M’Cheyne Bible Reading Plan
ದೇವರು ಅಬ್ರಾಮನನ್ನು ಕರೆದದ್ದು
12 ಯೆಹೋವನು ಅಬ್ರಾಮನಿಗೆ,
“ನಿನ್ನ ದೇಶವನ್ನೂ ನಿನ್ನ ಜನರನ್ನೂ ಬಿಟ್ಟು ಹೊರಡು.
ನಿನ್ನ ತಂದೆಯ ಕುಟುಂಬವನ್ನು ಬಿಟ್ಟು
ನಾನು ತೋರಿಸುವ ದೇಶಕ್ಕೆ ಹೋಗು.
2 ನಾನು ನಿನ್ನನ್ನು ಆಶೀರ್ವದಿಸುವೆನು;
ನಿನ್ನನ್ನು ದೊಡ್ಡ ಜನಾಂಗವನ್ನಾಗಿ ಮಾಡಿ
ನಿನ್ನ ಹೆಸರನ್ನು ಪ್ರಖ್ಯಾತಿಪಡಿಸುವೆನು;
ನೀನು ಆಶೀರ್ವಾದದಾಯಕನಾಗುವಂತೆ[a] ಮಾಡುವೆನು.
3 ನಿನಗೆ ಒಳ್ಳೆಯದನ್ನು ಮಾಡುವವರನ್ನು ಆಶೀರ್ವದಿಸುವೆನು;
ನಿನಗೆ ಕೇಡುಮಾಡುವವರನ್ನು ಶಿಕ್ಷಿಸುವೆನು.
ನಿನ್ನ ನಿಮಿತ್ತವಾಗಿ ಲೋಕದವರೆಲ್ಲರೂ
ಆಶೀರ್ವಾದ ಹೊಂದುವರು” ಎಂದು ಹೇಳಿದನು.
ಕಾನಾನಿಗೆ ಅಬ್ರಾಮನ ಪ್ರಯಾಣ
4 ಆದ್ದರಿಂದ ಅಬ್ರಾಮನು ಯೆಹೋವನಿಗೆ ವಿಧೇಯನಾದನು. ಅವನು ಹಾರಾನ್ ಪಟ್ಟಣವನ್ನು ಬಿಟ್ಟು ಹೊರಟನು. ಅವನೊಡನೆ ಲೋಟನು ಸಹ ಹೋದನು. ಆಗ ಅಬ್ರಾಮನಿಗೆ ಎಪ್ಪತ್ತೈದು ವರ್ಷ ವಯಸ್ಸಾಗಿತ್ತು. 5 ಅಬ್ರಾಮನು ಹಾರಾನ್ ಪಟ್ಟಣವನ್ನು ಬಿಟ್ಟು ಒಬ್ಬಂಟಿಗನಾಗಿ ಹೋಗಲಿಲ್ಲ. ಅಬ್ರಾಮನು ತನ್ನ ಹೆಂಡತಿಯಾದ ಸಾರಯಳನ್ನೂ ತನ್ನ ತಮ್ಮನ ಮಗನಾದ ಲೋಟನನ್ನೂ ತನ್ನೊಂದಿಗೆ ಕರೆದುಕೊಂಡು ಹೋದನು. ಹಾರಾನ್ ಪಟ್ಟಣದಲ್ಲಿ ತಮಗಿದ್ದ ಸ್ವತ್ತುಗಳನ್ನೆಲ್ಲ ಅವರು ತೆಗೆದುಕೊಂಡು ಹೋದರು. ಅಬ್ರಾಮನು ಹಾರಾನ್ ಪಟ್ಟಣದಲ್ಲಿ ಹೊಂದಿದ್ದ ಸೇವಕರು ಸಹ ಅವನೊಡನೆ ಹೋದರು. ಅಬ್ರಾಮನು ಮತ್ತು ಅವನ ಸಂಗಡಿಗರು ಹಾರಾನ್ ಪಟ್ಟಣವನ್ನು ಬಿಟ್ಟು ಕಾನಾನ್ ದೇಶಕ್ಕೆ ಪ್ರಯಾಣಮಾಡಿದರು. 6 ಅಬ್ರಾಮನು ಕಾನಾನ್ ದೇಶದಲ್ಲಿ ಪ್ರಯಾಣವನ್ನು ಮುಂದುವರಿಸಿದನು. ಅವನು ಶೆಕೆಮ್ ನಗರವನ್ನು ತಲುಪಿ, ಅಲ್ಲಿಂದ ಮೋರೆ ಎಂಬ ದೊಡ್ಡ ಓಕ್ ಮರವಿದ್ದ ಸ್ಥಳಕ್ಕೆ ಬಂದನು. ಆ ಕಾಲದಲ್ಲಿ ಕಾನಾನ್ಯರು ಆ ದೇಶದಲ್ಲಿ ವಾಸವಾಗಿದ್ದರು.
7 ಯೆಹೋವನು ಅಬ್ರಾಮನಿಗೆ ಕಾಣಿಸಿಕೊಂಡು, “ನಿನ್ನ ಸಂತತಿಯವರಿಗೆ ಈ ದೇಶವನ್ನು ಕೊಡುವೆನು” ಎಂದು ಹೇಳಿದನು.
ಆ ಸ್ಥಳದಲ್ಲಿ ಯೆಹೋವನು ಅಬ್ರಾಮನಿಗೆ ಕಾಣಿಸಿಕೊಂಡನು. ಆದ್ದರಿಂದ ಅಬ್ರಾಮನು ಯೆಹೋವನನ್ನು ಆರಾಧಿಸುವುದಕ್ಕಾಗಿ ಅಲ್ಲಿ ಒಂದು ಯಜ್ಞವೇದಿಕೆಯನ್ನು ಕಟ್ಟಿದನು. 8 ಆಮೇಲೆ ಅಬ್ರಾಮನು ಆ ಸ್ಥಳದಿಂದ ಹೊರಟು ಬೇತೇಲಿಗೆ ಪೂರ್ವದಲ್ಲಿರುವ ಗುಡ್ಡಗಳ ಬಳಿಗೆ ಪ್ರಯಾಣ ಮಾಡಿದನು. ಅಲ್ಲಿ ಅಬ್ರಾಮನು ತನ್ನ ಗುಡಾರಗಳನ್ನು ಹಾಕಿದನು. ಪಶ್ಚಿಮಕ್ಕೆ ಬೇತೇಲ್ ಪಟ್ಟಣವಿತ್ತು, ಪೂರ್ವಕ್ಕೆ ಆಯಿ ಪಟ್ಟಣವಿತ್ತು. ಆ ಸ್ಥಳದಲ್ಲಿ ಅವನು ಯೆಹೋವನಿಗೋಸ್ಕರ ಒಂದು ಯಜ್ಞವೇದಿಕೆಯನ್ನು ಕಟ್ಟಿ ಅಲ್ಲಿ ಅವನು ಯೆಹೋವನನ್ನು ಆರಾಧಿಸಿದನು. 9 ತರುವಾಯ ಅವನು ಮತ್ತೆ ಪ್ರಯಾಣವನ್ನು ಮುಂದುವರಿಸಿ ನೆಗೆವ್ ಸ್ಥಳದ ಕಡೆಗೆ ಹೋದನು.
ಈಜಿಪ್ಟಿನಲ್ಲಿ ಅಬ್ರಾಮ
10 ಈ ಕಾಲದಲ್ಲಿ ಭೂಮಿಯು ಒಣಗಿಹೋಗಿತ್ತು; ಮಳೆ ಇರಲಿಲ್ಲ. ಅಲ್ಲಿ ಆಹಾರವನ್ನು ಬೆಳೆಯಲು ಸಾಧ್ಯವಿರಲಿಲ್ಲ. ಆದ್ದರಿಂದ ಅಬ್ರಾಮನು ವಾಸಿಸುವುದಕ್ಕಾಗಿ ಈಜಿಪ್ಟಿಗೆ ಹೋದನು. 11 ತನ್ನ ಹೆಂಡತಿ ಸಾರಯಳು ರೂಪವತಿಯಾಗಿರುವುದು ಅಬ್ರಾಮನಿಗೆ ತಿಳಿದಿತ್ತು. ಆದ್ದರಿಂದ ಈಜಿಪ್ಟಿಗೆ ಹೋಗುವ ಮೊದಲೇ, ಅಬ್ರಾಮನು ಸಾರಯಳಿಗೆ, “ನೀನು ರೂಪವತಿಯೆಂದು ನನಗೆ ಗೊತ್ತಿದೆ. 12 ಈಜಿಪ್ಟಿನ ಗಂಡಸರು ನಿನ್ನನ್ನು ನೋಡಿ, ‘ಈಕೆ ಇವನ ಹೆಂಡತಿ’ ಎಂದು ತಿಳಿದು ನಿನ್ನನ್ನು ಪಡೆದುಕೊಳ್ಳುವುದಕ್ಕಾಗಿ ನನ್ನನ್ನು ಕೊಂದು ನಿನ್ನನ್ನು ಜೀವಂತವಾಗಿ ಉಳಿಸುವರು. 13 ಆದ್ದರಿಂದ ನೀನು ನನಗೆ ತಂಗಿಯಾಗಬೇಕೆಂದು ಜನರಿಗೆ ಹೇಳು. ಆಗ ಅವರು ನನ್ನನ್ನು ನಿನ್ನ ಸಹೋದರನೆಂದು ಭಾವಿಸಿ ನನ್ನನ್ನು ಕೊಲ್ಲದೆ ನನಗೆ ದಯೆತೋರುವರು. ಹೀಗೆ ನೀನು ನನ್ನ ಪ್ರಾಣ ಉಳಿಸುವೆ” ಎಂದು ಹೇಳಿದನು.
14 ಅಂತೆಯೇ ಅಬ್ರಾಮನು ಈಜಿಪ್ಟಿಗೆ ಹೋದನು. ಈಜಿಪ್ಟಿನ ಗಂಡಸರು ಸಾರಯಳನ್ನು ಕಂಡು ಈಕೆ ತುಂಬ ರೂಪವತಿ ಎಂದರು. 15 ಈಜಿಪ್ಟಿನ ಕೆಲವು ನಾಯಕರು ಸಹ ಆಕೆಯನ್ನು ಕಂಡರು. ಅವರು ಫರೋಹನ ಬಳಿಗೆ ಹೋಗಿ ಆಕೆಯ ಅಮೋಘ ಸೌಂದರ್ಯವನ್ನು ತಿಳಿಸಿದರು. ಬಳಿಕ ಆ ನಾಯಕರು ಸಾರಯಳನ್ನು ಫರೋಹನ ಬಳಿಗೆ ಕರೆದೊಯ್ದರು. 16 ಅಬ್ರಾಮನು ಸಾರಯಳ ಸಹೋದರನೆಂದು ಭಾವಿಸಿ ಫರೋಹನು ಅಬ್ರಾಮನಿಗೆ ದಯೆತೋರಿದನು. ಫರೋಹನು ಅಬ್ರಾಮನಿಗೆ ದನಕುರಿಗಳನ್ನೂ ಕತ್ತೆಗಳನ್ನೂ ಕೊಟ್ಟನು. ಅಲ್ಲದೆ ಅಬ್ರಾಮನಿಗೆ ದಾಸದಾಸಿಯರನ್ನೂ ಒಂಟೆಗಳನ್ನೂ ಕೊಟ್ಟನು.
17 ಫರೋಹನು ಅಬ್ರಾಮನ ಹೆಂಡತಿಯನ್ನು ತೆಗೆದುಕೊಂಡದ್ದರಿಂದ ಯೆಹೋವನು ಫರೋಹನಿಗೂ ಅವನ ಮನೆಯಲ್ಲಿದ್ದವರಿಗೂ ಭಯಂಕರವಾದ ರೋಗಗಳನ್ನು ಬರಮಾಡಿದನು. 18 ಆಗ ಫರೋಹನು ಅಬ್ರಾಮನನ್ನು ಕರೆಯಿಸಿ, “ನೀನು ನನಗೆ ತುಂಬ ಕೆಟ್ಟದ್ದನ್ನು ಮಾಡಿರುವೆ; ಸಾರಯಳು ನಿನಗೆ ಹೆಂಡತಿಯಾಗಬೇಕೆಂದು ಯಾಕೆ ತಿಳಿಸಲಿಲ್ಲ? 19 ‘ಈಕೆ ನನಗೆ ತಂಗಿಯಾಗಬೇಕು’ ಎಂದು ಯಾಕೆ ಹೇಳಿದೆ? ನೀನು ಹೀಗೆ ಹೇಳಿದ್ದರಿಂದ ನಾನು ಆಕೆಯನ್ನು ನನ್ನ ಹೆಂಡತಿಯಾಗಲಿಕ್ಕೆ ತೆಗೆದುಕೊಂಡೆ. ಆದರೆ ಈಗ ನಾನು ನಿನ್ನ ಹೆಂಡತಿಯನ್ನು ಮತ್ತೆ ನಿನಗೇ ಕೊಡುತ್ತೇನೆ. ನೀನು ಆಕೆಯನ್ನು ನಿನ್ನೊಂದಿಗೆ ಕರೆದುಕೊಂಡು ಹೊರಟುಹೋಗು” ಎಂದು ಹೇಳಿದನು. 20 ಆಮೇಲೆ ಫರೋಹನು ತನ್ನ ಜನರಿಗೆ ಅಬ್ರಾಮನನ್ನು ಈಜಿಪ್ಟಿನಿಂದ ಕಳುಹಿಸಿಕೊಡಬೇಕೆಂದು ಆಜ್ಞಾಪಿಸಿದನು. ಆದ್ದರಿಂದ ಅಬ್ರಾಮನು ಮತ್ತು ಅವನ ಹೆಂಡತಿ ಆ ಸ್ಥಳದಿಂದ ಹೊರಟುಹೋದರು; ಅವರು ತಮ್ಮೊಡನೆ ಇದ್ದವುಗಳನ್ನೆಲ್ಲ ತೆಗೆದುಕೊಂಡು ಹೋದರು.
ಶ್ರೇಷ್ಠನಾದ ಸ್ನಾನಿಕ ಯೋಹಾನ
(ಲೂಕ 7:18-35)
11 ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ ಈ ಸಂಗತಿಗಳನ್ನು ಹೇಳಿದ ನಂತರ ಅಲ್ಲಿಂದ ಹೊರಟು ಬೋಧಿಸುವುದಕ್ಕೆ ಮತ್ತು ಉಪದೇಶಿಸುವುದಕ್ಕೆ ಗಲಿಲಾಯ ಪಟ್ಟಣಕ್ಕೆ ಹೋದನು.
2 ಸ್ನಾನಿಕನಾದ ಯೋಹಾನನು ಸೆರೆಯಲ್ಲಿದ್ದನು. ಕ್ರಿಸ್ತನು ಮಾಡುತ್ತಿದ್ದ ಸಂಗತಿಗಳು ಅವನಿಗೆ ತಿಳಿಯಿತು. ಆದ್ದರಿಂದ ಯೋಹಾನನು ತನ್ನ ಕೆಲವು ಶಿಷ್ಯರನ್ನು ಯೇಸುವಿನ ಬಳಿಗೆ ಕಳುಹಿಸಿದನು. 3 ಯೋಹಾನನ ಶಿಷ್ಯರು ಯೇಸುವಿಗೆ, “ಯೋಹಾನನು ಹೇಳಿದ್ದಂತೆ ಬರಬೇಕಾಗಿದ್ದವನು ನೀನೋ ಅಥವಾ ಬೇರೊಬ್ಬನಿಗಾಗಿ ನಾವು ಎದುರುನೋಡಬೇಕೋ?” ಎಂದು ಕೇಳಿದರು.
4 ಅದಕ್ಕೆ ಯೇಸು, “ನೀವು ಇಲ್ಲಿ ಕೇಳಿದ ಮತ್ತು ನೋಡಿದ ಸಂಗತಿಗಳನ್ನು ಯೋಹಾನನಿಗೆ ತಿಳಿಸಿರಿ. 5 ಕುರುಡರು ದೃಷ್ಟಿ ಹೊಂದುತ್ತಾರೆ; ಕುಂಟರು ಮತ್ತೆ ನಡೆದಾಡಲು ಸಮರ್ಥರಾಗುತ್ತಾರೆ; ಕುಷ್ಟರೋಗಿಗಳು ಗುಣಹೊಂದುತ್ತಾರೆ; ಕಿವುಡರು ಕೇಳಲು ಸಮರ್ಥರಾಗುತ್ತಾರೆ; ಸತ್ತವರು ಜೀವವನ್ನು ಹೊಂದುತ್ತಾರೆ ಮತ್ತು ಬಡಜನರಿಗೆ ಶುಭವಾರ್ತೆಯನ್ನು ಹೇಳಲಾಗುತ್ತದೆ. 6 ನನ್ನನ್ನು ಸ್ವೀಕರಿಸಿಕೊಳ್ಳುವವನು ಧನ್ಯನಾಗಿದ್ದಾನೆ” ಎಂದು ಉತ್ತರಕೊಟ್ಟನು.
7 ಯೋಹಾನನ ಶಿಷ್ಯರು ಹೊರಟುಹೋಗುತ್ತಿರಲು ಯೇಸುವು ಜನರೊಡನೆ ಯೋಹಾನನನ್ನು ಕುರಿತು ಮಾತನಾಡಲು ಪ್ರಾರಂಭಿಸಿದನು. ಯೇಸು, “ನೀವು ಏನು ನೋಡಬೇಕೆಂದು ಅಡವಿಗೆ ಹೋಗಿದ್ದಿರಿ? ಗಾಳಿಯಿಂದ ಅಲ್ಲಾಡುವ ದಂಟನ್ನೋ? ಇಲ್ಲ! 8 ನಿಜವಾಗಿಯೂ ನೀವು ಏನನ್ನು ನೋಡುವುದಕ್ಕೆ ಹೋಗಿದ್ದಿರಿ? ನಯವಾದ ಉಡುಪನ್ನು ಹಾಕಿಕೊಂಡಿರುವ ಮನುಷ್ಯನನ್ನೋ? ಇಲ್ಲ! ನಯವಾದ ಉಡುಪನ್ನು ಹಾಕಿಕೊಂಡಿರುವ ಜನರು ರಾಜರ ಅರಮನೆಗಳಲ್ಲಿ ವಾಸಿಸುತ್ತಾರೆ. 9 ಹಾಗಾದರೆ, ಏನನ್ನು ನೋಡಲು ಹೋಗಿದ್ದಿರಿ? ಒಬ್ಬ ಪ್ರವಾದಿಯನ್ನೋ? ಹೌದು! ಯೋಹಾನನು ಪ್ರವಾದಿಗಿಂತಲೂ ಹೆಚ್ಚಿನವನು ಎಂದು ನಾನು ನಿಮಗೆ ಹೇಳುತ್ತೇನೆ. 10 ಯೋಹಾನನನ್ನು ಕುರಿತು ಪವಿತ್ರ ಗ್ರಂಥದಲ್ಲಿ ಹೀಗೆ ಬರೆದಿದೆ:
‘ಇಗೋ! ನಾನು (ದೇವರು) ನನ್ನ ದೂತನನ್ನು ನಿನಗಿಂತ ಮೊದಲು ಕಳುಹಿಸುತ್ತೇನೆ.
ಅವನು ನಿನಗೆ ದಾರಿಯನ್ನು ಸಿದ್ಧಮಾಡುತ್ತಾನೆ.’(A)
11 “ಸ್ನಾನಿಕ ಯೋಹಾನನು ಹಿಂದೆ ಜೀವಿಸಿದ್ದವರಿಗಿಂತ ದೊಡ್ಡವನು. ಆದರೆ ಪರಲೋಕರಾಜ್ಯದಲ್ಲಿರುವ ಚಿಕ್ಕವನು ಸಹ ಯೋಹಾನನಿಗಿಂತಲೂ ಹೆಚ್ಚಿನವನಾಗಿದ್ದಾನೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. 12 ಸ್ನಾನಿಕ ಯೋಹಾನನು ಬಂದ ಸಮಯದಿಂದ ಇಲ್ಲಿಯವರೆಗೂ ಪರಲೋಕರಾಜ್ಯ ಪ್ರಬಲವಾದ ಆಕ್ರಮಣಗಳಿಗೆ ಒಳಗಾಗಿದೆ. ಬಲಾತ್ಕಾರವನ್ನು ಉಪಯೋಗಿಸಿ ಜನರು ರಾಜ್ಯವನ್ನು ಪಡೆದುಕೊಳ್ಳುವುದಕ್ಕಾಗಿ ಪ್ರಯತ್ನಿಸುತ್ತಾರೆ. 13 ಎಲ್ಲಾ ಪ್ರವಾದನೆಗಳು ಮತ್ತು ಮೋಶೆಯ ಧರ್ಮಶಾಸ್ತ್ರವು ಯೋಹಾನನು ಬರುವ ತನಕ ಪರಲೋಕರಾಜ್ಯದ ಕುರಿತಾಗಿ ಮುಂತಿಳಿಸಿದವು. 14 ಧರ್ಮಶಾಸ್ತ್ರವನ್ನು ಮತ್ತು ಪ್ರವಾದಿಗಳು ಹೇಳಿದ್ದನ್ನು ನೀವು ನಂಬುವುದಾದರೆ ಈ ಯೋಹಾನನೇ ಎಲೀಯನು. ಅವನು ಬರುತ್ತಾನೆಂದು ಧರ್ಮಶಾಸ್ತ್ರವೂ ಹೇಳಿದೆ. 15 ಜನರೇ, ನಾನು ಹೇಳುವುದನ್ನು ಕೇಳಿರಿ. ಆಲಿಸಿರಿ!
16 “ಈ ಕಾಲದ ಜನರನ್ನು ಕುರಿತು ನಾನು ಏನು ಹೇಳಲಿ? ಅವರು ಯಾವ ರೀತಿ ಇದ್ದಾರೆ? ಈ ಕಾಲದ ಜನರು ಮಾರುಕಟ್ಟೆಯಲ್ಲಿ ಕುಳಿತುಕೊಂಡಿರುವ ಮಕ್ಕಳಂತಿದ್ದಾರೆ. ಒಂದು ಗುಂಪಿನ ಮಕ್ಕಳು ಮತ್ತೊಂದು ಗುಂಪಿನ ಮಕ್ಕಳಿಗೆ ಹೀಗೆನ್ನುತ್ತಾರೆ:
17 ‘ನಾವು ನಿಮಗೋಸ್ಕರ ವಾದ್ಯ ಬಾರಿಸಿದೆವು.
ನೀವು ಕುಣಿಯಲಿಲ್ಲ;
ನಾವು ಶೋಕಗೀತೆ ಹಾಡಿದೆವು,
ನೀವು ದುಃಖಿಸಲಿಲ್ಲ.’
18 ಇಂದಿನ ಜನರು ಈ ಮಕ್ಕಳಂತಿದ್ದಾರೆ ಎಂದು ನಾನು ಹೇಳಿದ್ದೇಕೆ? ಏಕೆಂದರೆ ಯೋಹಾನನು ಬಂದನು. ಆದರೆ ಅವನು ಬೇರೆ ಜನರಂತೆ ಊಟಮಾಡಲಿಲ್ಲ; ದ್ರಾಕ್ಷಾರಸವನ್ನು ಕುಡಿಯಲಿಲ್ಲ. ಆದರೆ ಜನರು, ‘ಅವನಿಗೆ ದೆವ್ವ ಹಿಡಿದಿದೆ’ ಎಂದು ಹೇಳುತ್ತಾರೆ.’ 19 ಮನುಷ್ಯಕುಮಾರನು ಬಂದನು. ಆತನು ಬೇರೆ ಜನರಂತೆ ಊಟಮಾಡುತ್ತಾನೆ; ದ್ರಾಕ್ಷಾರಸವನ್ನು ಕುಡಿಯುತ್ತಾನೆ. ಆದರೆ ಜನರು, ‘ನೋಡಿರಿ! ಅವನು ಹೊಟ್ಟೆಬಾಕ, ಅವನು ಕುಡುಕ, ಸುಂಕವಸೂಲಿಗಾರರು ಮತ್ತು ಕೆಟ್ಟ ಜನರು ಅವನ ಸ್ನೇಹಿತರಾಗಿದ್ದಾರೆ’ ಎಂದು ಹೇಳುತ್ತಾರೆ. ಆದರೆ ಜ್ಞಾನವು ತನ್ನ ಕ್ರಿಯೆಗಳಿಂದಲೇ ತನ್ನ ಯೋಗ್ಯತೆಯನ್ನು ತೋರ್ಪಡಿಸುತ್ತದೆ.”
ನಂಬದ ಜನರಿಗೆ ಯೇಸುವಿನ ಎಚ್ಚರಿಕೆ
(ಲೂಕ 10:13-15)
20 ನಂತರ ಯೇಸು, ತಾನು ಯಾವ ಪಟ್ಟಣಗಳಲ್ಲಿ ಹೇರಳವಾಗಿ ಅದ್ಭುತಕಾರ್ಯಗಳನ್ನು ಮಾಡಿದ್ದನೋ ಆ ಪಟ್ಟಣಗಳನ್ನು ಖಂಡಿಸಿದನು. ಏಕೆಂದರೆ ಆ ಪಟ್ಟಣಗಳಲ್ಲಿದ್ದ ಜನರು ತಮ್ಮ ಜೀವಿತವನ್ನು ಬದಲಾಯಿಸಿಕೊಳ್ಳಲಿಲ್ಲ ಮತ್ತು ಪಾಪ ಮಾಡುವುದನ್ನು ನಿಲ್ಲಿಸಲಿಲ್ಲ. 21 ಯೇಸು ಹೇಳಿದ್ದೇನೆಂದರೆ: “ಖೊರಾಜಿನೇ, ನಿನ್ನ ಗತಿಯನ್ನು ಏನು ಹೇಳಲಿ? ಬೆತ್ಸಾಯಿದವೇ, ನಿನ್ನ ಗತಿಯನ್ನು ಏನು ಹೇಳಲಿ! ನಾನು ನಿಮ್ಮಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡಿದೆನು. ಅದೇ ಅದ್ಭುತಕಾರ್ಯಗಳನ್ನು ಟೈರ್, ಸೀದೋನ್‌ಗಳಲ್ಲಿ ಮಾಡಿದ್ದರೆ, ಅವುಗಳ ಜನರು ಬಹಳ ಕಾಲದ ಹಿಂದೆಯೇ ತಮ್ಮ ಜೀವಿತವನ್ನು ಬದಲಾಯಿಸಿಕೊಳ್ಳುತ್ತಿದ್ದರು; ತಮ್ಮ ಪಾಪಗಳಿಗಾಗಿ ದುಃಖಪಟ್ಟು ಗೋಣಿತಟ್ಟನ್ನು ಕಟ್ಟಿಕೊಳ್ಳುತ್ತಿದ್ದರು; ಮೈಮೇಲೆ ಬೂದಿಯನ್ನು ಹಾಕಿಕೊಳ್ಳುತ್ತಿದ್ದರು. 22 ಆದರೆ ನ್ಯಾಯತೀರ್ಪಿನ ದಿನದಲ್ಲಿ ಟೈರ್, ಸೀದೋನ್‌ಗಳಿಗಿಂತಲೂ ನಿಮ್ಮ ಸ್ಥಿತಿಯು ಬಹಳ ದುಸ್ಥಿತಿಗೆ ಒಳಗಾಗುವುದೆಂದು ನಾನು ನಿಮಗೆ ಹೇಳುತ್ತೇನೆ.
23 “ಕಪೆರ್ನೌಮೇ, ನೀನು ಪರಲೋಕಕ್ಕೆ ಎತ್ತಲ್ಪಡುವುದಾಗಿ ಯೋಚಿಸುವಿಯೋ? ಇಲ್ಲ! ನೀನು ಪಾತಾಳಕ್ಕೆ ಇಳಿಯುವೆ. ನಾನು ನಿನ್ನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ನಡೆಸಿದೆ. ಸೊದೋಮಿನಲ್ಲಿ ಆ ಅದ್ಭುತಕಾರ್ಯಗಳನ್ನು ನಡೆಸಿದ್ದರೆ ಆ ಜನರು ಪಾಪಮಾಡುವುದನ್ನು ನಿಲ್ಲಿಸಿಬಿಡುತ್ತಿದ್ದರು ಮತ್ತು ಇಂದಿನವರೆಗೂ ಅದು ಪಟ್ಟಣವಾಗಿಯೇ ಉಳಿದಿರುತ್ತಿತ್ತು. 24 ಆದರೆ ನ್ಯಾಯತೀರ್ಪಿನ ದಿನದಲ್ಲಿ ನಿನ್ನ ಪರಿಸ್ಥಿತಿ ಸೊದೋಮಿಗಿಂತಲೂ ದುಸ್ಥಿತಿಗೆ ಒಳಗಾಗುವುದು ಎಂದು ನಾನು ನಿನಗೆ ಹೇಳುತ್ತೇನೆ.”
ಯೇಸು ಜನರಿಗೆ ವಿಶ್ರಾಂತಿದಾಯಕ
(ಲೂಕ 10:21-22)
25 ಬಳಿಕ ಯೇಸು, “ಪರಲೋಕ ಭೂಲೋಕಗಳ ಪ್ರಭುವಾದ ತಂದೆಯೇ, ನಿನಗೆ ನಾನು ವಂದನೆ ಸಲ್ಲಿಸುತ್ತೇನೆ. ನಾನು ನಿನ್ನನ್ನು ಕೊಂಡಾಡುತ್ತೇನೆ. ಏಕೆಂದರೆ, ನೀನು ಈ ಸಂಗತಿಗಳನ್ನು ಜ್ಞಾನಿಗಳಿಗೂ ಸೂಕ್ಷ್ಮಬುದ್ದಿಯುಳ್ಳವರಿಗೂ ಮರೆಮಾಡಿರುವೆ. ಆದರೆ ಚಿಕ್ಕ ಮಕ್ಕಳಂತಿರುವ ಈ ಜನರಿಗೆ ನೀನು ಗೋಚರಪಡಿಸಿರುವೆ. 26 ಹೌದು ತಂದೆಯೇ, ಇದು ನಿಜವಾಗಿಯೂ ನಿನ್ನ ಚಿತ್ತವಾಗಿದ್ದುದರಿಂದ ನೀನು ಹೀಗೆ ಮಾಡಿರುವೆ.
27 “ನನ್ನ ತಂದೆ ನನಗೆ ಎಲ್ಲವನ್ನು ಕೊಟ್ಟಿದ್ದಾನೆ. ಯಾವನೂ ಮಗನನ್ನು ಅರಿತಿಲ್ಲ. ತಂದೆ ಮಾತ್ರ ಮಗನನ್ನು ಅರಿತಿದ್ದಾನೆ. ಯಾವನೂ ತಂದೆಯನ್ನು ಅರಿತಿಲ್ಲ. ಮಗನು ಮಾತ್ರ ತಂದೆಯನ್ನು ಅರಿತಿದ್ದಾನೆ. ಮಗನು ತಂದೆಯನ್ನು ಯಾರಿಗೆ ಪ್ರಕಟಿಸಬೇಕೆಂದು ಇಷ್ಟಪಡುತ್ತಾನೋ ಅವರು ತಂದೆಯನ್ನು ತಿಳಿದುಕೊಳ್ಳುತ್ತಾರೆ.
28 “ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ. ನಾನು ನಿಮಗೆ ವಿಶ್ರಾಂತಿಯನ್ನು ಕೊಡುತ್ತೇನೆ. 29 ನನ್ನ ನೊಗಕ್ಕೆ ಹೆಗಲು ಕೊಟ್ಟು ನನ್ನಿಂದ ಕಲಿತುಕೊಳ್ಳಿರಿ. ನಾನು ಸಾತ್ವಿಕನೂ ದೀನನೂ ಆಗಿರುವುದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ. 30 ಹೌದು, ನಿಮಗೆ ನನ್ನ ನೊಗವು ಮೃದುವಾಗಿದೆ; ನನ್ನ ಹೊರೆಯು ಹಗುರವಾಗಿದೆ.”
ನೆಹೆಮೀಯನ ಪ್ರಾರ್ಥನೆ
1 ಇವು ನೆಹೆಮೀಯನ ಮಾತುಗಳು; ನೆಹೆಮೀಯನು ಹಕಲ್ಯನ ಮಗ. ಕಿಸ್ಲೇವ್ ತಿಂಗಳಿನಲ್ಲಿ ರಾಜಧಾನಿಯಾದ ಶೂಷನ್‌ನಲ್ಲಿ ನಾನು ಇದ್ದೆನು. ಅದು ಅರ್ತಷಸ್ತನ ಆಳ್ವಿಕೆಯ ಇಪ್ಪತ್ತನೆಯ ವರ್ಷವಾಗಿತ್ತು. 2 ನಾನು ಶೂಷನ್‌ನಲ್ಲಿದ್ದಾಗ ನನ್ನ ಸಹೋದರರಲ್ಲಿ ಒಬ್ಬನಾದ ಹನಾನೀ ಮತ್ತು ಇನ್ನಿತರರು ಯೆಹೂದ ಪ್ರಾಂತ್ಯದಿಂದ ಬಂದಿದ್ದರು. ನಾನು ಅಲ್ಲಿರುವ ಯೆಹೂದ್ಯರ ಯೋಗಕ್ಷೇಮದ ಬಗ್ಗೆ ವಿಚಾರಿಸಿದೆನು. ಈ ಯೆಹೂದ್ಯರು ಸೆರೆವಾಸದಿಂದ ತಪ್ಪಿಸಿಕೊಂಡು ಇನ್ನೂ ಯೆಹೂದದಲ್ಲಿ ವಾಸವಾಗಿದ್ದರು. ಜೆರುಸಲೇಮ್ ನಗರದ ವಿಷಯವಾಗಿಯೂ ವಿಚಾರಿಸಿದೆನು.
3 ಆಗ ಹನಾನೀ ಮತ್ತು ಅವನ ಜೊತೆಗಾರರು, “ನೆಹೆಮೀಯನೇ, ಸೆರೆಯಿಂದ ತಪ್ಪಿಸಿಕೊಂಡು ಯೆಹೂದ ಪ್ರಾಂತ್ಯಕ್ಕೆ ಹೋಗಿರುವವರು ತುಂಬಾ ಶೋಚನೀಯ ಸ್ಥಿತಿಯಲ್ಲಿದ್ದಾರೆ. ಅವರು ಅನೇಕ ಸಮಸ್ಯೆಗಳಲ್ಲಿ ಸಿಕ್ಕಿಕೊಂಡು ಅವಮಾನಕ್ಕೀಡಾಗಿದ್ದಾರೆ. ಯಾಕೆಂದರೆ ಜೆರುಸಲೇಮಿನ ಪೌಳಿಗೋಡೆಗಳು ಕೆಡವಲ್ಪಟ್ಟಿವೆ; ಅದರ ಬಾಗಿಲುಗಳೆಲ್ಲಾ ಸುಟ್ಟುಹೋಗಿವೆ” ಎಂದು ಹೇಳಿದರು.
4 ಜೆರುಸಲೇಮಿನ ಪೌಳಿಗೋಡೆಯ ಮತ್ತು ಅಲ್ಲಿಯ ಜನರ ವಿಚಾರವಾಗಿ ಕೇಳಿದಾಗ ನಾನು ತುಂಬಾ ಗಲಿಬಿಲಿಗೊಂಡೆನು; ನಾನು ಅಲ್ಲಿಯೇ ನೆಲದ ಮೇಲೆ ಕುಳಿತು ಅತ್ತೆನು; ದುಃಖಕ್ರಾಂತನಾದೆನು; ಅಲ್ಲದೆ ಅನೇಕ ದಿವಸಗಳವರೆಗೆ ಉಪವಾಸಮಾಡಿ ಪರಲೋಕದ ದೇವರಿಗೆ ಪ್ರಾರ್ಥಿಸಿದೆನು. 5 ನಂತರ ನಾನು ಈ ಪ್ರಾರ್ಥನೆ ಮಾಡಿದೆನು:
“ಪರಲೋಕದ ದೇವರಾದ ಯೆಹೋವನೇ, ನೀನು ಮಹಾ ದೇವರೂ ಪರಾಕ್ರಮವುಳ್ಳ ದೇವರೂ ಆಗಿರುವಿ. ನಿನ್ನನ್ನು ಪ್ರೀತಿಸಿ ನಿನ್ನ ಆಜ್ಞೆಗಳಿಗೆ ವಿಧೇಯರಾಗುವವರಿಗೆ ನೀನು ಮಾಡಿದ ವಾಗ್ದಾನವನ್ನು ನೆರವೇರಿಸುವವನಾಗಿರುವಿ.
6 “ಹಗಲಿರುಳು ನಿನ್ನಲ್ಲಿ ಪ್ರಾರ್ಥಿಸುವ ನಿನ್ನ ಸೇವಕನನ್ನು ಕಣ್ತೆರೆದು ನೋಡು; ಅವನ ಪ್ರಾರ್ಥನೆಗೆ ಕಿವಿಗೊಟ್ಟು ಆಲಿಸು. ನಿನ್ನ ಸೇವಕರಾದ ಇಸ್ರೇಲರಿಗಾಗಿ ನಾನು ಪ್ರಾರ್ಥಿಸುತ್ತಿದ್ದೇನೆ. ಇಸ್ರೇಲರಾದ ನಾವು ನಿನಗೆ ವಿರೋಧವಾಗಿ ಮಾಡಿದ ಪಾಪಗಳನ್ನು ನಾನು ನಿನಗೆ ಅರಿಕೆ ಮಾಡುತ್ತೇನೆ. ನಾನೂ ನನ್ನ ತಂದೆಯ ಮನೆಯವರೂ ನಿನಗೆ ವಿರುದ್ಧವಾಗಿ ಮಾಡಿದ ಪಾಪಗಳನ್ನು ನಿನಗೆ ಅರಿಕೆ ಮಾಡುತ್ತೇವೆ. 7 ಇಸ್ರೇಲರಾದ ನಾವು ನಿನಗೆ ಕೆಟ್ಟವರಾಗಿ ಜೀವಿಸಿದೆವು; ನೀನು ನಿನ್ನ ಸೇವಕನಾದ ಮೋಶೆಗೆ ಕೊಟ್ಟ ವಿಧಿನಿಯಮಗಳಿಗೆ ನಾವು ವಿಧೇಯರಾಗಲಿಲ್ಲ.
8 “ನಿನ್ನ ಸೇವಕನಾದ ಮೋಶೆಗೆ ನೀನು ಹೇಳಿದ್ದನ್ನು ನೆನಪುಮಾಡಿಕೊ, ನೀನು ಅವನಿಗೆ, ‘ಇಸ್ರೇಲ್ ಜನರಾದ ನೀವು ನಂಬಿಗಸ್ತರಾಗದಿದ್ದಲ್ಲಿ ನಿಮ್ಮನ್ನು ಅನ್ಯದೇಶಗಳಲ್ಲಿ ಚದರಿಸಿಬಿಡುವೆನು.’ 9 ಆದರೆ ನೀವು ಹಿಂತಿರುಗಿ ನನ್ನ ಬಳಿಗೆ ಬಂದು, ನನ್ನ ಕಟ್ಟಳೆಗಳಿಗೆ ವಿಧೇಯರಾದರೆ, ನಿಮ್ಮ ಜನರನ್ನು ಬಲವಂತವಾಗಿ ಭೂಲೋಕದ ಕಟ್ಟಕಡೆಯವರೆಗೆ ಕೊಂಡೊಯ್ದಿದ್ದರೂ ಅಲ್ಲಿಂದ ನನ್ನ ಹೆಸರನ್ನು ನೆಲೆಗೊಳಿಸುವುದಕ್ಕಾಗಿ ನಾನು ಆರಿಸಿಕೊಂಡ ಸ್ಥಳಕ್ಕೆ ಕರೆದುಕೊಂಡು ಬರುವೆನು” ಎಂದು ಹೇಳಿರುವೆ.
10 “ಇಸ್ರೇಲ್ ಜನರು ನಿನ್ನ ಜನಾಂಗ; ಅವರು ನಿನ್ನ ಸೇವಕರಾಗಿದ್ದಾರೆ. ನೀನು ನಿನ್ನ ಮಹಾಶಕ್ತಿಯನ್ನು ಉಪಯೋಗಿಸಿ ಅವರನ್ನು ರಕ್ಷಿಸಿರುವೆ. 11 ಆದ್ದರಿಂದ ಯೆಹೋವನೇ, ನನ್ನ ಪ್ರಾರ್ಥನೆಯನ್ನು ಆಲೈಸು. ನಾನು ನಿನ್ನ ಸೇವಕ. ನಿನ್ನ ಹೆಸರನ್ನು ಗೌರವಿಸುವ ನಿನ್ನ ಸೇವಕರ ಪ್ರಾರ್ಥನೆಗೆ ಕಿವಿಗೊಡು. ನಾನು ಅರಸನ ಪಾನದಾಯಕನಾಗಿದ್ದೇನೆಂದು ನೀನು ತಿಳಿದಿರುವೆ. ಆದ್ದರಿಂದ ಈ ಹೊತ್ತು ನನಗೆ ಸಹಾಯ ಮಾಡು. ಅರಸನಲ್ಲಿ ಸಹಾಯಕ್ಕಾಗಿ ಕೇಳಿಕೊಳ್ಳುವಾಗ ನನಗೆ ನೆರವು ನೀಡು; ನನಗೆ ಯಶಸ್ಸನ್ನು ದಯಪಾಲಿಸು; ರಾಜನಿಗೆ ನಾನು ಮೆಚ್ಚಿಕೆಯುಳ್ಳವನಾಗಿ ಕಂಡುಬರುವಂತೆ ಸಹಾಯಮಾಡು.”
ಪೇತ್ರನು ಜೆರುಸಲೇಮಿಗೆ ಹಿಂತಿರುಗುವನು
11 ಯೆಹೂದ್ಯರಲ್ಲದವರು ಸಹ ದೇವರ ವಾಕ್ಯವನ್ನು ಸ್ವೀಕರಿಸಿಕೊಂಡರೆಂಬುದು ಅಪೊಸ್ತಲರಿಗೂ ಜುದೇಯದ ಸಹೋದರರಿಗೂ ತಿಳಿಯಿತು. 2 ಆದರೆ ಪೇತ್ರನು ಜೆರುಸಲೇಮಿಗೆ ಬಂದಾಗ ಕೆಲವು ಯೆಹೂದ್ಯ ವಿಶ್ವಾಸಿಗಳು[a] ಅವನೊಂದಿಗೆ ವಾದ ಮಾಡಿದರು. 3 ಅವರು, “ಯೆಹೂದ್ಯರಲ್ಲದವರ ಮತ್ತು ಸುನ್ನತಿ ಮಾಡಿಸಿಕೊಂಡಿಲ್ಲದವರ ಮನೆಗಳಿಗೆ ನೀನು ಹೋದೆ! ನೀನು ಅವರೊಂದಿಗೆ ಊಟವನ್ನು ಸಹ ಮಾಡಿದೆ!” ಎಂದು ಹೇಳಿದರು.
4 ಆದ್ದರಿಂದ ಪೇತ್ರನು ನಡೆದ ಸಂಗತಿಯನ್ನೆಲ್ಲಾ ಅವರಿಗೆ ವಿವರಿಸಿದನು. 5 ಪೇತ್ರನು ಅವರಿಗೆ, “ನಾನು ಜೊಪ್ಪ ಪಟ್ಟಣದಲ್ಲಿದ್ದೆನು. ನಾನು ಪ್ರಾರ್ಥಿಸುತ್ತಿದ್ದಾಗ ನನಗೊಂದು ದರ್ಶನವಾಯಿತು. ಆ ದರ್ಶನದಲ್ಲಿ, ಆಕಾಶದಿಂದ ಇಳಿದುಬರುತ್ತಿರುವ ಒಂದು ವಸ್ತುವನ್ನು ಕಂಡೆನು. ಅದು ದೊಡ್ಡ ತಟ್ಟೆಯಂತಿತ್ತು. ಅದರ ನಾಲ್ಕು ಮೂಲೆಗಳಲ್ಲಿ ಹಗ್ಗವನ್ನು ಕಟ್ಟಿ ಭೂಮಿಗೆ ಇಳಿಯಬಿಡಲಾಗಿತ್ತು. ಅದು ಇಳಿದು ಬಂದು ನನ್ನ ಸಮೀಪದಲ್ಲೇ ನಿಂತುಕೊಂಡಿತು. 6 ನಾನು ಅದರೊಳಗೆ ನೋಡಿದೆನು. ಅದರಲ್ಲಿ ಪಶುಗಳೂ ಕ್ರೂರಪ್ರಾಣಿಗಳೂ ಹರಿದಾಡುವ ಕ್ರಿಮಿಕೀಟಗಳೂ ಹಾರಾಡುವ ಪಕ್ಷಿಗಳೂ ಇದ್ದವು. 7 ಆಗ, ‘ಪೇತ್ರನೇ, ಎದ್ದೇಳು! ಇವುಗಳಲ್ಲಿ ಯಾವುದನ್ನು ಬೇಕಾದರೂ ಕೊಯ್ದುತಿನ್ನು!’ ಎಂದು ನನಗೆ ಹೇಳುವ ವಾಣಿಯನ್ನು ಕೇಳಿದೆನು.
8 “ಆದರೆ ನಾನು, ‘ಪ್ರಭುವೇ, ನಾನು ಹಾಗೆ ಮಾಡಲಾರೆ! ಅಪವಿತ್ರವಾದ ಮತ್ತು ಅಶುದ್ಧವಾದ ಏನನ್ನಾಗಲಿ ನಾನೆಂದೂ ತಿಂದಿಲ್ಲ’ ಎಂದು ಹೇಳಿದೆನು.
9 “ಆದರೆ, ‘ಇವುಗಳನ್ನು ದೇವರು ಶುದ್ಧೀಕರಿಸಿದ್ದಾನೆ. ಇವುಗಳನ್ನು ಅಶದ್ಧವೆಂದು ಹೇಳಬೇಡ!’ ಎಂದು ಆ ವಾಣಿಯು ನನಗೆ ಉತ್ತರಕೊಟ್ಟಿತು.
10 “ಹೀಗೆ ಮೂರು ಸಲವಾಯಿತು. ಬಳಿಕ ಆ ಇಡೀ ವಸ್ತುವನ್ನು ಆಕಾಶಕ್ಕೆ ಹಿಂತೆಗೆದುಕೊಳ್ಳಲಾಯಿತು. 11 ಅದೇ ಸಮಯದಲ್ಲಿ ನಾನಿದ್ದ ಮನೆಗೆ ಮೂರು ಮಂದಿ ಬಂದರು. ಈ ಮೂವರನ್ನು ಸೆಜರೇಯ ಪಟ್ಟಣದಿಂದ ಕಳುಹಿಸಲಾಗಿತ್ತು. 12 ಸಂದೇಹಪಡದೆ ಅವರೊಂದಿಗೆ ಹೋಗಬೇಕೆಂದು ಪವಿತ್ರಾತ್ಮನು ನನಗೆ ಹೇಳಿದನು. ಇಲ್ಲಿರುವ ಈ ಆರು ಮಂದಿ ಸಹೋದರರು ನನ್ನೊಂದಿಗೆ ಬಂದರು. ನಾವು ಕೊರ್ನೇಲಿಯನ ಮನೆಗೆ ಹೋದೆವು. 13 ತನ್ನ ಮನೆಯಲ್ಲಿ ದೇವದೂತನೊಬ್ಬನು ನಿಂತಿರುವುದನ್ನು ತಾನು ಕಂಡದ್ದರ ಬಗ್ಗೆ ಕೊರ್ನೇಲಿಯನು ನನಗೆ ಹೇಳಿದನು. ಆ ದೇವದೂತನು ಕೊರ್ನೇಲಿಯನಿಗೆ, ‘ಕೆಲವು ಜನರನ್ನು ಜೊಪ್ಪಕ್ಕೆ ಕಳುಹಿಸು. ಸೀಮೋನ್ ಪೇತ್ರನನ್ನು ಆಹ್ವಾನಿಸಿ ನಿಮ್ಮ ಬಳಿಗೆ ಬರಮಾಡಿಕೊ. 14 ಅವನು ನಿಮ್ಮೊಂದಿಗೆ ಮಾತಾಡುವನು. ಅವನು ಹೇಳುವ ಸಂಗತಿಗಳು ನಿನ್ನನ್ನೂ ನಿನ್ನ ಕುಟಂಬದವರನ್ನೂ ರಕ್ಷಿಸುತ್ತವೆ’ ಎಂದು ಹೇಳಿದನು.
15 “ನಾನು ನನ್ನ ಉಪದೇಶವನ್ನು ಆರಂಭಿಸಿದ ಮೇಲೆ, ಪ್ರಾರಂಭದಲ್ಲಿ[b] ಪವಿತ್ರಾತ್ಮನು ನಮ್ಮ ಮೇಲೆ ಬಂದಂತೆ ಅವರ ಮೇಲೆಯೂ ಬಂದನು. 16 ಆಗ ನಾನು ಪ್ರಭುವಿನ ಮಾತುಗಳನ್ನು ಜ್ಞಾಪಿಸಿಕೊಂಡೆನು. ‘ಯೋಹಾನನು ಜನರಿಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿದನು, ಆದರೆ ನೀವು ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನ ಪಡೆಯುವಿರಿ!’ ಎಂದು ಪ್ರಭುವು ಹೇಳಿದ್ದನು. 17 ಪ್ರಭುವಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಮಗೆ ಕೊಟ್ಟ ವರವನ್ನೇ ದೇವರು ಈ ಜನರಿಗೆ ಕೊಟ್ಟನು. ಹೀಗಿರಲು ನಾನು ದೇವರ ಕೆಲಸವನ್ನು ನಿಲ್ಲಿಸಲು ಸಾಧ್ಯವಿರಲಿಲ್ಲ” ಎಂದು ಹೇಳಿದನು.
18 ಯೆಹೂದ್ಯವಿಶ್ವಾಸಿಗಳು ಈ ಸಂಗತಿಗಳನ್ನು ಕೇಳಿದಾಗ ವಾದವನ್ನು ನಿಲ್ಲಿಸಿ, ದೇವರನ್ನು ಸ್ತುತಿಸುತ್ತಾ, “ಹಾಗಾದರೆ ನಮ್ಮಂತೆಯೇ ತಮ್ಮ ಹೃದಯಗಳನ್ನು ಮಾರ್ಪಡಿಸಿಕೊಂಡು ಜೀವವನ್ನು ಹೊಂದಿಕೊಳ್ಳಲು ದೇವರು ಯೆಹೂದ್ಯರಲ್ಲದವರಿಗೂ ಅವಕಾಶ ಕೊಟ್ಟಿದ್ದಾನೆ!” ಎಂದು ಹೇಳಿದರು.
ಅಂತಿಯೋಕ್ಯಕ್ಕೆ ಸುವಾರ್ತೆ
19 ಸ್ತೆಫನನು ಕೊಲ್ಲಲ್ಪಟ್ಟ ನಂತರ ಉಂಟಾದ ಹಿಂಸೆಯಿಂದಾಗಿ ವಿಶ್ವಾಸಿಗಳು ಚದರಿಹೋದರು. ವಿಶ್ವಾಸಿಗಳಲ್ಲಿ ಕೆಲವರು ಬಹು ದೂರದ ಸ್ಥಳಗಳಾದ ಫೆನಿಷ್ಯ, ಸೈಪ್ರಸ್ ಮತ್ತು ಅಂತಿಯೋಕ್ಯಗಳಿಗೆ ಹೋದರು. ವಿಶ್ವಾಸಿಗಳು ಈ ಸ್ಥಳಗಳಲ್ಲಿ ಸುವಾರ್ತೆಯನ್ನು ತಿಳಿಸಿದರು. ಆದರೆ ಅವರು ಯೆಹೂದ್ಯರಿಗೆ ಮಾತ್ರ ತಿಳಿಸಿದರು. 20 ಈ ವಿಶ್ವಾಸಿಗಳಲ್ಲಿ ಕೆಲವರು ಸೈಪ್ರಸ್ ಮತ್ತು ಸಿರೇನ್ ಸ್ಥಳಗಳವರಾಗಿದ್ದರು. ಈ ಜನರು ಅಂತಿಯೋಕ್ಯಕ್ಕೆ ಬಂದಾಗ ಅವರು, ಪ್ರಭುವಾದ ಯೇಸುವಿನ ವಿಷಯವಾದ ಸುವಾರ್ತೆಯನ್ನು ಅಲ್ಲಿಯ ಗ್ರೀಕ್ ಜನರಿಗೆ ತಿಳಿಸಿದರು. 21 ಪ್ರಭುವು ವಿಶ್ವಾಸಿಗಳಿಗೆ ಸಹಾಯ ಮಾಡುತ್ತಿದ್ದನು. ಜನರು ಬಹು ಸಂಖ್ಯೆಯಲ್ಲಿ ಪ್ರಭುವನ್ನು ನಂಬಿಕೊಂಡು ಅನುಸರಿಸತೊಡಗಿದರು.
22 ಅಂತಿಯೋಕ್ಯದಲ್ಲಿದ್ದ ಈ ಹೊಸ ವಿಶ್ವಾಸಿಗಳ ಬಗ್ಗೆ ಜೆರುಸಲೇಮಿನ ಸಭೆಯವರಿಗೆ ತಿಳಿಯಿತು. ಆದ್ದರಿಂದ ಜೆರುಸಲೇಮಿನ ವಿಶ್ವಾಸಿಗಳು ಬಾರ್ನಬನನ್ನು ಅಂತಿಯೋಕ್ಯಕ್ಕೆ ಕಳುಹಿಸಿದರು. 23-24 ಬಾರ್ನಬನು ಒಳ್ಳೆಯ ಮನುಷ್ಯನಾಗಿದ್ದನು. ಅವನು ಪವಿತ್ರಾತ್ಮಭರಿತನಾಗಿದ್ದನು ಮತ್ತು ಪೂರ್ಣನಂಬಿಕೆಯುಳ್ಳವನಾಗಿದ್ದನು. ಬಾರ್ನಬನು ಅಂತಿಯೋಕ್ಯಕ್ಕೆ ಹೋದಾಗ, ದೇವರು ಆ ಜನರನ್ನು ಅಧಿಕವಾಗಿ ಆಶೀರ್ವದಿಸಿರುವುದನ್ನು ಕಂಡನು. ಇದರಿಂದ ಬಾರ್ನಬನಿಗೆ ತುಂಬಾ ಸಂತೋಷವಾಯಿತು. ಅಂತಿಯೋಕ್ಯದಲ್ಲಿದ್ದ ವಿಶ್ವಾಸಿಗಳನ್ನೆಲ್ಲ ಅವನು ಪ್ರೋತ್ಸಾಹಿಸಿದನು. ಅವನು ಅವರಿಗೆ, “ನಿಮ್ಮ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಪ್ರಭುವಿಗೆ ನಿಮ್ಮ ಪೂರ್ಣಹೃದಯಗಳಿಂದ ಯಾವಾಗಲೂ ವಿಧೇಯರಾಗಿರಿ” ಎಂದು ಹೇಳಿದನು. ಅನೇಕ ಜನರು ಪ್ರಭುವಾದ ಯೇಸುವಿನ ಹಿಂಬಾಲಕರಾದರು.
25 ಬಳಿಕ ಬಾರ್ನಬನು ಸೌಲನನ್ನು ಹುಡುಕಿಕೊಂಡು ತಾರ್ಸಸ್ ಪಟ್ಟಣಕ್ಕೆ ಹೋದನು. 26 ಬಾರ್ನಬನು ಅಲ್ಲಿ ಸೌಲನನ್ನು ಕಂಡುಕೊಂಡು ಅವನನ್ನು ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು. ಸೌಲನು ಮತ್ತು ಬಾರ್ನಬನು ಅಂತಿಯೋಕ್ಯದಲ್ಲಿ ಒಂದು ವರ್ಷ ಪೂರ್ತಿ ಸಭೆಯ ಅನ್ಯೋನ್ಯತೆಯಲ್ಲಿ ಇದ್ದುಕೊಂಡು ಅನೇಕ ಜನರಿಗೆ ಬೋಧಿಸಿದರು. ಯೇಸುವಿನ ಹಿಂಬಾಲಕರಿಗೆ “ಕ್ರೈಸ್ತರು” ಎಂಬ ಹೆಸರು ಬಂದದ್ದು ಅಂತಿಯೋಕ್ಯದಲ್ಲೇ.
27 ಆ ಕಾಲದಲ್ಲಿ ಕೆಲವು ಪ್ರವಾದಿಗಳು ಜೆರುಸಲೇಮಿನಿಂದ ಅಂತಿಯೋಕ್ಯಕ್ಕೆ ಹೋದರು. 28 ಈ ಪ್ರವಾದಿಗಳಲ್ಲಿ “ಅಗಬ” ಎಂಬ ಒಬ್ಬನಿದ್ದನು. ಅಗಬನು ಅಂತಿಯೋಕ್ಯದಲ್ಲಿ ಪವಿತ್ರಾತ್ಮನ ಪ್ರೇರಣೆಯಿಂದ, “ಇಡೀ ಪ್ರಪಂಚಕ್ಕೆ ಭೀಕರ ಕ್ಷಾಮ ಬರಲಿದೆ” ಎಂದು ಹೇಳಿದನು. (ಈ ಬರಗಾಲವು ಕ್ಲಾಡಿಯಸ್ ಚಕ್ರವರ್ತಿಯ ಕಾಲದಲ್ಲಿ ಬಂದಿತು.) 29 ಜುದೇಯದಲ್ಲಿರುವ ಸಹೋದರ ಸಹೋದರಿಯರಿಗೆ ಸಹಾಯಮಾಡಲು ವಿಶ್ವಾಸಿಗಳು ನಿರ್ಧರಿಸಿದರು. ವಿಶ್ವಾಸಿಗಳಲ್ಲಿ ಪ್ರತಿಯೊಬ್ಬರೂ ತಮ್ಮಿಂದಾದಷ್ಟನ್ನು ಅವರಿಗೆ ಕಳುಹಿಸಿಕೊಡಲು ಯೋಜನೆ ಮಾಡಿದರು. 30 ಅವರು ಹಣವನ್ನು ಕೂಡಿಸಿ ಬಾರ್ನಬ ಮತ್ತು ಸೌಲರಿಗೆ ಕೊಟ್ಟರು. ಬಳಿಕ ಬಾರ್ನಬ ಮತ್ತು ಸೌಲರು ಅದನ್ನು ತಂದು ಜುದೇಯದಲ್ಲಿದ್ದ ಸಭಾಹಿರಿಯರಿಗೆ ಕೊಟ್ಟರು.
Kannada Holy Bible: Easy-to-Read Version. All rights reserved. © 1997 Bible League International