Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 13

ಕಾನಾನಿಗೆ ಅಬ್ರಾಮನ ಮರುಪ್ರಯಾಣ

13 ಅಬ್ರಾಮನು ಈಜಿಪ್ಟಿನಿಂದ ಹೊರಟನು. ಅಬ್ರಾಮನು ತನ್ನ ಹೆಂಡತಿಯನ್ನು ಕರೆದುಕೊಂಡು ತನ್ನವುಗಳನ್ನೆಲ್ಲಾ ತೆಗೆದುಕೊಂಡು ನೆಗೆವ್ ಮೂಲಕ ಪ್ರಯಾಣ ಮಾಡಿದನು. ಲೋಟನು ಸಹ ಅವರೊಡನೆ ಇದ್ದನು. ಆಗ ಅಬ್ರಾಮನು ತುಂಬ ಐಶ್ವರ್ಯವಂತನಾಗಿದ್ದನು. ಅವನಿಗೆ ಅನೇಕ ಪಶುಗಳಿದ್ದವು; ಬಹಳ ಬೆಳ್ಳಿಬಂಗಾರಗಳಿದ್ದವು.

ಅಬ್ರಾಮನು ತನ್ನ ಪ್ರಯಾಣವನ್ನು ಮುಂದುವರಿಸಿ ನೆಗೆವ್‌ವನ್ನು ಬಿಟ್ಟು ಬೇತೇಲಿಗೆ ಹಿಂತಿರುಗಿಹೋದನು. ಅವನು ಬೇತೇಲ್‌ ನಗರಕ್ಕೂ ಆಯಿ ನಗರಕ್ಕೂ ಮಧ್ಯದಲ್ಲಿರುವ ಸ್ಥಳಕ್ಕೆ ಹೋದನು. ಅಬ್ರಾಮನು ಮತ್ತು ಅವನ ಕುಟುಂಬದವರು ಇಳಿದುಕೊಂಡಿದ್ದ ಸ್ಥಳವೇ ಇದು. ಅಬ್ರಾಮನು ಯಜ್ಞವೇದಿಕೆಯನ್ನು ಕಟ್ಟಿದ್ದು ಈ ಸ್ಥಳದಲ್ಲೇ. ಅಬ್ರಾಮನು ಯೆಹೋವನನ್ನು ಆರಾಧಿಸಿದ್ದು ಈ ಸ್ಥಳದಲ್ಲೇ.

ಅಬ್ರಾಮನು ಮತ್ತು ಲೋಟನು ಅಗಲಿದ್ದು

ಈ ಕಾಲದಲ್ಲಿ ಲೋಟನು ಸಹ ಅಬ್ರಾಮನೊಡನೆ ಪ್ರಯಾಣಮಾಡುತ್ತಿದ್ದನು. ಲೋಟನಿಗೂ ಸಹ ಕುರಿಮಂದೆಗಳೂ ಪಶುಹಿಂಡುಗಳೂ ಗುಡಾರಗಳೂ ಇದ್ದವು. ಅಬ್ರಾಮನಿಗೂ ಲೋಟನಿಗೂ ಬಹಳ ಪಶುಗಳಿದ್ದುದರಿಂದ ಅವುಗಳ ಪೋಷಣೆಗೆ ಆ ಸ್ಥಳವು ಸಾಕಾಗಲಿಲ್ಲ. ಅಬ್ರಾಮನ ಮಂದೆಕಾಯುವವರು ಮತ್ತು ಲೋಟನ ಮಂದೆಕಾಯುವವರು ವಾದ ಮಾಡಲಾರಂಭಿಸಿದರು. ಆ ಕಾಲದಲ್ಲಿ ಕಾನಾನ್ಯರು ಮತ್ತು ಪೆರಿಜೀಯರು ಸಹ ಆ ಸ್ಥಳದಲ್ಲಿ ವಾಸವಾಗಿದ್ದರು.

ಆದ್ದರಿಂದ ಅಬ್ರಾಮನು ಲೋಟನಿಗೆ, “ನಿನಗೂ ನನಗೂ ಯಾವ ವಾಗ್ವಾದವೂ ಇರಬಾರದು. ನಿನ್ನ ಜನರೂ ನನ್ನ ಜನರೂ ವಾಗ್ವಾದ ಮಾಡಬಾರದು; ನಾವೆಲ್ಲರೂ ಸಹೋದರರಾಗಿದ್ದೇವೆ. ನಾವು ಪ್ರತ್ಯೇಕವಾಗೋಣ. ನಿನಗೆ ಬೇಕಾದ ಸ್ಥಳವನ್ನು ನೀನು ಆರಿಸಿಕೊ. ನೀನು ಎಡಗಡೆಗೆ ಹೋಗುವುದಾದರೆ, ನಾನು ಬಲಗಡೆಗೆ ಹೋಗುತ್ತೇನೆ. ನೀನು ಬಲಗಡೆಗೆ ಹೋಗುವುದಾದರೆ, ನಾನು ಎಡಗಡೆಗೆ ಹೋಗುತ್ತೇನೆ” ಎಂದು ಹೇಳಿದನು.

10 ಲೋಟನು ಕಣ್ಣೆತ್ತಿ ನೋಡಿದಾಗ ಜೋರ್ಡನ್ ಕಣಿವೆಯೆಲ್ಲಾ ಕಾಣಿಸಿತು. ಅಲ್ಲಿ ಬೇಕಾದಷ್ಟು ನೀರಿರುವುದನ್ನು ಲೋಟನು ನೋಡಿದನು. (ಆ ಕಾಲದಲ್ಲಿ ಸೊದೋಮ್ ಮತ್ತು ಗೊಮೋರ ಪಟ್ಟಣಗಳು ಯೆಹೋವನಿಂದ ನಾಶವಾಗಿರಲಿಲ್ಲ. ಆ ಕಾಲದಲ್ಲಿ ಜೋರ್ಡನ್ ಕಣಿವೆಯು ಚೋಗರ್ ತನಕ ಯೆಹೋವನ ತೋಟದಂತಿತ್ತು. ಅದು ಈಜಿಪ್ಟಿನ ಭೂಮಿಯಂತೆ ಫಲವತ್ತಾಗಿತ್ತು.) 11 ಆದ್ದರಿಂದ ಲೋಟನು ಜೋರ್ಡನ್ ಕಣಿವೆಯನ್ನೆಲ್ಲಾ ತನಗಾಗಿ ಆರಿಸಿಕೊಂಡನು. ಅವರಿಬ್ಬರೂ ಪ್ರತ್ಯೇಕವಾದರು. ಲೋಟನು ಪೂರ್ವದ ಕಡೆಗೆ ಪ್ರಯಾಣ ಮಾಡಿದನು. 12 ಅಬ್ರಾಮನು ಕಾನಾನ್ ಪ್ರದೇಶದಲ್ಲಿ ಉಳಿದುಕೊಂಡನು. ಲೋಟನು ಕಣಿವೆಯಲ್ಲಿದ್ದ ಪಟ್ಟಣಗಳ ಮಧ್ಯದಲ್ಲಿ ವಾಸಿಸಿದನು; ದಕ್ಷಿಣದಲ್ಲಿದ್ದ ಸೊದೋಮಿನವರೆಗೂ ಗುಡಾರಗಳನ್ನು ಹಾಕಿಕೊಂಡು ಪಾಳೆಯಮಾಡಿಕೊಂಡನು. 13 ಸೊದೋಮಿನ ಜನರು ತುಂಬ ಕೆಟ್ಟವರಾಗಿದ್ದರು. ಅವರು ಯಾವಾಗಲೂ ಯೆಹೋವನಿಗೆ ವಿರೋಧವಾಗಿ ಪಾಪಮಾಡುತ್ತಿದ್ದರು.

14 ಲೋಟನು ಹೊರಟುಹೋದ ಮೇಲೆ ಯೆಹೋವನು ಅಬ್ರಾಮನಿಗೆ, “ಸುತ್ತಲೂ ನೋಡು, ಉತ್ತರದಕ್ಷಿಣಗಳ ಕಡೆಗೂ ಪೂರ್ವಪಶ್ಚಿಮಗಳ ಕಡೆಗೂ ನೋಡು. 15 ನೀನು ನೋಡುವ ಈ ದೇಶವನ್ನೆಲ್ಲಾ ನಿನಗೂ ನಿನ್ನ ನಂತರ ಜೀವಿಸುವ ನಿನ್ನ ಸಂತತಿಯವರಿಗೂ ಕೊಡುತ್ತೇನೆ. ಇದು ಎಂದೆಂದಿಗೂ ನಿನ್ನದಾಗಿರುವುದು. 16 ನಾನು ನಿನ್ನ ಜನರನ್ನು ಭೂಮಿಯ ಮೇಲಿರುವ ಧೂಳಿನಷ್ಟು ಹೆಚ್ಚಿಸುವೆನು. ಯಾವನಾದರೂ ಭೂಮಿಯ ಮೇಲಿರುವ ಧೂಳಿನ ಕಣಗಳನ್ನು ಲೆಕ್ಕಮಾಡಬಹುದಾದರೆ ನಿನ್ನ ಸಂತತಿಯವರ ಸಂಖ್ಯೆಯು ಅದರಷ್ಟೇ ಇರುವುದು. 17 ಆದ್ದರಿಂದ ಹೋಗು, ನಿನ್ನ ಭೂಮಿಯಲ್ಲೆಲ್ಲಾ ತಿರುಗಾಡು. ಅದರ ಉದ್ದಗಲಗಳಲ್ಲೆಲ್ಲಾ ತಿರುಗಾಡು; ಯಾಕೆಂದರೆ ನಾನು ಅದನ್ನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.

18 ಆದ್ದರಿಂದ ಅಬ್ರಾಮನು ತನ್ನ ಗುಡಾರಗಳನ್ನು ಕೀಳಿಸಿ, ದೊಡ್ಡ ಮರಗಳಿರುವ ಮಮ್ರೆಯ ಸಮೀಪಕ್ಕೆ ಹೋಗಿ ವಾಸಿಸತೊಡಗಿದನು. ಇದು ಹೆಬ್ರೋನ್ ನಗರಕ್ಕೆ ಸಮೀಪದಲ್ಲಿತ್ತು. ಆ ಸ್ಥಳದಲ್ಲಿ ಅಬ್ರಾಮನು ಯೆಹೋವನನ್ನು ಆರಾಧಿಸುವುದಕ್ಕಾಗಿ ಯಜ್ಞವೇದಿಕೆಯನ್ನು ಕಟ್ಟಿದನು.

ಮತ್ತಾಯ 12

ಕೆಲವು ಯೆಹೂದ್ಯರು ಯೇಸುವಿನ ಕುರಿತು ಮಾಡಿದ ಟೀಕೆ

(ಮಾರ್ಕ 2:23-28; ಲೂಕ 6:1-5)

12 ಅಂದು ಸಬ್ಬತ್ ದಿನ. ಯೇಸು ಧಾನ್ಯದ ಹೊಲಗಳ ಮಾರ್ಗವಾಗಿ ನಡೆದುಹೋಗುತ್ತಿದ್ದನು. ಯೇಸುವಿನ ಶಿಷ್ಯರು ಆತನೊಂದಿಗಿದ್ದರು. ಅವರು ಹಸಿದಿದ್ದರು. ಆದ್ದರಿಂದ ಶಿಷ್ಯರು ತೆನೆಗಳನ್ನು ಕಿತ್ತುಕೊಂಡು ತಿನ್ನತೊಡಗಿದರು. ಇದನ್ನು ಕಂಡ ಫರಿಸಾಯರು ಯೇಸುವಿಗೆ, “ನೋಡು! ಸಬ್ಬತ್‌ದಿನದಂದು ಮಾಡತಕ್ಕ ಕಾರ್ಯಗಳನ್ನು ಕುರಿತು ಯೆಹೂದ್ಯರ ಧರ್ಮಶಾಸ್ತ್ರದಲ್ಲಿ ವಿಧಿಸಿರುವ ನಿಯಮಗಳಿಗೆ ವಿರುದ್ಧವಾಗಿ ನಿನ್ನ ಶಿಷ್ಯರು ಮಾಡುತ್ತಿದ್ದಾರೆ” ಎಂದು ಹೇಳಿದರು.

ಅದಕ್ಕೆ ಯೇಸು, “ತಾನೂ ತನ್ನೊಂದಿಗಿದ್ದ ಜನರೂ ಹಸಿದಾಗ ದಾವೀದನು ಏನು ಮಾಡಿದನೆಂಬುದನ್ನು ನೀವು ಓದಲಿಲ್ಲವೇ? ದಾವೀದನು ದೇವರ ಮಂದಿರದೊಳಗೆ ಹೋದನು. ದೇವರಿಗೆ ಸಮರ್ಪಿಸಿದ್ದ ರೊಟ್ಟಿಯನ್ನು ದಾವೀದನು ಮತ್ತು ಅವನೊಂದಿಗಿದ್ದ ಜನರು ತಿಂದರು. ಅವರು ಆ ರೊಟ್ಟಿಯನ್ನು ತಿನ್ನುವುದು ಧರ್ಮಶಾಸ್ತ್ರಕ್ಕೆ ವಿರೋಧವಾಗಿತ್ತು. ಅದನ್ನು ತಿನ್ನಲು ಯಾಜಕರಿಗೆ ಮಾತ್ರ ಅವಕಾಶವಿತ್ತು. ಪ್ರತಿಯೊಂದು ಸಬ್ಬತ್ ದಿನದಲ್ಲಿ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನದ ನಿಯಮಗಳನ್ನು ಮೀರಿದರೂ ತಪ್ಪಿತಸ್ಥರಾಗುವುದಿಲ್ಲವೆಂದು ನೀವು ಮೋಶೆಯ ಧರ್ಮಶಾಸ್ತ್ರದಲ್ಲಿ ಓದಲಿಲ್ಲವೇ? ಆದರೆ ದೇವಾಲಯಕ್ಕಿಂತಲೂ ಹೆಚ್ಚಿನವನು ಇಲ್ಲಿದ್ದಾನೆಂದು ನಾನು ನಿಮಗೆ ಹೇಳುತ್ತೇನೆ. ‘ಪಶುಯಜ್ಞಗಳು ನನಗೆ ಬೇಡ, ಕರುಣೆಯೇ ನನಗೆ ಬೇಕು’(A) ಎಂದು ಪವಿತ್ರಗ್ರಂಥವು ಹೇಳುತ್ತದೆ. ಅದರ ಅರ್ಥವನ್ನು ನೀವು ನಿಜವಾಗಿಯೂ ಅರಿತಿಲ್ಲ. ನೀವು ಅದರ ಅರ್ಥವನ್ನು ತಿಳಿದುಕೊಂಡರೆ ತಪ್ಪನ್ನೇನೂ ಮಾಡದ ಇವರಿಗೆ ತಪ್ಪಿತಸ್ಥರೆಂದು ತೀರ್ಪು ಮಾಡುವುದಿಲ್ಲ.

“ಮನುಷ್ಯಕುಮಾರನು ಸಬ್ಬತ್‌ ದಿನಕ್ಕೂ ಪ್ರಭುವಾಗಿದ್ದಾನೆ” ಎಂದು ಹೇಳಿದನು.

ಕೈಬತ್ತಿದವನಿಗೆ ಆರೋಗ್ಯದಾನ

(ಮಾರ್ಕ 3:1-6; ಲೂಕ 6:6-11)

ಯೇಸು ಆ ಸ್ಥಳವನ್ನು ಬಿಟ್ಟು ಅವರ ಸಭಾಮಂದಿರದೊಳಕ್ಕೆ ಹೋದನು. 10 ಆ ಸಭಾಮಂದಿರದಲ್ಲಿ ಒಬ್ಬನ ಕೈ ಊನವಾಗಿತ್ತು. ಯೆಹೂದ್ಯರಲ್ಲಿ ಕೆಲವರು ಯೇಸುವಿನ ಮೇಲೆ ತಪ್ಪು ಹೊರಿಸುವುದಕ್ಕಾಗಿ ಕಾರಣ ಹುಡುಕುತ್ತಿದ್ದರು. ಆದ್ದರಿಂದ ಅವರು ಯೇಸುವಿಗೆ “ಸಬ್ಬತ್‌ದಿನದಲ್ಲಿ ಗುಣಪಡಿಸುವುದು ಸರಿಯೇ?” ಎಂದು ಕೇಳಿದರು.

11 ಯೇಸು, “ನಿಮ್ಮಲ್ಲಿ ಯಾರ ಬಳಿಯಾದರೂ ಒಂದು ಕುರಿಯಿದ್ದು, ಆ ಕುರಿಯು ಸಬ್ಬತ್ ದಿನದಂದು ಕುಣಿಯೊಳಕ್ಕೆ ಬಿದ್ದರೆ, ನೀವು ಆ ಕುರಿಯನ್ನು ಕುಣಿಯಿಂದ ಮೇಲಕ್ಕೆ ಎತ್ತುವಿರಿ. 12 ಮನುಷ್ಯನು ಕುರಿಗಿಂತ ಎಷ್ಟೋ ಬೆಲೆಯುಳ್ಳವನಾಗಿದ್ದಾನೆ. ಆದ್ದರಿಂದ ಸಬ್ಬತ್‌ದಿನದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವುದು ಮೋಶೆಯ ಧರ್ಮಶಾಸ್ತ್ರಕ್ಕೆ ಅನುಸಾರವಾದದ್ದು” ಎಂದು ಉತ್ತರಕೊಟ್ಟನು.

13 ನಂತರ ಯೇಸು ಕೈ ಊನವಾಗಿದ್ದ ಮನುಷ್ಯನಿಗೆ, “ನಿನ್ನ ಕೈ ತೋರಿಸು” ಎಂದನು. ಅವನು ತನ್ನ ಕೈಯನ್ನು ಆತನ ಕಡೆಗೆ ಚಾಚಿದನು. ಕೂಡಲೇ, ಅವನ ಕೈ ಮತ್ತೊಂದು ಕೈಯಂತೆ ಸರಿಯಾಯಿತು. 14 ಆದರೆ ಫರಿಸಾಯರು ಹೊರಟುಹೋಗಿ, ಯೇಸುವನ್ನು ಕೊಲ್ಲಲು ಉಪಾಯಗಳನ್ನು ಮಾಡಿಕೊಂಡರು.

ಯೇಸು ದೇವರಿಂದ ಆರಿಸಲ್ಪಟ್ಟ ಸೇವಕ

15 ಫರಿಸಾಯರು ಏನು ಮಾಡುತ್ತಿದ್ದಾರೆಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಆ ಸ್ಥಳವನ್ನು ಬಿಟ್ಟುಹೋದನು. ಅನೇಕ ಜನರು ಆತನನ್ನು ಹಿಂಬಾಲಿಸಿದರು. ಆತನು ಎಲ್ಲಾ ರೋಗಿಗಳನ್ನು ಗುಣಪಡಿಸಿದನು. 16 ಆದರೆ ತಾನು ಯಾರೆಂಬುದನ್ನು ಬೇರೆ ಜನರಿಗೆ ಹೇಳಬಾರದೆಂದು ಆತನು ಜನರನ್ನು ಎಚ್ಚರಿಸಿದನು. 17 ಪ್ರವಾದಿಯಾದ ಯೆಶಾಯನು ಹೇಳಿದ್ದನ್ನು ನೆರವೇರಿಸುವುದಕ್ಕಾಗಿ ಯೇಸು ಇವುಗಳನ್ನು ಮಾಡಿದನು. ಯೆಶಾಯನು ಹೇಳಿದ್ದೇನೆಂದರೆ:

18 “ಇಗೋ, ನನ್ನ ಸೇವಕನು.
    ನಾನು ಆತನನ್ನು ಆರಿಸಿಕೊಂಡಿದ್ದೇನೆ.
ಆತನನ್ನು ಪ್ರೀತಿಸುತ್ತೇನೆ,
    ಆತನನ್ನು ಮೆಚ್ಚಿದ್ದೇನೆ.
ಆತನ ಮೇಲೆ ನನ್ನ ಆತ್ಮವನ್ನು ಇರಿಸುವೆನು.
    ಆತನು ಜನಾಂಗಗಳಿಗೆ ನ್ಯಾಯವಾದ ತೀರ್ಪು ಮಾಡುವನು.
19 ಆತನು ಜಗಳವಾಡುವುದಿಲ್ಲ, ಕೂಗಾಡುವುದಿಲ್ಲ.
    ಬೀದಿಗಳಲ್ಲಿ ಆತನ ಶಬ್ದ ಕೇಳಿಸುವುದಿಲ್ಲ.
20 ಬಾಗಿಹೋದ ದಂಟನ್ನು ಆತನು ಮುರಿಯುವುದಿಲ್ಲ;
    ಆರಿಹೋಗುತ್ತಿರುವ ದೀಪವನ್ನು ಆತನು ನಂದಿಸುವುದಿಲ್ಲ.
    ನ್ಯಾಯವಾದ ತೀರ್ಪು ಜಯಗಳಿಸುವಂತೆ ಆತನು ಮಾಡುವನು.
21 ಎಲ್ಲಾ ಜನರು ಆತನಲ್ಲಿ ಭರವಸೆ ಇಡುವರು.”(B)

ಯೇಸುವಿನ ಅಧಿಕಾರ ದೇವರದೇ

(ಮಾರ್ಕ 3:20-30; ಲೂಕ 11:14-23; 12:10)

22 ಆಗ ಕೆಲವು ಜನರು ಒಬ್ಬನನ್ನು ಯೇಸುವಿನ ಬಳಿಗೆ ತಂದರು. ಅವನಲ್ಲಿ ದೆವ್ವವಿದ್ದುದರಿಂದ ಅವನು ಕುರುಡನಾಗಿದ್ದನು ಮತ್ತು ಮೂಕನಾಗಿದ್ದನು. ಯೇಸು ಆ ಮನುಷ್ಯನನ್ನು ಗುಣಪಡಿಸಿದ್ದರಿಂದ ಮಾತನಾಡುವುದಕ್ಕೂ ನೋಡುವುದಕ್ಕೂ ಸಾಧ್ಯವಾಯಿತು. 23 ಜನರೆಲ್ಲರೂ ಬೆರಗಾದರು. “ದೇವರು ಕಳುಹಿಸಿಕೊಡುವುದಾಗಿ ನಮಗೆ ವಾಗ್ದಾನಮಾಡಿದ್ದ ದಾವೀದನ ಕುಮಾರನು ಈತನೇ (ಯೇಸು) ಆಗಿರಬಹುದು” ಎಂದು ಮಾತಾಡಿಕೊಂಡರು.

24 ಜನರು ಹೀಗೆ ಮಾತಾಡುತ್ತಿದ್ದುದನ್ನು ಕೇಳಿಸಿಕೊಂಡ ಫರಿಸಾಯರು, “ಯೇಸು ಬೆಲ್ಜೆಬೂಲನ ಶಕ್ತಿಯ ಮೂಲಕ ಜನರನ್ನು ದೆವ್ವಗಳಿಂದ ಬಿಡಿಸುತ್ತಾನೆ. ಬೆಲ್ಜೆಬೂಲನು ದೆವ್ವಗಳ ಅಧಿಪತಿ” ಎಂದರು.

25 ಫರಿಸಾಯರು ಆಲೋಚಿಸುತ್ತಿದ್ದ ಸಂಗತಿಗಳು ಯೇಸುವಿಗೆ ತಿಳಿದಿದ್ದವು. ಆದ್ದರಿಂದ ಯೇಸು ಅವರಿಗೆ, “ತನಗೆ ವಿರೋಧವಾಗಿ ತಾನೇ ಹೋರಾಡುವ ರಾಜ್ಯವು ನಾಶವಾಗುವುದು. ಅಂತಃಕಲಹದಿಂದ ಒಡೆದುಹೋಗಿರುವ ಪ್ರತಿಯೊಂದು ರಾಜ್ಯವು ಸ್ಥಿರವಾಗಿರುವುದಿಲ್ಲ. ಭೇದಭಾವ ಹೊಂದಿರುವ ಪ್ರತಿಯೊಂದು ಕುಟುಂಬವು ಅಭಿವೃದ್ಧಿಯಾಗುವುದಿಲ್ಲ. 26 ಹೀಗಿರಲು ಸೈತಾನನು ತನ್ನ ಸ್ವಂತ ದೆವ್ವಗಳನ್ನೇ ಹೊರಗೆ ಓಡಿಸಿದರೆ ಅವನು ತನ್ನಲ್ಲಿಯೇ ಒಡಕನ್ನು ಮಾಡಿದಂತಾಯಿತು. ಆಗ ಅವನು ಮತ್ತು ಅವನ ರಾಜ್ಯವು ಸ್ಥಿರವಾಗಿರಲು ಹೇಗೆ ಸಾಧ್ಯ? 27 ನಾನು ಸೈತಾನನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತೇನೆ ಎಂದು ನೀವು ಹೇಳುತ್ತೀರಿ. ಅದು ನಿಜವಾದರೆ, ನಿಮ್ಮ ಜನರು ಯಾವ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾರೆ? ಆದ್ದರಿಂದ ನಿಮ್ಮ ಸ್ವಂತ ಜನರೇ ನಿಮ್ಮನ್ನು ತಪ್ಪಿತಸ್ಥರೆಂದು ನಿರೂಪಿಸುತ್ತಾರೆ. 28 ಆದರೆ ನಾನು ದೇವರಾತ್ಮನ ಶಕ್ತಿಯ ಮೂಲಕ ದೆವ್ವಗಳನ್ನು ಬಿಡಿಸುತ್ತೇನೆ. ದೇವರ ರಾಜ್ಯವು ನಿಮ್ಮ ಬಳಿಗೆ ಬಂದಿದೆ ಎಂಬುದನ್ನು ಇದು ತೋರ್ಪಡಿಸುತ್ತದೆ. 29 ಒಬ್ಬ ವ್ಯಕ್ತಿಯು ಬಲಿಷ್ಠನೊಬ್ಬನ ಮನೆಗೆ ನುಗ್ಗಿ ಅವನ ಸ್ವತ್ತನ್ನು ಕದಿಯಬೇಕಿದ್ದರೆ, ಮೊದಲು ಅವನು ಆ ಬಲಿಷ್ಠನನ್ನು ಕಟ್ಟಿಹಾಕಬೇಕು. ಆಗ ಆ ಬಲಿಷ್ಠನ ಮನೆಯ ಸ್ವತ್ತನ್ನು ಕದಿಯಲು ಅವನಿಗೆ ಸಾಧ್ಯವಾಗುವುದು. 30 ನನ್ನೊಂದಿಗೆ ಇಲ್ಲದವನು ನನಗೆ ವಿರೋಧಿಯಾಗಿದ್ದಾನೆ. ನನ್ನೊಂದಿಗೆ ಶೇಖರಿಸದವನು ಚದರಿಸುವವನಾಗಿದ್ದಾನೆ.

31 “ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ಜನರು ಮಾಡುವ ಪ್ರತಿಯೊಂದು ಪಾಪಕ್ಕೂ ಹೇಳುವ ಪ್ರತಿಯೊಂದು ದೂಷಣೆ ಮಾತಿಗೂ ಕ್ಷಮಾಪಣೆ ಉಂಟು. ಆದರೆ ಪವಿತ್ರಾತ್ಮ ದೂಷಣೆಗೆ ಕ್ಷಮಾಪಣೆ ಇಲ್ಲವೇ ಇಲ್ಲ. 32 ಮನುಷ್ಯಕುಮಾರನಿಗೆ ವಿರೋಧವಾಗಿ ಮಾತನಾಡಿದರೂ ಅದಕ್ಕೆ ಕ್ಷಮಾಪಣೆ ಉಂಟು. ಆದರೆ ಪವಿತ್ರಾತ್ಮನಿಗೆ ವಿರೋಧವಾಗಿ ಮಾತನಾಡಿದರೆ ಅದಕ್ಕೆ ಕ್ಷಮಾಪಣೆಯು ಇಹದಲ್ಲಾಗಲಿ ಪರದಲ್ಲಾಗಲಿ ಇಲ್ಲವೇ ಇಲ್ಲ.

ನಿಮ್ಮ ನಿಜಸ್ಥಿತಿಗೆ ನಿಮ್ಮ ಕಾರ್ಯಗಳೇ ಸಾಕ್ಷಿ

(ಲೂಕ 6:43-45)

33 “ನಿಮಗೆ ಒಳ್ಳೆಯ ಫಲ ಬೇಕಾಗಿದ್ದರೆ ನೀವು ಒಳ್ಳೆಯ ಮರ ಹೊಂದಿರಬೇಕು. ನಿಮ್ಮ ಮರ ಒಳ್ಳೆಯದಾಗಿಲ್ಲದಿದ್ದರೆ ಅದು ಕೆಟ್ಟ ಫಲವನ್ನೇ ಬಿಡುವುದು. ಮರವನ್ನು ಅದರಲ್ಲಿ ಬಿಡುವ ಫಲದಿಂದಲೇ ತಿಳಿದುಕೊಳ್ಳಬಹುದು. 34 ನೀವು ಹಾವುಗಳು! ನೀವು ದುಷ್ಟರು! ಒಳ್ಳೆಯದನ್ನು ನೀವು ಹೇಗೆ ಹೇಳುವಿರಿ? ನಿಮ್ಮ ಹೃದಯದಲ್ಲಿ ತುಂಬಿರುವುದನ್ನೇ ನಿಮ್ಮ ಬಾಯಿ ಮಾತಾಡುತ್ತದೆ. 35 ಒಳ್ಳೆಯವನು ತನ್ನ ಹೃದಯದಲ್ಲಿ ಒಳ್ಳೆಯವುಗಳನ್ನು ಇಟ್ಟುಕೊಂಡಿರುತ್ತಾನೆ. ಆದ್ದರಿಂದ ಅವನು ತನ್ನ ಹೃದಯದಿಂದ ಬರುವ ಒಳ್ಳೆಯವುಗಳನ್ನೇ ಮಾತಾಡುತ್ತಾನೆ. ಆದರೆ ದುಷ್ಟನು ತನ್ನ ಹೃದಯದಲ್ಲಿ ಕೆಟ್ಟವುಗಳನ್ನು ಶೇಖರಿಸಿಕೊಂಡಿರುತ್ತಾನೆ. ಆದ್ದರಿಂದ ಅವನು ತನ್ನ ಹೃದಯದಿಂದ ಬರುವ ಕೆಟ್ಟವುಗಳನ್ನೇ ಮಾತಾಡುತ್ತಾನೆ. 36 ಜನರು ನಿರ್ಲಕ್ಷ್ಯಭಾವದಿಂದ ಆಡಿದ ಪ್ರತಿಯೊಂದು ಮಾತಿಗೂ ನ್ಯಾಯವಿಚಾರಣೆಯ ದಿನದಲ್ಲಿ ಉತ್ತರ ಕೊಡಬೇಕಾಗುವುದು. 37 ನಿಮ್ಮ ಮಾತುಗಳಿಂದಲೇ ನಿಮಗೆ ನೀತಿವಂತರೆಂದಾಗಲಿ ಅಪರಾಧಿಗಳೆಂದಾಗಲಿ ತೀರ್ಪು ನೀಡಲಾಗುವುದು” ಎಂದನು.

ಸೂಚಕಕಾರ್ಯಕ್ಕಾಗಿ ಯೆಹೂದ್ಯರ ಬೇಡಿಕೆ

(ಮಾರ್ಕ 8:11-12; ಲೂಕ 11:29-32)

38 ಆಗ ಕೆಲವು ಫರಿಸಾಯರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ಬೋಧಕನೇ, ನೀನು ಹೇಳಿದ್ದನ್ನು ನಿರೂಪಿಸುವುದಕ್ಕಾಗಿ ಒಂದು ಸೂಚಕಕಾರ್ಯವನ್ನು ಮಾಡು” ಎಂದು ಹೇಳಿದರು.

39 ಯೇಸು, “ದುಷ್ಟರು ಮತ್ತು ಪಾಪಿಗಳು ಸೂಚಕಕಾರ್ಯವನ್ನು ಅಪೇಕ್ಷಿಸುತ್ತಾರೆ. ಆದರೆ ಅವರಿಗೆ ಒಂದು ಸೂಚಕಕಾರ್ಯವನ್ನೂ ಗುರುತಿಗಾಗಿ ತೋರಿಸಲಾಗುವುದಿಲ್ಲ. 40 ಪ್ರವಾದಿಯಾದ ಯೋನನು ಮೂರು ದಿವಸ ಹಗಲಿರುಳು ಒಂದು ದೊಡ್ಡ ಮೀನಿನ ಹೊಟ್ಟೆಯಲ್ಲಿ ಹೇಗಿದ್ದನೋ ಅದೇ ರೀತಿಯಲ್ಲಿ ಮನುಷ್ಯಕುಮಾರನು ಸಮಾಧಿಯಲ್ಲಿ ಮೂರು ದಿನ ಹಗಲಿರುಳು ಇರುವನು. ಇದಲ್ಲದೆ ಬೇರೆ ಯಾವ ಸೂಚಕಕಾರ್ಯವನ್ನು ಅವರಿಗೆ ತೋರಿಸಲಾಗುವುದಿಲ್ಲ. 41 ನ್ಯಾಯವಿಚಾರಣೆಯ ದಿನದಂದು ನಿನೆವೆ ಪಟ್ಟಣದ ಜನರು ಇಂದು ಜೀವಿಸುತ್ತಿರುವ ನಿಮ್ಮೊಂದಿಗೆ ನಿಂತುಕೊಂಡು ನಿಮ್ಮನ್ನು ಅಪರಾಧಿಗಳೆಂದು ಘೋಷಿಸುವರು. ಏಕೆಂದರೆ ಯೋನನು ಬೋಧಿಸಿದಾಗ ಅವರು ತಮ್ಮ ಜೀವಿತವನ್ನು ಬದಲಾವಣೆ ಮಾಡಿಕೊಂಡರು. ಆದರೆ ನಾನು ನಿಮಗೆ ಹೇಳುವುದೇನೆಂದರೆ ನಾನು ಯೋನನಿಗಿಂತಲೂ ಹೆಚ್ಚಿನವನಾಗಿರುತ್ತೇನೆ.

42 “ನ್ಯಾಯತೀರ್ಪಿನ ದಿನದಂದು ದಕ್ಷಿಣ ದೇಶದ ರಾಣಿಯು ಇಂದು ಜೀವಿಸುತ್ತಿರುವ ನಿಮ್ಮೊಂದಿಗೆ ಎದ್ದುನಿಂತು ನಿಮ್ಮನ್ನು ತಪ್ಪಿತಸ್ಥರೆಂದು (ಅಪರಾಧಿಗಳು) ನಿರೂಪಿಸುವಳು. ಏಕೆಂದರೆ, ಆ ರಾಣಿಯು ಸೊಲೊಮೋನನ ಜ್ಞಾನದ ಬೋಧನೆಯನ್ನು ಕೇಳಲು ಬಹಳ ದೂರದಿಂದ ಬಂದಳು. ನಾನಾದರೋ ಸೊಲೊಮೋನನಿಗಿಂತಲೂ ಹೆಚ್ಚಿನವನಾಗಿದ್ದೇನೆ ಎಂದು ನಿಮಗೆ ಹೇಳುತ್ತೇನೆ.

ಇಂದಿನ ದುಷ್ಟಜನರ ಸ್ಥಿತಿ

(ಲೂಕ 11:24-26)

43 “ದುರಾತ್ಮವು ಮನುಷ್ಯನಿಂದ ಹೊರಗೆ ಬಂದಾಗ ವಿಶ್ರಾಂತಿಗಾಗಿ ಸ್ಥಳವನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ಪ್ರಯಾಣ ಮಾಡುತ್ತದೆ. ಆದರೆ ಆ ದುರಾತ್ಮಕ್ಕೆ ಬೇಕಾದ ವಿಶ್ರಾಂತಿ ಸ್ಥಳ ಸಿಕ್ಕುವುದಿಲ್ಲ. 44 ಆಗ ಅದು, ‘ನಾನು ಬಿಟ್ಟುಬಂದ ಮನೆಗೇ ಹಿಂತಿರುಗಿ ಹೋಗುತ್ತೇನೆ’ ಎಂದು ಅಂದುಕೊಳ್ಳುತ್ತದೆ. ಬಳಿಕ ಅದು ಅವನ ಬಳಿಗೆ ಮತ್ತೆ ಬಂದಾಗ ಆ ಮನೆಯು ಇನ್ನೂ ಬರಿದಾಗಿರುತ್ತದೆ. ಚೊಕ್ಕಟವಾಗಿ ಗುಡಿಸಿ ಅಲಂಕರಿಸಲ್ಪಟ್ಟಿರುತ್ತದೆ. 45 ಆಗ ಅದು ಹೊರಗೆ ಹೋಗಿ ತನಗಿಂತಲೂ ಹೆಚ್ಚು ದುಷ್ಟರಾದ ಏಳು ದುರಾತ್ಮಗಳನ್ನು ಕರೆದುಕೊಂಡು ಬರುತ್ತದೆ. ಆ ದುರಾತ್ಮಗಳೆಲ್ಲಾ ಆ ಮನುಷ್ಯನೊಳಗೆ ಸೇರಿಕೊಂಡು ವಾಸಮಾಡಲಾರಂಭಿಸುತ್ತವೆ. ಆಗ ಆ ಮನುಷ್ಯನಿಗೆ ಮೊದಲಿಗಿಂತಲೂ ಹೆಚ್ಚಿನ ಕಷ್ಟಗಳು ಉಂಟಾಗುತ್ತವೆ. ಈ ದಿನಗಳಲ್ಲಿ ಜೀವಿಸುವ ದುಷ್ಟ ಜನರಿಗೆ ಅದೇ ರೀತಿ ಆಗುವುದು” ಎಂದನು.

ಯೇಸುವಿನ ಶಿಷ್ಯರೇ ಆತನ ಕುಟುಂಬ

(ಮಾರ್ಕ 3:31-35; ಲೂಕ 8:19-21)

46 ಯೇಸುವು ಜನರೊಂದಿಗೆ ಮಾತಾಡುತ್ತಿರುವಾಗ, ಆತನ ತಾಯಿ ಮತ್ತು ಸಹೋದರರು ಬಂದು ಹೊರಗೆ ನಿಂತುಕೊಂಡರು. ಅವರು ಆತನೊಂದಿಗೆ ಮಾತಾಡಬೇಕೆಂದಿದ್ದರು. 47 ಒಬ್ಬನು ಯೇಸುವಿಗೆ, “ನಿನ್ನ ತಾಯಿ ಮತ್ತು ಸಹೋದರರು ನಿನಗಾಗಿ ಹೊರಗಡೆ ಕಾದಿದ್ದಾರೆ, ಅವರು ನಿನ್ನೊಂದಿಗೆ ಮಾತಾಡಬೇಕೆಂದಿದ್ದಾರೆ” ಎಂದನು.

48 ಯೇಸು, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎಂದು ಉತ್ತರಕೊಟ್ಟು, 49 ತನ್ನ ಶಿಷ್ಯರ ಕಡೆಗೆ ಕೈ ತೋರಿಸಿ, “ನೋಡಿ! ಇವರೇ ನನ್ನ ತಾಯಿ ಮತ್ತು ನನ್ನ ಸಹೋದರರು. 50 ಪರಲೋಕದಲ್ಲಿರುವ ನನ್ನ ತಂದೆ ಇಚ್ಛಿಸುವಂಥವುಗಳನ್ನು ಮಾಡುವವನೇ ನನ್ನ ನಿಜವಾದ ಸಹೋದರ, ಸಹೋದರಿ ಮತ್ತು ತಾಯಿ” ಎಂದು ಹೇಳಿದನು.

ನೆಹೆಮೀಯ 2

ನೆಹೆಮೀಯನನ್ನು ಅರ್ತಷಸ್ತನು ಜೆರುಸಲೇಮಿಗೆ ಕಳುಹಿಸಿದ್ದು

ಅರ್ತಷಸ್ತನ ಆಳ್ವಿಕೆಯ ಇಪ್ಪತ್ತನೆಯ ವರ್ಷದ ನಿಸ್ಸಾನ್ ತಿಂಗಳಲ್ಲಿ ರಾಜನಿಗೆ ದ್ರಾಕ್ಷಾರಸವನ್ನು ನಾನು ಕೊಟ್ಟೆನು. ನಾನೆಂದೂ ರಾಜನ ಮುಂದೆ ದುಃಖಿತನಾಗಿರಲಿಲ್ಲ. ಆದರೆ ಈ ಸಮಯದಲ್ಲಿ ನನ್ನ ಮುಖವು ಕಳೆಗುಂದಿದ್ದರಿಂದ, “ನೀನು ಕ್ಷೇಮವೋ?” ಎಂದು ಅರಸನು ವಿಚಾರಿಸಿದನು, “ನೀನು ದುಃಖಿತನಾಗಿರುವುದೇಕೆ? ನಿನ್ನ ಹೃದಯವು ವೇದನೆಯಿಂದ ತುಂಬಿರುವ ಹಾಗಿದೆಯಲ್ಲ?”

ಅರಸನ ಈ ಪ್ರಶ್ನೆಗೆ ನಾನು ಭಯಪಟ್ಟೆನು. ನಾನು ಭಯದಿಂದಲೇ, “ಅರಸನೇ ಚಿರಂಜೀವಿಯಾಗಿರು. ನನ್ನ ಪೂರ್ವಿಕರ ಸಮಾಧಿಗಳಿರುವ ಪಟ್ಟಣವು ಹಾಳುದಿಬ್ಬವಾಗಿರುವುದರಿಂದ ನಾನು ದುಃಖಿತನಾಗಿದ್ದೇನೆ; ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ” ಅಂದೆನು.

ಆಗ ಅರಸನು, “ನಾನು ನಿನಗೆ ಏನುಮಾಡಬೇಕೆಂದು ಅಪೇಕ್ಷಿಸುವೆ?” ಎಂದು ಕೇಳಿದಾಗ ಅವನಿಗೆ ಉತ್ತರಿಸುವ ಮೊದಲು ನಾನು ಪರಲೋಕದ ದೇವರಿಗೆ ಪ್ರಾರ್ಥಿಸಿದೆನು.

ಅನಂತರ ಅರಸನಿಗೆ, “ನಾನು ನಿನಗೆ ಮೆಚ್ಚಿಕೆಯಾಗಿದ್ದಲ್ಲಿ ಮತ್ತು ನಿನಗೆ ಈ ವಿಷಯ ಸರಿಕಂಡಲ್ಲಿ ದಯಮಾಡಿ ಯೆಹೂದ ಪ್ರಾಂತ್ಯದಲ್ಲಿ ನನ್ನ ಪೂರ್ವಿಕರ ಸಮಾಧಿಗಳಿರುವ ಜೆರುಸಲೇಮಿಗೆ ನನ್ನನ್ನು ಕಳುಹಿಸು. ನಾನು ಅಲ್ಲಿಗೆ ಹೋಗಿ ಜೆರುಸಲೇಮನ್ನು ಮತ್ತೆ ಕಟ್ಟಬೇಕು” ಎಂದೆನು.

ರಾಣಿಯು ರಾಜನ ಪಕ್ಕದಲ್ಲಿ ಕುಳಿತಿದ್ದಳು. ರಾಜನೂ ರಾಣಿಯೂ, “ನಿನಗೆ ಹೋಗಿ ಬರಲು ಎಷ್ಟು ಸಮಯ ಬೇಕಾಗುವುದು? ನೀನು ಹಿಂದಕ್ಕೆ ಯಾವಾಗ ಬರುವಿ?” ಎಂದು ವಿಚಾರಿಸಿದರು.

ನನ್ನನ್ನು ಕಳುಹಿಸಲು ರಾಜನಿಗೆ ಸಂತೋಷವಿದ್ದುದರಿಂದ ನಾನೊಂದು ಸಮಯವನ್ನು ಸೂಚಿಸಿದೆನು. ಆಮೇಲೆ “ರಾಜನೇ, ನನಗೆ ಸಹಾಯವನ್ನು ಮಾಡಲು ನೀನು ಇಚ್ಫಿಸುವುದಾದರೆ ಯೂಫ್ರೇಟೀಸ್ ನದಿಯ ಪಶ್ಚಿಮದ ಪ್ರಾಂತ್ಯದ ರಾಜ್ಯಪಾಲರಿಗೆ ಪತ್ರಗಳನ್ನು ಬರೆದುಕೊಟ್ಟರೆ ನಾನು ಯೆಹೂದಕ್ಕೆ ಅವರ ಪ್ರಾಂತ್ಯಗಳ ಮೂಲಕವಾಗಿ ಸುರಕ್ಷಿತವಾಗಿ ಹೋಗಲು ಸಾಧ್ಯವಾಗುವುದು. ಅಲ್ಲದೆ ಬಾಗಿಲುಗಳಿಗೆ, ಗೋಡೆಗಳಿಗೆ, ದೇವಾಲಯದ ಆವರಣದ ಗೋಡೆಗಳಿಗೆ ಮತ್ತು ನನ್ನ ಮನೆಗೆ ಮರದ ತೊಲೆಗಳು ಬೇಕಾಗಿವೆ. ಆದ್ದರಿಂದ ನಿಮ್ಮ ಅರಣ್ಯಗಳ ಮುಖ್ಯಾಧಿಕಾರಿಯಾದ ಆಸಾಫನಿಗೂ ಪತ್ರವನ್ನು ಕೊಡಬೇಕು” ಎಂದು ವಿನಂತಿಸಿದೆನು.

ಅರಸನು ಪತ್ರಗಳನ್ನು ಮತ್ತು ನಾನು ಕೇಳಿದ್ದೆಲ್ಲವನ್ನು ನನಗೆ ಕೊಟ್ಟನು. ದೇವರು ನನ್ನನ್ನು ಕರುಣಿಸಿರುವುದರಿಂದ ರಾಜನು ನನಗೆ ಹಾಗೆ ಮಾಡಿದನು.

ಯೂಫ್ರೇಟೀಸ್ ನದಿಯ ಪಶ್ಚಿಮದಲ್ಲಿರುವ ರಾಜ್ಯಪಾಲರಿಗೆ ಅರಸನು ಕೊಟ್ಟ ಪತ್ರವನ್ನು ಕೊಟ್ಟೆನು. ರಾಜನು ನನ್ನೊಂದಿಗೆ ಸಿಪಾಯಿಗಳನ್ನೂ ಸೈನ್ಯಾಧಿಪತಿಗಳನ್ನೂ ಅಶ್ವ ಸೈನಿಕರನ್ನೂ ಕಳುಹಿಸಿದ್ದನು. 10 ನಾನು ಏನು ಮಾಡುತ್ತಿದ್ದೇನೆಂದು ಸನ್ಬಲ್ಲಟ್ ಮತ್ತು ಟೋಬೀಯ ಎಂಬವರಿಬ್ಬರು ಕೇಳಿಸಿಕೊಂಡರು. ಇಸ್ರೇಲ್ ಜನರಿಗೆ ಸಹಾಯ ಮಾಡಲು ಬರುತ್ತಿದ್ದಾರೆಂಬ ವಿಷಯವು ಅವರನ್ನು ತಳಮಳಗೊಳಿಸಿತು ಮತ್ತು ಅವರಿಗೆ ಸಿಟ್ಟೂ ಬಂದಿತು. ಸನ್ಬಲ್ಲಟನು ಹೋರೋನಿನವನು ಮತ್ತು ಟೋಬೀಯನು ಅಮ್ಮೋನಿಯ ಅಧಿಕಾರಿಯಾಗಿದ್ದನು.

ನೆಹೆಮೀಯನಿಂದ ಜೆರುಸಲೇಮಿನ ಗೋಡೆಗಳ ಪರೀಕ್ಷೆ

11-12 ನಾನು ಜೆರುಸಲೇಮ್ ಸೇರಿದ ನಂತರ ಮೂರು ದಿವಸ ಅಲ್ಲಿಯೇ ಉಳಿದೆನು. ಜೆರುಸಲೇಮಿಗೋಸ್ಕರ ಮಾಡತಕ್ಕ ಕಾರ್ಯದ ಬಗ್ಗೆ ದೇವರು ನನ್ನಲ್ಲಿ ಯಾವ ಆಲೋಚನೆಯನ್ನು ಹುಟ್ಟಸಿದ್ದಾನೆಂದು ನಾನು ಯಾರಿಗೂ ತಿಳಿಸದೆ ನನ್ನೊಂದಿಗಿದ್ದ ಕೆಲವು ಜನರೊಂದಿಗೆ ರಾತ್ರಿಯಲ್ಲಿ ಹೊರಟೆನು. ನಾನು ಸವಾರಿಮಾಡಿಕೊಂಡು ಬಂದಿದ್ದ ಕುದುರೆಯೊಂದಲ್ಲದೆ ಬೇರೆ ಯಾವ ಕುದುರೆಯೂ ಅಲ್ಲಿರಲಿಲ್ಲ. 13 ಕತ್ತಲೆಯಲ್ಲಿಯೇ ಕಣಿವೆಯ ಬಾಗಿಲಿನ ಮೂಲಕ ಹೊರಟು ಕೆಡವಲ್ಪಟ್ಟಿದ್ದ ಜೆರುಸಲೇಮಿನ ಗೋಡೆಗಳನ್ನು, ಸುಟ್ಟುಹೋಗಿರುವ ಅದರ ಬಾಗಿಲುಗಳನ್ನು ನೋಡುತ್ತಾ ಹೆಬ್ಬಾವು ಬಾವಿಯ ಬಳಿಗೂ ತಿಪ್ಪೆಬಾಗಿಲಿನ ಬಳಿಗೂ ಸವಾರಿಮಾಡಿಕೊಂಡು ಬಂದೆನು. 14 ಅಲ್ಲಿಂದ ಬುಗ್ಗೆಬಾಗಿಲಿಗೂ ಅರಸನ ಕೊಳಕ್ಕೂ ಬಂದೆನು. ಇಲ್ಲಿಂದ ಮುಂದಕ್ಕೆ ಹೋಗಲು ನನ್ನ ಕುದುರೆಗೆ ಸಾಧ್ಯಾವಾಗಲಿಲ್ಲ; 15 ಆದ್ದರಿಂದ ನಾನು ರಾತ್ರಿಯಲ್ಲಿ ಹಳ್ಳದ ಮಾರ್ಗದಿಂದ ಹತ್ತುತ್ತಾ ಗೋಡೆಗಳನ್ನು ಪರೀಕ್ಷಿಸಿ ಕೊನೆಗೆ ಹಿಂದಿರುಗಿ ಕಣಿವೆ ಬಾಗಿಲ ಮೂಲಕ ಮನೆ ಸೇರಿದೆನು. 16 ಇಸ್ರೇಲಿನ ನಾಯಕರಿಗೂ ಅಧಿಕಾರಿಗಳಿಗೂ ನಾನು ಎಲ್ಲಿಗೆ ಹೋದೆನೆಂದು ತಿಳಿದಿರಲಿಲ್ಲ; ನಾನು ಏನು ಮಾಡುತ್ತಿದ್ದೇನೆಂದೂ ಅವರಿಗೆ ಗೊತ್ತಿರಲಿಲ್ಲ. ಯೆಹೂದ್ಯರಿಗಾಗಲಿ ಅಧಿಕಾರಿಗಳಿಗಾಗಲಿ ರಾಜನಿಂದ ನೇಮಕಗೊಂಡ ಕೆಲಸವರ್ಗದವರಿಗಾಗಲಿ ನಾನು ಇನ್ನೂ ಯಾವ ವಿಷಯವನ್ನೂ ಹೇಳಿರಲಿಲ್ಲ.

17 ಆಮೇಲೆ ನಾನು ಎಲ್ಲಾ ಜನರಿಗೆ, “ನಮ್ಮ ದುರವಸ್ಥೆಯನ್ನು ನೀವು ನೋಡುತ್ತಿದ್ದೀರಿ. ಜೆರುಸಲೇಮ್ ಒಂದು ಹಾಳು ದಿಬ್ಬವಾಗಿದೆ; ಅದರ ಬಾಗಿಲುಗಳು ಸುಟ್ಟು ಬೂದಿಯಾಗಿವೆ. ಬನ್ನಿರಿ, ನಾವು ಜೆರುಸಲೇಮಿನ ಪೌಳಿಗೋಡೆಗಳನ್ನು ತಿರುಗಿ ಕಟ್ಟೋಣ. ಆಗ ನಾವು ಇನ್ನೆಂದಿಗೂ ನಾಚಿಕೆಗೆ ಗುರಿಯಾಗುವುದಿಲ್ಲ” ಎಂದು ಹೇಳಿದೆನು.

18 ನಾನು ಅವರಿಗೆ ದೇವರು ನನಗೆ ಕರುಣೆಯನ್ನು ತೋರಿಸಿದ್ದನ್ನು ಮತ್ತು ರಾಜನು ಹೇಳಿದ ವಿಷಯಗಳನ್ನು ತಿಳಿಸಿದೆನು. ಆಗ ಅವರು, “ನಾವು ಈಗಲೇ ಕೆಲಸ ಪ್ರಾರಂಭಿಸೋಣ” ಎಂದು ಹೇಳಿದರು. ಹೀಗೆ ನಾವು ಈ ಒಳ್ಳೆಯ ಕಾರ್ಯವನ್ನು ಪ್ರಾರಂಭಿಸಿದೆವು. 19 ಆದರೆ ಹೋರೋಬಿನ ಸನ್ಬಲ್ಲಟನು, ಅಮ್ಮೋನಿಯ ಅಧಿಕಾರಿಯಾದ ಟೋಬೀಯ ಮತ್ತು ಅರಬಿಯವನಾದ ಗೆಷೆಮ್ ಇವರುಗಳು ನಾವು ಪೌಳಿ ಗೋಡೆಯನ್ನು ಕಟ್ಟುತ್ತೇವೆಂಬ ಸುದ್ಧಿಯನ್ನು ಕೇಳಿ ಅಸಹ್ಯವಾಗಿ ಗೇಲಿಮಾಡಿ, “ನೀವು ಮಾಡುತ್ತಿರುವುದೇನು? ರಾಜನಿಗೆ ವಿರುದ್ಧವಾಗಿ ದಂಗೆ ಏಳುತ್ತಿರುವಿರೋ?” ಎಂದು ಕೇಳಿದರು.

20 ನಾನು ಅವರಿಗೆ, “ಪರಲೋಕದ ದೇವರು ನಮ್ಮ ಕಾರ್ಯವನ್ನು ಸಫಲಪಡಿಸುವನು. ನಾವು ಆತನ ಸೇವಕರು ಮತ್ತು ನಾವು ಈ ಪಟ್ಟಣವನ್ನು ತಿರಿಗಿ ಕಟ್ಟುತ್ತೇವೆ. ನೀವು ನಮ್ಮ ಸಹಾಯಕ್ಕಾಗಿ ಬರುವುದು ಬೇಡ. ನಿಮ್ಮಲ್ಲಿ ಯಾರ ಕುಟುಂಬಗಳವರೂ ಈ ಜೆರುಸಲೇಮಿನಲ್ಲಿ ವಾಸಿಸಲಿಲ್ಲ ಮತ್ತು ಈ ಪ್ರಾಂತ್ಯದಲ್ಲಿ ನಿಮಗೆ ಸ್ವಂತ ಭೂಮಿಯೂ ಇಲ್ಲ. ಆದ್ದರಿಂದ ನಿಮಗೆ ಈ ಪ್ರಾಂತ್ಯದಲ್ಲಿ ಯಾವ ಹಕ್ಕೂ ಇಲ್ಲ” ಎಂದು ಹೇಳಿದೆನು.

ಅಪೊಸ್ತಲರ ಕಾರ್ಯಗಳು 12

ಹೆರೋದ ಅಗ್ರಿಪ್ಪನಿಂದ ಸಭೆಗೆ ಹಿಂಸೆ

12 ಆ ಕಾಲದಲ್ಲಿ ರಾಜ ಹೆರೋದನು ಸಭೆಯವರಲ್ಲಿ ಕೆಲವರನ್ನು ಹಿಂಸಿಸತೊಡಗಿ, ಯಾಕೋಬನನ್ನು ಕತ್ತಿಯಿಂದ ಕೊಲ್ಲಿಸಿದನು. ಯಾಕೋಬನು ಯೋಹಾನನ ಅಣ್ಣ. ಯೆಹೂದ್ಯರು ಇದನ್ನು ಮೆಚ್ಚಿಕೊಂಡರೆಂಬುದು ಹೆರೋದನಿಗೆ ತಿಳಿಯಿತು. ಆದ್ದರಿಂದ ಅವನು ಪೇತ್ರನನ್ನು ಬಂಧಿಸಿ (ಇದು ನಡೆದದ್ದು ಯೆಹೂದ್ಯರ ಪಸ್ಕಹಬ್ಬದ ಕಾಲದಲ್ಲಿ) ಸೆರೆಮನೆಗೆ ಹಾಕಿಸಿದನು. ಹದಿನಾರು ಮಂದಿ ಸಿಪಾಯಿಗಳು ಪೇತ್ರನನ್ನು ಕಾಯುತ್ತಿದ್ದರು. ಪಸ್ಕಹಬ್ಬದ ಕಾಲ ಮುಗಿದೊಡನೆ ಪೇತ್ರನನ್ನು ಜನರ ಮುಂದೆ ನಿಲ್ಲಿಸಬೇಕೆಂದಿದ್ದನು. ಹೀಗೆ ಪೇತ್ರನು ಸೆರೆಮನೆಯಲ್ಲಿದ್ದಾಗ ಸಭೆಯವರು ಅವನಿಗಾಗಿ ಎಡಬಿಡದೆ ದೇವರಲ್ಲಿ ಪ್ರಾರ್ಥಿಸುತ್ತಿದ್ದರು.

ಪೇತ್ರನಿಗೆ ಸೆರೆಮನೆಯಿಂದ ಬಿಡುಗಡೆ

ಪೇತ್ರನು ಇಬ್ಬರು ಸೈನಿಕರ ಮಧ್ಯೆ ನಿದ್ರೆಮಾಡುತ್ತಿದ್ದನು. ಅವನನ್ನು ಎರಡು ಸರಪಣಿಗಳಿಂದ ಕಟ್ಟಲಾಗಿತ್ತು. ಅನೇಕ ಸೈನಿಕರು ಸೆರೆಮನೆಯ ಬಾಗಿಲನ್ನು ಕಾಯುತ್ತಿದ್ದರು. ಆಗ ರಾತ್ರಿಯಾಗಿತ್ತು. ಮರುದಿನ ಪೇತ್ರನನ್ನು ಜನರ ಮುಂದೆ ತರಬೇಕೆಂದು ಹೆರೋದನು ಯೋಚಿಸಿಕೊಂಡಿದ್ದನು. ಇದ್ದಕ್ಕಿದ್ದಂತೆ, ಪ್ರಭುವಿನ ದೂತನೊಬ್ಬನು ಅಲ್ಲಿ ನಿಂತುಕೊಂಡನು. ಬೆಳಕು ಕೋಣೆಯಲ್ಲಿ ಪ್ರಕಾಶಿಸಿತು. ದೇವದೂತನು ಪೇತ್ರನ ಪಕ್ಕೆಯನ್ನು ಮುಟ್ಟಿ ಅವನನ್ನು ಎಬ್ಬಿಸಿ, “ಬೇಗನೆ ಎದ್ದೇಳು!” ಎಂದನು. ಆ ಕೂಡಲೆ ಸರಪಣಿಗಳು ಪೇತ್ರನ ಕೈಗಳಿಂದ ಕಳಚಿಬಿದ್ದವು. ದೇವದೂತನು ಪೇತ್ರನಿಗೆ, “ಬಟ್ಟೆ ಧರಿಸಿಕೊ, ಪಾದರಕ್ಷೆಗಳನ್ನು ಮೆಟ್ಟಿಕೊ” ಎಂದು ಹೇಳಿದನು. ಅಂತೆಯೇ ಪೇತ್ರನು ಮಾಡಿದನು. ಬಳಿಕ ದೇವದೂತನು, “ನಿನ್ನ ಮೇಲಂಗಿಯನ್ನು ಧರಿಸಿಕೊಂಡು ನನ್ನನ್ನು ಹಿಂಬಾಲಿಸು” ಎಂದನು.

ದೇವದೂತನು ಹೊರಗೆ ಹೋದನು. ಪೇತ್ರನು ಅವನನ್ನು ಹಿಂಬಾಲಿಸಿದನು. ದೇವದೂತನು ನಿಜವಾಗಿಯೂ ಹೀಗೆ ಮಾಡುತ್ತಿದ್ದಾನೆಂಬುದು ಪೇತ್ರನಿಗೆ ತಿಳಿದಿರಲಿಲ್ಲ. ತಾನು ಕನಸು ಕಾಣುತ್ತಿರಬಹುದೆಂದು ಅವನು ಯೋಚಿಸಿಕೊಂಡನು. 10 ಪೇತ್ರನು ಮತ್ತು ದೇವದೂತನು ಮೊದಲನೆಯ ಮತ್ತು ಎರಡನೆಯ ಕಾವಲನ್ನು ದಾಟಿಹೋದರು. ಬಳಿಕ ಅವರು ತಮ್ಮನ್ನು ಪಟ್ಟಣದತ್ತ ನಡೆಸುವ ಕಬ್ಬಿಣದ ಬಾಗಿಲಿಗೆ ಬಂದರು. ಆ ಬಾಗಿಲು ಅವರಿಗಾಗಿ ತನ್ನಷ್ಟಕ್ಕೆ ತಾನೇ ತೆರೆದುಕೊಂಡಿತು. ಪೇತ್ರ ಮತ್ತು ಆ ದೇವದೂತನು ಬಾಗಿಲ ಮೂಲಕ ಹೊರಗೆ ಬಂದು ಒಂದು ಬೀದಿಯನ್ನು ದಾಟಿದರು. ಆಗ ಇದ್ದಕ್ಕಿದ್ದಂತೆ ಆ ದೇವದೂತನು ಅವನನ್ನು ಬಿಟ್ಟುಹೋದನು.

11 ನಡೆದ ಸಂಗತಿಯನ್ನು ಆಗ ಅರಿತುಕೊಂಡ ಪೇತ್ರನು, “ಪ್ರಭುವು ನನ್ನ ಬಳಿಗೆ ತನ್ನ ದೇವದೂತನನ್ನು ನಿಜವಾಗಿಯೂ ಕಳುಹಿಸಿದನೆಂದು ಈಗ ನನಗೆ ತಿಳಿಯಿತು. ಆತನು ನನ್ನನ್ನು ಹೆರೋದನ ಕೈಯಿಂದ ಪಾರುಮಾಡಿದನು. ನನಗೆ ಕೇಡು ಸಂಭವಿಸುತ್ತದೆಯೆಂದು ಯೆಹೂದ್ಯರು ಯೋಚಿಸಿಕೊಂಡಿದ್ದರು. ಆದರೆ ಪ್ರಭುವು ನನ್ನನ್ನು ಆ ಕೇಡಿನಿಂದ ರಕ್ಷಿಸಿದನು” ಎಂದುಕೊಂಡನು.

12 ಬಳಿಕ ಪೇತ್ರನು ಮರಿಯಳ ಮನೆಗೆ ಹೋದನು. ಆಕೆಯು ಯೋಹಾನನ ತಾಯಿ. (ಯೋಹಾನನನ್ನು ಮಾರ್ಕನೆಂದು ಕರೆಯುತ್ತಿದ್ದರು.) ಅನೇಕ ಜನರು ಅಲ್ಲಿ ಸೇರಿದ್ದರು. ಅವರೆಲ್ಲರೂ ಪ್ರಾರ್ಥಿಸುತ್ತಿದ್ದರು. 13 ಪೇತ್ರನು ಹೊರ ಬಾಗಲನ್ನು ತಟ್ಟಿದನು. ಯಾರೆಂದು ವಿಚಾರಿಸುವುದಕ್ಕಾಗಿ ರೋದೆ ಎಂಬ ಸೇವಕಿ ಬಂದಳು. 14 ರೋದೆಯು ಪೇತ್ರನ ಧ್ವನಿಯನ್ನು ಗುರುತಿಸಿದಳು. ಆಕೆಗೆ ತುಂಬಾ ಸಂತೋಷವಾಯಿತು. ಬಾಗಿಲು ತೆರೆಯುವುದನ್ನು ಆಕೆ ಮರೆತು, ನೆರೆದು ಬಂದಿದ್ದ ಜನರ ಬಳಿಗೆ ಓಡಿಹೋಗಿ, “ಪೇತ್ರನು ಬಾಗಿಲ ಬಳಿ ನಿಂತಿದ್ದಾನೆ!” ಎಂದು ಹೇಳಿದಳು. 15 ಆ ವಿಶ್ವಾಸಿಗಳು ಆಕೆಗೆ, “ನಿನಗೆ ಹುಚ್ಚು ಹಿಡಿದಿದೆ!” ಎಂದರು. ಆದರೆ ಅವಳು ತಾನು ಹೇಳುತ್ತಿರುವುದು ನಿಜವೆಂದು ಒತ್ತಿಹೇಳಿದಳು. ಆದ್ದರಿಂದ ಅವರು, “ಅವನು ಪೇತ್ರನ ದೂತನಿರಬೇಕು” ಎಂದು ಹೇಳಿದರು.

16 ಆದರೆ ಪೇತ್ರನು ಬಾಗಿಲನ್ನು ತಟ್ಟುತ್ತಲೇ ಇದ್ದನು. ಆ ವಿಶ್ವಾಸಿಗಳು ಬಾಗಿಲನ್ನು ತೆರೆದಾಗ ಅವರು ಪೇತ್ರನನ್ನು ಕಂಡು ವಿಸ್ಮಿತರಾದರು. 17 ಪೇತ್ರನು ಅವರಿಗೆ ಸುಮ್ಮನಿರಬೇಕೆಂದು ಸನ್ನೆ ಮಾಡಿದನು. ಪ್ರಭುವು ತನ್ನನ್ನು ಸೆರೆಮನೆಯಿಂದ ಬಿಡಿಸಿದ ರೀತಿಯನ್ನು ಅವನು ಅವರಿಗೆ ವಿವರಿಸಿ, “ಯಾಕೋಬನಿಗೂ ಮತ್ತು ಸಹೋದರರಿಗೂ ಈ ಸಂಗತಿಯನ್ನು ತಿಳಿಸಿರಿ” ಎಂದು ಹೇಳಿದನು. ಬಳಿಕ ಪೇತ್ರನು ಬೇರೊಂದು ಸ್ಥಳಕ್ಕೆ ಅಲ್ಲಿಂದ ಹೊರಟುಹೋದನು.

18 ಮರುದಿನ, ಪೇತ್ರನು ಏನಾದನೆಂದು ಸೈನಿಕರ ನಡುವೆ ದೊಡ್ಡ ಗೊಂದಲವೇ ಎದ್ದಿತು. 19 ಹೆರೋದನು ಎಲ್ಲೆಲ್ಲಿ ಹುಡುಕಿದರೂ ಪೇತ್ರನನ್ನು ಕಂಡುಹಿಡಿಯಲಾಗಲಿಲ್ಲ. ಆದ್ದರಿಂದ ಹೆರೋದನು ಕಾವಲುಗಾರರನ್ನು ವಿಚಾರಿಸಿ ಅವರಿಗೇ ಮರಣದಂಡನೆ ವಿಧಿಸಿದನು.

ಹೆರೋದ ಅಗ್ರಿಪ್ಪನ ಮರಣ

ತರುವಾಯ ಹೆರೋದನು ಜುದೇಯದಿಂದ ಹೊರಟು ಸೆಜರೇಯ ಪಟ್ಟಣಕ್ಕೆ ಬಂದು ಅಲ್ಲೇ ಸ್ವಲ್ಪಕಾಲ ನೆಲೆಸಿದ್ದನು. 20 ಟೈರ್ ಮತ್ತು ಸಿದೋನ್ ಪಟ್ಟಣಗಳ ಜನರ ಮೇಲೆ ಹೆರೋದನು ಬಹು ಕೋಪಗೊಂಡಿದ್ದನು. ಆ ಜನರೆಲ್ಲರೂ ಹೆರೋದನನ್ನು ಭೇಟಿಯಾಗಲು ಒಟ್ಟಾಗಿ ಹೋದರು. ಅವರು ಬ್ಲಾಸ್ತನನ್ನು ತಮ್ಮ ಕಡೆಗೆ ಒಲಿಸಿಕೊಂಡರು. ಬ್ಲಾಸ್ತನು ರಾಜನ ವೈಯಕ್ತಿಕ ಸೇವಕನಾಗಿದ್ದನು. ಆ ಜನರು ತಮ್ಮೊಂದಿಗೆ ಶಾಂತಿಸಂಧಾನ ಮಾಡಿಕೊಳ್ಳಬೇಕೆಂದು ಹೆರೋದನನ್ನು ಕೇಳಿಕೊಂಡರು. ಯಾಕೆಂದರೆ ಅವರ ನಾಡಿಗೆ ಹೆರೋದನ ನಾಡಿನಿಂದ ಆಹಾರವನ್ನು ತರಿಸಿಕೊಳ್ಳಬೇಕಾಗಿತ್ತು.

21 ಅವರನ್ನು ಸಂಧಿಸುವುದಕ್ಕಾಗಿ ಹೆರೋದನು ದಿನವೊಂದನ್ನು ಗೊತ್ತುಮಾಡಿದನು. ಅಂದು ಹೆರೋದನು ಸುಂದರವಾದ ರಾಜವಸ್ತ್ರವನ್ನು ಧರಿಸಿಕೊಂಡಿದ್ದನು. ಅವನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ಜನರಿಗೆ ಭಾಷಣ ಮಾಡಿದನು. 22 ಆ ಜನರು, “ಈ ಧ್ವನಿಯು ಮನುಷ್ಯನದಲ್ಲ, ದೇವರದೇ!” ಎಂದು ಕೂಗಿದರು. 23 ಹೆರೋದನು ಈ ಹೊಗಳಿಕೆಯನ್ನು ತಾನೇ ಸ್ವೀಕರಿಸಿಕೊಂಡನು. ದೇವರನ್ನು ಮಹಿಮೆಪಡಿಸಲಿಲ್ಲ. ಆದ್ದರಿಂದ ಆ ಕ್ಷಣವೇ, ಪ್ರಭುವಿನ ದೂತನೊಬ್ಬನು ಅವನಿಗೆ ಕಾಯಿಲೆಯನ್ನು ಬರಮಾಡಿದನು. ಅವನ ದೇಹದ ಒಳಭಾಗವನ್ನು ಹುಳಗಳು ತಿಂದುಹಾಕಿದ್ದರಿಂದ ಅವನು ಸತ್ತುಹೋದನು.

24 ದೇವರ ಸಂದೇಶವು ಹಬ್ಬುತ್ತಿತ್ತು ಮತ್ತು ಹೆಚ್ಚುಹೆಚ್ಚು ಜನರ ಮೇಲೆ ಪ್ರಭಾವ ಬೀರುತ್ತಿತ್ತು. ಇದರಿಂದ ವಿಶ್ವಾಸಿಗಳ ಸಮುದಾಯವು ದೊಡ್ಡದಾಗತೊಡಗಿತು.

25 ಬಾರ್ನಬ ಮತ್ತು ಸೌಲರು ಜೆರುಸಲೇಮಿನಲ್ಲಿ ತಮ್ಮ ಕಾರ್ಯವನ್ನು ಮುಗಿಸಿದ ಮೇಲೆ ಅಂತಿಯೋಕ್ಯಕ್ಕೆ ಹಿಂತಿರುಗಿದರು. ಮಾರ್ಕನೆಂಬ ಯೋಹಾನನು ಅವರೊಂದಿಗಿದ್ದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International