Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ಪೂರ್ವಕಾಲವೃತ್ತಾಂತ 25

ಯೆಹೂದದ ಅರಸನಾದ ಅಮಚ್ಯ

25 ಅಮಚ್ಯನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಇಪ್ಪತ್ತೊಂಭತ್ತು ವರ್ಷಗಳ ಕಾಲ ರಾಜ್ಯಭಾರ ಮಾಡಿದನು. ಅವನ ತಾಯಿಯ ಹೆಸರು ಯೆಹೋವದ್ದಾನ್. ಆಕೆ ಜೆರುಸಲೇಮಿನವಳು. ದೇವರ ದೃಷ್ಟಿಯಲ್ಲಿ ಯೋಗ್ಯವಾದದ್ದನ್ನು ಅಮಚ್ಯನು ಮಾಡಿದರೂ ಹೃದಯ ಪೂರ್ವಕವಾಗಿ ಮಾಡಲಿಲ್ಲ. ಅಮಚ್ಯನು ತನ್ನ ರಾಜ್ಯವನ್ನು ಸ್ಥಿರಪಡಿಸಿಕೊಂಡ ನಂತರ ತನ್ನ ತಂದೆಯನ್ನು ಕೊಂದ ಸೇವಕರನ್ನು ಕೊಲ್ಲಿಸಿದನು. ಆದರೆ ಆ ಸೇವಕರ ಮಕ್ಕಳನ್ನು ಕೊಲ್ಲಿಸಲಿಲ್ಲ. ಯಾಕೆಂದರೆ ಮೋಶೆಯ ಧರ್ಮಶಾಸ್ತ್ರದ ಪ್ರಕಾರ, ಮಕ್ಕಳು ಮಾಡಿದ ಪಾಪಕ್ಕಾಗಿ ಅವರ ತಂದೆತಾಯಿಗಳಿಗೆ ಮರಣಶಿಕ್ಷೆಯನ್ನು ವಿಧಿಸಕೂಡದು; ತಂದೆತಾಯಿಗಳು ಮಾಡಿದ ಪಾಪಕ್ಕಾಗಿ ಅವರ ಮಕ್ಕಳಿಗೆ ಮರಣಶಿಕ್ಷೆಯನ್ನು ವಿಧಿಸಕೂಡದು. ಪಾಪ ಮಾಡಿದವರಿಗೇ ಮರಣಶಿಕ್ಷೆಯಾಗಬೇಕು.

ಅಮಚ್ಯನು ಯೆಹೂದ ಪ್ರಾಂತ್ಯದ ಜನರನ್ನು ಒಟ್ಟುಗೂಡಿಸಿ ಅವರನ್ನು ಕುಟುಂಬಗಳಿಗನುಸಾರವಾಗಿ ವಿಭಾಗ ಮಾಡಿದನು. ಈ ಗುಂಪುಗಳಿಗೆ ಸಹಸ್ರಾಧಿಪತಿಗಳನ್ನು ಮತ್ತು ಶತಾಧಿಪತಿಗಳನ್ನು ನೇಮಿಸಿದನು. ಇವರು ಯೆಹೂದ ಮತ್ತು ಬೆನ್ಯಾಮೀನ್ ಗೋತ್ರಗಳಲ್ಲಿ ಇಪ್ಪತ್ತು ವರ್ಷಕ್ಕಿಂತ ಮೇಲ್ಪಟ್ಟವರನ್ನು ಸೈನಿಕರನ್ನಾಗಿ ಆರಿಸಿದರು. ಒಟ್ಟು ಮೂರು ಲಕ್ಷ ಸೈನಿಕರು ಬರ್ಜಿ ಗುರಾಣಿಗಳೊಂದಿಗೆ ಯುದ್ಧ ಮಾಡಲು ನುರಿತರಾಗಿದ್ದರು. ಅಮಚ್ಯನು ಒಂದು ಲಕ್ಷ ಸೈನಿಕರನ್ನು ಇಸ್ರೇಲಿನಿಂದ ತರಿಸಿಕೊಂಡನು. ಅವರಿಗೆ ಮೂರು ಮುಕ್ಕಾಲು ಟನ್ ಬೆಳ್ಳಿಯನ್ನು ಸಂಬಳ ರೂಪದಲ್ಲಿ ಕೊಟ್ಟನು. ಆದರೆ ಒಬ್ಬ ದೇವರ ಮನುಷ್ಯನು ಅಮಚ್ಯನ ಬಳಿಗೆ ಬಂದು, “ಅರಸನೇ, ಇಸ್ರೇಲಿನ ಸೈನಿಕರು ನಿನ್ನೊಂದಿಗೆ ಯುದ್ಧಕ್ಕೆ ಹೋಗಲು ಬಿಡಬೇಡ. ಯೆಹೋವನು ಇಸ್ರೇಲರೊಂದಿಗೂ ಎಫ್ರಾಯೀಮಿನ ಜನರೊಂದಿಗೂ ಇರಲಿಲ್ಲ. ನೀನು ನಿನ್ನನ್ನು ಬಲಿಷ್ಠನನ್ನಾಗಿ ಮಾಡಿಕೊಂಡಿದ್ದರೂ ನಿನ್ನ ಸೋಲು ಮತ್ತು ನಿನ್ನ ಜಯ ದೇವರ ಕೈಯಲ್ಲಿವೆ” ಎಂದು ಹೇಳಿದನು. ಅಮಚ್ಯನು ಆ ದೇವರ ಮನುಷ್ಯನಿಗೆ, “ಹಾಗಾದರೆ, ನಾನು ಈಗಾಗಲೇ ಅವರಿಗೆ ಕೊಟ್ಟಿರುವ ಹಣಕ್ಕೇನು ಮಾಡಲಿ?” ಎಂದು ಕೇಳಿದನು. ದೇವರ ಮನುಷ್ಯನು ಉತ್ತರಿಸಿದ್ದೇನೆಂದರೆ, “ಯೆಹೋವನ ಬಳಿಯಲ್ಲಿ ಯಾವ ಕೊರತೆಯೂ ಇಲ್ಲ. ನಿನಗೆ ಅದಕ್ಕಿಂತ ಅಧಿಕವಾಗಿ ಕೊಡಲು ಆತನು ಶಕ್ತನಾಗಿದ್ದಾನೆ” ಎಂದು ಹೇಳಿದನು.

10 ಅಮಚ್ಯನು ಇಸ್ರೇಲಿನ ಸೈನಿಕರನ್ನು ಎಫ್ರಾಯೀಮ್ ಪ್ರಾಂತ್ಯಕ್ಕೆ ಕಳುಹಿಸಿದನು. ಅವರು ಯೆಹೂದದ ಅರಸನ ಮೇಲೆಯೂ ಜನರ ಮೇಲೆಯೂ ಸಿಟ್ಟುಗೊಂಡು ಕೋಪದಿಂದಲೇ ತಮ್ಮ ಮನೆಗಳಿಗೆ ಹಿಂತೆರಳಿದರು.

11 ಅಮಚ್ಯನು ಧೈರ್ಯಗೊಂಡು ತನ್ನ ಸೈನ್ಯವನ್ನು ಎದೋಮ್ ರಾಜ್ಯದ ಉಪ್ಪಿನ ಕಣಿವೆಗೆ ನಡಿಸಿದನು. ಆ ಸ್ಥಳದಲ್ಲಿ ಅವನ ಸೈನಿಕರು ಸೇಯೀರಿನ ಹತ್ತು ಸಾವಿರ ಮಂದಿಯನ್ನು ಕೊಂದರು. 12 ಯೆಹೂದದ ಸೈನಿಕರು ಸೇಯೀರಿನ ಹತ್ತುಸಾವಿರ ಮಂದಿಯನ್ನು ಸೆರೆಹಿಡಿದರು. ಅವರನ್ನು ಒಂದು ಕಡಿದಾದ ಬೆಟ್ಟದ ಬದಿಗೊಯ್ದು ಅಲ್ಲಿಂದ ಅವರನ್ನು ಕೆಳಕ್ಕೆ ದೂಡಿದರು. ಅವರು ಕೆಳಗೆ ಬಂಡೆಗೆ ಅಪ್ಪಳಿಸಿದಾಗ ಅವರ ದೇಹಗಳು ಚೂರುಚೂರಾದವು.

13 ಅದೇ ಸಮಯದಲ್ಲಿ, ಇಸ್ರೇಲರ ಸೈನ್ಯವು ಯೆಹೂದದ ಕೆಲವು ಪಟ್ಟಣಗಳ ಮೇಲೆ ಧಾಳಿಮಾಡಿತು. ಅವರು ಬೇತ್ಹೋರೋನಿನಿಂದ ಹಿಡಿದು ಸಮಾರ್ಯದವರೆಗೆ ಇರುವ ಪಟ್ಟಣಗಳ ಮೇಲೆ ಧಾಳಿ ಮಾಡಿದರು. ಅವರು ಮೂರು ಸಾವಿರ ಜನರನ್ನು ಕೊಂದು ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡರು. ಅಮಚ್ಯನು ತನ್ನೊಂದಿಗೆ ಯುದ್ಧಕ್ಕೆ ಸೇರಿಸಿಕೊಳ್ಳದೆ ಇದ್ದದರಿಂದ ಆ ಸೈನಿಕರು ಕೋಪಗೊಂಡಿದ್ದರು.

14 ಎದೋಮ್ಯರನ್ನು ಸೋಲಿಸಿ ಅಮಚ್ಯನು ಮನೆಗೆ ಹಿಂದಿರುಗಿ ಬಂದನು. ಸೇಯೀರಿನ ಜನರು ಪೂಜಿಸುತ್ತಿದ್ದ ವಿಗ್ರಹಗಳನ್ನು ತನ್ನೊಂದಿಗೆ ತಂದನು. ಅವನು ಅವುಗಳನ್ನು ಪೂಜಿಸತೊಡಗಿ ಅಡ್ಡಬಿದ್ದು ಧೂಪ ಹಾಕಿದನು. 15 ಯೆಹೋವನು ಅಮಚ್ಯನ ಮೇಲೆ ಸಿಟ್ಟುಗೊಂಡನು. ಅವನ ಬಳಿಗೆ ಒಬ್ಬ ಪ್ರವಾದಿಯನ್ನು ಕಳುಹಿಸಿ ಅವನಿಗೆ, “ಅಮಚ್ಯನೇ, ಆ ಜನರು ಪೂಜಿಸುವ ವಿಗ್ರಹಗಳಿಗೇಕೆ ನೀನು ಪೂಜೆ ಮಾಡುವೆ? ತಮ್ಮನ್ನು ಪೂಜಿಸುವವರನ್ನು ಆ ದೇವರುಗಳು ನಿನ್ನಿಂದ ಕಾಪಾಡಲಾರದೆ ಹೋದವು” ಎಂದು ಹೇಳಿದನು.

16 ಆ ಪ್ರವಾದಿಯು ಈ ಮಾತುಗಳನ್ನು ಹೇಳಿದಾಗ ಅಮಚ್ಯನು, “ನಾವು ನಿನ್ನನ್ನು ಅರಸನ ಸಲಹೆಗಾರನನ್ನಾಗಿ ಮಾಡಲಿಲ್ಲವಲ್ಲಾ. ಆದ್ದರಿಂದ ಬಾಯಿಮುಚ್ಚಿಕೊಂಡು ಸುಮ್ಮನಿರು. ಇಲ್ಲದಿದ್ದರೆ ನೀನು ಸಾಯುವೆ” ಅಂದನು. ಆದರೆ ಅವನು, “ದೇವರು ನಿನ್ನನ್ನು ನಾಶಮಾಡಲು ನಿರ್ಧರಿಸಿದ್ದಾನೆ; ಯಾಕೆಂದರೆ ನೀನು ನನ್ನ ಸಲಹೆಯನ್ನು ಕೇಳದೆ ದುಷ್ಟತನ ಮಾಡುತ್ತಿರುವೆ?” ಎಂದು ಹೇಳಿದನು.

17 ಅಮಚ್ಯನು ತನ್ನ ಸಲಹೆಗಾರರೊಂದಿಗೆ ಆಲೋಚನೆ ನಡಿಸಿದನು. ಬಳಿಕ ಇಸ್ರೇಲರ ಅರಸನಾದ ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಆದ ಯೋವಾಷನಿಗೆ, “ನಾವು ಮುಖಾಮುಖಿಯಾಗಿ ಸಂಧಿಸೋಣ” ಎಂಬ ಸಂದೇಶವನ್ನು ಕಳುಹಿಸಿದನು.

18 ಯೋವಾಷನು ಇಸ್ರೇಲಿನ ಅರಸನಾಗಿದ್ದನು. ಅವನು, “ಲೆಬನೋನಿನ ಒಂದು ಚಿಕ್ಕ ಮುಳ್ಳುಗಿಡವು ಲೆಬನೋನಿನ ದೇವದಾರು ಮರಕ್ಕೆ ಸಂದೇಶವನ್ನು ಕಳುಹಿಸಿತು. ಮುಳ್ಳುಗಿಡವು ಹೀಗೆ ಹೇಳಿತು: ‘ನಿನ್ನ ಮಗಳು ನನ್ನ ಮಗನನ್ನು ಮದುವೆ ಮಾಡಿಕೊಳ್ಳಲಿ.’ ಆದರೆ ಒಂದು ಕಾಡುಮೃಗ ಬಂದು ಮುಳ್ಳುಗಿಡವನ್ನು ತುಳಿದು ನಾಶಮಾಡಿತು. 19 ನೀನು ನಿನ್ನ ಮನಸ್ಸಿನಲ್ಲಿ, ‘ನಾನು ಎದೋಮನನ್ನು ಸೋಲಿಸಿದ್ದೇನೆ’ ಎಂದು ನೆನಸಿಕೊಂಡಿರಬಹುದು. ನೀನು ತುಂಬಾ ಹೆಮ್ಮೆಯುಳ್ಳವನಾಗಿ ಜಂಬ ಕೊಚ್ಚಿಕೊಳ್ಳುತ್ತಿರುವೆ. ಆದರೆ ನೀನು ಮನೆಯಲ್ಲಿಯೇ ಕುಳಿತುಕೊಳ್ಳುವುದು ಒಳ್ಳೆದು. ಸುಮ್ಮನೆ ತೊಂದರೆಗೆ ಸಿಕ್ಕಿಕೊಳ್ಳಬೇಡ. ನನ್ನೊಂದಿಗೆ ಯುದ್ಧ ಮಾಡಿದರೆ ಇಡೀ ಯೆಹೂದ ದೇಶವೇ ನಾಶವಾಗುವದು.” ಎಂದು ಬರೆದು ಕಳುಹಿಸಿದನು.

20 ಅಮಚ್ಯನು ಅವನ ಮಾತಿಗೆ ಲಕ್ಷ್ಯಕೊಡಲಿಲ್ಲ. ಇದು ದೇವರಿಂದಲೇ ಆಯಿತು. ಇಸ್ರೇಲ್ ಯೆಹೂದವನ್ನು ಸೋಲಿಸಬೇಕೆಂದು ದೇವರ ಇಚ್ಛೆಯಾಗಿತ್ತು. ಯಾಕೆಂದರೆ ಯೆಹೂದದ ಜನರು ಎದೋಮ್ಯರ ದೇವರುಗಳನ್ನು ಆರಾಧಿಸುತ್ತಿದ್ದರು. 21 ಹೀಗೆ ಯೆಹೂದದ ಅರಸನಾದ ಅಮಚ್ಯನು ಇಸ್ರೇಲರ ಅರಸನನ್ನು ಮುಖಾಮುಖಿಯಾಗಿ ಬೇತ್ಷೆಮೆಷಿನಲ್ಲಿ ಸಂಧಿಸಿದನು. ಬೇತ್ಷೆಮೆಷ್ ಯೆಹೂದ ರಾಜ್ಯದ ಪಟ್ಟಣ. 22 ಇಸ್ರೇಲ್ ಯೆಹೂದವನ್ನು ಸೋಲಿಸಿಬಿಟ್ಟಿತು. ಯೆಹೂದದ ಸೈನಿಕರೆಲ್ಲಾ ತಮ್ಮತಮ್ಮ ಮನೆಗಳಿಗೆ ಓಡಿಹೋದರು. 23 ಯೋವಾಷನು ಬೇತ್ಷೆಮೆಷಿನಲ್ಲಿ ಅಮಚ್ಯನನ್ನು ಹಿಡಿದು ಜೆರುಸಲೇಮಿಗೆ ಕೊಂಡೊಯ್ದನು. ಅಮಚ್ಯನ ತಂದೆ ಯೆಹೋವಾಷನು. ಇವನು ಯೆಹೋವಹಾಜನ ಮಗ. ಯೋವಾಷನು ಜೆರುಸಲೇಮಿನ ಪೌಳಿಗೋಡೆಯಲ್ಲಿ ಆರುನೂರು ಅಡಿ ಗೋಡೆಯನ್ನು ಅಂದರೆ ಎಫ್ರಾಯೀಮ್ ಬಾಗಿಲಿನಿಂದ ಹಿಡಿದು ಮೂಲೆಬಾಗಿಲಿನವರೆಗೆ ಗೋಡೆಯನ್ನು ಕೆಡವಿಹಾಕಿದನು. 24 ದೇವಾಲಯದೊಳಗೆ ಬೆಳ್ಳಿಬಂಗಾರಗಳು ಮತ್ತು ಬೆಲೆಯುಳ್ಳ ವಸ್ತುಗಳಿದ್ದವು. ಓಬೇದೆದೋಮನು ಅವುಗಳ ಮೇಲ್ವಿಚಾರಕನಾಗಿದ್ದನು. ಯೋವಾಷಾನು ಅವೆಲ್ಲವನ್ನೂ ಅರಮನೆಯಲ್ಲಿದ್ದ ನಿಕ್ಷೇಪವನ್ನೂ ಸೂರೆಮಾಡಿ ಕೆಲಜನರನ್ನು ಸೆರೆಹಿಡಿದು ಎಲ್ಲವನ್ನು ಸಮಾರ್ಯಕ್ಕೊಯ್ದನು.

25 ಇಸ್ರೇಲಿನ ಅರಸನೂ ಯೆಹೋವಾಹಾಜನ ಮಗನೂ ಆದ ಯೋವಾಷನು ಸತ್ತಮೇಲೆ ಅಮಚ್ಯನು ಹದಿನೈದು ವರ್ಷ ಜೀವಿಸಿದನು. ಅಮಚ್ಯನ ತಂದೆಯ ಹೆಸರು ಯೆಹೋವಾಷ; ಅವನು ಯೆಹೂದದ ಅರಸನಾಗಿದ್ದನು. 26 ಅಮಚ್ಯನ ಬೇರೆ ಕಾರ್ಯಗಳು ಅಂದರೆ ಆರಂಭದಿಂದ ಕೊನೆಯವರೆಗಿನ ಕಾರ್ಯಗಳನ್ನು ಯೆಹೂದದ ಮತ್ತು ಇಸ್ರೇಲಿನ ರಾಜರ ಗ್ರಂಥದಲ್ಲಿ ಬರೆಯಲಾಗಿದೆ. 27 ಅಮಚ್ಯನು ದೇವರಾದ ಯೆಹೋವನನ್ನು ಆರಾಧಿಸುವದನ್ನು ಬಿಟ್ಟದ್ದಕ್ಕಾಗಿ ಜೆರುಸಲೇಮಿನ ಜನರು ಅವನನ್ನು ಕೊಲ್ಲಲು ಸಂಚುಮಾಡಿದರು. ಆಗ ಅವನು ಲಾಕೀಷಿಗೆ ಓಡಿಹೋದನು. ಆದರೆ ಜನರು ಕೆಲವರನ್ನು ಕಳುಹಿಸಿ ಅಲ್ಲಿಯೇ ಅವನನ್ನು ಕೊಲ್ಲಿಸಿದರು. 28 ಅವನ ಜನರು ಆ ಶವವನ್ನು ಕುದುರೆಯ ಬೆನ್ನಿನ ಮೇಲೆ ಹೊರಿಸಿ ತಂದು ಯೆಹೂದದ ನಗರದಲ್ಲಿ ಅವನ ಪೂರ್ವಿಕರ ಬಳಿಯಲ್ಲಿ ಸಮಾಧಿಮಾಡಿದರು.

ಪ್ರಕಟನೆ 12

ಸ್ತ್ರೀ ಮತ್ತು ಘಟಸರ್ಪ

12 ಆಗ ಪರಲೋಕದಲ್ಲಿ ಮಹಾ ಅದ್ಭುತವು ಕಾಣಿಸಿತು. ಸೂರ್ಯನನ್ನು ಧರಿಸಿದ್ದ ಒಬ್ಬ ಸ್ತ್ರೀ ಅಲ್ಲಿದ್ದಳು. ಆಕೆಯ ಪಾದದ ಕೆಳಗೆ ಚಂದ್ರನಿದ್ದನು. ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳುಳ್ಳ ಒಂದು ಕಿರೀಟವಿತ್ತು. ಆಕೆಯು ಗರ್ಭಿಣಿಯಾಗಿದ್ದಳು ಆಕೆಯು ಪ್ರಸವವೇದನೆಯಿಂದ ಕೂಗಿದಳು.

ಆಗ ಪರಲೋಕದಲ್ಲಿ ಮತ್ತೊಂದು ಅದ್ಭುತವು ಕಾಣಿಸಿತು: ಕೆಂಪಾದ ಮಹಾ ಘಟಸರ್ಪವೊಂದು ಅಲ್ಲಿತ್ತು. ಆ ಘಟಸರ್ಪಕ್ಕೆ ಏಳು ತಲೆಗಳಿದ್ದು, ಪ್ರತಿಯೊಂದು ತಲೆಯ ಮೇಲೂ ಏಳು ಕಿರೀಟಗಳಿದ್ದವು. ಆ ಸರ್ಪಕ್ಕೆ ಹತ್ತು ಕೊಂಬುಗಳಿದ್ದವು. ಆ ಸರ್ಪದ ಬಾಲವು ಆಕಾಶದ ನಕ್ಷತ್ರಗಳಲ್ಲಿ ಮೂರನೆಯ ಒಂದು ಭಾಗವನ್ನು ಸೆಳೆದೆಳೆದು ಭೂಮಿಯ ಮೇಲೆ ಎಸೆಯಿತು. ಆ ಘಟಸರ್ಪವು ಪ್ರಸವ ವೇದನೆಪಡುತ್ತಿದ್ದ ಸ್ತ್ರೀಯ ಎದುರಿನಲ್ಲಿ ನಿಂತುಕೊಂಡಿತು. ಆ ಸ್ತ್ರೀಯು ಹೆರುವ ಮಗುವನ್ನು ನುಂಗಿಹಾಕಲು ಆ ಸರ್ಪವು ಕಾದುಕೊಂಡಿತ್ತು.

ಆ ಸ್ತ್ರೀಯು ಅವನು ಎಲ್ಲಾ ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಆಳುವ ಒಂದು ಗಂಡು ಮಗುವನ್ನು ಹೆತ್ತಳು. ಅವಳ ಮಗುವನ್ನು ದೇವರ ಬಳಿಗೂ ಆತನ ಸಿಂಹಾಸನದ ಬಳಿಗೂ ತೆಗೆದುಕೊಂಡು ಹೋಗಲಾಯಿತು. ಆ ಸ್ತ್ರೀಯು ತನಗಾಗಿ ದೇವರು ಸಿದ್ಧಪಡಿಸಿದ್ದ ಮರುಳುಗಾಡಿನ ಒಂದು ಸ್ಥಳಕ್ಕೆ ಓಡಿಹೋದಳು. ಆ ಮರಳುಗಾಡಿನಲ್ಲಿ ಆಕೆಯನ್ನು ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಪೋಷಿಸಲಾಗುವುದು.

ನಂತರ ಪರಲೋಕದಲ್ಲಿ ಒಂದು ಯುದ್ಧವಾಯಿತು. ಮಿಕಾಯೇಲನು ಮತ್ತು ಅವನ ಸಹದೂತರು ಆ ಘಟಸರ್ಪದ ವಿರುದ್ಧ ಹೋರಾಡಿದರು. ಆ ಘಟಸರ್ಪ ಮತ್ತು ಅದರ ದೂತರೂ ಹೋರಾಡಿದರು. ಆದರೆ ಆ ಘಟಸರ್ಪವೂ ಅದರ ದೂತರೂ ಸೋತುಹೋಗಿ ಪರಲೋಕದಲ್ಲಿ ತಮ್ಮ ಸ್ಥಾನಗಳನ್ನು ಕಳೆದುಕೊಂಡರು. ಆ ಘಟಸರ್ಪವನ್ನು ಪರಲೋಕದಿಂದ (ಆ ಘಟಸರ್ಪಕ್ಕೆ ಸೈತಾನನೆಂತಲೂ ಪಿಶಾಚನೆಂತಲೂ ಹೆಸರಿದೆ. ಅದು ಲೋಕವನ್ನೆಲ್ಲಾ ತಪ್ಪು ಮಾರ್ಗಕ್ಕೆ ಎಳೆಯುತ್ತಿತ್ತು.) ಅದರ ದೂತರೊಂದಿಗೆ ಭೂಮಿಯ ಮೇಲೆ ಎಸೆಯಲಾಯಿತು.

10 ಆಗ ಪರಲೋಕದಲ್ಲಾದ ಒಂದು ಮಹಾಶಬ್ದವನ್ನು ನಾನು ಕೇಳಿದೆನು: “ನಮ್ಮ ದೇವರ ಜಯವು, ಶಕ್ತಿಯು ಮತ್ತು ರಾಜ್ಯವು ಹಾಗೂ ಆತನವನಾಗಿರುವ ಕ್ರಿಸ್ತನ ಅಧಿಕಾರವು ಈಗ ಬಂದಿವೆ. ನಮ್ಮ ಸಹೋದರರ ಮೇಲೆ ದೂಷಣೆ ಮಾಡುವವನನ್ನು ಹೊರಕ್ಕೆ ಎಸೆದಿರುವುದರಿಂದ ಇವುಗಳೆಲ್ಲಾ ಬಂದಿವೆ. ನಮ್ಮ ದೇವರ ಮುಂದೆ ಹಗಲಿರುಳು ನಮ್ಮ ಸಹೋದರರ ಬಗ್ಗೆ ಅವನು ದೂರು ಹೇಳಿದನು. 11 ನಮ್ಮ ಸಹೋದರರು ಕುರಿಮರಿಯಾದಾತನ ರಕ್ತದಿಂದಲೂ ತಮ್ಮ ವಾಕ್ಯದ ಬಲದಿಂದಲೂ ಅವನನ್ನು ಸೋಲಿಸಿದರು. ಅವರು ತಮ್ಮ ಜೀವಗಳನ್ನು ಪ್ರೀತಿಸಲಿಲ್ಲ. ಅವರು ಮರಣಕ್ಕೆ ಭಯಪಡಲಿಲ್ಲ. 12 ಆದ್ದರಿಂದ ಪರಲೋಕವೇ, ಅದರಲ್ಲಿ ವಾಸಮಾಡುವವರೆಲ್ಲರೇ, ಹರ್ಷಗೊಳ್ಳಿರಿ! ಆದರೆ ಭೂಮಿಯೇ, ಸಮುದ್ರವೇ, ಸೈತಾನನು ನಿಮ್ಮ ಬಳಿಗೆ ಬಂದಿರುವುದರಿಂದ ನಿಮಗೆ ದುರ್ಗತಿಯುಂಟಾಗುವುದು! ಸೈತಾನನು ಕೋಪದಿಂದ ತುಂಬಿಕೊಂಡಿದ್ದಾನೆ. ತನಗಿರುವುದು ಸ್ವಲ್ಪಕಾಲವೆಂಬುದು ಅವನಿಗೆ ತಿಳಿದಿದೆ.”

13 ಘಟಸರ್ಪಕ್ಕೆ ತನ್ನನ್ನು ಭೂಮಿಗೆ ತಳ್ಳಿಬಿಟ್ಟಿರುವುದು ತಿಳಿಯಿತು. ಆದ್ದರಿಂದ ಅವನು ಗಂಡು ಮಗುವನ್ನು ಹೆತ್ತ ಸ್ತ್ರೀಯನ್ನು ಅಟ್ಟಿಸಿಕೊಂಡು ಹೋದನು. 14 ಆದರೆ ಆ ಸ್ತ್ರೀಗೆ ಮಹಾಗರುಡನ ಎರಡು ರೆಕ್ಕೆಗಳನ್ನು ಕೊಡಲ್ಪಟ್ಟದ್ದರಿಂದ, ತನಗಾಗಿ ಮರುಳುಗಾಡಿನಲ್ಲಿ ಸಿದ್ಧಪಡಿಸಿದ ಸ್ಥಳಕ್ಕೆ ಹಾರಿ ಹೋಗಲು ಆಕೆಗೆ ಸಾಧ್ಯವಾಯಿತು. ಅಲ್ಲಿ ಅವಳು ಮೂರುವರೆ ವರ್ಷಗಳ ಕಾಲ ಪೋಷಣೆ ಹೊಂದುತ್ತಾ ಸರ್ಪಕ್ಕೆ ಕಾಣದಂತೆ ಮರೆಯಾಗಿರುವಳು.

15 ಆಗ ಸರ್ಪವು ತನ್ನ ಬಾಯಿಂದ ನದಿಯಂತೆ ನೀರನ್ನು ಹೊರಚೆಲ್ಲಿತು. ಆ ಪ್ರವಾಹದ ನೀರು ಅವಳನ್ನು ಕೊಚ್ಚಿ ಕೊಂಡುಹೋಗಲಿ ಎಂಬುದೇ ಆ ಘಟಸರ್ಪದ ಉದ್ದೇಶವಾಗಿತ್ತು. 16 ಆದರೆ ಭೂಮಿಯು ಆ ಸ್ತ್ರೀಗೆ ಸಹಾಯ ಮಾಡಲು ತನ್ನ ಬಾಯನ್ನು ತೆರೆದು, ಘಟಸರ್ಪದ ಬಾಯಿಂದ ಹೊರಬಂದ ನದಿಯನ್ನು ಕುಡಿದುಬಿಟ್ಟಿತು. 17 ಆಗ ಘಟ ಸರ್ಪವು ಆ ಸ್ತ್ರೀಯ ಮೇಲೆ ಬಹಳ ಕೋಪಗೊಂಡು ಆಕೆಯ ಇತರ ಮಕ್ಕಳೆಲ್ಲರ ಮೇಲೆ ಅಂದರೆ ದೇವರ ಆಜ್ಞೆಗಳನ್ನು ಅನುಸರಿಸುವವರ ಮತ್ತು ಯೇಸುವಿನ ಕುರಿತು ಸಾಕ್ಷಿ ಹೇಳುವವರ ಮೇಲೆ ಹೋರಾಟ ಮಾಡಲು ಹೋಯಿತು.

18 ಆ ಘಟಸರ್ಪವು ಸಮುದ್ರತೀರದಲ್ಲಿ ನಿಂತುಕೊಂಡಿತು.

ಜೆಕರ್ಯ 8

ಜೆರುಸಲೇಮನ್ನು ಆಶೀರ್ವದಿಸುವೆನು ಎಂಬ ಯೆಹೋವನ ವಾಗ್ದಾನ

ಸರ್ವಶಕ್ತನಾದ ಯೆಹೋವನ ಸಂದೇಶ: ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಚೀಯೋನ್ ಪರ್ವತವನ್ನು ನಾನು ಸತ್ಯವಾಗಿಯೂ ಪ್ರೀತಿಸುತ್ತೇನೆ. ನನಗೆ ನಂಬಿಗಸ್ತಳಾಗದಿದ್ದಾಗ ನಾನು ಆಕೆಯ ಮೇಲೆ ಕೋಪಗೊಳ್ಳುವಷ್ಟರವರೆಗೆ ಪ್ರೀತಿಸುತ್ತೇನೆ.” ಯೆಹೋವನು ಹೇಳುವುದೇನೆಂದರೆ, “ನಾನು ಚೀಯೋನಿಗೆ ಹಿಂದಿರುಗಿ ಬಂದಿದ್ದೇನೆ. ನಾನು ಜೆರುಸಲೇಮಿನಲ್ಲಿ ವಾಸಿಸುತ್ತೇನೆ. ಜೆರುಸಲೇಮ್ ನಂಬಿಗಸ್ತನಗರವೆಂದು ಕರೆಯಲ್ಪಡುವುದು. ಸರ್ವಶಕ್ತನ ಪರ್ವತವು ಪವಿತ್ರ ಪರ್ವತವೆಂದು ಕರೆಯಲ್ಪಡುವುದು.”

ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ವೃದ್ಧವೃದ್ಧೆಯರು ಜೆರುಸಲೇಮಿನ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಿ ಕಾಣಸಿಗುವರು. ಅವರು ಬಹು ದೀರ್ಘ ಆಯುಷ್ಯವನ್ನು ಹೊಂದುವದರಿಂದ ಅವರಿಗೆ ಕೈಕೋಲು ಬೇಕಾಗುತ್ತದೆ. ನಗರದ ತುಂಬಾ ಬಾಲಬಾಲೆಯರು ಆಡುವರು.” ಅಳಿದುಳಿದುವರು “ಇದು ಆಶ್ಚರ್ಯಕರ” ಎಂದು ಹೇಳುವರು. ನಾನೂ ಇದು ಆಶ್ಚರ್ಯಕರವೆಂದು ತಿಳಿಯುತ್ತೇನೆ.

ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನಾನೂ ಪೂರ್ವ ಪಶ್ಚಿಮದಲ್ಲಿರುವ ದೇಶಗಳೊಳಗಿಂದ ನನ್ನ ಜನರನ್ನು ರಕ್ಷಿಸುವುದನ್ನು ನೋಡಿರಿ. ನಾನು ಅವರನ್ನು ಇಲ್ಲಿಗೆ ಕರೆತರುವೆನು. ಅವರು ಜೆರುಸಲೇಮಿನಲ್ಲಿ ವಾಸಿಸುವರು. ಅವರು ನನ್ನ ಜನರಾಗಿರುವರು; ನಾನು ಅವರಿಗೆ ಒಳ್ಳೆಯವನಾದ ನಂಬಿಗಸ್ತನಾದ ದೇವರಾಗಿರುವೆನು.”

ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಬಲಗೊಳ್ಳಿರಿ! ಸರ್ವಶಕ್ತನಾದ ಯೆಹೋವನು ತನ್ನ ಆಲಯವನ್ನು ತಿರುಗಿ ಕಟ್ಟಲು ಅಸ್ತಿವಾರವನ್ನು ಹಾಕುವಾಗ ಪ್ರವಾದಿಗಳು ಕೊಟ್ಟ ಸಂದೇಶವನ್ನೇ ನೀವು ತಿರುಗಿ ಕೇಳುತ್ತಿದ್ದೀರಿ! 10 ಇದಕ್ಕಿಂತ ಮುಂಚೆ ಜನರ ಕೈಯಲ್ಲಿ ಕೆಲಸಗಾರರಿಗೆ ಕೂಲಿ ಕೊಡುವದಕ್ಕಾಗಲಿ ಪ್ರಾಣಿಗಳ ಬಾಡಿಗೆ ಕೊಡುವದಕ್ಕಾಗಲಿ ಹಣವಿರಲಿಲ್ಲ. ಅದೇ ಸಮಯದಲ್ಲಿ ಜನರು ಹೋಗುತ್ತಾ ಬರುತ್ತಾ ಇರುವದಕ್ಕೆ ಸುರಕ್ಷತೆ ಇರಲಿಲ್ಲ. ಎಲ್ಲಾ ತೊಂದರೆಗಳು ತೊರೆಯಲ್ಪಡಲಿಲ್ಲ. ಪ್ರತಿ ಮನುಷ್ಯನು ತನ್ನ ನೆರೆಯವನ ಮೇಲೆ ಎದುರುಬೀಳುವಂತೆ ನಾನು ಮಾಡಿದ್ದೆನು. 11 ಆದರೆ ಈಗ ಹಾಗಿಲ್ಲ. ಅಳಿಯದೆ ಉಳಿದವರಿಗೆ ಹಾಗೆ ಆಗುವದಿಲ್ಲ. ಇದು ಸರ್ವಶಕ್ತನಾದ ಯೆಹೋವನ ನುಡಿ.

12 “ಈ ಜನರು ನೆಮ್ಮದಿಯಿಂದ ಭೂಮಿಯ ಮೇಲೆ ನಡೆಯುವರು. ಅವರ ದ್ರಾಕ್ಷಾಲತೆಗಳು ದ್ರಾಕ್ಷಿಹಣ್ಣನ್ನು ಕೊಡುವವು. ದೇಶವು ಸಮೃದ್ಧಿಯಾದ ಬೆಳೆಯನ್ನು ಕೊಡುವದು. ಆಕಾಶವು ಮಳೆಯನ್ನು ಸುರಿಸುವದು. ಇವೆಲ್ಲವನ್ನು ನಾನು ನನ್ನ ಜನರಿಗೆ ಕೊಡುವೆನು. 13 ಜನರು ಇಸ್ರೇಲ್ ಮತ್ತು ಯೆಹೂದದ ಹೆಸರುಗಳನ್ನು ಶಾಪ ಇಡುವದಕ್ಕಾಗಿ ಉಪಯೋಗಿಸುವರು. ಆದರೆ ನಾನು ಇಸ್ರೇಲ್ ಮತ್ತು ಯೆಹೂದವನ್ನು ಸಂರಕ್ಷಿಸುವೆನು. ಆ ಹೆಸರುಗಳು ಆಶೀರ್ವದಿಸುವದಕ್ಕಾಗಿ ಉಪಯೋಗಿಸಲ್ಪಡುವದು. ಆದ್ದರಿಂದ ಭಯಪಡಬೇಡಿ, ಬಲಶಾಲಿಗಳಾಗಿರಿ.”

14 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನಿಮ್ಮ ಪೂರ್ವಿಕರು ನನ್ನನ್ನು ಕೋಪಗೊಳಿಸಿದರು. ಆದ್ದರಿಂದ ಅವರನ್ನು ನಾಶಮಾಡಲು ನಾನು ತೀರ್ಮಾನಿಸಿದೆನು. ಮತ್ತು ಈ ತೀರ್ಮಾನವನ್ನು ಬದಲಾಯಿಸುವದೇ ಇಲ್ಲವೆಂದು ನಿರ್ಧರಿಸಿದೆನು. 15 ಆದರೆ ಈಗ ನನ್ನ ನಿರ್ಧಾರವನ್ನು ಬದಲಾಯಿಸಿದ್ದೇನೆ. ಜೆರುಸಲೇಮಿಗೂ ಯೆಹೂದದ ಜನರಿಗೂ ಒಳ್ಳೆಯದನ್ನೇ ಮಾಡುವೆನು. ಆದ್ದರಿಂದ ಭಯಪಡಬೇಡಿ. 16 ಆದರೆ ನೀವು ಮಾಡಬೇಕಾದದ್ದೇನೆಂದರೆ, ನಿಮ್ಮ ನೆರೆಯವರ ಸಂಗಡ ಸತ್ಯವನ್ನೇ ಆಡಿರಿ. ನಿಮ್ಮ ನಗರಗಳಲ್ಲಿ ಯಾವುದೇ ತೀರ್ಮಾನಗಳನ್ನು ಮಾಡುವುದಾಗಿದ್ದರೂ ಅವು ನ್ಯಾಯವಾದವುಗಳಾಗಿಯೂ ಸತ್ಯವಾದವುಗಳಾಗಿಯೂ ಸಮಾಧಾನವನ್ನು ತರುವಂಥವುಗಳಾಗಿಯೂ ಇರಲಿ. 17 ನಿಮ್ಮ ನೆರೆಯವನಿಗೆ ಹಾನಿಮಾಡುವುದನ್ನು ಗುಟ್ಟಾಗಿ ಆಲೋಚಿಸಬೇಡಿರಿ. ಸುಳ್ಳು ವಾಗ್ದಾನ ಮಾಡಬೇಡಿರಿ. ಅವುಗಳನ್ನೆಲ್ಲಾ ಮಾಡುವದರಲ್ಲಿ ಆನಂದಿಸಬೇಡಿರಿ. ಯಾಕೆಂದರೆ ಅವುಗಳನ್ನು ನಾನು ದ್ವೇಷಿಸುತ್ತೇನೆ.” ಇದು ಯೆಹೋವನ ನುಡಿ.

18 ಸರ್ವಶಕ್ತನಾದ ಯೆಹೋವನಿಂದ ನಾನು ಈ ಸಂದೇಶವನ್ನು ಹೊಂದಿದೆನು. 19 ಆತನು ಹೇಳುವುದೇನೆಂದರೆ, “ನಾಲ್ಕನೇ, ಐದನೇ, ಏಳನೇ ಮತ್ತು ಹತ್ತನೇ ತಿಂಗಳಿನಲ್ಲಿ ನೀವು ದುಃಖದಿಂದ ಉಪವಾಸ ಮಾಡುವ ವಿಶೇಷ ದಿವಸಗಳಿವೆ. ಆ ದುಃಖದ ದಿವಸಗಳು ನಿಮ್ಮ ಸಂತಸದ ದಿವಸಗಳಾಗಿ ಪರಿಗಣಿಸಬೇಕು. ನೀವು ಸತ್ಯವನ್ನೂ ಸಮಾಧಾನವನ್ನೂ ಪ್ರೀತಿಸುವವರಾಗಬೇಕು.”

20 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ,
“ಮುಂದಿನ ದಿವಸಗಳಲ್ಲಿ ಬೇರೆಬೇರೆ ನಗರದ ಜನರು ಜೆರುಸಲೇಮಿಗೆ ಬರುವರು.
21 ಬೇರೆಬೇರೆ ನಗರದ ಜನರು ಪರಸ್ಪರ ವಂದಿಸುವರು.
    ಅವರಲ್ಲಿ ಕೆಲವರು, ‘ನಾವು ಸರ್ವಶಕ್ತನಾದ ಯೆಹೋವನನ್ನು ಆರಾಧಿಸಲು ಹೋಗುತ್ತಿದ್ದೇವೆ’ ಅನ್ನುವರು.
ಅದಕ್ಕೆ ಇನ್ನೊಬ್ಬನು,
    ‘ನಾನು ನಿಮ್ಮೊಂದಿಗೆ ಬರುತ್ತೇನೆ’” ಅನ್ನುವನು.

22 ಎಷ್ಟೋ ಜನರು, ಎಷ್ಟೋ ಬಲಶಾಲಿ ಜನಾಂಗಗಳು ಜೆರುಸಲೇಮಿಗೆ ಸರ್ವಶಕ್ತನಾದ ಯೆಹೋವನನ್ನು ಕಂಡುಕೊಳ್ಳಲೂ ಆತನನ್ನು ಆರಾಧಿಸಲೂ ಬರುವರು. 23 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: “ಆ ಸಮಯದಲ್ಲಿ ಬೇರೆಬೇರೆ ಭಾಷೆಗಳನ್ನು ಮಾತಾಡುವ ಅನೇಕ ವಿದೇಶಿಯರು ಯೆಹೂದ್ಯನೊಬ್ಬನ ಬಳಿಗೆ ಬಂದು, ಅವನ ಬಟ್ಟೆಯ ಅಂಚನ್ನು ಹಿಡಿದು, ‘ದೇವರು ನಿಮ್ಮೊಂದಿಗಿದ್ದಾನೆಂದು ನಾವು ಕೇಳಿದ್ದೇವೆ. ನಿಮ್ಮೊಂದಿಗೆ ನಾವೂ ಬಂದು ಆತನನ್ನು ಆರಾಧಿಸಬಹುದೋ?’” ಎಂದು ಕೇಳುವರು.

ಯೋಹಾನ 11

ಲಾಜರನ ಮರಣ

11 ಲಾಜರನೆಂಬ ಒಬ್ಬನು ಅಸ್ವಸ್ಥನಾಗಿದ್ದನು. ಅವನು ಬೆಥಾನಿ ಎಂಬ ಊರಿನಲ್ಲಿ ವಾಸವಾಗಿದ್ದನು. ಮರಿಯಳು ಮತ್ತು ಆಕೆಯ ಸಹೋದರಿಯಾದ ಮಾರ್ಥಳು ಈ ಊರಿನಲ್ಲೇ ವಾಸವಾಗಿದ್ದರು. ಪ್ರಭುವಿಗೆ (ಯೇಸುವಿಗೆ) ಪರಿಮಳತೈಲವನ್ನು ಹಚ್ಚಿ ಆತನ ಪಾದಗಳನ್ನು ತನ್ನ ತಲೆಕೂದಲಿನಿಂದ ಒರಸಿದವಳೇ ಈ ಮರಿಯಳು. ಅಸ್ವಸ್ಥನಾಗಿದ್ದ ಲಾಜರನು ಮರಿಯಳ ಸಹೋದರನಾಗಿದ್ದನು. ಆದ್ದರಿಂದ ಮರಿಯಳು ಮತ್ತು ಮಾರ್ಥಳು, “ಪ್ರಭುವೇ, ನಿನ್ನ ಪ್ರಿಯ ಸ್ನೇಹಿತನಾದ ಲಾಜರನು ಅಸ್ವಸ್ಥನಾಗಿದ್ದಾನೆ” ಎಂಬ ಸಂದೇಶವನ್ನು ಆತನಿಗೆ ತಿಳಿಸಲು ಒಬ್ಬನನ್ನು ಕಳುಹಿಸಿಕೊಟ್ಟರು.

ಯೇಸು ಇದನ್ನು ಕೇಳಿದಾಗ, “ಈ ಕಾಯಿಲೆಯು ದೇವರ ಮತ್ತು ದೇವಕುಮಾರನ ಮಹಿಮೆಗಾಗಿ ಬಂದಿದೆಯೇ ಹೊರತು ಮರಣಕ್ಕಾಗಿಯಲ್ಲ” ಎಂದು ಹೇಳಿದನು. ಯೇಸು ಮಾರ್ಥಳನ್ನು, ಆಕೆಯ ಸಹೋದರಿಯನ್ನು ಮತ್ತು ಲಾಜರನ್ನು ಪ್ರೀತಿಸುತ್ತಿದ್ದನು. ಲಾಜರನು ಅಸ್ವಸ್ಥನಾಗಿದ್ದಾನೆ ಎಂಬ ವಾರ್ತೆಯನ್ನು ಆತನು ಕೇಳಿದಾಗ ತಾನಿದ್ದ ಸ್ಥಳದಲ್ಲಿಯೇ ಇನ್ನೂ ಎರಡು ದಿನಗಳವರೆಗೆ ತಂಗಿದನು. ಬಳಿಕ ಆತನು ತನ್ನ ಶಿಷ್ಯರಿಗೆ, “ನಾವು ಜುದೇಯಕ್ಕೆ ಹಿಂತಿರುಗಿ ಹೋಗಬೇಕು” ಎಂದು ಹೇಳಿದನು.

ಶಿಷ್ಯರು, “ಗುರುವೇ, ಜುದೇಯದ ಯೆಹೂದ್ಯರು ನಿನ್ನನ್ನು ಕಲ್ಲುಗಳಿಂದ ಕೊಲ್ಲಲು ಪ್ರಯತ್ನಿಸಿದರು. ಅದಾದದ್ದು ಕೇವಲ ಸ್ವಲ್ಪಕಾಲದ ಹಿಂದೆಯಷ್ಟೇ. ಈಗ ನೀನು ಮತ್ತೆ ಅಲ್ಲಿಗೆ ಹೋಗಬೇಕೆನ್ನುವಿಯಾ?” ಎಂದು ಉತ್ತರಕೊಟ್ಟರು.

ಯೇಸು, “ಹಗಲಿಗೆ ಹನ್ನೆರಡು ತಾಸುಗಳಿರುತ್ತವೆ. ಹೌದಲ್ಲವೇ? ಹಗಲಿನಲ್ಲಿ ನಡೆಯುವವನು ಎಡವಿಬೀಳುವುದಿಲ್ಲ. ಏಕೆಂದರೆ ಈ ಲೋಕದ ಬೆಳಕಿನಿಂದ ಅವನು ನೋಡಬಲ್ಲನು. 10 ಆದರೆ ರಾತ್ರಿಯಲ್ಲಿ ನಡೆಯುವವನು ಎಡವುತ್ತಾನೆ. ಏಕೆಂದರೆ ನೋಡಿಕೊಂಡು ನಡೆಯಲು ಅವನಿಗೆ ಯಾವ ಬೆಳಕೂ ಇರುವುದಿಲ್ಲ” ಎಂದು ಉತ್ತರಕೊಟ್ಟನು.

11 ಯೇಸು ಈ ಸಂಗತಿಗಳನ್ನು ಹೇಳಿದ ಮೇಲೆ, “ನಮ್ಮ ಸ್ನೇಹಿತನಾದ ಲಾಜರನು ಈಗ ನಿದ್ರಿಸುತ್ತಿದ್ದಾನೆ. ಅವನನ್ನು ಎಬ್ಬಿಸಲು ನಾನು ಅಲ್ಲಿಗೆ ಹೋಗುತ್ತಿದ್ದೇನೆ” ಎಂದು ಹೇಳಿದನು.

12 ಶಿಷ್ಯರು, “ಪ್ರಭುವೇ, ಅವನು ನಿದ್ರೆ ಮಾಡುತ್ತಿದ್ದರೆ ಆರೋಗ್ಯ ಹೊಂದುವನು” ಎಂದು ಉತ್ತರಕೊಟ್ಟರು. 13 ಲಾಜರನು ಸತ್ತುಹೋಗಿದ್ದಾನೆ. ಎಂಬರ್ಥದಲ್ಲಿ ಯೇಸು ಹೇಳಿದನು. ಆದರೆ ಲಾಜರನು ನಿಜವಾಗಿಯೂ ನಿದ್ರಿಸುತ್ತಿದ್ದಾನೆ ಎಂಬರ್ಥದಲ್ಲಿ ಯೇಸು ಹೇಳಿದನೆಂಬುದಾಗಿ ಶಿಷ್ಯರು ಭಾವಿಸಿಕೊಂಡರು.

14 ಆದ್ದರಿಂದ ಯೇಸು, “ಲಾಜರನು ಸತ್ತುಹೋಗಿದ್ದಾನೆ. 15 ಆದರೆ ನಾನು ಅಲ್ಲಿ ಇಲ್ಲದಿದ್ದ ಕಾರಣ ಸಂತೋಷಿಸುತ್ತೇನೆ. ನಿಮ್ಮ ವಿಷಯದಲ್ಲಿಯೂ ನಾನು ಸಂತೋಷಪಡುತ್ತೇನೆ. ಏಕೆಂದರೆ, ಆಗ ನೀವು ನನ್ನಲ್ಲಿ ನಂಬಿಕೆ ಇಡುವಿರಿ. ಬನ್ನಿ, ಅವನ ಬಳಿಗೆ ಹೋಗೋಣ” ಎಂದು ಸ್ವಷ್ಟವಾಗಿ ಹೇಳಿದನು.

16 ಆಗ ದಿದುಮನೆಂಬ ತೋಮನು ತನ್ನ ಜೊತೆ ಶಿಷ್ಯರಿಗೆ, “ನಾವು ಸಹ ಯೇಸುವಿನೊಂದಿಗೆ ಹೋಗಿ ಜುದೇಯದಲ್ಲಿ ಸಾಯೋಣ” ಎಂದು ಹೇಳಿದನು.

ಬೆಥಾನಿಯಲ್ಲಿ ಯೇಸು

17 ಯೇಸು ಬೆಥಾನಿಯಕ್ಕೆ ಬಂದನು. ಈಗಾಗಲೇ ಲಾಜರನು ಸತ್ತು ಸಮಾಧಿಯಾಗಿ ನಾಲ್ಕು ದಿನಗಳಾಯಿತೆಂಬುದು ಯೇಸುವಿಗೆ ತಿಳಿಯಿತು. 18 ಬೆಥಾನಿಯು ಜೆರುಸಲೇಮಿನಿಂದ ಸುಮಾರು ಎರಡು ಮೈಲಿಗಳಷ್ಟು ದೂರದಲ್ಲಿತ್ತು. 19 ಅನೇಕ ಯೆಹೂದ್ಯರು ಮಾರ್ಥ ಮತ್ತು ಮರಿಯಳ ಬಳಿಗೆ ಬಂದಿದ್ದರು. ಮಾರ್ಥ ಮತ್ತು ಮರಿಯಳನ್ನು ಅವರ ತಮ್ಮನಾದ ಲಾಜರನ ವಿಷಯದಲ್ಲಿ ಸಂತೈಸಲು ಯೆಹೂದ್ಯರು ಬಂದಿದ್ದರು.

20 ಯೇಸು ಬರುತ್ತಿದ್ದಾನೆ ಎಂಬ ಸುದ್ದಿಯನ್ನು ಕೇಳಿ ಮಾರ್ಥಳು ಆತನನ್ನು ವಂದಿಸಲು ಹೊರಗೆ ಹೋದಳು. ಆದರೆ ಮರಿಯಳು ಮನೆಯಲ್ಲೇ ಇದ್ದಳು. 21 ಮಾರ್ಥಳು ಯೇಸುವಿಗೆ, “ಪ್ರಭುವೇ, ನೀನು ಇಲ್ಲಿ ಇದ್ದಿದ್ದರೆ, ನನ್ನ ಸಹೋದರನು ಸಾಯುತ್ತಿರಲಿಲ್ಲ. 22 ಆದರೆ ಈಗಲೂ ಸಹ ನೀನು ಏನನ್ನೇ ಕೇಳಿಕೊಂಡರೂ ದೇವರು ನಿನಗೆ ಕೊಡುತ್ತಾನೆ ಎಂಬುದು ನನಗೆ ತಿಳಿದಿದೆ” ಎಂದು ಹೇಳಿದಳು.

23 ಯೇಸು, “ನಿನ್ನ ಸಹೋದರನು ಮತ್ತೆ ಜೀವಂತವಾಗಿ ಎದ್ದುಬರುವನು” ಎಂದು ಹೇಳಿದನು.

24 ಮಾರ್ಥಳು, “ಅಂತಿಮ ದಿನದಂದು ಪುನರುತ್ಥಾನವಾಗುವಾಗ ಅವನು ಮತ್ತೆ ಎದ್ದುಬರುವನೆಂದು ನನಗೆ ಗೊತ್ತಿದೆ” ಎಂಬುದಾಗಿ ಉತ್ತರ ಕೊಟ್ಟಳು.

25 ಯೇಸು ಆಕೆಗೆ, “ನಾನೇ ಪುನರುತ್ಥಾನ. ನಾನೇ ಜೀವ. ನನ್ನನ್ನು ನಂಬುವವನು ತಾನು ಸತ್ತನಂತರವೂ ಮತ್ತೆ ಜೀವವನ್ನು ಹೊಂದುವನು. 26 ಮತ್ತು ಬದುಕುತ್ತಾ ನನ್ನನ್ನು ನಂಬುವವನು ಎಂದಿಗೂ ಸಾಯುವುದಿಲ್ಲ. ಮಾರ್ಥಳೇ, ನೀನು ಇದನ್ನು ನಂಬುವಿಯಾ?” ಎಂದನು.

27 ಮಾರ್ಥಳು, “ಹೌದು ಪ್ರಭುವೇ, ನೀನು ದೇವರ ಮಗನಾದ ಕ್ರಿಸ್ತನೆಂದು ನಾನು ನಂಬುವೆ. ಈ ಲೋಕಕ್ಕೆ ಬರಬೇಕಾಗಿದ್ದವನು ನೀನೇ” ಎಂದು ಉತ್ತರಕೊಟ್ಟಳು.

ಯೇಸು ಕಣ್ಣೀರಿಡುವನು

28 ಮಾರ್ಥಳು ಹೀಗೆ ಹೇಳಿದ ಮೇಲೆ, ತನ್ನ ಸಹೋದರಿಯಾದ ಮರಿಯಳ ಬಳಿಗೆ ಹಿಂತಿರುಗಿ ಹೋದಳು. ಮಾರ್ಥಳು ಮರಿಯಳೊಂದಿಗೆ ಪ್ರತ್ಯೇಕವಾಗಿ ಮಾತಾಡಿ, “ಗುರುವು (ಯೇಸು) ನಿನ್ನನ್ನು ಕರೆಯುತ್ತಿದ್ದಾನೆ” ಎಂದು ತಿಳಿಸಿದಳು. 29 ಇದನ್ನು ಕೇಳಿದ ಕೂಡಲೇ ಮರಿಯಳು ಎದ್ದು ಯೇಸುವಿನ ಬಳಿಗೆ ಬೇಗಬೇಗನೆ ಹೋದಳು. 30 ಯೇಸು ಇನ್ನೂ ಊರೊಳಗೆ ಬಂದಿರಲಿಲ್ಲ. ಮಾರ್ಥಳು ತನ್ನನ್ನು ಸಂಧಿಸಿದ ಸ್ಥಳದಲ್ಲೇ ಆತನಿದ್ದನು. 31 ಯೆಹೂದ್ಯರು ಮರಿಯಳೊಂದಿಗೆ ಮನೆಯಲ್ಲಿದ್ದರು. ಅವರು ಆಕೆಯನ್ನು ಸಂತೈಸುತ್ತಿದ್ದರು. ಮರಿಯಳು ಎದ್ದು ಬೇಗನೆ ಹೋಗುವುದನ್ನು ಅವರು ಕಂಡರು. ಆಕೆಯು ಅಳುವುದಕ್ಕಾಗಿ ಸಮಾಧಿಯ ಬಳಿಗೆ ಹೋಗುತ್ತಿದ್ದಾಳೆಂದು ಅವರು ಭಾವಿಸಿಕೊಂಡು ಆಕೆಯನ್ನು ಹಿಂಬಾಲಿಸಿದರು. 32 ಯೇಸು ಇದ್ದ ಸ್ಥಳಕ್ಕೆ ಮರಿಯಳು ಹೋದಳು. ಆಕೆಯು ಯೇಸುವನ್ನು ಕಂಡಾಗ ಆತನ ಪಾದಗಳಿಗೆ ಅಡ್ಡಬಿದ್ದು, “ಪ್ರಭುವೇ, ನೀನು ಇಲ್ಲಿ ಇದ್ದಿದ್ದರೆ, ನನ್ನ ಸಹೋದರನು ಸಾಯುತ್ತಿರಲಿಲ್ಲ” ಎಂದು ಹೇಳಿದಳು.

33 ಮರಿಯಳ ಮತ್ತು ಆಕೆಯೊಂದಿಗೆ ಬಂದಿದ್ದ ಯೆಹೂದ್ಯರ ಗೋಳಾಟವನ್ನು ಯೇಸು ನೋಡಿದಾಗ, ತನ್ನ ಹೃದಯದಲ್ಲಿ ಬಹಳವಾಗಿ ದುಃಖಗೊಂಡು ತತ್ತರಿಸಿದನು. 34 ಯೇಸು ಅವರಿಗೆ, “ಅವನನ್ನು ಎಲ್ಲಿ ಇಟ್ಟಿದ್ದೀರಿ?” ಎಂದು ಕೇಳಿದನು.

ಅದಕ್ಕೆ ಅವರು, “ಸ್ವಾಮೀ, ಬಂದು ನೋಡು” ಎಂದರು.

35 ಯೇಸು ಕಣ್ಣೀರಿಟ್ಟನು.

36 ಆಗ ಯೆಹೂದ್ಯರು, “ನೋಡಿ! ಯೇಸು ಅವನನ್ನು ಬಹಳವಾಗಿ ಪ್ರೀತಿಸುತ್ತಿದ್ದನು!” ಎಂದರು.

37 ಆದರೆ ಕೆಲವು ಯೆಹೂದ್ಯರು, “ಯೇಸು ಕುರುಡನ ಕಣ್ಣುಗಳನ್ನು ಗುಣಪಡಿಸಿದನಲ್ಲಾ; ಲಾಜರನಿಗೂ ಸಹಾಯಮಾಡಿ ಅವನನ್ನು ಸಾವಿನಿಂದ ತಪ್ಪಿಸಬಾರದಾಗಿತ್ತೇ?” ಎಂದರು.

ಮರುಜೀವ ಪಡೆದ ಲಾಜರ

38 ಯೇಸು ತನ್ನ ಹೃದಯದಲ್ಲಿ ಮತ್ತೆ ಬಹಳವಾಗಿ ದುಃಖಗೊಂಡು, ಲಾಜರನಿದ್ದ ಸಮಾಧಿಯ ಬಳಿಗೆ ಬಂದನು. ಆ ಸಮಾಧಿಯು ಒಂದು ಗವಿಯಾಗಿತ್ತು. ಅದರ ಬಾಯಿಗೆ ದೊಡ್ಡಕಲ್ಲನ್ನು ಮುಚ್ಚಿದ್ದರು. 39 “ಆ ಕಲ್ಲನ್ನು ತೆಗೆದುಹಾಕಿರಿ” ಎಂದು ಯೇಸು ಹೇಳಿದನು.

ಲಾಜರನ ಅಕ್ಕಳಾದ ಮಾರ್ಥಳು, “ಪ್ರಭುವೇ, ಲಾಜರನು ಸತ್ತು ನಾಲ್ಕು ದಿನಗಳಾಗಿವೆ. ಆದ್ದರಿಂದ ಅಲ್ಲಿ ದುರ್ವಾಸನೆಯಿರುತ್ತದೆ” ಎಂದು ಹೇಳಿದಳು.

40 ಯೇಸು ಮಾರ್ಥಳಿಗೆ, “ನಾನು ನಿನಗೆ ಹೇಳಿದ್ದನ್ನು ಜ್ಞಾಪಿಸಿಕೊಳ್ಳುವಿಯಾ? ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವೆ ಎಂದು ನಾನು ನಿನಗೆ ಹೇಳಿದೆನು” ಎಂದನು.

41 ಆದ್ದರಿಂದ ಅವರು ಸಮಾಧಿಯ ಬಾಯಿಂದ ಕಲ್ಲನ್ನು ತೆಗೆದುಹಾಕಿದರು. ಆಗ ಯೇಸು ಕಣ್ಣೆತ್ತಿ ಮೇಲಕ್ಕೆ ನೋಡಿ, “ತಂದೆಯೇ, ನನ್ನ ಪ್ರಾರ್ಥನೆಯನ್ನು ಕೇಳಿದರಿಂದ ನಿನ್ನನ್ನು ಕೊಂಡಾಡುತ್ತೇನೆ. 42 ನೀನು ಯಾವಾಗಲೂ ನನಗೆ ಕಿವಿಗೊಡುವೆ ಎಂಬುದು ನನಗೆ ತಿಳಿದಿದೆ. ಆದರೆ ಇಲ್ಲಿ ನನ್ನ ಸುತ್ತಲೂ ನೆರೆದಿರುವ ಜನರಿಗೋಸ್ಕರವಾಗಿ ನಾನು ಈ ಸಂಗತಿಗಳನ್ನು ಹೇಳಿದೆನು. ನೀನೇ ನನ್ನನ್ನು ಕಳುಹಿಸಿರುವುದಾಗಿ ಅವರು ನಂಬಬೇಕೆಂದು ನಾನು ಬಯಸುತ್ತೇನೆ” ಎಂದನು. 43 ಬಳಿಕ ಯೇಸು ಗಟ್ಟಿಯಾದ ಧ್ವನಿಯಿಂದ, “ಲಾಜರನೇ, ಹೊರಗೆ ಬಾ!” ಎಂದು ಕರೆದನು. 44 ಸತ್ತುಹೋಗಿದ್ದವನು (ಲಾಜರನು) ಹೊರಗೆ ಬಂದನು. ಅವನ ಕೈಕಾಲುಗಳನ್ನು ಬಟ್ಟೆಗಳಿಂದ ಸುತ್ತಲಾಗಿತ್ತು. ಅವನ ಮುಖವನ್ನು ಕರವಸ್ತ್ರದಿಂದ ಮುಚ್ಚಲಾಗಿತ್ತು.

ಆಗ ಯೇಸು, “ಅವನಿಗೆ ಸುತ್ತಿರುವ ಬಟ್ಟೆಗಳನ್ನು ತೆಗೆದುಹಾಕಿರಿ, ಅವನು ಹೋಗಲಿ” ಎಂದು ಹೇಳಿದನು.

ಯೇಸುವನ್ನು ಕೊಲ್ಲಲು ಯೆಹೂದ್ಯ ನಾಯಕರ ಸಂಚು

(ಮತ್ತಾಯ 26:1-5; ಮಾರ್ಕ 14:1-2; ಲೂಕ 22:1-2)

45 ಮರಿಯಳನ್ನು ಸಂದರ್ಶಿಸಲು ಬಂದಿದ್ದ ಅನೇಕ ಯೆಹೂದ್ಯರು ಅಲ್ಲಿದ್ದರು. ಯೇಸು ಮಾಡಿದ ಈ ಕಾರ್ಯವನ್ನು ಕಂಡ ಇವರಲ್ಲಿ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು. 46 ಆದರೆ ಕೆಲವು ಯೆಹೂದ್ಯರು ಫರಿಸಾಯರ ಬಳಿಗೆ ಹೋಗಿ, ಯೇಸು ಮಾಡಿದ್ದನ್ನು ತಿಳಿಸಿದರು. 47 ಆಗ ಮಹಾಯಾಜಕರು ಮತ್ತು ಫರಿಸಾಯರು ಯೆಹೂದ್ಯರ ಆಲೋಚನಾಸಭೆಯನ್ನು ಕರೆದು, “ನಾವು ಏನು ಮಾಡಬೇಕು? ಈ ಮನುಷ್ಯನು (ಯೇಸು) ಅನೇಕ ಸೂಚಕಕಾರ್ಯಗಳನ್ನು ಮಾಡುತ್ತಿದ್ದಾನೆ. 48 ಈ ಕಾರ್ಯಗಳನ್ನು ಮಾಡಲು ನಾವು ಅವನಿಗೆ ಅವಕಾಶ ಕೊಟ್ಟರೆ ಜನರೆಲ್ಲರೂ ಇವನಲ್ಲಿ ನಂಬಿಕೆ ಇಡುವರು. ಆಗ ರೋಮ್ ರಾಜ್ಯದವರು ಬಂದು ನಮ್ಮ ದೇವಾಲಯವನ್ನೂ ನಮ್ಮ ದೇಶವನ್ನೂ ವಶಪಡಿಸಿಕೊಳ್ಳುವರು” ಅಂದರು.

49 ಅವರಲ್ಲಿ ಕಾಯಫನೆಂಬ ಒಬ್ಬನಿದ್ದನು. ಅವನು ಆ ವರ್ಷ ಮಹಾಯಾಜಕನಾಗಿದ್ದನು. ಅವನು, “ನಿಮಗೆ ಏನೂ ಗೊತ್ತಿಲ್ಲ! 50 ಇಡೀ ಜನಾಂಗವು ನಾಶವಾಗುವುದಕ್ಕಿಂತ ಒಬ್ಬನು ಅವರಿಗೋಸ್ಕರವಾಗಿ ಸಾಯುವುದು ಉತ್ತಮ. ಆದರೆ ನೀವು ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ” ಎಂದು ಹೇಳಿದನು.

51 ಇದು ಕಾಯಫನ ಸ್ವಂತ ಆಲೋಚನೆಯಾಗಿರಲಿಲ್ಲ. ಅವನು ಆ ವರ್ಷ ಮಹಾಯಾಜಕನಾಗಿದ್ದನು. ಆದ್ದರಿಂದ ಯೆಹೂದ್ಯರಿಗೋಸ್ಕರವಾಗಿ ಯೇಸು ಸಾಯುತ್ತಾನೆಂದು ಅವನು ನಿಜವಾಗಿಯೂ ಪ್ರವಾದಿಸಿದನು. 52 ಹೌದು, ಯೆಹೂದ್ಯರಿಗಾಗಿಯೂ ಲೋಕದಲ್ಲೆಲ್ಲಾ ಚದರಿಹೋಗಿರುವ ದೇವರ ಮಕ್ಕಳನ್ನೆಲ್ಲ ಒಂದುಗೂಡಿಸುವುದಕ್ಕಾಗಿಯೂ ಆತನು ಸಾಯಲಿದ್ದನು.

53 ಅಂದಿನಿಂದ ಯೆಹೂದ್ಯನಾಯಕರು ಯೇಸುವನ್ನು ಕೊಲ್ಲಲು ಸಂಚು ಮಾಡಲಾರಂಭಿಸಿದರು. 54 ಆದ್ದರಿಂದ ಯೇಸುವು ಯೆಹೂದ್ಯರ ಮಧ್ಯದಲ್ಲಿ ಬಹಿರಂಗವಾಗಿ ಸಂಚರಿಸುವುದನ್ನು ಬಿಟ್ಟುಬಿಟ್ಟನು. ಆತನು ಜೆರುಸಲೇಮನ್ನು ಬಿಟ್ಟು ಮರುಭೂಮಿಯ ಸಮೀಪದಲ್ಲಿದ್ದ ಸ್ಥಳಕ್ಕೆ ಹೋಗಿ ಎಫ್ರಾಯಿಮ್ ಎಂಬ ಊರಿನಲ್ಲಿ ತನ್ನ ಶಿಷ್ಯರ ಸಂಗಡ ಇಳಿದುಕೊಂಡನು.

55 ಆಗ ಯೆಹೂದ್ಯರ ಪಸ್ಕಹಬ್ಬವು ಸಮೀಪವಾಗಿತ್ತು. ಪಸ್ಕಹಬ್ಬಕ್ಕಿಂತ ಮೊದಲೇ ತಮ್ಮ ಗ್ರಾಮಗಳಿಂದ ಅನೇಕ ಜನರು ಜೆರುಸಲೇಮಿಗೆ ಹೋಗಿದ್ದರು. ವಿಶೇಷವಾದ ಕಾರ್ಯಗಳನ್ನು ಮಾಡಿ ಪಸ್ಕಹಬ್ಬಕ್ಕಾಗಿ ತಮ್ಮನ್ನು ಶುದ್ಧೀಕರಿಸಿಕೊಳ್ಳಬೇಕೆಂದು ಅವರು ಹೋಗಿದ್ದರು. 56 ಅವರು ಅಲ್ಲಿ ಯೇಸುವನ್ನು ಹುಡುಕತೊಡಗಿದರು. ಅವರು ದೇವಾಲಯದಲ್ಲಿ ನಿಂತುಕೊಂಡು, “ಆತನು ಹಬ್ಬಕ್ಕೆ ಬರುವನೇ? ನಿಮ್ಮ ಆಲೋಚನೆ ಏನು?” ಎಂದು ಒಬ್ಬರನ್ನೊಬ್ಬರು ಕೇಳುತ್ತಿದ್ದರು. 57 ಆದರೆ ಮಹಾಯಾಜಕರು ಮತ್ತು ಫರಿಸಾಯರು, ಯೇಸು ಎಲ್ಲಿದ್ದಾನೆಂಬುದು ಯಾರಿಗಾದರೂ ತಿಳಿದು ಬಂದರೆ ತಮಗೆ ತಿಳಿಸಬೇಕೆಂದು ವಿಶೇಷ ಆಜ್ಞೆಯನ್ನು ಪ್ರಕಟಿಸಿದ್ದರು. ಅವರು ಆತನನ್ನು ಬಂಧಿಸಬೇಕೆಂದಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International