M’Cheyne Bible Reading Plan
ಏಳನೆ ದಿನ—ವಿಶ್ರಾಂತಿ
2 ಹೀಗೆ ಭೂಮಿಯೂ ಆಕಾಶವೂ ಅವುಗಳಲ್ಲಿರುವ ಪ್ರತಿಯೊಂದೂ ನಿರ್ಮಿತವಾದವು. 2 ದೇವರು ತನ್ನ ಸೃಷ್ಟಿಕಾರ್ಯವನ್ನು ಮುಕ್ತಾಯಗೊಳಿಸಿ ಏಳನೆ ದಿನದಲ್ಲಿ ವಿಶ್ರಮಿಸಿಕೊಂಡನು. 3 ದೇವರು ತನ್ನ ಸೃಷ್ಟಿಕಾರ್ಯಗಳನ್ನೆಲ್ಲಾ ಮುಗಿಸಿ ಏಳನೆ ದಿನದಲ್ಲಿ ವಿಶ್ರಮಿಸಿಕೊಂಡದ್ದರಿಂದ ಆ ದಿನವು “ಪರಿಶುದ್ಧ ದಿನವಾಗಿರಲಿ” ಎಂದು ಆಶೀರ್ವದಿಸಿದನು.
ಮಾನವನ ಪ್ರಾರಂಭ
4 ಇದು ಆಕಾಶದ ಮತ್ತು ಭೂಮಿಯ ಚರಿತ್ರೆ. ದೇವರು ಭೂಮಿಯನ್ನು ಮತ್ತು ಆಕಾಶವನ್ನು ಸೃಷ್ಟಿಸಿದಾಗ ನಡೆದ ಸಂಗತಿಗಳೇ ಈ ಚರಿತ್ರೆ. 5 ಆಗ ಭೂಮಿಯ ಮೇಲೆ ಯಾವ ಮರಗಿಡಗಳೂ ಇರಲಿಲ್ಲ. ಭೂಮಿಯ ಮೇಲೆ ಯಾವ ಸಸಿಯೂ ಬೆಳೆಯುತ್ತಿರಲಿಲ್ಲ; ಯಾಕೆಂದರೆ ಯೆಹೋವನು ಭೂಮಿಯ ಮೇಲೆ ಇನ್ನೂ ಮಳೆಯನ್ನು ಸುರಿಸಿರಲಿಲ್ಲ; ಭೂಮಿಯನ್ನು ವ್ಯವಸಾಯ ಮಾಡಲು ಯಾರೂ ಇರಲಿಲ್ಲ.
6 ಭೂಮಿಯಿಂದ ನೀರು[a] ಚಿಮ್ಮಿಬಂದು ನೆಲವನ್ನೆಲ್ಲಾ ತೋಯಿಸುತ್ತಿತ್ತು. 7 ಹೀಗಿರಲು ದೇವರಾದ ಯೆಹೋವನು ನೆಲದಿಂದ ಮಣ್ಣನ್ನು ತೆಗೆದುಕೊಂಡು ಮನುಷ್ಯನನ್ನು ರೂಪಿಸಿ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು. ಆಗ ಮನುಷ್ಯನು ಸಜೀವಿಯಾದನು. 8 ದೇವರಾದ ಯೆಹೋವನು ಪೂರ್ವ ದಿಕ್ಕಿನಲ್ಲಿದ್ದ ಏದೆನ್ ಸೀಮೆಯಲ್ಲಿ ಒಂದು ತೋಟವನ್ನು ಮಾಡಿ ತಾನು ಸೃಷ್ಟಿಸಿದ ಮನುಷ್ಯನನ್ನು ಆ ತೋಟದಲ್ಲಿರಿಸಿದನು. 9 ದೇವರಾದ ಯೆಹೋವನು ಆ ತೋಟದಲ್ಲಿ ಸುಂದರವಾದ ಪ್ರತಿಯೊಂದು ಮರವನ್ನು ಮತ್ತು ಊಟಕ್ಕೆ ಬೇಕಾದ ಒಳ್ಳೆಯ ಹಣ್ಣುಗಳನ್ನು ಬಿಡುವ ಪ್ರತಿಯೊಂದು ಮರವನ್ನು ಬೆಳೆಸಿದನು. ಇದಲ್ಲದೆ ತೋಟದ ಮಧ್ಯಭಾಗದಲ್ಲಿ ಜೀವದಾಯಕ ಮರವನ್ನೂ ಅಲ್ಲದೆ ಒಳ್ಳೆಯದರ ಮತ್ತು ಕೆಟ್ಟದ್ದರ ಬಗ್ಗೆ ಜ್ಞಾನ ಕೊಡುವ ಮರವನ್ನೂ ಬೆಳೆಸಿದನು.
10 ಏದೆನಿನಿಂದ ಹರಿದುಬರುತ್ತಿದ್ದ ನದಿಯು ತೋಟಕ್ಕೆ ಬೇಕಾದ ನೀರನ್ನು ಒದಗಿಸುತ್ತಿತ್ತು. ಬಳಿಕ ಅದೇ ನದಿಯು ಶಾಖೆಗಳಾಗಿ ಒಡೆದು ನಾಲ್ಕು ಉಪನದಿಗಳಾಯಿತು. 11 ಮೊದಲನೆ ನದಿಯ ಹೆಸರು ಪೀಶೋನ್. ಹವೀಲ ದೇಶದಲ್ಲೆಲ್ಲಾ ಹರಿಯುತ್ತಿದ್ದ ನದಿ ಇದೇ. 12 ಈ ದೇಶದಲ್ಲಿ ಒಳ್ಳೆಯ ಬಂಗಾರ ದೊರೆಯುತ್ತಿತ್ತು. ಅಲ್ಲದೆ ಗುಗ್ಗುಲ ಮತ್ತು ಗೋಮೇಧಿಕ ರತ್ನ ಸಹ ದೊರಕುತ್ತಿದ್ದವು. 13 ಎರಡನೆ ನದಿಯ ಹೆಸರು ಗೀಹೋನ್. ಇಥಿಯೋಪಿಯ ದೇಶದಲ್ಲೆಲ್ಲಾ ಹರಿಯುತ್ತಿದ್ದ ನದಿ ಇದೇ. 14 ಮೂರನೆ ನದಿಯ ಹೆಸರು ಟೈಗ್ರಿಸ್. ದಕ್ಷಿಣ ಅಸ್ಸೀರಿಯ ದೇಶದಲ್ಲಿ ಹರಿಯುತ್ತಿದ್ದ ನದಿ ಇದೇ. ನಾಲ್ಕನೆ ನದಿಯ ಹೆಸರು ಯೂಫ್ರೇಟೀಸ್.
15 ದೇವರಾದ ಯೆಹೋವನು ಆ ಮನುಷ್ಯನನ್ನು ಏದೆನ್ ತೋಟಕ್ಕೆ ಕರೆದೊಯ್ದು ವ್ಯವಸಾಯ ಮಾಡುವುದಕ್ಕಾಗಿಯೂ ಅದನ್ನು ನೋಡಿಕೊಳ್ಳುವುದಕ್ಕೂ ಅದರಲ್ಲಿರಿಸಿದನು. 16 ದೇವರಾದ ಯೆಹೋವನು ಆ ಮನುಷ್ಯನಿಗೆ, “ತೋಟದಲ್ಲಿರುವ ಯಾವ ಮರದ ಹಣ್ಣನ್ನು ಬೇಕಾದರೂ ನೀನು ತಿನ್ನಬಹುದು. 17 ಆದರೆ ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ಜ್ಞಾನ ಕೊಡುವ ಮರದ ಹಣ್ಣನ್ನು ಮಾತ್ರ ನೀನು ತಿನ್ನಕೂಡದು. ಒಂದುವೇಳೆ ಆ ಮರದ ಹಣ್ಣನ್ನು ತಿಂದರೆ ನೀನು ಸಾಯುವೆ!” ಎಂದು ಆಜ್ಞಾಪಿಸಿದನು.
ಮೊದಲನೆ ಸ್ತ್ರೀ
18 ಬಳಿಕ ದೇವರಾದ ಯೆಹೋವನು, “ಮನುಷ್ಯನು ಒಬ್ಬಂಟಿಗನಾಗಿರುವುದು ಒಳ್ಳೆಯದಲ್ಲವೆಂದು ನನಗೆ ತೋರುತ್ತದೆ. ಅವನಿಗೆ ಸರಿಹೊಂದುವ ಸಹಕಾರಿಣಿಯನ್ನು ಉಂಟುಮಾಡುವೆನು” ಎಂದುಕೊಂಡನು.
19 ದೇವರಾದ ಯೆಹೋವನು ನೆಲದ ಮಣ್ಣಿನಿಂದ ಭೂಮಿಯ ಮೇಲಿರುವ ಪ್ರತಿಯೊಂದು ಪಶುವನ್ನೂ ಆಕಾಶದಲ್ಲಿರುವ ಪ್ರತಿಯೊಂದು ಪಕ್ಷಿಯನ್ನೂ ನಿರ್ಮಿಸಿ ಮನುಷ್ಯನ ಬಳಿಗೆ ಬರಮಾಡಿದನು. ಅವುಗಳಿಗೆಲ್ಲಾ ಮನುಷ್ಯನು ಹೆಸರಿಟ್ಟನು. 20 ಭೂಮಿಯ ಮೇಲಿನ ಎಲ್ಲಾ ಪಶುಗಳಿಗೂ ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೂ ಮತ್ತು ಕಾಡಿನಲ್ಲಿರುವ ಎಲ್ಲಾ ಕ್ರೂರಪ್ರಾಣಿಗಳಿಗೂ ಮನುಷ್ಯನು ಹೆಸರಿಟ್ಟನು. ಮನುಷ್ಯನು ಅನೇಕಾನೇಕ ಪ್ರಾಣಿಗಳನ್ನು ಮತ್ತು ಪಕ್ಷಿಗಳನ್ನು ನೋಡಿದನು. ಆದರೆ ಅವುಗಳಲ್ಲಿ ತನಗೆ ಸರಿಹೊಂದುವ ಸಹಕಾರಿಣಿಯನ್ನು ಅವನು ಕಾಣಲಿಲ್ಲ. 21 ಆದ್ದರಿಂದ ದೇವರಾದ ಯೆಹೋವನು ಮನುಷ್ಯನಿಗೆ ಗಾಢವಾದ ನಿದ್ರೆಯನ್ನು ಬರಮಾಡಿ ಅವನ ದೇಹದ ಪಕ್ಕೆಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಆ ಪಕ್ಕೆಲುಬಿನ ಸ್ಥಳವನ್ನು ಮಾಂಸದಿಂದ ಮುಚ್ಚಿದನು. 22 ಆತನು ಮನುಷ್ಯನ ಪಕ್ಕೆಲುಬಿನಿಂದ ಸ್ತ್ರೀಯನ್ನು ಸೃಷ್ಟಿಸಿ ಆಕೆಯನ್ನು ಮನುಷ್ಯನ ಬಳಿಗೆ ಕರೆದುಕೊಂಡು ಬಂದನು. 23 ಆಗ ಅವನು ಆಕೆಯನ್ನು ನೋಡಿ,
“ಈಗ ಸರಿ, ಈಕೆ ನನ್ನಂತೆಯೇ ಇದ್ದಾಳೆ.
ಈಕೆಯ ಎಲುಬುಗಳು ನನ್ನ ಎಲುಬುಗಳಿಂದ ಬಂದಿವೆ.
ಈಕೆಯ ದೇಹವು ನನ್ನ ದೇಹದಿಂದ ಬಂದಿದೆ.
ಈಕೆ ಮನುಷ್ಯನಿಂದ ಉತ್ಪತ್ತಿಯಾದವಳು.
ಆದ್ದರಿಂದ ಈಕೆಗೆ ನಾನು ‘ಸ್ತ್ರೀ’ ಎಂದು ಹೆಸರಿಡುವೆ” ಎಂದನು.
24 ಆದ್ದರಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರೂ ಒಂದೇ ಶರೀರವಾಗುವರು.
25 ಆ ಪುರುಷನು ಮತ್ತು ಅವನ ಹೆಂಡತಿ ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ.
ಯೇಸುವನ್ನು ಸಂಧಿಸಲು ಜ್ಞಾನಿಗಳ ಆಗಮನ
2 ಹೆರೋದನು ರಾಜನಾಗಿದ್ದ ಕಾಲದಲ್ಲಿ ಯೇಸು ಜುದೇಯದ ಬೆತ್ಲೆಹೇಮ್ ಎಂಬ ಊರಲ್ಲಿ ಹುಟ್ಟಿದನು. ಯೇಸು ಹುಟ್ಟಿದ ಮೇಲೆ, ಪೂರ್ವದೇಶದ ಕೆಲವು ಜ್ಞಾನಿಗಳು ಜೆರುಸಲೇಮಿಗೆ ಬಂದರು. 2 ಆ ಜ್ಞಾನಿಗಳು ಜನರಿಗೆ, “ಯೆಹೂದ್ಯರ ರಾಜನು ಹುಟ್ಟಿದ್ದಾನಲ್ಲವೇ? ಆತನೆಲ್ಲಿ? ಆತನು ಹುಟ್ಟಿದನೆಂದು ಸೂಚಿಸುವ ನಕ್ಷತ್ರ ಪೂರ್ವದಲ್ಲಿ ಉದಯಿಸಿದ್ದನ್ನು ಕಂಡು ಆತನನ್ನು ಆರಾಧಿಸಲು ಬಂದೆವು” ಅಂದರು.
3 ಯೆಹೂದ್ಯರ ಈ ಹೊಸ ರಾಜನ ವಿಷಯ ತಿಳಿದಾಗ ಹೆರೋದನು ಮತ್ತು ಜೆರುಸಲೇಮಿನ ಜನರೆಲ್ಲರೂ ಗಲಿಬಿಲಿಗೊಂಡರು. 4 ಕೂಡಲೇ, ಹೆರೋದನು ಎಲ್ಲಾ ಮಹಾಯಾಜಕರನ್ನೂ ಧರ್ಮೋಪದೇಶಕರನ್ನೂ ಸಭೆ ಸೇರಿಸಿ, “ಕ್ರಿಸ್ತನು ಹುಟ್ಟಬೇಕಾಗಿದ್ದ ಸ್ಥಳ ಯಾವುದು?” ಎಂದು ಕೇಳಿದನು. 5 ಅವರು, “ಜುದೇಯದ ಬೆತ್ಲೆಹೇಮ್ ಎಂಬ ಊರಲ್ಲಿ ಹುಟ್ಟುವನು. ಏಕೆಂದರೆ ಪ್ರವಾದಿಯು ಪವಿತ್ರ ಗ್ರಂಥದಲ್ಲಿ ಹೀಗೆಂದು ಬರೆದಿದ್ದಾನೆ:
6 ‘ಯೆಹೂದ ಪ್ರಾಂತ್ಯದಲ್ಲಿರುವ ಬೆತ್ಲೆಹೇಮೇ,
ಯೆಹೂದವನ್ನು ಆಳುವವರಲ್ಲಿ ನೀನು ಪ್ರಾಮುಖ್ಯವಾಗಿರುವೆ.
ಹೌದು, ಅಧಿಪತಿಯೊಬ್ಬನು ನಿನ್ನೊಳಗಿಂದ ಬರುವನು.
ನನ್ನ ಜನರಾದ ಇಸ್ರೇಲರನ್ನು ಆತನೇ ಮುನ್ನಡೆಸುವನು’” ಎಂದು ಉತ್ತರಕೊಟ್ಟರು.’(A)”
7 ಆಗ ಹೆರೋದನು ಪೂರ್ವ ದೇಶದ ಜ್ಞಾನಿಗಳನ್ನು ರಹಸ್ಯವಾಗಿ ಕರೆಯಿಸಿ, ಅವರು ಆ ನಕ್ಷತ್ರವನ್ನು ಕಂಡ ಸರಿಯಾದ ಸಮಯವನ್ನು ಅವರಿಂದ ತಿಳಿದುಕೊಂಡನು. 8 ಹೆರೋದನು ಆ ಜ್ಞಾನಿಗಳಿಗೆ, “ನೀವು ಹೋಗಿ ಚೆನ್ನಾಗಿ ವಿಚಾರಣೆ ಮಾಡಿ ಆ ಮಗು ಎಲ್ಲಿದೆ ಎಂಬುದನ್ನು ತಿಳಿದುಕೊಂಡು ನಂತರ ಬಂದು ನನಗೆ ತಿಳಿಸಿರಿ. ಆಗ ನಾನೂ ಹೋಗಿ ಆತನನ್ನು ಆರಾಧಿಸುವೆನು” ಎಂದು ಹೇಳಿ ಅವರನ್ನು ಬೆತ್ಲೆಹೇಮಿಗೆ ಕಳುಹಿಸಿಕೊಟ್ಟನು.
9 ಆ ಜ್ಞಾನಿಗಳು ಅರಸನ ಮಾತನ್ನು ಕೇಳಿ ಅಲ್ಲಿಂದ ಹೊರಟಾಗ, ಪೂರ್ವ ದಿಕ್ಕಿನಲ್ಲಿ ಉದಯಿಸಿದ ನಕ್ಷತ್ರವನ್ನು ಮತ್ತೆ ಕಂಡರು. ಅವರು ಆ ನಕ್ಷತ್ರವನ್ನೇ ಹಿಂಬಾಲಿಸಿದರು. ಆ ನಕ್ಷತ್ರ ಅವರ ಮುಂದೆ ಚಲಿಸುತ್ತಾ ಹೋಗಿ ಮಗುವಿದ್ದ ಸ್ಥಳದ ಮೇಲೆ ನಿಂತುಕೊಂಡಿತು. 10 ಅವರು ಆ ನಕ್ಷತ್ರವನ್ನು ನೋಡಿ ಅತ್ಯಂತ ಸಂತೋಷಪಟ್ಟರು.
11 ಅವರು ಆ ಮನೆಗೆ ಬಂದಾಗ, ಮಗುವನ್ನು ತಾಯಿ ಮರಿಯಳ ಬಳಿ ಕಂಡು, ಅದಕ್ಕೆ ಸಾಷ್ಟಾಂಗವೆರಗಿ ಆರಾಧಿಸಿದರು. ಅಲ್ಲದೆ ತಾವು ಮಗುವಿಗಾಗಿ ತಂದಿದ್ದ ಕಾಣಿಕೆಗಳನ್ನು ತೆರೆದು ಚಿನ್ನ, ಧೂಪ ಮತ್ತು ಸುಗಂಧ ದ್ರವ್ಯಗಳನ್ನು ನೀಡಿದರು. 12 ಆದರೆ ದೇವರು ಜ್ಞಾನಿಗಳಿಗೆ ಕನಸಿನಲ್ಲಿ, “ನೀವು ಹೆರೋದನ ಬಳಿಗೆ ಹಿಂತಿರುಗಿ ಹೋಗಕೂಡದು” ಎಂದು ಎಚ್ಚರಿಸಿದನು. ಆದ್ದರಿಂದ ಅವರು ಬೇರೊಂದು ಮಾರ್ಗದ ಮೂಲಕ ತಮ್ಮ ದೇಶಕ್ಕೆ ಹೊರಟುಹೋದರು.
ಯೇಸುವಿನೊಡನೆ ಈಜಿಪ್ಟಿಗೆ ಪಲಾಯನ
13 ಜ್ಞಾನಿಗಳು ಹೊರಟುಹೋದ ನಂತರ ಪ್ರಭುವಿನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ಎದ್ದೇಳು! ಮಗುವನ್ನು ಮತ್ತು ಅದರ ತಾಯಿಯನ್ನು ಕರೆದುಕೊಂಡು ಈಜಿಪ್ಟಿಗೆ ಓಡಿಹೋಗು. ಹೆರೋದನು ಮಗುವನ್ನು ಹುಡುಕಲು ಪ್ರಾರಂಭಿಸುವನು. ಅವನು ಮಗುವನ್ನು ಕೊಲ್ಲಬೇಕೆಂದಿದ್ದಾನೆ. ‘ಅಪಾಯವಿಲ್ಲ’ ಎಂದು ನಾನು ನಿನಗೆ ಹೇಳುವ ತನಕ ನೀನು ಈಜಿಪ್ಟಿನಲ್ಲೇ ಇರು” ಎಂದು ಹೇಳಿದನು.
14 ಕೂಡಲೇ, ಯೋಸೇಫನು ಎದ್ದು ಮಗು ಮತ್ತು ಅದರ ತಾಯಿಯೊಂದಿಗೆ ಈಜಿಪ್ಟಿಗೆ ರಾತ್ರಿ ಸಮಯದಲ್ಲಿ ಹೊರಟುಹೋದನು. 15 ಹೆರೋದನು ಸಾಯುವ ತನಕ ಯೋಸೇಫನು ಈಜಿಪ್ಟಿನಲ್ಲೇ ಇದ್ದನು. “ನಾನು ನನ್ನ ಮಗನನ್ನು ಈಜಿಪ್ಟಿನೊಳಗಿಂದ ಕರೆದೆ”(B) ಎಂದು ಪ್ರವಾದಿಯ ಮೂಲಕ ಪ್ರಭು ಹೇಳಿದ್ದ ಮಾತು ಇದರಿಂದ ನೆರವೇರಿತು.
ಬೆತ್ಲೆಹೇಮಿನಲ್ಲಿ ಗಂಡುಮಕ್ಕಳ ಸಂಹಾರ
16 ಜ್ಞಾನಿಗಳು ತನಗೆ ಮೋಸಮಾಡಿದರೆಂಬುದು ತಿಳಿದಾಗ ಹೆರೋದನು ಬಹಳ ಕೋಪಗೊಂಡನು. ಆ ಮಗು ಹುಟ್ಟಿದ ಸಮಯವನ್ನು ಹೆರೋದನು ಜ್ಞಾನಿಗಳಿಂದ ತಿಳಿದುಕೊಂಡಿದ್ದನು. ಆ ಮಗು ಹುಟ್ಟಿ ಎರಡು ವರ್ಷಗಳಾಗಿದ್ದವು. ಆದ್ದರಿಂದ ಹೆರೋದನು ಬೆತ್ಲೆಹೇಮಿನಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದ ಎರಡು ವರ್ಷದ ಮತ್ತು ಅವರಿಗಿಂತ ಚಿಕ್ಕವರಾದ ಗಂಡುಮಕ್ಕಳನ್ನೆಲ್ಲಾ ಕೊಲ್ಲಬೇಕೆಂದು ಆಜ್ಞಾಪಿಸಿದನು. 17 ಹೀಗೆ ದೇವರು ತನ್ನ ಪ್ರವಾದಿಯಾದ ಯೆರೆಮೀಯನ ಮೂಲಕ ಹೇಳಿದ ಈ ಮಾತು ನೆರವೇರಿತು:
18 “ರಾಮದಲ್ಲಿ ಬೊಬ್ಬೆಯು ಕೇಳಿಸಿತು.
ಅದು ಬಹು ಗೋಳಾಟದ ಮತ್ತು ದುಃಖದ ಬೊಬ್ಬೆಯಾಗಿತ್ತು.
ರಾಹೇಲಳು ತನ್ನ ಮಕ್ಕಳಿಗಾಗಿ ಅಳುವಳು;
ಅವರು ಸತ್ತುಹೋದದ್ದಕ್ಕಾಗಿ ಸಮಾಧಾನ ಹೊಂದಲೊಲ್ಲಳು.”(C)
ಯೋಸೇಫ ಮರಿಯಳ ಮರುಪ್ರಯಾಣ
19 ಹೆರೋದನು ಸತ್ತನಂತರ, ಪ್ರಭುವಿನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡನು. ಯೋಸೇಫನು ಈಜಿಪ್ಟಿನಲ್ಲಿ ಇರುವಾಗಲೇ ಇದು ಸಂಭವಿಸಿತು. 20 ದೇವದೂತನು ಅವನಿಗೆ, “ಎದ್ದೇಳು! ಮಗುವನ್ನು ಮತ್ತು ಅದರ ತಾಯಿಯನ್ನು ಕರೆದುಕೊಂಡು ಇಸ್ರೇಲಿಗೆ ಹೋಗು. ಮಗುವನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದವರು ಸತ್ತುಹೋದರು” ಎಂದು ಹೇಳಿದನು.
21 ಆದ್ದರಿಂದ ಯೋಸೇಫನು ಮಗುವನ್ನು ಮತ್ತು ಮಗುವಿನ ತಾಯಿಯನ್ನು ಕರೆದುಕೊಂಡು ಇಸ್ರೇಲಿಗೆ ಹೋದನು. 22 ಆದರೆ ಹೆರೋದನು ಸತ್ತನಂತರ ಅವನ ಮಗನಾದ ಅರ್ಖೆಲಾಯನು ಜುದೇಯದ ರಾಜನಾಗಿದ್ದಾನೆ ಎಂಬುದನ್ನು ಕೇಳಿ ಅಲ್ಲಿಗೆ ಹೋಗಲು ಭಯಪಟ್ಟನು. ಕನಸಿನಲ್ಲಿ ತನಗೆ ಕೊಟ್ಟ ಎಚ್ಚರಿಕೆಯಂತೆ ಅವನು ಆ ಸ್ಥಳವನ್ನು ಬಿಟ್ಟು ಗಲಿಲಾಯ ಪ್ರದೇಶಕ್ಕೆ ಹೋಗಿ, 23 ನಜರೇತ್ ಎಂಬ ಊರಲ್ಲಿ ವಾಸಿಸಿದನು. “ಕ್ರಿಸ್ತನನ್ನು ‘ನಜರೇತಿನವನು’ ಎಂದು ಕರೆಯುತ್ತಾರೆ” ಎಂದು ದೇವರು ಪ್ರವಾದಿಗಳ ಮೂಲಕ ಹೇಳಿದ್ದು ಹೀಗೆ ನೆರವೇರಿತು.
ಹಿಂತಿರುಗಿಹೋದ ಸೆರೆಯವರು
2 ಸೆರೆಯಿಂದ ಮರಳಿಬಂದ ಸಂಸ್ಥಾನದವರ ವಿವರ, ಬಹಳ ವರ್ಷಗಳ ಹಿಂದೆ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಇವರನ್ನು ಸೆರೆಹಿಡಿದು ಬಾಬಿಲೋನಿಗೆ ಒಯ್ದಿದ್ದನು. ಇವರು ಜೆರುಸಲೇಮಿಗೆ ಹಿಂತಿರುಗಿ ಬಂದು ಎಲ್ಲರೂ ತಮ್ಮತಮ್ಮ ಸ್ವಂತ ಊರುಗಳಿಗೆ ಹೊರಟು ಹೋದರು. 2 ಜೆರುಬ್ಬಾಬೆಲನೊಂದಿಗೆ ಹಿಂತಿರುಗಿದವರು ಯಾರೆಂದರೆ: ಯೇಷೂವ, ನೆಹೆಮೀಯ, ಸೆರಾಯ, ರೆಗೇಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್ ಮತ್ತು ಬಾಣ. ಇಸ್ರೇಲರಲ್ಲಿ ಹಿಂತಿರುಗಿ ಬಂದವರ ಹೆಸರು ಮತ್ತು ಸಂಖ್ಯೆ:
3 ಪರೋಷಿನ ಸಂತತಿಯವರು | 2,172 |
4 ಶೆಫಟ್ಯನ ಸಂತತಿಯವರು | 372 |
5 ಅರಹನ ಸಂತತಿಯವರು | 775 |
6 ಯೇಷೂವ ಮತ್ತು ಯೋವಾಬನ ಕುಟುಂಬದ ಪಹತ್ ಮೋವಾಬಿನ ಸಂತತಿಯವರು | 2,812 |
7 ಏಲಾಮಿನ ಸಂತತಿಯವರು | 1,254 |
8 ಜತ್ತೂವಿನ ಸಂತತಿಯವರು | 945 |
9 ಜಕ್ಕೈಯ ಸಂತತಿಯವರು | 760 |
10 ಬಾನೀಯ ಸಂತತಿಯವರು | 642 |
11 ಬೇಬೈಯ ಸಂತತಿಯವರು | 623 |
12 ಅಜ್ಗಾದಿನ ಸಂತತಿಯವರು | 1,222 |
13 ಅದೋನೀಕಾಮನ ಸಂತತಿಯವರು | 666 |
14 ಬಿಗ್ವೈಯ ಸಂತತಿಯವರು | 2,056 |
15 ಆದೀನನ ಸಂತತಿಯವರು | 454 |
16 ಆಟೇರಿನವರಾದ ಹಿಜ್ಕೀಯನ ಸಂತತಿಯವರು | 98 |
17 ಬೇಚೈಯ ಸಂತತಿಯವರು | 323 |
18 ಯೋರನ ಸಂತತಿಯವರು | 112 |
19 ಹಾಷುಮಿನ ಸಂತತಿಯವರು | 223 |
20 ಗಿಬ್ಬಾರಿನ ಸಂತತಿಯವರು | 95 |
21 ಬೆತ್ಲೆಹೇಮಿನ ಊರಿನವರು | 123 |
22 ನೆಟೋಫ ಊರಿನವರು | 56 |
23 ಅನಾತೋತ್ ಊರಿನವರು | 128 |
24 ಅಜ್ಮಾವೆತ್ ಊರಿನವರು | 42 |
25 ಕಿರ್ಯತ್ಯಾರೀಮ್, ಕೆಫೀರ ಮತ್ತು ಬೇರೋತ್ ಊರುಗಳವರು | 743 |
26 ರಾಮಾ ಮತ್ತು ಗೆಬ ಊರುಗಳವರು | 621 |
27 ಮಿಕ್ಮಾಸಿನವರು | 122 |
28 ಬೇತೇಲ್ ಮತ್ತು ಆಯಿ ಎಂಬ ಊರುಗಳವರು | 223 |
29 ನೆಬೋ ಊರಿನವರು | 52 |
30 ಮಗ್ಬೀಷ್ ಊರಿನವರು | 156 |
31 ಏಲಾಮ್ ಎಂಬ ಮತ್ತೊಂದು ಊರಿನವರು | 1,254 |
32 ಹಾರಿಮ್ ಊರಿನವರು | 320 |
33 ಲೋದ್, ಹಾದೀದ್, ಓನೋ ಊರುಗಳವರು | 725 |
34 ಜೆರಿಕೊ ಊರಿನವರು | 345 |
35 ಸೆನಾಹ ಊರಿನವರು | 3,630 |
36 ಯಾಜಕರು ಯಾರೆಂದರೆ:
ಯೇಷೂವನ ಕುಟುಂಬಕ್ಕೆ ಸೇರಿದ ಯೆದಾಯನ ಸಂತತಿಯವರು | 973 |
37 ಇಮ್ಮೇರನ ಸಂತತಿಯವರು | 1,052 |
38 ಪಷ್ಹೂರನ ಸಂತತಿಯವರು | 1,247 |
39 ಹಾರಿಮನ ಸಂತತಿಯವರು | 1,017 |
40 ಲೇವಿ ಕುಲದವರು ಯಾರೆಂದರೆ:
ಹೋದವ್ಯನ ಕುಟುಂಬಕ್ಕೆ ಸೇರಿದ ಯೇಷೂವ ಮತ್ತು ಕದ್ಮೀಯೇಲರ ಸಂತತಿಯವರು | 74 |
41 ಗಾಯಕರು ಯಾರೆಂದರೆ:
ಆಸಾಫನ ಸಂತತಿಯವರು | 128 |
42 ದ್ವಾರಪಾಲಕರು ಯಾರೆಂದರೆ:
ಶಲ್ಲೂಮ್, ಅಟೇರ್, ಟಲ್ಮೋನ್, ಅಕ್ಕೂಬ್, ಹಟೀಟ್ ಮತ್ತು ಶೋಬೈ. ಇವರ ಸಂತತಿಯರು ಒಟ್ಟು | 139 |
43 ದೇವಾಲಯದ ವಿಶೇಷ ಸೇವಕರು ಯಾರೆಂದರೆ:
ಜೀಹ, ಹಸೂಫ, ಟಬ್ಬಾವೋತ್,
44 ಕೇರೋಸ್, ಸೀಯಹಾ, ಪಾದೋನ್,
45 ಲೆಬಾನ, ಹಗಾಬ, ಅಕ್ಕೂಬ್,
46 ಹಾಗಾಬ್, ಶೆಮ್ಲೈ, ಹಾನಾನ್,
47 ಗಿದ್ದೇಲ್, ಗಹರ್, ರೆವಾಯ,
48 ರೆಚೀನ್, ನೆಕೋದ, ಗಜ್ಜಾಮ್,
49 ಉಜ್ಜ, ಪಾಸೇಹ, ಬೇಸೈ,
50 ಅಸ್ನ, ಮೆಗೂನೀಮ್, ನೆಫೀಸೀಮ್,
51 ಬಕ್ಬೂಕ್, ಹಕ್ಕೂಫ, ಹರ್ಹೂರ್,
52 ಬಚ್ಲೂತ್, ಮೆಹೀದ, ಹರ್ಷ,
53 ಬರ್ಕೋಸ್, ಸೀಸೆರ, ತೆಮಹ,
54 ನೆಚೀಹ, ಹಟೀಫ ಇವರ ಸಂತತಿಯವರು.
55 ಸೊಲೊಮೋನನ ಸೇವಕರ ಸಂತತಿಯವರು:
ಸೋಟೈ, ಹಸ್ಸೋಫೆರೆತ್, ಪೆರೂಧ,
56 ಯಾಲ, ದರ್ಕೋನ್, ಗಿದ್ದೇಲ್,
57 ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್, ಆಮೀ ಇವರ ಸಂತತಿಯವರು.
58 ದೇವಾಲಯದ ಎಲ್ಲಾ ಸೇವಕರೂ ಸೊಲೊಮೋನನ ಸೇವಕರೂ ಒಟ್ಟು ಸೇರಿ | 392 |
59-60 ತೇಲ್ಮೆಲಹ, ತೇಲ್ಹರ್ಷ, ಕೆರೂಬದ್ದಾನ್ ಮತ್ತು ಇಮ್ಮೇರ್ ಎಂಬ ಊರುಗಳಿಂದ ಕೆಲವರು ಬಂದರು. ಇವರ ಕುಟುಂಬಗಳು ಇಸ್ರೇಲ್ ಕುಟುಂಬಕ್ಕೆ ಸೇರಿದವುಗಳಾಗಿವೆ ಎಂದು ರುಜುವಾತುಪಡಿಸಲು ಇವರಿಗೆ ಸಾಧ್ಯವಾಗಲಿಲ್ಲ. ಅವರು ಯಾರೆಂದರೆ:
ದೆಲಾಯ, ಟೋಬೀಯ ಮತ್ತು ನೆಕೋದನ ಸಂತತಿಯವರು | 652 |
61 ಯಾಜಕರಾದ ಹಬಯ್ಯ, ಹಕ್ಕೋಜ್, ಬರ್ಜಿಲ್ಲೈ ಇವರ ಸಂತತಿಯವರು. (ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆ ಮಾಡಿಕೊಂಡು ಅವನ ಹೆಸರನ್ನೂ ಇಟ್ಟುಕೊಂಡಿದ್ದನು.)
62 ಇವರು ಹುಡುಕಿದರೂ ತಮ್ಮ ವಂಶಾವಳಿ ಪತ್ರವನ್ನು ಕಂಡುಕೊಳ್ಳಲಾಗಲಿಲ್ಲ. ಆದ್ದರಿಂದ ಇವರು ಅಶುದ್ಧರೆಂದು ಪರಿಗಣಿಸಲ್ಪಟ್ಟು ಯಾಜಕತ್ವದಿಂದ ತಳ್ಳಲ್ಪಟ್ಟರು. 63 ಊರೀಮ್ ತುಮ್ಮೀಮ್‌ಗಳ ಮೂಲಕ ದೇವರ ಚಿತ್ತವನ್ನು ತಿಳಿಯಲು ಶಕ್ತನಾದ ಯಾಜಕನು ದೊರಕುವ ತನಕ ಇವರು ದೇವರಿಗೆ ಅರ್ಪಿಸಿದ್ದ ಪರಿಶುದ್ಧ ಆಹಾರವನ್ನು ತಿನ್ನಬಾರದೆಂದು ದೇಶಾಧಿಪತಿಯು ಆಜ್ಞಾಪಿಸಿದನು.
64-65 ಹೀಗೆ ಒಟ್ಟು ನಲವತ್ತೆರಡು ಸಾವಿರದ ಮುನ್ನೂರ ಅರವತ್ತು ಮಂದಿ ತಮ್ಮ ಸ್ವದೇಶಕ್ಕೆ ಹಿಂದಿರುಗಿದರು. ಇವರಲ್ಲಿನ ಅವರ ಏಳು ಸಾವಿರದ ಮುನ್ನೂರ ಮೂವತ್ತೇಳು ಸೇವಕಸೇವಕಿಯರನ್ನು ಸೇರಿಸಲಿಲ್ಲ. ಇವರೊಂದಿಗೆ ಇನ್ನೂರು ಮಂದಿ ಗಾಯಕಗಾಯಕಿಯರೂ ಇದ್ದರು. 66-67 ಅವರ ಬಳಿಯಲ್ಲಿ ಏಳುನೂರ ಮೂವತ್ತಾರು ಕುದುರೆಗಳು, ಇನ್ನೂರ ನಲವತ್ತೈದು ಹೇಸರಕತ್ತೆಗಳು, ನಾನೂರ ಮೂವತ್ತೈದು ಒಂಟೆಗಳು ಮತ್ತು ಆರು ಸಾವಿರದ ಏಳುನೂರ ಇಪ್ಪತ್ತು ಕತ್ತೆಗಳೂ ಇದ್ದವು.
68 ಈ ಗುಂಪು ಜೆರುಸಲೇಮಿನಲ್ಲಿದ್ದ ದೇವಾಲಯದ ಬಳಿ ಬಂದಾಗ ಆ ದೇವಾಲಯವನ್ನು ಮತ್ತೆ ನಿರ್ಮಿಸಲು ಕುಟುಂಬದ ನಾಯಕರುಗಳು ತಮ್ಮತಮ್ಮ ಕಾಣಿಕೆಗಳನ್ನು ಕೊಟ್ಟರು. ಕೆಡವಲ್ಪಟ್ಟಿದ್ದ ದೇವಾಲಯದ ಸ್ಥಳದಲ್ಲಿಯೇ ಹೊಸ ದೇವಾಲಯವನ್ನು ಕಟ್ಟಲು ಪ್ರಾರಂಭಿಸುವರು. 69 ದೇವಾಲಯ ಕಟ್ಟಲು ಅವರು ತಮ್ಮಿಂದ ಸಾಧ್ಯವಾದಷ್ಟು ಕಾಣಿಕೆಗಳನ್ನು ಕೊಟ್ಟರು. ಒಟ್ಟು ಐನೂರು ಕಿಲೋಗ್ರಾಂ ಬಂಗಾರ, ಮೂರು ಸಾವಿರ ಕಿಲೋಗ್ರಾಂ ಬೆಳ್ಳಿ, ನೂರು ಯಾಜಕರು ಧರಿಸಬೇಕಾದ ಬಟ್ಟೆಗಳನ್ನು ದಾನ ಮಾಡಿದರು.
70 ಅವರಲ್ಲಿದ್ದ ಯಾಜಕರು, ಲೇವಿಯರು ಮತ್ತು ಇನ್ನಿತರರು ಜೆರುಸಲೇಮ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿದರು. ಇವರೊಳಗೆ ಗಾಯಕರೂ ದ್ವಾರಪಾಲಕರೂ ದೇವಾಲಯದ ಸೇವಕರೂ ಇದ್ದರು. ಉಳಿದ ಇಸ್ರೇಲ್ ಜನರು ತಮ್ಮತಮ್ಮ ಊರುಗಳಲ್ಲಿ ವಾಸಿಸಿದರು.
ಪವಿತ್ರಾತ್ಮನ ಆಗಮನ
2 ಪಂಚಾಶತ್ತಮ ಹಬ್ಬದ[a] ದಿನ ಬಂದಾಗ ಅವರೆಲ್ಲರು ಒಂದು ಸ್ಥಳದಲ್ಲಿ ಒಟ್ಟಾಗಿ ಸೇರಿದ್ದರು. 2 ಆಗ, ಆಕಾಶದಿಂದ ಒಂದು ಶಬ್ದ ಇದ್ದಕ್ಕಿದ್ದಂತೆ ಬಂದಿತು. ಬಿರುಗಾಳಿ ಬೀಸುತ್ತಿದೆಯೋ ಎಂಬಂತಿತ್ತು ಆ ಶಬ್ದ. ಅವರು ಕುಳಿತುಕೊಂಡಿದ್ದ ಮನೆಯಲ್ಲೆಲ್ಲಾ ಆ ಶಬ್ದ ತುಂಬಿಕೊಂಡಿತು. 3 ಬೆಂಕಿಯ ಜ್ವಾಲೆಗಳಂತಿದ್ದ ಏನನ್ನೊ ಅವರು ಕಂಡರು. ಜ್ವಾಲೆಗಳು ವಿಂಗಡವಾಗಿ ಅಲ್ಲಿದ್ದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ನೆಲೆಸಿದವು. 4 ಅವರೆಲ್ಲರೂ ಪವಿತ್ರಾತ್ಮಭರಿತರಾದರು ಮತ್ತು ವಿವಿಧ ಭಾಷೆಗಳಲ್ಲಿ ಮಾತಾಡತೊಡಗಿದರು. ಪವಿತ್ರಾತ್ಮನೇ ಅವರಿಗೆ ಆ ಶಕ್ತಿಯನ್ನು ಕೊಟ್ಟನು.
5 ಬಹು ಧಾರ್ಮಿಕರಾದ ಅನೇಕ ಯೆಹೂದ್ಯರು ಆ ಸಮಯದಲ್ಲಿ ಜೆರುಸಲೇಮಿನಲ್ಲಿದ್ದರು. ಇವರಲ್ಲಿ ಪ್ರಪಂಚದ ಪ್ರತಿಯೊಂದು ದೇಶದಿಂದ ಬಂದ ಜನರಿದ್ದರು. 6 ಈ ಶಬ್ದವನ್ನು ಕೇಳಿ ಈ ಜನರ ಒಂದು ದೊಡ್ಡ ಸಮೂಹವೇ ಅಲ್ಲಿಗೆ ಬಂದಿತು. ಅಪೊಸ್ತಲರು ಮಾತಾಡುತ್ತಿರುವುದು ಪ್ರತಿಯೊಬ್ಬರಿಗೂ ಅವರವರ ಸ್ವಂತ ಭಾಷೆಗಳಲ್ಲಿ ಕೇಳಿಸುತ್ತಿರುವುದನ್ನು ಕಂಡು ಅವರಿಗೆ ಆಶ್ಚರ್ಯವಾಯಿತು.
7 ಇದನ್ನು ನೋಡಿದ ಯೆಹೂದ್ಯರೆಲ್ಲರೂ ವಿಸ್ಮಯಗೊಂಡರು. ಹೀಗೆ ಮಾಡಲು ಅಪೊಸ್ತಲರಿಗೆ ಹೇಗೆ ಸಾಧ್ಯವಾಯಿತೆಂದು ಅವರಿಗೆ ಅರ್ಥವಾಗಲಿಲ್ಲ. ಅವರು, “ಮಾತಾಡುತ್ತಿರುವ ಈ ಜನರು (ಅಪೊಸ್ತಲರು) ಗಲಿಲಾಯದವರು![b] 8 ಆದರೆ ಇವರು ನಮ್ಮ ಸ್ವಂತ ಭಾಷೆಗಳಲ್ಲಿ ಮಾತಾಡುತ್ತಿರುವಂತೆ ಕೇಳಿಸುತ್ತಿದೆ. ಇದು ಹೇಗೆ ಸಾಧ್ಯ? ನಾವು ಬೇರೆಬೇರೆ ಸ್ಥಳಗಳವರು. 9 ನಮ್ಮಲ್ಲಿ ಪಾರ್ಥ್ಯರು, ಮೇದ್ಯರು, ಏಲಾಮಿನವರು, ಮೆಸೊಪೊಟೇಮದವರು, ಯೂದಾಯದವರು, ಕಪ್ಪದೋಕ್ಯಯದವರು, ಪೊಂತದವರು, ಏಷ್ಯಾದವರು,[c] 10 ಫ್ರಿಜಿಯದವರು, ಪಾಂಫಿಲಿಯದವರು, ಈಜಿಪ್ಟ್‌ನವರು ಮತ್ತು ಸಿರೇನಿನ ಬಳಿಯಲ್ಲಿರುವ ಲಿಬಿಯ ಪ್ರಾಂತ್ಯದವರು, ರೋಮ್‌ನವರು, 11 ಕ್ರೇಟ್‌ನವರು ಮತ್ತು ಅರೇಬಿಯವರು ಇದ್ದಾರೆ. ನಮ್ಮಲ್ಲಿರುವ ಕೆಲವು ಜನರು ಹುಟ್ಟು ಯೆಹೂದ್ಯರು. ಉಳಿದವರು ಮತಾಂತರ ಹೊಂದಿದವರು. ನಾವು ಬೇರೆಬೇರೆ ದೇಶಗಳವರು. ಆದರೆ ಈ ಜನರು ಮಾತಾಡುತ್ತಿರುವುದು ನಮ್ಮ ಸ್ವಂತ ಭಾಷೆಗಳಲ್ಲಿ ನಮಗೆ ಕೇಳಿಸುತ್ತಿದೆ! ಅವರು ದೇವರ ಬಗ್ಗೆ ಹೇಳುತ್ತಿರುವ ಮಹಾಸಂಗತಿಗಳು ನಮಗೆಲ್ಲರಿಗೂ ಅರ್ಥವಾಗುತ್ತಿವೆ” ಎಂದು ಹೇಳಿದರು.
12 ಜನರೆಲ್ಲರೂ ವಿಸ್ಮಯಗೊಂಡರು ಮತ್ತು ಗಲಿಬಿಲಿಯಾದರು. ಅವರು, “ಏನು ನಡೆಯುತ್ತಿದೆ?” ಎಂದು ಒಬ್ಬರನ್ನೊಬ್ಬರು ಕೇಳತೊಡಗಿದರು. 13 ಕೆಲವರು ಅಪೊಸ್ತಲರನ್ನು ನೋಡಿ ನಗುತ್ತಾ, “ಇವರು ಅತಿಯಾಗಿ ದ್ರಾಕ್ಷಾರಸ ಕುಡಿದು ಮತ್ತರಾಗಿದ್ದಾರೆ” ಎಂದು ಹಾಸ್ಯಮಾಡಿದರು.
ಪೇತ್ರನ ಪ್ರಸಂಗ
14 ಬಳಿಕ ಪೇತ್ರನು ಉಳಿದ ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಎದ್ದುನಿಂತುಕೊಂಡನು. ಎಲ್ಲಾ ಜನರಿಗೆ ಕೇಳುವಂತೆ ಅವನು ಗಟ್ಟಿಯಾಗಿ ಹೀಗೆಂದನು: “ಯೆಹೂದ್ಯರೇ, ಜೆರುಸಲೇಮಿನಲ್ಲಿ ವಾಸವಾಗಿರುವ ಜನರೇ, ನನಗೆ ಕಿವಿಗೊಡಿರಿ. ನೀವು ತಿಳಿದುಕೊಳ್ಳಬೇಕಾದ ಸಂಗತಿಯನ್ನು ನಾನು ನಿಮಗೆ ಹೇಳುತ್ತೇನೆ. 15 ನೀವು ಯೋಚಿಸಿಕೊಂಡಿರುವಂತೆ ಈ ಜನರು ಕುಡಿದು ಮತ್ತರಾದವರಲ್ಲ. ಈಗ ಮುಂಜಾನೆ ಒಂಭತ್ತು ಗಂಟೆಯಷ್ಟೆ! 16 ಆದರೆ ಈ ಹೊತ್ತು ಇಲ್ಲಿ ನಡೆಯುತ್ತಿರುವ ಸಂಗತಿಗಳ ಬಗ್ಗೆ ಪ್ರವಾದಿಯಾದ ಯೋವೇಲನು ಹೀಗೆ ಬರೆದಿದ್ದಾನೆ:
17 ‘ದೇವರು ಹೀಗೆನ್ನುತ್ತಾನೆ:
ಕೊನೆಯ ದಿನಗಳಲ್ಲಿ, ನಾನು ನನ್ನ ಆತ್ಮವನ್ನು ಎಲ್ಲಾ ಜನರ ಮೇಲೆ ಸುರಿಸುವೆನು.
ನಿಮ್ಮ ಗಂಡುಮಕ್ಕಳು, ಹೆಣ್ಣುಮಕ್ಕಳು ಪ್ರವಾದಿಸುವರು.
ನಿಮ್ಮ ಯುವಜನರು ದರ್ಶನಗಳನ್ನು ಕಾಣುವರು.
ನಿಮ್ಮ ವಯೋವೃದ್ಧರು ವಿಶೇಷ ಕನಸುಗಳನ್ನು ಕಾಣುವರು.
18 ಆ ಸಮಯದಲ್ಲಿ ನಾನು ನನ್ನ ಆತ್ಮವನ್ನು ನನ್ನ ದಾಸದಾಸಿಯರ ಮೇಲೆ ಸುರಿಸುವೆನು.
ಆಗ ಅವರು ಪ್ರವಾದಿಸುವರು.
19 ನಾನು ಆಕಾಶದಲ್ಲಿ ಅದ್ಭುತಕಾರ್ಯಗಳನ್ನು ತೋರಿಸುವೆನು.
ಭೂಮಿಯ ಮೇಲೆ ಸೂಚಕಕಾರ್ಯಗಳನ್ನು ಮಾಡುವೆನು.
ರಕ್ತ, ಬೆಂಕಿ ಮತ್ತು ಕಪ್ಪೊಗೆಗಳು ಅಲ್ಲಿರುವವು.
20 ಸೂರ್ಯನು ಕತ್ತಲಾಗುವನು,
ಚಂದ್ರನು ರಕ್ತದಂತೆ ಕೆಂಪಾಗುವನು,
ಆಗ ಪ್ರಭುವಿನ ಗಂಭೀರವಾದ ಮಹಾದಿನವು ಬರುವುದು;
21 ಪ್ರಭುವಿನ ಹೆಸರನ್ನು ಹೇಳಿಕೊಳ್ಳುವವರಿಗೆಲ್ಲ ರಕ್ಷಣೆ ಆಗುವುದು.’(A)
22 “ಯೆಹೂದ್ಯರೇ, ಈ ಮಾತುಗಳನ್ನು ಕೇಳಿರಿ: ನಜರೇತಿನ ಯೇಸು ಬಹು ವಿಶೇಷವಾದ ವ್ಯಕ್ತಿ. ದೇವರು ತಾನು ಯೇಸುವಿನ ಮೂಲಕ ಮಾಡಿದ ಶಕ್ತಿಯುತವಾದ ಮತ್ತು ಅದ್ಭುತವಾದ ಕಾರ್ಯಗಳ ಮೂಲಕ ಇದನ್ನು ಸ್ಪಷ್ಟವಾಗಿ ನಿರೂಪಿಸಿದ್ದಾನೆ. ಈ ಸಂಗತಿಗಳನ್ನು ನೀವೆಲ್ಲರೂ ನೋಡಿದಿರಿ. ಆದ್ದರಿಂದ ಇದು ಸತ್ಯವೆಂದು ನಿಮಗೆ ಗೊತ್ತಿದೆ. 23 ಯೇಸುವನ್ನು ನಿಮಗೆ ಒಪ್ಪಿಸಲಾಯಿತು. ನೀವು ಕೆಟ್ಟಜನರ ಸಹಾಯದಿಂದ ಆತನನ್ನು ಶಿಲುಬೆಗೇರಿಸಿದಿರಿ. ಆದರೆ ಇವುಗಳೆಲ್ಲಾ ಸಂಭವಿಸುತ್ತವೆಯೆಂದು ದೇವರಿಗೆ ಗೊತ್ತಿತ್ತು. ಇದು ದೇವರ ಯೋಜನೆ. ದೇವರು ಬಹು ಕಾಲದ ಹಿಂದೆಯೇ ಈ ಯೋಜನೆಯನ್ನು ಮಾಡಿದನು. 24 ಯೇಸು ಮರಣವೇದನೆಯನ್ನು ಅನುಭವಿಸಿದನು. ಆದರೆ ದೇವರು ಆತನನ್ನು ಬಿಡಿಸಿದನು. ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ಮರಣವು ಯೇಸುವನ್ನು ಹಿಡಿದುಕೊಳ್ಳಲಾಗಲಿಲ್ಲ. 25 ಯೇಸುವಿನ ಬಗ್ಗೆ ದಾವೀದನು ಹೀಗೆ ಹೇಳಿದ್ದಾನೆ:
‘ಪ್ರಭುವು ಯಾವಾಗಲೂ ನನ್ನ ಮುಂದೆ ಇರುವುದನ್ನು ನಾನು ನೋಡುತ್ತಿದ್ದೆನು;
ನನ್ನನ್ನು ಸುರಕ್ಷಿತವಾಗಿಡಲು ಆತನು ನನ್ನ ಬಲಗಡೆಯಲ್ಲಿದ್ದಾನೆ.
26 ಆದ್ದರಿಂದ ನನ್ನ ಹೃದಯವು ಹರ್ಷಿಸುತ್ತದೆ.
ನನ್ನ ಬಾಯಿ ಆನಂದದಿಂದ ಮಾತಾಡುತ್ತದೆ.
ಹೌದು, ನನ್ನ ದೇಹವು ಸಹ ನಿರೀಕ್ಷೆಯಿಂದ ಜೀವಿಸುವುದು;
27 ಯಾಕೆಂದರೆ ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ತೊರೆದುಬಿಡುವುದಿಲ್ಲ.
ನಿನ್ನ ಪರಿಶುದ್ಧನ ದೇಹವು ಸಮಾಧಿಯಲ್ಲಿ ಕೊಳೆಯಲು ನೀನು ಅವಕಾಶ ಕೊಡುವುದಿಲ್ಲ.
28 ಹೇಗೆ ಜೀವಿಸಬೇಕೆಂಬುದನ್ನು ನೀನು ನನಗೆ ಉಪದೇಶಿಸಿದೆ.
ನಿನ್ನ ಪ್ರಸನ್ನತೆಯು ನನ್ನಲ್ಲಿ ಮಹಾ ಆನಂದವನ್ನು ಉಂಟುಮಾಡುವುದು.’(B)
29 “ನನ್ನ ಸಹೋದರರೇ, ನಮ್ಮ ಪಿತೃವಾದ ದಾವೀದನ ಬಗ್ಗೆ ನಾನು ನಿಮಗೆ ನಿಜವಾಗಿಯೂ ಹೇಳಬಲ್ಲೆನು. ಅವನು ಸತ್ತುಹೋದನು ಮತ್ತು ಅವನಿಗೆ ಸಮಾಧಿಯಾಯಿತು. ಅವನ ಸಮಾಧಿಯು ನಮ್ಮ ಮಧ್ಯದಲ್ಲಿ ಇಂದಿನವರೆಗೂ ಇದೆ. 30 ದಾವೀದನು ಒಬ್ಬ ಪ್ರವಾದಿಯಾಗಿದ್ದನು[d] ಮತ್ತು ‘ನಿನ್ನ ಕುಟುಂಬದ ಒಬ್ಬನನ್ನು ನಿನ್ನಂತೆಯೇ ರಾಜನನ್ನಾಗಿ ಮಾಡುವೆನು’ ಎಂದು ದೇವರು ಅವನಿಗೆ ಆಣೆಯಿಟ್ಟು ವಾಗ್ದಾನ ಮಾಡಿದ್ದು ಅವನಿಗೆ ಗೊತ್ತಿತ್ತು. 31 ಅದು ನೆರವೇರುವುದಕ್ಕಿಂತ ಮೊದಲೇ ದಾವೀದನಿಗೆ ತಿಳಿದಿತ್ತು. ಆದಕಾರಣ ದಾವೀದನು ಪುನರುತ್ಥಾನ ಹೊಂದುವ ಕ್ರಿಸ್ತನ ಬಗ್ಗೆ,
‘ಆತನನ್ನು ಪಾತಾಳದಲ್ಲಿ ಬಿಡಲ್ಪಡಲಿಲ್ಲ.
ಆತನ ದೇಹವು ಸಮಾಧಿಯಲ್ಲಿ ಕೊಳೆಯಲಿಲ್ಲ’
ಎಂದಿದ್ದಾನೆ. 32 ಆದ್ದರಿಂದ ದೇವರು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದು ಯೇಸುವನ್ನೇ ಹೊರತು ದಾವೀದನನ್ನಲ್ಲ! ಇದಕ್ಕೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ನಾವು ಆತನನ್ನು ಕಂಡೆವು! 33 ಯೇಸು ಪರಲೋಕಕ್ಕೆ ಎತ್ತಲ್ಪಟ್ಟನು. ಈಗ ಯೇಸು ದೇವರೊಂದಿಗಿದ್ದಾನೆ, ದೇವರ ಬಲಗಡೆಯಲ್ಲಿದ್ದಾನೆ. ಈಗ ತಂದೆಯು (ದೇವರು) ಪವಿತ್ರಾತ್ಮನನ್ನು ಯೇಸುವಿಗೆ ಕೊಟ್ಟಿದ್ದಾನೆ. ಪವಿತ್ರಾತ್ಮನನ್ನು ಕೊಡುವುದಾಗಿ ದೇವರು ವಾಗ್ದಾನ ಮಾಡಿದ್ದನು. ಆದ್ದರಿಂದ ಯೇಸು ಈಗ ಆ ಆತ್ಮನನ್ನು ಸುರಿಸಿದ್ದಾನೆ. ನೀವು ನೋಡುತ್ತಿರುವುದು ಮತ್ತು ಕೇಳುತ್ತಿರುವುದು ಇದನ್ನೇ. 34-35 ಪರಲೋಕಕ್ಕೆ ಎತ್ತಲ್ಪಟ್ಟವನು ದಾವೀದನಲ್ಲ, ಯೇಸುವೇ. ದಾವೀದನೇ ಅದರ ಬಗ್ಗೆ ಹೇಳುತ್ತಾ,
‘ಪ್ರಭುವು (ದೇವರು) ನನ್ನ ಪ್ರಭುವಿಗೆ,
ನಾನು ನಿನ್ನ ಶತ್ರುಗಳನ್ನು ನಿನ್ನ ಪಾದಗಳಿಗೆ ಪೀಠವಾಗಿ ಮಾಡುವ ತನಕ
ನನ್ನ ಬಲಗಡೆಯಲ್ಲಿ ಕುಳಿತುಕೊ ಎಂದು ತಿಳಿಸಿದನು’ ಎಂದಿದ್ದಾನೆ.(C)
36 “ಆದ್ದರಿಂದ ಯೆಹೂದ್ಯರೆಲ್ಲರೂ ಇದನ್ನು ನಿಜವಾಗಿಯೂ ತಿಳಿದುಕೊಳ್ಳಬೇಕು. ದೇವರು ಯೇಸುವನ್ನು ಪ್ರಭುವನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆ. ನೀವು ಶಿಲುಬೆಗೇರಿಸಿದ ವ್ಯಕ್ತಿಯೇ ಆತನು!”
37 ಇದನ್ನು ಕೇಳಿದಾಗ, ಅವರ ಹೃದಯದಲ್ಲಿ ಅಲಗು ನೆಟ್ಟಂತಾಯಿತು. ಅವರು ಪೇತ್ರನನ್ನು ಮತ್ತು ಉಳಿದ ಅಪೊಸ್ತಲರನ್ನು, “ಈಗ ನಾವೇನು ಮಾಡಬೇಕು?” ಎಂದು ಕೇಳಿದರು.
38 ಪೇತ್ರನು ಅವರಿಗೆ, “ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ. ಆಗ ದೇವರು ನಿಮ್ಮ ಪಾಪಗಳನ್ನು ಕ್ಷಮಿಸುವನು. ಅಲ್ಲದೆ ದೇವರು ವಾಗ್ದಾನ ಮಾಡಿರುವ ಪವಿತ್ರಾತ್ಮನನ್ನು ಹೊಂದಿಕೊಳ್ಳುವಿರಿ. 39 ಈ ವಾಗ್ದಾನವನ್ನು ನಿಮಗೂ ನಿಮ್ಮ ಮಕ್ಕಳಿಗೂ ಬಹು ದೂರದಲ್ಲಿರುವ ಜನರಿಗೂ ಕೊಡಲಾಗಿದೆ. ನಮ್ಮ ದೇವರಾದ ಪ್ರಭುವು ತನ್ನ ಬಳಿಗೆ ಕರೆಯುವ ಪ್ರತಿಯೊಬ್ಬರಿಗೂ ಈ ವಾಗ್ದಾನವನ್ನು ಕೊಟ್ಟಿದ್ದಾನೆ” ಎಂದು ಹೇಳಿದನು.
40 ಪೇತ್ರನು ಇನ್ನೂ ಅನೇಕ ಮಾತುಗಳಿಂದ ಅವರನ್ನು ಎಚ್ಚರಿಸಿ, “ಈ ದುಷ್ಟ ಸಂತತಿಯಿಂದ ತಪ್ಪಿಸಿಕೊಳ್ಳಿ” ಎಂದು ಬೇಡಿಕೊಂಡನು. 41 ಪೇತ್ರನು ಹೇಳಿದ್ದನ್ನು ಸ್ವೀಕರಿಸಿಕೊಂಡ ಜನರು ದೀಕ್ಷಾಸ್ನಾನ ಮಾಡಿಸಿಕೊಂಡರು. ಆ ದಿನ ಸುಮಾರು ಮೂರುಸಾವಿರ ಜನರು ವಿಶ್ವಾಸಿಗಳ ಗುಂಪಿಗೆ ಸೇರಿದರು.
ಅನ್ಯೋನ್ಯ ಜೀವನ
42 ಇವರೆಲ್ಲರೂ ಅಪೊಸ್ತಲರ ಬೋಧನೆಯನ್ನು ಕೇಳುವುದರಲ್ಲಿಯೂ ಸಹೋದರರ ಅನ್ಯೋನ್ಯತೆಯಲ್ಲಿಯೂ ರೊಟ್ಟಿ ಮುರಿಯುವುದರಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನಿರತರಾಗಿದ್ದರು. 43 ಅಪೊಸ್ತಲರು ಅನೇಕ ಶಕ್ತಿಯುತ ಮತ್ತು ಅದ್ಭುತಕಾರ್ಯಗಳನ್ನು ಮಾಡುತ್ತಿದ್ದರು; ಮತ್ತು ಪ್ರತಿಯೊಬ್ಬರಿಗೂ ದೇವರಲ್ಲಿ ಭಯಭಕ್ತಿ ಉಂಟಾಯಿತು. 44 ಎಲ್ಲಾ ವಿಶ್ವಾಸಿಗಳು ಒಟ್ಟಾಗಿ ವಾಸಿಸುತ್ತಿದ್ದರು. ಅವರು ಪ್ರತಿಯೊಂದನ್ನೂ ಹಂಚಿಕೊಳ್ಳುತ್ತಿದ್ದರು. 45 ತಮ್ಮ ಜಮೀನನ್ನು ಮತ್ತು ತಾವು ಹೊಂದಿದ್ದ ವಸ್ತುಗಳನ್ನು ಮಾರಿ, ಬಂದ ಹಣವನ್ನೆಲ್ಲಾ ಕೊರತೆಯಲ್ಲಿದ್ದವರಿಗೆ ಹಂಚಿಕೊಡುತ್ತಿದ್ದರು; 46 ಪ್ರತಿದಿನ ದೇವಾಲಯದಲ್ಲಿ ಸೇರಿಬರುತ್ತಿದ್ದರು. ಅವರೆಲ್ಲರ ಉದ್ದೇಶ ಒಂದೇ ಆಗಿತ್ತು. ಅವರು ತಮ್ಮ ಮನೆಗಳಲ್ಲಿ ರೊಟ್ಟಿ ಮುರಿದು ಒಟ್ಟಾಗಿ ಊಟ ಮಾಡುತ್ತಿದ್ದರು. ಅವರ ಹೃದಯಗಳು ಆನಂದದಿಂದ ತುಂಬಿದ್ದವು. 47 ಅವರು ದೇವರನ್ನು ಕೊಂಡಾಡುತ್ತಿದ್ದರು ಮತ್ತು ಜನರೆಲ್ಲರೂ ಅವರನ್ನು ಇಷ್ಟಪಡುತ್ತಿದ್ದರು. ಪ್ರತಿದಿನವೂ ಹೆಚ್ಚುಹೆಚ್ಚು ಜನರು ರಕ್ಷಣೆ ಹೊಂದುತ್ತಿದ್ದರು; ಪ್ರಭುವು ಅವರನ್ನೆಲ್ಲಾ ವಿಶ್ವಾಸಿಗಳ ಸಭೆಗೆ ಸೇರಿಸುತ್ತಿದ್ದನು.
Kannada Holy Bible: Easy-to-Read Version. All rights reserved. © 1997 Bible League International