Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ಪೂರ್ವಕಾಲವೃತ್ತಾಂತ 29

ಯೆಹೂದದ ಅರಸನಾದ ಹಿಜ್ಕೀಯ

29 ಹಿಜ್ಕೀಯನು ತನ್ನ ಇಪ್ಪತ್ತೈದನೆಯ ವರ್ಷದಲ್ಲಿ ಪಟ್ಟಕ್ಕೆ ಬಂದನು. ಅವನು ಜೆರುಸಲೇಮಿನಲ್ಲಿದ್ದುಕೊಂಡು ಇಪ್ಪತ್ತೊಂಭತ್ತು ವರ್ಷ ರಾಜ್ಯಭಾರ ಮಾಡಿದನು. ಅವನ ತಾಯಿ ಜೆಕರ್ಯನ ಮಗಳಾದ ಅಬೀಯಳು. ಹಿಜ್ಕೀಯನು ತನ್ನ ಪೂರ್ವಿಕನಾದ ದಾವೀದನಂತೆ ಯೆಹೋವನಿಗೆ ಸರಿಯಾಗಿ ನಡೆದುಕೊಂಡನು. ಅವನು ದೇವರ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದುಕೊಂಡನು.

ಹಿಜ್ಕೀಯನು ದೇವಾಲಯದ ಬಾಗಿಲುಗಳನ್ನು ದುರಸ್ತಿಮಾಡಿ ಭದ್ರಪಡಿಸಿದನು; ತನ್ನ ಆಳ್ವಿಕೆಯ ಮೊದಲನೇ ವರ್ಷದ ಮೊದಲಿನ ತಿಂಗಳಿನಲ್ಲಿಯೇ ದೇವಾಲಯವನ್ನು ಮತ್ತೆ ತೆರೆಯಿಸಿದನು. 4-5 ಹಿಜ್ಕೀಯನು ಎಲ್ಲಾ ಯಾಜಕರನ್ನೂ ಲೇವಿಯರನ್ನೂ ಕರೆದು ದೇವಾಲಯದ ಪೂರ್ವದಿಕ್ಕಿನಲ್ಲಿದ್ದ ಅಂಗಳದಲ್ಲಿ ಒಟ್ಟುಗೂಡಿಸಿ ಅವರಿಗೆ, “ನನ್ನ ಮಾತುಗಳನ್ನು ಕೇಳಿರಿ. ಲೇವಿಯರೇ, ನೀವು ನಿಮ್ಮನ್ನು ಪವಿತ್ರ ಸೇವೆಗೆ ಸಿದ್ಧಮಾಡಿಕೊಳ್ಳಿರಿ. ಯೆಹೋವ ದೇವರ ಆಲಯವನ್ನು ಪವಿತ್ರ ಸೇವೆಗಾಗಿ ಶುದ್ಧಮಾಡಿರಿ. ನಮ್ಮ ಪೂರ್ವಿಕರು ಸೇವೆಮಾಡಿದ ದೇವರು ಆತನೇ. ದೇವಾಲಯದೊಳಗೆ ಇರಬಾರದ ವಸ್ತುಗಳನ್ನು ತೆಗೆದು ಹೊರಗೆಹಾಕಿರಿ. ಅವು ದೇವರ ಆಲಯವನ್ನು ಹೊಲಸು ಮಾಡುತ್ತವೆ. ನಮ್ಮ ಪೂರ್ವಿಕರು ಯೆಹೋವನನ್ನು ತೊರೆದು ಆತನ ದೃಷ್ಟಿಯಲ್ಲಿ ಪಾಪಮಾಡಿದರು; ಆತನ ಆಲಯಕ್ಕೆ ವಿಮುಖರಾದರು. ಅವರು ದೇವಾಲಯದ ಮಂಟಪದ ಬಾಗಿಲನ್ನು ಮುಚ್ಚಿ ಉರಿಯುತ್ತಿದ್ದ ದೀಪಗಳನ್ನು ನಂದಿಸಿಬಿಟ್ಟರು. ಇಸ್ರೇಲ್ ದೇವರಾದ ಯೆಹೋವನಿಗೆ ಪವಿತ್ರ ಸ್ಥಳದಲ್ಲಿ ಧೂಪಸುಡುವದನ್ನೂ ಸರ್ವಾಂಗಹೋಮಗಳನ್ನು ಅರ್ಪಿಸುವದನ್ನೂ ನಿಲ್ಲಿಸಿದರು. ಆದ್ದರಿಂದ ಯೆಹೋವನು ಯೆಹೂದದ ಮತ್ತು ಜೆರುಸಲೇಮಿನ ಜನರ ಮೇಲೆ ಬಹು ಕೋಪಗೊಂಡು ಅವರನ್ನು ಶಿಕ್ಷಿಸಿದನು. ಯೆಹೋವನು ಯೆಹೂದ ಮತ್ತು ಜೆರುಸಲೇಮಿನ ಜನರಿಗೆ ಮಾಡಿದ್ದ ಸಂಗತಿಗಳನ್ನು ನೋಡಿದ ಅನ್ಯರು ಗೇಲಿ ಮಾಡುತ್ತ ವೈರತ್ವದಿಂದ ತಲೆಯಾಡಿಸಿದರು. ಇವೆಲ್ಲಾ ಸತ್ಯವೆಂದು ನಿಮಗೆ ತಿಳಿದದೆ. ಇದನ್ನು ನಿಮ್ಮ ಸ್ವಂತ ಕಣ್ಣುಗಳಿಂದ ನೋಡಿದ್ದೀರಿ. ನಮ್ಮ ಜನರು ರಣರಂಗದಲ್ಲಿ ಕೊಲ್ಲಲ್ಪಟ್ಟರು; ನಮ್ಮ ಹೆಂಡತಿಮಕ್ಕಳು ಸೆರೆಹಿಡಿಯಲ್ಪಟ್ಟರು. 10 ಆದ್ದರಿಂದ ಹಿಜ್ಕೀಯನಾದ ನಾನು ಇಸ್ರೇಲರ ದೇವರಾದ ಯೆಹೋವನೊಂದಿಗೆ ಒಡಂಬಡಿಕೆ ಮಾಡುತ್ತೇನೆ. ಆತನು ಇನ್ನು ಮುಂದೆ ನಮ್ಮ ಮೇಲೆ ಸಿಟ್ಟುಗೊಳ್ಳುವುದಿಲ್ಲ. 11 ಆದ್ದರಿಂದ ನನ್ನ ಪ್ರಿಯ ಮಕ್ಕಳೇ, ಉದಾಸೀನ ಮಾಡಬೇಡಿರಿ; ಸಮಯವನ್ನು ಹಾಳುಮಾಡಬೇಡಿ. ತನ್ನ ಸೇವೆಮಾಡುವದಕ್ಕಾಗಿ ಆತನು ನಿಮ್ಮನ್ನು ಆರಿಸಿರುತ್ತಾನೆ. ತನ್ನ ಆಲಯದಲ್ಲಿ ಸೇವೆಮಾಡುವುದಕ್ಕೂ ಧೂಪವನ್ನು ಆತನ ಮುಂದೆ ಸುಡುವದಕ್ಕೂ ನಿಮ್ಮನ್ನು ನೇಮಿಸಿರುತ್ತಾನೆ” ಎಂದು ಹೇಳಿದನು.

12-14 ದೇವಾಲಯದಲ್ಲಿ ಸೇವೆಮಾಡಲು ಪ್ರಾರಂಭಿಸಿದ ಲೇವಿಯರ ಪಟ್ಟಿ:

ಕೆಹಾತ್ಯನ ಕುಟುಂಬದ ಅಮಾಸೈಯ ಮಗನಾದ ಮಹತ್ ಮತ್ತು ಅಜರ್ಯನ ಮಗನಾದ ಯೋವೇಲ್;

ಮೆರಾರೀಯ ಸಂತತಿಯಲ್ಲಿ ಅಬ್ದೀಯ ಮಗನಾದ ಕೀಷ, ಯೆಹಲ್ಲೆಲೇಲನ ಮಗನಾದ ಅಜರ್ಯ;

ಗೆರ್ಷೋನ್ಯನ ಸಂತತಿಯಲ್ಲಿ ಜಿಮ್ಮನ ಮಗನಾದ ಯೋವಾಹ,

ಯೋವಾಹನ ಮಗನಾದ ಏದೆನ್; ಎಲೀಚಾಫಾನ್ಯನ ಸಂತತಿಯಲ್ಲಿ ಶಿಮ್ರಿ ಮತ್ತು ಯೆಗೀಯೇಲ್;

ಆಸಾಫಾನ ಸಂತತಿಯವರಿಂದ ಜೆಕರ್ಯ ಮತ್ತು ಮತ್ತನ್ಯ;

ಹೇಮಾನನ ಸಂತತಿಯಿಂದ ಯೆಹೀಯೇಲ್ ಮತ್ತು ಶಿಮ್ಮೀ;

ಯೆದೂತೂನನ ಸಂತತಿಯಲ್ಲಿ ಶೆಮಾಯ ಮತ್ತು ಉಜ್ಜೀಯೇಲ್.

15 ಈ ಲೇವಿಯರೆಲ್ಲಾ ಒಟ್ಟಾಗಿ ಸೇರಿ ತಮ್ಮ ಸಹೋದರರೊಂದಿಗೆ ದೇವಾಲಯದ ಪವಿತ್ರ ಸೇವೆಯನ್ನು ಆರಂಭಿಸಲು ಸಿದ್ಧರಾದರು; ಅರಸನ ಮೂಲಕವಾಗಿ ಬಂದ ದೇವರ ಆಜ್ಞೆಗೆ ವಿಧೇಯರಾದರು; ದೇವಾಲಯವನ್ನು ಶುದ್ಧೀಕರಿಸಲು ಪ್ರಾರಂಭಿಸಿದರು. 16 ಯಾಜಕರು ದೇವಾಲಯದ ಒಳಭಾಗವನ್ನು ಪ್ರವೇಶಿಸಿ ಶುಚಿಮಾಡಿದರು. ದೇವಾಲಯದೊಳಗೆ ಇದ್ದ ಎಲ್ಲಾ ಹೊಲಸು ವಸ್ತುಗಳನ್ನು ಹೊರತೆಗೆದರು. ದೇವಾಲಯದ ಅಂಗಳಕ್ಕೆ ತಂದು ಅಲ್ಲಿಂದ ಕಿದ್ರೋನ್ ಹಳ್ಳಕ್ಕೆ ತೆಗೆದುಕೊಂಡು ಹೋಗಿ ಬಿಸಾಡಿದರು. 17 ಮೊದಲನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಲೇವಿಯರು ಪವಿತ್ರ ಸೇವೆಯನ್ನು ಮಾಡಲು ಸಿದ್ಧರಾದರು. ತಿಂಗಳಿನ ಎಂಟನೆಯ ದಿನದಲ್ಲಿ ದೇವಾಲಯದ ಮಂಟಪಕ್ಕೆ ಲೇವಿಯರು ಬಂದರು. ಎಂಟು ದಿನಗಳಲ್ಲಿ ಅವರು ದೇವಾಲಯವನ್ನೆಲ್ಲಾ ಶುಚಿಮಾಡಿದರು. ಮೊದಲನೆಯ ತಿಂಗಳಿನ ಹದಿನಾರನೆಯ ದಿನದಲ್ಲಿ ಅವರು ಶುಚಿಮಾಡುವ ಕಾರ್ಯವನ್ನು ಮುಗಿಸಿದರು.

18 ಅನಂತರ ಅವರು ಅರಸನಾದ ಹಿಜ್ಕೀಯನ ಬಳಿಗೆ ಹೋಗಿ, “ಅರಸನಾದ ಹಿಜ್ಕೀಯನೇ, ನಾವು ದೇವಾಲಯವನ್ನೂ ಯಜ್ಞವೇದಿಕೆಯನ್ನೂ ದೇವಾಲಯದ ಸಾಮಾಗ್ರಿಗಳನ್ನೂ ಶುದ್ಧ ಮಾಡಿದೆವು. ರೊಟ್ಟಿಯನ್ನಿಡುವ ಮೇಜನ್ನೂ ಶುದ್ಧ ಮಾಡಿದೆವು. 19 ಆಹಾಜನು ಅರಸನಾಗಿದ್ದ ಕಾಲದಲ್ಲಿ ಅವನು ದೇವರಿಗೆ ವಿರುದ್ಧವಾಗಿ ಎದ್ದನು. ದೇವಾಲಯದೊಳಗಿದ್ದ ಅನೇಕ ವಸ್ತುಗಳನ್ನು ಎತ್ತಿ ಬಿಸಾಡಿದನು. ಆದರೆ ನಾವು ಅವುಗಳನ್ನೆಲ್ಲಾ ಮತ್ತೆ ಯಥಾಸ್ಥಾನದಲ್ಲಿರಿಸಿ ಅದರ ವಿಶೇಷ ಉಪಯೋಗಕ್ಕಾಗಿ ಸಿದ್ಧಪಡಿಸಿದೆವು. ಈಗ ಅವು ಯೆಹೋವನ ವೇದಿಕೆಯ ಮುಂದೆ ಇಡಲ್ಪಟ್ಟಿವೆ” ಎಂದು ಹೇಳಿದರು.

20 ಹಿಜ್ಕೀಯ ಅರಸನು ಪಟ್ಟಣದ ಅಧಿಕಾರಿಗಳನ್ನು ಮುಂಜಾನೆ ಕರೆಯಿಸಿ ಅವರೊಡನೆ ಯೆಹೋವನ ಆಲಯಕ್ಕೆ ಹೋದನು. 21 ಅವರು ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಏಳು ಕುರಿಮರಿಗಳನ್ನೂ ಏಳು ಆಡುಗಳನ್ನೂ ತಂದರು. ಈ ಪ್ರಾಣಿಗಳನ್ನೆಲ್ಲಾ ಇಡೀ ಯೆಹೂದ ಪ್ರಾಂತ್ಯದಲ್ಲಿರುವ ಪ್ರಜೆಯವರಿಗಾಗಿ, ದೇವಾಲಯದ ಶುದ್ಧೀಕರಣಕ್ಕಾಗಿ ಮತ್ತು ಯೆಹೂದ ರಾಜ್ಯಕ್ಕಾಗಿ ಪಾಪಪರಿಹಾರ ಯಜ್ಞವಾಗಿ ಅರ್ಪಿಸಿದರು. ಅರಸನಾದ ಹಿಜ್ಕೀಯನು ಆರೋನನ ಸಂತತಿಯವರಾದ ಯಾಜಕರಿಗೆ ಆ ಪಶುಗಳನ್ನು ಯೆಹೋವನ ಯಜ್ಞವೇದಿಕೆಯ ಮೇಲೆ ಸರ್ವಾಂಗಹೋಮಮಾಡಲು ಆಜ್ಞಾಪಿಸಿದನು. 22 ಯಾಜಕರು ಹೋರಿಗಳನ್ನು ವಧಿಸಿ ಅದರ ರಕ್ತವನ್ನು ಯಜ್ಞವೇದಿಕೆಯ ಮೇಲೆ ಚಿಮಿಕಿಸಿದರು. ಅನಂತರ ಕುರಿಮರಿಗಳನ್ನು ವಧಿಸಿ ಅದರ ರಕ್ತವನ್ನೂ ಯಜ್ಞವೇದಿಕೆಯ ಮೇಲೆ ಚಿಮಿಕಿಸಿದರು. 23-24 ಆ ಬಳಿಕ ಯಾಜಕರು ಹೋತಗಳನ್ನು ಅರಸನ ಮತ್ತು ಸೇರಿಬಂದ ಜನಗಳ ಮುಂದೆ ಪಾಪಪರಿಹಾರಕ ಯಜ್ಞಕ್ಕಾಗಿ ತಂದರು. ಯಾಜಕರು ಅವುಗಳ ಮೇಲೆ ಕೈಯಿಟ್ಟು ವಧಿಸಿದರು. ಅದರ ರಕ್ತವನ್ನು ಯಜ್ಞವೇದಿಕೆಯ ಮೇಲೆ ಪಾಪಪರಿಹಾರಕ ಯಜ್ಞವಾಗಿ ಸಮರ್ಪಿಸಿದರು. ದೇವರು ಇಸ್ರೇಲರ ಪಾಪಗಳನ್ನು ಕ್ಷಮಿಸುವಂತೆ ಅವರು ಹೀಗೆ ಮಾಡಿದರು. ಸರ್ವಾಂಗಹೋಮಗಳನ್ನೂ ಪಾಪಪರಿಹಾರಕ ಯಜ್ಞಗಳನ್ನೂ ಇಸ್ರೇಲಿನ ಸಮಸ್ತ ಜನರಿಗಾಗಿ ಅರ್ಪಿಸಬೇಕೆಂದು ರಾಜನು ಆಜ್ಞಾಪಿಸಿದ್ದನು.

25 ದಾವೀದನೂ ಅರಸನ ದರ್ಶಿಯಾಗಿದ್ದ ಗಾದನೂ ಮತ್ತು ಪ್ರವಾದಿಯಾಗಿದ್ದ ನಾತಾನನೂ ಆಜ್ಞಾಪಿಸಿದಂತೆ, ಅರಸನಾದ ಹಿಜ್ಕೀಯನು ಲೇವಿಯರನ್ನು ತಾಳ, ತಂತಿವಾದ್ಯ ಮತ್ತು ಕಿನ್ನರಿಗಳೊಂದಿಗೆ ದೇವಾಲಯದಲ್ಲಿ ಇರಿಸಿದನು. ಈ ಆಜ್ಞೆಯು ಯೆಹೋವನಿಂದ ಪ್ರವಾದಿಗಳ ಮೂಲಕ ಬಂದಿತ್ತು. 26 ಹೀಗೆ ಲೇವಿಯರು ದಾವೀದನ ಸಂಗೀತ ವಾದ್ಯಗಳೊಡನೆ ತಯಾರಾಗಿ ನಿಂತರು ಮತ್ತು ಯಾಜಕರು ತುತ್ತೂರಿಗಳೊಂದಿಗೆ ತಯಾರಾಗಿ ನಿಂತರು. 27 ಆ ಬಳಿಕ ಹಿಜ್ಕೀಯನು ಸರ್ವಾಂಗಹೋಮವನ್ನು ಅರ್ಪಿಸಲು ಆಜ್ಞಾಪಿಸಿದನು. ಸರ್ವಾಂಗಹೋಮ ಆರಂಭವಾದ ಕೂಡಲೇ ದೇವರಿಗೆ ಸ್ತೋತ್ರಗಾನ ಹಾಡುವದೂ ಪ್ರಾರಂಭವಾಯಿತು. ತುತ್ತೂರಿಯನ್ನು ಊದಿ ದಾವೀದನ ವಾದ್ಯಗಳನ್ನು ಬಾರಿಸಿದರು. 28 ಸೇರಿ ಬಂದಿದ್ದ ಜನಸಮೂಹದವರು ಸಾಷ್ಟಾಂಗನಮಸ್ಕಾರ ಮಾಡಿದರು. ಯಜ್ಞವು ಮುಗಿಯುವ ತನಕ ದೇವರ ಸ್ತೋತ್ರಗಾನ ಮುಂದುವರಿಯಿತು.

29 ಯಜ್ಞಸಮರ್ಪಣೆ ಮುಗಿದ ಬಳಿಕ ಅರಸನಾದ ಹಿಜ್ಕೀಯನೂ ಪ್ರಜೆಗಳೂ ಯೆಹೋವನಿಗೆ ಸಾಷ್ಟಾಂಗನಮಸ್ಕಾರ ಮಾಡಿದರು. 30 ರಾಜನಾದ ಹಿಜ್ಕೀಯನು ಮತ್ತು ಅವನ ಅಧಿಕಾರಿಗಳು ಯೆಹೋವನಿಗೆ ಸ್ತೋತ್ರ ಮಾಡಬೇಕೆಂದು ಲೇವಿಯರಿಗೆ ಆಜ್ಞಾಪಿಸಿದರು. ಆಸಾಫ ಮತ್ತು ಅರಸನಾಗಿದ್ದ ದಾವೀದನು ರಚಿಸಿದ್ದ ಹಾಡುಗಳನ್ನು ಗಾಯಕರು ಹಾಡಿ ದೇವರನ್ನು ಸ್ತುತಿಸಿದರು. ಹೀಗೆ ಜನರೆಲ್ಲಾ ಸಂತೋಷಪಟ್ಟರು. ಅವರೆಲ್ಲರು ಅಡ್ಡಬಿದ್ದು ದೇವರನ್ನು ಆರಾಧಿಸಿದರು. 31 ಹಿಜ್ಕೀಯನು ಜನರಿಗೆ, “ಯೆಹೂದದ ಜನರೇ, ನೀವೀಗ ನಿಮ್ಮನ್ನು ಯೆಹೋವನಿಗೆ ಒಪ್ಪಿಸಿದ್ದೀರಿ. ನೀವೀಗ ಬಂದು ದೇವಾಲಯದಲ್ಲಿ ನಿಮ್ಮನಿಮ್ಮ ಯಜ್ಞಗಳನ್ನೂ ಕೃತಜ್ಞತಾಯಜ್ಞಗಳನ್ನೂ ಸಮರ್ಪಿಸಿರಿ” ಎಂದು ಹೇಳಲು ಜನರು ತಮ್ಮ ಯಜ್ಞಗಳನ್ನು ಸಮರ್ಪಿಸಲು ಮುಂದೆ ಬಂದರು. ಸರ್ವಾಂಗಹೋಮ ಅರ್ಪಿಸಬೇಕೆಂದಿದ್ದವರು ಸರ್ವಾಂಗಹೋಮಗಳನ್ನು ಅರ್ಪಿಸಿದರು. 32 ಹೀಗೆ ಒಟ್ಟು ಎಪ್ಪತ್ತು ಹೋರಿಗಳನ್ನೂ ನೂರು ಟಗರುಗಳನ್ನೂ ಇನ್ನೂರು ಕುರಿಗಳನ್ನೂ ಯೆಹೋವನಿಗೆ ಸರ್ವಾಂಗಹೋಮವಾಗಿ ಸಮರ್ಪಿಸಿದರು. 33 ಪವಿತ್ರ ಯಜ್ಞಕ್ಕಾಗಿ ಆರುನೂರು ಹೋರಿಗಳನ್ನೂ ಮೂರುಸಾವಿರ ಆಡುಕುರಿಗಳನ್ನೂ ಸಮರ್ಪಿಸಿದರು. 34 ಅಲ್ಲಿ ಪಶುಗಳನ್ನು ವಧಿಸಿ ಅದರ ಚರ್ಮಸುಲಿದು ಯಜ್ಞಕ್ಕಾಗಿ ಸಿದ್ಧಪಡಿಸಲು ಸಾಕಷ್ಟು ಯಾಜಕರು ಇರಲಿಲ್ಲ. ಆಗ ಅವರ ಬಂಧುಗಳಾದ ಲೇವಿಯರು ಬಂದು ಆ ಕೆಲಸ ಮುಗಿಯುವ ತನಕ ಅವರಿಗೆ ಸಹಾಯಮಾಡಿದರು. ಯೆಹೋವನ ಸೇವೆಗೆ ತಮ್ಮನ್ನು ಸಿದ್ಧಪಡಿಸಿಕೊಳ್ಳಲು ಲೇವಿಯರು ಯಾಜಕರಿಗಿಂತ ಹೆಚ್ಚು ಉತ್ಸುಕತೆಯಲ್ಲಿದ್ದರು. 35 ಆ ದಿವಸ ಎಷ್ಟೋ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಪಾನದ್ರವ್ಯದ ಹೋಮಗಳನ್ನೂ ಸಮರ್ಪಿಸಿದರು. ಹೀಗೆ ದೇವಾಲಯದಲ್ಲಿ ಆರಾಧನೆಯು ಮತ್ತೆ ಪ್ರಾರಂಭವಾಯಿತು. 36 ದೇವರು ಅವುಗಳನ್ನು ತನ್ನ ಜನರಿಗಾಗಿ ಸಿದ್ಧಪಡಿಸಿದ್ದಕ್ಕಾಗಿಯೂ ಅದನ್ನು ಅಲ್ಪಕಾಲಾವಧಿಯಲ್ಲಿ ಮಾಡಿದ್ದಕ್ಕಾಗಿಯೂ ಹಿಜ್ಕೀಯನು ಮತ್ತು ಯೆಹೂದದ ಜನರು ಸಂತೋಷಪಟ್ಟರು.

ಪ್ರಕಟನೆ 15

ದೇವದೂತರಿಂದ ಕೊನೆಯ ಉಪದ್ರವಗಳು

15 ನಂತರ ಪರಲೋಕದಲ್ಲಿ ಮತ್ತೊಂದು ಅದ್ಭುತವನ್ನು ನಾನು ನೋಡಿದೆನು. ಅದು ಮಹಾ ಆಶ್ಚರ್ಯಕರವಾಗಿತ್ತು. ಏಳು ಉಪದ್ರವಗಳನ್ನು ತರುವ ಏಳು ಮಂದಿ ದೇವದೂತರು ಅಲ್ಲಿದ್ದರು. ದೇವರ ಕೋಪವು ಈ ಉಪದ್ರವಗಳೊಂದಿಗೆ ಮುಗಿಯುತ್ತಿದ್ದುದರಿಂದ ಇವು ಕಡೆಯ ಉಪದ್ರವಗಳಾಗಿದ್ದವು.

ಬೆಂಕಿಯನ್ನು ಬೆರಸಿದ ಗಾಜಿನ ಸಮುದ್ರದಂತೆ ಕಾಣಿಸುವ ಏನೋ ಒಂದು ನನಗೆ ಕಾಣಿಸಿತು. ಮೃಗವನ್ನು, ಅದರ ವಿಗ್ರಹವನ್ನು ಮತ್ತು ಅದರ ಹೆಸರಿನ ಸಂಖ್ಯೆಯನ್ನು ಸೋಲಿಸಿ ಜಯಗಳಿಸಿದವರೆಲ್ಲರೂ ಸಮುದ್ರ ತೀರದಲ್ಲಿ ನಿಂತಿದ್ದರು. ದೇವರು ಅವರಿಗೆ ನೀಡಿದ ತಂತಿವಾದ್ಯಗಳು ಅವರಲ್ಲಿದ್ದವು. ಅವರು ದೇವರ ಸೇವಕನಾದ ಮೋಶೆಯ ಗೀತೆಯನ್ನು ಮತ್ತು ಕುರಿಮರಿಯಾದಾತನ ಗೀತೆಯನ್ನು ಹಾಡಿದರು:

“ಪ್ರಭುವೇ, ಸರ್ವಶಕ್ತನಾದ ದೇವರೇ,
    ನೀನು ಮಹತ್ತಾದ ಕಾರ್ಯಗಳನ್ನೂ ಆಶ್ಚರ್ಯಕರವಾದ ಕಾರ್ಯಗಳನ್ನೂ ಮಾಡುವೆ.
ಸರ್ವಜನಾಂಗಗಳ ರಾಜನೇ,
    ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ.
ಪ್ರಭುವೇ, ಜನರೆಲ್ಲರೂ ನಿನಗೆ ಭಯಗೊಳ್ಳುತ್ತಾರೆ;
ಜನರೆಲ್ಲರೂ ನಿನ್ನ ಹೆಸರನ್ನು ಸ್ತುತಿಸುತ್ತಾರೆ.
    ನೀನು ಮಾತ್ರ ಪರಿಶುದ್ಧನಾದವನು.
ನೀನು ಯೋಗ್ಯವಾದ ಕಾರ್ಯಗಳನ್ನು ಮಾಡುತ್ತೀ ಎಂಬುದು ಸ್ಪಷ್ಟವಾಗಿರುವುದರಿಂದ
    ಜನರೆಲ್ಲರೂ ನಿನ್ನ ಸನ್ನಿಧಿಗೆ ಬಂದು ನಿನ್ನನ್ನು ಆರಾಧಿಸುತ್ತಾರೆ.”

ಇದಾದ ನಂತರ ನಾನು ನೋಡಿದಾಗ ಪರಲೋಕದ ಆಲಯವು (ದೇವದರ್ಶನ ಗುಡಾರವು) ತೆರೆಯಿತು. ಏಳು ಉಪದ್ರವಗಳನ್ನು ತರುವ ಏಳು ಮಂದಿ ದೇವದೂತರು ಆಲಯದಿಂದ ಹೊರಗೆ ಬಂದರು. ಅವರು ಶುಭ್ರವಾದ ಮತ್ತು ಪ್ರಕಾಶಮಾನವಾದ ನಾರುಮಡಿಯನ್ನು ಧರಿಸಿದ್ದರು. ಅವರು ಎದೆಯ ಸುತ್ತಲೂ ಚಿನ್ನದ ಪಟ್ಟಿಗಳನ್ನು ಕಟ್ಟಿಕೊಂಡಿದ್ದರು. ನಾಲ್ಕು ಜೀವಿಗಳಲ್ಲಿ ಒಂದು ಜೀವಿ ಈ ಏಳು ದೇವದೂತರಿಗೆ ಏಳು ಚಿನ್ನದ ಪಾತ್ರೆಗಳನ್ನು ನೀಡಿತು. ಈ ಪಾತ್ರೆಗಳು ಯುಗಯುಗಾಂತರಗಳಲ್ಲಿಯೂ ಜೀವಿಸುವ ದೇವರ ಕೋಪದಿಂದ ತುಂಬಿದ್ದವು. ದೇವರ ವೈಭವ ಮತ್ತು ಶಕ್ತಿಯ ಹೊಗೆಯಿಂದ ಆಲಯವು ತುಂಬಿಹೋಯಿತು. ಏಳು ದೇವದೂತರ ಏಳು ಉಪದ್ರವಗಳು ಮುಗಿಯುವ ತನಕ ಆಲಯದಲ್ಲಿ ಪ್ರವೇಶಿಸಲು ಯಾರಿಗೂ ಸಾಧ್ಯವಿರಲಿಲ್ಲ.

ಜೆಕರ್ಯ 11

ದೇವರು ಅನ್ಯ ದೇಶಗಳವರನ್ನು ಶಿಕ್ಷಿಸುವನು

11 ಲೆಬನೋನೇ, ನೀನು ನಿನ್ನ ದ್ವಾರಗಳನ್ನು ತೆರೆ.
    ಆಗ ಬೆಂಕಿಯು ಒಳಬಂದು ನಿನ್ನ ದೇವದಾರು ಮರಗಳನ್ನೆಲ್ಲಾ ಸುಟ್ಟು ಹಾಕುವದು.
ದೇವದಾರು ಮರಗಳು ಬೀಳುವಾಗ ಓಕ್ ಮರಗಳು ರೋದಿಸುವವು.
    ಆ ಬಲವಾದ ಮರಗಳನ್ನು ತೆಗೆದುಕೊಂಡು ಹೋಗಲಾಗುವುದು.
ಅಡವಿಯು ಕಡಿದುಹಾಕಲ್ಪಟ್ಟಿದ್ದಕ್ಕಾಗಿ
    ಬಾಷಾನಿನ ಶ್ರೇಷ್ಠ ವೃಕ್ಷಗಳು ದುಃಖಿಸುವವು.
ರೋದಿಸುವ ಕುರುಬರ ಕಡೆಗೆ ಕಿವಿಗೊಡಿರಿ.
    ಅವರ ನಾಯಕರುಗಳನ್ನು ತೆಗೆದುಕೊಂಡು ಹೋಗಿರುತ್ತಾರೆ.
ಪ್ರಾಯದ ಸಿಂಹಗಳ ಗರ್ಜನೆಗೆ ಕಿವಿಗೊಡಿರಿ.
    ಯೋರ್ದನ್ ಹೊಳೆಯ ಬದಿಯಲ್ಲಿದ್ದ ದಟ್ಟವಾದ ಪೊದರುಗಳೆಲ್ಲಾ ತೆಗೆದುಕೊಂಡು ಹೋಗಲಾಗಿದೆ.

ನನ್ನ ದೇವರಾದ ಯೆಹೋವನು ಹೇಳುವುದೇನೆಂದರೆ, “ಕೊಲ್ಲುವದಕ್ಕೋಸ್ಕರವಾಗಿ ಬೆಳೆಸಿದ ಕುರಿಗಳನ್ನು ಪರಾಮರಿಸು. ಅವರ ನಾಯಕರುಗಳು ವರ್ತಕರಂತೆಯೂ ಧಣಿಗಳಂತೆಯೂ ಇರುವರು. ಧಣಿಗಳು ಕುರಿಗಳನ್ನು ಕೊಂದರೂ ಶಿಕ್ಷಿಸಲ್ಪಡುವುದಿಲ್ಲ. ವರ್ತಕರು ಕುರಿಗಳನ್ನು ಮಾರಿ, ‘ನಾನೀಗ ಧನಿಕನಾಗಿದ್ದೇನೆ. ಯೆಹೋವನಿಗೆ ಸ್ತೋತ್ರವಾಗಲಿ’ ಎಂದು ಅನ್ನುವರು. ಕುರುಬರು ತಮ್ಮ ಕುರಿಗಳಿಗಾಗಿ ಚಿಂತಿಸುವುದಿಲ್ಲ. ಈ ದೇಶದಲ್ಲಿ ವಾಸಿಸುವ ಜನರ ಬಗ್ಗೆ ನಾನು ದುಃಖಿಸುವುದಿಲ್ಲ.” ಇದು ಯೆಹೋವನ ನುಡಿ. “ನೋಡಿರಿ, ಪ್ರತಿಯೊಬ್ಬನೂ ತನ್ನ ಅರಸನಿಂದಲೂ ನೆರೆಯವರಿಂದಲೂ ಹಾಳುಮಾಡಲ್ಪಡುವಂತೆ ನಾನು ಮಾಡುವೆನು. ಅವರ ದೇಶವನ್ನು ಹಾಳುಮಾಡುವಂತೆ ಅವರನ್ನು ಬಿಡುವೆನು. ಅವರನ್ನು ನಿಲ್ಲಿಸುವುದಿಲ್ಲ.”

ಕೊಲ್ಲುವದಕ್ಕಾಗಿ ಬೆಳೆಸುವ ಕುರಿಗಳನ್ನು ನಾನು ಪರಾಮರಿಸಿದೆನು. ನನಗೆ ಎರಡು ಕೋಲುಗಳು ದೊರೆತವು. ಒಂದು ಕೋಲನ್ನು ದಯೆ ಎಂದೂ ಇನ್ನೊಂದನ್ನು ಒಗ್ಗಟ್ಟು ಎಂಬ ಹೆಸರಿನಿಂದಲೂ ಕರೆದೆನು. ಆ ಬಳಿಕ ಕುರಿಗಳನ್ನು ಪರಾಮರಿಸ ತೊಡಗಿದೆನು. ಒಂದೇ ತಿಂಗಳೊಳಗೆ ಮೂರು ಮಂದಿ ಕುರುಬರನ್ನು ನಾನು ಕೆಲಸದಿಂದ ಬಿಡಿಸಿದೆನು. ನಾನು ಕುರಿಗಳ ಮೇಲೆ ಸಿಟ್ಟುಗೊಳ್ಳಲಾರಂಭಿಸಿದೆನು. ಅವು ನನ್ನನ್ನು ಹಗೆ ಮಾಡಲಾರಂಭಿಸಿದವು. ಆಗ ನಾನು, “ಸರಿ, ನಾನು ನಿಮ್ಮನ್ನು ಇನ್ನು ನೋಡಿಕೊಳ್ಳುವದಿಲ್ಲ. ಹೋಗಿಬಿಡುತ್ತೇನೆ” ಅಂದೆನು. ಸಾಯಲು ಮನಸ್ಸುಳ್ಳವುಗಳನ್ನು ಸಾಯಲುಬಿಟ್ಟೆನು. ನಾಶವಾಗಲು ಮನಸ್ಸುಳ್ಳವುಗಳನ್ನು ನಾಶವಾಗಲು ಬಿಟ್ಟೆನು. ಅಳಿಯದೆ ಉಳಿದವುಗಳು ಪರಸ್ಪರ ನಾಶಮಾಡಿಕೊಳ್ಳುವವು. 10 ಆಗ ನಾನು ದಯೆ ಹೆಸರಿನ ಕೋಲನ್ನು ತೆಗೆದುಕೊಂಡು ತುಂಡುಮಾಡಿದೆನು. ಯೆಹೋವನು ಎಲ್ಲಾ ಜನರೊಂದಿಗೆ ಮಾಡಿದ ಒಡಂಬಡಿಕೆಯು ಮುರಿಯಿತು ಎಂಬುದಾಗಿ ಅವರಿಗೆ ತೋರಿಸಿದೆನು. 11 ಹೀಗೆ ಆ ದಿವಸ ಒಡಂಬಡಿಕೆಗೆ ಅಂತ್ಯವಾಯಿತು. ನನ್ನನ್ನೇ ನೋಡುತ್ತಿದ್ದ ಆ ಬಡ ಕುರಿಗಳಿಗೆ ಈ ಸಂದೇಶವು ಯೆಹೋವನಿಂದಲೇ ನನಗೆ ಬಂದಿದೆ ಎಂಬುದು ತಿಳಿದಿತ್ತು.

12 ಆಗ ನಾನು ಹೀಗೆಂದೆನು, “ನನಗೆ ಸಂಬಳ ಕೊಡಲು ನಿಮಗೆ ಇಷ್ಟವಿದ್ದರೆ ಕೊಡಿರಿ, ಇಷ್ಟವಿಲ್ಲದಿದ್ದರೆ ಬೇಡ.” ಆಗ ಅವರು ನನಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಟ್ಟರು. 13 ಆಗ ಯೆಹೋವನು ನನಗೆ ಹೇಳಿದ್ದೇನೆಂದರೆ, “ನನ್ನ ಬೆಲೆ ಅಷ್ಟೇ ಎಂದು ಅವರು ನೆನಸುತ್ತಾರೆ. ಆ ಹಣವನ್ನು ತೆಗೆದು ಆಲಯದ ಖಜಾನೆಗೆ ಸುರಿ.” ನಾನು ಆ ಮೂವತ್ತು ಬೆಳ್ಳಿ ನಾಣ್ಯವನ್ನು ತೆಗೆದುಕೊಂಡು ಆಲಯದ ಖಜಾನೆಗೆ ಸುರಿದೆನು. 14 ಆಮೇಲೆ ನಾನು “ಒಗ್ಗಟ್ಟು” ಎಂಬ ಹೆಸರಿನ ಕೋಲನ್ನು ಎರಡು ತುಂಡಾಗಿ ಮುರಿದೆನು. ಇಸ್ರೇಲ್ ಮತ್ತು ಯೆಹೂದ ರಾಜ್ಯಗಳ ಒಗ್ಗಟ್ಟು ಮುರಿಯಿತು ಎಂದು ತೋರಿಸುವದಕ್ಕಾಗಿ ನಾನು ಹಾಗೆ ಮಾಡಿದೆನು.

15 ಆಗ ಯೆಹೋವನು ನನಗೆ ಹೇಳಿದ್ದೇನೆಂದರೆ, “ಒಬ್ಬ ಮೂರ್ಖ ಕುರುಬನು ಉಪಯೋಗಿಸುವ ವಸ್ತುಗಳನ್ನು ತೆಗೆದುಕೊಂಡು ಬಾ. 16 ನಾನು ಈ ದೇಶಕ್ಕೆ ಒಬ್ಬ ಹೊಸ ಕುರುಬನನ್ನು ನೇಮಕ ಮಾಡುವೆನೆಂದು ಆ ರೀತಿಯಾಗಿ ತೋರಿಸುವೆನು. ಆದರೆ ಈ ಮನುಷ್ಯನಿಗೆ ನಾಶಮಾಗುತ್ತಿರುವ ಕುರಿಗಳನ್ನು ಪರಾಮರಿಸಲು ಸಾಧ್ಯವಾಗುವುದಿಲ್ಲ. ಗಾಯಗೊಂಡ ಕುರಿಗಳನ್ನು ಗುಣಮಾಡಲು ಅವನಿಂದ ಸಾಧ್ಯವಾಗುವುದಿಲ್ಲ. ಸಾಯದೆ ಉಳಿದ ಕುರಿಗಳಿಗೆ ಆಹಾರ ಕೊಡಲು ಅವನಿಂದ ಸಾಧ್ಯವಾಗುವುದಿಲ್ಲ. ಪುಷ್ಟಿಕರವಾದ ಕುರಿಗಳನ್ನು ಪೂರ್ತಿಯಾಗಿ ತಿಂದುಹಾಕಲಾಗುವದು. ಅದರ ಗೊರಸುಗಳು ಮಾತ್ರವೇ ಉಳಿಯುವದು.”

17 ಕೆಲಸಕ್ಕೆ ಬಾರದ ಕುರುಬನೇ,
    ನೀನು ನನ್ನ ಕುರಿಗಳನ್ನು ತೊರೆದುಬಿಟ್ಟೆ.
ಅವನನ್ನು ಶಿಕ್ಷಿಸಿರಿ!
    ಖಡ್ಗದಿಂದ ಅವನ ಬಲಗೈಯನ್ನು ಕತ್ತರಿಸಿಹಾಕಿರಿ, ಮತ್ತು ಬಲಗಣ್ಣನ್ನು ಕಿತ್ತುಹಾಕಿರಿ.
    ಆಗ ಅವನ ಬಲಗೈ ಅಪ್ರಯೋಜಕವಾಗುವದು,
    ಬಲಗಣ್ಣು ದೃಷ್ಟಿಹೀನವಾಗುವದು.

ಯೋಹಾನ 14

ಶಿಷ್ಯರಿಗೆ ಯೇಸುವಿನ ಆದರಣೆ ಮಾತುಗಳು

14 ಯೇಸು, “ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ದೇವರಲ್ಲಿ ವಿಶ್ವಾಸವಿಡಿರಿ. ನನ್ನಲ್ಲಿಯೂ ವಿಶ್ವಾಸವಿಡಿರಿ. ನನ್ನ ತಂದೆಯ ಮನೆಯಲ್ಲಿ ಅನೇಕ ಕೋಣೆಗಳಿವೆ. ಅದು ಸತ್ಯವಲ್ಲದಿದ್ದರೆ, ನಾನು ನಿಮಗೆ ಹೇಳುತ್ತಿರಲಿಲ್ಲ. ನಾನು ನಿಮಗೋಸ್ಕರ ಸ್ಥಳವನ್ನು ಸಿದ್ಧಪಡಿಸಲು ಅಲ್ಲಿಗೆ ಹೋಗುತ್ತಿದ್ದೇನೆ. ನಾನು ಹೋಗಿ ನಿಮಗೋಸ್ಕರ ಸ್ಥಳವನ್ನು ಸಿದ್ಧಪಡಿಸಿದ ಮೇಲೆ ಹಿಂತಿರುಗಿ ಬಂದು, ನಿಮ್ಮನ್ನು ನನ್ನೊಂದಿಗೆ ಕರೆದುಕೊಂಡು ಹೋಗುವೆನು. ಏಕೆಂದರೆ ನಾನಿರುವಲ್ಲಿ ನೀವೂ ಇರಬೇಕು. ನಾನು ಹೋಗಲಿರುವ ಸ್ಥಳದ ದಾರಿಯು ನಿಮಗೆ ತಿಳಿದಿದೆ” ಎಂದು ಹೇಳಿದನು.

ತೋಮನು ಯೇಸುವಿಗೆ, “ಪ್ರಭುವೇ, ನೀನು ಹೋಗುತ್ತಿರುವುದು ಎಲ್ಲಿಗೆಂಬುದೇ ನಮಗೆ ಗೊತ್ತಿಲ್ಲ. ಹೀಗಿರಲು, ಆ ದಾರಿಯನ್ನು ನಾವು ಹೇಗೆ ತಿಳಿದುಕೊಳ್ಳಲಾದೀತು?” ಎಂದನು.

ಯೇಸು, “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ. ತಂದೆಯ ಬಳಿಗೆ ಹೋಗಲು ನಾನೇ ಏಕೈಕ ಮಾರ್ಗ. ನೀವು ನನ್ನನ್ನು ನಿಜವಾಗಿಯೂ ತಿಳಿದಿದ್ದರೆ, ನನ್ನ ತಂದೆಯನ್ನು ಸಹ ತಿಳಿದುಕೊಳ್ಳುತ್ತಿದ್ದಿರಿ. ಆದರೆ ಈಗ ನೀವು ತಂದೆಯನ್ನು ತಿಳಿದಿದ್ದೀರಿ. ನೀವು ಆತನನ್ನು ನೋಡಿದ್ದೀರಿ” ಎಂದು ಹೇಳಿದನು.

ಫಿಲಿಪ್ಪನು ಯೇಸುವಿಗೆ, “ಪ್ರಭುವೇ, ನಮಗೆ ತಂದೆಯನ್ನು ತೋರಿಸು. ನಮಗೆ ಅಷ್ಟೇ ಸಾಕು” ಎಂದು ಹೇಳಿದನು.

ಯೇಸು, “ಫಿಲಿಪ್ಪನೇ, ನಾನು ಇಷ್ಟು ಕಾಲದಿಂದ ನಿನ್ನೊಂದಿಗಿದ್ದರೂ ನೀನು ನನ್ನನ್ನು ತಿಳಿದುಕೊಳ್ಳಲಿಲ್ಲವೇ? ನನ್ನನ್ನು ನೋಡಿದವನು ತಂದೆಯನ್ನು ಸಹ ನೋಡಿದವನಾಗಿದ್ದಾನೆ. ಆದ್ದರಿಂದ, ‘ತಂದೆಯನ್ನು ನಮಗೆ ತೋರಿಸು’ ಎಂದು ಏಕೆ ಕೇಳುವಿರಿ? 10 ನಾನು ತಂದೆಯಲ್ಲಿದ್ದೇನೆ ಮತ್ತು ತಂದೆಯು ನನ್ನಲ್ಲಿದ್ದಾನೆ ಎಂದು ನೀವು ನಿಜವಾಗಿಯೂ ನಂಬುವಿರಾ? ನಾನು ನಿಮಗೆ ಹೇಳುವ ಸಂಗತಿಗಳು ನನ್ನಿಂದಲೇ ಬಂದಂಥವುಗಳಲ್ಲ. ತಂದೆಯು ನನ್ನಲ್ಲಿ ವಾಸವಾಗಿದ್ದಾನೆ ಮತ್ತು ಆತನು ತನ್ನ ಕಾರ್ಯವನ್ನು ಮಾಡುತ್ತಿದ್ದಾನೆ. 11 ನಾನು ತಂದೆಯಲ್ಲಿದ್ದೇನೆ ಮತ್ತು ತಂದೆಯು ನನ್ನಲ್ಲಿದ್ದಾನೆ ಎಂಬ ನನ್ನ ಮಾತನ್ನು ನಂಬಿರಿ. ಇಲ್ಲದಿದ್ದರೆ ನಾನು ಮಾಡಿದ ಅದ್ಭುತಕಾರ್ಯಗಳ ನಿಮಿತ್ತವಾದರೂ ನಂಬಿರಿ.

12 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನಲ್ಲಿ ನಂಬಿಕೆ ಇಡುವ ವ್ಯಕ್ತಿಯು ನಾನು ಮಾಡಿದ ಕಾರ್ಯಗಳನ್ನೇ ಮಾಡುವನು. ಹೌದು ನಾನು ಮಾಡುವ ಕಾರ್ಯಗಳಿಗಿಂತಲೂ ದೊಡ್ಡಕಾರ್ಯಗಳನ್ನು ಅವನು ಮಾಡುವನು. ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತಿದ್ದೇನೆ. 13 ಮತ್ತು ನೀವು ನನ್ನ ಹೆಸರಿನಲ್ಲಿ ಏನಾದರೂ ಬೇಡಿಕೊಂಡರೆ, ನಾನು ನಿಮಗೋಸ್ಕರ ಅದನ್ನು ನೆರವೇರಿಸುವೆನು. ಆಗ ಮಗನ ಮೂಲಕವಾಗಿ ತಂದೆಗೆ ಮಹಿಮೆ ಆಗುವುದು. 14 ನೀವು ನನ್ನ ಹೆಸರಿನಲ್ಲಿ ಏನಾದರೂ ಬೇಡಿಕೊಂಡರೆ, ನಾನು ಅದನ್ನು ನೆರವೇರಿಸುವೆನು.

ಪವಿತ್ರಾತ್ಮನನ್ನು ಕೊಡುವುದಾಗಿ ವಾಗ್ದಾನ

15 “ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ, ನಾನು ಆಜ್ಞಾಪಿಸುವವುಗಳನ್ನು ಮಾಡುವಿರಿ. 16 ನಾನು ತಂದೆಯನ್ನು ಕೇಳಿಕೊಳ್ಳುವೆನು. ಆಗ ಆತನು ಬೇರೊಬ್ಬ ಸಹಾಯಕನನ್ನು ನಿಮಗೆ ಕೊಡುವನು. ಆ ಸಹಾಯಕನು ಸದಾಕಾಲ ನಿಮ್ಮೊಂದಿಗಿರುವನು. 17 ಸತ್ಯದ ಆತ್ಮನೇ ಈ ಸಹಾಯಕನು. ಈ ಲೋಕವು ಆತನನ್ನು ಸ್ವೀಕರಿಸಿಕೊಳ್ಳಲಾರದು. ಏಕೆಂದರೆ ಲೋಕವು ಆತನನ್ನು ಕಾಣುವುದೂ ಇಲ್ಲ, ತಿಳಿದುಕೊಳ್ಳುವುದೂ ಇಲ್ಲ. ಆದರೆ ನೀವು ಆತನನ್ನು ಬಲ್ಲಿರಿ. ಆತನು ನಿಮ್ಮೊಂದಿಗೆ ಮತ್ತು ನಿಮ್ಮೊಳಗೆ ವಾಸಿಸುವವನಾಗಿದ್ದಾನೆ.

18 “ನಾನು ನಿಮ್ಮನ್ನು ತಂದೆತಾಯಿಗಳಿಲ್ಲದ ಮಕ್ಕಳಂತೆ ಒಬ್ಬಂಟಿಗರನ್ನಾಗಿ ಬಿಟ್ಟುಹೋಗುವುದಿಲ್ಲ. ನಾನು ನಿಮ್ಮ ಬಳಿಗೆ ಬರುತ್ತೇನೆ. 19 ಇನ್ನು ಸ್ವಲ್ಪ ಕಾಲವಾದ ಮೇಲೆ ಈ ಲೋಕದ ಜನರು ನನ್ನನ್ನು ಇನ್ನೆಂದಿಗೂ ಕಾಣುವುದಿಲ್ಲ. ಆದರೆ ನೀವು ನನ್ನನ್ನು ನೋಡುವಿರಿ. ನಾನು ಜೀವಿಸುವುದರಿಂದ ನೀವೂ ಜೀವಿಸುವಿರಿ. 20 ನಾನು ನನ್ನ ತಂದೆಯಲ್ಲಿರುವುದನ್ನು ನೀವು ಆ ದಿನದಂದು ತಿಳಿದುಕೊಳ್ಳುವಿರಿ. ನೀವು ನನ್ನಲ್ಲಿರುವುದನ್ನೂ ನಾನು ನಿಮ್ಮಲ್ಲಿರುವುದನ್ನೂ ತಿಳಿದುಕೊಳ್ಳುವಿರಿ. 21 ಒಬ್ಬನು ನನ್ನ ಆಜ್ಞೆಗಳನ್ನು ಸ್ವೀಕರಿಸಿಕೊಂಡು ಅವುಗಳಿಗೆ ವಿಧೇಯನಾದರೆ ಅವನು ನನ್ನನ್ನು ನಿಜವಾಗಿಯೂ ಪ್ರೀತಿಸುವವನಾಗಿದ್ದಾನೆ. ಅಲ್ಲದೆ ನನ್ನನ್ನು ಪ್ರೀತಿಸುವವನನ್ನು ನನ್ನ ತಂದೆಯೂ ಪ್ರೀತಿಸುವನು ಮತ್ತು ನಾನೂ ಅವನನ್ನು ಪ್ರೀತಿಸುವೆನು. ನಾನು ಅವನಿಗೆ ನನ್ನನ್ನೇ ತೋರ್ಪಡಿಸಿಕೊಳ್ಳುವೆನು” ಎಂದು ಉತ್ತರಕೊಟ್ಟನು.

22 ಆಗ ಯೂದನು (ಇಸ್ಕರಿಯೋತ ಯೂದನಲ್ಲ), “ಪ್ರಭುವೇ, ನೀನು ನಿನ್ನನ್ನು ಈ ಲೋಕಕ್ಕೆ ತೋರ್ಪಡಿಸಿಕೊಳ್ಳದೆ ನಮಗೆ ಮಾತ್ರ ತೋರ್ಪಡಿಸಿಕೊಳ್ಳಬೇಕೆಂದಿರುವುದೇಕೆ?” ಎಂದು ಕೇಳಿದನು.

23 ಯೇಸು ಹೀಗೆ ಉತ್ತರಕೊಟ್ಟನು: “ನನ್ನನ್ನು ಪ್ರೀತಿಸುವವನು ನನ್ನ ಉಪದೇಶಕ್ಕೆ ವಿಧೇಯನಾಗುವನು. ನನ್ನ ತಂದೆಯು ಅವನನ್ನು ಪ್ರೀತಿಸುವನು. ನನ್ನ ತಂದೆ ಮತ್ತು ನಾನು ಅವನ ಬಳಿಗೆ ಬಂದು ಅವನೊಂದಿಗೆ ವಾಸಿಸುವೆವು. 24 ಆದರೆ ನನ್ನನ್ನು ಪ್ರೀತಿಸದವನು, ನನ್ನ ಉಪದೇಶಕ್ಕೆ ವಿಧೇಯನಾಗುವುದಿಲ್ಲ. ನೀವು ಕೇಳುತ್ತಿರುವ ಈ ಉಪದೇಶವು ನಿಜವಾಗಿಯೂ ನನ್ನದಲ್ಲ, ನನ್ನನ್ನು ಕಳುಹಿಸಿರುವ ನನ್ನ ತಂದೆಯದು.

25 “ನಾನು ನಿಮ್ಮೊಂದಿಗೆ ಇರುವಾಗಲೇ ಈ ಸಂಗತಿಗಳನ್ನೆಲ್ಲಾ ನಿಮಗೆ ಹೇಳಿದ್ದೇನೆ. 26 ಆದರೆ ಆ ಸಹಾಯಕನು ನಿಮಗೆ ಪ್ರತಿಯೊಂದನ್ನೂ ಉಪದೇಶಿಸುವನು. ನಾನು ನಿಮಗೆ ಹೇಳಿದ ಸಂಗತಿಗಳನ್ನೆಲ್ಲಾ ಆ ಸಹಾಯಕನು ನಿಮ್ಮ ನೆನಪಿಗೆ ತರುವನು. ತಂದೆಯು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪವಿತ್ರಾತ್ಮನೇ ಆ ಸಹಾಯಕನು.

27 “ನಾನು ನಿಮಗೆ ಶಾಂತಿಯನ್ನು ನೀಡುತ್ತೇನೆ. ಈ ಲೋಕವು ಕೊಡುವುದಕ್ಕಿಂತ ಭಿನ್ನವಾದ ರೀತಿಯಲ್ಲಿ ನಾನು ನಿಮಗೆ ಶಾಂತಿಯನ್ನು ಕೊಡುತ್ತೇನೆ. ಆದ್ದರಿಂದ ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ಭಯಪಡಬೇಡಿರಿ. 28 ‘ನಾನು ಹೊರಟುಹೋಗುತ್ತೇನೆ. ಆದರೆ ನಿಮ್ಮ ಬಳಿಗೆ ಹಿಂತಿರುಗಿ ಬರುತ್ತೇನೆ’ ಎಂದು ನಾನು ನಿಮಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ, ನಾನು ತಂದೆಯ ಬಳಿಗೆ ಮರಳಿಹೋಗುವುದರ ಬಗ್ಗೆ ಸಂತೋಷಪಡುತ್ತಿದ್ದಿರಿ. ಏಕೆಂದರೆ ತಂದೆಯು ನನಗಿಂತಲೂ ದೊಡ್ಡವನು. 29 ಇದು ಸಂಭವಿಸುವುದಕ್ಕಿಂತ ಮೊದಲೇ ನಾನು ನಿಮಗೆ ಇದನ್ನು ಈಗಲೇ ತಿಳಿಸಿದ್ದೇನೆ. ಹೀಗಿರಲು, ಇದು ಸಂಭವಿಸುವಾಗ ನೀವು ನಂಬುವಿರಿ.

30 “ನಾನು ನಿಮ್ಮೊಂದಿಗೆ ಇನ್ನು ಬಹಳ ಹೊತ್ತು ಮಾತಾಡುವುದಿಲ್ಲ. ಈ ಲೋಕದ ಅಧಿಪತಿಯು (ಸೈತಾನನು) ಬರುತ್ತಿದ್ದಾನೆ. ಅವನಿಗೆ ನನ್ನ ಮೇಲೆ ಯಾವ ಅಧಿಕಾರವೂ ಇಲ್ಲ. 31 ಆದರೆ ನಾನು ತಂದೆಯನ್ನು ಪ್ರೀತಿಸುತ್ತೇನೆ ಎಂಬುದನ್ನು ಈ ಲೋಕವು ತಿಳಿದುಕೊಳ್ಳಬೇಕು. ಆದ್ದರಿಂದ ತಂದೆಯು ನನಗೆ ಹೇಳಿರುವುದನ್ನೇ ನಾನು ಮಾಡುತ್ತೇನೆ.

“ಬನ್ನಿ, ನಾವು ಇಲ್ಲಿಂದ ಹೋಗೋಣ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International