M’Cheyne Bible Reading Plan
21 ಯೆಹೋಷಾಫಾಟನು ಸತ್ತನು. ಅವನನ್ನು ಅವನ ಪೂರ್ವಿಕರೊಂದಿಗೆ ದಾವೀದನಗರದಲ್ಲಿ ಸಮಾಧಿಮಾಡಿದರು. ಅವನ ಮಗನಾದ ಯೆಹೋರಾಮನು ಪಟ್ಟಕ್ಕೆ ಬಂದನು. 2 ಯೆಹೋರಾಮನ ತಮ್ಮಂದಿರು ಯಾರೆಂದರೆ: ಅಜರ್ಯ, ಯೆಹೀಯೇಲ್, ಜೆಕರ್ಯ, ಅಜರ್ಯ, ಮೀಕಾಯೇಲ್ ಮತ್ತು ಶೆಫಟ್ಯ. ಇವರೆಲ್ಲಾ ಯೆಹೂದದ ರಾಜನಾಗಿದ್ದ ಯೆಹೋಷಾಫಾಟನ ಮಕ್ಕಳು. 3 ಯೆಹೋಷಾಫಾಟನು ತನ್ನ ಮಕ್ಕಳಿಗೆ ಅನೇಕ ಬೆಳ್ಳಿಬಂಗಾರದ ಮತ್ತು ಬೆಲೆಬಾಳುವ ವಸ್ತುಗಳನ್ನು ಉಡುಗೊರೆಯಾಗಿ ಕೊಟ್ಟನು. ಮಾತ್ರವಲ್ಲದೆ ಕೋಟೆಯಿಂದ ಭದ್ರಪಡಿಸಲ್ಪಟ್ಟ ಪಟ್ಟಣಗಳನ್ನು ಕೊಟ್ಟನು. ಆದರೆ ಯೆಹೂದ ರಾಜ್ಯವನ್ನು ತನ್ನ ಚೊಚ್ಚಲ ಮಗನಾದ ಯೆಹೋರಾಮನಿಗೆ ಕೊಟ್ಟನು.
ಯೆಹೂದ ರಾಜ್ಯದ ಅರಸನಾದ ಯೆಹೋರಾಮ
4 ಯೆಹೋರಾಮನು ತನ್ನ ತಂದೆಯ ರಾಜ್ಯವನ್ನು ಪಡೆದುಕೊಂಡು ತನ್ನನ್ನು ಬಲಪಡಿಸಿಕೊಂಡನು. ನಂತರ ತನ್ನ ತಮ್ಮಂದಿರನ್ನೆಲ್ಲಾ ಖಡ್ಗದಿಂದ ಹತಿಸಿದನು. ಮಾತ್ರವಲ್ಲದೆ ಇಸ್ರೇಲಿನ ಕೆಲವು ಪ್ರಧಾನರನ್ನು ಕೊಲ್ಲಿಸಿದನು. 5 ಅವನು ಮೂವತ್ತೆರಡು ವರ್ಷದವನಾಗಿದ್ದಾಗ ಆಳಲು ಪ್ರಾರಂಭಿಸಿದನು. ಅವನು ಜೆರುಸಲೇಮಿನಲ್ಲಿ ಒಟ್ಟು ಎಂಟು ವರ್ಷ ಆಳಿದನು. 6 ಅವನು ಇಸ್ರೇಲಿನ ರಾಜರುಗಳು ವರ್ತಿಸಿದ ರೀತಿಯಲ್ಲಿ ಜೀವಿಸಿದನು. ಅಹಾಬನ ಕುಟುಂಬದವರು ಹೇಗೆ ಜೀವಿಸಿದರೋ ಹಾಗೆಯೇ ಜೀವಿಸಿದನು. ಯಾಕೆಂದರೆ ಅವನು ಅಹಾಬನ ಮಗಳನ್ನು ಮದುವೆಯಾಗಿದ್ದನು. ಯೆಹೋರಾಮನು ಯೆಹೋವನ ದೃಷ್ಟಿಯಲ್ಲಿ ಕೆಟ್ಟವನಾಗಿ ಜೀವಿಸಿದನು. 7 ಆದರೆ ಯೆಹೋವನು ದಾವೀದನೊಂದಿಗೆ ಮಾಡಿದ ಒಡಂಬಡಿಕೆಯ ನಿಮಿತ್ತ ಅವನನ್ನು ನಾಶಮಾಡಲಿಲ್ಲ. ಯೆಹೋವನು, “ದಾವೀದನ ಸಂತತಿಯವರ ಬೆಳಕು ಉರಿಯುತ್ತಲೇ ಇರುವದು” ಎಂದು ವಾಗ್ದಾನ ಮಾಡಿದ್ದನು.
8 ಯೆಹೋರಾಮನ ಆಳ್ವಿಕೆಯ ಸಮಯದಲ್ಲಿ ಎದೋಮ್ ಯೆಹೂದದ ಹಿಡಿತದಿಂದ ಬಿಡಿಸಿಕೊಂಡಿತು. ಎದೋಮಿನ ಪ್ರಜೆಗಳು ತಮ್ಮ ರಾಜನನ್ನು ತಾವೇ ಆರಿಸಿಕೊಂಡರು. 9 ಇದನ್ನರಿತ ಯೆಹೋರಾಮನು ತನ್ನ ರಥಬಲದೊಡನೆ ಎದೋಮಿಗೆ ಹೋದನು. ಅಲ್ಲಿ ಎದೋಮ್ಯರ ಸೈನ್ಯ ಇವರಿಗೆ ಮುತ್ತಿಗೆ ಹಾಕಿತು. ಆದರೆ ರಾತ್ರಿ ಸಮಯದಲ್ಲಿಯೇ ಯೆಹೋರಾಮನು ಅವರನ್ನು ಸೋಲಿಸಿದನು. 10 ಅಂದಿನಿಂದ ಇಂದಿನ ತನಕವೂ ಎದೋಮ್ ರಾಜ್ಯವು ಯೆಹೂದರಾಜ್ಯಕ್ಕೆ ಒಳಗಾಗಲೇ ಇಲ್ಲ. ಲಿಬ್ನ ಪಟ್ಟಣದ ಜನರೂ ಯೆಹೋರಾಮನಿಗೆ ಎದುರುನಿಂತರು. ತನ್ನ ಪೂರ್ವಿಕರು ಆರಾಧಿಸುತ್ತಿದ್ದ ದೇವರಾದ ಯೆಹೋವನನ್ನು ಯೆಹೋರಾಮನು ತೊರೆದುಬಿಟ್ಟಿದ್ದರಿಂದ ಇವೆಲ್ಲಾ ಅವನಿಗೆ ಸಂಭವಿಸಿದವು. 11 ಯೆಹೋರಾಮನು ಯೆಹೂದ ರಾಜ್ಯದ ಬೆಟ್ಟಗಳ ಮೇಲೆ ಪೂಜಾಸ್ಥಳಗಳನ್ನು ಕಟ್ಟಿಸಿದನು. ಪ್ರಜೆಗಳು ದೇವರ ಚಿತ್ತಕ್ಕನುಸಾರವಾಗಿ ನಡೆಯದಂತೆ ಅವರನ್ನು ಯೆಹೋವನಿಂದ ದೂರಕ್ಕೆ ನಡೆಸಿದನು.
12 ಪ್ರವಾದಿಯಾದ ಎಲೀಯನು ಯೆಹೋರಾಮನಿಗೆ ಈ ಸಂದೇಶವನ್ನು ಕಳುಹಿಸಿದನು:
“ನಿನ್ನ ಪೂರ್ವಿಕನಾದ ದಾವೀದನ ದೇವರಾದ ಯೆಹೋವನ ಮಾತಿದು. ಆತನು ಹೇಳುವುದೇನೆಂದರೆ, ‘ಯೆಹೋರಾಮನೇ, ನೀನು ನಿನ್ನ ತಂದೆಯಾದ ಯೆಹೋಷಾಫಾಟನು ಜೀವಿಸಿದ್ದ ರೀತಿಯಲ್ಲಿ ಜೀವಿಸುತ್ತಿಲ್ಲ. ಯೆಹೂದದೇಶದ ಅರಸನಾದ ಆಸನು ಜೀವಿಸಿದ್ದ ರೀತಿಯಲ್ಲಿಯೂ ನೀನು ಜೀವಿಸುತ್ತಿಲ್ಲ. 13 ಇಸ್ರೇಲರ ರಾಜರುಗಳು ಜೀವಿಸಿದ್ದ ರೀತಿಯಲ್ಲಿ ನೀನು ಜೀವಿಸುತ್ತಿರುವೆ. ಯೆಹೂದ ದೇಶದಲ್ಲಿಯೂ ಜೆರುಸಲೇಮಿನಲ್ಲಿಯೂ ವಾಸಿಸುವ ಜನರು ನನ್ನ ಚಿತ್ತಕ್ಕನುಸಾರವಾಗಿ ಜೀವಿಸದಂತೆ ನೀನು ಮಾಡುತ್ತಿರುವೆ. ಅಹಾಬನೂ ಅವನ ಕುಟುಂಬದವರೂ ಹೀಗೆಯೇ ಮಾಡಿದರು. ಅವರು ದೇವರಿಗೆ ಅಪನಂಬಿಗಸ್ತರಾಗಿದ್ದರು. ನೀನು ನಿನ್ನ ತಮ್ಮಂದಿರನ್ನು ಕೊಂದುಹಾಕಿದೆ. ಅವರು ನಿನಗಿಂತಲೂ ಉತ್ತಮರಾಗಿದ್ದರು. 14 ಆದ್ದರಿಂದ ಯೆಹೋವನು ನಿನ್ನ ಜನರನ್ನು ಭಯಂಕರವಾದ ರೋಗದಿಂದ ದಂಡಿಸುವನು. ಆತನು ನಿನ್ನನ್ನೂ ನಿನ್ನ ಹೆಂಡತಿಮಕ್ಕಳನ್ನೂ ಆಸ್ತಿಪಾಸ್ತಿಯನ್ನೂ ಶಿಕ್ಷಿಸುವನು. 15 ನಿನ್ನ ಹೊಟ್ಟೆಯೊಳಗೆ ಭಯಂಕರವಾದ ಕಾಯಿಲೆ ಬರುವದು. ಅದು ದಿನದಿಂದ ದಿನಕ್ಕೆ ಹೆಚ್ಚುವುದು. ಆ ರೋಗದ ನಿಮಿತ್ತ ನಿನ್ನ ಕರುಳು ನಿನ್ನ ಹೊಟ್ಟೆಯಿಂದ ಹೊರಬೀಳುವದು.’”
16 ಫಿಲಿಷ್ಟಿಯರೂ ಇಥಿಯೋಪಿಯದವರ ಬಳಿಯಲ್ಲಿ ವಾಸವಾಗಿದ್ದ ಅರಬಿಯರೂ ಯೆಹೋರಾಮನ ಮೇಲೆ ಕೋಪಗೊಳ್ಳುವಂತೆ ಯೆಹೋವನು ಮಾಡಿದನು. 17 ಅವರು ಬಂದು ಯೆಹೂದದೇಶದ ಮೇಲೆ ಆಕ್ರಮಣ ಮಾಡಿದರು; ರಾಜನಿವಾಸದಲ್ಲಿದ್ದ ನಿಕ್ಷೇಪವನ್ನೆಲ್ಲಾ ಸೂರೆಮಾಡಿದರು. ಅಲ್ಲದೆ ಯೆಹೋರಾಮನ ಪತ್ನಿ, ಮಕ್ಕಳನ್ನೂ ಕೊಂಡೊಯ್ದರು. ಯೆಹೋರಾಮನ ಕೊನೆಯ ಮಗನು ಮಾತ್ರ ಉಳಿದನು. ಅವನ ಹೆಸರು ಯೆಹೋವಾಹಾಜ.
18 ಇದಾದ ಬಳಿಕ ಯೆಹೋವನು ಅವನ ಕರುಳಿನಲ್ಲಿ ಗುಣವಾಗದ ರೋಗ ಬರಮಾಡಿದನು. 19 ಎರಡು ವರ್ಷಗಳ ನಂತರ ಆ ರೋಗದ ನಿಮಿತ್ತ ಅವನ ಕರುಳುಗಳು ಹೊರಬಿದ್ದವು. ಅವನು ಬಹಳ ನೋವನ್ನು ಅನುಭವಿಸಿ ಸತ್ತನು. ಅವನು ಸತ್ತಾಗ ಅವನ ತಂದೆಗೆ ಧೂಪಹಾಕಿ ಗೌರವಿಸಿದಂತೆ ಯೆಹೋರಾಮನಿಗೆ ಮಾಡಲಿಲ್ಲ. 20 ಯೆಹೋರಾಮನು ಪಟ್ಟಕ್ಕೆ ಬಂದಾಗ ಮೂವತ್ತೆರಡು ವರ್ಷದವನಾಗಿದ್ದನು. ಅವನು ಎಂಟು ವರ್ಷ ಕಾಲ ಜೆರುಸಲೇಮಿನಲ್ಲಿ ಆಳಿದನು. ಅವನು ಸತ್ತಾಗ ಅವನಿಗೋಸ್ಕರ ಯಾರೂ ದುಃಖಪಡಲಿಲ್ಲ. ಜನರು ಅವನನ್ನು ದಾವೀದನಗರದಲ್ಲಿ ಸಮಾಧಿಮಾಡಿದರು. ಆದರೆ ರಾಜರ ಸಮಾಧಿ ಸ್ಥಳದಲ್ಲಿ ಅವನನ್ನು ಹೂಳಿಡಲಿಲ್ಲ.
ಐದನೆಯ ತುತೂರಿ—ಮೊದಲನೆ ವಿಪತ್ತು
9 ಐದನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಒಂದು ನಕ್ಷತ್ರವು ಆಕಾಶದಿಂದ ಭೂಮಿಯ ಮೇಲೆ ಬಿದ್ದದ್ದನ್ನು ನಾನು ನೋಡಿದೆನು. ಆ ನಕ್ಷತ್ರಕ್ಕೆ ತಳವಿಲ್ಲದ ಆಳವಾದ ಕೂಪಕ್ಕೆ[a] ಹೋಗುವ ಬೀಗದ ಕೈ ಕೊಡಲ್ಪಟ್ಟಿತು. 2 ನಂತರ ಆ ನಕ್ಷತ್ರವು ತಳವಿಲ್ಲದ ಆಳವಾದ ಕೂಪವನ್ನು ತೆರೆಯಿತು. ದೊಡ್ಡ ಕುಲುಮೆಯಿಂದ ಹೊಗೆಯು ಬರುವಂತೆ ಆ ಕೂಪದಿಂದ ಹೊಗೆ ಮೇಲಕ್ಕೆ ಬಂದಿತು. ಆ ಕೂಪದಿಂದ ಬಂದ ಹೊಗೆಯಿಂದ ಸೂರ್ಯನೂ ಆಕಾಶವೂ ಕಪ್ಪಾದವು.
3 ನಂತರ ಮಿಡತೆಗಳು ಹೊಗೆಯೊಳಗಿಂದ ಭೂಮಿಯ ಮೇಲಕ್ಕೆ ಬಂದಿಳಿದವು. ಅವುಗಳಿಗೆ ಚೇಳುಗಳಂತೆ ಕುಟುಕುವ ಶಕ್ತಿಯನ್ನು ಕೊಡಲಾಯಿತು. 4 ಭೂಮಿಯ ಮೇಲಿನ ಹುಲ್ಲಿಗಾಗಲಿ ಸಸ್ಯಕ್ಕಾಗಲಿ ಮರಕ್ಕಾಗಲಿ ಹಾನಿ ಮಾಡದಂತೆ ಆ ಮಿಡತೆಗಳಿಗೆ ತಿಳಿಸಲಾಯಿತು. ತಮ್ಮ ಹಣೆಗಳ ಮೇಲೆ ದೇವರ ಮುದ್ರೆಯಿಲ್ಲದ ಜನರನ್ನು ಹಿಂಸಿಸಲು ಅವುಗಳಿಗೆ ತಿಳಿಸಲಾಯಿತು. 5 ಜನಗಳಿಗೆ ಐದು ತಿಂಗಳ ಕಾಲ ನೋವು ಉಂಟುಮಾಡುವಂತಹ ಶಕ್ತಿಯನ್ನು ಈ ಮಿಡತೆಗಳಿಗೆ ಕೊಡಲಾಯಿತು. ಆದರೆ ಜನರನ್ನು ಕೊಲ್ಲುವ ಶಕ್ತಿಯನ್ನು ಮಿಡತೆಗಳಿಗೆ ಕೊಡಲಿಲ್ಲ. ಈ ಮಿಡತೆಗಳು ಕುಟುಕಿದಾಗ ಚೇಳು ಕುಟುಕಿದಷ್ಟೇ ನೋವಾಗುತ್ತಿತ್ತು. 6 ಆ ದಿನಗಳಲ್ಲಿ ಜನರು ಸಾಯುವುದಕ್ಕೆ ಮಾರ್ಗವನ್ನು ಹುಡುಕಿದರೂ ಅವರಿಗೆ ಸಿಕ್ಕುವುದಿಲ್ಲ. ಅವರು ಮರಣವನ್ನು ಬಯಸಿದರೂ ಮರಣವು ಅವರಿಗೆ ಮರೆಯಾಗುತ್ತದೆ.
7 ಮಿಡತೆಗಳು ಯುದ್ಧಕ್ಕೆ ಸಿದ್ಧಪಡಿಸಿದ ಕುದುರೆಗಳಂತೆ ಕಾಣುತ್ತಿದ್ದವು. ಅವುಗಳ ತಲೆಯ ಮೇಲೆ ಚಿನ್ನದ ಕಿರೀಟಗಳಂತೆ ಎನೋ ಇದ್ದವು; ಅವುಗಳ ಮುಖಗಳು ಮಾನವರ ಮುಖಗಳಂತಿದ್ದವು. 8 ತಲೆಕೂದಲು ಸ್ತ್ರೀಯರ ತಲೆಕೂದಲಂತಿತ್ತು; ಹಲ್ಲುಗಳು ಸಿಂಹಗಳ ಹಲ್ಲುಗಳಂತಿದ್ದವು. 9 ಎದೆಗಳು ಉಕ್ಕಿನ ಕವಚಗಳಂತೆ ಇದ್ದವು; ರೆಕ್ಕೆಗಳ ಶಬ್ದವು ಯುದ್ಧದಲ್ಲಿ ಆತುರದಿಂದ ಓಡುವ ಅನೇಕ ಕುದುರೆಗಳ ಮತ್ತು ರಥಗಳ ಶಬ್ದದಂತಿತ್ತು. 10 ಚೇಳುಗಳಿಗಿರುವಂತೆ ಬಾಲಗಳೂ ಕೊಂಡಿಗಳೂ ಇದ್ದವು; ಜನರಿಗೆ ಐದುತಿಂಗಳ ಕಾಲ ನೋವುಂಟುಮಾಡುವ ಶಕ್ತಿಯು ಅವುಗಳ ಬಾಲಗಳಲ್ಲಿ ಇತ್ತು. 11 ಮಿಡತೆಗಳಿಗೆ ಒಬ್ಬ ರಾಜನಿದ್ದನು. ತಳವಿಲ್ಲದ ಕೂಪದ ದೂತನೇ ಅವುಗಳ ರಾಜನಾಗಿದ್ದನು. ಅವನಿಗೆ ಹಿಬ್ರೂ ಭಾಷೆಯಲ್ಲಿ “ಅಬದ್ದೋನ್” ಎಂಬ ಹೆಸರಿತ್ತು. ಗ್ರೀಕ್ ಭಾಷೆಯಲ್ಲಿ “ಅಪೊಲ್ಲುವೋನ್” (ವಿನಾಶಕರ) ಎಂದೂ ಹೆಸರಿತ್ತು.
12 ಮೊದಲನೆಯ ಮಹಾವಿಪತ್ತು ಕಳೆದುಹೋಯಿತು. ಇನ್ನೂ ಎರಡು ಮಹಾವಿಪತ್ತುಗಳು ಬರಲಿದ್ದವು.
ಆರನೇ ತುತೂರಿಯ ಪ್ರಾರಂಭ
13 ಆರನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ದೇವರ ಸನ್ನಿಧಿಯಲ್ಲಿರುವ ಚಿನ್ನದ ಯಜ್ಞವೇದಿಕೆಯ ಮೇಲಿನ ಕೊಂಬುಗಳಿಂದ ಬರುತ್ತಿರುವ ಧ್ವನಿಯನ್ನು ನಾನು ಕೇಳಿದೆನು. 14 ಆ ಧ್ವನಿಯು ತುತೂರಿಯಿದ್ದ ಆರನೆಯ ದೇವದೂತನಿಗೆ, “ಯೂಫ್ರಟಿಸ್ ಎಂಬ ಮಹಾನದಿಯ ಬಳಿ ಕಟ್ಟಿಹಾಕಿರುವ ನಾಲ್ಕು ಮಂದಿ ದೇವದೂತರನ್ನು ಬಿಚ್ಚಿಬಿಡು” ಎಂದು ಹೇಳಿತು. 15 ಈ ನಾಲ್ಕು ಮಂದಿ ದೇವದೂತರನ್ನು ಇದೇ ವರ್ಷ, ಇದೇ ತಿಂಗಳು, ಇದೇ ದಿನ, ಇದೇ ತಾಸಿಗಾಗಿ ಸಿದ್ಧಪಡಿಸಲಾಗಿತ್ತು. ಭೂಮಿಯ ಮೇಲಿರುವ ಜನರಲ್ಲಿ ಮೂರನೆಯ ಒಂದು ಭಾಗವನ್ನು ಸಂಹರಿಸಲು ಇವರನ್ನು ಬಿಡುಗಡೆ ಮಾಡಲಾಯಿತು. 16 ಅವರಲ್ಲಿದ್ದ ಅಶ್ವದಳದ ಸೈನಿಕರ ಸಂಖ್ಯೆ ಇಪ್ಪತ್ತುಕೋಟಿ ಎಂದು ನನಗೆ ಕೇಳಿಸಿತು.
17 ನಾನು ದರ್ಶನದಲ್ಲಿ ಕುದುರೆಗಳನ್ನೂ ಕುದುರೆಗಳ ಮೇಲಿದ್ದ ಸವಾರರನ್ನೂ ನೋಡಿದೆನು. ಅವರು ಹೀಗೆ ಕಾಣುತ್ತಿದ್ದರು: ಅವರು ಬೆಂಕಿಯಂತೆ ಕೆಂಪಾದ, ಕಪ್ಪಾದ, ನೀಲಿಯ ಮತ್ತು ಗಂಧಕದಂತೆ ಹಳದಿಯಾದ ಕವಚಗಳನ್ನು ಹೊಂದಿದ್ದರು. ಕುದುರೆಗಳ ತಲೆಗಳು ಸಿಂಹಗಳ ತಲೆಗಳಂತೆ ಕಾಣುತ್ತಿದ್ದವು. ಕುದುರೆಗಳ ಬಾಯಿಂದ ಬೆಂಕಿ, ಹೊಗೆ ಮತ್ತು ಗಂಧಕಗಳು ಬರುತ್ತಿದ್ದವು. 18 ಭೂಮಿಯ ಮೇಲಿನ ಜನರಲ್ಲಿ ಮೂರನೆಯ ಒಂದು ಭಾಗವು ಕುದುರೆಗಳ ಬಾಯಿಂದ ಹೊರಬಂದ ಬೆಂಕಿ, ಹೊಗೆ ಮತ್ತು ಗಂಧಕಗಳ ಉಪದ್ರವಗಳಿಂದ ಕೊಲ್ಲಲ್ಪಟ್ಟಿತು. 19 ಕುದುರೆಗಳ ಶಕ್ತಿಯು ಅವುಗಳ ಬಾಯಲ್ಲಿಯೂ ಬಾಲಗಳಲ್ಲಿಯೂ ಇತ್ತು. ಅವುಗಳ ಬಾಲಗಳು ಜನರನ್ನು ಕಚ್ಚಬಲ್ಲ ಹೆಡೆಗಳುಳ್ಳ ಸರ್ಪಗಳಂತೆ ಇದ್ದವು.
20 ಈ ಉಪದ್ರವಗಳಿಂದ ಸಾಯದೆ ಉಳಿದ ಜನರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಲಿಲ್ಲ. ತಮ್ಮ ಸ್ವಂತ ಕೈಗಳಿಂದ ನಿರ್ಮಿಸಿದ ವಿಗ್ರಹಗಳನ್ನು ತೊರೆದುಬಿಡಲಿಲ್ಲ. ಅವರು ದೆವ್ವಗಳ ಆರಾಧನೆಯನ್ನು ನಿಲ್ಲಿಸಲಿಲ್ಲ. ಚಿನ್ನ, ಬೆಳ್ಳಿ, ತಾಮ್ರ, ಕಲ್ಲು ಮತ್ತು ಮರಗಳಿಂದ ಮಾಡಲ್ಪಟ್ಟು, ನಡೆಯಲಾರದ, ನೋಡಲಾರದ ಮತ್ತು ಕೇಳಲಾರದ ವಿಗ್ರಹಗಳನ್ನು ಪೂಜಿಸುವುದನ್ನು ಅವರು ನಿಲ್ಲಿಸಲಿಲ್ಲ. 21 ಈ ಜನರು ತಮ್ಮ ಹೃದಯಗಳನ್ನು ಮತ್ತು ಜೀವಿತಗಳನ್ನು ಪರಿವರ್ತಿಸಿಕೊಳ್ಳಲಿಲ್ಲ ಮತ್ತು ಇತರರನ್ನು ಕೊಲ್ಲುವುದನ್ನು ಬಿಟ್ಟುಬಿಡಲಿಲ್ಲ. ಅವರು ತಾವು ನಡೆಸುತ್ತಿದ್ದ ಮಾಟಮಂತ್ರಗಳನ್ನು, ಲೈಂಗಿಕ ಪಾಪಗಳನ್ನು ಮತ್ತು ಕಳ್ಳತನವನ್ನು ತೊರೆದುಬಿಡಲಿಲ್ಲ.
ಹಾರುವ ಸುರುಳಿ
5 ನಾನು ತಿರುಗಿ ಮೇಲಕ್ಕೆ ನೋಡಿದಾಗ ಒಂದು ಹಾರುವ ಸುರುಳಿಯನ್ನು ಕಂಡೆನು. 2 “ಏನನ್ನು ನೋಡುತ್ತೀ?” ಎಂದು ದೇವದೂತನು ಕೇಳಿದನು.
“ಒಂದು ಹಾರುವ ಸುರುಳಿ, ಅದು ಮೂವತ್ತು ಅಡಿ ಉದ್ದ, ಹದಿನೈದು ಅಡಿ ಅಗಲವಿದೆ” ಎಂದು ನಾನು ಉತ್ತರಿಸಿದೆನು.
3 ಆಗ ದೇವದೂತನು ನನಗೆ ಹೇಳಿದ್ದೇನೆಂದರೆ, “ಈ ಸುರುಳಿಯಲ್ಲಿ ಶಾಪವು ಬರೆಯಲ್ಪಟ್ಟಿದೆ. ಸುರುಳಿಯ ಒಂದು ಬದಿಯಲ್ಲಿ ಕದಿಯುವ ಜನರಿಗೆ ಶಾಪ ಬರೆಯಲ್ಪಟ್ಟಿದೆ. ಅದರ ಇನ್ನೊಂದು ಬದಿಯಲ್ಲಿ ವಾಗ್ದಾನ ಮಾಡಿಯೂ ಅದನ್ನು ಪಾಲಿಸದೆ ಸುಳ್ಳಾಡುವವರಿಗೆ ಶಾಪ ಬರೆಯಲ್ಪಟ್ಟಿದೆ. 4 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, ‘ನಾನು ಆ ಸುರುಳಿಯನ್ನು ಕದಿಯುವವರ ಮನೆಗಳಿಗೂ ಮತ್ತು ನನ್ನ ಹೆಸರಿನ ಮೇಲೆ ಸುಳ್ಳಾಣೆಯಿಡುವವರ ಮನೆಗಳಿಗೂ ಕಳುಹಿಸುವೆನು. ಆ ಸುರುಳಿಯು ಅಲ್ಲಿಯೇ ಇದ್ದು ಆ ಮನೆಗಳನ್ನು ನಾಶಮಾಡುವುದು. ಮನೆಯ ಕಲ್ಲುಕಂಬಗಳನ್ನು, ಮರದ ತೊಲೆಗಳನ್ನು ನಾಶಮಾಡುವದು.’”
ಸ್ತ್ರೀ ಮತ್ತು ಬುಟ್ಟಿ
5 ನನ್ನೊಡನೆ ಮಾತನಾಡುತ್ತಿದ್ದ ದೇವದೂತನು ಹೊರಗೆ ಹೋದನು. ಆಗ ಅವನು, “ನೋಡು, ನಮ್ಮ ಬಳಿಗೆ ಏನು ಬರುತ್ತಿದೆ ಎಂದು ನೋಡು” ಎಂದನು.
6 “ಅದು ಏನೋ ನನಗೆ ಗೊತ್ತಾಗುತ್ತಿಲ್ಲ. ಅದು ಏನಿರಬಹುದು?” ಎಂದು ನಾನು ವಿಚಾರಿಸಿದೆನು.
ಅದಕ್ಕವನು, “ಅದು ಒಂದು ಅಳೆಯುವ ಬುಟ್ಟಿ, ಈ ಬುಟ್ಟಿಯು ಈ ದೇಶದ ಜನರ ಪಾಪವನ್ನು ಅಳೆಯುವ ಬುಟ್ಟಿಯಾಗಿದೆ” ಎಂದನು.
7 ಸೀಸದಿಂದ ಮಾಡಲ್ಪಟ್ಟ ಒಂದು ಮುಚ್ಚಳವನ್ನು ಆ ಬುಟ್ಟಿಯಿಂದ ತೆಗೆಯಲಾಯಿತು. ಆಗ ಅದರೊಳಗೆ ಒಬ್ಬ ಹೆಂಗಸು ಇರುವುದನ್ನು ಕಂಡೆನು. 8 ಆಗ ಆ ದೂತನು, “ಆ ಸ್ತ್ರೀಯು ದುಷ್ಟತನವನ್ನು ಸೂಚಿಸುತ್ತಾಳೆ” ಎಂದು ಹೇಳಿ ದೂತನು ಆ ಸ್ತ್ರೀಯನ್ನು ಬುಟ್ಟಿಯ ತಳಕ್ಕೆ ನೂಕಿ, ಸೀಸದ ಮುಚ್ಚಳವನ್ನು ಹಾಕಿಬಿಟ್ಟನು. 9 ಆ ಬಳಿಕ ನಾನು ಮೇಲಕ್ಕೆ ನೋಡಿದಾಗ ಕೊಕ್ಕರೆಯಂತೆ ರೆಕ್ಕೆಗಳಿರುವ ಎರಡು ಸ್ತ್ರೀಯರನ್ನು ಕಂಡೆನು. ಅವರು ಹಾರುತ್ತಾ ರೆಕ್ಕೆಗಳಲ್ಲಿಯ ಗಾಳಿಯ ಸಹಾಯದಿಂದ ಬುಟ್ಟಿಯನ್ನು ಎತ್ತಿಕೊಂಡು ಆಕಾಶದಲ್ಲಿ ಹಾರಿಕೊಂಡು ಹೋದರು. 10 ಆಗ ನಾನು ದೂತನನ್ನು, “ಅವರು ಬುಟ್ಟಿಯನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ?” ಎಂದು ಪ್ರಶ್ನಿಸಿದೆನು.
11 “ಅವರು ಶಿನಾರಿನಲ್ಲಿ ಅದಕ್ಕೊಂದು ಮನೆ ಕಟ್ಟುವದಕ್ಕಿದ್ದಾರೆ. ಮನೆಕಟ್ಟಿದ ಬಳಿಕ ಆ ಬುಟ್ಟಿಯನ್ನು ಅವರು ಅದರೊಳಗಿಡುವರು” ಎಂದು ಹೇಳಿದನು.
ಸಿಕ್ಕಿಕೊಂಡ ವ್ಯಭಿಚಾರಿಣಿ
8 ಯೇಸು ಆಲಿವ್ ಮರಗಳ ಗುಡ್ಡಕ್ಕೆ ಹೋದನು. 2 ಮರುದಿನ ನಸುಕಿನಲ್ಲೇ ಯೇಸು ದೇವಾಲಯಕ್ಕೆ ಮರಳಿ ಹೋದನು. ಎಲ್ಲಾ ಜನರು ಯೇಸುವಿನ ಬಳಿಗೆ ನೆರೆದುಬಂದರು. ಯೇಸು ಕುಳಿತುಕೊಂಡು ಜನರಿಗೆ ಉಪದೇಶಿಸಿದನು.
3 ಧರ್ಮೋಪದೇಶಕರು ಮತ್ತು ಫರಿಸಾಯರು ಒಬ್ಬ ಸ್ತ್ರೀಯನ್ನು ಅಲ್ಲಿಗೆ ಕರೆದುಕೊಂಡು ಬಂದರು. ಆ ಸ್ತ್ರೀಯು ವ್ಯಭಿಚಾರ ಮಾಡುವಾಗಲೇ ಸಿಕ್ಕಿಕೊಂಡಿದ್ದಳು. ಅವರು ಆ ಸ್ತ್ರೀಯನ್ನು ಜನರ ಮುಂದೆ ಬಲವಂತವಾಗಿ ನಿಲ್ಲಿಸಿ, 4 ಯೇಸುವಿಗೆ, “ಉಪದೇಶಕನೇ, ಈ ಸ್ತ್ರೀಯು ವ್ಯಭಿಚಾರ ಮಾಡುತ್ತಿದ್ದಾಗಲೇ ಸಿಕ್ಕಿಕೊಂಡಳು. 5 ಇಂಥ ಕಾರ್ಯವನ್ನು ಮಾಡುವ ಪ್ರತಿಯೊಬ್ಬ ಸ್ತ್ರೀಯನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯ ಧರ್ಮಶಾಸ್ತ್ರವು ಆಜ್ಞಾಪಿಸುತ್ತದೆ. ಈಗ ನಾವೇನು ಮಾಡಬೇಕು? ನೀನೇ ಹೇಳು” ಎಂದರು.
6 ಯೇಸುವನ್ನು ಮಾತಿನಲ್ಲಿ ಸಿಕ್ಕಿಸಿದರೆ ಆತನ ಮೇಲೆ ಅಪವಾದ ಹೊರಿಸಲು ಸಾಧ್ಯವಾಗುತ್ತದೆ ಎಂದು ಈ ಪ್ರಶ್ನೆಯನ್ನು ಕೇಳಿದರು. ಆದರೆ ಯೇಸು ತಲೆ ಬಾಗಿಸಿಕೊಂಡು ತನ್ನ ಬೆರಳಿನಿಂದ ನೆಲದ ಮೇಲೆ ಬರೆಯತೊಡಗಿದನು. 7 ಯೆಹೂದ್ಯ ನಾಯಕರು ಅದೇ ಪ್ರಶ್ನೆಯನ್ನು ಮತ್ತೆ ಕೇಳಿದರು. ಆಗ ಯೇಸು ನೆಟ್ಟಗೆ ಕುಳಿತುಕೊಂಡು, “ನಿಮ್ಮಲ್ಲಿ ಪಾಪ ಮಾಡಿಲ್ಲದವನು ಆಕೆಯ ಮೇಲೆ ಮೊದಲನೆಯ ಕಲ್ಲನ್ನು ಎಸೆಯಲಿ” ಎಂದು ಹೇಳಿ, 8 ಮತ್ತೆ ಬಗ್ಗಿಕೊಂಡು ನೆಲದ ಮೇಲೆ ಬರೆಯತೊಡಗಿದನು.
9 ಯೇಸುವಿನ ಈ ಮಾತನ್ನು ಕೇಳಿದ ಆ ಜನರು ಒಬ್ಬೊಬ್ಬರಾಗಿ ಅಲ್ಲಿಂದ ಹೊರಟುಹೋದರು. ಮೊದಲು ಹಿರಿಯರು, ನಂತರ ಇತರರು ಹೊರಟುಹೋದರು. ಕೊನೆಗೆ ಅಲ್ಲಿ ಉಳಿದವರೆಂದರೆ, ಯೇಸು ಮತ್ತು ಆ ಸ್ತ್ರೀ. ಆಕೆಯು ಆತನ ಮುಂದೆ ನಿಂತುಕೊಂಡಿದ್ದಳು. 10 ಯೇಸು ನೆಟ್ಟಗೆ ಕುಳಿತುಕೊಂಡು, “ಅಮ್ಮಾ, ನಿನ್ನ ಮೇಲೆ ತಪ್ಪು ಹೊರಿಸಿದವರು ಎಲ್ಲಿದ್ದಾರೆ? ಅವರಲ್ಲಿ ಒಬ್ಬರಾದರೂ ನಿನಗೆ ಶಿಕ್ಷೆ ವಿಧಿಸಲಿಲ್ಲವೇ?” ಎಂದು ಕೇಳಿದನು.
11 ಆ ಸ್ತ್ರೀಯು, “ಸ್ವಾಮೀ, ಅವರಲ್ಲಿ ಯಾರೂ ನನಗೆ ತೀರ್ಪು ನೀಡಲಿಲ್ಲ” ಎಂದು ಉತ್ತರಕೊಟ್ಟಳು.
ಯೇಸು ಆಕೆಗೆ, “ಆದ್ದರಿಂದ ನಾನು ಸಹ ನಿನಗೆ ತೀರ್ಪು ನೀಡುವುದಿಲ್ಲ. ಈಗ ನೀನು ಹೋಗಬಹುದು, ಆದರೆ ಇನ್ನು ಮುಂದೆ ಪಾಪ ಮಾಡಬೇಡ” ಎಂದು ಹೇಳಿದನು.
ಯೇಸುವೇ ಲೋಕಕ್ಕೆ ಬೆಳಕು
12 ಬಳಿಕ, ಯೇಸುವು ಜನರೊಂದಿಗೆ ಮತ್ತೆ ಮಾತಾಡುತ್ತಾ, “ನಾನೇ ಈ ಲೋಕಕ್ಕೆ ಬೆಳಕಾಗಿದ್ದೇನೆ. ನನ್ನನ್ನು ಹಿಂಬಾಲಿಸುವವನು ಕತ್ತಲೆಯಲ್ಲಿ ಎಂದಿಗೂ ಜೀವಿಸುವುದಿಲ್ಲ. ಅವನು ಜೀವಕೊಡುವ ಬೆಳಕನ್ನು ಹೊಂದಿದವನಾಗಿರುವನು” ಎಂದು ಹೇಳಿದನು.
13 ಫರಿಸಾಯರು ಯೇಸುವಿಗೆ, “ನೀನು ನಿನ್ನ ಬಗ್ಗೆ ಮಾತಾಡುವ ಈ ಸಂಗತಿಗಳು ಸತ್ಯವೆಂದು ಹೇಳುವವನು ನೀನೊಬ್ಬನು ಮಾತ್ರ. ಆದ್ದರಿಂದ, ನೀನು ಹೇಳುವ ಈ ಸಂಗತಿಗಳನ್ನು ನಾವು ಸ್ವೀಕರಿಸಿಕೊಳ್ಳಲಾರೆವು” ಎಂದು ಹೇಳಿದರು.
14 ಯೇಸು, “ಹೌದು, ನಾನೇ ನನ್ನ ಬಗ್ಗೆ ಈ ಸಂಗತಿಗಳನ್ನು ಹೇಳುತ್ತಿದ್ದರೂ ಈ ಸಂಗತಿಗಳು ಜನರ ನಂಬಿಕೆಗೆ ಯೋಗ್ಯವಾಗಿವೆ. ಏಕೆಂದರೆ, ನಾನು ಎಲ್ಲಿಂದ ಬಂದೆನೆಂಬುದೂ ನಾನು ಎಲ್ಲಿಗೆ ಹೋಗುತ್ತೇನೆಂಬುದೂ ನನಗೆ ತಿಳಿದಿದೆ. ನಾನು ನಿಮ್ಮಂಥ ವ್ಯಕ್ತಿಯಲ್ಲ. ನಾನು ಎಲ್ಲಿಂದ ಬಂದೆನೆಂಬುದು ಮತ್ತು ಎಲ್ಲಿಗೆ ಹೋಗುತ್ತೇನೆಂಬುದು ನಿಮಗೆ ಗೊತ್ತಿಲ್ಲ. 15 ನೀವು ಹೊರತೋರಿಕೆಯ ಪ್ರಕಾರ ತೀರ್ಪು ಮಾಡುತ್ತಿದ್ದೀರಿ. ಆದರೆ ನಾನು ಯಾರಿಗೂ ತೀರ್ಪು ಮಾಡುವುದಿಲ್ಲ. 16 ನಾನು ಮಾಡುವ ತೀರ್ಪು ನ್ಯಾಯಬದ್ಧವಾಗಿರುತ್ತದೆ. ಏಕೆಂದರೆ ನಾನು ತೀರ್ಪು ಮಾಡುವಾಗ ಒಬ್ಬಂಟಿಗನಾಗಿರುವುದಿಲ್ಲ. ನನ್ನನ್ನು ಕಳುಹಿಸಿದ ತಂದೆಯೂ ನನ್ನೊಂದಿಗಿರುತ್ತಾನೆ. 17 ಇಬ್ಬರ ಸಾಕ್ಷಿ ಒಂದೇ ಆಗಿದ್ದರೆ ಅವರ ಹೇಳಿಕೆಯನ್ನು ಸ್ವೀಕರಿಸಿಕೊಳ್ಳಬೇಕೆಂದು ನಿಮ್ಮ ಧರ್ಮಶಾಸ್ತ್ರವೇ ತಿಳಿಸುತ್ತದೆ. 18 ನನ್ನ ಪರವಾದ ಸಾಕ್ಷಿಗಳಲ್ಲಿ ನಾನೂ ಒಬ್ಬನಾಗಿದ್ದೇನೆ, ನನ್ನನ್ನು ಕಳುಹಿಸಿದ ತಂದೆಯು ನನ್ನ ಮತ್ತೊಬ್ಬ ಸಾಕ್ಷಿಯಾಗಿದ್ದಾನೆ” ಎಂದು ಉತ್ತರಕೊಟ್ಟನು.
19 ಜನರು, “ನಿನ್ನ ತಂದೆ ಎಲ್ಲಿದ್ದಾನೆ?” ಎಂದು ಕೇಳಿದರು.
ಯೇಸು, “ನಿಮಗೆ ನಾನಾಗಲಿ, ನನ್ನ ತಂದೆಯಾಗಲಿ ಗೊತ್ತಿಲ್ಲ. ನೀವು ನನ್ನನ್ನು ತಿಳಿದಿದ್ದರೆ, ನನ್ನ ತಂದೆಯನ್ನು ಸಹ ತಿಳಿದಿರುವಿರಿ” ಎಂದು ಹೇಳಿದನು. 20 ಯೇಸುವು ದೇವಾಲಯದಲ್ಲಿ ಉಪದೇಶಿಸುತ್ತಿದ್ದಾಗ ಈ ಮಾತುಗಳನ್ನು ಹೇಳಿದನು. ಜನರು ಕೊಡುವ ಕಾಣಿಕೆಯನ್ನು ಇಟ್ಟಿದ್ದ ಸ್ಥಳದ ಸಮೀಪದಲ್ಲಿ ಆತನಿದ್ದನು. ಆದರೆ ಆತನನ್ನು ಯಾರೂ ಬಂಧಿಸಲಿಲ್ಲ. ಏಕೆಂದರೆ ಆತನನ್ನು ಬಂಧಿಸತಕ್ಕ ಸಮಯ ಇನ್ನೂ ಬಂದಿರಲಿಲ್ಲ.
ಯೆಹೂದ್ಯರ ಅಪನಂಬಿಕೆ
21 ಯೇಸು ಅವರಿಗೆ, “ನಾನು ನಿಮ್ಮನ್ನು ಬಿಟ್ಟುಹೋಗುತ್ತೇನೆ. ನೀವು ನನ್ನನ್ನು ಹುಡುಕುವಿರಿ. ಆದರೆ ನೀವು ನಿಮ್ಮ ಪಾಪದಲ್ಲೇ ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ” ಎಂದು ಹೇಳಿದನು.
22 ಆದ್ದರಿಂದ ಯೆಹೂದ್ಯರು, “ಯೇಸು ತನ್ನನ್ನು ತಾನೇ ಕೊಂದುಕೊಳ್ಳುವನೇ? ಅದಕ್ಕಾಗಿಯೇ, ನಾನು ಹೋಗುವಲ್ಲಿಗೆ ನೀವು ಬರಲಾರಿರಿ ಎಂದು ಹೇಳಿದನೇ?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.
23 ಅದಕ್ಕೆ ಯೇಸು, “ನೀವು ಕೆಳಗಿನವರಾಗಿದ್ದೀರಿ. ನಾನಾದರೋ ಮೇಲಿನವನು. ನೀವು ಈ ಲೋಕದವರಾಗಿದ್ದೀರಿ. ಆದರೆ ನಾನು ಈ ಲೋಕದವನಲ್ಲ. 24 ನೀವು ನಿಮ್ಮ ಪಾಪಗಳಲ್ಲೇ ಸಾಯುವಿರಿ ಎಂದು ನಾನು ನಿಮಗೆ ಹೇಳಿದೆ. ಹೌದು, ನಾನೇ ಆತನೆಂಬುದನ್ನು ನೀವು ನಂಬದಿದ್ದರೆ ನಿಮ್ಮ ಪಾಪಗಳಲ್ಲಿಯೇ ನೀವು ಸಾಯುವಿರಿ” ಎಂದು ಹೇಳಿದನು.
25 ಯೆಹೂದ್ಯರು, “ಹಾಗಾದರೆ, ನೀನು ಯಾರು?” ಎಂದು ಕೇಳಿದರು.
ಯೇಸು, “ನಾನು ಯಾರೆಂದು ನಿಮಗೆ ಮೊದಲಿಂದ ತಿಳಿಸುತ್ತಾ ಬಂದೆನೋ, ಆತನೇ ನಾನು. 26 ನಿಮ್ಮ ಬಗ್ಗೆ ಹೇಳಲು ನನ್ನಲ್ಲಿ ಅನೇಕ ಸಂಗತಿಗಳಿವೆ. ನಾನು ನಿಮಗೆ ತೀರ್ಪು ಮಾಡಬಲ್ಲೆನು. ಆದರೆ ನನ್ನನ್ನು ಕಳುಹಿಸಿದಾತನಿಂದ ನಾನು ಕೇಳಿದ ಸಂಗತಿಗಳನ್ನು ಮಾತ್ರ ಜನರಿಗೆ ಹೇಳುತ್ತೇನೆ. ಆತನು ಸತ್ಯವನ್ನೇ ತಿಳಿಸುತ್ತಾನೆ” ಎಂದು ಉತ್ತರಕೊಟ್ಟನು.
27 ಯೇಸು ಯಾರ ಬಗ್ಗೆ ಮಾತಾಡುತ್ತಿದ್ದಾನೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಲಿಲ್ಲ. ಯೇಸು ಅವರಿಗೆ ತಂದೆಯ (ದೇವರ) ಬಗ್ಗೆ ಹೇಳುತ್ತಿದ್ದನು. 28 ಆದ್ದರಿಂದ ಆತನು ಅವರಿಗೆ, “ನೀವು ಮನುಷ್ಯಕುಮಾರನನ್ನು ಮೇಲಕ್ಕೇರಿಸುವಿರಿ (ಕೊಲ್ಲುವಿರಿ). ನಾನೇ ಆತನೆಂಬುದು ಆಗ ನಿಮಗೆ ತಿಳಿಯುವುದು. ನಾನು ಈ ಕಾರ್ಯಗಳನ್ನು ನನ್ನ ಸ್ವಂತ ಅಧಿಕಾರದಿಂದ ಮಾಡುತ್ತಿಲ್ಲ ಎಂಬುದನ್ನು ನೀವು ತಿಳಿದುಕೊಳ್ಳುವಿರಿ. ಅಲ್ಲದೆ, ತಂದೆಯು ನನಗೆ ಉಪದೇಶಿಸಿದ ಸಂಗತಿಗಳನ್ನು ಮಾತ್ರ ನಾನು ಹೇಳುತ್ತೇನೆಂಬುದೂ ನಿಮಗೆ ಅರಿವಾಗುವುದು. 29 ನನ್ನನ್ನು ಕಳುಹಿಸಿದಾತನು (ದೇವರು) ನನ್ನೊಂದಿಗೆ ಇದ್ದಾನೆ. ಆತನಿಗೆ ಮೆಚ್ಚಿಕೆಯಾದದ್ದನ್ನೇ ನಾನು ಯಾವಾಗಲೂ ಮಾಡುತ್ತೇನೆ. ಆದ್ದರಿಂದ ಆತನು ನನ್ನನ್ನು ಒಬ್ಬಂಟಿಗನಾಗಿ ಬಿಟ್ಟುಬಿಟ್ಟಿಲ್ಲ” ಎಂದು ಹೇಳಿದನು. 30 ಯೇಸು ಈ ಸಂಗತಿಗಳನ್ನು ಹೇಳುತ್ತಿದ್ದಾಗ, ಅನೇಕ ಜನರು ಆತನಲ್ಲಿ ನಂಬಿಕೆಯಿಟ್ಟರು.
ಪಾಪವಿಮೋಚನೆಯ ಬಗ್ಗೆ ಯೇಸುವಿನ ಉಪದೇಶ
31 ಆದ್ದರಿಂದ ಯೇಸು ತನ್ನಲ್ಲಿ ನಂಬಿಕೆ ಇಟ್ಟಿದ್ದ ಯೆಹೂದ್ಯರಿಗೆ, “ನೀವು ನನ್ನ ಉಪದೇಶಕ್ಕೆ ವಿಧೇಯರಾಗಿದ್ದರೆ, ನೀವು ನಿಜವಾಗಿಯೂ ನನ್ನ ಹಿಂಬಾಲಕರಾಗಿದ್ದೀರಿ. 32 ನೀವು ಸತ್ಯವನ್ನು ತಿಳಿದುಕೊಳ್ಳುವಿರಿ. ಆ ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವುದು” ಎಂದು ಹೇಳಿದನು.
33 ಯೆಹೂದ್ಯರು, “ನಾವು ಅಬ್ರಹಾಮನ ಮಕ್ಕಳು. ನಾವೆಂದೂ ಯಾರ ಗುಲಾಮರೂ ಆಗಿರಲಿಲ್ಲ. ಹೀಗಿದ್ದರೂ, ನಮಗೆ ಬಿಡುಗಡೆ ಆಗುವುದೆಂದು ನೀನು ಹೇಳುವುದೇಕೆ?” ಎಂದು ಉತ್ತರಕೊಟ್ಟರು.
34 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಪಾಪಮಾಡುವ ಪ್ರತಿಯೊಬ್ಬನೂ ಪಾಪಕ್ಕೆ ಗುಲಾಮನಾಗಿದ್ದಾನೆ. ಪಾಪವು ಅವನ ಯಜಮಾನನಾಗಿದೆ. 35 ಗುಲಾಮನು ಒಂದು ಮನೆಯಲ್ಲಿ ಶಾಶ್ವತವಾಗಿ ಇರುವುದಿಲ್ಲ. ಆದರೆ ಮಗನು ಕುಟುಂಬಕ್ಕೆ ಶಾಶ್ವತವಾಗಿ ಸೇರಿದವನಾಗಿದ್ದಾನೆ. 36 ಆದ್ದರಿಂದ ಮಗನು ನಿಮ್ಮನ್ನು ಬಿಡುಗಡೆ ಮಾಡಿದರೆ, ನೀವು ನಿಜವಾಗಿಯೂ ಬಿಡುಗಡೆಯಾಗಿರುವಿರಿ. 37 ನೀವು ಅಬ್ರಹಾಮನ ಮಕ್ಕಳೆಂದು ನನಗೆ ಗೊತ್ತಿದೆ. ಆದರೆ ನೀವು ನನ್ನನ್ನು ಕೊಲ್ಲಬೇಕೆಂದಿದ್ದೀರಿ. ಏಕೆಂದರೆ ನನ್ನ ಉಪದೇಶವನ್ನು ಸ್ವೀಕರಿಸಿಕೊಳ್ಳಲು ನಿಮಗೆ ಇಷ್ಟವಿಲ್ಲ. 38 ನನ್ನ ತಂದೆಯು ನನಗೆ ತೋರಿಸಿರುವುದನ್ನೇ ನಾನು ನಿಮಗೆ ಹೇಳುತ್ತಿದ್ದೇನೆ. ನೀವಾದರೋ ನಿಮ್ಮ ತಂದೆ ನಿಮಗೆ ಹೇಳಿದ ಸಂಗತಿಗಳನ್ನೇ ಮಾಡುತ್ತೀರಿ” ಎಂದು ಹೇಳಿದನು.
39 ಯೆಹೂದ್ಯರು, “ಅಬ್ರಹಾಮನೇ ನಮ್ಮ ತಂದೆ” ಎಂದು ಹೇಳಿದರು.
ಯೇಸು, “ನೀವು ನಿಜವಾಗಿಯೂ ಅಬ್ರಹಾಮನ ಮಕ್ಕಳಾಗಿದ್ದರೆ, ಅಬ್ರಹಾಮನು ಮಾಡಿದ ಕಾರ್ಯಗಳನ್ನೇ ಮಾಡುತ್ತಿದ್ದಿರಿ. 40 ನಾನು ದೇವರಿಂದ ಕೇಳಿದ ಸತ್ಯವನ್ನು ನಿಮಗೆ ಹೇಳಿದವನಾಗಿದ್ದೇನೆ. ಆದರೆ ನೀವು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದೀರಿ. ಅಬ್ರಹಾಮನು ಅಂಥದ್ದೇನನ್ನೂ ಮಾಡಲಿಲ್ಲ. 41 ಆದ್ದರಿಂದ ನಿಮ್ಮ ಸ್ವಂತ ತಂದೆ ಮಾಡಿದ್ದನ್ನೇ ನೀವು ಮಾಡುತ್ತಿದ್ದೀರಿ” ಎಂದು ಹೇಳಿದನು.
ಆದರೆ ಯೆಹೂದ್ಯರು, “ನಾವು ಹಾದರಕ್ಕೆ ಹುಟ್ಟಿದವರಲ್ಲ. ದೇವರೇ ನಮ್ಮ ತಂದೆ. ನಮಗಿರುವ ತಂದೆ ಆತನೊಬ್ಬನೇ” ಎಂದು ಹೇಳಿದರು.
42 ಯೇಸು ಆ ಯೆಹೂದ್ಯರಿಗೆ, “ದೇವರು ನಿಜವಾಗಿಯೂ ನಿಮ್ಮ ತಂದೆಯಾಗಿದ್ದರೆ, ನೀವು ನನ್ನನ್ನು ಪ್ರೀತಿಸುತ್ತಿದ್ದಿರಿ. ನಾನು ದೇವರಿಂದ ಬಂದು ಈಗ ಇಲ್ಲಿದ್ದೇನೆ. ನಾನು ಬಂದದ್ದು ನನ್ನ ಸ್ವಂತ ಅಧಿಕಾರದಿಂದಲ್ಲ. ದೇವರೇ ನನ್ನನ್ನು ಕಳುಹಿಸಿದನು. 43 ನಾನು ಹೇಳುವ ಈ ಸಂಗತಿಗಳನ್ನು ನೀವು ಅರ್ಥಮಾಡಿಕೊಳ್ಳುವುದಿಲ್ಲ. ಏಕೆಂದರೆ ನನ್ನ ಉಪದೇಶವನ್ನು ನೀವು ಸ್ವೀಕರಿಸಿಕೊಳ್ಳಲಾರಿರಿ. 44 ಸೈತಾನನೇ ನಿಮ್ಮ ತಂದೆ. ನೀವು ಅವನಿಗೆ ಹುಟ್ಟಿದವರಾಗಿದ್ದೀರಿ. ಅವನ ದುರಿಚ್ಛೆಗಳನ್ನು ಮಾಡಬಯಸುತ್ತೀರಿ. ಅವನು ಆರಂಭದಿಂದಲೂ ಕೊಲೆಗಾರನಾಗಿದ್ದು ಸತ್ಯಕ್ಕೆ ವಿರೋಧವಾಗಿದ್ದನು. ಅವನಲ್ಲಿ ಸತ್ಯವು ಇಲ್ಲವೇ ಇಲ್ಲ. ಅವನು ಸ್ವಭಾವಾನುಸಾರವಾಗಿ ಸುಳ್ಳಾಡುತ್ತಾನೆ. ಅವನು ಸುಳ್ಳುಗಾರನೂ ಸುಳ್ಳಿಗೆ ತಂದೆಯೂ ಆಗಿದ್ದಾನೆ.
45 “ನಾನು ಸತ್ಯವನ್ನು ಹೇಳುತ್ತೇನೆ. ಆದರೆ ನೀವು ನನ್ನನ್ನು ನಂಬುವುದಿಲ್ಲ. 46 ನನ್ನಲ್ಲಿ ಪಾಪವನ್ನು ತೋರಿಸಿಕೊಡುವವನು ನಿಮ್ಮಲ್ಲಿ ಯಾವನಾದರೂ ಇರುವನೇ? ನಾನು ಸತ್ಯವನ್ನು ಹೇಳಿದರೂ ನೀವೇಕೆ ನಂಬುವುದಿಲ್ಲ? 47 ದೇವರಿಂದ ಹುಟ್ಟಿದವನು ದೇವರು ಹೇಳುವ ಮಾತುಗಳನ್ನು ಸ್ವೀಕರಿಸಿಕೊಳ್ಳುವನು. ಆದರೆ ನೀವು ದೇವರಿಂದ ಹುಟ್ಟಿಲ್ಲದ ಕಾರಣ ಆತನ ಮಾತುಗಳನ್ನು ಸ್ವೀಕರಿಸಿಕೊಳ್ಳುವುದಿಲ್ಲ” ಎಂದನು.
ತನ್ನ ಮತ್ತು ಅಬ್ರಹಾಮನ ಬಗ್ಗೆ ಯೇಸುವಿನ ಹೇಳಿಕೆ
48 ಯೆಹೂದ್ಯರು, “ನಾವು ನಿನ್ನನ್ನು ಸಮಾರ್ಯದವನೆಂದು ಹೇಳುತ್ತೇವೆ! ನಿನ್ನೊಳಗೆ ದೆವ್ವವು ಸೇರಿಕೊಂಡು ನಿನ್ನನ್ನು ಹುಚ್ಚನನ್ನಾಗಿ ಮಾಡಿದೆ” ಎಂದು ಉತ್ತರಕೊಟ್ಟರು.
49 ಯೇಸು, “ನನ್ನೊಳಗೆ ದೆವ್ವವಿಲ್ಲ. ನನ್ನ ತಂದೆಗೆ ನಾನು ಗೌರವ ಕೊಡುತ್ತೇನೆ, ಆದರೆ ನೀವು ನನಗೆ ಗೌರವ ಕೊಡುವುದಿಲ್ಲ. 50 ನನಗಾಗಿ ಗೌರವವನ್ನು ಪಡೆದುಕೊಳ್ಳಲು ನಾನು ಪ್ರಯತ್ನಿಸುತ್ತಿಲ್ಲ. ನನಗೆ ಗೌರವ ದೊರೆಯಬೇಕೆಂದು ಬಯಸುವ ಒಬ್ಬಾತನಿದ್ದಾನೆ. ಆತನೇ ನ್ಯಾಯಾಧಿಪತಿ. 51 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನ ವಾಕ್ಯಕ್ಕೆ ವಿಧೇಯನಾಗುವವನು ಎಂದಿಗೂ ಸಾಯುವುದಿಲ್ಲ” ಎಂದು ಉತ್ತರಕೊಟ್ಟನು.
52 ಯೆಹೂದ್ಯರು ಆತನಿಗೆ, “ನಿನ್ನೊಳಗೆ ದೆವ್ವವಿದೆ ಎಂದು ಈಗ ನಮಗೆ ತಿಳಿಯಿತು! ಅಬ್ರಹಾಮನು ಮತ್ತು ಪ್ರವಾದಿಗಳು ಸಹ ಸತ್ತುಹೋದರು. ಆದರೆ ‘ನನ್ನ ಉಪದೇಶಕ್ಕೆ ವಿಧೇಯನಾಗುವವನು ಎಂದಿಗೂ ಸಾಯುವುದಿಲ್ಲ’ ಎಂದು ನೀನು ಹೇಳುತ್ತಿರುವೆ. 53 ನಮ್ಮತಂದೆಯಾದ ಅಬ್ರಹಾಮನಿಗಿಂತಲೂ ನೀನು ದೊಡ್ಡವನೆಂದು ಭಾವಿಸಿಕೊಂಡಿರುವೆಯಾ? ಅಬ್ರಹಾಮನು ಸತ್ತುಹೋದನು ಮತ್ತು ಪ್ರವಾದಿಗಳು ಸಹ ಸತ್ತುಹೋದರು. ಹೀಗಿರಲು, ನೀನು ನಿನ್ನನ್ನು ಯಾರೆಂದು ಭಾವಿಸಿಕೊಂಡಿರುವೆ?” ಎಂದು ಕೇಳಿದರು.
54 ಯೇಸು, “ನನ್ನನ್ನು ನಾನೇ ಮಹಿಮೆಪಡಿಸಿಕೊಂಡರೆ, ಆ ಮಹಿಮೆಗೆ ಯಾವ ಬೆಲೆಯೂ ಇಲ್ಲ. ನನ್ನ ತಂದೆಯೇ ನನ್ನನ್ನು ಮಹಿಮೆಪಡಿಸುವನು. ನೀವು ಆತನನ್ನೇ ನಿಮ್ಮ ದೇವರೆಂದು ಹೇಳಿಕೊಳ್ಳುತ್ತೀರಿ. 55 ಆದರೆ ನೀವು ಆತನನ್ನು ನಿಜವಾಗಿಯೂ ತಿಳಿದಿಲ್ಲ. ನಾನು ಆತನನ್ನು ಬಲ್ಲೆನು. ನಾನು ಆತನನ್ನು ತಿಳಿದಿಲ್ಲವೆಂದು ಹೇಳಿದರೆ ನಿಮ್ಮಂತೆ ನಾನು ಸಹ ಸುಳ್ಳುಗಾರನಾಗುತ್ತೇನೆ. ನಾನು ಆತನನ್ನು ಬಲ್ಲೆನು. ನಾನು ಆತನ ವಾಕ್ಯಕ್ಕೆ ವಿಧೇಯನಾಗುತ್ತೇನೆ. 56 ನಾನು ಬರುವ ದಿನವನ್ನು ತಾನು ನೋಡುವುದಾಗಿ ನಿಮ್ಮ ತಂದೆಯಾದ ಅಬ್ರಹಾಮನು ಬಹು ಸಂತೋಷಪಟ್ಟನು. ಅವನು ಆ ದಿನವನ್ನು ಕಂಡು ಬಹು ಸಂತೋಷಗೊಂಡನು” ಎಂದು ಉತ್ತರಕೊಟ್ಟನು.
57 ಯೆಹೂದ್ಯರು ಯೇಸುವಿಗೆ, “ಏನು? ನೀನು ಅಬ್ರಹಾಮನನ್ನು ನೋಡಿರುವಿಯೋ? ನಿನಗೆ ಐವತ್ತು ವರ್ಷವೂ ಆಗಿಲ್ಲ!” ಎಂದು ಹೇಳಿದರು.
58 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಅಬ್ರಹಾಮನು ಹುಟ್ಟುವುದಕ್ಕಿಂತ ಮೊದಲಿಂದಲೂ ನಾನು ಇದ್ದೇನೆ!” ಎಂದು ಉತ್ತರಿಸಿದನು. 59 ಇದನ್ನು ಕೇಳಿದ ಕೂಡಲೇ ಜನರು ಆತನತ್ತ ಬೀರಲು ಕಲ್ಲುಗಳನ್ನು ತೆಗೆದುಕೊಂಡರು. ಆದರೆ ಯೇಸು ಅಡಗಿಕೊಂಡು ದೇವಾಲಯದಿಂದ ಹೊರಟುಹೋದನು.
Kannada Holy Bible: Easy-to-Read Version. All rights reserved. © 1997 Bible League International