜ್ಞಾಪಿಸುತ್ತಿದ್ದನು. ಆದರೂ ಜನರು ಆತನ ಬಗ್ಗೆ ಇನ್ನೂ ಹೆಚ್ಚಾಗಿ ಹಬ್ಬಿಸಿದರು. 37 ಜನರು ನಿಜವಾಗಿಯೂ ಅತ್ಯಾಶ್ಚರ್ಯಗೊಂಡು, “ಯೇಸು ಎಲ್ಲವನ್ನೂ ಒಳ್ಳೆಯ ರೀತಿಯಲ್ಲಿ ಮಾಡುತ್ತಾನೆ. ಆತನು ಕಿವುಡರಿಗೆ ಕಿವಿ ಕೇಳಿಸುವಂತೆ ಮಾಡುತ್ತಾನೆ. ಮೂಕರು ಮಾತಾಡುವಂತೆ ಮಾಡುತ್ತಾನೆ” ಎಂದು ಹೇಳಿದರು.
ಯೋಬನು ತನ್ನ ಜನ್ಮದಿನವನ್ನು ಶಪಿಸುವನು
3 ಬಳಿಕ ಯೋಬನು ಬಾಯಿ ತೆರೆದು ತನ್ನ ಜನ್ಮ ದಿನವನ್ನು ಶಪಿಸಿ ಹೀಗೆಂದನು:
2 “ನಾನು ಹುಟ್ಟಿದ ದಿನವು ಹಾಳಾಗಲಿ,
3 ‘ಗಂಡು ಮಗುವು ಗರ್ಭಧರಿಸಿತು’ ಎಂದು ಹೇಳಿದ ಆ ರಾತ್ರಿಯು ನಾಶವಾಗಲಿ.
4 ಆ ದಿನವು ಕತ್ತಲೆಯಾಗಲಿ.
ಆ ದಿನದ ಬಗ್ಗೆ ಮೇಲಿನ ಲೋಕದ ದೇವರು ಯೋಚಿಸದಿರಲಿ.
ಆ ದಿನದ ಮೇಲೆ ಬೆಳಕು ಬೆಳಗದಿರಲಿ.
5 ಆ ದಿನವನ್ನು ಕತ್ತಲೆಯೂ ಮರಣದ ನೆರಳೂ ವಶಪಡಿಸಿಕೊಳ್ಳಲಿ.
ಆ ದಿನವನ್ನು ಮೋಡವು ಕವಿದುಕೊಳ್ಳಲಿ.
ನಾನು ಹುಟ್ಟಿದ ದಿನದ ಹಗಲನ್ನು ಗ್ರಹಣಗಳು ಭಯಪಡಿಸಲಿ.
6 ಕಾರ್ಗತ್ತಲೆಯು ಆ ರಾತ್ರಿಯನ್ನು ಆವರಿಸಿಕೊಳ್ಳಲಿ.
ಆ ರಾತ್ರಿಯು ವರ್ಷದ ದಿನಗಳಲ್ಲಿ ಒಂದು ದಿನವೆಂದು ಲೆಕ್ಕಿಸಲ್ಪಡದಿರಲಿ;
ಅದು ಯಾವ ತಿಂಗಳುಗಳಲ್ಲೂ ಸೇರಿಸಲ್ಪಡದಿರಲಿ.
7 ಆ ರಾತ್ರಿಯು ಬಂಜೆಯಾಗಲಿ;
ಅದರಲ್ಲಿ ಯಾವ ಉತ್ಸಾಹಧ್ವನಿಯೂ ಕೇಳದಿರಲಿ.
8 ಲಿವ್ಯಾತಾನನನ್ನು ಎಬ್ಬಿಸಬಲ್ಲ ಹಾಗೂ ದಿನಗಳನ್ನು ಶಪಿಸುವ ಮಾಂತ್ರಿಕರು
ನಾನು ಹುಟ್ಟಿದ ರಾತ್ರಿಯನ್ನು ಶಪಿಸಲಿ.
9 ಆ ದಿನದ ಮುಂಜಾನೆಯ ನಕ್ಷತ್ರಗಳು ಕತ್ತಲಾಗಲಿ.
ಅದು ಮುಂಜಾನೆಯ ಬೆಳಕಿಗಾಗಿ ಎದುರುನೋಡಿದರೂ ಹೊಂದದಿರಲಿ.
ಅದು ಸೂರ್ಯೋದಯದ ಕಿರಣಗಳನ್ನು ನೋಡದಿರಲಿ.
10 ಯಾಕೆಂದರೆ ಆ ರಾತ್ರಿಯು ನನ್ನ ತಾಯಿಯ ಗರ್ಭದ್ವಾರವನ್ನು ಮುಚ್ಚಿ
ನನ್ನ ಕಣ್ಣುಗಳಿಗೆ ಶ್ರಮೆಯನ್ನು ಮರೆಮಾಡಲಿಲ್ಲ.
11 ನಾನು ಹುಟ್ಟಿದಾಗಲೇ ಯಾಕೆ ಸಾಯಲಿಲ್ಲ?
ತಾಯಿಯ ಗರ್ಭದಿಂದ ಬರುತ್ತಿರುವಾಗಲೇ ನಾನೇಕೆ ಸಾಯಲಿಲ್ಲ?
12 ತಾಯಿಯು ತನ್ನ ಮಡಿಲಲ್ಲಿ ನನ್ನನ್ನು ಹೊತ್ತುಕೊಂಡದ್ದೇಕೆ?
ಆಕೆಯ ಸ್ತನಗಳು ನನಗೆ ಹಾಲು ಕುಡಿಯಕೊಟ್ಟದ್ದೇಕೆ?
13 ನಾನು ಹುಟ್ಟಿದಾಗಲೇ ಸತ್ತುಹೋಗಿದ್ದರೆ,
ಸಮಾಧಾನದಿಂದ ನಿದ್ರೆಮಾಡುತ್ತಿದ್ದೆನು.
14 ಭೂರಾಜರೊಂದಿಗೂ ಮಂತ್ರಿಗಳೊಂದಿಗೂ ವಿಶ್ರಮಿಸಿಕೊಳ್ಳುತ್ತಿದ್ದೆನು.
ಅವರು ತಮಗಾಗಿ ಕಟ್ಟಿಸಿಕೊಂಡ ಪಟ್ಟಣಗಳು ಈಗ ಹಾಳುಬಿದ್ದಿವೆ.
15 ಬಂಗಾರವನ್ನು ಕೂಡಿಸಿಟ್ಟು ತಮ್ಮ ಮನೆಗಳನ್ನು ಬೆಳ್ಳಿಯಿಂದ ತುಂಬಿಸಿಕೊಂಡ
ಅಧಿಪತಿಗಳೊಡನೆ ನಾನು ವಿಶ್ರಮಿಸಿಕೊಳ್ಳುತ್ತಿದ್ದೆನು.
16 ನಾನು ಮಗುವಾಗಿ ಹುಟ್ಟುವಾಗಲೇ ಸತ್ತು ನೆಲದಲ್ಲಿ ಸಮಾಧಿಯಾಗಲಿಲ್ಲವೇಕೆ?
ಹಗಲಿನ ಬೆಳಕನ್ನು ಎಂದೂ ಕಂಡಿಲ್ಲದ ಮಗುವಿನಂತೆ ನಾನಿರಬೇಕಿತ್ತು.
17 ದುಷ್ಟರು ಸಮಾಧಿಯಲ್ಲಿರುವಾಗ ಕೇಡುಮಾಡುವುದನ್ನು ನಿಲ್ಲಿಸುವರು.
ಆಯಾಸಗೊಂಡಿರುವ ಜನರು ಸಮಾಧಿಯಲ್ಲಿ ವಿಶ್ರಾಂತಿಯನ್ನು ಕಂಡುಕೊಳ್ಳುವರು.
18 ಸೆರೆಯಾಳುಗಳು ಸಹ ಸಮಾಧಿಯಲ್ಲಿ ಸುಖವಾಗಿರುವರು;
ಅವರ ಒಡೆಯನ ಧ್ವನಿಯು ಅವರಿಗೆ ಕೇಳಿಸುವುದಿಲ್ಲ.
19 ಸಮಾಧಿಯಲ್ಲಿ ದೊಡ್ಡವರು, ಚಿಕ್ಕವರು ಎಂಬ ಭೇದವಿಲ್ಲ;
ಆಳು, ಒಡೆಯ ಎಂಬ ಕಟ್ಟಳೆಯೂ ಇಲ್ಲ.
20 “ಬಹು ವ್ಯಥೆಯಿಂದ ಸಂಕಟಪಡುತ್ತಿರುವವನು ಯಾಕೆ ಜೀವಿಸಬೇಕು?
ಮನನೊಂದಿರುವವನಿಗೆ ಜೀವವನ್ನು ಕೊಡುವುದೇಕೆ?
21 ಅವನು ಸಾಯಲು ಬಯಸಿದರೂ ಸಾವು ಬರುವುದಿಲ್ಲ.
ಹೂಳಿಟ್ಟಿರುವ ಭಂಡಾರವನ್ನು ಹುಡುಕುವುದಕ್ಕಿಂತಲೂ ಹೆಚ್ಚಾಗಿ
ವ್ಯಥೆಯುಳ್ಳವನು ಸಾವನ್ನೇ ಹುಡುಕುವನು.
22 ಅವರು ಸಮಾಧಿಗೆ ಸೇರುವಾಗ ಬಹು ಸಂತೋಷಪಡುವರು;
ಆನಂದದಿಂದ ಕೂಗುವರು.
23 ದೇವರು ಯಾರ ಭವಿಷ್ಯವನ್ನು ರಹಸ್ಯವಾಗಿಡುತ್ತಾನೊ,
ಯಾರ ಸುತ್ತಲೂ ಗೋಡೆಯನ್ನು ಕಟ್ಟುತ್ತಾನೊ ಅವರಿಗೆ ಯಾಕೆ ಜೀವವನ್ನು
ಕೊಡುತ್ತಾನೆ?
24 ಊಟದ ಸಮಯದಲ್ಲಿ ನಿಟ್ಟುಸಿರೇ ನನ್ನ ಆಹಾರವಾಗಿದೆ.
ನನ್ನ ನರಾಳಾಟವು ಜಲಧಾರೆಯಂತಿದೆ.
25 ಆಪತ್ತು ಸಂಭವಿಸಬಹುದೆಂದು ನಾನು ಭಯಗೊಂಡಿದ್ದೆನು.
ನಾನು ಯಾವುದಕ್ಕೆ ಹೆದರಿಕೊಂಡಿದ್ದೆನೊ ಅದು ನನಗೆ ಸಂಭವಿಸಿದೆ!
26 ನನಗೆ ಸಮಾಧಾನವಿಲ್ಲ, ವಿಶ್ರಾಂತಿಯೂ ಇಲ್ಲ; ನನಗೆ ಉಪಶಮನವಿಲ್ಲ;
ನನಗಿರುವುದು ಕೇವಲ ಕಷ್ಟವೊಂದೇ!”
ನೀತಿವಂತರಿಗೆ ಧರ್ಮಶಾಸ್ತ್ರದ ಹಂಗಿಲ್ಲ
7 ಸಹೋದರ ಸಹೋದರಿಯರೇ, ನೀವೆಲ್ಲರು ಮೋಶೆಯ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳುತ್ತೀರಿ. ಒಬ್ಬ ವ್ಯಕ್ತಿಯು ಜೀವದಿಂದಿರುವವರೆಗೆ ಮಾತ್ರ ಧರ್ಮಶಾಸ್ತ್ರವು ಆ ವ್ಯಕ್ತಿಯನ್ನು ಆಳುತ್ತದೆ ಎಂಬುದು ನಿಮಗೆ ತಿಳಿದಿಲ್ಲವೇ? 2 ನಾನು ನಿಮಗೆ ಒಂದು ಉದಾಹರಣೆಯನ್ನು ಕೊಡುತ್ತೇನೆ: ಗಂಡನು ಬದುಕಿರುವ ತನಕ ಹೆಂಡತಿಯು ಕಾನೂನಿನ ಪ್ರಕಾರ ಅವನಿಗೆ ಬದ್ಧಳಾಗಿರಬೇಕು. ಆದರೆ ಆಕೆಯ ಗಂಡನು ತೀರಿಕೊಂಡರೆ, ವಿವಾಹದ ಕಾನೂನಿನಿಂದ ಆಕೆಯು ಬಿಡುಗಡೆಯಾಗಿದ್ದಾಳೆ. 3 ಆದರೆ ತನ್ನ ಗಂಡನು ಜೀವದಿಂದಿರುವಾಗಲೇ ಮತ್ತೊಬ್ಬನನ್ನು ಮದುವೆ ಮಾಡಿಕೊಂಡರೆ ಆಕೆಯು ವ್ಯಭಿಚಾರವೆಂಬ ಅಪರಾಧಕ್ಕೆ ಗುರಿಯಾಗುತ್ತಾಳೆಂದು ಧರ್ಮಶಾಸ್ತ್ರವು ಹೇಳುತ್ತದೆ. ಆದರೆ ಆಕೆಯ ಗಂಡನು ಸತ್ತುಹೋದರೆ ಆಕೆಯು ವಿವಾಹದ ಹಂಗಿನಿಂದ ಬಿಡುಗಡೆಯಾಗಿದ್ದಾಳೆ. ಹೀಗಿರಲಾಗಿ, ತನ್ನ ಗಂಡನು ತೀರಿಕೊಂಡ ಮೇಲೆ ಮತ್ತೊಬ್ಬನನ್ನು ಮದುವೆ ಮಾಡಿಕೊಂಡರೆ ಆಕೆಯು ವ್ಯಭಿಚಾರವೆಂಬ ಅಪರಾಧಕ್ಕೆ ಗುರಿಯಾಗುವುದಿಲ್ಲ.
4 ನನ್ನ ಸಹೋದರ ಸಹೋದರಿಯರೇ, ಇದೇ ರೀತಿಯಲ್ಲಿ ನಿಮ್ಮ ಹಳೆಯ ಸ್ವಭಾವವು ಸತ್ತುಹೋಯಿತು; ನೀವು ಕ್ರಿಸ್ತನ ದೇಹದ ಮೂಲಕ ಧರ್ಮಶಾಸ್ತ್ರದಿಂದ ಬಿಡುಗಡೆಯಾದಿರಿ. ಈಗ ನೀವು, ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಾತನಿಗೆ ಸೇರಿದವರಾಗಿದ್ದೀರಿ. ನಾವು ದೇವರಿಗೋಸ್ಕರ ಫಲವನ್ನು ಫಲಿಸುವುದಕ್ಕಾಗಿ ಕ್ರಿಸ್ತನಿಗೆ ಸೇರಿದವರಾಗಿದ್ದೇವೆ. 5 ಹಿಂದಿನ ಕಾಲದಲ್ಲಿ, ನಮ್ಮ ಪಾಪಾಧೀನಸ್ವಭಾವವು ನಮ್ಮನ್ನು ಆಳುತ್ತಿತ್ತು. ಪಾಪಕೃತ್ಯಗಳನ್ನು ಮಾಡಬೇಕೆಂಬ ಬಯಕೆಯನ್ನು ಧರ್ಮಶಾಸ್ತ್ರವು ನಮ್ಮಲ್ಲಿ ಉಂಟುಮಾಡಿತು. ಮತ್ತು ನಾವು ಮಾಡಲಿಚ್ಛಿಸಿದ್ದ ಆ ಪಾಪಕೃತ್ಯಗಳು ನಮ್ಮ ದೇಹಗಳನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡವು. ಇದರಿಂದಾಗಿ, ನಾವು ಮಾಡಿದ ಕಾರ್ಯಗಳೆಲ್ಲ ನಮಗೆ ಆತ್ಮಿಕ ಮರಣವನ್ನು ಮಾತ್ರ ಉಂಟು ಮಾಡುತ್ತಿದ್ದವು. 6 ಹಿಂದಿನ ಕಾಲದಲ್ಲಿ, ಧರ್ಮಶಾಸ್ತ್ರವು ನಮ್ಮನ್ನು ಸೆರೆಯಾಳುಗಳಂತೆ ಬಂಧಿಸಿತ್ತು. ಆದರೆ ನಮ್ಮ ಹಳೆಯ ಸ್ವಭಾವವು ಸತ್ತುಹೋದ ಕಾರಣ ನಾವು ಧರ್ಮಶಾಸ್ತ್ರದಿಂದ ಬಿಡುಗಡೆಯಾದೆವು. ಆದ್ದರಿಂದ ಈಗ ನಾವು ಲಿಖಿತ ನಿಯಮಗಳೊಡನೆ ಹಳೇ ರೀತಿಯಲ್ಲಿ ದೇವರ ಸೇವೆಮಾಡದೆ ಪವಿತ್ರಾತ್ಮ ಪ್ರೇರಿತವಾದ ಹೊಸ ರೀತಿಯಲ್ಲಿ ದೇವರ ಸೇವೆ ಮಾಡುತ್ತೇವೆ.
ಪಾಪದೊಡನೆ ಹೋರಾಟ
7 ಪಾಪ ಮತ್ತು ಧರ್ಮಶಾಸ್ತ್ರ ಇವೆರಡೂ ಒಂದೇ ಎಂದು ನಾನು ಹೇಳುತ್ತಿರುವುದಾಗಿ ನೀವು ಭಾವಿಸಬಹುದು. ಆದರೆ ಅದು ನಿಜವಲ್ಲ. ಪಾಪವೆಂದರೆ ಏನೆಂಬುದನ್ನು ಕಲಿತುಕೊಳ್ಳಲು ಧರ್ಮಶಾಸ್ತ್ರವೊಂದೇ ನನಗೆ ಏಕೈಕ ಮಾರ್ಗವಾಗಿದೆ. ಧರ್ಮಶಾಸ್ತ್ರವಿಲ್ಲದಿದ್ದರೆ, ದುರಾಶೆ ಎಂದರೆ ಏನೆಂಬುದೇ ನನಗೆ ತಿಳಿಯುತ್ತಿರಲಿಲ್ಲ. “ಬೇರೆಯವರ ವಸ್ತುಗಳನ್ನು ನೀವು ಆಶಿಸಕೂಡದು”(A) ಎಂದು ಧರ್ಮಶಾಸ್ತ್ರವು ಹೇಳಿದ್ದರಿಂದಲೇ ಅದು ನನಗೆ ತಿಳಿಯಿತು. 8 ಆದರೆ ಪಾಪವು ಆ ಆಜ್ಞೆಯನ್ನೇ ಬಳಸಿಕೊಂಡು ನನ್ನಲ್ಲಿ ಎಲ್ಲಾ ಬಗೆಯ ದುರಾಶೆಗಳನ್ನು ಕೆರಳಿಸಿತು. ಆದ್ದರಿಂದ ಆ ಆಜ್ಞೆಯಿಂದಾಗಿ ಪಾಪವು ನನ್ನ ಬಳಿಗೆ ಬಂದಿತು. ಆದರೆ ಧರ್ಮಶಾಸ್ತ್ರವಿಲ್ಲದಿದ್ದರೆ, ಪಾಪಕ್ಕೆ ಅಧಿಕಾರವೇ ಇಲ್ಲ. 9 ನಾನು ಧರ್ಮಶಾಸ್ತ್ರವನ್ನು ತಿಳಿದುಕೊಳ್ಳುವುದಕ್ಕಿಂತ ಮೊದಲು ಧರ್ಮಶಾಸ್ತ್ರವಿಲ್ಲದವನಾಗಿ ಜೀವಂತವಾಗಿದ್ದೆನು. ಆದರೆ ಧರ್ಮಶಾಸ್ತ್ರದ ಆಜ್ಞೆಯು ನನ್ನ ಬಳಿಗೆ ಬಂದಾಗ, ಪಾಪವು ಜೀವಿಸತೊಡಗಿತು. 10 ನಾನು ಪಾಪದ ನಿಮಿತ್ತ ಆತ್ಮಿಕವಾಗಿ ಸತ್ತುಹೋದೆನು. ಜೀವವನ್ನು ತರಬೇಕಾಗಿದ್ದ ಆಜ್ಞೆಯೇ ನನಗೆ ಮರಣವನ್ನು ತಂದಿತು. 11 ಪಾಪವು ಆ ಆಜ್ಞೆಯನ್ನು ಬಳಸಿಕೊಂಡು ನನ್ನನ್ನು ವಂಚಿಸಿ, ನನ್ನಲ್ಲಿ ಆತ್ಮಿಕ ಮರಣವನ್ನು ಉಂಟುಮಾಡಿತು.
12 ಹೀಗಿರಲು ಧರ್ಮಶಾಸ್ತ್ರ ಪರಿಶುದ್ಧವಾದದ್ದು. ಆಜ್ಞೆಯು ಪರಿಶುದ್ಧವೂ ನ್ಯಾಯವೂ ಒಳ್ಳೆಯದೂ ಆಗಿದೆ. 13 ಹಾಗಾದರೆ, ಒಳ್ಳೆಯದೇ ನನಗೆ ಮರಣವನ್ನು ಬರಮಾಡಿತೆಂದರ್ಥವೇ? ಇಲ್ಲ! ಆದರೆ ಪಾಪವು ಒಳ್ಳೆಯದನ್ನೇ ಬಳಸಿಕೊಂಡು ನನಗೆ ಮರಣವನ್ನು ಬರಮಾಡಿತು. ಇದರಿಂದಾಗಿ, ನಾನು ಪಾಪದ ನಿಜಸ್ವರೂಪವನ್ನು ಕಾಣುವಂತಾಯಿತು. ಪಾಪವು ಬಹು ಕೆಟ್ಟದ್ದೆಂದು ಆಜ್ಞೆಯ ಮೂಲಕ ಸ್ಪಷ್ಟವಾಯಿತು.
ಮನುಷ್ಯನಲ್ಲಿ ಗೊಂದಲ
14 ಧರ್ಮಶಾಸ್ತ್ರವು ಆತ್ಮಿಕವಾದದ್ದೆಂದು ನಾವು ಬಲ್ಲೆವು. ಆದರೆ ನಾನು ಆತ್ಮಿಕನಲ್ಲ. ನಾನು ಪಾಪಕ್ಕೆ ಮಾರಲ್ಪಟ್ಟ ಗುಲಾಮನೋ ಎಂಬಂತೆ ಪಾಪವು ನನ್ನನ್ನು ಆಳುತ್ತದೆ. 15 ನಾನು ಮಾಡುವ ಕಾರ್ಯಗಳು ನನಗೇ ಅರ್ಥವಾಗುವುದಿಲ್ಲ. ನಾನು ಯಾವ ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ಇಚ್ಛಿಸುತ್ತೇನೋ ಆ ಕಾರ್ಯಗಳನ್ನು ಮಾಡದೆ ನಾನು ದ್ವೇಷಿಸುವ ಕೆಟ್ಟಕಾರ್ಯಗಳನ್ನೇ ಮಾಡುತ್ತೇನೆ. 16 ನಾನು ಮಾಡುವ ಕೆಟ್ಟಕಾರ್ಯಗಳನ್ನು ಮಾಡಲು ನನಗೆ ಇಷ್ಟವಿಲ್ಲದಿದ್ದರೆ, ಧರ್ಮಶಾಸ್ತ್ರವು ಒಳ್ಳೆಯದೆಂದು ನಾನು ಒಪ್ಪಿಕೊಂಡಂತಾಯಿತು. 17 ಹೀಗಿರಲಾಗಿ ಈ ಕೆಟ್ಟಕಾರ್ಯಗಳನ್ನು ಮಾಡುವವನು ನಿಜವಾಗಿಯೂ ನಾನಲ್ಲ. ನನ್ನಲ್ಲಿ ವಾಸವಾಗಿರುವ ಪಾಪವೇ ಈ ಕೆಟ್ಟಕಾರ್ಯಗಳನ್ನು ಮಾಡುತ್ತದೆ. 18 ಹೌದು, ನನ್ನಲ್ಲಿ ಅಂದರೆ ನನ್ನ ಪಾಪಾಧೀನಸ್ವಭಾವದಲ್ಲಿ ಒಳ್ಳೆಯದೇನೂ ವಾಸವಾಗಿಲ್ಲವೆಂಬುದು ನನಗೆ ಗೊತ್ತಿದೆ. ಒಳ್ಳೆಯ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಮನಸ್ಸಿದ್ದರೂ ಅವುಗಳನ್ನು ಕಾರ್ಯಗತಗೊಳಿಸಲು ನನಗೆ ಸಾಧ್ಯವಿಲ್ಲ. 19 ನಾನು ಮಾಡಲಿಚ್ಛಿಸುವ ಒಳ್ಳೆಯ ಕಾರ್ಯಗಳನ್ನು ಮಾಡದೆ ಮಾಡಲಿಚ್ಛಿಸದಿರುವ ಕೆಟ್ಟಕಾರ್ಯಗಳನ್ನೇ ಮಾಡುತ್ತೇನೆ. 20 ಹೀಗಿರಲಾಗಿ, ನಾನು ಮಾಡಲಿಚ್ಛಿಸದಿರುವ ಕಾರ್ಯಗಳನ್ನು ನಾನು ಮಾಡಿದರೆ, ಅವುಗಳನ್ನು ಮಾಡವವನು ನಿಜವಾಗಿಯೂ ನಾನಲ್ಲ. ನನ್ನಲ್ಲಿ ವಾಸವಾಗಿರುವ ಪಾಪವೇ ಆ ಕೆಟ್ಟಕಾರ್ಯಗಳನ್ನು ಮಾಡುತ್ತದೆ.
21 ಹೀಗಿರಲಾಗಿ, ನಾನು ಈ ನಿಯಮವನ್ನು ಕಲಿತುಕೊಂಡಿದ್ದೇನೆ: ನಾನು ಒಳ್ಳೆಯದನ್ನು ಮಾಡಲಿಚ್ಛಿಸುವಾಗ, ಕೆಟ್ಟದ್ದು ನನ್ನೊಳಗೇ ಇರುತ್ತದೆ. 22 ನನ್ನ ಅಂತರಂಗದಲ್ಲಿ ದೇವರ ನಿಯಮದ ವಿಷಯದಲ್ಲಿ ನಾನು ಸಂತೋಷಪಡುತ್ತೇನೆ. 23 ಆದರೆ ನನ್ನ ದೇಹದಲ್ಲಿ ಮತ್ತೊಂದು ನಿಯಮ ಕೆಲಸ ಮಾಡುತ್ತಿರುವುದನ್ನು ನಾನು ಕಾಣುತ್ತೇನೆ. ನನ್ನ ಅಂತರಂಗ ಒಪ್ಪಿಕೊಳ್ಳುವ ನಿಯಮಕ್ಕೆ ವಿರುದ್ಧವಾಗಿ ಆ ನಿಯಮ ಹೋರಾಡುತ್ತದೆ. ನನ್ನ ದೇಹದಲ್ಲಿ ಕೆಲಸ ಮಾಡುತ್ತಿರುವ ಆ ಮತ್ತೊಂದು ನಿಯಮವೇ ಪಾಪದ ನಿಯಮವಾಗಿದೆ. ಆ ನಿಯಮವು ನನ್ನನ್ನು ತನ್ನ ಸೆರೆಯಾಳನ್ನಾಗಿ ಮಾಡುತ್ತದೆ. 24 ನಾನು ದುರಾವಸ್ಥೆಗೆ ಒಳಗಾಗಿದ್ದೇನೆ. ನನಗೆ ಮರಣವನ್ನು ತರುವ ಈ ದೇಹದಿಂದ ನನ್ನನ್ನು ರಕ್ಷಿಸುವವರು ಯಾರು? 25 ದೇವರು ನನ್ನನ್ನು ರಕ್ಷಿಸುವನು! ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನ ಮೂಲಕ ಆತನು ದಯಪಾಲಿಸುವ ರಕ್ಷಣೆಗಾಗಿ ಆತನಿಗೆ ಸ್ತೋತ್ರವಾಗಲಿ!
ಆದ್ದರಿಂದ ನನ್ನ ಅಂತರಂಗದಲ್ಲಿ ನಾನು ದೇವರ ನಿಯಮಕ್ಕೆ ಗುಲಾಮನಾಗಿದ್ದೇನೆ. ಆದರೆ ನನ್ನ ಪಾಪಾಧೀನಸ್ವಭಾವದಲ್ಲಿ ನಾನು ಪಾಪದ ನಿಯಮಕ್ಕೆ ಗುಲಾಮನಾಗಿದ್ದೇನೆ.
Kannada Holy Bible: Easy-to-Read Version. All rights reserved. © 1997 Bible League International