Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 14

ಲೋಟನ ಸೆರೆ

14 ಆ ದಿನಗಳಲ್ಲಿ ಅಮ್ರಾಫೆಲನು ಶಿನಾರಿನ ರಾಜನಾಗಿದ್ದನು; ಅರಿಯೋಕನು ಎಲ್ಲಸಾರಿನ ರಾಜನಾಗಿದ್ದನು; ಕೆದೊರ್ಲಗೋಮರನು ಏಲಾಮಿನ ರಾಜನಾಗಿದ್ದನು; ತಿದ್ಗಾಲನು ಗೋಯಿಮದ ರಾಜನಾಗಿದ್ದನು. ಈ ರಾಜರುಗಳೆಲ್ಲ ಸೊದೋಮಿನ ರಾಜನಾದ ಬೆರಗನಿಗೂ ಗೊಮೋರದ ರಾಜನಾದ ಬಿರ್ಶಗನಿಗೂ ಅದ್ಮಾಹದ ರಾಜನಾದ ಶಿನಾಬನಿಗೂ ಚೆಬೋಯೀಮಿನ ರಾಜನಾದ ಶೆಮೇಬರನಿಗೂ ಚೋಗರ್ ಎಂಬ ಬೇಲಗಿನ ರಾಜನಿಗೂ ವಿರುದ್ಧವಾಗಿ ಯುದ್ಧಮಾಡಿದರು.

ಈ ರಾಜರುಗಳೆಲ್ಲ ಸಿದ್ದೀಮ್ ಕಣಿವೆಯಲ್ಲಿ ತಮ್ಮ ಸೈನ್ಯಗಳನ್ನು ಒಟ್ಟಿಗೆ ಸೇರಿಸಿದರು. (ಸಿದ್ದೀಮ್ ಕಣಿವೆಯು ಈಗ ಉಪ್ಪುಸಮುದ್ರವಾಗಿದೆ). ಈ ರಾಜರುಗಳು ಕೆದೊರ್ಲಗೋಮರನ ಅಧೀನದಲ್ಲಿ ಹನ್ನೆರಡು ವರ್ಷವಿದ್ದರು. ಆದರೆ ಹದಿಮೂರನೆಯ ವರ್ಷದಲ್ಲಿ, ಅವರೆಲ್ಲರೂ ಅವನಿಗೆ ವಿರೋಧವಾಗಿ ದಂಗೆ ಎದ್ದರು. ಆದ್ದರಿಂದ ಹದಿನಾಲ್ಕನೆಯ ವರ್ಷದಲ್ಲಿ, ರಾಜನಾದ ಕೆದೊರ್ಲಗೋಮರನು ಮತ್ತು ಅವನೊಡನಿದ್ದ ರಾಜರುಗಳು ಅವರ ವಿರೋಧವಾಗಿ ಯುದ್ಧಮಾಡಲು ಬಂದರು. ಕೆದೊರ್ಲಗೋಮರನು ಮತ್ತು ಅವನೊಡನಿದ್ದ ರಾಜರುಗಳು ಅಷ್ಟರೋತ್-ಕರ್ನಯಿಮಿನಲ್ಲಿದ್ದ ರೆಫಾಯರನ್ನೂ ಹಾಮಿನಲ್ಲಿದ್ದ ಜೂಜ್ಯರನ್ನೂ ಶಾವೆಕೆರ್ಯಾತಯಿಮಿನಲ್ಲಿದ್ದ ಏಮಿಯರನ್ನೂ ಸೋಲಿಸಿದರು. ಇದಲ್ಲದೆ ಅವರು ಹೋರಿಯರನ್ನು ಬೆಟ್ಟದ ಸೀಮೆಯಿಂದ ಮರುಭೂಮಿಯ ಸಮೀಪದಲ್ಲಿರುವ ಎಲ್ಪಾರಾನಿನವರೆಗೂ ಹಿಂದಟ್ಟಿದರು. ಆ ಬಳಿಕ ರಾಜ ಕೆದೊರ್ಲಗೋಮರನು ಉತ್ತರದ ಕಡೆಗೆ ತಿರುಗಿ ಕಾದೇಶ್ ಎನ್ನುವ ಎನ್ಮಿಷ್ಪಾಟಿಗೆ ಬಂದು ಎಲ್ಲಾ ಅಮಾಲೇಕ್ಯರನ್ನು ಸೋಲಿಸಿದನು. ಇದಲ್ಲದೆ ಅವನು ಹಚಚೋನ್‌ತಾಮರಿನಲ್ಲಿ ವಾಸವಾಗಿದ್ದ ಅಮೋರಿಯರನ್ನು ಸೋಲಿಸಿದನು.

ಆ ಕಾಲದಲ್ಲಿ, ಸೊದೋಮಿನ ರಾಜನೂ ಗೊಮೋರದ ರಾಜನೂ ಅದ್ಮಾಹದ ರಾಜನೂ ಚೆಬೋಯೀಮಿನ ರಾಜನೂ ಬೇಲಗದ, ಅಂದರೆ ಚೋಗರದ ರಾಜನೂ ಒಟ್ಟಾಗಿ ಸೇರಿಕೊಂಡು ತಮ್ಮ ಶತ್ರುಗಳ ವಿರುದ್ಧವಾಗಿ ದಂಡೆತ್ತಿಕೊಂಡು ಸಿದ್ದೀಮ್ ಕಣಿವೆಗೆ ಹೋದರು. ಅವರು ಏಲಾಮಿನ ರಾಜ ಕೆದೊರ್ಲಗೋಮರನಿಗೂ ಗೋಯಿಮದ ರಾಜ ತಿದ್ಗಾಲನಿಗೂ ಶಿನಾರಿನ ರಾಜ ಅಮ್ರಾಫೆಲನಿಗೂ, ಎಲ್ಲಸಾರಿನ ರಾಜ ಅರಿಯೋಕನಿಗೂ ವಿರುದ್ಧವಾಗಿ ಹೋರಾಡಿದರು. ಹೀಗೆ ನಾಲ್ಕು ಮಂದಿ ರಾಜರು ಐದು ಮಂದಿ ರಾಜರ ವಿರುದ್ಧವಾಗಿ ಹೋರಾಡಿದರು.

10 ಸಿದ್ದೀಮ್ ಕಣಿವೆಯಲ್ಲಿ ಕಲ್ಲರಗಿನ ಕೆಸರುಕುಣಿಗಳು ಬಹಳಷ್ಟಿದ್ದವು. ಸೊದೋಮ್ ಮತ್ತು ಗೊಮೋರಗಳ ರಾಜರುಗಳು ಮತ್ತು ಅವರ ಸೈನ್ಯಗಳವರು ಓಡಿಹೋಗುವಾಗ ಈ ಕುಣಿಗಳಲ್ಲಿ ಬಿದ್ದುಹೋದರು; ಉಳಿದವರು ಬೆಟ್ಟಗಳಿಗೆ ಓಡಿಹೋದರು.

11 ಗೆದ್ದವರು ಸೊದೋಮ್ ಮತ್ತು ಗೊಮೋರಗಳ ಜನರು ಹೊಂದಿದ್ದ ಎಲ್ಲಾ ವಸ್ತುಗಳನ್ನು ತೆಗೆದುಕೊಂಡರು. ಅವರು ಅವರೆಲ್ಲರ ಆಹಾರವನ್ನೂ ಬಟ್ಟೆಗಳನ್ನೂ ತೆಗೆದುಕೊಂಡರು. 12 ಅಬ್ರಾಮನ ಸಹೋದರನಾದ ಲೋಟನು ಸೊದೋಮಿನಲ್ಲಿ ವಾಸವಾಗಿದ್ದನು. ಶತ್ರುಗಳು ಅವನನ್ನು ಸೆರೆಹಿಡಿದು, ಅವನ ಸ್ವತ್ತುಗಳನ್ನೆಲ್ಲ ದೋಚಿಕೊಂಡು ಹೋದರು. 13 ತಪ್ಪಿಸಿಕೊಂಡ ಒಬ್ಬನು ಇಬ್ರಿಯನಾದ ಅಬ್ರಾಮನ ಬಳಿಗೆ ಹೋಗಿ ನಡೆದ ವಿಷಯವನ್ನೆಲ್ಲಾ ತಿಳಿಸಿದನು. ಅಬ್ರಾಮನು ಅಮೋರಿಯನಾದ ಮಮ್ರೆಯನ ತೋಪಿನ ಬಳಿಯಲ್ಲಿ ವಾಸವಾಗಿದ್ದನು. ಮಮ್ರೆ, ಎಷ್ಕೋಲ ಮತ್ತು ಆನೇರ್ ಒಬ್ಬರಿಗೊಬ್ಬರು ಸಹಾಯಮಾಡಲು ಒಂದು ಒಪ್ಪಂದವನ್ನು ಮಾಡಿಕೊಂಡಿದ್ದರು. ಅಲ್ಲದೆ ಅಬ್ರಾಮನಿಗೂ ಸಹಾಯಮಾಡುವುದಾಗಿ ಒಂದು ಒಪ್ಪಂದಕ್ಕೆ ಸಹಿ ಮಾಡಿದ್ದರು.

ಅಬ್ರಾಮನು ಲೋಟನನ್ನು ಬಿಡಿಸಿದ್ದು

14 ಲೋಟನು ಸೆರೆಯಾಳಾಗಿರುವುದು ಅಬ್ರಾಮನಿಗೆ ತಿಳಿಯಿತು. ಆದ್ದರಿಂದ ಅಬ್ರಾಮನು ತನ್ನ ಮನೆಯಲ್ಲಿ ಹುಟ್ಟಿದ ಗಂಡಾಳುಗಳನ್ನೆಲ್ಲ ಒಟ್ಟಾಗಿ ಸೇರಿಸಿದನು. ಅವರಲ್ಲಿ ಮುನ್ನೂರ ಹದಿನೆಂಟು ಮಂದಿ ತರಬೇತಿ ಹೊಂದಿದ್ದ ಸೈನಿಕರಾಗಿದ್ದರು. ಅಬ್ರಾಮನು ಅವರೊಡನೆ ಹೊರಟು ಶತ್ರುಗಳನ್ನು ದಾನ್ ಊರಿನವರೆಗೂ ಹಿಂದಟ್ಟಿದನು. 15 ಆ ರಾತ್ರಿ ಅವನು ಮತ್ತು ಅವನ ಸೇವಕರು ಹಠಾತ್ತನೆ ಶತ್ರುಗಳನ್ನು ಎದುರಿಸಿ ಸೋಲಿಸಿದರು; ದಮಸ್ಕಕ್ಕೆ ಉತ್ತರದಲ್ಲಿರುವ ಹೋಬಾದವರೆಗೂ ಹಿಂದಟ್ಟಿದರು. 16 ಆಮೇಲೆ ಶತ್ರುಗಳು ಅಪಹರಿಸಿದ್ದ ಎಲ್ಲಾ ವಸ್ತುಗಳನ್ನು ಮತ್ತು ಲೋಟನ ಆಸ್ತಿಯನ್ನು ಅಬ್ರಾಮನು ತೆಗೆದುಕೊಂಡು ಲೋಟನೊಡನೆ ಬಂದನು. ಅಲ್ಲದೆ ಸೆರೆಹಿಡಿಯಲ್ಪಟ್ಟಿದ್ದ ಸ್ತ್ರೀಯರನ್ನು ಮತ್ತು ಇತರ ಜನರನ್ನು ಹಿಂದಕ್ಕೆ ಕರೆದುಕೊಂಡು ಬಂದನು.

17 ಅಬ್ರಾಮನು ಕೆದೊರ್ಲಗೋಮರನನ್ನೂ ಮತ್ತು ಅವನೊಡನಿದ್ದ ರಾಜರುಗಳನ್ನೂ ಸೋಲಿಸಿದ ಮೇಲೆ ತನ್ನ ಮನೆಗೆ ಹಿಂತಿರುಗಿದನು. ಆಗ ಸೊದೋಮಿನ ರಾಜನು ಅಬ್ರಾಮನನ್ನು ಭೇಟಿಯಾಗಲು ಶಾವೆ ಕಣಿವೆಗೆ ಹೋದನು. (ಈಗ ಇದಕ್ಕೆ ರಾಜನ ಕಣಿವೆ ಎಂದು ಕರೆಯುತ್ತಾರೆ.)

ಮೆಲ್ಕೀಚೆದೆಕನು

18 ಸಾಲೇಮಿನ ರಾಜನಾದ ಮೆಲ್ಕೀಚೆದೆಕನು ಸಹ ಅಬ್ರಾಮನನ್ನು ಭೇಟಿಯಾಗಲು ಹೋದನು. ಮಹೋನ್ನತನಾದ ದೇವರ ಯಾಜಕನಾಗಿದ್ದ ಅವನು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ತೆಗೆದುಕೊಂಡು ಬಂದು, 19 ಅಬ್ರಾಮನನ್ನು ಹೀಗೆ ಆಶೀರ್ವದಿಸಿದನು:

“ಅಬ್ರಾಮನೇ, ಮಹೋನ್ನತನಾದ ದೇವರು ನಿನ್ನನ್ನು ಆಶೀರ್ವದಿಸಲಿ.
    ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದಾತನು ಆತನೇ.
20 ನಿನ್ನ ಶತ್ರುಗಳನ್ನು ಸೋಲಿಸಲು
    ನಿನಗೆ ಸಹಾಯ ಮಾಡಿದ ಮಹೋನ್ನತನಾದ ದೇವರಿಗೆ ಕೊಂಡಾಟವಾಗಲಿ.”

ಅಬ್ರಾಮನು ಯುದ್ಧದಿಂದ ತಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಮೆಲ್ಕೀಚೆದೆಕನಿಗೆ ಕೊಟ್ಟನು. 21 ಬಳಿಕ ಸೊದೋಮಿನ ರಾಜನು ಅಬ್ರಾಮನಿಗೆ, “ಈ ವಸ್ತುಗಳನ್ನೆಲ್ಲ ನೀನೇ ಇಟ್ಟುಕೊ. ಶತ್ರುಗಳು ವಶಪಡಿಸಿಕೊಂಡಿರುವ ನನ್ನ ಜನರನ್ನು ಮಾತ್ರ ನನಗೆ ಕೊಡು” ಎಂದು ಹೇಳಿದನು.

22 ಆದರೆ ಅಬ್ರಾಮನು ಅವನಿಗೆ, “ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದ ಮಹೋನ್ನತನಾಗಿರುವ ದೇವರಾದ ಯೆಹೋವನಿಗೆ ಪ್ರಮಾಣಮಾಡಿ ಹೇಳುವುದೇನೆಂದರೆ, 23 ನಿನ್ನದಾಗಿರುವ ಯಾವುದನ್ನೂ ನಾನು ಇಟ್ಟುಕೊಳ್ಳುವುದಿಲ್ಲ; ಅದು ದಾರವಾಗಿದ್ದರೂ, ಪಾದರಕ್ಷೆಯ ಬಾರಾಗಿದ್ದರೂ, ನಾನಿಟ್ಟುಕೊಳ್ಳುವುದಿಲ್ಲ. ‘ನಾನು ಅಬ್ರಾಮನನ್ನು ಐಶ್ವರ್ಯವಂತನನ್ನಾಗಿ ಮಾಡಿದೆ’ ಎಂದು ನೀನು ಹೇಳಿಕೊಳ್ಳುವುದು ನನಗೆ ಬೇಕಾಗಿಲ್ಲ. 24 ನನ್ನ ಯೌವನಸ್ಥರು ತಿಂದ ಆಹಾರದ ಹೊರತು ಬೇರೆ ಯಾವುದನ್ನೂ ನಾನು ಸ್ವೀಕರಿಸುವುದಿಲ್ಲ. ಆದರೆ ಬೇರೆ ಜನರಿಗೆ ಅವರ ಪಾಲನ್ನು ಕೊಡು. ನಾವು ಯುದ್ಧದಲ್ಲಿ ಗೆದ್ದುತಂದ ವಸ್ತುಗಳನ್ನು ತೆಗೆದುಕೊ; ಆನೇರ್, ಎಷ್ಕೋಲ ಮತ್ತು ಮಮ್ರೆಯರಿಗೆ ಅವರ ಪಾಲನ್ನು ಕೊಡು. ಈ ಜನರು ಯುದ್ಧದಲ್ಲಿ ನನಗೆ ಸಹಾಯ ಮಾಡಿದರು” ಎಂದು ಹೇಳಿದನು.

ಮತ್ತಾಯ 13

ಬಿತ್ತನೆಯನ್ನು ಉದಾಹರಿಸಿ ಯೇಸು ಹೇಳಿದ ಬೋಧನೆ

(ಮಾರ್ಕ 4:1-9; ಲೂಕ 8:4-8)

13 ಅದೇ ದಿನದಲ್ಲಿ ಯೇಸು ಮನೆಯಿಂದ ಹೊರಟು ಸರೋವರದ ತೀರದಲ್ಲಿ ಕುಳಿತುಕೊಂಡನು. ಅನೇಕ ಜನರು ಯೇಸುವಿನ ಸುತ್ತಲೂ ನೆರೆದರು. ಆಗ ಯೇಸು ದೋಣಿಯೊಳಕ್ಕೆ ಹೋಗಿ ಕುಳಿತುಕೊಂಡನು. ಜನರೆಲ್ಲರೂ ದಡದಲ್ಲಿ ನಿಂತಿದ್ದರು. ಆಗ ಯೇಸು ಸಾಮ್ಯಗಳ ಮೂಲಕ ಅನೇಕ ವಿಷಯಗಳನ್ನು ಅವರಿಗೆ ಬೋಧಿಸಿದನು. ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದನು:

“ಒಬ್ಬ ರೈತನು ಬೀಜ ಬಿತ್ತುವುದಕ್ಕೆ ಹೋದನು. ಅವನು ಬೀಜ ಬಿತ್ತುವಾಗ ಕೆಲವು ಬೀಜಗಳು ರಸ್ತೆಯ ಮಗ್ಗುಲಲ್ಲಿ ಬಿದ್ದವು. ಹಕ್ಕಿಗಳು ಬಂದು ಬೀಜಗಳನ್ನೆಲ್ಲ ತಿಂದುಬಿಟ್ಟವು. ಕೆಲವು ಬೀಜಗಳು ಬಂಡೆಯ ನೆಲದಲ್ಲಿ ಬಿದ್ದವು. ಅಲ್ಲಿಯ ನೆಲದಲ್ಲಿ ಸಾಕಷ್ಟು ಮಣ್ಣಿಲ್ಲದಿದ್ದುದರಿಂದ ಬೀಜಗಳು ಬೇಗ ಮೊಳೆತವು. ಆದರೆ ಬಿಸಿಲೇರಿದಾಗ ಆ ಮೊಳಕೆಗಳು ಒಣಗಿಹೋದವು. ಏಕೆಂದರೆ ಅವುಗಳಿಗೆ ಆಳವಾದ ಬೇರಿರಲಿಲ್ಲ. ಬೇರೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು. ಮುಳ್ಳುಗಿಡಗಳು ಬೆಳೆದು ಒಳ್ಳೆಯ ಗಿಡಗಳು ಬೆಳೆಯುವುದನ್ನು ತಡೆದುಬಿಟ್ಟವು. ಬೇರೆ ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಅವು ಬೆಳೆದು ಕಾಳುಬಿಟ್ಟವು. ಕೆಲವು ಗಿಡಗಳು ನೂರರಷ್ಟು, ಕೆಲವು ಗಿಡಗಳು ಅರವತ್ತರಷ್ಟು, ಇನ್ನು ಕೆಲವು ಮೂವತ್ತರಷ್ಟು ಕಾಳುಬಿಟ್ಟವು. ನನಗೆ ಕಿವಿಗೊಡುವ ಜನರೇ, ಲಾಲಿಸಿರಿ!”

ಯೇಸು ಸಾಮ್ಯಗಳನ್ನು ಏಕೆ ಬಳಸಿದನು?

(ಮಾರ್ಕ 4:10-12; ಲೂಕ 8:9-10)

10 ಆಗ ಶಿಷ್ಯರು ಯೇಸುವಿನ ಬಳಿಗೆ ಬಂದು, “ನೀನು ಸಾಮ್ಯಗಳ ಮೂಲಕ ಜನರಿಗೆ ಉಪದೇಶಿಸುವುದೇಕೆ?” ಎಂದು ಕೇಳಿದರು.

11 ಯೇಸು, “ಪರಲೋಕರಾಜ್ಯದ ರಹಸ್ಯವಾದ ಸತ್ಯಗಳನ್ನು ನೀವು ಮಾತ್ರ ತಿಳಿದುಕೊಳ್ಳಬಲ್ಲಿರಿ. ಈ ಸತ್ಯಗಳ ರಹಸ್ಯವು ಬೇರೆ ಜನರಿಗೆ ತಿಳಿಯಲಾರದು. 12 ಸ್ವಲ್ಪ ಜ್ಞಾನವನ್ನು ಹೊಂದಿರುವವನು ಇನ್ನೂ ಹೆಚ್ಚು ಜ್ಞಾನವನ್ನು ಪಡೆದುಕೊಂಡು ಸಾಕಷ್ಟು ಜ್ಞಾನವಂತನಾಗುವನು. ಆದರೆ ಜ್ಞಾನವನ್ನು ಹೊಂದಿಲ್ಲದವನು ತನಗಿರುವ ಸ್ವಲ್ಪ ಜ್ಞಾನವನ್ನೂ ಕಳೆದುಕೊಳ್ಳುವನು. 13 ಈ ಕಾರಣದಿಂದಲೇ ನಾನು ಈ ಸಾಮ್ಯಗಳ ಮೂಲಕ ಇವರಿಗೆ ಬೋಧಿಸುತ್ತೇನೆ. ಈ ಜನರು ನೋಡಿದರೂ ಕಾಣುವುದಿಲ್ಲ, ಕೇಳಿದರೂ ಗ್ರಹಿಸುವುದಿಲ್ಲ. 14 ಇಂಥವರ ಬಗ್ಗೆ ಯೆಶಾಯನು ಹೇಳಿದ್ದೇನೆಂದರೆ:

‘ನೀವು ಆಲಿಸುತ್ತೀರಿ, ಕೇಳುತ್ತೀರಿ,
    ಆದರೆ ನಿಮಗೆ ಅರ್ಥವಾಗುವುದಿಲ್ಲ.
ನೀವು ದೃಷ್ಟಿಸಿ ನೋಡುತ್ತೀರಿ,
    ಆದರೆ ನಿಮಗೆ ಕಾಣುವುದನ್ನು ಅರ್ಥಮಾಡಿಕೊಳ್ಳುವುದಿಲ್ಲ.
15 ಹೌದು, ಇವರ ಮನಸ್ಸುಗಳು ಕಠಿಣವಾಗಿವೆ.
    ಕಿವಿ ಮಂದವಾಗಿವೆ,
    ಕಣ್ಣು ಮಬ್ಬಾಗಿವೆ.
ಅವರು
    ತಮ್ಮ ಕಣ್ಣುಗಳಿಂದ ನೋಡದಂತೆಯೂ
    ತಮ್ಮ ಕಿವಿಗಳಿಂದ ಕೇಳದಂತೆಯೂ
    ತಮ್ಮ ಮನಸ್ಸುಗಳಿಂದ ಅರ್ಥಮಾಡಿಕೊಳ್ಳದಂತೆಯೂ
ನನ್ನ ಕಡೆಗೆ ತಿರುಗಿಕೊಳ್ಳದಂತೆಯೂ ನನ್ನಿಂದ ಗುಣಹೊಂದದಂತೆಯೂ ಹೀಗಾಯಿತು.’(A)

16 ನೀವಾದರೋ ಧನ್ಯರು. ನಿಮಗೆ ಕಾಣುವ ಸಂಗತಿಗಳನ್ನೂ ನಿಮಗೆ ಹೇಳುವ ವಿಷಯಗಳನ್ನೂ ಅರ್ಥಮಾಡಿಕೊಳ್ಳಬಲ್ಲಿರಿ. 17 ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ನೀವು ಈಗ ನೋಡುವ ಸಂಗತಿಗಳನ್ನು ನೋಡಲು ಮತ್ತು ಈಗ ನೀವು ಕೇಳುವ ಸಂಗತಿಗಳನ್ನು ಕೇಳಲು ಅನೇಕ ಪ್ರವಾದಿಗಳು ಮತ್ತು ಒಳ್ಳೆಯ ಜನರು ಅಪೇಕ್ಷಿಸಿದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ.

ಬಿತ್ತನೆಯ ಕುರಿತು ಯೇಸುವಿನ ವಿವರಣೆ

(ಮಾರ್ಕ 4:13-20; ಲೂಕ 8:11-15)

18 “ಹೀಗಿರಲು ಒಕ್ಕಲಿಗನ ಕುರಿತಾದ ಸಾಮ್ಯದ ಅರ್ಥವನ್ನು ಲಾಲಿಸಿರಿ.

19 “ಮಗ್ಗುಲಲ್ಲಿ ಬಿದ್ದ ಬೀಜ ಅಂದರೇನು? ಪರಲೋಕರಾಜ್ಯವನ್ನು ಕುರಿತು ಬೋಧಿಸಿದ್ದನ್ನು ಕೇಳಿ ಅದನ್ನು ಅರ್ಥಮಾಡಿಕೊಳ್ಳದೆ ಇರುವ ಮನುಷ್ಯನೇ ಬೀಜ ಬಿದ್ದ ದಾರಿ ಮಗ್ಗುಲಾಗಿರುವನು. ಕೆಡುಕನು (ಸೈತಾನನು) ಬಂದು ಆ ಮನುಷ್ಯನ ಹೃದಯದಲ್ಲಿ ಬಿತ್ತಿದ್ದ ಬೀಜಗಳನ್ನು ತೆಗೆದುಹಾಕುತ್ತಾನೆ.

20 “ಬಂಡೆನೆಲದ ಮೇಲೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿದ ಕೂಡಲೇ ಅದನ್ನು ಸಂತೋಷದಿಂದ ಅಂಗೀಕರಿಸುವ ಮನುಷ್ಯನೇ ಬೀಜ ಬಿದ್ದ ಬಂಡೆನೆಲವಾಗಿರುವನು. 21 ಆದರೆ ಆ ಮನುಷ್ಯನು ಬೋಧನೆಯನ್ನು ತನ್ನ ಜೀವಿತದಲ್ಲಿ ಬೇರೂರಿಸಿಕೊಳ್ಳುವುದಿಲ್ಲ. ಅವನು ಆ ಬೋಧನೆಯನ್ನು ಸ್ವಲ್ಪಕಾಲ ಮಾತ್ರ ಅನುಸರಿಸುವನು. ಆ ಬೋಧನೆಯನ್ನು ಅಂಗೀಕರಿಸಿದ್ದರಿಂದ ತನಗೆ ಕಷ್ಟವಾಗಲಿ ಹಿಂಸೆಯಾಗಲಿ ಬಂದಾಗ ಅದನ್ನು ಬೇಗನೆ ಬಿಟ್ಟುಬಿಡುವನು.

22 “ಮುಳ್ಳುಗಿಡಗಳ ನಡುವೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿದರೂ ಜೀವನದ ಚಿಂತೆಗಳಿಂದ ಮತ್ತು ಹಣದ ಮೇಲಿನ ಪ್ರೀತಿಯಿಂದ ಬೋಧನೆಯನ್ನು ತನ್ನಲ್ಲಿ ಬೆಳೆಯದಂತೆ ಮಾಡುವವನೇ ಬೀಜ ಬಿದ್ದ ಮುಳ್ಳುಗಿಡಗಳ ನೆಲವಾಗಿರವನು. ಆದ್ದರಿಂದ ಬೋಧನೆಯು ಆ ಮನುಷ್ಯನ ಜೀವಿತದಲ್ಲಿ ಫಲ ಕೊಡುವುದಿಲ್ಲ.

23 “ಒಳ್ಳೆಯ ನೆಲದ ಮೇಲೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿ ಅದನ್ನು ಅರ್ಥಮಾಡಿಕೊಂಡ ವ್ಯಕ್ತಿಯೇ ಬೀಜ ಬಿದ್ದ ಒಳ್ಳೆಯ ನೆಲವಾಗಿರುವನು. ಆ ಮನುಷ್ಯನು ಬೆಳೆದು ಕೆಲವು ಸಾರಿ ನೂರರಷ್ಟು ಕೆಲವು ಸಾರಿ ಅರವತ್ತರಷ್ಟು ಮತ್ತು ಕೆಲವು ಸಾರಿ ಮೂವತ್ತರಷ್ಟು ಫಲ ಕೊಡುವನು” ಎಂದು ಹೇಳಿದನು.

ಗೋಧಿ ಮತ್ತು ಹಣಜಿ ಸಾಮ್ಯ

24 ಬಳಿಕ ಯೇಸು ಅವರಿಗೆ ಇನ್ನೊಂದು ಸಾಮ್ಯದ ಮೂಲಕ ಬೋಧಿಸಿದನು. ಅದೇನೆಂದರೆ: “ಪರಲೋಕರಾಜ್ಯ ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ ಒಬ್ಬ ರೈತನಂತಿದೆ. 25 ಆ ರಾತ್ರಿ ಜನರೆಲ್ಲರೂ ನಿದ್ರಿಸುತ್ತಿದ್ದಾಗ ಅವನ ವೈರಿ ಬಂದು ಗೋಧಿಯ ನಡುವೆ ಹಣಜಿಯನ್ನು ಬಿತ್ತಿ ಹೊರಟುಹೋದನು. 26 ಬಳಿಕ ಗೋಧಿ ಬೆಳೆದು ತೆನೆಬಿಟ್ಟಿತು. ಅದರೊಡನೆ ಹಣಜಿ ಸಹ ಬೆಳೆಯಿತು. 27 ಆಗ ಆ ರೈತನ ಸೇವಕರು ಅವನ ಬಳಿಗೆ ಬಂದು, ‘ನಿನ್ನ ಹೊಲದಲ್ಲಿ ನೀನು ಒಳ್ಳೆಯ ಬೀಜ ಬಿತ್ತಿದೆ. ಹಣಜಿ ಎಲ್ಲಿಂದ ಬಂತು?’ ಎಂದು ಕೇಳಿದರು.

28 “ಆ ಮನುಷ್ಯನು, ‘ಒಬ್ಬ ವೈರಿ ಹಣಜಿಯನ್ನು ಬಿತ್ತಿದ್ದಾನೆ’ ಎಂದು ಉತ್ತರಕೊಟ್ಟನು.

“ಆ ಸೇವಕರು ‘ನಾವು ಹೋಗಿ ಹಣಜಿಗಳನ್ನು ಕೀಳಬೇಕೆ?’ ಎಂದು ಕೇಳಿದರು.

29 “ಆ ಮನುಷ್ಯನು, ‘ಬೇಡ, ಏಕೆಂದರೆ ನೀವು ಹಣಜಿಗಳನ್ನು ಕೀಳುವಾಗ ಗೋಧಿಯನ್ನು ಸಹ ಕೀಳಬಹುದು. 30 ಸುಗ್ಗಿಕಾಲದವರೆಗೆ ಹಣಜಿಯೂ ಗೋಧಿಯೂ ಒಟ್ಟಿಗೆ ಬೆಳೆಯಲಿ. ಸುಗ್ಗಿಕಾಲದ ಸಮಯದಲ್ಲಿ ನಾನು ಕೆಲಸದವರಿಗೆ, ಮೊದಲು ಹಣಜಿಗಳನ್ನು ಕೂಡಿಸಿ ಅದನ್ನು ಸುಡುವುದಕ್ಕಾಗಿ ಹೊರೆ ಕಟ್ಟಿ, ನಂತರ ಗೋಧಿಯನ್ನು ಕೂಡಿಸಿ ಅದನ್ನು ನನ್ನ ಕಣಜಕ್ಕೆ ತನ್ನಿರಿ ಎಂದು ಹೇಳುವೆನು’ ಎಂದು ಉತ್ತರಕೊಟ್ಟನು.”

ಅನೇಕ ಸಾಮ್ಯಗಳ ಮೂಲಕ ಯೇಸುವಿನ ಉಪದೇಶ

(ಮಾರ್ಕ 4:30-34; ಲೂಕ 13:18-21)

31 ನಂತರ ಯೇಸು ಜನರಿಗೆ ಮತ್ತೊಂದು ಸಾಮ್ಯವನ್ನು ಹೇಳಿದನು: “ಪರಲೋಕರಾಜ್ಯ ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ತನ್ನ ಹೊಲದಲ್ಲಿ ಬಿತ್ತಿದನು. 32 ಅದು ಎಲ್ಲಾ ಬೀಜಗಳಿಗಿಂತಲೂ ಸಣ್ಣ ಬೀಜವಾಗಿದೆ. ಆದರೆ ಅದು ಬೆಳೆದಾಗ ತೋಟದ ಗಿಡಗಳಿಗಿಂತಲೂ ದೊಡ್ಡದಾಗಿರುವುದು. ಅದು ಮರವಾದಾಗ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ಗೂಡು ಮಾಡಿಕೊಳ್ಳುವಷ್ಟು ದೊಡ್ಡದಾಗಿರುತ್ತದೆ.”

33 ಬಳಿಕ ಯೇಸು ಜನರಿಗೆ ಇನ್ನೊಂದು ಸಾಮ್ಯವನ್ನು ಹೇಳಿದನು: “ಪರಲೋಕರಾಜ್ಯವು ಒಬ್ಬ ಸ್ತ್ರೀ ರೊಟ್ಟಿ ಮಾಡುವುದಕ್ಕೆ ಒಂದು ದೊಡ್ಡ ಬೋಗುಣಿಯ ಹಿಟ್ಟಿಗೆ ಬೆರೆಸಿದ ಹುಳಿಗೆ ಹೋಲಿಕೆಯಾಗಿದೆ. ಆ ಹುಳಿಯು ನಾದಿದ ಹಿಟ್ಟನ್ನೆಲ್ಲಾ ಉಬ್ಬಿಸಿತು.”

34 ಯೇಸು ಇವುಗಳನ್ನೆಲ್ಲ ಸಾಮ್ಯಗಳ ಮೂಲಕ ಹೇಳಿದನು. ಆತನು ಉಪದೇಶಿಸುವಾಗಲೆಲ್ಲಾ ಸಾಮ್ಯಗಳನ್ನು ಉಪಯೋಗಿಸುತ್ತಿದ್ದನು. 35 ಪ್ರವಾದಿ ಹೇಳಿದ್ದ ಈ ಮಾತು ಇದರಿಂದ ನೆರವೇರಿತು:

“ನಾನು ಸಾಮ್ಯಗಳ ಮೂಲಕ ಉಪದೇಶಿಸುತ್ತೇನೆ.
    ಲೋಕ ಉಂಟಾದಂದಿನಿಂದ ಮರೆಯಾಗಿದ್ದ ಸಂಗತಿಗಳನ್ನು ನಾನು ಹೇಳುತ್ತೇನೆ.”(B)

ಕಠಿಣವಾದ ಸಾಮ್ಯಕ್ಕೆ ಯೇಸುವಿನ ವಿವರಣೆ

36 ನಂತರ ಯೇಸು ಜನರನ್ನು ಬಿಟ್ಟು ಮನೆಯೊಳಕ್ಕೆ ಹೋದನು. ಆತನ ಶಿಷ್ಯರು ಆತನ ಬಳಿಗೆ ಬಂದು, “ಹೊಲದಲ್ಲಿರುವ ಹಣಜಿಯನ್ನು ಕುರಿತಾದ ಸಾಮ್ಯದ ಅರ್ಥವನ್ನು ನಮಗೆ ವಿವರಿಸು” ಅಂದರು.

37 ಯೇಸು ಹೀಗೆ ಉತ್ತರಿಸಿದನು: “ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತುವವನೇ ಮನುಷ್ಯಕುಮಾರನು. 38 ಆ ಹೊಲ ಈ ಲೋಕವಾಗಿದೆ. ಒಳ್ಳೆಯ ಕಾಳುಗಳೇ ಪರಲೋಕರಾಜ್ಯಕ್ಕೆ ಸೇರಿದ ದೇವರ ಮಕ್ಕಳು. ಕೆಡುಕನಿಗೆ ಸಂಬಂಧಪಟ್ಟವರೇ ಹಣಜಿಗಳು. 39 ಹಣಜಿಯನ್ನು ಬಿತ್ತಿದ ವೈರಿಯೇ ಸೈತಾನ. ಸುಗ್ಗಿಕಾಲ ಅಂದರೆ ಲೋಕದ ಅಂತ್ಯಕಾಲ. ಕೂಡಿಸುವ ಕೆಲಸಗಾರರೇ ದೇವದೂತರು.

40 “ಹಣಜಿಗಳನ್ನು ಕಿತ್ತು ಬೆಂಕಿಯಲ್ಲಿ ಸುಟ್ಟುಬಿಡುತ್ತಾರೆ. ಈ ಲೋಕದ ಅಂತ್ಯದಲ್ಲಿ ಆಗುವಂಥದ್ದು ಇದೇ. 41 ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿಸುವನು. ಆತನ ದೂತರು ಪಾಪಕ್ಕೆ ಕಾರಣರಾದ ಮತ್ತು ಕೇಡುಮಾಡುವ ಜನರನ್ನೆಲ್ಲ ಕೂಡಿಸುವರು; ಅವರನ್ನು ಆತನ ರಾಜ್ಯದಿಂದ ಹೊರಗೆ ಹಾಕಿ 42 ಬೆಂಕಿಯ ಸ್ಥಳಕ್ಕೆ ಎಸೆದುಬಿಡುವರು. ಅಲ್ಲಿ ಅವರು ಗೋಳಾಡುತ್ತಾ ನೋವಿನಿಂದ ತಮ್ಮ ಹಲ್ಲುಗಳನ್ನು ಕಡಿಯುವರು. 43 ಒಳ್ಳೆಯವರಾದರೋ ಸೂರ್ಯನಂತೆ ಪ್ರಕಾಶಿಸುತ್ತಾ ತಮ್ಮ ತಂದೆಯ ರಾಜ್ಯದಲ್ಲಿರುವರು. ನನಗೆ ಕಿವಿಗೊಡುವ ಜನರೇ, ಆಲಿಸಿರಿ!

ನಿಧಿ ಮತ್ತು ಮುತ್ತಿನ ಸಾಮ್ಯಗಳು

44 “ಪರಲೋಕರಾಜ್ಯವು ಹೊಲದಲ್ಲಿ ಹೂಳಿಟ್ಟ ನಿಧಿಗೆ ಹೋಲಿಕೆಯಾಗಿದೆ. ಒಂದು ದಿನ ಒಬ್ಬನು ಆ ನಿಧಿಯನ್ನು ಕಂಡು ಬಹಳ ಸಂತೋಷದಿಂದ ಅದನ್ನು ಹೊಲದಲ್ಲಿ ಅಡಗಿಸಿಟ್ಟನು. ಬಳಿಕ ಅವನು ತನ್ನ ಆಸ್ತಿಯನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಂಡನು.

45 “ಪರಲೋಕರಾಜ್ಯವು ಶ್ರೇಷ್ಠವಾದ ಮುತ್ತುಗಳನ್ನು ಹುಡುಕುವ ಒಬ್ಬ ವ್ಯಾಪಾರಿಯಂತಿದೆ. 46 ಒಂದು ದಿನ ಆ ವ್ಯಾಪಾರಿಗೆ ಬಹು ಅಮೂಲ್ಯವಾದ ಒಂದು ಮುತ್ತು ಸಿಕ್ಕಿತು. ಆಗ ಅವನು ತನ್ನ ಆಸ್ತಿಯನ್ನೆಲ್ಲಾ ಮಾರಿ ಆ ಮುತ್ತನ್ನು ಕೊಂಡುಕೊಂಡನು.

ಮೀನಿನ ಬಲೆಯ ಕುರಿತಾದ ಸಾಮ್ಯ

47 “ಪರಲೋಕರಾಜ್ಯವು ಸರೋವರದೊಳಗೆ ಬೀಸಿದ ಬಲೆಯಂತಿದೆ. ಆ ಬಲೆಗೆ ಅನೇಕ ಜಾತಿಯ ಮೀನುಗಳು ಸಿಕ್ಕಿಕೊಂಡವು. 48 ಆಗ ಆ ಬಲೆಯು ತುಂಬಿಹೋಯಿತು. ಬೆಸ್ತರು ಆ ಬಲೆಯನ್ನು ದಡಕ್ಕೆ ಎಳೆದುಕೊಂಡು ಬಂದು ಒಳ್ಳೆಯ ಮೀನುಗಳನ್ನೆಲ್ಲಾ ಪುಟ್ಟಿಗಳಲ್ಲಿ ತುಂಬಿಕೊಂಡು ಕೆಟ್ಟ ಮೀನುಗಳನ್ನು ಬಿಸಾಡಿದರು. 49 ಈ ಪ್ರಪಂಚದ ಅಂತ್ಯದಲ್ಲಿ ಅದೇ ರೀತಿ ಆಗುವುದು. ದೇವದೂತರು ಬಂದು ಒಳ್ಳೆಯ ಜನರಿಂದ ಕೆಟ್ಟಜನರನ್ನು ಬೇರೆ ಮಾಡುವರು. 50 ದೇವದೂತರು ಕೆಟ್ಟಜನರನ್ನು ಬೆಂಕಿಯ ಸ್ಥಳದೊಳಕ್ಕೆ ಎಸೆಯುವರು. ಆ ಸ್ಥಳದಲ್ಲಿ ಜನರು ಗೋಳಾಡುತ್ತಾ ನೋವಿನಿಂದ ತಮ್ಮ ಹಲ್ಲುಗಳನ್ನು ಕಡಿಯುವರು.”

51 ಯೇಸು ತನ್ನ ಶಿಷ್ಯರಿಗೆ, “ನೀವು ಈ ವಿಷಯಗಳನ್ನೆಲ್ಲಾ ಅರ್ಥಮಾಡಿಕೊಂಡಿರೋ?” ಎಂದು ಕೇಳಿದನು.

ಅದಕ್ಕೆ ಶಿಷ್ಯರು, “ನಾವು ಅರ್ಥಮಾಡಿಕೊಂಡೆವು” ಎಂದು ಉತ್ತರಕೊಟ್ಟರು.

52 ಆಗ ಯೇಸು ತನ್ನ ಶಿಷ್ಯರಿಗೆ, “ಹೀಗಿರಲಾಗಿ ಪರಲೋಕರಾಜ್ಯದ ವಿಷಯವಾಗಿ ಬೋಧಿಸಿದಂಥ ಪ್ರತಿಯೊಬ್ಬ ಧರ್ಮೋಪದೇಶಕನು ಒಂದು ಮನೆಯ ಯಜಮಾನನಂತಿದ್ದಾನೆ. ಆ ಮನುಷ್ಯನು ಹೊಸ ವಸ್ತುಗಳನ್ನೂ ಹಳೆಯ ವಸ್ತುಗಳನ್ನೂ ಆ ಮನೆಯಲ್ಲಿ ಶೇಖರಿಸಿಕೊಂಡು ಅವುಗಳನ್ನು ಹೊರಗೆ ತರುವನು” ಎಂದನು.

ಸ್ವಂತ ಊರಿಗೆ ಯೇಸುವಿನ ಪ್ರಯಾಣ

(ಮಾರ್ಕ 6:1-6; ಲೂಕ 4:16-30)

53 ಯೇಸು ಈ ಸಾಮ್ಯಗಳ ಮೂಲಕ ಬೋಧಿಸಿದ ನಂತರ ಅಲ್ಲಿಂದ ತನ್ನ ಸ್ವಂತ ಊರಿಗೆ ಹೋದನು. 54 ಯೇಸು ಸಭಾಮಂದಿರದಲ್ಲಿ ಬೋಧಿಸಿದಾಗ ಜನರು ಬೆರಗಾಗಿ, “ಈ ಜ್ಞಾನವನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡುವ ಈ ಶಕ್ತಿಯನ್ನು ಎಲ್ಲಿಂದ ಪಡೆದುಕೊಂಡನು? 55 ಇವನು ಕೇವಲ ಆ ಬಡಗಿಯ ಮಗನಲ್ಲವೇ? ಇವನ ತಾಯಿ ಮರಿಯಳು. ಯಾಕೋಬ, ಯೋಸೇಫ, ಸಿಮೋನ ಮತ್ತು ಯೂದ ಇವನ ಸಹೋದರರು. 56 ಅವನ ಸಹೋದರಿಯರೆಲ್ಲರೂ ನಮ್ಮಲ್ಲಿ ಇದ್ದಾರೆ. ಹೀಗಿರಲು ಇವನು ಈ ಜ್ಞಾನವನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡುವ ಈ ಶಕ್ತಿಯನ್ನು ಎಲ್ಲಿಂದ ಪಡೆದುಕೊಂಡನು?” ಎಂದು ಮಾತಾಡಿಕೊಂಡು, 57 ಆತನನ್ನು ಸ್ವೀಕರಿಸಿಕೊಳ್ಳಲಿಲ್ಲ.

ಯೇಸು ಅವರಿಗೆ, “ಪ್ರವಾದಿಗೆ ಪರಜನರು ಮರ್ಯಾದೆ ಸಲ್ಲಿಸುತ್ತಾರೆ; ಆದರೆ ಸ್ವಂತ ಊರಿನವರಾಗಲಿ ಸ್ವಂತ ಮನೆಯವರಾಗಲಿ ಮರ್ಯಾದೆ ಕೊಡುವುದಿಲ್ಲ” ಎಂದು ಹೇಳಿದನು. 58 ಆ ಜನರ ಅವಿಶ್ವಾಸದ ಕಾರಣ ಆತನು ಅಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡಲಿಲ್ಲ.

ನೆಹೆಮೀಯ 3

ಪೌಳಿಗೋಡೆಯನ್ನು ಕಟ್ಟಿದವರು

ಎಲ್ಯಾಷೀಬನು ಮಹಾಯಾಜಕನಾಗಿದ್ದನು. ಅವನೂ ಮತ್ತು ಯಾಜಕರುಗಳಾಗಿದ್ದ ಅವನ ಸಹೋದರರೂ ಕುರಿ ಹೆಬ್ಬಾಗಿಲನ್ನು ಕಟ್ಟಿದರು. ನಂತರ ಪ್ರಾರ್ಥಿಸಿ ಯೆಹೋವನಿಗೆ ಅದನ್ನು ಪ್ರತಿಷ್ಠಿಸಿದರು. ಅವರು ಅದಕ್ಕೆ ಬಾಗಿಲುಗಳನ್ನು ಜೋಡಿಸಿದರು. ಆ ಯಾಜಕರು ನೂರುಗೋಪುರ ಮತ್ತು ಹನನೇಲ್ ಗೋಪುರದವರೆಗೂ ಜೆರುಸಲೇಮಿನ ಗೋಡೆಯನ್ನು ಕಟ್ಟಿದ್ದರು. ಅವರು ಪ್ರಾರ್ಥಿಸಿ ಯೆಹೋವನಿಗೆ ಪ್ರತಿಷ್ಠಿಸಿದರು.

ಯಾಜಕರು ಕಟ್ಟಿನಿಲ್ಲಿಸಿದ್ದ ಸ್ಥಳದಿಂದ ಜೆರಿಕೊದವರು ಗೋಡೆ ಕಟ್ಟಿದರು, ಜೆರಿಕೊದವರು ಕಟ್ಟಿ ನಿಲ್ಲಿಸಿದ್ದ ಸ್ಥಳದಿಂದ ಇಮ್ರಿಯ ಮಗನಾದ ಜಕ್ಕೂರನು ಗೋಡೆ ಕಟ್ಟಿದನು.

ಹಸ್ಸೆನಾಹನ ಗಂಡುಮಕ್ಕಳು ಮೀನುಬಾಗಿಲನ್ನು ಕಟ್ಟಿ ಅದರ ಮೇಲೆ ತೊಲೆಗಳನ್ನಿಟ್ಟು ಅದಕ್ಕೆ ಕದಗಳು, ಅಗುಳಿ, ತಿರುಗಣಿಗಳನ್ನಿಟ್ಟು ಭದ್ರಪಡಿಸಿದರು.

ಇವನ ನಂತರ ಊರೀಯನ ಮಗನಾದ ಮೆರೇಮೋತನು ಗೋಡೆಯನ್ನು ಕಟ್ಟಿದನು. (ಊರೀಯನು ಹಕ್ಕೋಚನ ಮಗ.)

ಇದರ ಮುಂದಿನ ಭಾಗವನ್ನು ಬೆರೆಕ್ಯನ ಮಗನಾದ ಮೆಷುಲ್ಲಾಮನು ಕಟ್ಟಿದನು. (ಬೆರೆಕ್ಯನು ಮೆಷೇಜಬೇಲನ ಮಗ.)

ಈ ಗೋಡೆಯ ನಂತರದ ಭಾಗವನ್ನು ಬಾನನ ಮಗನಾದ ಚಾದೋಕನು ಕಟ್ಟಿದನು.

ತೆಕೋವದವರು ಅಲ್ಲಿಂದಾಚೆಗೆ ಗೋಡೆ ಕಟ್ಟಿದರು. ಆದರೆ ಅವರ ನಾಯಕರು ತಮ್ಮ ರಾಜ್ಯಪಾಲನಾದ ನೆಹೆಮೀಯನಿಗಾಗಿ ಕೆಲಸಮಾಡಲು ಒಪ್ಪಲಿಲ್ಲ.

ಯೋಯಾದ ಮತ್ತು ಮೆಷುಲ್ಲಾಮ್ ಹಳೆಬಾಗಿಲನ್ನು ಜೋಡಿಸಿದರು. ಯೋಯಾದನು ಪಾಸೇಹನ ಮಗ; ಮೆಷುಲ್ಲಾಮನು ಬೆಸೋದ್ಯನ ಮಗ. ಅವರು ತೊಲೆಗಳನ್ನು ಇಟ್ಟರು; ಬಾಗಿಲುಗಳನ್ನು, ಕದಗಳನ್ನು, ಅಗುಳಿಗಳನ್ನು ಜೋಡಿಸಿದರು.

ಗಿಬ್ಯೋನ್ ಮತ್ತು ಮಿಚ್ಫದ ಜನರು ಅಲ್ಲಿಂದಾಚೆಗೆ ಗೋಡೆಯನ್ನು ಕಟ್ಟಿದರು. ಗಿಬ್ಯೋನಿನ ಮೆಲೆಟ್ಯ ಎಂಬವನು ಮತ್ತು ಮೇರೋನೋತಿನ ಯಾದೋನ್ ಎಂಬವನು ಈ ಕೆಲಸವನ್ನು ಮಾಡಿದರು. ಗಿಬ್ಯೋನ್ ಮತ್ತು ಮೇರೋನೋತ್ ಯೂಫ್ರೇಟೀಸ್ ನದಿಯ ಪಶ್ಚಿಮಪ್ರಾಂತ್ಯದ ರಾಜ್ಯಪಾಲರುಗಳ ಆಡಳಿತಕ್ಕೆ ಒಳಪಟ್ಟಿತ್ತು.

ಹರ್ಹಯನ ಮಗನಾದ ಉಜ್ಜೀಯೇಲನು ಅಲ್ಲಿಂದಾಚೆಗೆ ಕಟ್ಟಿದನು. ಉಜ್ಜೀಯೇಲನು ಅಕ್ಕಸಾಲಿಗನಾಗಿದ್ದನು; ಹನನ್ಯನು ಸುಗಂಧದ್ರವ್ಯವನ್ನು ತಯಾರುಮಾಡುತ್ತಿದ್ದನು. ಇವರು, “ಅಗಲಗೋಡೆ”ಯವರೆಗೂ ಜೆರುಸಲೇಮ್ ಗೋಡೆಯನ್ನು ಕಟ್ಟಿದರು.

ಅರ್ಧ ಜೆರುಸಲೇಮಿನ ರಾಜ್ಯಪಾಲನಾಗಿದ್ದ ಹೂರನ ಮಗನಾದ ರೆಫಾಯನು ಮುಂದಿನ ಭಾಗವನ್ನು ಕಟ್ಟಿ ಮುಗಿಸಿದನು.

10 ಹರೂಮಫನ ಮಗನಾದ ಯೆದಾಯನು ಅಲ್ಲಿಂದಾಚೆಗೆ ಗೋಡೆ ಕಟ್ಟಿದನು. ಅದು ಅವನ ಮನೆಯ ನಂತರವೇ ಇತ್ತು. ಅಲ್ಲಿಂದಾಚೆಗೆ ಹಷಬ್ನೆಯನ ಮಗನಾದ ಹಟ್ಟೂಷನು ಕಟ್ಟಿದನು. 11 ಹಾರೀಮನ ಮಗನಾದ ಮಲ್ಕೀಯನು, ಪಹತ್‌ಮೋವಾಬನ ಮಗನಾದ ಹಷ್ಷೂಬನು ಅಲ್ಲಿಂದಾಚೆಗೆ ಕಟ್ಟಿದರು. ಅವರು ಒಲೆಬುರುಜನ್ನು ಸಹ ಕಟ್ಟಿದರು.

12 ಹಲ್ಲೊಹೇಷನ ಮಗನಾದ ಶಲ್ಲೂಮನು ಮುಂದಿನ ಭಾಗವನ್ನು ರಿಪೇರಿ ಮಾಡಿದನು. ಅವನ ಹೆಣ್ಣುಮಕ್ಕಳು ಅವನಿಗೆ ಸಹಾಯ ಮಾಡಿದರು. ಶಲ್ಲೂಮನು ಜೆರುಸಲೇಮಿನ ಇನ್ನೊಂದು ಭಾಗದ ರಾಜ್ಯಪಾಲನಾಗಿದ್ದನು.

13 ಜಾನೋಹ ಪಟ್ಟಣದಲ್ಲಿ ವಾಸಿಸುವ ಹಾನೂನನೂ ಅವನ ಸಂಗಡಿಗರೂ ಕಣಿವೆ ಬಾಗಿಲನ್ನು ಕಟ್ಟಿ ಅದಕ್ಕೆ ಅಗುಳಿ, ತಿರುಗಣಿ, ಕದಗಳನ್ನಿಟ್ಟು ಭದ್ರಪಡಿಸಿದರು. ಅಲ್ಲದೆ ಒಂದು ಸಾವಿರ ಮೊಳದಷ್ಟು ಉದ್ದದ ಗೋಡೆಯನ್ನು ಕಟ್ಟಿ ತಿಪ್ಪೆಬಾಗಿಲಿನ ತನಕ ಮುಂದುವರಿದರು.

14 ರೇಕಾಬನ ಮಗನಾದ ಮಲ್ಕೀಯನು ತಿಪ್ಪೆಬಾಗಿಲನ್ನು ರಿಪೇರಿಮಾಡಿಸಿದನು. ಇವನು ಬೇತ್ ಹಕ್ಕೆರಿಮಿನ ರಾಜ್ಯಪಾಲನಾಗಿದ್ದನು. ಅವನು ಬಾಗಿಲಿಗೆ ಕದ, ತಿರುಗಣಿ, ಅಗುಳಿಗಳನ್ನಿಟ್ಟು ಭದ್ರಪಡಿಸಿದನು.

15 ಮಿಚ್ಪ ಜಿಲ್ಲಾಧಿಕಾರಿಯಾದ ಶಲ್ಲೂನನು ಬುಗ್ಗೆಬಾಗಿಲನ್ನು ರಿಪೇರಿಮಾಡಿದನು. ಶಲ್ಲೂನನು ಕೊಲ್ಹೋಜಿಯನ ಮಗ. ಬಾಗಿಲಿಗೆ ಕದ, ತಿರುಗಣಿ, ಅಗುಳಿಗಳನ್ನಿಟ್ಟು ಭದ್ರಪಡಿಸಿದನು. ನಂತರ ಗೋಡೆಯನ್ನು ರಾಜನ ತೋಟದ ಸಮೀಪದಲ್ಲಿದ್ದ ಸಿಲೋವಕೊಳದ ತನಕ ಮುಂದುವರಿಸಿ ದಾವೀದನಗರಕ್ಕೆ ಪ್ರವೇಶಿಸುವ ಮೆಟ್ಟಿಲುಗಳ ತನಕ ಗೋಡೆಯನ್ನು ಕಟ್ಟಿದನು.

16 ಅಜ್ಬೂಕನ ಮಗನಾದ ನೆಹೆಮೀಯನು ಗೋಡೆಯ ಮುಂದಿನ ಭಾಗವನ್ನು ಕಟ್ಟಿದನು. ಇವನು ಬೇತ್ಚೂರ್ ಜಿಲ್ಲೆಯ ಅರ್ಧಭಾಗಕ್ಕೆ ಅಧಿಕಾರಿಯಾಗಿದ್ದನು. ದಾವೀದನ ಸಮಾಧಿಯ ತನಕ ಗೋಡೆಯನ್ನು ಮುಂದುವರಿಸಿ ವೀರರ ಮನೆಗಳ ತನಕ ಕಟ್ಟಿದನು.

17 ಮುಂದಿನ ಭಾಗವನ್ನು ಲೇವಿಯರು ಕಟ್ಟಿದರು. ಅವರ ಮುಖ್ಯಸ್ತನು ಬಾನಿಯ ಮಗನಾದ ರೆಹೂಮನು. ಕೆಯೀಲ ಎಂಬ ಅರ್ಧ ಜಿಲ್ಲೆಗೆ ರಾಜ್ಯಪಾಲನಾಗಿದ್ದ ಹಷಬ್ಯನು ಇದರ ಮುಂದಿನ ಭಾಗದ ಗೋಡೆಯನ್ನು ಕಟ್ಟಿದನು. ಇವನು ತನ್ನ ಜಿಲ್ಲೆಯಲ್ಲಿ ಮಾತ್ರ ರಿಪೇರಿ ಮಾಡಿದನು.

18 ಅವರ ಸಹೋದರರು ಕೆಯೀಲದ ಇನ್ನೊಂದು ಅರ್ಧಜಿಲ್ಲೆಗೆ ರಾಜ್ಯಪಾಲನಾಗಿದ್ದ ಬಿನೈನ ನಾಯಕತ್ವದಲ್ಲಿ ಮುಂದಿನ ಭಾಗದ ಗೋಡೆಯನ್ನು ರಿಪೇರಿಮಾಡಿದರು. ಬಿನೈಹೇನಾದಾದನ ಮಗ.

19 ಮಿಚ್ಪದ ರಾಜ್ಯಪಾಲನಾದ ಏಜೆರನು ಮುಂದಿನ ಭಾಗವನ್ನು ರಿಪೇರಿ ಮಾಡಿದನು. ಏಜೆರನು ಯೇಷೂವನ ಮಗ. ಇವನು ಆಯುಧ ಕೋಣೆಯಿಂದ ಹಿಡಿದು ಗೋಡೆಯ ಮೂಲೆಯ ತನಕ ರಿಪೇರಿಮಾಡಿದನು. 20 ಚಬ್ಬಾಯನ ಮಗನಾದ ಬಾರೂಕನು ಮುಂದಿನ ಭಾಗವನ್ನು ರಿಪೇರಿಮಾಡಿದನು. ಇವನು ಪ್ರಯಾಸಪಟ್ಟು ಮೂಲೆಯಿಂದ ಹಿಡಿದು ಪ್ರಧಾನ ಯಾಜಕನಾದ ಎಲ್ಯಾಷೀಬನ ಮನೆ ಮುಂದಿನ ಬಾಗಿಲಿನ ತನಕ ಗೋಡೆಯನ್ನು ಕಟ್ಟಿದನು. 21 ಹಕ್ಕೋಚನ ಮಗನಾದ ಊರೀಯನ ಮಗನಾದ ಮೆರೇಮೋತನು ಎಲ್ಯಾಷೀಬನ ಮನೆ ಮುಂದಿನ ಬಾಗಿಲಿನಿಂದ ಆ ಮನೆಯ ಕೊನೆಯತನಕ ಗೋಡೆಯನ್ನು ಕಟ್ಟಿದನು. 22 ಆ ಪ್ರಾಂತ್ಯದಲ್ಲಿ ವಾಸಿಸಿದ್ದ ಯಾಜಕರು ಸೇರಿ ಮುಂದಿನ ಭಾಗವನ್ನು ಕಟ್ಟಿದರು.

23 ಬೆನ್ಯಾಮೀನ್ ಮತ್ತು ಹಷ್ಷೂಬ್ ತಮ್ಮ ತಮ್ಮ ಸ್ವಂತ ಮನೆಗಳ ಮುಂದಿದ್ದ ಭಾಗವನ್ನು ಕಟ್ಟಿದರು, ಹಾಗೆಯೇ ಮಾಸೇಯನ ಮಗನಾದ ಅಜರ್ಯನು ತನ್ನ ಮನೆ ಮುಂದಿದ್ದ ಗೋಡೆಯನ್ನು ಕಟ್ಟಿದನು.

24 ಹೇನಾದಾದನ ಮಗನಾದ ಬಿನ್ನೂಯ್ ಅಜರ್ಯನ ಮನೆಯಿಂದ ಹಿಡಿದು ಮೂಲೆಯ ತನಕ ಗೋಡೆಯನ್ನು ಕಟ್ಟಿದನು.

25 ಊಜೈಯ ಮಗನಾದ ಪಾಲಾಲನು ಮೂಲೆಯಿಂದ ಹಿಡಿದು ರಾಜನ ಮೇಲ್ಮನೆಯ ಬುರುಜಿನ ತನಕ ಮುಂದುವರಿಸಿದನು. ಇದು ರಾಜನ ಕಾವಲುಪಡೆಯ ಅಂಗಳದ ಸಮೀಪದಲ್ಲಿತ್ತು. ಪರೋಷನ ಮಗನಾದ ಪೆದಾಯನು ಅಲ್ಲಿಂದಾಚೆಗೆ ಅಂದರೆ ಪಾಲಾಲನು ಕೊನೆಗೊಳಿಸಿದಾಚಿನಿಂದ ಮುಂದುವರಿಸಿದನು.

26 ಓಫೇಲ್ ಗುಡ್ಡದಲ್ಲಿ ವಾಸಿಸುತ್ತಿದ್ದ ಆಲಯದ ಸೇವಕರು ಮುಂದಿನ ಭಾಗವನ್ನು “ನೀರು” ಎಂಬ ಬಾಗಿಲಿನ ಪೂರ್ವದ ಕಡೆಯವರೆಗೂ ಅದರ ಬಳಿಯಿದ್ದ ಬುರುಜಿನವರೆಗೂ ರಿಪೇರಿ ಮಾಡಿದರು.

27 ತೆಕೋವದವರು ಉಳಿದ ಆ ಭಾಗವನ್ನು ಅಂದರೆ ದೊಡ್ಡ ಬುರುಜಿನಿಂದ ಹಿಡಿದು ಓಫೇಲ್‌ಗೋಡೆಯ ತನಕ ಮುಂದುವರಿಸಿದರು.

28 ಯಾಜಕರು ಕುದುರೆಬಾಗಿಲಿನ ಮೇಲಿನ ಭಾಗವನ್ನು ಕಟ್ಟಿದರು. ಪ್ರತಿಯೊಬ್ಬ ಯಾಜಕನು ತನ್ನ ಮನೆ ಮುಂದಿದ್ದ ಭಾಗವನ್ನು ರಿಪೇರಿಮಾಡಿದನು. 29 ಇಮೇರನ ಮಗನಾದ ಚಾದೋಕನು ತನ್ನ ಮನೆಯ ಮುಂದಿದ್ದ ಗೋಡೆಯ ಭಾಗವನ್ನು ರಿಪೇರಿ ಮಾಡಿದನು. ಪೂರ್ವ ಬಾಗಿಲಿನ ದ್ವಾರಪಾಲಕನಾಗಿರುವ ಶೆಕನ್ಯನ ಮಗನಾದ ಶೆಮಾಯನು ಮುಂದಿನ ಭಾಗವನ್ನು ರಿಪೇರಿ ಮಾಡಿದನು.

30 ಶೆಲೆಮ್ಯನ ಮಗನಾದ ಹನನ್ಯನೂ ಮತ್ತು ಚಾಲಾಫನ ಆರನೆಯ ಮಗನಾದ ಹಾನೂನನೂ ಉಳಿದ ಭಾಗವನ್ನು ಮುಗಿಸಿದರು.

ಬೆರೆಕ್ಯನ ಮಗನಾದ ಮೆಷುಲ್ಲಾಮ್ ತನ್ನ ಮನೆಯ ಮುಂದಿದ್ದ ಭಾಗವನ್ನು ಕಟ್ಟಿದನು. 31 ವರ್ತಕರ ಮತ್ತು ಆಲಯದ ಸೇವಕರ ಮನೆಗಳ ತನಕದ ಭಾಗವನ್ನು ಮಲ್ಕೀಯನು ರಿಪೇರಿ ಮಾಡಿದನು. ಇದು, “ತನಿಕೆ” ಎಂಬ ಬಾಗಿಲಿನ ಎದುರಿನಲ್ಲಿತ್ತು. ಮೂಲೆಗೋಡೆಯ ಮೇಲಿರುವ ಕೋಣಿಯ ತನಕದ ಭಾಗವನ್ನು ಅಕ್ಕಸಾಲಿಗನಾದ ಮಲ್ಕೀಯನು ರಿಪೇರಿ ಮಾಡಿದನು. 32 ಅಕ್ಕಸಾಲಿಗರು ಮತ್ತು ವರ್ತಕರು ಸೇರಿ ಗೋಡೆ ಮೇಲಿರುವ ಕೋಣಿಯಿಂದ ಹಿಡಿದು, “ಕುರಿ” ಎಂಬ ಬಾಗಿಲಿನ ತನಕದ ಗೋಡೆಯನ್ನು ಕಟ್ಟಿದರು.

ಅಪೊಸ್ತಲರ ಕಾರ್ಯಗಳು 13

ಬಾರ್ನಬ ಮತ್ತು ಸೌಲರಿಗೆ ವಹಿಸಲಾದ ವಿಶೇಷಕಾರ್ಯ

13 ಅಂತಿಯೋಕ್ಯದ ಸಭೆಯಲ್ಲಿ ಕೆಲವು ಪ್ರವಾದಿಗಳು ಮತ್ತು ಉಪದೇಶಕರಿದ್ದರು. ಅವರು ಯಾರೆಂದರೆ: ಬಾರ್ನಬ, ಸಿಮೆಯೋನ್ (ಇವನನ್ನು ನೀಗರ್ ಎಂತಲೂ ಕರೆಯುತ್ತಿದ್ದರು.) ಲೂಸಿಯಸ್ (ಸಿರೇನ್ ಪಟ್ಟಣದವನು) ಮೆನಹೇನ (ಹೆರೋದ ರಾಜನೊಂದಿಗೆ ಬೆಳೆದವನು) ಮತ್ತು ಸೌಲ. ಇವರೆಲ್ಲರು ಪ್ರಭುವಿನ ಸೇವೆ ಮಾಡುತ್ತಿದ್ದರು ಮತ್ತು ಉಪವಾಸ ಮಾಡುತ್ತಿದ್ದರು. ಪವಿತ್ರಾತ್ಮನು ಅವರಿಗೆ, “ನಾನು ವಿಶೇಷವಾದ ಕಾರ್ಯಕ್ಕಾಗಿ ಬಾರ್ನಬ ಮತ್ತು ಸೌಲರನ್ನು ಆರಿಸಿಕೊಂಡಿದ್ದೇನೆ. ಆ ಕಾರ್ಯಕ್ಕಾಗಿ ಅವರನ್ನು ಪ್ರತ್ಯೇಕಿಸಿರಿ” ಎಂದು ಹೇಳಿದನು.

ಆದ್ದರಿಂದ ಸಭೆಯವರು ಉಪವಾಸವಿದ್ದು ಪ್ರಾರ್ಥನೆ ಮಾಡಿದರು. ಅವರು ಬಾರ್ನಬ ಮತ್ತು ಸೌಲರ ಮೇಲೆ ಹಸ್ತಾರ್ಪಣೆ ಮಾಡಿ ಅವರನ್ನು ಕಳುಹಿಸಿಕೊಟ್ಟರು.

ಸೈಪ್ರಸ್‌ನಲ್ಲಿ ಬಾರ್ನಬ ಮತ್ತು ಸೌಲರು

ಬಾರ್ನಬ ಮತ್ತು ಸೌಲರನ್ನು ಪವಿತ್ರಾತ್ಮನೇ ಕಳುಹಿಸಿಕೊಟ್ಟನು. ಅವರು ಸೆಲೂಸಿಯಾ ಪಟ್ಟಣಕ್ಕೆ ಹೋದರು. ಬಳಿಕ ಅವರು ಸೆಲೂಸಿಯಾದಿಂದ ಸೈಪ್ರಸ್ ದ್ವೀಪಕ್ಕೆ ಹಡಗಿನಲ್ಲಿ ಪ್ರಯಾಣ ಮಾಡಿದರು. ಬಾರ್ನಬ ಮತ್ತು ಸೌಲರು ಸಲಾಮಿಸ್ ಪಟ್ಟಣಕ್ಕೆ ಬಂದಾಗ ಯೆಹೂದ್ಯರ ಸಭಾಮಂದಿರದಲ್ಲಿ ದೇವರ ಸಂದೇಶವನ್ನು ಸಾರಿದರು. (ಮಾರ್ಕನೆನಿಸಿಕೊಳ್ಳುವ ಯೋಹಾನನು ಸಹಾಯ ಮಾಡುವುದಕ್ಕಾಗಿ ಅವರೊಂದಿಗಿದ್ದನು.)

ಅವರು ಆ ದ್ವೀಪದಲ್ಲೆಲ್ಲಾ ಪ್ರಯಾಣ ಮಾಡುತ್ತಾ ಪಾಫೋಸ್ ಎಂಬ ಊರಿಗೆ ಹೋದರು. ಮಂತ್ರತಂತ್ರಗಳನ್ನು ಮಾಡುತ್ತಿದ್ದ ಒಬ್ಬ ಯೆಹೂದ್ಯನನ್ನು ಅವರು ಪಾಫೋಸಿನಲ್ಲಿ ಕಂಡರು. ಅವನ ಹೆಸರು “ಬಾರ್ ಯೇಸು.” ಅವನೊಬ್ಬ ಸುಳ್ಳುಪ್ರವಾದಿ. ಸೆರ್ಗ್ಯಪೌಲನೆಂಬ ರಾಜ್ಯಪಾಲನ ಹತ್ತಿರದಲ್ಲೇ ಅವನು ಯಾವಾಗಲೂ ಇರುತ್ತಿದ್ದನು. ಸೆರ್ಗ್ಯಪೌಲನು ಜ್ಞಾನವಂತನಾಗಿದ್ದನು. ಅವನು ದೇವರ ವಾಕ್ಯವನ್ನು ಕೇಳಲು ಬಾರ್ನಬ ಮತ್ತು ಸೌಲರನ್ನು ಆಮಂತ್ರಿಸಿದನು. ಆದರೆ ಮಂತ್ರವಾದಿಯಾದ ಎಲಿಮನು ಬಾರ್ನಬ ಮತ್ತು ಸೌಲರಿಗೆ ವಿರೋಧವಾಗಿದ್ದನು. (ಬಾರ್ ಯೇಸುವನ್ನು ಗ್ರೀಕ್ ಭಾಷೆಯಲ್ಲಿ ಎಲಿಮ ಎಂದು ಕರೆಯುತ್ತಿದ್ದರು.) ರಾಜ್ಯಪಾಲನು ಯೇಸುವಿನಲ್ಲಿ ನಂಬಿಕೆ ಇಡದ ಹಾಗೆ ಮಾಡಲು ಎಲಿಮನು ಪ್ರಯತ್ನಿಸಿದನು. ಆದರೆ ಪೌಲನು (ಸೌಲನ ಮತ್ತೊಂದು ಹೆಸರು ಪೌಲ.) ಪವಿತ್ರಾತ್ಮಭರಿತನಾದನು. ಪೌಲನು ಎಲಿಮನನ್ನು ದಿಟ್ಟಿಸಿ ನೋಡಿ, 10 ಅವನಿಗೆ, “ನೀನು ಸೈತಾನನ ಮಗ! ಪ್ರತಿಯೊಂದು ಒಳ್ಳೆಯದಕ್ಕೂ ನೀನು ಶತ್ರು! ನೀನು ದುಷ್ಟತಂತ್ರಗಳಿಂದಲೂ ಸುಳ್ಳುಗಳಿಂದಲೂ ತುಂಬಿದವನಾಗಿರುವೆ. ಪ್ರಭುವಿನ ಸತ್ಯಗಳನ್ನು ಸುಳ್ಳುಗಳನ್ನಾಗಿ ಪರಿವರ್ತಿಸಲು ನೀನು ಯಾವಾಗಲೂ ಪ್ರಯತ್ನಿಸುತ್ತಿರುವೆ! 11 ಇಗೋ, ಪ್ರಭುವು ಕೈ ಎತ್ತಿದ್ದಾನೆ. ನೀನು ಕುರಡನಾಗಿ ಸ್ವಲ್ಪಕಾಲದವರೆಗೆ ಏನನ್ನೂ ನೋಡಲಾರೆ; ಸೂರ್ಯನ ಬೆಳಕನ್ನು ಸಹ ಕಾಣಲಾರೆ” ಎಂದನು.

ಆಗ ಎಲಿಮನಿಗೆ ಎಲ್ಲವೂ ಕತ್ತಲಾಯಿತು. ತನ್ನನ್ನು ಯಾರಾದರೂ ಕೈಹಿಡಿದು ನಡೆಸಲೆಂದು ಅವನು ತಡವರಿಸುತ್ತಾ ಸುತ್ತಮುತ್ತ ನಡೆದನು. 12 ಇದನ್ನು ಕಂಡ ರಾಜ್ಯಪಾಲನು ಪ್ರಭುವನ್ನು ನಂಬಿಕೊಂಡನು. ಪ್ರಭುವಿನ ವಿಷಯವಾದ ಉಪದೇಶವನ್ನು ಕೇಳಿ ವಿಸ್ಮಿತನಾದನು.

ಪೌಲ ಬಾರ್ನಬರು ಸೈಪ್ರಸ್‌ನಿಂದ ತೆರಳುವರು

13 ಪೌಲ ಮತ್ತು ಅವನ ಸಂಗಡಿಗರು ಪಾಫೋಸಿನಿಂದ ನೌಕಾಯಾನ ಮಾಡಿದರು. ಪಾಂಫೀಲಿಯ ಪ್ರಾಂತ್ಯದಲ್ಲಿದ್ದ ಪೆರ್ಗ ಎಂಬ ಪಟ್ಟಣಕ್ಕೆ ಅವರು ಬಂದರು. ಆದರೆ ಮಾರ್ಕನೆನಿಸಿಕೊಳ್ಳುವ ಯೋಹಾನನು ಅವರನ್ನು ಬಿಟ್ಟು ಜೆರುಸಲೇಮಿಗೆ ಹಿಂತಿರುಗಿದನು. 14 ಅವರು ತಮ್ಮ ಪ್ರಯಾಣವನ್ನು ಪೆರ್ಗದಿಂದ ಮುಂದುವರಿಸಿ, ಪಿಸಿದಿಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಹೋದರು.

ಅವರು ಅಂತಿಯೋಕ್ಯಕ್ಕೆ ಸಬ್ಬತ್ ದಿನದಂದು ಯೆಹೂದ್ಯರ ಸಭಾಮಂದಿರದೊಳಗೆ ಹೋಗಿ ಕುಳಿತುಕೊಂಡರು. 15 ಮೋಶೆಯ ಧರ್ಮಶಾಸ್ತ್ರವನ್ನು ಮತ್ತು ಪ್ರವಾದಿಗಳ ಗ್ರಂಥಗಳನ್ನು ಓದಲಾಯಿತು. ಬಳಿಕ ಸಭಾಮಂದಿರದ ನಾಯಕರು ಪೌಲ ಬಾರ್ನಬರಿಗೆ, “ಸಹೋದರರೇ, ಇಲ್ಲಿರುವ ಜನರಿಗೆ ಸಹಾಯವಾಗುವಂತೆ ಏನನ್ನಾದರೂ ನೀವು ಹೇಳಬೇಕೆಂದಿದ್ದರೆ, ದಯವಿಟ್ಟು ಹೇಳಿ!” ಎಂಬ ಸಂದೇಶವನ್ನು ಕಳುಹಿಸಿದರು.

16 ಪೌಲನು ಎದ್ದುನಿಂತುಕೊಂಡು ತನ್ನ ಮಾತುಗಳನ್ನು ಕೇಳಬೇಕೆಂದು ಜನರಿಗೆ ಕೈಸನ್ನೆ ಮಾಡಿ ಹೀಗೆಂದನು: “ನನ್ನ ಯೆಹೂದ್ಯ ಸಹೋದರರೇ, ನಿಜ ದೇವರನ್ನು ಆರಾಧಿಸುವ ಇತರ ಜನರೇ, ದಯವಿಟ್ಟು ನನಗೆ ಕಿವಿಗೊಡಿರಿ! 17 ಇಸ್ರೇಲರ ದೇವರು ನಮ್ಮ ಪಿತೃಗಳನ್ನು ಆರಿಸಿಕೊಂಡನು. ಈಜಿಪ್ಟಿನಲ್ಲಿ ಪ್ರವಾಸಿಗರಾಗಿ ವಾಸಿಸುತ್ತಿದ್ದ ತನ್ನ ಜನರಿಗೆ ದೇವರು ಸಹಾಯಮಾಡಿ ಅಭಿವೃದ್ಧಿಪಡಿಸಿದನು. ದೇವರು ತನ್ನ ಮಹಾಶಕ್ತಿಯಿಂದ ಅವರನ್ನು ಆ ದೇಶದೊಳಗಿಂದ ಬರಮಾಡಿದನು. 18 ಮರಳುಗಾಡಿನಲ್ಲಿ ನಲವತ್ತು ವರ್ಷಗಳ ಕಾಲ ಅವರನ್ನು ಸಹಿಸಿಕೊಂಡನು. 19 ಕಾನಾನ್ ನಾಡಿನ ಏಳು ಜನಾಂಗಗಳನ್ನು ನಾಶಮಾಡಿ ತನ್ನ ಜನರಿಗೆ ಆ ನಾಡನ್ನು ಸ್ವಾಸ್ತ್ಯವಾಗಿ ಕೊಟ್ಟನು. 20 ಇವೆಲ್ಲಾ ಸುಮಾರು ನಾನೂರ ಐವತ್ತು ವರ್ಷಗಳ ಅವಧಿಯಲ್ಲಿ ನಡೆದವು.

“ಇದಾದ ಮೇಲೆ ಪ್ರವಾದಿಯಾದ ಸಮುವೇಲನ ಕಾಲದವರೆಗೆ ದೇವರು ನಮ್ಮ ಜನರಿಗೆ ನ್ಯಾಯಸ್ಥಾಪಕರನ್ನು ಕೊಟ್ಟನು. 21 ಬಳಿಕ ಜನರು ತಮಗೆ ರಾಜನು ಬೇಕೆಂದು ಕೇಳಿಕೊಂಡರು. ದೇವರು ಅವರಿಗೆ ಕೀಷನ ಮಗನಾದ ಸೌಲನನ್ನು ಕೊಟ್ಟನು. ಸೌಲನು ಬೆನ್ಯಾಮಿನ್ ಕುಲದವನು. ಅವನು ನಲವತ್ತು ವರ್ಷಗಳ ಕಾಲ ರಾಜನಾಗಿದ್ದನು. 22 ದೇವರು ಸೌಲನನ್ನು ತೆಗೆದುಹಾಕಿದ ಮೇಲೆ ದಾವೀದನನ್ನು ಅವರ ರಾಜನನ್ನಾಗಿ ಮಾಡಿದನು. ‘ಇಷಯನ ಮಗನಾದ ದಾವೀದನು ನನಗೆ ಮೆಚ್ಚಿಗೆಯಾದವನು. ಅವನು ನನ್ನ ಅಪೇಕ್ಷೆಗೆ ತಕ್ಕಂತೆ ಕಾರ್ಯಗಳನ್ನು ಮಾಡುತ್ತಾನೆ’ ಎಂದು ದೇವರು ದಾವೀದನ ಬಗ್ಗೆ ಹೇಳಿದ್ದಾನೆ.

23 “ದೇವರು ತನ್ನ ವಾಗ್ದಾನಕ್ಕನುಸಾರವಾಗಿ ದಾವೀದನ ಸಂತಾನದವರಲ್ಲಿ ಒಬ್ಬನನ್ನು ಇಸ್ರೇಲರ ರಕ್ಷಕನನ್ನಾಗಿ ಕಳುಹಿಸಿ ಕೊಟ್ಟಿದ್ದಾನೆ. ಆತನೇ ಯೇಸು. 24 ಯೇಸು ಬರುವುದಕ್ಕಿಂತ ಮೊದಲು (ಸ್ನಾನಿಕ) ಯೋಹಾನನು ಯೆಹೂದ್ಯ ಜನರಿಗೆಲ್ಲಾ ‘ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ’ ಎಂದು ಬೋಧಿಸಿದನು. 25 ‘ನಾನು ಯಾರೆಂದು ನೀವು ಯೋಚಿಸುತ್ತೀರಿ? ನಾನು ಕ್ರಿಸ್ತನಲ್ಲ. ಆತನು ನನ್ನ ತರುವಾಯ ಬರುತ್ತಾನೆ. ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ’ ಎಂದು ಯೋಹಾನನು ತನ್ನ ಕಾರ್ಯವನ್ನು ಮಾಡಿ ಪೂರೈಸುತ್ತಿದ್ದಾಗ ಹೇಳಿಕೊಂಡಿದ್ದಾನೆ.

26 “ನನ್ನ ಸಹೋದರರೇ, ಅಬ್ರಹಾಮನ ಕುಟುಂಬದ ಪುತ್ರರೇ, ನಿಜದೇವರನ್ನು ಆರಾಧಿಸುತ್ತಿರುವ ಯೆಹೂದ್ಯರಲ್ಲದವರೇ, ಕೇಳಿರಿ! ಈ ರಕ್ಷಣೆಯ ಸಂದೇಶವನ್ನು ಕಳುಹಿಸಿರುವುದು ನಮಗಾಗಿಯೇ. 27 ಜೆರುಸಲೇಮಿನಲ್ಲಿ ವಾಸವಾಗಿದ್ದ ಯೆಹೂದ್ಯರು ಮತ್ತು ಯೆಹೂದ್ಯನಾಯಕರು ಯೇಸುವೇ ರಕ್ಷಕನೆಂಬುದನ್ನು ಅರ್ಥಮಾಡಿಕೊಳ್ಳಲಿಲ್ಲ. ಪ್ರವಾದಿಗಳು ಯೇಸುವಿನ ಬಗ್ಗೆ ಬರೆದಿದ್ದ ಮಾತುಗಳನ್ನು ಪ್ರತಿ ಸಬ್ಬತ್‌ದಿನದಂದು ಓದಲಾಗುತ್ತಿತ್ತು. ಆದರೆ ಅವರು ಅರ್ಥಮಾಡಿಕೊಳ್ಳಲಿಲ್ಲ. ಆ ಯೆಹೂದ್ಯರು ಯೇಸುವನ್ನು ಅಪರಾಧಿಯೆಂದು ತೀರ್ಪುಮಾಡಿದರು. ಹೀಗೆ ಮಾಡುವುದರ ಮೂಲಕವಾಗಿ ಅವರು ಪ್ರವಾದಿಗಳ ನುಡಿಗಳನ್ನು ನೆರವೇರಿಸಿದರು! 28 ಯೇಸು ಸಾಯಲೇಬೇಕೆಂಬುದಕ್ಕೆ ಸರಿಯಾದ ಕಾರಣವನ್ನು ಅವರು ಕಂಡುಹಿಡಿಯಲಾಗದಿದ್ದರೂ ಯೇಸುವನ್ನು ಕೊಲ್ಲಿಸಬೇಕೆಂದು ಪಿಲಾತನನ್ನು ಕೇಳಿಕೊಂಡರು.

29 “ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ ಯೇಸುವಿಗೆ ಸಂಭವಿಸಬೇಕಾಗಿದ್ದ ಕೆಟ್ಟವುಗಳನ್ನೆಲ್ಲ ಯೆಹೂದ್ಯರು ಆತನಿಗೆ ಮಾಡಿದರು. ಬಳಿಕ ಅವರು ಯೇಸುವನ್ನು ಶಿಲುಬೆಯಿಂದ ಕೆಳಗಿಳಿಸಿ ಸಮಾಧಿಯಲ್ಲಿಟ್ಟರು. 30 ಆದರೆ ದೇವರು ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು! 31 ಇದಾದ ಮೇಲೆ ಗಲಿಲಾಯದಿಂದ ಯೇಸುವಿನೊಂದಿಗೆ ಜೆರುಸಲೇಮಿಗೆ ಬಂದಿದ್ದವರು, ಅನೇಕ ದಿನಗಳವರೆಗೆ ಆತನನ್ನು ನೋಡಿದರು. ಈಗ ಅವರೇ ಜನರಿಗೆ ಸಾಕ್ಷಿಗಳಾಗಿದ್ದಾರೆ.

32 “ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನದ ವಿಷಯವಾದ ಸುವಾರ್ತೆಯನ್ನು ನಾವು ನಿಮಗೆ ಹೇಳುತ್ತೇವೆ. 33 ನಾವು ಅವರ ಸಂತತಿಯವರಾಗಿದ್ದೇವೆ. ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸುವುದರ ಮೂಲಕ ಆ ವಾಗ್ದಾನವನ್ನು ನಮಗಾಗಿ ನೆರವೇರಿಸಿದ್ದಾನೆ. ಇದರ ಬಗ್ಗೆ ಎರಡನೆ ಕೀರ್ತನೆಯಲ್ಲಿ ಹೀಗೆಂದು ಬರೆದಿದೆ:

‘ನೀನೇ ನನ್ನ ಮಗನು.
    ಇಂದೇ ನಾನು ನಿನ್ನನ್ನು ಪಡೆದೆನು.’(A)

34 ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದರಿಂದ ಆತನು ಇನ್ನೆಂದಿಗೂ ಸಮಾಧಿಗೆ ಸೇರಿ ಕೊಳೆಯುವುದಿಲ್ಲ ಎಂಬ ವಿಷಯದಲ್ಲಿ ದೇವರು ಇಂತೆಂದಿದ್ದಾನೆ:

‘ನಾನು ದಾವೀದನಿಗೆ ಮಾಡಿದ ಸತ್ಯವೂ ಪವಿತ್ರವೂ
    ಆದ ವಾಗ್ದಾನಗಳನ್ನು ನಿನಗೆ ಕೊಡುತ್ತೇನೆ.’(B)

35 ಆದರೆ ಮತ್ತೊಂದು ಸ್ಥಳದಲ್ಲಿ ದೇವರು ಹೀಗೆನ್ನುತ್ತಾನೆ:

‘ನೀನು ನಿನ್ನ ಪರಿಶುದ್ಧನ ದೇಹವನ್ನು ಸಮಾಧಿಯಲ್ಲಿ ಕೊಳೆಯಲು ಬಿಡುವುದಿಲ್ಲ.’(C)

36 “ದಾವೀದನು ತನ್ನ ಜೀವಮಾನಕಾಲದಲ್ಲಿ ದೇವರ ಚಿತ್ತಕ್ಕನುಸಾರವಾಗಿ ಬಾಳಿದನು. ಬಳಿಕ ಅವನು ಸತ್ತುಹೋದನು. ದಾವೀದನನ್ನು ಅವನ ಪಿತೃಗಳೊಂದಿಗೆ ಸಮಾಧಿಮಾಡಲಾಯಿತು. ಅವನ ದೇಹ ಸಮಾಧಿಯಲ್ಲಿ ಕೊಳೆತುಹೋಯಿತು! 37 ಆದರೆ ದೇವರಿಂದ ಜೀವಂತವಾಗಿ ಎಬ್ಬಿಸಲ್ಪಟ್ಟ ಯೇಸುವಿನ ದೇಹ ಸಮಾಧಿಯಲ್ಲಿ ಕೊಳೆಯಲ್ಪಡಲಿಲ್ಲ. 38-39 ಸಹೋದರರೇ, ಇದು ನಿಮಗೆ ತಿಳಿದಿರಲಿ: ಆತನ ಮೂಲಕವಾಗಿ ನಿಮ್ಮ ಪಾಪಗಳಿಗೆ ಕ್ಷಮೆ ದೊರೆಯುತ್ತದೆ. ಮೋಶೆಯ ಧರ್ಮಶಾಸ್ತ್ರಕ್ಕೆ, ನಿಮ್ಮನ್ನು ನಿಮ್ಮ ಪಾಪಗಳಿಂದ ಬಿಡಿಸಲಾಗಲಿಲ್ಲ. ಆದರೆ ಯೇಸುವಿನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬನು ಆತನ ಮೂಲಕವಾಗಿ ತನ್ನ ಎಲ್ಲಾ ಪಾಪಗಳಿಂದ ಬಿಡುಗಡೆಯಾಗುವನು. 40 ಆದ್ದರಿಂದ ಪ್ರವಾದಿಗಳು ತಿಳಿಸಿರುವ ಈ ಕೆಲವು ಸಂಗತಿಗಳು ನಿಮ್ಮಲ್ಲಿ ನಿಜವಾಗದಂತೆ ಎಚ್ಚರಿಕೆಯಾಗಿರಿ:

41 ‘ಅಪಹಾಸ್ಯ ಮಾಡುವವರೇ,
    ಆಶ್ಚರ್ಯಪಡುತ್ತಾ ನಾಶವಾಗಿಹೋಗಿರಿ.
ನೀವು ನಂಬಲೊಲ್ಲದ ಒಂದು ಕಾರ್ಯವನ್ನು
    ನಾನು ಮಾಡುವೆನು.
ಬೇರೊಬ್ಬನು ನಿಮಗೆ ಅದನ್ನು ವಿವರಿಸಿದರೂ
    ನೀವು ನಂಬುವುದಿಲ್ಲ!’”(D)

42 ಪೌಲ ಮತ್ತು ಬಾರ್ನಬ ಸಭಾಮಂದಿರದಿಂದ ಹೋಗುವಾಗ, ಈ ಸಂಗತಿಗಳ ಬಗ್ಗೆ ಇನ್ನೂ ಹೆಚ್ಚಿಗೆ ತಿಳಿಸುವುದಕ್ಕಾಗಿ ಮುಂದಿನ ಸಬ್ಬತ್‌ದಿನದಂದು ಮತ್ತೆ ಬರಬೇಕೆಂದು ಜನರು ಅವರನ್ನು ಕೇಳಿಕೊಂಡರು. 43 ಸಭೆಯು ಮುಗಿದ ಮೇಲೆ ಅನೇಕ ಯೆಹೂದ್ಯರು ಪೌಲ ಬಾರ್ನಬರನ್ನು ಆ ಸ್ಥಳದಿಂದ ಹಿಂಬಾಲಿಸಿದರು. ಯೆಹೂದ್ಯರ ಧರ್ಮಕ್ಕೆ ಸೇರಿಕೊಂಡಿದ್ದ ಅನೇಕ ಅನ್ಯಮತೀಯರೂ ಆ ಯೆಹೂದ್ಯರೊಂದಿಗಿದ್ದರು. ಮತಾಂತರಗೊಂಡಿದ್ದ ಇವರು ಸಹ ನಿಜದೇವರನ್ನು ಆರಾಧಿಸುತ್ತಿದ್ದರು. ಪೌಲ ಬಾರ್ನಬರು ಅವರೊಂದಿಗೆ ಮಾತಾಡಿ, ದೇವರ ಕೃಪೆಯಲ್ಲೇ ಭರವಸವಿಟ್ಟು ಮುಂದುವರಿಯಬೇಕೆಂದು ಪ್ರೋತ್ಸಾಹಪಡಿಸಿದರು.

44 ಮುಂದಿನ ಸಬ್ಬತ್‌ದಿನದಂದು, ಪ್ರಭುವಿನ ವಾಕ್ಯವನ್ನು ಕೇಳುವುದಕ್ಕಾಗಿ ಬಹುಮಟ್ಟಿಗೆ ನಗರದ ಜನರೆಲ್ಲರೂ ನೆರೆದುಬಂದರು. 45 ಇದನ್ನು ಕಂಡ ಯೆಹೂದ್ಯರಿಗೆ ಬಹಳ ಅಸೂಯೆಯಾಯಿತು. ಅವರು ಪೌಲನ ಮಾತುಗಳನ್ನು ಕಟುವಾಗಿ ದೂಷಿಸಿ ಅವುಗಳಿಗೆ ವಿರೋಧವಾಗಿ ವಾದಿಸಿದರು. 46 ಆದರೆ ಪೌಲ ಬಾರ್ನಬರು ಬಹು ಧೈರ್ಯದಿಂದ ಮಾತಾಡಿ, “ನಾವು ದೇವರ ಸಂದೇಶವನ್ನು ಯೆಹೂದ್ಯರಾದ ನಿಮಗೆ ಮೊದಲು ಹೇಳಬೇಕು. ಆದರೆ ನೀವು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ಎಣಿಸಿಕೊಂಡು ತಿರಸ್ಕರಿಸುತ್ತಿದ್ದೀರಿ. ಆದ್ದರಿಂದ ನಾವು ಅನ್ಯಧರ್ಮದವರ ಬಳಿಗೆ ಹೋಗುತ್ತೇವೆ! 47 ಏಕೆಂದರೆ ಪ್ರಭುವು ನಮಗೆ ಕೊಟ್ಟ ಆಜ್ಞೆ ಇಂತಿದೆ:

‘ಲೋಕದ ಕಟ್ಟಕಡೆಯಲ್ಲಿರುವ ಜನರೆಲ್ಲರಿಗೂ ನೀನು ರಕ್ಷಕನಾಗಿರಬೇಕೆಂದು
    ನಾನು ನಿನ್ನನ್ನು ಇತರ ಜನಾಂಗಗಳಿಗೆ ಬೆಳಕನ್ನಾಗಿ ಮಾಡಿದ್ದೇನೆ.’(E)

48 ಪೌಲನ ಈ ಮಾತುಗಳನ್ನು ಕೇಳಿದ ಯೆಹೂದ್ಯರಲ್ಲದ ಜನರು ಬಹು ಸಂತೋಷಪಟ್ಟು ಪ್ರಭುವಿನ ಸಂದೇಶಕ್ಕಾಗಿ ಸ್ತುತಿಸಿದರು. ನಿತ್ಯಜೀವವನ್ನು ಹೊಂದಿಕೊಳ್ಳಲು ಆಯ್ಕೆಯಾಗಿದ್ದವರೆಲ್ಲರೂ ನಂಬಿಕೊಂಡರು.

49 ಪ್ರಭುವಿನ ಸಂದೇಶವನ್ನು ಆ ನಾಡಿನಲ್ಲೆಲ್ಲಾ ಸಾರಲಾಯಿತು. 50 ಆದರೆ ಯೆಹೂದ್ಯರು ಕೆಲವು ಧಾರ್ಮಿಕ ಸ್ತ್ರೀಯರನ್ನೂ ನಗರದ ನಾಯಕರನ್ನೂ ಪ್ರಚೋಧಿಸಿ, ಪೌಲ ಬಾರ್ನಬರ ಮೇಲೆ ಅವರು ಕೋಪಗೊಳ್ಳುವಂತೆಯೂ ಅವರಿಗೆ ವಿರೋಧಿಗಳಾಗುವಂತೆಯೂ ಮಾಡಿ ಪೌಲ ಬಾರ್ನಬರನ್ನು ಪಟ್ಟಣದಿಂದ ಹೊರಗಟ್ಟಿಸಿದರು. 51 ಆದ್ದರಿಂದ ಪೌಲ ಬಾರ್ನಬರು ಅವರ ವಿರೋಧವಾಗಿ ತಮ್ಮ ಕಾಲಿನ ಧೂಳನ್ನು ಝಾಡಿಸಿ,[a] ಇಕೋನಿಯಾ ಪಟ್ಟಣಕ್ಕೆ ಹೋದರು. 52 ಆದರೆ ಯೇಸುವಿನ ಶಿಷ್ಯರು ಸಂತೋಷವಾಗಿದ್ದರು ಮತ್ತು ಪವಿತ್ರಾತ್ಮಭರಿತರಾಗಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International