M’Cheyne Bible Reading Plan
ಅಬ್ರಹಾಮನ ಕುಟುಂಬ
25 ಅಬ್ರಹಾಮನು ಮತ್ತೆ ಮದುವೆಯಾದನು. ಅವನ ಹೊಸ ಹೆಂಡತಿಯ ಹೆಸರು ಕೆಟೂರ. 2 ಆಕೆ ಅವನಿಗೆ; ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್, ಶೂಹ ಎಂಬವರನ್ನು ಹೆತ್ತಳು. 3 ಯೊಕ್ಷಾನನು ಶೆಬಾ ಮತ್ತು ದೆದಾನ್ ಎಂಬವರ ತಂದೆ. ದೆದಾನನ ಸಂತತಿಯವರು: ಅಶ್ಶೂರ್ಯರು ಲೆಟೂಶ್ಯರು ಮತ್ತು ಲೆಯುಮ್ಯರು. 4 ಮಿದ್ಯಾನನ ಗಂಡುಮಕ್ಕಳು: ಗೇಫಾ, ಗೇಫೆರ್, ಹನೋಕ್, ಅಬೀದಾ ಮತ್ತು ಎಲ್ದಾಗ. ಇವರೆಲ್ಲರೂ ಕೆಟೂರಳ ಸಂತತಿಯವರು. 5-6 ಅಬ್ರಹಾಮನು ಸಾಯುವುದಕ್ಕಿಂತ ಮುಂಚೆ ತನ್ನ ದಾಸಿಯ ಗಂಡುಮಕ್ಕಳಿಗೆ ಕೆಲವು ಉಡುಗೊರೆಗಳನ್ನು ಕೊಟ್ಟನು. ಅಬ್ರಹಾಮನು ಆ ಗಂಡುಮಕ್ಕಳನ್ನು ಪೂರ್ವದ ಕಡೆಯಲ್ಲಿದ್ದ ಕೆದೆಮೆಂಬ ದೇಶಕ್ಕೆ ಕಳುಹಿಸಿ ಅವರನ್ನು ಇಸಾಕನಿಂದ ದೂರಮಾಡಿದನು; ಬಳಿಕ ತನ್ನ ಆಸ್ತಿಯನ್ನೆಲ್ಲ ಇಸಾಕನಿಗೆ ಕೊಟ್ಟನು.
7 ಅಬ್ರಹಾಮನು ನೂರೆಪ್ಪತ್ತೈದು ವರ್ಷ ಜೀವಿಸಿದನು. 8 ಅವನು ಪೂರ್ಣಾಯುಷ್ಯದಿಂದ ದಿನತುಂಬಿದ ವೃದ್ಧನಾಗಿ ಪ್ರಾಣಬಿಟ್ಟು ತನ್ನ ಪಿತೃಗಳ ಬಳಿಗೆ ಸೇರಿದನು. 9 ಅವನ ಗಂಡುಮಕ್ಕಳಾದ ಇಸಾಕ ಮತ್ತು ಇಷ್ಮಾಯೇಲರು ಅವನನ್ನು ಮಕ್ಪೇಲದ ಗವಿಯಲ್ಲಿ ಸಮಾಧಿಮಾಡಿದರು. ಈ ಗವಿಯು ಹಿತ್ತಿಯನಾದ ಚೋಹರನ ಮಗ ಎಫ್ರೋನನ ಜಮೀನಿನಲ್ಲಿದೆ. ಅದು ಮಮ್ರೆಗೆ ಪೂರ್ವದಿಕ್ಕಿನಲ್ಲಿದೆ. 10 ಅಬ್ರಹಾಮನು ಹಿತ್ತಿಯರಿಂದ ಕೊಂಡುಕೊಂಡ ಈ ಗವಿಯಲ್ಲೇ ಅಬ್ರಹಾಮನನ್ನು ಅವನ ಹೆಂಡತಿಯಾದ ಸಾರಳ ಜೊತೆಯಲ್ಲಿ ಸಮಾಧಿಮಾಡಲಾಯಿತು. 11 ಅಬ್ರಹಾಮನು ತೀರಿಕೊಂಡ ಮೇಲೆ, ದೇವರು ಇಸಾಕನನ್ನು ಆಶೀರ್ವದಿಸಿದನು; ಇಸಾಕನು ಬೀರ್‌ಲಹೈರೋಯಿಯಲ್ಲಿ ತನ್ನ ಜೀವನವನ್ನು ಮುಂದುವರೆಸಿದನು.
12 ಇದು ಇಷ್ಮಾಯೇಲನ ವಂಶಾವಳಿ: ಇಷ್ಮಾಯೇಲನು ಅಬ್ರಹಾಮನ ಮತ್ತು ಹಾಗರಳ ಮಗನು. (ಈಜಿಪ್ಟಿನವಳಾದ ಹಾಗರಳು ಸಾರಳ ಸೇವಕಿ.) 13 ಇಷ್ಮಾಯೇಲನ ಗಂಡುಮಕ್ಕಳ ಹೆಸರುಗಳು: ಮೊದಲನೆ ಮಗನು ನೆಬಾಯೋತ್. ಆಮೇಲೆ ಹುಟ್ಟಿದವರು: ಕೇದಾರ್, ಅದ್ಬಯೇಲ್, ಮಿಬ್ಸಾಮ್, 14 ಮಿಷ್ಮಾ, ದೂಮಾ, ಮಸ್ಸಾ, 15 ಹದದ್, ತೇಮಾ, ಯಟೂರ್, ನಾಫೀಷ್ ಮತ್ತು ಕೇದ್ಮಾ. 16 ಪ್ರತಿಯೊಬ್ಬನೂ ತನ್ನದೇ ಆದ ಪಾಳೆಯವನ್ನು ಹೊಂದಿದ್ದನು. ಆ ಪಾಳೆಯಗಳೇ ಮುಂದೆ ಚಿಕ್ಕ ಪಟ್ಟಣಗಳಾದವು. ಈ ಹನ್ನೆರಡು ಮಂದಿ ಗಂಡುಮಕ್ಕಳು ತಮ್ಮ ಜನರಿಗೆ ಹನ್ನೆರಡು ಮಂದಿ ರಾಜರುಗಳಂತಿದ್ದರು. 17 ಇಷ್ಮಾಯೇಲನು ನೂರ ಮೂವತ್ತೇಳು ವರ್ಷ ಬದುಕಿದನು. ಅವನು ಸತ್ತ ನಂತರ ಅವನನ್ನು ತನ್ನ ಪೂರ್ವಜರ ಸಮಾಧಿಯಲ್ಲಿ ಹೂಣಿಟ್ಟರು. 18 ಇಷ್ಮಾಯೇಲನ ಸಂತತಿಯವರು ಮರುಭೂಮಿ ಪ್ರದೇಶದ ಉದ್ದಕ್ಕೂ ಪಾಳೆಯಗಳನ್ನು ಮಾಡಿಕೊಂಡಿದ್ದರು. ಈ ಪ್ರದೇಶವು ಹವೀಲ ಮತ್ತು ಈಜಿಪ್ಟಿನ ಸಮೀಪದಲ್ಲಿರುವ ಶೂರಿನಿಂದ ಆರಂಭಗೊಂಡು ಅಶ್ಶೂರದವರೆಗೂ ಇತ್ತು. ಇಷ್ಮಾಯೇಲನ ಸಂತತಿಗಳವರು ಪದೇಪದೇ ತಮ್ಮ ಸಹೋದರನ ಜನರಿಗೆ ವಿರೋಧವಾಗಿ ಆಕ್ರಮಣ ಮಾಡುತ್ತಿದ್ದರು.
ಇಸಾಕನ ಕುಟುಂಬ
19 ಇದು ಇಸಾಕನ ಚರಿತ್ರೆ. ಅಬ್ರಹಾಮನಿಗೆ ಇಸಾಕ ಎಂಬ ಹೆಸರಿನ ಮಗನಿದ್ದನು. 20 ಇಸಾಕನು ನಲವತ್ತು ವರ್ಷದವನಾಗಿದ್ದಾಗ ರೆಬೆಕ್ಕಳನ್ನು ಮದುವೆಯಾದನು. ರೆಬೆಕ್ಕಳು ಪದ್ದನ್ ಅರಾಮಿನವಳು. ಆಕೆ ಬೆತೂವೇಲನ ಮಗಳು ಮತ್ತು ಅರಾಮ್ಯನಾದ ಲಾಬಾನನ ತಂಗಿ. 21 ಇಸಾಕನ ಹೆಂಡತಿ ಮಕ್ಕಳನ್ನು ಪಡೆಯಲಾಗಲಿಲ್ಲ. ಆದ್ದರಿಂದ ಇಸಾಕನು ತನ್ನ ಹೆಂಡತಿಗೋಸ್ಕರ ಯೆಹೋವನಲ್ಲಿ ಪ್ರಾರ್ಥಿಸಿದನು. ಯೆಹೋವನು ಇಸಾಕನ ಪ್ರಾರ್ಥನೆಯನ್ನು ಕೇಳಿ ರೆಬೆಕ್ಕಳಿಗೆ ಗರ್ಭಧಾರಣೆಯನ್ನು ಅನುಗ್ರಹಿಸಿದನು.
22 ರೆಬೆಕ್ಕಳು ಗರ್ಭಿಣಿಯಾಗಿದ್ದಾಗ, ಅವಳ ಗರ್ಭದಲ್ಲಿದ್ದ ಕೂಸುಗಳು ಒಂದನ್ನೊಂದು ನೂಕಾಡಿದ್ದರಿಂದ ಅವಳು ಬಹಳ ತೊಂದರೆಪಡಬೇಕಾಯಿತು. ರೆಬೆಕ್ಕಳು ಯೆಹೋವನಿಗೆ ಪ್ರಾರ್ಥಿಸಿ, “ನನಗೇಕೆ ಹೀಗೆ ಆಗುತ್ತಿದೆ?” ಎಂದು ಕೇಳಿದಳು. 23 ಯೆಹೋವನು ಅವಳಿಗೆ,
“ನಿನ್ನ ಗರ್ಭದಲ್ಲಿ ಎರಡು ಜನಾಂಗಗಳಿವೆ.
ಎರಡು ಕುಟುಂಬಗಳನ್ನು ಆಳುವವರು ನಿನ್ನಲ್ಲಿ ಹುಟ್ಟುವರು;
ಅವರು ವಿಭಾಗವಾಗುವರು.
ಒಬ್ಬ ಮಗನು ಮತ್ತೊಬ್ಬನಿಗಿಂತ ಬಲಶಾಲಿಯಾಗಿರುವನು.
ದೊಡ್ಡ ಮಗನು ಚಿಕ್ಕ ಮಗನ ಸೇವೆ ಮಾಡುವನು”
ಎಂದು ಹೇಳಿದನು.
24 ದಿನ ತುಂಬಿದ ಮೇಲೆ ರೆಬೆಕ್ಕಳು ಅವಳಿಜವಳಿ ಮಕ್ಕಳನ್ನು ಹೆತ್ತಳು. 25 ಮೊದಲನೆಯ ಮಗುವು ಕೆಂಪಗಿತ್ತು. ಅವನ ಚರ್ಮವು ಕೂದಲಿನ ಉಡುಪಿನಂತಿತ್ತು. ಆದ್ದರಿಂದ ಅವನಿಗೆ “ಏಸಾವ್” ಎಂದು ಹೆಸರಿಡಲಾಯಿತು. 26 ಎರಡನೆಯ ಮಗು ಹುಟ್ಟಿದಾಗ ಅದು ಏಸಾವನ ಹಿಮ್ಮಡಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿತ್ತು. ಆದ್ದರಿಂದ ಆ ಮಗುವಿಗೆ “ಯಾಕೋಬ” ಎಂದು ಹೆಸರಿಡಲಾಯಿತು. ಯಾಕೋಬ ಮತ್ತು ಏಸಾವ ಹುಟ್ಟಿದಾಗ ಇಸಾಕನಿಗೆ ಅರವತ್ತು ವರ್ಷ ವಯಸ್ಸಾಗಿತ್ತು.
27 ಆ ಬಾಲಕರು ಬೆಳೆದು ದೊಡ್ಡವರಾದರು. ಏಸಾವನು ಚತುರ ಬೇಟೆಗಾರನಾದನು. ಹೊಲದಲ್ಲಿರುವುದು ಅವನಿಗೆ ಪ್ರಿಯವಾಗಿತ್ತು. ಆದರೆ ಯಾಕೋಬನು ಸಾಧು ಮನುಷ್ಯನಾಗಿದ್ದನು. ಅವನು ತನ್ನ ಗುಡಾರದಲ್ಲಿರುತ್ತಿದ್ದನು. 28 ಇಸಾಕನು ಏಸಾವನನ್ನು ಪ್ರೀತಿಸಿದನು. ಏಸಾವನು ಬೇಟೆಯಾಡಿ ತಂದ ಪ್ರಾಣಿಗಳ ಮಾಂಸ ಅವನಿಗೆ ಇಷ್ಟವಾಗಿತ್ತು. ಆದರೆ ರೆಬೆಕ್ಕಳು ಯಾಕೋಬನನ್ನು ಪ್ರೀತಿಸಿದಳು.
29 ಒಂದು ಸಲ ಏಸಾವನು ಬೇಟೆಯಿಂದ ಹಿಂತಿರುಗಿ ಬಂದಾಗ ಹಸಿವೆಯಿಂದ ಆಯಾಸಗೊಂಡಿದ್ದನು ಮತ್ತು ಬಲಹೀನನಾಗಿದ್ದನು. ಯಾಕೋಬನು ಅಲಸಂಧಿ ಗುಗ್ಗರಿ ಮಾಡುತ್ತಿದ್ದನು. 30 ಆಗ ಏಸಾವನು ಯಾಕೋಬನಿಗೆ, “ಹಸಿವೆಯಿಂದ ನನಗೆ ಆಯಾಸವಾಗಿದೆ. ನನಗೆ ಕೆಂಪಾದ ಸ್ವಲ್ಪ ಅಲಸಂದಿ ಗುಗ್ಗರಿಯನ್ನು ಕೊಡು” ಎಂದು ಕೇಳಿದನು. (ಈ ಕಾರಣದಿಂದ ಜನರು ಅವನಿಗೆ “ಏದೋಮ್” ಎಂದು ಕರೆಯುತ್ತಾರೆ.)
31 ಆದರೆ ಯಾಕೋಬನು, “ನಿನ್ನ ಚೊಚ್ಚಲತನದ ಹಕ್ಕನ್ನು ನೀನು ನನಗೆ ಈ ದಿನ ಮಾರಬೇಕು” ಎಂದು ಹೇಳಿದನು.
32 ಏಸಾವನು, “ನನಗೆ ಹಸಿವೆಯಿಂದ ಸಾಯುವಂತಾಗಿದೆ. ನಾನು ಸತ್ತುಹೋದರೆ, ನನ್ನ ತಂದೆಯ ಐಶ್ವರ್ಯವೆಲ್ಲ ನನಗೆ ಸಹಾಯ ಮಾಡಲಾರದು. ಆದ್ದರಿಂದ ನಾನು ನನ್ನ ಹಕ್ಕನ್ನು ನಿನಗೆ ಕೊಡುವೆನು” ಎಂದು ಹೇಳಿದನು.
33 ಆದರೆ ಯಾಕೋಬನು, “ನೀನು ಅದನ್ನು ಕೊಡುವುದಾಗಿ ಪ್ರಮಾಣಮಾಡು” ಅಂದನು. ಆದ್ದರಿಂದ ಏಸಾವನು ಯಾಕೋಬನಿಗೆ ಪ್ರಮಾಣ ಮಾಡಿದನು. ಹೀಗೆ ಏಸಾವನು ತನ್ನ ಚೊಚ್ಚಲತನದ ಹಕ್ಕನ್ನು ಯಾಕೋಬನಿಗೆ ಮಾರಿಕೊಂಡನು. 34 ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ ಕುದಿಸಿದ ಅಲಸಂಧಿ ಗುಗ್ಗರಿಯನ್ನೂ ಕೊಟ್ಟನು. ಏಸಾವನು ತಿಂದು ಕುಡಿದು ಅಲ್ಲಿಂದ ಹೊರಟುಹೋದನು. ಹೀಗೆ ಏಸಾವನು ತನ್ನ ಚೊಚ್ಚಲತನದ ಹಕ್ಕುಗಳ ಮೇಲೆ ತನಗೆ ಚಿಂತೆಯಿಲ್ಲದಿರುವುದನ್ನು ತೋರಿಸಿಕೊಂಡನು.
ನೆಲಸಮವಾಗಲಿರುವ ಮಹಾದೇವಾಲಯ
(ಮಾರ್ಕ 13:1-31; ಲೂಕ 21:5-33)
24 ಯೇಸು ದೇವಾಲಯದಿಂದ ಹೋಗುತ್ತಿದ್ದಾಗ ಆತನ ಶಿಷ್ಯರು ದೇವಾಲಯದ ಕಟ್ಟಡಗಳನ್ನು ತೋರಿಸಲು ಆತನ ಬಳಿಗೆ ಬಂದರು. 2 ಆಗ ಯೇಸು “ಈ ಕಟ್ಟಡಗಳನ್ನೆಲ್ಲ ನೋಡುತ್ತಿದ್ದೀರಾ? ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಇವುಗಳೆಲ್ಲಾ ನಾಶವಾಗುತ್ತವೆ. ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದಂತೆ ಎಲ್ಲಾ ಕಲ್ಲುಗಳು ಕೆಡವಲ್ಪಡುತ್ತವೆ” ಎಂದು ಹೇಳಿದನು.
3 ಬಳಿಕ ಯೇಸು ಆಲಿವ್ ಗುಡ್ಡದ ಮೇಲೆ ಕುಳಿತುಕೊಂಡಿದ್ದಾಗ, ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಇವುಗಳೆಲ್ಲಾ ಯಾವಾಗ ಸಂಭವಿಸುತ್ತವೆ! ನೀನು ಈ ಲೋಕಕ್ಕೆ ಮತ್ತೊಮ್ಮೆ ಬರುವಾಗ ಮತ್ತು ಲೋಕದ ಸಮಾಪ್ತಿಯ ಸಮಯ ಬಂದಾಗ ಸೂಚನೆಗಾಗಿ ಏನು ಸಂಭವಿಸುವುದು? ನಮಗೆ ತಿಳಿಸು!” ಎಂದು ಕೇಳಿದರು.
4 ಯೇಸು ಅವರಿಗೆ ಕೊಟ್ಟ ಉತ್ತರವಿದು: “ಎಚ್ಚರವಾಗಿರಿ! ನಿಮ್ಮನ್ನು ಮೋಸಗೊಳಿಸಲು ಯಾರಿಗೂ ಅವಕಾಶ ಕೊಡಬೇಡಿ. 5 ಅನೇಕರು ನನ್ನ ಹೆಸರಿನಲ್ಲಿ ಬಂದು, ‘ನಾನೇ ಕ್ರಿಸ್ತನು’ ಎಂದು ಹೇಳಿ ಅನೇಕರನ್ನು ಮೋಸಪಡಿಸುವರು. 6 ನಿಮ್ಮ ಸಮೀಪದಲ್ಲಿ ನಡೆಯುತ್ತಿರುವ ಯುದ್ಧಗಳ ಶಬ್ದವನ್ನೂ ಬಹು ದೂರದಲ್ಲಿ ನಡೆಯುತ್ತಿರುವ ಯುದ್ಧಗಳ ಸುದ್ದಿಯನ್ನೂ ನೀವು ಕೇಳುವಿರಿ. ಆದರೆ ಹೆದರಬೇಡಿ. ಅಂತ್ಯವು ಬರುವುದಕ್ಕಿಂತ ಮುಂಚೆ ಇವುಗಳು ಸಂಭವಿಸಲೇಬೇಕು. 7 ಜನಾಂಗಗಳು ಬೇರೆ ಜನಾಂಗಗಳಿಗೆ ವಿರೋಧವಾಗಿ ಯುದ್ದ ಮಾಡುತ್ತವೆ. ರಾಜ್ಯಗಳು ಬೇರೆಬೇರೆ ರಾಜ್ಯಗಳಿಗೆ ವಿರೋಧವಾಗಿ ಯುದ್ಧ ಮಾಡುತ್ತವೆ. ಬರಗಾಲಗಳು ಬರುತ್ತವೆ. ಬೇರೆಬೇರೆ ಸ್ಥಳಗಳಲ್ಲಿ ಭೂಕಂಪಗಳು ಆಗುತ್ತವೆ. 8 ಇವೆಲ್ಲಾ ಪ್ರಸವವೇದನೆಯ ಆರಂಭವಷ್ಟೇ.
9 “ಆಗ ಜನರು ನಿಮ್ಮನ್ನು ಹಿಂಸಿಸಿ, ಮರಣದಂಡನೆ ವಿಧಿಸಲು ಅಧಿಕಾರಿಗಳಿಗೆ ಒಪ್ಪಿಸಿಕೊಡುವರು. ಜನರೆಲ್ಲರೂ ನಿಮ್ಮನ್ನು ವಿರೋಧಿಸುವರು. ನೀವು ನನ್ನಲ್ಲಿ ನಂಬಿಕೆ ಇಟ್ಟದ್ದಕ್ಕಾಗಿ ಇವುಗಳೆಲ್ಲಾ ನಿಮಗೆ ಸಂಭವಿಸುವವು. 10 ಆ ಸಮಯದಲ್ಲಿ ಅನೇಕ ವಿಶ್ವಾಸಿಗಳು ತಮ್ಮ ನಂಬಿಕೆಯನ್ನು ಕಳೆದುಕೊಳ್ಳುವರು. ಅವರು ಒಬ್ಬರಿಗೊಬ್ಬರಿಗೆ ವಿರೋಧವಾಗಿ ತಿರುಗಿಕೊಂಡು ಒಬ್ಬರನ್ನೊಬ್ಬರು ದ್ವೇಷಿಸುವರು. 11 ಅನೇಕ ಸುಳ್ಳುಪ್ರವಾದಿಗಳು ಬಂದು ಎಷ್ಟೋ ಜನರನ್ನು ವಂಚಿಸುವರು. 12 ಲೋಕದಲ್ಲಿ ದುಷ್ಟತನವು ಹೆಚ್ಚಾಗಿ ಬಹುಜನ ವಿಶ್ವಾಸಿಗಳ ಪ್ರೀತಿಯು ಅಡಗಿಹೋಗುವುದು. 13 ಆದರೆ ಕಡೆಯವರೆಗೂ ದೃಢವಾಗಿರುವವನು ರಕ್ಷಣೆಹೊಂದುತ್ತಾನೆ. 14 ದೇವರ ರಾಜ್ಯದ ಶುಭವಾರ್ತೆಯನ್ನು ಲೋಕದಲ್ಲೆಲ್ಲಾ ಪ್ರತಿ ಜನಾಂಗಕ್ಕೂ ಸಾರಲಾಗುವುದು. ಆಗ ಅಂತ್ಯವು ಬರುತ್ತದೆ.
15 “ಭಯಂಕರವಾದ ನಾಶಕ್ಕೆ ಕಾರಣವಾದ ವಸ್ತುವೊಂದನ್ನು[a] ಕುರಿತು ಪ್ರವಾದಿ ದಾನಿಯೇಲನು ಹೇಳಿದ್ದಾನೆ. ಈ ಭಯಂಕರವಾದ ವಸ್ತುವು ದೇವಾಲಯದ ಪರಿಶುದ್ಧ ಸ್ಥಳದಲ್ಲಿ ನಿಂತಿರುವುದನ್ನು ನೀವು ನೋಡುವಿರಿ. (ಇದನ್ನು ಓದುತ್ತಿರುವವನು ಇದರ ಅರ್ಥವನ್ನು ಗ್ರಹಿಸಿಕೊಳ್ಳಲಿ.) 16 ಆ ಸಮಯದಲ್ಲಿ ಜುದೇಯದಲ್ಲಿರುವ ಜನರು ಬೆಟ್ಟಗಳಿಗೆ ಓಡಿಹೋಗಲಿ. 17 ಮಾಳಿಗೆಯ ಮೇಲಿರುವವನು ಇಳಿದು ತನ್ನ ವಸ್ತುಗಳನ್ನು ಮನೆಯಿಂದ ತೆಗೆದುಕೊಳ್ಳದೆ ಓಡಿಹೋಗಲಿ. 18 ಹೊಲದಲ್ಲಿರುವವನು ತನ್ನ ಮೇಲಂಗಿಯನ್ನು ತೆಗೆದುಕೊಳ್ಳುವುದಕ್ಕಾಗಿ ಮನೆಗೆ ಹಿಂತಿರುಗದಿರಲಿ.
19 “ಆ ಸಮಯದಲ್ಲಿ ಗರ್ಭಿಣಿಯರಿಗೂ ಮೊಲೆಕೂಸುಗಳಿರುವ ಸ್ತ್ರೀಯರಿಗೂ ಎಂಥಾ ಗೋಳಾಟ! 20 ನೀವು ಓಡಿಹೋಗಬೇಕಾದ ಈ ಸಮಯವು ಚಳಿಗಾಲದಲ್ಲಾಗಲಿ ಸಬ್ಬತ್ ದಿನದಲ್ಲಾಗಲಿ ಬರದಂತೆ ಪ್ರಾರ್ಥಿಸಿರಿ. 21 ಏಕೆಂದರೆ ಆ ಸಮಯದಲ್ಲಿ ಮಹಾ ಸಂಕಟ ಇರುವುದು. ಲೋಕವು ಸೃಷ್ಟಿಯಾದಂದಿನಿಂದ ಇಂಥ ಸಂಕಟವು ಎಂದೂ ಸಂಭವಿಸಿಲ್ಲ. ಇನ್ನು ಮುಂದೆಯೂ ಸಂಭವಿಸುವುದಿಲ್ಲ.
22 “ದೇವರು ಭಯಂಕರವಾದ ಆ ಸಮಯವನ್ನು ಕಡಿಮೆಗೊಳಿಸಲು ತೀರ್ಮಾನಿಸಿದ್ದಾನೆ. ಇಲ್ಲವಾದರೆ, ಜೀವದಿಂದ ಉಳಿಯಲು ಯಾರಿಗೂ ಸಾಧ್ಯವಿಲ್ಲ. ತಾನು ಆರಿಸಿಕೊಂಡ ಜನರ ನಿಮಿತ್ತ ದೇವರು ಆ ಸಮಯವನ್ನು ಕಡಿಮೆ ಮಾಡಿದ್ದಾನೆ.
23 “ಆ ಸಮಯದಲ್ಲಿ ಕೆಲವರು ನಿಮಗೆ, ‘ನೋಡಿ, ಕ್ರಿಸ್ತನು ಅಲ್ಲಿದ್ದಾನೆ!’ ಎಂದು ಹೇಳಬಹುದು. ಇಲ್ಲವೆ ಬೇರೊಬ್ಬನು, ‘ಆತನು ಇಲ್ಲಿದ್ದಾನೆ!’ ಎಂದು ಹೇಳಬಹುದು. ಆದರೆ ಅವರನ್ನು ನಂಬಬೇಡಿ. 24 ಸುಳ್ಳುಕ್ರಿಸ್ತರು ಮತ್ತು ಸುಳ್ಳುಪ್ರವಾದಿಗಳು ಬಂದು ದೇವರು ಆರಿಸಿಕೊಂಡಿರುವ ಜನರನ್ನು ಮೋಸಗೊಳಿಸುವುದಕ್ಕಾಗಿ ಮಹತ್ಕಾರ್ಯಗಳನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡುವರು. 25 ಅದು ಸಂಭವಿಸುವುದಕ್ಕೆ ಮುಂಚೆಯೇ ನಾನು ಅದರ ವಿಷಯವಾಗಿ ನಿಮಗೆ ಎಚ್ಚರಿಕೆ ಕೊಟ್ಟಿದ್ದೇನೆ.
26 “‘ಕ್ರಿಸ್ತನು ಅಡವಿಯಲ್ಲಿದ್ದಾನೆ!’ ಎಂದು ಕೆಲವರು ಹೇಳಿದರೆ ಅಡವಿಗೆ ಹೋಗಬೇಡಿ. ‘ಕ್ರಿಸ್ತನು ಆ ಕೋಣೆ ಒಳಗೆ ಇದ್ದಾನೆ!’ ಎಂದು ಹೇಳಿದರೆ ಅದನ್ನು ನಂಬಬೇಡಿ. 27 ಮನುಷ್ಯಕುಮಾರನು ಜನರಿಗೆಲ್ಲ ಕಾಣಿಸುವಂತೆ ಬರುತ್ತಾನೆ. ಮನುಷ್ಯಕುಮಾರನ ಪ್ರತ್ಯಕ್ಷತೆಯು ಆಕಾಶದಲ್ಲಿ ಮಿಂಚು ಹೊಳೆಯುವಂತೆ ಪ್ರಕಾಶಿಸುತ್ತಾ ಲೋಕದ ಎಲ್ಲಾ ಕಡೆಗಳಲ್ಲೂ ಕಾಣಿಸುವುದು. 28 ಹದ್ದುಗಳು ಎಲ್ಲಿ ಕೂಡಿಬರುತ್ತವೆಯೋ ಅಲ್ಲಿ ಹೆಣವಿರುತ್ತದೆ ಎಂಬುದು ನಿಮಗೆ ಗೊತ್ತೇ ಇದೆ. ಅದೇ ರೀತಿ ನನ್ನ ಬರುವಿಕೆಯೂ ಸ್ಪಷ್ಟವಾಗಿರುವುದು.
29 “ಆ ದಿನಗಳ ಸಂಕಟವು ತೀರಿದ ಕೂಡಲೇ,
‘ಸೂರ್ಯನು ಕತ್ತಲಾಗುವನು.
ಚಂದ್ರನು ಕಾಂತಿಹೀನನಾಗುವನು.
ನಕ್ಷತ್ರಗಳು ಆಕಾಶದಿಂದ ಕಳಚಿಬೀಳುವವು.
ಆಕಾಶಮಂಡಲವು ಕಂಪಿಸುವುದು.’(A)
30 “ಆಗ ಮನುಷ್ಯಕುಮಾರನ ಆಗಮನದ ಸೂಚನೆಯು ಆಕಾಶದಲ್ಲಿ ಕಾಣಿಸಿಕೊಳ್ಳುವುದು. ಲೋಕದ ಜನರೆಲ್ಲಾ ಗೋಳಾಡುವರು. ಆಕಾಶದಲ್ಲಿ ಮೇಘಗಳ ಮೇಲೆ ಆತನು ಬರುವುದನ್ನು ಜನರೆಲ್ಲರೂ ನೋಡುವರು. ಆತನು ಶಕ್ತಿಸಾಮರ್ಥ್ಯದಿಂದಲೂ ಮಹಿಮೆಯಿಂದಲೂ ಬರುವನು. 31 ಮಹಾಶಬ್ದದ ತುತ್ತೂರಿಯ ಘೋಷಣೆಯೊಡನೆ ಮನುಷ್ಯಕುಮಾರನು ತನ್ನ ದೂತರನ್ನು ಭೂಮಿಯ ಎಲ್ಲಾ ಕಡೆಗೆ ಕಳುಹಿಸುವನು. ಆತನು ಆರಿಸಿಕೊಂಡವರನ್ನು ದೇವದೂತರು ಭೂಲೋಕದ ಎಲ್ಲಾ ಕಡೆಗಳಿಂದಲೂ ಒಟ್ಟುಗೂಡಿಸುವರು.
32 “ಅಂಜೂರದ ಮರವು ನಮಗೆ ಒಂದು ಪಾಠವನ್ನು ಕಲಿಸುತ್ತದೆ. ಅಂಜೂರದ ಮರದ ಕೊಂಬೆಗಳು ಹಸುರಾಗಿ ಎಳೆಯದಾಗಿದ್ದು ಹೊಸ ಎಲೆಗಳು ಬೆಳೆಯುವುದಕ್ಕೆ ಪ್ರಾರಂಭಿಸಿದಾಗ, ಬೇಸಿಗೆಯು ಹತ್ತಿರವಾಯಿತೆಂದು ನೀವು ತಿಳಿದುಕೊಳ್ಳುತ್ತೀರಿ. 33 ನಾನು ನಿಮಗೆ ಹೇಳಿದ ಈ ಸಂಗತಿಗಳಿಗೂ ಅದು ಅನ್ವಯಿಸುತ್ತದೆ. ಈ ಸಂಗತಿಗಳೆಲ್ಲಾ ಸಂಭವಿಸುತ್ತಿರುವುದನ್ನು ನೀವು ನೋಡುವಾಗ ಆ ಸಮಯ ಹತ್ತಿರವಾಯಿತೆಂದೂ ಬರುವುದಕ್ಕೆ ಸಿದ್ಧವಾಗಿದೆಯೆಂದೂ ತಿಳಿದುಕೊಳ್ಳುವಿರಿ. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. 34 ಇಂದಿನ ಜನರು ಇನ್ನೂ ಜೀವಿಸಿರುವಾಗಲೇ ಈ ಎಲ್ಲಾ ಸಂಗತಿಗಳು ಸಂಭವಿಸುತ್ತವೆ! 35 ಭೂಮಿಯೂ ಆಕಾಶವೂ ನಾಶವಾಗುತ್ತವೆ, ಆದರೆ ನಾನು ಹೇಳಿದ ಮಾತುಗಳು ನಾಶವಾಗುವುದೇ ಇಲ್ಲ!
ಆ ಸಮಯ ದೇವರೊಬ್ಬನಿಗೆ ಗೊತ್ತಿದೆ
(ಮಾರ್ಕ 13:32,35; ಲೂಕ 17:26-30,34-36)
36 “ಆ ದಿನವು ಇಲ್ಲವೆ ಆ ಸಮಯವು ಯಾವಾಗ ಬರುತ್ತದೆ ಎಂಬುದು ಯಾರಿಗೂ ತಿಳಿಯದು. ಮಗನಿಗೂ ಮತ್ತು ಪರಲೋಕದಲ್ಲಿರುವ ದೇವದೂತರಿಗೂ ಆ ದಿನವು ಅಥವಾ ಆ ಸಮಯವು ಯಾವಾಗ ಬರುತ್ತದೆ ಎಂಬುದು ತಿಳಿಯದು. ತಂದೆಗೆ ಮಾತ್ರ ಗೊತ್ತಿದೆ.
37 “ನೋಹನ ಕಾಲದಲ್ಲಿ ಸಂಭವಿಸಿದಂತೆಯೇ ಮನುಷ್ಯಕುಮಾರನು ಬರುವಾಗಲೂ ಸಂಭವಿಸುತ್ತದೆ. 38 ಜಲಪ್ರಳಯಕ್ಕಿಂತ ಮುಂಚೆ ಜನರು ತಿನ್ನುತ್ತಿದ್ದರು, ಕುಡಿಯುತ್ತಿದ್ದರು, ಮದುವೆಯಾಗುತ್ತಿದ್ದರು ಮತ್ತು ತಮ್ಮ ಮಕ್ಕಳಿಗೂ ಮದುವೆ ಮಾಡಿಕೊಡುತ್ತಾ ಇದ್ದರು. ನೋಹನು ನಾವೆಯೊಳಗೆ ಹೋಗುವ ತನಕ ಜನರು ಅವುಗಳನ್ನು ಮಾಡುತ್ತಲೇ ಇದ್ದರು. 39 ಏನು ಸಂಭವಿಸುತ್ತಿದೆ ಎಂಬುದು ಅವರಿಗೆ ತಿಳಿದಿರಲಿಲ್ಲ. ಆಗ ಜಲಪ್ರಳಯವು ಬಂದು ಆ ಜನರನ್ನೆಲ್ಲಾ ನಾಶಮಾಡಿತು.
“ಮನುಷ್ಯಕುಮಾರನು ಬರುವಾಗಲೂ ಅದೇ ರೀತಿಯಾಗುವುದು. 40 ಹೊಲದಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡುತ್ತಿದ್ದರೆ ಒಬ್ಬನನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು. 41 ಇಬ್ಬರು ಹೆಂಗಸರು ಬೀಸುವ ಕಲ್ಲಿನಲ್ಲಿ ಧಾನ್ಯ ಬೀಸುತ್ತಿದ್ದರೆ ಅವರಲ್ಲಿ ಒಬ್ಬಳನ್ನು ತೆಗೆದುಕೊಳ್ಳಲಾಗುವುದು ಮತ್ತೊಬ್ಬಳನ್ನು ಬಿಡಲಾಗುವುದು.
42 “ಆದ್ದರಿಂದ ಯಾವಾಗಲೂ ಸಿದ್ಧವಾಗಿರಿ. ನಿಮ್ಮ ಪ್ರಭು ಬರುವ ದಿನ ನಿಮಗೆ ತಿಳಿಯದು. 43 ಇದನ್ನು ಜ್ಞಾಪಿಸಿಕೊಳ್ಳಿ. ಕಳ್ಳನು ಯಾವಾಗ ಬರುತ್ತಾನೆಂದು ಮನೆಯ ಯಜಮಾನನಿಗೆ ತಿಳಿದಿದ್ದರೆ, ಅವನು ಎಚ್ಚರವಾಗಿದ್ದು ಕಳ್ಳನನ್ನು ಮನೆಯೊಳಗೆ ಬರಗೊಡಿಸುತ್ತಿರಲಿಲ್ಲ. 44 ಆದ್ದರಿಂದ ನೀವು ಸಹ ಸಿದ್ಧವಾಗಿರಿ. ನೀವು ನೆನಸದ ಸಮಯದಲ್ಲಿ ಮನುಷ್ಯಕುಮಾರನು ಬರುತ್ತಾನೆ.
ಒಳ್ಳೆಯ ಸೇವಕ ಮತ್ತು ದುಷ್ಟ ಸೇವಕ
(ಮಾರ್ಕ 13:33-37; ಲೂಕ 12:41-48)
45 “ವಿವೇಕಿಯೂ ನಂಬಿಗಸ್ತನೂ ಆದ ಸೇವಕನು ಯಾರು? ಇತರ ಸೇವಕರಿಗೆ ಆಹಾರವನ್ನು ತಕ್ಕ ಸಮಯದಲ್ಲಿ ಕೊಡುವುದಕ್ಕಾಗಿ ಯಜಮಾನನು ಯಾವ ಸೇವಕನ ಮೇಲೆ ಭರವಸೆಯಿಡುತ್ತಾನೋ ಅವನೇ. 46 ತನಗೆ ಕೊಟ್ಟ ಕೆಲಸವನ್ನು ಮಾಡುತ್ತಿರುವಾಗ ಯಜಮಾನನು ಬಂದರೆ ಆ ಸೇವಕನಿಗೆ ಬಹಳ ಸಂತೋಷವಾಗುತ್ತದೆ. 47 ನಾನು ನಿಮಗೆ ಸತ್ಯವನ್ನೇ ಹೇಳುತ್ತೇನೆ. ಆ ಯಜಮಾನನು ತನ್ನ ಆಸ್ತಿಗೆಲ್ಲಾ ಆ ಸೇವಕನನ್ನು ಮೇಲ್ವಿಚಾರಕನನ್ನಾಗಿ ನೇಮಿಸುವನು.
48 “ಆದರೆ ಸೇವಕನು ದುಷ್ಟನಾಗಿದ್ದರೆ ಮತ್ತು ತನ್ನ ಯಜಮಾನನು ಬೇಗನೆ ಹಿಂತಿರುಗಿ ಬರುವುದಿಲ್ಲ ಎಂದು ನೆನಸಿಕೊಂಡಿದ್ದರೆ ಅವನಿಗೆ ಏನು ಸಂಭವಿಸುತ್ತದೆ? 49 ಆ ಸೇವಕನು ಇತರ ಸೇವಕರನ್ನು ಹೊಡೆಯುತ್ತಾ ತನ್ನಂಥ ಜನರೊಂದಿಗೆ ಸೇರಿಕೊಂಡು ತಿನ್ನುತ್ತಾ ಕುಡಿಯುತ್ತಾ ಇರುವನು. 50 ಹೀಗೆ ಅವನಿನ್ನೂ ಸಿದ್ಧನಾಗಿಲ್ಲದಿರುವಾಗ ಯಜಮಾನನು ಅನಿರೀಕ್ಷಿತವಾಗಿ ಬಂದು 51 ಅವನನ್ನು ಶಿಕ್ಷಿಸಿ ಕಪಟಿಗಳಿರುವ ಸ್ಥಳಕ್ಕೆ ನೂಕಿಸುವನು. ಆ ಸ್ಥಳದಲ್ಲಿ ಜನರು ಬಾಧೆಯಿಂದ ಗೋಳಾಡುತ್ತಾ ತಮ್ಮ ಹಲ್ಲುಗಳನ್ನು ಕಡಿಯುತ್ತಾ ಇರುವರು.
ವಷ್ಟಿ ರಾಣಿಯು ರಾಜಾಜ್ಞೆಯನ್ನು ತಿರಸ್ಕರಿಸಿದ್ದು
1 ಅಹಷ್ವೇರೋಷನು ರಾಜನಾಗಿದ್ದಾಗ ನಡೆದ ಘಟನೆ. ಹಿಂದೂಸ್ಥಾನದಿಂದ ಇಥಿಯೋಪ್ಯದ ತನಕ ನೂರಿಪ್ಪತ್ತೇಳು ಸಂಸ್ಥಾನಗಳನ್ನು ಅವನು ಆಳುತ್ತಿದ್ದನು. 2 ಅವನ ರಾಜ್ಯದ ರಾಜಧಾನಿ ನಗರವಾಗಿದ್ದ ಶೂಷನ್‌ನಲ್ಲಿಯ ಸಿಂಹಾಸನದಿಂದ ಅರಸನು ರಾಜ್ಯವಾಳುತ್ತಿದ್ದನು.
3 ತನ್ನ ಆಳ್ವಿಕೆಯ ಮೂರನೆ ವರ್ಷದಲ್ಲಿ ರಾಜ್ಯದ ಅಧಿಕಾರಿಗಳಿಗೂ ನಾಯಕರುಗಳಿಗೂ ಒಂದು ಔತಣವನ್ನು ಏರ್ಪಡಿಸಿದನು. ಮೇದ್ಯ. ಪರ್ಶಿಯದ ಎಲ್ಲಾ ಸೈನ್ಯಾಧಿಕಾರಿಗಳೂ ಪ್ರಧಾನರೂ ಔತಣದಲ್ಲಿ ಭಾಗವಹಿಸಿದ್ದರು. 4 ಔತಣ ಸಮಾರಂಭವು ನೂರೆಂಭತ್ತು ದಿವಸಗಳ ತನಕ ಮುಂದುವರೆಯಿತು. ಆ ಸಮಯದಲ್ಲಿ ತನ್ನ ರಾಜ್ಯದ ಸಕಲ ವೈಭವವನ್ನೂ ಅರಮನೆಯ ಐಶ್ವರ್ಯವನ್ನೂ ಅತಿಥಿಗಳಿಗೆ ಪ್ರದರ್ಶಿಸಿದನು. 5 ಆ ನೂರೆಂಭತ್ತು ದಿವಸಗಳು ಕಳೆದ ಬಳಿಕ ಅಹಷ್ವೇರೋಷನು ಮತ್ತೆ ಇನ್ನೊಂದು ಔತಣವನ್ನು ಒಂದು ವಾರದ ತನಕ ಮುಂದುವರಿಸಿದನು. ಇದು ಅರಮನೆಯ ಒಳ ಉದ್ಯಾನವನದಲ್ಲಿ ನಡೆಯಿತು. ಇದಕ್ಕೆ ಶೂಷನ್ ನಗರದಿಂದ ಗಣ್ಯರು, ಸಾಮಾನ್ಯರು ಎಂಬ ಭೇದಭಾವವಿಲ್ಲದೆ ಎಲ್ಲರೂ ಆಮಂತ್ರಿಸಲ್ಪಟ್ಟಿದ್ದರು. 6 ಆ ಒಳ ಉದ್ಯಾನವನವು ಬಿಳಿ ಮತು ನೀಲಿಬಣ್ಣಗಳ ಬಟ್ಟೆಗಳಿಂದ ಶೃಂಗರಿಸಲ್ಪಟ್ಟಿತ್ತು. ಅವುಗಳನ್ನು ಬಿಳಿ ಮತ್ತು ನೇರಳೆ ಬಣ್ಣದ ದಾರಗಳಿಂದ ಬೆಳ್ಳಿಯ ಉಂಗುರಗಳಲ್ಲಿ ಕಟ್ಟಲ್ಪಟ್ಟ ಅಮೃತಶಿಲೆಯ ಕಂಬಗಳಿಗೆ ತೂಗುಹಾಕಿದ್ದರು. ಬೆಲೆಬಾಳುವ ಕಲ್ಲುಗಳಿಂದಲೂ ಮುತ್ತು ಚಿಪ್ಪು, ರತ್ನಶಿಲೆಗಳಿಂದಲೂ ಅಲಂಕೃತವಾದ ನೆಲದ ಮೇಲೆ ಬೆಳ್ಳಿಬಂಗಾರಗಳಿಂದ ಮಾಡಿದ್ದ ಆಸನಗಳನ್ನಿಟ್ಟರು. 7 ಅತಿಥಿಗಳಿಗೆ ಬಂಗಾರದ ಪಾನಪಾತ್ರೆಯಲ್ಲಿ ದ್ರಾಕ್ಷಾರಸವನ್ನು ಕುಡಿಯಲು ಕೊಟ್ಟರು. ಬೇರೆಬೇರೆ ವಿಧದ ಪಾತ್ರೆಗಳನ್ನು ಉಪಯೋಗಿಸಲಾಗಿತ್ತು. ರಾಜನ ಔದಾರ್ಯಕ್ಕೆ ತಕ್ಕಂತೆ ದ್ರಾಕ್ಷಾರಸವು ಧಾರಾಳವಾಗಿ ಹಂಚಲ್ಪಡುತ್ತಿತ್ತು. 8 ತಮ್ಮ ಇಷ್ಟಾನುಸಾರವಾಗಿ ದ್ರಾಕ್ಷಾರಸವನ್ನು ಕುಡಿಯಲು ಅತಿಥಿಗಳಿಗೆ ಕೊಡಬೇಕೆಂದು ಸೇವಕರಿಗೆ ರಾಜಾಜ್ಞೆಯಾಗಿತ್ತು. ರಾಜಸೇವಕರು ಆ ಆಜ್ಞೆಯನ್ನು ಪಾಲಿಸಿದರು.
9 ರಾಜನ ಅರಮನೆಯಲ್ಲಿ ವಷ್ಟಿರಾಣಿಯೂ ಅದೇ ಪ್ರಕಾರ ಸ್ತ್ರೀಯರಿಗೂ ಔತಣವನ್ನು ಮಾಡಿಸಿದ್ದಳು.
10-11 ಔತಣದ ಏಳನೆಯ ದಿವಸದಲ್ಲಿ ರಾಜನು ದ್ರಾಕ್ಷಾರಸ ಕುಡಿದು ಆನಂದಲಹರಿಯಲ್ಲಿದ್ದಾಗ ತನ್ನ ಆಸ್ಥಾನ ಕಂಚುಕಿಯರಾದ ಮೆಹೂಮಾನ್, ಬಿಜತಾ, ಹರ್ಬೋನಾ, ಬಿಗೆತಾ, ಅಬಗೆತಾ, ಜೀತರ್, ಕರ್ಕಸ್ ಎಂಬ ಏಳು ಮಂದಿಗೆ ಹೋಗಿ ವಷ್ಟಿರಾಣಿಯನ್ನು ತನ್ನ ರಾಜಮುಕುಟವನ್ನು ಧರಿಸಿ ಕರೆತರಲು ಆಜ್ಞಾಪಿಸಿದನು. ವಷ್ಟಿರಾಣಿಯು ಅತ್ಯಂತ ಸುಂದರಿಯಾಗಿದ್ದಳು. ಆಕೆಯ ಸೌಂದರ್ಯವನ್ನು ತನ್ನ ರಾಜ್ಯದ ಅಧಿಕಾರಿಗಳಿಗೆ ತೋರಿಸಬೇಕೆಂಬುದು ಅವನ ಅಪೇಕ್ಷೆಯಾಗಿತ್ತು.
12 ಆಸ್ಥಾನಸೇವಕರು ವಷ್ಟಿರಾಣಿಗೆ ರಾಜಾಜ್ಞೆಯನ್ನು ತಿಳಿಸಿದಾಗ ಆಕೆಯು ಬರಲು ನಿರಾಕರಿಸಿದಳು. ಇದರಿಂದ ರಾಜನು ಕೋಪೋದ್ರಿಕ್ತನಾದನು. 13-14 ಕಾನೂನು ಮತ್ತು ದಂಡನೆಗಳ ಬಗ್ಗೆ ಪರಿಣಿತರಾಗಿದ್ದ ಮಂತ್ರಿಗಳ ಸಲಹೆ ಕೇಳುವುದು ರಾಜನ ವಾಡಿಕೆಯಾಗಿತ್ತು. ಅದೇ ಪ್ರಕಾರ ರಾಜನು ತನ್ನ ಸಲಹೆಗಾರರೊಂದಿಗೆ ಈ ವಿಷಯವನ್ನು ಆಲೋಚಿಸಿದನು. ಇವರು ರಾಜನಿಗೆ ನಿಕಟವರ್ತಿಗಳಾಗಿದ್ದರು. ಅವರು ಯಾರೆಂದರೆ ಕರ್ಷೆನಾ, ಶೇತಾರ್, ಅದ್ಮಾತಾ, ತರ್ಷಿಷ್, ಮೆರೆಸ್, ಮರ್ಸೆನಾ, ಮೆಮೂಕಾನ್ ಎಂಬ ಏಳು ಮಂದಿ ಮೇದ್ಯ, ಪಾರಸಿಯ ಪ್ರಮುಖ ಅಧಿಕಾರಿಗಳು. 15 “ಆಸ್ಥಾನ ಸೇವಕರ ಮೂಲಕ ಹೇಳಿ ಕಳುಹಿಸಿದ ರಾಜಾಜ್ಞೆಯನ್ನು ವಷ್ಟಿ ರಾಣಿಯು ನಿರಾಕರಿಸಿದ್ದಾಳೆ. ಇಂಥಾ ತಪ್ಪಿಗೆ ಯಾವ ಶಿಕ್ಷೆಯನ್ನು ವಿಧಿಸಬೇಕು?” ಎಂದು ವಿಚಾರಿಸಿದನು.
16 ಇತರ ಅಧಿಕಾರಿಗಳು ಆಲಿಸುತ್ತಿದ್ದಾಗ ಮೆಮೂಕಾನ್ ಎದ್ದುನಿಂತು, “ರಾಣಿ ವಷ್ಟಿಯು ತಪ್ಪು ಮಾಡಿದಳು. ಇದು ರಾಜನಿಗೆ ವಿರುದ್ಧವಾಗಿ ಮಾತ್ರವೇ ಅಲ್ಲ, ರಾಜ್ಯದ ಸಕಲ ನಾಯಕರಿಗೂ ಸಂಸ್ಥಾನಗಳ ಎಲ್ಲಾ ಜನರಿಗೂ ವಿರುದ್ಧವಾದದ್ದು. 17 ಹೇಗೆಂದರೆ: ರಾಣಿಯು ಮಾಡಿದ್ದನ್ನು ರಾಜ್ಯದ ಇತರ ಸ್ತ್ರೀಯರು ಕೇಳಿ ತಾವೂ ತಮ್ಮ ಗಂಡಂದಿರಿಗೆ ಅವಿಧೇಯರಾಗುವರು. ಅವರು ತಮ್ಮ ಗಂಡಂದಿರಿಗೆ, ‘ರಾಜ ಅಹಷ್ವೇರೋಷನು ವಷ್ಟಿರಾಣಿಯನ್ನು ಕರೆದುಕೊಂಡು ಬರಬೇಕೆಂದು ಆಜ್ಞಾಪಿಸಿದನು, ಆದರೆ ಆಕೆ ಬರಲಿಲ್ಲ’ ಎಂದು ಹೇಳುವರು.
18 “ಪರ್ಶಿಯ ಮತ್ತು ಮೇದ್ಯ ನಾಯಕರುಗಳ ಹೆಂಡತಿಯರು ಸಹ ವಷ್ಟಿರಾಣಿ ಈ ಹೊತ್ತು ಮಾಡಿದ್ದನ್ನು ಕೇಳಿದ್ದಾರೆ. ಅವರು ಸಹ ವಷ್ಟಿರಾಣಿಯ ನಡತೆಯಿಂದ ಪ್ರೋತ್ಸಾಹಿತರಾಗಿ ರಾಜನ ಮುಖ್ಯ ನಾಯಕರುಗಳೊಡನೆ ಅದೇರೀತಿ ವರ್ತಿಸುವರು. ಇದರಿಂದಾಗಿ ಅಗೌರವವೂ ಕೋಪವೂ ತುಂಬಿಕೊಳ್ಳುತ್ತವೆ.
19 “ಆದ್ದರಿಂದ ರಾಜನು ಒಪ್ಪುವುದಾದರೆ ನನ್ನ ಸಲಹೆ ಏನೆಂದರೆ, ಅರಸನು ಒಂದು ರಾಜಾಜ್ಞೆಯನ್ನು ಹೊರಡಿಸಬೇಕು. ಆ ಆಜ್ಞೆಯು ಪರ್ಶಿಯ ಮತ್ತು ಮೇದ್ಯ ರಾಜಶಾಸನಗಳಲ್ಲಿ ಬರೆಯಲ್ಪಡಬೇಕು. ಪರ್ಶಿಯ ಮತ್ತು ಮೇದ್ಯ ರಾಜಶಾಸನಗಳು ಎಂದಿಗೂ ಬದಲಾಗುವದಿಲ್ಲ. ರಾಜಾಜ್ಞೆಯು ಏನೆಂದರೆ, ಅರಸನಾದ ಅಹಷ್ವೇರೋಷನ ಸನ್ನಿಧಿಗೆ ರಾಣಿಯು ಪ್ರವೇಶಿಸಲೇ ಕೂಡದು. ಮಾತ್ರವಲ್ಲ ರಾಜನು ವಷ್ಟಿ ರಾಣಿಯ ಸ್ಥಾನವನ್ನು ಆಕೆಗಿಂತ ಉತ್ತಮಳಾದ ಇನ್ನೊಬ್ಬಾಕೆಗೆ ಕೊಡಲಿ. 20 ಈ ರಾಜಶಾಸನವು ವಿಶಾಲ ಸಾಮ್ರಾಜ್ಯದ ಎಲ್ಲಾ ಕಡೆಗಳಲ್ಲಿ ಪ್ರಕಟಿಸಲ್ಪಟ್ಟಾಗ ಎಲ್ಲಾ ಹೆಂಡತಿಯರು ತಮ್ಮ ಗಂಡಂದಿರಿಗೆ ಗೌರವವನ್ನು ಸಲ್ಲಿಸುವರು. ಶ್ರೇಷ್ಠರೂ ಕನಿಷ್ಠರೂ ಆದ ಎಲ್ಲಾ ಸ್ತ್ರೀಯರು ತಮ್ಮ ಗಂಡಂದಿರಿಗೆ ಗೌರವವನ್ನು ಸಲ್ಲಿಸುವರು.”
21 ಅರಸನೂ ಅವನ ಪ್ರಮುಖ ಅಧಿಕಾರಿಗಳೂ ಈ ಸಲಹೆಯನ್ನು ಕೇಳಿ ಸಂತೋಷಪಟ್ಟರು ಮತ್ತು ಅಹಷ್ವೇರೋಷ ರಾಜನು ಮೆಮೂಕಾನ್ ಹೇಳಿದ ಹಾಗೆ ಮಾಡಿದನು. 22 ಅಹಷ್ವೇರೋಷನು ತನ್ನ ರಾಜ್ಯದ ಎಲ್ಲಾ ಕಡೆಗಳಿಗೆ, ಎಲ್ಲಾ ಸಂಸ್ಥಾನಗಳಿಗೆ ಅವರವರ ಭಾಷೆಯಲ್ಲಿ ಪತ್ರಗಳನ್ನು ಬರೆಯಿಸಿ ರವಾನಿಸಿದನು. ಅವರವರ ಭಾಷೆಯಲ್ಲಿ ಬರೆದ ಪತ್ರದಲ್ಲಿ ಪ್ರತಿಯೊಬ್ಬ ಗಂಡಸು ತನ್ನ ಸಂಸಾರವನ್ನು ಆಳಬೇಕು ಎಂಬುದಾಗಿ ಬರೆಯಲ್ಪಟ್ಟಿತ್ತು.
ಪೌಲನ ಮೇಲೆ ಯೆಹೂದ್ಯರ ದೋಷಾರೋಪಣೆ
24 ಐದು ದಿನಗಳ ನಂತರ, ಪ್ರಧಾನಯಾಜಕ ಅನನೀಯನು ಯೆಹೂದ್ಯರ ಹಿರೀನಾಯಕರಲ್ಲಿ ಕೆಲವರನ್ನು ಮತ್ತು ತೆರ್ತುಲ್ಲ ಎಂಬ ವಕೀಲನನ್ನು ಕರೆದುಕೊಂಡು ರಾಜ್ಯಪಾಲನ ಎದುರಿನಲ್ಲಿ ಪೌಲನ ಮೇಲೆ ದೋಷಾರೋಪಣೆ ಮಾಡಲು ಸೆಜರೇಯ ಪಟ್ಟಣಕ್ಕೆ ಹೋದನು. 2 ಪೌಲನನ್ನು ಸಭೆಗೆ ಕರೆಸಲಾಯಿತು. ಆಗ ತೆರ್ತುಲ್ಲನು ತನ್ನ ಆಪಾದನೆಗಳನ್ನು ಹೊರಿಸಲಾರಂಭಿಸಿದನು:
“ಮಹಾರಾಜಶ್ರೀಗಳಾದ ಫೇಲಿಕ್ಸನೇ, ನಿನ್ನ ದೆಸೆಯಿಂದಾಗಿ ನಮ್ಮ ಜನರು ಶಾಂತಿಯಿಂದ ಜೀವಿಸುತ್ತಿದ್ದಾರೆ. ನಿನ್ನ ವಿವೇಕದ ಸಹಾಯದಿಂದ ನಮ್ಮ ದೇಶದ ಅನೇಕ ದೋಷಗಳನ್ನು ಸರಿಪಡಿಸಿ ಸುಧಾರಣೆಗಳನ್ನು ಮಾಡಲಾಗಿದೆ. 3 ನಾವು ಇವುಗಳನ್ನು ಬಹು ಕೃತಜ್ಞತೆಯಿಂದ ಎಲ್ಲಾ ಸ್ಥಳಗಳಲ್ಲಿ ಯಾವಾಗಲೂ ಒಪ್ಪಿಕೊಳ್ಳುತ್ತೇವೆ. 4 ಆದರೆ ನಾನು ನಿನ್ನ ಸಮಯವನ್ನು ಇನ್ನೂ ಹೆಚ್ಚಿಗೆ ತೆಗೆದುಕೊಳ್ಳಬಯಸದೆ, ಕೆಲವೇ ಮಾತುಗಳಲ್ಲಿ ಹೇಳುವೆ. ದಯವಿಟ್ಟು ತಾಳ್ಮೆಯಿಂದಿರು. 5 ಈ ಮನುಷ್ಯನು (ಪೌಲನು) ಗಲಭೆ ಮಾಡುತ್ತಿದ್ದಾನೆ. ಯೆಹೂದ್ಯರು ಜಗತ್ತಿನಲ್ಲಿ ಎಲ್ಲೇ ಇರಲಿ, ಅಲ್ಲೆಲ್ಲಾ ಇವನು ಗಲಭೆಯನ್ನು ಎಬ್ಬಿಸುತ್ತಾನೆ. ಇವನು ‘ನಜರೇನ’ ಪಂಗಡದ ನಾಯಕನಾಗಿದ್ದಾನೆ. 6 ಅಲ್ಲದೆ, ಇವನು ದೇವಾಲಯವನ್ನು ಅಶುದ್ಧಗೊಳಿಸಲು ಪ್ರಯತ್ನಿಸಿದನು, ಆದರೆ ನಾವು ಇವನನ್ನು ತಡೆದೆವು. 7 [a] 8 ಸ್ವತಃ ನೀನೇ ಇವನಿಗೆ ಕೆಲವು ಪ್ರಶ್ನೆಗಳನ್ನು ಕೇಳು. ಆಗ ಈ ಸಂಗತಿಗಳೆಲ್ಲಾ ಸತ್ಯವಾಗಿವೆಯೋ ಇಲ್ಲವೋ ಎಂದು ನಿರ್ಣಯಿಸಲು ನಿನಗೆ ಸಾಧ್ಯವಾಗುವುದು.” 9 ಉಳಿದ ಯೆಹೂದ್ಯರು, “ಈ ಸಂಗತಿಗಳು ನಿಜವಾಗಿಯೂ ಸತ್ಯವಾದುವುಗಳು!” ಎಂದರು.
ಫೇಲಿಕ್ಸನ ಎದುರು ಪೌಲನ ಪ್ರತಿಪಾದನೆ
10 ರಾಜ್ಯಪಾಲನು ಪೌಲನಿಗೆ ಸನ್ನೆಮಾಡಿ, ಮಾತಾಡಲು ಸೂಚಿಸಿದನು. ಆಗ ಪೌಲನು ಹೀಗೆಂದನು: “ರಾಜ್ಯಪಾಲನಾದ ಫೇಲಿಕ್ಸನೇ, ನೀನು ಅನೇಕ ವರ್ಷಗಳಿಂದ ಈ ದೇಶಕ್ಕೆ ನ್ಯಾಯಾಧೀಶನಾಗಿರುವುದು ನನಗೆ ಗೊತ್ತಿದೆ. ಆದ್ದರಿಂದ ಸಂತೋಷದಿಂದ ನಿನ್ನ ಮುಂದೆ ನನ್ನನ್ನು ಪ್ರತಿಪಾದಿಸಿಕೊಳ್ಳುವೆನು. 11 ನಾನು ಆರಾಧನೆಗೋಸ್ಕರ ಜೆರುಸಲೇಮಿಗೆ ಹೋದದ್ದು ಕೇವಲ ಹನ್ನೆರಡು ದಿನಗಳ ಹಿಂದೆಯಷ್ಟೆ. ಅದು ಸತ್ಯವೆಂದು ಸ್ವತಃ ನೀನೇ ತಿಳಿದುಕೊಳ್ಳಬಲ್ಲೆ. 12 ನಾನು ದೇವಾಲಯದಲ್ಲಾಗಲಿ ಸಭಾಮಂದಿರಗಳಲ್ಲಾಗಲಿ ಪಟ್ಟಣದಲ್ಲಾಗಲಿ ಯಾರೊಂದಿಗಾದರೂ ವಾದ ಮಾಡುತ್ತಿರುವುದನ್ನು, ಇಲ್ಲವೆ ಜನರ ಗುಂಪು ಕೂಡಿಸುವುದನ್ನು ಇವರು ನೋಡಿಲ್ಲ. 13 ಈಗ ನನಗೆ ವಿರೋಧವಾಗಿ ಹೇಳುತ್ತಿರುವ ಸಂಗತಿಗಳನ್ನು ಈ ಯೆಹೂದ್ಯರು ನಿರೂಪಿಸಲಾರರು.
14 “ಆದರೆ ನಾನು ನಿನಗೆ ಹೇಳುವುದೇನೆಂದರೆ, ಯೇಸುವಿನ ಮಾರ್ಗದ ಹಿಂಬಾಲಕನಾದ ನಾನು ನಮ್ಮ ಪಿತೃಗಳ ದೇವರನ್ನು ಆರಾಧಿಸುತ್ತೇನೆ. ಯೇಸುವಿನ ಮಾರ್ಗವು ಸರಿಯಲ್ಲವೆಂದು ಯೆಹೂದ್ಯರು ಹೇಳುತ್ತಾರೆ. ಆದರೆ ಮೋಶೆಯ ಧರ್ಮಶಾಸ್ತ್ರದಲ್ಲಿಯೂ ಪ್ರವಾದಿಗಳ ಪುಸ್ತಕಗಳಲ್ಲಿಯೂ ಬರೆದಿರುವ ಪ್ರತಿಯೊಂದನ್ನು ನಾನು ನಂಬುತ್ತೇನೆ. 15 ಈ ಯೆಹೂದ್ಯರಿಗೆ ದೇವರಲ್ಲಿ ಯಾವ ನಿರೀಕ್ಷೆಯಿದೆಯೋ ಅದೇ ನಿರೀಕ್ಷೆ ನನಗೂ ಇದೆ. ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುತ್ತದೆ ಎಂಬುದೇ ಆ ನಿರೀಕ್ಷೆ. 16 ಈ ಕಾರಣದಿಂದ ನಾನು ಯಾವುದನ್ನು ಸರಿಯಾದದ್ದು ಎಂದು ನಂಬಿದ್ದೇನೋ ಅದನ್ನು ದೇವರ ಮುಂದೆಯೂ ಮನುಷ್ಯರ ಮುಂದೆಯೂ ಮಾಡಲು ಯಾವಾಗಲು ಪ್ರಯತ್ನಿಸುತ್ತಿದ್ದೇನೆ.
17 “ನಾನು ಅನೇಕ ವರ್ಷಗಳಿಂದ ಜೆರುಸಲೇಮಿನಲ್ಲಿ ಇರಲಿಲ್ಲ. ಬಳಿಕ ನಾನು ನನ್ನ ಜನರಿಗಾಗಿ ಹಣವನ್ನು ತರುವುದಕ್ಕಾಗಿಯೂ ಉಡುಗೊರೆಗಳನ್ನು ಕೊಡುವುದಕ್ಕಾಗಿಯೂ ಜೆರುಸಲೇಮಿಗೆ ಮರಳಿ ಹೋದೆನು. 18 ನಾನು ಈ ಕಾರ್ಯದಲ್ಲಿ ನಿರತನಾಗಿದ್ದಾಗ ಕೆಲವು ಮಂದಿ ಯೆಹೂದ್ಯರು ನನ್ನನ್ನು ದೇವಾಲಯದಲ್ಲಿ ಕಂಡರು. ನಾನು ಶುದ್ಧಾಚಾರದ ವಿಧಿಯನ್ನು ಮುಗಿಸಿದ್ದೆನು. ನಾನು ಯಾವ ಗಲಭೆಯನ್ನೂ ಮಾಡಿರಲಿಲ್ಲ. ನನ್ನ ಸುತ್ತಲೂ ಯಾವ ಜನರೂ ಇರಲಿಲ್ಲ. 19 ಆದರೆ ಏಷ್ಯಾದ ಕೆಲವು ಮಂದಿ ಯೆಹೂದ್ಯರು ಅಲ್ಲಿದ್ದರು. ಅವರು ಈಗ ನಿನ್ನೆದುರಿನಲ್ಲಿ ಇರಬೇಕಿತ್ತು. ನಾನು ನಿಜವಾಗಿ ಏನಾದರೂ ತಪ್ಪು ಮಾಡಿದ್ದರೆ ಏಷ್ಯಾದ ಆ ಯೆಹೂದ್ಯರೇ ನನ್ನ ಮೇಲೆ ದೋಷಾರೋಪಣೆ ಮಾಡಬೇಕಿತ್ತು. 20 ನಾನು ಜೆರುಸಲೇಮಿನಲ್ಲಿ ಯೆಹೂದ್ಯ ನ್ಯಾಯಸಭೆಯ ಮುಂದೆ ನಿಂತಿದ್ದಾಗ, ನನ್ನಲ್ಲಿ ಅವರಿಗೆ ಯಾವ ಅಪರಾಧಗಳು ಕಂಡುಬಂದವೆಂದು ಇಲ್ಲಿರುವ ಈ ಯೆಹೂದ್ಯರನ್ನೇ ಕೇಳು. 21 ನಾನು ಅವರ ಮುಂದೆ ನಿಂತಿದ್ದಾಗ, ‘ಸತ್ತವರು ಪುನರುತ್ಥಾನ ಹೊಂದುತ್ತಾರೆಂದು ನಾನು ನಂಬುವುದರಿಂದ ಇಲ್ಲಿ ನ್ಯಾಯವಿಚಾರಣೆಗೆ ಗುರಿಯಾಗಿದ್ದೇನೆ!’ ಎಂಬ ಒಂದೇ ಒಂದು ಸಂಗತಿಯನ್ನು ನಾನು ಕೂಗಿ ಹೇಳಿದೆ.”
22 ಫೇಲಿಕ್ಸನು ಯೇಸುವಿನ ಮಾರ್ಗದ ಬಗ್ಗೆ ಮೊದಲೇ ಸಾಕಷ್ಟು ಅರ್ಥಮಾಡಿಕೊಂಡಿದ್ದನು. ಅವನು ವಿಚಾರಣೆಯನ್ನು ನಿಲ್ಲಿಸಿ, “ಸೇನಾಧಿಪತಿಯಾದ ಲೂಸಿಯನು ಇಲ್ಲಿಗೆ ಬಂದಾಗ, ಈ ಸಂಗತಿಗಳ ಬಗ್ಗೆ ನಾನು ತೀರ್ಪನ್ನು ಕೊಡುತ್ತೇನೆ” ಎಂದು ಹೇಳಿದನು. 23 ಪೌಲನನ್ನು ಕಾವಲಿನಲ್ಲಿರಿಸಬೇಕೆಂದು ಫೇಲಿಕ್ಸನು ಸೇನಾಧಿಕಾರಿಗೆ ತಿಳಿಸಿದನು. ಆದರೆ ಪೌಲನಿಗೆ ಸ್ವಲ್ಪ ಸ್ವತಂತ್ರವನ್ನು ಕೊಡುವಂತೆಯೂ ಪೌಲನ ಮಿತ್ರರು ಅವನಿಗೆ ಅಗತ್ಯವಾದ ವಸ್ತುಗಳನ್ನು ತಂದುಕೊಡುವುದಕ್ಕೆ ಅವಕಾಶ ಕೊಡಬೇಕೆಂತಲೂ ಅವನು ಅಧಿಕಾರಿಗೆ ಹೇಳಿದನು.
ಫೇಲಿಕ್ಸ ಮತ್ತು ಅವನ ಪತ್ನಿಯ ಮುಂದೆ ಪೌಲನು
24 ಕೆಲವು ದಿನಗಳಾದ ಮೇಲೆ ಫೇಲಿಕ್ಸನು ತನ್ನ ಹೆಂಡತಿಯಾದ ದ್ರೂಸಿಲ್ಲಳೊಂದಿಗೆ ಬಂದನು. ಆಕೆ ಯೆಹೂದ್ಯಳು. ಫೇಲಿಕ್ಸನು ಪೌಲನನ್ನು ಕರೆಯಿಸಿದನು. ಕ್ರಿಸ್ತನಾದ ಯೇಸುವಿನಲ್ಲಿ ನಂಬಿಕೆ ಇಡುವುದರ ಬಗ್ಗೆ ಪೌಲನು ಹೇಳಿದ್ದನ್ನು ಅವನು ಆಲಿಸಿದನು. 25 ಆದರೆ ನೀತಿಯಬಾಳ್ವೆ, ಇಂದ್ರಿಯನಿಗ್ರಹ ಮತ್ತು ಮುಂದೆ ಬರಲಿರುವ ನ್ಯಾಯತೀರ್ಪುಗಳ ಬಗ್ಗೆ ಪೌಲನು ಮಾತಾಡಿದಾಗ ಅವನು ಭಯಗೊಂಡು, “ಈಗ ನೀನು ಹೋಗು! ನನಗೆ ಹೆಚ್ಚು ಸಮಯವಿರುವಾಗ ನಿನ್ನನ್ನು ಕರೆಯಿಸುತ್ತೇನೆ” ಎಂದು ಹೇಳಿದನು. 26 ಆದರೆ ಪೌಲನು ಲಂಚ ಕೊಡಬಹುದೆಂದು ಅವನು ನಿರೀಕ್ಷಿಸಿಕೊಂಡಿದ್ದರಿಂದ ಅವನು ಅನೇಕ ಸಲ ಪೌಲನನ್ನು ಕರೆಯಿಸಿ ಅವನೊಂದಿಗೆ ಮಾತಾಡಿದನು.
27 ಆದರೆ ಎರಡು ವರ್ಷಗಳ ನಂತರ ಫೇಲಿಕ್ಸನ ಬದಲಾಗಿ ಪೊರ್ಸಿಯ ಫೆಸ್ತನು ರಾಜ್ಯಪಾಲನಾದನು. ಆದರೆ ಫೇಲಿಕ್ಸನು ಯೆಹೂದ್ಯರನ್ನು ಮೆಚ್ಚಿಸುವುದಕ್ಕಾಗಿ ಪೌಲನನ್ನು ಸೆರೆಮನೆಯಲ್ಲಿಯೇ ಬಿಟ್ಟುಹೋದನು.
Kannada Holy Bible: Easy-to-Read Version. All rights reserved. © 1997 Bible League International