M’Cheyne Bible Reading Plan
ಆಸನ ಕೊನೆಯ ವರ್ಷಗಳು
16 ಆಸನ ಆಳ್ವಿಕೆಯ ಮೂವತ್ತಾರನೆಯ ವರ್ಷದಲ್ಲಿ ಇಸ್ರೇಲಿನ ರಾಜನಾದ ಬಾಷನು ಆಸನ ಸಂಗಡ ಯುದ್ಧಕ್ಕೆ ಹೊರಟನು. ಅವನು ರಾಮ ಎಂಬ ಪಟ್ಟಣವನ್ನು ಕೋಟೆಯನ್ನಾಗಿ ಪರಿವರ್ತಿಸಿ, ಯೆಹೂದದ ರಾಜನಾದ ಆಸನ ಬಳಿಗೆ ಹೋಗುವುದಕ್ಕಾಗಲಿ ಬರುವುದಕ್ಕಾಗಲಿ ಯಾರಿಗೂ ಆಗದಂತೆ ಮಾಡಿದನು. 2 ಆಗ ಆಸನು ದೇವಾಲಯದಲ್ಲಿಯೂ ಅರಮನೆಯಲ್ಲಿಯೂ ಶೇಖರಿಸಿಟ್ಟಿದ್ದ ಬೆಳ್ಳಿಬಂಗಾರಗಳನ್ನೆಲ್ಲಾ ಒಟ್ಟಾಗಿ ಸೇರಿಸಿ ದಮಸ್ಕದಲ್ಲಿದ್ದ ಅರಾಮ್ಯರ ಅರಸನಾದ ಬೆನ್ಹದದನಿಗೆ ಈ ಸಂದೇಶದೊಡನೆ ಕಳುಹಿಸಿದನು, 3 “ಬೆನ್ಹದದನೇ, ನಮ್ಮೊಂದಿಗೆ ಒಂದು ಒಪ್ಪಂದವಿರಲಿ. ನನ್ನ ತಂದೆಯೂ ನಿನ್ನ ತಂದೆಯೂ ಮಾಡಿದ್ದ ಒಪ್ಪಂದವನ್ನು ನಾವು ಮುಂದುವರಿಸೋಣ. ನೋಡು, ನಾನೀಗ ನಿನಗೆ ಬೆಳ್ಳಿಬಂಗಾರಗಳನ್ನು ಕಳುಹಿಸುತ್ತಿದ್ದೇನೆ. ನೀನೀಗ ಇಸ್ರೇಲಿನ ರಾಜನಾದ ಬಾಷನೊಡನೆ ಮಾಡಿದ್ದ ಒಪ್ಪಂದವನ್ನು ಮುರಿದುಹಾಕು. ಆಗ ಅವನು ನನಗೆ ತೊಂದರೆ ಕೊಡುವುದನ್ನು ನಿಲ್ಲಿಸುವನು.”
4 ಇದಕ್ಕೆ ಬೆನ್ಹದದನು ಒಪ್ಪಿ ತನ್ನ ಸೇನಾಪತಿಗಳನ್ನು ಇಸ್ರೇಲಿನ ಪಟ್ಟಣಗಳ ಮೇಲೆ ಆಕ್ರಮಣಮಾಡಲು ಕಳುಹಿಸಿದನು. ಅವರು ಹೋಗಿ ಇಯ್ಯೋನ್, ದಾನ್, ಅಬೇಲ್ಮಯಿಮ್ ಎಂಬ ಪಟ್ಟಣಗಳ ಮೇಲೆಯೂ ಭಂಡಾರಗಳನ್ನು ಇಟ್ಟಿದ ನಫ್ತಾಲಿ ಪ್ರಾಂತ್ಯದ ಎಲ್ಲಾ ಪಟ್ಟಣಗಳ ಮೇಲೆಯೂ ಆಕ್ರಮಣ ಮಾಡಿದರು. 5 ಇದನ್ನು ಕೇಳಿದ ಬಾಷನು ರಾಮ ಪಟ್ಟಣವನ್ನು ಕೋಟೆಯಾಗಿ ಕಟ್ಟುವ ಕೆಲಸವನ್ನು ಬಿಟ್ಟುಬಿಟ್ಟನು. 6 ಆಗ ಆಸನೂ ಇಸ್ರೇಲಿನ ಎಲ್ಲಾ ಜನರೂ ಒಟ್ಟಿಗೆ ರಾಮಕ್ಕೆ ಹೋಗಿ ಅಲ್ಲಿ ಬಾಷನು ಕೋಟೆಕಟ್ಟಲು ತಂದಿಟ್ಟಿದ್ದ ಕಲ್ಲುಮರಗಳನ್ನೆಲ್ಲಾ ತೆಗೆದು ಮಿಚ್ಪ ಮತ್ತು ಗೆಬ ಪಟ್ಟಣಗಳನ್ನು ಭದ್ರಪಡಿಸಿದರು.
7 ಆಗ ದೇವದರ್ಶಿಯಾದ ಹನಾನಿಯು ಯೆಹೂದದ ರಾಜನಾದ ಆಸನ ಬಳಿಗೆ ಬಂದು, “ಆಸನೇ, ನೀನು ದೇವರಾದ ಯೆಹೋವನ ಮೇಲೆ ಭರವಸವನ್ನಿಡುವ ಬದಲು ಅರಾಮ್ಯರ ಅರಸನ ಮೇಲೆ ಭರವಸವನ್ನಿಟ್ಟಿದ್ದರಿಂದ ಅರಾಮ್ಯರ ಸೈನ್ಯವು ನಿನ್ನ ಕೈಗೆ ಬೀಳದಂತೆ ತಪ್ಪಿಸಿಕೊಂಡಿತು. 8 ಇಥಿಯೋಪಿಯಾದವರಿಗೆ ಮತ್ತು ಲಿಬ್ಯದವರಿಗೆ ಮಹಾದೊಡ್ಡ ಸೈನ್ಯವಿತ್ತು. ಅಪರಿಮಿತವಾದ ರಥಾಶ್ವಗಳಿದ್ದವು. ಆದರೆ ಅವರನ್ನು ಸೋಲಿಸುವಂತೆ ಯೆಹೋವನು ನಿನಗೆ ಸಹಾಯಿಸಿದನು. 9 ದೇವರು ಲೋಕವನ್ನೆಲ್ಲಾ ದೃಷ್ಟಿಸಿ ನೋಡಿ ತನ್ನ ನಂಬಿಗಸ್ತರನ್ನು ಕಂಡುಕೊಂಡು ಅವರನ್ನು ಬಲಿಷ್ಠರನ್ನಾಗಿ ಮಾಡುವನು. ಆಸನೇ, ನೀನು ಮೂರ್ಖ ಕೆಲಸ ಮಾಡಿದೆ. ಇಂದಿನಿಂದ ಯಾವಾಗಲೂ ನಿನಗೆ ಯುದ್ಧಗಳಿರುತ್ತವೆ.”
10 ಇದನ್ನು ಕೇಳಿದ ಆಸನು ಹನಾನಿಯ ಮೇಲೆ ಬಹುಕೋಪಗೊಂಡು ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು. ಆಸನು ಅದೇ ಸಮಯದಲ್ಲಿ ದೇವಜನರಾದ ಕೆಲವರೊಂದಿಗೆ ಕ್ರೂರವಾಗಿ ವರ್ತಿಸಿದನು.
11 ಆಸನು ಪ್ರಾರಂಭದಿಂದ ಕೊನೆಯವರೆಗೆ ಮಾಡಿದ ಎಲ್ಲಾ ವಿಷಯಗಳು ಯೆಹೂದ ಮತ್ತು ಇಸ್ರೇಲ್ ರಾಜರ ಗ್ರಂಥದಲ್ಲಿ ಬರೆಯಲ್ಪಟ್ಟಿವೆ. 12 ಆಸನ ಆಳ್ವಿಕೆಯ ಮೂವತ್ತೊಂಭತ್ತನೆಯ ವರ್ಷದಲ್ಲಿ ಅವನ ಕಾಲಿಗೆ ರೋಗ ಬಂದಿತು. ಅದು ಅಧಿಕವಾಗಿ ಹೆಚ್ಚಿದ್ದರಿಂದ ಅವನು ಯೆಹೋವನ ಸಹಾಯವನ್ನು ಕೇಳದೆ ವೈದ್ಯರ ನೆರವನ್ನೇ ಪಡೆದನು. 13 ಆಸನು ತನ್ನ ಆಳ್ವಿಕೆಯ ನಲವತ್ತೊಂದನೆಯ ವರ್ಷದಲ್ಲಿ ತನ್ನ ಪೂರ್ವಿಕರ ಬಳಿ ಸೇರಿದನು. 14 ಅವನು ತನಗಾಗಿ ದಾವೀದನಗರದಲ್ಲಿ ಮಾಡಿಸಿದ್ದ ಸಮಾಧಿಯಲ್ಲಿಯೇ ಅವನಿಗೆ ಸಮಾಧಿಮಾಡಿದರು. ನಾನಾತರದ ಪರಿಮಳದ್ರವ್ಯಗಳಿಂದ ತುಂಬಿದ್ದ ಹಾಸಿಗೆಯ ಮೇಲೆ ಮಲಗಿಸಿದ್ದರು. ಆಮೇಲೆ ಅವನ ಗೌರವಾರ್ಥವಾಗಿ ಒಂದು ದೊಡ್ಡ ಬೆಂಕಿಕೊಂಡವನ್ನು ಮಾಡಿ ಪರಿಮಳಧೂಪವನ್ನು ಸುಟ್ಟರು.
ಯಾರು ಸುರುಳಿಯನ್ನು ಬಿಚ್ಚಬಲ್ಲರು?
5 ಸಿಂಹಾಸನದ ಮೇಲೆ ಕುಳಿತಿರುವಾತನ ಬಲಗೈಯಲ್ಲಿ ಒಂದು ಸುರುಳಿಯನ್ನು ನೋಡಿದೆನು. ಅದರ ಎರಡು ಕಡೆಗಳಲ್ಲಿಯೂ ಬರಹವಿತ್ತು. ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು. 2 ಬಲಿಷ್ಠನಾದ ದೇವದೂತನು ಗಟ್ಟಿಯಾದ ಧ್ವನಿಯಲ್ಲಿ, “ಈ ಸುರುಳಿಯ ಮುದ್ರೆಗಳನ್ನು ತೆಗೆಯುವುದಕ್ಕೆ ಯೋಗ್ಯನಾದವನು ಯಾರು?” ಎಂದು ಪ್ರಕಟಿಸಿದನು. 3 ಆದರೆ ಪರಲೋಕದಲ್ಲಾಗಲಿ ಭೂಮಂಡಲದಲ್ಲಾಗಲಿ ಪಾತಾಳದಲ್ಲಾಗಲಿ ಈ ಸುರುಳಿಯನ್ನು ಬಿಚ್ಚಿ ನೋಡುವವರು ಯಾರೂ ಇರಲಿಲ್ಲವಾದ್ದರಿಂದ 4 ನಾನು ಮತ್ತೆಮತ್ತೆ ಗೋಳಾಡಿದೆನು. 5 ಆದರೆ ಹಿರಿಯರಲ್ಲಿ ಒಬ್ಬನು ನನಗೆ, “ಅಳಬೇಡ! ಯೂದ ಕುಲದ ಸಿಂಹವಾಗಿರುವಾತನು (ಕ್ರಿಸ್ತ) ಜಯಗಳಿಸಿದನು. ಆತನು ದಾವೀದನ ಸಂತತಿಯವನು. ಆತನು ಸುರುಳಿಯನ್ನು ಮತ್ತು ಅದರ ಏಳು ಮುದ್ರೆಗಳನ್ನು ತೆರೆಯಲು ಸಮರ್ಥನಾಗಿದ್ದಾನೆ” ಎಂದು ಹೇಳಿದನು.
6 ನಂತರ ಸಿಂಹಾಸನದ ಮತ್ತು ನಾಲ್ಕು ಜೀವಿಗಳ ಮಧ್ಯೆ ಒಂದು ಕುರಿಮರಿಯನ್ನು ನಾನು ನೋಡಿದೆನು. ಹಿರಿಯರು ಸಹ ಆ ಕುರಿಮರಿಯ ಸುತ್ತಲೂ ಇದ್ದರು. ಆ ಕುರಿಮರಿಯು ಕೊಲ್ಲಲ್ಪಟ್ಟಂತಿತ್ತು. ಅದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು. ಇವು ಈ ಲೋಕಕ್ಕೆಲ್ಲಾ ಕಳುಹಿಸಲ್ಪಟ್ಟ ದೇವರ ಏಳು ಆತ್ಮಗಳಾಗಿದ್ದವು. 7 ಆ ಕುರಿಮರಿಯು ಬಂದು ಸಿಂಹಾಸನದ ಮೇಲೆ ಕುಳಿತಿರುವಾತನ ಬಲಗೈಯಿಂದ ಸುರುಳಿಯನ್ನು ತೆಗೆದುಕೊಂಡಿತು. 8 ಆಗ ನಾಲ್ಕು ಜೀವಿಗಳು ಮತ್ತು ಇಪ್ಪತ್ನಾಲ್ಕು ಮಂದಿ ಹಿರಿಯರು ಆ ಕುರಿಮರಿಯ ಮುಂದೆ ಮೊಣಕಾಲೂರಿ ನಮಸ್ಕರಿಸಿದರು. ಪ್ರತಿಯೊಬ್ಬರ ಕೈಯಲ್ಲೂ ಒಂದೊಂದು ತಂತಿವಾದ್ಯವಿತ್ತು. ಧೂಪವು ತುಂಬಿದ್ದ ಚಿನ್ನದ ಪಾತ್ರೆಗಳನ್ನು ಅವರು ಹಿಡಿದುಕೊಂಡಿದ್ದರು. ಪಾತ್ರೆಗಳು ದೇವರ ಪರಿಶುದ್ಧ ಜನರ ಪ್ರಾರ್ಥನೆಗಳಾಗಿದ್ದವು. 9 ಅವರೆಲ್ಲರೂ ಕುರಿಮರಿಗೋಸ್ಕರ ಒಂದು ಹೊಸ ಹಾಡನ್ನು ಹಾಡಿದರು:
“ನೀನು ಕೊಲ್ಲಲ್ಪಟ್ಟವನಾದ್ದರಿಂದ,
ಸುರುಳಿಯನ್ನು ತೆಗೆದುಕೊಂಡು,
ಅದರ ಮುದ್ರೆಗಳನ್ನು ಒಡೆಯುವುದಕ್ಕೆ ಯೋಗ್ಯನಾಗಿರುವೆ.
ನೀನು ನಿನ್ನ ರಕ್ತದಿಂದ (ಮರಣದಿಂದ) ಸಕಲ ಕುಲ, ಭಾಷೆ,
ಜನಾಂಗಗಳಿಂದ ಜನರನ್ನು ದೇವರಿಗಾಗಿ ಕೊಂಡುಕೊಂಡಿರುವೆ.
10 ಅವರನ್ನು ಒಂದು ರಾಜ್ಯವನ್ನಾಗಿ ಮಾಡಿದೆ; ನಮ್ಮ ದೇವರಿಗೋಸ್ಕರ ಯಾಜಕರನ್ನಾಗಿ ಮಾಡಿದೆ;
ಅವರು ಲೋಕದಲ್ಲಿ ಆಳುವರು.”
11 ನಂತರ ನಾನು ನೋಡಿದಾಗ, ಅನೇಕ ದೇವದೂತರ ಧ್ವನಿಗಳನ್ನು ಕೇಳಿದೆನು. ಈ ದೇವದೂತರು ಸಿಂಹಾಸನದ, ನಾಲ್ಕು ಜೀವಿಗಳ ಮತ್ತು ಹಿರಿಯರ ಸುತ್ತಲೂ ಇದ್ದರು. ಅವರ ಸಂಖ್ಯೆಯು ಲಕ್ಷೋಪಲಕ್ಷವಾಗಿಯೂ ಕೋಟ್ಯಾನು ಕೋಟಿಯಾಗಿಯೂ ಇತ್ತು. 12 ಈ ದೇವದೂತರು ಗಟ್ಟಿಯಾದ ಧ್ವನಿಯಿಂದ ಇಂತೆಂದರು:
“ವಧಿತನಾದ ಕುರಿಮರಿಯು ಅಧಿಕಾರವನ್ನು, ಸಂಪತ್ತನ್ನು, ಜ್ಞಾನವನ್ನು, ಬಲವನ್ನು,
ಗೌರವವನ್ನು, ಪ್ರಭಾವವನ್ನು, ಸ್ತೋತ್ರವನ್ನು ಪಡೆಯಲು ಯೋಗ್ಯನಾಗಿದ್ದಾನೆ!”
13 ಇದಲ್ಲದೆ ಆಕಾಶದಲ್ಲಿಯೂ ಭೂಮಿಯಲ್ಲಿಯೂ ಭೂಮಿಯ ಕೆಳಭಾಗದಲ್ಲೂ ಸಮುದ್ರದಲ್ಲೂ ಇರುವ ಪ್ರತಿಯೊಂದು ಜೀವಿಗಳು ಹೀಗೆ ಹೇಳುವುದನ್ನು ಕೇಳಿದೆನು:
“ಸಿಂಹಾಸನದ ಮೇಲೆ ಕುಳಿತಿರುವಾತನಿಗೂ ಕುರಿಮರಿಯಾದಾತನಿಗೂ
ಸ್ತೋತ್ರ, ಗೌರವ, ಪ್ರಭಾವ, ಅಧಿಕಾರಗಳು ಯುಗಯುಗಾಂತರಗಳಲ್ಲಿಯೂ ಇರಲಿ!”
14 ಆ ನಾಲ್ಕು ಜೀವಿಗಳು “ಆಮೆನ್!” ಎಂದು ಹೇಳಿದವು. ಹಿರಿಯರು ಮೊಣಕಾಲೂರಿ ಆರಾಧಿಸಿದರು.
ತನ್ನ ಜನರು ಹಿಂದಿರುಗಿ ಬರಬೇಕೆಂದು ಯೆಹೋವನು ಆಶಿಸುತ್ತಾನೆ
1 ಪರ್ಶಿಯಾದಲ್ಲಿ ರಾಜನಾದ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ಎಂಟನೆಯ ತಿಂಗಳಲ್ಲಿ ಬೆರೆಕ್ಯನ ಮಗನಾದ ಜೆಕರ್ಯನಿಗೆ ಯೆಹೋವನಿಂದ ಸಂದೇಶವು ದೊರಕಿತು. ಬೆರೆಕ್ಯನು ಪ್ರವಾದಿಯಾದ ಇದ್ದೋವಿನ ಮಗನು. ಇದು ಆತನ ಸಂದೇಶ:
2 ನಿಮ್ಮ ಪೂರ್ವಿಕರ ಮೇಲೆ ಯೆಹೋವನು ಬಹಳವಾಗಿ ಕೋಪಗೊಂಡಿದ್ದಾನೆ. 3 ಆದ್ದರಿಂದ ನಿನ್ನ ಜನರಿಗೆ ನೀನು ಈ ವಿಷಯಗಳನ್ನು ತಿಳಿಸಬೇಕು. ಯೆಹೋವನು ಹೇಳುವುದೇನೆಂದರೆ, “ನನ್ನ ಬಳಿಗೆ ಹಿಂದಿರುಗಿರಿ. ಆಗ ನಾನು ನಿಮ್ಮ ಬಳಿಗೆ ಹಿಂದಿರುಗುವೆನು” ಇದು ಸರ್ವಶಕ್ತನಾದ ಯೆಹೋವನ ಮಾತುಗಳು.
4 ಯೆಹೋವನು ಹೀಗೆನ್ನುತ್ತಾನೆ: “ನಿಮ್ಮ ಪೂರ್ವಿಕರಂತೆ ಆಗಬೇಡಿರಿ. ಹಿಂದಿನ ಕಾಲದಲ್ಲಿ ಪ್ರವಾದಿಗಳು ಅವರ ಸಂಗಡ ಮಾತನಾಡಿದರು. ಅವರು, ‘ಸರ್ವಶಕ್ತನಾದ ಯೆಹೋವನು ನಿಮ್ಮ ಕೆಟ್ಟಜೀವಿತವನ್ನು ಬದಲಾಯಿಸಲು ಇಷ್ಟಪಡುತ್ತಾನೆ. ದುಷ್ಕೃತ್ಯಗಳನ್ನು ಮಾಡುವದನ್ನು ನಿಲ್ಲಿಸಿರಿ.’ ಆದರೆ ನಿಮ್ಮ ಪೂರ್ವಿಕರು ನನ್ನ ಮಾತುಗಳನ್ನು ಕೇಳಲಿಲ್ಲ.” ಇದು ಯೆಹೋವನ ನುಡಿ.
5 ಯೆಹೋವನು ಹೀಗೆನ್ನುತ್ತಾನೆ: “ನಿಮ್ಮ ಪೂರ್ವಿಕರು ದಾಟಿಹೋದರು. ಆ ಪ್ರವಾದಿಗಳು ನಿತ್ಯಕಾಲಕ್ಕೂ ಜೀವಿಸಲಿಲ್ಲ. 6 ಪ್ರವಾದಿಗಳು ನನ್ನ ಸೇವಕರು. ನಿಮ್ಮ ಪೂರ್ವಿಕರಿಗೆ ನ್ಯಾಯಪ್ರಮಾಣಗಳನ್ನು ಬೋಧಿಸಲು ನಾನು ಅವರನ್ನು ಉಪಯೋಗಿಸಿದೆನು. ನಿಮ್ಮ ಪೂರ್ವಿಕರು ಕಟ್ಟಕಡೆಗೆ ಪಾಠವನ್ನು ಕಲಿತರು. ಅವರು, ‘ಸರ್ವಶಕ್ತನಾದ ಯೆಹೋವನು ತಾನು ಹೇಳಿದ್ದನ್ನು ನೆರವೇರಿಸಿದನು. ನಮ್ಮ ದುಷ್ಕೃತ್ಯಗಳಿಗಾಗಿ ನಮ್ಮನ್ನು ಶಿಕ್ಷಿಸಿದನು’ ಎಂದು ಹೇಳಿದರು ಮತ್ತು ದೇವರ ಕಡೆಗೆ ತಿರುಗಿದರು.”
ನಾಲ್ಕು ಕುದುರೆಗಳು
7 ಪರ್ಶಿಯದ ರಾಜನಾದ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ಹನ್ನೊಂದನೇ ತಿಂಗಳಿನ (ಶೆಬಾಟ್) ಇಪ್ಪತ್ತನಾಲ್ಕನೆಯ ದಿವಸ ಜೆಕರ್ಯನು ಯೆಹೋವನಿಂದ ಇನ್ನೊಂದು ಸಂದೇಶವನ್ನು ಪಡೆದನು. ಈತನು ಪ್ರವಾದಿಯಾದ ಇದ್ದೋವಿನ ಮಗನಾದ ಬೆರೆಕ್ಯನ ಮಗನು. ಆ ಸಂದೇಶವು ಹೀಗಿತ್ತು.
8 ರಾತ್ರಿವೇಳೆಯಲ್ಲಿ ಒಬ್ಬ ಮನುಷ್ಯನು ಕೆಂಪು ಬಣ್ಣದ ಕುದುರೆಯ ಮೇಲೆ ಸವಾರಿ ಮಾಡುವದನ್ನು ಕಂಡೆನು. ಅವನು ಕಣಿವೆಯ ಸುಗಂಧ ಮರಗಳ ಬಳಿ ನಿಂತಿದ್ದನು. ಅವನ ಹಿಂದೆ ಕೆಂಪು, ಕಂದು ಮತ್ತು ಬಿಳಿ ಕುದುರೆಗಳು ನಿಂತಿದ್ದವು. 9 ಆಗ ನಾನು, “ಸ್ವಾಮೀ, ಈ ಕುದುರೆಗಳು ಯಾಕೆ?” ಎಂದು ವಿಚಾರಿಸಿದೆನು.
ಆಗ ನನ್ನೊಡನೆ ಮಾತಾಡುತ್ತಿದ್ದ ದೇವದೂತನು ಉತ್ತರಿಸುತ್ತಾ, “ಈ ಕುದುರೆಗಳು ಯಾತಕ್ಕಾಗಿ ಎಂದು ನಾನು ನಿನಗೆ ತೋರಿಸುತ್ತೇನೆ” ಅಂದನು.
10 ಆಗ ಸುಗಂಧ ಮರಗಳ ಬಳಿ ನಿಂತಿದ್ದ ಮನುಷ್ಯನು, “ಈ ಕುದುರೆಗಳು ಭೂಮಿಯ ಮೇಲೆ ಅತ್ತಿತ್ತ ತಿರುಗಾಡುವಂತೆ ಯೆಹೋವನು ಕಳುಹಿಸಿದನು” ಎಂದನು.
11 ಆಗ ಯೆಹೋವನ ದೂತನೊಂದಿಗೆ ಆ ಕುದುರೆಗಳು ಮಾತನಾಡುತ್ತಾ, “ನಾವು ಭೂಮಿಯ ಮೇಲೆ ಅತ್ತಿತ್ತ ಸಂಚರಿಸಿದೆವು. ಎಲ್ಲೆಲ್ಲಿಯೂ ಶಾಂತಿ ಸಮಾಧಾನವಿದೆ” ಎಂದವು.
12 ಆಗ ಯೆಹೋವನ ದೂತನು, “ಯೆಹೋವನೇ, ಜೆರುಸಲೇಮನ್ನೂ ಯೆಹೂದದ ಇತರ ನಗರಗಳನ್ನೂ ಸಂತೈಸಲು ಇನ್ನೆಷ್ಟು ಕಾಲಬೇಕು? ಈ ಪಟ್ಟಣಗಳ ಮೇಲೆ ಈಗಾಗಲೇ ಎಪ್ಪತ್ತು ವರ್ಷಗಳ ಕಾಲ ನಿನ್ನ ಕೋಪವನ್ನು ಪ್ರದರ್ಶಿಸಿರುವೆ” ಎಂದು ಹೇಳಿದನು.
13 ಆಗ ನನ್ನೊಡನೆ ಮಾತಾಡುತ್ತಿದ್ದ ದೇವದೂತನಿಗೆ ಯೆಹೋವನು ಉತ್ತರಿಸಿ ಅವನನ್ನು ಒಳ್ಳೆಯ ಆದರಣೆಯ ಮಾತುಗಳಿಂದ ಸಂತೈಸಿದನು.
14 ಆಗ ಆ ದೂತನು ಜನರಿಗೆ ತಿಳಿಸಲು ಈ ವಿಷಯವನ್ನು ನನಗೆ ಹೇಳಿದನು: ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ,
“ಜೆರುಸಲೇಮಿನ ಮೇಲೆಯೂ ಚೀಯೋನಿನ ಮೇಲೆಯೂ ನನಗೆ ಆಳವಾದ ಪ್ರೀತಿಯಿದೆ.
15 ತಾವು ಸುರಕ್ಷಿತರಾಗಿದ್ದೇವೆ ಎಂದು ನೆನಸುವ ಜನಾಂಗಗಳ ಮೇಲೆ ನಾನು ಕೋಪಗೊಳ್ಳುವೆನು.
ನಾನು ಸ್ವಲ್ಪ ಕೋಪಗೊಂಡಿದ್ದರಿಂದ
ನನ್ನ ಜನರನ್ನು ಶಿಕ್ಷಿಸಲು ಆ ಜನಾಂಗಗಳನ್ನು ಉಪಯೋಗಿಸಿಕೊಂಡೆನು.
ಆದರೆ ಆ ಜನಾಂಗಗಳು ಅತಿಯಾಗಿ ಅವರನ್ನು ಹಾನಿಮಾಡಿದರು.”
16 ಆದ್ದರಿಂದ ಯೆಹೋವನು ಹೀಗೆನ್ನುತ್ತಾನೆ: “ನಾನು ಜೆರುಸಲೇಮಿಗೆ ಹಿಂತಿರುಗಿ ಬರುವೆನು. ಬಂದು ಆಕೆಯನ್ನು ಸಂತೈಸುವೆನು.”
ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಜೆರುಸಲೇಮ್ ತಿರುಗಿ ಕಟ್ಟಲ್ಪಡುವದು ಮತ್ತು ನನ್ನ ಆಲಯವು ಅಲ್ಲಿ ಕಟ್ಟಲ್ಪಡುವದು.”
17 ಆಗ ದೂತನು: “ಈ ವಿಷಯವನ್ನು ಜನರಿಗೆ ತಿಳಿಸು, ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ:
‘ನನ್ನ ಪಟ್ಟಣಗಳು ತಿರುಗಿ ಐಶ್ವರ್ಯದಿಂದ ತುಂಬುವವು.
ಚೀಯೋನನ್ನು ನಾನು ಸಂತೈಸುವೆನು.
ನಾನು ಜೆರುಸಲೇಮನ್ನು ನನ್ನ ವಿಶೇಷ ನಗರವನ್ನಾಗಿ ಆರಿಸಿಕೊಳ್ಳುವೆನು’” ಎಂದನು.
ನಾಲ್ಕುಕೊಂಬುಗಳೂ ನಾಲ್ಕು ಕೆಲಸಗಾರರೂ
18 ಆಗ ನಾನು ಮೇಲೆ ನೋಡಿದಾಗ ನಾಲ್ಕು ಕೊಂಬುಗಳನ್ನು ಕಂಡೆನು. 19 “ಈ ಕೊಂಬುಗಳೇನು?” ಎಂದು ನಾನು ದೇವದೂತನೊಂದಿಗೆ ವಿಚಾರಿಸಿದೆನು.
ಅದಕ್ಕವನು, “ಇವು ಬಲಿಷ್ಠವಾದ ಕೊಂಬುಗಳು (ಬಲಿಷ್ಠವಾದ ಜನಾಂಗಗಳು); ಇಸ್ರೇಲ್, ಯೆಹೂದ ಮತ್ತು ಜೆರುಸಲೇಮಿನ ಜನರನ್ನು ಪರದೇಶಗಳಿಗೆ ಚದರಿಹೋಗುವಂತೆ ಮಾಡಿವೆ” ಅಂದನು.
20 ಯೆಹೋವನು ನನಗೆ ನಾಲ್ಕು ಮಂದಿ ಕೆಲಸಗಾರರನ್ನು ತೋರಿಸಿದನು. 21 “ಯಾವ ಕೆಲಸಕ್ಕಾಗಿ ಈ ಕೆಲಸಗಾರರು ಬರುತ್ತಿದ್ದಾರೆ?” ಎಂದು ನಾನು ವಿಚಾರಿಸಿದೆನು.
ಅದಕ್ಕಾತನು, “ಯೆಹೂದದ ಜನರನ್ನು ವಿದೇಶಗಳಲ್ಲಿ ಚದರಿ ಹೋಗುವಂತೆ ಮಾಡಿದ ಜನಾಂಗಗಳನ್ನು ಈ ಕೊಂಬುಗಳು ಸೂಚಿಸುತ್ತವೆ. ಈ ಕೊಂಬುಗಳು ಯೆಹೂದದ ಜನರನ್ನು ಎತ್ತಿ ಪರದೇಶಗಳಿಗೆ ಬಿಸಾಡಿದವು. ಈ ಕೊಂಬುಗಳು ಯಾರಿಗೂ ದಯೆ ತೋರಿಸಲಿಲ್ಲ. ಆದರೆ ಈ ನಾಲ್ಕು ಮಂದಿ ಕೆಲಸಗಾರರು ಆ ಕೊಂಬುಗಳಿಗೆ ಭಯಪಡಿಸಿ ಅವುಗಳನ್ನು ಎತ್ತಿ ಬಿಸಾಡಲು ಬಂದಿದ್ದಾರೆ” ಎಂದು ಹೇಳಿದನು.
ಯೇಸು ಮತ್ತು ಸಮಾರ್ಯ ಸ್ತ್ರೀಯ ಸಂಭಾಷಣೆ
4 ತಾನು ಯೋಹಾನನಿಗಿಂತಲೂ ಹೆಚ್ಚು ಶಿಷ್ಯರನ್ನು ಮಾಡಿಕೊಂಡು ಅವರಿಗೆ ದೀಕ್ಷಾಸ್ನಾನ ಮಾಡಿಸುತ್ತಿರುವ ಸುದ್ದಿಯು ಫರಿಸಾಯರಿಗೆ ತಿಳಿಯಿತೆಂಬುದು ಯೇಸುವಿಗೆ ಗೊತ್ತಾಯಿತು. 2 (ವಾಸ್ತವವಾಗಿ ಜನರಿಗೆ ದೀಕ್ಷಾಸ್ನಾನ ಕೊಟ್ಟದ್ದು ಯೇಸುವಲ್ಲ. ಆತನ ಶಿಷ್ಯರೇ ಜನರಿಗೆ ದೀಕ್ಷಾಸ್ನಾನ ಮಾಡಿಸಿದರು.) 3 ಆಗ, ಆತನು ಜುದೇಯವನ್ನು ಬಿಟ್ಟು ಮತ್ತೆ ಗಲಿಲಾಯಕ್ಕೆ ಹೋದನು. 4 ಸಮಾರ್ಯ ಪ್ರಾಂತ್ಯದ ಮೂಲಕವೇ ಗಲಿಲಾಯಕ್ಕೆ ಹೋಗಬೇಕಿತ್ತು.
5 ಯೇಸು ಸಮಾರ್ಯದ ಪಟ್ಟಣವಾದ ಸಿಖಾರ್ ಎಂಬಲ್ಲಿಗೆ ಬಂದನು. ಯಾಕೋಬನು ತನ್ನ ಮಗನಾದ ಯೋಸೇಫನಿಗೆ ಕೊಟ್ಟ ಭೂಮಿಯ ಸಮೀಪದಲ್ಲಿ ಆ ಊರಿದೆ. 6 ಯಾಕೋಬನ ಬಾವಿಯು ಅಲ್ಲಿತ್ತು. ಯೇಸು ತನ್ನ ದೀರ್ಘ ಪ್ರಯಾಣದಿಂದ ಆಯಾಸಗೊಂಡಿದ್ದನು. ಆದ್ದರಿಂದ ಆತನು ಬಾವಿಯ ಬಳಿ ಕುಳಿತುಕೊಂಡನು. ಆಗ ಸುಮಾರು ಮಧ್ಯಾಹ್ನದ ಸಮಯವಾಗಿತ್ತು. 7 ಸಮಾರ್ಯದ ಸ್ತ್ರೀಯೊಬ್ಬಳು ನೀರನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಆ ಬಾವಿಗೆ ಬಂದಳು. ಯೇಸು ಆಕೆಗೆ, “ದಯವಿಟ್ಟು, ಕುಡಿಯಲು ಸ್ವಲ್ಪ ನೀರು ಕೊಡು” ಎಂದು ಕೇಳಿದನು. 8 (ಯೇಸುವಿನ ಶಿಷ್ಯರು ಆಹಾರಪದಾರ್ಥವನ್ನು ಕೊಂಡುಕೊಂಡು ಬರಲು ಪಟ್ಟಣದೊಳಗೆ ಹೋಗಿದ್ದಾಗ ಇದು ಸಂಭವಿಸಿತು.)
9 ಸಮಾರ್ಯದ ಸ್ತ್ರೀಯು, “ಕುಡಿಯುವ ನೀರಿಗಾಗಿ ನೀನು ನನ್ನನ್ನು ಕೇಳುತ್ತಿರುವುದು ನನಗೆ ಆಶ್ಚರ್ಯವನ್ನು ಉಂಟುಮಾಡಿದೆ! ನೀನಾದರೋ ಯೆಹೂದ್ಯನು. ನಾನಾದರೋ ಸಮಾರ್ಯದವಳು!” ಎಂದು ಹೇಳಿದಳು. (ಯೆಹೂದ್ಯರು ಸಮಾರ್ಯದವರೊಂದಿಗೆ ಸ್ನೇಹದಿಂದಿರಲಿಲ್ಲ.)
10 ಯೇಸು ಆಕೆಗೆ, “ದೇವರು ಏನು ಕೊಡುತ್ತಾನೆಂಬುದು ನಿನಗೆ ಗೊತ್ತಿಲ್ಲ ಮತ್ತು ಕುಡಿಯಲು ನೀರನ್ನು ಕೇಳಿದ ನಾನು ಯಾರೆಂಬುದೂ ನಿನಗೆ ಗೊತ್ತಿಲ್ಲ. ನಿನಗೆ ಈ ಸಂಗತಿಗಳು ಗೊತ್ತಿದ್ದರೆ, ನೀನು ನನ್ನನ್ನು ಕೇಳಿಕೊಳ್ಳುತ್ತಿದ್ದೆ, ಮತ್ತು ನಾನು ನಿನಗೆ ಜೀವಜಲವನ್ನು ಕೊಡುತ್ತಿದ್ದೆ” ಎಂದನು.
11 ಆ ಸ್ತ್ರೀಯು, “ಅಯ್ಯಾ, ಆ ಜೀವಜಲ ನಿನಗೆಲ್ಲಿ ಸಿಕ್ಕುವುದು? ಬಾವಿಯು ಬಹು ಆಳವಾಗಿದೆ ಮತ್ತು ನೀರು ಸೇದುವುದಕ್ಕೆ ನಿನ್ನಲ್ಲಿ ಏನೂ ಇಲ್ಲ. 12 ನಮ್ಮ ಪಿತೃವಾದ ಯಾಕೋಬನಿಗಿಂತಲೂ ನೀನು ದೊಡ್ಡವನೋ? ನಮಗೆ ಈ ಬಾವಿಯನ್ನು ಯಾಕೋಬನೇ ಕೊಟ್ಟನು. ಸ್ವತಃ ಅವನೇ ಈ ನೀರನ್ನು ಕುಡಿದನು. ಅಲ್ಲದೆ ಅವನ ಮಕ್ಕಳು ಈ ಬಾವಿಯ ನೀರನ್ನು ಕುಡಿದರು ಮತ್ತು ಅವನ ಪಶುಗಳೆಲ್ಲಾ ಈ ಬಾವಿಯ ನೀರನ್ನು ಕುಡಿದವು” ಎಂದು ಹೇಳಿದಳು.
13 ಯೇಸು, “ಈ ನೀರನ್ನು ಕುಡಿಯುವ ಪ್ರತಿಯೊಬ್ಬನಿಗೂ ಮತ್ತೆ ದಾಹವಾಗುವುದು. 14 ಆದರೆ ನಾನು ಕೊಡುವ ನೀರನ್ನು ಕುಡಿಯುವವನಿಗೆ ದಾಹವಾಗುವುದೇ ಇಲ್ಲ. ನಾನು ಅವನಿಗೆ ಕೊಡುವ ನೀರು ಅವನೊಳಗೆ ಉಕ್ಕಿಹರಿಯುವ ನೀರಿನ ಬುಗ್ಗೆಯಾಗುವುದು. ಆ ನೀರು ಅವನಿಗೆ ನಿತ್ಯಜೀವವನ್ನು ತರುತ್ತದೆ” ಎಂದು ಉತ್ತರಕೊಟ್ಟನು.
15 ಆ ಸ್ತ್ರೀಯು ಯೇಸುವಿಗೆ, “ಅಯ್ಯಾ, ಆ ನೀರನ್ನು ನನಗೆ ಕೊಡು. ಆಗ ನನಗೆ ಮತ್ತೆಂದಿಗೂ ದಾಹವಾಗುವುದಿಲ್ಲ. ನೀರನ್ನು ತೆಗೆದುಕೊಂಡು ಹೋಗುವುದಕ್ಕಾಗಿ ನಾನು ಇಲ್ಲಿಗೆ ಮತ್ತೆ ಬರುವ ಅಗತ್ಯವೂ ಇರುವುದಿಲ್ಲ” ಎಂದು ಹೇಳಿದಳು.
16 ಯೇಸು ಆಕೆಗೆ, “ಹೋಗಿ ನಿನ್ನ ಗಂಡನನ್ನು ಕರೆದುಕೊಂಡು ಬಾ” ಎಂದನು.
17 ಆ ಸ್ತ್ರೀಯು, “ನನಗೆ ಗಂಡನಿಲ್ಲ” ಎಂದು ಹೇಳಿದಳು.
ಯೇಸು ಆಕೆಗೆ, “ಗಂಡನಿಲ್ಲವೆಂದು ಸರಿಯಾಗಿ ಹೇಳಿದೆ. 18 ನಿಜವಾಗಿಯೂ ನಿನಗೆ ಐದು ಮಂದಿ ಗಂಡಂದಿರಿದ್ದರು. ಆದರೆ ಈಗ ನೀನು ಯಾರೊಂದಿಗೆ ವಾಸಿಸುತ್ತಿರುವಿಯೋ ಅವನು ನಿನ್ನ ಗಂಡನಲ್ಲ. ನೀನು ನನಗೆ ಸತ್ಯವನ್ನು ತಿಳಿಸಿದೆ” ಎಂದು ಹೇಳಿದನು.
19 ಆ ಸ್ತ್ರೀಯು, “ಅಯ್ಯಾ, ನೀನು ಪ್ರವಾದಿಯೆಂದು ಕಾಣುತ್ತದೆ. 20 ನಮ್ಮ ಪಿತೃಗಳು ಈ ಗುಡ್ಡದ ಮೇಲೆ ಆರಾಧಿಸಿದರು. ಆದರೆ ಜನರು ಆರಾಧಿಸಬೇಕಾದ ಸ್ಥಳ ಜೆರುಸಲೇಮ್ ಎಂದು ಯೆಹೂದ್ಯರಾದ ನೀವು ಹೇಳುತ್ತೀರಲ್ಲಾ” ಎಂದಳು.
21 ಯೇಸು, “ಅಮ್ಮಾ, ನನ್ನನ್ನು ನಂಬು! ನೀವು ಇನ್ನೆಂದಿಗೂ ತಂದೆಯನ್ನು (ದೇವರನ್ನು) ಜೆರುಸಲೇಮಿನಲ್ಲಾಗಲಿ ಈ ಗುಡ್ಡದ ಮೇಲಾಗಲಿ ಆರಾಧಿಸಬೇಕಿಲ್ಲ. 22 ನೀವು ನಿಮಗೆ ತಿಳಿದಿಲ್ಲದ ಯಾವುದನ್ನೋ ಆರಾಧಿಸುತ್ತೀರಿ. ನಮಗಾದರೋ ನಾವು ಯಾರನ್ನು ಆರಾಧಿಸುತ್ತಿದ್ದೇವೆ ಎಂಬುದು ತಿಳಿದಿದೆ. ರಕ್ಷಣೆಯು ಯೆಹೂದ್ಯರಿಂದ ಬರುತ್ತದೆ. 23 ನಿಜವಾದ ಆರಾಧಕರು ತಂದೆಯ ಚಿತ್ತಕ್ಕನುಸಾರವಾಗಿ ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವ ಕಾಲ ಬರುತ್ತದೆ. ಆ ಕಾಲ ಈಗಲೇ ಬಂದಿದೆ ಮತ್ತು ಅಂಥ ಜನರೇ ತನ್ನ ಆರಾಧಕರಾಗಿರಬೇಕೆಂದು ತಂದೆಯು ಬಯಸುತ್ತಾನೆ. 24 ದೇವರು ಆತ್ಮಸ್ವರೂಪಿ. ಆದ್ದರಿಂದ ದೇವರನ್ನು ಆರಾಧಿಸುವವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸಬೇಕು” ಎಂದು ಹೇಳಿದನು.
25 ಆ ಸ್ತ್ರೀಯು, “ಮೆಸ್ಸೀಯನು ಬರುತ್ತಾನೆಂದು ನನಗೆ ಗೊತ್ತು. ಆತನು ಬಂದಾಗ ನಮಗೆ ಪ್ರತಿಯೊಂದನ್ನೂ ವಿವರಿಸುವನು” ಎಂದು ಹೇಳಿದಳು. (“ಮೆಸ್ಸೀಯನು” ಅಂದರೆ “ಕ್ರಿಸ್ತನು”)
26 ಆಗ ಯೇಸು, “ಆತನೇ ಈಗ ನಿನ್ನೊಂದಿಗೆ ಮಾತಾಡುತ್ತಿದ್ದಾನೆ. ನಾನೇ ಮೆಸ್ಸೀಯ” ಎಂದು ಹೇಳಿದನು.
27 ಆ ಸಮಯದಲ್ಲಿ ಆತನ ಶಿಷ್ಯರು ಹಿಂತಿರುಗಿ ಬಂದರು. ಯೇಸು ಒಬ್ಬ ಸ್ತ್ರೀಯೊಂದಿಗೆ ಮಾತಾಡುತ್ತಿರುವುದನ್ನು ನೋಡಿ ಅವರು ಆಶ್ಚರ್ಯಗೊಂಡರು. ಆದರೆ, “ನಿನಗೇನು ಬೇಕು?” ಎಂದಾಗಲಿ “ನೀನು ಆಕೆಯೊಂದಿಗೆ ಏಕೆ ಮಾತಾಡುತ್ತಿರುವೆ?” ಎಂದಾಗಲಿ ಅವರಲ್ಲಿ ಒಬ್ಬರೂ ಕೇಳಲಿಲ್ಲ.
28 ಬಳಿಕ ಆ ಸ್ತ್ರೀಯು, ತನ್ನ ಕೊಡವನ್ನು ಅಲ್ಲಿಯೇ ಬಿಟ್ಟು ಊರಿಗೆ ಹಿಂತಿರುಗಿ ಹೋಗಿ ಜನರಿಗೆ, 29 “ನಾನು ಈವರೆಗೆ ಮಾಡಿರುವ ಪ್ರತಿಯೊಂದನ್ನೂ ಒಬ್ಬ ವ್ಯಕ್ತಿ ನನಗೆ ತಿಳಿಸಿದನು. ಬಂದು ಅವನನ್ನು ನೋಡಿರಿ. ಆತನೇ ಕ್ರಿಸ್ತನಿರಬಹುದು” ಎಂದು ಹೇಳಿದಳು. 30 ಆದ್ದರಿಂದ ಜನರು ಆತನನ್ನು ನೋಡಲು ಪಟ್ಟಣದಿಂದ ಹೊರಬಂದರು.
31 ಅಷ್ಟರಲ್ಲಿ ಯೇಸುವಿನ ಶಿಷ್ಯರು, “ಗುರುವೇ, ಊಟಮಾಡು” ಎಂದು ಆತನನ್ನು ಒತ್ತಾಯ ಮಾಡಿದರು.
32 ಅದಕ್ಕೆ ಯೇಸು, “ನನ್ನಲ್ಲಿ ಆಹಾರವಿದೆ. ಆ ಆಹಾರದ ಬಗ್ಗೆ ನಿಮಗೇನೂ ಗೊತ್ತಿಲ್ಲ” ಎಂದನು.
33 ಆದ್ದರಿಂದ ಶಿಷ್ಯರು, “ಯಾರಾದರೂ ಆತನಿಗೆ ಮೊದಲೇ ಆಹಾರವನ್ನು ತಂದುಕೊಟ್ಟರೇ?” ಎಂದು ತಮ್ಮತಮ್ಮೊಳಗೆ ಕೇಳತೊಡಗಿದರು.
34 ಯೇಸು, “ನನ್ನನ್ನು ಕಳುಹಿಸಿದಾತನು (ದೇವರು) ನಾನು ಏನು ಮಾಡಬೇಕೆಂದು ಬಯಸುವನೋ ಅದನ್ನು ಮಾಡುವುದೇ ನನಗೆ ಆಹಾರವಾಗಿದೆ. ಆತನು ನನಗೆ ಕೊಟ್ಟಿರುವ ಕೆಲಸವನ್ನು ಪೂರೈಸುವುದೇ ನನಗೆ ಆಹಾರವಾಗಿದೆ. 35 ‘ಸುಗ್ಗಿಗೆ ಇನ್ನೂ ನಾಲ್ಕು ತಿಂಗಳು ಕಾಯಬೇಕು’ ಎಂದು ನೀವು ಹೇಳುವಿರಿ. ಆದರೆ ನಾನು ನಿಮಗೆ ಹೇಳುತ್ತೇನೆ, ನಿಮ್ಮ ಕಣ್ಣುಗಳನ್ನು ತೆರೆಯಿರಿ. ಹೊಲಗಳ ಸುತ್ತಲೆಲ್ಲಾ ನೋಡಿರಿ, ಅವು ಕೊಯ್ಲಿಗೆ ಬಂದಿವೆ. 36 ಈಗಲೂ ಸಹ, ಬೆಳೆಯನ್ನು ಕೊಯ್ಯುವವನಿಗೆ ಕೂಲಿ ದೊರೆಯುತ್ತದೆ. ಅವನು ಬೆಳೆಗಳನ್ನು ನಿತ್ಯಜೀವಕ್ಕಾಗಿ ಕೂಡಿಸುತ್ತಿದ್ದಾನೆ. ಆದ್ದರಿಂದ ಈಗ ಬಿತ್ತುವವರೂ ಮತ್ತು ಕೊಯ್ಯುವವರೂ ಒಟ್ಟಿಗೆ ಸಂತೋಷವಾಗಿರುವರು. 37 ‘ಒಬ್ಬನು ಬಿತ್ತುತ್ತಾನೆ, ಆದರೆ ಮತ್ತೊಬ್ಬನು ಬೆಳೆಯನ್ನು ಕೊಯ್ಯುತ್ತಾನೆ’ ಎಂದು ನಾವು ಹೇಳುವ ನಾಣ್ಣುಡಿ ಸತ್ಯವಾದದ್ದು. 38 ನೀವು ದುಡಿದಿಲ್ಲದ ಬೆಳೆಯನ್ನು ಕೊಯ್ಯುವುದಕ್ಕಾಗಿ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ. ಬೇರೆಯವರು ದುಡಿದರು, ಆದರೆ ಅವರ ದುಡಿಮೆಯಿಂದ ನೀವು ಲಾಭವನ್ನು ಪಡೆಯುತ್ತೀರಿ” ಎಂದು ಹೇಳಿದನು.
39 ಆ ಸಮಾರ್ಯ ಪಟ್ಟಣದ ಜನರಲ್ಲಿ ಅನೇಕರು ಯೇಸುವನ್ನು ನಂಬಿದರು. ಏಕೆಂದರೆ ಆ ಸ್ತ್ರೀಯು ಆತನ ವಿಷಯವಾಗಿ ಅವರಿಗೆ, “ನಾನು ಮಾಡಿರುವ ಪ್ರತಿಯೊಂದನ್ನೂ ಆತನು ನನಗೆ ತಿಳಿಸಿದನು” ಎಂದು ಹೇಳಿದ್ದಳು. 40 ಸಮಾರ್ಯದವರು ಯೇಸುವಿನ ಬಳಿಗೆ ಹೋಗಿ ತಮ್ಮೊಂದಿಗೆ ಇರಬೇಕೆಂದು ಆತನನ್ನು ಬೇಡಿಕೊಂಡರು. ಆದ್ದರಿಂದ ಆತನು ಅಲ್ಲಿ ಎರಡು ದಿನ ಇದ್ದನು. 41 ಆತನು ಹೇಳಿದ ಸಂಗತಿಗಳನ್ನು ಕೇಳಿ ಇನ್ನೂ ಅನೇಕ ಜನರು ನಂಬಿದರು.
42 ಅವರು ಆ ಸ್ತ್ರೀಗೆ, “ನಾವು ಮೊದಲು ನಿನ್ನ ಮಾತನ್ನು ಕೇಳಿ ಯೇಸುವನ್ನು ನಂಬಿದೆವು. ಆದರೆ ಈಗ ಸ್ವತಃ ನಾವೇ ಆತನ ಮಾತನ್ನು ಕೇಳಿದ್ದರಿಂದ ನಂಬುತ್ತೇವೆ. ನಿಜವಾಗಿಯೂ ಈತನೇ ಲೋಕರಕ್ಷಕನೆಂದು ಈಗ ನಮಗೆ ತಿಳಿದಿದೆ” ಎಂದು ಹೇಳಿದರು.
ಗುಣಹೊಂದಿದ ಅಧಿಕಾರಿಯ ಮಗ
(ಮತ್ತಾಯ 8:5-13; ಲೂಕ 7:1-10)
43 ಎರಡು ದಿನಗಳಾದ ನಂತರ ಯೇಸು ಅಲ್ಲಿಂದ ಗಲಿಲಾಯಕ್ಕೆ ಹೋದನು. 44 (ಪ್ರವಾದಿಗೆ ಸ್ವಂತ ಊರಿನಲ್ಲಿ ಗೌರವವಿಲ್ಲವೆಂದು ಸ್ವತಃ ಯೇಸುವೇ ತಿಳಿಸಿದ್ದನು.) 45 ಆತನು ಗಲಿಲಾಯವನ್ನು ತಲುಪಿದಾಗ, ಅಲ್ಲಿಯ ಜನರು ಆತನನ್ನು ಸ್ವಾಗತಿಸಿದರು. ಈ ಜನರು ಪಸ್ಕಹಬ್ಬಕ್ಕಾಗಿ ಜೆರುಸಲೇಮಿಗೆ ಹೋಗಿದ್ದಾಗ ಹಬ್ಬದ ಸಮಯದಲ್ಲಿ ಆತನು ಮಾಡಿದ ಕಾರ್ಯಗಳನ್ನೆಲ್ಲಾ ನೋಡಿದ್ದರು.
46 ಯೇಸು ಗಲಿಲಾಯದ ಕಾನಾ ಊರಿಗೆ ಮತ್ತೊಮ್ಮೆ ಭೇಟಿ ನೀಡಿದನು. ಆತನು ನೀರನ್ನು ದ್ರಾಕ್ಷಾರಸವನ್ನಾಗಿ ಮಾರ್ಪಡಿಸಿದ್ದು ಆ ಊರಿನಲ್ಲೇ. ರಾಜನ ಒಬ್ಬ ಅಧಿಕಾರಿಯು ಕಪೆರ್ನೌಮ್ ಪಟ್ಟಣದಲ್ಲಿ ವಾಸವಾಗಿದ್ದನು. ಅವನ ಮಗನಿಗೆ ಕಾಯಿಲೆಯಾಗಿತ್ತು. 47 ಯೇಸು ಜುದೇಯದಿಂದ ಬಂದು ಈಗ ಗಲಿಲಾಯದಲ್ಲಿ ಇದ್ದಾನೆ ಎಂಬ ಸುದ್ದಿಯನ್ನು ಅವನು ಕೇಳಿದನು. ಆದ್ದರಿಂದ ಅವನು ಆತನ ಬಳಿಗೆ ಹೋಗಿ ತನ್ನ ಮಗನನ್ನು ಗುಣಪಡಿಸುವುದಕ್ಕಾಗಿ ಕಪೆರ್ನೌಮ್‌ಗೆ ಬರಬೇಕೆಂದು ಆತನನ್ನು ಬೇಡಿಕೊಂಡನು. ಅವನ ಮಗನು ಸಾಯುವ ಸ್ಥಿತಿಯಲ್ಲಿದ್ದನು. 48 ಯೇಸು ಅವನಿಗೆ, “ನೀವು ಸೂಚಕಕಾರ್ಯಗಳನ್ನು ಮತ್ತು ಆಶ್ಚರ್ಯಕರವಾದ ಕಾರ್ಯಗಳನ್ನು ನೋಡದ ಹೊರತು ನನ್ನನ್ನು ನಂಬುವುದೇ ಇಲ್ಲ” ಎಂದು ಹೇಳಿದನು.
49 ರಾಜನ ಅಧಿಕಾರಿ, “ಸ್ವಾಮೀ, ನನ್ನ ಮಗನು ಸಾಯುವ ಮೊದಲೇ ನೀನು ಬರಬೇಕು” ಎಂದು ಕೇಳಿಕೊಂಡನು.
50 ಯೇಸು ಅವನಿಗೆ, “ಹೋಗು, ನಿನ್ನ ಮಗನು ಬದುಕುವನು” ಎಂದು ಉತ್ತರಕೊಟ್ಟನು.
ಯೇಸುವಿನ ಮಾತನ್ನು ಅವನು ನಂಬಿ ಮನೆಗೆ ಹಿಂತಿರುಗಿದನು. 51 ಅವನು ಮನೆಗೆ ಹೋಗುತ್ತಿರುವಾಗ ಅವನ ಸೇವಕರುಗಳು ಬಂದು ಅವನನ್ನು ಭೇಟಿಯಾಗಿ, “ನಿನ್ನ ಮಗನು ಗುಣಹೊಂದಿದನು” ಎಂದು ತಿಳಿಸಿದರು.
52 ಅವನು, “ನನ್ನ ಮಗನಿಗೆ ಯಾವಾಗ ಗುಣವಾಯಿತು?” ಎಂದು ಕೇಳಿದನು.
ಸೇವಕರುಗಳು, “ನಿನ್ನೆ ಮಧ್ಯಾಹ್ನ ಸುಮಾರು ಒಂದು ಗಂಟೆಯಲ್ಲಿ ಅವನ ಜ್ವರವು ಬಿಟ್ಟಿತು” ಎಂದು ಉತ್ತರಕೊಟ್ಟರು.
53 “ನಿನ್ನ ಮಗನು ಬದುಕುವನು” ಎಂದು ಯೇಸು ಹೇಳಿದ್ದು ಇದೇ ಹೊತ್ತಿನಲ್ಲಿ ಎಂಬುದು ತಂದೆಗೆ ತಿಳಿದಿತ್ತು. ಆದ್ದರಿಂದ ಅವನು ಮತ್ತು ಅವನ ಮನೆಯವರೆಲ್ಲ ಯೇಸುವನ್ನು ನಂಬಿದರು.
54 ಯೇಸು ಜುದೇಯದಿಂದ ಗಲಿಲಾಯಕ್ಕೆ ಬಂದ ಮೇಲೆ ಮಾಡಿದ ಎರಡನೆಯ ಸೂಚಕಕಾರ್ಯವಿದು.
Kannada Holy Bible: Easy-to-Read Version. All rights reserved. © 1997 Bible League International