Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
1 ಪೂರ್ವಕಾಲವೃತ್ತಾಂತ 3-4

ದಾವೀದನ ಗಂಡುಮಕ್ಕಳು

ದಾವೀದನ ಕೆಲವು ಗಂಡುಮಕ್ಕಳು ಹೆಬ್ರೋನಿನಲ್ಲಿ ಹುಟ್ಟಿದರು. ದಾವೀದನ ಗಂಡುಮಕ್ಕಳು ಯಾರೆಂದರೆ:

ಅಮ್ನೋನನು ದಾವೀದನ ಚೊಚ್ಚಲಮಗನು. ಅವನ ತಾಯಿ ಅಹೀನೋವಮಳು. ಈಕೆಯು ಇಜ್ರೇಲಿನವಳು.

ಎರಡನೆಯ ಮಗನು ಕರ್ಮೇಲ್ಯಳಾದ ಅಬೀಗೈಲಳ ಮಗನಾದ ದಾನಿಯೇಲನು.

ಅಬ್ಷಾಲೋಮನು ದಾವೀದನ ಮೂರನೆಯ ಮಗನು. ಇವನ ತಾಯಿ ಮಾಕಳು. ಈಕೆಯು ಗೆಷೂರಿನ ಅರಸನಾದ ತಲ್ಮೈಯ ಮಗಳು.

ನಾಲ್ಕನೆಯವನು ಅದೋನೀಯನು. ಇವನು ಹಗ್ಗೀತಳ ಮಗನು.

ಶೆಫಟ್ಯನು ಐದನೆಯ ಮಗನು. ಇವನ ತಾಯಿಯ ಹೆಸರು ಅಬೀಟಲ.

ಆರನೆಯವನು ಇತ್ರಾಮ. ಇವನ ತಾಯಿಯ ಹೆಸರು ಎಗ್ಲ.

ಈ ಆರು ಮಂದಿ ಮಕ್ಕಳು ದಾವೀದನಿಗೆ ಹೆಬ್ರೋನಿನಲ್ಲಿ ಹುಟ್ಟಿದರು.

ದಾವೀದನು ಅಲ್ಲಿ ಏಳುವರೆ ವರ್ಷ ಆಳಿದನು. ದಾವೀದನು ಜೆರುಸಲೇಮಿನಲ್ಲಿ ಮೂವತ್ತುಮೂರು ವರ್ಷ ಅರಸನಾಗಿದ್ದನು. ದಾವೀದನಿಗೆ ಜೆರುಸಲೇಮಿನಲ್ಲಿ ಹುಟ್ಟಿದ ಮಕ್ಕಳು ಯಾರೆಂದರೆ:

ಬತ್ಷೇಬಳ ನಾಲ್ಕು ಮಂದಿ ಮಕ್ಕಳು: ಶಿಮ್ಮ ಶೋಬಾಬ್, ನಾತಾನ್ ಮತ್ತು ಸೊಲೊಮೋನನು. ಬತ್ಷೇಬಳು ಅಮ್ಮೀಯೇಲನ ಮಗಳು. 6-8 ಇವರಲ್ಲದೆ ಅವನ ಬೇರೆ ಒಂಭತ್ತು ಮಕ್ಕಳು ಯಾರೆಂದರೆ: ಇಬ್ಹಾರ್, ಎಲೀಷಾಮ, ಎಲೀಫೆಲೆಟ್, ನೋಗ, ನೆಫೆಗ್, ಯಾಫೀಯ, ಎಲೀಷಾಮ, ಎಲ್ಯಾದ ಮತ್ತು ಎಲೀಫೆಲೆಟ್. ಇವರೆಲ್ಲಾ ದಾವೀದನ ಮಕ್ಕಳು. ತನ್ನ ಉಪಪತ್ನಿಯರಿಂದ ದಾವೀದನಿಗೆ ಬೇರೆ ಗಂಡುಮಕ್ಕಳೂ ಇದ್ದರು. ತಾಮಾರ್ ಎಂಬಾಕೆಯು ದಾವೀದನ ಮಗಳು.

ದಾವೀದನ ನಂತರ ಯೆಹೂದ ಪ್ರಾಂತ್ಯದ ಅರಸರು

10 ಸೊಲೊಮೋನನ ಮಗನು ರೆಹಬ್ಬಾಮ. ರೆಹಬ್ಬಾಮನ ಮಗನು ಅಬೀಯ. ಅಬೀಯನ ಮಗನು ಆಸ. ಆಸನ ಮಗನು ಯೆಹೋಷಾಫಾಟ್. 11 ಯೆಹೋಷಾಫಾಟನ ಮಗನು ಯೆಹೋರಾಮ್. ಯೆಹೋರಾಮನ ಮಗನು ಅಹಜ್ಯ. ಅಹಜ್ಯನ ಮಗನು ಯೆಹೋವಾಷ. 12 ಯೆಹೋವಾಷನ ಮಗನು ಅಮಚ್ಯ. ಅಮಚ್ಯನ ಮಗನು ಅಜರ್ಯ. ಅಜರ್ಯನ ಮಗನು ಯೋತಾಮ್. 13 ಯೋತಾಮನ ಮಗನು ಅಹಾಜ. ಅಹಾಜನ ಮಗನು ಹಿಜ್ಕೀಯ. ಹಿಜ್ಕೀಯನ ಮಗನು ಮನಸ್ಸೆ. 14 ಮನಸ್ಸೆಯ ಮಗನು ಅಮೋನ. ಅಮೋನನ ಮಗನು ಯೋಷೀಯ.

15 ಯೋಷೀಯನ ಗಂಡುಮಕ್ಕಳು ಯಾರೆಂದರೆ: ಮೊದಲನೆಯವನು ಯೋಹಾನಾನ್; ಎರಡನೆಯವನು ಯೆಹೋಯಾಕೀಮ; ಮೂರನೆಯವನು ಚಿದ್ಕೀಯ; ನಾಲ್ಕನೆಯವನು ಶಲ್ಲೂಮ್.

16 ಯೆಹೋಯಾಕೀಮನ ಗಂಡುಮಕ್ಕಳು ಯಾರೆಂದರೆ: ಯೆಕೊನ್ಯ ಮತ್ತು ಚಿದ್ಕೀಯ.[a]

ಬಾಬಿಲೋನ್ ದೇಶಕ್ಕೆ ಸೆರೆಹೋದ ಬಳಿಕ ದಾವೀದನ ವಂಶಾವಳಿ

17 ಯೆಹೋಯಾಕೀಮನು ಬಾಬಿಲೋನಿಗೆ ಸೆರೆಒಯ್ದ ಬಳಿಕ ಅವನಿಗೆ ಹುಟ್ಟಿದ ಗಂಡುಮಕ್ಕಳು: ಶೆಯಲ್ತೀಯೇಲ್,

18 ಮಲ್ಕೀರಾಮ್, ಪೆದಾಯ, ಶೆನಚ್ಚರ್, ಯೆಕಮ್ಯ, ಹೋಷಾಮ ಮತ್ತು ನೆದಬ್ಯ.

19 ಪೆದಾಯನ ಗಂಡುಮಕ್ಕಳು: ಜೆರುಬ್ಬಾಬೆಲ್ ಮತ್ತು ಶಿಮ್ಮೀ. ಜೆರುಬ್ಬಾಬೆಲನ ಗಂಡುಮಕ್ಕಳು: ಮೆಷುಲ್ಲಾಮ್ ಮತ್ತು ಹನನ್ಯ. ಶೆಲೋಮೀತಳು ಅವರ ತಂಗಿ. 20 ಜೆರುಬ್ಬಾಬೆಲನಿಗೆ ಐದು ಮಂದಿ ಬೇರೆ ಗಂಡುಮಕ್ಕಳಿದ್ದರು. ಅವರು ಯಾರೆಂದರೆ: ಹಷುಬ, ಓಹೆಲ್, ಬೆರೆಕ್ಯ, ಹಸದ್ಯ ಮತ್ತು ಯೂಷಬ್ಹೆಸೆದ್.

21 ಹನನ್ಯನ ಮಗನ ಹೆಸರು: ಪೆಲೆಟ್ಯ, ಪೆಲೆಟ್ಯನ ಮಗನು ಯೆಶಾಯ, ಯೆಶಾಯನ ಮಗನು ರೆಫಾಯ, ರೆಫಾಯನ ಮಗನು ಅರ್ನಾನ್, ಅರ್ನಾನನ ಮಗನು ಓಬದ್ಯ, ಓಬದ್ಯನ ಮಗನು ಶೆಕನ್ಯ.

22 ಶೆಕನ್ಯನ ಸಂತತಿಯವರು ಆರು ಮಂದಿ: ಶೆಮಾಯ ಮತ್ತು ಅವನ ಗಂಡುಮಕ್ಕಳು, ಹಟ್ಟೂಷ್, ಇಗಾಲ್, ಬಾರೀಹ, ನೆಯರ್ಯ ಮತ್ತು ಶಾಫಾಟ್.

23 ನೆಯರ್ಯನಿಗೆ ಮೂರು ಮಂದಿ ಗಂಡುಮಕ್ಕಳು: ಎಲ್ಯೋಗೇನೈ, ಹಿಜ್ಕೀಯ ಮತ್ತು ಅಜ್ರೀಕಾಮ್.

24 ಎಲ್ಯೋಗೇನೈಗೆ ಏಳು ಮಂದಿ ಗಂಡುಮಕ್ಕಳು. ಅವರು ಯಾರೆಂದರೆ: ಹೋದವ್ಯ, ಎಲ್ಯಾಷೀಬ್, ಪೆಲಾಯ, ಅಕ್ಕೂಬ್, ಯೋಹಾನಾನ್, ದೆಲಾಯ ಮತ್ತು ಅನಾನೀ.

ಯೆಹೂದನ ಗಂಡುಮಕ್ಕಳ ಪಟ್ಟಿ

ಪೆರೆಚ್, ಹೆಚ್ರೋನ್, ಕರ್ಮಿ, ಹೂರ್ ಮತ್ತು ಶೋಬಾಲರು.

ಶೋಬಾಲನ ಮಗ ರೆವಾಯ. ರೆವಾಯನ ಮಗನು ಯಹತ್. ಯಹತನ ಗಂಡುಮಕ್ಕಳು ಅಹೂಮೈ ಮತ್ತು ಲಹದ್. ಅಹೂಮೈ ಮತ್ತು ಲಹದ್‌ರವರು ಚೊರ್ರರ ಸಂತತಿಯವರು.

ಏಟಾಮನ ಗಂಡುಮಕ್ಕಳು ಯಾರೆಂದರೆ: ಇಜ್ರೆಯೇಲ್, ಇಷ್ಮ ಮತ್ತು ಇಬ್ಬಾಷ್. ಇವರ ಸಹೋದರಿ ಹಚೆಲೆಲ್ ಪೋನೀ.

ಪೆನೂವೇಲನು ಗೆದೋರನ ತಂದೆ: ಏಜೆರನು ಹೂಷಾಹ್ಯನ ತಂದೆ.

ಇವರು ಹೂರನ ಗಂಡುಮಕ್ಕಳು. ಹೂರನು ಎಫ್ರಾತಾಹಳ ಮೊದಲನೆಯ ಮಗನು. ಇವನೇ ಬೆತ್ಲೇಹೇಮ್ಯರ ಮೂಲಪಿತೃ.

ತೆಕೋವನ ತಂದೆಯಾದ ಅಷ್ಹೂರನಿಗೆ ಇಬ್ಬರು ಹೆಂಡತಿಯರು. ಇವರ ಹೆಸರು ಹೆಲಾಹ ಮತ್ತು ನಾರ. ನಾರಳಲ್ಲಿ ಹುಟ್ಟಿದ ಗಂಡುಮಕ್ಕಳು: ಅಹುಜ್ಜಾಮ್, ಹೇಫೆರ್, ತೇಮಾನ್ ಮತ್ತು ಅಹಷ್ಟಾರ್ಯ. ಹೆಲಾಹಳ ಗಂಡುಮಕ್ಕಳು: ಚೆರೆತ್, ಇಚ್ಹಾರ್, ಎತ್ನಾನ್ ಮತ್ತು ಕೋಚ. ಕೋಚನು ಆನೂಬ್ ಮತ್ತು ಚೊಬೇಬನ ತಂದೆ. ಕೋಚನು ಅಹರ್ಹೇಲ್ ವಂಶದವರ ಮೂಲಪಿತೃ. ಅಹರ್ಹೇಲನು ಹಾರಮನ ಮಗನು.

ಯಾಬೇಚನು ತುಂಬ ಒಳ್ಳೆಯ ವ್ಯಕ್ತಿಯಾಗಿದ್ದನು. ಅವನು ತನ್ನ ಅಣ್ಣತಮ್ಮಂದಿರಿಗಿಂತ ಉತ್ತಮನಾಗಿದ್ದನು. ಅವನ ತಾಯಿ, “ನಾನು ಅವನನ್ನು ಹೆರುವಾಗ ತುಂಬಾ ನೋವನ್ನು ಅನುಭವಿಸಿದ್ದರಿಂದ ನಾನು ಅವನಿಗೆ ಯಾಬೇಚ ಎಂದು ಹೆಸರಿಟ್ಟೆನು” ಎಂದು ಹೇಳಿದಳು. 10 ಯಾಬೇಚನು ಇಸ್ರೇಲರ ದೇವರಿಗೆ ಹೀಗೆ ಪ್ರಾರ್ಥಿಸಿದನು: “ದೇವರೇ, ನೀನು ನನ್ನನ್ನು ನಿಜವಾಗಿಯೂ ಆಶೀರ್ವದಿಸು. ನನ್ನ ಪ್ರಾಂತ್ಯವನ್ನು ವಿಸ್ತರಿಸು. ನನ್ನ ಬಳಿಯಲ್ಲಿಯೇ ಇದ್ದು ನನಗಾರೂ ನೋವು ಮಾಡದಂತೆ ನೋಡಿಕೊಂಡು ನನ್ನನ್ನು ರಕ್ಷಿಸು” ಎಂಬ ಯಾಬೇಚನ ಕೋರಿಕೆಯನ್ನು ದೇವರು ಕೇಳಿದನು.

11 ಕೆಲೂಬನು ಶೂಹನ ಸಹೋದರ. ಕೆಲೂಬನ ಮಗನು ಮೆಹೀರ್. ಮೆಹೀರನು ಎಷ್ಟೋನನ ತಂದೆ. 12 ಎಷ್ಟೋನನು ಬೇತ್ರಾಫ, ಪಾಸೇಹ ಮತ್ತು ತೆಹಿನ್ನ ಇವರ ತಂದೆ. ತೆಹಿನ್ನ ಇರ್‌ನಾಹಷನ ತಂದೆ. ಇವರೆಲ್ಲರೂ ರೇಕಾಬದವರು.

13 ಕೆನಜನ ಗಂಡುಮಕ್ಕಳು ಯಾರೆಂದರೆ: ಒತ್ನೀಯೇಲ್ ಮತ್ತು ಸೆರಾಯ. ಒತ್ನೀಯೇಲನ ಮಕ್ಕಳು: ಹತತ್ ಮತ್ತು ಮೆಯೋನೋತೈ. 14 ಮೆಯೋನೋತೈ ಒಫ್ರಾಹನ ತಂದೆ.

ಸೆರಾಯನು ಯೋವಾಬನ ತಂದೆ. ಯೋವಾಬನು ಗೇಹರಾಷೀಮ್ಯರ ಸ್ಥಾಪಕನು. ಇಲ್ಲಿಯವರು ನಿಪುಣ ಕುಶಲ ಕೆಲಸಗಾರರಾಗಿದ್ದುದರಿಂದ ಅವರಿಗೆ ಈ ಹೆಸರು ಬಂದಿತು.

15 ಕಾಲೇಬನು ಯೆಫುನ್ನೆಯ ಮಗನು. ಕಾಲೇಬನ ಗಂಡುಮಕ್ಕಳು: ಈರು, ಏಲ, ನಾಮ್, ಏಲನ ಮಗನ ಹೆಸರು ಕೆನಜ್.

16 ಯೆಹಲ್ಲೆಲೇಲನ ಗಂಡುಮಕ್ಕಳು ಯಾರೆಂದರೆ: ಜೀಪ್, ಜೀಫಾ, ತೀರ್ಯ ಮತ್ತು ಅಸರೇಲ್.

17-18 ಎಜ್ರನ ಗಂಡುಮಕ್ಕಳು ಯಾರೆಂದರೆ: ಯೆತೆರ್, ಮೆರೆದ್, ಏಫೆರ್, ಯಾಲೋನ್, ಮೆರೆದನ ಗಂಡುಮಕ್ಕಳು: ಮಿರ್ಯಾಮ್, ಶಮ್ಮೈ ಮತ್ತು ಇಷ್ಬಹ. ಇಷ್ಬಹನ ಮಗ ಎಷ್ಟೆಮೋ. ಮೆರೆದನಿಗೆ ಯೆಹೂದ್ಯಳಾದ ಹೆಂಡತಿಯಿದ್ದಳು. ಅವಳಲ್ಲಿ ಯೆರೆದ್, ಹೆಬೆರ್ ಮತ್ತು ಯೆಕೊತೀಯೇಲ್ ಎಂಬ ಗಂಡುಮಕ್ಕಳು ಹುಟ್ಟಿದರು. ಯೆರೆದನು ಗೆದೋರ್ಯನ ತಂದೆ. ಹೆಬೆರನು ಸೋಕೋನನ ತಂದೆ; ಯೆಕೊತೀಯೇಲನು ಜಾನೋಹನ ತಂದೆ. ಇವರು ಬಿತ್ಯಳ ಮಕ್ಕಳು; ಬಿತ್ಯಳು ಫರೋಹನ ಮಗಳು. ಈಕೆಯೇ ಮೆರೆದನ ಈಜಿಪ್ಟಿನ ಹೆಂಡತಿ.

19 ಮೆರೆದನ ಹೆಂಡತಿಯು ನೆಹಮನ ತಂಗಿ. ಮೆರೆದನ ಹೆಂಡತಿಯು ಯೂದಾಯದಿಂದ ಬಂದವಳು. ಮೆರೆದನ ಹೆಂಡತಿಯ ಗಂಡುಮಕ್ಕಳು: ಕೆಯೀಲ ಮತ್ತು ಎಷ್ಟೆಮೋ ಗೋತ್ರಗಳ ಮೂಲಪಿತೃಗಳು. ಕೆಯೀಲನು ಗರ್ಮ್ಯರಿಗೆ ಸೇರಿದವನು ಮತ್ತು ಎಷ್ಟೆಮೋವನು ಮಾಕಾತ್ಯರಿಗೆ ಸೇರಿದವನು. 20 ಶೀಮೋನನ ಮಕ್ಕಳು ಯಾರೆಂದರೆ: ಅಮ್ನೋನ್, ರಿನ್ನ, ಬೆನ್ಹಾನಾನ್ ಮತ್ತು ತೀಲೋನ್.

ಇಷ್ಷೀಯ ಮಕ್ಕಳು: ಜೋಹೇತ್ ಮತ್ತು ಬೆನ್ ಜೋಹೇತ್.

21-22 ಶೇಲನು ಯೆಹೂದನ ಮಗನು. ಶೇಲನ ಮಕ್ಕಳು: ಏರ್, ಲದ್ದ, ಯೊಕೀವ್, ಕೋಜೇಬದ ಜನರು. ಯೋವಾಷ್ ಮತ್ತು ಸಾರಾಫ್. ಏರನ ಮಗನು ಲೇಕಾಹ್ಯ. ಲದ್ದನು ಮರೇಷನ ತಂದೆ ಮತ್ತು ಬೇತಷ್ಬೇಯದ, ಬಟ್ಟೆ ನೇಕಾರರ ಮೂಲಪಿತೃ. ಯೋವಾಷ್ ಮತ್ತು ಸಾರಾಫ್ ಮೋವಾಬ್ಯರ ಸ್ತ್ರೀಯರನ್ನು ಮದುವೆಮಾಡಿಕೊಂಡು ಬೆತ್ಲೆಹೇಮಿಗೆ ಹಿಂತಿರುಗಿದರು. ಈ ಕುಟುಂಬದ ಕುರಿತಾದ ಬರಹಗಳು ಪುರಾತನ ಕಾಲದ್ದು. 23 ಶೇಲನ ಮಕ್ಕಳು ಮಣ್ಣಿನಿಂದ ವಸ್ತುಗಳನ್ನು ತಯಾರಿಸುತ್ತಿದ್ದರು. ನೆಟಾಯಿಮ್ ಮತ್ತು ಗೆದೇರ ಎಂಬ ಸ್ಥಳಗಳಲ್ಲಿ ವಾಸವಾಗಿದ್ದ ಅವರು ಅರಸನಿಗೋಸ್ಕರ ಕೆಲಸಮಾಡುತ್ತಿದ್ದರು.

ಸಿಮೆಯೋನನ ಗಂಡುಮಕ್ಕಳು

24 ಸಿಮೆಯೋನನ ಗಂಡುಮಕ್ಕಳು ಯಾರೆಂದರೆ: ನೆಮೂವೇಲ್, ಯಾಮೀನ್, ಯಾರೀದ್, ಜೆರಹ ಮತ್ತು ಸೌಲ. 25 ಸೌಲನ ಮಗನು ಶಲ್ಲುಮ. ಶಲ್ಲುಮನ ಮಗನು ಮಿಬ್ಸಾಮ್; ಮಿಬ್ಸಾಮನ ಮಗನು ಮಿಷ್ಮ.

26 ಮಿಷ್ಮನ ಮಗನು ಹಮ್ಮೂವೇಲ. ಹಮ್ಮೂವೇಲನ ಮಗನು. ಜಕ್ಕೂರ್. ಜಕ್ಕೂರನ ಮಗನು ಶಿಮ್ಮೀ. 27 ಶಿಮ್ಮೀಗೆ ಹದಿನಾರು ಮಂದಿ ಗಂಡುಮಕ್ಕಳೂ ಆರು ಮಂದಿ ಹೆಣ್ಣುಮಕ್ಕಳೂ ಇದ್ದರು. ಶಿಮ್ಮೀಯ ಸಹೋದರರಿಗೆ ಹೆಚ್ಚು ಮಕ್ಕಳಿರಲಿಲ್ಲ. ಇವರ ಸಂತತಿಯವರ ಸಂಖ್ಯೆಯು ಯೆಹೂದದ ಸಂತತಿಯವರಷ್ಟು ಹೆಚ್ಚಾಗಿರಲಿಲ್ಲ.

28 ಶಿಮ್ಮಿಯ ಗಂಡುಮಕ್ಕಳು: ಬೇರ್ಷೆಬ, ಮೋಲಾದ್, ಹಚರ್ ಷೂವಾಲ್, 29 ಬಿಲ್ಹ, ಎಚೆಮ್, ತೋಲಾಬ್, 30 ಬೆತೂವೇಲ್, ಹೊರ್ಮ, ಚಿಕ್ಲಗ್, 31 ಬೇತ್‌ಮರ್ಕಾಬೋತ್, ಹಚರ್ ಸೂಸೀಮ್, ಬೇತ್‌ಬಿರೀ ಮತ್ತು ಶಾರಯಿಮ್ ಊರುಗಳಲ್ಲಿ ವಾಸಿಸಿದರು. ದಾವೀದನು ಅರಸನಾಗುವ ತನಕ ಅವರು ಆ ಊರುಗಳಲ್ಲಿ ನೆಲೆಸಿದರು. 32 ಈ ಪಟ್ಟಣಗಳ ಹತ್ತಿರವಿರುವ ಐದು ಹಳ್ಳಿಗಳು ಯಾವುವೆಂದರೆ: ಏಟಾಮ್, ಅಯಿನ್, ರಿಮ್ಮೋನ್, ತೋಕೆನ್ ಮತ್ತು ಆಷಾನ್. 33 ಬೇರೆ ಹಳ್ಳಿಗಳು ಬಾಲ್ ತನಕವೂ ಇದ್ದವು. ಅವರು ವಾಸವಾಗಿದ್ದದ್ದು ಅಲ್ಲಿಯೇ. ಇದಲ್ಲದೆ ಅವರು ತಮ್ಮ ವಂಶದ ಚರಿತ್ರೆಯನ್ನೂ ಬರೆದಿಟ್ಟರು.

34-38 ಅವರ ಕುಲಪ್ರಧಾನರು ಯಾರೆಂದರೆ: ಮೊಷೋಬಾಬ್, ಯಮ್ಲೇಕ್, ಅಮಚ್ಯನ ಮಗನಾದ ಯೋಷ, ಯೋವೇಲ್, ಯೇಹೂ (ಯೇಹೂವು ಯೊಷಿಬ್ಯನ ಮಗ, ಸೆರಾಯನ ಮೊಮ್ಮಗ ಮತ್ತು ಅಸಿಯೇಲನ ಮರಿಮಗ). ಎಲ್ಯೋವೇನೈ, ಯಾಕೋಬ, ಯೆಷೋಹಾಮ, ಅಸಾಯ, ಆದೀಯೇಲ್, ಯೆಸೀಮಿಯೇಲ್, ಬೆನಾಯ ಮತ್ತು ಶಿಷ್ಪಿಯನ ಮಗನಾದ ಜೀಜ. ಶಿಪ್ಪಿಯು ಅಲ್ಲೋನನ ಮಗನು; ಅಲ್ಲೋನನು ಯೆದಾಯನ ಮಗನು; ಯೆದಾಯನು ಶಿಮ್ರಿಯ ಮಗನು; ಶಿಮ್ರಿಯು ಶೆಮಾಯನ ಮಗನು.

ಈ ಕುಲದ ಜನರು ಬಹುಸಂಖ್ಯಾತರಾಗಿ ಹೆಚ್ಚಿದರು. 39 ಗೆದೋರ್ ಊರಿನ ಹೊರಭಾಗದಲ್ಲಿರುವ ತಗ್ಗಿನ ಪೂರ್ವ ದಿಕ್ಕಿನಲ್ಲಿ ಅವರು ನೆಲೆಸಿದರು. ತಮ್ಮ ದನಕುರಿಗಳಿಗಾಗಿ ಹುಲ್ಲುಗಾವಲನ್ನು ಹುಡುಕಿಕೊಂಡು ಅವರು ಅಲ್ಲಿಗೆ ಹೋಗಿದ್ದರು. 40 ಅಲ್ಲಿ ಫಲವತ್ತಾದ ಭೂಮಿಯನ್ನೂ ಹಸಿರು ಹುಲ್ಲುಗಾವಲನ್ನೂ ಕಂಡು ಅಲ್ಲಿಯೇ ನೆಲೆಸಿದರು. ಆ ಪ್ರದೇಶವು ಪ್ರಶಾಂತವಾಗಿತ್ತು. ಹಿಂದಿನ ಕಾಲದಲ್ಲಿ ಹಾಮನ ಸಂತತಿಯವರು ಅಲ್ಲಿ ನೆಲೆಸಿದ್ದರು. 41 ಯೆಹೂದದ ಅರಸನಾಗಿದ್ದ ಹಿಜ್ಕೀಯನ ಕಾಲದಲ್ಲಿ ಇದು ಆಯಿತು. ಇವರು ಗೆದೋರಿಗೆ ಬಂದು ಹಾಮನ ಸಂತತಿಯವರೊಂದಿಗೆ ಯುದ್ಧಮಾಡಿ ಅವರ ಗುಡಾರಗಳನ್ನು ನಾಶಮಾಡಿದರು. ಅಲ್ಲದೆ ಮೆಗೂನ್ಯರ ವಿರುದ್ಧವಾಗಿ ಯುದ್ಧಮಾಡಿ ಅಲ್ಲಿ ನೆಲೆಸಿದರು. ಇವರು ಮೆಗೂನ್ಯರನ್ನೆಲ್ಲಾ ನಾಶಮಾಡಿದರು. ಇಂದಿನವರೆಗೂ ಮೆಗೂನ್ಯರಲ್ಲಿ ಯಾರೂ ಉಳಿದಿಲ್ಲ. ಹೀಗೆ ಆ ಸ್ಥಳದಲ್ಲಿ ಅವರು ನೆಲೆಸಿದರು; ಯಾಕೆಂದರೆ ಅವರ ಪಶುಗಳಿಗೆ ಅಲ್ಲಿ ಸಾಕಷ್ಟು ಹುಲ್ಲಿತ್ತು.

42 ಸಿಮೆಯೋನನ ಕುಲದ ಐನೂರು ಮಂದಿ ಸೇಯೀರ್ ಬೆಟ್ಟಪ್ರಾಂತ್ಯಕ್ಕೆ ಹೋದರು. ಇಷ್ಷೀಯ ಗಂಡುಮಕ್ಕಳು ಈ ಗುಂಪಿನ ನಾಯಕರಾಗಿದ್ದರು. ಅವರು ಯಾರೆಂದರೆ: ಪೆಲಟ್ಯ, ನೆಗರ್ಯ, ರೆಫಾಯ ಮತ್ತು ಉಜ್ಜೀಯೇಲ್. ಅಲ್ಲಿ ವಾಸಿಸುವ ಜನರೊಂದಿಗೆ ಇವರು ಕಾದಾಡಿದರು. 43 ಆಗ ಅಲ್ಲಿ ಸ್ವಲ್ಪವೇ ಮಂದಿ ಅಮಾಲೇಕ್ಯರು ವಾಸಿಸುತ್ತಿದ್ದರು. ಈ ಸಿಮೆಯೋನರು ಅವರನ್ನು ಕೊಂದು ಆ ಸ್ಥಳದಲ್ಲಿ ನೆಲೆಸಿದರು. ಇಂದಿನವರೆಗೂ ಸಿಮೆಯೋನರು ಅಲ್ಲಿ ನೆಲೆಸಿದ್ದಾರೆ.

ಇಬ್ರಿಯರಿಗೆ 9

ಹಳೆಯ ಒಡಂಬಡಿಕೆಯ ಕ್ರಮಕ್ಕನುಸಾರವಾದ ಆರಾಧನೆ

ಮೊದಲನೆ ಒಡಂಬಡಿಕೆಯಲ್ಲಿ ಆರಾಧನೆಯ ನಿಯಮಗಳಿದ್ದವು. ಅದರಲ್ಲಿ ಮಾನವನಿರ್ಮಿತವಾದ ಆರಾಧನಾ ಸ್ಥಳವಿತ್ತು. ಈ ಸ್ಥಳವು ಗುಡಾರದ ಒಳಗಿತ್ತು. ಗುಡಾರದ ಮೊದಲ ಆವರಣವನ್ನು ಪವಿತ್ರ ಸ್ಥಳವೆಂದು ಕರೆಯುತ್ತಿದ್ದರು. ಪವಿತ್ರ ಸ್ಥಳದಲ್ಲಿ ದೀಪಸ್ತಂಭ, ಮೇಜು ಮತ್ತು ದೇವರಿಗೆ ಅರ್ಪಿಸಲ್ಪಟ್ಟ ರೊಟ್ಟಿಗಳಿದ್ದವು. ಎರಡನೆ ತೆರೆಯ ಹಿಂದೆ “ಮಹಾ ಪವಿತ್ರಸ್ಥಳ”ವೆಂದು ಕರೆಸಿಕೊಳ್ಳುವ ಒಂದು ಕೊಠಡಿಯಿತ್ತು. ಮಹಾ ಪವಿತ್ರಸ್ಥಳದಲ್ಲಿ ಧೂಪವನ್ನು ಸುಡುವುದಕ್ಕಾಗಿ ಬಂಗಾರದ ಯಜ್ಞವೇದಿಕೆಯಿತ್ತು. ಅಲ್ಲದೆ ಮೊದಲನೆ ಒಡಂಬಡಿಕೆಯನ್ನು ಇಡಲಾಗಿದ್ದ ಪವಿತ್ರ ಪೆಟ್ಟಿಗೆಯಿತ್ತು. ಅದಕ್ಕೆ ಚಿನ್ನದ ತಗಡನ್ನು ಹೊದಿಸಲಾಗಿತ್ತು. ಅದರ ಒಳಗಡೆ ಚಿನ್ನದ ಪಾತ್ರೆಯಲ್ಲಿಟ್ಟಿದ್ದ ಮನ್ನಾ ಮತ್ತು ಒಂದಾನೊಂದು ಕಾಲದಲ್ಲಿ ಚಿಗುರಿ ಎಲೆಗಳನ್ನು ಬಿಟ್ಟಿದ್ದ ಆರೋನನ ಕೋಲು ಇದ್ದವು. ಅಲ್ಲದೆ ಆ ಮೊದಲನೆ ಒಡಂಬಡಿಕೆಯ ಹತ್ತು ಆಜ್ಞೆಗಳನ್ನು ಬರೆಯಲಾಗಿದ್ದ ಕಲ್ಲಿನ ಹಲಗೆಗಳನ್ನು ಅದರಲ್ಲಿ ಇಡಲಾಗಿತ್ತು. ಆ ಪೆಟ್ಟಿಗೆಯ ಮೇಲ್ಗಡೆ ದೇವರ ವೈಭವವನ್ನು ತೋರ್ಪಡಿಸುವ ಕೆರೂಬಿಗಳಿದ್ದವು. ಈ ಕೆರೂಬಿಗಳು ಕೃಪಾಸನವನ್ನು ಆಚ್ಛಾದಿಸಿಕೊಂಡಿದ್ದವು. ಆದರೆ ಇವುಗಳ ಕುರಿತು ಎಲ್ಲವನ್ನೂ ನಾವು ಈಗ ಹೇಳಲು ಸಾಧ್ಯವಿಲ್ಲ.

ನಾನು ನಿಮಗೆ ವಿವರಿಸಿದಂತೆಯೇ ಗುಡಾರದಲ್ಲಿ ಎಲ್ಲವನ್ನೂ ಸಿದ್ಧಮಾಡಲಾಗಿತ್ತು. ಯಾಜಕರು ಪ್ರತಿದಿನವೂ ತಮ್ಮ ಆರಾಧನೆಯ ಕರ್ತವ್ಯಗಳನ್ನು ಮಾಡಲು ಮೊದಲನೆ ಕೊಠಡಿಯ ಒಳಗಡೆ ಹೋಗುತ್ತಿದ್ದರು. ಆದರೆ ಪ್ರಧಾನಯಾಜಕನು ಮಾತ್ರ ಎರಡನೆ ಕೊಠಡಿಯ ಒಳಗೆ ಹೋಗಬಹುದಿತ್ತು. ಅವನು ವರ್ಷಕ್ಕೊಮ್ಮೆ ಮಾತ್ರ ಅದರೊಳಗೆ ಹೋಗುತ್ತಿದ್ದನು. ಅವನು ತನ್ನೊಂದಿಗೆ ರಕ್ತವನ್ನು ತೆಗೆದುಕೊಳ್ಳದೆ ಎಂದೂ ಅದರೊಳಗೆ ಪ್ರವೇಶಿಸುತ್ತಿರಲಿಲ್ಲ. ತನಗೋಸ್ಕರವಾಗಿಯೂ ಜನರು ತಿಳಿಯದೆ ಮಾಡಿದ ಪಾಪಗಳಿಗಾಗಿಯೂ ಅವನು ಆ ರಕ್ತವನ್ನು ದೇವರಿಗೆ ಅರ್ಪಿಸುತ್ತಿದ್ದನು.

ಪವಿತ್ರಾತ್ಮನು ಆ ಎರಡು ಪ್ರತ್ಯೇಕವಾದ ಕೊಠಡಿಗಳ ಮೂಲಕ ನಮಗೆ ತಿಳಿಸುವುದೇನೆಂದರೆ, ಮೊದಲನೆ ಕೊಠಡಿಯು ಅಲ್ಲಿ ಇರುವವರೆಗೂ ಮಹಾ ಪವಿತ್ರಸ್ಥಳಕ್ಕೆ ಹೋಗುವ ಮಾರ್ಗವು ತೆರೆಯಲೇ ಇಲ್ಲ. ಈ ದಿನ ನಮಗೆ ಇದೊಂದು ಉದಾಹರಣೆಯಾಗಿದೆ. ದೇವರಿಗೆ ಅರ್ಪಿಸಲ್ಪಡುತ್ತಿದ್ದ ಕಾಣಿಕೆಗಳಿಗಾಗಲಿ ಯಜ್ಞಗಳಿಗಾಗಲಿ ದೇವಾರಾಧನೆ ಮಾಡುವ ವ್ಯಕ್ತಿಯನ್ನು ಪರಿಪೂರ್ಣನನ್ನಾಗಿ ಮಾಡಲು ಸಾಧ್ಯವಿರಲಿಲ್ಲ ಎಂಬುದನ್ನು ಇದು ತೋರ್ಪಡಿಸುತ್ತದೆ. ಆ ವ್ಯಕ್ತಿಯ ಹೃದಯವನ್ನು ಪರಿಶುದ್ಧಗೊಳಿಸಲು ಆ ಯಜ್ಞಗಳಿಗೆ ಸಾಧ್ಯವಿರಲಿಲ್ಲ. 10 ಆ ಯಜ್ಞಗಳು ಮತ್ತು ಕಾಣಿಕೆಗಳು ಅನ್ನಪಾನಾದಿಗಳನ್ನೂ ವಿಶೇಷವಾದ ಸ್ನಾನಗಳನ್ನೂ ಕುರಿತಾಗಿದ್ದವು. ಅವು ದೇಹಕ್ಕೆ ಸಂಬಂಧಿಸಿದ ನಿಯಮಗಳೇ ಹೊರತು ಜನರ ಹೃದಯಕ್ಕೆ ಸಂಬಂಧಿಸಿದ್ದವುಗಳಲ್ಲ. ಜನರಿಗೆ ದೇವರ ಹೊಸ ಮಾರ್ಗವು ಲಭಿಸುವ ಕಾಲದವರೆಗೆ, ಅವರು ಅನುಸರಿಸಲೆಂದು ಆ ನಿಯಮಗಳನ್ನು ದೇವರೇ ಕೊಟ್ಟನು.

ಹೊಸ ಒಡಂಬಡಿಕೆಗನುಸಾರವಾಗಿ ಆರಾಧನೆ

11 ಆದರೆ ಕ್ರಿಸ್ತನು ಈಗಾಗಲೇ ಪ್ರಧಾನಯಾಜಕನಾಗಿ ಬಂದಿದ್ದಾನೆ. ಈಗ ನಾವು ಹೊಂದಿರುವ ಉತ್ತಮ ಸಂಗತಿಗಳಿಗೆ ಆತನು ಪ್ರಧಾನಯಾಜಕನಾಗಿದ್ದಾನೆ. ಇತರ ಯಾಜಕರಾದರೊ ಗುಡಾರದಲ್ಲಿ ಸೇವೆಯನ್ನು ಮಾಡಿದರು. ಆದರೆ ಕ್ರಿಸ್ತನು ಗುಡಾರದಲ್ಲಿ ಸೇವೆ ಮಾಡದೆ ಅದಕ್ಕಿಂತಲೂ ಶ್ರೇಷ್ಠವಾದ ಸ್ಥಳದಲ್ಲಿ ಸೇವೆ ಮಾಡುತ್ತಾನೆ. ಅದು ಮತ್ತಷ್ಟು ಪರಿಪೂರ್ಣವಾದದ್ದು. ಅದು ಮನುಷ್ಯರಿಂದ ನಿರ್ಮಿತವಾದದ್ದಲ್ಲ. ಲೋಕಕ್ಕೆ ಸೇರಿದ್ದೂ ಅಲ್ಲ. 12 ಆತನು ಒಂದೇ ಒಂದು ಸಾರಿ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸಿದನು. ಆತನು ಹೋತಗಳ ಮತ್ತು ಹೋರಿಕರುಗಳ ರಕ್ತವನ್ನು ತೆಗೆದುಕೊಳ್ಳದೆ ತನ್ನ ಸ್ವಂತ ರಕ್ತದಿಂದಲೇ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸಿ ನಮಗೆ ನಿತ್ಯಸ್ವಾತಂತ್ರ್ಯವನ್ನು ತಂದುಕೊಟ್ಟನು.

13 ಹೋತಗಳ ಮತ್ತು ಹೋರಿಗಳ ರಕ್ತವನ್ನೂ ಹಸುಗಳ ಬೂದಿಯನ್ನೂ ಆ ಆರಾಧನೆಯ ಸ್ಥಳದಲ್ಲಿ ಪ್ರವೇಶಿಸುವಷ್ಟು ಶುದ್ಧರಾಗಿಲ್ಲದ ಜನರ ಮೇಲೆ ಚಿಮುಕಿಸಲಾಗುತ್ತಿತ್ತು. ಆ ರಕ್ತ ಮತ್ತು ಬೂದಿ ಜನರ ದೇಹಗಳನ್ನು ಮಾತ್ರ ಶುದ್ಧಿಗೊಳಿಸುತ್ತಿದ್ದವು. 14 ಆದ್ದರಿಂದ ಆತನ ರಕ್ತವು ಖಚಿತವಾಗಿ ಅದಕ್ಕಿಂತಲೂ ಹೆಚ್ಚಿನದನ್ನು ಸಾಧಿಸುತ್ತದೆ. ಆತನು ನಿತ್ಯಾತ್ಮನ ಮೂಲಕ ತನ್ನನ್ನು ತಾನೇ ದೇವರಿಗೆ ನಿಷ್ಕಳಂಕವಾದ ಯಜ್ಞವನ್ನಾಗಿ ಅರ್ಪಿಸಿಕೊಂಡನು. ಆತನ ರಕ್ತವು ನಮ್ಮನ್ನು ನಮ್ಮ ಕೆಟ್ಟಕಾರ್ಯಗಳಿಂದ ಪರಿಪೂರ್ಣವಾಗಿ ಬಿಡಿಸಿ ನಾವು ಜೀವಸ್ವರೂಪನಾದ ದೇವರನ್ನು ಆರಾಧಿಸಲು ಸಾಧ್ಯವಾಗುವಂತೆ ನಮ್ಮ ಹೃದಯವನ್ನೂ ಪರಿಶುದ್ಧಗೊಳಿಸುತ್ತದೆ.

15 ದೇವರಿಂದ ಕರೆಯಲ್ಪಟ್ಟ ಜನರು ದೇವರ ವಾಗ್ದಾನಗಳನ್ನು ಹೊಂದಿಕೊಳ್ಳಲೆಂದು ಕ್ರಿಸ್ತನು ಈ ಹೊಸ ಒಡಂಬಡಿಕೆಯನ್ನು ದೇವರಿಂದ ತಂದನು. ದೇವರ ಜನರು ಅವುಗಳನ್ನು ಶಾಶ್ವತವಾಗಿ ಹೊಂದಿಕೊಳ್ಳಲು ಸಾಧ್ಯ. ಏಕೆಂದರೆ ಮೊದಲನೆ ಒಡಂಬಡಿಕೆಯ ಕಾಲದಲ್ಲಿ ಮಾಡಿದ ಪಾಪಗಳಿಂದ ಜನರನ್ನು ಬಿಡುಗಡೆಗೊಳಿಸುವುದಕ್ಕಾಗಿ ಕ್ರಿಸ್ತನು ಮರಣ ಹೊಂದಿದನು.

16 ಒಬ್ಬನು ಸಾಯುವ ಮೊದಲೇ ಉಯಿಲನ್ನು[a] ಬರೆದಿಡುತ್ತಾನೆ. ಆದರೆ ಸತ್ತಿರುವಾತನೇ ಆ ಉಯಿಲನ್ನು ಬರೆದವನೆಂದು ಜನರು ಸಾಧಿಸಿ ತೋರಿಸಬೇಕು. 17 ಅದನ್ನು ಬರೆದವನು ಇನ್ನೂ ಬದುಕಿದ್ದರೆ ಅದಕ್ಕೆ ಬೆಲೆಯೇನೂ ಇಲ್ಲ. ಅದನ್ನು ಬರೆದಾತನು ಸತ್ತನಂತರ ಅದು ಉಪಯುಕ್ತವಾಗಿರುತ್ತದೆ. 18 ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಮೊದಲನೆ ಒಡಂಬಡಿಕೆ ಇದಕ್ಕೆ ಹೋಲಿಕೆಯಾಗಿದೆ. ಮೊದಲನೆ ಒಡಂಬಡಿಕೆ ಉಪಯುಕ್ತಕ್ಕೆ ಬರಲು ರಕ್ತಾರ್ಪಣೆಯಾಗಬೇಕಿತ್ತು. 19 ಮೊದಲನೆಯದಾಗಿ, ಮೋಶೆಯು ಧರ್ಮಶಾಸ್ತ್ರದ ಪ್ರತಿಯೊಂದು ಆಜ್ಞೆಯನ್ನೂ ಜನರಿಗೆಲ್ಲ ತಿಳಿಸಿದನು. ನಂತರ ಅವನು ಕರುಗಳ ರಕ್ತವನ್ನು ತೆಗೆದುಕೊಂಡು ಅದನ್ನು ನೀರಿನೊಂದಿಗೆ ಬೆರೆಸಿದನು. ಬಳಿಕ ನೀರು ಮತ್ತು ರಕ್ತವನ್ನು ಧರ್ಮಶಾಸ್ತ್ರದ ಮೇಲೆ ಮತ್ತು ಜನರೆಲ್ಲರ ಮೇಲೆ ಚಿಮುಕಿಸಲು ಕೆಂಪು ಉಣ್ಣೆಯನ್ನೂ ಹಿಸ್ಸೋಪ್ ಗಿಡದ[b] ಕವಲನ್ನು ಉಪಯೋಗಿಸಿದನು. 20 ಚಿಮುಕಿಸುವಾಗ, “ನೀವು ಅನುಸರಿಸಬೇಕೆಂದು ದೇವರು ಆಜ್ಞಾಪಿಸಿದ ಒಡಂಬಡಿಕೆಯನ್ನು ಈ ರಕ್ತ ದೃಢಪಡಿಸುತ್ತದೆ”(A) ಎಂದು ಹೇಳಿದನು. 21 ಅದೇರೀತಿ, ಮೋಶೆಯು ರಕ್ತವನ್ನು ಗುಡಾರದ ಮೇಲೆಯೂ ಆರಾಧನೆಯಲ್ಲಿ ಬಳಸುವ ಎಲ್ಲಾ ವಸ್ತುಗಳ ಮೇಲೆಯೂ ಚಿಮುಕಿಸಿದನು. 22 ಬಹುಮಟ್ಟಿಗೆ ಪ್ರತಿಯೊಂದೂ ರಕ್ತದಿಂದ ಪರಿಶುದ್ಧವಾಗಬೇಕೆಂದು ಧರ್ಮಶಾಸ್ತ್ರವು ಹೇಳುತ್ತದೆ. ರಕ್ತವಿಲ್ಲದೆ ಪಾಪಗಳನ್ನು ಕ್ಷಮಿಸಲು ಸಾಧ್ಯವಿಲ್ಲ.

ಕ್ರಿಸ್ತನ ಯಜ್ಞವು ಪಾಪಗಳನ್ನು ದೂರತಳ್ಳಿತು

23 ಈ ವಸ್ತುಗಳು ಪರಲೋಕದಲ್ಲಿರುವ ವಸ್ತುಗಳ ಪ್ರತಿರೂಪಗಳಾಗಿವೆ. ಇವುಗಳನ್ನು ಪ್ರಾಣಿಗಳ ಯಜ್ಞಗಳಿಂದ ಪರಿಶುದ್ಧಗೊಳಿಸಬೇಕಾಗಿದೆ. ಆದರೆ ಪರಲೋಕದಲ್ಲಿರುವ ನಿಜರೂಪಗಳಿಗಾಗಿ ಉತ್ತಮವಾದ ಯಜ್ಞಗಳನ್ನು ಅರ್ಪಿಸಬೇಕಾಗಿದೆ. 24 ಕ್ರಿಸ್ತನು ಮಹಾ ಪವಿತ್ರಸ್ಥಳದೊಳಕ್ಕೆ ಹೋದನು. ಆದರೆ ಆತನು ಮಾನವನಿರ್ಮಿತವಾದ ಮಹಾಪವಿತ್ರಸ್ಥಳಕ್ಕೆ ಹೋಗಲಿಲ್ಲ. ಈ ಮಹಾಪವಿತ್ರಸ್ಥಳವು ನಿಜವಾದದ್ದರ ಪ್ರತಿರೂಪ ಮಾತ್ರವಾಗಿದೆ. ಆತನು ಪರಲೋಕಕ್ಕೆ ಹೋದನು; ನಮಗೆ ಸಹಾಯ ಮಾಡುವುದಕ್ಕೋಸ್ಕರ ಈಗ ದೇವರ ಸನ್ನಿಧಿಯಲ್ಲಿದ್ದಾನೆ.

25 ಪ್ರಧಾನಯಾಜಕನು ವರ್ಷಕ್ಕೊಮ್ಮೆ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸುವಾಗ ಅರ್ಪಿಸುವುದಕ್ಕಾಗಿ ಪಶುರಕ್ತವನ್ನು ತನ್ನೊಡನೆ ತೆಗೆದುಕೊಂಡು ಹೋಗುತ್ತಿದ್ದನು. ಆದರೆ ಅವನು ತನ್ನ ಸ್ವಂತ ರಕ್ತವನ್ನು ಅರ್ಪಿಸುತ್ತಿರಲಿಲ್ಲ. ಕ್ರಿಸ್ತನು ಪರಲೋಕಕ್ಕೆ ಹೋದದ್ದು, ಪ್ರಧಾನ ಯಾಜಕನು ಮತ್ತೆಮತ್ತೆ ರಕ್ತವನ್ನು ಅರ್ಪಿಸಿದಂತೆ ತನ್ನನ್ನು ಮತ್ತೆಮತ್ತೆ ಅರ್ಪಿಸಿಕೊಳ್ಳುವುದಕ್ಕಾಗಿಯಲ್ಲ. 26 ಕ್ರಿಸ್ತನು ಅನೇಕ ಸಲ ತನ್ನನ್ನು ಅರ್ಪಿಸಿಕೊಂಡಿದ್ದರೆ, ಈ ಲೋಕವು ಸೃಷ್ಟಿಯಾದಂದಿನಿಂದ ಆತನು ಅನೇಕ ಸಲ ಸಂಕಟವನ್ನು ಅನಭವಿಸ ಬೇಕಾಗುತ್ತಿತ್ತು. ಆದರೆ ಕ್ರಿಸ್ತನು ಯುಗಾಂತ್ಯದಲ್ಲಿ ಪಾಪನಿವಾರಣೆ ಮಾಡುವುದಕ್ಕಾಗಿ ಬಂದು ಒಂದೇ ಸಲ ತನ್ನನ್ನು ಅರ್ಪಿಸಿಕೊಂಡನು.

27 ಪ್ರತಿಯೊಬ್ಬರೂ ಒಂದೇಸಾರಿ ಸಾಯುವರು. ಅನಂತರ ಅವರಿಗೆ ನ್ಯಾಯತೀರ್ಪಾಗುವುದು. 28 ಅದರಂತೆಯೇ ಕ್ರಿಸ್ತನು ಅನೇಕ ಜನರ ಪಾಪಗಳನ್ನು ತೆಗೆದುಹಾಕಲು ಒಂದು ಸಲ ಮಾತ್ರ ತನ್ನನ್ನು ಯಜ್ಞವನ್ನಾಗಿ ಅರ್ಪಿಸಿಕೊಂಡನು. ಕ್ರಿಸ್ತನು ಎರಡನೆ ಸಲ ಪ್ರತ್ಯಕ್ಷನಾಗುವುದು ಜನರ ಪಾಪನಿವಾರಣೆಗೋಸ್ಕರವಲ್ಲ. ತನಗಾಗಿ ಕಾಯುತ್ತಿರುವ ಜನರನ್ನು ಬಿಡುಗಡೆ ಮಾಡುವುದಕ್ಕಾಗಿಯಷ್ಟೇ.

ಆಮೋಸ 3

ಇಸ್ರೇಲಿಗೆ ಎಚ್ಚರಿಕೆಯ ಮಾತು

ಇಸ್ರೇಲಿನ ಜನರೇ, ಈ ಸಂದೇಶಕ್ಕೆ ಕಿವಿಗೊಡಿರಿ! ನಿಮ್ಮ ವಿಷಯವಾಗಿ ಯೆಹೋವನು ಹೀಗೆ ಹೇಳಿದ್ದಾನೆ. ಇಸ್ರೇಲೇ, ಇದು ನಾನು ಈಜಿಪ್ಟ್‌ನಿಂದ ಬಿಡಿಸಿಕೊಂಡು ಬಂದ ಎಲ್ಲಾ ಕುಟುಂಬಗಳವರ (ಇಸ್ರೇಲ್) ವಿಷಯವಾದ ಸಂದೇಶ. “ಈ ಭೂಮುಖದಲ್ಲಿ ಅನೇಕ ಕುಟುಂಬಗಳಿವೆ. ಅವರೆಲ್ಲರಲ್ಲಿ ನಿಮ್ಮನ್ನು ಮಾತ್ರವೇ ನಾನು ವಿಶೇಷ ರೀತಿಯಲ್ಲಿ ಬಲ್ಲೆನು. ಆದರೆ ನೀವು ನನಗೆ ವಿರುದ್ಧವಾದಿರಿ. ಆದ್ದರಿಂದ ನಾನು ನೀವು ಮಾಡಿದ ಪಾಪಗಳಿಗೆ ನಿಮ್ಮೆಲ್ಲರನ್ನು ಶಿಕ್ಷಿಸುವೆನು.”

ಇಸ್ರೇಲಿನ ಶಿಕ್ಷೆಯ ಕಾರಣ

ಇಬ್ಬರು ಒಟ್ಟಾಗಿ ನಡೆಯಬೇಕಾದರೆ
    ಅದಕ್ಕೆ ಅವರಿಬ್ಬರೂ ಒಪ್ಪಿಕೊಂಡಿರಲೇಬೇಕು.
ಅಡವಿಯಲ್ಲಿರುವ ಸಿಂಹವು
    ಪ್ರಾಣಿಯನ್ನು ಹಿಡಿದ ನಂತರವೇ ಗರ್ಜಿಸುವದು.
ಪ್ರಾಯದ ಸಿಂಹವು ತನ್ನ ಗವಿಯಲ್ಲಿ ಗರ್ಜಿಸಿದರೆ
    ಅದು ಒಂದು ಪ್ರಾಣಿಯನ್ನು ಹಿಡಿಯಿತು ಎಂದು ಅರ್ಥ.
ಬಲೆಯಲ್ಲಿ ಆಹಾರ ಹಾಕದಿದ್ದರೆ
    ಪಕ್ಷಿಯು ಬಲೆಯೊಳಗೆ ಸಿಕ್ಕಿಹಾಕಿಕೊಳ್ಳುವುದಿಲ್ಲ.
ಏನೂ ಸಿಕ್ಕಿಕೊಳ್ಳದೆ
    ಬೋನು ಮುಚ್ಚಿಕೊಳ್ಳುವುದೇ?
ತುತ್ತೂರಿಯ ಎಚ್ಚರಿಕೆಯ ಶಬ್ಧವನ್ನು ಕೇಳಿದ ಜನರು
    ಖಂಡಿತವಾಗಿ ಹೆದರಿ ನಡುಗುವರು.
ಒಂದು ಗಂಡಾಂತರವು ಪಟ್ಟಣಕ್ಕೆ ಬಂದಿರುವುದಾದರೆ
    ಅದನ್ನು ಬರಮಾಡಿದಾತನು ಯೆಹೋವನೇ.

ನನ್ನ ಒಡೆಯನಾದ ಯೆಹೋವನು ಒಂದು ಕಾರ್ಯವನ್ನು ಮಾಡಲು ನಿರ್ಧರಿಸಬಹುದು. ಆದರೆ ಆತನು ಹಾಗೆ ಮಾಡುವ ಮುಂಚಿತವಾಗಿ ತನ್ನ ಸೇವಕರಾದ ಪ್ರವಾದಿಗಳಿಗೆ ಮುಂತಿಳಿಸುವನು. ಸಿಂಹವು ಗರ್ಜಿಸಿದಾಗ ಜನರಿಗೆ ಭಯವಾಗುವುದು. ಯೆಹೋವನು ಮಾತನಾಡಿದಾಗ ಪ್ರವಾದಿಗಳು ಪ್ರವಾದಿಸುವರು.

9-10 ಅಷ್ಡೋದ್ ಮತ್ತು ಈಜಿಪ್ಟಿನ ಉನ್ನತ ಬುರುಜುಗಳ ಬಳಿಗೆ ಹೋಗಿ ಈ ಸಂದೇಶವನ್ನು ಸಾರಿರಿ, “ಸಮಾರ್ಯದ ಪರ್ವತಗಳ ಬಳಿಗೆ ಬನ್ನಿರಿ. ಅಲ್ಲಿ ಒಂದು ದೊಡ್ಡ ಗಲಿಬಿಲಿಯನ್ನು ನೋಡುವಿರಿ. ಯಾಕೆಂದರೆ ಜನರಿಗೆ ಸರಿಯಾಗಿ ಜೀವಿಸುವ ರೀತಿ ಗೊತ್ತಿಲ್ಲ. ಅವರು ಜನರೊಂದಿಗೆ ಕ್ರೂರವಾಗಿ ವರ್ತಿಸುವರು. ಬೇರೆ ಜನರಿಂದ ವಸ್ತುಗಳನ್ನು ತೆಗೆದುಕೊಂಡು ಅವುಗಳನ್ನು ಉನ್ನತ ಬುರುಜುಗಳಲ್ಲಿ ಅಡಗಿಸಿಡುವರು. ಯುದ್ಧದಲ್ಲಿ ಸೂರೆ ಮಾಡಿದ ವಸ್ತುಗಳಿಂದ ಅವರ ಖಜಾನೆಯು ತುಂಬಿರುವದು.”

11 ಆದ್ದರಿಂದ ಯೆಹೋವನು ಹೇಳುವುದೇನೆಂದರೆ, “ಆ ದೇಶಕ್ಕೆ ಒಬ್ಬ ಶತ್ರುವು ಬರುವನು. ಅವನು ನಿಮ್ಮ ಬಲವನ್ನೇ ಮುರಿಯುವನು. ನೀವು ಉನ್ನತ ಬುರುಜುಗಳಲ್ಲಿ ಅಡಿಗಿಸಿಟ್ಟಿದ್ದ ವಸ್ತುಗಳನ್ನು ಕಿತ್ತುಕೊಳ್ಳುವನು.”

12 ಯೆಹೋವನು ಹೇಳುವುದೇನೆಂದರೆ,

“ಒಂದುವೇಳೆ ಸಿಂಹವು ಒಂದು ಕುರಿಮರಿಯ ಮೇಲೆ ಎರಗಿದರೆ
    ಕುರುಬನು ಅದನ್ನು ರಕ್ಷಿಸಲು ಪ್ರಯತ್ನಿಸಾನು.
ಆದರೆ ಕುರುಬನು ಆ ಕುರಿಮರಿಯ
    ಒಂದು ಭಾಗವನ್ನು ಮಾತ್ರ ಕಾಪಾಡಿಯಾನು.
ಸಿಂಹದ ಬಾಯಿಂದ ಕುರಿಯ ಎರಡು ಕಾಲುಗಳನ್ನೋ
    ಕಿವಿಯ ಒಂದು ಭಾಗವನ್ನೋ ಎಳೆದು ರಕ್ಷಿಸಿಯಾನು.
ಅದೇ ರೀತಿಯಲ್ಲಿ ಬಹುತೇಕ ಇಸ್ರೇಲರು ರಕ್ಷಿಸಲ್ಪಡುವದಿಲ್ಲ.
    ಸಮಾರ್ಯದಲ್ಲಿರುವ ಜನರು ತಮ್ಮ ಹಾಸಿಗೆಯ ಒಂದು ಮೂಲೆಯನ್ನಾಗಲಿ
    ಅಥವಾ ಮಂಚದ ಮೇಲಿನ ಬಟ್ಟೆಯ ಒಂದು ತುಂಡನ್ನಾಗಲಿ ಉಳಿಸಿಕೊಳ್ಳುವರು.”

13 ಸರ್ವಶಕ್ತನೂ ನನ್ನ ಒಡೆಯನೂ ಆಗಿರುವ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ, “ಯಾಕೋಬನ ಕುಟುಂಬದವರಿಗೆ ಈ ವಿಷಯವನ್ನು ತಿಳಿಸು. 14 ಇಸ್ರೇಲು ಪಾಪಮಾಡಿದೆ. ಅದಕ್ಕಾಗಿ ನಾನು ಅದನ್ನು ಶಿಕ್ಷಿಸುವೆನು. ಬೇತೇಲಿನಲ್ಲಿರುವ ವೇದಿಕೆಗಳನ್ನು ನಾನು ನಾಶಮಾಡುವೆನು. ವೇದಿಕೆಯ ಕೊಂಬುಗಳು ಮುರಿಯಲ್ಪಟ್ಟು ನೆಲದ ಮೇಲೆ ಬೀಳುವವು. 15 ಬೇಸಿಗೆ ಕಾಲದ ಅರಮನೆಯೊಂದಿಗೆ ಚಳಿಗಾಲದ ಅರಮನೆಯನ್ನೂ ನಾಶಮಾಡುವೆನು. ದಂತದ ಭವನಗಳನ್ನು ನಾಶಮಾಡುವೆನು, ಇತರ ಎಷ್ಟೋ ಮನೆಗಳು ನಾಶವಾಗುವವು.” ಇವು ಯೆಹೋವನ ನುಡಿಗಳು.

ಕೀರ್ತನೆಗಳು 146-147

146 ಯೆಹೋವನಿಗೆ ಸ್ತೋತ್ರವಾಗಲಿ!
    ನನ್ನ ಮನವೇ, ಯೆಹೋವನನ್ನು ಸ್ತುತಿಸು!
ನನ್ನ ಜೀವಮಾನವೆಲ್ಲಾ ಯೆಹೋವನನ್ನು ಸ್ತುತಿಸುವೆನು;
    ಆತನನ್ನು ಸಂಕೀರ್ತಿಸುವೆನು.
ಸಹಾಯಕ್ಕಾಗಿ ನಿಮ್ಮ ನಾಯಕರುಗಳನ್ನು ಅವಲಂಬಿಸಿಕೊಳ್ಳಬೇಡಿ.
    ಮನುಷ್ಯರಲ್ಲಿ ಭರವಸವಿಡಬೇಡಿ, ಅವರು ನಿಮ್ಮನ್ನು ರಕ್ಷಿಸಲಾರರು.
ಮನುಷ್ಯರು ಸತ್ತು ಸಮಾಧಿಗೆ ಸೇರುವರು;
    ಆಗ ನಿಮಗೆ ಸಹಾಯಮಾಡಬೇಕೆಂಬ ಅವರ ಆಲೋಚನೆಗಳೆಲ್ಲಾ ಅಳಿದುಹೋಗುತ್ತವೆ.
ಯಾರಿಗೆ ದೇವರು ಸಹಾಯಕನೋ,
    ಯಾರು ತಮ್ಮ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದಾರೋ, ಅವರೇ ಭಾಗ್ಯವಂತರು.
ಯೆಹೋವನು ಆಕಾಶವನ್ನೂ ಭೂಮಿಯನ್ನೂ
    ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿದನು.
ಆತನು ಅವುಗಳನ್ನು ಶಾಶ್ವತವಾಗಿ ಸಂರಕ್ಷಿಸುವನು.
ಹಿಂಸೆಗೆ ಗುರಿಯಾಗಿರುವವರಿಗೆ ನ್ಯಾಯವನ್ನೂ;
    ಹಸಿದವರಿಗೆ ಆಹಾರವನ್ನೂ ಕೊಡುವವನು ಆತನೇ.
ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುವನು.
    ಯೆಹೋವನು ಕುರುಡರಿಗೆ ದೃಷ್ಟಿಕೊಡುವನು.
ಯೆಹೋವನು ಕುಗ್ಗಿಹೋದವರನ್ನು ಉದ್ಧರಿಸುವನು.
    ಯೆಹೋವನು ನೀತಿವಂತರನ್ನು ಪ್ರೀತಿಸುವನು.
ಯೆಹೋವನು ನಮ್ಮ ದೇಶದಲ್ಲಿ ವಾಸವಾಗಿರುವ ವಿದೇಶಿಯರನ್ನು ಕಾಪಾಡುತ್ತಾನೆ.
    ಆತನು ವಿಧವೆಯರನ್ನೂ ಅನಾಥರನ್ನೂ ಪರಿಪಾಲಿಸುತ್ತಾನೆ.
    ಆದರೆ ಆತನು ದುಷ್ಟರ ಆಲೋಚನೆಗಳನ್ನು ನಾಶಮಾಡುವನು.
10 ಯೆಹೋವನು ಸದಾಕಾಲ ಆಳುವನು!
    ಚೀಯೋನೇ, ನಿನ್ನ ದೇವರು ಶಾಶ್ವತವಾಗಿ ಆಳುವನು!

ಯೆಹೋವನಿಗೆ ಸ್ತೋತ್ರವಾಗಲಿ!

147 ಯೆಹೋವನನ್ನು ಸ್ತುತಿಸಿರಿ! ಆತನು ಒಳ್ಳೆಯವನು.
    ನಮ್ಮ ದೇವರನ್ನು ಸಂಕೀರ್ತಿಸಿರಿ.
    ಆತನನ್ನು ಸ್ತುತಿಸುವುದು ಒಳ್ಳೆಯದೂ ಸಂತೋಷಕರವೂ ಆಗಿದೆ.
ಯೆಹೋವನು ಜೆರುಸಲೇಮನ್ನು ಕಟ್ಟಿದನು.
    ಸೆರೆಯಾಳುಗಳಾಗಿ ಒಯ್ಯಲ್ಪಟ್ಟಿದ್ದ ಇಸ್ರೇಲರನ್ನು ಆತನು ಹಿಂದಕ್ಕೆ ಕರೆತಂದನು.
ಅವರ ಒಡೆದ ಹೃದಯಗಳನ್ನು ಆತನು ವಾಸಿಮಾಡುವನು;
    ಅವರ ಗಾಯಗಳನ್ನು ಕಟ್ಟುವನು.
ಆತನು ನಕ್ಷತ್ರಗಳನ್ನು ಎಣಿಸುವನು.
    ಆತನಿಗೆ ಪ್ರತಿಯೊಂದು ನಕ್ಷತ್ರದ ಹೆಸರು ತಿಳಿದಿದೆ.
ನಮ್ಮ ಒಡೆಯನು ಬಹು ದೊಡ್ಡವನೂ ಪರಾಕ್ರಮಿಯೂ ಆಗಿದ್ದಾನೆ.
    ಆತನ ಜ್ಞಾನವು ಅಪರಿಮಿತವಾಗಿದೆ.
ಯೆಹೋವನು ದೀನರಿಗೆ ಆಧಾರವಾಗಿದ್ದಾನೆ.
    ದುಷ್ಟರನ್ನಾದರೋ ನಾಚಿಕೆಗೆ ಗುರಿಪಡಿಸುವನು.
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ.
    ನಮ್ಮ ದೇವರನ್ನು ಹಾರ್ಪ್‌ವಾದ್ಯಗಳೊಂದಿಗೆ ಸ್ತುತಿಸಿರಿ.
ಆತನು ಆಕಾಶವನ್ನು ಮೋಡಗಳಿಂದ ತುಂಬಿಸುವನು;
    ಭೂಮಿಗಾಗಿ ಮಳೆಯನ್ನು ಸುರಿಸುವನು;
ಬೆಟ್ಟಗಳ ಮೇಲೆ ಹುಲ್ಲನ್ನು ಬೆಳೆಯಮಾಡುವನು.
ದೇವರು ಪ್ರಾಣಿಗಳಿಗೂ
    ಪಕ್ಷಿಯ ಮರಿಗಳಿಗೂ ಆಹಾರ ಕೊಡುವನು.
10 ಯುದ್ಧದ ಕದುರೆಗಳಾಗಲಿ ಶಕ್ತಿಯುತರಾದ ಸೈನಿಕರಾಗಲಿ ಆತನನ್ನು ಮೆಚ್ಚಿಸಲಾರವು.
11 ಯೆಹೋವನು ತನ್ನನ್ನು ಆರಾಧಿಸುವ ಜನರಲ್ಲೇ ಸಂತೋಷಪಡುವನು.
    ಆತನು ತನ್ನ ಶಾಶ್ವತ ಪ್ರೀತಿಯಲ್ಲಿ ಭರವಸವಿಟ್ಟಿರುವವರನ್ನು ಮೆಚ್ಚಿಕೊಳ್ಳುವನು.
12 ಜೆರುಸಲೇಮೇ, ಯೆಹೋವನನ್ನು ಸ್ತುತಿಸು!
    ಚೀಯೋನೇ, ನಿನ್ನ ದೇವರನ್ನು ಸ್ತುತಿಸು!
13 ಜೆರುಸಲೇಮೇ, ದೇವರು ನಿನ್ನ ಬಾಗಿಲುಗಳ ಸರಳುಗಳನ್ನು ಬಲಪಡಿಸುವನು;
    ನಿನ್ನ ನಗರದಲ್ಲಿರುವ ಜನರನ್ನು ಆಶೀರ್ವದಿಸುವನು.
14 ಆತನು ನಿಮ್ಮ ದೇಶದಲ್ಲಿ ಶಾಂತಿಯನ್ನು ನೆಲೆಗೊಳಿಸಿದನು.
    ನಿಮ್ಮನ್ನು ಶ್ರೇಷ್ಠವಾದ ಗೋಧಿಯಿಂದ ತೃಪ್ತಿಪಡಿಸಿದನು.
15 ಆತನು ಭೂಮಿಗೆ ಆಜ್ಞಾಪಿಸಲು
    ಅದು ಕೂಡಲೆ ವಿಧೇಯವಾಗುತ್ತದೆ.
16 ನೆಲವು ಉಣ್ಣೆಯಂತೆ ಬಿಳುಪಾಗುವವರೆಗೆ ಆತನು ಮಂಜನ್ನು ಬೀಳಿಸುವನು;
    ಹಿಮವನ್ನು ಗಾಳಿಯ ಮೂಲಕ ಧೂಳಿನಂತೆ ಹರಡುವನು.
17 ಆತನು ಆಕಾಶದಿಂದ ಕಲ್ಲುಗಳಂತಿರುವ ಆಲಿಕಲ್ಲನ್ನು ಸುರಿಸುವನು;
    ಯಾವನೂ ಚಳಿಯಲ್ಲಿ ಹೊರಗಡೆ ಇರಲಾರನು.
18 ಆತನು ಮತ್ತೊಂದು ಆಜ್ಞೆಯನ್ನು ಹೊರಡಿಸುವನು; ಆಗ ಬಿಸಿಗಾಳಿಯು ಮತ್ತೆ ಬೀಸುವುದು;
    ಮಂಜು ಕರಗಿಹೋಗುವುದು. ನೀರು ಹರಿಯತೊಡಗುವುದು.

19 ಆತನು ಯಾಕೋಬಿಗೆ ತನ್ನ ಆಜ್ಞೆಗಳನ್ನು ಕೊಟ್ಟನು.
    ಇಸ್ರೇಲಿಗೆ ತನ್ನ ಕಟ್ಟಳೆಗಳನ್ನೂ ನಿಯಮಗಳನ್ನೂ ಕೊಟ್ಟನು.
20 ಆತನು ಬೇರೆ ಯಾವ ಜನಾಂಗದವರಿಗೂ ಹೀಗೆ ಮಾಡಲಿಲ್ಲ.
    ಆತನು ಅನ್ಯಜನಾಂಗಗಳವರಿಗೆ ತನ್ನ ಕಟ್ಟಳೆಗಳನ್ನು ಉಪದೇಶಿಸಲಿಲ್ಲ.

ಯೆಹೋವನಿಗೆ ಸ್ತೋತ್ರವಾಗಲಿ!

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International