Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 8

ಜಲಪ್ರಳಯದ ಮುಕ್ತಾಯ

ಆದರೆ ದೇವರು ನೋಹನನ್ನು ಮರೆಯಲಿಲ್ಲ. ದೇವರು ನೋಹನನ್ನು ಮತ್ತು ನಾವೆಯಲ್ಲಿದ್ದ ಎಲ್ಲಾ ಪ್ರಾಣಿಗಳನ್ನು ನೆನಪುಮಾಡಿಕೊಂಡನು. ದೇವರು ಭೂಮಿಯ ಮೇಲೆ ಗಾಳಿಯನ್ನು ಬರಮಾಡಿದನು. ನೀರು ಕಡಿಮೆಯಾಗಲು ಪ್ರಾರಂಭಿಸಿತು.

ಆಕಾಶದಿಂದ ಸುರಿಯುತ್ತಿದ್ದ ಮಳೆ ನಿಂತುಹೋಯಿತು. ಆಕಾಶದ ತೂಬುಗಳು ಮುಚ್ಚಿಹೋದವು. ಭೂಸೆಲೆಗಳಿಂದ ಉಕ್ಕುತ್ತಿದ್ದ ನೀರು ಸಹ ನಿಂತುಹೋಯಿತು. 3-4 ಭೂಮಿಯನ್ನು ಆವರಿಸಿಕೊಂಡಿದ್ದ ನೀರು ನೂರೈವತ್ತು ದಿನಗಳಾದ ಮೇಲೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬಂತು. ಏಳನೆಯ ತಿಂಗಳ ಹದಿನೇಳನೆಯ ದಿನದಲ್ಲಿ ನಾವೆಯು ಅರಾರಾಟ್ ನಾಡಿನಲ್ಲಿದ್ದ ಒಂದು ಬೆಟ್ಟದ ಮೇಲೆ ನಿಂತುಕೊಂಡಿತು. ನೀರು ಕಡಿಮೆಯಾಗತೊಡಗಿದ್ದರಿಂದ ಹತ್ತನೆಯ ತಿಂಗಳ ಮೊದಲನೆಯ ದಿನದಲ್ಲಿ ಬೆಟ್ಟದ ತುದಿಗಳು ಕಾಣತೊಡಗಿದವು.

ನಲವತ್ತು ದಿನಗಳಾದ ಮೇಲೆ, ನೋಹನು ತಾನು ಮಾಡಿದ್ದ ನಾವೆಯ ಕಿಟಕಿಯನ್ನು ತೆರೆದು ನೋಡಿದನು. ನೋಹನು ಒಂದು ಕಾಗೆಯನ್ನು ಹೊರಕ್ಕೆ ಬಿಟ್ಟನು. ಭೂಮಿಯ ಮೇಲಿನ ನೀರು ಒಣಗುವ ವರೆಗೆ ಆ ಕಾಗೆಯು ಸ್ಥಳದಿಂದ ಸ್ಥಳಕ್ಕೆ ಹಾರಾಡುತ್ತಿತ್ತು. ನೆಲ ಒಣಗಿದೆಯೇ, ತೇವವಾಗಿದೆಯೇ ಎಂದು ತಿಳಿದುಕೊಳ್ಳುವುದಕ್ಕಾಗಿ ನೋಹನು ಒಂದು ಪಾರಿವಾಳವನ್ನು ಸಹ ಹೊರಕ್ಕೆ ಬಿಟ್ಟನು.

ನೀರು ಇನ್ನೂ ಇದ್ದಕಾರಣ, ಆ ಪಾರಿವಾಳ ಹಿಂತಿರುಗಿ ಬಂತು. ನೋಹನು ಕೈಚಾಚಿ ಅದನ್ನು ಹಿಡಿದುಕೊಂಡು ನಾವೆಯೊಳಗೆ ಸೇರಿಸಿಕೊಂಡನು.

10 ಏಳು ದಿನಗಳವರೆಗೆ ನೋಹನು ಕಾದುಕೊಂಡಿದ್ದು ಮತ್ತೆ ಪಾರಿವಾಳವನ್ನು ಹೊರಕ್ಕೆ ಬಿಟ್ಟನು. 11 ಆ ಸಾಯಂಕಾಲವೂ ಪಾರಿವಾಳ ನೋಹನ ಬಳಿಗೆ ಹಿಂತಿರುಗಿ ಬಂತು. ಅದರ ಕೊಕ್ಕಿನಲ್ಲಿ ಆಲೀವ್ ಮರದ ಎಲೆಯಿತ್ತು. ಇದರಿಂದ, ಭೂಮಿಯಲ್ಲಿ ಒಣನೆಲವಿದೆಯೆಂದು ನೋಹನು ತಿಳಿದುಕೊಂಡನು. 12 ಏಳು ದಿನಗಳ ನಂತರ ನೋಹನು ಮತ್ತೆ ಪಾರಿವಾಳವನ್ನು ಹೊರಕ್ಕೆ ಬಿಟ್ಟನು. ಆದರೆ ಅದು ಈ ಸಲ ಹಿಂತಿರುಗಿ ಬರಲಿಲ್ಲ.

13 ಆದ್ದರಿಂದ ನೋಹನು ನಾವೆಯ ಬಾಗಿಲನ್ನು ತೆರೆದು ಸುತ್ತಲೂ ನೋಡಿದನು. ನೆಲವೆಲ್ಲಾ ಒಣಗಿತ್ತು. ಅಂದು ಮೊದಲನೆಯ ವರ್ಷದ ಮೊದಲನೆಯ ತಿಂಗಳ ಮೊದಲನೆಯ ದಿನವಾಗಿತ್ತು. ಆಗ ನೋಹನಿಗೆ ಆರುನೂರ ಒಂದು ವರ್ಷವಾಗಿತ್ತು. 14 ಎರಡನೆಯ ತಿಂಗಳ ಇಪ್ಪತ್ತೇಳನೆಯ ದಿನದೊಳಗೆ ನೆಲವೆಲ್ಲಾ ಸಂಪೂರ್ಣವಾಗಿ ಒಣಗಿಹೋಯಿತು.

15-16 ಆಮೇಲೆ ದೇವರು ನೋಹನಿಗೆ, “ನೀನು, ನಿನ್ನ ಹೆಂಡತಿ, ನಿನ್ನ ಗಂಡುಮಕ್ಕಳು ಮತ್ತು ನಿನ್ನ ಸೊಸೆಯರೊಂದಿಗೆ ನಾವೆಯಿಂದ ಹೊರಗೆ ಬನ್ನಿ. 17 ನಿಮ್ಮೊಡನೆ ನಾವೆಯೊಳಗಿದ್ದ ಎಲ್ಲಾ ಜೀವಿಗಳು ಅಂದರೆ ಎಲ್ಲಾ ಪಕ್ಷಿಗಳು, ಪ್ರಾಣಿಗಳು ಮತ್ತು ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದೂ ಹೊರಗೆ ಬರಲಿ. ಅವುಗಳ ಸಂತಾನವು ಹೆಚ್ಚೆಚ್ಚಾಗಲಿ; ಭೂಮಿಯ ಮೇಲೆಲ್ಲಾ ಅವು ತುಂಬಿಕೊಳ್ಳಲಿ” ಅಂದನು.

18 ಆದ್ದರಿಂದ ನೋಹನು ತನ್ನ ಹೆಂಡತಿ, ಗಂಡುಮಕ್ಕಳು ಮತ್ತು ಸೊಸೆಯರೊಂದಿಗೆ ನಾವೆಯಿಂದ ಹೊರಗೆ ಬಂದನು. 19 ಎಲ್ಲಾ ಪ್ರಾಣಿಗಳು, ಪಕ್ಷಿಗಳು, ಹರಿದಾಡುವ ಜೀವಿಗಳು ನಾವೆಯಿಂದ ಹೊರಬಂದವು.

20 ಆಮೇಲೆ ನೋಹನು ಯೆಹೋವನಿಗಾಗಿ ಒಂದು ಯಜ್ಞವೇದಿಕೆಯನ್ನು ಕಟ್ಟಿ ಶುದ್ಧವಾದ ಕೆಲವು ಪಶುಪಕ್ಷಿಗಳನ್ನು ತೆಗೆದುಕೊಂಡು ಅವುಗಳನ್ನು ದೇವರಿಗೆ ಯಜ್ಞವೇದಿಕೆಯ ಮೇಲೆ ಸರ್ವಾಂಗಹೋಮ ಮಾಡಿದನು.

21 ಈ ಯಜ್ಞಗಳ ಸುವಾಸನೆಯು ಯೆಹೋವನಿಗೆ ಮೆಚ್ಚಿಕೆಯಾಯಿತು. ಆಗ ಯೆಹೋವನು ತನ್ನೊಳಗೆ, “ಜನರನ್ನು ದಂಡಿಸುವುದಕ್ಕಾಗಿ ನಾನು ಇನ್ನೆಂದೂ ಭೂಮಿಯನ್ನು ಶಪಿಸುವುದಿಲ್ಲ. ಜನರು ಚಿಕ್ಕಂದಿನಿಂದಲೇ ಕೆಟ್ಟವರು. ಆದ್ದರಿಂದ ನಾನು ಇನ್ನೆಂದೂ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯನ್ನು ನಾಶಮಾಡುವುದಿಲ್ಲ; ಮತ್ತೆಂದೂ ನಾನು ಹೀಗೆ ಮಾಡುವುದಿಲ್ಲ. 22 ಭೂಮಿ ಇರುವವರೆಗೆ ಬಿತ್ತನೆಕಾಲ, ಸುಗ್ಗಿಕಾಲ ಯಾವಾಗಲೂ ಇರುತ್ತವೆ. ಹಿಮಕಾಲ, ಬೇಸಿಗೆಕಾಲ, ಚಳಿಗಾಲ, ಹಗಲು ಮತ್ತು ರಾತ್ರಿ ಯಾವಾಗಲೂ ಇದ್ದೇ ಇರುತ್ತವೆ” ಎಂದು ಅಂದುಕೊಂಡನು.

ಮತ್ತಾಯ 8

ಗುಣಮುಖನಾದ ಕುಷ್ಠರೋಗಿ

(ಮಾರ್ಕ 1:40-45; 5:12-16)

ಯೇಸು ಬೆಟ್ಟದಿಂದ ಕೆಳಗೆ ಇಳಿದು ಬಂದನು. ಜನರು ಗುಂಪುಗುಂಪಾಗಿ ಆತನನ್ನು ಹಿಂಬಾಲಿಸಿದರು. ಆಗ ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದನು. ಅವನು ಯೇಸುವಿನ ಮುಂದೆ ಅಡ್ಡಬಿದ್ದು, “ಪ್ರಭುವೇ, ನೀನು ಇಷ್ಟಪಟ್ಟರೆ ನನ್ನನ್ನು ಗುಣಪಡಿಸಬಲ್ಲೆ” ಎಂದನು.

ಯೇಸು ಅವನನ್ನು ಮುಟ್ಟಿ, “ನಿನ್ನನ್ನು ಗುಣಪಡಿಸಲು ನನಗೆ ಮನಸ್ಸಿದೆ, ಗುಣವಾಗು” ಎಂದನು. ಆ ಕ್ಷಣವೇ ಅವನ ಕುಷ್ಠರೋಗ ವಾಸಿಯಾಯಿತು. ಯೇಸು ಅವನಿಗೆ, “ಇದು ಹೇಗಾಯಿತೆಂಬುದನ್ನು ಯಾರಿಗೂ ಹೇಳಬೇಡ. ಈಗ ನೀನು ಹೋಗಿ ಯಾಜಕನಿಗೆ ನಿನ್ನ ಮೈಯನ್ನು ತೋರಿಸು. ಗುಣಹೊಂದಿದವರು ಮೋಶೆಯ ಆಜ್ಞೆಗನುಸಾರವಾಗಿ ಕೊಡತಕ್ಕ ಕಾಣಿಕೆಯನ್ನು ಅರ್ಪಿಸು. ನೀನು ಗುಣವಾದದ್ದಕ್ಕೆ ಅದು ಸಾಕ್ಷಿಯಾಗಿರುವುದು” ಎಂದು ಹೇಳಿದನು.[a]

ಆರೋಗ್ಯ ಹೊಂದಿದ ಅಧಿಕಾರಿಯ ಸೇವಕ

(ಲೂಕ 7:1-10; ಯೋಹಾನ 4:43-54)

ಯೇಸು ಕಪೆರ್ನೌಮ್ ಪಟ್ಟಣಕ್ಕೆ ಹೊರಟುಹೋದನು. ಆತನು ಪಟ್ಟಣಕ್ಕೆ ಪ್ರವೇಶಿಸಿದಾಗ ಸೈನ್ಯದ ಅಧಿಕಾರಿಯೊಬ್ಬನು ಬಂದು, “ಪ್ರಭುವೇ, ನನ್ನ ಸೇವಕನು ಕಾಯಿಲೆಯಿಂದ ಹಾಸಿಗೆಯ ಮೇಲಿದ್ದಾನೆ. ಅವನು ಬಹಳ ನೋವಿನಿಂದ ನರಳುತ್ತಿದ್ದಾನೆ” ಎಂದು ಸಹಾಯಕ್ಕಾಗಿ ಬೇಡಿಕೊಂಡನು.

ಯೇಸು ಆ ಅಧಿಕಾರಿಗೆ, “ನಾನು ಬಂದು ಅವನನ್ನು ಗುಣಪಡಿಸುತ್ತೇನೆ” ಎಂದು ಹೇಳಿದನು.

ಅದಕ್ಕೆ ಆ ಅಧಿಕಾರಿ, “ಪ್ರಭುವೇ, ನನ್ನ ಮನೆಗೆ ನೀನು ಬರುವಷ್ಟು ಯೋಗ್ಯತೆ ನನಗಿಲ್ಲ. ಅವನಿಗೆ ಗುಣವಾಗಲಿ ಎಂದು ನೀನು ಆಜ್ಞಾಪಿಸಿದರೆ ಸಾಕು, ಅವನಿಗೆ ಗುಣವಾಗುವುದು. ನಾನು ಸಹ ಬೇರೆ ಅಧಿಕಾರಿಗಳ ಅಧೀನದಲ್ಲಿದ್ದೇನೆ. ನನ್ನ ಅಧೀನದಲ್ಲಿ ಸಿಪಾಯಿಗಳಿದ್ದಾರೆ. ನಾನು ಒಬ್ಬ ಸಿಪಾಯಿಗೆ ‘ಹೋಗು’ ಅಂದರೆ ಅವನು ಹೋಗುತ್ತಾನೆ; ಮತ್ತೊಬ್ಬ ಸಿಪಾಯಿಗೆ ‘ಬಾ’ ಅಂದರೆ ಅವನು ಬರುತ್ತಾನೆ. ನಾನು ನನ್ನ ಸೇವಕನಿಗೆ, ‘ಇದನ್ನು ಮಾಡು’ ಅಂದರೆ ಅವನು ವಿಧೇಯತೆಯಿಂದ ಮಾಡುತ್ತಾನೆ. ನಿನಗೂ ಇದೇ ರೀತಿಯ ಅಧಿಕಾರವಿದೆ ಎಂದು ನನಗೆ ಗೊತ್ತಿದೆ” ಎಂದು ಹೇಳಿದನು.

10 ಇದನ್ನು ಕೇಳಿ ಯೇಸುವಿಗೆ ಆಶ್ಚರ್ಯವಾಯಿತು. ಯೇಸು ತನ್ನ ಸಂಗಡ ಇದ್ದವರಿಗೆ, “ನಾನು ಇಸ್ರೇಲಿನಲ್ಲಿಯೂ ಸಹ ಇಷ್ಟು ನಂಬಿಕೆಯುಳ್ಳ ವ್ಯಕ್ತಿಯನ್ನು ಕಾಣಲಿಲ್ಲ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಎಂದನು. 11 ಅನೇಕ ಜನರು ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಿಂದ ಬರುತ್ತಾರೆ. ಅವರು ಪರಲೋಕರಾಜ್ಯದಲ್ಲಿ ಅಬ್ರಹಾಮ, ಇಸಾಕ, ಯಾಕೋಬ ಇವರ ಸಂಗಡ ಕುಳಿತುಕೊಂಡು ಊಟಮಾಡುತ್ತಾರೆ. 12 ಪರಲೋಕರಾಜ್ಯವನ್ನು ಹೊಂದತಕ್ಕವರು ಹೊರಗೆ ಕತ್ತಲೆಗೆ ಎಸೆಯಲ್ಪಡುವರು. ಅಲ್ಲಿ ಅವರು ಗೋಳಾಡುವರು ಮತ್ತು ನೋವಿನಿಂದ ಹಲ್ಲುಗಳನ್ನು ಕಡಿಯುವರು” ಎಂದನು.

13 ಬಳಿಕ ಯೇಸು ಆ ಅಧಿಕಾರಿಗೆ, “ಮನೆಗೆ ಹೋಗು, ನೀನು ನಂಬಿದಂತೆಯೇ ನಿನ್ನ ಸೇವಕನಿಗೆ ಗುಣವಾಗುವುದು” ಎಂದನು. ಅದೇ ಸಮಯದಲ್ಲಿ ಅವನ ಸೇವಕನಿಗೆ ಗುಣವಾಯಿತು.

ಗುಣಮುಖರಾದ ವಿವಿಧ ಜನರು

(ಮಾರ್ಕ 1:29-34; ಲೂಕ 4:38-41)

14 ಯೇಸುವು ಪೇತ್ರನ ಮನೆಗೆ ಹೋದನು. ಅಲ್ಲಿ ಪೇತ್ರನ ಅತ್ತೆಯು ಬಹಳ ಜ್ವರದಿಂದ ಹಾಸಿಗೆಯಲ್ಲಿ ಮಲಗಿದ್ದನ್ನು ಯೇಸು ನೋಡಿದನು. 15 ಯೇಸು ಅವಳ ಕೈ ಮುಟ್ಟಿದಾಗ ಜ್ವರವು ಅವಳನ್ನು ಬಿಟ್ಟುಹೋಯಿತು. ಆಗ ಅವಳು ಮೇಲೆದ್ದು, ಆತನ ಸೇವೆಮಾಡಿದಳು.

16 ಅಂದು ಸಾಯಂಕಾಲ ಜನರು ದೆವ್ವದಿಂದ ಪೀಡಿತರಾಗಿದ್ದ ಅನೇಕರನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದರು. ಯೇಸುವು ಮಾತಿನಿಂದಲೇ ದೆವ್ವಗಳನ್ನು ಅವರಿಂದ ಓಡಿಸಿದನು; ಕಾಯಿಲೆಯಾಗಿದ್ದ ಜನರೆಲ್ಲರನ್ನೂ ಗುಣಪಡಿಸಿದನು.

17 “ಆತನು ನಮ್ಮ ಬೇನೆಗಳನ್ನು ತೆಗೆದುಕೊಂಡನು, ನಮ್ಮ ರೋಗಗಳನ್ನು ಹೊತ್ತುಕೊಂಡನು”(A)

ಎಂದು ಪ್ರವಾದಿಯಾದ ಯೆಶಾಯನು ಹೇಳಿದ್ದು ಇದರ ಮೂಲಕ ನೆರವೇರಿತು.

ಯೇಸುವನ್ನು ಹಿಂಬಾಲಿಸಿ

(ಲೂಕ 9:57-62)

18 ಯೇಸು ತನ್ನ ಸುತ್ತಲೂ ಇದ್ದ ಜನರೆಲ್ಲರನ್ನು ನೋಡಿ ತನ್ನ ಶಿಷ್ಯರಿಗೆ ಸರೋವರದ ಆಚೆಯ ತೀರಕ್ಕೆ ಹೋಗುವಂತೆ ಹೇಳಿದನು. 19 ಆಗ ಧರ್ಮೋಪದೇಶಕನು ಯೇಸುವಿನ ಬಳಿಗೆ ಬಂದು, “ಬೋಧಕನೇ, ನೀನು ಯಾವ ಸ್ಥಳಕ್ಕೆ ಹೋದರೂ ನಾನು ನಿನ್ನನ್ನು ಹಿಂಬಾಲಿಸುತ್ತೇನೆ” ಎಂದನು.

20 ಯೇಸು ಅವನಿಗೆ, “ನರಿಗಳಿಗೆ ಗುಹೆಗಳಿವೆ, ಪಕ್ಷಿಗಳಿಗೆ ಗೂಡುಗಳಿವೆ. ಆದರೆ ಮನುಷ್ಯಕುಮಾರನಿಗೆ ತಲೆ ಇಡುವಷ್ಟು ಸ್ಥಳವೂ ಇಲ್ಲ” ಅಂದನು.

21 ಶಿಷ್ಯರಲ್ಲಿ ಒಬ್ಬನು ಯೇಸುವಿಗೆ, “ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿಬರಲು ನನಗೆ ಅಪ್ಪಣೆಯಾಗಲಿ. ಆಮೇಲೆ ನಾನು ನಿನ್ನನ್ನು ಹಿಂಬಾಲಿಸುತ್ತೇನೆ” ಎಂದು ಹೇಳಿದನು.

22 ಆದರೆ ಯೇಸು ಅವನಿಗೆ, “ಸತ್ತವರೇ ತಮ್ಮಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಿಕೊಳ್ಳಲಿ. ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.

ಯೇಸುವಿನ ಆಜ್ಞೆಗೆ ಬಿರುಗಾಳಿಯ ವಿಧೇಯತೆ

(ಮಾರ್ಕ 4:35-41; ಲೂಕ 8:22-25)

23 ಯೇಸು ದೋಣಿಯೊಳಗೆ ಹೋದನು. ಆತನ ಶಿಷ್ಯರೂ ಆತನೊಂದಿಗೆ ಹೋದರು. 24 ದೋಣಿಯು ದಡವನ್ನು ಬಿಟ್ಟಮೇಲೆ ದೊಡ್ಡ ಬಿರುಗಾಳಿಯು ಸರೋವರದ ಮೇಲೆ ಪ್ರಾರಂಭವಾಯಿತು. ಅಲೆಗಳು ದೋಣಿಯನ್ನು ಮುಚ್ಚಿಕೊಂಡವು. ಆದರೆ ಯೇಸು ನಿದ್ರಿಸುತ್ತಿದ್ದನು. 25 ಯೇಸುವಿನ ಶಿಷ್ಯರು ಆತನ ಬಳಿಗೆ ಹೋಗಿ ಆತನನ್ನು ಎಬ್ಬಿಸಿ, “ಪ್ರಭುವೇ, ನಮ್ಮನ್ನು ರಕ್ಷಿಸು! ನಾವು ಮುಳುಗುತ್ತಿದ್ದೇವೆ!” ಎಂದು ಹೇಳಿದರು.

26 ಯೇಸು, “ನೀವು ಭಯಪಡುವುದೇಕೆ? ನಿಮ್ಮಲ್ಲಿ ಸಾಕಷ್ಟು ನಂಬಿಕೆಯಿಲ್ಲ” ಎಂದು ಉತ್ತರಿಸಿ ಎದ್ದುನಿಂತುಕೊಂಡು ಆ ದೊಡ್ಡ ಬಿರುಗಾಳಿಗೂ ಅಲೆಗಳಿಗೂ ಆಜ್ಞಾಪಿಸಿದನು. ಆ ಕೂಡಲೇ ಬಿರುಗಾಳಿ ನಿಂತುಹೋಯಿತು. ಸರೋವರ ಪ್ರಶಾಂತವಾಯಿತು.

27 ಜನರೆಲ್ಲರೂ ಆಶ್ಚರ್ಯಪಟ್ಟರು. “ಈತನು ಎಂತಹ ಮನುಷ್ಯ? ಬಿರುಗಾಳಿ ಮತ್ತು ನೀರು ಈತನಿಗೆ ವಿಧೇಯವಾಗುತ್ತವೆಯಲ್ಲಾ” ಎಂದು ಮಾತಾಡಿಕೊಂಡರು.

ದೆವ್ವದಿಂದ ಪೀಡಿತರಾಗಿದ್ದ ಇಬ್ಬರಿಗೆ ಬಿಡುಗಡೆ

(ಮಾರ್ಕ 5:1-20; ಲೂಕ 8:26-39)

28 ಯೇಸು ಸರೋವರದ ಮತ್ತೊಂದು ತೀರದಲ್ಲಿದ್ದ ಗದರೇನ ಪ್ರಾಂತ್ಯಕ್ಕೆ ಬಂದನು. ಅಲ್ಲಿ ದೆವ್ವಗಳಿಂದ ಪೀಡಿತರಾಗಿದ್ದ ಇಬ್ಬರು ಯೇಸುವಿನ ಬಳಿಗೆ ಬಂದರು. ಅವರು ಸಮಾಧಿಯ ಗವಿಗಳಲ್ಲಿ ವಾಸವಾಗಿದ್ದರು ಮತ್ತು ಬಹಳ ಅಪಾಯಕಾರಿಗಳಾಗಿದ್ದರು. ಆದ್ದರಿಂದ ಜನರು ಆ ಮಾರ್ಗದಲ್ಲಿ ಹೋಗುತ್ತಿರಲಿಲ್ಲ. 29 ಅವರಿಬ್ಬರು ಯೇಸುವಿನ ಬಳಿಗೆ ಬಂದು. “ನೀನು ನಮಗೆ ಏನು ಮಾಡಬೇಕೆಂದಿರುವೆ? ದೇವಕುಮಾರನೇ, ನೇಮಿತ ಕಾಲಕ್ಕಿಂತ ಮುಂಚೆಯೇ ನಮ್ಮನ್ನು ಶಿಕ್ಷಿಸಲು ಇಲ್ಲಿಗೆ ಬಂದೆಯಾ?” ಎಂದು ಗಟ್ಟಿಯಾಗಿ ಕೂಗಿಕೊಂಡರು.

30 ಆ ಸ್ಥಳದ ಹತ್ತಿರ ಹಂದಿಗಳ ದೊಡ್ಡ ಗುಂಪು ಮೇಯುತ್ತಿತ್ತು. 31 ಆ ದೆವ್ವಗಳು, “ನಾವು ಇವರಿಬ್ಬರನ್ನು ಬಿಟ್ಟುಹೋಗುವಂತೆ ನೀನು ಮಾಡಬೇಕೆಂದಿದ್ದರೆ, ದಯವಿಟ್ಟು ನಮ್ಮನ್ನು ಆ ಹಂದಿಗಳೊಳಗೆ ಕಳುಹಿಸು” ಎಂದು ಬೇಡಿಕೊಂಡವು.

32 ಯೇಸು ಅವುಗಳಿಗೆ, “ಹೋಗಿ” ಅಂದನು. ಆಗ ಆ ದೆವ್ವಗಳು ಅವರಿಬ್ಬರನ್ನು ಬಿಟ್ಟು ಹಂದಿಗಳೊಳಗೆ ಹೋದವು. ಕೂಡಲೇ ಹಂದಿಗಳೆಲ್ಲಾ ಗುಡ್ಡದ ಕೆಳಗೆ ಓಡಿ ಸರೋವರದಲ್ಲಿ ಬಿದ್ದು ನೀರಿನಲ್ಲಿ ಮುಳುಗಿಹೋದವು. 33 ಹಂದಿಗಳನ್ನು ಮೇಯಿಸುತ್ತಿದ್ದವರು ಪಟ್ಟಣದೊಳಕ್ಕೆ ಓಡಿಹೋಗಿ ಹಂದಿಗಳಿಗೂ ದೆವ್ವಗಳಿಂದ ಪೀಡಿತರಾಗಿದ್ದವರಿಗೂ ಸಂಭವಿಸಿದ್ದನ್ನು ಜನರಿಗೆ ತಿಳಿಸಿದರು. 34 ಆಗ ಪಟ್ಟಣದ ಜನರೆಲ್ಲರೂ ಯೇಸುವನ್ನು ನೋಡಲು ಹೋಗಿ, ತಮ್ಮ ಸ್ಥಳವನ್ನು ಬಿಟ್ಟುಹೋಗಬೇಕೆಂದು ಆತನನ್ನು ಬೇಡಿಕೊಂಡರು.

ಎಜ್ರ 8

ಎಜ್ರನೊಂದಿಗೆ ಹಿಂದಿರುಗಿದ ನಾಯಕರು

ಬಾಬಿಲೋನಿನಿಂದ ಜೆರುಸಲೇಮಿಗೆ ನನ್ನೊಂದಿಗೆ (ಎಜ್ರ) ಹೊರಟ ಇಸ್ರೇಲರ ಕುಲಪ್ರಧಾನರ ಮತ್ತು ಇತರ ಜನರ ವಿವರಗಳು ಹೀಗಿದೆ. ಅರಸನಾದ ಅರ್ತಷಸ್ತನ ಆಳ್ವಿಕೆಯ ಕಾಲದಲ್ಲಿ ನಾವು ಜೆರುಸಲೇಮಿಗೆ ಬಂದು ಸೇರಿದೆವು. ಬಂದವರ ಹೆಸರುಗಳು ಹೀಗಿವೆ:

ಫೀನೆಹಾಸನ ಸಂತತಿಯವರಲ್ಲಿ ಗೇರ್ಷೋಮ್; ಈತಾಮಾರನ ಸಂತತಿಯವರಲ್ಲಿ ದಾನಿಯೇಲನು; ದಾವೀದನ ಸಂತತಿಯವರಲ್ಲಿ ಹಟ್ಟೂಷ್;

ಶೆಕನ್ಯನ ಸಂತತಿಯವರಲ್ಲಿ ಪರೋಷ್, ಜೆಕರ್ಯ ಮತ್ತು ಬೇರೆ ನೂರೈವತ್ತು ಮಂದಿ ಗಂಡಸರು;

ಪಹತ್‌ಮೋವಾಬ್ ಸಂತತಿಯವರಲ್ಲಿ ಜೆರಹ್ಯನ ಮಗನಾದ ಎಲ್ಯೆಹೊವೇನೈ ಮತ್ತು ಇತರ ಇನ್ನೂರು ಮಂದಿ ಗಂಡಸರು;

ಜತ್ತೂವಿನ ಸಂತತಿಯವರಲ್ಲಿ ಯಹಜೀಯೇಲನ ಮಗನಾದ ಶೆಕನ್ಯ ಮತ್ತು ಇತರ ಮುನ್ನೂರು ಮಂದಿ ಗಂಡಸರು;

ಆದೀನನ ಸಂತತಿಯವರಲ್ಲಿ ಯೋನಾತಾನನ ಮಗನಾದ ಎಬೆದ್ ಮತ್ತು ಇತರ ಐವತ್ತು ಮಂದಿ ಗಂಡಸರು;

ಏಲಾಮಿನ ಸಂತತಿಯವರಲ್ಲಿ ಅತಲ್ಯನ ಮಗನಾದ ಯೆಶಾಯ ಮತ್ತು ಬೇರೆ ಎಪ್ಪತ್ತು ಮಂದಿ ಗಂಡಸರು;

ಶೆಫಟ್ಯನ ಸಂತತಿಯವರಲ್ಲಿ ಮೀಕಾಯೇಲನ ಮಗನಾದ ಜೆಬದ್ಯ ಮತ್ತು ಬೇರೆ ಎಂಭತ್ತು ಮಂದಿ ಗಂಡಸರು;

ಯೋವಾಬನ ಸಂತತಿಯವರಲ್ಲಿ ಯೆಹೀಯೇಲನ ಮಗನಾದ ಓಬದ್ಯ ಮತ್ತು ಇನ್ನೂರ ಹದಿನೆಂಟು ಮಂದಿ ಬೇರೆ ಗಂಡಸರು;

10 ಬಾನೀಯ ಸಂತತಿಯವರಲ್ಲಿ ಯೋಸಿಫ್ಯನ ಮಗನಾದ ಶೆಲೋಮೀತ್ ಮತ್ತು ನೂರ ಅರವತ್ತು ಮಂದಿ ಇತರ ಗಂಡಸರು;

11 ಬೇಬೈಯ ಸಂತತಿಯವರಿಂದ ಬೇಬೈಯ ಮಗನಾದ ಜೆಕರ್ಯ ಮತ್ತು ಇಪ್ಪತ್ತೆಂಟು ಮಂದಿ ಇತರರು;

12 ಅಜ್ಗಾದನ ಸಂತತಿಯವರಿಂದ ಹಕ್ಕಾಟಾನನ ಮಗನಾದ ಯೋಹಾನಾನ್ ಮತ್ತು ಇತರ ನೂರಹತ್ತು ಮಂದಿ ಗಂಡಸರು;

13 ಅದೋನೀಕಾಮಾನ ಕೊನೆಯ ಸಂತತಿಯವರಿಂದ ಎಲೀಫೆಲೆಟ್, ಎಮೀಯೇಲ್, ಶೆಮಾಯ ಮತ್ತು ಬೇರೆ ಅರವತ್ತು ಮಂದಿ ಗಂಡಸರು;

14 ಬಿಗ್ವೈಯ ಸಂತಿಯವರಲ್ಲಿ ಊತೈ, ಜಕ್ಕೂರ ಮತ್ತು ಎಪ್ಪತ್ತು ಮಂದಿ ಇತರ ಗಂಡಸರು.

ಮರಳಿ ಜೆರುಸಲೇಮಿಗೆ

15 ಎಜ್ರನಾದ ನಾನು ಅಹವಾ ಕಡೆಗೆ ಹರಿಯುವ ನದಿಯ ಬಳಿಗೆ ಬರುವಂತೆ ಮೇಲಿನ ಎಲ್ಲಾ ಜನರಿಗೆ ಹೇಳಿದೆ. ಆ ಸ್ಥಳದಲ್ಲಿ ನಾವು ಮೂರು ದಿನ ಇದ್ದೆವು. ಆ ಗುಂಪಿನಲ್ಲಿ ಯಾಜಕರೂ ಇದ್ದರು ಎಂದು ನಮಗೆ ತಿಳಿದುಬಂತು. ಆದರೆ ಲೇವಿಯರು ಅವರಲ್ಲಿ ಇರಲಿಲ್ಲ. 16 ಆಗ ನಾನು ಎಲಿಯೆಜರ್, ಅರೀಯೇಲ್, ಶೆಮಾಯ, ಎಲ್ನಾತಾನ್, ಯಾರೀಬ್, ಎಲ್ನಾತಾನ್, ನಾತಾನ್, ಜೆಕರ್ಯ ಮತ್ತು ಮೆಷುಲ್ಲಾಮ್ ಎಂಬ ನಾಯಕರನ್ನು ಕರೆದೆನು. ಅಲ್ಲದೆ (ಬೋಧಕರುಗಳಾದ) ಯೋಯಾರೀಬ್ ಮತ್ತು ಎಲ್ನಾತಾನ್ ಎಂಬವರನ್ನು ಕರೆದು 17 ಕಾಸಿಫ್ಯದ ಇದ್ದೋ ಎಂಬವರಲ್ಲಿಗೆ ಕಳುಹಿಸಿದೆನು. ಇವನು ಕಾಸಿಫ್ಯದ ನಿವಾಸಿಗಳ ನಾಯಕನಾಗಿದ್ದನು. ಇವನ ಸಂಬಂಧಿಕರು ಕಾಸಿಫ್ಯದ ದೇವಾಲಯದ ಸೇವಕರಾಗಿದ್ದಾರೆ. ನಾವು ಕಟ್ಟುವ ದೇವಾಲಯದಲ್ಲಿ ಸೇವೆ ಮಾಡುವವರನ್ನು ಇದ್ದೋ ಕಳುಹಿಸಬೇಕೆಂಬ ಉದ್ದೇಶದಿಂದಲೇ ನಾನು ಅವರನ್ನು ಅವರ ಬಳಿಗೆ ಕಳುಹಿಸಿದೆನು. 18 ದೇವರು ನಮ್ಮ ಸಂಗಡವಿದ್ದ ಕಾರಣ, ಇದ್ದೋವಿನ ಸಂಬಂಧಿಕರು ಇವರನ್ನು ಕಳುಹಿಸಿಕೊಟ್ಟರು: ಮಹ್ಲೀಯ ಸಂತತಿಯವರಲ್ಲಿ ಜಾಣನಾದ ಶೇರೇಬ್ಯ, ಮಹ್ಲೀಯು ಲೇವಿಯ ವಂಶದವನಾಗಿದ್ದನು. ಲೇವಿಯು ಇಸ್ರೇಲನ ಒಬ್ಬ ಮಗನಾಗಿದ್ದನು. ಅವರು ಸಹ ತಮ್ಮ ಗಂಡುಮಕ್ಕಳನ್ನು ಮತ್ತು ಸಹೋದರರನ್ನು ಕಳುಹಿಸಿದರು. ಒಟ್ಟಿನಲ್ಲಿ ಆ ಕುಟುಂಬದಿಂದ 18 ಮಂದಿ ಗಂಡಸರಿದ್ದರು. 19 ಅಲ್ಲದೆ ಮೆರಾರೀ ಸಂತತಿಯವರಾದ ಹಷಬ್ಯ ಮತ್ತು ಯೆಶಾಯ; ಇವರು ಸಹ ತಮ್ಮ ಸಹೋದರರನ್ನು ಮತ್ತು ಸಂಬಂಧಿಕರನ್ನು ಕಳುಹಿಸಿದರು. ಒಟ್ಟಿನಲ್ಲಿ ಆ ಕುಟುಂಬದಿಂದ ಇಪ್ಪತ್ತು ಮಂದಿ ಗಂಡಸರಿದ್ದರು. 20 ಇನ್ನೂರಿಪ್ಪತ್ತು ಮಂದಿ ದೇವಾಲಯದ ಸೇವಕರು; (ಇವರ ಪೂರ್ವಿಕರು ದಾವೀದನ ಕಾಲದಲ್ಲಿ ಲೇವಿಯರಿಗೆ ಸಹಾಯಕರಾಗಿ ಆರಿಸಲ್ಪಟ್ಟವರಾಗಿದ್ದರು. ಅವರೆಲ್ಲರ ಹೆಸರುಗಳನ್ನು ಪಟ್ಟಿಮಾಡಲಾಗಿದೆ.)

21 ಅಹವಾ ನದಿಯ ದಡದಲ್ಲಿದ್ದಾಗ ನಮಗೆ ಸುಖ ಪ್ರಯಾಣ ದೊರೆಯುವಂತೆ ಎಲ್ಲಾ ತರದ ತೊಂದರೆಗಳಿಂದ ಪಾರು ಮಾಡುವಂತೆ ಮತ್ತು ನಮ್ಮಲ್ಲಿರುವ ಸ್ವತ್ತುಗಳನ್ನು ಕಾಪಾಡುವಂತೆ ನಮ್ಮ ದೇವರಲ್ಲಿ ದೀನತೆಯಿಂದ ಉಪವಾಸ ಪ್ರಾರ್ಥನೆ ಮಾಡಬೇಕೆಂದು ನೆರೆದುಬಂದ ಜನರಿಗೆ ಪ್ರಕಟಿಸಿದೆನು. 22 ನಾವು ಪ್ರಯಾಣ ಮಾಡುವಾಗ ದಾರಿಯಲ್ಲಿ ಶತ್ರುಗಳಿದ್ದುದರಿಂದ ನಮ್ಮ ಸಂರಕ್ಷಣೆಗಾಗಿ ಸಿಪಾಯಿಗಳನ್ನು ಮತ್ತು ರಾಹುತರನ್ನು ಅರಸನಿಂದ ಕೇಳಲು ನನಗೆ ಸಂಕೋಚವಾಯಿತು. ಯಾಕೆಂದರೆ, “ನಮ್ಮ ದೇವರು ತನ್ನನ್ನು ನಂಬಿದವರೊಂದಿಗಿದ್ದಾನೆ; ಆತನಿಂದ ದೂರಹೋಗುವವರ ಮೇಲೆ ಆತನು ಕೋಪವುಳ್ಳವನಾಗಿದ್ದಾನೆ” ಎಂದು ರಾಜನಾದ ಅರ್ತಷಸ್ತನಿಗೆ ನಾವು ಹೇಳಿದ್ದೆವು. 23 ಹಾಗೆ ನಾವು ನಮ್ಮ ಪ್ರಯಾಣದ ಕುರಿತು ದೇವರಿಗೆ ಉಪವಾಸ ಪ್ರಾರ್ಥನೆ ಮಾಡಿದೆವು. ಆತನು ಅದನ್ನು ಅನುಗ್ರಹಿಸಿದನು.

24 ಆಮೇಲೆ ನಾನು ಯಾಜಕರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡೆನು. ಅವರು ಶೇರೇಬ್ಯ, ಹಷಬ್ಯ ಮತ್ತು ಅವರ ಹತ್ತು ಮಂದಿ ಸಹೋದರರು. 25 ದೇವಾಲಯಕ್ಕೆ ಕೊಟ್ಟಿರುವ ಬೆಳ್ಳಿಬಂಗಾರಗಳನ್ನು ಮತ್ತು ಇತರ ವಸ್ತುಗಳನ್ನು ನಾನು ತೂಗಿ ಆರಿಸಲ್ಪಟ್ಟಿದ್ದ ಹನ್ನೆರಡು ಮಂದಿಗೆ ಕೊಟ್ಟೆನು. ಅವುಗಳನ್ನು ಅರ್ತಷಸ್ತ ರಾಜನೂ ಅವನ ಸಲಹೆಗಾರರೂ ಉನ್ನತಾಧಿಕಾರಿಗಳೂ ಅಲ್ಲದೆ ಬಾಬಿಲೋನಿನಲ್ಲಿದ್ದ ಎಲ್ಲಾ ಇಸ್ರೇಲರು ದೇವಾಲಯಕ್ಕಾಗಿ ಕೊಟ್ಟಿದ್ದರು. 26 ನಾನು ಅವುಗಳನ್ನು ತೂಗಿದಾಗ ಇಪ್ಪತ್ತೆರಡು ಸಾವಿರದ ನೂರು ಕಿಲೋಗ್ರಾಂ ಬೆಳ್ಳಿಯೂ ಮೂರು ಸಾವಿರದ ನಾನೂರು ಕಿಲೋಗ್ರಾಂ ತೂಕದ ಬೆಳ್ಳಿಪಾತ್ರೆಗಳೂ ಮೂರು ಸಾವಿರದ ನಾನೂರು ಕಿಲೋಗ್ರಾಂ ತೂಕದ ಬಂಗಾರವೂ ಇದ್ದವು. 27 ನಾನು ಇಪ್ಪತ್ತು ಬಂಗಾರದ ಬೋಗುಣಿಗಳನ್ನು ಕೊಟ್ಟಿದ್ದೆನು. ಅವುಗಳ ಒಟ್ಟು ತೂಕ ಎಂಟುವರೆ ಕಿಲೋಗ್ರಾಂ ಆಮೇಲೆ ಎರಡು ಶ್ರೇಷ್ಠವಾದ ಶುದ್ಧ ತಾಮ್ರದ ಎರಡು ಪಾತ್ರೆಗಳನ್ನೂ ಕೊಟ್ಟೆನು. ಇವು ಬಂಗಾರದಷ್ಟೇ ಬೆಲೆ ಬಾಳುವಂತಹದ್ದಾಗಿದ್ದವು. 28 ಆ ಹನ್ನೆರಡು ಮಂದಿ ಯಾಜಕರಿಗೆ ನಾನು ಹೇಳಿದ್ದೇನೆಂದರೆ, “ನೀವು ಮತ್ತು ಈ ವಸ್ತುಗಳು ಯೆಹೋವನಿಗೆ ಪರಿಶುದ್ಧವಾದವುಗಳಾಗಿವೆ. ನಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಜನರು ಕಾಣಿಕೆ ಕೊಟ್ಟರು. 29 ಆದ್ದರಿಂದ ಭದ್ರವಾಗಿ ಇಟ್ಟುಕೊಳ್ಳಿರಿ. ಜೆರುಸಲೇಮಿನಲ್ಲಿರುವ ದೇವಾಲಯದ ಅಧಿಕಾರಿಗಳಿಗೆ, ಲೇವಿಯರಿಗೆ ಮತ್ತು ಇಸ್ರೇಲ್ ಕುಲಪ್ರಧಾನರಿಗೆ ಇವುಗಳನ್ನು ತಲುಪಿಸುವ ತನಕ ನೀವು ಇದಕ್ಕೆ ಜವಾಬ್ದಾರರಾಗಿದ್ದೀರಿ. ಅವರು ಇವುಗಳನ್ನು ತೂಗಿ ದೇವಾಲಯದ ಕೋಣೆಯಲ್ಲಿ ಭದ್ರವಾಗಿಡುವರು.”

30 ಎಜ್ರನು ತೂಕಮಾಡಿ ಕೊಟ್ಟ ಬೆಳ್ಳಿಬಂಗಾರಗಳನ್ನು ಮತ್ತು ಇತರ ವಿಶೇಷ ವಸ್ತುಗಳನ್ನು ಯಾಜಕರು ಮತ್ತು ಲೇವಿಯರು ಸ್ವೀಕರಿಸಿ ಜೆರುಸಲೇಮಿನಲ್ಲಿರುವ ದೇವಾಲಯಕ್ಕೆ ತಲುಪಿಸುವ ಜವಾಬ್ದಾರಿಕೆ ಹೊತ್ತರು.

31 ಮೊದಲನೆಯ ತಿಂಗಳಿನ ಹನ್ನೆರಡನೆಯ ದಿನ ನಾವು ಅಹವಾ ನದಿಯ ದಡವನ್ನು ಬಿಟ್ಟು ಜೆರುಸಲೇಮಿಗೆ ಹೊರಟೆವು. ದೇವರು ನಮ್ಮೊಂದಿಗಿದ್ದು ಶತ್ರುಗಳಿಂದಲೂ ಕಳ್ಳರಿಂದಲೂ ನಮ್ಮನ್ನು ಸಂರಕ್ಷಿಸಿ ಕಾಪಾಡಿದನು. 32 ಜೆರುಸಲೇಮಿಗೆ ಬಂದು ಮೂರು ದಿನ ವಿಶ್ರಾಂತಿ ತೆಗೆದುಕೊಂಡೆವು. 33 ನಾಲ್ಕನೆಯ ದಿನ ನಾವು ದೇವಾಲಯಕ್ಕೆ ಹೋಗಿ ಅಲ್ಲಿ ಬೆಳ್ಳಿ, ಚಿನ್ನ ಮತ್ತು ಇತರ ಶ್ರೇಷ್ಠವಸ್ತುಗಳನ್ನು ತೂಗಿ ಯಾಜಕನಾದ ಊರೀಯನ ಮಗನಾದ ಮೆರೇಮೋತನಿಗೆ ಒಪ್ಪಿಸಿದೆವು. ಫೀನೆಹಾಸನ ಮಗನಾದ ಎಲ್ಲಾಜಾರನು ಮೆರೇಮೋತನ ಸಂಗಡವಿದ್ದನು. ಲೇವಿಯರಾದ ಯೇಷೂವನ ಮಗನಾದ ಯೋಜಾಬಾದನು ಮತ್ತು ಬಿನ್ನೂಯನ ಮಗನಾದ ನೋವದ್ಯನು ಅವರ ಸಂಗಡ ಇದ್ದರು. 34 ನಾವು ಎಲ್ಲಾ ವಸ್ತುಗಳನ್ನು ತೂಗಿ ಪಟ್ಟಿಯಲ್ಲಿ ಬರೆದಿಟ್ಟೆವು.

35 ಆಮೇಲೆ ಸೆರೆಯಿಂದ ಹಿಂತಿರುಗಿಬಂದ ಯೆಹೂದ್ಯರು ಇಸ್ರೇಲ್ ದೇವರಿಗೆ ಇಸ್ರೇಲರ ಎಲ್ಲಾ ಕುಲಗಳವರಿಗಾಗಿ ಹನ್ನೆರಡು ಹೋರಿಗಳನ್ನು, ತೊಂಭತ್ತಾರು ಟಗರುಗಳನ್ನು, ಎಪ್ಪತ್ತೇಳು ಗಂಡು ಕುರಿಗಳನ್ನು ಮತ್ತು ಹನ್ನೆರಡು ಗಂಡು ಆಡುಗಳನ್ನು ಸರ್ವಾಂಗಹೋಮ ಯಜ್ಞವನ್ನಾಗಿಯೂ ಮತ್ತು ಪಾಪಪರಿಹಾರಕ ಯಜ್ಞವನ್ನಾಗಿಯೂ ಸಮರ್ಪಿಸಿದರು.

36 ಅರಸನಾದ ಅರ್ತಷಸ್ತನು ಕೊಟ್ಟಿದ್ದ ರಾಜಾಜ್ಞೆಯ ಪತ್ರವನ್ನು ಯೂಫ್ರೇಟೀಸ್ ನದಿಯ ಪಶ್ಚಿಮಪ್ರಾಂತ್ಯದ ರಾಜ್ಯಪಾಲರಿಗೂ ಸಂಸ್ಥಾನಾಧಿಕಾರಿಗಳಿಗೂ ಕೊಟ್ಟಾಗ ಅವರು ಇಸ್ರೇಲ್ ಜನರಿಗೂ ಅವರ ದೇವಾಲಯಕ್ಕೂ ಸಂಪೂರ್ಣ ಸಹಕಾರವನ್ನೂ ಬೆಂಬಲವನ್ನೂ ಕೊಟ್ಟರು.

ಅಪೊಸ್ತಲರ ಕಾರ್ಯಗಳು 8

1-3 ಸ್ತೆಫನನ ಕೊಲೆಗೆ ಸೌಲನ ಸಮ್ಮತಿಯಿತ್ತು. ಕೆಲವು ಭಕ್ತರು ಸ್ತೆಫನನನ್ನು ಸಮಾಧಿ ಮಾಡಿದರು. ಅವರು ಅವನಿಗೋಸ್ಕರ ಬಹಳವಾಗಿ ಗೋಳಾಡಿದರು.

ವಿಶ್ವಾಸಿಗಳಿಗೆ ಹಿಂಸೆ

ಜೆರುಸಲೇಮಿನಲ್ಲಿದ್ದ ವಿಶ್ವಾಸಿಗಳ ಸಮುದಾಯವನ್ನು ಹಿಂಸಿಸಲು ಯೆಹೂದ್ಯರು ಅಂದೇ ಆರಂಭಿಸಿ ಅವರನ್ನು ಬಹಳವಾಗಿ ಸಂಕಟಪಡಿಸಿದರು. ಆ ಸಭೆಯನ್ನು ನಾಶಮಾಡಲು ಸೌಲನು ಮನೆಗಳಿಗೆ ನುಗ್ಗಿ ಗಂಡಸರನ್ನೂ ಹೆಂಗಸರನ್ನೂ ಎಳೆದೊಯ್ದು ಸೆರೆಮನೆಗೆ ಹಾಕಿದನು. ವಿಶ್ವಾಸಿಗಳೆಲ್ಲಾ ಜೆರುಸಲೇಮನ್ನು ಬಿಟ್ಟುಹೋದರು. ಅಪೊಸ್ತಲರು ಮಾತ್ರ ಅಲ್ಲೇ ಇದ್ದರು. ವಿಶ್ವಾಸಿಗಳು ಜುದೇಯ ಮತ್ತು ಸಮಾರ್ಯದ ಬೇರೆಬೇರೆ ಸ್ಥಳಗಳಿಗೆ ಹೊರಟುಹೋದರು. ವಿಶ್ವಾಸಿಗಳು ಎಲ್ಲೆಲ್ಲಿಯೂ ಚದರಿಹೋದರು. ವಿಶ್ವಾಸಿಗಳು ತಾವು ಹೋದ ಪ್ರತಿಯೊಂದು ಸ್ಥಳದಲ್ಲಿಯೂ ಜನರಿಗೆ ಸುವಾರ್ತೆಯನ್ನು ತಿಳಿಸಿದರು.

ಸಮಾರ್ಯದಲ್ಲಿ ಫಿಲಿಪ್ಪನ ಉಪದೇಶ

ಫಿಲಿಪ್ಪನು ಸಮಾರ್ಯ ಪಟ್ಟಣಕ್ಕೆ ಹೋಗಿ ಕ್ರಿಸ್ತನ ಬಗ್ಗೆ ಉಪದೇಶಿಸಿದನು. ಫಿಲಿಪ್ಪನು ಹೇಳುವುದನ್ನು ಅಲ್ಲಿನ ಜನರು ಕೇಳಿದರು. ಅವನು ಮಾಡುತ್ತಿದ್ದ ಅದ್ಭುತಕಾರ್ಯಗಳನ್ನು ನೋಡಿದರು. ಅವನು ಹೇಳಿದ ಸಂಗತಿಗಳನ್ನು ಗಮನವಿಟ್ಟು ಕೇಳಿದರು. ಈ ಜನರಲ್ಲಿ ಅನೇಕರು ದೆವ್ವಗಳಿಂದ ಪೀಡಿತರಾಗಿದ್ದರು. ಫಿಲಿಪ್ಪನು ಆ ದೆವ್ವಗಳನ್ನು ಅವರೊಳಗಿಂದ ಹೊರಡಿಸಿದಾಗ ಅವು ಅಬ್ಬರಿಸುತ್ತಾ ಹೊರಬಂದವು. ಅಲ್ಲಿದ್ದ ಅನೇಕ ಬಲಹೀನರನ್ನು, ಕುಂಟರನ್ನು ಸಹ ಫಿಲಿಪ್ಪನು ಗುಣಪಡಿಸಿದನು. ಇದರಿಂದಾಗಿ ಆ ಪಟ್ಟಣದಲ್ಲಿದ್ದ ಜನರು ಬಹು ಸಂತೋಷಗೊಂಡರು.

ಆದರೆ ಆ ಪಟ್ಟಣದಲ್ಲಿ ಸಿಮೋನ ಎಂಬ ಒಬ್ಬನಿದ್ದನು. ಫಿಲಿಪ್ಪನು ಅಲ್ಲಿಗೆ ಬರುವುದಕ್ಕಿಂತ ಮೊದಲಿನಿಂದಲೂ ಸಿಮೋನನು ಮಂತ್ರತಂತ್ರಗಳನ್ನು ಮಾಡುತ್ತಿದ್ದನು. ಅವನು ತನ್ನ ತಂತ್ರಗಳಿಂದ ಸಮಾರ್ಯದ ಜನರೆಲ್ಲರನ್ನು ವಿಸ್ಮಯಗೊಳಿಸಿದ್ದನು. ಸಿಮೋನನು ತನ್ನನ್ನು ಮಹಾವ್ಯಕ್ತಿಯೆಂದು ಹೇಳಿಕೊಂಡು ಜಂಭಪಡುತ್ತಿದ್ದನು. 10 ಎಲ್ಲಾ ಜನರು ಅಂದರೆ ಕನಿಷ್ಠರಾದವರು ಮತ್ತು ಅತಿಮುಖ್ಯರಾದವರು ಸಿಮೋನನು ಹೇಳಿದ ಸಂಗತಿಗಳನ್ನು ನಂಬಿದ್ದರು. “ಈ ಮನುಷ್ಯನಲ್ಲಿ ‘ಮಹಾಶಕ್ತಿ’ ಎಂಬ ದೇವರ ಶಕ್ತಿಯಿದೆ!” ಎಂದು ಜನರು ಅವನ ಬಗ್ಗೆ ಹೇಳುತ್ತಿದ್ದರು. 11 ಸಿಮೋನನು ತನ್ನ ಮಂತ್ರತಂತ್ರಗಳಿಂದ ಜನರನ್ನು ಬಹುಕಾಲದಿಂದಲೂ ವಿಸ್ಮಯಗೊಳಿಸಿದ್ದರಿಂದ ಜನರು ಅವನ ಹಿಂಬಾಲಕರಾಗಿದ್ದರು. 12 ಆದರೆ ಫಿಲಿಪ್ಪನು ದೇವರ ರಾಜ್ಯದ ಬಗ್ಗೆ ಮತ್ತು ಯೇಸುಕ್ರಿಸ್ತನ ಶಕ್ತಿಯ ಬಗ್ಗೆ ಜನರಿಗೆ ಸುವಾರ್ತೆಯನ್ನು ಹೇಳಿದನು. ಗಂಡಸರು ಮತ್ತು ಹೆಂಗಸರು ಫಿಲಿಪ್ಪನು ಹೇಳಿದ್ದನ್ನು ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡರು. 13 ಸಿಮೋನನು ಸಹ ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡನು. ಸಿಮೋನನು ಫಿಲಿಪ್ಪನ ಸಮೀಪದಲ್ಲೇ ಇದ್ದನು. ಫಿಲಿಪ್ಪನು ಮಾಡಿದ ಅದ್ಭುತಕಾರ್ಯಗಳನ್ನು ಮತ್ತು ಸೂಚಕಕಾರ್ಯಗಳನ್ನು ಸಿಮೋನನು ನೋಡಿ ವಿಸ್ಮಿತನಾದನು.

14 ಅಪೊಸ್ತಲರು ಇನ್ನೂ ಜೆರುಸಲೇಮಿನಲ್ಲಿದ್ದರು. ಸಮಾರ್ಯದ ಜನರು ದೇವರ ವಾಕ್ಯವನ್ನು ಸ್ವೀಕರಿಸಿಕೊಂಡರೆಂಬುದು ಅವರಿಗೆ ತಿಳಿಯಿತು. ಆದ್ದರಿಂದ ಅಪೊಸ್ತಲರು ಪೇತ್ರ ಮತ್ತು ಯೋಹಾನರನ್ನು ಸಮಾರ್ಯದ ಜನರ ಬಳಿಗೆ ಕಳುಹಿಸಿದರು. 15 ಪೇತ್ರ ಮತ್ತು ಯೋಹಾನರು ಅಲ್ಲಿಗೆ ಬಂದು ಸಮಾರ್ಯದ ವಿಶ್ವಾಸಿಗಳಿಗೂ ಪವಿತ್ರಾತ್ಮನು ದೊರೆಯಬೇಕೆಂದು ಅವರಿಗಾಗಿ ಪ್ರಾರ್ಥಿಸಿದರು. 16 ಈ ಜನರು ಪ್ರಭುವಾದ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದರು. ಆದರೆ ಪವಿತ್ರಾತ್ಮನು ಅವರಲ್ಲಿ ಯಾರ ಮೇಲೆಯೂ ಇನ್ನೂ ಇಳಿದು ಬಂದಿರಲಿಲ್ಲ. ಈ ಕಾರಣದಿಂದಲೇ ಪೇತ್ರ ಮತ್ತು ಯೋಹಾನರು ಪ್ರಾರ್ಥಿಸಿದರು. 17 ಈ ಇಬ್ಬರು ಅಪೊಸ್ತಲರು ಅವರ ಮೇಲೆ ತಮ್ಮ ಕೈಗಳನ್ನಿಟ್ಟಾಗ ಅವರು ಪವಿತ್ರಾತ್ಮನನ್ನು ಹೊಂದಿಕೊಂಡರು.

18 ಅಪೊಸ್ತಲರು ಜನರ ಮೇಲೆ ತಮ್ಮ ಕೈಗಳನ್ನಿಟ್ಟಾಗ ಜನರಿಗೆ ಪವಿತ್ರಾತ್ಮನು ದೊರೆತ್ತಿದ್ದನ್ನು ಸಿಮೋನನು ಕಂಡನು. ಆದ್ದರಿಂದ ಸಿಮೋನನು ಅಪೊಸ್ತಲರಿಗೆ ಹಣವನ್ನು ನೀಡುತ್ತಾ, 19 “ನಾನು ಯಾರ ಮೇಲೆ ಕೈಯಿಟ್ಟರೂ ಅವರಿಗೆ ಪವಿತ್ರಾತ್ಮನು ದೊರೆಯುವಂಥ ಶಕ್ತಿಯನ್ನು ನನಗೆ ಕೊಡಿರಿ” ಎಂದು ಹೇಳಿದನು.

20 ಪೇತ್ರನು ಸಿಮೋನನಿಗೆ, “ನೀನೂ ನಾಶವಾಗು! ನಿನ್ನ ಹಣವೂ ನಾಶವಾಗಲಿ! ದೇವರ ವರವನ್ನು ಹಣದಿಂದ ಕೊಂಡುಕೊಳ್ಳಬಹುದೆಂದು ನೀನು ಭಾವಿಸಿದೆ. 21 ಈ ಕಾರ್ಯದಲ್ಲಿ ನೀನು ನಮ್ಮೊಂದಿಗೆ ಭಾಗಿಯಾಗಲು ಸಾಧ್ಯವಿಲ್ಲ. ನಿನ್ನ ಹೃದಯವು ದೇವರ ಮುಂದೆ ಸರಿಯಾಗಿಲ್ಲ. 22 ನಿನ್ನ ಹೃದಯವನ್ನು ಮಾರ್ಪಡಿಸಿಕೊ! ನೀನು ಮಾಡಿದ ಕೆಟ್ಟಕಾರ್ಯದಿಂದ ತಿರುಗಿಕೊ. ಪ್ರಭುವಿನಲ್ಲಿ ಪ್ರಾರ್ಥಿಸು. ನೀನು ಹೀಗೆ ಆಲೋಚಿಸಿದ್ದನ್ನು ಆತನು ಕ್ಷಮಿಸಬಹುದು. 23 ನೀನು ಅತೀವ ಅಸೂಯೆಯಿಂದ ತುಂಬಿದವನೂ ಪಾಪದ ಆಳ್ವಿಕೆಗೆ ಒಳಗಾದವನೂ ಆಗಿರುವೆ” ಎಂದು ಹೇಳಿದನು.

24 ಸಿಮೋನನು, “ನೀವಿಬ್ಬರೂ ನನಗೋಸ್ಕರ ಪ್ರಭುವಿನಲ್ಲಿ ಪ್ರಾರ್ಥಿಸಿ. ನೀವು ಹೇಳಿದ ಸಂಗತಿಗಳು ನನಗಾಗದಂತೆ ಪ್ರಾರ್ಥಿಸಿ!” ಎಂದು ಕೇಳಿಕೊಂಡನು.

25 ಬಳಿಕ ಆ ಇಬ್ಬರು ಅಪೊಸ್ತಲರು ತಾವು ಕಂಡ ಯೇಸುವಿನ ಕಾರ್ಯಗಳನ್ನು ಜನರಿಗೆ ತಿಳಿಸಿದರು. ಅಪೊಸ್ತಲರು ಜನರಿಗೆ ಪ್ರಭುವಿನ ಸಂದೇಶವನ್ನು ತಿಳಿಸಿದರು. ಆಮೇಲೆ ಅವರು ಜೆರುಸಲೇಮಿಗೆ ಹಿಂತಿರುಗಿದರು. ದಾರಿಯಲ್ಲಿ ಅವರು ಸಮಾರ್ಯದ ಅನೇಕ ಊರುಗಳಿಗೆ ಹೋಗಿ ಜನರಿಗೆ ಸುವಾರ್ತೆಯನ್ನು ತಿಳಿಸಿದರು.

ಫಿಲಿಪ್ಪನು ಇಥಿಯೋಪಿಯದವನಿಗೆ ನೀಡಿದ ಉಪದೇಶ

26 ಪ್ರಭುವಿನ ದೂತನೊಬ್ಬನು ಫಿಲಿಪ್ಪನಿಗೆ, “ನೀನು ಸಿದ್ಧನಾಗಿ ದಕ್ಷಿಣದ ಕಡೆಗೆ ಅಂದರೆ ಜೆರುಸಲೇಮಿನಿಂದ ಗಾಜಾಕ್ಕೆ ಹೋಗುವ ಮರಳುಗಾಡಿನ ಮಾರ್ಗಕ್ಕೆ ಹೋಗು” ಎಂದು ಹೇಳಿದನು.

27 ಆದ್ದರಿಂದ ಫಿಲಿಪ್ಪನು ಸಿದ್ಧನಾಗಿ ಹೊರಟನು. ಇಥಿಯೋಪಿಯಾದ ಒಬ್ಬನನ್ನು ಅವನು ದಾರಿಯಲ್ಲಿ ಕಂಡನು. ಈ ಮನುಷ್ಯನು ನಪುಂಸಕನಾಗಿದ್ದನು. ಇಥಿಯೋಪಿಯದ ರಾಣಿಯಾದ ಕಂದಾಕೆಯ ಆಸ್ಥಾನದಲ್ಲಿ ಇವನು ಮುಖ್ಯಾಧಿಕಾರಿಯಾಗಿದ್ದನು. ಹಣವನ್ನೆಲ್ಲ ನೋಡಿಕೊಳ್ಳುವ ಜವಾಬ್ದಾರಿ ಇವನದೇ ಆಗಿತ್ತು. ಈ ಮನುಷ್ಯನು ಆರಾಧನೆಗಾಗಿ ಜೆರುಸಲೇಮಿಗೆ ಹೋಗಿದ್ದನು. 28 ಈಗ ಅವನು ತನ್ನ ಮನೆಗೆ ಮರಳಿ ಹೋಗುತ್ತಿದ್ದನು. ಅವನು ತನ್ನ ರಥದಲ್ಲಿ ಕುಳಿತುಕೊಂಡು ಯೆಶಾಯನ ಗ್ರಂಥವನ್ನು ಓದುತ್ತಿದ್ದನು.

29 ಪವಿತ್ರಾತ್ಮನು ಫಿಲಿಪ್ಪನಿಗೆ, “ರಥದ ಬಳಿಗೆ ಹೋಗಿ ಅದರ ಸಮೀಪದಲ್ಲಿ ನಿಂತುಕೊ” ಎಂದು ಹೇಳಿದನು. 30 ಅಂತೆಯೇ ಫಿಲಿಪ್ಪನು ರಥದ ಬಳಿಗೆ ಹೋದನು. ಆ ಮನುಷ್ಯನು ಓದುತ್ತಿರುವುದು ಅವನಿಗೆ ಕೇಳಿಸಿತು. ಅವನು ಯೆಶಾಯನ ಪ್ರವಾದನಾ ಗ್ರಂಥವನ್ನು ಓದುತ್ತಿದ್ದನು. ಫಿಲಿಪ್ಪನು ಅವನಿಗೆ, “ನೀನು ಓದುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೋ?” ಎಂದು ಕೇಳಿದನು.

31 ಆ ಅಧಿಕಾರಿಯು “ನಾನು ಹೇಗೆ ಅರ್ಥಮಾಡಿಕೊಳ್ಳಲಿ? ಬೇರೆ ಯಾರಾದರೂ ನನಗೆ ಅದನ್ನು ವಿವರಿಸಬೇಕು!” ಎಂದು ಉತ್ತರಕೊಟ್ಟನು. ಬಳಿಕ, ರಥವನ್ನು ಹತ್ತಿ ತನ್ನೊಂದಿಗೆ ಕುಳಿತುಕೊಳ್ಳುವಂತೆ ಅವನು ಫಿಲಿಪ್ಪನನ್ನು ಆಹ್ವಾನಿಸಿದನು. 32 ಅವನು ಓದುತ್ತಿದ್ದ ಪವಿತ್ರ ಗ್ರಂಥದ ಭಾಗವು ಇಂತಿದೆ:

“ವಧ್ಯಸ್ಥಾನಕ್ಕೆ ಒಯ್ದ ಕುರಿಯಂತೆ ಆತನಿದ್ದನು.
ಉಣ್ಣೆ ಕತ್ತರಿಸುವವನ ಮುಂದೆ ಮೌನವಾಗಿರುವ ಕುರಿಯಂತೆ ಆತನಿದ್ದನು.
    ಆತನು ಬಾಯಿ ತೆರೆಯಲಿಲ್ಲ.
33 ಆತನಿಗೆ ಅವಮಾನ ಮಾಡಿದರು. ಆತನಿಗೆ ನ್ಯಾಯವು ದೊರೆಯಲಿಲ್ಲ.
ಆತನ ಜೀವವನ್ನು ಭೂಮಿಯ ಮೇಲಿನಿಂದ ತೆಗೆದುಬಿಟ್ಟರಲ್ಲಾ!
    ಆತನ ಸಂತತಿಯವರ ಬಗ್ಗೆ ಯಾರು ಮಾತಾಡಬಲ್ಲರು?”(A)

34 ಅವನು ಫಿಲಿಪ್ಪನಿಗೆ, “ದಯವಿಟ್ಟು ನನಗೆ ಹೇಳು, ಯಾವ ಪ್ರವಾದಿಯ ಬಗ್ಗೆ ಇಲ್ಲಿ ಹೇಳುತ್ತಿದ್ದಾನೆ? ಅವನು ತನ್ನ ಬಗ್ಗೆ ಹೇಳುತ್ತಿದ್ದಾನೋ ಅಥವಾ ಬೇರೊಬ್ಬನ ಬಗ್ಗೆ ಹೇಳುತ್ತಿದ್ದಾನೋ?” ಎಂದು ಕೇಳಿದನು. 35 ಫಿಲಿಪ್ಪನು ಪವಿತ್ರ ಗ್ರಂಥದ ಈ ಭಾಗದಿಂದಲೇ ಆರಂಭಿಸಿ ಯೇಸುವಿನ ವಿಷಯವಾದ ಸುವಾರ್ತೆಯನ್ನು ಅವನಿಗೆ ತಿಳಿಸಿದನು.

36 ಅವರು ಪ್ರಯಾಣ ಮಾಡುತ್ತಾ ನೀರಿದ್ದ ಒಂದು ಸ್ಥಳಕ್ಕೆ ಬಂದಾಗ ಅಧಿಕಾರಿಯು, “ಇಗೋ! ಇಲ್ಲಿ ನೀರಿದೆ! ನಾನು ದೀಕ್ಷಾಸ್ನಾನ ತೆಗೆದುಕೊಳ್ಳಲು ಏನಾದರೂ ಅಡ್ಡಿಯಿದೆಯೇ?” ಎಂದು ಫಿಲಿಪ್ಪನನ್ನು ಕೇಳಿದನು. 37 [a] 38 ಬಳಿಕ ಅವನು ರಥವನ್ನು ನಿಲ್ಲಿಸಬೇಕೆಂದು ಆಜ್ಞಾಪಿಸಿದನು. ಅವರಿಬ್ಬರೂ ನೀರಿನೊಳಗೆ ಇಳಿದುಹೋದರು. ಫಿಲಿಪ್ಪನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು. 39 ಅವರು ನೀರಿನಿಂದ ಮೇಲಕ್ಕೆ ಬಂದಾಗ ಪ್ರಭುವಿನ ಆತ್ಮನಿಂದ ಫಿಲಿಪ್ಪನು ಎತ್ತಲ್ಪಟ್ಟನು. ಅವನು ಫಿಲಿಪ್ಪನನ್ನು ಮತ್ತೆಂದೂ ನೋಡಲಿಲ್ಲ. ಅವನು ಬಹಳ ಸಂತೋಷದಿಂದ ತನ್ನ ಪ್ರಯಾಣವನ್ನು ಮುಂದುವರಿಸಿದನು. 40 ಆದರೆ ಫಿಲಿಪ್ಪನು ಅಜೋತ್ ಎಂಬ ಪಟ್ಟಣದಲ್ಲಿ ಕಾಣಿಸಿಕೊಂಡು ಸೆಜರೇಯ ಎಂಬ ಪಟ್ಟಣಕ್ಕೆ ಹೋದನು. ಅಲ್ಲಿಗೆ ಹೋಗುವಾಗ ದಾರಿಯಲ್ಲಿ ಸಿಕ್ಕಿದ ಎಲ್ಲಾ ಊರುಗಳಲ್ಲಿಯೂ ಸುವಾರ್ತೆಯನ್ನು ಸಾರಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International