Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 27

ಯಾಕೋಬನು ಇಸಾಕನಿಗೆ ಮಾಡಿದ ಮೋಸ

27 ಇಸಾಕನು ಮುದುಕನಾದಾಗ ಅವನಿಗೆ ಕಣ್ಣುಗಳು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಒಂದು ದಿನ ಅವನು ತನ್ನ ಹಿರಿಮಗನಾದ ಏಸಾವನನ್ನು ತನ್ನ ಬಳಿಗೆ ಕರೆದು ಅವನಿಗೆ, “ಮಗನೇ” ಅಂದನು.

ಏಸಾವನು, “ಇಗೋ ಇದ್ದೇನೆ” ಎಂದು ಉತ್ತರಿಸಿದನು.

ಇಸಾಕನು ಅವನಿಗೆ, “ನನಗೆ ವಯಸ್ಸಾಯಿತು. ನಾನು ಬಹುಬೇಗನೆ ಸಾಯಬಹುದು. ಆದ್ದರಿಂದ ನಿನ್ನ ಬಿಲ್ಲುಬಾಣಗಳನ್ನು ತೆಗೆದುಕೊಂಡು ಬೇಟೆಗೆ ಹೋಗು. ನನಗೋಸ್ಕರ ಒಂದು ಪ್ರಾಣಿಯನ್ನು ಬೇಟೆಯಾಡಿಕೊಂಡು ಬಂದು ನನಗೆ ಇಷ್ಟವಾದ ಅಡಿಗೆಯನ್ನು ತಯಾರಿಸಿ ತೆಗೆದುಕೊಂಡು ಬಾ. ನಾನು ಸಾಯುವ ಮೊದಲೇ ನಿನ್ನನ್ನು ಆಶೀರ್ವದಿಸುವೆನು” ಎಂದು ಹೇಳಿದನು. ಆದ್ದರಿಂದ ಏಸಾವನು ಬೇಟೆಗಾಗಿ ಹೋದನು.

ಇಸಾಕನು ತನ್ನ ಮಗನಾದ ಏಸಾವನಿಗೆ ಹೇಳಿದ ಈ ವಿಷಯಗಳನ್ನೆಲ್ಲ ರೆಬೆಕ್ಕಳು ಕೇಳಿಸಿಕೊಂಡಳು. ರೆಬೆಕ್ಕಳು ತನ್ನ ಮಗನಾದ ಯಾಕೋಬನಿಗೆ, “ಕೇಳು, ನಿನ್ನ ತಂದೆಯು ನಿನ್ನ ಅಣ್ಣನಾದ ಏಸಾವನೊಡನೆ ಮಾತಾಡುತ್ತಿರುವುದನ್ನು ನಾನು ಕೇಳಿಸಿಕೊಂಡೆ. ನಿನ್ನ ತಂದೆ ಅವನಿಗೆ, ‘ನನಗೋಸ್ಕರ ಒಂದು ಪ್ರಾಣಿಯನ್ನು ಬೇಟೆಯಾಡಿಕೊಂಡು ಬಂದು ನನಗೆ ಇಷ್ಟವಾದ ಅಡಿಗೆಯನ್ನು ತಯಾರಿಸಿ ತೆಗೆದುಕೊಂಡು ಬಾ. ನಾನು ಸಾಯುವ ಮೊದಲೇ ನಿನ್ನನ್ನು ಆಶೀರ್ವದಿಸುವೆನು’ ಎಂದು ಹೇಳಿದನು. ಆದ್ದರಿಂದ ಮಗನೇ, ನನ್ನ ಮಾತನ್ನು ಕೇಳು ಮತ್ತು ನಾನು ಹೇಳಿದ್ದನ್ನು ಮಾಡು. ನಮ್ಮ ಆಡುಗಳ ಬಳಿಗೆ ಹೋಗಿ ಎರಡು ಆಡುಮರಿಗಳನ್ನು ತೆಗೆದುಕೊಂಡು ಬಾ. ನಿಮ್ಮ ತಂದೆಗೆ ಇಷ್ಟವಾದ ಅಡಿಗೆಯನ್ನು ನಾನು ಅವುಗಳ ಮಾಂಸದಿಂದ ಸಿದ್ಧಪಡಿಸುವೆ. 10 ನೀನು ಆ ಅಡಿಗೆಯನ್ನು ನಿನ್ನ ತಂದೆಗೆ ತೆಗೆದುಕೊಂಡು ಹೋಗು. ಆಗ ಅವನು ತಾನು ಸಾಯುವ ಮೊದಲೇ ನಿನ್ನನ್ನು ಆಶೀರ್ವದಿಸುವನು” ಅಂದಳು.

11 ಅದಕ್ಕೆ ಯಾಕೋಬನು ತನ್ನ ತಾಯಿಯಾದ ರೆಬೆಕ್ಕಳಿಗೆ, “ನನ್ನ ಅಣ್ಣನಾದ ಏಸಾವನಿಗೆ ಮೈತುಂಬ ರೋಮಗಳಿವೆ, ಆದರೆ ನನಗೆ ರೋಮಗಳಿಲ್ಲ. 12 ನನ್ನ ತಂದೆ ನನ್ನನ್ನು ಮುಟ್ಟಿದರೆ, ನಾನು ಏಸಾವನಲ್ಲವೆಂದು ತಿಳಿದುಕೊಳ್ಳುವನು. ಆಗ ಅವನು ನನ್ನನ್ನು ಆಶೀರ್ವದಿಸುವುದಿಲ್ಲ. ನಾನು ಅವನನ್ನು ಮೋಸಗೊಳಿಸಲು ಪ್ರಯತ್ನಿಸಿದ್ದರಿಂದ ಅವನು ನನ್ನನ್ನು ಶಪಿಸುವನು” ಎಂದು ಹೇಳಿದನು.

13 ಅದಕ್ಕೆ ರೆಬೆಕ್ಕಳು ಅವನಿಗೆ, “ಅವನು ನಿನಗೆ ಶಾಪಕೊಟ್ಟರೆ, ಆ ಶಾಪವು ನನಗಾಗಲಿ. ನಾನು ಹೇಳಿದಂತೆ ಮಾಡು. ನನಗೋಸ್ಕರ ಆಡುಗಳನ್ನು ತೆಗೆದುಕೊಂಡು ಬಾ” ಎಂದು ಹೇಳಿದಳು.

14 ಆದ್ದರಿಂದ ಯಾಕೋಬನು ಹೋಗಿ ಎರಡು ಆಡುಗಳನ್ನು ತೆಗೆದುಕೊಂಡು ಬಂದನು. ಇಸಾಕನಿಗೆ ಇಷ್ಟವಾದ ರುಚಿಕರವಾದ ಪದಾರ್ಥಗಳನ್ನು ಆಕೆ ಅವುಗಳ ಮಾಂಸದಿಂದ ತಯಾರಿಸಿದಳು. 15 ಅನಂತರ ರೆಬೆಕ್ಕಳು ತನ್ನ ಹಿರಿಯ ಮಗನಾದ ಏಸಾವನಿಗೆ ಇಷ್ಟವಾದ ಉಡುಪನ್ನು ತೆಗೆದುಕೊಂಡಳು. ರೆಬೆಕ್ಕಳು ಆ ಉಡುಪನ್ನು ತನ್ನ ಕಿರಿಮಗನಾದ ಯಾಕೋಬನಿಗೆ ತೊಡಿಸಿದಳು. 16 ಆಡುಗಳ ಚರ್ಮವನ್ನು ಯಾಕೋಬನ ಕೈಗಳಿಗೂ ಕೊರಳಿಗೂ ಸುತ್ತಿದಳು. 17 ಅನಂತರ ಆಕೆ ತಾನು ಸಿದ್ಧಪಡಿಸಿದ್ದ ಅಡಿಗೆಯನ್ನು ಯಾಕೋಬನಿಗೆ ಕೊಟ್ಟಳು.

18 ಯಾಕೋಬನು ತನ್ನ ತಂದೆಯ ಬಳಿಗೆ ಹೋಗಿ, “ಅಪ್ಪಾ” ಎಂದು ಕರೆದನು.

ಅವನ ತಂದೆ, “ಏನು ಮಗನೇ, ನೀನು ಯಾರು?” ಎಂದು ಕೇಳಿದನು.

19 ಯಾಕೋಬನು ತನ್ನ ತಂದೆಗೆ, “ನಾನು ಏಸಾವ, ನಿನ್ನ ಮೊದಲನೆ ಮಗ. ನೀನು ಹೇಳಿದಂತೆ ನಾನು ಮಾಡಿಕೊಂಡು ಬಂದಿದ್ದೇನೆ. ನಾನು ನಿನಗೋಸ್ಕರ ಬೇಟೆಯಾಡಿದ ಪ್ರಾಣಿಯ ಮಾಂಸವನ್ನು ಕುಳಿತುಕೊಂಡು ತಿನ್ನು. ಅನಂತರ ನೀನು ನನ್ನನ್ನು ಆಶೀರ್ವದಿಸಬಹುದು” ಎಂದು ಹೇಳಿದನು.

20 ಆದರೆ ಇಸಾಕನು ತನ್ನ ಮಗನಿಗೆ, “ನೀನು ಇಷ್ಟು ಬೇಗನೆ ಬೇಟೆಯಾಡಿಕೊಂಡು ಬಂದೆಯಾ?” ಎಂದು ಕೇಳಿದನು.

ಅದಕ್ಕೆ ಯಾಕೋಬನು, “ನಾನು ಬಹುಬೇಗನೆ ಪ್ರಾಣಿಗಳನ್ನು ಕಂಡುಕೊಳ್ಳುವಂತೆ ನಿನ್ನ ದೇವರಾದ ಯೆಹೋವನು ಸಹಾಯ ಮಾಡಿದನು” ಎಂದು ಉತ್ತರಿಸಿದನು.

21 ಬಳಿಕ ಇಸಾಕನು ಯಾಕೋಬನಿಗೆ, “ನನ್ನ ಬಳಿಗೆ ಬಾ, ನನ್ನ ಮಗನನ್ನು ನಾನು ಮುಟ್ಟಿ ತಿಳಿದುಕೊಳ್ಳಬಲ್ಲೆ. ನಾನು ನಿನ್ನನ್ನು ಮುಟ್ಟಿದರೆ, ನೀನು ನಿಜವಾಗಿಯೂ ನನ್ನ ಮಗನಾದ ಏಸಾವನೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಲ್ಲೆ” ಎಂದು ಹೇಳಿದನು.

22 ಆದ್ದರಿಂದ ಯಾಕೋಬನು ತನ್ನ ತಂದೆಯಾದ ಇಸಾಕನ ಬಳಿಗೆ ಹೋದನು. ಇಸಾಕನು ಅವನನ್ನು ಮುಟ್ಟಿ, “ನಿನ್ನ ಸ್ವರ ಯಾಕೋಬನ ಸ್ವರವಿದ್ದಂತಿದೆ. ಆದರೆ ನಿನ್ನ ಕೈಗಳು ಏಸಾವನ ಕೈಗಳಂತೆ ರೋಮದಿಂದ ಕೂಡಿವೆ” ಅಂದನು. 23 ಅವನು ಯಾಕೋಬನೆಂಬುದು ಇಸಾಕನಿಗೆ ತಿಳಿಯಲಿಲ್ಲ. ಯಾಕೆಂದರೆ ಅವನ ಕೈಗಳು ಏಸಾವನ ಕೈಗಳಂತೆ ರೋಮದಿಂದ ಕೂಡಿದ್ದವು. ಆದ್ದರಿಂದ ಇಸಾಕನು ಯಾಕೋಬನನ್ನು ಆಶೀರ್ವದಿಸಿದನು.

24 ಇಸಾಕನು ಅವನಿಗೆ, “ನೀನು ನಿಜವಾಗಿಯೂ ನನ್ನ ಮಗನಾದ ಏಸಾವನೋ?” ಎಂದು ಕೇಳಿದನು.

ಅದಕ್ಕೆ ಯಾಕೋಬನು, “ಹೌದು, ನಾನೇ” ಎಂದು ಉತ್ತರಕೊಟ್ಟನು.

ಯಾಕೋಬನಿಗೆ ಆಶೀರ್ವಾದ

25 ಆಗ ಇಸಾಕನು, “ಊಟವನ್ನು ತೆಗೆದುಕೊಂಡು ಬಾ. ನಾನು ಊಟಮಾಡಿ ನಿನ್ನನ್ನು ಆಶೀರ್ವದಿಸುವೆನು” ಎಂದು ಹೇಳಿದನು. ಅಂತೆಯೇ ಯಾಕೋಬನು ಊಟವನ್ನು ತಂದು ಕೊಟ್ಟಾಗ ಊಟಮಾಡಿದನು; ದ್ರಾಕ್ಷಾರಸವನ್ನು ಕುಡಿದನು.

26 ಬಳಿಕ ಇಸಾಕನು ಅವನಿಗೆ, “ಮಗನೇ, ನನ್ನ ಬಳಿಗೆ ಬಂದು ನನಗೆ ಮುದ್ದಿಡು” ಅಂದನು. 27 ಅದರಂತೆಯೇ ಯಾಕೋಬನು ತಂದೆಯ ಬಳಿಗೆ ಹೋಗಿ ಅವನಿಗೆ ಮುದ್ದಿಟ್ಟನು. ಇಸಾಕನು ಅವನ ಉಡುಪಿನ ವಾಸನೆಯನ್ನು ನೋಡಿ ಅವನನ್ನು ಹೀಗೆ ಆಶೀರ್ವದಿಸಿದನು:

“ನನ್ನ ಮಗನ ಸುವಾಸನೆಯು
    ಯೆಹೋವನು ಆಶೀರ್ವದಿಸಿದ ಪ್ರದೇಶಗಳಂತಿದೆ.
28 ಯೆಹೋವನು ನಿನಗೆ ಬೇಕಾದಷ್ಟು ಮಳೆಯನ್ನು ಕೊಡಲಿ;
    ನಿನಗೆ ಸಾರವುಳ್ಳ ಭೂಮಿಯೂ ಮಹಾಸುಗ್ಗಿಗಳೂ ಮತ್ತು ದ್ರಾಕ್ಷಾರಸವೂ ದೊರೆಯಲಿ.
29 ಎಲ್ಲಾ ಜನರು ನಿನ್ನ ಸೇವೆಮಾಡಲಿ;
    ಜನಾಂಗಗಳು ನಿನಗೆ ತಲೆಬಾಗಲಿ.
ನೀನು ನಿನ್ನ ಸಹೋದರರ ಮೇಲೆ ಆಡಳಿತ ಮಾಡುವೆ.
    ನಿನ್ನ ತಾಯಿಯ ಗಂಡುಮಕ್ಕಳು ನಿನಗೆ ತಲೆಬಾಗಿ ವಿಧೇಯರಾಗುವರು.
ನಿನ್ನನ್ನು ಶಪಿಸುವ ಪ್ರತಿಯೊಬ್ಬನು ಶಾಪಗ್ರಸ್ಥನಾಗುವನು.
    ನಿನ್ನನ್ನು ಆಶೀರ್ವದಿಸುವ ಪ್ರತಿಯೊಬ್ಬನು ಆಶೀರ್ವದಿಸಲ್ಪಡುವನು.”

ಏಸಾವನ “ಆಶೀರ್ವಾದ”

30 ಇಸಾಕನು ಯಾಕೋಬನನ್ನು ಆಶೀರ್ವದಿಸಿದ ಬಳಿಕ ಯಾಕೋಬನು ತನ್ನ ತಂದೆಯಾದ ಇಸಾಕನ ಬಳಿಯಿಂದ ಹೊರಟುಹೋಗುವಷ್ಟರಲ್ಲಿ ಏಸಾವನು ಬೇಟೆಯಿಂದ ಬಂದನು. 31 ಏಸಾವನು ಸಹ ತನ್ನ ತಂದೆಗೆ ಇಷ್ಟವಾದ ರೀತಿಯಲ್ಲಿ ವಿಶೇಷವಾದ ಆಹಾರವನ್ನು ಸಿದ್ಧಪಡಿಸಿ ತನ್ನ ತಂದೆಯ ಬಳಿಗೆ ತೆಗೆದುಕೊಂಡು ಬಂದನು. ಅವನು ತನ್ನ ತಂದೆಗೆ, “ಅಪ್ಪಾ ಎದ್ದೇಳು, ನಿನಗೋಸ್ಕರ ನಿನ್ನ ಮಗನು ಬೇಟೆಯಾಡಿದ ಪ್ರಾಣಿಯ ಮಾಂಸವನ್ನು ತಿನ್ನು, ನಂತರ ನೀನು ನನ್ನನ್ನು ಆಶೀರ್ವದಿಸಬಹುದು” ಎಂದು ಹೇಳಿದನು.

32 ಇಸಾಕನು ಅವನಿಗೆ, “ನೀನು ಯಾರು?” ಎಂದು ಕೇಳಿದನು.

ಅವನು, “ನಾನು ನಿನ್ನ ಹಿರಿಯಮಗನಾದ ಏಸಾವ” ಎಂದು ಹೇಳಿದನು.

33 ಆಗ ಇಸಾಕನು ತುಂಬ ವ್ಯಸನಗೊಂಡು ಗಡಗಡನೆ ನಡುಗುತ್ತಾ ಅವನಿಗೆ, “ನೀನು ಬರುವುದಕ್ಕಿಂತ ಮೊದಲೇ ಅಡಿಗೆಯನ್ನು ಸಿದ್ಧಪಡಿಸಿ ನನಗೆ ತಂದುಕೊಟ್ಟವನು ಯಾರು? ನಾನು ಅದನ್ನೆಲ್ಲ ತಿಂದು ಅವನನ್ನು ಆಶೀರ್ವದಿಸಿದೆನು. ಈಗ ನನ್ನ ಆಶೀರ್ವಾದವನ್ನು ಹಿಂತೆಗೆದುಕೊಳ್ಳಲಾಗದು” ಎಂದು ಹೇಳಿದನು.

34 ಏಸಾವನು ತನ್ನ ತಂದೆಯ ಮಾತುಗಳನ್ನು ಕೇಳಿ ತುಂಬ ಕೋಪಗೊಂಡನು; ವ್ಯಥೆಪಟ್ಟನು; ಗೋಳಾಡಿದನು. ಅವನು ತನ್ನ ತಂದೆಗೆ, “ಹಾಗಾದರೆ, ನನ್ನನ್ನೂ ಆಶೀರ್ವದಿಸಪ್ಪಾ” ಎಂದು ಹೇಳಿದನು.

35 ಇಸಾಕನು, “ನಿನ್ನ ತಮ್ಮನು ನನ್ನನ್ನು ಮೋಸಗೊಳಿಸಿದನು; ಅವನು ಬಂದು ನಿನ್ನ ಆಶೀರ್ವಾದವನ್ನು ತೆಗೆದುಕೊಂಡನು” ಎಂದು ಹೇಳಿದನು.

36 ಏಸಾವನು, “ಅವನ ಹೆಸರು ಯಾಕೋಬ (ಮೋಸಗಾರ). ಅದೇ ಅವನಿಗೆ ಸರಿಯಾದ ಹೆಸರು. ಅವನು ಎರಡು ಸಲ ನನಗೆ ಮೋಸಮಾಡಿದನು. ನನ್ನ ಚೊಚ್ಚಲತನದ ಹಕ್ಕನ್ನು ತೆಗೆದುಕೊಂಡನು. ಈಗ ನನ್ನ ಆಶೀರ್ವಾದವನ್ನೂ ತೆಗೆದುಕೊಂಡನು” ಎಂದು ಹೇಳಿದನು. ನಂತರ ಏಸಾವನು, “ನನಗೋಸ್ಕರ ಯಾವ ಆಶೀರ್ವಾದವೂ ಉಳಿದಿಲ್ಲವೆ?” ಎಂದು ಕೇಳಿದನು.

37 ಇಸಾಕನು, “ಇಲ್ಲ, ತುಂಬ ತಡವಾಯಿತು. ನಿನ್ನ ಮೇಲೆ ಆಡಳಿತ ಮಾಡುವ ಅಧಿಕಾರವನ್ನು ನಾನು ಯಾಕೋಬನಿಗೆ ಕೊಟ್ಟಿದ್ದೇನೆ. ಅವನ ಸಹೋದರರೆಲ್ಲ ಅವನಿಗೆ ಸೇವಕರಾಗಿರುವರು ಎಂದು ನಾನು ಹೇಳಿದ್ದೇನೆ. ಅವನಿಗೆ ಬೇಕಾದಷ್ಟು ದವಸಧಾನ್ಯಗಳೂ ದ್ರಾಕ್ಷಾರಸವೂ ದೊರೆಯುವಂತೆ ಆಶೀರ್ವಾದ ಮಾಡಿದ್ದೇನೆ. ನಿನಗೆ ಕೊಡಲು ನನ್ನಲ್ಲಿ ಏನೂ ಉಳಿದಿಲ್ಲ ಮಗನೇ” ಎಂದು ಹೇಳಿದನು.

38 ಆದರೆ ಏಸಾವನು ತನ್ನ ತಂದೆಯನ್ನು ಮತ್ತೆ ಬೇಡತೊಡಗಿದನು. “ಅಪ್ಪಾ ನನಗಾಗಿ ಒಂದಾದರೂ ಆಶೀರ್ವಾದವಿಲ್ಲವೇ? ಅಪ್ಪಾ, ನನ್ನನ್ನು ಸಹ ಆಶೀರ್ವದಿಸು” ಎಂದು ಏಸಾವನು ಅಳಲಾರಂಭಿಸಿದನು.

39 ಆಗ ಇಸಾಕನು ಅವನಿಗೆ ಹೀಗೆ ಹೇಳಿದನು:

“ನೀನು ಒಳ್ಳೆಯ ಪ್ರದೇಶದಲ್ಲಿ ಜೀವಿಸುವುದಿಲ್ಲ.
    ನಿನಗೆ ಬೇಕಾದಷ್ಟು ಇಬ್ಬನಿ ಇರುವುದಿಲ್ಲ.
40 ನೀನು ಕತ್ತಿಯಿಂದಲೇ ಜೀವಿಸುವೆ.
    ನೀನು ನಿನ್ನ ತಮ್ಮನ ಸೇವಕನಾಗಿರುವೆ.
ಆದರೆ ನೀನು ಬಿಡುಗಡೆಯಾಗಲು ಹೋರಾಡಿ
    ಅವನ ಹಿಡಿತದಿಂದ ಪಾರಾಗುವೆ.”

41 ಅಂದಿನಿಂದ ಏಸಾವನು ಯಾಕೋಬನನ್ನು ದ್ವೇಷಿಸಿದನು. ಏಸಾವನು ತನ್ನೊಳಗೆ, “ನನ್ನ ತಂದೆ ಬಹುಬೇಗನೆ ಸತ್ತುಹೋಗುವನು. ಆಗ ನಾನು ಅವನಿಗಾಗಿ ದುಃಖಿಸಿ ಆ ಬಳಿಕ ಯಾಕೋಬನನ್ನು ಕೊಲ್ಲುವೆನು” ಅಂದುಕೊಂಡನು.

42 ಏಸಾವನು ಯಾಕೋಬನನ್ನು ಕೊಲ್ಲಬೇಕೆಂದಿರುವುದು ರೆಬೆಕ್ಕಳಿಗೆ ತಿಳಿಯಿತು. ಆಕೆ ಯಾಕೋಬನನ್ನು ಕರೆಸಿ ಅವನಿಗೆ, “ಕೇಳು, ನಿನ್ನ ಅಣ್ಣನಾದ ಏಸಾವನು ನಿನ್ನನ್ನು ಕೊಲ್ಲಬೇಕೆಂದಿದ್ದಾನೆ. 43 ಆದ್ದರಿಂದ ಮಗನೇ, ನಾನು ಹೇಳಿದಂತೆ ಮಾಡು. ನನ್ನ ಅಣ್ಣನಾದ ಲಾಬಾನನು ಹಾರಾನಿನಲ್ಲಿ ವಾಸವಾಗಿದ್ದಾನೆ. ಅವನ ಬಳಿಗೆ ಹೋಗಿ ಅಡಗಿಕೊ. 44 ನಿನ್ನ ಅಣ್ಣನ ಕೋಪ ತಣ್ಣಗಾಗುವವರೆಗೆ ನೀನು ಸ್ವಲ್ಪ ಕಾಲ ಅವನೊಂದಿಗಿರು. 45 ಸ್ವಲ್ಪ ಸಮಯದ ನಂತರ, ನೀನು ಮಾಡಿದ್ದನ್ನು ನಿನ್ನ ಅಣ್ಣನು ಮರೆತುಬಿಡುವನು. ಆಗ ನಿನ್ನನ್ನು ಅಲ್ಲಿಂದ ಕರೆದುಕೊಂಡು ಬರಲು ನಾನು ಒಬ್ಬ ಸೇವಕನನ್ನು ಅಲ್ಲಿಗೆ ಕಳುಹಿಸಿಕೊಡುವೆನು. ಒಂದೇ ದಿನದಲ್ಲಿ, ನನ್ನ ಇಬ್ಬರು ಗಂಡುಮಕ್ಕಳನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ” ಎಂದು ಹೇಳಿದಳು.

46 ನಂತರ ರೆಬೆಕ್ಕಳು ಇಸಾಕನಿಗೆ, “ನಿನ್ನ ಮಗನಾದ ಏಸಾವನು ಹಿತ್ತಿಯರ ಸ್ತ್ರೀಯರನ್ನು ಮದುವೆ ಮಾಡಿಕೊಂಡಿದ್ದಾನೆ. ಆ ಸ್ತ್ರೀಯರಿಂದ ನನಗೆ ಸಾಕಾಗಿ ಹೋಗಿದೆ; ಯಾಕೆಂದರೆ ಅವರು ನಮ್ಮ ಜನರಲ್ಲ. ಯಾಕೋಬನು ಸಹ ಇಂಥ ಸ್ತ್ರೀಯರಲ್ಲಿ ಒಬ್ಬಳನ್ನು ಮದುವೆ ಮಾಡಿಕೊಂಡರೆ ನಾನು ಸಾಯುವುದೇ ಮೇಲು” ಎಂದು ಹೇಳಿದಳು.

ಮತ್ತಾಯ 26

ಯೇಸುವನ್ನು ಕೊಲ್ಲಲು ಯೆಹೂದ್ಯ ನಾಯಕರ ಆಲೋಚನೆ

(ಮಾರ್ಕ 14:1-2; ಲೂಕ 22:1-2; ಯೋಹಾನ 11:45-53)

26 ಯೇಸು ಈ ಸಂಗತಿಗಳನ್ನೆಲ್ಲಾ ಹೇಳಿ ಮುಗಿಸಿದ ನಂತರ, ತನ್ನ ಶಿಷ್ಯರಿಗೆ, “ನಾಳಿದ್ದು ಪಸ್ಕಹಬ್ಬವೆಂಬುದು ನಿಮಗೆ ತಿಳಿದಿದೆ. ಅಂದು ಮನುಷ್ಯಕುಮಾರನನ್ನು ಶಿಲುಬೆಗೇರಿಸಲು ವೈರಿಗಳಿಗೆ ಒಪ್ಪಿಸುವರು” ಎಂದನು.

ಇತ್ತ ಮಹಾಯಾಜಕರು ಮತ್ತು ಹಿರಿಯ ಯೆಹೂದ್ಯ ನಾಯಕರು, ಪ್ರಧಾನಯಾಜಕನ ಭವನದಲ್ಲಿ ಸಭೆ ಸೇರಿದರು. ಪ್ರಧಾನಯಾಜಕನ ಹೆಸರು ಕಾಯಫ. ಆ ಸಭೆಯಲ್ಲಿ ಅವರು ಯೇಸುವನ್ನು ಉಪಾಯದಿಂದ ಬಂಧಿಸಿ ಕೊಲ್ಲಲು ಸಮಾಲೋಚಿಸಿದರು. ಆದರೆ ಸಭಿಕರು, “ನಾವು ಪಸ್ಕಹಬ್ಬದ ಕಾಲದಲ್ಲಿ ಯೇಸುವನ್ನು ಬಂಧಿಸಲು ಸಾಧ್ಯವಿಲ್ಲ. ಏಕೆಂದರೆ ಜನರು ಕೋಪಗೊಂಡು ದಂಗೆ ಏಳಬಹುದು” ಎಂದು ಹೇಳಿದರು.

ಸ್ತ್ರೀಯೊಬ್ಬಳು ಮಾಡಿದ ವಿಶೇಷ ಕಾರ್ಯ

(ಮಾರ್ಕ 14:9; ಯೋಹಾನ 12:1-8)

ಯೇಸು ಬೆಥಾನಿಯಲ್ಲಿದ್ದಾಗ ಸಿಮೋನ ಎಂಬ ಕುಷ್ಠರೋಗಿಯ ಮನೆಯಲ್ಲಿದ್ದನು. ಆಗ ಸ್ತ್ರೀಯೊಬ್ಬಳು ಬಹು ಬೆಲೆಬಾಳುವ ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಬಂದು ಊಟಕ್ಕೆ ಕುಳಿತ್ತಿದ್ದ ಯೇಸುವಿನ ತಲೆಯ ಮೇಲೆ ಆ ಸುಗಂಧ ತೈಲವನ್ನು ಸುರಿದಳು.

ಇದನ್ನು ನೋಡಿದ ಶಿಷ್ಯರು ಆ ಸ್ತ್ರೀಯ ಮೇಲೆ ಕೋಪಗೊಂಡು, “ಆ ಸುಗಂಧತೈಲವನ್ನು ಏಕೆ ಹಾಳು ಮಾಡಿದೆ? ಅದನ್ನು ಬಹಳ ಹಣಕ್ಕೆ ಮಾರಿ ಬಡ ಜನರಿಗೆ ಕೊಡಬಹುದಾಗಿತ್ತಲ್ಲಾ” ಎಂದರು.

10 ಆದರೆ ಈ ಘಟನೆಗೆ ಕಾರಣವನ್ನು ತಿಳಿದಿದ್ದ ಯೇಸು ತನ್ನ ಶಿಷ್ಯರಿಗೆ, “ಈ ಸ್ತ್ರೀಗೆ ಏಕೆ ತೊಂದರೆ ಕೊಡುತ್ತೀರಿ? ಆಕೆಯು ನನಗೆ ಬಹಳ ಒಳ್ಳೆಯ ಕಾರ್ಯವನ್ನು ಮಾಡಿದಳು. 11 ಬಡಜನರು ನಿಮ್ಮೊಂದಿಗೆ ಯಾವಾಗಲೂ ಇರುತ್ತಾರೆ. ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ. 12 ನಾನು ಸತ್ತನಂತರ ನನ್ನನ್ನು ಸಮಾಧಿಗೆ ಸಿದ್ಧಪಡಿಸುವುದಕ್ಕಾಗಿ ಈ ಸ್ತ್ರೀಯು ನನ್ನ ದೇಹದ ಮೇಲೆ ಸುಗಂಧತೈಲವನ್ನು ಸುರಿದಳು. 13 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಪ್ರಪಂಚದಾದ್ಯಂತ ಎಲ್ಲೆಲ್ಲಿ ಸುವಾರ್ತೆಯನ್ನು ತಿಳಿಸಲಾಗುವುದೋ ಅಲ್ಲೆಲ್ಲಾ ಈ ಕಾರ್ಯವನ್ನು ಈಕೆಯ ನೆನಪಿಗಾಗಿ ತಿಳಿಸಲಾಗುವುದು” ಎಂದು ಹೇಳಿದನು.

ಯೇಸುವಿನ ಶತ್ರು ಯೂದ

(ಮಾರ್ಕ 14:10-11; ಲೂಕ 22:3-6)

14 ನಂತರ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನು ಮಹಾಯಾಜಕರ ಬಳಿಗೆ ಹೋಗಿ, 15 “ಯೇಸುವನ್ನು ನಿಮಗೆ ಹಿಡಿದುಕೊಟ್ಟರೆ ನೀವು ನನಗೆ ಎಷ್ಟು ಹಣ ಕೊಡುವಿರಿ?” ಎಂದು ಕೇಳಿದನು. ಮಹಾಯಾಜಕರು ಮೂವತ್ತು ಬೆಳ್ಳಿಯ ನಾಣ್ಯಗಳನ್ನು ಯೂದನಿಗೆ ಕೊಟ್ಟರು. 16 ಅಂದಿನಿಂದ ಯೇಸುವನ್ನು ಹಿಡಿದುಕೊಡಲು ಯೂದನು ಸಮಯ ಕಾಯುತ್ತಿದ್ದನು.

ಪಸ್ಕಹಬ್ಬದ ಆಚರಣೆಗೆ ಸಿದ್ಧತೆ

(ಮಾರ್ಕ 14:21-22; ಲೂಕ 22:7-14,21-23; ಯೋಹಾನ 13:21-30)

17 ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನದಂದು ಶಿಷ್ಯರು ಯೇಸುವಿನ ಬಳಿಗೆ ಬಂದು, “ನಾವು ನಿನಗಾಗಿ ಪಸ್ಕಹಬ್ಬದ ಊಟವನ್ನು ಎಲ್ಲಿ ಸಿದ್ಧಪಡಿಸಬೇಕು?” ಎಂದು ಕೇಳಿದರು.

18 ಅದಕ್ಕೆ ಯೇಸು, “ನೀವು ನಗರಕ್ಕೆ ಹೋಗಿ ನಾನು ಸೂಚಿಸುವ ವ್ಯಕ್ತಿಯನ್ನು ಭೇಟಿಮಾಡಿ ಅವನಿಗೆ, ‘ಆರಿಸಿಕೊಂಡ ಸಮಯ ಸಮೀಪಿಸಿತು. ನಾನು ಪಸ್ಕಹಬ್ಬದ ಊಟವನ್ನು ನಿನ್ನ ಮನೆಯಲ್ಲಿ ನನ್ನ ಶಿಷ್ಯರೊಂದಿಗೆ ಮಾಡುತ್ತೇನೆ ಎಂದು ಉಪದೇಶಕನು ಹೇಳುತ್ತಾನೆ’ ಎಂಬುದಾಗಿ ತಿಳಿಸಿರಿ” ಎಂದು ಉತ್ತರಕೊಟ್ಟನು. 19 ಯೇಸು ಹೇಳಿದಂತೆಯೇ ಶಿಷ್ಯರು ಮಾಡಿ ಪಸ್ಕಹಬ್ಬದ ಊಟವನ್ನು ಏರ್ಪಡಿಸಿದರು.

20 ಸಾಯಂಕಾಲದಲ್ಲಿ ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರೊಂದಿಗೆ ಊಟಕ್ಕೆ ಕುಳಿತಿದ್ದನು. 21 ಅವರೆಲ್ಲರೂ ಊಟ ಮಾಡುತ್ತಿದ್ದಾಗ ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಇಲ್ಲಿರುವ ಹನ್ನೆರಡು ಮಂದಿಯಲ್ಲಿ ಒಬ್ಬನು ನನ್ನನ್ನು ವೈರಿಗಳಿಗೆ ಒಪ್ಪಿಸುತ್ತಾನೆ” ಎಂದು ಹೇಳಿದನು.

22 ಶಿಷ್ಯರು ಇದನ್ನು ಕೇಳಿ ಬಹಳ ದುಃಖಪಟ್ಟರು. ಪ್ರತಿಯೊಬ್ಬ ಶಿಷ್ಯನು ಯೇಸುವಿಗೆ, “ಪ್ರಭುವೇ, ನಿಜವಾಗಿಯೂ ನಾನಲ್ಲ!” ಎಂದು ಹೇಳಿದರು.

23 ಯೇಸು, “ಬಟ್ಟಲಲ್ಲಿ ನನ್ನ ಸಂಗಡ ತನ್ನ ಕೈಗಳನ್ನು ಅದ್ದುವವನೇ ನನಗೆ ವಿರೋಧವಾಗಿದ್ದಾನೆ. 24 ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ ಮನುಷ್ಯಕುಮಾರನು ಹೊರಟುಹೋಗಿ ಮರಣ ಹೊಂದುತ್ತಾನೆ. ಆದರೆ ಆತನನ್ನು ಕೊಲ್ಲಲು ಒಪ್ಪಿಸುವವನಿಗೆ ಬಹಳ ಕೇಡಾಗುತ್ತದೆ. ಅವನು ಹುಟ್ಟದೆ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!” ಎಂದು ಹೇಳಿದನು.

25 ಆಗ, ಯೇಸುವನ್ನು ಆತನ ಶತ್ರುಗಳಿಗೆ ಒಪ್ಪಿಸಿಕೊಡಲಿದ್ದ ಯೂದನು, “ಗುರುವೇ, ನಿನಗೆ ವಿರೋಧವಾಗಿರುವವನು ನಾನಲ್ಲ ತಾನೇ?” ಎಂದನು.

ಅದಕ್ಕೆ ಯೇಸು, “ಹೌದು, ಅವನು ನೀನೇ?” ಎಂದು ಉತ್ತರಿಸಿದನು.

ಪ್ರಭುವಿನ ಭೋಜನ

(ಮಾರ್ಕ 14:22-26; ಲೂಕ 22:15-20; 1 ಕೊರಿಂಥ. 11:23-25)

26 ಅವರು ಊಟಮಾಡುತ್ತಿದ್ದಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು ಅದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು, “ತೆಗೆದುಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ” ಎಂದು ಹೇಳಿ ತನ್ನ ಶಿಷ್ಯರಿಗೆ ಕೊಟ್ಟನು.

27 ನಂತರ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು ಅದಕ್ಕಾಗಿ ದೇವರಿಗೆ ಸ್ತೋತ್ರಸಲ್ಲಿಸಿ, “ನೀವೆಲ್ಲರೂ ಇದನ್ನು ಕುಡಿಯಿರಿ. 28 ಇದು ಹೊಸ ಒಡಂಬಡಿಕೆಯನ್ನು ಸ್ಥಾಪಿಸುವ ನನ್ನ ರಕ್ತ. ಇದು ಅನೇಕ ಜನರ ಪಾಪಗಳ ಕ್ಷಮೆಗಾಗಿ ಸುರಿಸಲ್ಪಡುವ ರಕ್ತ. 29 ನಾನು ನನ್ನ ತಂದೆಯ ರಾಜ್ಯದಲ್ಲಿ ಮತ್ತೆ ಒಟ್ಟಾಗಿ ಸೇರಿ ದ್ರಾಕ್ಷಾರಸವನ್ನು ಹೊಸದಾಗಿ ಕುಡಿಯುವ ತನಕ ಅದನ್ನು ಇನ್ನು ಕುಡಿಯುವುದೇ ಇಲ್ಲ” ಎಂದು ಹೇಳಿ ಜನರಿಗೆ ಕುಡಿಯಲು ಕೊಟ್ಟನು.

30 ಆಗ ಶಿಷ್ಯರೆಲ್ಲರೂ ಪಸ್ಕಹಬ್ಬದ ಹಾಡನ್ನು ಹಾಡಿದರು. ಬಳಿಕ ಅವರು ಆಲಿವ್ ಗುಡ್ಡಕ್ಕೆ ಹೋದರು.

ಶಿಷ್ಯರ ವಿಶ್ವಾಸದ್ರೋಹದ ಮುನ್ಸೂಚನೆ

(ಮಾರ್ಕ 14:27-31; ಲೂಕ 22:31-34; ಯೋಹಾನ 13:36-38)

31 ಆಗ ಯೇಸು ತನ್ನ ಶಿಷ್ಯರಿಗೆ, “ಇಂದು ರಾತ್ರಿ ನೀವೆಲ್ಲರೂ ನನ್ನ ದೆಸೆಯಿಂದ ನಿಮ್ಮ ವಿಶ್ವಾಸವನ್ನು ಕಳೆದುಕೊಳ್ಳುವಿರಿ.

‘ನಾನು ಕುರುಬನನ್ನು ಕೊಲ್ಲುವೆನು,
    ಆಗ ಕುರಿಗಳೆಲ್ಲಾ ಚದರಿಹೋಗುತ್ತವೆ’(A)

ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. 32 ಆದರೆ ನಾನು ಸತ್ತಮೇಲೆ ಜೀವಂತನಾಗಿ ಎದ್ದುಬರುವೆನು. ನಂತರ ನಾನು ಗಲಿಲಾಯಕ್ಕೆ ಹೋಗುವೆನು. ನೀವು ಅಲ್ಲಿಗೆ ಹೋಗುವುದಕ್ಕಿಂತ ಮುಂಚೆಯೇ ನಾನು ಅಲ್ಲಿರುವೆನು” ಎಂದು ಹೇಳಿದನು.

33 ಪೇತ್ರನು, “ಉಳಿದ ಶಿಷ್ಯರೆಲ್ಲರೂ ನಿನ್ನ ದೆಸೆಯಿಂದ ತಮ್ಮ ವಿಶ್ವಾಸವನ್ನು ಕಳೆದುಕೊಳ್ಳಬಹುದು. ಆದರೆ ನಾನು ಮಾತ್ರ ಹಾಗೆ ಮಾಡುವುದಿಲ್ಲ” ಎಂದು ಉತ್ತರಕೊಟ್ಟನು.

34 ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಇಂದು ರಾತ್ರಿ ಕೋಳಿ ಕೂಗುವುದಕ್ಕಿಂತ ಮೊದಲು ನೀನು ನನ್ನ ವಿಷಯದಲ್ಲಿ ಆತನು ನನಗೆ ಗೊತ್ತೇ ಇಲ್ಲ ಎಂಬುದಾಗಿ ಮೂರು ಸಲ ಹೇಳುವೆ” ಅಂದನು.

35 ಆದರೆ ಪೇತ್ರನು, “ನಾನು ನಿನ್ನೊಂದಿಗೆ ಸತ್ತರೂ ಸರಿ, ನಿನ್ನನ್ನು ನಿರಾಕರಿಸುವುದಿಲ್ಲ” ಅಂದನು. ಉಳಿದ ಶಿಷ್ಯರು ಸಹ ಅದೇ ರೀತಿ ಹೇಳಿದರು.

ಯೇಸುವಿನ ಸಂಕಟದ ಪ್ರಾರ್ಥನೆ

(ಮಾರ್ಕ 14:32-42; ಲೂಕ 22:39-46)

36 ಅನಂತರ ಯೇಸು ತನ್ನ ಶಿಷ್ಯರೊಂದಿಗೆ ಗೆತ್ಸೆಮನೆ ಎಂಬ ಸ್ಥಳಕ್ಕೆ ಹೋದನು. ಯೇಸು ತನ್ನ ಶಿಷ್ಯರಿಗೆ, “ನಾನು ಅಲ್ಲಿಗೆ ಹೋಗಿ, ಪ್ರಾರ್ಥಿಸಿ ಬರುವ ತನಕ ಇಲ್ಲಿಯೇ ಇರಿ” ಎಂದು ಹೇಳಿದನು. 37 ಯೇಸುವು ಪೇತ್ರನನ್ನು ಮತ್ತು ಜೆಬೆದಾಯನ ಇಬ್ಬರು ಮಕ್ಕಳನ್ನು ತನ್ನೊಂದಿಗೆ ಕರೆದುಕೊಂಡು ಹೋದನು. ಆಗ ಯೇಸು ಬಹಳ ದುಃಖದಿಂದ ಮನಗುಂದಿದವನಾಗಿ 38 ಅವರಿಗೆ, “ನನ್ನ ಆತ್ಮವು ದುಃಖದಿಂದ ತುಂಬಿಹೋಗಿದೆ. ನನ್ನ ಹೃದಯವು ದುಃಖದಿಂದ ಒಡೆದುಹೋಗುವಂತಿದೆ. ನೀವು ನನ್ನೊಂದಿಗೆ ಎಚ್ಚರವಾಗಿದ್ದು ಇಲ್ಲೇ ಇರಿ” ಎಂದು ಹೇಳಿದನು.

39 ಬಳಿಕ ಯೇಸು ಅವರಿಂದ ಸ್ವಲ್ಪದೂರ ಹೋಗಿ ನೆಲದ ಮೇಲೆ ಬೋರಲಬಿದ್ದು, “ನನ್ನ ತಂದೆಯೇ, ಸಾಧ್ಯವಿದ್ದರೆ, ಸಂಕಟದ ಈ ಪಾತ್ರೆಯನ್ನು ನನಗೆ ಕೊಡಬೇಡ. ಆದರೆ ನನ್ನ ಇಷ್ಟದಂತಲ್ಲ, ನಿನ್ನ ಇಷ್ಟದಂತೆಯೇ ಮಾಡು” ಎಂದು ಪ್ರಾರ್ಥಿಸಿದನು. 40 ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿದನು. ಅವರು ನಿದ್ರಿಸುತ್ತಿರುವುದನ್ನು ಕಂಡು ಆತನು ಪೇತ್ರನಿಗೆ, “ನೀವು ನನ್ನೊಂದಿಗೆ ಒಂದು ಗಂಟೆಯ ಕಾಲ ಎಚ್ಚರವಾಗಿರಲು ಸಾಧ್ಯವಿಲ್ಲವೇ? 41 ನೀವು ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ. ಮನಸ್ಸೇನೋ ಸಿದ್ಧವಾಗಿದೆ ಆದರೆ ದೇಹಕ್ಕೆ ಬಲಸಾಲದು” ಎಂದು ಹೇಳಿದನು.

42 ಯೇಸು ಎರಡನೆಯ ಸಾರಿ ಸ್ಪಲ್ಪದೂರ ಹೋಗಿ ಪ್ರಾರ್ಥಿಸುತ್ತಾ, “ನನ್ನ ತಂದೆಯೇ, ಸಂಕಟದ ಈ ಪಾತ್ರೆಯನ್ನು ನನ್ನಿಂದ ತೆಗೆದುಕೊಳ್ಳಲು ಸಾಧ್ಯವಿಲ್ಲದಿದ್ದರೆ ಮತ್ತು ನಾನು ಅದನ್ನು ನೆರವೇರಿಸಲೇಬೇಕಿದ್ದರೆ, ನಿನ್ನ ಇಷ್ಟದಂತೆಯೇ ಆಗಲಿ” ಎಂದನು.

43 ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿದಾಗ ಅವರು ಮತ್ತೆ ನಿದ್ರೆ ಮಾಡುತ್ತಿರುವುದನ್ನು ಕಂಡನು. ಅವರ ಕಣ್ಣುಗಳು ಬಹಳ ಆಯಾಸಗೊಂಡಿದ್ದವು. 44 ಆದ್ದರಿಂದ ಯೇಸು ಮತ್ತೊಮ್ಮೆ ಅವರನ್ನು ಬಿಟ್ಟು ಸ್ವಲ್ಪ ದೂರ ಹೋಗಿ ಮೂರನೆಯ ಸಾರಿ ಅದೇ ರೀತಿ ಪ್ರಾರ್ಥಿಸಿದನು.

45 ಬಳಿಕ ಯೇಸು ತನ್ನ ಶಿಷ್ಯರ ಬಳಿಗೆ ಹಿಂದಿರುಗಿ, “ನೀವು ಇನ್ನೂ ನಿದ್ರೆ ಮಾಡುತ್ತಾ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೀರಾ? ಪಾಪಿಷ್ಠರಾದ ಜನರಿಗೆ ಮನುಷ್ಯಕುಮಾರನನ್ನು ಒಪ್ಪಿಸುವ ಕಾಲ ಸಮೀಪಿಸಿದೆ. 46 ನಾವು ಹೋಗಬೇಕು. ಎದ್ದೇಳಿ! ನನ್ನನ್ನು ವೈರಿಗಳಿಗೆ ಒಪ್ಪಿಸುವ ಮನುಷ್ಯನು ಇಲ್ಲಿಯೇ ಬರುತ್ತಿದ್ದಾನೆ” ಎಂದು ಹೇಳಿದನು.

ಯೇಸುವಿನ ಬಂಧನ

(ಮಾರ್ಕ 14:43-50; ಲೂಕ 22:47-53; ಯೋಹಾನ 18:3-12)

47 ಯೇಸು ಮಾತಾಡುತ್ತಿರವಷ್ಟರಲ್ಲೇ ಯೂದನು ಅಲ್ಲಿಗೆ ಬಂದನು. ಯೂದನು ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾಗಿದ್ದನು. ಮಹಾಯಾಜಕರು ಮತ್ತು ಹಿರಿಯ ನಾಯಕರು ಕಳುಹಿಸಿದ್ದ ಅನೇಕ ಜನರು ಅವನೊಂದಿಗಿದ್ದರು. ಅವರು ಕತ್ತಿ ಮತ್ತು ದೊಣ್ಣೆಗಳನ್ನು ಹಿಡಿದುಕೊಂಡಿದ್ದರು. 48 ಯೇಸು ಯಾರೆಂಬುದನ್ನು ತಿಳಿದುಕೊಳ್ಳಲು ಯೂದನು ಅವರಿಗೆ ಒಂದು ಗುರುತು ಹೇಳಿಕೊಟ್ಟಿದ್ದನು. 49 ಅಂತೆಯೇ ಯೂದನು ಯೇಸುವಿನ ಬಳಿಗೆ ಹೋಗಿ, “ಗುರುವೇ, ನಮಸ್ಕಾರ” ಎಂದು ಹೇಳಿ ಆತನಿಗೆ ಮುದ್ದಿಟ್ಟನು.

50 ಆಗ ಯೇಸು, “ಸ್ನೇಹಿತನೇ, ನೀನು ಮಾಡಲು ಬಂದ ಕೆಲಸ ಇದೆಯೋ?” ಎಂದನು.

ಕೂಡಲೇ ಆ ಜನರು ಬಂದು ಯೇಸುವನ್ನು ಹಿಡಿದು, ಬಂಧಿಸಿದರು. 51 ಆಗ ಯೇಸುವಿನ ಶಿಷ್ಯರಲ್ಲೊಬ್ಬನು ತನ್ನ ಖಡ್ಗವನ್ನು ಹೊರಕ್ಕೆ ಸೆಳೆದು ಮಹಾಯಾಜಕನ ಸೇವಕನಿಗೆ ಹೊಡೆದು ಅವನ ಕಿವಿಯನ್ನು ಕತ್ತರಿಸಿಬಿಟ್ಟನು.

52 ಯೇಸು ಅವನಿಗೆ, “ನಿನ್ನ ಖಡ್ಗವನ್ನು ಒರೆಗೆ ಹಾಕು. ಕತ್ತಿಯನ್ನು ಬಳಸುವ ಜನರು ಕತ್ತಿಯಿಂದಲೇ ಸಾಯುತ್ತಾರೆ. 53 ನಾನು ನನ್ನ ತಂದೆಯನ್ನು ಕೇಳಿದ್ದರೆ, ಆತನು ನನಗೆ ದೇವದೂತರ ಹನ್ನೆರಡು ಸೇನಾದಳಗಳನ್ನು ನೀಡುತ್ತಿದ್ದನೆಂಬುದು ನಿನಗೆ ಗೊತ್ತೇ ಇದೆ. 54 ಆದರೆ ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ ಇದು ಈ ರೀತಿಯಲ್ಲೇ ಆಗಬೇಕಾಗಿದೆ” ಎಂದು ಹೇಳಿದನು.

55 ನಂತರ ಯೇಸು ಆ ಜನರಿಗೆ, “ನೀವು ಅಪರಾಧಿಯನ್ನು ಬಂಧಿಸುವವರಂತೆ ಕತ್ತಿ ಮತ್ತು ದೊಣ್ಣೆಗಳನ್ನು ಹಿಡಿದುಕೊಂಡು ಇಲ್ಲಿಗೆ ಬಂದಿದ್ದೀರಿ. ನಾನು ಪ್ರತಿದಿನವೂ ದೇವಾಲಯದಲ್ಲಿ ಕುಳಿತುಕೊಂಡು ಬೋಧಿಸುತ್ತಿದ್ದಾಗ ನೀವು ನನ್ನನ್ನು ಅಲ್ಲಿ ಬಂಧಿಸಲೇ ಇಲ್ಲ. 56 ಆದರೆ ಪ್ರವಾದಿಗಳು ಬರೆದಿರುವುದೆಲ್ಲಾ ನೆರವೇರುವುದಕ್ಕಾಗಿ ಇದೆಲ್ಲಾ ಆಯಿತು” ಎಂದು ಹೇಳಿದನು. ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.

ಯೆಹೂದ್ಯ ನಾಯಕರ ಎದುರಿನಲ್ಲಿ ಯೇಸು

(ಮಾರ್ಕ 14:53-65; ಲೂಕ 22:54-55,63-71; ಯೋಹಾನ 18:13-14,19-24)

57 ಬಳಿಕ ಯೇಸುವನ್ನು ಬಂಧಿಸಿದ್ದವರು ಆತನನ್ನು ಪ್ರಧಾನ ಯಾಜಕನಾದ ಕಾಯಫನ ಮನೆಗೆ ಕರೆದೊಯ್ದರು. ಅಲ್ಲಿ ಧರ್ಮೋಪದೇಶಕರು ಮತ್ತು ಯೆಹೂದ್ಯರ ಹಿರಿಯ ನಾಯಕರು ಒಟ್ಟಿಗೆ ಸೇರಿದ್ದರು. 58 ಯೇಸುವಿಗೆ ಏನಾಗುತ್ತದೋ ಎಂಬುದನ್ನು ನೋಡಲು ಪೇತ್ರನು ಆತನನ್ನು ದೂರದಿಂದ ಹಿಂಬಾಲಿಸುತ್ತಾ ಪ್ರಧಾನಯಾಜಕನ ಭವನದ ಅಂಗಳದೊಳಗೆ ಬಂದು ಕಾವಲುಗಾರರೊಂದಿಗೆ ಕುಳಿತುಕೊಂಡನು.

59 ಮಹಾಯಾಜಕರು ಮತ್ತು ಯೆಹೂದ್ಯರ ಸಮಿತಿಯವರು ಯೇಸುವಿಗೆ ಮರಣದಂಡನೆ ವಿಧಿಸಲು ಅಗತ್ಯವಾದ ಸುಳ್ಳುಸಾಕ್ಷಿಗಳನ್ನು ಹುಡುಕಿದರು. 60 ಅನೇಕರು ಬಂದು, ಯೇಸುವಿನ ವಿಷಯವಾಗಿ ಸುಳ್ಳು ಸಂಗತಿಗಳನ್ನು ಹೇಳಿದರು. ಆದರೆ ಯೇಸುವನ್ನು ಕೊಲ್ಲಲು ಬಲವಾದ ಕಾರಣವೊಂದೂ ಸಮಿತಿಗೆ ಸಿಗಲಿಲ್ಲ. ಆಗ ಇಬ್ಬರು ಬಂದು, 61 “ಈ ಮನುಷ್ಯನು, ‘ನಾನು ದೇವರ ಆಲಯವನ್ನು ಕೆಡವಿ ಅದನ್ನು ಮತ್ತೆ ಮೂರು ದಿನಗಳಲ್ಲಿ ನಿರ್ಮಿಸುತ್ತೇನೆ’ ಎಂದು ಹೇಳಿದನು” ಎಂಬುದಾಗಿ ತಿಳಿಸಿದರು.

62 ಪ್ರಧಾನಯಾಜಕನು ಎದ್ದುನಿಂತು ಯೇಸುವಿಗೆ, “ಈ ಜನರು ನಿನ್ನ ಮೇಲೆ ಹೊರಿಸಿರುವ ಆಪಾದನೆಗಳ ಬಗ್ಗೆ ನೀನು ಏನಾದರೂ ಹೇಳಬೇಕೆಂದಿರುವೆಯಾ? ಇವರು ಹೇಳುತ್ತಿರುವುದೆಲ್ಲಾ ನಿಜವೇ?” ಎಂದು ಕೇಳಿದನು. 63 ಆದರೆ ಯೇಸು ಮೌನವಾಗಿದ್ದನು.

ಪ್ರಧಾನಯಾಜಕನು ಮತ್ತೆ ಯೇಸುವಿಗೆ, “ಜೀವಸ್ವರೂಪನಾದ ದೇವರ ಮೇಲೆ ಆಣೆಯಿಟ್ಟು ಕೇಳುತ್ತಿದ್ದೇನೆ, ನೀನು ದೇವಕುಮಾರನಾದ ಕ್ರಿಸ್ತನೋ? ನಮಗೆ ತಿಳಿಸು” ಎಂದನು.

64 ಯೇಸು, “ಹೌದು, ನೀನು ಹೇಳಿದಂತೆ ಆತನೇ ನಾನು. ಆದರೆ ನಿನಗೆ ಹೇಳುವುದೇನೆಂದರೆ, ಇನ್ನು ಮೇಲೆ ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ಕುಳಿತಿರುವುದನ್ನೂ ಆಕಾಶದ ಮೋಡಗಳ ಮೇಲೆ ಕುಳಿತು ಬರುವುದನ್ನೂ ನೀವು ಕಾಣುವಿರಿ” ಎಂದು ಹೇಳಿದನು.

65 ಪ್ರಧಾನಯಾಜಕನು ಇದನ್ನು ಕೇಳಿ ಬಹಳ ಕೋಪಗೊಂಡು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಈ ಮನುಷ್ಯನು ದೇವದೂಷಣೆ ಮಾಡಿದ್ದಾನೆ. ನಮಗೆ ಇನ್ನು ಯಾವ ಸಾಕ್ಷಿಗಳ ಅಗತ್ಯವೂ ಇಲ್ಲ. ಇವನು ಮಾಡಿದ ದೇವದೂಷಣೆಯನ್ನು ನೀವೇ ಕೇಳಿದಿರಿ. 66 ನಿಮ್ಮ ತೀರ್ಮಾನವೇನು?” ಎಂದು ಕೇಳಿದನು.

ಯೆಹೂದ್ಯರು, “ಇವನು ಅಪರಾಧಿ. ಇವನು ಸಾಯಲೇಬೇಕು” ಎಂದು ಉತ್ತರಕೊಟ್ಟರು.

67 ನಂತರ ಜನರು ಅಲ್ಲಿಯೇ ಯೇಸುವಿನ ಮುಖದ ಮೇಲೆ ಉಗುಳಿದರು. ಮುಷ್ಠಿಯಿಂದ ಆತನನ್ನು ಗುದ್ದಿದರು. ಆತನ ಕೆನ್ನೆಗೆ ಹೊಡೆದರು. 68 ಅವರು, “ಕ್ರಿಸ್ತನೇ, ನಮಗೆ ಪ್ರವಾದನೆ ಹೇಳು! ನಿನಗೆ ಹೊಡೆದವರು ಯಾರು?” ಎಂದು ಅಪಹಾಸ್ಯ ಮಾಡಿದರು.

ಪೇತ್ರನ ವಿಶ್ವಾಸದ್ರೋಹ

(ಮಾರ್ಕ 14:66-72; ಲೂಕ 22:56-62; ಯೋಹಾನ 18:15-18,25-27)

69 ಇತ್ತ ಪೇತ್ರನು ಅಂಗಳದಲ್ಲಿ ಕುಳಿತಿದ್ದನು. ಸೇವಕಿಯೊಬ್ಬಳು ಪೇತ್ರನ ಬಳಿಗೆ ಬಂದು, “ನೀನು ಸಹ ಗಲಿಲಾಯದ ಯೇಸುವಿನೊಂದಿಗಿದ್ದವನು” ಎಂದು ಹೇಳಿದಳು.

70 ಆದರೆ ಪೇತ್ರನು, ಅಲ್ಲಿದ್ದ ಜನರೆಲ್ಲರ ಎದುರಿನಲ್ಲಿ ಆಕೆಗೆ, “ನೀನು ಏನು ಹೇಳುತ್ತಿರುವೆಯೋ ನನಗೆ ಗೊತ್ತೇ ಇಲ್ಲ” ಎಂದು ನಿರಾಕರಿಸಿದನು.

71 ಬಳಿಕ ಪೇತ್ರನು ಅಲ್ಲಿಂದ ಎದ್ದು ಹೆಬ್ಬಾಗಿಲ ಬಳಿಗೆ ಬಂದಾಗ ಮತ್ತೊಬ್ಬ ಸೇವಕಿಯು ಅವನನ್ನು ನೋಡಿ ಅಲ್ಲಿದ್ದ ಜನರಿಗೆ, “ಈ ಮನುಷ್ಯನು ನಜರೇತಿನ ಯೇಸುವಿನೊಂದಿಗಿದ್ದನು” ಎಂದು ಹೇಳಿದಳು.

72 ಆಗ ಪೇತ್ರನು, “ನಾನು ದೇವರ ಮೇಲೆ ಆಣೆಯಿಟ್ಟು ಹೇಳುತ್ತೇನೆ. ನನಗೆ ಯೇಸುವೆಂಬ ಮನುಷ್ಯನು ತಿಳಿದೇ ಇಲ್ಲ!” ಎಂದು ನಿರಾಕರಿಸಿದನು.

73 ಸ್ವಲ್ಪ ಸಮಯದ ತರುವಾಯ, ಅಲ್ಲಿ ನಿಂತಿದ್ದ ಕೆಲವು ಜನರು ಪೇತ್ರನ ಸಮೀಪಕ್ಕೆ ಹೋಗಿ, “ಯೇಸುವನ್ನು ಹಿಂಬಾಲಿಸಿಕೊಂಡು ಬಂದ ಜನರಲ್ಲಿ ನೀನೂ ಒಬ್ಬನಾಗಿರುವೆ ಎಂಬುದನ್ನು ನೀನು ಮಾತಾಡುವ ರೀತಿಯೇ ತೋರಿಸುತ್ತದೆ” ಎಂದು ಹೇಳಿದರು.

74 ಆಗ ಪೇತ್ರನು ಶಪಿಸಿಕೊಳ್ಳತೊಡಗಿ, “ನಾನು ದೇವರ ಮೇಲೆ ಆಣೆಯಿಟ್ಟು ಹೇಳುತ್ತೇನೆ. ಯೇಸುವೆಂಬ ಮನುಷ್ಯನು ನನಗೆ ತಿಳಿದೇ ಇಲ್ಲ!” ಎಂದು ಹೇಳಿದನು. ಆ ಕೂಡಲೇ ಕೋಳಿ ಕೂಗಿತು. 75 “ಆತನು ಯಾರೋ ನನಗೆ ಗೊತ್ತೇ ಇಲ್ಲ ಎಂಬುದಾಗಿ ಕೋಳಿ ಕೂಗುವುದಕ್ಕಿಂತ ಮುಂಚೆ ನೀನು ಮೂರು ಸಲ ಹೇಳುವೆ” ಎಂದು ತನಗೆ ಯೇಸು ಹೇಳಿದ್ದ ಮಾತನ್ನು ಪೇತ್ರನು ನೆನಪು ಮಾಡಿಕೊಂಡು ಹೊರಗೆ ಹೋಗಿ ಬಹಳವಾಗಿ ವ್ಯಥೆಪಟ್ಟು ಅತ್ತನು.

ಎಸ್ತೇರಳು 3

ಯೆಹೂದ್ಯರನ್ನು ನಿರ್ಮೂಲ ಮಾಡಲು ಹಾಮಾನನ ಸಂಚು

ಇದಾದ ಬಳಿಕ ರಾಜನಾದ ಅಹಷ್ವೇರೋಷನು ಹಾಮಾನನನ್ನು ಗೌರವಿಸಿದನು. ಹಾಮಾನನು ಹಮ್ಮೆದಾತನೆಂಬವನ ಮಗನು. ಇವನು ಅಗಾಗನ ವಂಶಕ್ಕೆ ಸೇರಿದವನಾಗಿದ್ದನು. ಅರಸನು ಹಾಮಾನನನ್ನು ಉನ್ನತಸ್ಥಾನಕ್ಕೆ ನೇಮಿಸಿ ಬೇರೆ ಅಧಿಕಾರಿಗಳಿಗಿಂತ ವಿಶೇಷವಾದ ಗೌರವವನ್ನು ಕೊಡಿಸಿದನು. ರಾಜ್ಯದ ಎಲ್ಲಾ ಅಧಿಕಾರಿಗಳೂ ಅರಮನೆಯ ಹೆಬ್ಬಾಗಿಲ ಬಳಿಯಲ್ಲಿದ್ದವರೆಲ್ಲರೂ ಅವನಿಗೆ ಅಡ್ಡಬೀಳುತ್ತಿದ್ದರು. ಇದು ರಾಜಾಜ್ಞೆಯಾಗಿತ್ತು. ಆದರೆ ಮೊರ್ದೆಕೈ ಮಾತ್ರ ಅವನಿಗೆ ಅಡ್ಡಬೀಳಲೂ ಇಲ್ಲ ಗೌರವಿಸಲೂ ಇಲ್ಲ. ಅರಮನೆಯ ಹೆಬ್ಬಾಗಿಲ ಬಳಿಯಲ್ಲಿದ್ದ ಅಧಿಕಾರಿಗಳು, “ಮೊರ್ದೆಕೈ, ಅರಸನ ಆಜ್ಞೆಯ ಪ್ರಕಾರ ಹಾಮಾನನಿಗೆ ನೀನು ಏಕೆ ಬಗ್ಗಿ ನಮಸ್ಕರಿಸುವುದಿಲ್ಲ?” ಎಂದು ಪ್ರಶ್ನಿಸಿದರು.

ಪ್ರತಿದಿನ ಆ ಅಧಿಕಾರಿಗಳು ಮೊರ್ದೆಕೈಗೆ ಹೇಳಿದರೂ ಅವನು ಹಾಮಾನನಿಗೆ ಅಡ್ಡಬೀಳಲೂ ಇಲ್ಲ, ಗೌರವಿಸಲೂ ಇಲ್ಲ. ಈ ವಿಷಯವನ್ನು ಅಧಿಕಾರಿಗಳು ಹಾಮಾನನಿಗೆ ತಿಳಿಸಿದರು. ಮೊರ್ದೆಕೈಗೆ ಹಾಮಾನನು ಮಾಡುವದನ್ನು ನೋಡಲು ಕಾದಿದ್ದರು. ಮೊರ್ದೆಕೈ ಅವರಿಗೆ ತಾನು ಯೆಹೂದ್ಯನೆಂದು ತಿಳಿಸಿದ್ದನು. ಮೊರ್ದೆಕೈ ತನಗೆ ಅಡ್ಡಬೀಳದಿರುವುದರಿಂದ ಮತ್ತು ಗೌರವಿಸದಿರುವುದರಿಂದ ಹಾಮಾನನು ಬಹಳ ಕೋಪಗೊಂಡನು. ಮೊರ್ದೆಕೈ ಯೆಹೂದ್ಯ ಜನಾಂಗಕ್ಕೆ ಸೇರಿದವನೆಂದು ಹಾಮಾನನಿಗೆ ತಿಳಿದುಬಂತು. ಕೇವಲ ಮೊರ್ದೆಕೈಯನ್ನು ಮಾತ್ರವೇ ಕೊಲ್ಲದೆ ಅಹಷ್ವೇರೋಷನ ಸಾಮ್ರಾಜ್ಯದಲ್ಲಿರುವ ಎಲ್ಲಾ ಯೆಹೂದ್ಯರನ್ನು ಕೊಲ್ಲುವ ಉಪಾಯವನ್ನು ಹೂಡಿದನು.

ಅಹಷ್ವೇರೋಷನ ಆಳ್ವಿಕೆಯ ಹನ್ನೆರಡನೆಯ ವರ್ಷದ ಮೊದಲನೆ ತಿಂಗಳಾದ ನೀಸಾನ್ ತಿಂಗಳಲ್ಲಿ ಒಂದು ನಿರ್ದಿಷ್ಟ ದಿವಸಕ್ಕಾಗಿ ಹಾಮಾನನು ಚೀಟು ಹಾಕಿದನು. ಆಗ ಹನ್ನೆರಡನೆ ತಿಂಗಳಾದ ಅದಾರ್ ಮಾಸವು ಆರಿಸಲ್ಪಟ್ಟಿತು. (ಆ ದಿವಸಗಳಲ್ಲಿ ಚೀಟು ಹಾಕುವದಕ್ಕೆ “ಪೂರ್” ಎಂದು ಅನ್ನುತ್ತಿದ್ದರು.) ಹಾಮಾನನು ಅರಸನಾದ ಅಹಷ್ವೇರೋಷನ ಬಳಿಗೆ ಬಂದು, “ಅರಸನೇ, ನಿನ್ನ ಸಾಮ್ರಾಜ್ಯದ ಎಲ್ಲಾ ಸಂಸ್ಥಾನಗಳಲ್ಲಿ ಒಂದು ಜನಾಂಗದವರು ಹಬ್ಬಿರುತ್ತಾರೆ. ಇವರು ಇತರ ಎಲ್ಲಾ ಜನರಿಂದ ಪ್ರತ್ಯೇಕವಾಗಿ ಇರುತ್ತಾರೆ. ಅವರ ನೀತಿರೀತಿಗಳೆಲ್ಲಾ ಬೇರೆ ಜನರಿಗಿಂತ ವಿಭಿನ್ನವಾಗಿರುತ್ತದೆ. ಅವರು ರಾಜನ ಕಟ್ಟಳೆಗೆ ವಿಧೇಯರಾಗುವುದಿಲ್ಲ. ನಿನ್ನ ರಾಜ್ಯದಲ್ಲಿ ಅವರು ಹೀಗೆಯೇ ಇರುವದು ಒಳ್ಳೆಯದಲ್ಲ.

“ರಾಜನೇ, ನೀನು ಸಮ್ಮತಿಸುವದಾದರೆ ನನ್ನ ಸಲಹೆ ಏನೆಂದರೆ, ಆ ಜನರನ್ನು ನಿರ್ಮೂಲ ಮಾಡಲು ಅಪ್ಪಣೆ ಕೊಡು. ನಾನು ಹತ್ತು ಸಾವಿರ ಬೆಳ್ಳಿನಾಣ್ಯಗಳನ್ನು ರಾಜ ಖಜಾನೆಯಲ್ಲಿ ಹಾಕುವೆನು. ಆ ಹಣವನ್ನು ಆ ಕಾರ್ಯ ಮಾಡುವ ಜನರ ಸಂಬಳಕ್ಕಾಗಿ ವಿನಿಯೋಗಿಸಬಹುದು” ಎಂದು ಹೇಳಿದನು.

10 ಆಗ ಅರಸನು ತನ್ನ ಮುದ್ರೆಯುಂಗುರವನ್ನು ಬೆರಳಿನಿಂದ ತೆಗೆದು ಹಾಮಾನನಿಗೆ ಕೊಟ್ಟನು. ಹಾಮಾನನು ಅಗಾಗನ ವಂಶದವನಾದ ಹಮ್ಮೆದಾತನ ಮಗನು. ಈ ಹಾಮಾನನು ಯೆಹೂದ್ಯರ ಕಡುವೈರಿಯಾಗಿದ್ದನು. 11 ಅರಸನು ಹಾಮಾನನಿಗೆ, “ನಿನ್ನ ಹಣವು ನಿನ್ನ ಹತ್ರವೇ ಇರಲಿ. ಆ ಜನರನ್ನು ನಿನಗೆ ಇಷ್ಟಬಂದ ಹಾಗೆ ಮಾಡಬಹುದು” ಅಂದನು.

12 ಮೊದಲನೆ ತಿಂಗಳಿನ ಹದಿಮೂರನೇ ದಿವಸದಂದು ರಾಜಲೇಖಕರನ್ನು ಕರೆಯಿಸಿ ಹಾಮಾನನ ಆಜ್ಞೆಯನ್ನು ಆಯಾಭಾಷೆಗಳಲ್ಲಿ ಬರೆಯಿಸಿದನು. ರಾಜನ ಸಂಸ್ಥಾನಾಧಿಕಾರಿಗಳಿಗೆ, ರಾಜ್ಯಪಾಲರಿಗೆ ಮತ್ತು ವಿವಿಧ ಜನಾಂಗದ ಅಧಿಕಾರಿಗಳಿಗೆ ಅರಸನಾದ ಅಹಷ್ವೇರೋಷನ ಹೆಸರಿನಲ್ಲಿ ಬರೆದು ಅದಕ್ಕೆ ರಾಜನ ಮುದ್ರೆಯನ್ನೊತ್ತಲಾಯಿತು.

13 ರಾಜಾಜ್ಞೆಯನ್ನು ಹೊತ್ತ ಸಂದೇಶವಾಹಕರು ದೇಶದ ಎಲ್ಲಾ ಕಡೆಗಳಲ್ಲಿ ಹೊತ್ತುಕೊಂಡು ಬಂದರು. ಆ ಪತ್ರದಲ್ಲಿ ಹನ್ನೆರಡನೇ ತಿಂಗಳಿನ ಹದಿಮೂರನೇ ದಿವಸದಂದು ಆಯಾ ಪ್ರಾಂತ್ಯಗಳಲ್ಲಿರುವ ಎಲ್ಲಾ ಯೆಹೂದ್ಯರನ್ನು ಚಿಕ್ಕವರು ದೊಡ್ಡವರು ಎನ್ನದೆ ಕೊಂದು ಅವರ ವಸ್ತುಗಳನ್ನೆಲ್ಲ ಸೂರೆ ಮಾಡಬೇಕೆಂಬದಾಗಿ ಬರೆದಿತ್ತು.

14 ಈ ಪತ್ರದ ಒಂದೊಂದು ಪ್ರತಿಯು ಪ್ರತಿಯೊಂದು ಸಂಸ್ಥಾನದಲ್ಲಿ ರಾಜವಿಧಿಯೆಂದು ಎಲ್ಲಾ ಜನರಲ್ಲಿ ಪ್ರಕಟಿಸಲ್ಪಡಬೇಕು ಅಲ್ಲದೆ ಆ ದಿನಕ್ಕಾಗಿ ಎಲ್ಲಾ ಜನರೂ ಸಿದ್ಧರಾಗಿರಬೇಕೆಂಬುದಾಗಿ ಬರೆದಿತ್ತು. 15 ರಾಜನ ಆಜ್ಞೆಯ ಪ್ರಕಾರ ಸಂದೇಶವಾಹಕರು ದೇಶದೇಶಗಳಿಗೆ ಚದರಿದರು. ರಾಜಧಾನಿಯಾದ ಶೂಷನ್ ನಗರದಲ್ಲೂ ಆ ಸಂದೇಶವನ್ನು ಪ್ರಕಟಿಸಲಾಯಿತು. ಅರಸನೂ ಹಾಮಾನನೂ ಮದ್ಯಪಾನ ಮಾಡಲು ಕುಳಿತರು. ಆದರೆ ರಾಜಧಾನಿಯಲ್ಲಿನ ಜನರು ಗಲಿಬಿಲಿಗೊಂಡಿದ್ದರು.

ಅಪೊಸ್ತಲರ ಕಾರ್ಯಗಳು 26

ರಾಜ ಅಗ್ರಿಪ್ಪನ ಮುಂದೆ ಪೌಲನು

26 ಅಗ್ರಿಪ್ಪನು ಪೌಲನಿಗೆ, “ಈಗ ನೀನು ನಿನ್ನ ಪರವಾಗಿ ಮಾತಾಡಬಹುದು” ಎಂದು ಹೇಳಿದನು. ಆಗ ಪೌಲನು ತನ್ನ ಕೈಯೆತ್ತಿ ಮಾತಾಡಲಾರಂಭಿಸಿ ಹೀಗೆಂದನು: “ರಾಜನಾದ ಅಗ್ರಿಪ್ಪನೇ, ಯೆಹೂದ್ಯರು ನನ್ನ ಮೇಲೆ ಹೊರಿಸುತ್ತಿರುವ ಆಪಾದನೆಗಳಿಗೆಲ್ಲಾ ನಾನು ಉತ್ತರಕೊಡುವೆನು. ಇಂದು ನಿನ್ನ ಮುಂದೆ ನಿಂತುಕೊಂಡು ಪ್ರತಿವಾದ ಮಾಡುವ ಅವಕಾಶ ದೊರೆತಿರುವುದು ನನ್ನ ಭಾಗ್ಯವೆಂದೇ ಎಣಿಸುತ್ತೇನೆ. ನಾನು ನಿನ್ನೊಂದಿಗೆ ಮಾತಾಡಲು ಬಹು ಸಂತೋಷಪಡುತ್ತೇನೆ. ಯಾಕೆಂದರೆ, ಯೆಹೂದ್ಯರ ಎಲ್ಲಾ ಸಂಪ್ರದಾಯಗಳ ಬಗ್ಗೆ ಮತ್ತು ಯೆಹೂದ್ಯರು ವಾದಿಸುತ್ತಿರುವ ಸಂಗತಿಗಳ ಬಗ್ಗೆ ನಿನಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದ ದಯವಿಟ್ಟು ನನ್ನ ಮಾತುಗಳನ್ನು ತಾಳ್ಮೆಯಿಂದ ಆಲಿಸು.

“ನನ್ನ ಇಡೀ ಜೀವಮಾನದ ಬಗ್ಗೆ ಎಲ್ಲಾ ಯೆಹೂದ್ಯರಿಗೆ ಗೊತ್ತಿದೆ. ನಾನು ಆರಂಭದಿಂದ ನನ್ನ ಸ್ವದೇಶದಲ್ಲಿಯೂ ಅನಂತರ ಜೆರುಸಲೇಮಿನಲ್ಲಿಯೂ ಜೀವಿಸಿದ ರೀತಿಯನ್ನು ಅವರು ಬಲ್ಲರು. ಈ ಯೆಹೂದ್ಯರು ಬಹುಕಾಲದಿಂದಲೂ ನನ್ನನ್ನು ತಿಳಿದಿದ್ದಾರೆ. ನೀನು ಅವರನ್ನು ಕೇಳುವುದಾದರೆ, ನಾನು ಒಳ್ಳೆಯ ಫರಿಸಾಯನಾಗಿದ್ದೆನೆಂದು ಅವರು ನಿನಗೆ ಹೇಳಬಲ್ಲರು. ಯೆಹೂದ್ಯರ ಇತರ ಯಾವುದೇ ಪಂಗಡಗಿಳಿಗಿಂತಲೂ ಹೆಚ್ಚು ಎಚ್ಚರಿಕೆಯಿಂದ ಫರಿಸಾಯರು ಯೆಹೂದ್ಯ ಧರ್ಮದ ಕಟ್ಟೆಳೆಗಳಿಗೆ ವಿಧೇಯರಾಗುತ್ತಾರೆ. ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನವನ್ನು ನಾನು ನಿರೀಕ್ಷಿಸಿಕೊಂಡಿರುವುದರಿಂದಲೇ ಈಗ ವಿಚಾರಣೆಗೆ ಗುರಿಯಾಗಿದ್ದೇನೆ. ಈ ವಾಗ್ದಾನವು ಖಂಡಿತವಾಗಿ ನೆರವೇರುತ್ತದೆ ಎಂದು ಹನ್ನೆರಡು ಕುಲಗಳ ನಮ್ಮ ಜನರು ನಿರೀಕ್ಷಿಸಿಕೊಂಡಿದ್ದಾರೆ. ಯೆಹೂದ್ಯರು ಹಗಲಿರುಳು ದೇವರ ಸೇವೆ ಮಾಡುತ್ತಿರುವುದು ಈ ನಿರೀಕ್ಷೆಯಿಂದಲೇ. ನಾನು ಸಹ ಇದೇ ನಿರೀಕ್ಷೆಯನ್ನು ಹೊಂದಿರುವುದರಿಂದ ಇವರು ನನ್ನ ಮೇಲೆ ಆಪಾದನೆಗಳನ್ನು ಹೊರಿಸಿದ್ದಾರೆ! ಸತ್ತವರನ್ನು ದೇವರು ಜೀವಂತವಾಗಿ ಎಬ್ಬಿಸುತ್ತಾನೆ ಎಂಬುದು ನಂಬತಕ್ಕದ್ದಲ್ಲವೆಂದು ನೀವು ಭಾವಿಸಿಕೊಂಡಿರುವುದೇಕೆ?

“ನಾನು ಫರಿಸಾಯನಾಗಿದ್ದಾಗ ನಜರೇತಿನ ಯೇಸುವಿನ ಹೆಸರಿಗೆ ವಿರೋಧವಾಗಿ ಅನೇಕ ಕಾರ್ಯಗಳನ್ನು ಮಾಡಬೇಕೆಂದು ಆಲೋಚಿಸಿಕೊಂಡೆನು. 10 ಜೆರುಸಲೇಮಿನಲ್ಲಿ ವಿಶ್ವಾಸಿಗಳ ವಿರೋಧವಾಗಿ ಅನೇಕ ಕಾರ್ಯಗಳನ್ನು ಮಾಡಿದೆ. ಈ ವಿಶ್ವಾಸಿಗಳಲ್ಲಿ ಅನೇಕರನ್ನು ಸೆರೆಮನೆಗೆ ಹಾಕಲು ಮಹಾಯಾಜಕರು ನನಗೆ ಅಧಿಕಾರವನ್ನು ಕೊಟ್ಟರು. ಯೇಸುವಿನ ಶಿಷ್ಯರನ್ನು ಕೊಂದಾಗ ಅದಕ್ಕೆ ನಾನೂ ನನ್ನ ಸಮ್ಮತಿಯನ್ನು ಸೂಚಿಸಿದೆ. 11 ಪ್ರತಿಯೊಂದು ಸಭಾಮಂದಿರದಲ್ಲಿಯೂ ನಾನು ಅವರನ್ನು ದಂಡಿಸಿದೆನು. ಯೇಸುವಿನ ವಿರುದ್ಧ ದೂಷಣೆಯ ಮಾತುಗಳನ್ನು ಅವರ ಬಾಯಿಂದ ಹೊರಡಿಸಲು ನಾನು ಪ್ರಯತ್ನಿಸಿದೆನು. ಆ ವಿಶ್ವಾಸಿಗಳ ಮೇಲೆ ಬಹುಕೋಪವುಳ್ಳವನಾಗಿದ್ದು ಅವರನ್ನು ಹುಡುಕಿಹುಡುಕಿ ಹಿಂಸಿಸುವುದಕ್ಕಾಗಿ ವಿದೇಶದ ಪಟ್ಟಣಗಳಿಗೂ ಹೋದೆನು.

ತನಗಾದ ದರ್ಶನದ ಬಗ್ಗೆ ಪೌಲನ ಸಾಕ್ಷಿ

12 “ಒಂದುಸಲ, ದಮಸ್ಕ ಪಟ್ಟಣಕ್ಕೆ ಹೋಗಲು ಮಹಾಯಾಜಕರು ನನಗೆ ಅಪ್ಪಣೆಯನ್ನೂ ಅಧಿಕಾರವನ್ನೂ ಕೊಟ್ಟರು. 13 ನಾನು ದಮಸ್ಕದ ದಾರಿಯಲ್ಲಿ ಹೋಗುತ್ತಿದ್ದೆನು. ಆಗ ಮಧ್ಯಾಹ್ನವಾಗಿತ್ತು. ಇದ್ದಕ್ಕಿದ್ದಂತೆ ಆಗ ಆಕಾಶದಿಂದ ಸೂರ್ಯನಿಗಿಂತಲೂ ಪ್ರಕಾಶಮಾನವಾದ ಬೆಳಕೊಂದು ಬಂದು ನನ್ನ ಸುತ್ತಲೂ ಮತ್ತು ನನ್ನೊಂದಿಗೆ ಪ್ರಯಾಣ ಮಾಡುತ್ತಿದ್ದವರ ಸುತ್ತಲೂ ಪ್ರಜ್ವಲಿಸಿತು. 14 ನಾವೆಲ್ಲರೂ ನೆಲಕ್ಕೆ ಬಿದ್ದೆವು. ಆಗ ವಾಣಿಯೊಂದು ಯೆಹೂದ್ಯರ ಭಾಷೆಯಲ್ಲಿ[a] ನನ್ನೊಂದಿಗೆ ಮಾತಾಡುವುದನ್ನು ಕೇಳಿದೆನು. ಆ ವಾಣಿಯು, ‘ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸಿಸುತ್ತಿರುವೆ? ಮುಳ್ಳುಗೋಲನ್ನು ಒದೆಯುವುದು ನಿನಗೆ ಕಷ್ಟ’ ಎಂದು ಹೇಳಿತು.

15 “ನಾನು, ‘ಪ್ರಭುವೇ, ನೀನು ಯಾರು?’ ಎಂದೆನು.

“ಪ್ರಭುವು, ‘ನೀನು ಹಿಂಸೆಪಡಿಸುತ್ತಿರುವ ಯೇಸುವೇ ನಾನು. 16 ಎದ್ದೇಳು! ನಿನ್ನನ್ನು ನನ್ನ ಸೇವಕನನ್ನಾಗಿಯೂ ಸಾಕ್ಷಿಯನ್ನಾಗಿಯೂ ಆರಿಸಿಕೊಂಡಿದ್ದೇನೆ. ಈ ಹೊತ್ತು ನಾನು ನಿನಗೆ ಕಾಣಿಸಿಕೊಂಡದ್ದರ ವಿಷಯವಾಗಿಯೂ ನಾನು ನಿನಗೆ ಕೊಡಲಿರುವ ದರ್ಶನಗಳ ವಿಷಯವಾಗಿಯೂ ನೀನು ಜನರಿಗೆ ಸಾಕ್ಷಿಯಾಗಿರುವೆ. ಇದಕ್ಕಾಗಿಯೇ ಈ ಹೊತ್ತು ನಾನು ನಿನಗೆ ಕಾಣಿಸಿಕೊಂಡೆನು. 17 ನಿನ್ನ ಸ್ವಂತ ಜನರಿಂದಲೂ ಯೆಹೂದ್ಯರಲ್ಲದ ಜನರಿಂದಲೂ ನಿನಗೆ ಕೇಡಾಗದಂತೆ ಕಾಪಾಡುವೆನು. ನಾನು ನಿನ್ನನ್ನು ಅವರ ಬಳಿಗೆ ಕಳುಹಿಸುತ್ತಿದ್ದೇನೆ. 18 ನೀನು ಅವರಿಗೆ ಸತ್ಯವನ್ನು ತಿಳಿಸಿ ಅವರನ್ನು ಕತ್ತಲೆಯಿಂದ ಬೆಳಕಿಗೆ ಬರುವಂತೆಯೂ ಸೈತಾನನ ಅಧಿಕಾರಕ್ಕೆ ವಿಮುಖರಾಗಿ ದೇವರ ಕಡೆಗೆ ತಿರುಗಿಕೊಳ್ಳುವಂತೆಯೂ ಮಾಡಬೇಕು. ಆಗ ಅವರ ಪಾಪಗಳು ಕ್ಷಮಿಸಲ್ಪಡುತ್ತವೆ. ನನ್ನಲ್ಲಿ ನಂಬಿಕೆ ಇಡುವುದರ ಮೂಲಕ ಪವಿತ್ರರಾದ ಜನರೊಂದಿಗೆ ಅವರು ಪಾಲು ಹೊಂದುವರು’ ಎಂದನು.”

ತನ್ನ ಸೇವೆಯ ಬಗ್ಗೆ ಪೌಲನ ವಿವರಣೆ

19 ಪೌಲನು ಮಾತನ್ನು ಮುಂದುವರಿಸಿ ಹೀಗೆಂದನು: “ರಾಜನಾದ ಅಗ್ರಿಪ್ಪನೇ, ನಾನು ಪರಲೋಕದ ಈ ದರ್ಶನವನ್ನು ಕಂಡ ಮೇಲೆ ಅದಕ್ಕೆ ವಿಧೇಯನಾದೆನು. 20 ನಾನು ಜನರಿಗೆ, ‘ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ’ ಎಂತಲೂ ಅವರಿಗಾಗಿರುವ ಮಾನಸಾಂತರವನ್ನು ಯೋಗ್ಯವಾದ ಕಾರ್ಯಗಳ ಮೂಲಕ ತೋರ್ಪಡಿಸಬೇಕೆಂತಲೂ ಹೇಳಿದೆನು. ಮೊದಲನೆಯದಾಗಿ ದಮಸ್ಕಕ್ಕೂ ಬಳಿಕ ಜೆರುಸಲೇಮಿಗೂ ಜುದೇಯದ ಪ್ರತಿಯೊಂದು ಭಾಗಕ್ಕೂ ಹೋಗಿ ಅಲ್ಲಿರುವ ಜನರಿಗೆ ಈ ಸಂಗತಿಗಳನ್ನು ತಿಳಿಸಿದೆನು. ಅಲ್ಲದೆ ಯೆಹೂದ್ಯರಲ್ಲದ ಜನರ ಬಳಿಗೂ ಹೋದೆನು.

21 “ಈ ಕಾರಣಗಳಿಂದ ಯೆಹೂದ್ಯರು ನನ್ನನ್ನು ದೇವಾಲಯದಲ್ಲಿ ಬಂಧಿಸಿ ಕೊಲ್ಲಲು ಪ್ರಯತ್ನಿಸಿದರು. 22 ಆದರೆ ದೇವರು ನನಗೆ ಸಹಾಯಮಾಡಿದನು. ಆತನು ಇಂದಿನವರೆಗೂ ನನಗೆ ಸಹಾಯಮಾಡುತ್ತಿದ್ದಾನೆ. ಆದ್ದರಿಂದಲೇ ಇಂದು ಇಲ್ಲಿ ನಿಂತುಕೊಂಡಿದ್ದೇನೆ ಮತ್ತು ನಾನು ಕಂಡ ಸಂಗತಿಗಳ ಬಗ್ಗೆ ಜನರಿಗೆಲ್ಲಾ ಸಾಕ್ಷಿ ಹೇಳುತ್ತಿದ್ದೇನೆ. ಆದರೆ ನಾನು ಯಾವ ಹೊಸದನ್ನೂ ಹೇಳದೆ, ಮೋಶೆ ಮತ್ತು ಪ್ರವಾದಿಗಳು ಮುಂದೆ ನೆರವೇರುತ್ತವೆ ಎಂದು ಹೇಳಿದ ಸಂಗತಿಗಳನ್ನೇ ಹೇಳುತ್ತಿದ್ದೇನೆ. 23 ಕ್ರಿಸ್ತನು ಬಾಧೆಪಟ್ಟು ಸತ್ತು, ಸತ್ತವರೊಳಗಿಂದ ಮೊದಲನೆಯವನಾಗಿ ಎದ್ದುಬಂದು, ಯೆಹೂದ್ಯರಿಗೂ ಯೆಹೂದ್ಯರಲ್ಲದವರಿಗೂ ಬೆಳಕನ್ನು ತರುತ್ತಾನೆಂದು ಮೋಶೆ ಮತ್ತು ಪ್ರವಾದಿಗಳು ಹೇಳಿದ್ದಾರೆ.”

ಅಗ್ರಿಪ್ಪನನ್ನು ಒಡಂಬಡಿಸಲು ಪೌಲನ ಪ್ರಯತ್ನ

24 ಪೌಲನು ತನ್ನ ಪರವಾಗಿ ಈ ಸಂಗತಿಗಳನ್ನು ಹೇಳುತ್ತಿರಲು ಫೆಸ್ತನು, “ಪೌಲನೇ, ನೀನು ಹುಚ್ಚನಾಗಿರುವೆ! ಅಧಿಕ ಅಧ್ಯಯನ ನಿನ್ನನ್ನು ಹುಚ್ಚನನ್ನಾಗಿ ಮಾಡಿದೆ!” ಎಂದು ಕೂಗಿ ಹೇಳಿದನು.

25 ಪೌಲನು, “ಮಹಾರಾಜಶ್ರೀಗಳಾದ ಫೆಸ್ತನೇ, ನಾನು ಹುಚ್ಚನಲ್ಲ. ನಾನು ಹೇಳುತ್ತಿರುವುದು ಸತ್ಯಸಂಗತಿಗಳಾಗಿವೆ. ನನ್ನ ಮಾತುಗಳು ಮೂರ್ಖನ ಮಾತುಗಳಲ್ಲ. ನಾನು ಸ್ವಸ್ಥಬುದ್ಧಿಯುಳ್ಳವನಾಗಿದ್ದೇನೆ. 26 ರಾಜನಾದ ಅಗ್ರಿಪ್ಪನಿಗೆ ಈ ಸಂಗತಿಗಳು ತಿಳಿದಿವೆ. ನಾನು ಅವನೊಂದಿಗೆ ಸ್ವತಂತ್ರವಾಗಿ ಮಾತಾಡಬಲ್ಲೆನು. ಈ ಎಲ್ಲಾ ಸಂಗತಿಗಳ ಬಗ್ಗೆ ಅವನು ಕೇಳಿದ್ದಾನೆಂದು ನನಗೆ ಗೊತ್ತಿದೆ. ಯಾಕೆಂದರೆ ಎಲ್ಲಾ ಜನರು ನೋಡಬಹುದಾದ ಸ್ಥಳದಲ್ಲಿ ಈ ಸಂಗತಿಗಳು ನೆರವೇರಿದವು. 27 ರಾಜ ಅಗ್ರಿಪ್ಪನೇ, ಪ್ರವಾದಿಗಳು ಬರೆದ ಸಂಗತಿಗಳನ್ನು ನೀನು ನಂಬುವಿಯಾ? ನೀನು ನಂಬುವೆ ಎಂದು ನನಗೆ ಗೊತ್ತಿದೆ!” ಎಂಬುದಾಗಿ ಹೇಳಿದನು.

28 ರಾಜ ಅಗ್ರಿಪ್ಪನು ಪೌಲನಿಗೆ, “ಬಹು ಸುಲಭವಾಗಿ ನನ್ನನ್ನು ಒಪ್ಪಿಸಿ ಕ್ರೈಸ್ತನನ್ನಾಗಿ ಮಾಡಬಹುದೆಂದು ನೀನು ಯೋಚಿಸಿಕೊಂಡಿರುವಿಯಾ?” ಎಂದು ಕೇಳಿದನು.

29 ಪೌಲನು, “ಸುಲಭವೋ ಕಷ್ಟವೋ ಅದು ನನಗೆ ಮುಖ್ಯವಲ್ಲ. ನೀನು ಮಾತ್ರವಲ್ಲ, ಇಂದು ನನ್ನನ್ನು ಆಲಿಸುತ್ತಿರುವ ಪ್ರತಿಯೊಬ್ಬರೂ ರಕ್ಷಣೆಹೊಂದಿ ನನ್ನಂತೆಯೇ ಆಗಬೇಕೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಆದರೆ ಈ ಸಂಕೋಲೆಗಳು ಮಾತ್ರ ನಿಮಗೆ ಬೇಡ!” ಎಂದು ಹೇಳಿದನು.

30 ರಾಜ ಅಗ್ರಿಪ್ಪನು, ರಾಜ್ಯಪಾಲ ಫೆಸ್ತನು, ಬೆರ್ನಿಕೆರಾಣಿ ಮತ್ತು ಅವರೊಂದಿಗೆ ಕುಳಿತುಕೊಂಡಿದ್ದ ಜನರೆಲ್ಲರೂ ಎದ್ದುನಿಂತು 31 ಅಲ್ಲಿಂದ ಹೊರಗೆ ಹೋದರು. ಅವರು ಒಬ್ಬರಿಗೊಬ್ಬರು, “ಈ ಮನುಷ್ಯನನ್ನು ಕೊಲ್ಲಬಾರದು ಅಥವಾ ಸೆರೆಮನೆಗೆ ಹಾಕಬಾರದು. ಇವನು ನಿಜವಾಗಿಯೂ ಕೆಟ್ಟದ್ದೇನೂ ಮಾಡಿಲ್ಲ!” ಎಂದು ಮಾತಾಡಿಕೊಂಡರು. 32 ಬಳಿಕ ಅಗ್ರಿಪ್ಪನು ಫೆಸ್ತನಿಗೆ, “ಇವನು ಸೀಸರನಿಗೆ ಬಿನ್ನಹ ಮಾಡಿಕೊಳ್ಳದಿದ್ದರೆ, ಇವನನ್ನು ಬಿಡುಗಡೆ ಮಾಡಬಹುದಿತ್ತು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International