Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ಪೂರ್ವಕಾಲವೃತ್ತಾಂತ 2

ದೇವಾಲಯವನ್ನು ಕಟ್ಟಲು ಸೊಲೊಮೋನನ ಸಿದ್ಧತೆ

ದೇವಾಲಯವನ್ನು ಕಟ್ಟಿ ದೇವರಿಗೆ ಘನತೆಯನ್ನು ಸಲ್ಲಿಸಲು ಸೊಲೊಮೋನನು ಯೋಜಿಸಿದನು. ಮಾತ್ರವಲ್ಲದೆ ತನಗೆ ವಾಸಿಸಲು ಒಂದು ಅರಮನೆಯನ್ನು ಕಟ್ಟಲೂ ಸಿದ್ಧತೆ ಮಾಡಿದನು. ಅದಕ್ಕಾಗಿ ಎಪ್ಪತ್ತು ಸಾವಿರ ಮಂದಿ ಕೆಲಸಗಾರರನ್ನೂ ಬೆಟ್ಟದ ಮೇಲೆ ನಡಿಯುತ್ತಿರುವ ಕಲ್ಲಿನ ಕೆಲಸಕ್ಕಾಗಿ ಎಂಭತ್ತು ಸಾವಿರ ಮಂದಿ ಕಲ್ಲುಕುಟಿಕರನ್ನೂ ಇವರ ಮೇಲ್ವಿಚಾರಣೆಗಾಗಿ ಮೂರು ಸಾವಿರದ ಆರುನೂರು ಮಂದಿ ಮೇಸ್ತ್ರಿಗಳನ್ನೂ ನೇಮಿಸಿದನು.

ಸೊಲೊಮೋನನು ತನ್ನ ಸ್ನೇಹಿತನೂ ತೂರ್ ದೇಶದ ರಾಜನೂ ಆದ ಹೂರಾಮನಿಗೆ ಹೀಗೆ ಬರೆದು ಕಳುಹಿಸಿದನು:

“ನನ್ನ ತಂದೆಯಾದ ದಾವೀದನ ಅರಮನೆಗೆ ಬೇಕಾದ ದೇವದಾರುಮರಗಳನ್ನು ನೀನು ಒದಗಿಸಿದಂತೆಯೇ ನನಗೂ ನೀನು ಸಹಾಯ ಮಾಡಬೇಕು. ನನ್ನ ದೇವರಾದ ಯೆಹೋವನ ನಾಮದ ಘನತೆಗಾಗಿ ನಾನು ಒಂದು ದೇವಾಲಯವನ್ನು ಕಟ್ಟಲಿರುವೆನು. ಆತನ ಸನ್ನಿಧಿಯಲ್ಲಿ ನಿತ್ಯವೂ ಧೂಪವನ್ನು ಹಾಕುವೆವು; ವಿಶೇಷ ಮೇಜಿನ ಮೇಲೆ ಪವಿತ್ರವಾದ ರೊಟ್ಟಿಗಳನ್ನಿಡುವೆವು. ಪ್ರತಿ ಮುಂಜಾನೆ ಮತ್ತು ಸಾಯಂಕಾಲಗಳಲ್ಲಿ, ಸಬ್ಬತ್ ದಿನಗಳಲ್ಲಿ ಮತ್ತು ಅಮಾವಾಸ್ಯೆ ದಿನಗಳಲ್ಲಿ ಯೆಹೋವನು ಆಜ್ಞಾಪಿಸಿದ ಹಬ್ಬಗಳಲ್ಲಿ ಸರ್ವಾಂಗಹೋಮಗಳನ್ನು ಸಮರ್ಪಿಸುವೆವು. ಇಸ್ರೇಲಿನ ಜನರು ನಿತ್ಯಕಾಲಕ್ಕೂ ಇವುಗಳನ್ನು ಅನುಸರಿಸಬೇಕೆಂದು ದೇವರು ನೇಮಿಸಿರುತ್ತಾನೆ.

“ನಮ್ಮ ದೇವರು ಎಲ್ಲಾ ದೇವರುಗಳಿಗಿಂತ ದೊಡ್ಡವನು. ಆದ್ದರಿಂದ ಆತನಿಗಾಗಿ ನಾನು ಮಹತ್ತಾದ ಆಲಯವನ್ನು ಕಟ್ಟುವೆನು. ಯಾವನೂ ದೇವರಿಗೆ ಆಲಯವನ್ನು ಕಟ್ಟಲು ಸಾಧ್ಯವಿಲ್ಲ. ಯಾಕೆಂದರೆ, ಆಕಾಶವೂ ಉನ್ನತೋನ್ನತವಾದ ಆಕಾಶವೂ ಆತನ ವಾಸಕ್ಕೆ ಸಾಲುವುದಿಲ್ಲ. ಆದ್ದರಿಂದ ನಾನು ಆತನಿಗೆ ಆಲಯವನ್ನು ಕಟ್ಟಲಾರೆ. ನಾನು ಆತನಿಗೆ ಆಲಯವನ್ನು ಕಟ್ಟುತ್ತಿರುವುದು ಧೂಪಹಾಕಿ ಆತನನ್ನು ಘನಪಡಿಸುವದಕ್ಕಾಗಿಯಷ್ಟೇ.

“ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಇವುಗಳ ಕೆಲಸಗಳಲ್ಲಿ ಪಳಗಿರುವ ಒಬ್ಬ ಕುಶಲಕರ್ಮಿಯನ್ನು ನೀನು ಕಳುಹಿಸಿಕೊಡಬೇಕು. ಅವನಿಗೆ ನೀಲಿ, ಕೆಂಪು, ನೇರಳೆ ವರ್ಣಗಳ ಬಟ್ಟೆಗಳನ್ನು ನೇಯುವುದೂ ಗೊತ್ತಿರಬೇಕು. ನನ್ನ ತಂದೆ ಆರಿಸಿಕೊಂಡಿರುವ ಕುಶಲಕರ್ಮಿಗಳ ಜೊತೆಯಲ್ಲಿ ಅವನು ಜೆರುಸಲೇಮಿನಲ್ಲಿಯೂ ಯೆಹೂದದಲ್ಲಿಯೂ ಕೆಲಸ ಮಾಡಬೇಕು. ಅಲ್ಲದೆ ನನಗೆ ಲೆಬನೋನಿನಿಂದ ದೇವದಾರು, ತುರಾಯಿ ಮತ್ತು ಸುಗಂಧಮರಗಳನ್ನು ಕಳುಹಿಸಿಕೊಡು. ನಿನ್ನ ಸೇವಕರು ಲೆಬನೋನಿನ ಮರಗಳನ್ನು ಕತ್ತರಿಸುವುದರಲ್ಲಿ ನಿಪುಣರೆಂಬುದು ನನಗೆ ಗೊತ್ತಿದೆ. ನಿನ್ನ ಅನುಭವಸ್ಥ ಸೇವಕರಿಗೆ ಸಹಾಯ ಮಾಡಲು ನನ್ನ ಸೇವಕರೂ ಬರುವರು. ನಾನು ಕಟ್ಟುವ ಆಲಯವು ದೊಡ್ಡದಾಗಿಯೂ ಅಂದವಾಗಿಯೂ ಇರುವದರಿಂದ ನನಗೆ ಬಹಳ ಮರ ಬೇಕಾಗುತ್ತದೆ. 10 ನಿನ್ನ ಜನರು ಮರಗಳನ್ನು ಕಡಿದು ಸಾಗಿಸುವ ಕಾರ್ಯಕ್ಕೆ ನಾನು ಒಂದು ಲಕ್ಷದ ಇಪ್ಪತ್ತೈದು ಸಾವಿರ ಕ್ವಿಂಟಾಲ್ ಗೋಧಿಯನ್ನೂ ಒಂದು ಲಕ್ಷದ ಇಪ್ಪತ್ತೈದು ಸಾವಿರ ಕ್ವಿಂಟಾಲ್ ಜವೆಗೋಧಿಯನ್ನೂ ಒಂದು ಲಕ್ಷದ ಹದಿನೈದು ಸಾವಿರ ಲೀಟರ್ ದ್ರಾಕ್ಷಾರಸವನ್ನೂ ಒಂದು ಲಕ್ಷದ ಹದಿನೈದು ಸಾವಿರ ಲೀಟರ್ ಎಣ್ಣೆಯನ್ನೂ ಕೊಡುವೆನು.”

11 ಅದಕ್ಕೆ ಹೂರಾಮನು ಸೊಲೊಮೋನನಿಗೆ ಪತ್ರದ ಮೂಲಕ ಹೀಗೆ ಉತ್ತರಿಸಿದನು:

“ಸೊಲೊಮೋನನೇ, ಯೆಹೋವನು ತನ್ನ ಜನರನ್ನು ಪ್ರೀತಿಸುತ್ತಾನೆ. ಆದ್ದರಿಂದಲೇ ನಿನ್ನನ್ನು ಅವರ ಅರಸನನ್ನಾಗಿ ಆರಿಸಿಕೊಂಡಿರುತ್ತಾನೆ. 12 ಇಸ್ರೇಲರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ, ಆತನು ಭೂಪರಲೋಕಗಳನ್ನು ಉಂಟುಮಾಡಿದನು. ಅರಸನಾದ ದಾವೀದನಿಗೆ ಒಬ್ಬ ಜ್ಞಾನವುಳ್ಳ ಮಗನನ್ನು ಅನುಗ್ರಹಿಸಿದ್ದಾನೆ. ನಿನಗೆ ಜ್ಞಾನವೂ ತಿಳುವಳಿಕೆಯೂ ಇರುವದರಿಂದ ನೀನು ದೇವಾಲಯವನ್ನು ಕಟ್ಟುವೆ ಮತ್ತು ನಿನಗೂ ಒಂದು ಅರಮನೆಯನ್ನು ಕಟ್ಟುವೆ. 13 ನಾನು ಹೂರಾಮಾಬೀ ಎಂಬ ಹೆಸರಿನ ಅನುಭವಶಾಲಿಯಾದ ಕುಶಲಕರ್ಮಿಯನ್ನು ನಿನಗೋಸ್ಕರ ಕಳುಹಿಸುತ್ತೇನೆ. 14 ಅವನ ತಾಯಿಯು ದಾನ್ ಕುಟುಂಬದವಳು, ತಂದೆಯು ತೂರ್ ಪಟ್ಟಣದವನು. ಅವನು ಬೆಳ್ಳಿ, ಬಂಗಾರ, ತಾಮ್ರ, ಕಬ್ಬಿಣ, ಮರ ಇವುಗಳ ಕೆಲಸಗಳಲ್ಲಿ ತುಂಬ ಚತುರನು. ಅಲ್ಲದೆ ನೀಲಿ, ಕೆಂಪು ಧೂಮ್ರವರ್ಣದ ಬಟ್ಟೆಗಳನ್ನು ಮತ್ತು ಬೆಲೆಬಾಳುವ ಲಿನಿನ್ ಬಟ್ಟೆಗಳನ್ನು ನೇಯುವುದರಲ್ಲಿ ನಿಪುಣನಾಗಿದ್ದಾನೆ. ನೀನು ಏನೇ ಹೇಳಿದರೂ ಅವನು ಮಾಡಿಕೊಡುವನು. ನಿನ್ನ ಮತ್ತು ದಾವೀದನ ಕುಶಲಕರ್ಮಿಗಳ ಜೊತೆಯಲ್ಲಿ ಅವನು ಕೆಲಸ ಮಾಡುವನು.

15 “ನೀನು ನನ್ನ ಸೇವಕರಿಗೆ ಆಹಾರವನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಕೊಡುವ ಭರವಸೆ ನೀಡಿರುವೆ. ಆದ್ದರಿಂದ ದಯವಿಟ್ಟು ಇವುಗಳನ್ನು ಒದಗಿಸಿಕೊಡು. 16 ನಾವು ಲೆಬನೋನಿನಲ್ಲಿ ನಿನಗೆ ಬೇಕಾದಷ್ಟು ಮರಗಳನ್ನು ಕಡಿದು ಅವುಗಳನ್ನು ಜೋಡಿಸಿ ತೆಪ್ಪಗಳನ್ನಾಗಿ ಮಾಡಿ ಸಮುದ್ರದಲ್ಲಿ ತೇಲಿಬಿಡುವೆವು. ಅವು ಯೊಪ್ಪಕ್ಕೆ ತಲುಪಿದಾಗ ನೀನು ಅವುಗಳನ್ನು ಶೇಖರಿಸಿ ಬೇಕಾದ ಕಡೆಗೆ ರವಾನಿಸು.”

17 ಆಮೇಲೆ ಸೊಲೊಮೋನನು ತನ್ನ ರಾಜ್ಯದಲ್ಲಿದ್ದ ಎಲ್ಲಾ ಪರದೇಶಸ್ಥರನ್ನು ಲೆಕ್ಕಿಸಿದನು. ಸೊಲೊಮೋನನ ತಂದೆಯಾದ ದಾವೀದನು ಮಾಡಿದ ಜನಗಣತಿಯ ನಂತರ ಈ ಜನಗಣತಿಯನ್ನು ಮಾಡಲಾಯಿತು. ಅವರಲ್ಲಿ ಒಂದು ಲಕ್ಷದ ಐವತ್ತ ಮೂರು ಸಾವಿರದ ಆರುನೂರು ಮಂದಿ ಪರದೇಶದವರಿದ್ದರು. 18 ಅವರಲ್ಲಿ ಎಪ್ಪತ್ತು ಸಾವಿರ ಮಂದಿಯನ್ನು ಸೊಲೊಮೋನನು ಹೊರೆಹೊರುವದಕ್ಕಾಗಿ ನೇಮಿಸಿದನು; ಎಂಭತ್ತುಸಾವಿರ ಮಂದಿಯನ್ನು ಬೆಟ್ಟಗಳಲ್ಲಿ ಕಲ್ಲಿನ ಕೆಲಸಮಾಡಲು ನೇಮಿಸಿದನು; ಮೂರು ಸಾವಿರದ ಆರುನೂರು ಮಂದಿಯನ್ನು ಕಾರ್ಮಿಕರ ಮೇಲ್ವಿಚಾರಣೆಗೋಸ್ಕರ ನೇಮಿಸಿದನು.

1 ಯೋಹಾನ 2

ಯೇಸು ನಮ್ಮ ಸಹಾಯಕ

ನನ್ನ ಪ್ರಿಯ ಮಕ್ಕಳೇ, ನೀವು ಪಾಪಗಳನ್ನು ಮಾಡದಿರಲೆಂದು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಆದರೆ ಯಾರಾದರೂ ಪಾಪವನ್ನು ಮಾಡಿದರೆ ನಮಗೆ ಸಹಾಯ ಮಾಡಲು ಯೇಸು ಕ್ರಿಸ್ತನಿದ್ದಾನೆ. ನೀತಿವಂತನಾಗಿರುವ ಆತನು ತಂದೆಯಾದ ದೇವರ ಬಳಿಯಲ್ಲಿದ್ದಾನೆ. ನಮ್ಮ ಪಾಪಗಳ ನಿವಾರಣೆಗೂ ಎಲ್ಲಾ ಜನರ ಪಾಪಗಳ ನಿವಾರಣೆಗೂ ಯೇಸುವೇ ಮಾರ್ಗವಾಗಿದ್ದಾನೆ.

ದೇವರ ಆಜ್ಞೆಗಳಿಗೆ ನಾವು ವಿಧೇಯರಾಗಿದ್ದರೆ, ದೇವರ ಬಗ್ಗೆ ನಿಜವಾಗಿಯೂ ತಿಳಿದಿದ್ದೇವೆಂಬುದು ಖಚಿತವಾಗುತ್ತದೆ. “ದೇವರನ್ನು ನಾನು ಬಲ್ಲೆನು” ಎಂದು ಹೇಳುವವನು ದೇವರ ಆಜ್ಞೆಗಳಿಗೆ ವಿಧೇಯನಾಗಿರದಿದ್ದರೆ, ಅವನು ಸುಳ್ಳುಗಾರನಾಗಿದ್ದಾನೆ. ಅವನಲ್ಲಿ ಸತ್ಯವಿಲ್ಲ. ಆದರೆ ಯಾವನಾದರೂ ದೇವರ ವಾಕ್ಯಕ್ಕೆ ವಿಧೇಯನಾಗಿದ್ದರೆ, ದೇವರ ಮೇಲೆ ಅವನಿಗಿರುವ ಪ್ರೀತಿಯು ಪರಿಪೂರ್ಣವಾಗಿದೆ. ನಾವು ದೇವರನ್ನು ಅನುಸರಿಸುತ್ತಿದ್ದೇವೆ ಎಂಬುದನ್ನು ಇದರಿಂದಲೇ ತಿಳಿದುಕೊಳ್ಳುತ್ತೇವೆ. ದೇವರಲ್ಲಿ ನೆಲೆಗೊಂಡಿದ್ದೇನೆ ಎಂದು ಹೇಳುವವನು, ಯೇಸು ಜೀವಿಸಿದಂತೆಯೇ ಜೀವಿಸಬೇಕು.

ಇತರರನ್ನು ಪ್ರೀತಿಸಿ

ನನ್ನ ಪ್ರಿಯ ಸ್ನೇಹೀತರೇ, ನಾನು ನಿಮಗೆ ಹೊಸ ಆಜ್ಞೆಯನ್ನು ಬರೆಯುತ್ತಿಲ್ಲ. ಮೊದಲಿಂದಲೂ ಈ ಆಜ್ಞೆಯು ನಿಮಗಿತ್ತು. ನೀವು ಈಗಾಗಲೇ ಕೇಳಿರುವ ವಾಕ್ಯವೇ ಈ ಆಜ್ಞೆಯಾಗಿದೆ. ಆದರೆ ಈ ಆಜ್ಞೆಯನ್ನು ನಾನು ನಿಮಗೆ ಹೊಸ ಆಜ್ಞೆಯೋ ಎಂಬಂತೆ ಬರೆಯುತ್ತಿದ್ದೇನೆ. ಈ ಆಜ್ಞೆಯು ಸತ್ಯವಾದದ್ದು. ಅದರ ಸತ್ಯತೆಯನ್ನು ನೀವು ಯೇಸುವಿನಲ್ಲಿಯೂ ನಿಮ್ಮಲ್ಲಿಯೂ ಕಾಣಬಹುದು. ಕತ್ತಲೆಯು ಕಳೆದುಹೋಗುತ್ತಿದೆ ಮತ್ತು ನಿಜವಾದ ಬೆಳಕು ಈಗಾಗಲೇ ಪ್ರಕಾಶಿಸುತ್ತಿದೆ.

“ನಾನು ಬೆಳಕಿನಲ್ಲಿದ್ದೇನೆ” ಎಂದು ಹೇಳುವವನು ತನ್ನ ಸಹೋದರನನ್ನು ದ್ವೇಷಿಸುತ್ತಿದ್ದರೆ, ಅವನಿನ್ನೂ ಅಂಧಕಾರದಲ್ಲಿದ್ದಾನೆ. 10 ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿದ್ದಾನೆ. ಬೇರೊಬ್ಬನನ್ನು ಪಾಪಕ್ಕೆ ನಡೆಸುವಂಥದ್ದೇನೂ ಅವನಲ್ಲಿರುವುದಿಲ್ಲ. 11 ಆದರೆ ತನ್ನ ಸಹೋದರನನ್ನು ದ್ವೇಷಿಸುವವನು ಅಂಧಕಾರದಲ್ಲಿದ್ದಾನೆ. ಅವನು ಅಂಧಕಾರದಲ್ಲಿಯೇ ಜೀವಿಸುತ್ತಾನೆ. ಅವನಿಗೆ ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದೇ ತಿಳಿದಿಲ್ಲ. ಏಕೆಂದರೆ ಅಂಧಕಾರವು ಅವನನ್ನು ಕುರುಡನನ್ನಾಗಿ ಮಾಡಿದೆ.

12 ಪ್ರಿಯ ಮಕ್ಕಳೇ, ನಿಮ್ಮ ಪಾಪಗಳು ಕ್ರಿಸ್ತನ ಮೂಲಕ ಕ್ಷಮಿಸಲ್ಪಟ್ಟಿರುವುದರಿಂದ
    ನಾನು ನಿಮಗೆ ಬರೆಯುತ್ತಿದ್ದೇನೆ.
13 ತಂದೆಗಳೇ, ಆದಿಯಿಂದ ಇರುವಾತನನ್ನು ನೀವು ತಿಳಿದಿರುವುದರಿಂದ
    ನಾನು ನಿಮಗೆ ಬರೆಯುತ್ತಿದ್ದೇನೆ.
ಯುವಕರೇ, ನೀವು ಕೆಡುಕನನ್ನು ಸೋಲಿಸಿರುವುದರಿಂದ
    ನಾನು ನಿಮಗೆ ಬರೆಯುತ್ತಿದ್ದೇನೆ.
14 ಮಕ್ಕಳೇ, ನೀವು ತಂದೆಯನ್ನು ತಿಳಿದಿರುವುದರಿಂದ
    ನಾನು ನಿಮಗೆ ಬರೆಯುತ್ತಿದ್ದೇನೆ.
ತಂದೆಗಳೇ, ಆದಿಯಿಂದ ಇರುವಾತನನ್ನು ನೀವು ತಿಳಿದಿರುವುದರಿಂದ
    ನಾನು ನಿಮಗೆ ಬರೆಯುತ್ತಿದ್ದೇನೆ.
ಯುವಕರೇ, ನೀವು ಬಲಶಾಲಿಗಳಾಗಿರುವುದರಿಂದ,
    ದೇವರ ವಾಕ್ಯವು ನಿಮ್ಮಲ್ಲಿ ನೆಲಸಿರುವುದರಿಂದ
ಮತ್ತು ನೀವು ಕೆಡುಕನನ್ನು ಸೋಲಿಸಿರುವುದರಿಂದ
    ನಾನು ನಿಮಗೆ ಬರೆಯುತ್ತಿದ್ದೇನೆ.

15 ಈ ಲೋಕವನ್ನಾಗಲಿ ಈ ಲೋಕದಲ್ಲಿರುವ ವಸ್ತುಗಳನ್ನಾಗಲಿ ನೀವು ಪ್ರೀತಿಸಬೇಡಿ. ಈ ಲೋಕವನ್ನು ಪ್ರೀತಿಸುವವನಿಗೆ ತಂದೆಯ (ದೇವರ) ಮೇಲೆ ಪ್ರೀತಿಯಿರುವುದಿಲ್ಲ. 16 ಈ ಲೋಕದಲ್ಲಿರುವ ಕೆಟ್ಟವುಗಳು ಇಂತಿವೆ: ನಮ್ಮ ಪಾಪಸ್ವಭಾವವನ್ನು ತಣಿಸಲು ಮಾಡಲಿಚ್ಛಿಸುವ ಕಾರ್ಯಗಳು, ನಾವು ನೋಡುವ ಪಾಪಪೂರಿತವಾದದ್ದನ್ನು ಪಡೆಯಲಿಚ್ಛಿಸುವುದು, ಮತ್ತು ನಮ್ಮಲ್ಲಿರುವ ವಸ್ತುಗಳಲ್ಲಿಯೇ ದುರಹಂಕಾರಪಡುವುದು. ಆದರೆ ಇವುಗಳಲ್ಲಿ ಯಾವುದೂ ತಂದೆಯಿಂದ ಬರುವುದಿಲ್ಲ. ಇವುಗಳೆಲ್ಲ ಈ ಲೋಕದಿಂದ ಬರುತ್ತವೆ. 17 ಈ ಲೋಕವು ಮತ್ತು ಜನರು ಬಯಸುವಂಥವುಗಳು ಗತಿಸಿಹೋಗುತ್ತವೆ. ಆದರೆ ದೇವರ ಚಿತ್ತಕ್ಕನುಸಾರವಾಗಿ ಮಾಡುವವನು ಸದಾಕಾಲ ಜೀವಿಸುವನು.

ಕ್ರಿಸ್ತನ ಶತ್ರುಗಳನ್ನು ಅನುಸರಿಸಬೇಡಿ

18 ನನ್ನ ಪ್ರಿಯ ಮಕ್ಕಳೇ, ಅಂತ್ಯವು ಸಮೀಪಿಸಿದೆ! ಕ್ರಿಸ್ತನ ಶತ್ರು ಬರುತ್ತಿದ್ದಾನೆಂಬುದನ್ನು ನೀವು ಕೇಳಿದ್ದೀರಿ. ಕ್ರಿಸ್ತನ ಅನೇಕ ಶತ್ರುಗಳು ಈಗಾಗಲೇ ಇಲ್ಲಿದ್ದಾರೆ. ಆದ್ದರಿಂದ ಅಂತ್ಯವು ಸಮೀಪಿಸಿದೆ ಎಂಬುದು ನಮಗೆ ತಿಳಿದಿದೆ. 19 ಕ್ರಿಸ್ತನ ಶತ್ರುಗಳು ನಮ್ಮ ಗುಂಪಿನಲ್ಲೇ ಇದ್ದರು. ಅವರು ನಮ್ಮನ್ನು ಬಿಟ್ಟುಹೋದರು. ಅವರು ನಿಜವಾಗಿಯೂ ನಮ್ಮವರಾಗಿರಲಿಲ್ಲ. ಅವರು ನಿಜವಾಗಿಯೂ ನಮ್ಮ ಸಭೆಗೆ ಸೇರಿದವರಾಗಿದ್ದರೆ ನಮ್ಮೊಂದಿಗೆ ಇರುತ್ತಿದ್ದರು. ಆದರೆ ಅವರು ಹೊರಟುಹೋದರು. ಅವರು ನಿಜವಾಗಿಯೂ ನಮ್ಮವರಾಗಿರಲಿಲ್ಲ ಎಂಬುದನ್ನು ಇದೇ ತೋರ್ಪಡಿಸುತ್ತದೆ.

20 ಪರಿಶುದ್ಧವಾಗಿರುವಾತನು (ದೇವರು ಅಥವಾ ಕ್ರಿಸ್ತನು) ಕೊಟ್ಟಿರುವ ವರವನ್ನು ನೀವು ಹೊಂದಿದ್ದೀರಿ. ಆದ್ದರಿಂದ ನೀವೆಲ್ಲರೂ ಸತ್ಯವನ್ನು ತಿಳಿದಿದ್ದೀರಿ. 21 ನಾನು ನಿಮಗೆ ಏಕೆ ಬರೆಯಬೇಕು? ನೀವು ಸತ್ಯವನ್ನು ತಿಳಿದಿಲ್ಲವೆಂದು ನಾನು ಬರೆಯಬೇಕೇ? ಇಲ್ಲ! ನೀವು ಸತ್ಯವನ್ನು ತಿಳಿದಿರುವುದರಿಂದ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಸತ್ಯದಿಂದ ಯಾವ ಸುಳ್ಳೂ ಬರುವುದಿಲ್ಲ ಎಂಬುದು ನಿಮಗೆ ತಿಳಿದಿದೆ.

22 ಆದ್ದರಿಂದ ಸುಳ್ಳು ಹೇಳುವವನು ಯಾರು? ಯೇಸುವನ್ನು ಕ್ರಿಸ್ತನಲ್ಲವೆಂದು ಹೇಳುವವನೇ ಸುಳ್ಳುಗಾರ. ಅವನು ಕ್ರಿಸ್ತನ ವೈರಿಯಾಗಿದ್ದಾನೆ. ಅವನು ತಂದೆಯನ್ನಾಗಲಿ (ದೇವರು), ಆತನ ಮಗನನ್ನಾಗಲಿ (ಕ್ರಿಸ್ತನು) ನಂಬುವುದಿಲ್ಲ. 23 ಮಗನನ್ನು ನಂಬದೆ ಇರುವವನು ತಂದೆಯನ್ನು ಹೊಂದಿಲ್ಲ. ಆದರೆ ಮಗನನ್ನು ಸ್ವೀಕರಿಸಿಕೊಳ್ಳುವವನು ತಂದೆಯನ್ನು ಸಹ ಹೊಂದಿದ್ದಾನೆ.

24 ನೀವು ಆರಂಭದಿಂದಲೂ ಕೇಳಿರುವ ಬೋಧನೆಯನ್ನೇ ಅನುಸರಿಸಿರಿ. ಆ ಬೋಧನೆಯನ್ನು ಅನುಸರಿಸುವವರಾಗಿದ್ದರೆ ನೀವು ಮಗನಲ್ಲಿಯೂ ತಂದೆಯಲ್ಲಿಯೂ ನೆಲೆಗೊಂಡಿದ್ದೀರಿ. 25 ಕ್ರಿಸ್ತನು ನಮಗೆ ಕೊಡುವುದಾಗಿ ಮಾಡಿದ್ದ ವಾಗ್ದಾನವೇ ಈ ನಿತ್ಯಜೀವ.

26 ನಿಮ್ಮನ್ನು ತಪ್ಪುಮಾರ್ಗಕ್ಕೆ ಸೆಳೆಯುವ ಜನರನ್ನು ಕುರಿತು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. 27 ಕ್ರಿಸ್ತನು ನಿಮಗೆ ವಿಶೇಷವಾದ ವರವನ್ನು ದಯಪಾಲಿಸಿರುವನು. ಅದು ನಿಮ್ಮಲ್ಲಿ ಇನ್ನೂ ಇದೆ. ಆದ್ದರಿಂದ ನಿಮಗೆ ಯಾವ ಉಪದೇಶಕರ ಅಗತ್ಯವೂ ಇಲ್ಲ. ಆತನು ನಿಮಗೆ ಕೊಟ್ಟಿರುವ ವರವು ನಿಮಗೆ ಎಲ್ಲವನ್ನೂ ಉಪದೇಶಿಸುತ್ತದೆ. ಅದು ನಿಜವಾದುದು, ಸುಳ್ಳಲ್ಲ. ಆದ್ದರಿಂದ ಅದರ ಉಪದೇಶಕ್ಕನುಸಾರವಾಗಿ ನೀವು ಆತನಲ್ಲಿ ನೆಲೆಗೊಂಡಿರಿ.

28 ಹೌದು, ನನ್ನ ಪ್ರಿಯ ಮಕ್ಕಳೇ, ಆತನಲ್ಲಿಯೇ ನೆಲೆಗೊಂಡಿರೋಣ. ನಾವು ಹೀಗೆ ಮಾಡಿದರೆ, ಕ್ರಿಸ್ತನು ಮರಳಿ ಬರುವ ದಿನದಂದು ನಾವು ಭಯಪಡಬೇಕಾಗಿಲ್ಲ; ಅಡಗಿಕೊಳ್ಳುವ ಅಗತ್ಯವಿರುವುದಿಲ್ಲ; ನಾಚಿಕೆಪಡುವ ಅಗತ್ಯವೂ ಇರುವುದಿಲ್ಲ. 29 ಕ್ರಿಸ್ತನು ನೀತಿವಂತನೆಂಬುದು ನಿಮಗೆ ತಿಳಿದಿದೆ. ಆದ್ದರಿಂದ ಯೋಗ್ಯವಾದುದನ್ನು ಮಾಡುವ ಜನರೆಲ್ಲರೂ ದೇವರ ಮಕ್ಕಳೆಂಬುದು ನಿಮಗೆ ತಿಳಿದಿದೆ.

ನಹೂಮ 1

ಎಲ್ಕೋಷ್ ಎಂಬ ಊರಿನವನಾದ ನಹೂಮನಿಗೆ ಆದ ದೇವದರ್ಶನದ ಪುಸ್ತಕ. ನಿನೆವೆ ಪಟ್ಟಣದ ವಿಷಯವಾಗಿ ದುಃಖಕರವಾದ ಸಂದೇಶ.

ನಿನೆವೆಯ ಮೇಲೆ ಯೆಹೋವನು ಕೋಪಗೊಂಡಿದ್ದಾನೆ

ಯೆಹೋವನು ಸ್ವಾಭಿಮಾನವುಳ್ಳ ದೇವರಾಗಿದ್ದಾನೆ.
    ಆತನು ಪಾಪಿಗಳ ಮೇಲೆ ಸೇಡನ್ನು ತೀರಿಸುವ ದೇವರು.
    ಆತನು ಬಹಳವಾಗಿ ಕೋಪಗೊಂಡಿದ್ದಾನೆ.
ಯೆಹೋವನು ಪಾಪಿಗಳನ್ನು ಶಿಕ್ಷಿಸುವ ದೇವರು.
    ಆತನು ವೈರಿಗಳನ್ನು ಶಿಕ್ಷಿಸುವನು.
    ಆತನ ವೈರಿಗಳ ಮೇಲೆ ಕೋಪವು ಸದಾಕಾಲವಿರುವುದು.
ಯೆಹೋವನು ತಾಳ್ಮೆಯುಳ್ಳ ದೇವರು
    ಮತ್ತು ಬಲಿಷ್ಠನಾದ ದೇವರಾಗಿದ್ದಾನೆ!
ಪಾಪಿಗಳನ್ನು ಆತನು ಶಿಕ್ಷಿಸುವನು.
ಆತನಿಂದ ಅವರು ತಪ್ಪಿಸಿಕೊಳ್ಳಲಾರರು.
    ದುಷ್ಟಜನರನ್ನು ಶಿಕ್ಷಿಸಲು ಯೆಹೋವನು ಬರುವನು.
ಆತನು ತನ್ನ ಸಾಮರ್ಥ್ಯವನ್ನು ಬಿರುಗಾಳಿಯಲ್ಲಿಯೂ ಸುಂಟರಗಾಳಿಯಲ್ಲಿಯೂ ತೋರ್ಪಡಿಸುವನು.
    ಮನುಷ್ಯನು ನೆಲದ ಧೂಳಿನ ಮೇಲೆ ನಡೆಯುತ್ತಾರೆ,
    ಯೆಹೋವನಾದರೋ ಮೋಡಗಳ ಮೇಲೆ ನಡೆಯುತ್ತಾನೆ.
ಯೆಹೋವನು ಸಮುದ್ರಕ್ಕೆ ಗದರಿಸಿದಾಗ ಅದು ಒಣಗಿಹೋಗುವುದು.
    ಆತನು ಎಲ್ಲಾ ನದಿಗಳನ್ನು ಬತ್ತಿಸಿಬಿಡುವನು.
ಕರ್ಮೆಲ್ ಮತ್ತು ಬಾಷಾನಿನ ಫಲವತ್ತಾದ ನೆಲಗಳು ಒಣಗಿ ಪಾಳುಬೀಳುವವು.
    ಲೆಬನೋನಿನ ಪುಷ್ಪವು ಬಾಡಿಹೋಗುವದು.
ಯೆಹೋವನು ಬರುತ್ತಾನೆ.
    ಪರ್ವತಗಳು ಭಯದಿಂದ ನಡುಗುವವು.
    ಬೆಟ್ಟಗಳು ಕರಗಿಹೋಗುವವು.
ಯೆಹೋವನು ಬರುತ್ತಾನೆ,
    ಮತ್ತು ಭೂಮಿಯು ಭಯದಿಂದ ನಡುಗುವುದು.
ಇಡೀ ಪ್ರಪಂಚ ಮತ್ತು ಅದರಲ್ಲಿರುವ
    ಜನರೆಲ್ಲಾ ಭಯದಿಂದ ನಡುಗುವರು.
ಯೆಹೋವನ ಮಹಾ ರೌದ್ರಕ್ಕೆದುರಾಗಿ ಯಾರೂ ನಿಲ್ಲಲಾರರು.
    ಯಾರೂ ಆ ಮಹಾ ಕೋಪವನ್ನು ಸಹಿಸಲು ಸಾಧ್ಯವಿಲ್ಲ.
ಆತನ ಕೋಪವು ಬೆಂಕಿಯಂತೆ ದಹಿಸುವದು.
    ಆತನು ಬರುವಾಗ ಬಂಡೆಯು ಪುಡಿಯಾಗುವುದು.
ಯೆಹೋವನು ಒಳ್ಳೆಯವನು.
    ಕಷ್ಟದ ಸಮಯದಲ್ಲಿ ಆತನು ಆಶ್ರಯಸ್ಥಾನ.
    ಆತನ ಮೇಲೆ ಭರವಸವಿಡುವವರನ್ನು ಸಂರಕ್ಷಿಸುತ್ತಾನೆ.
ಆದರೆ ಆತನು ತನ್ನ ವೈರಿಗಳನ್ನು ಪೂರ್ತಿಯಾಗಿ ನಾಶಮಾಡುತ್ತಾನೆ.
    ತೆರೆಯಂತೆ ಅವರನ್ನು ಕೊಚ್ಚಿಕೊಂಡು ಹೋಗುತ್ತಾನೆ.
    ಕತ್ತಲೆಯ ಕಡೆಗೆ ವೈರಿಗಳನ್ನು ಅಟ್ಟಿಬಿಡುವನು.
ಯೆಹೋವನಿಗೆ ವಿರುದ್ಧವಾಗಿ ಏಕೆ ಯೋಜನೆ ಹಾಕುತ್ತೀರಿ?
    ನೀವು ಯಾವ ಕುಯುಕ್ತಿಯನ್ನೂ ಮಾಡದ ಹಾಗೆ
    ಆತನು ನಿಮ್ಮನ್ನು ಸಂಪೂರ್ಣವಾಗಿ ನಾಶಮಾಡುತ್ತಾನೆ.
10 ಮಡಕೆಯ ಅಡಿಯಲ್ಲಿ ಉರಿಯುವ ಮುಳ್ಳುಕಡ್ಡಿಗಳಂತೆ
    ನೀವು ಸಂಪೂರ್ಣವಾಗಿ ನಾಶವಾಗುವಿರಿ.
ಜಂಬುಹುಲ್ಲಿನಂತೆ
    ನೀವು ಸುಟ್ಟು ಭಸ್ಮವಾಗುವಿರಿ.

11 ಅಶ್ಶೂರವೇ, ನಿನ್ನಿಂದ ಒಬ್ಬ ಮನುಷ್ಯನು ಬಂದು, ಯೆಹೋವನಿಗೆ ವಿರುದ್ಧವಾದ ಯೋಜನೆಗಳನ್ನು ಹಾಕಿದನು.
    ದುರಾಲೋಚನೆಯನ್ನು ಕೊಟ್ಟನು.
12 ಯೆಹೋವನು ಯೆಹೂದನಿಗೆ ಇಂತೆಂದೆನು:
“ಅಶ್ಶೂರದ ಜನರು ಬಲಶಾಲಿಗಳು.
    ಅವರಲ್ಲಿ ಅಸಂಖ್ಯಾತ ಸೈನಿಕರಿದ್ದಾರೆ.
    ಆದರೆ ಅವರೆಲ್ಲಾ ತುಂಡರಿಸಲ್ಪಡುವರು.
    ಅವರೆಲ್ಲಾ ಹತರಾಗುವರು.
ನನ್ನ ಜನರೇ, ನೀವು ಕಷ್ಟ ಅನುಭವಿಸುವಂತೆ ಮಾಡಿದೆನು.
    ಆದರೆ ಇನ್ನು ಮುಂದೆ ಹಾಗೆ ಮಾಡುವುದಿಲ್ಲ.
13 ನಾನು ನಿಮ್ಮನ್ನು ಸ್ವತಂತ್ರರನ್ನಾಗಿ ಬಿಟ್ಟಿದ್ದೇನೆ.
    ಅಶ್ಶೂರದವರ ಹಿಡಿತದಿಂದ ನಿಮ್ಮನ್ನು ಪಾರುಮಾಡಿದ್ದೇನೆ.
ನಿಮ್ಮ ಭುಜದಿಂದ ನೊಗವನ್ನು ತೆಗೆದುಹಾಕುವೆನು.
    ನಿಮ್ಮನ್ನು ಬಂಧಿಸಿದ್ದ ಸಂಕೋಲೆಯನ್ನು ಮುರಿದುಹಾಕುವೆನು.”

14 ಅಶ್ಶೂರದ ಅರಸನೇ, ನಿನ್ನ ವಿಷಯವಾಗಿ ಯೆಹೋವನು ಕೊಟ್ಟ ಆಜ್ಞೆ ಏನೆಂದರೆ,
    “ನಿನ್ನ ಹೆಸರನ್ನು ಧರಿಸುವ ಸಂತತಿಯವರು ಯಾರೂ ಇರುವುದಿಲ್ಲ.
ನಿನ್ನ ಕೆತ್ತನೆಯ ವಿಗ್ರಹಗಳನ್ನು ನಾನು ನಾಶಮಾಡುವೆನು.
    ನಿನ್ನ ದೇವರುಗಳ ಆಲಯದಲ್ಲಿರುವ ಲೋಹದ ಬೊಂಬೆಗಳನ್ನು ಕೆಡವಿಬಿಡುವೆನು.
ನಿನ್ನ ಅಂತ್ಯವು ಬೇಗನೆ ಬರಲಿರುವುದರಿಂದ
    ನಿನಗೆ ಸಮಾಧಿಯನ್ನು ತಯಾರುಮಾಡುತ್ತಿದ್ದೇನೆ.”

15 ಯೆಹೂದವೇ, ನೋಡು!
    ಬೆಟ್ಟಗಳ ಮೇಲಿನಿಂದ ಬರುವವನನ್ನು ನೋಡು.
    ಅವನು ಶುಭಸಮಾಚಾರವನ್ನು ತರುವನು.
    ಸಮಾಧಾನ ಉಂಟೆಂದು ಅವನು ಸಾರುತ್ತಾನೆ.
ಯೆಹೂದವೇ, ನಿನ್ನ ವಿಶೇಷ ಹಬ್ಬಗಳನ್ನು ಆಚರಿಸು.
    ನೀನು ವಾಗ್ದಾನ ಮಾಡಿದ್ದನ್ನು ನೆರವೇರಿಸು.
ಕೆಲಸಕ್ಕೆ ಬಾರದ ಆ ಜನರು ನಿನ್ನ ಬಳಿಗೆ ಬಂದು ನಿನ್ನ ಮೇಲೆ ದಾಳಿ ಮಾಡುವದಿಲ್ಲ.
    ಯಾಕೆಂದರೆ ಆ ದುಷ್ಟ ಜನರೆಲ್ಲಾ ನಾಶವಾಗಿರುತ್ತಾರೆ.

ಲೂಕ 17

ಪಾಪ

(ಮತ್ತಾಯ 18:6-7,21-22; ಮಾರ್ಕ 9:42)

17 ಯೇಸು ತನ್ನ ಶಿಷ್ಯರಿಗೆ, “ಜನರನ್ನು ಪಾಪಕ್ಕೆ ನಡೆಸುವಂಥ ಸಂಗತಿಗಳು ಖಂಡಿತವಾಗಿ ಬರುತ್ತವೆ. ಆದರೆ ಅವುಗಳನ್ನು ಬರಮಾಡುವವನ ಗತಿಯನ್ನು ಏನು ಹೇಳಲಿ! ಬಲಹೀನರಾದ ಇವರನ್ನು ಪಾಪಕ್ಕೆ ನಡೆಸುವವನು ತನ್ನ ಕುತ್ತಿಗೆಗೆ ಒಂದು ದೊಡ್ಡ ಕಲ್ಲನ್ನು ಕಟ್ಟಿಕೊಂಡು ನೀರಿನಲ್ಲಿ ಮುಳುಗುವುದೇ ಉತ್ತಮ. ಆದ್ದರಿಂದ ಎಚ್ಚರಿಕೆಯಾಗಿರಿ!

“ನಿನ್ನ ಸಹೋದರನು ಪಾಪಮಾಡಿದರೆ, ಅವನನ್ನು ಖಂಡಿಸು. ಒಂದುವೇಳೆ ಅವನೇನಾದರೂ ತನ್ನ ತಪ್ಪಿಗಾಗಿ ಪಶ್ಚಾತ್ತಾಪಪಟ್ಟರೆ ಅವನನ್ನು ಕ್ಷಮಿಸು. ನಿನ್ನ ಸಹೋದರನು ನಿನಗೆ ಒಂದು ದಿನದಲ್ಲಿ ಏಳು ಸಲ ತಪ್ಪುಮಾಡಿ, ಪ್ರತಿಸಲವೂ, ‘ನನ್ನನ್ನು ಕ್ಷಮಿಸು’ ಎಂದು ಕೇಳಿಕೊಂಡರೆ, ನೀನು ಅವನನ್ನು ಕ್ಷಮಿಸಬೇಕು” ಎಂದು ಹೇಳಿದನು.

ನಿಮ್ಮ ನಂಬಿಕೆ ಎಷ್ಟು ದೊಡ್ಡದು?

ಅಪೊಸ್ತಲರು ಪ್ರಭುವಿಗೆ (ಯೇಸು), “ನಮ್ಮ ನಂಬಿಕೆಯನ್ನು ಹೆಚ್ಚಿಸು!” ಎಂದು ಕೇಳಿಕೊಂಡರು.

ಪ್ರಭುವು ಅವರಿಗೆ ಹೀಗೆಂದನು: “ನಿಮ್ಮ ನಂಬಿಕೆ ಸಾಸಿವೆ ಕಾಳಷ್ಟು ದೊಡ್ಡದಾಗಿದ್ದರೆ, ನೀವು ಈ ಅತ್ತಿಮರಕ್ಕೆ, ‘ಇಲ್ಲಿಂದ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು!’ ಎಂದು ಹೇಳಿದರೂ ಅದು ನಿಮಗೆ ವಿಧೇಯವಾಗುತ್ತದೆ.

ಒಳ್ಳೆಯ ಸೇವಕರಾಗಿರಿ

“ನಿಮ್ಮಲ್ಲಿ ಒಬ್ಬನಿಗೆ ಹೊಲದಲ್ಲಿ ಕೆಲಸ ಮಾಡುವಂಥ ಒಬ್ಬ ಸೇವಕನಿದ್ದಾನೆಂದು ಭಾವಿಸಿಕೊಳ್ಳೋಣ. ಆ ಸೇವಕನು ಭೂಮಿಯನ್ನು ಉಳುತ್ತಿರುತ್ತಾನೆ ಅಥವಾ ಕುರಿಗಳನ್ನು ಮೇಯಿಸುತ್ತಿರುತ್ತಾನೆ. ಆ ಸೇವಕನು ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಬಂದಾಗ ನೀನು ಅವನಿಗೆ ಏನು ಹೇಳುವೆ? ‘ಒಳಗೆ ಬಾ! ಊಟಕ್ಕೆ ಕುಳಿತುಕೊ’ ಎಂದು ಹೇಳುವಿಯೋ? ಇಲ್ಲ! ನೀನು ಅವನಿಗೆ, ‘ನನಗೋಸ್ಕರ ಅಡಿಗೆ ಮಾಡು. ಬಳಿಕ ಶುಭ್ರವಾದ ಬಟ್ಟೆಯನ್ನು ಧರಿಸಿಕೊಂಡು ಬಂದು ನನಗೆ ಊಟಬಡಿಸು. ನಾನು ತಿಂದು ಕುಡಿದ ಮೇಲೆ ನೀನು ಊಟಮಾಡು’ ಎಂದು ಹೇಳುವೆಯಷ್ಟೇ. ಆ ಸೇವಕನು ತನ್ನ ಕೆಲಸ ಮಾಡಿದ್ದಕ್ಕಾಗಿ ನೀನೇನೂ ಅವನಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಬೇಕಾಗಿಲ್ಲ. ಸೇವಕನಿರುವುದು ಯಜಮಾನನು ಹೇಳಿದ್ದನ್ನು ಮಾಡುವುದಕ್ಕಾಗಿಯಷ್ಟೇ. 10 ಇದೇ ನಿಯಮ ನಿಮಗೂ ಅನ್ವಯಿಸುತ್ತದೆ. ನಿಮಗೆ ನೇಮಿಸಿದ ಕೆಲಸಗಳನ್ನು ನೀವು ಮಾಡಿ ಪೂರೈಸಿದಾಗ, ‘ನಾವು ಆಳುಗಳು, ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ’ ಎಂದು ಹೇಳಬೇಕು.”

ಕೃತಜ್ಞತೆಯುಳ್ಳವರಾಗಿರಿ

11 ಯೇಸುವು ಜೆರುಸಲೇಮಿಗೆ ಪ್ರಯಾಣಮಾಡುತ್ತಾ ಗಲಿಲಾಯದಿಂದ ಸಮಾರ್ಯಕ್ಕೆ ಹೋದನು. 12 ಅಲ್ಲಿ ಆತನು ಒಂದು ಗ್ರಾಮಕ್ಕೆ ಬಂದನು. ಅಲ್ಲಿ ಹತ್ತು ಜನರು ಆತನನ್ನು ಭೇಟಿಯಾದರು. ಅವರು ಯೇಸುವಿನ ಸಮೀಪಕ್ಕೆ ಬರಲಿಲ್ಲ. ಏಕೆಂದರೆ ಅವರೆಲ್ಲರೂ ಕುಷ್ಠರೋಗಿಗಳಾಗಿದ್ದರು. 13 ಆದರೆ ಅವರು, “ಯೇಸುವೇ! ಗುರುವೇ! ದಯಮಾಡಿ ನಮಗೆ ಸಹಾಯಮಾಡು!” ಎಂದು ಕೂಗಿಕೊಂಡರು.

14 ಯೇಸು ಅವರನ್ನು ನೋಡಿ, “ಹೋಗಿ, ನಿಮ್ಮನ್ನು ಯಾಜಕರಿಗೆ ತೋರಿಸಿಕೊಳ್ಳಿರಿ” ಎಂದು ಹೇಳಿದನು.

ಅವರು ಯಾಜಕರ ಬಳಿಗೆ ಹೋಗುತ್ತಿದ್ದಾಗ ಅವರಿಗೆ ವಾಸಿಯಾಯಿತು. 15 ಅವರಲ್ಲಿ ಒಬ್ಬನು ತನಗೆ ಗುಣವಾದುದ್ದನ್ನು ಕಂಡು ಯೇಸುವಿನ ಬಳಿಗೆ ಹಿಂತಿರುಗಿ ಬಂದು ಗಟ್ಟಿಯಾದ ಧ್ವನಿಯಿಂದ ದೇವರನ್ನು ಕೊಂಡಾಡಿದನು. 16 ಅವನು ಯೇಸುವಿನ ಪಾದಗಳಿಗೆ ಅಡ್ಡಬಿದ್ದು ಆತನಿಗೆ ವಂದನೆ ಸಲ್ಲಿಸಿದನು. (ಅವನು ಸಮಾರ್ಯದವನು, ಯೆಹೂದ್ಯನಲ್ಲ.) 17 ಯೇಸು, “ಹತ್ತು ಜನರಿಗೆ ವಾಸಿಯಾಯಿತಲ್ಲಾ! ಇನ್ನುಳಿದ ಒಂಭತ್ತು ಮಂದಿ ಎಲ್ಲಿ? 18 ದೇವರಿಗೆ ಕೃತಜ್ಞತೆ ಸಲ್ಲಿಸಲು ಈ ಸಮಾರ್ಯದವನನ್ನು ಬಿಟ್ಟು ಬೇರೆ ಯಾರೂ ಬರಲಿಲ್ಲವೇ?” ಎಂದು ಕೇಳಿದನು. 19 ಬಳಿಕ ಯೇಸು ಅವನಿಗೆ, “ಎದ್ದೇಳು! ಈಗ ನೀನು ಮನೆಗೆ ಹೋಗು! ನೀನು ನಂಬಿದ್ದರಿಂದಲೇ ನಿನಗೆ ವಾಸಿಯಾಯಿತು” ಅಂದನು.

ದೇವರ ರಾಜ್ಯವು ನಿಮ್ಮೊಳಗಿದೆ

(ಮತ್ತಾಯ 24:23-28,37-41)

20 ಫರಿಸಾಯರಲ್ಲಿ ಕೆಲವರು ಯೇಸುವನ್ನು, “ದೇವರ ರಾಜ್ಯವು ಯಾವಾಗ ಬರುವುದು?” ಎಂದು ಕೇಳಿದರು.

ಯೇಸು ಅವರಿಗೆ, “ದೇವರ ರಾಜ್ಯವು ಬರುತ್ತಿದೆ, ಆದರೆ ನಿಮ್ಮ ಕಣ್ಣುಗಳಿಗೆ ಕಾಣಿಸುವಂತೆ ಅದು ಬರುವುದಿಲ್ಲ. 21 ‘ಇಗೋ, ದೇವರ ರಾಜ್ಯವು ಇಲ್ಲಿದೆ!’ ‘ಅಗೋ ಅಲ್ಲಿದೆ!’ ಎಂದು ಜನರು ಹೇಳುವಂತಿಲ್ಲ. ದೇವರ ರಾಜ್ಯವು ನಿಮ್ಮೊಳಗೇ ಇದೆ” ಎಂದು ಉತ್ತರಿಸಿದನು.

22 ಬಳಿಕ ಯೇಸು ತನ್ನ ಶಿಷ್ಯರಿಗೆ, “ಮನುಷ್ಯಕುಮಾರನ ದಿನಗಳಲ್ಲೊಂದನ್ನು ನೀವು ನೋಡಬೇಕೆಂದು ಬಹಳವಾಗಿ ಆಶಿಸುವ ಕಾಲವು ಬರುವುದು, ಆದರೆ ನೀವು ಅದನ್ನು ನೋಡಲಾಗುವುದಿಲ್ಲ. 23 ಜನರು ನಿಮಗೆ, ‘ಅಗೋ, ಅಲ್ಲಿದ್ದಾನೆ, ಇಗೋ, ಇಲ್ಲಿದ್ದಾನೆ!’ ಎಂದು ಹೇಳುವರು. ನೀವು ಇದ್ದಲ್ಲಿಯೇ ಇರಿ. ಅವರನ್ನು ಹಿಂಬಾಲಿಸಿ ಹೋಗಿ ಹುಡುಕಬೇಡಿ.

ಯೇಸು ತಿರುಗಿ ಬರುವಾಗ ಲೋಕದ ಸ್ಥಿತಿ

24 “ಮನುಷ್ಯಕುಮಾರನು ಬಂದಾಗ ನಿಮಗೇ ಗೊತ್ತಾಗುವುದು. ಆಕಾಶದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೆ ಹೊಳೆಯುವ ಮಿಂಚಿನಂತೆ ಆತನು ಬರುವನು. 25 ಆದರೆ ಅದಕ್ಕಿಂತಲೂ ಮೊದಲು, ಮನುಷ್ಯಕುಮಾರನು ಅನೇಕ ಸಂಕಟಗಳನ್ನು ಅನುಭವಿಸಿ ಈ ಕಾಲದ ಜನರಿಂದ ತಿರಸ್ಕರಿಸಲ್ಪಡುವನು.

26 “ಮನುಷ್ಯಕುಮಾರನು ತಿರುಗಿ ಬರುವ ದಿವಸಗಳಲ್ಲಿ ಈ ಲೋಕದ ಸ್ಥಿತಿಯು ನೋಹನ ಕಾಲದ ಸ್ಥಿತಿಯಂತೆಯೇ ಇರುವುದು. 27 ನೋಹನ ಕಾಲದಲ್ಲಿ ಜನರು ತಿನ್ನುತ್ತಾ, ಕುಡಿಯುತ್ತಾ, ಮದುವೆ ಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ ಇದ್ದರು. ನೋಹನು ನಾವೆಯನ್ನು ಪ್ರವೇಶಿಸಿದ ದಿನದಲ್ಲಿಯೂ ಅವರು ಹಾಗೆಯೇ ಮಾಡುತ್ತಿದ್ದರು. ಆಗ ಜಲಪ್ರಳಯ ಬಂದು ಎಲ್ಲಾ ಜನರನ್ನು ನಾಶಮಾಡಿತು.

28 “ಲೋಟನ ಕಾಲದಲ್ಲಿ ದೇವರು ಸೊದೋಮನ್ನು ನಾಶಮಾಡಿದಾಗ ಲೋಕದ ಸ್ಥಿತಿಯು ಹೇಗಿತ್ತೋ ಅದೇರೀತಿಯಲ್ಲಿ ಮುಂದೆಯೂ ಇರುವುದು. ಆ ಜನರು ತಿನ್ನುತ್ತಾ, ಕುಡಿಯುತ್ತಾ, ಕೊಂಡುಕೊಳ್ಳುತ್ತಾ, ಮಾರಾಟ ಮಾಡುತ್ತಾ, ಬೀಜ ಬಿತ್ತುತ್ತಾ ಮತ್ತು ತಮಗಾಗಿ ಮನೆಗಳನ್ನು ಕಟ್ಟಿಸಿಕೊಳ್ಳುತ್ತಾ ಇದ್ದರು. 29 ಲೋಟನು ಆ ಪಟ್ಟಣವನ್ನು ಬಿಟ್ಟು ಹೊರಟ ದಿನದಲ್ಲಿಯೂ ಜನರು ಹಾಗೆಯೇ ಮಾಡುತ್ತಿದ್ದರು. ಆಗ ಆಕಾಶದಿಂದ ಬೆಂಕಿಯ ಸುರಿಮಳೆಯಾಗಿ ಅವರೆಲ್ಲರನ್ನೂ ನಾಶಮಾಡಿತು. 30 ಮನುಷ್ಯಕುಮಾರನು ತಿರುಗಿ ಬರುವಾಗ ಲೋಕದ ಸ್ಥಿತಿ ಅದೇ ರೀತಿಯಲ್ಲಿರುವುದು.

31 “ಆ ದಿನದಲ್ಲಿ, ಮಾಳಿಗೆಯ ಮೇಲಿರುವವನು ಮನೆಯೊಳಗಿರುವ ತನ್ನ ವಸ್ತುಗಳನ್ನು ತೆಗೆದುಕೊಳ್ಳಲು ಹೋಗದಿರಲಿ. ಹೊಲದಲ್ಲಿರುವವನು ತನ್ನ ಮನೆಗೆ ಮರಳಿ ಹೋಗದಿರಲಿ. 32 ಲೋಟನ ಹೆಂಡತಿಗೆ[a] ಸಂಭವಿಸಿದ್ದು ಜ್ಞಾಪಕವಿದೆಯೇ?

33 “ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವವನು ಅದನ್ನು ಕಳೆದುಕೊಳ್ಳುವನು. ಆದರೆ ತನ್ನ ಪ್ರಾಣವನ್ನು ಕೊಡುವವನು ಅದನ್ನು ಉಳಿಸಿಕೊಳ್ಳುವನು. 34 ನಾನು ತಿರುಗಿ ಬರುವಾಗ ಒಂದೇ ಕೋಣೆಯಲ್ಲಿ ಇಬ್ಬರು ಮಲಗಿದ್ದರೂ ಅವರಲ್ಲಿ ಒಬ್ಬನನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು. 35 ಇಬ್ಬರು ಸ್ತ್ರೀಯರು ಒಟ್ಟಿಗೆ ಕೆಲಸಮಾಡುತ್ತಿದ್ದರೂ ಅವರಲ್ಲಿ ಒಬ್ಬಳನ್ನು ತೆಗೆದುಕೊಳ್ಳಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು.” 36 [b]

37 ಶಿಷ್ಯರು ಯೇಸುವಿಗೆ, “ಪ್ರಭುವೇ, ಇದೆಲ್ಲಾ ಎಲ್ಲಿ ಸಂಭವಿಸುವುದು?” ಎಂದು ಕೇಳಿದರು.

ಯೇಸು ಅವರಿಗೆ, “ಹದ್ದುಗಳು ಎಲ್ಲಿ ಕೂಡಿಬಂದಿರುತ್ತವೆಯೋ ಅಲ್ಲಿ ಹೆಣ ಇದ್ದೇ ಇರುತ್ತದೆಯೆಂದು ಜನರು ತಿಳಿದುಕೊಳ್ಳುತ್ತಾರೆ” ಎಂದು ಉತ್ತರಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International