M’Cheyne Bible Reading Plan
19 ಯೆಹೂದದ ರಾಜನಾದ ಯೆಹೋಷಾಫಾಟನು ಜೆರುಸಲೇಮಿನಲ್ಲಿದ್ದ ತನ್ನ ಮನೆಗೆ ಸುರಕ್ಷಿತವಾಗಿ ಹಿಂದಿರುಗಿದನು. 2 ದೇವದರ್ಶಿಯಾದ ಯೇಹೂ ಅವನನ್ನು ಎದುರುಗೊಂಡನು. ಅವನು ಹನಾನೀಯನ ಮಗ. ರಾಜನಿಗೆ ಯೇಹುವು ಹೇಳಿದ್ದೇನೆಂದರೆ, “ನೀನು ದುಷ್ಟಜನರಿಗೆ ಸಹಾಯಮಾಡಿದ್ದೇಕೆ? ಯೆಹೋವನನ್ನು ದ್ವೇಷಿಸುವ ಜನರನ್ನು ನೀನು ಪ್ರೀತಿಸಿದ್ದೇಕೆ? ಆ ಕಾರಣಕ್ಕಾಗಿ ಯೆಹೋವನು ನಿನ್ನ ಮೇಲೆ ಕೋಪಗೊಂಡಿದ್ದಾನೆ. 3 ಆದರೆ ನಿನ್ನಲ್ಲಿ ಕೆಲವಾರು ಒಳ್ಳೆಯ ವಿಷಯಗಳಿವೆ. ನೀನು ಈ ದೇಶದೊಳಗಿದ್ದ ಅಶೇರಕಂಬಗಳನ್ನು ತೆಗೆದುಹಾಕಿಸಿದೆ; ಯೆಹೋವನನ್ನು ಹಿಂಬಾಲಿಸಲು ನಿನ್ನ ಹೃದಯದಲ್ಲಿ ತೀರ್ಮಾನಿಸಿದೆ” ಅಂದನು.
ಯೆಹೋಷಾಫಾಟನು ನ್ಯಾಯಾಧಿಪತಿಗಳನ್ನು ಆರಿಸಿದ್ದು
4 ಯೆಹೋಷಾಫಾಟನು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದನು. ಅವನು ಬೇರ್ಷೆಬ ನಗರದಿಂದ ಹಿಡಿದು ಎಫ್ರಾಯೀಮ್ ಬೆಟ್ಟದ ಪ್ರದೇಶದ ಜನರನ್ನೆಲ್ಲಾ ಸಂದರ್ಶಿಸಿದನು. ಯೆಹೋಷಾಫಾಟನು ಈ ಜನರನ್ನೆಲ್ಲ ಅವರ ಪೂರ್ವಿಕರ ದೇವರಾದ ಯೆಹೋವನ ಬಳಿಗೆ ಮತ್ತೆ ಕರೆದುಕೊಂಡು ಬಂದನು. 5 ಯೆಹೋಷಾಫಾಟನು ಯೆಹೂದ ಪ್ರಾಂತ್ಯದಲ್ಲಿ ನ್ಯಾಯಾಧಿಪತಿಗಳನ್ನು ಆರಿಸಿದನು. ಯೆಹೂದದ ಪ್ರತಿಯೊಂದು ಕೋಟೆಯ ಪಟ್ಟಣಗಳಿಗೆ ನ್ಯಾಯಾಧಿಪತಿಗಳನ್ನು ನೇಮಕ ಮಾಡಿದನು. 6 ಅವನು ಅವರಿಗೆ, “ನೀವು ಮಾಡುವ ಕಾರ್ಯದಲ್ಲಿ ಜಾಗರೂಕರಾಗಿರಿ. ನೀವು ಯೆಹೋವನ ಪರವಾಗಿ ಜನರ ನ್ಯಾಯವನ್ನು ತೀರಿಸುವವರಾಗಿದ್ದೀರಿ. ನೀವು ನ್ಯಾಯತೀರಿಸುವಾಗ ಯೆಹೋವನು ನಿಮ್ಮ ಸಂಗಡ ಇರುವನು. 7 ನಿಮ್ಮಲ್ಲಿ ಪ್ರತಿಯೊಬ್ಬರೂ ಯೆಹೋವನಿಗೆ ಭಯಪಡುವವರಾಗಿರಬೇಕು. ಆತನು ನ್ಯಾಯವಂತನಾಗಿದ್ದಾನೆ. ಆತನಿಗೆ ಎಲ್ಲಾ ಜನರು ಸಮಾನರೇ. ಆತನು ಲಂಚ ಸ್ವೀಕರಿಸಿ ನ್ಯಾಯವನ್ನು ಬದಲಾಯಿಸುವದಿಲ್ಲ” ಎಂದು ಹೇಳಿದನು.
8 ಜೆರುಸಲೇಮಿನೊಳಗೆ ಯೆಹೋಷಾಫಾಟನು ಲೇವಿಯರಲ್ಲಿ, ಯಾಜಕರಲ್ಲಿ ಮತ್ತು ಇಸ್ರೇಲರ ನಾಯಕರಲ್ಲಿ ಕೆಲವರನ್ನು ನ್ಯಾಯಾಧಿಪತಿಗಳನ್ನಾಗಿ ಆರಿಸಿದನು. ಇವರು ಜನರ ಜಗಳಗಳನ್ನು ಮತ್ತು ಸಮಸ್ಯೆಗಳನ್ನು ಯೆಹೋವನ ಕಟ್ಟಳೆಗಳ ಪ್ರಕಾರ ತೀರಿಸಬೇಕಾಗಿತ್ತು. 9 ಯೆಹೋಷಾಫಾಟನು ಅವರಿಗೆ, “ನೀವು ಹೃದಯಪೂರ್ವಕವಾಗಿ ನಿಮ್ಮ ಕೆಲಸ ನಡಿಸಬೇಕು. ನೀವು ಯೆಹೋವನಿಗೆ ಭಯಪಡುವವರಾಗಿರಬೇಕು. 10 ನಿಮ್ಮ ಬಳಿಗೆ ಕೊಲೆಯ ಪ್ರಕರಣಗಳ ಬಗ್ಗೆ, ಕಟ್ಟಳೆಯ ಬಗ್ಗೆ, ಆಜ್ಞೆಯ ಬಗ್ಗೆ, ನಿಯಮದ ಬಗ್ಗೆ ಮತ್ತು ಬೇರೆ ಯಾವುದಾದರೂ ಕಟ್ಟಳೆಯ ಬಗ್ಗೆ ಬಗೆಹರಿಸಲು ಬರಬಹುದು. ಅವೆಲ್ಲಾ ನಿಮ್ಮ ಸಹೋದರರಿಂದಲೇ ಬರುವವು. ದೇವರಿಗೆ ವಿರುದ್ಧವಾಗಿ ಪಾಪಮಾಡಬಾರದೆಂಬುದಾಗಿ ಅವರಿಗೆಲ್ಲಾ ಎಚ್ಚರಿಸಬೇಕು. ನೀವು ನಂಬಿಗಸ್ತಿಕೆಯಿಂದ ಸೇವೆಮಾಡದಿದ್ದಲ್ಲಿ ನಿಮ್ಮ ಮೇಲೆಯೂ ನಿಮ್ಮ ಸಹೋದರರ ಮೇಲೆಯೂ ದೇವರ ಕೋಪ ಉರಿಯುವಂತೆ ಮಾಡಿಕೊಳ್ಳುವಿರಿ. ನೀವು ತಪ್ಪಿತಸ್ಥರಾಗದೆ ನಂಬಿಗಸ್ತಿಕೆಯಿಂದ ಸೇವೆಮಾಡಿರಿ.
11 “ಅಮರ್ಯನು ನಿಮ್ಮ ಪ್ರಧಾನಯಾಜಕನು. ಯೆಹೋವನ ಕಾರ್ಯಗಳಿಗೆಲ್ಲಾ ಅವನೇ ನಿಮಗೆ ಪ್ರಮುಖನು. ಯೆಹೋವನ ಕುರಿತಾದ ಸಂಗತಿಗಳ ಬಗ್ಗೆ ಜೆಬದ್ಯನು ಪ್ರಮುಖನಾಗಿರುವನು. ಅವನು ಯೆಹೂದ ಕುಲದ ಇಷ್ಮಾಯೇಲನ ಮಗ. ಲೇವಿಯರು ನಿಮಗಾಗಿ ಬರವಣಿಗೆಯ ಕೆಲಸವನ್ನು ಮಾಡುವರು. ನೀವು ಮಾಡುವ ಕಾರ್ಯಗಳಲ್ಲಿ ಧೈರ್ಯಶಾಲಿಗಳಾಗಿರಿ. ಯೆಹೋವನು ನೀತಿವಂತರೊಂದಿಗಿರುವನು” ಎಂದು ಹೇಳಿದನು.
ಯೆಹೋಷಾಫಾಟನು ಯುದ್ಧವನ್ನು ಎದುರಿಸಿದನು
20 ಕೆಲಕಾಲದನಂತರ ಮೋವಾಬ್ಯರೂ ಅಮ್ಮೋನಿಯರೂ ಮೆಗೂನ್ಯರಲ್ಲಿ ಕೆಲವರೂ ಯೆಹೋಷಾಫಾಟನೊಂದಿಗೆ ಯುದ್ಧಮಾಡಲು ಬಂದರು. 2 ಕೆಲವು ಜನರು ಯೆಹೋಷಾಫಾಟನ ಬಳಿಗೆ ಬಂದು, “ಎದೋಮ್ಯರ ದೊಡ್ಡ ಸೈನ್ಯವು ಲವಣಸಮುದ್ರದ ಆಚೆಕಡೆಯಿಂದ ನಿನಗೆ ವಿರುದ್ಧವಾಗಿ ಬರುತ್ತಿದೆ. ಈಗಾಗಲೇ ಅವರು ಹಚೆಚೋನ್ ತಾಮಾರಿನಲ್ಲಿದ್ದಾರೆ” (ಇದನ್ನು ಏಂಗೆದಿ ಎಂತಲೂ ಕರೆಯುತ್ತಾರೆ.) ಎಂದು ಹೇಳಿದರು. 3 ಯೆಹೋಷಾಫಾಟನು ಭಯಭೀತನಾಗಿ ಯೆಹೋವನನ್ನು ವಿಚಾರಿಸಲು ನಿರ್ಧರಿಸಿದನು. ಯೆಹೂದದ ಎಲ್ಲಾ ಜನರು ಉಪವಾಸ ಮಾಡಬೇಕೆಂದು ಆಜ್ಞೆ ಹೊರಡಿಸಿದನು. 4 ಯೆಹೂದದ ಜನರೆಲ್ಲಾ ಯೆಹೋವನನ್ನು ವಿಚಾರಿಸಲು ಒಟ್ಟಾಗಿ ಸೇರಿದರು. 5 ಯೆಹೋಷಾಫಾಟನು ದೇವಾಲಯದ ಹೊಸ ಅಂಗಳದಲ್ಲಿ ಕೂಡಿಬಂದ ಜನರೆದುರು ಎದ್ದುನಿಂತು,
6 “ನಮ್ಮ ಪಿತೃಗಳ ದೇವರಾದ ಯೆಹೋವನೇ, ನೀನು ಪರಲೋಕದಲ್ಲಿರುವ ದೇವರು. ಲೋಕದ ಎಲ್ಲಾ ದೇಶಗಳನ್ನಾಳುವವನು ನೀನೇ. ಬಲಸಾಮರ್ಥ್ಯವುಳ್ಳವನು ನೀನೇ, ಯಾರೂ ನಿನಗೆದುರಾಗಿ ನಿಲ್ಲಲಾರರು. 7 ನೀನೇ ನಮ್ಮ ದೇವರಾಗಿರುವೆ. ನೀನು ಈ ದೇಶದಲ್ಲಿ ವಾಸವಾಗಿದ್ದ ಜನರನ್ನು ಹೊರಡಿಸಿ ಈ ದೇಶವನ್ನು ಅಬ್ರಹಾಮನ ಸಂತತಿಯವರಾದ ಇಸ್ರೇಲರಿಗೆ ಕೊಟ್ಟೆ. ಅಬ್ರಹಾಮನು ನಿನ್ನ ಸ್ನೇಹಿತನಾಗಿದ್ದನು. 8 ಅಬ್ರಹಾಮನ ಸಂತತಿಯವರು ಈ ದೇಶದಲ್ಲಿ ವಾಸವಾಗಿ ನಿನ್ನ ಹೆಸರನ್ನು ಸ್ಥಾಪಿಸಲು ನಿನಗೊಂದು ದೇವಾಲಯವನ್ನು ಕಟ್ಟಿದರು. 9 ಅವರು, ‘ನಮಗೆ ಖಡ್ಗ, ಕಾಯಿಲೆ, ಬರ, ಶಿಕ್ಷೆಗಳಿಂದ ಸಂಕಷ್ಟ ಉಂಟಾದರೆ ನಾವು ನಿನ್ನ ಮತ್ತು ನಿನ್ನ ಆಲಯದೆದುರು ನಿಂತು ನಿನಗೆ ಮೊರೆಯಿಡುವಾಗ ನೀನು ನಮ್ಮ ಮೊರೆಯನ್ನು ಕೇಳಿ ನಮಗೆ ಸಹಾಯ ಮಾಡುವೆ. ನಿನ್ನ ಹೆಸರು ಈ ಆಲಯದ ಮೇಲಿದೆ’ ಎಂದು ಹೇಳಿದರು.
10 “ಈಗ ಅಮ್ಮೋನಿಯರೂ ಮೋವಾಬಿನವರೂ ಸೇಯೀರ್ ಬೆಟ್ಟಪ್ರದೇಶದವರೂ ನಮಗೆ ವಿರೋಧವಾಗಿ ಬಂದಿದ್ದಾರೆ. ಈಜಿಪ್ಟಿನಿಂದ ಇಸ್ರೇಲರು ಹೊರಬಂದಾಗ ಅವರ ದೇಶದೊಳಗಿಂದ ಪ್ರಯಾಣ ಮಾಡಲು ನೀನು ಬಿಡಲಿಲ್ಲ. ಆದ್ದರಿಂದ ಇಸ್ರೇಲರು ಅವರನ್ನು ನಾಶಮಾಡದೆ ಬೇರೆ ಕಡೆಗೆ ತಿರುಗಿದರು.[a] 11 ಅವರನ್ನು ನಾಶಮಾಡದೆ ಹೋದದ್ದಕ್ಕೆ ಈಗ ಅವರು ಮಾಡುತ್ತಿರುವುದನ್ನು ನೀನೇ ನೋಡು. ನೀನು ನಮಗೆ ಕೊಟ್ಟ ದೇಶದಿಂದ ನಮ್ಮನ್ನು ಹೊರಡಿಸಲು ಬಂದಿದ್ದಾರೆ. 12 ನಮ್ಮ ದೇವರೇ, ನೀನೇ ಅವರನ್ನು ಶಿಕ್ಷಿಸು. ನಮಗೆ ವಿರುದ್ಧವಾಗಿ ಬರುತ್ತಿರುವ ಅವರ ದೊಡ್ಡಸೈನ್ಯವನ್ನು ಎದುರಿಸಲು ನಮ್ಮಿಂದಾಗದು. ಏನು ಮಾಡಬೇಕೋ ನಮಗೆ ತಿಳಿಯುತ್ತಿಲ್ಲ. ನಾವು ನಿನ್ನ ಸಹಾಯವನ್ನೇ ಎದುರುನೋಡುತ್ತಿದ್ದೇವೆ” ಎಂದು ಪ್ರಾರ್ಥಿಸಿದನು.
13 ಯೆಹೂದದ ಎಲ್ಲಾ ಜನರು ತಮ್ಮ ಹೆಂಡತಿಮಕ್ಕಳೊಂದಿಗೆ ಯೆಹೋವನೆದುರು ನಿಂತಿದ್ದರು. 14 ಆಗ ಜೆಕರ್ಯನ ಮಗನಾದ ಯೆಹಜೀಯೇಲನ ಮೇಲೆ ಯೆಹೋವನ ಆತ್ಮನು ಬಂದನು. ಜೆಕರ್ಯನು ಬೆನಾಯನ ಮಗ. ಬೆನಾಯನು ಯೆಗೀಯೇಲನ ಮಗ. ಯೆಗೀಯೇಲನು ಮತ್ತನ್ಯನ ಮಗ. ಯೆಹಜೀಯೇಲನು ಲೇವಿಯನಾಗಿದ್ದನು ಮತ್ತು ಆಸಾಫನ ಸಂತತಿಯವನಾಗಿದ್ದನು. 15 ಸಭೆಯ ಮಧ್ಯದಲ್ಲಿ ನಿಂತುಕೊಂಡು ಯೆಹಜೀಯೇಲನು ಅವರಿಗೆ, “ರಾಜನಾದ ಯೆಹೋಷಾಫಾಟನೇ, ನನ್ನ ಮಾತನ್ನು ಕೇಳು. ಜೆರುಸಲೇಮಿನಲ್ಲಿಯೂ ಯೆಹೂದದ ರಾಜ್ಯದಲ್ಲಿಯೂ ವಾಸಿಸುವ ಸರ್ವಜನರೇ, ನನ್ನ ಮಾತನ್ನು ಕೇಳಿರಿ. ಯೆಹೋವನು ನಿಮಗೆ ಹೀಗೆನ್ನುತ್ತಾನೆ: ‘ಆ ದೊಡ್ಡ ಸೈನ್ಯಕ್ಕೆ ಹೆದರಿ ಚಿಂತೆಗೊಳಗಾಗಬೇಡಿ. ಯಾಕೆಂದರೆ ಯುದ್ಧವು ನಿಮ್ಮದಲ್ಲ, ಅದು ದೇವರದೇ! 16 ನಾಳೆ ಅವರ ವಿರುದ್ಧವಾಗಿ ಹೊರಟು ಅವರೊಂದಿಗೆ ಹೋರಾಡಿ. ಅವರು ಹಜ್ಜೀಜ್ ಕಣಿವೆಯಿಂದ ಬರುವರು. ನೀವು ಅವರನ್ನು ಯೆರೂವೇಲ್ ಅರಣ್ಯದ ಮುಂದಿರುವ ಕಣಿವೆಯ ತುದಿಯಲ್ಲಿ ಅವರನ್ನು ಸಂಧಿಸುವಿರಿ. 17 ನೀವು ಈ ಯುದ್ಧದಲ್ಲಿ ಹೋರಾಡುವ ಅವಶ್ಯವಿಲ್ಲ. ನಿಮ್ಮ ಸ್ಥಳಗಳಲ್ಲಿ ಸ್ಥಿರವಾಗಿ ನಿಂತುಕೊಂಡಿರಿ. ಯೆಹೋವನ ರಕ್ಷಣಾಕಾರ್ಯವನ್ನು ನೀವು ನೋಡುವಿರಿ. ಭಯಪಡಬೇಡಿರಿ; ಚಿಂತೆಗೊಳಗಾಗಬೇಡಿರಿ; ಯೆಹೋವನು ನಿಮ್ಮೊಂದಿಗಿದ್ದಾನೆ. ಆದ್ದರಿಂದ ನೀವು ನಾಳೆ ಹೋಗಿ ಆ ಸೈನ್ಯವನ್ನು ಎದುರಿಸಿರಿ’” ಎಂದು ಹೇಳಿದನು.
18 ಯೆಹೋಷಾಫಾಟನು ನೆಲದ ಮೇಲೆ ಸಾಷ್ಟಾಂಗನಮಸ್ಕಾರ ಮಾಡಿದನು. ಹಾಗೆಯೇ, ನೆರೆದಿದ್ದ ಜನರೆಲ್ಲರೂ ಯೆಹೋವನ ಮುಂದೆ ಅಡ್ಡಬಿದ್ದು ನಮಸ್ಕರಿಸಿದರು. 19 ಕೆಹಾತ್ಯನ ಕುಲದವರಾದ ಲೇವಿಯರೂ ಕೋರಹನ ವಂಶದವರೂ ಎದ್ದುನಿಂತು ಇಸ್ರೇಲ್ ದೇವರಾದ ಯೆಹೋವನಿಗೆ ಗಟ್ಟಿಯಾದ ಸ್ವರದಿಂದ ಸ್ತುತಿಗೀತೆ ಹಾಡಿದರು.
20 ಮರುದಿನ ಮುಂಜಾನೆ ಯೆಹೋಷಾಫಾಟನ ಸೈನ್ಯವು ತೆಕೋವದ ಅರಣ್ಯಕ್ಕೆ ಹೊರಟಿತು. ಅವರು ಹೊರಡುವ ಮುಂಚೆ ಯೆಹೋಷಾಫಾಟನು ಎದ್ದುನಿಂತು, “ಜೆರುಸಲೇಮಿನವರೇ, ಯೆಹೂದ ಪ್ರಾಂತ್ಯದವರೇ, ನನ್ನ ಮಾತನ್ನು ಕೇಳಿರಿ. ನಮ್ಮ ದೇವರಾದ ಯೆಹೋವನ ಮೇಲೆ ಭರವಸವಿಡಿರಿ. ಆಗ ನೀವು ಸ್ಥಿರಗೊಳ್ಳುವಿರಿ. ಯೆಹೋವನ ಪ್ರವಾದಿಗಳ ಮೇಲೆ ಭರವಸವಿಡಿರಿ; ಆಗ ನೀವು ಜಯಗಳಿಸುವಿರಿ” ಎಂದು ಹೇಳಿದನು.
21 ಯೆಹೋಷಾಫಾಟನು ಜನರ ಸಲಹೆಗಳನ್ನು ಕೇಳಿದನು; ಯೆಹೋವನನ್ನು ಸ್ತುತಿಸಲು ಗಾಯಕರನ್ನು ಆರಿಸಿದನು; ಯಾಕೆಂದರೆ ಆತನು ಪರಿಶುದ್ಧನು ಮತ್ತು ಅದ್ಭುತಸ್ವರೂಪನು. ಅವರು ಸೈನ್ಯದ ಮುಂದುಗಡೆಯಲ್ಲಿ ಹೋಗುತ್ತಾ ಆತನಿಗೆ ಸ್ತುತಿಗೀತೆಯನ್ನು ಹಾಡಿದರು. ಆ ಗಾಯಕರು,
“ಯೆಹೋವನಿಗೆ ಸ್ತೋತ್ರಮಾಡಿರಿ.
ಆತನ ಕರುಣೆಯು ನಿರಂತರವಾದದ್ದು”
ಎಂದು ಹಾಡಿದರು. 22 ಅವರು ಹೀಗೆ ಸ್ತೋತ್ರ ಮಾಡುತ್ತಿರುವಾಗ ಅಮ್ಮೋನಿಯರ ಮೇಲೆಯೂ ಮೋವಾಬ್ಯರ ಮೇಲೆಯೂ ಸೇಯೀರ್ ಬೆಟ್ಟಪ್ರದೇಶದವರ ಮೇಲೆಯೂ ಇತರ ವೈರಿಗಳು ಹಠಾತ್ತನೆ ದಾಳಿ ಮಾಡುವಂತೆ ಯೆಹೋವನು ಮಾಡಿದನು. ಯೆಹೂದವನ್ನು ಆಕ್ರಮಣಮಾಡಲು ಬಂದಿದ್ದ ಅವರೆಲ್ಲರೂ ಸೋತುಹೋದರು. 23 ಅಮ್ಮೋನಿಯರೂ ಮೋವಾಬ್ಯರೂ ಸೇಯೀರ್ ಬೆಟ್ಟಪ್ರದೇಶದವರೊಂದಿಗೆ ಹೋರಾಡಲಾರಂಭಿಸಿ ಅವರನ್ನು ಕೊಂದು ನಾಶಪಡಿಸಿದರು. ಅವರು ಸೇಯೀರ್ ಬೆಟ್ಟಪ್ರದೇಶದವರನ್ನು ಕೊಂದ ಬಳಿಕ ತಮ್ಮಲ್ಲಿ ತಾವೇ ಒಬ್ಬರನ್ನೊಬ್ಬರು ಕೊಂದರು.
24 ಯೆಹೂದದ ಸೈನ್ಯದವರು ಅರಣ್ಯದಲ್ಲಿ ಶತ್ರು ಸೈನ್ಯವನ್ನು ವೀಕ್ಷಿಸುವ ಸ್ಥಳಕ್ಕೆ ಬಂದಾಗ ಸೈನ್ಯವನ್ನು ಕಾಣದೆ ರಾಶಿಯಾಗಿ ಬಿದ್ದಿದ್ದ ಹೆಣಗಳನ್ನೇ ಕಂಡರು; ಯಾರೂ ಜೀವದಿಂದುಳಿದಿರಲಿಲ್ಲ. 25 ಯೆಹೋಷಾಫಾಟನೂ ಅವನ ಸೈನಿಕರೂ ಬಂದು ಸತ್ತವರ ದೇಹದಿಂದ ಬೆಲೆಬಾಳುವ ವಸ್ತುಗಳನ್ನು ಸೂರೆ ಮಾಡಿದರು. ಅವರು ಅನೇಕ ಪಶುಗಳನ್ನು, ಐಶ್ವರ್ಯವನ್ನು, ಬಟ್ಟೆಬರೆಗಳನ್ನು ಮತ್ತು ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡರು. ಯೆಹೋಷಾಫಾಟನು ಮತ್ತು ಅವನ ಜನರು ಹೊತ್ತುಕೊಂಡು ಹೋಗಲಾರದಷ್ಟು ವಸ್ತುಗಳಿದ್ದವು; ಅವುಗಳನ್ನು ಶೇಖರಿಸಲು ಮೂರು ದಿವಸಗಳು ಬೇಕಾಯಿತು. 26 ನಾಲ್ಕನೆಯ ದಿವಸದಲ್ಲಿ ಯೆಹೋಷಾಫಾಟನೂ ಅವನ ಸೈನ್ಯವೂ ಬೆರಾಕ ತಗ್ಗಿನಲ್ಲಿ ಬಂದು ಸೇರಿದರು. ಅಲ್ಲಿ ಯೆಹೋವನಿಗೆ ಸ್ತೋತ್ರ ಮಾಡಿದರು. ಆದ್ದರಿಂದ ಈ ದಿನದವರೆಗೂ ಅದಕ್ಕೆ ಬೆರಾಕ[b] ತಗ್ಗು ಎಂಬ ಹೆಸರಿದೆ.
27 ತರುವಾಯ ಯೆಹೋಷಾಫಾಟನು ತನ್ನ ಸೈನ್ಯವನ್ನು ಜೆರುಸಲೇಮಿಗೆ ನಡಿಸಿದನು. ಶತ್ರುಗಳ ಮೇಲೆ ಯೆಹೋವನು ನೀಡಿದ ಜಯಕ್ಕಾಗಿ ಅವರು ಹರ್ಷಿಸಿದರು. 28 ಅವರು ವಾದ್ಯಗಳನ್ನು ಬಾರಿಸುತ್ತಾ ದೇವಾಲಯವನ್ನು ಪ್ರವೇಶಿಸಿದರು.
29 ಯೆಹೋವನು ಇಸ್ರೇಲರ ವೈರಿಗಳಿಗೆ ವಿರುದ್ಧವಾಗಿ ಯುದ್ಧ ಮಾಡಿದನೆಂದು ಕೇಳಿ ಎಲ್ಲಾ ದೇಶಗಳವರು ಆತನಿಗೆ ಭಯಪಟ್ಟರು. 30 ಆದ್ದರಿಂದ ಯೆಹೋಷಾಫಾಟನ ರಾಜ್ಯದಲ್ಲಿ ಸಮಾಧಾನ ನೆಲೆಸಿತ್ತು. ಅವನ ಸುತ್ತಮುತ್ತಲೂ ಯೆಹೋವನು ಶಾಂತಿಯನ್ನು ಅನುಗ್ರಹಿಸಿದನು.
ಯೆಹೋಷಾಫಾಟನ ಆಳ್ವಿಕೆಯ ಅಂತ್ಯ
31 ಯೆಹೂದ ದೇಶವನ್ನು ಯೆಹೋಷಾಫಾಟನು ಆಳಿದನು. ಅವನು ಪಟ್ಟವನ್ನೇರಿದಾಗ ಮೂವತ್ತೈದು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಳಿದನು. ಅವನ ತಾಯಿಯ ಹೆಸರು ಅಜೂಬ. ಆಕೆ ಶಿಲ್ಹಿ ಎಂಬಾತನ ಮಗಳು. 32 ಯೆಹೋಷಾಫಾಟನು ತನ್ನ ತಂದೆ ಆಸನ ಹಾಗೆ ದೇವರ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದುಕೊಂಡನು. 33 ಆದರೆ ಅವನು ಉನ್ನತಸ್ಥಳಗಳನ್ನು ನಿರ್ಮೂಲಗೊಳಿಸಲಿಲ್ಲ. ಯೆಹೂದದ ಜನರು ತಮ್ಮ ಪೂರ್ವಿಕರ ದೇವರಾದ ಯೆಹೋವನ ಮೇಲೆ ಪೂರ್ಣ ಮನಸ್ಸಿಟ್ಟಿರಲಿಲ್ಲ.
34 ಯೆಹೋಷಾಫಾಟನು ಆರಂಭದಿಂದ ಕೊನೆಯವರೆಗೂ ಮಾಡಿದ ಬೇರೆ ಕಾರ್ಯಗಳು, ಹನಾನೀಯನ ಮಗನಾದ ಯೇಹು ಬರೆದ ಇಸ್ರೇಲ್ ರಾಜರ ಗ್ರಂಥದಲ್ಲಿ ದಾಖಲಾಗಿವೆ.
35 ಕೆಲಕಾಲದ ನಂತರ ಯೆಹೋಷಾಫಾಟನು ಇಸ್ರೇಲರ ರಾಜನಾಗಿದ್ದ ಅಹಜ್ಯನೊಂದಿಗೆ ಒಪ್ಪಂದವನ್ನು ಮಾಡಿಕೊಂಡನು. ಅಹಜ್ಯನು ದೇವರ ದೃಷ್ಟಿಯಲ್ಲಿ ಬಹು ದುಷ್ಟನಾಗಿದ್ದನು. 36 ಯೆಹೋಷಾಫಾಟನು ಅಹಜ್ಯನೊಂದಿಗೆ ಸೇರಿ ಹಡಗುಗಳನ್ನು ತಯಾರಿಸಿ ತಾರ್ಷೀಷಿಗೆ ಕಳುಹಿಸಿದನು. ಅವರು ಎಚ್ಯೋನ್ ಗೆಬೆರಿನಲ್ಲಿ ಹಡಗುಗಳನ್ನು ಕಟ್ಟಿದರು. 37 ಆಗ ಎಲಿಯೇಜರನು ಯೆಹೋಷಾಫಾಟನ ವಿರುದ್ಧವಾಗಿ ಪ್ರವಾದಿಸಿದನು. ಅವನು ದೋದಾವಾಹುವಿನ ಮಗನು. ಅವನು ಮಾರೇಷ ಎಂಬ ಪಟ್ಟಣದವನಾಗಿದ್ದನು. ಅವನು, “ಯೆಹೋಷಾಫಾಟನೇ, ನೀನು ಅಹಜ್ಯನೊಂದಿಗೆ ಸೇರಿಕೊಂಡಿರುವೆ. ಇದಕ್ಕಾಗಿ ಯೆಹೋವನು ನಿನ್ನ ಕೆಲಸಗಳನ್ನು ನಾಶಮಾಡುವನು” ಎಂದು ಹೇಳಿದನು. ಅವನ ಹಡಗುಗಳು ಸಮುದ್ರದಲ್ಲಿ ಒಡೆದುಹೋದದ್ದರಿಂದ ಅವುಗಳು ತಾರ್ಷೀಷಿಗೆ ಹೋಗಲಾಗಲಿಲ್ಲ.
ಏಳನೆಯ ಮುದ್ರೆ
8 ಕುರಿಮರಿಯಾದಾತನು ಏಳನೆಯ ಮುದ್ರೆಯನ್ನು ಒಡೆದನು. ಆಗ ಪರಲೋಕದಲ್ಲಿ ಅರ್ಧ ಗಂಟೆಯ ಕಾಲ ನಿಶ್ಯಬ್ದವಾಯಿತು. 2 ದೇವರ ಎದುರಿನಲ್ಲಿ ಏಳು ದೇವದೂತರು ನಿಂತಿರುವುದನ್ನು ನಾನು ನೋಡಿದೆನು. ಅವರಿಗೆ ಏಳು ತುತೂರಿಗಳನ್ನು ಕೊಡಲಾಯಿತು.
3 ಮತ್ತೊಬ್ಬ ದೇವದೂತನು ಬಂದು, ಯಜ್ಞವೇದಿಕೆಯ ಬಳಿ ನಿಂತನು. ಈ ದೇವದೂತನು ಧೂಪವಿದ್ದ ಬಂಗಾರದ ಪಾತ್ರೆಯನ್ನು ಹಿಡಿದುಕೊಂಡಿದ್ದನು. ದೇವರ ಪರಿಶುದ್ಧ ಜನರೆಲ್ಲರ ಪ್ರಾರ್ಥನೆಗಳ ಜೊತೆಯಲ್ಲಿ ಅರ್ಪಿಸುವುದಕ್ಕಾಗಿ ಅವನಿಗೆ ಬಹಳ ಧೂಪವನ್ನು ಕೊಡಲಾಯಿತು. ಈ ದೇವದೂತನು ಸಿಂಹಾಸನದ ಎದುರಿನಲ್ಲಿರುವ ಚಿನ್ನದ ಯಜ್ಞವೇದಿಕೆಯ ಮೇಲೆ ಈ ಧೂಪವನ್ನು ಇಟ್ಟನು. 4 ಧೂಪದ ಹೊಗೆಯು ದೇವದೂತನ ಕೈಯಿಂದ ದೇವಜನರ ಪ್ರಾರ್ಥನೆಗಳೊಂದಿಗೆ ದೇವರ ಬಳಿಗೆ ಏರಿಹೋಯಿತು. 5 ಆಗ ದೇವದೂತನು ಧೂಪವಿದ್ದ ಪಾತ್ರೆಯನ್ನು ಯಜ್ಞವೇದಿಕೆಯ ಬೆಂಕಿಯಿಂದ ತುಂಬಿಸಿ ಅದನ್ನು ಭೂಮಿಯ ಮೇಲೆ ಎಸೆದನು. ಆಗ ಮಿಂಚು ಗುಡುಗುಗಳೂ ಮತ್ತಿತರ ಧ್ವನಿಗಳೂ ಭೂಕಂಪಗಳೂ ಉಂಟಾದವು.
ಏಳು ತುತೂರಿಗಳನ್ನು ಹಿಡಿದಿರುವ ಏಳು ಮಂದಿ ದೇವದೂತರು
6 ನಂತರ ಆ ಏಳು ಮಂದಿ ದೇವದೂತರು ಏಳು ತುತೂರಿಗಳನ್ನು ಊದಲು ಸಿದ್ಧರಾದರು.
7 ಮೊದಲನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ರಕ್ತದಲ್ಲಿ ಕಲಸಿದ್ದ ಆಲಿಕಲ್ಲುಗಳ ಮತ್ತು ಬೆಂಕಿಯ ಮಳೆಯು ಭೂಮಿಯ ಮೇಲೆ ಸುರಿಯಿತು. ಭೂಮಿಯ ಮೂರನೆಯ ಒಂದು ಭಾಗ ಮತ್ತು ಹಸಿರು ಹುಲ್ಲೆಲ್ಲಾ ಸುಟ್ಟುಹೋದವು; ಮತ್ತು ಮರಗಳಲ್ಲಿ ಮೂರನೆಯ ಒಂದು ಭಾಗ ಸುಟ್ಟುಹೋದವು.
8 ಎರಡನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಬೆಂಕಿಯಿಂದ ಉರಿಯುತ್ತಿದ್ದ ದೊಡ್ಡ ಬೆಟ್ಟವೋ ಎಂಬಂತಿದ್ದ ವಸ್ತುವೊಂದನ್ನು ಸಮುದ್ರದೊಳಕ್ಕೆ ಎಸೆಯಲಾಯಿತು. ಆಗ ಸಮುದ್ರದ ಮೂರನೆಯ ಒಂದು ಭಾಗ ರಕ್ತವಾಯಿತು. 9 ಸಮುದ್ರದಲ್ಲಿದ್ದ ಜೀವಿಗಳಲ್ಲಿ ಮೂರನೆಯ ಒಂದು ಭಾಗ ಸತ್ತುಹೋದವು ಮತ್ತು ಹಡಗುಗಳಲ್ಲಿ ಮೂರನೆಯ ಒಂದು ಭಾಗ ನಾಶವಾದವು.
10 ಮೂರನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಪಂಜಿನಂತೆ ಉರಿಯುವ ಒಂದು ದೊಡ್ಡ ನಕ್ಷತ್ರವು ಆಕಾಶದಿಂದ ಕೆಳಗೆ ಬಿತ್ತು. ಆ ನಕ್ಷತ್ರವು ನದಿಗಳಲ್ಲಿ ಮತ್ತು ನೀರಿನ ಬುಗ್ಗೆಗಳಲ್ಲಿ ಮೂರನೆಯ ಒಂದು ಭಾಗದ ಮೇಲೆ ಬಿದ್ದಿತು. 11 ಆ ನಕ್ಷತ್ರಕ್ಕೆ “ಕಹಿ ಮರ”[a] ಎಂದು ಹೆಸರು. ನೀರಿನಲ್ಲಿ ಮೂರನೆಯ ಒಂದು ಭಾಗವು ಕಹಿಯಾಯಿತು. ಈ ಕಹಿಯಾದ ನೀರನ್ನು ಕುಡಿದು ಅನೇಕ ಜನರು ಸತ್ತುಹೋದರು.
12 ನಾಲ್ಕನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಸೂರ್ಯನಲ್ಲಿ ಮೂರನೆಯ ಒಂದು ಭಾಗ, ಚಂದ್ರನಲ್ಲಿ ಮೂರನೆಯ ಒಂದು ಭಾಗ ಮತ್ತು ನಕ್ಷತ್ರಗಳಲ್ಲಿ ಮೂರನೆಯ ಒಂದು ಭಾಗ ಬಡಿಯಲ್ಪಟ್ಟು ಅವುಗಳಲ್ಲಿ ಮೂರನೆಯ ಒಂದು ಭಾಗ ಕತ್ತಲಾಯಿತು. ಹಗಲಿನಲ್ಲಿಯೂ ರಾತ್ರಿಯಲ್ಲಿಯೂ ಮೂರನೆಯ ಒಂದು ಭಾಗಕ್ಕೆ ಬೆಳಕಿಲ್ಲದಂತಾಯಿತು.
13 ನಾನು ನೋಡುತ್ತಿದ್ದಂತೆ, ವಾಯುಮಂಡಲದ ಅತಿ ಎತ್ತರದಲ್ಲಿ ಗರುಡ ಪಕ್ಷಿಯೊಂದು ಹಾರಾಡುತ್ತಿರುವುದನ್ನು ಕಂಡೆನು. ಆ ಪಕ್ಷಿಯು ಗಟ್ಟಿಯಾದ ಧ್ವನಿಯಲ್ಲಿ, “ತೊಂದರೆ! ತೊಂದರೆ! ಭೂಮಿಯ ಮೇಲೆ ವಾಸಿಸುವ ಜನರಿಗೆ ತೊಂದರೆ! ಇತರ ಮೂರು ಮಂದಿ ದೇವದೂತರು ತಮ್ಮ ತುತೂರಿಗಳನ್ನು ಊದಿದಾಗ ವಿಪತ್ತುಗಳು ಆರಂಭವಾಗುತ್ತವೆ” ಎಂದು ಕೂಗಿತು.
ದೀಪಸ್ತಂಭವೂ, ಎರಡು ಆಲೀವ್ ಮರಗಳೂ
4 ನನ್ನೊಡನೆ ಮಾತನಾಡುತ್ತಿದ್ದ ದೇವದೂತನು ಬಂದು ನನ್ನನ್ನೆಬ್ಬಿಸಿದನು. ನಾನು ನಿದ್ರೆಯಿಂದ ಎದ್ದೇಳುವವನಂತೆ ಇದ್ದೆನು. 2 ಆಗ ದೂತನು, “ಏನು ನೋಡುತ್ತೀ?” ಎಂದು ಪ್ರಶ್ನಿಸಿದನು.
ಆಗ ನಾನು “ಬಂಗಾರದ ದೀಪಸ್ತಂಭವನ್ನು ನೋಡುತ್ತಿದ್ದೇನೆ. ಆ ಸ್ತಂಭದಲ್ಲಿ ಏಳು ದೀಪಗಳಿವೆ. ದೀಪಸ್ತಂಭದ ಮೇಲೆ ಒಂದು ಬೋಗುಣಿ ಇದೆ. ಆ ಬೋಗುಣಿಯಿಂದ ಏಳು ನಳಿಗೆಗಳು ಪ್ರತೀ ದೀಪಕ್ಕೆ ಹೋಗುತ್ತವೆ. ಬೋಗುಣಿಯಲ್ಲಿಟ್ಟ ಎಣ್ಣೆಯು ಆ ನಳಿಗೆಯ ಮೂಲಕ ದೀಪಕ್ಕೆ ಸುರಿಯುತ್ತಿತ್ತು. 3 ಆ ಬೋಗುಣಿಯ ಬಳಿಯಲ್ಲಿ ಎರಡು ಆಲೀವ್ ಮರಗಳಿದ್ದವು. ಒಂದು ಬಲಬದಿಯಲ್ಲಿಯೂ ಇನ್ನೊಂದು ಎಡಬದಿಯಲ್ಲಿಯೂ ಇತ್ತು. ಈ ಮರಗಳು ದೀಪಗಳಿಗೆ ಬೇಕಾದ ಎಣ್ಣೆಯನ್ನು ತಯಾರು ಮಾಡುತ್ತಿದ್ದವು.” 4 ಆಗ ನಾನು ನನ್ನ ಜೊತೆ ಮಾತನಾಡುತ್ತಿದ್ದ ದೂತನೊಡನೆ, “ಸ್ವಾಮಿ, ಇವುಗಳ ಅರ್ಥವೇನು?” ಎಂದು ಕೇಳಿದೆನು.
5 ಅವನು ಹೀಗೆ ಹೇಳಿದನು: “ಈ ವಿಷಯಗಳು ಏನೆಂದು ನಿನಗೆ ತಿಳಿಯಲಿಲ್ಲವೇ?”
ನಾನು, “ಇಲ್ಲ” ಅಂದೆನು.
6 ಅವನು ಅದಕ್ಕೆ ಉತ್ತರಿಸಿ, “ಇದು ಯೆಹೋವನಿಂದ ಜೆರುಬ್ಬಾಬೆಲನಿಗೆ ಕೊಟ್ಟ ಸಂದೇಶವಾಗಿದೆ. ‘ನಿನ್ನ ಸಹಾಯವು ನಿನ್ನ ಸ್ವಂತ ಶಕ್ತಿಸಾಮರ್ಥ್ಯದಿಂದ ಬರುವದಿಲ್ಲ. ಅದು ನನ್ನ ಆತ್ಮದಿಂದಲೇ ನಿನಗೆ ದೊರಕುವದು.’ ಇದು ಸರ್ವಶಕ್ತನಾದ ಯೆಹೋವನ ನುಡಿ. 7 ಉನ್ನತವಾದ ಶಿಖರವು ಜೆರುಬ್ಬಾಬೆಲನಿಗೆ ಸಮತಟ್ಟಾದ ನೆಲದಂತಿರುವುದು. ಅವನು ಆಲಯವನ್ನು ಕಟ್ಟುವನು. ಅದರ ಅತಿ ವಿಶೇಷವಾದ ಕಲ್ಲನ್ನಿಟ್ಟ ಬಳಿಕ ಜನರೆಲ್ಲರೂ, ‘ಬಹಳ ಚಂದ, ಬಹಳ ಚಂದ’ ಎಂದು ಆರ್ಭಟಿಸುವರು.”
8 ನನಗೆ ಯೆಹೋವನ ಸಂದೇಶವೂ ಸಹ ಹೀಗೆ ಹೇಳಿತು: 9 “ಜೆರುಬ್ಬಾಬೆಲನು ನನ್ನ ಆಲಯದ ಅಸ್ತಿವಾರವನ್ನು ಹಾಕುವನು. ಜೆರುಬ್ಬಾಬೆಲನು ಆಲಯವನ್ನು ಕಟ್ಟಿ ಮುಗಿಸುವನು. ಆಗ ನೀವು ಸರ್ವಶಕ್ತನಾದ ಯೆಹೋವನು ನಿಮ್ಮ ಬಳಿಗೆ ನನ್ನನ್ನು ಕಳುಹಿಸಿದ್ದಾನೆಂದು ತಿಳಿಯುವಿರಿ. 10 ಒಂದು ಸಣ್ಣ ರೀತಿಯ ಪ್ರಾರಂಭಕ್ಕೆ ಜನರು ನಾಚುವುದಿಲ್ಲ. ಜೆರುಬ್ಬಾಬೆಲನು ನೂಲುಗುಂಡು ಹಿಡಿದುಕೊಂಡು ಸಂಪೂರ್ಣವಾದ ಆಲಯವನ್ನು ಅಳತೆ ಮಾಡುವಾಗ ಜನರು ಅತಿಯಾಗಿ ಸಂತೋಷಿಸುವರು. ಈಗ ಆ ಕಲ್ಲಿನ ಏಳು ಬದಿಗಳು ಯೆಹೋವನ ಕಣ್ಣುಗಳು ಎಲ್ಲಾ ದಿಕ್ಕುಗಳನ್ನು ನೋಡುತ್ತಿರುವುದನ್ನು ಸೂಚಿಸುತ್ತವೆ. ಅವು ಭೂಲೋಕದಲ್ಲಿರುವ ಎಲ್ಲಾ ಸಂಗತಿಗಳನ್ನು ನೋಡುತ್ತಿವೆ.”
11 ಆಗ ಜೆಕರ್ಯನಾದ ನಾನು ಅವನಿಗೆ ಹೇಳಿದ್ದೇನೆಂದರೆ, “ನಾನು ದೀಪಸ್ತಂಭದ ಬಲಗಡೆಯಲ್ಲಿ ಒಂದು ಆಲೀವ್ ಮರವನ್ನೂ ಎಡಗಡೆಯಲ್ಲಿ ಇನ್ನೊಂದು ಆಲೀವ್ ಮರವನ್ನೂ ನೋಡಿದೆನು. ಇವುಗಳು ಏನನ್ನು ಸೂಚಿಸುತ್ತವೆ?” ಎಂದು ಕೇಳಿದೆನು. 12 ತಿರಿಗಿ ನಾನು ಅವನಿಗೆ, “ನಾನು ಆ ಎರಡು ಬಂಗಾರದ ನಳಿಗೆಯ ಬದಿಯಲ್ಲಿ ಆಲೀವ್ ಮರದ ಎರಡು ಕೊಂಬೆಗಳನ್ನು ನೋಡಿದೆನು. ಅದರಿಂದ ಬಂಗಾರದ ಬಣ್ಣದ ಎಣ್ಣೆಯು ಹರಿಯುತ್ತಿತ್ತು. ಇವುಗಳ ಅರ್ಥವೇನು?” ಎಂದು ಕೇಳಿದೆನು.
13 ಆಗ ದೇವದೂತನು ಹೇಳಿದ್ದೇನೆಂದರೆ, “ಇವು ಏನನ್ನು ಸೂಚಿಸುತ್ತವೆ ಎಂದು ನಿನಗೆ ತಿಳಿಯದೋ?”
ಅದಕ್ಕೆ ನಾನು, “ಇಲ್ಲ” ಅಂದೆನು.
14 ಆಗ ಅವನು, “ಈ ಪ್ರಪಂಚದಲ್ಲಿ ಯೆಹೋವನು ತನ್ನ ಸೇವೆಮಾಡಲು ಆರಿಸಿಕೊಂಡ ಇಬ್ಬರು ಮನುಷ್ಯರನ್ನು ಅವು ಪ್ರತಿನಿಧಿಸುತ್ತವೆ” ಅಂದನು.
ಯೇಸು ಮತ್ತು ಆತನ ಸಹೋದರರು
7 ಇದಾದ ಮೇಲೆ, ಯೇಸು ಗಲಿಲಾಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿದನು. ಜುದೇಯದಲ್ಲಿ ಸಂಚರಿಸಲು ಯೇಸುವಿಗೆ ಇಷ್ಟವಿರಲಿಲ್ಲ. ಏಕೆಂದರೆ ಅಲ್ಲಿನ ಯೆಹೂದ್ಯರು ಆತನನ್ನು ಕೊಲ್ಲಲು ಅವಕಾಶಕ್ಕಾಗಿ ಕಾಯುತ್ತಿದ್ದರು. 2 ಆಗ ಯೆಹೂದ್ಯರ ಪರ್ಣಕುಟೀರಗಳ ಹಬ್ಬದ ಸಮಯವಾಗಿತ್ತು. 3 ಆದ್ದರಿಂದ ಯೇಸುವಿನ ಸಹೋದರರು ಆತನಿಗೆ, “ನೀನು ಇಲ್ಲಿಂದ ಜುದೇಯಕ್ಕೆ ಹೋಗು. ಆಗ ಅಲ್ಲಿರುವ ನಿನ್ನ ಹಿಂಬಾಲಕರು ನೀನು ಮಾಡುವ ಅದ್ಭುತಕಾರ್ಯಗಳನ್ನು ನೋಡುವರು. 4 ತನ್ನ ಬಗ್ಗೆ ಜನರಿಗೆ ತಿಳಿಯಬೇಕೆಂದು ಅಪೇಕ್ಷಿಸುವವನು ತಾನು ಮಾಡುವ ಕಾರ್ಯಗಳನ್ನು ಮರೆಮಾಡಕೂಡದು. ನಿನ್ನನ್ನು ಈ ಲೋಕಕ್ಕೆ ತೋರಿಸಿಕೊ. ನೀನು ಮಾಡುವ ಕಾರ್ಯಗಳನ್ನು ಅವರು ನೋಡಲಿ” ಎಂದು ಹೇಳಿದರು. 5 (ಯೇಸುವಿನ ಸಹೋದರರು ಸಹ ಆತನನ್ನು ನಂಬಲಿಲ್ಲ.)
6 ಯೇಸು ತನ್ನ ಸಹೋದರರಿಗೆ, “ನನಗೆ ಸರಿಯಾದ ಸಮಯವು ಇನ್ನೂ ಬಂದಿಲ್ಲ. ನಿಮಗಾದರೋ ಹೋಗಲು ಎಲ್ಲಾ ಸಮಯವೂ ಸರಿಯಾಗಿರುತ್ತದೆ. 7 ಈ ಲೋಕವು ನಿಮ್ಮನ್ನು ದ್ವೇಷಿಸಲಾರದು. ಆದರೆ ಈ ಲೋಕವು ನನ್ನನ್ನು ದ್ವೇಷಿಸುತ್ತದೆ. ಏಕೆಂದರೆ ನಾನು ಈ ಲೋಕದ ಜನರಿಗೆ, ಅವರು ಮಾಡುತ್ತಿರುವುದು ಕೆಟ್ಟಕಾರ್ಯಗಳೆಂದು ಹೇಳುವೆನು. 8 ಆದ್ದರಿಂದ ನೀವು ಹಬ್ಬಕ್ಕೆ ಹೋಗಿರಿ. ನಾನು ಈ ಹಬ್ಬಕ್ಕೆ ಹೋಗುವುದಿಲ್ಲ. ನನಗೆ ಸರಿಯಾದ ಸಮಯವು ಇನ್ನೂ ಬಂದಿಲ್ಲ” ಎಂದು ಹೇಳಿದನು. 9 ಯೇಸು ಹೀಗೆ ಹೇಳಿ ಗಲಿಲಾಯದಲ್ಲೇ ಉಳಿದುಕೊಂಡನು.
10 ಆದ್ದರಿಂದ ಯೇಸುವಿನ ಸಹೋದರರು ಹಬ್ಬಕ್ಕಾಗಿ ಹೊರಟರು. ಅವರು ಹೋದನಂತರ ಆತನು ಸಹ ಗುಟ್ಟಾಗಿಹೋದನು. 11 ಹಬ್ಬದಲ್ಲಿ ಯೆಹೂದ್ಯರು, “ಆತನು ಎಲ್ಲಿದ್ದಾನೆ” ಎಂದು ಕೇಳುತ್ತಾ ಆತನಿಗಾಗಿ ಹುಡುಕುತ್ತಿದ್ದರು.
12 ಅಲ್ಲಿ ಜನರ ದೊಡ್ಡ ಗುಂಪೊಂದು ನೆರೆದಿದ್ದಿತು. ಆ ಜನರಲ್ಲಿ ಅನೇಕರು ಯೇಸುವಿನ ಬಗ್ಗೆ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಿದ್ದರು. “ಆತನು ಒಳ್ಳೆಯವನು” ಎಂದು ಕೆಲವರು ಹೇಳಿದರು. ಇತರರು, “ಇಲ್ಲ, ಆತನು ಜನರನ್ನು ಮೋಸಗೊಳಿಸುತ್ತಿದ್ದಾನೆ” ಎಂದು ಟೀಕಿಸಿದರು. 13 ಆದರೆ ಯೇಸುವಿನ ಬಗ್ಗೆ ಬಹಿರಂಗವಾಗಿ ಮಾತಾಡಲು ಆ ಜನರಲ್ಲಿ ಯಾರಿಗೂ ಸಾಕಷ್ಟು ಧೈರ್ಯವಿರಲಿಲ್ಲ. ಜನರು ಯೆಹೂದ್ಯ ನಾಯಕರುಗಳಿಗೆ ಹೆದರಿಕೊಂಡಿದ್ದರು.
ಯೆಹೂದ್ಯರ ಹಬ್ಬದಲ್ಲಿ ಯೇಸುವಿನ ಉಪದೇಶ
14 ಹಬ್ಬದಲ್ಲಿ ಸುಮಾರು ಅರ್ಧಭಾಗ ಮುಗಿದುಹೋಗಿತ್ತು. ಆಗ ಯೇಸು ದೇವಾಲಯಕ್ಕೆ ಹೋಗಿ ಉಪದೇಶಿಸಲು ಆರಂಭಿಸಿದನು. 15 ಯೆಹೂದ್ಯರಿಗೆ ಆಶ್ಚರ್ಯವಾಯಿತು. “ಈ ಮನುಷ್ಯನು ಎಂದೂ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲಿಲ್ಲ. ಇವನು ಇಷ್ಟೆಲ್ಲವನ್ನೂ ಹೇಗೆ ಕಲಿತನು?” ಎಂದು ವಿಚಾರಿಸತೊಡಗಿದರು.
16 ಯೇಸು, “ನಾನು ಉಪದೇಶಿಸುವ ಸಂಗತಿಗಳು ನನ್ನ ಸ್ವಂತವಾದವುಗಳಲ್ಲ. ನನ್ನ ಉಪದೇಶವು ನನ್ನನ್ನು ಕಳುಹಿಸಿದಾತನಿಂದ (ದೇವರು) ಬರುತ್ತದೆ. 17 ದೇವರು ಅಪೇಕ್ಷಿಸುವುದನ್ನು ಮಾಡಬಯಸುವವನಿಗೆ ನನ್ನ ಉಪದೇಶವು ದೇವರಿಂದ ಬಂದದ್ದೇ ಹೊರತು ನನ್ನ ಸ್ವಂತದ್ದಲ್ಲವೆಂದು ಗೊತ್ತಾಗುವುದು. 18 ತನ್ನ ಸ್ವಂತ ಆಲೋಚನೆಗಳನ್ನು ಉಪದೇಶಿಸುವವನು, ತನಗೇ ಘನತೆಯನ್ನು ಉಂಟುಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ತನ್ನನ್ನು ಕಳುಹಿಸಿದಾತನಿಗೆ ಘನತೆಯನ್ನು ಉಂಟುಮಾಡಲು ಪ್ರಯತ್ನಿಸುವವನು ಸತ್ಯವನ್ನೇ ಹೇಳುತ್ತಾನೆ. ಆತನಲ್ಲಿ ಯಾವ ಸುಳ್ಳೂ ಇಲ್ಲ. 19 ಮೋಶೆಯು ನಿಮಗೆ ಧರ್ಮಶಾಸ್ತ್ರವನ್ನು ಕೊಟ್ಟನು. ಹೌದಲ್ಲವೇ? ಆದರೆ ನಿಮ್ಮಲ್ಲಿ ಒಬ್ಬರೂ ಧರ್ಮಶಾಸ್ತ್ರಕ್ಕೆ ವಿಧೇಯರಾಗುತ್ತಿಲ್ಲ. ನೀವು ನನ್ನನ್ನು ಕೊಲ್ಲಲು ಏಕೆ ಪ್ರಯತ್ನಿಸುತ್ತಿದ್ದೀರಿ?” ಎಂದು ಉತ್ತರಕೊಟ್ಟನು.
20 ಜನರು, “ದೆವ್ವವು ನಿನ್ನೊಳಗೆ ಸೇರಿಕೊಂಡು ನಿನ್ನನ್ನು ಹುಚ್ಚನನ್ನಾಗಿ ಮಾಡಿದೆ! ನಾವು ನಿನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿಲ್ಲ” ಎಂದು ಉತ್ತರಕೊಟ್ಟರು.
21 ಯೇಸು ಅವರಿಗೆ, “ನಾನು ಮಾಡಿದ ಒಂದು ಅದ್ಭುತಕಾರ್ಯವನ್ನು ಕಂಡು ನೀವೆಲ್ಲರೂ ಆಶ್ಚರ್ಯಗೊಂಡಿದ್ದೀರಿ. 22 ಮೋಶೆಯು ನಿಮಗೆ ಸುನ್ನತಿಯ ಬಗ್ಗೆ ಕಟ್ಟಳೆಯನ್ನು ಕೊಟ್ಟನು. (ಆದರೆ ನಿಜವಾಗಿಯೂ ಸುನ್ನತಿ ಎಂಬ ಸಂಸ್ಕಾರವನ್ನು ನಿಮಗೆ ಕೊಟ್ಟವನು ಮೋಶೆಯಲ್ಲ. ಅವನಿಗಿಂತ ಮೊದಲೇ ಜೀವಿಸಿದ್ದ ನಮ್ಮ ಜನರಿಂದ ಈ ಸಂಸ್ಕಾರವು ಬಂದಿದೆ.) ಆದ್ದರಿಂದ ಕೆಲವೊಮ್ಮೆ ನೀವು ಸಬ್ಬತ್‌ದಿನದಲ್ಲಿ ಮಗುವಿಗೆ ಸುನ್ನತಿಮಾಡುತ್ತೀರಿ. 23 ಒಬ್ಬ ವ್ಯಕ್ತಿಯು ಮೋಶೆಯ ಕಟ್ಟಳೆಗೆ ವಿಧೇಯನಾಗುವುದಕ್ಕಾಗಿ ಸಬ್ಬತ್‌ದಿನದಂದು ಸುನ್ನತಿ ಮಾಡಬಹುದು ಎಂಬುದನ್ನು ಇದು ತೋರಿಸುತ್ತದೆ. ಹೀಗಿರುವಲ್ಲಿ, ಸಬ್ಬತ್‌ದಿನದಂದು ಒಬ್ಬನ ಇಡೀ ದೇಹವನ್ನು ಗುಣಪಡಿಸಿದ್ದಕ್ಕೋಸ್ಕರ ನೀವು ಏಕೆ ಕೋಪಗೊಂಡಿದ್ದೀರಿ? 24 ಹೊರತೋರಿಕೆಯ ಆಧಾರದ ಮೇಲೆ ತೀರ್ಪುಮಾಡದೆ ನ್ಯಾಯಾನುಸಾರವಾಗಿ ತೀರ್ಪುಮಾಡಿರಿ” ಎಂದು ಹೇಳಿದನು.
ಯೇಸುವೇ ಕ್ರಿಸ್ತನೋ?
25 ಬಳಿಕ, ಜೆರುಸಲೇಮಿನಲ್ಲಿ ವಾಸವಾಗಿದ್ದ ಕೆಲವರು, “ಅವರು ಕೊಲ್ಲಲು ಪ್ರಯತ್ನಿಸುತ್ತಿರುವುದು ಈ ವ್ಯಕ್ತಿಯನ್ನೇ 26 ಆದರೆ ಇವನು ಪ್ರತಿಯೊಬ್ಬರಿಗೂ ಕಾಣುವ ಮತ್ತು ಕೇಳುವ ಸ್ಥಳದಲ್ಲಿ ಉಪದೇಶಿಸುತ್ತಿದ್ದಾನೆ. ಅಲ್ಲದೆ ಉಪದೇಶ ಮಾಡದಂತೆ ಯಾರೂ ಅವನನ್ನು ತಡೆಯುತ್ತಿಲ್ಲ. ಒಂದುವೇಳೆ ಈತನೇ ಕ್ರಿಸ್ತನು ಎಂಬ ನಿರ್ಧಾರಕ್ಕೆ ನಾಯಕರುಗಳು ಬಂದಿರಬಹುದು. 27 ಆದರೆ ಈ ಮನುಷ್ಯನ ಮನೆಯು ಎಲ್ಲಿದೆ ಎಂಬುದು ನಮಗೆ ಗೊತ್ತಿದೆ. ಅಲ್ಲದೆ, ಕ್ರಿಸ್ತನು ಬಂದಾಗ, ಆತನು ಎಲ್ಲಿಂದ ಬಂದನೆಂದು ಯಾರಿಗೂ ತಿಳಿಯುವುದಿಲ್ಲ” ಎಂದು ಮಾತಾಡಿಕೊಂಡರು.
28 ಯೇಸುವು ದೇವಾಲಯದಲ್ಲಿ ಇನ್ನೂ ಉಪದೇಶಿಸುತ್ತಾ, “ಹೌದು, ನಿಮಗೆ ನನ್ನ ಬಗ್ಗೆ ಗೊತ್ತಿದೆ, ನಾನು ಎಲ್ಲಿಂದ ಬಂದೆನೆಂಬುದೂ ನಿಮಗೆ ತಿಳಿದಿದೆ. ಆದರೆ ನಾನು ಬಂದಿರುವುದು ನನ್ನ ಸ್ವಂತ ಅಧಿಕಾರದಿಂದಲ್ಲ. ಸತ್ಯಸ್ವರೂಪನು ನನ್ನನ್ನು ಕಳುಹಿಸಿದ್ದಾನೆ. ನಿಮಗೆ ಆತನು ಗೊತ್ತಿಲ್ಲ. 29 ಆದರೆ ನಾನು ಆತನನ್ನು ಬಲ್ಲೆನು. ನಾನು ಆತನಿಂದಲೇ ಬಂದೆನು ಮತ್ತು ಆತನೇ ನನ್ನನ್ನು ಕಳುಹಿಸಿದನು” ಎಂದು ಗಟ್ಟಿಯಾಗಿ ಕೂಗಿ ಹೇಳಿದನು.
30 ಇದನ್ನು ಕೇಳಿ ಜನರು ಆತನನ್ನು ಬಂಧಿಸಲು ಪ್ರಯತ್ನಿಸಿದರು. ಆದರೆ ಯೇಸುವಿನ ಮೇಲೆ ಕೈಹಾಕಲು ಯಾರಿಗೂ ಸಾಧ್ಯವಿರಲಿಲ್ಲ, ಏಕೆಂದರೆ ಯೇಸುವನ್ನು ಕೊಲ್ಲಲು ಇನ್ನೂ ಸರಿಯಾದ ಸಮಯ ಬಂದಿರಲಿಲ್ಲ. 31 ಆದರೆ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು. ಅವರು, “ಕ್ರಿಸ್ತನು ಬರುತ್ತಾನೆಂದು ನಾವು ಎದುರು ನೋಡುತ್ತಿದ್ದೇವೆ. ಕ್ರಿಸ್ತನು ಬಂದಾಗ, ಈ ಮನುಷ್ಯನು (ಯೇಸು) ಮಾಡಿರುವುದಕ್ಕಿಂತಲೂ ಹೆಚ್ಚು ಸೂಚಕಕಾರ್ಯಗಳನ್ನು ಮಾಡುವನೇ? ಇಲ್ಲ! ಆದ್ದರಿಂದ ಈತನೇ ಕ್ರಿಸ್ತನಿರಬೇಕು” ಎಂದರು.
ಯೇಸುವನ್ನು ಬಂಧಿಸಲು ಯೆಹೂದ್ಯರ ಪ್ರಯತ್ನ
32 ಯೇಸುವಿನ ಬಗ್ಗೆ ಜನರು ಹೇಳುತ್ತಿದ್ದ ಈ ಸಂಗತಿಗಳನ್ನು ಫರಿಸಾಯರು ಕೇಳಿದರು. ಆದ್ದರಿಂದ ಮಹಾಯಾಜಕರು ಮತ್ತು ಫರಿಸಾಯರು ಯೇಸುವನ್ನು ಬಂಧಿಸುವುದಕ್ಕಾಗಿ ದೇವಾಲಯದ ಸಿಪಾಯಿಗಳಲ್ಲಿ ಕೆಲವರನ್ನು ಕಳುಹಿಸಿದರು. 33 ಆಗ ಯೇಸು, “ಇನ್ನು ಸ್ವಲ್ಪಕಾಲ ನಾನು ನಿಮ್ಮೊಂದಿಗಿರುತ್ತೇನೆ. ಬಳಿಕ, ನನ್ನನ್ನು ಕಳುಹಿಸಿದಾತನ ಬಳಿಗೆ ನಾನು ಹಿಂತಿರುಗಿ ಹೋಗುತ್ತೇನೆ. 34 ನೀವು ನನ್ನನ್ನು ಹುಡುಕುವಿರಿ, ಆದರೆ ನೀವು ನನ್ನನ್ನು ಕಂಡುಕೊಳ್ಳುವುದಿಲ್ಲ ಮತ್ತು ನಾನಿರುವಲ್ಲಿಗೆ ನೀವು ಬರಲಾರಿರಿ” ಎಂದು ಹೇಳಿದನು.
35 ಯೆಹೂದ್ಯರು, “ಇವನನ್ನು ನಾವು ಕಂಡುಕೊಳ್ಳಲಾಗದಂತೆ ಇವನು ಎಲ್ಲಿಗೆ ಹೋಗುವನು? ನಮ್ಮವರು ವಾಸವಾಗಿರುವ ಗ್ರೀಕ್ ಜನರ ಪಟ್ಟಣಗಳಿಗೆ ಹೋಗಿ ಗ್ರೀಕರಿಗೆ ಉಪದೇಶಿಸುವನೇ? 36 ಇವನು (ಯೇಸು), ‘ನೀವು ನನ್ನನ್ನು ಹುಡುಕುವಿರಿ, ಆದರೆ ನೀವು ನನ್ನನ್ನು ಕಂಡುಕೊಳ್ಳುವುದಿಲ್ಲ’ ಎನ್ನುತ್ತಾನೆ. ಅಲ್ಲದೆ ಇವನು, ‘ನಾನು ಇರುವಲ್ಲಿಗೆ ನೀವು ಬರಲಾರಿರಿ’ ಎನ್ನುತ್ತಾನೆ. ಇದರರ್ಥವೇನು?” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.
ಪವಿತ್ರಾತ್ಮನ ಬಗ್ಗೆ ಉಪದೇಶ
37 ಹಬ್ಬದ ಕೊನೆಯ ದಿನ ಬಂದಿತು. ಅದು ಅತ್ಯಂತ ಮುಖ್ಯವಾದ ದಿನವಾಗಿತ್ತು. ಅಂದು ಯೇಸು ನಿಂತುಕೊಂಡು, “ಯಾವನಿಗಾದರೂ ಬಾಯಾರಿಕೆಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ. 38 ನನ್ನಲ್ಲಿ ನಂಬಿಕೆ ಇಡುವವನ ಹೊಟ್ಟೆಯೊಳಗಿಂದ ಜೀವಕರವಾದ ನೀರಿನ ಹೊಳೆಗಳು ಹರಿಯುತ್ತವೆ. ಪವಿತ್ರ ಗ್ರಂಥವು ತಿಳಿಸುವುದು ಇದನ್ನೇ” ಎಂದು ಗಟ್ಟಿಯಾಗಿ ಹೇಳಿದನು. 39 ಯೇಸು ತನ್ನನ್ನು ನಂಬಿದವರು ಹೊಂದಲಿರುವ ಪವಿತ್ರಾತ್ಮನನ್ನು ಕುರಿತು ಹೇಳಿದನು. ಆತನು ಇನ್ನೂ ತನ್ನ ಮಹಿಮೆಯನ್ನು ಹೊಂದಿಲ್ಲದಿದ್ದ ಕಾರಣ ಪವಿತ್ರಾತ್ಮನು ಇನ್ನೂ ಬಂದಿರಲಿಲ್ಲ.
ಯೇಸುವಿನ ಬಗ್ಗೆ ಜನರ ವಾದವಿವಾದ
40 ಈ ಸಂಗತಿಗಳನ್ನು ಕೇಳಿದ ಜನರಲ್ಲಿ ಕೆಲವರು, “ಈ ಮನುಷ್ಯನು ನಿಜವಾಗಿಯೂ ಪ್ರವಾದಿ” ಎಂದರು.
41 “ಆತನೇ ಕ್ರಿಸ್ತನು” ಎಂದು ಇನ್ನು ಕೆಲವರು ಹೇಳಿದರು.
ಮತ್ತೆ ಕೆಲವರು, “ಕ್ರಿಸ್ತನು ಗಲಿಲಾಯದಿಂದ ಬರುವುದಿಲ್ಲ. 42 ಕ್ರಿಸ್ತನು ದಾವೀದನ ಕುಟುಂಬದವನೆಂತಲೂ ದಾವೀದನು ವಾಸಿಸಿದ ಬೆತ್ಲೆಹೇಮ್ ಊರಿನಿಂದ ಆತನು ಬರುತ್ತಾನೆಂತಲೂ ಪವಿತ್ರ ಗ್ರಂಥವು ತಿಳಿಸುತ್ತದೆ” ಎಂದರು. 43 ಹೀಗೆ ಯೇಸುವಿನ ಕುರಿತು ಜನರಲ್ಲಿ ಭೇದ ಉಂಟಾಯಿತು. 44 ಕೆಲವರು ಯೇಸುವನ್ನು ಬಂಧಿಸಬೇಕೆಂದಿದ್ದರು. ಆದರೆ ಬಂಧಿಸಲು ಯಾರೂ ಪ್ರಯತ್ನಿಸಲಿಲ್ಲ.
ಯೆಹೂದ್ಯನಾಯಕರ ಅಪನಂಬಿಕೆ
45 ದೇವಾಲಯದ ಸಿಪಾಯಿಗಳು ಹಿಂತಿರುಗಿದಾಗ, ಮಹಾಯಾಜಕರು ಮತ್ತು ಫರಿಸಾಯರು ಅವರಿಗೆ, “ನೀವು ಅವನನ್ನು ಏಕೆ ಹಿಡಿದುಕೊಂಡು ಬರಲಿಲ್ಲ?” ಎಂದು ಕೇಳಿದರು.
46 ದೇವಾಲಯದ ಸಿಪಾಯಿಗಳು, “ಈತನಂತೆ ಆಶ್ಚರ್ಯಕರವಾದ ಸಂಗತಿಗಳನ್ನು ಬೇರೆ ಯಾರೂ ಹೇಳಿಲ್ಲ” ಎಂದು ಉತ್ತರಕೊಟ್ಟರು.
47 ಫರಿಸಾಯರು, “ಹಾಗಾದರೆ, ಯೇಸು ನಿಮ್ಮನ್ನು ಸಹ ಮರುಳುಗೊಳಿಸುತ್ತಿದ್ದಾನೆ! 48 ನಾಯಕರಲ್ಲಿ ಯಾರಾದರೂ ಯೇಸುವಿನಲ್ಲಿ ನಂಬಿಕೆ ಇಟ್ಟಿದ್ದಾರೋ? ಇಲ್ಲ! ಫರಿಸಾಯರಾದ ನಮ್ಮಲ್ಲಿ ಯಾರಾದರೂ ಆತನನ್ನು ನಂಬಿದ್ದಾರೋ? ಇಲ್ಲ! 49 ಆದರೆ ಹೊರಗಿನ ಜನರಿಗೆ ಧರ್ಮಶಾಸ್ತ್ರದ ಬಗ್ಗೆ ಏನೂ ಗೊತ್ತಿಲ್ಲ. ಅವರು ದೇವರ ಶಾಪಕ್ಕೆ ಒಳಗಾಗಿದ್ದಾರೆ!” ಎಂದು ಉತ್ತರಕೊಟ್ಟರು.
50 ಆದರೆ ಆ ಗುಂಪಿನಲ್ಲಿ ನಿಕೊದೇಮನು ಇದ್ದನು. ಮೊದಲೊಮ್ಮೆ ಯೇಸುವನ್ನು ನೋಡಲು ಹೋಗಿದ್ದವನು ಇವನೇ. 51 ನಿಕೊದೇಮನು, “ಒಬ್ಬ ವ್ಯಕ್ತಿಯ ಹೇಳಿಕೆಯನ್ನು ಕೇಳದೆ ತೀರ್ಪು ನೀಡಲು ನಮ್ಮ ಧರ್ಮಶಾಸ್ತ್ರವು ಸಮ್ಮತಿಸುವುದಿಲ್ಲ. ಆತನು ಮಾಡಿರುವುದನ್ನು ನಾವು ತಿಳಿದುಕೊಳ್ಳುವವರೆಗೆ ಆತನಿಗೆ ತೀರ್ಪು ಮಾಡಲಾಗದು” ಎಂದು ಹೇಳಿದನು.
52 ಯೆಹೂದ್ಯನಾಯಕರು, “ನೀನೂ ಗಲಿಲಾಯದವನೋ? ಪವಿತ್ರ ಗ್ರಂಥವನ್ನು ಅಧ್ಯಯನಮಾಡು. ಗಲಿಲಾಯದಿಂದ ಯಾವ ಪ್ರವಾದಿಯೂ ಬರುವುದಿಲ್ಲವೆಂಬುದು ಆಗ ನಿನಗೆ ತಿಳಿಯುತ್ತದೆ” ಎಂದು ಉತ್ತರಕೊಟ್ಟರು. 53 ಬಳಿಕ ಅವರೆಲ್ಲರೂ ತಮ್ಮತಮ್ಮ ಮನೆಗಳಿಗೆ ಹೊರಟುಹೋದರು.
Kannada Holy Bible: Easy-to-Read Version. All rights reserved. © 1997 Bible League International