M’Cheyne Bible Reading Plan
ಯೆಹೂದದ ಅರಸನಾದ ಯೆಹೋವಾಹಾಜ
36 ಯೆಹೂದದ ಜನರು ಯೆಹೋವಾಹಾಜನನ್ನು ತಮ್ಮ ಹೊಸ ಅರಸನನ್ನಾಗಿ ಜೆರುಸಲೇಮಿನಲ್ಲಿ ಆರಿಸಿದರು. ಯೆಹೋವಾಹಾಜನು ಯೋಷೀಯನ ಮಗನು. 2 ಅವನು ತನ್ನ ಇಪ್ಪತ್ತಮೂರನೆ ವಯಸ್ಸಿನಲ್ಲಿ ಪಟ್ಟಕ್ಕೆ ಬಂದನು. ಅವನು ಜೆರುಸಲೇಮಿನಲ್ಲಿ ಮೂರು ತಿಂಗಳ ಕಾಲ ಆಳಿದನು. 3 ಆ ಬಳಿಕ ಈಜಿಪ್ಟಿನ ನೆಕೋ ಯೆಹೋವಾಹಾಜನನ್ನು ಕೈದಿಯನ್ನಾಗಿ ಮಾಡಿದನು. ಯೆಹೂದದ ಜನರು ತನಗೆ ಮೂರು ಸಾವಿರದ ನಾನೂರು ಕಿಲೋಗ್ರಾಂ ಬೆಳ್ಳಿಯನ್ನೂ ಮೂವತ್ತನಾಲ್ಕು ಕಿಲೋಗ್ರಾಂ ಬಂಗಾರವನ್ನೂ ಕೊಡಲು ಆಜ್ಞಾಪಿಸಿದನು. 4 ನೆಕೋ ಯೆಹೋವಾಹಾಜನ ತಮ್ಮನಾದ ಎಲ್ಯಾಕೀಮನನ್ನು ಯೆಹೋವಾಹಾಜನ ಬದಲಿಗೆ ಯೆಹೂದದ ಮತ್ತು ಜೆರುಸಲೇಮಿನ ಅರಸನನ್ನಾಗಿ ಮಾಡಿದನು. ಅವನಿಗೆ ಎಲ್ಯಾಕೀಮನ ಬದಲು ಯೆಹೋಯಾಕೀಮ ಎಂಬ ಹೆಸರಿಟ್ಟನು. ನೆಕೋ ಯೆಹೋವಾಹಾಜನನ್ನು ಈಜಿಪ್ಟಿಗೆ ತೆಗೆದುಕೊಂಡು ಹೋದನು.
ಯೆಹೂದದ ಅರಸನಾದ ಯೆಹೋಯಾಕೀಮ
5 ಯೆಹೋಯಾಕೀಮನು ಯೆಹೂದ ದೇಶದ ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರ್ಷ ಪ್ರಾಯದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಯೆಹೋಯಾಕೀಮನು ಯೆಹೋವನ ಚಿತ್ತಕ್ಕೆ ಒಳಗಾಗಲಿಲ್ಲ. ಅವನು ತನ್ನ ದೇವರಾದ ಯೆಹೋವನ ವಿರುದ್ಧವಾಗಿ ಪಾಪಮಾಡಿದನು.
6 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಯೆಹೂದ ಪ್ರಾಂತ್ಯದ ಮೇಲೆ ಯುದ್ಧಕ್ಕೆ ಬಂದನು. ಯೆಹೋಯಾಕೀಮನನ್ನು ಸೆರೆಹಿಡಿದು ಅವನನ್ನು ಕಂಚಿನ ಸರಪಣಿಯಿಂದ ಕಟ್ಟಿಸಿದನು. ನಂತರ ಯೆಹೋಯಾಕೀಮನನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದನು. 7 ನೆಬೂಕದ್ನೆಚ್ಚರನು ದೇವಾಲಯದಿಂದ ಹಲವಾರು ವಸ್ತುಗಳನ್ನು ತೆಗೆದುಕೊಂಡು ಹೋಗಿ ಬಾಬಿಲೋನಿನ ತನ್ನ ಅರಮನೆಯಲ್ಲಿ ಇಟ್ಟುಕೊಂಡನು. 8 ಯೆಹೋಯಾಕೀಮನು ಮಾಡಿದ ದುಷ್ಕ್ರಿಯೆಗಳೆಲ್ಲಾ ಇಸ್ರೇಲಿನ ಮತ್ತು ಯೆಹೂದದ ರಾಜರುಗಳ ಗ್ರಂಥದಲ್ಲಿ ಬರೆಯಲ್ಪಟ್ಟಿವೆ. ಯೆಹೋಯಾಕೀಮನ ಬದಲು ಯೆಹೋಯಾಕೀನನು ಅರಸನಾದನು. ಇವನು ಯೆಹೋಯಾಕೀಮನ ಮಗ.
ಯೆಹೂದದ ಅರಸನಾದ ಯೆಹೋಯಾಕೀನ
9 ಯೆಹೋಯಾಕೀನನು ಯೆಹೂದ ದೇಶದ ಪಟ್ಟಕ್ಕೆ ಬಂದಾಗ ಹದಿನೆಂಟು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಮೂರು ತಿಂಗಳು ಹತ್ತು ದಿವಸಗಳ ಕಾಲ ರಾಜ್ಯವನ್ನಾಳಿದನು. ಅವನು ಯೆಹೋವನ ಚಿತ್ತಕ್ಕನುಸಾರವಾಗಿ ನಡೆಯಲಿಲ್ಲ. ಯೆಹೋಯಾಕೀನನು ದೇವರಿಗೆ ವಿರುದ್ಧವಾಗಿ ಪಾಪ ಮಾಡಿದನು. 10 ವಸಂತ ಕಾಲದಲ್ಲಿ ನೆಬೂಕದ್ನೆಚ್ಚರನು ತನ್ನ ಸೇವಕರನ್ನು ಕಳುಹಿಸಿ ಯೆಹೋಯಾಕೀನನನ್ನು ಕರೆಯಿಸಿದನು. ಆ ಸೇವಕರು ದೇವಾಲಯದ ಕೆಲವು ವಸ್ತುಗಳನ್ನೂ ಅವನ ಜೊತೆಯಲ್ಲಿ ಬಾಬಿಲೋನಿಗೆ ತೆಗೆದುಕೊಂಡು ಹೋದರು. ನೆಬೂಕದ್ನೆಚ್ಚರನು ಯೆಹೂದ ಮತ್ತು ಜೆರುಸಲೇಮಿಗೆ ಚಿದ್ಕೀಯನನ್ನು ಹೊಸ ಅರಸನನ್ನಾಗಿ ಮಾಡಿದನು. ಚಿದ್ಕೀಯನು ಯೆಹೋಯಾಕೀನನ ಸಂಬಂಧಿಕನಾಗಿದ್ದನು.
ಯೆಹೂದದ ಅರಸನಾದ ಚಿದ್ಕೀಯನು
11 ಚಿದ್ಕೀಯನು ಅರಸನಾದಾಗ ಇಪ್ಪತ್ತೊಂದು ವರ್ಷ ಪ್ರಾಯದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಹನ್ನೊಂದು ವರ್ಷ ಕಾಲ ರಾಜ್ಯಭಾರ ಮಾಡಿದನು. 12 ಚಿದ್ಕೀಯನು ಯೆಹೋವನ ಚಿತ್ತಾನುಸಾರವಾಗಿ ನಡೆಯಲಿಲ್ಲ. ಅವನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದನು. ಪ್ರವಾದಿಯಾದ ಯೆರೆಮೀಯನು ದೇವರ ಸಂದೇಶವನ್ನು ಕೊಡುತ್ತಾ ಬಂದನು. ಆದರೆ ಚಿದ್ಕೀಯನು ದೇವರೆದುರಿಗೆ ತನ್ನನ್ನು ತಗ್ಗಿಸಿಕೊಳ್ಳದೆ ಯೆರೆಮೀಯನ ಮೂಲಕ ಬಂದ ದೇವರ ಆಜ್ಞೆಗಳಿಗೆ ವಿಧೇಯನಾಗಲಿಲ್ಲ.
ಜೆರುಸಲೇಮಿನ ನಾಶನ
13 ಚಿದ್ಕೀಯನು ನೆಬೂಕದ್ನೆಚ್ಚರನಿಗೆ ವಿರುದ್ಧವಾಗಿ ದಂಗೆ ಎದ್ದನು. ನೆಬೂಕದ್ನೆಚ್ಚರನು ತನಗೆ ವಿಧೇಯನಾಗಿರುವಂತೆ ಚಿದ್ಕೀಯನಿಂದ ಪ್ರಮಾಣ ಮಾಡಿಸಿಕೊಂಡಿದ್ದನು. ಚಿದ್ಕೀಯನು ದೇವರ ಹೆಸರಿನಲ್ಲಿ ಆಣೆಯಿಟ್ಟು ತಾನು ನೆಬೂಕದ್ನೆಚ್ಚರನಿಗೆ ನಂಬಿಗಸ್ತನಾಗಿರುವುದಾಗಿ ಪ್ರಮಾಣಮಾಡಿದ್ದನು. ಆದರೆ ಚಿದ್ಕೀಯನು ಮನಸ್ಸನ್ನು ಕಠಿಣಮಾಡಿಕೊಂಡು ಇಸ್ರೇಲಿನ ದೇವರಾದ ಯೆಹೋವನಿಗೆ ವಿಧೇಯನಾಗಲು ನಿರಾಕರಿಸಿದನು. 14 ಅವನು ಮಾತ್ರವಲ್ಲದೆ ಎಲ್ಲಾ ಯಾಜಕರು, ಯೆಹೂದದ ಜನನಾಯಕರು ಬಹಳ ಪಾಪಗಳನ್ನು ಮಾಡಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟುಹೋಗಿದ್ದರು. ಅವರು ಬೇರೆ ದೇಶಗಳ ನಡವಳಿಕೆಯನ್ನು ಅನುಸರಿಸಿದರು. ಆ ನಾಯಕರುಗಳು ದೇವಾಲಯವನ್ನು ಹಾಳುಮಾಡಿದರು. ಜೆರುಸಲೇಮಿನಲ್ಲಿದ್ದ ಆ ಆಲಯವನ್ನು ಯೆಹೋವನು ತನಗಾಗಿ ಪ್ರತಿಷ್ಠಿಸಿಕೊಂಡಿದ್ದನು. 15 ಅವರ ಪೂರ್ವಿಕರ ದೇವರಾದ ಯೆಹೋವನು ಆಗಾಗ್ಗೆ ತನ್ನ ಪ್ರವಾದಿಗಳನ್ನು ಕಳುಹಿಸಿ ತನ್ನ ಜನರನ್ನು ಎಚ್ಚರಿಸಿದನು. ಯಾಕೆಂದರೆ ಆತನಿಗೆ ತನ್ನ ಜನರೂ ತನ್ನ ಮಂದಿರವೂ ನಾಶವಾಗುವದರಲ್ಲಿ ಇಷ್ಟವಿರಲಿಲ್ಲ. 16 ಆದರೆ ಆತನ ಜನರು ಪ್ರವಾದಿಗಳನ್ನು ಹಾಸ್ಯಮಾಡಿದರು; ಅವರ ಮಾತುಗಳನ್ನು ಕೇಳಲು ನಿರಾಕರಿಸಿದರು; ದೇವರ ಸಂದೇಶವನ್ನು ದ್ವೇಷಿಸಿದರು. ಆಗ ದೇವರ ಕೋಪವು ಅವರ ಮೇಲೆ ಉರಿಯತೊಡಗಿತು. ಅದನ್ನು ನಿಲ್ಲಿಸಲು ಯಾರಿಗೂ ಸಾಧ್ಯವಾಗಲಿಲ್ಲ. 17 ಯೆಹೂದದ ಮತ್ತು ಜೆರುಸಲೇಮಿನ ಜನರನ್ನು ನಾಶಮಾಡಲು ಬಾಬಿಲೋನಿನ ಅರಸನನ್ನು ಕಳುಹಿಸಿದನು. ಬಾಬಿಲೋನಿನ ಅರಸನು ದೇವಾಲಯದೊಳಗಿದ್ದ ಯುವಜನರನ್ನು ಕೊಂದುಹಾಕಿದನು. ಅವನಿಗೆ ಯೆಹೂದದ ಮತ್ತು ಜೆರುಸಲೇಮಿನ ಜನರ ಮೇಲೆ ಕರುಣೆಯೇ ಇರಲಿಲ್ಲ. ಅವನು ಚಿಕ್ಕವರನ್ನೂ ದೊಡ್ಡವರನ್ನೂ ಗಂಡಸರನ್ನೂ ಹೆಂಗಸರನ್ನೂ ಬಿಡದೆ ಸಂಹರಿಸಿದನು. ರೋಗಿಗಳನ್ನೂ ಆರೋಗ್ಯವಂತರನ್ನೂ ಸಂಹರಿಸಿದನು; ಯೆಹೂದದ ಮತ್ತು ಜೆರುಸಲೇಮಿನ ಜನರನ್ನು ಶಿಕ್ಷಿಸಲು ದೇವರು ನೆಬೂಕದ್ನೆಚ್ಚರನನ್ನು ಉಪಯೋಗಿಸಿದನು. 18 ದೇವಾಲಯದೊಳಗಿದ್ದ ಎಲ್ಲಾ ವಸ್ತುಗಳನ್ನು ನೆಬೂಕದ್ನೆಚ್ಚರನು ಬಾಬಿಲೋನಿಗೆ ಸಾಗಿಸಿದನು. ದೇವಾಲಯದೊಳಗೂ ಅರಸನ ಬಳಿಯಲ್ಲಿಯೂ ಅಧಿಕಾರಿಗಳ ಬಳಿಯಲ್ಲಿಯೂ ಇದ್ದ ಬೆಲೆಬಾಳುವ ವಸ್ತುಗಳನ್ನೆಲ್ಲಾ ಬಾಬಿಲೋನಿಗೆ ಸಾಗಿಸಿದನು. 19 ನೆಬೂಕದ್ನೆಚ್ಚರನು ಮತ್ತು ಅವನ ಸೈನಿಕರು ದೇವಾಲಯವನ್ನು ಸುಟ್ಟುಹಾಕಿದರು; ಜೆರುಸಲೇಮ್ ಪಟ್ಟಣದ ಪೌಳಿಗೋಡೆಯನ್ನು ಕೆಡವಿಹಾಕಿದರು; ಅರಸನ ಮತ್ತು ಅವನ ಪರಿವಾರದವರ ಮನೆಗಳನ್ನೆಲ್ಲಾ ಸುಟ್ಟುಹಾಕಿದರು. ಜೆರುಸಲೇಮಿನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನೆಲ್ಲಾ ದೋಚಿದರು ಮತ್ತು ಸುಟ್ಟುಹಾಕಿದರು; 20 ಜೀವದಿಂದುಳಿದ ಜನರನ್ನು ಸೆರೆಹಿಡಿದು ಬಾಬಿಲೋನಿನಗೆ ತೆಗೆದುಕೊಂಡು ಹೋಗಿ ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು. ಪಾರಸಿಯ ಸಾಮ್ರಾಜ್ಯ ಸ್ಥಾಪನೆಯಾಗುವ ತನಕ ಅವರು ಅಲ್ಲಿ ಗುಲಾಮರಾಗಿದ್ದರು. 21 ಹೀಗೆ ಯೆಹೋವನು ತನ್ನ ಪ್ರವಾದಿಯಾದ ಯೆರೆಮೀಯನ ಮೂಲಕ ಹೇಳಿಸಿದ ಮಾತುಗಳನ್ನು ನೆರವೇರಿಸಿದನು. “ಈ ಸ್ಥಳವು ಎಪ್ಪತ್ತು ವರ್ಷಗಳ ತನಕ ಪಾಳುಬೀಳುವದು. ಜನರು ಆಚರಿಸದೆಹೋದ ಸಬ್ಬತ್ ಹಬ್ಬಗಳಿಗೆ ಅದು ಪರಿಹಾರವಾಗಿರುವುದು” ಎಂದು ಯೆರೆಮೀಯನು ಹೇಳಿದ್ದನು.[a]
22 ಪಾರಸಿ ರಾಜನಾದ ಕೋರೆಷನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ಯೆಹೋವನು ಅವನಿಂದ ಒಂದು ವಿಶೇಷ ಪ್ರಕಟನೆಯನ್ನು ಹೊರಡಿಸಿದನು. ಯೆರೆಮೀಯನು ಹೇಳಿದ ಮಾತು ನೆರವೇರುವಂತೆ ಇದಾಯಿತು. ಕೊರೇಷನು ತನ್ನ ಸಾಮ್ರಾಜ್ಯದ ಮೂಲೆಮೂಲೆಗಳಿಗೆ ಜನರನ್ನು ಕಳುಹಿಸಿ ಈ ಸಂದೇಶವನ್ನು ಕೊಟ್ಟನು:
23 ಪಾರಸಿ ರಾಜನಾದ ಕೋರೆಷನು ತಿಳಿಸುವದೇನೆಂದರೆ:
ಪರಲೋಕದಲ್ಲಿರುವ ದೇವರಾದ ಯೆಹೋವನು ನನ್ನನ್ನು ಇಡೀ ಭೂಮಿಗೆ ಅರಸನನ್ನಾಗಿ ಮಾಡಿದ್ದಾನೆ. ಆತನು ಜೆರುಸಲೇಮಿನಲ್ಲಿರುವ ತನ್ನ ಆಲಯವನ್ನು ತಿರುಗಿ ಕಟ್ಟುವ ಜವಾಬ್ದಾರಿಕೆಯನ್ನು ನನಗೆ ಕೊಟ್ಟಿರುತ್ತಾನೆ. ಆದ್ದರಿಂದ ದೇವರ ಜನರೆಲ್ಲಾ ಜೆರುಸಲೇಮಿಗೆ ಹಿಂತಿರುಗಿ ಹೋಗಬಹುದು. ನಿಮ್ಮ ದೇವರಾದ ಯೆಹೋವನು ನಿಮ್ಮೊಂದಿಗೆ ಇರಲಿ.
22 ಆಗ ದೇವದೂತನು ನನಗೆ ಜೀವಜಲದ ನದಿಯನ್ನು ತೋರಿಸಿದನು. ಆ ನದಿಯು ಸ್ಫಟಿಕದಂತೆ ಪ್ರಕಾಶಮಾನವಾಗಿತ್ತು. ಆ ನದಿಯು ದೇವರ ಮತ್ತು ಕುರಿಮರಿಯಾದಾತನ ಸಿಂಹಾಸನದಿಂದ ಆಗಮಿಸಿ, 2 ನಗರದ ಬೀದಿಯ ಮಧ್ಯಭಾಗದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲಿಯೂ ಜೀವವೃಕ್ಷಗಳಿದ್ದ್ದವು. ಆ ಜೀವವೃಕ್ಷವು ಪ್ರತಿತಿಂಗಳು ಫಲವನ್ನು ಫಲಿಸುತ್ತಾ ವರ್ಷದಲ್ಲಿ ಹನ್ನೆರಡು ತರದ ಫಲಗಳನ್ನು ನೀಡುತ್ತದೆ. ಆ ವೃಕ್ಷದ ಎಲೆಗಳು ಜನಾಂಗದವರನ್ನು ಗುಣಪಡಿಸುತ್ತವೆ.
3 ದೇವರಿಂದ ಶಾಪ ಹೊಂದಿದ ಯಾವುದೂ ಆ ಪಟ್ಟಣದಲ್ಲಿರುವುದಿಲ್ಲ. ದೇವರ ಮತ್ತು ಕುರಿಮರಿಯಾದಾತನ (ಯೇಸು) ಸಿಂಹಾಸನವು ಆ ನಗರದಲ್ಲಿರುತ್ತದೆ. ದೇವರ ಸೇವಕರು ಆತನನ್ನು ಆರಾಧಿಸುತ್ತಾರೆ. 4 ಅವರು ಆತನ ಮುಖವನ್ನು ನೋಡುತ್ತಾರೆ. ದೇವರ ಹೆಸರನ್ನು ಅವರ ಹಣೆಗಳ ಮೇಲೆ ಬರೆಯಲಾಗುತ್ತದೆ. 5 ಅಲ್ಲಿ ರಾತ್ರಿಯೆಂಬುದೇ ಇರುವುದಿಲ್ಲ. ಜನರಿಗೆ ದೀಪದ ಬೆಳಕಾಗಲಿ ಸೂರ್ಯನ ಬೆಳಕಾಗಲಿ ಬೇಕಾಗುವುದಿಲ್ಲ. ಪ್ರಭುವಾದ ದೇವರೇ ಅವರಿಗೆ ಬೆಳಕನ್ನು ನೀಡುತ್ತಾನೆ. ಅವರು ಯುಗಯುಗಾಂತರಗಳಲ್ಲಿ ರಾಜರುಗಳಂತೆ ಆಳುತ್ತಾರೆ.
6 ಆ ದೇವದೂತನು ನನಗೆ, “ಈ ವಾಕ್ಯಗಳು ಸತ್ಯವಾದವುಗಳೂ ನಂಬತಕ್ಕವುಗಳೂ ಆಗಿವೆ. ಪ್ರವಾದಿಗಳ ಆತ್ಮಗಳಿಗೆ ಪ್ರಭುವೇ ದೇವರಾಗಿದ್ದಾನೆ. ಬೇಗನೆ ಸಂಭವಿಸಲಿರುವ ಸಂಗತಿಗಳನ್ನು ತನ್ನ ಸೇವಕರಿಗೆ ತೋರಿಸಲು ದೇವರು ತನ್ನ ದೂತನನ್ನು ಕಳುಹಿಸಿದ್ದಾನೆ: 7 ‘ಕೇಳಿರಿ, ನಾನು ಬೇಗನೆ ಬರುತ್ತೇನೆ! ಈ ಪುಸ್ತಕದಲ್ಲಿರುವ ಪ್ರವಾದನೆಯ ವಾಕ್ಯಗಳಿಗೆ ವಿಧೇಯತೆಯಿಂದಿರುವವನು ಧನ್ಯನಾಗುತ್ತಾನೆ’” ಎಂದು ಹೇಳಿದನು.
8 ನಾನೇ ಯೋಹಾನನು. ನಾನು ಇವುಗಳನ್ನೆಲ್ಲ ಕೇಳಿದೆನು ಮತ್ತು ನೋಡಿದೆನು. ನಾನು ಇವುಗಳನ್ನು ಕೇಳಿ, ಕಂಡಾಗ, ನನಗೆ ಇವುಗಳನ್ನೆಲ್ಲ ತೋರಿಸಿದ ದೇವದೂತನನ್ನು ಆರಾಧಿಸುವುದಕ್ಕಾಗಿ ಅವನ ಪಾದಗಳಿಗೆ ಅಡ್ಡಬಿದ್ದೆನು. 9 ಆದರೆ ಆ ದೇವದೂತನು ನನಗೆ, “ನನ್ನನ್ನು ಆರಾಧಿಸಬೇಡ! ನಾನು ನಿನ್ನಂತೆ, ಈ ಪುಸ್ತಕದಲ್ಲಿರುವ ವಾಕ್ಯಗಳಿಗೆ ವಿಧೇಯರಾಗಿರುವ ಎಲ್ಲ ಜನರಂತೆ ಮತ್ತು ನಿನ್ನ ಸಹೋದರರಾದ ಪ್ರವಾದಿಗಳಂತೆ ಒಬ್ಬ ಸೇವಕನು. ನೀನು ದೇವರನ್ನು ಆರಾಧಿಸಬೇಕು!” ಎಂದು ಹೇಳಿದನು.
10 ಬಳಿಕ ದೇವದೂತನು ನನಗೆ, “ಈ ಪುಸ್ತಕದಲ್ಲಿರುವ ಪ್ರವಾದನೆಯ ವಾಕ್ಯಗಳನ್ನು ರಹಸ್ಯವಾಗಿಡಬೇಡ. ಇವುಗಳೆಲ್ಲವೂ ಸಂಭವಿಸುವ ಕಾಲ ಸಮೀಪಿಸಿದೆ. 11 ತಪ್ಪು ಮಾಡುತ್ತಿರುವವನು ತಪ್ಪುಮಾಡುತ್ತಲೇ ಮುಂದುವರಿಯಲು ಬಿಡು. ಅಶುದ್ಧನಾದವನು ಅಶುದ್ಧತೆಯಲ್ಲೇ ಮುಂದುವರಿಯಲು ಬಿಡು. ಯೋಗ್ಯವಾದುದನ್ನು ಮಾಡುವವನು ಯೋಗ್ಯವಾದುದನ್ನೇ ಮಾಡಲಿ. ಪರಿಶುದ್ಧನಾಗಿರುವವನು ಪರಿಶುದ್ಧನಾಗಿಯೇ ಇರಲಿ” ಎಂದು ಹೇಳಿದನು.
12 “ಕೇಳು! ನಾನು ಬೇಗನೆ ಬರುತ್ತೇನೆ! ನನ್ನೊಂದಿಗೆ ಪ್ರತಿಫಲವನ್ನು ತರುತ್ತೇನೆ. ಪ್ರತಿಯೊಬ್ಬ ವ್ಯಕ್ತಿಗೂ ಅವನು ಮಾಡಿದುದಕ್ಕೆ ತಕ್ಕ ಪ್ರತಿಫಲವನ್ನು ಕೊಡುತ್ತೇನೆ. 13 ನಾನೇ ಆದಿಯೂ ಅಂತ್ಯವೂ ಮೊದಲನೆಯವನೂ ಕಡೆಯವನೂ ಪ್ರಾರಂಭವೂ ಸಮಾಪ್ತಿಯೂ ಆಗಿದ್ದೇನೆ.
14 “ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡ ಜನರೇ ಧನ್ಯರು. ಅವರು ಜೀವವೃಕ್ಷದ ಹಣ್ಣನ್ನು ತಿನ್ನಲು ಹಕ್ಕುಳ್ಳವರಾಗಿದ್ದಾರೆ. ಅವರು ಬಾಗಿಲುಗಳ ಮೂಲಕ ನಗರದೊಳಕ್ಕೆ ಹೋಗಬಲ್ಲರು. 15 ನಗರದ ಹೊರಭಾಗದಲ್ಲಿ ನಾಯಿಗಳಿವೆ (ಕೆಟ್ಟಜನರು), ಕೆಟ್ಟ ಮಾಟವನ್ನು ಮಾಡುವ ಜನರಿದ್ದಾರೆ, ಲೈಂಗಿಕ ಪಾಪಗಳನ್ನು ಮಾಡುವ ಜನರಿದ್ದಾರೆ, ಕೊಲೆಗಾರರಿದ್ದಾರೆ, ವಿಗ್ರಹಗಳನ್ನು ಆರಾಧಿಸುವ ಜನರಿದ್ದಾರೆ ಮತ್ತು ಸುಳ್ಳನ್ನು ಪ್ರೀತಿಸುವ ಮತ್ತು ಹೇಳುವ ಜನರಿದ್ದಾರೆ.
16 “ಯೇಸುವೆಂಬ ನಾನೇ, ನನ್ನ ಸಭೆಗಳ ಪ್ರಯೋಜನಾರ್ಥವಾಗಿ ಈ ಸಂಗತಿಗಳ ಬಗ್ಗೆ ಸಾಕ್ಷಿ ನೀಡಲೆಂದು ನನ್ನ ದೂತನನ್ನು ಕಳುಹಿಸಿದೆನು. ದಾವೀದನ ವಂಶದಲ್ಲಿ ಹುಟ್ಟಿದವನೂ ಪ್ರಕಾಶಮಾನವಾದ ಉದಯನಕ್ಷತ್ರವೂ ಆಗಿದ್ದಾನೆ.”
17 ಆತ್ಮನೂ ಮದುಮಗಳೂ, “ಬಾ!” ಎನ್ನುತ್ತಾರೆ. ಇದನ್ನು ಕೇಳುವ ಪ್ರತಿಯೊಬ್ಬ ವ್ಯಕ್ತಿಯೂ, “ಬಾ!” ಎಂದು ಹೇಳಬೇಕು. ಬಾಯಾರಿದವನು ನನ್ನ ಬಳಿಗೆ ಬರಲಿ; ಅವನಿಗೆ ಇಷ್ಟವಿದ್ದರೆ ಜೀವಜಲವನ್ನು ಉಚಿತವಾಗಿ ಪಡೆದುಕೊಳ್ಳಲಿ.
18 ಈ ಪುಸ್ತಕದಲ್ಲಿರುವ ಪ್ರವಾದನೆಯ ವಾಕ್ಯಗಳನ್ನು ಕೇಳಿದ ಪ್ರತಿಯೊಬ್ಬರಿಗೂ ನಾನು ಎಚ್ಚರಿಕೆ ನೀಡುತ್ತೇನೆ: ಈ ವಾಕ್ಯಗಳಿಗೆ ಯಾರಾದರೂ ಏನನ್ನಾದರೂ ಸೇರಿಸಿದರೆ, ದೇವರು ಈ ಪುಸ್ತಕದಲ್ಲಿ ಬರೆದಿರುವ ಉಪದ್ರವಗಳನ್ನು ಅವನಿಗೆ ಕೊಡುತ್ತಾನೆ. 19 ಈ ಪ್ರವಾದನೆಯ ಪುಸ್ತಕದಿಂದ ಯಾರಾದರೂ ಏನನ್ನಾದರೂ ತೆಗೆದುಹಾಕಿದರೆ, ದೇವರು ಈ ಪುಸ್ತಕದಲ್ಲಿ ಬರೆದಿರುವ ಪವಿತ್ರಪಟ್ಟಣದಲ್ಲಿಯೂ ಜೀವವೃಕ್ಷದಲ್ಲಿಯೂ ಅವನಿಗಿರುವ ಪಾಲನ್ನು ತೆಗೆದುಹಾಕುತ್ತಾನೆ.
20 ಇವುಗಳೆಲ್ಲಾ ನಿಜವೆಂದು ಹೇಳುವಾತನು ಯೇಸುವೇ. ಈಗ ಆತನು, “ಹೌದು, ನಾನು ಬೇಗನೆ ಬರುತ್ತೇನೆ” ಎಂದು ಹೇಳುತ್ತಾನೆ.
ಆಮೆನ್! ಪ್ರಭು ಯೇಸುವೇ, ಬಾ!
21 ಪ್ರಭು ಯೇಸುವಿನ ಕೃಪೆಯು ಎಲ್ಲಾ ಜನರೊಂದಿಗಿರಲಿ.
4 “ಆ ನ್ಯಾಯತೀರ್ಪಿನ ದಿನವು ಬರುತ್ತಿದೆ. ಅದು ಕುಲುಮೆಯಂತೆ ತೀಕ್ಷ್ಣವಾಗಿರುವದು. ಅಹಂಕಾರಿಗಳೆಲ್ಲಾ ಶಿಕ್ಷಿಸಲ್ಪಡುವರು. ದುಷ್ಟಜನರೆಲ್ಲಾ ಹುಲ್ಲಿನಂತೆ ಸುಡುವರು. ಆ ಸಮಯದಲ್ಲಿ ಒಂದು ಪೊದೆ ಬೆಂಕಿಯಲ್ಲಿ ಸುಡುವಂತೆ ಸುಡುವರು. ಆದರೆ ಕೊಂಬೆ ಅಥವಾ ಬೇರು ಯಾವದೂ ಉಳಿಯುವದಿಲ್ಲ.” ಇದು ಸರ್ವಶಕ್ತನಾದ ಯೆಹೋವನ ನುಡಿ.
2 “ನನ್ನನ್ನು ಹಿಂಬಾಲಿಸುವವರ ಮೇಲೆ ಸೂರ್ಯನ ಪ್ರಕಾಶದಂತೆ ಶುಭವು ಪ್ರಕಾಶಿಸುವದು. ಸೂರ್ಯನ ಕಿರಣಗಳಂತೆ ಅದು ಗುಣಪಡಿಸುವ ಶಕ್ತಿಯನ್ನು ಹೊಂದುವದು. ಕೊಟ್ಟಿಗೆಯಿಂದ ಬಿಟ್ಟ ಕರುಗಳಂತೆ ನೀವು ಸ್ವತಂತ್ರರಾಗಿಯೂ ಸಂತೋಷವಾಗಿಯೂ ಇರುವಿರಿ. 3 ಆಗ ನೀವು ದುಷ್ಟಜನರ ಮೇಲೆ ನಡೆದುಕೊಂಡು ಹೋಗುವಿರಿ; ಅವರು ನಿಮ್ಮ ಕಾಲುಗಳ ಕೆಳಗೆ ಬೂದಿಯಂತಿರುವರು. ನ್ಯಾಯತೀರ್ಪಿನ ಸಮಯದಲ್ಲಿ ನಾನು ಹಾಗೆ ಮಾಡುವೆನು.” ಇದು ಸರ್ವಶಕ್ತನಾದ ಯೆಹೋವನ ನುಡಿ.
4 “ನನ್ನ ಸೇವಕನಾದ ಮೋಶೆಯ ಕಟ್ಟಳೆಗಳನ್ನು ಅನುಸರಿಸಲು ಮರೆಯಬೇಡಿ. ಹೋರೇಬ್ ಬೆಟ್ಟದಲ್ಲಿ ನಾನು ಆ ನ್ಯಾಯವಿಧಿಗಳನ್ನು ಅವನಿಗೆ ಕೊಟ್ಟೆನು. ಆ ಕಟ್ಟಳೆಗಳೆಲ್ಲಾ ಇಸ್ರೇಲ್ ಜನರಿಗಾಗಿ ಇರುವದು.”
5 ಯೆಹೋವನು ಹೀಗೆನ್ನುತ್ತಾನೆ, “ನಾನು ಪ್ರವಾದಿಯಾದ ಎಲೀಯನನ್ನು ನಿಮ್ಮ ಬಳಿಗೆ ಕಳುಹಿಸುವೆನು. ಅವನು ಯೆಹೋವನಿಂದ ಪ್ರಾಪ್ತಿಯಾಗುವ ಭಯಂಕರವಾದ ಮಹಾ ನ್ಯಾಯತೀರ್ಪಿನ ಕಾಲದಲ್ಲಿ ಬರುವನು. 6 ತಂದೆತಾಯಿಗಳು ಮಕ್ಕಳಿಗೂ ಮಕ್ಕಳು ತಂದೆತಾಯಿಗಳಿಗೂ ನಿಕಟ ಸಂಬಂಧಿಗಳಾಗುವಂತೆ ಅವನು ಮಾಡುವನು. ಇದು ನೆರವೇರಲೇಬೇಕು, ಇಲ್ಲದಿದ್ದಲ್ಲಿ ನಾನು ಬಂದು ನಿಮ್ಮ ದೇಶವನ್ನು ಸಂಪೂರ್ಣವಾಗಿ ನಾಶಮಾಡುವೆನು.”
ಏಳು ಮಂದಿ ಶಿಷ್ಯರಿಗೆ ಯೇಸುವಿನ ದರ್ಶನ
21 ತರುವಾಯ, ಯೇಸು ತನ್ನ ಶಿಷ್ಯರಿಗೆ ತಿಬೇರಿಯ (ಗಲಿಲಾಯ) ಸರೋವರದ ಬಳಿ ಕಾಣಿಸಿಕೊಂಡನು. ಅದು ಹೀಗೆ ನಡೆಯಿತು: 2 ಕೆಲವು ಶಿಷ್ಯರು ಒಟ್ಟಾಗಿ ಸೇರಿದ್ದರು. ಅವರು ಯಾರೆಂದರೆ, ಸೀಮೋನ್ ಪೇತ್ರ, ದಿದುಮನೆಂಬ ತೋಮ, ಗಲಿಲಾಯಕ್ಕೆ ಸೇರಿದ ಕಾನಾ ಊರಿನವನಾದ ನತಾನಿಯೇಲ, ಜೆಬೆದಾಯನ ಇಬ್ಬರು ಗಂಡುಮಕ್ಕಳು ಮತ್ತು ಇನ್ನಿಬ್ಬರು ಶಿಷ್ಯರು. 3 ಪೇತ್ರನು ಅವರಿಗೆ, “ನಾನು ಮೀನು ಹಿಡಿಯಲು ಹೋಗುತ್ತಿದ್ದೇನೆ” ಎಂದನು.
ಉಳಿದ ಶಿಷ್ಯರು, “ನಾವೂ ನಿನ್ನೊಂದಿಗೆ ಬರುತ್ತೇವೆ” ಎಂದು ಹೇಳಿದರು. ಅಂತೆಯೇ ಶಿಷ್ಯರೆಲ್ಲಾ ಹೊರಟು ದೋಣಿಯನ್ನು ಹತ್ತಿದರು. ಅವರು ರಾತ್ರಿಯೆಲ್ಲಾ ಬಲೆ ಬೀಸಿದರೂ ಒಂದು ಮೀನೂ ಸಿಗಲಿಲ್ಲ.
4 ಅಂದು ಮುಂಜಾನೆಯಾದಾಗ, ಯೇಸು ತೀರದಲ್ಲಿ ನಿಂತುಕೊಂಡಿದ್ದನು. ಆದರೆ ಆತನೇ ಯೇಸು ಎಂಬುದು ಶಿಷ್ಯರಿಗೆ ಗೊತ್ತಿರಲಿಲ್ಲ. 5 ಆಗ ಆತನು ತನ್ನ ಶಿಷ್ಯರಿಗೆ, “ಮಕ್ಕಳೇ, ನಿಮಗೆ ಮೀನು ಸಿಕ್ಕಿತೋ?” ಎಂದು ಕೇಳಿದನು.
ಶಿಷ್ಯರು, “ಇಲ್ಲ” ಎಂದು ಉತ್ತರಕೊಟ್ಟರು.
6 ಯೇಸು, “ನಿಮ್ಮ ದೋಣಿಯ ಬಲಭಾಗದಲ್ಲಿ ನಿಮ್ಮ ಬಲೆ ಬೀಸಿರಿ. ಅಲ್ಲಿ ಕೆಲವು ಮೀನುಗಳು ಸಿಕ್ಕುತ್ತವೆ” ಎಂದು ಹೇಳಿದನು. ಶಿಷ್ಯರು ಹಾಗೆಯೇ ಮಾಡಿದರು. ಬಹಳ ಮೀನುಗಳು ಸಿಕ್ಕಿಕೊಂಡದ್ದರಿಂದ ಅವರು ಬಲೆಯನ್ನು ದೋಣಿಯೊಳಗೆ ಎಳೆದುಕೊಳ್ಳಲಾಗಲಿಲ್ಲ.
7 ಯೇಸುವಿನ ಪ್ರೀತಿಯ ಶಿಷ್ಯನು ಪೇತ್ರನಿಗೆ, “ಆ ಮನುಷ್ಯನು ಪ್ರಭುವೇ!” ಎಂದು ಹೇಳಿದನು. ಕೂಡಲೇ ಪೇತ್ರನು ತನ್ನ ಅಂಗಿಯನ್ನು ಹಾಕಿಕೊಂಡು, ನೀರಿಗೆ ಧುಮುಕಿದನು. (ಪೇತ್ರನು ಮೀನು ಹಿಡಿಯುವುದಕ್ಕಾಗಿ ತನ್ನ ಅಂಗಿಯನ್ನು ಬಿಚ್ಚಿಟ್ಟಿದ್ದನು.) 8 ಉಳಿದ ಶಿಷ್ಯರು ದೋಣಿಯಲ್ಲಿ ತೀರಕ್ಕೆ ಹೋದರು. ಅವರು ಬಲೆತುಂಬ ಮೀನುಗಳನ್ನು ದಡಕ್ಕೆ ಎಳೆದುಕೊಂಡು ಹೋದರು. ಅವರು ದಡದಿಂದ ಬಹುದೂರದಲ್ಲೇನೂ ಇರಲಿಲ್ಲ. ಕೇವಲ ಮುನ್ನೂರು ಅಡಿಗಳಷ್ಟು ದೂರದಲ್ಲಿದ್ದರು. 9 ಶಿಷ್ಯರು ದೋಣಿಯಿಂದ ಇಳಿದು ದಡಕ್ಕೆ ಹೋದಾಗ, ಬೆಂಕಿಯ ಕೆಂಡಗಳನ್ನು ಕಂಡರು. ಬೆಂಕಿಯ ಮೇಲೆ ಮೀನುಗಳಿದ್ದವು ಮತ್ತು ಕೆಲವು ರೊಟ್ಟಿಗಳೂ ಅಲ್ಲಿದ್ದವು. 10 ಬಳಿಕ ಯೇಸು, “ನೀವು ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿರಿ” ಎಂದು ಹೇಳಿದನು.
11 ಸೀಮೋನ್ ಪೇತ್ರನು ದೋಣಿಯೊಳಕ್ಕೆ ಹೋಗಿ ಬಲೆಯನ್ನು ದಡಕ್ಕೆ ಎಳೆದುಕೊಂಡು ಬಂದನು. ಬಲೆಯು ದೊಡ್ಡ ಮೀನುಗಳಿಂದ ತುಂಬಿತ್ತು. ಅದರಲ್ಲಿ 153 ಮೀನುಗಳಿದ್ದವು. ಅವು ಬಹಳ ಭಾರವಾಗಿದ್ದರೂ ಬಲೆಯು ಹರಿದುಹೋಗಲಿಲ್ಲ. 12 ಯೇಸು ಅವರಿಗೆ, “ಬಂದು ಊಟ ಮಾಡಿ” ಎಂದು ಹೇಳಿದನು. ಶಿಷ್ಯರಲ್ಲಿ ಒಬ್ಬರಾದರೂ, “ನೀನು ಯಾರು?” ಎಂದು ಆತನನ್ನು ಕೇಳಲಿಲ್ಲ. ಆತನು ಪ್ರಭುವೆಂದು ಅವರಿಗೆ ತಿಳಿದಿತ್ತು. 13 ಯೇಸುವು ಸಮೀಪಕ್ಕೆ ಬಂದು ರೊಟ್ಟಿಯನ್ನು ಮತ್ತು ಮೀನುಗಳನ್ನು ತೆಗೆದುಕೊಂಡು ಅವರಿಗೆ ಕೊಟ್ಟನು.
14 ಯೇಸು ಪುನರುತ್ಥಾನ ಹೊಂದಿದ ಮೇಲೆ ತನ್ನ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಲ.
ಪೇತ್ರನೊಂದಿಗೆ ಯೇಸುವಿನ ಸಂಭಾಷಣೆ
15 ಅವರು ಊಟಮಾಡಿದ ಮೇಲೆ, ಯೇಸು ಸೀಮೋನ್ ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ಇಲ್ಲಿರುವ ಇವರು ನನ್ನನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಕೇಳಿದನು.
ಪೇತ್ರನು, “ಹೌದು ಪ್ರಭುವೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬುದು ನಿನಗೆ ಗೊತ್ತಿದೆ” ಎಂದನು.
ಯೇಸು ಪೇತ್ರನಿಗೆ, “ನನ್ನ ಕುರಿಮರಿಗಳನ್ನು[a] ಮೇಯಿಸು” ಎಂದನು.
16 ಎರಡನೆಯ ಸಾರಿ ಯೇಸು ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಕೇಳಿದನು.
ಪೇತ್ರನು, “ಹೌದು, ಪ್ರಭುವೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬುದು ನಿನಗೆ ಗೊತ್ತಿದೆ” ಎಂದನು.
ಯೇಸು ಪೇತ್ರನಿಗೆ, “ನನ್ನ ಕುರಿಗಳನ್ನು ಕಾಯಿ” ಎಂದನು.
17 ಯೇಸು ಮೂರನೆಯ ಸಾರಿ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಕೇಳಿದನು.
ಯೇಸು, “ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಮೂರು ಸಾರಿ ಕೇಳಿದ್ದರಿಂದ ಪೇತ್ರನಿಗೆ ದುಃಖವಾಯಿತು. ಪೇತ್ರನು, “ಪ್ರಭುವೇ, ನಿನಗೆ ಪ್ರತಿಯೊಂದೂ ತಿಳಿದಿದೆ. ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬುದು ನಿನಗೆ ಗೊತ್ತಿದೆ” ಎಂದನು.
ಯೇಸು ಪೇತ್ರನಿಗೆ, “ನನ್ನ ಕುರಿಗಳನ್ನು ಮೇಯಿಸು. 18 ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ನೀನು ಯೌವನಸ್ಥನಾಗಿದ್ದಾಗ, ನಡುಕಟ್ಟಿಕೊಂಡು ನಿನಗೆ ಇಷ್ಟವಾದ ಕಡೆಗೆಲ್ಲಾ ಹೋದೆ. ಆದರೆ ನೀನು ಮುದುಕನಾದಾಗ, ನಿನ್ನ ಕೈಗಳನ್ನು ಚಾಚುವೆ ಮತ್ತು ಬೇರೊಬ್ಬನು ನಿನ್ನ ನಡುಕಟ್ಟಿ ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ನಡೆಸಿಕೊಂಡು ಹೋಗುವನು” ಎಂದು ಹೇಳಿದನು. 19 (ದೇವರನ್ನು ಮಹಿಮೆಪಡಿಸುವುದಕ್ಕಾಗಿ ಪೇತ್ರನು ಯಾವ ರೀತಿ ಸಾಯುತ್ತಾನೆ ಎಂಬುದನ್ನು ಸೂಚಿಸಲು ಯೇಸು ಹೀಗೆ ಹೇಳಿದನು.) ಬಳಿಕ ಯೇಸು ಪೇತ್ರನಿಗೆ, “ನನ್ನನ್ನು ಹಿಂಬಾಲಿಸು!” ಎಂದನು.
20 ಪೇತ್ರನು ಹಿಂತಿರುಗಿ ನೋಡಿದಾಗ, ಯೇಸುವಿನ ಪ್ರೀತಿಯ ಶಿಷ್ಯನು ತಮ್ಮ ಹಿಂದೆ ನಡೆದುಕೊಂಡು ಬರುತ್ತಿರುವುದನ್ನು ಕಂಡನು. (ರಾತ್ರಿಭೋಜನದ ಸಮಯದಲ್ಲಿ ಯೇಸುವಿನ ಎದೆಯ ಕಡೆಗೆ ಬಾಗಿ, “ಪ್ರಭುವೇ, ನಿನಗೆ ದ್ರೋಹ ಮಾಡುವವನು ಯಾರು?” ಎಂದು ಕೇಳಿದ ಶಿಷ್ಯನೇ ಇವನು.) 21 ಪೇತ್ರನು ತಮ್ಮ ಹಿಂದೆ ಬರುತ್ತಿದ್ದ ಈ ಶಿಷ್ಯನನ್ನು ಕಂಡಾಗ ಯೇಸುವಿಗೆ, “ಪ್ರಭುವೇ, ಇವನ ವಿಷಯವೇನು?” ಎಂದು ಕೇಳಿದನು.
22 ಯೇಸು, “ನಾನು ಬರುವ ತನಕ ಅವನು ಜೀವದಿಂದ ಇರಬೇಕೆಂಬುದು ನನ್ನ ಇಷ್ಟವಾಗಿದ್ದರೆ ಅದರಿಂದ ನಿನಗೇನು? ನೀನು ನನ್ನನ್ನು ಹಿಂಬಾಲಿಸು!” ಎಂದು ಉತ್ತರಕೊಟ್ಟನು.
23 ಆದ್ದರಿಂದ ಸಹೋದರರ (ಶಿಷ್ಯರ) ಮಧ್ಯೆ ಒಂದು ಕಥೆಯೇ ಹರಡಿಕೊಂಡಿತು. ಯೇಸುವಿನ ಪ್ರೀತಿಯ ಈ ಶಿಷ್ಯನು ಸಾಯುವುದಿಲ್ಲವೆಂದು ಅವರು ಹೇಳುತ್ತಿದ್ದರು. ಆದರೆ ಅವನು ಸಾಯುವುದಿಲ್ಲವೆಂದು ಯೇಸು ಹೇಳಲಿಲ್ಲ. “ನಾನು ಬರುವ ತನಕ ಅವನು ಜೀವದಿಂದ ಇರಬೇಕೆಂಬುದು ನನ್ನ ಇಷ್ಟವಾಗಿದ್ದರೆ ಅದರಿಂದ ನಿನಗೇನು?” ಎಂದಷ್ಟೇ ಆತನು ಹೇಳಿದ್ದನು.
24 ಈ ಸಂಗತಿಗಳನ್ನು ಈಗ ಬರೆದಿರುವವನು ಮತ್ತು ಇವುಗಳ ವಿಷಯವಾಗಿ ಈಗ ಸಾಕ್ಷಿ ಹೇಳಿರುವ ಶಿಷ್ಯನು ಅವನೇ. ಅವನು ಹೇಳುವುದು ಸತ್ಯವೆಂದು ನಮಗೆ ಗೊತ್ತಿದೆ.
25 ಯೇಸು ಇತರ ಅನೇಕ ಕಾರ್ಯಗಳನ್ನು ಮಾಡಿದನು. ಅವುಗಳಲ್ಲಿ ಪ್ರತಿಯೊಂದನ್ನೂ ಬರೆಯುವುದಾದರೆ, ಬರೆಯಲ್ಪಡುವ ಪುಸ್ತಕಗಳನ್ನು ಇಡೀ ಪ್ರಪಂಚವೇ ಹಿಡಿಸಲಾರದೆಂದು ನಾನು ನೆನಸುತ್ತೇನೆ.
Kannada Holy Bible: Easy-to-Read Version. All rights reserved. © 1997 Bible League International