M’Cheyne Bible Reading Plan
ಸುನ್ನತಿ—ಒಡಂಬಡಿಕೆ
17 ಅಬ್ರಾಮನಿಗೆ ತೊಂಭತ್ತೊಂಬತ್ತು ವರ್ಷವಾಗಿದ್ದಾಗ ಯೆಹೋವನು ಅವನಿಗೆ ಪ್ರತ್ಯಕ್ಷನಾಗಿ, “ನಾನು ಸರ್ವಶಕ್ತನಾದ ದೇವರು. ನನಗೆ ವಿಧೇಯನಾಗಿದ್ದು ನಿರ್ದೋಷಿಯಾಗಿರು. 2 ನಾನು ನಿನ್ನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ನಿನ್ನನ್ನು ದೊಡ್ಡ ಜನಾಂಗವನ್ನಾಗಿ ಮಾಡುವುದಾಗಿ ವಾಗ್ದಾನ ಮಾಡುತ್ತೇನೆ” ಎಂದು ಹೇಳಿದನು.
3 ಆ ಕೂಡಲೇ ಅಬ್ರಾಮನು ದೇವರಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. ಆಗ ದೇವರು ಅವನಿಗೆ, 4 “ನಾನು ನಿನಗೆ ಮಾಡುವ ವಾಗ್ದಾನವೇನೆಂದರೆ: 5 ‘ಅಬ್ರಾಮ’ ಎಂಬ ನಿನ್ನ ಹೆಸರನ್ನು ಬದಲಾಯಿಸಿ ನಿನಗೆ ‘ಅಬ್ರಹಾಮ’ ಎಂದು ಹೆಸರಿಡುವೆನು. ನಿನ್ನನ್ನು ಅಬ್ರಹಾಮ ಎಂದೇ ಕರೆಯುವರು; ಯಾಕೆಂದರೆ ನೀನು ಅನೇಕ ಜನಾಂಗಗಳಿಗೆ ಮೂಲಪಿತೃವಾಗುವೆ. 6 ಹೊಸ ಜನಾಂಗಗಳು ನಿನ್ನಿಂದ ಹುಟ್ಟುವವು; ರಾಜರುಗಳು ನಿನ್ನಿಂದ ಬರುವರು. 7 ನಾನು ನಿನ್ನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ಈ ಒಡಂಬಡಿಕೆಯು ನಿನ್ನ ಎಲ್ಲಾ ಸಂತತಿಯವರಿಗೆ ಶಾಶ್ವತವಾಗಿ ಅನ್ವಯಿಸುವುದು. ನಾನೇ ನಿನಗೂ ನಿನ್ನ ಎಲ್ಲಾ ಸಂತತಿಯವರಿಗೂ ದೇವರಾಗಿರುವೆನು. 8 ನೀನು ಪ್ರಯಾಣ ಮಾಡುತ್ತಿರುವ ಈ ಕಾನಾನ್ ದೇಶವನ್ನೆಲ್ಲ ನಿನಗೂ ನಿನ್ನ ಸಂತತಿಯವರಿಗೂ ಶಾಶ್ವತವಾಗಿ ಕೊಡುವೆನು. ನಾನೇ ನಿಮ್ಮ ದೇವರಾಗಿರುವೆನು” ಎಂದು ಹೇಳಿದನು.
9 ಇದಲ್ಲದೆ ದೇವರು ಅಬ್ರಹಾಮನಿಗೆ, “ನಮ್ಮ ಒಡಂಬಡಿಕೆಯ ಪ್ರಕಾರ ನೀನು ಮತ್ತು ನಿನ್ನ ಸಂತತಿಯವರೆಲ್ಲರೂ ನನ್ನ ಒಡಂಬಡಿಕೆಗೆ ವಿಧೇಯರಾಗಬೇಕು. 10 ನೀನೂ ಮತ್ತು ನಿನ್ನ ಎಲ್ಲಾ ಸಂತತಿಯವರು ಕೈಕೊಳ್ಳಬೇಕಾದ ನಿಬಂಧನೆಯೇನೆಂದರೆ, ನಿಮ್ಮಲ್ಲಿ ಹುಟ್ಟಿದ ಪ್ರತಿಯೊಂದು ಗಂಡುಮಗುವಿಗೂ ಸುನ್ನತಿ ಮಾಡಿಸಬೇಕು. 11-12 ಇಂದಿನಿಂದ ನಿಮ್ಮಲ್ಲಿ ಗಂಡುಮಗು ಹುಟ್ಟಿ ಎಂಟು ದಿನಗಳಾದ ಮೇಲೆ ಆ ಮಗುವಿಗೆ ಸುನ್ನತಿ ಮಾಡಿಸಬೇಕು; ಈ ನಿಯಮವು ನಿಮ್ಮ ಮನೆಯಲ್ಲಿ ಹುಟ್ಟಿದ ಸೇವಕರಿಗೂ, ಪರದೇಶದಿಂದ ಕೊಂಡುತಂದ ಸೇವಕರಿಗೂ ಸಹ ಅನ್ವಯಿಸುತ್ತದೆ. ನನಗೂ ನಿನಗೂ ಆದ ಒಡಂಬಡಿಕೆಗೆ ಇದು ಗುರುತಾಗಿರುವುದು. 13-14 ಹೀಗೆ ಪ್ರತಿಯೊಬ್ಬನಿಗೂ ಸುನ್ನತಿಯಾಗಲೇಬೇಕು. ನಾನು ನಿನ್ನೊಂದಿಗೆ ಮಾಡಿಕೊಂಡ ಒಡಂಬಡಿಕೆಯು ಶಾಶ್ವತವಾದದ್ದು ಎಂಬುದಕ್ಕೆ ಈ ಸುನ್ನತಿಯೇ ದೈಹಿಕ ಗುರುತಾಗಿದೆ. ಸುನ್ನತಿಯಾಗಿಲ್ಲದ ಪುರುಷನು ನನ್ನ ಒಡಂಬಡಿಕೆಗೆ ವಿಧೇಯನಾಗದ ಕಾರಣ ಅವನನ್ನು ಕುಲದಿಂದ ತೆಗೆದುಹಾಕಲ್ಪಡಬೇಕು” ಎಂದು ಹೇಳಿದನು.
ಇಸಾಕನು ವಾಗ್ದಾನದ ಮಗನು
15 ದೇವರು ಅಬ್ರಹಾಮನಿಗೆ, “ನಿನ್ನ ಹೆಂಡತಿಯಾದ, ಸಾರಯಳಿಗೆ ನಾನು ಒಂದು ಹೆಸರನ್ನು ಕೊಡುತ್ತೇನೆ. ಆಕೆಯ ಹೊಸ ಹೆಸರು ಸಾರ. 16 ನಾನು ಆಕೆಯನ್ನು ಆಶೀರ್ವದಿಸಿ ಆಕೆಗೆ ಒಬ್ಬ ಮಗನನ್ನು ದಯಪಾಲಿಸುವೆನು; ನೀನೇ ಅವನ ತಂದೆ. ಅನೇಕ ಜನಾಂಗಗಳಿಗೂ ರಾಜರುಗಳಿಗೂ ಆಕೆಯು ಮೂಲಮಾತೆಯಾಗಿರುವಳು” ಎಂದು ಹೇಳಿದನು.
17 ಅಬ್ರಹಾಮನು ದೇವರಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. ಆದರೆ ಅವನು ಮನಸ್ಸಿನಲ್ಲಿ ನಗುತ್ತಾ, “ನನಗೆ ನೂರು ವರ್ಷ ವಯಸ್ಸಾಗಿರುವುದರಿಂದ ಮಗನನ್ನು ಪಡೆಯಲು ನನಗೂ ಸಾಧ್ಯವಿಲ್ಲ. ಸಾರಳಿಗೆ ತೊಂಭತ್ತು ವರ್ಷ ವಯಸ್ಸಾಗಿರುವುದರಿಂದ ಮಗನನ್ನು ಪಡೆಯಲು ಆಕೆಗೂ ಸಾಧ್ಯವಿಲ್ಲ” ಅಂದುಕೊಂಡನು.
18 ಆಮೇಲೆ ಅಬ್ರಹಾಮನು ದೇವರಿಗೆ, “ಇಷ್ಮಾಯೇಲನೇ ನಿನ್ನ ಆಶೀರ್ವಾದವನ್ನು ಹೊಂದಿಕೊಂಡು ಜೀವಿಸಬಾರದೇಕೆ?” ಎಂದು ಕೇಳಿದನು.
19 ಅದಕ್ಕೆ ದೇವರು ಅವನಿಗೆ, “ಇಲ್ಲ! ನಿನ್ನ ಹೆಂಡತಿಯಾದ ಸಾರಳಿಗೆ ಒಬ್ಬ ಮಗನು ಹುಟ್ಟುವನು. ನೀನು ಅವನಿಗೆ, ‘ಇಸಾಕ’ ಎಂದು ಹೆಸರಿಡಬೇಕು. ನಾನು ಒಂದು ಒಡಂಬಡಿಕೆಯನ್ನು ಅವನೊಡನೆ ಮಾಡಿಕೊಳ್ಳುವೆನು. ಆ ಒಡಂಬಡಿಕೆಯು ಅವನ ಎಲ್ಲಾ ಸಂತತಿಯವರಲ್ಲಿಯೂ ಶಾಶ್ವತವಾಗಿರುವುದು.
20 “ನೀನು ಇಷ್ಮಾಯೇಲನ ಬಗ್ಗೆ ಮಾಡಿದ ಬಿನ್ನಹವನ್ನು ಕೇಳಿದ್ದೇನೆ. ನಾನು ಅವನನ್ನು ಆಶೀರ್ವದಿಸುವೆನು. ಅವನು ಅನೇಕ ಮಕ್ಕಳನ್ನು ಪಡೆದುಕೊಳ್ಳುವನು. ಹನ್ನೆರಡು ಮಹಾನಾಯಕರುಗಳಿಗೆ ಅವನು ತಂದೆಯಾಗುವನು. ಅವನ ಸಂತತಿಯು ಮಹಾಜನಾಂಗವಾಗುವುದು. 21 ಆದರೆ ನಾನು ನನ್ನ ಒಡಂಬಡಿಕೆಯನ್ನು ಇಸಾಕನೊಡನೆ ಮಾಡಿಕೊಳ್ಳುವೆನು. ಸಾರಳಲ್ಲಿ ಹುಟ್ಟುವ ಮಗನೇ ಇಸಾಕನು. ಮುಂದಿನ ವರ್ಷ ಇದೇ ಸಮಯದಲ್ಲಿ ಇಸಾಕನು ಹುಟ್ಟುವನು” ಎಂದು ಹೇಳಿದನು.
22 ದೇವರು ಅಬ್ರಹಾಮನೊಡನೆ ಮಾತಾಡುವುದನ್ನು ಮುಗಿಸಿದ ಮೇಲೆ ಮೇಲೋಕಕ್ಕೆ ಹೊರಟುಹೋದನು. 23 ಅದೇ ದಿನದಲ್ಲಿ ಅಬ್ರಹಾಮನು ಇಷ್ಮಾಯೇಲನಿಗೂ ತನ್ನ ಮನೆಯಲ್ಲಿದ್ದ ಸೇವಕರಿಗೆ ಹುಟ್ಟಿದ ಗಂಡುಮಕ್ಕಳಿಗೂ ಪರದೇಶಿಯರಿಂದ ಕೊಂಡುತಂದಿದ್ದ ಸೇವಕರಿಗೂ ದೇವರು ಹೇಳಿದಂತೆಯೇ ಸುನ್ನತಿ ಮಾಡಿಸಿದನು.
24 ಅಬ್ರಹಾಮನು ಸುನ್ನತಿ ಮಾಡಿಸಿಕೊಂಡಾಗ ತೊಂಭತ್ತೊಂಭತ್ತು ವರ್ಷದವನಾಗಿದ್ದನು. 25 ಇಷ್ಮಾಯೇಲನಿಗೆ ಸುನ್ನತಿಯಾದಾಗ ಅವನಿಗೆ ಹದಿಮೂರು ವರ್ಷವಾಗಿತ್ತು. 26 ಅಬ್ರಹಾಮನಿಗೂ ಅವನ ಮಗನಿಗೂ ಒಂದೇ ದಿನದಲ್ಲಿ ಸುನ್ನತಿಯಾಯಿತು. 27 ಅಬ್ರಹಾಮನ ಮನೆಯಲ್ಲಿದ್ದ ಎಲ್ಲಾ ಗಂಡಸರಿಗೆ ಅಂದರೆ ಅವನ ಮನೆಯಲ್ಲಿ ಹುಟ್ಟಿದ ಎಲ್ಲಾ ಸೇವಕರಿಗೆ ಮತ್ತು ಅವನು ಕ್ರಯಕ್ಕೆ ತೆಗೆದುಕೊಂಡಿದ್ದ ಎಲ್ಲಾ ಸೇವಕರಿಗೆ ಸುನ್ನತಿಯಾಯಿತು.
ಯೇಸುವನ್ನು ಪರೀಕ್ಷಿಸಲು ಯೆಹೂದ್ಯ ನಾಯಕರ ಪ್ರಯತ್ನ
(ಮಾರ್ಕ 8:11-13; ಲೂಕ 12:54-56)
16 ಫರಿಸಾಯರು ಮತ್ತು ಸದ್ದುಕಾಯರು ಯೇಸುವಿನ ಬಳಿಗೆ ಬಂದರು. ಅವರು ಯೇಸುವನ್ನು ಪರೀಕ್ಷಿಸಲು, “ನೀನು ದೇವರಿಂದ ಬಂದವನೆಂಬುದನ್ನು ನಿರೂಪಿಸಲು ಒಂದು ಅದ್ಭುತಕಾರ್ಯವನ್ನು ಮಾಡಿ ತೋರಿಸು” ಎಂದು ಕೇಳಿದರು.
2 ಯೇಸು, “ಸೂರ್ಯನು ಮುಳುಗುವಾಗ ಹವಾಮಾನ ಹೇಗಿರುತ್ತದೆ ಎಂಬುದು ನಿಮಗೆ ತಿಳಿದಿದೆ. ಆಕಾಶವು ಕೆಂಪಾಗಿದ್ದರೆ, ನಮಗೆ ಒಳ್ಳೆಯ ಹವಾಮಾನವಿರುತ್ತದೆ ಎಂದು ಹೇಳುತ್ತೀರಿ. 3 ಬೆಳಿಗ್ಗೆ ಸೂರ್ಯೋದಯವನ್ನು ಗಮನಿಸುತ್ತೀರಿ. ಆಕಾಶವು ಕಪ್ಪಾಗಿದ್ದರೆ ಅಥವಾ ಕೆಂಪಾಗಿದ್ದರೆ, ಈ ದಿನ ಮಳೆ ಬರುತ್ತದೆ ಎಂದು ಹೇಳುತ್ತೀರಿ. ಇವುಗಳು ಹವಾಮಾನದ ಗುರುತುಗಳಾಗಿವೆ. ನೀವು ಈ ಗುರುತುಗಳನ್ನು ಕಂಡು ಅವುಗಳ ಅರ್ಥವನ್ನು ತಿಳಿದುಕೊಳ್ಳುತ್ತೀರಿ. ಅದೇ ರೀತಿಯಲ್ಲಿ ಈಗ ನೀವು ನೋಡುತ್ತಿರುವ ಇಂದಿನ ಸಂಗತಿಗಳು ಸಹ ಗುರುತುಗಳಾಗಿವೆ. ಆದರೆ ನಿಮಗೆ ಈ ಗುರುತುಗಳ ಅರ್ಥವು ಗೊತ್ತಿಲ್ಲ. 4 ಕೆಟ್ಟವರಾದ ಮತ್ತು ಪಾಪಿಗಳಾದ ಜನರು ಸೂಚನೆಗಾಗಿ ಒಂದು ಅದ್ಭುತಕಾರ್ಯವನ್ನು ಅಪೇಕ್ಷಿಸುತ್ತಾರೆ. ಅವರಿಗೆ ಯೋನನಲ್ಲಾದ ಸೂಚಕಕಾರ್ಯವೊಂದೇ[a] ಹೊರತು ಬೇರೆ ಯಾವ ಸೂಚಕಕಾರ್ಯವೂ ದೊರೆಯುವುದಿಲ್ಲ” ಎಂದು ಉತ್ತರಕೊಟ್ಟನು. ಬಳಿಕ ಯೇಸು ಆ ಸ್ಥಳವನ್ನು ಬಿಟ್ಟು ಹೊರಟುಹೋದನು.
ಯೆಹೂದ್ಯನಾಯಕರ ಬಗ್ಗೆ ಯೇಸು ನೀಡಿದ ಎಚ್ಚರಿಕೆ
(ಮಾರ್ಕ 8:14-21)
5 ಯೇಸು ಮತ್ತು ಆತನ ಶಿಷ್ಯರು ಸರೋವರವನ್ನು[b] ದಾಟಿ ಹೋದರು. ಆದರೆ ಶಿಷ್ಯರು ರೊಟ್ಟಿಯನ್ನು ತರಲು ಮರೆತುಬಿಟ್ಟರು. 6 ಯೇಸು ಶಿಷ್ಯರಿಗೆ, “ಎಚ್ಚರಿಕೆಯಿಂದಿರಿ! ಫರಿಸಾಯರ ಮತ್ತು ಸದ್ದುಕಾಯರ ಹುಳಿಗೆ ಒಳಗಾಗಬೇಡಿ” ಎಂದು ಹೇಳಿದನು.
7 ಶಿಷ್ಯರು ಇದರ ಅರ್ಥವನ್ನು ಚರ್ಚಿಸಿದರು. ಅವರು, “ನಾವು ರೊಟ್ಟಿ ತರಲು ಮರೆತುಬಿಟ್ಟದ್ದಕ್ಕಾಗಿ ಯೇಸು ಹೀಗೆ ಹೇಳಿರಬಹುದೆ?” ಎಂದು ಮಾತಾಡಿಕೊಂಡರು.
8 ಶಿಷ್ಯರು ಈ ವಿಷಯವನ್ನು ಚರ್ಚಿಸುತ್ತಿರುವುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಯೇಸು ಅವರಿಗೆ, “ರೊಟ್ಟಿ ಇಲ್ಲವಲ್ಲಾ ಎಂಬ ವಿಷಯದಲ್ಲಿ ನೀವು ಮಾತಾಡಿಕೊಳ್ಳುತ್ತಿರುವುದೇಕೆ? ಅಲ್ಪ ವಿಶ್ವಾಸಿಗಳೇ, 9 ನೀವಿನ್ನೂ ಅರ್ಥಮಾಡಿಕೊಳ್ಳಲಿಲ್ಲವೇ? ಐದು ರೊಟ್ಟಿಗಳಿಂದ ಐದು ಸಾವಿರ ಜನರಿಗೆ ಊಟ ಮಾಡಿಸಿದ್ದು ನಿಮಗೆ ನೆನಪಿಲ್ಲವೇ? ಜನರು ಊಟ ಮಾಡಿದ ಮೇಲೆ ನೀವು ಅನೇಕ ಬುಟ್ಟಿಗಳಲ್ಲಿ ರೊಟ್ಟಿಗಳನ್ನು ತುಂಬಿಸಿದ್ದು ನಿಮಗೆ ನೆನಪಿಲ್ಲವೇ? 10 ಏಳು ರೊಟ್ಟಿಗಳ ತುಂಡುಗಳನ್ನು ನಾಲ್ಕು ಸಾವಿರ ಜನರಿಗೆ ಊಟ ಮಾಡಿಸಿದ್ದು ನಿಮಗೆ ನೆನಪಿಲ್ಲವೇ? ಜನರು ತಿಂದು ಮುಗಿಸಿದ ಮೇಲೆ ನೀವು ಅನೇಕ ಬುಟ್ಟಿಗಳಲ್ಲಿ ರೊಟ್ಟಿಗಳನ್ನು ತುಂಬಿಸಿದ್ದು ನಿಮಗೆ ನೆನಪಿಲ್ಲವೇ? 11 ಆದ್ದರಿಂದ ನಾನು ನಿಮಗೆ ಹೇಳಿದ್ದು ರೊಟ್ಟಿಯ ಕುರಿತಲ್ಲ. ನೀವು ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲವೇಕೆ? ಫರಿಸಾಯರು ಮತ್ತು ಸದ್ದುಕಾಯರ ಹುಳಿಗೆ (ಕೆಟ್ಟ ಪ್ರಭಾವಕ್ಕೆ) ಒಳಗಾಗದಂತೆ ನೀವು ಎಚ್ಚರಿಕೆಯಿಂದಿರಬೇಕೆಂದು ನಾನು ನಿಮ್ಮನ್ನು ಎಚ್ಚರಿಸಿದೆನು” ಅಂದನು.
12 ಆಗ ಶಿಷ್ಯರು ಯೇಸು ಹೇಳಿದ್ದನ್ನು ಅರ್ಥಮಾಡಿಕೊಂಡರು. ಆತನು ಅವರಿಗೆ ರೊಟ್ಟಿಯಲ್ಲಿ ಬೆರೆಸಿದ್ದ ಹುಳಿಯನ್ನು ಕುರಿತು ಎಚ್ಚರಿಕೆಯಾಗಿರಬೇಕೆಂದು ಹೇಳಲಿಲ್ಲ. ಫರಿಸಾಯರು ಮತ್ತು ಸದ್ದುಕಾಯರ ಬೋಧನೆಯ ಪ್ರಭಾವಕ್ಕೆ ಒಳಗಾಗದಂತೆ ಎಚ್ಚರಿಕೆಯಾಗಿರಬೇಕೆಂದು ಹೇಳಿದ್ದನು.
ಯೇಸುವೇ ಕ್ರಿಸ್ತನೆಂದು ಪೇತ್ರನ ಪ್ರಕಟನೆ
(ಮಾರ್ಕ 8:27-30; ಲೂಕ 9:18-21)
13 ಯೇಸು ಫಿಲಿಪ್ಪನ ಸೆಜರೇಯ ಎಂಬ ಪ್ರಾಂತ್ಯಕ್ಕೆ ಹೋದನು. ಯೇಸು ತನ್ನ ಶಿಷ್ಯರಿಗೆ, “ಮನುಷ್ಯಕುಮಾರನಾದ ನನ್ನನ್ನು ಜನರು ಯಾರೆಂದು ಹೇಳುತ್ತಾರೆ?” ಎಂದು ಕೇಳಿದನು.
14 ಶಿಷ್ಯರು, “ಕೆಲವರು ‘ಸ್ನಾನಿಕ ಯೋಹಾನ’ನೆಂದು ಹೇಳುತ್ತಾರೆ. ಇನ್ನು ಕೆಲವರು ‘ಎಲೀಯ’ನೆಂದು ಹೇಳುತ್ತಾರೆ. ಮತ್ತೆ ಕೆಲವರು ‘ಯೆರೆಮೀಯ’ನೆಂದು ಇಲ್ಲವೆ ‘ಪ್ರವಾದಿಗಳಲ್ಲಿ ಒಬ್ಬ’ನೆಂದು ಹೇಳುತ್ತಾರೆ” ಎಂದು ಉತ್ತರಕೊಟ್ಟರು.
15 ಅದಕ್ಕೆ ಆತನು, “ನೀವು ನನ್ನನ್ನು ಯಾರೆಂದು ಹೇಳುತ್ತೀರಿ?” ಎಂದು ಕೇಳಿದನು.
16 ಸೀಮೋನ್ ಪೇತ್ರನು, “ನೀನೇ ಬರಬೇಕಾಗಿರುವ ಕ್ರಿಸ್ತನು. ನೀನೇ ಜೀವಸ್ವರೂಪನಾದ ದೇವರ ಮಗನು” ಎಂದು ಉತ್ತರಕೊಟ್ಟನು.
17 ಯೇಸು, “ಯೋನನ ಮಗನಾದ ಸೀಮೋನನೇ ನೀನು ಧನ್ಯನು. ಅದನ್ನು ನಿನಗೆ ತಿಳಿಸಿಕೊಟ್ಟವನು ಯಾವ ಮನುಷ್ಯನೂ ಅಲ್ಲ. ಪರಲೋಕದಲ್ಲಿರುವ ನನ್ನ ತಂದೆಯೇ ನಿನಗೆ ತಿಳಿಸಿಕೊಟ್ಟನು. 18 ಆದ್ದರಿಂದ ನಾನು ನಿನಗೆ ಹೇಳುವುದೇನೆಂದರೆ, ನೀನೇ ಪೇತ್ರ.[c] ನಾನು ಈ ಬಂಡೆಯ ಮೇಲೆ ನನ್ನ ಸಭೆಯನ್ನು ಕಟ್ಟುತ್ತೇನೆ. ಪಾತಾಳಲೋಕದ ಬಲವು ನನ್ನ ಸಭೆಯನ್ನು ಸೋಲಿಸಲಾರದು. 19 ಪರಲೋಕರಾಜ್ಯದ ಬೀಗದ ಕೈಗಳನ್ನು ನಾನು ನಿನಗೆ ಕೊಡುತ್ತೇನೆ. ನೀನು ಭೂಲೋಕದಲ್ಲಿ ನೀಡುವ ನ್ಯಾಯತೀರ್ಪು ದೇವರ ನ್ಯಾಯತೀರ್ಪಾಗಿರುತ್ತದೆ. ನೀನು ಭೂಲೋಕದಲ್ಲಿ ನೀಡುವ ಕ್ಷಮೆಯು ದೇವರ ಕ್ಷಮೆಯಾಗಿರುತ್ತದೆ” ಎಂದು ಉತ್ತರಿಸಿದನು.
20 ಬಳಿಕ ಯೇಸು ತನ್ನ ಶಿಷ್ಯರಿಗೆ, ತಾನು ಕ್ರಿಸ್ತನೆಂಬುದನ್ನು ಯಾರಿಗೂ ಹೇಳಕೂಡದೆಂದು ಎಚ್ಚರಿಕೆ ಕೊಟ್ಟನು.
ಯೇಸು ತನ್ನ ಮರಣದ ಕುರಿತು ಮುಂತಿಳಿಸಿದ್ದು
(ಮಾರ್ಕ 8:31–9:1; ಲೂಕ 9:22-27)
21 ಆ ಸಮಯದಲ್ಲಿ ಯೇಸು ತಾನು ಜೆರುಸಲೇಮಿಗೆ ಹೋಗಬೇಕೆಂದು ಮತ್ತು ಅಲ್ಲಿ ಯೆಹೂದ್ಯರ ಹಿರಿಯ ನಾಯಕರಿಂದಲೂ ಮಹಾಯಾಜಕರಿಂದಲೂ ಮತ್ತು ಧರ್ಮೋಪದೇಶಕರಿಂದಲೂ ತಾನು ಅನೇಕ ಕಷ್ಟಗಳನ್ನು ಅನುಭವಿಸಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಸತ್ತವರೊಳಗಿಂದ ಜೀವಂತವಾಗಿ ಎದ್ದುಬರಬೇಕಾಗಿದೆ ಎಂದು ತನ್ನ ಶಿಷ್ಯರಿಗೆ ವಿವರಿಸಿ ಹೇಳಿದನು.
22 ಆಗ ಪೇತ್ರನು ಯೇಸುವನ್ನು ಸ್ವಲ್ಪ ದೂರದಲ್ಲಿ ಕರೆದೊಯ್ದು, “ದೇವರು ನಿನ್ನನ್ನು ಕಾಪಾಡಲಿ, ನಿನಗೆಂದಿಗೂ ಹಾಗೆ ಸಂಭವಿಸದಿರಲಿ!” ಎಂದು ಪ್ರತಿಭಟಿಸಿದನು.
23 ಆಗ ಯೇಸು ಪೇತ್ರನಿಗೆ, “ಸೈತಾನನೇ, ಇಲ್ಲಿಂದ ತೊಲಗು! ನೀನು ನನಗೆ ಅಡ್ಡಿಯಾಗಿರುವೆ! ನಿನ್ನ ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದಲ್ಲ” ಎಂದು ಹೇಳಿದನು.
24 ಬಳಿಕ ಯೇಸು ತನ್ನ ಶಿಷ್ಯರಿಗೆ, “ನನ್ನನ್ನು ಹಿಂಬಾಲಿಸಲು ಅಪೇಕ್ಷಿಸುವವನು ತನಗೆ ಇಷ್ಟವಾದದ್ದನ್ನು ತ್ಯಜಿಸಬೇಕು. ಅವನು ತನಗೆ ಕೊಟ್ಟಿರುವ ಶಿಲುಬೆಯನ್ನು (ಸಂಕಟ) ಸ್ವೀಕರಿಸಿಕೊಂಡು ನನ್ನನ್ನು ಹಿಂಬಾಲಿಸಬೇಕು. 25 ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು. ನನಗಾಗಿ ತನ್ನ ಪ್ರಾಣವನ್ನು ಕೊಡುವ ಪ್ರತಿಯೊಬ್ಬನೂ ಅದನ್ನು ಉಳಿಸಿಕೊಳ್ಳುವನು. 26 ಒಬ್ಬನು ಪ್ರಪಂಚವನ್ನೆಲ್ಲಾ ಗಳಿಸಿಕೊಂಡು ತನ್ನ ಆತ್ಮವನ್ನೇ ಕಳೆದುಕೊಂಡರೆ ಅದರಿಂದ ಅವನಿಗೇನು ಪ್ರಯೋಜನ? ಮನುಷ್ಯನು ತನ್ನ ಆತ್ಮವನ್ನು ಕೊಂಡುಕೊಳ್ಳಲು ಏನನ್ನು ತಾನೇ ಕೊಡಬಲ್ಲನು? 27 ಮನುಷ್ಯಕುಮಾರನು ತನ್ನ ತಂದೆಯ ಮಹಿಮೆಯೊಡನೆ ಮತ್ತು ತನ್ನ ದೂತರೊಡನೆ ಮರಳಿ ಬಂದು ಪ್ರತಿಯೊಬ್ಬನಿಗೂ ಅವನವನ ಕಾರ್ಯಗಳಿಗೆ ತಕ್ಕಂತೆ ಪ್ರತಿಫಲ ಕೊಡುವನು. 28 ನಾನು ನಿಮಗೆ ಸತ್ಯವನ್ನೇ ಹೇಳುತ್ತೇನೆ. ಈಗ ಇಲ್ಲಿ ನಿಂತಿರುವ ಕೆಲವರು, ಮನುಷ್ಯಕುಮಾರನು ತನ್ನ ರಾಜ್ಯದೊಡನೆ ಬರುವುದನ್ನು ನೋಡುವ ತನಕ ಸಾಯುವುದಿಲ್ಲ” ಎಂದು ಹೇಳಿದನು.
ವಿರೋಧಿಗಳ ಕುಯುಕ್ತಿ
6 ಸನ್ಬಲ್ಲಟನಿಗೆ, ಟೋಬೀಯನಿಗೆ, ಅರಬಿಯವನಾದ ಗೆಷೆಮನಿಗೆ ಮತ್ತು ಇನ್ನಿತರ ವೈರಿಗಳಿಗೆ ನಾವು ಗೋಡೆಯನ್ನು ಕಟ್ಟಿ ಮುಗಿಸಿದ್ದು ಗೊತ್ತಾಯಿತು. ಗೋಡೆಯಲ್ಲಿದ್ದ ಎಲ್ಲಾ ಕಿಂಡಿಗಳನ್ನು ನಾವು ಮುಚ್ಚಿದೆವು. ಆದರೆ ಗೋಡೆಯಲ್ಲಿನ ದ್ವಾರಗಳಿಗೆ ಇನ್ನೂ ಬಾಗಿಲುಗಳನ್ನು ಇಟ್ಟಿರಲಿಲ್ಲ. 2 ಸನ್ಬಲ್ಲಟನು ಮತ್ತು ಗೆಷೆಮನು ನನಗೆ ಒಂದು ಸಂದೇಶವನ್ನು ಕಳುಹಿಸಿ, “ನೆಹಮೀಯನೇ, ನಾವು ಓನೋ ಬಯಲಿನಲ್ಲಿರುವ ಹಕ್ಕೆಫಿರೀಮ್ ಎಂಬ ಪಟ್ಟಣದಲ್ಲಿ ಭೇಟಿಯಾಗೋಣ” ಎಂದು ಬರೆದಿದ್ದರು. ಓನೋ ಬಯಲಿನಲ್ಲಿ ನನಗೆ ಅವರು ಕೇಡು ಮಾಡಬೇಕೆಂದಿದ್ದರು.
3 ನಾನು ಅವರಿಗೆ ಸೇವಕರ ಮುಖಾಂತರ ಈ ಉತ್ತರವನ್ನು ಕಳುಹಿಸಿದೆನು: “ನಾನು ಬಹಳ ವಿಶೇಷವಾದ ಕೆಲಸ ಮಾಡಿಸುತ್ತಿದ್ದೇನೆ. ಆದ್ದರಿಂದ ನನಗೆ ಬರಲು ಸಾಧ್ಯವಿಲ್ಲ. ನನ್ನ ಬರುವಿಕೆಯಿಂದಾಗಿ ಈ ಕೆಲಸವು ನಿಂತು ಹೋಗಬಾರದು.”
4 ಸನ್ಬಲ್ಲಟನೂ ಗೆಷೆಮನೂ ಅದೇ ಸಂದೇಶವನ್ನು ನಾಲ್ಕು ಸಲ ಕಳುಹಿಸಿದರು. ಪ್ರತಿ ಸಾರಿಯೂ ಅದೇ ಉತ್ತರವನ್ನು ನಾನು ಅವರಿಗೆ ಕಳುಹಿಸಿದೆನು. 5 ಐದನೆಯ ಸಾರಿ ಸನ್ಬಲ್ಲಟನು ತನ್ನ ಸೇವಕನೊಂದಿಗೆ ಮುದ್ರೆಯಿಂದ ಮುಚ್ಚಲ್ಪಡದ ಪತ್ರವನ್ನು ಕಳುಹಿಸಿಕೊಟ್ಟನು. 6 ಅದರಲ್ಲಿ,
“ಒಂದು ಸುದ್ದಿಯು ಹರಡುತ್ತಲಿದೆ. ಎಲ್ಲಾ ಕಡೆಗಳಲ್ಲಿ ಜನರು ಅದರ ವಿಷಯವಾಗಿ ಮಾತಾಡುತ್ತಿದ್ದಾರೆ. ಆ ಸುದ್ದಿಯು ಸತ್ಯವೆಂದು ಗೆಷೆಮನು ನನಗೆ ಹೇಳಿದನು. ನೀನು ಮತ್ತು ಯೆಹೂದ್ಯರು ಅರಸನಿಗೆ ವಿರುದ್ಧವಾಗಿ ದಂಗೆ ಏಳಲು ಯೋಚಿಸುತ್ತಿದ್ದೀರೆಂಬ ವದಂತಿ ಇದೆ. ಅದಕ್ಕೋಸ್ಕರವಾಗಿಯೇ ನೀವು ಕೋಟೆಗೋಡೆಯನ್ನು ಕಟ್ಟುತ್ತಿದ್ದೀರಿ. ನೀನು ಯೆಹೂದ್ಯರ ಅರಸನಾಗುವೆ ಎಂದೂ ಜನರಲ್ಲಿ ಸುದ್ದಿ ಹಬ್ಬಿದೆ. 7 ಮಾತ್ರವಲ್ಲದೆ ನಿನ್ನನ್ನು ಯೆಹೂದ ಪ್ರಾಂತ್ಯದ ಅರಸನೆಂದು ಪ್ರಕಟಿಸಲಿಕ್ಕೆ ಪ್ರವಾದಿಗಳನ್ನು ಆರಿಸಿಕೊಂಡಿರುವೆ ಎಂಬ ಸುದ್ದಿಯೂ ಇದೆ. ರಾಜನಾದ ಅರ್ತಷಸ್ತನು ಇದರ ಬಗ್ಗೆ ಕೇಳುವುದಕ್ಕಿಂತ ಮೊದಲೇ ನಾವು ಕುಳಿತುಕೊಂಡು ಮಾತನಾಡೋಣ” ಎಂದು ಬರೆಯಲಾಗಿತ್ತು.
8 ನಾನು ಆ ಕಾಗದವನ್ನು ಹಾಗೆಯೇ ಹಿಂದಕ್ಕೆ ಕಳುಹಿಸಿದೆನು. ಅಲ್ಲದೆ, “ನೀನು ಹೇಳುವಂಥದ್ದೇನೂ ಆಗಲಿಲ್ಲ. ಇದು ಕೇವಲ ನಿನ್ನ ಊಹೆಯಷ್ಟೇ!” ಎಂದು ಹೇಳಿ ಕಳುಹಿಸಿದೆನು.
9 ನಾವು ಹೆದರಿಹೋಗಬೇಕೆಂದು ನಮ್ಮ ವೈರಿಗಳ ಕುತಂತ್ರವಿದೆ. “ಯೆಹೂದ್ಯರು ಭಯಗೊಂಡು ಬಲಹೀನರಾಗುವುದರಿಂದ ಅವರ ಕೆಲಸವನ್ನು ಮುಂದುವರಿಸಲು ಆಗುವುದಿಲ್ಲ, ಗೋಡೆಯೂ ಪೂರ್ಣಗೊಳ್ಳುವುದಿಲ್ಲ” ಎಂದು ಅವರು ಯೋಚಿಸಿಕೊಂಡಿದ್ದಾರೆ.
ಆದರೆ ನಾನು, “ದೇವರೇ, ನನ್ನನ್ನು ಬಲಗೊಳಿಸು” ಎಂದು ಪ್ರಾರ್ಥಿಸಿದೆನು.
10 ಒಂದು ದಿನ ನಾನು ದೆಲಾಯನ ಮಗನಾದ ಶೆಮಾಯನ ಮನೆಗೆ ಹೋದೆನು. ದೆಲಾಯನು ಮೆಹೇಟಬೇಲನ ಮಗ. ಆಗ ಶೆಮಾಯನು ಮನೆಯಲ್ಲಿದ್ದನು. ಅವನು, “ನೆಹೆಮೀಯನೇ, ನಾವು ದೇವಾಲಯದಲ್ಲಿ ಭೇಟಿಯಾಗೋಣ. ನಾವು ಅದರ ಒಳಗೆ ಹೋಗಿ ಕದಗಳನ್ನು ಮುಚ್ಚಿಕೊಳ್ಳೋಣ. ಯಾಕೆಂದರೆ ನಿನ್ನನ್ನು ಕೊಲ್ಲಲು ಈ ರಾತ್ರಿ ಜನರು ಬರುತ್ತಾರೆ” ಎಂದು ಹೇಳಿದನು.
11 ಆದರೆ ನಾನು ಶೆಮಾಯನಿಗೆ, “ನನ್ನಂಥ ಪುರುಷನು ಓಡಿಹೋಗಬೇಕೆ? ನನ್ನಂಥ ಸಾಮಾನ್ಯ ವ್ಯಕ್ತಿ ದೇವಾಲಯಕ್ಕೆ ಹೋಗಿ ಅವಿತುಕೊಳ್ಳಬಾರದು. ನಾನು ಬರುವುದಿಲ್ಲ” ಎಂದು ಹೇಳಿದೆನು.
12 ಶೆಮಾಯನನ್ನು ದೇವರು ಕಳುಹಿಸಿಲ್ಲವೆಂದು ನನಗೆ ಚೆನ್ನಾಗಿ ಗೊತ್ತಿತ್ತು. ಟೋಬೀಯ ಮತ್ತು ಸನ್ಬಲ್ಲಟ್ ಅವನಿಗೆ ಲಂಚಕೊಟ್ಟು ಹಾಗೆ ಹೇಳಿಸಿದ್ದರು. 13 ನಾನು ಭಯಗೊಂಡು ದೇವಾಲಯದೊಳಗೆ ಓಡಿಹೋಗಿ ದೋಷಿಯಾಗುವಂತೆಯೂ ನನ್ನ ಮೇಲೆ ಹಾಗೆ ಅಪರಾಧ ಹೊರಿಸಲು ತಮಗೆ ಕಾರಣ ದೊರೆಯುವಂತೆಯೂ ಅವರು ಶೆಮಾಯನನ್ನು ಉಪಯೋಗಿಸಿಕೊಂಡರು.
14 ದೇವರೇ, ಟೋಬೀಯ ಮತ್ತ ಸನ್ಬಲ್ಲಟನ ವಿಚಾರವಾಗಿ ನಿನ್ನ ಜ್ಞಾಪಕದಲ್ಲಿರಿಸು. ಅವರು ಮಾಡಿದ ಕೆಟ್ಟಕಾರ್ಯಗಳನ್ನು ನೆನಪಿನಲ್ಲಿಡು. ಅದೇ ಸಮಯದಲ್ಲಿ ಪ್ರವಾದಿನಿಯಾದ ನೋವದ್ಯಳನ್ನು, ಇತರ ಪ್ರವಾದಿಗಳನ್ನು, ನನ್ನನ್ನು ಹೆದರಿಸುವವರನ್ನು ನೆನಪು ಮಾಡಿಕೊ.
ಗೋಡೆಯ ಕೆಲಸ ಮುಕ್ತಾಯವಾಯಿತು
15 ಏಲೂಲ್ ತಿಂಗಳ ಇಪ್ಪತ್ತೈದನೆಯ ದಿನದಲ್ಲಿ ಜೆರುಸಲೇಮಿನ ಪೌಳಿಗೋಡೆಗಳ ಕೆಲಸ ಮುಕ್ತಾಯವಾಯಿತು. ಅದಕ್ಕೆ ಒಟ್ಟು ಐವತ್ತೆರಡು ದಿನಗಳು ಬೇಕಾದವು. 16 ನಮ್ಮ ವೈರಿಗಳೆಲ್ಲಾ ಕೆಲಸ ಸಂಪೂರ್ಣವಾದದ್ದನ್ನು ಕೇಳಿದರು. ನಮ್ಮ ಸುತ್ತಮುತ್ತಲಿನ ಪ್ರಾಂತ್ಯಗಳವರಿಗೂ ದೇಶಗಳವರಿಗೂ ಈ ಸುದ್ದಿಮುಟ್ಟಿತು. ಆಗ ಅವರ ಧೈರ್ಯವು ಕುಗ್ಗಿತು. ಯಾಕೆಂದರೆ ಈ ಮಹಾಕಾರ್ಯವನ್ನು ನಮ್ಮ ದೇವರ ಸಹಾಯದಿಂದಲೇ ನಾವು ಮಾಡಿದ್ದೇವೆಂದು ಅವರಿಗೆ ಅರ್ಥವಾಯಿತು.
17 ಅದೇ ಸಮಯದಲ್ಲಿ ಗೋಡೆಯ ಕೆಲಸ ಮುಗಿದ ಬಳಿಕ ಯೆಹೂದ ಪ್ರಾಂತ್ಯದ ಧನಿಕರು ಟೋಬೀಯನಿಗೆ ಆಗಾಗ್ಗೆ ಅನೇಕ ಪತ್ರ ಬರೆಯುತ್ತಿದ್ದರು. 18 ಟೋಬೀಯನೂ ಅವರಿಗೆ ಉತ್ತರಿಸುತ್ತಿದ್ದನು. ಅವರು ಆ ಪತ್ರಗಳನ್ನು ಕಳುಹಿಸಲು ಕಾರಣವೇನೆಂದರೆ ಯೆಹೂದ್ಯರಲ್ಲಿ ಅನೇಕ ಜನರು ಅವನಿಗೆ ನಂಬಿಗಸ್ತರಾಗಿರುವುದಾಗಿ ವಾಗ್ದಾನ ಮಾಡಿದ್ದರು. ಟೋಬೀಯನು ಆರಹನ ಮಗನಾದ ಶೆಕನ್ಯನ ಅಳಿಯನಾಗಿದ್ದುದೇ ಇದಕ್ಕೆ ಕಾರಣ. ಟೋಬೀಯನ ಮಗನಾದ ಯೆಹೋಹಾನಾನನು ಬೆರೆಕ್ಯನ ಮಗನಾದ ಮೆಷುಲ್ಲಾಮನ ಮಗಳೊಂದಿಗೆ ಲಗ್ನವಾಗಿದ್ದನು. 19 ಹಿಂದಿನ ಕಾಲದಲ್ಲಿ ಆ ಜನರು ಟೋಬೀಯನಿಗೆ ಒಂದು ವಿಶೇಷ ವಾಗ್ದಾನ ಮಾಡಿದ್ದರು. ಆದ್ದರಿಂದ ಟೋಬೀಯನು ಎಷ್ಟು ಒಳ್ಳೆಯವನೆಂದು ನನ್ನೊಂದಿಗೆ ಹೇಳುತ್ತಿದ್ದರು; ನಾನು ಮಾಡುತ್ತಿರುವ ಕಾರ್ಯಗಳ ಬಗ್ಗೆಯೂ ಅವರು ಟೋಬೀಯನಿಗೆ ವರದಿ ಮಾಡುತ್ತಿದ್ದರು. ಟೋಬೀಯನು ನನ್ನನ್ನು ಬೆದರಿಸುವುದಕ್ಕೋಸ್ಕರ ನನಗೆ ಪದೇಪದೇ ಪತ್ರ ಬರೆಯುತ್ತಿದ್ದನು.
ತಿಮೊಥೆಯನು ಪೌಲ ಸೀಲರೊಂದಿಗೆ ಹೋಗುವನು
16 ಪೌಲನು ದರ್ಬೆ ಮತ್ತು ಲುಸ್ತ್ರ ಪಟ್ಟಣಗಳಿಗೆ ಹೋದನು. ತಿಮೊಥೆ ಎಂಬ ಕ್ರಿಸ್ತನ ಶಿಷ್ಯನೊಬ್ಬನು ಅಲ್ಲಿದ್ದನು. ತಿಮೊಥೆಯನ ತಾಯಿ ಯೆಹೂದ್ಯ ವಿಶ್ವಾಸಿಯಾಗಿದ್ದಳು. ಅವನ ತಂದೆಯು ಗ್ರೀಕನಾಗಿದ್ದನು. 2 ಲುಸ್ತ್ರ ಮತ್ತು ಇಕೋನಿಯಾ ಪಟ್ಟಣಗಳ ವಿಶ್ವಾಸಿಗಳು ತಿಮೊಥೆಯನನ್ನು ಗೌರವಿಸುತ್ತಿದ್ದರು; ಮತ್ತು ಅವನ ಬಗ್ಗೆ ಒಳ್ಳೆಯದನ್ನೇ ಹೇಳುತ್ತಿದ್ದರು. 3 ಪೌಲನು ತಿಮೊಥೆಯನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಅಪೇಕ್ಷಿಸಿದನು. ಆದರೆ ಆ ಪ್ರದೇಶದಲ್ಲಿ ವಾಸವಾಗಿದ್ದ ಎಲ್ಲಾ ಜನರಿಗೂ ತಿಮೊಥೆಯನ ತಂದೆ ಗ್ರೀಕನೆಂಬುದು ಗೊತ್ತಿತ್ತು. ಆದ್ದರಿಂದ ಪೌಲನು ಯೆಹೂದ್ಯರನ್ನು ಮೆಚ್ಚಿಸುವುದಕ್ಕಾಗಿ ತಿಮೊಥೆಯನಿಗೆ ಸುನ್ನತಿ ಮಾಡಿಸಿದನು.
4 ಬಳಿಕ ಪೌಲನು ಮತ್ತು ಅವನ ಸಂಗಡಿಗರು ಬೇರೆ ಪಟ್ಟಣಗಳ ಮೂಲಕ ಪ್ರಯಾಣ ಮಾಡಿದರು. ಜೆರುಸಲೇಮಿನಲ್ಲಿರುವ ಅಪೊಸ್ತಲರ ಮತ್ತು ಹಿರಿಯರ ನಿಯಮಗಳನ್ನೂ ತೀಮಾರ್ನಗಳನ್ನೂ ಅವರು ವಿಶ್ವಾಸಿಗಳಿಗೆ ಕೊಟ್ಟು ಅವುಗಳಿಗೆ ವಿಧೇಯರಾಗಬೇಕೆಂದು ತಿಳಿಸಿದರು. 5 ಇದರಿಂದಾಗಿ ಸಭೆಗಳು ನಂಬಿಕೆಯಲ್ಲಿ ಬಲವಾಗತೊಡಗಿದವು ಮತ್ತು ಸಂಖ್ಯೆಯಲ್ಲಿ ದಿನದಿನಕ್ಕೂ ಹೆಚ್ಚಾಗತೊಡಗಿದವು.
ಏಷ್ಯಾದಿಂದಾಚೆಗೆ ಬರಲು ಪೌಲನಿಗೆ ಕರೆ
6 ಪೌಲನು ಮತ್ತು ಅವನ ಸಂಗಡಿಗರು ಫ್ರಿಜಿಯ ಮತ್ತು ಗಲಾತ್ಯ ಪ್ರಾಂತ್ಯಗಳ ಮೂಲಕ ಹಾದುಹೋದರು. ಏಷ್ಯಾ[a] ಸೀಮೆಯಲ್ಲಿ ಸುವಾರ್ತೆಯನ್ನು ತಿಳಿಸದಂತೆ ಪವಿತ್ರಾತ್ಮನು ಅವರನ್ನು ತಡೆದನು. 7 ಪೌಲ ತಿಮೊಥೆಯರು ಮುಸಿಯ ನಾಡಿನ ಸಮೀಪಕ್ಕೆ ಹೋದರು. ಅವರು ಬಿಥೂನಿಯ ನಾಡಿನೊಳಗೆ ಹೋಗಬೇಕೆಂದಿದ್ದರು. ಆದರೆ ಯೇಸುವಿನ ಆತ್ಮನು ಅಲ್ಲಿಗೆ ಹೋಗದಂತೆ ಅವರನ್ನು ತಡೆದನು. 8 ಆದ್ದರಿಂದ ಅವರು ಮುಸಿಯ ನಾಡನ್ನು ಹಾದು ನೇರವಾಗಿ ತ್ರೋವ ಪಟ್ಟಣಕ್ಕೆ ಬಂದರು.
9 ಆ ರಾತ್ರಿ ಪೌಲನಿಗೆ ಒಂದು ದರ್ಶನವಾಯಿತು. ಈ ದರ್ಶನದಲ್ಲಿ ಮಕೆದೋನಿಯದ ನಾಡಿನಿಂದ ಬಂದ ಒಬ್ಬ ಮನುಷ್ಯನು ಅಲ್ಲಿ ನಿಂತುಕೊಂಡು, “ಮಕೆದೋನಿಯಕ್ಕೆ ಬಂದು ನಮಗೆ ಸಹಾಯಮಾಡು” ಎಂದು ಬೇಡಿಕೊಂಡನು. 10 ಪೌಲನು ಆ ದರ್ಶನವನ್ನು ಕಂಡಕೂಡಲೇ, ಅಲ್ಲಿಯ ಜನರಿಗೆ ಸುವಾರ್ತೆಯನ್ನು ತಿಳಿಸುವುದಕ್ಕಾಗಿ ದೇವರು ನಮ್ಮನ್ನು ಕರೆದಿದ್ದಾನೆಂದು ಅರ್ಥಮಾಡಿಕೊಂಡು ಮಕೆದೋನಿಯಕ್ಕೆ ಹೋಗಲು ನಾವು ಸಿದ್ಧರಾದೆವು.
ಲಿಡಿಯಳ ಪರಿವರ್ತನೆ
11 ನಾವು ತ್ರೋವದಿಂದ ಹಡಗಿನಲ್ಲಿ ಹೊರಟು ಸಮೊಥ್ರ ದ್ವೀಪಕ್ಕೆ ಬಂದು ಮರುದಿನ ನೆಯಪೊಲಿಸ್ ಪಟ್ಟಣವನ್ನು ತಲುಪಿ, 12 ಅಲ್ಲಿಂದ ಫಿಲಿಪ್ಪಿಗೆ ಹೋದೆವು. ಅದು ಮಕೆದೋನಿಯದ ಜಿಲ್ಲೆಯಲ್ಲಿ ಮತ್ತು ರೋಮನ್ನರ ವಸಾಹತುವಿನಲ್ಲಿ[b] ಮುಖ್ಯವಾದ ಪಟ್ಟಣವಾಗಿತ್ತು. ನಾವು ಅಲ್ಲಿ ಕೆಲವು ದಿನಗಳವರೆಗೆ ಇಳಿದುಕೊಂಡೆವು.
13 ನದಿಯ ಸಮೀಪದಲ್ಲಿ ವಿಶೇಷವಾದ ಪ್ರಾರ್ಥನಾ ಸ್ಥಳವನ್ನು ನಾವು ಕಾಣಬಹುದೆಂದು ಆಲೋಚಿಸಿಕೊಂಡು ಸಬ್ಬತ್ ದಿನದಂದು ನದಿಯ ಬಳಿಗೆ ಹೋಗಲು ನಗರದ್ವಾರದಿಂದ ಹೊರಗೆ ಹೋದೆವು. ಕೆಲವು ಸ್ತ್ರೀಯರು ಅಲ್ಲಿ ಸೇರಿ ಬಂದಿದ್ದರು. ಆದ್ದರಿಂದ ನಾವು ಕುಳಿತುಕೊಂಡು ಅವರೊಂದಿಗೆ ಮಾತಾಡಿದೆವು. 14 ಅಲ್ಲಿ ಲಿಡಿಯಾ ಎಂಬ ಒಬ್ಬ ಹೆಂಗಸಿದ್ದಳು. ಆಕೆಯು ಥುವತೈರ ಪಟ್ಟಣದವಳು. ಕೆನ್ನೇರಳೆ ಬಣ್ಣದ ಬಟ್ಟೆಗಳನ್ನು ಮಾರುವುದು ಆಕೆಯ ಕಸುಬಾಗಿತ್ತು. ಆಕೆಯು ನಿಜ ದೇವರನ್ನು ಆರಾಧಿಸುತ್ತಿದ್ದಳು. ಪೌಲನ ಮಾತನ್ನು ಲಿಡಿಯಾ ಆಲಿಸುತ್ತಿದ್ದಳು. ಪ್ರಭುವು ಆಕೆಯ ಹೃದಯವನ್ನು ತೆರೆದನು. ಪೌಲನು ಹೇಳಿದ ಸಂಗತಿಗಳನ್ನು ಆಕೆ ನಂಬಿಕೊಂಡಳು. 15 ಆಕೆ ಮತ್ತು ಆಕೆಯ ಮನೆಯಲ್ಲಿ ವಾಸವಾಗಿದ್ದ ಎಲ್ಲಾ ಜನರು ದೀಕ್ಷಾಸ್ನಾನ ಮಾಡಿಸಿಕೊಂಡರು. ಆಕೆಯು, “ನಾನು ಪ್ರಭು ಯೇಸುವಿನಲ್ಲಿ ನಿಜವಾದ ವಿಶ್ವಾಸಿಯೆಂದು ನೀವು ಯೋಚಿಸುವುದಾಗಿದ್ದರೆ, ನನ್ನ ಮನೆಗೆ ಬಂದು ತಂಗಿರಿ” ಎಂದು ಕೇಳಿಕೊಂಡು ನಮ್ಮನ್ನು ಒತ್ತಾಯ ಮಾಡಿದಳು.
ಸೆರೆಮನೆಯಲ್ಲಿ ಪೌಲ ಸೀಲರು
16 ಒಂದು ಸಲ, ನಾವು ಪ್ರಾರ್ಥನಾಸ್ಥಳಕ್ಕೆ ಹೋಗುತ್ತಿದ್ದಾಗ ಒಂದು ಸಂಗತಿ ಸಂಭವಿಸಿತು. ದಾಸಿಯೊಬ್ಬಳು ನಮ್ಮನ್ನು ಎದುರುಗೊಂಡಳು. ಆಕೆಯಲ್ಲಿ ವಿಶೇಷವಾದ ಆತ್ಮವಿತ್ತು. ಆ ಆತ್ಮದ ಶಕ್ತಿಯಿಂದ ಅವಳು ಮುಂದೆ ಸಂಭವಿಸುವ ಸಂಗತಿಗಳ ಬಗ್ಗೆ ಹೇಳುತ್ತಿದ್ದಳು. ಇದರ ಮೂಲಕವಾಗಿ ಆಕೆ ತನ್ನ ಯಜಮಾನರಿಗೆ ಬಹಳ ಹಣವನ್ನು ಗಳಿಸಿ ಕೊಡುತ್ತಿದ್ದಳು. 17 ಅವಳು ಪೌಲನನ್ನು ಮತ್ತು ನಮ್ಮನ್ನು ಹಿಂಬಾಲಿಸುತ್ತಾ, “ಈ ಜನರು ಮಹೋನ್ನತನಾದ ದೇವರ ಸೇವಕರು! ನೀವು ಹೇಗೆ ರಕ್ಷಣೆ ಹೊಂದಬಹುದೆಂಬುದನ್ನು ಅವರು ಹೇಳುತ್ತಿದ್ದಾರೆ!” ಎಂದು ಕೂಗುತ್ತಿದ್ದಳು. 18 ಹೀಗೆ ಆಕೆ ಅನೇಕ ದಿನಗಳವರೆಗೆ ಮಾಡಿದಳು. ಇದರಿಂದ ಬೇಸರಗೊಂಡ ಪೌಲನು ಹಿಂತಿರುಗಿ, ಆ ಆತ್ಮಕ್ಕೆ, “ಅವಳನ್ನು ಬಿಟ್ಟು ಹೋಗಬೇಕೆಂದು ಯೇಸು ಕ್ರಿಸ್ತನ ಹೆಸರಿನಲ್ಲಿ ನಿನಗೆ ಆಜ್ಞಾಪಿಸುತ್ತೇನೆ!” ಎಂದು ಹೇಳಿದನು. ಆ ಕೂಡಲೇ ಆ ಆತ್ಮವು ಹೊರಬಂದಿತು.
19 ಇದನ್ನು ಕಂಡ ಅವಳ ಯಜಮಾನರು ಈಗ ಆಕೆಯಿಂದ ಹಣಗಳಿಸಲು ಸಾಧ್ಯವಿಲ್ಲವೆಂದು ಅರಿತುಕೊಂಡರು. ಆದ್ದರಿಂದ ಅವರು ಪೌಲ ಸೀಲರನ್ನು ಹಿಡಿದು ಪಟ್ಟಣದ ನ್ಯಾಯಸ್ಥಾನಕ್ಕೆ ಎಳೆದುಕೊಂಡು ಹೋದರು. ನಗರಾಧಿಕಾರಿಗಳು ಅಲ್ಲಿದ್ದರು. 20 ಆ ಜನರು ಪೌಲ ಸೀಲರನ್ನು ನ್ಯಾಯಾಧೀಶರ ಬಳಿಗೆ ತಂದು, “ಈ ಜನರು ಯೆಹೂದ್ಯರು. ಇವರು ನಮ್ಮ ಪಟ್ಟಣದಲ್ಲಿ ಗಲಭೆ ಎಬ್ಬಿಸುತ್ತಿದ್ದಾರೆ. 21 ನಿಷಿದ್ಧ ಕಾರ್ಯಗಳನ್ನು ಮಾಡುವಂತೆ ಇವರು ಜನರಿಗೆ ಹೇಳುತ್ತಿದ್ದಾರೆ. ರೋಮ್ ಪ್ರಜೆಗಳಾಗಿರುವ ನಾವು ಅಂಥ ಕಾರ್ಯಗಳನ್ನು ಮಾಡಲು ಸಾಧ್ಯವಿಲ್ಲ” ಎಂದು ಹೇಳಿದರು.
22 ಜನರು ಪೌಲ ಸೀಲರಿಗೆ ವಿರೋಧವಾಗಿದ್ದರು. ಆಗ ನಾಯಕರು ಪೌಲ ಸೀಲರ ಬಟ್ಟೆಗಳನ್ನು ಹರಿದುಹಾಕಿಸಿ ಅವರಿಬ್ಬರಿಗೂ ಕೋಲುಗಳಿಂದ ಬಲವಾಗಿ ಹೊಡೆಸಿ, ಸೆರೆಮನೆಗೆ ಹಾಕಿಸಿದರು. 23 ಬಳಿಕ ಸೆರೆಮನೆಯ ಅಧಿಕಾರಿಗೆ, “ಅವರನ್ನು ಬಹು ಎಚ್ಚರಿಕೆಯಿಂದ ಕಾಯಿರಿ!” ಎಂದು ಆಜ್ಞಾಪಿಸಿದರು. 24 ಆದ್ದರಿಂದ ಸೆರೆಮನೆಯ ಅಧಿಕಾರಿಯು ಅವರನ್ನು ಸೆರೆಮನೆಯ ಒಳಕೋಣೆಗೆ ಹಾಕಿಸಿ, ಅವರ ಕಾಲುಗಳನ್ನು ಮರದ ದಿಮ್ಮಿಗಳಿಗೆ ಬಿಗಿಸಿದನು.
25 ಸುಮಾರು ಮಧ್ಯರಾತ್ರಿಯಲ್ಲಿ ಪೌಲ ಸೀಲರು ಪ್ರಾರ್ಥನೆ ಮಾಡುತ್ತಾ ದೇವರಿಗೆ ಸ್ತುತಿಗೀತೆಗಳನ್ನು ಹಾಡುತ್ತಾ ಇದ್ದರು. ಇತರ ಕೈದಿಗಳೆಲ್ಲರೂ ಆಲಿಸುತ್ತಿದ್ದರು. 26 ಇದ್ದಕ್ಕಿದ್ದಂತೆ ದೊಡ್ಡ ಭೂಕಂಪವಾಯಿತು. ಭೀಕರವಾಗಿದ್ದ ಅದು ಸೆರೆಮನೆಯ ಅಡಿಪಾಯವನ್ನೇ ನಡುಗಿಸಿತು. ಆಗ ಸೆರೆಮನೆಯ ಬಾಗಿಲುಗಳೆಲ್ಲಾ ತೆರೆದುಕೊಂಡವು. ಎಲ್ಲಾ ಕೈದಿಗಳ ಸರಪಣಿಗಳು ಕಳಚಿಬಿದ್ದವು. 27 ಆಗ ಸೆರೆಮನೆಯ ಅಧಿಕಾರಿಗೆ ಎಚ್ಚರವಾಯಿತು. ಸೆರೆಮನೆಯ ಬಾಗಿಲುಗಳು ತೆರೆದುಕೊಂಡಿರುವುದನ್ನು ಕಂಡು ಈಗಾಗಲೇ ಕೈದಿಗಳು ತಪ್ಪಿಸಿಕೊಂಡಿದ್ದಾರೆಂದು ಅವನು ಭಾವಿಸಿದನು. ಆದ್ದರಿಂದ ಅವನು ತನ್ನ ಕತ್ತಿಯನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನುವಷ್ಟರಲ್ಲಿಯೇ 28 ಪೌಲನು ಅವನಿಗೆ, “ಹಾನಿ ಮಾಡಿಕೊಳ್ಳಬೇಡ! ನಾವೆಲ್ಲಾ ಇಲ್ಲೇ ಇದ್ದೇವೆ!” ಎಂದು ಕೂಗಿ ಹೇಳಿದನು.
29 ಸೆರೆಮನೆಯ ಅಧಿಕಾರಿಯು ಒಬ್ಬನಿಗೆ ದೀಪವನ್ನು ತರಬೇಕೆಂದು ಹೇಳಿದನು. ಬಳಿಕ ಅವನು ಒಳಗೆ ಓಡಿಹೋದನು. ಅವನು ನಡುಗುತ್ತಾ ಪೌಲ ಸೀಲರ ಮುಂದೆ ಕುಸಿದುಬಿದ್ದನು. 30 ಬಳಿಕ ಅವನು ಅವರನ್ನು ಹೊರಗೆ ಕರೆದುಕೊಂಡು ಬಂದು, “ಸ್ವಾಮಿಗಳೇ, ನಾನು ರಕ್ಷಣೆ ಹೊಂದಬೇಕಾದರೆ ಏನು ಮಾಡಬೇಕು?” ಎಂದು ಕೇಳಿದನು.
31 ಅವರು ಅವನಿಗೆ, “ಪ್ರಭು ಯೇಸುವಿನಲ್ಲಿ ನಂಬಿಕೆಯಿಡು. ಆಗ ನೀನು ರಕ್ಷಣೆ ಹೊಂದುವೆ ಮತ್ತು ನಿನ್ನ ಮನೆಯವರೆಲ್ಲರೂ ರಕ್ಷಣೆ ಹೊಂದುವರು” ಎಂದು ಹೇಳಿ, 32 ಅವನಿಗೂ ಅವನ ಮನೆಯವರೆಲ್ಲರಿಗೂ ಪ್ರಭುವಿನ ಸಂದೇಶವನ್ನು ತಿಳಿಸಿದರು. 33 ಆಗ ಮಧ್ಯರಾತ್ರಿ ಕಳೆದಿತ್ತು. ಆದರೂ ಅವನು ಪೌಲ ಸೀಲರನ್ನು ಕರೆದೊಯ್ದು ಅವರ ಗಾಯಗಳನ್ನು ತೊಳೆದನು. ಬಳಿಕ ಅವನು ಮತ್ತು ಅವನ ಮನೆಯವರೆಲ್ಲರೂ ದೀಕ್ಷಾಸ್ನಾನ ಮಾಡಿಸಿಕೊಂಡರು. 34 ಇದಾದ ಮೇಲೆ ಅವನು ಪೌಲ ಸೀಲರನ್ನು ಮನೆಗೆ ಕರೆದೊಯ್ದು ಅವರಿಗೆ ಊಟಮಾಡಿಸಿದನು. ಆ ಜನರೆಲ್ಲರೂ ಪ್ರಭುವಿನಲ್ಲಿ ನಂಬಿಕೆ ಇಟ್ಟದ್ದರಿಂದ ಬಹ ಸಂತೋಷಭರಿತರಾದರು.
35 ಮರುದಿನ ಮುಂಜಾನೆ ನಾಯಕರು ಸೆರೆಮನೆಯ ಅಧಿಕಾರಿಗೆ, “ಈ ಜನರನ್ನು ಬಿಟ್ಟುಬಿಡು!” ಎಂದು ಕೆಲವು ಸೈನಿಕರ ಮೂಲಕ ಹೇಳಿ ಕಳುಹಿಸಿದರು.
36 ಸೆರೆಮನೆಯ ಅಧಿಕಾರಿಯು ಪೌಲನಿಗೆ, “ನಮ್ಮ ನಾಯಕರು ನಿಮ್ಮನ್ನು ಬಿಡುಗಡೆ ಮಾಡಬೇಕೆಂದು ಸೈನಿಕರ ಮೂಲಕ ಹೇಳಿ ಕಳುಹಿಸಿದ್ದಾರೆ. ಈಗ ನೀವು ಸಮಾಧಾನದಿಂದ ಹೋಗಿರಿ” ಎಂದು ಹೇಳಿದನು.
37 ಆದರೆ ಪೌಲನು, “ನಾವು ಏನು ತಪ್ಪು ಮಾಡಿದ್ದೇವೆಂಬುದನ್ನು ನಿಮ್ಮ ನಾಯಕರು ನಿರೂಪಿಸದೆ ನಮ್ಮನ್ನು ಜನರ ಎದುರಿನಲ್ಲಿ ಹೊಡೆಸಿ ಸೆರೆಮನೆಗೆ ಹಾಕಿಸಿದರು. ನಾವು ರೋಮಿನ ಪ್ರಜೆಗಳು. ಆದ್ದರಿಂದ ನಮಗೂ ಹಕ್ಕುಗಳಿವೆ. ಈಗ ಅವರು ನಮ್ಮನ್ನು ಗೋಪ್ಯವಾಗಿ ಬಿಡುಗಡೆ ಮಾಡಬೇಕೆಂದಿರುವರೇ? ಇಲ್ಲ! ನಾಯಕರೇ ಬಂದು ನಮ್ಮನ್ನು ಹೊರಗೆ ಕರೆದುಕೊಂಡು ಹೋಗಬೇಕು!” ಎಂದು ಹೇಳಿದನು.
38 ಆ ಸೈನಿಕರು ನಾಯಕರ ಬಳಿಗೆ ಹೋಗಿ ಪೌಲನು ಹೇಳಿದ್ದನ್ನೆಲ್ಲ ತಿಳಿಸಿದರು. ಪೌಲ ಸೀಲರು ರೋಮಿನ ಪ್ರಜೆಗಳೆಂಬುದನ್ನು ಕೇಳಿದ ಕೂಡಲೇ ನಾಯಕರಿಗೆ ಭಯವಾಯಿತು. 39 ಆದ್ದರಿಂದ ಅವರು ಪೌಲ ಸೀಲರ ಬಳಿಗ ಬಂದು ಕ್ಷಮೆ ಕೇಳಿದರು. ಅಲ್ಲದೆ ಅವರನ್ನು ಸೆರೆಮನೆಯಿಂದ ಹೊರಗೆ ಕರೆದುಕೊಂಡು ಹೋದರು ಮತ್ತು ತಮ್ಮ ಪಟ್ಟಣವನ್ನು ಬಿಟ್ಟುಹೋಗಬೇಕೆಂದು ಕೇಳಿಕೊಂಡರು. 40 ಆದರೆ ಪೌಲ ಸೀಲರು ಸೆರೆಮನೆಯಿಂದ ಹೊರಟು ಲಿಡಿಯಾಳ ಮನೆಗೆ ಹೋದರು. ಅಲ್ಲಿ ಅವರು ಕೆಲವು ವಿಶ್ವಾಸಿಗಳನ್ನು ಕಂಡು ಅವರನ್ನು ಸಂತೈಸಿದರು. ಬಳಿಕ ಪೌಲ ಸೀಲರು ಅಲ್ಲಿಂದ ಹೊರಟುಹೋದರು.
Kannada Holy Bible: Easy-to-Read Version. All rights reserved. © 1997 Bible League International