M’Cheyne Bible Reading Plan
ಸಾರಳಿಗೆ ಮಗುವಾಯಿತು
21 ಯೆಹೋವನು ಸಾರಳಿಗೆ ಮಾಡಿದ ವಾಗ್ದಾನವನ್ನು ಮರೆಯದೆ ಈಡೇರಿಸಿದನು. 2 ಸಾರಳು ವೃದ್ಧನಾಗಿದ್ದ ಅಬ್ರಹಾಮನಿಂದ ಗರ್ಭಿಣಿಯಾಗಿ, ಒಂದು ಗಂಡುಮಗುವನ್ನು ಹೆತ್ತಳು. ದೇವರು ವಾಗ್ದಾನ ಮಾಡಿದಂತೆಯೇ ಈ ಸಂಗತಿಗಳೆಲ್ಲ ತಕ್ಕಕಾಲದಲ್ಲಿ ನಡೆದವು. 3 ಅಬ್ರಹಾಮನು ಸಾರಳಲ್ಲಿ ತನ್ನಿಂದ ಹುಟ್ಟಿದ ಮಗನಿಗೆ ಇಸಾಕ ಎಂದು ಹೆಸರಿಟ್ಟನು. 4 ಇಸಾಕನಿಗೆ ಎಂಟು ದಿನಗಳಾಗಿದ್ದಾಗ, ದೇವರ ಆಜ್ಞೆಗನುಸಾರವಾಗಿ ಅಬ್ರಹಾಮನು ಅವನಿಗೆ ಸುನ್ನತಿ ಮಾಡಿದನು.
5 ಅಬ್ರಹಾಮನಿಗೆ ನೂರು ವರ್ಷಗಳಾಗಿದ್ದಾಗ, ಅವನ ಮಗನಾದ ಇಸಾಕನು ಹುಟ್ಟಿದನು. 6 ಸಾರಳು, “ದೇವರು, ನನ್ನನ್ನು ನಗುವಂತೆ ಮಾಡಿದ್ದಾನೆ, ಇದನ್ನು ಕೇಳಿದ ಪ್ರತಿಯೊಬ್ಬರು ನನ್ನೊಡನೆ ನಗುವರು. 7 ಅಬ್ರಹಾಮನಿಗೆ ಸಾರಳಲ್ಲಿ ಮಗನು ಹುಟ್ಟುತ್ತಾನೆಂದು ಯಾರೂ ಯೋಚಿಸಿರಲಿಲ್ಲ. ಅಬ್ರಹಾಮನು ವೃದ್ಧನಾಗಿದ್ದರೂ ಈಗ ನಾನು ಅವನಿಗೆ ಒಬ್ಬ ಮಗನನ್ನು ಕೊಟ್ಟಿದ್ದೇನೆ” ಅಂದಳು.
ಕುಟುಂಬದಲ್ಲಾದ ಒಡಕು
8 ಇಸಾಕನು ಬೆಳೆದು ಊಟಮಾಡುವಷ್ಟು ದೊಡ್ಡವನಾದನು. ಆಗ ಅಬ್ರಹಾಮನು ಒಂದು ದೊಡ್ಡ ಔತಣವನ್ನು ಮಾಡಿಸಿದನು. 9 ಮೊದಲು, ಈಜಿಪ್ಟಿನ ಸೇವಕಿಯಾದ ಹಾಗರಳಲ್ಲಿ ಒಬ್ಬ ಮಗನು ಹುಟ್ಟಿದ್ದನು. ಅವನಿಗೂ ಅಬ್ರಹಾಮನು ತಂದೆಯಾಗಿದ್ದನು. ಆದರೆ ಆ ಮೊದಲನೆ ಮಗನು ಇಸಾಕನಿಗೆ ತೊಂದರೆ ಕೊಡುವುದನ್ನು ಸಾರಳು ಗಮನಿಸಿದಳು. 10 ಸಾರಳು ಅಬ್ರಹಾಮನಿಗೆ, “ಆ ಸೇವಕಿಯನ್ನೂ ಅವಳ ಮಗನನ್ನೂ ಕಳುಹಿಸಿಬಿಡು. ನಾವು ಸತ್ತಾಗ ನಮ್ಮ ಆಸ್ತಿಯನ್ನೆಲ್ಲ ನಮ್ಮ ಮಗನಾದ ಇಸಾಕನೇ ಪಡೆದುಕೊಳ್ಳಲಿ; ನಮ್ಮ ಆಸ್ತಿಯಲ್ಲಿ ಇಸಾಕನೊಡನೆ ಅವನು ಪಾಲುಹೊಂದುವುದು ನನಗೆ ಇಷ್ಟವಿಲ್ಲ” ಎಂದು ಹೇಳಿದಳು.
11 ಅಬ್ರಹಾಮನಿಗೆ ತುಂಬ ದುಃಖವಾಯಿತು. ಅವನು ತನ್ನ ಮಗನಾದ ಇಷ್ಮಾಯೇಲನ ಬಗ್ಗೆ ಚಿಂತಿಸತೊಡಗಿದನು. 12 ಆದರೆ ದೇವರು ಅಬ್ರಹಾಮನಿಗೆ, “ಆ ಹುಡುಗನ ಕುರಿತಾಗಲಿ ಸೇವಕಿಯ ಕುರಿತಾಗಲಿ ಚಿಂತೆಮಾಡಬೇಡ. ಸಾರಳ ಇಷ್ಟದಂತೆ ಮಾಡು. ಇಸಾಕನೊಬ್ಬನೇ ಬಾಧ್ಯಸ್ತನಾಗಬೇಕು. 13 ಆದರೆ ನಿನ್ನ ಸೇವಕಿಯ ಮಗನನ್ನು ಸಹ ನಾನು ಆಶೀರ್ವದಿಸುವೆನು. ಅವನು ನಿನ್ನ ಮಗನು. ಆದ್ದರಿಂದ ಅವನಿಂದಲೂ ನಾನು ದೊಡ್ಡ ಜನಾಂಗವನ್ನು ಉಂಟುಮಾಡುವೆನು” ಎಂದು ಹೇಳಿದನು.
14 ಮರುದಿನ ಮುಂಜಾನೆ, ಅಬ್ರಹಾಮನು ಸ್ವಲ್ಪ ಆಹಾರವನ್ನು ಮತ್ತು ಸ್ವಲ್ಪ ನೀರನ್ನು ತೆಗೆದು ಹಾಗರಳಿಗೆ ಕೊಟ್ಟನು. ಹಾಗರಳು ಅವುಗಳನ್ನು ತೆಗೆದುಕೊಂಡು ತನ್ನ ಮಗನೊಡನೆ ಅಲ್ಲಿಂದ ಹೊರಟುಹೋದಳು. ಹಾಗರಳು ಆ ಸ್ಥಳವನ್ನು ಬಿಟ್ಟು ಬೇರ್ಷೆಬದ ಮರಳುಗಾಡಿನಲ್ಲಿ ಅಲೆಯತೊಡಗಿದಳು.
15 ಸ್ವಲ್ಪ ಸಮಯದ ನಂತರ, ಇದ್ದ ನೀರೆಲ್ಲಾ ಮುಗಿದುಹೋಯಿತು. ಕುಡಿಯುವುದಕ್ಕೆ ಏನೂ ಇರಲಿಲ್ಲ. ಆದ್ದರಿಂದ ಹಾಗರಳು ತನ್ನ ಮಗನನ್ನು ಪೊದೆಯ ಕೆಳಗೆ ಮಲಗಿಸಿದಳು. 16 ಹಾಗರಳು ಸ್ವಲ್ಪ ದೂರ ನಡೆದುಹೋಗಿ ಕುಳಿತುಕೊಂಡು ತನ್ನ ಮಗನು ಸಾಯುವುದನ್ನು ನೋಡಲಾರದೆ ಅಳತೊಡಗಿದಳು.
17 ಮಗುವಿನ ಕೂಗು ದೇವರಿಗೆ ಕೇಳಿಸಿತು. ಆಗ ದೇವದೂತನು ಆಕಾಶದಿಂದ ಆಕೆಯನ್ನು ಕರೆದು, “ಹಾಗರಳೇ, ನಿನಗೇನಾಯಿತು? ಭಯಪಡಬೇಡ; ಮಗುವಿನ ಕೂಗನ್ನು ಯೆಹೋವನು ಕೇಳಿದ್ದಾನೆ. 18 ಹೋಗಿ ಮಗುವನ್ನು ಎತ್ತಿಕೊ. ಅವನಿಂದ ದೊಡ್ಡ ಜನಾಂಗವಾಗುವಂತೆ ಮಾಡುವೆನು” ಎಂದು ಹೇಳಿದನು.
19 ಆಮೇಲೆ ದೇವರು ಹಾಗರಳಿಗೆ ಒಂದು ಬಾವಿ ಕಾಣಿಸುವಂತೆ ಮಾಡಿದನು. ಹಾಗರಳು ಬಾವಿಗೆ ಹೋಗಿ ತನ್ನ ತಿತ್ತಿಯಲ್ಲಿ ನೀರನ್ನು ತುಂಬಿಸಿಕೊಂಡು ಬಂದು ಮಗುವಿಗೆ ಕುಡಿಸಿದಳು.
20 ದೇವರು ಆ ಮಗುವಿನ ಸಂಗಡವಿದ್ದ ಕಾರಣ ಆ ಮಗುವು ಬೆಳೆದು ದೊಡ್ಡವನಾದನು; ಕಾಡಿನಲ್ಲಿ ವಾಸವಾಗಿದ್ದು ಚತುರ ಬಿಲ್ಲುಗಾರನಾದನು. 21 ಅವನ ತಾಯಿಯು ಅವನಿಗೆ ಈಜಿಪ್ಟಿನ ಹುಡುಗಿಯನ್ನು ತಂದು ಮದುವೆ ಮಾಡಿಸಿದಳು. ಅವರು ಪಾರಾನ್ ಕಾಡಿನಲ್ಲಿ ತಮ್ಮ ವಾಸವನ್ನು ಮುಂದುವರಿಸಿದರು.
ಅಬ್ರಹಾಮನು ಅಬೀಮೆಲೆಕನೊಡನೆ ಮಾಡಿಕೊಂಡ ಒಪ್ಪಂದ
22 ಆಮೇಲೆ ಅಬೀಮೆಲೆಕನು ಮತ್ತು ಫೀಕೋಲನು ಅಬ್ರಹಾಮನೊಡನೆ ಮಾತಾಡಿದರು. ಫೀಕೋಲನು ಅಬೀಮೆಲೆಕನ ಸೈನ್ಯಾಧಿಕಾರಿಯಾಗಿದ್ದನು. ಅಬೀಮೆಲೆಕನು ಅಬ್ರಹಾಮನಿಗೆ, “ನೀನು ಮಾಡುವ ಪ್ರತಿಯೊಂದರಲ್ಲೂ ದೇವರು ನಿನ್ನೊಡನೆ ಇದ್ದಾನೆ. 23 ಆದ್ದರಿಂದ ನೀನು ನನ್ನೊಡನೆ ಮತ್ತು ನನ್ನ ಮಕ್ಕಳೊಡನೆ ನ್ಯಾಯವಾಗಿ ನಡೆದುಕೊಳ್ಳುವುದಾಗಿ ದೇವರ ಮೇಲೆ ಪ್ರಮಾಣಮಾಡು. ನನಗೂ ಮತ್ತು ನೀನು ವಾಸಿಸುತ್ತಿರುವ ಈ ನಾಡಿಗೂ ದಯೆತೋರುವುದಾಗಿ ನೀನು ಪ್ರಮಾಣಮಾಡು. ನಾನು ನಿನಗೆ ದಯೆತೋರಿದಂತೆ ನೀನೂ ನನಗೆ ದಯೆತೋರುವುದಾಗಿ ಪ್ರಮಾಣಮಾಡು” ಎಂದು ಹೇಳಿದನು.
24 ಅದಕ್ಕೆ ಅಬ್ರಹಾಮನು, “ನೀನು ನನ್ನನ್ನು ನೋಡಿಕೊಂಡಂತೆ ನಾನೂ ನಿನ್ನನ್ನು ನೋಡಿಕೊಳ್ಳುವೆನು” ಎಂದು ಪ್ರಮಾಣಮಾಡಿದನು. 25 ಆಮೇಲೆ ಅಬ್ರಹಾಮನು ಅಬೀಮೆಲೆಕನಿಗೆ, “ನಿನ್ನ ಸೇವಕರು ನೀರಿದ್ದ ಒಂದು ಬಾವಿಯನ್ನು ವಶಪಡಿಸಿಕೊಂಡಿದ್ದಾರೆ” ಎಂದು ದೂರು ಹೇಳಿದನು.
26 ಅದಕ್ಕೆ ಅಬೀಮೆಲೆಕನು, “ಅದನ್ನು ಯಾರು ಮಾಡಿದರೋ ನನಗೆ ಗೊತ್ತಿಲ್ಲ. ಇಂದಿನವರೆಗೂ ನೀನು ಇದನ್ನು ನನಗೆ ಹೇಳಲೇ ಇಲ್ಲ” ಎಂದು ಹೇಳಿದನು.
27 ಆಗ ಅಬ್ರಹಾಮನು ಮತ್ತು ಅಬೀಮೆಲೆಕನು ಒಂದು ಒಪ್ಪಂದವನ್ನು ಮಾಡಿಕೊಂಡರು. ಅಬ್ರಹಾಮನು ಅವನಿಗೆ ಕೆಲವು ದನಕುರಿಗಳನ್ನು ಒಪ್ಪಂದದ ಗುರುತಾಗಿ ಕೊಟ್ಟನು; 28 ಅಲ್ಲದೆ ಅಬ್ರಹಾಮನು ಮಂದೆಯ ಏಳು ಹೆಣ್ಣು ಕುರಿಮರಿಗಳನ್ನು ಪ್ರತ್ಯೇಕಿಸಿದನು.
29 ಅಬೀಮೆಲೆಕನು ಅಬ್ರಹಾಮನಿಗೆ, “ಈ ಏಳು ಕುರಿಗಳನ್ನು ಇಲ್ಲಿ ಇರಿಸಿರುವುದೇಕೆ?” ಎಂದು ಕೇಳಿದನು.
30 ಅಬ್ರಹಾಮನು “ಆ ಬಾವಿಯನ್ನು ತೋಡಿಸಿದವನು ನಾನೇ ಎಂಬುದಕ್ಕೆ ಸಾಕ್ಷಿಯಾಗಿ ನೀನು ಈ ಕುರಿಗಳನ್ನು ನನ್ನಿಂದ ಸ್ವೀಕರಿಸಿಕೊಳ್ಳಬೇಕು” ಎಂದು ಉತ್ತರಿಸಿದನು.
31 ಅವರು ಆ ಸ್ಥಳದಲ್ಲಿ ಒಪ್ಪಂದ ಮಾಡಿಕೊಂಡಿದ್ದರಿಂದ ಆ ಬಾವಿಗೆ ಬೇರ್ಷೆಬ ಎಂದು ಹೆಸರಾಯಿತು.
32 ಬೇರ್ಷೆಬದಲ್ಲಿ ಒಪ್ಪಂದವನ್ನು ಮಾಡಿಕೊಂಡ ಮೇಲೆ ಅಬೀಮೆಲೆಕನು ಮತ್ತು ಅವನ ಸೈನ್ಯಾಧಿಕಾರಿಯು ಫಿಲಿಷ್ಟಿಯರ ದೇಶಕ್ಕೆ ಹಿಂತಿರುಗಿದರು.
33 ಅಬ್ರಹಾಮನು ಬೇರ್ಷೆಬದಲ್ಲಿ ವಿಶೇಷವಾದ ಒಂದು ಮರವನ್ನು ನೆಟ್ಟನು. ಆ ಸ್ಥಳದಲ್ಲಿ ಅವನು ಸದಾಕಾಲ ಜೀವಿಸುವ ದೇವರಾದ ಯೆಹೋವನಿಗೆ ಪ್ರಾರ್ಥಿಸಿದನು. 34 ಅವನು ಬಹುಕಾಲದವರೆಗೆ ಫಿಲಿಷ್ಟಿಯರ ದೇಶದಲ್ಲಿ ವಾಸವಾಗಿದ್ದನು.
ಕೂಲಿಯಾಳುಗಳ ಕುರಿತು ಯೇಸು ಹೇಳಿದ ಸಾಮ್ಯ
20 “ಪರಲೋಕರಾಜ್ಯವು ಒಬ್ಬ ದ್ರಾಕ್ಷಿತೋಟದ ಯಜಮಾನನಿಗೆ ಹೋಲಿಕೆಯಾಗಿದೆ. ಒಂದು ಮುಂಜಾನೆ ಅವನು ತನ್ನ ತೋಟದಲ್ಲಿ ಕೆಲಸ ಮಾಡಲು ಬೇರೆ ಕೂಲಿಯಾಳುಗಳನ್ನು ಕರೆಯುವುದಕ್ಕೆ ಹೊರಟನು. 2 ಒಂದು ದಿನಕ್ಕೆ ಒಬ್ಬ ಕೆಲಸಗಾರನಿಗೆ ಒಂದು ಬೆಳ್ಳಿನಾಣ್ಯವನ್ನು ಕೊಡುವುದಾಗಿ ಹೇಳಿ ಆ ಕೆಲಸಗಾರರನ್ನು ಅವನು ತೋಟಕ್ಕೆ ಕಳುಹಿಸಿದನು.
3 “ಸುಮಾರು ಒಂಭತ್ತು ಗಂಟೆಗೆ ಯಜಮಾನನು ಪೇಟೆಯ ಸ್ಥಳಕ್ಕೆ ಹೋದನು. ಏನೂ ಕೆಲಸವಿಲ್ಲದೆ ಸುಮ್ಮನೆ ನಿಂತಿದ್ದ ಕೆಲವರನ್ನು ಅವನು ಅಲ್ಲಿ ಕಂಡನು. 4 ಅವನು ಅವರಿಗೆ, ‘ನೀವು ಹೋಗಿ ನನ್ನ ತೋಟದಲ್ಲಿ ಕೆಲಸ ಮಾಡುವುದಾದರೆ ನಿಮ್ಮ ಕೆಲಸಕ್ಕೆ ಯೋಗ್ಯವಾದ ಕೂಲಿಯನ್ನು ಕೊಡುತ್ತೇನೆ’ ಎಂದು ಹೇಳಿದನು. 5 ಆ ಕೂಲಿಯಾಳುಗಳು ಕೆಲಸ ಮಾಡಲು ಅವನ ತೋಟಕ್ಕೆ ಹೋದರು.
“ಆ ಯಜಮಾನನು ಅದೇ ರೀತಿ ಸುಮಾರು ಹನ್ನೆರಡು ಗಂಟೆಗೊಮ್ಮೆ ಮತ್ತೆ ಮೂರು ಗಂಟೆಗೊಮ್ಮೆ ಪೇಟೆಗೆ ಹೋದನು. ಆ ಎರಡು ಸಲವೂ ತನ್ನ ಹೊಲದಲ್ಲಿ ಕೆಲಸ ಮಾಡಲು ಬೇರೆ ಕೆಲವು ಕೂಲಿಯವರನ್ನು ಅವನು ಗೊತ್ತುಮಾಡಿದನು. 6 ಸುಮಾರು ಐದು ಗಂಟೆಗೆ ಆ ಯಜಮಾನನು ಮತ್ತೊಮ್ಮೆ ಪೇಟೆಗೆ ಹೋದನು. ಅಲ್ಲಿ ನಿಂತಿದ್ದ ಕೆಲವರನ್ನು ಅವನು ಕಂಡು, ‘ನೀವು ದಿನವಿಡೀ ಕೆಲಸ ಮಾಡದೆ ಸುಮ್ಮನೆ ಏಕೆ ನಿಂತಿದ್ದೀರಿ?’ ಎಂದು ಕೇಳಿದನು.
7 “ಅದಕ್ಕೆ ಅವರು, ‘ನಮಗೆ ಯಾರೂ ಕೆಲಸ ಕೊಡಲಿಲ್ಲ’ ಎಂದು ಉತ್ತರಕೊಟ್ಟರು.
“ಆ ಯಜಮಾನನು, ‘ಹಾಗಾದರೆ ನೀವು ಹೋಗಿ ನನ್ನ ತೋಟದಲ್ಲಿ ಕೆಲಸ ಮಾಡಿರಿ’ ಎಂದು ಹೇಳಿದನು.
8 “ಅಂದು ಸಾಯಂಕಾಲ, ತೋಟದ ಯಜಮಾನನು ಕೆಲಸಗಾರರನ್ನು ನೋಡಿಕೊಳ್ಳುವವನಿಗೆ, ‘ಕೂಲಿಯಾಳುಗಳನ್ನು ಕರೆದು ಕೊನೆಗೆ ಬಂದವರಿಂದ ಆರಂಭಿಸಿ ಮೊದಲು ಬಂದವರ ತನಕ ಕೂಲಿ ಕೊಡು’ ಎಂದನು.
9 “ಐದು ಗಂಟೆಯ ಸಮಯದಲ್ಲಿ ಗೊತ್ತುಮಾಡಲ್ಪಟ್ಟ ಕೂಲಿಯಾಳುಗಳು ತಮ್ಮ ಕೂಲಿಯನ್ನು ತೆಗೆದುಕೊಳ್ಳಲು ಬಂದರು. ಪ್ರತಿಯೊಬ್ಬ ಆಳಿಗೂ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು. 10 ನಂತರ ಮೊಟ್ಟಮೊದಲು ಗೊತ್ತುಮಾಡಲ್ಪಟ್ಟಿದ್ದವರು ತಮ್ಮ ಕೂಲಿಯನ್ನು ತೆಗೆದುಕೊಳ್ಳಲು ಬಂದರು. ಬೇರೆ ಆಳುಗಳಿಗಿಂತ ತಮಗೆ ಹೆಚ್ಚು ಸಿಕ್ಕುವುದೆಂದು ಅವರು ಆಲೋಚಿಸಿಕೊಂಡಿದ್ದರು. ಆದರೆ ಅವರಿಗೂ ಸಹ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು. 11 ಅವರು ತಮ್ಮ ಬೆಳ್ಳಿನಾಣ್ಯವನ್ನು ತೆಗೆದುಕೊಂಡಾಗ ತೋಟದ ಯಜಮಾನನ ಬಗ್ಗೆ ಗೊಣಗುಟ್ಟುತ್ತಾ, 12 ‘ಕೊನೆಗೆ ಗೊತ್ತುಮಾಡಲ್ಪಟ್ಟ ಆಳುಗಳು ಒಂದು ಗಂಟೆ ಮಾತ್ರ ಕೆಲಸ ಮಾಡಿದ್ದಾರೆ. ಆದರೆ ಇವನು ಅವರಿಗೂ ನಮ್ಮಷ್ಟೇ ಕೊಟ್ಟಿದ್ದಾನೆ. ನಾವಾದರೋ ದಿನವೆಲ್ಲಾ ಬಿಸಿಲಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇವೆ’ ಎಂದರು.
13 “ತೋಟದ ಯಜಮಾನನು ಆ ಆಳುಗಳಲ್ಲಿ ಒಬ್ಬನಿಗೆ, ‘ಸ್ನೇಹಿತನೇ, ನಾನು ನಿನಗೆ ಅನ್ಯಾಯ ಮಾಡಲಿಲ್ಲ. ನೀನು ಒಂದು ಬೆಳ್ಳಿನಾಣ್ಯಕ್ಕಾಗಿ ಕೆಲಸ ಮಾಡಲು ಒಪ್ಪಿಕೊಂಡೆಯಲ್ಲವೇ? 14 ಆದ್ದರಿಂದ ನೀನು ನಿನ್ನ ಕೂಲಿಯನ್ನು ತೆಗೆದುಕೊಂಡು ಹೋಗು. ನಾನು ನಿನಗೆ ಎಷ್ಟು ಕೂಲಿ ಕೊಟ್ಟೆನೋ ಅಷ್ಟೇ ಕೂಲಿಯನ್ನು ಕೊನೆಗೆ ಗೊತ್ತುಮಾಡಲ್ಪಟ್ಟವನಿಗೂ ಕೊಡಲು ಇಷ್ಟಪಡುತ್ತೇನೆ. 15 ನನ್ನ ಸ್ವಂತ ಹಣವನ್ನು ನನಗೆ ಇಷ್ಟಬಂದ ಹಾಗೆ ನಾನು ಕೊಡಬಹುದಲ್ಲವೇ? ನಾನು ಅವರಿಗೆ ಒಳ್ಳೆಯದನ್ನು ಮಾಡಿದ್ದಕ್ಕಾಗಿ ನೀನು ಹೊಟ್ಟೆಕಿಚ್ಚುಪಡುವೆಯಾ?’ ಎಂದನು.
16 “ಇದೇಪ್ರಕಾರ ಕಡೆಯವರು ಮೊದಲಿನವರಾಗುವರು, ಮೊದಲಿನವರು ಕಡೆಯವರಾಗುವರು.”
ತನ್ನ ಮರಣದ ಬಗ್ಗೆ ಯೇಸುವಿನ ಮೂರನೆ ಪ್ರಕಟನೆ
(ಮಾರ್ಕ 10:32-34; ಲೂಕ 18:31-34)
17 ಯೇಸು ಜೆರುಸಲೇಮಿಗೆ ಹೋಗುತ್ತಿದ್ದನು. ಆತನ ಹನ್ನೆರಡು ಮಂದಿ ಶಿಷ್ಯರೂ ಆತನೊಂದಿಗೆ ಇದ್ದರು. ಯೇಸು ಅವರನ್ನು ಪ್ರತ್ಯೇಕವಾಗಿ ಕರೆದು, 18 “ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಮನುಷ್ಯಕುಮಾರನನ್ನು ಮಹಾಯಾಜಕರಿಗೆ ಮತ್ತು ಧರ್ಮೋಪದೇಶಕರಿಗೆ ಒಪ್ಪಿಸಿಕೊಡಲಾಗುವುದು. ಅವರು ಆತನನ್ನು ಯೆಹೂದ್ಯರಲ್ಲದವರ ಕೈಗೆ ಒಪ್ಪಿಸುವರು. 19 ಅವರು ಮನುಷ್ಯಕುಮಾರನನ್ನು ಅಪಹಾಸ್ಯ ಮಾಡಿ, ಕೊರಡೆಗಳಿಂದ ಹೊಡೆದು, ಶಿಲುಬೆಗೇರಿಸುವರು. ಆದರೆ ಆತನು ಮರಣ ಹೊಂದಿದ ನಂತರ ಮೂರನೆಯ ದಿನದಂದು ಮತ್ತೆ ಜೀವಂತನಾಗಿ ಎದ್ದುಬರುವನು” ಎಂದು ಹೇಳಿದನು.
ತಾಯಿಯೊಬ್ಬಳ ವಿಶೇಷ ಕೋರಿಕೆ
(ಮಾರ್ಕ 10:35-45)
20 ಆಗ ಜೆಬೆದಾಯನ ಹೆಂಡತಿಯು ಯೇಸುವಿನ ಬಳಿಗೆ ಬಂದಳು. ಅವಳ ಗಂಡುಮಕ್ಕಳು ಅವಳೊಂದಿಗಿದ್ದರು. ಅವಳು ಯೇಸುವಿನ ಮುಂದೆ ಅಡ್ಡಬಿದ್ದು ತನ್ನ ಕೋರಿಕೆಯನ್ನು ಈಡೇರಿಸಬೇಕೆಂದು ಕೇಳಿಕೊಂಡಳು.
21 ಯೇಸು, “ನಿನ್ನ ಕೋರಿಕೆ ಏನು?” ಎಂದನು.
ಅವಳು, “ನಿನ್ನ ರಾಜ್ಯದಲ್ಲಿ, ನನ್ನ ಗಂಡುಮಕ್ಕಳಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ನಿನ್ನ ಎಡಗಡೆಯಲ್ಲಿಯೂ ಕುಳಿತುಕೊಳ್ಳುವಂತೆ ವಾಗ್ದಾನಮಾಡು” ಎಂದು ಕೇಳಿಕೊಂಡಳು.
22 ಯೇಸು ಅವಳ ಮಕ್ಕಳಿಗೆ, “ನೀವು ಏನು ಕೇಳಿಕೊಳ್ಳುತ್ತಿದ್ದೀರೆಂಬುದೇ ನಿಮಗೆ ಗೊತ್ತಿಲ. ನಾನು ಅನುಭವಿಸಬೇಕಾಗಿರುವ ಸಂಕಟವನ್ನು ಅನುಭವಿಸಲು ನಿಮಗೆ ಸಾಧ್ಯವೋ?” ಎಂದು ಕೇಳಿದನು.
ಅದಕ್ಕೆ ಅವರು, “ಹೌದು, ನಮಗೆ ಸಾಧ್ಯ” ಎಂದು ಉತ್ತರಕೊಟ್ಟರು.
23 ಯೇಸು ಅವರಿಗೆ, “ನಾನು ಅನುಭವಿಸಲಿರುವ ಸಂಕಟಗಳನ್ನು ನೀವು ನಿಜವಾಗಿಯೂ ಅನುಭವಿಸುವಿರಿ. ಆದರೆ ನನ್ನ ಬಲಗಡೆಯಲ್ಲಾಗಲಿ ಎಡಗಡೆಯಲ್ಲಾಗಲಿ ಕುಳಿತುಕೊಳ್ಳುವವನನ್ನು ಆಯ್ಕೆಮಾಡುವವನು ನಾನಲ್ಲ. ನನ್ನ ತಂದೆಯು ಆ ಸ್ಥಳಗಳನ್ನು ಯಾರಿಗಾಗಿ ಕಾಯ್ದಿರಿಸಿದ್ದಾನೋ ಅವರಿಗೇ ಆ ಅವಕಾಶವನ್ನು ಕೊಡುತ್ತಾನೆ” ಎಂದನು.
24 ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ ಆ ಇಬ್ಬರು ಶಿಷ್ಯರ ಮೇಲೆ ಕೋಪಗೊಂಡರು. 25 ಯೇಸು ಶಿಷ್ಯರನ್ನೆಲ್ಲ ಒಟ್ಟಿಗೆ ಕರೆದು, “ಯೆಹೂದ್ಯರಲ್ಲದ ಅಧಿಪತಿಗಳು ಜನರ ಮೇಲೆ ತಮ್ಮ ಅಧಿಕಾರ ತೋರಿಸಲು ಇಷ್ಟಪಡುತ್ತಾರೆ ಎಂಬುದು ನಿಮಗೆ ಗೊತ್ತಿದೆ. ಮತ್ತು ಅವರ ಪ್ರಮುಖ ನಾಯಕರು ಜನರ ಮೇಲೆ ತಮ್ಮ ಅಧಿಕಾರವನ್ನೆಲ್ಲಾ ಚಲಾಯಿಸಲು ಇಷ್ಟಪಡುತ್ತಾರೆ. 26 ಆದರೆ ನೀವು ಹಾಗೆ ಮಾಡಬಾರದು. ನಿಮ್ಮಲ್ಲಿ ದೊಡ್ಡವನಾಗಲು ಇಚ್ಫಿಸುವವನು ಸೇವಕನಂತೆ ಸೇವೆ ಮಾಡಬೇಕು. 27 ನಿಮ್ಮಲ್ಲಿ ಮೊದಲನೆಯವನಾಗಲು ಇಚ್ಛಿಸುವವನು ಗುಲಾಮನಂತೆ ಸೇವೆ ಮಾಡಬೇಕು. 28 ಇದೇ ನಿಯಮ ಮನುಷ್ಯಕುಮಾರನಿಗೂ ಅನ್ವಯಿಸುತ್ತದೆ. ಮನುಷ್ಯಕುಮಾರನು ಬೇರೆಯವರಿಂದ ಸೇವೆ ಮಾಡಿಸಿಕೊಳ್ಳಲು ಬರದೆ ಬೇರೆಯವರಿಗೆ ಸೇವೆ ಮಾಡುವುದಕ್ಕಾಗಿ ಮತ್ತು ಅನೇಕ ಜನರನ್ನು ರಕ್ಷಿಸುವುದಕ್ಕಾಗಿ ತನ್ನ ಪ್ರಾಣವನ್ನೇ ಈಡುಕೊಡಲು ಬಂದನು” ಎಂದು ಹೇಳಿದನು.
ಇಬ್ಬರು ಕುರುಡರಿಗೆ ಯೇಸುವಿನಿಂದ ಸ್ವಸ್ಥತೆ
(ಮಾರ್ಕ 10:46-52; ಲೂಕ 18:35-43)
29 ಯೇಸು ಮತ್ತು ಆತನ ಶಿಷ್ಯರು ಜೆರಿಕೋವಿನಿಂದ ಹೊರಟುಹೋಗುತ್ತಿರುವಾಗ ಬಹಳ ಜನರು ಯೇಸುವನ್ನು ಹಿಂಬಾಲಿಸಿದರು. 30 ದಾರಿಯ ಪಕ್ಕದಲ್ಲಿ ಇಬ್ಬರು ಕುರುಡರು ಕುಳಿತಿದ್ದರು. ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂಬುದನ್ನು ಅವರು ಕೇಳಿದಾಗ, “ಪ್ರಭುವೇ, ದಾವೀದನ ಕುಮಾರನೇ, ದಯಮಾಡಿ ನಮಗೆ ಸಹಾಯ ಮಾಡು!” ಎಂದು ಕೂಗಿಕೊಂಡರು.
31 ಜನರೆಲ್ಲರೂ ಕುರುಡರನ್ನು ಗದರಿಸಿ, ಸುಮ್ಮನಿರಬೇಕೆಂದು ಹೇಳಿದರು. ಆದರೆ ಆ ಕುರುಡರು, “ಪ್ರಭುವೇ, ದಾವೀದನ ಕುಮಾರನೇ, ದಯಮಾಡಿ ನಮಗೆ ಸಹಾಯ ಮಾಡು!” ಎಂದು ಹೆಚ್ಚುಹೆಚ್ಚು ಕೂಗಿಕೊಂಡರು.
32 ಯೇಸು ನಿಂತು, ಆ ಕುರುಡರಿಗೆ “ನಾನು ನಿಮಗೆ ಏನು ಮಾಡಬೇಕೆಂದು ಆಶಿಸುತ್ತೀರಿ?” ಎಂದನು.
33 ಆಗ ಕುರುಡರು, “ಪ್ರಭುವೇ, ನಮಗೆ ಕಣ್ಣು ಕಾಣಿಸುವಂತೆ ಮಾಡು!” ಅಂದರು.
34 ಯೇಸು ಅವರಿಗಾಗಿ ದುಃಖಪಟ್ಟು ಅವರ ಕಣ್ಣುಗಳನ್ನು ಮುಟ್ಟಿದನು. ಕೂಡಲೇ ಅವರಿಗೆ ದೃಷ್ಟಿ ಬಂದಿತು. ಬಳಿಕ ಅವರು ಯೇಸುವನ್ನು ಹಿಂಬಾಲಿಸಿದರು.
10 ಮುದ್ರೆ ಹಾಕಿದ ಒಡಂಬಡಿಕೆಯಲ್ಲಿದ್ದ ಹೆಸರುಗಳು:
ರಾಜ್ಯಪಾಲನಾದ ನೆಹೆಮೀಯ, ಇವನು ಹಕಲ್ಯನ ಮಗನು. 2 ಚಿದ್ಕೀಯ, ಸೆರಾಯ, ಅಜರ್ಯ, ಯೆರೆಮೀಯ, 3 ಪಷ್ಹೂರ್, ಅಮರ್ಯ, ಮಲ್ಕೀಯ, 4 ಹಟ್ಟೂಷ್, ಶೆಬನ್ಯ, ಮಲ್ಲೂಕ್, 5 ಹಾರೀಮ್, ಮೆರೇಮೋತ್, ಓಬದ್ಯ, 6 ದಾನಿಯೇಲ್, ಗಿನ್ನೆತೋನ್, ಬಾರೂಕ್, 7 ಮೆಷುಲ್ಲಾಮ್, ಅಬೀಯ, ಮಿಯ್ಯಾಮೀನ್, 8 ಮಾಜ್ಯ, ಬಿಲ್ಲೈ ಮತ್ತು ಶೆಮಾಯ ಈ ಎಲ್ಲಾ ಯಾಜಕರು ಮುದ್ರೆಹಾಕಿ ಒಡಂಬಡಿಕೆಯಲ್ಲಿ ಹೆಸರು ಬರೆಸಿದವರು.
9 ಲೇವಿಯರಲ್ಲಿ ಒಡಂಬಡಿಕೆಗೆ ಸಹಿ ಹಾಕಿದವರು:
ಅಜನ್ಯನ ಮಗನಾದ ಯೇಷೂವ, ಹೇನಾದಾದ್‌ನ ಸಂತತಿಯವನಾದ ಬಿನ್ನೂಯ್, 10 ಕದ್ಮೀಯೇಲ್ ಮತ್ತು ಅವನ ಸಹೋದರರಾದ ಶೆಬನ್ಯ, ಹೋದೀಯ, ಕೆಲೀಟ, ಪೆಲಾಯ ಮತ್ತು ಹಾನಾನ್; 11-12 ಮೀಕ, ರೆಹೋಬ್, ಹಷಬ್ಯ ಜಕ್ಕೂರ್, ಶೇರೇಬ್ಯ, ಶೆಬನ್ಯ, 13 ಹೋದೀಯ, ಬಾನೀ ಮತ್ತು ಬೆನೀನೂ.
14 ಒಡಂಬಡಿಕೆಗೆ ಸಹಿ ಹಾಕಿದ ನಾಯಕರುಗಳು:
ಪರೋಷ್, ಪಹತ್‌ಮೋವಾಬ್, ಏಲಾಮ್, ಜತ್ತೂ, ಬಾನೀ, 15 ಬುನ್ನೀ, ಅಜ್ಗಾದ್, ಬೇಬೈ, 16 ಅದೋನೀಯ, ಬಿಗ್ವೈ, ಆದೀನ್, 17 ಆಟೇರ್, ಹಿಜ್ಕೀಯ, ಆಜ್ಜೂರ್, 18 ಹೋದೀಯ, ಹಾಷುಮ್, ಬೇಚೈ, 19 ಹಾರೀಫ್, ಅನಾತೋತ್, ನೇಬೈ, 20 ಮಗ್ಪೀಯಾಷ್, ಮೆಷುಲ್ಲಾಮ್, ಹೇಜೀರ್, 21 ಮೆಷೇಜಬೇಲ್, ಚಾದೋಕ್, ಯದ್ದೂವ, 22 ಪೆಲಟ್ಯ, ಹಾನಾನ್, ಅನಾಯ, 23 ಹೋಷೇಯ, ಹನನ್ಯ, ಹಷ್ಷೂಬ್, 24 ಹಲೋಹೇಷ, ಪಿಲ್ಹ, ಶೋಬೇಕ್, 25 ರೆಹೂಮ್, ಹಷಬ್ನ, ಮಾಸೇಯ, 26 ಅಹೀಯ, ಹಾನಾನ್, ಅನಾನ್, 27 ಮಲ್ಲೂಕ್, ಹಾರಿಮ್ ಮತ್ತು ಬಾನ.
28-29 ಹೀಗೆ ಇವರೆಲ್ಲಾ ಯೆಹೋವನಿಗೆ ಒಂದು ವಿಶೇಷವಾದ ವಾಗ್ದಾನವನ್ನು ಮಾಡಿದರು. ತಾವು ವಾಗ್ದಾನವನ್ನು ನೆರವೇರಿಸದೆ ಹೋದಲ್ಲಿ ಸಂಕಟಬಾಧೆಗಳು ಪ್ರಾಪ್ತವಾಗುವಂತೆ ಯೆಹೋವನನ್ನು ಕೇಳಿಕೊಂಡರು. ಇವರೆಲ್ಲಾ ದೇವರ ನೀತಿನಿಯಮಗಳನ್ನು ಅನುಸರಿಸುತ್ತೇವೆಂದು ಮಾತುಕೊಟ್ಟರು. ಆ ನೀತಿನಿಯಮಗಳನ್ನು ಯೆಹೋವನು ತನ್ನ ಸೇವಕನಾದ ಮೋಶೆಯ ಮೂಲಕ ನಮಗೆ ಕೊಟ್ಟನು. ಮೇಲೆ ಕಾಣಿಸಿದ ಹೆಸರುಗಳಲ್ಲದೆ ಉಳಿದ ಜನರು, ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ದೇವಾಲಯದ ಸೇವಕರು ಮತ್ತು ಇಸ್ರೇಲಿನ ಜನರು ತಮ್ಮ ಸುತ್ತಲು ವಾಸಿಸುವ ಜನರಿಂದ ಪ್ರತ್ಯೇಕಿಸಲ್ಪಟ್ಟರು. ದೇವರ ವಿಧಿನಿಯಮಗಳನ್ನು ಅನುಸರಿಸುವುದಕ್ಕಾಗಿ ತಮ್ಮ ಹೆಂಡತಿ ಮಕ್ಕಳೊಂದಿಗೆ ಪ್ರತ್ಯೇಕಿಸಿಕೊಂಡರು. ದೇವರಿಗೆ ಮಾಡಿದ ಒಡಂಬಡಿಕೆಯನ್ನು ನಡೆಸಿಕೊಡಲು ಒಪ್ಪಿದರು ಮತ್ತು ಹಾಗೆ ಮಾಡದಿದ್ದಲ್ಲಿ ದೇವರಿಂದ ಸಂಕಟ ವ್ಯಾಧಿಗಳನ್ನು ಸ್ವೀಕರಿಸಲೂ ಒಪ್ಪಿದರು.
30 “ನಮ್ಮ ಗಂಡು ಮತ್ತು ಹೆಣ್ಣುಮಕ್ಕಳು ನಮ್ಮ ಸುತ್ತಲಿರುವ ಅನ್ಯರನ್ನು ಮದುವೆಯಾಗಲು ಬಿಡುವುದಿಲ್ಲ” ಎಂದು ಪ್ರತಿಜ್ಞೆ ಮಾಡಿದರು.
31 “ಸಬ್ಬತ್ ದಿನದಲ್ಲಿ ಯಾವ ಕೆಲಸವನ್ನೂ ಮಾಡುವುದಿಲ್ಲವೆಂದು ಪ್ರಮಾಣಮಾಡುತ್ತೇವೆ. ನಮ್ಮ ಸುತ್ತಮುತ್ತಲಿನ ಜನರು ಸಬ್ಬತ್ ದಿನದಲ್ಲಿ ಮಾರಲು ದವಸಧಾನ್ಯವನ್ನಾಗಲಿ ಬೇರೆ ವಸ್ತುಗಳನ್ನಾಗಲಿ ತಂದರೆ ನಾವು ಸಬ್ಬತ್ ದಿನದಲ್ಲಿ ಮತ್ತು ಇತರ ಯಾವುದೇ ಹಬ್ಬದ ದಿನದಲ್ಲಿ ಅವುಗಳನ್ನು ಕೊಂಡುಕೊಳ್ಳುವುದಿಲ್ಲ. ಪ್ರತಿ ಏಳನೆಯ ವರ್ಷ ನಾವು ನೆಡುವುದೂ ಇಲ್ಲ. ಹೊಲದಲ್ಲಿ ಕೆಲಸ ಮಾಡುವುದೂ ಇಲ್ಲ. ನಮಗೆ ಬೇರೆಯವರು ಕೊಡಬೇಕಾಗಿರುವ ಸಾಲವನ್ನು ಏಳನೆಯ ವರ್ಷದಲ್ಲಿ ವಜಾ ಮಾಡುತ್ತೇವೆ.
32 “ದೇವಾಲಯವನ್ನು ನಡಿಸುವ ಖರ್ಚಿನ ಜವಾಬ್ದಾರಿಕೆಯನ್ನು ನಾವು ಹೊರುತ್ತೇವೆ. ನಾವು ಒಂದು ಬೆಳ್ಳಿನಾಣ್ಯವನ್ನು ಪ್ರತಿವರ್ಷ ನಮ್ಮ ದೇವರಿಗೆ ಕಾಣಿಕೆ ಕೊಡುತ್ತೇವೆ. ಇದು ದೇವಾಲಯದ ಕೆಲಸಕಾರ್ಯಗಳಿಗೆ ಉಪಯೋಗಿಲ್ಪಡಬೇಕು. 33 ಪ್ರತಿದಿನ ದೇವಾಲಯದೊಳಗೆ ಮೇಜಿನ ಮೇಲೆ ಇಡುವ ರೊಟ್ಟಿಗಳಿಗಾಗಿಯೂ ದಿನನಿತ್ಯದ ಸರ್ವಾಂಗಹೋಮಗಳಿಗೂ ಧಾನ್ಯಸರ್ಮರ್ಪಣೆಗೂ ಈ ಹಣವನ್ನು ಉಪಯೋಗಿಸಿರಿ. ಅಮಾವಾಸ್ಯೆ, ಸಬ್ಬತ್ ಮತ್ತು ಇತರ ವಿಶೇಷ ಸಭಾಕೂಟಗಳಲ್ಲಿ ಮಾಡುವ ಯಜ್ಞಗಳಿಗಾಗಿ ಈ ಹಣವನ್ನು ಉಪಯೋಗಿಸಿರಿ. ಇಸ್ರೇಲರನ್ನು ಶುದ್ಧರನ್ನಾಗಿ ಮಾಡುವ ಪವಿತ್ರ ಯಜ್ಞಗಳಿಗಾಗಿ ಮತ್ತು ಪಾಪಪರಿಹಾರಕ ಯಜ್ಞಗಳಿಗಾಗಿ ಈ ಹಣವನ್ನು ಉಪಯೋಗಿಸಿರಿ. ನಮ್ಮ ದೇವರ ಆಲಯದ ಯಾವ ಕಾರ್ಯಗಳಿಗೆ ಬೇಕಾದರೂ ಈ ಹಣವನ್ನು ಉಪಯೋಗಿಸಿರಿ.
34 “ನಾವು ಅಂದರೆ ಯಾಜಕರು, ಲೇವಿಯರು ಮತ್ತು ಇತರ ಜನರು ಒಟ್ಟಾಗಿ ಸೇರಿ ದೇವಾಲಯದಲ್ಲಿ ಯಜ್ಞ ಹೋಮಗಳನ್ನರ್ಪಿಸುವುದಕ್ಕೆ ಬೇಕಾದ ಕಟ್ಟಿಗೆಯನ್ನು ಪ್ರತಿಯೊಂದು ಕುಟುಂಬವು ವರ್ಷಕ್ಕೊಮ್ಮೆ ತಮಗೆ ನಿಗದಿತವಾದ ಸಮಯದಲ್ಲಿ ತಂದು ಒದಗಿಸುವುದಕ್ಕೆ ಚೀಟು ಹಾಕಿದೆವು. ಧರ್ಮಶಾಸ್ತ್ರದಲ್ಲಿ ಬರೆದಂತೆಯೇ ನಾವು ಮಾಡಬೇಕಲ್ಲಾ!
35 “ನಮ್ಮ ಬೆಳೆಗಳಲ್ಲಿ ಮತ್ತು ಹಣ್ಣಿನ ಮರಗಳಲ್ಲಿ ಬೆಳೆದ ಪ್ರಥಮ ಫಲಗಳನ್ನೆಲ್ಲಾ ಪ್ರತಿವರ್ಷ ದೇವಾಲಯಕ್ಕೆ ತಂದು ಅರ್ಪಿಸುವುದಕ್ಕೆ ಒಪ್ಪಿಕೊಂಡೆವು.
36 “ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ನಾವು ನಮ್ಮ ಚೊಚ್ಚಲು ಮಕ್ಕಳನ್ನು, ಚೊಚ್ಚಲು ದನ, ಕುರಿ, ಆಡುಗಳನ್ನು ದೇವಾಲಯದಲ್ಲಿ ಸೇವೆಮಾಡುತ್ತಿರುವ ಯಾಜಕರಿಗೆ ಒಪ್ಪಿಸುವೆವು.
37 “ಪ್ರಥಮ ಫಲದ ಹಿಟ್ಟನ್ನು, ಪ್ರಥಮ ಫಲದ ಹಣ್ಣುಗಳನ್ನು, ಹೊಸ ದ್ರಾಕ್ಷಾರಸವನ್ನು, ಹೊಸ ಎಣ್ಣೆಯನ್ನು ಯಾಜಕರಿಗೋಸ್ಕರವಾಗಿ ದೇವಾಲಯದ ಉಗ್ರಾಣಗಳಲ್ಲಿ ತಂದಿಡುವೆವು. ನಮ್ಮ ಬೆಳೆಗಳಲ್ಲಿ ಹತ್ತನೆಯ ಒಂದು ಭಾಗವನ್ನು ಲೇವಿಯರಿಗೆ ತಂದುಕೊಡುವೆವು. ನಾವು ಕೆಲಸ ಮಾಡುತ್ತಿರುವ ಊರುಗಳಿಂದ ಲೇವಿಯರು ಇವುಗಳನ್ನು ತೆಗೆದುಕೊಳ್ಳಬೇಕು. 38 ನಮ್ಮಿಂದ ಆ ಕಾಣಿಕೆಗಳನ್ನು ಅವರು ಸ್ವೀಕರಿಸುವಾಗ ಆರೋನನ ವಂಶದವರಾದ ಯಾಜಕನೊಬ್ಬನು ಅವರ ಜೊತೆಯಲ್ಲಿ ಇರಬೇಕು. ಲೇವಿಯರು ಆ ಕಾಣಿಕೆಗಳನ್ನು ದೇವಾಲಯಕ್ಕೆ ತಂದು ಅದರ ಉಗ್ರಾಣಗಳಲ್ಲಿ ಶೇಖರಿಸಿಡಬೇಕು. 39 ಇಸ್ರೇಲ್ ಜನರು ಮತ್ತು ಲೇವಿಯರು ತಮ್ಮ ಕಾಣಿಕೆಗಳಾದ ದವಸಧಾನ್ಯ, ಹೊಸ ದ್ರಾಕ್ಷಾರಸ, ಎಣ್ಣೆ ಇವುಗಳನ್ನು ತಂದು ದೇವಾಲಯದ ಉಗ್ರಾಣಗಳಲ್ಲಿ ಇಡಬೇಕು. ದೇವಾಲಯಕ್ಕೋಸ್ಕರ ಮೀಸಲಾದ ಎಲ್ಲಾ ವಸ್ತುಗಳನ್ನು ಆ ಉಗ್ರಾಣಗಳಲ್ಲಿ ಇಡಬೇಕು. ಕೆಲಸದಲ್ಲಿ ನಿರತರಾಗಿರುವ ಯಾಜಕರು, ಗಾಯಕರು, ದ್ವಾರಪಾಲಕರು ಅಲ್ಲೇ ಇರಬೇಕು.
“ನಮ್ಮ ದೇವರ ಆಲಯವನ್ನು ನಾವು ನೋಡಿಕೊಳ್ಳುವುದಾಗಿ ನಾವೆಲ್ಲರೂ ಪ್ರಮಾಣಮಾಡುತ್ತೇವೆ!”
ಮಕೆದೋನಿಯಕ್ಕೆ ಮತ್ತು ಗ್ರೀಸಿಗೆ ಪೌಲನ ಪ್ರಯಾಣ
20 ಗಲಭೆಯು ನಿಂತುಹೋದ ಮೇಲೆ, ಪೌಲನು ಯೇಸುವಿನ ಶಿಷ್ಯರನ್ನು ಕರೆಯಿಸಿ ಅವರನ್ನು ಧೈರ್ಯಪಡಿಸಿದನು. ಬಳಿಕ ಪೌಲನು ಅಲ್ಲಿಂದ ಹೊರಟು ಮಕೆದೋನಿಯಾಕ್ಕೆ ಹೋದನು. 2 ಅವನು ಆ ಪ್ರದೇಶದಲ್ಲಿ ಪ್ರಯಾಣ ಮಾಡುತ್ತಾ ಅನೇಕ ಊರುಗಳಿಗೆ ಭೇಟಿನೀಡಿ, ಯೇಸುವಿನ ಶಿಷ್ಯರಿಗೆ ಅನೇಕ ಸಂಗತಿಗಳನ್ನು ತಿಳಿಸಿ ಬಲಪಡಿಸಿದನು. ಬಳಿಕ ಪೌಲನು ಗ್ರೀಸಿಗೆ (ಅಖಾಯ) ಹೋದನು. 3 ಅಲ್ಲಿ ಅವನು ಮೂರು ತಿಂಗಳವರೆಗೆ ಇದ್ದನು. ಅವನು ಸಿರಿಯಕ್ಕೆ ನೌಕಾಯಾನ ಮಾಡಲು ಸಿದ್ಧನಾಗಿದ್ದನು.
ಆದರೆ ಕೆಲವು ಯೆಹೂದ್ಯರು ಅವನಿಗೆ ವಿರೋಧವಾಗಿ ಯೋಜನೆ ಮಾಡಿದರು. ಆದ್ದರಿಂದ ಪೌಲನು ಸಿರಿಯಕ್ಕೆ ಮಕೆದೋನಿಯದ ಮೂಲಕ ಹಿಂತಿರುಗಿ ಹೋಗಲು ನಿರ್ಧರಿಸಿದನು. 4 ಕೆಲವು ಜನರು ಅವನೊಂದಿಗಿದ್ದರು. ಅವರು ಯಾರೆಂದರೆ: ಬೆರೋಯ ಪಟ್ಟಣದ ಪುರ್ರನ ಮಗನಾದ ಸೋಪತ್ರನು, ಥೆಸಲೋನಿಕ ಪಟ್ಟಣದ ಆರಿಸ್ತಾರ್ಕ ಮತ್ತು ಸೆಕುಂದ, ದರ್ಬೆ ಪಟ್ಟಣದ ಗಾಯ ಮತ್ತು ತಿಮೊಥೆಯ, ಅಲ್ಲದೆ ಏಷ್ಯಾದ ತುಖಿಕ ಹಾಗು ತ್ರೊಫಿಮ. 5 ಇವರು ಪೌಲನಿಗಿಂತ ಮುಂಚಿತವಾಗಿಯೇ ಹೋದರು. ಅವರು ನಮಗಾಗಿ ತ್ರೋವ ಪಟ್ಟಣದಲ್ಲಿ ಕಾಯುತ್ತಿದ್ದರು. 6 ಯೆಹೂದ್ಯರ ಹುಳಿ ರಹಿತ ರೊಟ್ಟಿ ಹಬ್ಬದ ನಂತರ ನಾವು ಫಿಲಿಪ್ಪಿ ಪಟ್ಟಣದ ಹಡಗಿನಲ್ಲಿ ಹೋದೆವು. ಐದು ದಿನಗಳಾದ ನಂತರ ನಾವು ಇವರನ್ನು ತ್ರೋವದಲ್ಲಿ ಸಂಧಿಸಿದೆವು. ಅಲ್ಲಿ ನಾವು ಏಳು ದಿನ ತಂಗಿದೆವು.
ತ್ರೋವಕ್ಕೆ ಪೌಲನ ಕೊನೆಯ ಭೇಟಿ
7 ಭಾನುವಾರದಂದು, ನಾವೆಲ್ಲರು ಪ್ರಭುವಿನ ರಾತ್ರಿ ಭೋಜನಕ್ಕೆ ಒಟ್ಟಾಗಿ ಸೇರಿದೆವು. ಸಭೆ ಸೇರಿಬಂದಿದ್ದ ಜನರೊಂದಿಗೆ ಪೌಲನು ಮಾತಾಡಿದನು. ಅವನು ಮರುದಿನ ಅಲ್ಲಿಂದ ಹೊರಡಬೇಕೆಂದು ಅಲೋಚಿಸಿಕೊಂಡಿದ್ದನು. ಪೌಲನು ಮಧ್ಯರಾತ್ರಿಯವರೆಗೂ ಮಾತಾಡುತ್ತಲೇ ಇದ್ದನು. 8 ನಾವೆಲ್ಲರೂ ಮೇಲಂತಸ್ತಿನ ಕೊಠಡಿಯೊಂದರಲ್ಲಿ ಸೇರಿ ಬಂದಿದ್ದೆವು. ಆ ಕೊಠಡಿಯಲ್ಲಿ ಅನೇಕ ದೀಪಗಳಿದ್ದವು. 9 ಯುತಿಕ ಎಂಬ ಯುವಕನು ಕಿಟಕಿಯಲ್ಲಿ ಕುಳಿತುಕೊಂಡಿದ್ದನು. ಪೌಲನು ಮಾತಾಡುತ್ತಲೇ ಇದ್ದನು. ಇತ್ತ ಯುವಕನು ಗಾಢವಾಗಿ ನಿದ್ರಿಸುತ್ತಾ ಮೂರನೆ ಅಂತಸ್ತಿನಿಂದ ಕೆಳಗಡೆ ಬಿದ್ದುಬಿಟ್ಟನು. ಜನರು ಕೆಳಗಿಳಿದು ಹೋಗಿ ಅವನನ್ನು ಎತ್ತಿ ನೋಡಿದಾಗ ಅವನು ಸತ್ತಿದ್ದನು.
10 ಪೌಲನು ಕೆಳಗಿಳಿದು ಅವನ ಬಳಿಗೆ ಹೋಗಿ, ಮೊಣಕಾಲೂರಿ ಅವನನ್ನು ಅಪ್ಪಿಕೊಂಡು, ಅಲ್ಲಿದ್ದ ವಿಶ್ವಾಸಿಗಳಿಗೆ, “ಚಿಂತಿಸಬೇಡಿ. ಇವನು ಮತ್ತೆ ಜೀವಂತನಾದನು” ಎಂದು ಹೇಳಿದನು. 11 ಪೌಲನು ಮತ್ತೆ ಮೇಲಂತಸ್ತಿಗೆ ಹೋಗಿ ರೊಟ್ಟಿಯನ್ನು ಮುರಿದು ಊಟಮಾಡಿದನು. ಪೌಲನು ಅವರೊಂದಿಗೆ ದೀರ್ಘಕಾಲ ಮಾತಾಡಿದನು. ಅಷ್ಟರಲ್ಲಿಯೇ ಮುಂಜಾನೆಯಾಗಿತ್ತು. ಬಳಿಕ ಪೌಲನು ಹೊರಟುಹೋದನು. 12 ಜನರು ಜೀವಂತನಾಗಿದ್ದ ಆ ಯುವಕನನ್ನು ಮನೆಗೆ ಕರೆದುಕೊಂಡು ಹೋದರು. ಇದರಿಂದ ಜನರಿಗೆ ಬಹಳ ಆದರಣೆಯಾಯಿತು.
ತ್ರೋವದಿಂದ ಮಿಲೇತಕ್ಕೆ ಪ್ರಯಾಣ
13 ನಾವು ಪೌಲನಿಗಿಂತ ಮುಂಚಿತವಾಗಿಯೇ ಅಸ್ಸೊಸಿ ಎಂಬ ಪಟ್ಟಣಕ್ಕೆ ನೌಕಾಯಾನ ಮಾಡಿದೆವು. ತಾನು ಭೂಮಾರ್ಗವಾಗಿ ಬರುವುದಾಗಿಯೂ ಅಸ್ಸೊಸಿನಲ್ಲಿ ನಮ್ಮನ್ನು ಸಂಧಿಸಿ ಅಲ್ಲಿಂದ ನಮ್ಮೊಂದಿಗೆ ಹಡಗಿನಲ್ಲಿ ಪ್ರಯಾಣ ಮಾಡುವುದಾಗಿಯೂ ಪೌಲನು ನಮಗೆ ತಿಳಿಸಿದ್ದನು. 14 ಅಂತೆಯೇ ನಾವು ಪೌಲನನ್ನು ಅಸ್ಸೊಸಿನಲ್ಲಿ ಸಂಧಿಸಿದೆವು. ಅಲ್ಲಿಂದ ಅವನು ನಮ್ಮೊಂದಿಗೆ ಹಡಗಿನಲ್ಲಿ ಪ್ರಯಾಣ ಮಾಡಿದನು. ನಾವೆಲ್ಲರೂ ಮಿತಿಲೇನಿ ಪಟ್ಟಣಕ್ಕೆ ಹೋದೆವು. 15 ಮರುದಿನ ನಾವು ಅಲ್ಲಿಂದ ನೌಕಾಯಾನ ಮಾಡಿ ಖಿಯೋಸ್ ದ್ವೀಪದ ಸಮೀಪದಲ್ಲಿದ್ದ ಸ್ಥಳವೊಂದಕ್ಕೆ ಬಂದೆವು. ಮರುದಿನ ಸಾಮೋಸ್ ದ್ವೀಪಕ್ಕೆ ನೌಕಾಯಾನ ಮಾಡಿದೆವು. ಅದರ ಮೂರನೆಯ ದಿನ ನಾವು ಮಿಲೇತ ಪಟ್ಟಣಕ್ಕೆ ಬಂದೆವು. 16 ಎಫೆಸದಲ್ಲಿ ತಂಗಬಾರದೆಂದು ಪೌಲನು ಆಗಲೇ ನಿರ್ಧಾರ ಮಾಡಿದ್ದನು. ಏಷ್ಯಾದಲ್ಲಿ ದೀರ್ಘಕಾಲ ತಂಗಲು ಅವನಿಗೆ ಇಷ್ಟವಿರಲಿಲ್ಲ. ಸಾಧ್ಯವಾದರೆ ಪಂಚಾಶತ್ತಮ ಹಬ್ಬಕ್ಕೆ ಜೆರುಸಲೇಮಿನಲ್ಲಿರಬೇಕೆಂದು ಅವನು ತನ್ನ ಪ್ರಯಾಣವನ್ನು ತ್ವರಿತಗೊಳಿಸಿದನು.
ಎಫೆಸದ ಹಿರಿಯರಿಗೆ ಪೌಲನ ಬುದ್ಧಿಮಾತು
17 ಪೌಲನು ಮಿಲೇತದಿಂದ ಒಂದು ಸಂದೇಶವನ್ನು ಎಫೆಸಕ್ಕೆ ಕಳುಹಿಸಿ ಅಲ್ಲಿನ ಸಭೆಯ ಹಿರಿಯರನ್ನು ತನ್ನ ಬಳಿಗೆ ಬರಮಾಡಿಕೊಂಡನು.
18 ಆ ಹಿರಿಯರು ಬಂದಾಗ ಪೌಲನು ಅವರಿಗೆ, “ನಾನು ಏಷ್ಯಾ ಪ್ರಾಂತ್ಯಕ್ಕೆ ಬಂದ ಮೊದಲನೆಯ ದಿನದಿಂದಲೂ ನೀವು ನನ್ನ ಜೀವಿತದ ಬಗ್ಗೆ ತಿಳಿದಿದ್ದೀರಿ. ನಾನು ನಿಮ್ಮೊಂದಿಗೆ ಇದ್ದ ಕಾಲದಲ್ಲೆಲ್ಲಾ ನಾನು ಯಾವ ರೀತಿಯಲ್ಲಿ ಜೀವಿಸಿದೆನೆಂಬುದು ನಿಮಗೆ ಗೊತ್ತಿದೆ. 19 ಯೆಹೂದ್ಯರು ನನಗೆ ವಿರೋಧವಾಗಿ ಮಾಡಿದ ಒಳಸಂಚುಗಳಿಂದ ನಾನು ಬಹಳ ಕಷ್ಟಪಡಬೇಕಾಯಿತು. ಅನೇಕ ಸಲ ಕಣ್ಣೀರಿಡಬೇಕಾಯಿತು. ಆದರೆ ನಾನು ಯಾವಾಗಲೂ ಪ್ರಭುವಿನ ಸೇವೆ ಮಾಡಿದೆನೆಂಬುದು ನಿಮಗೆ ಗೊತ್ತಿದೆ. ನಾನು ನನ್ನ ಬಗ್ಗೆ ಚಿಂತಿಸದೆ, 20 ನಿಮಗೆ ಒಳ್ಳೆಯದನ್ನೇ ಯಾವಾಗಲೂ ಮಾಡಿದೆನು. ನಾನು ನಿಮಗೆ ಯೇಸುವಿನ ಕುರಿತಾದ ಸುವಾರ್ತೆಯನ್ನು ಬಹಿರಂಗವಾಗಿ ಜನರೆದುರಿನಲ್ಲಿ ತಿಳಿಸಿದೆನು ಮತ್ತು ನಿಮ್ಮ ಮನೆಗಳಲ್ಲಿಯೂ ಸಹ ಬೋಧಿಸಿದೆನು. 21 ನಿಮ್ಮ ಹೃದಯಗಳನ್ನು ಮಾರ್ಪಡಿಸಿಕೊಂಡು ದೇವರ ಕಡೆಗೆ ತಿರುಗಿಕೊಳ್ಳಬೇಕೆಂದು ನಾನು ಎಲ್ಲಾ ಜನಾಂಗಗಳವರಿಗೆ ಅಂದರೆ ಯೆಹೂದ್ಯರಿಗೂ ಮತ್ತು ಗ್ರೀಕರಿಗೂ ತಿಳಿಸಿದೆನು. ನಮ್ಮ ಪ್ರಭುವಾದ ಯೇಸುವಿನಲ್ಲಿ ನಂಬಿಕೆ ಇಡಬೇಕೆಂದು ನಾನು ಅವರೆಲ್ಲರಿಗೂ ತಿಳಿಸಿದೆನು.
22 “ಆದರೆ ಈಗ ನಾನು ಪವಿತ್ರಾತ್ಮನಿಗೆ ವಿಧೇಯನಾಗಿ ಜೆರುಸಲೇಮಿಗೆ ಹೋಗಬೇಕು. ಅಲ್ಲಿ ನನಗೆ ಏನು ಸಂಭವಿಸುವುದೋ ತಿಳಿಯದು. 23 ಜೆರುಸಲೇಮಿನಲ್ಲಿ ತೊಂದರೆಗಳು ಮತ್ತು ಸೆರೆವಾಸವು ನನಗಾಗಿ ಕಾದಿವೆಯೆಂದು ಪವಿತ್ರಾತ್ಮನು ಪ್ರತಿಯೊಂದು ಪಟ್ಟಣದಲ್ಲಿಯೂ ನನಗೆ ಹೇಳುತ್ತಿರುವುದು ಮಾತ್ರ ಸ್ಪಷ್ಟವಾಗಿದೆ. 24 ನಾನು ನನ್ನ ಸ್ವಂತ ಪ್ರಾಣದ ಬಗ್ಗೆ ಚಿಂತಿಸುವುದಿಲ್ಲ. ಪ್ರಭುವಾದ ಯೇಸು ನನಗೆ ಕೊಟ್ಟಿರುವ ಕೆಲಸವನ್ನು ಪೂರೈಸುವುದೇ ನನಗೆ ಅತ್ಯಂತ ಮುಖ್ಯವಾಗಿದೆ. ದೇವರ ಕೃಪೆಯ ವಿಷಯವಾದ ಸುವಾರ್ತೆಯ ಬಗ್ಗೆ ಸಾಕ್ಷಿ ನೀಡುವುದೇ ನನ್ನ ಕೆಲಸವಾಗಿದೆ. ಆ ಕೆಲಸವನ್ನು ಮಾಡಿ ಪೂರೈಸುವುದೇ ನನ್ನ ಅಪೇಕ್ಷೆಯಾಗಿದೆ.
25 “ಈಗ ನನಗೆ ಕಿವಿಗೊಡಿ. ನಿಮ್ಮಲ್ಲಿ ಒಬ್ಬರಾಗಲಿ ನನ್ನನ್ನು ಮತ್ತೆಂದಿಗೂ ನೋಡುವುದಿಲ್ಲವೆಂದು ನನಗೆ ಗೊತ್ತಿದೆ. ನಿಮ್ಮೊಂದಿಗೆ ಇದ್ದ ಸಮಯದಲ್ಲೆಲ್ಲಾ ದೇವರ ರಾಜ್ಯದ ವಿಷಯವಾದ ಸುವಾರ್ತೆಯನ್ನು ನಾನು ನಿಮಗೆ ತಿಳಿಸಿದೆನು. 26 ಆದ್ದರಿಂದ ಇಂದು ನಾನು ನಿಮಗೆ ದೃಢವಾಗಿ ಹೇಳಬಹುದಾದ ಒಂದು ಸಂಗತಿಯೇನೆಂದರೆ, ನಿಮ್ಮಲ್ಲಿ ಯಾರಾದರೂ ರಕ್ಷಣೆ ಹೊಂದಿಲ್ಲದಿದ್ದರೆ ಅದಕ್ಕೆ ನಾನು ಹೊಣೆಯಲ್ಲ. 27 ಯಾಕೆಂದರೆ ದೇವರ ಅಪೇಕ್ಷೆಗನುಸಾರವಾಗಿ ನೀವು ತಿಳಿದುಕೊಳ್ಳಬೇಕಾದ ಪ್ರತಿಯೊಂದನ್ನೂ ನಾನು ನಿಮಗೆ ನಿಶ್ಚಯವಾಗಿ ತಿಳಿಸಿದ್ದೇನೆ. 28 ಆದ್ದರಿಂದ ನಿಮ್ಮ ವಿಷಯದಲ್ಲಿಯೂ ಪವಿತ್ರಾತ್ಮನು ನಿಮ್ಮ ಪಾಲನೆಗೆ ವಹಿಸಿರುವ ಮಂದೆಯ ವಿಷಯದಲ್ಲಿಯೂ ಎಚ್ಚರಿಕೆಯಿಂದಿರಿ. ದೇವರು ತನ್ನ ಸ್ವಂತ ರಕ್ತದಿಂದ ಕೊಂಡುಕೊಂಡಿರುವ ಸಭೆಗೆ ನೀವು ಕುರುಬರಾಗಿದ್ದೀರಿ. 29 ನಾನು ಹೊರಟುಹೋದ ಮೇಲೆ ಬೇರೆಯವರು ನಿಮ್ಮ ಸಭೆಗೆ ಬರುತ್ತಾರೆಂದು ನನಗೆ ಗೊತ್ತಿದೆ. ಕ್ರೂರವಾದ ತೋಳಗಳಂತಿರುವ ಅವರು ಮಂದೆಯನ್ನು ನಾಶಮಾಡಲು ಪ್ರಯತ್ನಿಸುವರು. 30 ಅಲ್ಲದೆ, ನಿಮ್ಮ ಸಭೆಯ ಕೆಲವು ಜನರೇ ದುರ್ಬೋಧಕರಾಗಿ ಯೇಸುವಿನ ಶಿಷ್ಯರಲ್ಲಿ ಕೆಲವರನ್ನು ಸತ್ಯದಿಂದ ದೂರಕ್ಕೆ ನಡೆಸುವರು. 31 ಆದ್ದರಿಂದ ಎಚ್ಚರಿಕೆಯಿಂದಿರಿ! ನಾನು ಮೂರು ವರ್ಷಗಳ ಕಾಲ ನಿಮ್ಮೊಂದಿಗೆ ಇದ್ದೆನು. ಈ ಕಾಲಾವಧಿಯಲ್ಲಿ ನಾನು ನಿಮಗೆ ಹಗಲಿರುಳು ಉಪದೇಶಿಸುತ್ತಾ ನಿಮಗಾಗಿ ಕಣ್ಣೀರಿಡುತ್ತಾ ನಿಮ್ಮನ್ನು ಎಚ್ಚರಿಸಿದ್ದನ್ನು ಮರೆಯದಿರಿ.
32 “ಈಗ ನಾನು ನಿಮ್ಮನ್ನು ದೇವರಿಗೂ ಆತನ ಕೃಪಾವಾಕ್ಯಕ್ಕೂ ಒಪ್ಪಿಸಿಕೊಡುತ್ತಿದ್ದೇನೆ. ಆತನ ಕೃಪಾವಾಕ್ಯವು ನಿಮ್ಮ ಭಕ್ತಿಯನ್ನು ವೃದ್ಧಿಪಡಿಸಿ ಪರಿಶುದ್ಧರ ಬಾಧ್ಯತೆಯಲ್ಲಿ ಪಾಲುಗಾರರನ್ನಾಗಿ ಮಾಡುವುದು. 33 ನಾನು ನಿಮ್ಮೊಂದಿಗೆ ಇದ್ದಾಗ, ಯಾರ ಹಣವನ್ನಾಗಲಿ ಒಳ್ಳೆಯ ಬಟ್ಟೆಗಳನ್ನಾಗಲಿ ಎಂದೂ ಬಯಸಲಿಲ್ಲ. 34 ನಾನು ಯಾವಾಗಲೂ ನನ್ನ ಅಗತ್ಯತೆಗಳನ್ನು ಮತ್ತು ನನ್ನೊಂದಿಗಿರುವವರ ಅಗತ್ಯತೆಗಳನ್ನು ಪೂರೈಸುವುದಕ್ಕಾಗಿ ದುಡಿಯುತ್ತಿದ್ದೆನು ಎಂಬುದು ನಿಮಗೆ ಗೊತ್ತಿದೆ. 35 ಕಷ್ಟಪಟ್ಟು ದುಡಿದು ದುರ್ಬಲರಿಗೆ ನೆರವಾಗಬೇಕೆಂದು ನಾನೇ ನಿಮಗೆ ಮಾದರಿಯಾಗಿ ತೋರಿಸಿಕೊಟ್ಟಿದ್ದೇನೆ. ‘ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲೇ ಹೆಚ್ಚು ಸಂತೋಷ’ ಎಂಬ ಯೇಸುವಿನ ಮಾತನ್ನು ನಾವು ಮರೆಯಕೂಡದೆಂದು ನಿಮಗೆ ಉಪದೇಶಿಸಿದೆನು” ಎಂದು ಹೇಳಿದನು.
36 ಪೌಲನು ಈ ಸಂಗತಿಗಳನ್ನು ಹೇಳಿ ಮುಗಿಸಿದ ಮೇಲೆ ಮೊಣಕಾಲೂರಿ ಅವರೆಲ್ಲರೊಡನೆ ಪ್ರಾರ್ಥಿಸಿದನು. 37-38 ಅವರೆಲ್ಲರೂ ಬಹಳವಾಗಿ ಅತ್ತರು. “ನೀವು ನನ್ನನ್ನು ಮತ್ತೆಂದಿಗೂ ನೋಡುವುದಿಲ್ಲ”ವೆಂದು ಪೌಲನು ಹೇಳಿದ್ದರಿಂದ ಅವರು ಬಹಳ ದುಃಖಗೊಂಡಿದ್ದರು. ಅವರು ಪೌಲನನ್ನು ಅಪ್ಪಿಕೊಂಡು ಮುದ್ದಿಟ್ಟರು. ಅವರು ಹಡಗಿನವರೆಗೂ ಹೋಗಿ ಅವನನ್ನು ಬೀಳ್ಕೊಟ್ಟರು.
Kannada Holy Bible: Easy-to-Read Version. All rights reserved. © 1997 Bible League International