M’Cheyne Bible Reading Plan
ದೇವಾಲಯದ ಪ್ರತಿಷ್ಠೆ
7 ಸೊಲೊಮೋನನು ಪ್ರಾರ್ಥಿಸುವದನ್ನು ನಿಲ್ಲಿಸಿದ ಕೂಡಲೇ ಆಕಾಶದಿಂದ ಬೆಂಕಿಯು ಬಂದು ಯಜ್ಞವೇದಿಕೆಯ ಮೇಲಿದ್ದ ಸರ್ವಾಂಗಹೋಮಗಳನ್ನೂ ಯಜ್ಞಮಾಂಸವನ್ನೂ ದಹಿಸಿಬಿಟ್ಟಿತು. ಯೆಹೋವನ ಮಹಿಮೆಯು ದೇವಾಲಯದಲ್ಲಿ ತುಂಬಿತು. 2 ದೇವಾಲಯದಲ್ಲಿ ತುಂಬಲ್ಪಟ್ಟ ಮಹಿಮೆಯಿಂದಾಗಿ ಯಾಜಕರಿಗೆ ದೇವಾಲಯದೊಳಗೆ ಪ್ರವೇಶಿಸಲು ಆಗದೆ ಹೋಯಿತು. 3 ಸೇರಿಬಂದ ಇಸ್ರೇಲ್ ಜನರೆಲ್ಲಾ ಆಕಾಶದಿಂದ ಬೆಂಕಿ ಬೀಳುವದನ್ನೂ ದೇವಾಲಯದಲ್ಲಿ ಯೆಹೋವನ ಮಹಿಮೆ ತುಂಬಿದ್ದನ್ನೂ ನೋಡಿ ನೆಲದ ಮೇಲೆ ಬೋರಲಬಿದ್ದು
“ಯೆಹೋವನು ಒಳ್ಳೆಯವನು,
ಅವನ ಕರುಣೆಯು ನಿರಂತರಕ್ಕೂ ಇರುವಂಥದ್ದು”
ಎಂದು ಹೇಳುತ್ತಾ ದೇವರನ್ನು ಸುತ್ತಿಸಿ ಕೊಂಡಾಡಿದರು.
4 ಅನಂತರ ಅರಸನಾದ ಸೊಲೊಮೋನನೂ ಇಸ್ರೇಲಿನ ಎಲ್ಲಾ ಜನರೂ ಯೆಹೋವನ ಮುಂದೆ ಯಜ್ಞವನ್ನು ಸಮರ್ಪಿಸಿದರು. 5 ಸೊಲೊಮೋನ ಅರಸನು ಇಪ್ಪತ್ತೆರಡು ಸಾವಿರ ಹೋರಿಗಳನ್ನೂ ಒಂದು ಲಕ್ಷ ಇಪ್ಪತ್ತು ಸಾವಿರ ಕುರಿಗಳನ್ನೂ ಯಜ್ಞವಾಗಿ ಸಮರ್ಪಿಸಿದನು. ಅರಸನೂ ಎಲ್ಲಾ ಜನರೂ ದೇವಾಲಯವನ್ನು ಆರಾಧನೆಗಾಗಿ ಪ್ರತಿಷ್ಠಿಸಿದರು. 6 ಯಾಜಕರು ತಮ್ಮ ಕೆಲಸಗಳನ್ನು ಮಾಡಲು ತಮ್ಮ ತಮ್ಮ ಸ್ಥಳಗಳಲ್ಲಿ ತಯಾರಾಗಿ ನಿಂತಿದ್ದರು. ಲೇವಿಕುಲದ ಗಾಯಕರು ತಮ್ಮ ವಾದ್ಯಗಳೊಂದಿಗೆ ದೇವರನ್ನು ಸ್ತುತಿಸಲು ನಿಂತಿದ್ದರು. ಆ ವಾದ್ಯಗಳನ್ನು ಅರಸನಾದ ದಾವೀದನು ದೇವರನ್ನು ಸ್ತುತಿಸುವದಕ್ಕೋಸ್ಕರ ತಯಾರಿಸಿದ್ದನು. ಯಾಜಕರೂ ಲೇವಿಯರೂ, “ದೇವರಾದ ಯೆಹೋವನ ಕೃಪೆಯು ನಿರಂತರವಾದದ್ದು” ಎಂದು ಹೇಳುತ್ತಿದ್ದರು. ಯಾಜಕರು ಲೇವಿಯರಿಗೆ ಎದುರಾಗಿ ನಿಂತುಕೊಂಡು ತುತ್ತೂರಿಯನ್ನು ಊದಿದರು. ಇಸ್ರೇಲರೆಲ್ಲರೂ ನಿಂತುಕೊಂಡರು.
7 ಆಲಯದ ಮುಂದೆ ಇದ್ದ ಅಂಗಳವನ್ನು ಸೊಲೊಮೋನನು ಶುದ್ಧೀಕರಿಸಿದನು. ಆ ಸ್ಥಳದಲ್ಲಿ ಸೊಲೊಮೋನನು ಸರ್ವಾಂಗಹೋಮಗಳನ್ನೂ ಧಾನ್ಯನೈವೇದ್ಯಗಳನ್ನೂ ಸಮಾಧಾನಯಜ್ಞದ ಕೊಬ್ಬನ್ನೂ ಸಮರ್ಪಿಸಿದ್ದನು. ಯಾಕೆಂದರೆ ಸೊಲೊಮೋನನು ಮಾಡಿಸಿದ ತಾಮ್ರದ ಯಜ್ಞವೇದಿಕೆಯ ಮೇಲೆ ಇಷ್ಟೆಲ್ಲಾ ಸರ್ವಾಂಗಹೋಮಗಳನ್ನೂ ಧಾನ್ಯನೈವೇದ್ಯಗಳನ್ನೂ ಸಮಾಧಾನಯಜ್ಞದ ಕೊಬ್ಬನ್ನೂ ಸಮರ್ಪಿಸಲು ಆಗದೆಹೋಯಿತು.
8 ಸೊಲೊಮೋನನೂ ಎಲ್ಲಾ ಇಸ್ರೇಲರೂ ಏಳು ದಿನಗಳ ತನಕ ಪರ್ಣಶಾಲೆಗಳ ಹಬ್ಬವನ್ನು ಆಚರಿಸಿದರು. ಸೊಲೊಮೋನನೊಂದಿಗೆ ಬಹುದೊಡ್ಡ ಇಸ್ರೇಲರ ಸಮೂಹವು ನೆರೆದು ಬಂದಿತ್ತು. ಹಮಾತಿನಿಂದ ಹಿಡಿದು ಈಜಿಪ್ಟಿನ ನದಿಯ ತನಕ ವಾಸಿಸುವವರೆಲ್ಲರೂ ಜೆರುಸಲೇಮಿಗೆ ಬಂದಿದ್ದರು. 9 ಏಳು ದಿನ ಹಬ್ಬದ ಆಚರಣೆಯ ಬಳಿಕ ಎಂಟನೆಯ ದಿನವನ್ನು ಪವಿತ್ರ ದಿನವನ್ನಾಗಿ ಆಚರಿಸಿದರು. ಅವರು ಯಜ್ಞವೇದಿಕೆಯನ್ನು ಯೆಹೋವನ ಆರಾಧನೆಗೋಸ್ಕರ ಪ್ರತಿಷ್ಠಿಸಿದರು. ಹಬ್ಬವನ್ನು ಏಳು ದಿನಗಳ ತನಕ ಆಚರಿಸಿದರು. 10 ಏಳನೆಯ ತಿಂಗಳಿನ ಇಪ್ಪತ್ತಮೂರನೆಯ ದಿನದಂದು ಸೊಲೊಮೋನನು ನೆರೆದು ಬಂದಿದ್ದ ಜನರನ್ನು ಅವರ ಮನೆಗಳಿಗೆ ಕಳುಹಿಸಿದನು. ದೇವರಾದ ಯೆಹೋವನು ದಾವೀದನಿಗೂ ಅವನ ಮಗನಾದ ಸೊಲೊಮೋನನಿಗೂ ಮತ್ತು ಎಲ್ಲಾ ಇಸ್ರೇಲರಿಗೂ ಕರುಣೆಯನ್ನು ತೋರಿಸಿದ್ದಕ್ಕಾಗಿ ಜನರೆಲ್ಲರೂ ಹರ್ಷಿಸುತ್ತಾ ತಮ್ಮತಮ್ಮ ಮನೆಗಳಿಗೆ ಹಿಂತಿರುಗಿದರು.
ಸೊಲೊಮೋನನಿಗೆ ದೇವರು ಪ್ರತ್ಯಕ್ಷನಾದದ್ದು
11 ಸೊಲೊಮೋನನು ತಾನು ಯೋಜಿಸಿದ ರೀತಿಯಲ್ಲಿ ದೇವಾಲಯವನ್ನೂ ಅರಮನೆಯನ್ನೂ ಕಟ್ಟಿ ಮುಗಿಸಿದನು. 12 ಆ ಬಳಿಕ ಯೆಹೋವನು ರಾತ್ರಿಯಲ್ಲಿ ಸೊಲೊಮೋನನಿಗೆ ಕಾಣಿಸಿಕೊಂಡು,
“ಸೊಲೊಮೋನನೇ, ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ. ನಾನು ಈ ಆಲಯವನ್ನು ಯಜ್ಞಾಲಯಕ್ಕಾಗಿ ಆರಿಸಿಕೊಂಡಿರುತ್ತೇನೆ. 13 ನಾನು ಮಳೆ ಬಾರದಂತೆ ಆಕಾಶವನ್ನು ಮುಚ್ಚಿದರೆ, ಅಥವಾ ಮಿಡತೆಗಳಿಗೆ ದೇಶವನ್ನು ಹಾಳುಮಾಡಲು ಅಪ್ಪಣೆಕೊಟ್ಟರೆ ಅಥವಾ ಜನರಿಗೆ ರೋಗವನ್ನು ಬರಮಾಡಿದರೆ 14 ನನ್ನ ಹೆಸರಿನಿಂದ ಕರೆಯಲ್ಪಡುವ ನನ್ನ ಜನರು ದೀನತೆಯಿಂದ ಪ್ರಾರ್ಥಿಸಿ, ತಮ್ಮ ಪಾಪಗಳನ್ನು ಬಿಟ್ಟು ನನ್ನ ಕಡೆಗೆ ತಿರುಗಿದರೆ ನಾನು ಪರಲೋಕದಿಂದ ಅವರನ್ನು ಆಲೈಸಿ, ಅವರ ಪಾಪಗಳನ್ನು ಮನ್ನಿಸಿ ಅವರ ದೇಶವನ್ನು ಗುಣಪಡಿಸುವೆನು. 15 ನಿಮ್ಮನ್ನು ದೃಷ್ಟಿಸಿ ನಿಮ್ಮ ಪ್ರಾರ್ಥನೆಗಳಿಗೆ ಕಿವಿಗೊಡುವೆನು. 16 ನನ್ನ ನಾಮದ ಮಹತ್ವ ಶಾಶ್ವತವಾಗಿರಬೇಕೆಂದು ನಾನು ಈ ಆಲಯವನ್ನು ಆರಿಸಿಕೊಂಡು ಶುದ್ಧೀಕರಿಸಿದ್ದೇನೆ. ಹೌದು, ನನ್ನ ದೃಷ್ಟಿಯೂ ನನ್ನ ಹೃದಯವೂ ಸದಾಕಾಲ ಈ ಆಲಯದ ಮೇಲೆ ನೆಲೆಸಿರುತ್ತದೆ. 17 ಸೊಲೊಮೋನನೇ, ನಿನ್ನ ತಂದೆಯಾದ ದಾವೀದನು ಹೇಗೆ ಜೀವಿಸಿದನೋ ಅದೇ ಪ್ರಕಾರ ನೀನು ನನ್ನೆದುರಿನಲ್ಲಿ ಜೀವಿಸಿ, ನನ್ನ ಅಪ್ಪಣೆಗಳನ್ನು ಕೈಕೊಂಡು, ನನ್ನ ವಿಧಿನಿಯಮಗಳಿಗೆ ವಿಧೇಯನಾಗುವದಾದರೆ, 18 ನಾನು ನಿನ್ನನ್ನು ಬಲಿಷ್ಠನಾದ ಅರಸನನ್ನಾಗಿ ಮಾಡುವೆನು. ನಿನ್ನ ರಾಜ್ಯವು ಮಹಾರಾಜ್ಯವಾಗುವದು. ನಿನ್ನ ತಂದೆಯಾದ ದಾವೀದನಿಗೆ, ‘ದಾವೀದನೇ, ನಿನ್ನ ಕುಟುಂಬದವರಲ್ಲಿ ಒಬ್ಬನು ಯಾವಾಗಲೂ ಇಸ್ರೇಲಿನ ರಾಜನಾಗಿರುವನು’ ಎಂದು ನಾನು ವಾಗ್ದಾನ ಮಾಡಿದ್ದೇನೆ.
19 “ಆದರೆ ನಾನು ಕೊಟ್ಟ ಕಟ್ಟಳೆಗಳನ್ನು ಮತ್ತು ಆಜ್ಞೆಗಳನ್ನು ನೀನು ಮೀರಿ ಇತರ ದೇವರುಗಳನ್ನು ಪೂಜಿಸಿದರೆ, 20 ನಾನು ಇಸ್ರೇಲರನ್ನು ಅವರಿಗೆ ಕೊಟ್ಟಿರುವ ದೇಶದಿಂದ ತೆಗೆದುಹಾಕುವೆನು; ನನ್ನ ಹೆಸರಿಗೋಸ್ಕರ ಪವಿತ್ರ ಮಾಡಿದ ಈ ದೇವಾಲಯವನ್ನು ತೊರೆದುಬಿಡುವೆನು. ಈ ದೇವಾಲಯದ ಬಗ್ಗೆ ಲೋಕದ ಜನರು ಗೇಲಿಮಾಡುವಂತೆ ಮಾಡುವೆನು. 21 ಅತ್ಯಂತ ಪ್ರಸಿದ್ಧಿಹೊಂದಿದ ಈ ದೇವಾಲಯವನ್ನು ನೋಡುವ ಪ್ರತಿಯೊಬ್ಬನು, ‘ದೇವರು ಈ ದೇಶಕ್ಕೆ ಮತ್ತು ಈ ಆಲಯಕ್ಕೆ ಹೀಗೇಕೆ ಮಾಡಿದನು?’ ಎಂದು ಅಚ್ಚರಿಪಡುವಂತೆ ಮಾಡುವೆನು. 22 ಆಗ ಜನರು, ‘ಯಾಕೆಂದರೆ ಇಸ್ರೇಲರು ತಮ್ಮ ಪೂರ್ವಿಕರ ದೇವರಾದ ಯೆಹೋವನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ಆತನು ಅವರನ್ನು ಈಜಿಪ್ಟಿನಿಂದ ಬಿಡಿಸಿ ಹೊರತಂದನು. ಆದರೆ ಅವರು ಬೇರೆ ದೇವರುಗಳನ್ನು ಪೂಜಿಸಿ ಅವುಗಳ ಸೇವೆಮಾಡಿದರು. ಆದ್ದರಿಂದಲೇ ಭಯಂಕರವಾದ ಈ ಸಂಕಟಗಳನ್ನೆಲ್ಲ ದೇವರು ಇಸ್ರೇಲರಿಗೆ ಬರಮಾಡಿದನು’ ಎಂದು ಹೇಳುವರು” ಅಂದನು.
1 ಸಭಾಹಿರಿಯನು, ದೇವರಿಂದ ಆಯ್ಕೆಯಾದ ಅಮ್ಮನವರಿಗೆ ಮತ್ತು ಆಕೆಯ ಮಕ್ಕಳಿಗೆ ಬರೆಯುವ ಪತ್ರ.
ನಾನು ನಿಮ್ಮೆಲ್ಲರನ್ನು ಸತ್ಯದಲ್ಲಿ ಪ್ರೀತಿಸುತ್ತೇನೆ. ಸತ್ಯವನ್ನು ತಿಳಿದಿರುವ ಜನರೆಲ್ಲರೂ ಸಹ ನಿಮ್ಮನ್ನು ಪ್ರೀತಿಸುತ್ತಾರೆ. 2 ನಮ್ಮಲ್ಲಿ ನೆಲೆಗೊಂಡಿರುವ ಸತ್ಯದ ನಿಮಿತ್ತ ನಾವು ನಿಮ್ಮನ್ನು ಪ್ರೀತಿಸುತ್ತೇವೆ. ಈ ಸತ್ಯವು ನಮ್ಮಲ್ಲಿ ಸದಾಕಾಲ ಇರುವುದು.
3 ತಂದೆಯಾದ ದೇವರಿಂದಲೂ ಆತನ ಮಗನಾದ ಯೇಸು ಕ್ರಿಸ್ತನಿಂದಲೂ ಕೃಪೆ, ಕರುಣೆ ಮತ್ತು ಶಾಂತಿ ನಮ್ಮೊಂದಿಗಿರುತ್ತವೆ. ನಾವು ಈ ಆಶೀರ್ವಾದಗಳನ್ನು ಸತ್ಯದ ಮತ್ತು ಪ್ರೀತಿಯ ಮೂಲಕ ಪಡೆಯುತ್ತೇವೆ.
4 ನಿಮ್ಮ ಮಕ್ಕಳಲ್ಲಿ ಕೆಲವರ ಬಗ್ಗೆ ನಾನು ಕೇಳಿದಾಗ ತುಂಬಾ ಸಂತೋಷವಾಯಿತು. ತಂದೆಯಾದ ದೇವರು ನಮಗೆ ಆಜ್ಞಾಪಿಸಿದ ಸತ್ಯಮಾರ್ಗವನ್ನು ಅವರು ಅನುಸರಿಸುತ್ತಿರುವುದರಿಂದ ನನಗೆ ಸಂತೋಷವಾಯಿತು. 5 ಪ್ರಿಯ ಅಮ್ಮನವರೇ, ಈಗ ನಾನು ನಿಮ್ಮನ್ನು ಕೇಳಿಕೊಳ್ಳುವುದೇನೆಂದರೆ, ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ಇದು ಹೊಸ ಆಜ್ಞೆಯಾಗಿರದೆ ಮೊದಲಿನಿಂದಲೂ ಇದ್ದ ಆಜ್ಞೆಯಾಗಿದೆ. 6 ಆತನು ಆಜ್ಞಾಪಿಸಿದ ಮಾರ್ಗದಲ್ಲಿ ಜೀವಿಸುವುದೇ ಪ್ರೀತಿ. ನೀವು ಪ್ರೀತಿಯಿಂದ ಬಾಳಬೇಕೆಂಬುದೇ ದೇವರ ಆಜ್ಞೆ. ನೀವು ಆರಂಭದಿಂದಲೂ ಈ ಆಜ್ಞೆಯನ್ನು ಕೇಳಿರುವಿರಿ.
7 ಈಗ ಲೋಕದಲ್ಲಿ ಅನೇಕ ಸುಳ್ಳುಬೋಧಕರಿದ್ದಾರೆ. ಯೇಸು ಕ್ರಿಸ್ತನು ಈ ಲೋಕಕ್ಕೆ ಮನುಷ್ಯನಾಗಿ ಬಂದನೆಂಬುದನ್ನು ಈ ಸುಳ್ಳುಬೋಧಕರು ಒಪ್ಪಿಕೊಳ್ಳುವುದಿಲ್ಲ. ಈ ಸತ್ಯವನ್ನು ಒಪ್ಪಿಕೊಳ್ಳದವನು ಸುಳ್ಳುಬೋಧಕನಾಗಿದ್ದಾನೆ ಮತ್ತು ಯೇಸು ಕ್ರಿಸ್ತನ ವೈರಿಯಾಗಿದ್ದಾನೆ. 8 ನೀವು ಎಚ್ಚರವಾಗಿರಿ! ನೀವು ದುಡಿದು ಸಂಪಾದಿಸಿದ್ದನ್ನು ಕಳೆದುಕೊಳ್ಳಬೇಡಿ. ನೀವು ಎಚ್ಚರಿಕೆಯಿಂದ ಇರುವುದಾದರೆ, ನಿಮಗೆ ಬರಬೇಕಾದ ಪೂರ್ಣಫಲವನ್ನು ಹೊಂದಿಕೊಳ್ಳುವಿರಿ.
9 ಕ್ರಿಸ್ತನ ಉಪದೇಶದಲ್ಲಿ ನೆಲೆಗೊಳ್ಳದೆ ಅದನ್ನು ಅತಿಕ್ರಮಿಸಿ ಮುಂದಕ್ಕೆ ಹೋಗುವವನು ದೇವರನ್ನು ಹೊಂದಿಲ್ಲ. ಆದರೆ ಆ ಉಪದೇಶದಲ್ಲಿ ನೆಲೆಗೊಂಡಿರುವವನು ತಂದೆಯನ್ನೂ ಮಗನನ್ನೂ ಹೊಂದಿದ್ದಾನೆ. 10 ನಿಮ್ಮ ಬಳಿಗೆ ಬರುವವನು ಈ ಉಪದೇಶವನ್ನು ಹೊಂದಿಲ್ಲದಿದ್ದರೆ ಅವನನ್ನು ನಿಮ್ಮ ಮನೆಯೊಳಗೆ ಸೇರಿಸಿಕೊಳ್ಳಬೇಡಿ. ಅವನನ್ನು ಸ್ವಾಗತಿಸಬೇಡಿ. 11 ನೀವು ಅವನನ್ನು ಸ್ವಾಗತಿಸಿದರೆ ಅವನ ಕೆಟ್ಟಕಾರ್ಯಕ್ಕೆ ನೀವೂ ಸಹಾಯ ಮಾಡಿದಂತಾಗುವುದು.
12 ನಾನು ನಿಮಗೆ ಹೇಳಬೇಕಾದುದು ಬಹಳಷ್ಟಿದೆ. ಆದರೆ ನಾನು ಕಾಗದವನ್ನೂ ಇಂಕನ್ನೂ ಬಳಸಲಿಚ್ಛಿಸುವುದಿಲ್ಲ. ಅದರ ಬದಲು, ನಾನೇ ನಿಮ್ಮ ಬಳಿಗೆ ಬರಬೇಕೆಂದಿದ್ದೇನೆ. ಆಗ ನಾವು ಒಟ್ಟಾಗಿ ಮಾತನಾಡಬಹುದು. ಇದು ನಮಗೆ ಬಹಳ ಸಂತಸವನ್ನು ಉಂಟುಮಾಡುತ್ತದೆ. 13 ದೇವರಿಂದ ಆಯ್ಕೆಗೊಂಡವಳಾದ ನಿಮ್ಮ ಸಹೋದರಿಯ ಮಕ್ಕಳು ನಿಮಗೆ ವಂದನೆ ತಿಳಿಸಿದ್ದಾರೆ.
2 “ನಾನು ಕಾವಲುಗಾರನಂತೆ ನಿಂತುಕೊಂಡು ಗಮನಿಸುವೆನು.
ಯೆಹೋವನು ನನಗೆ ಏನನ್ನುವನೋ ಎಂದು ನಾನು ನಿರೀಕ್ಷಿಸುತ್ತಿರುವೆನು.
ಆತನು ನನ್ನ ಪ್ರಶ್ನೆಗಳಿಗೆ ಹೇಗೆ ಉತ್ತರಿಸುವನೆಂಬುದನ್ನು ತಾಳ್ಮೆಯಿಂದ ಗಮನಿಸುವೆನು.”
ಹಬಕ್ಕೂಕನಿಗೆ ದೇವರ ಉತ್ತರ
2 ಯೆಹೋವನು ನನಗೆ ಹೇಳಿದ್ದು: “ನಾನು ನಿನಗೆ ತೋರಿಸುವದನ್ನು ಬರೆ. ಜನರು ಸುಲಭವಾಗಿ ಓದುವಂತೆ ಅದನ್ನು ದೊಡ್ಡ ಹಲಗೆಗಳ ಮೇಲೆ ಬರೆ. 3 ಭವಿಷ್ಯದ ಒಂದು ವಿಶೇಷ ಸಮಯದ ಕುರಿತಾಗಿ ಈ ಸಂದೇಶ. ಈ ಸಂದೇಶವು ಅಂತ್ಯದ ವಿಷಯವಾಗಿ ಇದೆ. ಇದು ಖಂಡಿತವಾಗಿಯೂ ನೆರವೇರುತ್ತದೆ. ಆ ಸಮಯವು ಎಂದಿಗೂ ಬರುವುದಿಲ್ಲ ಎಂಬಂತೆ ಕಾಣಬಹುದು. ಆದರೆ ತಾಳ್ಮೆಯಿಂದಿರು; ಅದನ್ನು ನಿರೀಕ್ಷಿಸುತ್ತಾ ಇರು. ಆ ಸಮಯವು ಬರುವದು. ಅದು ತಡವಾಗುವುದಿಲ್ಲ. 4 ಯಾವ ಜನರು ಅದರ ವಿಚಾರವಾಗಿ ಕೇಳಲು ನಿರಾಕರಿಸುವರೋ ಅವರಿಗಾಗಿ ಈ ಸಂದೇಶವಿರುವದಿಲ್ಲ. ಆದರೆ ಒಬ್ಬ ಸತ್ಪುರುಷನು ಈ ಸಂದೇಶವನ್ನು ನಂಬುವನು. ಆ ಸತ್ಪುರುಷನು ತಾನು ನಂಬಿದ ನಿಮಿತ್ತವಾಗಿ ಬದುಕುವನು.”
5 ಯೆಹೋವನು ಹೇಳಿದ್ದು: “ಒಬ್ಬನನ್ನು ದ್ರಾಕ್ಷಾರಸವು ಮೋಸಪಡಿಸಬಹುದು. ಅದೇ ರೀತಿಯಲ್ಲಿ ಬಲಿಷ್ಠನ ಗರ್ವವು ಅವನನ್ನು ಮೋಸಪಡಿಸಬಹುದು. ಆದರೆ ಅವನಿಗೆ ಸಮಾಧಾನ ಸಿಕ್ಕುವುದಿಲ್ಲ. ಅವನು ಮರಣದಂತಿರುವನು. ಅವನಿಗೆ ಯಾವಾಗಲೂ ಹೆಚ್ಚೆಚ್ಚು ಬೇಕು. ಮರಣದಂತೆ ಅವನಿಗೆ ತೃಪ್ತಿಯೇ ಇರದು. ಅವನು ಜನಾಂಗಗಳನ್ನು ಸೋಲಿಸುತ್ತಲೇ ಇರುವನು. ಆ ಜನರನ್ನು ತನ್ನ ಕೈದಿಗಳನ್ನಾಗಿ ಮಾಡುತ್ತಲೇ ಇರುವನು. 6 ಆದರೆ ಬೇಗನೇ ಅವರೆಲ್ಲಾ ಇವನನ್ನು ನೋಡಿ ನಗಾಡುವರು. ಅವನ ಸೋಲುವಿಕೆಯ ಕಥೆಗಳನ್ನು ವರ್ಣಿಸುವರು; ನಗಾಡುತ್ತಾ, ‘ಎಂಥಾ ದುಃಖಕರ ಸಂಗತಿ, ಅಷ್ಟೆಲ್ಲಾ ಸಂಪಾದಿಸಿದವನು ಅದನ್ನು ಇಟ್ಟುಕೊಳ್ಳಲಾಗಲಿಲ್ಲವಲ್ಲ. ಅವನು ಸಾಲಗಳನ್ನು ವಸೂಲಿ ಮಾಡಿ ತನ್ನನ್ನು ಐಶ್ವರ್ಯವಂತನನ್ನಾಗಿ ಮಾಡಿಕೊಂಡನು.’
7 “ಬಲಶಾಲಿಯಾದ ಮನುಷ್ಯನೇ, ನೀನು ಜನರಿಂದ ಹಣವನ್ನು ಸುಲಿದುಕೊಂಡಿರುವೆ. ಒಂದು ದಿವಸ ಆ ಜನರು ಎಚ್ಚರವಾಗಿ ತಮಗೆ ಏನಾಯಿತೆಂದು ಅರಿತುಕೊಳ್ಳುವರು. ನಿನಗೆ ವಿರುದ್ಧವಾಗಿ ಏಳುವರು. ನಿನ್ನ ಕೈಯಿಂದ ಆ ವಸ್ತುಗಳನ್ನು ಕಿತ್ತುಕೊಳ್ಳುವರು. ಆಗ ನೀನು ಭಯಗ್ರಸ್ತನಾಗುವೆ. 8 ಎಷ್ಟೋ ಜನಾಂಗಗಳಿಂದ ನೀನು ವಸ್ತುಗಳನ್ನು ಅಪಹರಿಸಿರುವೆ. ಅವರು ನಿನ್ನಿಂದ ಇನ್ನೂ ಹೆಚ್ಚಾಗಿ ಅಪಹರಿಸುವರು. ನೀನು ಎಷ್ಟೋ ಮಂದಿಯನ್ನು ಕೊಂದಿರುವೆ; ದೇಶಗಳನ್ನೂ ನಗರಗಳನ್ನೂ ನಾಶಮಾಡಿರುವೆ. ಅಲ್ಲಿಯ ಎಷ್ಟೋ ಜನರನ್ನು ಸಂಹರಿಸಿರುವೆ.
9 “ಹೌದು, ಕೆಟ್ಟದ್ದನ್ನು ಮಾಡಿ ಧನಿಕನಾದವನಿಗೆ ಬಹಳ ಕೇಡಾಗುವುದು. ಆ ಮನುಷ್ಯನು ಒಂದು ಸುರಕ್ಷಿತವಾದ ಸ್ಥಳದಲ್ಲಿ ವಾಸಿಸಲು ಇದನ್ನೆಲ್ಲಾ ಮಾಡುತ್ತಾನೆ. ಹಾಗೆ ಮಾಡುವದರಿಂದ ಬೇರೆ ಜನರು ಅವನಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲವೆಂದು ಅವನು ತಿಳಿಯುತ್ತಾನೆ. ಆದರೆ ಕೆಟ್ಟ ಸಂಗತಿಗಳು ಅವನಿಗೆ ಸಂಭವಿಸುವವು. 10 ಎಷ್ಟೋ ಜನರನ್ನು ನಾಶಮಾಡಲು ನೀನು ಯೋಜನೆ ಮಾಡಿರುವೆ. ಆದರೆ ಆ ಯೋಜನೆಗಳು ನಿನ್ನ ಮನೆಗೆ ನಾಚಿಕೆಯನ್ನು ತಂದೊಡ್ಡುವವು. ನೀನು ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ನೀನು ನಿನ್ನ ಪ್ರಾಣವನ್ನು ಕಳೆದುಕೊಳ್ಳುವೆ. 11 ಗೋಡೆಯ ಕಲ್ಲುಗಳು ನಿನಗೆ ವಿರುದ್ಧವಾಗಿ ಕೂಗುವವು. ನಿನ್ನ ಮನೆಯ ಮರದ ಜಂತೆಗಳು ಸಹ ನೀನು ಅಪರಾಧಿಯೆಂದು ಸಾಕ್ಷಿ ಹೇಳುವವು.
12 “ಪಟ್ಟಣ ಕಟ್ಟುವುದಕ್ಕಾಗಿ ಜನರನ್ನು ಕೊಲ್ಲುವವನಿಗೂ ಪಟ್ಟಣದ ಕೋಟೆಗಳನ್ನು ಭದ್ರಪಡಿಸಲು ದುಷ್ಕೃತ್ಯಗಳನ್ನು ಮಾಡುವವನಿಗೂ ಕೇಡಾಗುವದು. 13 ಆ ಜನರು ಕಟ್ಟುವ ಪ್ರತಿಯೊಂದನ್ನೂ ಸರ್ವಶಕ್ತನಾದ ಯೆಹೋವನು ಬೆಂಕಿಯಿಂದ ನಾಶಮಾಡುವ ತೀರ್ಮಾನವನ್ನು ಮಾಡಿರುತ್ತಾನೆ. ಅವರು ಮಾಡಿದ ಕೆಲಸವೆಲ್ಲವೂ ವ್ಯರ್ಥವಾಗುವದು. 14 ಆಗ ಎಲ್ಲಾ ಕಡೆಗಳಲ್ಲಿರುವ ಜನರು ಯೆಹೋವನ ಮಹಿಮೆಯನ್ನು ತಿಳಿದುಕೊಳ್ಳುವರು. ಹೇಗೆ ನೀರು ಸಮುದ್ರಕ್ಕೆ ಹರಿಯುತ್ತದೋ ಹಾಗೆ ಈ ವರ್ತಮಾನವು ಎಲ್ಲಾ ಕಡೆಗೆ ಹಬ್ಬುವದು. 15 ತಾನು ಸಿಟ್ಟುಗೊಂಡು ಇತರರು ಸಂಕಟಪಡುವಂತೆ ಮಾಡುವವನಿಗೆ ಬಹಳ ಕೇಡು ಉಂಟಾಗುವದು. ಸಿಟ್ಟಿನ ಭರದಲ್ಲಿ ಆ ಮನುಷ್ಯನು ಇತರ ಜನರನ್ನು ನೆಲಕ್ಕೆ ಅಪ್ಪಳಿಸಿಬಿಡುವನು. ಅವನು ಅವರನ್ನು ಅಮಲೇರಿದವರಂತೆಯೂ ಬೆತ್ತಲೆಯಾಗಿರುವವರಂತೆಯೂ ಪರಿಗಣಿಸುತ್ತಾನೆ.
16 “ಆದರೆ ಅವನು ಯೆಹೋವನ ಕೋಪವನ್ನು ತಿಳಿದುಕೊಳ್ಳುವನು. ಆ ಕೋಪವು ಯೆಹೋವನ ಬಲಗೈಯಲ್ಲಿರುವ ವಿಷದ ಪಾತ್ರೆಯಂತಿರುವುದು. ಆ ವ್ಯಕ್ತಿಯು ಆ ಕೋಪವನ್ನು ರುಚಿನೋಡುವನು ಮತ್ತು ಅಮಲೇರಿದವನಂತೆ ನೆಲದ ಮೇಲೆ ಕುಸಿದುಬೀಳುವನು.
“ದುಷ್ಟ ಅಧಿಪತಿಯೇ, ನೀನು ಆ ಪಾತ್ರೆಯಿಂದ ಕುಡಿಯುವೆ. ನಿನಗೆ ಅವಮಾನವೇ ಹೊರತು, ಮಾನ ಸಿಗುವುದಿಲ್ಲ. 17 ಲೆಬನೋನಿನಲ್ಲಿ ಅನೇಕರನ್ನು ಗಾಯಗೊಳಿಸಿರುವೆ. ಅಲ್ಲಿ ಎಷ್ಟೋ ಪಶುಗಳನ್ನು ಅಪಹರಿಸಿರುವೆ. ಆ ದೇಶದಲ್ಲಿ ನೀನು ಮಾಡಿದ ದುಷ್ಕೃತ್ಯಗಳ ನಿಮಿತ್ತ, ಅದರಿಂದಾಗಿ ಅಲ್ಲಿ ಸತ್ತುಹೋದವರ ನಿಮಿತ್ತ ನೀನು ಭಯಗ್ರಸ್ತನಾಗಿರುವೆ. ಅಲ್ಲಿಯ ಪಟ್ಟಣಗಳಿಗೆ ನೀನು ಮಾಡಿದ ಹಾನಿ, ಜನರಿಗೆ ನೀನು ಕೊಟ್ಟ ಸಂಕಟದ ನಿಮಿತ್ತ ನಿನಗೆ ಹೆದರಿಕೆಯುಂಟಾಗಿದೆ.”
ವಿಗ್ರಹಗಳ ವಿಷಯವಾದ ಸಂದೇಶ
18 ಆ ಮನುಷ್ಯನ ಸುಳ್ಳು ದೇವರು ಅವನಿಗೆ ಸಹಾಯ ಮಾಡಲಾರದು. ಯಾಕೆಂದರೆ ಅದು ಒಬ್ಬನು ಲೋಹದಿಂದ ಮಾಡಿದ ಕೇವಲ ವಿಗ್ರಹವಷ್ಟೆ. ಅದು ಕೇವಲ ಜಡಮೂರ್ತಿ. ಅದನ್ನು ಮಾಡಿದವನು, ಅದು ಅವನಿಗೆ ಸಹಾಯ ಮಾಡುವದೆಂದು ಯೋಚಿಸುವದು ಶುದ್ಧ ಮೂರ್ಖತನ. ಆ ಮೂರ್ತಿಯು ಮಾತಾಡುವೂದೂ ಇಲ್ಲ. 19 ಆ ಮೂರ್ತಿಗೆ “ಎದ್ದೇಳು” ಎಂದು ಹೇಳುವವನಿಗೆ ಕೇಡಾಗುವುದು! ಮಾತಾಡಲಾಗದ ಒಂದು ಕಲ್ಲಿಗೆ “ಎಚ್ಚರವಾಗು” ಎಂದು ಹೇಳುವವನಿಗೆ ಕೇಡಾಗುವುದು! ಅವುಗಳು ಅವನಿಗೆ ಸಹಾಯ ಮಾಡುವದಿಲ್ಲ. ಮಾಡಲಿಕ್ಕಾಗುವದೂ ಇಲ್ಲ. ಆ ವಿಗ್ರಹಗಳನ್ನು ಬೆಳ್ಳಿಬಂಗಾರದಿಂದ ಹೊದಿಸಿದರೂ ಆ ವಿಗ್ರಹಗಳಲ್ಲಿ ಜೀವವಿಲ್ಲ.
20 ಆದರೆ ಯೆಹೋವನಾದರೋ ಹಾಗಲ್ಲ. ಆತನು ತನ್ನ ಪವಿತ್ರ ಆಲಯದಲ್ಲಿದ್ದಾನೆ. ಆದ್ದರಿಂದ ಎಲ್ಲಾ ಭೂನಿವಾಸಿಗಳು ಆತನ ಮುಂದೆ ಮೌನದಿಂದಿದ್ದು ಆತನನ್ನು ಗೌರವಿಸತಕ್ಕದ್ದು.
ನಿಜವಾದ ಕಾಣಿಕೆ
(ಮಾರ್ಕ 12:41-44)
21 ಕೆಲವು ಐಶ್ವರ್ಯವಂತರು ದೇವಾಲಯದ ಹಣದ ಪೆಟ್ಟಿಗೆಯಲ್ಲಿ ದೇವರಿಗಾಗಿ ತಮ್ಮ ಕಾಣಿಕೆಗಳನ್ನು ಹಾಕುವುದನ್ನು ಯೇಸು ಗಮನಿಸಿದನು. 2 ಅಷ್ಟರಲ್ಲಿ ಒಬ್ಬ ಬಡ ವಿಧವೆಯು ಬಂದು ಎರಡು ಚಿಕ್ಕನಾಣ್ಯಗಳನ್ನು ಪೆಟ್ಟಿಗೆಯಲ್ಲಿ[a] ಹಾಕಿದಳು. 3 ಅದನ್ನು ಕಂಡ ಯೇಸು, “ನಿಮಗೆ ಸತ್ಯವಾಗಿ ಹೇಳುತ್ತೇನೆ. ಈ ಬಡ ವಿಧವೆ ಕೇವಲ ಎರಡು ಚಿಕ್ಕ ತಾಮ್ರದ ನಾಣ್ಯಗಳನ್ನು ಕೊಟ್ಟಳು. ಆದರೆ ಆಕೆ ನಿಜವಾಗಿಯೂ, ಆ ಐಶ್ವರ್ಯವಂತರೆಲ್ಲರಿಗಿಂತ ಹೆಚ್ಚು ಕೊಟ್ಟಳು. 4 ಐಶ್ವರ್ಯವಂತರಿಗೆ ಬೇಕಾದಷ್ಟು ಇದೆ. ಅವರು ಕೇವಲ ತಮಗೆ ಅವಶ್ಯವಿಲ್ಲದ್ದನ್ನು ಕೊಟ್ಟರು. ಈ ಸ್ತ್ರೀ ಬಹಳ ಬಡವಳಾಗಿದ್ದರೂ ತನ್ನಲ್ಲಿ ಇದ್ದದ್ದೆಲ್ಲವನ್ನೂ ಕೊಟ್ಟಳು. ಈಕೆಗೆ ಆ ಹಣದ ಅವಶ್ಯವಿತ್ತು” ಎಂದು ಹೇಳಿದನು.
ದೇವಾಲಯದ ನಾಶನ
(ಮತ್ತಾಯ 24:1-14; ಮಾರ್ಕ 13:1-13)
5 ಶಿಷ್ಯರಲ್ಲಿ ಕೆಲವರು ದೇವಾಲಯದ ಕುರಿತು ಮಾತಾಡುತ್ತಾ, “ಇದು ಅಂದವಾದ ಕಲ್ಲುಗಳಿಂದಲೂ ಹರಕೆಯ ಕೊಡುಗೆಗಳಿಂದಲೂ ಎಷ್ಟೊಂದು ಸುಂದರವಾಗಿದೆ!” ಎಂದರು.
6 ಆದರೆ ಯೇಸು ಅವರಿಗೆ, “ನೀವು ಇಲ್ಲಿ ನೋಡುವಂಥದ್ದೆಲ್ಲವೂ ನಾಶವಾಗುವ ಕಾಲ ಬರುವುದು. ಈ ಕಟ್ಟಡಗಳ ಪ್ರತಿಯೊಂದು ಕಲ್ಲನ್ನು ನೆಲಕ್ಕೆ ಕೆಡವಲಾಗುವುದು. ಇಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲುವುದಿಲ್ಲ!” ಎಂದು ಹೇಳಿದನು.
7 ಶಿಷ್ಯರಲ್ಲಿ ಕೆಲವರು ಯೇಸುವಿಗೆ, “ಗುರುವೇ, ಇವುಗಳೆಲ್ಲಾ ಯಾವಾಗ ಸಂಭವಿಸುತ್ತವೆ? ಆ ಸಮಯವನ್ನು ಯಾವ ಸೂಚನೆಗಳಿಂದ ತಿಳಿದುಕೊಳ್ಳಬೇಕು?” ಎಂದು ಕೇಳಿದರು.
8 ಯೇಸು ಅವರಿಗೆ, “ಎಚ್ಚರಿಕೆಯಾಗಿರಿ! ಮೋಸ ಹೋಗಬೇಡಿರಿ. ನನ್ನ ಹೆಸರನ್ನು ಹೇಳುತ್ತಾ ಅನೇಕರು ಬರುವರು. ಅವರು, ‘ನಾನೇ ಕ್ರಿಸ್ತನು’ ಎಂದೂ, ‘ಸರಿಯಾದ ಸಮಯ ಬಂದಿದೆ’ ಎಂದೂ ಹೇಳುವರು. ಆದರೆ ಅವರನ್ನು ಹಿಂಬಾಲಿಸಬೇಡಿರಿ. 9 ಯುದ್ಧಗಳ ಬಗ್ಗೆ ಮತ್ತು ದಂಗೆಗಳ ಬಗ್ಗೆ ನೀವು ಕೇಳುವಾಗ ಹೆದರಬೇಡಿರಿ. ಇವುಗಳೆಲ್ಲಾ ಮೊದಲು ಸಂಭವಿಸಬೇಕು. ಆದರೂ ಆ ಕೂಡಲೇ ಅಂತ್ಯ ಬರುವುದಿಲ್ಲ” ಎಂದು ಹೇಳಿದನು.
10 ಬಳಿಕ ಯೇಸು ಅವರಿಗೆ, “ಜನಾಂಗಗಳು ಬೇರೆ ಜನಾಂಗಗಳಿಗೆ ವಿರುದ್ಧವಾಗಿ ಹೋರಾಡುವವು. ರಾಜ್ಯಗಳು ಬೇರೆ ರಾಜ್ಯಗಳಿಗೆ ವಿರುದ್ಧವಾಗಿ ಹೋರಾಡುವವು. 11 ಭೀಕರ ಭೂಕಂಪಗಳಾಗುವವು. ಕ್ಷಾಮಗಳೂ ಉಪದ್ರವಗಳೂ ತಲೆದೋರುವವು. ಭಯಂಕರ ಘಟನೆಗಳೂ ಆಕಾಶದಲ್ಲಿ ಅಪೂರ್ವ ಸೂಚನೆಗಳೂ ಕಾಣಿಸಿಕೊಳ್ಳುವವು.
12 “ಆದರೆ ಈ ಎಲ್ಲಾ ಸಂಗತಿಗಳು ಸಂಭವಿಸುವ ಮೊದಲು, ಜನರು ನಿಮ್ಮನ್ನು ಬಂಧಿಸುವರು ಮತ್ತು ಹಿಂಸಿಸುವರು. ಸಭಾಮಂದಿರಗಳಲ್ಲಿ ಜನರು ನಿಮಗೆ ತೀರ್ಪು ನೀಡಿ ಸೆರೆಮನೆಗೆ ಹಾಕುವರು. ರಾಜರ ಮುಂದೆ ಮತ್ತು ರಾಜ್ಯಪಾಲರ ಮುಂದೆ ನಿಮ್ಮನ್ನು ಬಲವಂತವಾಗಿ ನಿಲ್ಲಿಸುವರು. ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರು ನಿಮಗೆ ಹೀಗೆಲ್ಲಾ ಮಾಡುವರು. 13 ಆದರೆ ನನ್ನ ಕುರಿತು ಹೇಳುವುದಕ್ಕೆ ನಿಮಗೆ ಅದು ಸುಸಂದರ್ಭವಾಗಿರುವುದು. 14 ನೀವು ಏನು ಹೇಳಬೇಕೆಂದು ಚಿಂತಿಸಬೇಡಿರಿ. 15 ಏಕೆಂದರೆ ನಾನೇ ನಿಮಗೆ ಜ್ಞಾನವನ್ನು ಕೊಡುತ್ತೇನೆ. ಆದ್ದರಿಂದ ನಿಮ್ಮ ವೈರಿಗಳಲ್ಲಿ ಯಾರೂ ನಿಮ್ಮ ಮಾತಿಗೆ ಪ್ರತ್ಯುತ್ತರವನ್ನು ಕೊಡಲು ಸಾಧ್ಯವಿಲ್ಲ. 16 ನಿಮ್ಮ ತಂದೆತಾಯಿಗಳು, ಸಹೋದರರು, ಸಂಬಂಧಿಕರು ಮತ್ತು ಸ್ನೇಹಿತರು ಸಹ ನಿಮಗೆ ವಿರುದ್ಧವಾಗುವರು. ನಿಮ್ಮಲ್ಲಿ ಕೆಲವರನ್ನು ಅವರು ಕೊಲ್ಲುವರು. 17 ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರೆಲ್ಲರೂ ನಿಮ್ಮನ್ನು ದ್ವೇಷಿಸುವರು. 18 ಆದರೆ ಇವುಗಳಿಂದ ನೀವೇನೂ ನಾಶವಾಗುವುದಿಲ್ಲ. 19 ನೀವು ನಿಮ್ಮ ನಂಬಿಕೆಯಲ್ಲಿ ದೃಢವಾಗಿದ್ದರೆ ನಿಮ್ಮನ್ನು ರಕ್ಷಿಸಿಕೊಳ್ಳುವಿರಿ.
ಜೆರುಸಲೇಮಿನ ನಾಶನ
(ಮತ್ತಾಯ 24:15-21; ಮಾರ್ಕ 13:14-19)
20 “ಜೆರುಸಲೇಮಿನ ಸುತ್ತಲೂ ಸೈನ್ಯಗಳು ಮುತ್ತಿಗೆ ಹಾಕುವುದನ್ನು ನೀವು ನೋಡುವಿರಿ. ಆಗ ಜೆರುಸಲೇಮಿನ ನಾಶನದ ಕಾಲ ಬಂತೆಂದು ನೀವು ತಿಳಿದುಕೊಳ್ಳಿರಿ. 21 ಆ ಕಾಲದಲ್ಲಿ ಜುದೇಯದಲ್ಲಿರುವ ಜನರು ಬೆಟ್ಟಗಳಿಗೆ ಓಡಿಹೋಗಲಿ. ಜೆರುಸಲೇಮಿನಲ್ಲಿರುವ ಜನರು ಬೇಗನೆ ಅಲ್ಲಿಂದ ಪಲಾಯನ ಮಾಡಲಿ. ನೀವು ಪಟ್ಟಣದ ಹತ್ತಿರವಿದ್ದರೂ ಅದರೊಳಗೆ ಹೋಗದಿರಿ! 22 ದೇವರು ತನ್ನ ಜನರನ್ನು ಶಿಕ್ಷಿಸುವ ಕಾಲದ ಬಗ್ಗೆ ಪ್ರವಾದಿಗಳು ಬರೆದಿರುವ ಸಂಗತಿಗಳೆಲ್ಲಾ ಆಗ ನೆರವೇರುತ್ತದೆ. 23 ಆ ಕಾಲದಲ್ಲಿ, ಗರ್ಭಿಣಿ ಸ್ತ್ರೀಯರಿಗೂ ಚಿಕ್ಕ ಕೂಸುಗಳಿರುವವರಿಗೂ ಬಹಳ ಗೋಳಾಟ ಇರುವುದು. ಏಕೆಂದರೆ ಈ ದೇಶವು ಮಹಾವಿಪತ್ತಿಗೆ ಈಡಾಗುವುದು. ದೇವರು ಈ ಜನರ (ಯೆಹೂದ್ಯರ) ವಿಷಯದಲ್ಲಿ ಕೋಪಗೊಂಡಿರುವುದರಿಂದ 24 ಇವರಲ್ಲಿ ಕೆಲವರು ಸೈನಿಕರಿಂದ ಕೊಲ್ಲಲ್ಪಡುವರು. ಇನ್ನು ಕೆಲವರು ಬಂಧಿತರಾಗಿ ಪರದೇಶಕ್ಕೆ ಒಯ್ಯಲ್ಪಡುವರು. ಅನ್ಯದೇಶೀಯರು ತಮ್ಮ ಕಾಲ ಮುಗಿಯುವ ತನಕ ಪರಿಶುದ್ಧ ಪಟ್ಟಣವಾದ ಜೆರುಸಲೇಮಿನಲ್ಲಿ ನಡೆದಾಡುವರು.
ಭಯಪಡಬೇಡಿರಿ
(ಮತ್ತಾಯ 24:29-31; ಮಾರ್ಕ 13:24-27)
25 “ಸೂರ್ಯ, ಚಂದ್ರ ಮತ್ತು ನಕ್ಷತ್ರಗಳಲ್ಲಿ ವಿಚಿತ್ರವಾದ ಸೂಚನೆಗಳು ಕಾಣಿಸಿಕೊಳ್ಳುವವು. ಮೊರೆಯುವ ತೆರೆಗಳ ಹಾಗೂ ಭೋರ್ಗರೆಯುವ ಸಮುದ್ರದ ನಿಮಿತ್ತ ಭೂಮಿಯಲ್ಲಿ ಜನಾಂಗಗಳು ದಿಕ್ಕುತೋಚದೆ ತತ್ತರಿಸಿ ಹೋಗುವವು. 26 ಗ್ರಹಶಕ್ತಿಗಳು ಕದಲುವುದರಿಂದ ಭೂಮಿಯಲ್ಲಿ ಏನೇನು ಸಂಭವಿಸುವುದೋ ಎಂಬ ಭಯದಿಂದ ಮನುಷ್ಯರು ದಿಗ್ಭ್ರಮೆಗೊಳ್ಳುವರು. 27 ಆಗ ಮನುಷ್ಯಕುಮಾರನು ಮಹಾಶಕ್ತಿಯಿಂದಲೂ ಮಹಿಮಾ ಪ್ರಭಾವದಿಂದಲೂ ಮೇಘಾರೂಢನಾಗಿ ಬರುವುದನ್ನು ಜನರು ನೋಡುವರು. 28 ಈ ಸಂಗತಿಗಳು ಸಂಭವಿಸುವುದಕ್ಕೆ ತೊಡಗುವಾಗ ಭಯಪಡಬೇಡಿರಿ. ಮೇಲೆ ನೋಡಿ ಸಂತೋಷಪಡಿರಿ! ಚಿಂತೆಮಾಡಬೇಡಿರಿ. ಸಂತೋಷಪಡಿರಿ, ಏಕೆಂದರೆ ದೇವರು ನಿಮ್ಮನ್ನು ಬಿಡುಗಡೆಗೊಳಿಸುವ ಕಾಲ ಸಮೀಪವಾಗಿದೆ ಎಂಬುದಕ್ಕೆ ಅವು ಸೂಚನೆಯಾಗಿವೆ.”
ಯೇಸುವಿನ ಮಾತುಗಳಿಗೆ ಅಳಿವಿಲ್ಲ
(ಮತ್ತಾಯ 24:32-35; ಮಾರ್ಕ 13:28-31)
29 ಬಳಿಕ ಯೇಸು ಈ ಸಾಮ್ಯವನ್ನು ಹೇಳಿದನು: “ಎಲ್ಲಾ ಮರಗಳಲ್ಲಿ ಅಂಜೂರದ ಮರ ಒಳ್ಳೆಯ ಉದಾಹರಣೆಯಾಗಿದೆ. 30 ಅದು ಚಿಗುರುತ್ತಲೇ, ಬೇಸಿಗೆ ಹತ್ತಿರವಾಗಿದೆ ಎಂದು ನೀವು ತಿಳಿದುಕೊಳ್ಳುವಿರಿ. 31 ಅದೇರೀತಿಯಲ್ಲಿ ಈ ಎಲ್ಲಾ ಸಂಗತಿಗಳು ಸಂಭವಿಸುವುದನ್ನು ನೀವು ನೋಡುವಾಗ, ದೇವರ ರಾಜ್ಯವು ಬಹುಬೇಗನೆ ಬರುತ್ತದೆ ಎಂದು ತಿಳಿದುಕೊಳ್ಳುವಿರಿ.
32 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಈ ಕಾಲದ ಜನರು ಇನ್ನೂ ಜೀವಿಸುತ್ತಿರುವಾಗ ಈ ಸಂಗತಿಗಳೆಲ್ಲಾ ಸಂಭವಿಸುವವು! 33 ಭೂಮ್ಯಾಕಾಶಗಳು ನಾಶವಾಗುವವು; ಆದರೆ ನಾನು ಹೇಳಿದ ಮಾತುಗಳು ಎಂದಿಗೂ ನಾಶವಾಗುವುದಿಲ್ಲ!
ಎಲ್ಲಾ ಸಮಯದಲ್ಲೂ ಸಿದ್ಧರಾಗಿರಿ
34 “ಎಚ್ಚರಿಕೆ! ತಿನ್ನುವುದರಲ್ಲಿಯೂ ಕುಡಿದು ಮತ್ತರಾಗುವುದರಲ್ಲಿಯೂ ಪ್ರಾಪಂಚಿಕ ಚಿಂತೆಗಳಲ್ಲಿಯೂ ಮಗ್ನರಾಗಿರಬೇಡಿರಿ. ಇಲ್ಲವಾದರೆ, ನಿಮ್ಮ ಹೃದಯಗಳು ಭಾರವಾಗಿರುವಾಗಲೇ ಅಂತ್ಯವು ಫಕ್ಕನೆ ಬಂದೀತು. 35 ಆ ದಿವಸವು ಭೂನಿವಾಸಿಗಳೆಲ್ಲರಿಗೂ ವಿಸ್ಮಯಕರವಾಗಿರುವುದು. 36 ಆದ್ದರಿಂದ ಎಲ್ಲಾ ಸಮಯದಲ್ಲಿಯೂ ಸಿದ್ಧರಾಗಿರಿ. ನಡೆಯಲಿರುವ ಈ ಎಲ್ಲಾ ಸಂಗತಿಗಳನ್ನು ಎದುರಿಸಿ ಸುರಕ್ಷಿತವಾಗಿ ಮುಂದುವರಿಯಲು ಮತ್ತು ಮನುಷ್ಯಕುಮಾರನ ಮುಂದೆ ನಿಲ್ಲಲು ಬೇಕಾದ ಶಕ್ತಿಗಾಗಿ ಪ್ರಾರ್ಥಿಸಿರಿ.”
37 ಯೇಸು ಹಗಲೆಲ್ಲಾ ದೇವಾಲಯದಲ್ಲಿ ಜನರಿಗೆ ಉಪದೇಶಿಸುತ್ತಿದ್ದನು. ರಾತ್ರಿಯಲ್ಲಾದರೋ ಪಟ್ಟಣದ ಹೊರಗಿದ್ದ ಆಲಿವ್ ಮರಗಳ ಗುಡ್ಡದ ಮೇಲೆ ಇರುತ್ತಿದ್ದನು. 38 ಪ್ರತಿ ಮುಂಜಾನೆ, ಜನರೆಲ್ಲರೂ ಬೇಗನೆ ಎದ್ದು ದೇವಾಲಯದಲ್ಲಿ ಯೇಸುವಿನ ಉಪದೇಶವನ್ನು ಕೇಳುವುದಕ್ಕೆ ಹೋಗುತ್ತಿದ್ದರು.
Kannada Holy Bible: Easy-to-Read Version. All rights reserved. © 1997 Bible League International