M’Cheyne Bible Reading Plan
ಜನರ ದುಷ್ಟತನ
6 ಭೂಮಿಯಲ್ಲಿ ಜನಸಂಖ್ಯೆಯು ಹೆಚ್ಚುತ್ತಲೇ ಇತ್ತು. ಅವರಿಗೆ ಸುಂದರವಾದ ಹೆಣ್ಣುಮಕ್ಕಳು ಹುಟ್ಟಿದರು. 2-4 ಈ ಹೆಣ್ಣುಮಕ್ಕಳ ಸೌಂದರ್ಯವನ್ನು ಕಂಡ ದೇವಪುತ್ರರು ತಮಗೆ ಬೇಕಾದ ಸ್ತ್ರೀಯರನ್ನು ಆರಿಸಿಕೊಂಡು ಮದುವೆಯಾದರು.
ಈ ಸ್ತ್ರೀಯರು ಮಕ್ಕಳನ್ನು ಹೆತ್ತರು. ಆ ಕಾಲದಲ್ಲಿ ಮತ್ತು ಆ ಕಾಲದ ನಂತರ ನೆಫೇಲಿಯರು ಆ ನಾಡಿನಲ್ಲಿ ವಾಸವಾಗಿದ್ದರು. ಅವರು ಪ್ರಸಿದ್ಧರಾದ ಪರಾಕ್ರಮಶಾಲಿಗಳಾಗಿದ್ದರು.[a]
ಬಳಿಕ ಯೆಹೋವನು, “ಜನರು ಕೇವಲ ಮಾನವರಷ್ಟೆ; ನನ್ನ ಆತ್ಮವು ಅವರಿಂದ ಯಾವಾಗಲೂ ತೊಂದರೆಗೆ ಗುರಿಯಾಗಕೂಡದು. ಅವರು 120 ವರ್ಷ ಬದುಕುವಂತೆ ಮಾಡುವೆನು” ಅಂದುಕೊಂಡನು.
5 ಭೂಮಿಯ ಮೇಲಿರುವ ಜನರು ತುಂಬ ದುಷ್ಟರಾಗಿದ್ದು ಯಾವಾಗಲೂ ಕೆಟ್ಟವಿಷಯಗಳ ಬಗ್ಗೆ ಆಲೋಚಿಸುತ್ತಿರುವುದನ್ನು ಯೆಹೋವನು ನೋಡಿದನು. 6 ಭೂಮಿಯ ಮೇಲೆ ತಾನು ಮನುಷ್ಯರನ್ನು ಸೃಷ್ಟಿಸಿದ್ದಕ್ಕಾಗಿ ಯೆಹೋವನು ದುಃಖಪಟ್ಟು ತನ್ನ ಹೃದಯದಲ್ಲಿ ನೊಂದುಕೊಂಡನು.
7 ಆದ್ದರಿಂದ ಯೆಹೋವನು, “ನಾನು ಸೃಷ್ಟಿಸಿದ ಜನರನ್ನೆಲ್ಲ ಭೂಮುಖದಿಂದ ನಾಶಮಾಡುವೆನು. ಪ್ರತಿಯೊಬ್ಬ ಮನುಷ್ಯನನ್ನೂ ಪ್ರತಿಯೊಂದು ಪ್ರಾಣಿಯನ್ನೂ ನೆಲದ ಮೇಲೆ ಹರಿದಾಡುವ ಪ್ರತಿಯೊಂದು ಜಂತುವನ್ನೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳನ್ನೂ ನಾಶಮಾಡುವೆನು. ಇವುಗಳನ್ನೆಲ್ಲಾ ಸೃಷ್ಟಿಸಿದ್ದರಿಂದ ನನಗೆ ದುಃಖವಾಯಿತು” ಅಂದುಕೊಂಡನು.
8 ಆದರೆ ಯೆಹೋವನಿಗೆ ಮೆಚ್ಚಿಕೆಯಾಗುವಂತೆ ನಡೆದುಕೊಂಡ ಒಬ್ಬ ಮನುಷ್ಯನಿದ್ದನು. ಅವನೇ ನೋಹ.
ನೋಹ ಮತ್ತು ಮಹಾ ಜಲಪ್ರಳಯ
9 ಇದು ನೋಹನ ಚರಿತ್ರೆ. ಅವನು ತನ್ನ ಜೀವಮಾನವೆಲ್ಲಾ ನೀತಿವಂತನಾಗಿದ್ದನು; ಯಾವಾಗಲೂ ದೇವರನ್ನೇ ಅನುಸರಿಸುತ್ತಿದ್ದನು. 10 ಅವನಿಗೆ ಮೂವರು ಗಂಡುಮಕ್ಕಳಿದ್ದರು: ಶೇಮ್, ಹಾಮ್, ಯೆಫೆತ್.
11-12 ದೇವರು ಭೂಮಿಯ ಕಡೆಗೆ ನೋಡಿದಾಗ ಜನರಿಂದ ಅದು ಕೆಟ್ಟುಹೋಗಿರುವುದನ್ನು ಕಂಡನು. ಎಲ್ಲೆಲ್ಲೂ ಹಿಂಸೆ ತುಂಬಿಕೊಂಡಿತ್ತು; ಜನರು ದುಷ್ಟರಾಗಿಯೂ ಕ್ರೂರಿಗಳಾಗಿಯೂ ತಮ್ಮ ಜೀವಿತವನ್ನು ಕೆಡಿಸಿಕೊಂಡಿದ್ದರು.
13 ಆದ್ದರಿಂದ ದೇವರು ನೋಹನಿಗೆ, “ನಾನು ಎಲ್ಲಾ ಜನರಿಗೂ ಅಂತ್ಯವನ್ನು ಬರಮಾಡಬೇಕೆಂದಿದ್ದೇನೆ; ಯಾಕೆಂದರೆ ಅವರು ಕೋಪ, ಹಿಂಸೆಗಳಿಂದ ಭೂಮಿಯನ್ನು ತುಂಬಿಸಿದ್ದಾರೆ. ಆದಕಾರಣ ನಾನು ಎಲ್ಲಾ ಜೀವಿಗಳನ್ನು ನಾಶಮಾಡುವೆನು. 14 ನಿನಗೋಸ್ಕರ ಒಂದು ನಾವೆಯನ್ನು ತುರಾಯಿ ಮರದಿಂದ ತಯಾರಿಸು. ಆ ನಾವೆಯಲ್ಲಿ ಕೋಣೆಗಳನ್ನು ಮಾಡು. ಇಡೀ ನಾವೆಗೆ ಒಳಭಾಗದಲ್ಲೂ ಹೊರಭಾಗದಲ್ಲೂ ರಾಳವನ್ನು ಹಚ್ಚು.
15 “ನೀನು ತಯಾರಿಸುವ ನಾವೆಯು ನಾನೂರೈವತ್ತು ಅಡಿ ಉದ್ದವಾಗಿಯೂ ಎಪ್ಪತ್ತೈದು ಅಡಿ ಅಗಲವಾಗಿಯೂ ನಲವತ್ತೈದು ಅಡಿ ಎತ್ತರವಾಗಿಯೂ ಇರಬೇಕು. 16 ಕಿಟಕಿಯ ಮೇಲ್ಛಾವಣಿಗೆ ಹದಿನೆಂಟು ಇಂಚು ಕೆಳಗಿರಲಿ. ನಾವೆಯ ಪಾರ್ಶ್ವದಲ್ಲಿ ಬಾಗಿಲಿರಲಿ. ನಾವೆಯಲ್ಲಿ ಮೇಲಂತಸ್ತು ಮಧ್ಯಂತಸ್ತು ಮತ್ತು ಕೆಳಂತಸ್ತು ಎಂಬ ಮೂರು ಅಂತಸ್ತುಗಳಿರಲಿ.
17 “ನಾನು ನಿನಗೆ ಹೇಳುತ್ತಿರುವುದನ್ನು ಅರ್ಥಮಾಡಿಕೊ. ನಾನು ಭೂಮಿಯ ಮೇಲೆ ಮಹಾ ಜಲಪ್ರಳಯವನ್ನು ತರುವೆನು. ಆಕಾಶದ ಕೆಳಗಿರುವ ಎಲ್ಲಾ ಜೀವಿಗಳನ್ನು ನಾಶಮಾಡುವೆನು. ಭೂಮಿಯ ಮೇಲಿರುವ ಪ್ರತಿಯೊಂದೂ ಸಾಯುವುದು. 18 ನಾನು ನಿನ್ನೊಂದಿಗೆ ವಿಶೇಷ ಒಡಂಬಡಿಕೆಯನ್ನು ಮಾಡಿಕೊಳ್ಳುವೆ. ಅದೇನೆಂದರೆ, ನೀನು ಮತ್ತು ನಿನ್ನ ಹೆಂಡತಿ, ನಿನ್ನ ಗಂಡುಮಕ್ಕಳು ಮತ್ತು ಸೊಸೆಯಂದಿರು ನಾವೆಯೊಳಗೆ ಹೋಗುವಿರಿ. 19 ಇದಲ್ಲದೆ, ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯಲ್ಲಿ ಒಂದು ಗಂಡನ್ನೂ ಒಂದು ಹೆಣ್ಣನ್ನೂ ನಾವೆಯೊಳಗೆ ಸೇರಿಸಿಕೊ. ನಿನ್ನೊಡನೆ ಅವುಗಳನ್ನು ಜೀವದಿಂದುಳಿಸಿ ಕಾಪಾಡು. 20 ಭೂಮಿಯ ಮೇಲಿರುವ ಪ್ರತಿಯೊಂದು ಬಗೆಯ ಪಕ್ಷಿಗಳಲ್ಲಿ ಎರಡೆರಡೂ ಪ್ರತಿಯೊಂದು ಪ್ರಾಣಿಗಳಲ್ಲಿ ಎರಡೆರಡೂ ಮತ್ತು ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಜಂತುಗಳಲ್ಲಿ ಎರಡೆರಡೂ ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುವುದಕ್ಕಾಗಿ ನಿನ್ನೊಂದಿಗಿರಲಿ. 21 ಭೂಮಿಯ ಮೇಲೆ ದೊರೆಯುವ ಎಲ್ಲಾ ಬಗೆಯ ಆಹಾರವನ್ನು ನಿಮಗಾಗಿಯೂ ಮತ್ತು ಪ್ರಾಣಿಗಳಿಗಾಗಿಯೂ ನಾವೆಯಲ್ಲಿ ತುಂಬಿಸಿಕೊ” ಎಂದು ಹೇಳಿದನು.
22 ದೇವರು ಆಜ್ಞಾಪಿಸಿದಂತೆಯೇ ನೋಹನು ಮಾಡಿದನು.
ಕೊಡುವುದರ ಕುರಿತು ಯೇಸುವಿನ ಉಪದೇಶ
6 “ಎಚ್ಚರವಾಗಿರಿ! ನೀವು ಒಳ್ಳೆಯ ಕಾರ್ಯಗಳನ್ನು ಜನರ ಮುಂದೆ ಮಾಡಬೇಡಿ. ಜನರು ನೋಡಲೆಂದು ನೀವು ಅವುಗಳನ್ನು ಮಾಡಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ದೊರೆಯುವುದಿಲ್ಲ.
2 “ನೀವು ಬಡಜನರಿಗೆ ಮಾಡುವ ದಾನವನ್ನು ಪ್ರಕಟಿಸಬೇಡಿ. ನೀವು ಕಪಟಿಗಳಂತೆ ಮಾಡಕೂಡದು. ತಾವು ಮಾಡುವ ದಾನವನ್ನು ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ಕಪಟಿಗಳು ಸಭಾಮಂದಿರಗಳಲ್ಲಿ ಮತ್ತು ಬೀದಿಗಳಲ್ಲಿ ತುತ್ತೂರಿ ಊದಿಸುತ್ತಾರೆ. ಜನರಿಂದ ಗೌರವ ಪಡೆಯಬೇಕೆಂಬುದೇ ಅವರ ಉದ್ದೇಶ. 3 ಆದ್ದರಿಂದ ನೀವು ಬಡಜನರಿಗೆ ಕೊಡುವಾಗ ಬಹಳ ಗುಟ್ಟಾಗಿ ಕೊಡಿ. ನೀವು ಮಾಡುವಂಥದ್ದು ಯಾರಿಗೂ ತಿಳಿಯದಿರಲಿ. 4 ನೀವು ದಾನವನ್ನು ರಹಸ್ಯವಾಗಿ ಕೊಡಬೇಕು. ರಹಸ್ಯದಲ್ಲಿ ನಡೆಯುವ ಕಾರ್ಯಗಳನ್ನು ನೋಡಬಲ್ಲ ನಿಮ್ಮ ತಂದೆ ನಿಮಗೆ ಪ್ರತಿಫಲ ಕೊಡುವನು.
ಪ್ರಾರ್ಥನೆಯ ಕುರಿತು ಯೇಸುವಿನ ಉಪದೇಶ
(ಲೂಕ 11:2-4)
5 “ನೀವು ಪ್ರಾರ್ಥಿಸುವಾಗ ಕಪಟಿಗಳ ಹಾಗೆ ಪ್ರಾರ್ಥಿಸಬೇಡಿ. ಕಪಟಿಗಳು ಸಭಾಮಂದಿರಗಳಲ್ಲಿ ಮತ್ತು ಬೀದಿಯ ಮೂಲೆಗಳಲ್ಲಿ ನಿಂತುಕೊಂಡು ಗಟ್ಟಿಯಾಗಿ ಪ್ರಾರ್ಥಿಸಲು ಇಷ್ಟಪಡುತ್ತಾರೆ. ತಾವು ಪ್ರಾರ್ಥಿಸುವುದನ್ನು ಜನರು ನೋಡಬೇಕೆಂಬುದೇ ಅವರ ಬಯಕೆ. ಅವರು ಆಗಲೇ ಅದರ ಪೂರ್ಣ ಪ್ರತಿಫಲವನ್ನು ಹೊಂದಿಕೊಂಡಾಯಿತೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. 6 ನೀವು ಪ್ರಾರ್ಥನೆ ಮಾಡಬೇಕಾದರೆ, ನಿಮ್ಮ ಕೋಣೆಯೊಳಗೆ ಹೋಗಿ ಬಾಗಿಲನ್ನು ಮುಚ್ಚಿಕೊಂಡು ನಿಮಗೆ ಕಾಣದಿರುವ ನಿಮ್ಮ ತಂದೆಗೆ ಪ್ರಾರ್ಥಿಸಿ. ರಹಸ್ಯದಲ್ಲಿ ನಡೆಯುವ ಕಾರ್ಯಗಳನ್ನು ನೋಡಬಲ್ಲ ನಿಮ್ಮ ತಂದೆಯು ನಿಮಗೆ ಪ್ರತಿಫಲವನ್ನು ಕೊಡುವನು.
7 “ನೀವು ಪ್ರಾರ್ಥಿಸುವಾಗ ದೇವರನ್ನು ತಿಳಿದಿಲ್ಲದ ಜನರಂತೆ ಪ್ರಾರ್ಥಿಸಬೇಡಿ. ಅವರು ಅರ್ಥವಿಲ್ಲದ ಸಂಗತಿಗಳನ್ನು ಹೇಳುತ್ತಲೇ ಇರುತ್ತಾರೆ. ಆ ರೀತಿ ಪ್ರಾರ್ಥಿಸಬೇಡಿ. ತಾವು ಅನೇಕ ವಿಷಯಗಳನ್ನು ಹೇಳುವುದರಿಂದ ದೇವರು ತಮ್ಮ ಪ್ರಾರ್ಥನೆಯನ್ನು ಕೇಳುತ್ತಾನೆಂಬುದು ಅವರ ಆಲೋಚನೆ. 8 ನೀವು ಅವರಂತಾಗಬೇಡಿ. ನೀವು ಕೇಳುವುದಕ್ಕೆ ಮೊದಲೇ ನಿಮಗೆ ಏನೇನು ಬೇಕು ಎಂಬುದು ನಿಮ್ಮ ತಂದೆಗೆ ತಿಳಿದಿದೆ. 9 ಆದ್ದರಿಂದ ನೀವು ಹೀಗೆ ಪ್ರಾರ್ಥಿಸಿರಿ:
‘ಪರಲೋಕದಲ್ಲಿರುವ ನಮ್ಮ ತಂದೆಯೇ,
ನಿನ್ನ ಹೆಸರು ಪರಿಶುದ್ಧವಾಗಿರಲಿ.
10 ನಿನ್ನ ರಾಜ್ಯ ಬರಲಿ.
ನಿನ್ನ ಚಿತ್ತ ಪರಲೋಕದಲ್ಲಿ ನೆರವೇರುವಂತೆ ಭೂಲೋಕದಲ್ಲಿಯೂ ನೆರವೇರಲಿ.
11 ನಮ್ಮ ಅನುದಿನದ ಆಹಾರವನ್ನು ಈ ಹೊತ್ತು ನಮಗೆ ದಯಪಾಲಿಸು.
12 ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆಯೇ
ನಮ್ಮ ಪಾಪಗಳನ್ನು ಕ್ಷಮಿಸು.
13 ನಮ್ಮನ್ನು ಶೋಧನೆಗೆ ಒಳಪಡಿಸದೆ
ಕೆಡುಕನಿಂದ (ಸೈತಾನನಿಂದ) ನಮ್ಮನ್ನು ರಕ್ಷಿಸು.’
14 ಹೌದು, ಬೇರೆಯವರು ನಿಮಗೆ ಮಾಡಿದ ತಪ್ಪುಗಳನ್ನು ನೀವು ಕ್ಷಮಿಸಿದರೆ, ಪರಲೋಕದಲ್ಲಿರುವ ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸುತ್ತಾನೆ. 15 ಆದರೆ ಜನರು ನಿಮಗೆ ಮಾಡಿದ ತಪ್ಪುಗಳನ್ನು ನೀವು ಕ್ಷಮಿಸದಿದ್ದರೆ, ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ.
ಉಪವಾಸದ ಕುರಿತು ಯೇಸುವಿನ ಉಪದೇಶ
16 “ನೀವು ಉಪವಾಸ ಮಾಡುವಾಗ ನಿಮ್ಮ ಮುಖವನ್ನು ಸಪ್ಪಗೆ ಮಾಡಿಕೊಳ್ಳಬೇಡಿ. ಕಪಟಿಗಳು ಹಾಗೆ ಮಾಡುತ್ತಾರೆ. ಆದರೆ ನೀವು ಕಪಟಿಗಳಂತಿರಬೇಡಿ. ತಾವು ಉಪವಾಸ ಮಾಡುತ್ತಿರುವುದಾಗಿ ಜನರಿಗೆ ತೋರ್ಪಡಿಸಿಕೊಳ್ಳಲು ಅವರು ತಮ್ಮ ಮುಖಗಳನ್ನು ವಿಕಾರಮಾಡಿಕೊಳ್ಳುತ್ತಾರೆ. ಆ ಕಪಟಿಗಳು ತಮಗೆ ಬರತಕ್ಕ ಪ್ರತಿಫಲವನ್ನು ಸಂಪೂರ್ಣವಾಗಿ ಹೊಂದಾಯಿತೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. 17 ಆದ್ದರಿಂದ ನೀವು ಉಪವಾಸ ಮಾಡುವಾಗ, ಮುಖವನ್ನು ತೊಳೆದುಕೊಳ್ಳಿರಿ; ತಲೆಗೆ ಎಣ್ಣೆಯನ್ನು ಹಚ್ಚಿಕೊಳ್ಳಿರಿ. 18 ಆಗ ನೀವು ಉಪವಾಸ ಮಾಡುತ್ತಿದ್ದೀರೆಂದು ಜನರಿಗೆ ಗೊತ್ತಾಗುವುದಿಲ್ಲ. ಆದರೆ ನಿಮಗೆ ಅಗೋಚರವಾಗಿರುವ ನಿಮ್ಮ ತಂದೆಯು ನಿಮ್ಮನ್ನು ನೋಡುತ್ತಾನೆ. ರಹಸ್ಯದಲ್ಲಿ ನಡೆಯುವ ಸಂಗತಿಗಳನ್ನು ನೋಡಬಲ್ಲ ನಿಮ್ಮ ತಂದೆಯು ನಿಮಗೆ ಪ್ರತಿಫಲವನ್ನು ಕೊಡುತ್ತಾನೆ.
ಹಣಕ್ಕಿಂತ ದೇವರೇ ಬಹು ಮುಖ್ಯ
(ಲೂಕ 12:33-34; 11:34-36; 16:13)
19 “ನಿಮಗೋಸ್ಕರ ಈ ಭೂಮಿಯ ಮೇಲೆ ಭಂಡಾರಗಳನ್ನು ಮಾಡಿಕೊಳ್ಳಬೇಡಿ. ಅವು ಕಿಲುಬುಹತ್ತಿ ಹಾಳಾಗುತ್ತವೆ. ಕಳ್ಳರು ನಿಮ್ಮ ಮನೆಯೊಳಗೆ ಕನ್ನಕೊರೆದು ನಿಮ್ಮಲ್ಲಿರುವುದನ್ನು ಕದಿಯಬಲ್ಲರು. 20 ಆದ್ದರಿಂದ ನಿಮ್ಮ ಭಂಡಾರಗಳನ್ನು ಪರಲೋಕದಲ್ಲಿ ಮಾಡಿಟ್ಟುಕೊಳ್ಳಿ. ಅಲ್ಲಿ ಅವುಗಳಿಗೆ ನುಸಿ ಹಿಡಿಯುವುದಿಲ್ಲ. ಕಿಲುಬುಹತ್ತುವುದಿಲ್ಲ, ಕಳ್ಳರು ಕನ್ನಕೊರೆದು ಕದಿಯುವುದಿಲ್ಲ. 21 ನಿಮ್ಮ ಭಂಡಾರ ಎಲ್ಲಿರುವುದೋ ಅಲ್ಲೇ ನಿಮ್ಮ ಮನಸ್ಸಿರುವುದು.
22 “ಕಣ್ಣು ಶರೀರಕ್ಕೆ ಬೆಳಕಾಗಿದೆ. ನಿನ್ನ ಕಣ್ಣು ಸರಿಯಿದ್ದರೆ, ನಿನ್ನ ದೇಹವೆಲ್ಲಾ ಬೆಳಕಿನಿಂದ ಕೂಡಿರುವುದು. 23 ಆದರೆ ನಿನ್ನ ಕಣ್ಣು ಕೆಟ್ಟಿದ್ದರೆ, ನಿನ್ನ ಶರೀರವೆಲ್ಲ ಕತ್ತಲೆಯಿಂದ (ಪಾಪದಿಂದ) ತುಂಬಿರುವುದು. ನಿನ್ನಲ್ಲಿರುವ ಒಂದೇ ಬೆಳಕು ನಿಜವಾಗಿಯೂ ಕತ್ತಲಾದರೆ, ಆಗ ನೀನು ಕಗ್ಗತ್ತಲಲ್ಲಿರುವೆ.
24 “ಯಾವನೂ ಇಬ್ಬರು ಯಜಮಾನರಿಗೆ ಒಂದೇ ಸಮಯದಲ್ಲಿ ಸೇವೆ ಮಾಡಲಾರನು. ಅವನು ಒಬ್ಬ ಯಜಮಾನನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುತ್ತಾನೆ ಅಥವಾ ಒಬ್ಬ ಯಜಮಾನನನ್ನು ಹಿಂಬಾಲಿಸಿ ಮತ್ತೊಬ್ಬನನ್ನು ತಾತ್ಸಾರ ಮಾಡುತ್ತಾನೆ. ಆದ್ದರಿಂದ ನೀನು ದೇವರಿಗೆ ಮತ್ತು ಹಣಕ್ಕೆ ಒಂದೇ ಸಮಯದಲ್ಲಿ ಸೇವೆ ಮಾಡಲಾರೆ.
ದೇವರ ರಾಜ್ಯಕ್ಕೆ ಪ್ರಥಮ ಸ್ಥಾನ
(ಲೂಕ 12:22-34)
25 “ಆದ್ದರಿಂದ ನಿಮ್ಮ ಪ್ರಾಣಧಾರಣೆಗೆ ಬೇಕಾದ ಆಹಾರಕ್ಕಾಗಲಿ ದೇಹಕ್ಕೆ ಬೇಕಾದ ಬಟ್ಟೆಗಾಗಲಿ ನೀವು ಚಿಂತಿಸಬಾರದು. ಪ್ರಾಣವು ಆಹಾರಕ್ಕಿಂತಲೂ ದೇಹವು ಬಟ್ಟೆಗಿಂತಲೂ ಬಹಳ ಮುಖ್ಯವಾದದ್ದೆಂದು ನಾನು ನಿಮಗೆ ಹೇಳುತ್ತೇನೆ. 26 ಪಕ್ಷಿಗಳ ಕಡೆಗೆ ನೋಡಿ. ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ ಇಲ್ಲವೇ ಕಣಜಗಳಲ್ಲಿ ತುಂಬಿಟ್ಟುಕೊಳ್ಳುವುದಿಲ್ಲ. ಆದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳಿಗೆ ಆಹಾರವನ್ನು ನೀಡುತ್ತಾನೆ. ನೀವು ಆ ಪಕ್ಷಿಗಳಿಗಿಂತ ಎಷ್ಟೋ ಅಮೂಲ್ಯರೆಂಬುದು ನಿಮಗೆ ಗೊತ್ತಿದೆ. 27 ನೀವು ಚಿಂತಿಸುವುದರಿಂದ ನಿಮ್ಮ ಆಯುಷ್ಯು ಹೆಚ್ಚೇನೂ ಆಗುವುದಿಲ್ಲ.
28 “ಬಟ್ಟೆಗಾಗಿ ಚಿಂತಿಸುವುದೇಕೆ? ಹೊಲದಲ್ಲಿರುವ ಹೂವುಗಳನ್ನು ನೋಡಿ. ಅವು ಬೆಳೆಯುವ ಬಗೆಯನ್ನು ಗಮನಿಸಿ. ಅವು ದುಡಿಯುವುದಿಲ್ಲ ಅಥವಾ ತಮಗಾಗಿ ಬಟ್ಟೆಗಳನ್ನು ನೇಯುವುದಿಲ್ಲ. 29 ಆದರೆ ನಾನು ನಿಮಗೆ ಹೇಳುವುದೇನೆಂದರೆ, ಸೊಲೊಮೋನನು ತನ್ನ ವೈಭವದಿಂದ ಇದ್ದಾಗಲೂ ಈ ಹೂವುಗಳಲ್ಲಿ ಒಂದಕ್ಕಿರುವಷ್ಟು ಸೌಂದರ್ಯವುಳ್ಳ ಬಟ್ಟೆಗಳನ್ನು ಧರಿಸಲಿಲ್ಲ. 30 ಬಯಲಿನಲ್ಲಿರುವ ಹುಲ್ಲಿಗೂ ದೇವರು ಹಾಗೆ ಹೊದಿಸುತ್ತಾನೆ. ಹುಲ್ಲಾದರೋ ಈ ಹೊತ್ತು ಇದ್ದು ನಾಳೆ ಬೆಂಕಿಯ ಪಾಲಾಗುತ್ತದೆ. ಆದ್ದರಿಂದ ದೇವರು ನಿಮಗೆ ಎಷ್ಟೋ ಹೆಚ್ಚಾಗಿ ತೊಡಿಸುತ್ತಾನೆಂದು ನಿಮಗೆ ಗೊತ್ತಿದೆ. ಅಲ್ಪವಿಶ್ವಾಸಿಗಳಾಗಿರಬೇಡಿ!
31 “‘ನಾವು ಏನು ತಿನ್ನಬೇಕು? ಏನು ಕುಡಿಯಬೇಕು? ಏನನ್ನು ಧರಿಸಬೇಕು?’ ಎಂದು ಚಿಂತಿಸಬೇಡಿ. 32 ದೇವರನ್ನು ತಿಳಿಯದ ಜನರೆಲ್ಲರೂ ಇವುಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ. ಚಿಂತಿಸಬೇಡಿರಿ, ಏಕೆಂದರೆ ಈ ವಸ್ತುಗಳು ನಿಮಗೆ ಅಗತ್ಯವೆಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ. 33 ಆದ್ದರಿಂದ ನೀವು ದೇವರ ರಾಜ್ಯಕ್ಕಾಗಿ ಮತ್ತು ಆತನ ಚಿತ್ತಕ್ಕನುಸಾರವಾಗಿ ಕಾರ್ಯಗಳನ್ನು ಮಾಡಲು ಬಹಳ ತವಕಪಡಬೇಕು. ಆಗ ನಿಮಗೆ ಅಗತ್ಯವಾದ ಉಳಿದವುಗಳನ್ನು ಸಹ ಕೊಡಲಾಗುವುದು. 34 ಆದ್ದರಿಂದ ನಾಳೆಗಾಗಿ ಚಿಂತಿಸಬೇಡಿ. ಪ್ರತಿದಿನವು ತನ್ನದೇ ಆದ ಎಷ್ಟೋ ಕಷ್ಟಗಳನ್ನು ಹೊಂದಿರುತ್ತದೆ. ನಾಳೆಯು ಸಹ ತನ್ನದೇ ಆದ ಚಿಂತೆಗಳನ್ನು ಹೊಂದಿದೆ.
ದಾರ್ಯಾವೆಷನ ಆಜ್ಞೆ
6 ತನಗಿಂತ ಮೊದಲು ರಾಜರಾಗಿದ್ದವರ ವೃತ್ತಾಂತ ಪುಸ್ತಕಗಳನ್ನು ತರಿಸಿ ದಾರ್ಯಾವೆಷನು ಶೋಧಿಸಿದನು. ಈ ಪುಸ್ತಕಗಳು ರಾಜ ಖಜಾನೆಯಲ್ಲಿ ಇಡಲ್ಪಟ್ಟಿದ್ದವು. 2 ಮೇದ್ಯ ಪ್ರಾಂತ್ಯದ ಎಕ್‌ಬಟಾನ ಎಂಬ ಕೋಟೆಯೊಳಗೆ ಒಂದು ಸುರುಳಿಯು ದೊರಕಿತು. ಆ ಸುರುಳಿಯಲ್ಲಿ ಈ ರೀತಿಯಾಗಿ ಬರೆದಿತ್ತು:
ಸರಕಾರದ ಆಜ್ಞೆ: 3 ರಾಜನಾದ ಸೈರಸನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ಜೆರುಸಲೇಮಿನಲ್ಲಿರುವ ದೇವಾಲಯದ ವಿಷಯವಾಗಿ ಸೈರಸ್ ರಾಜನು ಹೊರಡಿಸಿದ ರಾಜಾಜ್ಞೆ:
ದೇವಾಲಯವು ಮತ್ತೆ ಕಟ್ಟಲ್ಪಡಲಿ. ಅದು ಹೋಮಯಜ್ಞಾದಿಗಳನ್ನು ಸಮರ್ಪಿಸುವ ಸ್ಥಳವಾಗಲಿ. ದೇವಾಲಯದ ಅಸ್ತಿವಾರವು ಬಲವಾಗಿರಬೇಕು. ಅದರ ಎತ್ತರ ತೊಂಭತ್ತು ಅಡಿ ಇರಬೇಕು. ಅದರ ಅಗಲ ತೊಂಭತ್ತು ಅಡಿ ಇರಬೇಕು. 4 ಅದರ ಗೋಡೆಯಲ್ಲಿ ಮೂರುಸಾಲು ದೊಡ್ಡ ಗಾತ್ರದ ಕಲ್ಲುಗಳಿರಬೇಕು; ಒಂದು ಸಾಲಿನಲ್ಲಿ ಮರದ ತೊಲೆಗಳಿರಬೇಕು. ದೇವಾಲಯ ಕಟ್ಟಲು ತಗಲುವ ಖರ್ಚುವೆಚ್ಚವೆಲ್ಲವನ್ನು ರಾಜನ ಖಜಾನೆಯಿಂದ ಕೊಡಬೇಕು. 5 ಬೆಳ್ಳಿಬಂಗಾರಗಳ ವಸ್ತುಗಳೆಲ್ಲವನ್ನು ಜೆರುಸಲೇಮಿನ ದೇವಾಲಯದಿಂದ ನೆಬೂಕದ್ನೆಚ್ಚರನು ಸೂರೆಮಾಡಿ ಬಾಬಿಲೋನಿಗೆ ತಂದದ್ದನ್ನು ದೇವಾಲಯದಲ್ಲಿ ಇಡಬೇಕು.
6 ಹೀಗಿರುವದರಿಂದ, ದಾರ್ಯಾವೇಷನಾದ ನಾನು,
ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯಕ್ಕೆ ರಾಜ್ಯಪಾಲನಾಗಿರುವ ತತ್ತೆನೈ ಎಂಬ ನಿನಗೂ ಶೆತರ್ಬೋಜೆನೈ ಮತ್ತು ಆ ಪ್ರಾಂತ್ಯದ ಎಲ್ಲಾ ಅಧಿಕಾರಿಗಳಿಗೂ ಆಜ್ಞೆ ಕೊಡುವದೇನೆಂದರೆ, ಜೆರುಸಲೇಮಿನಿಂದ ನೀವು ದೂರವಾಗಿರಿ. 7 ಕೆಲಸ ಮಾಡುವವರನ್ನು ತೊಂದರೆಪಡಿಸಬೇಡಿ. ದೇವಾಲಯ ಕಟ್ಟುವ ಕೆಲಸವನ್ನು ನಿಲ್ಲಿಸುವ ಪ್ರಯತ್ನ ಮಾಡಬೇಡಿ. ಯೆಹೂದ್ಯರ ದೇಶಾಧಿಪತಿ ಮತ್ತು ಯೆಹೂದ್ಯ ನಾಯಕರು ಅದನ್ನು ಮತ್ತೆ ಕಟ್ಟಲಿ. ಹಿಂದಿನ ದೇವಾಲಯವಿದ್ದಲ್ಲಿಯೇ ಹೊಸದನ್ನು ಕಟ್ಟಲಿ.
8 ಈಗ ನಾನು ನಿಮಗೆ ಕೊಡುವ ಆಜ್ಞೆ ಏನೆಂದರೆ, ದೇವಾಲಯ ಕಟ್ಟುವ ಯೆಹೂದ್ಯ ನಾಯಕರಿಗೆ ನೀವು ಸಂಪೂರ್ಣ ಖರ್ಚನ್ನು ಸರಕಾರದ ಖಜಾನೆಯಿಂದ ಕೊಡಬೇಕು. ಇದಕ್ಕೆ ಬೇಕಾದ ಹಣವನ್ನು ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯದ ಜನರಿಂದ ತೆರಿಗೆವಸೂಲಿ ಮಾಡಿದ ಹಣದಿಂದ ಕೊಡಬೇಕು. ಈ ಕೆಲಸವನ್ನು ನೀವು ಬೇಗನೆ ಮಾಡಬೇಕು. ದೇವಾಲಯದ ಕೆಲಸ ನಿಂತುಹೋಗಬಾರದು. 9 ಆ ಜನರಿಗೆ ಏನು ಅವಶ್ಯಕತೆಯಿದೆಯೋ ಅದನ್ನು ಪೂರೈಸಬೇಕು. ಅವರಿಗೆ ಎಳೆಹೋರಿಗಳು, ಟಗರುಗಳು, ಗಂಡುಕುರಿಗಳು ಪರಲೋಕದ ದೇವರಿಗೆ ಯಜ್ಞವನ್ನರ್ಪಿಸಲು ಬೇಕಾಗಿದ್ದರೆ ಅವುಗಳನ್ನು ಕೊಡಿರಿ. ಜೆರುಸಲೇಮಿನ ಯಾಜಕರು ಗೋಧಿ, ಉಪ್ಪು, ದ್ರಾಕ್ಷಾರಸ, ಎಣ್ಣೆ ಬೇಕು ಎಂದು ಹೇಳಿದರೆ ಅದನ್ನು ಪ್ರತಿದಿನ ತಪ್ಪದೆ ಒದಗಿಸಿರಿ. 10 ಅವುಗಳನ್ನು ಜೆರುಸಲೇಮಿನ ಯಾಜಕರಿಗೆ ಕೊಡಿರಿ. ಅವುಗಳನ್ನು ಯಜ್ಞವಾಗಿ ಸಮರ್ಪಿಸಿದಾಗ ಪರಲೋಕದ ದೇವರು ಅದನ್ನು ಮೆಚ್ಚುವನು. ಯಾಜಕರು ನನಗಾಗಿಯೂ ನನ್ನ ಮಕ್ಕಳಿಗಾಗಿಯು ಪ್ರಾರ್ಥಿಸಲಿ.
11 ಮಾತ್ರವಲ್ಲದೆ, ನನ್ನ ಆಜ್ಞೆ ಏನೆಂದರೆ: ಯಾವನಾದರೂ ನನ್ನ ಆಜ್ಞೆಯನ್ನು ಬದಲಾಯಿಸಿದರೆ ಅವನ ಮನೆಯಿಂದಲೇ ಒಂದು ತೊಲೆಯನ್ನು ಎಳೆದು ಅದನ್ನು ಶೂಲವನ್ನಾಗಿ ಮಾಡಿ, ಅವನನ್ನು ಅದಕ್ಕೆ ನೇತು ಹಾಕಬೇಕು; ಅವನ ಮನೆಯನ್ನು ಕೆಡವಿ ಅದನ್ನು ಮಣ್ಣುದಿಬ್ಬವನ್ನಾಗಿ ಮಾಡಬೇಕು.
12 ಜೆರುಸಲೇಮಿನಲ್ಲಿ ದೇವರು ತನ್ನ ಹೆಸರನ್ನು ಸ್ಥಾಪಿಸಿರುತ್ತಾನೆ. ಆದ್ದರಿಂದ ಯಾವ ಅರಸನಾಗಲಿ ಅಧಿಕಾರಿಯಾಗಲಿ ಈ ಆಜ್ಞೆಗೆ ವಿರುದ್ಧವಾಗಿ ನಡೆದರೆ ದೇವರೇ ಅವನನ್ನು ಸೋಲಿಸುವನು; ಯಾರಾದರೂ ಆ ದೇವಾಲಯವನ್ನು ಕೆಡವಲು ಪ್ರಯತ್ನಿಸಿದರೆ ಅಂಥವರನ್ನು ದೇವರೇ ನಾಶಮಾಡುವನು.
ಇದನ್ನು ದಾರ್ಯಾವೆಷನೆಂಬ ನಾನೇ ಆಜ್ಞಾಪಿಸಿರುತ್ತೇನೆ. ಈ ಆಜ್ಞೆಯನ್ನು ಬೇಗನೆ ಮತ್ತು ಸಂಪೂರ್ಣವಾಗಿ ನೆರವೇರಿಸಬೇಕು.
ದೇವಾಲಯ ಸಂಪೂರ್ಣವಾದದ್ದು ಮತ್ತು ಅದರ ಪ್ರತಿಷ್ಠೆ
13 ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯದ ರಾಜ್ಯಪಾಲನಾದ ತತ್ತೆನೈ, ಶೆತರ್ಬೋಜೆನೈ ಮತ್ತು ಅವರ ಸಂಗಡವಿರುವ ಜನರು ರಾಜನಾದ ದಾರ್ಯಾವೆಷನ ಆಜ್ಞೆಗೆ ಅತ್ಯಂತ ಶೀಘ್ರವಾಗಿ ಮತ್ತು ಸಂಪೂರ್ಣವಾಗಿ ವಿಧೇಯರಾದರು. 14 ಹೀಗೆ ಯೆಹೂದ್ಯರ ಹಿರಿಯರು ದೇವಾಲಯದ ಕಟ್ಟಡ ಕೆಲಸವನ್ನು ಮುಂದುವರಿಸಿದರು. ಪ್ರವಾದಿಯಾದ ಹಗ್ಗೈನಂತೆ ಮತ್ತು ಇದ್ದೋವಿನ ಮಗನಾದ ಜೆಕರೀಯನಂತೆ ಅವರನ್ನು ಪ್ರೋತ್ಸಾಹಿಸುತ್ತಾ ಇದ್ದರು. ಆದ್ದರಿಂದ ಅವರು ಯಶಸ್ವಿಯಾದರು. ದೇವಾಲಯದ ಕೆಲಸ ಮುಗಿಯಿತು. ಇಸ್ರೇಲಿನ ದೇವರ ಆಜ್ಞೆಗೆ ವಿಧೇಯರಾಗಿಯೂ, ಸೈರಸ್, ದಾರ್ಯಾವೆಷ ಮತ್ತು ಅರ್ತಷಸ್ತ ಎಂಬ ಪರ್ಶಿಯ ಅರಸರ ಆಜ್ಞೆಗೆ ವಿಧೇಯರಾಗಿಯೂ ಕಟ್ಟಡದ ಕೆಲಸವನ್ನು ಸಂಪೂರ್ಣ ಮಾಡಿದರು. 15 ಆದಾರ್ ತಿಂಗಳಿನ ಮೂರನೆಯ ದಿನದಲ್ಲಿ ಅಂದರೆ ರಾಜ ದಾರ್ಯಾವೆಷನ ಆಳ್ವಿಕೆಯ ಆರನೆಯ ವರ್ಷದಲ್ಲಿ ದೇವಾಲಯವು ಸಂಪೂರ್ಣವಾಯಿತು.
16 ಅನಂತರ ಇಸ್ರೇಲರೆಲ್ಲರೂ ಸೇರಿ ದೇವಾಲಯವನ್ನು ಅತ್ಯಂತ ಹರ್ಷದಿಂದ ಪ್ರತಿಷ್ಠೆ ಮಾಡಿದರು. ಸೆರೆವಾಸದಿಂದ ಹಿಂತಿರುಗಿ ಬಂದಿದ್ದ ಯಾಜಕರು, ಲೇವಿಯರು ಮತ್ತು ಎಲ್ಲಾ ಜನರು ಈ ಆಚರಣೆಯಲ್ಲಿ ಭಾಗವಹಿಸಿದರು.
17 ಆ ದಿವಸ ಸರ್ವಾಂಗಹೋಮವಾಗಿ ನೂರು ಹೋರಿಗಳನ್ನೂ, ಇನ್ನೂರು ಟಗರುಗಳನ್ನೂ ನಾನೂರು ಕುರಿಮರಿಗಳನ್ನೂ ಸಮರ್ಪಿಸಿದರು. ಎಲ್ಲಾ ಇಸ್ರೇಲರ ದೋಷ ಪರಿಹಾರಕ್ಕಾಗಿ ಕುಲಕ್ಕೆ ಒಂದರಂತೆ ಹನ್ನೆರಡು ಹೋತಗಳನ್ನು ಅರ್ಪಿಸಿದರು. 18 ಅನಂತರ ಯಾಜಕರನ್ನು ಮತ್ತು ಲೇವಿಯರನ್ನು ಅವರವರ ವರ್ಗಗಳಿಗನುಸಾರವಾಗಿ, ಮೋಶೆಯ ವಿಧಿಯಂತೆ ದೇವಾಲಯದಲ್ಲಿ ಸೇವೆಮಾಡುವುದಕ್ಕಾಗಿ ಆರಿಸಿದರು.
ಪಸ್ಕಹಬ್ಬ
19 ಮೊದಲನೇ ತಿಂಗಳ ಹದಿನಾಲ್ಕನೆಯ ದಿನದಂದು ಸೆರೆಯಿಂದ ಹಿಂತಿರುಗಿಬಂದಿದ್ದ ಯೆಹೂದ್ಯರು ಪಸ್ಕಹಬ್ಬವನ್ನು ಆಚರಿಸಿದರು. 20 ಯಾಜಕರೂ ಲೇವಿಯರೂ ತಮ್ಮನ್ನು ಶುದ್ಧಮಾಡಿಕೊಂಡು ಹಬ್ಬವನ್ನು ಆಚರಿಸಲು ಸಿದ್ಧರಾದರು. ಪಸ್ಕದ ಕುರಿಮರಿಯನ್ನು ಎಲ್ಲಾ ಇಸ್ರೇಲರಿಗಾಗಿಯೂ ತಮಗಾಗಿಯೂ ಯಾಜಕರಿಗಾಗಿಯೂ ಲೇವಿಯರು ವಧಿಸಿದರು. 21 ಸೆರೆಯಿಂದ ಹಿಂತಿರುಗಿ ಬಂದಿದ್ದ ಇಸ್ರೇಲರೆಲ್ಲರೂ ಪಸ್ಕದ ಊಟವನ್ನು ಮಾಡಿದರು. ಉಳಿದವರು ಅನ್ಯರ ಜೊತೆಯಲ್ಲಿ ವಾಸಿಸುವುದರಿಂದ ತಮ್ಮನ್ನು ಶುದ್ಧಪಡಿಸಿಕೊಂಡವರೆಲ್ಲರೂ ಪಸ್ಕದ ಊಟದಲ್ಲಿ ಪಾಲು ತೆಗೆದುಕೊಂಡರು. ಇಸ್ರೇಲರ ದೇವರಾದ ಯೆಹೋವನ ಬಳಿಗೆ ಸಹಾಯಕ್ಕಾಗಿ ಹೋಗಲು ಸಾಧ್ಯವಾಗುವಂತೆ ಅವರು ಹೀಗೆ ಮಾಡಿದರು. 22 ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಅವರು ಏಳು ದಿನಗಳ ತನಕ ಸಂತಸದಿಂದ ಆಚರಿಸಿದರು. ಯಾಕೆಂದರೆ ಅಶ್ಶೂರದ ಅರಸನ ಮನಸ್ಸನ್ನು ಮಾರ್ಪಡಿಸುವುದರ ಮೂಲಕ ಯೆಹೋವನು ಯೆಹೂದ್ಯರನ್ನು ಬಹಳ ಸಂತೋಷಗೊಳಿಸಿದ್ದನು. ಇಸ್ರೇಲ್ ದೇವರ ಆಲಯದ ಕಟ್ಟಡವು ಪೂರ್ಣಗೊಳ್ಳಲು ಅಶ್ಶೂರದ ಅರಸನು ಸಹಾಯ ಮಾಡಿದನು.
ವಿಶೇಷ ಕಾರ್ಯಕ್ಕೆ ಏಳು ಮಂದಿಯ ಆಯ್ಕೆ
6 ಯೇಸುವಿನ ಶಿಷ್ಯರ ಸಂಖ್ಯೆಯು ಹೆಚ್ಚುಹೆಚ್ಚಾಗುತ್ತಿತ್ತು. ಆದರೆ ಈ ಸಮಯದಲ್ಲಿ ಗ್ರೀಕ್ ಮಾತಾಡುವ ಶಿಷ್ಯರು ಯೆಹೂದ್ಯ ಶಿಷ್ಯರಿಗೆ ದೂರು ಹೇಳಿದರು. ಪ್ರತಿದಿನ ಶಿಷ್ಯರಿಗೆ ಕೊಡುವಂಥವುಗಳಲ್ಲಿ ತಮ್ಮ ವಿಧವೆಯರಿಗೆ ಅವರ ಪಾಲು ದೊರೆಯುತ್ತಿಲ್ಲವೆಂದು ಅವರು ಆಪಾದಿಸಿದರು.
2 ಆಗ ಹನ್ನೆರಡು ಮಂದಿ ಅಪೊಸ್ತಲರು ಇಡೀ ಶಿಷ್ಯಸಮುದಾಯದ ಸಭೆಯನ್ನು ಕರೆದು ಅವರಿಗೆ, “ದೇವರ ವಾಕ್ಯವನ್ನು ಬೋಧಿಸುವುದು ನಮ್ಮ ಕೆಲಸ. ಆದರೆ ಅದು ನಿಂತುಹೋಗುವುದು ಸರಿಯಲ್ಲ! ನಾವು ಜನರಿಗೆ ಊಟವನ್ನು ಒದಗಿಸಲು ಸಹಾಯ ಮಾಡುವುದಕ್ಕಿಂತಲೂ ದೇವರ ವಾಕ್ಯೋಪದೇಶವನ್ನು ಮುಂದುವರಿಸುವುದು ಒಳ್ಳೆಯದು. 3 ಆದ್ದರಿಂದ, ಸಹೋದರರೇ, ನಿಮ್ಮ ಜನರಲ್ಲಿ ಏಳು ಮಂದಿಯನ್ನು ಆರಿಸಿಕೊಳ್ಳಿರಿ. ಅವರು ಜನರಿಂದ ಒಳ್ಳೆಯವರು ಎನಿಸಿಕೊಂಡವರಾಗಿರಬೇಕು; ಜ್ಞಾನಪೂರ್ಣರಾಗಿರಬೇಕು ಮತ್ತು ಪವಿತ್ರಾತ್ಮಭರಿತರಾಗಿರಬೇಕು. ನಾವು ಅವರಿಗೆ ಈ ಕೆಲಸವನ್ನು ಒಪ್ಪಿಸಿಕೊಡುತ್ತೇವೆ. 4 ಆಗ ನಾವು ನಮ್ಮ ಸಮಯವನ್ನೆಲ್ಲಾ ಪ್ರಾರ್ಥನೆಗೂ ದೇವರ ವಾಕ್ಯೋಪದೇಶಕ್ಕೂ ಕೊಡಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
5 ಇಡೀ ಸಮುದಾಯವು ಈ ಆಲೋಚನೆಯನ್ನು ಇಷ್ಟಪಟ್ಟಿತು. ಆದ್ದರಿಂದ ಅವರು ಈ ಏಳು ಮಂದಿಯನ್ನು ಆರಿಸಿಕೊಂಡರು: ಸ್ತೆಫನ (ಮಹಾನಂಬಿಕೆಯುಳ್ಳ ಮತ್ತು ಪವಿತ್ರಾತ್ಮಭರಿತನಾಗಿದ್ದ ಮನುಷ್ಯ), ಫಿಲಿಪ್ಪ,[a] ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ ಮತ್ತು ನಿಕೊಲಾಯ (ಮತಾಂತರ ಹೊಂದಿ ಯೆಹೂದ್ಯನಾಗಿದ್ದ ಇವನು ಅಂತಿಯೋಕ್ಯಕ್ಕೆ ಸೇರಿದವನು.) 6 ಬಳಿಕ ಅವರು ಈ ಏಳು ಮಂದಿಯನ್ನು ಅಪೊಸ್ತಲರ ಮುಂದೆ ನಿಲ್ಲಿಸಿದರು. ಅಪೊಸ್ತಲರು ಪ್ರಾರ್ಥಿಸಿ, ಅವರ ತಲೆಗಳ ಮೇಲೆ ತಮ್ಮ ಕೈಗಳನ್ನಿಟ್ಟರು.
7 ದೇವರ ವಾಕ್ಯವು ಹೆಚ್ಚುಹೆಚ್ಚು ಜನರಿಗೆ ತಲುಪತೊಡಗಿತು. ಜೆರುಸಲೇಮಿನ ಶಿಷ್ಯಸಮುದಾಯವು ಹೆಚ್ಚುಹೆಚ್ಚು ದೊಡ್ಡದಾಗ ತೊಡಗಿತು. ಅನೇಕ ಯೆಹೂದ್ಯಯಾಜಕರು ನಂಬಿಕೊಂಡರು ಮತ್ತು ವಿಧೇಯರಾದರು.
ಯೆಹೂದ್ಯರು ಸ್ತೆಫನನಿಗೆ ವಿರುದ್ಧವಾದರು
8 ಸ್ತೆಫನನು (ಏಳು ಮಂದಿಯಲ್ಲಿ ಒಬ್ಬನು) ದೇವರ ಕೃಪೆಯಿಂದಲೂ ಬಲದಿಂದಲೂ ತುಂಬಿದವನಾಗಿ ಅದ್ಭುತಕಾರ್ಯಗಳನ್ನು ಮತ್ತು ಸೂಚಕಕಾರ್ಯಗಳನ್ನು ಮಾಡುತ್ತಾ ಇದ್ದನು. 9 ಆದರೆ ಕೆಲವು ಯೆಹೂದ್ಯರು ಬಂದು ಅವನೊಂದಿಗೆ ವಾದಿಸಿದರು. ಈ ಯೆಹೂದ್ಯರು ಸಭಾಮಂದಿರಕ್ಕೆ ಸೇರಿದವರು. ಅದಕ್ಕೆ “ಬಿಡುಗಡೆ ಹೊಂದಿದವರ[b] ಸಭಾಮಂದಿರ” ಎಂದು ಕರೆಯುತ್ತಿದ್ದರು. (ಸಿರೇನ್ ಮತ್ತು ಅಲೆಕ್ಸಾಂಡ್ರಿಯದಿಂದ ಬಂದ ಯೆಹೂದ್ಯರಿಗೋಸ್ಕರವಾಗಿಯೂ ಈ ಸಭಾಮಂದಿರವಿತ್ತು.) ಸಿಲಿಸಿಯ ಮತ್ತು ಏಷ್ಯಾದಿಂದ ಬಂದ ಯೆಹೂದ್ಯರೂ ಅವರೊಂದಿಗಿದ್ದರು. ಅವರೆಲ್ಲರೂ ಬಂದು ಅವನೊಂದಿಗೆ ವಾದಮಾಡಿದರು. 10 ಆದರೆ ವಿವೇಕದಿಂದ ಮಾತಾಡಲು ಪವಿತ್ರಾತ್ಮನು ಅವನಿಗೆ ಸಹಾಯಮಾಡಿದನು. ಸ್ತೆಫನನ ಮಾತುಗಳು ಬಹು ಶಕ್ತಿಯುತವಾಗಿದ್ದ ಕಾರಣ ಅವನೊಂದಿಗೆ ವಾದಿಸಲು ಅವರಿಗೆ ಸಾಧ್ಯವಾಗದೆ,
11 “ಸ್ತೆಫನನು ಮೋಶೆಗೂ ದೇವರಿಗೂ ವಿರುದ್ಧವಾಗಿ ಕೆಟ್ಟ ಸಂಗತಿಗಳನ್ನು ಹೇಳುತ್ತಾನೆ; ಅವನ್ನು ನಾವೇ ಕೇಳಿದ್ದೇವೆ!” ಎಂದು ತಿಳಿಸುವಂತೆ ಕೆಲವರಿಗೆ ಹಣಕೊಟ್ಟರು. 12 ಹೀಗೆ ಈ ಯೆಹೂದ್ಯರು ಜನರನ್ನೂ ಯೆಹೂದ್ಯರ ಹಿರಿಯನಾಯಕರನ್ನೂ ಧರ್ಮೋಪದೇಶಕರನ್ನೂ ಗಲಿಬಿಲಿಗೊಳಿಸಿದರು. ಅವರು ಬಹು ಸಿಟ್ಟಿನಿಂದ ಬಂದು ಸ್ತೆಫನನನ್ನು ಬಂಧಿಸಿ ಯೆಹೂದ್ಯನಾಯಕರ ಸಭೆಗೆ ಕೊಂಡೊಯ್ದರು.
13 ಈ ಯೆಹೂದ್ಯರು ಕೆಲವು ಮಂದಿ ಸುಳ್ಳುಸಾಕ್ಷಿಗಳನ್ನು ಕರೆದುಕೊಂಡು ಬಂದು, “ಈ ಮನುಷ್ಯನು ಈ ಪವಿತ್ರಸ್ಥಳದ (ದೇವಾಲಯದ) ವಿರುದ್ಧವಾಗಿಯೂ ಮೋಶೆಯ ಧರ್ಮಶಾಸ್ತ್ರದ ವಿರುದ್ಧವಾಗಿಯೂ ಕೆಟ್ಟಸಂಗತಿಗಳನ್ನು ಯಾವಾಗಲೂ ಹೇಳುತ್ತಾನೆ. 14 ನಜರೇತಿನ ಯೇಸು ಈ ದೇವಾಲಯವನ್ನು ಕೆಡವಿ ಮೋಶೆಯ ವಿಧಿಗಳನ್ನು ಬದಲಾಯಿಸುತ್ತಾನೆಂದು ಇವನು ಹೇಳುವುದನ್ನು ನಾವು ಕೇಳಿದ್ದೇವೆ” ಎಂದು ಹೇಳಿಸಿದರು. 15 ಸಭೆಯಲ್ಲಿ ಕುಳಿತಿದ್ದವರೆಲ್ಲರೂ ಸ್ತೆಫನನ ಮುಖವನ್ನು ದಿಟ್ಟಿಸಿ ನೋಡಲು ಅವನ ಮುಖವು ದೇವದೂತನ ಮುಖದಂತೆ ಕಂಗೊಳಿಸಿತು.
Kannada Holy Bible: Easy-to-Read Version. All rights reserved. © 1997 Bible League International