Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 7

ಜಲಪ್ರಳಯದ ಪ್ರಾರಂಭ

ಆಮೇಲೆ ಯೆಹೋವನು ನೋಹನಿಗೆ, “ಈ ಕಾಲದವರಲ್ಲಿ ನೀನೊಬ್ಬನೇ ನೀತಿವಂತನಾಗಿರುವೆ. ಆದ್ದರಿಂದ ನಿನ್ನ ಕುಟುಂಬದವರೆಲ್ಲರನ್ನು ಕರೆದುಕೊಂಡು ನಾವೆಯೊಳಗೆ ಹೋಗು. ಎಲ್ಲಾ ಬಗೆಯ ಶುದ್ಧಪ್ರಾಣಿಗಳಲ್ಲಿ ಏಳೇಳು ಜೋಡಿಗಳನ್ನು (ಏಳು ಗಂಡನ್ನು ಮತ್ತು ಏಳು ಹೆಣ್ಣನ್ನು) ತೆಗೆದುಕೊ. ಭೂಮಿಯ ಮೇಲಿನ ಇತರ ಪ್ರಾಣಿಗಳಲ್ಲಿ ಒಂದೊಂದು ಜೋಡಿಯನ್ನು (ಒಂದು ಗಂಡನ್ನು ಮತ್ತು ಒಂದು ಹೆಣ್ಣನ್ನು) ತೆಗೆದುಕೊ. ಎಲ್ಲಾ ಬಗೆಯ ಪಕ್ಷಿಗಳಲ್ಲಿ ಏಳೇಳು ಜೋಡಿಗಳನ್ನು (ಏಳು ಗಂಡನ್ನು ಮತ್ತು ಏಳು ಹೆಣ್ಣನ್ನು) ತೆಗೆದುಕೊ. ಉಳಿದ ಜೀವಿಗಳೆಲ್ಲ ನಾಶವಾದಮೇಲೆ, ಇವು ತಮ್ಮ ಸಂತತಿಗಳನ್ನು ಮುಂದುವರಿಸಲಿ. ಏಳು ದಿನಗಳ ನಂತರ ನಾನು ದೊಡ್ಡ ಮಳೆಯನ್ನು ಭೂಮಿಯ ಮೇಲೆ ಸುರಿಸುವೆನು. ಈ ಮಳೆಯು ನಲವತ್ತು ದಿವಸ ಹಗಲಿರುಳು ಸುರಿಯುವುದು. ನಾನು ನಿರ್ಮಿಸಿದ ಪ್ರತಿಯೊಂದು ಜೀವಿಯನ್ನೂ ನಾನು ಭೂಮಿಯ ಮೇಲಿಂದ ಅಳಿಸಿಬಿಡುವೆನು” ಎಂದು ಹೇಳಿದನು. ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ನೋಹನು ಮಾಡಿದನು.

ಮಳೆಯು ಆರಂಭವಾದಾಗ ನೋಹನ ವಯಸ್ಸು ಆರುನೂರು ವರ್ಷ. ಜಲಪ್ರಳಯದಿಂದ ತಪ್ಪಿಸಿಕೊಳ್ಳಲು ನೋಹನು ತನ್ನ ಹೆಂಡತಿ, ತನ್ನ ಗಂಡುಮಕ್ಕಳು ಮತ್ತು ಸೊಸೆಯರೊಂದಿಗೆ ನಾವೆಯೊಳಗೆ ಹೋದನು. ಎಲ್ಲಾ ಶುದ್ಧಪ್ರಾಣಿಗಳು, ಭೂಮಿಯ ಮೇಲಿರುವ ಇತರ ಎಲ್ಲಾ ಪ್ರಾಣಿಗಳು, ಪಕ್ಷಿಗಳು ಮತ್ತು ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದೂ ನೋಹನೊಂದಿಗೆ ನಾವೆಯೊಳಗೆ ಹೋದವು. ದೇವರ ಆಜ್ಞೆಯಂತೆ ಈ ಪ್ರಾಣಿಗಳು ಜೋಡಿಜೋಡಿಯಾಗಿ ನಾವೆಯೊಳಗೆ ಹೋದವು. 10 ಏಳು ದಿನಗಳ ನಂತರ ಜಲಪ್ರಳಯ ಪ್ರಾರಂಭವಾಯಿತು. ಭೂಮಿಯ ಮೇಲೆ ಮಳೆ ಸುರಿಯತೊಡಗಿತು.

11-13 ಎರಡನೆ ತಿಂಗಳಿನ ಹದಿನೇಳನೆಯ ದಿನದಂದು ಭೂಮಿಯ ಕೆಳಗಿರುವ ಸಾಗರದ ಸೆಲೆಗಳು ಒಡೆದು ಭೂಮಿಯೊಳಗಿಂದ ನೀರು ಮೇಲೇರತೊಡಗಿತು; ಭೂಮಿಯ ಮೇಲೆ ಭಾರಿಮಳೆ ಸುರಿಯತೊಡಗಿತು. ಆಕಾಶದ ಕಿಟಕಿ ತೆರೆದಿದೆಯೋ ಎಂಬಂತೆ ನಲವತ್ತು ದಿವಸ ಹಗಲಿರುಳು ಮಳೆ ಸುರಿಯಿತು. ಆ ದಿನದಂದು ನೋಹ ಮತ್ತು ಅವನ ಹೆಂಡತಿ, ಅವನ ಗಂಡುಮಕ್ಕಳಾದ ಶೇಮ್, ಹಾಮ್, ಯೆಫೆತ್ ಮತ್ತು ಅವನ ಸೊಸೆಯಂದಿರು ನಾವೆಯೊಳಗೆ ಹೋದರು. ಆಗ ನೋಹನು ಆರುನೂರು ವರ್ಷವಾಗಿತ್ತು. 14 ಅವರು ನಾವೆಯೊಳಗೆ ಇದ್ದರು. ಭೂಮಿಯ ಮೇಲಿರುವ ಪ್ರತಿಯೊಂದು ಬಗೆಯ ಪ್ರಾಣಿಗಳು, ಪ್ರತಿಯೊಂದು ಬಗೆಯ ಪಶುಗಳು, ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಬಗೆಯ ಕ್ರಿಮಿಗಳು ಮತ್ತು ಪ್ರತಿಯೊಂದು ಬಗೆಯ ಪಕ್ಷಿಗಳು ನಾವೆಯೊಳಗೆ ಇದ್ದವು. 15 ಉಸಿರಾಡುವ ಪ್ರತಿಯೊಂದು ಬಗೆಯ ಪ್ರಾಣಿಗಳು ತಮ್ಮತಮ್ಮ ಜಾತಿಗನುಸಾರವಾಗಿ ಎರಡೆರಡಾಗಿ ಬಂದವು. 16 ದೇವರ ಆಜ್ಞೆಯಂತೆ ಈ ಪ್ರಾಣಿಗಳೆಲ್ಲಾ ನಾವೆಯೊಳಗೆ ಪ್ರವೇಶಿಸಿದವು. ಆಗ ಯೆಹೋವನು ನಾವೆಯ ಬಾಗಿಲನ್ನು ಮುಚ್ಚಿದನು.

17 ಭೂಮಿಯ ಮೇಲೆ ಜಲಪ್ರಳಯವು ನಲವತ್ತು ದಿನಗಳವರೆಗೆ ಇತ್ತು. ನೀರು ಮೇಲೇರುತ್ತಾ ನಾವೆಯನ್ನು ಎತ್ತಲು ಅದು ನೀರಿನ ಮೇಲೆ ತೇಲತೊಡಗಿತು. 18 ನೀರು ಇನ್ನೂ ಮೇಲೇರತೊಡಗಿದ್ದರಿಂದ ನಾವೆಯೂ ಭೂಮಿಯಿಂದ ಬಹು ಮೇಲೆ ಚಲಿಸತೊಡಗಿತು. 19 ನೀರು ಬಹಳವಾಗಿ ಹೆಚ್ಚಿದ್ದರಿಂದ, ಎತ್ತರವಾದ ಬೆಟ್ಟಗಳು ಸಹ ನೀರಿನಿಂದ ಮುಚ್ಚಿಕೊಂಡವು. 20 ಬೆಟ್ಟಗಳ ಮೇಲೂ ನೀರು ಹೆಚ್ಚತೊಡಗಿತು. ಅತೀ ಎತ್ತರವಾದ ಬೆಟ್ಟಕ್ಕಿಂತಲೂ ಇಪ್ಪತ್ತು ಅಡಿ ಹೆಚ್ಚಾಗಿ ನೀರು ಆವರಿಸಿಕೊಂಡಿತು.

21-22 ಭೂಮಿಯ ಮೇಲಿದ್ದ ಪ್ರತಿಯೊಂದು ಜೀವಿಯು ಸತ್ತುಹೋಯಿತು. ಎಲ್ಲಾ ಪುರುಷರು ಮತ್ತು ಸ್ತ್ರೀಯರು ಸತ್ತುಹೋದರು. ಎಲ್ಲಾ ಪಕ್ಷಿಗಳು, ಪಶುಗಳು, ಪ್ರಾಣಿಗಳು ಮತ್ತು ಪ್ರತಿಯೊಂದು ಬಗೆಯ ಕ್ರಿಮಿಗಳು ಸತ್ತುಹೋದವು. 23 ಹೀಗೆ ದೇವರು ಭೂಮಿಯ ಮೇಲಿದ್ದ ಪ್ರತಿಯೊಂದು ಜೀವಿಯನ್ನು ನಾಶಗೊಳಿಸಿದನು. ಪ್ರತಿಯೊಬ್ಬ ಮನುಷ್ಯನು ನಾಶವಾದನು; ಪ್ರತಿಯೊಂದು ಪ್ರಾಣಿಯು, ಹರಿದಾಡುವ ಪ್ರತಿಯೊಂದು ಕ್ರಿಮಿಯು ಮತ್ತು ಪ್ರತಿಯೊಂದು ಪಕ್ಷಿಯು ನಾಶವಾದವು. ಉಳಿದುಕೊಂಡವರೆಂದರೆ, ನೋಹ ಮತ್ತು ಅವನ ಕುಟುಂಬದವರು ಹಾಗೂ ಅವನೊಡನೆ ನಾವೆಯೊಳಗಿದ್ದ ಜೀವಿಗಳು. 24 ನೂರೈವತ್ತು ದಿನಗಳವರೆಗೆ ನೀರು ಭೂಮಿಯನ್ನು ಆವರಿಸಿಕೊಂಡಿತ್ತು.

ಮತ್ತಾಯ 7

ತೀರ್ಪು ಮಾಡುವುದರ ಕುರಿತು ಯೇಸುವಿನ ಉಪದೇಶ

(ಲೂಕ 6:37-38,41-42)

“ಬೇರೆಯವರಿಗೆ ತೀರ್ಪು ನೀಡಬೇಡಿ. ಆಗ ದೇವರೂ ನಿಮಗೆ ತೀರ್ಪು ಮಾಡುವುದಿಲ್ಲ. ನೀವು ಬೇರೆಯವರಿಗೆ ತೀರ್ಪು ಮಾಡಿದರೆ, ಅದೇ ಪ್ರಕಾರ ನಿಮಗೂ ತೀರ್ಪಾಗುವುದು. ನೀವು ಬೇರೆಯವರನ್ನು ಕ್ಷಮಿಸಿದರೆ ನಿಮಗೂ ಕ್ಷಮೆ ದೊರೆಯುವುದು.

“ನಿನ್ನ ಸ್ವಂತ ಕಣ್ಣಿನಲ್ಲಿ ಇರುವ ತೊಲೆಯನ್ನು ನೀನು ನೋಡದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ಅಣುವನ್ನು ಏಕೆ ನೋಡುವೆ? ‘ನಿನ್ನ ಕಣ್ಣಿನಲ್ಲಿರುವ ಅಣುವನ್ನು ನಾನು ಹೊರಗೆ ತೆಗೆಯುವೆನು’ ಎಂದು ನಿನ್ನ ಸಹೋದರನಿಗೆ ಹೇಳುವುದೇಕೆ? ಮೊದಲು ನಿನ್ನ ಕಣ್ಣನ್ನು ನೋಡಿಕೊ! ನಿನ್ನ ಕಣ್ಣಿನಲ್ಲಿ ತೊಲೆ ಇನ್ನೂ ಇದೆ. ನೀನು ಕಪಟಿ! ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಹೊರಗೆ ತೆಗೆದುಬಿಡು. ಆಗ ನಿನ್ನ ಸಹೋದರನ ಕಣ್ಣಿನಲ್ಲಿರುವ ಅಣುವನ್ನು ಹೊರತೆಗೆಯಲು ನಿನಗೆ ಸ್ಪಷ್ಟವಾಗಿ ಕಾಣುವುದು.

“ಪರಿಶುದ್ಧವಾದ ವಸ್ತುಗಳನ್ನು ನಾಯಿಗಳಿಗೆ ಹಾಕಬೇಡಿ. ಅವು ಹಿಂದಕ್ಕೆ ತಿರುಗಿ ನಿಮ್ಮನ್ನು ಕಚ್ಚುತ್ತವೆ. ಹಂದಿಗಳ ಮುಂದೆ ನಿಮ್ಮ ಮುತ್ತುಗಳನ್ನು ಎಸೆಯಬೇಡಿ. ಅವು ಮುತ್ತುಗಳನ್ನು ತುಳಿದುಹಾಕುತ್ತವೆ.

ಪ್ರಾರ್ಥನೆಯ ಪ್ರತಿಫಲ

(ಲೂಕ 11:9-13)

“ಬೇಡಿಕೊಳ್ಳಿರಿ, ಆಗ ದೇವರು ನಿಮಗೆ ಕೊಡುತ್ತಾನೆ. ಹುಡುಕಿರಿ, ಆಗ ನೀವು ಕಂಡುಕೊಳ್ಳುವಿರಿ. ಬಾಗಿಲು ತಟ್ಟಿರಿ, ಆಗ ಅದು ನಿಮಗೆ ತೆರೆಯುವುದು. ಹೌದು, ಕೇಳುತ್ತಲೇ ಇರುವವನು ಪಡೆದುಕೊಳ್ಳುತ್ತಾನೆ, ಹುಡುಕುತ್ತಲೇ ಇರುವವನು ಕಂಡುಕೊಳ್ಳುತ್ತಾನೆ, ತಟ್ಟುತ್ತಲೇ ಇರುವವನಿಗೆ ಬಾಗಿಲು ತೆರೆಯುತ್ತದೆ.

“ನಿಮ್ಮ ಮಗನು ರೊಟ್ಟಿಯನ್ನು ಕೇಳಿದರೆ ಕಲ್ಲನ್ನು ಕೊಡುವಿರೋ? 10 ಮೀನನ್ನು ಕೇಳಿದರೆ, ಹಾವನ್ನು ಕೊಡುವಿರೋ? 11 ನೀವು ದೇವರಂತೆ ಒಳ್ಳೆಯವರಲ್ಲ, ಕೆಟ್ಟವರು. ಆದರೂ ನಿಮ್ಮ ಮಕ್ಕಳಿಗೆ ಒಳ್ಳೆಯ ವಸ್ತುಗಳನ್ನು ಕೊಡಬೇಕೆಂಬುದು ನಿಮಗೆ ತಿಳಿದಿದೆ. ಹೀಗಿರಲಾಗಿ ಪರಲೋಕದ ನಿಮ್ಮ ತಂದೆಯು ಸಹ ತನ್ನನ್ನು ಕೇಳುವವರಿಗೆ ಒಳ್ಳೆಯ ವಸ್ತುಗಳನ್ನು ನಿಶ್ಚಯವಾಗಿಯೂ ಕೊಡುತ್ತಾನೆ.

ಬಹಳ ಮುಖ್ಯ ನಿಯಮ

12 “ನಿಮಗೆ ಬೇರೆಯವರು ಏನನ್ನು ಮಾಡಬೇಕೆಂದು ನೀವು ಆಶಿಸುತ್ತೀರೋ ಅಂಥವುಗಳನ್ನೇ ನೀವು ಅವರಿಗೆ ಮಾಡಿರಿ. ಇದು ಮೋಶೆಯ ಧರ್ಮಶಾಸ್ತ್ರದ ಮತ್ತು ಪ್ರವಾದಿಗಳ ಬೋಧನೆಯ ಸಾರಾಂಶ.

ನಿತ್ಯಜೀವದ ದಾರಿ ಕಷ್ಟಕರ

(ಲೂಕ 13:24)

13 “ಇಕ್ಕಟ್ಟಾದ ಬಾಗಿಲಿನ ಮೂಲಕ ಪರಲೋಕರಾಜ್ಯವನ್ನು ಪ್ರವೇಶಿಸಿರಿ. ನರಕಕ್ಕೆ ಹೋಗುವ ದಾರಿ ದೊಡ್ಡದು, ಬಾಗಿಲು ಬಹಳ ವಿಶಾಲ. ಅನೇಕ ಜನರು ಆ ಬಾಗಿಲಲ್ಲಿ ಪ್ರವೇಶಿಸುತ್ತಾರೆ. 14 ಆದರೆ ನಿತ್ಯಜೀವಕ್ಕಿರುವ ಬಾಗಿಲು ಬಹಳ ಚಿಕ್ಕದು, ದಾರಿ ಕಷ್ಟಕರ. ಕೆಲವರು ಮಾತ್ರ ಆ ಮಾರ್ಗವನ್ನು ಕಂಡುಕೊಳ್ಳುವರು.

ಜನರ ನಡತೆಯನ್ನು ಗಮನಿಸಿ

(ಲೂಕ 6:43-44; 13:25-27)

15 “ಸುಳ್ಳುಪ್ರವಾದಿಗಳ ಬಗ್ಗೆ ಎಚ್ಚರವಾಗಿರಿ. ಅವರು ಕುರಿಗಳ ಹಾಗೆ ಕಾಣಿಸಿಕೊಂಡು ನಿಮ್ಮ ಬಳಿಗೆ ಬರುತ್ತಾರೆ. ಆದರೆ ಅವರು ತೋಳಗಳಂತೆ ನಿಜವಾಗಿಯೂ ಅಪಾಯಕಾರಿಗಳಾಗಿದ್ದಾರೆ. 16 ಅವರ ಕ್ರಿಯೆಗಳಿಂದ ನೀವು ಅವರನ್ನು ತಿಳಿದುಕೊಳ್ಳುವಿರಿ. ಮುಳ್ಳಿನ ಪೊದೆಗಳಲ್ಲಿ ದ್ರಾಕ್ಷಿಯು ಹೇಗೆ ದೊರೆಯುವುದಿಲ್ಲವೋ ಅದೇ ರೀತಿ ಒಳ್ಳೆಯವುಗಳು ಕೆಟ್ಟ ಜನಗಳಿಂದ ಬರುವುದಿಲ್ಲ. ಅಂಜೂರವು ಮುಳ್ಳುಗಿಡಗಳಲ್ಲಿ ದೊರೆಯುವುದಿಲ್ಲ. 17 ಅದೇ ರೀತಿ ಪ್ರತಿಯೊಂದು ಒಳ್ಳೆಯ ಮರವು ಒಳ್ಳೆಯ ಫಲವನ್ನು ಕೊಡುತ್ತದೆ. ಕೆಟ್ಟ ಮರವು ಕೆಟ್ಟ ಫಲವನ್ನು ಕೊಡುತ್ತದೆ. 18 ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ ಮತ್ತು ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. 19 ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಎಸೆಯಲಾಗುವುದು. 20 ಈ ಸುಳ್ಳು ಬೋಧಕರನ್ನು ಅವರು ಕೊಡುವ ಫಲದಿಂದಲೇ (ಕಾರ್ಯಗಳಿಂದಲೇ) ನೀವು ತಿಳಿದುಕೊಳ್ಳುವಿರಿ.

21 “‘ನಾನು ಪ್ರಭುವಿನವನು’ ಎಂದು ಹೇಳಿದ ಮಾತ್ರಕ್ಕೆ ಮನುಷ್ಯನು ಪರಲೋಕರಾಜ್ಯಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ. ಪರಲೋಕದಲ್ಲಿರುವ ನನ್ನ ತಂದೆಯ ಇಷ್ಟದಂತೆ ಮಾಡುವವರೇ ಪರಲೋಕರಾಜ್ಯಕ್ಕೆ ಪ್ರವೇಶಿಸುವರು. 22 ಕೊನೆಯ ದಿನಗಳಲ್ಲಿ ಅನೇಕರು ನನಗೆ, ‘ನೀನೇ ನಮ್ಮ ಪ್ರಭು! ನಿನ್ನ ವಿಷಯವಾಗಿ ನಾವು ಬೋಧಿಸಿದೆವು. ನಿನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸಿದೆವು ಮತ್ತು ಅನೇಕ ಅದ್ಭುತಕಾರ್ಯಗಳನ್ನು ಮಾಡಿದೆವು’ ಎಂದು ಹೇಳುವರು. 23 ಆದರೆ ನಾನು ಅವರಿಗೆ, ‘ಅಧರ್ಮಿಗಳೇ, ನನ್ನಿಂದ ತೊಲಗಿರಿ. ನೀವು ಯಾರೋ ನನಗೆ ತಿಳಿಯದು’ ಎಂದು ಸ್ಪಷ್ಟವಾಗಿ ಹೇಳಿಬಿಡುವೆನು.

ಬುದ್ಧಿವಂತ ಮತ್ತು ಬುದ್ಧಿಹೀನ

(ಲೂಕ 6:47-49)

24 “ನನ್ನ ಈ ಮಾತುಗಳನ್ನು ಕೇಳಿ ಅವುಗಳಿಗೆ ವಿಧೇಯನಾಗಿರುವ ಪ್ರತಿಯೊಬ್ಬನೂ ತನ್ನ ಮನೆಯನ್ನು ಬಂಡೆಯ ಮೇಲೆ ಕಟ್ಟಿದ ಬುದ್ಧಿವಂತನಿಗೆ ಹೋಲಿಕೆಯಾಗಿದ್ದಾನೆ. 25 ಬಿರುಸಾದ ಮಳೆಯು ಸುರಿದು ನೀರು ಮೇಲಕ್ಕೆ ಏರುತ್ತದೆ. ಗಾಳಿ ಬೀಸಿ ಆ ಮನೆಗೆ ಬಡಿಯುತ್ತದೆ. ಆದರೆ ಆ ಮನೆಯನ್ನು ಬಂಡೆಯ ಮೇಲೆ ಕಟ್ಟಿದ್ದರಿಂದ ಅದು ಬೀಳಲಿಲ್ಲ.

26 “ಆದರೆ ನನ್ನ ಮಾತುಗಳನ್ನು ಕೇಳಿಯೂ ಅವುಗಳಿಗೆ ವಿಧೇಯನಾಗದವನು ಬುದ್ಧಿಹೀನನಾಗಿದ್ದಾನೆ. ಆ ಬುದ್ಧಿಹೀನನು ಮರಳಿನ ಮೇಲೆ ತನ್ನ ಮನೆಯನ್ನು ಕಟ್ಟಿದನು. 27 ಬಿರುಸಾದ ಮಳೆ ಸುರಿದು ನೀರು ಮೇಲಕ್ಕೆ ಏರಿತು, ಗಾಳಿ ಬೀಸಿ ಆ ಮನೆಗೆ ಬಡಿಯಿತು. ಆಗ ಆ ಮನೆಯು ಕುಸಿದು ಬಿತ್ತು.”

28 ಯೇಸು ಉಪದೇಶಿಸಿದ ಈ ಸಂಗತಿಗಳನ್ನು ಕೇಳಿ ಜನರು ಅತ್ಯಾಶ್ಚರ್ಯಪಟ್ಟರು. 29 ಏಕೆಂದರೆ, ಆತನು ಧರ್ಮೋಪದೇಶಕರಂತೆ ಉಪದೇಶಿಸದೆ ಅಧಿಕಾರವಿದ್ದವನಂತೆ ಉಪದೇಶಿಸಿದನು.

ಎಜ್ರ 7

ಜೆರುಸಲೇಮಿಗೆ ಎಜ್ರನ ಆಗಮನ

ಇವೆಲ್ಲವೂ ಕಳೆದ ಬಳಿಕ, ಪರ್ಶಿಯ ರಾಜನಾದ ಅರ್ತಷಸ್ತನ ಆಳ್ವಿಕೆಯ ಕಾಲದಲ್ಲಿ ಎಜ್ರನು ಬಾಬಿಲೋನಿನಿಂದ ಜೆರುಸಲೇಮಿಗೆ ಬಂದನು. ಎಜ್ರನು ಸೆರಾಯನ ಮಗನು; ಸೆರಾಯನು ಅಜರ್ಯನ ಮಗನು; ಅಜರ್ಯನು ಹಿಲ್ಕೀಯನ ಮಗನು. ಹಿಲ್ಕೀಯನು ಶಲ್ಲೂಮನ ಮಗನು. ಶಲ್ಲೂಮನು ಚಾದೋಕನ ಮಗನು; ಚಾದೋಕನು ಅಹೀಟೂಬನ ಮಗನು. ಅಹೀಟೂಬನು ಅಮರ್ಯನ ಮಗನು; ಅಮರ್ಯನು ಅಜರ್ಯನ ಮಗನು. ಅಜರ್ಯನು ಮೆರಾಯೋತನ ಮಗನು; ಮೆರಾಯೋತನು ಜೆರಹ್ಯನ ಮಗನು; ಜೆರಹ್ಯನು ಉಜ್ಜೀಯನ ಮಗನು; ಉಜ್ಜೀಯನು ಬುಕ್ಕೀಯ ಮಗನು. ಬುಕ್ಕೀಯು ಅಬೀಷೂವನ ಮಗನು; ಅಬೀಷೂವನು ಫೀನೆಹಾಸನ ಮಗನು; ಫೀನೆಹಾಸನು ಎಲ್ಲಾಜಾರನ ಮಗನು. ಎಲ್ಲಾಜಾರನು ಪ್ರಧಾನಯಾಜಕನಾದ ಆರೋನನ ಮಗನು.

ಎಜ್ರನು ಬಾಬಿಲೋನಿನಿಂದ ಜೆರುಸಲೇಮಿಗೆ ಬಂದನು. ಅವನು ವಿದ್ವಾಂಸನಾಗಿದ್ದನು. ಇಸ್ರೇಲರ ದೇವರಾದ ಯೆಹೋವನು ಮೋಶೆಗೆ ಕೊಟ್ಟಿದ್ದ ಧರ್ಮಶಾಸ್ತ್ರವನ್ನು ಅವನು ಚೆನ್ನಾಗಿ ಬಲ್ಲವನಾಗಿದ್ದನು. ಯೆಹೋವನು ಎಜ್ರನೊಂದಿಗಿದ್ದುದರಿಂದ ಅವನು ಕೇಳಿದ್ದೆಲ್ಲವನ್ನು ಅರ್ತಷಸ್ತ ರಾಜನು ಅವನಿಗೆ ಕೊಟ್ಟನು. ಎಜ್ರನೊಂದಿಗೆ ಇಸ್ರೇಲರ ಬಹುಮಂದಿ ಜೆರುಸಲೇಮಿಗೆ ಬಂದರು. ಅವರಲ್ಲಿ ಯಾಜಕರೂ ಲೇವಿಯರೂ ಗಾಯಕರೂ ದ್ವಾರಪಾಲಕರೂ ದೇವಾಲಯದ ಸೇವಕರೂ ಇದ್ದರು. ಅರಸನಾದ ಅರ್ತಷಸ್ತನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಅವರು ಜೆರುಸಲೇಮಿಗೆ ಬಂದು ತಲುಪಿದರು. ಅರ್ತಷಸ್ತನ ಆಳ್ವಿಕೆಯ ಏಳನೆಯ ವರ್ಷದ ಐದನೆಯ ತಿಂಗಳಲ್ಲಿ ಎಜ್ರನು ಜೆರುಸಲೇಮನ್ನು ತಲುಪಿದನು. ಅವರು ಬಾಬಿಲೋನನ್ನು ಮೊದಲನೆಯ ತಿಂಗಳಿನ ಮೊದಲನೆಯ ದಿನದಂದು ಬಿಟ್ಟು ಐದನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಜೆರುಸಲೇಮನ್ನು ಸೇರಿದರು. ದೇವರಾದ ಯೆಹೋವನು ಎಜ್ರನ ಸಂಗಡವಿದ್ದನು. 10 ಧರ್ಮಶಾಸ್ತ್ರವನ್ನು ಓದಲೂ, ಅಭ್ಯಾಸಿಸಲೂ ಮತ್ತು ಅದಕ್ಕೆ ವಿಧೇಯನಾಗಲು ಎಜ್ರನು ತನ್ನ ಸಮಯವನ್ನೆಲ್ಲಾ ವಿನಿಯೋಗಿಸಿದನು. ಯೆಹೋವನ ಆಜ್ಞೆಗಳನ್ನು, ವಿಧಿನಿಯಮಗಳನ್ನು ಇಸ್ರೇಲ್ ಜನರಿಗೆ ಕಲಿಸಬೇಕೆಂಬ ಇಚ್ಫೆ ಅವನಲ್ಲಿತ್ತು. ಯೆಹೋವನ ಕಟ್ಟಳೆಗಳಿಗೆ ವಿಧೇಯರಾಗುವಂತೆ ಇಸ್ರೇಲರೆಲ್ಲರಿಗೆ ಸಹಾಯ ಮಾಡಬೇಕೆಂಬ ಅಭಿಲಾಷೆಯು ಅವನಲ್ಲಿತ್ತು.

ಎಜ್ರನಿಗೆ ಅರಸನಾದ ಅರ್ತಷಸ್ತನ ಪತ್ರ

11 ಎಜ್ರನು ಯಾಜಕನೂ ಬೋಧಕನೂ ಆಗಿದ್ದನು. ಯೆಹೋವನು ಇಸ್ರೇಲರಿಗೆ ಕೊಟ್ಟಿರುವ ಕಟ್ಟಳೆಗಳನ್ನು, ವಿಧಿಗಳನ್ನು ಅವನು ಚೆನ್ನಾಗಿ ಅಭ್ಯಾಸ ಮಾಡಿಕೊಂಡಿದ್ದನು. ರಾಜನಾದ ಅರ್ತಷಸ್ತನು ಅವನಿಗೆ ಕೊಟ್ಟಿದ್ದ ಪತ್ರದಲ್ಲಿ ಹೀಗೆ ಬರೆದಿತ್ತು:

12 ಅರಸನಾದ ಅರ್ತಷಸ್ತನಿಂದ:

ಪರಲೋಕದ ದೇವರ ಕಟ್ಟಳೆಗಳ ಬೋಧಕನೂ ಯಾಜಕನೂ ಆಗಿರುವ ಎಜ್ರನಿಗೆ

ವಂದನೆಗಳು.

13 ಈ ಆಜ್ಞೆಯನ್ನು ಕೊಡುವ ನಾನು ತಿಳಿಸುವುದೇನೆಂದರೆ, ನನ್ನ ಸಾಮ್ರಾಜ್ಯದಲ್ಲಿರುವ ಇಸ್ರೇಲರ ಯಾಜಕರು, ಲೇವಿಯರು, ಜನರೆಲ್ಲರೂ ಎಜ್ರನೊಂದಿಗೆ ಜೆರುಸಲೇಮಿಗೆ ಹೋಗಲು ಇಚ್ಛಿಸುವುದಾದರೆ ಅವರು ಹೋಗಬಹುದು.

14 ಎಜ್ರನೇ, ನಾನೂ ನನ್ನ ಏಳು ಮಂದಿ ಸಲಹೆಗಾರರೂ ನಿನ್ನನ್ನು ಯೆಹೂದಕ್ಕೆ ಮತ್ತು ಜೆರುಸಲೇಮಿಗೆ ಕಳುಹಿಸುತ್ತೇವೆ. ಅಲ್ಲಿ ನೀನೂ ನಿನ್ನ ಜನರೂ ದೇವರ ಕಟ್ಟಳೆಗಳಿಗೆ ವಿಧೇಯರಾಗಿರುವಂತೆ ನೋಡಿಕೊ. ಆ ಕಟ್ಟಳೆಗಳು ನಿನ್ನ ಬಳಿಯಲ್ಲಿ ಇವೆ.

15 ನಾನೂ ನನ್ನ ಸಲಹೆಗಾರರೂ ಜೆರುಸಲೇಮಿನಲ್ಲಿರುವ ಇಸ್ರೇಲಿನ ದೇವರಿಗೆ ಬೆಳ್ಳಿಬಂಗಾರಗಳನ್ನು ಅರ್ಪಿಸುತ್ತೇವೆ. ನೀನು ಹೋಗುವಾಗ ಅವುಗಳನ್ನು ತೆಗೆದುಕೊಂಡು ಹೋಗಬೇಕು. 16 ದಾರಿಯಲ್ಲಿ ಬಾಬಿಲೋನ್ ಸಾಮ್ರಾಜ್ಯದ ಎಲ್ಲಾ ಸಂಸ್ಥಾನಗಳನ್ನು ಸಂದರ್ಶಿಸಬೇಕು. ಅಲ್ಲಿ ವಾಸಿಸುವ ನಿನ್ನ ಜನರಿಂದಲೂ ಯಾಜಕರಿಂದಲೂ ಲೇವಿಯರಿಂದಲೂ ಬೆಳ್ಳಿಬಂಗಾರಗಳನ್ನು ಕಾಣಿಕೆಯಾಗಿ ಸ್ವೀಕರಿಸು. ಆ ಕಾಣಿಕೆಗಳು ಜೆರುಸಲೇಮಿನಲ್ಲಿರುವ ದೇವಾಲಯಕ್ಕಾಗಿರುವುದು.

17 ಆ ಹಣದಿಂದ ಹೋರಿಗಳನ್ನು, ಟಗರುಗಳನ್ನು, ಗಂಡು ಕುರಿಗಳನ್ನು ಖರೀದಿಸಲು ಉಪಯೋಗಿಸು. ಪಾನಾರ್ಪಣೆಗಳಿಗೆ ಮತ್ತು ಧಾನ್ಯಸಮರ್ಪಣೆಗಳಿಗೆ ಬೇಕಾಗುವ ಗೋಧಿಯನ್ನೂ ದ್ರಾಕ್ಷಾರಸವನ್ನೂ ತೆಗೆದುಕೊಂಡು ಜೆರುಸಲೇಮಿನ ಯಜ್ಞವೇದಿಕೆಯ ಮೇಲೆ ನಿನ್ನ ದೇವರಿಗೆ ಸಮರ್ಪಿಸು. 18 ಉಳಿದ ಬೆಳ್ಳಿಬಂಗಾರಗಳನ್ನು ನಿನಗೂ ನಿನ್ನೊಂದಿಗಿರುವ ಇತರರಿಗೂ ಸರಿತೋರುವ ರೀತಿಯಲ್ಲಿ ವಿನಿಯೋಗಿಸಿರಿ. ಅದು ದೇವರಿಗೆ ಮೆಚ್ಚಿಕೆಯಾಗುವಂತೆ ಉಪಯೋಗಿಸಿರಿ. 19 ಅವೆಲ್ಲವುಗಳನ್ನು ಜೆರುಸಲೇಮಿನ ದೇವರ ಬಳಿಗೆ ತೆಗೆದುಕೊಂಡು ಹೋಗಿ ಆತನನ್ನು ಆರಾಧಿಸಲು ಅವುಗಳನ್ನು ಉಪಯೋಗಿಸಿರಿ. 20 ಜೆರುಸಲೇಮಿನ ದೇವಾಲಯಕ್ಕೆ ಇನ್ನೂ ವಸ್ತುಗಳು ಬೇಕಾಗಿದ್ದಲ್ಲಿ ರಾಜನ ಖಜಾನೆಯಿಂದ ಹಣ ತೆಗೆದುಕೊಂಡು ಅವುಗಳನ್ನು ಖರೀದಿಮಾಡು.

21 ಅರಸನಾದ ಅರ್ತಷಸ್ತನೆಂಬ ನಾನು ಈ ರಾಜಾಜ್ಞೆಯನ್ನು ಹೊರಡಿಸುತ್ತಿದ್ದೇನೆ: ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯದಲ್ಲಿ ರಾಜಧನವನ್ನು ಇಟ್ಟುಕೊಂಡಿರುವ ಎಲ್ಲಾ ಸಂಸ್ಥಾನಾಧಿಕಾರಿಗಳಿಗೆ ನನ್ನ ಆಜ್ಞೆ ಏನೆಂದರೆ, ಎಜ್ರನಿಗೆ ಬೇಕಾದುದನ್ನು ಅವರು ಒದಗಿಸಬೇಕು. ಎಜ್ರನು ಪರಲೋಕದ ದೇವರ ಯಾಜಕನೂ ಆತನ ಕಟ್ಟಳೆಗಳ ಬೋಧಕನೂ ಆಗಿದ್ದಾನೆ. ನನ್ನ ಈ ಆಜ್ಞೆಗೆ ಸಂಪೂರ್ಣವಾಗಿಯೂ ತ್ವರಿತವಾಗಿಯೂ ವಿಧೇಯರಾಗಬೇಕು. 22 ಇವುಗಳನ್ನು ನೀವು ಎಜ್ರನಿಗೆ ಕೊಡಬೇಕು: ಮೂರು ಸಾವಿರದ ನಾನೂರು ಕಿಲೋಗ್ರಾಂ ಬೆಳ್ಳಿ, ಇಪ್ಪತ್ತೆರಡು ಸಾವಿರ ಕಿಲೋಗ್ರಾಂ ಗೋಧಿ, ಎರಡು ಸಾವಿರದ ಇನ್ನೂರು ಲೀಟರ್ ದ್ರಾಕ್ಷಾರಸ, ಎರಡು ಸಾವಿರದ ಇನ್ನೂರು ಲೀಟರ್ ಆಲಿವ್ ಎಣ್ಣೆ ಮತ್ತು ಬೇಕಾಗುವಷ್ಟು ಉಪ್ಪು. 23 ಪರಲೋಕದ ದೇವರು ಯಾವಯಾವ ವಸ್ತುಗಳಿಗಾಗಿ ಎಜ್ರನಿಗೆ ಆಜ್ಞಾಪಿಸಿರುವನೊ ಅವುಗಳನ್ನೆಲ್ಲ ನೀವು ಎಜ್ರನಿಗೆ ಸಂಪೂರ್ಣವಾಗಿಯೂ ಶೀಘ್ರವಾಗಿಯೂ ಒದಗಿಸಬೇಕು. ಇವುಗಳನ್ನು ಪರಲೋಕದ ದೇವರ ಆಲಯಕ್ಕಾಗಿ ಮಾಡಿರಿ. ನನ್ನ ರಾಜ್ಯದ ಮೇಲಾಗಲಿ ನನ್ನ ಮಕ್ಕಳ ಮೇಲಾಗಲಿ ದೇವರು ಸಿಟ್ಟುಗೊಳ್ಳುವುದು ನಮಗೆ ಇಷ್ಟವಿಲ್ಲ.

24 ನಾನು ನಿಮಗೆ ತಿಳಿಯಪಡಿಸುವುದೇನೆಂದರೆ: ಯಾಜಕರಿಂದ, ಲೇವಿಯರಿಂದ, ಗಾಯಕರಿಂದ, ದ್ವಾರಪಾಲಕರಿಂದ ಮತ್ತು ದೇವಾಲಯದ ಸೇವಕರಿಂದ ತೆರಿಗೆವಸೂಲಿ ಮಾಡುವುದು ನ್ಯಾಯಬಾಹಿರವಾದದ್ದು. ಅವರು ಯಾವ ರೀತಿಯ ತೆರಿಗೆಯನ್ನಾಗಲಿ ಸುಂಕವನ್ನಾಗಲಿ ಕಪ್ಪಕಾಣಿಕೆಯನ್ನಾಗಲಿ ಅರಸನಿಗೆ ಸಲ್ಲಿಸಬೇಕಿಲ್ಲ. 25 ಎಜ್ರನೇ, ನಿನ್ನ ದೇವರು ನಿನಗೆ ಕೊಟ್ಟಿರುವ ಜ್ಞಾನಶಕ್ತಿಯನ್ನು ಉಪಯೋಗಿಸಿ ನ್ಯಾಯಾಧೀಶರನ್ನೂ ನ್ಯಾಯಶಾಸ್ತ್ರಿಗಳನ್ನೂ ಆರಿಸಿ ನೇಮಿಸಲು ನಿನಗೆ ಅಧಿಕಾರ ಕೊಟ್ಟಿದ್ದೇನೆ. ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯಗಳಲ್ಲಿ ವಾಸಮಾಡುವ ಜನರಿಗೆಲ್ಲಾ ಅವರು ನ್ಯಾಯತೀರಿಸುವರು. ನಿನ್ನ ದೇವರ ಕಟ್ಟಳೆಗಳನ್ನು ಅರಿತವರಿಗೆಲ್ಲಾ ಅವರು ನ್ಯಾಯತೀರಿಸುವರು. ಯಾರಿಗಾದರೂ ದೇವರ ಕಟ್ಟಳೆ ಗೊತ್ತಿಲ್ಲದಿದ್ದಲ್ಲಿ ಆ ನ್ಯಾಯಶಾಸ್ತ್ರಿಗಳು ಅವರಿಗೆ ಕಲಿಸಬೇಕು. 26 ದೇವರ ಕಟ್ಟಳೆಗಳಿಗಾಗಲಿ ಅರಸನ ಆಜ್ಞೆಗಳಿಗಾಗಲಿ ಅವಿಧೇಯನಾಗುವವನಿಗೆ ದಂಡನೆಯಾಗಬೇಕು. ಅವರವರ ಅಪರಾಧಗಳ ಪ್ರಕಾರ ಮರಣಶಿಕ್ಷೆಯಿಂದಾಗಲಿ ಗಡಿಪಾರಿನಿಂದಾಗಲಿ ಅವರ ಆಸ್ತಿಪಾಸ್ತಿಗಳ ಜಪ್ತಿಯಿಂದಾಗಲಿ ಸೆರೆಮನೆವಾಸದಿಂದಾಗಲಿ ಅವರಿಗೆ ದಂಡನೆಯಾಗಬೇಕು.

ಎಜ್ರನು ದೇವರನ್ನು ಕೊಂಡಾಡಿದನು

27 ನಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ! ಜೆರುಸಲೇಮಿನಲ್ಲಿರುವ ದೇವಾಲಯವನ್ನು ಗೌರವಿಸುವ ಮನಸ್ಸನ್ನು ರಾಜನ ಹೃದಯದಲ್ಲಿರಿಸಿದ್ದಕ್ಕೆ ಆತನಿಗೆ ಸ್ತೋತ್ರ! 28 ರಾಜನ, ಅವನ ಮುಖ್ಯಾಧಿಕಾರಿಗಳ ಮತ್ತು ಅವನ ಸಲಹೆಗಾರರ ಸಮ್ಮುಖದಲ್ಲಿ ಯೆಹೋವನು ನನ್ನ ಮೇಲಿಟ್ಟಿರುವ ಅಗಾಧ ಪ್ರೀತಿಯನ್ನು ಪ್ರಕಟಪಡಿಸಿದನು. ದೇವರಾದ ಯೆಹೋವನು ನನ್ನ ಸಂಗಡವಿದ್ದುದರಿಂದ ನಾನು ಧೈರ್ಯಗೊಂಡೆನು. ನನ್ನೊಂದಿಗೆ ಜೆರುಸಲೇಮಿಗೆ ಹೋಗಲು ಮನಸ್ಸುಳ್ಳ ಇಸ್ರೇಲ್ ನಾಯಕರನ್ನು ನಾನು ಒಟ್ಟುಗೂಡಿಸಿದೆನು.

ಅಪೊಸ್ತಲರ ಕಾರ್ಯಗಳು 7

ಸ್ತೆಫನನ ಪ್ರಸಂಗ

ಪ್ರಧಾನಯಾಜಕನು ಸ್ತೆಫನನಿಗೆ, “ಈ ಸಂಗತಿಗಳು ನಿಜವೋ?” ಎಂದು ಕೇಳಿದನು. ಪ್ರತ್ಯುತ್ತರವಾಗಿ ಅವನು ಹೀಗೆಂದನು: “ನನ್ನ ಯೆಹೂದ್ಯತಂದೆಗಳೇ, ಸಹೋದರರೇ, ನನಗೆ ಕಿವಿಗೊಡಿರಿ. ನಮ್ಮ ಪಿತೃವಾದ ಅಬ್ರಹಾಮನಿಗೆ ನಮ್ಮ ಪ್ರಭಾವಸ್ವರೂಪನಾದ ದೇವರು ಕಾಣಸಿಕೊಂಡನು. ಅಬ್ರಹಾಮನು ಹಾರಾನಿನಲ್ಲಿ ವಾಸಮಾಡುವ ಮೊದಲು ಮೆಸಪೊಟೇಮಿಯದಲ್ಲಿದ್ದನು. ದೇವರು ಅಬ್ರಹಾಮನಿಗೆ, ‘ನಿನ್ನ ದೇಶವನ್ನೂ ನಿನ್ನ ಜನರನ್ನೂ ಬಿಟ್ಟು ನಾನು ನಿನಗೆ ತೋರಿಸುವ ದೇಶಕ್ಕೆ ಹೋಗು’(A) ಎಂದು ಹೇಳಿದನು.

“ಆದ್ದರಿಂದ ಅಬ್ರಹಾಮನು ಖಾಲ್ದೆಯ[a] ದೇಶವನ್ನು ಬಿಟ್ಟು ಹಾರಾನಿನಲ್ಲಿ ವಾಸಿಸಲು ಹೋದನು. ಅಬ್ರಹಾಮನ ತಂದೆ ಸತ್ತಮೇಲೆ ದೇವರು ಅವನನ್ನು ಈಗ ನೀವು ವಾಸಿಸುತ್ತಿರುವ ಈ ಸ್ಥಳಕ್ಕೆ ಕಳುಹಿಸಿದನು. ಆದರೆ ದೇವರು ಅಬ್ರಹಾಮನಿಗೆ ಇಲ್ಲಿ ಯಾವ ಭೂಮಿಯನ್ನೂ ಕೊಡಲಿಲ್ಲ. ದೇವರು ಅವನಿಗೆ ಒಂದು ಅಡಿ ಸ್ಥಳವನ್ನೂ ಕೊಡಲಿಲ್ಲ. ಆದರೆ ಮುಂದಿನ ಕಾಲದಲ್ಲಿ ಈ ದೇಶವನ್ನು ಅವನಿಗೂ ಅವನ ಮಕ್ಕಳಿಗೂ ಕೊಡುವುದಾಗಿ ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದನು. (ಅಬ್ರಹಾಮನಿಗೆ ಮಕ್ಕಳೇ ಇಲ್ಲದಿದ್ದಾಗ ಇದಾಯಿತು.)

“ದೇವರು ಅವನಿಗೆ, ‘ನಿನ್ನ ಸಂತಾನದವರು ಬೇರೊಂದು ದೇಶದಲ್ಲಿ ವಾಸಿಸುವರು. ಅವರು ಪರದೇಶಿಗಳಾಗಿರುವರು. ಅಲ್ಲಿಯ ಜನರು ಅವರನ್ನು ಗುಲಾಮರನ್ನಾಗಿ ಮಾಡಿಕೊಂಡು ನಾನೂರು ವರ್ಷಗಳವರೆಗೆ ಅವರಿಗೆ ಕೇಡುಗಳನ್ನು ಮಾಡುವರು. ಆದರೆ ಅವರನ್ನು ಗಲಾಮರನ್ನಾಗಿ ಮಾಡಿಕೊಂಡ ಜನಾಂಗವನ್ನು ನಾನು ದಂಡಿಸುವೆನು’(B) ಎಂದು ಹೇಳಿದನು. ಇದಲ್ಲದೆ ದೇವರು ಅವನಿಗೆ, ‘ಆ ಬಳಿಕ ನಿನ್ನ ಜನರು ಆ ದೇಶದಿಂದ ಹೊರಗೆ ಬಂದು ನನ್ನನ್ನು ಈ ಸ್ಥಳದಲ್ಲಿ ಆರಾಧಿಸುವರು’(C) ಎಂದು ಹೇಳಿದನು.

“ದೇವರು ಅಬ್ರಹಾಮನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಆ ಒಡಂಬಡಿಕೆಯ ಗುರುತೇ ಸುನ್ನತಿ. ಹೀಗಿರಲು ಅಬ್ರಹಾಮನು ಒಬ್ಬ ಮಗನನ್ನು ಪಡೆದಾಗ, ಆ ಮಗನಿಗೆ ಎಂಟನೆಯ ದಿನದಲ್ಲಿ ಸುನ್ನತಿ ಮಾಡಿದನು. ಅವನ ಮಗನ ಹೆಸರು ಇಸಾಕ. ಇಸಾಕನು ಸಹ ತನ್ನ ಮಗನಾದ ಯಾಕೋಬನಿಗೆ ಸುನ್ನತಿ ಮಾಡಿದನು. ಮತ್ತು ಯಾಕೋಬನು ತನ್ನ ಗಂಡುಮಕ್ಕಳಿಗೆಲ್ಲಾ ಸುನ್ನತಿ ಮಾಡಿದನು. ಈ ಗಂಡುಮಕ್ಕಳೇ ಮುಂದೆ ಹನ್ನೆರಡು ಮಂದಿ ಪಿತೃಗಳಾದರು.

“ಈ ಪಿತೃಗಳು ಯೋಸೇಫನ (ಅವರು ತಮ್ಮ) ಮೇಲೆ ಹೊಟ್ಟೆಕಿಚ್ಚುಪಟ್ಟರು. ಅವರು ಯೋಸೇಫನನ್ನು ಈಜಿಪ್ಟಿನ ಜನರಿಗೆ ಗುಲಾಮನನ್ನಾಗಿ ಮಾರಿದರು. ಆದರೆ ದೇವರು ಯೋಸೇಫನೊಂದಿಗೆ ಇದ್ದನು. 10 ಯೋಸೇಫನಿಗೆ ಅಲ್ಲಿ ಅನೇಕ ತೊಂದರೆಗಳು ಬಂದವು. ಆದರೆ ದೇವರು ಆ ಎಲ್ಲಾ ತೊಂದರೆಗಳಿಂದ ಅವನನ್ನು ರಕ್ಷಿಸಿದನು. ಆಗ ಫರೋಹನು ಈಜಿಪ್ಟಿನ ರಾಜನಾಗಿದ್ದನು. ದೇವರು ಯೋಸೇಫನಿಗೆ ಕೊಟ್ಟ ಜ್ಞಾನದ ದೆಸೆಯಿಂದ ಫರೋಹನು ಯೋಸೇಫನನ್ನು ಇಷ್ಟಪಟ್ಟನು ಮತ್ತು ಗೌರವಿಸಿದನು. ಫರೋಹನು ಯೋಸೇಫನನ್ನು ಈಜಿಪ್ಟಿನ ರಾಜ್ಯಪಾಲನನ್ನಾಗಿಯೂ ತನ್ನ ಮನೆಯಲ್ಲಿದ್ದ ಎಲ್ಲಾ ಜನರ ಮೇಲೆ ಅಧಿಪತಿಯನ್ನಾಗಿಯೂ ಮಾಡಿದನು. 11 ಆದರೆ ಈಜಿಪ್ಟಿನಲ್ಲಿ ಮತ್ತು ಕಾನಾನಿನಲ್ಲಿ ಬರಗಾಲ ಉಂಟಾಯಿತು. ಆಹಾರವಿಲ್ಲದೆ ನಮ್ಮ ಪಿತೃಗಳಿಗೆ ಬಹಳ ಕಷ್ಟವಾಯಿತು.

12 “ಆದರೆ ಈಜಿಪ್ಟಿನಲ್ಲಿ ಆಹಾರವನ್ನು ಸಂಗ್ರಹಿಸಲಾಗಿದೆ ಎಂಬ ಸುದ್ದಿಯನ್ನು ಯಾಕೋಬನು ಕೇಳಿ, ನಮ್ಮ ಪಿತೃಗಳನ್ನು ಅಲ್ಲಿಗೆ ಕಳುಹಿಸಿದನು. (ಇದು ಈಜಿಪ್ಟಿಗೆ ಅವರ ಮೊದಲ ಪ್ರಯಾಣ.) 13 ಬಳಿಕ ಅವರು ಅಲ್ಲಿಗೆ ಎರಡನೆಯ ಸಲ ಹೋದರು. ಈ ಸಲ, ತಾನು ಯಾರೆಂಬುದನ್ನು ಯೋಸೇಫನು ತನ್ನ ಸಹೋದರರಿಗೆ ತಿಳಿಸಿದನು ಮತ್ತು ಯೋಸೇಫನ ಕುಟುಂಬದ ಬಗ್ಗೆ ಫರೋಹನಿಗೆ ತಿಳಿಯಿತು. 14 ಬಳಿಕ, ಯೋಸೇಫನು ತನ್ನ ತಂದೆಯಾದ ಯಾಕೋಬನನ್ನು ಮತ್ತು ಸಂಬಂಧಿಕರನ್ನು (ಅವರೆಲ್ಲರು ಒಟ್ಟಿಗೆ ಎಪ್ಪತ್ತೈದು ಮಂದಿ) ಈಜಿಪ್ಟಿಗೆ ಆಹ್ವಾನಿಸಲು ಕೆಲವು ಜನರನ್ನು ಕಳುಹಿಸಿದನು. 15 ಆದ್ದರಿಂದ ಯಾಕೋಬನು ಈಜಿಪ್ಟಿಗೆ ಹೋದನು. ಯಾಕೋಬನು ಮತ್ತು ನಮ್ಮ ಪಿತೃಗಳು ತಾವು ಸಾಯುವವರೆಗೆ ಅಲ್ಲೇ ಇದ್ದರು. 16 ಬಳಿಕ ಅವರ ದೇಹಗಳನ್ನು ಶೇಕೆಮಿಗೆ ಸಾಗಿಸಲಾಯಿತು. ಅಲ್ಲಿಯ ಸಮಾಧಿಯೊಂದರಲ್ಲಿ ಅವರನ್ನು ಹೂಳಲಾಯಿತು. (ಅಬ್ರಹಾಮನು ಹಾಮೋರನ ಗಂಡುಮಕ್ಕಳಿಂದ ಕೊಂಡುಕೊಂಡದ್ದು ಈ ಸಮಾಧಿಯನ್ನೇ. ಅವನು ಅವರಿಗೆ ಬೆಳ್ಳಿಯನ್ನು ಕ್ರಯವಾಗಿ ಕೊಟ್ಟಿದ್ದನು.)

17 “ಈಜಿಪ್ಟಿನಲ್ಲಿ ನಮ್ಮ ಜನರಾದ ಯೆಹೂದ್ಯರ ಸಂಖ್ಯೆಯು ಹೆಚ್ಚತೊಡಗಿತು. (ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ ಕಾಲ ಬಹು ಶೀಘ್ರದಲ್ಲೇ ಬರಲಿತ್ತು.) 18 ಬಳಿಕ, ಬೇರೊಬ್ಬ ರಾಜನು ಈಜಿಪ್ಟನ್ನು ಆಳಲಾರಂಭಿಸಿದನು. ಅವನಿಗೆ ಯೋಸೇಫನ ಬಗ್ಗೆ ಏನೂ ತಿಳಿದಿರಲಿಲ್ಲ. 19 ಈ ರಾಜನು ನಮ್ಮ ಜನರಿಗೆ ಮೋಸ ಮಾಡಿದನು. ಅವನು ನಮ್ಮ ಪಿತೃಗಳಿಗೆ ಕೇಡನ್ನು ಮಾಡಿದನು. ಅವರ ಕೂಸುಗಳನ್ನು ಸಾಯಿಸಬೇಕೆಂದು ಹೊರಗೆ ಹಾಕಿಸಿದನು.

20 “ಮೋಶೆಯು ಜನಿಸಿದ್ದು ಈ ಕಾಲದಲ್ಲೇ. ಅವನು ಬಹು ಸುಂದರನಾಗಿದ್ದನು. ಮೋಶೆಯನ್ನು ಅವನ ತಂದೆಯ ಮನೆಯಲ್ಲಿ ಮೂರು ತಿಂಗಳವರೆಗೆ ನೋಡಿಕೊಳ್ಳಲಾಯಿತು. 21 ಅವರು ಮೋಶೆಯನ್ನು ಹೊರಗೆ ಹಾಕಿದಾಗ ಫರೋಹನ ಮಗಳು ಅವನನ್ನು ತೆಗೆದುಕೊಂಡಳು. ಆಕೆಯು ಅವನನ್ನು ತನ್ನ ಸ್ವಂತ ಮಗನಂತೆ ಬೆಳೆಸಿದಳು. 22 ಈಜಿಪ್ಟಿನವರು ತಮಗೆ ಗೊತ್ತಿದ್ದ ಸಕಲ ವಿದ್ಯೆಗಳನ್ನು ಮೋಶೆಗೆ ಕಲಿಸಿದರು. ಅವನು ವಿಷಯಗಳನ್ನು ಹೇಳುವುದರಲ್ಲಿಯೂ ಕಾರ್ಯಗಳನ್ನು ಮಾಡುವು ದರಲ್ಲಿಯೂ ಬಹು ಸಮರ್ಥನಾಗಿದ್ದನು.

23 “ಮೋಶೆಗೆ ನಲವತ್ತು ವರ್ಷ ವಯಸ್ಸಾಗಿದ್ದಾಗ, ತನ್ನ ಸಹೋದರರಾದ ಯೆಹೂದ್ಯ ಜನರನ್ನು ಸಂದರ್ಶಿಸುವುದು ಒಳ್ಳೆಯದೆಂದು ಯೋಚಿಸಿಕೊಂಡನು. 24 ಈಜಿಪ್ಟಿನವನೊಬ್ಬನು ಯೆಹೂದ್ಯನೊಬ್ಬನಿಗೆ ಅನ್ಯಾಯ ಮಾಡಿ ಹಿಂಸಿಸುತ್ತಿರುವುದನ್ನು ಕಂಡ ಮೋಶೆಯು ಆ ಈಜಿಪ್ಟಿನವನಿಗೆ ಬಲವಾಗಿ ಹೊಡೆದು ಕೊಂದುಹಾಕಿದನು. 25 ತಮ್ಮನ್ನು ರಕ್ಷಿಸಲು ದೇವರು ಮೋಶೆಯನ್ನು ಉಪಯೋಗಿಸುತ್ತಿದ್ದಾನೆ ಎಂಬುದಾಗಿ ತನ್ನ ಯೆಹೂದ್ಯ ಸಹೋದರರು ಅರ್ಥಮಾಡಿಕೊಳ್ಳುತ್ತಾರೆ ಎಂದು ಮೋಶೆ ಭಾವಿಸಿಕೊಂಡನು. ಆದರೆ ಅವರು ಅರ್ಥಮಾಡಿಕೊಳ್ಳಲಿಲ್ಲ.

26 “ಮರುದಿನ, ಇಬ್ಬರು ಯೆಹೂದ್ಯರು ಹೊಡೆದಾಡುವುದನ್ನು ಮೋಶೆಯು ಕಂಡನು. ಅವರನ್ನು ಸಮಾಧಾನಪಡಿಸಲು ಅವನು ಪ್ರಯತ್ನಿಸಿ ‘ಗೆಳೆಯರೇ, ನೀವು ಸಹೋದರರಾಗಿದ್ದೀರಿ! ನೀವು ಒಬ್ಬರಿಗೊಬ್ಬರು ಅನ್ಯಾಯ ಮಾಡುವುದೇಕೆ?’ ಎಂದು ಅವರನ್ನು ಕೇಳಿದನು. 27 ಮತ್ತೊಬ್ಬನಿಗೆ ಅನ್ಯಾಯ ಮಾಡುತ್ತಿದ್ದವನು ಮೋಶೆಯನ್ನು ಹಿಂದಕ್ಕೆ ತಳ್ಳಿ, ‘ನಿನ್ನನ್ನು ನಮ್ಮ ಅಧಿಪತಿ ಎಂದಾಗಲಿ ನ್ಯಾಯಾಧೀಶ ಎಂದಾಗಲಿ ಯಾರಾದರೂ ಹೇಳಿದರೇ? ಇಲ್ಲ! 28 ನಿನ್ನೆ ಆ ಈಜಿಪ್ಟಿನವನನ್ನು ಕೊಂದಂತೆ ನನ್ನನ್ನೂ ಕೊಲ್ಲುವೆಯಾ?’(D) ಎಂದು ಹೇಳಿದನು. 29 ಇದನ್ನು ಕೇಳಿದ್ದೇ ಮೋಶೆಯು ಈಜಿಪ್ಟನ್ನು ಬಿಟ್ಟು ಮಿದ್ಯಾನ್ಯರ ನಾಡಿಗೆ ಹೋಗಿ ವಿದೇಶಿಯವನಂತೆ ವಾಸಿಸತೊಡಗಿದನು. ಅಲ್ಲಿ ಅವನಿಗೆ ಇಬ್ಬರು ಗಂಡುಮಕ್ಕಳು ಹುಟ್ಟಿದರು.

30 “ನಲವತ್ತು ವರ್ಷಗಳಾದ ಮೇಲೆ ಮೋಶೆಯು ಸಿನಾಯ್ ಬೆಟ್ಟದ ಸಮೀಪದಲ್ಲಿರುವ ಮರಳುಗಾಡಿನಲ್ಲಿದ್ದಾಗ ಉರಿಯುತ್ತಿದ್ದ ಪೊದೆಯ ಜ್ವಾಲೆಯಲ್ಲಿ ದೇವದೂತನೊಬ್ಬನು ಕಾಣಿಸಿಕೊಂಡನು. 31 ಮೋಶೆಯು ಆಶ್ಚರ್ಯದಿಂದ ನೋಡಲು ಸಮೀಪಕ್ಕೆ ಹೋದನು. ಆಗ ಮೋಶೆಗೆ ವಾಣಿಯೊಂದು ಕೇಳಿಸಿತು. ಅದು ಪ್ರಭುವಿನ ವಾಣಿಯಾಗಿತ್ತು. 32 ಪ್ರಭುವು ಅವನಿಗೆ, ‘ನಾನೇ ನಿನ್ನ ಪಿತೃಗಳ ದೇವರು. ನಾನೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’(E) ಎಂದು ಹೇಳಿದನು. ಮೋಶೆಯು ಭಯದಿಂದ ನಡುಗ ತೊಡಗಿದನು; ಪೊದೆಯನ್ನು ನೋಡಲು ಹೆದರಿದನು.

33 “ಪ್ರಭುವು ಅವನಿಗೆ, ‘ನಿನ್ನ ಪಾದರಕ್ಷೆಗಳನ್ನು ತೆಗೆದುಹಾಕು, ಈಗ ನೀನು ನಿಂತುಕೊಂಡಿರುವ ಸ್ಥಳ ಪರಿಶುದ್ಧವಾದದ್ದು. 34 ಜನರು ಈಜಿಪ್ಟಿನಲ್ಲಿ ಬಹಳ ಸಂಕಟಪಡುತ್ತಿರುವುದನ್ನು ನಾನು ನೋಡಿದ್ದೇನೆ; ನನ್ನ ಜನರ ಗೋಳಾಟವನ್ನು ನಾನು ಕೇಳಿದ್ದೇನೆ. ನಾನು ಅವರನ್ನು ರಕ್ಷಿಸುವುದಕ್ಕಾಗಿ ಇಳಿದುಬಂದಿದ್ದೇನೆ. ಮೋಶೆಯೇ, ಈಗ ನಾನು ನಿನ್ನನ್ನು ಈಜಿಪ್ಟಿಗೆ ಕಳುಹಿಸುತ್ತಿದ್ದೇನೆ’(F) ಎಂದು ಹೇಳಿದನು.

35 “ಆ ಯೆಹೂದ್ಯರಿಂದ ತಿರಸ್ಕೃತನಾದವನೇ ಈ ಮೋಶೆ. ಅವರು ಅವನಿಗೆ, ‘ನಿನ್ನನ್ನು ನಮ್ಮ ಅಧಿಪತಿ ಎಂದಾಗಲಿ ನ್ಯಾಯಾಧೀಶ ಎಂದಾಗಲಿ ನಿನಗೆ ಯಾರಾದರೂ ಹೇಳಿದರೇ?’ ಎಂದು ಪ್ರಶ್ನಿಸಿದ್ದರು. ಆದರೆ ದೇವರು ಅಧಿಪತಿಯನ್ನಾಗಿಯೂ ವಿಮೋಚಕನನ್ನಾಗಿಯೂ ಕಳುಹಿಸಿದ್ದು ಆ ಮೋಶೆಯನ್ನೇ. ದೇವರು ತನ್ನ ದೂತನ ಮೂಲಕವಾಗಿ ಮೋಶೆಯನ್ನು ಕಳುಹಿಸಿದನು. ಉರಿಯುವ ಪೊದೆಯಲ್ಲಿ ಮೋಶೆಯು ಕಂಡದ್ದು ಈ ದೇವದೂತನನ್ನೇ. 36 ಆದ್ದರಿಂದ ಮೋಶೆಯು ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. ಅವನು ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಈಜಿಪ್ಟಿನಲ್ಲಿಯೂ ಕೆಂಪುಸಮುದ್ರದಲ್ಲಿಯೂ ಮತ್ತು ನಲವತ್ತು ವರ್ಷಗಳ ಕಾಲ ಅರಣ್ಯದಲ್ಲಿಯೂ ಮಾಡಿದನು.

37 “ಈ ಮೋಶೆಯೇ ಯೆಹೂದ್ಯ ಜನರಿಗೆ, ‘ದೇವರು ನಿಮಗೊಬ್ಬ ಪ್ರವಾದಿಯನ್ನು ಕೊಡುವನು. ಆ ಪ್ರವಾದಿಯು ನಿಮ್ಮ ಸ್ವಜನರ ಮಧ್ಯದಿಂದಲೇ ಬರುವನು. ಅವನು ನನ್ನಂತೆಯೇ ಇರುವನು’(G) ಎಂದು ಹೇಳಿದನು. 38 ಅರಣ್ಯದಲ್ಲಿ ಯೆಹೂದ್ಯರ ಸಮೂಹದೊಂದಿಗೆ ಇದ್ದವನು ಈ ಮೋಶೆಯೇ. ಸಿನಾಯ್ ಬೆಟ್ಟದ ಬಳಿ ತನ್ನೊಂದಿಗೆ ಮಾತಾಡಿದ ದೇವದೂತನೊಂದಿಗೆ ಅವನಿದ್ದನು. ಅಲ್ಲದೆ ಅವನು ನಮ್ಮ ಪಿತೃಗಳೊಂದಿಗೆ ಇದ್ದನು. ಜೀವಕರವಾದ ಆಜ್ಞೆಗಳನ್ನು ಮೋಶೆಯು ದೇವರಿಂದ ಸ್ವೀಕರಿಸಿಕೊಂಡು ಅವುಗಳನ್ನು ನಮಗೆ ಕೊಟ್ಟನು.

39 “ಆದರೆ ಮೋಶೆಗೆ ವಿಧೇಯರಾಗಲು ನಮ್ಮ ಪಿತೃಗಳಿಗೆ ಇಷ್ಟವಿರಲಿಲ್ಲ. ಅವರು ಅವನನ್ನು ತಿರಸ್ಕರಿಸಿ, ಈಜಿಪ್ಟಿಗೆ ಹಿಂತಿರುಗಬೇಕೆಂದಿದ್ದರು. 40 ನಮ್ಮ ಪಿತೃಗಳು ಆರೋನನಿಗೆ, ‘ಮೋಶೆಯು ನಮ್ಮನ್ನು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದನು. ಆದರೆ ಅವನಿಗೆ ಏನಾಯಿತೋ ನಮಗೆ ಗೊತ್ತಿಲ್ಲ. ಆದ್ದರಿಂದ ನಮ್ಮ ಮುಂದೆ ಹೋಗಲು ಮತ್ತು ನಮ್ಮನ್ನು ನಡೆಸಲು ಕೆಲವು ದೇವರುಗಳನ್ನು ಮಾಡು’(H) ಎಂದರು. 41 ಆದ್ದರಿಂದ ಆ ಜನರು ಕರುವಿನಾಕೃತಿಯಲ್ಲಿ ಒಂದು ವಿಗ್ರಹವನ್ನು ಮಾಡಿ, ಅದಕ್ಕೆ ಯಜ್ಞಗಳನ್ನು ಅರ್ಪಿಸಿದರು. ಆ ಜನರು ತಮ್ಮ ಕೈಯಾರೆ ಮಾಡಿಕೊಂಡ ವಿಗ್ರಹದ ವಿಷಯದಲ್ಲಿ ಬಹು ಸಂತೋಷಪಟ್ಟರು! 42 ಆದರೆ ದೇವರು ಅವರಿಗೆ ವಿರೋಧವಾಗಿ, ಆಕಾಶದ ಸುಳ್ಳುದೇವರುಗಳನ್ನು ಪೂಜಿಸುವಂತೆ ಅವರನ್ನು ಬಿಟ್ಟುಬಿಟ್ಟನು. ಇದರ ಬಗ್ಗೆ ಪ್ರವಾದಿಗಳ ಪುಸ್ತಕದಲ್ಲಿ ಹೀಗೆ ಬರೆದಿದೆ: ದೇವರು ಹೀಗೆನ್ನುತ್ತಾನೆ,

‘ಯೆಹೂದ್ಯ ಜನರಾದ ನೀವು ನಲವತ್ತು ವರ್ಷಗಳ ಕಾಲ ಮರಳುಗಾಡಿನಲ್ಲಿದ್ದಾಗ
    ನನಗೆ ಯಜ್ಞಗಳನ್ನು ಅರ್ಪಿಸಲಿಲ್ಲ; ಕಾಣಿಕೆಗಳನ್ನು ತರಲಿಲ್ಲ.
43 ನೀವು ನಿಮ್ಮೊಂದಿಗೆ ಮೊಲೋಖನ (ಸುಳ್ಳುದೇವರ) ಗುಡಾರವನ್ನು
    ಮತ್ತು ನಿಮ್ಮ ರೇಫಾ ದೇವತೆಯ ನಕ್ಷತ್ರರೂಪವನ್ನು ಹೊತ್ತುಕೊಂಡು ಹೋದಿರಿ.
ಆರಾಧಿಸುವುದಕ್ಕಾಗಿ ನೀವು ಮಾಡಿಕೊಂಡ ವಿಗ್ರಹಗಳೇ ಇವು.
    ಆದ್ದರಿಂದ ನಾನು ನಿಮ್ಮನ್ನು ಬಾಬಿಲೋನಿನ ಆಚೆಗೆ ಕಳುಹಿಸಿಬಿಡುವೆನು.’(I)

44 “ದೇವರು ನಮ್ಮ ಪಿತೃಗಳೊಂದಿಗೆ ಯಾವ ಗುಡಾರದಲ್ಲಿ ಮತಾಡಿದ್ದನೋ ಆ ಗುಡಾರವು[b] ಈ ಯೆಹೂದ್ಯರೊಂದಿಗೆ ಮರಳುಗಾಡಿನಲ್ಲಿತ್ತು. ಈ ಗುಡಾರವನ್ನು ನಿರ್ಮಿಸುವ ಬಗೆಯನ್ನು ದೇವರು ಮೋಶೆಗೆ ತಿಳಿಸಿಕೊಟ್ಟನು. ದೇವರು ತನಗೆ ತೋರಿಸಿದ ಆಕಾರದಂತೆಯೇ ಮೋಶೆಯು ಅದನ್ನು ನಿರ್ಮಿಸಿದನು. 45 ತರುವಾಯ ಇತರ ಜನಾಂಗಗಳ ನಾಡುಗಳನ್ನು ವಶಪಡಿಸಿಕೊಳ್ಳುವುದಕ್ಕಾಗಿ ಯೆಹೋಶುವನು ನಮ್ಮ ಪಿತೃಗಳನ್ನು ಮುನ್ನಡೆಸಿದನು. ನಮ್ಮ ಜನರು ಆ ದೇಶದೊಳಗೆ ಹೋದಾಗ, ದೇವರು ಇತರ ಜನರನ್ನು ಅಲ್ಲಿಂದ ಹೊರಡಿಸಿಬಿಟ್ಟನು. ನಮ್ಮ ಜನರು ಆ ಹೊಸ ದೇಶದೊಳಗೆ ಹೋದಾಗ ಈ ಗುಡಾರವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು. ನಮ್ಮ ಜನರು ಈ ಗುಡಾರವನ್ನು ತಮ್ಮ ಪಿತೃಗಳಿಂದ ಸ್ವೀಕರಿಸಿಕೊಂಡು ದಾವೀದನ ಕಾಲದವರೆಗೂ ಅದನ್ನು ಇಟ್ಟುಕೊಂಡಿದ್ದರು. 46 ದೇವರು ದಾವೀದನನ್ನು ಬಹಳವಾಗಿ ಮೆಚ್ಚಿಕೊಂಡನು. ‘ಯಾಕೋಬನ ದೇವರಾದ ನಿನಗಾಗಿ ಒಂದು ಆಲಯವನ್ನು ಕಟ್ಟಲು ನನಗೆ ಅವಕಾಶಕೊಡು’ ಎಂದು ದಾವೀದನು ದೇವರನ್ನು ಕೇಳಿಕೊಂಡನು. 47 ಆದರೆ ದೇವಾಲಯವನ್ನು ಕಟ್ಟಿದ್ದು (ದಾವೀದನ ಮಗನಾದ) ಸೊಲೊಮೋನನೇ.

48 “ಆದರೆ ಮನುಷ್ಯರು ತಮ್ಮ ಕೈಯಾರೆ ನಿರ್ಮಿಸಿದ ಮನೆಗಳಲ್ಲಿ ಮಹೋನ್ನತನು (ದೇವರು) ವಾಸಿಸುವುದಿಲ್ಲ. ಪ್ರವಾದಿಯು ಹೀಗೆ ಬರೆದಿದ್ದಾನೆ:

49 ‘ಪ್ರಭುವು ಹೀಗೆನ್ನುತ್ತಾನೆ,
ಪರಲೋಕವು ನನ್ನ ಸಿಂಹಾಸನ.
    ಭೂಮಿಯು ನನ್ನ ಪಾದಪೀಠ.
ನೀವು ನನಗೋಸ್ಕರ ಯಾವ ಬಗೆಯ ಮನೆಯನ್ನು ಕಟ್ಟಬಲ್ಲಿರಿ?
    ನಾನು ವಿಶ್ರಮಿಸಿಕೊಳ್ಳತಕ್ಕ ಸ್ಥಳವೇ ಇಲ್ಲ!
50 ನೆನಪಿರಲಿ, ಈ ವಸ್ತುಗಳನ್ನೆಲ್ಲ ಮಾಡಿದವನು ನಾನೇ!’(J)

51 ಸ್ತೆಫನನು ಮಾತನ್ನು ಮುಂದುವರಿಸಿದನು: “ಮೊಂಡರಾದ ಯೆಹೂದ್ಯನಾಯಕರೇ! ನೀವು ನಿಮ್ಮ ಹೃದಯಗಳನ್ನು ದೇವರಿಗೆ ಕೊಟ್ಟಿಲ್ಲ. ನೀವು ಆತನಿಗೆ ಕಿವಿಗೊಡುವುದಿಲ್ಲ. ಪವಿತ್ರಾತ್ಮನು ನಿಮಗೆ ತಿಳಿಸಲು ಪ್ರಯತ್ನಿಸುತ್ತಿರುವ ವಿಷಯಕ್ಕೆ ನೀವು ಯಾವಾಗಲೂ ವಿರೋಧಿಗಳಾಗಿದ್ದೀರಿ. ನಿಮ್ಮ ಪಿತೃಗಳು ಹೀಗೆಯೇ ಮಾಡಿದರು ಮತ್ತು ನೀವೂ ಅವರಂತೆಯೇ ಇದ್ದೀರಿ! 52 ಜೀವಸಿದ್ದ ಪ್ರವಾದಿಗಳಲ್ಲಿ ಪ್ರತಿಯೊಬ್ಬರನ್ನೂ ನಿಮ್ಮ ಪಿತೃಗಳು ಹಿಂಸಿಸಿದರು. ನೀತಿವಂತನೊಬ್ಬನು (ಕ್ರಿಸ್ತನು) ಬರುತ್ತಾನೆಂದು ಬಹುಕಾಲದ ಹಿಂದೆಯೇ ಆ ಪ್ರವಾದಿಗಳು ತಿಳಿಸಿದ್ದರು. ಆದರೆ ನಿಮ್ಮ ಪಿತೃಗಳು ಆ ಪ್ರವಾದಿಗಳನ್ನು ಕೊಂದುಹಾಕಿದರು. ಈಗ ನೀವು ನೀತಿವಂತನಿಗೆ ವಿರುದ್ಧವಾಗಿ ತಿರುಗಿ ಆತನನ್ನು ಕೊಂದುಹಾಕಿದಿರಿ. 53 ದೇವರು ತನ್ನ ದೂತರ ಮೂಲಕ ಕೊಟ್ಟ ಮೋಶೆಯ ಧರ್ಮಶಾಸ್ತ್ರವನ್ನು ಪಡೆದುಕೊಂಡ ನೀವೇ ಅದಕ್ಕೆ ವಿಧೇಯರಾಗುವುದಿಲ್ಲ!”

ಸ್ತೆಫನನು ಕೊಲ್ಲಲ್ಪಟ್ಟನು

54 ಸ್ತೆಫನನ ಈ ಮಾತುಗಳನ್ನು ಕೇಳಿದ ಆ ಯೆಹೂದ್ಯನಾಯಕರು ಬಹಳ ಕೋಪಗೊಂಡರು. ಅವರು ರೋಷದಿಂದ ಸ್ತೆಫನನ ಮೇಲೆ ಹಲ್ಲು ಕಡಿದರು. 55 ಆದರೆ ಸ್ತೆಫನನು ಪವಿತ್ರಾತ್ಮಭರಿತನಾಗಿದ್ದನು. ಅವನು ಆಕಾಶದತ್ತ ಕಣ್ಣೆತ್ತಿ ನೋಡಿ, ದೇವರ ಮಹಿಮೆಯನ್ನೂ ಯೇಸುವು ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ಕಂಡು, 56 “ಇಗೋ, ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನು (ಯೇಸು) ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ನಾನು ನೋಡುತ್ತಿದ್ದೇನೆ!” ಎಂದು ಹೇಳಿದನು.

57 ಆಗ ಯೆಹೂದ್ಯನಾಯಕರೆಲ್ಲ ಗಟ್ಟಿಯಾಗಿ ಕೂಗಿ, ತಮ್ಮ ಕಿವಿಗಳನ್ನು ಕೈಗಳಿಂದ ಮುಚ್ಚಿಕೊಂಡರು. ಅವರೆಲ್ಲರು ಸ್ತೆಫನನ ಬಳಿಗೆ ಒಟ್ಟಾಗಿ ಓಡಿಬಂದು, 58 ಅವನನ್ನು ಪಟ್ಟಣದಿಂದ ಹೊರಗೆ ಎಳೆದೊಯ್ದು, ಅವನು ಸಾಯುವವರೆಗೂ ಅವನ ಮೇಲೆ ಕಲ್ಲುಗಳನ್ನು ಎಸೆದರು. ಸ್ತೆಫನನ ವಿರುದ್ಧವಾಗಿ ಸುಳ್ಳು ಹೇಳಿದ ಜನರು ತಮ್ಮ ಮೇಲಂಗಿಗಳನ್ನು ಬಿಚ್ಚಿ ಸೌಲನೆಂಬ ಯುವಕನಿಗೆ ಕೊಟ್ಟು, 59 ಸ್ತೆಫನನಿಗೆ ಕಲ್ಲುಗಳನ್ನು ಎಸೆದರು. ಆದರೆ ಸ್ತೆಫನನು ಪ್ರಾರ್ಥಿಸುತ್ತಾ, “ಪ್ರಭುವಾದ ಯೇಸುವೇ, ನನ್ನ ಆತ್ಮವನ್ನು ಸ್ವೀಕರಿಸಿಕೊ!” ಎಂದನು. 60 ಅವನು ಮೊಣಕಾಲೂರಿ, “ಪ್ರಭುವೇ, ಈ ಪಾಪವನ್ನು ಇವರ ಮೇಲೆ ಹೊರಿಸಬೇಡ!” ಎಂದು ಧ್ವನಿಯೆತ್ತಿ ಹೇಳುತ್ತಾ ಪ್ರಾಣಬಿಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International