Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ಪೂರ್ವಕಾಲವೃತ್ತಾಂತ 1

ಸೊಲೊಮೋನನು ಜ್ಞಾನವನ್ನು ಕೇಳಿಕೊಂಡದ್ದು

ದೇವರಾದ ಯೆಹೋವನು ದಾವೀದನ ಮಗನಾದ ಸೊಲೊಮೋನನೊಂದಿಗೆ ಇದ್ದುದರಿಂದ ಸೊಲೊಮೋನನು ಬಹು ಬಲಿಷ್ಠನಾದ ಅರಸನಾಗಿ ಪ್ರಖ್ಯಾತನಾದನು.

2-3 ಸೊಲೊಮೋನನು ಇಸ್ರೇಲರನ್ನೂ ಅಂದರೆ ನ್ಯಾಯಾಧಿಪತಿಗಳನ್ನೂ ಶತಾಧಿಪತಿಗಳನ್ನೂ ಸೇನಾಧಿಪತಿಗಳನ್ನೂ ಕುಲಪ್ರಧಾನರನ್ನೂ ಕರೆಯಿಸಿ ಅವರೊಂದಿಗೆ ಗಿಬ್ಯೋನಿನ ಉನ್ನತಸ್ಥಳಕ್ಕೆ ಹೋದನು. ದೇವದರ್ಶನಗುಡಾರವು ಅಲ್ಲಿತ್ತು. ಅರಣ್ಯದಲ್ಲಿ ಇಸ್ರೇಲರು ಪ್ರಯಾಣಿಸುತ್ತಿದ್ದಾಗ ಯೆಹೋವನ ಸೇವಕನಾದ ಮೋಶೆಯು ಗುಡಾರವನ್ನು ಮಾಡಿಸಿದ್ದನು. ದೇವರ ಒಡಂಬಡಿಕೆಯ ಪೆಟ್ಟಿಗೆಯನ್ನು ದಾವೀದನು ಕಿರ್ಯತ್ಯಾರೀಮಿನಿಂದ ಜೆರುಸಲೇಮಿಗೆ ತಂದು ಅಲ್ಲಿ ತಾನು ಅದಕ್ಕಾಗಿ ಏರ್ಪಡಿಸಿದ್ದ ಸ್ಥಳದಲ್ಲಿ ಪ್ರತಿಷ್ಠಿಸಿದನು; ಮತ್ತು ಅದಕ್ಕೆ ಗುಡಾರವನ್ನು ನಿರ್ಮಿಸಿದ್ದನು. ಊರೀಯ ಮಗನೂ ಹೂರನ ಮೊಮ್ಮಗನೂ ಆದ ಬೆಚಲೇಲನು ಮಾಡಿದ ತಾಮ್ರದ ಯಜ್ಞವೇದಿಕೆಯು ಗಿಬ್ಯೋನಿನಲ್ಲಿದ್ದ ಪವಿತ್ರ ಗುಡಾರದ ಮುಂದೆ ಇಡಲ್ಪಟ್ಟಿತ್ತು. ಆದ್ದರಿಂದ ಸೊಲೊಮೋನನೂ ಇಸ್ರೇಲರೂ ಗಿಬ್ಯೋನಿಗೆ ಹೋದರು. ದೇವದರ್ಶನ ಗುಡಾರದ ಮುಂಭಾಗದಲ್ಲಿದ್ದ ತಾಮ್ರದ ಯಜ್ಞವೇದಿಕೆಯ ಬಳಿಗೆ ಸೊಲೊಮೋನನು ಹೋಗಿ ಅದರ ಮೇಲೆ ಒಂದು ಸಾವಿರ ಸರ್ವಾಂಗಹೋಮಗಳನ್ನು ಸಮರ್ಪಿಸಿದನು.

ಆ ರಾತ್ರಿ ದೇವರು ಸೊಲೊಮೋನನಿಗೆ ದರ್ಶನ ನೀಡಿ, “ಸೊಲೊಮೋನನೇ, ನಿನ್ನ ಕೋರಿಕೆಯೇನು?” ಎಂದು ಕೇಳಿದನು.

ಆಗ ಸೊಲೊಮೋನನು ದೇವರಿಗೆ, “ನೀನು ನನ್ನ ತಂದೆಯಾದ ದಾವೀದನ ಮೇಲೆ ಮಹಾಕೃಪೆಯನ್ನು ತೋರಿ ಅವನ ಸ್ಥಾನದಲ್ಲಿ ಅರಸನಾಗುವದಕ್ಕೆ ನನ್ನನ್ನು ಆರಿಸಿಕೊಂಡಿರುವೆ. ದೇವರಾದ ಯೆಹೋವನೇ ನೀನು ನನ್ನ ತಂದೆಯಾದ ದಾವೀದನಿಗೆ ಮಾಡಿರುವ ವಾಗ್ದಾನವನ್ನು ನೆರವೇರಿಸು. ಒಂದು ದೊಡ್ಡ ರಾಜ್ಯಕ್ಕೆ ನನ್ನನ್ನು ಅರಸನನ್ನಾಗಿ ನೇಮಿಸಿರುತ್ತೀ. ಅದರಲ್ಲಿ ಭೂಮಿಯ ಧೂಳಿನೋಪಾದಿಯಲ್ಲಿ ಜನರು ತುಂಬಿದ್ದಾರೆ. 10 ಈ ಜನರನ್ನು ಸರಿಯಾದ ರೀತಿಯಲ್ಲಿ ಆಳುವ ಹಾಗೆ ನನಗೆ ಜ್ಞಾನವನ್ನೂ ವಿವೇಕವನ್ನೂ ದಯಪಾಲಿಸು. ನಿನ್ನ ಸಹಾಯವಿಲ್ಲದೆ ಈ ನಿನ್ನ ಜನರನ್ನು ಆಳಲು ಯಾರಿಗೂ ಸಾಧ್ಯವಿಲ್ಲ” ಎಂದು ಹೇಳಿದನು.

11 ಆಗ ದೇವರು ಸೊಲೊಮೋನನಿಗೆ, “ನಿನ್ನ ಕೋರಿಕೆ ಒಳ್ಳೆಯದಾಗಿದೆ. ನೀನು ಐಶ್ವರ್ಯವನ್ನಾಗಲಿ ಗೌರವವನ್ನಾಗಲಿ ಬೆಳ್ಳಿಬಂಗಾರಗಳನ್ನಾಗಲಿ ಕೇಳಲಿಲ್ಲ. ನಿನ್ನ ವೈರಿಗಳನ್ನು ನಿರ್ಮೂಲ ಮಾಡುವಂತಾಗಲಿ ಅಥವಾ ನಿನಗೆ ದೀರ್ಘಾಯುಷ್ಯವನ್ನು ಕೊಡು ಎಂದಾಗಲಿ ನೀನು ಕೇಳಿಕೊಳ್ಳದೆ ರಾಜ್ಯವನ್ನು ನ್ಯಾಯವಾಗಿ ಆಳಲು ಬೇಕಾದ ಜ್ಞಾನವಿವೇಕಗಳನ್ನು ಕೇಳಿಕೊಂಡೆ. ನಾನು ಆರಿಸಿಕೊಂಡಿರುವ ಜನಾಂಗದ ಮೇಲೆ ಆಡಳಿತ ನಡಿಸುವಾಗ ಯೋಗ್ಯವಾದ ಸಲಹೆ ಕೊಡುವಂತೆ ಜ್ಞಾನವನ್ನು ಕೇಳಿರುತ್ತೀ. 12 ನಾನು ನಿನಗೆ ಜ್ಞಾನವಿವೇಕಗಳನ್ನು ಕೊಡುವೆನು. ಅದರ ಜೊತೆಯಲ್ಲಿ ನಿನಗೆ ಐಶ್ವರ್ಯವನ್ನೂ ಘನತೆಯನ್ನೂ ದಯಪಾಲಿಸುವೆನು. ನಿನಗಿಂತ ಮುಂಚೆ ಇದ್ದ ಯಾವ ಅರಸನಿಗೂ ಇಂಥಾ ಐಶ್ವರ್ಯಗಳಾಗಲಿ ಘನತೆಯಾಗಲಿ ಇರಲಿಲ್ಲ. ಮತ್ತು ಇನ್ನು ಮುಂದೆಯೂ ಯಾವ ರಾಜನಿಗೂ ಇಂಥಾ ಘನತೆ ಮತ್ತು ಐಶ್ವರ್ಯಗಳಿರುವುದಿಲ್ಲ” ಎಂದು ಹೇಳಿದನು.

13 ಸೊಲೊಮೋನನು ಗಿಬ್ಯೋನಿನಲ್ಲಿ ಆರಾಧನಾಸ್ಥಳಕ್ಕೆ ಹೋದನು. ಬಳಿಕ ಅವನು ದೇವದರ್ಶನ ಗುಡಾರದಿಂದ ಜೆರುಸಲೇಮಿಗೆ ಹಿಂದಿರುಗಿ ಇಸ್ರೇಲಿನ ಮೇಲೆ ರಾಜ್ಯಭಾರವನ್ನು ಮಾಡತೊಡಗಿದನು.

ಸೊಲೊಮೋನನು ಸೈನ್ಯವನ್ನೂ ತನ್ನ ಐಶ್ವರ್ಯವನ್ನೂ ಹೆಚ್ಚಿಸಿಕೊಂಡದ್ದು

14 ಸೊಲೊಮೋನನು ಕುದುರೆಗಳನ್ನೂ ರಥಗಳನ್ನೂ ಸಂಗ್ರಹಿಸಲು ಪ್ರಾರಂಭಿಸಿ ಒಂದು ಸಾವಿರದ ನಾನೂರು ರಥಗಳನ್ನೂ ಹನ್ನೆರಡು ಸಾವಿರ ರಾಹುತರನ್ನೂ ತನ್ನ ಸೈನ್ಯಕ್ಕೆ ಕೂಡಿಸಿಕೊಂಡನು. ಅವುಗಳನ್ನು ರಥಗಳನ್ನಿಡುವ ನಗರಗಳಲ್ಲಿ ಇರಿಸಿದನು. ಅದರಲ್ಲಿ ಕೆಲವನ್ನು ತನ್ನ ಅರಮನೆಯಿರುವ ಜೆರುಸಲೇಮಿನಲ್ಲಿ ಇರಿಸಿದನು. 15 ಜೆರುಸಲೇಮಿನಲ್ಲಿ ಸೊಲೊಮೋನನು ಅಪಾರವಾದ ಬೆಳ್ಳಿಬಂಗಾರಗಳನ್ನು ಶೇಖರಿಸಿಟ್ಟಿದನು. ಭೂಮಿಯ ಮೇಲೆ ಕಲ್ಲುಗಳು ಹೇಗಿರುತ್ತವೋ ಅದೇ ರೀತಿಯಲ್ಲಿ ಅವನಲ್ಲಿ ಬೆಳ್ಳಿಬಂಗಾರಗಳಿದ್ದವು. ದೇವದಾರು ಮರಗಳನ್ನೂ ಸೊಲೊಮೋನನು ಶೇಖರಿಸಿಟ್ಟನು. ಪಶ್ಚಿಮದ ಬೆಟ್ಟಪ್ರದೇಶಗಳಲ್ಲಿ ಜಾಲಿಮರಗಳು ಹೇರಳವಾಗಿರುವಂತೆ ದೇವದಾರುಮರಗಳೂ ಹೇರಳವಾಗಿದ್ದವು. 16 ಈಜಿಪ್ಟ್ ಮತ್ತು ಕ್ಯೂ ದೇಶಗಳಿಂದ ಸೊಲೊಮೋನನು ಕುದುರೆಗಳನ್ನು ತನ್ನ ವ್ಯಾಪಾರಸ್ಥರ ಮೂಲಕ ಖರೀದಿ ಮಾಡಿದನು. 17 ಸೊಲೊಮೋನನ ವ್ಯಾಪಾರಿಗಳು ಈಜಿಪ್ಟಿನಲ್ಲಿ ಒಂದೊಂದು ರಥಕ್ಕೆ ಏಳು ಕಿಲೋಗ್ರಾಂ ತೂಕದ ಬೆಳ್ಳಿಯನ್ನೂ ಒಂದೊಂದು ಕುದುರೆಗೆ ಎರಡು ಕಿಲೋಗ್ರಾಂ ತೂಕದ ಬೆಳ್ಳಿಯನ್ನೂ ಕೊಟ್ಟು ಖರೀದಿಸಿ ಅವುಗಳನ್ನು ಹಿತ್ತಿಯರ ಅರಸರಿಗೂ ಅರಾಮ್ಯರ ಅರಸರಿಗೂ ಮಾರಿದರು.

1 ಯೋಹಾನ 1

ಈ ಲೋಕವು ಆರಂಭವಾಗುವುದಕ್ಕಿಂತ ಮುಂಚಿನಿಂದಲೂ ಇದ್ದ ಜೀವವಾಕ್ಯದ ಕುರಿತಾಗಿ ನಾವು ನಿಮಗೆ ಬರೆಯುತ್ತಿದ್ದೇವೆ: ಅದನ್ನು ಕಿವಿಯಾರೆ ಕೇಳಿದೆವು; ಕಣ್ಣಾರೆ ನೋಡಿದೆವು, ಮನಸ್ಸಿಟ್ಟು ಗಮನಿಸಿದೆವು, ಕೈಗಳಿಂದ ಮುಟ್ಟಿ ನೋಡಿದೆವು. ಆ ಜೀವವು ನಮಗೆ ಪ್ರತ್ಯಕ್ಷವಾಯಿತು. ನಾವು ಅದನ್ನು ನೋಡಿದ್ದರಿಂದ ಅದರ ಬಗ್ಗೆ ಸಾಕ್ಷಿ ಹೇಳ ಬಲ್ಲೆವು. ನಾವೀಗ ನಿಮಗೆ ಆ ಜೀವದ ಬಗ್ಗೆ ಸಾಕ್ಷಿ ಹೇಳುತ್ತೇವೆ. ಅದು ತಂದೆಯಾದ ದೇವರ ಸಂಗಡವಿದ್ದ ನಿತ್ಯವಾದ ಜೀವ. ದೇವರು ಈ ಜೀವವನ್ನು ನಮಗೆ ತೋರಿಸಿದನು. ನಾವು ನೋಡಿದವುಗಳನ್ನೂ ಕೇಳಿದವುಗಳನ್ನೂ ಈಗ ನಿಮಗೆ ಹೇಳುತ್ತೇವೆ. ಏಕೆಂದರೆ ನೀವು ನಮ್ಮ ಅನ್ಯೋನ್ಯತೆಯಲ್ಲಿ ಪಾಲುಗಾರರಾಗಬೇಕೆಂಬುದು ನಮ್ಮ ಅಪೇಕ್ಷೆ. ನಮ್ಮ ಈ ಅನ್ಯೋನ್ಯತೆಯು ತಂದೆಯಾದ ದೇವರ ಮತ್ತು ಆತನ ಮಗನಾದ ಯೇಸು ಕ್ರಿಸ್ತನ ಸಂಗಡವಿರುವಂಥದ್ದು. ನಮ್ಮ[a] ಸಂತೋಷವು ಪರಿಪೂರ್ಣವಾಗಲೆಂದು ನಾವು ನಿಮಗೆ ಈ ಸಂಗತಿಗಳನ್ನು ಬರೆಯುತ್ತಿದ್ದೇವೆ.

ದೇವರು ನಮ್ಮ ಪಾಪಗಳನ್ನು ಕ್ಷಮಿಸುತ್ತಾನೆ

ನಾವು ದೇವರಿಂದ ಕೇಳಿ ನಿಮಗೆ ತಿಳಿಸುವ ವಾರ್ತೆ ಏನೆಂದರೆ, ದೇವರು ಬೆಳಕಾಗಿದ್ದಾನೆ; ಆತನಲ್ಲಿ ಅಂಧಕಾರವಿಲ್ಲ. ಆದ್ದರಿಂದ ದೇವರ ಜೊತೆಯಲ್ಲಿ ಅನ್ಯೋನ್ಯತೆಯಿಂದ ಇದ್ದೇವೆ ಎಂದು ನಾವು ಹೇಳಿಕೊಂಡು, ಅಂಧಕಾರದಲ್ಲಿ ಜೀವಿಸುತ್ತಿದ್ದರೆ ಸುಳ್ಳು ಹೇಳಿದಂತಾಯಿತು. ಏಕೆಂದರೆ ನಾವು ಸತ್ಯವನ್ನು ಅನುಸರಿಸುತ್ತಿಲ್ಲ. ದೇವರು ಬೆಳಕಿನಲ್ಲಿದ್ದಾನೆ. ಆದ್ದರಿಂದ ನಾವೂ ಬೆಳಕಿನಲ್ಲಿ ಜೀವಿಸಬೇಕಾಗಿದೆ. ನಾವು ಬೆಳಕಿನಲ್ಲಿ ಜೀವಿಸುವವರಾಗಿದ್ದರೆ ಪರಸ್ಪರ ಅನ್ಯೋನ್ಯತೆಯಲ್ಲಿದ್ದೇವೆ ಮತ್ತು ದೇವರ ಮಗನಾದ ಯೇಸುವಿನ ರಕ್ತವು ನಮ್ಮ ಪಾಪಗಳನ್ನೆಲ್ಲಾ ನಿವಾರಣೆ ಮಾಡುತ್ತದೆ.

ನಮ್ಮಲ್ಲಿ ಪಾಪವಿಲ್ಲವೆಂದು ಹೇಳಿಕೊಂಡರೆ, ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುವವರಾಗಿದ್ದೇವೆ ಮತ್ತು ನಮ್ಮಲ್ಲಿ ಸತ್ಯವೇ ಇಲ್ಲ. ಆದರೆ ನಮ್ಮ ಪಾಪಗಳನ್ನು ಅರಿಕೆ ಮಾಡಿದರೆ, ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿ ನಮ್ಮನ್ನು ಶುದ್ಧೀಕರಿಸುತ್ತಾನೆ. 10 ನಾವು ಪಾಪಮಾಡಿಲ್ಲವೆಂದು ಹೇಳಿದರೆ ದೇವರನ್ನೇ ಸುಳ್ಳುಗಾರನನ್ನಾಗಿ ಮಾಡುವವರಾಗಿದ್ದೇವೆ ಮತ್ತು ದೇವರ ವಾಕ್ಯವನ್ನು ಒಪ್ಪಿಕೊಳ್ಳದವರಾಗಿದ್ದೇವೆ.

ಮೀಕ 7

ಜನರ ದುಷ್ಟತನವನ್ನು ನೋಡಿ ಮೀಕನಿಗಾದ ಬೇಸರ

ನಾನು ಬೇಸರಗೊಂಡಿದ್ದೇನೆ. ಯಾಕೆಂದರೆ ನಾನು ಕೂಡಿಸಲ್ಪಟ್ಟ ಹಣ್ಣಿನಂತಿದ್ದೇನೆ;
    ಕೊಯಿದು ಶೇಖರಿಸಿದ ದ್ರಾಕ್ಷಿಹಣ್ಣಿನಂತಿದ್ದೇನೆ.
ತಿನ್ನಲು ದ್ರಾಕ್ಷಿಹಣ್ಣು ಏನೂ ಉಳಿಯಲಿಲ್ಲ.
    ನನಗೆ ಪ್ರಿಯವಾದ ಫಲಕಾಲದ ಆರಂಭದಲ್ಲೇ ಫಲಿಸುವ ಅಂಜೂರದ ಹಣ್ಣು ಸಿಕ್ಕಲೇ ಇಲ್ಲ.
ನಾನು ಹೇಳುವುದೇನೆಂದರೆ ನಂಬಿಗಸ್ತ ಜನರೆಲ್ಲಾ ಹೋಗಿಬಿಟ್ಟರು.
    ಈ ದೇಶದಲ್ಲಿ ಒಳ್ಳೆಯ ಜನರು ಯಾರೂ ಉಳಿಯಲಿಲ್ಲ.
ಪ್ರತಿಯೊಬ್ಬನೂ ಇನ್ನೊಬ್ಬನನ್ನು ಕೊಲ್ಲಲು ಕಾಯುತ್ತಿದ್ದಾನೆ.
    ಪ್ರತಿಯೊಬ್ಬನೂ ತನ್ನ ಸೋದರನನ್ನು ಸಿಕ್ಕಿಸಿಹಾಕಲು ಕಾಯುತ್ತಿದ್ದಾನೆ.
ಕೆಟ್ಟದ್ದನ್ನು ಎರಡೂ ಕೈಗಳಿಂದ ಮಾಡಲು ಜನರು ನಿಪುಣರಾಗಿದ್ದಾರೆ.
    ಅಧಿಕಾರಿಗಳು ಲಂಚ ಕೇಳುತ್ತಾರೆ.
ನ್ಯಾಯಾಧೀಶರು ತಮ್ಮ ತೀರ್ಪು ಬದಲಾಯಿಸಲು ಹಣ ಕೇಳುತ್ತಾರೆ.
    “ಪ್ರಮುಖ ನಾಯಕರು” ನ್ಯಾಯವಾದ ಮತ್ತು ಜನರಿಗೆ ಹಿತವಾದ ತೀರ್ಮಾನವನ್ನು ಮಾಡುವದಿಲ್ಲ.
    ತಮ್ಮ ಇಷ್ಟಪ್ರಕಾರ ಅವರು ಮಾಡುತ್ತಿದ್ದಾರೆ.
ಅವರಲ್ಲಿರುವ ಉತ್ತಮರೂ ಸಹ ಮುಳ್ಳಿನ ಪೊದೆಯಂತಿದ್ದಾರೆ.
    ಅವರಲ್ಲಿರುವ ಉತ್ತಮರೂ ಸಹ ಡೊಂಕುಡೊಂಕಾಗಿರುವ ಮುಳ್ಳುಪೊದೆಗಿಂತಲೂ ಡೊಂಕಾಗಿದ್ದಾರೆ.

ಶಿಕ್ಷೆಯ ದಿನ ಬರುತ್ತಿದೆ

ನಿನ್ನ ಪ್ರವಾದಿಗಳು ಈ ದಿನವು ಬರುತ್ತಿದೆ ಎಂದು ಹೇಳುತ್ತಿದ್ದಾರೆ.
    ನಿನ್ನ ಪ್ರವಾದಿಗಳ ದಿವಸವು ಬಂದದೆ.
ಈಗ ನೀನು ಶಿಕ್ಷಿಸಲ್ಪಡುವೆ.
    ನೀನು ಈಗ ಗಲಿಬಿಲಿಗೆ ಒಳಗಾಗುವೆ!
ನಿನ್ನ ನೆರೆಯವನ ಮೇಲೆ ನಂಬಿಕೆ ಇಡಬೇಡ!
    ನಿನ್ನ ಸ್ನೇಹಿತನ ಮೇಲೆ ಭರವಸವಿಡಬೇಡ!
ನಿನ್ನ ಹೆಂಡತಿಯೊಂದಿಗೂ
    ನಿನ್ನ ಮನಸ್ಸಿನಲ್ಲಿರುವ ವಿಷಯವನ್ನು ತಿಳಿಸಬೇಡ.
ಒಬ್ಬನ ವೈರಿಯು ಅವನ ಮನೆಯವರೇ ಆಗಿರುತ್ತಾರೆ.
    ಮಗನು ತಂದೆಗೆ ಗೌರವವನ್ನು ಕೊಡುವದಿಲ್ಲ.
ಮಗಳು ತಾಯಿಗೆ ವಿರುದ್ಧವಾಗಿ ನಡೆಯುವಳು.
    ಸೊಸೆಯು ಅತ್ತೆಗೆ ವಿರುದ್ಧವಾಗಿ ನಡೆಯುವಳು.

ಯೆಹೋವನೇ ರಕ್ಷಕನು

ನಾನು ಸಹಾಯಕ್ಕಾಗಿ ಯೆಹೋವನ ಕಡೆಗೆ ನೋಡುತ್ತೇನೆ.
    ದೇವರ ರಕ್ಷಣೆಗಾಗಿ ನಿರೀಕ್ಷಿಸುತ್ತೇನೆ.
    ನನ್ನ ದೇವರು ನನಗೆ ಕಿವಿಗೊಡುತ್ತಾನೆ.
ನಾನು ಬಿದ್ದಿದ್ದೇನೆ, ಆದರೆ ವೈರಿಯೇ, ನನ್ನನ್ನು ನೋಡಿ ನಗಾಡಬೇಡ!
    ನಾನು ತಿರುಗಿ ಏಳುತ್ತೇನೆ;
ನಾನೀಗ ಅಂಧಕಾರದಲ್ಲಿ ಕುಳಿತುಕೊಳ್ಳುತ್ತೇನೆ.
    ಆದರೆ ಯೆಹೋವನು ನನ್ನ ಬೆಳಕಾಗಿರುತ್ತಾನೆ.

ಯೆಹೋವನು ಕ್ಷಮಿಸುತ್ತಾನೆ

ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇನೆ.
    ಆದ್ದರಿಂದ ಆತನು ನನ್ನ ಮೇಲೆ ಕೋಪಿಸಿಕೊಂಡಿದ್ದಾನೆ.
ಆದರೆ ನನ್ನ ಪರವಾಗಿ ಆತನು ವಾದಿಸುತ್ತಾನೆ.
    ನನಗೆ ಒಳ್ಳೆಯದನ್ನೇ ಆತನು ಮಾಡುತ್ತಾನೆ.
ಆ ಬಳಿಕ ನನ್ನನ್ನು ಹೊರಗೆ ಬೆಳಕಿಗೆ ತರುವನು.
    ಆತನು ನೀತಿವಂತನೆಂಬುದು ಆಗ ನನಗೆ ತಿಳಿಯುವುದು.
10 “ನಿನ್ನ ದೇವರಾದ ಯೆಹೋವನು ಎಲ್ಲಿ?”
    ಎಂದು ಕೇಳಿದ ವೈರಿಗಳು ಇದನ್ನು ನೋಡಿ, ನಾಚಿಕೆಗೊಳ್ಳುವರು.
ಆಗ ನಾನು ಅವರ ವಿಷಯವಾಗಿ ನಗಾಡುವೆನು;
    ರಸ್ತೆಯ ಮಣ್ಣಿನ ಮೇಲೆ ನಡೆಯುವಂತೆ ಜನರು ಅವರ ಮೇಲೆ ನಡೆಯುವರು.

ಯೆಹೂದ್ಯರು ಮರಳಿ ಬರುವರು

11 ನಿನ್ನ ನಗರದ ಗೋಡೆಗಳು ತಿರುಗಿ ಕಟ್ಟಲ್ಪಡುವ ದಿನಗಳು ಬರುತ್ತವೆ.
    ಆಗ ದೇಶವು ಬೆಳೆಯುವುದು.
12 ನಿನ್ನ ಜನರು ದೇಶಕ್ಕೆ ಹಿಂತಿರುಗುವರು.
    ಅವರು ಅಶ್ಶೂರದಿಂದಲೂ ಈಜಿಪ್ಟ್ ನಗರಗಳಿಂದಲೂ ಹಿಂದೆ ಬರುವರು.
ನಿನ್ನ ಜನರು ಈಜಿಪ್ಟಿನಿಂದಲೂ
    ಯೂಫ್ರೇಟೀಸ್ ನದಿಯ ಆಚೆಕಡೆಯಿಂದಲೂ ಬರುವರು.
ಪಶ್ಟಿಮದ ಸಮುದ್ರದ ಕಡೆಯಿಂದ ಬರುವರು.
    ಪೂರ್ವದ ಪರ್ವತಗಳ ಕಡೆಯಿಂದ ಬರುವರು.

13 ದೇಶದಲ್ಲಿ ವಾಸಿಸಿದ್ದ ಜನರಿಂದಲೂ
    ಅವರು ಮಾಡಿದ್ದ ಕೆಲಸಗಳಿಂದಲೂ ದೇಶವು ಹಾಳಾಗಿಹೋಗಿತ್ತು.
14 ಆದ್ದರಿಂದ ನಿನ್ನ ಜನರನ್ನು ಕಬ್ಬಿಣದ ಕೋಲಿನಿಂದ ಆಳು,
    ನಿನಗೆ ಸೇರಿದ ಜನರ ಹಿಂಡುಗಳನ್ನು ಆಳು.
ಆ ಗುಂಪು ಅಡವಿಯಲ್ಲಿ ತಾನಾಗಿಯೇ ವಾಸಿಸುತ್ತದೆ;
    ಕರ್ಮೆಲ್ ಬೆಟ್ಟದಲ್ಲಿಯೂ ವಾಸಿಸುತ್ತದೆ.
ಹಿಂದಿನ ಕಾಲದಲ್ಲಿ ಮಾಡಿದಂತೆ ಆ ಗುಂಪು ಬಾಷಾನ್
    ಮತ್ತು ಗಿಲ್ಯಾದ್ ಪ್ರಾಂತ್ಯದಲ್ಲಿ ವಾಸಿಸುತ್ತದೆ.

ಇಸ್ರೇಲ್ ತನ್ನ ವೈರಿಗಳನ್ನು ಸೋಲಿಸುವುದು

15 ನಿನ್ನನ್ನು ಈಜಿಪ್ಟಿನಿಂದ ಬರಮಾಡಿದಾಗ ಅನೇಕ ಅದ್ಭುತಕಾರ್ಯಗಳನ್ನು ಮಾಡಿದೆನು.
    ಇನ್ನೂ ಅನೇಕ ಅದ್ಭುತಗಳನ್ನು ನೀನು ನೋಡುವಂತೆ ಮಾಡುವೆನು.
16 ಜನಾಂಗಗಳು ಆ ಅದ್ಭುತವನ್ನು ನೋಡಿ ನಾಚಿಕೆಗೊಳ್ಳುವರು.
    ನನ್ನ ಶಕ್ತಿಯ ಎದುರು ಅವರ ಬಲವು ಏನೂ ಅಲ್ಲವೆಂದು ತಿಳಿಯುವರು.
ಅವರು ಆಶ್ಚರ್ಯಚಕಿತರಾಗಿ ತಮ್ಮ ಬಾಯಿಗಳ ಮೇಲೆ ಕೈಗಳನ್ನಿಡುವರು.
    ತಮ್ಮ ಕಿವಿಗಳನ್ನು ಮುಚ್ಚಿ ವಾರ್ತೆ ಕೇಳಲು ನಿರಾಕರಿಸುವರು.
17 ಅವರು ಹಾವಿನಂತೆ ಧೂಳಿನ ಮೇಲೆ ಹರಿದಾಡುವರು.
    ಭಯದಿಂದ ನಡುಗುವರು.
ಅವರು ನೆಲದ ಮೇಲಿನ ಬಿಲಗಳಿಂದ
    ಹರಿದುಕೊಂಡು ಬರುವ ಹುಳಗಳಂತಿರುವರು.
ಅವರು ನಮ್ಮ ದೇವರಾದ ಯೆಹೋವನ ಬಳಿಗೆ ಬಂದು
    ನಿಮ್ಮನ್ನು ಭಯದಿಂದ ನೋಡುವರು.

ಯೆಹೋವನಿಗೆ ಸ್ತೋತ್ರ

18 ನಿನ್ನ ಹಾಗೆ ಬೇರೆ ಯಾವ ದೇವರೂ ಇಲ್ಲ.
    ಪಾಪದಲ್ಲಿ ಬಿದ್ದವರನ್ನು ನೀನು ಕ್ಷಮಿಸುವೆ.
ನಿನ್ನ ಜನಶೇಷವನ್ನು ಮನ್ನಿಸುವೆ.
ನೀನು ನಿತ್ಯಕ್ಕೂ ಕೋಪಿಸುವದಿಲ್ಲ.
    ಯಾಕೆಂದರೆ ದಯೆತೋರಿಸುವದರಲ್ಲಿ ನೀನು ಸಂತೋಷಿಸುವೆ.
19 ಯೆಹೋವನೇ, ನಮ್ಮನ್ನು ತಿರುಗಿ ಸಂತೈಸು.
    ನಮ್ಮ ಪಾಪಗಳನ್ನು ನಮ್ಮಿಂದ ನಿವಾರಿಸು.
    ನಮ್ಮೆಲ್ಲಾ ಪಾಪಗಳನ್ನು ಆಳವಾದ ಸಮುದ್ರದ ತಳದಲ್ಲಿ ಹಾಕು.
20 ನೀನು ಯಾಕೋಬನಿಗೆ ನಂಬಿಗಸ್ತನಾಗುವೆ.
    ನೀನು ಅಬ್ರಹಾಮನ ಮೇಲೆ ದಯೆತೋರಿಸಿ ನಂಬಿಗಸ್ತನಾಗುವೆ.
    ಇದನ್ನು ನೀನು ಬಹಳ ಕಾಲದ ಹಿಂದೆಯೇ ನಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿರುವೆ.

ಲೂಕ 16

ನಿಜವಾದ ಐಶ್ವರ್ಯ

16 ಯೇಸು ತನ್ನ ಶಿಷ್ಯರಿಗೆ ಹೀಗೆಂದನು: “ಒಂದಾನೊಂದು ಕಾಲದಲ್ಲಿ ಒಬ್ಬ ಐಶ್ವರ್ಯವಂತನಿದ್ದನು. ಈ ಐಶ್ವರ್ಯವಂತನು ತನ್ನ ವ್ಯಾಪಾರವನ್ನು ನೋಡಿಕೊಳ್ಳಲು ಒಬ್ಬ ಮೇಲ್ವಿಚಾರಕನನ್ನು ನೇಮಿಸಿದನು. ಸ್ವಲ್ಪಕಾಲದ ನಂತರ, ಆ ಮೇಲ್ವಿಚಾರಕನು ತನಗೆ ಮೋಸಮಾಡುತ್ತಿದ್ದಾನೆಂಬುದು ಐಶ್ವರ್ಯವಂತನಿಗೆ ತಿಳಿಯಿತು. ಆದ್ದರಿಂದ ಅವನು ಆ ಮೇಲ್ವಿಚಾರಕನನ್ನು ಕರೆದು, ‘ನಿನ್ನ ಬಗ್ಗೆ ನನಗೆ ದೂರುಗಳು ಬಂದಿವೆ. ನನ್ನ ಹಣವನ್ನು ನೀನು ಯಾವುದಕ್ಕಾಗಿ ಖರ್ಚು ಮಾಡಿರುವೆ? ನನಗೆ ವರದಿ ಒಪ್ಪಿಸು. ಇನ್ನು ಮೇಲೆ ನನ್ನ ವ್ಯಾಪಾರಕ್ಕೆ ನೀನು ಮೇಲ್ವಿಚಾರಕನಾಗಿರಲು ಸಾಧ್ಯವಿಲ್ಲ’ ಎಂದು ಹೇಳಿದನು.

“ಆಗ, ಆ ಮೇಲ್ವಿಚಾರಕನು ತನ್ನೊಳಗೆ, ‘ಈಗ ನಾನೇನು ಮಾಡಲಿ? ನನ್ನ ಯಜಮಾನನು ನನ್ನನ್ನು ಈ ಕೆಲಸದಿಂದ ತೆಗೆದುಬಿಡುತ್ತಾನೆ! ಗುಂಡಿಗಳನ್ನು ಅಗಿಯುವುದಕ್ಕೂ ನನಗೆ ಬಲವಿಲ್ಲ. ಭಿಕ್ಷೆ ಬೇಡುವುದಕ್ಕೂ ನನಗೆ ನಾಚಿಕೆ. ಈಗ ನಾನೇನು ಮಾಡಬೇಕೆಂಬುದು ನನಗೆ ಗೊತ್ತಿದೆ! ನಾನು ಕೆಲಸವನ್ನು ಕಳೆದುಕೊಂಡ ಮೇಲೆ ಬೇರೆ ಜನರು ನನ್ನನ್ನು ತಮ್ಮ ಮನೆಗಳಿಗೆ ಸೇರಿಸಿಕೊಳ್ಳುವಂಥ ಕಾರ್ಯವೊಂದನ್ನು ನಾನು ಈಗ ಮಾಡುವೆ’ ಅಂದುಕೊಂಡನು.

“ಆಮೇಲೆ ಆ ಮೇಲ್ವಿಚಾರಕನು, ಯಜಮಾನನ ಸಾಲಗಾರರಲ್ಲಿ ಪ್ರತಿಯೊಬ್ಬನನ್ನು ಕರೆದನು. ಅವನು ಮೊದಲನೆಯವನಿಗೆ, ‘ನೀನು ನನ್ನ ಯಜಮಾನನಿಗೆ ಎಷ್ಟು ಸಾಲ ಕೊಡಬೇಕು?’ ಎಂದು ಕೇಳಿದನು. ಅದಕ್ಕೆ ಮೊದಲನೆಯ ವ್ಯಕ್ತಿ, ‘ನಾನು ಎಂಟುಸಾವಿರ ಕಿಲೋಗ್ರಾಂ ಆಲಿವ್ ಎಣ್ಣೆ ಕೊಡಬೇಕು’ ಎಂದು ಉತ್ತರಿಸಿದನು. ಮೇಲ್ವಿಚಾರಕನು ಅವನಿಗೆ, ‘ನಿನ್ನ ಲೆಕ್ಕಪತ್ರ ಇಲ್ಲಿದೆ. ಕುಳಿತುಕೊಂಡು ಬೇಗನೆ ಅದನ್ನು ಕಡಿಮೆಮಾಡಿ ನಾಲ್ಕುಸಾವಿರ ಎಂದು ಬರೆ’ ಅಂದನು.

“ಬಳಿಕ ಆ ಮೇಲ್ವಿಚಾರಕನು ಎರಡನೆಯವನಿಗೆ, ‘ನೀನು ನನ್ನ ಯಜಮಾನನಿಗೆ ಎಷ್ಟು ಕೊಡಬೇಕಾಗಿದೆ’ ಎಂದು ಕೇಳಿದನು. ಎರಡನೆಯವನು, ‘ನಾನು ಅವನಿಗೆ ಅರವತ್ತುಸಾವಿರ ಕಿಲೋಗ್ರಾಂ ಗೋಧಿ ಕೊಡಬೇಕು’ ಎಂದು ಉತ್ತರಿಸಿದನು. ಆಗ ಆ ಮೇಲ್ವಿಚಾರಕನು ಅವನಿಗೆ, ‘ನಿನ್ನ ಲೆಕ್ಕಪತ್ರ ಇಲ್ಲಿದೆ. ನೀನು ಅದನ್ನು ಕಡಿಮೆ ಮಾಡು. ಐವತ್ತುಸಾವಿರ ಎಂದು ಬರೆ’ ಅಂದನು.

“ಬಳಿಕ ಯಜಮಾನನು ಮೋಸಗಾರನಾದ ಮೇಲ್ವಿಚಾರಕನಿಗೆ, ‘ನೀನು ಜಾಣತನ ಮಾಡಿದೆ’ ಎಂದು ಹೇಳಿದನು. ಹೌದು, ಲೌಕಿಕ ಜನರು ತಮ್ಮ ಜನರೊಡನೆ ವ್ಯಾಪಾರದಲ್ಲಿ ದೈವಿಕ ಜನರಿಗಿಂತಲೂ ಜಾಣರಾಗಿದ್ದಾರೆ.

“ಈ ಲೋಕದಲ್ಲಿ ನೀವು ಹೊಂದಿರುವಂಥವುಗಳಿಂದ ದೇವರಿಗೆ ಸ್ನೇಹಿತರನ್ನು ಮಾಡಿಕೊಡಿರಿ. ನೀವು ಹೀಗೆ ಮಾಡಿದರೆ, ಈ ಲೋಕದವುಗಳು ನಿಮ್ಮ ಕೈಬಿಟ್ಟು ಹೋದಾಗ ನಿಮ್ಮನ್ನು ಶಾಶ್ವತವಾದ ಮನೆಗೆ ಸ್ವೀಕರಿಸಿಕೊಳ್ಳಲಾಗುವುದು. 10 ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾಗಿರುವವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗಿರುವನು. ಸ್ವಲ್ಪವಾದದ್ದರಲ್ಲಿ ಅನ್ಯಾಯಗಾರನಾಗಿರುವವನು ಬಹಳವಾದದ್ದರಲ್ಲಿಯೂ ಅನ್ಯಾಯಗಾರನಾಗಿರುವನು. 11 ಲೌಕಿಕ ಐಶ್ವರ್ಯಗಳಲ್ಲಿ ನೀವು ನಂಬಿಗಸ್ತರಾಗಿಲ್ಲದಿದ್ದರೆ ಪರಲೋಕದ ಐಶ್ವರ್ಯಗಳಲ್ಲಿಯೂ ನೀವು ನಂಬಿಗಸ್ತರಾಗಿರುವುದಿಲ್ಲ. 12 ಮತ್ತೊಬ್ಬನ ಸ್ವತ್ತುಗಳಲ್ಲಿ ನೀವು ನಂಬಿಗಸ್ತರಾಗಿಲ್ಲದಿದ್ದರೆ ನಿಮ್ಮ ಸ್ವಂತ ಸ್ವತ್ತುಗಳನ್ನೇ ನಿಮಗೆ ಯಾರೂ ಕೊಡುವುದಿಲ್ಲ.

13 “ಯಾವ ಸೇವಕನೂ ಒಂದೇ ಸಮಯದಲ್ಲಿ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುವನು ಅಥವಾ ಒಬ್ಬನಿಗೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುವನು. ನೀವು ಒಂದೇ ಸಮಯದಲ್ಲಿ ದೇವರ ಮತ್ತು ಹಣದ ಸೇವೆಮಾಡಲಾರಿರಿ.”

ದೇವರ ಧರ್ಮಶಾಸ್ತ್ರ ಬದಲಾಗಲಾರದು

(ಮತ್ತಾಯ 11:12-13)

14 ಫರಿಸಾಯರು ಈ ಎಲ್ಲಾ ಸಂಗತಿಗಳನ್ನು ಕೇಳುತ್ತಿದ್ದರು. ಫರಿಸಾಯರೆಲ್ಲರು ಹಣದಾಸೆ ಉಳ್ಳವರಾಗಿದ್ದರಿಂದ ಅವರು ಯೇಸುವನ್ನು ಟೀಕಿಸಿದರು. 15 ಯೇಸು ಫರಿಸಾಯರಿಗೆ ಹೀಗೆಂದನು, “ನೀವು ಜನರ ಮುಂದೆ ನಿಮ್ಮನ್ನು ಒಳ್ಳೆಯವರೆಂದು ತೋರಿಸಿಕೊಳ್ಳುತ್ತೀರಿ. ಆದರೆ ನಿಜವಾಗಿಯೂ ನಿಮ್ಮ ಹೃದಯದಲ್ಲಿರುವುದು ದೇವರಿಗೆ ಗೊತ್ತು. ಜನರ ದೃಷ್ಟಿಯಲ್ಲಿ ಅಮೂಲ್ಯವಾದುವುಗಳು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿವೆ.

16 “ಜನರು ಮೋಶೆಯ ಧರ್ಮಶಾಸ್ತ್ರಕ್ಕೂ ಪ್ರವಾದಿಗಳ ಗ್ರಂಥಗಳಿಗೂ ಅನುಸಾರವಾಗಿ ಜೀವಿಸಬೇಕೆಂಬುದು ದೇವರ ಅಪೇಕ್ಷೆಯಾಗಿತ್ತು. ಸ್ನಾನಿಕನಾದ ಯೋಹಾನನು ಬಂದ ಕಾಲದಿಂದ ದೇವರ ರಾಜ್ಯದ ಸುವಾರ್ತೆಯು ತಿಳಿಸಲ್ಪಡುತ್ತಿದೆ. ಅನೇಕ ಜನರು ದೇವರ ರಾಜ್ಯದೊಳಗೆ ಹೋಗಲು ಬಹಳ ಪ್ರಯಾಸಪಡುತ್ತಿದ್ದಾರೆ. 17 ಧರ್ಮಶಾಸ್ತ್ರದಲ್ಲಿರುವ ಒಂದು ಚುಕ್ಕೆಯು ಬದಲಾಗುವುದಕ್ಕಿಂತಲೂ ಭೂಮ್ಯಾಕಾಶಗಳು ಅಳಿದುಹೋಗುವುದು ಸುಲಭ.

ವಿವಾಹವಿಚ್ಛೇದನ ಮತ್ತು ಪುನರ್ವಿವಾಹ

18 “ತನ್ನ ಪತ್ನಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಆಗುವವನು ವ್ಯಭಿಚಾರ ಮಾಡಿದವನಾಗುತ್ತಾನೆ. ವಿವಾಹವಿಚ್ಛೇದನ ಹೊಂದಿದ ಸ್ತ್ರೀಯನ್ನು ಮದುವೆ ಆಗುವವನು ಸಹ ವ್ಯಭಿಚಾರ ಮಾಡಿದವನಾಗುತ್ತಾನೆ.”

ಐಶ್ವರ್ಯವಂತನು ಮತ್ತು ಲಾಜರನು

19 ಯೇಸು ಹೀಗೆಂದನು: “ಒಬ್ಬ ಐಶ್ವರ್ಯವಂತನಿದ್ದನು. ಅವನು ಯಾವಾಗಲೂ ಉತ್ತಮವಾದ ಉಡುಪುಗಳನ್ನು ಧರಿಸುತ್ತಿದ್ದನು. ಅವನು ಬಹಳ ಐಶ್ವರ್ಯವಂತನಾಗಿದ್ದುದರಿಂದ ಪ್ರತಿದಿನವೂ ವೈಭವದೊಡನೆ ಊಟಮಾಡುತ್ತಾ ಸಂತೋಷಪಡುತ್ತಿದ್ದನು. 20 ಅಲ್ಲಿ ಲಾಜರನೆಂಬ ಒಬ್ಬ ಬಡಮನುಷ್ಯನೂ ಇದ್ದನು. ಅವನ ಮೈತುಂಬ ಹುಣ್ಣುಗಳಿದ್ದವು. ಅವನು ಐಶ್ವರ್ಯವಂತನ ಮನೆಯ ಹೊರಬಾಗಿಲ ಬಳಿ ಬಿದ್ದುಕೊಂಡಿರುತ್ತಿದ್ದನು. 21 ಐಶ್ವರ್ಯವಂತನು ಊಟ ಮಾಡಿದ ಮೇಲೆ ಹೊರಗೆಸೆದ ಎಂಜಲನ್ನು ತಿನ್ನುವುದಕ್ಕಾಗಿ ಅಲ್ಲಿ ಬಿದ್ದುಕೊಂಡಿರುತ್ತಿದ್ದನು. ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು.

22 “ಸ್ವಲ್ಪ ಸಮಯದ ನಂತರ ಲಾಜರನು ಸತ್ತನು. ದೇವದೂತರು ಲಾಜರನನ್ನು ತೆಗೆದುಕೊಂಡು ಹೋಗಿ ಅಬ್ರಹಾಮನ ಎದೆಗೆ ಒರಗಿಸಿದರು. ಒಂದು ದಿನ ಐಶ್ವರ್ಯವಂತನೂ ಸತ್ತನು. ಅವನಿಗೆ ಸಮಾಧಿ ಮಾಡಲಾಯಿತು. 23 ಆದರೆ ಅವನು ಪಾತಾಳದಲ್ಲಿ ಬಹಳ ಯಾತನೆಪಡುತ್ತಾ ಬಹಳ ದೂರದಲ್ಲಿ ಅಬ್ರಹಾಮನ ಎದೆಗೆ ಒರಗಿಕೊಂಡಿದ್ದ ಲಾಜರನನ್ನು ನೋಡಿ, 24 ‘ತಂದೆಯಾದ ಅಬ್ರಹಾಮನೇ, ನನ್ನ ಮೇಲೆ ಕರುಣೆತೋರು! ಲಾಜರನನ್ನು ನನ್ನ ಬಳಿಗೆ ಕಳುಹಿಸು. ಅವನು ತನ್ನ ಬೆರಳನ್ನು ನೀರಿನಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡಲಿ, ನಾನು ಈ ಬೆಂಕಿಯಲ್ಲಿ ಯಾತನೆಪಡುತ್ತಿದ್ದೇನೆ!’ ಎಂದು ಬೇಡಿಕೊಂಡನು.

25 “ಅದಕ್ಕೆ ಅಬ್ರಹಾಮನು, ‘ಕಂದಾ, ನಿನ್ನ ಜೀವಮಾನದ ದಿನಗಳು ನಿನಗೆ ನೆನಪಿಲ್ಲವೇ? ಅಲ್ಲಿ ನಿನಗೆ ಎಲ್ಲ ಬಗೆಯ ಸುಖವಿತ್ತು. ಆದರೆ ಲಾಜರಿನಿಗಾದರೋ ಕಷ್ಟಗಳೇ ತುಂಬಿಕೊಂಡಿದ್ದವು. ಆದ್ದರಿಂದ ಈಗ ಅವನು ಸುಖಪಡುತ್ತಿದ್ದಾನೆ, ನೀನು ಸಂಕಟಪಡುತ್ತಿರುವೆ. 26 ಮಾತ್ರವಲ್ಲದೆ ನಿನಗೂ ನಮಗೂ ಮಧ್ಯೆ ದೊಡ್ಡ ಡೊಂಗುರವಿದೆ. ಅಲ್ಲಿಗೆ ಬಂದು ನಿನಗೆ ಸಹಾಯ ಮಾಡಲು ಯಾರಿಗೂ ಸಾಧ್ಯವಿಲ್ಲ. ಅಲ್ಲದೆ ಯಾರು ಅಲ್ಲಿಂದ ಇಲ್ಲಿಗೆ ಬರಲು ಸಾಧ್ಯವಿಲ್ಲ’ ಎಂದು ಹೇಳಿದನು.

27 “ಐಶ್ವರ್ಯವಂತನು, ‘ಹಾಗಾದರೆ, ದಯಮಾಡಿ ಲಾಜರನನ್ನು ಭೂಲೋಕದಲ್ಲಿರುವ ನನ್ನ ತಂದೆಯ ಮನೆಗೆ ಕಳುಹಿಸು! 28 ನನಗೆ ಐದು ಮಂದಿ ಸಹೋದರರಿದ್ದಾರೆ. ಅವರು ಈ ಯಾತನೆಯ ಸ್ಥಳಕ್ಕೆ ಬಾರದಂತೆ ಲಾಜರನು ಅವರನ್ನು ಎಚ್ಚರಿಸಲಿ’ ಎಂದು ಹೇಳಿದನು.

29 “ಅದಕ್ಕೆ ಅಬ್ರಹಾಮನು, ‘ಮೋಶೆಯ ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರಂಥಗಳು ಅವರಲ್ಲಿ ಇವೆ. ಅವರು ಅವುಗಳನ್ನು ಓದಿ ಕಲಿತುಕೊಳ್ಳಲಿ’ ಅಂದನು.

30 “ಅದಕ್ಕೆ ಐಶ್ವರ್ಯವಂತನು, ‘ತಂದೆಯಾದ ಅಬ್ರಹಾಮನೇ, ಹಾಗೆನ್ನಬೇಡ! ಯಾರಾದರೊಬ್ಬರು ಸತ್ತವರೊಳಗಿಂದ ಎದ್ದುಹೋದರೆ, ಅವರು ತಮ್ಮ ಹೃದಯಗಳನ್ನೂ ಜೀವಿತಗಳನ್ನೂ ಮಾರ್ಪಡಿಸಿಕೊಳ್ಳುವರು’ ಎಂದು ಹೇಳಿದನು.

31 “ಅದಕ್ಕೆ ಅಬ್ರಹಾಮನು ಅವನಿಗೆ, ‘ಇಲ್ಲ! ನಿನ್ನ ಸಹೋದರರು ಮೋಶೆಯ ಮತ್ತು ಪ್ರವಾದಿಗಳ ನುಡಿಗಳನ್ನು ಕೇಳುವುದಿಲ್ಲವಾದರೆ, ಸತ್ತವರೊಳಗಿಂದ ಜೀವಿತನಾಗಿ ಎದ್ದುಬಂದವನ ಮಾತನ್ನೂ ಅವರು ಕೇಳುವುದಿಲ್ಲ’” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International