M’Cheyne Bible Reading Plan
ಒಡಂಬಡಿಕೆಯ ಪೆಟ್ಟಿಗೆಯನ್ನು ಹಿಂದಕ್ಕೆ ತರಲು ಮಾಡಿದ ತೀರ್ಮಾನ
13 ದಾವೀದನು ತನ್ನ ಎಲ್ಲಾ ಸೇನಾಧಿಪತಿಗಳೊಂದಿಗೆ ಮಾತನಾಡಿದನು. ಅವನು ಸಹಸ್ರಾಧಿಪತಿಗಳೊಂದಿಗೆ, ಶತಾಧಿಪತಿಗಳೊಂದಿಗೆ ಮತ್ತು ಪ್ರತಿಯೊಬ್ಬ ನಾಯಕನೊಂದಿಗೆ ಚರ್ಚಿಸಿದನು. 2 ಆಮೇಲೆ ಇಸ್ರೇಲ್ ಜನರನ್ನು ಕರೆದು ಅವರಿಗೆ ಹೀಗೆಂದನು: “ಇದು ನಿಮಗೆ ಒಳ್ಳೆಯ ಆಲೋಚನೆ ಎನಿಸಿದರೆ ಮತ್ತು ಇದು ಯೆಹೋವನ ಚಿತ್ತಕ್ಕನುಸಾರವಾಗಿದ್ದರೆ, ಇಸ್ರೇಲಿನ ಎಲ್ಲಾ ಸ್ಥಳಗಳಲ್ಲಿರುವ ನಮ್ಮ ಸಹೋದರರಿಗೆ ಒಂದು ಸಂದೇಶವನ್ನು ಕಳುಹಿಸೋಣ. ನಮ್ಮ ಸಹೋದರರೊಂದಿಗೆ ಊರುಗಳಲ್ಲಿಯೂ ಊರುಗಳ ಸಮೀಪದಲ್ಲಿರುವ ಹೊಲಗಳಲ್ಲಿಯೂ ವಾಸವಾಗಿರುವ ಯಾಜಕರಿಗೂ ಲೇವಿಯರಿಗೂ ಈ ಸಂದೇಶವನ್ನು ಕಳುಹಿಸಿಕೊಡೋಣ: ನೀವು ಬಂದು ನಮ್ಮೊಂದಿಗೆ ಸೇರಿಕೊಳ್ಳಿ. 3 ನಾವೆಲ್ಲರೂ ಹೋಗಿ ಒಡಂಬಡಿಕೆಯ ಪೆಟ್ಟಿಗೆಯನ್ನು ಜೆರುಸಲೇಮಿಗೆ ತರೋಣ. ಸೌಲನು ಅರಸನಾಗಿದ್ದಾಗ ನಾವು ಒಡಂಬಡಿಕೆಯ ಪೆಟ್ಟಿಗೆಯ ಬಗ್ಗೆ ಆಸಕ್ತಿವಹಿಸಲಿಲ್ಲ.” 4 ಆದ್ದರಿಂದ ಇಸ್ರೇಲರೆಲ್ಲರೂ ದಾವೀದನ ಸಲಹೆಗೆ ಒಪ್ಪಿದರು ಮತ್ತು ಅದು ಯೋಗ್ಯವಾದದ್ದೆಂದು ತೀರ್ಮಾನಿಸಿದರು.
5 ಆಗ ದಾವೀದನು ಈಜಿಪ್ಟಿನ ಶೀಹೋರ್ ನದಿಯಿಂದ ಹಿಡಿದು ಲೆಬೊಹಮಾತ್ ಪಟ್ಟಣದ ತನಕ ಇದ್ದ ಇಸ್ರೇಲರನ್ನೆಲ್ಲಾ ಒಟ್ಟು ಸೇರಿಸಿದನು; ಅವರೆಲ್ಲರೂ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಕಿರ್ಯತ್ಯಾರೀಮಿನಿಂದ ತರಲು ಹೊರಟರು. 6 ಇಸ್ರೇಲಿನ ಎಲ್ಲಾ ಜನರು ದಾವೀದನೊಂದಿಗೆ ಯೆಹೂದದ ಬಾಳಾ ಎಂಬ ಸ್ಥಳಕ್ಕೆ (ಕೀರ್ಯಾತ್ಯಾರೀಮಿನ ಇನ್ನೊಂದು ಹೆಸರು ಬಾಳಾ.) ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ತರಲು ನಡೆದರು. ಆತನು ಕೆರೂಬಿಗಳ ನಡುವೆ ಆಸೀನನಾಗಿರುತ್ತಾನೆ. ಆ ಪೆಟ್ಟಿಗೆಯು ಯೆಹೋವನ ಹೆಸರಿನಲ್ಲಿ ಕರೆಯಲ್ಪಡುತ್ತದೆ.
7 ಅಬೀನಾದಾಬನ ಮನೆಯಲ್ಲಿದ್ದ ಒಡಂಬಡಿಕೆಯ ಪೆಟ್ಟಿಗೆಯನ್ನು ಜನರು ಎತ್ತಿ ಒಂದು ಹೊಸ ಬಂಡಿಯಲ್ಲಿಟ್ಟರು. ಉಜ್ಜನೂ ಅಹಿಯೋವನೂ ಆ ಬಂಡಿಯನ್ನು ನಡೆಸಿದರು.
8 ದಾವೀದನೂ ಎಲ್ಲಾ ಇಸ್ರೇಲರೂ ದೇವರ ಮುಂದೆ ಸಂತೋಷದಿಂದ ಹಾಡುತ್ತಾ ಕುಣಿಯುತ್ತಾ ಹೋದರು. ಹಾರ್ಪ್‌ವಾದ್ಯವನ್ನು, ಲೈರ್‌ವಾದ್ಯವನ್ನು, ತಬಲವನ್ನು, ತಾಳವನ್ನು ಮತ್ತು ತುತ್ತೂರಿಯನ್ನು ಬಾರಿಸುತ್ತಾ ಹಾಡುತ್ತಾ ದೇವರಿಗೆ ಸ್ತೋತ್ರ ಮಾಡಿದರು.
9 ಅವರು ಕೀದೋನನ ಕಣಕ್ಕೆ ಬಂದಾಗ ಗಾಡಿ ಎಳೆಯುತ್ತಿದ್ದ ಎತ್ತುಗಳು ಮುಗ್ಗರಿಸಿದವು. ಆಗ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯು ಬೀಳುವುದರಲ್ಲಿತ್ತು. ಉಜ್ಜನು ತನ್ನ ಕೈಯನ್ನು ಚಾಚಿ ಪೆಟ್ಟಿಗೆಯನ್ನು ಹಿಡಿಯಲು ಹೋದನು. 10 ಆದರೆ ಯೆಹೋವನು ಅವನ ಮೇಲೆ ಕೋಪಗೊಂಡು ಆ ಪವಿತ್ರವಾದ ಪೆಟ್ಟಿಗೆಯನ್ನು ಮುಟ್ಟಿದ್ದಕ್ಕೆ ಅವನನ್ನು ಅಲ್ಲಿಯೇ ಸಾಯಿಸಿದನು. 11 ದಾವೀದನು ಇದನ್ನು ನೋಡಿ ತುಂಬಾ ಬೇಸರಗೊಂಡನು. ಆ ಸಮಯದಿಂದ ಈ ತನಕವೂ ಆ ಸ್ಥಳಕ್ಕೆ, “ಪೆರೆಚ್‌ಉಜ್ಜ” ಎಂಬ ಹೆಸರೇ ಇದೆ.
12 ಆ ದಿವಸದಲ್ಲಿ ದಾವೀದನು ಯೆಹೋವನಿಗೆ ತುಂಬಾ ಭಯಪಟ್ಟು, “ನಾನು ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಜೆರುಸಲೇಮಿಗೆ ತರಲು ಆಗುವುದಿಲ್ಲ” ಅಂದುಕೊಂಡನು. 13 ದಾವೀದನು ದೇವರಿಗೆ ಭಯಪಟ್ಟನು. ದೇವರ ಒಡಂಬಡಿಕೆಯ ಪೆಟ್ಟಿಗೆಯನ್ನು ಓಬೇದೆದೋಮನ ಮನೆಯಲ್ಲಿಯೇ ಬಿಟ್ಟನು. ಓಬೇದೆದೋಮನು ಗತ್ ಊರಿನವನು. 14 ಆ ಮನೆಯಲ್ಲಿ ದೇವರ ಒಡಂಬಡಿಕೆಯ ಪೆಟ್ಟಿಗೆಯು ಮೂರು ತಿಂಗಳ ಕಾಲವಿತ್ತು. ಯೆಹೋವನು ಆ ಮನೆಯನ್ನು ಆಶೀರ್ವದಿಸಿ ಅಭಿವೃದ್ಧಿಪಡಿಸಿದನು.
ದಾವೀದನ ರಾಜ್ಯವಿಸ್ತರಣೆ
14 ತೂರ್ ಪಟ್ಟಣದ ರಾಜನಾದ ಹೀರಾಮನು ದಾವೀದನ ಬಳಿಗೆ ತನ್ನ ಸಂದೇಶಕರನ್ನು ಕಳುಹಿಸಿದನು. ಇವರೊಂದಿಗೆ ದೇವದಾರು ಮರದ ತೊಲೆಗಳನ್ನು, ಕಲ್ಲುಕುಟಿಗರನ್ನು ಮತ್ತು ಬಡಗಿಯರನ್ನು ಕಳುಹಿಸಿದನು. ದಾವೀದನಿಗೊಂದು ಮನೆಯನ್ನು ಕಟ್ಟಲು ಇವರನ್ನು ಕಳುಹಿಸಿದನು. 2 ದೇವರು ತನ್ನನ್ನು ಇಸ್ರೇಲರ ಅರಸನನ್ನಾಗಿ ಆಗಲೇ ಮಾಡಿದ್ದಾನೆಂದು ದಾವೀದನಿಗೆ ತಿಳಿದುಬಂತು. ಆತನು ದಾವೀದನ ಸಾಮ್ರಾಜ್ಯವನ್ನು ವಿಸ್ತರಿಸಿ ಬಲಿಷ್ಠಗೊಳಿಸಿದನು. ಯೆಹೋವನು ದಾವೀದನನ್ನೂ ಇಸ್ರೇಲರನ್ನೂ ಪ್ರೀತಿಸಿದ್ದರಿಂದ ಹಾಗೆ ಮಾಡಿದನು.
3 ಜೆರುಸಲೇಮಿನಲ್ಲಿ ದಾವೀದನು ಇನ್ನೂ ಹಲವು ಸ್ತ್ರೀಯರನ್ನು ಮದುವೆಯಾದನು. ಅವನಿಗೆ ಅನೇಕ ಗಂಡುಹೆಣ್ಣು ಮಕ್ಕಳು ಹುಟ್ಟಿದರು. 4 ಜೆರುಸಲೇಮಿನಲ್ಲಿ ಅವನಿಗೆ ಹುಟ್ಟಿದ ಮಕ್ಕಳು ಯಾರೆಂದರೆ: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ, 5 ಇಬ್ಹಾರ್, ಎಲೀಷೂವ, ಎಲ್ಪೆಲೆಟ್, 6 ನೋಗಹ, ನೆಫೆಗ್, ಯಾಫೀಯ, 7 ಎಲೀಷಾಮಾ, ಬೇಲ್ಯಾದ ಮತ್ತು ಎಲೀಫೆಲೆಟ್.
ದಾವೀದನು ಫಿಲಿಷ್ಟಿಯರನ್ನು ಸೋಲಿಸಿದ್ದು
8 ದಾವೀದನು ಇಸ್ರೇಲರ ಅರಸನಾಗಿ ಆರಿಸಲ್ಪಟ್ಟಿದ್ದನ್ನು ಕೇಳಿ ಎಲ್ಲಾ ಫಿಲಿಷ್ಟಿಯರು ಅವನೊಂದಿಗೆ ಯುದ್ಧಮಾಡಲು ಬಂದರು. ದಾವೀದನು ಇದನ್ನು ಅರಿತು ಯುದ್ಧಸನ್ನದ್ಧನಾಗಿ ಫಿಲಿಷ್ಟಿಯರ ವಿರುದ್ಧವಾಗಿ ಯುದ್ಧಕ್ಕೆ ಹೊರಟನು. 9 ಫಿಲಿಷ್ಟಿಯರು ರೆಫಾಯೀಮ್ ತಗ್ಗಿನಲ್ಲಿ ವಾಸಿಸುತ್ತಿದ್ದ ಇಸ್ರೇಲರ ಮೇಲೆ ದಾಳಿಮಾಡಿ ಅವರದನ್ನೆಲ್ಲಾ ದೋಚಿಕೊಂಡರು. 10 ದಾವೀದನು ಯೆಹೋವನಿಗೆ, “ನಾನು ಫಿಲಿಷ್ಟಿಯರ ಸಂಗಡ ಯುದ್ಧಕ್ಕೆ ಹೋಗಬಹುದೇ?” ಎಂದು ವಿಚಾರಿಸಲಾಗಿ ಯೆಹೋವನು ಅವನಿಗೆ, “ಹೋಗು, ನಾನು ನಿನಗೆ ಫಿಲಿಷ್ಟಿಯರ ಮೇಲೆ ಜಯ ಕೊಡುವೆನು” ಎಂದು ಹೇಳಿದನು.
11 ಆಗ ದಾವೀದನೂ ಅವನ ಸಂಗಡಿಗರೂ ಬಾಳ್ ಪೆರಾಚೀಮ್ ಎಂಬ ಸ್ಥಳದವರೆಗೆ ಹೋಗಿ ಫಿಲಿಷ್ಟಿಯರನ್ನು ನಾಶಮಾಡಿದನು. “ದೇವರು ಕಟ್ಟೆಯೊಡೆದ ಪ್ರವಾಹದಂತೆ ತನ್ನ ಶತ್ರುಗಳ ಮೇಲೆ ದಾಳಿಮಾಡಿ ಅವರನ್ನು ನನ್ನ ಮುಖಾಂತರವಾಗಿ ನಾಶಮಾಡಿದ್ದಾನೆ” ಎಂದು ದಾವೀದನು ಹೇಳಿದನು. ಆದ್ದರಿಂದ ಆ ಸ್ಥಳಕ್ಕೆ ಬಾಳ್‌ಪೆರಾಚೀಮ್ ಎಂದು ಹೆಸರಾಯಿತು. 12 ಫಿಲಿಷ್ಟಿಯರು ತಮ್ಮ ವಿಗ್ರಹಗಳನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದರು. ದಾವೀದನು ಅವುಗಳನ್ನೆಲ್ಲಾ ಒಟ್ಟುಸೇರಿಸಿ ಸುಡಿಸಿಬಿಟ್ಟನು.
ಫಿಲಿಷ್ಟಿಯರ ಮೇಲೆ ಇನ್ನೊಂದು ಜಯ
13 ಫಿಲಿಷ್ಟಿಯರು ಮತ್ತೆ ರೆಫಾಯೀಮ್ ತಗ್ಗಿನಲ್ಲಿ ವಾಸಮಾಡುತ್ತಿದ್ದ ಇಸ್ರೇಲರ ಮೇಲೆ ದಾಳಿಮಾಡಿದರು. 14 ದಾವೀದನು ಮತ್ತೆ ಯೆಹೋವನಿಗೆ ಪ್ರಾರ್ಥಿಸಿ ವಿಚಾರಿಸಿದನು. ಯೆಹೋವನು ಅವನ ಪ್ರಾರ್ಥನೆಗೆ ಉತ್ತರಕೊಟ್ಟು, “ದಾವೀದನೇ, ಫಿಲಿಷ್ಟಿಯರನ್ನು ಬೆಟ್ಟದ ಮೇಲೆ ನೀನು ಹಿಂಬಾಲಿಸದಿರು. ಅವರ ಹಿಂದಿನಿಂದ ಹೋಗಿ ಬಾಲ್ಸಾಮ್ ಮರಗಳ ಹಿಂದೆ ಅವಿತುಕೊಂಡಿರು. 15 ಒಬ್ಬ ಕಾವಲುಗಾರನನ್ನು ಮರಕ್ಕೆ ಹತ್ತಿಸು; ಫಿಲಿಷ್ಟಿಯರು ಬರುವ ಸಪ್ಪಳ ಕೇಳಿದೊಡನೆ ಅವರ ಮೇಲೆ ದಾಳಿಮಾಡು. ನಾನು ನಿನ್ನ ಮುಂದಾಗಿ ಹೋಗಿ ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವೆನು” ಎಂದು ಹೇಳಿದನು. 16 ಯೆಹೋವನು ಹೇಳಿದಂತೆಯೇ ದಾವೀದನು ಮಾಡಿದನು. ದಾವೀದನೂ ಅವನ ಸೈನಿಕರೂ ಫಿಲಿಷ್ಟಿಯರನ್ನು ಸೋಲಿಸಿ ಗಿಬ್ಯೋನಿನಿಂದ ಹಿಡಿದು ಗೆಜೆರ್ ಪಟ್ಟಣದವರೆಗೂ ಅವರನ್ನು ಕೊಲ್ಲುತ್ತಾ ಹೋದರು. 17 ಹೀಗೆ ದಾವೀದನು ಎಲ್ಲಾ ದೇಶಗಳಲ್ಲಿ ಹೆಸರುವಾಸಿಯಾದನು. ಎಲ್ಲಾ ಜನಾಂಗಗಳವರು ಅವನಿಗೆ ಭಯಪಡುವಂತೆ ಯೆಹೋವನು ಮಾಡಿದನು.
1 ದೇವರ ಮತ್ತು ಪ್ರಭುವಾದ ಯೇಸು ಕ್ರಿಸ್ತನ ಸೇವಕನಾದ ಯಾಕೋಬನು ಲೋಕದಲ್ಲೆಲ್ಲಾ ಚದರಿಹೋಗಿರುವ (ಇಸ್ರೇಲಿನ) ಹನ್ನೆರಡು ಕುಲದವರಿಗೆ ಬರೆದ ಪತ್ರ. ನಿಮಗೆ ಶುಭವಾಗಲಿ.
ನಂಬಿಕೆ ಮತ್ತು ಜ್ಞಾನ
2 ನನ್ನ ಸಹೋದರ ಸಹೋದರಿಯರೇ, ನಿಮಗೆ ಅನೇಕ ತೊಂದರೆಗಳು ಬರುತ್ತವೆ. ಆದರೆ ಅವುಗಳು ಬಂದಾಗ ನೀವು ಬಹಳ ಸಂತೋಷಪಡಬೇಕು. 3 ಏಕೆಂದರೆ ಅವುಗಳು ನಿಮ್ಮ ನಂಬಿಕೆಯನ್ನು ಪರಿಶೋಧಿಸಲು ಬಂದಿವೆ ಎಂಬುದು ನಿಮಗೆ ತಿಳಿದದೆ. ಅವು ನಿಮ್ಮಲ್ಲಿ ತಾಳ್ಮೆಯನ್ನು ಉಂಟುಮಾಡುತ್ತವೆ. 4 ತಾಳ್ಮೆಯು ತನ್ನ ಕಾರ್ಯವನ್ನು ಪೂರೈಸಲಿ. ಆಗ ನೀವು ನಿಷ್ಕಳಂಕರೂ ಮತ್ತು ಪರಿಪೂರ್ಣರೂ ಆಗುವಿರಿ ಮತ್ತು ನಿಮಗೆ ಬೇಕಾದುದೆಲ್ಲವೂ ದೊರೆಯುವುದು.
5 ಆದರೆ ನಿಮ್ಮಲ್ಲಿ ಯಾರಿಗಾದರೂ ಜ್ಞಾನವು ಬೇಕಾಗಿದ್ದರೆ ಅಂಥವರು ದೇವರಲ್ಲಿ ಕೇಳಿಕೊಳ್ಳಲಿ. ದೇವರು ಉದಾರಿಯಾಗಿರುವುದರಿಂದ ಮತ್ತು ಎಲ್ಲಾ ಜನರಿಗೆ ಸಂತೋಷದಿಂದ ಕೊಡುವುದರಿಂದ ನಿಮಗೆ ಜ್ಞಾನವನ್ನು ದಯಪಾಲಿಸುತ್ತಾನೆ. 6 ಆದರೆ ನೀವು ದೇವರನ್ನು ಕೇಳಿಕೊಳ್ಳುವಾಗ ಆತನಲ್ಲಿ ನಿಮಗೆ ನಂಬಿಕೆಯಿರಬೇಕು. ದೇವರ ಬಗ್ಗೆ ಸಂದೇಹಪಡದಿರಿ. ಸಂದೇಹಪಡುವವನು ಸಾಗರದಲ್ಲಿನ ಅಲೆಯಂತಿದ್ದಾನೆ. ಗಾಳಿಯು ಬೀಸಿದಾಗ ಅಲೆಯು ಮೇಲೆದ್ದು ಬೀಳುತ್ತದೆ. ಸಂದೇಹಪಡುವವನು ಆ ಅಲೆಯಂತಿರುವನು. 7-8 ಅವನು ಒಂದೇ ಕಾಲದಲ್ಲಿ ಎರಡು ರೀತಿಯ ಸಂಗತಿಗಳನ್ನು ಯೋಚಿಸುತ್ತಾನೆ. ಅವನು ತಾನು ಮಾಡುವ ಯಾವುದೇ ಕಾರ್ಯದಲ್ಲಾಗಲಿ ಒಂದು ತೀರ್ಮಾನಕ್ಕೆ ಬರಲಾರನು. ಅಂಥವನು ತನಗೆ ಪ್ರಭುವಿನಿಂದ ಏನಾದರೂ ದೊರೆಯುತ್ತದೆ ಎಂದು ಯೋಚಿಸದಿರಲಿ.
ನಿಜ ಶ್ರೀಮಂತಿಕೆ
9 ಬಡವನಾಗಿರುವ ವಿಶ್ವಾಸಿಯು ಹೆಮ್ಮೆಪಡಲಿ, ಏಕೆಂದರೆ ದೇವರು ಅವನನ್ನು ಆತ್ಮಿಕ ವಿಷಯದಲ್ಲಿ ಐಶ್ವರ್ಯವಂತನನ್ನಾಗಿ ಮಾಡಿದ್ದಾನೆ. 10 ಐಶ್ವರ್ಯವಂತನಾಗಿರುವ ವಿಶ್ವಾಸಿಯೂ ಹೆಮ್ಮೆಪಡಬೇಕು. ಏಕೆಂದರೆ ಆತ್ಮಿಕ ವಿಷಯದಲ್ಲಿ ಅವನಿಗಿರುವ ಬಡತನವನ್ನು ದೇವರು ಅವನಿಗೆ ತೋರಿಸಿಕೊಟ್ಟಿದ್ದಾನೆ. ಐಶ್ವರ್ಯವಂತನು ಹುಲ್ಲಿನ ಹೂವಿನಂತೆ ಗತಿಸುವನು. 11 ಸೂರ್ಯನು ಮೇಲೇರಿದಂತೆ ಬಿಸಿಲು ಹೆಚ್ಚಾಗುವುದು. ಸೂರ್ಯನ ತಾಪದಿಂದ ಗಿಡಗಳು ಒಣಗಿಹೋಗುವವು; ಹೂವುಗಳು ಉದುರಿ ಹೋಗುವವು. ಹೂವು ಸುಂದರವಾಗಿತ್ತು, ಆದರೆ ಈಗ ಅದು ಒಣಗಿಹೋಯಿತು. ಐಶ್ವರ್ಯವಂತನಿಗೂ ಇದೇ ರೀತಿಯಾಗುವುದು. ಅವನು ತನ್ನ ವ್ಯಾಪಾರದ ಬಗ್ಗೆ ಯೋಜನೆಗಳನ್ನು ಮಾಡುತ್ತಿರುವಾಗಲೇ ಸತ್ತುಹೋಗುವನು.
ಶೋಧನೆಯು ದೇವರಿಂದ ಬರುವುದಿಲ್ಲ
12 ಶೋಧನೆಯನ್ನು ಎದುರಿಸುತ್ತಿದ್ದರೂ ದೃಢವಾಗಿರುವವನೇ ಧನ್ಯನು. ಏಕೆಂದರೆ ಅವನು ತನ್ನ ನಂಬಿಕೆಯನ್ನು ನಿರೂಪಿಸಿದಾಗ, ಜೀವವೆಂಬ ಜಯಮಾಲೆಯನ್ನು ಹೊಂದುವನು. ದೇವರು ತನ್ನನ್ನು ಪ್ರೀತಿಸುವ ಜನರಿಗೆಲ್ಲರಿಗೂ ಇದನ್ನು ವಾಗ್ದಾನ ಮಾಡಿದ್ದಾನೆ. 13 ಶೋಧನೆಗೆ ಗುರಿಯಾಗಿರುವ ವ್ಯಕ್ತಿಯು, “ದೇವರು ನನ್ನನ್ನು ಶೋಧಿಸುತ್ತಿದ್ದಾನೆ” ಎಂದು ಹೇಳಬಾರದು. ಕೆಟ್ಟದ್ದು ದೇವರನ್ನು ಶೋಧಿಸಲಾರದು. ದೇವರು ತಾನಾಗಿಯೇ ಯಾರನ್ನೂ ಶೋಧಿಸುವುದಿಲ್ಲ. 14 ಶೋಧನೆಗೆ ಗುರಿಯಾಗಿರುವವನು ತಾನು ಇಷ್ಟಪಡುವ ಕೆಟ್ಟಕಾರ್ಯಗಳಿಂದಲೇ ಶೋಧನೆಗೆ ಒಳಗಾಗಿದ್ದಾನೆ. ಅವನ ಕೆಟ್ಟ ಆಸೆಗಳೇ ಅವನನ್ನು ದೂರ ಸೆಳೆದು, ಬಿಡದೆ ಹಿಡಿದುಕೊಳ್ಳುತ್ತವೆ. 15 ಈ ಆಸೆಗಳು ಅವನಿಂದ ಪಾಪವನ್ನು ಮಾಡಿಸುತ್ತದೆ. ನಂತರ ಪಾಪವು ಬೆಳೆದು ಸಾವನ್ನು ತರುತ್ತದೆ.
16 ನನ್ನ ಪ್ರಿಯ ಸಹೋದರ ಸಹೋದರಿಯರೇ, ಈ ವಿಷಯದಲ್ಲಿ ನೀವು ಮೋಸಹೋಗಬೇಡಿರಿ. 17 ಎಲ್ಲಾ ಒಳ್ಳೆಯ ದಾನಗಳೂ ಕುಂದಿಲ್ಲದ ವರಗಳೂ, ಎಲ್ಲಾ ಬೆಳಕುಗಳಿಗೆ (ಸೂರ್ಯ, ಚಂದ್ರ, ನಕ್ಷತ್ರಗಳು) ಮೂಲ ಕಾರಣನಾದ ಸೃಷ್ಟಿ ಕರ್ತನಿಂದ ಬರುತ್ತವೆ. ದೇವರು ಬದಲಾಗುವುದಿಲ್ಲ. ಆತನು ಎಲ್ಲಾ ಕಾಲದಲ್ಲಿಯೂ ಒಂದೇ ರೀತಿಯಲ್ಲಿರುತ್ತಾನೆ. 18 ದೇವರು ಸತ್ಯವಾಕ್ಯದ ಮೂಲಕ ನಮಗೆ ಜೀವವನ್ನು ದಯಪಾಲಿಸಲು ತೀರ್ಮಾನಿಸಿದ್ದಾನೆ. ತನ್ನಿಂದ ಸೃಷ್ಟಿಸಲ್ಪಟ್ಟ ಎಲ್ಲಾ ವಸ್ತುಗಳಲ್ಲಿಯೂ ನಾವು ಅತ್ಯಂತ ಮುಖ್ಯರಾಗಬೇಕೆಂಬುದೇ ಆತನ ಅಪೇಕ್ಷೆ.
ಕೇಳುವಿಕೆ ಮತ್ತು ವಿಧೇಯತೆ
19 ನನ್ನ ಸಹೋದರ ಸಹೋದರಿಯರೇ, ಯಾವಾಗಲೂ ಮಾತನಾಡುವುದಕ್ಕಿಂತ ಕೇಳುವುದರಲ್ಲಿ ಆಸಕ್ತರಾಗಿರಿ. ಸುಲಭವಾಗಿ ಕೋಪಗೊಳ್ಳದಿರಿ. 20 ಒಬ್ಬ ವ್ಯಕ್ತಿಯ ಕೋಪವು ದೇವರು ಅಪೇಕ್ಷಿಸಿದಂತೆ ಯೋಗ್ಯ ಜೀವನವನ್ನು ನಡೆಸಲು ಅವನಿಗೆ ಸಹಾಯಕವಾಗುವುದಿಲ್ಲ. 21 ಆದ್ದರಿಂದ ಎಲ್ಲಾ ನೀಚತನವನ್ನೂ ದುಷ್ಟತನವನ್ನೂ ನಿಮ್ಮ ಜೀವನದಿಂದ ದೂರತಳ್ಳಿರಿ. ನಿಮ್ಮ ಹೃದಯದಲ್ಲಿ ಬೇರೂರಿರುವ ದೇವರ ವಾಕ್ಯವನ್ನು ದೀನತೆಯಿಂದ ಒಪ್ಪಿಕೊಳ್ಳಿರಿ. ಅದು ನಿಮ್ಮ ಆತ್ಮಗಳನ್ನು ರಕ್ಷಿಸುತ್ತದೆ.
22 ದೇವರ ವಾಕ್ಯವನ್ನು ಕೇವಲ ಕೇಳುವವರಾಗಿರದೆ ಅದನ್ನು ಕಾರ್ಯರೂಪಕ್ಕೆ ತನ್ನಿರಿ. ಇಲ್ಲವಾದರೆ ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳುವಿರಿ. 23 ದೇವರ ವಾಕ್ಯವನ್ನು ಕೇಳಿಯೂ ಅದರಂತೆ ನಡೆಯದವನು ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಂಡವನಂತಿರುವನು. 24 ಅವನು ಅಲ್ಲಿಂದ ಹೊರಟು ಹೋಗಿ, ತಾನು ಹೇಗಿದ್ದೇನೆಂಬುದನ್ನು ಬೇಗನೆ ಮರೆತುಬಿಡುತ್ತಾನೆ. 25 ಜನರನ್ನು ಬಿಡುಗಡೆ ಮಾಡುವ ದೇವರ ಪರಿಪೂರ್ಣ ನಿಯಮವನ್ನು ಎಚ್ಚರಿಕೆಯಿಂದ ಅಭ್ಯಾಸ ಮಾಡುವವನು ನಿಜವಾಗಿಯೂ ಸಂತೋಷಭರಿತನಾಗಿದ್ದಾನೆ. ಅವನು ಅದನ್ನು ಅಭ್ಯಾಸ ಮಾಡುತ್ತಲೇ ಇರುತ್ತಾನೆ. ಅವನು ದೇವರ ವಾಕ್ಯವನ್ನು ಕೇಳುತ್ತಾನೆ ಮತ್ತು ತಾನು ಕೇಳಿದ್ದನ್ನು ಮರೆತುಬಿಡುವುದಿಲ್ಲ. ಅವನು ದೇವರ ವಾಕ್ಯಕ್ಕೆ ವಿಧೇಯನಾಗಿರುತ್ತಾನೆ. ಆದ್ದರಿಂದಲೇ ಅವನು ಸಂತೋಷಭರಿತನಾಗಿರುತ್ತಾನೆ.
ದೇವರನ್ನು ಆರಾಧಿಸತಕ್ಕ ನಿಜವಾದ ಮಾರ್ಗ
26 ಸದ್ಭಕ್ತನೆಂದು ತನ್ನ ಬಗ್ಗೆ ಹೇಳಿಕೊಳ್ಳುವವನು ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆಹೋದರೆ ಅವನು ತನ್ನನ್ನು ತಾನೇ ಮೋಸಗೊಳಿಸಿಕೊಂಡಂತಾಗುವುದು. ಅವನ “ಭಕ್ತಿ”ಗೆ ಬೆಲೆಯಿಲ್ಲ. 27 ದೇವರು ಒಪ್ಪಿಕೊಳ್ಳುವ ಭಕ್ತಿಯು ಹೀಗಿದೆ: ಕೊರತೆಯಲ್ಲಿರುವ ಅನಾಥರನ್ನೂ ವಿಧವೆಯರನ್ನೂ ನೋಡಿಕೊಳ್ಳುವುದು ಮತ್ತು ಲೋಕದ ಕೆಟ್ಟತನದಿಂದ ಪ್ರಭಾವಿತರಾಗದಂತೆ ಅದರಿಂದ ದೂರವಿರುವುದು. ದೇವರು ಇಂಥ ಭಕ್ತಿಯನ್ನು ಪರಿಶುದ್ಧವಾದದ್ದೆಂದೂ ಒಳಿತಾದದ್ದೆಂದೂ ಪರಿಗಣಿಸಿ ಸ್ವೀಕರಿಸಿಕೊಳ್ಳುವನು.
ಮಾಗಿದ ಹಣ್ಣಿನ ದರ್ಶನ
8 ಯೆಹೋವನು ನನಗೆ ಇದನ್ನು ತೋರಿಸಿದನು: ನಾನು ಒಂದು ಪುಟ್ಟಿ ಬೇಸಿಗೆಯ ಹಣ್ಣುಗಳನ್ನು ಕಂಡೆನು. 2 ಯೆಹೋವನು ನನಗೆ, “ಆಮೋಸನೇ, ನೀನು ಏನನ್ನು ನೋಡುತ್ತೀ?” ಎಂದು ಕೇಳಿದನು.
ಅದಕ್ಕೆ ನಾನು, “ಒಂದು ಪುಟ್ಟಿ ಬೇಸಿಗೆಯ ಹಣ್ಣುಗಳು” ಎಂದು ಹೇಳಿದೆನು.
ಆಗ ಯೆಹೋವನು ನನಗೆ, “ನನ್ನ ಜನರಾದ ಇಸ್ರೇಲರಿಗೆ ಅಂತ್ಯಕಾಲವು ಬಂದಿದೆ. ಇನ್ನು ಮೇಲೆ ನಾನು ಅವರನ್ನು ಸುಮ್ಮನೆ ಬಿಡುವುದಿಲ್ಲ. 3 ನನ್ನ ಆಲಯದಲ್ಲಿ ಹಾಡುವ ಹಾಡುಗಳು ಮರಣದ ಶೋಕಗೀತೆಗಳಾಗುವವು. ಇವು ಕರ್ತನಾದ ಯೆಹೋವನ ನುಡಿಗಳು. ಸತ್ತಹೆಣಗಳು ಎಲ್ಲೆಲ್ಲಿಯೂ ಬಿದ್ದುಕೊಂಡಿರುವವು. ಜನರು ಮೌನದಿಂದಿದ್ದು ಸತ್ತವರನ್ನು ಎತ್ತಿ ರಾಶಿಗೆ ಬಿಸಾಡುವರು.”
ಇಸ್ರೇಲಿನ ವರ್ತಕರಿಗೆ ಹಣ ಸಂಪಾದಿಸುವದೇ ಗುರಿ
4 ನನ್ನ ಮಾತುಗಳನ್ನು ಕೇಳಿರಿ! ಜನರೇ, ನೀವು ಬಡವರ ಮೇಲೆ ನಡೆದಾಡುತ್ತೀರಿ.
ಈ ದೇಶದ ಬಡಜನರನ್ನು ನಾಶಮಾಡುತ್ತೀರಿ.
5 ವರ್ತಕರಾದ ನೀವು ಹೇಳುವುದೇನೆಂದರೆ,
“ಅಮಾವಾಸ್ಯೆ ಯಾವಾಗ ಮುಗಿಯುವುದು?
ಆಗ ನಾವು ಧಾನ್ಯವನ್ನು ಮಾರಾಟ ಮಾಡುವೆವು.
ಸಬ್ಬತ್ ಯಾವಾಗ ಮುಗಿಯುವುದು?
ಆಗ ನಾವು ನಮ್ಮ ಗೋದಿಯನ್ನು ಮಾರಾಟ ಮಾಡಲು ತರುವೆವು.
ಅದರ ಬೆಲೆಯನ್ನು ಅಧಿಕಗೊಳಿಸಿ
ಅಳತೆಯನ್ನು ಕಡಿಮೆ ಮಾಡುವೆವು.
ತ್ರಾಸನ್ನು ಕಡಿಮೆ ಮಾಡಿ
ಜನರಿಗೆ ಮೋಸ ಮಾಡುವೆವು.
6 ಬಡಜನರಿಗೆ ಸಾಲ ಸಂದಾಯ ಮಾಡಲು ಸಾಧ್ಯವಾಗದಿರುವದರಿಂದ
ಅವರನ್ನು ನಾವು ಗುಲಾಮರನ್ನಾಗಿ ತೆಗೆದುಕೊಳ್ಳೋಣ.
ಒಂದು ಜೊತೆ ಚಪ್ಪಲಿಯ ಕ್ರಯಕೊಟ್ಟು
ಅವರನ್ನು ಖರೀದಿಸೋಣ.
ಮತ್ತು ನೆಲದಲ್ಲಿ ಬಿದ್ದ ಗೋದಿಯನ್ನು
ಒಟ್ಟುಗೂಡಿಸಿ ಮಾರೋಣ.”
7 ಯೆಹೋವನು “ಯಾಕೋಬನ ಮಹಿಮೆ” ಎಂಬ ತನ್ನ ಹೆಸರಿನ ಮೇಲೆ ಆಣೆಯಿಟ್ಟು ವಾಗ್ದಾನ ಮಾಡಿದ್ದಾನೆ.
“ಆ ಜನರು ಮಾಡಿದ ಕೃತ್ಯಗಳನ್ನು ನಾನು ಎಂದಿಗೂ ಮರೆಯುವುದಿಲ್ಲ.
8 ಅದರ ಸಲುವಾಗಿ ಇಡೀ ದೇಶವು ಅಲುಗಾಡುವದು.
ಸತ್ತವರಿಗಾಗಿ ದೇಶದ ಪ್ರತಿ ನಿವಾಸಿಯೂ ರೋಧಿಸುವನು.
ಈಜಿಪ್ಟಿನ ನೈಲ್ ನದಿಯ ರೀತಿಯಲ್ಲಿ ದೇಶವು ತಿರುಗುಮುರುಗಾಗುವುದು.”
9 ಯೆಹೋವನು ಹೀಗೆನ್ನುತ್ತಾನೆ,
“ಆ ದಿವಸಗಳಲ್ಲಿ ನಡುಮಧ್ಯಾಹ್ನದಲ್ಲಿಯೇ ಸೂರ್ಯನನ್ನು ಮುಳುಗುವಂತೆ ಮಾಡುವೆನು.
ಶುಭ್ರವಾದ ಹಗಲಿನಲ್ಲಿ ಕತ್ತಲು ಉಂಟಾಗುವಂತೆ ಮಾಡುವೆನು.
10 ನಿಮ್ಮ ಸಂತಸದ ದಿವಸಗಳನ್ನು ಸತ್ತವರಿಗಾಗಿ ರೋದಿಸುವ ದಿವಸಗಳನ್ನಾಗಿ ಮಾಡುವೆನು.
ನಿಮ್ಮ ಹಾಡುಗಳೆಲ್ಲಾ ಶೋಕಗೀತೆಯಾಗುವವು.
ಎಲ್ಲರೂ ಶೋಕಬಟ್ಟೆಯನ್ನು ಧರಿಸುವಂತೆ ಮಾಡುವೆನು.
ಪ್ರತಿ ತಲೆಯನ್ನು ಬೋಳು ತಲೆಯನ್ನಾಗಿ ಮಾಡುವೆನು.
ಒಬ್ಬನೇ ಮಗನನ್ನು ಕಳೆದುಕೊಳ್ಳುವಾಗ ರೋದಿಸುವ ಹಾಗೆ
ಗಟ್ಟಿಯಾಗಿ ರೋದಿಸುವಂತೆ ಮಾಡುತ್ತೇನೆ.
ಅದರ ಅಂತ್ಯ ಕಹಿಯಾಗಿರುವುದು.”
ದೇವರ ವಾಕ್ಯಕ್ಕಾಗಿ ಅತಿಯಾದ ಹಸಿವೆಯಿಂದ ಕೇಳುವ ದಿವಸಗಳು ಬರುವವು
11 ಯೆಹೋವನು ಹೇಳುವುದೇನೆಂದರೆ,
“ನಿಮ್ಮ ದೇಶದಲ್ಲಿ ಹಸಿವೆಯ
ದಿವಸಗಳನ್ನು ಬರಮಾಡುವೆನು.
ಜನರು ರೊಟ್ಟಿಗಾಗಿ ಹಸಿಯುವುದಿಲ್ಲ.
ನೀರಿಗಾಗಿ ಬಾಯಾರುವದಿಲ್ಲ.
ಇಲ್ಲ! ಜನರು ಯೆಹೋವನ ವಾಕ್ಯಕ್ಕಾಗಿ ಹಸಿವೆಯುಳ್ಳವರಾಗುವರು.
12 ಮೃತ್ಯುಸಮುದ್ರದಿಂದ ಮೆಡಿಟರೇನಿಯನ್ ಸಮುದ್ರದ ತನಕ,
ಉತ್ತರದಿಂದ ಪೂರ್ವದಿಕ್ಕಿನ ತನಕ ಜನರು
ಯೆಹೋವನ ಸಂದೇಶಕ್ಕಾಗಿ ಹಾತೊರೆಯುತ್ತಾ ಅಲೆದಾಡುವರು.
ಆದರೆ ಅವರು ಕಂಡುಕೊಳ್ಳುವುದಿಲ್ಲ.
13 ಆ ಸಮಯದಲ್ಲಿ ಸುಂದರವಾದ
ತರುಣತರುಣಿಯರು ದಾಹದಿಂದ ಬಳಲುವರು.
14 ಆ ಜನರು ಸಮಾರ್ಯದ ಪಾಪದ[a] ಮೇಲೆ ಆಣೆಯಿಡುವರು,
‘ದಾನೇ, ನಿನ್ನ ದೇವರಾಣೆ ….’
‘ಬೇರ್ಷೆಬದ ದೇವರಾಣೆ ….’ ಎಂಬುದಾಗಿ ಹೇಳುವರು.
ಆದರೆ ಆ ಜನರು ಬಿದ್ದುಹೋಗುವರು.
ಅಲ್ಲಿಂದ ತಿರುಗಿ ಏಳುವದೇ ಇಲ್ಲ.”
ಯೋಹಾನನ ಬೋಧನೆ
(ಮತ್ತಾಯ 3:1-12; ಮಾರ್ಕ 1:1-8; ಯೋಹಾನ 1:19-28)
3 ಚಕ್ರವರ್ತಿಯಾದ ತಿಬೇರಿಯಸ್ ಸೀಸರನ ಆಳ್ವಿಕೆಯ ಹದಿನೈದನೇ ವರ್ಷ ಅದಾಗಿತ್ತು.
ಆಗ, ಪೊಂತ್ಯ ಪಿಲಾತನು ಜುದೇಯ ಪ್ರಾಂತ್ಯಕ್ಕೂ
ಹೆರೋದನು ಗಲಿಲಾಯಕ್ಕೂ
ಹೆರೋದನ ಸಹೋದರನಾದ ಫಿಲಿಪ್ಪನು ಇತುರೆಯ ಮತ್ತು ತ್ರಕೋನಿತಿ ಪ್ರಾಂತ್ಯಗಳಿಗೂ
ಲೂಸನ್ಯನು ಅಬಿಲೇನೆ ಪ್ರಾಂತ್ಯಕ್ಕೂ ಅಧಿಪತಿಯಾಗಿದ್ದರು.
2 ಅನ್ನನು ಮತ್ತು ಕಾಯಫನು ಮಹಾಯಾಜಕರಾಗಿದ್ದರು.[a] ಆ ಸಮಯದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ದೇವರಿಂದ ಆಜ್ಞೆಯೊಂದು ಬಂತು. ಯೋಹಾನನು ಗುಡ್ಡಗಾಡಿನಲ್ಲಿ ವಾಸವಾಗಿದ್ದನು. 3 ಯೋಹಾನನು ಜೋರ್ಡನ್ ನದಿಯ ಸುತ್ತಲಿರುವ ಪ್ರದೇಶದಲ್ಲೆಲ್ಲಾ ಸಂಚರಿಸಿ, ತಮ್ಮ ಪಾಪಪರಿಹಾರಕ್ಕಾಗಿ ಅವರು ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಜನರಿಗೆ ತಿಳಿಸಿದನು. 4 ಯೆಶಾಯ ಪ್ರವಾದಿಯು ತನ್ನ ಗ್ರಂಥದಲ್ಲಿ ಬರೆದಿರುವಂತೆಯೇ ಇದು ನಡೆಯಿತು. ಅದೇನೆಂದರೆ:
“‘ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಮಾಡಿರಿ.
ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ.
5 ಪ್ರತಿಯೊಂದು ಕಣಿವೆಯು ಮುಚ್ಚಲ್ಪಡುವವು.
ಪ್ರತಿಯೊಂದು ಬೆಟ್ಟಗುಡ್ಡಗಳು ಸಮನಾಗಿ ಮಾಡಲ್ಪಡುವವು.
ಡೊಂಕಾದ ದಾರಿಗಳು ನೀಟಾಗುವವು.
ಕೊರಕಲಾದ ದಾರಿಗಳು ಸಮವಾಗುವವು.
6 ಪ್ರತಿಯೊಬ್ಬನೂ ದೇವರ ರಕ್ಷಣೆಯನ್ನು ಕಾಣುವನು!’
ಎಂಬುದಾಗಿ ಅಡವಿಯಲ್ಲಿ ಒಬ್ಬನು ಕೂಗುತ್ತಿದ್ದಾನೆ.”(A)
7 ಜನರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬಂದರು. ಯೋಹಾನನು ಅವರಿಗೆ. “ನೀವು ವಿಷಕರವಾದ ಹಾವುಗಳಂತಿದ್ದೀರಿ! ಬರಲಿರುವ ದೇವರ ಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮ್ಮನ್ನು ಎಚ್ಚರಿಸಿದವರು ಯಾರು? 8 ನಿಮ್ಮ ಮನಸ್ಸು ನಿಜವಾಗಿಯೂ ದೇವರ ಕಡೆಗೆ ತಿರುಗಿಕೊಂಡಿರುವುದಾದರೆ ಅದನ್ನು ನಿಮ್ಮ ತಕ್ಕಕಾರ್ಯಗಳಿಂದ ತೋರಿಸಿರಿ. ‘ಅಬ್ರಹಾಮನು ನಮ್ಮ ತಂದೆ’ ಎಂದು ಜಂಬ ಕೊಚ್ಚಿಕೊಳ್ಳಬೇಡಿರಿ. ದೇವರು ಅಬ್ರಹಾಮನಿಗೆ ಇಲ್ಲಿರುವ ಕಲ್ಲುಗಳಿಂದ ಮಕ್ಕಳನ್ನು ಕೊಡಬಲ್ಲನೆಂದು ನಾನು ನಿಮಗೆ ಹೇಳುತ್ತೇನೆ. 9 ಮರಗಳನ್ನು ಕಡಿಯುವುದಕ್ಕೆ ಕೊಡಲಿಯು ಸಿದ್ಧವಾಗಿದೆ. ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನು ಕತ್ತರಿಸಿ ಬೆಂಕಿಯಲ್ಲಿ ಹಾಕಲಾಗುವುದು” ಎಂದು ಹೇಳಿದನು.
10 ಆದ್ದರಿಂದ ಜನರು, “ಈಗ ನಾವೇನು ಮಾಡಬೇಕು?” ಎಂದು ಕೇಳಿದರು.
11 ಯೋಹಾನನು, “ನಿಮ್ಮಲ್ಲಿ ಎರಡು ಅಂಗಿಗಳಿದ್ದರೆ, ಏನೂ ಇಲ್ಲದವನಿಗೆ ಒಂದು ಕೊಡಿರಿ. ನಿಮ್ಮಲ್ಲಿ ಆಹಾರವಿದ್ದರೆ, ಅದನ್ನೂ ಹಂಚಿಕೊಡಿರಿ” ಎಂದು ಹೇಳಿದನು.
12 ಸುಂಕವಸೂಲಿಗಾರರು[b] ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಯೋಹಾನನ ಬಳಿಗೆ ಬಂದರು. ಅವರು ಯೋಹಾನನಿಗೆ, “ಉಪದೇಶಕನೇ, ನಾವೇನು ಮಾಡಬೇಕು?” ಎಂದು ಕೇಳಿದರು.
13 ಯೋಹಾನನು ಅವರಿಗೆ, “ನೇಮಕವಾದ ತೆರಿಗೆಗಿಂತ ಹೆಚ್ಚಾಗಿ ಜನರಿಂದ ತೆಗೆದುಕೊಳ್ಳಬೇಡಿರಿ” ಎಂದು ಹೇಳಿದನು.
14 ಸೈನಿಕರು ಯೋಹಾನನಿಗೆ, “ನಾವೇನು ಮಾಡಬೇಕು?” ಎಂದು ಕೇಳಿದರು.
ಯೋಹಾನನು ಅವರಿಗೆ, “ಲಂಚ ತೆಗೆದುಕೊಳ್ಳಬೇಡಿ, ಸುಳ್ಳುದೂರು ಹೇಳಬೇಡಿರಿ. ನಿಮಗೆ ಸಿಕ್ಕುವ ಸಂಬಳದಲ್ಲಿ ಸಂತೋಷವಾಗಿರಿ” ಎಂದು ಹೇಳಿದನು.
15 ಜನರೆಲ್ಲರೂ ಕ್ರಿಸ್ತನ ಆಗಮನವನ್ನು ನಿರೀಕ್ಷಿಸುತ್ತಿದ್ದುದರಿಂದ ಅವರು ಯೋಹಾನನ ಬಗ್ಗೆ ಆಶ್ಚರ್ಯಪಟ್ಟು, “ಒಂದುವೇಳೆ ಈತನೇ ಕ್ರಿಸ್ತನಾಗಿರಬಹುದು” ಎಂದು ಭಾವಿಸಿಕೊಂಡರು.
16 ಅದಕ್ಕೆ ಯೋಹಾನನು, “ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನನಗಿಂತಲೂ ಶಕ್ತನಾಗಿರುವಾತನು ಬರುತ್ತಾನೆ. ಆತನ ಪಾದರಕ್ಷೆಗಳನ್ನು ಬಿಚ್ಚುವದಕ್ಕೂ ನನಗೆ ಯೋಗ್ಯತೆ ಇಲ್ಲ. ಆತನು ನಿಮಗೆ ಪವಿತ್ರಾತ್ಮನಲ್ಲಿಯೂ, ಬೆಂಕಿಯಲ್ಲಿಯೂ ದೀಕ್ಷಾಸ್ನಾನ ಮಾಡಿಸುವನು. 17 ಆತನು ರಾಶಿಯನ್ನು ಶುದ್ಧಮಾಡುವುದಕ್ಕೆ[c] ಸಿದ್ಧನಾಗಿ ಬರುವನು. ಆತನು ಒಳ್ಳೆಯ ಕಾಳನ್ನು ಹೊಟ್ಟಿನಿಂದ ಬೇರ್ಪಡಿಸಿ ತನ್ನ ಕಣಜದಲ್ಲಿ ಹಾಕುವನು. ನಂತರ ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟುಬಿಡುವನು” ಎಂದು ಉತ್ತರಕೊಟ್ಟನು. 18 ಯೋಹಾನನು ಜನರಿಗೆ ಇನ್ನೂ ಅನೇಕ ವಿಷಯಗಳನ್ನು ಹೇಳಿ ಪ್ರೋತ್ಸಾಹಿಸುತ್ತಾ ಸುವಾರ್ತೆಯನ್ನು ಬೋಧಿಸುತ್ತಿದ್ದನು.
ಯೋಹಾನನ ಸೇವೆಯ ಅಂತ್ಯ
19 ರಾಜ್ಯಪಾಲ ಹೆರೋದನು ತನ್ನ ಸಹೋದರನ ಹೆಂಡತಿಯಾದ ಹೆರೋದ್ಯಳೊಂದಿಗೆ ಹೊಂದಿದ್ದ ಅನೈತಿಕ ಸಂಬಂಧವನ್ನು ಮತ್ತು ಹೆರೋದನು ಮಾಡಿದ್ದ ಅನೇಕ ದುಷ್ಕೃತ್ಯಗಳನ್ನು ಯೋಹಾನನು ಖಂಡಿಸಿದನು. 20 ಆದ್ದರಿಂದ ಹೆರೋದನು ಯೋಹಾನನನ್ನು ಸೆರೆಮನೆಗೆ ಹಾಕಿಸಿ ತನ್ನ ದುಷ್ಕೃತ್ಯಗಳೊಂದಿಗೆ ಮತ್ತೊಂದು ದುಷ್ಕೃತ್ಯವನ್ನು ಸೇರಿಸಿಕೊಂಡನು.
ಯೋಹಾನನಿಂದ ಯೇಸುವಿನ ದೀಕ್ಷಾಸ್ನಾನ
(ಮತ್ತಾಯ 3:13-17; ಮಾರ್ಕ 1:9-11)
21 ಯೋಹಾನನನ್ನು ಸೆರೆಮನೆಗೆ ಹಾಕುವುದಕ್ಕಿಂತ ಮೊದಲು, ಜನರೆಲ್ಲರೂ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು. ಆಗ ಯೇಸು ಸಹ ಬಂದು ದೀಕ್ಷಾಸ್ನಾನ ಮಾಡಿಸಿಕೊಂಡನು. ಯೇಸು ಪ್ರಾರ್ಥಿಸುತ್ತಿದ್ದಾಗ ಆಕಾಶವು ತೆರೆಯಿತು. 22 ಪವಿತ್ರಾತ್ಮನು ಆತನ ಮೇಲೆ ಪಾರಿವಾಳದ ರೂಪದಲ್ಲಿ ಇಳಿದು ಬಂದನು. ಆ ಕೂಡಲೇ, ಪರಲೋಕದಿಂದ ಧ್ವನಿಯೊಂದು ಹೊರಟು, “ನೀನು ನನ್ನ ಪ್ರಿಯ ಮಗನು, ನಾನು ನಿನನ್ನು ಮೆಚ್ಚಿಕೊಂಡಿದ್ದೇನೆ” ಎಂದು ಹೇಳಿತು.
ಯೋಸೇಫನ ಕುಟುಂಬ ಚರಿತ್ರೆ
(ಮತ್ತಾಯ 1:1-17)
23 ಯೇಸು ಬೋಧಿಸುವುದಕ್ಕೆ ಪ್ರಾರಂಭಿಸಿದಾಗ ಸುಮಾರು ಮೂವತ್ತು ವರ್ಷದವನಾಗಿದ್ದನು. ಯೇಸು ಯೋಸೇಫನ ಮಗನೆಂದು ಜನರು ಭಾವಿಸಿದ್ದರು.
ಯೋಸೇಫನು ಹೇಲಿಯ ಮಗನು.
24 ಹೇಲಿಯು ಮತ್ತಾತನ ಮಗನು.
ಮತ್ತಾತನು ಲೇವಿಯ ಮಗನು.
ಲೇವಿಯು ಮೆಲ್ಕಿಯ ಮಗನು.
ಮೆಲ್ಕಿಯು ಯನ್ನಾಯನ ಮಗನು.
ಯನ್ನಾಯನು ಯೋಸೇಫನ ಮಗನು.
25 ಯೋಸೇಫನು ಮತ್ತಥೀಯನ ಮಗನು.
ಮತ್ತಥೀಯನು ಆಮೋಸನ ಮಗನು.
ಆಮೋಸನು ನಹೂಮನ ಮಗನು.
ನಹೂಮನು ಎಸ್ಲಿಯ ಮಗನು.
ಎಸ್ಲಿಯು ನಗ್ಗಾಯನ ಮಗನು.
26 ನಗ್ಗಾಯನು ಮಹಾಥತನ ಮಗನು.
ಮಹಾಥತನು ಮತ್ತಥೀಯನ ಮಗನು.
ಮತ್ತಥೀಯನು ಶಿಮೀಯನ ಮಗನು.
ಶಿಮೀಯನು ಯೋಸೇಖನ ಮಗನು.
ಯೋಸೇಖನು ಯೂದನ ಮಗನು.
27 ಯೂದನು ಯೋಹಾನನ ಮಗನು.
ಯೋಹಾನನು ರೇಸನ ಮಗನು.
ರೇಸನು ಜೆರುಬಾಬೆಲನ ಮಗನು.
ಜೆರುಬಾಬೆಲನು ಸಲಥಿಯೇಲನ ಮಗನು.
ಸಲಥಿಯೇಲನು ಸೇರಿಯ ಮಗನು.
28 ಸೇರಿಯು ಮೆಲ್ಕಿಯ ಮಗನು.
ಮೆಲ್ಕಿಯು ಅದ್ದಿಯ ಮಗನು.
ಅದ್ದಿಯು ಕೋಸಾಮನ ಮಗನು.
ಕೋಸಾಮನು ಎಲ್ಮದಾಮನ ಮಗನು.
ಎಲ್ಮದಾಮನು ಏರನ ಮಗನು.
29 ಏರನು ಯೆಹೋಷುವನ ಮಗನು.
ಯೆಹೋಷುವನು ಎಲಿಯೇಜರನ ಮಗನು.
ಎಲಿಯೇಜರನು ಯೋರೈವುನ ಮಗನು.
ಯೋರೈವುನು ಮತ್ತಾತನ ಮಗನು.
ಮತ್ತಾತನು ಲೇವಿಯ ಮಗನು.
30 ಲೇವಿಯು ಸಿಮೆಯೋನನ ಮಗನು.
ಸಿಮೆಯೋನನು ಯೂದನ ಮಗನು.
ಯೂದನು ಯೋಸೇಫನ ಮಗನು.
ಯೋಸೇಫನು ಯೊನಾವುನ ಮಗನು.
ಯೊನಾವುನು ಎಲಿಯಕೀಮನ ಮಗನು.
31 ಎಲಿಯಕೀಮನು ಮೆಲೆಯನ ಮಗನು.
ಮೆಲೆಯನು ಮೆನ್ನನ ಮಗನು.
ಮೆನ್ನನು ಮತ್ತಾಥನ ಮಗನು.
ಮತ್ತಾಥನು ನಾತಾನನ ಮಗನು.
ನಾತಾನನು ದಾವೀದನ ಮಗನು.
32 ದಾವೀದನು ಇಷಯನ ಮಗನು.
ಇಷಯನು ಓಬೇದನ ಮಗನು.
ಓಬೇದನು ಬೋವಜನ ಮಗನು.
ಬೋವಜನು ಸಲ್ಮೋನನ ಮಗನು.
ಸಲ್ಮೋನನು ನಹಸ್ಸೋನನ ಮಗನು.
33 ನಹಸ್ಸೋನನು ಅಮ್ಮಿನಾದ್ವಾನ ಮಗನು.
ಅಮ್ಮಿನಾದ್ವಾನು ಅದ್ಮಿನನ ಮಗನು.
ಅದ್ಮಿನನು ಅರ್ನೈಯನ ಮಗನು.
ಅರ್ನೈಯನು ಹೆಸ್ರೋನನ ಮಗನು.
ಹೆಸ್ರೋನನು ಪೆರೆಸನ ಮಗನು.
ಪೆರೆಸನು ಯೂದನ ಮಗನು.
34 ಯೂದನು ಯಾಕೋಬನ ಮಗನು.
ಯಾಕೋಬನು ಇಸಾಕನ ಮಗನು.
ಇಸಾಕನು ಅಬ್ರಹಾಮನ ಮಗನು.
ಅಬ್ರಹಾಮನು ತೇರಹನ ಮಗನು.
ತೇರಹನು ನಹೋರನ ಮಗನು.
35 ನಹೋರನು ಸೆರೂಗನ ಮಗನು.
ಸೆರೂಗನು ರೆಗೂವನ ಮಗನು.
ರೆಗೂವನು ಪೆಲೆಗನ ಮಗನು.
ಪೆಲೆಗನು ಎಬರನ ಮಗನು.
ಎಬರನು ಸಾಲನ ಮಗನು.
36 ಸಾಲನು ಕಯಿನನ ಮಗನು.
ಕಯಿನನು ಅರ್ಪಕ್ಷದನ ಮಗನು.
ಅರ್ಪಕ್ಷದನು ಶೇಮನ ಮಗನು.
ಶೇಮನು ನೋಹನ ಮಗನು.
ನೋಹನು ಲಾಮೆಕನ ಮಗನು.
37 ಲಾಮೆಕನು ಮೆತೂಷಲನ ಮಗನು.
ಮೆತೂಷಲನು ಹನೋಕನ ಮಗನು.
ಹನೋಕನು ಯೆರೆದನ ಮಗನು.
ಯೆರೆದನು ಮಹಲಲೇಲನ ಮಗನು.
ಮಹಲಲೇಲನು ಕಯಿನಾನನ ಮಗನು.
38 ಕಯಿನಾನನು ಎನೋಷನ ಮಗನು.
ಎನೋಷನು ಸೇಥನ ಮಗನು.
ಸೇಥನು ಆದಾಮನ ಮಗನು.
ಆದಾಮನು ದೇವರ ಮಗನು.
Kannada Holy Bible: Easy-to-Read Version. All rights reserved. © 1997 Bible League International