M’Cheyne Bible Reading Plan
ಯಾಕೋಬನು ರಾಹೇಲಳನ್ನು ಭೇಟಿಯಾದದ್ದು
29 ಬಳಿಕ ಯಾಕೋಬನು ತನ್ನ ಪ್ರಯಾಣವನ್ನು ಮುಂದುವರಿಸಿದನು. ಅವನು ಪೂರ್ವ ದಿಕ್ಕಿನಲ್ಲಿದ್ದ ನಾಡಿಗೆ ಹೋದನು. 2 ಯಾಕೋಬನು ದೃಷ್ಟಿಸಿ ನೋಡಿದಾಗ, ಹೊಲದಲ್ಲಿ ಅವನಿಗೆ ಒಂದು ಬಾವಿ ಕಾಣಿಸಿತು. ಬಾವಿಯ ಸಮೀಪದಲ್ಲಿ ಮೂರು ಕುರಿಮಂದೆಗಳು ಮಲಗಿಕೊಂಡಿದ್ದವು. ಕುರಿಗಳಿಗೆ ಆ ಬಾವಿಯ ನೀರನ್ನೇ ಕುಡಿಸುತ್ತಿದ್ದರು. ಬಾವಿಯ ಮೇಲೆ ಅಗಲವಾದ ದೊಡ್ಡ ಕಲ್ಲನ್ನು ಮುಚ್ಚಲಾಗಿತ್ತು. 3 ಕುರಿಮಂದೆಗಳೆಲ್ಲ ಒಟ್ಟಿಗೆ ಸೇರಿದ ಮೇಲೆ, ಕುರುಬರು ಬಾವಿಯ ಮೇಲಿನ ಕಲ್ಲನ್ನು ಉರುಳಿಸುತ್ತಿದ್ದರು. ಆಮೇಲೆ ಎಲ್ಲಾ ಕುರಿಗಳು ಬಾವಿಯ ನೀರನ್ನು ಕುಡಿಯುತ್ತಿದ್ದವು. ಕುರಿಗಳು ನೀರು ಕುಡಿದಾದ ಮೇಲೆ ಕುರುಬರು ಕಲ್ಲನ್ನು ಮತ್ತೆ ಮುಚ್ಚುತ್ತಿದ್ದರು.
4 ಯಾಕೋಬನು ಅಲ್ಲಿದ್ದ ಕುರುಬರಿಗೆ, “ಸಹೋದರರೇ, ನೀವು ಎಲ್ಲಿಯವರು?” ಎಂದು ಕೇಳಿದನು.
ಅವರು “ನಾವು ಹಾರಾನಿನವರು” ಎಂದು ಉತ್ತರಕೊಟ್ಟರು.
5 ನಂತರ ಯಾಕೋಬನು ಅವರಿಗೆ, “ನಾಹೋರನ ಮೊಮ್ಮಗನಾದ ಲಾಬಾನನು ನಿಮಗೆ ಗೊತ್ತೆ?” ಎಂದು ಕೇಳಿದನು.
ಕುರುಬರು, “ನಮಗೆ ಗೊತ್ತು” ಎಂದು ಉತ್ತರಿಸಿದರು.
6 ಯಾಕೋಬನು, “ಅವನು ಕ್ಷೇಮವಾಗಿರುವನೇ?” ಎಂದು ಕೇಳಿದನು.
ಅವರು, “ಅವನು ಕ್ಷೇಮವಾಗಿದ್ದಾನೆ. ಅಗೋ, ಆ ಕುರಿಗಳೊಂದಿಗೆ ಬರುತ್ತಿರುವವಳೇ ಅವನ ಮಗಳಾದ ರಾಹೇಲಳು” ಎಂದು ಉತ್ತರಿಸಿದರು.
7 ಯಾಕೋಬನು, “ನೋಡಿ, ಇನ್ನೂ ಹೊತ್ತಾಗಿಲ್ಲ; ರಾತ್ರಿಗಾಗಿ ಕುರಿಗಳನ್ನು ಒಟ್ಟಿಗೆ ಸೇರಿಸುವ ಸಮಯವಾಗಿಲ್ಲ; ನೀರು ಕುಡಿಸಿ ಅವುಗಳನ್ನು ಮೇಯಿಸಿರಿ” ಎಂದನು.
8 ಆ ಕುರುಬರು, “ಕುರಿಮಂದೆಗಳೆಲ್ಲ ಒಟ್ಟಿಗೆ ಸೇರುವವರೆಗೆ ನಾವು ಬಾವಿಯ ಮೇಲಿರುವ ಕಲ್ಲನ್ನು ತೆಗೆದು ಕುರಿಗಳಿಗೆ ನೀರು ಕುಡಿಸುವಂತಿಲ್ಲ; ಅವು ಒಟ್ಟಿಗೆ ಕೂಡಿಬಂದಾಗಲೇ ನೀರು ಕುಡಿಸುತ್ತೇವೆ” ಎಂದು ಹೇಳಿದರು.
9 ಯಾಕೋಬನು ಕುರುಬರೊಡನೆ ಮಾತಾಡುತ್ತಿರುವಾಗ ರಾಹೇಲಳು ತನ್ನ ತಂದೆಯ ಕುರಿಗಳೊಡನೆ ಬಂದಳು. (ಕುರಿಗಳನ್ನು ನೋಡಿಕೊಳ್ಳುವುದು ರಾಹೇಲಳ ಕೆಲಸವಾಗಿತ್ತು.) 10 ರಾಹೇಲಳು ಲಾಬಾನನ ಮಗಳು. ಲಾಬಾನನು ಯಾಕೋಬನ ತಾಯಿಯಾದ ರೆಬೆಕ್ಕಳ ಅಣ್ಣ. ಯಾಕೋಬನು ರಾಹೇಲಳನ್ನು ನೋಡಿದಾಗ ಬಾವಿಯ ಮೇಲಿದ್ದ ಕಲ್ಲನ್ನು ತೆಗೆದುಹಾಕಿ ತನ್ನ ತಾಯಿಯ ಅಣ್ಣನಾದ ಲಾಬಾನನ ಕುರಿಗಳಿಗೆ ನೀರು ಕೊಟ್ಟನು. 11 ಬಳಿಕ ಯಾಕೋಬನು ರಾಹೇಲಳಿಗೆ ಮುದ್ದಿಟ್ಟು ಅತ್ತನು. 12 ಯಾಕೋಬನು ರಾಹೇಲಳಿಗೆ, ತಾನು ಅವಳ ತಂದೆಯ ಕುಟುಂಬದವನೆಂದೂ ರೆಬೆಕ್ಕಳ ಮಗನೆಂದೂ ತಿಳಿಸಿದನು. ಆಗ ರಾಹೇಲಳು ಮನೆಗೆ ಓಡಿಹೋಗಿ ತನ್ನ ತಂದೆಗೆ ಈ ಸುದ್ದಿಯನ್ನು ತಿಳಿಸಿದಳು.
13 ಲಾಬಾನನು ತನ್ನ ತಂಗಿಯ ಮಗನಾದ ಯಾಕೋಬನ ವಿಷಯವನ್ನು ಕೇಳಿ ಭೇಟಿಯಾಗಲು ಓಡಿಬಂದನು. ಲಾಬಾನನು ಅವನನ್ನು ಅಪ್ಪಿಕೊಂಡು ಮುದ್ದಿಟ್ಟು ಮನೆಗೆ ಕರೆದುಕೊಂಡು ಬಂದನು. ಯಾಕೋಬನು ನಡೆದ ಪ್ರತಿಯೊಂದನ್ನೂ ಲಾಬಾನನಿಗೆ ತಿಳಿಸಿದನು.
14 ನಂತರ ಲಾಬಾನನು, “ಇದು ಆಶ್ಚರ್ಯವಾಗಿದೆ; ನೀನು ನನ್ನ ಸ್ವಂತ ಕುಟುಂಬದವನು” ಎಂದು ಹೇಳಿದನು. ಆದ್ದರಿಂದ ಯಾಕೋಬನು ಲಾಬಾನನೊಡನೆ ಒಂದು ತಿಂಗಳವರೆಗೆ ಇದ್ದನು.
ಯಾಕೋಬನಿಗಾದ ಮೋಸ
15 ಒಂದು ದಿನ ಲಾಬಾನನು ಯಾಕೋಬನಿಗೆ, “ನೀನು ಸಂಬಳ ತೆಗೆದುಕೊಳ್ಳದೆ ನನ್ನ ಬಳಿಯಲ್ಲಿ ಕೆಲಸ ಮಾಡುವುದು ಸರಿಯಲ್ಲ. ನೀನು ನನ್ನ ಸಂಬಂಧಿಕನೇ ಹೊರತು ಸೇವಕನಲ್ಲ. ನಾನು ನಿನಗೆ ಎಷ್ಟು ಸಂಬಳ ಕೊಡಲಿ?” ಎಂದು ಕೇಳಿದನು.
16 ಲಾಬಾನನಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಹಿರಿಯವಳ ಹೆಸರು ಲೇಯಾ; ಕಿರಿಯವಳ ಹೆಸರು ರಾಹೇಲ್.
17 ರಾಹೇಲಳು ಸುಂದರವಾಗಿದ್ದಳು. ಲೇಯಳ ಕಣ್ಣುಗಳು ಸೌಮ್ಯವಾಗಿದ್ದವು.[a] 18 ಯಾಕೋಬನು ರಾಹೇಲಳನ್ನು ಪ್ರೀತಿಸಿದನು. ಯಾಕೋಬನು ಲಾಬಾನನಿಗೆ, “ನಿನ್ನ ಚಿಕ್ಕಮಗಳಾದ ರಾಹೇಲಳನ್ನು ನನಗೆ ಮದುವೆ ಮಾಡಿಕೊಡುವುದಾದರೆ ನಾನು ನಿನಗೆ ಏಳು ವರ್ಷ ಸೇವೆ ಮಾಡುವೆನು” ಎಂದು ಹೇಳಿದನು.
19 ಲಾಬಾನನು, “ಬೇರೊಬ್ಬನು ಆಕೆಯನ್ನು ಮದುವೆಯಾಗುವುದಕ್ಕಿಂತ ನೀನು ಮದುವೆಯಾಗುವುದೇ ಆಕೆಗೆ ಒಳ್ಳೆಯದು. ಆದ್ದರಿಂದ ನನ್ನೊಂದಿಗಿರು” ಎಂದು ಹೇಳಿದನು.
20 ಆದ್ದರಿಂದ ಯಾಕೋಬನು ಅವನೊಂದಿಗೆ ಇದ್ದುಕೊಂಡು ಏಳು ವರ್ಷಗಳವರೆಗೆ ಲಾಬಾನನ ಸೇವೆ ಮಾಡಿದನು. ಆದರೆ ಅವನು ರಾಹೇಲಳನ್ನು ತುಂಬಾ ಪ್ರೀತಿಸುತ್ತಿದ್ದುದರಿಂದ ಆ ಸಮಯವು ಅವನಿಗೆ ತುಂಬಾ ಕಡಿಮೆಯಂತೆ ಕಾಣಿಸಿತು.
21 ಏಳು ವರ್ಷಗಳಾದ ಮೇಲೆ ಯಾಕೋಬನು ಲಾಬಾನನಿಗೆ, “ನನಗೆ ರಾಹೇಲಳನ್ನು ಮದುವೆ ಮಾಡಿಕೊಡು. ನನ್ನ ಸೇವೆಯ ಕಾಲ ಮುಗಿದುಹೋಯಿತು” ಎಂದು ಹೇಳಿದನು.
22 ಆದ್ದರಿಂದ ಲಾಬಾನನು ಆ ಸ್ಥಳದಲ್ಲಿದ್ದ ಜನರಿಗೆಲ್ಲ ಒಂದು ಔತಣಕೂಟವನ್ನು ಏರ್ಪಡಿಸಿದನು. 23 ಆ ರಾತ್ರಿ ಲಾಬಾನನು ತನ್ನ ಮಗಳಾದ ಲೇಯಳನ್ನು ಯಾಕೋಬನ ಬಳಿಗೆ ಕಳುಹಿಸಿದನು. ಯಾಕೋಬನು ಆಕೆಯನ್ನು ಕೂಡಿದನು. 24 (ಲಾಬಾನನು ತನ್ನ ಸೇವಕಿಯಾದ ಜಿಲ್ಪಾಳನ್ನು ತನ್ನ ಮಗಳಿಗೆ ಸೇವಕಿಯನ್ನಾಗಿ ಕೊಟ್ಟನು.) 25 ಮುಂಜಾನೆ ಯಾಕೋಬನು ಎದ್ದು ನೋಡಿದಾಗ ಅವನೊಂದಿಗೆ ಲೇಯಾ ಇದ್ದಳು. ಯಾಕೋಬನು ಲಾಬಾನನಿಗೆ, “ನೀನು ನನಗೆ ಮೋಸ ಮಾಡಿದೆ. ನಾನು ರಾಹೇಲಳನ್ನು ಮದುವೆ ಮಾಡಿಕೊಳ್ಳುವುದಕ್ಕಾಗಿ ತುಂಬಾ ಕಷ್ಟಪಟ್ಟು ಕೆಲಸ ಮಾಡಿದೆ. ನೀನು ನನಗೇಕೆ ಮೋಸ ಮಾಡಿದೆ?” ಎಂದು ಕೇಳಿದನು.
26 ಲಾಬಾನನು, “ನಮ್ಮ ದೇಶದಲ್ಲಿ ದೊಡ್ಡ ಮಗಳು ಮದುವೆಯಾಗದ ಹೊರತು ಚಿಕ್ಕಮಗಳಿಗೆ ಮದುವೆ ಮಾಡುವುದಿಲ್ಲ. 27 ಆದರೆ ಆಕೆಯ ಮದುವೆಯ ವಾರವನ್ನು ಮುಂದುವರಿಸು. ನಾನು ನಿನಗೆ ರಾಹೇಲಳನ್ನು ಸಹ ಮದುವೆ ಮಾಡಿಕೊಡುತ್ತೇನೆ. ಆದರೆ ನೀನು ನನಗೆ ಇನ್ನೂ ಏಳು ವರ್ಷ ಸೇವೆ ಮಾಡಬೇಕು” ಎಂದು ಹೇಳಿದನು.
28 ಅಂತೆಯೇ ಯಾಕೋಬನು ಒಂದು ವಾರವನ್ನು ಕಳೆದನು. ಬಳಿಕ ಲಾಬಾನನು ತನ್ನ ಮಗಳಾದ ರಾಹೇಲಳನ್ನೂ ಅವನಿಗೆ ಹೆಂಡತಿಯನ್ನಾಗಿ ಕೊಟ್ಟನು. 29 (ಲಾಬಾನನು ತನ್ನ ಸೇವಕಿಯಾದ ಬಿಲ್ಹಾಳನ್ನು ತನ್ನ ಮಗಳಾದ ರಾಹೇಲಳಿಗೆ ಸೇವಕಿಯನ್ನಾಗಿ ಕೊಟ್ಟನು.) 30 ಯಾಕೋಬನು ರಾಹೇಲಳನ್ನೂ ಕೂಡಿದನು. ಯಾಕೋಬನು ರಾಹೇಲಳನ್ನು ಲೇಯಳಿಗಿಂತ ಹೆಚ್ಚಾಗಿ ಪ್ರೀತಿಸಿ ಆಕೆಗೋಸ್ಕರ ಇನ್ನೂ ಏಳು ವರ್ಷ ಸೇವೆ ಮಾಡಿದನು.
ಯಾಕೋಬನ ಕುಟುಂಬದ ಅಭಿವೃದ್ಧಿ
31 ಯಾಕೋಬನು ರಾಹೇಲಳನ್ನು ಲೇಯಳಿಗಿಂತ ಹೆಚ್ಚಾಗಿ ಪ್ರೀತಿಸುವುದನ್ನು ಯೆಹೋವನು ನೋಡಿದನು. ಆದ್ದರಿಂದ ಯೆಹೋವನು ಲೇಯಳಿಗೆ ಮಕ್ಕಳಾಗುವಂತೆ ಮಾಡಿದನು. ಆದರೆ ರಾಹೇಲಳಿಗೆ ಮಕ್ಕಳಿರಲಿಲ್ಲ.
32 ಲೇಯಳು ಒಬ್ಬ ಮಗನನ್ನು ಹೆತ್ತಳು. ಆಕೆಯು ತನ್ನೊಳಗೆ, “ಯೆಹೋವನು ನನ್ನ ದುಃಖವನ್ನು ನೋಡಿದ್ದಾನೆ. ನನ್ನ ಗಂಡನು ನನ್ನನ್ನು ಪ್ರೀತಿಸುವುದಿಲ್ಲ. ಈಗಲಾದರೊ ಅವನು ನನ್ನನ್ನು ಪ್ರೀತಿಸಬಹುದು” ಎಂದು ಹೇಳಿ ಆ ಮಗುವಿಗೆ ರೂಬೇನ್ ಎಂದು ಹೆಸರಿಟ್ಟಳು.
33 ಲೇಯಾ ಮತ್ತೆ ಬಸುರಾಗಿ ಮತ್ತೊಬ್ಬ ಮಗನನ್ನು ಹೆತ್ತಳು. ಆಕೆ ತನ್ನೊಳಗೆ, “ನಾನು ಗಂಡನ ಅಲಕ್ಷ್ಯಕ್ಕೆ ಗುರಿಯಾದೆನೆಂದು ಯೆಹೋವನು ತಿಳಿದು ನನಗೆ ಈ ಮಗುವನ್ನು ಕೊಟ್ಟಿದ್ದಾನೆ” ಎಂದು ಹೇಳಿ ಆ ಮಗುವಿಗೆ ಸಿಮೆಯೋನ್ ಎಂದು ಹೆಸರಿಟ್ಟಳು.
34 ಲೇಯಾ ಮತ್ತೆ ಬಸುರಾಗಿ ಮತ್ತೊಬ್ಬ ಗಂಡುಮಗನನ್ನು ಹೆತ್ತಳು. ಆಕೆ ತನ್ನೊಳಗೆ, “ಖಂಡಿತವಾಗಿಯೂ ನನ್ನ ಗಂಡ ನನ್ನ ಜೊತೆಗೂಡಿರುವನು. ನಾನು ಅವನಿಗೆ ಮೂರು ಗಂಡುಮಕ್ಕಳನ್ನು ಕೊಟ್ಟಿರುವೆ” ಎಂದು ಹೇಳಿ ಆ ಮಗುವಿಗೆ ಲೇವಿ ಎಂದು ಹೆಸರಿಟ್ಟಳು.
35 ನಂತರ ಲೇಯಾ ಮತ್ತೊಬ್ಬ ಗಂಡುಮಗನನ್ನು ಹೆತ್ತಳು. ಲೇಯಳು ತನ್ನೊಳಗೆ, “ಈಗ ನಾನು ಯೆಹೋವನನ್ನು ಸ್ತುತಿಸುವೆನು” ಎಂದು ಹೇಳಿ ಆ ಮಗುವಿಗೆ ಯೆಹೂದ ಎಂದು ಹೆಸರಿಟ್ಟಳು. ನಂತರ ಲೇಯಳಿಗೆ ಮಕ್ಕಳಾಗುವುದು ನಿಂತುಹೋಯಿತು.
ಯೇಸುವಿನ ಪುನರುತ್ಥಾನ
(ಮಾರ್ಕ 16:1-8; ಲೂಕ 24:1-12; ಯೋಹಾನ 20:1-10)
28 ಸಬ್ಬತ್ ದಿನ ಕಳೆದಿತ್ತು. ಭಾನುವಾರ ಬೆಳಗಾಗುವುದರಲ್ಲಿತ್ತು. ಮಗ್ಧಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಸಮಾಧಿಯನ್ನು ನೋಡಲು ಹೋದರು.
2 ಆಗ ಭೀಕರ ಭೂಕಂಪವಾಯಿತು. ಪ್ರಭುವಿನ ದೂತನೊಬ್ಬನು ಆಕಾಶದಿಂದ ಇಳಿದುಬಂದನು. ಆ ದೇವದೂತನು ಸಮಾಧಿಯ ಬಳಿಗೆ ಹೋಗಿ, ಸಮಾಧಿಯ ಬಾಗಿಲಿನಿಂದ ಬಂಡೆಯನ್ನು ಉರುಳಿಸಿ ಆ ಬಂಡೆಯ ಮೇಲೆ ಕುಳಿತುಕೊಂಡನು. 3 ದೇವದೂತನು ಮಿಂಚಿನಂತೆ ಪ್ರಕಾಶಿಸುತ್ತಿದ್ದನು. ಅವನ ಬಟ್ಟೆಗಳು ಮಂಜಿನಂತೆ ಬಿಳುಪಾಗಿದ್ದವು. 4 ಸಮಾಧಿಯನ್ನು ಕಾಯುತ್ತಿದ್ದ ಸೈನಿಕರು ದೇವದೂತನನ್ನು ಕಂಡು ಬಹಳವಾಗಿ ಹೆದರಿ ಭಯದಿಂದ ನಡುಗುತ್ತಾ ಸತ್ತಂತಾದರು.
5 ದೇವದೂತನು ಆ ಸ್ತ್ರೀಯರಿಗೆ, “ಹೆದರಬೇಡಿ, ಶಿಲುಬೆಗೇರಿಸಲ್ಪಟ್ಟ ಯೇಸುವನ್ನು ನೀವು ಹುಡುಕುತ್ತಿದ್ದೀರೆಂಬುದು ನನಗೆ ತಿಳಿದಿದೆ. 6 ಆದರೆ ಯೇಸು ಇಲ್ಲಿಲ್ಲ. ಆತನು ತಾನು ತಿಳಿಸಿದ್ದಂತೆಯೇ ಪುನರುತ್ಥಾನ ಹೊಂದಿದ್ದಾನೆ. ಬನ್ನಿ, ಆತನ ದೇಹವಿದ್ದ ಸ್ಥಳವನ್ನು ನೋಡಿ. 7 ಬೇಗನೆ ಹೋಗಿ ಆತನ ಶಿಷ್ಯರಿಗೆ, ‘ಯೇಸು ಪುನರುತ್ಥಾನ ಹೊಂದಿದ್ದಾನೆ. ಆತನು ಗಲಿಲಾಯಕ್ಕೆ ಹೋಗುತ್ತಿದ್ದಾನೆ. ನಿಮಗಿಂತ ಮುಂಚೆಯೇ ಆತನು ಅಲ್ಲಿರುತ್ತಾನೆ. ನೀವು ಆತನನ್ನು ಅಲ್ಲಿ ನೋಡುತ್ತೀರಿ’ ಎಂದು ಹೇಳಿರಿ. ನಾನು ನಿಮಗೆ ತಿಳಿಸಬೇಕಾದ ಸಮಾಚಾರ ಇದೇ, ಮರೆಯದಿರಿ” ಎಂದನು.
8 ಕೂಡಲೇ ಆ ಸ್ತ್ರೀಯರು ಭಯದಿಂದಲೂ ಸಂತೋಷದಿಂದಲೂ ಸಮಾಧಿಯಿಂದ ಹೊರಟರು. ನಡೆದ ಸಂಗತಿಯನ್ನು ಶಿಷ್ಯರಿಗೆ ತಿಳಿಸಲು ಅವರು ಓಡಿಹೋಗುತ್ತಿರಲು, 9 ಯೇಸು ಅವರ ಮುಂದೆ ಪ್ರತ್ಯಕ್ಷನಾಗಿ, “ನಿಮಗೆ ಶುಭವಾಗಲಿ” ಎಂದನು. ಆ ಸ್ತ್ರೀಯರು ಯೇಸುವಿನ ಬಳಿಗೆ ಹೋಗಿ, ಆತನ ಪಾದಗಳನ್ನು ಹಿಡಿದುಕೊಂಡು ಆತನನ್ನು ಆರಾಧಿಸಿದರು. 10 ಯೇಸು ಆ ಸ್ತ್ರೀಯರಿಗೆ, “ಹೆದರಬೇಡಿ, ನನ್ನ ಸಹೋದರರ ಬಳಿಗೆ ಹೋಗಿ ಗಲಿಲಾಯಕ್ಕೆ ಬರಲು ತಿಳಿಸಿರಿ. ಅವರು ನನ್ನನ್ನು ಅಲ್ಲಿ ಕಾಣುವರು” ಎಂದು ಹೇಳಿದನು.
ಯೆಹೂದ್ಯ ನಾಯಕರಿಗೆ ಬಂದ ವರದಿ
11 ಆ ಸ್ತ್ರೀಯರು ಶಿಷ್ಯರಿಗೆ ತಿಳಿಸಲು ಹೋದರು. ಇತ್ತ ಸಮಾಧಿಯನ್ನು ಕಾಯುತ್ತಿದ್ದ ಕೆಲವು ಸೈನಿಕರು ನಗರದೊಳಕ್ಕೆ ಹೋಗಿ ನಡೆದ ಸಂಗತಿಯನ್ನೆಲ್ಲಾ ಮಹಾಯಾಜಕರಿಗೆ ತಿಳಿಸಿದರು. 12 ಆಗ ಮಹಾಯಾಜಕರು ಹಿರಿಯ ಯೆಹೂದ್ಯರನ್ನು ಭೇಟಿಮಾಡಿ ಚರ್ಚಿಸಿದರು ಮತ್ತು ಸೈನಿಕರಿಗೆ ಹೆಚ್ಚು ಹಣಕೊಟ್ಟು ಅವರಿಂದ ಸುಳ್ಳು ಹೇಳಿಸುವ ಉಪಾಯವನ್ನು ಮಾಡಿದರು. 13 ಅವರು ಸೈನಿಕರಿಗೆ, “ರಾತ್ರಿ ವೇಳೆಯಲ್ಲಿ ನಾವು ನಿದ್ರಿಸುತ್ತಿದ್ದಾಗ ಯೇಸುವಿನ ಶಿಷ್ಯರು ಬಂದು ಅವನ ದೇಹವನ್ನು ಕದ್ದೊಯ್ದರೆಂದು ಜನರಿಗೆ ತಿಳಿಸಿರಿ. 14 ಇದು ರಾಜ್ಯಪಾಲನಿಗೆ ಗೊತ್ತಾದರೂ ನಾವು ಅವನನ್ನು ಸಮಾಧಾನಪಡಿಸುತ್ತೇವೆ ಮತ್ತು ನಿಮಗೇನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ” ಎಂದು ಹೇಳಿದರು. 15 ಸೈನಿಕರು ಹಣವನ್ನು ತೆಗೆದುಕೊಂಡು, ಅವರು ಹೇಳಿದಂತೆಯೇ ಮಾಡಿದರು. ಈ ಕಥೆಯು ಇಂದಿನವರೆಗೂ ಯೆಹೂದ್ಯರಲ್ಲಿ ಹಬ್ಬಿಕೊಂಡಿದೆ.
ಯೇಸು ತನ್ನ ಶಿಷ್ಯರಿಗೆ ಹೇಳಿದ ಕಡೆಯ ಮಾತುಗಳು
(ಮಾರ್ಕ 16:14-18; ಲೂಕ 24:36-49; ಯೋಹಾನ 20:19-23; ಅ.ಕಾ. 1:6-8)
16 ಹನ್ನೊಂದು ಮಂದಿ ಶಿಷ್ಯರು ಗಲಿಲಾಯಕ್ಕೆ ಹೊರಟು ಯೇಸು ತಿಳಿಸಿದ್ದ ಬೆಟ್ಟಕ್ಕೆ ಬಂದರು. 17 ಶಿಷ್ಯರು ಬೆಟ್ಟದ ಮೇಲೆ ಯೇಸುವನ್ನು ಕಂಡು ಆತನನ್ನು ಆರಾಧಿಸಿದರು. ಆದರೆ ಕೆಲವು ಶಿಷ್ಯರು ಆತನೇ ನಿಜವಾದ ಯೇಸು ಎಂಬುದನ್ನು ನಂಬಲಿಲ್ಲ. 18 ಆದ್ದರಿಂದ ಯೇಸು ಅವರ ಬಳಿಗೆ ಬಂದು, “ಪರಲೋಕದ ಮತ್ತು ಈ ಲೋಕದ ಅಧಿಕಾರವೆಲ್ಲವನ್ನು ನನಗೆ ಕೊಡಲಾಗಿದೆ. 19 ಆದ್ದರಿಂದ ನೀವು ಹೋಗಿ, ಲೋಕದಲ್ಲಿರುವ ಜನರೆಲ್ಲರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ. ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ಅವರಿಗೆಲ್ಲ ದೀಕ್ಷಾಸ್ನಾನ ಮಾಡಿಸಿ. 20 ನಾನು ನಿಮಗೆ ಆಜ್ಞಾಪಿಸಿದವುಗಳಿಗೆಲ್ಲಾ ವಿಧೇಯರಾಗುವಂತೆ ಜನರಿಗೆ ಉಪದೇಶಿಸಿ, ಲೋಕಾಂತ್ಯದವರೆಗೂ ಸದಾಕಾಲ ನಾನು ನಿಮ್ಮೊಂದಿಗಿರುತ್ತೇನೆ” ಎಂದು ಹೇಳಿದನು.
ಎಸ್ತೇರಳು ರಾಜನನ್ನು ಸಂದರ್ಶಿಸಿದ್ದು
5 ಮೂರನೇ ದಿವಸದಲ್ಲಿ ಎಸ್ತೇರಳು ವಿಶೇಷ ಬಟ್ಟೆಗಳನ್ನು ಧರಿಸಿ ಅರಸನ ಅರಮನೆಯ ಒಳಾಂಗಣದಲ್ಲಿ ನಿಂತುಕೊಂಡಳು. ಅದು ರಾಜ ದರ್ಬಾರಿನ ಮುಂದೆ ಇತ್ತು. ರಾಜನು ಸಿಂಹಾಸನದ ಮೇಲೆ, ಪ್ರಜೆಗಳು ಪ್ರವೇಶಿಸುವ ಬಾಗಿಲಿಗೆ ಎದುರಾಗಿ ಕುಳಿತಿದ್ದನು. 2 ಅರಸನು ಒಳಾಂಗಣದಲ್ಲಿ ನಿಂತಿದ್ದ ಎಸ್ತೇರಳನ್ನು ಕಂಡ ಕೂಡಲೇ ಆಕೆಯನ್ನು ಮೆಚ್ಚಿಕೊಂಡು ತನ್ನ ಕೈಯಲ್ಲಿದ್ದ ರಾಜದಂಡವನ್ನು ಆಕೆಯ ಕಡೆಗೆ ಚಾಚಿದನು. ಆಗ ಎಸ್ತೇರಳು ಒಳಾಂಗಣವನ್ನು ಪ್ರವೇಶಿಸಿ ರಾಜನ ಬಳಿ ಹೋದಳು ಮತ್ತು ರಾಜದಂಡದ ತುದಿಯನ್ನು ತನ್ನ ಬೆರಳಿನಿಂದ ಮುಟ್ಟಿದಳು.
3 “ಎಸ್ತೇರ್ ರಾಣಿಯೇ, ಯಾವುದು ನಿನ್ನ ಮನಸ್ಸನ್ನು ಭಾದಿಸುತ್ತದೆ? ನನ್ನನ್ನು ಏನು ಕೇಳಲು ಬಂದಿರುವಿ? ಕೇಳು, ನಾನು ನಿನಗೆ ಅರ್ಧ ರಾಜ್ಯವನ್ನು ಕೇಳಿದರೂ ಕೊಡುವೆನು” ಎಂದು ರಾಜನು ಅಂದನು.
4 ಅದಕ್ಕೆ ಎಸ್ತೇರಳು, “ನಾನು ಒಂದು ಔತಣವನ್ನು ಸಿದ್ಧಪಡಿಸಿರುತ್ತೇನೆ. ಅದಕ್ಕೆ ನೀವೂ, ಹಾಮಾನನೂ ಬರಬೇಕು ಎಂದು ವಿನಂತಿಸುತ್ತೇನೆ” ಎಂದಳು.
5 ಆಗ ಅರಸನು, “ಹಾಮಾನನನ್ನು ಬೇಗನೇ ಕರೆಯಿಸಿರಿ, ಎಸ್ತೇರಳು ಹೇಳಿದಂತೆ ನಾವು ಮಾಡುವೆವು” ಅಂದನು.
ಹಾಗೆ ಅರಸನೂ ಹಾಮಾನನೂ ಎಸ್ತೇರಳು ಅವರಿಗಾಗಿ ಮಾಡಿದ ಔತಣಕ್ಕೆ ಹೋದರು. 6 ಅವರು ದ್ರಾಕ್ಷಾರಸವನ್ನು ಸೇವಿಸುತ್ತಿರುವಾಗ ರಾಜನು ಎಸ್ತೇರಳನ್ನು ತಿರಿಗಿ ವಿಚಾರಿಸಿದನು, “ನೀನು ನನ್ನನ್ನು ಏನು ಕೇಳಬೇಕೆಂದಿದ್ದೀ? ಏನೂ ಬೇಕಾದರೂ ಕೇಳು. ನಾನು ಕೊಡುತ್ತೇನೆ. ಹೇಳು ಏನುಬೇಕು? ನನ್ನ ಅರ್ಧ ರಾಜ್ಯವನ್ನು ಕೇಳಿದರೂ ನಾನು ಕೊಡುತ್ತೇನೆ” ಅಂದನು.
7 ಅದಕ್ಕೆ ಎಸ್ತೇರಳು, “ನನ್ನ ಬಿನ್ನಹವೇನೆಂದರೆ: 8 ರಾಜನು ಸಮ್ಮತಿಸುವದಾದರೆ ಮತ್ತು ನಾನು ಕೇಳಿಕೊಳ್ಳುವುದನ್ನು ಕೊಡಲು ರಾಜನಿಗೆ ಇಷ್ಟವಾದರೆ, ನಾಳೆ ನಾನು ಇನ್ನೊಂದು ಔತಣ ಸಮಾರಂಭವನ್ನು ಏರ್ಪಡಿಸುತ್ತೇನೆ. ಅದಕ್ಕೆ ನೀವೂ ಹಾಮಾನನೂ ಬರಬೇಕು. ಆಗ ನಾನು ನನಗೇನುಬೇಕೆಂದು ತಿಳಿಸುವೆನು” ಅಂದಳು.
ಮೊರ್ದೆಕೈ ಮೇಲೆ ಹಾಮಾನನ ರೋಷ
9 ಹಾಮಾನನು ಹರ್ಷ ತುಂಬಿದವನಾಗಿ ರಾಜ ಸನ್ನಿಧಿಯಿಂದ ತನ್ನ ಮನೆಗೆ ತೆರಳಿದನು. ಆದರೆ ಹೆಬ್ಬಾಗಿಲ ಬಳಿಯಲ್ಲಿ ಮೊರ್ದೆಕೈಯನ್ನು ನೋಡಿದಾಗ ಅವನ ಮೇಲೆ ಹಾಮಾನನ ಕೋಪ ಉಕ್ಕಿ ಬಂತು. ಯಾಕೆಂದರೆ ಮೊರ್ದೆಕೈ ಹಾಮಾನನಿಗೆ ಯಾವ ಗೌರವವನ್ನೂ ಕೊಟ್ಟಿರಲಿಲ್ಲ ಮತ್ತು ಅವನಿಗೆ ಭಯಪಡಲಿಲ್ಲ. ಇದು ಹಾಮಾನನನ್ನು ಸಿಟ್ಟಿಗೇರುವಂತೆ ಮಾಡಿತು. 10 ಆದರೆ ಹಾಮಾನನು ತನ್ನ ಕೋಪವನ್ನು ಹಿಡಿತದಲ್ಲಿಟ್ಟುಕೊಂಡು ತನ್ನ ಮನೆಗೆ ಹೋದನು. ಅಲ್ಲಿ ತನ್ನ ಸ್ನೇಹಿತರನ್ನೂ ತನ್ನ ಹೆಂಡತಿಯಾದ ಜೆರೆಷಳನ್ನೂ ಕರೆದು 11 ತನ್ನ ಸಂಪತ್ತಿನ ವಿಷಯ ಕೊಚ್ಚಿಗೊಂಡನು. ತನ್ನ ಸ್ನೇಹಿತರಲ್ಲಿ ತನ್ನ ಮಕ್ಕಳ ವಿಚಾರವಾಗಿ ಹೆಗ್ಗಳಿಕೆಯಿಂದ ಮಾತಾಡುತ್ತಿದ್ದನು. ಮಾತ್ರವಲ್ಲದೆ ಅರಸನು ತನ್ನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ ಇತರ ಎಲ್ಲಾ ನಾಯಕರುಗಳ ಮೇಲೆ ನೇಮಿಸಿದನು. 12 “ಅಷ್ಟೇ ಅಲ್ಲ” ಹಾಮಾನನು ಮುಂದುವರಿಸುತ್ತಾ, “ಎಸ್ತೇರ್ ರಾಣಿಯು ಅರಸನೊಡನೆ ನನ್ನೊಬ್ಬನನ್ನೇ ಕರೆದು ಔತಣ ಮಾಡಿಸಿದಳು. ನಾಳೆಯ ಔತಣ ಸಮಾರಂಭಕ್ಕೂ ಅರಸನೊಡನೆ ನನ್ನನ್ನು ತಿರಿಗಿ ಬರಲು ಆಮಂತ್ರಿಸಿರುತ್ತಾಳೆ. 13 ಆದರೆ ನಾನು ಹೆಬ್ಬಾಗಿಲ ಬಳಿಯಲ್ಲಿ ಕುಳಿತುಕೊಳ್ಳುತ್ತಿರುವ ಮೊರ್ದೆಕೈಯನ್ನು ನೋಡುವಾಗ ನನ್ನ ಸಂತೋಷವೆಲ್ಲವೂ ಮಾಯವಾಗುತ್ತದೆ” ಎಂದು ಹೇಳಿದನು.
14 ಇದನ್ನು ಕೇಳಿದ ಹಾಮಾನನ ಹೆಂಡತಿ ಜೆರೆಷಳೂ ಮತ್ತು ಅವನ ಮಿತ್ರವೃಂದದವರೂ ಅವನಿಗೊಂದು ಸಲಹೆಯನ್ನಿತ್ತರು. “ಒಂದು ಗಲ್ಲುಮರವನ್ನು ನೆಡಿಸು. ಅದು ಎಪ್ಪತ್ತೈದು ಅಡಿ ಎತ್ತರವಿರಲಿ. ನಾಳೆ ಮುಂಜಾನೆ ಮೊರ್ದೆಕೈಯನ್ನು ಗಲ್ಲಿಗೇರಿಸಲು ಅರಸನಿಂದ ಅಪ್ಪಣೆ ತೆಗೆದುಕೋ. ಅನಂತರ ಅರಸನೊಂದಿಗೆ ಔತಣ ಸಮಾರಂಭಕ್ಕೆ ಹೋಗಿ ಸಂತೋಷಪಡು.”
ಇದನ್ನು ಕೇಳಿ ಹಾಮಾನನು ಸಂತೋಷಗೊಂಡನು. ಕೂಡಲೇ ಸೇವಕನನ್ನು ಕರೆಸಿ ಗಲ್ಲುಮರವನ್ನು ಸಿದ್ಧಮಾಡಲು ಆಜ್ಞಾಪಿಸಿದನು.
ಮಾಲ್ಟ ದ್ವೀಪದಲ್ಲಿ ಪೌಲನು
28 ನಾವು ಸುರಕ್ಷಿತವಾಗಿ ದಡವನ್ನು ಸೇರಿದ ಮೇಲೆ ಅದು ಮಾಲ್ಟ ದ್ವೀಪವೆಂದು ನಮಗೆ ತಿಳಿಯಿತು. 2 ಆಗ ಮಳೆಯು ಸುರಿಯುತ್ತಿತ್ತು ಮತ್ತು ತುಂಬ ಚಳಿಯಿತ್ತು. ಆದರೆ ಅಲ್ಲಿನ ಜನರು ನಮಗೆ ವಿಶೇಷವಾದ ಕರುಣೆತೋರಿ ನಮಗಾಗಿ ಬೆಂಕಿಹೊತ್ತಿಸಿ ನಮ್ಮೆಲ್ಲರನ್ನು ಆಹ್ವಾನಿಸಿದರು. 3 ಪೌಲನು ಒಂದು ಹೊರೆ ಕಟ್ಟಿಗೆಯನ್ನು ಕೂಡಿಸಿ ಅದನ್ನು ಬೆಂಕಿಯ ಮೇಲೆ ಹಾಕುತ್ತಿರಲು ಅದರ ಕಾವಿನ ದೆಸೆಯಿಂದ ವಿಷದ ಹಾವೊಂದು ಹೊರಗೆ ಬಂದು ಪೌಲನ ಕೈಗೆ ಸುತ್ತಿಕೊಂಡಿತು. 4 ಪೌಲನ ಕೈಗೆ ಸುತ್ತಿಕೊಂಡಿದ್ದ ಆ ಹಾವನ್ನು ಅಲ್ಲಿನ ಜನರು ನೋಡಿ, “ಇವನು ಕೊಲೆಗಾರನೇ ಸರಿ! ಇವನು ಸಮುದ್ರದಲ್ಲಿ ಸಾಯದಿದ್ದರೂ ಇವನು ಬದುಕುವುದು ನ್ಯಾಯಕ್ಕೆ[a] ಇಷ್ಟವಿಲ್ಲ” ಎಂದು ಹೇಳಿದರು.
5 ಆದರೆ ಪೌಲನು ಆ ಹಾವನ್ನು ಬೆಂಕಿಯೊಳಕ್ಕೆ ಝಾಡಿಸಿ ಬಿಟ್ಟನು. ಪೌಲನಿಗೆ ಯಾವ ಹಾನಿಯೂ ಆಗಲಿಲ್ಲ. 6 ಪೌಲನ ಮೈ ಊದಿಕೊಂಡು ಇದ್ದಕ್ಕಿದ್ದಂತೆ ಸತ್ತುಬೀಳುತ್ತಾನೆ ಎಂದು ಅವರು ತಿಳಿದುಕೊಂಡಿದ್ದರು. ಅವರು ಪೌಲನನ್ನೇ ಬಹು ಹೊತ್ತಿನವರೆಗೆ ದಿಟ್ಟಿಸಿ ನೋಡುತ್ತಿದ್ದರೂ ಪೌಲನಿಗೆ ಯಾವ ಹಾನಿಯೂ ಆಗಲಿಲ್ಲ. ಆದ್ದರಿಂದ ಅವರು ತಮ್ಮ ಅಭಿಪ್ರಾಯವನ್ನು ಬದಲಿಸಿ, “ಇವನೊಬ್ಬ ದೇವರು!” ಎಂದು ಹೇಳಿದರು.
7 ಆ ಸ್ಥಳದ ಸುತ್ತಮುತ್ತ ಕೆಲವು ಹೊಲಗಳು ಇದ್ದವು. ಆ ದ್ವೀಪದ ಪ್ರಮುಖ ವ್ಯಕ್ತಿಯೊಬ್ಬನಿಗೆ ಆ ಹೊಲಗಳು ಸೇರಿದ್ದವು. ಅವನ ಹೆಸರು ಪೊಪ್ಲಿಯ. ಅವನು ನಮ್ಮನ್ನು ತನ್ನ ಮನೆಗೆ ಸ್ವಾಗತಿಸಿದನು. ಪೊಪ್ಲಿಯನು ಕನಿಕರ ತೋರಿದನು. ನಾವು ಅವನ ಮನೆಯಲ್ಲಿ ಮೂರು ದಿನವಿದ್ದೆವು. 8 ಪೊಪ್ಲಿಯನ ತಂದೆಯು ಬಹಳ ಅಸ್ವಸ್ಥನಾಗಿದ್ದನು. ಅವನಿಗೆ ಜ್ವರವಿತ್ತು ಮತ್ತು ರಕ್ತಭೇದಿಯಾಗುತ್ತಿತ್ತು. ಪೌಲನು ಅವನ ಬಳಿಗೆ ಹೋಗಿ ಅವನಿಗಾಗಿ ಪ್ರಾರ್ಥಿಸಿ ಅವನ ಮೇಲೆ ತನ್ನ ಕೈಗಳನ್ನಿಟ್ಟು ಗುಣಪಡಿಸಿದನು. 9 ಇದಾದ ನಂತರ ದ್ವೀಪದಲ್ಲಿದ್ದ ಇತರ ರೋಗಿಗಳೆಲ್ಲ ಪೌಲನ ಬಳಿಗೆ ಬಂದರು. ಪೌಲನು ಅವರನ್ನು ಸಹ ಗುಣಪಡಿಸಿದನು.
10-11 ಆ ದ್ವೀಪ ನಿವಾಸಿಗಳು ನಮ್ಮನ್ನು ಬಹಳವಾಗಿ ಸನ್ಮಾನಿಸಿದರು. ನಾವು ಅಲ್ಲಿ ಮೂರು ತಿಂಗಳಿದ್ದೆವು. ನಾವು ಅಲ್ಲಿಂದ ಹೊರಡಲು ಸಿದ್ಧರಾದಾಗ ಅವರು ನಮಗೆ ಬೇಕಾದ ವಸ್ತುಗಳನ್ನು ಕೊಟ್ಟರು.
ರೋಮಿಗೆ ಪೌಲನ ಪ್ರಯಾಣ
ಅಲೆಕ್ಸಾಂಡ್ರಿಯ ಪಟ್ಟಣದಿಂದ ಬಂದ ಹಡಗೊಂದನ್ನು ನಾವು ಹತ್ತಿದೆವು. ಆ ಹಡಗು ಚಳಿಗಾಲದ ನಿಮಿತ್ತ ಮಾಲ್ಟ ದ್ವೀಪದಲ್ಲೇ ತಂಗಿತ್ತು. ಆ ಹಡಗಿನ ಮುಂಭಾಗದಲ್ಲಿ ಎರಡು ಗ್ರೀಕ್ ದೇವತೆಗಳ ಚಿಹ್ನೆಯಿತ್ತು. 12 ನಾವು ಸಿರಾಕೊಸ್ ಪಟ್ಟಣಕ್ಕೆ ಬಂದು ಅಲ್ಲಿ ಮೂರು ದಿನವಿದ್ದೆವು. ಬಳಿಕ ಅಲ್ಲಿಂದ ಹೊರಟು 13 ರೇಗಿಯ ಎಂಬ ಪಟ್ಟಣಕ್ಕೆ ಬಂದೆವು. ಮರುದಿನ ನೈರುತ್ಯ[b] ಗಾಳಿಯು ಬೀಸತೊಡಗಿತು. ಆದ್ದರಿಂದ ಅಲ್ಲಿಂದ ಹೊರಡಲು ಸಾಧ್ಯವಾಯಿತು. ಒಂದು ದಿನವಾದ ಮೇಲೆ ಪುತೋಲಿ ಎಂಬ ಪಟ್ಟಣಕ್ಕೆ ಬಂದೆವು. 14 ಅಲ್ಲಿ ಕೆಲವು ಮಂದಿ ವಿಶ್ವಾಸಿಗಳನ್ನು ಕಂಡೆವು. ತಮ್ಮೊಂದಿಗೆ ಒಂದು ವಾರವಾದರೂ ಇರಬೇಕೆಂದು ಅವರು ನಮ್ಮನ್ನು ಕೇಳಿಕೊಂಡರು. ಕೊನೆಗೆ ನಾವು ರೋಮಿಗೆ ಹೊರಟೆವು. 15 ನಾವು ಇಲ್ಲಿರುವುದು ರೋಮಿನಲ್ಲಿದ್ದ ವಿಶ್ವಾಸಿಗಳಿಗೆ ತಿಳಿಯಿತು. ಅವರು ನಮ್ಮನ್ನು ಭೇಟಿಯಾಗುವುದಕ್ಕಾಗಿ “ಅಪ್ಪಿಯ” ಮಾರುಕಟ್ಟೆಗೂ[c] ಮತ್ತು “ತ್ರಿಛತ್ರ”[d] ಎಂಬ ಸ್ಥಳಕ್ಕೂ ಬಂದರು. ಈ ವಿಶ್ವಾಸಿಗಳನ್ನು ಕಂಡಾಗ ಪೌಲನು ಧೈರ್ಯಗೊಂಡು ದೇವರಿಗೆ ಸ್ತೋತ್ರ ಸಲ್ಲಿಸಿದನು.
ರೋಮಿನಲ್ಲಿ ಪೌಲನು
16 ಬಳಿಕ ನಾವು ರೋಮಿಗೆ ಹೋದೆವು. ಅಲ್ಲಿ ಪ್ರತ್ಯೇಕವಾಗಿರಲು ಪೌಲನಿಗೆ ಅವಕಾಶವನ್ನು ಕೊಡಲಾಯಿತು. ಆದರೆ ಪೌಲನನ್ನು ಕಾಯುವುದಕ್ಕಾಗಿ ಸೈನಿಕನೊಬ್ಬನು ಅವನೊಂದಿಗಿದ್ದನು.
17 ಮೂರು ದಿನಗಳಾದ ಮೇಲೆ ಪೌಲನು ಯೆಹೂದ್ಯರಲ್ಲಿ ಪ್ರಧಾನರಾಗಿದ್ದವರನ್ನು ಕರೆಯಿಸಿದನು. ಅವರು ಬಂದು ಒಟ್ಟಾಗಿ ಸೇರಿದಾಗ ಪೌಲನು ಅವರಿಗೆ, “ನನ್ನ ಯೆಹೂದ್ಯ ಸಹೋದರರೇ, ನಮ್ಮ ಜನರಿಗೂ ನಮ್ಮ ಪಿತೃಗಳ ಸಂಪ್ರದಾಯಗಳಿಗೂ ವಿರುದ್ಧವಾಗಿ ನಾನೇನೂ ಮಾಡಿಲ್ಲ. ಆದರೆ ನನ್ನನ್ನು ಜೆರುಸಲೇಮಿನಲ್ಲಿ ಬಂಧಿಸಿ ರೋಮಿನವರಿಗೆ ಒಪ್ಪಿಸಲಾಗಿದೆ. 18 ರೋಮಿನವರು ನನಗೆ ಅನೇಕ ಪ್ರಶ್ನೆಗಳನ್ನು ಕೇಳಿದರು. ಆದರೆ ನನ್ನನ್ನು ಮರಣದಂಡನೆಗೆ ಗುರಿಮಾಡುವಂಥ ಯಾವ ಅಪರಾಧವನ್ನೂ ಅವರು ನನ್ನಲ್ಲಿ ಕಾಣಲಿಲ್ಲ. ಆದ್ದರಿಂದ ಅವರು ನನ್ನನ್ನು ಬಿಡುಗಡೆಮಾಡಬೇಕೆಂದಿದ್ದರು. 19 ಆದರೆ ಅಲ್ಲಿದ್ದ ಯೆಹೂದ್ಯರು ಅದಕ್ಕೆ ಆಕ್ಷೇಪಿಸಿದರು. ಆದ್ದರಿಂದ ನನಗೆ ರೋಮಿನಲ್ಲಿ ಸೀಸರನ ಮುಂದೆ ವಿಚಾರಣೆಯಾಗಲಿ ಎಂದು ಕೇಳಿಕೊಳ್ಳಬೇಕಾಯಿತು. ಆದರೆ ನನ್ನ ಜನರು ಮಾಡಿದ್ದು ತಪ್ಪೆಂದು ನಾನು ನಿಮಗೆ ಹೇಳುತ್ತಿಲ್ಲ. 20 ಆದಕಾರಣವೇ ನಾನು ನಿಮ್ಮನ್ನು ನೋಡಲು ಮತ್ತು ನಿಮ್ಮ ಸಂಗಡ ಮಾತಾಡಲು ಬಯಸಿದೆ. ಇಸ್ರೇಲಿನ ನಿರೀಕ್ಷೆಯಲ್ಲಿ ನಾನು ನಂಬಿಕೆ ಇಟ್ಟಿರುವುದರಿಂದಲೇ ಈ ಸರಪಣಿಗಳಿಂದ ಬಂಧಿತನಾಗಿದ್ದೇನೆ” ಎಂದು ಹೇಳಿದನು.
21-22 ಯೆಹೂದ್ಯರು ಪೌಲನಿಗೆ, “ನಿನ್ನ ಬಗ್ಗೆ ಜುದೇಯದಿಂದ ನಮಗೆ ಯಾವ ಪತ್ರಗಳೂ ಬಂದಿಲ್ಲ. ಅಲ್ಲಿಂದ ಪ್ರಯಾಣ ಮಾಡಿ ಬಂದ ನಮ್ಮ ಯೆಹೂದ್ಯ ಸಹೋದರರಲ್ಲಿ ಯಾರೂ ನಿನ್ನ ಬಗ್ಗೆ ಸುದ್ದಿಯನ್ನು ತರಲಿಲ್ಲ ಮತ್ತು ಕೆಟ್ಟದ್ದನ್ನು ಹೇಳಲಿಲ್ಲ. ನಿನ್ನ ಆಲೋಚನೆಗಳನ್ನು ನಾವು ಕೇಳಬಯಸುತ್ತೇವೆ. ಎಲ್ಲಾ ಕಡೆಗಳಲ್ಲಿರುವ ಜನರು ಈ ಗುಂಪಿನ (ಕ್ರೈಸ್ತರ) ವಿರೋಧವಾಗಿ ಮಾತಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ” ಎಂದು ಹೇಳಿದರು.
23 ಪೌಲನು ಮತ್ತು ಯೆಹೂದ್ಯರು ಸಭೆಸೇರಲು ಒಂದು ದಿನವನ್ನು ಗೊತ್ತುಮಾಡಿದರು. ಅಂದು ಇನ್ನೂ ಅನೇಕ ಮಂದಿ ಯೆಹೂದ್ಯರು ಪೌಲನ ಮನೆಯಲ್ಲಿ ಸಭೆಸೇರಿದರು. ಪೌಲನು ಬೆಳಗ್ಗೆಯಿಂದ ಸಂಜೆಯವರೆಗೂ ಅವರೊಂದಿಗೆ ಮಾತಾಡಿದನು; ದೇವರ ರಾಜ್ಯದ ಬಗ್ಗೆ ಅವರಿಗೆ ವಿವರಿಸಿದನು. ಯೇಸುವಿನ ವಿಷಯವಾದ ಸಂಗತಿಗಳಲ್ಲಿ ನಂಬಿಕೆ ಇಡುವಂತೆ ಅವರನ್ನು ಒಪ್ಪಿಸಲು ಪ್ರಯತ್ನಿಸಿದನು. ಇದಕ್ಕಾಗಿ ಅವನು ಮೋಶೆಯ ಧರ್ಮಶಾಸ್ತ್ರವನ್ನೂ ಪ್ರವಾದಿಗಳ ಗ್ರಂಥಗಳನ್ನೂ ಬಳಸಿಕೊಂಡನು. 24 ಪೌಲನು ಹೇಳಿದ ಕೆಲವು ಸಂಗತಿಗಳನ್ನು ಕೆಲವು ಮಂದಿ ಯೆಹೂದ್ಯರು ನಂಬಿದರು. ಆದರೆ ಉಳಿದವರು ನಂಬಲಿಲ್ಲ. 25 ಅವರು ವಾದಮಾಡಿ ಅಲ್ಲಿಂದ ಹೊರಡಲು ಸಿದ್ಧರಾದಾಗ ಪೌಲನು ಅವರಿಗೆ ಹೀಗೆಂದನು: “ಪವಿತ್ರಾತ್ಮನು ಪ್ರವಾದಿಯಾದ ಯೆಶಾಯನ ಮೂಲಕ ಪಿತೃಗಳಿಗೆ ಸತ್ಯವನ್ನು ತಿಳಿಸಿದನು. ಆತನು ಹೀಗೆ ಹೇಳಿದ್ದಾನೆ:
26 ‘ಈ ಜನರ ಬಳಿಗೆ ಹೋಗಿ ಇಂತೆನ್ನಿರಿ:
ನೀನು ಕಿವಿಗೊಟ್ಟು ಕೇಳಿದರೂ
ಅರ್ಥಮಾಡಿಕೊಳ್ಳವುದಿಲ್ಲ;
ಕಣ್ಣಾರೆ ಕಂಡರೂ
ಗ್ರಹಿಸಿಕೊಳ್ಳುವುದಿಲ್ಲ.
27 ಹೌದು, ಈ ಜನರ ಹೃದಯಗಳು ಕಠಿಣವಾಗಿವೆ.
ಈ ಜನರಿಗೆ ಕಿವಿಗಳಿದ್ದರೂ ಕೇಳುವುದಿಲ್ಲ.
ಸತ್ಯವಿದ್ದರೂ ನೋಡಬಯಸರು.
ಅಲ್ಲದಿದ್ದರೆ ಇವರು
ಕಣ್ಣಾರೆ ಕಂಡು,
ಕಿವಿಯಾರೆ ಕೇಳಿ,
ಮನಸಾರೆ ಗ್ರಹಿಸಿಕೊಂಡು
ನನ್ನತ್ತ ತಿರುಗಿಕೊಳ್ಳುತ್ತಿದ್ದರು; ನನ್ನಿಂದ ಗುಣಹೊಂದುತ್ತಿದ್ದರು.’(A)
28 “ದೇವರು ತನ್ನ ರಕ್ಷಣೆಯನ್ನು ಯೆಹೂದ್ಯರಲ್ಲದವರಿಗೆ ಕಳುಹಿಸಿದ್ದಾನೆ. ಅವರು ಅದಕ್ಕೆ ಕಿವಿಗೊಡುವರು. ಯೆಹೂದ್ಯರಾದ ನಿಮಗೆ ಇದು ತಿಳಿದಿರಲಿ!” 29 [e]
30 ಪೌಲನು ತನ್ನ ಬಾಡಿಗೆ ಮನೆಯಲ್ಲಿ ಎರಡು ವರ್ಷಗಳವರೆಗೆ ವಾಸವಾಗಿದ್ದನು. ತನ್ನನ್ನು ಸಂದರ್ಶಿಸಲು ಬಂದ ಜನರೆಲ್ಲರನ್ನು ಆದರದಿಂದ ಬರಮಾಡಿಕೊಂಡು, 31 ದೇವರ ರಾಜ್ಯದ ಬಗ್ಗೆ ಬೋಧಿಸುತ್ತಿದ್ದನು; ಪ್ರಭು ಯೇಸುಕ್ರಿಸ್ತನ ಬಗ್ಗೆ ಉಪದೇಶಿಸುತ್ತಿದ್ದನು; ಬಹು ಧೈರ್ಯದಿಂದ ಮಾತಾಡುತ್ತಿದ್ದನು. ಅವನಿಗೆ ಅಡ್ಡಿಮಾಡಲು ಯಾರೂ ಪ್ರಯತ್ನಿಸಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International