Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
1 ಪೂರ್ವಕಾಲವೃತ್ತಾಂತ 23

ದೇವಾಲಯದಲ್ಲಿ ಲೇವಿಯರ ಸೇವಾಕಾರ್ಯ

23 ದಾವೀದನು ಬಹಳ ಮುದುಕನಾದಾಗ ತನ್ನ ಮಗನಾದ ಸೊಲೊಮೋನನನ್ನು ಇಸ್ರೇಲರ ಅರಸನನ್ನಾಗಿ ಮಾಡಿದನು. ದಾವೀದನು ರಾಜ್ಯದ ಎಲ್ಲಾ ಮುಖಂಡರುಗಳನ್ನೂ ಯಾಜಕರನ್ನೂ ಲೇವಿಯರನ್ನೂ ಕರೆದನು. ಅವನು ಮೂವತ್ತು ವರ್ಷದ ಮತ್ತು ಅದಕ್ಕಿಂತ ಮೇಲ್ಪಟ್ಟ ಲೇವಿಯರನ್ನು ಲೆಕ್ಕಿಸಿದಾಗ ಒಟ್ಟು ಮೂವತ್ತೆಂಟು ಸಾವಿರ ಮಂದಿ ಪುರುಷರಿದ್ದರು. ದಾವೀದನು, “ಇವರಲ್ಲಿ ಇಪ್ಪತ್ನಾಲ್ಕು ಸಾವಿರ ಮಂದಿ ಲೇವಿಯರು ದೇವಾಲಯದ ಕಟ್ಟಡದ ಮೇಲ್ವಿಚಾರಕರಾಗಿಯೂ ಆರು ಸಾವಿರ ಮಂದಿ ಲೇವಿಯರು ನ್ಯಾಯಾಧೀಶರಾಗಿಯೂ ಕಾನೂನು ಪಾಲಕರಾಗಿಯೂ ನಾಲ್ಕು ಸಾವಿರ ಮಂದಿ ಲೇವಿಯರು ದ್ವಾರಪಾಲಕರಾಗಿಯೂ ನಾಲ್ಕು ಸಾವಿರ ಮಂದಿ ಲೇವಿಯರು ಗಾಯಕರಾಗಿಯೂ ಸೇವೆ ಮಾಡಬೇಕು. ನಾನು ಅವರಿಗಾಗಿ ವಿಶೇಷ ವಾದ್ಯಗಳನ್ನು ತಯಾರಿಸಿಟ್ಟಿರುತ್ತೇನೆ. ಅವರು ಅವುಗಳನ್ನು ನುಡಿಸುತ್ತಾ ದೇವರಿಗೆ ಸ್ತೋತ್ರ ಮಾಡಬೇಕು” ಅಂದನು.

ದಾವೀದನು ಲೇವಿಯರನ್ನು ಮೂರು ಗುಂಪುಗಳನ್ನಾಗಿ ಮಾಡಿದನು. ಗೇರ್ಷೋನ್ಯರು, ಕೆಹಾತ್ಯರು ಮತ್ತು ಮೆರಾರೀಯರು.

ಗೇರ್ಷೋನ್ ಕುಲದವರು

ಗೇರ್ಷೋಮ್ ಕುಲದಲ್ಲಿ ಲದ್ದಾನ್ ಮತ್ತು ಶಿಮ್ಮೀ ಎಂಬವರಿದ್ದರು. ಲದ್ದಾನನಿಗೆ ಮೂವರು ಗಂಡುಮಕ್ಕಳು. ಮೊದಲನೆ ಮಗನು ಯೆಹೀಯೇಲ್. ಉಳಿದ ಇನ್ನಿಬ್ಬರು ಜೀತಾಮ್ ಮತ್ತು ಯೋವೇಲ್. ಶಿಮ್ಮೀಯನ ಗಂಡುಮಕ್ಕಳು ಯಾರೆಂದರೆ: ಶೆಲೋಮೋತ್, ಹಜೀಯೇಲ್ ಮತ್ತು ಹಾರಾನ್. ಈ ಮೂವರು ಲದ್ದಾನನ ಸಂತತಿಯವರ ಮುಖಂಡರಾಗಿದ್ದರು.

10 ಶಿಮ್ಮೀಗೆ ನಾಲ್ಕು ಮಂದಿ ಗಂಡುಮಕ್ಕಳು. ಅವರು ಯಾರೆಂದರೆ: ಯಹತ್, ಜೀಜ, ಯೆಯೂಷ್ ಮತ್ತು ಬೆರೀಯ. 11 ಯಹತನು ಚೊಚ್ಚಲಮಗನು. ಜೀಜನು ಎರಡನೆಯವನು. ಯೆಯೂಷನಿಗೂ ಬೆರೀಯನಿಗೂ ಹೆಚ್ಚು ಮಕ್ಕಳಿರಲಿಲ್ಲ. ಆದ್ದರಿಂದ ಅವರಿಬ್ಬರನ್ನು ಒಂದೇ ಕುಟುಂಬವೆಂದು ಲೆಕ್ಕಿಸಲಾಯಿತು.

ಕೆಹಾತನ ಕುಲದವರು

12 ಕೆಹಾತನಿಗೆ ನಾಲ್ಕು ಮಂದಿ ಗಂಡುಮಕ್ಕಳು: ಅಮ್ರಾಮ್, ಇಚ್ಚಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್. 13 ಅಮ್ರಾಮನ ಗಂಡುಮಕ್ಕಳು ಯಾರೆಂದರೆ: ಆರೋನ್ ಮತ್ತು ಮೋಶೆ. ಆರೋನನು ಮತ್ತು ಅವನ ಸಂತತಿಯವರು ಮಹಾಪರಿಶುದ್ಧವಾದ ವಸ್ತುಗಳನ್ನು ಪ್ರತಿಷ್ಠಿಸುವುದಕ್ಕೆ ಪ್ರತ್ಯೇಕಿಸಲ್ಪಟ್ಟರು; ಇವರು ಯೆಹೋವನ ಸನ್ನಿಧಿಯಲ್ಲಿ ಸದಾಕಾಲ ಧೂಪ ಸುಡುವುದಕ್ಕಾಗಿಯೂ ಆತನ ಸೇವೆಮಾಡುವುದಕ್ಕಾಗಿಯೂ ಯೆಹೋವನ ಹೆಸರಿನಲ್ಲಿ ಜನರನ್ನು ಸದಾಕಾಲ ಆಶೀರ್ವದಿಸುವುದಕ್ಕಾಗಿಯೂ ಆರಿಸಲ್ಪಟ್ಟರು.

14 ಮೋಶೆಯು ದೇವರ ಮನುಷ್ಯನಾಗಿದ್ದನು. ಅವನ ಮಕ್ಕಳು ಲೇವಿಕುಲದಲ್ಲಿ ಸೇರಿಸಲ್ಪಟ್ಟಿದ್ದರು. 15 ಮೋಶೆಯ ಮಕ್ಕಳು ಯಾರೆಂದರೆ: ಗೇರ್ಷೋಮ್ ಮತ್ತು ಎಲೀಯೆಜೆರ್, 16 ಗೇರ್ಷೋಮನ ಚೊಚ್ಚಲ ಮಗನು ಶೆಬೂವೇಲ. 17 ಎಲೀಯೆಜರನ ಚೊಚ್ಚಲ ಮಗನು ರೆಹಬ್ಯ. ಎಲೀಯೆಜೆರನಿಗೆ ಬೇರೆ ಮಕ್ಕಳಿರಲಿಲ್ಲ. ಆದರೆ ರೆಹಬ್ಯನಿಗೆ ಅನೇಕ ಮಕ್ಕಳಿದ್ದರು.

18 ಇಚ್ಹಾರನ ಚೊಚ್ಚಲಮಗನು ಶೆಲೋಮೋತ್.

19 ಹೆಬ್ರೋನಿನ ಚೊಚ್ಚಲಮಗನು ಯೆರೀಯ. ಎರಡನೆಯ ಮಗನು ಅಮರ್ಯ. ಯಹಜೀಯೇಲನು ಮೂರನೆಯ ಮಗ. ಯೆಕಮ್ಮಾಮನು ನಾಲ್ಕನೆಯ ಮಗ.

20 ಉಜ್ಜೀಯೇಲನ ಚೊಚ್ಚಲಮಗನು ಮೀಕ; ಇಷ್ಷೀಯನು ಅವನ ಎರಡನೆಯ ಮಗ.

ಮೆರಾರೀಯ ಕುಲದವರು

21 ಮಹ್ಲೀ ಮತ್ತು ಮೂಷೀ ಮೆರಾರೀಯ ಗಂಡುಮಕ್ಕಳು. ಮಹ್ಲೀಯ ಮಕ್ಕಳು ಯಾರೆಂದರೆ: ಎಲ್ಲಾಜಾರ್ ಮತ್ತು ಕೀಷ್. 22 ಎಲ್ಲಾಜಾರನು ಗಂಡುಮಕ್ಕಳಿಲ್ಲದೆ ಸತ್ತನು. ಅವನಿಗೆ ಹೆಣ್ಣುಮಕ್ಕಳು ಮಾತ್ರವೇ ಇದ್ದರು. ಇವರು ತಮ್ಮ ಸಂಬಂಧಿಕರಲ್ಲಿಯೇ ಮದುವೆಯಾದರು. ಕೀಷನ ಗಂಡುಮಕ್ಕಳು ಅವರ ಸಂಬಂಧಿಕರಾಗಿದ್ದರು. 23 ಮೂಷಿಯ ಗಂಡುಮಕ್ಕಳು ಯಾರೆಂದರೆ: ಮಹ್ಲೀ, ಏದೆರ್ ಮತ್ತು ಯೆರೇಮೋತ್. ಅವನಿಗೆ ಮೂರು ಮಂದಿ ಗಂಡುಮಕ್ಕಳು.

ಲೇವಿಯರ ಕೆಲಸ

24 ಇವರೇ ಲೇವಿಯರ ಸಂತತಿಯವರು. ಇವರೇ ಆಯಾ ಕುಟುಂಬಗಳ ಪ್ರಧಾನರು. ಇವರಲ್ಲಿ ಇಪ್ಪತ್ತು ವರ್ಷ ಮೊದಲುಗೊಂಡು ಅದಕ್ಕಿಂತ ಮೇಲ್ಪಟ್ಟವರನ್ನು ಮಾತ್ರ ಲೆಕ್ಕಿಸಲಾಯಿತು. ಅವರು ದೇವಾಲಯದಲ್ಲಿ ಸೇವೆಮಾಡಿದರು.

25 ದಾವೀದನು, “ಇಸ್ರೇಲರ ದೇವರಾದ ಯೆಹೋವನು ತನ್ನ ಜನರಿಗೆ ಸಮಾಧಾನವನ್ನು ಅನುಗ್ರಹಿಸಿದ್ದಾನೆ. ದೇವರು ನಿರಂತರವೂ ಜೆರುಸಲೇಮಿನಲ್ಲಿ ವಾಸಿಸಲು ಬಂದಿರುತ್ತಾನೆ. 26 ಆದ್ದರಿಂದ ಇನ್ನು ಮುಂದೆ ಲೇವಿಯರಿಗೆ ದೇವದರ್ಶನ ಗುಡಾರವನ್ನಾಗಲಿ ಅದರ ಸಾಮಾಗ್ರಿಗಳನ್ನಾಗಲಿ ಹೊರುವ ಅವಶ್ಯವಿಲ್ಲ” ಎಂದು ಹೇಳಿದ್ದನು.

27 ದಾವೀದನ ಕೊನೇ ಆಜ್ಞೆಯ ಪ್ರಕಾರ ಲೇವಿ ವಂಶದವರಲ್ಲಿ ಇಪ್ಪತ್ತು ವರ್ಷ ಮೊದಲುಗೊಂಡು ಅದಕ್ಕಿಂತ ಮೇಲ್ಪಟ್ಟವರನ್ನು ಲೆಕ್ಕಿಸಲಾಯಿತು.

28 ಲೇವಿಯರು ಆರೋನನ ಸಂತತಿಯವರಾದ ಯಾಜಕರಿಗೆ ದೇವಾಲಯದಲ್ಲಿ ಸೇವೆಮಾಡಲು ಸಹಾಯ ಮಾಡುತ್ತಿದ್ದರು. ಇದಲ್ಲದೆ ಅವರು ದೇವಾಲಯದ ಹೊರಗಿನ ಅಂಗಳವನ್ನೂ ದೇವಾಲಯದ ಎಡಬಲಗಡೆಗಳಲ್ಲಿದ್ದ ಕೋಣೆಗಳನ್ನೂ ನೋಡಿಕೊಳ್ಳುತ್ತಿದ್ದರು; ಪರಿಶುದ್ಧ ಸಾಮಾಗ್ರಿಗಳನ್ನು ಯಾವಾಗಲೂ ಶುದ್ಧವಾಗಿಡುತ್ತಿದ್ದರು. ಹೀಗೆ ದೇವಾಲಯದ ಸೇವೆಯನ್ನು ಮಾಡುತ್ತಿದ್ದರು. 29 ಮಾತ್ರವಲ್ಲದೆ ಅವರು ಗೋಧಿಹಿಟ್ಟನ್ನು ಅಳೆದು ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿ ದೇವಾಲಯದೊಳಗಿರುವ ಮೇಜಿನ ಮೇಲೆ ಇಡುತ್ತಿದ್ದರು. 30 ಪ್ರತಿದಿನ ಮುಂಜಾನೆ ಮತ್ತು ಸಾಯಂಕಾಲ ದೇವಾಲಯದೊಳಗೆ ಸ್ತುತಿಗೀತೆಗಳನ್ನು ಹಾಡಿ ದೇವರನ್ನು ಮಹಿಮೆಪಡಿಸುತ್ತಿದ್ದರು. 31 ಸಬ್ಬತ್ ದಿನಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ಬೇರೆ ವಿಶೇಷ ದಿನಗಳಲ್ಲಿಯೂ ದೇವರಿಗೆ ಸಮರ್ಪಿಸುವ ಸರ್ವಾಂಗಹೋಮವನ್ನು ತಯಾರು ಮಾಡುತ್ತಿದ್ದರು. ಪ್ರತಿದಿನ ಎಷ್ಟು ಮಂದಿ ಲೇವಿಯರು ಸೇವೆಮಾಡಬೇಕೆಂಬುದನ್ನು ಮೊದಲೇ ಗೊತ್ತುಪಡಿಸಲಾಗಿತ್ತು. 32 ಹೀಗೆ ಲೇವಿಯರು ತಾವು ಮಾಡಬೇಕಾದ ಕೆಲಸಗಳನ್ನೆಲ್ಲಾ ಮಾಡಿದರು. ಅವರು ಪವಿತ್ರ ಗುಡಾರವನ್ನು ಮತ್ತು ಪವಿತ್ರಸ್ಥಳವನ್ನು ನೋಡಿಕೊಂಡರು; ತಮ್ಮ ಸಂಬಂಧಿಕರೂ ಆರೋನನ ಕುಲದವರೂ ಆಗಿದ್ದ ಯಾಜಕರಿಗೆ ಸಹಾಯ ಮಾಡಿದರು.

1 ಪೇತ್ರನು 4

ಮಾರ್ಪಾಟಾದ ಜೀವಿತ

ಕ್ರಿಸ್ತನು ದೇಹಾರೂಢನಾಗಿದ್ದಾಗ ಸಂಕಟಪಟ್ಟನು. ಆದ್ದರಿಂದ ಕ್ರಿಸ್ತನಲ್ಲಿದ್ದ ಮನೋಭಾವವನ್ನೇ ನೀವೂ ಹೊಂದಿದವರಾಗಿ ನಿಮ್ಮನ್ನು ಬಲಪಡಿಸಿಕೊಳ್ಳಿರಿ. ಶಾರೀರಿಕವಾಗಿ ಸಂಕಟವನ್ನು ಅನುಭವಿಸಿದ ವ್ಯಕ್ತಿಯು ಪಾಪದಿಂದ ಮುಕ್ತನಾಗಿದ್ದಾನೆ. ಆದ್ದರಿಂದ ಈ ಲೋಕದಲ್ಲಿ ನೀವು ಜನರ ಅಪೇಕ್ಷೆಗೆ ತಕ್ಕಂತೆ ಕೆಟ್ಟಕಾರ್ಯಗಳನ್ನು ಮಾಡದೆ, ದೇವರು ಅಪೇಕ್ಷಿಸುವಂಥ ಕಾರ್ಯಗಳನ್ನೇ ಮಾಡುತ್ತಾ ಜೀವಿಸಲು ನಿಮ್ಮನ್ನು ಬಲಪಡಿಸಿಕೊಳ್ಳಿರಿ. ಮೊದಲು, ನಂಬಿಕೆಯಿಲ್ಲದ ಜನರು ಮಾಡುವಂತಹ ಕಾರ್ಯಗಳನ್ನು ಮಾಡುತ್ತಾ ಬಹಳ ಕಾಲವನ್ನು ವ್ಯರ್ಥಗೊಳಿಸಿ ಬಿಟ್ಟಿರುವಿರಿ. ನೀವು ಲೈಂಗಿಕ ಪಾಪಗಳನ್ನು ಮಾಡುತ್ತಿದ್ದಿರಿ; ಇಷ್ಟವಾದ ಕೆಟ್ಟಕಾರ್ಯಗಳನ್ನು ಮಾಡುತ್ತಿದ್ದಿರಿ; ಕುಡುಕರಾಗಿದ್ದಿರಿ, ಕ್ರೂರಿಗಳಾಗಿದ್ದಿರಿ; ಅಸಹ್ಯಕರವಾದ ನಿರರ್ಥಕ ಗೋಷ್ಠಿಗಳನ್ನು ಮತ್ತು ಮದ್ಯಪಾನಗೋಷ್ಠಿಗಳನ್ನು ನಡೆಸುತ್ತಿದ್ದಿರಿ; ವಿಗ್ರಹಾರಾಧನೆ ಮಾಡುತ್ತಿದ್ದಿರಿ.

ನೀವು ಅಸಹ್ಯಕರವಾದ ನಿರರ್ಥಕಗೋಷ್ಠಿಗಳನ್ನು ಮಾಡದಿರುವುದನ್ನು ಕಂಡ ಅವಿಶ್ವಾಸಿಗಳು ನಿಮ್ಮ ವಿಷಯದಲ್ಲಿ ಆಶ್ಚರ್ಯಪಡುವರು. ಆದ್ದರಿಂದಲೇ ಅವರು ನಿಮ್ಮ ಬಗ್ಗೆ ಕೆಟ್ಟ ಸಂಗತಿಗಳನ್ನು ಹೇಳುವರು. ಆದರೆ ಅವಿಶ್ವಾಸಿಗಳು ತಾವು ಮಾಡುವ ಕಾರ್ಯಗಳ ಬಗ್ಗೆ ತಾವೇ ವಿವರಣೆಯನ್ನು ನೀಡಬೇಕಾಗುತ್ತದೆ. ಜೀವಂತವಾಗಿರುವ ಮತ್ತು ಸತ್ತಿರುವ ಜನರಿಗೆ ತೀರ್ಪು ನೀಡಲು ಸಿದ್ಧನಾಗಿರುವ ಕ್ರಿಸ್ತನಿಗೆ ಅವರು ವಿವರಣೆ ನೀಡಬೇಕಾಗುವುದು. ಸತ್ತುಹೋಗಿರುವ ಜನರಿಗೂ ಸುವಾರ್ತೆಯನ್ನು ಉಪದೇಶಿಸಲಾಯಿತು. ಅವರು ಶರೀರಸಂಬಂಧವಾಗಿ ಮರಣದಂಡನೆಗೆ ಗುರಿಯಾಗಿದ್ದರೂ ಸಹ ಆತ್ಮ ಸಂಬಂಧವಾಗಿ ದೇವರಂತೆ ಸದಾಕಾಲ ಜೀವಿಸಲೆಂದೇ ಅವರಿಗೆ ಉಪದೇಶಿಸಲಾಯಿತು.

ದೇವರ ವರಗಳಿಗೆ ಉತ್ತಮ ಕಾರ್ಯ ನಿರ್ವಾಹಕರಾಗಿರಿ

ಎಲ್ಲಾ ಸಂಗತಿಗಳೂ ಅಂತ್ಯಗೊಳ್ಳುವ ಕಾಲ ಸಮೀಪಿಸಿದೆ. ನೀವು ವಿವೇಕಿಗಳಾಗಿದ್ದು ನಿಮ್ಮನ್ನು ಹತೋಟಿಯಲ್ಲಿಟ್ಟು ಕೊಳ್ಳಿರಿ. ನೀವು ಪ್ರಾರ್ಥಿಸಲು ಇದು ಸಹಾಯ ಮಾಡುತ್ತದೆ. ನೀವು ಒಬ್ಬರನ್ನೊಬ್ಬರು ಎಡಬಿಡದೆ ಪ್ರೀತಿಸುವುದು ಬಹಳ ಮುಖ್ಯವಾದುದು. ಪ್ರೀತಿಯು ಅನೇಕ ಪಾಪಗಳನ್ನು ಅಡಗಿಸಿಬಿಡುತ್ತದೆ. ಗುಣುಗುಟ್ಟದೆ ಅತಿಥಿಸತ್ಕಾರ ಮಾಡಿರಿ. 10 ನಿಮ್ಮಲ್ಲಿ ಪ್ರತಿಯೊಬ್ಬರೂ ದೇವರಿಂದ ಆತ್ಮಿಕ ವರವನ್ನು ಪಡೆದುಕೊಂಡಿರಿ. ದೇವರು ನಿಮಗೆ ಅನೇಕ ವಿಧಗಳಲ್ಲಿ ತನ್ನ ಕೃಪೆಯನ್ನು ದಯಪಾಲಿಸಿರುವನು. ನೀವು ದೇವರ ವರಗಳನ್ನು ಉಪಯೋಗಿಸುವ ಜವಾಬ್ದಾರಿಯುತರಾದ ಸೇವಕರಾಗಿದ್ದೀರಿ. ಆದ್ದರಿಂದ ಒಳ್ಳೆಯ ಸೇವಕರಾಗಿರಿ; ಪರಸ್ಪರ ಸೇವೆ ಮಾಡಲು ನಿಮ್ಮ ವರಗಳನ್ನು ಉಪಯೋಗಿಸಿರಿ. 11 ಬೋಧಿಸುವವನು ದೇವರ ನುಡಿಗಳನ್ನೇ ಬೋಧಿಸಲಿ. ಸೇವೆ ಮಾಡುವವನು ದೇವರೇ ದಯಪಾಲಿಸಿದ ಶಕ್ತಿಯಿಂದ ಸೇವೆ ಮಾಡಲಿ. ನೀವು ಹೀಗೆ ಮಾಡಿದರೆ, ನೀವು ಮಾಡುವ ಪ್ರತಿಯೊಂದರಲ್ಲೂ ಯೇಸು ಕ್ರಿಸ್ತನ ಮೂಲಕ ದೇವರು ಸ್ತುತಿಸಲ್ಪಡುವನು. ಅಧಿಕಾರವೂ ಮಹಿಮೆಯೂ ಯುಗಯುಗಾಂತರಗಳಲ್ಲಿ ಆತನಿಗೆ ಸೇರಿದವುಗಳಾಗಿವೆ. ಆಮೆನ್.

ಕ್ರೈಸ್ತನಾಗಿ ಸಂಕಟಪಡುವುದು

12 ನನ್ನ ಸ್ನೇಹಿತರೇ, ನೀವು ಈಗ ಅನುಭವಿಸುತ್ತಿರುವ ಸಂಕಟಗಳ ವಿಷಯದಲ್ಲಿ ಆಶ್ಚರ್ಯಪಡದಿರಿ. ಅವು ನಿಮ್ಮ ನಂಬಿಕೆಯನ್ನು ಪರೀಕ್ಷಿಸುತ್ತಿವೆ. ವಿಪರೀತವಾದದ್ದು ನಿಮಗೆ ಸಂಭವಿಸುತ್ತಿದೆಯೆಂದು ಯೋಚಿಸದಿರಿ. 13 ಆದರೆ ನೀವು ಕ್ರಿಸ್ತನ ಸಂಕಟಗಳನ್ನು ಹಂಚಿಕೊಳ್ಳುತ್ತಿರುವುದರಿಂದ ಸಂತೋಷಿಸಿರಿ. ಕ್ರಿಸ್ತನು ತನ್ನ ಮಹಿಮೆಯನ್ನು ತೋರ್ಪಡಿಸುವಾಗ ನೀವು ಸಂತೋಷಪಡುವಿರಿ ಮತ್ತು ಆನಂದಿಸುವಿರಿ. 14 ನೀವು ಕ್ರಿಸ್ತನನ್ನು ಅನುಸರಿಸುತ್ತಿರುವುದರ ನಿಮಿತ್ತವಾಗಿ ನಿಮ್ಮ ಬಗ್ಗೆ ಜನರು ಕೆಟ್ಟದ್ದನ್ನು ನುಡಿದರೆ ನೀವು ಭಾಗ್ಯವಂತರಾಗಿದ್ದೀರಿ. ತೇಜೋಮಯವಾದ ಆತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನೆ. ಆತನು ದೇವರಾತ್ಮನಾಗಿದ್ದಾನೆ. 15 ನೀವು ಕೆಡುಕರಾಗಬಾರದು ಅಂದರೆ ಕೊಲೆಗಾರರಾಗಬಾರದು, ಕಳ್ಳರಾಗಬಾರದು ಮತ್ತು ಇತರರಿಗೆ ತೊಂದರೆ ಕೊಡಬಾರದು. ಇಂಥವುಗಳನ್ನು ಮಾಡುವವನು ಸಂಕಟಕ್ಕೆ ಒಳಗಾಗುವನು. ನಿಮ್ಮಲ್ಲಿ ಯಾರೂ ಆ ರೀತಿಯ ಸಂಕಟಕ್ಕೆ ಒಳಗಾಗಬಾರದು. 16 ನೀವು ಕ್ರೈಸ್ತರಾಗಿರುವುದರಿಂದ ಸಂಕಟಪಟ್ಟರೆ, ನಾಚಿಕೊಳ್ಳಬಾರದು. ಆ (ಕ್ರೈಸ್ತ) ಹೆಸರಿನ ನಿಮಿತ್ತ ನೀವು ದೇವರಿಗೆ ಸ್ತೋತ್ರ ಮಾಡಬೇಕು. 17 ನಿಮ್ಮ ನ್ಯಾಯನಿರ್ಣಯದ ಕಾಲ ಬಂದಿದೆ. ಅದು ದೇವರ ಕುಟುಂಬದಿಂದಲೇ ಆರಂಭವಾಗುವುದು. ನಮ್ಮಲ್ಲಿಯೇ ಅದು ಆರಂಭವಾದರೆ, ದೇವರ ಸುವಾರ್ತೆಗೆ ವಿಧೇಯರಾಗದ ಜನರಿಗೆ ಏನಾಗಬಹುದು?

18 “ನೀತಿವಂತನೇ ರಕ್ಷಣೆ ಹೊಂದಲು ಕಷ್ಟವಾದರೆ,
    ಭಕ್ತಿಹೀನನ ಮತ್ತು ಪಾಪಿಷ್ಠನ ಗತಿಯೇನು?”(A)

19 ಆದ್ದರಿಂದ ದೇವರ ಅಪೇಕ್ಷೆಯಂತೆ ಸಂಕಟಪಡುವವರು ತಮ್ಮ ಜೀವಾತ್ಮಗಳನ್ನು ಆತನಿಗೆ ಒಪ್ಪಿಸಿಕೊಡಬೇಕು. ಅವರನ್ನು ಸೃಷ್ಟಿಸಿದಾತನು ದೇವರೇ. ಆದ್ದರಿಂದ ಅವರು ಆತನಲ್ಲಿ ಭರವಸವಿಡತಕ್ಕದ್ದು. ಹೀಗಿರಲಾಗಿ ಅವರು ಒಳ್ಳೆಯದನ್ನು ಮಾಡುತ್ತಲೇ ಇರಬೇಕು.

ಮೀಕ 2

ಜನರ ದುಷ್ಟ ಯೋಚನೆಗಳು

ಪಾಪಮಾಡಲು ಯೋಚಿಸುವವರಿಗೆ ಸಂಕಟವು ಒದಗುವದು.
    ಇವರು ಹಾಸಿಗೆಯ ಮೇಲೆ ಬಿದ್ದುಕೊಂಡು ಪಾಪಮಾಡಲು ಯೋಚಿಸುತ್ತಾರೆ.
ಬೆಳಿಗ್ಗೆ ಸೂರ್ಯ ಮೂಡಲು ತಾವು ಯೋಚಿಸಿದ ಪಾಪವನ್ನು ಕಾರ್ಯಗತ ಮಾಡುತ್ತಾರೆ.
    ಯಾಕೆ? ಯಾಕೆಂದರೆ ಅವರಿಗೆ ತಮ್ಮ ಇಷ್ಟಪ್ರಕಾರ ನಡೆದುಕೊಳ್ಳಲು ಬಲವಿದೆ.
ಅವರಿಗೆ ಹೊಲಗದ್ದೆಗಳು ಬೇಕು, ಅದನ್ನು ಅವರು ತೆಗೆದುಕೊಳ್ಳುವರು.
    ಅವರಿಗೆ ಮನೆಮಠಗಳು ಬೇಕು, ಅದನ್ನು ಅವರು ತೆಗೆದುಕೊಳ್ಳುವರು.
ಒಬ್ಬನಿಗೆ ಮೋಸಮಾಡಿ ಅವನ ಮನೆಯನ್ನು ಕಿತ್ತುಕೊಳ್ಳುವರು.
    ಇನ್ನೊಬ್ಬನಿಗೆ ಮೋಸಮಾಡಿ ಅವನ ಹೊಲಗದ್ದೆಗಳನ್ನು ಕಿತ್ತುಕೊಳ್ಳುವರು.

ಜನರನ್ನು ಶಿಕ್ಷಿಸಲು ಯೆಹೋವನ ಯೋಜನೆ

ಅದಕ್ಕಾಗಿಯೇ ಯೆಹೋವನು ಹೀಗೆ ಹೇಳುತ್ತಾನೆ:
“ನೋಡಿ, ನಾನು ಈ ಕುಟುಂಬದ ವಿರುದ್ಧವಾಗಿ ಸಂಕಟ ತರಲು ಯೋಚಿಸುತ್ತಿದ್ದೇನೆ.
    ನಿನ್ನನ್ನು ನೀನು ರಕ್ಷಿಸಲು ಸಾಧ್ಯವಿರುವುದಿಲ್ಲ.
ಭಯಂಕರ ದಿವಸಗಳು ಬರುವದರಿಂದ
    ನೀನು ಉಬ್ಬಿಕೊಳ್ಳುವುದನ್ನು ನಿಲ್ಲಿಸುವೆ.
ಆಗ ಜನರು ನಿಮ್ಮ ಬಗ್ಗೆ ಹಾಡನ್ನು ಹಾಡುವರು.
    ಜನರು ಶೋಕಗೀತೆಯನ್ನು ಹಾಡುವರು.
‘ನಾವು ನಾಶವಾದೆವು!
    ಯೆಹೋವನು ನಮ್ಮ ದೇಶವನ್ನು ನಮ್ಮಿಂದ ತೆಗೆದುಕೊಂಡು ಇತರ ಜನರಿಗೆ ಕೊಟ್ಟನು.
ಹೌದು, ಆತನು ನಮ್ಮ ಭೂಮಿಯನ್ನು ನಮ್ಮಿಂದ ತೆಗೆದುಕೊಂಡುಬಿಟ್ಟನು,
    ನಮ್ಮ ಗದ್ದೆಗಳನ್ನು ಯೆಹೋವನು ನಮ್ಮ ವೈರಿಗಳಿಗೆ ಪಾಲು ಮಾಡಿಕೊಟ್ಟನು.
ಈಗ ನಾವು ನಮ್ಮ ದೇಶವನ್ನು ಅಳತೆಮಾಡಿ
    ದೇವಜನರಿಗೆ ಹಂಚಲು ಆಗುವದಿಲ್ಲ.’”

ಮೀಕನನ್ನು ಬೋಧಿಸಬಾರದೆಂದು ಹೇಳಿದ್ದು

ಜನರು, “ನೀನು ನಮಗೆ ಬೋಧಿಸಬೇಡ,
    ಆ ಕೆಟ್ಟವಿಷಯಗಳನ್ನು ನಮಗೆ ಹೇಳಬೇಡ,
    ನಮಗೆ ಯಾವ ಕೆಟ್ಟ ವಿಷಯವೂ ಸಂಭವಿಸುವುದಿಲ್ಲ” ಎಂದು ಹೇಳುತ್ತಾರೆ.

ಆದರೆ ಯಾಕೋಬಿನ ಜನರೇ,
    ನಾನು ನಿಮಗೆ ಹೇಳಲೇಬೇಕು.
ನಿಮ್ಮ ದುಷ್ಟತನದ ನಿಮಿತ್ತ ಯೆಹೋವನು
    ತನ್ನ ತಾಳ್ಮೆಯನ್ನು ಕಳೆದುಕೊಂಡಿದ್ದಾನೆ.
ನೀವು ನ್ಯಾಯವಾದ ರೀತಿಯಲ್ಲಿ ಜೀವಿಸುತ್ತಿದ್ದರೆ
    ನಾನು ನಿಮಗೆ ಒಳ್ಳೆಯ ಸಂಗತಿಗಳನ್ನು ತಿಳಿಸುತ್ತಿದ್ದೆ.
ಆದರೆ ನನಗೆ ವೈರಿಯಂತೆ[a] ಎದ್ದುನಿಂತಿರುವ ನನ್ನ ಜನರೇ,
    ನೀವು ಹಾದುಹೋಗುವವರ ಬಟ್ಟೆಯನ್ನು ಅವರ ಬೆನ್ನಿನ ಮೇಲಿಂದ ಕಿತ್ತುಕೊಳ್ಳುತ್ತೀರಿ.
ನಿಭರ್ಯವಾಗಿ ಓಡಾಡುವ ಜನರಿಂದ
    ಕೈದಿಗಳೋ ಎಂಬಂತೆ ಸುಲಿದುಕೊಳ್ಳುತ್ತೀರಿ.
ನನ್ನ ಜನರು ಸ್ತ್ರೀಯರ ಕೈಯಿಂದ
    ಅಂದವಾದ ಮನೆಗಳನ್ನು ಕಿತ್ತುಕೊಂಡಿದ್ದೀರಿ;
ಅವರ ಚಿಕ್ಕಮಕ್ಕಳಿಂದ ನನ್ನ ಐಶ್ವರ್ಯವನ್ನು
    ನಿರಂತರಕ್ಕೂ ಕಿತ್ತುಕೊಂಡಿದ್ದೀರಿ.
10 ಎದ್ದು ಈ ಸ್ಥಳವನ್ನು ಬಿಟ್ಟುಹೋಗು.
    ಇದು ನಿನ್ನ ವಿಶ್ರಾಂತಿಯ ಸ್ಥಳವಲ್ಲ, ಯಾಕೆಂದರೆ ನೀನು ಇದನ್ನು ಹಾಳು ಮಾಡಿರುವೆ.
ನೀನು ಇದನ್ನು ಹೊಲಸು ಮಾಡಿರುವೆ,
    ಆದ್ದರಿಂದ ಇದು ನಾಶವಾಗುವದು; ಭಯಂಕರ ರೀತಿಯಲ್ಲಿ ಕೆಡವಲ್ಪಡುವದು.

11 ಈ ಜನರು ನನ್ನ ಮಾತುಗಳನ್ನು ಕೇಳಲು ಇಷ್ಟಪಡುವದಿಲ್ಲ.
    ಆದರೆ ಬೇರೊಬ್ಬನ ಸುಳ್ಳು ಮಾತುಗಳನ್ನು ಕೇಳಲು ಇಷ್ಟಪಡುವರು.
ಸುಳ್ಳು ಪ್ರವಾದಿಯು ಬಂದು, “ನಿಮಗೆ ಒಳ್ಳೆಯ ಭವಿಷ್ಯವಿದೆ.
    ಬೇಕಾದಷ್ಟು ದ್ರಾಕ್ಷಾರಸ, ಮದ್ಯವು ನಿಮಗೆ ದೊರಕುವವು” ಎಂದು ಹೇಳಿದರೆ ಅವರು ಅವನನ್ನು ನಂಬಿ ಸ್ವೀಕರಿಸಿಕೊಳ್ಳುವರು.

ಯೆಹೋವನು ತನ್ನ ಜನರನ್ನು ಒಟ್ಟುಗೂಡಿಸುತ್ತಾನೆ

12 ಯಾಕೋಬಿನ ಜನರೇ, ನಾನು ನಿಮ್ಮೆಲ್ಲರನ್ನು ಒಟ್ಟಾಗಿ ಸೇರಿಸುತ್ತೇನೆ.
    ಇಸ್ರೇಲಿನಲ್ಲಿ ಉಳಿದವರನ್ನೆಲ್ಲಾ ಒಟ್ಟುಗೂಡಿಸುತ್ತೇನೆ.
ಹಟ್ಟಿಯೊಳಗೆ ಕುರಿಗಳನ್ನು ಸೇರಿಸುವಂತೆ,
    ಹುಲ್ಲುಗಾವಲಿನಲ್ಲಿ ಕುರಿಮಂದೆ ಸೇರಿಸಲ್ಪಡುವಂತೆ ನಾನು ಅವರನ್ನು ಒಟ್ಟುಗೂಡಿಸುವೆನು.
ಆಗ ಆ ಸ್ಥಳವು ಜನಸಮೂಹದ
    ಗದ್ದಲದಿಂದ ತುಂಬಿಹೋಗುವುದು.
13 ಆಗ ಒಡೆದುಹಾಕುವವನು[b] ಜನಗಳ ಮುಂದೆ ಮುನ್ನುಗ್ಗಿ ಹೋಗಿ,
    ದ್ವಾರಗಳನ್ನು ಒಡೆದುಹಾಕಿದಾಗ ಜನರು ಪಟ್ಟಣವನ್ನು ಬಿಟ್ಟುಹೋಗುವರು.
ಅವರು ತಮ್ಮ ರಾಜನನ್ನೂ ಕರ್ತನನ್ನೂ
    ಹಿಂಬಾಲಿಸಿಕೊಂಡು ಅಲ್ಲಿಂದ ಹೋಗುವರು.

ಲೂಕ 11

ಪ್ರಾರ್ಥನೆಯ ಕುರಿತು ಯೇಸುವಿನ ಉಪದೇಶ

(ಮತ್ತಾಯ 6:9-15)

11 ಒಮ್ಮೆ ಯೇಸು ಒಂದು ಸ್ಥಳದಲ್ಲಿ ಪ್ರಾರ್ಥಿಸುತ್ತಿದ್ದನು. ಯೇಸು ಪ್ರಾರ್ಥನೆ ಮಾಡಿ ಮುಗಿಸಿದಾಗ, ಆತನ ಶಿಷ್ಯರಲ್ಲೊಬ್ಬನು, “ಪ್ರಭುವೇ, ಯೋಹಾನನು ತನ್ನ ಶಿಷ್ಯರಿಗೆ ಪ್ರಾರ್ಥಿಸುವ ವಿಧಾನವನ್ನು ಕಲಿಸಿದಂತೆ, ದಯಮಾಡಿ ನಮಗೂ ಪ್ರಾರ್ಥಿಸುವ ವಿಧಾನವನ್ನು ಹೇಳಿಕೊಡು” ಎಂದನು.

ಯೇಸು ಅವರಿಗೆ ಹೀಗೆಂದನು: “ನೀವು ಹೀಗೆ ಪ್ರಾರ್ಥಿಸಿರಿ:

‘ತಂದೆಯೇ, ನಿನ್ನ ನಾಮವು ಯಾವಾಗಲೂ ಪರಿಶುದ್ಧವಾಗಿರಲಿ.
ನಿನ್ನ ರಾಜ್ಯವು ಬರಲಿ.
ನಮ್ಮ ಅನುದಿನದ ಆಹಾರವನ್ನು ನಮಗೆ ದಯಪಾಲಿಸು.
ನಮಗೆ ತಪ್ಪುಮಾಡಿದವರನ್ನು ನಾವು ಕ್ಷಮಿಸುವಂತೆ
    ನಮ್ಮಪಾಪಗಳನ್ನೂ ಕ್ಷಮಿಸು.
ನಮ್ಮನ್ನು ಶೋಧನೆಗೆ ಒಳಪಡಿಸಬೇಡ.’”

ಎಡಬಿಡದೆ ಪ್ರಾರ್ಥಿಸಿ

(ಮತ್ತಾಯ 7:7-11)

5-6 ಆಗ ಯೇಸು ಅವರಿಗೆ, “ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನೊಬ್ಬನ ಮನೆಗೆ ರಾತ್ರಿ ಬಹಳ ತಡವಾಗಿ ಹೋಗಿದ್ದಾನೆ ಎಂದು ಭಾವಿಸಿಕೊಳ್ಳೋಣ. ಅವನು ತನ್ನ ಸ್ನೇಹಿತನಿಗೆ, ‘ನನ್ನ ಗೆಳೆಯನೊಬ್ಬನು ನನ್ನನ್ನು ನೋಡಲು ದೂರದಿಂದ ನಮ್ಮ ಮನೆಗೆ ಬಂದಿದ್ದಾನೆ. ಆದರೆ ಅವನಿಗೆ ಊಟಕ್ಕೆ ಕೊಡಲು ನನಲ್ಲಿ ಏನೂ ಇಲ್ಲ. ದಯಮಾಡಿ ನನಗೆ ಮೂರು ರೊಟ್ಟಿಗಳನ್ನು ಕೊಡು’ ಎಂದು ಕೇಳುತ್ತಾನೆ. ಮನೆಯೊಳಗಿರುವ ಸ್ನೇಹಿತನು, ‘ಹೊರಟುಹೋಗು! ನನಗೆ ತೊಂದರೆ ಕೊಡಬೇಡ! ಬಾಗಿಲು ಮುಚ್ಚಿದೆ! ನಾನು ಮತ್ತು ನನ್ನ ಮಕ್ಕಳು ಮಲಗಿದ್ದೇವೆ. ಈಗ ಎದ್ದು ನಿನಗೆ ರೊಟ್ಟಿ ಕೊಡಲಾರೆ’ ಎಂದು ಉತ್ತರಕೊಡುತ್ತಾನೆ. ಕೇವಲ ಸ್ನೇಹವೊಂದೇ ಅವನನ್ನು ಏಳಿಸಿ ರೊಟ್ಟಿ ಕೊಡುವಂತೆ ಮಾಡಲಾರದೆಂದು ನಾನು ನಿಮಗೆ ಹೇಳುತ್ತೇನೆ. ಆದರೆ ಅವನು ಎಡಬಿಡದೆ ಕೇಳುತ್ತಲೇ ಇದ್ದರೆ, ಅವನು ಎದ್ದು ತನ್ನ ಸ್ನೇಹಿತನಿಗೆ ಬೇಕಾಗಿರುವ ರೊಟ್ಟಿಯನ್ನು ಖಂಡಿತವಾಗಿ ಕೊಡುವನು. ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ಬೇಡಿಕೊಳ್ಳಿರಿ, ನಿಮಗೆ ದೊರೆಯುವುದು. ಹುಡುಕಿರಿ, ಆಗ ನೀವು ಕಂಡುಕೊಳ್ಳುವಿರಿ. ತಟ್ಟಿರಿ, ಆಗ ನಿಮಗೆ ಬಾಗಿಲು ತೆರೆಯುವುದು. 10 ಹೌದು, ಎಡಬಿಡದೆ ಬೇಡಿಕೊಳ್ಳುವವನಿಗೆ ದೊರೆಯುವುದು. ಎಡಬಿಡದೆ ಹುಡುಕುವವನು ಕಂಡುಕೊಳ್ಳುವನು. ಒಬ್ಬನು ಎಡಬಿಡದೆ ತಟ್ಟುತ್ತಿದ್ದರೆ, ಅವನಿಗೆ ಬಾಗಿಲು ತೆರೆಯಲ್ಪಡುವುದು. 11 ನಿಮ್ಮಲ್ಲಿ ಎಷ್ಟು ಜನರು ತಂದೆಗಳಾಗಿದ್ದೀರಿ? ನಿಮ್ಮ ಮಗನು ಮೀನನ್ನು ಕೇಳಿದರೆ, ನೀವು ಅವನಿಗೆ ಹಾವನ್ನು ಕೊಡುವಿರೋ? ಇಲ್ಲ! ನೀವು ಮೀನನ್ನೇ ಕೊಡುತ್ತೀರಿ. 12 ನಿಮ್ಮ ಮಗನು ಮೊಟ್ಟೆಯನ್ನು ಕೇಳಿದರೆ, ನೀವು ಅವನಿಗೆ ಚೇಳನ್ನು ಕೊಡುವಿರೋ? ಇಲ್ಲ! 13 ನೀವು ಇತರ ಜನರಂತೆ ಕೆಟ್ಟವರಾಗಿದ್ದೀರಿ. ಆದರೆ ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡುತ್ತೀರಿ. ಅದೇ ರೀತಿಯಲ್ಲಿ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ತನ್ನನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮನನ್ನು ಖಂಡಿತವಾಗಿ ಕೊಡುತ್ತಾನೆ” ಎಂದು ಹೇಳಿದನು.

ಯೇಸುವಿನ ಶಕ್ತಿ ದೇವರಿಂದ ಬಂದದ್ದು

(ಮತ್ತಾಯ 12:22-30; ಮಾರ್ಕ 3:20-27)

14 ಒಮ್ಮೆ ಯೇಸು ಮೂಕದೆವ್ವದಿಂದ ಪೀಡಿತನಾಗಿದ್ದ ಒಬ್ಬನನ್ನು ಬಿಡಿಸುತ್ತಿದ್ದನು. ಆ ದೆವ್ವವು ಅವನನ್ನು ಬಿಟ್ಟು ಹೊರಗೆ ಬಂದಾಗ ಅವನು ಮಾತಾಡಿದನು. ಇದನ್ನು ಕಂಡ ಜನರು ಬೆರಗಾದರು. 15 ಆದರೆ ಕೆಲವರು, “ದೆವ್ವದಿಂದ ಪೀಡಿತರಾಗಿರುವವರನ್ನು ಇವನು ಬೆಲ್ಜೆಬೂಲನ ಶಕ್ತಿಯಿಂದ ಬಿಡಿಸುತ್ತಾನೆ. ಬೆಲ್ಜೆಬೂಲನು ದೆವ್ವಗಳ ಅಧಿಪತಿ” ಎಂದು ಹೇಳಿದರು.

16 ಇತರ ಜನರು ಯೇಸುವನ್ನು ಪರೀಕ್ಷಿಸಬೇಕೆಂದು ದೇವರಿಂದ ಒಂದು ಸೂಚಕಕಾರ್ಯವನ್ನು ನಮಗೆ ತೋರಿಸು ಎಂದು ಕೇಳಿದರು. 17 ಆದರೆ ಅವರ ಆಲೋಚನೆಯನ್ನು ತಿಳಿದಿದ್ದ ಯೇಸು ಅವರಿಗೆ, “ಒಡೆದುಹೋದ ಮತ್ತು ತನಗೆ ವಿರುದ್ಧವಾಗಿ ತಾನೇ ಕಾದಾಡುವ ರಾಜ್ಯವು ನಾಶವಾಗುವುದು. ಭೇದಭಾವದಿಂದ ಕೂಡಿರುವ ಕುಟುಂಬವು ಮುರಿದು ಹೋಗುವುದು. 18 ಅಂತೆಯೇ, ಸೈತಾನನು ತನಗೆ ವಿರುದ್ಧವಾಗಿ ತಾನೇ ಕಾದಾಡಿದರೆ ಅವನ ರಾಜ್ಯವು ಮುಂದುವರಿಯಲು ಹೇಗೆ ಸಾಧ್ಯ? ನಾನು ದೆವ್ವಗಳನ್ನು ಬೆಲ್ಜೆಬೂಲನ ಶಕ್ತಿಯಿಂದ ಬಿಡಿಸುತ್ತೇನೆಂದು ನೀವು ಹೇಳುತ್ತೀರಿ. 19 ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾಗಿದ್ದರೆ, ನಿಮ್ಮ ಜನರು ದೆವ್ವಗಳನ್ನು ಯಾವ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನಿಮ್ಮ ಸ್ವಂತ ಜನರೇ ನಿಮ್ಮನು ತಪ್ಪಿತಸ್ಥರೆಂದು ಹೇಳುತ್ತಾರೆ. 20 ಆದರೆ ನಾನು ದೆವ್ವಗಳನ್ನು ದೇವರ ಬಲದಿಂದ ಹೊರಡಿಸುವುದಾದರೆ ದೇವರ ರಾಜ್ಯವು ನಿಮ್ಮ ಬಳಿಗೆ ಬಂದಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ.

21 “ಒಬ್ಬ ಬಲಿಷ್ಠನು ಅನೇಕ ಆಯುಧಗಳಿಂದ ಸುಸಜ್ಜಿತನಾಗಿ ತನ್ನ ಮನೆಯನ್ನು ಕಾಯುತ್ತಿರುವಾಗ, ಮನೆಯೊಳಗಿರುವ ವಸ್ತುಗಳು ಸುರಕ್ಷಿತವಾಗಿರುತ್ತವೆ. 22 ಆದರೆ ಅವನಿಗಿಂತಲೂ ಬಲಿಷ್ಠನಾದ ಮತ್ತೊಬ್ಬನು ಬಂದು ಅವನನ್ನು ಸೋಲಿಸಿದರೆ, ಮೊದಲನೆಯ ಬಲಿಷ್ಠನು ತನ್ನ ಮನೆಯನ್ನು ಸುರಕ್ಷಿತವಾಗಿಡುವುದಕ್ಕಾಗಿ ಅವಲಂಬಿಸಿಕೊಂಡಿದ್ದ ಆಯುಧಗಳನ್ನೆಲ್ಲಾ ಆ ಮತ್ತೊಬ್ಬ ಬಲಿಷ್ಠನು ತೆಗೆದುಕೊಂಡು ಹೋಗುವನು. ಬಳಿಕ ಆ ಮತ್ತೊಬ್ಬ ಬಲಿಷ್ಠನು ಆ ಮನುಷ್ಯನ ವಸ್ತುಗಳನ್ನು ತನಗೆ ಇಷ್ಟಬಂದ ಹಾಗೆ ಮಾಡುವನು.

23 “ನನ್ನೊಂದಿಗಿಲ್ಲದವನು ನನಗೆ ವಿರೋಧವಾಗಿದ್ದಾನೆ. ನನ್ನೊಂದಿಗೆ ಶೇಖರಿಸದವನು ಚದರಿಸುವವನಾಗಿದ್ದಾನೆ.

ಬರಿದಾದ ಹೃದಯ

(ಮತ್ತಾಯ 12:43-45)

24 “ದೆವ್ವವು ಒಬ್ಬ ವ್ಯಕ್ತಿಯಿಂದ ಹೊರಗೆ ಬಂದ ಮೇಲೆ ವಿಶ್ರಾಂತಿಗಾಗಿ ಸ್ಥಳವನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ಅಲೆದಾಡುತ್ತದೆ. ಆದರೆ ವಿಶ್ರಮಿಸಿಕೊಳ್ಳಲು ಅದಕ್ಕೆ ಸ್ಥಳ ದೊರೆಯುವುದಿಲ್ಲ. ಆದ್ದರಿಂದ ‘ನಾನು ಬಿಟ್ಟುಬಂದ ಮನೆಗೆ (ವ್ಯಕ್ತಿ) ಹಿಂತಿರುಗುವೆನು’ ಎಂದುಕೊಳ್ಳುತ್ತದೆ. 25 ಅದು ಆ ವ್ಯಕ್ತಿಯ ಬಳಿಗೆ ಹಿಂತಿರುಗಿ ಬಂದಾಗ, ಆ ಮನೆಯನ್ನು (ವ್ಯಕ್ತಿ) ಗುಡಿಸಿ ಅಲಂಕರಿಸಿರುವುದನ್ನು ಕಾಣುತ್ತದೆ. 26 ಆಗ ಹೊರಟುಹೋಗಿ ತನಗಿಂತಲೂ ಹೆಚ್ಚು ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುತ್ತದೆ. ಬಳಿಕ ಆ ದೆವ್ವಗಳೆಲ್ಲಾ ಆ ಮನುಷ್ಯನೊಳಗೆ ಹೋಗಿ ಅಲ್ಲೇ ವಾಸಿಸುತ್ತವೆ. ಆಗ ಆ ವ್ಯಕ್ತಿಯು ಮೊದಲಿಗಿಂತಲೂ ಹೆಚ್ಚಿನ ಸಂಕಟಕ್ಕೆ ಒಳಗಾಗುತ್ತಾನೆ” ಎಂದು ಹೇಳಿದನು.

ನಿಜವಾದ ಭಾಗ್ಯವಂತರು

27 ಯೇಸು ಈ ಸಂಗತಿಗಳನ್ನು ಹೇಳಿದಾಗ, ಅಲ್ಲಿ, ಜನರೊಂದಿಗಿದ್ದ ಒಬ್ಬ ಸ್ತ್ರೀ ಯೇಸುವಿಗೆ, “ನಿನ್ನನ್ನು ಹೆತ್ತು ಪೋಷಿಸಿದ ತಾಯಿ ಭಾಗ್ಯವಂತಳೇ ಸರಿ!” ಎಂದು ಹೇಳಿದಳು.

28 ಆದರೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದಕ್ಕೆ ವಿಧೇಯರಾಗುವ ಜನರೇ ಭಾಗ್ಯವಂತರು!” ಎಂದನು.

ನಮಗೆ ಸಾಕ್ಷಿ ಕೊಡು!

(ಮತ್ತಾಯ 12:38-42; ಮಾರ್ಕ 8:12)

29 ಜನರ ಗುಂಪು ದೊಡ್ಡದಾಗುತ್ತಿರಲು ಯೇಸು ಅವರಿಗೆ, “ಈ ಸಂತತಿಯು ಕೆಟ್ಟ ಸಂತತಿಯೇ ಸರಿ! ಇದು ಸೂಚಕಕಾರ್ಯವನ್ನು ನೋಡಬೇಕೆನ್ನುತ್ತದೆ. ಆದರೆ ಯೋನನ ಜೀವಿತದಲ್ಲಾದ ಸೂಚಕಕಾರ್ಯದ ಹೊರತು ಬೇರೆ ಯಾವುದೂ ಇದಕ್ಕೆ ದೊರೆಯುವುದಿಲ್ಲ. 30 ನಿನೆವೆಯಲ್ಲಿ ಜೀವಿಸುತ್ತಿದ್ದ ಜನರಿಗೆ ಯೋನನು ಒಂದು ಸೂಚನೆಯಾಗಿದ್ದನು. ಅದೇ ರೀತಿಯಲ್ಲಿ ಈ ಕಾಲದ ಜನರಿಗೆ ಮನುಷ್ಯಕುಮಾರನು ಸೂಚನೆಯಾಗಿದ್ದಾನೆ.

31 “ನ್ಯಾಯತೀರ್ಪಿನ ದಿನದಲ್ಲಿ ದಕ್ಷಿಣ ದೇಶದ ರಾಣಿಯು ಈ ಪೀಳಿಗೆಯವರೊಂದಿಗೆ ಎದ್ದುನಿಂತು ಇವರನ್ನು ಅಪರಾಧಿಗಳೆಂದು ಹೇಳುವಳು. ಏಕೆಂದರೆ ಆ ರಾಣಿಯು ಬಹುದೂರದಿಂದ ಸೊಲೊಮೋನನ ಜ್ಞಾನಬೋಧನೆಯನ್ನು ಕೇಳಲು ಬಂದಳು. ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಾನು ಸೊಲೊಮೋನನಿಗಿಂತಲೂ ಹೆಚ್ಚಿನವನಾಗಿದ್ದೇನೆ!

32 “ನ್ಯಾಯತೀರ್ಪಿನ ದಿನದಲ್ಲಿ ನಿನೆವೆ ಪಟ್ಟಣದವರು ಈ ಸಂತತಿಗೆ ಎದುರಾಗಿ ನಿಂತು ಇವರನ್ನು ಅಪರಾಧಿಗಳೆಂದು ತೋರಿಸುವರು. ಏಕೆಂದರೆ ಅವರು ಪ್ರವಾದಿಯಾದ ಯೋನನ ಬೋಧನೆಯನ್ನು ಕೇಳಿ ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡರು. ಆದರೆ ನಾನು ಪ್ರವಾದಿ ಯೋನನಿಗಿಂತಲೂ ಹೆಚ್ಚಿನವನಾಗಿದ್ದೇನೆ.

ಲೋಕಕ್ಕೆ ಬೆಳಕಾಗಿರಿ!

(ಮತ್ತಾಯ 5:15; 6:22-23)

33 “ದೀಪವನ್ನು ಹಚ್ಚಿ ಪಾತ್ರೆಯೊಳಗಾಗಲಿ ಬೇರೆ ಎಲ್ಲೇ ಆಗಲಿ ಅಡಗಿಸಿಡುವುದಿಲ್ಲ. ಒಳಗೆ ಬರುವವರಿಗೆ ಬೆಳಕು ಕಾಣಿಸಲೆಂದು ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. 34 ನಿನ್ನ ಕಣ್ಣು ದೇಹಕ್ಕೆ ಬೆಳಕಾಗಿದೆ, ನಿನ್ನ ಕಣ್ಣು ಒಳ್ಳೆಯದಾಗಿದ್ದರೆ, ನಿನ್ನ ದೇಹವೆಲ್ಲಾ ಪೂರ್ಣ ಬೆಳಕಾಗಿರುವುದು. ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ, ನಿನ್ನ ದೇಹವೆಲ್ಲಾ ಪೂರ್ಣಕತ್ತಲಾಗಿರುವುದು. 35 ಆದ್ದರಿಂದ ಎಚ್ಚರಿಕೆಯಾಗಿರು! ನಿನ್ನೊಳಗಿರುವ ಬೆಳಕು ಕತ್ತಲಾಗದಂತೆ ನೋಡಿಕೊ. 36 ನಿನ್ನ ದೇಹವೆಲ್ಲಾ ಬೆಳಕಿನಿಂದ ತುಂಬಿದ್ದು ಯಾವ ಭಾಗದಲ್ಲಿಯೂ ಕತ್ತಲಿಲ್ಲದಿದ್ದರೆ ನೀನು ಪ್ರಜ್ವಲಿಸುವ ಬೆಳಕಿನಂತಿರುವೆ” ಎಂದು ಹೇಳಿದನು.

ಯೇಸು ಫರಿಸಾಯರನ್ನು ಖಂಡಿಸಿದನು

(ಮತ್ತಾಯ 23:1-36; ಮಾರ್ಕ 12:38-40; ಲೂಕ 20:45-47)

37 ಯೇಸು ಮಾತಾಡಿ ಮುಗಿಸಿದ ಮೇಲೆ ಫರಿಸಾಯನೊಬ್ಬನು ಯೇಸುವನ್ನು ತನ್ನ ಮನೆಗೆ ಊಟಕ್ಕೆ ಬರಬೇಕೆಂದು ಕರೆದನು. ಆದ್ದರಿಂದ ಯೇಸು ಅವನ ಮನೆಯೊಳಗೆ ಹೋಗಿ ಊಟಕ್ಕೆ ಕುಳಿತುಕೊಂಡನು. 38 ಆದರೆ ಯೇಸು ತನ್ನ ಕೈಗಳನ್ನು ತೊಳೆದುಕೊಳ್ಳದೆ ಊಟಕ್ಕೆ ಕುಳಿತಿರುವುದನ್ನು ಕಂಡಾಗ ಫರಿಸಾಯನಿಗೆ ಆಶ್ಚರ್ಯವಾಯಿತು. 39 ಪ್ರಭುವು (ಯೇಸು) ಅವನಿಗೆ ಹೇಳಿದ್ದೇನೆಂದರೆ: “ಫರಿಸಾಯರಾದ ನೀವು ಪಾತ್ರೆಯ ಮತ್ತು ಬಟ್ಟಲಿನ ಹೊರಭಾಗವನ್ನು ಶುಚಿಮಾಡುತ್ತೀರಿ. ಆದರೆ ನಿಮ್ಮ ಒಳಭಾಗವು ಮೋಸದಿಂದಲೂ ಕೆಟ್ಟತನದಿಂದಲೂ ತುಂಬಿಹೋಗಿದೆ. 40 ನೀವು ಬುದ್ಧಿಹೀನರು! ಹೊರಭಾಗವನ್ನು ಮಾಡಿದಾತನೇ (ದೇವರು) ಒಳಭಾಗವನ್ನೂ ಮಾಡಿದ್ದಾನೆ. 41 ಆದ್ದರಿಂದ ಪಾತ್ರೆ ಮತ್ತು ಬಟ್ಟಲುಗಳ ಒಳಗಿರುವುದನ್ನು ಬಡವರಿಗೆ ದಾನಮಾಡಿರಿ. ಆಗ ನೀವು ಪೂರ್ಣಶುದ್ಧರಾಗುತ್ತೀರಿ.

42 “ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ದೇವರಿಗೆ ನಿಮ್ಮಲ್ಲಿರುವ ಪ್ರತಿಯೊಂದರಲ್ಲಿಯೂ ಹತ್ತನೆಯ ಒಂದು ಭಾಗವನ್ನು ಕೊಡುತ್ತೀರಿ. ನಿಮ್ಮ ತೋಟದಲ್ಲಿ ಬೆಳೆಯುವ ಮರುಗ, ಸದಾಪು ಮುಂತಾದ ಚಿಕ್ಕ ಸಸಿಗಳಲ್ಲಿಯೂ ಹತ್ತನೆಯ ಒಂದು ಭಾಗವನ್ನು ಕೊಡುತ್ತೀರಿ. ಆದರೆ ಬೇರೆಯವರಿಗೆ ನ್ಯಾಯತೋರಿಸುವುದನ್ನೂ ದೇವರನ್ನು ಪ್ರೀತಿಸುವುದನ್ನೂ ಮರೆತುಬಿಟ್ಟಿದ್ದೀರಿ. ನೀವು ಮೊದಲು ಇವುಗಳನ್ನು ಮಾಡಬೇಕು ಮತ್ತು ಉಳಿದವುಗಳನ್ನು ಕಡೆಗಣಿಸಬಾರದು.

43 “ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಸಭಾಮಂದಿರಗಳಲ್ಲಿ ಉನ್ನತಪೀಠಗಳನ್ನೂ ಮಾರುಕಟ್ಟೆಗಳಲ್ಲಿ ಜನರಿಂದ ಗೌರವವನ್ನೂ ಆಶಿಸುತ್ತೀರಿ. 44 ನೀವು ಮರೆಯಾಗಿರುವ ಸಮಾಧಿಗಳಂತಿದ್ದೀರಿ. ಜನರು ಸಮಾಧಿಗಳೆಂದು ತಿಳಿಯದೆ ಅವುಗಳ ಮೇಲೆ ನಡೆಯುತ್ತಾರೆ.”

ಧರ್ಮೋಪದೇಶಕನಿಗೆ ಯೇಸು ನೀಡಿದ ಉತ್ತರ

45 ಧರ್ಮೋಪದೇಶಕನೊಬ್ಬನು ಯೇಸುವಿಗೆ, “ಬೋಧಕನೇ, ನೀನು ಫರಿಸಾಯರ ಕುರಿತಾಗಿ ಈ ಸಂಗತಿಗಳನ್ನು ಹೇಳಿದಾಗ ನಮ್ಮನ್ನು ಸಹ ಖಂಡಿಸಿದಂತಾಯಿತು” ಎಂದು ಹೇಳಿದನು.

46 ಅದಕ್ಕೆ ಯೇಸು, “ಧರ್ಮೋಪದೇಶಕರೇ, ನಿಮ್ಮ ಗತಿಯನ್ನು ಏನು ಹೇಳಲಿ! ಜನರು ಅನುಸರಿಸಲಾಗದ ನಿಯಮಗಳನ್ನು ನೀವು ಮಾಡುತ್ತೀರಿ.[a] ಆ ನಿಯಮಗಳಿಗೆ ವಿಧೇಯರಾಗುವಂತೆ ಬೇರೆಯವರಿಗೆ ಬಲವಂತ ಮಾಡುತ್ತೀರಿ. ಆದರೆ ಆ ನಿಯಮಗಳಲ್ಲಿ ಒಂದನ್ನಾದರೂ ಪಾಲಿಸಲು ನೀವು ಪ್ರಯತ್ನಿಸುವುದಿಲ್ಲ. 47 ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಪ್ರವಾದಿಗಳಿಗೆ ಗೋರಿಗಳನ್ನು[b] ಕಟ್ಟುತ್ತೀರಿ. ಆದರೆ ಆ ಪ್ರವಾದಿಗಳನ್ನು ಕೊಂದವರು ನಿಮ್ಮ ಪಿತೃಗಳೇ! 48 ಇದರಿಂದಾಗಿ, ನಿಮ್ಮ ಪಿತೃಗಳು ಮಾಡಿದ ಕೃತ್ಯಗಳನ್ನು ನೀವು ಒಪ್ಪಿಕೊಂಡಿದ್ದೀರೆಂಬುದನ್ನು ಎಲ್ಲಾ ಜನರಿಗೆ ತೋರಿಸುತ್ತೀರಿ. ಅವರು ಪ್ರವಾದಿಗಳನ್ನು ಕೊಂದರು. ನೀವು ಆ ಪ್ರವಾದಿಗಳಿಗಾಗಿ ಗೋರಿಗಳನ್ನು ಕಟ್ಟುತ್ತೀರಿ! 49 ಆದಕಾರಣ ದೇವರ ಜ್ಞಾನವು ಹೇಳಿದ್ದೇನೆಂದರೆ, ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಅಪೊಸ್ತಲರನ್ನೂ ಕಳುಹಿಸುವೆನು. ನನ್ನ ಕೆಲವು ಪ್ರವಾದಿಗಳು ಮತ್ತು ಅಪೊಸ್ತಲರು ಕೆಡುಕರಿಂದ ಹತರಾಗುವರು. ಬೇರೆ ಕೆಲವರು ಸಂಕಟಕ್ಕೆ ಗುರಿಯಾಗುವರು.’

50 “ಆದ್ದರಿಂದ ಲೋಕಾದಿಯಿಂದ ಹತರಾದ ಎಲ್ಲಾ ಪ್ರವಾದಿಗಳ ಸಾವಿಗೆ ಈ ಕಾಲದ ಜನರಾದ ನೀವು ದಂಡನೆ ಹೊಂದುವಿರಿ. 51 ಹೇಬೆಲನನ್ನು ಕೊಂದದ್ದಕ್ಕಾಗಿಯೂ ಜಕರೀಯನನ್ನು ಕೊಂದದ್ದಕ್ಕಾಗಿಯೂ ನಿಮಗೆ ದಂಡನೆಯಾಗುವುದು. ಜಕರೀಯನನ್ನು ಯಜ್ಞವೇದಿ ಮತ್ತು ದೇವಾಲಯದ ನಡುವೆ ಕೊಲ್ಲಲಾಯಿತು. ಹೌದು, ಅವರೆಲ್ಲರ ಕೊಲೆಗಳಿಗಾಗಿ ಈಗ ಜೀವಿಸುತ್ತಿರುವ ನಿಮಗೆ ದಂಡನೆ ಆಗುವುದು.

52 “ಧರ್ಮೋಪದೇಶಕರೇ, ನಿಮ್ಮ ಗತಿಯನ್ನು ಏನು ಹೇಳಲಿ! ದೇವರ ಕುರಿತಾಗಿ ಕಲಿಯಲು ಸಾಧನವಾಗಿರುವ ಬೀಗದ ಕೈಯನ್ನು ನೀವು ಬಚ್ಚಿಟ್ಟಿದ್ದೀರಿ. ನೀವೂ ಕಲಿಯುವುದಿಲ್ಲ, ಬೇರೆಯವರಿಗೂ ಕಲಿಯಲು ಬಿಡುವುದಿಲ್ಲ” ಎಂದು ಹೇಳಿದನು.

53 ಯೇಸು ಅಲ್ಲಿಂದ ಹೊರಟಾಗ ಧರ್ಮೋಪದೇಶಕರು ಮತ್ತು ಫರಿಸಾಯರು ಆತನಿಗೆ ಮತ್ತಷ್ಟು ತೊಂದರೆ ಕೊಡಲು ಪ್ರಾರಂಭಿಸಿದರು. ಅವರು ಅನೇಕ ಸಂಗತಿಗಳ ಕುರಿತು ಪ್ರಶ್ನೆಗಳನ್ನು ಕೇಳಿ, ಆತನಿಂದ ಉತ್ತರ ಹೇಳಿಸುವುದಕ್ಕೆ ಪ್ರಯತ್ನಿಸಿದರು. 54 ಯೇಸುವನ್ನು ಮಾತಿನಲ್ಲಿ ಹಿಡಿಯಬೇಕೆಂದು ಯೋಚಿಸಿ, ಆತನು ಏನಾದರೂ ತಪ್ಪು ಹೇಳುವಂತೆ ಮಾಡಲು ಪ್ರಯತ್ನಿಸುತ್ತಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International