Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ಪೂರ್ವಕಾಲವೃತ್ತಾಂತ 8

ಸೊಲೊಮೋನನು ಕಟ್ಟಿದ ಪಟ್ಟಣಗಳು

ದೇವಾಲಯವನ್ನೂ ತನ್ನ ಅರಮನೆಯನ್ನೂ ಕಟ್ಟಲು ಸೊಲೊಮೋನನಿಗೆ ಇಪ್ಪತ್ತು ವರ್ಷಗಳು ಬೇಕಾದವು. ಅನಂತರ ಹೂರಾಮನು ಕೊಟ್ಟ ಪಟ್ಟಣಗಳನ್ನು ಭದ್ರಪಡಿಸಿ ಕೆಲವು ಇಸ್ರೇಲರು ಅಲ್ಲಿ ವಾಸಿಸುವಂತೆ ಮಾಡಿದನು. ಇದಾದ ಬಳಿಕ ಸೊಲೊಮೋನನು ಚೋಬದ ಹಮಾತ್ ಎಂಬಲ್ಲಿಗೆ ಹೋಗಿ ಅದನ್ನು ವಶಪಡಿಸಿಕೊಂಡನು. ಅರಣ್ಯದಲ್ಲಿದ್ದ ತದ್ಮೋರ್ ಎಂಬ ಪಟ್ಟಣವನ್ನು ಸೊಲೊಮೋನನು ಕಟ್ಟಿದನು. ಆಮೇಲೆ ಹಮಾತಿನ ಎಲ್ಲಾ ಪಟ್ಟಣಗಳನ್ನು ಉಗ್ರಾಣ ಪಟ್ಟಣಗಳನ್ನಾಗಿ ಮಾಡಿದನು. ಮೇಲಿನ ಬೇತ್ಹೋರೋನ್ ಮತ್ತು ಕೆಳಗಿನ ಬೇತ್ಹೋರೋನ್ ಎಂಬ ನಗರಗಳನ್ನು ಸೊಲೊಮೋನನು ಬಲವಾದ ಕೋಟೆಯ ನಗರಗಳನ್ನಾಗಿ ಮತ್ತೆ ಕಟ್ಟಿದನು. ಆ ನಗರಗಳನ್ನು ಕೋಟೆ, ಕದ ಮತ್ತು ಹೆಬ್ಬಾಗಿಲುಗಳಿಂದ ಬಲಗೊಳಿಸಿದನು. ಅಲ್ಲದೆ, ಬಾಲಾತ್ ಪಟ್ಟಣ ಮತ್ತು ಇನ್ನಿತರ ಪಟ್ಟಣಗಳನ್ನು ಉಗ್ರಾಣ ನಗರಗಳನ್ನಾಗಿ ಮಾಡಿದನು. ಅವನು ರಥಗಳನ್ನು ಇಡುವದಕ್ಕಾಗಿಯೂ ಮತ್ತು ರಾಹುತರ ವಾಸಕ್ಕಾಗಿಯೂ ಪಟ್ಟಣಗಳನ್ನು ಕಟ್ಟಿಸಿದನು. ಜೆರುಸಲೇಮಿನಲ್ಲಿಯೂ ಲೆಬನೋನಿನಲ್ಲಿಯೂ ಮತ್ತು ತನ್ನ ಆಡಳಿತದಲ್ಲಿದ್ದ ದೇಶಗಳಲ್ಲಿಯೂ ಸೊಲೊಮೋನನು ತನ್ನ ಇಷ್ಟದ ಪ್ರಕಾರ ಕಟ್ಟಿಸಿದನು.

7-8 ಇಸ್ರೇಲರು ಇದ್ದ ದೇಶದಲ್ಲಿ ಅನ್ಯ ಜನರಾದ ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು ಮತ್ತು ಯೆಬೂಸಿಯರು ವಾಸಿಸುತ್ತಿದ್ದರು. ಇವರನ್ನೆಲ್ಲಾ ಸೊಲೊಮೋನನು ಗುಲಾಮರನ್ನಾಗಿ ಉಪಯೋಗಿಸಿದನು. ಈ ಜನರು ಇಸ್ರೇಲರಾಗಿರಲಿಲ್ಲ. ಇಸ್ರೇಲರು ದೇಶವನ್ನು ವಶಪಡಿಸಿಕೊಂಡಾಗ ಅಲ್ಲಿದ್ದ ನಿವಾಸಿಗಳನ್ನು ಓಡಿಸದೆ ಬಿಟ್ಟವರ ಸಂತತಿಯವರಾಗಿದ್ದರು. ಅವರು ಈಗಲೂ ಅಲ್ಲಿಯೇ ಇದ್ದಾರೆ. ಸೊಲೊಮೋನನು ಇಸ್ರೇಲರಲ್ಲಿ ಯಾರನ್ನೂ ಗುಲಾಮರನ್ನಾಗಿ ಮಾಡಲಿಲ್ಲ. ಇಸ್ರೇಲರು ಸೊಲೊಮೋನನ ಯುದ್ಧವೀರರಾಗಿದ್ದರು. ಅವರು ಸೊಲೊಮೋನನ ಸೈನಕ್ಕೂ ರಥಾಶ್ವಗಳಿಗೂ ಸಾರಧಿಗಳಿಗೂ ಮಹಾದಂಡನಾಯಕರಾಗಿದ್ದರು. 10 ಇನ್ನು ಕೆಲವರು ಮುಖ್ಯಾಧಿಕಾರಿಗಳಿಗೆ ಅಧಿಪತಿಗಳಾಗಿದ್ದರು. ಜನಸೇವೆಗಾಗಿ ಈ ರೀತಿಯ 250 ಅಧಿಪತಿಗಳಿದ್ದರು.

11 ಸೊಲೊಮೋನನು ದಾವೀದ ನಗರದಲ್ಲಿದ್ದ ಫರೋಹನ ಕುಮಾರ್ತೆಯನ್ನು ಆಕೆಗಾಗಿ ಕಟ್ಟಿದ ಅರಮನೆಗೆ ಕರೆಸಿದನು. “ನನ್ನ ಹೆಂಡತಿಯು ದಾವೀದನ ಮನೆಯಲ್ಲಿ ವಾಸಿಸಬಾರದು. ಯಾಕೆಂದರೆ ದೇವರ ಒಡಂಬಡಿಕೆಯ ಪೆಟ್ಟಿಗೆ ಇರುವ ಸ್ಥಳಗಳು ಪರಿಶುದ್ಧವಾಗಿವೆ” ಎಂದು ಸೊಲೊಮೋನನು ಅಂದುಕೊಂಡನು.

12 ಅನಂತರ ಸೊಲೊಮೋನನು ದೇವಾಲಯದ ಮಂಟಪದ ಮುಂದೆ ತಾನು ಕಟ್ಟಿಸಿದ ಯಜ್ಞವೇದಿಕೆಯ ಮೇಲೆ ಯೆಹೋವನಿಗೆ ಸರ್ವಾಂಗಹೋಮಗಳನ್ನು ಅರ್ಪಿಸಿದನು. 13 ಮೋಶೆಯ ಅಪ್ಪಣೆಯ ಪ್ರಕಾರ ಪ್ರತಿನಿತ್ಯವೂ ಸಬ್ಬತ್‌ದಿನಗಳಲ್ಲಿಯೂ ಅಮಾವಾಸ್ಯೆಯ ದಿನಗಳಲ್ಲಿಯೂ ವರ್ಷದ ಮೂರು ಹಬ್ಬದ ದಿನಗಳಲ್ಲಿಯೂ (ಹುಳಿಯಿಲ್ಲದ ರೊಟ್ಟಿಯ ಹಬ್ಬ, ವಾರಗಳ ಹಬ್ಬ ಮತ್ತು ಪರ್ಣಶಾಲೆಗಳ ಹಬ್ಬ) ಆಯಾ ದಿನಗಳಲ್ಲಿ ಯಜ್ಞಗಳನ್ನು ಸಮರ್ಪಿಸುತ್ತಿದ್ದನು. 14 ದಾವೀದನು ಹೇಳಿದ ಪ್ರಕಾರ ಸೊಲೊಮೋನನು ಯಾಜಕರನ್ನು ಸರದಿಯ ಪ್ರಕಾರ ಸೇವೆಗೆ ನೇಮಿಸಿದನು. ಲೇವಿಯರನ್ನು ಆಯಾಕೆಲಸಕ್ಕೆ ನೇಮಿಸಿದನು. ಅವರು ಗಾಯನದಲ್ಲಿಯೂ ಯಾಜಕರ ಕೆಲಸಗಳಲ್ಲಿ ಸಹಾಯಕರಾಗಿಯೂ ದೇವಾಲಯದ ಕೆಲಸದಲ್ಲಿ ಪಾಲುತೆಗೆದುಕೊಂಡರು. ದ್ವಾರಪಾಲಕರ ಕೆಲಸಕ್ಕೆ ಸೊಲೊಮೋನನು ಜನರನ್ನು ಆರಿಸಿ ದ್ವಾರಗಳನ್ನು ಕಾಯುವುದಕ್ಕೆ ಅವರನ್ನು ನೇಮಿಸಿದನು. ದೇವಮನುಷ್ಯನಾದ ದಾವೀದನು ಹೀಗೆಯೇ ಮಾಡಬೇಕೆಂದು ತಿಳಿಸಿದ್ದನು. 15 ಸೊಲೊಮೋನನು ಯಾಜಕರಿಗಾಗಲಿ ಲೇವಿಯರಿಗಾಗಲಿ ಕೊಟ್ಟ ಆಜ್ಞೆಗಳನ್ನು ಯಾರೂ ಬದಲಿಸಲಿಲ್ಲ; ಅವುಗಳಿಗೆ ಯಾರೂ ಅವಿಧೇಯರಾಗಲಿಲ್ಲ; ಬೆಲೆಬಾಳುವ ವಸ್ತುಗಳ ಸಂಗ್ರಹಣ ಕಾರ್ಯದಲ್ಲೂ ಅವರು ಜಾಗರೂಕರಾಗಿದ್ದರು.

16 ದೇವಾಲಯವನ್ನು ಕಟ್ಟುವ ಕಾರ್ಯವು ಪ್ರಾರಂಭದಿಂದ ಹಿಡಿದು ಕೊನೆಯತನಕ ಎಲ್ಲವೂ ಯೋಜನೆಗನುಸಾರವಾಗಿ ನಡೆಯಿತು. ಹೀಗೆ ದೇವಾಲಯದ ಕಾರ್ಯವೆಲ್ಲಾ ಮುಕ್ತಾಯವಾಯಿತು.

17 ಆ ಬಳಿಕ ಸೊಲೊಮೋನನು ಎದೋಮ್ ದೇಶದ ಕೆಂಪುಸಮುದ್ರದ ತೀರದಲ್ಲಿದ್ದ ಎಚ್ಯೋನ್ಗೆಬೆರ್ ಮತ್ತು ಏಲೋತ್ ಎಂಬ ಪಟ್ಟಣಗಳಿಗೆ ಹೋದನು. 18 ಹೂರಾಮನು ಸೊಲೊಮೋನನಿಗೋಸ್ಕರ ಹಡಗುಗಳನ್ನು ಕಳುಹಿಸಿದನು. ಅವನ ಜನರೇ ಅದನ್ನು ನಡೆಸಿದರು. ಅವರು ಒಳ್ಳೆಯ ನುರಿತ ನಾವಿಕರಾಗಿದ್ದರು. ಹೂರಾಮನ ನಾವಿಕರು ಸೊಲೊಮೋನನ ಸೇವಕರೊಂದಿಗೆ ಓಫೀರ್ ದೇಶಕ್ಕೆ ಹೋಗಿ ಅಲ್ಲಿಂದ ಹದಿನೇಳು ಟನ್ ಬಂಗಾರವನ್ನು ಸೊಲೊಮೋನನಿಗೆ ತಂದುಕೊಟ್ಟರು.

3 ಯೋಹಾನ

ಸಭಾಹಿರಿಯನು, ತಾನು ಸತ್ಯವಾಗಿಯೂ ಪ್ರೀತಿಸುವ,

ತನ್ನ ಪ್ರಿಯ ಸ್ನೇಹಿತನಾದ ಗಾಯನಿಗೆ ಬರೆಯುವ ಪತ್ರ.

ನನ್ನ ಪ್ರಿಯ ಸ್ನೇಹಿತನೇ, ನಿನ್ನ ಆತ್ಮವು ಅಭಿವೃದ್ಧಿ ಹೊಂದುತ್ತಿದೆ ಎಂಬುದು ನನಗೆ ತಿಳಿದಿದೆ. ನೀನು ಸರ್ವವಿಧದಲ್ಲಿಯೂ ಅಭಿವೃದ್ಧಿ ಹೊಂದಬೇಕೆಂದೂ ಆರೋಗ್ಯದಿಂದಿರಬೇಕೆಂದೂ ನಾನು ಪ್ರಾರ್ಥಿಸುತ್ತೇನೆ. ಕ್ರಿಸ್ತನಲ್ಲಿ ಸಹೋದರರಾದ ಕೆಲವರು ಬಂದು, ನಿನ್ನ ಜೀವನದಲ್ಲಿರುವ ಸತ್ಯವನ್ನು ನನಗೆ ತಿಳಿಸಿದರು. ನೀನು ಸತ್ಯಮಾರ್ಗದಲ್ಲಿ ನಡೆಯುತ್ತಿರುವೆ ಎಂಬುದನ್ನು ಅವರು ನನಗೆ ಹೇಳಿದರು. ಇದು ನನಗೆ ಬಹಳ ಸಂತೋಷವನ್ನು ಉಂಟುಮಾಡಿತು. ನನ್ನ ಮಕ್ಕಳು ಸತ್ಯಮಾರ್ಗದಲ್ಲಿ ನಡೆಯುತ್ತಿದ್ದಾರೆ ಎಂಬುದನ್ನು ಕೇಳುವಾಗಲೆಲ್ಲಾ ನನಗೆ ಬಹಳ ಸಂತೋಷವಾಗುತ್ತದೆ.

ನನ್ನ ಪ್ರಿಯ ಸ್ನೇಹಿತನೇ, ಕ್ರಿಸ್ತನಲ್ಲಿ ಸಹೋದರರಾದವರಿಗೆ ನೀನು ಸಹಾಯ ಮಾಡುತ್ತಿರುವುದು ಒಳ್ಳೆಯದೇ ಸರಿ. ನಿನಗೆ ಗೊತ್ತಿಲ್ಲದ ಸಹೋದರರಿಗೂ ನೀನು ಸಹಾಯ ಮಾಡುತ್ತಿರುವೆ! ನಿನಗಿರುವ ಪ್ರೀತಿಯನ್ನು ಕುರಿತು ಈ ಸಹೋದರರು ಸಭೆಗೆ ತಿಳಿಸಿದರು. ಅವರು ತಮ್ಮ ಪ್ರವಾಸವನ್ನು ಮುಂದುವರಿಸಲು ದಯವಿಟ್ಟು ಅವರಿಗೆ ಸಹಾಯಮಾಡು. ದೇವರಿಗೆ ಮೆಚ್ಚಿಗೆಕರವಾದ ರೀತಿಯಲ್ಲಿ ಅವರಿಗೆ ಸಹಾಯಮಾಡು. ಈ ಸಹೋದರರು ಕ್ರಿಸ್ತನ ಸೇವೆಗಾಗಿ ಪ್ರವಾಸಹೊರಟಿದ್ದಾರೆ. ಅವಿಶ್ವಾಸಿಗಳಿಂದ ಅವರು ಯಾವ ಸಹಾಯವನ್ನೂ ತೆಗೆದುಕೊಳ್ಳಲಿಲ್ಲ. ಆದ್ದರಿಂದ ನಾವು ಈ ಸಹೋದರರಿಗೆ ಸಹಾಯ ಮಾಡಬೇಕು. ನಾವು ಅವರಿಗೆ ಸಹಾಯಮಾಡಿದಾಗ, ಸತ್ಯಕ್ಕೋಸ್ಕರ ಅವರು ಮಾಡುವ ಕಾರ್ಯದಲ್ಲಿ ನಾವೂ ಪಾಲುಗಾರರಾಗುತ್ತೇವೆ.

ನಾನು ಸಭೆಗೆ ಒಂದು ಪತ್ರವನ್ನು ಬರೆದೆನು. ಆದರೆ ನಾವು ಹೇಳಿದುದನ್ನು ದಿಯೊತ್ರೇಫನು ಕೇಳುವುದಿಲ್ಲ. ಅವನು ತಾನೇ ಅವರ ನಾಯಕನಾಗಿರಬೇಕೆಂದು ಯಾವಾಗಲೂ ಇಚ್ಛಿಸುತ್ತಾನೆ. 10 ನಾನು ಬಂದಾಗ, ದಿಯೊತ್ರೇಫನು ಮಾಡುತ್ತಿರುವುದರ ಬಗ್ಗೆ ತಿಳಿಸುತ್ತೇನೆ. ಅವನು ನಮ್ಮನ್ನು ಕುರಿತು ಸುಳ್ಳನ್ನೂ ಕೆಟ್ಟ ಸಂಗತಿಗಳನ್ನೂ ಹೇಳುತ್ತಾನೆ. ಆದರೆ ಅಷ್ಟೇ ಅಲ್ಲ! ಕ್ರಿಸ್ತನ ಸೇವೆಮಾಡುತ್ತಿರುವ ಆ ಸಹೋದರರಿಗೆ ಸಹಾಯಮಾಡಲು ಅವನು ಒಪ್ಪುವುದಿಲ್ಲ. ಅಲ್ಲದೆ ಆ ಸಹೋದರರಿಗೆ ಸಹಾಯ ಮಾಡಲಿಚ್ಛಿಸುವ ಜನರನ್ನೂ ಅವನು ತಡೆಯುತ್ತಾನೆ. ಆ ಜನರು ಸಭೆಯನ್ನು ಬಿಟ್ಟುಹೋಗುವಂತೆ ಅವನು ಮಾಡುತ್ತಾನೆ.

11 ನನ್ನ ಪ್ರಿಯ ಸ್ನೇಹಿತನೇ, ಕೆಟ್ಟದ್ದನ್ನು ಅನುಸರಿಸಬೇಡ; ಒಳ್ಳೆಯದನ್ನೇ ಅನುಸರಿಸು. ಒಳ್ಳೆಯದನ್ನು ಮಾಡುವವನು ದೇವರಿಗೆ ಸೇರಿದವನಾಗಿದ್ದಾನೆ. ಆದರೆ ಕೆಟ್ಟದ್ದನ್ನು ಮಾಡುವವನು ದೇವರನ್ನು ಎಂದೂ ತಿಳಿಯದವನಾಗಿದ್ದಾನೆ.

12 ದೇಮೇತ್ರಿಯನ ಬಗ್ಗೆ ಜನರೆಲ್ಲರೂ ಒಳ್ಳೆಯ ಸಂಗತಿಗಳನ್ನು ಹೇಳುತ್ತಾರೆ. ಅವರು ಹೇಳುವುದನ್ನು ಸತ್ಯವೂ ಅಂಗೀಕರಿಸುತ್ತದೆ. ಅವನನ್ನು ಕುರಿತು ನಾವೂ ಸಹ ಒಳ್ಳೆಯದನ್ನು ಹೇಳುತ್ತೇವೆ. ನಾವು ಹೇಳುವುದು ನಿಜವೆಂಬುದು ನಿನಗೆ ತಿಳಿದಿದೆ.

13 ನಾನು ನಿನಗೆ ಹೇಳಲಿಚ್ಛಿಸುವ ಅನೇಕ ವಿಚಾರಗಳಿವೆ. ಆದರೆ ನಾನು ಕಾಗದವನ್ನೂ ಇಂಕನ್ನೂ ಬಳಸಲು ಇಚ್ಛಿಸುವುದಿಲ್ಲ. 14 ನಾನು ನಿನ್ನನ್ನು ನೋಡಲು ಬರಬೇಕೆಂದಿದ್ದೇನೆ. ಆಗ ನಾವಿಬ್ಬರೂ ಒಟ್ಟಿಗೆ ಮಾತನಾಡಬಹುದು. 15 ನಿನಗೆ ಶಾಂತಿಯಿರಲಿ. ಸ್ನೇಹಿತರು ನಿನಗೆ ವಂದನೆ ತಿಳಿಸಿದ್ದಾರೆ. ಅಲ್ಲಿರುವ ಸ್ನೇಹಿತರಿಗೆಲ್ಲ ದಯವಿಟ್ಟು ನಮ್ಮ ವಂದನೆಯನ್ನು ತಿಳಿಸು.

ಹಬಕ್ಕೂಕ 3

ಹಬಕ್ಕೂಕನ ಪ್ರಾರ್ಥನೆ

ಪ್ರವಾದಿಯಾದ ಹಬಕ್ಕೂಕನ ಪ್ರಾರ್ಥನೆ:

ಯೆಹೋವನೇ, ನಾನು ನಿನ್ನ ವಿಚಾರ ಕೇಳಿದೆನು.
    ಯೆಹೋವನೇ, ನೀನು ಹಿಂದಿನ ಕಾಲದಲ್ಲಿ ಮಾಡಿದ ಮಹತ್ಕಾರ್ಯಗಳು ನನ್ನನ್ನು ಚಕಿತಗೊಳಿಸಿವೆ.
ನಮ್ಮ ಕಾಲದಲ್ಲಿಯೂ ಮಹತ್ಕಾರ್ಯಗಳನ್ನು ಮಾಡಬೇಕೆಂದು ಪ್ರಾರ್ಥಿಸುತ್ತೇನೆ.
    ದಯಮಾಡಿ, ಆ ಘಟನೆಗಳು ನಮ್ಮ ದಿವಸಗಳಲ್ಲೂ ನೆರವೇರುವಂತೆ ಮಾಡು.
ಅದರ ಜೊತೆಯಲ್ಲಿ ನಮ್ಮ ಮೇಲೆ
    ಕರುಣೆ ತೋರಿಸಲು ಮರೆಯಬೇಡ.

ತೇಮಾನಿನಿಂದ ಯೆಹೋವನು ಬರುತ್ತಿದ್ದಾನೆ.
    ಪರಿಶುದ್ಧನಾದವನು ಪಾರಾನ್ ಪರ್ವತದಿಂದ ಬರುತ್ತಿದ್ದಾನೆ.
ಯೆಹೋವನ ಮಹಿಮೆಯು ಆಕಾಶಮಂಡಲವನ್ನು ಮುಚ್ಚುತ್ತದೆ.
    ಅವನ ಸ್ತೋತ್ರವು ಭೂಲೋಕವನ್ನು ತುಂಬುತ್ತದೆ.
ಬೆಳಕಿನ ಕಿರಣಗಳು ಆತನ ಕೈಯಿಂದ ಹೊಳೆಯುತ್ತವೆ.
ಅದು ಹೊಳೆಯುವಂಥ ಪ್ರಕಾಶಮಾನವಾದ ಹೊಳಪು.
    ಆ ಕೈಗಳಲ್ಲಿ ಅಂಥಾ ಶಕ್ತಿಯು ಅಡಕವಾಗಿದೆ.
ರೋಗವು ಆತನ ಮುಂದೆ ಹೊರಟಿತು.
    ನಾಶಕನು ಆತನನ್ನು ಹಿಂಬಾಲಿಸಿದನು.
ಯೆಹೋವನು ನಿಂತು ಪ್ರಪಂಚದ ನ್ಯಾಯತೀರಿಸಿದನು.
    ಎಲ್ಲಾ ಜನಾಂಗಗಳ ಜನರ ಕಡೆಗೆ ನೋಡಿದನು.
    ಅವರು ಭಯದಿಂದ ನಡುಗಿದರು.
ತಲಾಂತರಗಳಿಂದ ಪರ್ವತಗಳು ಸ್ಥಿರವಾಗಿ ನಿಂತಿದ್ದವು.
    ಆದರೆ ಅದೇ ಪರ್ವತಗಳು ತುಂಡುತುಂಡಾಗಿ ಬಿದ್ದವು.
ಪುರಾತನ ಕಾಲದ ಬೆಟ್ಟಗಳು ಬಿದ್ದುಹೋದವು.
    ಹಾಗೆ ಮಾಡಲು ದೇವರು ಯಾವಾಗಲೂ ಶಕ್ತನಾಗಿದ್ದಾನೆ.
ಕೂಷಾನಿನ ನಗರಗಳು ಸಂಕಟದಲ್ಲಿರುವುದನ್ನು ಕಂಡೆನು.
    ಮಿದ್ಯಾನಿನ ಮನೆಗಳು ಹೆದರಿ ನಡುಗುತ್ತಿದ್ದವು.
ಯೆಹೋವನೇ, ನೀನು ನದಿಗಳ ಮೇಲೆ ಕೋಪಗೊಂಡಿದ್ದೀಯೋ?
    ತೊರೆಗಳ ಮೇಲೆ ನೀನು ಕೋಪಗೊಂಡಿದ್ದೀಯೋ?
ಸಮುದ್ರದ ಮೇಲೆ ನೀನು ಕೋಪಗೊಂಡಿದ್ದೀಯೋ?
    ನೀನು ನಿನ್ನ ಕುದುರೆಗಳ ಮೇಲೆ ಮತ್ತು ರಥಗಳ ಮೇಲೆ ಸವಾರಿ ಮಾಡಿದಾಗ ಕೋಪಗೊಂಡಿದ್ದೀಯೋ?

ಆದಾಗ್ಯೂ ನೀನು ನಿನ್ನ ಮೇಘದ ಬಿಲ್ಲನ್ನು ತೋರಿಸಿದೆ.
    ಈ ಲೋಕದ ಮನುಷ್ಯರೊಂದಿಗೆ ಅದು ನಿನ್ನ ಒಡಂಬಡಿಕೆಯ ಸಾಕ್ಷಿ.

ಭೂಮಿಯು ನದಿಯನ್ನು ಇಬ್ಭಾಗವಾಗಿ ಮಾಡಿತು.
10     ಪರ್ವತಗಳು ನಿನ್ನನ್ನು ನೋಡಿ ನಡುಗಿದವು.
ನೆಲದ ಮೇಲಿಂದ ನೀರು ಹರಿದುಹೋಯಿತು.
    ಭೂಮಿಯ ಮೇಲೆ ತನಗಿದ್ದ ಶಕ್ತಿ ಹೋದದ್ದನ್ನು ನೋಡಿ
    ಸಮುದ್ರವು ಗಟ್ಟಿಯಾಗಿ ಶಬ್ದ ಮಾಡಿತು.
11 ಸೂರ್ಯಚಂದ್ರರು ತಮ್ಮ ಪ್ರಕಾಶವನ್ನು ಕಳಕೊಂಡವು.
    ಹೊಳೆಯುವ ನಿನ್ನ ಮಿಂಚುಗಳನ್ನು ನೋಡಿ ಅವು ಪ್ರಕಾಶಿಸುವದನ್ನು ನಿಲ್ಲಿಸಿದವು.
    ಆ ಮಿಂಚುಗಳು ಗಾಳಿಯಲ್ಲಿ ತೂರಿಬರುವ ಭರ್ಜಿ, ಬಾಣಗಳಂತಿದ್ದವು.
12 ಸಿಟ್ಟಿನಿಂದ ನೀನು ಭೂಮಿಯ ಮೇಲೆ ನಡೆದೆ.
    ಮತ್ತು ಜನಾಂಗಗಳನ್ನು ಶಿಕ್ಷಿಸಿದೆ.
13 ನಿನ್ನ ಜನರನ್ನು ರಕ್ಷಿಸಲು ನೀನು ಬಂದೆ.
    ನೀನು ಆರಿಸಿದ್ದ ರಾಜನನ್ನು ಜಯದ ಕಡೆಗೆ ನಡಿಸುವುದಕ್ಕಾಗಿ ಬಂದೆ.
ಪ್ರತೀ ದುಷ್ಟ ಕುಟುಂಬದ ನಾಯಕನನ್ನು ನೀನು ಸಂಹರಿಸಿದೆ.
    ಭೂಲೋಕದಲ್ಲಿದ್ದ ಪ್ರಮುಖನಿಂದಿಡಿದು
    ಪ್ರಮುಖನಲ್ಲದವನವರೆಗೂ ನೀನು ಹತಿಸಿದೆ.

14 ವೈರಿಗಳ ಸೈನ್ಯವನ್ನು ಮೋಶೆಯ
    ಕೋಲಿನಿಂದ ನಿಲ್ಲಿಸಿದೆ.
ಆ ಸೈನಿಕರು ಬಿರುಗಾಳಿಯಂತೆ ನಮ್ಮೊಂದಿಗೆ
    ಯುದ್ಧ ಮಾಡಲು ಬಂದರು.
ರಸ್ತೆಯ ಮೇಲೆ ಇದ್ದ ಒಬ್ಬ ಬಡ ಮನುಷ್ಯನನ್ನು ದೋಚಿದ ಪ್ರಕಾರ
    ನಮ್ಮನ್ನೂ ಸುಲಭವಾಗಿ ಗೆಲ್ಲುವೆವೆಂದು ಅವರು ನೆನೆಸಿದ್ದರು.
15 ಆದರೆ ನೀನು ನಿನ್ನ ಕುದುರೆಗಳನ್ನು ಸಮುದ್ರದೊಳಗಿಂದ ನಡೆಸಿದೆ.
    ಅವುಗಳು ಆ ಮಹಾ ಸಮುದ್ರವನ್ನು ಕದಡಿಬಿಟ್ಟವು.
16 ಆ ವಿಷಯವನ್ನು ಕೇಳಿದಾಗ ನನ್ನ ಶರೀರವೆಲ್ಲಾ ನಡುಗಿತು.
    ಆಶ್ಟರ್ಯದಿಂದ ನಾನು ಸಿಳ್ಳುಹಾಕಿದೆ.
ನನ್ನ ಎಲುಬುಗಳ ಬಲಹೀನತೆಯಿಂದ
    ನಾನು ನಡುಗುವವನಾಗಿ ನಿಂತೆನು.
ಅವರು ಜನರ ಮೇಲೆ ಬೀಳಲು ಬರುವಾಗ
    ನಾನು ಅವರ ನಾಶನದ ದಿವಸವನ್ನು ಎದುರುನೋಡುತ್ತಿದ್ದೇನೆ.

ಯಾವಾಗಲೂ ಯೆಹೋವನಲ್ಲಿ ಸಂತೋಷಿಸು

17 ಅಂಜೂರದ ಮರಗಳಲ್ಲಿ ಅಂಜೂರದ ಹಣ್ಣು ಬೆಳೆಯದಿದ್ದರೂ
    ದ್ರಾಕ್ಷಿಬಳ್ಳಿಗಳಲ್ಲಿ ದ್ರಾಕ್ಷಿಹಣ್ಣುಗಳು ಬೆಳೆಯದಿದ್ದರೂ
ಎಣ್ಣೆಮರಗಳಲ್ಲಿ ಆಲೀವ್ ಕಾಯಿಗಳು ಬೆಳೆಯದಿದ್ದರೂ
    ಹೊಲದಲ್ಲಿ ಪೈರು ಬೆಳೆಯದಿದ್ದರೂ
ಹಟ್ಟಿಯಲ್ಲಿ ಯಾವ ಕುರಿಗಳು ಇಲ್ಲದಿದ್ದರೂ
    ಕೊಟ್ಟಿಗೆಯೊಳಗೆ ಯಾವ ಪಶುಗಳು ಇಲ್ಲದಿದ್ದರೂ
18 ನಾನು ಯೆಹೋವನಲ್ಲಿ ಸಂತೋಷಿಸುವೆನು.
    ನನ್ನ ರಕ್ಷಕನಾದ ದೇವರಲ್ಲಿ ಸಂತೋಷಪಡುವೆನು.

19 ನನ್ನ ಒಡೆಯನಾದ ಯೆಹೋವನು ನನಗೆ ಬಲವನ್ನು ಕೊಡುವನು.
    ಜಿಂಕೆಯಂತೆ ವೇಗವಾಗಿ ಓಡಲು ನನಗೆ ಸಹಾಯ ಮಾಡುವನು.
    ಪರ್ವತಗಳಲ್ಲಿ ನನ್ನನ್ನು ಸುರಕ್ಷಿತವಾಗಿ ನಡೆಸುವನು.

ಸಂಗೀತ ನಿರ್ದೇಶಕನಿಗೆ. ತಂತಿವಾದ್ಯಗಳಿಂದ ಹಾಡತಕ್ಕದ್ದು.

ಲೂಕ 22

ಯೇಸುವನ್ನು ಕೊಲ್ಲಲು ಯೆಹೂದ್ಯನಾಯಕರ ಸಂಚು

(ಮತ್ತಾಯ 26:1-5,14-16; ಮಾರ್ಕ 14:1-2,10-11; ಯೋಹಾನ 11:45-53)

22 ಯೆಹೂದ್ಯರ ಹುಳಿಯಿಲ್ಲದ ರೊಟ್ಟಿಯ ಹಬ್ಬ ಅಂದರೆ ಪಸ್ಕಹಬ್ಬವು ಹತ್ತಿರವಾಗಿತ್ತು. ಮಹಾಯಾಜಕರು ಮತ್ತು ಧರ್ಮೋಪದೇಶಕರು ಯೇಸುವನ್ನು ಹೇಗೆ ಕೊಲ್ಲಬೇಕೆಂದು ಆಲೋಚಿಸುತ್ತಾ ಜನರ ಭಯದಿಂದ ತಕ್ಕ ಮಾರ್ಗವನ್ನು ಹುಡುಕತೊಡಗಿದರು.

ಯೇಸುವಿನ ವಿರುದ್ಧ ಯೂದನು ಮಾಡಿದ ಸಂಚು

ಯೇಸುವಿನ ಹನ್ನೆರಡು ಅಪೊಸ್ತಲರಲ್ಲಿ ಇಸ್ಕರಿಯೋತ ಯೂದನು ಒಬ್ಬನಾಗಿದ್ದನು. ಸೈತಾನನು ಇವನೊಳಗೆ ಪ್ರವೇಶಿಸಿ ಕೆಟ್ಟಕಾರ್ಯವೊಂದನ್ನು ಮಾಡುವಂತೆ ಪ್ರೇರೇಪಿಸಿದನು. ಯೂದನು ಮಹಾಯಾಜಕರ ಮತ್ತು ದೇವಾಲಯವನ್ನು ಕಾಯುತ್ತಿದ್ದ ಕೆಲವು ಸೈನಿಕರ ಬಳಿಗೆ ಹೋಗಿ, ಯೇಸುವನ್ನು ಹಿಡಿದುಕೊಡುವುದರ ಬಗ್ಗೆ ಅವರೊಂದಿಗೆ ಮಾತಾಡಿದನು. ಯಾಜಕರಿಗೆ ಬಹಳ ಸಂತೋಷವಾಯಿತು. ಯೇಸುವನ್ನು ತಮಗೆ ಹಿಡಿದುಕೊಟ್ಟರೆ ಹಣ ಕೊಡುವುದಾಗಿ ಅವರು ಯೂದನಿಗೆ ಮಾತುಕೊಟ್ಟರು. ಯೂದನು ಅದಕ್ಕೆ ಒಪ್ಪಿದನು. ಬಳಿಕ ಯೇಸುವನ್ನು ಅವರಿಗೆ ಹಿಡಿದುಕೊಡಲು ಉತ್ತಮವಾದ ಸಮಯಕ್ಕಾಗಿ ಕಾಯತೊಡಗಿದನು. ತನ್ನ ಈ ಕಾರ್ಯವನ್ನು ಯಾರಿಗೂ ತಿಳಿಯದಂಥ ಸಮಯದಲ್ಲಿ ಮಾಡಬೇಕೆಂಬುದು ಅವನ ಬಯಕೆಯಾಗಿತ್ತು.

ಪಸ್ಕದ ಊಟಕ್ಕೆ ಸಿದ್ಧತೆ

(ಮತ್ತಾಯ 26:17-25; ಮಾರ್ಕ 14:12-21; ಯೋಹಾನ 13:21-30)

ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ದಿನ ಬಂತು. ಯೆಹೂದ್ಯರು ಪಸ್ಕದ ಕುರಿಮರಿಗಳನ್ನು ಕೊಯ್ಯುವ ದಿನ ಅದಾಗಿತ್ತು. ಯೇಸುವು ಪೇತ್ರ ಮತ್ತು ಯೋಹಾನರಿಗೆ, “ಹೋಗಿ, ಪಸ್ಕದ ಊಟವನ್ನು ನಮಗಾಗಿ ಸಿದ್ಧಮಾಡಿರಿ” ಎಂದು ಹೇಳಿದನು.

ಪೇತ್ರ ಮತ್ತು ಯೋಹಾನರು, “ಊಟವನ್ನು ಎಲ್ಲಿ ಸಿದ್ಧಮಾಡಬೇಕು?” ಎಂದು ಯೇಸುವಿಗೆ ಕೇಳಿದರು.

10 ಯೇಸು ಅವರಿಗೆ, “ಕೇಳಿರಿ! ನೀವು ಪಟ್ಟಣದೊಳಗೆ (ಜೆರುಸಲೇಮಿಗೆ) ಹೋದನಂತರ, ನೀರಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬ ಮನುಷ್ಯನನ್ನು ನೋಡುವಿರಿ. ಅವನನ್ನೇ ಹಿಂಬಾಲಿಸಿರಿ. ಅವನು ಒಂದು ಮನೆಯೊಳಗೆ ಹೋಗುವನು. ನೀವು ಅವನೊಂದಿಗೆ ಹೋಗಿರಿ. 11 ಆ ಮನೆಯ ಯಜಮಾನನಿಗೆ, ‘ಗುರುವು ತನ್ನ ಶಿಷ್ಯರೊಂದಿಗೆ ಯಾವ ಕೋಣೆಯಲ್ಲಿ ಪಸ್ಕದ ಊಟವನ್ನು ಮಾಡಬೇಕೆಂಬುದನ್ನು ದಯಮಾಡಿ ತೋರಿಸು’ ಎಂದು ಹೇಳಿರಿ. 12 ಆಗ ಮನೆಯ ಯಜಮಾನನು ಮೇಲಂತಸ್ತಿನಲ್ಲಿ ಒಂದು ದೊಡ್ಡ ಕೋಣೆಯನ್ನು ತೋರಿಸುವನು. ಈ ಕೋಣೆಯು ನಿಮಗಾಗಿ ಸಿದ್ಧವಾಗಿರುವುದು. ಪಸ್ಕದ ಊಟವನ್ನು ಅಲ್ಲಿ ಸಿದ್ಧಮಾಡಿರಿ” ಅಂದನು.

13 ಆದ್ದರಿಂದ ಪೇತ್ರ ಮತ್ತು ಯೋಹಾನ ಹೊರಟರು. ಯೇಸು ಹೇಳಿದ ಹಾಗೆ ಪ್ರತಿಯೊಂದೂ ನಡೆಯಿತು. ಅವರು ಪಸ್ಕದ ಊಟವನ್ನು ಅಲ್ಲಿ ಸಿದ್ಧಮಾಡಿದರು.

ಪ್ರಭುವಿನ ರಾತ್ರಿ ಭೋಜನ

(ಮತ್ತಾಯ 26:26-30; ಮಾರ್ಕ 14:22-26; 1 ಕೊರಿಂಥ. 11:23-25)

14 ಪಸ್ಕದ ಊಟಮಾಡುವ ಸಮಯ ಬಂತು. ಯೇಸು ಮತ್ತು ಅಪೊಸ್ತಲರು ಮೇಜಿನ ಸುತ್ತಲೂ ಊಟಕ್ಕೆ ಕುಳಿತುಕೊಂಡರು. 15 ಯೇಸು ಅವರಿಗೆ, “ನಾನು ಸಾಯುವ ಮೊದಲು ಈ ಪಸ್ಕದ ಊಟ ಮಾಡಲು ಬಹಳವಾಗಿ ಅಪೇಕ್ಷಿಸಿದ್ದೇನೆ. 16 ಇದರ ನಿಜವಾದ ಅರ್ಥವು ದೇವರ ರಾಜ್ಯದಲ್ಲಿ ನೆರವೇರುವ ತನಕ, ನಾನೆಂದಿಗೂ ಇನ್ನೊಂದು ಪಸ್ಕದ ಊಟವನ್ನು ಮಾಡುವುದೇ ಇಲ್ಲ” ಅಂದನು.

17 ಬಳಿಕ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು ಅದಕ್ಕಾಗಿ ದೇವರಿಗೆ ಸ್ತೋತ್ರ ಮಾಡಿದನು. ಬಳಿಕ ಆತನು, “ಈ ಪಾತ್ರೆಯಲ್ಲಿರುವ ದ್ರಾಕ್ಷಾರಸವನ್ನು ನೀವೆಲ್ಲರೂ ಹಂಚಿಕೊಳ್ಳಿರಿ. 18 ದೇವರ ರಾಜ್ಯ ಬರುವ ತನಕ, ನಾನೆಂದಿಗೂ ತಿರುಗಿ ದ್ರಾಕ್ಷಾರಸ ಕುಡಿಯುವುದಿಲ್ಲ” ಅಂದನು.

19 ಆಮೇಲೆ ಯೇಸು ಸ್ವಲ್ಪ ರೊಟ್ಟಿಯನ್ನು ತೆಗೆದುಕೊಂಡನು. ಆತನು ರೊಟ್ಟಿಗಾಗಿ ದೇವರಿಗೆ ಸ್ತೋತ್ರಮಾಡಿ ಅದನ್ನು ಮುರಿದು ಅಪೊಸ್ತಲರಿಗೆ ಕೊಟ್ಟನು. ಬಳಿಕ ಯೇಸು, “ನಾನು ನಿಮಗೋಸ್ಕರ ಕೊಡುತ್ತಿರುವ ನನ್ನ ದೇಹವಿದು. ನನ್ನನ್ನು ನೆನಸಿಕೊಳ್ಳುವುದಕ್ಕಾಗಿ ಹೀಗೆ ಮಾಡಿರಿ” ಅಂದನು. 20 ಅದೇ ರೀತಿಯಾಗಿ, ಊಟವಾದ ನಂತರ, ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು, “ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಹೊಸ ಒಡಂಬಡಿಕೆಯನ್ನು ಇದು ಸೂಚಿಸುತ್ತದೆ. ನಾನು ನಿಮಗಾಗಿ ಕೊಡುತ್ತಿರುವ ರಕ್ತದಿಂದ ಈ ಹೊಸ ಒಡಂಬಡಿಕೆ ಪ್ರಾರಂಭವಾಗುತ್ತದೆ” ಅಂದನು.

ಯೇಸುವಿಗೆ ಯಾರು ವಿರೋಧಿಗಳಾಗುವರು?

21 ಯೇಸು, “ನನಗೆ ದ್ರೋಹ ಬಗೆಯುವವನು ನನ್ನೊಂದಿಗೆ ಇದೇ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದಾನೆ. 22 ಮನುಷ್ಯಕುಮಾರನು ದೇವರ ಯೋಜನೆಗನುಸಾರವಾಗಿ ಮರಣಹೊಂದುವನು. ಆದರೆ ಮನುಷ್ಯಕುಮಾರನನ್ನು ಕೊಲ್ಲುವುದಕ್ಕೆ ಒಪ್ಪಿಸಿಕೊಡುವ ವ್ಯಕ್ತಿಗೆ ಬಹಳ ಕೇಡಾಗುವುದು” ಎಂದು ಹೇಳಿದನು.

23 ಆಗ ಅಪೊಸ್ತಲರು, “ನಮ್ಮಲ್ಲಿ ಯಾವನು ಇಂಥ ದುಷ್ಕೃತ್ಯ ಮಾಡುವನು?” ಎಂದು ಒಬ್ಬರನ್ನೊಬ್ಬರು ಕೇಳಿಕೊಂಡರು.

ಸೇವಕರಂತಿರಿ

24 ಬಳಿಕ ಅಪೊಸ್ತಲರು ತಮ್ಮಲ್ಲಿ ಯಾರು ಅತಿ ಶ್ರೇಷ್ಠರೆಂದು ವಾದ ಮಾಡತೊಡಗಿದರು. 25 ಆಗ ಯೇಸು ಅವರಿಗೆ, “ಈ ಲೋಕದ ಅರಸರು ತಮ್ಮ ಜನರ ಮೇಲೆ ದೊರೆತನ ಮಾಡುತ್ತಾರೆ. ಜನರ ಮೇಲೆ ಅಧಿಕಾರ ಹೊಂದಿರುವವರನ್ನು ಧರ್ಮಿಷ್ಠರೆಂದು ಕರೆಯುತ್ತಾರೆ. 26 ಆದರೆ ನೀವು ಹಾಗಾಗಬಾರದು. ಅತ್ಯಂತ ದೊಡ್ಡ ವ್ಯಕ್ತಿಯು ಅತ್ಯಂತ ಚಿಕ್ಕ ವ್ಯಕ್ತಿಯಾಗಬೇಕು. ನಾಯಕರು ಸೇವಕರಂತಿರಬೇಕು. 27 ಶ್ರೇಷ್ಠನಾದವನು ಯಾರು? ಊಟಕ್ಕೆ ಕುಳಿತವನೋ? ಅಥವಾ ಅವನಿಗೆ ಸೇವೆ ಮಾಡುವವನೋ? ಊಟಕ್ಕೆ ಕುಳಿತಿರುವವನೇ ಶ್ರೇಷ್ಠನೆಂದು ನೀವು ಭಾವಿಸುತ್ತೀರೋ? ಆದರೆ ನಾನು ನಿಮ್ಮಲ್ಲಿ ಸೇವಕನಂತಿದ್ದೇನೆ!

28 “ನೀವು ನನ್ನ ಅನೇಕ ಕಷ್ಟಗಳಲ್ಲಿ ನನ್ನ ಸಂಗಡ ಇದ್ದವರು. 29 ನನ್ನ ತಂದೆ ನನಗೆ ರಾಜ್ಯವನ್ನು ಕೊಟ್ಟಿದ್ದಾನೆ. ನನ್ನ ಸಂಗಡ ಆಳುವುದಕ್ಕೆ ನಾನು ಸಹ ನಿಮಗೆ ಅಧಿಕಾರ ಕೊಡುತ್ತೇನೆ. 30 ನನ್ನ ರಾಜ್ಯದಲ್ಲಿ ನೀವು ನನ್ನ ಸಂಗಡ ಊಟಮಾಡುವಿರಿ ಮತ್ತು ಕುಡಿಯುವಿರಿ. ನೀವು ಸಿಂಹಾಸನಗಳಲ್ಲಿ ಕುಳಿತುಕೊಂಡು ಇಸ್ರೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.

ನಿಮ್ಮ ನಂಬಿಕೆಯನ್ನು ಕಳೆದುಕೊಳ್ಳಬೇಡಿರಿ!

(ಮತ್ತಾಯ 26:31-35; ಮಾರ್ಕ 14:27-31; ಯೋಹಾನ 13:36-38)

31 “ಒಬ್ಬ ರೈತನು ತನ್ನ ಗೋಧಿಯನ್ನು ತೂರುವಂತೆ ಸೈತಾನನು ನಿಮ್ಮನ್ನು ಶೋಧಿಸಲು ಕೇಳಿಕೊಂಡನು. ಸೀಮೋನನೇ, ಸೀಮೋನನೇ (ಪೇತ್ರ) 32 ನಿನ್ನ ನಂಬಿಕೆಯು ಕುಂದಿಹೋಗಬಾರದೆಂದು ನಾನು ಪ್ರಾರ್ಥಿಸಿದೆನು! ನೀನು ಪರಿವರ್ತನೆಗೊಂಡ ನಂತರ ನಿನ್ನ ಸಹೋದರರನ್ನು ಬಲಪಡಿಸು” ಎಂದು ಹೇಳಿದನು.

33 ಅದಕ್ಕೆ ಪೇತ್ರನು ಯೇಸುವಿಗೆ, “ಪ್ರಭುವೇ, ನಿನ್ನ ಸಂಗಡ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ನಾನು ಸಿದ್ಧನಾಗಿದ್ದೇನೆ” ಎಂದು ಹೇಳಿದನು.

34 ಅದಕ್ಕೆ ಯೇಸು, “ಪೇತ್ರನೇ, ನಾಳೆ ಬೆಳಿಗ್ಗೆ ಕೋಳಿ ಕೂಗುವ ಮೊದಲು ನನ್ನನ್ನು ಅರಿಯೆನೆಂದು ನೀನು ಮೂರು ಸಾರಿ ಹೇಳುವೆ!” ಅಂದನು.

ಕಷ್ಟವನ್ನು ಎದುರಿಸಲು ಸಿದ್ಧರಾಗಿರಿ

35 ಬಳಿಕ ಯೇಸು ಅಪೊಸ್ತಲರಿಗೆ, “ಜನರಿಗೆ ಬೋಧಿಸುವುದಕ್ಕೆ ನಾನು ನಿಮ್ಮನ್ನು ಹಣವಿಲ್ಲದೆ, ಚೀಲವಿಲ್ಲದೆ ಮತ್ತು ಪಾದರಕ್ಷೆಗಳಿಲ್ಲದೆ ಕಳುಹಿಸಿದೆನು. ಆದರೆ ನಿಮಗೆ ಏನಾದರೂ ಕೊರತೆ ಆಯಿತೇ?” ಎಂದು ಕೇಳಿದನು.

ಅಪೊಸ್ತಲರು, “ಇಲ್ಲ” ಅಂದರು.

36 ಯೇಸು ಅವರಿಗೆ, “ಆದರೆ ಈಗ ನಿಮ್ಮಲ್ಲಿ ಹಣವಾಗಲಿ ಚೀಲವಾಗಲಿ ಇದ್ದರೆ ಅದನ್ನು ತೆಗೆದುಕೊಂಡು ಹೋಗಿರಿ. ನಿಮ್ಮಲ್ಲಿ ಖಡ್ಗವಿಲ್ಲದಿದ್ದರೆ, ನಿಮ್ಮ ಮೇಲಂಗಿಯನ್ನು ಮಾರಿ ಒಂದು ಖಡ್ಗವನ್ನು ಕೊಂಡುಕೊಳ್ಳಿರಿ.

37 ‘ಆತನು ಅಪರಾಧಿಗಳಲ್ಲಿ ಒಬ್ಬನಂತೆ ಎಣಿಸಲ್ಪಟ್ಟನು’(A)

ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ನನ್ನ ಬಗ್ಗೆ ಬರೆಯಲ್ಪಟ್ಟಿರುವ ಈ ಮಾತು ನೆರವೇರಬೇಕಾಗಿದೆ ಮತ್ತು ಈಗ ನೆರವೇರುತ್ತಿದೆ” ಎಂದು ಹೇಳಿದನು.

38 ಶಿಷ್ಯರು, “ಪ್ರಭುವೇ, ಇಲ್ಲಿ ನೋಡು, ಎರಡು ಖಡ್ಗಗಳಿವೆ” ಎಂದು ಹೇಳಿದರು.

ಯೇಸು “ಅಷ್ಟು ಸಾಕು” ಅಂದನು.

ಅಪೊಸ್ತಲರ ಪ್ರಾರ್ಥನೆಯ ಅಗತ್ಯತೆ

(ಮತ್ತಾಯ 26:36-46; ಮಾರ್ಕ 14:32-42)

39 ಯೇಸು ಪಟ್ಟಣದಿಂದ (ಜೆರುಸಲೇಮ್) ಆಲಿವ್ ಮರಗಳ ಗುಡ್ಡಕ್ಕೆ ಹೋದನು. 40 ಆತನ ಶಿಷ್ಯರೂ ಆತನೊಡನೆ ಹೋದರು. (ಯೇಸು ಆಗಾಗ್ಗೆ ಅಲ್ಲಿಗೆ ಹೋಗುತ್ತಿದ್ದನು.) ಯೇಸು ತನ್ನ ಶಿಷ್ಯರಿಗೆ, “ನೀವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.

41 ಬಳಿಕ ಯೇಸು ಅವರಿಂದ ಸುಮಾರು ನೂರೈವತ್ತು ಅಡಿ ದೂರ ಹೋದನು. ಆತನು ಮೊಣಕಾಲೂರಿ, 42 “ತಂದೆಯೇ, ನಿನಗೆ ಇಷ್ಟವಿದ್ದರೆ, ಈ ಶ್ರಮೆಯ ಪಾತ್ರೆಯನ್ನು ನನ್ನಿಂದ ತೊಲಗಿಸು. ಆದರೆ ನನ್ನ ಇಷ್ಟದಂತಾಗದೆ ನಿನ್ನ ಇಷ್ಟದಂತೆಯೇ ಮಾಡು” ಎಂದು ಪ್ರಾರ್ಥಿಸಿದನು. 43 ಆಗ ಪರಲೋಕದಿಂದ ಒಬ್ಬ ದೇವದೂತನು ಕಾಣಿಸಿಕೊಂಡನು. ಯೇಸುವನ್ನು ಬಲಪಡಿಸುವುದಕ್ಕಾಗಿ ಈ ದೇವದೂತನನ್ನು ಕಳುಹಿಸಲಾಗಿತ್ತು. 44 ಯೇಸುವಿಗೆ ತುಂಬಾ ವೇದನೆಯಿತ್ತು. ಆತನು ಪ್ರಾರ್ಥನೆಯಲ್ಲಿ ಕಷ್ಟಪಟ್ಟು ಹೋರಾಡಿದನು. ಆತನ ಮುಖದಲ್ಲಿ ಬೆವರು ರಕ್ತದೋಪಾದಿಯಲ್ಲಿ ತೊಟ್ಟಿಕ್ಕತೊಡಗಿತು. 45 ಯೇಸು ಪ್ರಾರ್ಥಿಸಿದ ಮೇಲೆ ತನ್ನ ಶಿಷ್ಯರ ಬಳಿ ಹೋದನು. ಅವರು ನಿದ್ರೆ ಮಾಡುತ್ತಿದ್ದರು. (ಅವರು ದುಃಖದಿಂದ ಆಯಾಸಗೊಂಡಿದ್ದರು.) 46 ಯೇಸು ಅವರಿಗೆ, “ನೀವು ಏಕೆ ನಿದ್ರಿಸುತ್ತಿದ್ದೀರಿ? ಎದ್ದೇಳಿರಿ! ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.

ಯೇಸುವಿನ ಬಂಧನ

(ಮತ್ತಾಯ 26:47-56; ಮಾರ್ಕ 14:43-50; ಯೋಹಾನ 18:3-11)

47 ಯೇಸು ಮಾತಾಡುತ್ತಿದ್ದಾಗ, ಜನರ ಒಂದು ಗುಂಪು ಅಲ್ಲಿಗೆ ಬಂದಿತು. ಹನ್ನೆರಡು ಅಪೊಸ್ತಲರಲ್ಲಿ ಒಬ್ಬನು ಆ ಗುಂಪಿಗೆ ಮುಂದಾಳಾಗಿದ್ದನು. ಅವನೇ ಯೂದನು. ಅವನು ಯೇಸುವಿಗೆ ಮುದ್ದಿಡುವಷ್ಟು ಹತ್ತಿರ ಬಂದನು.

48 ಯೇಸು ಅವನಿಗೆ, “ಯೂದನೇ, ಮುದ್ದಿಟ್ಟು ಮನುಷ್ಯಕುಮಾರನನ್ನು ಹಿಡಿದುಕೊಡುವಿಯೋ?” ಎಂದು ಕೇಳಿದನು. 49 ಯೇಸುವಿನ ಶಿಷ್ಯರು ಸಹ ಅಲ್ಲಿ ನಿಂತಿದ್ದರು. ಅಲ್ಲಿ ನಡೆಯುತ್ತಿದ್ದುದನ್ನು ಅವರು ನೋಡುತ್ತಿದ್ದರು. ಶಿಷ್ಯರು ಯೇಸುವಿಗೆ, “ಪ್ರಭುವೇ, ನಾವು ನಮ್ಮ ಖಡ್ಗಗಳನ್ನು ಉಪಯೋಗಿಸೋಣವೇ?” ಎಂದು ಕೇಳಿದರು. 50 ಶಿಷ್ಯರಲ್ಲಿ ಒಬ್ಬನು ತನ್ನ ಖಡ್ಗವನ್ನು ಬೀಸಿ ಮಹಾಯಾಜಕನ ಆಳಿನ ಬಲಗಿವಿಯನ್ನು ಕತ್ತರಿಸಿದನು.

51 ಯೇಸು ಅವನಿಗೆ, “ನಿಲ್ಲಿಸು” ಎಂದು ಹೇಳಿ, ಆ ಸೇವಕನ ಕಿವಿಯನ್ನು ಮುಟ್ಟಿ ಸ್ವಸ್ಥಗೊಳಿಸಿದನು.

52 ಯೇಸುವನ್ನು ಬಂಧಿಸಲು ಅಲ್ಲಿಗೆ ಮಹಾಯಾಜಕರು, ಹಿರಿಯ ಯೆಹೂದ್ಯನಾಯಕರು ಮತ್ತು ಯೆಹೂದ್ಯ ಸಿಪಾಯಿಗಳು ಬಂದಿದ್ದರು. ಯೇಸು ಅವರಿಗೆ, “ಖಡ್ಗಗಳನ್ನೂ ದೊಣ್ಣೆಗಳನ್ನೂ ಹಿಡಿದುಕೊಂಡು ಇಲ್ಲಿಗೆ ಬಂದದ್ದೇಕೆ? ನಾನು ಅಪರಾಧಿಯೆಂದು ನೀವು ಭಾವಿಸುತ್ತೀರೋ? 53 ಪ್ರತಿದಿನ ನಿಮ್ಮ ಸಂಗಡ ದೇವಾಲಯದಲ್ಲಿದ್ದೆನು. ನೀವು ನನ್ನನ್ನು ಅಲ್ಲಿ ಏಕೆ ಬಂಧಿಸಲಿಲ್ಲ? ಆದರೆ ಇದು ನಿಮ್ಮ ಸಮಯ. ಇದು ಅಂಧಕಾರದ (ಪಾಪ) ದೊರೆತನ” ಎಂದು ಹೇಳಿದನು.

ಪೇತ್ರನ ವಿಶ್ವಾಸದ್ರೋಹ

(ಮತ್ತಾಯ 26:57-58,69-75; ಮಾರ್ಕ 14:53-54,66-72; ಯೋಹಾನ 18:12-18,25-27)

54 ಅವರು ಯೇಸುವನ್ನು ಬಂಧಿಸಿ ಪ್ರಧಾನಯಾಜಕನ ಮನೆಯೊಳಗೆ ಕರೆದುಕೊಂಡು ಬಂದರು. ಪೇತ್ರನು ಅವರನ್ನು ಹಿಂಬಾಲಿಸಿದನು. ಆದರೆ ಅವನು ಯೇಸುವಿನ ಹತ್ತಿರ ಬರಲಿಲ್ಲ. 55 ಸೈನಿಕರು ಅಂಗಳದ ಮಧ್ಯದಲ್ಲಿ ಬೆಂಕಿಯನ್ನು ಹೊತ್ತಿಸಿ ಒಟ್ಟಾಗಿ ಕುಳಿತುಕೊಂಡರು. ಪೇತ್ರನೂ ಅವರ ಜೊತೆ ಕುಳಿತುಕೊಂಡನು. 56 ಪೇತ್ರನು ಅಲ್ಲಿ ಕುಳಿತಿರುವುದನ್ನು ಒಬ್ಬ ಸೇವಕಿ ನೋಡಿದಳು. ಬೆಂಕಿಯ ಬೆಳಕಿನಿಂದ ಆಕೆಯು ಪೇತ್ರನನ್ನು ಗುರುತಿಸಿದಳು. ಅವಳು ಪೇತ್ರನ ಮುಖವನ್ನೇ ಲಕ್ಷ್ಯವಿಟ್ಟು ನೋಡಿ, “ಈ ಮನುಷ್ಯನು ಆತನ (ಯೇಸು) ಸಂಗಡ ಇದ್ದವನು” ಅಂದಳು.

57 ಆದರೆ ಪೇತ್ರನು ಅದು ನಿಜವಲ್ಲವೆಂದು ಹೇಳಿದನು. ಅವನು ಅಕೆಗೆ, “ಅಮ್ಮಾ, ಆತನು ನನಗೆ ಗೊತ್ತೇ ಇಲ್ಲ” ಅಂದನು. 58 ಸ್ವಲ್ಪ ಸಮಯದ ನಂತರ ಇನ್ನೊಬ್ಬ ವ್ಯಕ್ತಿ ಪೇತ್ರನನ್ನು ನೋಡಿ, “ನೀನು ಯೇಸುವನ್ನು ಹಿಂಬಾಲಿಸುತ್ತಿದ್ದ ಜನರಲ್ಲಿ ಒಬ್ಬನಾಗಿದ್ದೆ!” ಎಂದು ಹೇಳಿದನು.

ಆದರೆ ಪೇತ್ರನು, “ನಾನು ಆತನ ಹಿಂಬಾಲಕರಲ್ಲಿ ಒಬ್ಬನಲ್ಲ” ಅಂದನು.

59 ಸುಮಾರು ಒಂದು ತಾಸಿನ ನಂತರ ಇನ್ನೊಬ್ಬನು, “ಅದು ನಿಜ! ಈ ಮನುಷ್ಯನು ಆತನೊಡನೆ ಇದ್ದವನು. ಇವನು ಗಲಿಲಾಯದವನು!” ಎಂದು ದೃಢವಾಗಿ ಹೇಳಿದನು.

60 ಆಗ ಪೇತ್ರನು, “ನೀನು ಏನು ಹೇಳುತ್ತಿದ್ದೀಯೋ ನನಗೆ ಗೊತ್ತಿಲ್ಲ” ಅಂದನು.

ಪೇತ್ರನು ಇನ್ನೂ ಮಾತಾಡುತ್ತಿದ್ದಾಗ ಕೋಳಿ ಕೂಗಿತು. 61 ಆಗ ಪ್ರಭುವು (ಯೇಸು) ಹಿಂತಿರುಗಿ ಪೇತ್ರನನ್ನು ದೃಷ್ಟಿಸಿ ನೋಡಿದನು. “ಮುಂಜಾನೆ ಕೋಳಿ ಕೂಗುವುದಕ್ಕಿಂತ ಮೊದಲು ನೀನು ನನ್ನನ್ನು ಅರಿಯೆನೆಂಬುದಾಗಿ ಮೂರು ಸಲ ಹೇಳುವೆ” ಎಂದು ಪ್ರಭುವು ಹೇಳಿದ ಮಾತನ್ನು ಪೇತ್ರನು ಆಗ ಜ್ಞಾಪಿಸಿಕೊಂಡನು. 62 ಬಳಿಕ ಪೇತ್ರನು ಹೊರಗೆ ಹೋಗಿ ಬಹು ದುಃಖದಿಂದ ಅತ್ತನು.

ಯೇಸುವಿಗೆ ಜನರು ಮಾಡಿದ ಅಪಹಾಸ್ಯ

(ಮತ್ತಾಯ 26:67-68; ಮಾರ್ಕ 14:65)

63-64 ಕೆಲವು ಜನರು ಯೇಸುವನ್ನು ಹಿಡಿದುಕೊಂಡಿದ್ದರು. ಅವರು ಯೇಸುವಿನ ಮುಖಕ್ಕೆ ಮುಸುಕು ಹಾಕಿ, ಆತನನ್ನು ಹೊಡೆದು, “ನಿನ್ನನ್ನು ಹೊಡೆದವರ್ಯಾರು? ನಮಗೆ ಪ್ರವಾದನೆ ಹೇಳು” ಎಂದು ಗೇಲಿಮಾಡಿದರು. 65 ಅವರು ಹಲವಾರು ವಿಧದಲ್ಲಿ ಆತನನ್ನು ದೂಷಿಸಿ ನಿಂದಿಸಿದರು.

ಯೆಹೂದ್ಯನಾಯಕರ ಮುಂದೆ ಯೇಸು

(ಮತ್ತಾಯ 26:59-66; ಮಾರ್ಕ 14:55-64; ಯೋಹಾನ 18:19-24)

66 ಮರುದಿನ ಮುಂಜಾನೆ ಹಿರಿಯ ಜನನಾಯಕರು, ಮಹಾಯಾಜಕರು ಮತ್ತು ಧರ್ಮೋಪದೇಶಕರು ಒಟ್ಟಾಗಿ ಸೇರಿಬಂದರು. ಅವರು ಯೇಸುವನ್ನು ನ್ಯಾಯಾಲಯಕ್ಕೆ ಕರೆದೊಯ್ದು, 67 “ನೀನು ಕ್ರಿಸ್ತನಾಗಿದ್ದರೆ ನಮಗೆ ಹೇಳು” ಎಂದು ಹೇಳಿದರು.

ಯೇಸು ಅವರಿಗೆ, “ನಾನು ಕ್ರಿಸ್ತನೆಂದು ಹೇಳಿದರೂ ನೀವು ನನ್ನನ್ನು ನಂಬುವುದಿಲ್ಲ. 68 ನಾನು ನಿಮ್ಮನ್ನು ಕೇಳಿದರೂ ನೀವು ಉತ್ತರಕೊಡುವುದಿಲ್ಲ. 69 ಆದರೆ ಇಂದಿನಿಂದ ಮನುಷ್ಯಕುಮಾರನು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನನಾಗಿರುವನು” ಎಂದು ಹೇಳಿದನು.

70 ಅವರೆಲ್ಲರೂ, “ಹಾಗಾದರೆ ನೀನು ದೇವರ ಕುಮಾರನೋ?” ಎಂದು ಕೇಳಿದರು. ಯೇಸು ಅವರಿಗೆ, “ನಾನು ಆತನೇ ಎಂದು ನೀವೇ ಹೇಳುತ್ತಿದ್ದೀರಿ” ಎಂದನು.

71 ಆಗ ಅವರು, “ಇನ್ನೇನು ಸಾಕ್ಷಿಬೇಕು? ಆತನು ಹೀಗೆ ಹೇಳುವುದನ್ನು ನಾವೇ ಕೇಳಿದೆವಲ್ಲಾ!” ಅಂದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International