M’Cheyne Bible Reading Plan
ಬೇತೇಲಿನಲ್ಲಿ ಯಾಕೋಬನು
35 ದೇವರು ಯಾಕೋಬನಿಗೆ, “ನೀನು ಬೇತೇಲ್ ಪಟ್ಟಣಕ್ಕೆ ಹೋಗಿ ಅಲ್ಲೇ ವಾಸಿಸು ಮತ್ತು ಆರಾಧನೆಗಾಗಿ ಒಂದು ಯಜ್ಞವೇದಿಕೆಯನ್ನು ಕಟ್ಟಿಸು. ನೀನು ನಿನ್ನ ಅಣ್ಣನಾದ ಏಸಾವನ ಬಳಿಯಿಂದ ಓಡಿಹೋಗುತ್ತಿದ್ದಾಗ ದೇವರಾದ ‘ಏಲ್’ ನಿನಗೆ ಅಲ್ಲಿ ಕಾಣಿಸಿಕೊಳ್ಳಲಿಲ್ಲವೇ! ಆತನ ಆರಾಧನೆಗಾಗಿ ಅಲ್ಲಿ ಯಜ್ಞವೇದಿಕೆಯನ್ನು ಕಟ್ಟಿಸು” ಎಂದು ಹೇಳಿದನು.
2 ಆದ್ದರಿಂದ ಯಾಕೋಬನು ತನ್ನ ಕುಟುಂಬದವರಿಗೂ ತನ್ನ ಎಲ್ಲಾ ಸೇವಕರಿಗೂ, “ನಿಮ್ಮಲ್ಲಿರುವ ಮರದ ಮತ್ತು ಲೋಹದ ಎಲ್ಲಾ ಅನ್ಯದೇವರುಗಳನ್ನು ನಾಶಮಾಡಿರಿ. ನಿಮ್ಮನ್ನು ಶುದ್ಧಿ ಮಾಡಿಕೊಂಡು ಶುದ್ಧವಾದ ಬಟ್ಟೆಗಳನ್ನು ಧರಿಸಿಕೊಳ್ಳಿರಿ. 3 ನಾವು ಇಲ್ಲಿಂದ ಹೊರಟು ಬೇತೇಲಿಗೆ ಹೋಗೋಣ; ನಾನು ಕಷ್ಟದಲ್ಲಿದ್ದಾಗ ಸಹಾಯಮಾಡಿದ ದೇವರಿಗಾಗಿ ಒಂದು ಯಜ್ಞವೇದಿಕೆಯನ್ನು ಅಲ್ಲಿ ಕಟ್ಟಿಸುತ್ತೇನೆ. ನಾನು ಹೋದಕಡೆಗಳಲ್ಲೆಲ್ಲಾ ಆ ದೇವರು ನನ್ನೊಂದಿಗೆ ಇದ್ದನು” ಎಂದು ಹೇಳಿದನು.
4 ಆದ್ದರಿಂದ ಅವರು ತಮ್ಮಲ್ಲಿದ್ದ ಎಲ್ಲಾ ಅನ್ಯದೇವರುಗಳನ್ನೂ ತಮ್ಮ ಕಿವಿಗಳಲ್ಲಿದ್ದ ವಾಲೆಗಳನ್ನೂ ಯಾಕೋಬನಿಗೆ ಕೊಟ್ಟರು. ಯಾಕೋಬನು ಅವುಗಳನ್ನೆಲ್ಲಾ ಶೆಕೆಮ್ ಪಟ್ಟಣದ ಸಮೀಪದಲ್ಲಿರುವ ಏಲಾವೃಕ್ಷದ ಬುಡದಲ್ಲಿ ಹೂಳಿಟ್ಟನು.
5 ಯಾಕೋಬನು ಮತ್ತು ಅವನ ಗಂಡುಮಕ್ಕಳು ಆ ಸ್ಥಳದಿಂದ ಹೊರಟರು. ಆ ಪ್ರದೇಶದಲ್ಲಿದ್ದ ಜನರು ಅವರನ್ನು ಹಿಂಬಾಲಿಸಿ ಕೊಲ್ಲಬೇಕೆಂದಿದ್ದರು. ಆದರೆ ಅವರು ಭಯಪಟ್ಟು ಯಾಕೋಬನನ್ನು ಹಿಂಬಾಲಿಸಲಿಲ್ಲ. 6 ಯಾಕೋಬನು ಮತ್ತು ಅವರ ಜನರು ಲೂಜಿಗೆ ಹೋದರು. ಈಗ ಲೂಜನ್ನು “ಬೇತೇಲ್” ಎಂದು ಕರೆಯುತ್ತಾರೆ. ಅದು ಕಾನಾನ್ ದೇಶದಲ್ಲಿದೆ. 7 ಯಾಕೋಬನು ಅಲ್ಲಿ ಒಂದು ಯಜ್ಞವೇದಿಕೆಯನ್ನು ಕಟ್ಟಸಿದನು. ಯಾಕೋಬನು ತನ್ನ ಅಣ್ಣನ ಬಳಿಯಿಂದ ಓಡಿ ಹೋಗುತ್ತಿದ್ದಾಗ ದೇವರು ಅವನಿಗೆ ಮೊದಲು ಕಾಣಿಸಿಕೊಂಡದ್ದು ಆ ಸ್ಥಳದಲ್ಲೇ. ಆದ್ದರಿಂದ ಯಾಕೋಬನು ಆ ಸ್ಥಳಕ್ಕೆ “ಏಲ್ ಬೇತೇಲ್” ಎಂದು ಹೆಸರಿಟ್ಟನು.
8 ರೆಬೆಕ್ಕಳ ದಾಸಿಯಾದ ದೆಬೋರಳು ಅಲ್ಲಿ ಸತ್ತುಹೋದಳು. ಆದ್ದರಿಂದ ಅವರು ಆಕೆಯನ್ನು ಬೇತೇಲಿನ ಬಳಿಯಲ್ಲಿರುವ ಏಲಾವೃಕ್ಷದ ಬುಡದಲ್ಲಿ ಸಮಾಧಿ ಮಾಡಿದರು. ಆ ಸ್ಥಳಕ್ಕೆ “ಅಲ್ಲೋನ್ ಬಾಕೂತ್” ಎಂದು ಹೆಸರಿಟ್ಟರು.
ಯಾಕೋಬನ ಹೊಸ ಹೆಸರು
9 ಯಾಕೋಬನು ಪದ್ದನ್‌ಅರಾಮಿನಿಂದ ಹಿಂತಿರುಗಿ ಬಂದಾಗ, ದೇವರು ಅವನಿಗೆ ಮತ್ತೆ ಕಾಣಿಸಿಕೊಂಡು ಅವನನ್ನು ಆಶೀರ್ವದಿಸಿದನು. 10 ದೇವರು ಯಾಕೋಬನಿಗೆ, “ನಿನ್ನ ಹೆಸರು ಯಾಕೋಬ. ಆದರೆ ನಾನು ಆ ಹೆಸರನ್ನು ಬದಲಾಯಿಸುವೆನು. ಇನ್ನು ಮುಂದೆ ನೀನು ಯಾಕೋಬನೆಂದು ಕರೆಸಿಕೊಳ್ಳುವುದಿಲ್ಲ. ನಿನ್ನ ಹೊಸ ಹೆಸರು ‘ಇಸ್ರೇಲ್’” ಎಂದು ಹೇಳಿ ಅವನಿಗೆ “ಇಸ್ರೇಲ್” ಎಂದು ಹೆಸರಿಟ್ಟನು.
11 ದೇವರು ಅವನಿಗೆ, “ನಾನೇ ಸರ್ವಶಕ್ತನಾದ ದೇವರು. ನೀನು ಅನೇಕ ಮಕ್ಕಳನ್ನು ಪಡೆದು ಮಹಾಜನಾಂಗವಾಗಿ ಬೆಳೆಯುವೆ. ಅನೇಕ ಜನಾಂಗಗಳೂ ರಾಜರುಗಳೂ ನಿನ್ನೊಳಗಿಂದ ಬರುವರು. 12 ನಾನು ಅಬ್ರಹಾಮನಿಗೂ ಇಸಾಕನಿಗೂ ವಿಶೇಷವಾದ ದೇಶವನ್ನು ಕೊಟ್ಟೆನು. ಈಗ ನಾನು ಆ ದೇಶವನ್ನು ನಿನಗೆ ಕೊಡುವೆನು. ನಾನು ಆ ದೇಶವನ್ನು ನಿನ್ನ ಮುಂದಿನ ಸಂತತಿಗಳವರಿಗೆ ಕೊಡುವೆನು” ಎಂದು ಹೇಳಿದನು. 13 ಆಮೇಲೆ ದೇವರು ಆ ಸ್ಥಳದಿಂದ ಹೊರಟುಹೋದನು. 14-15 ಯಾಕೋಬನು ಈ ಸ್ಥಳದಲ್ಲಿ ಜ್ಞಾಪಕಾರ್ಥವಾಗಿ ಒಂದು ಸ್ಮಾರಕಕಲ್ಲನ್ನು ನಿಲ್ಲಿಸಿ ಅದರ ಮೇಲೆ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಸುರಿದನು. ಇದು ಒಂದು ವಿಶೇಷವಾದ ಸ್ಥಳ. ಯಾಕೆಂದರೆ ಅಲ್ಲಿ ದೇವರು ಯಾಕೋಬನೊಂದಿಗೆ ಮಾತಾಡಿದನು. ಯಾಕೋಬನು ಆ ಸ್ಥಳಕ್ಕೆ “ಬೇತೇಲ್” ಎಂದು ಹೆಸರಿಟ್ಟನು.
ಹೆರಿಗೆ ಬೇನೆಯಿಂದ ರಾಹೇಲಳ ಮರಣ
16 ಯಾಕೋಬನು ಮತ್ತು ಅವನ ಜನರು ಬೇತೇಲಿನಿಂದ ಹೊರಟು ಬೆತ್ಲೆಹೇಮೆಂಬ ಎಫ್ರಾತೂರಿಗೆ ಬರುವುದಕ್ಕಿಂತ ಸ್ವಲ್ಪಮುಂಚೆ ರಾಹೇಲಳಿಗೆ ಹೆರಿಗೆ ಕಾಲ ಬಂದಿತು. 17 ಆದರೆ ರಾಹೇಲಳು ಈ ಹೆರಿಗೆಯಲ್ಲಿ ತುಂಬ ಕಷ್ಟಪಡಬೇಕಾಯಿತು. ಆಕೆಗೆ ಬಹಳ ನೋವಿತ್ತು. ರಾಹೇಲಳ ದಾದಿಯು ಇದನ್ನು ಕಂಡು, ಆಕೆಗೆ, “ರಾಹೇಲಳೇ, ಭಯಪಡಬೇಡ. ನೀನು ಮತ್ತೊಬ್ಬ ಮಗನಿಗೆ ಜನನ ಕೊಡುತ್ತಿರುವೆ” ಎಂದು ಹೇಳಿದಳು.
18 ರಾಹೇಲಳು ಮಗನನ್ನು ಹೆರುವಾಗ ಸತ್ತುಹೋದಳು; ಸಾಯುವುದಕ್ಕೆ ಮೊದಲು, ರಾಹೇಲಳು ಆ ಮಗುವಿಗೆ ಬೆನೋನಿ ಎಂದು ಹೆಸರಿಟ್ಟಳು. ಆದರೆ ಯಾಕೋಬನು ಅವನಿಗೆ ಬೆನ್ಯಾಮೀನ್ ಎಂದು ಹೆಸರಿಟ್ಟನು. ಹಾಗೆ ರಾಹೇಳಲು ಮೃತಪಟ್ಟಳು.
19 ರಾಹೇಲಳನ್ನು ಬೆತ್ಲೆಹೇಮೆಂಬ ಎಫ್ರಾತಿಗೆ ಹೋಗುವ ದಾರಿಯಲ್ಲಿ ಸಮಾಧಿ ಮಾಡಲಾಯಿತು. 20 ಯಾಕೋಬನು ರಾಹೇಲಳ ಗೌರವಾರ್ಥವಾಗಿ ಆಕೆಯ ಸಮಾಧಿಯ ಮೇಲೆ ವಿಶೇಷವಾದ ಒಂದು ಕಲ್ಲನ್ನು ಇಟ್ಟನು. ಇಂದಿಗೂ ಆ ವಿಶೇಷವಾದ ಕಲ್ಲು ಅಲ್ಲಿದೆ. 21 ಆಮೇಲೆ ಇಸ್ರೇಲನು ತನ್ನ ಪ್ರಯಾಣವನ್ನು ಮುಂದುವರೆಸಿ “ಮಿಗ್ದಲ್‌ಏದರ್” ಗೋಪುರದ ದಕ್ಷಿಣದಲ್ಲಿ ಗುಡಾರವನ್ನು ಹಾಕಿಸಿದನು.
22 ಇಸ್ರೇಲನು ಸ್ವಲ್ಪಕಾಲದವರೆಗೆ ಅಲ್ಲಿ ಇಳಿದುಕೊಂಡನು. ಅವನು ಅಲ್ಲಿದ್ದಾಗ ರೂಬೇನನು ಇಸ್ರೇಲನ ದಾಸಿಯಾದ[a] ಬಿಲ್ಹಳೊಡನೆ ಮಲಗಿಕೊಂಡನು. ಇಸ್ರೇಲನು ಇದರ ಬಗ್ಗೆ ಕೇಳಿದಾಗ ತುಂಬ ಕೋಪಗೊಂಡನು.
ಇಸ್ರಾಯೇಲನ ಕುಟುಂಬ
ಯಾಕೋಬನಿಗೆ (ಇಸ್ರೇಲ) ಹನ್ನೆರಡು ಗಂಡುಮಕ್ಕಳಿದ್ದರು.
23 ಲೇಯಳ ಗಂಡುಮಕ್ಕಳು: ಯಾಕೋಬನ ಚೊಚ್ಚಲ ಮಗನಾದ ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್ ಮತ್ತು ಜೆಬುಲೂನ್.
24 ರಾಹೇಲಳ ಗಂಡುಮಕ್ಕಳು: ಯೋಸೇಫ ಮತ್ತು ಬೆನ್ಯಾಮೀನ್.
25 ಬಿಲ್ಹಳು ರಾಹೇಲಳ ದಾಸಿ. ಬಿಲ್ಹಳ ಗಂಡುಮಕ್ಕಳು: ದಾನ್ ಮತ್ತು ನಫ್ತಾಲಿ.
26 ಜಿಲ್ಪಳು ಲೇಯಳ ದಾಸಿ. ಜಿಲ್ಪಳ ಗಂಡುಮಕ್ಕಳು: ಗಾದ್ ಮತ್ತು ಆಶೇರ್.
ಇವರೆಲ್ಲರು ಯಾಕೋಬನಿಗೆ ಪದ್ದನ್‌ಅರಾಮಿನಲ್ಲಿ ಹುಟ್ಟಿದ ಗಂಡುಮಕ್ಕಳು.
27 ಯಾಕೋಬನು ತನ್ನ ತಂದೆಯಾದ ಇಸಾಕನ ಬಳಿಗೆ ಹೆಬ್ರೋನೆಂಬ ಕಿರ್ಯತರ್ಬದಲ್ಲಿದ್ದ ಮಮ್ರೆಗೆ ಬಂದನು. ಅಬ್ರಹಾಮನು ಮತ್ತು ಇಸಾಕನು ವಾಸವಾಗಿದ್ದದ್ದು ಇಲ್ಲೇ. 28 ಇಸಾಕನು ನೂರೆಂಭತ್ತು ವರ್ಷಗಳವರೆಗೆ ಜೀವಿಸಿದನು. 29 ಆಮೇಲೆ ಇಸಾಕನು ದಿನ ತುಂಬಿದ ಮುದುಕನಾಗುವವರೆಗೆ ಜೀವಿಸಿ ತೀರಿಕೊಂಡನು. ಅವನ ಮಕ್ಕಳಾದ ಏಸಾವನು ಮತ್ತು ಯಾಕೋಬನು ತಮ್ಮ ಅಜ್ಜನಿಗೆ ಸಮಾಧಿಯಾಗಿದ್ದ ಸ್ಥಳದಲ್ಲೇ ತಮ್ಮ ತಂದೆಗೆ ಸಮಾಧಿ ಮಾಡಿದರು.
ಏಸಾವನ ಕುಟುಂಬ
36 ಎದೋಮನೆಂಬ ಏಸಾವನ ಕುಟುಂಬ ಚರಿತ್ರೆ: 2 ಏಸಾವನು ಕಾನಾನ್ ದೇಶದ ಸ್ತ್ರೀಯರನ್ನು ಮದುವೆಯಾದನು. ಏಸಾವನ ಹೆಂಡತಿಯರು: ಹಿತ್ತಿಯನಾದ ಏಲೋನನ ಮಗಳಾದ ಆದಾ; ಹಿವ್ವಿಯನಾದ ಸಿಬೆಯೋನನಿಗೆ ಹುಟ್ಟಿದ ಅನಾಹ ಎಂಬಾಕೆಯ ಮಗಳಾಗಿದ್ದ ಒಹೊಲೀಬಾಮ; 3 ಇಷ್ಮಾಯೇಲನ ಮಗಳೂ ನೆಬಾಯೋತನ ತಂಗಿಯೂ ಆಗಿದ್ದ ಬಾಸೆಮತ್. 4 ಏಸಾವನಿಗೆ ಮತ್ತು ಆದಾಳಿಗೆ ಎಲೀಫಜನೆಂಬ ಮಗನಿದ್ದನು. ಬಾಸೆಮತಳಿಗೆ ರೆಗೂವೇಲನೆಂಬ ಮಗನಿದ್ದನು. 5 ಒಹೊಲೀಬಾಮಳಿಗೆ ಮೂವರು ಗಂಡುಮಕ್ಕಳಿದ್ದರು: ಯೆಗೂಷ, ಯಳಾಮ ಮತ್ತು ಕೋರಹ. ಇವರೆಲ್ಲರೂ ಏಸಾವನ ಗಂಡುಮಕ್ಕಳು ಮತ್ತು ಕಾನಾನ್ ದೇಶದಲ್ಲಿ ಹುಟ್ಟಿದವರು.
6-8 ಯಾಕೋಬ ಮತ್ತು ಏಸಾವರ ಕುಟುಂಬಗಳು ಬಹಳ ವೃದ್ಧಿಯಾದ ಕಾರಣ ಕಾನಾನ್ ದೇಶವು ಅವರಿಗೆ ಸಾಕಾಗಲಿಲ್ಲ. ಆದ್ದರಿಂದ ಏಸಾವನು ತನ್ನ ತಮ್ಮನಾದ ಯಾಕೋಬನಿಂದ ದೂರ ಹೋದನು. ಏಸಾವನು ತನ್ನ ಹೆಂಡತಿಯರನ್ನೂ ಗಂಡುಹೆಣ್ಣುಮಕ್ಕಳನ್ನೂ ಎಲ್ಲಾ ಸೇವಕರನ್ನೂ ದನಗಳನ್ನೂ ಮತ್ತು ಇತರ ಪಶುಗಳನ್ನೂ ತನಗೆ ಕಾನಾನಿನಲ್ಲಿದ್ದ ಪ್ರತಿಯೊಂದು ಆಸ್ತಿಯನ್ನೂ ತೆಗೆದುಕೊಂಡು ಸೇಯೀರ್ ಬೆಟ್ಟದ ಸೀಮೆಗೆ ಹೋದನು. (ಏಸಾವನಿಗೆ ಎದೋಮ್ ಎಂಬ ಹೆಸರೂ ಇದೆ. ಎದೋಮ್ ಎಂಬುದು ಸೇಯೀರ್ ದೇಶದ ಮತ್ತೊಂದು ಹೆಸರು.)
9 ಏಸಾವನು ಎದೋಮ್ ಜನರ ತಂದೆ. ಸೇಯೀರ್ ದೇಶದಲ್ಲಿ ವಾಸವಾಗಿದ್ದ ಏಸಾವನ ಕುಟುಂಬದವರ ಹೆಸರುಗಳು:
10 ಏಸಾವನ ಗಂಡುಮಕ್ಕಳು: ಎಲೀಫಜ, ಇವನು ಏಸಾವನಿಗೆ ಆದಾ ಎಂಬಾಕೆಯಲ್ಲಿ ಹುಟ್ಟಿದ ಮಗನು. ರೆಗೂವೇಲ, ಇವನು ಏಸಾವನಿಗೆ ಬಾಸೆಮತಳಲ್ಲಿ ಹುಟ್ಟಿದ ಮಗನು.
11 ಎಲೀಫಜನಿಗೆ ಐದು ಮಂದಿ ಗಂಡುಮಕ್ಕಳಿದ್ದರು: ತೇಮಾನ್, ಓಮಾರ್, ಚೆಪೋ, ಗತಾಮ್ ಮತ್ತು ಕೆನಜ್.
12 ಎಲೀಫಜನಿಗೆ ತಿಮ್ನ ಎಂಬ ಒಬ್ಬ ದಾಸಿಯೂ ಇದ್ದಳು. ತಿಮ್ನಳಿಗೆ ಮತ್ತು ಎಲೀಫಜನಿಗೆ ಅಮಾಲೇಕ ಎಂಬ ಒಬ್ಬ ಗಂಡುಮಗನಿದ್ದನು.
13 ರೆಗೂವೇಲನಿಗೆ ನಾಲ್ಕು ಮಂದಿ ಗಂಡುಮಕ್ಕಳಿದ್ದರು: ನಹತ್, ಜೆರಹ, ಶಮ್ಮಾ ಮತ್ತು ಮಿಜ್ಜಾ.
ಇವರು ಏಸಾವನ ಮೊಮ್ಮಕ್ಕಳು. ಇವರು ಏಸಾವನ ಹೆಂಡತಿಯಾದ ಬಾಸೆಮತಳ ಸಂತತಿಯವರು.
14 ಏಸಾವನ ಮೂರನೆ ಹೆಂಡತಿಯು ಅನಾಹನ ಮಗಳಾದ ಒಹೊಲೀಬಾಮ. (ಅನಾಹನು ಸಿಬೆಯೋನನ ಮಗನು.) ಏಸಾವನ ಮತ್ತು ಒಹೊಲೀಬಾಮಳ ಮಕ್ಕಳು: ಯೆಗೂಷ್, ಯಳಾಮ್ ಮತ್ತು ಕೋರಹ.
15 ಏಸಾವನ ವಂಶಸ್ಥರ ಕುಲಪತಿಗಳು:
ಏಸಾವನ ಮೊದಲನೆ ಮಗನಾದ ಎಲೀಫಜ. ಎಲೀಫಜನಿಂದ ಬಂದವರು: ತೇಮಾನ್, ಓಮಾರ್, ಚೆಫೋ, ಕೆನೆಜ್, 16 ಕೋರಹ, ಗತಾಮ ಮತ್ತು ಅಮಾಲೇಕ.
ಈ ಕುಲಪತಿಗಳು ಏಸಾವನ ಹೆಂಡತಿಯಾದ ಆದಾಳ ಸಂತತಿಯವರು.
17 ಏಸಾವನ ಮಗನಾದ ರೆಗೂವೇಲನು ಈ ಕುಟುಂಬಗಳ ತಂದೆಯಾಗಿದ್ದನು: ನಹತ, ಜೆರಹ, ಶಮ್ಮಾ ಮತ್ತು ಮಿಜ್ಜಾ.
ಈ ಕುಟುಂಬಗಳೆಲ್ಲವು ಏಸಾವನ ಹೆಂಡತಿಯಾದ ಬಾಸೆಮತಳ ಸಂತತಿಯವರು.
18 ಅನಾಹನ ಮಗಳೂ ಏಸಾವನ ಹೆಂಡತಿಯೂ ಆಗಿದ್ದ ಒಹೊಲೀಬಾಮಳಲ್ಲಿ ಹುಟ್ಟಿದವರು: ಯಗೂಷ್, ಯೆಳಾಮ ಮತ್ತು ಕೋರಹ. ಈ ಮೂವರು ತಮ್ಮ ಕುಟುಂಬಗಳ ತಂದೆಯಾಗಿದ್ದರು.
19 ಈ ಕುಟುಂಬಗಳಿಗೆಲ್ಲಾ ಏಸಾವನೇ ಮೂಲಪುರುಷ.
20 ಏಸಾವನಿಗಿಂತ ಮೊದಲು ಹೋರಿಯ ಜನಾಂಗದ ಸೇಯೀರ್ ಎಂಬವನು ಎದೋಮಿನಲ್ಲಿ ವಾಸವಾಗಿದ್ದನು. ಸೇಯೀರನ ಗಂಡುಮಕ್ಕಳು:
ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ, 21 ದೀಶೋನ್, ಏಚೆರ್ ಮತ್ತು ದೀಶಾನ್, ಆ ಗಂಡುಮಕ್ಕಳು ಕುಲಪತಿಗಳಾಗಿದ್ದರು.
22 ಲೋಟಾನನು ಹೋರಿ, ಹೇಮಾಮ್ ಎಂಬುವರ ತಂದೆ. (ತಿಮ್ನಳು ಲೋಟಾನನ ತಂಗಿ.)
23 ಶೋಬಾಲನು ಅಲ್ಪಾನ್, ಮಾನಹತ್, ಗೇಬಾಲ್, ಶೆಫೋ ಮತ್ತು ಓನಾಮ್ ಎಂಬವರ ತಂದೆ.
24 ಸಿಬೆಯೋನನಿಗೆ ಅಯ್ಯಾ ಮತ್ತು ಅನಾಹ ಎಂಬ ಇಬ್ಬರು ಗಂಡುಮಕ್ಕಳಿದ್ದರು. (ತನ್ನ ತಂದೆಯ ಕತ್ತೆಗಳನ್ನು ಮೇಯಿಸುತ್ತಿದ್ದಾಗ ಬಿಸಿನೀರಿನ ಒರತೆಗಳನ್ನು ಕಂಡುಕೊಂಡವನೇ ಅನಾಹ.)
25 ಅನಾಹನು ದೀಶೋನ್ ಮತ್ತು ಓಹೊಲೀಬಾಮಳ ತಂದೆ.
26 ದಿಶೋನನಿಗೆ ಹೆಮ್ದಾನ್, ಎಷ್ಬಾನ್, ಇತ್ರಾನ್ ಮತ್ತು ಕೆರಾನ್ ಎಂಬ ನಾಲ್ಕ ಮಂದಿ ಗಂಡುಮಕ್ಕಳಿದ್ದರು.
27 ಏಚೆರನಿಗೆ ಬಿಲ್ಹಾನ್, ಚಾವಾನ್ ಮತ್ತು ಅಕಾನ್ ಎಂಬ ಮೂರು ಮಂದಿ ಗಂಡುಮಕ್ಕಳಿದ್ದರು.
28 ದೀಶಾನನಿಗೆ ಊಚ್ ಮತ್ತು ಅರಾನ್ ಎಂಬ ಇಬ್ಬರು ಗಂಡುಮಕ್ಕಳಿದ್ದರು.
29 ಹೋರಿಯರ ಕುಟುಂಬಗಳ ನಾಯಕರುಗಳ ಹೆಸರುಗಳು ಇಂತಿವೆ: ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ, 30 ದೀಶೋನ್, ಏಚೆರ್ ಮತ್ತು ದೀಶಾನ್. ಸೇಯೀರ್‌ನಲ್ಲಿ ವಾಸವಾಗಿದ್ದ ಹೋರಿಯ ಕುಟುಂಬಗಳ ನಾಯಕರುಗಳು ಇವರೇ.
31 ಆ ಸಮಯದಲ್ಲಿ ಎದೋಮಿನಲ್ಲಿ ರಾಜರುಗಳಿದ್ದರು. ಇಸ್ರೇಲರಿಗಿಂತಲೂ ಮುಂಚೆ ಎದೋಮಿಗೆ ರಾಜರುಗಳಿದ್ದರು.
32 ಬೆಯೋರನ ಮಗನಾದ ಬೆಲಗನು ಎದೋಮಿನ ರಾಜನಾಗಿದ್ದನು. ಅವನು ದಿನ್ಹಾಬಾ ನಗರವನ್ನು ಆಳಿದನು.
33 ಬೆಲಗನು ಸತ್ತಮೇಲೆ, ಯೋಬಾಬನು ರಾಜನಾದನು. ಯೋಬಾಬನು ಬೊಚ್ರದವನಾದ ಚೆರಹನ ಮಗನು.
34 ಯೋಬಾಬನು ಸತ್ತಮೇಲೆ ಹುಷಾಮನು ಆಳಿದನು. ಹುಷಾಮನು ತೇಮಾನೀಯರ ದೇಶದವನು.
35 ಹುಷಾಮನು ಸತ್ತಮೇಲೆ, ಹದದನು ಆ ದೇಶವನ್ನು ಆಳಿದನು. ಹದದನು ಬೆದದನ ಮಗನು. (ಮೊವಾಬ್ಯರನ್ನು ಮಿದ್ಯಾನರ ದೇಶದಲ್ಲಿ ಸೋಲಿಸಿದವನೇ ಬೆದದನು.) ಹದದನು ಅವೀತ್ ಪಟ್ಟಣದವನು.
36 ಹದದನು ಸತ್ತಮೇಲೆ, ಸಮ್ಲಾಹನು ಆ ದೇಶವನ್ನು ಆಳಿದನು; ಸಮ್ಲಾಹನು ಮಸ್ರೇಕದವನು.
37 ಸಮ್ಲಾಹನು ಸತ್ತಮೇಲೆ ಸೌಲನು ಆ ದೇಶವನ್ನು ಆಳಿದನು. ಸೌಲನು ಯೂಫ್ರೇಟೀಸ್ ನದಿತೀರದಲ್ಲಿರುವ ರೆಹೋಬೋತೂರಿನವನು.
38 ಸೌಲನು ಸತ್ತಮೇಲೆ ಆ ದೇಶವನ್ನು ಬಾಳ್ಹಾನಾನನು ಆಳಿದನು. ಬಾಳ್ಹಾನಾನನು ಅಕ್ಬೋರನ ಮಗನು.
39 ಬಾಳ್ಹಾನಾನನು ಸತ್ತಮೇಲೆ ಆ ದೇಶವನ್ನು ಹದದನು ಆಳಿದನು. ಹದದನು ಪಾಗು ಎಂಬ ಪಟ್ಟಣದವನು. ಹದದನ ಹೆಂಡತಿಯ ಹೆಸರು ಮಹೇಟಬೇಲ್. ಮಹೇಟಬೇಲಳು ಮಟ್ರೇದ ಎಂಬಾಕೆಯ ಮಗಳು. (ಮಟ್ರೇದಳು ಮೇಜಾಹಾಬನ ಮಗಳು.)
40-43 ಏಸಾವನು ಎದೋಮ್ಯರಿಗೆ ಮೂಲಪಿತೃ:
ತಿಮ್ನ ಅಲ್ವಾ, ಯತೇತ, ಓಹೊಲೀಬಾಮಾ, ಏಲಾ, ಪೀನೋನ್, ಕೆನೆಜ್, ತೇಮಾನ್, ಮಿಪ್ಚಾರ, ಮಗ್ದೀಯೇಲ್ ಮತ್ತು ಗೀರಾಮ್ ಕುಟುಂಬಗಳವರು ತಮ್ಮ ಕುಟುಂಬಗಳ ಹೆಸರುಗಳನ್ನು ಹೊಂದಿದ್ದ ಪ್ರದೇಶಗಳಲ್ಲಿ ವಾಸಿಸಿದರು.
ಸ್ವಂತ ಊರಿಗೆ ಯೇಸುವಿನ ಪ್ರಯಾಣ
(ಮತ್ತಾಯ 13:53-58; ಲೂಕ 4:16-30)
6 ಯೇಸು ಅಲ್ಲಿಂದ ಹೊರಟು, ತನ್ನ ಸ್ವಂತ ಊರಿಗೆ ಹೋದನು. ಆತನ ಶಿಷ್ಯರು ಆತನೊಂದಿಗೆ ಹೋದರು. 2 ಸಬ್ಬತ್ ದಿನದಂದು ಯೇಸು ಸಭಾಮಂದಿರದಲ್ಲಿ ಉಪದೇಶಿಸಿದನು. ಆತನ ಉಪದೇಶವನ್ನು ಕೇಳಿ ಆಶ್ಚರ್ಯಗೊಂಡ ಅನೇಕ ಜನರು, “ಈ ಉಪದೇಶವನ್ನು ಮತ್ತು ಈ ಜ್ಞಾನವನ್ನು ಇವನು ಎಲ್ಲಿಂದ ಪಡೆದನು? ಇವನಿಗೆ ಕೊಟ್ಟವರು ಯಾರು? ಇವನಿಗೆ ಅದ್ಭುತಕಾರ್ಯಗಳನ್ನು ಮಾಡುವ ಶಕ್ತಿಯು ಎಲ್ಲಿಂದ ಬಂತು? 3 ಇವನು ಕೇವಲ ಬಡಗಿಯಲ್ಲವೋ? ಇವನ ತಾಯಿ ಮರಿಯಳು. ಇವನು ಯಾಕೋಬ, ಯೋಸೆ, ಯೂದ ಮತ್ತು ಸಿಮೋನರ ಅಣ್ಣ. ಇವನ ತಂಗಿಯರು ಇಲ್ಲಿ ನಮ್ಮೊಂದಿಗಿದ್ದಾರೆ” ಎಂದು ಹೇಳಿ ಆತನನ್ನು ತಾತ್ಸಾರ ಮಾಡಿದರು.
4 ಯೇಸು, “ಪ್ರವಾದಿಯನ್ನು ಬೇರೆ ಜನರು ಗೌರವಿಸುತ್ತಾರೆ, ಆದರೆ ಪ್ರವಾದಿಗೆ ಸ್ವಂತ ಊರಿನಲ್ಲಿಯೂ ಸ್ವಂತ ಜನರಲ್ಲಿಯೂ ಸ್ವಂತ ಮನೆಯಲ್ಲಿಯೂ ಗೌರವ ದೊರೆಯುವುದಿಲ್ಲ” ಎಂದು ಜನರಿಗೆ ಹೇಳಿದನು. 5 ಯೇಸು ಆ ಊರಿನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಆತನು ತನ್ನ ಕೈಗಳನ್ನು ಕೆಲವು ಮಂದಿ ಕಾಯಿಲೆಯವರ ಮೇಲಿಟ್ಟು ಅವರ ಕಾಯಿಲೆಗಳನ್ನು ವಾಸಿಮಾಡಿದನು. ಇವುಗಳಲ್ಲದೆ ಬೇರೆ ಯಾವ ಅದ್ಭುತಕಾರ್ಯಗಳನ್ನೂ ಆತನು ಮಾಡಲಿಲ್ಲ. 6 ಆ ಜನರಲ್ಲಿ ನಂಬಿಕೆಯಿಲ್ಲದಿರುವುದನ್ನು ಕಂಡು ಯೇಸುವಿಗೆ ಬಹಳ ಆಶ್ಚರ್ಯವಾಯಿತು. ಬಳಿಕ ಯೇಸು ಆ ಪ್ರದೇಶದ ಇತರ ಹಳ್ಳಿಗಳಿಗೆ ಹೋಗಿ ಉಪದೇಶಿಸಿದನು.
ಯೇಸು ತನ್ನ ಅಪೊಸ್ತಲರನ್ನು ಸೇವೆಗೆ ಕಳುಹಿಸಿದ್ದು
(ಮತ್ತಾಯ 10:1,5-15; ಲೂಕ 9:1-6)
7 ಯೇಸು ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಾಗಿ ಕರೆದು ಅವರನ್ನು ಇಬ್ಬರಿಬ್ಬರಾಗಿ ಹೊರಗೆ ಕಳುಹಿಸಿದನು. ಯೇಸು ಅವರಿಗೆ ದೆವ್ವಗಳ ಮೇಲೆ ಅಧಿಕಾರವನ್ನು ನೀಡಿದನು. 8 ಯೇಸು ಅವರಿಗೆ ಹೇಳಿದ್ದೇನೆಂದರೆ: “ನಿಮ್ಮ ಪ್ರವಾಸಕ್ಕೆ ಏನನ್ನೂ ತೆಗೆದುಕೊಳ್ಳಬೇಡಿ. ಊರುಗೋಲನ್ನು ಮಾತ್ರ ತೆಗೆದುಕೊಳ್ಳಿ, ರೊಟ್ಟಿಯನ್ನಾಗಲಿ ಚೀಲವನ್ನಾಗಲಿ ತೆಗೆದುಕೊಳ್ಳಬೇಡಿ. ನಿಮ್ಮ ಜೇಬಿನಲ್ಲಿ ಹಣವನ್ನು ಇಟ್ಟುಕೊಳ್ಳಬೇಡಿ. 9 ಪಾದರಕ್ಷೆಗಳನ್ನು ತೊಟ್ಟುಕೊಳ್ಳಿರಿ. ನೀವು ಧರಿಸಿಕೊಂಡಿರುವ ಉಡುಪೇ ಸಾಕು. 10 ನೀವು ಒಂದು ಮನೆಯಲ್ಲಿ ಇಳಿದುಕೊಂಡ ಮೇಲೆ ಆ ಊರನ್ನು ಬಿಡುವವರೆಗೆ ಆ ಮನೆಯಲ್ಲಿರಿ. 11 ಯಾವ ಊರಿನವರಾದರೂ ನಿಮ್ಮನ್ನು ಸ್ವೀಕರಿಸಿಕೊಳ್ಳದಿದ್ದರೆ ಮತ್ತು ನಿಮ್ಮ ಬೋಧನೆಯನ್ನು ಕೇಳದಿದ್ದರೆ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಝಾಡಿಸಿ ಆ ಊರನ್ನು ಬಿಟ್ಟುಹೋಗಿರಿ. ಇದು ಅವರಿಗೆ ಎಚ್ಚರಿಕೆಯಾಗಿರುತ್ತದೆ.”
12 ಶಿಷ್ಯರು ಅಲ್ಲಿಂದ ಹೊರಟು, ಇತರ ಸ್ಥಳಗಳಿಗೆ ಹೋಗಿ ಜನರಿಗೆ, “ನಿಮ್ಮಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ” ಎಂದು ಉಪದೇಶಿಸಿದರು. 13 ದೆವ್ವಗಳಿಂದ ಪೀಡಿತರಾಗಿದ್ದ ಅನೇಕರನ್ನು ಶಿಷ್ಯರು ಬಿಡುಗಡೆ ಮಾಡಿದರು ಮತ್ತು ಕಾಯಿಲೆಯ ಜನರಿಗೆ ಎಣ್ಣೆಯನ್ನು ಹಚ್ಚಿ ಗುಣಪಡಿಸಿದರು.
ಯೇಸುವಿನ ಕುರಿತು ಹೆರೋದನ ಅಭಿಪ್ರಾಯ
(ಮತ್ತಾಯ 14:1-12; ಲೂಕ 9:7-9)
14 ಯೇಸು ಪ್ರಸಿದ್ಧನಾಗಿದ್ದುದರಿಂದ ರಾಜನಾದ ಹೆರೋದನಿಗೆ ಯೇಸುವಿನ ವಿಷಯ ತಿಳಿಯಿತು. ಕೆಲವು ಜನರು, “ಇವನು (ಯೇಸು) ಸ್ನಾನಿಕನಾದ ಯೋಹಾನ. ಇವನು ಮತ್ತೆ ಬದುಕಿಬಂದಿದ್ದಾನೆ. ಆದಕಾರಣವೇ ಈ ಅದ್ಭುತಕಾರ್ಯಗಳನ್ನು ಮಾಡಲು ಶಕ್ತನಾಗಿದ್ದಾನೆ” ಎಂದು ಹೇಳಿದರು.
15 ಇನ್ನು ಕೆಲವರು, “ಇವನು ಎಲೀಯ”ನೆಂದು ಹೇಳಿದರು.
ಇತರ ಜನರು, “ಯೇಸು ಒಬ್ಬ ಪ್ರವಾದಿ. ಬಹುಕಾಲದ ಹಿಂದೆ ಜೀವಿಸಿದ್ದ ಪ್ರವಾದಿಗಳಂತೆ ಇವನೂ ಒಬ್ಬನು” ಎಂದು ಹೇಳಿದರು.
16 ಜನರು ಯೇಸುವಿನ ಬಗ್ಗೆ ಹೇಳುತ್ತಿದ್ದ ಈ ಮಾತುಗಳನ್ನೆಲ್ಲಾ ಕೇಳಿದ ಹೆರೋದನು, “ನಾನು ಶಿರಚ್ಛೇದನ ಮಾಡಿಸಿದ ಯೋಹಾನನು ಈಗ ಮತ್ತೆ ಬದುಕಿಬಂದಿದ್ದಾನೆ!” ಎಂದು ಹೇಳಿದನು.
ಸ್ನಾನಿಕ ಯೋಹಾನನು ಕೊಲ್ಲಲ್ಪಟ್ಟದ್ದರ ಬಗ್ಗೆ
17 ಯೋಹಾನನನ್ನು ಬಂಧಿಸಲು ತನ್ನ ಸೈನಿಕರಿಗೆ ಹೆರೋದನೇ ಆಜ್ಞಾಪಿಸಿದ್ದನು. ಅಂತೆಯೇ ಅವರು ಯೋಹಾನನನ್ನು ಸೆರೆಯಲ್ಲಿ ಹಾಕಿದ್ದರು. ಹೆರೋದನು ತನ್ನ ಪತ್ನಿಯಾಗಿ ಇಟ್ಟುಕೊಂಡಿದ್ದ ಹೆರೋದ್ಯಳ ನಿಮಿತ್ತ ಹೀಗೆ ಮಾಡಿದ್ದನು. ಹೆರೋದ್ಯಳು ಹೆರೋದನ ಸಹೋದರನಾದ ಫಿಲಿಪ್ಪನ ಪತ್ನಿ. 18 ಯೋಹಾನನು ಹೆರೋದನಿಗೆ, “ನೀನು ನಿನ್ನ ಅಣ್ಣನ ಪತ್ನಿಯನ್ನು ಇಟ್ಟುಕೊಂಡಿರುವುದು ಸರಿಯಲ್ಲ” ಎಂದು ಹೇಳುತ್ತಿದ್ದನು. 19 ಆದ್ದರಿಂದ ಹೆರೋದ್ಯಳು ಯೋಹಾನನನ್ನು ದ್ವೇಷಿಸಲಾರಂಭಿಸಿ ಅವನನ್ನು ಕೊಲ್ಲಿಸಬೇಕೆಂದಿದ್ದಳು. 20 ಆದರೆ ಆಕೆಗೆ ಸಾಧ್ಯವಾಗಲಿಲ್ಲ. ಹೆರೋದನು ಯೋಹಾನನನ್ನು ಕೊಲ್ಲಿಸಲು ಭಯಪಟ್ಟನು. ಯೋಹಾನನನ್ನು ಒಳ್ಳೆಯವನೆಂದೂ ಪವಿತ್ರನೆಂದೂ ಜನರೆಲ್ಲರು ನಂಬಿದ್ದಾರೆಂಬುದು ಹೆರೋದನಿಗೆ ತಿಳಿದಿತ್ತು. ಆದ್ದರಿಂದ ಹೆರೋದನು ಯೋಹಾನನನ್ನು ರಕ್ಷಿಸಿದನು. ಹೆರೋದನು ಯೋಹಾನನ ಉಪದೇಶವನ್ನು ಕೇಳಿದಾಗಲೆಲ್ಲಾ ಗಲಿಬಿಲಿಗೊಳ್ಳುತ್ತಿದ್ದನು. ಆದರೂ ಅವನ ಉಪದೇಶವನ್ನು ಸಂತೋಷದಿಂದ ಕೇಳುತ್ತಿದ್ದನು.
21 ಒಮ್ಮೆ ಯೋಹಾನನನ್ನು ಮರಣಕ್ಕೆ ಈಡುಮಾಡುವ ಸುಸಮಯ ಹೆರೋದ್ಯಳಿಗೆ ದೊರೆಯಿತು. ಅಂದು ಹೆರೋದನ ಹುಟ್ಟುಹಬ್ಬದ ದಿನವಾಗಿತ್ತು. ಹೆರೋದನು ರಾಜಾಧಿಕಾರಿಗಳಿಗೂ ಸೇನಾಧಿಪತಿಗಳಿಗೂ ಮತ್ತು ಗಲಿಲಾಯದ ಪ್ರಮುಖರಿಗೂ ಒಂದು ಔತಣಕೂಟವನ್ನು ಏರ್ಪಡಿಸಿದನು. 22 ಹೆರೋದ್ಯಳ ಮಗಳು ಈ ಔತಣಕೂಟಕ್ಕೆ ಬಂದು ನರ್ತಿಸಿದಳು. ಹೆರೋದನಿಗೂ ಮತ್ತು ಅವನ ಜೊತೆಯಲ್ಲಿ ಊಟಮಾಡುತ್ತಿದ್ದವರಿಗೂ ಬಹಳ ಸಂತೋಷವಾಯಿತು.
ಆಗ ರಾಜ ಹೆರೋದನು ಆ ಹುಡುಗಿಗೆ, “ನಿನಗೆ ಏನು ಬೇಕಾದರೂ ಕೇಳಿಕೊ, ನಾನು ನಿನಗೆ ಕೊಡುತ್ತೇನೆ. 23 ನನ್ನ ರಾಜ್ಯದಲ್ಲಿ ಅರ್ಧವನ್ನು ಕೇಳಿಕೊಂಡರೂ ಕೊಡುತ್ತೇನೆ” ಎಂದು ಪ್ರಮಾಣಮಾಡಿದನು.
24 ಆ ಹುಡುಗಿಯು ತನ್ನ ತಾಯಿಯ ಬಳಿಗೆ ಹೋಗಿ, “ನಾನು ಏನ್ನನ್ನು ಕೇಳಿಕೊಳ್ಳಲಿ?” ಎಂದು ಕೇಳಿದಳು.
ಅವಳ ತಾಯಿ, “ಸ್ನಾನಿಕ ಯೋಹಾನನ ತಲೆಯನ್ನು ಕೇಳಿಕೊ” ಎಂದು ಹೇಳಿಕೊಟ್ಟಳು.
25 ಆ ಹುಡುಗಿ ಬೇಗನೆ ರಾಜನ ಬಳಿಗೆ ಬಂದು, “ಸ್ನಾನಿಕ ಯೋಹಾನನ ತಲೆಯನ್ನು ಒಂದು ತಟ್ಟೆಯಲ್ಲಿ ಈಗಲೇ ತರಿಸಿಕೊಡಿ, ಇದೇ ನನ್ನ ಬೇಡಿಕೆ” ಎಂದು ಹೇಳಿದಳು.
26 ರಾಜ ಹೆರೋದನು ಬಹಳ ವ್ಯಸನಗೊಂಡನು. ಆದರೆ ಅವನು ಆ ಹುಡುಗಿಗೆ ಏನು ಬೇಕಾದರೂ ಕೊಡುವೆನೆಂದು ಪ್ರಮಾಣ ಮಾಡಿದ್ದನು. ಅಲ್ಲಿ ಹೆರೋದನ ಸಂಗಡ ಊಟಮಾಡುತ್ತಿದ್ದ ಜನರು ಆ ಪ್ರಮಾಣವನ್ನು ಕೇಳಿಸಿಕೊಂಡಿದ್ದರು. ಆದ್ದರಿಂದ ಅವಳು ಕೇಳಿದ್ದನ್ನು ನಿರಾಕರಿಸಲು ಹೆರೋದನು ಇಚ್ಛಿಸಲಿಲ್ಲ. 27 ಆದ್ದರಿಂದ ರಾಜನು ಯೋಹಾನನ ತಲೆಯನ್ನು ಕತ್ತರಿಸಿ ತರಲು ಒಬ್ಬ ಸೈನಿಕನನ್ನು ಕಳುಹಿಸಿದನು. ಸೈನಿಕನು ಸೆರೆಮನೆಗೆ ಹೋಗಿ ಯೋಹಾನನ ತಲೆಯನ್ನು ಕತ್ತರಿಸಿ, 28 ಅದನ್ನು ಒಂದು ತಟ್ಟೆಯ ಮೇಲಿಟ್ಟು ತಂದು ಆ ಹುಡುಗಿಗೆ ಕೊಟ್ಟನು. ಅವಳು ಆ ತಲೆಯನ್ನು ತನ್ನ ತಾಯಿಗೆ ಕೊಟ್ಟಳು. 29 ನಡೆದ ಈ ಸಂಗತಿಯು ಯೋಹಾನನ ಶಿಷ್ಯರಿಗೆ ತಿಳಿಯಿತು. ಅವರು ಬಂದು, ಯೋಹಾನನ ದೇಹವನ್ನು ತೆಗೆದುಕೊಂಡು ಹೋಗಿ ಒಂದು ಸಮಾಧಿಯಲ್ಲಿಟ್ಟರು.
ಐದು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ
(ಮತ್ತಾಯ 14:13-21; ಲೂಕ 9:10-17; ಯೋಹಾನ 6:1-14)
30 ಯೇಸು ಉಪದೇಶಿಸಲು ಕಳುಹಿಸಿದ್ದ ಅಪೊಸ್ತಲರು ಮರಳಿಬಂದು ತಾವು ಮಾಡಿದ ಮತ್ತು ಉಪದೇಶಿಸಿದ ಸಂಗತಿಗಳನ್ನೆಲ್ಲ ಆತನಿಗೆ ತಿಳಿಸಿದರು. 31 ಯೇಸು ಮತ್ತು ಆತನ ಶಿಷ್ಯರು ಜನರಿಂದ ತುಂಬಿದ ಸ್ಥಳದಲ್ಲಿದ್ದರು. ಅಲ್ಲಿ ಅನೇಕಾನೇಕ ಜನರಿದ್ದುದರಿಂದ ಯೇಸು ಮತ್ತು ಆತನ ಶಿಷ್ಯರಿಗೆ ಊಟಮಾಡಲು ಸಹ ಸಮಯವಿರಲಿಲ್ಲ. ಯೇಸು ತನ್ನ ಶಿಷ್ಯರಿಗೆ, “ನನ್ನೊಂದಿಗೆ ಬನ್ನಿ. ನಾವು ಪ್ರಶಾಂತವಾಗಿರುವ ಸ್ಥಳಕ್ಕೆ ಹೋಗಿ ಸ್ವಲ್ಪ ವಿಶ್ರಮಿಸಿಕೊಳ್ಳೋಣ” ಎಂದು ಹೇಳಿದನು.
32 ಆದ್ದರಿಂದ ಯೇಸು ಮತ್ತು ಆತನ ಶಿಷ್ಯರು ಜನರಿಲ್ಲದ ಸ್ಥಳಕ್ಕೆ ದೋಣಿಯಲ್ಲಿ ಪ್ರತ್ಯೇಕವಾಗಿ ಹೊರಟರು. 33 ಆದರೆ ಅವರು ಹೋಗುತ್ತಿರುವುದನ್ನು ಅನೇಕ ಜನರು ನೋಡಿದರು. ಆತನು ಯೇಸುವೆಂಬುದು ಅವರಿಗೆ ತಿಳಿದಿತ್ತು. ಆದ್ದರಿಂದ ಆತನು ಹೋಗುತ್ತಿರುವ ಸ್ಥಳಕ್ಕೆ ಎಲ್ಲಾ ಊರುಗಳಿಂದ ಜನರು ಓಡಿಹೋಗಿ, ಆತನು ಅಲ್ಲಿಗೆ ಬರುವುದಕ್ಕೆ ಮುಂಚೆಯೇ ಅಲ್ಲಿದ್ದರು. 34 ಯೇಸು ಅಲ್ಲಿಗೆ ಬಂದಾಗ, ಅನೇಕ ಜನರು ತನಗಾಗಿ ಕಾಯುತ್ತಿರುವುದನ್ನು ನೋಡಿದನು. ಅವರು ಕುರುಬನಿಲ್ಲದ ಕುರಿಗಳಂತೆ ಇರುವುದನ್ನು ಕಂಡು ದುಃಖಗೊಂಡು ಅವರಿಗೆ ಅನೇಕ ಸಂಗತಿಗಳನ್ನು ಉಪದೇಶಿಸಿದನು.
35 ಅಂದು ಬಹಳ ಹೊತ್ತಾಯಿತು. ಯೇಸುವಿನ ಶಿಷ್ಯರು ಆತನ ಬಳಿಗೆ ಬಂದು, “ಈ ಸ್ಥಳದಲ್ಲಿ ಯಾರೂ ವಾಸಿಸುತ್ತಿಲ್ಲ. ಈಗಾಗಲೇ ಬಹಳ ಹೊತ್ತಾಗಿದೆ. 36 ಆದ್ದರಿಂದ ಜನರನ್ನು ಕಳುಹಿಸಿಬಿಡು. ಅವರು ಸುತ್ತಮುತ್ತಲಿರುವ ತೋಟಗಳಿಗೂ ಪಟ್ಟಣಗಳಿಗೂ ಹೋಗಿ ಆಹಾರವನ್ನು ಕೊಂಡುಕೊಳ್ಳಲಿ” ಎಂದು ಹೇಳಿದರು.
37 ಆದರೆ ಯೇಸು, “ನೀವೇ ಅವರಿಗೆ ಊಟ ಕೊಡಿ” ಎಂದು ಉತ್ತರಕೊಟ್ಟನು.
ಶಿಷ್ಯರು ಯೇಸುವಿಗೆ, “ಈ ಜನರಿಗೆಲ್ಲ ಬೇಕಾಗುವಷ್ಟು ರೊಟ್ಟಿಯನ್ನು ನಾವು ಎಲ್ಲಿಂದ ತರೋಣ! ಅವರಿಗೆ ಬೇಕಾಗುವಷ್ಟು ರೊಟ್ಟಿಯನ್ನು ಕೊಂಡುಕೊಂಡು ಬರಬೇಕಾದರೆ ನಮಗೆ ಇನ್ನೂರು ದಿನಾರಿ ನಾಣ್ಯ[a] ಗಳಾದರೂ ಬೇಕು!” ಎಂದು ಹೇಳಿದರು.
38 ಯೇಸು ಶಿಷ್ಯರಿಗೆ, “ಈಗ ನಿಮ್ಮ ಬಳಿಯಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿ” ಎಂದು ಹೇಳಿದನು.
ಶಿಷ್ಯರು ಹೋಗಿ ರೊಟ್ಟಿಗಳನ್ನು ಎಣಿಸಿ ಬಂದು, “ನಮ್ಮ ಬಳಿ ಐದು ರೊಟ್ಟಿಗಳಿವೆ ಮತ್ತು ಎರಡು ಮೀನುಗಳಿವೆ” ಎಂದು ಹೇಳಿದರು.
39 ಆಗ ಯೇಸು ಶಿಷ್ಯರಿಗೆ, “ಹಸಿರು ಹುಲ್ಲಿನ ಮೇಲೆ ಸಾಲುಸಾಲಾಗಿ ಕುಳಿತುಕೊಳ್ಳಲು ಜನರಿಗೆ ತಿಳಿಸಿ” ಎಂದು ಹೇಳಿದನು. 40 ಅಂತೆಯೇ ಜನರೆಲ್ಲರೂ ಸಾಲುಸಾಲಾಗಿ ಕುಳಿತುಕೊಂಡರು. ಪ್ರತಿಯೊಂದು ಸಾಲಿನಲ್ಲಿಯೂ ಐವತ್ತರಿಂದ ನೂರು ಜನರಿದ್ದರು.
41 ಯೇಸು ಐದು ರೊಟ್ಟಿಗಳನ್ನು ಮತ್ತು ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ, ರೊಟ್ಟಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದನು. ಬಳಿಕ ರೊಟ್ಟಿಯನ್ನು ಮುರಿದು, ಅದನ್ನು ಶಿಷ್ಯರಿಗೆ ಕೊಟ್ಟು ಜನರಿಗೆಲ್ಲ ಹಂಚಲು ತಿಳಿಸಿದನು. ಅಂತೆಯೇ ಎರಡು ಮೀನುಗಳನ್ನು ಮುರಿದು ಜನರಿಗೆ ಹಂಚಬೇಕೆಂದು ಶಿಷ್ಯರಿಗೆ ಕೊಟ್ಟನು.
42 ಜನರೆಲ್ಲರೂ ಊಟಮಾಡಿ ತೃಪ್ತರಾದರು. 43 ಬಳಿಕ ಜನರು ತಿನ್ನಲಾರದೆ ಉಳಿಸಿದ ರೊಟ್ಟಿ ಮತ್ತು ಮೀನುಗಳನ್ನು ಶಿಷ್ಯರು ಶೇಖರಿಸಿದಾಗ ಹನ್ನೆರಡು ಬುಟ್ಟಿಗಳು ತುಂಬಿಹೋದವು. 44 ಅಂದು ಸುಮಾರು ಐದು ಸಾವಿರ ಜನ ಊಟಮಾಡಿದರು.
ನೀರಿನ ಮೇಲೆ ಕಾಲ್ನಡಿಗೆ
(ಮತ್ತಾಯ 14:22-33; ಯೋಹಾನ 6:15-21)
45 ಆಗ ಯೇಸು ತನ್ನ ಶಿಷ್ಯರಿಗೆ ದೋಣಿಯೊಳಕ್ಕೆ ಹೋಗಲು ತಿಳಿಸಿದನು. ಸರೋವರದ ಆಚೆಯ ದಡದಲ್ಲಿದ್ದ ಬೆತ್ಸಾಯಿದಕ್ಕೆ ಹೋಗಬೇಕೆಂತಲೂ ಸ್ವಲ್ಪ ಸಮಯದ ನಂತರ ತಾನು ಬರುವುದಾಗಿಯೂ ಯೇಸು ಅವರಿಗೆ ಹೇಳಿ ಅವರನ್ನು ಕಳುಹಿಸಿದನು. ತಮ್ಮತಮ್ಮ ಮನೆಗಳಿಗೆ ಹೋಗುವಂತೆ ಜನರಿಗೆ ತಿಳಿಸುವುದಕ್ಕಾಗಿ ಯೇಸು ಅಲ್ಲಿ ಉಳಿದುಕೊಂಡನು. 46 ಯೇಸು ಜನರನ್ನು ಬೀಳ್ಕೊಟ್ಟ ಮೇಲೆ ಪ್ರಾರ್ಥಿಸುವುದಕ್ಕಾಗಿ ಬೆಟ್ಟದ ಮೇಲಕ್ಕೆ ಹೋದನು.
47 ಅಂದು ರಾತ್ರಿ ದೋಣಿಯು ಸರೋವರದ ಮಧ್ಯದಲ್ಲಿಯೇ ಇದ್ದಿತು. ಯೇಸು ಒಬ್ಬನೇ ದಡದ ಮೇಲಿದ್ದನು. 48 ದೋಣಿಯು ಸರೋವರದ ಮೇಲೆ ದೂರದಲ್ಲಿರುವುದನ್ನೂ ಶಿಷ್ಯರು ಅದನ್ನು ದಡಕ್ಕೆ ಸಾಗಿಸಲು ಬಹಳ ಕಷ್ಟಪಡುತ್ತಿರುವುದನ್ನೂ ಯೇಸು ನೋಡಿದನು. ಗಾಳಿಯು ಅವರಿಗೆ ಪ್ರತಿಕೂಲವಾಗಿ ಬೀಸುತ್ತಿತ್ತು. ಮುಂಜಾನೆ ಮೂರರಿಂದ ಆರು ಗಂಟೆಯ ಸಮಯದಲ್ಲಿ, ಯೇಸು ನೀರಿನ ಮೇಲೆ ನಡೆದುಕೊಂಡು ದೋಣಿಯ ಸಮೀಪಕ್ಕೆ ಬಂದು ಅವರನ್ನು ಹಾದು ಮುಂದೆ ಹೋಗುವುದರಲ್ಲಿದ್ದನು. 49 ಆದರೆ ನೀರಿನ ಮೇಲೆ ನಡೆಯುತ್ತಿದ್ದ ಆತನನ್ನು ಕಂಡ ಶಿಷ್ಯರು ಆತನನ್ನು ಭೂತವೆಂದು ಭ್ರಮಿಸಿಕೊಂಡು ಭಯದಿಂದ ಕಿರುಚಿದರು. 50 ಶಿಷ್ಯರೆಲ್ಲರೂ ಯೇಸುವನ್ನು ನೋಡಿ ಬಹಳವಾಗಿ ಹೆದರಿದ್ದರು. ಆದರೆ ಯೇಸು ಅವರೊಂದಿಗೆ ಮಾತನಾಡಿ, “ಚಿಂತಿಸದಿರಿ! ನಾನೇ! ಅಂಜಬೇಡಿ” ಎಂದು ಹೇಳಿದನು. 51 ನಂತರ ಯೇಸು ತನ್ನ ಶಿಷ್ಯರಿದ್ದ ದೋಣಿಯೊಳಕ್ಕೆ ಹತ್ತಿದನು. ಆಗ ಗಾಳಿಯು ನಿಂತುಹೋಯಿತು. ಶಿಷ್ಯರಿಗೆ ಬಹಳ ಆಶ್ಚರ್ಯವಾಯಿತು. 52 ಯೇಸು ಐದು ರೊಟ್ಟಿಗಳಿಂದ ಐದು ಸಾವಿರ ಜನರಿಗೆ ಊಟ ಮಾಡಿಸಿದ್ದನ್ನು ಅವರು ನೋಡಿದ್ದರೂ ಅದರ ಅರ್ಥವನ್ನು ಗ್ರಹಿಸಲಿಲ್ಲ. ಅವರು ಅದನ್ನು ಅರ್ಥಮಾಡಿಕೊಳ್ಳುವಷ್ಟು ಸಮರ್ಥರಾಗಿರಲಿಲ್ಲ.
ಅನೇಕ ರೋಗಿಗಳಿಗೆ ಯೇಸುವಿನಿಂದ ಸ್ವಸ್ಥತೆ
(ಮತ್ತಾಯ 14:34-36)
53 ಯೇಸುವಿನ ಶಿಷ್ಯರು ಸರೋವರವನ್ನು ದಾಟಿ ಗೆನಸರೇತ್ ಊರಿಗೆ ಬಂದು ದೋಣಿಯನ್ನು ತೀರದಲ್ಲಿ ಕಟ್ಟಿದರು. 54 ಅವರು ದೋಣಿಯಿಂದ ಹೊರಕ್ಕೆ ಬಂದಾಗ ಜನರು ಯೇಸುವನ್ನು ಗುರುತು ಹಿಡಿದರು. 55 ಯೇಸು ಬಂದಿರುವ ಸುದ್ದಿಯನ್ನು ಆ ಪ್ರದೇಶದಲ್ಲಿರುವ ಜನರಿಗೆಲ್ಲಾ ತಿಳಿಸುವುದಕ್ಕಾಗಿ ಅವರು ಓಡಿಹೋದರು. ಯೇಸು ಹೋದ ಸ್ಥಳಗಳಿಗೆಲ್ಲ ಜನರು ಕಾಯಿಲೆಯ ಜನರನ್ನು ಹಾಸಿಗೆಗಳ ಮೇಲೆ ತಂದರು. 56 ಯೇಸು ಆ ಪ್ರದೇಶದಲ್ಲಿದ್ದ ಪಟ್ಟಣಗಳಿಗೆ, ನಗರಗಳಿಗೆ ಮತ್ತು ತೋಟಗಳಿಗೆ ಹೋದನು. ಆತನು ಹೋದ ಕಡೆಗಳಲ್ಲೆಲ್ಲಾ ಜನರು ಮಾರುಕಟ್ಟೆಯ ಸ್ಥಳಗಳಿಗೆ ಕಾಯಿಲೆಯ ಜನರನ್ನು ಕರೆತಂದರು. ಅವರು ಯೇಸುವಿಗೆ, ನಿನ್ನ ಮೇಲಂಗಿಯ ಅಂಚನ್ನಾದರೂ ಮುಟ್ಟಲು ತಮಗೆ ಅವಕಾಶ ಕೊಡಬೇಕೆಂದು ಬೇಡಿಕೊಂಡರು. ಆತನನ್ನು ಸ್ಪರ್ಶಿಸಿದ ಜನರೆಲ್ಲರಿಗೂ ಗುಣವಾಯಿತು.
ಯೋಬನಿಗೆ ಎರಡನೆ ಪರೀಕ್ಷೆ
2 ಮತ್ತೊಂದು ದಿನ ಯೆಹೋವನನ್ನು ಭೇಟಿಯಾಗಲು ದೇವದೂತರು ಬಂದರು. ಸೈತಾನನು ಸಹ ಯೆಹೋವನನ್ನು ಭೇಟಿಯಾಗಲು ಅವರೊಂದಿಗೆ ಬಂದನು. 2 ಯೆಹೋವನು ಸೈತಾನನಿಗೆ, “ನೀನು ಎಲ್ಲಿಂದ ಬರುತ್ತಿರುವೆ?” ಎಂದು ಕೇಳಿದನು.
ಸೈತಾನನು ಯೆಹೋವನಿಗೆ, “ನಾನು ಭೂಮಿಯ ಮೇಲೆಲ್ಲಾ ಅಲೆದಾಡುತ್ತಾ ಬಂದೆನು” ಎಂದು ಉತ್ತರಕೊಟ್ಟನು.
3 ಅದಕ್ಕೆ ಯೆಹೋವನು, “ನನ್ನ ಸೇವಕನಾದ ಯೋಬನನ್ನು ಗಮನಿಸಿದೆಯಾ? ಭೂಮಿಯ ಮೇಲೆ ಅವನಂತೆ ಯಾರೂ ಇಲ್ಲ. ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿದ್ದಾನೆ; ಕೆಟ್ಟಕಾರ್ಯಗಳನ್ನು ಮಾಡದೆ ನಿರ್ದೋಷಿಯೂ ಯಥಾರ್ಥವಂತನೂ ಆಗಿದ್ದಾನೆ. ನಿಷ್ಕಾರಣವಾಗಿ ಅವನನ್ನು ನಾಶಪಡಿಸುವಂತೆ ನೀನು ನನ್ನನ್ನು ಒತ್ತಾಯಪಡಿಸಿದೆ. ಆದರೆ ಅವನು ನನಗೆ ಇನ್ನೂ ನಂಬಿಗಸ್ತನಾಗಿದ್ದಾನೆ” ಎಂದು ಹೇಳಿದನು.
4 ಅದಕ್ಕೆ ಸೈತಾನನು, “ಚರ್ಮಕ್ಕೆ ಚರ್ಮ![a] ಎಂಬಂತೆ ಮನುಷ್ಯನು ತನ್ನ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕೆ ತನ್ನ ಸರ್ವಸ್ವವನ್ನೂ ಕೊಡುವನು. 5 ಆದರೆ ನೀನು ಕೈಚಾಚಿ ಅವನ ಮಾಂಸವನ್ನೂ ಮೂಳೆಗಳನ್ನೂ ಹೊಡೆ. ಅವನು ನಿನ್ನ ಮುಖದೆದುರಿಗೆ ನಿನ್ನನ್ನು ಖಂಡಿತವಾಗಿ ದೂಷಿಸುವನು” ಎಂದು ಉತ್ತರಕೊಟ್ಟನು.
6 ಅದಕ್ಕೆ ಯೆಹೋವನು ಸೈತಾನನಿಗೆ, “ಸರಿ, ಯೋಬನನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ; ಆದರೆ ಅವನ ಪ್ರಾಣವನ್ನು ಮಾತ್ರ ತೆಗೆಯಬೇಡ” ಎಂದು ಅಪ್ಪಣೆಕೊಟ್ಟನು.
7 ಆಗ, ಸೈತಾನನು ಯೆಹೋವನ ಬಳಿಯಿಂದ ಹೊರಟುಹೋಗಿ ಯೋಬನಿಗೆ ಬಾಧಿಸುವ ಕುರುಗಳನ್ನು ಹುಟ್ಟಿಸಿದನು. ಯೋಬನ ದೇಹದ ಮೇಲೆಲ್ಲಾ ಅಂದರೆ ಅವನ ಪಾದದಿಂದಿಡಿದು ತಲೆಯ ಮೇಲ್ಭಾಗದವರೆಗೂ ಬಾಧಿಸುವ ಕುರುಗಳು ತುಂಬಿಕೊಂಡವು. 8 ಯೋಬನು ಬೂದಿಯಲ್ಲಿ ಕುಳಿತುಕೊಂಡು ತನ್ನ ಕುರುಗಳನ್ನು ಮಡಕೆಯ ಚೂರಿನಿಂದ ಕೆರೆದುಕೊಳ್ಳುತ್ತಿದ್ದನು. 9 ಯೋಬನ ಹೆಂಡತಿಯು ಅವನಿಗೆ, “ನೀನು ಇನ್ನೂ ದೇವರಿಗೆ ನಂಬಿಗಸ್ತನಾಗಿರುವೆಯೋ? ದೇವರನ್ನು ದೂಷಿಸಿ ಸಾಯಿ” ಎಂದು ಹೇಳಿದಳು.
10 ಯೋಬನು ತನ್ನ ಹೆಂಡತಿಗೆ, “ನೀನು ಮೂರ್ಖಳಂತೆ ಮಾತಾಡುತ್ತಿರುವೆ! ದೇವರು ಒಳ್ಳೆಯವುಗಳನ್ನು ಕೊಡುವಾಗ ನಾವು ಅವುಗಳನ್ನು ಸ್ವೀಕರಿಸಿಕೊಳ್ಳುತ್ತೇವೆ. ಆತನು ಕೆಟ್ಟದ್ದನ್ನು ಕೊಡುವಾಗ ನಾವು ಸ್ವೀಕರಿಸಿಕೊಳ್ಳಬಾರದೋ?” ಎಂದು ಉತ್ತರಕೊಟ್ಟನು. ಈ ಸಂಕಟದಲ್ಲಿಯೂ ಯೋಬನು ಪಾಪ ಮಾಡಲಿಲ್ಲ ಹಾಗೂ ದೇವರ ವಿರುದ್ಧ ಯಾವ ಮಾತನ್ನು ಆಡಲಿಲ್ಲ.
ಯೋಬನ ಮೂವರು ಸ್ನೇಹಿತರು
11 ಯೋಬನ ಮೂವರು ಗೆಳೆಯರು ಯಾರೆಂದರೆ: ತೇಮಾನಿನ ಎಲೀಫಜನು, ಶೂಹದ ಬಿಲ್ದದನು ಮತ್ತು ನಾಮಾಥದ ಚೋಫರನು. ಯೋಬನಿಗೆ ಸಂಭವಿಸಿದ ಆಪತ್ತುಗಳ ಬಗ್ಗೆ ಈ ಮೂವರು ಗೆಳೆಯರು ಕೇಳಿದಾಗ ತಮ್ಮ ಮನೆಯಿಂದ ಹೊರಟು ಒಟ್ಟಾಗಿ ಭೇಟಿಯಾದರು. ಯೋಬನ ಬಳಿಗೆ ಹೋಗಿ ಅನುತಾಪ ಸೂಚಿಸಿ ಸಂತೈಸಲು ಒಪ್ಪಿಕೊಂಡರು. 12 ಆದರೆ ಆ ಮೂವರು ಸ್ನೇಹಿತರು ಬಹು ದೂರದಿಂದ ಯೋಬನನ್ನು ಕಂಡಾಗ ಅವನ ಗುರುತೇ ಹಿಡಿಯಲಾರದೆ ಗಟ್ಟಿಯಾಗಿ ಅಳತೊಡಗಿದರು; ತಮ್ಮ ತಮ್ಮ ಮೇಲಂಗಿಗಳನ್ನು ಹರಿದುಕೊಂಡು ಮಣ್ಣನ್ನು ಮೇಲಕ್ಕೆ ತೂರಿ ತಮ್ಮ ತಲೆಗಳ ಮೇಲೆ ಸುರಿಸಿಕೊಂಡರು. 13 ಬಳಿಕ ಆ ಮೂವರು ಸ್ನೇಹಿತರು ಏಳುದಿನ ಹಗಲಿರುಳು ಯೋಬನೊಂದಿಗೆ ನೆಲದ ಮೇಲೆ ಕುಳಿತುಕೊಂಡಿದ್ದರು. ಯೋಬನು ವಿಪರೀತ ನೋವಿನಲ್ಲಿದ್ದ ಕಾರಣ ಅವರು ಒಂದು ಮಾತನ್ನೂ ಅವನಿಗೆ ಹೇಳಲಿಲ್ಲ.
ಪಾಪದ ಪಾಲಿಗೆ ಸತ್ತವರು, ಆದರೆ ಕ್ರಿಸ್ತನಲ್ಲಿ ಜೀವಂತರು
6 ಹಾಗಾದರೆ ನಿಮ್ಮ ಅಭಿಪ್ರಾಯವೇನು? ದೇವರು ನಮಗೆ ಹೆಚ್ಚುಹೆಚ್ಚು ಕೃಪೆಯನ್ನು ತೋರಿಸಲೆಂದು ನಾವು ಪಾಪದಲ್ಲೇ ಮುಂದುವರಿಯಬೇಕೇ? 2 ಇಲ್ಲ! ನಾವು ನಮ್ಮ ಹಿಂದಿನ ಪಾಪಮಯ ಜೀವಿತಗಳ ಪಾಲಿಗೆ ಸತ್ತುಹೋದೆವು. ಹೀಗಿರಲು, ನಾವು ಪಾಪದಲ್ಲೇ ಜೀವಿಸಲು ಹೇಗೆ ಸಾಧ್ಯ? 3 ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಕ್ರಿಸ್ತನಲ್ಲಿ ಪಾಲುಗಾರರಾದೆವು ಎಂಬುದನ್ನು ನೀವು ಮರೆತುಬಿಟ್ಟಿರಾ? ನಮ್ಮ ದೀಕ್ಷಾಸ್ನಾನದ ಮೂಲಕ ನಾವು ಆತನ ಮರಣದಲ್ಲಿ ಪಾಲುಗಾರರಾದೆವು. 4 ಹೀಗಿರಲಾಗಿ, ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ, ನಮಗೆ ಕ್ರಿಸ್ತನೊಂದಿಗೆ ಸಮಾಧಿಯಾಯಿತು ಮತ್ತು ನಾವು ಆತನ ಮರಣದಲ್ಲಿ ಪಾಲುಗಾರರಾದೆವು. ನಾವು ಜೀವಂತವಾಗಿ ಎದ್ದು ಹೊಸ ಜೀವಿತವನ್ನು ನಡೆಸಬೇಕೆಂದು ನಮಗೆ ಕ್ರಿಸ್ತನೊಂದಿಗೆ ಸಮಾಧಿಯಾಯಿತು. ಕ್ರಿಸ್ತನು ತಂದೆಯ ಅದ್ಭುತವಾದ ಶಕ್ತಿಯ ಮೂಲಕ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಂತೆಯೇ ನಾವು ಜೀವಂತವಾಗಿ ಎದ್ದುಬಂದೆವು.
5 ಕ್ರಿಸ್ತನ ಮರಣಕ್ಕೆ ಸದೃಶ್ಯವಾದ ಮರಣದ ಮೂಲಕ ನಾವು ಸಹ ಆತನೊಂದಿಗೆ ಐಕ್ಯರಾದೆವು. ಆದ್ದರಿಂದ ಕ್ರಿಸ್ತನು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಂತೆಯೇ ನಾವು ಸಹ ಜೀವಂತವಾಗಿ ಎದ್ದುಬರುವುದರ ಮೂಲಕವಾಗಿ ಆತನೊಂದಿಗೆ ಐಕ್ಯರಾಗುವೆವು. 6 ನಮ್ಮ ಹಳೆಯ ಜೀವಿತವು ಕ್ರಿಸ್ತನೊಂದಿಗೆ ಶಿಲುಬೆಯ ಮೇಲೆ ಸತ್ತುಹೋಯಿತೆಂಬುದು ನಮಗೆ ಗೊತ್ತಿದೆ. ನಮ್ಮ ಪಾಪಸ್ವಭಾವಕ್ಕೆ ನಮ್ಮ ಮೇಲೆ ಯಾವ ಅಧಿಕಾರ ಇರಬಾರದೆಂತಲೂ ನಾವು ಪಾಪಕ್ಕೆ ಗುಲಾಮರಾಗಿರಬಾರದೆಂತಲೂ ಹೀಗಾಯಿತು. 7 ಪಾಪದ ಪಾಲಿಗೆ ಸತ್ತವನು ಪಾಪದ ಹಿಡಿತದಿಂದ ಬಿಡುಗಡೆ ಹೊಂದಿದ್ದಾನೆ.
8 ನಾವು ಕ್ರಿಸ್ತನೊಂದಿಗೆ ಸತ್ತಿದ್ದರೆ, ಆತನೊಂದಿಗೆ ಜೀವಿಸುತ್ತೇವೆ ಎಂಬುದೂ ನಿಶ್ಚಯವಾಗಿದೆ. 9 ಕ್ರಿಸ್ತನು ಸತ್ತವರೊಳಗಿಂದ ಜೀವಂತನಾಗಿ ಎದ್ದುಬಂದನು. ಆತನು ಮತ್ತೆ ಸಾಯಲು ಸಾಧ್ಯವಿಲ್ಲವೆಂಬುದು ನಮಗೆ ತಿಳಿದಿದೆ. ಈಗ ಮರಣಕ್ಕೆ ಆತನ ಮೇಲೆ ಯಾವ ಅಧಿಕಾರವೂ ಇಲ್ಲ. 10 ಹೌದು, ಕ್ರಿಸ್ತನು ಪಾಪದ ಶಕ್ತಿಯನ್ನು ಸೋಲಿಸುವುದಕ್ಕಾಗಿ ಒಂದೇ ಸಲ ಸತ್ತನು; ಅದು ಎಲ್ಲಾ ಕಾಲಕ್ಕೂ ಸಾಕಾಗಿದೆ. ಈಗ ಆತನಲ್ಲಿ ಹೊಸ ಜೀವಿತವಿದೆ. ದೇವರೊಂದಿಗೆ ಜೀವಿಸುವುದೇ ಆ ಹೊಸ ಜೀವಿತ. 11 ಅದೇ ರೀತಿಯಲ್ಲಿ ನೀವು ಸಹ ನಿಮ್ಮನ್ನು ಪಾಪದ ಶಕ್ತಿಯ ಪಾಲಿಗೆ ಸತ್ತವರೆಂದು ಮತ್ತು ಕ್ರಿಸ್ತ ಯೇಸುವಿನ ಮೂಲಕ ದೇವರಿಗಾಗಿ ಜೀವಿಸುವವರೆಂದು ಪರಿಗಣಿಸಿರಿ.
12 ಆದರೆ ನೀವು ಭೂಲೋಕದ ಜೀವನದಲ್ಲಿ ಪಾಪಕ್ಕೆ ಅಧೀನರಾಗಿರಬೇಡಿ; ನಿಮ್ಮ ಪಾಪಾಧೀನಸ್ವಭಾವದ ದುರಾಶೆಗಳ ಆಡಳಿತಕ್ಕೆ ಒಳಗಾಗಬೇಡಿ. 13 ನಿಮ್ಮ ದೇಹದ ಅಂಗಗಳನ್ನು ಪಾಪದ ಸೇವೆಗೆ ಒಪ್ಪಿಸಬೇಡಿ; ನಿಮ್ಮ ದೇಹಗಳನ್ನು ಪಾಪಕ್ಕೆ ಒಪ್ಪಿಸಿ ದುಷ್ಟತ್ವವನ್ನು ನಡೆಸುವ ಸಾಧನಗಳಾಗಬೇಡಿ. ಅದಕ್ಕೆ ಬದಲಾಗಿ, ನಿಮ್ಮನ್ನೇ ದೇವರಿಗೆ ಸಮರ್ಪಿಸಿಕೊಳ್ಳಿರಿ; ಸತ್ತು ಈಗ ಜೀವಂತವಾಗಿ ಎದ್ದುಬಂದಿರುವವರಂತೆ ಜೀವಿಸಿರಿ; ಒಳ್ಳೆಯ ಕಾರ್ಯಗಳನ್ನು ಮಾಡುವ ಸಾಧನಗಳನ್ನಾಗಿ ನಿಮ್ಮ ದೇಹದ ಅಂಗಗಳನ್ನು ದೇವರಿಗೆ ಸಮರ್ಪಿಸಿರಿ. 14 ಪಾಪವು ನಿಮ್ಮ ಒಡೆಯನಾಗಿರುವುದಿಲ್ಲ. ಏಕೆಂದರೆ, ನೀವು ಧರ್ಮಶಾಸ್ತ್ರಕ್ಕೆ ಅಧೀನರಲ್ಲ. ಈಗ ನೀವು ದೇವರ ಕೃಪೆಯಲ್ಲಿ ಜೀವಿಸುವವರಾಗಿದ್ದೀರಿ.
ನೀತಿಯ ಗುಲಾಮರು
15 ಹೀಗಿರಲಾಗಿ ನಾವೇನು ಮಾಡಬೇಕು? ನಾವು ಧರ್ಮಶಾಸ್ತ್ರದ ಅಧೀನದಲ್ಲಿರದೆ ಕೃಪೆಯ ಅಧೀನದಲ್ಲಿರುವುದರಿಂದ ಪಾಪ ಮಾಡಬೇಕೇ? ಇಲ್ಲ! 16 ನೀವು ಯಾವನಿಗೆ ಗುಲಾಮರಂತೆ ವಿಧೇಯರಾಗುತ್ತೇವೆ ಎಂದು ನಿಮ್ಮನ್ನು ಒಪ್ಪಿಸಿಕೊಡುತ್ತೀರೋ ಆ ವ್ಯಕ್ತಿಗೆ ನೀವು ನಿಜವಾಗಿಯೂ ಗುಲಾಮರಾಗಿದ್ದೀರಿ ಎಂಬುದು ನಿಮಗೆ ಖಂಡಿತವಾಗಿ ತಿಳಿದಿದೆ. ನೀವು ಯಾವನಿಗೆ ವಿಧೇಯರಾಗುತ್ತೀರೋ ಅವನೇ ನಿಮ್ಮ ಒಡೆಯನಾಗಿದ್ದಾನೆ. ನೀವು ಪಾಪವನ್ನಾದರೂ ಅನುಸರಿಸಬಹುದು ಅಥವಾ ದೇವರಿಗಾದರೂ ವಿಧೇಯರಾಗಬಹುದು. ಪಾಪವು ಆತ್ಮಿಕ ಮರಣವನ್ನು ಉಂಟುಮಾಡುತ್ತದೆ. ಆದರೆ ನೀವು ದೇವರಿಗೆ ವಿಧೇಯರಾದರೆ, ಆ ವಿಧೇಯತೆಯು ನಿಮ್ಮನ್ನು ನೀತಿವಂತರನ್ನಾಗಿ ಮಾಡುತ್ತದೆ. 17 ಹಿಂದಿನ ಕಾಲದಲ್ಲಿ ನೀವು ಪಾಪಕ್ಕೆ ಗುಲಾಮರಾಗಿದ್ದಿರಿ. ಪಾಪವು ನಿಮ್ಮನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು. ನಿಮಗೆ ಬೋಧಿಸಿದ ವಿಷಯಗಳಿಗೆ ನೀವು ಸಂಪೂರ್ಣವಾಗಿ ವಿಧೇಯರಾದ್ದರಿಂದ ದೇವರಿಗೆ ಸ್ತೋತ್ರವಾಗಲಿ. 18 ನೀವು ಪಾಪದಿಂದ ಬಿಡುಗಡೆ ಹೊಂದಿದ್ದೀರಿ. ಈಗ ನೀವು ನೀತಿಗೆ ಗುಲಾಮರಾಗಿದ್ದೀರಿ. 19 ಜನರಿಗೆ ತಿಳಿದಿರುವ ಉದಾಹರಣೆಯ ಮೂಲಕ ನಾನು ಇದನ್ನು ನಿಮಗೆ ವಿವರಿಸುತ್ತೇನೆ. ಹಿಂದಿನ ಕಾಲದಲ್ಲಿ ನೀವು ನಿಮ್ಮ ದೇಹದ ಅಂಗಗಳನ್ನು ಪಾಪಕ್ಕೂ ದುಷ್ಟತ್ವಕ್ಕೂ ಗುಲಾಮರನ್ನಾಗಿ ಒಪ್ಪಿಸಿಕೊಟ್ಟಿದ್ದಿರಿ. ನೀವು ದುಷ್ಟತ್ವಕ್ಕಾಗಿ ಮಾತ್ರ ಜೀವಿಸಿದಿರಿ. ಅದೇ ರೀತಿಯಲ್ಲಿ ಈಗ ನೀವು ನಿಮ್ಮ ದೇಹದ ಅಂಗಗಳನ್ನು ನೀತಿಗೆ ಗುಲಾಮರನ್ನಾಗಿ ಒಪ್ಪಿಸಿಕೊಡಬೇಕು. ಆಗ ನೀವು ದೇವರಿಗಾಗಿ ಮಾತ್ರ ಜೀವಿಸುತ್ತೀರಿ.
20 ಹಿಂದಿನ ಕಾಲದಲ್ಲಿ ನೀವು ಪಾಪಕ್ಕೆ ಗುಲಾಮರಾಗಿದ್ದಿರಿ ಮತ್ತು ನೀತಿಯ ಹತೋಟಿಗೆ ಒಳಗಾಗಿರಲಿಲ್ಲ. 21 ನೀವು ದುಷ್ಕೃತ್ಯಗಳನ್ನು ಮಾಡಿದಿರಿ. ಈಗ ನೀವು ಆ ಕಾರ್ಯಗಳ ವಿಷಯದಲ್ಲಿ ನಾಚಿಕೆಪಡುತ್ತೀರಿ. ಆ ಕಾರ್ಯಗಳು ನಿಮಗೆ ಸಹಾಯ ಮಾಡಿದವೇ? ಇಲ್ಲ. ಆ ಕಾರ್ಯಗಳು ಆತ್ಮಿಕ ಮರಣವನ್ನು ಮಾತ್ರ ಉಂಟುಮಾಡುತ್ತವೆ. 22 ಆದರೆ ಈಗ ನೀವು ಪಾಪದಿಂದ ಬಿಡುಗಡೆಯಾಗಿ ದೇವರ ಗುಲಾಮರಾಗಿದ್ದೀರಿ. ಇದರಿಂದ ನಿಮಗೆ ಪರಿಶುದ್ಧ ಜೀವನವೂ ನಿತ್ಯಜೀವವೂ ದೊರೆಯುತ್ತವೆ. 23 ಜನರು ಮಾಡುವ ಪಾಪಕ್ಕೆ ಮರಣವೇ ಸಂಬಳ. ಆದರೆ ದೇವರ ಉಚಿತವಾದ ಕೊಡುಗೆಯು ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.
Kannada Holy Bible: Easy-to-Read Version. All rights reserved. © 1997 Bible League International