M’Cheyne Bible Reading Plan
ಅಹಾಬನಿಗೆ ಮೀಕಾಯೆಹುವಿನ ಎಚ್ಚರ
18 ಯೆಹೋಷಾಫಾಟನಿಗೆ ಅತ್ಯಧಿಕವಾದ ಐಶ್ವರ್ಯವೂ ಘನತೆಯೂ ಇದ್ದವು. ಅವನು ಅರಸನಾದ ಅಹಾಬನೊಂದಿಗೆ ತನ್ನ ಮದುವೆಯ ಮೂಲಕ ಸಂಬಂಧ ಬೆಳೆಸಿಕೊಂಡನು. 2 ಕೆಲವು ವರ್ಷಗಳ ನಂತರ ಯೆಹೋಷಾಫಾಟನು ಸಮಾರ್ಯ ಪಟ್ಟಣದಲ್ಲಿ ಅಹಾಬನನ್ನು ಸಂಧಿಸಲು ಹೋದನು. ಯೆಹೋಷಾಫಾಟನಿಗೂ ಅವನೊಂದಿಗೆ ಬಂದಿದ್ದ ಜನರಿಗೂ ಅಹಾಬನು ಅನೇಕ ದನಕುರಿಗಳನ್ನು ವಧಿಸಿ ಔತಣಮಾಡಿಸಿದನು. ರಾಮೋತ್‌ಗಿಲ್ಯೋದ್ ಪಟ್ಟಣದ ಮೇಲೆ ಯುದ್ಧಮಾಡಲು ಅಹಾಬನು ಯೆಹೋಷಾಫಾಟನನ್ನು ಪ್ರೇರೇಪಿಸಿದನು. 3 ಇಸ್ರೇಲರ ಅರಸನಾದ ಅಹಾಬನು ಯೆಹೂದದ ಅರಸನಾದ ಯೆಹೋಷಾಫಾಟನಿಗೆ, “ನೀನು ನನ್ನೊಂದಿಗೆ ರಾಮೋತ್‌ಗಿಲ್ಯಾದಿಗೆ ಯುದ್ಧಮಾಡಲು ಬರುವಿಯಾ?” ಎಂದು ಕೇಳಲು, ಯೆಹೋಷಾಫಾಟನು, “ನಾನು ನಿನ್ನವನೆ, ನನ್ನ ಜನರು ನಿನ್ನ ಜನರೇ ಆಗಿದ್ದಾರೆ. ನಾವು ಯುದ್ಧಮಾಡಲು ನಿಮ್ಮೊಂದಿಗೆ ಬರುತ್ತೇವೆ” ಎಂದು ಅಹಾಬನಿಗೆ ಉತ್ತರಿಸಿದನು. 4 ಯೆಹೋಷಾಫಾಟನು ಅಹಾಬನಿಗೆ, “ಆದರೆ ಮೊದಲು ನಾವು ಯೆಹೋವನನ್ನು ವಿಚಾರಿಸೋಣ” ಅಂದನು.
5 ಆಗ ಅಹಾಬನು ನಾನೂರು ಮಂದಿ ಪ್ರವಾದಿಗಳನ್ನು ಒಟ್ಟಾಗಿ ಸೇರಿಸಿ ಅವರಿಗೆ, “ನಾವು ರಾಮೋತ್‌ಗಿಲ್ಯಾದಿನ ಮೇಲೆ ಯುದ್ಧಕ್ಕೆ ಹೊರಡಬೇಕೋ ಬೇಡವೋ?” ಎಂದು ಕೇಳಿದಾಗ
ಆ ಪ್ರವಾದಿಗಳು ಅಹಾಬನಿಗೆ, “ಹೋಗು, ದೇವರು ರಾಮೋತ್‌ಗಿಲ್ಯಾದನ್ನು ಸೋಲಿಸುವಂತೆ ಮಾಡುವನು” ಎಂದು ಹೇಳಿದರು.
6 ಆಗ ಯೆಹೋಷಾಫಾಟನು, “ಈ ಪ್ರವಾದಿಗಳಲ್ಲದೆ ಬೇರೆ ಪ್ರವಾದಿಗಳಿಲ್ಲವೆ? ಅವರ ಮೂಲಕ ನಾವು ಯೆಹೋವನನ್ನು ಕೇಳೋಣ” ಎಂದನು.
7 ಆಗ ಅರಸನಾದ ಅಹಾಬನು, “ಇನ್ನೂ ಒಬ್ಬನು ಇದ್ದಾನೆ. ನಾವು ಅವನಿಂದ ಯೆಹೋವನನ್ನು ವಿಚಾರಿಸಬಹುದು. ಆದರೆ ನಾನು ಅವನನ್ನು ದ್ವೇಷಿಸುತ್ತೇನೆ. ಯಾಕೆಂದರೆ ನನ್ನ ವಿಷಯವಾಗಿ ಯೆಹೋವನಿಂದ ಯಾವ ಒಳ್ಳೆಯ ಸಂದೇಶವನ್ನೂ ಅವನು ಕೊಡುವದಿಲ್ಲ. ನನ್ನ ಬಗ್ಗೆ ಯಾವಾಗಲೂ ಕೆಟ್ಟದ್ದನ್ನೇ ನುಡಿಯುತ್ತಾನೆ. ಅವನು ಇಮ್ಲನ ಮಗನಾದ ಮೀಕಾಯೆಹುವು” ಅಂದನು.
ಅದಕ್ಕೆ ಯೆಹೋಷಾಫಾಟನು, “ಅಹಾಬನೇ, ನೀನು ಹಾಗೆ ಹೇಳಬಾರದು” ಅಂದನು.
8 ಆಗ ಅಹಾಬನು ತನ್ನ ಸೇವಕರಲ್ಲೊಬ್ಬನನ್ನು ಕರೆದು, “ಬೇಗ ಹೋಗಿ ಇಮ್ಲನ ಮಗನಾದ ಮೀಕಾಯೆಹುವನ್ನು ಕರೆದುಕೊಂಡು ಬಾ” ಎಂದು ಆಜ್ಞಾಪಿಸಿದನು.
9 ಇಸ್ರೇಲರ ಅರಸನಾದ ಅಹಾಬನೂ ಯೆಹೂದ್ಯರ ಅರಸನಾದ ಯೆಹೋಷಾಫಾಟನೂ ತಮ್ಮ ರಾಜವಸ್ತ್ರಗಳನ್ನು ಧರಿಸಿದ್ದರು. ಅವರು ಸಮಾರ್ಯ ಪಟ್ಟಣದ ಮುಂಭಾಗದ ಬಾಗಿಲಿನೆದುರು ಸಿಂಹಾಸನಗಳ ಮೇಲೆ ಕುಳಿತಿದ್ದರು. ಆ ನಾನೂರು ಮಂದಿ ಪ್ರವಾದಿಗಳು ಅವರ ಮುಂದೆ ನಿಂತುಕೊಂಡು ಪ್ರವಾದಿಸುತ್ತಿದ್ದರು. 10 ಚಿದ್ಕೀಯನು ಕೆನಾನನ ಮಗ. ಚಿದ್ಕೀಯನು ಕಬ್ಬಿಣದ ಕೊಂಬುಗಳನ್ನು ತಯಾರಿಸಿ, “ಇದು ಯೆಹೋವನ ನುಡಿ. ಈ ಕಬ್ಬಿಣದ ಕೊಂಬುಗಳಿಂದಲೋ ಎಂಬಂತೆ ನೀನು ಅರಾಮ್ಯರನ್ನು ನಾಶಮಾಡುವೆ” ಎಂದು ಹೇಳಿದನು. 11 ಅಲ್ಲಿದ್ದ ಪ್ರವಾದಿಗಳೆಲ್ಲರೂ ಅದನ್ನೇ ನುಡಿದರು. ಅವರು, “ನೀನು ರಾಮೋತ್‌ಗಿಲ್ಯಾದಿಗೆ ಹೋಗು. ನಿನಗಲ್ಲಿ ಜಯವಾಗುವದು. ಯೆಹೋವನು ಅರಾಮ್ಯರನ್ನು ಸೋಲಿಸುವಂತೆ ನಿನಗೆ ಸಹಾಯಮಾಡುವನು” ಎಂದರು.
12 ಮೀಕಾಯೆಹುವಿನ ಬಳಿಗೆ ಹೋದ ರಾಜನ ಸೇವಕನು ಅವನಿಗೆ, “ಮೀಕಾಯೆಹುವೇ ಕೇಳು, ಎಲ್ಲಾ ಪ್ರವಾದಿಗಳೂ ರಾಜನು ಗೆಲ್ಲುವನು ಎಂದು ಪ್ರವಾದಿಸುತ್ತಿದ್ದಾರೆ. ಅದನ್ನೇ ನೀನು ಹೇಳಿ ಅರಸನಿಗೆ ಶುಭವನ್ನು ಹಾರೈಸಬೇಕು” ಅಂದನು.
13 ಆದರೆ ಮೀಕಾಯೆಹುವು, “ಯೆಹೋವನಾಣೆ, ಆತನು ಹೇಳಿದ್ದನ್ನೇ ನಾನು ಹೇಳುವೆನು” ಎಂದನು.
14 ಮೀಕಾಯೆಹುವು ಅಹಾಬನ ಬಳಿಗೆ ಬಂದಾಗ ಅರಸನು, “ಮೀಕಾಯೆಹುವೇ, ನಾವು ರಾಮೋತ್‌ಗಿಲ್ಯಾದಿನ ಮೇಲೆ ಯುದ್ಧಕ್ಕೆ ಹೊರಡಬಹುದೋ?” ಎಂದು ವಿಚಾರಿಸಿದಾಗ
ಮೀಕಾಯೆಹುವು, “ಹೋಗಿ, ಯುದ್ಧಮಾಡು. ದೇವರು ಅವರನ್ನು ನಿನ್ನ ಕೈಗಳಿಗೆ ಒಪ್ಪಿಸುವನು” ಎಂದು ಹೇಳಿದನು.
15 ಆಗ ಅಹಾಬನು ಮೀಕಾಯೆಹುವಿಗೆ, “ನೀನು ಯೆಹೋವನ ಹೆಸರಿನಲ್ಲಿ ನನಗೆ ಸತ್ಯವನ್ನೇ ತಿಳಿಸಬೇಕೆಂದು ಎಷ್ಟೋ ಸಲ ನಿನ್ನಿಂದ ಪ್ರಮಾಣ ಮಾಡಿಸಿರುತ್ತೇನೆ” ಎಂದು ಹೇಳಿದಾಗ ಮೀಕಾಯೆಹುವು,
16 “ಇಸ್ರೇಲಿನ ಜನರೆಲ್ಲರೂ ಬೆಟ್ಟಪ್ರದೇಶಗಳಲ್ಲಿ ಚದರಿರುವದನ್ನು ಕಂಡೆನು. ಅವರು ಕುರುಬನಿಲ್ಲದ ಕುರಿಗಳಂತಿದ್ದರು. ಕರ್ತನು ಹೇಳಿದ್ದೇನೆಂದರೆ, ‘ಅವರಿಗೆ ನಾಯಕರಿಲ್ಲ, ಆದ್ದರಿಂದ ಸುರಕ್ಷಿತವಾಗಿ ಮನೆಗೆ ಹಿಂದಿರುಗಲಿ’” ಎಂದು ಹೇಳಿದನು.
17 ಇಸ್ರೇಲಿನ ರಾಜನಾದ ಅಹಾಬನು ಯೆಹೋಷಾಫಾಟನಿಗೆ, “ಮೀಕಾಯೆಹುವು ನನ್ನ ಬಗ್ಗೆ ಯೆಹೋವನಿಂದ ಒಳ್ಳೆಯ ಸಂದೇಶವನ್ನು ಕೊಡುವದೇ ಇಲ್ಲವೆಂದು ನಿನಗೆ ಹೇಳಿದೆನಲ್ಲಾ? ಅವನಲ್ಲಿ ನನ್ನ ವಿಷಯವಾಗಿ ಕೆಟ್ಟ ಸಂದೇಶವೇ ಇರುವದು” ಎಂದು ಹೇಳಿದನು.
18 ಮೀಕಾಯೆಹುವು, “ಯೆಹೋವನಿಂದ ಬಂದ ಸಂದೇಶವನ್ನು ಕೇಳು. ಯೆಹೋವನು ಸಿಂಹಾಸನದಲ್ಲಿ ಕುಳಿತಿರುವದನ್ನು ನಾನು ಕಂಡೆನು. ಅವನ ಎಡಬಲಗಳಲ್ಲಿ ಪರಲೋಕದ ಸೈನ್ಯವು ನಿಂತಿತ್ತು. 19 ‘ರಾಮೋತ್‌ಗಿಲ್ಯಾದಿನ ಮೇಲೆ ಯುದ್ಧಮಾಡಲು ಅಹಾಬನನ್ನು ಯಾರು ಮರುಳುಗೊಳಿಸುವರು? ಯಾಕೆಂದರೆ ಅಲ್ಲಿ ಅವನು ಸಾಯಬೇಕು’ ಎಂದು ಯೆಹೋವನು ಕೇಳಿದಾಗ ಅಲ್ಲಿ ನಿಂತಿದ್ದವರು ಬೇರೆಬೇರೆ ವಿಧಾನವನ್ನು ತಿಳಿಸಿದರು. 20 ಆಗ ಒಂದು ಆತ್ಮವು ದೇವರ ಮುಂದೆ ನಿಂತು, ‘ನಾನು ಅಹಾಬನನ್ನು ಮರುಳುಗೊಳಿಸುತ್ತೇನೆ’ ಎಂದು ಹೇಳಿತು. ‘ಹೇಗೆ?’ ಎಂದು ಆತನು ಕೇಳಿದನು. 21 ಅದಕ್ಕೆ ಆತ್ಮವು, ‘ನಾನು ಹೋಗಿ ಅಹಾಬನ ಪ್ರವಾದಿಗಳಿಗೆ ಸುಳ್ಳುಹೇಳುವ ಆತ್ಮವಾಗುತ್ತೇನೆ’ ಎಂದು ಹೇಳಿತು. ಅದಕ್ಕೆ ಆತನು ‘ಸರಿ, ಹಾಗೆಯೇ ಮಾಡು. ನೀನು ನಿನ್ನ ಕಾರ್ಯದಲ್ಲಿ ಸಫಲವಾಗುವೆ’ ಎಂದು ಹೇಳಿದನು.
22 “ಆದ್ದರಿಂದ ಅಹಾಬನೇ, ನಿನ್ನ ಪ್ರವಾದಿಗಳ ಬಾಯಿಯಲ್ಲಿ ಸುಳ್ಳುಹೇಳುವ ಆತ್ಮವನ್ನು ಯೆಹೋವನೇ ಇರಿಸಿದ್ದಾನೆ; ನಿನಗೆ ಕೇಡಾಗುವುದೆಂದು ಯೆಹೋವನೇ ತಿಳಿಸುತ್ತಾನೆ” ಎಂದನು.
23 ಆಗ ಚಿದ್ಕೀಯನು ಮುಂದೆ ಬಂದು ಮೀಕಾಯೆಹುವಿನ ಕೆನ್ನೆಗೆ ಹೊಡೆದು, “ಮೀಕಾಯೆಹುವೇ, ಯೆಹೋವನ ಆತ್ಮನು ನಿನ್ನೊಂದಿಗೆ ಮಾತಾಡಲು ನನ್ನ ಬಳಿಯಿಂದ ಬಂದಾಗ ಯಾವ ಕಡೆಗೆ ಹೋದನು?” ಎಂದು ಗೇಲಿಮಾಡಿದಾಗ,
24 ಮೀಕಾಯೆಹುವು, “ಚಿದ್ಕೀಯನೇ, ನೀನು ಒಳಕೋಣೆಯೊಳಗೆ ಅವಿತು ಕುಳಿತಿರುವ ದಿನದಲ್ಲಿ ನಿನಗೆ ತಿಳಿಯುವದು” ಎಂದು ಹೇಳಿದನು.
25 ಆಗ ಅರಸನಾದ ಅಹಾಬನು, ಮೀಕಾಯೆಹುವನ್ನು ತೆಗೆದುಕೊಂಡು ನಗರಪಾಲಕನಾದ ಅಮೋನನಿಗೂ ಮತ್ತು ರಾಜಕುಮಾರನಾದ ಯೋವಾಷನಿಗೂ ಕೊಟ್ಟು, 26 ಅವರಿಗೆ “ಮೀಕಾಯೆಹುವನ್ನು ಸೆರೆಮನೆಗೆ ಹಾಕಿ. ನಾನು ಯುದ್ಧದಿಂದ ಸುರಕ್ಷಿತವಾಗಿ ಹಿಂತಿರುಗುವ ತನಕ ಬರಿ ರೊಟ್ಟಿ ಮತ್ತು ನೀರನ್ನು ಮಾತ್ರ ಅವನಿಗೆ ಕೊಡಿ ಎಂದು ಅರಸನು ಆಜ್ಞಾಪಿಸುತ್ತಾನೆ ಎಂದು ಹೇಳಿ” ಎಂದನು.
27 ಆಗ ಮೀಕಾಯೆಹುವು, “ಅಹಾಬನೇ, ನೀನು ರಣರಂಗದಿಂದ ಸುರಕ್ಷಿತವಾಗಿ ಬಂದರೆ ಯೆಹೋವನು ನನ್ನ ಮೂಲಕ ಮಾತನಾಡಲಿಲ್ಲವೆಂದು ತಿಳಿದುಕೋ. ಜನರೇ, ನನ್ನ ಮಾತನ್ನು ಕೇಳಿ ನೆನಪಿನಲ್ಲಿಡಿರಿ” ಎಂದು ಉತ್ತರಕೊಟ್ಟನು.
ರಾಮೋತ್‌ಗಿಲ್ಯಾದಿನಲ್ಲಿ ಅಹಾಬನು ಕೊಲ್ಲಲ್ಪಟ್ಟದ್ದು
28 ಇಸ್ರೇಲಿನ ರಾಜನಾದ ಅಹಾಬನೂ ಯೆಹೂದದ ರಾಜನಾದ ಯೆಹೋಷಾಫಾಟನೂ ರಾಮೋತ್‌ಗಿಲ್ಯಾದ್ ಪಟ್ಟಣದ ಮೇಲೆ ಧಾಳಿ ಮಾಡಿದರು. 29 ಯೆಹೋಷಾಫಾಟನಿಗೆ ಅಹಾಬನು, “ನಾನು ಯುದ್ಧರಂಗಕ್ಕೆ ಹೋಗುವ ಮೊದಲು ವೇಷ ಬದಲಾಯಿಸುತ್ತೇನೆ. ನೀನು ರಾಜವಸ್ತ್ರದಲ್ಲಿಯೇ ಇರು” ಎಂದು ಹೇಳಿ ತನ್ನ ರೂಪವನ್ನು ಬದಲಾಯಿಸಿದನು. ಇಬ್ಬರು ರಾಜರೂ ಯುದ್ಧರಂಗಕ್ಕಿಳಿದರು.
30 ಅರಾಮ್ಯರ ರಾಜನು ತನ್ನ ರಥದ ಅಧಿಪತಿಗಳಿಗೆ, “ನೀವು ಜನರೊಂದಿಗೆ ಯುದ್ಧಮಾಡಬೇಡಿರಿ, ಅಧಿಕಾರಿಗಳ ಮತ್ತು ಸಾಮಾನ್ಯ ಸೈನಿಕರ ಗೊಡವೆಗೆ ಹೋಗಬೇಡಿರಿ. ಆದರೆ ನೀವು ಇಸ್ರೇಲಿನ ರಾಜನಾದ ಅಹಾಬನೊಂದಿಗೇ ಯುದ್ಧಮಾಡಿರಿ” ಎಂದು ಹೇಳಿದನು. 31 ರಥಾಧಿಪತಿಗಳು ಯೆಹೋಷಾಫಾಟನನ್ನು ನೋಡಿದಾಗ ಅವನೇ ಅಹಾಬನೆಂದೆಣಿಸಿ ಅವನ ಮೇಲೆ ದಾಳಿ ನಡೆಸಿದರು. ಆದರೆ ಯೆಹೋಷಾಫಾಟನು ಗಟ್ಟಿಯಾಗಿ ಕೂಗಿಕೊಂಡನು. ಆಗ ಯೆಹೋವನು ಅವನಿಗೆ ಸಹಾಯಮಾಡಿ ರಥಾಧಿಪತಿಗಳು ಅವನಿಂದ ಬೇರೆ ಕಡೆಗೆ ತಿರುಗುವಂತೆ ಮಾಡಿದನು. 32 ಯೆಹೋಷಾಫಾಟನು ಇಸ್ರೇಲಿನ ರಾಜನಲ್ಲವೆಂದು ಅವರು ತಿಳಿದು ಅವನ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿದರು.
33 ಆದರೆ ಒಬ್ಬ ಸಿಪಾಯಿಯು ಬಿಲ್ಲು ತೆಗೆದು ಬಾಣವನ್ನು ಹೂಡಿ ಗುರಿಯಿಲ್ಲದೆ ಹೊಡೆದಾಗ ಆ ಬಾಣವು ಬಂದು ಇಸ್ರೇಲರ ರಾಜನಾದ ಅಹಾಬನಿಗೆ ತಾಗಿತು. ಅವನ ಕವಚದ ಸಂದಿನಿಂದ ಅವನ ದೇಹದೊಳಗೆ ಹೊಕ್ಕಿತು. ಆಗ ಅವನು ತನ್ನ ರಥವನ್ನೋಡಿಸುವ ರಾಹುತನಿಗೆ, “ರಥವನ್ನು ಹಿಂದಕ್ಕೆ ತಿರುಗಿಸಿ ನನ್ನನ್ನು ರಣರಂಗದಿಂದ ಹೊರಕ್ಕೆ ಕರೆದುಕೊಂಡು ಹೋಗು. ನಾನು ಗಾಯಗೊಂಡಿದ್ದೇನೆ” ಅಂದನು.
34 ಆ ದಿವಸ ಯುದ್ಧವು ಬಲುಘೋರವಾಗಿ ನಡೆಯಿತು. ಅಹಾಬನು ರಥದ ಕಂಬಕ್ಕೆ ಒರಗಿ ಸಂಜೆಯ ತನಕ ಹಾಗೆಯೇ ಅರಾಮ್ಯರ ಎದುರು ನಿಂತುಕೊಂಡಿದ್ದನು. ಸೂರ್ಯಾಸ್ತಮಾನವಾದಾಗ ಅಹಾಬನು ಸತ್ತನು.
ಇಸ್ರೇಲಿನ 1,44,000 ಜನರು
7 ಇದಾದ ಮೇಲೆ ನಾಲ್ಕು ಮಂದಿ ದೇವದೂತರು ಭೂಮಿಯ ನಾಲ್ಕು ಮೂಲೆಗಳಲ್ಲಿ ನಿಂತಿರುವುದನ್ನು ನಾನು ನೋಡಿದೆನು. ಗಾಳಿಯು ಭೂಮಿಯ ಮೇಲಾಗಲಿ ಸಮುದ್ರದ ಮೇಲಾಗಲಿ ಮರದ ಮೇಲಾಗಲಿ ಬೀಸದಂತೆ ಅವರು ಭೂಮಿಯ ನಾಲ್ಕು ದಿಕ್ಕುಗಳ ಗಾಳಿಯನ್ನು ತಡೆಹಿಡಿದಿದ್ದರು. 2 ನಂತರ ಬೇರೊಬ್ಬ ದೇವದೂತನು ಪೂರ್ವದಿಕ್ಕಿನ ಕಡೆಯಿಂದ ಬರುತ್ತಿರುವುದನ್ನು ನಾನು ನೋಡಿದೆನು. ಜೀವಸ್ವರೂಪನಾದ ದೇವರ ಮುದ್ರೆಯು ಈ ದೇವದೂತನ ಬಳಿಯಿತ್ತು. ಈ ದೇವದೂತನು ನಾಲ್ಕುಮಂದಿ ದೇವದೂತರನ್ನು ಗಟ್ಟಿಯಾದ ಧ್ವನಿಯಲ್ಲಿ ಕರೆದನು. ಭೂಮಿಗೆ ಮತ್ತು ಸಮುದ್ರಕ್ಕೆ ತೊಂದರೆ ಮಾಡುವುದಕ್ಕೆ ಅಧಿಕಾರವನ್ನು ದೇವರು ಈ ನಾಲ್ವರು ದೇವದೂತರಿಗೆ ನೀಡಿದ್ದನು. ಆ ದೇವದೂತನು ಈ ನಾಲ್ವರು ದೇವದೂತರಿಗೆ, 3 “ನಮ್ಮ ದೇವರ ಸೇವೆಮಾಡುವ ಜನರ ಹಣೆಯ ಮೇಲೆ ಮುದ್ರೆ ಒತ್ತುವ ತನಕ ಭೂಮಿಗಾಗಲಿ ಸಮುದ್ರಕ್ಕಾಗಲಿ ಮರಗಳಿಗಾಗಲಿ ತೊಂದರೆಯನ್ನು ಮಾಡಬೇಡಿ” ಎಂದು ಕೂಗಿ ಹೇಳಿದನು.
4 ನಂತರ, ಮುದ್ರೆ ಒತ್ತಿಸಿಕೊಂಡವರ ಸಂಖ್ಯೆ ನನಗೆ ಕೇಳಿಬಂತು. ಅವರ ಒಟ್ಟು ಸಂಖ್ಯೆ 1,44,000 ಮಂದಿ. ಅವರು ಇಸ್ರೇಲರ ಹನ್ನೆರಡು ಕುಲಗಳಿಗೆ ಸೇರಿದವರಾಗಿದ್ದರು.
5 ಯೂದನ ಕುಲದಿಂದ | 12,000 |
ರೂಬೇನನ ಕುಲದಿಂದ | 12,000 |
ಗಾದನ ಕುಲದಿಂದ | 12,000 |
6 ಆಶೇರನ ಕುಲದಿಂದ | 12,000 |
ನಫ್ತಾಲಿಯ ಕುಲದಿಂದ | 12,000 |
ಮನಸ್ಸೆಯ ಕುಲದಿಂದ | 12,000 |
7 ಸಿಮೆಯೋನನ ಕುಲದಿಂದ | 12,000 |
ಲೇವಿಯ ಕುಲದಿಂದ | 12,000 |
ಇಸ್ಸಾಕಾರನ ಕುಲದಿಂದ | 12,000 |
8 ಜೆಬುಲೋನನ ಕುಲದಿಂದ | 12,000 |
ಯೋಸೇಫನ ಕುಲದಿಂದ | 12,000 |
ಬೆನ್ಯಾಮೀನನ ಕುಲದಿಂದ | 12,000 |
ಜನರ ಮಹಾಸಮೂಹ
9 ಬಳಿಕ ನಾನು ನೋಡಿದಾಗ, ಜನರ ಮಹಾಸಮೂಹವನ್ನು ಕಂಡೆನು. ಅವರು ಎಣಿಸಲಾಗದಷ್ಟು ಅಸಂಖ್ಯಾತರಾಗಿದ್ದರು. ಅವರಲ್ಲಿ ಸಕಲ ಜನಾಂಗ, ಕುಲ, ಪ್ರಜೆಗಳವರೂ ಲೋಕದ ಸಕಲ ಭಾಷೆಗಳನ್ನಾಡುವವರೂ ಇದ್ದರು. ಈ ಜನರು ಸಿಂಹಾಸನದ ಮುಂದೆ ಮತ್ತು ಕುರಿಮರಿಯ (ಯೇಸು) ಮುಂದೆ ನಿಂತಿದ್ದರು. ಅವರೆಲ್ಲರೂ ಬಿಳಿ ನಿಲುವಂಗಿಗಳನ್ನು ಧರಿಸಿಕೊಂಡು ಖರ್ಜೂರದ ಗರಿಗಳನ್ನು ತಮ್ಮ ಕೈಗಳಲ್ಲಿ ಹಿಡಿದಿದ್ದರು. 10 ಅವರು ಗಟ್ಟಿಯಾದ ಧ್ವನಿಯಲ್ಲಿ, “ಸಿಂಹಾಸನದ ಮೇಲೆ ಕುಳಿತುಕೊಳ್ಳುವ ನಮ್ಮ ಪ್ರಭುವಿಗೆ ಮತ್ತು ಕುರಿಮರಿಯಾದಾತನಿಗೆ ಜಯವು ಲಭಿಸಿತು” ಎಂದು ಕೂಗಿದರು. 11 ಹಿರಿಯರು ಅಲ್ಲಿದ್ದರು ಮತ್ತು ನಾಲ್ಕು ಜೀವಿಗಳು ಅಲ್ಲಿದ್ದವು. ಅವರ ಸುತ್ತಲೂ ಮತ್ತು ಸಿಂಹಾಸನದ ಸುತ್ತಲೂ ದೇವದೂತರೆಲ್ಲಾ ನಿಂತಿದ್ದರು. ದೇವದೂತರು ಸಿಂಹಾಸನದ ಮುಂದೆ ಮೊಣಕಾಲೂರಿ ದೇವರನ್ನು ಆರಾಧಿಸಿದರು. 12 ಅವರು, “ಆಮೆನ್! ನಮ್ಮ ದೇವರಿಗೆ ಸ್ತೋತ್ರವೂ ಪ್ರಭಾವವೂ ಜ್ಞಾನವೂ ಕೃತಜ್ಞತಾಸುತ್ತಿಯೂ ಗೌರವವೂ ಅಧಿಕಾರವೂ ಮತ್ತು ಬಲವೂ ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್!” ಎಂದರು.
13 ಆಗ ಹಿರಿಯರಲ್ಲೊಬ್ಬನು, “ಬಿಳಿ ನಿಲುವಂಗಿಗಳನ್ನು ಧರಿಸಿಕೊಂಡಿರುವ ಈ ಜನರು ಯಾರು! ಅವರು ಎಲ್ಲಿಂದ ಬಂದವರು?” ಎಂದು ನನ್ನನ್ನು ಕೇಳಿದನು.
14 “ಸ್ವಾಮೀ, ಅವರು ಯಾರೆಂಬುದು ನಿಮಗೆ ತಿಳಿದಿದೆ” ಎಂದು ನಾನು ಉತ್ತರಿಸಿದೆನು.
ಆಗ ಹಿರಿಯನು, “ಈ ಜನರು ಭೀಕರ ಸಂಕಟವನ್ನು ಅನುಭವಿಸಿ ಬಂದವರು. ಅವರು ಕುರಿಮರಿಯಾದಾತನ ರಕ್ತದಿಂದ ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡಿದ್ದಾರೆ.[a] ಈಗ ಅವರು ಶುಭ್ರವಾಗಿದ್ದಾರೆ ಮತ್ತು ಬಿಳುಪಾಗಿದ್ದಾರೆ. 15 ಆದ್ದರಿಂದ ಈ ಜನರು ಈಗ ದೇವರ ಸಿಂಹಾಸನದ ಮುಂದೆ ಇದ್ದಾರೆ. ಅವರು ದೇವರನ್ನು ಆತನ ಆಲಯದಲ್ಲಿ ಹಗಲಿರುಳು ಆರಾಧಿಸುತ್ತಾರೆ. ಸಿಂಹಾಸನದ ಮೇಲೆ ಕುಳಿತಿರುವಾತನು ಅವರನ್ನು ಸಂರಕ್ಷಿಸುತ್ತಾನೆ. 16 ಆ ಜನರಿಗೆ ಮತ್ತೆ ಹಸಿವೆಯಾಗಲಿ ಬಾಯಾರಿಕೆಯಾಗಲಿ ಸೂರ್ಯನ ತಾಪವಾಗಲಿ ಇರುವುದಿಲ್ಲ. ಅವರನ್ನು ಯಾವ ತಾಪವೂ ಸುಡುವುದಿಲ್ಲ. 17 ಸಿಂಹಾಸನದ ಮಧ್ಯೆ ಇರುವ ಕುರಿಮರಿಯಾದಾತನು ಅವರ ಕುರುಬನಾಗಿರುತ್ತಾನೆ. ಆತನು ಅವರನ್ನು ಜೀವ ನೀಡುವ ನೀರಿನ ಬುಗ್ಗೆಗಳ ಬಳಿಗೆ ಕರೆದೊಯ್ಯುತ್ತಾನೆ. ಅವರ ಕಣ್ಣುಗಳಿಂದ ತೊಟ್ಟಿಕ್ಕುವ ಕಣ್ಣೀರನ್ನೆಲ್ಲ ದೇವರು ಒರಸಿಹಾಕುತ್ತಾನೆ” ಎಂದು ಹೇಳಿದನು.
ಪ್ರಧಾನ ಯಾಜಕನು
3 ದೇವದೂತನು ನನಗೆ ಪ್ರಧಾನ ಯಾಜಕನಾದ ಯೆಹೋಶುವನನ್ನು ತೋರಿಸಿದನು. ಅವನು ಯೆಹೋವನ ದೂತನ ಮುಂದೆ ನಿಂತಿದ್ದನು. ಸೈತಾನನು ಯೆಹೋಶುವನ ಬಲಗಡೆಯಲ್ಲಿ ನಿಂತಿದ್ದನು. ಯೆಹೋಶುವನು ಕೆಟ್ಟಕೃತ್ಯಗಳನ್ನು ಮಾಡಿದ್ದಾನೆಂದು ದೂರು ಹೇಳುವದಕ್ಕಾಗಿ ಸೈತಾನನು ಅಲ್ಲಿ ನಿಂತಿದ್ದನು. 2 ಆಗ ಯೆಹೋವನ ದೂತನು ಹೇಳಿದ್ದೇನೆಂದರೆ, “ಯೆಹೋವನು ನಿನ್ನನ್ನು ಖಂಡಿಸಲಿ ಮತ್ತು ಟೀಕೆ ಮಾಡಲಿ. ಯೆಹೋವನು ತನ್ನ ವಿಶೇಷ ನಗರವನ್ನಾಗಿ ಜೆರುಸಲೇಮನ್ನು ಆರಿಸಿಕೊಂಡಿದ್ದಾನೆ. ಆ ನಗರವನ್ನು ಆತನೇ ಕಾಪಾಡಿದನು. ಬೆಂಕಿಯಿಂದ ಎಳೆದುತೆಗೆದ ಕೊಳ್ಳಿಯಂತೆ ಆತನು ಅದನ್ನು ಕಾಪಾಡಿದನು.”
3 ಯೆಹೋಶುವನು ದೂತನ ಮುಂದೆ ನಿಂತುಕೊಂಡಿದ್ದನು. ಅವನ ವಸ್ತ್ರವು ಮಲಿನವಾಗಿತ್ತು. 4 ಆಗ ಆ ದೂತನು ಪಕ್ಕದಲ್ಲಿ ನಿಂತಿದ್ದ ಬೇರೆ ದೂತರನ್ನುದ್ದೇಶಿಸಿ, “ಯೆಹೋಶುವನ ಮೇಲಿರುವ ಮೈಲಿಗೆ ವಸ್ತ್ರವನ್ನು ತೆಗೆಯಿರಿ” ಎಂದು ಹೇಳಿದನು. ಆಗ ದೂತನು ಯೆಹೋಶುವನಿಗೆ, “ನಾನು ನಿನ್ನ ದೋಷಗಳನ್ನು ತೊಳೆದುಬಿಟ್ಟಿರುವೆ. ಈಗ ನಾನು ನಿನಗೆ ಹೊಸ ಬಟ್ಟೆಗಳನ್ನು ಕೊಡುತ್ತೇನೆ” ಎಂದು ಹೇಳಿದನು.
5 ಆಗ ನಾನು, “ಅವನ ತಲೆಯ ಮೇಲೆ ಶುಚಿಯಾದ ಪೇಟವನ್ನಿಡಿರಿ” ಎಂದು ಹೇಳಿದಾಗ ಅವರು ಅವನಿಗೆ ಶುಭ್ರವಾದ ಪೇಟವನ್ನು ಇಟ್ಟರು. ಯೆಹೋವನ ದೂತನು ಅಲ್ಲಿ ನಿಂತಿದ್ದಾಗಲೇ ಅವನಿಗೆ ನಿರ್ಮಲವಾದ ಬಟ್ಟೆಗಳನ್ನು ಧರಿಸಲು ಕೊಟ್ಟರು. 6 ಆಗ ಯೆಹೋವನ ದೂತನು ಯೆಹೋಶುವನಿಗೆ ಹೀಗೆ ಹೇಳಿದನು.
7 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ,
“ನಾನು ಹೇಳುವ ರೀತಿಯಲ್ಲಿ ಜೀವಿಸು.
ನಾನು ಹೇಳುವ ರೀತಿಯಲ್ಲಿ ನಡೆ.
ನೀನು ನನ್ನ ಆಲಯದ ಮುಖ್ಯಾಧಿಕಾರಿಯಾಗುವೆ.
ಅದರ ಅಂಕಣಗಳನ್ನು ನೀನು ನೋಡಿಕೊಳ್ಳುವೆ.
ಇಲ್ಲಿ ನಿಂತಿರುವವರೊಂದಿಗೆ ನೀನು ಪ್ರವೇಶಿಸಬಹುದು.
8 ಪ್ರಧಾನ ಯಾಜಕನಾದ ಯೆಹೋಶುವನೇ,
ಅವನೊಂದಿಗೆ ಸೇವೆಮಾಡುವ ಇತರ ಯಾಜಕರೇ, ನನ್ನ ಮಾತಿಗೆ ಕಿವಿಗೊಡಿರಿ.
ಈ ಗಂಡಸರು ಮುಂದೆ ಏನಾಗಬಹುದೆಂಬುದಕ್ಕೆ ನಿದರ್ಶನವಾಗಿದ್ದಾರೆ.
ಆಗ ನಾನು ನನ್ನ ವಿಶೇಷ ಸೇವಕನನ್ನು ಕರೆತರುವೆನು.
ಆತನ ಹೆಸರು ಕೊಂಬೆ.
9 ನೋಡು, ನಾನು ಯೆಹೋಶುವನ ಮುಂದೆ ಒಂದು ವಿಶೇಷ ಕಲ್ಲನ್ನಿಡುವೆನು.
ಆ ಕಲ್ಲಿನಲ್ಲಿ ಏಳು ಬದಿಗಳಿವೆ.
ನಾನು ಆ ವಿಶೇಷ ಕಲ್ಲಿನ ಮೇಲೆ ವಿಶೇಷ ಸಂದೇಶವನ್ನು ಕೆತ್ತುವೆನು.
ನಾನು ಆ ದೇಶದ ಪಾಪವನ್ನು ಒಂದು ದಿವಸದಲ್ಲಿ ತೆಗೆದುಹಾಕುವೆನೆಂದು ಅದು ತೋರಿಸುವುದು.”
10 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ:
“ಆ ದಿವಸಗಳಲ್ಲಿ ಜನರು ತಮ್ಮ ಸ್ನೇಹಿತರೊಂದಿಗೆ
ಕುಳಿತುಕೊಂಡು ಸಂಭಾಷಿಸುವರು.
ಅಂಜೂರದ ಮರದ ನೆರಳಿನಲ್ಲಿಯೂ ದ್ರಾಕ್ಷಿತೋಟಗಳ ನೆರಳಿನಲ್ಲಿಯೂ
ಕುಳಿತುಕೊಂಡು ಮಾತನಾಡಲು ಪರಸ್ಪರ ಆಮಂತ್ರಿಸುವರು.”
ಐದು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ
(ಮತ್ತಾಯ 14:13-21; ಮಾರ್ಕ 6:30-44; ಲೂಕ 9:10-17)
6 ತರುವಾಯ, ಯೇಸು ಗಲಿಲಾಯ ಸರೋವರವನ್ನು (ತಿಬೇರಿಯ ಸರೋವರ) ದಾಟಿ ಆಚೆಯ ದಡಕ್ಕೆ ಹೋದನು. 2 ಅನೇಕ ಜನರು ಯೇಸುವನ್ನು ಹಿಂಬಾಲಿಸಿದರು. ಏಕೆಂದರೆ ಯೇಸು ರೋಗಿಗಳನ್ನು ಗುಣಪಡಿಸುವುದರ ಮೂಲಕ ತನ್ನ ಅಧಿಕಾರವನ್ನು ತೋರಿಸಿದ್ದನು. ಅವರೆಲ್ಲರೂ ಅದನ್ನು ನೋಡಿದ್ದರು. 3 ಆಗ ಯೇಸು ಬೆಟ್ಟವನ್ನು ಹತ್ತಿ ತನ್ನ ಶಿಷ್ಯರ ಸಂಗಡ ಕುಳಿತುಕೊಂಡನು. 4 ಯೆಹೂದ್ಯರ ಪಸ್ಕಹಬ್ಬವೂ ಬಹು ಸಮೀಪವಾಗಿತ್ತು.
5 ಯೇಸು ಕಣ್ಣೆತ್ತಿ ನೋಡಿದಾಗ, ತನ್ನ ಬಳಿಗೆ ಬರುತ್ತಿದ್ದ ಜನಸಮೂಹವನ್ನು ಕಂಡು ಫಿಲಿಪ್ಪನಿಗೆ, “ಈ ಜನರಿಗೆಲ್ಲಾ ಸಾಕಾಗುವಷ್ಟು ರೊಟ್ಟಿಯನ್ನು ನಾವು ಎಲ್ಲಿ ಕೊಂಡುಕೊಳ್ಳೋಣ?” ಎಂದು ಕೇಳಿದನು. 6 (ಫಿಲಿಪ್ಪನನ್ನು ಪರೀಕ್ಷಿಸುವುದಕ್ಕಾಗಿ ಆತನು ಈ ಪ್ರಶ್ನೆಯನ್ನು ಕೇಳಿದನು. ತಾನು ಮಾಡಲಿದ್ದ ಕಾರ್ಯ ಯೇಸುವಿಗೆ ಮೊದಲೇ ತಿಳಿದಿತ್ತು.)
7 ಫಿಲಿಪ್ಪನು, “ಇಲ್ಲಿರುವ ಪ್ರತಿಯೊಬ್ಬರಿಗೆ ರೊಟ್ಟಿಯ ಒಂದು ತುಂಡನ್ನು ಕೊಡಬೇಕಾದರೆ, ಇನ್ನೂರು ದಿನಾರಿ ನಾಣ್ಯಗಳಾದರೂ[a] ಬೇಕು” ಎಂದು ಉತ್ತರಕೊಟ್ಟನು.
8 ಅಂದ್ರೆಯನೆಂಬ ಮತ್ತೊಬ್ಬ ಶಿಷ್ಯನು ಅಲ್ಲಿದ್ದನು. ಅಂದ್ರೆಯನು ಸೀಮೋನ್ ಪೇತ್ರನ ಸಹೋದರ. 9 ಅಂದ್ರೆಯನು, “ಇಲ್ಲಿರುವ ಒಬ್ಬ ಹುಡುಗನ ಬಳಿ ಜವೆಗೋಧಿಯ ಐದು ರೊಟ್ಟಿಗಳಿವೆ ಮತ್ತು ಎರಡು ಚಿಕ್ಕ ಮೀನುಗಳಿವೆ. ಆದರೆ ಅವು ಈ ಜನಸಮೂಹಕ್ಕೆ ಸಾಕಾಗುವುದಿಲ್ಲ” ಎಂದು ಹೇಳಿದನು.
10 ಯೇಸು, “ಜನರಿಗೆ ಕುಳಿತುಕೊಳ್ಳಲು ಹೇಳಿರಿ” ಎಂದು ತಿಳಿಸಿದನು. ಆ ಸ್ಥಳದಲ್ಲಿ ಹುಲ್ಲು ಹುಲುಸಾಗಿ ಬೆಳೆದಿತ್ತು. ಅಲ್ಲಿ ಕುಳಿತುಕೊಂಡವರಲ್ಲಿ ಸುಮಾರು ಐದುಸಾವಿರ ಮಂದಿ ಗಂಡಸರಿದ್ದರು. 11 ಬಳಿಕ ಯೇಸು ಆ ರೊಟ್ಟಿಗಳನ್ನು ತೆಗೆದುಕೊಂಡು ಅವುಗಳಿಗಾಗಿ ದೇವರಿಗೆ ಸ್ತೋತ್ರಸಲ್ಲಿಸಿ, ಕುಳಿತುಕೊಂಡಿದ್ದ ಜನರಿಗೆ ಕೊಟ್ಟನು. ಆತನು ಮೀನುಗಳನ್ನು ಕೊಡುವಾಗಲೂ ಅದೇ ರೀತಿ ಮಾಡಿದನು. ಎಲ್ಲರೂ ತಮಗೆ ಬೇಕಾದಷ್ಟು ತಿಂದರು.
12 ಅವರೆಲ್ಲರೂ ಊಟ ಮಾಡಿ ತೃಪ್ತರಾದ ಮೇಲೆ ಯೇಸು ತನ್ನ ಶಿಷ್ಯರಿಗೆ, “ಉಳಿದುಹೋದ ರೊಟ್ಟಿ ಮತ್ತು ಮೀನುಗಳ ತುಂಡುಗಳನ್ನು ಒಟ್ಟುಗೂಡಿಸಿರಿ. ಯಾವುದನ್ನೂ ಹಾಳುಮಾಡಬೇಡಿ” ಎಂದು ಹೇಳಿದನು. 13 ಆದ್ದರಿಂದ ಶಿಷ್ಯರು ಉಳಿದುಹೋಗಿದ್ದ ತುಂಡುಗಳನ್ನು ಒಟ್ಟುಗೂಡಿಸಿದರು. ಜನರು ತಿನ್ನಲು ಆರಂಭಿಸಿದಾಗ ಕೇವಲ ಐದು ಜವೆಗೋದಿಯ ರೊಟ್ಟಿಗಳಿದ್ದವು. ಆದರೆ ಶಿಷ್ಯರು ಉಳಿದುಹೋದ ಆಹಾರದ ತುಂಡುಗಳನ್ನು ಒಟ್ಟುಗೂಡಿಸಿದಾಗ ಹನ್ನೆರಡು ದೊಡ್ಡ ಬುಟ್ಟಿಗಳು ತುಂಬಿಹೋದವು.
14 ಯೇಸು ಮಾಡಿದ ಈ ಸೂಚಕಕಾರ್ಯವನ್ನು ಕಂಡ ಜನರು, “ಈ ಲೋಕಕ್ಕೆ ಬರಲಿರುವ ಪ್ರವಾದಿ ನಿಜವಾಗಿಯೂ ಈತನೇ ಇರಬೇಕು” ಎಂದು ಹೇಳತೊಡಗಿದರು.
15 ತನ್ನನ್ನು ಬಲವಂತದಿಂದ ರಾಜನನ್ನಾಗಿ ಮಾಡಲು ಜನರು ಯೋಚಿಸುತ್ತಿದ್ದಾರೆಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಅಲ್ಲಿಂದ ತಾನೊಬ್ಬನೇ ಬೆಟ್ಟಕ್ಕೆ ಮತ್ತೆ ಹೋದನು.
ನೀರಿನ ಮೇಲೆ ಕಾಲ್ನಡಿಗೆ
(ಮತ್ತಾಯ 14:22-27; ಮಾರ್ಕ 6:45-52)
16 ಆ ಸಾಯಂಕಾಲ ಯೇಸುವಿನ ಶಿಷ್ಯರು ಸರೋವರಕ್ಕೆ (ಗಲಿಲಾಯ) ಹೋದರು. 17 ಆಗಲೇ ಕತ್ತಲಾಗಿತ್ತು. ಯೇಸು ಅವರ ಬಳಿಗೆ ಇನ್ನೂ ಬಂದಿರಲಿಲ್ಲ. ಆದ್ದರಿಂದ ಶಿಷ್ಯರು ದೋಣಿಯನ್ನು ಹತ್ತಿ ಸರೋವರದ ಆಚೆಯ ಕಡೆಯಿದ್ದ ಕಪೆರ್ನೌಮಿಗೆ ಹೊರಟರು. 18 ಗಾಳಿಯು ಬಹು ರಭಸವಾಗಿ ಬೀಸುತ್ತಿತ್ತು. ಸರೋವರದ ಅಲೆಗಳು ದೊಡ್ಡದಾಗುತ್ತಿದ್ದವು. 19 ಅವರು ಹುಟ್ಟುಹಾಕುತ್ತಾ ಸುಮಾರು ಮೂರು ಅಥವಾ ನಾಲ್ಕು ಮೈಲಿಗಳವರೆಗೆ ದೋಣಿಯನ್ನು ನಡೆಸಿದ ನಂತರ ಯೇಸುವನ್ನು ಕಂಡರು. ಆತನು ನೀರಿನ ಮೇಲೆ ನಡೆಯುತ್ತಾ ದೋಣಿಯ ಸಮೀಪಕ್ಕೆ ಬರುತ್ತಿರುವುದನ್ನು ಕಂಡು ಅವರಿಗೆ ಭಯವಾಯಿತು. 20 ಯೇಸು ಅವರಿಗೆ, “ಹೆದರಬೇಡಿರಿ, ನಾನೇ” ಎಂದು ಹೇಳಿದನು. 21 ಆಗ ಅವರು ಯೇಸುವನ್ನು ದೋಣಿಯೊಳಗೆ ಬರಮಾಡಿಕೊಳ್ಳಬೇಕೆಂದಿದ್ದರು. ಅಷ್ಟರಲ್ಲೇ, ಅವರು ಹೋಗಬೇಕೆಂದಿದ್ದ ಸ್ಥಳದ ದಡಕ್ಕೆ ದೋಣಿಯು ತಲುಪಿತು.
ಯೇಸುವಿಗಾಗಿ ಹುಡುಕಾಟ
22 ಮರುದಿನವಾಯಿತು. ಕೆಲವು ಜನರು ಸರೋವರದ ಮತ್ತೊಂದು ಕಡೆಯಲ್ಲಿ ಉಳಿದುಕೊಂಡಿದ್ದರು. ಯೇಸು ತನ್ನ ಶಿಷ್ಯರೊಂದಿಗೆ ದೋಣಿಯಲ್ಲಿ ಹೋಗಲಿಲ್ಲ ಎಂಬುದು ಈ ಜನರಿಗೆ ತಿಳಿದಿತ್ತು. ಯೇಸುವಿನ ಶಿಷ್ಯರು ಮಾತ್ರ ದೋಣಿಯಲ್ಲಿ ಹೋದರೆಂಬುದೂ ಮತ್ತು ಅದೊಂದು ದೋಣಿ ಮಾತ್ರ ಅಲ್ಲಿತ್ತೆಂಬುದೂ ಅವರಿಗೆ ಗೊತ್ತಿತ್ತು. 23 ಆದರೆ ಅಷ್ಟರಲ್ಲಿಯೇ, ಕೆಲವು ದೋಣಿಗಳು ತಿಬೇರಿಯಾದಿಂದ ಬಂದವು. ಅವರು ಊಟ ಮಾಡಿದ ಸ್ಥಳಕ್ಕೆ ಸಮೀಪದ ದಡದಲ್ಲಿಯೇ ಆ ದೋಣಿಗಳು ನಿಂತುಕೊಂಡವು. ಪ್ರಭುವು ಸ್ತೋತ್ರ ಮಾಡಿದ ಮೇಲೆ ಅವರು ರೊಟ್ಟಿಯನ್ನು ಆ ಸ್ಥಳದಲ್ಲೇ ತಿಂದಿದ್ದರು. 24 ಯೇಸು ಮತ್ತು ಆತನ ಶಿಷ್ಯರು ಅಲ್ಲಿಲ್ಲದಿರುವುದನ್ನು ಜನರು ಕಂಡು ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಪೆರ್ನೌಮಿಗೆ ಹೋದರು. ಅವರು ಯೇಸುವನ್ನು ಕಂಡುಕೊಳ್ಳಬೇಕೆಂದಿದ್ದರು.
ಯೇಸುವೇ ಜೀವದ ರೊಟ್ಟಿ
25 ಜನರು ಯೇಸುವನ್ನು ಸರೋವರದ ಆಚೆಯ ದಡದಲ್ಲಿ ಕಂಡುಕೊಂಡರು. ಅವರು ಆತನಿಗೆ, “ಗುರುವೇ, ನೀನು ಇಲ್ಲಿಗೆ ಯಾವಾಗ ಬಂದೆ?” ಎಂದು ಕೇಳಿದರು.
26 ಯೇಸು, “ನೀವು ನನ್ನನ್ನು ಏಕೆ ಹುಡುಕುತ್ತಿದ್ದೀರಿ? ನನ್ನ ಅಧಿಕಾರವನ್ನು ನಿರೂಪಿಸುವ ನನ್ನ ಅದ್ಭುತಕಾರ್ಯಗಳನ್ನು ಕಂಡು ನೀವು ನನ್ನನ್ನು ಹುಡುಕುತ್ತಿದ್ದೀರೋ? ಇಲ್ಲ! ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ರೊಟ್ಟಿಯನ್ನು ತೃಪ್ತಿಯಾಗುವಷ್ಟು ತಿಂದಕಾರಣ ನನ್ನನ್ನು ಹುಡುಕುತ್ತಿದ್ದೀರಿ. 27 ಈ ಲೋಕದ ಆಹಾರವು ಕೆಟ್ಟುಹೋಗುತ್ತದೆ ಮತ್ತು ಹಾಳಾಗುತ್ತದೆ. ಆದ್ದರಿಂದ ಅಂಥ ಆಹಾರವನ್ನು ಪಡೆದುಕೊಳ್ಳಲು ದುಡಿಯಬೇಡಿರಿ. ಆದರೆ ಎಂದಿಗೂ ಕೆಟ್ಟುಹೋಗದಂಥ ಮತ್ತು ನಿಮಗೆ ನಿತ್ಯಜೀವವನ್ನು ಕೊಡುವಂಥ ಆಹಾರವನ್ನು ಪಡೆದುಕೊಳ್ಳಲು ದುಡಿಯಿರಿ. ಮನುಷ್ಯಕುಮಾರನು ಆ ಆಹಾರವನ್ನು ನಿಮಗೆ ಕೊಡುವನು. ತಂದೆಯಾದ ದೇವರು ಆತನ ಮೇಲೆ ತನ್ನ ಅಧಿಕಾರದ ಮುದ್ರೆಯನ್ನು ಒತ್ತಿದ್ದಾನೆ” ಎಂದು ಹೇಳಿದನು.
28 ಜನರು ಯೇಸುವಿಗೆ, “ನಾವು ಯಾವ ಕಾರ್ಯಗಳನ್ನು ಮಾಡಬೇಕೆಂದು ದೇವರು ಬಯಸುತ್ತಾನೆ?” ಎಂದು ಕೇಳಿದರು.
29 ಯೇಸು, “ದೇವರು ಕಳುಹಿಸಿದಾತನನ್ನು ನೀವು ನಂಬಬೇಕು. ಈ ಕಾರ್ಯವನ್ನೇ ದೇವರು ನಿಮ್ಮಿಂದ ಅಪೇಕ್ಷಿಸುತ್ತಾನೆ” ಎಂದು ಉತ್ತರಕೊಟ್ಟನು.
30 ಆದ್ದರಿಂದ ಜನರು, “ದೇವರಿಂದ ಕಳುಹಿಸಲ್ಪಟ್ಟಾತನು ನೀನೇ ಎಂಬುದನ್ನು ನಿರೂಪಿಸುವುದಕ್ಕಾಗಿ ನೀನು ಯಾವ ಸೂಚಕಕಾರ್ಯವನ್ನು ಮಾಡುವೆ? 31 ನಮ್ಮ ಪಿತೃಗಳು ತಮಗೆ ದೇವರು ಮರುಭೂಮಿಯಲ್ಲಿ ಕೊಟ್ಟ ಮನ್ನವನ್ನು (ಆಹಾರವನ್ನು) ತಿಂದರು. ‘ದೇವರು ಅವರಿಗೆ ತಿನ್ನಲು ಪರಲೋಕದಿಂದ ರೊಟ್ಟಿಯನ್ನು ಕೊಟ್ಟನು’(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಹೇಳಿದರು.
32 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮ್ಮ ಜನರಿಗೆ ಪರಲೋಕದಿಂದ ರೊಟ್ಟಿಯನ್ನು ಕೊಟ್ಟವನು ಮೋಶೆಯಲ್ಲ. ಆದರೆ ನನ್ನ ತಂದೆಯು ನಿಮಗೆ ಪರಲೋಕದಿಂದ ನಿಜವಾದ ರೊಟ್ಟಿಯನ್ನು ಕೊಡುವನು. 33 ದೇವರ ರೊಟ್ಟಿ ಯಾವುದು? ಪರಲೋಕದಿಂದ ಇಳಿದುಬಂದು ಈ ಲೋಕಕ್ಕಾಗಿ ಜೀವವನ್ನು ಕೊಡುವಾತನೇ ದೇವರು ಕೊಡುವ ರೊಟ್ಟಿ” ಎಂದು ಹೇಳಿದನು.
34 ಜನರು, “ಅಯ್ಯಾ, ಆ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡು” ಎಂದು ಕೇಳಿಕೊಂಡರು.
35 ಅದಕ್ಕೆ ಯೇಸು, “ನಾನೇ ಜೀವಕೊಡುವ ರೊಟ್ಟಿ. ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗದು. ನನ್ನಲ್ಲಿ ನಂಬಿಕೆ ಇಡುವವನಿಗೆ ಎಂದಿಗೂ ಬಾಯಾರಿಕೆಯಾಗದು. 36 ನಾನು ನಿಮಗೆ ಮೊದಲೇ ಹೇಳಿದಂತೆ, ನೀವು ನನ್ನನ್ನು ನೋಡಿದ್ದರೂ ಇನ್ನೂ ನನ್ನನ್ನು ನಂಬುತ್ತಿಲ್ಲ. 37 ತಂದೆಯು ನನ್ನ ಜನರನ್ನು ನನಗೆ ಕೊಡುತ್ತಾನೆ. ಆ ಜನರಲ್ಲಿ ಪ್ರತಿಯೊಬ್ಬರೂ ನನ್ನ ಬಳಿಗೆ ಬರುತ್ತಾರೆ. ನನ್ನಲ್ಲಿಗೆ ಬರುವ ಪ್ರತಿಯೊಬ್ಬರನ್ನೂ ನಾನು ಖಂಡಿತವಾಗಿ ಸ್ವೀಕರಿಸಿಕೊಳ್ಳುವೆನು, ಅವರನ್ನು ಎಂದಿಗೂ ತಳ್ಳಿಬಿಡುವುದಿಲ್ಲ. 38 ನಾನು ಪರಲೋಕದಿಂದ ಇಳಿದು ಬಂದದ್ದು ದೇವರ ಚಿತ್ತಕ್ಕನುಸಾರವಾಗಿ ಮಾಡುವುದಕ್ಕಾಗಿಯೇ ಹೊರತು ನನ್ನ ಚಿತ್ತಕ್ಕನುಸಾರವಾಗಿಯಲ್ಲ. 39 ದೇವರು ನನಗೆ ಕೊಟ್ಟಿರುವ ಯಾವ ವ್ಯಕ್ತಿಯನ್ನೂ ನಾನು ಕಳೆದುಕೊಳ್ಳಕೂಡದು. ಅಲ್ಲದೆ ಅಂತಿಮ ದಿನದಂದು ನಾನು ಆ ಜನರನ್ನು ಜೀವಂತವಾಗಿ ಎಬ್ಬಿಸಬೇಕು. ನನ್ನನ್ನು ಕಳುಹಿಸಿದಾತನು ಆ ಕಾರ್ಯವನ್ನೇ ನನ್ನಿಂದ ಅಪೇಕ್ಷಿಸುತ್ತಾನೆ. 40 ಮಗನನ್ನು ನೋಡಿ ಆತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬನೂ ನಿತ್ಯಜೀವವನ್ನು ಹೊಂದಿದ್ದಾನೆ. ಅಂತಿಮ ದಿನದಂದು ನಾನು ಆ ವ್ಯಕ್ತಿಯನ್ನು ಜೀವಂತವಾಗಿ ಎಬ್ಬಿಸುವೆನು. ನನ್ನ ತಂದೆಯು ಬಯಸುವುದು ಇದನ್ನೇ” ಎಂದನು.
41 ಯೆಹೂದ್ಯರು ಯೇಸುವಿನ ಬಗ್ಗೆ ಗುಣುಗುಟ್ಟಿದರು. “ಪರಲೋಕದಿಂದ ಇಳಿದುಬರುವ ರೊಟ್ಟಿಯೇ ನಾನು” ಎಂದು ಆತನು ಹೇಳಿದ್ದರಿಂದ ಅವರು ಆಕ್ಷೇಪಿಸಿದರು. 42 ಯೆಹೂದ್ಯರು, “ಇವನು ಯೇಸು. ಇವನ ತಂದೆತಾಯಿಗಳನ್ನು ನಾವು ಬಲ್ಲೆವು. ಇವನು ಕೇವಲ ಯೋಸೇಫನ ಮಗನು. ‘ನಾನು ಪರಲೋಕದಿಂದ ಇಳಿದುಬಂದೆನು’ ಎಂದು ಇವನು ಹೇಳುವುದಕ್ಕೆ ಹೇಗೆ ಸಾಧ್ಯ?” ಎಂದರು.
43 ಅದಕ್ಕೆ ಯೇಸು, “ನೀವು ಗುಣುಗುಟ್ಟುತ್ತಿರುವುದನ್ನು ನಿಲ್ಲಿಸಿರಿ. 44 ತಂದೆಯೇ ನನ್ನನ್ನು ಕಳುಹಿಸಿದನು ಮತ್ತು ತಂದೆಯೇ ನನ್ನ ಬಳಿಗೆ ಜನರನ್ನು ಕರೆತರುವನು. ಅಂತಿಮ ದಿನದಂದು ನಾನು ಆ ಜನರನ್ನು ಜೀವಂತವಾಗಿ ಎಬ್ಬಿಸುವೆನು. ತಂದೆಯು ನನ್ನ ಬಳಿಗೆ ಕರೆದುಕೊಂಡು ಬರದ ಹೊರತು ಯಾವನೂ ನನ್ನ ಬಳಿಗೆ ಬರಲಾರನು. 45 ‘ದೇವರು ಎಲ್ಲಾ ಜನರಿಗೆ ಉಪದೇಶಿಸುವನು’(B) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಜನರು ತಂದೆಗೆ ಕಿವಿಗೊಟ್ಟು ಆತನಿಂದ ಕಲಿತುಕೊಳ್ಳುವರು. ಆ ಜನರು ನನ್ನ ಬಳಿಗೆ ಬರುವರು. 46 ತಂದೆಯಿಂದ ಬಂದಿರುವಾತನು ಮಾತ್ರ ತಂದೆಯನ್ನು ನೋಡಿದವನಾಗಿದ್ದಾನೆ. ಬೇರೆ ಯಾವ ವ್ಯಕ್ತಿಯೂ ತಂದೆಯನ್ನು ಎಂದೂ ನೋಡಿಲ್ಲ.
47 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನನ್ನು ನಂಬಿರುವವನು ನಿತ್ಯಜೀವವನ್ನು ಹೊಂದಿದ್ದಾನೆ. 48 ನಾನೇ ಜೀವಕೊಡುವ ರೊಟ್ಟಿ. 49 ನಿಮ್ಮ ಪಿತೃಗಳು ತಮಗೆ ದೇವರು ಮರುಭೂಮಿಯಲ್ಲಿ ಕೊಟ್ಟ ಮನ್ನವನ್ನು ತಿಂದರು. ಆದರೆ ಎಲ್ಲಾ ಜನರಂತೆ ಅವರೂ ಸತ್ತುಹೋದರು. 50 ಪರಲೋಕದಿಂದ ಇಳಿದುಬರುವ ರೊಟ್ಟಿ ನಾನೇ. ಈ ರೊಟ್ಟಿಯನ್ನು ತಿನ್ನುವವನು ಎಂದಿಗೂ ಸಾಯುವುದಿಲ್ಲ. 51 ಪರಲೋಕದಿಂದ ಇಳಿದುಬಂದ ಜೀವವುಳ್ಳ ರೊಟ್ಟಿ ನಾನೇ. ಈ ರೊಟ್ಟಿಯನ್ನು ತಿನ್ನುವವನು ಶಾಶ್ವತವಾಗಿ ಜೀವಿಸುವನು. ಈ ರೊಟ್ಟಿಯೇ ನನ್ನ ದೇಹ. ಈ ಲೋಕದಲ್ಲಿರುವ ಜನರು ಜೀವವನ್ನು ಹೊಂದಿಕೊಳ್ಳಲೆಂದು ನಾನು ನನ್ನ ದೇಹವನ್ನೇ ಕೊಡುತ್ತೇನೆ” ಎಂದು ಉತ್ತರಕೊಟ್ಟನು.
52 ಆಗ ಯೆಹೂದ್ಯರು, “ಈ ಮನುಷ್ಯನು ತನ್ನ ದೇಹವನ್ನು ನಮಗೆ ತಿನ್ನಲು ಹೇಗೆ ಕೊಡಲಾದೀತು?” ಎಂದು ತಮ್ಮತಮ್ಮೊಳಗೆ ವಾಗ್ವಾದ ಮಾಡತೊಡಗಿದರು.
53 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಮನುಷ್ಯಕುಮಾರನ ದೇಹವನ್ನು ತಿನ್ನಲೇಬೇಕು. ಆತನ ರಕ್ತವನ್ನು ಕುಡಿಯಲೇಬೇಕು. ನೀವು ಹೀಗೆ ಮಾಡದಿದ್ದರೆ, ನಿಮ್ಮಲ್ಲಿ ನಿಜವಾದ ಜೀವ ಇರುವುದಿಲ್ಲ. 54 ನನ್ನ ದೇಹವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನಿತ್ಯಜೀವವನ್ನು ಹೊಂದಿದ್ದಾನೆ. ಅಂತಿಮ ದಿನದಂದು ನಾನು ಆ ವ್ಯಕ್ತಿಯನ್ನು ಜೀವಂತವಾಗಿ ಎಬ್ಬಿಸುವೆನು. 55 ನನ್ನ ದೇಹವು ನಿಜವಾದ ಆಹಾರವಾಗಿದೆ. ನನ್ನ ರಕ್ತವು ನಿಜವಾದ ಪಾನೀಯವಾಗಿದೆ. 56 ನನ್ನ ದೇಹವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ವಾಸಿಸುತ್ತಾನೆ. ನಾನು ಅವನಲ್ಲಿ ವಾಸಿಸುತ್ತೇನೆ.
57 “ತಂದೆಯೇ ನನ್ನನ್ನು ಕಳುಹಿಸಿದನು. ತಂದೆಯು ಜೀವಸ್ವರೂಪನಾಗಿದ್ದಾನೆ. ನಾನು ತಂದೆಯಿಂದಲೇ ಜೀವಿಸುತ್ತೇನೆ. ಆದ್ದರಿಂದ ನನ್ನನ್ನು ತಿನ್ನುವವನು ನನ್ನಿಂದಲೇ ಜೀವಿಸುವನು. 58 ನಮ್ಮ ಪಿತೃಗಳು ತಿಂದ ರೊಟ್ಟಿಯಂತಲ್ಲ ನಾನು. ಅವರು ಆ ರೊಟ್ಟಿಯನ್ನು ತಿಂದರೂ ಎಲ್ಲಾ ಜನರಂತೆ ಸತ್ತು ಹೋದರು. ನಾನು ಪರಲೋಕದಿಂದ ಇಳಿದುಬಂದ ರೊಟ್ಟಿ. ಈ ರೊಟ್ಟಿಯನ್ನು ತಿನ್ನುವವನು ಸದಾಕಾಲ ಜೀವಿಸುವನು,” ಎಂದು ಹೇಳಿದನು.
59 ಯೇಸು ಕಪೆರ್ನೌಮಿನ ಸಭಾಮಂದಿರದಲ್ಲಿ ಉಪದೇಶಿಸುತ್ತಿದ್ದಾಗ ಈ ಸಂಗತಿಗಳನ್ನೆಲ್ಲಾ ಹೇಳಿದನು.
ನಿತ್ಯಜೀವದ ನುಡಿಗಳು
60 ಇದನ್ನು ಕೇಳಿದ ಆತನ ಶಿಷ್ಯರಲ್ಲಿ ಅನೇಕರು, “ಈ ಉಪದೇಶವು ಕಠಿಣವಾಗಿದೆ. ಇದನ್ನು ಯಾರು ಗ್ರಹಿಸಿಕೊಳ್ಳಬಲ್ಲರು?” ಎಂದರು.
61 ತನ್ನ ಶಿಷ್ಯರು ಆಕ್ಷೇಪಿಸುತ್ತಿರುವುದನ್ನು ತಿಳಿದಿದ್ದ ಯೇಸು, “ಈ ಉಪದೇಶದಿಂದ ನಿಮಗೆ ಬೇಸರವಾಯಿತೇ? 62 ಹಾಗಾದರೆ ಮನುಷ್ಯಕುಮಾರನು ತಾನು ಬಿಟ್ಟುಬಂದ ಸ್ಥಳಕ್ಕೆ ಮರಳಿಹೋಗುವುದನ್ನು ನೀವು ನೋಡುವಾಗ ಬೇಸರಪಡುವಿರಾ? 63 ಒಬ್ಬನಿಗೆ ಜೀವವನ್ನು ಕೊಡುವಂಥದ್ದು ದೈಹಿಕ ಸಂಗತಿಗಳಲ್ಲ. ಜೀವವನ್ನು ಕೊಡುವಂಥದ್ದು ದೇವರಾತ್ಮ. ನಾನು ನಿಮಗೆ ಹೇಳಿದ ಸಂಗತಿಗಳು ಆತ್ಮಿಕ ಸಂಗತಿಗಳಾಗಿವೆ. ಆದ್ದರಿಂದ ಈ ಸಂಗತಿಗಳೇ ಜೀವವನ್ನು ಕೊಡುತ್ತವೆ. 64 ಆದರೆ ನಿಮ್ಮಲ್ಲಿ ಕೆಲವರು ನಂಬುವುದಿಲ್ಲ” ಎಂದು ಹೇಳಿದನು. (ತನ್ನನ್ನು ನಂಬಿಲ್ಲದವರು ಯಾರೆಂದೂ ತನಗೆ ದ್ರೋಹ ಮಾಡುವವನು ಯಾರೆಂದೂ ಯೇಸುವಿಗೆ ಮೊದಲಿಂದಲೂ ತಿಳಿದಿತ್ತು.) 65 ಇದಲ್ಲದೆ ಯೇಸು, “ತಂದೆಯ ಅನುಮತಿ ಇಲ್ಲದೆ ಯಾವನೂ ನನ್ನ ಬಳಿಗೆ ಬರಲಾರನು ಎಂದು ನಾನು ನಿಮಗೆ ಹೇಳಿದ್ದಕ್ಕೆ ಅದೇ ಕಾರಣ” ಎಂದನು.
66 ಯೇಸು ಈ ಸಂಗತಿಗಳನ್ನು ಹೇಳಿದ ಮೇಲೆ ಆತನ ಹಿಂಬಾಲಕರಲ್ಲಿ ಅನೇಕರು ಆತನನ್ನು ತೊರೆದುಬಿಟ್ಟರು. ಅವರು ಆತನನ್ನು ಹಿಂಬಾಲಿಸಲಿಲ್ಲ.
67 ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ, “ನೀವು ಸಹ ನನ್ನನ್ನು ಬಿಟ್ಟುಹೋಗಬೇಕೆಂದಿರುವಿರಾ?” ಎಂದು ಕೇಳಿದನು.
68 ಸೀಮೋನ್ ಪೇತ್ರನು ಯೇಸುವಿಗೆ, “ಪ್ರಭುವೇ, ನಾವೆಲ್ಲಿಗೆ ಹೋಗೋಣ? ನಿತ್ಯಜೀವವನ್ನು ಕೊಡುವ ಸಂಗತಿಗಳು ನಿನ್ನಲ್ಲಿವೆ. 69 ನಾವು ನಿನ್ನಲ್ಲಿ ನಂಬಿಕೆ ಇಡುತ್ತೇವೆ. ನೀನು ದೇವರಿಂದ ಬಂದ ಪರಿಶುದ್ಧನೆಂದು ನಮಗೆ ಗೊತ್ತಿದೆ” ಎಂದು ಉತ್ತರಕೊಟ್ಟನು.
70 ಬಳಿಕ ಯೇಸು, “ನಾನು ಆರಿಸಿಕೊಂಡ ಹನ್ನೆರಡು ಮಂದಿ ನೀವೇ. ಆದರೆ ನಿಮ್ಮಲ್ಲಿರುವ ಒಬ್ಬನು ಸೈತಾನನ ಮಗನಾಗಿದ್ದಾನೆ” ಎಂದು ಉತ್ತರಕೊಟ್ಟನು. 71 ಯೇಸು ಸಿಮೋನನ ಮಗನಾದ ಇಸ್ಕರಿಯೋತ ಯೂದನ ಬಗ್ಗೆ ಮಾತಾಡುತ್ತಿದ್ದನು. ಯೂದನು ಹನ್ನೆರಡು ಮಂದಿ ಅಪೊಸ್ತಲರಲ್ಲಿ ಒಬ್ಬನಾಗಿದ್ದನು. ಆದರೆ ಮುಂದೆ ಯೇಸುವಿಗೆ ದ್ರೋಹ ಮಾಡಿದ ವ್ಯಕ್ತಿ ಇವನೇ.
Kannada Holy Bible: Easy-to-Read Version. All rights reserved. © 1997 Bible League International