Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
1 ಪೂರ್ವಕಾಲವೃತ್ತಾಂತ 24-25

ಯಾಜಕರ ವರ್ಗಗಳು

24 ಆರೋನನ ಸಂತಾನದವರು ವರ್ಗಗಳಾಗಿ ವಿಭಾಗಿಸಲ್ಪಟ್ಟರು. ಆರೋನನ ಗಂಡುಮಕ್ಕಳು: ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್. ನಾದಾಬ್ ಮತ್ತು ಅಬೀಹೂ ತಮ್ಮ ತಂದೆ ಸಾಯುವ ಮೊದಲೇ ತೀರಿಹೋದರು. ಅವರಿಗೆ ಮಕ್ಕಳಿರಲಿಲ್ಲ. ಅವರ ಬದಲಿಗೆ ಎಲ್ಲಾಜಾರ್ ಮತ್ತು ಈತಾಮಾರ್ ಯಾಜಕರಾಗಿ ಸೇವೆಮಾಡಿದರು. ಎಲ್ಲಾಜಾರ್ ಮತ್ತು ಈತಾಮಾರ್ ಕುಲದ ಯಾಜಕರನ್ನು ದಾವೀದನು ಪ್ರತ್ಯೇಕಿಸಿ ಚಾದೋಕ್ ಮತ್ತು ಅಹೀಮೆಲೆಕ್ ಯಾಜಕರ ಸಹಾಯದಿಂದ ಎರಡು ವರ್ಗಗಳನ್ನಾಗಿ ಮಾಡಿದನು. ಚಾದೋಕನು ಎಲ್ಲಾಜಾರನ ವಂಶದವನಾಗಿದ್ದನು ಮತ್ತು ಅಹೀಮೆಲೆಕನು ಈತಾಮಾರನ ವಂಶದವನಾಗಿದ್ದನು. ಈತಾಮಾರನ ಸಂತತಿಗಿಂತಲೂ ಎಲ್ಲಾಜಾರನ ಸಂತತಿಯವರಲ್ಲಿ ಹೆಚ್ಚು ಮಂದಿ ನಾಯಕರಿದ್ದರು. ಎಲ್ಲಾಜಾರನ ಸಂತತಿಯವರಲ್ಲಿ ಹದಿನಾರು ಮಂದಿ ಮತ್ತು ಈತಾಮಾರನ ಸಂತತಿಯವರಲ್ಲಿ ಎಂಟು ಮಂದಿ ನಾಯಕರಿದ್ದರು. ಪ್ರತಿಯೊಂದು ಕುಲದಿಂದ ಚೀಟುಹಾಕುವುದರ ಮೂಲಕ ಜನರನ್ನು ಆರಿಸಿಕೊಳ್ಳಲಾಯಿತು. ಕೆಲವರನ್ನು ಪವಿತ್ರ ಸ್ಥಳದ ಸೇವೆಗಾಗಿ ಆರಿಸಿಕೊಳ್ಳಲಾಯಿತು; ಇನ್ನು ಕೆಲವರನ್ನು ಯಾಜಕರಾಗಿ ಸೇವೆಮಾಡಲು ಆರಿಸಿಕೊಳ್ಳಲಾಯಿತು; ಇವರೆಲ್ಲರೂ ಎಲ್ಲಾಜಾರ್ ಮತ್ತು ಈತಾಮಾರನ ಕುಲದವರಾಗಿದ್ದರು.

ನೆತನೇಲನ ಮಗನಾದ ಶೆಮಾಯನು ಲೇಖಕನಾಗಿದ್ದನು. ಶೆಮಾಯನು ಲೇವಿ ಸಂತತಿಗೆ ಸೇರಿದವನಾಗಿದ್ದನು. ಇವನು ವಂಶಾವಳಿಯನ್ನು ಬರೆದಿಡುತ್ತಿದ್ದನು. ಅರಸನಾದ ದಾವೀದನ ಮತ್ತು ಯಾಜಕರಾದ ಚಾದೋಕನ, ಅಹೀಮೆಲೆಕನ ಮತ್ತು ಲೇವಿಯರ ನಾಯಕರ ಎದುರಿನಲ್ಲಿ ಸಂತತಿಯವರನ್ನು ಬರೆದನು. ಪ್ರತಿಸಲ ಚೀಟುಹಾಕಿ ಒಬ್ಬನನ್ನು ಒಂದು ಕೆಲಸಕ್ಕೆ ಆರಿಸಿದಾಗ ಅವನ ಹೆಸರನ್ನು ವಂಶಾವಳಿಯಲ್ಲಿ ಬರೆದನು. ಹೀಗೆ ಒಬ್ಬೊಬ್ಬನು ಯಾವಯಾವ ಕೆಲಸಗಳನ್ನು ಮಾಡಬೇಕೆಂದು ಎಲ್ಲರಿಗೂ ಗೊತ್ತುಪಡಿಸಿದರು. ಈ ರೀತಿಯಾಗಿ ಎಲ್ಲಾಜಾರ್ ಮತ್ತು ಈತಾಮಾರ್ ಕುಟುಂಬದವರಿಗೆ ಯಾಜಕೋದ್ಯೋಗವನ್ನು ಮಾಡುವಂತೆ ವರ್ಗಗಳಾಗಿ ಪ್ರತ್ಯೇಕಿಸಿ ಕೆಲಸಗಳನ್ನು ನೇಮಿಸಿದರು.

ಮೊದಲನೆಯ ವರ್ಗ ಯೆಹೋಯಾರೀಬನದು.

ಎರಡನೆಯ ವರ್ಗ ಯೆದಾಯನದು.

ಮೂರನೆಯ ವರ್ಗ ಹಾರೀಮನದು.

ನಾಲ್ಕನೆಯ ವರ್ಗ ಸೆಯೋರೀಮನದು.

ಐದನೆಯ ವರ್ಗ ಮಲ್ಕೀಯನದು.

ಆರನೆಯ ವರ್ಗ ಮಿಯ್ಯಾಮೀನನದು.

10 ಏಳನೆಯ ವರ್ಗ ಹಕ್ಕೋಚನದು.

ಎಂಟನೆಯ ವರ್ಗ ಅಬೀಯನದು.

11 ಒಂಭತ್ತನೆಯ ವರ್ಗ ಯೆಷೂವನದು.

ಹತ್ತನೆಯ ವರ್ಗ ಶೆಕನ್ಯನದು.

12 ಹನ್ನೊಂದನೆಯ ವರ್ಗ ಎಲ್ಯಾಷೀಬನದು.

ಹನ್ನೆರಡನೆಯ ವರ್ಗ ಯಾಕೀಮನದು.

13 ಹದಿಮೂರನೆಯ ವರ್ಗ ಹುಪ್ಪನದು.

ಹದಿನಾಲ್ಕನೆಯ ವರ್ಗ ಎಷೆಬಾಬನದು.

14 ಹದಿನೈದನೆಯ ವರ್ಗ ಬಿಲ್ಗನದು.

ಹದಿನಾರನೆಯ ವರ್ಗ ಇಮ್ಮೇರನದು.

15 ಹದಿನೇಳನೆಯ ವರ್ಗ ಹೇಜೀರನದು.

ಹದಿನೆಂಟನೆಯ ವರ್ಗ ಹಪ್ಪಿಚ್ಚೇಚನದು.

16 ಹತ್ತೊಂಭತ್ತನೆಯ ವರ್ಗ ಪೆತಹ್ಯನದು.

ಇಪ್ಪತ್ತನೆಯ ವರ್ಗ ಯೆಹೆಜ್ಕೇಲನದು.

17 ಇಪ್ಪತ್ತೊಂದನೆಯ ವರ್ಗ ಯಾಕೀನನದು.

ಇಪ್ಪತ್ತೆರಡನೆಯ ವರ್ಗ ಗಾಮೂಲನದು.

18 ಇಪ್ಪತ್ತಮೂರನೆಯ ವರ್ಗ ದೆಲಾಯನದು.

ಇಪ್ಪತ್ತನಾಲ್ಕನೆಯ ವರ್ಗ ಮಾಜ್ಯನದು.

19 ಈ ವರ್ಗದವರನ್ನು ಕ್ರಮವಾಗಿ ದೇವಾಲಯದಲ್ಲಿ ಸೇವೆಮಾಡಲು ಆರಿಸಲಾಯಿತು. ಇವರು ಆರೋನನ ಆರಾಧನಾ ಪದ್ದತಿಯನ್ನು ಅನುಸರಿಸಿದರು. ಇಸ್ರೇಲರ ದೇವರಾದ ಯೆಹೋವನು ಆರಾಧನಾ ಕ್ರಮಗಳನ್ನು ಆರೋನನಿಗೆ ತಿಳಿಸಿದ್ದನು.

ಇತರ ಲೇವಿಯರು

20 ಲೇವಿಕುಲದ ಇತರ ಸಂತತಿಯವರು:

ಅಮ್ರಾಮನ ಸಂತತಿಯ ಶೂಬಾಯೇಲ.

ಶೂಬಾಯೇಲನ ಸಂತತಿಯ ಯೆಹ್ದೆಯಾಹ.

21 ರೆಹಬ್ಯನ ಸಂತತಿಯ ಇಷ್ಷೀಯ. (ಇಷ್ಷೀಯನು ಚೊಚ್ಚಲಮಗನು.)

22 ಇಚ್ಹಾರನ ಸಂತತಿಯ ಶೆಲೋಮೋತ್. ಶೆಲೋಮೋತನ ಕುಟುಂಬದ ಯಹತ.

23 ಹೆಬ್ರೋನನ ಗಂಡುಮಕ್ಕಳು: ಮೊದಲನೆಯವನು ಯೆರೀಯ;

ಎರಡನೆಯ ಮಗ ಅಮರ್ಯ;

ಮೂರನೆಯ ಮಗ ಯಹಜೀಯೇಲನು;

ನಾಲ್ಕನೆಯ ಮಗ ಯೆಕಮ್ಮಾಮ.

24 ಉಜ್ಜೀಯೇಲನ ಮಗನು ಮೀಕ.

ಮೀಕನ ಮಗ ಶಾಮೀರ್.

25 ಇಷ್ಷೀಯನು ಮೀಕನ ಸೋದರ.

ಇಷ್ಷೀಯನ ಮಗ ಜೆಕರ್ಯ.

26 ಮೆರಾರೀಯ ಸಂತತಿಯ ಮಹ್ಲೀ,

ಮೂಷೀ ಮತ್ತು ಯಾಜ್ಯ.

27 ಯಾಜ್ಯನ ಗಂಡುಮಕ್ಕಳಾದ ಬೆನೋ,

ಶೋಹಮ್, ಜಕ್ಕೂರ್ ಮತ್ತು ಇಬ್ರೀ.

28 ಮಹ್ಲೀಯ ಮಗ ಎಲ್ಲಾಜಾರ್.

ಎಲ್ಲಾಜಾರನಿಗೆ ಗಂಡುಮಕ್ಕಳಿರಲಿಲ್ಲ.

29 ಕೀಷನ ಮಗನಾದ ಯೆರಹ್ಮೇಲ.

30 ಮೂಷೀಯ ಗಂಡುಮಕ್ಕಳಾದ ಮಹ್ಲೀ,

ಏದೆರ್ ಮತ್ತು ಯೆರೀಮೋತ್.

ಇವರೆಲ್ಲರು ಲೇವಿಕುಲದವರ ನಾಯಕರುಗಳು. ಇವರನ್ನು ಆಯಾ ಗೋತ್ರಗಳಿಗನುಸಾರವಾಗಿ ಪಟ್ಟಿ ಮಾಡಲಾಯಿತು. 31 ಇವರನ್ನು ವಿಶಿಷ್ಟಕಾರ್ಯಗಳಿಗಾಗಿ ಚೀಟುಹಾಕಿ ಆರಿಸಲಾಯಿತು. ಆರೋನನ ಸಂತತಿಯವರೂ ಯಾಜಕರೂ ಆಗಿದ್ದ ತಮ್ಮ ಸಂಬಂಧಿಕರು ಮಾಡಿದಂತೆಯೇ ಚೀಟುಹಾಕಿ ವಿಶಿಷ್ಟ ಕಾರ್ಯಗಳಿಗಾಗಿ ಇವರನ್ನು ಆರಿಸಿಕೊಳ್ಳಲಾಯಿತು. ರಾಜನಾದ ದಾವೀದನ, ಚಾದೋಕನ, ಅಹೀಮೆಲೆಕನ ಮತ್ತು ಲೇವಿಕುಲದ ನಾಯಕರ ಎದುರಿಗೆ ಚೀಟುಹಾಕಿದರು. ಹಿರಿಯ ಅಥವಾ ಕಿರಿಯ ಕುಟುಂಬಗಳೆನ್ನದೆ ಎಲ್ಲರಿಗೂ ಸಮಾನವಾಗಿ ಕೆಲಸಗಳನ್ನು ಹಂಚಿದರು.

ಗಾಯಕವೃಂದ

25 ದಾವೀದನೂ ಸೇನಾಪತಿಗಳೂ ಆಸಾಫನ ಸಂತತಿಯವರನ್ನು ವಿಶೇಷವಾದ ಸೇವೆಗೆ ಪ್ರತ್ಯೇಕಿಸಿದರು. ಆಸಾಫನ ಗಂಡುಮಕ್ಕಳು ಹೇಮಾನ್ ಮತ್ತು ಯೆದುತೂನ್. ಹಾರ್ಪ್ ವಾದ್ಯಗಳನ್ನು, ಲೈರ್ ವಾದ್ಯಗಳನ್ನು ಮತ್ತು ತಾಳಗಳನ್ನು ಬಾರಿಸುತ್ತಾ ದೇವರ ಸಂದೇಶವನ್ನು ಪ್ರವಾದಿಸುವುದೇ ಇವರ ಸೇವೆಯಾಗಿತ್ತು. ಈ ರೀತಿಯಾಗಿ ದೇವರ ಸೇವೆಯನ್ನು ಮಾಡಿದವರು ಯಾರೆಂದರೆ:

ಆಸಾಫನ ಸಂತತಿಯಲ್ಲಿ: ಜಕ್ಕೂರ್, ಯೋಸೇಫ್, ನೆತನ್ಯ ಮತ್ತು ಅಶರೇಲ, ಅರಸನಾದ ದಾವೀದನು ಆಸಾಫನನ್ನು ಪ್ರವಾದಿಸುವುದಕ್ಕಾಗಿ ಆರಿಸಿಕೊಂಡನು. ಆಸಾಫನು ತನ್ನ ಮಕ್ಕಳಿಗೂ ಮಾರ್ಗದರ್ಶನ ನೀಡಿದನು.

ಯೆದುತೂನನ ಸಂತತಿಯವರಲ್ಲಿ: ಗೆದಲ್ಯ, ಜೇರಿ, ಯೆಶಾಯ, ಶಿಮ್ಮೀ, ಹಷಬ್ಯ ಮತ್ತು ಮತ್ತಿತ್ಯ. ಒಟ್ಟು ಅವನ ಆರು ಮಂದಿ ಮಕ್ಕಳು ತಮ್ಮ ತಂದೆಯಾದ ಯೆದುತೂನನೊಂದಿಗೆ ಹಾರ್ಪ್ ವಾದ್ಯಗಳನ್ನು ಬಾರಿಸಿ ದೇವರ ಸಂದೇಶವನ್ನು ತಿಳಿಸಿದರು ಮತ್ತು ದೇವರಿಗೆ ಕೃತಜ್ಞತಾಸ್ತುತಿಯನ್ನು ಅರ್ಪಿಸಿದರು.

ಹೇಮಾನನ ಸಂತತಿಯವರಲ್ಲಿ ಗಾಯನವೃಂದದಲ್ಲಿ ಸೇವೆ ಮಾಡಿದವರು ಯಾರೆಂದರೆ: ಬುಕ್ಕೀಯ, ಮತ್ತನ್ಯ, ಉಜ್ಜೀಯೇಲ್, ಶೂಬಾಯೇಲ್ ಮತ್ತು ಯೆರೀಮೋತ; ಹನನ್ಯ, ಹನಾನೀ, ಎಲೀಯಾತ, ಗಿದ್ದಲ್ತಿ ಮತ್ತು ರೋಮಮ್ತಿ ಯೆಜೆರ್; ಯೊಷ್ಬೆಕಾಷ, ಮಲ್ಲೋತೀ, ಹೋತೀರ್ ಮತ್ತು ಮಹಜೀಯೋತ್. ಇವರೆಲ್ಲರೂ ಹೇಮಾನನ ಮಕ್ಕಳು. ಹೇಮಾನನು ದಾವೀದನ ಪ್ರವಾದಿಯಾಗಿದ್ದನು. ಅವನನ್ನು ಬಲಿಷ್ಠನನ್ನಾಗಿ ಮಾಡುವುದಾಗಿ ದೇವರು ವಾಗ್ದಾನ ಮಾಡಿದ್ದನು. ಆದ್ದರಿಂದ ಅವನಿಗೆ ಹದಿನಾಲ್ಕು ಮಂದಿ ಗಂಡುಮಕ್ಕಳೂ ಮೂವರು ಹೆಣ್ಣುಮಕ್ಕಳೂ ಹುಟ್ಟಿದರು.

ಹೇಮಾನನು ತನ್ನ ಮಕ್ಕಳೆಲ್ಲರನ್ನು ದೇವಾಲಯದಲ್ಲಿ ಹಾಡುವದಕ್ಕಾಗಿ ಬಳಸಿಕೊಂಡನು. ಅವರು ಹಾರ್ಪ್ ಮತ್ತು ಲೈರ್ ವಾದ್ಯಗಳನ್ನೂ ತಾಳಗಳನ್ನೂ ಬಾರಿಸಿದರು. ಹೀಗೆ ದೇವಾಲಯದಲ್ಲಿ ಸೇವೆಮಾಡುವುದಕ್ಕಾಗಿ ಅರಸನಾದ ದಾವೀದನು ಅವರನ್ನು ಆರಿಸಿಕೊಂಡನು. ಅವರೂ ಅವರ ಸಂಬಂಧಿಕರೂ ಹಾಡುಗಳನ್ನು ಹಾಡಲು ತರಬೇತಿ ಹೊಂದಿದವರಾಗಿದ್ದರು. ಒಟ್ಟು ಇನ್ನೂರ ಎಂಭತ್ತೆಂಟು ಮಂದಿ ಗಾಯಕರು ದೇವರಿಗೆ ಸ್ತುತಿಗೀತೆ ಹಾಡಲು ತರಬೇತಿ ಹೊಂದಿದವರಾಗಿದ್ದರು. ಪ್ರತಿಯೊಬ್ಬರಿಗೂ ಕೆಲಸಗಳನ್ನು ಗೊತ್ತುಪಡಿಸಲು ಚೀಟುಹಾಕಿ ನೇಮಕ ಮಾಡಿದರು. ಅವರು ಯಾವ ಪಕ್ಷಪಾತವನ್ನೂ ಮಾಡಲಿಲ್ಲ. ದೊಡ್ಡವರು, ಚಿಕ್ಕವರು, ಉಪಾಧ್ಯಾಯರು, ವಿದ್ಯಾರ್ಥಿಗಳು ಎಂಬ ಬೇಧಭಾವವಿಲ್ಲದೆ ಆರಿಸಲ್ಪಟ್ಟರು.

ಮೊದಲನೆಯದಾಗಿ, ಆಸಾಫ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

ಎರಡನೆಯದಾಗಿ, ಗೆದಲ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

10 ಮೂರನೆಯದಾಗಿ, ಜಕ್ಕೂರನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

11 ನಾಲ್ಕನೆಯದಾಗಿ, ಇಚ್ರೀಯ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

12 ಐದನೆಯದಾಗಿ, ನೆತನ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

13 ಆರನೆಯದಾಗಿ, ಬುಕ್ಕೀಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

14 ಏಳನೆಯದಾಗಿ, ಯೆಸರೇಲನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

15 ಎಂಟನೆಯದಾಗಿ, ಯೆಶಾಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

16 ಒಂಭತ್ತನೆಯದಾಗಿ, ಮತ್ತನ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

17 ಹತ್ತನೆಯದಾಗಿ, ಶಿಮ್ಮೀಯನ ಗಂಡುಮಕ್ಕಳಲ್ಲಿ ಮತ್ತು ಅವನ ಸಂಬಂಧಿಕರಲ್ಲಿ ಹನ್ನೆರಡು ಮಂದಿ.

18 ಹನ್ನೊಂದನೆಯದಾಗಿ, ಅಜರೇಲನ ಗಂಡುಮಕ್ಕಳಲ್ಲಿ ಮತ್ತು ಅವನ ಸಂಬಂಧಿಕರಲ್ಲಿ ಹನ್ನೆರಡು ಮಂದಿ.

19 ಹನ್ನೆರಡನೆಯದಾಗಿ, ಹಷಬ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

20 ಹದಿಮೂರನೆಯದಾಗಿ, ಶೂಬಾಯೇಲನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

21 ಹದಿನಾಲ್ಕನೆಯದಾಗಿ, ಮತ್ತಿತ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

22 ಹದಿನೈದನೆಯದಾಗಿ, ಯೆರೆಮೋತನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

23 ಹದಿನಾರನೆಯದಾಗಿ, ಹನನ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

24 ಹದಿನೇಳನೆಯದಾಗಿ, ಯೊಷ್ಬೆಕಾಷನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

25 ಹದಿನೆಂಟನೆಯದಾಗಿ, ಹನಾನೀಯ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

26 ಹತ್ತೊಂಭತ್ತನೆಯದಾಗಿ, ಮಲ್ಲೋತಿಯ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

27 ಇಪ್ಪತ್ತನೆಯದಾಗಿ, ಎಲೀಯಾತನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

28 ಇಪ್ಪತ್ತೊಂದನೆಯದಾಗಿ, ಹೋತೀರನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

29 ಇಪ್ಪತ್ತೆರಡನೆಯದಾಗಿ, ಗಿದ್ದಲ್ತಿಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

30 ಇಪ್ಪತ್ತಮೂರನೆಯದಾಗಿ, ಮಹಜೀಯೋತನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

31 ಇಪ್ಪತ್ತನಾಲ್ಕನೆಯದಾಗಿ, ರೋಮಮ್ತಿಯೆಜೆರನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

1 ಪೇತ್ರನು 5

ದೇವರ ಮಂದೆ

ನಿಮ್ಮ ಸಭಾಹಿರಿಯರಿಗೆ ನಾನು ಈಗ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ನಾನೂ ಒಬ್ಬ ಹಿರಿಯನಾಗಿದ್ದೇನೆ. ನಾನು ಕ್ರಿಸ್ತನ ಬಾಧೆಗಳನ್ನು ಕಣ್ಣಾರೆ ನೋಡಿದ್ದೇನೆ. ನಮಗೆ ಪ್ರತ್ಯಕ್ಷವಾಗುವ ಪ್ರಭಾವದಲ್ಲಿ ನಾನೂ ಪಾಲುಗಾರನಾಗಿದ್ದೇನೆ. ನೀವು ಜವಾಬ್ದಾರಿ ವಹಿಸಿಕೊಂಡಿರುವ ಸಭೆಯನ್ನು ಪರಿಪಾಲಿಸಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಅವರು ದೇವರ ಮಂದೆ. ನೀವು ಆ ಮಂದೆಯನ್ನು ಕಾಯಿರಿ, ಏಕೆಂದರೆ ಅದು ನಿಮ್ಮ ಬಯಕೆಯಾಗಿದೆ; ಅದು ಬಲವಂತದಿಂದ ಹೊರಿಸಿದ ಹೊರೆಯಲ್ಲ. ದೇವರು ಅದನ್ನೇ ಇಷ್ಟಪಡುತ್ತಾನೆ. ನೀವು ಆ ಮಂದೆಯನ್ನು ಕಾಯುವುದು ಹಣದ ನಿಮಿತ್ತವಲ್ಲ, ದೇವರ ಸೇವೆ ಮಾಡಲು ನಿಮಗಿರುವ ಸಂತಸದ ನಿಮಿತ್ತವಾಗಿಯೇ. ನೀವು ಜವಾಬ್ದಾರರಾಗಿರುವ ಆ ಮಂದೆಯ ಮೇಲೆ ದಬ್ಬಾಳಿಕೆ ಮಾಡಬೇಡಿ. ನೀವು ಅವರಿಗೆ ಉತ್ತಮ ಮಾದರಿಯಾಗಿರಿ. ಪ್ರಧಾನ ಕುರುಬನು (ಕ್ರಿಸ್ತನು) ಪ್ರತ್ಯಕ್ಷನಾದಾಗ, ನಿಮಗೆ ಕಿರೀಟವು ಲಭಿಸುವುದು. ಮಹಾ ಪ್ರಭಾವವನ್ನು ಹೊಂದಿರುವ ಆ ಕಿರೀಟವು ತನ್ನ ಸೌಂದರ್ಯವನ್ನು ಕಳೆದುಕೊಳ್ಳುವುದೇ ಇಲ್ಲ.

ಯುವಕರೇ, ನಾನು ನಿಮಗೂ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ನೀವು ಹಿರಿಯರಿಗೆ ಅಧೀನರಾಗಿರಬೇಕು. ನೀವೆಲ್ಲರೂ ಒಬ್ಬರಿಗೊಬ್ಬರು ನಮ್ರತೆಯಿಂದ ನಡೆದುಕೊಳ್ಳಬೇಕು.

“ದೇವರು ಅಹಂಕಾರಿಗಳಿಗೆ ವಿರುದ್ಧನಾಗಿದ್ದಾನೆ.
    ಆದರೆ ಆತನು ನಮ್ರತೆಯಿಂದ ಇರುವ ಜನರಿಗೆ ಕೃಪೆಯನ್ನು ದಯಪಾಲಿಸುವನು.”(A)

ಆದ್ದರಿಂದ ದೇವರ ಶಕ್ತಿಯುತವಾದ ಹಸ್ತದ ಕೆಳಗೆ ನಮ್ರತೆಯಿಂದಿರಿ. ಯೋಗ್ಯಕಾಲವು ಸಮೀಪಿಸಿದಾಗ ಆತನು ನಿಮ್ಮನ್ನು ಮೇಲೆತ್ತುವನು. ಆತನು ನಿಮ್ಮನ್ನು ಪರಿಪಾಲಿಸುವುದರಿಂದ ನಿಮ್ಮ ಚಿಂತೆಗಳನ್ನೆಲ್ಲಾ ಆತನಿಗೆ ಒಪ್ಪಿಸಿರಿ.

ಸ್ವಸ್ಥಚಿತ್ತರಾಗಿರಿ ಮತ್ತು ಎಚ್ಚರವಾಗಿರಿ! ಸೈತಾನನು ನಿಮ್ಮ ಶತ್ರು. ಗರ್ಜಿಸುವ ಸಿಂಹವು ಯಾರನ್ನು ತಿನ್ನಲಿ ಎಂದು ಹುಡುಕುತ್ತಿರುವಂತೆ ಅವನು ಮನುಷ್ಯನನ್ನು ಹುಡುಕುತ್ತಿದ್ದಾನೆ. ನಿಮ್ಮ ನಂಬಿಕೆಯಲ್ಲಿ ಸ್ಥಿರವಾಗಿದ್ದು ಅವನನ್ನು ಎದುರಿಸಿರಿ. ಯಾಕೆಂದರೆ ಲೋಕದಲ್ಲಿರುವ ನಿಮ್ಮ ಸಹೋದರ ಸಹೋದರಿಯರೆಲ್ಲರೂ ನಿಮಗಿರುವಂಥ ಬಾಧೆಗಳನ್ನು ಅನುಭವಿಸುತ್ತಿದ್ದಾರೆಂಬುದು ನಿಮಗೆ ತಿಳಿದಿದೆ.

10 ಹೌದು, ನೀವು ಸ್ವಲ್ಪಕಾಲ ಮಾತ್ರ ಸಂಕಟವನ್ನು ಅನುಭವಿಸುವಿರಿ. ಆದರೆ ಅನಂತರ ದೇವರು ಎಲ್ಲವನ್ನು ಸರಿಪಡಿಸುತ್ತಾನೆ. ಆತನು ನಿಮ್ಮನ್ನು ಬಲಪಡಿಸುತ್ತಾನೆ. ನೀವು ಕೆಳಕ್ಕೆ ಬೀಳದಂತೆ ಆತನು ನಿಮಗೆ ಆಧಾರವಾಗುವನು. ಎಲ್ಲರಿಗೂ ಕೃಪೆಯನ್ನು ತೋರುವ ದೇವರು ಆತನೇ. ತನ್ನ ಪ್ರಭಾವದಲ್ಲಿ ಪಾಲುಗಾರರಾಗಲು ಕ್ರಿಸ್ತನೇ ನಿಮ್ಮನ್ನು ಕರೆದನು. ಆ ಪ್ರಭಾವವು ಶಾಶ್ವತವಾದದ್ದು. 11 ಸರ್ವಾಧಿಪತ್ಯವು ಎಂದೆಂದಿಗೂ ಆತನದೇ. ಆಮೆನ್.

ಅಂತಿಮ ಶುಭಾಶಯಗಳು

12 ನಾನು ಈ ಕಿರುಪತ್ರವನ್ನು ಸಿಲ್ವಾನನ ನೆರವಿನಿಂದ ಬರೆದೆನು. ಅವನು ಕ್ರಿಸ್ತನಲ್ಲಿ ನಂಬಿಗಸ್ತನಾದ ಸಹೋದರನೆಂಬುದು ನನಗೆ ತಿಳಿದಿದೆ. ನಾನು ನಿಮ್ಮನ್ನು ಸಂತೈಸಲು ಮತ್ತು ಪ್ರೋತ್ಸಾಹಿಸಲು ಈ ಪತ್ರವನ್ನು ಬರೆದೆನು. ಇದುವೇ ದೇವರ ನಿಜವಾದ ಕೃಪೆ ಎಂಬುದನ್ನು ನಿಮಗೆ ತಿಳಿಸಬೇಕೆಂಬುದೇ ನನ್ನ ಅಪೇಕ್ಷೆಯಾಗಿತ್ತು. ಆ ಕೃಪೆಯಲ್ಲಿ ಸ್ಥಿರತೆಯಿಂದಿರಿ.

13 ಬಾಬಿಲೋನಿನಲ್ಲಿರುವ ಸಭೆಯವರು ನಿಮಗೆ ವಂದನೆಗಳನ್ನು ತಿಳಿಸಿದ್ದಾರೆ. ನಿಮ್ಮನ್ನು ಆರಿಸಿಕೊಂಡಂತೆಯೇ ಆ ಜನರನ್ನೂ ಆರಿಸಿಕೊಳ್ಳಲಾಗಿದೆ. ಕ್ರಿಸ್ತನಲ್ಲಿ ನನ್ನ ಮಗನಾದ ಮಾರ್ಕನೂ ನಿಮಗೆ ವಂದನೆಗಳನ್ನು ತಿಳಿಸಿದ್ದಾನೆ. 14 ನೀವು ಭೇಟಿ ಮಾಡಿದಾಗ ಒಬ್ಬರಿಗೊಬ್ಬರು ಪ್ರೀತಿಯ ಮುದ್ದನ್ನು ನೀಡಿರಿ.

ಕ್ರಿಸ್ತನಲ್ಲಿರುವ ನಿಮಗೆಲ್ಲರಿಗೂ ಶಾಂತಿಯಿರಲಿ.

ಮೀಕ 3

ಇಸ್ರೇಲಿನ ನಾಯಕರು ದುಷ್ಟತ್ವವನ್ನು ನಡಿಸಿದ್ದಾರೆ

ಆಗ ನಾನು ಹೇಳಿದ್ದೇನೆಂದರೆ, “ಯಾಕೋಬಿನ ನಾಯಕರೇ, ಇಸ್ರೇಲಿನ ಅಧಿಪತಿಗಳೇ, ನನ್ನ ಮಾತನ್ನು ಕೇಳಿರಿ.
    ನ್ಯಾಯ ಏನು ಎಂದು ನಿಮಗೆ ತಿಳಿದಿರಬೇಕು.
ನೀವು ಶಿಷ್ಟತನವನ್ನು ದ್ವೇಷಿಸಿ ದುಷ್ಟತನವನ್ನು ಪ್ರೀತಿಸುತ್ತೀರಿ!
    ನೀವು ಜನರ ಚರ್ಮವನ್ನು ಸುಲಿಯುತ್ತಾ
    ಅವರ ಎಲುಬುಗಳಿಂದ ಮಾಂಸವನ್ನು ಕಿತ್ತು ತೆಗೆಯುತ್ತೀರಿ.
ನೀವು ನನ್ನ ಜನರ ದೇಹದಿಂದ ಚರ್ಮ ತೆಗೆದು ಎಲುಬುಗಳನ್ನು ತುಂಡುಮಾಡಿ ಅವರನ್ನು ನಾಶಮಾಡುತ್ತೀರಿ.
    ತಪ್ಪಲೆಯೊಳಗೆ ಬೇಯಿಸಲು ಮಾಂಸ ತುಂಡುಮಾಡಿ ಹಾಕುವಂತೆ ನೀವು ಅವರ ಎಲುಬುಗಳನ್ನು ತುಂಡುಮಾಡುತ್ತೀರಿ.
ನೀವು ಯೆಹೋವನಿಗೆ ಪ್ರಾರ್ಥಿಸಬಹುದು.
    ಆದರೆ ಆತನು ನಿಮಗೆ ಉತ್ತರಕೊಡುವದಿಲ್ಲ.
ನಿಮ್ಮ ಕೆಟ್ಟ ಪಾಪಗಳ ನಿಮಿತ್ತ
    ತನ್ನ ಮುಖವನ್ನು ಮರೆಮಾಡಿಕೊಳ್ಳುತ್ತಾನೆ.”

ಸುಳ್ಳುಪ್ರವಾದಿಗಳು

ಕೆಲವು ಸುಳ್ಳುಪ್ರವಾದಿಗಳೆದ್ದು ಯೆಹೋವನ ಜನರಿಗೆ ಸುಳ್ಳನ್ನು ತಿಳಿಸುತ್ತಾರೆ. ಅಂಥವರ ಬಗ್ಗೆ ಯೆಹೋವನು ಹೇಳುವುದೇನೆಂದರೆ,

“ಈ ಪ್ರವಾದಿಗಳ ಮಾತುಗಳು ಅವರ ಹೊಟ್ಟೆಗಳನ್ನವಲಂಬಿಸಿವೆ.
ಜನರು ಅವರಿಗೆ ಆಹಾರ ಕೊಟ್ಟರೆ ಶಾಂತಿಯನ್ನು ವಾಗ್ದಾನ ಮಾಡುತ್ತಾರೆ.
    ಜನರು ಅವರಿಗೆ ಆಹಾರ ಕೊಡದಿದ್ದರೆ ಯುದ್ಧವನ್ನು ವಾಗ್ದಾನ ಮಾಡುತ್ತಾರೆ.

“ಹೀಗಿರುವದರಿಂದ ನಿಮಗೆ ರಾತ್ರಿಯಂತಿರುವದು.
    ನಿಮಗೆ ದರ್ಶನಗಳಾಗುವದಿಲ್ಲ.
ಮುಂದೆ ಏನು ಸಂಭವಿಸುತ್ತದೆ ಎಂಬುದನ್ನು ನೀವು ನೋಡುವದಿಲ್ಲ.
    ಆದ್ದರಿಂದ ನಿಮಗೆ ಕತ್ತಲೆಯಂತಿದೆ.
ಪ್ರವಾದಿಗಳಿಗೆ ಸೂರ್ಯನು ಮುಳುಗಿರುತ್ತಾನೆ.
    ಅವರಿಗೆ ಮುಂದೆ ಆಗುವಂಥದು ಕಾಣಿಸುವುದಿಲ್ಲ.
    ಆದ್ದರಿಂದ ಅವರಿಗೆ ಎಲ್ಲಾ ಕತ್ತಲೆಯಾಗಿದೆ.
ದೇವದರ್ಶಿಗಳು ನಾಚಿಕೆಗೊಂಡಿದ್ದಾರೆ.
    ಭವಿಷ್ಯ ಹೇಳುವವರು ನಾಚಿಕೆಗೊಳಗಾಗಿದ್ದಾರೆ.
ಯಾಕೆಂದರೆ ದೇವರು ಅವರ ಕೂಡ ಮಾತನಾಡುವದನ್ನು ನಿಲ್ಲಿಸಿರುವದರಿಂದ
    ಅವರು ಏನನ್ನೂ ಹೇಳುವದಿಲ್ಲ.”

ಮೀಕನು ದೇವರ ನಂಬಿಗಸ್ತ ಪ್ರವಾದಿ

ಯೆಹೋವನ ಆತ್ಮನು ನನ್ನಲ್ಲಿ ಅಧಿಕಾರವನ್ನೂ,
    ಒಳ್ಳೆಯತನವನ್ನೂ ಶಕ್ತಿಯನ್ನೂ ತುಂಬಿದ್ದಾನೆ.
ಯಾಕೆಂದರೆ ಯಾಕೋಬನ ಅಪರಾಧಗಳನ್ನು ಅವನಿಗೆ ತಿಳಿಸುವುದಕ್ಕಾಗಿಯಷ್ಟೇ,
    ಇಸ್ರೇಲಿನ ಪಾಪಗಳನ್ನು ಅವನಿಗೆ ಹೇಳುವುದಕ್ಕಾಗಿಯಷ್ಟೇ.

ಇಸ್ರೇಲಿನ ನಾಯಕರು ಇದಕ್ಕೆ ಕಾರಣ

ಯಾಕೋಬಿನ ನಾಯಕರೇ, ಇಸ್ರೇಲಿನ ಪ್ರಧಾನರೇ, ನನಗೆ ಕಿವಿಗೊಡಿರಿ!
    ಸರಿಯಾದ ಜೀವಿತವನ್ನು ನೀವು ದ್ವೇಷಿಸುತ್ತೀರಿ.
ನೆಟ್ಟಗಿರುವದನ್ನು ಡೊಂಕಾಗಿ ನೀವು ಮಾಡುವಿರಿ.
10 ಜನರನ್ನು ಕೊಲೆ ಮಾಡಿ ಚೀಯೋನನ್ನು ಕಟ್ಟುತ್ತೀರಿ.
    ಜನರನ್ನು ಮೋಸಮಾಡಿ ಜೆರುಸಲೇಮನ್ನು ಕಟ್ಟುತ್ತೀರಿ.
11 ಜೆರುಸಲೇಮಿನ ನ್ಯಾಯಾಧೀಶರು ಲಂಚ ತೆಗೆದುಕೊಂಡು
    ಅನ್ಯಾಯವಾದ ತೀರ್ಪುಕೊಡುವರು.
ಜನರಿಗೆ ಬೋಧಿಸುವ ಮೊದಲು ಜೆರುಸಲೇಮಿನ ಯಾಜಕರು
    ಹಣವನ್ನು ವಸೂಲಿ ಮಾಡುವರು.
ಜನರು ತಮ್ಮ ಭವಿಷ್ಯದ ಬಗ್ಗೆ ಕೇಳಲು
    ಪ್ರವಾದಿಗಳಿಗೆ ಮುಂಗಡವಾಗಿ ಹಣ ಕೊಡುವರು.
ಆಮೇಲೆ ಆ ನಾಯಕರು, “ಯೆಹೋವನು ನಮ್ಮಲ್ಲಿ ವಾಸಮಾಡುತ್ತಿದ್ದಾನೆ.
    ಆದ್ದರಿಂದ ನಮಗೆ ಕೆಟ್ಟದ್ದು ಏನೂ ಸಂಭವಿಸುವದಿಲ್ಲ” ಎಂದು ಹೇಳುವರು.

12 ನಾಯಕರೇ, ನಿಮ್ಮಿಂದಾಗಿ ಚೀಯೋನ್ ನಾಶವಾಗುವದು.
    ನೇಗಿಲಿನಿಂದ ಉತ್ತಲ್ಪಟ್ಟ ಹೊಲದಂತೆ ಅದು ಇರುವದು.
ಜೆರುಸಲೇಮ್ ಕಲ್ಲಿನ ರಾಶಿಯಾಗುವದು.
    ಆಲಯದ ಗುಡ್ಡವು ಬರಿದಾದ ಬೆಟ್ಟವಾಗುವುದು.
    ಅದರ ಮೇಲೆ ಪೊದೆಗಳು ಹುಲುಸಾಗಿ ಬೆಳೆದುಕೊಳ್ಳುವವು.

ಲೂಕ 12

ಫರಿಸಾಯರಂತಾಗಬೇಡಿ

12 ಸಾವಿರಾರು ಜನರು ಒಬ್ಬರನ್ನೊಬ್ಬರು ನೂಕುತ್ತಾ ಕಿಕ್ಕಿರಿದು ನೆರೆದಿದ್ದರು. ಜನರಿಗೆ ಉಪದೇಶಿಸುವ ಮೊದಲು ಯೇಸು ತನ್ನ ಶಿಷ್ಯರಿಗೆ, “ಫರಿಸಾಯರ ಹುಳಿಹಿಟ್ಟಿನ ಬಗ್ಗೆ ಅಂದರೆ ಅವರ ಕಪಟತನದ ಬಗ್ಗೆ ಎಚ್ಚರಿಕೆಯಾಗಿರಿ. ಮರೆಯಾದ ಪ್ರತಿಯೊಂದೂ ಬಯಲಾಗುವುದು. ಗುಪ್ತವಾಗಿರುವ ಪ್ರತಿಯೊಂದೂ ಪ್ರಕಟಿಸಲ್ಪಡುವುದು. ಕತ್ತಲಿನಲ್ಲಿ (ಗುಪ್ತವಾಗಿ) ನೀವು ಹೇಳುವ ವಿಷಯಗಳು ಬೆಳಕಿನಲ್ಲಿ (ಬಹಿರಂಗವಾಗಿ) ತಿಳಿಸಲ್ಪಡುವವು. ಗುಪ್ತವಾಗಿ ಕೋಣೆಯಲ್ಲಿ ನೀವು ಪಿಸುಗುಟ್ಟುವ ವಿಷಯಗಳು, ಮನೆಯ ಮೇಲಿನಿಂದ ಗಟ್ಟಿಯಾಗಿ ಪ್ರಕಟಿಸಲ್ಪಡುವವು” ಎಂದು ಹೇಳಿದನು.

ದೇವರಿಗೆ ಮಾತ್ರ ಭಯಪಡಿರಿ

(ಮತ್ತಾಯ 10:28-31)

ಬಳಿಕ ಯೇಸು ಜನರಿಗೆ ಹೀಗೆಂದನು: “ಗೆಳೆಯರೇ, ನಾನು ನಿಮಗೆ ಹೇಳುವುದೇನೆಂದರೆ, ಮನುಷ್ಯರಿಗೆ ಭಯಪಡಬೇಡಿ. ಅವರು ನಿಮ್ಮನ್ನು ಕೊಲ್ಲಬಹುದಷ್ಟೇ. ಆ ಬಳಿಕ ಬೇರೇನೂ ಮಾಡಲು ಅವರಿಂದಾಗದು. ನೀವು ಯಾರಿಗೆ ಭಯಪಡಬೇಕೆಂದರೆ, ನಿಮ್ಮನ್ನು ಕೊಂದು ನರಕಕ್ಕೆ ಹಾಕಲು ಅಧಿಕಾರವುಳ್ಳಾತನಿಗಷ್ಟೇ (ದೇವರಿಗೆ). ಹೌದು, ಆತನೊಬ್ಬನಿಗೇ ನೀವು ಭಯಪಡಬೇಕು.

“ಐದು ಗುಬ್ಬಿಗಳ ಬೆಲೆ ಕೇವಲ ಎರಡು ಪೈಸೆಗಳು. ಆದರೆ ದೇವರು ಅವುಗಳಲ್ಲಿ ಒಂದನ್ನೂ ಮರೆತುಬಿಡುವುದಿಲ್ಲ. ಹೌದು, ನಿಮ್ಮ ತಲೆಯಲ್ಲಿ ಎಷ್ಟು ಕೂದಲುಗಳಿವೆ ಎಂಬುದು ಸಹ ದೇವರಿಗೆ ಗೊತ್ತಿದೆ. ಹೆದರಬೇಡಿರಿ. ನೀವು ಅನೇಕ ಗುಬ್ಬಿಗಳಿಗಿಂತ ಹೆಚ್ಚು ಬೆಲೆಯುಳ್ಳವರಾಗಿದ್ದೀರಿ.

ಯೇಸುವಿನ ಕುರಿತು ನಾಚಿಕೆಪಡಬೇಡಿರಿ

(ಮತ್ತಾಯ 10:32-33; 12:32; 10:19-20)

“ನಾನು ನಿಮಗೆ ಹೇಳುವುದೇನೆಂದರೆ, ಯಾವನಾದರೂ ಬೇರೆಯವರ ಎದುರಿನಲ್ಲಿ ತಾನು ನನ್ನವನೆಂದು ಹೇಳಿದರೆ, ನಾನು ಸಹ[a] ಅವನನ್ನು ನನ್ನವನೆಂದು ದೇವದೂತರ ಮುಂದೆ ಹೇಳುವೆನು. ಆದರೆ ಯಾವನಾದರೂ ಬೇರೆಯವರ ಎದುರಿನಲ್ಲಿ ತಾನು ನನ್ನವನಲ್ಲವೆಂದು ಹೇಳಿದರೆ, ನಾನು ಸಹ ದೇವದೂತರ ಮುಂದೆ ಅವನನ್ನು ನನ್ನವನಲ್ಲವೆಂದು ಹೇಳುವೆನು.

10 “ಯಾವನಾದರೂ ಮನುಷ್ಯಕುಮಾರನಿಗೆ ವಿರೋಧವಾಗಿ ಮಾತಾಡಿದರೆ ಅವನಿಗೆ ಕ್ಷಮೆ ದೊರಕಬಹುದು. ಆದರೆ ಪವಿತ್ರಾತ್ಮನನ್ನು ದೂಷಿಸುವವನಿಗೆ ಕ್ಷಮೆಯೇ ಇಲ್ಲ.

11 “ಜನರು ನಿಮ್ಮನ್ನು ಸಭಾಮಂದಿರಗಳಿಗೂ ನ್ಯಾಯಾಧಿಪತಿಗಳ ಮತ್ತು ದೇಶಾಧಿಕಾರಿಗಳ ಬಳಿಗೂ ಎಳೆದೊಯ್ಯುವಾಗ ಅವರಿಗೆ ಏನು ಹೇಳಬೇಕೆಂದು ಚಿಂತೆ ಮಾಡಬೇಡಿ. 12 ಆ ಸಮಯದಲ್ಲಿ ನೀವು ಹೇಳಬೇಕಾದುದನ್ನು ಪವಿತ್ರಾತ್ಮನೇ ನಿಮಗೆ ತಿಳಿಸುವನು.”

ಸ್ವಾರ್ಥತೆಯ ಬಗ್ಗೆ ಯೇಸುವಿನ ಎಚ್ಚರಿಕೆ

13 ಸಮೀಪದಲ್ಲಿದ್ದ ಒಬ್ಬನು ಯೇಸುವಿಗೆ, “ಬೋಧಕನೇ, ನಮ್ಮ ತಂದೆ ಇದೀಗ ಸತ್ತುಹೋದನು. ನಮ್ಮ ತಂದೆಯ ಆಸ್ತಿಯಲ್ಲಿ ನನಗೆ ಪಾಲುಕೊಡಬೇಕೆಂದು ನನ್ನ ಅಣ್ಣನಿಗೆ ಹೇಳು” ಎಂದು ಹೇಳಿದನು.

14 ಆದರೆ ಯೇಸು ಅವನಿಗೆ, “ನಾನು ನಿಮ್ಮ ನ್ಯಾಯಾಧಿಪತಿ ಎಂದಾಗಲಿ ನಿಮ್ಮ ತಂದೆಯ ಆಸ್ತಿಯನ್ನು ನಿಮ್ಮಿಬ್ಬರಿಗೆ ಹಂಚಿಕೊಡುವವನು ಎಂದಾಗಲಿ ನಿನಗೆ ಯಾರು ಹೇಳಿದರು?” ಎಂದು ಕೇಳಿದನು. 15 ಬಳಿಕ ಯೇಸು ನೆರೆದಿದ್ದ ಜನರಿಗೆ, “ಎಚ್ಚರಿಕೆ, ಯಾವ ವಿಧವಾದ ಸ್ವಾರ್ಥಕ್ಕೂ ಒಳಗಾಗದಂತೆ ಜಾಗರೂಕರಾಗಿರಿ. ಒಬ್ಬನಿಗೆ ಎಷ್ಟೇ ಆಸ್ತಿಯಿದ್ದರೂ ಅದರಿಂದ ಅವನು ಜೀವವನ್ನು ಪಡೆದುಕೊಳ್ಳಲಾರನು” ಎಂದನು.

16 ಬಳಿಕ ಯೇಸು ಈ ಸಾಮ್ಯವನ್ನು ಹೇಳಿದನು: “ಒಬ್ಬ ಐಶ್ವರ್ಯವಂತನಿದ್ದನು. ಅವನಿಗೆ ಬಹಳ ಜಮೀನಿತ್ತು. ಒಮ್ಮೆ ಅವನ ಜಮೀನಿನಲ್ಲಿ ಸಮೃದ್ಧಿಯಾದ ಬೆಳೆ ಆಯಿತು. 17 ಆಗ ಐಶ್ವರ್ಯವಂತನು, ‘ನಾನೇನು ಮಾಡಲಿ? ನನ್ನ ಬೆಳೆಯನ್ನೆಲ್ಲಾ ತುಂಬಿಡಲು ನನಗೆ ಸ್ಥಳವಿಲ್ಲವಲ್ಲಾ!’ ಎಂದುಕೊಂಡನು.

18 “ಬಳಿಕ ಅವನು, ‘ನಾನೇನು ಮಾಡಬೇಕೆಂಬುದು ನನಗೆ ತಿಳಿದದೆ. ನನ್ನ ಕಣಜಗಳನ್ನು ಕೆಡವಿ, ದೊಡ್ಡ ಕಣಜಗಳನ್ನು ಕಟ್ಟುವೆನು! ನನ್ನ ಹೊಸ ಕಣಜಗಳಲ್ಲಿ ಗೋಧಿಯನ್ನೂ ಒಳ್ಳೆಯ ಪದಾರ್ಥಗಳನ್ನೂ ತುಂಬಿಸಿಡುವೆನು.’ 19 ಆ ಬಳಿಕ ನಾನು ‘ನನಗೆ ಅನೇಕ ವರ್ಷಗಳವರೆಗೆ ಬೇಕಾದಷ್ಟು ಸರಕನ್ನು ಕೂಡಿಸಿಟ್ಟಿದ್ದೇನೆ. ವಿಶ್ರಮಿಸಿಕೊ, ತಿನ್ನು, ಕುಡಿ, ಸಂತೋಷಪಡು! ಎಂದು ಹೇಳಿಕೊಳ್ಳುವೆನು’ ಎಂಬುದಾಗಿ ಆಲೋಚಿಸಿಕೊಂಡನು.

20 “ಆದರೆ ದೇವರು ಅವನಿಗೆ, ‘ನೀನು ಬುದ್ಧಿಹೀನ! ಈ ರಾತ್ರಿ ನೀನು ಸಾಯುವೆ! ಈಗ ಹೇಳು, ನೀನು ಕೂಡಿಟ್ಟ ಪದಾರ್ಥಗಳ ಗತಿ ಏನಾಗುವುದು? ಅವು ಯಾರ ಪಾಲಾಗುತ್ತವೆ?’ ಎಂದು ಕೇಳಿದನು.

21 “ತನಗೋಸ್ಕರ ಮಾತ್ರ ಸಂಪತ್ತನ್ನು ಕೂಡಿಸಿಟ್ಟುಕೊಳ್ಳುವವನ ಗತಿ ಇದೇ. ದೇವರ ದೃಷ್ಟಿಯಲ್ಲಿ ಅವನು ಐಶ್ವರ್ಯವಂತನಲ್ಲ.”

ದೇವರ ರಾಜ್ಯಕ್ಕೆ ಮೊದಲನೆ ಪ್ರಾಧಾನ್ಯತೆ

(ಮತ್ತಾಯ 6:25-34,19-21)

22 ಯೇಸು ತನ್ನ ಶಿಷ್ಯರಿಗೆ ಹೀಗೆ ಹೇಳಿದನು: “ಈ ಕಾರಣದಿಂದ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಪ್ರಾಣಧಾರಣೆಗೆ ಬೇಕಾದ ಊಟಕ್ಕಾಗಿ ಮತ್ತು ತೊಟ್ಟುಕೊಳ್ಳಲು ಬೇಕಾದ ಬಟ್ಟೆಗಾಗಿ ಚಿಂತಿಸಬೇಡಿರಿ. 23 ಆಹಾರಕ್ಕಿಂತ ಪ್ರಾಣ ಹೆಚ್ಚು ಪ್ರಾಮುಖ್ಯವಾದದ್ದು. ಬಟ್ಟೆಗಿಂತಲೂ ದೇಹ ಹೆಚ್ಚು ಪ್ರಾಮುಖ್ಯವಾದದ್ದು. 24 ಪಕ್ಷಿಗಳನ್ನು ನೋಡಿರಿ. ಅವು ಬಿತ್ತುವುದೂ ಇಲ್ಲ, ಕೊಯ್ಯುವುದೂ ಇಲ್ಲ. ಅವು ಆಹಾರವನ್ನು ಮನೆಗಳಲ್ಲಾಗಲಿ ಕಣಜಗಳಲ್ಲಾಗಲಿ ತುಂಬಿಟ್ಟುಕೊಳ್ಳುವುದಿಲ್ಲ. ದೇವರೇ ಅವುಗಳನ್ನು ಪರಿಪಾಲಿಸುತ್ತಾನೆ. ನೀವು ಪಕ್ಷಿಗಳಿಗಿಂತ ಎಷ್ಟೋ ಅಮೂಲ್ಯರಾಗಿದ್ದೀರಿ. 25 ನೀವು ಊಟಬಟ್ಟೆಗಳಿಗಾಗಿ ಎಷ್ಟೇ ಚಿಂತಿಸಿದರೂ ನಿಮ್ಮ ಆಯುಷ್ಯೇನೂ ಹೆಚ್ಚಾಗುವುದಿಲ್ಲ. 26 ಚಿಕ್ಕಕಾರ್ಯಗಳನ್ನೇ ಮಾಡಲು ನಿಮಗೆ ಸಾಧ್ಯವಿಲ್ಲದಿರುವಾಗ, ದೊಡ್ಡಕಾರ್ಯಗಳ ಕುರಿತು ನೀವು ಚಿಂತಿಸುವುದೇಕೆ?

27 “ಅಡವಿಯ ಹೂವುಗಳು ಬೆಳೆಯುವ ಬಗೆಯನ್ನು ನೋಡಿರಿ. ಅವು ದುಡಿಯುವುದಿಲ್ಲ. ತಮಗಾಗಿ ಉಡುಪುಗಳನ್ನು ಹೊಲಿದುಕೊಳ್ಳುವುದಿಲ್ಲ. ಆದರೂ ಸೊಲೊಮೋನ ರಾಜನು ತನ್ನ ಸಕಲ ವೈಭವದಲ್ಲಿ ಇದ್ದಾಗಲೂ ಈ ಹೂವುಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪನ್ನು ಧರಿಸಿರಲಿಲ್ಲ. 28 ದೇವರು ಬಯಲಿನ ಹುಲ್ಲಿಗೂ ಹೀಗೆ ಉಡಿಸುತ್ತಾನೆ. ಹುಲ್ಲಾದರೋ ಈ ಹೊತ್ತಿದ್ದು ನಾಳೆ ಬೆಂಕಿಯ ಪಾಲಾಗುವುದು. ಹೀಗಿರಲು ದೇವರು ನಿಮಗೆ ಎಷ್ಟೋ ಹೆಚ್ಚಾಗಿ ಉಡಿಸುವುದಿಲ್ಲವೇ? ಆದ್ದರಿಂದ ಅಲ್ಪವಿಶ್ವಾಸಿಗಳಾಗಿರಬೇಡಿ!

29 “ಏನು ಊಟಮಾಡಬೇಕು? ಏನು ಕುಡಿಯಬೇಕು? ಎಂದು ಯಾವಾಗಲೂ ಆಲೋಚಿಸಬೇಡಿರಿ ಮತ್ತು ಚಿಂತಿಸಬೇಡಿರಿ. 30 ಅವುಗಳನ್ನು ಪಡೆದುಕೊಳ್ಳುವುದಕ್ಕಾಗಿ ಲೋಕದ ಜನರೆಲ್ಲರೂ ಪ್ರಯತ್ನಿಸುತ್ತಾರೆ. ಅವುಗಳ ಅವಶ್ಯಕತೆ ನಿಮಗೂ ಇದೆ ಎಂಬುದು ನಿಮ್ಮ ತಂದೆಗೆ (ದೇವರು) ತಿಳಿದಿದೆ. 31 ನೀವು ದೇವರ ರಾಜ್ಯಕ್ಕೆ ಮೊದಲನೆ ಪ್ರಾಧಾನ್ಯತೆಯನ್ನು ಕೊಡಿರಿ. ಆಗ ನಿಮಗೆ ಬೇಕಾಗಿರುವ ಉಳಿದವುಗಳನ್ನು ಕೊಡಲಾಗುವುದು.

ಹಣದಲ್ಲಿ ಭರವಸೆ ಇಡಬೇಡಿ

32 “ಚಿಕ್ಕ ಮಂದೆಯೇ, ಹೆದರಬೇಡ, ನಿಮಗೆ ರಾಜ್ಯವನ್ನು ಕೊಡಲು ನಿಮ್ಮ ತಂದೆ ಬಯಸಿದ್ದಾನೆ. 33 ನಿಮ್ಮಲ್ಲಿರುವ ಆಸ್ತಿಯನ್ನು ಮಾರಿ, ಬಂದ ಹಣವನ್ನು ಕೊರತೆಯಲ್ಲಿರುವ ಜನರಿಗೆ ಕೊಡಿರಿ. ಈ ಲೋಕದ ಐಶ್ವರ್ಯ ಶಾಶ್ವತವಲ್ಲ. ಆದ್ದರಿಂದ ಶಾಶ್ವತವಾದ ಐಶ್ವರ್ಯವನ್ನು ಗಳಿಸಿಕೊಳ್ಳಿರಿ. ಲಯವಾಗದ ಸಂಪತ್ತನ್ನು ಪರಲೋಕದಲ್ಲಿ ಶೇಖರಿಸಿಟ್ಟುಕೊಳ್ಳಿರಿ. ಆ ಭಂಡಾರವನ್ನು ಕಳ್ಳರು ಕದಿಯಲಾಗುವುದಿಲ್ಲ ಮತ್ತು ಹುಳಗಳು ನಾಶಮಾಡಲಾಗುವುದಿಲ್ಲ. 34 ನಿಮ್ಮ ಭಂಡಾರ ಎಲ್ಲಿದೆಯೋ ಅಲ್ಲಿಯೇ ನಿಮ್ಮ ಹೃದಯವೂ ಇರುತ್ತದೆ.

ಯಾವಾಗಲೂ ಸಿದ್ಧವಾಗಿರಿ

(ಮತ್ತಾಯ 24:42-44)

35 “ಉಡುಪನ್ನು ಧರಿಸಿಕೊಂಡು ಪೂರ್ಣಸಿದ್ಧರಾಗಿರಿ! ನಿಮ್ಮ ದೀಪಗಳು ಉರಿಯುತ್ತಿರಲಿ. 36 ಮದುವೆಯ ಔತಣದಿಂದ ಮನೆಗೆ ಮರಳಿಬರುವ ಯಜಮಾನನನ್ನು ಎದುರುನೋಡುತ್ತಿರುವ ಸೇವಕರಂತಿರಿ. ಯಜಮಾನನು ಬಂದು ಬಾಗಿಲನ್ನು ತಟ್ಟಿದಾಗ ಸೇವಕರು ಬಾಗಿಲನ್ನು ತೆರೆಯುತ್ತಾರೆ. 37 ಆ ಸೇವಕರೇ ಧನ್ಯರು. ಏಕೆಂದರೆ, ಅವರು ಸಿದ್ಧರಾಗಿದ್ದು ತನಗೋಸ್ಕರ ಕಾಯುತ್ತಿದ್ದುದನ್ನು ಯಜಮಾನನು ನೋಡುತ್ತಾನೆ. ನಾನು ನಿಮಗೆ ಸತ್ಯವಾಗಿ ಹೇಳುವುದೇನೆಂದರೆ, ಆಗ ಯಜಮಾನನು ತಾನೇ ಸೇವಕರ ಉಡುಪನ್ನು ಧರಿಸಿಕೊಂಡು, ಆ ಸೇವಕರನ್ನು ಕುಳ್ಳಿರಿಸಿ, ಅವರಿಗೆ ಊಟ ಬಡಿಸುತ್ತಾನೆ. 38 ಆ ಆಳುಗಳು ತಮ್ಮ ಯಜಮಾನನಿಗಾಗಿ ಮಧ್ಯರಾತ್ರಿಯವರೆಗೆ ಅಥವಾ ಇನ್ನೂ ಹೆಚ್ಚು ಸಮಯದವರೆಗೆ ಎಚ್ಚರದಿಂದ ಇರಬೇಕಾಗಬಹುದು. ಆದರೆ ಯಜಮಾನನು ಬಂದು, ಇನ್ನೂ ಎಚ್ಚರದಿಂದಿರುವ ಅವರನ್ನು ಕಂಡಾಗ ಅವರಿಗೆ ಸಂತೋಷವಾಗುವುದು.

39 “ಇದು ನಿಮ್ಮ ನೆನಪಿನಲ್ಲಿರಲಿ: ಕಳ್ಳನು ಬರುವ ಗಳಿಗೆಯು ಯಜಮಾನನಿಗೆ ತಿಳಿದರೆ, ಅವನು ತನ್ನ ಮನೆಗೆ ಕನ್ನಹಾಕಲು ಬಿಡುವನೇ? ಇಲ್ಲ! 40 ಅಂತೆಯೇ, ನೀವೂ ಸಿದ್ಧರಾಗಿರಿ! ನೀವು ನಿರೀಕ್ಷಿಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುವನು!”

ನಂಬಿಗಸ್ತನಾದ ಆಳು ಯಾರು?

41 ಪೇತ್ರನು, “ಪ್ರಭುವೇ, ನೀನು ಈ ಸಾಮ್ಯವನ್ನು ಹೇಳಿದ್ದು ನಮಗಾಗಿಯೋ ಅಥವಾ ಎಲ್ಲಾ ಜನರಿಗಾಗಿಯೋ?” ಎಂದು ಕೇಳಿದನು.

42 ಪ್ರಭುವು ಹೀಗೆಂದನು: “ವಿವೇಕಿಯೂ ನಂಬಿಗಸ್ತನೂ ಆದ ಆಳು ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿಯಾಳುಗಳಿಗೆ ದವಸಧಾನ್ಯವನ್ನು ಅಳೆದುಕೊಟ್ಟು, ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನಿಂದ ನೇಮಿಸಲ್ಪಟ್ಟವನೇ. 43 ಆ ಸೇವಕನು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತಿದ್ದರೆ, ಯಜಮಾನನು ಬಂದಾಗ ಅವನಿಗೆ ಬಹಳ ಸಂತೋಷವಾಗುವುದು. 44 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಯಜಮಾನನು ಆ ಸೇವಕನನ್ನು ತನ್ನ ಆಸ್ತಿಗೆಲ್ಲಾ ಮೇಲ್ವಿಚಾರಕನನ್ನಾಗಿ ನೇಮಿಸುವನು.

45 “ಆದರೆ ಆ ಸೇವಕನು ದುಷ್ಟನಾಗಿ ತನ್ನ ಯಜಮಾನನು ಬೇಗನೆ ಹಿಂತಿರುಗಿ ಬರುವುದಿಲ್ಲ ಎಂದುಕೊಂಡರೆ ಏನಾಗುವುದು? ಆ ಸೇವಕನು ಯಜಮಾನನ ಇತರ ದಾಸದಾಸಿಯರನ್ನು ಹೊಡೆಯುವುದಕ್ಕೂ ತಿಂದುಕುಡಿದು ಮತ್ತನಾಗುವುದಕ್ಕೂ ತೊಡಗುವನು. 46 ಬಳಿಕ ಅವನು ನಿರೀಕ್ಷಿಸಿಲ್ಲದ ಗಳಿಗೆಯಲ್ಲಿ ಯಜಮಾನನು ಬಂದು ಅವನನ್ನು ದಂಡಿಸಿ ಅಪನಂಬಿಗಸ್ತರಿರುವ ಸ್ಥಳಕ್ಕೆ ದಬ್ಬುವನು.

47 “ತನ್ನ ಯಜಮಾನನು ತನ್ನಿಂದ ಏನು ಅಪೇಕ್ಷಿಸುತ್ತಾನೆ ಎಂಬುದು ಆ ಸೇವಕನಿಗೆ ಗೊತ್ತಿತ್ತು. ಆದರೆ ಅವನು ತನ್ನನ್ನು ಸಿದ್ಧಪಡಿಸಿಕೊಳ್ಳಲಿಲ್ಲ ಮತ್ತು ತನ್ನ ಕೆಲಸವನ್ನು ಪೂರೈಸಲು ಪ್ರಯತ್ನಿಸಲಿಲ್ಲ. ಆದ್ದರಿಂದ ಅವನು ಕಠಿಣ ದಂಡನೆಗೆ ಗುರಿಯಾಗುವನು! 48 ಆದರೆ ತನ್ನ ಯಜಮಾನನ ಬಯಕೆಯನ್ನು ತಿಳಿದಿಲ್ಲದ ಸೇವಕನಿಗೆ ಏನಾಗುವುದು? ಇವನು ಸಹ ದಂಡನೆಗೆ ಅರ್ಹವಾದ ಕಾರ್ಯಗಳನ್ನು ಮಾಡುತ್ತಾನೆ. ಆದರೆ ತನ್ನ ಕರ್ತವ್ಯವನ್ನು ತಿಳಿದಿದ್ದರೂ ಮಾಡದೆಹೋದ ಸೇವಕನಿಗಿಂತ ಇವನಿಗೆ ಕಡಿಮೆ ದಂಡನೆ ಆಗುವುದು. ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು. ಇನ್ನೂ ಹೆಚ್ಚು ಪಡೆದವನಿಂದ ಇನ್ನೂ ಹೆಚ್ಚಾಗಿ ನಿರೀಕ್ಷಿಸಲಾಗುವುದು.”

ಯೇಸುವಿನ ಬಗ್ಗೆ ಭಿನ್ನಾಭಿಪ್ರಾಯ

(ಮತ್ತಾಯ 10:34-36)

49 ಯೇಸು ತನ್ನ ಮಾತನ್ನು ಮುಂದುವರೆಸಿ ಹೀಗೆಂದನು: “ನಾನು ಈ ಲೋಕಕ್ಕೆ ಬೆಂಕಿಹಾಕಲು ಬಂದೆನು! ಅದು ಇಷ್ಟರೊಳಗೆ ಉರಿಯುತ್ತಿದ್ದರೆ ನನಗೆ ಸಂತೋಷ! 50 ನಾನು ಬೇರೊಂದು ರೀತಿಯ ದೀಕ್ಷಾಸ್ನಾನ ಹೊಂದಬೇಕು. ಅದನ್ನು ಹೊಂದುವ ತನಕ ನಾನು ಬಹಳ ತೊಂದರೆಯಲ್ಲಿದ್ದೇನೆ. 51 ನಾನು ಲೋಕಕ್ಕೆ ಸಮಾಧಾನವನ್ನು ಕೊಡುವುದಕ್ಕೆ ಬಂದೆನೆಂದು ನೀವು ಭಾವಿಸುತ್ತೀರೋ? ಇಲ್ಲ! ನಾನು ಲೋಕದಲ್ಲಿ ಭೇದವನ್ನು ಉಂಟುಮಾಡಲು ಬಂದೆನು! 52 ಇಂದಿನಿಂದ, ಐದು ಜನರಿರುವ ಕುಟುಂಬದಲ್ಲಿ ಭೇದ ಉಂಟಾಗುವುದು. ಅವರಲ್ಲಿ ಮೂವರು ಇಬ್ಬರಿಗೆ ವಿರೋಧವಾಗುವರು ಮತ್ತು ಇಬ್ಬರು ಮೂವರಿಗೆ ವಿರೋಧವಾಗುವರು.

53 ತಂದೆಗೂ ಮಗನಿಗೂ ಭೇದ ಉಂಟಾಗುವುದು.
    ಮಗನು ತನ್ನ ತಂದೆಗೆ ವಿರೋಧವಾಗುವನು.
    ತಂದೆಯು ತನ್ನ ಮಗನಿಗೆ ವಿರೋಧವಾಗುವನು,
ತಾಯಿಗೂ ಮಗಳಿಗೂ ಭೇದ ಉಂಟಾಗುವುದು.
    ಮಗಳು ತನ್ನ ತಾಯಿಗೆ ವಿರೋಧವಾಗುವಳು,
    ತಾಯಿ ತನ್ನ ಮಗಳಿಗೆ ವಿರೋಧವಾಗುವಳು.
ಅತ್ತೆಗೂ ಸೊಸೆಗೂ ಭೇದವಿರುವುದು.
    ಸೊಸೆಯು ತನ್ನ ಅತ್ತೆಗೆ ವಿರೋಧವಾಗುವಳು,
    ಅತ್ತೆಯು ತನ್ನ ಸೊಸೆಗೆ ವಿರೋಧವಾಗುವಳು.”[b]

ಕಾಲಮಾನವನ್ನು ಗ್ರಹಿಸಿಕೊಳ್ಳಿರಿ

(ಮತ್ತಾಯ 16:2-3)

54 ಬಳಿಕ ಯೇಸು ಜನರಿಗೆ ಹೀಗೆಂದನು: “ಮೋಡವು ಪಶ್ಚಿಮ ದಿಕ್ಕಿನಲ್ಲಿ ದೊಡ್ಡದಾಗುತ್ತಿರುವುದನ್ನು ನೀವು ನೋಡುವಾಗ ‘ಇಂದು ಮಳೆ ಬರುತ್ತದೆ’ ಎಂದು ಹೇಳುತ್ತೀರಿ. ಅಂತೆಯೇ ಅಂದು ಮಳೆಯಾಗುತ್ತದೆ. 55 ದಕ್ಷಿಣ ದಿಕ್ಕಿನಿಂದ ಗಾಳಿ ಬೀಸತೊಡಗಿದಾಗ, ‘ಈ ದಿನ ತುಂಬಾ ಸೆಕೆ ಇರುವುದು’ ಎನ್ನುತ್ತೀರಿ. ಅಂತೆಯೇ ಸೆಕೆ ಇರುವುದು. 56 ನೀವು ಕಪಟಿಗಳು! ಹವಾಮಾನವನ್ನು ತಿಳಿದುಕೊಳ್ಳಬಲ್ಲ ನೀವು ಈಗ ನಡೆಯುತ್ತಿರುವುದನ್ನು ಗ್ರಹಿಸಿಕೊಳ್ಳಲು ಸಾಧ್ಯವಿಲ್ಲವೇ?

ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿರಿ

(ಮತ್ತಾಯ 5:25-26)

57 “ನೀವೇ ನ್ಯಾಯನಿರ್ಣಯವನ್ನು ಮಾಡಬಾರದೇಕೆ? 58 ಒಬ್ಬನು ನಿಮ್ಮ ಮೇಲೆ ದಾವೆ ಹೂಡಲು ನ್ಯಾಯಾಲಯಕ್ಕೆ ಹೋಗುತ್ತಿರುವಾಗ ನಿಮ್ಮ ಸಮಸ್ಯೆಯನ್ನು ದಾರಿಯಲ್ಲಿಯೇ ಪರಿಹರಿಸಲು ನಿಮ್ಮಿಂದಾದಷ್ಟು ಪ್ರಯತ್ನಿಸಿರಿ. ಇಲ್ಲವಾದರೆ, ಅವನು ನಿಮ್ಮನ್ನು ನ್ಯಾಯಾಧೀಶನ ಬಳಿಗೆ ಕೊಂಡೊಯ್ಯುವನು. ನ್ಯಾಯಾಧೀಶನು ನಿಮ್ಮನ್ನು ಸೆರೆಮನೆಗೆ ಹಾಕಿಸುವನು. 59 ನೀವು ನಿಮ್ಮ ಸಾಲವನ್ನೆಲ್ಲಾ ಕೊನೆಯ ಪೈಸದವರೆಗೆ ತೀರಿಸುವ ತನಕ ಸೆರೆಮನೆಯಿಂದ ಹೊರಗೆ ಬರಲು ಸಾಧ್ಯವೇ ಇಲ್ಲ!”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International