M’Cheyne Bible Reading Plan
ಯೆಹೂದದ ಅರಸನಾದ ಯೆಹೋಷಾಫಾಟನು
17 ಆಸನ ಮಗನಾದ ಯೆಹೋಷಾಫಾಟನು ಪಟ್ಟಕ್ಕೆ ಬಂದನು. ಅವನು ತನ್ನ ರಾಜ್ಯವನ್ನು ಬಲಪಡಿಸಿ ಇಸ್ರೇಲರಿಂದ ತನಗೆ ಅಪಾಯವಾಗದಂತೆ ಸುರಕ್ಷೆಯ ವ್ಯವಸ್ಥೆ ಮಾಡಿಕೊಂಡನು. 2 ಯೆಹೂದದ ಎಲ್ಲಾ ಕೋಟೆಗಳುಳ್ಳ ಪಟ್ಟಣಗಳಲ್ಲಿಯೂ ತನ್ನ ತಂದೆಯು ವಶಪಡಿಸಿಕೊಂಡಿದ್ದ ಎಫ್ರಾಯೀಮ್ ಪ್ರಾಂತ್ಯದ ಪಟ್ಟಣಗಳಲ್ಲಿಯೂ ಸೈನ್ಯವನ್ನಿಟ್ಟನು.
3 ಯೆಹೋವನು ಯೆಹೋಷಾಫಾಟನೊಂದಿಗೆ ಇದ್ದನು; ಯಾಕೆಂದರೆ ಯೆಹೋಷಾಫಾಟನು ತನ್ನ ಯೌವನ ಕಾಲದಲ್ಲಿಯೇ ತನ್ನ ಪೂರ್ವಿಕನಾದ ದಾವೀದನಂತೆ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿ ಜೀವಿಸಿದನು. ಅವನು ಬಾಳನ ಪೂಜೆಯನ್ನು ಮಾಡಲಿಲ್ಲ. 4 ತನ್ನ ಪೂರ್ವಿಕರು ಅನುಸರಿಸಿದ ದೇವರನ್ನು ನಿರೀಕ್ಷಿಸಿದನು. ಆತನ ಆಜ್ಞೆಗಳನ್ನು ಅನುಸರಿಸಿದನು. ಇಸ್ರೇಲಿ ಅರಸರು ನಡೆದಂತೆ ಇವನು ನಡೆಯಲಿಲ್ಲ. 5 ಯೆಹೋವನು ಯೆಹೋಷಾಫಾಟನಿಗಾಗಿ ರಾಜ್ಯದ ಅಧಿಕಾರವನ್ನು ಸ್ಥಿರಪಡಿಸಿದನು. ಯೆಹೂದದ ಜನರೆಲ್ಲರು ಅವನಿಗೆ ಕಾಣಿಕೆಗಳನ್ನು ತಂದುಕೊಟ್ಟರು. ಆದ್ದರಿಂದ ಅವನಿಗೆ ಐಶ್ವರ್ಯವೂ ಘನತೆಯೂ ದೊರಕಿತು. 6 ಅವನ ಹೃದಯವು ಯೆಹೋವನ ಮಾರ್ಗಗಳಲ್ಲಿ ಆನಂದವನ್ನು ಕಂಡುಕೊಂಡಿತು.[a] ಯೆಹೂದ ಪ್ರಾಂತ್ಯದಲ್ಲಿ ವಿಗ್ರಹಗಳ ಪೂಜಾಸ್ಥಳಗಳನ್ನೆಲ್ಲಾ ತೆಗೆದುಹಾಕಿಸಿ ಅಶೇರಸ್ತಂಭಗಳನ್ನು ಕಡಿದುಹಾಕಿಸಿ ಅವುಗಳನ್ನು ನಿರ್ಮೂಲ ಮಾಡಿದನು.
7 ತನ್ನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಯೆಹೂದದ ಎಲ್ಲಾ ಪಟ್ಟಣಗಳಿಗೆ ನಾಯಕರನ್ನು ಕಳುಹಿಸಿ ಜನರಿಗೆ ದೇವರ ವಿಧಿನಿಯಮಗಳು ಬೋಧಿಸಲ್ಪಡುವಂತೆ ಮಾಡಿದನು. ಆ ನಾಯಕರು ಯಾರೆಂದರೆ: ಬೆನ್ಹೈಲ್, ಓಬದ್ಯ, ಜೆಕರ್ಯನೆತನೇಲ್ ಮತ್ತು ಮೀಕಾಯ. 8 ಯೆಹೋಷಾಫಾಟನು ಅವರೊಂದಿಗೆ ಲೇವಿಯರನ್ನೂ ಕಳುಹಿಸಿದನು. ಅವರು ಯಾರೆಂದರೆ: ಶೆಮಾಯ, ನೆತನ್ಯ, ಜೆಬದ್ಯ, ಅಸಾಹೇಲ್, ಶೆಮೀರಾಮೋತ್, ಯೆಹೋನಾತಾನ್, ಅದೋನೀಯ ಮತ್ತು ಟೋಬೀಯ. ಅವರೊಂದಿಗೆ ಕಳುಹಿಸಲ್ಪಟ್ಟ ಯಾಜಕರು ಯಾರೆಂದರೆ: ಎಲೀಷಾಮಾ ಮತ್ತು ಯೆಹೋರಾಮ. 9 ಇವರೆಲ್ಲಾ ಯೆಹೂದದ ಜನರಿಗೆ ಯೆಹೋವನ ಧರ್ಮೋಪದೇಶ ಪುಸ್ತಕದಿಂದ ಆತನ ಕಟ್ಟಳೆ ವಿಧಿನಿಯಮಗಳನ್ನು ಯೆಹೂದದ ಪಟ್ಟಣಗಳಲ್ಲೆಲ್ಲಾ ಸಂಚರಿಸಿ ಕಲಿಸಿದರು.
10 ಯೆಹೂದದ ಸುತ್ತಮುತ್ತಲಿನ ದೇಶಗಳ ಜನಾಂಗಗಳು ಯೆಹೋವನಿಗೆ ಭಯಪಟ್ಟರು. ಆದ್ದರಿಂದ ಅವರು ಯೆಹೋಷಾಫಾಟನ ಮೇಲೆ ಯುದ್ಧಕ್ಕೆ ಹೋಗಲಿಲ್ಲ. 11 ಫಿಲಿಷ್ಟಿಯರಲ್ಲಿ ಕೆಲವರು ಅವನಿಗೆ ಬೆಳ್ಳಿಬಂಗಾರಗಳ ಕಾಣಿಕೆಗಳನ್ನು ತಂದುಕೊಟ್ಟರು; ಅವನೊಬ್ಬ ಬಲಿಷ್ಠನಾದ ರಾಜನೆಂದು ಅವರು ತಿಳಿದುಕೊಂಡಿದ್ದರು. ಅರಬಿಯದ ಜನರು ಯೆಹೋಷಾಫಾಟನಿಗೆ ಪಶುಗಳ ಹಿಂಡುಗಳನ್ನು ತಂದುಕೊಟ್ಟರು. ಅವುಗಳಲ್ಲಿ ಏಳು ಸಾವಿರದ ಏಳುನೂರು ಟಗರುಗಳು ಮತ್ತು ಏಳು ಸಾವಿರದ ಏಳುನೂರು ಹೋತಗಳು ಇದ್ದವು.
12 ಯೆಹೋಷಾಫಾಟನು ಅತ್ಯಧಿಕವಾಗಿ ಅಭಿವೃದ್ಧಿಹೊಂದಿ ದೊಡ್ಡ ಅರಸನಾದನು. ಅವನು ಯೆಹೂದ ದೇಶದಲ್ಲೆಲ್ಲಾ ಕೋಟೆಗಳನ್ನು ಕಟ್ಟಿಸಿದನು. ಉಗ್ರಾಣ ನಗರಗಳನ್ನು ಕಟ್ಟಿಸಿದನು. 13 ಅವುಗಳಲ್ಲಿ ಬೇಕಾದ ಸಾಮಾಗ್ರಿಗಳನ್ನು ಸಂಗ್ರಹಿಸಿಟ್ಟನು. ಜೆರುಸಲೇಮಿನಲ್ಲಿ ನುರಿತ ಸೈನ್ಯವನ್ನು ಇರಿಸಿದನು. 14 ಅವರು ಬೇರೆಬೇರೆ ಕುಲಗಳಿಂದ ಬಂದವರಾಗಿದ್ದರು.
ಯೆಹೂದಕುಲದ ಅದ್ನನು ಮೂರುಲಕ್ಷ ಸೈನಿಕರಿಗೆ ಸೇನಾಪತಿಯಾಗಿದ್ದನು.
15 ಯೆಹೋಹಾನಾನನು ಎರಡು ಲಕ್ಷ ಎಂಭತ್ತು ಸಾವಿರ ಸೈನಿಕರಿಗೆ ಸೇನಾಪತಿಯಾಗಿದ್ದನು.
16 ಅಮಸ್ಯನು ಎರಡು ಲಕ್ಷ ಸೈನಿಕರಿಗೆ ಸೇನಾಪತಿಯಾಗಿದ್ದನು. ಅಮಸ್ಯನು ಜಿಕ್ರಿಯ ಮಗ. ಯೆಹೋವನ ಸೇವೆಮಾಡುವದಕ್ಕೆ ಅವನು ತನ್ನನ್ನು ಒಪ್ಪಿಸಿಕೊಟ್ಟಿದ್ದನು.
17 ಬೆನ್ಯಾಮೀನನ ಕುಲದ ಎಲ್ಯಾದನು ಎರಡು ಲಕ್ಷ ಸೈನಿಕರಿಗೆ ಸೇನಾಪತಿಯಾಗಿದ್ದನು. ಇವರು ಬಿಲ್ಲು, ಬಾಣ, ಗುರಾಣಿಗಳನ್ನು ಬಳಸಬಲ್ಲವರಾಗಿದ್ದರು. ಎಲ್ಯಾದನು ಶೂರನಾದ ಸೇನಾಪತಿ.
18 ಯೆಹೋಜಾಬಾದನು ಒಂದುಲಕ್ಷ ಎಂಭತ್ತು ಸಾವಿರ ಸೈನಿಕರಿಗೆ ಸೇನಾಪತಿಯಾಗಿದ್ದನು.
19 ಈ ಸೈನಿಕರೆಲ್ಲಾ ಯೆಹೋಷಾಫಾಟನ ಸೇವೆಮಾಡಿದರು. ಇವರಲ್ಲದೆ ಯೆಹೂದ ದೇಶದಲ್ಲೆಲ್ಲಾ ಇದ್ದ ಕೋಟೆಗಳಲ್ಲಿಯೂ ಸೈನಿಕರಿದ್ದರು.
ಕುರಿಮರಿಯು ಸುರುಳಿಯನ್ನು ಬಿಚ್ಚಿತು
6 ನಂತರ ಕುರಿಮರಿಯು ಏಳು ಮುದ್ರೆಗಳಲ್ಲಿ ಒಂದು ಮುದ್ರೆಯನ್ನು ಒಡೆಯುವಾಗ ನಾನು ಗಮನಿಸಿದೆನು. ಆ ನಾಲ್ಕು ಜೀವಿಗಳಲ್ಲಿ ಒಂದು ಜೀವಿಯು ಗುಡುಗಿನಂತೆ ಮಾತನಾಡುವುದನ್ನು ನಾನು ಕೇಳಿದೆನು. ಅದು “ಬಾ!” ಎಂದು ಹೇಳಿತು. 2 ನಾನು ನೋಡಿದಾಗ ನನ್ನ ಮುಂದೆ ಒಂದು ಬಿಳಿ ಕುದುರೆಯಿರುವುದು ನನಗೆ ಕಾಣಿಸಿತು. ಕುದುರೆಯ ಮೇಲಿದ್ದ ಸವಾರನ ಕೈಯಲ್ಲಿ ಒಂದು ಬಿಲ್ಲು ಇತ್ತು. ಆ ಸವಾರನಿಗೆ ಒಂದು ಕಿರೀಟವನ್ನು ಕೊಡಲಾಯಿತು. ಅವನು ಶತ್ರುವನ್ನು ಸೋಲಿಸುತ್ತಾ ಜಯಗಳಿಸುವುದಕ್ಕಾಗಿ ಹೊರಟನು.
3 ಆ ಕುರಿಮರಿಯು ಎರಡನೆಯ ಮುದ್ರೆಯನ್ನು ತೆಗೆಯಿತು. ಆಗ ಎರಡನೆಯ ಜೀವಿಯು, “ಬಾ!” ಎಂದು ಹೇಳಿದ್ದನ್ನು ಕೇಳಿದೆನು. 4 ಆಗ ಮತ್ತೊಂದು ಕುದುರೆಯು ಹೊರಗೆ ಬಂದಿತು. ಇದು ಕೆಂಪು ಕುದುರೆಯಾಗಿತ್ತು. ಈ ಕುದುರೆಯ ಮೇಲೆ ಕುಳಿತಿದ್ದ ಸವಾರನಿಗೆ ಲೋಕದಲ್ಲಿದ್ದ ಶಾಂತಿಯನ್ನು ತೆಗೆದುಹಾಕಲೂ ಜನರು ಒಬ್ಬರನ್ನೊಬ್ಬರು ಕೊಲ್ಲುವಂತೆ ಮಾಡಲೂ ಅವನಿಗೆ ಅಧಿಕಾರವನ್ನು ನೀಡಲಾಗಿತ್ತು. ಈ ಸವಾರನಿಗೆ ಒಂದು ಮಹಾಖಡ್ಗವನ್ನೂ ಕೊಡಲಾಗಿತ್ತು.
5 ಆ ಕುರಿಮರಿಯು ಮೂರನೆಯ ಮುದ್ರೆಯನ್ನು ತೆಗೆಯಿತು. ಆಗ ಮೂರನೆಯ ಜೀವಿಯು, “ಬಾ” ಎಂದು ಹೇಳುವುದನ್ನು ನಾನು ಕೇಳಿದೆನು. ನಾನು ನೋಡಿದಾಗ, ನನ್ನ ಮುಂದೆ ಒಂದು ಕಪ್ಪು ಕುದುರೆಯಿರುವುದು ನನಗೆ ಕಾಣಿಸಿತು. ಆ ಕುದುರೆಯ ಮೇಲಿದ್ದ ಸವಾರನು ತನ್ನ ಕೈಯಲ್ಲಿ ಎರಡು ತಕ್ಕಡಿಗಳನ್ನು ಹಿಡಿದಿದ್ದನು. 6 ಆಗ ಒಬ್ಬನ ಸ್ವರವೋ ಎಂಬಂತೆ ಒಂದು ಧ್ವನಿಯನ್ನು ಕೇಳಿದೆನು. ಆ ನಾಲ್ಕು ಜೀವಿಗಳಿದ್ದ ಸ್ಥಳದಿಂದ ಈ ಧ್ವನಿಯು ಹೊರ ಹೊಮ್ಮಿತು. ಆ ಧ್ವನಿಯು, “ಒಂದು ದಿನದ ಕೆಲಸಕ್ಕೆ ಒಂದು ಕಿಲೋಗ್ರಾಂ ಗೋಧಿ. ಒಂದು ದಿನದ ಕೆಲಸಕ್ಕೆ ಮೂರು ಕಿಲೋಗ್ರಾಂ ಬಾರ್ಲಿ. ಆದರೆ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಕೆಡಿಸಬೇಡಿ!” ಎಂದು ಹೇಳಿತು.
7 ಆ ಕುರಿಮರಿಯು ನಾಲ್ಕನೆಯ ಮುದ್ರೆಯನ್ನು ತೆರೆಯಿತು. ಆಗ ನಾಲ್ಕನೆಯ ಜೀವಿಯು, “ಬಾ” ಎಂದು ಹೇಳಿದ ಧ್ವನಿಯು ನನಗೆ ಕೇಳಿಸಿತು. 8 ನಾನು ನೋಡಿದಾಗ, ನನ್ನ ಮುಂದೆ ಒಂದು ಬೂದುಬಣ್ಣದ ಕುದುರೆಯಿರುವುದು ನನಗೆ ಕಾಣಿಸಿತು. ಆ ಕುದುರೆಯ ಮೇಲೆ ಕುಳಿತಿದ್ದ ಸವಾರನೇ ಮೃತ್ಯು.[a] ಅವನ ಹಿಂದೆ ಪಾತಾಳ ಎಂಬುವನು ಬಂದನು. ಅವರಿಗೆ ಭೂಮಿಯ ಕಾಲುಭಾಗದ ಮೇಲೆ ಅಧಿಕಾರವನ್ನು ನೀಡಲಾಯಿತು. ಕತ್ತಿಯಿಂದಲೂ ಬರಗಾಲದಿಂದಲೂ ರೋಗಗಳಿಂದಲೂ ಮತ್ತು ಲೋಕದ ಮೇಲಿರುವ ಕಾಡುಮೃಗಗಳಿಂದಲೂ ಜನರನ್ನು ಕೊಲ್ಲುವ ಅಧಿಕಾರವನ್ನು ಅವರಿಗೆ ನೀಡಲಾಯಿತು.
9 ಕುರಿಮರಿಯು ಐದನೆಯ ಮುದ್ರೆಯನ್ನು ತೆರೆಯಿತು. ಆಗ ಯಜ್ಞವೇದಿಕೆಯ ಕೆಳಗೆ ಕೆಲವು ಆತ್ಮಗಳಿರುವುದನ್ನು ನಾನು ನೋಡಿದೆನು. ದೇವರ ಸಂದೇಶಕ್ಕೂ ತಾವು ಸ್ವೀಕರಿಸಿ ಕೊಂಡ ಸತ್ಯಕ್ಕೂ ನಂಬಿಗಸ್ತರಾಗಿದ್ದ ಕಾರಣ ಕೊಲ್ಲಲ್ಪಟ್ಟವರ ಆತ್ಮಗಳೇ ಅವು. 10 ಈ ಆತ್ಮಗಳು, “ಪವಿತ್ರನಾದ ಮತ್ತು ಸತ್ಯವಂತನಾದ ಪ್ರಭುವೇ, ನಮ್ಮನ್ನು ಕೊಂದ ಜನರಿಗೆ ತೀರ್ಪು ನೀಡಲು ಮತ್ತು ಅವರನ್ನು ದಂಡಿಸಲು ನೀನು ಎಷ್ಟು ಕಾಲ ತೆಗೆದುಕೊಳ್ಳುವೆ?” ಎಂದು ಗಟ್ಟಿಯಾದ ಧ್ವನಿಯಲ್ಲಿ ಕೂಗಿದವು. 11 ಆ ಆತ್ಮಗಳಲ್ಲಿ ಪ್ರತಿಯೊಂದಕ್ಕೂ ಒಂದೊಂದು ಬಿಳಿ ನಿಲುವಂಗಿಯನ್ನು ಕೊಡಲಾಯಿತು. ಇನ್ನೂ ಸ್ವಲ್ಪಕಾಲ ಕಾಯುವಂತೆ ಅವುಗಳಿಗೆ ತಿಳಿಸಲಾಯಿತು. ಅವರ ಸಹೋದರರಲ್ಲಿ ಕೆಲವರು ಇನ್ನೂ ಕ್ರಿಸ್ತನ ಸೇವೆಯಲ್ಲಿದ್ದಾರೆ. ಅವರೂ ಕೊಲ್ಲಲ್ಪಡಬೇಕು. ಈ ಕೊಲೆಗಳೆಲ್ಲಾ ಮುಗಿಯುವ ತನಕ ಕಾಯಬೇಕೆಂದು ಆ ಆತ್ಮಗಳಿಗೆ ಹೇಳಲಾಯಿತು.
12 ಆ ಕುರಿಮರಿಯು ಆರನೆಯ ಮುದ್ರೆಯನ್ನು ತೆರೆಯುವುದನ್ನು ನಾನು ನೋಡುತ್ತಲೇ ಇದ್ದೆನು. ಆಗ ಮಹಾಭೂಕಂಪವಾಯಿತು. ಸೂರ್ಯನು ಕಪ್ಪು ಕಂಬಳಿಯಂತೆ ಕಪ್ಪಾದನು. ಪೂರ್ಣಚಂದ್ರನು ರಕ್ತದಂತೆ ಕೆಂಪಾದನು. 13 ಆಕಾಶದಲ್ಲಿದ್ದ ನಕ್ಷತ್ರಗಳು, ಬಿರುಗಾಳಿ ಬೀಸಿದಾಗ ಅಂಜೂರದ ಹಣ್ಣುಗಳು ಮರದಿಂದ ಭೂಮಿಯ ಮೇಲೆ ಉದುರುವಂತೆ ಉದುರಿದವು. 14 ಆಕಾಶವು ವಿಭಾಗಗೊಂಡು ಸುರುಳಿಯಂತೆ ಸುತ್ತಲ್ಪಟ್ಟಿತು. ಪ್ರತಿಯೊಂದು ಬೆಟ್ಟ ಮತ್ತು ದ್ವೀಪಗಳು ತಮ್ಮ ನೆಲೆಯಿಂದ ಚಲಿಸಿದವು.
15 ಆಗ ಲೋಕದ ರಾಜರುಗಳೂ ಅಧಿಪತಿಗಳೂ ಸೇನಾಧಿಪತಿಗಳೂ ಶ್ರೀಮಂತರೂ ಬಲಿಷ್ಠರೂ ಪ್ರತಿಯೊಬ್ಬ ಗುಲಾಮನೂ ಸ್ವತಂತ್ರ ಪ್ರಜೆಯೂ ಗವಿಗಳಲ್ಲಿ ಮತ್ತು ಬೆಟ್ಟಗಳ ಮೇಲಿನ ಬಂಡೆಗಳ ಮರೆಯಲ್ಲಿ ಅಡಗಿಕೊಂಡರು. 16 ಆ ಜನರು ಬೆಟ್ಟಗಳಿಗೆ ಮತ್ತು ಬಂಡೆಗಳಿಗೆ, “ನಮ್ಮ ಮೇಲೆ ಬೀಳಿರಿ. ಸಿಂಹಾಸನದ ಮೇಲೆ ಕುಳಿತಿರುವಾತನ ದೃಷ್ಟಿಯಿಂದ ನಮ್ಮನ್ನು ಮರೆಮಾಡಿ; ಕುರಿಮರಿಯಾದಾತನ ಕೋಪದಿಂದ ನಮ್ಮನ್ನು ಮರೆಮಾಡಿ; 17 ಆತನ ಕೋಪವು ಪ್ರಕಟವಾಗುವ ಮಹಾದಿನವು ಬಂದುಬಿಟ್ಟಿದೆ. ಆ ಕೋಪದ ಎದುರಿನಲ್ಲಿ ನಿಲ್ಲಲು ಯಾರಿಗೂ ಸಾಧ್ಯವಿಲ್ಲ” ಎಂದು ಹೇಳಿದರು.
ಜೆರುಸಲೇಮನ್ನು ಅಳತೆ ಮಾಡಿದ್ದು
2 ಆಗ ನಾನು ಮೇಲಕ್ಕೆ ನೋಡಿದಾಗ ಒಬ್ಬ ಮನುಷ್ಯನು ಕೈಯಲ್ಲಿ ಒಂದು ಹಗ್ಗ ಮತ್ತು ಅಳತೆ ಮಾಡುವ ಸಾಮಾಗ್ರಿಗಳನ್ನು ಹಿಡಿದುಕೊಂಡಿದ್ದನ್ನು ಕಂಡೆನು. 2 “ನೀನು ಎಲ್ಲಿಗೆ ಹೋಗುತ್ತೀ?” ಎಂದು ನಾನು ಅವನನ್ನು ವಿಚಾರಿಸಿದೆನು.
“ನಾನು ಜೆರುಸಲೇಮ್ ಎಷ್ಟು ಉದ್ದಗಲವಿದೆಯೆಂದು ಅಳತೆ ಮಾಡಲು ಹೋಗುತ್ತಿದ್ದೇನೆ” ಎಂದನು.
3 ಆಗ ನನ್ನೊಡನೆ ಮಾತನಾಡುತ್ತಿದ್ದ ದೂತನು ನನ್ನನ್ನು ಬಿಟ್ಟುಹೋದನು. ಅವನೊಡನೆ ಮಾತನಾಡಲು ಇನ್ನೊಬ್ಬ ದೂತನು ಬಂದನು. 4 ಅವನು, “ಓಡಿಹೋಗಿ ಆ ಯೌವನಸ್ಥನಿಗೆ ಜೆರುಸಲೇಮು ಅಳತೆ ಮಾಡಲು ಸಾಧ್ಯವಾಗದಷ್ಟು ದೊಡ್ಡದಾಗಿದೆ ಎಂದು ಹೇಳು. ಅಲ್ಲದೆ ಅವನಿಗೆ ಈ ವಿಷಯವನ್ನೂ ತಿಳಿಸು:
‘ಜೆರುಸಲೇಮ್ ಗೋಡೆಗಳಿಲ್ಲದ ಪಟ್ಟಣವಾಗುವದು.
ಯಾಕೆಂದರೆ ಅಷ್ಟೊಂದು ಜನರೂ ಪಶುಗಳೂ ಅಲ್ಲಿ ವಾಸಿಸುವವು.’
5 ಯೆಹೋವನು ಹೇಳುವುದೇನೆಂದರೆ,
‘ನಾನು ಆಕೆಯ ಸುತ್ತಲೂ ಆಕೆಯನ್ನು ಸಂರಕ್ಷಿಸುವ ಬೆಂಕಿಯ ಗೋಡೆಯಂತಿರುವೆನು.
ಮತ್ತು ನಾನು ಅಲ್ಲಿಯೇ ವಾಸಿಸುವದರಿಂದ ಆ ನಗರಕ್ಕೆ ಮಹಿಮೆಯನ್ನು ತರುವೆನು.’”
ತಮ್ಮ ಮನೆಗೆ ಬರಲು ದೇವರು ತನ್ನ ಜನರನ್ನು ಕರೆಯುತ್ತಾನೆ
6 ಯೆಹೋವನು ಹೀಗೆನ್ನುತ್ತಾನೆ,
“ಅವಸರಪಡುತ್ತಾ ಉತ್ತರದ ದೇಶಗಳಿಂದ ಹೊರಬನ್ನಿರಿ.
ಹೌದು, ನಾನು ನಿಮ್ಮ ಜನರನ್ನು ಪ್ರತಿಯೊಂದು ದಿಕ್ಕಿಗೂ ಚದರಿಸಿರುವುದು ನಿಜ.
7 ಚೀಯೋನಿನ ಜನರಾದ ನೀವು ಬಾಬಿಲೋನಿನಲ್ಲಿ ವಾಸಿಸುತ್ತಿದ್ದೀರಿ.
ಅಲ್ಲಿಂದ ತಪ್ಪಿಸಿಕೊಂಡು ಬನ್ನಿರಿ. ಆ ನಗರದಿಂದ ಓಡಿಹೋಗಿರಿ.”
8 ಇದು ಸರ್ವಶಕ್ತನಾದ ಯೆಹೋವನ ನುಡಿ.
“ನಿಮ್ಮ ವಸ್ತುಗಳನ್ನು ಕದ್ದುಕೊಂಡ ಜನಾಂಗಗಳಿಗೆ ಆತನು ನನ್ನನ್ನು ಕಳುಹಿಸಿದನು.
ನಿಮಗೆ ಗೌರವವನ್ನು ತರುವುದಕ್ಕಾಗಿ ಆತನು ನನ್ನನ್ನು ಕಳುಹಿಸಿದನು.
ಯಾಕೆಂದರೆ, ನಿಮಗೆ ಹಾನಿ ಮಾಡಿದರೆ
ಅದು ದೇವರ ಕಣ್ಣುಗುಡ್ಡೆಗೆ ಹಾನಿ ಮಾಡಿದಂತೆ.
9 ಬಾಬಿಲೋನಿನ ಜನರು ನನ್ನ ಜನರನ್ನು ತೆಗೆದುಕೊಂಡು ಹೋಗಿ ತಮ್ಮ ಗುಲಾಮರನ್ನಾಗಿ ಮಾಡಿದರು.
ಆದರೆ ನಾನು ಅವರನ್ನು ಹೊಡೆಯುವೆನು.
ಅವರನ್ನು ನನ್ನ ಜನರ ಗುಲಾಮರನ್ನಾಗಿ ಮಾಡುವೆನು.”
ಆಗ ಯೆಹೋವ ದೇವರು ನನ್ನನ್ನು ಕಳುಹಿಸಿದನೆಂಬುದು ನಿಮಗೆ ಗೊತ್ತಾಗುವದು.
10 ಯೆಹೋವನು ಹೀಗೆನ್ನುತ್ತಾನೆ,
“ಚೀಯೋನೇ, ಆನಂದಿಸು, ಯಾಕೆಂದರೆ ನಾನು ಬಂದು
ನಿಮ್ಮ ಪಟ್ಟಣದಲ್ಲಿ ವಾಸಿಸುವೆನು.
11 ಆ ಸಮಯದಲ್ಲಿ ವಿವಿಧ ಜನಾಂಗಗಳ ಜನರು
ನನ್ನನ್ನು ನೋಡಲು ಬರುವರು.
ಅವರು ನನ್ನ ಜನರಾಗುವರು.
ಮತ್ತು ನಾನು ನಿಮ್ಮ ನಗರದಲ್ಲಿ ವಾಸಿಸುವೆನು.”
ಆಗ ಸರ್ವಶಕ್ತನಾದ ದೇವರು ನನ್ನನ್ನು ಕಳುಹಿಸಿದ್ದಾನೆಂದು
ನಿಮಗೆ ಗೊತ್ತಾಗುವುದು.
12 ಯೆಹೋವನು ತಿರುಗಿ ಜೆರುಸಲೇಮನ್ನು ತನ್ನ ವಿಶೇಷ ನಗರವನ್ನಾಗಿ ಆರಿಸಿಕೊಳ್ಳುವನು.
ಯೆಹೂದವು ಆ ಪವಿತ್ರ ದೇಶದಲ್ಲಿರುವ ಆತನ ಪಾಲು.
13 ಎಲ್ಲರೂ ಮೌನವಾಗಿರಿ.
ಯೆಹೋವನು ತನ್ನ ಪರಿಶುದ್ಧ ನಿವಾಸದಿಂದ ಹೊರಬರುತ್ತಿದ್ದಾನೆ.
ಕೊಳದ ಬಳಿ ಗುಣಹೊಂದಿದ ರೋಗಿ
5 ತರುವಾಯ ಯೇಸು ಯೆಹೂದ್ಯರ ಒಂದು ಹಬ್ಬಕ್ಕಾಗಿ ಜೆರುಸಲೇಮಿಗೆ ಹೋದನು. 2 ಜೆರುಸಲೇಮಿನಲ್ಲಿ ಐದು ಮಂಟಪಗಳಿಂದ ಕೂಡಿದ ಒಂದು ಕೊಳವಿದೆ. ಯೆಹೂದ್ಯರ ಭಾಷೆಯಲ್ಲಿ ಅದಕ್ಕೆ “ಬೆತ್ಸಥ” ಎಂದು ಕರೆಯುತ್ತಾರೆ. ಈ ಕೊಳವು “ಕುರಿಬಾಗಿಲು” ಎಂಬ ಸ್ಥಳದ ಸಮೀಪದಲ್ಲಿದೆ. 3 ಕೊಳದ ಬಳಿಯಲ್ಲಿದ್ದ ಮಂಟಪಗಳಲ್ಲಿ ಅನೇಕ ರೋಗಿಗಳು ಬಿದ್ದುಕೊಂಡಿರುತ್ತಿದ್ದರು. ಅವರಲ್ಲಿ ಕೆಲವರು ಕುರಡರಾಗಿದ್ದರು, ಕೆಲವರು ಕುಂಟರಾಗಿದ್ದರು, ಮತ್ತೆ ಕೆಲವರು, ಪಾರ್ಶ್ವವಾಯು ರೋಗಿಗಳಾಗಿದ್ದರು.[a] 4 [b] 5 ಮೂವತ್ತೆಂಟು ವರ್ಷಗಳಿಂದ ರೋಗಿಯಾಗಿದ್ದ ಒಬ್ಬನು ಅಲ್ಲಿ ಬಿದ್ದುಕೊಂಡಿದ್ದನು. 6 ಯೇಸು ಅವನನ್ನು ನೋಡಿದನು. ಅವನು ಬಹುಕಾಲದಿಂದ ರೋಗಿಯಾಗಿರುವುದು ಆತನಿಗೆ ಗೊತ್ತಿತ್ತು. ಆದ್ದರಿಂದ ಆತನು ಅವನಿಗೆ, “ಗುಣಹೊಂದಲು ನಿನಗೆ ಅಪೇಕ್ಷೆ ಇದೆಯಾ?” ಎಂದು ಕೇಳಿದನು.
7 ಆ ರೋಗಿಯು, “ಅಯ್ಯಾ, ನೀರು ಉಕ್ಕುವಾಗ ಕೊಳದೊಳಗೆ ಇಳಿದುಹೋಗಲು ನನಗೆ ಯಾರೂ ಸಹಾಯ ಮಾಡುವುದಿಲ್ಲ. ನಾನು ಎಲ್ಲರಿಗಿಂತ ಮೊದಲೇ ನೀರಿಗೆ ಇಳಿಯಲು ಪ್ರಯತ್ನಿಸುವೆ. ಆದರೆ ಪ್ರತಿಸಲವೂ ನನಗಿಂತ ಮೊದಲೇ ಮತ್ತೊಬ್ಬನು ಇಳಿದುಬಿಡುತ್ತಾನೆ” ಎಂದು ಹೇಳಿದನು.
8 ಆಗ ಯೇಸು, “ಎದ್ದುನಿಲ್ಲು! ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ” ಎಂದು ಹೇಳಿದನು. 9 ಆ ಕ್ಷಣವೇ ಆ ಮನುಷ್ಯನು ಗುಣಹೊಂದಿ, ತನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆದನು.
ಇದೆಲ್ಲಾ ನಡೆದದ್ದು ಸಬ್ಬತ್‌ದಿನದಲ್ಲಿ. 10 ಆದ್ದರಿಂದ ಯೆಹೂದ್ಯರು ಗುಣಹೊಂದಿದ ಆ ವ್ಯಕ್ತಿಗೆ, “ಇಂದು ಸಬ್ಬತ್‌ದಿನ. ನೀನು ಸಬ್ಬತ್‌ದಿನದಲ್ಲಿ[c] ಹಾಸಿಗೆಯನ್ನು ಹೊತ್ತುಕೊಂಡು ಹೋಗುವುದು ನಮ್ಮ ಧರ್ಮಶಾಸ್ತ್ರಕ್ಕೆ ವಿರುದ್ಧವಾದದ್ದು” ಎಂದರು.
11 ಅದಕ್ಕೆ ಅವನು, “ನನ್ನನ್ನು ಗುಣಪಡಿಸಿದವನೇ, ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎಂದು ಹೇಳಿದನು” ಎಂಬುದಾಗಿ ಉತ್ತರಿಸಿದನು.
12 ಅದಕ್ಕೆ ಅವರು, “ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆಯಲು ನಿನಗೆ ಹೇಳಿದವನು ಯಾರು?” ಎಂದು ಕೇಳಿದರು.
13 ಆದರೆ ಗುಣಹೊಂದಿದ್ದ ವ್ಯಕ್ತಿಗೆ ತನ್ನನ್ನು ಗುಣಪಡಿಸಿದವನು ಯಾರೆಂಬುದು ಗೊತ್ತಿರಲಿಲ್ಲ. ಆ ಸ್ಥಳದಲ್ಲಿ ಅನೇಕ ಜನರಿದ್ದರು. ಯೇಸು ಆ ಸ್ಥಳದಿಂದ ನುಸುಳಿಕೊಂಡು ಹೊರಟುಹೋದನು.
14 ಅನಂತರ ಯೇಸು ಆ ಮನುಷ್ಯನನ್ನು ದೇವಾಲಯದಲ್ಲಿ ಕಂಡು ಅವನಿಗೆ, “ನೋಡು, ಈಗ ನೀನು ಗುಣಹೊಂದಿರುವೆ. ಆದರೆ ಪಾಪ ಮಾಡುವುದನ್ನು ಬಿಟ್ಟುಬಿಡು. ಇಲ್ಲದಿದ್ದರೆ ಹೆಚ್ಚಿನ ಕೇಡು ನಿನಗೆ ಸಂಭವಿಸಬಹುದು!” ಎಂದು ಹೇಳಿದನು.
15 ಆಗ ಆ ಮನುಷ್ಯನು ಆ ಯೆಹೂದ್ಯರ ಬಳಿಗೆ ಹೋಗಿ ತನ್ನನ್ನು ಗುಣಪಡಿಸಿದವನು ಯೇಸುವೇ ಎಂದು ತಿಳಿಸಿದನು.
16 ಯೇಸು ಈ ಕಾರ್ಯಗಳನ್ನು ಸಬ್ಬತ್‌ದಿನದಲ್ಲಿ ಮಾಡುತ್ತಿದ್ದನು. ಈ ಕಾರಣದಿಂದಾಗಿ ಯೆಹೂದ್ಯರು ಯೇಸುವನ್ನು ಹಿಂಸಿಸತೊಡಗಿದರು. 17 ಆದರೆ ಯೇಸು ಅವರಿಗೆ, “ನನ್ನ ತಂದೆಯು ತನ್ನ ಕಾರ್ಯವನ್ನು ಎಂದಿಗೂ ನಿಲ್ಲಿಸುವುದಿಲ್ಲ. ಆದ್ದರಿಂದ ನಾನು ಸಹ ಕಾರ್ಯನಿರತನಾಗಿದ್ದೇನೆ” ಎಂದು ತನ್ನನ್ನು ಪ್ರತಿಪಾದಿಸಿಕೊಂಡನು.
18 ಯೇಸು ಸಬ್ಬತ್ತನ್ನು ಉಲ್ಲಂಘಿಸಿದ್ದಲ್ಲದೆ ದೇವರನ್ನು ತನ್ನ ತಂದೆಯೆಂದು ಹೇಳಿಕೊಂಡು ತನ್ನನ್ನು ದೇವರಿಗೆ ಸರಿಸಮಾನನನ್ನಾಗಿ ಮಾಡಿಕೊಳ್ಳುತ್ತಿದ್ದಾನೆಂದು ಯೆಹೂದ್ಯರು ಆತನನ್ನು ಕೊಲ್ಲಲು ಮತ್ತಷ್ಟು ಪ್ರಯತ್ನಿಸಿದರು.
ಯೇಸುವಿಗೆ ದೇವರ ಅಧಿಕಾರವಿದೆ
19 ಅದಕ್ಕೆ ಉತ್ತರವಾಗಿ ಆತನು ಹೀಗೆಂದನು: “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಮಗನು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು; ತಂದೆಯು ಮಾಡುವುದನ್ನು ಕಂಡು ತಾನೂ ಹಾಗೆಯೇ ಮಾಡುತ್ತಾನೆ. ತಂದೆಯು ಮಾಡುವ ಕಾರ್ಯಗಳನ್ನೇ ಮಗನೂ ಮಾಡುತ್ತಾನೆ. 20 ತಂದೆಯು ಮಗನನ್ನು ಪ್ರೀತಿಸುವನು ಮತ್ತು ತಾನು ಮಾಡುವ ಎಲ್ಲಾ ಕಾರ್ಯಗಳನ್ನು ಮಗನಿಗೆ ತೋರಿಸುವನು. ಆದರೆ ಇದಕ್ಕಿಂತಲೂ ಹೆಚ್ಚಿನ ಕಾರ್ಯಗಳನ್ನು ತಂದೆಯು ಮಗನಿಗೆ ತೋರಿಸುವನು. ಆಗ ನೀವೆಲ್ಲರೂ ಆಶ್ಚರ್ಯಚಕಿತರಾಗುವಿರಿ. 21 ತಂದೆಯು ಸತ್ತವರನ್ನು ಎಬ್ಬಿಸಿ ಅವರಿಗೆ ಜೀವ ಕೊಡುತ್ತಾನೆ. ಅದೇ ರೀತಿಯಲ್ಲಿ ಮಗನು ತಾನು ಬಯಸಿದವರಿಗೆ ಜೀವವನ್ನು ಕೊಡುತ್ತಾನೆ.
22 “ಇದಲ್ಲದೆ ತಂದೆಯು ಯಾರಿಗೂ ತೀರ್ಪು ಮಾಡುವುದಿಲ್ಲ. ಆದರೆ ತಂದೆಯು ತೀರ್ಪು ಮಾಡುವ ಅಧಿಕಾರವನ್ನೆಲ್ಲಾ ಮಗನಿಗೆ ಕೊಟ್ಟಿದ್ದಾನೆ. 23 ಜನರು ತಂದೆಯನ್ನು ಗೌರವಿಸುವಂತೆ ಮಗನನ್ನು ಗೌರವಿಸಬೇಕೆಂದು ದೇವರು ಹೀಗೆ ಮಾಡಿದನು. ಮಗನನ್ನು ಸನ್ಮಾನಿಸದವನು ಆತನನ್ನು ಕಳುಹಿಸಿರುವ ತಂದೆಯನ್ನೂ ಸನ್ಮಾನಿಸದವನಾಗಿದ್ದಾನೆ.
24 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನ ಮಾತನ್ನು ಕೇಳಿ ನನ್ನನ್ನು ಕಳುಹಿಸಿದಾತನನ್ನು ನಂಬುವವನು ನಿತ್ಯಜೀವವನ್ನು ಹೊಂದಿದ್ದಾನೆ. ಅವನಿಗೆ ಅಪರಾಧಿಯೆಂಬ ತೀರ್ಪಾಗುವುದಿಲ್ಲ. ಅವನು ಈಗಾಗಲೇ ಮರಣವನ್ನು ದಾಟಿ ಜೀವಕ್ಕೆ ಪ್ರವೇಶಿಸಿದ್ದಾನೆ. 25 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸತ್ತುಹೋದವರು ದೇವರ ಮಗನ ಸ್ವರವನ್ನು ಕೇಳುವ ಕಾಲ ಬರುತ್ತದೆ. ಅದು ಈಗಲೇ ಬಂದಿದೆ. ಕೇಳಿ ಸ್ವೀಕರಿಸಿಕೊಳ್ಳುವವರು ಜೀವವನ್ನು ಹೊಂದುವರು. 26 ತಂದೆಯು ಜೀವಕೊಡುವ ಶಕ್ತಿಯನ್ನು ತಾನು ಹೊಂದಿರುವಂತೆ ಮಗನಿಗೂ ಜೀವಕೊಡುವ ಶಕ್ತಿಯನ್ನು ಅನುಗ್ರಹಿಸಿದನು, 27 ಮತ್ತು ಎಲ್ಲಾ ಜನರಿಗೆ ತೀರ್ಪುಮಾಡುವ ಅಧಿಕಾರವನ್ನು ತಂದೆಯು ಮಗನಿಗೂ ಕೊಟ್ಟಿದ್ದಾನೆ. ಏಕೆಂದರೆ ಆ ಮಗನು ಮನುಷ್ಯಕುಮಾರನಾಗಿದ್ದಾನೆ.
28 “ಇದರ ಬಗ್ಗೆ ಆಶ್ಚರ್ಯಪಡಬೇಡಿರಿ. ಏಕೆಂದರೆ ಸಮಾಧಿಗಳಲ್ಲಿರುವ ಜನರೆಲ್ಲರೂ ಆತನ ಸ್ವರವನ್ನು ಕೇಳುವ ಕಾಲ ಬರುತ್ತದೆ. 29 ಆಗ ಅವರು ತಮ್ಮ ಸಮಾಧಿಗಳಿಂದ ಎದ್ದುಬರುವರು. ಜೀವನದಲ್ಲಿ ಒಳ್ಳೆಯದನ್ನು ಮಾಡಿದ ಜನರು ಪುನರುತ್ಥಾನಗೊಂಡು ನಿತ್ಯಜೀವವನ್ನು ಹೊಂದಿಕೊಳ್ಳುವರು. ಆದರೆ ಕೆಟ್ಟದ್ದನ್ನು ಮಾಡಿದವರಿಗೆ ತೀರ್ಪಿಗಾಗಿ ಪುನರುತ್ಥಾನವಾಗುವುದು.
30 “ನಾನು ಒಬ್ಬಂಟಿಗನಾಗಿ ಏನೂ ಮಾಡಲಾರೆನು. ನಾನು ಕೇಳಿದ್ದಕ್ಕನುಸಾರವಾಗಿ ತೀರ್ಪು ಮಾಡುತ್ತೇನೆ. ಆದ್ದರಿಂದ ನನ್ನ ತೀರ್ಪು ಸರಿಯಾದದ್ದು. ಏಕೆಂದರೆ, ನಾನು ನನ್ನನ್ನು ಮೆಚ್ಚಿಸಲು ಪ್ರಯತ್ನಿಸದೆ ನನ್ನ ತಂದೆಯನ್ನು ಮೆಚ್ಚಿಸಲು ಪ್ರಯತ್ನಿಸುತ್ತೇನೆ.
ಯೆಹೂದ್ಯ ನಾಯಕರಿಗೆ ಯೇಸು ಹೇಳಿದ ಅಧಿಕ ವಿಷಯಗಳು
31 “ನನ್ನ ವಿಷಯವಾಗಿ ನಾನೇ ಹೇಳಿಕೊಂಡರೆ, ನನ್ನ ಸಾಕ್ಷಿಯು ಸತ್ಯವಾದದ್ದಲ್ಲ. 32 ಆದರೆ ನನ್ನ ವಿಷಯವಾಗಿ ಜನರಿಗೆ ಹೇಳುವ ಮತ್ತೊಬ್ಬ ವ್ಯಕ್ತಿಯಿದ್ದಾನೆ. ನನ್ನ ಬಗ್ಗೆ ಅವನು ಹೇಳುವ ಸಂಗತಿಗಳು ಸತ್ಯವಾಗಿವೆಯೆಂದು ನನಗೆ ಗೊತ್ತಿದೆ.
33 “ನೀವು ಯೋಹಾನನ ಬಳಿಗೆ ಜನರನ್ನು ಕಳುಹಿಸಿದ್ದಿರಿ. ಅವನು ನಿಮಗೆ ಸತ್ಯದ ಬಗ್ಗೆ ತಿಳಿಸಿದನು. 34 ಆದರೆ ನನ್ನ ಬಗ್ಗೆ ಜನರಿಗೆ ತಿಳಿಸುವುದಕ್ಕಾಗಿ ನನಗೆ ಮನುಷ್ಯನೊಬ್ಬನ ಅಗತ್ಯವಿಲ್ಲ. ಆದರೆ ನಿಮಗೆ ರಕ್ಷಣೆಯಾಗಬೇಕೆಂದು ನಾನು ಈ ಸಂಗತಿಗಳನ್ನು ಹೇಳುತ್ತಿದ್ದೇನೆ. 35 ಯೋಹಾನನು ಉರಿಯುವ ದೀಪದಂತೆ ಬೆಳಕನ್ನು ಕೊಟ್ಟನು ಮತ್ತು ನೀವು ಅವನ ಬೆಳಕನ್ನು ಸ್ವಲ್ಪಕಾಲ ಸಂತೋಷದಿಂದ ಅನುಭವಿಸಿದಿರಿ.
36 “ಆದರೆ ನನ್ನ ಬಗ್ಗೆ ನನ್ನಲ್ಲಿ ಯೋಹಾನನಿಗಿಂತಲೂ ಹೆಚ್ಚಿನ ಸಾಕ್ಷಿಗಳಿವೆ. ನಾನು ಮಾಡುವ ಕಾರ್ಯಗಳೇ ನನ್ನ ಸಾಕ್ಷಿಗಳಾಗಿವೆ. ತಂದೆಯು ನನಗೆ ಕೊಟ್ಟಿರುವ ಈ ಕಾರ್ಯಗಳೇ, ತಂದೆಯು ನನ್ನನ್ನು ಕಳುಹಿಸಿಕೊಟ್ಟಿದ್ದಾನೆ ಎಂಬುದನ್ನು ತೋರಿಸುತ್ತವೆ. 37 ಅಲ್ಲದೆ ನನ್ನನ್ನು ಕಳುಹಿಸಿದ ತಂದೆಯು ನನ್ನ ಬಗ್ಗೆ ತಾನೇ ಸಾಕ್ಷಿ ಕೊಟ್ಟಿದ್ದಾನೆ. ಆದರೆ ನೀವು ಆತನ ಧ್ವನಿಯನ್ನು ಎಂದೂ ಕೇಳಿಲ್ಲ. ಆತನು ಹೇಗಿದ್ದಾನೆ ಎಂಬುದನ್ನು ನೀವು ಎಂದೂ ಕಂಡಿಲ್ಲ. 38 ತಂದೆಯ ಉಪದೇಶವು ನಿಮ್ಮಲ್ಲಿ ನೆಲೆಸಿಲ್ಲ. ಏಕೆಂದರೆ ತಂದೆಯು ಕಳುಹಿಸಿರುವಾತನನ್ನು ನೀವು ನಂಬುವುದಿಲ್ಲ. 39 ನೀವು ಪವಿತ್ರ ಗ್ರಂಥವನ್ನು ಜಾಗ್ರತೆಯಿಂದ ಅಧ್ಯಯನ ಮಾಡುತ್ತೀರಿ. ಆ ಪವಿತ್ರ ಗ್ರಂಥವು ನಿಮಗೆ ನಿತ್ಯಜೀವವನ್ನು ಕೊಡುತ್ತದೆ ಎಂಬುದು ನಿಮ್ಮ ಆಲೋಚನೆ. ಅದೇ ಪವಿತ್ರ ಗ್ರಂಥವು ನನ್ನ ಬಗ್ಗೆ ತಿಳಿಸುತ್ತದೆ! 40 ಆದರೆ ನೀವು ಬಯಸುವ ಆ ಜೀವವನ್ನು ನನ್ನ ಬಳಿಗೆ ಬಂದು ಹೊಂದಿಕೊಳ್ಳಲು ನಿಮಗೆ ಇಷ್ಟವಿಲ್ಲ.
41 “ಮನುಷ್ಯರಿಂದ ಬರುವ ಹೊಗಳಿಕೆಯು ನನಗೆ ಬೇಕಾಗಿಲ್ಲ. 42 ಆದರೆ ನಾನು ನಿಮ್ಮನ್ನು ಬಲ್ಲೆನು. ದೇವರ ಮೇಲೆ ನಿಮಗೆ ಪ್ರೀತಿಯಿಲ್ಲವೆಂದು ನನಗೆ ಗೊತ್ತಿದೆ. 43 ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ. ನಾನು ಆತನಿಗೋಸ್ಕರ ಮಾತಾಡುತ್ತೇನೆ. ಆದರೆ ನೀವು ನನ್ನನ್ನು ಸ್ವೀಕರಿಸಿಕೊಳ್ಳುವುದಿಲ್ಲ. ಮತ್ತೊಬ್ಬನು ಬಂದು ತನಗೋಸ್ಕರವಾಗಿ ಮಾತಾಡಿದರೆ ನೀವು ಅವನನ್ನು ಸ್ವೀಕರಿಸಿಕೊಳ್ಳುತ್ತೀರಿ. 44 ನೀವು ಪರಸ್ಪರ ಸನ್ಮಾನವನ್ನು ಬಯಸುತ್ತೀರಿ. ಆದರೆ ಒಬ್ಬನೇ ದೇವರಿಂದ ಬರುವ ಸನ್ಮಾನವನ್ನು ಪಡೆದುಕೊಳ್ಳಲು ನೀವೆಂದೂ ಪ್ರಯತ್ನಿಸುವುದಿಲ್ಲ. ಹೀಗಿರಲು ನೀವು ಹೇಗೆ ನಂಬಬಲ್ಲಿರಿ? 45 ನಾನು ತಂದೆಯ ಮುಂದೆ ನಿಂತುಕೊಂಡು ನಿಮ್ಮನ್ನು ತಪ್ಪಿತಸ್ಥರೆಂಬುದಾಗಿ ಹೇಳುತ್ತೇನೆಂದು ಯೋಚಿಸಬೇಡಿರಿ. ನಿಮ್ಮನ್ನು ರಕ್ಷಿಸುತ್ತಾನೆಂದು ನೀವು ನಿರೀಕ್ಷಿಸಿಕೊಂಡಿರುವ ಮೋಶೆಯೇ ನಿಮ್ಮ ಮೇಲೆ ದೂರು ಹೇಳುವನು. 46 ನೀವು ಮೋಶೆಯನ್ನು ನಿಜವಾಗಿಯೂ ನಂಬಿದ್ದರೆ, ನನ್ನನ್ನೂ ನಂಬುತ್ತಿದ್ದಿರಿ. ಯಾಕೆಂದರೆ ಅವನು ನನ್ನ ವಿಷಯವಾಗಿ ಬರೆದಿದ್ದಾನೆ. 47 ಆದರೆ ಮೋಶೆ ಬರೆದದ್ದನ್ನು ನೀವು ನಂಬುವುದಿಲ್ಲ. ಹೀಗಿರಲು ನಾನು ಹೇಳುವ ಸಂಗತಿಗಳನ್ನು ನೀವು ಹೇಗೆ ನಂಬಬಲ್ಲಿರಿ?”
Kannada Holy Bible: Easy-to-Read Version. All rights reserved. © 1997 Bible League International