Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 5

ಆದಾಮನ ಕುಟುಂಬ ಚರಿತ್ರೆ

ಇದು ಆದಾಮನ ಕುಟುಂಬ ಚರಿತ್ರೆ. ದೇವರು ಮನುಷ್ಯನನ್ನು ತನ್ನ ಹೋಲಿಕೆಗೆ ಸರಿಯಾಗಿ ಸೃಷ್ಟಿ ಮಾಡಿದನು. ದೇವರು ಅವರನ್ನು ಗಂಡು ಮತ್ತು ಹೆಣ್ಣುಗಳಾಗಿ ಉಂಟುಮಾಡಿದನು. ಆತನು ಅವರನ್ನು ನಿರ್ಮಿಸಿದ ದಿನದಲ್ಲೇ ಅವರನ್ನು ಆಶೀರ್ವದಿಸಿ ಅವರಿಗೆ, “ಮನುಷ್ಯ” ಎಂದು ಹೆಸರಿಟ್ಟನು.

ಆದಾಮನು 130 ವರ್ಷದವನಾದಾಗ ಮತ್ತೊಬ್ಬ ಮಗನನ್ನು ಪಡೆದನು. ಆ ಮಗನು ರೂಪದಲ್ಲಿ ಆದಾಮನಂತಿದ್ದನು. ಆದಾಮನು ಅವನಿಗೆ ಸೇತ ಎಂದು ಹೆಸರಿಟ್ಟನು. ಸೇತನು ಹುಟ್ಟಿದ ಮೇಲೆ ಆದಾಮನು 800 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು. ಹೀಗೆ ಆದಾಮನು ಒಟ್ಟು 930 ವರ್ಷ ಜೀವಿಸಿ ಮರಣಹೊಂದಿದನು.

ಸೇತನು 105 ವರ್ಷದವನಾದಾಗ ಎನೋಷ್ ಎಂಬ ಮಗನನ್ನು ಪಡೆದನು. ಎನೋಷನು ಹುಟ್ಟಿದ ಮೇಲೆ ಸೇತನು 807 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಸೇತನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು. ಹೀಗೆ ಸೇತನು ಒಟ್ಟು 912 ವರ್ಷ ಜೀವಿಸಿ ಮರಣಹೊಂದಿದನು.

ಎನೋಷನು 90 ವರ್ಷದವನಾದಾಗ ಕೇನಾನ ಎಂಬ ಮಗನನ್ನು ಪಡೆದನು. 10 ಕೇನಾನನು ಹುಟ್ಟಿದ ಮೇಲೆ ಎನೋಷನು 815 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಅವನು ಬೇರೆ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು. 11 ಹೀಗೆ ಎನೋಷನು ಒಟ್ಟು 905 ವರ್ಷ ಜೀವಿಸಿ ಮರಣಹೊಂದಿದನು.

12 ಕೇನಾನನು 70 ವರ್ಷದವನಾದಾಗ ಅವನು ಮಹಲಲೇಲ ಎಂಬ ಮಗನನ್ನು ಪಡೆದನು. 13 ಮಹಲಲೇಲನು ಹುಟ್ಟಿದ ಮೇಲೆ ಕೇನಾನನು 840 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಕೇನಾನನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು. 14 ಹೀಗೆ ಕೇನಾನನು ಒಟ್ಟು 910 ವರ್ಷ ಜೀವಿಸಿ ಮರಣಹೊಂದಿದನು.

15 ಮಹಲಲೇಲನು 65 ವರ್ಷದವನಾದಾಗ ಯೆರೆದ ಎಂಬ ಮಗನನ್ನು ಪಡೆದನು. 16 ಯೆರೆದನು ಹುಟ್ಟಿದ ಮೇಲೆ ಮಹಲಲೇಲನು 830 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು. 17 ಹೀಗೆ ಮಹಲಲೇಲನು ಒಟ್ಟು 895 ವರ್ಷ ಜೀವಿಸಿ ಮರಣಹೊಂದಿದನು.

18 ಯೆರೆದನು 162 ವರ್ಷದವನಾದಾಗ ಹನೋಕ ಎಂಬ ಮಗನನ್ನು ಪಡೆದನು. 19 ಹನೋಕನು ಹುಟ್ಟಿದ ಮೇಲೆ ಯೆರೆದನು 800 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು. 20 ಹೀಗೆ ಯೆರೆದನು ಒಟ್ಟು 962 ವರ್ಷ ಜೀವಿಸಿ ಮರಣಹೊಂದಿದನು.

21 ಹನೋಕನು 65 ವರ್ಷದವನಾದಾಗ ಮೆತೂಷೆಲಹ ಎಂಬ ಮಗನನ್ನು ಪಡೆದನು. 22 ಮೆತೂಷೆಲಹನು ಹುಟ್ಟಿದ ಮೇಲೆ ಹನೋಕನು ದೇವರ ಅನ್ಯೋನ್ಯತೆಯಲ್ಲಿ 300 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು. 23 ಹೀಗೆ ಹನೋಕನು ಒಟ್ಟು 365 ವರ್ಷ ಜೀವಿಸಿದನು. 24 ಹನೋಕನು ದೇವರ ಅನ್ಯೋನ್ಯತೆಯಲ್ಲಿ ಜೀವಿಸುತ್ತಿದ್ದಾಗ, ದೇವರು ಅವನನ್ನು ತನ್ನ ಬಳಿಗೆ ಕರೆದುಕೊಂಡನು. ಅಂದಿನಿಂದ ಅವನು ಕಣ್ಮರೆಯಾದನು.

25 ಮೆತೂಷೆಲಹನು 187 ವರ್ಷದವನಾದಾಗ ಲೆಮೆಕ ಎಂಬ ಮಗನನ್ನು ಪಡೆದನು. 26 ಲೆಮೆಕನು ಹುಟ್ಟಿದ ಮೇಲೆ ಮೆತೂಷೆಲಹನು 782 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು. 27 ಹೀಗೆ ಮೆತೂಷೆಲಹನು ಒಟ್ಟು 969 ವರ್ಷ ಜೀವಿಸಿ ಮರಣಹೊಂದಿದನು.

28 ಲೆಮೆಕನು 182 ವರ್ಷದವನಾದಾಗ ಒಬ್ಬ ಮಗನನ್ನು ಪಡೆದನು. 29 ಲೆಮೆಕನು, “ನಾವು ರೈತರಾಗಿ ಕಷ್ಟಪಟ್ಟು ಕೆಲಸ ಮಾಡುತ್ತೇವೆ, ಯಾಕೆಂದರೆ ದೇವರು ಭೂಮಿಯನ್ನು ಶಪಿಸಿದನು. ಆದರೆ ಈ ಮಗನು ನಮಗೆ ವಿಶ್ರಾಂತಿ ಕೊಡುವನು” ಎಂದು ಹೇಳಿ ಆ ಮಗುವಿಗೆ ನೋಹ ಎಂದು ಹೆಸರಿಟ್ಟನು.

30 ನೋಹನು ಹುಟ್ಟಿದ ಮೇಲೆ, ಲೆಮೆಕನು 595 ವರ್ಷ ಜೀವಿಸಿದನು. ಆ ಕಾಲದಲ್ಲಿ ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು. 31 ಹೀಗೆ ಲೆಮೆಕನು ಒಟ್ಟು 777 ವರ್ಷ ಜೀವಿಸಿ ಮರಣಹೊಂದಿದನು.

32 ನೋಹನು 500 ವರ್ಷದವನಾದಾಗ ಶೇಮ್, ಹಾಮ್, ಯೆಫೆತ್ ಎಂಬ ಮೂವರು ಗಂಡುಮಕ್ಕಳನ್ನು ಪಡೆದನು.

ಮತ್ತಾಯ 5

ಪರ್ವತ ಪ್ರಸಂಗ

(ಲೂಕ 6:20-23)

ಯೇಸು ಈ ಜನಸಮೂಹವನ್ನು ನೋಡಿ, ಬೆಟ್ಟದ ಮೇಲೆ ಹೋಗಿ ಕುಳಿತುಕೊಂಡನು. ಆತನ ಶಿಷ್ಯರು ಸಹ ಆತನ ಬಳಿಗೆ ಬಂದರು. ಆಗ ಯೇಸು ಜನರಿಗೆ ಈ ಉಪದೇಶ ಮಾಡಿದನು:

“ಆತ್ಮಿಕತೆಯಲ್ಲಿ ಬಡವರಾಗಿರುವವರು ಧನ್ಯರು.
    ಪರಲೋಕರಾಜ್ಯ ಅವರದು.
ಈಗ ದು:ಖದಿಂದಿರುವವರು ಧನ್ಯರು.
    ದೇವರು ಅವರನ್ನು ಸಂತೈಸುವನು.
ದೀನರು ಧನ್ಯರು.
    ದೇವರು ವಾಗ್ದಾನ ಮಾಡಿದ ಭೂಮಿಯನ್ನು ಅವರು ಹೊಂದಿಕೊಳ್ಳುವರು.
ನೀತಿಗಾಗಿ ತವಕಪಡುವವರು ಧನ್ಯರು.
    ದೇವರು ಅವರನ್ನು ಸಂತೃಪ್ತಿಪಡಿಸುವನು.
ಕರುಣೆ ತೋರುವವರು ಧನ್ಯರು.
    ಅವರು ಕರುಣೆ ಹೊಂದುವರು.
ಪರಿಶುದ್ಧ ಹೃದಯವುಳ್ಳವರು ಧನ್ಯರು.
    ಅವರು ದೇವರನ್ನು ನೋಡುವರು.
ಸಮಾಧಾನಪಡಿಸುವವರು ಧನ್ಯರು.
    ಅವರು ‘ದೇವರ ಮಕ್ಕಳು’ ಎನಿಸಿಕೊಳ್ಳುವರು.
10 ನೀತಿಯ ನಿಮಿತ್ತ ಹಿಂಸೆಪಡುವವರು ಧನ್ಯರು.
    ಪರಲೋಕರಾಜ್ಯ ಅವರದು.

11 “ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರು ನಿಮ್ಮನ್ನು ಅಪಹಾಸ್ಯ ಮಾಡಿದರೆ, ಹಿಂಸೆಪಡಿಸಿದರೆ ಮತ್ತು ನಿಮ್ಮ ಮೇಲೆ ಕೆಟ್ಟಕೆಟ್ಟ ವಿಷಯಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರಾಗಿದ್ದೀರಿ. 12 ಸಂತೋಷಪಡಿರಿ, ಆನಂದಿಸಿರಿ. ಪರಲೋಕದಲ್ಲಿ ನಿಮಗಾಗಿ ಕಾದಿರುವ ಹೆಚ್ಚಿನ ಪ್ರತಿಫಲವನ್ನು ನೀವು ಹೊಂದುವಿರಿ. ನಿಮಗಿಂತ ಮುಂಚೆ ಜೀವಿಸಿದ್ದ ಪ್ರವಾದಿಗಳಿಗೂ ಜನರು ಹೀಗೆಯೇ ಮಾಡಿದರು.

ನೀವು ಉಪ್ಪಿನಂತಿದ್ದೀರಿ, ಬೆಳಕಿನಂತಿದ್ದೀರಿ

(ಮಾರ್ಕ 9:50; ಲೂಕ 14:34-35)

13 “ನೀವು ಭೂಮಿಗೆ ಉಪ್ಪಾಗಿದ್ದೀರಿ. ಆದರೆ ಉಪ್ಪೇ ತನ್ನ ರುಚಿಯನ್ನು ಕಳೆದುಕೊಂಡರೆ ಅದನ್ನು ಮತ್ತೆ ಉಪ್ಪನ್ನಾಗಿ ಮಾಡಲು ಸಾಧ್ಯವಿಲ್ಲ; ಅಂಥ ಉಪ್ಪಿನಿಂದ ಪ್ರಯೋಜನವೇನೂ ಇಲ್ಲ. ಜನರು ಅದನ್ನು ಹೊರಗೆ ಬಿಸಾಡಿ ಅದರ ಮೇಲೆ ನಡೆದಾಡುವರು.

14 “ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಗುಡ್ಡದ ಮೇಲೆ ಕಟ್ಟಿದ ಪಟ್ಟಣ ಮರೆಯಾಗಿರಲಾರದು. 15 ಜನರು ದೀಪವನ್ನು ಪಾತ್ರೆಯ ಕೆಳಗೆ ಮುಚ್ಚಿಡುವುದಿಲ್ಲ. ಜನರು ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಮನೆಯಲ್ಲಿರುವವರಿಗೆಲ್ಲಾ ಬೆಳಕು ಪ್ರಕಾಶಿಸುವುದು. 16 ಅದೇ ರೀತಿಯಲ್ಲಿ ನೀವು ಜನರಿಗೆ ಬೆಳಕಾಗಿರಬೇಕು. ಹೀಗೆ ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ.

ಪವಿತ್ರ ಗ್ರಂಥಕ್ಕೆ ಅಂತ್ಯವೇ ಇಲ್ಲ

17 “ನಾನು ಮೋಶೆಯ ಧರ್ಮಶಾಸ್ತ್ರವನ್ನಾಗಲಿ ಪ್ರವಾದಿಗಳ ಉಪದೇಶಗಳನ್ನಾಗಲಿ ತೆಗೆದುಹಾಕುವುದಕ್ಕೆ ಬಂದೆನೆಂದು ನೆನೆಸಬೇಡಿರಿ. ನಾನು ಅವುಗಳನ್ನು ನಾಶಮಾಡುವುದಕ್ಕಾಗಿ ಬರದೆ ಅವುಗಳನ್ನು ನೆರವೇರಿಸುವುದಕ್ಕಾಗಿ ಬಂದೆನು. 18 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಆಕಾಶ ಮತ್ತು ಭೂಮಿ ಅಳಿದುಹೋಗುವವರೆಗೂ ಧರ್ಮಶಾಸ್ತ್ರದಿಂದ ಏನೂ ಅಳಿದುಹೋಗುವುದಿಲ್ಲ. ಎಲ್ಲಾ ನೆರವೇರುವ ತನಕ ಧರ್ಮಶಾಸ್ತ್ರದ ಒಂದು ಅಕ್ಷರವಾಗಲಿ ಅಥವಾ ಅದರ ಒಂದು ಚುಕ್ಕೆಯಾಗಲಿ ಅಳಿದುಹೋಗುವುದಿಲ್ಲ.

19 “ಮನುಷ್ಯನು ಪ್ರತಿ ಆಜ್ಞೆಗೂ, ಅಂದರೆ ಸಣ್ಣಸಣ್ಣ ಆಜ್ಞೆಗೂ ವಿಧೇಯನಾಗಿರಬೇಕು. ಒಬ್ಬನು ಯಾವ ಆಜ್ಞೆಗಾದರೂ ಅವಿಧೇಯನಾಗಿ ಜೀವಿಸುತ್ತಾ ಆ ಆಜ್ಞೆಗೆ ಬೇರೆಯವರೂ ಅವಿಧೇಯರಾಗಿರಬೇಕೆಂದು ಬೋಧಿಸಿದರೆ ಅವನು ಪರಲೋಕರಾಜ್ಯದಲ್ಲಿ ಅತ್ಯಲ್ಪನಾಗಿರುವನು. ಆದರೆ ಧರ್ಮಶಾಸ್ತ್ರಕ್ಕೆ ವಿಧೇಯನಾಗಿ ಜೀವಿಸುತ್ತಾ ಧರ್ಮಶಾಸ್ತ್ರಕ್ಕೆ ವಿಧೇಯರಾಗಬೇಕೆಂದು ಬೇರೆಯವರಿಗೂ ಬೋಧಿಸುವವನು ಪರಲೋಕರಾಜ್ಯದಲ್ಲಿ ಪ್ರಮುಖನಾಗಿರುವನು. 20 ಧರ್ಮೋಪದೇಶಕರಿಗಿಂತಲೂ ಫರಿಸಾಯರಿಗಿಂತಲೂ ನೀವು ಉತ್ತಮವಾದದ್ದನ್ನು ಮಾಡಬೇಕು. ಇಲ್ಲವಾದರೆ ನೀವು ಪರಲೋಕರಾಜ್ಯವನ್ನು ಪ್ರವೇಶಿಸಲಾರಿರಿ.

ಕೋಪವನ್ನು ಕುರಿತು ಯೇಸುವಿನ ಉಪದೇಶ

21 “‘ಯಾರನ್ನೂ ಕೊಲೆಮಾಡಬಾರದು.(A) ಕೊಲೆ ಮಾಡುವವನು ನ್ಯಾಯತೀರ್ಪಿಗೆ ಒಳಗಾಗುವನು’ ಎಂದು ಬಹುಕಾಲದ ಹಿಂದೆ ನಮ್ಮ ಜನರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. 22 ಆದರೆ ನಾನು ನಿಮಗೆ ಹೇಳುವುದೇನೆಂದರೆ ಯಾರ ಮೇಲೂ ಕೋಪಗೊಳ್ಳಬೇಡಿ. ಪ್ರತಿಯೊಬ್ಬನೂ ನಿಮ್ಮ ಸಹೋದರ. ನೀವು ಬೇರೆಯವರ ಮೇಲೆ ಕೋಪಗೊಂಡರೆ ನ್ಯಾಯತೀರ್ಪಿಗೆ ಗುರಿಯಾಗುವಿರಿ. ನೀವು ಯಾರಿಗಾದರೂ ಕೆಟ್ಟ ಮಾತುಗಳನ್ನಾಡಿದರೆ, ಯೆಹೂದ್ಯರ ನ್ಯಾಯಸಭೆಯ ವಿಚಾರಣೆಗೆ ಗುರಿಯಾಗುವಿರಿ. ನೀವು ಯಾರನ್ನಾದರೂ ‘ಮೂರ್ಖ’ ಎಂದು ಕರೆದರೆ, ಅಗ್ನಿನರಕಕ್ಕೆ ಸೇರುವ ಅಪಾಯದಲ್ಲಿದ್ದೀರಿ.

23 “ಆದ್ದರಿಂದ ನೀವು ನಿಮ್ಮ ಕಾಣಿಕೆಯನ್ನು ಯಜ್ಞವೇದಿಕೆಯ ಮುಂದೆ ದೇವರಿಗೆ ಅರ್ಪಿಸುವಾಗ, ನಿಮ್ಮ ಸಹೋದರನಿಗೆ ನಿಮ್ಮ ಮೇಲೆ ಏನೋ ಮನಸ್ತಾಪವಿದೆ ಎಂಬುದು ನಿಮ್ಮ ನೆನಪಿಗೆ ಬಂದರೆ, 24 ಆಗ ನಿಮ್ಮ ಕಾಣಿಕೆಯನ್ನು ಯಜ್ಞವೇದಿಕೆಯ ಬಳಿಯಲ್ಲೇ ಬಿಟ್ಟುಹೋಗಿ, ಮೊದಲು ಅವನೊಂದಿಗೆ ಸಮಾಧಾನ ಮಾಡಿಕೊಳ್ಳಿರಿ. ಆಮೇಲೆ ಬಂದು ನಿಮ್ಮ ಕಾಣಿಕೆಯನ್ನು ಸಲ್ಲಿಸಿ.

25 “ನಿಮ್ಮ ವಿರೋಧಿಯು ನಿಮ್ಮನ್ನು ನ್ಯಾಯಾಲಯಕ್ಕೆ ಎಳೆದೊಯ್ಯುವಾಗ ಬೇಗನೆ ಅವನೊಂದಿಗೆ ಸ್ನೇಹಿತರಾಗಿ. ನೀವು ನ್ಯಾಯಾಲಯಕ್ಕೆ ಹೋಗುವ ಮೊದಲೇ ಇದನ್ನು ಮಾಡಬೇಕು. ನೀವು ಅವನ ಸ್ನೇಹಿತರಾಗದಿದ್ದರೆ, ಅವನು ನಿಮ್ಮನ್ನು ನ್ಯಾಯಾಧಿಪತಿಗೆ ಒಪ್ಪಿಸಬಹುದು. ನ್ಯಾಯಾಧಿಪತಿಯು ನಿಮ್ಮನ್ನು ಸೆರೆಮನೆಗೆ ಹಾಕಲು ಕಾವಲುಗಾರನಿಗೆ ಒಪ್ಪಿಸಬಹುದು. 26 ಆಗ ನೀವು ನಿಮ್ಮ ಸಾಲವನ್ನೆಲ್ಲ ತೀರಿಸುವ ತನಕ ಸೆರೆಯಿಂದ ಬಿಡುಗಡೆ ಆಗುವುದಿಲ್ಲವೆಂದು ನಾನು ನಿಮಗೆ ಹೇಳುತ್ತೇನೆ.

ಲೈಂಗಿಕ ಪಾಪದ ಕುರಿತು ಯೇಸುವಿನ ಉಪದೇಶ

27 “‘ವ್ಯಭಿಚಾರ ಮಾಡಬೇಡಿರಿ’(B) ಎಂದು ಹೇಳಿದ್ದನ್ನು ನೀವು ಕೇಳಿದ್ದೀರಿ. 28 ಆದರೆ ಒಬ್ಬನು ಪರಸ್ತ್ರೀಯನ್ನು ನೋಡಿ ಅವಳೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಬಯಸಿದರೆ, ಅವನು ಆಗಲೇ ತನ್ನ ಮನಸ್ಸಿನಲ್ಲಿ ಅವಳೊಂದಿಗೆ ವ್ಯಭಿಚಾರವನ್ನು ಮಾಡಿದ್ದಾನೆಂದು ನಾನು ನಿಮಗೆ ಹೇಳುತ್ತೇನೆ. 29 ನಿನ್ನ ಬಲಗಣ್ಣು ನಿನ್ನನ್ನು ಪಾಪಕ್ಕೊಳಗಾಗುವಂತೆ ಮಾಡಿದರೆ, ಅದನ್ನು ಕಿತ್ತು ಬಿಸಾಡು. ನಿನ್ನ ಪೂರ್ಣಶರೀರವು ನರಕಕ್ಕೆ ಬೀಳುವುದಕ್ಕಿಂತ ನಿನ್ನ ಶರೀರದ ಒಂದು ಭಾಗವನ್ನು ಕಳೆದುಕೊಳ್ಳುವುದೇ ಮೇಲು. 30 ನಿನ್ನ ಬಲಗೈ ನಿನ್ನನ್ನು ಪಾಪಕ್ಕೊಳಗಾಗುವಂತೆ ಮಾಡಿದರೆ, ಅದನ್ನು ಕತ್ತರಿಸಿ ಬಿಸಾಡು. ನಿನ್ನ ಪೂರ್ಣ ಶರೀರವು ನರಕಕ್ಕೆ ಹೋಗುವುದಕ್ಕಿಂತ ನಿನ್ನ ಶರೀರದ ಒಂದು ಭಾಗವನ್ನು ಕಳೆದುಕೊಳ್ಳುವುದೇ ಮೇಲು.

ವಿವಾಹ ವಿಚ್ಛೇದನ ಕುರಿತು ಯೇಸುವಿನ ಉಪದೇಶ

(ಮತ್ತಾಯ 19:9; ಮಾರ್ಕ 10:11-12; ಲೂಕ 16:18)

31 “‘ತನ್ನ ಹೆಂಡತಿಯನ್ನು ಬಿಟ್ಟುಬಿಡಬೇಕೆಂದಿರುವವನು, ಅವಳಿಗೆ ವಿವಾಹ ವಿಚ್ಛೇದನ ಪತ್ರವನ್ನು ಕೊಡಲಿ’(C) ಎಂದು ಹೇಳಲ್ಪಟ್ಟಿದೆ. 32 ಆದರೆ ನಾನು ಹೇಳುವುದೇನೆಂದರೆ, ತನ್ನ ಹೆಂಡತಿಯನ್ನು ಬಿಟ್ಟುಬಿಡುವವನೇ ಅವಳು ವ್ಯಭಿಚಾರಿಣಿಯಾಗುವುದಕ್ಕೆ ಕಾರಣನಾಗುತ್ತಾನೆ. ಹೆಂಡತಿಯು ಬೇರೊಬ್ಬ ಪುರುಷನೊಂದಿಗೆ ಲೈಂಗಿಕ ಸಂಬಂಧವಿಟ್ಟುಕೊಂಡಿದ್ದರೆ ಮಾತ್ರ ಅವಳನ್ನು ಗಂಡನು ಬಿಟ್ಟುಬಿಡಬಹುದು. ವಿವಾಹ ವಿಚ್ಛೇದನ ಹೊಂದಿದವಳನ್ನು ಮದುವೆಯಾಗುವವನು ಸಹ ವ್ಯಭಿಚಾರ ಮಾಡಿದವನಾಗುತ್ತಾನೆ.

ಆಣೆ ಇಡುವುದರ ಕುರಿತು ಯೇಸುವಿನ ಉಪದೇಶ

33 “‘ನೀವಿಟ್ಟ ಆಣೆಯನ್ನು ಮೀರಬೇಡಿರಿ. ಪ್ರಭುವಿಗೆ ನೀವಿಟ್ಟ ಆಣೆಗಳನ್ನು ಕೈಗೊಳ್ಳಲೇಬೇಕು’[a] ಎಂದು ನಮ್ಮ ಪೂರ್ವಿಕರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. 34 ಆದರೆ ನಾನು ಹೇಳುವುದೇನೆಂದರೆ, ಆಣೆ ಇಡಲೇಬೇಡಿ. ಪರಲೋಕದ ಮೇಲೂ ಆಣೆ ಇಡಬೇಡಿ, ಏಕೆಂದರೆ ಪರಲೋಕವು ದೇವರ ಸಿಂಹಾಸನ. 35 ಭೂಮಿಯ ಮೇಲೂ ಆಣೆ ಇಡಬೇಡಿ. ಏಕೆಂದರೆ ಭೂಮಿಯು ದೇವರ ಪಾದಪೀಠ. ಜೆರುಸಲೇಮಿನ ಮೇಲೂ ಆಣೆ ಇಡಬೇಡಿ, ಏಕೆಂದರೆ ಅದು ಆ ಮಹಾರಾಜನ ಪಟ್ಟಣ. 36 ನಿಮ್ಮ ತಲೆಯ ಮೇಲೂ ಆಣೆ ಇಡಬೇಡಿ. ನಿಮ್ಮ ತಲೆಯ ಒಂದು ಕೂದಲನ್ನಾದರೂ ಬೆಳ್ಳಗೆ ಅಥವಾ ಕಪ್ಪಗೆ ಮಾಡಲು ನಿಮ್ಮಿಂದಾಗದು. 37 ಹೌದಾದರೆ ‘ಹೌದು’ ಎನ್ನಿರಿ. ಇಲ್ಲವಾದರೆ ‘ಇಲ್ಲ’ ಎನ್ನಿರಿ. ನೀವು ಇದಕ್ಕಿಂತ ಹೆಚ್ಚಾಗಿ ಹೇಳುವಂಥದ್ದು ಸೈತಾನನಿಂದ ಪ್ರೇರಿತವಾದದ್ದು.

ಸೇಡಿನ ಬಗ್ಗೆ ಯೇಸುವಿನ ಉಪದೇಶ

(ಲೂಕ 6:29-30)

38 “‘ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು’(D) ಎಂದು ಹೇಳಿರುವುದನ್ನು ನೀವು ಕೇಳಿದ್ದೀರಿ. 39 ಆದರೆ ನಾನು ನಿಮಗೆ ಹೇಳುವುದೇನೆಂದರೆ, ದುಷ್ಟನಿಗೆ ವಿರೋಧವಾಗಿ ನಿಂತುಕೊಳ್ಳಬೇಡಿ. ಯಾವನಾದರೂ ನಿಮ್ಮ ಬಲಗೆನ್ನೆಗೆ ಹೊಡೆದರೆ, ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡಿರಿ. 40 ಯಾವನಾದರೂ ನಿಮ್ಮ ಮೇಲಂಗಿಗಾಗಿ ನಿಮ್ಮನ್ನು ನ್ಯಾಯಾಲಯಕ್ಕೆ ಎಳೆದೊಯ್ಯಬೇಕೆಂದಿದ್ದರೆ, ನಿಮ್ಮ ಒಳಂಗಿಯನ್ನು ಸಹ ಅವನಿಗೆ ಕೊಟ್ಟುಬಿಡಿರಿ. 41 ಯಾವ ಸೈನಿಕನಾದರೂ ತನ್ನೊಂದಿಗೆ ಒಂದು ಮೈಲಿ ದೂರ ಬರಬೇಕೆಂದು ನಿಮ್ಮನ್ನು ಒತ್ತಾಯಿಸಿದರೆ, ಅವನೊಂದಿಗೆ ಎರಡು ಮೈಲಿ ದೂರ ಹೋಗಿ. 42 ಯಾವನಾದರೂ ನಿಮ್ಮಲ್ಲಿರುವ ಯಾವುದನ್ನಾದರೂ ಕೇಳಿದರೆ, ಅವನಿಗೆ ಕೊಡಿ. ನಿಮ್ಮಿಂದ ಸಾಲ ತೆಗೆದುಕೊಳ್ಳಬೇಕೆಂದು ಬಂದವನಿಗೆ ಕೊಡದಿರಬೇಡಿ.

ಎಲ್ಲರನ್ನು ಪ್ರೀತಿಸಿರಿ

(ಲೂಕ 6:27-28,32-36)

43 “‘ನಿನ್ನ ಸ್ನೇಹಿತರನ್ನು ಪ್ರೀತಿಸು ಮತ್ತು ನಿನ್ನ ಶತ್ರುಗಳನ್ನು ದ್ವೇಷಿಸು’(E) ಎಂದು ಹೇಳಿರುವುದನ್ನು ನೀವು ಕೇಳಿದ್ದೀರಿ. 44 ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಶತ್ರುಗಳನ್ನು ಪ್ರೀತಿಸಿರಿ. ನಿಮಗೆ ಕೆಟ್ಟದ್ದನ್ನು ಮಾಡುವ ಜನರಿಗಾಗಿ ಪ್ರಾರ್ಥಿಸಿರಿ. 45 ಆಗ ನೀವು ಪರಲೋಕದಲ್ಲಿರುವ ನಿಮ್ಮ ತಂದೆಯ ನಿಜವಾದ ಮಕ್ಕಳಾಗುವಿರಿ. ನಿಮ್ಮ ತಂದೆಯು ಒಳ್ಳೆಯವರಿಗಾಗಿ ಮತ್ತು ಕೆಟ್ಟವರಿಗಾಗಿ ಸೂರ್ಯನನ್ನು ಉದಯಿಸುತ್ತಾನೆ ಮತ್ತು ಮಳೆಯನ್ನು ಸುರಿಸುತ್ತಾನೆ. 46 ನಿಮ್ಮನ್ನು ಪ್ರೀತಿಸುವ ಜನರನ್ನೇ ನೀವು ಪ್ರೀತಿಸಿದರೆ, ಅದರಿಂದ ನಿಮಗೇನು ಪ್ರತಿಫಲ ದೊರೆಯುವುದು? ಸುಂಕದವರು ಸಹ ಹಾಗೆ ಮಾಡುತ್ತಾರೆ. 47 ನೀವು ನಿಮ್ಮ ಸ್ನೇಹಿತರಿಗೆ ಮಾತ್ರ ಒಳ್ಳೆಯವರಾಗಿದ್ದರೆ, ನೀವು ಬೇರೆಯವರಿಗಿಂತ ಉತ್ತಮರೇನೂ ಅಲ್ಲ. ದೇವರನ್ನರಿಯದ ಜನರು ಸಹ ತಮ್ಮ ಸ್ನೇಹಿತರಿಗೆ ಒಳ್ಳೆಯವರಾಗಿರುತ್ತಾರೆ. 48 ಆದ್ದರಿಂದ ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣನಾಗಿರುವಂತೆಯೇ ನೀವೂ ಪರಿಪೂರ್ಣರಾಗಿರಬೇಕು.

ಎಜ್ರ 5

ಆ ಸಮಯಗಳಲ್ಲಿ ಪ್ರವಾದಿಗಳಾದ ಹಗ್ಗಾಯನೂ ಇದ್ದೋವಿನ ಮಗನಾದ ಜೆಕರ್ಯನೂ ದೇವರ ಹೆಸರಿನಲ್ಲಿ ಪ್ರವಾದಿಸುತ್ತಿದ್ದರು. ಯೆಹೂದ ಪ್ರಾಂತ್ಯದಲ್ಲಿದ್ದ ಮತ್ತು ಜೆರುಸಲೇಮಿನಲ್ಲಿದ್ದ ಯೆಹೂದ್ಯರನ್ನು ಅವರು ಪ್ರೋತ್ಸಾಹಿಸಿದರು. ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೇಲ್ ಮತ್ತು ಯೋಚಾದಾಕನ ಮಗನಾದ ಯೇಷೂವನೂ ಜೆರುಸಲೇಮಿನಲ್ಲಿ ದೇವಾಲಯವನ್ನು ಕಟ್ಟುವ ಕಾರ್ಯವನ್ನು ಮತ್ತೆ ಪ್ರಾರಂಭಿಸಿದರು. ದೇವರ ಪ್ರವಾದಿಗಳೆಲ್ಲರೂ ಅವರೊಂದಿಗಿದ್ದು ಅವರನ್ನು ಪ್ರೋತ್ಸಾಹಪಡಿಸುತ್ತಿದ್ದರು. ಆ ಸಮಯದಲ್ಲಿ ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯದ ರಾಜ್ಯಪಾಲನಾಗಿದ್ದ ತತ್ತೆನೈ ಮತ್ತು ಶೆತರ್ಬೋಜೆನೈ ಮತ್ತು ಅವರ ಸಂಗಡಿಗರು ಜೆರುಬ್ಬಾಬೆಲ್, ಯೇಷೂವ ಮತ್ತು ಅವರ ಜೊತೆಗಾರರ ಬಳಿ ಬಂದು, “ನಿಮಗೆ ದೇವಾಲಯವನ್ನು ಮತ್ತೆ ಕಟ್ಟಲೂ ಅದನ್ನು ಹೊಸದಾಗಿ ಮಾಡಲೂ ಅಪ್ಪಣೆ ಕೊಟ್ಟವರು ಯಾರು? ಈ ಕಾರ್ಯದಲ್ಲಿ ಕೆಲಸ ಮಾಡುವವರ ಹೆಸರುಗಳೇನು?” ಎಂದು ವಿಚಾರಿಸಿದರು.

ಆದರೆ ಯೆಹೂದ್ಯರ ನಾಯಕರ ಮೇಲೆ ದೇವರ ಕೃಪಾಕಟಾಕ್ಷವಿತ್ತು. ರಾಜನಾದ ದಾರ್ಯಾವೆಷನಿಗೆ ವರದಿ ತಲುಪಿ ಉತ್ತರವನ್ನು ಕಳುಹಿಸುವ ತನಕ ನಾಯಕರು ಕಟ್ಟಡದ ಕೆಲಸವನ್ನು ಮುಂದುವರಿಸುತ್ತಲೇ ಇದ್ದರು. ಯೂಫ್ರೇಟೀಸ್ ನದಿಯ ಪಶ್ಚಿಮದ ಪ್ರಾಂತ್ಯದ ರಾಜ್ಯಪಾಲ ತತ್ತೆನೈ, ಶೆತರ್ಬೋಜೆನೈ ಮತ್ತು ಪ್ರಮುಖರು ರಾಜನಾದ ದಾರ್ಯಾವೆಷನಿಗೆ ಪತ್ರ ಬರೆದರು. ಪತ್ರದ ನಕಲು ಹೀಗಿದೆ:

ಅರಸನಾದ ದಾರ್ಯಾವೆಷನಿಗೆ

ವಂದನೆಗಳು.

ರಾಜನೇ, ನಾವು ಯೆಹೂದ ಪ್ರಾಂತ್ಯವನ್ನು ಸಂದರ್ಶಿಸಿದ್ದೇವೆಂದು ನಿಮಗೆ ತಿಳಿಸುತ್ತೇವೆ. ಅಲ್ಲಿ ಮಹೋನ್ನತ ದೇವರ ಆಲಯವನ್ನು ನೋಡಿದೆವು. ಯೆಹೂದ ಪ್ರಾಂತ್ಯದ ಜನರು ದೊಡ್ಡ ಕಲ್ಲುಗಳಿಂದ ದೇವಾಲಯವನ್ನು ಕಟ್ಟುತ್ತಿದ್ದಾರೆ. ದೊಡ್ಡದೊಡ್ಡ ಮರದ ತೊಲೆಗಳನ್ನು ಗೋಡೆಯ ಮೇಲೆ ಕುಳ್ಳಿರಿಸಿದ್ದಾರೆ. ಯೆಹೂದ ಪ್ರಾಂತ್ಯದ ಜನರು ಜಾಗರೂಕತೆಯಿಂದಲೂ ತುಂಬ ಪ್ರಯಾಸದಿಂದಲೂ ಕಾರ್ಯವನ್ನು ನಡಿಸುತ್ತಿದ್ದಾರೆ. ಬಹಳ ವೇಗವಾಗಿ ಕೆಲಸ ಮುಂದುವರಿಯುತ್ತಿರುವದರಿಂದ ದೇವಾಲಯವು ಬೇಗನೆ ಸಂಪೂರ್ಣವಾಗಬಹುದು.

“ದೇವಾಲಯವನ್ನು ಕಟ್ಟಲು ನಿಮಗೆ ಯಾರು ಅಪ್ಪಣೆಕೊಟ್ಟರು?” ಎಂದು ಅವರ ನಾಯಕರನ್ನು ಪ್ರಶ್ನಿಸಿದೆವು. 10 ಕೆಲಸಗಾರರ ಹೆಸರುಗಳನ್ನು ನಾವು ಕೇಳಿದೆವು. ಅವರ ನಾಯಕರುಗಳ ಹೆಸರುಗಳನ್ನೂ ಕೇಳಿದೆವು. ಆ ನಾಯಕರುಗಳು ಯಾರೆಂದು ನಿಮಗೆ ತಿಳಿಯುವಂತೆ ಅವರ ಹೆಸರುಗಳನ್ನು ನಿಮಗೆ ತಿಳಿಸಬೇಕೆಂದಿದ್ದೆವು.

11 ಅದಕ್ಕೆ ಅವರು ಈ ರೀತಿಯಾಗಿ ಉತ್ತರಕೊಟ್ಟರು:

“ಭೂಪರಲೋಕಗಳ ದೇವರ ಸೇವಕರಾದ ನಾವು ಬಹಳ ವರ್ಷಗಳ ಹಿಂದೆ ಇಸ್ರೇಲರ ರಾಜನು ಕಟ್ಟಿಸಿ ಮುಗಿಸಿದ ದೇವಾಲಯವನ್ನು ಮತ್ತೆ ಕಟ್ಟುತ್ತಿದ್ದೇವೆ. 12 ನಮ್ಮ ಪೂರ್ವಿಕರು ಪರಲೋಕದ ನಮ್ಮ ದೇವರನ್ನು ಸಿಟ್ಟಿಗೆಬ್ಬಿಸಿದರು. ಆಗ ಆತನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಗೆ ನಮ್ಮ ಪೂರ್ವಿಕರನ್ನು ಕೊಟ್ಟುಬಿಟ್ಟನು. ನೆಬೂಕದ್ನೆಚ್ಚರನು ದೇವಾಲಯವನ್ನು ಹಾಳುಗೆಡವಿ ಜನರನ್ನು ಬಲವಂತದಿಂದ ಸೆರೆಯಾಗಿ ಬಾಬಿಲೋನಿಗೆ ಒಯ್ದನು. 13 ಅನಂತರ ಬಾಬಿಲೋನಿನ ಅರಸನಾದ ಸೈರಸನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ದೇವಾಲಯವನ್ನು ತಿರಿಗಿ ಕಟ್ಟಲು ವಿಶೇಷ ಅನುಮತಿಯನ್ನು ಕೊಟ್ಟನು. 14 ಹಿಂದಿನ ಕಾಲದಲ್ಲಿ ನೆಬೂಕದ್ನೆಚ್ಚರನು ಜೆರುಸಲೇಮಿನ ದೇವಾಲಯದಿಂದ ಬೆಳ್ಳಿಬಂಗಾರಗಳ ವಸ್ತುಗಳನ್ನು ತೆಗೆದುಕೊಂಡು ಬಂದು ಬಾಬಿಲೋನಿನಲ್ಲಿದ್ದ ತನ್ನ ವಿಗ್ರಹಾಲಯದಲ್ಲಿಟ್ಟಿದ್ದನು. ಆಲಯದಿಂದ ತೆಗೆದುಕೊಂಡು ಬಂದಿದ್ದ ಆ ಬೆಳ್ಳಿಬಂಗಾರದ ವಸ್ತುಗಳನ್ನು ಸೈರಸನು ಬಾಬಿಲೋನಿನ ತನ್ನ ವಿಗ್ರಹಾಲಯದಿಂದ ತೆಗೆದು ಶೆಷ್ಬಚ್ಚರನಿಗೆ (ಜೆರುಬ್ಬಾಬೆಲನಿಗೆ) ಕೊಟ್ಟು ಅವನನ್ನು ದೇಶಾಧಿಪತಿಯನ್ನಾಗಿ ನೇಮಿಸಿದನು.”

15 ಅರಸನಾದ ಸೈರಸನು ಶೆಷ್ಬಚ್ಚರನಿಗೆ (ಜೆರುಬ್ಬಾಬೆಲನಿಗೆ), “ಈ ಬೆಳ್ಳಿಬಂಗಾರಗಳ ವಸ್ತುಗಳನ್ನು ತೆಗೆದುಕೊಂಡು ಜೆರುಸಲೇಮಿನ ದೇವಾಲಯದಲ್ಲಿಡು. ಹಿಂದೆ ದೇವಾಲಯವು ಎಲ್ಲಿ ಇತ್ತೋ ಅದೇ ಸ್ಥಳದಲ್ಲಿ ಅದನ್ನು ಪುನಃ ಕಟ್ಟು.”

16 ಹೀಗೆ ಶೆಷ್ಬಚ್ಚರನು (ಜೆರುಬ್ಬಾಬೆಲ್), ಜೆರುಸಲೇಮಿನಲ್ಲಿ ದೇವರ ಆಲಯಕ್ಕೆ ಅಸ್ತಿವಾರವನ್ನು ಹಾಕಿದನು. ಅಂದಿನಿಂದ ಇಂದಿನ ತನಕ ಕೆಲಸವು ಮುಂದುವರಿಯುತ್ತಲೇ ಇದೆ. ಆದರೆ ಅದು ಇನ್ನೂ ಸಂಪೂರ್ಣವಾಗಿಲ್ಲ.

17 ರಾಜರಾದ ತಾವು ಅಪೇಕ್ಷಿಸಿದರೆ ರಾಜವೃತ್ತಾಂತವನ್ನು ನೀವೇ ಪರಿಶೋಧಿಸಿ. ಜೆರುಸಲೇಮಿನಲ್ಲಿ ಮತ್ತೆ ದೇವಾಲಯವನ್ನು ಕಟ್ಟಲು ರಾಜ ಸೈರಸನು ಆಜ್ಞಾಪಿಸಿದ್ದು ನಿಜವೇ ಎಂಬುದನ್ನು ನೀವೇ ನೋಡಿರಿ. ಆಮೇಲೆ, ಅರಸನೇ, ಇದರ ವಿಚಾರವಾಗಿ ಏನು ತೀರ್ಮಾನ ಮಾಡಿದ್ದೀರೆಂದು ನಮಗೆ ಪತ್ರದ ಮೂಲಕ ತಿಳಿಸಿರಿ.

ಅಪೊಸ್ತಲರ ಕಾರ್ಯಗಳು 5

ಅನನೀಯ ಮತ್ತು ಸಫೈರ

ಅನನೀಯ ಎಂಬ ಒಬ್ಬನಿದ್ದನು. ಅವನ ಹೆಂಡತಿಯ ಹೆಸರು ಸಫೈರ. ಅನನೀಯ ತನ್ನಲ್ಲಿದ್ದ ಸ್ವಲ್ಪ ಜಮೀನನ್ನು ಮಾರಿದನು. ಆದರೆ, ಬಂದ ಹಣದಲ್ಲಿ ಒಂದು ಭಾಗವನ್ನು ಮಾತ್ರ ಅವನು ಅಪೊಸ್ತಲರ ಪಾದಗಳ ಬಳಿ ಇಟ್ಟನು. ಅವನು ಸ್ವಲ್ಪ ಹಣವನ್ನು ತನಗೋಸ್ಕರ ರಹಸ್ಯವಾಗಿಟ್ಟುಕೊಂಡನು. ಅವನ ಹೆಂಡತಿಗೆ ಇದು ತಿಳಿದಿತ್ತು. ಆಕೆಯೂ ಅದಕ್ಕೆ ಒಪ್ಪಿಕೊಂಡಿದ್ದಳು.

ಪೇತ್ರನು, “ಅನನೀಯನೇ, ನಿನ್ನ ಹೃದಯವನ್ನು ಆಳಲು ನೀನು ಸೈತಾನನಿಗೆ ಒಪ್ಪಿಸಿಕೊಟ್ಟದ್ದೇಕೆ? ನೀನು ಸುಳ್ಳು ಹೇಳಿ, ಪವಿತ್ರಾತ್ಮನನ್ನು ಮೋಸಪಡಿಸಲು ಪ್ರಯತ್ನಿಸಿದೆ. ನೀನು ನಿನ್ನ ಜಮೀನನ್ನು ಮಾರಿದೆ, ಆದರೆ ಬಂದ ಹಣದಲ್ಲಿ ಒಂದು ಭಾಗವನ್ನು ನೀನು ನಿನಗೋಸ್ಕರ ಇಟ್ಟುಕೊಂಡದ್ದೇಕೆ? ನೀನು ಜಮೀನನ್ನು ಮಾರುವುದಕ್ಕಿಂತ ಮೊದಲು ಅದು ನಿನ್ನದೇ ಆಗಿತ್ತು. ನೀನು ಮಾರಿದ ಮೇಲೆಯೂ ಬಂದ ಹಣ ನಿನ್ನದೇ ಆಗಿತ್ತು. ಈ ಕೆಟ್ಟಕಾರ್ಯವನ್ನು ಮಾಡಲು ನೀನು ಯಾಕೆ ಯೋಚಿಸಿಕೊಂಡೆ? ನೀನು ಸುಳ್ಳು ಹೇಳಿದ್ದು ದೇವರಿಗೆ, ಮನುಷ್ಯರಿಗಲ್ಲ!” ಎಂದು ಹೇಳಿದನು.

5-6 ಅನನೀಯನು ಇದನ್ನು ಕೇಳಿದ ಕೂಡಲೇ ಕೆಳಗೆ ಬಿದ್ದು ಸತ್ತುಹೋದನು. ಕೆಲವು ಯೌವನಸ್ಥರು ಬಂದು ಅವನ ದೇಹವನ್ನು ಬಟ್ಟೆಯಲ್ಲಿ ಸುತ್ತಿದರು. ಅವರು ಅದನ್ನು ಹೊತ್ತುಕೊಂಡು ಹೋಗಿ ಸಮಾಧಿಮಾಡಿದರು. ಇದರ ಬಗ್ಗೆ ಕೇಳಿದ ಪ್ರತಿಯೊಬ್ಬರೂ ಭಯಭ್ರಾಂತರಾದರು.

ಸುಮಾರು ಮೂರು ಗಂಟೆಗಳಾದ ನಂತರ ಅವನ ಹೆಂಡತಿಯಾದ ಸಫೈರ ಒಳಗೆ ಬಂದಳು. ನಡೆದ ಸಂಗತಿಯ ಬಗ್ಗೆ ಸಫೈರಳಿಗೆ ಗೊತ್ತಿರಲಿಲ್ಲ. ಪೇತ್ರನು ಆಕೆಗೆ, “ನಿಮ್ಮ ಜಮೀನಿನಿಂದ ನಿಮಗೆ ಎಷ್ಟು ಹಣ ಬಂತೆಂದು ನನಗೆ ಹೇಳು. ಇಷ್ಟೇ ಹಣವೋ?” ಎಂದು ಕೇಳಿದನು.

ಸಫೈರಳು, “ಹೌದು, ಅಷ್ಟೇ!” ಎಂದು ಹೇಳಿದಳು.

ಪೇತ್ರನು ಆಕೆಗೆ, “ನೀನು ಮತ್ತು ನಿನ್ನ ಗಂಡನು ಪ್ರಭುವಿನ ಆತ್ಮನನ್ನು ಪರೀಕ್ಷಿಸಲು ಒಪ್ಪಿಕೊಂಡಿದ್ದೇಕೆ? ಅಗೋ, ನಿನ್ನ ಗಂಡನನ್ನು ಹೂಳಿಟ್ಟ ಜನರು ಬಾಗಿಲ ಬಳಿಗೆ ಬಂದಿದ್ದಾರೆ! ಅವರು ನಿನ್ನನ್ನೂ ಅದೇರೀತಿ ಹೊತ್ತುಕೊಂಡು ಹೋಗುವರು” ಎಂದು ಹೇಳಿದನು. 10 ತಕ್ಷಣವೇ ಸಫೈರಳು ಅವನ ಪಾದಗಳ ಮುಂದೆ ಬಿದ್ದು ಸತ್ತುಹೋದಳು. ಆ ಯೌವನಸ್ಥರು ಒಳಗೆ ಬಂದು ನೋಡಿದಾಗ ಆಕೆ ಸತ್ತುಹೋಗಿದ್ದಳು. ಅವರು ಆಕೆಯನ್ನು ಹೊತ್ತುಕೊಂಡು ಹೋಗಿ, ಆಕೆಯ ಗಂಡನ ಪಕ್ಕದಲ್ಲಿ ಹೂಳಿಟ್ಟರು. 11 ಈ ಸಂಗತಿಗಳ ಬಗ್ಗೆ ಕೇಳಿದ ವಿಶ್ವಾಸಿಗಳೆಲ್ಲರೂ ಮತ್ತು ಜನರೆಲ್ಲರೂ ಭಯಗ್ರಸ್ತರಾದರು.

ದೇವರ ಸೂಚಕಕಾರ್ಯಗಳು

12 ಅಪೊಸ್ತಲರು ಅನೇಕ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿದರು. ಜನರೆಲ್ಲರೂ ಆ ಕಾರ್ಯಗಳನ್ನು ನೋಡಿದರು. ಅಪೊಸ್ತಲರು ಒಟ್ಟಾಗಿ ಸೊಲೊಮೋನನ ಮಂಟಪದಲ್ಲಿರುತ್ತಿದ್ದರು. ಅವರೆಲ್ಲರ ಉದ್ದೇಶ ಒಂದೇ ಆಗಿತ್ತು. 13 ಅವರೊಂದಿಗೆ ನಿಂತುಕೊಳ್ಳಲು ತಮಗೂ ಯೋಗ್ಯತೆ ಇದೆಯೆಂದು ಬೇರೆ ಯಾರಿಗೂ ಅನ್ನಿಸಲಿಲ್ಲ. ಜನರೆಲ್ಲರೂ ಅಪೊಸ್ತಲರ ಬಗ್ಗೆ ಒಳ್ಳೆಯ ಸಂಗತಿಗಳನ್ನು ಹೇಳುತ್ತಿದ್ದರು. 14 ಮತ್ತು ಹೆಚ್ಚುಹೆಚ್ಚು ಜನರು ಪ್ರಭುವನ್ನು ನಂಬಿಕೊಂಡರು. ಅನೇಕ ಸ್ತ್ರೀಯರೂ ಪುರುಷರೂ ವಿಶ್ವಾಸಿಗಳ ಸಮುದಾಯಕ್ಕೆ ಸೇರುತ್ತಿದ್ದರು. 15 ಹೀಗಿರಲು, ಪೇತ್ರನು ದಾರಿಯಲ್ಲಿ ಹೋಗುತ್ತಾನೆಂಬ ಸುದ್ದಿಯನ್ನು ಕೇಳಿದ ಜನರು ಕಾಯಿಲೆಯವರನ್ನು ಬೀದಿಗಳಿಗೆ ಹೊತ್ತುಕೊಂಡು ಬಂದು ಹಾಸಿಗೆ ಮತ್ತು ಡೋಲಿಗಳ ಮೇಲೆ ಮಲಗಿಸುತ್ತಿದ್ದರು. ಪೇತ್ರನ ನೆರಳು ಬಿದ್ದರೆ ಸಾಕು, ಕಾಯಿಲೆಯವರು ಗುಣಮುಖರಾಗುತ್ತಾರೆಂದು ಜನರು ಯೋಚಿಸಿಕೊಂಡಿದ್ದರು. 16 ಜೆರುಸಲೇಮಿನ ಸುತ್ತಮುತ್ತಲಿನ ಊರುಗಳಿಂದೆಲ್ಲಾ ಜನರು ಬರುತ್ತಿದ್ದರು. ಅವರು ಕಾಯಿಲೆಯವರನ್ನೂ ದೆವ್ವಪೀಡಿತರಾಗಿದ್ದವರನ್ನೂ ಹೊತ್ತುಕೊಂಡು ಬರುತ್ತಿದ್ದರು. ಈ ಜನರೆಲ್ಲರಿಗೂ ಗುಣವಾಯಿತು.

ಅಪೊಸ್ತಲರನ್ನು ತಡೆಯಲು ಯೆಹೂದ್ಯರ ಪ್ರಯತ್ನ

17 ಪ್ರಧಾನಯಾಜಕನು ಮತ್ತು ಅವನ ಸ್ನೇಹಿತರೆಲ್ಲರೂ (ಸದ್ದುಕಾಯರು) ಬಹು ಅಸೂಯೆಗೊಂಡರು. 18 ಅವರು ಅಪೊಸ್ತಲರನ್ನು ಬಂಧಿಸಿ ರಾಜ್ಯಮಟ್ಟದ ಸೆರೆಮನೆಗೆ ಹಾಕಿದರು. 19 ಆದರೆ ರಾತ್ರಿಯಲ್ಲಿ ಪ್ರಭುವಿನ ದೂತನೊಬ್ಬನು ಸೆರೆಮನೆಯ ಬಾಗಿಲುಗಳನ್ನು ತೆರೆದನು. ದೇವದೂತನು ಅಪೊಸ್ತಲರನ್ನು ಕರೆದುಕೊಂಡು ಹೊರಗೆ ಬಂದು ಅವರಿಗೆ, 20 “ಹೋಗಿ ದೇವಾಲಯದಲ್ಲಿ ನಿಂತುಕೊಳ್ಳಿರಿ. ಯೇಸುವಿನಲ್ಲಿರುವ ಈ ಹೊಸ ಜೀವಿತದ ಬಗ್ಗೆ ಪ್ರತಿಯೊಂದನ್ನೂ ಜನರಿಗೆ ಹೇಳಿರಿ” ಎಂದನು. 21 ಆದ್ದರಿಂದ ಅವರು ಮರುದಿನ ಮುಂಜಾನೆ ದೇವಾಲಯಕ್ಕೆ ಹೋಗಿ ಉಪದೇಶ ಮಾಡತೊಡಗಿದರು.

ಪ್ರಧಾನಯಾಜಕನು ಮತ್ತು ಅವನ ಸ್ನೇಹಿತರು ದೇವಾಲಯಕ್ಕೆ ಬಂದರು. ಅವರು ಯೆಹೂದ್ಯನಾಯಕರ ಮತ್ತು ಇಸ್ರೇಲರಲ್ಲಿ ಪ್ರಮುಖರಾಗಿದ್ದವರ ಸಭೆಯನ್ನು ಸೇರಿಸಿದರು. ಬಳಿಕ ಅಪೊಸ್ತಲರನ್ನು ತಮ್ಮ ಬಳಿಗೆ ಕರೆದುಕೊಂಡು ಬರಲು ಕೆಲವರನ್ನು ಸೆರೆಮನೆಗೆ ಕಳುಹಿಸಿದರು. 22 ದೇವಾಲಯದ ಸಿಪಾಯಿಗಳು ಸೆರೆಮನೆಗೆ ಹೋದಾಗ ಅಲ್ಲಿ ಅಪೊಸ್ತಲರನ್ನು ಕಾಣಲಿಲ್ಲ. ಆದ್ದರಿಂದ ಅವರು ಹಿಂತಿರುಗಿ ಬಂದು ಯೆಹೂದ್ಯನಾಯಕರಿಗೆ, 23 “ಸೆರೆಮನೆ ಮುಚ್ಚಿತ್ತು ಮತ್ತು ಬೀಗವನ್ನು ಹಾಕಲಾಗಿತ್ತು. ಕಾವಲುಗಾರರು ಬಾಗಿಲ ಬಳಿ ನಿಂತುಕೊಂಡಿದ್ದರು. ಆದರೆ ನಾವು ಬಾಗಿಲುಗಳನ್ನು ತೆರೆದಾಗ ಸೆರೆಮನೆಯು ಬರಿದಾಗಿತ್ತು!” ಎಂದು ತಿಳಿಸಿದರು. 24 ದೇವಾಲಯದ ಕಾವಲುಗಾರರ ನಾಯಕನು ಮತ್ತು ಮಹಾಯಾಜಕರು ಇದನ್ನು ಕೇಳಿ ಗಲಿಬಿಲಿಗೊಂಡರು. ಇದರಿಂದ ಏನಾಗುವುದೋ ಎಂದು ಅವರು ಭಯಪಟ್ಟರು.

25 ಬಳಿಕ ಬೇರೊಬ್ಬನು ಬಂದು ಅವರಿಗೆ, “ಕೇಳಿ! ನೀವು ಸೆರೆಮನೆಯಲ್ಲಿ ಹಾಕಿದ್ದ ಜನರು ದೇವಾಲಯದಲ್ಲಿ ನಿಂತಿದ್ದಾರೆ. ಅವರು ಜನರಿಗೆ ಉಪದೇಶ ಮಾಡುತ್ತಿದ್ದಾರೆ!” ಎಂದು ಹೇಳಿದನು. 26 ಆಗ ದಳಪತಿ ಮತ್ತು ಅವನ ಜನರು ಹೋಗಿ ಅಪೊಸ್ತಲರನ್ನು ಮರಳಿ ಕರೆತಂದರು. ಆದರೆ ಸೈನಿಕರು ಒತ್ತಾಯ ಮಾಡಲಿಲ್ಲ. ಯಾಕೆಂದರೆ ಅವರು ಜನರಿಗೆ ಭಯಪಟ್ಟರು. ಜನರು ಕೋಪಗೊಂಡು ಕಲ್ಲೆಸೆದು ತಮ್ಮನ್ನು ಕೊಲ್ಲಬಹುದೆಂದು ಅವರು ಹೆದರಿದರು.

27 ಸೈನಿಕರು ಅಪೊಸ್ತಲರನ್ನು ಸಭೆಗೆ ಕರೆದುಕೊಂಡು ಬಂದು ಯೆಹೂದ್ಯನಾಯಕರ ಮುಂದೆ ನಿಲ್ಲಿಸಿದರು. ಪ್ರಧಾನಯಾಜಕನು ಅಪೊಸ್ತಲರಿಗೆ, 28 “ಈ ಮನುಷ್ಯನ (ಯೇಸುವಿನ) ಬಗ್ಗೆ ನೀವು ಬೋಧಿಸಕೂಡದೆಂದು ನಾವು ನಿಮಗೆ ಆಜ್ಞಾಪಿಸಿದೆವು. ಆದರೆ ನೀವು ಮಾಡಿರುವುದೇನು? ನೀವು ಜೆರುಸಲೇಮನ್ನು ನಿಮ್ಮ ಉಪದೇಶದಿಂದ ತುಂಬಿಸಿಬಿಟ್ಟಿದ್ದೀರಿ. ಈ ಮನುಷ್ಯನ (ಯೇಸುವಿನ) ಸಾವಿಗೆ ನಮ್ಮನ್ನೇ ಜವಾಬ್ದಾರರನ್ನಾಗಿ ಮಾಡಲು ನೀವು ಪ್ರಯತ್ನಿಸುತ್ತಿದ್ದೀರಿ” ಎಂದರು.

29 ಪೇತ್ರ ಮತ್ತು ಉಳಿದ ಅಪೊಸ್ತಲರು, “ನಾವು ವಿಧೇಯರಾಗಬೇಕಾದದ್ದು ದೇವರಿಗೇ ಹೊರತು ನಿಮಗಲ್ಲ! 30 ನೀವು ಯೇಸುವನ್ನು ಕೊಂದಿರಿ. ನೀವು ಆತನನ್ನು ಶಿಲುಬೆಯ ಮೇಲೆ ನೇತುಹಾಕಿದಿರಿ. ಆದರೆ ದೇವರು, ಅಂದರೆ ನಮ್ಮ ಪಿತೃಗಳ ದೇವರೇ ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು! 31 ದೇವರಿಂದ ಆತನ ಬಲಗಡೆಗೆ ಏರಿಸಲ್ಪಟ್ಟಾತನೇ ಯೇಸು. ಎಲ್ಲಾ ಯೆಹೂದ್ಯರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವುದರ ಮೂಲಕ ಪಾಪಕ್ಷಮೆ ಹೊಂದಿಕೊಳ್ಳಲೆಂದು ದೇವರು ಯೇಸುವನ್ನು ನಮ್ಮ ನಾಯಕನನ್ನಾಗಿಯೂ ರಕ್ಷಕನನ್ನಾಗಿಯೂ ಮಾಡಿದ್ದಾನೆ. 32 ಈ ಘಟನೆಗಳಿಗೆ ನಾವೇ ಸಾಕ್ಷಿಗಳು. ನಾವು ಮಾತ್ರವಲ್ಲದೆ ವಿಧೇಯರಾಗುವ ಎಲ್ಲಾ ಜನರಿಗೆ ದೇವರು ದಯಪಾಲಿಸಿರುವ ಪವಿತ್ರಾತ್ಮನೂ ಸಾಕ್ಷಿಯಾಗಿದ್ದಾನೆ” ಎಂದನು.

33 ಯೆಹೂದ್ಯನಾಯಕರು ಈ ಮಾತುಗಳನ್ನು ಕೇಳಿ ಬಹು ಕೋಪಗೊಂಡು, ಅಪೊಸ್ತಲರನ್ನು ಕೊಲ್ಲಬೇಕೆಂದಿದ್ದರು. 34 ಆಗ ಫರಿಸಾಯರಲ್ಲಿ ಒಬ್ಬನು ಸಭೆಯಲ್ಲಿ ಎದ್ದು ನಿಂತುಕೊಂಡನು. ಅವನ ಹೆಸರು ಗಮಲಿಯೇಲ. ಅವನು ಧರ್ಮೋಪದೇಶಕನಾಗಿದ್ದನು ಮತ್ತು ಜನರೆಲ್ಲಾ ಅವನನ್ನು ಗೌರವಿಸುತ್ತಿದ್ದರು. ಕೆಲವು ನಿಮಿಷಗಳವರೆಗೆ ಅಪೊಸ್ತಲರನ್ನು ಸಭೆಯಿಂದ ಹೊರಗೆ ಕಳುಹಿಸಬೇಕೆಂದು ಅವನು ಜನರಿಗೆ ಹೇಳಿದನು. 35 ಬಳಿಕ ಅವನು ಅವರಿಗೆ, “ಇಸ್ರೇಲ್ ಜನರೇ, ನೀವು ಇವರಿಗೆ ಮಾಡಬೇಕೆಂದಿರುವುದರ ಬಗ್ಗೆ ಎಚ್ಚರಿಕೆಯಾಗಿರಿ! 36 ಒಮ್ಮೆ, ತೈದ ಎಂಬುವನು ಬಂದದ್ದು ನಿಮ್ಮ ನೆನಪಿನಲ್ಲಿದೆಯೋ? ಅವನು ತನ್ನನ್ನು ಮಹಾಪುರುಷನೆಂದು ಹೇಳಿಕೊಂಡನು. ಸುಮಾರು ನಾನೂರು ಮಂದಿ ಅವನ ಜೊತೆ ಸೇರಿದರು. ಆದರೆ ಅವನು ಕೊಲ್ಲಲ್ಪಟ್ಟನು. ಅವನನ್ನು ಹಿಂಬಾಲಿಸುತ್ತಿದ್ದವರೆಲ್ಲ ಚದರಿ ಓಡಿಹೋದರು. ಅವರಿಂದ ಏನೂ ಮಾಡಲಾಗಲಿಲ್ಲ. 37 ಬಳಿಕ, ಯೂದ ಎಂಬುವನು ಗಲಿಲಾಯದಿಂದ ಬಂದನು. ಅದು ಜನಗಣತಿಯ ಕಾಲವಾಗಿತ್ತು. ಅವನು ಸಹ ಅನುಯಾಯಿಗಳ ಒಂದು ಗುಂಪನ್ನೇ ಕಟ್ಟಿದ. ಅವನು ಸಹ ಕೊಲ್ಲಲ್ಪಟ್ಟನು. ಅವನ ಅನುಯಾಯಿಗಳೆಲ್ಲಾ ಚದರಿ ಓಡಿಹೋದರು. 38 ಆದ್ದರಿಂದ ಈಗ ನಾನು ನಿಮಗೆ ಹೇಳುವುದೇನೆಂದರೆ, ಈ ಜನರಿಂದ ದೂರವಾಗಿರಿ. ಅವರನ್ನು ಅವರಷ್ಟಕ್ಕೇ ಬಿಟ್ಟುಬಿಡಿರಿ. ಅವರ ಯೋಜನೆಯು ಮನುಷ್ಯರಿಂದ ಬಂದದ್ದಾಗಿದ್ದರೆ, ಅದು ಉರುಳಿಹೋಗುವುದು. 39 ಆದರೆ ಅದು ದೇವರಿಂದ ಬಂದದ್ದಾಗಿದ್ದರೆ, ನೀವು ಅವರನ್ನು ತಡೆಯಲು ಸಾಧ್ಯವಾಗುವುದಿಲ್ಲ. ನೀವು ದೇವರಿಗೇ ವಿರುದ್ಧವಾಗಿ ಹೋರಾಡಿದಂತಾದೀತು!” ಎಂದು ಹೇಳಿದನು.

ಗಮಲಿಯೇಲನ ಸಲಹೆಗೆ ಯೆಹೂದ್ಯ ನಾಯಕರು ಒಪ್ಪಿಕೊಂಡರು. 40 ಅವರು ಅಪೊಸ್ತಲರನ್ನು ಒಳಗೆ ಕರೆಸಿ, ಹೊಡೆಸಿ, ಯೇಸುವಿನ ಬಗ್ಗೆ ಜನರಿಗೆ ಹೇಳಕೂಡದೆಂದು ಎಚ್ಚರಿಸಿ ಕಳುಹಿಸಿ ಬಿಟ್ಟರು. 41 ಅಪೊಸ್ತಲರು ಸಭೆಯಿಂದ ಹೊರಟುಹೋದರು. ಯೇಸುವಿನ ಹೆಸರಿಗಾಗಿ ಅಪಮಾನವನ್ನು ಅನುಭವಿಸುವ ಅರ್ಹತೆಯನ್ನು ಪಡೆದುಕೊಂಡೆವೆಂದು ಅವರು ಸಂತೋಷಪಟ್ಟರು. 42 ಅವರು ಜನರಿಗೆ ಉಪದೇಶಿಸುವುದನ್ನು ನಿಲ್ಲಿಸಲಿಲ್ಲ. ಯೇಸುವೇ ಕ್ರಿಸ್ತನೆಂಬ ಶುಭವಾರ್ತೆಯನ್ನು ಜನರಿಗೆ ಹೇಳುವುದನ್ನು ಮುಂದುವರಿಸಿದರು. ಅವರು ಪ್ರತಿದಿನ ದೇವಾಲಯದಲ್ಲಿಯೂ ಜನರ ಮನೆಗಳಲ್ಲಿಯೂ ಉಪದೇಶಿಸುತ್ತಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International