Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 30

30 ರಾಹೇಲಳು ತನಗೆ ಮಕ್ಕಳಾಗದಿರುವುದನ್ನು ಗಮನಿಸಿದಳು. ರಾಹೇಲಳಿಗೆ ತನ್ನ ಅಕ್ಕ ಲೇಯಳ ಮೇಲೆ ಹೊಟ್ಟೆಕಿಚ್ಚಾಯಿತು. ಆದ್ದರಿಂದ ರಾಹೇಲಳು ಯಾಕೋಬನಿಗೆ, “ನನಗೆ ಮಕ್ಕಳನ್ನು ಕೊಡು, ಇಲ್ಲವಾದರೆ ನಾನು ಸಾಯುವೆ” ಎಂದು ಹೇಳಿದಳು.

ಯಾಕೋಬನಿಗೆ ರಾಹೇಲಳ ಮೇಲೆ ಕೋಪವಾಯಿತು. ಅವನು ಆಕೆಗೆ, “ನಾನು ದೇವರಲ್ಲ. ನಿನಗೆ ಮಕ್ಕಳಾಗದಂತೆ ಮಾಡಿರುವವನು ದೇವರು” ಎಂದು ಹೇಳಿದನು.

ನಂತರ ರಾಹೇಲಳು, “ನೀನು ನನ್ನ ಸೇವಕಿಯಾದ ಬಿಲ್ಹಾಳನ್ನು ತೆಗೆದುಕೊಳ್ಳಬಹುದು. ಆಕೆಯೊಡನೆ ಮಲಗಿಕೊ; ಆಕೆ ನನಗೋಸ್ಕರ ಒಂದು ಮಗುವನ್ನು ಹೆರುವಳು. ಆಗ ನಾನು ಆಕೆಯ ಮೂಲಕ ತಾಯಿಯಾಗುವೆನು” ಎಂದು ಹೇಳಿದಳು.

ಅಂತೆಯೇ ರಾಹೇಲಳು ಬಿಲ್ಹಾಳನ್ನು ತನ್ನ ಗಂಡನಾದ ಯಾಕೋಬನಿಗೆ ಕೊಟ್ಟಳು. ಯಾಕೋಬನು ಬಿಲ್ಹಾಳನ್ನು ಕೂಡಿದನು. ಬಿಲ್ಹಾ ಬಸುರಾಗಿ ಯಾಕೋಬನಿಗೆ ಒಬ್ಬ ಮಗನನ್ನು ಹೆತ್ತಳು.

ರಾಹೇಲಳು, “ದೇವರು ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಒಬ್ಬ ಮಗನನ್ನು ಕೊಡಲು ನಿರ್ಧರಿಸಿದನು” ಎಂದು ಹೇಳಿ ಆ ಮಗುವಿಗೆ ದಾನ್ ಎಂದು ಹೆಸರಿಟ್ಟಳು.

ಬಿಲ್ಹಾ ಮತ್ತೆ ಬಸುರಾಗಿ ಯಾಕೋಬನಿಗೆ ಎರಡನೆ ಮಗನನ್ನು ಹೆತ್ತಳು. ರಾಹೇಲಳು, “ನನ್ನ ಅಕ್ಕನೊಂದಿಗೆ ಕಷ್ಟಪಟ್ಟು ಹೋರಾಡಿ ಗೆದ್ದಿದ್ದೇನೆ” ಎಂದು ಹೇಳಿ ಆ ಮಗುವಿಗೆ ನಫ್ತಾಲಿ ಎಂದು ಹೆಸರಿಟ್ಟಳು.

ಲೇಯಳು ತನಗೆ ಮಕ್ಕಳಾಗದಿರುವುದನ್ನು ಗಮನಿಸಿ ತನ್ನ ಸೇವಕಿಯಾದ ಜಿಲ್ಪಳನ್ನು ಯಾಕೋಬನಿಗೆ ಕೊಟ್ಟಳು. 10 ಜಿಲ್ಪಳಿಗೂ ಒಬ್ಬ ಮಗನು ಹುಟ್ಟಿದನು. 11 ಲೇಯಳು, “ನಾನು ಅದೃಷ್ಟವಂತೆ” ಎಂದು ಹೇಳಿ, ಆ ಮಗುವಿಗೆ ಗಾದ್ ಎಂದು ಹೆಸರಿಟ್ಟಳು. 12 ಜಿಲ್ಪಳು ಮತ್ತೊಬ್ಬ ಮಗನನ್ನು ಹೆತ್ತಳು. ಲೇಯಳು, “ನಾನು ಧನ್ಯಳಾದೆ. 13 ಈಗ ಸ್ತ್ರೀಯರು ನನ್ನನ್ನು ಧನ್ಯಳೆಂದು ಕರೆಯುವರು” ಎಂದು ಹೇಳಿ ಆ ಮಗುವಿಗೆ ಆಶೇರ್ ಎಂದು ಹೆಸರಿಟ್ಟಳು.

14 ಗೋಧಿಯ ಸುಗ್ಗಿಕಾಲದಲ್ಲಿ, ರೂಬೇನನು ಹೊಲಕ್ಕೆ ಹೋಗಿದ್ದಾಗ ಕಾಮಜನಕಗಿಡದ ಹೂವುಗಳನ್ನು ಕಂಡನು. ರೂಬೇನನು ಈ ಹೂವುಗಳನ್ನು ತನ್ನ ತಾಯಿಯಾದ ಲೇಯಳಿಗೆ ತಂದುಕೊಟ್ಟನು. ರಾಹೇಲಳು ಲೇಯಳಿಗೆ, “ದಯವಿಟ್ಟು, ನಿನ್ನ ಮಗನು ತಂದಿರುವ ಹೂವುಗಳಲ್ಲಿ ನನಗೆ ಸ್ವಲ್ಪಕೊಡು” ಎಂದು ಕೇಳಿದಳು.

15 ಲೇಯಳು, “ನೀನು ಈಗಾಗಲೇ ನನ್ನ ಗಂಡನನ್ನು ತೆಗೆದುಕೊಂಡಿರುವೆ. ಈಗ ನನ್ನ ಮಗನು ತಂದಿರುವ ಹೂವುಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವೆ” ಎಂದು ಹೇಳಿದಳು.

ರಾಹೇಲಳು, “ನಿನ್ನ ಮಗನು ತಂದಿರುವ ಹೂವುಗಳನ್ನು ನನಗೆ ಕೊಟ್ಟರೆ, ನೀನು ಈ ರಾತ್ರಿ ಯಾಕೋಬನ ಸಂಗಡ ಮಲಗಿಕೊಳ್ಳಬಹುದು” ಎಂದು ಹೇಳಿದಳು.

16 ಆ ರಾತ್ರಿ ಯಾಕೋಬನು ಹೊಲದಿಂದ ಬಂದನು. ಲೇಯಳು ಅವನನ್ನು ಕಂಡು ಭೇಟಿಯಾಗಲು ಹೋದಳು. ಅವಳು ಅವನಿಗೆ, “ಈ ರಾತ್ರಿ ನೀನು ನನ್ನ ಸಂಗಡ ಮಲಗಿಕೊಳ್ಳುವೆ. ನನ್ನ ಮಗನು ತಂದ ಹೂವುಗಳನ್ನು ನಾನು ನಿನಗೋಸ್ಕರವಾಗಿ ಕೊಟ್ಟಿರುವೆ” ಎಂದು ಹೇಳಿದಳು. ಆದ್ದರಿಂದ ಯಾಕೋಬನು ಆ ರಾತ್ರಿ ಲೇಯಳೊಡನೆ ಮಲಗಿಕೊಂಡನು.

17 ಲೇಯಳು ಮತ್ತೆ ಬಸುರಾಗುವಂತೆ ದೇವರು ಅನುಗ್ರಹಿಸಿದನು. ಆಕೆ ತನ್ನ ಐದನೆಯ ಮಗನನ್ನು ಹೆತ್ತಳು. 18 ಲೇಯಳು, “ದೇವರು ನನಗೆ ಒಂದು ಬಹುಮಾನವನ್ನು ಕೊಟ್ಟನು; ಯಾಕೆಂದರೆ ನಾನು ನನ್ನ ಸೇವಕಿಯನ್ನು ನನ್ನ ಗಂಡನಿಗೆ ಕೊಟ್ಟೆನು” ಎಂದು ಹೇಳಿ, ಆ ಮಗುವಿಗೆ ಇಸ್ಸಾಕಾರ್ ಎಂದು ಹೆಸರಿಟ್ಟಳು.

19 ಲೇಯಳು ಮತ್ತೆ ಬಸುರಾಗಿ ಆರನೆಯ ಮಗನನ್ನು ಹೆತ್ತಳು. 20 ಲೇಯಳು, “ದೇವರು ನನಗೆ ಒಂದು ಒಳ್ಳೆಯ ಬಹುಮಾನವನ್ನು ಕೊಟ್ಟಿದ್ದಾನೆ. ಈಗ ಖಂಡಿತವಾಗಿ ಯಾಕೋಬನು ನನ್ನನ್ನು ಸ್ವೀಕರಿಸುವನು, ಯಾಕೆಂದರೆ ನಾನು ಅವನಿಗೆ ಆರು ಗಂಡುಮಕ್ಕಳನ್ನು ಕೊಟ್ಟಿರುವೆ” ಎಂದು ಹೇಳಿ ಆ ಮಗುವಿಗೆ, ಜೆಬುಲೂನ್ ಎಂದು ಹೆಸರಿಟ್ಟಳು.

21 ತರುವಾಯ ಲೇಯಳು ಒಬ್ಬ ಮಗಳನ್ನು ಹೆತ್ತಳು. ಆಕೆ ತನ್ನ ಮಗಳಿಗೆ ದೀನಾ ಎಂದು ಹೆಸರಿಟ್ಟಳು.

22 ನಂತರ, ದೇವರು ರಾಹೇಲಳ ಪ್ರಾರ್ಥನೆಯನ್ನು ಕೇಳಿ ಆಕೆಗೆ ಮಕ್ಕಳಾಗುವಂತೆ ಅನುಗ್ರಹಿಸಿದನು. 23-24 ರಾಹೇಲಳು ಬಸುರಾಗಿ ಒಬ್ಬ ಮಗನನ್ನು ಹೆತ್ತಳು. ರಾಹೇಲಳು, “ದೇವರು ನನಗಿದ್ದ ಅವಮಾನವನ್ನು ತೆಗೆದುಹಾಕಿದ್ದಾನೆ; ನನಗೆ ಒಬ್ಬ ಮಗನನ್ನು ಕೊಟ್ಟಿದ್ದಾನೆ” ಎಂದು ಹೇಳಿ ಆ ಮಗುವಿಗೆ ಯೋಸೇಫ ಎಂದು ಹೆಸರಿಟ್ಟಳು.

ಯಾಕೋಬನು ಲಾಬಾನನಿಗೆ ಮೋಸ ಮಾಡಿದ್ದು

25 ಯೋಸೇಫನು ಹುಟ್ಟಿದ ಮೇಲೆ, ಯಾಕೋಬನು ಲಾಬಾನನಿಗೆ, “ಈಗ ನಾನು ನನ್ನ ಸ್ವಂತ ಮನೆಗೆ ಹೋಗಲು ಅನುಮತಿ ಕೊಡು. 26 ನನ್ನ ಹೆಂಡತಿಯರನ್ನೂ ಮಕ್ಕಳನ್ನೂ ನನಗೆ ಕೊಡು. ನಾನು ಹದಿನಾಲ್ಕು ವರ್ಷ ನಿನ್ನ ಸೇವೆಮಾಡಿ ಅವರನ್ನು ಸಂಪಾದಿಸಿಕೊಂಡಿದ್ದೇನೆ. ನಾನು ನಿನಗೆ ಒಳ್ಳೆಯ ಸೇವೆ ಮಾಡಿರುವುದು ನಿನಗೆ ತಿಳಿದಿದೆ” ಎಂದು ಹೇಳಿದನು.

27 ಲಾಬಾನನು ಅವನಿಗೆ, “ನಾನು ಹೇಳುವುದನ್ನು ಕೇಳು; ಯೆಹೋವನು ನಿನ್ನ ನಿಮಿತ್ತವಾಗಿ ನನ್ನನ್ನು ಆಶೀರ್ವದಿಸಿದ್ದಾನೆಂದು ನನಗೆ ತಿಳಿದಿದೆ. 28 ಹೇಳು, ನಾನು ನಿನಗೆ ಎಷ್ಟು ಸಂಬಳ ಕೊಡಬೇಕು? ನೀನು ಹೇಳಿದಷ್ಟು ಕೊಡುತ್ತೇನೆ” ಎಂದು ಹೇಳಿದನು.

29 ಯಾಕೋಬನು, “ನಾನು ನಿನಗೋಸ್ಕರ ಕಷ್ಟಪಟ್ಟು ಕೆಲಸ ಮಾಡಿರುವುದು ನಿನಗೆ ಗೊತ್ತಿದೆ. ನಾನು ನಿನ್ನ ಕುರಿಮಂದೆಗಳನ್ನು ನೋಡಿಕೊಂಡಿದ್ದರಿಂದ ಅವು ಹೆಚ್ಚಾಗಿವೆ. 30 ನಾನು ಬಂದಾಗ ನಿನಗೆ ಸ್ವಲ್ಪವಿತ್ತು, ಈಗ ನಿನಗೆ ಬೇಕಾದಷ್ಟಿದೆ. ನಾನು ನಿನಗೋಸ್ಕರ ಮಾಡಿದ್ದನ್ನೆಲ್ಲ ಯೆಹೋವನು ಆಶೀರ್ವದಿಸಿದನು. ನಾನು ನನಗೋಸ್ಕರ ಕೆಲಸ ಮಾಡುವ ಸಮಯವಿದು. ನನ್ನ ಸ್ವಂತ ಮನೆಗೆ ಒದಗಿಸುವ ಸಮಯವಿದು” ಎಂದು ಹೇಳಿದನು.

31 ಲಾಬಾನನು “ಹಾಗಾದರೆ ನಾನು ನಿನಗೇನು ಕೊಡಬೇಕು” ಎಂದು ಕೇಳಿದನು.

ಯಾಕೋಬನು, “ನೀನು ನನಗೆ ಏನೂ ಕೊಡಬೇಕಾಗಿಲ್ಲ. (ನಾನು ಕೆಲಸ ಮಾಡಿದ್ದಕ್ಕೆ ನೀನು ಸಂಬಳ ಕೊಟ್ಟರೆ ಸಾಕು.) ಇದೊಂದು ಕಾರ್ಯವನ್ನು ಮಾಡು; ನಾನು ಹೋಗಿ ನಿನ್ನ ಕುರಿಗಳನ್ನು ನೋಡಿಕೊಳ್ಳುವೆ. 32 ನಾನು ನಿನ್ನ ಕುರಿಮಂದೆಯೊಳಗೆ ಹೋಗಿ, ಚುಕ್ಕೆಮಚ್ಚೆಗಳಿರುವ ಪ್ರತಿಯೊಂದು ಕುರಿಯನ್ನೂ ಪ್ರತಿಯೊಂದು ಕಪ್ಪು ಕುರಿಯನ್ನೂ ಚುಕ್ಕೆಮಚ್ಚೆಗಳಿರುವ ಪ್ರತಿಯೊಂದು ಮೇಕೆಯನ್ನೂ ತೆಗೆದುಕೊಳ್ಳುವೆನು. ಅದೇ ನನಗೆ ಸಂಬಳ. 33 ಮುಂದಿನ ದಿನಗಳಲ್ಲಿ ನೀನು ಬಂದು ಪರೀಕ್ಷಿಸಿದಾಗ ನಾನು ಯಥಾರ್ಥನೊ ಇಲ್ಲವೊ ಎಂಬುದನ್ನು ನೀನು ಸುಲಭವಾಗಿ ಕಂಡುಕೊಳ್ಳಬಹುದು. ನಾನೇನಾದರೂ ಚುಕ್ಕೆಯಿಲ್ಲದ ಮೇಕೆಗಳನ್ನಾಗಲಿ ಅಥವಾ ಕಪ್ಪಿಲ್ಲದ ಕುರಿಗಳನ್ನಾಗಲಿ ಹೊಂದಿದ್ದರೆ, ನಾನು ಅದನ್ನು ಕದ್ದುಕೊಂಡದ್ದೆಂದು ನೀನು ಪರಿಗಣಿಸಬಹುದು” ಎಂದು ಹೇಳಿದನು.

34 ಲಾಬಾನನು, “ನಾನು ಅದಕ್ಕೆ ಒಪ್ಪಿಕೊಂಡಿದ್ದೇನೆ. ನೀನು ಹೇಳಿದಂತೆ ನಾವು ಮಾಡೋಣ” ಎಂದು ಹೇಳಿದನು. 35 ಆ ದಿನ ಲಾಬಾನನು ಚುಕ್ಕೆಗಳಿದ್ದ ಎಲ್ಲಾ ಹೋತಗಳನ್ನೂ ಮೇಕೆಗಳನ್ನೂ ಕಪ್ಪಾದ ಕುರಿಗಳನ್ನೂ ಪ್ರತ್ಯೇಕಿಸಿದನು. ಲಾಬಾನನು ತನ್ನ ಗಂಡುಮಕ್ಕಳಿಗೆ ಆ ಕುರಿಗಳನ್ನು ನೋಡಿಕೊಳ್ಳಲು ಹೇಳಿದನು. 36 ಆದ್ದರಿಂದ ಅವನ ಗಂಡುಮಕ್ಕಳು ಚುಕ್ಕೆಗಳಿದ್ದ ಅವುಗಳೊಂದಿಗೆ ಮತ್ತೊಂದು ಸ್ಥಳಕ್ಕೆ ಹೋದರು. ಅವರು ಮೂರು ದಿನಗಳವರೆಗೆ ಪ್ರಯಾಣ ಮಾಡಿದರು. ಯಾಕೋಬನು ಅಲ್ಲಿದ್ದುಕೊಂಡು ಉಳಿದವುಗಳನ್ನೆಲ್ಲ ನೋಡಿಕೊಳ್ಳತೊಡಗಿದನು.

37 ಆದ್ದರಿಂದ ಯಾಕೋಬನು ಲಿಬ್ನೆ, ಲೂಜ್ ಮತ್ತು ಅರ್ಮೋನ್ ಎಂಬ ಮರಗಳಿಂದ ಹಸಿರುಕೊಂಬೆಗಳನ್ನು ಕತ್ತರಿಸಿದನು. ಅವುಗಳನ್ನು ಪಟ್ಟಿಪಟ್ಟಿಯಾಗಿ ತೊಗಟೆ ಸುಲಿದು ಅವುಗಳಲ್ಲಿರುವ ಬಿಳುಪುಬಣ್ಣವು ಕಾಣಿಸುವಂತೆ ಮಾಡಿದನು. 38 ಯಾಕೋಬನು ಆ ಕೊಂಬೆಗಳನ್ನು ಮಂದೆಗಳ ಎದುರಿಗೆ ನೀರು ಕುಡಿಯುವ ಸ್ಥಳದಲ್ಲಿಟ್ಟನು. ಪ್ರಾಣಿಗಳು ನೀರು ಕುಡಿಯುವುದಕ್ಕೆ ಬಂದಾಗ ಆ ಸ್ಥಳದಲ್ಲಿ ಸಂಗಮ ಮಾಡುತ್ತಿದ್ದವು. 39 ಮೇಕೆಗಳು ಆ ಕೊಂಬೆಗಳ ಎದುರಿನಲ್ಲಿ ಸಂಗಮ ಮಾಡಿದಾಗ, ಅವುಗಳಲ್ಲಿ ಹುಟ್ಟಿದ ಮರಿಗಳೆಲ್ಲ ಚುಕ್ಕೆಮಚ್ಚೆಗಳಿಂದಲೂ ಕಪ್ಪು ಬಣ್ಣದಿಂದಲೂ ಕೂಡಿದ್ದವು.

40 ಯಾಕೋಬನು ಚುಕ್ಕೆಯುಳ್ಳ ಮತ್ತು ಕಪ್ಪಾಗಿರುವ ಆಡುಕುರಿಗಳನ್ನು ಮಂದೆಯ ಇತರ ಆಡುಕುರಿಗಳಿಂದ ಬೇರ್ಪಡಿಸಿದನು. ಯಾಕೋಬನು ತನ್ನ ಪಶುಗಳನ್ನು ಲಾಬಾನನ ಪಶುಗಳಿಂದ ಪ್ರತ್ಯೇಕವಾಗಿರಿಸಿದನು. 41 ಬಲವಾದ ಆಡುಕುರಿಗಳು ಸಂಗಮ ಮಾಡುವಾಗಲೆಲ್ಲ ಯಾಕೋಬನು ಆ ಕೊಂಬೆಗಳನ್ನು ಅವುಗಳ ಕಣ್ಣಿಗೆ ಎದುರಾಗಿಡುತ್ತಿದ್ದನು. ಅವುಗಳು ಆ ಕೊಂಬೆಗಳ ಸಮೀಪದಲ್ಲಿ ಸಂಗಮ ಮಾಡುತ್ತಿದ್ದವು. 42 ಆದರೆ ಬಲಹೀನವಾದ ಪ್ರಾಣಿಗಳು ಸಂಗಮ ಮಾಡುವಾಗ ಯಾಕೋಬನು ಆ ಕೊಂಬೆಗಳನ್ನು ಅಲ್ಲಿ ಇಡುತ್ತಿರಲಿಲ್ಲ. ಆದ್ದರಿಂದ ಬಲಹೀನವಾದ ಆಡುಕುರಿಗಳಿಗೆ ಹುಟ್ಟಿದ ಮರಿಗಳೆಲ್ಲ ಲಾಬಾನನಿಗೆ ಸೇರಿಕೊಂಡವು. ಬಲವಾದ ಆಡುಕುರಿಗಳಿಗೆ ಹುಟ್ಟಿದ ಮರಿಗಳೆಲ್ಲ ಯಾಕೋಬನಿಗೆ ಸೇರಿಕೊಂಡವು. 43 ಹೀಗೆ ಯಾಕೋಬನು ತುಂಬ ಐಶ್ವರ್ಯವಂತನಾದನು. ಅವನಿಗೆ ದೊಡ್ಡ ಮಂದೆಗಳಿದ್ದವು. ಅನೇಕ ಸೇವಕರಿದ್ದರು; ಒಂಟೆಗಳಿದ್ದವು ಮತ್ತು ಕತ್ತೆಗಳಿದ್ದವು.

ಮಾರ್ಕ 1

ಯೇಸುವಿನ ಆಗಮನ

(ಮತ್ತಾಯ 3:1-12; ಲೂಕ 3:1-9,15-17; ಯೋಹಾನ 1:19-28)

ದೇವಕುಮಾರನಾದ ಯೇಸು ಕ್ರಿಸ್ತನನ್ನು ಕುರಿತ ಸುವಾರ್ತೆಯ ಆರಂಭವಿದು. ಪ್ರವಾದಿಯಾದ ಯೆಶಾಯನು ತನ್ನ ಪ್ರವಾದನೆಯ ಗ್ರಂಥದಲ್ಲಿ ಹೀಗೆ ಬರೆದಿದ್ದಾನೆ.

“ಇಗೋ! ನಾನು ನನ್ನ ಸಂದೇಶಕನನ್ನು ನಿನ್ನ ಮುಂದೆ ಕಳುಹಿಸುತ್ತೇನೆ.
    ಅವನು ನಿನಗಾಗಿ ಮಾರ್ಗವನ್ನು ಸಿದ್ಧಪಡಿಸುತ್ತಾನೆ.”(A)

“‘ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಗೊಳಿಸಿರಿ,
ಆತನ ದಾರಿಯನ್ನು ಸುಗಮಗೊಳಿಸಿರಿ’
    ಎಂದು ಒಬ್ಬ ವ್ಯಕ್ತಿಯು ಅಡವಿಯಲ್ಲಿ ಕೂಗುತ್ತಿದ್ದಾನೆ.”(B)

ಅಂತೆಯೇ ಸ್ನಾನಿಕ ಯೋಹಾನನು ಬಂದು, ಅಡವಿಯಲ್ಲಿ ಜನರಿಗೆ, “ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ. ಆಗ ನಿಮಗೆ ಪಾಪಕ್ಷಮೆ ಆಗುವುದು” ಎಂದು ಉಪದೇಶಿಸುತ್ತಿದ್ದನು ಮತ್ತು ದೀಕ್ಷಾಸ್ನಾನ ಕೊಡುತ್ತಾ ಇದ್ದನು. ಜುದೇಯ ಮತ್ತು ಜೆರುಸಲೇಮಿನ ಜನರೆಲ್ಲರೂ ಯೋಹಾನನ ಬಳಿಗೆ ಬಂದು ತಮ್ಮ ಪಾಪಗಳನ್ನು ಅರಿಕೆಮಾಡಿಕೊಂಡರು. ಆಗ ಯೋಹಾನನು ಅವರಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಕೊಟ್ಟನು.

ಯೋಹಾನನು ಒಂಟೆಯ ತುಪ್ಪಟದಿಂದ ಮಾಡಿದ ಹೊದಿಕೆಯನ್ನು ಹೊದ್ದುಕೊಂಡು ಸೊಂಟಕ್ಕೆ ತೊಗಲಿನ ನಡುಪಟ್ಟಿಯನ್ನು ಕಟ್ಟಿಕೊಳ್ಳುತ್ತಿದ್ದನು. ಅವನು ಮಿಡತೆಗಳನ್ನು ಮತ್ತು ಕಾಡುಜೇನನ್ನು ತಿನ್ನುತ್ತಿದ್ದನು.

ಯೋಹಾನನು ಜನರಿಗೆ, “ನನ್ನ ತರುವಾಯ ಬರುವಾತನು ನನಗಿಂತಲೂ ಶಕ್ತನಾಗಿದ್ದಾನೆ. ನಾನು ಮೊಣಕಾಲೂರಿ, ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ಯೋಗ್ಯನಲ್ಲ. ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ, ಆದರೆ ಆತನು ನಿಮಗೆ ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನ ಮಾಡಿಸುತ್ತಾನೆ” ಎಂದು ಬೋಧಿಸಿದನು.

ಯೇಸುವಿಗೆ ದೀಕ್ಷಾಸ್ನಾನ

(ಮತ್ತಾಯ 3:13-17; ಲೂಕ 3:21-22)

ಆ ದಿನಗಳಲ್ಲಿ ಯೇಸು ಗಲಿಲಾಯದ ನಜರೇತಿನಿಂದ ಯೋಹಾನನಿದ್ದ ಸ್ಥಳಕ್ಕೆ ಬಂದನು. ಯೋಹಾನನು ಯೇಸುವಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಮಾಡಿಸಿದನು. 10 ಯೇಸು ನೀರಿನಿಂದ ಮೇಲಕ್ಕೆ ಬರುತ್ತಿದ್ದಾಗ, ಆಕಾಶವು ತೆರೆಯಂತೆ ಹರಿದುಹೋಯಿತು; ಮತ್ತು ಪವಿತ್ರಾತ್ಮನು ತನ್ನ ಮೇಲೆ ಪಾರಿವಾಳದ ರೂಪದಲ್ಲಿ ಇಳಿದುಬರುತ್ತಿರುವುದನ್ನು ಕಂಡನು. 11 ಆಗ ಪರಲೋಕದಿಂದ ಧ್ವನಿಯೊಂದು ಹೊರಟು, “ನೀನೇ ನನ್ನ ಪ್ರಿಯ ಮಗನು. ನಾನು ನಿನ್ನನ್ನು ಮೆಚ್ಚಿಕೊಂಡಿದ್ದೇನೆ” ಎಂದು ಹೇಳಿತು.

ಯೇಸುವಿಗಾದ ಪರಿಶೋಧನೆ

(ಮತ್ತಾಯ 4:1-11; ಲೂಕ 4:1-13)

12 ಆಗ ದೇವರಾತ್ಮನು ಯೇಸುವನ್ನು ಅಡವಿಗೆ ನಡೆಸಿದನು. 13 ಯೇಸು ಅಲ್ಲಿ ನಲವತ್ತು ದಿನಗಳ ಕಾಲ ಕಾಡುಮೃಗಗಳೊಂದಿಗಿದ್ದು ಸೈತಾನನಿಂದ ಪರಿಶೋಧಿಸಲ್ಪಟ್ಟನು. ಬಳಿಕ ದೇವದೂತರು ಬಂದು ಯೇಸುವಿಗೆ ಉಪಚಾರ ಮಾಡಿದರು.

ಗಲಿಲಾಯದಲ್ಲಿ ಯೇಸುವಿನ ಸೇವೆಯ ಆರಂಭ

(ಮತ್ತಾಯ 4:12-17; ಲೂಕ 4:14-15)

14 ಯೋಹಾನನನ್ನು ಸೆರೆಮನೆಗೆ ಹಾಕಿದ ಮೇಲೆ, ಯೇಸು ಗಲಿಲಾಯಕ್ಕೆ ಹೋಗಿ ಜನರಿಗೆ, 15 “ಕಾಲ ಪರಿಪೂರ್ಣವಾಯಿತು. ದೇವರ ರಾಜ್ಯ ಸಮೀಪಿಸಿತು. ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಸುವಾರ್ತೆಯನ್ನು ನಂಬಿರಿ” ಎಂಬ ದೇವರ ಸುವಾರ್ತೆಯನ್ನು ಉಪದೇಶಿಸಿದನು.

ಯೇಸುವಿನ ಪ್ರಥಮ ಶಿಷ್ಯರು

(ಮತ್ತಾಯ 4:18-22; ಲೂಕ 5:1-11)

16 ಯೇಸು ಗಲಿಲಾಯ ಸರೋವರದ ಬಳಿ ನಡೆದುಹೋಗುತ್ತಿದ್ದಾಗ ಸೀಮೋನನನ್ನು ಮತ್ತು ಸೀಮೋನನ ಸಹೋದರನಾದ ಅಂದ್ರೆಯನನ್ನು ಕಂಡನು. ಇವರಿಬ್ಬರೂ ಬೆಸ್ತರಾಗಿದ್ದರು. ಇವರು ಮೀನುಗಳನ್ನು ಹಿಡಿಯಲು ಸರೋವರದೊಳಕ್ಕೆ ಬಲೆಯನ್ನು ಬೀಸುತ್ತಿದ್ದರು. 17 ಯೇಸು, “ಬನ್ನಿರಿ, ನನ್ನನ್ನು ಹಿಂಬಾಲಿಸಿರಿ, ನಾನು ನಿಮ್ಮನ್ನು ಬೇರೆ ವಿಧದ ಬೆಸ್ತರನ್ನಾಗಿ ಮಾಡುವೆನು. ಇನ್ನು ಮೇಲೆ ನೀವು ಒಂದುಗೂಡಿಸುವುದು ಜನರನ್ನೇ, ಮೀನುಗಳನ್ನಲ್ಲ” ಎಂದು ಅವರಿಗೆ ಹೇಳಿದನು. 18 ಆಗ ಅವರು ತಮ್ಮ ಬಲೆಗಳನ್ನು ಅಲ್ಲಿಯೇ ಬಿಟ್ಟು ಆತನನ್ನು ಹಿಂಬಾಲಿಸಿದರು.

19 ಯೇಸು ಗಲಿಲಾಯ ಸರೋವರದ ಬಳಿಯಲ್ಲಿ ಇನ್ನೂ ತಿರುಗಾಡುತ್ತಲೇ ಇದ್ದಾಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೆಂಬ ಇಬ್ಬರು ಸಹೋದರರನ್ನು ಕಂಡನು. ಅವರು ಮೀನುಗಳನ್ನು ಹಿಡಿಯಲು ಬಲೆಯನ್ನು ಸಿದ್ಧಪಡಿಸುತ್ತಾ ತಮ್ಮ ದೋಣಿಯಲ್ಲಿದ್ದರು. 20 ಅವರ ತಂದೆಯಾದ ಜೆಬೆದಾಯನೂ ಅವನ ಕೆಲಸಗಾರರೂ ಸಹೋದರರೊಂದಿಗೆ ದೋಣಿಯಲ್ಲಿದ್ದರು. ಯೇಸು ಅವರನ್ನು ಕರೆದನು. ಕೂಡಲೇ ಅವರು ತಮ್ಮ ತಂದೆಯನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

ದೆವ್ವದಿಂದ ಪೀಡಿತನಾಗಿದ್ದವನಿಗೆ ವಿಮೋಚನೆ

(ಲೂಕ 4:31-37)

21 ಯೇಸು ಮತ್ತು ಆತನ ಶಿಷ್ಯರು ಕಪೆರ್ನೌಮಿಗೆ ಹೋದರು. ಸಬ್ಬತ್‌ದಿನದಂದು ಯೇಸು ಸಭಾಮಂದಿರಕ್ಕೆ ಹೋಗಿ ಜನರಿಗೆ ಉಪದೇಶಮಾಡಿದನು. 22 ಯೇಸುವಿನ ಉಪದೇಶವನ್ನು ಕೇಳಿ ಅಲ್ಲಿದ್ದ ಜನರು ಆಶ್ಚರ್ಯಗೊಂಡರು. ಆತನು ಅವರ ಧರ್ಮೋಪದೇಶಕರಂತೆ ಉಪದೇಶಮಾಡದೆ, ಅಧಿಕಾರವುಳ್ಳವನಂತೆ ಉಪದೇಶ ಮಾಡಿದನು. 23 ಯೇಸು ಸಭಾಮಂದಿರದಲ್ಲಿದ್ದಾಗ, ದೆವ್ವದಿಂದ ಪೀಡಿತನಾಗಿದ್ದ ಒಬ್ಬ ಮನುಷ್ಯನು ಅಲ್ಲಿದ್ದನು. ಅವನು, 24 “ನಜರೇತಿನ ಯೇಸುವೇ! ನಮ್ಮಿಂದ ನಿನಗೆ ಏನಾಗಬೇಕಾಗಿದೆ? ನಮ್ಮನ್ನು ನಾಶಗೊಳಿಸಲು ಬಂದಿರುವೆಯಾ? ನೀನು ದೇವರಿಂದ ಬಂದ ಪರಿಶುದ್ಧನೆಂದು ನನಗೆ ಗೊತ್ತಿದೆ!” ಎಂದು ಕೂಗಿಕೊಂಡನು.

25 ಯೇಸು, “ಸುಮ್ಮನಿರು! ಅವನೊಳಗಿಂದ ಹೊರಗೆ ಬಾ!” ಎಂದು ಆಜ್ಞಾಪಿಸಿದನು. 26 ದೆವ್ವವು ಅವನನ್ನು ಒದ್ದಾಡಿಸಿ ಗಟ್ಟಿಯಾಗಿ ಅರಚುತ್ತಾ ಅವನೊಳಗಿಂದ ಹೊರಬಂದಿತು.

27 ಜನರೆಲ್ಲರೂ ದಿಗ್ಭ್ರಮೆಗೊಂಡು, “ಇದೇನು? ಹೊಸದೊಂದನ್ನು ಈತನು ಅಧಿಕಾರದಿಂದ ಉಪದೇಶಿಸುತ್ತಿದ್ದಾನೆ! ಈತನ ಆಜ್ಞೆಗೆ ದೆವ್ವಗಳೂ ವಿಧೇಯವಾಗುತ್ತಿವೆ” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. 28 ಯೇಸುವಿನ ಸುದ್ದಿಯು ಗಲಿಲಾಯ ಪ್ರದೇಶದ ಎಲ್ಲೆಡೆಯಲ್ಲಿಯೂ ಹರಡಿತು.

ಅನೇಕರಿಗೆ ಸ್ವಸ್ಥತೆ

(ಮತ್ತಾಯ 8:14-17; ಲೂಕ 4:38-41)

29 ಯೇಸು ಮತ್ತು ಆತನ ಶಿಷ್ಯರು ಸಭಾಮಂದಿರದಿಂದ ಹೊರಟು ಯಾಕೋಬ ಮತ್ತು ಯೋಹಾನರ ಸಂಗಡ ಸೀಮೋನ ಮತ್ತು ಅಂದ್ರೆಯರ ಮನೆಗೆ ಹೋದರು. 30 ಸೀಮೋನನ ಅತ್ತೆ ಜ್ವರದಿಂದ ಹಾಸಿಗೆಯಲ್ಲಿ ಮಲಗಿದ್ದಳು. ಅಲ್ಲಿನ ಜನರು ಅವಳ ಬಗ್ಗೆ ಯೇಸುವಿಗೆ ಹೇಳಿದರು. 31 ಆದ್ದರಿಂದ ಯೇಸು ಅವಳ ಹಾಸಿಗೆಯ ಬಳಿ ಹೋಗಿ ಆಕೆಯ ಕೈಗಳನ್ನು ಹಿಡಿದುಕೊಂಡು, ಮೇಲೇಳಲು ಸಹಾಯ ಮಾಡಿದನು. ಕೂಡಲೇ ಅವಳಿಗೆ ಗುಣವಾಯಿತು. ಆಕೆ ಎದ್ದು ಅವರಿಗೆ ಉಪಚಾರ ಮಾಡಿದಳು.

32 ಅಂದು ಸೂರ್ಯನು ಮುಳುಗಿದ ಮೇಲೆ, ಜನರು ಕಾಯಿಲೆಯವರನ್ನೂ ದೆವ್ವಗಳಿಂದ ಪೀಡಿತರಾಗಿದ್ದವರನ್ನೂ ಆತನ ಬಳಿಗೆ ಕರೆತಂದರು. 33 ಊರಿನ ಜನರೆಲ್ಲರೂ ಆ ಮನೆಯ ಮುಂದೆ ಒಟ್ಟುಗೂಡಿದರು. 34 ಯೇಸು ನಾನಾ ಬಗೆಯ ರೋಗಗಳಿಂದ ನರಳುತ್ತಿದ್ದ ಅನೇಕ ಜನರನ್ನು ಗುಣಪಡಿಸಿದನು; ದೆವ್ವಗಳಿಂದ ಪೀಡಿತರಾಗಿದ್ದ ಅನೇಕರನ್ನು ಬಿಡಿಸಿದನು. ಆದರೆ ಆ ದೆವ್ವಗಳಿಗೆ ಮಾತನಾಡಲು ಆತನು ಅವಕಾಶ ಕೊಡಲಿಲ್ಲ; ಏಕೆಂದರೆ ಯೇಸು ಯಾರೆಂಬುದು ದೆವ್ವಗಳಿಗೆ ಗೊತ್ತಿತ್ತು.

ಸುವಾರ್ತೆ ಸಾರಲು ಯೇಸುವಿನ ಸಿದ್ಧತೆ

(ಲೂಕ 4:42-44)

35 ಮರುದಿನ ಮುಂಜಾನೆ, ಇನ್ನೂ ಕತ್ತಲೆ ಇರುವಾಗಲೇ ಯೇಸು ಎದ್ದು ಪ್ರಾರ್ಥಿಸುವುದಕ್ಕಾಗಿ ಏಕಾಂತವಾದ ಸ್ಥಳಕ್ಕೆ ಹೋದನು. 36 ತರುವಾಯ, ಸೀಮೋನ ಮತ್ತು ಅವನ ಗೆಳೆಯರು ಯೇಸುವನ್ನು ಹುಡುಕುತ್ತಾ ಹೋದರು. 37 ಅವರು ಯೇಸುವನ್ನು ಕಂಡುಕೊಂಡು, “ಜನರೆಲ್ಲರೂ ನಿನ್ನನ್ನೇ ಎದುರು ನೋಡುತ್ತಿದ್ದಾರೆ!” ಎಂದು ಹೇಳಿದರು.

38 ಯೇಸು, “ಇಲ್ಲಿಗೆ ಸಮೀಪದಲ್ಲಿರುವ ಊರುಗಳಿಗೆ ನಾವು ಹೋಗೋಣ. ಆ ಸ್ಥಳಗಳಲ್ಲಿಯೂ ನಾನು ಉಪದೇಶಿಸಬೇಕು. ಅದಕ್ಕಾಗಿಯೇ ನಾನು ಇಲ್ಲಿಗೆ ಬಂದೆನು” ಎಂದು ಹೇಳಿದನು. 39 ಹೀಗೆ ಯೇಸು ಗಲಿಲಾಯದ ಎಲ್ಲಾ ಕಡೆಗೆ ಪ್ರವಾಸಮಾಡಿ ಸಭಾಮಂದಿರಗಳಲ್ಲಿ ಉಪದೇಶಿಸಿದನು; ದೆವ್ವಗಳಿಂದ ಪೀಡಿತರಾಗಿದ್ದವರನ್ನು ಬಿಡಿಸಿದನು.

ಕುಷ್ಠರೋಗಿಗೆ ಸ್ವಸ್ಥತೆ

(ಮತ್ತಾಯ 8:1-4; ಲೂಕ 5:12-16)

40 ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಮೊಣಕಾಲೂರಿ ಆತನಿಗೆ, “ನೀನು ಇಷ್ಟಪಟ್ಟರೆ, ನನ್ನನ್ನು ಗುಣಪಡಿಸಬಲ್ಲೆ” ಎಂದು ಬೇಡಿಕೊಂಡನು.

41 ಯೇಸು ಅವನಿಗಾಗಿ ದುಃಖಪಟ್ಟು ಅವನನ್ನು ಮುಟ್ಟಿ, “ನಿನ್ನನ್ನು ಗುಣಪಡಿಸಲು ನನಗೆ ಇಷ್ಟವಿದೆ. ನಿನಗೆ ಗುಣವಾಗಲಿ” ಎಂದು ಹೇಳಿದನು. 42 ಆ ಕೂಡಲೇ ಅವನಿಗೆ ಗುಣವಾಯಿತು.

43-44 ಯೇಸು ಅವನಿಗೆ, “ನಾನು ನಿನ್ನನ್ನು ಗುಣಪಡಿಸಿದೆನೆಂದು ಯಾರಿಗೂ ಹೇಳದೆ, ನೇರವಾಗಿ ಯಾಜಕನ ಬಳಿಗೆ ಹೋಗಿ ಮೈ ತೋರಿಸು. ನೀನು ಗುಣಹೊಂದಿರುವುದರಿಂದ ಮೋಶೆಯ ಆಜ್ಞಾನುಸಾರವಾಗಿ ದೇವರಿಗೆ ಕಾಣಿಕೆಯನ್ನು ಅರ್ಪಿಸು. ನಿನಗೆ ಗುಣವಾಯಿತು ಎಂಬುದಕ್ಕೆ ಇದು ಜನರಿಗೆ ಸಾಕ್ಷಿಯಾಗಿರುವುದು” ಎಂದು ಎಚ್ಚರಿಕೆ ನೀಡಿ ಕಳುಹಿಸಿಬಿಟ್ಟನು.[a] 45 ಅವನು ಅಲ್ಲಿಂದ ಹೋಗಿ ಯೇಸುವೇ ತನ್ನನ್ನು ಗುಣಪಡಿಸಿದನೆಂದು ಜನರೆಲ್ಲರಿಗೆ ತಿಳಿಸಿದನು. ಈ ಸುದ್ದಿಯು ಎಲ್ಲೆಡೆ ಹರಡಿದ್ದರಿಂದ ಆತನು ಬಹಿರಂಗವಾಗಿ ಊರೊಳಗೆ ಹೋಗಲು ಸಾಧ್ಯವಾಗದೆ ಏಕಾಂತವಾದ ಸ್ಥಳಗಳಲ್ಲಿ ವಾಸಿಸಬೇಕಾಯಿತು. ಆದರೂ ಎಲ್ಲಾ ಕಡೆಗಳಿಂದ ಜನರು ಯೇಸುವಿದ್ದಲ್ಲಿಗೆ ಬರುತ್ತಿದ್ದರು.

ಎಸ್ತೇರಳು 6

ಮೊರ್ದೆಕೈಯನ್ನು ಗೌರವಿಸಿದ್ದು

ಆ ರಾತ್ರಿ ಅರಸನಿಗೆ ನಿದ್ರಿಸಲಾಗಲಿಲ್ಲ. ಒಬ್ಬ ಸೇವಕನನ್ನು ಕರೆದು ರಾಜಕಾಲವೃತ್ತಾಂತ ಪುಸ್ತಕವನ್ನು ತರಹೇಳಿ ಅವನಿಂದ ಅದನ್ನು ಓದಿಸಿದನು. (ಈ ಪುಸ್ತಕದಲ್ಲಿ ಅರಸರ ರಾಜ್ಯ ಆಳ್ವಿಕೆಯಲ್ಲಿ ನಡೆದ ಘಟನೆಗಳು ಲಿಖಿತವಾಗಿರುತ್ತದೆ.) ಆ ಸೇವಕನು ರಾಜನಿಗೆ ಪುಸ್ತಕದಿಂದ ಓದುತ್ತಾ ಹೋದನು. ರಾಜನನ್ನು ಕೊಲ್ಲುವ ಒಳಸಂಚಿನ ವಿಚಾರವನ್ನೂ ಕೇಳಿದನು. ಬಿಗೆತಾನ್ ಮತ್ತು ತೆರೆಷ್ ಎಂಬ ಇಬ್ಬರು ದ್ವಾರಪಾಲಕರು ರಾಜನನ್ನು ಕೊಲ್ಲಲು ಒಳಸಂಚು ಮಾಡಿದಾಗ ಮೊರ್ದೆಕೈಗೆ ಅದು ತಿಳಿದುಬಂತು. ಕೂಡಲೇ ಅವನು ಬೇರೆಯವರ ಮುಖಾಂತರ ಅರಸನಿಗೆ ತಿಳಿಸಿದನು.

ಇದನ್ನು ಕೇಳುತ್ತಿದ್ದ ಅರಸನು, “ಮೊರ್ದೆಕೈ ಹೀಗೆ ಮಾಡಿದುದಕ್ಕೆ ಯಾವ ಗೌರವ ಮತ್ತು ಬಹುಮಾನಗಳು ಕೊಡಲ್ಪಟ್ಟವು?” ಎಂದು ವಿಚಾರಿಸಿದನು. “ಮೊರ್ದೆಕೈಗೆ ಏನೂ ಕೊಡಲಿಲ್ಲ” ಎಂದು ಸೇವಕರು ಉತ್ತರಿಸಿದರು.

ಅದೇ ಸಮಯದಲ್ಲಿ ಹಾಮಾನನು ಹೊರಾಂಗಣದಲ್ಲಿದ್ದನು. ಅವನು ತಾನು ತಯಾರಿಸಿಟ್ಟಿರುವ ಗಲ್ಲುಕಂಬದಲ್ಲಿ ಮೊರ್ದೆಕೈಯನ್ನು ಗಲ್ಲಿಗೆ ಹಾಕಲು ಅರಸನಿಂದ ಅಪ್ಪಣೆ ಪಡೆದುಕೊಳ್ಳಲು ಬಂದಿದ್ದನು. ಅರಸನು ಹೊರಾಂಗಣದಲ್ಲಿ “ಈಗ ತಾನೇ ಯಾರು ಬಂದರು?” ಎಂದು ಕೇಳಿದಾಗ ಸೇವಕರು, “ಹಾಮಾನನು ನಿಂತಿದ್ದಾನೆ!” ಎಂದು ಹೇಳಿದರು.

“ಸರಿ, ಒಳಕ್ಕೆ ಕರೆದುಕೊಂಡು ಬನ್ನಿರಿ” ಎಂದು ಆಜ್ಞಾಪಿಸಿದನು.

ಹಾಮಾನನು ಒಳಗೆ ಪ್ರವೇಶಮಾಡುವಾಗ ಅರಸನು, “ಹಾಮಾನನೇ, ಅರಸನು ಒಬ್ಬನಿಗೆ ಗೌರವಿಸಬೇಕೆಂದು ಇಚ್ಫಿಸುವಾಗ ಯಾವ ರೀತಿಯಲ್ಲಿ ಅದನ್ನು ಮಾಡಬೇಕು?” ಎಂದು ಕೇಳಿದನು.

ಆಗ ಹಾಮಾನನು, “ಅರಸನು ಗೌರವಿಸುವವನು ನನಗಿಂತ ಹೆಚ್ಚಿನವನು ಯಾರಿರಬಹುದು? ಅವನು ನನ್ನ ವಿಚಾರವಾಗಿಯೇ ನೆನಸುತ್ತಿರಬಹುದು” ಎಂದು ತನ್ನ ಮನಸ್ಸಿನಲ್ಲಿಯೇ ನೆನೆಸಿಕೊಂಡು

ಅರಸನಿಗೆ, “ನೀನು ಗೌರವಿಸಬೇಕಾದ ಮನುಷ್ಯನಿಗೆ ಈ ರೀತಿಯಾಗಿ ಮಾಡಬೇಕು. ಅರಸನು ಧರಿಸಿದ ರಾಜವಸ್ತ್ರಗಳನ್ನು ಸೇವಕರ ಮೂಲಕ ತರಿಸು. ಅಲ್ಲದೆ ರಾಜನು ಸವಾರಿ ಮಾಡಿರುವ ಕುದುರೆಯನ್ನು ತರಿಸು. ಸೇವಕರು ಅದರ ಹಣೆಯ ಮೇಲೆ ರಾಜನ ವಿಶೇಷ ಗುರುತನ್ನು ಇಡಲಿ. ಅನಂತರ ಅರಸನ ಮುಖ್ಯ ಅಧಿಕಾರಿಗಳಲ್ಲೊಬ್ಬನನ್ನು ರಾಜವಸ್ತ್ರಗಳಿಗೂ ಕುದುರೆಗೂ ಜವಾಬ್ದಾರನನ್ನಾಗಿ ನೇಮಿಸಿರಿ. ರಾಜನು ಯಾವ ವ್ಯಕ್ತಿಯನ್ನು ಗೌರವಿಸಬೇಕೆಂದಿದ್ದಾನೋ ಆ ವ್ಯಕ್ತಿಯ ಮೇಲೆ ಅವನು ರಾಜವಸ್ತ್ರವನ್ನು ಹಾಕಲಿ. ಆಮೇಲೆ ಅವನನ್ನು ಕುದುರೆಯ ಮೇಲೆ ಕುಳ್ಳಿರಿಸಿಕೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿಸುತ್ತಾ, ‘ರಾಜನು ಗೌರವಿಸುವ ಮನುಷ್ಯನಿಗೆ ಹೀಗೆಯೇ ಆಗುವುದು’ ಎಂದು ಪ್ರಕಟಿಸುತ್ತಾ ಹೋಗಲಿ” ಎಂದು ಹೇಳಿದನು.

10 “ಈಗಲೇ,” ಅರಸನು ಹಾಮಾನನಿಗೆ ಆಜ್ಞೆಕೊಟ್ಟು “ಈಗಲೇ ಹೋಗಿ ರಾಜವಸ್ತ್ರಗಳನ್ನೂ ರಾಜನ ಕುದುರೆಯನ್ನೂ ಕೊಂಡುಹೋಗಿ ಯೆಹೂದ್ಯನಾದ ಮೊರ್ದೆಕೈಗೆ ನೀನು ಹೇಳಿದ ಪ್ರಕಾರವೆ ಮಾಡು. ಮೊರ್ದೆಕೈ ಅರಮನೆಯ ಹೆಬ್ಬಾಗಿಲ ಬಳಿಯಲ್ಲಿ ಕುಳಿತುಕೊಂಡಿರುತ್ತಾನೆ. ನಿನ್ನ ಸಲಹೆಯಂತೆಯೇ ಎಲ್ಲವನ್ನೂ ಮಾಡು” ಅಂದನು.

11 ಹಾಮಾನನು ಉಡುಪನ್ನೂ ಕುದುರೆಯನ್ನೂ ತೆಗೆದುಕೊಂಡು ಮೊರ್ದೆಕೈಗೆ ತೊಡಿಸಿ, ಕುದುರೆಯ ಮೇಲೆ ಕುಳ್ಳಿರಿಸಿ ನಗರದ ಮುಖ್ಯರಸ್ತೆಗಳಲ್ಲಿ ಕರೆದುಕೊಂಡು ಹೋಗುತ್ತಿರುವಾಗ, “ಅರಸನು ಸನ್ಮಾನಿಸುವ ಮನುಷ್ಯನಿಗೆ ಹೀಗೆಯೇ ಆಗುವದು” ಎಂದು ಪ್ರಕಟಿಸಿದನು.

12 ಇದಾದ ಬಳಿಕ ಮೊರ್ದೆಕೈ ಹೆಬ್ಬಾಗಿಲ ಬಳಿಯಲ್ಲಿದ್ದ ತನ್ನ ಸ್ಥಾನಕ್ಕೆ ಹೋದನು. ಆದರೆ ಹಮಾನನು ತನ್ನ ಮನೆಗೆ ಅವಸರವಸರವಾಗಿ ನಡೆದನು. ನಾಚಿಕೆಯಿಂದಲೂ ಸಿಟ್ಟಿನಿಂದಲೂ ತನ್ನ ಮುಖವನ್ನು ಮುಚ್ಚಿಕೊಂಡಿದ್ದನು. 13 ತನ್ನ ಹೆಂಡತಿ ಜೆರೆಷಳಿಗೂ ಮತ್ತು ತನಗೆ ಸಲಹೆ ಕೊಟ್ಟಿದ್ದ ಮಿತ್ರವೃಂದದವರಿಗೂ ನಡೆದ ವಿಷಯ ತಿಳಿಸಿದನು. ಆಗ ಅವರು ತಿಳಿಸಿದ್ದೇನೆಂದರೆ: “ಮೊರ್ದೆಕೈಯು ಯೆಹೂದ್ಯನಾಗಿದ್ದರೆ ನೀನು ಜಯಗಳಿಸುವುದಿಲ್ಲ. ಈಗಲೇ ನೀನು ಸೋಲುತ್ತಿರುವಿ. ನಿಜವಾಗಿಯೂ ನೀನೇ ನಾಶವಾಗುವಿ.”

14 ಅವರು ಮಾತಾಡುತ್ತಿರುವಾಗಲೇ ರಾಜಕಂಚುಕಿಗಳು ಅವನನ್ನು ರಾಣಿ ಎಸ್ತೇರಳು ಏರ್ಪಡಿಸಿದ್ದ ಔತಣಕ್ಕೆ ಕರೆದುಕೊಂಡು ಹೋಗಲು ಬಂದರು.

ರೋಮ್ನಗರದವರಿಗೆ 1

ಕ್ರಿಸ್ತ ಯೇಸುವಿನ ಸೇವಕನಾದ ಪೌಲನು ಬರೆಯುವ ಪತ್ರ.

ದೇವರು ನನ್ನನ್ನು ಅಪೊಸ್ತಲನಾಗುವುದಕ್ಕೆ[a] ಕರೆದನು. ದೇವರ ಸುವಾರ್ತೆಯನ್ನು ಎಲ್ಲಾ ಜನರಿಗೆ ತಿಳಿಸುವುದಕ್ಕಾಗಿ ನಾನು ಆರಿಸಲ್ಪಟ್ಟೆನು. ದೇವರು ತನ್ನ ಜನರಿಗೆ ಈ ಸುವಾರ್ತೆಯನ್ನು ಕೊಡುವುದಾಗಿ ಬಹುಕಾಲದ ಹಿಂದೆಯೇ ತನ್ನ ಪ್ರವಾದಿಗಳ ಮೂಲಕ ಪವಿತ್ರ ಗ್ರಂಥದಲ್ಲಿ ವಾಗ್ದಾನ ಮಾಡಿದ್ದನು. 3-4 ದೇವರ ಮಗನೂ ನಮ್ಮ ಪ್ರಭುವೂ ಆಗಿರುವ ಯೇಸು ಕ್ರಿಸ್ತನ ವಿಷಯವೇ ಆ ಸುವಾರ್ತೆ. ಮನುಷ್ಯತ್ವದ ಮಟ್ಟಿಗೆ ಆತನು ದಾವೀದನ[b] ಕುಟುಂಬದಲ್ಲಿ ಹುಟ್ಟಿದನು. ಆದರೆ ಯೇಸು ಪರಿಶುದ್ಧ ಆತ್ಮನ ಮೂಲಕ ಮಹಾಶಕ್ತಿಯೊಡನೆ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದು ತಾನೇ ದೇವರ ಮಗನೆಂಬುದನ್ನು ತೋರಿಸಿಕೊಟ್ಟನು.

ದೇವರು ಕ್ರಿಸ್ತನ ಮೂಲಕವಾಗಿ ನನಗೆ ಅಪೊಸ್ತಲನೆಂಬ ವಿಶೇಷ ಕೆಲಸವನ್ನು ಕೊಟ್ಟನು. ದೇವರಲ್ಲಿ ನಂಬಿಕೆಯಿಡುವಂತೆಯೂ ದೇವರಿಗೆ ವಿಧೇಯರಾಗುವಂತೆಯೂ ಎಲ್ಲಾ ಜನಾಂಗಗಳ ಜನರನ್ನು ನಡೆಸಬೇಕೆಂದು ದೇವರು ನನಗೆ ಈ ಕೆಲಸವನ್ನು ಕೊಟ್ಟನು. ನಾನು ಈ ಕೆಲಸವನ್ನು ಕ್ರಿಸ್ತನಿಗಾಗಿ ಮಾಡುತ್ತೇನೆ. ರೋಮಿನಲ್ಲಿರುವ ನೀವು ಸಹ ಯೇಸು ಕ್ರಿಸ್ತನವರಾಗುವುದಕ್ಕಾಗಿ ಕರೆಯಲ್ಪಟ್ಟಿದ್ದೀರಿ.

ರೋಮಿನಲ್ಲಿರುವವರೂ ದೇವರ ಪವಿತ್ರ ಜನರಾಗಿರುವುದಕ್ಕಾಗಿ ದೇವರಿಂದಲೇ ಕರೆಯಲ್ಪಟ್ಟವರೂ ಆಗಿರುವ ನಿಮ್ಮೆಲ್ಲರಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ನೀವು ದೇವರಿಗೆ ಪ್ರಿಯರಾದ ಜನರಾಗಿದ್ದೀರಿ.

ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.

ಕೃತಜ್ಞತಾ ಪ್ರಾರ್ಥನೆ

ಮೊದಲನೆಯದಾಗಿ, ನಾನು ನಿಮ್ಮೆಲ್ಲರ ವಿಷಯದಲ್ಲಿ ಯೇಸು ಕ್ರಿಸ್ತನ ಮೂಲಕ ನನ್ನ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ಏಕೆಂದರೆ ನಿಮ್ಮ ನಂಬಿಕೆಯು ಲೋಕದಲೆಲ್ಲಾ ಪ್ರಖ್ಯಾತವಾಗಿದೆ. 9-10 ನಾನು ಪ್ರಾರ್ಥಿಸುವಾಗಲೆಲ್ಲಾ ನಿಮ್ಮನ್ನು ಖಂಡಿತವಾಗಿ ಜ್ಞಾಪಿಸಿಕೊಳ್ಳುತ್ತೇನೆ. ಇದು ಸತ್ಯವೆಂದು ದೇವರಿಗೆ ಗೊತ್ತಿದೆ. ದೇವರ ಮಗನ ವಿಷಯವಾದ ಸುವಾರ್ತೆಯನ್ನು ಜನರಿಗೆ ಸಾರುವುದರ ಮೂಲಕ ನಾನು ದೇವರನ್ನು ನನ್ನ ಆತ್ಮದಲ್ಲಿ ಆರಾಧಿಸುವವನಾಗಿದ್ದೇನೆ. ದೇವರ ಚಿತ್ತದಿಂದ, ನಿಮ್ಮ ಬಳಿಗೆ ಬರಲು ಅವಕಾಶವಾಗಬೇಕೆಂದು ಪ್ರಾರ್ಥಿಸುತ್ತೇನೆ. 11 ನಾನು ನಿಮ್ಮನ್ನು ನೋಡಲು, ನಿಮ್ಮನ್ನು ಬಲಗೊಳಿಸಲು, ನಿಮಗೆ ಆತ್ಮಿಕ ಉಡುಗೊರೆಯನ್ನು ಕೊಡಲು ಅತ್ಯಾಸಕ್ತಿ ಉಳ್ಳವನಾಗಿದ್ದೇನೆ. 12 ಅಂದರೆ ನಾವು ಹೊಂದಿರುವ ನಂಬಿಕೆಯಿಂದ ನಾವು ಒಬ್ಬರಿಗೊಬ್ಬರು ಸಹಾಯ ಮಾಡಬೇಕೆಂಬುದು ನನ್ನ ಅಪೇಕ್ಷೆ. ನಿಮ್ಮ ನಂಬಿಕೆ ನನಗೆ ಸಹಾಯ ಮಾಡುತ್ತದೆ ಮತ್ತು ನನ್ನ ನಂಬಿಕೆ ನಿಮಗೆ ಸಹಾಯ ಮಾಡುತ್ತದೆ.

13 ಸಹೋದರ ಸಹೋದರಿಯರೇ, ನಾನು ನಿಮ್ಮ ಬಳಿಗೆ ಬರಲು ಅನೇಕ ಸಲ ಯೋಜನೆ ಮಾಡಿದೆನೆಂಬುದು ನಿಮಗೆ ತಿಳಿದಿರಲಿ. ಆದರೆ ನಿಮ್ಮ ಬಳಿಗೆ ಬರಲು ನನಗೆ ಸಾಧ್ಯವಾಗಲಿಲ್ಲ. ನಾನು ನಿಮ್ಮ ಬಳಿಗೆ ಬಂದು ನೀವು ಆತ್ಮಿಕವಾಗಿ ಬೆಳೆಯಲು ನಿಮಗೆ ಸಹಾಯ ಮಾಡಬೇಕೆಂದಿದ್ದೆನು. ನಾನು ಯೆಹೂದ್ಯರಲ್ಲದ ಜನರಿಗೆ ಸಹಾಯ ಮಾಡಿದಂತೆಯೇ ನಿಮಗೂ ಸಹಾಯ ಮಾಡಬೇಕೆಂದಿರುವೆ.

14 ನಾನು ಎಲ್ಲಾ ಜನರ ಅಂದರೆ ಗ್ರೀಕರ ಮತ್ತು ಗ್ರೀಕರಲ್ಲದವರ, ಹಾಗೂ ಜ್ಞಾನಿಗಳ ಮತ್ತು ಮೂಢರ ಸೇವೆ ಮಾಡಲೇಬೇಕು. 15 ಆದಕಾರಣ ರೋಮಿನಲ್ಲಿರುವ ನಿಮಗೆ ಸುವಾರ್ತೆಯನ್ನು ತಿಳಿಸಲು ಬಹಳವಾಗಿ ಆಶಿಸುತ್ತೇನೆ.

16 ನಾನು ಸುವಾರ್ತೆಯ ವಿಷಯದಲ್ಲಿ ಹೆಮ್ಮೆಪಡುತ್ತೇನೆ. ನಂಬುವ ಪ್ರತಿಯೊಬ್ಬರನ್ನು ರಕ್ಷಿಸುವುದಕ್ಕಾಗಿ ಅಂದರೆ ಮೊದಲನೆಯದಾಗಿ, ಯೆಹೂದ್ಯರನ್ನು ಅನಂತರ ಯೆಹೂದ್ಯರಲ್ಲದವರನ್ನು ಸಹ ರಕ್ಷಿಸುವುದಕ್ಕಾಗಿ ದೇವರು ಸುವಾರ್ತೆ ಎಂಬ ಶಕ್ತಿಯನ್ನು ಉಪಯೋಗಿಸುತ್ತಾನೆ. 17 ಹೇಗೆಂದರೆ, ದೇವರಿಂದ ದೊರೆಯುವ ನೀತಿಯು ಅದರಲ್ಲಿ ತೋರಿಬರುತ್ತದೆ. ಆ ನೀತಿಯು ನಂಬಿಕೆಯ ಫಲವಾಗಿದ್ದು ನಂಬಿಕೆಯನ್ನು ಪ್ರಕಟಿಸುತ್ತದೆ. ಪವಿತ್ರ ಗ್ರಂಥವು ಹೇಳುವಂತೆ, “ನೀತಿವಂತನು ನಂಬಿಕೆಯಿಂದಲೇ ಜೀವಿಸುತ್ತಾನೆ.”(A)

ಎಲ್ಲಾ ಜನರು ತಪ್ಪು ಮಾಡಿದ್ದಾರೆ

18 ದೇವರ ಕೋಪವು ಪರಲೋಕದಿಂದ ತೋರಿಬಂದಿದೆ. ಜನರು ದೇವರಿಗೆ ವಿರೋಧವಾಗಿ ಮಾಡುವ ಎಲ್ಲಾ ಕೆಟ್ಟ ಮತ್ತು ದುಷ್ಕೃತ್ಯಗಳ ಬಗ್ಗೆ ದೇವರು ಕೋಪ ಉಳ್ಳವನಾಗಿದ್ದಾನೆ. ಅವರಿಗೆ ಸತ್ಯವು ತಿಳಿದಿದೆ, ಆದರೆ ಅವರು ತಮ್ಮ ದುಷ್ಟಜೀವಿತಗಳಿಂದ ಸತ್ಯವನ್ನು ಅಡಗಿಸುತ್ತಾರೆ. 19 ದೇವರು ತನ್ನ ಕೋಪವನ್ನು ತೋರಿಸುತ್ತಾನೆ, ಏಕೆಂದರೆ ದೇವರ ಬಗ್ಗೆ ತಿಳಿದುಕೊಳ್ಳಬಹುದಾದ ಪ್ರತಿಯೊಂದನ್ನೂ ಅವರಿಗೆ ಸ್ಪಷ್ಟಪಡಿಸಲಾಗಿದೆ. ಹೌದು, ತನ್ನ ಬಗ್ಗೆ ತಿಳಿದುಕೊಳ್ಳಬಹುದಾದ ಪ್ರತಿಯೊಂದನ್ನೂ ದೇವರು ಜನರಿಗೆ ಸ್ಪಷ್ಟವಾಗಿ ತೋರಿಸಿದ್ದಾನೆ.

20 ಜನರು ದೇವರ ನಿತ್ಯಶಕ್ತಿಯನ್ನಾಗಲಿ ಆತನ ದೈವತ್ವಗಳನ್ನಾಗಲಿ ಕಾಣಲಾರರು. ಆದರೆ ಲೋಕದ ಆರಂಭದಿಂದಲೂ ಆ ಸಂಗತಿಗಳು ಜನರಿಗೆ ಸುಲಭವಾಗಿ ಅರ್ಥವಾಗುತ್ತವೆ. ದೇವರು ಮಾಡಿದ ಸೃಷ್ಟಿಗಳಲ್ಲಿ ಆ ಸಂಗತಿಗಳು ಸ್ಪಷ್ಟವಾಗಿವೆ. ಆದ್ದರಿಂದ ಜನರು ತಾವು ಮಾಡುವ ಕೆಟ್ಟಕಾರ್ಯಗಳಿಗೆ ನೆವ ಹೇಳಲು ಸಾಧ್ಯವಿಲ್ಲ.

21 ಜನರು ದೇವರನ್ನು ತಿಳಿದಿದ್ದರೂ ದೇವರನ್ನು ಮಹಿಮೆಪಡಿಸಲಿಲ್ಲ, ಆತನಿಗೆ ಕೃತಜ್ಞತೆಯನ್ನು ಸಲ್ಲಿಸಲಿಲ್ಲ. ಜನರ ಆಲೋಚನೆಯು ನಿಷ್ಪ್ರಯೋಜಕವಾಯಿತು. ಅವರ ಮೂಢಮನಸ್ಸುಗಳು ಕತ್ತಲೆಯಿಂದ ತುಂಬಿಹೋದವು. 22 ಜನರು ತಮ್ಮನ್ನು ಜ್ಞಾನಿಗಳೆಂದು ಹೇಳಿಕೊಂಡು ಮೂರ್ಖರಾದರು. 23 ಸದಾಕಾಲ ಜೀವಿಸುವ ದೇವರ ಮಹಿಮೆಯನ್ನು ಅವರು ಬಿಟ್ಟುಕೊಟ್ಟು ಮನುಷ್ಯರಂತಿರುವ, ಪಕ್ಷಿಗಳಂತಿರುವ, ಪ್ರಾಣಿಗಳಂತಿರುವ ಮತ್ತು ಹಾವುಗಳಂತಿರುವ ವಿಗ್ರಹಗಳನ್ನು ಮಾಡಿಕೊಂಡು ಅವುಗಳನ್ನು ಆರಾಧಿಸತೊಡಗಿದರು.

24 ಪಾಪಗಳಿಂದ ತುಂಬಿಹೋಗಿದ್ದ ಅವರು ದುಷ್ಕೃತ್ಯಗಳನ್ನೇ ಮಾಡಬಯಸಿದರು. ಆದ್ದರಿಂದ ಪಾಪಮಾರ್ಗದಲ್ಲೇ ಹೋಗಲೆಂದು ದೇವರು ಅವರನ್ನು ಬಿಟ್ಟುಬಿಟ್ಟನು. ಅದರಿಂದಾಗಿ ಅವರು ತಮ್ಮತಮ್ಮಲ್ಲೇ ತಮ್ಮ ದೇಹಗಳಿಂದ ಲೈಂಗಿಕ ಪಾಪಗಳನ್ನು ಮಾಡಿದರು. 25 ಅವರು ದೇವರ ಸತ್ಯವನ್ನು ತೊರೆದು ಸುಳ್ಳನ್ನು ಹಿಡಿದುಕೊಂಡರು; ಸೃಷ್ಟಿಸಲ್ಪಟ್ಟ ವಸ್ತುಗಳನ್ನು ಆರಾಧಿಸಿದರು; ಅವುಗಳ ಸೇವೆ ಮಾಡಿದರು. ಆದರೆ ಆ ವಸ್ತುಗಳನ್ನು ಸೃಷ್ಟಿಸಿದ ದೇವರನ್ನು ಅವರು ಆರಾಧಿಸಲಿಲ್ಲ; ಆತನ ಸೇವೆ ಮಾಡಲಿಲ್ಲ. ದೇವರಿಗೇ ನಿರಂತರ ಸ್ತುತಿಸ್ತೋತ್ರ ಸಲ್ಲಬೇಕು. ಆಮೆನ್.

26 ಅವರು ಆ ರೀತಿ ವರ್ತಿಸಿದ್ದರಿಂದಲೇ, ದೇವರು ಅವರನ್ನು ನಾಚಿಕೆಕರವಾದ ಕಾಮಾಭಿಲಾಷೆಗೆ ಬಿಟ್ಟುಕೊಟ್ಟನು. ಅವರ ಸ್ತ್ರೀಯರು ಪುರಷರೊಂದಿಗೆ ಪಡೆಯುತ್ತಿದ್ದ ಸಹಜವಾದ ಲೈಂಗಿಕ ಸಂಪರ್ಕವನ್ನು ನಿಲ್ಲಿಸಿ, ಸಲಿಂಗಕಾಮಿಗಳಾದರು. 27 ಅದೇರೀತಿಯಲ್ಲಿ, ಪುರುಷರು ಸ್ತ್ರೀಯರೊಂದಿಗೆ ಪಡೆಯುತ್ತಿದ್ದ ಸಹಜವಾದ ಲೈಂಗಿಕ ಸಂಪರ್ಕವನ್ನು ನಿಲ್ಲಿಸಿ ಉದ್ರೇಕಗೊಂಡ ಸಲಿಂಗಕಾಮಿಗಳಾದರು. ಅವರು ತಮ್ಮ ದುರ್ನಡತೆಗೆ ತಕ್ಕ ದಂಡನೆಯನ್ನು ತಮ್ಮ ದೇಹಗಳಿಗೆ ಬರಮಾಡಿಕೊಂಡರು.

28 ದೇವರ ನಿಜ ಜ್ಞಾನವನ್ನು ಹೊಂದಿಕೊಳ್ಳಲು ಅವರಿಗೆ ಇಷ್ಟವಿಲ್ಲದ್ದರಿಂದ ದೇವರು ಅವರನ್ನು ಅವರ ಅಯೋಗ್ಯ ಭಾವಕ್ಕೆ ಒಪ್ಪಿಸಿಕೊಟ್ಟನು. ಆದ್ದರಿಂದ ಅವರು ತಾವು ಮಾಡಬಾರದ ಕೆಲಸಗಳನ್ನು ಮಾಡುತ್ತಾರೆ. 29 ಅವರಲ್ಲಿ ಪ್ರತಿಯೊಂದು ಬಗೆಯ ಪಾಪ, ದುಷ್ಟತನ, ಸ್ವಾರ್ಥ, ದ್ವೇಷ, ಹೊಟ್ಟೆಕಿಚ್ಚು, ಕೊಲೆ, ಹೊಡೆದಾಟ, ಸುಳ್ಳುನುಡಿ ಮತ್ತು ಕೆಟ್ಟ ಆಲೋಚನೆ ಇವುಗಳೆಲ್ಲಾ ತುಂಬಿಕೊಂಡಿವೆ. ಅವರು ಹರಟೆ ಹೊಡೆಯುತ್ತಾರೆ; 30 ಒಬ್ಬರ ಮೇಲೊಬ್ಬರು ಚಾಡಿ ಹೇಳುತ್ತಾರೆ; ದೇವರನ್ನು ದ್ವೇಷಿಸುತ್ತಾರೆ. ಅವರು ಸೊಕ್ಕಿನವರೂ ಅಹಂಕಾರಿಗಳೂ ಮತ್ತು ತಮ್ಮ ಬಗ್ಗೆ ಬಡಾಯಿಕೊಚ್ಚಿಕೊಳ್ಳುವವರೂ ಆಗಿದ್ದಾರೆ. ಅವರು ಕೇಡಿನ ಮಾರ್ಗಗಳನ್ನು ಹುಡುಕುವವರೂ ತಂದೆತಾಯಿಗಳಿಗೆ ಅವಿಧೇಯರೂ ಮೂರ್ಖರೂ ಆಗಿದ್ದಾರೆ. 31 ಅವರು ತಾವು ಕೊಟ್ಟ ಮಾತನ್ನು ನೆರವೇರಿಸದವರೂ ಬೇರೆಯವರಿಗೆ ಮಮತೆಯನ್ನಾಗಲಿ ಕರುಣೆಯನ್ನಾಗಲಿ ತೋರದವರೂ ಆಗಿದ್ದಾರೆ. 32 ಇಂಥವರಿಗೆ ಮರಣದಂಡನೆ ಆಗಬೇಕೆಂದು ದೇವರ ಧರ್ಮಶಾಸ್ತ್ರ ಹೇಳುತ್ತದೆ ಎಂಬುದು ಅವರಿಗೆ ಗೊತ್ತಿದೆ. ಆದರೂ ಅವರು ಇಂಥ ಕಾರ್ಯಗಳನ್ನು ಮಾಡುತ್ತಾರೆ ಮತ್ತು ಇಂಥ ಕಾರ್ಯಗಳನ್ನು ಮಾಡುವ ಜನರಿಗೆ ಪ್ರೋತ್ಸಾಹ ನೀಡುತ್ತಾರೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International