M’Cheyne Bible Reading Plan
ಯೋಷೀಯನು ಪಸ್ಕಹಬ್ಬವನ್ನು ಆಚರಿಸಿದ್ದು
35 ಅರಸನಾದ ಯೋಷೀಯನು ಯೆಹೋವನಿಗೆ ಪಸ್ಕಹಬ್ಬವನ್ನು ಜೆರುಸಲೇಮಿನಲ್ಲಿ ಆಚರಿಸಿದನು. ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿವಸದಲ್ಲಿ ಪಸ್ಕದ ಕುರಿಮರಿಯು ವಧಿಸಲ್ಪಟ್ಟಿತು. 2 ದೇವಾಲಯದಲ್ಲಿ ಸೇವೆ ಮಾಡುತ್ತಿದ್ದ ಯಾಜಕರನ್ನು ಯೋಷೀಯನು ಪ್ರೋತ್ಸಾಹಿಸಿ ವಿವಿಧ ಕೆಲಸಕಾರ್ಯಗಳಿಗೆ ಯಾಜಕರನ್ನು ಆರಿಸಿದನು. 3 ಎಲ್ಲಾ ಇಸ್ರೇಲರಿಗೆ ಉಪದೇಶಿಸತಕ್ಕವರೂ ಯೆಹೋವನಿಗೆ ಪ್ರತಿಷ್ಠಿತರೂ ಆದ ಲೇವಿಯರಿಗೆ ಯೋಷೀಯನು, “ದೇವರ ಒಡಂಬಡಿಕೆಯ ಪೆಟ್ಟಿಗೆಯನ್ನು ಸೊಲೊಮೋನನು ಕಟ್ಟಿದ ದೇವಾಲಯದೊಳಗೆ ಇಡಿರಿ. ಸೊಲೊಮೋನನು ಇಸ್ರೇಲಿನ ರಾಜನಾದ ದಾವೀದನ ಮಗ. ಆ ಪೆಟ್ಟಿಗೆಯನ್ನು ನಿಮ್ಮ ಹೆಗಲಿನ ಮೇಲೆ ಹೊತ್ತುಕೊಂಡು ಸ್ಥಳದಿಂದ ಸ್ಥಳಕ್ಕೆ ಹೋಗಬೇಡಿ; ನಿಮ್ಮ ದೇವರಾದ ಯೆಹೋವನ ಸೇವೆಮಾಡಿರಿ; ದೇವಜನರಾದ ಇಸ್ರೇಲರ ಸೇವೆಮಾಡಿರಿ. 4 ನಿಮ್ಮ ನಿಮ್ಮ ವಂಶಕ್ರಮದ ಮೇರೆಗೆ ದೇವಾಲಯದೊಳಗೆ ಸೇವೆಮಾಡಲು ನಿಮ್ಮನ್ನು ಸಿದ್ಧಮಾಡಿಕೊಳ್ಳಿರಿ. ಅರಸನಾದ ದಾವೀದನೂ ಅವನ ಮಗನಾದ ಸೊಲೊಮೋನನೂ ನಿಮಗೆ ಕೊಟ್ಟ ಸೇವಾ ಜವಾಬ್ದಾರಿಕೆಗಳನ್ನು ನಡಿಸಿರಿ. 5 ಪವಿತ್ರಸ್ಥಳದಲ್ಲಿ ಲೇವಿಯರೊಂದಿಗೆ ನಿಲ್ಲಿರಿ ಮತ್ತು ಬೇರೆ ಕುಲಗಳ ಜನರಿಗೂ ಸಹಾಯ ಮಾಡುವುದಕ್ಕಾಗಿ ಹೀಗೆ ಮಾಡಿರಿ. 6 ಪಸ್ಕದ ಕುರಿಮರಿಯನ್ನು ವಧಿಸಿ ಯೆಹೋವನಿಗಾಗಿ ನಿಮ್ಮನ್ನು ಶುದ್ಧಮಾಡಿಕೊಳ್ಳಿರಿ. ನಿಮ್ಮ ಸೋದರರಾದ ಇಸ್ರೇಲರಿಗೆ ಕುರಿಮರಿಯನ್ನು ಸಿದ್ಧಮಾಡಿರಿ. ಯೆಹೋವನು ನಮಗೆ ಆಜ್ಞಾಪಿಸಿದ್ದನ್ನೆಲ್ಲಾ ನೆರವೇರಿಸಿರಿ. ಆತನು ಮೋಶೆಯ ಮೂಲಕ ನಮಗೆ ಈ ವಿಧಿನಿಯಮಗಳನ್ನು ಅನುಗ್ರಹಿಸಿದ್ದಾನೆ” ಎಂದು ಹೇಳಿದನು.
7 ಇಸ್ರೇಲರಿಗೆ ಅರಸನಾದ ಯೋಷೀಯನು ಪಸ್ಕಹಬ್ಬದ ಯಜ್ಞಗಳಿಗಾಗಿ ಮೂವತ್ತು ಸಾವಿರ ಕುರಿಮರಿಗಳನ್ನು ಕೊಟ್ಟನು. ಇದರ ಮೇಲೆ ಮೂರು ಸಾವಿರ ಪಶುಗಳನ್ನು ಅವನು ಜನರಿಗೆ ಕೊಟ್ಟನು. ಈ ಪ್ರಾಣಿಗಳೆಲ್ಲಾ ಅರಸನಾದ ಯೋಷೀಯನದೇ ಆಗಿದ್ದವು. 8 ಯೋಷೀಯನ ಆಡಳಿತಾಧಿಕಾರಿಗಳೂ ಯಾಜಕರಿಗೆ, ಲೇವಿಯರಿಗೆ ಮತ್ತು ಜನರಿಗೆ ಧಾರಾಳವಾಗಿ ಪಶುಗಳನ್ನು ಕೊಟ್ಟರು. ಮಹಾಯಾಜಕನಾದ ಹಿಲ್ಕೀಯ, ಜೆಕರ್ಯ ಮತ್ತು ಯೆಹೀಯೇಲನು ದೇವಾಲಯದ ಮುಖ್ಯಸ್ತರಾಗಿದ್ದರು. ಅವರು ಯಾಜಕರಿಗೆ ಎರಡು ಸಾವಿರದ ಆರು ನೂರು ಕುರಿಗಳನ್ನು ಮತ್ತು ಆಡುಗಳನ್ನು, ಮೂನ್ನೂರು ಹೋರಿಗಳನ್ನು ಪಸ್ಕಹಬ್ಬದ ಯಜ್ಞಗಳಿಗಾಗಿ ಕೊಟ್ಟರು. 9 ಕೋನನ್ಯ, ಸೆಮಾಯ, ನೆತನೇಲ್ ಮತ್ತು ಇವರ ಸಹೋದರರು ಮತ್ತು ಹಷಲ್ಯ, ಯೆಗೀಯೇಲ್, ಯೋಜಾಬಾದ್ ಇವರು ಐನೂರು ಕುರಿಗಳನ್ನು ಆಡುಗಳನ್ನು ಮತ್ತು ಐನೂರು ಹೋರಿಗಳನ್ನು ಪಸ್ಕಹಬ್ಬದ ಯಜ್ಞಕ್ಕಾಗಿ ಲೇವಿಯರಿಗೆ ಕೊಟ್ಟರು. ಇವರು ಲೇವಿಯರ ನಾಯಕರಾಗಿದ್ದರು.
10 ಪಸ್ಕಹಬ್ಬದ ಆಚರಣೆಗಳಿಗೆ ಎಲ್ಲವೂ ಸಿದ್ಧವಾದಾಗ ಯಾಜಕರೂ ಲೇವಿಯರೂ ತಮ್ಮ ನೇಮಿತ ಸ್ಥಳಗಳಲ್ಲಿ ನಿಂತರು. ಇದು ಅರಸನ ಆಜ್ಞೆಯಾಗಿತ್ತು. 11 ಪಸ್ಕದ ಪಶುಗಳನ್ನು ವಧಿಸಿದ ಬಳಿಕ ಲೇವಿಯರು ಅದರ ಚರ್ಮ ಸುಲಿದು ಅದರ ರಕ್ತವನ್ನು ಯಾಜಕರಿಗೆ ಕೊಟ್ಟರು. ಆ ರಕ್ತವನ್ನು ಯಾಜಕರು ವೇದಿಕೆಯ ಮೇಲೆ ಚಿಮಿಕಿಸಿದರು. 12 ಆಮೇಲೆ ಬೇರೆಬೇರೆ ಕುಲಗಳವರಿಗೆ ಸರ್ವಾಂಗಹೋಮವನ್ನರ್ಪಿಸಲು ಪಶುಗಳನ್ನು ಕೊಟ್ಟರು. ಈ ಸರ್ವಾಂಗಹೋಮವು ಮೋಶೆಯ ಕಟ್ಟಳೆಗನುಸಾರವಾಗಿ ನಡೆಯಿತು. 13 ಲೇವಿಯರು ಪಸ್ಕದ ಪಶುಗಳ ಮಾಂಸವನ್ನು ಕಟ್ಟಳೆಯ ಪ್ರಕಾರ ಬೆಂಕಿಯಲ್ಲಿ ಸುಟ್ಟರು. ಪರಿಶುದ್ಧ ಯಜ್ಞದ ಮಾಂಸವನ್ನು ಪಾತ್ರೆಗಳಲ್ಲಿ ಮತ್ತು ಹಂಡೆಗಳಲ್ಲಿ ಬೇಯಿಸಿದರು. ಆಮೇಲೆ ಅವುಗಳನ್ನು ಜನರಿಗೆ ಹಂಚಿದರು. 14 ಬಳಿಕ ಲೇವಿಯರು ತಮಗಾಗಿಯೂ ಆರೋನನ ಸಂತತಿಯವರಾದ ಯಾಜಕರಿಗಾಗಿಯೂ ಮಾಂಸವನ್ನು ಸಿದ್ಧಮಾಡಿದರು. ಆ ಯಾಜಕರು ರಾತ್ರಿ ತನಕವೂ ಕೆಲಸದಲ್ಲಿ ನಿರತರಾಗಿದ್ದರು; ಸರ್ವಾಂಗಹೋಮಗಳನ್ನೂ ಪಶುಗಳ ಕೊಬ್ಬನ್ನೂ ಹೋಮಮಾಡುತ್ತಾ ಇದ್ದರು. 15 ಆಸಾಫನ ಕುಟುಂಬದವರಾದ ಲೇವಿಗಾಯಕರು ದಾವೀದನಿಂದ ನೇಮಕಗೊಂಡಿದ್ದ ಸ್ಥಳದಲ್ಲಿ ನಿಂತುಕೊಂಡರು. ಅವರು ಯಾರೆಂದರೆ: ಆಸಾಫ್, ಹೇಮಾನ್ ಮತ್ತು ಅರಸನ ಪ್ರವಾದಿಯಾಗಿದ್ದ ಯೆದೂತೂನ್. ದ್ವಾರಪಾಲಕರು ತಮ್ಮತಮ್ಮ ಸ್ಥಳಗಳಲ್ಲಿಯೇ ನಿಂತಿದ್ದರು. ಅವರು ತಮ್ಮ ಸ್ಥಳಗಳನ್ನು ಬಿಟ್ಟುಹೋಗುವ ಅಗತ್ಯವಿರಲಿಲ್ಲ ಯಾಕಂದೆರ ಪಸ್ಕದ ಯಜ್ಞಗಳನ್ನು ಅವರ ಸೋದರರಾದ ಲೇವಿಯರು ಅವರಿಗಾಗಿ ಮಾಡಿದರು.
16 ಹೀಗೆ ಅರಸನಾದ ಯೋಷೀಯನ ಆಜ್ಞೆಗನುಸಾರವಾಗಿ ಪಸ್ಕಹಬ್ಬದ ಪ್ರತಿಯೊಂದು ವಿಷಯವು ನಡೆಯಿತು. ಸರ್ವಾಂಗಹೋಮವನ್ನು ಯಜ್ಞವೇದಿಕೆಯಲ್ಲಿ ಸಮರ್ಪಿಸಿದರು. 17 ಇಸ್ರೇಲಿನ ಜನರೂ ಅಲ್ಲಿ ಸೇರಿಬಂದವರೂ ಪಸ್ಕಹಬ್ಬವನ್ನು ಮತ್ತು ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನು ಏಳು ದಿನಗಳವರೆಗೆ ಆಚರಿಸಿದರು. 18 ಪ್ರವಾದಿಯಾದ ಸಮುವೇಲನ ಕಾಲದಿಂದ ಈ ರೀತಿಯಾಗಿ ಪಸ್ಕಹಬ್ಬವನ್ನು ಎಂದೂ ಆಚರಿಸಿರಲಿಲ್ಲ. ಇಸ್ರೇಲರ ಅರಸರಲ್ಲಿ ಯಾರೂ ಈ ರೀತಿಯಾಗಿ ಹಬ್ಬ ಆಚರಿಸಿರಲಿಲ್ಲ. ಅರಸನಾದ ಯೋಷೀಯ, ಯಾಜಕರು, ಲೇವಿಯರು, ಯೆಹೂದದ ಜನರು, ಇಸ್ರೇಲಿನಿಂದ ಬಂದ ಜನರು ಮತ್ತು ಜೆರುಸಲೇಮಿನ ಜನರು ವಿಶೇಷ ರೀತಿಯಲ್ಲಿ ಪಸ್ಕಹಬ್ಬವನ್ನು ಆಚರಿಸಿದರು. 19 ಇದು ಯೋಷೀಯನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ನಡೆಯಿತು.
ಯೋಷೀಯನ ಮರಣ
20 ದೇವಾಲಯಕ್ಕಾಗಿ ಎಲ್ಲಾ ಒಳ್ಳೆಯ ಕಾರ್ಯಗಳನ್ನು ಯೋಷೀಯನು ಮಾಡಿದನು. ಸ್ವಲ್ಪಕಾಲವಾದ ಬಳಿಕ ಈಜಿಪ್ಟಿನ ಅರಸನಾದ ನೆಕೋ ಯೂಫ್ರೇಟೀಸ್ ನದಿಯ ಬಳಿಯಲ್ಲಿದ್ದ ಕರ್ಕೆಮೀಷ್ ಪಟ್ಟಣದ ಮೇಲೆ ಯುದ್ಧಮಾಡಲು ಹೊರಟನು. ಅರಸನಾದ ಯೋಷೀಯನು ನೆಕೋನ ಮೇಲೆ ಯುದ್ಧಮಾಡಲು ಹೊರಟನು. 21 ಆದರೆ ನೆಕೋ ಯೋಷೀಯನಿಗೆ ಸಂದೇಶವನ್ನು ಕಳುಹಿಸಿ ಅದರಲ್ಲಿ,
“ಅರಸನಾದ ಯೋಷೀಯನೇ, ನಾನು ನಿನಗೆ ವಿರುದ್ಧವಾಗಿ ಬರಲಿಲ್ಲ. ಆದ್ದರಿಂದ ನೀನು ಯುದ್ಧಕ್ಕೆ ಕೈಹಾಕಬೇಡ. ನಾನು ನನ್ನ ವೈರಿಗಳ ಮೇಲೆ ಯುದ್ಧಮಾಡಲು ಬಂದಿದ್ದೇನೆ. ಬೇಗನೆ ಯುದ್ಧಮಾಡಲು ದೇವರು ನನ್ನನ್ನು ಅವಸರಪಡಿಸುತ್ತಿದ್ದಾನೆ. ದೇವರು ನಿನ್ನೊಂದಿಗಿದ್ದಾನೆ. ಆದ್ದರಿಂದ ನನಗೆ ತೊಂದರೆ ಕೊಡಬೇಡ. ನೀನು ನನ್ನ ಮೇಲೆ ಯುದ್ಧ ಮಾಡಿದರೆ ದೇವರು ನಿನ್ನನ್ನು ನಾಶಮಾಡುವನು” ಎಂದು ಹೇಳಿದನು.
22 ಆದರೆ ಅರಸನಾದ ಯೋಷೀಯನು ಹಿಂದಕ್ಕೆ ಹೋಗಲಿಲ್ಲ. ಅವನು ನೆಕೋನನ್ನು ಎದುರಿಸಲು ನಿರ್ಧರಿಸಿದನು. ತನ್ನ ವೇಷ ಬದಲಾಯಿಸಿ ಯುದ್ಧಕ್ಕೆ ಹೋದನು. ದೇವರ ಅಪ್ಪಣೆಯ ಬಗ್ಗೆ ನೆಕೋ ಹೇಳಿದ್ದನ್ನು ಕೇಳಲು ಯೋಷೀಯನು ನಿರಾಕರಿಸಿ ಮೆಗಿದ್ದೋ ಕಣಿವೆಯಲ್ಲಿ ಯುದ್ಧಕ್ಕೆ ಹೊರಟನು. 23 ರಣರಂಗದಲ್ಲಿ ಅರಸನಾದ ಯೋಷೀಯನಿಗೆ ಬಾಣಗಳು ತಾಗಿದ್ದವು. ಆಗ ತನ್ನ ಸೇವಕರಿಗೆ, “ನನ್ನನ್ನು ಇಲ್ಲಿಂದ ಕೊಂಡೊಯ್ಯಿರಿ. ನಾನು ತೀವ್ರವಾಗಿ ಗಾಯಗೊಂಡಿದ್ದೇನೆ” ಅಂದನು.
24 ಆಗ ಸೇವಕರು ಯೋಷೀಯನನ್ನು ಅವನಿದ್ದ ರಥದಿಂದ ತೆಗೆದು ಅವನ ಜೊತೆಯಲ್ಲಿ ತಂದಿದ್ದ ಇನ್ನೊಂದು ರಥದಲ್ಲಿ ಹಾಕಿ ರಣರಂಗದಿಂದ ನೇರವಾಗಿ ಜೆರುಸಲೇಮಿಗೆ ಕೊಂಡೊಯ್ದರು. ಅಲ್ಲಿ ಅವನು ಸತ್ತನು. ಅವನ ಪೂರ್ವಿಕರ ಬಳಿಯಲ್ಲಿ ಅವನನ್ನು ಸಮಾಧಿಮಾಡಿದರು. ಅವನು ಸತ್ತದ್ದನ್ನು ಕೇಳಿ ಯೆಹೂದದ ಮತ್ತು ಜೆರುಸಲೇಮಿನ ಜನರು ತುಂಬಾ ಶೋಕಿಸಿದರು. 25 ಯೆರೆಮೀಯನು ಅವನ ಬಗ್ಗೆ ಶೋಕಗೀತೆಗಳನ್ನು ರಚಿಸಿ ಹಾಡಿದನು. ಆ ಗೀತೆಗಳನ್ನು ಗಂಡಸರು ಹೆಂಗಸರು ಈಗಲೂ ಹಾಡುತ್ತಾರೆ. ಯೋಷೀಯನ ಕುರಿತು ದುಃಖದ ಹಾಡನ್ನು ಹಾಡುವದು ಅವರಿಗೆ ರೂಢಿಯಾಗಿದೆ. ಆ ಗೀತೆಗಳನ್ನು ಮರಣದ ಹಾಡಿನ ಪುಸ್ತಕದಲ್ಲಿ ಬರೆಯಲಾಗಿದೆ.
26-27 ಯೋಷೀಯನು ಅರಸನಾಗಿದ್ದಾಗ ಮಾಡಿದ ಇತರ ಕಾರ್ಯಗಳನ್ನೂ ಅವನ ಆಳ್ವಿಕೆಯ ಪ್ರಾರಂಭದಿಂದ ಕೊನೆಯ ತನಕದ ವಿಷಯಗಳನ್ನೂ ಇಸ್ರೇಲಿನ ಮತ್ತು ಯೆಹೂದದ ಅರಸರ ಗ್ರಂಥದಲ್ಲಿ ಬರೆಯಲಾಗಿದೆ. ದೇವರ ಮೇಲೆ ಯೋಷೀಯನಿಗಿದ್ದ ಭಕ್ತಿಯನ್ನೂ ಅವನು ಯೆಹೋವನಿಗೆ ಹೇಗೆ ವಿಧೇಯನಾಗಿದ್ದನೆಂಬುದನ್ನೂ ಆ ಗ್ರಂಥದಲ್ಲಿ ವಿವರಿಸಿದೆ.
ನೂತನ ಜೆರುಸಲೇಮ್
21 ನಂತರ ನೂತನ ಪರಲೋಕವನ್ನು ಮತ್ತು ನೂತನ ಭೂಮಿಯನ್ನು[a] ನಾನು ನೋಡಿದೆನು. ಮೊದಲನೆ ಪರಲೋಕ ಮತ್ತು ಮೊದಲನೆ ಭೂಮಿ ಅದೃಶ್ಯವಾಗಿದ್ದವು. ಅಲ್ಲಿ ಸಮುದ್ರವಿರಲಿಲ್ಲ. 2 ಪರಿಶುದ್ಧ ನಗರವು ಪರಲೋಕದಿಂದ ದೇವರ ಬಳಿಯಿಂದ ಇಳಿದು ಬರುತ್ತಿರುವುದನ್ನು ನಾನು ನೋಡಿದೆನು. ಈ ಪರಿಶುದ್ಧ ನಗರವೇ ನೂತನ ಜೆರುಸಲೇಮ್. ವಧುವು ತನ್ನ ಪತಿಗಾಗಿ ಶೃಂಗರಿಸಿಕೊಳ್ಳುವಂತೆ ಅದನ್ನು ಸಿದ್ಧಪಡಿಸಿದ್ದರು.
3 ಸಿಂಹಾಸನದಿಂದ ಒಂದು ಗಟ್ಟಿಯಾದ ಧ್ವನಿಯನ್ನು ನಾನು ಕೇಳಿದೆನು. ಆ ಧ್ವನಿಯು, “ಈಗ ದೇವರ ಮನೆಯು ಜನರ ಸಂಗಡವಿದೆ. ಆತನು ಅವರೊಂದಿಗೆ ನೆಲೆಸುತ್ತಾನೆ. ಅವರು ಆತನವರಾಗಿರುತ್ತಾರೆ. ದೇವರು ತಾನೇ ಅವರೊಂದಿಗೆ ಇರುತ್ತಾನೆ ಮತ್ತು ಅವರ ದೇವರಾಗಿರುತ್ತಾನೆ. 4 ದೇವರು ಅವರ ಕಣ್ಣೀರನ್ನೆಲ್ಲ ಒರಸಿ ಬಿಡುವನು. ಅಲ್ಲಿ ಇನ್ನು ಮರಣವಿರುವುದಿಲ್ಲ, ದುಃಖವಿರುವುದಿಲ್ಲ, ಗೋಳಾಟವಿರುವುದಿಲ್ಲ ಮತ್ತು ನೋವಿರುವುದಿಲ್ಲ. ಹಳೆಯ ಮಾರ್ಗಗಳೆಲ್ಲ ಹೋಗಿಬಿಟ್ಟವು” ಎಂದು ಹೇಳಿತು.
5 ಸಿಂಹಾಸನದ ಮೇಲೆ ಕುಳಿತಿದ್ದವನು, “ನೋಡು! ನಾನು ಎಲ್ಲವನ್ನೂ ಹೊಸದಾಗಿ ಸೃಷ್ಟಿಸುತ್ತೇನೆ!” ಎಂದು ಹೇಳಿದನು. ನಂತರ ಆತನು, “ಈ ವಾಕ್ಯಗಳು ಸತ್ಯವಾದುವುಗಳೂ ನಂಬತಕ್ಕವುಗಳೂ ಆಗಿರುವುದರಿಂದ ಇವುಗಳನ್ನು ಬರೆ” ಎಂದು ಹೇಳಿದನು.
6 ಸಿಂಹಾಸನದ ಮೇಲೆ ಕುಳಿತಿದ್ದಾತನು ನನಗೆ ಹೀಗೆ ಹೇಳಿದನು: “ಎಲ್ಲವೂ ನೆರವೇರಿತು! ನಾನೇ ಆದಿಯೂ ಅಂತ್ಯವೂ ಆಗಿದ್ದೇನೆ. ನಾನೇ ಪ್ರಾರಂಭವೂ ಸಮಾಪ್ತಿಯೂ ಆಗಿದ್ದೇನೆ. ಬಾಯಾರಿದವರಿಗೆ ನಾನು ಜೀವಜಲದ ಬುಗ್ಗೆಯಿಂದ ನೀರನ್ನು ಉಚಿತವಾಗಿ ಕೊಡುತ್ತೇನೆ. 7 ಜಯಗಳಿಸುವವನು ಇದೆಲ್ಲವನ್ನು ಪಡೆಯುತ್ತಾನೆ. ನಾನು ಅವನ ದೇವರಾಗಿರುತ್ತೇನೆ, ಅವನು ನನ್ನ ಮಗನಾಗಿರುತ್ತಾನೆ. 8 ಆದರೆ ಹೇಡಿಗಳಿಗೆ, ನಂಬಿಕೆಯಿಲ್ಲದವರಿಗೆ, ಅಸಹ್ಯಕೃತ್ಯ ಮಾಡುವವರಿಗೆ, ಕೊಲೆಗಾರರಿಗೆ, ಲೈಂಗಿಕ ಪಾಪಮಾಡುವವರಿಗೆ, ಮಾಟಮಂತ್ರಗಾರರಿಗೆ, ವಿಗ್ರಹಾರಾಧಕರಿಗೆ, ಸುಳ್ಳುಗಾರರಿಗೆ ಸಿಕ್ಕುವ ಸ್ಥಳ ಬೆಂಕಿಗಂಧಕಗಳು ಉರಿಯುವ ಕೆರೆಯೇ. ಇದು ಎರಡನೆಯ ಮರಣವಾಗಿರುತ್ತದೆ.”
9 ಕಡೆಯ ಏಳು ಉಪದ್ರವಗಳನ್ನು ತಮ್ಮ ಪಾತ್ರೆಗಳಲ್ಲಿ ತುಂಬಿಕೊಂಡಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ನನ್ನ ಬಳಿಗೆ ಬಂದು, “ನನ್ನ ಸಂಗಡ ಬಾ. ಕುರಿಮರಿಯಾದಾತನ ಪತ್ನಿಯಾಗಲಿರುವ ವಧುವನ್ನು ನಾನು ನಿನಗೆ ತೋರಿಸುತ್ತೇನೆ” ಎಂದನು. 10 ಆ ದೇವದೂತನು ಪವಿತ್ರಾತ್ಮವಶನಾದ ನನ್ನನ್ನು ಬಹಳ ದೊಡ್ಡದಾದ ಮತ್ತು ಎತ್ತರವಾದ ಬೆಟ್ಟಕ್ಕೆ ಕೊಂಡೊಯ್ದನು. ದೇವದೂತನು ನನಗೆ ಪವಿತ್ರ ನಗರವಾದ ಜೆರುಸಲೇಮನ್ನು ತೋರಿಸಿದನು. ಆ ನಗರವು ಪರಲೋಕದೊಳಗಿಂದ ದೇವರ ಕಡೆಯಿಂದ ಇಳಿದುಬರುತ್ತಿತ್ತು.
11 ಆ ನಗರವು ದೇವರ ಪ್ರಭಾವದಿಂದ ಪ್ರಕಾಶಿಸುತ್ತಿತ್ತು. ಅದು ಬಹು ಬೆಲೆಬಾಳುವ ವಜ್ರದಂತೆ ಪ್ರಕಾಶಿಸುತ್ತಿತ್ತು. ಅಮೂಲ್ಯ ರತ್ನದಂತೆ ಹೊಳೆಯುತ್ತಿತ್ತು. 12 ಆ ನಗರಕ್ಕೆ ಹನ್ನೆರಡು ಬಾಗಿಲುಗಳುಳ್ಳ ಅತ್ಯಂತ ಎತ್ತರವಾದ ಗೋಡೆಯಿತ್ತು. ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ಮಂದಿ ದೇವದೂತರಿದ್ದರು. ಪ್ರತಿಯೊಂದು ಬಾಗಿಲಿನ ಮೇಲೂ ಇಸ್ರೇಲಿನ ಹನ್ನೆರಡು ಕುಲಗಳಲ್ಲಿ ಒಂದು ಕುಲದ ಹೆಸರನ್ನು ಬರೆಯಲಾಗಿತ್ತು. 13 ಪೂರ್ವದಿಕ್ಕಿನಲ್ಲಿ ಮೂರು ಬಾಗಿಲುಗಳು, ಉತ್ತರದಿಕ್ಕಿನಲ್ಲಿ ಮೂರು ಬಾಗಿಲುಗಳು, ದಕ್ಷಿಣದಿಕ್ಕಿನಲ್ಲಿ ಮೂರು ಬಾಗಿಲುಗಳು ಮತ್ತು ಪಶ್ಚಿಮದಿಕ್ಕಿನಲ್ಲಿ ಮೂರು ಬಾಗಿಲುಗಳು ಇದ್ದವು. 14 ಆ ನಗರದ ಗೋಡೆಗಳನ್ನು ಹನ್ನೆರಡು ಅಡಿಪಾಯದ ಕಲ್ಲುಗಳ ಮೇಲೆ ಕಟ್ಟಲಾಗಿತ್ತು. ಆ ಕಲ್ಲುಗಳ ಮೇಲೆ ಕುರಿಮರಿಯಾದಾತನ ಹನ್ನರೆಡು ಮಂದಿ ಅಪೊಸ್ತಲರ ಹೆಸರುಗಳನ್ನು ಬರೆಯಲಾಗಿತ್ತು.
15 ನನ್ನ ಸಂಗಡ ಮಾತನಾಡಿದ ದೇವದೂತನ ಬಳಿಯಲ್ಲಿ ಚಿನ್ನದ ಅಳತೆಗೋಲಿತ್ತು. ಆ ನಗರವನ್ನು, ಅದರ ಬಾಗಿಲುಗಳನ್ನು ಮತ್ತು ಅದರ ಗೋಡೆಯನ್ನು ದೇವದೂತನು ಆ ಕೋಲಿನಿಂದ ಅಳೆಯುತ್ತಿದ್ದನು. 16 ನಗರವನ್ನು ಚೌಕೋನವಾಗಿ ನಿರ್ಮಿಸಲಾಗಿತ್ತು. ಅದರ ಉದ್ದವು ಅದರ ಅಗಲದಷ್ಟಿತ್ತು. ದೇವದೂತನು ತನ್ನ ಅಳತೆಗೋಲಿನಿಂದ ನಗರವನ್ನು ಅಳೆದನು. ನಗರವು 1,500 ಮೈಲಿ ಉದ್ದ, 1,500 ಮೈಲಿ ಅಗಲ ಮತ್ತು 1,500 ಮೈಲಿ[b] ಎತ್ತರವಾಗಿತ್ತು. 17 ದೇವದೂತನು ಗೋಡೆಯನ್ನೂ ಅಳೆದನು. ಅದು ಮನುಷ್ಯರ ಮೊಳದಲ್ಲಿ 144 ಮೊಳವಿತ್ತು.[c] ದೇವದೂತನು ಉಪಯೋಗಿಸಿದ ಅಳತೆಮಾನವೇ ಅದು. 18 ಗೋಡೆಯನ್ನು ಸೂರ್ಯಕಾಂತ ಶಿಲೆಯಿಂದ ನಿರ್ಮಿಸಲಾಗಿತ್ತು. ನಗರವನ್ನು ಗಾಜಿನಷ್ಟು ಅಪ್ಪಟವಾದ ಚಿನ್ನದಿಂದ ನಿರ್ಮಿಸಲಾಗಿತ್ತು.
19 ನಗರದ ಗೋಡೆಯ ಅಡಿಪಾಯದ ಕಲ್ಲುಗಳಲ್ಲಿ ಸಕಲ ವಿಧವಾದ ಬೆಲೆಬಾಳುವ ರತ್ನಗಳಿದ್ದವು. ಮೊದಲನೆ ಮೂಲೆಗಲ್ಲು ವಜ್ರ, ಎರಡನೆಯದು ವೈಢೂರ್ಯ, ಮೂರನೆಯದು ಪಚ್ಚೆ, 20 ನಾಲ್ಕನೆಯದು ಪದ್ಮರಾಗ, ಐದನೆಯದು ಗೋಮೇಧಿಕ, ಆರನೆಯದು ಮಾಣಿಕ್ಯ, ಏಳನೆಯದು ಪೀತರತ್ನ, ಎಂಟನೆಯದು ಬೆರುಲ್ಲ, ಒಂಭತ್ತನೆಯದು ಪುಷ್ಯರಾಗ, ಹತ್ತನೆಯದು ಗರುಡಪಚ್ಚೆ, ಹನ್ನೊಂದನೆಯದು ಇಂದ್ರನೀಲ ಮತ್ತು ಹನ್ನೆರಡನೆಯದು ನೀಲಸ್ಫಟಿಕ. 21 ಹನ್ನೆರಡು ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿಯೊಂದು ಬಾಗಿಲು ಒಂದೊಂದು ಮುತ್ತಿನಿಂದ ಮಾಡಲ್ಪಟ್ಟಿತ್ತು. ನಗರದ ಬೀದಿಯು ಗಾಜಿನಂತೆ ಶುಭ್ರವಾಗಿದ್ದ ಅಪ್ಪಟ ಚಿನ್ನದಿಂದ ಮಾಡಲ್ಪಟ್ಟಿತ್ತು.
22 ನಾನು ನಗರದಲ್ಲಿ ಒಂದು ಆಲಯವನ್ನೂ ನೋಡಲಿಲ್ಲ. ಸರ್ವಶಕ್ತನಾದ ದೇವರಾದ ಪ್ರಭು ಮತ್ತು ಕುರಿಮರಿಯಾದಾತನು (ಯೇಸು) ನಗರದ ಆಲಯವಾಗಿದ್ದಾರೆ. 23 ನಗರದ ಮೇಲೆ ಸೂರ್ಯನಾಗಲಿ ಚಂದ್ರನಾಗಲಿ ಪ್ರಕಾಶಿಸುವ ಅಗತ್ಯವಿರಲಿಲ್ಲ. ದೇವರ ಪ್ರಭಾವವೇ ಆ ನಗರಕ್ಕೆ ಬೆಳಕನ್ನು ನೀಡುತ್ತಿತ್ತು. ಕುರಿಮರಿಯಾದಾತನು ನಗರಕ್ಕೆ ದೀಪವಾಗಿದ್ದನು.
24 ಕುರಿಮರಿಯಾದಾತನು ನೀಡಿದ ಬೆಳಕಿನಿಂದ ಲೋಕದ ಜನರು ನಡೆಯುತ್ತಾರೆ. ಲೋಕದ ರಾಜರುಗಳು ತಮ್ಮ ಸಿರಿಸಂಪತ್ತನ್ನು ನಗರಕ್ಕೆ ತರುತ್ತಾರೆ. 25 ನಗರದ ಬಾಗಿಲುಗಳು ಎಂದಿಗೂ ಮುಚ್ಚುವುದೇ ಇಲ್ಲ. ಏಕೆಂದರೆ ಅಲ್ಲಿ ರಾತ್ರಿಯೇ ಇಲ್ಲ. 26 ಜನಾಂಗಗಳ ವೈಭವ ಮತ್ತು ಗೌರವಗಳು ನಗರಕ್ಕೆ ಬರುತ್ತವೆ. 27 ಪರಿಶುದ್ಧವಾಗಿಲ್ಲದ ಯಾವುದೂ ನಗರವನ್ನು ಪ್ರವೇಶಿಸುವುದೇ ಇಲ್ಲ. ಅವಮಾನಕರವಾದ ಕಾರ್ಯಗಳನ್ನು ಮಾಡುವವನಾಗಲಿ ಸುಳ್ಳು ಹೇಳುವವನಾಗಲಿ ನಗರವನ್ನು ಎಂದಿಗೂ ಪ್ರವೇಶಿಸುವುದಿಲ್ಲ. ಕುರಿಮರಿಯಾದಾತನು ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರುಗಳನ್ನು ಬರೆದಿರುವನೋ ಅವರು ಮಾತ್ರ ಆ ನಗರವನ್ನು ಪ್ರವೇಶಿಸುವರು.
3 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: “ನನ್ನ ಮಾರ್ಗವನ್ನು ಸಿದ್ಧಮಾಡಲು ನಾನು ಮುಂದೂತನನ್ನು ಕಳುಹಿಸುತ್ತೇನೆ. ನೀವು ಹುಡುಕುತ್ತಿರುವ ಧಣಿಯು ತನ್ನ ಆಲಯಕ್ಕೆ ಬರುತ್ತಾನೆ. ಹೌದು, ನಿಮಗೆ ಬೇಕಾಗಿರುವ ಹೊಸ ಒಡಂಬಡಿಕೆಯ ಸಂದೇಶಕನು ನಿಜವಾಗಿಯೂ ಬರುತ್ತಿದ್ದಾನೆ.
2 “ಆ ಸಮಯಕ್ಕಾಗಿ ಯಾರೂ ಸಿದ್ಧಮಾಡಿಕೊಳ್ಳಲಾರರು. ಯಾರೂ ಆತನು ಬರುವಾಗ ಆತನಿಗೆ ವಿರುದ್ಧವಾಗಿ ನಿಲ್ಲರು. ಆತನು ಸುಡುವ ಬೆಂಕಿಯಾಗಿರುವನು. ಆತನು ಶಕ್ತಿಯುತವಾದ ಸಾಬೂನಿನಂತೆ ಕೊಳೆಯನ್ನು ಹೋಗಲಾಡಿಸಿ ಶುದ್ಧಮಾಡುವನು. 3 ಆತನು ಲೇವಿಯರನ್ನು ಶುದ್ಧಮಾಡುವನು. ಅವರನ್ನು ಬೆಂಕಿಯಿಂದ ಪರಿಶುದ್ಧ ಮಾಡುವನು. ಶುದ್ಧ ಬೆಳ್ಳಿ ಚಿನ್ನದಂತೆ ಆತನು ಅವರನ್ನು ಶುದ್ಧಿಮಾಡುವನು. ಆಗ ಅವರು ಯೆಹೋವನಿಗೆ ಕಾಣಿಕೆಗಳನ್ನು ತರುವರು; ಸರಿಯಾದ ರೀತಿಯಲ್ಲಿ ಕಾಣಿಕೆಗಳನ್ನು ಅರ್ಪಿಸುವರು. 4 ಜೆರುಸಲೇಮಿನಿಂದಲೂ ಯೆಹೂದದಿಂದಲೂ ಯೆಹೋವನು ಕಾಣಿಕೆಗಳನ್ನು ಸ್ವೀಕರಿಸುವನು. ಹಿಂದಿನ ಕಾಲದಲ್ಲಿದ್ದಂತೆಯೇ ಈಗಲೂ ಆಗುವದು. ಬಹಳ ವರ್ಷಗಳ ಹಿಂದಿನ ಕಥೆಯೇ ಈಗಲೂ ಆಗುವದು. 5 ಆಗ ನಾನು ನಿಮ್ಮ ಬಳಿಗೆ ಬಂದು ಯೋಗ್ಯವಾದ ಕಾರ್ಯವನ್ನು ಮಾಡುವೆನು. ದುಷ್ಟ ಕ್ರಿಯೆಗಳನ್ನು ಮಾಡಿದ ಜನರ ಬಗ್ಗೆ ನ್ಯಾಯಾಧೀಶರೊಡನೆ ದೂರು ಹೇಳುವ ಮನುಷ್ಯನಂತಿರುವೆನು. ಕೆಲವರು ಮಾಟಮಂತ್ರ ಮಾಡುವರು; ಕೆಲವರು ವ್ಯಭಿಚಾರ ಮಾಡುವರು; ಕೆಲವರು ಸುಳ್ಳು ವಾಗ್ದಾನಗಳನ್ನು ಮಾಡುವರು; ಕೆಲವರು ಕೂಲಿಯಾಳುಗಳಿಗೆ ಹೇಳಿದ ಕೂಲಿಯನ್ನು ಕೊಡದೆ ಅವರಿಗೆ ಮೋಸಮಾಡುವರು. ಜನರು ವಿಧವೆಯರಿಗೂ ಅನಾಥರಿಗೂ ಸಹಾಯ ಮಾಡುವದಿಲ್ಲ. ಪರದೇಶಿಗಳಿಗೆ ಸಹಾಯ ಮಾಡುವದಿಲ್ಲ. ನನಗೆ ಗೌರವ ಸಲ್ಲಿಸುವದಿಲ್ಲ.” ಇದು ಸರ್ವಶಕ್ತನಾದ ಯೆಹೋವನ ನುಡಿ.
ದೇವರಿಂದ ಕದ್ದುಕೊಳ್ಳುವದು
6 “ನಾನು ದೇವರಾದ ಯೆಹೋವನು. ನಾನು ಬದಲಾಗದ ದೇವರು. ನೀವು ಯಾಕೋಬನ ಮಕ್ಕಳು. ನೀವು ಸಂಪೂರ್ಣವಾಗಿ ನಾಶ ಹೊಂದಲಿಲ್ಲ. 7 ನೀವು ನನ್ನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ನಿಮ್ಮ ಪೂರ್ವಿಕರು ನನ್ನನ್ನು ಅನುಸರಿಸುವದನ್ನು ನಿಲ್ಲಿಸಿಬಿಟ್ಟಿದ್ದರು. ನೀವು ಹಿಂತಿರುಗಿ ನನ್ನ ಬಳಿಗೆ ಬಂದರೆ ನಾನು ನಿಮ್ಮ ಬಳಿಗೆ ಬರುವೆನು.” ಇದು ಸರ್ವಶಕ್ತನಾದ ಯೆಹೋವನ ನುಡಿ.
“ನಾವು ಹೇಗೆ ಹಿಂತಿರುಗಿ ಬರಬಹುದು?” ಎಂದು ನೀವು ಕೇಳುತ್ತೀರೋ?
8 ದೇವರಿಂದ ಕದ್ದುಕೊಳ್ಳುವದನ್ನು ನಿಲ್ಲಿಸಿರಿ. ಮನುಷ್ಯನು ದೇವರಿಂದ ಕದ್ದುಕೊಳ್ಳಬಾರದು. ಆದರೆ ನೀವು ನನ್ನಿಂದ ಕದ್ದುಕೊಂಡಿದ್ದೀರಿ.
“ನಿನ್ನಿಂದ ಏನು ಕದ್ದುಕೊಂಡಿದ್ದೇವೆ” ಎಂದು ಕೇಳುತ್ತೀರಾ?
“ನಿಮ್ಮ ದಶಮ ಭಾಗವನ್ನು ನೀವು ನನಗೆ ಅರ್ಪಿಸಬೇಕಿತ್ತು. ವಿಶೇಷ ಕಾಣಿಕೆಗಳನ್ನು ನೀವು ನನಗೆ ಕೊಡಬೇಕಾಗಿತ್ತು. ಆದರೆ ನೀವು ಹಾಗೆ ಮಾಡಲಿಲ್ಲ. 9 ಈ ರೀತಿಯಾಗಿ ನಿಮ್ಮ ಇಡೀ ಜನಾಂಗವೇ ನನ್ನಿಂದ ಕದ್ದುಕೊಂಡಿದ್ದಾರೆ. ಆದ್ದರಿಂದ ನಿಮಗೆ ದುರ್ದೆಶೆ ಸಂಭವಿಸುತ್ತಲಿದೆ.” ಇದು ಸರ್ವಶಕ್ತನಾದ ಯೆಹೋವನ ನುಡಿ.
10 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನೀವು ಈ ಪರೀಕ್ಷೆ ಮಾಡಿನೋಡಿ. ನಿಮ್ಮ ವಸ್ತುಗಳ ಹತ್ತನೇ ಒಂದು ಅಂಶವನ್ನು ನನಗೆ ತೆಗೆದುಕೊಂಡು ಬನ್ನಿರಿ. ಅವುಗಳನ್ನು ಆಲಯದ ಬಂಡಾರದೊಳಗೆ ಹಾಕಿರಿ. ನನ್ನ ಮನೆಗೆ ನೀವು ಆಹಾರ ವಸ್ತುಗಳನ್ನು ತನ್ನಿರಿ. ನನ್ನನ್ನು ಪರೀಕ್ಷಿಸಿರಿ. ನೀವು ಹೀಗೆ ಮಾಡುವುದಾದರೆ ಖಂಡಿತವಾಗಿಯೂ ನಾನು ನಿಮ್ಮನ್ನು ಆಶೀರ್ವದಿಸುವೆನು. ಆಕಾಶದಿಂದ ಮಳೆ ಸುರಿಯುವ ಹಾಗೆ ನಿಮಗೆ ಶುಭವು ಸುರಿಯುವವು. ನಿಮ್ಮ ಮನೆಯಲ್ಲಿ ಬೇಕಾಗಿರುವದಕ್ಕಿಂತ ಹೆಚ್ಚು ಯಾವಾಗಲೂ ಇರುವದು. 11 ನಿಮ್ಮ ಬೆಳೆಗಳು ಹುಳಗಳಿಂದ ನಾಶವಾಗದಂತೆ ನಾನು ಸಂರಕ್ಷಿಸುವೆನು; ನಿಮ್ಮ ದ್ರಾಕ್ಷಾಲತೆಗಳೆಲ್ಲಾ ದ್ರಾಕ್ಷಿಯನ್ನು ಫಲಿಸುವವು.” ಇದು ಸರ್ವಶಕ್ತನಾದ ಯೆಹೋವನ ನುಡಿ.
12 “ಇತರ ಜನಾಂಗಗಳವರು ನಿಮ್ಮೊಂದಿಗೆ ಸಮಾಧಾನದಿಂದಿರುವರು. ನಿಜವಾಗಿಯೂ ನಿಮ್ಮ ದೇಶವು ಆಗ ಆಶ್ಚರ್ಯಕರವಾದ ದೇಶವಾಗಿರುವುದು.” ಇದು ಸರ್ವಶಕ್ತನಾದ ಯೆಹೋವನ ನುಡಿ.
ನ್ಯಾಯತೀರ್ಪಿನ ವಿಶೇಷ ಕಾಲ
13 ಯೆಹೋವನು ಹೀಗೆನ್ನುತ್ತಾನೆ, “ನೀವು ನನಗೆ ವಿರುದ್ಧವಾಗಿ ಹೇಯ ಮಾತುಗಳನ್ನಾಡಿದಿರಿ.”
ಅದಕ್ಕೆ ನೀವು “ನಿನ್ನ ವಿರುದ್ಧವಾಗಿ ಏನು ಹೇಳಿದ್ದೇವೆ?” ಎಂದು ಕೇಳುತ್ತೀರಿ.
14 ನೀವು, “ದೇವರಾದ ಯೆಹೋವನನ್ನು ಆರಾಧಿಸುವುದು ನಿಷ್ಪ್ರಯೋಜಕ. ಆತನ ಕಟ್ಟಳೆಗಳನ್ನು ನಾವು ಅನುಸರಿಸಿದೆವು. ಆದರೆ ಅದರಲ್ಲಿ ನಮಗೇನೂ ಲಾಭವಾಗಲಿಲ್ಲ. ಸಮಾಧಿಯಲ್ಲಿ ಜನರು ರೋದಿಸುವ ಹಾಗೆ ನಮ್ಮ ಪಾಪಗಳಿಗಾಗಿ ನಾವು ರೋದಿಸಿದೆವು. ಆದರೆ ಅದರಿಂದ ನಮಗೇನೂ ಸಹಾಯವಾಗಲಿಲ್ಲ. 15 ಗರ್ವಿಷ್ಟರು ಸಂತೋಷವಾಗಿದ್ದಾರೆ ಎಂದು ನಾವು ತಿಳಿಯುತ್ತೇವೆ. ದುಷ್ಟಜನರು ಸಫಲತೆ ಹೊಂದುತ್ತಿದ್ದಾರೆ, ದೇವರ ತಾಳ್ಮೆಯನ್ನು ಪರೀಕ್ಷಿಸಲು ದುಷ್ಕೃತ್ಯಗಳನ್ನು ಮಾಡುತ್ತಿದ್ದಾರೆ. ಆದರೆ ದೇವರು ಅವರನ್ನು ಶಿಕ್ಷಿಸಲಿಲ್ಲ” ಎಂದು ಹೇಳಿದಿರಿ.
16 ದೇವರನ್ನು ಅನುಸರಿಸುವ ಭಕ್ತರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳಲು ಯೆಹೋವನು ಆಲೈಸಿದನು. ಆತನ ಮುಂದೆ ದೇವಜನರ ಹೆಸರುಗಳನ್ನು ಬರೆದಿರುವ ಒಂದು ಪುಸ್ತಕವಿತ್ತು. ಯೆಹೋವನ ಹೆಸರನ್ನು ಘನಪಡಿಸುವವರ ಹೆಸರುಗಳು ಅದರಲ್ಲಿದ್ದವು.
17 ಯೆಹೋವನು ಹೇಳುವುದೇನೆಂದರೆ, “ಅವರು ನನ್ನ ಜನರು. ನಾನು ಅವರಿಗೆ ಕರುಣೆ ತೋರಿಸುವೆನು. ತಂದೆಯು ತನಗೆ ವಿಧೇಯತೆ ತೋರಿಸುವ ತನ್ನ ಮಕ್ಕಳಿಗೆ ಕನಿಕರವುಳ್ಳವನಾಗಿರುತ್ತಾನೆ. ಅದೇ ರೀತಿಯಲ್ಲಿ ನನ್ನನ್ನು ಅನುಸರಿಸುವವರ ಮೇಲೆ ನಾನು ದಯೆ ತೋರಿಸುವೆನು. 18 ನೀವು ನನ್ನ ಬಳಿಗೆ ಹಿಂತಿರುಗಿ ಬರುವಿರಿ. ಆಗ ನೀವು ಒಳ್ಳೆಯವರಿಗೂ ಕೆಟ್ಟವರಿಗೂ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳುವಿರಿ. ಆಗ ನೀವು ದೇವರನ್ನು ಹಿಂಬಾಲಿಸುವವರಿಗೂ ಹಿಂಬಾಲಿಸದೆ ಇರುವವರಿಗೂ ಇರುವ ವ್ಯತ್ಯಾಸವನ್ನು ನೋಡುವಿರಿ.
ಬರಿದಾದ ಸಮಾಧಿ
(ಮತ್ತಾಯ 28:1-10; ಮಾರ್ಕ 16:1-8; ಲೂಕ 24:1-12)
20 ಭಾನುವಾರದ ಮುಂಜಾನೆ ಮಗ್ದಲದ ಮರಿಯಳು ಯೇಸುವಿನ ದೇಹವಿದ್ದ ಸಮಾಧಿಯ ಬಳಿಗೆ ಬಂದಳು. ಆಗ ಇನ್ನೂ ಕತ್ತಲಿತ್ತು. ಸಮಾಧಿಯ ಬಾಗಿಲಿಗೆ ಮುಚ್ಚಿದ್ದ ದೊಡ್ಡ ಕಲ್ಲು ಅಲ್ಲಿಂದ ತೆಗೆದುಹಾಕಲ್ಪಟ್ಟಿರುವುದನ್ನು ಕಂಡ ಮರಿಯಳು 2 ಸೀಮೋನ್ ಪೇತ್ರನ ಮತ್ತು (ಯೇಸು ಪ್ರೀತಿಸುತ್ತಿದ್ದ) ಮತ್ತೊಬ್ಬ ಶಿಷ್ಯನ ಬಳಿಗೆ ಓಡಿಬಂದು, “ಅವರು ಸಮಾಧಿಯೊಳಗಿಂದ ಪ್ರಭುವನ್ನು ತೆಗೆದುಕೊಂಡಿದ್ದಾರೆ, ಆತನನ್ನು ಎಲ್ಲಿಟ್ಟಿದ್ದಾರೋ ನಮಗೆ ಗೊತ್ತಿಲ್ಲ” ಎಂದು ಹೇಳಿದಳು.
3 ಆದ್ದರಿಂದ ಪೇತ್ರನು ಮತ್ತು ಮತ್ತೊಬ್ಬ ಶಿಷ್ಯನು ಸಮಾಧಿಯ ಬಳಿಗೆ ಹೊರಟರು. 4 ಅವರಿಬ್ಬರೂ ಓಡುತ್ತಾ ಹೋದರು. ಆದರೆ ಆ ಮತ್ತೊಬ್ಬ ಶಿಷ್ಯನು ಪೇತ್ರನಿಗಿಂತಲೂ ವೇಗವಾಗಿ ಓಡುತ್ತಾ ಹೋಗಿ ಸಮಾಧಿಯನ್ನು ಮೊದಲು ತಲುಪಿದನು. 5 ಆ ಶಿಷ್ಯನು ಬಗ್ಗಿ ಒಳಗೆ ನೋಡಿದನು.
6 ನಾರುಬಟ್ಟೆಯ ತುಂಡುಗಳು ಅಲ್ಲಿ ಬಿದ್ದಿರುವುದನ್ನು ಅವನು ಕಂಡನು. 7 ಅಲ್ಲದೆ ಯೇಸುವಿನ ತಲೆಗೆ ಸುತ್ತಿದ್ದ ಬಟ್ಟೆಯನ್ನೂ ಅವನು ಕಂಡನು. ಆ ಬಟ್ಟೆಯು ಸುತ್ತಲ್ಪಟ್ಟು, ಇತರ ನಾರುಬಟ್ಟೆಗಳಿಂದ ಪ್ರತ್ಯೇಕವಾಗಿ ಬಿದ್ದಿತ್ತು. 8 ಬಳಿಕ ಆ ಮತ್ತೊಬ್ಬ ಶಿಷ್ಯನು ಒಳಗೆ ಹೋದನು. ಸಮಾಧಿಯನ್ನು ಮೊದಲು ತಲುಪಿದವನೇ ಆ ಶಿಷ್ಯನು. ಅವನು ಸಂಭವಿಸಿರುವುದನ್ನು ಕಂಡು ನಂಬಿಕೊಂಡನು. 9 (ಯೇಸು ಸತ್ತು ಜೀವಂತವಾಗಿ ಎದ್ದುಬರಬೇಕೆಂಬುದಾಗಿ ಪವಿತ್ರ ಗ್ರಂಥದಲ್ಲಿ ಬರೆದಿರುವುದು ಈ ಶಿಷ್ಯರಿಗೆ ಇನ್ನೂ ಅರ್ಥವಾಗಿರಲಿಲ್ಲ.)
ಮಗ್ದಲದ ಮರಿಯಳಿಗೆ ಯೇಸುವಿನ ದರ್ಶನ
(ಮಾರ್ಕ 16:9-11)
10 ಬಳಿಕ ಶಿಷ್ಯರು ಹಿಂತಿರುಗಿ ಮನೆಗೆ ಹೋದರು. 11 ಆದರೆ ಮರಿಯಳು ಅಳುತ್ತಾ ಸಮಾಧಿಯ ಹೊರಗೆ ನಿಂತುಕೊಂಡಿದ್ದಳು. ಆಕೆ ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ, 12 ಬಿಳುಪಾದ ಬಟ್ಟೆಗಳನ್ನು ಧರಿಸಿಕೊಂಡಿದ್ದ ಇಬ್ಬರು ದೇವದೂತರನ್ನು ಕಂಡಳು. ಯೇಸುವಿನ ದೇಹವನ್ನು ಇಟ್ಟಿದ್ದ ಸ್ಥಳದಲ್ಲಿ ಅವರಲ್ಲೊಬ್ಬನು ಯೇಸುವಿನ ತಲೆಯಿದ್ದ ಕಡೆಯಲ್ಲಿಯೂ ಮತ್ತೊಬ್ಬನು ಪಾದವಿದ್ದ ಕಡೆಯಲ್ಲಿಯೂ ಕುಳಿತುಕೊಂಡಿದ್ದನು.
13 ದೇವದೂತರು ಮರಿಯಳಿಗೆ, “ಅಮ್ಮಾ, ಏಕೆ ಅಳುತ್ತಿರುವೆ?” ಎಂದು ಕೇಳಿದರು.
ಮರಿಯಳು, “ನನ್ನ ಪ್ರಭುವಿನ ದೇಹವನ್ನು ಕೆಲವು ಜನರು ತೆಗೆದುಕೊಂಡು ಹೋಗಿದ್ದಾರೆ. ಅವರು ಆತನನ್ನು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟಳು. 14 ಮರಿಯಳು ಹೀಗೆ ಹೇಳಿ ಹಿಂದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿಂತಿರುವುದನ್ನು ಕಂಡಳು. ಆದರೆ ಆತನು ಯೇಸು ಎಂಬುದು ಆಕೆಗೆ ಗೊತ್ತಿರಲಿಲ್ಲ.
15 ಯೇಸು ಆಕೆಯನ್ನು “ಅಮ್ಮಾ ಏಕೆ ಅಳುತ್ತಿರುವೆ? ನೀನು ಯಾರನ್ನು ಹುಡುಕುತ್ತಿರುವೆ?” ಎಂದು ಕೇಳಿದನು.
ಇವನು ತೋಟವನ್ನು ನೋಡಿಕೊಳ್ಳುವವನಿರಬಹುದೆಂದು ಮರಿಯಳು ಯೋಚಿಸಿಕೊಂಡು ಅವನಿಗೆ, “ಅಯ್ಯಾ, ನೀನು ಯೇಸುವನ್ನು ತೆಗೆದುಕೊಂಡು ಹೋದೆಯಾ? ಆತನನ್ನು ಎಲ್ಲಿಟ್ಟಿರುವೆ, ನನಗೆ ಹೇಳು. ನಾನು ಹೋಗಿ ಆತನನ್ನು ತೆಗೆದು ಕೊಳ್ಳುತ್ತೇನೆ” ಎಂದು ಹೇಳಿದಳು.
16 ಯೇಸು ಆಕೆಗೆ, “ಮರಿಯಳೇ” ಎಂದನು.
ಮರಿಯಳು ಯೇಸುವಿನ ಕಡೆಗೆ ತಿರುಗಿ, ಯೆಹೂದ್ಯರ ಭಾಷೆಯಲ್ಲಿ “ರಬ್ಬೂನಿ” ಎಂದಳು. (ರಬ್ಬೂನಿ ಎಂದರೆ “ಗುರು”.)
17 ಯೇಸು ಆಕೆಗೆ, “ನನ್ನನ್ನು ಮುಟ್ಟಬೇಡ. ನಾನು ತಂದೆಯ ಬಳಿಗೆ ಇನ್ನೂ ಹಿಂತಿರುಗಿ ಹೋಗಿಲ್ಲ. ಆದರೆ ನೀನು ನನ್ನ ಸಹೋದರರ (ಶಿಷ್ಯರ) ಬಳಿಗೆ ಹೋಗಿ, ‘ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ನಾನು ಹಿಂತಿರುಗಿ ಹೋಗುತ್ತಿದ್ದೇನೆ’ ಎಂಬುದಾಗಿ ಹೇಳು” ಎಂದನು.
18 ಮಗ್ದಲದ ಮರಿಯಳು ಶಿಷ್ಯರ ಬಳಿಗೆ ಹೋಗಿ, “ನಾನು ಪ್ರಭುವನ್ನು ಕಂಡೆನು!” ಎಂದು ಹೇಳಿದಳು. ಮತ್ತು ಯೇಸು ಹೇಳಿದ ಸಂಗತಿಗಳನ್ನು ಆಕೆ ಅವರಿಗೆ ತಿಳಿಸಿದಳು.
ಶಿಷ್ಯರಿಗೆ ಯೇಸುವಿನ ದರ್ಶನ
(ಮತ್ತಾಯ 28:16-20; ಮಾರ್ಕ 16:14-18; ಲೂಕ 24:36-49)
19 ಅಂದು ಭಾನುವಾರ, ಅದೇ ಸಾಯಂಕಾಲ ಶಿಷ್ಯರು ಒಟ್ಟಾಗಿ ಸೇರಿದ್ದರು. ಅವರು ಯೆಹೂದ್ಯರಿಗೆ ಹೆದರಿ ಬಾಗಿಲುಗಳನ್ನು ಮುಚ್ಚಿಕೊಂಡು ಒಳಗೇ ಇದ್ದರು. ಆಗ ಯೇಸು ಬಂದು ಅವರ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ಶಾಂತಿಯು ನಿಮ್ಮೊಂದಿಗಿರಲಿ!” ಎಂದು ಹೇಳಿದನು. 20 ಯೇಸು ಹೀಗೆ ಹೇಳಿದ ಮೇಲೆ, ತನ್ನ ಕೈಗಳನ್ನು ಮತ್ತು ಪಕ್ಕೆಯನ್ನು ಅವರಿಗೆ ತೋರಿಸಿದನು. ಪ್ರಭುವನ್ನು ಕಂಡು ಶಿಷ್ಯರಿಗೆ ಬಹು ಸಂತೋಷವಾಯಿತು.
21 ಬಳಿಕ ಯೇಸು ಮತ್ತೆ, “ಶಾಂತಿಯು ನಿಮ್ಮೊಂದಿಗಿರಲಿ! ತಂದೆಯು ನನ್ನನ್ನು ಕಳುಹಿಸಿದನು. ಅದೇ ರೀತಿಯಲ್ಲಿ, ಈಗ ನಾನೂ ನಿಮ್ಮನ್ನು ಕಳುಹಿಸುತ್ತೇನೆ” ಎಂದು ಹೇಳಿದನು. 22 ಯೇಸು ಹೀಗೆ ಹೇಳಿದ ನಂತರ ಶಿಷ್ಯರ ಮೇಲೆ ಉಸಿರೂದಿ, “ಪವಿತ್ರಾತ್ಮನನ್ನು ಸ್ವೀಕರಿಸಿಕೊಳ್ಳಿ. 23 ನೀವು ಯಾರ ಪಾಪಗಳನ್ನು ಕ್ಷಮಿಸುತ್ತೀರೋ, ಅವರ ಪಾಪಗಳನ್ನು ಕ್ಷಮಿಸಲಾಗುವುದು. ನೀವು ಯಾರ ಪಾಪಗಳನ್ನು ಕ್ಷಮಿಸುವುದಿಲ್ಲವೋ, ಅವರ ಪಾಪಗಳಿಗೆ ಕ್ಷಮೆ ದೊರೆಯುವುದಿಲ್ಲ” ಎಂದು ಹೇಳಿದನು.
ತೋಮನಿಗೆ ಯೇಸುವಿನ ದರ್ಶನ
24 ಯೇಸು ಬಂದಾಗ ದಿದುಮನೆಂಬ ತೋಮನು ಶಿಷ್ಯರೊಂದಿಗೆ ಇರಲಿಲ್ಲ. ಹನ್ನೆರಡು ಮಂದಿ ಶಿಷ್ಯರಲ್ಲಿ ತೋಮನೂ ಒಬ್ಬನಾಗಿದ್ದನು. 25 ಉಳಿದ ಶಿಷ್ಯರು ತೋಮನಿಗೆ, “ನಾವು ಪ್ರಭುವನ್ನು ನೋಡಿದೆವು” ಎಂದು ಹೇಳಿದರು. ಆದರೆ ತೋಮನು, “ಆತನ ಕೈಗಳಲ್ಲಿರುವ ಮೊಳೆಯ ಗಾಯದ ಗುರುತುಗಳನ್ನು ನಾನು ನೋಡುವವರೆಗೆ, ಮೊಳೆಗಳನ್ನು ಜಡಿದಿದ್ದ ಸ್ಥಳದಲ್ಲಿ ನನ್ನ ಬೆರಳನ್ನಿಡುವವರೆಗೆ ಮತ್ತು ಆತನ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟುನೋಡುವವರೆಗೆ ನಾನು ಅದನ್ನು ನಂಬುವುದಿಲ್ಲ” ಎಂದು ಹೇಳಿದನು.
26 ಒಂದು ವಾರದ ನಂತರ ಶಿಷ್ಯರು ಮನೆಯೊಂದರಲ್ಲಿ ಒಟ್ಟಾಗಿ ಸೇರಿದ್ದರು. ತೋಮನು ಅವರೊಂದಿಗೆ ಇದ್ದನು. ಬಾಗಿಲುಗಳನ್ನು ಮುಚ್ಚಲಾಗಿತ್ತು. ಆಗ ಯೇಸು ಬಂದು ಅವರ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ಶಾಂತಿಯು ನಿಮ್ಮೊಂದಿಗಿರಲಿ!” ಎಂದು ಹೇಳಿದನು. 27 ಬಳಿಕ ಯೇಸು ತೋಮನಿಗೆ, “ನಿನ್ನ ಬೆರಳನ್ನು ಇಲ್ಲಿಡು. ನನ್ನ ಕೈಗಳನ್ನು ನೋಡು. ನಿನ್ನ ಕೈಯನ್ನು ನನ್ನ ಪಕ್ಕೆಯಲ್ಲಿ ಹಾಕು. ಸಂಶಯಪಡದೆ ನಂಬುವವನಾಗು” ಎಂದು ಹೇಳಿದನು.
28 ತೋಮನು ಯೇಸುವಿಗೆ, “ನನ್ನ ಪ್ರಭುವೇ, ನನ್ನ ದೇವರೇ!” ಎಂದು ಹೇಳಿದನು.
29 ಯೇಸು ತೋಮನಿಗೆ, “ನೀನು ನನ್ನನ್ನು ನೋಡಿದ್ದರಿಂದ ನಂಬಿದೆ. ನನ್ನನ್ನು ನೋಡದೆ ನಂಬುವವರು ನಿಜವಾಗಿಯೂ ಧನ್ಯರು” ಎಂದು ಹೇಳಿದನು.
ಯೋಹಾನನು ಈ ಪುಸ್ತಕವನ್ನು ಬರೆದ ಉದ್ದೇಶ
30 ಯೇಸು ಇನ್ನೂ ಅನೇಕ ಸೂಚಕಕಾರ್ಯಗಳನ್ನು ತನ್ನ ಶಿಷ್ಯರ ಕಣ್ಮುಂದೆ ಮಾಡಿದನು. ಆ ಅದ್ಭುತಕಾರ್ಯಗಳನ್ನು ಈ ಪುಸ್ತಕದಲ್ಲಿ ಬರೆದಿಲ್ಲ. 31 ಆದರೆ ಆತನೇ ಕ್ರಿಸ್ತನೆಂದೂ ದೇವರ ಮಗನೆಂದೂ ನೀವು ನಂಬುವಂತೆಯೂ ನಂಬಿ ಆತನ ಹೆಸರಿನ ಮೂಲಕವಾಗಿ ಜೀವವನ್ನು ಪಡೆದುಕೊಳ್ಳುವಂತೆಯೂ ಇಷ್ಟೆಲ್ಲಾ ಬರೆದದೆ.
Kannada Holy Bible: Easy-to-Read Version. All rights reserved. © 1997 Bible League International