Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 4

ಮೊದಲನೆಯ ಕುಟುಂಬ

ಆದಾಮ ಮತ್ತು ಹವ್ವಳು ಕೂಡಿದರು. ಆದ್ದರಿಂದ ಹವ್ವಳಿಗೆ ಒಂದು ಮಗು ಜನಿಸಿತು. ಹವ್ವಳು, “ಯೆಹೋವನ ಸಹಾಯದಿಂದ ಗಂಡುಮಗುವನ್ನು ಪಡೆದಿದ್ದೇನೆ” ಎಂದು ಹೇಳಿ ಆ ಮಗುವಿಗೆ ಕಾಯಿನ ಎಂದು ಹೆಸರಿಟ್ಟಳು.

ಆಮೇಲೆ, ಹವ್ವಳಿಗೆ ಮತ್ತೊಂದು ಮಗು ಜನಿಸಿತು. ಈ ಮಗುವೇ ಕಾಯಿನನ ತಮ್ಮನಾದ ಹೇಬೆಲ. ಹೇಬೆಲನು ಕುರುಬನಾದನು ಕಾಯಿನನು ರೈತನಾದನು.

ಮೊದಲನೆಯ ಕೊಲೆ

ಸ್ವಲ್ಪ ಕಾಲದ ನಂತರ ಕಾಯಿನನು ದೇವರಿಗೆ ಕೃತಜ್ಞತಾ ಕಾಣಿಕೆಯನ್ನು ತಂದನು. ಕಾಯಿನನು ತಾನು ಹೊಲದಲ್ಲಿ ಬೆಳೆದ ಕೆಲವು ಆಹಾರಪದಾರ್ಥಗಳನ್ನು ತಂದನು. ಹೇಬೆಲನು ತನ್ನ ಕುರಿಮಂದೆಯಿಂದ ಒಳ್ಳೆಯ ಚೊಚ್ಚಲ ಕುರಿಗಳನ್ನು ಮತ್ತು ಅವುಗಳ ಒಳ್ಳೆಯ ಕೊಬ್ಬಿದ ಭಾಗಗಳನ್ನು ತಂದನು.

ಯೆಹೋವನು ಹೇಬೆಲನ ಕಾಣಿಕೆಯನ್ನು ಸ್ವೀಕರಿಸಿದನು; ಆದರೆ ಕಾಯಿನನ ಕಾಣಿಕೆಯನ್ನು ಸ್ವೀಕರಿಸಲಿಲ್ಲ. ಇದರಿಂದ ಕಾಯಿನನು ದುಃಖಿತನಾದನು ಮತ್ತು ಬಹಳ ಕೋಪಗೊಂಡನು. ಯೆಹೋವನು ಕಾಯಿನನಿಗೆ, “ಏಕೆ ಕೋಪಗೊಂಡಿರುವೆ? ನಿನ್ನ ಮುಖ ವ್ಯಸನದಿಂದಿರುವುದೇಕೆ? ನೀನು ಒಳ್ಳೆಯ ಕಾರ್ಯಗಳನ್ನು ಮಾಡಿದರೆ ನಾನು ನಿನ್ನನ್ನು ಸ್ವೀಕರಿಸಿಕೊಳ್ಳುವೆನು. ಆದರೆ ನೀನು ಕೆಟ್ಟಕಾರ್ಯಗಳನ್ನು ಮಾಡಿದರೆ, ಆ ಪಾಪವು ನಿನ್ನೊಂದಿಗಿರುತ್ತದೆ. ನಿನ್ನ ಪಾಪವು ನಿನ್ನನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಇಷ್ಟಪಡುತ್ತದೆ. ಆದರೆ ನೀನು ಆ ಪಾಪವನ್ನು ನಿನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು”[a] ಎಂದು ಹೇಳಿದನು.

ಕಾಯಿನನು ತನ್ನ ತಮ್ಮನಾದ ಹೇಬೆಲನಿಗೆ, “ನಾವು ಹೊಲಕ್ಕೆ ಹೋಗೋಣ ಬಾ” ಎಂದು ಹೇಳಿದನು. ಅಂತೆಯೇ ಕಾಯಿನನು ಮತ್ತು ಹೇಬೆಲನು ಹೊಲಕ್ಕೆ ಹೋದರು. ಅಲ್ಲಿ ಕಾಯಿನನು ತನ್ನ ತಮ್ಮನ ಮೇಲೆರಗಿ ಅವನನ್ನು ಕೊಂದುಹಾಕಿದನು.

ತರುವಾಯ ಯೆಹೋವನು ಕಾಯಿನನಿಗೆ, “ನಿನ್ನ ತಮ್ಮನಾದ ಹೇಬೆಲನೆಲ್ಲಿ?” ಎಂದು ಕೇಳಿದನು.

ಅದಕ್ಕೆ ಕಾಯಿನನು, “ನನಗೆ ಗೊತ್ತಿಲ್ಲ. ನನ್ನ ತಮ್ಮನನ್ನು ಕಾಯುವುದಾಗಲಿ ನೋಡಿಕೊಳ್ಳುವುದಾಗಲಿ ನನ್ನ ಕೆಲಸವೇ?” ಎಂದು ಉತ್ತರಕೊಟ್ಟನು.

10 ಅದಕ್ಕೆ ಯೆಹೋವನು, “ನೀನು ಮಾಡಿದ್ದೇನು? ನೀನು ನಿನ್ನ ತಮ್ಮನನ್ನೇ ಕೊಲೆಮಾಡಿದೆ! ಅವನ ರಕ್ತವು ಭೂಮಿಯ ಕಡೆಯಿಂದ ನನ್ನನ್ನು ಕೂಗುತಿದೆ. 11 ನೀನು ನಿನ್ನ ತಮ್ಮನನ್ನು ಕೊಂದುಹಾಕಿದೆ. ನಿನ್ನ ಕೈಗಳಿಂದ ಸುರಿಸಿದ ಅವನ ರಕ್ತವನ್ನು ಕುಡಿಯಲು ಭೂಮಿಯು ಬಾಯಿ ತೆರೆಯಿತು. ಆದ್ದರಿಂದ ಈಗ ಅದು ಶಾಪಗ್ರಸ್ತವಾಗಿದೆ. 12 ಕಳೆದ ದಿನಗಳಲ್ಲಿ ನೀನು ಸಸಿಗಳನ್ನು ನೆಟ್ಟಾಗ ಸಸಿಗಳು ಚೆನ್ನಾಗಿ ಬೆಳೆದವು. ಆದರೆ ಈಗ ನೀನು ಸಸಿ ನೆಟ್ಟರೂ ಭೂಮಿ ಫಲಿಸುವುದಿಲ್ಲ. ನಿನಗೆ ಭೂಮಿಯ ಮೇಲೆ ಮನೆ ಇರುವುದಿಲ್ಲ. ನೀನು ಸ್ಥಳದಿಂದ ಸ್ಥಳಕ್ಕೆ ಅಲೆದಾಡುವೆ” ಎಂದು ಹೇಳಿದನು.

13 ಅದಕ್ಕೆ ಕಾಯಿನನು ಯೆಹೋವನಿಗೆ, “ಈ ಶಿಕ್ಷೆಯನ್ನು ನಾನು ಸಹಿಸಲಾರೆ! 14 ನೀನು ನನ್ನನ್ನು ನನ್ನ ದೇಶದಿಂದ ಬಲವಂತವಾಗಿ ಹೊರಡಿಸುತ್ತಿರುವೆ. ನಿನ್ನನ್ನು ನೋಡುವುದಕ್ಕಾಗಲಿ ನಿನ್ನ ಸಮೀಪದಲ್ಲಿ ಇರುವುದಕ್ಕಾಗಲಿ ನನಗೆ ಸಾಧ್ಯವಿರುವುದಿಲ್ಲ! ನನಗೆ ಮನೆಯೂ ಇಲ್ಲ! ನಾನು ಭೂಮಿಯ ಮೇಲೆ ಸ್ಥಳದಿಂದ ಸ್ಥಳಕ್ಕೆ ಬಲವಂತವಾಗಿ ಅಲೆದಾಡಬೇಕಾಗುವುದು. ನನ್ನನ್ನು ಕಂಡವರು ನನ್ನನ್ನು ಕೊಲ್ಲುವರು” ಎಂದು ಹೇಳಿದನು.

15 ಅದಕ್ಕೆ ಯೆಹೋವನು ಕಾಯಿನನಿಗೆ, “ಆ ರೀತಿ ಆಗದಂತೆ ನಾನು ನೋಡಿಕೊಳ್ಳುವೆ! ಕಾಯಿನನೇ, ನಿನ್ನನ್ನು ಯಾವನಾದರೂ ಕೊಂದರೆ, ನಾನು ಅವನನ್ನು ಏಳರಷ್ಟು ಶಿಕ್ಷಿಸುವೆನು” ಎಂದು ಹೇಳಿದನು. ಆಮೇಲೆ ಯೆಹೋವನು ಕಾಯಿನನ ಮೇಲೆ ಒಂದು ಗುರುತಿಟ್ಟನು. ಅವನನ್ನು ಯಾರೂ ಕೊಲ್ಲಕೂಡದೆಂದು ಆ ಗುರುತು ಸೂಚಿಸುತ್ತಿತ್ತು.

ಕಾಯಿನನ ಕುಟುಂಬ

16 ಕಾಯಿನನು ಯೆಹೋವನ ಪ್ರಸನ್ನತೆಯಿಂದ ದೂರ ಹೊರಟುಹೋದನು. ಕಾಯಿನನು ನೋದು ಎಂಬ ನಾಡಿನಲ್ಲಿ ವಾಸಿಸಿದನು. ಅದು ಏದೆನ್ ತೋಟಕ್ಕೆ ಪೂರ್ವದಲ್ಲಿರುವುದು.

17 ಕಾಯಿನ ಮತ್ತು ಅವನ ಹೆಂಡತಿಗೆ ಒಂದು ಗಂಡುಮಗು ಹುಟ್ಟಿತು. ಅವರು ಆ ಮಗುವಿಗೆ ಹನೋಕ ಎಂದು ಹೆಸರಿಟ್ಟರು. ಕಾಯಿನನು ಒಂದು ಊರನ್ನು ಕಟ್ಟಿದನು. ಆ ಊರಿಗೆ ಅವನು ತನ್ನ ಮಗನ ಹೆಸರನ್ನೇ ಇಟ್ಟನು.

18 ಹನೋಕನು ಈರಾದ್ ಎಂಬ ಮಗನನ್ನು ಪಡೆದನು. ಈರಾದನು ಮೆಹೂಯಾಯೇಲ ಎಂಬ ಮಗನನ್ನು ಪಡೆದನು. ಮೆಹೂಯಾಯೇಲನು ಮೆತೂಷಾಯೇಲ ಎಂಬ ಮಗನನ್ನು ಪಡೆದನು. ಮೆತೂಷಾಯೇಲನು ಲೆಮೆಕ ಎಂಬ ಮಗನನ್ನು ಪಡೆದನು.

19 ಲೆಮೆಕನು ಇಬ್ಬರು ಹೆಂಗಸರನ್ನು ಮದುವೆ ಮಾಡಿಕೊಂಡನು. ಮೊದಲನೆ ಹೆಂಡತಿಯ ಹೆಸರು ಆದಾ; ಎರಡನೆ ಹೆಂಡತಿಯ ಹೆಸರು ಚಿಲ್ಲಾ. 20 ಆದಳಿಗೆ ಯಾಬಾಲ ಎಂಬ ಮಗನು ಹುಟ್ಟಿದನು. ಗುಡಾರಗಳಲ್ಲಿದ್ದುಕೊಂಡು ಪಶುಗಳನ್ನು ಸಾಕಿಕೊಂಡು ಜೀವನ ಮಾಡುತ್ತಿದ್ದ ಜನರಿಗೆ ಯಾಬಾಲನೇ ಮೂಲಪಿತೃ. 21 ಆದಳಿಗೆ ಮತ್ತೊಬ್ಬ ಮಗ ಹುಟ್ಟಿದನು. ಅವನೇ ಯೂಬಾಲ. ಕಿನ್ನರಿಕೊಳಲುಗಳನ್ನು ನುಡಿಸುವ ಜನರಿಗೆ ಯೂಬಾಲನೇ ಮೂಲಪಿತೃ.

22 ಚಿಲ್ಲಾಳಿಗೆ ತೂಬಲ್‌ಕಾಯಿನ ಎಂಬ ಮಗನು ಹುಟ್ಟಿದನು. ಕಬ್ಬಿಣ ಮತ್ತು ತಾಮ್ರಗಳಿಂದ ಉಪಕರಣ ಮಾಡುತ್ತಿದ್ದವರಿಗೆ ತೂಬಲ್‌ಕಾಯಿನನೇ ಮೂಲಪಿತೃ. ತೂಬಲ್‌ಕಾಯಿನನ ತಂಗಿ ನಯಮಾ.

23 ಲೆಮೆಕನು ತನ್ನ ಹೆಂಡತಿಯರಿಗೆ ಹೀಗೆಂದನು:

“ಆದಾ, ಚಿಲ್ಲಾ, ನನ್ನ ಮಾತನ್ನು ಕೇಳಿ!
    ಲೆಮೆಕನ ಹೆಂಡತಿಯರೇ, ನಾನು ಹೇಳುವುದನ್ನು ಕೇಳಿ.
ಒಬ್ಬನು ನನಗೆ ಗಾಯ ಮಾಡಿದ,
    ಆದ್ದರಿಂದ ನಾನು ಅವನನ್ನು ಕೊಂದೆ,
ಒಬ್ಬ ಯುವಕನು ನನ್ನನ್ನು ಹೊಡೆದ,
    ಆದ್ದರಿಂದ ನಾನು ಅವನನ್ನು ಕೊಂದೆ.
24 ಕಾಯಿನನನ್ನು ಕೊಂದವರಿಗೆ ಏಳರಷ್ಟು ಶಿಕ್ಷೆಯಾಗುವುದು!
    ಆದರೆ ನನ್ನನ್ನು ಕೊಂದವರಿಗೆ ಎಪ್ಪತ್ತೇಳರಷ್ಟು ಶಿಕ್ಷೆಯಾಗುವುದು!”

ಸೇತ ಮತ್ತು ಎನೋಷ್

25 ಆದಾಮನು ತಿರಿಗಿ ತನ್ನ ಹೆಂಡತಿಯನ್ನು ಕೂಡಲು, ಆಕೆಗೆ ಮತ್ತೊಬ್ಬ ಮಗ ಹುಟ್ಟಿದನು. ಹವ್ವಳು, “ದೇವರು ನನಗೆ ಮತ್ತೊಬ್ಬ ಮಗನನ್ನು ಕೊಟ್ಟನು. ಕಾಯಿನನು ಕೊಂದ ಹೇಬೆಲನಿಗೆ ಬದಲಾಗಿ ದೇವರು ನನಗೆ ಗಂಡುಮಗುವನ್ನು ಕೊಟ್ಟನು” ಎಂದು ಹೇಳಿ ಆ ಮಗುವಿಗೆ ಸೇತ ಎಂದು ಹೆಸರಿಟ್ಟಳು. 26 ಸೇತನು ಒಬ್ಬ ಮಗನನ್ನು ಪಡೆದನು. ಆ ಮಗುವಿಗೆ ಅವನು ಎನೋಷ್ ಎಂದು ಹೆಸರಿಟ್ಟನು. ಆ ಕಾಲದಲ್ಲಿ ಜನರು ಯೆಹೋವನ ಮೇಲೆ ಭರವಸೆ ಇಡಲಾರಂಭಿಸಿದರು.[b]

ಮತ್ತಾಯ 4

ಯೇಸುವಿಗಾದ ಶೋಧನೆ

(ಮಾರ್ಕ 1:12-13; ಲೂಕ 4:1-13)

ಆಗ ದೇವರಾತ್ಮನು ಸೈತಾನನಿಂದ ಶೋಧಿಸಲ್ಪಡಲು ಯೇಸುವನ್ನು ಅಡವಿಗೆ ನಡೆಸಿದನು. ಯೇಸು ನಲವತ್ತು ದಿನ ಹಗಲಿರುಳು ಏನನ್ನೂ ತಿನ್ನಲಿಲ್ಲ. ಬಳಿಕ ಆತನಿಗೆ ಬಹಳ ಹಸಿವಾಯಿತು. ಆಗ ಆತನನ್ನು ಶೋಧಿಸಲು ಸೈತಾನನು ಬಂದು, “ನೀನು ದೇವರ ಮಗನಾಗಿದ್ದರೆ ಈ ಕಲ್ಲುಗಳು ರೊಟ್ಟಿಗಳಾಗಲೆಂದು ಆಜ್ಞಾಪಿಸು” ಅಂದನು.

ಯೇಸು ಅವನಿಗೆ,

“‘ಮನುಷ್ಯನು ಬದುಕುವುದು ಕೇವಲ ರೊಟ್ಟಿಯಿಂದಲ್ಲ,
    ಮನುಷ್ಯನ ಜೀವಿತವು ದೇವರು ಹೇಳುವ ಪ್ರತಿಯೊಂದು ಮಾತನ್ನು ಅವಲಂಬಿಸಿಕೊಂಡಿದೆ’(A)

ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂಬುದಾಗಿ ಉತ್ತರಕೊಟ್ಟನು.

ಆಗ ಸೈತಾನನು ಯೇಸುವನ್ನು ಪರಿಶುದ್ಧ ಪಟ್ಟಣವಾದ ಜೆರುಸಲೇಮಿಗೆ ಕರೆದುಕೊಂಡು ಹೋಗಿ, ದೇವಾಲಯದ ಅತಿ ಎತ್ತರವಾದ ಸ್ಥಳದಲ್ಲಿ ನಿಲ್ಲಿಸಿ, “ನೀನು ದೇವರ ಮಗನಾಗಿದ್ದರೆ, ಕೆಳಕ್ಕೆ ದುಮುಕು.

‘ದೇವರು ನಿನಗೋಸ್ಕರ ತನ್ನ ದೂತರಿಗೆ ಆಜ್ಞಾಪಿಸುವನು.
    ನಿನ್ನ ಪಾದಗಳು ಬಂಡೆಗೆ ಅಪ್ಪಳಿಸದಂತೆ
    ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು’(B)

ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆಯಲ್ಲ” ಎಂದನು.

ಅದಕ್ಕೆ ಯೇಸು,

“‘ನಿನ್ನ ದೇವರಾದ ಪ್ರಭುವನ್ನು ನೀನು ಪರೀಕ್ಷಿಸಕೂಡದು’(C)

ಎಂಬುದಾಗಿಯೂ ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಉತ್ತರಕೊಟ್ಟನು.

ಬಳಿಕ ಸೈತಾನನು ಯೇಸುವನ್ನು ಎತ್ತರವಾದ ಬೆಟ್ಟದ ತುದಿಗೆ ಕರೆದುಕೊಂಡು ಹೋಗಿ ಲೋಕದ ಎಲ್ಲಾ ರಾಜ್ಯಗಳನ್ನು ಮತ್ತು ಅವುಗಳ ವೈಭವವನ್ನು ತೋರಿಸಿ, “ನೀನು ನನಗೆ ಅಡ್ಡಬಿದ್ದು ಆರಾಧಿಸಿದರೆ ನಾನು ಅವೆಲ್ಲವನ್ನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.

10 ಯೇಸು ಸೈತಾನನಿಗೆ, “ಇಲ್ಲಿಂದ ತೊಲಗು!

‘ನಿನ್ನ ದೇವರಾದ ಪ್ರಭುವನ್ನೇ ಆರಾಧಿಸಬೇಕು,
    ಆತನೊಬ್ಬನನ್ನೇ ಸೇವಿಸಬೇಕು’(D)

ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಹೇಳಿದನು.

11 ಆದ್ದರಿಂದ ಸೈತಾನನು ಯೇಸುವನ್ನು ಬಿಟ್ಟುಹೋದನು. ಆಗ ಕೆಲವು ದೇವದೂತರು ಬಂದು ಆತನನ್ನು ಉಪಚರಿಸಿದರು.

ಗಲಿಲಾಯದಲ್ಲಿ ಯೇಸುವಿನ ಸುವಾರ್ತಾ ಸೇವೆಯ ಆರಂಭ

(ಮಾರ್ಕ 1:14-15; ಲೂಕ 4:14-15)

12 ಯೋಹಾನನನ್ನು ಸೆರೆಯಲ್ಲಿಟ್ಟಿದ್ದಾರೆಂಬುದು ಯೇಸುವಿಗೆ ತಿಳಿಯಿತು. ಆದ್ದರಿಂದ ಯೇಸು ಗಲಿಲಾಯಕ್ಕೆ ಹಿಂತಿರುಗಿ ಹೋದನು. 13 ಆತನು ನಜರೇತಿನಲ್ಲಿ ಇಳಿದುಕೊಳ್ಳದೆ ಹೊರಟುಹೋಗಿ ಗಲಿಲಾಯ ಸರೋವರಕ್ಕೆ ಹತ್ತಿರವಿದ್ದ ಕಪೆರ್ನೌಮ್ ಎಂಬ ಊರಲ್ಲಿ ವಾಸಿಸಿದನು. ಈ ಊರು ಜೆಬುಲೋನ್ ಮತ್ತು ನಫ್ತಾಲಿ ಸೀಮೆಗಳ ಬಳಿಯಲ್ಲಿದೆ. 14 ಪ್ರವಾದಿಯಾದ ಯೆಶಾಯನು ನುಡಿದಿದ್ದ ಮಾತು ಹೀಗೆ ನೆರವೇರಿತು. ಅದೇನೆಂದರೆ:

15 “ಜೆಬುಲೋನ್ ಸೀಮೆಯ, ನಫ್ತಾಲಿ ಸೀಮೆಯ,
    ಜೋರ್ಡನ್ನಿನ ಆಚೆ ಸೀಮೆಯ, ಸಮುದ್ರದ ಕಡೆಗಿರುವ ಸೀಮೆಯ,
    ಯೆಹೂದ್ಯರಲ್ಲದ ಗಲಿಲಾಯ ಸೀಮೆಯ
16 ಜನರು ಕತ್ತಲಲ್ಲಿ ಜೀವಿಸುತ್ತಿದ್ದರು.
    ಆಗ ಅವರಿಗೆ ದೊಡ್ಡ ಬೆಳಕೊಂದು ಕಾಣಿಸಿತು.
ಸಮಾಧಿಯಂತಿರುವ ಕಾರ್ಗತ್ತಲೆಯ ದೇಶದಲ್ಲಿ ವಾಸಿಸುವ ಆ ಜನರಿಗೆ ಬೆಳಕು ದೊರೆಯಿತು.”(E)

17 ಅಂದಿನಿಂದ ಯೇಸು ಬೋಧಿಸುವುದಕ್ಕೆ ಪ್ರಾರಂಭಿಸಿದನು. “ಪರಲೋಕರಾಜ್ಯವು ಬೇಗನೆ ಬರಲಿದೆ. ಆದ್ದರಿಂದ ನೀವು ನಿಮ್ಮ ಹೃದಯಗಳನ್ನು ಮತ್ತು ಜೀವಿತಗಳನ್ನು ಮಾರ್ಪಡಿಸಿಕೊಳ್ಳಿರಿ” ಎಂದು ಯೇಸು ಬೋಧಿಸಿದನು.

ಯೇಸುವಿನ ಪ್ರಥಮ ಶಿಷ್ಯರು

(ಮಾರ್ಕ 1:16-20; ಲೂಕ 5:1-11)

18 ಗಲಿಲಾಯ ಸರೋವರದ ತೀರದಲ್ಲಿ ಯೇಸು ತಿರುಗಾಡುತ್ತಾ ಇದ್ದನು. ಆತನು ಸೀಮೋನ (ಈತನನ್ನೇ ಪೇತ್ರ ಎಂದು ಕರೆಯಲಾಯಿತು.) ಮತ್ತು ಸೀಮೋನನ ಸಹೋದರನಾದ ಅಂದ್ರೆಯ ಎಂಬ ಇಬ್ಬರು ಸಹೋದರರನ್ನು ಕಂಡನು. ಬೆಸ್ತರಾಗಿದ್ದ ಇವರಿಬ್ಬರು ಅಂದು ಸರೋವರದ ತೀರದಲ್ಲಿ ಬಲೆ ಹಾಕಿ ಮೀನು ಹಿಡಿಯುತ್ತಿದ್ದರು. 19 ಯೇಸು, “ಬನ್ನಿರಿ, ನನ್ನನ್ನು ಹಿಂಬಾಲಿಸಿ. ನಿಮ್ಮನ್ನು ಬೇರೆ ರೀತಿಯ ಬೆಸ್ತರನ್ನಾಗಿ ಮಾಡುವೆನು. ನೀವು ಒಟ್ಟುಗೂಡಿಸುವುದು ಮೀನನ್ನಲ್ಲ, ಮನುಷ್ಯರನ್ನು” ಎಂದನು. 20 ಕೂಡಲೇ ಸೀಮೋನ ಮತ್ತು ಅಂದ್ರೆಯ ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.

21 ಯೇಸು ಗಲಿಲಾಯ ಸರೋವರದ ತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೆಂಬ ಇಬ್ಬರು ಸಹೋದರರನ್ನು ನೋಡಿದನು. ಅವರು ತಮ್ಮ ತಂದೆಯಾದ ಜೆಬೆದಾಯನ ಸಂಗಡ ದೋಣಿಯಲ್ಲಿದ್ದರು. ಅವರು ಮೀನು ಹಿಡಿಯಲು ತಮ್ಮ ಬಲೆಗಳನ್ನು ಸರಿಪಡಿಸಿಕೊಳ್ಳುತ್ತಿದ್ದರು. ಯೇಸು ಇವರನ್ನು ಕರೆದನು. 22 ಆಗ ಅವರು ದೋಣಿಯನ್ನು ಮತ್ತು ತಮ್ಮ ತಂದೆಯನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

ಯೇಸುವಿನ ಉಪದೇಶ ಮತ್ತು ರೋಗಿಗಳಿಗೆ ಸ್ವಸ್ಥತೆ

(ಲೂಕ 6:17-19)

23 ಯೇಸು ಗಲಿಲಾಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿದನು. ಯೇಸು ಸಭಾಮಂದಿರಗಳಲ್ಲಿ ಬೋಧಿಸಿದನು ಮತ್ತು ಪರಲೋಕರಾಜ್ಯದ ವಿಷಯವಾದ ಶುಭವಾರ್ತೆಯನ್ನು ಉಪದೇಶಿಸಿದನು. ಯೇಸು ಎಲ್ಲಾ ಜನರ ಕಾಯಿಲೆಗಳನ್ನು ಮತ್ತು ರೋಗಗಳನ್ನು ವಾಸಿಮಾಡಿದನು. 24 ಯೇಸುವಿನ ವಿಷಯವಾದ ಸುದ್ದಿಯು ಸಿರಿಯ ದೇಶದಲ್ಲೆಲ್ಲಾ ಹರಡಿತು. ಜನರು ಕಾಯಿಲೆಯವರನ್ನೆಲ್ಲ ಯೇಸುವಿನ ಬಳಿಗೆ ತಂದರು. ಅವರು ನಾನಾ ವಿಧವಾದ ವ್ಯಾಧಿಗಳಿಂದ ಮತ್ತು ನೋವಿನಿಂದ ಬಾಧೆಪಡುತ್ತಿದ್ದರು. ಕೆಲವರು ತೀವ್ರವಾದ ನೋವಿನಿಂದ ನರಳುತ್ತಿದ್ದರು. ಕೆಲವರು ದೆವ್ವಗಳಿಂದ ಪೀಡಿತರಾಗಿದ್ದರು. ಕೆಲವರು ಮೂರ್ಛಾರೋಗಿಗಳಾಗಿದ್ದರು. ಕೆಲವರು ಪಾರ್ಶ್ವವಾಯು ರೋಗಿಗಳಾಗಿದ್ದರು. ಯೇಸು ಇವರನ್ನೆಲ್ಲಾ ಗುಣಪಡಿಸಿದನು. 25 ಅನೇಕಾನೇಕ ಜನರು ಯೇಸುವನ್ನು ಹಿಂಬಾಲಿಸಿದರು. ಈ ಜನರು ಗಲಿಲಾಯದಿಂದಲೂ ದೆಕಪೊಲಿ ಎಂಬ ಹತ್ತು ಊರುಗಳಿಂದಲೂ ಜೆರುಸಲೇಮಿನಿಂದಲೂ ಜುದೇಯದಿಂದಲೂ ಮತ್ತು ಜೋರ್ಡನ್ ನದಿಯ ಆಚೆಕಡೆಯ ಪ್ರದೇಶದಿಂದಲೂ ಬಂದಿದ್ದರು.

ಎಜ್ರ 4

ದೇವಾಲಯ ಕಟ್ಟುವ ಕಾರ್ಯವನ್ನು ವಿರೋಧಿಸಿದ ವೈರಿಗಳು

1-2 ಆ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದ ಬೇರೆ ಜನರು ಯೆಹೂದ ಮತ್ತು ಬೆನ್ಯಾಮೀನ್ ಕುಲಗಳ ಜನರಿಗೆ ವಿರುದ್ಧವಾಗಿದ್ದರು. ಸೆರೆಯಿಂದ ಬಂದ ಜನರು ಇಸ್ರೇಲರ ದೇವರಾದ ಯೆಹೋವನ ದೇವಾಲಯವನ್ನು ಕಟ್ಟುತ್ತಿದ್ದಾರೆಂಬ ವರ್ತಮಾನವನ್ನು ವೈರಿಗಳು ಕೇಳಿ ಜೆರುಬ್ಬಾಬೆಲನ ಬಳಿಗೂ ಮತ್ತು ಕುಲಪ್ರಧಾನರ ಬಳಿಗೂ ಬಂದು, “ಕಟ್ಟುವ ಕಾರ್ಯದಲ್ಲಿ ನಿಮಗೆ ಸಹಾಯ ಮಾಡಲು ಬಂದಿದ್ದೇವೆ. ನಾವು ಸಹ ನಿಮ್ಮಂತೆಯೇ ದೇವರನ್ನು ಪ್ರಾರ್ಥಿಸುತ್ತೇವೆ. ಅಶ್ಶೂರದ ರಾಜನಾದ ಏಸರ್ಹದ್ದೋನನು ನಮ್ಮನ್ನು ಇಲ್ಲಿಗೆ ತಂದು ಬಿಟ್ಟಂದಿನಿಂದ ನಾವು ನಿಮ್ಮ ದೇವರನ್ನೇ ಆರಾಧಿಸುತ್ತೇವೆ” ಅಂದರು.

ಆದರೆ ಜೆರುಬ್ಬಾಬೆಲ್, ಯೇಷೂವ ಮತ್ತು ಗೋತ್ರಪ್ರಧಾನರು ಅವರಿಗೆ ಹೇಳಿದ್ದೇನೆಂದರೆ: “ನೀವು ನಮ್ಮ ದೇವರಿಗೆ ದೇವಾಲಯವನ್ನು ಕಟ್ಟಬಾರದು. ನಾವು ಮಾತ್ರವೇ ಕಟ್ಟಬಹುದು. ಯಾಕೆಂದರೆ ಆತನು ಇಸ್ರೇಲ್ ಜನರ ದೇವರು. ಪರ್ಶಿಯ ರಾಜನಾದ ಸೈರಸನು ಅದೇ ರೀತಿಯಾಗಿ ನಮಗೆ ಅಪ್ಪಣೆ ಮಾಡಿರುತ್ತಾನೆ.”

ಇದನ್ನು ಕೇಳಿ ಅವರಿಗೆ ಸಿಟ್ಟುಬಂತು. ಮತ್ತು ಯೆಹೂದ್ಯರಿಗೆ ಉಪದ್ರವ ಕೊಡಲು ಪ್ರಾರಂಭಿಸಿದರು. ದೇವಾಲಯ ಕಟ್ಟುವ ಕೆಲಸವನ್ನು ನಿಲ್ಲಿಸಲೂ ಕಟ್ಟುವವರನ್ನು ನಿರಾಶೆಪಡಿಸಲೂ ಪ್ರಯತ್ನಿಸಿದರು. ಯೆಹೂದ ಜನರ ವಿರುದ್ಧವಾಗಿರಲು ಸರಕಾರದ ಅಧಿಕಾರಿಗಳಿಗೆ ಲಂಚಕೊಟ್ಟು ಪ್ರೋತ್ಸಾಹಿಸಿದರು. ಯೆಹೂದ್ಯರು ದೇವಾಲಯ ಕಟ್ಟುವ ಕಾರ್ಯವನ್ನು ನಿಲ್ಲಿಸಲು ಈ ಅಧಿಕಾರಿಗಳು ಪದೇಪದೇ ತೊಂದರೆಪಡಿಸಿದರು. ಪರ್ಶಿಯಾದ ಅರಸನಾದ ಸೈರಸನ ರಾಜ್ಯಭಾರದ ಆಳ್ವಿಕೆಯಲ್ಲಿಯೂ ಅವನ ನಂತರ ಪಟ್ಟಕ್ಕೆ ಬಂದ ದಾರ್ಯಾವೆಷನ ಆಳ್ವಿಕೆಯಲ್ಲಿಯೂ ಇದೇ ರೀತಿ ಮುಂದುವರಿಯಿತು.

ಆ ಶತ್ರುಗಳು ಪರ್ಶಿಯ ರಾಜನಿಗೆ ಪತ್ರವನ್ನು ಬರೆದು ದೇವಾಲಯವನ್ನು ಕಟ್ಟುವ ಕಾರ್ಯವನ್ನು ನಿಲ್ಲಿಸಬೇಕೆಂದು ಬೇಡಿಕೊಂಡರು. ಅಹಷ್ವೇರೋಷನು ಪರ್ಶಿಯ ದೇಶದ ಅರಸನಾದಾಗ ಅವನಿಗೆ ಪತ್ರ ಬರೆದರು.

ಜೆರುಸಲೇಮ್ ನಗರವನ್ನು ಕಟ್ಟುವ ಕಾರ್ಯಕ್ಕೆ ವಿರೋಧಿಸಿದ ಶತ್ರುಗಳು

ಅರ್ತಷಸ್ತನು ಪರ್ಶಿಯಾದ ರಾಜನಾದಾಗ ಬಿಷ್ಲಾಮ್, ಮಿತ್ರದಾತ್ ಮತ್ತು ಟಾಬೆಯೇಲ್ ಈ ಮೊದಲಾದವರು ಯೆಹೂದ್ಯರ ವಿರುದ್ಧವಾಗಿ ರಾಜನಿಗೆ ಆಪಾದನಾ ಪತ್ರವನ್ನು ಅರಮೇಯಿಕ್ ಭಾಷೆಯಲ್ಲಿಯೂ ಅದರ ಲಿಪಿಯಲ್ಲಿಯೂ ಬರೆದರು.

ಅದಕ್ಕೆ ದೇಶಾಧಿಪತಿಯಾದ ರೆಹೂಮ ಮತ್ತು ಕಾರ್ಯದರ್ಶಿಯಾದ ಶಿಂಷೈ ಜೆರುಸಲೇಮಿನ ನಿವಾಸಿಗಳ ವಿರುದ್ಧವಾಗಿ ರಾಜ ಅರ್ತಷಸ್ತನಿಗೆ ಈ ರೀತಿ ಬರೆದರು:

ದೇಶಾಧಿಪತಿಯಾದ ರೆಹೂಮ, ಕಾರ್ಯದರ್ಶಿಯಾದ ಶಿಂಷೈ ಇವರೂ ಇವರ ಜೊತೆಗಾರರಾದ ಟರ್ಪಲಾಯರು, ಪರ್ಶಿಯದವರು, ಯೆರೆಕ್ಯರು, ಬಾಬಿಲೋನಿನವರು, ಕೂಷನಿನ ಏಲಾಮ್ಯರು, 10 ಮತ್ತು ಮಹಾ ಬಲಿಷ್ಠನಾದ ಅಷೂರ್ ಬನಿಪಾಲನು ಕರೆತಂದು ಸಮಾರ್ಯ ಮತ್ತು ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯಗಳಲ್ಲಿ ಇರಿಸಿದ ಇತರ ಜನರು,

11 ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯದಲ್ಲಿ ವಾಸಿಸುವ ಸೇವಕರು ಅರ್ತಷಸ್ತ ರಾಜನಿಗೆ ಬರೆಯುವ ಪತ್ರ:

12 ಅರ್ತಷಸ್ತ ರಾಜರೇ, ನಿಮ್ಮ ಸನ್ನಿಧಾನದಲ್ಲಿ ನಾವು ತಿಳಿಸುವ ವಿಷಯವೇನೆಂದರೆ, ನೀವು ಕಳುಹಿಸಿರುವ ಯೆಹೂದ್ಯರು ಇಲ್ಲಿಗೆ ಬಂದಿದ್ದಾರೆ. ಅವರು ತಮ್ಮ ನಗರವಾದ ಜೆರುಸಲೇಮನ್ನು ತಿರುಗಿ ಕಟ್ಟುತ್ತಿದ್ದಾರೆ. ಜೆರುಸಲೇಮ್ ಕೆಟ್ಟ ನಗರವಾಗಿದೆ. ಅದರ ನಿವಾಸಿಗಳು ಯಾವಾಗಲೂ ಬೇರೆ ಅರಸುಗಳಿಗೆ ಎದುರು ಬೀಳುವವರಾಗಿದ್ದಾರೆ. ಈಗ ಆ ಯೆಹೂದ್ಯರು ಅಸ್ತಿವಾರವನ್ನು ಹಾಕಿ ಗೋಡೆಯನ್ನು ಕಟ್ಟುತ್ತಿದ್ದಾರೆ.

13 ಅದೇ ಸಮಯದಲ್ಲಿ ರಾಜರೇ, ನೀವು ತಿಳಿಯಬೇಕಾದ ವಿಷಯವೇನೆಂದರೆ, ಜೆರುಸಲೇಮ್ ಮತ್ತು ಅದರ ಪೌಳಿಗೋಡೆಗಳು ಕಟ್ಟಲ್ಪಟ್ಟಲ್ಲಿ ಅಲ್ಲಿಯ ಪ್ರಜೆಗಳು ತೆರಿಗೆ ಕೊಡುವುದನ್ನು ನಿಲ್ಲಿಸುವರು. ನಿನಗೆ ಕಪ್ಪಕಾಣಿಕೆ ಸಲ್ಲಿಸುವುದನ್ನೂ ಇತರ ತೆರಿಗೆಗಳನ್ನು ಕೊಡುವುದನ್ನೂ ನಿಲ್ಲಿಸುವರು. ಇದರಿಂದಾಗಿ ರಾಜರಿಗೆ ದೊಡ್ಡ ನಷ್ಟವಾಗಲಿದೆ.

14 ರಾಜನ ಮೇಲೆ ನಮಗೆ ಜವಾಬ್ದಾರಿ ಇದೆ. ಅಂಥಾ ಸಂಗತಿಗಳು ನಡೆಯಲು ನಾವು ಇಷ್ಟಪಡುವುದಿಲ್ಲ. ಆದ್ದರಿಂದಲೇ ರಾಜರಿಗೆ ಈ ಪತ್ರವನ್ನು ಕಳುಹಿಸುತ್ತಿದ್ದೇವೆ.

15 ರಾಜನಾದ ಅರ್ತಷಸ್ತನೇ, ನಿಮಗಿಂತ ಮೊದಲು ಆಳಿದ ರಾಜರ ಬಗ್ಗೆ ಬರೆದ ವೃತ್ತಾಂತವನ್ನು ಓದಿರಿ ಎಂದು ನಿಮ್ಮನ್ನು ವಿನಂತಿಸುತ್ತೇವೆ. ಜೆರುಸಲೇಮ್ ಯಾವಾಗಲೂ ಇತರ ರಾಜರುಗಳಿಗೆ ಎದುರುಬೀಳುವುದನ್ನು ನೀವು ಅದರಲ್ಲಿ ಕಂಡುಕೊಳ್ಳುವಿರಿ. ಬೇರೆ ರಾಜರನ್ನು ಮತ್ತು ದೇಶಗಳವರನ್ನು ತುಂಬಾ ಕಷ್ಟಕ್ಕೆ ಒಳಪಡಿಸಿದ್ದು ಮಾತ್ರವಲ್ಲ, ಪೂರ್ವಕಾಲದಿಂದಲೂ ಈ ನಗರದಿಂದ ಎಷ್ಟೋ ದಂಗೆಗಳು ಎದ್ದಿವೆ. ಆ ಕಾರಣಕ್ಕಾಗಿಯೇ ಜೆರುಸಲೇಮ್ ನಾಶಮಾಡಲ್ಪಟ್ಟಿತ್ತು.

16 ರಾಜನಾದ ಅರ್ತಷಸ್ತನೇ, ಈ ಪಟ್ಟಣ ಮತ್ತು ಅದರ ಪೌಳಿಗೋಡೆಗಳು ತಿರಿಗಿ ಕಟ್ಟಲ್ಪಟ್ಟರೆ ನೀವು ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವಿರಿ.

17 ಈ ಪತ್ರಕ್ಕೆ ಅರಸನಾದ ಅರ್ತಷಸ್ತನು ಈ ರೀತಿಯಾಗಿ ಉತ್ತರಿಸಿದನು.

ದೇಶಾಧಿಪತಿಯಾದ ರೆಹೂಮನಿಗೂ ಕಾರ್ಯದರ್ಶಿಯಾದ ಶಿಂಷೈಗೂ ಮತ್ತು ಸಮಾರ್ಯದಲ್ಲೂ ಯೂಫ್ರೇಟೀಸ್ ಪಶ್ಚಿಮ ಪ್ರಾಂತ್ಯದಲ್ಲೂ ವಾಸಿಸುವ ಜನರಿಗೆ

ವಂದನೆಗಳು.

18 ನೀವು ಕಳುಹಿಸಿದ ಪತ್ರವನ್ನು ಭಾಷಾಂತರ ಮಾಡಿ ನನಗೆ ತಿಳಿಸಲಾಯಿತು. 19 ಹಿಂದಿನ ರಾಜರ ವೃತ್ತಾಂತ ಪುಸ್ತಕಗಳನ್ನು ಶೋಧಿಸಲು ನಾನು ಆಜ್ಞೆ ಕೊಟ್ಟೆನು. ಆ ವೃತ್ತಾಂತಗಳನ್ನು ಓದಿದಾಗ, ರಾಜರ ವಿರುದ್ಧವಾದ ದಂಗೆಯ ದೀರ್ಘ ಇತಿಹಾಸವನ್ನು ಜೆರುಸಲೇಮ್ ಹೊಂದಿರುವುದು ನಮಗೆ ತಿಳಿದು ಬಂತು. ಜೆರುಸಲೇಮಿನಲ್ಲಿ ದಂಗೆ ಮತ್ತು ಪ್ರತಿಭಟನೆ ಆಗಾಗ್ಗೆ ನಡೆದಿದ್ದವು. 20 ಬಲಿಷ್ಠರಾಜರು ಜೆರುಸಲೇಮನ್ನು ಮತ್ತು ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯವನ್ನೆಲ್ಲಾ ಆಳಿದರು. ಅವರಿಗೆ ಕಪ್ಪಕಾಣಿಕೆ, ಸುಂಕ, ತೆರಿಗೆಗಳನ್ನು ಸಲ್ಲಿಸಲಾಗುತ್ತಿತ್ತು.

21 ಈಗ ನೀವು ಜೆರುಸಲೇಮ್‌ನಲ್ಲಿ ನಡೆಯುವ ಕೆಲಸವನ್ನು ನಿಲ್ಲಿಸುವಂತೆ ಆಜ್ಞಾಪಿಸಬೇಕು. ನಾನು ತಿಳಿಸುವ ತನಕ ಅದು ತಿರಿಗಿ ಕಟ್ಟಲ್ಪಡಬಾರದು. 22 ಈ ವಿಷಯದಲ್ಲಿ ನೀವು ಅಜಾಗರೂಕರಾಗಬಾರದೆಂದು ನಿಮ್ಮನ್ನು ಎಚ್ಚರಿಸುತ್ತೇನೆ. ಜೆರುಸಲೇಮಿನ ಕಟ್ಟುವಿಕೆಯು ಮುಂದುವರಿಯಬಾರದು. ಮುಂದುವರಿದರೆ ನನಗೆ ಆ ಪ್ರಾಂತ್ಯದಿಂದ ದೊರಕಬೇಕಾದ ಹಣವು ದೊರಕುವುದಿಲ್ಲ.

23 ರಾಜನಾದ ಅರ್ತಷಸ್ತನು ಬರೆದ ಪತ್ರವನ್ನು ರೆಹೂಮನಿಗೂ ಕಾರ್ಯದರ್ಶಿ ಶಿಂಷೈಗೂ ಅವರೊಂದಿಗಿದ್ದ ಜನರ ಮುಂದೆ ಓದಲಾಯಿತು. ಆ ಕೂಡಲೇ ಅವರು ಬೇಗನೆ ಜೆರುಸಲೇಮಿನಲ್ಲಿದ್ದ ಯೆಹೂದ್ಯರ ಬಳಿಗೆ ಹೋಗಿ ಅಲ್ಲಿ ನಡೆಯುತ್ತಿದ್ದ ಕೆಲಸವನ್ನು ಬಲವಂತದಿಂದ ನಿಲ್ಲಿಸಿದರು.

ದೇವಾಲಯ ಕಟ್ಟುವ ಕೆಲಸ ನಿಲ್ಲಿಸಲ್ಪಟ್ಟಿದ್ದು

24 ಜೆರುಸಲೇಮಿನಲ್ಲಿ ಯೆಹೋವನ ಆಲಯದ ಕಾರ್ಯವು ನಿಂತಿತು. ಪರ್ಶಿಯ ರಾಜ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ತನಕ ಕೆಲಸವು ಮುಂದುವರೆಯಲಿಲ್ಲ.

ಅಪೊಸ್ತಲರ ಕಾರ್ಯಗಳು 4

ನ್ಯಾಯಸಭೆಯ ಮುಂದೆ ಪೇತ್ರ ಮತ್ತು ಯೋಹಾನ

ಪೇತ್ರ ಮತ್ತು ಯೋಹಾನ ಜನರೊಂದಿಗೆ ಮಾತಾಡುತ್ತಿದ್ದಾಗ, ಕೆಲವು ಜನರು ಅವರ ಬಳಿಗೆ ಬಂದರು. ಅಲ್ಲಿ ಕೆಲವು ಯೆಹೂದ್ಯ ಯಾಜಕರಿದ್ದರು. ಕೆಲವು ಸದ್ದುಕಾಯರಿದ್ದರು ಮತ್ತು ದೇವಾಲಯ ಕಾಯುವ ಸಿಪಾಯಿಗಳ ಅಧಿಪತಿಯೂ ಇದ್ದನು. ಈ ಇಬ್ಬರು ಅಪೊಸ್ತಲರು ಜನರಿಗೆ ಉಪದೇಶ ಮಾಡುತ್ತಿರುವುದನ್ನು ಕಂಡು ಅವರು ಸಿಟ್ಟುಗೊಂಡರು. ಯೇಸುವಿನ ಶಕ್ತಿಯ ಮೂಲಕವಾಗಿ ಜನರು ಪುನರುತ್ಥಾನ ಹೊಂದುತ್ತಾರೆ ಎಂದು ಪೇತ್ರ ಮತ್ತು ಯೋಹಾನ ಬೋಧಿಸುತ್ತಿದ್ದರು. ಯೆಹೂದ್ಯ ನಾಯಕರು ಪೇತ್ರ ಮತ್ತು ಯೋಹಾನರನ್ನು ಬಂಧಿಸಿ ಸೆರೆಮನೆಗೆ ಹಾಕಿದರು. ಆಗಲೇ ಕತ್ತಲಾಗಿತ್ತು. ಆದ್ದರಿಂದ ಅವರು ಪೇತ್ರ ಮತ್ತು ಯೋಹಾನರನ್ನು ಮರುದಿನದವರೆಗೆ ಸೆರೆಯಲ್ಲಿಟ್ಟರು. ಆದರೆ ಪೇತ್ರ ಮತ್ತು ಯೋಹಾನರ ಬೋಧನೆಯನ್ನು ಕೇಳಿ ಅನೇಕರು ನಂಬಿಕೊಂಡರು. ಆಗ ಆ ಸಮುದಾಯದಲ್ಲಿ ವಿಶ್ವಾಸಿಗಳ ಸಂಖ್ಯೆ ಐದು ಸಾವಿರಕ್ಕೆ ಏರಿತ್ತು.

ಮರುದಿನ ಯೆಹೂದ್ಯನಾಯಕರು, ಯೆಹೂದ್ಯರ ಹಿರಿಯನಾಯಕರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಲ್ಲಿ ಸಭೆಸೇರಿದರು. ಅಲ್ಲಿ ಅನ್ನನು (ಪ್ರಧಾನ ಯಾಜಕ), ಕಾಯಫ, ಯೋಹಾನ ಮತ್ತು ಅಲೆಕ್ಸಾಂಡರ್ ಇದ್ದರು. ಪ್ರಧಾನಯಾಜಕನ ಕುಟುಂಬಕ್ಕೆ ಸೇರಿದ ಪ್ರತಿಯೊಬ್ಬರು ಅಲ್ಲಿದ್ದರು. ಅವರು ಪೇತ್ರ ಯೋಹಾನರನ್ನು ಅಲ್ಲಿದ್ದ ಎಲ್ಲಾ ಜನರ ಮುಂದೆ ನಿಲ್ಲಿಸಿದರು. ಯೆಹೂದ್ಯನಾಯಕರು ಅವರನ್ನು “ನೀವು ಈ ಕುಂಟನನ್ನು ಹೇಗೆ ಗುಣಪಡಿಸಿದಿರಿ? ನೀವು ಯಾವ ಶಕ್ತಿಯನ್ನು ಉಪಯೋಗಿಸಿದಿರಿ? ಇದನ್ನು ಯಾರ ಅಧಿಕಾರದಿಂದ ಮಾಡಿದಿರಿ?” ಎಂದು ಅನೇಕ ಸಲ ಕೇಳಿದರು.

ಆಗ ಪೇತ್ರನು ಪವಿತ್ರಾತ್ಮಭರಿತನಾದನು. ಅವನು ಅವರಿಗೆ, “ಜನನಾಯಕರೇ ಮತ್ತು ಹಿರಿಯನಾಯಕರೇ, ಈ ಕುಂಟನಿಗಾದ ಒಳ್ಳೆಯದರ ಬಗ್ಗೆ ನೀವು ನಮ್ಮನ್ನು ಕೇಳುತ್ತಿದ್ದೀರಿ. 10 ನಜರೇತಿನ ಯೇಸು ಕ್ರಿಸ್ತನ ಹೆಸರಿನಿಂದ ಈ ಮನುಷ್ಯನಿಗೆ ಗುಣವಾಯಿತೆಂಬುದನ್ನು ನೀವು ಮತ್ತು ಯೆಹೂದ್ಯರೆಲ್ಲರು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ! ನೀವು ಯೇಸುವನ್ನು ಶಿಲುಬೆಗೇರಿಸಿದಿರಿ. ದೇವರು ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ಈ ಮನುಷ್ಯನು ಕುಂಟನಾಗಿದ್ದನು, ಆದರೆ ಈಗ ಇವನು ಗುಣಹೊಂದಿದ್ದಾನೆ ಮತ್ತು ಯೇಸುವಿನ ಹೆಸರಿನಿಂದ ನಿಮ್ಮ ಮುಂದೆ ನಿಂತುಕೊಳ್ಳಲು ಶಕ್ತನಾಗಿದ್ದಾನೆ!

11 ‘ಕಟ್ಟುವವರಾದ ನೀವು ಬೇಡವೆಂದು ಬಿಟ್ಟ ಕಲ್ಲೇ (ಯೇಸು)
    ಮುಖ್ಯವಾದ ಮೂಲೆಗಲ್ಲಾಯಿತು.’(A)

12 ರಕ್ಷಣೆಯು ಯೇಸುವಿನಿಂದಲ್ಲದೆ ಬೇರೆ ಯಾರಲ್ಲಿಯೂ ಸಿಕ್ಕುವುದಿಲ್ಲ. ಆತನ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವುದಿಲ್ಲ” ಎಂದು ಹೇಳಿದನು.

13 ಪೇತ್ರ ಮತ್ತು ಯೋಹಾನರಿಗೆ ವಿಶೇಷವಾದ ಯಾವ ತರಬೇತಿಯಾಗಲಿ ವಿದ್ಯೆಯಾಗಲಿ ಇಲ್ಲವೆಂಬುದು ಯೆಹೂದ್ಯನಾಯಕರಿಗೆ ಗೊತ್ತಿತ್ತು. ಅಲ್ಲದೆ ಅವರು ಹೆದರದೆ ಮಾತಾಡುವುದನ್ನು ಸಹ ನಾಯಕರು ಗಮನಿಸಿದರು. ಆದ್ದರಿಂದ ಆ ನಾಯಕರಿಗೆ ಬಹಳ ಆಶ್ಚರ್ಯವಾಯಿತು. ಪೇತ್ರ ಮತ್ತು ಯೋಹಾನರು ಯೋಸುವಿನೊಂದಿಗೆ ಇದ್ದರೆಂಬುದನ್ನು ಅವರು ಆ ಬಳಿಕ ಗ್ರಹಿಸಿಕೊಂಡರು. 14 ಈ ಇಬ್ಬರು ಅಪೊಸ್ತಲರ ಪಕ್ಕದಲ್ಲೇ ನಿಂತುಕೊಂಡಿದ್ದ ಕುಂಟನನ್ನು ಅವರು ನೋಡಿದರು. ಅವನಿಗೆ ಗುಣವಾಗಿರುವುದನ್ನು ಅವರು ಕಂಡರು. ಆದ್ದರಿಂದ ಅಪೊಸ್ತಲರ ಮಾತಿಗೆ ವಿರುದ್ಧವಾಗಿ ಅವರೇನೂ ಹೇಳಲಾಗಲಿಲ್ಲ.

15 ಯೆಹೂದ್ಯನಾಯಕರು ಅಪೊಸ್ತಲರನ್ನು ಸಭೆಯಿಂದ ಹೊರಗೆ ಕಳುಹಿಸಿ, 16 “ಇವರಿಗೆ ನಾವೇನು ಮಾಡೋಣ? ಇವರು ದೊಡ್ಡ ಅದ್ಭುತಕಾರ್ಯ ಮಾಡಿರುವುದು ಜೆರುಸಲೇಮಿನಲ್ಲಿರುವ ಪ್ರತಿಯೊಬ್ಬರಿಗೂ ಗೊತ್ತಿದೆ. ಈ ಅದ್ಭುತಕಾರ್ಯವು ಸ್ಪಷ್ಟವಾಗಿರುವುದರಿಂದ ಅದನ್ನು ಅಸತ್ಯವೆಂದು ಹೇಳಲಾಗದು. 17 ಆದರೆ ಈ ಮನುಷ್ಯನ (ಯೇಸುವಿನ) ಬಗ್ಗೆ ಜನರಿಗೆ ಹೇಳದಂತೆ ನಾವು ಅವರನ್ನು ಬೆದರಿಸಬೇಕು. ಆಗ ಈ ಸಮಾಚಾರ ಜನರ ಮಧ್ಯದಲ್ಲಿ ಹರಡುವುದಿಲ್ಲ” ಎಂದು ಅವರು ಮಾತಾಡಿಕೊಂಡರು.

18 ಆದ್ದರಿಂದ ಯೆಹೂದ್ಯನಾಯಕರು ಪೇತ್ರ ಮತ್ತು ಯೋಹಾನರನ್ನು ಮತ್ತೆ ಒಳಗೆ ಕರೆಸಿ, ಯೇಸುವಿನ ಹೆಸರಿನಲ್ಲಿ ಏನೂ ಹೇಳಬಾರದೆಂದೂ, ಏನೂ ಬೋಧಿಸಬಾರದೆಂದೂ ಎಚ್ಚರಿಕೆ ಕೊಟ್ಟರು. 19 ಆದರೆ ಪೇತ್ರ ಮತ್ತು ಯೋಹಾನ ಅವರಿಗೆ, “ನಾವು ನಿಮಗೆ ವಿಧೇಯರಾಗಬೇಕೇ ಅಥವಾ ದೇವರಿಗೆ ವಿಧೇಯರಾಗಬೇಕೇ? ಇದರಲ್ಲಿ ಯಾವುದು ದೇವರಿಗೆ ಅಪೇಕ್ಷೆಯಾದದು? ನೀವೇ ಹೇಳಿ. 20 ನಾವಂತೂ ಸುಮ್ಮನಿರಲಾರೆವು. ನಾವು ಕಂಡ ಮತ್ತು ಕೇಳಿದ ಸಂಗತಿಗಳ ಬಗ್ಗೆ ಜನರಿಗೆ ಹೇಳಲೇಬೇಕು” ಎಂದು ಉತ್ತರಕೊಟ್ಟರು.

21-22 ಯೆಹೂದ್ಯನಾಯಕರಿಗೆ ಅಪೊಸ್ತಲರನ್ನು ದಂಡಿಸಲು ಯಾವ ಮಾರ್ಗವೂ ತೋಚಲಿಲ್ಲ, ಯಾಕೆಂದರೆ ಸಂಭವಿಸಿದ ಕಾರ್ಯಕ್ಕಾಗಿ ಜನರೆಲ್ಲರೂ ದೇವರನ್ನು ಕೊಂಡಾಡುತ್ತಿದ್ದರು. (ಈ ಸೂಚಕಕಾರ್ಯದಿಂದ ಗುಣಹೊಂದಿದ ವ್ಯಕ್ತಿಗೆ ನಲವತ್ತು ವರ್ಷಕ್ಕಿಂತಲೂ ಹೆಚ್ಚು ವಯಸ್ಸಾಗಿತ್ತು.) ಆದ್ದರಿಂದ ಯೆಹೂದ್ಯನಾಯಕರು ಅಪೊಸ್ತಲರನ್ನು ಮತ್ತೆ ಎಚ್ಚರಿಸಿ ಕಳುಹಿಸಿಬಿಟ್ಟರು.

ಪೇತ್ರ ಮತ್ತು ಯೋಹಾನರು ಹಿಂತಿರುಗಿದರು

23 ಪೇತ್ರ ಮತ್ತು ಯೋಹಾನರು ಯೆಹೂದ್ಯನಾಯಕರ ಸಭೆಯಿಂದ ಹೊರಟು ತಮ್ಮ ಸಮುದಾಯಕ್ಕೆ ಹೋದರು. ಮಹಾಯಾಜಕರು ಮತ್ತು ಯೆಹೂದ್ಯರ ಹಿರಿಯ ನಾಯಕರು ತಮಗೆ ಹೇಳಿದ ಪ್ರತಿಯೊಂದನ್ನು ಅವರು ತಮ್ಮ ಸಮುದಾಯದವರಿಗೆ ತಿಳಿಸಿದರು. 24 ಇದನ್ನು ಕೇಳಿದಾಗ ವಿಶ್ವಾಸಿಗಳು ಏಕಮನಸ್ಸಿನಿಂದ ದೇವರಲ್ಲಿ ಪ್ರಾರ್ಥಿಸಿದರು: ಅವರೆಲ್ಲರಲ್ಲಿ ಒಂದೇ ಮನಸ್ಸಿತ್ತು. “ಒಡೆಯನೇ, ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಮತ್ತು ಲೋಕದಲ್ಲಿರುವ ಪ್ರತಿಯೊಂದನ್ನೂ ನಿರ್ಮಿಸಿದಾತನು ನೀನೇ. 25 ನಮ್ಮ ಪಿತೃವಾದ ದಾವೀದನು ನಿನ್ನ ಸೇವಕನಾಗಿದ್ದನು. ಅವನು ಪವಿತ್ರಾತ್ಮನ ಸಹಾಯದಿಂದ ಈ ಮಾತುಗಳನ್ನು ಬರೆದನು:

‘ಜನಾಂಗಗಳು ಕೂಗಾಡುವುದೇಕೆ?
ಈ ಲೋಕದ ಜನರು ದೇವರಿಗೆ ವಿರೋಧವಾಗಿ ಕಾರ್ಯಗಳನ್ನು ಯೋಚಿಸುತ್ತಿರುವುದೇಕೆ? ಇದರಿಂದ ಪ್ರಯೋಜನವೇನೂ ಇಲ್ಲ!

26 ‘ಭೂಲೋಕದ ರಾಜರು ಹೋರಾಡಲು ಸಿದ್ಧರಾಗಿದ್ದಾರೆ;
    ಪ್ರಭುವಿಗೂ ಆತನ ಕ್ರಿಸ್ತನಿಗೂ ವಿರೋಧವಾಗಿ ಅಧಿಪತಿಗಳೆಲ್ಲರೂ ಒಟ್ಟಾಗಿ ಸೇರಿದ್ದಾರೆ.’(B)

27 ಹೆರೋದರಾಜನು, ಪೊಂತಿಯಸ್ ಪಿಲಾತನು, ಜನಾಂಗಗಳು ಮತ್ತು ಯೆಹೂದ್ಯರು ಈ ಪಟ್ಟಣದಲ್ಲಿ ಒಟ್ಟಾಗಿ ಸೇರಿಕೊಂಡು ಯೇಸುವನ್ನು ವಿರೋಧಿಸಿದಾಗ ಈ ಸಂಗತಿಗಳು ನಿಜವಾಗಿಯೂ ನೆರವೇರಿದವು. ಯೇಸು ನಿನ್ನ ಪವಿತ್ರ ಸೇವಕನಾಗಿದ್ದಾನೆ. ನೀನು ಆತನನ್ನು ಅಭಿಷೇಕಿಸಿದೆ. 28 ಯೇಸುವಿನ ವಿರುದ್ಧ ಒಟ್ಟಾಗಿ ಬಂದ ಈ ಜನರು ನಿನ್ನ ಯೋಜನೆ ನೆರವೇರುವಂತೆ ಮಾಡಿದರು. ನಿನ್ನ ಶಕ್ತಿಯಿಂದಲೂ ನಿನ್ನ ಚಿತ್ತದಿಂದಲೂ ಇದು ನೆರವೇರಿತು. 29 ಪ್ರಭುವೇ, ಈಗ ಅವರು ಹೇಳುತ್ತಿರುವುದನ್ನು ಕೇಳು. ಅವರು ನಮ್ಮನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ! ಪ್ರಭುವೇ ನಾವು ನಿನ್ನ ಸೇವಕರು. ನಿನ್ನ ವಾಕ್ಯವನ್ನು ಭಯವಿಲ್ಲದೆ ಹೇಳಲು ನೀನೇ ಸಹಾಯ ಮಾಡು. 30 ನಿನ್ನ ಕೈಚಾಚಿ ಯೇಸುವಿನ ಹೆಸರಿನ ಮೂಲಕ ರೋಗಿಗಳನ್ನು ಗುಣಪಡಿಸು; ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡು” ಎಂದು ಅವರು ಪ್ರಾರ್ಥಿಸಿದರು.

31 ಹೀಗೆ ವಿಶ್ವಾಸಿಗಳು ಪ್ರಾರ್ಥಿಸುತ್ತಿದ್ದಾಗ, ಅವರು ಸಭೆ ಸೇರಿದ್ದ ಸ್ಥಳವು ನಡುಗಿತು. ಅವರೆಲ್ಲರೂ ಪವಿತ್ರಾತ್ಮಭರಿತರಾದರು ಮತ್ತು ದೇವರ ವಾಕ್ಯವನ್ನು ಭಯವಿಲ್ಲದೆ ಪ್ರಕಟಿಸಿದರು.

ವಿಶ್ವಾಸಿಗಳ ಅನ್ಯೋನ್ಯ ಜೀವನ

32 ವಿಶ್ವಾಸಿಗಳ ಹೃದಯವೂ ಪ್ರಾಣವೂ ಒಂದೇ ಆಗಿತ್ತು. ಸಮುದಾಯದಲ್ಲಿದ್ದ ಯಾವನಾಗಲಿ ತನ್ನಲ್ಲಿರುವವುಗಳನ್ನು ತನ್ನದೆಂದು ಹೇಳುತ್ತಿರಲಿಲ್ಲ. ಬದಲಾಗಿ, ಅವರು ಪ್ರತಿಯೊಂದನ್ನು ಹಂಚಿಕೊಳ್ಳುತ್ತಿದ್ದರು. 33 ಪ್ರಭುವಾದ ಯೇಸು ನಿಜವಾಗಿಯೂ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದನೆಂದು ಅಪೊಸ್ತಲರು ಬಹುಬಲವಾಗಿ ಜನರಿಗೆ ಹೇಳುತ್ತಿದ್ದರು. ದೇವರು ವಿಶ್ವಾಸಿಗಳೆಲ್ಲರನ್ನು ಬಹಳವಾಗಿ ಆಶೀರ್ವದಿಸಿದನು. 34 ಅವರೆಲ್ಲರ ಅವಶ್ಯಕತೆಗಳನ್ನು ಪೂರೈಸಲಾಗುತ್ತಿತ್ತು. ಜಮೀನುಗಳನ್ನು ಮತ್ತು ಮನೆಗಳನ್ನು ಹೊಂದಿದ್ದ ಪ್ರತಿಯೊಬ್ಬರು ಅವುಗಳನ್ನು ಮಾರಿ, 35 ಬಂದ ಹಣವನ್ನು ಅಪೊಸ್ತಲರ ಪಾದಗಳ ಬಳಿ ಇಡುತ್ತಿದ್ದರು. ಬಳಿಕ ಅದನ್ನು ಪ್ರತಿಯೊಬ್ಬರಿಗೂ ಅವರವರ ಅಗತ್ಯತೆಗಳಿಗನುಸಾರವಾಗಿ ಹಂಚಲಾಗುತ್ತಿತ್ತು.

36 ಆ ವಿಶ್ವಾಸಿಗಳಲ್ಲಿ ಯೋಸೇಫ ಎಂಬವನೂ ಇದ್ದನು. ಅಪೊಸ್ತಲರು ಅವನನ್ನು ಬಾರ್ನಬ ಎಂದು ಕರೆಯುತ್ತಿದ್ದರು. (ಬಾರ್ನಬ ಅಂದರೆ “ಧೈರ್ಯದಾಯಕ.”) ಸೈಪ್ರಸ್‌ನಲ್ಲಿ ಹುಟ್ಟಿದ ಇವನು ಲೇವಿಯನಾಗಿದ್ದನು.[a] 37 ಯೋಸೇಫನಿಗೆ ಒಂದು ಹೊಲವಿತ್ತು. ಅವನು ಅದನ್ನು ಮಾರಿ ಬಂದ ಹಣವನ್ನು ಅಪೊಸ್ತಲರ ಪಾದಗಳ ಬಳಿ ಇಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International