Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
1 ಪೂರ್ವಕಾಲವೃತ್ತಾಂತ 26-27

ದ್ವಾರಪಾಲಕರ ವರ್ಗಗಳು

26 ಕೋರಹಿಯ ವಂಶದವರಲ್ಲಿ ದ್ವಾರಪಾಲಕರು ಯಾರೆಂದರೆ:

ಮೆಷೆಲೆಮ್ಯ ಮತ್ತು ಅವನ ಗಂಡುಮಕ್ಕಳು. (ಮೆಷೆಲೆಮ್ಯನು ಕೋರಹಿಯನ ಮಗ. ಕೋರಹಿಯನು ಆಸಾಫನ ಕುಲದವನಾಗಿದ್ದನು.) ಜೆಕರ್ಯನು ಮೆಷೆಲೆಮ್ಯನ ಮೊದಲನೆಯ ಮಗ; ಎದೀಯಯೇಲನು ಎರಡನೆಯ ಮಗ; ಜೆಬದ್ಯನು ಮೂರನೆಯ ಮಗ; ಯತ್ನಿಯೇಲನು ನಾಲ್ಕನೆಯ ಮಗ; ಏಲಾಮನು ಐದನೆಯ ಮಗ; ಯೆಹೋಹಾನನು ಆರನೆಯ ಮಗ; ಮತ್ತು ಎಲೈಹೋಯೇನೈ ಏಳನೆಯ ಮಗ.

ಓಬೇದೆದೋಮ್ ಮತ್ತು ಅವನ ಮಕ್ಕಳು: ಶೆಮಾಯನು ಚೊಚ್ಚಲಮಗ; ಎರಡನೆಯವನು ಯೆಹೋಜಾಬಾದ್; ಮೂರನೆಯವನು ಯೋವಾಹ, ನಾಲ್ಕನೆಯವನು ಸಾಕಾರ್, ಐದನೆಯವನು ನೆತನೇಲ್; ಆರನೆಯವನು ಅಮ್ಮೀಯೇಲ; ಏಳನೆಯವನು ಇಸ್ಸಾಕಾರ್; ಎಂಟನೆಯವನು ಪೆಯುಲ್ಲೆತೈ. ದೇವರು ಓಬೇದೆದೋಮನನ್ನು ಅತಿಯಾಗಿ ಆಶೀರ್ವದಿಸಿದನು. ಶೆಮಾಯನಿಗೂ ಗಂಡುಮಕ್ಕಳಿದ್ದರು. ಅವರು ಧೈರ್ಯಶಾಲಿಗಳೂ ಬಲಶಾಲಿಗಳೂ ಆಗಿದ್ದದರಿಂದ ತಂದೆಯ ಕುಲದಲ್ಲಿ ನಾಯಕರಾಗಿದ್ದರು. ಶೆಮಾಯನ ಮಕ್ಕಳು ಯಾರೆಂದರೆ: ಒತ್ನೀ, ರೆಫಾಯೇಲ್, ಓಬೇದ್, ಎಲ್ಜಾಬಾದ್, ಎಲೀಹು ಮತ್ತು ಸಮಕ್ಯ. ಎಲ್ಜಾಬಾದನ ಸಂಬಂಧಿಕರು ಕುಶಲ ಕರ್ಮಿಗಳು. ಈ ಎಲ್ಲಾಜನರೂ, ಓಬೇದೆದೋಮನ ಸಂತತಿಯವರು. ಇವರೆಲ್ಲಾ ಬಲಶಾಲಿಗಳಾಗಿದ್ದರು. ಒಳ್ಳೆಯ ಅನುಭವಸ್ಥ ದ್ವಾರಪಾಲಕರಾಗಿದ್ದರು. ಓಬೇದೆದೋಮನ ಸಂತತಿಯವರ ಒಟ್ಟು ಸಂಖ್ಯೆ ಅರವತ್ತೆರಡು ಮಂದಿ.

ಮೆಷೆಲೆಮ್ಯನ ಗಂಡುಮಕ್ಕಳು ಮತ್ತು ಸಂಬಂಧಿಕರು ಬಲಾಢ್ಯರಾಗಿದ್ದರು. ಅವನಿಗೆ ಒಟ್ಟು ಹದಿನೆಂಟು ಗಂಡುಮಕ್ಕಳು ಮತ್ತು ಸಂಬಂಧಿಕರು ಇದ್ದರು.

10 ಮೆರಾರೀ ಕುಲದವರ ದ್ವಾರಪಾಲಕರು ಯಾರೆಂದರೆ: ಹೋಸ ಮತ್ತು ಅವನ ಗಂಡುಮಕ್ಕಳಲ್ಲಿ ಆರಿಸಲ್ಪಟ್ಟ ಶಿಮ್ರಿ. (ಇವನು ಚೊಚ್ಚಲ ಮಗನಲ್ಲದಿದ್ದರೂ ತಂದೆಯು ಅವನನ್ನು ಪ್ರಧಾನನ್ನಾಗಿ ಆರಿಸಿದನು.) 11 ಅವನ ಎರಡನೆಯ ಮಗನು ಹಿಲ್ಕೀಯ; ಮೂರನೆಯವನು ಟೆಬಲ್ಯ. ನಾಲ್ಕನೆಯ ಮಗನು ಜೆಕರ್ಯ. ಹೀಗೆ ಒಟ್ಟು ಅವನಿಗೆ ಹದಿಮೂರು ಗಂಡುಮಕ್ಕಳೂ ಸಂಬಂಧಿಕರೂ ಇದ್ದರು.

12 ಇವರೆಲ್ಲಾ ದೇವಾಲಯದ ದ್ವಾರಪಾಲಕರಾಗಿದ್ದರು. ಅದರಲ್ಲಿ ಸೇವೆಮಾಡುತ್ತಿರುವ ಇತರರಂತೆಯೇ ಇವರೂ ದೇವಾಲಯದ ದ್ವಾರಗಳನ್ನು ಕಾಯುತ್ತಿದ್ದರು. 13 ಪ್ರತಿಯೊಂದು ಕುಟುಂಬಕ್ಕೆ ಒಂದೊಂದು ದ್ವಾರದ ಜವಾಬ್ದಾರಿಕೆಯನ್ನು ಚೀಟುಹಾಕಿ ಕೊಡಲಾಯಿತು.

14 ಶೆಲೆಮ್ಯನಿಗೆ ಪೂರ್ವದಿಕ್ಕಿನ ಬಾಗಿಲನ್ನು ಕಾಯುವ ಜವಾಬ್ದಾರಿ ದೊರೆಯಿತು; ಅವನ ಮಗನಾದ ಜೆಕರ್ಯನಿಗೆ ಉತ್ತರ ದಿಕ್ಕಿನ ಬಾಗಿಲನ್ನು ಕಾಯುವ ಜವಾಬ್ದಾರಿ ದೊರೆಯಿತು. ಇವನು ಒಳ್ಳೆಯ ಸಲಹೆಗಾರನಾಗಿದ್ದನು. 15 ಓಬೇದೆದೋಮನಿಗೆ ದಕ್ಷಿಣದಿಕ್ಕಿನ ಬಾಗಿಲನ್ನು ಕಾಯುವ ಜವಾಬ್ದಾರಿ ದೊರೆಯಿತು. ಇವನ ಮಕ್ಕಳಿಗೆ ಬೆಲೆಬಾಳುವ ಸಾಮಾಗ್ರಿಗಳ ಉಗ್ರಾಣದ ಕೋಣೆಯನ್ನು ಕಾಯುವ ಕೆಲಸ ದೊರೆಯಿತು. 16 ಶುಪ್ಪೀಮ್ ಮತ್ತು ಹೋಸ ಎಂಬವರಿಗೆ ಪಶ್ಚಿಮದ ಬಾಗಿಲನ್ನು ಮತ್ತು ಮೇಲ್ದಾರಿಯಲ್ಲಿದ್ದ ಶೆಲ್ಲೆಕೆತ್ ಬಾಗಿಲನ್ನು ಕಾಯುವ ಕೆಲಸ ದೊರೆಯಿತು.

ಕಾವಲುಗಾರರು ಪಕ್ಕಪಕ್ಕದಲ್ಲಿಯೇ ನಿಂತುಕೊಳ್ಳುತ್ತಿದ್ದರು. 17 ಪ್ರತಿದಿನ ಪೂರ್ವದಿಕ್ಕಿನ ಬಾಗಿಲಿನಲ್ಲಿ ಆರು ಮಂದಿ ಲೇವಿಯರು ಕಾವಲಿಗಿದ್ದರು; ಉತ್ತರದಿಕ್ಕಿನ ಬಾಗಿಲಿನಲ್ಲಿ ಪ್ರತಿದಿನ ನಾಲ್ಕು ಮಂದಿ ಲೇವಿಯರು ಕಾವಲಿಗಿದ್ದರು; ದಕ್ಷಿಣದ ಬಾಗಿಲಿನಲ್ಲಿ ನಾಲ್ಕು ಮಂದಿ ಲೇವಿಯರು ಕಾವಲಿಗಿದ್ದರು; ಇಬ್ಬರು ಲೇವಿಯರು ಬೆಲೆಬಾಳುವ ವಸ್ತುಗಳ ಕೋಣೆಗೆ ಕಾವಲಾಗಿದ್ದರು. 18 ಪಶ್ಚಿಮದ ಅಂಗಳದಲ್ಲಿ ನಾಲ್ಕು ಮಂದಿ ಕಾವಲುಗಾರರಿದ್ದರು.

19 ಅಂಗಳಕ್ಕೆ ಹೋಗುವ ದಾರಿಯನ್ನು ಕಾಯಲು ಇಬ್ಬರು ಕಾವಲುಗಾರರಿದ್ದರು. ಹೀಗೆ ಇವರೆಲ್ಲಾ ದ್ವಾರಪಾಲಕರ ತಂಡಗಳು. ಇವರು ಕೋರಹ ಮತ್ತು ಮೆರಾರೀಯ ವಂಶದವರು.

ಖಜಾಂಚಿಗಳು ಮತ್ತು ಇತರ ಅಧಿಕಾರಿಗಳು

20 ಅಹೀಯನು ಲೇವಿ ಕುಲದವನಾಗಿದ್ದನು. ಇವನು ದೇವಾಲಯದ ಬೆಲೆಬಾಳುವ ವಸ್ತುಗಳ ಅಧಿಕಾರಿಯಾಗಿದ್ದನು. ಅಲ್ಲದೆ ಪವಿತ್ರ ಸಾಮಾಗ್ರಿಗಳನ್ನು ಇಡುವ ಸ್ಥಳದ ಮೇಲೆಯೂ ಇವನು ಅಧಿಕಾರಿಯಾಗಿದ್ದನು.

21 ಲದ್ದಾನ್ಯನು ಗೇರ್ಷೋಮ್ ಕುಲದವನಾಗಿದ್ದನು. ಯೆಹೀಯೇಲೀಯು ಲದ್ದಾನ್ ಕುಲದ ನಾಯಕರಲ್ಲೊಬ್ಬನು. 22 ಯೆಹೀಯೇಲೀಯ ಗಂಡುಮಕ್ಕಳು: ಜೀತಾಮ್ ಮತ್ತು ಅವನ ತಮ್ಮನಾದ ಯೋವೇಲ. ಇವರು ಸಹ ದೇವಾಲಯದ ಬೆಲೆಬಾಳುವ ವಸ್ತುಗಳ ಅಧಿಕಾರಿಗಳಾಗಿದ್ದರು.

23 ಇವರಲ್ಲದೆ ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್ ಇವರ ಕುಲಗಳಿಂದ ಬೇರೆ ನಾಯಕರನ್ನು ಆರಿಸಿಕೊಂಡರು.

24 ಶೆಬೂವೇಲನು ದೇವಾಲಯದ ಅಮೂಲ್ಯ ವಸ್ತುಗಳಿಗೆ ಅಧಿಕಾರಿಯಾಗಿದ್ದನು. ಇವನು ಗೇರ್ಷೋಮನ ಮಗ. ಗೇರ್ಷೋಮನು ಮೋಶೆಯ ಮಗ. 25 ಶೆಬೂವೇಲನ ಸಂಬಂಧಿಕರು ಯಾರೆಂದರೆ: ಎಲೀಯೆಜೆರನ ಮಗನಾದ ರೆಹಬ್ಯ; ರೆಹಬ್ಯನ ಮಗನಾದ ಯೆತಾಯ; ಯೆತಾಯನ ಮಗನಾದ ಯೋರಾಮ್; ಯೋರಾಮನ ಮಗನಾದ ಜಿಕ್ರೀ; ಮತ್ತು ಜಿಕ್ರೀಯ ಮಗನಾದ ಶೆಲೋಮೋತ್. 26 ದಾವೀದನು ದೇವಾಲಯಕ್ಕೋಸ್ಕರ ಸಂಗ್ರಹಿಸಿದ ಎಲ್ಲಾ ವಸ್ತುಗಳಿಗೆ ಶೆಲೋಮೋತನೂ ಅವನ ಸಂಬಂಧಿಕರೂ ಅಧಿಕಾರಿಗಳಾಗಿದ್ದರು.

ಸೈನ್ಯಾಧಿಕಾರಿಗಳು ದೇವಾಲಯವನ್ನು ಕಟ್ಟಲು ಸಾಮಾಗ್ರಿಗಳನ್ನು ಒದಗಿಸಿದರು. 27 ಯುದ್ಧದಲ್ಲಿ ಗೆದ್ದ ವಸ್ತುಗಳಲ್ಲಿ ಕೆಲವನ್ನು ದೇವಾಲಯ ಕಟ್ಟಲು ಎತ್ತಿಡಲು ತೀರ್ಮಾನಿಸಿದರು. 28 ಶೆಲೋಮೋತ್ ಮತ್ತು ಅವನ ಸಂಬಂಧಿಕರೂ ಪ್ರವಾದಿಯಾದ ಸಮುವೇಲನೂ ಕೀಷನ ಮಗನಾದ ಸೌಲನೂ ನೇರನ ಮಗನಾದ ಅಬ್ನೇರನೂ ಚೆರೂಯಳ ಮಗನಾದ ಯೋವಾಬನೂ ದೇವರಿಗೆಂದು ಕೊಟ್ಟಿದ್ದ ಪವಿತ್ರವಸ್ತುಗಳ ಮೇಲ್ವಿಚಾರಕರಾಗಿದ್ದರು.

29 ಕೆನನ್ಯನು ಇಚ್ಹಾರ್ಯ ವಂಶದವನಾಗಿದ್ದನು. ಕೆನನ್ಯನೂ ಅವನ ಮಕ್ಕಳೂ ನ್ಯಾಯಾಧೀಶರಾಗಿಯೂ ಕಾನೂನು ಪಾಲಕರಾಗಿಯೂ ಇಸ್ರೇಲಿನ ಅನೇಕ ಕಡೆಗಳಲ್ಲಿ ಕೆಲಸ ಮಾಡಿದರು. 30 ಹಷಬ್ಯನು ಹೆಬ್ರೋನ್ ಸಂತಾನದವನಾಗಿದ್ದನು. ಇವನೂ ಇವನ ಸಂಬಂಧಿಕರೂ ಜೋರ್ಡನ್ ನದಿಯ ಪಶ್ಚಿಮ ಪ್ರಾಂತ್ಯದಲ್ಲಿ ಯೆಹೋವನ ಸೇವೆಗೂ ಅರಸನ ಕಾರ್ಯಕ್ಕೂ ಅಧಿಕಾರಿಗಳಾಗಿದ್ದರು. ಹಷಬ್ಯನ ವರ್ಗದಲ್ಲಿ ಒಟ್ಟು ಒಂದು ಸಾವಿರದ ಏಳುನೂರು ಮಂದಿ ಸಾಮರ್ಥ್ಯಶಾಲಿಗಳಿದ್ದರು. 31 ಹೆಬ್ರೋನ್ ಸಂತಾನದ ಚರಿತ್ರೆಗನುಸಾರವಾಗಿ ಯೆರೀಯನು ಅವರ ಅಧಿಪತಿಯಾಗಿದ್ದನು. ದಾವೀದನು ನಲವತ್ತು ವರ್ಷ ಇಸ್ರೇಲಿನ ಅರಸನಾಗಿದ್ದ ಕಾಲದಲ್ಲಿ ತನ್ನ ಜನರ ಚರಿತ್ರೆಯನ್ನು ಕಂಡುಹಿಡಿದು ದಾಖಲೆ ಮಾಡಲು ಆಜ್ಞೆಯಿತ್ತಿದ್ದನು. ಗಿಲ್ಯಾದಿನ ಯಾಜೇರ್ ಎಂಬಲ್ಲಿ ಹೆಬ್ರೋನ್ ಸಂತಾನಕ್ಕೆ ಸೇರಿದವರಲ್ಲಿ ಬಹಳ ಮಂದಿ ಅನುಭವಶಾಲಿಗಳಾದ ಕಾರ್ಮಿಕರು ದೊರಕಿದರು. 32 ಯೆರೀಯನಿಗೆ ಎರಡು ಸಾವಿರದ ಏಳುನೂರು ಮಂದಿ ಸಂಬಂಧಿಕರಿದ್ದರು. ಇವರೆಲ್ಲಾ ಬಲಾಢ್ಯರೂ ಕುಟುಂಬಕ್ಕೆ ನಾಯಕರುಗಳೂ ಆಗಿದ್ದರು. ದಾವೀದನು ಇವರೆಲ್ಲರಿಗೂ ರೂಬೇನ್, ಗಾದ್, ಅರ್ಧಮನಸ್ಸೆಯವರ ಪ್ರಾಂತ್ಯಗಳಲ್ಲಿ ಯೆಹೋವನಿಗೆ ಸಂಬಂಧಿಸಿದ ಕಾರ್ಯಗಳನ್ನು, ರಾಜನಿಗೆ ಸಂಬಂಧಿಸಿದ ಕಾರ್ಯಗಳನ್ನು ಮಾಡಲು ನೇಮಕ ಮಾಡಿದನು.

ಸೈನಿಕ ತಂಡಗಳು

27 ಅರಸನ ಸೈನ್ಯದಲ್ಲಿ ಸೇವೆಮಾಡಿದವರ ಪಟ್ಟಿ. ಒಂದೊಂದು ತಂಡದವರು, ಇಸ್ರೇಲಿನ ಸೈನ್ಯಾಧಿಕಾರಿಗಳು, ಸಹಸ್ರಾಧಿಪತಿಗಳು ಮತ್ತು ಇತರ ಅಧಿಕಾರಿಗಳು ವರ್ಷದ ಆಯಾ ತಿಂಗಳಲ್ಲಿ ತಮ್ಮ ತಂಡದ ಸರದಿಯ ಪ್ರಕಾರ ಅರಸನ ವಿವಿಧ ಸೇವೆಮಾಡುತ್ತಿದ್ದರು. ಸೈನ್ಯದ ಪ್ರತಿಯೊಂದು ತಂಡದಲ್ಲಿ ಇಪ್ಪತ್ತನಾಲ್ಕು ಸಾವಿರ ಪುರುಷರಿದ್ದರು.

ಮೊದಲನೆಯ ತಿಂಗಳಲ್ಲಿ ಕಾರ್ಯಾಚರಣೆಯಲ್ಲಿರಬೇಕಾದ ತಂಡಕ್ಕೆ ಯಾಷೊಬ್ಬಾಮನು ಮುಖ್ಯಸ್ತನಾಗಿದ್ದನು. ಇವನು ಜಬ್ದೀಯೇಲನ ಮಗನಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಇದ್ದರು. ಯಾಷೊಬ್ಬಾಮನು ಪೆರೆಚನ ಸಂತತಿಯವನಾಗಿದ್ದನು. ಇವನು ವರ್ಷದ ಮೊದಲನೆಯ ತಿಂಗಳಲ್ಲಿ ಸೇವೆಮಾಡುವ ಸೈನ್ಯಾಧಿಕಾರಿಯಾಗಿದ್ದನು.

ಎರಡನೆಯ ತಿಂಗಳಿನ ಸೈನ್ಯಾಧಿಕಾರಿ ಅಹೋಹೀಯನಾದ ದೋದೈ. ಮಿಕ್ಲೋತ್ ಎಂಬವನು ಈ ತಂಡದ ನಾಯಕನಾಗಿದ್ದನು. ಒಟ್ಟು ಇಪ್ಪತ್ತನಾಲ್ಕು ಸಾವಿರ ಮಂದಿ ದೋದೈನ ತಂಡದಲ್ಲಿದ್ದರು.

ಮೂರನೆಯ ಸೈನ್ಯಾಧಿಪತಿಯು ಬೆನಾಯ. ಇವನು ಯೆಹೋಯಾದನ ಮಗನಾಗಿದ್ದನು. ಇವನು ಮಹಾಯಾಜಕನಾಗಿದ್ದನು. ಇವನೊಂದಿಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಕಾಲಾಳುಗಳು ಇದ್ದರು. ಮೂವತ್ತು ವೀರರಲ್ಲಿ ಒಬ್ಬನಾದ ಬೆನಾಯನೇ ಇವನು. ಬೆನಾಯನು ಅವರ ನಾಯಕನಾಗಿದ್ದನು. ಬೆನಾಯನ ಮಗ ಅಮ್ಮೀಜಾಬಾದನು ಬೆನಾಯನ ತಂಡದ ಅಧಿಪತಿಯಾಗಿದ್ದನು.

ನಾಲ್ಕನೆಯ ಸೇನಾಪತಿಯು ಅಸಾಹೇಲ. ಇವನು ವರ್ಷದ ನಾಲ್ಕನೆಯ ತಿಂಗಳಿನಲ್ಲಿ ರಾಜ್ಯದ ಸೈನ್ಯದ ಅಧಿಪತಿಯಾಗಿದ್ದನು. ಇವನು ಯೋವಾಬನ ಸೋದರ. ಇವನ ನಂತರ ಅಸಾಹೇಲನ ಮಗನಾದ ಜೆಬದ್ಯನು ಸೈನ್ಯಾಧಿಕಾರಿಯಾದನು. ಅಸಾಹೇಲನ ತಂಡದಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಇದ್ದರು.

ಐದನೆಯ ಸೈನ್ಯಾಧಿಕಾರಿಯು ಶಮ್ಹೂತ. ಇವನು ಇಜ್ರಾಹ್ಯನ ಸಂತತಿಯವನಾಗಿದ್ದನು. ವರ್ಷದ ಐದನೆಯ ತಿಂಗಳಿನ ಸೈನ್ಯದ ಮುಖ್ಯಾಧಿಕಾರಿಯಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.

ಆರನೆಯ ಸೈನ್ಯಾಧಿಪತಿಯು ಐರನು. ಇವನು ವರ್ಷದ ಆರನೆಯ ತಿಂಗಳಲ್ಲಿ ಸೈನ್ಯಾಧಿಕಾರಿಯಾಗಿದ್ದನು. ಇವನು ತೆಕೋವನದ ಇಕ್ಕೇಷನ ಮಗ. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.

10 ಹೆಲೆಚನು ಏಳನೆಯ ಸೈನ್ಯಾಧಿಕಾರಿ. ವರ್ಷದ ಏಳನೆಯ ತಿಂಗಳಲ್ಲಿ ಇವನು ಸೈನ್ಯಾಧಿಕಾರಿಯಾಗಿದ್ದನು. ಇವನು ಎಫ್ರಾಯೀಮ್ ಸಂತತಿಯ ಪೆಲೋನ್ಯನಾಗಿದ್ದನು. ಇವನ ತಂಡದಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.

11 ಎಂಟನೆಯ ಸೇನಾಧಿಪತಿಯ ಹೆಸರು ಸಿಬ್ಬಕೈ. ಇವನು ಹುಷ ಊರಿನ ಜೆರಹನ ಸಂತತಿಯವನು. ವರ್ಷದ ಎಂಟನೆಯ ತಿಂಗಳಿನ ಸೇನಾಧಿಪತಿ. ಇವನ ಕೈ ಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.

12 ಒಂಭತ್ತನೆಯ ಸೇನಾಪತಿ ಅಬೀಯೆಜೆರ್. ಇವನು ಅನತೋತ್ ಊರಿನ ಬೆನ್ಯಾಮೀನ್ ಕುಲದವನು. ವರ್ಷದ ಒಂಭತ್ತನೆಯ ತಿಂಗಳಲ್ಲಿ ಸೈನ್ಯಾಧಿಕಾರಿಯಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.

13 ಹತ್ತನೆಯ ಸೇನಾಪತಿ ಮಹರೈ. ಇವನು ನೆಟೋಫದ ಜೆರಹನ ಸಂತತಿಯವನು. ವರ್ಷದ ಹತ್ತನೆಯ ತಿಂಗಳಿಗೆ ಇವನು ಸೈನ್ಯಾಧಿಕಾರಿಯಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.

14 ಹನ್ನೊಂದನೆಯ ಸೇನಾಪತಿ ಪಿರ್ರಾತೋನ್ಯನಾದ ಬೆನಾಯ. ಇವನು ಎಫ್ರಾಯೀಮ್ ಕುಲದ ಪಿರ್ರಾತೋನ್ ಎಂಬಲ್ಲಿಂದ ಬಂದವನು. ವರ್ಷದ ಹನ್ನೊಂದನೆಯ ತಿಂಗಳಿಗೆ ಇವನು ಸೇನಾಪತಿಯಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಸೈನಿಕರಿದ್ದರು.

15 ಹನ್ನೆರಡನೆಯ ಸೇನಾಪತಿ ಹೆಲ್ದೈ. ಇವನು ನೆಟೋಫ ಊರಿನ ಒತ್ನೀಯೇಲನ ಸಂತತಿಯವನು. ವರ್ಷದ ಹನ್ನೆರಡನೆಯ ತಿಂಗಳಿನಲ್ಲಿ ಇವನು ಸೇನಾಪತಿಯಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಸೈನಿಕರಿದ್ದರು.

ಕುಲಪ್ರಧಾನರು

16 ಇಸ್ರೇಲ್ ಕುಲಗಳ ನಾಯಕರು ಯಾರೆಂದರೆ:

ರೂಬೇನ್ಯರಲ್ಲಿ ಜಿಕ್ರೀಯ ಮಗ ಎಲೀಯೆಜರ್.

ಸಿಮೆಯೋನ್ಯರಲ್ಲಿ ಮಾಕನ ಮಗನಾದ ಶೆಫಟ್ಯ.

17 ಲೇವಿಯರಲ್ಲಿ ಕೆಮುವೇಲನ ಮಗನಾದ ಹಷಬ್ಯ.

ಆರೋನ್ಯರಲ್ಲಿ ಚಾದೋಕ್.

18 ಯೆಹೂದ್ಯರಲ್ಲಿ ಎಲೀಹು (ದಾವೀದನ ಅಣ್ಣಂದಿರಲ್ಲೊಬ್ಬನು.)

ಇಸ್ಸಾಕಾರರಲ್ಲಿ ಮೀಕಾಯೇಲನ ಮಗ ಒಮ್ರಿ.

19 ಜೆಬೂಲೂನ್ಯರಲ್ಲಿ ಓಬದ್ಯನ ಮಗನಾದ ಇಷ್ಮಾಯ.

ನಫ್ತಾಲ್ಯರಲ್ಲಿ ಅಜ್ರೀಯೇಲನ ಮಗನಾದ ಯೆರೀಮೋತ್.

20 ಎಫ್ರಾಯೀಮ್ಯರಲ್ಲಿ ಅಜಜ್ಯನ ಮಗನಾದ ಹೊಷೇಯನು.

ಪಶ್ಚಿಮ ಮನಸ್ಸೆಯವರಲ್ಲಿ ಪೆದಾಯನ ಮಗ ಯೋವೇಲ್.

21 ಪೂರ್ವ ಮನಸ್ಸೆಯವರಲ್ಲಿ ಜೆಕರ್ಯನ ಮಗ ಇದ್ದೋ.

ಬೆನ್ಯಾಮೀನ್ಯರಲ್ಲಿ ಅಬ್ನೇರನ ಮಗ ಯಗಸೀಯೇಲ್.

22 ದಾನ್ಯರಲ್ಲಿ ಯೆರೋಹಾಮನ ಮಗ ಅಜರೇಲ್.

ಇವರು ಇಸ್ರೇಲ್ ಗೋತ್ರಪ್ರಧಾನರು.

ದಾವೀದನು ಇಸ್ರೇಲರನ್ನು ಲೆಕ್ಕಿಸಿದ್ದು

23 ದೇವರು ಇಸ್ರೇಲರನ್ನು ಆಕಾಶದ ನಕ್ಷತ್ರದಷ್ಟು ಹೆಚ್ಚಿಸುವೆನೆಂದು ವಾಗ್ದಾನ ಮಾಡಿದ್ದ ಪ್ರಕಾರ ಇಸ್ರೇಲರ ಸಂಖ್ಯೆ ಅಪರಿಮಿತವಾಗಿತ್ತು. ಆದ್ದರಿಂದ ದಾವೀದನು ಇಪ್ಪತ್ತು ವರ್ಷ ಪ್ರಾಯದ ಮೇಲ್ಪಟ್ಟ ಗಂಡಸರನ್ನು ಮಾತ್ರ ಲೆಕ್ಕಿಸುವ ಆಲೋಚನೆ ಮಾಡಿದನು. 24 ಚೆರೂಯಳ ಮಗನಾದ ಯೋವಾಬನು ಲೆಕ್ಕಿಸುವ ಕಾರ್ಯ ಪ್ರಾರಂಭಿಸಿದನು. ಆದರೆ ಅವನು ಪೂರ್ಣಗೊಳಿಸಲಿಲ್ಲ. ದೇವರು ಇಸ್ರೇಲರ ಮೇಲೆ ಕೋಪಗೊಂಡನು. ಇದರಿಂದಾಗಿ ಇಸ್ರೇಲರ ಜನಸಂಖ್ಯೆಯನ್ನು ದಾವೀದನ ಚರಿತ್ರಾ ಪುಸ್ತಕದಲ್ಲಿ ದಾಖಲೆ ಮಾಡಲಿಲ್ಲ.

ಅರಸನ ಆಡಳಿತ ವರ್ಗದವರು

25 ಅರಸನ ಆಸ್ತಿಗೆ ಜವಾಬ್ದಾರರಾಗಿದ್ದವರ ಪಟ್ಟಿ:

ಅದೀಯೇಲನ ಮಗನಾದ ಅಜ್ಮಾವೆತ್ ರಾಜನ ಉಗ್ರಾಣಗಳ ಅಧಿಕಾರಿಯಾಗಿದ್ದನು.

ಉಜ್ಜೀಯನ ಮಗನಾದ ಯೋನಾತಾನ್ ಚಿಕ್ಕ ಊರುಗಳಲ್ಲಿ, ಹಳ್ಳಿಗಳಲ್ಲಿ, ಹೊಲಗಳಲ್ಲಿ ಮತ್ತು ಗೋಪುರಗಳಲ್ಲಿ ಇದ್ದ ಉಗ್ರಾಣಗಳಿಗೆ ಅಧಿಕಾರಿಯಾಗಿದ್ದನು.

26 ಕೆಲೂಬನ ಮಗನಾದ ಎಜ್ರೀಯು ರಾಜನ ವ್ಯವಸಾಯಗಾರರಿಗೆ ಅಧಿಕಾರಿಯಾಗಿದ್ದನು.

27 ರಾಮಾದ ಶಿಮ್ಮೀಯು ರಾಜನ ದ್ರಾಕ್ಷಿತೋಟಗಳ ಅಧಿಕಾರಿಯಾಗಿದ್ದನು.

ಶಿಪ್ಮೀಯದ ಜಬ್ದೀಯು ರಾಜನ ದ್ರಾಕ್ಷಿತೋಟಗಳಿಂದ ದೊರಕಿದ ದ್ರಾಕ್ಷಾರಸದ ಉಗ್ರಾಣಗಳಿಗೆ ಅಧಿಕಾರಿಯಾಗಿದ್ದನು.

28 ಗೆದೆರಿನ ಬಾಳ್ಹಾನಾನ್ ಪಶ್ಚಿಮದ ಬೆಟ್ಟಪ್ರದೇಶದಲ್ಲಿ ಆಲಿವ್ ಮರಗಳ ಮತ್ತು ಸಿಖಮೊರ್ ಮರಗಳ ತೋಪುಗಳಿಗೆ ಅಧಿಕಾರಿಯಾಗಿದ್ದನು.

ಯೋವಾಷನು ಆಲಿವ್ ಎಣ್ಣೆಯ ಉಗ್ರಾಣಗಳಿಗೆ ಅಧಿಕಾರಿಯಾಗಿದ್ದನು.

29 ಶಾರೋನಿನ ಶಿಟ್ರೈಯು ಶಾರೋನಿನ ಸುತ್ತಮುತ್ತಲಿದ್ದ ರಾಜನ ಕುರಿದನಗಳ ಹಿಂಡುಗಳ ಅಧಿಕಾರಿಯಾಗಿದ್ದನು.

ಅದ್ಲ್ಯೆಯ ಮಗನಾದ ಶಾಫಾಟನು ತಗ್ಗುಪ್ರದೇಶಗಳಲ್ಲಿದ್ದ ರಾಜನ ಪಶುಗಳ ಹಿಂಡುಗಳಿಗೆ ಅಧಿಕಾರಿಯಾಗಿದ್ದನು.

30 ಇಷ್ಮಾಯೇಲ್ಯನಾದ ಓಬೀಲನು ಒಂಟೆಗಳ ಮೇಲೆ ಅಧಿಕಾರಿಯಾಗಿದ್ದನು. ಮೇರೊನೋತ್ಯನಾದ ಯೆಹ್ದೆಯು ರಾಜನ ಕತ್ತೆಗಳ ಹಿಂಡಿಗೆ ಅಧಿಕಾರಿಯಾಗಿದ್ದನು.

31 ಹಗ್ರೀಯನಾದ ಯಾಜೀಜನು ರಾಜನ ಕುರಿಹಿಂಡುಗಳ ಮೇಲೆ ಅಧಿಕಾರಿಯಾಗಿದ್ದನು.

ಇವರೆಲ್ಲರೂ ರಾಜನ ಆಸ್ತಿಪಾಸ್ತಿಗಳ ಮೇಲ್ವಿಚಾರಕರಾಗಿದ್ದರು.

32 ದಾವೀದನ ಚಿಕ್ಕಪ್ಪನಾದ ಯೋನಾತಾನನು ಉತ್ತಮ ಸಲಹೆಗಾರನಾಗಿದ್ದನು. ಹಕ್ಮೋನಿಯ ಮಗನಾದ ಯೆಹೀಯೇಲನು ರಾಜನ ಗಂಡುಮಕ್ಕಳನ್ನು ಪಾಲನೆ ಮಾಡುತ್ತಿದ್ದನು. 33 ಅಹೀತೋಫೆಲನು ರಾಜನ ಮಂತ್ರಾಲೋಚಕನಾಗಿದ್ದನು. ಹೂಷೈ ರಾಜನ ಮಿತ್ರನಾಗಿದ್ದನು. ಇವನು ಅರ್ಕೀಯ ಜನರಿಗೆ ಸೇರಿದವನಾಗಿದ್ದನು. 34 ಬೆನಾಯನ ಮಗನಾದ ಯೆಹೋಯಾದವನೂ ಎಬ್ಯಾತಾರನೂ ಅಹೀತೋಫೆಲನ ತರುವಾಯ ರಾಜನ ಮಂತ್ರಾಲೋಚಕರಾದರು. ರಾಜನ ಸೈನ್ಯಕ್ಕೆ ಯೋವಾಬನು ಪ್ರಧಾನಸೇನಾಪತಿಯಾಗಿದ್ದನು.

2 ಪೇತ್ರನು 1

ಯೇಸು ಕ್ರಿಸ್ತನ ಸೇವಕನೂ ಅಪೊಸ್ತಲನೂ ಆದ ಸಿಮೆಯೋನ ಪೇತ್ರನು ನಮ್ಮೊಂದಿಗೆ ಅಮೂಲ್ಯವಾದ ನಂಬಿಕೆಯನ್ನು ಹೊಂದಿರುವ ಜನರೆಲ್ಲರಿಗೂ ಬರೆಯುವ ಪತ್ರ. ನಮ್ಮ ದೇವರೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನು ನೀತಿವಂತನಾಗಿರುವುದರಿಂದ ನೀವು ಆ ನಂಬಿಕೆಯನ್ನು ಪಡೆದುಕೊಂಡಿರಿ. ಆತನು ಯೋಗ್ಯವಾದದ್ದನ್ನೇ ಮಾಡುತ್ತಾನೆ.

ನಿಮಗೆ ಕೃಪೆಯೂ ಶಾಂತಿಯೂ ಹೆಚ್ಚೆಚ್ಚಾಗಿ ದೊರೆಯಲಿ. ದೇವರನ್ನು ಮತ್ತು ನಮ್ಮ ಪ್ರಭುವಾದ ಯೇಸುವನ್ನು ನೀವು ನಿಜವಾಗಿಯೂ ತಿಳಿದಿರುವುದರಿಂದ ನಿಮಗೆ ಕೃಪೆಯೂ ಶಾಂತಿಯೂ ದೊರೆಯಲಿ.

ನಮಗೆ ಬೇಕಾದುದನ್ನೆಲ್ಲಾ ದೇವರು ದಯಪಾಲಿಸಿದ್ದಾನೆ

ಯೇಸುವಿಗೆ ದೇವರ ಶಕ್ತಿಯಿದೆ. ಜೀವಿಸಲು ಮತ್ತು ದೇವರ ಸೇವೆ ಮಾಡಲು ಬೇಕಾದ ಪ್ರತಿಯೊಂದನ್ನು ಆತನ ಶಕ್ತಿಯು ನಮಗೆ ಒದಗಿಸಿದೆ. ನಾವು ಆತನನ್ನು ಬಲ್ಲವರಾದ್ದರಿಂದಲೇ ಅವುಗಳನ್ನು ಪಡೆದುಕೊಂಡಿದ್ದೇವೆ. ಯೇಸು ತನ್ನ ಪ್ರಭಾವದಿಂದಲೂ ಗುಣಾತಿಶಯದಿಂದಲೂ ನಮ್ಮನ್ನು ಕರೆದನು. ಯೇಸು ತಾನು ಮಾಡಿದ ವಾಗ್ದಾನದಂತೆ, ತನ್ನ ಪ್ರಭಾವ ಮತ್ತು ಗುಣಾತಿಶಯಗಳ ಮೂಲಕ ನಮಗೆ ಅಮೂಲ್ಯವಾದ ಹಾಗೂ ಉತ್ಕೃಷ್ಟವಾದ ವರಗಳನ್ನು ದಯಪಾಲಿಸಿರುವನು. ಆ ವರಗಳಿಂದ ನೀವು ದೇವರ ಗುಣಾತಿಶಯದಲ್ಲಿ ಪಾಲುಗಾರರಾಗಲು ಸಾಧ್ಯ. ಹೀಗಿರಲಾಗಿ ನೀವು ಈ ಲೋಕದಲ್ಲಿ ದುರಾಶೆಯಿಂದುಂಟಾಗುವ ಕೆಟ್ಟತನಕ್ಕೆ ತಪ್ಪಿಸಿಕೊಂಡವರಾಗಿದ್ದೀರಿ.

ನೀವು ಈ ಆಶೀರ್ವಾದಗಳನ್ನು ಹೊಂದಿರುವುದರಿಂದ ಅವುಗಳನ್ನು ನಿಮ್ಮ ಜೀವಿತಕ್ಕೆ ಅಳವಡಿಸಿಕೊಳ್ಳಲು ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನಿಸಿ. ನಿಮ್ಮ ನಂಬಿಕೆಗೆ ಸದ್ಗುಣವನ್ನೂ ಸದ್ಗುಣಕ್ಕೆ ಜ್ಞಾನವನ್ನೂ ಜ್ಞಾನಕ್ಕೆ ದಮೆಯನ್ನೂ ದಮೆಗೆ ತಾಳ್ಮೆಯನ್ನೂ ತಾಳ್ಮೆಗೆ ದೇವರ ಸೇವೆಯನ್ನೂ ದೇವರ ಸೇವೆಗೆ ಸಹೋದರ ಸ್ನೇಹವನ್ನೂ ಸಹೋದರ ಸ್ನೇಹಕ್ಕೆ ಪ್ರೀತಿಯನ್ನೂ ಸೇರಿಸಿರಿ ಇವೆಲ್ಲವೂ ನಿಮ್ಮಲ್ಲಿದ್ದು ಬೆಳೆಯುತ್ತಿದ್ದರೆ, ನೀವು ಎಂದಿಗೂ ನಿರರ್ಥಕರಾಗದಂತೆ ಇವು ನಿಮಗೆ ಸಹಾಯ ಮಾಡುತ್ತವೆ. ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಜ್ಞಾನದಲ್ಲಿ ಎಂದಿಗೂ ಅಯೋಗ್ಯರೆನಿಸಿಕೊಳ್ಳದಂತೆ ಇವು ನಿಮಗೆ ಸಹಾಯಮಾಡುತ್ತವೆ. ಆದರೆ ಇವು ಯಾವನಲ್ಲಿ ಇರುವುದಿಲ್ಲವೋ ಅವನು ಸ್ಪಷ್ಟವಾಗಿ ನೋಡಲಾರನು. ಅವನು ಕುರುಡನಾಗಿದ್ದಾನೆ; ತಾನು ಶುದ್ಧನಾದದ್ದನ್ನು ಮರೆತವನಾಗಿದ್ದಾನೆ.

10 ನನ್ನ ಸಹೋದರ ಸಹೋದರಿಯರೇ, ದೇವರು ನಿಮ್ಮನ್ನು ತನ್ನವರನ್ನಾಗಿ ಆರಿಸಿಕೊಳ್ಳಲು ಕರೆದನು. ಆದ್ದರಿಂದಲೇ ನೀವು ದೇವರಿಂದ ನಿಜವಾಗಿಯೂ ಕರೆಯಲ್ಪಟ್ಟವರೆಂದೂ ಆರಿಸಲ್ಪಟ್ಟವೆರೆಂದೂ ತೋರಿಸಲು ಬಹಳವಾಗಿ ಪ್ರಯತ್ನಿಸಿರಿ. ಹೀಗೆ ನೀವು ಮಾಡಿದರೆ ಎಂದಿಗೂ ಎಡವಿಬೀಳುವುದಿಲ್ಲ. 11 ನಮ್ಮ ಪ್ರಭುವಾದ ಮತ್ತು ರಕ್ಷಕನಾದ ಯೇಸುಕ್ರಿಸ್ತನ ರಾಜ್ಯದಲ್ಲಿ ನಿಮಗೆ ಮಹಾ ಸ್ವಾಗತವನ್ನು ನೀಡಲಾಗುವುದು. ಆ ರಾಜ್ಯವು ಶಾಶ್ವತವಾದದ್ದು.

12 ಇವೆಲ್ಲವೂ ನಿಮಗೆ ತಿಳಿದಿದೆ. ನಿಮ್ಮಲ್ಲಿರುವ ಸತ್ಯದಲ್ಲಿ ನೀವು ಸ್ಥಿರವಾಗಿದ್ದೀರಿ. ಆದರೆ ಇವುಗಳನ್ನು ನೀವು ಜ್ಞಾಪಕ ಮಾಡಿಕೊಳ್ಳುವಂತೆ ನಾನು ನಿಮಗೆ ಯಾವಾಗಲೂ ಸಹಾಯ ಮಾಡುತ್ತೇನೆ. 13 ನಾನು ಈ ಲೋಕದಲ್ಲಿ ಇನ್ನೂ ಜೀವದಿಂದಿರುವಾಗಲೇ ಇವುಗಳನ್ನು ನಿಮ್ಮ ನೆನಪಿಗೆ ತರುವುದು ಯೋಗ್ಯವಾದದ್ದೆಂಬುದು ನನ್ನ ಆಲೋಚನೆ. 14 ನಾನು ಬಹುಬೇಗ ಈ ದೇಹವನ್ನು ತ್ಯಜಿಸಬೇಕೆಂಬುದೂ ನನಗೆ ತಿಳಿದಿದೆ. ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಅದನ್ನು ತೋರ್ಪಡಿಸಿದ್ದಾನೆ. 15 ನೀವು ಇವುಗಳನ್ನು ಯಾವಾಗಲೂ ನೆನಪು ಮಾಡಿಕೊಳ್ಳಲು ನಿಮಗೆ ನನ್ನಿಂದಾದಷ್ಟು ಸಹಾಯಮಾಡಲು ನಾನು ಪ್ರಯತ್ನಿಸುತ್ತೇನೆ. ನಾನು ಈ ಲೋಕವನ್ನು ಬಿಟ್ಟುಹೋದ ನಂತರವೂ ನೀವು ಈ ಸಂಗತಿಗಳನ್ನು ನೆನಪು ಮಾಡಿಕೊಳ್ಳಲು ಸಮರ್ಥರಾಗಿರಬೇಕೆಂಬುದು ನನ್ನ ಅಪೇಕ್ಷೆ.

ಕ್ರಿಸ್ತನ ಮಹಿಮೆಯನ್ನು ನಾವು ನೋಡಿದೆವು

16 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಶಕ್ತಿಯ ಕುರಿತಾಗಿ ಮತ್ತು ಆತನ ಬರುವಿಕೆಯ ಕುರಿತಾಗಿ ನಿಮಗೆ ತಿಳಿಸಿದ್ದೇವೆ. ಆ ಸಂಗತಿಗಳು ಜನರಿಂದ ಕಲ್ಪಿತವಾದ ಜಾಣ್ಮೆಯ ಕಥೆಗಳಲ್ಲ. ಯೇಸುವಿನ ಮಹಿಮೆಯನ್ನು ನಾವು ಕಣ್ಣಾರೆ ಕಂಡಿದ್ದೇವೆ. 17 ಆತನು ಅತ್ಯಂತ ಪ್ರಭಾವವುಳ್ಳ (ದೇವರ) ಸ್ವರವನ್ನು ಕೇಳಿದನು. ಆಗಲೇ ಆತನು ತಂದೆಯಾದ ದೇವರಿಂದ ಮಾನವನ್ನೂ ಪ್ರಭಾವವನ್ನೂ ಹೊಂದಿಕೊಂಡನು. ಆ ಸ್ವರವು, “ಈತನು ನನ್ನ ಪ್ರಿಯ ಮಗ. ಈತನನ್ನು ಬಹಳವಾಗಿ ಮೆಚ್ಚಿಕೊಂಡಿದ್ದೇನೆ” ಎಂದು ಹೇಳಿತು. 18 ನಾವು ಪವಿತ್ರ ಪರ್ವತದ ಮೇಲೆ ಯೇಸುವಿನ ಜೊತೆಯಲ್ಲಿದ್ದಾಗ ಪರಲೋಕದಿಂದ ಬಂದ ಆ ಧ್ವನಿಯನ್ನು ನಾವೂ ಕೇಳಿದೆವು.[a]

19 ಪ್ರವಾದಿಗಳು ಹೇಳಿದ ಸಂಗತಿಗಳನ್ನು ಇದು ನಮಗೆ ಮತ್ತಷ್ಟು ಖಚಿತಪಡಿಸಿತು. ಅವರು ಹೇಳಿದ್ದನ್ನು ನೀವು ಚಾಚು ತಪ್ಪದೆ ಅನುಸರಿಸುವುದು ಒಳ್ಳೆಯದೇ ಸರಿ. ಅವರು ಹೇಳಿದ ಸಂಗತಿಗಳು ಅಂಧಕಾರದಲ್ಲಿ ಪ್ರಕಾಶಿಸುವ ಬೆಳಕಿನಂತಿವೆ. ನಿಮ್ಮ ಹೃದಯಗಳಲ್ಲಿ ಹಗಲು ಆರಂಭವಾಗಿ, ಮುಂಜಾನೆಯ ನಕ್ಷತ್ರವು ಮೂಡುವವರೆಗೂ ಆ ಬೆಳಕು ಪ್ರಕಾಶಿಸುತ್ತದೆ. 20 ನೀವು ಅರ್ಥಮಾಡಿಕೊಳ್ಳಬೇಕಾದ ಮುಖ್ಯವಾದ ಸಂಗತಿಯೇನೆಂದರೆ, ಪವಿತ್ರ ಗ್ರಂಥದಲ್ಲಿರುವ ಯಾವ ಪ್ರವಾದನವಾಕ್ಯವೂ ಒಬ್ಬ ವ್ಯಕ್ತಿಯ ವೈಯಕ್ತಿಕ ವಿವರಣೆಯಿಂದ ಬಂದಿಲ್ಲ. 21 ಯಾವ ಪ್ರವಾದನೆಯೇ ಆಗಲಿ ಮನುಷ್ಯನ ಚಿತ್ತದಿಂದ ಬಂದಿಲ್ಲ. ಆದರೆ ಜನರು ಪವಿತ್ರಾತ್ಮನಿಂದ ನಡೆಸಲ್ಪಟ್ಟು ದೇವರಿಂದ ಹೊಂದಿದ್ದನ್ನೇ ಮಾತನಾಡಿದರು.

ಮೀಕ 4

ಜೆರುಸಲೇಮಿನಿಂದ ಧರ್ಮಶಾಸ್ತ್ರ ಬರುವದು

ಅಂತ್ಯದ ದಿವಸಗಳಲ್ಲಿ ಯೆಹೋವನ ಆಲಯದ ಪರ್ವತವು
    ಎಲ್ಲಾ ಪರ್ವತಗಳಿಗಿಂತಲೂ ಅತ್ಯುನ್ನತವಾಗಿರುವುದು.
ಅದು ಬೆಟ್ಟಗಳಿಗಿಂತಲೂ ಉನ್ನತವಾಗಿರುವದು.
    ಅಲ್ಲಿಗೆ ಜನರು ಗುಂಪುಗುಂಪಾಗಿ ಹೋಗುವರು.
ಅನೇಕ ದೇಶಗಳಿಂದ ಜನರು ಅಲ್ಲಿಗೆ ಹೋಗುವರು.
    “ಬನ್ನಿರಿ, ನಾವು ಯೆಹೋವನ ಪರ್ವತಕ್ಕೆ ಹೋಗೋಣ,
    ಯಾಕೋಬನ ದೇವರ ಆಲಯಕ್ಕೆ ನಾವು ಹೋಗೋಣ.
ಆಗ ದೇವರು ನಮಗೆ ಜೀವಿತದ ಮಾರ್ಗವನ್ನು ಕಲಿಸುವನು.
    ಮತ್ತು ನಾವು ಆತನನ್ನು ಅನುಸರಿಸುವೆವು” ಎಂದು ಹೇಳುವರು.

ದೇವರ ಉಪದೇಶವು, ಆತನ ಸಂದೇಶವು ಚೀಯೋನ್ ಬೆಟ್ಟದಲ್ಲಿರುವ
    ಜೆರುಸಲೇಮಿನಲ್ಲಿ ಪ್ರಾರಂಭವಾಗಿ ಪ್ರಪಂಚದಲ್ಲೆಲ್ಲಾ ಹಬ್ಬುತ್ತದೆ.
ಆಗ ಪ್ರಪಂಚದ ಎಲ್ಲಾ ಜನಾಂಗಗಳಿಗೆ ಯೆಹೋವನೇ ನ್ಯಾಯಾಧೀಶನು.
    ದೂರದೇಶದಲ್ಲಿರುವ ಅನೇಕ ಜನರ ಜಗಳಗಳನ್ನು ಆತನು ನಿಲ್ಲಿಸುವನು.
ಆ ಜನರು ಯುದ್ಧದ ಆಯುಧಗಳನ್ನು ಉಪಯೋಗಿಸುವದನ್ನು ನಿಲ್ಲಿಸುವರು.
    ತಮ್ಮ ಖಡ್ಗಗಳಿಂದ ನೇಗಿಲ ಗುಳಗಳನ್ನು ತಯಾರಿಸುವರು.
    ಭರ್ಜಿಗಳಿಂದ ಕುಡುಗೋಲುಗಳನ್ನು ತಯಾರಿಸುವರು.
ಜನರೊಳಗೆ ಪರಸ್ಪರ ಯುದ್ಧ ಮಾಡುವದನ್ನು ನಿಲ್ಲಿಸುವರು.
    ಯುದ್ಧಕ್ಕೆ ತರಬೇತಿ ಎಂದಿಗೂ ಮಾಡರು.
ಪ್ರತಿಯೊಬ್ಬನೂ ತನ್ನ ದ್ರಾಕ್ಷಾಲತೆಯ ನೆರಳಿನಲ್ಲಿ ಕುಳಿತುಕೊಳ್ಳುವನು.
    ಅವರು ಅಂಜೂರದ ಮರದಡಿಯಲ್ಲಿ ವಿಶ್ರಾಂತಿಯಲ್ಲಿರುವರು.
ಯಾರೂ ಅವರನ್ನು ಭಯಗೊಳಿಸುವದಿಲ್ಲ.
    ಯಾಕೆಂದರೆ ಸರ್ವಶಕ್ತನಾದ ಯೆಹೋವನು ಹೀಗೆ ಆಗುವದೆಂದು ಹೇಳಿದ್ದಾನೆ.

ಬೇರೆ ದೇಶಗಳವರು ತಮ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತಾರೆ.
    ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರನ್ನು ನಿತ್ಯಕಾಲಕ್ಕೂ ಸ್ಮರಿಸುವೆವು.

ರಾಜ್ಯವು ತಿರುಗಿ ತರಲ್ಪಡುವದು

ಯೆಹೋವನು ಹೇಳುವುದೇನೆಂದರೆ,
    “ಜೆರುಸಲೇಮು ಗಾಯಗೊಂಡು ಕುಂಟಾಗಿದೆ;
ತಳ್ಳಲ್ಪಟ್ಟಿದೆ; ಗಾಯಗೊಂಡು ಶಿಕ್ಷಿಸಲ್ಪಟ್ಟಿದೆ.
    ಆದರೆ ನಾನು ಆಕೆಯನ್ನು ನನ್ನ ಬಳಿಗೆ ಬರಮಾಡುವೆನು.

“ಆ ‘ಕುಂಟು’ ನಗರದ ಜನರೇ ಅಳಿದುಳಿದ ಜನರಾಗುವರು.
    ಆ ಪಟ್ಟಣದ ಜನರನ್ನು ಬಲವಂತದಿಂದ ಓಡಿಸಲಾಯಿತು.
    ಆದರೆ ನಾನು ಅವರನ್ನು ಬಲಶಾಲಿಯಾದ ಜನಾಂಗವನ್ನಾಗಿ ಮಾಡುವೆನು.”
ಯೆಹೋವನು ಅವರ ಅರಸನಾಗುವನು.
    ಆತನು ಚೀಯೋನ್ ಪರ್ವತದಿಂದ ನಿತ್ಯಕಾಲಕ್ಕೂ ಆಳುವನು.
ಹಿಂಡುಗಳ ಗೋಪುರವೇ,
    ನಿನ್ನ ಸಮಯವು ಬರುವದು.
ಚೀಯೋನಿನ ಒಫೆಲ್ ಗುಡ್ಡವೇ,
    ನಿನಗೆ ತಿರುಗಿ ಅಧಿಕಾರ ದೊರಕುವುದು.
ಹೌದು, ಮೊದಲಿನಂತೆಯೇ
    ಜೆರುಸಲೇಮಿನಲ್ಲೇ ರಾಜ್ಯವಿರುವುದು.

ಬಾಬಿಲೋನಿಗೆ ಇಸ್ರೇಲರು ಯಾಕೆ ಹೋಗಬೇಕು?

ಯಾಕೆ ನೀನು ಗಟ್ಟಿಯಾಗಿ ಅರಚಿಕೊಳ್ಳುವೆ?
    ನೀನು ನಿನ್ನ ನಾಯಕನನ್ನು ಕಳೆದುಕೊಂಡೆಯಾ?
ನಿನ್ನ ರಾಜನು ನಿನ್ನನ್ನು ಬಿಟ್ಟುಹೋದನೋ?
    ಈ ಕಾರಣದಿಂದ ನೀನು ಪ್ರಸವವೇದನೆಯನ್ನು ಅನುಭವಿಸುವ ಸ್ತ್ರೀಯಂತೆ ಶ್ರಮೆಯನ್ನು ಅನುಭವಿಸುತ್ತಿರುವೆಯೋ?
10 ಚೀಯೋನ್ ಕುಮಾರಿಯೇ, ಪ್ರಸವವೇದನೆಯಲ್ಲಿರುವ ಸ್ತ್ರೀಯಂತೆ
    ನೀನು ನೋವನ್ನು ಅನುಭವಿಸು.
ನೀನು ಜೆರುಸಲೇಮ್ ಪಟ್ಟಣದಿಂದ
    ಹೊರಗೆ ಹೋಗಿ ಹೊಲದಲ್ಲಿ ವಾಸಿಸುವೆ.
ನಾನು ಹೇಳುವುದೇನೆಂದರೆ, ನೀನು ಬಾಬಿಲೋನಿಗೆ ಹೋಗುವೆ,
    ಆದರೆ ಅಲ್ಲಿ ನೀನು ರಕ್ಷಿಸಲ್ಪಡುವೆ.
ಯೆಹೋವನು ಅಲ್ಲಿಗೆ ಬಂದು ನಿನ್ನನ್ನು ರಕ್ಷಿಸುವನು.
    ನಿನ್ನ ವೈರಿಗಳಿಂದ ನಿನ್ನನ್ನು ಬಿಡುಗಡೆ ಮಾಡುವನು.

ಯೆಹೋವನು ಜನಾಂಗಗಳನ್ನು ನಾಶಮಾಡುವನು

11 ಎಷ್ಟೋ ಜನಾಂಗಗಳು ನಿನ್ನ ವಿರುದ್ಧ ಯುದ್ಧಕ್ಕೆ ಬಂದಿವೆ.
    “ಅಲ್ಲಿ ನೋಡಿ, ಚೀಯೋನ್, ಬನ್ನಿ ಆಕ್ರಮಣ ಮಾಡೋಣ” ಎಂದು ಹೇಳುವರು.

12 ಅವರು ತಮ್ಮ ಯೋಜನೆಯನ್ನು ಹಾಕುತ್ತಾರೆ.
    ಆದರೆ ಯೆಹೋವನ ಯೋಜನೆಯೇನೆಂದು ಅವರು ಅರಿಯರು.
ಯೆಹೋವನು ತನ್ನ ಜನರನ್ನು ಒಂದು ವಿಶೇಷ ಉದ್ದೇಶಕ್ಕಾಗಿ ಇಲ್ಲಿಗೆ ತಂದಿದ್ದಾನೆ.
    ಆ ಜನರು ಕಣಕ್ಕೆ ಹಾಕಿದ ಸಿವುಡುಗಳಂತೆ ನಜ್ಜುಗುಜ್ಜಾಗುವರು.

ಇಸ್ರೇಲ್ ಜಯಗೊಂಡು ಇತರ ಜನಾಂಗಗಳನ್ನು ನಾಶಮಾಡುವದು

13 “ಚೀಯೋನ್ ಕುಮಾರಿಯೇ ಎದ್ದೇಳು, ಆ ಜನರನ್ನು ಪುಡಿಮಾಡು!
    ನಾನು ನಿನ್ನನ್ನು ಬಲಶಾಲಿಯನ್ನಾಗಿ ಮಾಡುವೆನು.
ಕಬ್ಬಿಣದ ಕೊಂಬುಗಳಿರುವಂತೆ, ತಾಮ್ರದ ಗೊರಸುಗಳಿರುವಂತೆ ನಿನ್ನನ್ನು ಮಾಡುವೆನು.
    ಎಷ್ಟೋ ಜನರನ್ನು ನೀನು ತುಂಡುತುಂಡು ಮಾಡುವೆ.
ಅವರ ಐಶ್ವರ್ಯವನ್ನು ನೀನು ಯೆಹೋವನಿಗೆ ಕೊಡುವೆ.
    ಅವರ ನಿಕ್ಷೇಪಗಳನ್ನು ಇಡೀ ಭೂಮಿಗೆ ಒಡೆಯನಾಗಿರುವ ಯೆಹೋವನಿಗೆ ಅರ್ಪಿಸುವೆ.”

ಲೂಕ 13

ಹೃದಯ ಪರಿವರ್ತನೆ

13 ಅದೇ ಸಮಯದಲ್ಲಿ ಅಲ್ಲಿದ್ದ ಕೆಲವರು ಯೇಸುವಿನ ಬಳಿಗೆ ಬಂದು ಗಲಿಲಾಯದಲ್ಲಿ ಯಜ್ಞ ಅರ್ಪಿಸುತ್ತಿದ್ದವರನ್ನು ಪಿಲಾತನು[a] ಕೊಲ್ಲಿಸಿದ್ದನ್ನೂ ಅವರು ಯಜ್ಞವಾಗಿ ಅರ್ಪಿಸಿದ್ದ ಪಶುಗಳ ರಕ್ತದೊಡನೆ ಅವರ ರಕ್ತವನ್ನು ಬೆರಸಿದ್ದನ್ನೂ ಯೇಸುವಿಗೆ ತಿಳಿಸಿದರು. ಯೇಸು ಅವರಿಗೆ, “ಕೊಲೆಗೀಡಾದವರು ಗಲಿಲಾಯದ ಇತರರೆಲ್ಲರಿಗಿಂತ ಹೆಚ್ಚು ಪಾಪಿಗಳಾಗಿದ್ದರೆಂದು ಭಾವಿಸುತ್ತೀರೋ? ಇಲ್ಲ! ಅವರು ಅಂತಹ ಪಾಪಿಗಳಾಗಿರಲಿಲ್ಲ! ಆದರೆ ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ಅವರಂತೆಯೇ ನಾಶವಾಗುವಿರಿ! ಸಿಲೊವಾ ಎಂಬಲ್ಲಿ ಗೋಪುರ ಕುಸಿದು ಬಿದ್ದಾಗ, ಸತ್ತುಹೋದ ಹದಿನೆಂಟು ಮಂದಿಯ ಕುರಿತು ನಿಮ್ಮ ಅಭಿಪ್ರಾಯವೇನು? ಜೆರುಸಲೇಮಿನಲ್ಲಿ ವಾಸವಾಗಿದ್ದ ಇತರರೆಲ್ಲರಿಗಿಂತಲೂ ಅವರು ಹೆಚ್ಚು ಪಾಪಿಗಳಾಗಿದ್ದರೆಂದು ಭಾವಿಸುತ್ತೀರೋ? ಅವರು ಅಂತಹ ಪಾಪಿಗಳಾಗಿರಲಿಲ್ಲ! ಆದರೆ ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ಅವರಂತೆಯೇ ನಾಶವಾಗುವಿರಿ ಎಂದು ನಾನು ನಿಮಗೆ ಹೇಳುತ್ತೇನೆ!” ಎಂದು ಉತ್ತರಿಸಿದನು.

ಉಪಯೋಗವಿಲ್ಲದ ಮರ

ಯೇಸು ಈ ಸಾಮ್ಯವನ್ನು ಹೇಳಿದನು: “ಒಬ್ಬನು ತನ್ನ ತೋಟದಲ್ಲಿ ಒಂದು ಅಂಜೂರದ ಮರವನ್ನು ನೆಡಿಸಿದ್ದನು. ಒಮ್ಮೆ ಅವನು ಆ ಮರ ಹಣ್ಣು ಫಲಿಸಿರಬಹುದೆಂದು ಅಲ್ಲಿಗೆ ಬಂದನು. ಆದರೆ ಅವನು ಅದರಲ್ಲಿ ಒಂದು ಹಣ್ಣನ್ನೂ ಕಾಣಲಿಲ್ಲ. ಅವನು ತನ್ನ ತೋಟವನ್ನು ನೋಡಿಕೊಳ್ಳುವುದಕ್ಕಾಗಿ ಒಬ್ಬ ತೋಟಗಾರನನ್ನೂ ನೇಮಿಸಿದ್ದನು. ಅವನು ತನ್ನ ಆ ಸೇವಕನಿಗೆ, ‘ಈ ಮರವು ಹಣ್ಣು ಬಿಡಬಹುದೆಂದು ನಾನು ಮೂರು ವರ್ಷದಿಂದ ಕಾಯುತ್ತಿದ್ದೇನೆ. ಆದರೆ ಇದು ಹಣ್ಣನ್ನು ಬಿಡಲೇ ಇಲ್ಲ. ಇದನ್ನು ಕತ್ತರಿಸಿಹಾಕು! ಇದು ಭೂಮಿಯ ಸಾರವನ್ನೇಕೆ ವ್ಯರ್ಥಗೊಳಿಸಬೇಕು?’ ಎಂದು ಹೇಳಿದನು. ಆದರೆ ಆ ಸೇವಕನು, ‘ಯಜಮಾನನೇ, ಇನ್ನೊಂದು ವರ್ಷ ತಾಳಿಕೊ. ಅದು ಫಲವನ್ನು ಕೊಡಬಹುದು. ಅದರ ಸುತ್ತಲೂ ಅಗೆದು ಸ್ವಲ್ಪ ರಸಗೊಬ್ಬರವನ್ನು ಹಾಕುತ್ತೇನೆ. ಆಗ ಮುಂದಿನ ವರ್ಷ ಈ ಮರ ಫಲವನ್ನು ಕೊಡಬಹುದು. ಒಂದುವೇಳೆ ಇದು ಫಲವನ್ನು ಕೊಡದಿದ್ದರೆ ನೀನು ಇದನ್ನು ಕಡಿದುಹಾಕು’ ಎಂದು ಉತ್ತರಿಸಿದನು.”

ಯೇಸುವಿನಿಂದ ಗುಣಹೊಂದಿದ ಸ್ತ್ರೀ

10 ಒಂದು ಸಬ್ಬತ್‌ದಿನ ಯೇಸು ಸಭಾಮಂದಿರದಲ್ಲಿ ಉಪದೇಶಿಸಿದನು. 11 ದೆವ್ವದಿಂದ ಪೀಡಿತಳಾಗಿದ್ದ ಒಬ್ಬ ಸ್ತ್ರೀ ಅಲ್ಲಿದ್ದಳು. ಆ ದೆವ್ವದಿಂದಾಗಿ ಆಕೆಗೆ ಹದಿನೆಂಟು ವರ್ಷಗಳಿಂದ ನಡು ಬಗ್ಗಿಕೊಂಡಿತ್ತು. ನೆಟ್ಟಗೆ ನಿಂತುಕೊಳ್ಳಲು ಆಕೆಗೆ ಸಾಧ್ಯವಿರಲಿಲ್ಲ. 12 ಯೇಸು ಆಕೆಯನ್ನು ಕಂಡು, ತನ್ನ ಬಳಿಗೆ ಕರೆದು, “ಅಮ್ಮಾ, ನಿನ್ನ ಕಾಯಿಲೆ ನಿನ್ನನ್ನು ಬಿಟ್ಟುಹೋಗಿದೆ!” ಎಂದು ಹೇಳಿದನು. 13 ಯೇಸು ಆಕೆಯ ಮೇಲೆ ತನ್ನ ಕೈಗಳನ್ನಿಟ್ಟಾಗ ಆಕೆ ನೆಟ್ಟಗೆ ನಿಲ್ಲಲು ಶಕ್ತಳಾದಳು. ಆಕೆ ದೇವರನ್ನು ಕೊಂಡಾಡಿದಳು.

14 ಯೇಸು ಸಬ್ಬತ್‌ದಿನದಲ್ಲಿ ವಾಸಿಮಾಡಿದ್ದರಿಂದ ಸಭಾಮಂದಿರದ ಅಧಿಕಾರಿ ಕೋಪಗೊಂಡು ಜನರಿಗೆ, “ಕೆಲಸಕ್ಕಾಗಿ ವಾರದಲ್ಲಿ ಆರು ದಿನಗಳಿವೆ. ಆ ದಿನಗಳಲ್ಲಿ ಬಂದು ವಾಸಿಮಾಡಿಸಿಕೊಳ್ಳಿರಿ. ಸಬ್ಬತ್‌ದಿನದಲ್ಲಿ ವಾಸಿಮಾಡಿಸಿಕೊಳ್ಳಬಾರದು” ಎಂದು ಹೇಳಿದನು.

15 ಅದಕ್ಕೆ ಪ್ರಭುವು (ಯೇಸು), “ನೀವು ಕಪಟಿಗಳು! ನೀವೆಲ್ಲರೂ ನಿಮ್ಮ ದುಡಿಮೆಯ ಪಶುಗಳನ್ನು ಪ್ರತಿದಿನ ಬಿಚ್ಚಿ ನೀರು ಕುಡಿಸಲು ಕರೆದೊಯ್ಯುತೀರಿ. ಸಬ್ಬತ್‌ದಿನದಲ್ಲಿಯೂ ನೀವು ಹಾಗೆಯೇ ಮಾಡುತ್ತೀರಿ! 16 ನಾನು ವಾಸಿಮಾಡಿದ ಈ ಸ್ತ್ರೀಯಾದರೋ ಯೆಹೂದ್ಯಳು. ಸೈತಾನನು ಆಕೆಯನ್ನು ಹದಿನೆಂಟು ವರ್ಷಗಳಿಂದ ಕಟ್ಟಿಹಾಕಿದ್ದನು. ಆದ್ದರಿಂದ ಆಕೆಯನ್ನು ಸಬ್ಬತ್‌ದಿನದಂದು ಕಾಯಿಲೆಯಿಂದ ಬಿಡುಗಡೆ ಮಾಡುವುದು ಖಂಡಿತವಾಗಿಯೂ ತಪ್ಪಲ್ಲ!” ಎಂದು ಹೇಳಿದನು. 17 ಈ ಮಾತನ್ನು ಕೇಳಿದಾಗ, ಆತನನ್ನು ಟೀಕಿಸುತ್ತಿದ್ದ ಜನರೆಲ್ಲರಿಗೂ ತಮ್ಮ ಬಗ್ಗೆ ನಾಚಿಕೆಯಾಯಿತು. ಯೇಸು ಮಾಡುತ್ತಿದ್ದ ಅದ್ಭುತಕಾರ್ಯಗಳಿಗಾಗಿ ಜನರೆಲ್ಲರೂ ಸಂತೋಷಪಟ್ಟರು.

ದೇವರ ರಾಜ್ಯ ಯಾವುದಕ್ಕೆ ಹೋಲಿಕೆಯಾಗಿದೆ?

(ಮತ್ತಾಯ 13:31-33; ಮಾರ್ಕ 4:30-32)

18 ಬಳಿಕ ಯೇಸು, “ದೇವರ ರಾಜ್ಯ ಯಾವುದಕ್ಕೆ ಹೋಲಿಕೆಯಾಗಿದೆ? ಅದನ್ನು ನಾನು ಯಾವುದಕ್ಕೆ ಹೋಲಿಸಲಿ? 19 ದೇವರ ರಾಜ್ಯ ಸಾಸಿವೆಕಾಳಿನಂತಿದೆ. ಒಬ್ಬನು ತನ್ನ ತೋಟದಲ್ಲಿ ಈ ಬೀಜವನ್ನು ಹಾಕುತ್ತಾನೆ. ಅದು ಬೆಳೆದು ಮರವಾಗುತ್ತದೆ. ಪಕ್ಷಿಗಳು ಅದರ ಕೊಂಬೆಗಳಲ್ಲಿ ಗೂಡುಗಳನ್ನು ಕಟ್ಟಿಕೊಳ್ಳುತ್ತವೆ” ಎಂದು ಹೇಳಿದನು.

20 ಯೇಸು ಮತ್ತೆ ಹೀಗೆಂದನು: “ದೇವರ ರಾಜ್ಯವನ್ನು ನಾನು ಯಾವುದಕ್ಕೆ ಹೋಲಿಸಲಿ? 21 ಅದು, ಸ್ತ್ರೀಯೊಬ್ಬಳು ರೊಟ್ಟಿಮಾಡುವುದಕ್ಕಾಗಿ ದೊಡ್ಡ ಪಾತ್ರೆಯೊಂದರಲ್ಲಿರುವ ಹಿಟ್ಟಿಗೆ ಬೆರೆಸುವ ಹುಳಿಯಂತಿದೆ. ಆ ಹುಳಿಯು ನಾದಿದ ಹಿಟ್ಟನ್ನೆಲ್ಲ ಉಬ್ಬಿಸುತ್ತದೆ.”

ಕಿರಿದಾದ ಬಾಗಿಲು

(ಮತ್ತಾಯ 7:13-14,21-23)

22 ಯೇಸು ಪ್ರತಿಯೊಂದು ಊರಿನಲ್ಲಿಯೂ ಹಳ್ಳಿಯಲ್ಲಿಯೂ ಉಪದೇಶಿಸುತ್ತಾ ಜೆರುಸಲೇಮಿನ ಕಡೆಗೆ ಪ್ರಯಾಣ ಮಾಡಿದನು. 23 ಯಾರೋ ಒಬ್ಬನು ಯೇಸುವಿಗೆ, “ಸ್ವಾಮೀ, ಎಷ್ಟು ಜನರು ರಕ್ಷಿಸಲ್ಪಡುವರು? ಕೇವಲ ಸ್ವಲ್ಪ ಜನರೋ?” ಎಂದು ಕೇಳಿದನು.

ಅದಕ್ಕೆ ಯೇಸು, 24 “ಸ್ವರ್ಗಕ್ಕೆ ನಡೆಸುವ ಕಿರಿದಾದ ಬಾಗಿಲಿನ ಮೂಲಕ ಹೋಗಲು ಪ್ರಯಾಸಪಡಿರಿ! ಅನೇಕ ಜನರು ಅದರ ಮೂಲಕ ಹೋಗಲು ಪ್ರಯತ್ನಿಸುತ್ತಾರೆ. ಆದರೆ ಅವರಿಂದ ಆಗುವುದಿಲ್ಲ. 25 ಮನೆಯ ಯಜಮಾನನು ಎದ್ದು ಬಾಗಿಲನ್ನು ಮುಚ್ಚಿದ ಮೇಲೆ ನೀವು ಹೊರಗೆ ನಿಂತುಕೊಂಡು ಬಾಗಿಲು ತಟ್ಟಬೇಕಷ್ಟೇ, ಆದರೂ ಅವನು ತೆರೆಯುವುದಿಲ್ಲ. ‘ಸ್ವಾಮೀ, ನಮಗೆ ಬಾಗಿಲು ತೆರೆ!’ ಎಂದು ನೀವು ಕೇಳುವಿರಿ. ಅವನು ನಿಮಗೆ, ‘ನೀವು ಯಾರೋ ನನಗೆ ತಿಳಿಯದು. ನೀವು ಎಲ್ಲಿಯವರು?’ ಎಂದು ಉತ್ತರಿಸುವನು. 26 ಆಗ ನೀವು, ‘ನಾವು ನಿನ್ನೊಡನೆ ಊಟಮಾಡಿದೆವು, ಪಾನಮಾಡಿದೆವು. ನೀನು ನಮ್ಮ ಬೀದಿಗಳಲ್ಲಿ ನಮಗೆ ಉಪದೇಶಿಸಿದೆ’ ಎಂದು ಹೇಳುವಿರಿ. 27 ಆಗ ಅವನು ನಿಮಗೆ, ‘ನೀವು ಯಾರೋ ನನಗೆ ಗೊತ್ತಿಲ್ಲ! ನೀವು ಎಲ್ಲಿಯವರು? ಇಲ್ಲಿಂದ ಹೊರಟುಹೋಗಿ! ನೀವೆಲ್ಲರೂ ಪಾಪಕೃತ್ಯಗಳನ್ನು ಮಾಡುವ ಜನರು!’ ಎಂದು ನಿಮಗೆ ಹೇಳುವನು.

28 “ಅಬ್ರಹಾಮ, ಇಸಾಕ, ಯಾಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ರಾಜ್ಯದಲ್ಲಿರುವುದನ್ನು ನೀವು ನೋಡುವಿರಿ. ಆದರೆ ನಿಮ್ಮನ್ನು ಹೊರಗೆ ಹಾಕಲಾಗುವುದು. ಆಗ ನೀವು ಭಯದಿಂದಲೂ ಕೋಪದಿಂದಲೂ ಕೂಗಿಕೊಳ್ಳುವಿರಿ. 29 ಜನರು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣದಿಕ್ಕುಗಳಿಂದ ಬರುವರು. ಅವರು ದೇವರ ರಾಜ್ಯದಲ್ಲಿ ಊಟಕ್ಕೆ ಕುಳಿತುಕೊಳ್ಳುವರು. 30 ಇಗೋ, ಕಡೆಯವರಾಗಿರುವ ಕೆಲವರು ಮೊದಲಿನವರಾಗುವರು, ಮೊದಲಿನವರಾಗಿರುವ ಕೆಲವರು ಕಡೆಯವರಾಗುವರು.”

ಜೆರುಸಲೇಮಿನಲ್ಲಿ ಯೇಸುವಿನ ಮರಣ

(ಮತ್ತಾಯ 23:37-39)

31 ಆ ಸಮಯದಲ್ಲಿ ಕೆಲವು ಫರಿಸಾಯರು ಯೇಸುವಿನ ಬಳಿಗೆ ಬಂದು, “ಇಲ್ಲಿಂದ ಹೋಗಿ ಅಡಗಿಕೊ! ಹೆರೋದನು ನಿನ್ನನ್ನು ಕೊಲ್ಲಬೇಕೆಂದಿದ್ದಾನೆ!” ಎಂದು ಹೇಳಿದರು.

32 ಯೇಸು ಅವರಿಗೆ, “ನೀವು ಹೋಗಿ ಆ ನರಿಗೆ (ಹೆರೋದನಿಗೆ), ‘ಈ ದಿನ ಮತ್ತು ನಾಳೆ ನಾನು ಜನರನ್ನು ದೆವ್ವಗಳಿಂದ ಬಿಡಿಸುತ್ತೇನೆ ಮತ್ತು ರೋಗಿಗಳನ್ನು ಗುಣಪಡಿಸುವ ಕಾರ್ಯವನ್ನು ಪೂರ್ಣಗೊಳಿಸುತ್ತೇನೆ. ನಾಳಿದ್ದು, ನನ್ನ ಕಾರ್ಯವೆಲ್ಲಾ ಸಂಪೂರ್ಣ ಮುಕ್ತಾಯವಾಗುವುದು’ ಎಂದು ಹೇಳಿರಿ. 33 ಅನಂತರ ನಾನು ಜೆರುಸಲೇಮಿಗೆ ಹೋಗಬೇಕು. ಏಕೆಂದರೆ ಪ್ರವಾದಿಗಳು ಅಲ್ಲೇ ಕೊಲ್ಲಲ್ಪಡತಕ್ಕದ್ದು.

34 “ಜೆರುಸಲೇಮೇ, ಜೆರುಸಲೇಮೇ! ನೀನು ಪ್ರವಾದಿಗಳನ್ನು ಕೊಲ್ಲುವವಳು. ದೇವರು ನಿನ್ನ ಬಳಿಗೆ ಕಳುಹಿಸಿದ ಜನರನ್ನು ನೀನು ಕಲ್ಲೆಸೆದು ಕೊಲ್ಲುವೆ. ಕೋಳಿ ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಾನು ನಿನ್ನ ಜನರಿಗೆ ಸಹಾಯ ಮಾಡಲು ಎಷ್ಟೋ ಸಲ ಅಪೇಕ್ಷಿಸಿದೆ. ಆದರೆ ನೀನು ನನಗೆ ಆಸ್ಪದವನ್ನು ಕೊಡಲಿಲ್ಲ. 35 ನಿನ್ನ ಆಲಯವು ಬರಿದಾಗುವುದು. ‘ಪ್ರಭುವಿನ ಹೆಸರಿನಲ್ಲಿ ಬರುವಾತನಿಗೆ ಆಶೀರ್ವಾದ!’(A) ಎಂದು ಹೇಳುವ ಸಮಯದ ತನಕ ನೀನು ನನ್ನನ್ನು ನೋಡುವುದೇ ಇಲ್ಲವೆಂದು ನಾನು ನಿನಗೆ ಹೇಳುತ್ತೇನೆ” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International