Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ರಾಜರುಗಳು 25

ನೆಬೂಕದ್ನೆಚ್ಚರನು ಚಿದ್ಕೀಯನ ಆಳ್ವಿಕೆಯನ್ನು ಕೊನೆಗೊಳಿಸಿದನು

25 ಆದ್ದರಿಂದ ಬಾಬಿಲೋನ್ ರಾಜನಾದ ನೆಬೂಕದ್ನೆಚ್ಚರನು ಜೆರುಸಲೇಮಿನ ವಿರುದ್ಧ ಯುದ್ಧಮಾಡಲು ತನ್ನ ಎಲ್ಲಾ ಸೇನೆಯೊಡನೆ ಬಂದನು. ನೆಬೂಕದ್ನೆಚ್ಚರನು ಜೆರುಸಲೇಮಿನ ಸುತ್ತಲೂ ಪಾಳೆಯ ಮಾಡಿಕೊಂಡು ಮಣ್ಣಿನ ದಿಬ್ಬವನ್ನು ನಿರ್ಮಿಸಿದನು. ಅವನು ನಗರದೊಳಕ್ಕೆ ಹೋಗುವ ಮತ್ತು ನಗರದಿಂದ ಬರುವ ಜನರನ್ನು ತಡೆಯಲು ಹೀಗೆ ಮಾಡಿದನು. ಇದು ನೆಬೂಕದ್ನೆಚ್ಚರನ ಆಳ್ವಿಕೆಯ ಒಂಭತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹತ್ತನೆಯ ದಿನದಂದು ಸಂಭವಿಸಿತು. ನೆಬೂಕದ್ನೆಚ್ಚರನ ಸೇನೆಯು ಜೆರುಸಲೇಮಿನ ಸುತ್ತಲೂ, ಚಿದ್ಕೀಯನು ಯೆಹೂದದ ರಾಜನಾದ ಹನ್ನೊಂದನೆಯ ವರ್ಷದವರೆಗೆ ನೆಲೆಸಿತು. ನಾಲ್ಕನೆಯ ತಿಂಗಳ ಒಂಭತ್ತನೆಯ ದಿನದಂದು ನಗರದಲ್ಲಿ ಭೀಕರ ಬರಗಾಲವಿತ್ತು. ಅಲ್ಲಿನ ಸಾಮಾನ್ಯರಿಗೆ ಆಹಾರವೇನೂ ಇರಲಿಲ್ಲ.

ಆಗ ನೆಬೂಕದ್ನೆಚ್ಚರನ ಸೇನೆಯು ನಗರದ ಗೋಡೆಯಲ್ಲಿ ಒಂದು ರಂಧ್ರವನ್ನು ಕೊರೆದರು. ಅಂದಿನ ರಾತ್ರಿ ರಾಜನಾದ ಚಿದ್ಕೀಯ ಮತ್ತು ಅವನ ಸೈನಿಕರೆಲ್ಲರೂ ಓಡಿಹೋದರು. ಅವರು ರಾಜನ ತೋಟದ ಎರಡು ಗೋಡೆಗಳ ಮಧ್ಯಭಾಗದ ರಹಸ್ಯ ಬಾಗಿಲಿನ ಮೂಲಕ ಓಡಿಹೋದರು. ಬಾಬಿಲೋನ್ ಸೇನೆಯು ನಗರವನ್ನು ಸುತ್ತುವರಿದಿತ್ತು. ಆದರೆ ಚಿದ್ಕೀಯ ಮತ್ತು ಅವನ ಸೇನೆಯು ಮರುಭೂಮಿಯ ರಸ್ತೆಯಲ್ಲಿ ತಪ್ಪಿಸಿಕೊಂಡರು. ಬಾಬಿಲೋನ್ ಸೇನೆಯು ರಾಜನಾದ ಚಿದ್ಕೀಯನನ್ನು ಅಟ್ಟಿಸಿಕೊಂಡು ಹೋಗಿ, ಅವನನ್ನು ಜೆರಿಕೊವಿನ ಸಮೀಪದಲ್ಲಿ ಹಿಡಿದರು.

ಬಾಬಿಲೋನಿನವರು ರಾಜನಾದ ಚಿದ್ಕೀಯನನ್ನು ರಿಬ್ಲದಲ್ಲಿ ಬಾಬಿಲೋನ್ ರಾಜನಿಗೆ ಒಪ್ಪಿಸಿದರು. ಬಾಬಿಲೋನ್ ರಾಜನು ಚಿದ್ಕೀಯನನ್ನು ದಂಡಿಸಲು ತೀರ್ಮಾನಿಸಿದನು. ಅವರು ಚಿದ್ಕೀಯನ ಮಕ್ಕಳನ್ನು ಅವನ ಎದುರಿನಲ್ಲಿಯೇ ಕೊಂದುಹಾಕಿದರು. ನಂತರ ಅವರು ಚಿದ್ಕೀಯನ ಕಣ್ಣುಗಳನ್ನು ಕಿತ್ತುಹಾಕಿದರು. ಅವರು ಅವನನ್ನು ಸರಪಣಿಗಳಿಂದ ಬಂಧಿಸಿ, ಬಾಬಿಲೋನಿಗೆ ಕೊಂಡೊಯ್ದರು.

ಜೆರುಸಲೇಮನ್ನು ನಾಶಗೊಳಿಸಲಾಯಿತು

ಬಾಬಿಲೋನ್ ರಾಜನಾಗಿದ್ದ ನೆಬೂಕದ್ನೆಚ್ಚರನು ತನ್ನ ಆಳ್ವಿಕೆಯ ಹತ್ತೊಂಭತ್ತನೆಯ ವರ್ಷದ ಐದನೆಯ ತಿಂಗಳ ಏಳನೆಯ ದಿನದಂದು ಜೆರುಸಲೇಮಿಗೆ ಬಂದನು. ನೆಬೂಜರದಾನ ಎಂಬವನು ನೆಬೂಕದ್ನೆಚ್ಚರನ ರಕ್ಷಕ ದಳದ ಅಧಿಪತಿಯಾಗಿದ್ದನು. ನೆಬೂಜರದಾನನು ದೇವಾಲಯವನ್ನೂ ರಾಜನ ಅರಮನೆಯನ್ನೂ ಜೆರುಸಲೇಮಿನಲ್ಲಿದ್ದ ಮನೆಗಳನ್ನೆಲ್ಲಾ ಸುಟ್ಟುಹಾಕಿದನು. ಅವನು ಮಹಾಸೌಧಗಳನ್ನು ನಾಶಗೊಳಿಸಿದನು.

10 ನಂತರ ನೆಬೂಜರದಾನನೊಂದಿಗಿದ್ದ ಬಾಬಿಲೋನ್ ಸೈನ್ಯವು ಜೆರುಸಲೇಮಿನ ಸುತ್ತಲೂ ಇದ್ದ ಗೋಡೆಯನ್ನು ಕೆಡವಿಹಾಕಿತು. 11 ಆ ನಗರದಲ್ಲಿ ಉಳಿದಿದ್ದ ಜನರನ್ನೆಲ್ಲಾ ನೆಬೂಜರದಾನನು ಸೆರೆಹಿಡಿದನು. ರಾಜನಾದ ನೆಬೂಕದ್ನೆಚ್ಚರನಿಗೆ ವಿಧೇಯರಾಗಿರಲು ಕೆಲವು ಜನರು ಒಪ್ಪಿದರು. ಆದರೆ ನೆಬೂಜರದಾನನು ಆ ಜನರನ್ನೆಲ್ಲಾ ಸೆರೆಹಿಡಿದನು. ಅವನು ನಗರದಲ್ಲಿದ್ದ ಪ್ರತಿಯೊಬ್ಬರನ್ನೂ ಕರೆದೊಯ್ದನು. 12 ಸಾಮಾನ್ಯ ಜನರಲ್ಲಿ ತೀರ ಬಡವರಾದ ಜನರನ್ನು ಮಾತ್ರ ನೆಬೂಜರದಾನನು ಅಲ್ಲಿಯೇ ನೆಲೆಸಲು ಬಿಟ್ಟನು. ಆ ಬಡಜನರು ಅಲ್ಲಿಯೇ ನೆಲೆಸಿ, ಬೇಸಾಯಮಾಡಿ ದ್ರಾಕ್ಷಿಯನ್ನು ಬೆಳೆಯಲು ಅವರನ್ನು ಬಿಟ್ಟುಬಿಟ್ಟನು.

13 ಬಾಬಿಲೋನ್ ಸೈನಿಕರು ದೇವಾಲಯದಲ್ಲಿದ್ದ ತಾಮ್ರದ ಸ್ತಂಭಗಳನ್ನು ಚೂರುಚೂರು ಮಾಡಿದರು. ಅವರು ಯೆಹೋವನ ಆಲಯದಲ್ಲಿದ್ದ ತಾಮ್ರದ ದೊಡ್ಡ ತೊಟ್ಟಿಯನ್ನು ಮತ್ತು ತಾಮ್ರದ ಬಂಡಿಯನ್ನು ಚೂರುಚೂರಾಗಿ ಒಡೆದುಹಾಕಿದರು. ನಂತರ ಬಾಬಿಲೋನ್ ಸೈನಿಕರು ತಾಮ್ರದ ಚೂರುಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದರು. 14 ಬಾಬಿಲೋನಿನವರು ದೇವಾಲಯದಲ್ಲಿ ಉಪಯೋಗಿಸುತ್ತಿದ್ದ ಬೋಗುಣಿ, ಸಲಿಕೆ, ಕತ್ತರಿ, ಧೂಪಾರತಿ ಮೊದಲಾದ ತಾಮ್ರದ ವಸ್ತುಗಳನ್ನು ತೆಗೆದುಕೊಂಡು ಹೋದರು. 15 ನೆಬೂಜರದಾನನು ಅಗ್ಗಿಷ್ಟಿಕೆಗಳನ್ನು ಮತ್ತು ಬಟ್ಟಲುಗಳನ್ನು ತೆಗೆದುಕೊಂಡು ಹೋದನು. ಅವನು ಬಂಗಾರದ ವಸ್ತುಗಳನ್ನು ಬಂಗಾರಕ್ಕಾಗಿಯೂ ಬೆಳ್ಳಿಯ ವಸ್ತುಗಳನ್ನು ಬೆಳ್ಳಿಗಾಗಿಯೂ ತೆಗೆದುಕೊಂಡು ಹೋದನು. 16 ಅವನು ತೆಗೆದುಕೊಂಡು ಹೋದ ವಸ್ತುಗಳ ಪಟ್ಟಿಯು ಹೀಗಿದೆ: ಎರಡು ತಾಮ್ರ ಕಂಬಗಳು, ಒಂದು ತೊಟ್ಟಿ ಮತ್ತು ದೇವಾಲಯಕ್ಕೆ ಸೊಲೊಮೋನನು ನಿರ್ಮಿಸಿದ್ದ ಬಂಡಿಗಳು. ಈ ವಸ್ತುಗಳ ತಾಮ್ರವು ತೂಕ ಮಾಡಲಾರದಷ್ಟು ಅಧಿಕವಾಗಿತ್ತು. 17 ಪ್ರತಿಯೊಂದು ಕಂಬವೂ ಸುಮಾರು ಇಪ್ಪತ್ತೇಳು ಅಡಿ ಉದ್ದವಾಗಿತ್ತು. ಕಂಬಗಳ ಮೇಲಿದ್ದ ಬೋದಿಗೆಗಳನ್ನು ತಾಮ್ರದಿಂದ ನಿರ್ಮಿಸಿದ್ದರು. ಪ್ರತಿಯೊಂದು ಬೋದಿಗೆಯೂ ನಾಲ್ಕುವರೆ ಅಡಿ ಉದ್ದವಾಗಿತ್ತು. ಪ್ರತಿಯೊಂದು ಬೋದಿಗೆಯ ಮೇಲೆ ಜಾಲರಿಯ ಆಕಾರವಿತ್ತು ಮತ್ತು ದಾಳಿಂಬೆ ಹಣ್ಣುಗಳ ಆಕಾರಗಳಿದ್ದವು. ಇವೆಲ್ಲವುಗಳನ್ನು ತಾಮ್ರದಿಂದಲೇ ಮಾಡಿದ್ದರು. ಎರಡು ಕಂಬಗಳೂ ಒಂದೇ ರೀತಿಯ ಆಕಾರದಲ್ಲಿದ್ದವು.

ಯೆಹೂದದ ಜನರನ್ನು ಸೆರೆಯಾಳುಗಳನ್ನಾಗಿಸಿ ಕರೆದೊಯ್ದರು

18 ನಂತರ, ನೆಬೂಜರದಾನನು, ಪ್ರಧಾನಯಾಜಕನಾದ ಸೆರಾಯನನ್ನು, ಎರಡನೆಯ ಯಾಜಕನಾದ ಚೆಫನ್ಯನನ್ನು ಮತ್ತು ಮೂವರು ದ್ವಾರಪಾಲಕರನ್ನು ಹಿಡಿದುಕೊಂಡು ಹೋದನು.

19 ನೆಬೂಜರದಾನನು ಸೇನೆಯ ಸೇನಾಧಿಕಾರಿಯೊಬ್ಬನನ್ನು ಹಿಡಿದುಕೊಂಡು ಹೋದನು. ನೆಬೂಜರದಾನನು ನಗರದಲ್ಲಿ ಸಿಕ್ಕಿದ ರಾಜನ ಐದು ಮಂದಿ ಸಲಹೆಗಾರರನ್ನು ಹಿಡಿದೊಯ್ದನು. ಅವನು ಸೇನೆಯ ಅಧಿಕಾರಿಯ ಕಾರ್ಯದರ್ಶಿಯನ್ನು ಹಿಡಿದೊಯ್ದನು. ಸೇನಾಧಿಕಾರಿಯ ಕಾರ್ಯದರ್ಶಿಯು ಸಾಮಾನ್ಯ ಜನರನ್ನು ಒಟ್ಟುಗೂಡಿಸಿ, ಅವರನ್ನು ಸೈನಿಕರನ್ನಾಗಿ ಆರಿಸುತ್ತಿದ್ದನು. ನೆಬೂಜರದಾನನು ನಗರದಲ್ಲಿ ಸಿಕ್ಕಿದ ಇತರ ಅರವತ್ತು ಮಂದಿಯನ್ನು ಹಿಡಿದೊಯ್ದನು. ಈ ಜನರು ಸಾಮಾನ್ಯ ಜನರಾಗಿದ್ದರು.

20 ನಂತರ ನೆಬೂಜರದಾನನು ಆ ಜನರನ್ನೆಲ್ಲ ರಿಬ್ಲದಲ್ಲಿದ್ದ ಬಾಬಿಲೋನ್ ರಾಜನ ಬಳಿಗೆ ಒಯ್ದನು. 21 ಬಾಬಿಲೋನ್ ರಾಜನು ಹಮಾತ್ ದೇಶದ ರಿಬ್ಲದಲ್ಲಿ ಅವರನ್ನೆಲ್ಲ ಕೊಂದುಹಾಕಿದನು. ಹೀಗೆ ಯೆಹೂದದ ಜನರನ್ನೆಲ್ಲ ಅವರ ದೇಶದಿಂದ ಸೆರೆಯಾಳುಗಳನ್ನಾಗಿಸಿ ಹಿಡಿದೊಯ್ದರು.

ನೆಬೂಕದ್ನೆಚ್ಚರನು ಗೆದಲ್ಯನನ್ನು ಯೆಹೂದದ ರಾಜ್ಯಪಾಲನನ್ನಾಗಿ ನೇಮಿಸಿದನು

22 ಬಾಬಿಲೋನ್ ರಾಜನಾದ ನೆಬೂಕದ್ನೆಚ್ಚರನು ಯೆಹೂದ ದೇಶದಲ್ಲಿ ಕೆಲವು ಜನರನ್ನು ಬಿಟ್ಟನು. ಅವನು ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನನ್ನು ಯೆಹೂದದಲ್ಲಿ ಜನರಿಗೆ ರಾಜ್ಯಪಾಲನನ್ನಾಗಿ ಮಾಡಿದನು.

23 ಬಾಬಿಲೋನ್ ರಾಜನು ಗೆದಲ್ಯನನ್ನು ರಾಜ್ಯಪಾಲನನ್ನಾಗಿ ನೇಮಿಸಿರುವುದನ್ನು ಸೇನಾಧಿಪತಿಗಳು ಮತ್ತು ಅವನ ಜನರು ಕೇಳಿ ಮಿಚ್ಛದಲ್ಲಿದ್ದ ಗೆದಲ್ಯನ ಬಳಿಗೆ ಬಂದರು. ಈ ಸೇನಾಧಿಪತಿಗಳು ಯಾರೆಂದರೆ: ನೆತನ್ಯನ ಮಗನಾದ ಇಷ್ಮಾಯೇಲ, ಕಾರೇಹನ ಮಗನಾದ ಯೋಹಾನಾನ್, ನೆಟೋಫದವನೂ ತನ್ಹುಮೆತನ ಮಗನೂ ಆದ ಸೆರಾಯ, ಮಾಕಾತ್ಯರಲ್ಲಿ ಒಬ್ಬನ ಮಗನಾದ ಯಾಜನ್ಯ. 24 ನಂತರ ಗೆದಲ್ಯನು ಈ ಸೇನಾಧಿಪತಿಗಳಿಗೆ ಮತ್ತು ಅವರ ಜನರಿಗೆ, “ಬಾಬಿಲೋನ್ ಅಧಿಕಾರಿಗಳಿಗೆ ನೀವು ಹೆದರಬೇಡಿ. ನೀವು ದೇಶದಲ್ಲಿ ವಾಸಿಸುತ್ತ ಬಾಬಿಲೋನ್ ರಾಜನ ಸೇವೆಯನ್ನು ಮಾಡಿ. ಆಗ ನಿಮಗೇನೂ ತೊಂದರೆಯಾಗುವುದಿಲ್ಲ” ಎಂದು ಪ್ರಮಾಣ ಮಾಡಿದನು.

25 ಆದರೆ ಏಳನೆಯ ತಿಂಗಳಲ್ಲಿ, ರಾಜನ ಕುಲದವನೂ ಎಲೀಷಾಮನ ಮೊಮ್ಮಗನೂ ನೆತನ್ಯನ ಮಗನೂ ಆದ ಇಷ್ಮಾಯೇಲನು ಹತ್ತು ಜನರೊಂದಿಗೆ ಬಂದು ಗೆದಲ್ಯನನ್ನು ಕೊಂದುಹಾಕಿದನು. ಇಷ್ಮಾಯೇಲ ಮತ್ತು ಅವನ ಜನರು ಮಿಚ್ಛದಲ್ಲಿ ಗೆದಲ್ಯನ ಜೊತೆಗಿದ್ದ ಯೆಹೂದ್ಯರನ್ನು ಮತ್ತು ಬಾಬಿಲೋನಿನವರನ್ನು ಕೊಂದುಹಾಕಿದರು. 26 ಇದಾದ ನಂತರ, ಕನಿಷ್ಠರಾದವರೂ ಮತ್ತು ಅತಿ ಮುಖ್ಯರೂ ಆದ ಜನರೆಲ್ಲರು ಮತ್ತು ಸೇನೆಯ ನಾಯಕರು ಬಾಬಿಲೋನಿನವರಿಗೆ ಹೆದರಿಕೊಂಡು ಈಜಿಪ್ಟಿಗೆ ಓಡಿಹೋದರು.

27 ಬಾಬಿಲೋನ್ ರಾಜನಾದ ಎವೀಲ್ಮೆರೋದಕನು, ಯೆಹೂದದ ರಾಜನಾದ ಯೆಹೋಯಾಖೀನನನ್ನು ಸೆರೆಯಿಂದ ಬಿಡುಗಡೆ ಮಾಡಿದನು. ಯೆಹೋಯಾಖೀನನನ್ನು ಸೆರೆಹಿಡಿದ ಮೂವತ್ತೇಳನೆಯ ವರ್ಷದ ನಂತರ ಇದು ಸಂಭವಿಸಿತು. ಎವೀಲ್ಮೆರೋದಕನ ಆಳ್ವಿಕೆಯ ಹನ್ನೆರಡನೆ ತಿಂಗಳಿನ ಇಪ್ಪತ್ತೇಳನೆಯ ದಿನದಂದು ಇದು ಸಂಭವಿಸಿತು. 28 ಎವೀಲ್ಮೆರೋದಕನು ಯೆಹೋಯಾಖೀನನೊಂದಿಗೆ ದಯೆಯಿಂದ ಮಾತನಾಡಿದನು. ಎವೀಲ್ಮೆರೋದಕನು ಯೆಹೋಯಾಖೀನನ ಸಿಂಹಾಸನವನ್ನು ಬಾಬಿಲೋನಿನಲ್ಲಿ ತನ್ನೊಂದಿಗಿದ್ದ ರಾಜರುಗಳ ಸಿಂಹಾಸನಗಳಿಗಿಂತ ಎತ್ತರದಲ್ಲಿರಿಸಿದನು. 29 ಎವೀಲ್ಮೆರೋದಕನು ಯೆಹೋಯಾಖೀನನ ಸೆರೆವಾಸದ ಬಟ್ಟೆಗಳನ್ನು ತೆಗೆಸಿ ಹೊಸ ಬಟ್ಟೆಗಳನ್ನು ತೊಡಿಸಿದನು. ಯೆಹೋಯಾಖೀನನು ಬದುಕಿರುವ ತನಕ ತನ್ನ ಪಂಕ್ತಿಯಲ್ಲಿ ಊಟಮಾಡಲು ಎವೀಲ್ಮೆರೋದಕನು ಅವಕಾಶ ಮಾಡಿಕೊಟ್ಟನು. 30 ಹೀಗೆ ರಾಜನಾದ ಎವೀಲ್ಮೆರೋದಕನ ಪಂಕ್ತಿಯಲ್ಲಿ ಯೆಹೋಯಾಖೀನನು ತನ್ನ ಉಳಿದ ಜೀವಿತದಲ್ಲಿ ಊಟಮಾಡಿದನು.

ಇಬ್ರಿಯರಿಗೆ 7

ಯಾಜಕ ಮೆಲ್ಕಿಜೆದೇಕ

ಮೆಲ್ಕಿಜೆದೇಕನು ಸಾಲೇಮಿನ ರಾಜನಾಗಿದ್ದನು ಮತ್ತು ಪರಾತ್ಪರನಾದ ದೇವರ ಯಾಜಕನಾಗಿದ್ದನು. ಅಬ್ರಹಾಮನು ರಾಜರುಗಳನ್ನು ಸೋಲಿಸಿ ಹಿಂದಿರುಗಿ ಬರುತ್ತಿರುವಾಗ ಅವನು ಅಬ್ರಹಾಮನನ್ನು ಸಂಧಿಸಿ ಆಶೀರ್ವದಿಸಿದನು. ಅಬ್ರಹಾಮನು ಅವನಿಗೆ ತನ್ನಲ್ಲಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಕೊಟ್ಟನು.

ಸಾಲೇಮಿನ ರಾಜನಾದ ಮೆಲ್ಕಿಜೆದೇಕನೆಂಬ ಹೆಸರಿಗೆ ಎರಡು ಅರ್ಥಗಳಿವೆ. ಮೆಲ್ಕಿಜೆದೇಕನೆಂದರೆ, “ನೀತಿರಾಜ” ಎಂಬರ್ಥ. “ಸಾಲೇಮಿನ ರಾಜ”ನೆಂದರೆ “ಸಮಾಧಾನದ ರಾಜ” ಎಂದರ್ಥ. ಮೆಲ್ಕಿಜೆದೇಕನ ತಂದೆತಾಯಿಗಳು ಯಾರೆಂಬುದಾಗಲಿ ಅವನು ಎಲ್ಲಿಂದ ಬಂದನೆಂಬುದಾಗಲಿ ಅವನು ಯಾವಾಗ ಹುಟ್ಟಿದನೆಂಬುದಾಗಲಿ ಅವನು ಯಾವಾಗ ಸತ್ತನೆಂಬುದಾಗಲಿ ಯಾರಿಗೂ ತಿಳಿದಿಲ್ಲ. ಅವನು ದೇವರ ಮಗನಂತೆ ಸದಾಕಾಲವೂ ಯಾಜಕನಾಗಿದ್ದಾನೆ.

ಮೆಲ್ಕಿಜೆದೇಕನು ಎಷ್ಟು ದೊಡ್ಡವನೆಂಬುದನ್ನು ಸ್ವಲ್ಪ ಆಲೋಚಿಸಿರಿ. ನಮ್ಮ ಮೂಲಪಿತೃವಾದ ಅಬ್ರಹಾಮನು, ಯುದ್ಧದಲ್ಲಿ ತಾನು ಜಯಿಸಿದ್ದರಲ್ಲಿ ಹತ್ತನೆಯ ಒಂದು ಭಾಗವನ್ನು ಅವನಿಗೆ ಕೊಟ್ಟನು. ಲೇವಿಯಕುಲದ ಜನರಲ್ಲಿ ಯಾಜಕರಾಗುವವರು ಯೆಹೂದ್ಯರಿಂದ ಹತ್ತನೆಯ ಒಂದು ಭಾಗವನ್ನು ಪಡೆಯಬೇಕೆಂದು ಧರ್ಮಶಾಸ್ತ್ರವು ಹೇಳುತ್ತದೆ. ಯಾಜಕರು ತಮ್ಮ ಸ್ವಂತ ಜನರಿಂದಲೇ (ಯೆಹೂದ್ಯರು) ಅದನ್ನು ಸಂಗ್ರಹಿಸುತ್ತಾರೆ ಮತ್ತು ಅವರ ಜನರು ಅಬ್ರಹಾಮನ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮೆಲ್ಕಿಜೆದೇಕನು ಲೇವಿಯರ ಕುಲಕ್ಕೆ ಸೇರಿದವನಾಗಿರಲಿಲ್ಲ. ಆದರೆ ಅವನು ಹತ್ತನೆ ಒಂದು ಭಾಗವನ್ನು ಅಬ್ರಹಾಮನಿಂದ ಪಡೆದನು. ದೇವರ ವಾಗ್ದಾನಗಳನ್ನು ಹೊಂದಿದ್ದ ಅಬ್ರಹಾಮನನ್ನು ಅವನು ಆಶೀರ್ವದಿಸಿದನು. ಮುಖ್ಯನಾದ ವ್ಯಕ್ತಿಯು ಅಲ್ಪನಾದವನಿಗೆ ಆಶೀರ್ವಾದ ಮಾಡುತ್ತಾನೆಂಬುದು ಜನರೆಲ್ಲರಿಗೂ ತಿಳಿದಿರುವ ವಿಷಯ.

ಯಾಜಕರು ಹತ್ತನೆಯ ಒಂದು ಭಾಗವನ್ನು ಪಡೆಯುತ್ತಾರೆ. ಆದರೆ ಅವರು ಸ್ವಲ್ಪಕಾಲ ಜೀವಿಸಿದ್ದು ನಂತರ ಸಾಯುತ್ತಾರೆ. ಆದರೆ ಅಬ್ರಹಾಮನಿಂದ ಹತ್ತನೆಯ ಒಂದು ಭಾಗವನ್ನು ಪಡೆದ ಮೆಲ್ಕಿಜೆದೇಕನು ಜೀವಂತನಾಗಿಯೇ ಇರುತ್ತಾನೆಂದು ಪವಿತ್ರ ಗ್ರಂಥವು ಹೇಳುತ್ತದೆ. ಲೇವಿಯರು ಜನರಿಂದ ಹತ್ತನೆಯ ಒಂದು ಭಾಗವನ್ನು ತೆಗೆದುಕೊಳ್ಳುತ್ತಾರೆ. ಆದರೆ ಅಬ್ರಹಾಮನು ಮೆಲ್ಕಿಜೆದೇಕನಿಗೆ ಹತ್ತನೆಯ ಒಂದು ಭಾಗವನ್ನು ಕೊಟ್ಟನೆಂದರೆ, ಲೇವಿಯೂ ಕೊಟ್ಟಂತಾಯಿತೆಂದು ಹೇಳಬಹುದು. 10 ಲೇವಿಯು ಇನ್ನೂ ಹುಟ್ಟಿರಲಿಲ್ಲ. ಆದರೆ ಮೆಲ್ಕಿಜೆದೇಕನು ಅಬ್ರಹಾಮನನ್ನು ಎದುರುಗೊಂಡಾಗ, ಲೇವಿಯು ತನ್ನ ಪೂರ್ವಿಕನಾದ ಅಬ್ರಹಾಮನ ದೇಹದಲ್ಲಿದ್ದನು.

11 ಲೇವಿಕುಲದ ಯಾಜಕತ್ವದ ಆಧಾರದ ಮೇಲೆ ಧರ್ಮಶಾಸ್ತ್ರವನ್ನು ಜನರಿಗೆ ಕೊಡಲಾಯಿತು. ಆದರೆ ಆ ಯಾಜಕತ್ವದಿಂದ ಜನರನ್ನು ಆತ್ಮಿಕತೆಯಲ್ಲಿ ಪರಿಪೂರ್ಣರನ್ನಾಗಿ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಬೇರೊಂದು ರೀತಿಯ ಯಾಜಕನು ಬರುವುದು ಅತ್ಯವಶ್ಯಕವಾಗಿತ್ತು. ಅಂದರೆ ಮೆಲ್ಕಿಜೆದೇಕನಂತಹ ಯಾಜಕನೇ ಹೊರತು ಆರೋನನಂತವನಲ್ಲ ಎಂಬುದು ಅದರ ಅರ್ಥ. 12 ಬೇರೊಬ್ಬ ಯಾಜಕನು ಬಂದರೆ, ಆಗ ಧರ್ಮಶಾಸ್ತ್ರವು ಬದಲಾಗಲೇಬೇಕು. 13 ನಾವು ಕ್ರಿಸ್ತನನ್ನು ಕುರಿತು ಇವುಗಳನ್ನು ಹೇಳುತ್ತಿರುವೆವು. ಆತನು ಬೇರೊಂದು ಕುಲಕ್ಕೆ ಸೇರಿದವನು. ಆ ಕುಲದವರಲ್ಲಿ ಯಾರೇ ಆಗಲಿ ಎಂದೂ ಯಾಜಕರಾಗಿ ಸೇವೆ ಮಾಡಿರಲಿಲ್ಲ. 14 ನಮ್ಮ ಪ್ರಭು (ಕ್ರಿಸ್ತನು) ಯೆಹೂದಕುಲದಿಂದ ಬಂದವನೆಂಬುದು ಸ್ಪಷ್ಟವಾಗಿದೆ. ಆ ಕುಲಕ್ಕೆ ಸೇರಿದ ಯಾಜಕರನ್ನು ಕುರಿತು ಮೋಶೆಯು ಏನನ್ನೂ ಹೇಳಲಿಲ್ಲ.

ಯೇಸು ಮೆಲ್ಕಿಜೆದೇಕನಂತಹ ಯಾಜಕನು

15 ಮೆಲ್ಕಿಜೆದೇಕನಂತಹ ಮತ್ತೊಬ್ಬ ಯಾಜಕನು (ಯೇಸು) ಬಂದಿರುವುದರಿಂದ ಇವು ಮತ್ತಷ್ಟು ಸ್ಪಷ್ಟವಾಗಿವೆ. 16 ಆತನು ಯಾಜಕನಾದದ್ದು ವಂಶಾನುಗತವಾಗಿ ಬಂದ ನಿಯಮಗಳ ಮತ್ತು ಶಾಸ್ತ್ರಗಳ ಪ್ರಕಾರವಲ್ಲ. ಆತನು ನಾಶವಾಗದ ತನ್ನ ಜೀವಶಕ್ತಿಯಿಂದ ಯಾಜಕನಾದನು. 17 ಪವಿತ್ರ ಗ್ರಂಥದಲ್ಲಿ ಆತನನ್ನು ಕುರಿತು ಹೀಗೆ ಹೇಳಿದೆ: “ನೀನು ಮೆಲ್ಕಿಜೆದೇಕನಂತೆ ಸದಾಕಾಲವೂ ಯಾಜಕನಾಗಿರುವೆ.”(A)

18 ಹಳೆಯ ನಿಯಮವು ದುರ್ಬಲವೂ ನಿಷ್ಪ್ರಯೋಜಕವೂ ಆಗಿದ್ದರಿಂದ ರದ್ದಾಯಿತು. 19 ಮೋಶೆಯ ಧರ್ಮಶಾಸ್ತ್ರವು ಯಾವುದನ್ನೂ ಸಿದ್ಧಿಗೆ ತರಲಿಲ್ಲ. ಈಗ ನಮಗೆ ಉತ್ತಮವಾದ ಒಂದು ನಿರೀಕ್ಷೆಯನ್ನು ಕೊಡಲಾಗಿದೆ. ಈ ನಿರೀಕ್ಷೆಯು ನಮ್ಮನ್ನು ದೇವರ ಬಳಿಗೆ ಕೊಂಡೊಯ್ಯಬಲ್ಲದು.

20 ದೇವರು ಯೇಸುವನ್ನು ಪ್ರಧಾನಯಾಜಕನನ್ನಾಗಿ ಮಾಡಿದಾಗ, ಒಂದು ವಾಗ್ದಾನವನ್ನೂ ಮಾಡಿದನು. ಆದರೆ ಬೇರೆಯವರು ಯಾಜಕರಾದಾಗ ಆತನು ವಾಗ್ದಾನ ಮಾಡಲಿಲ್ಲ. 21 ಕ್ರಿಸ್ತನು ದೇವರ ವಾಗ್ದಾನದಂತೆ ಯಾಜಕನಾದನು. ದೇವರು ಆತನಿಗೆ ಹೇಳಿದ್ದೇನೆಂದರೆ:

“‘ನೀನು ಸದಾಕಾಲವೂ ಯಾಜಕನಾಗಿರುವೆ’
    ಎಂದು ಪ್ರಭುವೆಂಬ ನಾನು ವಾಗ್ದಾನ ಮಾಡಿದೆನು.
ಇದಕ್ಕಾಗಿ ನಾನೆಂದಿಗೂ ಪಶ್ಚಾತ್ತಾಪಪಡುವುದಿಲ್ಲ.”(B)

22 ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಶ್ರೇಷ್ಠವಾದ ಒಡಂಬಡಿಕೆಗೆ ಯೇಸುವೇ ಆಧಾರ ಎಂಬುದೇ ಇದರರ್ಥ.

23 ಇದಲ್ಲದೆ ಇತರ ಯಾಜಕರಲ್ಲಿ ಮರಣದ ಕಾರಣದಿಂದ ಒಬ್ಬನೇ ಶಾಶ್ವತವಾಗಿ ಯಾಜಕನಾಗಿ ಮುಂದುವರೆಯಲಾಗಲಿಲ್ಲ. ಆದ್ದರಿಂದ ಅಲ್ಲಿ ಅನೇಕ ಮಂದಿ ಯಾಜಕರಿದ್ದರು. 24 ಆದರೆ ಯೇಸು ಸದಾಕಾಲವೂ ಜೀವಿಸುವವನಾಗಿದ್ದಾನೆ. ಆತನು ತನ್ನ ಯಾಜಕ ಸೇವೆಯನ್ನು ಎಂದೆಂದಿಗೂ ನಿಲ್ಲಿಸುವುದಿಲ್ಲ. 25 ಆದ್ದರಿಂದಲೇ ತನ್ನ ಮೂಲಕ ದೇವರ ಬಳಿಗೆ ಬರುವ ಜನರನ್ನು ಯೇಸು ಯಾವಾಗಲೂ ರಕ್ಷಿಸಬಲ್ಲನು. ಏಕೆಂದರೆ ಆತನು ಸದಾಕಾಲ ಜೀವಿಸುವವನಾಗಿದ್ದಾನೆ ಮತ್ತು ಜನರು ದೇವರ ಸನ್ನಿಧಿಗೆ ಬಂದಾಗ ಜನರಿಗೆ ಸಹಾಯ ಮಾಡಲು ಸಿದ್ಧನಾಗಿದ್ದಾನೆ.

26 ಯೇಸುವೇ ನಮಗೆ ಬೇಕಾಗಿದ್ದ ಪ್ರಧಾನ ಯಾಜಕನು. ಆತನು ಪಾಪರಹಿತನೂ ಪರಿಶುದ್ಧನೂ ನಿಷ್ಕಳಂಕನೂ ಪಾಪಿಗಳ ಪ್ರಭಾವಕ್ಕೆ ಒಳಗಾಗದವನೂ ಆಕಾಶಮಂಡಲಕ್ಕಿಂತ ಉನ್ನತನೂ ಆಗಿದ್ದಾನೆ. 27 ಆತನು ಬೇರೆ ಯಾಜಕರಂತಲ್ಲ. ಅವರಾದರೋ ಪ್ರತಿ ದಿನವೂ ಯಜ್ಞಗಳನ್ನು ಅರ್ಪಿಸಬೇಕು. ಅವರು ತಮ್ಮ ಸ್ವಂತ ಪಾಪಗಳಿಗಾಗಿ ಯಜ್ಞಗಳನ್ನು ಅರ್ಪಿಸಿದ ನಂತರ ಬೇರೆಯವರ ಪಾಪಗಳಿಗಾಗಿ ಅರ್ಪಿಸಬೇಕು. ಆದರೆ ಕ್ರಿಸ್ತನು ಹಾಗೆ ಮಾಡಬೇಕಾಗಿಲ್ಲ. ಆತನು ತನ್ನನ್ನೇ ಯಜ್ಞವಾಗಿ ಅರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು. 28 ಧರ್ಮಶಾಸ್ತ್ರವು ಮನುಷ್ಯರೊಳಗಿಂದ ಪ್ರಧಾನ ಯಾಜಕರನ್ನು ಆರಿಸುತ್ತದೆ. ಆರಿಸಲ್ಪಟ್ಟ ಈ ಜನರು ಮಾನವ ದೌರ್ಬಲ್ಯಗಳನ್ನು ಹೊಂದಿದವರಾಗಿದ್ದಾರೆ. ಆದರೆ ದೇವರು ಧರ್ಮಶಾಸ್ತ್ರದ ನಂತರ ಮಾಡಿದ ವಾಗ್ದಾನ ದೇವರ ಮಗನನ್ನು ಪ್ರಧಾನ ಯಾಜಕನನ್ನಾಗಿ ಮಾಡಿತು. ಆ ಮಗನು ಎಂದೆಂದಿಗೂ ಸರ್ವಸಂಪೂರ್ಣನಾಗಿ ಮಾಡಲ್ಪಟ್ಟಿದ್ದಾನೆ.

ಆಮೋಸ 1

ಪರಿಚಯ

ಇದು ಆಮೋಸನ ಸಂದೇಶ. ಇವನು ತೆಕೋವ ಎಂಬ ಪಟ್ಟಣದ ಕುರುಬರಲ್ಲೊಬ್ಬನು. ಯೆಹೂದದ ಅರಸನಾದ ಉಜ್ಜೀಯನ ಆಳ್ವಿಕೆಯ ಸಮಯದಲ್ಲಿ ಮತ್ತು ಅದೇ ಸಮಯದಲ್ಲಿ ಯೋವಾಷನ ಮಗನಾದ ಯಾರೊಬ್ಬಾಮನು ಇಸ್ರೇಲನ್ನು ಆಳುತ್ತಿರುವಾಗ ಆಮೋಸನಿಗೆ ದೈವದರ್ಶನಗಳುಂಟಾದವು. ಭೂಕಂಪವಾಗುವುದಕ್ಕಿಂತ ಎರಡು ವರ್ಷಗಳಿಗೆ ಮೊದಲು ಈ ದರ್ಶನಗಳಾದವು.

ಅರಾಮ್ಯರಿಗೆ ಶಿಕ್ಷೆ

ಆಮೋಸನು ಹೇಳಿದ್ದೇನೆಂದರೆ,
“ಚೀಯೋನಿನಲ್ಲಿ ಯೆಹೋವನು ಸಿಂಹದಂತೆ ಗರ್ಜಿಸುವನು.
    ಜೆರುಸಲೇಮಿನಿಂದ ಆರ್ಭಟಿಸುತ್ತಾನೆ.
ಆಗ ಕುರುಬರ ಹಸಿರು ಹುಲ್ಲುಗಾವಲು ಕಂದುಬಣ್ಣವಾಗಿ ಸಾಯುವುದು.
    ಕರ್ಮೆಲ್ ಬೆಟ್ಟವು ಒಣಗಿ ಬರಡಾಗುವುದು.”

ಯೆಹೋವನು ಹೇಳುವುದೇನೆಂದರೆ, “ದಮಸ್ಕದವರು ನಡಿಸಿದ ಅನೇಕ ಅಪರಾಧಗಳ ನಿಮಿತ್ತವಾಗಿ ನಾನು ಖಂಡಿತವಾಗಿಯೂ ಅವರನ್ನು ಶಿಕ್ಷಿಸುವೆನು. ಯಾಕೆಂದರೆ ಅವರು ಗಿಲ್ಯಾದಿನ ಜನರನ್ನು ಒಕ್ಕಣೆಗೆ ಉಪಯೋಗಿಸುವ ಕಬ್ಬಿಣದ ಸಲಕರಣೆಗಳಿಂದ ಜಜ್ಜಿಬಿಟ್ಟರು. ಆದರೆ ನಾನು ಹಜಾಯೇಲನ ನಿವಾಸದಲ್ಲಿ ಬೆಂಕಿಯನ್ನು ಪ್ರಾರಂಭಿಸುವೆನು. ಅದು ಬೆನ್ಹದದನ ಭವ್ಯ ಅರಮನೆಗಳನ್ನೆಲ್ಲಾ ಸುಟ್ಟುಹಾಕುವದು.

“ನಾನು ದಮಸ್ಕದ ಹೆಬ್ಬಾಗಿಲುಗಳನ್ನೂ ಒಡೆದುಹಾಕುವೆನು; ಆವೆನ್ ಕಣಿವೆಯಲ್ಲಿ ಸಿಂಹಾಸನದ ಮೇಲೆ ಕುಳಿತುಕೊಳ್ಳುವವನನ್ನು ತೆಗೆದುಬಿಡುವೆನು; ಬೇತ್ ಎದೆನ್‌ನಲ್ಲಿರುವ ಸಾಮರ್ಥ್ಯದ ಗುರುತನ್ನು ಕಿತ್ತುಹಾಕುವೆನು. ಆಗ ಅರಾಮ್ಯರು ಸೋಲಿಸಲ್ಪಟ್ಟವರಾಗಿ ಕೀರ್ ಎಂಬಲ್ಲಿಗೆ ಕೊಂಡೊಯ್ಯುವರು. ಇದು ಯೆಹೋವನ ನುಡಿ.”

ಫಿಲಿಷ್ಟಿಯರಿಗೆ ಶಿಕ್ಷೆ

ಯೆಹೋವನು ಹೇಳುವುದೇನೆಂದರೆ, “ಗಾಜದ ಜನರನ್ನು ಅವರು ಮಾಡಿದ ಅಪರಾಧಗಳ ನಿಮಿತ್ತ ಖಂಡಿತವಾಗಿಯೂ ಶಿಕ್ಷಿಸುವೆನು. ಯಾಕೆಂದರೆ ಅವರು ಒಂದು ಇಡೀ ಜನಾಂಗವನ್ನೇ ಎದೋಮಿಗೆ ಗುಲಾಮರನ್ನಾಗಿ ಕಳುಹಿಸಿದರು. ಅದಕ್ಕಾಗಿ ನಾನು ಗಾಜದ ಗೋಡೆಯ ಮೇಲೆ ಬೆಂಕಿಯನ್ನು ಕಳುಹಿಸುವೆನು. ಈ ಬೆಂಕಿಯು ಗಾಜದ ಎತ್ತರವಾದ ಗೋಪುರಗಳನ್ನು ನಾಶಮಾಡುವದು. ಇದಲ್ಲದೆ, ನಾನು ಅಷ್ಡೋದಿನಲ್ಲಿ ಸಿಂಹಾಸನದ ಮೇಲೆ ಕುಳಿತುಕೊಳ್ಳುವವನನ್ನು ನಾಶಮಾಡುವೆನು; ಅಷ್ಕೆಲೋನಿನಲ್ಲಿ ರಾಜದಂಡ ಹಿಡಿಯುವವನನ್ನು ನಾಶಮಾಡುವೆನು; ಎಕ್ರೋನಿನ ಜನರನ್ನು ಶಿಕ್ಷಿಸುವೆನು. ಆಮೇಲೆ ಅಳಿದುಳಿದ ಫಿಲಿಷ್ಟಿಯರು ಸಾಯುವರು.” ಇದು ಯೆಹೋವನ ನುಡಿ.

ತೂರಿಗೆ ಶಿಕ್ಷೆ

ಯೆಹೋವನು ಹೇಳುವುದೇನೆಂದರೆ, “ಅನೇಕ ಅಪರಾಧಗಳನ್ನು ಮಾಡಿದ ತೂರಿನ ಜನರನ್ನು ನಾನು ಖಂಡಿತವಾಗಿ ಶಿಕ್ಷಿಸುವೆನು. ಯಾಕೆಂದರೆ ಅವರು ಒಂದು ಜನಾಂಗದ ಜನರನ್ನೆಲ್ಲಾ ಗುಲಾಮರನ್ನಾಗಿ ಎದೋಮಿಗೆ ಕಳುಹಿಸಿದರು. ಅವರು ತಮ್ಮ ಸಹೋದರರೊಂದಿಗೆ (ಇಸ್ರೇಲಿನೊಂದಿಗೆ) ಮಾಡಿದ ಒಡಂಬಡಿಕೆಯನ್ನು ಮರೆತುಬಿಟ್ಟರು. 10 ಆದ್ದರಿಂದ ನಾನು ತೂರಿನ ಗೋಡೆಯ ಮೇಲೆ ಬೆಂಕಿಯನ್ನು ಹಾಕುವೆನು. ಆ ಬೆಂಕಿಯು ತೂರಿನ ಎತ್ತರವಾದ ಬುರುಜುಗಳನ್ನು ನಾಶಮಾಡುವದು.”

ಎದೋಮ್ಯರಿಗೆ ಶಿಕ್ಷೆ

11 ಯೆಹೋವನು ಹೇಳುವುದೇನೆಂದರೆ, “ಅನೇಕ ಅಪರಾಧಗಳನ್ನು ಮಾಡಿದ ಎದೋಮ್ಯರನ್ನು ನಾನು ಖಂಡಿತವಾಗಿ ಶಿಕ್ಷಿಸುವೆನು. ಯಾಕೆಂದರೆ ಎದೋಮ್ ತನ್ನ ಸಹೋದರನಾದ ಇಸ್ರೇಲನ್ನು ಕತ್ತಿಯಿಂದ ಹತಿಸಿತು. ಎದೋಮ್ ಯಾವ ಕರುಣೆಯನ್ನೂ ತೋರಲಿಲ್ಲ. ಅದರ ಕೋಪವು ನಿರಂತರವಾಗಿ ಮುಂದುವರಿಯಿತು; ಕ್ರೂರಪ್ರಾಣಿಯಂತೆ ಇಸ್ರೇಲನ್ನು ಹರಿದುಹರಿದು ಹಾಕಿತು. 12 ಆದ್ದರಿಂದ ನಾನು ತೇಮಾನಿನಲ್ಲಿ ಬೆಂಕಿಯನ್ನು ಹಾಕುವೆನು. ಆ ಬೆಂಕಿಯು ಬೋಚ್ರದ ಉನ್ನತ ಗೋಪುರಗಳನ್ನು ನಾಶಮಾಡುವದು.”

ಅಮ್ಮೋನಿಯರಿಗೆ ಶಿಕ್ಷೆ

13 ಯೆಹೋವನು ಹೇಳುವುದೇನೆಂದರೆ, “ಅನೇಕಾನೇಕ ಅಪರಾಧಗಳನ್ನು ಮಾಡಿದ ಅಮ್ಮೋನಿಯರನ್ನು ನಾನು ಖಂಡಿತವಾಗಿಯೂ ಶಿಕ್ಷಿಸುತ್ತೇನೆ. ಯಾಕೆಂದರೆ ಅವರು ಗಿಲ್ಯಾದಿನ ಗರ್ಭಿಣಿ ಸ್ತ್ರೀಯರನ್ನು ಕೊಂದರು. ಆ ಪ್ರಾಂತ್ಯವನ್ನು ಕೈವಶಮಾಡಿಕೊಂಡು ತಮ್ಮ ದೇಶವನ್ನು ವಿಸ್ತಾರ ಮಾಡುವುದಕ್ಕಾಗಿ ಅವರು ಹೀಗೆ ಮಾಡಿದರು. 14 ಆದ್ದರಿಂದ ನಾನು ರಬ್ಬದ ಗೋಡೆಗಳಲ್ಲಿ ಬೆಂಕಿ ಹಾಕುವೆನು. ಆ ಬೆಂಕಿಯು ರಬ್ಬದ ಉನ್ನತ ಗೋಪುರಗಳನ್ನು ನಾಶಮಾಡುವದು; ಹಗಲಿನ ಯುದ್ಧದ ಕೂಗಾಟದಂತೆಯೂ ಸುಂಟರಗಾಳಿಯಂತೆಯೂ ಸಂಕಟವು ಅವರ ದೇಶಕ್ಕೆ ಬರುವದು. 15 ಆಗ ಅವರ ಅರಸನು ಮತ್ತು ನಾಯಕರು ಸೆರೆಹಿಡಿಯಲ್ಪಡುವರು. ಅವರನ್ನೆಲ್ಲ ಒಟ್ಟಿಗೆ ಕೊಂಡೊಯ್ಯಲಾಗುವುದು.” ಈ ಸಂಗತಿಗಳನ್ನೆಲ್ಲ ಯೆಹೋವನು ತಿಳಿಸಿದನು.

ಕೀರ್ತನೆಗಳು 144

ರಚನೆಗಾರ: ದಾವೀದ.

144 ಯೆಹೋವನು ನನಗೆ ಬಂಡೆಯಾಗಿದ್ದಾನೆ.
    ಆತನಿಗೆ ಸ್ತೋತ್ರವಾಗಲಿ.
ಆತನು ನನ್ನನ್ನು ಯುದ್ಧಕ್ಕೂ
    ಕದನಕ್ಕೂ ತರಬೇತು ಮಾಡುವನು.
ಆತನು ನನ್ನನ್ನು ಪ್ರೀತಿಸುವ ದೇವರೂ
    ನನ್ನ ಕೋಟೆಯೂ ನನ್ನ ದುರ್ಗವೂ ನನ್ನ ರಕ್ಷಕನೂ ನನ್ನ ಗುರಾಣಿಯೂ ನನ್ನ ಆಶ್ರಯವೂ ಆಗಿದ್ದಾನೆ.

ಯೆಹೋವನೇ, ಮನುಷ್ಯರು ಎಷ್ಟು ಮಾತ್ರದವರು?
    ನೀನು ಅವರನ್ನು ಯಾಕೆ ನೆನಸಬೇಕು?
ಮನುಷ್ಯರು ಎಷ್ಟರವರು?
    ನೀನು ಅವರನ್ನು ಯಾಕೆ ಗಮನಿಸಬೇಕು?
ಮನುಷ್ಯರು ಕೇವಲ ಉಸಿರೇ.
    ಅವರ ಜೀವಮಾನವು ಬೇಗನೆ ಗತಿಸಿಹೋಗುವ ನೆರಳಿನಂತಿದೆ.

ಯೆಹೋವನೇ, ಆಕಾಶವನ್ನು ಹರಿದು ಇಳಿದು ಬಾ.
    ಪರ್ವತಗಳನ್ನು ಮುಟ್ಟು.
    ಆಗ ಅವುಗಳಿಂದ ಹೊಗೆಯು ಮೇಲೇರುವುದು.
ಸಿಡಿಲಿನಿಂದ ಶತ್ರುಗಳನ್ನು ಚದರಿಸಿಬಿಡು.
    ನಿನ್ನ ಬಾಣಗಳಿಂದ ಅವರನ್ನು ಓಡಿಸಿಬಿಡು.
ಮೇಲಿನ ಲೋಕದಿಂದ ಕೈಚಾಚಿ ಮಹಾ ಜಲರಾಶಿಯಂತಿರುವ
    ನನ್ನ ಶತ್ರುಗಳಿಂದ ನನ್ನನ್ನು ಎಳೆದುಕೋ.
    ಅನ್ಯಜನರ ಕೈಯಿಂದ ನನ್ನನ್ನು ಬಿಡಿಸು.
ಅವರ ಬಾಯಿ ಸುಳ್ಳುಗಳಿಂದ ತುಂಬಿವೆ.
    ಅವರ ಬಲಗೈ ಮೋಸದಿಂದ ತುಂಬಿವೆ.

ಯೆಹೋವನೇ, ನಿನಗೆ ನೂತನ ಕೀರ್ತನೆಯನ್ನು ಹಾಡುವೆನು.
    ನಾನು ಹತ್ತು ತಂತಿಗಳ ಹಾರ್ಪ್‌ವಾದ್ಯವನ್ನು ನುಡಿಸುತ್ತಾ ನಿನ್ನನ್ನು ಸ್ತುತಿಸುವೆನು.
10 ರಾಜರುಗಳಿಗೆ ಸಹಾಯಮಾಡಿ ಯುದ್ಧಗಳಲ್ಲಿ ಗೆಲ್ಲಿಸುವವನೂ ನೀನೇ.
    ನಿನ್ನ ಸೇವಕನಾದ ದಾವೀದನನ್ನು ಅವನ ಶತ್ರುಗಳ ಖಡ್ಗಗಳಿಂದ ರಕ್ಷಿಸಿದವನೂ ನೀನೇ.
11 ಈ ಅನ್ಯಜನರಿಂದ ನನ್ನನ್ನು ರಕ್ಷಿಸು.
    ಅವರ ಬಾಯಿಗಳು ಸುಳ್ಳುಗಳಿಂದ ತುಂಬಿವೆ.
    ಅವರ ಬಲಗೈಗಳು ಮೋಸದಿಂದ ತುಂಬಿವೆ.

12 ನಮ್ಮ ಯುವಕರು ಮಹಾವೃಕ್ಷಗಳಂತಿದ್ದಾರೆ.
    ನಮ್ಮ ಯುವತಿಯರು ಅರಮನೆಯಲ್ಲಿ ಸುಂದರವಾಗಿ ಕೆತ್ತಲ್ಪಟ್ಟ ಕಂಬಗಳಂತಿರುವರು.
13 ನಮ್ಮ ಕಣಜಗಳು ಸಕಲ ಬಗೆಯ ದವಸಧಾನ್ಯಗಳಿಂದ ತುಂಬಿರುತ್ತವೆ.
    ನಮ್ಮ ಹೊಲಗಳಲ್ಲಿರುವ ಕುರಿಗಳು ಸಾವಿರಾರು ಮರಿಗಳನ್ನು ಈಯುತ್ತವೆ.
14     ನಮ್ಮ ಸೈನಿಕರು ಸುರಕ್ಷಿತವಾಗಿದ್ದಾರೆ.
ಯಾವ ಶತ್ರುಗಳೂ ನುಗ್ಗಿಬರಲು ಪ್ರಯತ್ನಿಸುತ್ತಿಲ್ಲ.
    ನಾವು ಯುದ್ಧಕ್ಕೆ ಹೋಗುವುದೂ ಇಲ್ಲ;
ನಮ್ಮ ಬೀದಿಗಳಲ್ಲಿ ಗೋಳಾಟವೂ ಇರುವುದಿಲ್ಲ.

15 ಇಂಥ ಸುಸ್ಥಿತಿಯಲ್ಲಿರುವ ಜನರೇ ಧನ್ಯರು.
    ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರೇ ಭಾಗ್ಯವಂತರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International